Thursday, August 16, 2018

ಭಾರತರತ್ನ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಅಸ್ತಂಗತ


ಭಾರತರತ್ನ, ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಅಸ್ತಂಗತ

ನವದೆಹಲಿ: ಭಾರತೀಯ ರಾಜಕಾರಣದ ಉತ್ತುಂಗ ವ್ಯಕ್ತಿತ್ವ, ಅಜಾತಶತ್ರು, ಭಾರತ ರತ್ನ, ಮಹಾನ್ ಮುತ್ಸದ್ಧಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 16 ಆಗಸ್ಟ್  2018ರ ಗುರುವಾರ ಸಂಜೆ ನಗರದ ಏಮ್ಸ್ ಆಸ್ಪತ್ರೆಯಲ್ಲಿ ತಮ್ಮ 93ರ ಹರೆಯದಲ್ಲಿ ನಿಧನರಾದರು.
ತೀವ್ರ ಅಸ್ವಸ್ಥತೆಯ ಕಾರಣ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಅವರು ಈದಿನ ಸಂಜೆ 5.5 ನಿಮಿಷಕ್ಕೆ ಕೊನೆಯುಸಿರು ಎಳೆದರು ಎಂದು ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ತಿಳಿಸಿತು.
ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ೨೦೧೮ರ ಆಗಸ್ಟ್ ೧೬ರ ಸಂಜೆ ೦೫:೦೫ ಗಂಟೆಗೆ ನಿಧನರಾದರು ಎಂಬ ಬೇಸರದ ಸುದ್ದಿಯನ್ನು ಅತ್ಯಂತ ದುಃಖದೊಂದಿಗೆ ನಾವು ನೀಡುತ್ತಿದ್ದೇವೆಎಂದು ಏಮ್ಸ್ ವೈದ್ಯಕೀಯ ಬುಲೆಟಿನ್ ಹೇಳಿತು.
ದುರದೃಷ್ಟಕರವಾಗಿ ಕಳೆದ ೩೬ ಗಂಟೆಗಳಿಂದ ಆರೋಗ್ಯ ತೀವ್ರ ವಿಷಮಿಸಿದ್ದರಿಂದ ತೀವ್ರ  ನಿಗಾ ಘಟಕದಲಿ ಜೀವರಕ್ಷಕ ವ್ಯವಸ್ಥೆಯ ಅಡಿಯಲ್ಲಿದ್ದ ವಾಜಪೇಯಿ ಅವರನ್ನು ರಕ್ಷಿಸಲು ನಡೆಸಿದ ಸರ್ವ ಯತ್ನಗಳ ಹೊರತಾಗಿಯೂ ನಾವು ಅವರನ್ನು ಈದಿನ ಕಳೆದುಕೊಂಡಿದ್ದೇವೆಎಂದು ಏಮ್ಸ್ ಮಾಧ್ಯಮ ಮತ್ತು ಪ್ರೋಟೋಕಾಲ್ ವಿಭಾಗದ ಮುಖ್ಯಸ್ಥರಾದ ಡಾ. ಆರತಿ ವಿಜ್ ಅವರ ಪ್ರಕಟಣೆ ತಿಳಿಸಿತು.
ಭಾರತೀಯ ಜನತಾ ಪಕ್ಷದ ನಾಯಕನನ್ನು ಜೂನ್ ೧೧ರಂದು ಮೂತ್ರನಾಳದ ಸೋಂಕಿನ ಕಾರಣಕ್ಕಾಗಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ದಾಖಲು ಮಾಡಲಾಗಿತ್ತು. ಮೂತ್ರ ವಿಸರ್ಜನೆ ಪ್ರಮಾಣ ಇಳಿತ ಮತ್ತು ಹೃದಯ ದಟ್ಟಣೆ ಸಮಸ್ಯೆಯೂ ಅವರನ್ನು ಕಾಡುತ್ತಿತ್ತು. ಬುಧವಾರ ರಾತ್ರಿ ವಾಜಪೇಯಿ ಅವರ ದೇಹಸ್ಥಿತಿ ವಿಷಮಿಸಿದ್ದರಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತು.
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಲವಾರು ಕೇಂದ್ರ ಸಚಿವರು ಈದಿನ ಮುಂಜಾನೆಯಿಂದಲೇ ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು. ಅರವಿಂದ ಕೇಜ್ರಿವಾಲ್ ಅವರು ತಮ್ಮ ಹುಟ್ಟು ಹಬ್ಬದ ಆಚರಣೆ ಮಾಡದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರು.
ವಾಜಪೇಯಿ ಅವರ ಆರೋಗ್ಯ ಸುಧಾರಿಸಲೆಂದು ಅಭಿಮಾನಿಗಳು ದೇಶಾದ್ಯಂತ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಆಸ್ಪತ್ರೆಯ ಹೊರಗೆ ಭಾರಿ ಪ್ರಮಾಣದಲ್ಲಿ ಪಕ್ಷ ಕಾರ್ಯಕರ್ತರು, ಅಭಿಮಾನಿಗಳು ಸುದ್ದಿ ತಿಳಿಯುತ್ತಿದಂತೆಯೇ ಜಮಾಯಿಸಿದರು.
