Wednesday, August 8, 2018

ಇಂದಿನ ಇತಿಹಾಸ History Today ಆಗಸ್ಟ್ 08

ಇಂದಿನ ಇತಿಹಾಸ  ಆಗಸ್ಟ್ 08

2018: ಚೆನ್ನೈ: ಸಕಲ ಸರ್ಕಾರಿ ಗೌರವದೊಂದಿಗೆ ದ್ರಾವಿಡ ನಾಯಕ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಚೆನ್ನೈಯ ಮರೀನಾ ಬೀಚ್‌ನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ, ಡಿಎಂಕೆ ಸ್ಥಾಪಕ ಸಿ.ಎನ್. ಅಣ್ಣಾದುರೈ ಮತ್ತು ಎಂ.ಜಿ. ರಾಮಚಂದ್ರನ್ ಸಮಾಧಿಗಳ ಸಾಲಿನಲ್ಲಿ ಈದಿನ  ಸಂಜೆ ಭೂಮಿತಾಯಿಯ ಮಡಿಲಲ್ಲಿ ಅಂತಿಮ ವಿಶ್ರಾಂತಿ ಪಡೆದರು.  ಇದರೊಂದಿಗೆ ತಮಿಳುನಾಡಿನ ದ್ರಾವಿಡ ರಾಜಕೀಯದಲ್ಲಿ ’ಕಲೈನ್ಯಾರ್ ಯುಗ ಅಂತ್ಯಗೊಂಡಿತು.  ಕುಟುಂಬ ಸದಸ್ಯರು, ವಿವಿಧ ಪಕ್ಷಗಳ ರಾಜಕೀಯ ನಾಯಕರು ಮತ್ತು ಬೆಂಬಲಿಗರು ಹಾಗೂ ಅಭಿಮಾನಿಗಳ ಸಾಗರವೇ ಕಂಬನಿ ದುಂಬಿ ’ಕಲೈನ್ಯಾರ್ ಕರುಣಾನಿಧಿ ಅವರಿಗೆ ಅಂತಿಮ ವಿದಾಯ ಹೇಳಿತು.  ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ತಮ್ನನ್ನು ಆಳಿದ್ದ ಧೀಮಂತ ನಾಯಕನ ಅಂತಿಮ ದರ್ಶನಕ್ಕಾಗಿ, ಚೆನ್ನೈಯ ರಾಜಾಜಿ ಸಭಾಂಗಣವಲ್ಲದೆ ಅಲ್ಲಿಂದ ಮರೀನಾ ಬೀಚ್‌ವರೆಗೆ ಸಾಗಿದ ಅಂತಿಮ ಯಾತ್ರೆಯಲ್ಲೂ ಲಕ್ಷಾಂತರ ಮಂದಿ ಮುಗಿ ಬಿದ್ದರು. ತ್ರಿವರ್ಣ ಧ್ವಜ ಹೊದಿಸಲಾಗಿದ್ದ ತಮ್ಮ ’ತಲೈವರ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಾಗುತ್ತಿದ್ದಂತೆಯೇ ಅಭಿಮಾನಿಗಳು ಧೀಮಂತ ನಾಯಕನ ಕೀರ್ತಿ ಅಮರವಾಗಲಿ ಎಂದು ಘೋಷಣೆ ಕೂಗಿದರು.  ದಿವಂಗತ ನಾಯಕನ ಪುತ್ರರಾದ ಎಂ.ಕೆ. ಸ್ಟಾಲಿನ್ ಮತ್ತು ತಮಿಳರಸು ಸೇರಿದಂತೆ ಕುಟುಂಬ ಸದಸ್ಯರು ಬಿಕ್ಕಳಿಸುತ್ತಾ ಅಂತಿಮ ಯಾತ್ರೆಯಲ್ಲಿ ಸಾಗಿದರು.  ಮರೀನಾ ಬೀಚಿನ ಅಣ್ಣಾ ಸಲೈ ಸಮುಚ್ಚಯದಲ್ಲಿ ೨೧ ಕುಶಾಲುತೋಪು ಹಾರಿಸುವ ಮೂಲಕ ಸರ್ಕಾರಿ ಗೌರವ ನೀಡಿದ ಬಳಿಕ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ದಿವಂಗತ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ, ಸಿ.ಎನ್. ಅಣ್ಣಾದುರೈ ಮತ್ತು ಎಂ.ಜಿ. ರಾಮಚಂದ್ರನ್ ಅವರ ಸಮಾಧಿಗಳ ಸಾಲಿನಲ್ಲಿಯೇ ಸಮಾಧಿ ಮಾಡಲಾಯಿತು.
ಕರುಣಾನಿಧಿ ಆವರ ಆಶಯದಂತೆ ಕರುಣಾನಿಧಿಯವರ ಪಾರ್ಥಿವ ಶರೀರವನ್ನು ಸಮಾಧಿ ಮಾಡಲು ಬಳಸಲಾದ ಶವಪೆಟ್ಟಿಗೆಯಲ್ಲಿ ’ವಿಶ್ರಾಂತಿಯಿಲ್ಲದೆ ಶ್ರಮಿಸಿದ ವ್ಯಕ್ತಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಬರಹವನ್ನು ಬರೆಯಲಾಗಿತ್ತು.  ಇದಕ್ಕೆ ಮುನ್ನ ಮದ್ರಾಸ್ ಹೈಕೋರ್ಟ್ ಕರುಣಾನಿಧಿ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಮರೀನಾಬೀಚ್‌ನಲ್ಲಿ ನಡೆಸಲು ಅವಕಾಶ ನೀಡುವಂತೆ ಈದಿನ ಬೆಳಗ್ಗೆ ಎಐಎಡಿಎಂಕೆ ಸರ್ಕಾರಕ್ಕೆ ನಿರ್ದೇಶಿಸಿತ್ತು. ಹೀಗಾಗಿ ಮುಖ್ಯಮಂತ್ರಿಗಳ ಸಾಲಿನಲ್ಲಿ ಚಿರ ವಿಶ್ರಾಂತಿ ಪಡೆದ ಮೊದಲ ಮಾಜಿ ಮುಖ್ಯಮಂತ್ರಿ ಎಂಬ ಕೀರ್ತಿಗೂ ಕರುಣಾನಿಧಿ ಪಾತ್ರರಾದರು.  ಕಣ್ಣೀರಿನೊಂದಿಗೆ ನಿಂತಿದ್ದ ಮಕ್ಕಳಾದ ಸ್ಟಾಲಿನ್, ಅಳಗಿರಿ, ಕನಿಮೋಳಿ, ಸೆಲ್ವಿ ಮತ್ತಿತರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಇರಿಸಲಾದ ಪೆಟ್ಟಿಗೆಯನ್ನು ಸಮಾಧಿಗೆ ಇಳಿಸುತ್ತಿದ್ದಂತೆಯೇ ಅಭಿಮಾನಿಗಳು ಹೂವಿನ ಮಳೆಗರೆದರು. ಅದಕ್ಕೂ ಮುನ್ನ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹತ್ ಅವರು ಅಂತಿಮ ಗೌರವ ಸಲ್ಲಿಸಿದ ಬಳಿಕ ಪಾರ್ಥಿವ ಶರೀರಕ್ಕೆ ಹೊದೆಸಲಾಗಿದ್ದ ತ್ರಿವರ್ಣ ಧ್ವಜವನ್ನು ತೆಗೆಯಲಾಯಿತು. ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒ ಬ್ರಿಯನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೀರಪ್ಪ ಮೊಯ್ಲಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಗುಲಾಂ ನಬಿ ಆಜಾದ್ ಮತ್ತಿತರ ಉನ್ನತ ರಾಜಕೀಯ ನಾಯಕರು ಈ ಸಂದರ್ಭದಲ್ಲಿ ಹಾಜರಿದ್ದು ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.  ಅಂತಿಮ ದರ್ಶನ: ಇದಕ್ಕೆ ಮುನ್ನ,  ಚೆನ್ನೈಯ ರಾಜಾಜಿ ಸಭಾಂಗಣದಲ್ಲಿ ಬೆಳಗ್ಗೆಯೇ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕಾಗಿ ಮಂಗಳವಾರ ಸಂಜೆ ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ೯೪ರ ಹರೆಯದಲ್ಲಿ ನಿಧನರಾದ ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿತ್ತು.  ಪ್ರಧಾನಿ ನರೇಂದ್ರ ಮೋದಿ, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚಿತ್ರನಟರಾದ ರಜನೀಕಾಂತ್, ಕಮಲ್ ಹಾಸನ್ ಸೇರಿದಂತೆ ವಿವಿಧ ರಂಗಗಳ ಗಣ್ಯರು ಅಗಲಿದ ನಾಯಕನ ದರ್ಶನ ಮಾಡಿ ತಮ್ಮ ಬಾಷ್ಪಾಂಜಲಿ ಸಲ್ಲಿಸಿದರು. ಪಕ್ಷದ ಕಾರ್‍ಯಕರ್ತರು, ಅಭಿಮಾನಿಗಳು ಸಾಲುಗಟ್ಟಿ ನಿಂತು ತಮ್ಮ ನಾಯಕನ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ವಯಸ್ಸಾದ ಇಬ್ಬರು ಗಾಯಗೊಂಡು ಬಳಿಕ ಸಾವನ್ನಪ್ಪಿದರು. ಇತರ ೩೩ ಮಂದಿ ಗಾಯಗೊಂಡರು.

2018: ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ, ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ. ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ವೀಕ್ಷಣೆಗಾಗಿ ಇರಿಸಲಾಗಿದ್ದ ಚೆನ್ನೈಯ ರಾಜಾಜಿ ಸಭಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ ಇಬ್ಬರು ಮೃತರಾಗಿ ಇತರ ೩೩ ಮಂದಿ ಗಾಯಗೊಂಡರು. ಮಾಧ್ಯಮ ವರದಿಗಳ ಪ್ರಕಾರ, ಒಬ್ಬರು ಹಿರಿಯ ವ್ಯಕ್ತಿ ಮತ್ತು ೬೦ ವರ್ಷದ ಒಬ್ಬ ಮಹಿಳೆ ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡು ಬಳಿಕ ಸಾವನ್ನಪ್ಪಿದರು. ಗಾಯಾಳುಗಳೆಲ್ಲರನ್ನೂ ಚೆನ್ನೈ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಗಾಯಾಳುಗಳಲ್ಲಿ ೮ ಮಂದಿ ಮಹಿಳೆಯರೂ ಸೇರಿದ್ದಾರೆ. ಅವರಲ್ಲಿ ಕೆಲವರು ಪೊಲೀಸ್ ಸಿಬ್ಬಂದಿಯಾಗಿದ್ದು, ಉದ್ವಿಗ್ನ ಗುಂಪನ್ನು ನಿಯಂತ್ರಿಸಲು ಯತ್ನಿಸುತ್ತಿದ್ದರು. ಸ್ಟಾಲಿನ್ ಮನವಿ: ಕಾಲ್ತುಳಿತ ಘಟನೆಯ ಬಳಿಕ, ಕರುಣಾನಿಧಿ ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರು ಶಾಂತರಾಗಿರುವಂತೆ ಜನತೆಗೆ ಮನವಿ ಮಾಡಿದರು.  ‘ನನಗೆ ಸ್ವಂತಕ್ಕಾಗಿ ಏನೂ ಬೇಕಾಗಿಲ್ಲ. ಕಲೈನ್ಯಾರ್ ಅವರಿಗೆ ನ್ಯಾಯೋಚಿತ ಶ್ರಧ್ದಾಂಜಲಿಯನ್ನಷ್ಟೇ ನಾನು ಬಯಸುತ್ತಿದ್ದೇನೆ ಎಂದು ಅವರು ನುಡಿದರು. ’ಅಧಿಕಾರದಲ್ಲಿ ಇರುವವರು ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ, ಆದರೆ ನೀವು ಕಾರ್‍ಯಕರ್ತ ಪಡೆಯ ಸಕಲ ಬಲವನ್ನೂ ತೋರಿಸಿದ್ದೀರಿ. ಶಾಂತಿ ಕಾಯ್ದುಕೊಳ್ಳಿ ಎಂದು ನಾನು ಪ್ರತಿಯೊಬ್ಬನಿಗೂ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಸ್ಟಾಲಿನ್ ಹೇಳಿದರು.  ಹೈಕೋರ್ಟ್ ಆದೇಶ: ಇದಕ್ಕೆ ಮುನ್ನ ಈದಿನ ಬೆಳಗ್ಗೆ ಮದ್ರಾಸ್ ಹೈಕೋರ್ಟ್, ದಿವಂಗತ ಮುಖ್ಯಮಂತ್ರಿಗಳಾದ ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್, ಜೆ. ಜಯಲಲಿತಾ ಅವರನ್ನು ಸಮಾಧಿ ಮಾಡಲಾಗಿದ್ದ ಮರೀನಾ ಬೀಚ್ ನಲ್ಲೇ ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲು ಮತ್ತು ಪಾರ್ಥಿವ ಶರೀರವನ್ನು ಸಮಾಧಿ ಮಾಡಲು ಅವಕಾಶ ನೀಡುವಂತೆ ರಾಜ್ಯದ ಏಐಎಡಿಎಂಕೆ ಸರ್ಕಾರಕ್ಕೆ ಆದೇಶಿಸಿತು.  ‘ಕಲೈನ್ಯಾರ್ ಕೀರ್ತಿ ಚಿರಾಯುವಾಗಲಿ ಎಂಬ ಘೋಷಣೆಯೊಂದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಡಿಎಂಕೆ ಕಾರ್‍ಯಕರ್ತರು ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ರಾಜಾಜಿ ಸಭಾಂಗಣದಿಂದ ೮ ಕಿಮೀ ದೂರಲ್ಲಿರುವ ಮದ್ರಾಸ್ ಹೈಕೋರ್ಟ್ ನೀಡಿದ ತೀರ್ಪನ್ನು ಸ್ವಾಗತಿಸಿದರು.  ಕಾನೂನಿನ ತೊಡಕಿನ ಕಾರಣ ಮರೀನಾಬೀಚಿನಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶ ನಿರಾಕರಿಸಿದ್ದ ಸರ್ಕಾರ, ಹಾಲಿ ಮುಖ್ಯಮಂತ್ರಿಗಳಾಗಿದ್ದು ನಿಧನರಾದರೆ ಮಾತ್ರ ಮರೀನಾ ಬೀಚಿನಲ್ಲಿ ಸಮಾಧಿ ಮಾಡಬಹುದು ಎಂದು ವಾದಿಸಿತ್ತು. ಡಿಎಂಕೆ ಪರ ವಕೀಲರು ಅದನ್ನು ವಿರೋಧಿಸಿ ’ಕೇಳುತ್ತಿರುವುದು ಅಂತ್ಯಕ್ರಿಯೆಗಷ್ಟೇ ಅನುಮತಿ. ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಅಲ್ಲ ಎಂದು ವಾದಿಸಿದ್ದರು. ಅದೇ ರೀತಿ ರಾಜಾಜಿ ಸಭಾಂಗಣದಿಂದ ಮರೀನಾಬೀಚ್ ವರೆಗಿನ ಅಂತಿಮ ಯಾತ್ರೆಗೆ ತಡೆಯಾಜ್ಞೆ  ನೀಡುವಂತೆ ಕೋರಲಾದ ಮನವಿಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ ಅಂತಿಮ ಯಾತ್ರೆಗೆ ಅನುಮತಿ ನೀಡಿತ್ತು. ಕೇಂದ್ರದಿಂದ ಶೋಕಾಚರಣೆ: ಡಿಎಂಕೆ ಮುಖ್ಯಸ್ಥನ ಗೌರವಾರ್ಥ ಕೇಂದ್ರ ಸರ್ಕಾರವು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿತ್ತು. ‘ವಿಶ್ರಾಂತಿಯಿಲ್ಲದೆ ಶ್ರಮಿಸಿದ ವ್ಯಕ್ತಿ ಈಗ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಬರಹವನ್ನು ಕರುಣಾನಿಧಿ ಅವರ ಪಾರ್ಥಿವ ಶರೀರವನ್ನು ಇರಿಸಲಾಗುವ ಶವ ಪೆಟ್ಟಿಗೆಯಲ್ಲಿ ಬರೆಯಲಾಗಿತ್ತು.

