Wednesday, August 1, 2018

ಇದು ಚಿನ್ನಮೋಹಿ ‘ಗೋಲ್ಡನ್ ಬಾಬಾ’ ಕೊನೆಯ ಕನ್ವರ್ ಯಾತ್ರೆ!


ಇದು ಚಿನ್ನಮೋಹಿ ‘ಗೋಲ್ಡನ್ ಬಾಬಾ’ ಕೊನೆಯ ಕನ್ವರ್ ಯಾತ್ರೆ!

ನವದೆಹಲಿ/ ಗಾಜಿಯಾಬಾದ್:  ಗೋಲ್ಡನ್ ಬಾಬಾ ಎಂದೇ ಖ್ಯಾತರಾಗಿರುವ ಬಂಗಾರದ ಬಾಬಾ ಸುಧೀರ್ ಮಕ್ಕರ್ ಮತ್ತೆ ತಮ್ಮ ಸುಪ್ರಸಿದ್ದ ಕನ್ವರ್ ಯಾತ್ರೆಗೆ ಸಜ್ಜಾಗಿದ್ದಾರೆ. ಈ ಬಾರಿ ಬಾಬಾ ಅಂದಾಜು ೬ ಕೋಟಿ ರೂಪಾಯಿ ಮೌಲ್ಯದ ೨೦ ಕಿ.ಗ್ರಾಂ. ಚಿನ್ನಾಭರಣ ಧರಿಸಿಕೊಂಡು ಕನ್ವರ್ ಯಾತ್ರೆ ನಡೆಸಲಿದ್ದಾರೆ. ಇದು ಅವರ ೨೫ನೆಯ ಹಾಗೂ ಕೊನೆಯ ಕನ್ವರ್ ಯಾತ್ರೆ.

ವರ್ಷದಿಂದ ವರ್ಷಕ್ಕೆ ಬಾಬಾ ಅವರು ಯಾತ್ರೆ ಕಾಲದಲ್ಲಿ ಧರಿಸುವ ಚಿನ್ನಾಭರಣದ ಪ್ರಮಾಣ ಏರುತ್ತಲೇ ಇದೆ. ೨೦೧೬ರಲ್ಲಿ ಅವರು ೧೨ ಕಿಲೋ ಗ್ರಾಂ ಚಿನ್ನಾಭರಣ ಧರಿಸಿ ಕನ್ವರ್ ಯಾತ್ರೆ ನಡೆಸಿದ್ದರು. ಕಳೆದ ವರ್ಷ ಅವರು ೧೪.೫ ಕಿ.ಗ್ರಾಂ ಚಿನ್ನಾಭರಣ ಧರಿಸಿ ಯಾತ್ರೆ ನಡೆಸಿದ್ದರು. ಈ ಚಿನ್ನಾಭರಣದಲ್ಲಿ ೨೧ ಚಿನ್ನದ ನಾಣ್ಯಗಳು, ೨೧ ದೇವತೆಗಳ ಲಾಕೆಟ್ ಗಳು, ಕೈ ಕಡಗಗಳು, ಚಿನ್ನದ ಜಾಕೆಟ್ ಇತ್ಯಾದಿ ಸೇರಿವೆ.

ಬಾಬಾ ಎಸ್ ಯುವಿ ಕಾರಿನಲ್ಲಿ ಕುಳಿತು ತಮ್ಮ ಯಾತ್ರೆ ನಡೆಸುತಾರೆ. ಅವರ ಈ ಯಾತ್ರೆಯಲ್ಲಿ ಪೊಲೀಸರಲ್ಲದೆ ಅಂಗರಕ್ಷಕರೂ ಇರುತ್ತಾರೆ.

