ನಾನು ಮೆಚ್ಚಿದ ವಾಟ್ಸಪ್

Friday, August 10, 2018

ಇಂದಿನ ಇತಿಹಾಸ History Today ಆಗಸ್ಟ್ 10


2018: ತಿರುವನಂತಪುರಂ: ಕೇರಳದಲ್ಲಿ ಬಿಡುವಿಲ್ಲದ ಮುಸಲಧಾರೆ ಮುಂದುವರೆದು ಪರಿಸ್ಥಿತಿ ಇನ್ನೂ ಗಂಭೀರವಾಯಿತು. ಜಡಿ ಮಳೆ, ದಿಢೀರ್ ಪ್ರವಾಹ, ಭೂಕುಸಿತಗಳಲ್ಲಿ ಮೃತರಾದವರ ಸಂಖ್ಯೆ ಶುಕ್ರವಾರ ೩೦ಕ್ಕೆ ಏರಿತು. ಇಡುಕ್ಕಿ ಜಿಲ್ಲೆಯೊಂದರಲ್ಲೇ ೧೧ ಜನ, ಮಲಪ್ಪುರಂನಲ್ಲಿ ೬ ಜನ ಕೋಯಿಕ್ಕೋಡ್ ಮತ್ತು ವೇನಾಡ್ ಜಿಲ್ಲೆಗಳಲ್ಲಿ ತಲಾ ಇಬ್ಬರು ಸಾವನ್ನಪ್ಪಿದರು. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ಆಗಸ್ಟ್ ೧೨ರಂದು ಪ್ರವಾಹ ಪ್ರದೇಶದ ಸಮೀಕ್ಷೆ ನಡೆಸುವುದಾಗಿ ಪ್ರಕಟಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ’ಕೇರಳದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಹೇಳಿದ್ದು, ಅಯನ್ನಕುಲು, ಇಡುಕ್ಕಿ ಮತ್ತು ವೇನಾಡ್ ಜಿಲ್ಲೆಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕೆ ಸೇನೆಯನ್ನು ನಿಯೋಜಿಸಲಾಯಿತು. ವಿವಿಧ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಗರಿಷ್ಠ ಪ್ರಮಾಣವನ್ನು ಮೀರಿರುವುದರಿಂದ ಕೇರಳದ ಕನಿಷ್ಠ ೨೪ ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಹೊರಬಿಡಲು ತೂಬುಗಳನ್ನು (ಕವಾಟ) ತೆರೆಯಲಾಯಿತು.  ಇಡುಕ್ಕಿ ಅಣೆಕಟ್ಟಿನ ಐದು ತೂಬುಗಳ ಪೈಕಿ ನಾಲ್ಕು ತೂಬುಗಳನ್ನು ತೆರೆಯಲಾಯಿತು. ಇಡುಕ್ಕಿ ಅಣೆಕಟ್ಟಿನ ಜಲಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲುವಕ್ಕೆ ಇನ್ನಷ್ಟು ಸೇನಾ ತುಕಡಿಗಳನ್ನು ಕಳುಹಿಸುವಂತೆ ಕೋರಲಾಗಿದ್ದು, ರಾತ್ರಿ ೧೦ ಗಂಟೆ ಸುಮಾರಿಗೆ ತಲುಪುವ ನಿರೀಕ್ಷೆ ಇದೆ ಎಂದು ವರದಿಗಳು ಹೇಳಿದವು. ಎನ್ ಡಿ ಆರ್ ಎಫ್ ಸಿಬ್ಬಂದಿ ಮತ್ತು ಸೇನಾ ಸಿಬ್ಬಂದಿಯನ್ನು ಒಳಗೊಂಡ ರಕ್ಷಣಾ ತಂಡಗಳು ಭೂಕುಸಿತಗಳಲ್ಲಿ ಸಿಕ್ಕಿಹಾಕಿಕೊಂಡವರ ರಕ್ಷಣೆಗಾಗಿ ಶತ ಪ್ರಯತ್ನ ನಡೆಸುತ್ತಿದ್ದು, ಅಧಿಕಾರಿಗಳು ಉಕ್ಕುತ್ತಿರುವ ನದಿಗಳ ದಂಡೆಗಳಲ್ಲಿ ಇರುವ ಕುಟುಂಬಗಳನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು.  ಪಲ್ಲಿವಾಸಲ್ ವಿಶ್ರಾಂತಿಧಾಮಕ್ಕೆ ಹೋಗುವ ರಸ್ತೆ ಹಾನಿಗೊಂಡಿದ್ದು, ಅಲ್ಲಿನ ಕಟ್ಟಡವೊಂದರಲ್ಲಿ ವಿದೇಶೀ ಪ್ರವಾಸಿಗರ ಗುಂಪೊಂದು ಸಿಕ್ಕಿಹಾಕಿಕೊಂಡಿದೆ ಎಂಬ ವರದಿಗಳನ್ನು ಅನುಸರಿಸಿ ರಸ್ತೆಯನ್ನು ತುರ್ತಾಗಿ ದುರಸ್ತಿಪಡಿಸುವ ಪ್ರಯತ್ನಗಳನ್ನು ನಡೆಸಲಾಯಿತು.  ಗೃಹ ಸಚಿವ ರಾಜನಾಥ್ ಸಿಂಗ್ ಸಮೀಕ್ಷೆ: ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಆಗಸ್ಟ್ ೧೨ರಂದು ಸಮೀಕ್ಷೆ ನಡೆಸಲಿರುವುದಾಗಿ ಪ್ರಕಟಿಸಿದರು. ಇದಕ್ಕೆ  ಮುನ್ನ ಮಳೆ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಇದಕ್ಕೆ ಮುನ್ನ ಅವರು ಕೇರಳ ಸರ್ಕಾರಕ್ಕೆ ಭರವಸೆ ನೀಡಿದರು.