2018: ನವದೆಹಲಿ: ದಿವಂಗತ ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರು ತಮಗೆ ’ತಂದೆಯಂತಹ ವ್ಯಕ್ತಿತ್ವವಾಗಿದ್ದರು ಎಂದು ಹೇಳಿರುವ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಕರುಣಾನಿಧಿ ನಿಧನದಿಂದ ತಮಗೆ ವೈಯಕ್ತಿಕ ನಷ್ಟವಾಗಿದೆ ಮತ್ತು ಅವರಂತಹ ಮುತ್ಸದ್ಧಿಯನ್ನು ಕಳೆದುಕೊಂಡು ರಾಷ್ಟ್ರವು ಇನ್ನಷ್ಟು ಬಡವಾಗಿದೆ ಎಂದು ಹೇಳಿದರು.  ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರಿಗೆ ಬರೆದಿರುವ ಪತ್ರದಲ್ಲಿ ಸೋನಿಯಾ ಗಾಂಧಿ ಅವರು ’ಕಲೈನ್ಯಾರ್ ಅವರು ರಾಜಕೀಯ ಮತ್ತು ಸಾರ್ವಜನಿಕ ಸೇವೆಯಲ್ಲಿ ತಮಿಳುನಾಡು ಮಾತ್ರವೇ ಅಲ್ಲ ರಾಷ್ಟ್ರಮಟ್ಟದಲ್ಲೂ ಉನ್ನತ ವ್ಯಕ್ತಿತ್ವವಾಗಿದ್ದರು ಎಂದು ಬಣ್ಣಿಸಿದರು. ‘ನನ್ನ ಪಾಲಿಗೆ ಕಲೈನ್ಯಾರ್ ಅವರ ನಷ್ಟ ಅತ್ಯಂತ ವೈಯಕ್ತಿಕ ನಷ್ಟ. ಅವರು ಯಾವಾಗಲೂ ನನ್ನ ಬಗ್ಗೆ ಭಾರೀ ಕಾಳಜಿ, ಆತ್ಮೀಯತೆ ತೋರುತ್ತಿದ್ದರು. ಅದನ್ನು ನಾನೆಂದೂ ಮರೆಯಲಾರೆ. ಅವರು ನನ್ನ ಪಾಲಿಗೆ ತಂದೆಯಂತಹ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಸೋನಿಯಾ ಬರೆದರು. ‘ಕಲೈನ್ಯಾರ್ ಅವರಂತಹ ವ್ಯಕ್ತಿಯನ್ನು ನಾವು ಮತ್ತೊಮ್ಮೆ ಕಾಣಲು ಸಾಧ್ಯವಿಲ್ಲ. ಅವರ ಮುತ್ಸದ್ಧಿತನ ಮತ್ತು ರಾಷ್ಟ್ರ ಮತ್ತು ನಮ್ಮ ಜನರಿಗಾಗಿ ಅವರು ಮಾಡುತ್ತಿದ್ದ ಸಮರ್ಪಣೆ ಇಲ್ಲದೆ ನಮ್ಮ ರಾಷ್ಟ್ರವು ಇನ್ನಷ್ಟು ಬಡವಾಗಿದೆ ಎಂದು ಕಾಂಗ್ರೆಸ್ ನಾಯಕಿ ಬರೆದರು. ಕರುಣಾನಿಧಿ ಅವರು ಅದ್ಭುತ ಸಾಹಿತ್ಯಿಕ ವ್ಯಕ್ತಿತ್ವವಾಗಿದ್ದರು. ತಮಿಳುನಾಡಿನ ಶ್ರೀಮಂತ ಸಂಸ್ಕೃತಿ, ಕಲೆಯ ಅಭಿವೃದ್ಧಿಗಾಗಿ ಮತ್ತು ಅದಕ್ಕೆ ಜಾಗತಿಕ ಮನ್ನಣೆ ತಂದುಕೊಡಲು ಅವರು ಸಾಕಷ್ಟು ದುಡಿದರು ಎಂದು ಸೋನಿಯಾ ಗಾಂಧಿ ಬಣ್ಣಿಸಿದರು.
 
2018: ಪಾಟ್ನಾ: ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮದ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣದ ಮುಖ್ಯ ಆರೋಪಿ ಜೊತೆಗೆ ಒಡನಾಟ ಹೊಂದಿದ್ದರೆಂಬ ಆಪಾದನೆಗೆ ತನ್ನ ಪತಿ ಚಂದೇಶ್ವರ ವರ್ಮಾ ಗುರಿಯಾಗಿರುವ ಹಿನ್ನೆಲೆಯಲ್ಲಿ ಬಿಹಾರದ ಸಮಾಜ ಕಲ್ಯಾಣ ಸಚಿವೆ ಮಂಜು ವರ್ಮಾ ಅವರು ಬುಧವಾರ ಮುಖ್ಯಮಂತ್ರಿ ನಿತೀಶ್ ಕುಮಾರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಮಂಜು ಮರ್ಮಾ ಅವರು ಈದಿನ ಪಾಟ್ನಾದಲ್ಲಿ ನಿತೀಶ್ ಕುಮಾರ್ ಅವರನ್ನು ನಂ.೭ ಸರ್ಕ್ಯೂಲರ್ ರಸೆ ಕಚೇರಿಯಲ್ಲಿ ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಮಂಜು ವರ್ಮ ಅವರ ರಾಜೀನಾಮೆ ಪತ್ರವನ್ನು ತತ್ ಕ್ಷಣವೇ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರಿಗೆ ಕಳುಹಿಸಲಾಯಿತು. ಮಲಿಕ್ ಅವರು ದೆಹಲಿಯಲ್ಲಿ ಇರುವುದರಿಂದ ರಾಜೀನಾಮೆ ಪತ್ರವನ್ನು ಫ್ಯಾಕ್ಸ್ ಮೂಲಕ ಅವರ ಒಪ್ಪಿಗೆಗಾಗಿ ಕಳುಹಿಸಲಾಗುವುದು ಎಂದು ವರದಿಗಳು ತಿಳಿಸಿದವು. ‘ಮಾಧ್ಯಮಗಳು ಮತ್ತು ವಿರೋಧ ಪಕ್ಷ ಭಾರಿ ಹುಯಿಲು ಎಬ್ಬಿಸಿರುವುದರಿಂದ ನಾನು ರಾಜೀನಾಮೆ ನೀಡಿದ್ದೇನೆ. ಆದರೆ ನನಗೆ ಸಿಬಿಐ ಮತ್ತು ನ್ಯಾಯಾಂಗದಲ್ಲಿ ಸಂಪೂರ್ಣ ಭರವಸೆ ಇದೆ. ನಿಶ್ಚಿತವಾಗಿ ಸತ್ಯ ಹೊರಬರುವುದು ಮತ್ತು ನನ್ನ ಪತಿ ಆರೋಪಮುಕ್ತರಾಗಿ ಹೊರಬರುವರು ಎಂಬ ವಿಶ್ವಾಸ ನನಗಿದೆ ಎಂದು ಮಂಜು ವರ್ಮ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ತಮ್ಮ ಇಲಾಖೆಯಿಂದಲೇ ಹಣ ಒದಗಿಸಲಾಗಿರುವ ಬಾಲಿಕಾ ಆಶ್ರಯಧಾಮದ ವಿರುದ್ಧ ಪ್ರಾರಂಭದಿಂದಲೇ ಇಲಾಖೆ ಕ್ರಮ ಕೈಗೊಳ್ಳದೆ ಇದ್ದುದಕ್ಕಾಗಿಯೂ ಸಚಿವೆ ತೀವ್ರ ಟೀಕೆಗೆ ಗುರಿಯಾಗಿದ್ದರು.  ತಮಗೆ ಸಚಿವೆಯ ಪತಿ ಜೊತೆಗೆ ಯಾವುದೇ ವಿಶೇಷ ಸಂಪರ್ಕವೂ ಇಲ್ಲ, ಅವರು ತಮ್ಮ ಜೊತೆಗೆ ರಾಜಕೀಯ ಮತ್ತು ಇತರ ವಿಷಯಗಳ ಬಗ್ಗೆ ಮಾತ್ರವೇ ಮಾತನಾಡುತ್ತಿದ್ದರು ಎಂಬುದಾಗಿ ಪ್ರಕರಣದ ಮುಖ್ಯ ಆರೋಪಿ ಬೃಜೇಶ್ ಥಾಕೂರ್ ಮುಜಾಫ್ಫರಪುರದಲ್ಲಿ ವಿಶೇಷ ಪೋಸ್ಕೊ ನ್ಯಾಯಾಲಯದ ಹೊರಭಾಗದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ ಕೆಲವೇ ಗಂಟೆಗಳ ಬಳಿಕ ಸಚಿವೆ ತಮ್ಮ ರಾಜೀನಾಮೆ ಸಲ್ಲಿಸಿದರು. ಥಾಕೂರ್ ಫೋನ್ ದಾಖಲೆಯಲ್ಲಿ ಚಂದೇಶ್ವರ ವರ್ಮ ಅವರಿಂದ ೧೭ಕ್ಕೂ ಹೆಚ್ಚು ಕರೆಗಳು ಬಂದಿದ್ದುದನ್ನು ಸಿಬಿಐ ಪತ್ತೆ ಹಚ್ಚಿದೆ ಎಂದು ವರದಿಗಳು ಹೇಳಿದ್ದವು.  ವಾರದ ಹಿಂದೆ, ಮುಜಾಫ್ಫರಪುರದ ಬಂಧಿತ ಮಕ್ಕಳ ಸಂರಕ್ಷಣಾ ಅಧಿಕಾರಿ (ಸಿಪಿಒ) ರವಿಕುಮಾರ್ ರೋಷನ್ ಅವರ ಪತ್ನಿ ಶಿಬಾ ಕುಮಾರಿ ಅವರು ಸಚಿವೆಯ ಪತಿ ಆಶ್ರಯಧಾಮಕ್ಕೆ ಯಾವಾಗಲೂ ಬರುತ್ತಿದ್ದರು ಮತ್ತು ಮುಗ್ದ ರೋಷನ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಆಪಾದಿಸಿದ್ದರು. ಸಚಿವೆ ಮತ್ತು ಅವರ ಪತಿ ಇಬ್ಬರೂ ಈ ಆಪಾದನೆಗಳನ್ನು ಬಲವಾಗಿ ತಳ್ಳಿ ಹಾಕಿದ್ದರು.

