ಇಂದಿನ ಇತಿಹಾಸ History Today ಆಗಸ್ಟ್ 17
2018: ನವದೆಹಲಿ: ಕವಿ ಹೃದಯದ ಮಾನವತಾವಾದಿ, ಮಹಾನ್ ಮುತ್ಸದ್ಧಿ, ಅಪ್ರತಿಮ ವಾಗ್ಮಿ, ಶ್ರೇಷ್ಠ ಸಂಸತ್ ಪಟು, ಭಾರತ ರತ್ನ, ಅಜಾತ ಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಕಲ ಸರ್ಕಾರಿ ಹಾಗೂ ಸೇನಾ ಗೌರವ, ಮಂತ್ರಪಠಣ ಮತ್ತು ಅಭಿಮಾನಿಗಳ ಭಾಷ್ಪಾಂಜಲಿ ಮಿಳಿತ ಭಾವಪೂರ್ಣ ’ಅಟಲ್ ಅಮರ್ ರಹೆ’ ಘೋಷಣೆಗಳ ಮಧ್ಯೆ ಯಮುನಾ ದಂಡೆಯ ಸ್ಮೃತಿಸ್ಥಳದಲ್ಲಿ ಈದಿನ
ಸಂಜೆ ಪಂಚಭೂತಗಳೊಂದಿಗೆ ಲೀನವಾದರು.ಹಿಂದಿನ
ದಿನ ಸಂಜೆ
ತಮ್ಮ ೯೩ರ ಹರೆಯದಲ್ಲಿ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ಯಮುನಾ ನದಿ ದಂಡೆಯಲ್ಲಿ ಜವಾಹರ ಲಾಲ್ ನೆಹರು (ಶಾಂತಿವನ), ಲಾಲ್ ಬಹಾದುರ್ ಶಾಸ್ತ್ರಿ (ವಿಜಯ್ ಘಾಟ್) ಅವರ ಸಮಾಧಿಗಳ ನಡುವೆ ಇರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗಣ್ಯರು ಮತ್ತು ಲಕ್ಷಾಂತರ ಮಂದಿ ಅಭಿಮಾನಿಗಳ ಸಮ್ಮುಖದಲ್ಲಿ ಹಿಂದೂ ವಿಧಿ ವಿಧಾನಗಳಿಗೆ ಅನುಗುಣವಾಗಿ ನೆರವೇರಿಸಲಾಯಿತು. ಭಾರತ ಮತ್ತು ವಿಶ್ವ ನಾಯಕರ ತಮ್ಮ ಅಂತಿಮ ಗೌರವ, ಸೇನಾ ಪಡೆಯಿಂದ ೨೧ ಗನ್ ಸೆಲ್ಯೂಟ್ ಗೌರವದ ಮಧ್ಯೆ, ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಕೌಲ್ ಭಟ್ಟಾಚಾರ್‍ಯ
ಅವರು ವಾಜಪೇಯಿ ಅವರ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅದಕ್ಕೆ ಮುನ್ನ ಮಾಜಿ ಪ್ರಧಾನಿಯ ಪಾರ್ಥಿವ ಶರೀರಕ್ಕೆ ಹೊದೆಸಲಾಗಿದ್ದ ತ್ರಿವರ್ಣ ಧ್ವಜವನ್ನು ತೆಗೆದು ವಾಜಪೇಯಿ ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ವಾಜಪೇಯಿ ಅವರ ಮೊಮ್ಮಗಳು ನೀಹಾರಿಕಾ ರಾಷ್ಟ್ರಧ್ವಜವನ್ನು ಸ್ವೀಕರಿಸಿದರು. ಈ ವೇಳೆಯಲ್ಲಿ ವಂದೇ ಮಾತರಂ ರಾಷ್ಟ್ರಗೀತೆಯನ್ನು ಹಾಡಲಾಯಿತು. ಲತಾ ಮಂಗೇಶ್ಕರ್ ಅವರು ಮಾಜಿ ಪ್ರಧಾನಿಗೆ ಗೀತನಮನ ಸಲ್ಲಿಸಿದರು. ಸಾರ್ಕ್ ರಾಷ್ಟ್ರಗಳನ್ನು ಪ್ರತಿನಿಧಿಸುವ ಸಲುವಾಗಿ ಆಗಮಿಸಿದ್ದ ಭೂತಾನ್ ದೊರೆ ಜಿಗ್ಮೆ ಖೇಸರ್ ನಂಗ್ಯಾಲ್ ವಾಂಗ್ಚುಕ್, ನೇಪಾಳದ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಳಿ, ಬಾಂಗ್ಲಾದೇಶದ ವಿದೇಶಾಂಗ ಸಚಿವ ಅಬುಲ್ ಹಸನ್ ಮುಹಮ್ಮದ್ ಅಲಿ, ಪಾಕಿಸ್ತಾನದ ಕಾನೂನು ಸಚಿವ ಅಲಿ ಜಾಫರ್, ಮತ್ತು ಶ್ರೀಲಂಕಾದ ಹಂಗಾಮೀ ವಿದೇಶಾಂಗ ಸಚಿವ ಲಕ್ಷ್ಮಣ್ ಕಿರೀಲ್ಲಾ ಅವರು ತಮ್ಮ ರಾಷ್ಟ್ರಗಳ ಜನತೆಯ ಪರವಾಗಿ ಅಗಲಿದೆ ನಾಯಕನಿಗೆ ಅಂತಿಮ ಗೌರವ ಸಲ್ಲಿಸಿದರು. ಅಂತಾರಾಷ್ಟ್ರೀಯ ನಾಯಕರ ಬಳಿಕ ಭಾರತೀಯ ನಾಯಕರಾದ ಎಲ್.ಕೆ. ಅಡ್ವಾಣಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮತ್ತಿತರರು ತಮ್ಮ ಅಂತಿಮ ಗೌರವ ಸಲ್ಲಿಸಿದರು. ಅದಕ್ಕೂ ಮುನ್ನ ಬಿಜೆಪಿ ಕೇಂದ್ರ ಕಚೇರಿಯಿಂದ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಅಂತಿಮ ಯಾತ್ರೆಯಲ್ಲಿ ಸಾಗಿ ಬಂದ ವಾಜಪೇಯಿ ಅವರ ಪಾರ್ಥಿವ ಶರೀರಕ್ಕೆ ಸೇನಾಪಡೆ ಮುಖ್ಯಸ್ಥ ಬಿಎಸ್ ಧನೋವ, ನೌಕಾಪಡೆ ಮುಖ್ಯಸ್ಥ ಸುನಿಲ್ ಲಂಬಾ ಮತ್ತು ವಾಯುಪಡೆ ಮುಖ್ಯಸ್ಥ
ಬಿಪಿನ್ ರಾವತ್ ಮತ್ತು
ಮೂರೂ ಪಡೆಗಳ ಸಿಬ್ಬಂದಿ ಪರಂಪರಾಗತ ಗೌರವ ವಂದನೆ ಸಲ್ಲಿಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತಿತರರು ಅಂತಿಮ ಗೌರವ ಸಲ್ಲಿಸಿದರು. ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಇತರ ಕೇಂದ್ರ ಸಚಿವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ವಿರೋಧ ಪಕ್ಷದ ನಾಯಕರು ವಾಜಪೇಯಿ ಅವರಿಗೆ ತಮ್ಮ ಅಂತಿಮ ಗೌರವ ಸಲ್ಲಿಸಿದರು.ಅಂತಿಮಯಾತ್ರೆ: ಇದಕ್ಕೂ ಮುನ್ನ ಸಂಜೆ
ಮುನ್ನ ಬಿಜೆಪಿ ಕೇಂದ್ರ ಕಚೇರಿಯಿಂದ ೭ ಕಿ.ಮೀ. ದೂರದಲ್ಲಿರುವ ಸ್ಮೃತಿ ಸ್ಥಳಕ್ಕೆ ಪುಷ್ಪಾಲಂಕೃತ ಸೇನಾ ವಾಹನದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಅಟಲ್ ಅವರ ಆರು ದಶಕದ ಸ್ನೇಹಿತ ಸಹೋದ್ಯೋಗಿ ಎಲ್.ಕೆ. ಅಡ್ವಾಣಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ಲಕ್ಷಾಂತರ ಮಂದಿ ಅಭಿಮಾನಿಗಳೊಂದಿಗೆ ಅಂತಿಮ ಯಾತ್ರೆಯಲ್ಲಿ ದಿವಂಗತ ನಾಯಕನ ಪಾರ್ಥಿವ ಶರೀರದ ಜೊತೆಗೆ ಹೆಜ್ಜೆ ಹಾಕಿದರು. ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳು ’ಜಬ್ ತಕ್ ಸೂರಜ್ ಚಾಂದ್ ರಹೇಗಾ, ಅಟಲ್ ಜಿ ಕಾ ನಾಮ್ ರಹೇಗಾ’ ಘೋಷಣೆಯ ಜೊತೆಗೆ ’ಭಾರತ್ ಮಾತಾ ಕೀ ಜಯ್’ ಮತ್ತು ’ವಂದೇ ಮಾತರಂ’ ದೇಶಭಕ್ತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಬಿಜೆಪಿ ಕೇಂದ್ರ ಕಚೇರಿಯಿಂದ ಹೊರಟ ಅಂತಿಮ ಯಾತ್ರೆಯು ಬಹಾದುರ್ ಶಾ ಜಾಫರ್ ಮಾರ್ಗ, ದೆಹಲಿ ಗೇಟ್, ನೇತಾಜಿ ಸುಭಾಶ್ ಮಾರ್ಗ್, ನಿಶದರಾಜ್ ಮಾರ್ಗ ಮತ್ತು ಶಾಂತಿ ವನದ ಮೂಲಕವಾಗಿ ಸ್ಮೃತಿ ಸ್ಥಳವನ್ನು ತಲುಪಿತು.ಬಿಜೆಪಿ ಕೇಂದ್ರ ಕಚೇರಿಯಲ್ಲಿ: ಇದಕ್ಕೆ ಮುನ್ನ ೯೩ರ ಹರೆಯದ ಮಾಜಿ ಪ್ರಧಾನಿಯ ಪಾರ್ಥಿವ ಶರೀರವನ್ನು ಅಂತಿಮ ದರ್ಶನ ಪಡೆಯಲು ಕಾದಿದ್ದ ಸಹಸ್ರಾರು ಮಂದಿಗೆ ಅಂತಿಮ ಶ್ರದ್ಧಾಂಜಲಿ ಸಲ್ಲಿಸಲು ಅನುಕೂಲವಾಗುವಂತೆ ಬಿಜೆಪಿ ಕೇಂದ್ರ ಕಚೇರಿಗೆ ತರಲಾಗಿತ್ತು.ಪಂಡಿತ ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎಲ್. ಕೆ. ಅಡ್ವಾಣಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್, ರಮಣ್ ಸಿಂಗ್ ಮತ್ತು ದೇವೇಂದ್ರ ಫಡ್ನವಿಸ್ ಇತರರ ಜೊತೆಗೆ ತಮ್ಮ ಭಾಷ್ಪಾಂಜಲಿ ಸಲ್ಲಿಸಲು ಕಾದಿದ್ದರು. ತ್ರಿವರ್ಣ ಧ್ವಜವನ್ನು ಹೊದಿಸಲಾಗಿದ್ದ
ಅಟಲ್ ಪಾರ್ಥಿವ
ಶರೀರವನ್ನು ಕೃಷ್ಣ ಮೆನನ್ ಮಾರ್ಗದ ನಂ.೬ರ ಅವಧಿ ಅಧಿಕೃತ ನಿವಾಸದಿಂದ ’ಅಟಲ್ ಬಿಹಾರಿ ಅಮರ್ ರಹೆ’ ಮತ್ತು ’ವಂದೇ ಮಾತರಂ’ ಘೋಷಣೆಗಳ ಮಧ್ಯೆ ಬಿಜೆಪಿ ಕೇಂದ್ರ ಕಚೇರಿಗೆ ತರಲಾಯಿತು.ಅಗಲಿದ ರಾಷ್ಟ್ರನಾಯಕರ ಅಂತ್ಯಕ್ರಿಯೆ ನಡೆಸಲು ಮತ್ತು ಅವರಿಗೆ ಸ್ಮಾರಕ ರಚಿಸುವ ಸಲುವಾಗಿ ಕೇಂದ್ರ ದೆಹಲಿಯಲ್ಲಿನ ಯಮುನಾ