2018: ನವದೆಹಲಿ: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ದಿನ  ರಾಜ್ಯಸಭೆಯಲ್ಲಿ ಮಾಡಿದ ಟೀಕೆಗಳನ್ನು ಕಡತದಿಂದ ಕಿತ್ತು ಹಾಕಿದ ಅಪರೂಪದ ಘಟನೆ  ಈದಿನ ಘಟಿಸಿತು. ಪ್ರಧಾನಿ ಮೋದಿ ಅವರು ಕೆಲವು ಮಾತುಗಳು ’ಆಕ್ಷೇಪಾರ್ಹ ಎಂಬುದಾಗಿ ಕಂಡು ಬಂದದ್ದರಿಂದ ಅವುಗಳನ್ನು ಕಡತದಿಂದ ಕಿತ್ತು ಹಾಕಲಾಗಿದೆ ಎಂದು ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು  ಹೇಳಿದರು. ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಜಯಗಳಿಸಿದ ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಅಭಿನಂದಿಸಿ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಮಾಡಿದ ಟೀಕೆಗಳನ್ನು ಕಿತ್ತು ಹಾಕಬೇಕು ಎಂದು ಹಲವು ಸದಸ್ಯರು ಆಗ್ರಹಿಸಿದ್ದರು ಪ್ರಧಾನಿಯವರ ಮಾತುಗಳಲ್ಲಿ ಆಕ್ಷೇಪಾರ್ಹವಾದುದು ಇದೆಯೇ ಎಂಬುದಾಗಿ ಪರಿಶೀಲಿಸುವುದಾಗಿ ಸಭಾಪತಿ ನಾಯ್ಡು  ಹೇಳಿದ್ದರು.  ಹರಿವಂಶ್ ಸಿಂಗ್ ಅವರನ್ನು ಅಭಿನಂದಿಸಿ ಮಾತನಾಡಿದ ಪ್ರಧಾನಿ ಮೋದಿ ’ಅವರು (ಸಿಂಗ್) ಬರವಣಿಗೆ ಪ್ರತಿಭೆಯ ಆಶೀರ್ವಾದ ಪಡೆದವರು. ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಜಿ ಅವರ ಒಲವಿನ ವ್ಯಕ್ತಿಯೂ ಆಗಿದ್ದರು. ಈಗ ನಾವೆಲ್ಲರೂ ಹರಿಭರೋಸೆ (ಈಗ ನಾವೆಲ್ಲರೂ ಅವರನ್ನು ಅವಲಂಬಿಸಿದ್ದೇವೆ)’ ಎಂದು ಹೇಳಿದ್ದರು.  ಮುಂದುವರೆದ ಮೋದಿ ಉಪ ಸಭಾಪತಿ ಚುನಾವಣೆಯಲ್ಲಿ ಹರಿವಂಶ್ ನಾರಾಯಣ ಸಿಂಗ್ ಅವರ ವಿರುದ್ಧ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ಸಿನ ಬಿಕೆ ಹರಿಪ್ರಸಾದ್ ಬಗ್ಗೆ ಮಾತನಾಡಿದ್ದರು. ಆ ಮಾತುಗಳನ್ನು ಇದೀಗ ಕಡತದಿಂದ ಕಿತ್ತು ಹಾಕಲಾಯಿತು.  ಪ್ರಧಾನಿಯವರ ಮಾತುಗಳನ್ನು ಕಡತದಿಂದ ಹೀಗೆ ಕಿತ್ತು ಹಾಕುವುದು ಅಪರೂಪದಲ್ಲಿ ಅಪರೂಪ.  ಪ್ರಧಾನಿ ಮೋದಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಬಿಕೆ ಹರಿಪ್ರಸಾದ್ ಅವರು ’ಪ್ರಧಾನಿಯವರು ಪೀಠದ ಘನತೆಯನ್ನು ತೃಣೀಕರಿಸಿದ್ದಾರೆ ಮತ್ತು ಸದನದ ಘನತೆಯನ್ನು ಕುಗ್ಗಿಸಿದ್ದಾರೆ. ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿದ್ದರು.  ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯು (ಎನ್ ಸಿಪಿ) ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರಲು ನಿರ್ಧರಿಸಿದ ಬಳಿಕ ಕೊನೆಯ ಗಳಿಗೆಯಲ್ಲಿ ವಿರೋಧಿ ಅಭ್ಯರ್ಥಿ, ಹರಿಪ್ರಸಾದ್ ಅವರನ್ನು ವಿಪಕ್ಷಗಳ ಜಂಟಿ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು.  ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಬಿಜು ಜನತಾದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಅವರಿಗೆ ದೂರವಾಣಿ ಕರೆ ಮಾಡಿದ ಬಳಿಕ ಎನ್ ಸಿಪಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವ ನಿರ್ಧಾರ ಮಾಡಿದ್ದರು. ಪಟ್ನಾಯಕ್ ಅವರು ಬಿಜೆಡಿಯು ಎನ್ ಡಿಎ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ಶರದ್ ಪವಾರ್ ಅವರಿಗೆ ತಿಳಿಸಿದ್ದರು.  ರಾಜ್ಯಸಭಾ ಉಪಸಭಾಪತಿ ಚುನಾವಣೆಯು ಕಠಿಣ ರಾಜಕೀಯ ಸ್ಪರ್ಧೆ ಮತ್ತು ಈ ವರ್ಷದ ಕೊನೆಗೆ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ಮತ್ತು ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿನ ವರ್ಷದಲ್ಲಿ ರೂಪಿಸಲ್ಪಡಬಹುದಾದ ಹೊಂದಾಣಿಕೆಗಳ ಲೆಕ್ಕಾಚಾರಗಳ ಪ್ರತಿಫಲನವಾಗಿದೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಯಿತು. ಅಲ್ಲದೆ ಒಗ್ಗೂಡಲು ಇನ್ನೂ ತಿಣುಕಾಡುತ್ತಿರುವ ವಿರೋಧ ಪಕ್ಷಗಳ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಈಗಲೂ ಮೇಲುಗೈಯನ್ನು ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಭಾವಿಸಲಾಯಿತು.

