Saturday, August 4, 2018

ಇಂದಿನ ಇತಿಹಾಸ History Today ಆಗಸ್ಟ್ 04

ಇಂದಿನ ಇತಿಹಾಸ  ಆಗಸ್ಟ್ 04

2018: ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಸಂಸ್ಥೆಯ ವಿಮಾನ ನಿರ್ಮಾಣ ವಿಭಾಗದ ನಿಯಂತ್ರಣವನ್ನು ಸರ್ಕಾರವು ಭಾರತೀಯ ವಾಯುಪಡೆಗೆ (ಐಎಎಫ್) ವಹಿಸಲು ಸಜ್ಜಾಯಿತು.  ದೇಶೀಯ ಯುದ್ಧ ವಿಮಾನಗಳ (ಎಲ್ ಸಿಎ) ಯೋಜನೆಯ ವೆಚ್ಚ ಇಳಿಕೆ ಮತ್ತು ವಿಳಂಬ ನಿವಾರಣೆ ಸಲುವಾಗಿ ಸರ್ಕಾರ ಈ ಕ್ರಮ ಕೈಗೊಳ್ಳಲು ಮುಂದಾಯಿತು. ಹಗುರ ಯುದ್ಧ ವಿಮಾನ ಯೋಜನೆಯ ಅಡಿಯಲ್ಲಿ ಎಂಕೆ೨ ವೈವಿಧ್ಯಮಯ ಯುದ್ಧ ವಿಮಾನದ ಅಭಿವೃದ್ಧಿ ಮತ್ತು ರಾಷ್ಟ್ರದ ಮುಂದಿನ ಸಮರ ವಿಮಾನಗಳ ಯೋಜನೆಯಾದ ಅಡ್ವಾನ್ಸಡ್ ಮೀಡಿಯಂ ಕೊಂಬಾಟ್ ಏರ್ ಕ್ರಾಫ್ಟ್ (ಎಎಂಸಿಎ) ರೂಪುಗೊಳ್ಳುವ ನಿರ್ಣಾಯಕ ಹಂತದಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ.  ‘ಬೆಂಗಳೂರಿನ ಎಚ್ ಎಎಲ್ ಸಮುಚ್ಚಯವನ್ನು ಪೂರ್ತಿಯಾಗಿ ಭಾರತೀಯ ವಾಯುಪಡೆಗೆ ಒಪ್ಪಿಸಲು ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದರೊಂದಿಗೆ ಫಿಕ್ಸೆಡ್ ವಿಂಗ್ ಏರ್ ಕ್ರಾಫ್ಟ್ ವಿಭಾಗವು ಭಾರತೀಯ ವಾಯುಪಡೆಯ ಸ್ವಾಮ್ಯಕ್ಕೆ ಒಳಪಡಲಿದೆ. ಇದಕ್ಕೆ ಸಂಬಂಧಿಸಿದ ರೂಪುರೇಷೆಗಳನ್ನು ತಯಾರಿಲಾಗುತ್ತಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಹೇಳಲಾಗಿದೆ.  ಎಚ್ ಎಎಲ್ ಪ್ರತಿರೋಧ: ಎಚ್ ಎಎಲ್ ತಯಾರಕರು ವಿಮಾನ ಮತ್ತು ಹೆಲಿಕಾಪ್ಟರುಗಳ ಹಲವಾರು ಶ್ರೇಣಿಗಳನ್ನು ನಿರ್ಮಿಸುತ್ತಾರೆ. ಆದರೆ ಯೋಜನೆ ಜಾರಿಯಲ್ಲಿ ಆಗುವ ವಿಳಂಬ ಮತ್ತು ವೃತ್ತಿ ಪರತೆಯ ಕೊರತೆ ಕಾರಣಕ್ಕಾಗಿ ಅದು ಟೀಕೆಗಳನ್ನು ಎದುರಿಸಬೇಕಾಗಿ ಬರುತ್ತಿತ್ತು. ತನ್ನ ಸ್ವಾಯತ್ತತೆ ಕಳೆದುಕೊಳ್ಳುವ ಭೀತಿಯಿಂದ ಸರ್ಕಾರದ ಈ ಕ್ರಮಕ್ಕೆ ದೀರ್ಘ ಕಾಲದಿಂದ ಎಚ್ ಎ ಎಲ್ ವಿರೋಧ ವ್ಯಕ್ತ ಪಡಿಸುತ್ತಾ ಬಂದಿತ್ತು. ಹಗುರ ಯುದ್ಧ ವಿಮಾನ ಕಾರ್‍ಯಕ್ರಮಕ್ಕೆ ೧೯೮೩ರಲ್ಲಿ ಮಂಜೂರಾತಿ ನೀಡಲಾಗಿದ್ದು, ಸಂಸ್ಥೆಯು ತನ್ನ ಮೊತ್ತ ಮೊದಲ ವಿಮಾನವನ್ನು ೨೦೦೧ರಲ್ಲಿ ನಿರ್ಮಿಸಿತ್ತು. ಭಾರತೀಯ ವಾಯುಪಡೆಯು ಎಚ್ ಎಎಲ್ ಜೊತೆಗೆ ಎರಡು ಒಪ್ಪಂದಗಳಿಗೆ ಸಹಿ ಮಾಡಿತ್ತು. ಒಂದು ಒಪ್ಪಂದಕ್ಕೆ ೨೦೦೬ರ ಮಾರ್ಚ್ ೩೧ರಂದು ಸಹಿ ಹಾಕಲಾಗಿತ್ತು. ಅದರ ಪ್ರಕಾರ ೨೦೧೧ರ ಡಿಸೆಂಬರ್ ಒಳಗಾಗಿ ೨೦ ವಿಮಾನಗಳನ್ನು ಎಚ್ ಎಎಲ್ ತಯಾರಿಸಿಕೊಡಬೇಕಾಗಿತ್ತು. ಇನ್ನೊಂದು ಒಪ್ಪಂದಕ್ಕೆ ಭಾರತೀಯ ವಾಯುಪಡೆಯು ೨೦೧೦ರ ಡಿಸೆಂಬರ್ ೨೩ರಂದು ಸಹಿ ಹಾಕಿದ್ದು ಇದು ಇನ್ನೂ ೨೦ ವಿಮಾನಗಳ ತಯಾರಿಗೆ ಮಾಡಿಕೊಂಡ ಒಪ್ಪಂದವಾಗಿತ್ತು. ಈ ವಿಮಾನಗಳ ತಯಾರಿಯು ೨೦೧೬ಕ್ಕೆ ಪೂರ್ಣಗೊಳ್ಳಬೇಕಿತ್ತು. ಎಂಕೆ ೧ ಎ ಸಂರಚನೆಯ ೮೩ ಜೆಟ್ ಗಳಿಗೆ ಆರ್ಡರ್ ಕೊಡುವ ಪ್ರಕ್ರಿಯೆಯಲ್ಲೂ ಭಾರತೀಯ ವಾಯುಪಡೆ ನಿರತವಾಗಿದೆ.
ಭಾರತೀಯ ವಾಯುಪಡೆಯು ತನ್ನ ಮೊದಲ ಹಗುರ ಯುದ್ಧವಿಮಾನ ದಳವನ್ನು (ಎಲ್ ಸಿ ಎ ಸ್ಕ್ವಾಡ್ರನ್) ಕೇವಲ ೨ ವಿಮಾನಗಳೊಂದಿಗೆ ೨೦೧೬ರಲ್ಲಿ ರಚಿಸಿತು. ೨೦೧೮ರ ಜುಲೈ ವೇಳೆಗೆ ಒಂಬತ್ತು ವಿಮಾನಗಳನ್ನು ಮಾತ್ರವೇ ತನ್ನ ದಳಕ್ಕೆ ಸೇರಿಸಿಕೊಳ್ಳಲು ಸಾಧ್ಯವಾಗಿದೆ. ಜೂನ್ ತಿಂಗಳಲ್ಲಿ ತೇಜಸ್ ವಿಮಾನವನ್ನು ಸೇರ್ಪಡೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ತೇಜಸ್ -ಎಂಕೆ ೧ಎಯನ್ನು ನಿರ್ದಿಷ್ಟ ವಿಸ್ತರಣೆ ವಿಳಂಬಗೊಂಡಿತು.   ಸರ್ಕಾರದ ಈಗಿನ ಉಪಕ್ರಮದ ಬೆಳವಣಿಗೆಯೊಂದಿಗೆ ಎಚ್ ಎಎಲ್ ನ ವಿಮಾನ ವಿಭಾಗವು ಮೂರು ಸ್ಟಾರ್ ಅಧಿಕಾರಿಯ ಅಥವಾ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ನೇತೃತ್ವವನ್ನು ಪಡೆಯಲಿದೆ ಮತ್ತು ರಾಷ್ಟ್ರದ ದೇಶೀಯ ಹಗುರ ಯುದ್ಧ ವಿಮಾನ ಯೋಜನೆಯ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ತೆಗೆದುಕೊಳ್ಳಲಿದೆ.  ಇದರ ಜೊತೆಗೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ಅಡಿಯಲ್ಲಿರುವ ಏರೋನಾಟಿಕಲ್ ಡೆವಲಪ್ ಮೆಂಟ್ ಏಜೆನ್ಸಿ (ಎಡಿಎ), ಏರೋನಾಟಿಕಲ್ ಡೆವಲಪ್ ಮೆಂಟ್ ಎಸ್ಟಾಬ್ಲಿಷ್ ಮೆಂಟ್ (ಎಡಿಇ) ಮತ್ತು ಗ್ಯಾಸ್ ಟರ್ಬೈನ್ ರೀಸರ್ಚ್ ಎಸ್ಟಾಬ್ಲಿಷ್ ಮೆಂಟ್ (ಜಿಟಿಆರ್ ಇ) -ಇವುಗಳನ್ನು ವಾಯುಪಡೆ ಮುಖ್ಯಸ್ಥರ ನೇರ ನಿಯಂತ್ರಣಕ್ಕೆ ತರಲಾಗುತ್ತಿದೆ. ಇದರೊಂದಿಗೆ ಹಗುರ ಯುದ್ಧ ವಿಮಾನ ನಿರ್ಮಾಣದ ಸಂಪೂರ್ಣ ಕಾರ್ಯವು ಭಾರತೀಯ ವಾಯುಪಡೆಯ ನಿಗಾದಡಿ ನಡೆಯಲಿದ್ದು, ಯೋಜನೆಗಳು ವಿಳಂಬವಿಲ್ಲದೆ ಸಕಾಲಕ್ಕೆ ಜಾರಿಯಾಗುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿದವು. ಎರಡು ದಶಕ ಹಿಂದೆಯೇ ಆಗಬೇಕಿತ್ತು: ಹಗುರ ಯುದ್ಧ ವಿಮಾನ ಯೋಜನೆಯನ್ನು ಭಾರತೀಯ ವಾಯುಪಡೆಯು ಎರಡು ದಶಕಗಳಷ್ಟು ಹಿಂದೆಯೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಿತ್ತು. ಕನಿಷ್ಠ ಈಗಲಾದರೂ ಆಗುತ್ತಿರುವುದು ಒಳ್ಳೆಯ ವಿಷಯ ಎಂದು ಏರ್ ಮಾರ್ಷಲ್ ಎಂ. ಮಾತೇಶ್ವರನ್ (ನಿವೃತ್ತ) ಅಭಿಪ್ರಾಯ ಪಟ್ಟರು. ಮಾತೇಶ್ವರನ್ ಅವರು ಈ ಹಿಂದೆ ಭಾರತೀಯ ವಾಯುಪಡೆಯ ಯುದ್ದವಿಮಾನ ಸಂಗ್ರಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಿಜವಾದ ವ್ಯತ್ಯಾಸ ಗೊತ್ತಾಗಬೇಕಿದ್ದರೆ ಭಾರತೀಯ ವಾಯುಪಡೆಯು ಹಗುರ ಯುದ್ಧ ವಿಮಾನ ನಿರ್ಮಾಣದ ವಿನ್ಯಾಸದಿಂದ ತಯಾರಿವರೆಗಿನ ಸಂಪೂರ್ಣ ಕಾರ್ಯವನ್ನು ತನ್ನ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಕೇವಲ ಒಬ್ಬ ಅಧಿಕಾರಿಯನ್ನು ನಿಯೋಜಿಸಿ ಬಿಟ್ಟರೆ ಹೆಚ್ಚಿನ ಬದಲಾವಣೆ ಅಸಾಧ್ಯ ಎಂದು ಅವರು ನುಡಿದರು.  ‘