ದಂಡೆಯಲ್ಲಿ ’ರಾಷ್ಟ್ರೀಯ
ಸ್ಮೃತಿ ಸ್ಥಳ’ವನ್ನು ನಿರ್ಮಿಸುವ ಪ್ರಸ್ತಾಪಕ್ಕೆ ೨೦೧೩ರ ಮೇ ತಿಂಗಳಲ್ಲಿ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿತ್ತು. ಮಾಜಿ ರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ಇತರ ಗಣ್ಯರಿಗೆ ಕೇಂದ್ರ ಸಂಪುಟದ ಅನುಮತಿಯೊಂದಿಗೆ ಮಾತ್ರವೇ ಯಮುನಾ ನದಿ ದಂಡೆಯ ಈ ಸ್ಥಳಗಳಲ್ಲಿ ಸಮಾಧಿ ನಿರ್ಮಿಸಲು ಅವಕಾಶವಿದೆ. ಬಿಗಿ ಭದ್ರತೆ: ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ನಡೆದ ಬೃಹತ್ ಅಂತಿಮ ಯಾತ್ರೆಗೆ ಭದ್ರತೆ ಒದಗಿಸಲು ೫೦೦೦ಕ್ಕೂ ಹೆಚ್ಚು ಪೊಲೀಸರು ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿತ್ತು. ದೆಹಲಿಯ ೧೮೦ ಪೊಲೀಸ್ ಠಾಣೆಗಳು ಭದ್ರತಾ ವ್ಯವಸ್ಥೆಯ ರೂಪುರೇಷೆ ರಚಿಸಿದ್ದವು. ಎರಡು ಡಜನ್ ಗಳಿಗೂ ಹೆಚ್ಚಿನ ಭಯೋತ್ಪಾದನೆ ನಿಗ್ರಹ ಪರಾಕ್ರಮ ವಾಹನಗಳನ್ನೂ ಕಮಾಂಡೋಗಳ ಜೊತೆಗೆ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಶ್ವಾನದಳ, ಬಾಂಬ್ ಪತ್ತೆ ಮತ್ತು ಬಾಂಬ್ ನಿಷ್ಕ್ರಿಯದಳ ಮತ್ತು ವಿಶೇಷ ರಕ್ಷಣಾ ತಂಡ (ಎಸ್ ಪಿಜಿ) ಕೂಡಾ ಗುರುವಾರ ಸಂಜೆಯಿಂದಲೇ ನಾಗರಿಕರಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಕಾರ್ಯಮಗ್ನವಾಗಿದ್ದವು. ದೆಹಲಿಯ ಎಲ್ಲ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳು ದಿವಂಗತ ನಾಯಕನ ಗೌರವಾರ್ಥ ಹರತಾಳ ಅಚರಿಸಿದವು.ಸಂಪುಟ ಸಂತಾಪ ನಿರ್ಣಯ: ಅದಕ್ಕೂ ಮುನ್ನ ಈದಿನ ಬೆಳಗ್ಗೆ ಕೇಂದ್ರ ಸಚಿವ ಸಂಪುಟವು ಸಭೆ ಸೇರಿ ವಾಜಪೇಯಿ ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ, ನಿರ್ಣಯವನ್ನು ಅಂಗೀಕರಿಸಿತು. ಒಂದು ನಿಮಿಷದ ಮೌನವನ್ನೂ ಆಚರಿಸಲಾಯಿತು.
ಈದಿನ ಎಲ್ಲ
ಕೇಂದ್ರ ಸರ್ಕಾರಿ ಕಚೇರಿಗಳೂ ಮುಚ್ಚಿದ್ದು, ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ದೇಶಾದ್ಯಂತ ಎಲ್ಲ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುವುದು.ಅಪರೂಪದ ಸಂಕೇತವಾಗಿ ನವದೆಹಲಿಯಲ್ಲಿನ ಬ್ರಿಟಿಷ್ ಹೈ ಕಮೀಷನ್ ಕಚೇರಿಯು ದಿವಂಗತ ಮಆಜಿ ಪ್ರಧಾನಿ ವಾಜಪೇಯಿ ಅವರಿಗೆ ಗೌರವ ಸಲ್ಲಿಸಿ ಯೂನಿಯನ್ ಫ್ಲಾಗ್ನ್ನು
ಅರ್ಧ ಮಟ್ಟಕ್ಕೆ ಹಾರಿಸಿತು.೨೦೧೮ರ ಏಷಿಯನ್ ಕ್ರೀಡಾಕೂಟದಲ್ಲಿ ತಾವು ಗೆದ್ದ ಎಲ್ಲ ಪದಕಗಳನ್ನೂ ಭಾರತೀಯ ಅಥ್ಲೆಟಿಕ್ಸ್ಗಳು
ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ಸಮರ್ಪಿಸುವರು ಎಂದು ಚೆಫ್ ಡೆ ಮಿಷನ್ (ಸಿಡಿಎಂ) ಬ್ರಿಜ್ ಭೂಷಣ್ ಶರಣ್ ಸಿಂಗ್ ಪ್ರಕಟಿಸಿದರು.
2018: ನವದೆಹಲಿ: ೧೯೮೪ರಲ್ಲಿ, ದೇಶದಲ್ಲಿ ಸಿಖ್ ವಿರೋಧಿ ದಂಗೆಗಳು ನಡೆದ ಕಾಲದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಕ್ತದಾಹಿ ಉದ್ರಿಕ್ತ ಗುಂಪು ಮತ್ತು ಅಸಹಾಯಕ ಸಿಕ್ಖರ ಮಧ್ಯೆ ನಿಂತು ಬಡಪಾಯಿ ಸಿಕ್ಖರನ್ನು ಕೊಲ್ಲದಂತೆ ಉದ್ರಿಕ್ತ ವ್ಯಕ್ತಿಗಳ ಗುಂಪನ್ನು ತಡೆದಿದ್ದರು.ಎಲ್ಲೂ ಪ್ರಚಾರಕ್ಕೆ ಬಾರದ ಇದ್ದ ಈ ಘಟನೆಯನ್ನು ಆರೆಸ್ಸೆಸ್ಸಿನ ಹಿರಿಯ ನಾಯಕ ಕೆ.ಎನ್. ಗೋವಿಂದಾಚಾರ್ಯ ಅವರು ಬಹಿರಂಗ ಪಡಿಸಿದರು. ‘ನಾನು ವಾಜಪೇಯಿ ಅವರ ಬದಿಯಲ್ಲಿದ್ದುಕೊಂಡೇ ಈ ದೃಶ್ಯವನ್ನು ಕಂಡಿದ್ದೆ. ಅವರ ಮನೆ ರೈಸೀನಾ ರಸ್ತೆಯಲ್ಲಿತ್ತು. ಅವರ ಮನೆಯ ಮುಂಭಾಗದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್ ಇತ್ತು. ಅಲ್ಲಿಂದ ಕೆಲವೇ ಹೆಜ್ಜೆಗಳಷ್ಟು ದೂರದಲ್ಲಿ ಯುವ ಕಾಂಗ್ರೆಸ್ ಕಚೇರಿ ಇತ್ತು. ಅಲ್ಲೇ ರಾಜೀವ್ ಭವನವಿದೆ. ಆ ದಿನ ದಿಢೀರನೆ ಯುವ ಕಾಂಗ್ರೆಸ್ ಕಚೇರಿಯ ಒಳಗಿನಿಂದ ಸಿಟ್ಟಿನಿಂದ ಕುದಿಯುತ್ತಿದ್ದ ಗುಂಪೊಂದು ಹೊರಕ್ಕೆ ಧಾವಿಸಿತು’ ಎಂದು ಗೋವಿಂದಾಚಾರ್‍ಯ
ಆದಿನ ಘಟಿಸಿದ ಘಟನೆಯನ್ನು ನೆನಪಿಸಿಕೊಂಡರು. ‘ಅಟಲ್ ಜಿ ಅವರು ಸಿಖ್ ಟ್ಯಾಕ್ಸಿ ಚಾಲಕರ ಕಡೆಗೆ ನುಗ್ಗ ಹೊರಟ ರಕ್ತದಾಹಿ ಗುಂಪನ್ನು ನೋಡಿದರು. ಕ್ಷಣಮಾತ್ರದಲ್ಲೇ ಮುಂದಕ್ಕೆ ನುಗ್ಗಿದ ಅವರು ಗುಂಪು ಮತ್ತು ಸಿಖ್ ಟ್ಯಾಕ್ಸಿ ಚಾಲಕರ ಮಧ್ಯೆ ಹೋಗಿ ನಿಂತುಕೊಂಡರು. ಪೊಲೀಸರು ಬರುವವರೆಗೂ ವಾಜಪೇಯಿ ಅವರು ಅಲ್ಲೇ ನಿಂತುಕೊಂಡು ಗುಂಪನ್ನು ತಡೆದು ನಿಲ್ಲಿಸಿದ್ದರು. ರಾಜಕೀಯವಾಗಿ ಗಮನಿಸಿದರೆ ಅವರ ಕ್ರಮ ಸರಿಯಾದುದಾಗಿರಲಿಲ್ಲ ಎಂದು ನೀವು ಒಂದು ಕ್ಷಣ ಯೋಚಿಸಬಹುದು. ಆದರೆ ಅವರು ಅದನ್ನು ಕೇವಲ ಮಾನವೀಯತೆ ಸಲುವಾಗಿ ಮಾಡಿದ್ದರು’ ಎಂದು ಗೋವಿಂದಾಚಾರ್ಯ ಹೇಳಿದರು. ೧೯೮೪ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಕೊಲೆಗೈದ ಹಿನ್ನೆಲೆಯಲ್ಲಿ ಸಿಖ್ ವಿರೋಧಿ ದಂಗೆಗಳು ಸಂಭವಿಸಿದ್ದವು. ದೇಶಾದ್ಯಂತ ಸಂಘಟಿತ ಸಿಖ್ ವಿರೋಧಿ ಕಾರ್ಯಕ್ರಮಗಳು
ನಡೆದಿದ್ದವು. ದೆಹಲಿ ಒಂದೇ ಕಡೆ ಸಿಕ್ಖರನ್ನೇ ಗುರಿಯಾಗಿಸಿಕೊಂಡು ನಡೆದಿದ್ದ ದಂಗೆಗಳಲ್ಲಿ ೩೦೦೦ ಮಂದಿ ಹತರಾಗಿದ್ದರು. ’೧೯೮೪ರ
ದಂಗೆ ಕಾಲದ ಆ ಸಮಯದಲ್ಲಿ ಅಟಲ್ ಅವರು ಕೈಗೊಂಡ ಕ್ರಮವು ಅವರು ಹೇಗೆ ತಮ್ಮ ಶಕ್ತಿಯನ್ನು ಪ್ರದರ್ಶಿಸಬಲ್ಲರು ಎಂಬುದನ್ನು ನಮಗೆ ತೋರಿಸಿಕೊಟ್ಟಿತ್ತು’ ಎಂದು ಗೋವಿಂದಾಚಾರ್ಯ ನುಡಿದರು. ‘ಇದು ಅಟಲ್ ಜಿ ಅವರ ಬಗ್ಗೆ ಎಲ್ಲರಿಗೂ ಗೊತ್ತಿದ್ದಂತಹ ಘಟನೆಯಲ್ಲ. ಏಕೆಂದರೆ ಅಟಲ್ ಜಿ ಎಂದೂ ತಮ್ಮ ಒಳ್ಳೆಯ ಕೆಲಸಗಳನ್ನು ಟಾಂ ಟಾಂ ಮಾಡುತ್ತಿರಲಿಲ್ಲ’ ಎಂದೂ ಸಂಘದ ನಾಯಕ ಹೇಳಿದರು.೨೦೧೮ರ ಆಗಸ್ಟ್ ೧೬ರಂದು ರಾಷ್ಟ್ರವು ತನ್ನ ಮುತ್ಸದ್ಧಿಯನ್ನು ಕಳೆದುಕೊಂಡಿದೆ. ಅವರ ಅಂತ್ಯಕ್ರಿಯೆ ಯಮುನಾ ನದಿಯ ದಂಡೆ ಮೇಲಿರುವ ರಾಜಘಾಟ್ ಸಮೀಪದ ಸ್ಮೃತಿ ಸ್ಥಳದಲ್ಲಿ ನಡೆಯಿತು.