2018: ನವದೆಹಲಿ: ಮುಸ್ಲಿಂ ಮಹಿಳಾ (ಮದುವೆ ಹಕ್ಕುಗಳ ಸಂರಕ್ಷಣೆ) ಮಸೂದೆ, ೨೦೧೭ ಅಥವಾ ತ್ರಿವಳಿ ತಲಾಖ್ ಮಸೂದೆಯನ್ನು ರಾಜ್ಯಸಭೆಯಲ್ಲಿ ಈದಿನ ಚರ್ಚೆಗೆ ಎತ್ತಿಕೊಳ್ಳಲಾಗುವುದಿಲ್ಲ ಎಂದು ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸದನಕ್ಕೆ ಈದಿನ ಮಧ್ಯಾಹ್ನ ತಿಳಿಸಿದರು.  ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾಗಿರುವುದರಿಂದ ಈಗ ಮಸೂದೆಯು ಕಾನೂನಾಗಿ ಜಾರಿಗೆ ಬರಲು ಸಂಸತ್ತಿನ ಚಳಿಗಾಲದ ಅಧಿವೇಶನದವರೆಗೆ ಕಾಯಬೇಕಾಗುತ್ತದೆ.  ಮುಸ್ಲಿಮ್ ಪುರುಷರು ತಮ್ಮ ಪತ್ನಿಯರಿಗೆ ಒಂದೇ ಉಸಿರಿಗೆ ಮೂರು ಬಾರಿ ’ತಲಾಖ್ ಶಬ್ದ ಉಸುರಿ ದಿಢೀರ್ ವಿಚ್ಛೇದನ ನೀಡುವುದನ್ನು ನಿಷೇಧಿಸುವ ಈ ಮಸೂದೆಯನ್ನು ಲೋಕಸಭೆ ೨೦೧೭ರ ಡಿಸೆಂಬರ್ ೨೮ರಂದು ಅಂಗೀಕರಿಸಿತ್ತು. ಕೇಂದ್ರ ಸಚಿವ ಸಂಪುಟವು ಹಿಂದಿನ ದಿನ ಮಸೂದೆಗೆ ಮೂರು ನಿರ್ಣಾಯಕ ತಿದ್ದುಪಡಿಗಳನ್ನು ತರಲು ಒಪ್ಪಿಗೆ ನೀಡಿತ್ತು. ವಿಚಾರಣೆ ಆರಂಭಕ್ಕೆ ಮುನ್ನ ಆರೋಪಿಗೆ ಜಾಮೀನು ನೀಡಲು ಅವಕಾಶ ಕಲ್ಪಿಸುವ ವಿಧಿಯನ್ನು ಮಸೂದೆಗೆ ಸೇರ್ಪಡೆ ಮಾಡುವುದು ಇವುಗಳಲ್ಲಿ ಪ್ರಮುಖ ತಿದ್ದುಪಡಿಯಾಗಿತ್ತು.  ಮಸೂದೆಯನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷವು ಮೂರು ಬೇಡಿಕೆಗಳನ್ನು ಮುಂದಿಟ್ಟಿದ್ದು, ಅವುಗಳಲ್ಲಿ ಜಾಮೀನು ವಿದಿಯ ಸೇರ್ಪಡೆ ಒಂದಾಗಿತ್ತು.  ಸಂತ್ರಸ್ಥ ಮಹಿಳೆಯ ನಿಕಟ ಬಂಧುವಿಗೆ ಆಕೆಯ ಪರವಾಗಿ ದೂರು ದಾಖಲಿಸಲು ಅವಕಾಶ ನೀಡಬೇಕು ಮತ್ತು ದಂಪತಿ ನಡುವಣ ಜಗಳವನ್ನು ಇತ್ಯರ್ಥ ಪಡಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟರಿಗೆ ನೀಡಬೇಕು ಎಂಬುದು ಕಾಂಗ್ರೆಸ್ ಮುಂದಿಟ್ಟಿದ್ದ ಇತರ ಎರಡು ಬೇಡಿಕೆಗಳಾಗಿದ್ದು, ಅವುಗಳನ್ನು ಮಸೂದೆಗೆ ಸೇರ್ಪಡೆ ಮಾಡಲು ಸರ್ಕಾರ ನಿರಾಕರಿಸಿತ್ತು.  ಮಸೂದೆಯ ಪ್ರಕಾರ, ಒಂದೇ ಉಸಿರಿಗೆ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಅಕ್ರಮ ಮತ್ತು ಅಸಿಂಧುವಾಗಿದ್ದು ಇಂತಹ ತಪ್ಪೆಸಗಿದ ಪತಿಗೆ ಮೂರು ವರ್ಷಗಳ ಅವಧಿಯ ಸೆರೆವಾಸವನ್ನು ವಿಧಿಸಬಹುದು. ಹಿಂದಿನ ದಿನ ಕೇಂದ್ರ ಸಂಪುಟವು ಒಪ್ಪಿಗೆ ನೀಡಿರುವ ತಿದ್ದುಪಡಿ ಪ್ರಕಾರ ಮ್ಯಾಜಿಸ್ಟ್ರೇಟರು ಜಾಮೀನು ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಮೂಲಗಳು ಹೇಳಿದವು. ಪ್ರಸ್ತಾಪಿತ ಕಾನೂನು ಒಂದೇ ಉಸಿರಿನ ತ್ರಿವಳಿ ತಲಾಖ್ ಅಥವಾ ’ತಲಾಖ್-ಇ-ಬಿದ್ದತ್ ಗೆ ಮಾತ್ರ ಅನ್ವಯಿಸುವುದು. ಇದು ಶೋಷಿತ ಮಹಿಳೆಯು ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಿ ತನಗೆ ಮತ್ತು ಅಪ್ರಾಪ್ತ ಮಕ್ಕಳಿಗೆ ಜೀವನಾಧಾರ ಭತ್ಯೆ ಒದಗಿಸುವಂತೆ ಕೋರಲು ಅವಕಾಶ ಕಲ್ಪಿಸುತ್ತದೆ.  ಮಹಿಳೆಯು ತನ್ನ ಅಪ್ರಾಪ್ತ ಮಕ್ಕಳನ್ನು ತನ್ನ ವಶಕ್ಕೆ ಒಪ್ಪಿಸುವಂತೆಯೂ ಮ್ಯಾಜಿಸ್ಟ್ರೇಟರನ್ನು ಕೋರಬಹುದು. ಮ್ಯಾಜಿಸ್ಟ್ರೇಟರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುತ್ತದೆ.

2018: ನವದೆಹಲಿ: ಸರ್ಕಾರ ಪ್ರಸ್ತಾಪಿಸುತ್ತಿರುವ ಏಕ ಕಾಲದ ಚುನಾವಣೆಗಳಿಗೆ ಪರ್ಯಾಯವಾಗಿ ಒಂದು ವರ್ಷದಲ್ಲಿ ಒಂದು ಚುನಾವಣೆ ನಡೆಸುವ ಪ್ರಸ್ತಾಪವನ್ನು ಚುನಾವಣಾ ಆಯೋಗ ಮುಂದಿಟ್ಟಿತು.  ಸುದ್ದಿವಾಹಿನಿ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಲಹೆ ಮಾಡಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಓಂ ಪ್ರಕಾಶ್ ರಾವತ್ ಅವರು ’ಏಕ ಕಾಲದ ಚುನಾವಣೆಗೆ ಹೆಚ್ಚು ಮಾನವ ಶಕ್ತಿಯನ್ನು, ವಿಶೇಷವಾಗಿ ಭದ್ರತಾ ಪಡೆಗಳನ್ನು ನಿಯೋಜಿಸಬೇಕಾದ ಅಗತ್ಯ ಬೀಳುತ್ತದೆ ಎಂದು ಹೇಳಿದರು.  ರಾವತ್ ಅವರು ಈ ಹಿಂದೆಯೂ ಎಕ ಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಎಚ್ಚರಿಕೆ ನೀಡಿದ್ದರು. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆಯನ್ನು ಏಕಕಾಲದಲ್ಲಿ ನಡೆಸಲು ಶಾಸನಬದ್ಧ ಚೌಕಟ್ಟು ಬೇಕಾಗುತ್ತದೆ. ಇದನ್ನು ರೂಪಿಸಲು ದೀರ್ಘಕಾಲ ಬೇಕಾಗಬಹುದು ಎಂದು ಅವರು ಹೇಳಿದ್ದರು.  ನಾವು ಕುದುರೆಯ ಮುಂದೆ ಬಂಡಿಯನ್ನು ಇರಿಸಲು ಸಾಧ್ಯವಿಲ್ಲ. ಸಾಗಣೆ ವಿಷಯಗಳು ಶಾಸನ ಬದ್ಧ ಚೌಕಟ್ಟಿಗೆ ಆಧೀನವಾಗಿರುತ್ತವೆ. ಶಾಸನಬದ್ಧ ಚೌಕಟ್ಟು ರೂಪಿಸದೆ, ನಾವು ಬೇರೆ ಏನನ್ನೂ ಮಾತನಾಡುವುದು ಸರಿಯಲ್ಲ. ಏಕೆಂದರೆ ಶಾಸನಬದ್ಧ ಚೌಕಟ್ಟು ರೂಪಿಸಲು ಸಮಯ ಹಿಡಿಯುತ್ತದೆ. ಕಾನೂನು ಬದಲಾವಣೆಗೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕು. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.
ಚುನಾವಣೆಗೆ ೪೮ ಗಂಟೆ ಮುಂಚಿತವಾಗಿ ಯಾವುದೇ ಚುನಾವಣೆ ಸಂಬಂಧಿಸಿ ಸುದ್ದಿಗಳನ್ನು ಹಾಕದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೂ ಸೂಚಿಸಲಾಗುವುದು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜಾರಿಗೆ ತರುವ ಮುನ್ನ, ಮೊದಲಿಗೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಪ್ರಾಯೋಗಿಕವಾಗಿ ಈ ಕಲ್ಪನೆಯನ್ನು ಜಾರಿಗೊಳಿಸಲಾಗುವುದು ಎಂದು ಅವರು ನುಡಿದರು.  ವಿವಿಪ್ಯಾಟ್ ಯಂತ್ರಗಳು ಸುರಕ್ಷಿತವಾಗಿವೆ ಮತ್ತು ವಿದ್ಯುನ್ಮಾನ ಮತ ಯಂತ್ರಗಳಲ್ಲಿನ ವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ರಾವತ್ ಹೇಳಿದರು.