2018: ಬೆಂಗಳೂರು: ಮುಂಬರುವ ೨೦೧೯ರ ’ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ (ಏರ್ ಶೋ) ಸ್ಥಳ ಮತ್ತು ದಿನಾಂಕಗಳನ್ನು ರಕ್ಷಣಾ ಸಚಿವಾಲಯ ಇನ್ನೂ ನಿರ್ಧರಿಸಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಲ್ಲಿ ಹೇಳಿದರು. ಮೂಲಸವಲತ್ತು ಅಭಿವೃದ್ಧಿ ಯೋಜನೆಗಳಿಗೆ ರಕ್ಷಣಾ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಜೊತೆಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಸಚಿವರು, ಹಲವಾರು ರಾಜ್ಯಗಳು ತಮ್ಮ ನಗರಗಳಲ್ಲಿ ಏರೋ ಶೋ ನಡೆಸುವ ಬಗ್ಗೆ ಮನವಿಗಳನ್ನು ಮಾಡುತ್ತಿವೆ ಎಂದು ಹೇಳಿದರು. ರಕ್ಷಣಾ ಸಚಿವಾಲಯವು ಏರ್ ಶೋವನ್ನು ಲಕ್ನೋದ ಬಕ್ಷಿ ಕಾ ತಾಲಾಬ್ ವಾಯುಪಡೆ ನೆಲೆಗೆ ಸ್ಥಳಾಂತರಿಸುವ ಬಗ್ಗೆ ಪರಿಶೀಲಿಸುತ್ತಿದೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಸಚಿವರು, ’ಏರ್ ಶೋ ಕುರಿತಂತೆ ಸಚಿವಾಲಯವು ಈವರೆಗೂ ಯಾವುದೇ ಪ್ರಕಟಣೆಯನ್ನೂ ಮಾಡಿಲ್ಲ ಎಂದು ನುಡಿದರು.  ವೈಮಾನಿಕ ಪ್ರದರ್ಶನವು ಬೆಂಗಳೂರಿನಲ್ಲಿಯೇ ಮುಂದುವರೆಯುವುದೇ ಎಂಬ ಪ್ರಶ್ನೆಗೆ ಯಾವುದೇ ಬದ್ಧತೆ ವ್ಯಕ್ತ ಪಡಿಸಲು ಅವರು ನಿರಾಕರಿಸಿದರು.  ‘ನಾವಿನ್ನೂ ವಿಷಯದ ಬಗ್ಗೆ ನಿರ್ಧರಿಸಬೇಕಾಗಿದೆ. ನವದೆಹಲಿಯಲ್ಲಿ ಹತ್ತು ಬಾರಿಗೂ ಹೆಚ್ಚು ಸಲ ನಡೆದಿದ್ದ ರಕ್ಷಣಾ ಪ್ರದರ್ಶನದಂತೆಯೇ ಇರುವ ಪ್ರದರ್ಶನ ಇದು. ದೆಹಲಿಯ ಪ್ರದರ್ಶನವನ್ನು ಬಳಿಕ ಗೋವಾಕ್ಕೂ ಇತ್ತೀಚೆಗೆ ತಮಿಳುನಾಡಿಗೂ ಸ್ಥಳಾಂತರಿಸಲಾಗಿದೆ. ಶೀಘ್ರದಲ್ಲೇ ವಿಷಯದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಿರ್ಮಲಾ ನುಡಿದರು.  ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕುಮಾರ ಸ್ವಾಮಿ ಅವರೂ, ’ಏರ್ ಶೋ ವನ್ನು ಬೆಂಗಳೂರಿನಲ್ಲಿಯೇ ಮುಂದುವರೆಸುವಂತೆ ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಕರ್ನಾಟಕ ಮನವಿ ಮಾಡಿದೆ. ನಾವು ಮತ್ತೊಮ್ಮೆ ರಕ್ಷಣಾ ಸಚಿವಾಲಯಕ್ಕೆ ಈ ಬಗ್ಗೆ ಮನವಿ ಮಾಡುತ್ತೇವೆ ಮತ್ತು ಆವರು ನಮ್ಮ ಮನವಿಯನ್ನು ಪರಿಗಣಿಸುವರು ಎಂಬ ಭರವಸೆ ಇದೆ ಎಂದು ಹೇ:ಳಿದರು.  ಬೆಂಗಳೂರಿನಲ್ಲಿ ೧೯೯೬ರಿಂದ ದ್ವೈವಾರ್ಷಿಕ ಏರೋ ಶೋ ನಡೆಯುತ್ತಿದ್ದು, ಇದೀಗ ಅಗಾಧವಾಗಿ ಬೆಳೆದಿದೆ. ಈಗ ಇದು ಏಷ್ಯಾದ ಅತ್ಯಂತ ಪ್ರತಿಷ್ಠಿತ ಕಾರ್‍ಯಕ್ರಮಗಳಲ್ಲಿ ಒಂದು ಎಂಬುದಾಗಿ ಪರಿಗಣಿತವಾಗಿದೆ.
ದೇಶ ವಿದೇಶಗಳ ರಕ್ಷಣಾ ರಂಗದ ಹಲವಾರು ಸಂಸ್ಥೆಗಳು ಯುದ್ದ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ಸೆರಿದಂತೆ ತಮ್ಮ ಉತ್ಪನ್ನಗಳನ್ನು ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ನಿನಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಪ್ರದರ್ಶಿಸುತ್ತವೆ.