ತಮ್ಮ ತಲೆಮಾರಿನ ಇತರ ಹಲವರಂತೆ ವಾಜಪೇಯಿ ಅವರೂ ೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ತಮ್ಮ ೧೮ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಧುಮುಕಿದ್ದರು. ಕಾಲದಲ್ಲಿ ಕ್ವಿಟ್ ಇಂಡಿಯಾ ಚಳವಳಿ ದೇಶದಲ್ಲಿ ಜೋರಾಗಿ ನಡೆಯುತ್ತಿತ್ತು.
ಅಜೀವ ಪರ್ಯಂತ ಅವಿವಾಹಿತರಾಗಿದ್ದ ವಾಜಪೇಯಿ ಅವರು ೧೯೫೭ರಲ್ಲಿ ಭಾರತದ ಎರಡನೇ ಮಹಾ ಚುನಾವಣೆಯಲ್ಲಿ ಮೊತ್ತ ಮೊದಲ ಬಾರಿಗೆ ಉತ್ತರ ಪ್ರದೇಶದ ಬಲರಾಂ ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
ಸಂಸತ್ತಿನಲ್ಲಿ ವಾಜಪೇಯಿ ಅವರು ಮಾಡಿದ ಚೊಚ್ಚಲ ಭಾಷಣ ಗೆಳೆಯರು, ಸಹೋದ್ಯೋಗಿಗಳು ಮಾತ್ರವೇ ಅಲ್ಲ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನೂ ಅಪಾರವಾಗಿ ಆಕರ್ಷಿಸಿತು. ನೆಹರೂ ಅವರು ದೇಶಕ್ಕೆ ಬೇಟಿ ನೀಡಿದ್ದ ವಿದೇಶೀ ಗಣ್ಯರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ ಯುವಕ ಒಂದು ದಿನ ರಾಷ್ಟ್ರದ ಪ್ರಧಾನಿಯಾಗುತ್ತಾರೆಎಂದು ಹೇಳಿದ್ದರು.
ಬಳಿಕ ಸಂಸತ್ತಿನಲ್ಲಿ ೧೨ ಬಾರಿ ಸದಸ್ಯರಾದ ವಿಶಿಷ್ಠ  ಕೀರ್ತಿಗೆ ವಾಜಪೇಯಿ ಪಾತ್ರರಾಗಿದ್ದರು. ಲೋಕಸಭೆಯ ಸದಸ್ಯರಾಗಿ ೧೦ ಬಾರಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಬಾರಿ ಆಯ್ಕೆಯಾಗಿದ್ದ ಅವರು ೧೯೮೪ರಲ್ಲಿ ಒಂದೇ ಒಂದು ಬಾರಿ ಗ್ವಾಲಿಯರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮಾಧವರಾವ್ ಸಿಂಧಿಯಾ ಎದುರು ಲಕ್ಷ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು.
೧೯೯೧ರಿಂದ ೨೦೦೯ರವರೆಗೆ ಲಕ್ನೋ ಕ್ಷೇತ್ರವನ್ನು ೧೦, ೧೧, ೧೨, ೧೩ ಮತ್ತು ೧೪ನೇ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ವಾಜಪೇಯಿ ಬಲರಾಂ ಪುರ ಲೋಕಸಭಾ ಕ್ಷೇತ್ರವನ್ನು ಎರಡನೇ ಮತ್ತು ನಾಲ್ಕನೇ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಗ್ವಾಲಿಯರ್ ಕ್ಷೇತ್ರವನ್ನು ೫ನೇ ಹಾಗೂ ನವದೆಹಲಿ ಕ್ಷೇತ್ರವನ್ನು ೬ನೇಮತ್ತು ೭ನೇ ಲೋಕಸಭೆಯಲ್ಲೂ ಅವರು ಪ್ರತಿನಿಧಿಸಿದ್ದರು. ೧೯೬೨ ಮತ್ತು ೧೯೮೬ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.
೨೦೦೫ರಲ್ಲಿ ವಾಜಪೇಯಿ ಅವರು ಮುಂಬೈಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಚುನಾವಣಾ ರಾಜಕೀಯಕ್ಕೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು.
೪೭ ವರ್ಷ ಕಾಲ ಸಂಸತ್ ಸದಸ್ಯರಾಗಿದ್ದ ವಾಜಪೇಯಿ ಅವರು ೧೯೯೬ರಿಂದ ೨೦೦೪ರ ನಡುವಣ ಅವಧಿಯಲ್ಲಿ ಮೂರು ಬಾರಿ ನಿರಂತರ ಅವಧಿಗೆ ಪ್ರಧಾನಿಯಾಗಿದ್ದರು. ಮೊದಲ ಬಾರಿಗೆ ೧೩ ದಿನ, ಬಳಿಕ ೧೯೯೮-೧೯೯೯ರ ಅವಧಿಯಲ್ಲಿ ಎರಡನೇ ಬಾರಿಗೆ ೧೩ ತಿಂಗಳು ಮತ್ತು ೧೯೯೯-೨೦೦೪ರ ಅವಧಿಯಲ್ಲಿ ಮೂರನೇ ಬಾರಿಗೆ ಪೂರ್ಣಾವಧಿ ಪ್ರಧಾನಿಯಾಗಿದ್ದರು.
ವಾಜಪೇಯಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಪ್ರಥಮ ಬಿಜೆಪಿ ನಾಯಕರಾಗಿದ್ದರು ಮತ್ತು ಐದು ವರ್ಷದ ಅವಧಿ ಪೂರ್ಣಗೊಳಿಸಿದ ಮೊತ್ತ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು.
೧೯೫೧ರಲ್ಲಿ ಸ್ಥಾಪನೆಯಾದ ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಾಜಪೇಯಿ ಅವರು ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ನಿಧನರಾದಾಗ ಅತ್ಯಂತ ವಿಚಲಿತರಾಗಿದ್ದರು. ದೀನದಯಾಳ ಉಪಾಧ್ಯಾಯರು ನಿಧನರಾದ ಬಳಿಕ ೧೯೬೮ರಲ್ಲಿ ಅವರ ಪಕ್ಷದ ಅಧ್ಯಕ್ಷರಾಗಿದ್ದರು.
ವಾಜಪೇಯಿ ಅವರು ೨೦೦೯ರಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ತುತ್ತಾಗಿದ್ದರು. ಪರಿಣಾಮವಾಗಿ ಅವರ ಅರವಿನ ಸಾಮರ್ಥ್ಯ ಕುಸಿದಿತ್ತು. ಬಳಿಕ ಅವರು ಬುದ್ದಿ ಮಾಂದ್ಯತೆಗೆ ಒಳಗಾಗಿದ್ದರು.
 ಏಳು ದಿನ ಶೋಕಾಚರಣೆ, ಇಂದು ದೇಶಾದ್ಯಂತ ಶಾಲೆಗಳಿಗೆ ರಜೆ
ನವದೆಹಲಿ: ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಕೇಂದ್ರ ಸರ್ಕಾರವು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಶುಕ್ರವಾರ ದೇಶಾದ್ಯಂತ ಶಾಲೆಗಳು ಮುಚ್ಚಿರುತ್ತವೆ.
ಇಂದಿನಿಂದ ಏಳು ದಿನಗಳ ಕಾಲ ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುವುದು ಮತ್ತು ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
 ಅಂತ್ಯಕ್ರಿಯೆ- ಅಂತಿಮ ದರ್ಶನ
ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಸಂಜೆ ಗಂಟೆಗೆ ಅವರ ನಿವಾಸಕ್ಕೆ ಒಯ್ದು ಅಲ್ಲಿ ಸೇರಿದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲು ವ್ಯವಸ್ಥೆ ಮಾಡಲಾಗುವುದು. ಶುಕ್ರವಾರ ಬೆಳಗ್ಗೆ ೧೦ ಗಂಟೆಗೆ ಅವರ ಪಾರ್ಥಿವ ಶರೀರವನ್ನು ಬಿಜೆಪಿ ಕೇಂದ್ರ ಕಚೇರಿಗೆ ಒಯ್ಯಲಾಗುವುದು ಮತ್ತು ಸಂಜೆ ಗಂಟೆಗೆ ರಾಜಘಾಟ್ ಸಮೀಪದ ವಿಜಯ್ ಘಾಟ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. 
ಅಟಲ್ ಜಿ ಅವರ ನಿಧನದಿಂದ ರಾಷ್ಟ್ರಕ್ಕೆ ಅಪಾರ ನಷ್ಟವಾಗಿದೆ. ಅವರ ನಿಧನದಿಂದ ನನಗೆ ಅತೀವ ದುಃಖವಾಗಿದೆಎಂದು ಟ್ವೀಟ್ ಮಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನಾಳೆ (ಶುಕ್ರವಾರ) ರಾಜಧಾನಿಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳು ಅಟಲ್ ಗೌರವಾರ್ಥ ಮುಚ್ಚಿರುತ್ತವೆಎಂದು ತಿಳಿಸಿದರು.
ಗುರುವಾರ ಬೆಳಗ್ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ವಾಜಪೇಯಿ ನಿಧನಕ್ಕೆ ತೀವ್ರ ದುಃಖ ವ್ಯಕ್ತ ಪಡಿಸಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೂ ಅಟಲ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದ್ದಾರೆ.

No comments:

Post a Comment