Sunday, August 5, 2018

ಇಂದಿನ ಇತಿಹಾಸ History Today ಆಗಸ್ಟ್ 05

ಇಂದಿನ ಇತಿಹಾಸ  ಆಗಸ್ಟ್ 05

2018: ನವದೆಹಲಿ:  ಭಾರತದಲ್ಲಿ ಕಾನೂನು ಅಪರಾಧ ಪ್ರಕ್ರಿಯೆಗಳನ್ನು ತಪ್ಪಿಸಿಕೊಂಡು ವಿದೇಶಗಳಿಗೆ ಪರಾರಿಯಾಗುವ ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ತಡೆದು ಕಾನೂನು ಕುಣಿಕೆಗೆ ಸಿಕ್ಕಿಸುವಂತಹ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕಿದರು. ಯಾವ ವ್ಯಕ್ತಿ ಕನಿಷ್ಠ ೧೦೦ ಕೋಟಿ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆಯ್ದ ಆರ್ಥಿಕ ಅಪರಾಧದಲ್ಲಿ ಶಾಮೀಲಾಗಿ ಕ್ರಿಮಿನಲ್ ಖಟ್ಲೆ ತಪ್ಪಿಸಿಕೊಳ್ಳಲು ವಿದೇಶಕ್ಕೆ ಪರಾರಿಯಾಗುತ್ತಾನೋ ಮತ್ತು ಇಂತಹ ಯಾವ ವ್ಯಕ್ತಿಗಳ ವಿರುದ್ಧ ಬಂಧನ ವಾರಂಟ್ ಜಾರಿ ಆಗಿರುತ್ತದೋ ಅಂತಹ ವ್ಯಕ್ತಿ ದೇಶಭ್ರಷ್ಟ ಆರ್ಥಿಕ ಅಪರಾಧಿ ವ್ಯಾಖ್ಯೆಯ ಅಡಿಯಲ್ಲಿ ಬರುತ್ತಾನೆ.  ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆ, ೨೦೧೮ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಯಂತಹ ದೊಡ್ಡ ಆರ್ಥಿಕ ಅಪರಾಧಿಗಳನ್ನು ವಿದೇಶಗಳಿಗೆ ಪರಾರಿಯಾಗದಂತೆ ಮತ್ತು ಕಾನೂನು ಪ್ರಕ್ರಿಯೆಯ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ತಡೆಯಲಿದೆ.  ಮಲ್ಯ ಮತ್ತು ಮೋದಿ ಇಬ್ಬರೂ ಕೇಂದ್ರೀಯ ತನಿಖಾ ದಳವು (ಸಿಬಿಐ) ಭಾರತದ ಹೊರಗೆ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಬೇಕಾದವರಾಗಿದ್ದಾರೆ.  ನೂತನ ಕಾನೂನು ನಿಯೋಜಿತ ವಿಶೇಷ ನ್ಯಾಯಾಲಯಕ್ಕೆ ವ್ಯಕ್ತಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂಬುದಾಗಿ ಘೋಷಿಸಲು ಮತ್ತು ಬೇನಾಮೀ ಆಸ್ತಿಗಳೂ ಸೇರಿದಂತೆ ಆತನ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.  ‘ಹೀಗೆ ಮುಟ್ಟುಗೋಲು ಹಾಕಿಕೊಳ್ಳಲಾಗುವ ಆಸ್ತಿಯ ಎಲ್ಲ ಹಕ್ಕುಗಳೂ ಮತ್ತು ಟೈಟಲ್ ಮುಟ್ಟುಗೋಲು ಆದೇಶದ ದಿನದಿಂದ ಕೇಂದ್ರ ಸರ್ಕಾರದ ವಶಕ್ಕೆ ಬರುತ್ತದೆ ಮತ್ತು ಎಲ್ಲ ಋಣಭಾರಗಳಿಂದ ಮುಕ್ತವಾಗುತ್ತದೆ ಎಂದು ಕಾನೂನು ಹೇಳುತ್ತದೆ.  ದೇಶಭ್ರಷ್ಟ ಆರ್ಥಿಕ ಅಪರಾಧಗಳ ಮಸೂದೆ, ೨೦೧೮ಕ್ಕೆ ರಾಜ್ಯಸಭೆಯು ಜುಲೈ ೨೫ರಂದು ಅನಮೋದನೆ ನೀಡಿದೆ. ಮಸೂದೆಗೆ ಲೋಕಸಭೆಯು ಜುಲೈ ೧೯ರಂದು ತನ್ನ ಒಪ್ಪಿಗೆ ನೀಡಿತ್ತು.  ಕಾನೂನಿನ ವಿಧಿಗಳನ್ನು ಅನ್ವಯಿಸಲು ೧೦೦ ಕೋಟಿ ರೂಪಾಯಿಗಳ ಆರ್ಥಿಕ ಮಿತಿ ವಿಧಿಸಿದ್ದನ್ನು ಸಮರ್ಥಿಸಿದ ಹಣಕಾಸು ಸಚಿವ ಪೀಯೂಶ್ ಗೋಯೆಲ್ ಅವರು ’ಬೃಹತ್ ಕುಳಗಳನ್ನು ಹಿಡಿಯಲು ಈ ಕಾಯ್ದೆ ರೂಪಿಸಲಾಗಿದೆ ಹೊರತು ನ್ಯಾಯಾಲಯಗಳಿಗೆ ತಡೆಯೊಡ್ಡುವುದಕ್ಕಾಗಿ ಅಲ್ಲ ಎಂದು ಸಂಸತ್ತಿನಲ್ಲಿ ಪತಿಪಾದಿಸಿದ್ದರು.  .ಈ ಮಸೂದೆಯು ಇಂತಹ ಅಪರಾಧಿಗಳನ್ನು ದೇಶದಿಂದ ಪರಾರಿಯಾಗದಂತೆ ಮಾಡುವ ಪರಿಣಾಮಕಾರಿಯಾದ, ಕ್ಷಿಪ್ರವಾದ ಸಂವಿಧಾನಬದ್ಧ ಮಾರ್ಗ. ಈ ರೀತಿ ತಲೆತಪ್ಪಿಸಿಕೊಂಡ ವ್ಯಕ್ತಿಗಳು ನ್ಯಾಯಾಲಯಗಳ ಮುಂದೆ ಹಾಜರಾಗುವವರೆಗೂ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಶಾಸನಬದ್ಧ ಬದಲಾವಣೆಗಳು ಅಥವಾ ಹೊಸ ಕಾನೂನು ಅತ್ಯಗತ್ಯವಾಗಿ ಬೇಕು. ಹೀಗೆ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯನ್ನು ಏನು ಮಾಡಬೇಕು ಎಂಬ ಬಗೆಗೂ ನಾವು ಪರಿಶೀಲಿಸಬೇಕಾಗಿದೆ ಎಂದು ಗೋಯೆಲ್ ರಾಜ್ಯಸಭೆಯಲ್ಲಿ ಹೇಳಿದ್ದರು.  ಕಾಯ್ದೆಯ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ತನಿಖಾ ಸಂಸ್ಥೆಯಾಗಿರುತ್ತದೆ ಎಂದೂ ಅವರು ಹೇಳಿದ್ದರು.  ರಾಷ್ಟ್ರಪತಿಯವರು ಈ ಮಸೂದೆಯ ಜೊತೆ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ತಿದ್ದುಪಡಿ) ಕಾಯ್ದೆ, ೨೦೧೮ ಮತ್ತು ದಿ ಸ್ಟೇಟ್ ಬ್ಯಾಂಕ್ಸ್ (ರದ್ದು ಮತ್ತು ತಿದ್ದುಪಡಿ) ಕಾಯ್ದೆ, ೨೦೧೮ ಹಾಗೂ ಸ್ಪೆಸಿಫಿಕ್ ರಿಲೀಫ್ (ತಿದ್ದುಪಡಿ) ಕಾಯ್ದೆ, ೨೦೧೮ ಇವುಗಳಿಗೂ ತಮ್ಮ ಅಂಕಿತ ಹಾಕಿದರು.  ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ (ತಿದ್ದುಪಡಿ) ಕಾಯ್ದೆಯು ಚೆಕ್ ಬೌನ್ಸ್ ಸಂಬಂಧಿತ ಅಪರಾಧ ಪ್ರಕರಣಗಳನ್ನು ತುರ್ತಾಗಿ ವಿಚಾರಣೆ ನಡೆಸಲು ಮತ್ತು ಶೇಕಡಾ ೨೦ ರಷ್ಟು ಚೆಕ್ ಹಣವನ್ನು ಮಧ್ಯಂತರ ಪರಿಹಾರವಾಗಿ ಪಾವತಿ ಮಾಡುವಂತೆ ಚೆಕ್ ನೀಡಿದಾತನಿಗೆ ನಿರ್ದೇಶಿಸಲು ಕೋರ್ಟ್‌ಗಳಿಗೆ ಅನುಮತಿ ನೀಡುತ್ತದೆ.   ಸ್ಟೇಟ್ ಬ್ಯಾಂಕ್ಸ್ (ರದು ಮತ್ತು ತಿದ್ದುಪಡಿ) ಕಾಯ್ದೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಆಧೀನ ಬ್ಯಾಂಕುಗಳೂ) ಕಾಯ್ದೆ, ೧೯೫೯ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಕಾಯ್ದೆ ೧೯೫೬ ಈ ಎರಡು ಕಾಯ್ದೆಗಳನ್ನು ರದ್ದು ಪಡಿಸಲು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ ೧೯೫೫ಕ್ಕೆ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದೆ.   ಸ್ಪೆಸಿಫಿಕ್ ರಿಲೀಫ್ (ತಿದ್ದುಪಡಿ) ಕಾಯ್ದೆ, ೨೦೧೮ ಕಕ್ಷಿದಾರನಿಗೆ ವ್ಯವಹಾರದಲ್ಲಿ ವಂಚನೆಯಾದ ಸಂದರ್ಭದಲ್ಲಿ ಪರಿಹಾರ ಕೋರಲು ಉಭಯ ಕಡೆಗಳಿಗೂ ಹಕ್ಕನ್ನು ಒದಗಿಸುತ್ತದೆ ಮತ್ತು ಇಂತಹ ವಿಚಾರಗಳಲ್ಲಿ ನ್ಯಾಯಾಲದ ವಿವೇಚನಾ ಅಧಿಕಾರವನ್ನು ಇಳಿಸುತ್ತದೆ.  ಇವುಗಳಿಗೆ ಸಂಬಂಧಪಟ್ಟ ಮಸೂದೆಗಳಿಗೆ ಸಂಸತ್ತು ಇತ್ತೀಚೆಗೆ ಅನುಮೋದನೆ ನೀಡಿತ್ತು.