2018: ಲಕ್ನೋ: ಸರ್ಕಾರಿ ಕಚೇರಿಗಳನ್ನು ವಸ್ತುಶಃ ‘ಕೇಸರೀಮಯವನ್ನಾಗಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಿರಂತರ ಆಪಾದಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಈದಿನ ಇಲ್ಲಿ ಸ್ವತಃ ತನ್ನ ಕಚೇರಿಯ ಗೋಡೆಯೇ ಕೇಸರಿಮಯವಾದಾಗ ಪೆಚ್ಚಾದ ಘಟನೆ ಘಟಿಸಿತು.
ಲಕ್ನೋದಲ್ಲಿನ ಕಾಂಗ್ರೆಸ್ ಪಕ್ಷದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದ ಪತ್ರಕರ್ತರು ಮತ್ತು ಇತರರು ಕೇಂದ್ರದ ಗೋಡೆಗಳು ಕೇಸರಿಮಯವಾಗಿದ್ದುದನ್ನು ಕಂಡು ಅಚ್ಚರಿಗೊಂಡರು. ಮಾಲ್ ಅವೆನ್ಯೂದಲ್ಲಿನ ಕಾಂಗ್ರೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಪತ್ರಕರ್ತರು ಮತ್ತು ಇತರರು ಮಾಧ್ಯಮ ಕೇಂದ್ರದಲ್ಲಿ ಪಕ್ಷದ ವಕ್ತಾರರು ಕುಳಿತುಕೊಳ್ಳುವ ವೇದಿಕೆಯ ಹಿಂಭಾಗದ ಗೋಡೆ ಕೇಸರಿ ಬಣ್ಣದಲ್ಲಿ ವಿಜೃಂಭಿಸುತ್ತಿದ್ದುದನ್ನು ಕಂಡು ಪರಸ್ಪರ ಮುಖ ನೋಡಿದರು. ಚೇಷ್ಟೆಗಳ ಮಧ್ಯೆ ಕೆಲವರು ಗೋಡೆಯ ಚಿತ್ರಗಳನ್ನು ತಮ್ಮ ಸೆಲ್ ಫೋನ್ ಗಳಲ್ಲೇ ತೆಗೆದುಕೊಂಡರು. ಕೆಲವೇ ಗಂಟೆಗಳಲ್ಲಿ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವು.  ಕೆಂಪು ಕೆಂಪಾದ ಕಾಂಗ್ರೆಸ್ ವಕ್ತಾರರು ತ್ರಿವರ್ಣ ಧ್ವಜದ ಬಣ್ಣವನ್ನು ಪ್ರಾತಿನಿಧಿಕವಾಗಿ ಬಳಿಯಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ಕಡೆಗೂ  ‘ಕೇಸರಿ ಬಣ್ಣದ ಮೇಲೆ ಬಿಳಿ ಬಣ್ಣವನ್ನು ಬಳಿದರು. ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಯ (ಯುಪಿಸಿಸಿ) ಹಿರಿಯ ಪದಾಧಿಕಾರಿಯೊಬ್ಬರು ಬಣ್ಣ ಬಳಿಯುತ್ತಿದ್ದ ಪೇಂಟರ್ ಮೇಲೆ ಗೂಬೆ ಕೂರಿಸಿದರು. ‘ಗೋಡೆಗೆ ಹಳದಿ ಬಣ್ಣಕೊಡಬೇಕಾಗಿತ್ತು, ಆದರೆ ಪೇಂಟರ್ ತಪ್ಪು ಶೇಡ್ ಬಳಸಿದ್ದಾನೆ ಎಂದು ಅವರು ಪ್ರತಿಪಾದಿಸಿದರು.  ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಚಿವಾಲಯದ ಗೋಡೆಗಳಿಗೆ ಕೇಸರಿ ಬಣ್ಣಬಳಿದಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಸರ್ಕಾರವನ್ನು ಕಾಂಗ್ರೆಸ್ ಪಕ್ಷ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು. ಸಚಿವಾಲಯವಲ್ಲದೆ ಶಾಸ್ತ್ರಿಭವನ್, ಲಕ್ನೋ ಹಜ್ ಭವನ ಇತ್ಯಾದಿ ಸರ್ಕಾರಿ ಕಟ್ಟಡಗಳು ಕೂಡಾ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ‘ಬಣ್ಣ ಬದಲಾಯಿಸಿದ್ದು ವಿಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿತ್ತು.