2018: ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರು ಆಗಸ್ಟ್ ೧೮ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನ ತೆಹೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕರೊಬ್ಬರು ಇಲ್ಲಿ ತಿಳಿಸಿದರು. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಭಾರತದ ಕ್ರಿಕೆಟಿಗರಾದ ಕಪಿಲ್ ದೇವ್, ನವಜೋತ್ ಸಿಂಗ್ ಸಿಧು ಮತ್ತು ಸುನಿಲ್ ಗಾವಸ್ಕರ್ ಅವರನ್ನು ರಾಜಕಾರಣಿಯಾಗಿ ಬದಲಾದ ಕ್ರಿಕೆಟಿಗನ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದೆ ಎಂದು ಸೆನೆಟರ್ ಫೈಸಲ್ ಜಾವೇದ್ ಟ್ವೀಟ್ ಮಾಡಿದರು.  ‘ಇಮ್ರಾನ್ ಖಾನ್ ಅವರು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನದ ಪ್ರಧಾನಿಯಾಗಿ ೧೮ ಆಗಸ್ಟ್ ೨೦೧೮ರಂದು (ಅಲ್ಲಾಹ್ ಬಯಸಿದರೆ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಜಾವೇದ್ ಟ್ವೀಟ್ ಮಾಡಿದರು.  ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಆಗಸ್ಟ್ ೧೩ರಂದು ರಾಷ್ಟ್ರೀಯ ಅಸೆಂಬ್ಲಿಯ ಸಮಾವೇಶವನ್ನು ಕರೆದ ಬಳಿಕ ಜಾವೇದ್ ಅವರ ಟ್ವೀಟ್ ಬಂದಿತು. ಸಮಾವೇಶದಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸುವರು. ಪಿಟಿಐಯ ಸಂಸದೀಯ ಸಮಿತಿಯು ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಸಂಸದೀಯ ನಾಯಕ ಮತ್ತು ಪಾಕಿಸ್ತಾನದ ಮುಂದಿನ ಪ್ರಧಾನಿ ಸ್ಥಾನಕ್ಕೆ ಅಧಿಕೃತವಾಗಿ ನಾಮಕರಣ ಮಾಡಿತ್ತು. ಜುಲೈ ೨೫ರ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ೧೧೬ ಸ್ಥಾನಗಳನ್ನು ಗೆದ್ದಿರುವ ಪಿಟಿಐ ಕೆಳಮನೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿತ್ತು. ಮುಂದಿನ ಪ್ರಧಾನ ಮಂತ್ರಿಗೆ ಪ್ರಮಾಣವಚನ ಬೋಧಿಸಬೇಕಾಗಿರುವ ಕಾರಣ ಅಧ್ಯಕ್ಷ ಮಮ್ನೂನ್ ಹುಸೇನ್ ಅವರುತಮ್ಮ ಸ್ಕಾಟ್ಲೆಂಡ್ ಭೇಟಿಯನ್ನು ಮುಂದೂಡಲು ನಿರ್ಧರಿಸಿದ್ದಾರೆ ಎಂದು ಪತ್ರಿಕಾ ವರದಿಯೊಂದು ಹೇಳಿತು. ಆಗಸ್ಟ್ ೧೬ರಿಂದ ೧೯ರವರೆಗೆ ಮಮ್ನೂನ್ ಅವರ ಎಡಿನ್ ಬರೋ ಪ್ರವಾಸ ನಿಗದಿಯಾಗಿತ್ತು. ಅಧ್ಯಕ್ಷರು ಈಗ ಪ್ರಮಾಣವಚನ ಸಮಾರಂಭದ ಬಳಿಕ ತಮ್ಮ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತು.

2015: ವಾಷಿಂಗ್ಟನ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ಎಸ್) ಇರುವ 6 ಬಾಹ್ಯಾಕಾಶಯಾನಿಗಳು ಅಂತರಿಕ್ಷದಲ್ಲಿ ಬೆಳೆದ ಎಲೆಕೋಸನ್ನು ಹೋಲುವ ಸೊಪ್ಪು ತಿಂದು ತೇಗಿದರು. ತನ್ಮೂಲಕ ಅವರು ಇತಿಹಾಸವೊಂದನ್ನು ಸೃಷ್ಟಿಸಿದರು. ಅಂತರಿಕ್ಷದಲ್ಲಿ ಪರಿಭ್ರಮಿಸುತ್ತಿರುವ ಐಎಸ್ಎಸ್ನಲ್ಲೇ ಇರುವ ವೆಜ್-01 ಎಂಬ ಪರಿಭ್ರಮಿಸುತ್ತಿರುವ ಹಸಿರು ಮನೆಯಲ್ಲಿಯೇ  (ಗ್ರೀನ್ ಹೌಸ್) ಸೊಪ್ಪನ್ನು ಬೆಳೆಸಲಾಗಿತ್ತು. ಮಂಗಳ ಗ್ರಹಕ್ಕೆ ಯಾನ ಕೈಗೊಳ್ಳಲಿರುವವರಿಗೆ ಆಹಾರವನ್ನು ಪ್ರತ್ಯೇಕವಾಗಿ ರವಾನಿಸಲು ಸಾಧ್ಯವಿಲ್ಲ. ಆದಕಾರಣ ಅಂತರಿಕ್ಷದಲ್ಲೇ ಸೊಪ್ಪು, ತರಕಾರಿ ಬೆಳೆಯುವ ಪ್ರಯೋಗವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೈಗೊಂಡಿತ್ತು. 2014ರ ಮೇ ತಿಂಗಳಿನಲ್ಲಿ ಐಎಸ್ಎಸ್ನಲ್ಲಿ ಈ ಪ್ರಯೋಗಕ್ಕೆಂದೇ ಪ್ರತ್ಯೇಕವಾದ ವೆಜ್ಜಿ ಎಂಬ ಹಸಿರು ಮನೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಬೀಜ ಹಾಕಿದ 33 ದಿನಗಳ ಬಳಿಕ ಸೊಪ್ಪು ಸೊಗಸಾಗಿ ಬೆಳೆದಿತ್ತು. ಮೊದಲ ಬೆಳೆಯನ್ನು ಶೀತವಾತಾವರಣದಲ್ಲಿ ಇರಿಸಿ, ಭೂಮಿಗೆ ರವಾನಿಸಿ, ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಪ್ರಯೋಗಗಳು ಮುಂದುವರಿದಿರುವಂತೆ 2015ರ ಜುಲೈ 8ರಂದು 2ನೇ ಸುತ್ತಿನ ಬೆಳೆಗೆ ಬೀಜ ಹಾಕಲಾಗಿತ್ತು. 33 ದಿನಗಳ ಬಳಿಕ ಅದು ಚೆನ್ನಾಗಿ ಬೆಳೆಯಿತು. ಅದನ್ನು ಬಾಹ್ಯಾಕಾಶಯಾನಿಗಳು ಈದಿನ ತಿಂದಿದ್ದಾಗಿ ನಾಸಾ ತಿಳಿಸಿತು. ನಾಸಾದ ಪ್ರಕಾರ ಟೊಮ್ಯಾಟೋ, ನೀಲಿ ಬೆರಿ ಮತ್ತು ಎಲೆಕೋಸನ್ನು ಹೋಲುವ ಸೊಪ್ಪನ್ನು ಅಂತರಿಕ್ಷದಲ್ಲಿ ಚೆನ್ನಾಗಿ ಬೆಳೆಯಬಹುದು. ಈ ರೀತಿಯ ಬೆಳೆಗಳನ್ನು ತಿನ್ನುವುದರಿಂದ ಅಂತರಿಕ್ಷಯಾನದಲ್ಲಿರುವ ಬಾಹ್ಯಾಕಾಶಯಾನಿಗಳ ಲಹರಿ ಚೆನ್ನಾಗಿರುತ್ತದೆ. ಜತೆಗೆ ವಿಕಿರಣಗಳಿಂದ ಅವರಿಗೆ ರಕ್ಷಣೆ ಸಿಗುತ್ತದೆ.