2018: ಪಾಟ್ನಾ: ರಾಜ್ಯ ಸರ್ಕಾರದ ನೆರವಿನೊಂದಿಗೆ ಅಪಾಪ್ತ ಬಾಲಕಿಯರಿಗಾಗಿ ಮುಜಾಫ್ಫರಪುರದಲ್ಲಿ ಆಶ್ರಯಧಾಮ ನಡೆಸುತ್ತಿದ್ದ ಮುಖ್ಯ ಆರೋಪಿ ಭೃಜೇಶ್ ಥಾಕೂರ್, ಆಶ್ರಯಧಾಮದ ೩೪ ಬಾಲಕಿಯ ಲೈಂಗಿಕ ಶೋಷಣೆಗಾಗಿ ಬಂಧಿಸಲ್ಪಟ್ಟ ೨ ತಿಂಗಳ ಬಳಿಕ ತನ್ನ ಮೇಲಿನ ಆರೋಪಗಳೆಲ್ಲವನ್ನು ತಳ್ಳಿಹಾಕಿದ. ‘ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ಕ್ಷುಲ್ಲಕ ಮತ್ತು ರಾಜಕೀಯ ಪ್ರೇರಿತ. ನಾನು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷ ಸೇರಲಿದ್ದು, ಮುಜಾಫ್ಫರಪುರದಿಂದ ಸ್ಪರ್ಧಿಸಲಿದ್ದೇನೆಂಬ ಹಿನ್ನೆಲೆಯಲ್ಲಿ ಈ ಆರೋಪಗಳನ್ನು ,ಮಾಡಲಾಗಿದೆ ಎಂದು ಥಾಕೂರ್ ಹೇಳಿದ.  ಬಾಲಿಕಾ ಆಶ್ರಯಧಾಮವನ್ನು ಭೃಜೇಶ್ ಥಾಕೂರ್  ಮಾಲೀಕತ್ವದ ’ಸೇವಾ ಸಂಕಲ್ಪ ಏವಂ ವಿಕಾಸ ಸಮಿತಿ ಹೆಸರಿನ ಸರ್ಕಾರೇತರ ಸಂಘಟನೆ (ಎನ್ ಜಿಒ) ನಿರ್ವಹಿಸುತ್ತಿತ್ತು.  ‘ನನ್ನ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳೂ ಬುಡರಹಿತ. ಯಾವ ಬಾಲಕಿಯೂ ತನ್ನ ವರದಿಯಲ್ಲಿ ನನ್ನ ವಿರುದ್ಧ ಆರೋಪ ಮಾಡಿಲ್ಲ. ನಾನು ಶೀಘ್ರದಲ್ಲೇ ಕಾಂಗ್ರೆಸ್ ಪಕ್ಷವನ್ನು ಸೇರಿ ಮುಜಾಫ್ಫರಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದೆ ಎಂಬ ಕಾರಣಕ್ಕಾಗಿ ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಥಾಕೂರ್ ಮುಜಾಫ್ಫರಪುರದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಇತರ ೯ ಮಂದಿ ಆರೋಪಿಗಳ ಜೊತೆಗೆ ಒಯ್ಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿರುವುದಾಗಿ ವರದಿಗಳು ತಿಳಿಸಿವೆ. ಮುಖಕ್ಕೆ ಮಸಿ: ಥಾಕೂರನನ್ನು ನ್ಯಾಯಾಲಯದಿಂದ ಹೊರಕ್ಕೆ ಕರೆತಂದಾಗ, ಜನ ಅಧಿಕಾರ ಪಾರ್ಟಿಗೆ (ಜೆಎಪಿ) ಸೇರಿದವರು ಎನ್ನಲಾದ ವ್ಯಕ್ತಿಗಳು ಮುಖಕ್ಕೆ ಮಸಿ ಬಳಿದರು.  ಧೇಪುರದ ಪಕ್ಷೇತರ ಸಂಸತ್ ಸದಸ್ಯ ಪಪ್ಪು ಯಾದವ್ ಜೆಎಪಿ ಮುಖ್ಯಸ್ಥರಾಗಿದ್ದಾರೆ. ಆದರೆ ಜೆಎಪಿ ಕಾರ್ಯಕರ್ತರು ಈ ಘಟನೆಗೆ ತಾವು ಹೊಣೆ ಎಂಬುದನ್ನು ತಳ್ಳಿಹಾಕಿದರು. ಆದರೆ ಮುಖಕ್ಕೆ ಮಸಿ ಬಳಿಕ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದಿರುವ ಇಬ್ಬರು ಮಹಿಳೆಯರು ತಾವು ಜೆಎಪಿಗೆ ಸೇರಿದವರು ಎಂದು ಸ್ಥಳೀಯ ಪತ್ರಕರ್ತರಿಗೆ ತಿಳಿಸಿದರು. ಮುಜಾಫ್ಫರಪುರದ ಸಾಹು ರಸ್ತೆಯಲ್ಲಿನ ತನ್ನ ನಿವಾಸದ ಪಕ್ಷದಲ್ಲೇ ಸರ್ಕಾರೇತರ ಸಂಘಟನೆಯನ್ನು (ಎನ್ ಜಿಒ) ನಡೆಸುತ್ತಿದ್ದ ಥಾಕೂರನನ್ನು ಪೊಲೀಸರು ಲೈಂಗಿಕ ಶೋಷಣೆಗೆ ಸಂಬಂಧಿಸಿದಂತೆ ಜೂನ್ ೨ರಂದು ಬಂಧಿಸಿದ್ದರು. ೩೪ ಬಾಲಕಿಯರು ಈ ಎನ್ ಜಿಒ ನಡೆಸುತ್ತಿದ್ದ ಬಾಲಕಿಯರ ಆಶ್ರಯಧಾಮದಲ್ಲಿದ್ದರು. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್) ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿದ ಸಾಮಾಜಿಕ ಆಡಿಟ್ ವರದಿಯಿಂದ ಈ ಶೋಷಣೆ ಬೆಳಕಿಗೆ ಬಂದಿತ್ತು. ಟಿಐಎಸ್ ಎಸ್ ವರದಿಯನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿವೇಶ್ ಕುಮಾರ್ ಮೇ ೩೧ರಂದು ಎಫ್ ಐ ಆರ್ ದಾಖಲಿಸಿದ್ದರು. ಆದರೆ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಅಮಾನತುಗೊಳಿಸಲಾಗಿತ್ತು. ಬಳಿಕ ಎಫ್ ಐಆರ್ ಆಧರಿಸಿ ಮುಖ್ಯ ಆರೋಪಿ ಥಾಕೂರ್ ಸೇರಿದಂತೆ ೧೦ ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಪೊಲೀಸರು ದೋಷಾರೋಪ ಪಟ್ಟಿಯನ್ನೂ (ಚಾರ್ಜ್‌ಶೀಟ್) ಸಲ್ಲಿಸಿದ್ದರು. ಬಳಿಕ ರಾಜ್ಯಸರ್ಕಾರವು ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ಜುಲೈ ೨೯ರಂದು ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು. ಕಾಂಗ್ರೆಸ್ ನಿರಾಕರಣೆ: ಈಮಧ್ಯೆ, ಭೃಜೇಶ್ ಥಾಕೂರ್ ಪ್ರತಿಪಾದನೆಯಲ್ಲಿ ಯಾವುದೇ ಹುರಳಿಲ್ಲ ಎಂದು ಹಿರಿಯ ರಾಜ್ಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ವಿಧಾನಸಭಾ ಸದಸ್ಯರಾದ ಪ್ರೇಮ್ ಚಂದ್ರ ಮಿಶ್ರ ಹೇಳಿದರು.  ‘ಕಾಂಗ್ರೆಸ್ ಸೇರಲಿದ್ದುದಾಗಿ ಭೃಜೇಶ್ ಥಾಕೂರ್ ಮಾಡಿರುವ ಪ್ರತಿಪಾದನೆಯಲ್ಲಿ ಯಾವುದೇ ಹುರುಳಿಲ್ಲ. ಇದು ನಗು ತರಿಸುವ ವಿಷಯ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಬಿಜೆಪಿ ನಾಯಕರು ತೀವ್ರ ಒತ್ತಡಕ್ಕೆ ಒಳಗಾಗಿರುವ ಕಾರಣ ಈ ರೀತಿ ಹೇಳುವಂತೆ ಥಾಕೂರ್ ಗೆ ಹೇಳಿಕೊಟ್ಟಿರಬಹುದು ಎಂದು ಪ್ರೇಮ್ ಚಂದ್ರ ಮಿಶ್ರ ಪ್ರತಿಪಾದಿಸಿದರು.

2018: ನವದೆಹಲಿ: ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆಯಲ್ಲಿ ಭಿಕ್ಷಾಟನೆಯನ್ನು ಅಪರಾಧವನ್ನಾಗಿ ಮಾಡುವ ವಿಧಿಗಳು ಸಂವಿಧಾನಬಾಹಿರ ಮತ್ತು ರದ್ದುಪಡಿಸಲು ಯೋಗ್ಯವಾಗಿವೆ ಎಂದು ಹೇಳುವ ಮೂಲಕ ದೆಹಲಿ ಹೈಕೋರ್ಟ್ ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ಭಿಕ್ಷಾಟನೆಯನ್ನು ಅಪರಾಧವಲ್ಲ ಎಂದು ತೀರ್ಪು ನೀಡಿತು.  ಹಂಗಾಮೀ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಈ ತೀರ್ಪಿನ ಪರಿಣಾಮವಾಗಿ ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆಯ ಅಡಿಯಲ್ಲಿ ಯಾರೇ ವ್ಯಕ್ತಿಗಳ ವಿರುದ್ಧ ಭಿಕ್ಷಾಟನೆಗೆ ವಿರುದ್ಧ ದಾಖಲಿಸಲಾಗಿರುವ ಖಟ್ಲೆಗಳು ವಜಾಗೊಳ್ಳುತ್ತವೆ ಎಂದು ಹೇಳಿತು. ವಿಷಯದ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳನ್ನು ಪರಿಶೀಲಿಸಿದ ಬಳಿಕ ಬಲವಂತದ ಭಿಕ್ಷಾಟನೆ ಜಾಲವನ್ನು ನಿಗ್ರಹಿಸಲು ಪರ್‍ಯಾಯ ಶಾಸನವನ್ನು ತರುವ ಸ್ವಾತಂತ್ರ್ಯ ದೆಹಲಿ ಸರ್ಕಾರಕ್ಕೆ ಇದೆ ಎಂದೂ ಹೈಕೋರ್ಟ್ ಹೇಳಿತು. ಭಿಕ್ಷಾಟನೆಯನ್ನು ಅಪರಾಧ ಎಂಬುದಾಗಿ ಪರಿಗಣಿಸುವ, ದೆಹಲಿಗೆ ವಿಸ್ತರಣೆಗೊಂಡಿರುವ ಕಾಯ್ದೆಯ ವಿಧಿ ಅಥವಾ ಈ ಅಪರಾಧಕ್ಕೆ ಸಂಬಂಧಿಸಿದಂತೆ ವ್ಯವಹರಿಸುವ ಅಧಿಕಾರಿಗಳ ಅಧಿಕಾರದಂತಹ ಸಂಬಂಧಿತ ವಿಷಯಗಳು ಕೂಡಾ ಸಂವಿಧಾನಬಾಹಿರವಾಗಿದ್ದು, ರದ್ದುಗೊಳಿಸಲ್ಪಟ್ಟಿವೆ ಎಂದು ಪೀಠ ಹೇಳಿತು.  ಕಾಯ್ದೆಯ ಯಾವ ವಿಧಿಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಿಕ್ಷಾಟನೆಯನ್ನು ಅಪರಾಧವನ್ನಾಗಿ ಮಾಡುವುದಿಲ್ಲವೋ ಅಥವಾ ಭಿಕ್ಷಾಟನೆಯನ್ನು ಅಪರಾಧವನ್ನಾಗಿ ಮಾಡಲು ಸಂಬಂಧಿಸಿಲ್ಲವೂ ಅಂತಹ ವಿಧಿಗಳನ್ನು ರದ್ದು ಪಡಿಸುವ ಅಗತ್ಯವಿಲ್ಲ ಮತ್ತು ಅವುಗಳನ್ನು ಉಳಿಸಿಕೊಳ್ಳಲಾಗಿದೆ ಎಂದೂ ಕೋರ್ಟ್ ಸ್ಪಷ್ಟ ಪಡಿಸಿತು. ಯಾವ ರಾಷ್ಟ್ರದಲ್ಲಿ ಸರ್ಕಾರವು ಆಹಾರ ಮತ್ತು ನೌಕರಿ ಒದಗಿಸಲು ಸಮರ್ಥವಾಗಿಲ್ಲವೋ ಅಂತಹ ರಾಷ್ಟ್ರದಲ್ಲಿ ಭಿಕ್ಷಾಟನೆ ಅಪರಾಧವಾಗುವುದು ಹೇಗೆ ಎಂದು ಹೈಕೋರ್ಟ್ ಮೇ ೧೬ರಂದು ಪ್ರಶ್ನಿಸಿತ್ತು. ಭಿಕ್ಷಾಟನೆಯನ್ನು ಅಪರಾಧಮುಕ್ತವನ್ನಾಗಿ ಮಾಡುವಂತೆ ಕೋರಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಪೀಠ ನಡೆಸಿತ್ತು.  ಭಿಕ್ಷಾಟನೆಯನ್ನು ಅಪರಾಧವನ್ನಾಗಿ ಮಾಡುವ ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆಯಲ್ಲಿ ಸಾಕಷ್ಟು ನಿಯಂತ್ರಣಗಳು ಮತ್ತು ಸಮತೋಲನಗಳು ಇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ದಾರಿದ್ರ್ಯದ ಪರಿಣಾಮವಾಗಿ ಭಿಕ್ಷಾಟನೆ ಮಾಡಿದರೆ ಅದನ್ನು ಅಪರಾಧವನ್ನಾಗಿ ಮಾಡಲಾಗದು ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಭಿಕ್ಷಾಟನೆಯನ್ನು ಅಪರಾಧಮುಕ್ತವನ್ನಾಗಿ ಮಾಡಲೂ ಸಾಧ್ಯವಿಲ್ಲ ಎಂದು ಅದು ಹೇಳಿತ್ತು. ಹರ್ಷ ಮಂದರ್ ಮತ್ತು ಕರ್ಣಿಕ ಸಾಹ್ನಿ ಅವರ ಸಲ್ಲಿಸಿದ್ದ ಸಾರ್ವಜಿನಿಕ ಹಿತಾಸಕ್ತಿ ಅರ್ಜಿಗಳು ಭಿಕ್ಷುಕರಿಗೆ ರಾಷ್ಟ್ರದ ರಾಜಧಾನಿಯಲ್ಲಿ ಮೂಲಭೂತ ಮಾನವೀಯ ಮತ್ತು ಮೂಲಭೂತ ಹಕ್ಕುಗಳನ್ನು ನೀಡುವುದರ ಜೊತೆಗೆ ಭಿಕ್ಷಾಟನೆಯನ್ನು ಅಪರಾಧಮುಕ್ತವನ್ನಾಗಿ ಮಾಡಬೇಕು ಎಂದು ಕೋರಿದ್ದವು. ನಗರದಲ್ಲಿ ಭಿಕ್ಷುಕರಿಗೆ ಎಲ್ಲ ಮನೆಗಳಲ್ಲೂ ಸೂಕ್ತ ಆಹಾರ ಮತ್ತು ಔಷಧ ಸವಲತ್ತುಗಳನ್ನು ಒದಗಿಸಬೇಕು ಎಂದೂ ಅರ್ಜಿಗಳು ಮನವಿ ಮಾಡಿದ್ದವು. ಅರ್ಜಿದಾರರು ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆಯನ್ನು ಕೂಡಾ ಪ್ರಶ್ನಿಸಿದ್ದರು. ಕೇಂದ್ರ ಮತ್ತು ಆಪ್ ಸರ್ಕಾರ ೨೦೧೬ರ ಅಕ್ಟೋಬರಿನಲ್ಲಿ ಭಿಕ್ಷಾಟನೆಯನ್ನು ಅಪರಾಧ ಮುಕ್ತವನ್ನಾಗಿ ಮಾಡಲು ಮತ್ತು ಭಿಕ್ಷುಕರು ಮತ್ತು ವಸತಿ ರಹಿತ ವ್ಯಕ್ತಿಗಳಿಗೆ ಪುನರ್ ವಸತಿ ಕಲ್ಪಿಸಲು ಸಾಮಾಜಿಕ ನ್ಯಾಯ ಸಚಿವಾಲಯವು ಮಸೂದೆಯೊಂದನ್ನು ರಚಿಸಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದವು. ಆದರೆ ಶಾಸನಕ್ಕೆ ತಿದ್ದುಪಡಿ ತರುವ ಪ್ರಸ್ತಾಪವನ್ನು ಬಳಿಕ ಕೈಬಿಡಲಾಗಿತ್ತು.  ಮೊದಲ ಬಾರಿ ಭಿಕ್ಷಾಟನೆಯ ತಪ್ಪು ಮಾಡಿದಾಗ ಮೂರು ವರ್ಷಗಳಿಗೂ ಹೆಚ್ಚಿನ ಅವಧಿಯ ಸೆರೆವಾಸವನ್ನು ವಿಧಿಸಬಹುದು ಮತ್ತು ಪುನಃ  ಅಪರಾಧ ಎಸಗಿದರೆ ೧೦ ವರ್ಷಗಳವರೆಗೂ ವ್ಯಕ್ತಿಗೆ ಸೆರೆವಾಸದ ಶಿಕ್ಷೆ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ. ಭಿಕ್ಷಾಟನೆಗೆ ಸಂಬಂಧಿಸಿದಂತೆ ಪ್ರಸ್ತುತ ಯಾವುದೇ ಕಾನೂನು ಅಸ್ತಿತ್ವದಲ್ಲಿ ಇಲ್ಲ. ಬಹುತೇಕ ರಾಜ್ಯಗಳು ಭಿಕ್ಷಾಟನೆಯನ್ನು ಅಪರಾಧವನ್ನಾಗಿಸುವ ಬಾಂಬೆ ಭಿಕ್ಷಾಟನೆ ತಡೆ ಕಾಯ್ದೆಯನ್ನೇ (೧೯೫೯) ಅಂಗೀಕರಿಸಿವೆ ಅಥವಾ  ಅದನ್ನು ಮಾದರಿಯಾಗಿಟ್ಟುಕೊಂಡು ಕಾನೂನು ರೂಪಿಸಿಕೊಂಡಿವೆ.