2018: ಜಮ್ಮು: ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸಕ್ಕೆ ಏಕಾಏಕಿ ತನ್ನ ಕಾರನ್ನು ನುಗ್ಗಿಸಿ, ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಹಾಳು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಗುಂಡು ಹಾರಿಸಿ ಹತ್ಯೆಗೈದರು. ಜಮ್ಮು ಮತ್ತು ಕಾಶ್ಮೀರದ ಭತಿಂದಿ ಪ್ರದೇಶದಲ್ಲಿರುವ ಹಾಲಿ ಸಂಸತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಿವಾಸದಲ್ಲಿ ಈ ಘಟನೆ ಘಟಿಸಿದ್ದು, ಇದೊಂದು ಭಾರಿ ಭದ್ರತಾ ಲೋಪ ಎಂದು ಪರಿಗಣಿಸಲಾಯಿತು. ಭತಿಂದಿ ಪ್ರದೇಶದಲ್ಲಿ ಈದಿನ ಬೆಳಗ್ಗೆ ಈ ಘಟನೆ ಘಟಿಸಿದೆ. ನಿವಾಸಕ್ಕೆ ನುಗ್ಗಿದ್ದ ವ್ಯಕ್ತಿಯನ್ನು ಪೂಂಛ್ ಜಿಲ್ಲೆಯ ಮೆಂದರ್ ಮೂಲದ ವ್ಯಕ್ತಿ ಮುರ್ಫಾಸ್ ಎಂಬುದಾಗಿ ಗುರುತಿಸಲಾಯಿತು. ಫಾರೂಕ್ ನಿವಾಸದ ಹೊರಗಿನ ಮುಖ್ಯ ದ್ವಾರಕ್ಕೆ ವೇಗವಾಗಿ ಕಾರು ಚಲಾಯಿಸಿ ಡಿಕ್ಕಿ ಹೊಡೆದು ಕಾಂಪೌಂಡ್ ಒಳಗೆ ನುಗ್ಗಿದ ವ್ಯಕ್ತಿ, ಬಳಿಕ ಕಾರಿನಿಂದ ಇಳಿದು ಕಾಂಪೌಂಡ್ ಒಳಕ್ಕೆ ಪ್ರವೇಶಿಸಿದ. ಗಾರ್ಡನ್ನಿನಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಹಾಳು ಮಾಡುತ್ತಾ ಮನೆಯೊಳಕ್ಕೆ ಪ್ರವೇಶಿಸಲು ಯತ್ನಿಸಿದ. ಈ ವೇಳೆಯಲ್ಲಿ ಅವನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಫಾರೂಕ್ ಅಬ್ದುಲ್ಲಾ ಮನೆಗೆ ನುಗ್ಗಲು ಯತ್ನಿಸಿದ ಮುರ್ತಾಸ್‌ನ ತಂದೆ ಜಮ್ಮುವಿನ ಬಾನ್ -ತಲಬ್ ಪ್ರದೇಶದಲ್ಲಿ ಬಂದೂಕು ಫ್ಯಾಕ್ಟರಿಯನ್ನು ಇಟ್ಟುಕೊಂಡಿದ್ದಾನೆ. ಅವನ ಕುಟುಂಬ ಸಹ ಜಮ್ಮು ಪ್ರದೇಶದಲ್ಲಿ ವಾಸ ಮಾಡುತ್ತಿದೆ ಎಂದು ಕಣಿವೆ ರಾಜ್ಯದ ಪೊಲೀಸರು ತಿಳಿಸಿದರು. ಮಾಜಿ ಮುಖ್ಯಮಂತ್ರಿಯ ನಿವಾಸದ ಬೆಡ್‌ರೂಂಗೆ ಹೋಗುವ ಮೆಟ್ಟಿಲುಗಳ ಬಳಿ ಹೋಗುತ್ತಿದ್ದಾಗ ವ್ಯಕ್ತಿಯನ್ನು ಗುಂಡಿಟ್ಟು ಹತ್ಯೆ ಗೈಯಲಾಯಿತು ಪೊಲೀಸರು ಮಾಹಿತಿ ನೀಡಿದರು. ಝುಡ್ ಪ್ಲಸ್ ಶ್ರೇಣಿಯ ಭದ್ರತೆ ಹೊಂದಿರುವ ಫಾರೂಕ್ ಅಬ್ದುಲ್ಲಾ ನಿವಾಸದ ಮೇಲೆ ಈ ರೀತಿ ದಾಳಿ ನಡೆಸಿರುವುದು ದೊಡ್ಡ ಭದ್ರತಾ ಉಲ್ಲಂಘನೆ ಎಂದೇ ಪರಿಗಣಿಸಲಾಗಿದೆ. ಶ್ರೀನಗರ ಕ್ಷೇತ್ರದ ಸಂಸತ್ ಸದಸ್ಯರಾಗಿರುವ ಅಬ್ದುಲ್ಲಾ, ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ನವದೆಹಲಿಯಲ್ಲಿ ವಾಸ್ತವ್ಯ ಇದ್ದಾರೆ. ಫಾರೂಕ್ ಅಬ್ದುಲ್ಲಾ ಅವರ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಸಹ ಟ್ವೀಟ್ ಮಾಡಿ, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳುತ್ತಿರುವುದಾಗಿ ತಿಳಿಸಿದರು.  ಮುಖ್ಯದ್ವಾರಕ್ಕೆ ವಾಹನವನ್ನು ನುಗ್ಗಿಸಿದ ಬಳಿಕ ಕೆಳಗಿಳಿದು ಕಾಂಪೌಂಡ್ ಪ್ರವೇಶಿಸಿದ ವ್ಯಕ್ತಿ ಅಲ್ಲಿ ಕರ್ತವ್ಯ ನಿರತರಾಗಿದ್ದ ಅಧಿಕಾರಿಗಳ ಜೊತೆ ಘರ್ಷಸಿದ. ಘರ್ಷಣೆಯಲ್ಲಿ ಕರ್ತವ್ಯ ನಿರತ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಬಳಿಕ ಆತ ಅಬ್ದುಲ್ಲಾ ಮತ್ತು ಓಮರ್ ಅವರು ವಾಸಮಾಡುವ ನಿವಾಸವನ್ನು ಪ್ರವೇಶಿಸಿ, ಕೆಲವು ವಸ್ತುಗಳನ್ನು ಹಾನಿ ಪಡಿಸಿದ. ಬಳಿಕ ಆತನನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ಜಮ್ಮು ಎಸ್ ಎಸ್ ಪಿ ವಿವೇಕ್ ಗುಪ್ತ ವರದಿಗಾರರಿಗೆ ತಿಳಿಸಿದರು. ಪೂಂಚ್ ನಿವಾಸಿ ಮುರ್ಫಾಸ್ ಶಾ ಎಂಬ ವ್ಯಕ್ತಿ ಮನೆಯೊಳಕ್ಕೆ ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ್ದಾನೆ. ಎಸ್ ಯುವಿನಲ್ಲಿ ಬಂದ ಆತ ವಿಐಪಿ ಗೇಟ್ ಮೂಲಕ ಒಳಕ್ಕೆ ನುಗ್ಗಿದ. ಆತ ನಿರಾಯುಧನಾಗಿದ್ದ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಮ್ಮ ವಲಯದ ಐಜಿ ಎಸ್ ಡಿ ಸಿಂಗ್ ಜಮ್ವಾಲ್ ನುಡಿದರು.  ಅಬ್ದುಲ್ಲಾ ನಿವಾಸದ ಹೊರಗೆ ವರದಿಗಾರರ ಜೊತೆ ಮಾತನಾಡಿದ ಮುರ್ಫಾಸ್ ಬಂದು ಇಜಾಜ್ ಶಾ ಅವರು ’ಆತ ಮಾಜಿ ಮುಖ್ಯಮಂತ್ರಿಯ ನಿವಾಸಕ್ಕೆ ಹೇಗೆ ಬಂದ? ನಿನ್ನೆ ರಾತ್ರಿ ಆತ ನನ್ನ ಜೊತೆಗಿದ್ದ. ಆತ ಇಲ್ಲಿಗೆ ಹೇಗೆ ಬಂದ? ಆತನ ಮೇಲೆ ಗುಂಡು ಹೊಡೆದದ್ದು ಯಾಕೆ? ಕೊಂದದ್ದು ಏಕೆ? ಆತ ಜಿಮ್ ಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ. ಭದ್ರತಾ ಸಿಬ್ಬಂದಿ ಆತನನ್ನು ಒಳಕ್ಕೆ ಬಿಟ್ಟದ್ದು ಹೇಗೆ? ಮುಖ್ಯದ್ವಾರಕ್ಕೆ ವಾಹನವನ್ನು ಗುದ್ದಿದ್ದರೆ ಗೇಟ್ ಹಾನಿಯಾಗದೇ ಇರುವುದು ಹೇಗೆ?’ ಇತ್ಯಾದಿ ಪ್ರಶ್ನೆಗಳ ಮಳೆಗರೆದರು.  

2018: ನವದೆಹಲಿ: ಮುಂಬರುವ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಸಂವಿಧಾನದ ೩೫ಎ ಪರಿಚ್ಛೇದ ರದ್ದು ಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ಕುರಿತ ಆಗಸ್ಟ್ ೬ರ ವಿಚಾರಣೆಯನ್ನು ಮುಂದೂಡುವಂತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಸುಪ್ರೀಂಕೋರ್ಟಿಗೆ ಮನವಿ ಮಾಡಿತು. ಮುಂಬರುವ ಪಂಚಾಯತ್/ ನಗರ ಸ್ಥಳೀಯ ಸಂಸ್ಥೆ ಮತ್ತು ಮುನಿಸಿಪಲ್ ಚುನಾವಣೆಗಳಿಗೆ ನಡೆಯುತ್ತಿರುವ ಸಿದ್ಧತೆಗಳ ಹಿನ್ನೆಲೆಯಲ್ಲಿ ಆಗಸ್ಟ್ ೬ನೇ ತಾರೀಕಿಗೆ ನಿಗದಿಯಾಗಿರುವ ವಿಚಾರಣೆಯನ್ನು ಮುಂದೂಡಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ವಕೀಲ ಶೋಯೆಬ್ ಆಲಂ ಅವರು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಹೇಳಿದರು.  ‘ವಿ ದ ಸಿಟಿಜನ್ಸ್ ಸರ್ಕಾರೇತರ ಸಂಘಟನೆ ಸೇರಿದಂತೆ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಾಯಂ ನಿವಾಸಿಗಳಿಗೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿಯನ್ನು ಈ ಅರ್ಜಿಗಳು ಪ್ರಶ್ನಿಸಿದ್ದವು. ಮಹಿಳಾ ವಕೀಲ ಚಾರು ವಲಿ ಖನ್ನಾ ಅವರೂ ತಾರತಮ್ಯದ ನೆಲೆಯಲ್ಲಿ ಸಂವಿಧಾನದ ಈ ಪರಿಚ್ಛೇದವನ್ನು ಪ್ರಶ್ನಿಸಿದ್ದಾರೆ. ರಾಜ್ಯದ ಖಾಯಂ ನಿವಾಸಿಗಳಿಗೆ ಸಂಬಂಧಿಸಿದ ಜಮ್ಮು ಮತ್ತು ಕಾಶ್ಮೀರ ಸಂವಿಧಾನದ ಸೆಕ್ಷನ್ ೬ನ್ನೂ ಖನ್ನಾ ಪ್ರಶ್ನಿಸಿದ್ದಾರೆ. ಸಂವಿಧಾನದ ಕೆಲವು ವಿಧಿಗಳು ಕಾಶ್ಮೀರದ ’ಪೌರರಲ್ಲದ ವ್ಯಕ್ತಿಗಳನ್ನು ಮದುವೆಯಾಗುವ ಮಹಿಳೆಯರಿಗೆ ಆಸ್ತಿ ಹಕ್ಕನ್ನು ನಿರಾಕರಿಸುತ್ತವೆ.  ಕಾನೂನಿನ ಪ್ರಕಾರ ರಾಜ್ಯದ ಮಹಿಳೆಯರು ಆಸ್ತಿ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಇದು ಅವಳ ಮಕ್ಕಳಿಗೂ ಅನ್ವಯಿಸುತ್ತದೆ. ಮಹಿಳೆಯು ರಾಜ್ಯದಲ್ಲಿ ಉದ್ಯೋಗ ಅವಕಾಶಗಳನ್ನೂ ಕಳೆದುಕೊಳ್ಳುತ್ತಾಳೆ.  ೩೫ ಎ ಪರಿಚ್ಛೇದವನ್ನು ರಾಷ್ಟ್ರಪತಿ ಆದೇಶದ ಮೂಲಕ ಸಂವಿಧಾನಕ್ಕೆ ಸೇರ್ಪಡೆ ಮಾಡಲಾಗಿದೆ. ಇದು ಜಮ್ಮು ಮತ್ತು ಕಾಶ್ಮೀರದ ಪೌರರಿಗೆ ವಿಶೇಷ ಹಕ್ಕುಗಳು ಮತ್ತು ಸವಲತ್ತುಗಳನ್ನು ಒದಗಿಸುತ್ತದೆ. ಅಲ್ಲದೆ ಯಾವುದೇ ಕಾನೂನು ರೂಪಿಸಲು ರಾಜ್ಯ ಶಾಸನಸಭೆಗೆ ಅಧಿಕಾರವನ್ನು ನೀಡುತ್ತದೆ. ಸಂವಿಧಾನದ ಅಡಿಯಲ್ಲಿ ಇತರ ರಾಜ್ಯಗಳಿಂದ ಬರುವ ವ್ಯಕ್ತಿಗಳ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂಬ ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಈ ಕಾನೂನನ್ನು ಪ್ರಶ್ನಿಸದಂತೆಯೂ ರಕ್ಷಣೆಯನ್ನು ಒದಗಿಸಲಾಗಿದೆ.  ಕಳೆದ ವಾರ ರಾಜಕೀಯ ಪಕ್ಷಗಳು ಮತ್ತು ಪ್ರತ್ಯೇಕತಾವಾದಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸವಲತ್ತುಗಳ ಖಾತರಿ ನೀಡುವ ಸಂವಿಧಾನದ ೩೫ ಎ ವಿಧಿಯ ಜೊತೆಗೆ ಕೈಯಾಡಿಸುವುದು ಬೇಡ ಎಂದು ಇದಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂಕೋರ್ಟಿನಲ್ಲಿ ಆಗಸ್ಟ್ ೬ರಂದು ವಿಚಾರಣೆಗೆ ಬರುವುದಕ್ಕೆ ಮುನ್ನವೇ ಎಚ್ಚರಿಕೆ ನೀಡಿದ್ದವು.