2018: ತಿರುವನಂತಪುರಂ: ಕೇರಳದ ಜಡಿಮಳೆ, ಪ್ರವಾಹ, ಭೂಕುಸಿತದ ಘಟನೆಗಳಲ್ಲಿ ಹಿಂದಿನದಿನ ಒಂದೇ ದಿನ 91 ಮಂದಿ ಮೃತರಾಗಿರುವ ಬಗ್ಗೆ ವರದಿಗಳು ಬಂದಿದ್ದು, ಈ ವರ್ಷದ ಮುಂಗಾರು ಮಹಾಪೂರಕ್ಕೆ ಬಲಿಯಾದವರ ಸಂಖ್ಯೆ 324ಕ್ಕೆ ಏರಿತು. ಮುಂಗಾರಿನ ಈ ವರ್ಷದ ಮಳೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ’ಮಹಾಪೂರ’ ಎಂದು ಬಣ್ಣಿಸಿದರು.
ಎರಡು ಜಿಲ್ಲೆಗಳಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿದ್ದ ವೇಳೆಯಲ್ಲಿ
17 ಆಗಸ್ಟ್ 2018ರ ಶುಕ್ರವಾರ ಒಂದೇ ದಿನ 80,000 ಮಂದಿಯನ್ನು ಅಪಾಯದಿಂದ ರಕ್ಷಿಸಲಾಯಿತು ಎಂದು ವಿಜಯನ್ ಅವರು ರಾತ್ರಿ ತಿಳಿಸಿದರು.ಪ್ರಧಾನಿ ನರೇಂದ್ರ ಮೋದಿ ಅವರು ರಾತ್ರಿ ವೇಳೆಗೆ ತಿರುವನಂತಪುರಂ ತಲುಪಿದ್ದು, 18 ಆಗಸ್ಟ್ 2018ರ ಶನಿವಾರ ಪ್ರವಾಹ ಪರಿಸ್ಥಿತಿ ಬಗ್ಗೆ ವೈಮಾನಿಕ ಸಮೀಕ್ಷೆ ನಡೆಸುವರು
ಎಂದು ವರದಿಗಳು ಹೇಳಿದವು.ಸಹಸ್ರಾರು
ಮಂದಿ ನಿರ್ವಸಿತರಾಗಿದ್ದು, ಭಾರಿ ಪ್ರಮಾಣದಲ್ಲಿ ಬೆಳೆನಷ್ಟ ಸಂಭವಿಸಿದೆ. ವಿಮಾನಯಾನ, ರೈಲು ಮತ್ತು ರಸ್ತೆ ಸಂಚಾರ ಒಂದು ವಾರದಿಂದ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತ್ರಿಶ್ಯೂರಿನಲ್ಲಿ ನಾಲ್ವರು ಸಾವನ್ನಪ್ಪಿದ್ದು, ಮೂವರ ಶವಗಳು ಪಟ್ಟಣಂತಿಟ್ಟದಲ್ಲಿ ಪತ್ತೆಯಾಗಿದೆ. ಅವರನ್ನು ಇನ್ನೂ ಗುರುತು ಹಿಡಿಯಲಾಗಿಲ್ಲ. ಉತ್ತರ ಪರವೂರಿನಲ್ಲ ಸಭಾಂಗಣವೊಂದು ಕುಸಿದ ಬಳಿಕ ೭ ಮಂದಿ ಕಣ್ಮರೆಯಾಗಿದ್ದಾರೆ ಇತರ ಹಲವರು ಕುಸಿದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು
ವರದಿ ತಿಳಿಸಿತು. ಪ್ರಧಾನಿ
ನರೆಂದ್ರ ಮೋದಿ ಅವರು ತಾವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತ್ಯಕ್ರಿಯೆಯ ಬಳಿಕ ಈದಿನವೇ ಸಂಜೆ ಕೇರಳಕ್ಕೆ ಪ್ರವಾಹದ ವೈಮಾನಿಕ ಸಮೀಕ್ಷೆ ಸಲುವಾಗಿ ಭೇಟಿ ನೀಡುವುದಾಗಿ ಬೆಳಗ್ಗೆಯೇ ಟ್ವೀಟ್ ಮಾಡಿದ್ದರು.
ಕೇರಳದ ೧೪
ಜಿಲ್ಲೆಗಳ ಪೈಕಿ ತಿರುವನಂತಪುರಂ ಮತ್ತು ಕಾಸರಗೋಡು ಜಿಲ್ಲೆಗಳ ಕಟ್ಟೆಚ್ಚರ (ರೆಡ್ ಅಲರ್ಟ್) ಹಿಂತೆಗೆದುಕೊಳ್ಳಲಾಯಿತು. ಜಡಿಮಳೆ, ಭೂಕುಸಿತ ಮತ್ತು ಪ್ರವಾಹಗಳ ಪರಿಣಾಮವಾಗಿ ರಾಜ್ಯದ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ, ಬಹುತೇಕ ಭಾಗ ಜಲಾವೃತಗೊಂಡಿದೆ ಎಂದು ಹೇಳಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪರಿಸ್ಥಿತಿ ಸುಧಾರಿಸುವ ಆಶಾಭಾವನೆ ಹೊಂದಿರುವುದಾಗಿ ನುಡಿದರು.ರಾಜ್ಯಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ೧೫೬೮ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ,
ಆದರೆ ಇನ್ನೂ ಹಲವರು ಪ್ರವಾಹ, ಭೂಕುಸಿತ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ನುಡಿದರು.ಜಲಾವೃತಗೊಂಡಿರುವ ಸ್ಥಳಗಳಲ್ಲಿ ಇರುವ ಎಲ್ಲರನ್ನೂ ಈದಿನ ಸಂಜೆಯವೇಳೆಗೆ ರಕ್ಷಿಸಲಾಗುವುದು. ಇದನ್ನು ಸಾಧಿಸುವ ವಿಶ್ವಾಸ ನನಗಿದೆ. ಕೇಂದ್ರವು ಚೆನ್ನಾಗಿ ಸ್ಪಂದಿಸುತ್ತಿದೆ ಎಂದು ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
೧೬ ಸೇನಾಪಡೆ ತಂಡಗಳು, ೨೮ ನೌಕಾಪಡೆ ತಂಡಗಳು, ೩೯ ಎನ್ ಡಿಆರ್ ಎಫ್ (ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ) ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ
ಮಗ್ನವಾಗಿವೆ. ಎನ್ ಡಿ ಆರ್ ಎಫ್ ಈವರೆಗೆ ೪೦೦೦ ಮಂದಿಯನ್ನು ರಕ್ಷಿಸಿದೆ ಎಂದು ಅವರು ನುಡಿದರು.ಮುಲ್ಲಪೆರಿಯಾರ್ ಭದ್ರ: ಶತಮಾನದಷ್ಟು ಹಳೆಯದಾದ ಮುಲ್ಲಪೆರಿಯಾರ್ ಅಣೆಕಟ್ಟು ಬಿರುಕು ಬಿಟ್ಟಿದೆ ಎಂಬ ವದಂತಿಗಳಿಂದ ಉಂಟಾಗಿರುವ ಭೀತಿಯನ್ನು ನಿವಾರಿಸಲು ಯತ್ನಿಸಿದ ಮುಖ್ಯಮಂತ್ರಿ ಈ ರೀತಿ ವದಂತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ’ಅಣೆಕಟ್ಟಿಗೆ ಯಾವುದೇ ಅಪಾಯವೂ ಇಲ್ಲ’ ಎಂದು ಅವರು ಸ್ಪಷ್ಟ ಪಡಿಸಿದರು.ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆಯ ತಂಡಗಳು ಈದಿನ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು ಜಲಾವೃತ ಪ್ರದೇಶಗಳಲ್ಲಿ ಸಿಕ್ಕಿ ಹಾಕಿಕೊಂಡವರಿಗೆ ಆಹಾರದ ಪ್ಯಾಕೆಟ್ ವಿತರಣೆ ಆರಂಭಿಸಿದವು. ಹೆಚ್ಚಿನ ಸಂಖ್ಯೆಯಲ್ಲಿ ದೋಣಿಗಳು ಮತ್ತು ಹೆಲಿಕಾಪ್ಟರುಗಳನ್ನು ಸೇವೆಗೆ ನಿಯೋಜಿಸಲಾಯಿತು. ಭಾರತೀಯ ಕರಾವಳಿ ಕಾವಲು ಪಡೆ ಕೂಡಾ ರಾಜ್ಯದ ೨೮ ಕಡೆಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಯಿತು.
ಖ್ಯಾತ ಮುನ್ನಾರ್
ಬೆಟ್ಟಧಾಮದಲ್ಲಿ ಹಿಂದಿನ
ರಾತ್ರಿ ೧೨೭
ಮಿಮೀ ಮಳೆ ಸುರಿದು
ಇಡೀ ಪ್ರದೇಶ ಸಂಪರ್ಕ ಕಳೆದುಕೊಂಡಿತು.