2018: ಮುಂಬೈ: ಮಹಾರಾಷ್ಟ್ರದ ಮುಂಬೈಯ ಪೂರ್ವ ಹೊರವಲಯದ ಚೆಂಬೂರಿನಲ್ಲಿರುವ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ನಿನ ತೈಲ ಶುದ್ಧೀಗಾರದಲ್ಲಿ (ರಿಫೈನರಿ) ಭಾರಿ ಅಗ್ನಿ ಅನಾಹುತ ಸಂಭವಿಸಿ, ಕನಿಷ್ಠ ೪೩ ಮಂದಿ ಕಾರ್ಮಿಕರು ಗಾಯಗೊಂಡರು. ಗಾಯಾಳುಗಳ ಪೈಕಿ ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ರಿಫೈನರಿ ಘಟಕದ ಸಮೀಪದ ಸ್ಥಳಗಳ ನಿವಾಸಿಗಳು ತಮಗೆ ಭೂಕಂಪ ಮಾದರಿಯ ಕಂಪನದ ಅನುಭವಗಳಾಗಿರುವುದಾಗಿ ದೂರಿದರು.  ಬಿಪಿಸಿಎಲ್ ನ ನೆರವು ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ೨೨ ಮಂದಿಗೆ ಮನೆಗೆ ಹೋಗಲು ಅವಕಾಶ ನೀಡಲಾಯಿತು. ೨೧ ಮಂದಿಯನ್ನು ಚೆಂಬೂರಿನ ಇನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಮುರಿತ ಹಾಗೂ ಚರ್ಮ ಕಿತ್ತ ಗಾಯಗಳು ಆಗಿವೆ. ಒಬ್ಬರಿಗೆ ತೀವ್ರ ನಿಗಾ ಘಟಕದಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ ಎಂದು ಉಪ ಪೊಲೀಸ್ ಕಮೀಷನರ್ (೬ನೇ ವಲಯ) ಶಾಜಿ ಉಮಪ್ ಹೇಳಿದರು. ಇದಕ್ಕೆ ಮುನ್ನ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಬಿಪಿಸಿಎಲ್ ಹೇಳಿಕೆಯಲ್ಲಿ ತಿಳಿಸಿತ್ತು. ಗಾಯಾಳುಗಳಿಗೆ ರಿಫೈನರಿಯ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೇಳಿಕೆ ತಿಳಿಸಿತ್ತು. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಕಂಪೆನಿ ತಿಳಿಸಿತು. ಘಟಕದಿಂದ ೨೦ಕ್ಕೂ ಹೆಚ್ಚು ಕಾರ್ಮಿಕರನ್ನು ತೆರವು ಮಾಡಲಾಯಿತು. ಮುಂಬೈ ಅಗ್ನಿಶಾಮಕ ದಳವು ೭ ಅಗ್ನಿಶಾಮಕ ವಾಹನಗಳನ್ನು ದುರಂತ ಸ್ಥಳಕ್ಕೆ ಕಳುಹಿಸಿದೆ. ಎರಡು ಫೋಮ್ ಟೆಂಡರುಗಳು ಮತ್ತು ಎರಡು ಜಂಬೋ ಟ್ಯಾಂಕರುಗಳನ್ನೂ ಕಳುಹಿಸಲಾಗಿದೆ. ಬೆಂಕಿ ಹೈಡ್ರೋಕ್ರ್ಯಾಕರ್ ಘಟಕಕ್ಕೆ ಮಾತ್ರವೇ ಸೀಮಿತವಾಗಿದೆ ಎಂದು ಅಗ್ನಿಶಾಮಕ ಮೂಲಗಳು ತಿಳಿಸಿದವು. ಅತಿಯಾದ ಬಿಸಿ ಮತ್ತು ಒತ್ತಡ ಸೃಷ್ಟಿಯಾಗಿರುವ ಕಾರಣ, ಸುರಕ್ಷಿತ ದೂರದಿಂದ ಬೆಂಕಿ ಆರಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ಪಿ.ಎಸ್. ರಹಂಗ್ದಳೆ ಹೇಳಿದರು. ಏಳು ಸ್ಥಿರ ಅಗ್ನಿಶಾಮಕ ಯಂತ್ರಗಳು ಮತ್ತು ನಾಲ್ಕು ಹೋಸ್ ಲೈನ್ ಅಗ್ನಿಶಾಮಕ ಯಂತ್ರಗಳನ್ನು ಬಳಸಿ ಬೆಂಕಿಯನ್ನು ನಿಯಂತ್ರಿಸಲು ಯತ್ನಿಸಲಾಗುತ್ತಿದೆ ಎಂದು ಮೂಲಗಳು ಹೇಳಿದವು. ಭೂಕಂಪ ಮಾದರಿ ಅನುಭವ: ಈಮಧ್ಯೆ, ರಿಫೈನರಿ ಘಟಕದಿಂದ ೪ ಕಿಮೀಗಳಷ್ಟು ದೂರದಲ್ಲಿ ಭೂಕಂಪದಂತಹ ಅನುಭವಗಳಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಚೆಂಬೂರಿನ ಉತ್ತರಕ್ಕೆ ಇರುವ ದೇವನಾರ್‌ನ ನಿವಾಸಿಗಳು ಕೂಡಾ ಸ್ಫೋಟವಾದಾಗ ಅನುಭವವಾಗುವಂತಹ ಕಂಪನದ ಅನುಭವ ಆಗಿರುವ  ಬಗ್ಗೆ ವರದಿ ಮಾಡಿದ್ದಾರೆ. ರಿಫೈನರಿ ಸಮೀಪ ಪುನರ್ ವಸತಿ ಮಾಡಲಾಗಿರುವ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಮಂಡಳಿಯ ೭೨ ಕಟ್ಟಡಗಳಲ್ಲಿ ನ ನಿವಾಸಿಗಳು ಘಟಕದ ಹೊರಭಾಗದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.   ರಿಫೈನರಿ ಘಟಕದಿಂದ ಆಗುತ್ತಿರುವ ಮಾಲಿನ್ಯದ ಪರಿಣಾಮವಾಗಿ ತಾವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿಯೂ ಸ್ಥಳೀಯರು ದೂರಿದರು.

.
2017: ನವದೆಹಲಿ: ಮಹತ್ವದ ಬೆಳವಣಿಯೊಂದರಲ್ಲಿ ವಿವಾದಿತ ರಾಮಜನ್ಮಭೂಮಿ ಸ್ಥಳದಿಂದ ದೂರದಲ್ಲಿ ಅಥವಾ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ  ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ (ಅಫಿಡವಿಟ್ ) ತಿಳಿಸಿತು. ರಾಮ ಜನ್ಮಭೂಮಿ ವಿವಾದ ಪ್ರಕರಣ ಇತ್ಯರ್ಥಕ್ಕೆ ತ್ರಿಸದಸ್ಯ ನ್ಯಾಯಪೀಠವನ್ನು ಸುಪ್ರೀಂ ಕೋರ್ಟ್ ಹಿಂದಿನ ದಿನವಷ್ಟೇ ರಚನೆ ಮಾಡಿದ್ದು, ಬೆನ್ನಲ್ಲೇ ಶಿಯಾ ವಕ್ಫ್ ಮಂಡಳಿ ಈ ಪ್ರಮಾಣ ಪತ್ರ ಸಲ್ಲಿಸಿತು. ಎಎನ್ ಐ ವರದಿ ಪ್ರಕಾರ, ಅಯೋಧ್ಯೆಯಲ್ಲಿರುವ  ಶ್ರೀರಾಮನ ಜನ್ಮಸ್ಥಳದಿಂದ ದೂರದಲ್ಲಿ ಮುಸ್ಲಿಮ್ ಬಾಹುಳ್ಯ ಇರುವ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಮಂಡಳಿ ಪ್ರಮಾಣ ಪತ್ರದಲ್ಲಿ ತಿಳಿಸಿತು. ಅಲ್ಲದೇ ಬಾಬ್ರಿ ಮಸೀದಿ ಶಿಯಾ ವಕ್ಫ್ ಆಸ್ತಿಯಾಗಿದೆ. ಪರಸ್ಪರ ಸೌಹಾರ್ದತಯುತವಾಗಿ ಸಂಧಾನದ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕಾಗಿದೆ.  ಹಾಗಾಗಿ ವಿವಾದವನ್ನು ಹೊಂದಾಣಿಕೆ ಮೂಲಕ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲು ಕಾಲಾವಕಾಶ ಕೊಡಿ ಎಂದು ಸುಪ್ರೀಂ ಪೀಠಕ್ಕೆ ಮನವಿ ಮಾಡಿತು.
2017: ನವದೆಹಲಿ: ದೇಶಾದ್ಯಂತ 1ರಿಂದ 8ನೇ ತರಗತಿವರೆಗೆ ಯೋಗ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕೆಂದು
ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಶಾಲೆಯಲ್ಲಿ ಏನು ಕಲಿಸಬೇಕೆಂಬುದನ್ನು ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ, ಇಂತಹ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಕಡ್ಡಾಯ ಗೊಳಿಸಬೇಕೆಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ನ ಜಸ್ಟೀಸ್ ಎಂಬಿ ಲೋಕುರ್ ನೇತೃತ್ವದ ಪೀಠ ವಜಾಗೊಳಿಸಿತು.  ಶಾಲೆಗಳಲ್ಲಿ ಯಾವ ವಿಷಯವನ್ನು ಬೋಧಿಸಬೇಕೆಂದು ನಾವ್ಯಾರು ಹೇಳಲು ಸಾಧ್ಯವಿಲ್ಲ. ಇದು ನಮ್ಮ ಕೆಲಸವಲ್ಲ.ಹಾಗಾಗಿ ನಾವು ಹೇಗೆ ನಿರ್ದೇಶನ ನೀಡಲು ಸಾಧ್ಯ ಎಂದು ಪೀಠ ಪ್ರಶ್ನಿಸಿತು.


2017: ಇಸ್ಲಾಮಾಬಾದ್‌ : ಆತ್ಮಾಹುತಿ ಬಾಂಬ್‌ ದಾಳಿಗಳು ಸಾಮಾನ್ಯವಾಗಿರುವ ಪೂರ್ವ ಪಾಕಿಸ್ಥಾನದ ಲಾಹೋರಿನಲ್ಲಿ ಈದಿನ ಸಂಭವಿಸಿದ ಬಾಂಬ್‌ ಸ್ಫೋಟಕ್ಕೆ 22 ಮಂದಿ ಬಲಿಯಾದರು. ಈ ಬಾಂಬ್‌ ಸ್ಫೋಟಕ್ಕೆ ಈ ತನಕ ಯಾವುದೇ ಉಗ್ರ ಸಂಘಟನೆ ಹೊಣೆ ಹೊತ್ತಿಲ್ಲ.