2018: ಮುಂಬೈ: ಪಂಜಾಬ್ ನ್ಯಾಷನಲ್ ಬ್ಯಾಂಕಿನ (ಪಿಎನ್ ಬಿ) ಬಹುಕೋಟಿ ಹಗರಣದಲ್ಲಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಸ್ವಾಮ್ಯದ ಕಂಪೆನಿಯ ಹಿರಿಯ ಎಕ್ಸಿಕ್ಯೂಟಿವ್ ವಿಪುಲ್ ಅಂಬಾನಿ ಅವರಿಗೆ ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತು.  ನೀರವ್ ಮೋದಿ ಮಾಲೀಕತ್ವದ ಫೈವ್ ಸ್ಟಾರ್ ಡೈಮಂಡ್ ಕಂಪೆನಿಯ ಅಧ್ಯಕ್ಷ (ಹಣಕಾಸು) ವಿಪುಲ್ ಅಂಬಾನಿ ಅವರನ್ನು ಕೇಂದ್ರೀಯ ತನಿಖಾದಳವು (ಸಿಬಿಐ) ಈ ವರ್ಷ ಫೆಬ್ರುವರಿಯಲ್ಲಿ ಬಂಧಿಸಿತ್ತು.  ಅಂಬಾನಿ ಅವರಿಗೆ ನೀರವ್ ಮೋದಿ ಸಂಸ್ಥೆಗಳ ಪರವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮಾಜಿ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ್ ಶೆಟ್ಟಿ ಅವರು ನೀಡಿದ್ದ ಮೋಸದ ಜವಾಬ್ದಾರಿ ಪತ್ರಗಳ (ಲೆಟರ್‍ಸ್ ಆಫ್ ಅಂಡರ್ ಟೇಕಿಂಗ್ -ಎಲ್ ಒಯು) ಬಗ್ಗೆ ಅರಿವು ಇತ್ತು ಎಂದು ಸಿಬಿಐ ತಿಳಿಸಿತ್ತು. ವಿಶೇಷ ಸಿಬಿಐ ನ್ಯಾಯಾಧೀಶ ಜೆ.ಸಿ. ಜಗದಾಳೆ ಅವರು ಆಗಸ್ಟ್ ೪ರಂದು ಅಂಬಾನಿ ಅವರ ಜಾಮೀನು ಕೋರಿಕೆ ಮನವಿಯನ್ನು ಅಂಗೀಕರಿಸಿ, ೧ ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ನೀಡುವಂತೆ ಅವರಿಗೆ ನಿರ್ದೇಶಿಸಿದರು.  ಪ್ರಕರಣದಲ್ಲಿ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ (ಚಾಜ್‌ಶೀಟ್) ದಾಖಲಿಸಿರುವುದರಿಂದ ತಮ್ಮ ಕಸ್ಟಡಿಯ ಅಗತ್ಯವಿಲ್ಲ ಎಂಬ ನೆಲೆಯಲ್ಲಿ ತಮಗೆ ಜಾಮೀನು ನೀಡುವಂತೆ ಅಂಬಾನಿ ಮನವಿ ಮಾಡಿದ್ದರು.  ಅಂಬಾನಿ ಅವರಿಗೆ ಜಾಮೀನು ನೀಡುತ್ತಾ ನ್ಯಾಯಾಲಯವು ’ಅಂಬಾನಿ ಅವರು ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ರಾಷ್ಟ್ರವನ್ನು ಬಿಟ್ಟು ತೆರಳುವಂತಿಲ್ಲ ಮತ್ತು ಪ್ರಕರಣದ ಸಾಕ್ಷ್ಯಾಧಾರಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಸೂಚಿಸಿತು ಎಂದು ಅಂಬಾನಿ ಪರ ವಕೀಲ ಅಮಿತ್ ದೇಸಾಯಿ ನುಡಿದರು.  ೨೦೧೮ರ ಜನವರಿ ೩೧ರಂದು ಸಿಬಿಐ ನೀರವ್ ಮೋದಿ, ಚಿಕ್ಕಪ್ಪ ಹಾಗೂ ಗೀತಾಂಜಲಿ ಜೆಮ್ಸ್ ಮಾಲೀಕ ಮೆಹುಲ್ ಚೊಕ್ಸಿ ಮತ್ತು ಪಿಎನ್ ಬಿ ಅಧಿಕಾರಿಗಳು ಸೇರಿದಂತೆ ಹಲವಾರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿತ್ತು.  ತನ್ನ ಎಫ್ ಐಆರ್ ನಲ್ಲಿ ಸಿಬಿಐ ೨೮೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಎಂಟು ಮೋಸದ ವಹಿವಾಟುಗಳ ಪಟ್ಟಿ ಮಾಡಿತ್ತು.  ಆದರೆ ಬ್ಯಾಂಕಿನಿಂದ ಬಂದ ಇನ್ನಷ್ಟು ದೂರುಗಳನ್ನು ಆದರಿಸಿ, ಮೊದಲ ಎಫ್ ಐ ಆರ್ ನಲ್ಲಿ ಸೂಚಿಸಿದ್ದ ಮೋಸದ ವಹಿವಾಟಿನ ಮೊತ್ತ ೬,೪೯೮ ಕೋಟಿ ರೂಪಾಯಿಗಳಿಗೂ ಹೆಚ್ಚು ಎಂದು ಸಿಬಿಐ ತಿಳಿಸಿತು. ಇದರಲ್ಲಿ ಮೋಸದಿಂದ ನೀಡಲಾದ ೧೫೦ ಮೋಸದ ಜವಾಬ್ದಾರಿ ಪತ್ರಗಳು (ಎಲ್ ಒಯು) ಸೇರಿದ್ದವು.  ೪,೮೮೬ ಕೋಟಿ ರೂಪಾಯಿ ಮೌಲ್ಯದ ಉಳಿದ ೧೫೦ ಮೋಸದ ಜವಾಬ್ದಾರಿ ಪತ್ರಗಳನ್ನು (ಎಲ್ ಒಯು) ಗೀತಾಂಜಲಿ ಕಂಪೆನಿಗಳ ಸಮೂಹ ನೀಡಿದ್ದು ಈ ವಿಚಾರವನ್ನು ಸಿಬಿಐ ಮೆಹುಲ್ ಚೊಕ್ಸಿ ಮತ್ತು ಅವರ ಕಂಪೆನಿಗಳಾದ ಗೀತಾಂಜಲಿ ಜೆಮ್ಸ್, ನಕ್ಷತ್ರ ಬ್ರ್ಯಾಂಡ್ಸ್ ಅಂಡ್ ಗಿಲಿ ವಿರುದ್ಧ ದಾಖಲಿಸಿದ ಎಫ್ ಐಆರ್ ನಲ್ಲಿ ದಾಖಲಿಸಿತ್ತು.