ಸಂಪರ್ಕ ಜಾಲದ
ಮರುಸ್ಥಾಪನೆಗೆ ಕೂಡಾ ಸೇನೆಯ ನೆರವು ಕೋರಲಾಯಿತು.
ಚೆರುಥೋಣಿ, ಚಲಕುಡಿ
ಮತ್ತು ಪಂಡಲಂ ನಂತಹ ಅನೇಕ ಪಟ್ಟಣಗಳು ನೀರಿನಡಿ ಮುಳುಗಿದ್ದು, ಇನ್ನೂ ಹಲವರು ಅಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿದವು.
ಇಡುಕ್ಕಿ ಮತ್ತು
ವೇನಾಡ್ ಜಿಲ್ಲೆಯಲ್ಲಿ ಮಳೆ ಸ್ವಲ್ಪ ಕಡಿಮೆಯಾಯಿತು. ಆದರೆ ಪೆರಿಯಾರ್ ನದಿಯಲ್ಲಿ ನೀರಿನ ಮಟ್ಟ ಇನ್ನೂ ಏರುತ್ತಲೇ ಇತ್ತು. ಪೆರಿಯಾರ್ ನದಿ ಮತ್ತು ಅದರ ಉಪನದಿಗಳ ನೀರಿನಿಂದ ಎರ್ನಾಕುಲಂ ಮತ್ತು ತ್ರಿಶೂರ್ ಮುಳುಗಿವೆ. ಪರವೂರು, ಕಾಲಡಿ, ಚಲಕುಡಿ, ಪೆರುಂಬವೂರು ಮತ್ತು ಮುವತುಪುಳ ಸೇರಿದಂತೆ ಹಲವು ಪಟ್ಟಣಗಳು ಅತ್ಯಂತ ಹೆಚ್ಚು ಹಾನಿಗೆ ಈಡಾದವು.
ಇಡುಕ್ಕಿ ಮತ್ತು
ವೇನಾಡು ಪ್ರದೇಶ ಹಾಗೂ ಪಟ್ಟಣಂತಿಟ್ಟದ ಕೆಲವು ಪ್ರದೇಶದಲ್ಲಿ ನೀರಿನ ಪ್ರಮಾಣ ಸ್ವಲ್ಪ ತಗ್ಗಿತು.
ಮುಖ್ಯ ವಾಣಿಜ್ಯ
ನಗರವಾಗಿರುವ ಕೋಚಿಯ ವಿಮಾನ ನಿಲ್ದಾಣ ಪ್ರವಾಹಕ್ಕೆ ತತ್ತರಿಸಿದ್ದು ವಿಮಾನಯಾನ ಕಾರ್ಯಾಚರಣೆಯನ್ನು ಆಗಸ್ಟ್ ೨೬ರವರೆಗೆ ಅಮಾನತುಗೊಳಿಸಲಾಯಿತು.
ರಸ್ತೆ ಸಂಪರ್ಕ
ಕಡಿತದ ಪರಿಣಾಮವಾಗಿ ಹಲವಾರು ಪ್ರದೇಶಗಳಲ್ಲಿ ಇಂಧನ ಸಮಸ್ಯೆ ತಲೆದೋರಿತು. ಹಲವಾರು ಆಸ್ಪತ್ರೆಗಳಲ್ಲಿ ಆಮ್ಲಜನಕದ ಸಿಲಿಂಡರುಗಳ ಕೊರತೆಯುಂಟಾಯಿತು. ಔಷಧದ ಅಭಾವವೂ ಕೇರಳದ ಹೆಚ್ಚುತ್ತಿರುವ ಸಮಸ್ಯೆಗಳಿಗೆ ತನ್ನ ಕಾಣಿಕೆಯನ್ನು ಸಲ್ಲಿಸಿತು.
2018: ನವದೆಹಲಿ: ಕೇರಳವೂ ಸೇರಿದಂತೆ ೭ ರಾಜ್ಯಗಳಲ್ಲಿ ಈ ವರ್ಷದ ಮುಂಗಾರು ಮಳೆ, ಪ್ರವಾಹ ಮತ್ತು ಭೂಕುಸಿತಗಳಿಗೆ ಒಟ್ಟು ೮೬೮ ಮಂದಿ ಬಲಿಯಾಗಿದ್ದಾರೆ. ಈ ಪೈಕಿ ೨೪೭ ಮಂದಿ ಕೇರಳ ಒಂದೇ ರಾಜ್ಯದಲ್ಲಿ ಅಸು ನೀಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತು.
ಕೇಂದ್ರ ಗೃಹ
ಸಚಿವಾಲಯದ ರಾಷ್ಟ್ರೀಯ ತುರ್ತು ಸ್ಪಂದನಾ ಕೇಂದ್ರ (ಎನ್ ಇ ಆರ್ ಸಿ) ಮಾಹಿತಿಯ ಪ್ರಕಾರ ಕೇರಳದಲ್ಲಿ ಈ ವರ್ಷ ಮುಂಗಾರು ಹಾವಳಿಗೆ ೨೪೭ ಮಂದಿ ಅಸು ನೀಗಿದ್ದು, ೧೪ ಜಿಲ್ಲೆಗಳಲ್ಲಿ ೨.೧೧ ಲಕ್ಷ ಮಂದಿ ಅತೀವವಾಗಿ ತೊಂದರೆಗೆ ಒಳಗಾಗಿದ್ದಾರೆ ಮತ್ತು ೩೨,೫೦೦ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಹಾನಿಗೊಂಡಿವೆ.ಉತ್ತರ ಪ್ರದೇಶದಲ್ಲಿ ಈ ವರ್ಷದ ಮುಂಗಾರು ಆರ್ಭಟಕ್ಕೆ ೧೯೧ ಜನ ಅಸು ನೀಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ೧೮೩ ಮಂದಿ ಮೃತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ೧೩೯, ಗುಜರಾತಿನಲ್ಲಿ ೫೨, ಅಸ್ಸಾಮಿನಲ್ಲಿ ೪೫ ಮತ್ತು ನಾಗಾಲ್ಯಾಂಡಿನಲ್ಲಿ ೧೧ ಮಂದಿ ಸಾವನ್ನಪ್ಪಿದ್ದಾರೆ.ಒಟ್ಟು ೩೩ ಮಂದಿ ಕಣ್ಮರೆಯಾಗಿದ್ದು ಅವರ ಪೈಕಿ ೨೮ ಮಂದಿ ಕೇರಳದವರು, ಐವರು ಪಶ್ಚಿಮ ಬಂಗಾಳದವರು. ಈ ರಾಜ್ಯಗಳಲ್ಲಿ ಮಳೆ ಸಂಬಂಧಿತ ಅಪಘಾತಗಳಲ್ಲಿ ೨೭೪ ಮಂದಿ ಗಾಯಗೊಂಡಿದ್ದಾರೆ. ಮಹಾಪೂರ ಮತ್ತು ಮಳೆ ಮಹಾರಾಷ್ಟ್ರದಲ್ಲಿ ೨೬ ಜಿಲ್ಲೆಗಳು, ಅಸ್ಸಾಮಿನ ೨೩ ಜಿಲ್ಲೆಗಳು, ಪಶ್ಚಿಮ ಬಂಗಾಳದ ೨೩ ಜಿಲ್ಲೆಗಳು, ಕೇರಳದ ೧೪ ಜಿಲ್ಲೆಗಳು, ಉತ್ತರ ಪ್ರದೇಶದ ೧೩ ಜಿಲ್ಲೆಗಳು, ನಾಗಾಲ್ಯಾಂಡಿನ ೧೧ ಮತ್ತು ಗುಜರಾತಿನ ೧೦ ಜಿಲ್ಲೆಗಳನ್ನು ಬಾಧಿಸಿದೆ
ಎಂದು ವರದಿ ಹೇಳಿತು.
2018: ನವದೆಹಲಿ: ವಿರೋಧಿ ಏಕತೆಯು ಕೇವಲ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ವಿರೋಧಿಸುವುದಕ್ಕಾಗಿ ಮಾತ್ರವೇ ಅಲ್ಲ, ಬದಲಿಗೆ ಭಾರತದ ಸಲುವಾಗಿ ಸಾಮಾನ್ಯ ದರ್ಶನ ಅಥವಾ ದೃಷ್ಟಿಕೋನಕ್ಕಾಗಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿ ಹೇಳಿದರು.ಜನತಾದಳ - ಸಂಯುಕ್ತ (ಜೆಡಿ-ಯು) ಬಂಡಾಯ ನಾಯಕ ಶರದ್ ಯಾದವ್ ಅವರು ಸಂಘಟಿಸಿದ್ದ ’ಸಮ್ಮಿಶ್ರ ಸಂಸ್ಕೃತಿ ರಕ್ಷಿಸಿ’ ವಿಚಾರ ಸಂಕಿರಣದಲ್ಲಿ ಇತರ ರಾಜಕೀಯ ಪಕ್ಷಗಳ ಜೊತೆ ವೇದಿಕೆ ಹಂಚಿಕೊಂಡು ಅವರು ಮಾತನಾಡುತ್ತಿದ್ದರು. ಮಾರ್ಕ್ಸ್ವಾದಿ
ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ಪ್ರಧಾನ ಕಾರ್ಯದರ್ಶಿ
ಸೀತಾರಾಂ ಯೆಚೂರಿ, ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ಪ್ರಧಾನ ಕಾರ್ಯದರ್ಶಿ
ಸುಧಾಕರ ರೆಡ್ಡಿ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ ಸಿಪಿ) ಪ್ರಧಾನ ಕಾರ್ಯದರ್ಶಿ
ತಾರಿಖ್ ಅನ್ವರ್, ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ) ನಾಯಕ ಜಯಂತ್ ಚೌಧರಿ, ಸಮಾಜವಾದಿ ಪಕ್ಷದ (ಎಸ್ಪಿ) ಧರ್ಮೇಂದ್ರ ಯಾದವ್, ಆರ್ ಜೆಡಿಯ ಜೈ ಪ್ರಕಾಶ್ ಯಾದವ್, ಡಿಎಂಕೆಯ ತಿರುಚಿ ಸಿವ ಮತ್ತು ಜನತಾದಳ -ಜಾತ್ಯತೀತ (ಜೆಡಿ-ಎಸ್) ಧರ್ಮೇಂದ್ರ ಯಾದವ್ ಅವರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿರೋಧ ಪಕ್ಷಗಳಿಗೆ ಬಿಜೆಪಿ ಸರ್ಕಾರವನ್ನು ಉರುಳಿಸುವುದು ಬಿಟ್ಟು ಬೇರೆ ಯಾವುದೇ ಸಾಮಾನ್ಯ ಸಿದ್ಧಾಂತ ಇಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಆಪಾದಿಸಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಂದ ಈ ಮಾತುಗಳು ಬಂದವು.