ಈ ಬಾರಿ ಬಾಬಾ ಅವರು ಧರಿಸಲಿರುವ ಹೊಸ ಚಿನ್ನದ ಸರ ೨ ಕಿಗ್ರಾಂ ತೂಕವಿದ್ದು ಶಿವನ ಲಾಕೆಟ್ ಹೊಂದಿದೆ. ಕತ್ತು ನೋವು ಬರುವುದರ ಜೊತೆಗೆ ಒಂದು ಕಣ್ಣಿನ ದೃಷ್ಟಿ ಮಂದವಾಗಿರುವುದರಿಂದ ನಾನು ಈ ಬಾರಿ ಹೆಚ್ಚು ಚಿನ್ನ ಧರಿಸುವುದಿಲ್ಲ. ಇದು ನನ್ನ ೨೫ನೆಯ ವರ್ಷದ ಹಾಗೂ ಕೊನೆಯ ಕನ್ವರ್ ಯಾತ್ರೆ ಎಂದು ಬಾಬಾ ಹೇಳುತ್ತಾರೆ. ಚಿನ್ನಾಭರಣಗಳ ಜೊತೆಗೆ ಅಂದಾಜು ೨೭ ಲಕ್ಷ ರೂಪಾಯಿ ಬೆಲೆಯ ರೊಲೆಕ್ಸ್ ವಾಚನ್ನೂ  ಬಾಬಾ ಧರಿಸುತ್ತಾರೆ.

ಹರದ್ವಾರದಿಂದ ದೆಹಲಿಯವರೆಗೆ ೨೦೦ ಕಿಮೀ ದೂರ ಸಾಗುವ ಕನ್ವರ್ ಯಾತ್ರೆಯಲ್ಲಿ, ಬಾಬಾ ಅವರ ಸ್ವಂತ ವಾಹನಗಳಾದ ಬಿಎಂಡಬ್ಲ್ಯೂ, ಮೂರು ಪಾರ್ಚುನರ್‌ಗಳು, ಎರಡು ಆಡಿ ಮತ್ತು ಎರಡು ಇನ್ನೋವಾ ಕಾರುಗಳೂ ಸಾಗುತ್ತವೆ. ಯಾತ್ರೆಗಾಗಿ ಅವರು ಹಲವಾರು ಬಾರಿ ಹಮ್ಮರ್, ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗಳನ್ನು ಬಾಡಿಗೆಗೆ ಪಡೆದು ಬಳಸಿದ್ದಾರೆ.

ನನ್ನ ಚಿನ್ನ ಮತ್ತು ಕಾರುಗಳ ವ್ಯಾಮೋಹ ಸಾಯುವುದಿಲ್ಲ. ೧೯೭೨-೭೩ರಲ್ಲಿ ಚಿನ್ನದ ಬೆಲೆ ತೊಲೆಗೆ (೧೦ ಗ್ರಾಮ್) ೨೦೦ ರೂ ಇದ್ದಾಗ ನಾನು ಚಿನ್ನಾಭರಣಗಳನ್ನು ಧರಿಸಲು ಆರಂಭಿಸಿದೆ ಎಂಬುದು ನನ್ನ ನೆನಪು. ಆಗ ನಾನು ೪ ತೊಲೆಯಷ್ಟು ಚಿನ್ನಾಭರಣ ಧರಿಸಿ ಯಾತ್ರೆ ಗೈದಿದ್ದೆ. ಕ್ರಮೇಣ ನನ್ನ ಬಳಿ ಬಂಗಾರ ಹೆಚ್ಚಿತು. ನಾನು ಸಾಯುವವರೆಗೂ ಚಿನ್ನಾಭರಣಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳುವೆ. ಈ ಜಗತ್ತನ್ನು ತ್ಯಜಿಸುವಾಗ ನನ್ನ ಯಾರಾದರೂ ಒಬ್ಬ ಪ್ರಿಯ ಶಿಷ್ಯನಿಗೆ ಅವುಗಳನ್ನು ಹಸ್ತಾಂತರಿಸುವೆ ಎಂದು ಮಕ್ಕರ್ ಹೇಳುತ್ತಾರೆ.