2017: ನವದೆಹಲಿ: ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ಎಲ್ಲಿಯವರೆಗೆ ಮುಂದುವರಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿತು.  ಸಂವಿಧಾನದ 370ನೇ ವಿಧಿಗೆ ಸಂಬಂಧಿಸಿದಂತೆ ಕುಮಾರಿ ವಿಜಯಲಕ್ಷ್ಮಿ ಝಾ
ಅವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌ ಖೇಹರ್‌ ಅವರಿದ್ದ ಪೀಠ  ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಕಾಲಾವಕಾಶ ನೀಡಿ ನೋಟೀಸ್‌ ಜಾರಿ ಮಾಡಿತು. ಝಾ ಅವರು 2014ರ ಜುಲೈನಲ್ಲಿ ಮೊದಲ ಸಲ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸಿ ಈ ಕುರಿತು ಪ್ರಶ್ನಿಸಿದ್ದರು. ಆ ವೇಳೆ ಹೈಕೋರ್ಟ್‌ಗೆ  ತೆರಳುವಂತೆ ಸೂಚಿಸಿದ್ದ ಸುಪ್ರೀಂ,ಕೋರ್ಟ್  ಅರ್ಜಿಯನ್ನು ತಿರಸ್ಕರಿಸಿತ್ತು. ನಂತರ ಹೈಕೋರ್ಟ್‌ ಸಹ, ‘ಸುಪ್ರೀಂಕೋರ್ಟ್‌ ಈಗಾಗಲೇ ತಿರಸ್ಕರಿಸಿರುವ ಅರ್ಜಿಯ ಕುರಿತು ಪ್ರತಿಕ್ರಿಯಿಸಲು ಬೇರೇನು ಉಳಿದಿಲ್ಲ’ ಎಂದು ಹೇಳಿ ಅರ್ಜಿ ವಜಾ ಮಾಡಿತ್ತು. ಹೀಗಾಗಿ ಮತ್ತೆ ಝಾ ಅವರು ಸುಪ್ರೀಂ ಮೆಟ್ಟಿಲೇರಿದ್ದರು.
2017: ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ  ದೀಪಕ್ ಮಿಶ್ರಾ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಯಿತು. ದೀಪಕ್ ಮಿಶ್ರಾ ಅವರ ನೇಮಕದ ಬಗ್ಗೆ ಕಾನೂನು ಸಚಿವಾಲಯವೂ ಅಧಿಕೃತ ಆದೇಶ ಹೊರಡಿಸಿತು.ಪ್ರಸ್ತುತ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೆ.ಎಸ್ ಖೇಹರ್ ಅವರು ಇದೇ ತಿಂಗಳ 27ರಂದು ನಿವೃತ್ತಿಯಾಗಲಿದ್ದಾರೆ. ಬಳಿಕ ದೀಪಕ್ ಮಿಶ್ರಾ ಅವರು ಖೇಹರ್ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
2015:ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರಾ ವಲಯದಲ್ಲಿಈದಿನ ಸಂಜೆ ಭದ್ರತಾ ಪಡೆ ಸಿಬ್ಬಂದಿ ಮತ್ತು ಶಂಕಿತ ಉಗ್ರರಗುಂಪಿನ ನಡುವೆ ಗುಂಡಿನ ಚಕಮಕಿ ಆರಂಭವಾಯಿತು. 20ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯಾಚರಣೆ ಪಡೆಯಯೋಧರ ತುಕಡಿ ಗಡಿ ನಿಯಂತ್ರಣ ರೇಖೆಯ ಬಳಿ ಇರುವಸೇನಾಶಿಬಿರದ ಸುತ್ತಮುತ್ತ ಎಂದಿನಂತೆ ಗಸ್ತು ತಿರುಗುತ್ತಿರುವಾಗಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಸಾಗುತ್ತಿರುವುದನ್ನುಗಮನಿಸಿದರುಅವರನ್ನು ತಡೆಯಲು ಯೋಧರು ಪ್ರಯತ್ನಿಸಿದಾಗಉಗ್ರರು ಗುಂಡಿನ ದಾಳಿ ಆರಂಭಿಸಿದ್ದಾಗಿ ಸೇನಾ ಮೂಲಗಳುತಿಳಿಸಿದವು.

2015: ನವದೆಹಲಿ: ಮುಂಬೈ ಮೇಲಿನ 1993ರ ಸರಣಿ ಸ್ಪೋಟ ಅಪರಾಧಿ ಯಾಕುಬ್ ಮೆಮನ್ ಮರಣದಂಡನೆ ಜಾರಿಗೆ ಸಂಬಂಧಿಸಿದಂತೆ ಮೂರು ಪ್ರಮುಖ ಟಿವಿ ವಾಹಿನಿಗಳ ಸುದ್ದಿ ಪ್ರಸಾರ ಬಗ್ಗೆ ಅಸಮಾಧಾನಗೊಂಡ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ಟಿವಿ ವಾಹಿನಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿತು. ಈ ಟಿವಿ ವಾಹಿನಿಗಳ ಪ್ರಸಾರದ ಕೆಲವು ಭಾಗಗಳು ಸಮರ್ಪಕವಾಗಿರಲಿಲ್ಲ ಎಂದು ಭಾವಿಸಿರುವ ಸಚಿವಾಲಯವು ಈ ಸಂಬಂಧ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿ ನೋಟಿಸ್ ನೀಡಿತು. ‘ನಿಮ್ಮ ಸುದ್ದಿ ಪ್ರಸಾರವು ಕಾರ್ಯಕ್ರಮ ಸಂಹಿತೆಯ ವಿಧಿಗಳನ್ನು ಹೇಗೆ ಉಲ್ಲಂಘಿಸಿಲ್ಲ’ ಎಂಬುದಾಗಿ ವಿವರಿಸುವಂತೆ ಸಚಿವಾಲಯವು ಈ ವಾಹಿನಿಗಳಿಗೆ ಸೂಚಿಸಿತು.ಕಾರ್ಯಕ್ರಮ ಸಂಹಿತೆ ಪ್ರಕಾರ ವಾಹಿನಿಗಳು ಅಶ್ಲೀಲ, ಮಾನಹಾನಿಕಾರಕ, ದುರುದ್ದೇಶಪೂರಿತ, ತಪ್ಪು ಹಾಗೂ ಸಲಹಾತ್ಮಕ ಮತ್ತು ಅರ್ಧ ಸತ್ಯದ ಸುದ್ದಿಗಳನ್ನು ಪ್ರಸಾರ ಮಾಡುವಂತಿಲ್ಲ. ಹಿಂಸೆಗೆ ಪ್ರಚೋದನೆ ನೀಡುವಂತಹ ಅಥವಾ ರಾಷ್ಟ್ರವಿರೋಧಿ ಭಾವನೆಗಳನ್ನು ಪ್ರಚೋದಿಸುವಂತಹ ಇಲ್ಲವೇ ಕಾನೂನು ಮತ್ತು ಸುವ್ಯವಸ್ಥೆಗೆ ವಿರುದ್ಧವಾದ ಯಾವುದೇ ಸುದ್ದಿಗಳನ್ನೂ ವಾಹಿನಿಗಳು ಪ್ರಸಾರ ಕಾರ್ಯಕ್ರಮ ಸಂಹಿತೆಯ ಪ್ರಕಾರ ಪ್ರಸಾರ ಮಾಡುವಂತಿಲ್ಲ.

2015: ಶ್ರೀನಗರ: ಜೀವಂತವಾಗಿ ಸೆರೆಸಿಕ್ಕಿರುವ ಪಾಕಿಸ್ತಾನ ಮೂಲದ ಉಗ್ರ ನವೀದ್ ಯಾನೆ ಉಸ್ಮಾನ್​ಗೆ ಆಶ್ರಯ ನೀಡಿದ್ದ ವ್ಯಕ್ತಿ ಸೇರಿದಂತೆ ಒಟ್ಟು 4 ಮಂದಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್​ಐಎ) ಸಿಬ್ಬಂದಿ ಬಂಧಿಸಿದರು. ಫುಲ್ವಾಮಾ ಜಿಲ್ಲೆಯ ನಿವಾಸಿಗಳಾದ ಫಯಾಜ್ ಅಹ್ಮದ್ ವಾನಿ, ಜಾವೇದ್ ಅಹ್ಮದ್ ವಾನಿ, ಮೊಹಮ್ಮದ್ ಅಲ್ತಾಫ್ ವಾನಿ ಮತ್ತು ಜಾವೇದ್ ಅಹ್ಮದ್ ಪರೆ ಬಂಧಿತರು. ಬಂಧಿತರೆಲ್ಲರೂ ಲಷ್ಕರ್ ಎ ತಯ್ಯಾಬದ ಸ್ಲೀಪರ್ ಸೆಲ್​ಗಳ ಸದಸ್ಯರೆಂದು ಎನ್​ಐಎ ಮೂಲಗಳು ತಿಳಿಸಿದವು. 3 ದಿನಗಳ ಹಿಂದೆ ಪಾಕಿಸ್ತಾನದ ಫೈಸಲಾಬಾದ್​ನ ನಿವಾಸಿ ಹಾಗೂ ಲಷ್ಕರ್ ಎ ತಯ್ಯಾಬದ ಉಗ್ರ ನವೀದ್ ಉಧಂಪುರದಲ್ಲಿ ಗಡಿ ಭದ್ರತಾ ಪಡೆಯ ಯೋಧರ ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ಚಕಮಕಿಯಲ್ಲಿ ಈತನ ಸಹಚರ ಮೃತಪಟ್ಟಿದ್ದ. ಆದರೆ ತಪ್ಪಿಸಿಕೊಳ್ಳುವಾಗ ನವೀದ್ ಕೈಗೆ ಒತ್ತೆ ಸೆರೆ ಸಿಕ್ಕಿದ್ದವರು  ಈತನನ್ನು ಜೀವಂತವಾಗಿ ಹಿಡಿದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆನಂತರದ ವಿಚಾರಣೆಯಲ್ಲಿ ನವೀದ್ ತನ್ನನ್ನು ವ್ಯಕ್ತಿಯೊಬ್ಬರು ರಸ್ತೆ ಮಾರ್ಗದಲ್ಲಿ ಜಮ್ಮು ಪ್ರದೇಶಕ್ಕೆ ಕರೆತಂದಿದ್ದಾಗಿ ತಿಳಿಸಿದ್ದ. ಅಲ್ಲದೆ, ಕೆಲವು ಕಾಲ ತನಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರೆಂದು ಹೇಳಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಜಮ್ಮು ಪ್ರದೇಶಕ್ಕೆ ಕರೆತಂದಿದ್ದ ಎನ್​ಐಎ ಸಿಬ್ಬಂದಿ, ದಾಳಿಗೆ ಸಹಕರಿಸಿದವರನ್ನು ಗುರುತಿಸುವಂತೆ ತಿಳಿಸಿದ್ದರು. ಅದರಂತೆ ನವೀದ್ ಈ ನಾಲ್ಕು ಮಂದಿಯನ್ನು ಗುರುತಿಸಿದ್ದಾಗಿ ಎನ್​ಐಎ ಮೂಲಗಳು ಹೇಳಿದವು.

2015: ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಿಂದ 250 ಕಿಮೀ ದೂರದಲ್ಲಿರುವ ಮಂಡಿ ಜಿಲೆಯ ಧರಂಪುರ ಪ್ರದೇಶದಲ್ಲಿ ಮೇಘಸ್ಪೋಟದ ಪರಿಣಾಮವಾಗಿ ಈದಿನ ಬೆಳಗ್ಗೆ ಸುರಿದ ಭಾರಿ ಮಳೆ- ದಿಢೀರ್ ಪ್ರವಾಹಕ್ಕೆ ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಮಂದಿ ಬಲಿಯಾಗಿರುವ ಭೀತಿ ವ್ಯಕ್ತವಾಯಿತು. ಹಠಾತ್ ಮಳೆ, ಪ್ರವಾಹದಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವಾರು ವಾಹನಗಳು ಹಾಗೂ ಜಾನುವಾರುಗಳೂ ಕೊಚ್ಚಿ ಹೋದವು. ಬಹಳಷ್ಟು ಪ್ರದೇಶ ನೀರಿನಡಿಯಲ್ಲಿ ಮುಳುಗಿತು. ಭೂಕುಸಿತದಿಂದಾಗಿ ಮನೆಯೊಂದು ಕುಸಿದು ಬಿದ್ದು ಅದರೊಳಗಿದ್ದ ಒಂದೇ ಕುಟುಂಬದ ಮೂವರು ಜೀವಂತ ಹೂತು ಹೋಗಿರುವ ಶಂಕೆ ವ್ಯಕ್ತವಾಯಿತು. ಸಾಧುವೊಬ್ಬರು ಬಿಯಾಸ್ ನದಿಯ ಉಪನದಿಯಾದ ಸೋನ್ ಖುಡ್ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸೋನ್ ಖುಡ್ ಹಠಾತ್ತನೆ ಉಕ್ಕಿ ಹರಿದು ಅಂಗಡಿ, ಮನೆಗಳನ್ನು ಮುಳುಗಿಸುತ್ತಾ ಧರಂಪುರ ಬಸ್ ನಿಲ್ದಾಣಕ್ಕೆ ನುಗ್ಗಿದಾಗ ಅಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸುಮಾರು ಒಂದು ಡಜನ್ ಮಂದಿ ಪ್ರಾಣ ಉಳಿಸಿಕೊಳ್ಳಲು ಮೊದಲ ಮಹಡಿಗೆ ಧಾವಿಸಿದರು. ಪ್ರವಾಹದಲ್ಲಿ ಸಿಲುಕಿ ಮೂರು ಬಸ್ಸುಗಳು ಹಾನಿಗೊಂಡರೆ, ಮೂರು ಕಾರುಗಳು ಪ್ರವಾಹದಲ್ಲಿ ಕೊಚ್ಚಿ ಹೋದವು.ಪ್ರಬಲ ಪ್ರವಾಹ ರಕ್ಷಣಾ ಕಾರ್ಯಾಚರಣೆಗಳಿಗೂ ಅಡ್ಡಿಯಾಯಿತು.