2018: ನವದೆಹಲಿ:  ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿರುದ್ಧ ಅಸಾಧಾರಣ ರಂಗವೊಂದನ್ನು ಕಟ್ಟಬೇಕು ಎಂದು ಇಲ್ಲಿ ಪ್ರತಿಪಾದಿಸಿದ ಜೆಡಿ(ಎಸ್) ಮುಖ್ಯಸ್ಥ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳ ’ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ತಮ್ಮ ವಿರೋಧ ಇಲ್ಲ ಎಂದು ಹೇಳಿದರು.  ವಿರೋಧಿ ಏಕತೆಗೆ ಧಕ್ಕೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ಪ್ರಧಾನ ಮಂತ್ರಿ ಅಭ್ಯರ್ಥಿ ಆಯ್ಕೆಯ ವಿಚಾರವನ್ನು ಚುನಾವಣೋತ್ತರಕ್ಕೆ ಇಟ್ಟುಕೊಳ್ಳಲು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಒಲವು ಹೊಂದಿವೆ ಎಂಬ ವರದಿಗಳ ಮಧ್ಯೆಯೇ ೮೫ರ ಹರೆಯದ ದೇವೇಗೌಡ ಅವರ ಹೇಳಿಕೆ ಬಂದಿತು. ವಿಪಕ್ಷ ಮೈತ್ರಿಕೂಟದಿಂದ ಯಾರೇ ಅಭ್ಯರ್ಥಿಯನ್ನು ಪ್ರಧಾನಿ ಸ್ಥಾನಕ್ಕೆ ನಾಮನಿರ್ದೇಶನ ಮಾಡಲು ಪಕ್ಷವು ಹಿಂಜರಿಯುವುದಿಲ್ಲ ಎಂಬುದಾಗಿ ಉನ್ನತ ಕಾಂಗ್ರೆಸ್ ಮೂಲಗಳು ತಿಳಿಸಿದ ಮರುದಿನ ದೇವೇಗೌಡರಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ.  ಭಾರತೀಯ ಜನತಾ ಪಕ್ಷ (ಬಿಜೆಪಿ) ಅಥವಾ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಬೆಂಬಲಿಸದ ವಿರೋಧ ಪಕ್ಷದ ಯಾರೇ ಒಬ್ಬ ಅಭ್ಯರ್ಥಿಯನ್ನು ಪ್ರಧಾನಿ ಹುದ್ದೆಗೆ ತಾನು ಬೆಂಬಲಿಸುವುದಾಗಿ ಕಾಂಗ್ರೆಸ್ ಹೇಳಿದೆ.  ಕಾಂಗ್ರೆಸ್ ಜೊತೆ ಸೇರಿ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿರುವ ಜನತಾದಳದ (ಎಸ್) ಮುಖ್ಯಸ್ಥರಾಗಿರುವ ದೇವೇಗೌಡ, ಬಿಜೆಪಿಯನ್ನು ಅಧಿಕಾರದಿಂದ ಉಚ್ಚಾಟಿಸಲು ವಿಪಕ್ಷ ಮೈತ್ರಿಕೂಟ ರಚಿಸುವಲ್ಲಿ ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ನುಡಿದರು.  ವಾರಾಂತ್ಯದಲ್ಲಿ ದೆಹಲಿಯಲ್ಲಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ಮಾಜಿ ಪ್ರಧಾನಿ, ತೃತೀಯ ರಂಗದ ರಚನೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಎಲ್ಲ ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಮಮತಾ ಬ್ಯಾನರ್ಜಿ ಅವರು ತಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ ಎಂದು ಹೇಳಿದರು.  ದೇವೇಗೌಡ ಅವರು ೧೯೯೬ರಲ್ಲಿ ಜನತಾದಳ ನೇತೃತ್ವದ ಯುನೈಟೆಡ್ ಫ್ರಂಟ್ (ಯುಎಫ್) ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿದ್ದರು. ಆದರೆ ಅವರ ಆಡಳಿತಾವಧಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರೆಯಲಿಲ್ಲ.  ಅಸ್ಸಾಮಿನಲ್ಲಿ ೪೦ ಲಕ್ಷ ಮಂದಿಯನ್ನು ಪಟ್ಟಿಯಿಂದ ಹೊರಗಿಟ್ಟ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಕರಡು ಪ್ರಕಟಗೊಂಡ ಬಳಿಕ ಬಳಿಕ ಮಮತಾ ಬ್ಯಾನರ್ಜಿ ಅವರು ಫೆಡರಲ್ ಫ್ರಂಟ್ ರಚನೆಗೆ ತೀವ್ರ ಯತ್ನ ಮಾಡುತ್ತಿದ್ದಾರೆ ಎಂದು ದೇವೇಗೌಡ ಹೇಳಿದರು.  ಬ್ಯಾನರ್ಜಿ ಅವರು ರಾಷ್ಟ್ರೀಯ ಪೌರತ್ವ ನೋಂದಣಿಯ ಕಟು ಟೀಕಾಕಾರರಾಗಿದ್ದು, ಪೌರತ್ವ ವಿಷಯವನ್ನು ತೆಗೆದುಕೊಂಡು ಬಿಜೆಪಿಯನ್ನು ದಾಳಿಗೆ ಗುರಿಮಾಡಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಸೆಣಸಲು ಬೆಂಬಲ ನೀಡುವಂತೆ ಅವರು ಇತರ ವಿರೋಧ ಪಕ್ಷಗಳನ್ನೂ ಕೋರುತ್ತಿದ್ದಾರೆ.  ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸಿದ್ಧ ಪಡಿಸಲಾಗಿರುವ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಬಿಜೆಪಿ ಪ್ರಬಲವಾಗಿ ಸಮರ್ಥಿಸಿದ್ದು, ಇದು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರದ ಪೌರರ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಪ್ರತಿಪಾದಿಸಿದೆ.  ಟಿಎಂಸಿ ಮುಖ್ಯಸ್ಥರನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ನೀವು ಬೆಂಬಲ ನೀಡುವಿರಾ ಎಂಬ ಪ್ರಶ್ನೆಗೆ ದೇವೇಗೌಡರು ’ಮಮತಾ ಬ್ಯಾನರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವುದು ಅತ್ಯಂತ ಸ್ವಾಗತಾರ್ಹ. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ೧೭ ವರ್ಷ ಆಡಳಿತ ನಡೆಸಿದ್ದಾರೆ. ನಾವು (ಪುರುಷರು) ಮಾತ್ರವೇ ಏಕೆ ಪ್ರಧಾನಿಯಾಗಬೇಕು? ಮಮತಾ ಅಥವಾ ಮಾಯಾವತಿ ಏಕಾಗಬಾರದು? ಎಂದು ದೇವೇಗೌಡ ಪ್ರಶ್ನಿಸಿದರು.  ಮಹಿಳೆಯು ಪ್ರಧಾನಿಯಾಗುವುದಕ್ಕೆ ತಮ್ಮ ವಿರೋಧವಿಲ್ಲ ಎಂಬ ಸುಳಿವು ನೀಡಿದ ಅವರು, ೧೯೯೬ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮುನ್ನಡೆಸಿದ್ದೇ ತಾವು ಎಂದು ಹೇಳಿದರು.  ಜನತಾದಳ (ಎಸ್) ಈವರೆಗೂ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಲು ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದು ನಿಜ, ಏನಿದ್ದರೂ ಬಿಜೆಪಿ ವಿರುದ್ಧ ಹೋರಾಟಕ್ಕೆ ಇತರ ಪಕ್ಷಗಳ ಜೊತೆ ಸಹಕರಿಸಲು ಪ್ರಾದೇಶಿಕ ಪಕ್ಷವು ಸಿದ್ಧವಿದೆ ಎಂದು ಅವರು ನುಡಿದರು.  ‘ರಾಷ್ಟ್ರದಲ್ಲಿ ಒಂದು ರೀತಿಯ ಭಯದ ವಾತಾವರಣ ಇದೆ. ಉತ್ತರ ಪ್ರದೇಶ, ಬಿಹಾರ, ಗುಜರಾತ್ ಮುಂತಾದ ರಾಜ್ಯಗಳಲ್ಲಿ ಉಸಿರು ಕಟ್ಟಿಸುವ ಪರಿಸರ ಇದೆ. ೨೦೧೯ರಲ್ಲಿ ಬಿಜೆಪಿಯನ್ನು ಎದುರಿಸಲು ಪ್ರಬಲ ರಂಗ ಒಂದರ ಅಗತ್ಯ ಇದೆ ಎಂದು ಅವರು ಹೇಳಿದರು.  ‘ಬಿಜೆಪಿಗೆ ರಾಜಕೀಯ ಪರ್‍ಯಾಯಕ್ಕಾಗಿ ಕೂಗು ಕ್ರಮೇಣ ಬಲಗೊಳ್ಳಲಿದೆ ಎಂದು ನುಡಿದ ಗೌಡ, ’ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ಪಕ್ಷವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದರು.  ‘ಮುಂದಿನ ೨-೩ ತಿಂಗಳುಗಳಲ್ಲಿ ಪರಿಸ್ಥಿತಿ ಯಾವ ರೀತಿ ರೂಪುಗೊಳ್ಳುತ್ತದೆ ಎಂದು ನಾನು ನೋಡಬಯಸಿದ್ದೇನೆ ಎಂದು ಅವರು ಹೇಳಿದರು.  ೨೦೧೯ರ ಮಹಾ ಚುನಾವಣೆ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ತಮ್ಮ ಪಕ್ಷ ಒಟ್ಟಾಗಿ ಹೋರಾಡಲಿವೆ ಎಂದು ನುಡಿದ ಅವರು ’ಏನಿದ್ದರೂ ಸ್ಥಾನ ಹೊಂದಾಣಿಕೆ ಬಗ್ಗೆ ಇನ್ನೂ ಚರ್ಚಿಸಲಾಗಿಲ್ಲ ಎಂದು ನುಡಿದರು. ಕರ್ನಾಟಕದಲ್ಲಿ ೨೮ ಲೋಕಸಭಾ ಸ್ಥಾನಗಳಿವೆ.
2018: ನವದೆಹಲಿ: ಬಿಹಾರದ ಮುಜಾಫ್ಫರಪುರ ಬಾಲಿಕಾಧಾಮದ ಅಪ್ರಾಪ್ತ ಬಾಲಿಕೆಯರ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತಿತರರ ಜೊತೆಗೆ ವಿಪಕ್ಷ ನಾಯಕ ತೇಜಸ್ವಿ ಯಾದವ್ ನಡೆಸಿದ ಧರಣಿಗೆ  ಉತ್ತರ ನೀಡಿರುವ ಜನತಾದಳ (ಯು), ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ಬೇಡಿಕೆಯನ್ನು ತಳ್ಳಿಹಾಕಿತು. ದೆಹಲಿಯ ಜಂತರ್ ಮಂತರ್ ನಲ್ಲಿ ತೇಜಸ್ವಿ ಯಾದವ್ ಮತ್ತು ಇತರರು ಜಂಟಿ ಧರಣಿಯ ಮರುದಿನ ಇಲ್ಲಿ ಮಾತನಾಡಿದ ಜೆಡಿ(ಯು) ನಾಯಕ ಕೆ.ಸಿ ತ್ಯಾಗಿ ಅವರು ನಿತೀಶ್ ಕುಮಾರ್ ರಾಜೀನಾಮೆ ಪ್ರಶ್ನೆಯಿಲ್ಲ. ಬೇಕಿದ್ದರೆ ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆ ನಡೆಸಲೂ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.  ಸ್ಥಳೀಯ ನಾಯಕ ಬೃಜೇಶ್ ಥಾಕುರ್ ಮಾಲೀಕತ್ವದ ಬಾಲಿಕಾಧಾಮದಲ್ಲಿ ನಡೆದ ಲೈಂಗಿಕ ಶೋಷಣೆ ಪ್ರಕರಣದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ತೇಜಸ್ವಿಯಾದವ್ ಅವರು ಆಗ್ರಹಿಸಿದ ಜಂಟಿ ಧರಣಿಯಲ್ಲಿ  ರಾಹುಲ್ ಗಾಂಧಿ, ಅರವಿಂದ ಕೇಜ್ರಿವಾಲ್ ಮತ್ತಿತರರು ಪಾಲ್ಗೊಂಡಿದ್ದರು. ಜಂಟಿ ಧರಣಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ರಾಹುಲ್ ಗಾಂಧಿ ಮತ್ತು ಕೇಜ್ರಿವಾಲ್ ಅವರನ್ನೂ ತ್ಯಾಗಿ ಕಟುವಾಗಿ ಟೀಕಿಸಿದರು.  ಇದಕ್ಕೆ ಮುನ್ನ ನಿತೀಶ್ ಕುಮಾರ್ ಅವರು ತಡವಾಗಿ ನೀಡಿದ ಪ್ರತಿಕ್ರಿಯೆಯಲ್ಲಿ ’ಮುಜಾಫ್ಫರಪುರ ಘಟನೆ ನಾಚಿಕೆಗೇಡು ಘಟನೆ ಎಂದು ಹೇಳಿದ್ದರು. ಇಂತಹ ನಾಚಿಕಗೇಡಿನ ದುರದೃಷ್ಟಕರ ಘಟನೆಯನ್ನು ಹಿಡಿದುಕೊಂಡು ’ಫ್ರೆಂಡ್ ಶಿಪ್ ದಿನದಂದು ಪಕ್ಷಗಳು ರಾಜಕೀಯ ಲಾಭ ಮಾಡಿಕೊಳ್ಳಲು ಹೊರಟಿವೆ ಎಂದು ಅವರು ಟೀಕಿಸಿದ್ದರು.   ‘ಎಳೆಯ ಬಾಲಕಿಯರ ಮೇಲೆ ನಡೆದ ನಾಚಿಕೆ ಹುಟ್ಟಿಸುವ ಅತ್ಯಾಚಾರದ ಘಟನೆ ವಿಪಕ್ಷಗಳಿಗೆ ಬಿಹಾರದಲ್ಲಿನ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಸರ್ಕಾರದ ರಾಜೀನಾಮೆಗೆ ಒತ್ತಾಯಿಸುವ ಸಲುವಾಗಿ ಒಗ್ಗಟ್ಟಾಗಲು ಒಂದು ವಿಷಯವಾಗಿರುವುದಾದರೂ ಹೇಗೆ? ಇದು ಅತ್ಯಂತ ದುರದೃಷ್ಟಕರ ಎಂದು ತ್ಯಾಗಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ವಿಪಕ್ಷಗಳ ಒತ್ತಾಯದ ಹೊರತಾಗಿಯೂ ನಿತೀಶ್ ಕುಮಾರ್ ರಾಜೀನಾಮೆ ನೀಡುವುದಿಲ್ಲ ಎಂದು ನುಡಿದ ತ್ಯಾಗಿ, ತಾಕತ್ತಿದ್ದರೆ ವಿಧಾನಸಭೆಯಲ್ಲಿ ಅವರನ್ನು ಹುದ್ದೆಯಿಂದ ಇಳಿಸಲಿ ಎಂದು ಸವಾಲು ಹಾಕಿದರು.  ಮುಜಾಫ್ಫರಪುರ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಕ್ಷಿಪ್ರವಾಗಿ ಕ್ರಮ ಕೈಗೊಂಡಿದೆ. ವಿಪಕ್ಷ ಬೇಡಿಕೆಯಂತೆ ಸಿಬಿಐ ತನಿಖೆಗೆ ಆಜ್ಞಾಪಿಸಿದೆ. ತನಿಖೆಯ ನಿಗಾ ವಹಿಸುವಂತೆ ಹೈಕೋರ್ಟಿಗೂ ಮನವಿ ಮಾಡಿದೆ. ಬೇಕಿದ್ದರೆ ಸುಪ್ರೀಂಕೋರ್ಟ್ ನಿಗಾದಲ್ಲೂ ತನಿಖೆ ನಡೆಸಲು ಸಿದ್ಧ ಎಂದು ಅವರು ನುಡಿದರು.  ಮರಳು ಗಣಿಗಾರಿಕೆ ಮತ್ತು ಕಳ್ಳಭಟ್ಟಿ ವ್ಯವಹಾರವನ್ನು ರಾಜ್ಯ ಸರ್ಕಾರ ಪರಿಣಾಮಕಾರಿಯಾಗಿ ಮಟ್ಟ ಹಾಕಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ನೆರವು ನೀಡಲು ವಿಪಕ್ಷಗಳು ಬಯಸಿದ್ದು ಅದಕ್ಕಾಗಿ ನಿತೀಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತಿವೆ ಎಂದು ತ್ಯಾಗಿ ಆಪಾದಿಸಿದರು.  ರಾಹುಲ್ ಗಾಂಧಿ, ಸಿತಾರಾಂ ಯೆಚೂರಿ ಮತ್ತು ಡಿ. ರಾಜಾ ಅವರನ್ನು ಆರ್ ಜೆಡಿಯ ಜಂತರ್ ಮಂತರ್ ಧರಣಿಯಲ್ಲಿ ಪಾಲ್ಗೊಂಡದ್ದಕ್ಕಾಗಿ ಖಂಡಿಸಿದ ತ್ಯಾಗಿ, ಜೆ ಎನ್ ಯು ಅಧ್ಯಕ್ಷ ಚಂದ್ರಶೇಖರ್ ಮತ್ತು ಪೂರ್ಣಿಯಾ ಶಾಸಕ ಅಜಿತ್ ಸರ್ಕಾರ ಹತ್ಯೆಯನ್ನು ಮರೆತು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಟೀಕಿಸಿದರು.

2018: ನವದೆಹಲಿ/ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ  ಚಂದ್ರಯಾನ-೨ ಪುನಃ ವಿಳಂಬಗೊಂಡಿದ್ದು, ೨೦೧೯ರ ಜನವರಿ ತಿಂಗಳಿಗೆ ಮುಂದೂಡಿಕೆಯಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದರು. ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಂದ್ರಯಾನ-೨ ರೋವರ್ ಉಡಾವಣೆ ಮಾಡುವ ಗುರಿಯನ್ನು ಇಸ್ರೋ ಹಾಕಿಕೊಂಡಿತ್ತು. ಆದರೆ ತಾಂತ್ರಿಕ ಅಡಚಣೆಗಳ ಕಾರಣದಿಂದಾಗಿ ಕಾರ್‍ಯಕ್ರಮವನ್ನು ಒಂದು ವರ್ಷಕ್ಕೂ ಕಡಿಮೆ ಅವಧಿಯಲ್ಲ್ಲಿ ಎರಡನೇ ಬಾರಿಗೆ ಮುಂದೂಡಿಕೆ ಮಾಡಲಾಯಿತು. ಮೊದಲಿಗೆ ಏಪ್ರಿಲ್ ತಿಂಗಳಲ್ಲಿ ಚಂದ್ರಯಾನ-೨ ರೋವರ್ ಉಡಾವಣೆಗೆ ಯೋಜಿಸಲಾಗಿತ್ತು.  ಇದಕ್ಕೆ ಮುನ್ನ ಈ ವರ್ಷ ಇಸ್ರೋ ಸೇನಾ ಸಂಪರ್ಕ ಉಪಗ್ರಹ ಜಿಸ್ಯಾಟ್-೬ಎ ಯನ್ನು ಉಡಾವಣೆ ಮಾಡಿತ್ತು. ಆದರೆ ಬಳಿಕ ಅದರ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಇಸ್ರೋ ಫ್ರೆಂಚ್ ಗಯಾನಾದ ಕೊವುರೊನಿಂದ ಉಡಾವಣೆ ಮಾಡಬೇಕಾಗಿದ್ದ ಜಿಸ್ಯಾಟ್ ೧೧ ನ್ನು ಹೆಚ್ಚುವರಿ ತಾಂತ್ರಿಕ ತಪಾಸಣೆಗಳಿಗಾಗಿ ಹಿಂದಕ್ಕೆ ತರಿಸಿಕೊಂಡಿತ್ತು.  ಕಳೆದ ಸೆಪ್ಟೆಂಬರಿನಲ್ಲಿ ಐಆರ್ ಎನ್ ಎಸ್ ಎಸ್ -೧ ಎಚ್ ದಿಕ್ಸೂಚಿ ಉಪಗ್ರವನ್ನು ಒಯ್ಯುತ್ತಿದ್ದ ಪಿಎಸ್ ಎಲ್ ವಿ -ಸಿ೩೯ ಯೋಜನೆ ಹೀಟ್ ಶೀಲ್ಡ್ ತೆರೆಯಲ್ಪಡದ ಕಾರಣ ಉಪಗ್ರಹ ಬಿಡುಗಡೆ ಮಾಡಲಾಗದೆ ವಿಫಲಗೊಂಡಿತ್ತು.  ಈ ಎರಡು ಹಿನ್ನಡೆಗಳ ಬಳಿಕ ಚಂದ್ರಯಾನ ೨ ವಿಚಾರದಲ್ಲಿ ಇಸ್ರೋ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಇದು ಚಂದ್ರಯಾನ -೧ ಮತ್ತು ಮಂಗಳಯಾನ ಬಳಿಕದ ಅತ್ಯಂತ ನಿರ್ಣಾಯಕ ಯೋಜನೆಯಾಗಿದೆ. ಬಾಹ್ಯಾಕಾಶದ ಯಾವುದೇ ಒಂದು ಗ್ರಹದ ಮೇಲೆ ಇಳಿಯುವ ಇಸ್ರೋದ ಪ್ರಥಮ ಯೋಜನೆ ಇದಾಗಿದೆ.  ‘ನಾವು ಈಗ ಅಪಾಯಗಳನ್ನು ಆಹ್ವಾನಿಸಿಕೊಳ್ಳಲು ಬಯಸುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದರು.  ಚಂದ್ರಯಾನ -೨ ವಿಳಂಬದಿಂದಾಗಿ ಚಂದ್ರನ ಅಂಗಳಕ್ಕೆ ನೌಕೆ ಕಳುಹಿಸುವ ಪೈಪೋಟಿಯಲ್ಲಿ ಇಸ್ರೇಲ್ ಒಂದು ಹೆಜ್ಜೆ ಮುಂದಿಡುವ ಸಾಧ್ಯತೆಯಿದೆ. ಇಸ್ರೇಲ್‌ನ ಸ್ಪೇಸ್‌ಐಎಲ್ ಸಂಸ್ಥೆಯು ಸ್ಪ್ಯಾರೋ ನೌಕೆಯನ್ನು ಈ ವರ್ಷದ ಡಿಸೆಂಬರ್‌ನಲ್ಲಿ ಉಡಾವಣೆ ಮಾಡಲು ನಿರ್ಧರಿಸಲಾಗಿದ್ದು, ೨೦೧೯ ಫೆಬ್ರವರಿ ೧೩ ರಂದು ಚಂದ್ರನ ಅಂಗಳಕ್ಕೆ ಇಳಿಯಲಿದೆ.  ಹೀಗಾಗಿ ಚಂದ್ರನ ಮೇಲೆ ನೌಕೆಯನ್ನು ಸಾಫ್ಟ್ ಲ್ಯಾಂಡ್ ಮಾಡುವ ನಾಲ್ಕನೇ ದೇಶ ಯಾವುದಾಗುತ್ತದೆ ಎಂಬ ಕುತೂಹಲ ಇದೆ. ಸದ್ಯದ ಬೆಳವಣಿಗೆಯ ಪ್ರಕಾರ ನಾಲ್ಕನೇ ಸ್ಥಾನ  ಇಸ್ರೇಲ್ ಪಾಲಾಗುವ ಸಾಧ್ಯತೆಯಿದೆ

2018: ನವದೆಹಲಿ: ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಿರುವ ವಿಚಾರವು ಪುನಃ ವಿವಾದದ ಸುಳಿಯನ್ನು ಎಬ್ಬಿಸಿತು.  ಈ ಬಾರಿ  ಸರ್ಕಾರವು ನೇಮಕಾತಿ ಅಧಿಸೂಚನೆಯಲ್ಲಿ ಅವರ ಹಿರಿತನಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಯಾಡಿಸಿದೆ ಎಂದು ಸುಪ್ರೀಂಕೋರ್ಟಿನ ಹಲವಾರು ನ್ಯಾಯಮೂರ್ತಿಗಳು ಅಸಮಾಧಾನಗೊಂಡರು. ಉತ್ತರಾಖಂಡ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರಿಗೆ ಸುಪ್ರೀಂಕೋರ್ಟಿಗೆ ಬಡ್ತಿನೀಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಜನವರಿ ತಿಂಗಳಲ್ಲಿ ಮೊದಲಿಗೆ ಶಿಫಾರಸು ಮಾಡಿತ್ತು.  ಆದರೆ ಸರ್ಕಾರವು ಅವರಿಗೆ ಹಿರಿತನವಿಲ್ಲ ಎಂಬ ನೆಲೆಯಲ್ಲಿ ಹಾಗೂ ಅವರಿಗೆ ಬಡ್ತಿ ನೀಡುವುದರಿಂದ ಕೇರಳಕ್ಕೆ ಮಿತಿ ಮೀರಿದ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಬಡ್ತಿ ನೀಡಲು ನಿರಾಕರಿಸಿತ್ತು.   ಸುಪ್ರೀಂಕೋರ್ಟ್ ಕೊಲಿಜಿಯಂ ಜುಲೈ ತಿಂಗಳಲ್ಲಿ ನ್ಯಾಯಮೂರ್ತಿ ಜೋಸೆಫ್ ಅವರ ಹೆಸರನ್ನು ಪುನಃ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಒರಿಸ್ಸಾ ಹೈಕೋಟ್ ಮುಖ್ಯ ನ್ಯಾಯಮೂರ್ತಿ ವಿನೀತ್ ಸರನ್ ಅವರ ಹೆಸರುಗಳ ಜೊತೆಗೆ ಬಡ್ತಿ ಸಲುವಾಗಿ ಕಳುಹಿಸಿತು.  ಸರ್ಕಾರವು ಶನಿವಾರ ಬಡ್ತಿಗೆ ಒಪ್ಪಿಗೆ ನೀಡಿತು, ಆದರೆ ಅಧಿಸೂಚನೆಯಲ್ಲಿ ನ್ಯಾಯಮೂರ್ತಿ ಜೋಸೆಫ್ ಅವರ ಹೆಸರನ್ನು ಇತರ ಇಬ್ಬರು ನ್ಯಾಯಮೂರ್ತಿಗಳ ಬಳಿಕದ ಸಾಲಿನಲ್ಲಿ ಸೇರಿಸುವ ಮೂಲಕ ಅವರನ್ನು ಕಿರಿಯ ನ್ಯಾಯಮೂರ್ತಿಯನ್ನಾಗಿ ಮಾಡಿತು. ಇದರಿಂದ ಅಸಮಾಧಾನಗೊಂಡಿರುವ ನ್ಯಾಯಮೂರ್ತಿಗಳು ಸೋಮವಾರ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರನ್ನ ಭೇಟಿ ಮಾಡಿ ತಮ್ಮ ಪ್ರತಿಭಟನೆ ಸಲ್ಲಿಸುವ ನಿರೀಕ್ಷೆ ಇದೆ.  ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಸುಪ್ರೀಂಕೋರ್ಟಿಗೆ ಬಡ್ತಿ ನೀಡುವ ಮೂಲಕ ಸರ್ಕಾರ ಮತ್ತು ನ್ಯಾಯಾಂಗದ ನಡುವಣ ದೀರ್ಘಕಾಲದ ಬಿಕ್ಕಟ್ಟು ಇತ್ಯರ್ಥಗೊಂಡಂತಾಗಿತ್ತು.  ನ್ಯಾಯಮೂರ್ತಿ ಜೋಸೆಫ್ ಅವರು ೨೦೧೬ರಲ್ಲಿ ಹರೀಶ್ ರಾವತ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಿದ ಬಳಿಕ ಉತ್ತರಾಖಂಡದಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ರದ್ದು ಪಡಿಸಿದ್ದರು.  ನ್ಯಾಯಮೂರ್ತಿ ಜೋಸೆಫ್ ಅವರ ಸುಪ್ರೀಂಕೋರ್ಟ್ ಬಡ್ತಿ ವಿವಾದಕ್ಕೆ ಅವರ ಈ ತೀರ್ಪೇ ಮೂಲ ಕಾರಣವಾಗಿರಬಹುದು ಎಂದು ಊಹಾಪೋಹಗಳು ವ್ಯಾಪಕವಾಗಿ ಹರಡಿದ್ದವು.  ಇದಕ್ಕೆ ಮುನ್ನ ನ್ಯಾಯಮೂರ್ತಿ ಜೋಸೆಫ್ ಅವರನ್ನು ಆರೋಗ್ಯದ ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಹೈಕೋರ್ಟಿಗೆ ವರ್ಗಾವಣೆ ಮಾಡಿ ಕೊಲಿಜಿಯಂ ಕಳುಹಿಸಿದ್ದ ಆದೇಶವನ್ನು ಸರ್ಕಾರ ದೀರ್ಘ ಕಾಲದವರೆಗೆ ನನೆಗುದಿಯಲ್ಲಿ ಇರಿಸಿತ್ತು. ನ್ಯಾಯಮೂರ್ತಿ ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸುವ ತನ್ನ ನಿರ್ಧಾರವನ್ನು ಮೇ ೧೬ರಂದು ಕೊಲಿಜಿಯಂ ಪುನರುಚ್ಚರಿಸಿತ್ತು. ಆದರೆ ಈ ಶಿಫಾರಸನ್ನು ಜುಲೈ ತಿಂಗಳಲ್ಲಿ ಸರ್ಕಾರಕ್ಕೆ ಕಳುಹಿಸಿತ್ತು.  ಹೊಸ ನೇಮಕಾತಿಗಳ ಬಳಿಕ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ೨೫ಕ್ಕೆ ಏರಿದೆ. ಮೂವರು ನ್ಯಾಯಮೂರ್ತಿಗಳಿಗೆ ಭಾರತದ ಮುಖ್ಯ ನ್ಯಾಯಮೂರ್ತಿಯವರು ಆಗಸ್ಟ್ ೭ರಂದು ಪ್ರಮಾಣವಚನ ಬೋಧಿಸುವ ನಿರೀಕ್ಷೆ ಇದೆ.