ಆಧ್ಯಾತ್ಮದೆಡೆಗೆ ವಾಲುವ ಮುನ್ನ ಮಕ್ಕರ್ ಅವರು ದೆಹಲಿಯ ಗಾಂಧಿ ನಗರ ಮಾರುಕಟ್ಟೆಯಲ್ಲಿ ಒಬ್ಬ ಯಶಸ್ವೀ ಬಟ್ಟೆ ಹಾಗೂ ಆಸ್ತಿ ವ್ಯವಹಾರಗಾರರಾಗಿದ್ದರು. ಈಗ ಅವರು ಗಾಜಿಯಾಬಾದಿನ ಇಂದಿರಾಪುರದಲ್ಲಿ ಬಹುಮಹಡಿಗಳ ಬೃಹತ್ ಐಷಾರಾಮೀ ಫ್ಲಾಟ್ ಹೊಂದಿದ್ದಾರೆ.

ಬಾಬಾ ಅವರ ಆರಂಭದ ಬದುಕು ಅತ್ಯಂತ ಕಷ್ಟಮಯವಾಗಿತ್ತು. ಆರನೇ ವಯಸ್ಸಿನಲ್ಲಿ ಅವರು ಹರಿದ್ವಾರದಲ್ಲಿ ಬದುಕಿನ ದಾರಿ ಹುಡುಕುತ್ತಾ ಗುರುಕುಲ ಸೇರಿದ್ದರು. ರಸ್ತೆ ಬದಿಯಲ್ಲಿ ಗುಲಾಬಿ ಹೂ ಮತು ಬಟ್ಟೆ ಮಾರಾಟ ಮಾಡಿ ಅವರು ಬದುಕು ಸಾಗಿಸಿದ್ದರು.
ಬಳಿಕ ಭಗವಾನ್ ಶಿವನ ಕೃಪೆಯಿಂದ ನನ್ನ ವಹಿವಾಟು ಬೆಳೆಯಿತು. ನಾನು ಜೀನ್ಸ್, ಶರ್ಟ್ ಮತ್ತು ಜಾಕೆಟ್ ಗಳನ್ನು ’ಬಿಟ್ಟು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಿದೆ. ಆಸ್ತಿ ವಹಿವಾಟೂ ಬೆಳೆಯಿತು. ನಾನು ಸಂಪೂರ್ಣವಾಗಿ ಶಿವನ ಭಕ್ತನಾದೆ ಎಂದು ಬಾಬಾ ಹೇಳುತ್ತಾರೆ.

ವಾರ್ಷಿಕ ಕನ್ವರ್ ಯಾತ್ರೆಯಲ್ಲಿ ಬಾಬಾ ಅತ್ಯಂತ ಜನಪ್ರಿಯರಾದ ಕೇಂದ್ರ ವ್ಯಕ್ತಿಯಾಗಿದದಾರೆ. ಮಕ್ಕಳು, ಮಹಿಳೆಯರು, ಯುವಕರು ಅವರ ಯಾತ್ರೆಯಲ್ಲಿ ಪಾಲ್ಗೊಳ್ಳಲು ದುಂಬಾಲು ಬೀಳುತ್ತಾರೆ. ಅವರ ವಿಡಿಯೋಗಳನ್ನು ಮಾಡುವುದು, ಅವರ ಜೊತೆಗೆ ಸೆಲ್ಫೀ ತೆಗೆದುಕೊಳ್ಳುವುದು ಮತ್ತು ಅವರ ಆಶೀರ್ವಾದಕ್ಕಾಗಿ ಪಾದ ಮುಟ್ಟಿ ನಮಸ್ಕರಿಸುವುದೇ ಇತ್ಯಾದಿ ಚಟುವಟಿಕೆಗಳು ಅವರ ಯಾತ್ರೆಯುದ್ದಕ್ಕೂ ನಡೆಯುತ್ತಲೇ ಇರುತ್ತವೆ.

No comments:

Post a Comment