2015: ಹೈದರಾಬಾದ್: ತೆಲಂಗಾಣದ ಬ್ರಾಂಡ್ ಅಂಬಾಸಿಡರ್ ಹಾಗೂ ಇತ್ತೀಚೆಗಷ್ಟೇ ವಿಂಬಲ್ಡನ್ ಡಬಲ್ಸ್ ಚಾಂಪಿಯನ್ ಆಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ವಿಧಿಸಲಾಯಿತು. ಹೈದರಾಬಾದ್ ಪೊಲೀಸರು ಈದಿನ  ರಾತ್ರಿ ಕಾರಿನ ನಂಬರ್ ಪ್ಲೇಟ್ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕಾಗಿ ಸಾನಿಯಾ ಮಿರ್ಜಾ ಅವರಿಗೆ 200 ರೂಪಾಯಿ ದಂಡ ವಿಧಿಸಿದರು. ಟ್ರಾಫಿಕ್ ಪೊಲೀಸರು ನಿಗದಿ ಪಡಿಸಿದ ಸ್ವರೂಪದಲ್ಲಿ ಆಕೆಯ ಕಾರಿನ ನಂಬರ್ ಪ್ಲೇಟ್ ಇರಲಿಲ್ಲ. ಹೀಗಾಗಿ ಪೊಲೀಸರು ಆಕೆಗೆ 200 ರೂಪಾಯಿಗಳ ದಂಡ ವಿಧಿಸಿ ಚಲನ್ ನೀಡಿದರು ಎಂದು ಪೊಲೀಸ್ ಮೂಲಗಳು ತಿಳಿಸಿದವು. ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಸಂಚಾರಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದಾಗ ನಿಯಮಾವಳಿಯ ಉಲ್ಲಂಘನೆ ಗಮನಕ್ಕೆ ಬಂತು ಎಂದು ಪೊಲೀಸ್ ಮೂಲಗಳು ಹೇಳಿದವು..

2008: ಉತ್ತರಖಂಡದ ಮುಖ್ಯಮಂತ್ರಿ ಬಿ.ಸಿ.ಖಂಡೂರಿ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಭಗತ್ಸಿಂಗ್ ಕೋಶಿಯಾರಿ ನೇತೃತ್ವದಲ್ಲಿ 26 ಶಾಸಕರು ತಿರುಗಿಬಿದ್ದ ಪರಿಣಾಮವಾಗಿ ಆಡಳಿತಾರೂಢ ಬಿಜೆಪಿ ಸರ್ಕಾರ ತೊಂದರೆಯಲ್ಲಿ ಸಿಲುಕಿತು.

2007: ಭಾರತದ ಹದಿಮೂರನೇ ಉಪ ರಾಷ್ಟ್ರಪತಿಯಾಗಿ ಯುಪಿಎ-ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ರಾಯಭಾರಿ 70 ವರ್ಷದ ಮೊಹಮ್ಮದ್ ಹಮೀದ್ ಅನ್ಸಾರಿ ನಿರೀಕ್ಷೆಯಂತೆ ಭಾರಿ ಬಹುಮತದೊಂದಿಗೆ ಜಯ ಗಳಿಸಿದರು. ರಾಜ್ಯಸಭೆಯ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಜನರಲ್ ಯೋಗೇಂದ್ರ ನರೇನ್ ಈದಿನ ಸಂಜೆ ಚುನಾವಣಾ ಫಲಿತಾಂಶ ಪ್ರಕಟಿಸಿದರು. ಚುನಾವಣೆಯಲ್ಲಿ ಎನ್ ಡಿಎ ಮತ್ತು ತೃತೀಯ ರಂಗದ ಅಭ್ಯರ್ಥಿಗಳೂ ಕಣದಲ್ಲಿ ಉಳಿದಿದ್ದುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಮಾತ್ರ ಮತಾಧಿಕಾರ ಇದ್ದ ಈ ಚುನಾವಣೆಯಲ್ಲಿ ಒಟ್ಟು 788 ಮತಗಳ ಪೈಕಿ ಚಲಾವಣೆಯಾದ 762 ಮತಗಳಲ್ಲಿ ಹಮೀದ್ ಅನ್ಸಾರಿ ಅವರು 455 ಮತ ಪಡೆದರೆ, ಎನ್ ಡಿಎ ಬೆಂಬಲಿತ ಅಭ್ಯರ್ಥಿ ರಾಜ್ಯಸಭೆ ಮಾಜಿ ಉಪಸಭಾಪತಿ ನಜ್ಮಾ ಹೆಫ್ತುಲ್ಲಾ 222 ಮತಗಳನ್ನು ಗಳಿಸಿದರು. ತೃತೀಯ ರಂಗದ ಅಭ್ಯರ್ಥಿ ಸಮಾಜವಾದಿ ಪಕ್ಷದ ರಶೀದ್ ಮಸೂದ್ ಕೇವಲ 75 ಮತ ಪಡೆದರು. ಹತ್ತು ಮತಗಳು ತಿರಸ್ಕೃತವಾದವು.