2018: ಜಿನೀವಾ: ೨ನೇ ಜಾಗತಿಕ ಸಮರ ಕಾಲದ ವಿಂಟೇಜ್ ವಿಮಾನವೊಂದು ಸ್ವಿಜರ್ಲೆಂಡಿನ ಪರ್ವತ ಪ್ರದೇಶದಲ್ಲಿ ಪತನಗೊಂಡಿದ್ದು ಅದರಲ್ಲಿದ್ದ ಕನಿಷ್ಠ ೨೦ ಮಂದಿ ಅಸು ನೀಗಿದ್ದಾರೆ ಎಂದು ಭೀತಿ ಪಡಲಾಗಿದೆ ಎಂದು ಸ್ಥಳೀಯ ವರದಿಗಳು ಇಲ್ಲಿ ತಿಳಿಸಿದವು. ಸೇವೆಯಲ್ಲಿ ಇಲ್ಲದೇ ಇದ್ದ ಜಂಕರ್ ಜೆಯು೫೨ಎಚ್ ಬಿ -ಎಚ್ ಒಟಿ ವಿಮಾನವು ೧೯೩೯ರಲ್ಲಿ ಜರ್ಮನಿಯಲ್ಲಿ ನಿರ್ಮಿಸಿದ್ದ ವಿಮಾನವಾಗಿದ್ದು, ಈಗ ಸಂಗ್ರಹಕಾರರ ವಸ್ತುವಾಗಿದ್ದು, ಜೆಯು - ಏರ್ ಕಂಪೆನಿಯ ವಶದಲ್ಲಿತ್ತು. ಈ ಕಂಪೆನಿಯು ಸ್ವಿಸ್ ವಾಯುಪಡೆಯ ಜೊತೆ ಸಂಪರ್ಕ ಹೊಂದಿತ್ತು ಎಂದು ವರದಿ ತಿಳಿಸಿತು. ೧೭ ಮಂದಿ ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿಯನ್ನು ಒಯ್ಯುವಂತಹ ಈ ಜಂಕರ್ ವಿಮಾನ ಶನಿವಾರ ರಾಷ್ಟ್ರದ ಪೂರ್ವಕ್ಕಿರುವ ೨,೫೦೦ ಮೀಟರ್ ಎತ್ತರ ಪ್ರದೇಶದ ಪಿಝ್ ಸೆಗ್ನಾಸ್ ಪರ್ವತಕ್ಕೆ ಅಪ್ಪಳಿಸಿ ಪತನಗೊಂಡಿದೆ ಎಂದು ವರದಿಗಳು ಹೇಳಿದವು. ಜರ್ಮನ್ ಭಾಷಾ ಪತ್ರಿಕೆ ಬ್ಲಿಕ್ ಪ್ರಕಾರ, ವಿಮಾನ ಜನರಿಂದ ಭರ್ತಿಯಾಗಿದ್ದು, ಅದರಲ್ಲಿದ್ದ ಕನಿಷ್ಠ ೨೦ ಮಂದಿ ಸಾವನ್ನಪ್ಪಿರಬಹುದು ಎಂದು ಹೇಳಲಾಯಿತು. ವಿಮಾನವು ದೇಶದ ದಕ್ಷಿಣದ ಟಿಸಿನೋದಿಂದ ಬಾನಿಗೇರಿತ್ತು ಮತ್ತು ಜುರಿಚ್ ಸಮೀಪದ ಡ್ಯುಬೆಂಡೋರ್ಫ್ ಮಿಲಿಟರಿ ಏರ್ ಫೀಲ್ಡ್ ನಲ್ಲಿ ಇಳಿಯಬೇಕಾಗಿತ್ತು ಎಂದು ವರದಿ ಹೇಳಿದೆ.  ‘ವಿಮಾನವು ೧೮೦ ಡಿಗ್ರಿಗಳಷ್ಟು ದಕ್ಷಿಣಕ್ಕೆ ತಿರುಗಿತು ಮತ್ತು ಕಲ್ಲಿನಂತೆ ನೆಲಕ್ಕೆ ಅಪ್ಪಳಿಸಿತು ಎಂದು ದುರಂತದ ವೇಳೆ ಪರ್ವತದ ಬಳಿ ಇದ್ದ ಪ್ರತ್ಯಕ್ಷದರ್ಶಿಯೊಬ್ಬ ತಿಳಿಸಿದ್ದಾಗಿ ಇನ್ನೊಂದು ಪತ್ರಿಕೆ ವರದಿ ಮಾಡಿದೆ. ಅವಶೇಷಗಳು ಅತ್ಯಂತ ಸಣ್ಣ ಪ್ರದೇಶದಲ್ಲಿ ಹರಡಿಬಿದ್ದಿವೆ. ವಿಮಾನ ಸ್ಫೋಟದ ಕಾರಣ ಪತನಗೊಂಡಿಲ್ಲ ಎಂಬುದನ್ನು ಇದು ತೋರಿಸಿದೆ ಎಂದು ವರದಿ ಹೇಳಿತು. ಪೊಲೀಸರು ಈದಿನ  ಬೆಳಗಿನವರೆಗೂ ಸಾವು ನೋವಿನ ವಿವರ ಕೊಟ್ಟಿಲ್ಲ. ಆದರೆ ಐದು ಹೆಲಿಕಾಪ್ಟರುಗಳನ್ನು ದುರಂತ ಸ್ಥಳಕ್ಕೆ ಶೋಧ ಹಾಗೂ ರಕ್ಷಣಾ ಕಾರ್‍ಯಾಚರಣೆಗಾಗಿ ಕಳುಹಿಸಲಾಗಿದೆ ಎಂದು ಹೇಳಿರುವುದಾಗಿ ವರದಿ ಹೇಳಿದೆ.


2018: ಜಕಾರ್ತ: ಇಂಡೋನೇಷ್ಯಾದ ಲೊಂಬೊಕ್ ದ್ವೀಪದಲ್ಲಿ ರಿಕ್ಟರ್ ಮಾಪಕದಲ್ಲಿ ೭ ರಷ್ಟು ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಯಿತು. ವಾರದ ಹಿಂದೆ ೧೭ ಜನರನ್ನು ಬಲಿತೆಗೆದುಕೊಂಡಿದ್ದ ಭೂಕಂಪದ ಬಳಿಕ ಈದಿನ ಪುನಃ ಭಾರಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂಗರ್ಭ ಸಮೀಕ್ಷೆ ತಿಳಿಸಿತು. ರಿಕ್ಟರ್ ಮಾಪಕದಲ್ಲಿ ೭ರಷ್ಟು ತೀವ್ರತೆ ಇದ್ದ ಭೂಕಂಪವು ಭೂಗರ್ಭ ಪ್ರದೇಶದಲ್ಲಿ ೧೦ ಕಿಮೀಯಷ್ಟು ಪ್ರದೇಶದಲ್ಲಿ ಮಾತ್ರ ಭೂಮಿಯನ್ನು ಕಂಪಿಸುವಂತೆ ಮಾಡಿದೆ ಎಂದು ಸಮೀಕ್ಷಾ ವರದಿ ಹೇಳಿತು. ಭೂಕಂಪದ ಪರಿಣಾಮವಾಗಿ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಸಮುದ್ರದ ತೀರ ಪ್ರದೇಶಗಳಿಂದ ದೂರ ಹೋಗುವಂತೆ ಸೂಚನೆ ನೀಡಿದರು.  ‘ಸಮುದ್ರ ಶಾಂತವಾಗಿರುವಾಗಲೇ ಎತ್ತರದ ಪ್ರದೇಶಗಳಿಗೆ ತೆರಳಿ. ಭಯಭೀತರಾಗಬೇಡಿ ಎಂದು ಹವಾಮಾನ ಸಂಸ್ಥೆಯ ಮುಖ್ಯಸ್ತರು ಸೂಚಿಸಿದರು.

2017: ನವದೆಹಲಿ: ಸಂಸತ್‌ನಲ್ಲಿ ನಡೆದ ಚುನಾವಣೆಯಲ್ಲಿ ಉಪರಾಷ್ಟ್ರಪತಿಯಾಗಿ ಎನ್‌ಡಿಎ ಅಭ್ಯರ್ಥಿ ಎಂ. ವೆಂಕಯ್ಯ ನಾಯ್ಡು 272 ಮತಗಳ ಭಾರೀ ಅಂತರದಲ್ಲಿ ಆಯ್ಕೆಯಾದರು. ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಿದ್ದ ಎಂ. ವೆಂಕಯ್ಯ ನಾಯ್ಡು ಅವರು 516 ಮತ ಪಡೆದರೆ, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು 244 ಮತ ಪಡೆದರು. ಉಪರಾಷ್ಟ್ರಪತಿ ಆಯ್ಕೆಗೆ ನಡೆದ ಮತದಾನದಲ್ಲಿ ಶೇಕಡಾ 98.21ರಷ್ಟು ಮತ ಚಲಾವಣೆಯಾಯಿತು. ಒಟ್ಟು 785 ಸಂಸದರ ಪೈಕಿ 771 ಮಂದಿ ಹಕ್ಕು ಚಲಾಯಿಸಿದರು ಎಂದು ಸಹಾಯಕ ಚುನಾವಣಾ ಅಧಿಕಾರಿ ಮುಕುಲ್‌ ಪಾಂಡೆ ತಿಳಿಸಿದರು. ಆಡಳಿತಾರೂಢ ಎನ್‌ಡಿಎಗೆ ಲೋಕಸಭೆಯಲ್ಲಿ ಬಹುಮತ ಇತ್ತು. ಹಾಗಾಗಿ ಎನ್‌ಡಿಎ ಅಭ್ಯರ್ಥಿ ಉಪರಾಷ್ಟ್ರಪತಿ ಆಗಲಿದ್ದಾರೆ ಎಂಬುದು ಬಹುತೇಕ ಖಚಿತವಾಗಿತ್ತು. ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣದಲ್ಲಿದ್ದರು.
2017: ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಾಲ್ಕು ತಿಂಗಳ ನಂತರ ಯೋಗಿ
ಆದಿತ್ಯನಾಥ್ ಅವರು ಲೋಕಸಭೆಯ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜ್ಯ ವಿಧಾನಸಭೆಗೆ ಆಯ್ಕೆಯಾಗಬೇಕಿರುವುದರಿಂದ ಅವರು ಈ ಕ್ರಮ ಕೈಗೊಂಡರು. ನಿಯಮಗಳ ಪ್ರಕಾರ, ಯಾವುದೇ ರಾಜ್ಯದಲ್ಲಿ ಬಹುಮತ ಹೊಂದಿರುವ ಪಕ್ಷವೊಂದು ಶಾಸಕನಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದರೆ, ಅಧಿಕಾರ ಸ್ವೀಕರಿಸಿದ ಆರು ತಿಂಗಳ ಒಳಗಾಗಿ ಅವರು ಶಾಸಕನಾಗಿ ಗೆದ್ದು ಬರಬೇಕು. ಹೀಗಾಗಿ ಆದಿತ್ಯನಾಥ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ಅವರು ರಾಜೀನಾಮೆ ನೀಡಿದರು. ಸತತ ಐದು ಬಾರಿ ಅವರು ಗೋರಖ್‌ಪುರ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು.