 2015: ಮುಂಬೈ: ಮುಂಬೈಯಿಂದ ದೆಹಲಿಗೆ ಹೊರಟಿದ್ದ ಇಂಡಿಗೊ ವಿಮಾನವು ಗಗನಕ್ಕೆ ಏರಿದ 15 ನಿಮಿಷಗಳಲ್ಲಿಯೇ ತಾಂತ್ರಿಕ ತೊಂದರೆ ಕಾರಣ ಪುನಃ ಮುಂಬೈ ವಿಮಾನ ನಿಲ್ದಾಣಕ್ಕೇ ಮರಳಿದ ಘಟನೆ ಈದಿನ ಬೆಳಗ್ಗೆ ಘಟಿಸಿತು. 6ಇ-178 ವಿಮಾನದಲ್ಲಿ ಇದ್ದ ಎಲ್ಲಾ 150 ಮಂದಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದು, ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಯಬೇಕಾದ ಸನ್ನಿವೇಶ ಉಂಟಾಗಲಿಲ್ಲ. ವಿಮಾನವು ಸುಮಾರು 15 ನಿಮಿಷ ತಡವಾಗಿ ಬೆಳಗ್ಗೆ 9.45ಕ್ಕೆ ಮುಂಬೈಯಿಂದ ಹೊರಟಿತ್ತು. ಆದರೆ ಗಗನಕ್ಕೆ ಏರಿದ ಸುಮಾರು 15 ನಿಮಿಷಗಳ ಬಳಿಕ ಕೆಲವು ತಾಂತ್ರಿಕ ತೊಂದರೆಗಳ ಕಾರಣ ವಿಮಾನವು ಮುಂಬೈಗೇ ವಾಪಸಾಗುವುದು ಎಂದು ಪೈಲಟ್ ಪ್ರಕಟಿಸಿದರು. ಇಂಧನ ವ್ಯವಸ್ಥೆಯಲ್ಲಿನ ಸೋರಿಕೆಯಿಂದಾಗಿ ವಿಮಾನವನ್ನು ಮುಂಬೈಗೆ ಹಿಂದೆ ತರಬೇಕಾಯಿತು ಎನ್ನಲಾಯಿತು.

 2015: ನವದೆಹಲಿ: ಬಿಹಾರ ಮತ್ತು ಹಿಮಾಚಲ ಪ್ರದೇಶಕ್ಕೆ ಹೊಸ ರಾಜ್ಯಪಾಲರ ನೇಮಕವಾಯಿತು. ಈ ಸಂಬಂಧ ಆದೇಶ ಹೊರಡಿಸಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ರಾಮ್ ರಾಥ್ ಕೋವಿಂದ್ ಅವರನ್ನು ಬಿಹಾರ ರಾಜ್ಯಪಾಲರಾಗಿ ಮತ್ತು ಆಚಾರ್ಯ ದೇವವ್ರತ ಅವರನ್ನು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಳಿಸಿದರು.  ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇವರ ಕಾರ್ಯಾವಧಿ ಆರಂಭವಾಗುವುದು.

2015: ಚೆನೈ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆಗೊಳಿಸಿದ ದೇಶದ ಅತೀ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಸಾಂಸ್ಕೃತಿಕ ನಗರ ಮೈಸೂರು ಮೊದಲ ಸ್ಥಾನ ಪಡೆದುಕೊಂಡಿತು. ‘ಸ್ವಚ್ಛ ಭಾರತ’ ಯೋಜನೆಯಡಿ ಆಯ್ದ 476 ನಗರಗಳ ಪೈಕಿ ಮೈಸೂರಿಗೆ ಪ್ರಥಮ ಸ್ಥಾನ ಲಭಿಸಿದ್ದು, ತಮಿಳು ನಾಡಿನ ತಿರುಚಿರಾಪಳ್ಳಿ ದ್ವಿತೀಯ ಸ್ಥಾನದಲ್ಲಿದೆ. ವಿಶೇಷವೆಂದರೆ ದೇಶದ ಮೊದಲ 10 ಸ್ವಚ್ಛ ನಗರಗಳ ಪಟ್ಟಿಯಲ್ಲಿ ಕರ್ನಾಟಕದ ನಾಲ್ಕು ನಗರಗಳು ಸ್ಥಾನ ಪಡೆದುಕೊಳ್ಳುವ ಮೂಲಕ ಗಮನ ಸೆಳೆದವು.  ಕರ್ನಾಟಕದ ಹಾಸನ, ಮಂಡ್ಯ, ಬೆಂಗಳೂರು ಹಾಗೂ ಪಶ್ಚಿಮ ಬಂಗಾಳದ ಹಲಿಸಹರ, ಗ್ಯಾಂಗ್ಟಕ್, ನವಿ ಮುಂಬೈ, ಕೊಚ್ಚಿ, ತಿರುವನಂತಪುರಂ ನಗರಗಳು ಪಟ್ಟಿಯಲ್ಲಿವೆ. 2014-15ನೇ ಸಾಲಿನಲ್ಲಿ ನಡೆದ ಸಮೀಕ್ಷೆಯಲ್ಲಿ ನಗರಗಳಲ್ಲಿ ಘನ ತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸೌಲಭ್ಯ, ತ್ಯಾಜ್ಯ ನೀರು ಸಂಸ್ಕರಣೆ ಸೇರಿದಂತೆ ಹಲವು ವಿಷಯಗಳಲ್ಲಿನ ಕಾರ್ಯವೈಖರಿಯನ್ನು ಪರಿಗಣಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಕಾರ್ಯಕ್ರಮದ ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಘೋಷಿಸಿತ್ತು.

2015: ರಾಂಚಿ: ವಾಮಾಚಾರ ನಡೆಸುತ್ತಿದ್ದ ಆಪಾದನೆಯಲ್ಲಿ ಐವರು ಮಹಿಳೆಯರನ್ನು ನಸುಕಿನಲ್ಲಿ ರಾಂಚಿಗೆ 40 ಕಿಮೀ ದೂರದ ಮಂದಾರ ಗ್ರಾಮದಲ್ಲಿ ಹೊಡೆದು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದರು. ‘ಐವರು ಮಹಿಳೆಯರನ್ನು ಬಡಿಗೆಗಳು ಮತ್ತು ಸರಳುಗಳಿಂದ ಹೊಡೆದು ಗ್ರಾಮಸ್ಥರು ಕೊಂದು ಹಾಕಿದ್ದಾರೆ. ದಾಳಿ ನಡೆಸಿದವರಲ್ಲಿ ಬಹುತೇಕ ಮಂದಿ ಯುವಕರು. ಮಹಿಳೆಯರನ್ನು ಹಿಂದಿನ ದಿನ ತಡರಾತ್ರಿಯಲ್ಲಿ ಅವರ ಮನೆಗಳಿಂದ ಎಳೆತರಲಾಗಿತ್ತು’ ಎಂದು ಪೊಲೀಸರು ಹೇಳಿದರು. ಈ ಮಹಿಳೆಯರು ಮಾಟ ಮಂತ್ರ ಮಾಡುವುದರಲ್ಲಿ ನಿರತರಾಗಿದ್ದರು ಎಂದು ಗ್ರಾಮಸ್ಥರು ಆಪಾದಿಸಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.  ಮಾಟಗಾತಿಯರು ಎಂದು ಆಪಾದಿಸಿ ಜಾರ್ಖಂಡ್​ನಲ್ಲಿ ಕಳೆದ ಹಲವಾರು ವರ್ಷಗಳಿಂದ ಸುಮಾರು 750ಕ್ಕೂ ಹೆಚ್ಚು ಮಹಿಳೆಯರನ್ನು ಕೊಲ್ಲಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದವು.

2015: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪತ್ನಿ ಸುವ್ರಾ ಮುಖರ್ಜಿ ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ ಎಂದು ಇಲ್ಲಿನ ಸೇನಾ ಆಸ್ಪತ್ರೆ ಮೂಲಗಳು ತಿಳಿಸಿದವು. ಕೆಲ ಕಾಲದಿಂದ ಅಸ್ವಸ್ಥರಾಗಿದ್ದ ಸುವ್ರಾ ಮುಖರ್ಜಿ ಅವರನ್ನು ಹಿಂದಿನ ದಿನ ಸಂಜೆ ಇಲ್ಲಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಹೃದ್ರೋಗಿಯಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಆಸ್ಪತ್ರೆ ವಕ್ತಾರರು ಹೇಳಿದರು.

2015: ಪಟನಾ (ಬಿಹಾರ): ಪ್ರಧಾನಿ ನರೇಂದ್ರ ಮೋದಿ ಅವರು ಈದಿನದ ತಮ್ಮ ಗಯಾ ಪ್ರವಾಸ ಕಾಲಕ್ಕೆ ನಿಗದಿಯಾಗಿದ್ದ ಬೋಧ್ ಗಯಾ ಭೇಟಿಯನ್ನು ರದ್ದು ಪಡಿಸಿದರು. ಬಿಹಾರಿನ ಗಯಾ ಪ್ರವಾಸ ಕಾಲದಲ್ಲಿ ನಿಗದಿಯಾಗಿದ್ದ ತಮ್ಮ ಬೋಧ್ ಗಯಾ ಭೇಟಿಯನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಗೊತ್ತಿರುವ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರದ್ದು ಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ‘ಮೋದಿಯವರು ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಸಮೀಪದಲ್ಲೇ ಇರುವ ಬೋಧ ಗಯಾದ ಮಹಾಬೋಧಿ ದೇವಾಲಯಕ್ಕೆ ಭೇಟಿ ನೀಡುವುದಿಲ್ಲ. ಅವರ ಬೋಧ ಗಯಾ ಭೇಟಿ ರದ್ದಾಗಿದೆ. ಇದಕ್ಕೆ ಕಾರಣವೇನು ಎಂಬುದು ಸಂಬಂಧಪಟ್ಟವರಿಗೆ ಚೆನ್ನಾಗಿ ಗೊತ್ತು’ ಎಂದು ಗಯಾದಲ್ಲಿನ ಅಧಿಕಾರಿಯೊಬ್ಬರು ಹೇಳಿದರು. ಬೌದ್ಧರ ಪವಿತ್ರ ಸ್ಥಳವಾದ ಬೋಧ್ ಗಯಾವು ಗಯಾ ಪಟ್ಟಣದಿಂದ 12 ಕಿಮೀ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 2 ಕಿಮೀ ದೂರದಲ್ಲಿದೆ. ಮುಜಾಫ್ಪರಪುರದಲ್ಲಿ ಜುಲೈ 25ರಂದು ಸಾರ್ವಜನಿಕ ಭಾಷಣ ಮಾಡಿದ್ದ ಮೋದಿ ಅವರು ಗಯಾಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿ ತಮ್ಮ ಎರಡನೇ ಸಾರ್ವಜನಿಕ ಭಾಷಣ ಮಾಡುವರು. ‘ಸಮಯದ ಅಭಾವ ಕಾರಣ ಮೋದಿ ಅವರ ಪ್ರಸ್ತಾಪಿತ ಬೋಧ್ ಗಯಾ ಭೇಟಿ ರದ್ದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಯಾದಲ್ಲಿ ಹೇಳಿದರು. 2013ರ ಜುಲೈ ತಿಂಗಳಿನಿಂದ ಆಗಾಗ ಸರಣಿ ಬಾಂಬ್ ಸ್ಪೋಟಗಳಿಗೆ ತುತ್ತಾಗಿರುವ ಬೋಧ್ ಗಯಾಕ್ಕೆ ಮೋದಿಯವರು ಭೇಟಿ ನೀಡಿದ್ದರೆ ಬೌದ್ಧ ರಾಷ್ಟ್ರಗಳಿಗೆ ಧನಾತ್ಮಕ ಸಂದೇಶವನ್ನು ನೀಡುತ್ತಿತ್ತು ಎಂದು ಬೌದ್ಧ ಭಿಕ್ಷು ಒಬ್ಬರು ಹೇಳಿದರು. ದೇವಾಲಯದ ಆಸುಪಾಸಿನಲ್ಲಿ 2013ರಿಂದ ಈವರೆಗೆ ಕನಿಷ್ಠ 10 ಬಾಂಬ್​ಗಳು ಸ್ಪೋಟಿಸಿದ್ದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸುದ್ಧಿಗಳಾಗಿದ್ದವು.

 2015: ಜಮ್ಮು: ಕೆಲವು ಗಂಟೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಉಧಾಂಪುರ ಜಿಲ್ಲೆಯ ಖೇರಿ ಸಮೀಪ ಶ್ರೀನಗರ ಮತ್ತು ಜಮ್ಮು ಸಂಪರ್ಕ ಸಾಧಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ, ಅಮರನಾಥ ಯಾತ್ರಿಕರ ಪ್ರಯಾಣಕ್ಕೆ ಅಡ್ಡಿಯುಂಟಾಯಿತು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಅಮರನಾಥ ಯಾತ್ರೆಯನ್ನು ರದ್ದು ಪಡಿಸಲಾಯಿತು. 300 ಕಿಲೋ ಮೀಟರ್​ನಷ್ಟು ದೂರ ಹೊಂದಿರುವ ಈ ಹೆದ್ದಾರಿ ಮೂಲಕವೇ ಜಮ್ಮುವಿನಿಂದ ಅಮರನಾಥಕ್ಕೆ ಸಾಗಬೇಕಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಾಹನ ನಿರ್ವಹಣಾಧಿಕಾರಿ ಸಂಜಯ್ ಕೊತ್ವಾಲ್ ಹೇಳಿದರು.