ವಿಭಿನ್ನ ಸಿದ್ಧಾಂತಗಳು
ಇರುವ ವಿರೋಧ ಪಕ್ಷಗಳು ಹೇಗೆ ಒಟ್ಟಿಗೆ ನಿಲ್ಲಬಹುದು ಎಂಬ ಬಗ್ಗೆ ತಾವು ಯೋಚಿಸಿರುವುದಾಗಿ ನುಡಿದ ರಾಹುಲ್ ’ಈ ಬಗ್ಗೆ ನಾನು ಆಳವಾಗಿ ಚಿಂತಿಸಿದಾಗ, ರಾಷ್ಟ್ರದಲ್ಲಿ ಎರಡು ದರ್ಶನಗಳು ಇವೆ ಎಂಬ ತೀರ್ಮಾನಕ್ಕೆ ನಾನು ಬಂದೆ. ಒಂದು ಬಿಜೆಪಿಯ ದರ್ಶನ. ಬಿಜೆಪಿ ಅಧ್ಯಕ್ಷರು ಇತ್ತೀಚೆಗೆ ತಮ್ಮ ಭಾಷಣದಲ್ಲಿ ಭಾರತವು ಸೋನೆ ಕಿ ಚಿಡಿಯಾ ಅಥವಾ ಸ್ವರ್ಣದ ಹಕ್ಕಿ ಎಂದು ಹೇಳಿದ್ದಾರೆ. ಎರಡನೆಯದು ನಮ್ಮ ದೃಷ್ಟಿಕೋನ- ನಾವು ಭಾರತವನ್ನು ಪ್ರತಿಯೊಂದು ಸಿದ್ಧಾಂತದ ತೊರೆಯನ್ನೂ ತನ್ನೊಳಗೆ ಸೇರಿಸಿಕೊಳ್ಳಬಲ್ಲಂತಹ ನದಿ ಎಂಬುದಾಗಿ ಪರಿಗಣಿಸುತ್ತೇವೆ’ ಎಂದು ಹೇಳಿದರು.ಬಿಜೆಪಿಯ ದರ್ಶನ ಅಥವಾ ದೃಷ್ಟಿಕೋನ ಬ್ರಿಟಿಷರ ದೃಷ್ಟಿಕೋನಕ್ಕೆ ಸಮ. ಅವರು ಗೂಡು ನಿರ್ಮಿಸಿ ಅದರೊಳಗೆ ಹಕ್ಕಿಯನ್ನು ಇರಿಸಲು ಬಯಸುತ್ತಾರೆ. ನಾವು ಅವರು ಅಂತಹ ಗೂಡು ನಿರ್ಮಿಸದಂತೆ ತಡೆಯಲು ಯತ್ನಿಸುತ್ತಿದ್ದೇವೆ’ ಎಂದು ರಾಹುಲ್ ನುಡಿದರು.ನೋಟು ಅಮಾನ್ಯೀಕರಣವಿರಲಿ, ಅವಸರದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಳಿಸಿದ್ದೇ ಇರಲಿ ಅದು ಸಣ್ಣ ವರ್ತಕರು ಮತ್ತು ಬಡ ವರ್ಗಗಳಿಗೆ ಅತ್ಯಂತ ಹೀನಾಯವಾಗಿ ಬಾಧಿಸಿತು ಎಂದು ಕಾಂಗ್ರೆಸ್ ಅಧ್ಯಕ್ಷ ಹೇಳಿದರು. ರಫೇಲ್ ವ್ಯವಹಾರ ಕುರಿತ ಪ್ರಶ್ನೆಗಳನ್ನೂ ಅವರು ಪ್ರಸ್ತಾಪಿಸಿದರು. ಬಿಜೆಪಿಯ ಕಾಂಗ್ರೆಸ್ ಮುಕ್ತ ಭಾರತದ ಘೋಷಣೆಯನ್ನು ಪ್ರಸ್ತಾಪಿಸಿದ ರಾಹುಲ್, ’ವಿರೋಧ ಪಕ್ಷಗಳು ’ಬಿಜೆಪಿ ಮುಕ್ತ ಭಾರತದ’ ಗುರಿ ಇಟ್ಟುಕೊಂಡಿಲ್ಲ. ನಾವು ಅವರನ್ನು ಮುಗಿಸಲು, ಕೊಲ್ಲಲು ಅಥವಾ ನಾಶ ಮಾಡಲು ಬಯಸುತ್ತಿಲ್ಲ. ಅವರ ಸಿದ್ಧಾಂತವೂ ಒಟ್ಟಿಗೇ ಇರುವಂತೆ ನಾವು ನೋಡಿಕೊಳ್ಳುತ್ತೇವೆ. ಆದರೆ ಅವರ ಸಿದ್ಧಾಂತಕ್ಕಿಂತ ನಮ್ಮದು ಹೆಚ್ಚು ಪ್ರಬಲವಾಗಿದೆ ಎಂದು ಹೇಳಲು ನಾವು ಬಯಸುತ್ತೇವೆ ಎಂದು ರಾಹುಲ್ ಹೇಳಿದರು.
2016: ಇಸ್ಲಾಮಾಬಾದ್/ನವದೆಹಲಿ: ಕಾಶ್ಮೀರ ವಿವಾದವನ್ನು ಬಗೆ ಹರಿಸಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸಲು ಪಾಕಿಸ್ತಾನ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಭಾರತ ತಿರಸ್ಕರಿಸಿತು. ಕೇವಲ ಗಡಿಯಾಚೆಗಿನ ಭಯೋತ್ಪಾದನೆ ವಿಷಯವಾಗಿ ಮಾತ್ರ ಚರ್ಚಿಸುವುದಾಗಿ ಭಾರತ ಪಾಕಿಸ್ತಾನಕ್ಕೆ
ತಿಳಿಸಿತು. ಪಾಕ್ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹಮದ್ ಚೌಧರಿ ಅವರು ಬರೆದಿದ್ದ ಪತ್ರಕ್ಕೆ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್ ಪ್ರತಿಕ್ರಿಯೆ ನೀಡಿದರು. ಈ ಸಂಬಂಧ ಜೈ ಶಂಕರ್ ಬರೆದಿರುವ ಪತ್ರವನ್ನು ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಾಂಬವಾಲೆ ಪಾಕ್ ವಿದೇಶಾಂಗ ಸಚಿವಾಲಯಕ್ಕೆ ಹಸ್ತಾಂತರಿಸಿದರು. ಜಮ್ಮು ಮತ್ತು ಕಾಶ್ಮೀರದ ಪ್ರಸ್ತುತ ಪರಿಸ್ಥಿತಿಯ ಕುರಿತು ಪಾಕಿಸ್ತಾನ ಭಾರತದೊಂದಿಗೆ ಚರ್ಚೆ ನಡೆಸಲು ಯಾವುದೇ ಹಕ್ಕು ಹೊಂದಿಲ್ಲ. ಜಮ್ಮು ಮತ್ತು ಕಾಶ್ಮೀರ ಭಾರತದ ಆಂತರಿಕ ವಿಷಯ. ಗಡಿ ಒಳನುಸುಳುವಿಕೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಚರ್ಚಿಸಬೇಕಾಗಿರುವ ಪ್ರಮುಖ ವಿಷಯ. ಅದನ್ನು ಚರ್ಚಿಸುವುದಿದ್ದರೆ ಚರ್ಚಿಸೋಣ. ಈ ಹಿಂದೆಯೂ ಸಹ ಭಾರತ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಚರ್ಚೆ ನಡೆಸಲು ಸಿದ್ಧ ಎಂದು ತಿಳಿಸಿತ್ತು. ಈಗಲೂ ಸಹ ಇದರ ಕುರಿತು ಚರ್ಚಿಸುವುದಿದ್ದರೆ ಮಾತ್ರ ನಾನು ಇಸ್ಲಾಮಾಬಾದ್ಗೆ ಭೇಟಿ ನೀಡಲು ಸಿದ್ಧ ಎಂದು ಜೈಶಂಕರ್ ತಮ್ಮ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದರು. ಕಾಶ್ಮೀರ ವಿವಾದದ ಕುರಿತು ಚರ್ಚೆ ನಡೆಸಲು ಪಾಕಿಸ್ತಾನ ಭಾರತಕ್ಕೆ ಆಗಸ್ಟ್ 15ರಂದು ಆಹ್ವಾನ ನೀಡಿತ್ತು. ಈ ಸಂಬಂಧ ಪಾಕ್ ವಿದೇಶಾಂಗ ಕಾರ್ಯದರ್ಶಿ ಭಾರತೀಯ ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.
2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿರುವವರಿಗೆ ವಿದೇಶಗಳಲ್ಲಿರುವವರು ಸಾಮಾನ್ಯ ಜನರ ಬ್ಯಾಂಕ್ ಖಾತೆಗಳ ಮೂಲಕ ಹಣಕಾಸಿನ ನೆರವು ಒದಗಿಸುತ್ತಿರುವ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಆರಂಭಿಸಿತು. ಉಗ್ರ ಸಂಘಟನೆಗಳು ಮತ್ತು ಉಗ್ರ ಸಂಘಟನೆಗಳ ಪರವಾಗಿರುವವರು ಹಣವನ್ನು ವರ್ಗಾಯಿಸಲು ಹಲವಾರು ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಕಾಶ್ಮೀರಿ ಯುವಕರನ್ನು ಕೊಲ್ಲಿ ದೇಶಗಳಲ್ಲಿ ಕೆಲಸ ಮಾಡಲು ಕರೆದೊಯ್ಯಲಾಗುತ್ತಿದೆ. ಅಲ್ಲಿ ಆತನಿಗೆ ಉಗ್ರರಿಗೆ ಹಣಕಾಸು ನೆರವು ನೀಡಲು ಸಹಕರಿಸುವಂತೆ ಮನವೊಲಿಸುತ್ತಿರುವ ಸಂಘಟನೆಗಳು ಆತನ ಬ್ಯಾಂಕ್ ಖಾತೆಯ ಮೂಲಕ ಹಣವನ್ನು ಕಾಶ್ಮೀರಕ್ಕೆ ವರ್ಗಾಯಿಸುತ್ತಿದ್ದಾರೆ. ನಂತರ ಆ ಹಣ ಉಗ್ರವಾದಿಗಳ ಕೈ ಸೇರುತ್ತಿದೆ. ಈ ಹಣ ವರ್ಗಾವಣೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುವ ಸಾಮಾನ್ಯ ಕಾಶ್ಮೀರಿಗಳಿಗೆ ಶೇ. 1 ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡಲಾಗುತ್ತಿದೆ. ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದ ಕೆಲವೇ ದಿನಗಳಲ್ಲಿ ಹಣವನ್ನು ಬ್ಯಾಂಕ್ನಿಂದ ಉಗ್ರವಾದಿಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿದವು. ಹೀಗೆ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಪ್ರಮಾಣದ ಹಣ ವರ್ಗಾವಣೆ ಆಗಿರುವ ಪ್ರಕರಣದಲ್ಲಿ ಹಣ ಜಮೆ ಮಾಡಿದವರಿಗೂ ಮತ್ತು ಖಾತೆದಾರರಿಗೂ ಯಾವುದೇ ಸಂಬಂಧವಿರುವುದಿಲ್ಲ ಮತ್ತು ಹಣವನ್ನು 48 ಗಂಟೆಗಳೊಳಗೆ ಬ್ಯಾಂಕ್ನಿಂದ ಡ್ರಾ ಮಾಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ನಿಯಮಾವಳಿಗಳ ಪ್ರಕಾರ ಬ್ಯಾಂಕ್ ಮತ್ತು ತನಿಖಾ ಏಜೆನ್ಸಿಗಳ ಗಮನಕ್ಕೆ ಬಾರದಂತೆ ಹಣ ವರ್ಗಾವಣೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಒಂದು ಲಕ್ಷಕ್ಕಿಂತ ಕಡಿಮೆ ಮೊತ್ತದ ಹಣ ಮಾತ್ರ ವರ್ಗಾವಣೆಯಾಗುತ್ತಿದೆ. ಹಣ ವರ್ಗಾವಣೆಗಾಗಿ ಸಾಕಷ್ಟು ಖಾತೆಗಳನ್ನು ಆಯ್ಕೆ ಮಾಡಿಕೊಂಡು ಸರದಿಯಂತೆ ಮೂರರಿಂದ ನಾಲ್ಕು ತಿಂಗಳಿಗೆ ಒಂದು ಸಲ ಹಣ ವರ್ಗಾವಣೆ ಮಾಡಲಾಗುತ್ತಿದೆ. ಎನ್ಐಎ ಈ ವಿಧದ ಹಣ ವರ್ಗಾವಣೆಯ ಜಾಡು ಹಿಡಿದು ತನಿಖೆ ಪ್ರಾರಂಭಿಸಿದೆ ಎಂದು ಎನ್ಐಎ ಮೂಲಗಳು ತಿಳಿಸಿದವು.