2018: ನೈನಿತಾಲ್ : ಮೂರನೇ ಮಗು ಹೆತ್ತ ಉದ್ಯೋಗಿಗೆ ಹೆರಿಗೆ ರಜೆ ನಿರಾಕರಿಸಿದ ರಾಜ್ಯ ಸರ್ಕಾರದ ನಿಯಮ ಸಂವಿಧಾನಬಾಹಿರ ಎಂದು ಉತ್ತರಾಖಂಡ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು.  ಹಲದ್ವಾನಿ ನಿವಾಸಿಯಾಗಿರುವ ರಾಜ್ಯ ಸರ್ಕಾರಿ ಉದ್ಯೋಗಿ  ಊರ್ಮಿಳಾ ಮನೀಶ್ ಅವರಿಗೆ ಮೂರನೇ ಮಗು ಹೆತ್ತದ್ದಕ್ಕೆ ಹೆರಿಗೆ ರಜೆ ನಿರಾಕರಿಸಲಾಗಿತ್ತು. ರಾಜ್ಯ ಸರ್ಕಾರದ ಈ ನಿಯಮವನ್ನು ಪ್ರಶ್ನಿಸಿ ಅಕೆ  ಹೈಕೋರ್ಟ್ ಮೆಟ್ಟಿಲೇರಿದ್ದರು.  ನ್ಯಾಯಮೂರ್ತಿ ರಾಜೀವ್ ಶರ್ಮಾ ಅವರ ಏಕ ಸದಸ್ಯ ಪೀಠವು ಉತ್ತರಾಖಂಡ ಸರ್ಕಾರದ ಈ ನಿಯಮವು ಸಂವಿಧಾನದ ಅಶಯಕ್ಕೆ ವಿರುದ್ಧವಾದುದು ಎಂದು ತೀರ್ಪು ನೀಡಿದರು ಮತ್ತು ಮನೀಶ್ ಅವರಿಗೆ ಮಾನವೀಯ ನೆಲೆಯಲ್ಲಿ ರಜೆ ಮಂಜೂರು ಮಾಡಿದರು.  ಉತ್ತರ ಪ್ರದೇಶ ಮೂಲಭೂತ ನಿಯಮಗಳ ಹಣಕಾಸು ಕೈಪಿಡಿಯ ಎರಡನೇ ಪ್ರಾವಿಸೋ ಅಡಿಯ ೧೫೩ನೇ ಮೂಲಭೂತ ನಿಯಮವು ಮೂರನೇ ಮಗು ಹೆತ್ತರೆ ಹೆರಿಗೆ ರಜೆಯನ್ನು ನಿರಾಕರಿಸುತ್ತದೆ. ಈ ನಿಯಮಾವಳಿಯನ್ನು ಉತ್ತರಾಖಂಡ ಸರ್ಕಾರ ಯಥಾವತ್ ಎತ್ತಿಕೊಂಡಿದೆ.  ರಾಜ್ಯ ಸರ್ಕಾರದ ಈ ನಿಯಮವು ಸಂವಿಧಾನದ ೪೨ನೇ ವಿಧಿ ಮತ್ತು ೧೯೬೧ರ ಹೆರಿಗೆ ಸೌಲಭ್ಯ ಕಾಯಿದೆಯ ಸೆ.೨೭ರ ಆಶಯಕ್ಕೆ ವಿರುದ್ಧವಾಗಿರುವುದರಿಂದ ಇದನ್ನು ಕಿತ್ತು ಹಾಕಬೇಕು ಎಂದು ತನ್ನ ಜುಲೈ ೩೦ರ ಆದೇಶದಲ್ಲಿ ಪೀಠ ನಿರ್ದೇಶಿಸಿತು. ಸಂವಿಧಾನದ ೪೨ನೇ ವಿಧಿಯು ಮಹಿಳಾ ನೌಕರರಿಗೆ ನ್ಯಾಯೋಚಿತ ಮತ್ತು ಮಾನವೀಯ ಕೆಲಸದ ನಿಯಮ ಮತ್ತು ಹೆರಿಗೆ ಸೌಕರ್ಯಗಳ ಭರವಸೆ ನೀಡುತ್ತದೆ.  ಮನೀಶ್ ಅವರಿಗೆ ಈಗಾಗಲೇ ಎರಡು ಮಕ್ಕಳಿರುವುದರಿಂದ, ತನ್ನ ನಿಯಮಗಳ ಪ್ರಕಾರ, ಮೂರನೇ ಮಗುವಿಗಾಗಿ ಹೆರಿಗೆ-ರಜೆ ನೀಡುವಂತಿಲ್ಲ ಎಂದು ಉತ್ತರಾಖಂಡ ಸರ್ಕಾರ ಹೇಳಿತ್ತು. 

2017: ಇಸ್ಲಾಮಾಬಾದ್‌: 20 ವರ್ಷಗಳ ಬಳಿಕ ಪಾಕಿಸ್ಥಾನ ಸಚಿವ ಸಂಪುಟದಲ್ಲಿ ಹಿಂದೂ ಸಚಿವರಾಗಿ ದರ್ಶನ್‌ ಲಾಲ್‌ ಅಧಿಕಾರ ವಹಿಸಿಕೊಂಡರು.  ಪಾಕಿಸ್ತಾನದ ನೂತನ ಪ್ರಧಾನಿ ಶಹೀದ್‌ ಖಾಕನ್‌ ಅಬ್ಬಾಸಿ ಅವರು ಹೊಸ ಸಚಿವ ಸಂಪುಟ ರಚಿಸಿದ್ದು, ದರ್ಶನ್‌ ಲಾಲ್‌ ಆಯ್ಕೆಯನ್ನು ಪ್ರಕಟಿಸಿದರು. ದರ್ಶನ್‌ ಲಾಲ್‌ ಅವರಿಗೆ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ಸಮನ್ವಯ ಹೊಣೆಗಾರಿಕೆಯನ್ನು ನೀಡಲಾಯಿತು. ಇದೇ ವೇಳೆ 28 ಮಂದಿ ಸಂಪುಟ ದರ್ಜೆಯ ಸಚಿವರಾಗಿ ಮತ್ತು 19 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮುಖವಾಗಿ ಖವಾಜಾ ಅಸೀಫ್‌ ಅವರನ್ನು ವಿದೇಶಾಂಗ ಸಚಿವರನ್ನಾಗಿ ನೇಮಿಸಲಾಯಿತು. ಅಸೀಫ್‌ ಅವರು ನವಾಜ್‌ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿದ್ದರು. ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಪಂಜಾಬ್‌ ಮುಖ್ಯಮಂತ್ರಿ ಶಹಬಾಜ್‌ ಷರೀಫ್‌ ಅವರ ಜತೆ ಸತತ ಆರು ಗಂಟೆ ಕಾಲ ಸಮಾಲೋಚನೆ ನಡೆಸಿದ ಬಳಿಕ ಅಬ್ಬಾಸಿ ಅವರು ಖಾತೆಗಳನ್ನು ಹಂಚಿಕೆ ಮಾಡಿದರು. 2013ರಿಂದ ವಿದೇಶಾಂಗ ಖಾತೆಗೆ ಪ್ರತ್ಯೇಕ ಸಚಿವರನ್ನು ನೇಮಿಸಿರಲಿಲ್ಲ. ಹೊಸ ಸಂಪುಟದಲ್ಲಿ ಬಹುತೇಕ ಹಳಬರನ್ನೇ ಮುಂದುವರಿಸಲಾಯಿತು. ಕೆಲವರನ್ನು ಮಾತ್ರ ಹೊಸದಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. 65 ವರ್ಷದ ದರ್ಶನ್‌ ಲಾಲ್‌ ಮೀರಾಪುರದ ಮಿಥೆಲೊ ನಗರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದರು. 2013ರ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಲ್ಪಸಂಖ್ಯಾತ ಕೋಟಾದಡಿ ಟಿಕೆಟ್‌ ಪಡೆದು ಕಣಕ್ಕಿಳಿದಿದ್ದರು.
2008: ರಾಸಾಯನಿಕ ರಸಗೊಬ್ಬರದಿಂದ ದೂರವಾಗಿ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸುವುದು ಹಾಗೂ ಆತ್ಮಹತ್ಯೆ ತಡೆದು ರೈತರ್ಲಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ರಾಜ್ಯ ರೈತ ಸಂಘವು ವರ್ಷಾಂತ್ಯದೊಳಗೆ ರಾಜ್ಯದ 10 ಸಾವಿರ ಹಳ್ಳಿಗಳಲ್ಲಿ ಜಾಗೃತಿ ಕಾರ್ಯಕ್ರಮ ಸಂಘಟಿಸಲು ನಿರ್ಧರಿಸಿತು.

2007: ದೇಶದ ಮೊದಲ ಸಂಚಾರಿ ನ್ಯಾಯಾಲಯವನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರು ಹರಿಯಾಣದ ಮೇವಟ್ ಜಿಲ್ಲೆಯಲ್ಲಿ ಉದ್ಘಾಟಿಸಿದರು.

