Friday, August 17, 2018

ಕೇರಳದ ಬಹುಭಾಗ ಜಲಾವೃತ, ಮುಂಗಾರು ಮಹಾಪೂರಕ್ಕೆ 324 ಬಲಿ


ಕೇರಳದ ಬಹುಭಾಗ ಜಲಾವೃತ, ಮುಂಗಾರು ಮಹಾಪೂರಕ್ಕೆ 324 ಬಲಿ


ತಿರುವನಂತಪುರ
: ಕೇರಳದ ಜಡಿಮಳೆ, ಪ್ರವಾಹ, ಭೂಕುಸಿತದ ಘಟನೆಗಳಲ್ಲಿ  ಗುರುವಾರ ಒಂದೇ ದಿನ 91 ಮಂದಿ ಮೃತರಾಗಿರುವ ಬಗ್ಗೆ ವರದಿಗಳು ಬಂದಿದ್ದು, ವರ್ಷದ ಮುಂಗಾರು  ಮಹಾಪೂರಕ್ಕೆ ಬಲಿಯಾದವರ ಸಂಖ್ಯೆ 324ಕ್ಕೆ ಏರಿದೆ.

ಮುಂಗಾರಿನ ವರ್ಷದ ಮಳೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ಮಹಾಪೂರಎಂದು ಬಣ್ಣಿಸಿದ್ದಾರೆ.

ಎರಡು ಜಿಲ್ಲೆಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದ ವೇಳೆಯಲ್ಲಿ  17 ಆಗಸ್ಟ್ 2018 ಶುಕ್ರವಾರ ಒಂದೇ ದಿನ 80,000 ಮಂದಿಯನ್ನು ಅಪಾಯದಿಂದ ರಕ್ಷಿಸಲಾಯಿತು ಎಂದು ವಿಜಯನ್ ಅವರು ರಾತ್ರಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ ವೇಳೆಗೆ ತಿರುವನಂತಪುರಂ ತಲುಪಿದ್ದು, 18 ಆಗಸ್ಟ್ 2018 ಶನಿವಾರ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸುವರು.

ಸಹಸ್ರಾರು ಮಂದಿ ನಿರ್ವಸಿತರಾಗಿದ್ದು, ಭಾರಿ ಪ್ರಮಾಣದಲ್ಲಿ ಬೆಳೆನಷ್ಟ ಸಂಭವಿಸಿದೆ.

ವಿಮಾನಯಾನ, ರೈಲು ಮತ್ತು ರಸ್ತೆ ಸಂಚಾರ ಒಂದು ವಾರದಿಂದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ತ್ರಿಶ್ಯೂರಿನಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರ ಶವಗಳು ಪಟ್ಟಣಂತಿಟ್ಟದಲ್ಲಿ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತು ಹಿಡಿಯಲಾಗಿಲ್ಲ. ಉತ್ತರ ಪರವೂರಿನಲ್ಲ ಸಭಾಂಗಣವೊಂದು ಕುಸಿದ ಬಳಿಕ ಮಂದಿ ಕಣ್ಮರೆಯಾಗಿದ್ದಾರೆ ಇತರ ಹಲವರು ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.

ಪ್ರಧಾನಿ ನರೆಂದ್ರ ಮೋದಿ ಅವರು ತಾವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ಬಳಿಕ ಈದಿನವೇ ಸಂಜೆ ಕೇರಳಕ್ಕೆ ಪ್ರವಾಹದ ವೈಮಾನಿಕ ಸಮೀಕ್ಷೆ ಸಲುವಾಗಿ ಭೇಟಿ ನೀಡುವುದಾಗಿ ಬೆಳಗ್ಗೆಯೇ ಟ್ವೀಟ್ ಮಾಡಿದ್ದಾರೆ.

ಕೇರಳದ ೧೪ ಜಿಲ್ಲೆಗಳ ಪೈಕಿ ತಿರುವನಂತಪುರಂ ಮತ್ತು ಕಾಸರಗೋಡು ಜಿಲ್ಲೆಗಳ ಕಟ್ಟೆಚ್ಚರ (ರೆಡ್ ಅಲರ್ಟ್) ಹಿಂತೆಗೆದುಕೊಳ್ಳಲಾಗಿದೆ. ಮುಂದಿನ ೨೪ ಗಂಟೆಗಳ ಅವಧಿಯಲ್ಲಿ ಶನಿವಾರದವರೆಗೆ ಮಳೆಯ ರಭಸ ಸ್ವಲ್ಪ ಇಳಿಮುಖವಾಗುವ ಲಕ್ಷಣಗಳಿವೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದ್ದು, ಜನತೆ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡಬಹುದೆಂಬ ಆಶಯದಲ್ಲಿ ಇದ್ದಾರೆ.