2007: ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆಗೆ ಸುದಿನ. ಆದರೆ ಬೌಲಿಂಗಿನಲ್ಲಿ ಅಲ್ಲ. ಟೆಸ್ಟ್ ಕ್ರಿಕೆಟ್ಟಿಗೆ ಕಾಲಿರಿಸಿದ 17 ವರ್ಷಗಳ ಬಳಿಕ ಬೆಂಗಳೂರಿನ ಆಟಗಾರನ ಬ್ಯಾಟಿನಿಂದ ಚೊಚ್ಚಲ ಶತಕವೊಂದು ಹೊರಹೊಮ್ಮಿತು. ಅದೂ ಇಂಗ್ಲೆಂಡ್ ನೆಲದಲ್ಲಿ! ಸದಾ ಕಾಲ ನೆನಪಿನಲ್ಲಿ ಇಡಬೇಕಾದ ಕ್ಷಣಕ್ಕೆ ಕುಂಬ್ಳೆ (ಔಟಾಗದೇ 110) ಅವರ ಆಟ ಸಾಕ್ಷಿಯಾಯಿತು. ಇಂಗ್ಲೆಂಡ್ ವಿರುದ್ಧ ಲಂಡನ್ನಿನಲ್ಲಿ ನಡೆದ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದ ಮೊದಲ ಇನ್ನಿಂಗ್ಸಿನಲ್ಲಿ ಟೀಮ್ ಇಂಡಿಯಾ ಭಾರಿ ಮೊತ್ತ ಪೇರಿಸಿತು. ರಾಹುಲ್ ದ್ರಾವಿಡ್ ಪಡೆಯು ತಮ್ಮ ಮೊದಲ ಇನ್ನಿಂಗ್ಸಿನಲ್ಲಿ 174 ಓವರುಗಳಲ್ಲಿ 664 ರನ್ನುಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಎರಡನೇ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ ಮೊದಲ ಇನ್ನಿಂಗ್ಸಿನಲ್ಲಿ 8 ಓವರುಗಳಲ್ಲಿ 24 ರನ್ ಸೇರಿಸಿ ಒಂದು ವಿಕೆಟ್ ಕಳೆದುಕೊಂಡಿತು.

2007: ವಿವಾದಿತ ಸೇತುಸಮುದ್ರಂ ಕಡಲ್ಗಾಲುವೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು. ದಂಡಿ ವಿದ್ಯಾನಂದ ಭಾರತಿ ಸ್ವಾಮೀಜಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಜಿ.ಬಾಲಕೃಷ್ಣನ್ ಮತ್ತು ಆರ್.ವಿ. ರವೀಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು ಪೌರಾಣಿಕ 'ರಾಮ ಸೇತು'ವನ್ನು ನಾಶ ಮಾಡದಂತೆ ಸರ್ಕಾರಕ್ಕೆ ಮಧ್ಯಂತರ ಆದೇಶ ಕೊಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿತು. ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶಿಸಿತು.

2007: ವಿಶ್ವ ಚಾಂಪಿಯನ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ 2006ನೇ ಇಸವಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಂದಿದೆ ಎಂದು ಸರ್ಕಾರ ಈದಿನ ಪ್ರಕಟಿಸಿತು. ಅರ್ಜುನ ಪ್ರಶಸ್ತಿ ಪಡೆದವರ ಹೆಸರನ್ನೂ ಪ್ರಕಟಿಸಲಾಗಿದ್ದು, ಆರ್ಚರಿ ಸ್ಪರ್ಧಿ ಜಯಂತ ತೆಂಡೂಲ್ಕರ್, ಅಥ್ಲೀಟ್ ಕೆ. ಮ್ಯಾಥ್ಯು ಬಿನು, ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್, ಟೇಬಲ್ ಟೆನಿಸಿನಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಶುಭಜಿತ್ ಸಹಾ ಹಾಗೂ ಪೆಂಟ್ಯಾಲ ಹರಿಕೃಷ್ಣ ಸೇರಿದಂತೆ ಒಟ್ಟು ಹದಿನಾಲ್ಕು ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿಗೆ ಆಯ್ಕೆಯಾದರು. ಮಹಿಳಾ ಆಟಗಾರ್ತಿ ಅಂಜುಮ್ ಚೋಪ್ರಾ ಬಿಟ್ಟರೆ ಬೇರೆ ಯಾವ ಕ್ರಿಕೆಟ್ ಆಟಗಾರರಿಗೂ ಅರ್ಜುನ ಪ್ರಶಸ್ತಿ ಬಂದಿಲ್ಲ. ಜ್ಯೋತಿ ಸುನಿತಾ ಕುಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಶಾಲ್ (ಸ್ಕ್ವಾಷ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ಗೀತಿಕಾ ಜಾಖಡ್ (ಕುಸ್ತಿ), ನವನೀತ್ ಗೌತಮ್ (ಕಬಡ್ಡಿ) ಹಾಗೂ ರೋಹಿತ್ ಭಾಕರ್ (ಅಂಗವಿಕಲರ ಬ್ಯಾಡ್ಮಿಂಟನ್) ಅರ್ಜುನ ಪ್ರಶಸ್ತಿಗೆ ಆಯ್ಕೆಯಾದ ಇತರರು. ಜೀವಮಾನದ ಸಾಧನೆಗೆ ನೀಡಲಾಗುವ 2007ನೇ ಇಸವಿಯ ಧ್ಯಾನ್ಚಂದ್ ಪ್ರಶಸ್ತಿಗೆ ಮಾಜಿ ಹಾಕಿ ಆಟಗಾರ ವರೀಂದರ್ ಸಿಂಗ್, ಮಾಜಿ ಕಬಡ್ಡಿ ಆಟಗಾರ ಶಮ್ಶೇರ್ ಸಿಂಗ್ ಹಾಗೂ ಮಾಜಿ ಕುಸ್ತಿ ಸ್ಪರ್ಧಿ ರಾಜೇಂದ್ರ ಸಿಂಗ್ ಅವರನ್ನು ಆಯ್ಕೆ ಮಾಡಲಾಯಿತು. ತರಬೇತುದಾರರಾಗಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ನೀಡುವ 2006ನೇ ಸಾಲಿನ ದ್ರೋಣಾಚಾರ್ಯ ಪ್ರಶಸ್ತಿ ಆರ್. ಡಿ. ಸಿಂಗ್ (ಅಥ್ಲೆಟಿಕ್ಸ್, ಪ್ಯಾರಾಲಿಂಪಿಕ್ ಗೇಮ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್) ಹಾಗೂ ಕೊನೇರು ಅಶೋಕ್ (ಚೆಸ್) ಅವರಿಗೆ ಲಭಿಸಿದೆ. ಅಶೋಕ್ ಅವರು ಹೆಸರಾಂತ ಚೆಸ್ ಆಟಗಾರ್ತಿ ಕೊನೇರು ಹಂಪಿ ಅವರ ತಂದೆ.