2007: ಖ್ಯಾತ ಹಿಂದುಸ್ಥಾನಿ ಗಾಯಕ ಶರತ್ ಚಂದ್ರ ಮರಾಠೆ ಅವರು ಕೇರಳದ ಪ್ರತಿಷ್ಠಿತ 13ನೇ ಬಷೀರ್ ಪುರಸ್ಕಾರಕ್ಕೆ ಆಯ್ಕೆಯಾದರು. ದೋಹಾ ಮೂಲದ `ಪ್ರವಾಸಿ ಟ್ರಸ್ಟ್' ಈ ಪ್ರಶಸ್ತಿಯನ್ನು ನೀಡುತ್ತದೆ. 35,000 ನಗದು ಹಣ ಮತ್ತು ವಿಗ್ರಹವನ್ನು ಖ್ಯಾತ ಗಾಯಕ ಮರಾಠೆ ಅವರಿಗೆ ಆಗಸ್ಟ್ 7ರಂದು ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟಿನ ಟೋನಿ ಪ್ರಕಟಿಸಿದರು. ಈ ಹಿಂದೆ ಕೇರಳದ ಮಾಜಿ ಮುಖ್ಯಮಂತ್ರಿ ನಂಬೂದಿರಿ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.

2007: ಖಯ್ಯಾಂ ಎಂದೇ ಖ್ಯಾತರಾದ ಸಂಗೀತ ನಿರ್ದೇಶಕ ಮೊಹಮ್ಮದ್ ಜಹೀರ್ ಖಯ್ಯಾಂ ಹಶ್ಮಿ ಅವರು 2007ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಆಯ್ಕೆಯಾದರು. ಸಿನೆಮಾ ಸಂಗೀತಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಫಲಕವನ್ನು ಒಳಗೊಂಡಿದೆ.

2007: ಕರ್ನಾಟಕದಲ್ಲಿ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ರಚನೆಗೆ ಸಂಬಂಧಿಸಿದ ಅಂತಿಮ ಆದೇಶವನ್ನು ಜುಲೈ 3ರಂದೇ ಹೊರಡಿಸಲಾಗಿದ್ದು, ಸೆಪ್ಟೆಂಬರ್ 11ರಂದು ಈ ಎರಡೂ ಜಿಲ್ಲೆಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕನಕಪುರದ ಜೆಟ್ಟಿದೊಡ್ಡಿಯಲ್ಲಿ ಪ್ರಕಟಿಸಿದರು. ಇಲ್ಲಿನ ಲಕ್ಕಯ್ಯ ಮತ್ತು ಚಿಕ್ಕತಾಯಮ್ಮ ದಂಪತಿಗಳ ಮನೆಯಲ್ಲಿ `ವಾಸ್ತವ್ಯ' ಹೂಡಿದ್ದ ವೇಳೆಯಲ್ಲಿ ಅವರು ಪತ್ರಕರ್ತರಿಗೆ ಈ ವಿಚಾರ ತಿಳಿಸಿದರು.

2007: ಹಿರಿಯ ಪೊಲೀಸ್ ಅಧಿಕಾರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ (ಡಿಐಜಿ) ಭಾ.ಶಿ. ಅಬ್ಬಾಯಿ (52) ಅವರು ಬೆಂಗಳೂರಿನಲ್ಲಿ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲದವರಾದ ಅಬ್ಬಾಯಿ ಪರಪ್ಪನ ಅಗ್ರಹಾರದ ಪೊಲೀಸ್ ವಸತಿ ನಿಲಯದಲ್ಲಿ ಪತ್ನಿ ಗಿರಿಜಾ ಹಾಗೂ ಆರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಪುತ್ರ ಶಿವಪ್ರಸಾದ್ ಜೊತೆ ವಾಸವಿದ್ದರು. ನಾಲ್ಕು ವರ್ಷದಿಂದ ಈ ಕಾರಾಗೃಹದ ಅಧೀಕ್ಷಕರಾಗಿದ್ದರು. ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಸಲ್ಲಿಸಿ, ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿ ಪದಕ ಪಡೆದಿದ್ದರು.

2007: ವಿವಿಧ ಧರ್ಮಗಳಲ್ಲಿ ಗೋವಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಗೋ ಹಿಂಸೆಯನ್ನು ಎಲ್ಲ ಧರ್ಮಗಳು ವಿರೋಧಿಸುತ್ತವೆ ಎಂದು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಬೆಂಗಳೂರು ಗಿರಿನಗರದ ಶ್ರೀರಾಮಾಶ್ರಮದಲ್ಲಿ `ಗೋ ವಿಚಾರ ಮಂಥನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು 'ಧಾರ್ಮಿಕ ವಿಧಿ- ವಿಧಾನಗಳಲ್ಲಿ ಗೋವಿಗೆ ಶ್ರೇಷ್ಠ ಸ್ಥಾನ ನೀಡಲಾಗಿದೆ. ಅಪಾರ ಗೌರವ ತೋರಲಾಗುತ್ತದೆ' ಎಂದರು.

2007: ಅಪ್ನಾ ಸಪ್ನಾ ಹಾಗೂ ಫ್ಲೈಯಿಂಗ್ ಕ್ಯಾಟ್ಸ್ ಉದ್ಯಾನನಗರಿಯಲ್ಲಿ ಸ್ಥಾಪಿಸಿರುವ `ಬೆಂಗಳೂರು ಸೆಂಟರ್ ಆಫ್ ಕ್ಯಾಟ್ಸ್' ವಾಯುಯಾನ ಶಾಲೆಯನ್ನು ಬಾಲಿವುಡ್ ನಟಿ ದಿವಾ ನೇಹಾ ಧೂಪಿಯಾ ಉದ್ಘಾಟಿಸಿದರು.

2007: ದೇಶದಲ್ಲೇ ಪ್ರಪ್ರಥಮ ಬಾರಿಗೆ 45 ದಿನಗಳ ಹಸುಳೆಯ ಭಾವಚಿತ್ರವಿರುವ ಪ್ಯಾನ್ ಕಾರ್ಡನ್ನು ಆದಾಯ ತೆರಿಗೆ ಇಲಾಖೆಯು ಚೆನ್ನೈಯಲ್ಲಿ ಈದಿನ ನೀಡಿತು. ಇದರೊಂದಿಗೆ ಭಾರತದಲ್ಲಿ ಇಂತಹ ಕಾರ್ಡ್ ಪಡೆದ ಅತ್ಯಂತ ಕಿರಿಯ ಮಗು ಎಂಬ ಖ್ಯಾತಿಗೆ ಹಸುಳೆ ಅಕ್ಷಿತಾ ಪಾತ್ರವಾಯಿತು. ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ (ಐಸಿಎಫ್) ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿರುವ ಎಸ್. ಬಾಲಮುರುಗನ್ ಅವರು ತಮ್ಮ ಮಗಳಿಗೆ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿ ಅದನ್ನು ಪಡೆಯುವ ಮೂಲಕ ಮುಂಬೈಯ 56 ದಿನಗಳ ಕೃಷ್ಣಿ ಸಮೀರ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಬಾಲಮುರುಗನ್ (35) ಅವರು ತಮಿಳು ದಿನಪತ್ರಿಕೆಯಲ್ಲಿ ಕೃಷ್ಣಿ ಬಗ್ಗೆ ಬಂದ ಲೇಖನವನ್ನು ಓದಿ ತನ್ನ ಮಗಳು ಆರ್. ಪಿ. ಅಕ್ಷಿತಾಳ ಹೆಸರಿನಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರು. ಬಾಲಮುರುಗನ್ ಅವರು ಕೃಷ್ಣಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವುದಕೋಸ್ಕರವೇ ಜೂನ್ 20ರಂದು ಹುಟ್ಟಿದ ತಮ್ಮ ಮಗಳ ಹೆಸರಿನಲ್ಲಿ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮುನ್ನ ಒರಿಸ್ಸಾದ ಮೂರು ವರ್ಷದ ಮಗು ಪ್ಯಾನ್ ಕಾರ್ಡ್ ಹೊಂದಿದ ಅತ್ಯಂತ ಕಿರಿಯ ಮಗು ಎಂದು ದಾಖಲೆ ಹೊಂದಿತ್ತು. ಇದನ್ನು ಕೃಷ್ಣಿ ಮುರಿದಿದ್ದಳು. ಕೃಷ್ಣಿ ದಾಖಲೆಯನ್ನು ಮರಿದ ಅಕ್ಷತಾ ಈಗ ಆ ದಾಖಲೆಯನ್ನು ತನ್ನದಾಗಿಸಿ ಕೊಂಡಳು. ತಮ್ಮ ಮಕ್ಕಳ ಹೆಸರಿನಲ್ಲಿ ಹಣ ತೊಡಗಿಸುವ ಯಾರೇ ಪಾಲಕರು/ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಪಾನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು ಎಂಬುದು ಆದಾಯ ತೆರಿಗೆ ಇಲಾಖೆಯ ಸ್ಪಷ್ಟನೆ.