2017: ನವದೆಹಲಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ನಡೆದ ಕಲ್ಲು ತೂರಾಟದ ಸಂಬಂಧ ಒಬ್ಬ ವ್ಯಕ್ತಿಯನ್ನು  ಪೊಲೀಸರು ಬಂಧಿಸಿದರು. ಆರೋಪಿ ಜಯೇಶ್ ದರ್ಜಿ ಅಲಿಯಾಸ್ ಅನಿಲ್  ರಾಥೋಡ್ ಎಂಬುವರನ್ನು ಬಂಧಿಸಲಾಗಿದೆ ಎಂದು ಬನಸ್‌ಕಾಂತ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೀರಜ್ ಬದ್ಗೂಜರ್ ಹೇಳಿದರು. ಜಯೇಶ್ ದರ್ಜಿ ಅವರು ಬನಸ್ಕಾಂತ ಜಿಲ್ಲೆಯ ಬಿಜೆಪಿಯ ಯುವ ಮೋರ್ಚಾ ಸಂಘಟನೆಯ ಕಾರ್ಯದರ್ಶಿ. ಹಿಂದಿನ ದಿನ  ಗುಜರಾತಿನಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ನಡೆದ ಕಲ್ಲು ತೂರಾಟದಂತಹ ದುಷ್ಕೃತ್ಯದ ಹಿಂದೆ ಈತನ ಕೈವಾಡವಿದೆ. ಈತನ ಜತೆ ಇನ್ನೂ ಮೂರು ಹೆಸರುಗಳನ್ನು ಪೊಲೀಸರಿಗೆ ನೀಡಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ‘ನನ್ನ ಮೇಲಿನ ಹಲ್ಲೆ ಖಂಡಿಸಿ ರಾಜ್ಯದ ಹಲವೆಡೆ ನಡೆಸುತ್ತಿರುವ ಪ್ರತಿಭಟನೆಯನ್ನು ಪಕ್ಷದ ಕಾರ್ಯಕರ್ತರು ಕೈಬಿಡಬೇಕು. ಪ್ರವಾಹಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿರುವ ಜನರಿಗೆ ಸಹಾಯ ಮಾಡಿ’ ಎಂದು ರಾಹುಲ್ ಗಾಂಧಿ ಅವರು ಮನವಿ ಮಾಡಿದರು. ಗುಜರಾತ್‌ ಪ್ರವಾಹ ಪೀಡಿತ ಪ್ರದೇಶಗಳಿಗೆ ಹಿಂದಿನ ದಿನ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ನಡೆದ ಕಲ್ಲು ತೂರಾಟ ನಡೆಸಿದ್ದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದ ಹಲವು ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

2017: ನವದೆಹಲಿ: ನೀತಿ ಆಯೋಗದ  ಉಪಾಧ್ಯಕ್ಷರಾಗಿ ಆರ್ಥಿಕ ತಜ್ಞ  ರಾಜೀವ ಕುಮಾರನ್ನು ಕೇಂದ್ರ ಸರ್ಕಾರವು ಪಕಟಿಸಿತು. ಅರವಿಂದ ಪನಗರಿಯಾ ಅವರು ಹುದ್ದೆಗೆ ರಾಜೀನಾಮೆ ನೀಡಿದ 5 ದಿನಗಳ ಬಳಿಕ ಕೇಂದ್ರವು ರಾಜೀವ ಕುಮಾರ್  ನೇಮಕವನ್ನು ಪ್ರಕಟಿಸಿತು. ಡಾ. ವಿನೋದ ಕುಮಾರ ಪೌಲ್ ಅವರನ್ನು ಆಯೋಗದ ಸದಸ್ಯರಾಗಿಯೂ ಕೇಂದ್ರ ಸರ್ಕಾರ ನೇಮಿಸಿತು.
2016: ಅಹ್ಮದಾಬಾದ್: ವಿಜಯ್ ರೂಪಾನಿ ಅವರು ಗುಜತಾತಿನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು. ನಿತಿನ್ ಪಟೇಲ್ ಅವರು ರಾಜ್ಯನ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಈದಿನ ಪ್ರಕಟಿಸಲಾಯಿತು. ಪಕ್ಷದ ಶಾಸಕಾಂಗ ಸಭೆಯಲ್ಲಿ ರೂಪಾನಿ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಹಿರಿಯ ನಾಯಕ ನಿತಿನ್ ಗಡ್ಕರಿ ವೀಕ್ಷಕರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಜಯ್ ರೂಪಾನಿ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಆನಂದಿಬೆನ್ ಅವರ ಸಂಪುಟದಲ್ಲಿ ಸಾರಿಗೆ, ನೀರು ಸರಬರಾಜು, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. 2014ರಲ್ಲಿ ರೂಪಾನಿ ಅವರು ಮೊತ್ತ ಮೊದಲ ಬಾರಿಗೆ ವಜುಭಾಯಿ ವಾಲಾ ಅವರಿಂದ ತೆರವಾಗಿದ್ದ ರಾಜಕೋಟ್ ಪಶ್ಚಿಮ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ವಾಲಾ ಅವರು ತಮ್ಮ ಸ್ಥಾನ ತೆರವುಗೊಳಿಸಿದ್ದರು.

2016: ಕೊಕ್ರಜ್ಹಾರ್, ಅಸ್ಸಾಮ್ಅಸ್ಸಾಮಿನ ಕೊಕ್ರಜ್ಹಾರ್ ಮಾರುಕಟ್ಟೆಯಲ್ಲಿ ಹಠಾತ್ ದಾಳೆ ನಡೆಸಿರುವ ಉಗ್ರಗಾಮಿಗಳು ಯದ್ವಾತದ್ವ ಗುಂಡು ಹಾರಿಸಿ 14 ಮಂದಿ ನಾಗರಿಕರನ್ನು ಕೊಂದು ಹಾಕಿದ್ದಲ್ಲದೆ, 3 ಅಂಗಡಿಗಳನ್ನು ಧ್ವಂಸಗೊಳಿಸಿದರು. ಇದೇ ವೇಳೆಗೆ ಕೊಕ್ರಜ್ಹಾರಿನಿಂದ 8 ಕಿಮೀ. ದೂರದ ಬಲಜನ್ ತೆನಾಲಿ ಮಾರುಕಟ್ಟೆ ಪ್ರದೇಶದಲ್ಲಿಯೂ ಮೂವರು ಉಗ್ರರು ಗುಂಡಿನ ದಾಳಿ ನಡೆಸಿದರು. ಉಗ್ರಗಾಮಿಗಳ ಜೊತೆ ಗುಂಡಿನ ಘರ್ಷಣೆಯಲ್ಲಿ ನಿರತವಾಗಿದ್ದು ಒಬ್ಬ ಉಗ್ರಗಾಮಿ ಗುಂಡೇಟಿಗೆ ಬಲಿಯಾಗಿದ್ದಾನೆ. ಘಟನೆಯಲ್ಲಿ 18 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಉಗ್ರಗಾಮಿಗಳು ಬೋಡೋ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿದ್ದು ಅವರು ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಬೆದರಿಕೆ ಹಾಕಿದ್ದರು ಎಂದು ಸುದ್ದಿಮೂಲಗಳು ತಿಳಿಸಿದವು. ಉಗ್ರಗಾಮಿಗಳ ಜೊತೆ ಗುಂಡಿನ ಘರ್ಷಣೆ ನಡೆಸುತ್ತಿರುವ ಭದ್ರತಾ ಪಡೆಗಳು ಒಬ್ಬ ಉಗ್ರಗಾಮಿಯನ್ನು ಕೊಂದು ಹಾಕಿದ್ದು, ಉಳಿದವರ ಜೊತೆಗೆ ಕದನ ಮುಂದುವರೆದಿದೆ. ಐದರಿಂದ ಏಳು ಮಂದಿ ಉಗ್ರಗಾಮಿಗಳು ಆಟೋರಿಕ್ಷಾ ಒಂದರಲ್ಲಿ ಮಾರುಕಟ್ಟೆಗೆ ಬಂದು ದಾಳಿ ಆರಂಭಿಸಿದರು ಎಂದು ವರದಿಗಳು ಹೇಳಿದವು. ಗುಂಡಿನ ದಾಳಿಯ ಜೊತೆಗೆ ಉಗ್ರಗಾಮಿಗಳು ಮಾರುಕಟ್ಟೆ ಮೇಲೆ ಗ್ರೆನೇಡ್ ದಾಳಿ ನಡೆಸಿ ಮೂರು ಅಂಗಡಿಗಳನ್ನು ಧ್ವಂಸಗೊಳಿಸಿದರು.
2016: ಗುವಾಹಟಿ: ಪ್ರಖ್ಯಾತ ಅಸ್ಸಾಮಿ ಲೇಖಕ, ಶಿಕ್ಷಣ ತಜ್ಞ ಮಹೀಮ್ ಬೋರಾ (92) ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ನಾಗೋನ್ ಖಾಸಗಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ಕೊನೆಯುಸಿರೆಳೆದರು. ಅವರು ಪತ್ನಿ, ಒಬ್ಬ ಪುತ್ರನನ್ನು ಅಗಲಿದರು. ಇದಾನಿ ಮಹೀರ್ ಹನ್ನಿ ಕೃತಿಗೆ 2001ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಬೋರಾ, ಅಸ್ಸಾಂ ವ್ಯಾಲಿ ಲಿಟರೇಚರ್ ಅವಾರ್ಡ್ ಸೇರಿದಂತೆ ನೂರಾರು ಪ್ರಶಸ್ತಿ, ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ಅವರ ಮುಡಿಗೇರಿತ್ತು.
ಮುಖ್ಯಮಂತ್ರಿ ಎಸ್. ಸೋನೋವಾಲ್, ಸಂಸ್ಕೃತಿ ಸಚಿವ ನಬಾ ಕುಮಾರ್ ಮತ್ತಿತರರು ಬೋರಾ ನಿಧನಕ್ಕೆ ಸಂತಾಪ ಸೂಚಿಸಿದರು.
2016: ಬೀಜಿಂಗ್: ಟ್ರಾಫಿಕ್ ಜಾಮ್ ಎಂದು ಬಸ್ ಸಂಚಾರ ವಿಳಂಬವಾಯಿತು ಎಂದು ಹೇಳುವ ಕಾರಣಕ್ಕೆ ಚೀನಾ ಬ್ರೇಕ್ ಹಾಕಲಿದೆ. ಬೈಕ್, ಕಾರು, ಮತ್ತಿತರ ವಾಹನಗಳು ಸಂಚರಿಸುತ್ತಿದ್ದರೂ ಅವುಗಳಿಗೆ ಸಲ್ಪವೂ ಅಡಚಣೆಯಾಗದಂತೆ ಅದರ ಮೇಲೆಯೇ ಸರಾಗವಾಗಿ ತೆರಳಲಿದೆ ಬಸ್ (ಹಾರುವ ಬಸ್) ಚೀನಾದಲ್ಲಿ ರಸ್ತೆಗೆ ಇಳಿದು ಪ್ರಯೋಗಾರ್ಥ ಸಂಚಾರದಲ್ಲೂ ಯಶಸ್ವಿಯಾಯಿತು. ಸಂಚಾರದ ದ್ವಿಪಥವನ್ನೂ ಆಕ್ರಮಿಸಲಿರುವ ಬಿಗ್ ಬಸ್ನ್ನು ಟ್ರಾನ್ಸಿಟ್ ಎಲಿವೇಟೆಡ್ (ಟಿಇಬಿ) ಕಂಪೆನಿ ವಿನ್ಯಾಸಗೊಳಿಸಿದೆ.300 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯದ ಬಸ್ ನೆಲದಿಂದ 16 ಅಡಿ ಎತ್ತರದಲ್ಲಿರುತ್ತದೆ. ಹಾಗಾಗಿ ಇದರ ಕೆಳಗೆ ಚಿಕ್ಕಪುಟ್ಟ ವಾಹನ ತಮ್ಮ ಪಾಡಿಗೆ ತಾವು ಸಂಚರಿಸಬಹುದು. ಅಂದಹಾಗೆ ಇದಕ್ಕೆ ರಾಜಮಾರ್ಗವೇ ಬೇಕು. ಕಿನ್ಹ್ಯಿಂಡ್ಡೋ ನಗರದಲ್ಲಿ ರಸ್ತೆಗಿಳಿದ ಬಸ್, ಅನೇಕ ಪ್ರಯಾಣಿಕರನ್ನು ಮಹಾಮಾರ್ಗದಲ್ಲಿ ಕರೆದೊಯ್ಯುವ ಸೇವೆ ಸಲ್ಲಿಸಿತು. ಮಹಾನಗರಗಳಲ್ಲಿ ಸಂಚರಿಸುವ ಪ್ರಯಾಣಿಕರ ರೈಲು (ಕಮ್ಯೂಟರ್ ಟ್ರೖೆನ್)ಗಳಂತೆ ಇದು ಟ್ರಾಫಿಕ್ ಸ್ನೇಹಿ ಆಗಲಿದೆ ಎನ್ನಲಾಯಿತು.

2016: ಉದಯಪುರ: ಮಧುಮೇಹ (ಡಯಾಬಿಟೀಸ್) ರೋಗದಿಂದ ಬಳಲುತ್ತಿರುವವರಿಗಾಗಿ ಹಣ್ಣುಗಳ ರಾಜ ಮಾವಿನ ಹಣ್ಣುಗಳಲ್ಲಿ ಕಡಿಮೆ ಸಿಹಿ ಅಂಶ ಹೊಂದಿರುವ ಮಾವಿನಹಣ್ಣಿನ ತಳಿಯನ್ನು ಕಂಡು ಹಿಡಿದಿರುವುದಾಗಿ ಮಧ್ಯಪ್ರದೇಶದ ಉದಯಪುರ ಮಹಾರಾಣಾ ಪ್ರತಾಪ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಎಮ್ಯುುಎಟಿ) ಸಂಶೋಧಕರು ಪ್ರಕಟಿಸಿದರು. ಹಣ್ಣುಗಳ ಬೀಜದಲ್ಲಿನ ಸೂಕ್ಷ್ಮ ಜೀವದ್ರವ್ಯಗಳಲ್ಲಿನ ಸಕ್ಕರೆ ಪ್ರಮಾಣದ ಅಸಿಡಿಕ್ ನೇಚರ್ ಕಡಿಮೆಗೊಳಿಸಿ ಸಸಿ ಅಭಿವೃದ್ಧಿಗೊಳಿಸಲಾಗಿದೆ. ಇದಕ್ಕೆವನರಾಜಎಂದು ಹೆಸರಿಡಲಾಗಿದ್ದು, ಶೇಕಡಾ 9 ಟಿಎಸ್ಎಸ್ ಹಾಗೂ ಶೇಕಡಾ 31 ಅಸಿಡಿಕ್ ಮೌಲ್ಯವನ್ನು ಹೊಂದಿದೆ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಮೆತಾ ಹೇಳಿದ್ದಾರೆ. ಮಧುಮೇಹಿಗಳಿಗೆ ಮಾವಿನ ರುಚಿ ಸವಿಯಬೇಕೆಂಬ ಆಸೆ ಈಡೇರಿಸಲು ಸಂಶೋಧನೆ ನೆರವಾಗಲಿದೆ  ಎಂದು ಅವರು ಹೇಳಿದರು.