ಜಡಿಮಳೆ, ಭೂಕುಸಿತ ಮತ್ತು ಪ್ರವಾಹಗಳ ಪರಿಣಾಮವಾಗಿ ರಾಜ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ, ಬಹುತೇಕ ಭಾಗ ಜಲಾವೃತಗೊಂಡಿದೆ ಎಂದು ಹೇಳಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪರಿಸ್ಥಿತಿ ಸುಧಾರಿಸುವ ಆಶಾಭಾವನೆ ಹೊಂದಿರುವುದಾಗಿ ನುಡಿದರು.

ರಾಜ್ಯಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ೧೫೬೮ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ,  ಆದರೆ ಇನ್ನೂ ಹಲವರು ಪ್ರವಾಹ, ಭೂಕುಸಿತ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ನುಡಿದರು.
ಜಲಾವೃತಗೊಂಡಿರುವ ಸ್ಥಳಗಳಲ್ಲಿ ಇರುವ ಎಲ್ಲರನ್ನೂ ಈದಿನ ಸಂಜೆಯವೇಳೆಗೆ ರಕ್ಷಿಸಲಾಗುವುದು. ಇದನ್ನು ಸಾಧಿಸುವ ವಿಶ್ವಾಸ ನನಗಿದೆ. ಕೇಂದ್ರವು ಚೆನ್ನಾಗಿ ಸ್ಪಂದಿಸುತ್ತಿದೆ ಎಂದು ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

೧೬ ಸೇನಾಪಡೆ ತಂಡಗಳು, ೨೮ ನೌಕಾಪಡೆ ತಂಡಗಳು, ೩೯ ಎನ್ ಡಿಆರ್ ಎಫ್ (ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಮಗ್ನವಾಗಿವೆ. ಎನ್ ಡಿ ಆರ್ ಎಫ್ ಈವರೆಗೆ ೪೦೦೦ ಮಂದಿಯನ್ನು ರಕ್ಷಿಸಿದೆ ಎಂದು ಅವರು ನುಡಿದರು.

ಮುಲ್ಲಪೆರಿಯಾರ್ ಭದ್ರ: ಶತಮಾನದಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ವದಂತಿಗಳಿಂದ ಉಂಟಾಗಿರುವ ಭೀತಿಯನ್ನು ನಿವಾರಿಸಲು ಯತ್ನಿಸಿದ ಮುಖ್ಯಮಂತ್ರಿ ರೀತಿ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ’ಅಣೆಕಟ್ಟಿಗೆ ಯಾವುದೇ ಅಪಾಯವೂ ಇಲ್ಲಎಂದು ಅವರು ಸ್ಪಷ್ಟ ಪಡಿಸಿದರು.

ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯ ತಂಡಗಳು ಶುಕ್ರವಾರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಜಲಾವೃತ ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಆಹಾರದ ಪ್ಯಾಕೆಟ್ ವಿತರಣೆ ಆರಂಭಿಸಿವೆ. ಹೆಚ್ಚಿನ ಸಂಖ್ಯೆಯಲ್ಲಿ ದೋಣಿಗಳು ಮತ್ತು ಹೆಲಿಕಾಪ್ಟರುಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಭಾರತೀಯ ಕರಾವಳಿ ಕಾವಲು ಪಡೆ ಕೂಡಾ ರಾಜ್ಯದ ೨೮ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದೆ.

ಖ್ಯಾತ ಮುನ್ನಾರ್ ಬೆಟ್ಟಧಾಮದಲ್ಲಿ ಗುರುವಾರ ರಾತ್ರಿ ೧೨೭ ಮಿಮೀ ಮಳೆ ಸುರಿದಿದ್ದು, ಇಡೀ ಪ್ರದೇಶ ಸಂಪರ್ಕ ಕಳೆದುಕೊಂಡಿದೆ. ಸಂಪರ್ಕ ಜಾಲದ ಮರುಸ್ಥಾಪನೆಗೆ ಕೂಡಾ ಸೇನೆಯ ನೆರವು ಕೋರಲಾಗಿದೆ.