2016: ಲಖನೌ: ಉತ್ತರಪ್ರದೇಶದ ಬಿಜ್ನೂರ್ ಜಿಲ್ಲೆಯ ಹರಿನಗರ ಗ್ರಾಮದಲ್ಲಿ 4000-4500 ವರ್ಷ ಹಳೆಯದಾದ ಹರಪ್ಪ ಕಾಲದ 60 ಪಳೆಯುಳಿಕೆಗಳು ಪತ್ತೆಯಾದವು. ಹೊಲದಲ್ಲಿ ಲೋಹದ ಮಡಕೆಯಲ್ಲಿ 60 ವಿವಿಧ ಬಗೆಯ ತಾಮ್ರದ ಪಾತ್ರೆಗಳು ಪತ್ತೆಯಾಗಿದ್ದು ಇವುಗಳ ಮಾದರಿಯನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗಾಗಿ ಪುಣೆ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಹರಪ್ಪ ಕಾಲಕ್ಕೆ ಸೇರಿದ ಲೋಹದ ಈ 60 ಪಾತ್ರೆಗಳು ರೈತರು ಹೊಲ ಅಗೆಯುವಾಗ ಪತ್ತೆಯಾದವು ಎಂದು ಭಾರತೀಯ ಪುರಾತತ್ವ ಇಲಾಖೆ ತಿಳಿಸಿತು. ಈ ಹಿಂದೆ 1950ರಲ್ಲಿ ಇದೇ ಸ್ಥಳದಿಂದ 1.5 ಕಿ.ಮೀ ದೂರದಲ್ಲಿರುವ ರಾಜ್ಪುರ ಪರ್ಸ ಎಂಬ ಗ್ರಾಮದಲ್ಲಿ ಇದೇ ರೀತಿ 4000 ವರ್ಷ ಹಳೆಯದಾದ ಮಡಕೆಗಳು ಪತ್ತೆಯಾಗಿದ್ದವು.
2016: ವಡೋದರಾ: ಕಡು ಬಡವರ್ಗದ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರ ಅನುಕೂಲಕ್ಕಾಗಿ ‘ಅಂತ್ಯೋದಯ ಎಕ್ಸ್ಪ್ರೆಸ್’ ಸೇರಿದಂತೆ ಒಟ್ಟು ನಾಲ್ಕು ಹೊಸ ರೈಲುಗಳನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದರು. ಕಡು ಬಡ ವರ್ಗದ ಜನರೂ ಸಹ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗುವಂತೆ ಟಿಕೆಟ್ ಕಾಯ್ದಿರಿಸದ ಪ್ರಯಾಣಿಕರಿಗಾಗಿ ಮೀಸಲಾಗಿರುವ ‘ಅಂತ್ಯೋದಯ ಎಕ್ಸ್ಪ್ರೆಸ್’ ರೈಲನ್ನು ಪ್ರಾರಂಭಿಸಲಾಗುವುದು. ಇದು ಸೂಪರ್ ಫಾಸ್ಟ್ ರೈಲಾಗಿದ್ದು, ದೂರದ ಮಾರ್ಗಗಳಲ್ಲಿ ಸಂಚರಿಸಲಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುವ ಮಾರ್ಗಗಳಲ್ಲಿ ಈ ರೈಲು ಸಂಚರಿಸಲಿದೆ. ಮುಂದಿನ ಕೆಲವು ತಿಂಗಳಲ್ಲಿ ರೈಲು ಸಂಚಾರವನ್ನು ಪ್ರಾರಂಭಿಸಲಿದೆ. ಉಳಿದಂತೆ ಟಿಕೆಟ್ ಕಾಯ್ದಿರಿಸಿದವರಿಗಾಗಿ ವಿಶೇಷ ಸವಲತ್ತುಗಳುಳ್ಳ ಮೂರು ರೈಲುಗಳ ಸಂಚಾರವನ್ನು ಆರಂಭಿಸಲಾಗುವುದು ಎಂದು ಸುರೇಶ್ ಪ್ರಭು ತಿಳಿಸಿದರು. ಜೊತೆಗೆ ಪ್ರಸ್ತುತ ಸಂಚಾರ ನಡೆಸುತ್ತಿರುವ ದೂರ ಪ್ರಯಾಣದ ರೈಲುಗಳಲ್ಲಿ ಎರಡು ದೀನ ದಯಾಳು ಬೋಗಿಗಳನ್ನು ಅಳವಡಿಸುವ ಮೂಲಕ ಟೆಕೆಟ್ ಕಾಯ್ದಿರಿಸದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿ್ಪಲಾಗುವುದು. ರೈಲ್ವೆ ಇಲಾಖೆ ಹಮ್ ಸಫರ್ ಎಂಬ ರೈಲನ್ನು ಪರಿಚಯಿಸಲಿದ್ದು, ಇದು ಪೂರ್ಣ ಪ್ರಮಾಣದಲ್ಲಿ 3 ಟಯರ್ ಏಸಿ ಬೋಗಿಗಳನ್ನು ಒಳಗೊಂಡಿರಲಿದೆ. ತೇಜಸ್ ಎಂಬ ಹೊಸ ರೈಲನ್ನು ಸಹ ಆರಂಭಿಸಲಿದ್ದು, ಇದು 130 ಕಿ.ಮೀ ಪ್ರತೀ ಘಂಟೆ ವೇಗದಲ್ಲಿ ಸಂಚರಿಲಿದ್ದು. ಇದರಲ್ಲಿ ಸ್ಥಳೀಯ ಆಹಾರ, ವೈಫೈ ಮತ್ತು ಇತರೇ ಸೌಲಭ್ಯಗಳನ್ನು ಒದಗಿಸಲಾಗುವುದು. ನಾಲ್ಕನೇ ರೈಲಿಗೆ ಉದಯ್ ಎಂದು ಹೆಸರಿಡಲಾಗಿದೆ. ಉದಯ್ (ಉತ್ಕೃಷ್ಟ ಡಬಲ್ ಡೆಕ್ಕರ್ ಹಮಾನಿಯಂತ್ರಿತ ಯಾತ್ರಿ), ಈ ರೈಲು ಒಂದು ರಾತ್ರಿ ಪ್ರಯಾಣದ ದೂರದ ಮಾರ್ಗಗಳಲ್ಲಿ ರಾತ್ರಿ ವೇಳೆ ಸಂಚರಿಸಲಿದೆ. ಇದು ಶೇ. 40 ರಷ್ಟು ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯ ಹೊಂದಿರಲಿದೆ ಎಂದು ಸುರೇಶ್ ಪ್ರಭು ತಿಳಿಸಿದರು..
2016: ನವದೆಹಲಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಆಚರಿಸಲಾಗುವ ಪ್ರಸಿದ್ಧ ದಹಿ ಹಂಡಿ (ಮೊಸರು ಕುಡಿಕೆ)ಉತ್ಸವದಲ್ಲಿ ನಿರ್ಮಿಸಲಾಗುವ ಮಾನವ ಗೋಪುರದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಾಲ್ಗೊಳ್ಳುವಂತಿಲ್ಲ ಮತ್ತು ಮಾನವ ಗೋಪುರ 20 ಅಡಿಗಿಂತ ಎತ್ತರ ಇರಬಾರದು ಎಂದು ಸುಪ್ರೀಂ ಕೋರ್ಟ್ ಆಜ್ಞಾಪಿಸಿತು. ದಹಿ ಹಂಡಿ ಉತ್ಸವದಲ್ಲಿ ಮಾನವ ಗೋಪುರ ನಿರ್ಮಿಸಲು ಅಪ್ರಾಪ್ತರನ್ನು ಬಳಕೆ ಮಾಡಿಕೊಳ್ಳಬಾರದು ಎಂದು ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಬಾಂಬೆ ಹೈಕೋರ್ಟ್ ಈ ಸಂಬಂಧ 2014ರ ಆಗಸ್ಟ್ ತಿಂಗಳಲ್ಲಿ ತೀರ್ಪು ನೀಡಿತ್ತು. ಕಳೆದ ವಾರ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ತೀರ್ಪಿನ ಕುರಿತು ಸ್ಪಷ್ಟನೆ ನೀಡಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ವಿಚಾರಣೆ ಪ್ರಾರಂಭಿಸಿ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿತ್ತು. ಆ ನಂತರ ಸಾಮಾಜಿಕ ಕಾರ್ಯಕರ್ತೆ ಸ್ವಾತಿ ಪಾಟೀಲ್ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಅದೇಶವನ್ನು ಪಾಲಿಸುತ್ತಿಲ್ಲ ಎಂದು ತಿಳಿಸಿದ್ದರು. ನಂತರ ಎರಡೂ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯಿತು. ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಮಹಾರಾಷ್ಟ್ರದಲ್ಲಿ ದಹಿ ಹಂಡಿ ಉತ್ಸವ ಆಯೋಜಿಸಲಾಗುತ್ತದೆ. ಇದರಲ್ಲಿ ಮಾನವ ಗೋಪುರ ನಿರ್ಮಿಸಿ ಮೊಸರಿನ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಮಾನವ ಗೋಪುರ ನಿರ್ಮಿಸುವ ಸಂದರ್ಭದಲ್ಲಿ ಬಿದ್ದ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಕೆಲವರು ಮೃತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ದಹಿ ಹಂಡಿ ಉತ್ಸವಕ್ಕೆ ನಿಯಮಾವಳಿಗಳನ್ನು ರೂಪಿಸಿ ಆದೇಶ ನೀಡಿತ್ತು.