2016: ಅಲಹಾಬಾದ್: ಅಲಹಾಬಾದಿನ ಸ್ಥಳೀಯ ಕಲಾವಿದನೊಬ್ಬ ಇಸ್ಪೀಟ್ ಕಾರ್ಡ್ ಮೂಲಕ ರಿಯೋ ಒಲಿಂಪಿಕ್ ನಡೆಯುತ್ತಿರುವ ರಿಯೋ ಡಿ ಜನೈರೊದ ಮರಕಾನ ಕ್ರೀಡಾಂಗಣದ ವಿನ್ಯಾಸ ರಚಿಸಿ ಭಾರತದ ಕ್ರೀಡಾಪಟುಗಳಿಗೆ ಶುಭ ಕೋರಿದರು.  ನಿಶಾಂತ ಕುಮಾರ ಝಾ ಎಂಬ ಕಲಾವಿದ 4 ಸಾವಿರ ಇಸ್ಪೀಟ್ ಕಾರ್ಡ್ಗಳನ್ನು ಬಳಸಿ ರಿಯೋ ಕ್ರೀಡಾಂಗಣದ ಜತೆ ಶಿವಲಿಂಗವನ್ನು ನಿರ್ವಿುಸಿದರು.   ಬಾರಿ ಒಲಿಂಪಿಕ್ನಲ್ಲಿ ಭಾರತದ ಅಥ್ಲಿಟ್ಗಳು ಗಣನೀಯ ಸಾಧನೆ ಮಾಡಿಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ನಿಶಾಂತ ಭಾರತದ ಸ್ಪರ್ಧಾಳುಗಳಿಗೆ ಶುಭ ಕೋರಿದರು.

2016: ನವದೆಹಲಿ: ಗಾಲೆಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ಪ್ರಥಮ ಇನಿಂಗ್ಸ್ನಲ್ಲಿ ಶ್ರೀಲಂಕಾ ಎಡಗೈ ಸ್ಪಿನ್ನರ್ ರಂಗನ ಹೆರಾತ್ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದರು.  ಇದರಿಂದಾಗಿ ಆಸ್ಟ್ರೇಲಿಯಾ 106 ರನ್ಗೆ ಆಲೌಟ್ ಆಯಿತು. 281 ಗುರಿಯ ಬೆನ್ನು ಹತ್ತಿದ ಆಸ್ಟ್ರೇಲಿಯಾಕ್ಕೆ ಹೆರಾತ್ ಕಂಟಕವಾದರು. 8 ರನ್ಗಳಿಸಿದ ವೋಗ್ಸ್ ಹೆರಾತ್ ಎಸೆತದಲ್ಲಿ ಕರುಣರತ್ನೆಗೆ ಕ್ಯಾಚ್ ನೀಡುವ ಮೂಲಕ ಮೊದಲಿಗರಾಗಿ ಪೆವಿಲಿಯನ್ ಸೇರಿಕೊಂಡರು. ಎರಡನೆಯವರಾಗಿ ಪೀಟರ್ ನೇವಿಲ್ ಎಲ್ಬಿ ಬಲೆಗೆ ಬಿದ್ದರು. ಹ್ಯಾಟ್ರಿಕ್ ಎಸೆತದಲ್ಲಿ ಮಿಷೆಲ್ ಸ್ಟಾರ್ಕ್ ಎಲ್ಬಿ ಆದರು. ಮೂಲಕ ಹ್ಯಾಟ್ರಿಕ್ ವಿಕೆಟ್ ಪಡೆದ ಶ್ರೀಲಂಕಾದ ಎರಡನೇ ಬೌಲರ್ ಎಂಬ ಕೀರ್ತಿಗೆ ಹೆರಾತ್ ಭಾಜನರಾದರು. 54 ರನ್ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯಾ, ಎರಡನೆ ದಿನ ರಕ್ಷಣಾತ್ಮಕ ಆಟಕ್ಕೆ ಮುಂದಾಯಿತು. ಆದರೆ ಆರಂಭದಲ್ಲಿಯೇ ನಾಯಕ ಸ್ಟೀವನ್ ಸ್ಮಿತ್ ಅವರ ವಿಕೆಟ್ ಪಡೆಯುವ ಮೂಲಕ ಹೆರಾತ್ ಶ್ರೀಲಂಕಾಕ್ಕೆ ಬಿಗ್ ಬ್ರೇಕ್ ನೀಡಿದರು. 33.2 ಓವರ್ಗೆ ಆಸ್ಟ್ರೇಲಿಯಾ 106 ರನ್ಗೆ ಸರ್ವಪತನ ಕಂಡಿತು. ಹೆರಾತ್ ಹಾಗೂ ಪೆರೆರಾ ತಲಾ ನಾಲ್ಕು ವಿಕೆಟ್ ಪಡೆದು ಮಿಂಚಿದರು. ದ್ವಿತೀಯ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 36 ಓವರ್ಗೆ ಆರು ವಿಕೆಟ್ ಕಳೆದುಕೊಂಡು, 316 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು.

ಮುಂಬೈ: ಮಹಾರಾಷ್ಟ್ರದ ಮುಂಬೈಯಲ್ಲಿ ಮುಂಜಾನೆಯಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಂಚಾರ ವ್ಯವಸ್ಥೆ ಸೇರಿದಂತೆ ವಿಮಾನ, ರೈಲು ಓಡಾಟ ನಿಧಾನಗೊಂಡವು. ಜನಜೀವನ ಅಲ್ಲೋಲ ಕಲ್ಲೋಲವಾಗಿ ಮುಂಬೈಯ ಕೆಲ ಪ್ರದೇಶಗಳು ದ್ವೀಪದಂತಾದವು. ದಕ್ಷಿಣ ಮುಂಬೈ, ಮಧ್ಯ ಮುಂಬೈಯಲ್ಲಿ ಮುಂಜಾನೆಯಿಂದಲೇ ವಾಹನಗಳು ಸಾಲುಗಟ್ಟಿ ನಿಂತವು.  ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸುವ ಪೂರ್ವ ಮತ್ತು ಪಶ್ಚಿಮ ಎಕ್ಸ್ಪ್ರೆಸ್ ವೇಯಲ್ಲಿ ಸಾವಿರಾರು ವಾಹನಗಳು ನಿಂತಲ್ಲೇ ನಿಂತವು. ರೈಲು ಸಂಚಾರವು ನಿಧಾನಗತಿಯಲ್ಲಿದ್ದು, ಎಲ್ಲ ರೈಲುಗಳು ಅರ್ಧ ಗಂಟೆ ತಡವಾಗಿ ಚಲಿಸಿದವು.  ವಿಮಾನ ಸಂಚಾರ ಕೂಡ ಇದಕ್ಕೆ ಹೊರತಾಗಲಿಲ್ಲ.

2016: ನವದೆಹಲಿ: ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾರ್ಕ್ ಶೃಂಗ ಸಮ್ಮೇಳನಕ್ಕಾಗಿ ಇಸ್ಲಾಮಾಬಾದ್ಗೆ ನೀಡಿದ ಭೇಟಿ ಕಾಲದಲ್ಲಿ ಅವರ ವಿರುದ್ಧ ನಡೆದ ಪ್ರತಿಭಟನೆಗಳು ಮತ್ತು ಅವರನ್ನು ಸ್ವಾಗತಿಸಿ ಆದರಿಸುವಲ್ಲಿ ಹಾಗೂ ಸಾರ್ಕ್ ಭಾಷಣದ ಪ್ರಚಾರಕ್ಕೆ ಎಲ್ಲಾ ಮಾಧ್ಯಮಗಳಿಗೆ ನಿರ್ಬಂಧ  ವಿಧಿಸುವ ಮೂಲಕ ಪಾಕಿಸ್ತಾನ ಶಿಷ್ಟಾಚಾರ ಉಲ್ಲಂಘಿಸಿದ ವಿಚಾರ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ, ಎಲ್ಲಾ ಸದಸ್ಯರೂ ಪಕ್ಷಭೇದವಿಲ್ಲದೆ ಪಾಕ್ ನಿಲುವನ್ನು ಖಂಡಿಸಿದರು. ಇಸ್ಲಾಮಾಬಾದ್ ಭೇಟಿಗೆ ಸಂಬಂಧಿಸಿದಂತೆ ರಾಜನಾಥ್ ಸಿಂಗ್ ಅವರು ಸದನಕ್ಕೆ ಹೇಳಿಕೆ ನೀಡುವ ವೇಳೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಜನತಾದಳ (ಯು) ಸದಸ್ಯ ಶರದ್ ಯಾದವ್, ಕಾಂಗ್ರೆಸ್ ಸದಸ್ಯ ಗುಲಾಂ ನಬಿ ಆಜಾದ್, ಬಿಎಸ್ಪಿ ನಾಯಕಿ ಮಾಯಾವತಿ, ಎನ್ಸಿಪಿ ಸದಸ್ಯ ಮಜೀದ್, ಸಿಪಿಐ ಸದಸ್ಯ ಡಿ ರಾಜಾ ಅವರು ಪಾಕಿಸ್ತಾನವು ಶಿಷ್ಟಾಚಾರ ಪಾಲಿಸದ ವಿಚಾರವನ್ನು ಉಲ್ಲೇಖಿಸಿದರುಭಯೋತ್ಪಾದಕರನ್ನು ವೈಭವೀಕರಿಸಬಾರದು, ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಎಲ್ಲರೂ ಒಂದಾಗಬೇಕು. ಭಯೋತ್ಪಾದಕ ಸಂಘಟನೆಗಳ ಮೇಲೆ ವಿಶ್ವಸಂಸ್ಥೆಯು ವಿಧಿಸಿರುವ ನಿಷೇಧವನ್ನು ಗೌರವಿಸಬೇಕು,  ಭಯೋತ್ಪಾದನೆಯಲ್ಲಿ ಒಳ್ಳೆಯ ಭಯೋತ್ಪಾದನೆ, ಕೆಟ್ಟ ಭಯೋತ್ಪಾದನೆ ಎಂಬ ವರ್ಗೀಕರಣ ಸಲ್ಲದು ಎಂಬುದಾಗಿ ತಾವು ಸಾರ್ಕ್ ಶೃಂಗ ಸಭೆಯಲ್ಲಿ ಹೇಳಿರುವುದಾಗಿ ರಾಜನಾಥ್ ಸಿಂಗ್ ಹೇಳುತ್ತಿದ್ದಂತೆಯೇ ಸದಸ್ಯರು ಪಾಕಿಸ್ತಾನ ಶಿಷ್ಟಾಚಾರ ಪಾಲಿಸದ ಕುರಿತ ವರದಿಗಳನ್ನು ಪ್ರಸ್ತಾಪಿಸಿದರು. ಭಾರತವನ್ನು ಒಡೆಯುವ ಬಗ್ಗೆ ಕೇವಲ ಅಧಿಕಾರಿಗಳ ಮಟ್ಟವಷ್ಟೇ ಅಲ್ಲ, ಪ್ರಧಾನಿಯ ಮಟ್ಟದಲ್ಲೂ ಪಾಕಿಸ್ತಾನವು ಮಾತನಾಡುತ್ತಿದೆ ಎಂದು ಸ್ವಾಮಿ ಆಕ್ಷೇಪಿಸಿದರು. ಗೃಹ ಸಚಿವರನ್ನು ಆದರಿಸುವಲ್ಲಿ ಪಾಕಿಸ್ತಾನ ಶಿಷ್ಟಾಚಾರ ಪಾಲಿಸದೇ ಇರುವ ಕುರಿತ ವರದಿಗಳನ್ನು ನಾವು ನೋಡಿದ್ದೇವೆ. ಇದನ್ನು ಖಂಡಿಸುವಲ್ಲಿ ಇಡೀ ರಾಷ್ಟ್ರವೇ ಒಂದಾಗಿದೆ ಎಂದು ಶರದ್ ಯಾದವ್ ನುಡಿದರು. ಅವರ ಮಾತಿಗೆ ದನಿಗೂಡಿಸಿದ ಗುಲಾಂ ನಬಿ ಆಜಾದ್ ಗೃಹ ಸಚಿವರಿಗೆ ಪಾಕಿಸ್ತಾನದಲ್ಲಿ ಶಿಷ್ಟಾಚಾರದಂತೆ ಲಭಿಸಬೇಕಾದ ಗೌರವ, ಆದರಗಳು ಲಭ್ಯವಾಗಿಲ್ಲ ಎಂದಾದರೆ ನಾವು ಅದನ್ನು ಖಂಡಿಸುತ್ತೇವೆ ಎಂದು ಹೇಳಿದರು. ಪಾಕ್ ವರ್ತನೆ ಕುರಿತ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಭಾರತ-ಪಾಕ್ ಬಾಂಧವ್ಯ ಕುರಿತ ಧೋರಣೆ ಬದಲಾಯಿಸುವ ಬಗ್ಗೆ ಗೃಹ ಸಚಿವರು ಪ್ರಧಾನಿ ಜೊತೆಗೆ ಮಾತುಕತೆ ನಡೆಸಬೇಕು ಎಂದು ಮಾಯಾವತಿ ನುಡಿದರು. ನಮ್ಮ ಗೃಹ ಸಚಿವರ ಭೇಟಿ ವಿರುದ್ಧ ಪಾಕಿಸ್ತಾನದಲ್ಲಿ ನಡೆದ ಪ್ರತಿಭಟನೆಗಳನ್ನು ನಾವು ಖಂಡಿಸುತ್ತೇವೆ ಎಂದು ಮಜೀದ್ ಹೇಳಿದರು. ಪಾಕಿಸ್ತಾನದ ಜೊತೆಗೆ ಭಾರತ ಮುಂದಿನ ದಿನಗಳಲ್ಲಿ ಹೇಗೆ ವ್ಯವಹರಿಸುತ್ತದೆ ಎಂಬುದು ನನ್ನ ಪ್ರಶ್ನೆ ಎಂದು ಡಿ. ರಾಜಾ ಹೇಳಿದರು.