2015: ಲಖನೌ: ಲಖನೌ ಪ್ರಯೋಗಾಲಯ ಪರೀಕ್ಷೆಯಲ್ಲಿ ‘ಮ್ಯಾಗಿ ನೂಡಲ್’ ಮಾದರಿ ವಿಫಲಗೊಂಡಿದ್ದು, ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನೆರೆಯ ಬಾರಾಬಂಕಿಯಲ್ಲಿ ಸಂಗ್ರಹಿಸಲಾದ ‘ಮ್ಯಾಗಿ’ ಸ್ಯಾಂಪಲ್​ಗಳನ್ನು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸತುವಿನ ಅಂಶ ಇದ್ದುದು ಪತ್ತೆಯಾಯಿತು ಎಂದು ಅವರು ನುಡಿದರು. ಪರೀಕ್ಷಾ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್​ಎಸ್​ಎಸ್​ಎಐ) ಕಳುಹಿಸಿಕೊಡಲಾಗುವುದು ಎಂದು ಅಡಿಷನಲ್ ಕಮಿಷನರ (ಆಹಾರ) ಆರ್.ಎಸ್. ಮೌರ್ಯ ಹೇಳಿದರು. ಮ್ಯಾಗಿಯಲ್ಲಿ ಮಾನೋಸೋಡಿಯಂ ಗ್ಲುಟಾಮೇಟ್ (ಎಂಎಸ್​ಜಿ) ಮತ್ತು ಸತುವಿನ ಅಂಶ ಮಿತಿಗಿಂತ ಹೆಚ್ಚಿದೆ ಎಂಬ ಪ್ರಾಥಮಿಕ ವರದಿಗಳ ಬಳಿಕ ರಾಜ್ಯಾದ್ಯಂತ 500 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವುಗಳಲ್ಲಿ ಐದು ಮಾದರಿಗಳು ಸಂಪೂರ್ಣ ‘ಅಯೋಗ್ಯ’ ಎಂದು ಕಂಡು ಬಂದವು ಎಂದು ಅವರು ನುಡಿದರು. ಜೂನ್ ತಿಂಗಳಲ್ಲಿ ಮ್ಯಾಗಿ ಮೇಲೆ ನಿಷೇಧ ಹೇರಲಾಗಿತ್ತು. ಮ್ಯಾಗಿ ತಯಾರಕ ನೆಸ್ಲೆ ಕಂಪೆನಿ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಎಂಎಸ್​ಜಿ ಮತ್ತು ಸತುವಿನ ಅಂಶ ಅತ್ಯಂತ ಹೆಚಚಿನ ಪ್ರಮಾಣದಲ್ಲಿದೆ ಎಂಬುದು ಪತ್ತೆಯಾಗಿ ಕೋಲಾಹಲ ಎದ್ದ ಬಳಿಕ ತನ್ನ ಜನಪ್ರಿಯ ದಿಢೀರ್ ನೂಡಲ್ ’ಮ್ಯಾಗಿ’ಯನ್ನು ರಾಷ್ಟ್ರಾದ್ಯಂತ ಹಿಂತೆಗೆದುಕೊಳ್ಳಲು ನೆಸ್ಲೆ ಆದೇಶಿಸಿತ್ತು. ’ಮ್ಯಾಗಿ’ ಮಾನವ ಸೇವನೆಗೆ ಸುರಕ್ಷಿತವಾಗಿದ್ದು, ಭಾರತದ ಆಹಾರ ಗುಣಮಟ್ಟ ನಿಯಮಾವಳಿಗಳಿಗೆ ಅದು ಬದ್ಧವಾಗಿದೆ ಎಂದು ನೆಸ್ಲೆ ವಾದಿಸಿತ್ತು..

2015: ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ ಮೇಲೆ ಗುಂಡಿನ ದಾಳಿ ಮಾಡಿದ್ದ ದುಷ್ಕರ್ವಿುಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ಪಾಕ್​ನ ಡಾನ್ ಪತ್ರಿಕೆ ವರದಿ ಮಾಡಿತು. ಖೈದಾಬಾದ್​ನ ದೌಡ್ ಚೌರಂಗಿ ಪ್ರದೇಶದಲ್ಲಿ ದಾಳಿ ಮಾಡಿದ ಪೊಲೀಸರು ಶಂಕಿತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ರಂ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದ ಕಾರಿನ ಚಾಲಕ ಈತನೆಂದು ಪೊಲೀಸರು ತಿಳಿಸಿರುವುದಾಗಿ ವರದಿಯಲ್ಲಿ ತಿಳಿಸಲಾಯಿತು. ಅಕ್ರಂ ಅವರಿದ್ದ ಮರ್ಸಿಡೀಸ್ ಕಾರಿಗೆ ಮತ್ತೊಂದು ಕಾರು ಲಘುವಾಗಿ ಡಿಕ್ಕಿ ಹೊಡೆದಿತ್ತು. ಉಭಯ ಕಾರು ಚಾಲಕರು ವಾಗ್ವಾದ ನಡೆಸಿದ್ದರು. ಬಳಿಕ ಮತ್ತೊಂದು ಕಾರಿನಲ್ಲಿದ್ದವನೊಬ್ಬ ಅಕ್ರಂ ಅವರಿದ್ದ ಕಾರಿನ ಮೇಲೆ ಗುಂಡಿನ ದಾಳಿ ಮಾಡಿದ್ದ. ಅದೃಷ್ಟವಶಾತ್ ಅಕ್ರಂ ಪ್ರಾಣಾಪಾಯದಿಂದ ಪಾರಾಗಿದ್ದರು.

2008: ಬೀಜಿಂಗಿನ ರಾಷ್ಟ್ರೀಯ ಕ್ರೀಡಾಂಗಣದ್ಲಲಿ 17 ದಿನಗಳ 29ನೇ ಒಲಿಂಪಿಕ್ ರೋಮಾಂಚಕಾರಿಯಾಗಿ ಆರಂಭಗೊಂಡಿತು. ತನ್ನ ಎಂಟರ ನಂಟಿಗೆ ಅಂಟಿಕೊಂಡ ಚೀನಾ ಅಂದುಕೊಂಡದ್ದನ್ನೆಲ್ಲ ಅಚ್ಚುಕಟ್ಟಾಗಿ ಬೀಜಿಂಗಿನ ಹಕ್ಕಿ ಗೂಡಿನಲ್ಲಿ ಅನಾವರಣಗೊಳಿಸಿ ಹೊಸದೊಂದು ಕ್ರೀಡಾಭಾಷ್ಯ ಬರೆಯಿತು.
2007: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಅನುಪಮ ಸೇವೆಗಾಗಿ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಶ್ಯಾಮ್ ಬೆನಗಲ್ ಅವರಿಗೆ ಕೇಂದ್ರ ಸರ್ಕಾರ 2005ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಿತು. ಈ ಪ್ರಶಸ್ತಿ ಎರಡು ಲಕ್ಷ ರೂಪಾಯಿ ನಗದು ಹಾಗೂ ಸ್ವರ್ಣ ಕಮಲ ಒಳಗೊಂಡಿದೆ. 72 ವರ್ಷದ ಬೆನಗಲ್ ಪ್ರಸ್ತುತ ರಾಜ್ಯಸಭೆಯ ಸದಸ್ಯರು. 1976ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಪಾತ್ರರಾಗಿದ್ದ ಅವರು 1991ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 70ರ ದಶಕದಲ್ಲಿ ಹಿಂದಿ ಚಿತ್ರ `ಅಂಕುರ್' ನಿರ್ದೇಶನದೊಂದಿಗೆ ಅವರು ಚಿತ್ರರಂಗ ಪ್ರವೇಶಿಸಿದರು. `ಅಂಕುರ್' ಚಿತ್ರರಂಗದಲ್ಲಿ ಹೊಸ ಅಲೆಗೆ ಕಾರಣವಾಯಿತು. ಅವರ ಚಿತ್ರಗಳ ಕಥಾವಸ್ತು ವೈವಿಧ್ಯಮಯವಾಗಿದ್ದು ಸಮಕಾಲೀನ ಭಾರತೀಯ ಸಮಾಜವನ್ನು ಪ್ರತಿಬಿಂಬಿಸಿದವು. ನಿಶಾಂತ್, ಮಂಥನ್, ಭೂಮಿಕಾ, ಜುನೂನ್, ಕಲಿಯುಗ್, ಮಂಡಿ, ತ್ರಿಕಾಲ್, ಸೂರಜ್ ಕಾ ಸಾತ್ವಾ ಘೋಡಾ, ಮಾಮೂ, ಸರ್ದಾರಿ ಬೇಗಂ, ಸಮರ್, ದಿ ಮೇಕಿಂಗ್ ಆಫ್ ಮಹಾತ್ಮ, ಜುಬೇದಾ ಹಾಗೂ ಸುಭಾಶ್ ಚಂದ್ರ ಬೋಸ್ - ಶ್ಯಾಮ್ ಅವರ ಕೆಲವು ಪ್ರಮುಖ ಚಿತ್ರಗಳು. ಸದಭಿರುಚಿಯ, ಚಿಂತನೆಗೆ ಹಚ್ಚುವಂತಹ 24 ಚಿತ್ರಗಳನ್ನು ನಿರ್ದೇಶಿಸಿರುವ ಬೆನಗಲ್, ಸಿನಿಮಾಗಳ ಹೊರತಾಗಿ ಹಲವು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದವರು. ಕೈಗಾರೀಕರಣದ ಸಮಸ್ಯೆಗಳು, ಸಂಸ್ಕೃತಿ, ಸಂಗೀತ ಅವರ ಸಾಕ್ಷ್ಯಚಿತ್ರಗಳಿಗೆ ವಸ್ತು. ಬೆನಗಲ್ ಕಿರುತೆರೆಯಲ್ಲೂ ತಮ್ಮ ಛಾಪು ಒತ್ತಿದವರು. ಭಾರತೀಯ ಹಾಗೂ ಅಂತಾರಾಷ್ಟ್ರೀಯ ಕಥೆಗಾರರ ಸಣ್ಣಕಥೆಗಳನ್ನು ಆಧರಿಸಿದ ಹಲವು ಧಾರಾವಾಹಿಗಳು ದೂರದರ್ಶನದಲ್ಲಿ ಪ್ರಸಾರವಾಗಿ ಜನಪ್ರಿಯತೆ ಗಳಿಸಿವೆ. ಗ್ರಾಮೀಣ ಮಕ್ಕಳಿಗಾಗಿ `ಯುನಿಸೆಫ್' ಪ್ರಾಯೋಜಿತ ಶೈಕ್ಷಣಿಕ ಸರಣಿಯನ್ನೂ ಶ್ಯಾಮ್ ನಿರ್ದೇಶಿಸಿದ್ದಾರೆ. 1966ರಿಂದ 1973ರ ಅವಧಿಯಲ್ಲಿ ಸಮೂಹ ಸಂವಹನ ತಂತ್ರಜ್ಞಾನವನ್ನು ಬೋಧಿಸಿದ ಬೆನಗಲ್, 1980-83 ಹಾಗೂ 1989-92ರ ಅವಧಿಯಲ್ಲಿ `ಫಿಲ್ಮ್ ಅಂಡ್ ಟೆಲಿವಿಜನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ'ದ ಅಧ್ಯಕ್ಷರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಚಲನಚಿತ್ರ ಶಿಕ್ಷಣಕ್ಕೆ ಹೊಸ ಸ್ವರೂಪ ನೀಡಿದರು. ಬೆನಗಲ್ ಮೂಲತಃ ಉಡುಪಿ ಜಿಲ್ಲೆಯ ಬೆನಗಲ್ ಗ್ರಾಮದವರು. ತಂದೆ ಉದ್ಯೋಗದ ನಿಮಿತ್ತ ವಲಸೆ ಹೋಗಿದ್ದರಿಂದ 1934ರ ಡಿಸೆಂಬರ್ 14ರಂದು ಹೈದರಾಬಾದ್ ಸಮೀಪದ ಅಲಿವಾಲ್ ನಲ್ಲಿ ಹುಟ್ಟಿ ಬೆಳೆದರು.

2007: ಕರ್ನಾಟಕ ರಾಜ್ಯದಲ್ಲಿ ಮಳೆ ತನ್ನ ಆರ್ಭಟವನ್ನು ಮುಂದುವರೆಸಿತು. ಕೊಡಗಿನಲ್ಲಿ ಮಳೆ ಸ್ವಲ್ಪ ಇಳಿಮುಖವಾದರೂ ಉತ್ತರ ಕನ್ನಡ ಮತ್ತು ಬಳ್ಳಾರಿಗಳಲ್ಲಿ ಅಪಾಯದ ಅಂಚು ತಲುಪಿತು. ತುಂಗಭದ್ರಾ ಜಲಾಶಯದಿಂದ ನದಿಗೆ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನ 16 ಗ್ರಾಮಗಳು ನಡುಗಡ್ಡೆಯಾದವು. ಇಲ್ಲಿ ಸಿಕ್ಕಿಹಾಕಿಕೊಂಡಿದ್ದ 76 ಜನರ ಪೈಕಿ 50 ಜನರನ್ನು ಹರಿಗೋಲಿನ ಮೂಲಕ ರಕ್ಷಿಸಲಾಯಿತು.

2007: ಲಾಸ್ ಏಂಜೆಲಿಸ್ ನ ಕಾರ್ಸೋನಿನಲ್ಲಿ ಆರು ಲಕ್ಷ ಡಾಲರ್ ಬಹುಮಾನ ಮೊತ್ತದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಡಬ್ಲ್ಯುಟಿಎ ಟೆನಿಸ್ ಟೂರ್ನಿಯ ಸಿಂಗಲ್ಸಿನಲ್ಲಿ ಕ್ವಾರ್ಟರ್ ಫೈನಲಿನಲ್ಲಿ 30ನೇ ರ್ಯಾಂಕಿಂಗಿನಲ್ಲಿದ್ದ ಸಾನಿಯಾ ಮಿರ್ಜಾ ಮಾಜಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಅವರನ್ನು ಸೋಲಿಸಿ ಟೆನಿಸ್ ಜಗತ್ತನ್ನು ಅಚ್ಚರಿಯಲ್ಲಿ ಮುಳುಗಿಸಿದರು.