2007: ಉತ್ತರ ಪ್ರದೇಶದ 14ರ ಹರೆಯದ ಬಾಲ ಪ್ರತಿಭೆ ಶೈಲೇಂದ್ರ ವರ್ಮ ದೇಶದ ಅತಿ ಕಿರಿಯ ಪದವೀಧರ ಎಂಬ ಹೆಸರನ್ನು ತನ್ನದಾಗಿಸಿಕೊಂಡ. ಲಖನೌ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಷನ್ಸ್ ವಿಷಯದಲ್ಲಿ ಶೇ. 64 ಅಂಕಗಳೊಂದಿಗೆ ಶೈಲೇಂದ್ರ ತನ್ನ ಪದವಿ ಪೂರೈಸುವ ಮೂಲಕ ಈ ಸಾಧನೆಗೆ ಅರ್ಹನಾದ. ಮೂರು ವರ್ಷಗಳ ಹಿಂದೆ ಈತ ಲಖನೌ ವಿಶ್ವವಿದ್ಯಾಲಯದ 'ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್' ಪದವಿಗೆ ಪ್ರವೇಶ ಪಡೆಯುವ ವೇಳೆ `ಪ್ರಜಾವಾಣಿ' ಮತ್ತು `ಡೆಕ್ಕನ್ ಹೆರಾಲ್ಡ್' ಓದುಗರು 2.45 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ದಿನಗೂಲಿ ನೌಕರನಾಗಿರುವ ತೇಜ್ ಬಹಾದೂರ್ ವರ್ಮ ಅವರಿಗೆ ಮಗನ ಶಿಕ್ಷಣಕ್ಕೆ ಹಣ ಹೊಂದಿಸುವ ಸಾಮಥ್ರ್ಯವಿರಲಿಲ್ಲ. ಸಹೃದಯಿಗಳು ಮತ್ತು ಸಾಮಾಜಿಕ ಸಂಘಟನೆಗಳೂ ಈತನಿಗೆ ನೆರವು ನೀಡಿದ್ದವು. ಶೈಲೇಂದ್ರ ನೆರವಿತ್ತವರ ನಿರೀಕ್ಷೆ ಹುಸಿಗೊಳಿಸಲಿಲ್ಲ. ಪದವಿಯನ್ನು ಯಶಸ್ವಿಯಾಗಿ ಪೂರೈಸಿ ಅಸಾಮಾನ್ಯ ಸಾಧನೆ ತೋರಿದ.

2006: ಮರಾಠಿ ಸಾಹಿತ್ಯದ ಸದಭಿರುಚಿಯ ಕವಿ ವಿಂದಾ ಕರಂದೀಕರ್ ಅವರು 39ನೇ ಜ್ಞಾನಪೀಠ ಪ್ರಶಸ್ತಿಯನ್ನು ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಂದ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸ್ವೀಕರಿಸಿದರು. 88 ವರ್ಷ ವಯಸ್ಸಿನ ಕರಂದೀಕರ್ ಸಮಗ್ರ ಸಾಹಿತ್ಯಕ್ಕೆ ಸಾಹಿತ್ಯದ ಅತ್ಯುನ್ನತ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿ ಲಭಿಸಿದ್ದು, ಅವರು ಮರಾಠಿ ಸಾಹಿತ್ಯದಲ್ಲಿ ಈ ಪ್ರಶಸ್ತಿ ಪಡೆದ ಮೂರನೆಯವರು. ಈ ಮೊದಲು ವಿಷ್ಣು ಸಖಾರಾಂ ಖಾಂಡೇಕರ್ (1974) ಮತ್ತು ವಿ.ವಿ. ಶ್ರೀವಾಡಕರ್ (1987) ಈ ಪ್ರಶಸ್ತಿ ಪಡೆದಿದ್ದರು. ಪ್ರತಿಷ್ಠಿತ ಸೋವಿಯತ್ ಲ್ಯಾಂಡಿನ ನೆಹರೂ ಸಾಹಿತ್ಯ ಪ್ರಶಸ್ತಿ, ಕಬೀರ್ ಸಮ್ಮಾನ್ ಪ್ರಶಸ್ತಿಗಳನ್ನು ಕರಂದೀಕರ್ ಪಡೆದಿದ್ದಾರೆ.

2006: ಲಂಡನ್ನಿನಿಂದ ಅಮೆರಿಕಕ್ಕೆ ತೆರಳಬೇಕಿದ್ದ ಸುಮಾರು 10 ವಿಮಾನಗಳನ್ನು ಆಕಾಶದಲ್ಲೇ ಸ್ಫೋಟಿಸಿ ಪ್ರಯಾಣಿಕರ ಸಾಮೂಹಿಕ ಹತ್ಯೆಗೆ ಅಲ್ ಖೈದಾ ಉಗ್ರಗಾಮಿಗಳು ಹೂಡಿದ್ದ ಸಂಚನ್ನು ಬ್ರಿಟಿಷ್ ಪೊಲೀಸರು ವಿಫಲಗೊಳಿಸಿದರು. ಈ ಸಂಬಂಧ ಬ್ರಿಟನ್ನಿನ ವಿವಿಧೆಡೆಗಳಲ್ಲಿ 21 ಜನರನ್ನು ಹಾಗೂ ಪಾಕಿಸ್ಥಾನದ ಕರಾಚಿಯಲ್ಲಿ 7 ಜನರನ್ನು ಬಂಧಿಸಲಾಯಿತು.

2006: ರಾಜ್ಯ ಸರ್ಕಾರಿ ನೌಕರರು ಪಿಂಚಣಿ ಪಡೆಯಬೇಕಾದರೆ 15 ವರ್ಷಗಳ ಸೇವೆ ಪೂರೈಸಿರಬೇಕು ಎಂಬ ನಿಬಂಧನೆಯನ್ನು 10 ವರ್ಷಗಳ ಸೇವೆಗೆ ಇಳಿಸಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿತು. ಆದರೆ ಸ್ವಯಂ ನಿವೃತ್ತಿ ಪಡೆಯಲು ಕನಿಷ್ಠ 15 ವರ್ಷಗಳ ಸೇವಾವಧಿ ಪೂರೈಸಿರಬೇಕು ಎಂಬ ನಿಬಂಧನೆ ಹಾಗೆಯೇ ಮುಂದುವರೆಯುವುದು.

2006: ಹೆಚ್ಚು ಕಡಿಮೆ ಹತ್ತು ವರ್ಷಗಳಿಂದ ಗೃಹ ಇಲಾಖೆಯಲ್ಲಿ ಕೊಳೆಯುತ್ತಿದ್ದ 1993ರ ಭಟ್ಕಳ ಗಲಭೆ, ಹಿಂಸಾಚಾರಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ನೇತೃತ್ವದ ತನಿಖಾವರದಿಯನ್ನು ಕರ್ನಾಟಕ ಸಚಿವ ಸಂಪುಟ ಅಂಗೀಕರಿಸಿತು. ಶಾಸಕರಾಗಿದ್ದ ಡಾ. ಯು. ಚಿತ್ತರಂಜನ್ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ನ್ಯಾಯಮೂರ್ತಿ ರಾಮಚಂದ್ರಯ್ಯ ಆಯೋಗದ ವರದಿಯನ್ನೂ ಇದರ ಜೊತೆಗೆ ಸೇರಿಸಿಕೊಳ್ಳಲಾಗಿದೆ ಎಂದು ಸಚಿವ ಬಸವರಾಜ ಹೊರಟ್ಟಿ ಸಂಪುಟ ಸಭೆಯ ಬಳಿಕ ಪ್ರಕಟಿಸಿದರು. 1993ರ ಸೆಪ್ಟೆಂಬರ್ 16ರಂದು ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ನೇತೃತ್ವದ ತನಿಖಾ ಆಯೋಗವನ್ನು ನೇಮಿಸಲಾಗಿತ್ತು. ಅದು 1997ರ ಫೆಬ್ರುವರಿ 27ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

1997: ಅಥೆನ್ಸಿನಲ್ಲಿ ನಡೆದ ಆರನೇ ವರ್ಲ್ಡ್ಡ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್ ಶಿಪ್ ಗಳಲ್ಲಿ ಉಕ್ರೇನಿನ ಸೆರ್ಗೆ ಬೂಬ್ ಕಾ ಅವರು ಸತತ ಆರನೇ ಬಾರಿ ಪೋಲ್ ವಾಲ್ಟ್ (ಕೋಲು ಜಿಗಿತ) ಚಾಂಪಿಯನ್ ಶಿಪ್ ಗೆದ್ದುಕೊಂಡರು.