2016: ನವದೆಹಲಿ: ಉತ್ತರಾಖಂಡದ ಡೆಹರಾಡೂನ್ನಲ್ಲಿರುವ ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ನಲ್ಲಿ ದೇಶದ ಮೊದಲಟೈಗರ್ ಸೆಲ್’ (ಹುಲಿ ಕೋಣೆ) ತಲೆಯೆತ್ತಲಿದೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮತ್ತು ರಾಜ್ಯ ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಿವೆ ಎಂಬುದು ಮೂಲಗಳಿಂದ ಗೊತ್ತಾಯಿತು. ಭಾರತೀಯ ವನ್ಯಜೀವಿ ಸಂಸ್ಥೆಯ ಕ್ಯಾಂಪಸ್ಗೆ ಹೊಂದಿಕೊಂಡಿರುವ ಜಾಗದಲ್ಲಿ ಟೈಗರ್ ಸೆಲ್ ನಿರ್ಮಿಸಲಾಗುತ್ತಿದ್ದು, ಇಲ್ಲಿ ಹುಲಿಗಳ ಸಂತತಿ ಹೆಚ್ಚಳಕ್ಕೆ ವಿಶೇಷವಾದ ಕಾರ್ಯಾಚರಣೆಗೆ ಯೋಜನೆಗಳು ರೂಪುಗೊಳ್ಳಲಿವೆ. ಜೊತೆಗೆ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಅಂಕಿ-ಅಂಶಗಳ ದಾಖಲೆಗಳು ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಜತೆ ಜೊತೆಗೆ ರಾಜ್ಯದಲ್ಲಿನ 50 ಹುಲಿಧಾಮಗಳಲ್ಲಿನ ಹುಲಿಗಳ ಡಿಎನ್ ಸ್ಯಾಂಪಲ್ಗಳು ಇಲ್ಲಿ ಲಭ್ಯವಿರಲಿದೆ. ದೇಶದಲ್ಲಿ ಎಲ್ಲಿಯೇ ಹುಲಿ ಬೇಟೆ ಆದರೂ ಇಲ್ಲಿ ದಾಖಲಾಗಿರುವಂತೆ ಮತ್ತು ಕೃತ್ಯಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ‘ಟೈಗರ್ ಸೆಲ್ಗೆ ಹಿರಿಯ ವಿಜ್ಞಾನಿ ವೈ.ವಿ.ಜ್ಹಾಲಾ ಮುಖ್ಯಸ್ಥರಾಗಿರಲಿದ್ದಾರೆ. ಉಳಿದ ನಾಲ್ಕು ಮಂದಿ ವಿಜ್ಞಾನಿಗಳು ಇವರಿಗೆ ಸಾಥ್ ನೀಡಲಿದ್ದಾರೆ. ಬಗ್ಗೆ ಪ್ರತಿಕ್ರಿಯಿಸಿರುವ ಜ್ಹಾಲಾ, ದೇಶದ ಎಲ್ಲಾ ಭಾಗಗಳ ಹುಲಿ ಸಂತತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಇಲ್ಲಿ ಲಭ್ಯವಿರಬೇಕೆನ್ನುವ ಕಾರಣಕ್ಕಾಗಿಟೈಗರ್ ಸೆಲ್ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

2015: ಉಧಾಮಪುರ: ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ  ಅಟ್ಟಹಾಸ ಮೆರೆದರು. ಒಂದು ವಾರದಿಂದ ನಿರಂತರವಾಗಿ ಪಾಕಿಸ್ತಾನ ಪಡೆಗಳು ಗಡಿಯಲ್ಲಿ ಭಾರತೀಯ ಯೋಧರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದವು. ಬೆನ್ನಿಗೇ ಈದಿನ ಬೆಳಗ್ಗೆ ಉಗ್ರವಾದಿಗಳು ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಉಧಾಮಪುರದಲ್ಲಿ ಭಾರತೀಯ ಭದ್ರತಾ ಪಡೆಯ ಯೋಧರಿಬ್ಬರನ್ನು ಗುಂಡಿಟ್ಟು ಹತ್ಯೆಗೈದರು. ಘಟನೆಯಲ್ಲಿ ಯೋಧರೂ ಸೇರಿದಂತೆ ಒಟ್ಟು 13 ಮಂದಿ ಗಾಯಗೊಂಡರು. ನಿರಂತರ ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ. ಒಬ್ಬ ಭಯೋತ್ಪಾದಕನನ್ನು ಜೀವಂತವಾಗಿ ಸೆರೆ ಹಿಡಿಯಲಾಯಿತು. ಈ ಉಗ್ರಗಾಮಿ ಸಮರೋಲಿ ಶಾಲೆಯೊಂದರಲ್ಲಿ ಮೂವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಈ ಒತ್ತೆಯಾಳು ಗ್ರಾಮಸ್ಥರೇ ಸಮಯ ನೋಡಿಕೊಂಡು ಆತ ಹಸಿವಿನಿಂದ ಬಳಲಿದ್ದಾಗ ನಿರಾಯುಧನನ್ನಾಗಿ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟರು ಎಂದು ವರದಿಗಳು ತಿಳಿಸಿದವು. ಬಂಧಿತ ಭಯೋತ್ಪಾದಕನ್ನು ನಾವೇದ್ ಯಾನೆ ಖಾಸಿಮ್ ಯಾನೆ ಉಸ್ಮಾನ್ ಎಂಬುದಾಗಿ ಹೇಳಲಾಗುತ್ತಿದೆ.  2008ರ ನವೆಂಬರ್ 11ರ ದಾಳಿ ಕಾಲದಲ್ಲಿ ಸೆರೆ ಹಿಡಿಯಲಾಗಿದ್ದ  ಅಜ್ಮಲ್ ಕಸಾಬ್ ಬಳಿಕ ಜೀವಂತ ಸೆರೆ ಸಿಕ್ಕಿದ ಮೊದಲ ಭಯೋತ್ಪಾದಕ ಈತ. ಈತ ಪಾಕಿಸ್ತಾನದ ಫೈಸಲಾಬಾದ್ ನಿವಾಸಿ ಎನ್ನಲಾಗಿದೆ. ಈತ ಗುರುದಾಸಪುರ ದಾಳಿ ಯೋಜನೆಯ ಸದಸ್ಯರಲ್ಲಿ ಒಬ್ಬನಾಗಿದ್ದು, ಪಂಜಾಬ್​ನಲ್ಲಿ ದಾಳಿ ನಡೆಸಿದ ಹಂತಕರ ಜೊತೆಗೇ ಭಾರತಕ್ಕೆ ಬಂದಿದ್ದ.  ಬಿಎಸ್​ಎಫ್ ತುಕಡಿಯ ದಾಳಿ ಆರಂಭವಾಗುತ್ತಿದ್ದಂತೆಯೇ ಉಸ್ಮಾನ್ ಕಾಡಿನ ಒಳಕ್ಕೆ ಪರಾರಿಯಾಗಿದ್ದ.

2015: ಹರ್ದಾ (ಮಧ್ಯಪ್ರದೇಶ): ಕೇವಲ ಒಂದೆರಡು ನಿಮಿಷಗಳ ಅಂತರದಲ್ಲಿ ಎರಡು ಬೇರೆ ಬೇರೆ ಪ್ರಯಾಣಿಕ ರೈಲುಗಳು ಅಪಘಾತಕ್ಕೀಡಾದ ಘಟನೆ ಮಂಗಳವಾರ, 04 ಆಗಸ್ಟ್ 2015ರ  ತಡರಾತ್ರಿ ಮಧ್ಯಪ್ರದೇಶದ ಹರ್ದಾ ಬಳಿ ನಡೆದಿದ್ದು, 10 ಬೋಗಿಗಳು, ಒಂದು ಇಂಜಿನ್ ಮಚಕ್ ನದಿಗೆ ಉರುಳಿದೆ. ದುರ್ಘಟನೆಯಲ್ಲಿ 28 ಸಾವು ಸಂಭವಿಸಿದ್ದು, ಹಲವರಿಗೆ ತೀವ್ರ ಸ್ವರೂಪದ ಗಾಯಗಳಾದವು.. 300ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಲಾಯಿತು. ಪ್ರಾಣ ಕಳೆದುಕೊಂಡವರಲ್ಲಿ 11 ಮಂದಿ ಮಹಿಳೆಯರು, 12 ಮಂದಿ ಪುರುಷರು, 5ಮಂದಿ ಮಕ್ಕಳು ಎಂದು ತಿಳಿದುಬಂದಿದೆ. ಹಠಾತ್ ಪ್ರವಾಹದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿತು ಎನ್ನಲಾಯಿತು. ಕಾಮಯಾನಿ ಎಕ್ಸ್​ಪ್ರೆಸ್ ಉತ್ತರಪ್ರದೇಶದ ವಾರಾಣಸಿಯಿಂದ ಮುಂಬೈಗೆ ಸಾಗುತ್ತಿತ್ತು. ಮಚಕ್ ನದಿ ಸೇತುವೆಯ ಬಳಿ ಬರುತ್ತಿದ್ದಂತೆ ಹಳಿ ತಪ್ಪಿ ಅಪಘಾತಕ್ಕೀಡಾಯಿತು.  ಇದೇ ಸ್ಥಳದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಜನತಾ ಎಕ್ಸ್​ಪ್ರೆಸ್ ಕೂಡ ಕಣ್ಣೆದುರಲ್ಲೇ ಅಪಘಾತಕ್ಕೀಡಾಯಿತು.. ಕಾಮಯಾನಿ ಎಕ್ಸ್​ಪ್ರೆಸ್​ನ ಆರು ಬೋಗಿಗಳು ನದಿಗೆ ಉರುಳಿದವು. ಕೆಲವೇ ನಿಮಿಷಗಳ ಅಂತರದಲ್ಲಿ ಇದೇ ಸ್ಥಳದಲ್ಲಿಯೇ ಜನತಾ ಎಕ್ಸ್​ಪ್ರೆಸ್ ರೈಲು ಕೂಡ ಅಪಘಾತಕ್ಕೀಡಾಯಿತು. ಜನತಾ ಎಕ್ಸ್​ಪ್ರೆಸ್ ಪಟನಾದಿಂದ ಮುಂಬೈಗೆ ಸಾಗುತ್ತಿತ್ತು. ಜನತಾ ಎಕ್ಸ್​ಪ್ರೆಸ್​ನ ನಾಲ್ಕು ಬೋಗಿಗಳು ನದಿಗೆ ಉರುಳಿದವು.
2008: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಮಿತ್ತಲ್ ನೇತೃತ್ವದ ನ್ಯಾಯಮಂಡಳಿ `ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ' (ಸಿಮಿ)ದ ಮೇಲಿನ ನಿಷೇಧವನ್ನು ರದ್ದುಪಡಿಸಿತು. ಗೃಹ ಸಚಿವಾಲಯ ನೀಡಿದ ದಾಖಲೆಗಳು `ಸಿಮಿ' ಮೇಲೆ ನಿಷೇಧ ಹೇರುವಷ್ಟು ಪ್ರಬಲವಾಗಿಲ್ಲ. ಈ ಸಂಘಟನೆ ಭಯೋತ್ಪಾದನಾ ಕಾರ್ಯದಲ್ಲಿ ತೊಡಗಿಕೊಂಡಿದೆ ಎಂಬುದಕ್ಕೂ ಸಾಕ್ಷ್ಯವಿಲ್ಲ ಎಂದು ನ್ಯಾಯಾಧೀಶರು ಸಚಿವಾಲಯಕ್ಕೆ ಹಸ್ತಾಂತರಿಸಿರುವ ಮುಚ್ಚಿದ ಲಕೋಟೆಯಲ್ಲಿ ತಿಳಿಸಿದರು. ಫೆಬ್ರುವರಿ 7ರಿಂದ ಎರಡು ವರ್ಷಗಳ ಕಾಲ ಅನ್ವಯವಾಗುವಂತೆ ಕೇಂದ್ರ ಸರ್ಕಾರ ತನ್ನ ಮೇಲೆ ಹೇರಿದ್ದ ನಿಷೇಧವನ್ನು ಪ್ರಶ್ನಿಸಿ `ಸಿಮಿ' ಅರ್ಜಿ ಸಲ್ಲಿಸಿತ್ತು.

2007: ದಕ್ಷಿಣ ಏಷ್ಯಾದ ದೇಶವಾದ ಬಾಂಗ್ಲಾದೇಶದ ಹಲವು ಪ್ರದೇಶಗಳಲ್ಲಿ ಪ್ರವಾಹದಿಂದಾಗಿ ಕನಿಷ್ಠ 120 ಜನರು ಸಾವನ್ನಪ್ಪಿ, 80 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ಬಾಂಗ್ಲಾದೇಶದ ಅಧಿಕೃತ ಮೂಲಗಳು ಪ್ರಕಟಿಸಿದವು. ಮಂಜುಗಡ್ಡೆಗಳು ಕರಗಿದ್ದರಿಂದ ಹಾಗೂ ಭಾರಿ ಮುಂಗಾರು ಮಳೆಯ ಪರಿಣಾಮವಾಗಿ ಅತ್ಯಂತ ಭೀಕರ ಪ್ರವಾಹ ಬರುತ್ತಿದ್ದು ದೇಶದ 64 ಜಿಲ್ಲೆಗಳ ಪೈಕಿ 38 ಜಿಲ್ಲೆಗಳು ಭಾಗಶಃ ಮುಳುಗಡೆಯಾಗಿವೆ ಎಂದು ಸರ್ಕಾರಿ ವಕ್ತಾರ ಸಚಿಂದ್ರನಾಥ್ ಹಲ್ದಾರ್ ಹೇಳಿದರು.