2006: ಅಣು ಬಾಂಬ್ ದಾಳಿಯಿಂದ ಬದುಕಿ ಉಳಿದರೂ ವಿಕಿರಣದಿಂದ ಆನಾರೋಗ್ಯ ಪೀಡಿತರಾಗಿರುವ ತಮಗೆ ಪರಿಹಾರ ವಿತರಣೆಯಲ್ಲಿ ಸರ್ಕಾರ ಆದ್ಯತೆ ನೀಡಬೇಕು ಎಂದು ಹಿರೋಷಿಮಾದಲ್ಲಿ ಬಾಂಬ್ ದಾಳಿಯಿಂದ ಬದುಕುಳಿದ ಕೆಲವು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಹಿರೋಷಿಮಾ ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿಯಿತು. 41 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ಅದು ಪುರಸ್ಕರಿಸಿ, 26 ಸಾವಿರ ಡಾಲರ್ ಪರಿಹಾರ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿತು.

2006: ಒರಿಸ್ಸಾದ ಮೊದಲ ಮತ್ತು ಏಕೈಕ ಮಹಿಳಾ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗಿದ್ದ ನಂದಿನಿ ಸತ್ಪತಿ (76) ಭುವನೇಶ್ವರದಲ್ಲಿ ನಿಧನರಾದರು. 1972 ಮತ್ತು 1974ರಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ನಂದಿನಿ, ಏಳು ಬಾರಿ ಶಾಸಕಿಯಾಗಿ ಹಾಗೂ ಒಮ್ಮೆ ಕೇಂದ್ರ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಪಾತ್ರರಾಗಿದ್ದರು.

2006: ಸಿಖ್ ಸಮುದಾಯ ವಾಸಿಸುವ ನೆರೆಹೊರೆಯಲ್ಲೇ ಗುರುದ್ವಾರ ನಿರ್ಮಿಸುವ ಹಕ್ಕು ಸಿಕ್ಖರಿಗೆ ಇದೆ ಎಂದು ಸ್ಯಾನ್ ಫ್ರಾನ್ಸಿಸ್ಕೊ ನ್ಯಾಯಾಲಯ ತೀರ್ಪು ನೀಡಿತು. `ಬೆಕೆಟ್ ಫಂಡ್ ಫಾರ್ ರೆಲಿಜಿಯಸ್ ಲಿಬರ್ಟಿ' ಎಂಬ ಕಾನೂನು ಸಂಸ್ಥೆ ನ್ಯಾಯಾಲಯದಲ್ಲಿ ಸಿಖ್ ಸಮುದಾಯದ ಪರವಾಗಿ ಈ ಅರ್ಜಿ ಸಲ್ಲಿಸಿತ್ತು.

2006: ತಂಪು ಪೇಯಗಳಲ್ಲಿ ಬಳಸಲಾಗುವ ವಸ್ತು ಹಾಗೂ ರಾಸಾಯನಿಕ ಅಂಶಗಳನ್ನು ಬಹಿರಂಗಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಸರ್ಕಾರ, ಪೆಪ್ಸಿ ಮತ್ತು ಕೋಕಾಕೋಲಾ ಕಂಪೆನಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಮಾಡಿತು.

2006: ಧಾರವಾಡ ಮತ್ತು ಗುಲ್ಬರ್ಗದಲ್ಲಿ ಸಂಚಾರಿ ಹೈಕೋರ್ಟ್ ಪೀಠದ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆ ಪೂಜೆ ನೆರವೇರಿಸಲಾಯಿತು.

2001: ಕೆನಡಾದ ಎಡ್ಮೊಂಟನ್ನಿನ ಜಾಗತಿಕ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇಥಿಯೋಪಿಯಾದ ಓಟಗಾರ ಜೆಹಾನೇ ಅಬೇರಾ ಅವರು ಒಲಿಂಪಿಕ್ ಮತ್ತು ಜಾಗತಿಕ ಮ್ಯಾರಥಾನ್ ಎರಡೂ ಪ್ರಶಸ್ತಿಗಳನ್ನು ಬಗಲಿಗೆ ಏರಿಸಿಕೊಂಡ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದರು.

1981: ಕುಡಿಯುವ ನೀರು ಸಂಗ್ರಹಕ್ಕೆ ಮಣ್ಣಿನ ಪಾತ್ರೆಗಳೇ (ಮಡಕೆ) ಶ್ರೇಷ್ಠ ಎಂದು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ ಪ್ರಕಟಿಸಿತು. ಅಲ್ಯುಮಿನಿಯಂ, ಸ್ಟೀಲ್ ಮತ್ತು ಮಣ್ಣಿನ ಪಾತ್ರೆಗಳಲ್ಲಿ 24 ಗಂಟೆ ಕಾಲ ನೀರು ಸಂಗ್ರಹಿಸಿ ಇಟ್ಟು ಪರೀಕ್ಷಿಸಿದ ಬಳಿಕ ಸಂಸ್ಥೆ ಈ ವಿಚಾರವನ್ನು ಬಹಿರಂಗಪಡಿಸಿತು.

1981: ಹಲವಾರು ಆಪಾದನೆಗಳ ಹಿನ್ನೆಲೆಯಲ್ಲಿ ವಿವಾದಗ್ರಸ್ತ ಯೋಜನಾ ಸಚಿವ ಸಿ.ಎಂ. ಇಬ್ರಾಹಿಂ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

1956: ಭಾರತದ ಮೊತ್ತ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ `ಅಪ್ಸರಾ' ಟ್ರಾಂಬೆಯಲ್ಲಿ ಕಾರ್ಯಾರಂಭ ಮಾಡಿತು.

1941: ಸಾಹಿತಿ ಜಿ.ಜಿ. ಮಂಜುನಾಥ ಜನನ.

1937: ಸಾಹಿತಿ ಎಂ. ಮಹದೇವಪ್ಪ ಜನನ.

1931: ಭಾರತದ ಮಾಜಿ ಕ್ರಿಕೆಟ್ ಆಟಗಾರ ನರೇನ್ ಶಂಕರ್ ತಮ್ ಹಾನೆ (1931-2002) ಜನ್ಮದಿನ.

1929: ಖ್ಯಾತ ಹಿನ್ನೆಲೆ ಗಾಯಕ, ಹಿಂದಿ ಚಲನಚಿತ್ರ ನಟ ಕಿಶೋರ ಕುಮಾರ್ (1929-1987) ಜನ್ಮದಿನ.

1914: ಜರ್ಮನಿಯು ಬೆಲ್ಜಿಯಂ ಮೇಲೆ ದಾಳಿ ಮಾಡಿತು ಮತ್ತು ಬ್ರಿಟನ್ ಜರ್ಮನಿಯ ವಿರುದ್ಧ ಸಮರ ಸಾರಿತು.

1906: ವಿದ್ವಾನ್ ಚಕ್ರವರ್ತಿ ಗೋಪಾಲಾಚಾರ್ಯ (4-8-1906ರಿಂದ 13-12-2005) ಅವರು ಚಾಮರಾಜ ನಗರ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹೆಡತಲೆ ಗ್ರಾಮದಲ್ಲಿ ಜನಿಸಿದರು. ತ್ರಿಭಾಷಾ ಪಂಡಿತರಾಗಿದ್ದ ಇವರು ಪ್ರಥಮ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾಗಿದ್ದರು.

1885: ಪತ್ರಿಕೋದ್ಯಮಿ, ಸಾಹಿತಿ ಹುರುಳಿ ಭೀಮರಾವ್ (4-8-1885ರಿಂದ 4-8-1990) ಅವರು ಶಾಮರಾಯ- ಭಿಷ್ಟಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಹುರುಳಿ ಗ್ರಾಮದಲ್ಲಿ ಜನಿಸಿದರು.

1875: ಕಟ್ಟು ಕಥೆಗಳ `ಮಾಸ್ಟರ್' ಹ್ಯಾನ್ಸ್ ಕ್ರಿಸ್ಟಿಯನ್ ಆಂಡರ್ಸನ್ (1805-1875) ಕೊಪೆನ್ ಹೇಗನ್ ನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ಮೃತರಾದರು. ಇವರು ರಚಿಸಿದ ಕಟ್ಟುಕಥೆಗಳು ಜಗತ್ತಿನಾದ್ಯಂತ ಜನಪ್ರಿಯವಾಗಿವೆ.

1845: ಭಾರತದ ರಾಜಕೀಯ ಧುರೀಣ ಸರ್ ಫಿರೋಜ್ ಶಾ ಮೆಹ್ತಾ (1845-1915) ಜನ್ಮದಿನ. ಇವರು ಇಂಗ್ಲಿಷ್ ಭಾಷಾ ಪತ್ರಿಕೆ `ಬಾಂಬೆ ಕ್ರಾನಿಕಲ್' ನ ಸ್ಥಾಪಕರು ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಗೆ ನೆರವಾದವರು.

No comments:

Post a Comment