1989: ಪಂಚಾಯತ್ ರಾಜ್ ಮತ್ತು ನಗರ ಪಾಲಿಕೆ ಮಸೂದೆಗಳಿಗೆ ಲೋಕಸಭೆ ಒಪ್ಪಿಗೆ ನೀಡಿತು.

1988: ದೂರವಾಣಿ ಕದ್ದಾಲಿಕೆ ಪ್ರಕರಣದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದರು.

1986: ಭಾರತದ ಮಾಜಿ ಸೇನಾ ದಂಡನಾಯಕ ಜನರಲ್ ಅರುಣ್ ಎಸ್. ವೈದ್ಯ ಅವರನ್ನು ಸಿಖ್ ಉಗ್ರಗಾಮಿಗಳು ಪುಣೆಯಲ್ಲಿ ಗುಂಡಿಟ್ಟು ಕೊಲೆಗೈದರು.

1977: ತನ್ನನ್ನು `ಸನ್ ಆಫ್ ಸ್ಯಾಮ್' ಎಂದು ಕರೆದುಕೊಳ್ಳುತ್ತಿದ್ದ ಕೊಲೆಗಡುಕ ಡೇವಿಡ್ ರಿಚರ್ಡ್ ಬೆರ್ ಕೊವಿಟ್ಜ್ ನನ್ನು (1953) ನ್ಯೂಯಾರ್ಕ್ ನಗರದಲ್ಲಿ ಬಂಧಿಸಲಾಯಿತು. ನಂತರ ಆರು ಮಂದಿಯ ಹತ್ಯೆ ಹಾಗೂ ಇತರ ಏಳು ಮಂದಿಯನ್ನು ಗಾಯಗೊಳಿಸಿದ್ದಕ್ಕಾಗಿ ಆತನಿಗೆ ಆಜೀವ ಸೆರೆವಾಸ ವಿಧಿಸಲಾಯಿತು. ತಾನು ಸೆರೆವಾಸದ ಅವಧಿಯಲ್ಲಿ ಬರೆಯಲಿರುವ ತನ್ನ `ನೆನಪು'ಗಳನ್ನು ಮಾರಾಟ ಮಾಡಲು ಉದ್ದೇಶಿಸಿರುವುದಾಗಿ ಆತ ಪ್ರಕಟಿಸಿದ. ಇದನ್ನು ತಡೆಯಲು ನ್ಯೂಯಾರ್ಕ್ ರಾಜ್ಯದ ಶಾಸನಸಭೆಯು ಶಿಕ್ಷಿತ ಹಂತಕರು ತಮ್ಮ ಅಪರಾಧಗಳನ್ನು ಬಂಡವಾಳ ಮಾಡಿಕೊಂಡು ಲಾಭ ಗಳಿಸುವುದನ್ನು ನಿಷೇಧಿಸಿ ಶಾಸನವನ್ನೇ ಅಂಗೀಕರಿಸಿತು. ನಂತರ 42 ರಾಜ್ಯಗಳು ಇಂತಹ `ಸನ್ ಆಫ್ ಸ್ಯಾಮ್' ಶಾಸನಗಳನ್ನು ಅಂಗೀಕರಿಸಿದವು.

1955: ಸಾಹಿತಿ ರಾಜಶೇಖರ ಶ್ರೀಧರ ಹೆಬ್ಬಾರ ಜನನ.

1945: `ಆಧುನಿಕ ರಾಕೆಟ್ಟುಗಳ ಜನಕ' ಎಂದೇ ಅವರು ಖ್ಯಾತರಾದ ಅಮೆರಿಕದ ರಾಬರ್ಟ್ ಹಚ್ಚಿಂಗ್ಸ್ ಗೊಡ್ಡಾರ್ಡ್ (1882-1945) ಮೃತರಾದರು.

1945: ಸಾಹಿತಿ ಮಳಲಿ ವಸಂತಕುಮಾರ್ ಜನನ.

1932: ಸಾಹಿತಿ ಹ.ವೆಂ. ಸೀತಾರಾಮಯ್ಯ ಜನನ.

1927: ಮನಾಲಿ ಕಲ್ಲಾಟ್ ವೈನು ಬಪ್ಪು (1927-1982) ಜನ್ಮದಿನ. ಭಾರತೀಯ ಖಗೋಳತಜ್ಞರಾದ ಇವರು `ಬಪ್ಪು-ಬಾಪ್-ನ್ಯೂಕಿರ್ಕ್' ಧೂಮಕೇತುವನ್ನು ಕಂಡು ಹಿಡಿದವರು. ತಮಿಳುನಾಡಿನ ಕಾವಲೂರಿನಲ್ಲಿರುವ ಖಗೋಳ ವೀಕ್ಷಣಾಲಯಕ್ಕೆ ಬಪ್ಪ್ಪು ಅವರ ಹೆಸರನ್ನೇ ಇಡಲಾಗಿದೆ.

1909: ಕನ್ನಡ ಸಾಹಿತ್ಯದಲ್ಲಿ ನವ್ಯ ಕಾವ್ಯ ಪ್ರವರ್ತಕರು ಎಂದೇ ಖ್ಯಾತಿ ಪಡೆದಿದ್ದ ಡಾ. ವಿನಾಯಕ ಕೃಷ್ಣ ಗೋಕಾಕ (ಡಾ. ವಿ.ಕೃ. ಗೋಕಾಕ) (10-8-1909ರಿಂದ 28-4-1992) ಅವರು ಕೃಷ್ಣ ಗೋಕಾಕ- ಸುಂದರಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜಾಜಿ ಪ್ರಶಸ್ತಿ, ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿವಿ ಮತ್ತು ಅಮೆರಿಕದ ಫೆಸಿಫಿಕ್ ವಿವಿಯ ಗೌರವ ಡಾಕ್ಟರೇಟ್, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವಾರು ಸಮ್ಮೇಳನ ಗೋಷ್ಠಿಗಳ ಅಧ್ಯಕ್ಷತೆ ಅವರಿಗೆ ಸಂದಿರುವ ಗೌರವಗಳು.

1894: ವರಾಹಗಿರಿ ವೆಂಕಟ ಗಿರಿ (1894-1980) ಜನ್ಮದಿನ. ವಿ.ವಿ. ಗಿರಿ ಎಂದೇ ಪರಿಚಿತರಾಗಿದ್ದ ಇವರು 1969-1974ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.

1821: ಅಮೆರಿಕದ 24ನೇ ರಾಜ್ಯವಾಗಿ ಮಿಸ್ಸೌರಿ ಸೇರ್ಪಡೆಯಾಯಿತು.

No comments:

Post a Comment