2007: ಶಂಕಿತ ವಿದೇಶಿಯರ ಮೇಲೆ ನಿಗಾ ಇಡಲು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಎಲೆಕ್ಟ್ರಾನಿಕ್ ಗೂಢಚರ್ಯೆ ನಡೆಸುವ ಸರ್ಕಾರದ ಅಧಿಕಾರವನ್ನು ತಾತ್ಕಾಲಿಕವಾಗಿ ಮುಂದುವರೆಸುವುದಕ್ಕೆ ಸಂಬಂಧಿಸಿದ ಮಸೂದೆಗೆ ಅಮೆರಿಕದ ಕಾಂಗ್ರೆಸ್ಸಿನಲ್ಲಿ ಬಹುಮತ ಹೊಂದಿರುವ ಡೆಮಾಕ್ರೆಟಿಕ್ ಸದಸ್ಯರು ಒಪ್ಪಿಗೆ ನೀಡಿದರು. ಸೆನೆಟ್ ಈ ಮಸೂದೆಯನ್ನು ಒಪ್ಪಿಕೊಂಡ ಮಾರನೇ ದಿನವೇ ಕಾಂಗ್ರೆಸ್ (ಜನ ಪ್ರಾತಿನಿಧ್ಯ ಸಭೆ) ಸಹ ಒಪ್ಪಿಗೆ ನೀಡಿತು. ಈ ಮಸೂದೆಯು ವಿಧೇಯ ಅಮೆರಿಕ ಪ್ರಜೆಗಳ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘಟನೆಗಳು ಟೀಕಿಸಿದ್ದವು. ಅಮೆರಿಕದ ರಕ್ಷಣೆ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಶಾಸನ ಸಭೆಗಳು ಈ ಮಸೂದೆಗೆ ಒಪ್ಪಿಗೆ ನೀಡಬೇಕು ಎಂದು ಅಧ್ಯಕ್ಷ ಬುಷ್ ಒತ್ತಾಯಿಸಿದ್ದರು.

2007: ಟರ್ಕಿಯ ಹೊಸ ಸಂಸತ್ ಸದಸ್ಯರು ಅಂಕಾರದಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ಹಿಂದಿನ ಆಡಳಿತ ಪಕ್ಷ ತನ್ನ ಬಹುಮತವನ್ನು ಉಳಿಸಿಕೊಂಡಿದ್ದು, 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕುರ್ದಿಷ್ ಪರ ಅಧಿಕಾರಿಗಳು ಇದರಲ್ಲಿ ಭಾಗಿಯಾದರು. ವಿದೇಶಾಂಗ ಸಚಿವ ಅಬ್ದುಲ್ಲ ಗುಲ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಪ್ರಧಾನಿ ತಯ್ಯಿಪ್ ಎರ್ ಡೊಗನ್ ಅವರು ಪ್ರಯತ್ನಿಸಿದಾಗ ಚುನಾವಣೆ ನಡೆಸಲಾಗಿತ್ತು. ಚುನಾವಣೆಯಲ್ಲಿ 549 ಸ್ಥಾನಗಳಲ್ಲಿ 349 ಸ್ಥಾನಗಳನ್ನು ಪ್ರಧಾನಿ ತಯ್ಯಿಪ್ ಎರ್ ಡೊಗನ್ ಅವರ ಪಕ್ಷ ಗಳಿಸಿತು.

2007: 14 ವರ್ಷದ ಇರಾಕಿ ಬಾಲಕಿಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಅಪರಾಧಕ್ಕಾಗಿ ಅಮೆರಿಕದ ಯೋಧನೊಬ್ಬನಿಗೆ ಚಿಕಾಗೋ ಸೇನಾ ನ್ಯಾಯಾಲಯ 110 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಜೆಸ್ಸೆ ಸ್ಪೈಲ್ ನಮ್(22) ಎಂಬ ಈ ಯೋಧನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ತೀರ್ಪು ನೀಡಿತು. 2006ರ ಮಾರ್ಚ್ ತಿಂಗಳಲ್ಲಿ ಮಹಮ್ಮದೀಯ ಕುಟುಂಬವೊಂದರ ಮೇಲೆ ದಾಳಿ ನಡೆಸಿದ ಐವರು ಯೋಧರ ಗುಂಪಿನಲ್ಲಿ ಈತ ಇದ್ದ ಎಂಬುದು ಸಾಬೀತಾಗಿದ್ದು, ಈ ಐವರಲ್ಲಿ ಮೂವರು ತಪ್ಪೊಪ್ಪಿಕೊಂಡು ಶರಣಾಗಿದ್ದರು. ಅವರಿಗೆ ಐದರಿಂದ 100 ವರ್ಷಗಳ ಶಿಕ್ಷೆ ವಿಧಿಸಲಾಯಿತು.

2006: ದ್ವೀಪದ ವಾಯವ್ಯ ಭಾಗದಲ್ಲಿ ಶ್ರೀಲಂಕಾ ಭದ್ರತಾ ಪಡೆಗಳು ಸೇನೆ ಹಾಗೂ ವೈಮಾನಿಕ ದಾಳಿ ನಡೆಸಿ ಕನಿಷ್ಠ 152 ತಮಿಳು ಟೈಗರ್ಸ್ ಬಂಡುಕೋರರನ್ನು ಕೊಂದು ಹಾಕಿ ಕರಾವಳಿಯ ಮುಸ್ಲಿಂ ಪ್ರಾಬಲ್ಯದ ಮುತ್ತೂರು ಪಟ್ಟಣದ ಮೇಲೆ ಪೂರ್ಣ ಹಿಡಿತ ಸಾಧಿಸಿದವು.

2006: ಸಿಖ್ ಸಮುದಾಯಕ್ಕೆ ತನ್ನ ನೆರೆಹೊರೆಯಲ್ಲೇ ಗುರುದ್ವಾರ ನಿರ್ಮಿಸುವ ಹಕ್ಕು ಇದೆ ಎಂಬುದಾಗಿ ಸ್ಯಾನ್ ಫ್ರಾನ್ಸಿಸ್ಕೊ ನ್ಯಾಯಾಲಯವೊಂದು ತೀರ್ಪು ನೀಡಿತು. ಇದರಿಂದ ಅಮೆರಿಕದಲ್ಲಿ ನೆಲೆಸಿರುವ ಸಿಕ್ಖರಿಗೆ ಮಹತ್ವದ ವಿಜಯ ಲಭಿಸಿತು. ಸಟ್ಟೆರ್ ಕೌಂಟಿಯ ಮಂಜೂರಾದ ಕೃಷಿ ಭೂಮಿಯಲ್ಲಿ ಪೂಜಾಸ್ಥಳ ನಿರ್ಮಿಸಲು ಸಿಖ್ ಸಮುದಾಯಕ್ಕೆ ಮೇಲ್ಮನವಿಗಳ ಒಂಭತ್ತನೇ ಸರ್ಕಿಟ್ ಕೋರ್ಟ್ ಅನುಮತಿ ನೀಡಿತು. `ಬೆಕೆಟ್ ಫಂಡ್ ಫಾರ್ ರೆಲಿಜಿಯಸ್ ಲಿಬರ್ಟಿ' ಎಂಬ ಲಾಭ ರಹಿತ ಕಾನೂನು ಸಂಸ್ಥೆಯೊಂದು ಸಿಖ್ ಸಮುದಾಯದ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

2000: ಭಾರತೀಯ ಕ್ರಿಕೆಟ್ ಆಟಗಾರ ಲಾಲಾ ಅಮರನಾಥ್ (1911-2000) ನಿಧನರಾದರು.

1992: ಕ್ವಿಟ್ ಇಂಡಿಯಾ ಚಳವಳಿ ನಾಯಕ ಅಚ್ಯುತರಾವ್ ಪಟವರ್ಧನ್ (86) ನಿಧನರಾದರು.

1991: ಜಸ್ಟೀಸ್ ಲೀಲಾ ಸೇಥ್ ಅವರು ಹಿಮಾಚಲ ಪ್ರದೇಶ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹೈಕೋರ್ಟ್ ಒಂದರ ಮುಖ್ಯ ನ್ಯಾಯಮೂರ್ತಿಯಾಗಿನೇಮಕಗೊಂಡ ಮೊತ್ತ ಮೊದಲ ಮಹಿಳೆ ಎಂಬ ಕೀರ್ತಿಗೆ ಇವರು ಪಾತ್ರರಾದರು. ಸೇಥ್ ಅವರು ಖ್ಯಾತ ಕಾದಂಬರಿಕಾರ ವಿಕ್ರಮ್ ಸೇಥ್ ಅವರ ತಾಯಿ.

1984: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-84) ಅವರು ತಮ್ಮ 58ನೇ ವಯಸ್ಸಿನಲ್ಲಿ ಜಿನೇವಾದಲ್ಲಿ ಮೃತರಾದರು. ರಿಚರ್ಡ್ ಬರ್ಟನ್ ಅವರ ನಿಜವಾದ ಹೆಸರು ರಿಚರ್ಡ್ ವಾಲ್ಟೆರ್ ಜೆಂಕಿನ್ಸ್. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸ್ಕಾಲರ್ ಶಿಪ್ ಪಡೆಯಲು ನೆರವಾದ ತಮ್ಮ ಶಾಲಾಶಿಕ್ಷಕ ಫಿಲಿಪ್ ಬರ್ಟನ್ ಅವರಿಗೆ ಕೃತಜ್ಞತೆ ವ್ಯಕ್ತಪಡಿಸುವ ಸಲುವಾಗಿ ಅವರು `ಬರ್ಟನ್' ಎಂಬ ವೃತ್ತಿನಾಮವನ್ನು ಇಟ್ಟುಕೊಂಡರು.

1981: ಮಹಾರಾಷ್ಟ್ರದಲ್ಲಿ ನಡೆದ ಪಕ್ಷಾಂತರದ ಪರಿಣಾಮವಾಗಿ ತತ್ತರಿಸಿದ ಕಾಂಗ್ರೆಸ್ ಯು ಪಕ್ಷದಿಂದ ಜಗಜೀವನರಾಂ ಮತ್ತು ಸಂಗಡಿಗರೂ ಹೊರಬಿದ್ದರು. ಪರಿಣಾಮವಾಗಿ ಕಾಂಗ್ಯೂ ಎರಡು ಹೋಳಾಯಿತು. ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಯು ಬಣ ಜಗಜೀವನರಾಂ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿತು.

1969: ಭಾರತೀಯ ಕ್ರಿಕೆಟ್ ಆಟಗಾರ ವೆಂಕಟೇಶ ಪ್ರಸಾದ್ ಜನ್ಮದಿನ.

1962: ಖ್ಯಾತ ನಟಿ ಮರ್ಲಿನ್ ಮನ್ರೋ ಅವರು ಅತಿಯಾದ ಮಾದಕ ದ್ರವ್ಯ ಸೇವನೆಯ ಪರಿಣಾಮವಾಗಿ ತಮ್ಮ 36ನೇ ವಯಸ್ಸಿನಲ್ಲಿ ನಿಧನರಾದರು.

1950: ಅಸ್ಸಾಂನ ಮೊದಲ ಮುಖ್ಯಮಂತ್ರಿ ಗೋಪಿನಾಥ ಬೋರ್ದೊಲೋಯಿ ನಿಧನರಾದರು. `ಆಧುನಿಕ ಅಸ್ಸಾಂನ ಜನಕ' ಎಂದೇ ಅವರು ಖ್ಯಾತರಾಗಿದ್ದರು.

1930: ಅಮೆರಿಕನ್ ಗಗನಯಾನಿ ಚಂದ್ರನ ಮೇಲೆ ನಡೆದಾಡಿದ ಮೊತ್ತ ಮೊದಲ ಮಾನವ ನೀಲ್ ಆರ್ಮ್ ಸ್ಟ್ರಾಂಗ್ ಜನ್ಮದಿನ.

1928: ಸಾಹಿತಿ ರಾಮಚಂದ್ರ ಕೊಟ್ಟಲಗಿ (5-8-1928ರಿಂದ 20-9-1975) ಅವರು ಕೃಷ್ಣರಾವ್ ಕೊಟ್ಟಲಗಿ ಅವರ ಪುತ್ರನಾಗಿ ವಿಜಾಪುರ ಜಿಲ್ಲೆಯ ಮನಗೋಳಿ ಹಳ್ಳಿಯಲ್ಲಿ ಜನಿಸಿದರು.

1895: ಜರ್ಮನಿಯ ಸಮಾಜವಾದಿ ತತ್ವಜ್ಞಾನಿ ಫೆಡ್ರಿಕ್ ಏಂಜೆಲ್ಸ್ (1820-95) ಅವರು 74ನೇ ವಯಸ್ಸಿನಲ್ಲಿ ಲಂಡನ್ನಿನಲ್ಲಿ ಕ್ಯಾನ್ಸರ್ ಪರಿಣಾಮವಾಗಿ ಅಸು ನೀಗಿದರು.

No comments:

Post a Comment