2007: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳವರಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸುವ ನೀತಿಯಿಂದ `ಕೆನೆಪದರ' (ಆರ್ಥಿಕವಾಗಿ ಸಬಲರು) ಹೊರಗಿಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಮಹತ್ವದ ಹೇಳಿಕೆ ನೀಡಿತು. ಈ ಮೀಸಲಾತಿಯಿಂದ `ಕೆನೆಪದರ'ವನ್ನು ಹೊರಗಿಡಬೇಕು ಎಂದು ನ್ಯಾಯಾಲಯ ಬಯಸಿದಲ್ಲಿ ಕೇಂದ್ರ ಸರ್ಕಾರ ಅದನ್ನು ಪಾಲಿಸಲಿದೆ ಎಂದು ಸಾಲಿಸಿಟರ್ ಜನರಲ್ ಜಿ.ಇ. ವಹನಾವತಿ, ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠಕ್ಕೆ ತಿಳಿಸಿದರು. ಸರ್ಕಾರ ಜಾರಿಗೊಳಿಸಲು ಹೊರಟಿದ್ದ `ಒಬಿಸಿ' ಮೀಸಲಾತಿಗೆ ಸುಪ್ರೀಂಕೋರ್ಟ್ ಮಾರ್ಚ್ 29ರಂದು ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಅವರು ಕೇಂದ್ರದ ಪರವಾಗಿ ಈ ಹೇಳಿಕೆ ನೀಡಿದರು.

2007: ವಿಶ್ವದಲ್ಲೇ ಪ್ರಥಮ ಎನ್ನಬಹುದಾದ 4ನೇ ಪೀಳಿಗೆಯ ತದ್ರೂಪಿ ಹಂದಿಮರಿಯನ್ನು ಜಪಾನ್ ವಿಜ್ಞಾನಿಗಳು ಸೃಷ್ಟಿಸಿದ್ದು, ಈ ಸಂಶೋಧನೆ ಮಾನವ ಅಂಗಾಂಶ ಕಸಿಗೆ ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು. ಅಮೆರಿಕದ ವಿಜ್ಞಾನಿಗಳು ಇಲಿಯ 6ನೇ ತದ್ರೂಪಿ ಸೃಷ್ಟಿಸಿದ್ದೇ ಈವರೆಗಿನ ಸಾಧನೆಯಾಗಿತ್ತು. ಆದರೆ ಜಪಾನ್ ವಿಜ್ಞಾನಿಗಳು ಇಷ್ಟು ದೊಡ್ಡ ಗಾತ್ರದ ಪ್ರಾಣಿಯೊಂದರ 4ನೇ ತಲೆಮಾರಿನ ಪ್ರತಿರೂಪಿ ಸೃಷ್ಟಿಸುವ ಮೂಲಕ ಸಂಶೋಧನೆಯನ್ನು ಉತ್ತಮಪಡಿಸಿದರು. 4ನೇ ಪೀಳಿಗೆ ಹೇಗೆ ಎಂದರೆ ಎಂದರೆ ಈ ಹಂದಿಯ ಮೊದಲಿನ ಮೂರು ತಲೆಮಾರು ಕೂಡಾ ತದ್ರೂಪಿ ವಿಧಾನದಲ್ಲಿ ಜನಿಸಿದ್ದವು.

2007: ಅಮೇರಿಕದಲ್ಲಿರುವ ಭಾರತೀಯ ಮೂಲದ ನರಶಸ್ತ್ರ ಚಿಕಿತ್ಸಾ ತಜ್ಞ ಡಾ. ಕುಮಾರ ಬಾಹುಳ್ಯನ್ ತಾವು ಹುಟ್ಟಿ ಬೆಳೆದ ಕೇರಳದ ಚೆಮ್ಮನಾಕರಿ ಹಳ್ಳಿಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು 2 ಕೋಟಿ ಅಮೆರಿಕನ್ ಡಾಲರ್ (ಸುಮಾರು 80 ಕೋಟಿ ರೂಪಾಯಿ) ದಾನ ಮಾಡಿದರು. ಈಗ ಅಮೆರಿಕದಲ್ಲಿ ವೈದ್ಯರಾಗಿರುವ ಬಾಹುಳ್ಯನ್, ಕೋಟಿಗಟ್ಟಲೆ ಹಣ ಸಂಪಾದಿಸಿದ್ದು, ಐದು ಬೆಂಜ್ ಕಾರು, ಒಂದು ವಿಮಾನ ಇಟ್ಟುಕೊಂಡಿದ್ದಾರೆ. ಆದರೆ ಅವರು ಹುಟ್ಟಿದ್ದು ದಲಿತ ಕುಟುಂಬದಲ್ಲಿ. ಬೆಳೆದದ್ದು ಕಡು ಬಡತನದಲ್ಲಿ. ಈಗಿನ ಮಟ್ಟಕ್ಕೆ ಮರಲು ತನ್ನ ಹಳ್ಳಿಯವರ ಪ್ರೋತ್ಸಾಹವೇ ಕಾರಣ. ಆ ಋಣ ತೀರಿಸಲು ಇದೊಂದು ಪುಟ್ಟ ಯತ್ನ ಎನ್ನುತ್ತಾರೆ ಬಾಹುಳ್ಯನ್.

2006: ವಿದೇಶಾಂಗ ಖಾತೆ ಮಾಜಿ ಸಚಿವ ನಟವರ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಯಿತು. ಪಕ್ಷದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿ ಅಗೌರವ ಉಂಟು ಮಾಡ್ದಿದಕ್ಕಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂಬ ನಿರ್ಣಯವನ್ನೂ ಪಕ್ಷದ ಶಿಸ್ತು ಸಮಿತಿ ಕೈಗೊಂಡಿತು.

2006: ವಿಶ್ವ ಜೂನಿಯರ್ ಮಾಜಿ ಚಾಂಪಿಯನ್ ಭಾರತದ ಪೆಂಟ್ಯಾಲ ಹರಿಕೃಷ್ಣ ಅವರು ಹಂಗೇರಿಯ ಪಾಕ್ಸ್ ನಲ್ಲಿ ನಡೆದ ಮೂರನೇ ಮಾರ್ಕ್ಸ್ ಗಾರ್ಗಿ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯ ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್ ಶಿಪ್ ಪಟ್ಟವನ್ನು ತಮ್ಮದಾಗಿಸಿಕೊಂಡರು. ಹಂಗೇರಿಯ ಫರೆನ್ಸ್ ಬರ್ಕ್ ವಿರುದ್ಧ ಅವರು ಡ್ರಾ ಸಾಧಿಸಿ ಚಾಂಪಿಯನ್ ಶಿಪ್ ಗೆದ್ದುಕೊಂಡರು.

2005: ಖ್ಯಾತ ಸಾಹಿತಿ ಶಾಂತಾದೇವಿ ಮಾಳವಾಡ ನಿಧನರಾದರು.

2000: ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ (97) ನಿಧನರಾದರು.

1990: ಖ್ಯಾತ ಕೈಗಾರಿಕೋದ್ಯಮಿ ನವಲ್ ಗೋದ್ರೆಜ್ ನಿಧನ.

1974: ವಾಟರ್ ಗೇಟ್ ಹಗರಣದ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ತಮ್ಮ ರಾಜೀನಾಮೆಯನ್ನು ಪ್ರಕಟಿಸಿದರು. ಹಗರಣದಿಂದಾಗಿ ರಾಜೀನಾಮೆ ನೀಡಿದ ಅಮೆರಿಕದ ಮೊತ್ತ ಮೊದಲ ಅಧ್ಯಕ್ಷರು ಇವರು.

1968: ರಿಚರ್ಡ್ ನಿಕ್ಸನ್ ಅವರು ಮಿಯಾಮಿ ತೀರದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ನಾಮಕರಣಗೊಂಡರು.

1968: ಭಾರತೀಯ ಕ್ರಿಕೆಟ್ ಆಟಗಾರ ಅಬೇ ಕುರುವಿಲ್ಲ ಜನ್ಮದಿನ.

1956: ದ್ವಿಭಾಷಾ ಮುಂಬೈ ರಾಜ್ಯ ರಚನೆಯನ್ನು ವಿರೋಧಿಸಿ ಅಹಮದಾಬಾದಿನಲ್ಲಿ ಜನ ಉಗ್ರ ಪ್ರದರ್ಶನ ನಡೆಸಿದಾಗ ಪೊಲೀಸರ ಗೋಲಿಬಾರ್, ಆಶ್ರುವಾಯು, ಲಾಠಿ ಪ್ರಹಾರಕ್ಕೆ ಬಲಿಯಾಗಿ ಐವರು ಮೃತರಾಗಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1956: ಭಾರತ ಸರ್ಕಾರವು ನೇಮಿಸಿದ್ದ ನೇತಾಜಿ ಸುಭಾಶ್ ಚಂದ್ರ ಬೋಸ್ ತನಿಖಾ ಸಮಿತಿಯು `ನೇತಾಜಿ ಬೋಸರ ಮರಣವು ಸ್ಥಿರಪಟ್ಟಿದೆಯೆಂದೂ, ದ್ವಿತೀಯ ಯುದ್ಧದ ಕಾಲದಲ್ಲಿ ಫಾರೋಸಾದಲ್ಲಿ ಇದು ಸಂಭವಿಸಿದೆ' ಎಂಬ ತೀರ್ಮಾನಕ್ಕೆ ಬಂದಿತು.

1942: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮುಂಬೈಯ ಗೊವಾಲಿಯಾ ಟ್ಯಾಂಕಿನಲ್ಲಿ (ಈಗಿನ ಆಗಸ್ಟ್ ಕ್ರಾಂತಿ ಮೈದಾನ) ನಿರ್ಣಯ ಒಂದನ್ನು ಅಂಗೀಕರಿಸುವ ಮೂಲಕ `ಭಾರತ ಬಿಟ್ಟು ತೊಲಗಿ' (ಕ್ವಿಟ್ ಇಂಡಿಯಾ) ಚಳವಳಿಗೆ ಚಾಲನೆ ನೀಡಿತು. ಮರುದಿನ ಸರ್ದಾರ್ ವಲ್ಲಭಭಾಯಿ ಪಟೇಲ್, ಜವಾಹರಲಾಲ್ ನೆಹರೂ ಮತ್ತಿತರ ನಾಯಕರ ಜೊತೆಗೆ ಬಂಧನಕ್ಕೆ ಒಳಗಾಗುವ ಮುನ್ನ ಮಹಾತ್ಮಾ ಗಾಂಧೀಜಿ ಅವರು `ಮಾಡು ಇಲ್ಲವೇ ಮಡಿ' ಸಂದೇಶವನ್ನು ರಾಷ್ಟ್ರಕ್ಕೆ ನೀಡಿದರು. ಇದು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದಲ್ಲಿ ನಡೆದ ವ್ಯಾಪಕ ಮತ್ತು ತೀವ್ರ ಸ್ವರೂಪದ ಜನಾಂದೋಳನವಾಯಿತು.

1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ ದೇಸಾಯಿ ಜನ್ಮದಿನ. ಬಲಗೈ ಬ್ಯಾಟ್ಸ್ ಮನ್ ಎಂದೇ ಇವರು ಖ್ಯಾತರಾಗಿದ್ದರು.

1934: ಸಾಹಿತಿ ಕಮಲ ಸಂಪಳ್ಳಿ ಜನನ.

1929: ಸಾಹಿತಿ ಮತ್ತೂರು ಕೃಷ್ಣಮೂರ್ತಿ ಜನನ.

1924: ಎಚ್. ಕೆ. ರಂಗನಾಥ್ ಜನನ.

1921: ಕೆ.ವಿ. ರತ್ನಮ್ಮ ಜನನ.

1917: ಹಾಸ್ಯ ಸಾಹಿತ್ಯದ ಹಿರಿಯಜ್ಜಿ ಎಂದೇ ಖ್ಯಾತರಾದ ಸುನಂದಮ್ಮ (8-8-1917ರಿಂದ 27-1-2006) ಅವರು ರಾಮಯ್ಯ- ನಾಗಮ್ಮ ದಂಪತಿಯ ಮಗಳಾಗಿ ಮೈಸೂರಿನಲ್ಲಿ ಜನಿಸಿದರು.

1900: ಅಮೆರಿಕ ಮತ್ತು ಗ್ರೇಟ್ ಬ್ರಿಟನ್ ನಡುವೆ ಮೊತ್ತ ಮೊದಲ ಡೇವಿಸ್ ಕಪ್ ಟೆನಿಸ್ ಪಂದ್ಯ ಮೆಸಾಚ್ಯುಸೆಟ್ಸಿನ ಬ್ರೂಕ್ಲಿನ್ನಿನಲ್ಲಿ ಆರಂಭವಾಯಿತು. ಡೇವಿಸ್ ಕಪ್ ಟ್ರೋಫಿಯನ್ನು ನೀಡಿದ ಅಮೆರಿಕದ ಟೆನಿಸ್ ಆಟಗಾರ ಡ್ವೈಟ್ ಎಫ್. ಡೇವಿಸ್ ಅವರು ಅಮೆರಿಕ ತಂಡದ ಪರವಾಗಿ ಆಟವಾಡಿ ಮೊದಲ ಎರಡು ಸ್ಪರ್ಧೆಗಳಲ್ಲಿ ಟ್ರೋಫಿಯನ್ನು ಗೆದ್ದುಕೊಂಡರು.

1890: ಸಾಹಿತಿ ಶೀನಪ್ಪ ಹೆಗಡೆ ಜನನ.

1815: ದೇಶಭ್ರಷ್ಟನಾದ ಬಳಿಕ ನೆಪೋಲಿಯನ್ ಬೋನಪಾರ್ಟೆ ದಕ್ಷಿಣ ಅಟ್ಲಾಂಟಿಕ್ ನ ಸೇಂಟ್ ಹೆಲೆನಾ ದ್ವೀಪಕ್ಕೆ ಪ್ರಯಾಣ ಬೆಳೆಸಿದ.

No comments:

Post a Comment