ಚೆರುಥೋಣಿ, ಚಲಕುಡಿ ಮತ್ತು ಪಂಡಲಂ ನಂತಹ ಅನೇಕ ಪಟ್ಟಣಗಳು ನೀರಿನಡಿ ಮುಳುಗಿದ್ದು, ಇನ್ನೂ ಹಲವರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಇಡುಕ್ಕಿ ಮತ್ತು ವೇನಾಡ್ ಜಿಲ್ಲೆಯಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದೆ. ಆದರೆ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಇನ್ನೂ ಏರುತ್ತಲೇ ಇದೆ. ಪೆರಿಯಾರ್ ನದಿ ಮತ್ತು ಅದರ ಉಪನದಿಗಳ ನೀರಿನಿಂದ ಎರ್ನಾಕುಲಂ ಮತ್ತು ತ್ರಿಶೂರ್ ಮುಳುಗಿವೆ. ಪರವೂರು, ಕಾಲಡಿ, ಚಲಕುಡಿ, ಪೆರುಂಬವೂರು ಮತ್ತು ಮುವತುಪುಳ ಸೇರಿದಂತೆ ಹಲವು ಪಟ್ಟಣಗಳು ಅತ್ಯಂತ ಹೆಚ್ಚು ಹಾನಿಗೆ ಈಡಾಗಿವೆ.

ಇಡುಕ್ಕಿ ಮತ್ತು ವೇನಾಡು ಪ್ರದೇಶ ಹಾಗೂ ಪಟ್ಟಣಂತಿಟ್ಟದ ಕೆಲವು ಪ್ರದೇಶದಲ್ಲಿ ನೀರಿನ ಪ್ರಮಾಣ ಸ್ವಲ್ಪ ತಗ್ಗಿದೆ.

ಮುಖ್ಯ ವಾಣಿಜ್ಯ ನಗರವಾಗಿರುವ ಕೋಚಿಯ ವಿಮಾನ ನಿಲ್ದಾಣ ಪ್ರವಾಹಕ್ಕೆ ತತ್ತರಿಸಿದ್ದು ವಿಮಾನಯಾನ ಕಾರ್ಯಾಚರಣೆಯನ್ನು ಆಗಸ್ಟ್ ೨೬ರವರೆಗೆ ಅಮಾನತುಗೊಳಿಸಲಾಗಿದೆ. ಇಲ್ಲಿಗೆ ಬರುವ ವಿಮಾನಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ೨೫ಕ್ಕೂ ಹೆಚ್ಚು ರೈಲುಗಳ ಪಯಣ ರದ್ದು ಪಡಿಸಲಾಗಿದೆ ಅಥವಾ ವೇಳೆ ಬದಲಾವಣೆ ಮಾಡಲಾಗಿದೆ.

ರೈಲ್ವೆಯು ಸೇನೆಯ ನೆರವಿನೊಂದಿಗೆ ಪ್ರವಾಹ ಪೀಡಿತರಿಗೆ ಆಹಾರ ತಲುಪಿಸಲು ಶೀಘ್ರವೇ ವಿಶೇಷ ಪ್ರವಾಹ ಪರಿಹಾರ ರೈಲುಗಳನ್ನು ಓಡಿಸಲಿದೆ ಎಂದು ದಕ್ಷಿಣ ರೈಲ್ವೇಯ ತಿರುವನಂತಪುರಂ ವಿಭಾಗದ ವಕ್ತಾರು ಈದಿನ ಇಲ್ಲಿ ತಿಳಿಸಿದರು.

ಅಧಿಕಾರಿಗಳು ಬಸ್ಸು, ಟ್ರಕ್ ಮತ್ತು ಇತರ ದೊಡ್ಡ ವಾಹನಗಳನ್ನು ಪರಿಹಾರ ಕಾರ್ಯಕ್ಕಾಗಿ ಬಳಸುತ್ತಿದ್ದಾರೆ.

ರಸ್ತೆ ಸಂಪರ್ಕ ಕಡಿತದ ಪರಿಣಾಮವಾಗಿ ಹಲವಾರು ಪ್ರದೇಶಗಳಲ್ಲಿ ಇಂಧನ ಸಮಸ್ಯೆ ತಲೆದೋರಿದೆ. ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಿಲಿಂಡರುಗಳ ಕೊರತೆಯುಂಟಾಗಿದೆ. ಔಷಧದ ಅಭಾವವೂ ಕೇರಳದ ಹೆಚ್ಚುತ್ತಿರುವ ಸಮಸ್ಯೆಗಳಿಗೆ ತನ್ನ ಕಾಣಿಕೆಯನ್ನು ಸಲ್ಲಿಸಿದೆ.

No comments:

Post a Comment