2016: ನವದೆಹಲಿ: ಮಾಜಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾ ಅವರನ್ನು ಮಣಿಪುರದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಕೇಂದ್ರ ಸಚಿವೆಯಾಗಿದ್ದ ನಜ್ಮಾ ಹೆಪ್ತುಲ್ಲಾ ಅವರನ್ನು 75 ವಯಸ್ಸು ದಾಟಿದ ಹಿನ್ನೆಲೆಯಲ್ಲಿ ಕಳೆದ ಜುಲೈ ತಿಂಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆ ಕಾಲದಲ್ಲಿ ಸಂಪುಟದಿಂದ ಕೈಬಿಡಲಾಗಿತ್ತು. ಇದಲ್ಲದೆ ಅಂಡಮಾನ್ ನಿಕೋಬಾರ್ ದ್ವೀಪದ ನೂತನ ಲೆಫ್ತಿನೆಂಟ್ ಗವರ್ನರ್ ಸ್ಥಾನಕ್ಕೆ ಬಿಜೆಪಿ ನಾಯಕ ಜಗದೀಶ್ ಮುಖಿ, ಪಂಜಾಬ್ನ ನೂತನ ರಾಜ್ಯಪಾಲ ಸ್ಥಾನಕ್ಕೆ ವಿ.ಪಿ. ಸಿಂಗ್ ಬದ್ನೋರ್ ಮತ್ತು ಅಸ್ಸಾಂನ ನೂತನ ರಾಜ್ಯಪಾಲ ಸ್ಥಾನಕ್ಕೆ ಬನ್ವಾರಿ ಲಾಲ್ ಪುರೋಹಿತ್ ಅವರನ್ನು ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿತು.
2016: ನವದೆಹಲಿ: ಕಂಪೆನಿಯ ನೊಯ್ಡಾ ಮತ್ತು ಗುರ್ಗಾಂವ್ ಯೋಜನೆಗಳಲ್ಲಿ ಹಣ ತೊಡಗಿಸಿ ಮನೆ ಖರೀದಿಸಿದ ಗ್ರಾಹಕರಿಗೆ ಹಣ ಮರುಪಾವತಿ ಮಾಡದೇ ಇರುವುದ್ಕದಕಾಗಿ ಯುನಿಟೆಕ್ ಕಂಪೆನಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್ ಗ್ರಾಹಕರಿಗೆ ಪಾವತಿ ಮಾಡುವ ಸಲುವಾಗಿ 15 ಕೋಟಿ ರೂಪಾಯಿಗಳನ್ನು ಠೇವಣಿ ಇಡುವಂತೆ ಆದೇಶ ನೀಡಿತು. ಕಂಪೆನಿಯ ಎರಡೂ ವಸತಿ ಯೋಜನೆಗಳು ವರ್ಷಗಟ್ಟಲೆ ವಿಳಂಬಗೊಂಡಿರುವ ಹಿನ್ನೆಲೆಯಲ್ಲಿ ಈ ಕಠಿಣ ಆದೇಶ ನೀಡಿದ ಸುಪ್ರೀಂಕೋರ್ಟ್ ‘ನಮಗೆ ನಿಜಕ್ಕೂ ನೋವಾಗಿದೆ. 38 ಮಂದಿ ಹೂಡಿಕೆದಾರರಿಗೆ ವಿತರಿಸುವ ಸಲುವಾಗಿ 15 ಕೋಟಿ ರೂಪಾಯಿಗಳನ್ನು ಠೇವಣಿ ಇಡಿ’ ಎಂದು ರಿಯಲ್ ಎಸ್ಟೇಟ್ ಡೆವಲಪರ್ಗೆ ನಿರ್ದೇಶಿಸಿತು. ಯುನಿಟೆಕ್ ಕಂಪೆನಿಯು 5 ಕೋಟಿ ರೂಪಾಯಿಗಳನ್ನು ಎರಡು ವಾರಗಳ ಒಳಗಾಗಿ ಠೇವಣಿ ಇಡಲೇಬೇಕು, ಉಳಿದ 10 ಕೋಟಿ ರೂಪಾಯಿಗಳನ್ನು ಸೆಪ್ಟೆಂಬರ್ ಅಂತ್ಯದೊಳಗೆ ಠೇವಣಿ ಇಡಬೇಕು ಎಂದು ನ್ಯಾಯಾಲಯ ಸೂಚಿಸಿತು. ಯೋಜನೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮನೆಗಳನ್ನು ಖರೀದಿಸಿದವರಿಗೆ ಬಡ್ಡಿಯನ್ನು ಪರಿಹಾರವಾಗಿ ನೀಡುವುದರ ವಿರುದ್ಧ ಕಂಪೆನಿಯು ಸಲ್ಲಿಸಿರುವ ಮೇಲ್ಮನವಿಗಳನ್ನು ಆಲಿಸಲು ಸುಪ್ರೀಂಕೋರ್ಟ್ ಒಪ್ಪಿದೆ ಎಂದು ಯುನಿಟೆಕ್ ಹೇಳಿತು. ಹೂಡಿಕೆದಾರರಿಗೆ ಮರುಪಾವತಿ ಮಾಡಲು ತನ್ನ ಬಳಿ ಹಣ ಇಲ್ಲ ಎಂದು ಯುನಿಟೆಕ್ ಕಳೆದ ವಾರ ಹೇಳಿತ್ತು. ನೋಯ್ಡಾದ ಬರ್ಗಂಡಿ ಯೋಜನೆ ಮತ್ತು ಗುರ್ಗಾಂವ್ನ ವಿಸ್ತಾಸ್ಯೊಜನೆಗಳಲ್ಲಿ ಹಣ ತೊಡಗಿಸಿದ ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡುವಂತೆ ಗ್ರಾಹಕ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಯುನಿಟೆಕ್ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
2007: ಪೆಪ್ಸಿ ಹಾಗೂ ಕೋಕಾ ಕೋಲಾ ಕಂಪೆನಿಗಳು ತಮ್ಮ ತಂಪು ಪಾನೀಯಗಳಲ್ಲಿ ಬಳಸಿದ ಸಾಮಗ್ರಿಗಳ ವಿವರವನ್ನು ಬಾಟಲಿಗಳ ಮೇಲೆ ನಮೂದಿಸುವಂತೆ ಕಡ್ಡಾಯ ಮಾಡದೇ ಇದ್ದುದಕ್ಕಾಗಿ ಮತ್ತು ದಾರಿತಪ್ಪಿಸುವ ಜಾಹೀರಾತುಗಳ ನಿಯಂತ್ರಣಕ್ಕೆ ಕಾನೂನು ಅನುಷ್ಠಾನ ವೈಫಲ್ಯಕ್ಕಾಗಿಯೂ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಲೋಕಸಭೆಯ ಉಭಯ ಸದನಗಳಲ್ಲಿ ಅಂಗೀಕಾರ ದೊರೆತ ಆಹಾರ ಭದ್ರತೆ ಮತ್ತು ಗುಣಮಟ್ಟ ಮಸೂದೆಗೆ ರಾಷ್ಟ್ರಪತಿಗಳ ಅನುಮೋದನೆ ಕೂಡಾ ದೊರೆತಿದ್ದರೂ, ಈ ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸದಿರಲು ಕಾರಣಗಳನ್ನು ನೀಡಿ ವಿವರವಾದ ಪ್ರಮಾಣ ಪತ್ರ ಸಲ್ಲಿಸುವಂತೆ ನ್ಯಾಯಮೂರ್ತಿ ಎ.ಕೆ. ಮಾಥೂರ್ ಹಾಗೂ ದಳವೀರ್ ಭಂಡಾರಿ ಅವರನ್ನೊಳಗೊಂಡ ಪೀಠವು ಕೇಂದ್ರಕ್ಕೆ ನಿರ್ದೇಶನ ನೀಡಿತು.
2007: ಪೂರ್ವ ಇಂಡೋನೇಷ್ಯಾದ ಸಮುದ್ರ ತಳದಲ್ಲಿ ಭಾರಿ ಭೂಕಂಪ ಸಂಭವಿಸಿತು. ಪ್ರಾಣ ಹಾನಿ ಬಗ್ಗೆ ವರದಿ ಬಂದಿಲ್ಲ ಎಂದು ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿತು. ಮಲುಕು ಪ್ರಾಂತ್ಯದ ರಾಜಧಾನಿ ಅಂಬೊನ್ ನ ಆಗ್ನೇಯ ಭಾಗದ ಸಮುದ್ರದಡಿ ರಿಕ್ಟರ್ ಮಾಪಕದಲ್ಲಿ 6.2 ಪ್ರಮಾಣದ ಭೂಕಂಪ ಸಂಭವಿಸಿ, ಸಮುದ್ರದಡಿಯ 230 ಕಿ.ಲೋ. ಮೀಟರಿನಷ್ಟು ಪ್ರದೇಶ ನಡುಗಿತು.
2007: ದಕ್ಷಿಣ ಪೆರುವಿನಲ್ಲಿ ಸಂಭವಿಸಿದ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 500ರಿಂದ 510ಕ್ಕೆ ಏರಿದ್ದು ಗಾಯಗೊಂಡವರ ಸಂಖ್ಯೆ 1600 ಮೀರಿತು.
2007: ಬೆಂಗಳೂರು ನಗರದಲ್ಲಿ ಬಾಂಬ್ ಸ್ಫೋಟಿಸಿ ಭಾರಿ ಅನಾಹುತ ಎಸಗಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಮೇಲೆ ಕುಖ್ಯಾತ ರೌಡಿ ಅಸ್ಗರ್ ಪಾಷಾ ಮತ್ತು ಆತನ ನಾಲ್ವರು ಸಹಚರರನ್ನು ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದರು.
2007: ಡಾ. ಶ್ರೀನಿವಾಸ ವರಖೇಡಿ ಅವರಿಗೆ ಈ ಸಲ ರಾಷ್ಟ್ರಪತಿಗಳ ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ನೀಡಲಾಯಿತು. ಸಂಸ್ಕೃತ, ಪಾಲಿ, ಪ್ರಾಕೃತ, ಅರೇಬಿಕ್ ಹಾಗೂ ಪರ್ಶಿಯನ್ ಭಾಷೆಗಳಲ್ಲಿ ಸಾಧನೆ ಮಾಡಿದ 22 ವಿದ್ವಾಂಸರಿಗೆ ಗೌರವ ಪತ್ರ ನೀಡಲು ನಿರ್ಧರಿಸಲಾಯಿತು. ಇವರಲ್ಲಿ ಪಂಡಿತ್ ಬಾಲಚಂದ್ರ ಜೋಶಿ, ಡಾ. ಪಿ.ಎಸ್. ಅನಂತನಾರಾಯಣ ಸೋಮಯಾಜಿ ಸೇರಿದ್ದರು.
2007: ಬದನೆಕಾಯಿ, ಹತ್ತಿ ಸೇರಿದಂತೆ ಹತ್ತು ವಿವಿಧ ಕುಲಾಂತರಿ ಬೆಳೆಗಳನ್ನು ಪ್ರಾಯೋಗಿಕವಾಗಿ ಬೆಳೆಯಲು ಅನುಮತಿ ನೀಡಲಾಗಿದೆ ಎಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಪ್ರಕಟಿಸಿತು.
2007: ಆಫ್ಘಾನಿಸ್ಥಾನದ ಜಹ್ರಿ ಜಿಲ್ಲಾ ಗವರ್ನರ್ ಖೈರುದ್ದೀನ್ ಹಾಗೂ ಅವರ ಮೂವರು ಮಕ್ಕಳು ಕಂದಹಾರದಲ್ಲಿ ಆತ್ಮಾಹುತಿ ದಾಳಿಗೆ ಬಲಿಯಾದರು. ಬಡಜನರಿಗೆ ಆಹಾರ ಹಂಚಲು ಗವರ್ಮರ್ ಖೈರುದ್ದೀನ್ ತಮ್ಮ ಇಬ್ಬರು ಪುತ್ರರು ಹಾಗೂ ಒಬ್ಬಳು ಪುತ್ರಿಯೊಂದಿಗೆ ನಿವಾಸದಿಂದ ಹೊರಬರುತ್ತಿದ್ದಂತೆಯೇ ಆತ್ಮಾಹುತಿ ದಾಳಿಕೋರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಗವರ್ನರ್ ಸಹಿತ ಅವರ ಕುಟುಂಬವನ್ನು ಹತ್ಯೆಗೈದ.
2007: ಇಂಡೊನೇಷ್ಯಾ ಮೂಲದ ಹಾಂಕಾಂಗಿನ 9 ವರ್ಷ 3ತಿಂಗಳು ವಯಸ್ಸಿನ ಪೋರ ಮಾರ್ಚ್ ಬೋಡಿಹರ್ಜೊ ಸಾಮಾನ್ಯವಾಗಿ 17 ಅಥವಾ 18 ವಯಸ್ಸಿನ ವಿದ್ಯಾರ್ಥಿಗಳು ಗಣಿತ ವಿಷಯದಲ್ಲಿ ತೆಗೆದುಕೊಳ್ಳುವ ಬ್ರಿಟಿಷ್ `ಎ' ಮಟ್ಟದ ಪರೀಕ್ಷೆಯಲ್ಲಿ ಎರಡು `ಎ' ಶ್ರೇಣಿ ಪಡೆದು ದಾಖಲೆ ನಿರ್ಮಿಸಿದ.
2006: `ಲಾಭದಾಯಕ ಹುದ್ದೆಯ'ಯ ಅರ್ಥ ವಿವರಣೆ ರೂಪಿಸಲು 15 ಸದಸ್ಯರ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ನಿರ್ಣಯಕ್ಕೆ ಲೋಕಸಭೆ ಅಂಗೀಕಾರ ನೀಡಿತು.
2006: ನೈಋತ್ಯ ಇಂಗ್ಲೆಂಡಿನಲ್ಲಿ ಏಕಕಾಲಕ್ಕೆ 56,645 ರಾಕೆಟ್ಟುಗಳನ್ನು ಐದು ಸೆಕೆಂಡುಗಳಲ್ಲಿ ಹಾರಿಸುವುದರ ಮೂಲಕ ವಿಶ್ವ ದಾಖಲೆ ಸ್ಥಾಪಿಸಲಾಯಿತು.
2006: ಬೇರೆ ಬೇರೆ ದೇಶಗಳ ಸಂಸ್ಕೃತಿ ಹೊಂದಿದ ಉದ್ಯೋಗಸ್ಥರು ಪರಸ್ಪರ ಗೌರವದಿಂದ ಕಾಣುವಂತೆ ಪ್ರೇರೇಪಿಸುವ ದೇಶದಲ್ಲೇ ಪ್ರಥಮ ಎನ್ನಲಾದ ಸೊಸೈಟಿ ಫಾರ್ ಇಂಟರ್ ಕಲ್ಚರಲ್ ಎಜುಕೇಷನ್, ಟ್ರೈನಿಂಗ್ ಅಂಡ್ ರೀಸರ್ಚ್(ಸೀತಾರ್) ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂತು.
1988: ಪಾಕಿಸ್ತಾನದ ಅಧ್ಯಕ್ಷ ಮಹಮ್ಮದ್ ಜಿಯಾ ಉಲ್ ಹಕ್ ಮತ್ತು ಅಮೆರಿಕದ ರಾಯಭಾರಿ ಅರ್ನಾಲ್ಡ್ ರಾಫೆಲ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು.
1987: ಭಾರತೀಯ ಈಜುಗಾರ್ತಿ ಅನಿತಾ ಸೂದ್ ಇಂಗ್ಲಿಷ್ ಕಡಲ್ಗಾಲುವೆಯನ್ನು ಅತಿವೇಗವಾಗಿ ಈಜಿ ದಾಟಿದ ಮೊತ್ತ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1987: ಅಡಾಲ್ಫ್ ಹಿಟ್ಲರನ ಆತ್ಮೀಯ ವಲಯದ ಕೊನೆಯ ವ್ಯಕ್ತಿ ರುಡಾಲ್ಫ್ ಹೆಸ್ 93ನೇ ವಯಸ್ಸಿನಲ್ಲಿ ಬರ್ಲಿನ್ ಆಸ್ಪತ್ರೆ ಸಮೀಪದ ಸ್ಪಂಡಾವು ಜೈಲಿನಲ್ಲಿ ಎಲೆಕ್ಟ್ರಿಕ್ ವಯರಿನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ.
1978: ಅಮೆರಿಕದ ಮ್ಯಾಕ್ಸೀ ಆಂಡರ್ಸನ್, ಬೆನ್ ಅಬ್ರುಜ್ಜೊ ಮತ್ತು ಲಾರಿ ನ್ಯೂಮನ್ ಅವರು `ಡಬಲ್ ಈಗಲ್ 2' ಹೆಸರಿನ ತಮ್ಮ ಬಲೂನಿನಲ್ಲಿ 3,200 ಮೈಲು ದೂರದ ಐದು ದಿನಗಳ ಹಾರಾಟವನ್ನು ಮುಕ್ತಾಯಗೊಳಿಸಿ ಪ್ಯಾರಿಸ್ಸಿನ ಹೊರಭಾಗದಲ್ಲಿ ಇಳಿದರು. ಇದರೊಂದಿಗೆ ಮೊತ್ತ ಮೊದಲ ಯಶಸ್ವಿ ಟ್ರಾನ್ಸ್ - ಅಟ್ಲಾಂಟಿಕ್ ಬಲೂನ್ ಹಾರಾಟ ಮುಕ್ತಾಯಗೊಂಡಿತು.
1970: ಸಾಹಿತಿ ವಿರೂಪಾಕ್ಷ ಪೂಜಾರಯ್ಯ ಜನನ.
1948: ಸಾಹಿತಿ ಜೆ.ಕೆ. ಜಯಮ್ಮ ಜನನ.
1932: ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ಜನ್ಮದಿನ.
1925: ಸಾಹಿತಿ, ಪತ್ರಕರ್ತ ಸುರೇಂದ್ರ ದಾನಿ ಅವರು ಭೀಮರಾವ್- ಗಂಗೂ ಬಾಯಿ ದಂಪತಿಯ ಮಗನಾಗಿ ಧಾರವಾಡದಲ್ಲಿ ಜನಿಸಿದರು. ಹಲವು ಪತ್ರಿಕೆಗಳ ಸಂಪಾದಕರಾಗಿ ದುಡಿದ ಅವರು ಪತ್ರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಸ್ಮರಣ ಸಂಚಿಕೆಗಳ ಸಂಪಾದಕತ್ವ ವಹಿಸಿದ್ದಲ್ಲದೆ ಜೀವನ ಚರಿತ್ರೆ, ಅನುವಾದ ಕೃತಿಗಳು ಪ್ರಬಂಧಗಳು ಸೇರಿ 15ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಟಿಯೆಸ್ಸಾರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1909: ಭಾರತದ ಸ್ವಾತಂತ್ರ್ಯ ಹೋರಾಟಗಾರ, ಕ್ರಾಂತಿಕಾರಿ ಮದನ್ ಲಾಲ್ ಧಿಂಗ್ರಾ ಅವರನ್ನು ಬ್ರಿಟಿಷ್ ಸರ್ಕಾರವು ಈದಿನ ಗಲ್ಲಿಗೇರಿಸಿತು. 1887ರಲ್ಲಿ ಪಂಜಾಬ್ ಪ್ರಾಂತ್ಯದ ಶ್ರೀಮಂತ ಕುಟುಂಬ ಒಂದರಲ್ಲಿ ಜನಿಸಿದ ಧಿಂಗ್ರಾ 1906ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿನ ಯೂನಿವರ್ಸಿಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿ ಸೇರಿದರು. ವಿನಾಯಕ ದಾಮೋದರ ಸಾವರ್ಕರ್ ಮತ್ತು ಶ್ಯಾಮಜಿ ಕೃಷ್ಣ ವರ್ಮ ಅವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡರು. ಜುಲೈ 23ರಂದು ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ವಿವಿಧ ಪತ್ರಿಕಾ ದಾಖಲೆಗಳ ಪ್ರಕಾರ ಧಿಂಗ್ರಾ ಅವರನ್ನು ಆಗಸ್ಟ್ 17ರಂದು ಗಲ್ಲಿಗೇರಿಸಲಾಯಿತು.
1906: ಇದು ಚುಂಬಿಸಿದರೂ ತುಟಿಯ ಬಣ್ಣ ಕುಂದದಂತಹ `ಕಿಸ್ಪ್ರೂಫ್ ಲಿಪ್ ಸ್ಟಿಕ್' ಸಂಶೋಧಕನ ಜನ್ಮದಿನ. ಈದಿನ ಹುಟ್ಟಿದ ಅಮೆರಿಕದ ರಾಸಾಯನಿಕ ತಜ್ಞ, ಸೌಂದರ್ಯ ಸಾಧನಗಳ ಎಕ್ಸಿಕ್ಯೂಟಿವ್ ಹಝೆಲ್ ಗ್ಲೇಡಿಸ್ ಬಿಷಪ್ (1906-98) `ಕಿಸ್ ಪ್ರೂಫ್ ಲಿಪ್ ಸ್ಟಿಕ್' ಸಂಶೋಧಿಸುವ ಮೂಲಕ `ಪ್ರಸಾಧನಗಳ' ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದರು.
1761: ವಿಲಿಯಂ ಕ್ಯಾರೀ (1761-1834) ಜನ್ಮದಿನ. ತಮ್ಮ ಜೀವಮಾನದ್ದುದಕ್ಕೂ ಭಾರತದಲ್ಲಿ ಮಿಷನರಿಯಾಗಿ ಕೆಲಸ ಮಾಡ್ದಿದ ಈ ಶಿಕ್ಷಣ ತಜ್ಞ `ಬಂಗಾಳಿ ಗದ್ಯ ಸಾಹಿತ್ಯದ ಜನಕ' ಎಂಬ ಹೆಸರು ಪಡೆದಿದ್ದಾರೆ. ಅವರು ರಚಿಸಿದ ವ್ಯಾಕರಣ, ಅರ್ಥಕೋಶ, ಮತ್ತು ಭಾಷಾಂತರ ಗ್ರಂಥಗಳು ಅವರಿಗೆ ಈ ಕೀರ್ತಿ ತಂದುಕೊಟ್ಟವು.
No comments:
Post a Comment