Saturday, August 11, 2018

ಇಂದಿನ ಇತಿಹಾಸ History Today ಆಗಸ್ಟ್ 11

ಇಂದಿನ ಇತಿಹಾಸ History Today ಆಗಸ್ಟ್ 11

2018: ಕೇಪ್ ಕೆನವರಾಲ್: ಸೌರ ನಿಗೂಢದ ಪತ್ತೆಗಾಗಿ ರೂಪುಗೊಂಡಿರುವ ಸೂರ್ಯನತ್ತ ಪಯಣಿಸಬೇಕಾಗಿದ್ದ ಅಭೂತಪೂರ್ವ ’ಪಾರ್ಕರ್ ಸೋಲಾರ್ ಪ್ರೋಬ್ ಉಡ್ಡಯನವನ್ನು ದಿಢೀರನೆ ಮುಂದೂಡಲಾಯಿತು. ನಾಸಾ ತನ್ನ ಟ್ವಿಟ್ಟರ್ ಪುಟದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಉಡ್ಡಯನವನ್ನು ಬೆಳಗಿನ ೩.೩೩ ಗಂಟೆಯಿಂದ ೪.೩೮ ಗಂಟೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿತು. ಆದರೆ ಬಳಿಕ ಯಾನವನ್ನು ರದ್ದು ಪಡಿಸಲಾಗಿದ್ದು ಆಗಸ್ಟ್ 12ರ ಭಾನುವಾರ ಬೆಳಗ್ಗೆ ದ್ವಿತೀಯ ಪ್ರಯತ್ನ ಮಾಡಲಾಗುವುದು ಎಂದು ನಾಸಾ ತಿಳಿಸಿತು. ನಾಸಾದ ಕಾರು ಗಾತ್ರದ ೧೫೦೦ ಕೋಟಿ (೧.೫ ಬಿಲಿಯನ್) ಡಾಲರ್ ವೆಚ್ಚದ ಪಾರ್ಕರ್ ಸೋಲಾರ್ ಪ್ರೋಬ್ ಫ್ಲಾರಿಡಾದ ಕೇಪ್ ಕೆನವರಾಲ್ ಉಡ್ಡಯನ ಕೇಂದ್ರದಿಂದ ಡೆಲ್ಟಾ ೪ ಹೆವಿ ರಾಕೆಟ್ ಮೂಲಕ ನಸುಕಿನ ೩.೩೩ ಗಂಟೆಗೆ ೬೫ ನಿಮಿಷಗಳ ಅವಧಿಯಲ್ಲಿ ಉಡಾವಣೆಗೊಳ್ಳಬೇಕಿತ್ತು. ಬಾಹ್ಯಾಕಾಶ ನೌಕೆಯ ಇತಿಹಾಸದಲ್ಲೇ ಸೂರ್ಯನಿಗೆ ಅತ್ಯಂತ ಸಮೀಪ ಸಾಗಲಿದ್ದ ಮಾನವ ರಹಿತ ಪ್ರೋಬ್ ನ ಮುಖ್ಯ ಉದ್ದೇಶ ಅಸಾಧಾರಣವಾದ ಪರಿಸರವಾದ ಸೂರ್ಯನ ಪ್ರಭಾವಲಯದ (ಕೊರೋನ) ರಹಸ್ಯಗಳನ್ನು ಪತ್ತೆ ಹಚ್ಚುವುದಾಗಿತ್ತು. ’ಸೌರ ಗಾಳಿ ಬಹುಪಟ್ಟು ಗಾತ್ರದಲ್ಲಿ ಹೆಚ್ಚುತ್ತಿರುವ ಪ್ರದೇಶಕ್ಕೆ ನಾವು ಹೋಗುತ್ತಿದ್ದೇವೆ. ಇದೊಂದು ರೋಮಾಂಚಕ ಅನುಭವ ಎಂದು ನಾಸಾದ ಗ್ರಹ ವಿಜ್ಞಾನ ವಿಭಾಗದ ನಿರ್ದೇಶಕ ಜಿಮ್ ಗ್ರೀನ್ ಹೇಳಿದ್ದರು.  ‘ಸೌರ ಪ್ರಭಾವಲಯದಲ್ಲಿ ಭಾರಿ ಗಾತ್ರದ ಆಯಸ್ಕಾಂತ ಕ್ಷೇತ್ರವಿದ್ದು, ನಾವು ಅದರ ಮೂಲಕ ಸಾಗಲಿದ್ದೇವೆ.’ ಎಂದು ಅವರು ಹೇಳಿದ್ದರು. ಸೌರ ಪ್ರಭಾವಲಯವು ಸೂರ್‍ಯನ ಮೇಲ್ಮೈಗಿಂತ ೩೦೦ ಪಟ್ಟು ಬಿಸಿಯಾಗಿದರುವುದಲ್ಲದೆ, ಭೂಕಾಂತೀಯ ಬಾಹ್ಯಾಕಾಶ ಬಿರುಗಾಳಿಗಳನ್ನು ಎಬ್ಬಿಸಬಲ್ಲಂತಹ ವಸ್ತುಗಳನ್ನು ಮತ್ತು ಬಲವಾದ ಪ್ಲಾಸ್ಮಾವನ್ನು ಹೊರಕ್ಕೆ ಎಸೆಯುತ್ತಿರುತ್ತದೆ. ಇದು ಭೂಮಿಯ ಮೇಲೆ ಭಾರಿ ಅನಾಹುತವನ್ನು ಸೃಷ್ಟಿಸಬಲ್ಲುದು ಎಂದು ನಂಬಲಾಗಿದೆ. ಆದರೆ ಈ ಸೌರ ಸ್ಫೋಟದ ವಿದ್ಯಮಾನ ಅತ್ಯಂತ ನಿಗೂಢವಾಗಿದ್ದು, ವಿಜ್ಞಾನಿಗಳಿಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.  ಭೂಮಿಗೆ ಯಾವಾಗ ಸೌರ ಗಾಳಿ ಬಡಿದು ಹಾನಿ ಉಂಟಾಗಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಪಾರ್ಕರ್ ಸೋಲಾರ್ ಪ್ರೋಬ್ ನಮಗೆ ನೆರವಾಗಲಿದೆ ಎಂದು ಯೋಜನಾ ವಿಜ್ಞಾನಿ ಮತ್ತು ಮಿಷಿಗನ್ ವಿಶ್ವ ವಿದ್ಯಾಲಯದ ಪ್ರೊಫೆಸರ್ ಜಸ್ಟಿನ್ ಕಸ್ಪರ್ ಹೇಳಿದ್ದರು. ಚಂದ್ರ ಮತ್ತು ಮಂಗಳ ಗ್ರಹಗಳತ್ತ ಸಾಗಲಿರುವ ಮುಂದಿನ ಆಳವಾದ ಬಾಹ್ಯಾಕಾಶ ಸಂಶೋಧನೆ ಯತ್ನಗಳ ರಕ್ಷಣೆ ದೃಷ್ಟಿಯಿಂದಲೂ ಸೌರ ಗಾಳಿ ಮತ್ತು ಬಾಹ್ಯಾಕಾಶ ಬಿರುಗಾಳಿಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದ್ದರು. ಪಾರ್ಕರ್ ಸೋಲಾರ್ ಪ್ರೋಬ್ ಕೇವಲ ೪.೫ ಅಂಗುಲ ದಪ್ಪದ ಅತ್ಯಂತ ಶಕ್ತಿಶಾಲಿಯಾದ ಶಾಕ ಕವಚದಿಂದ (ಅಲ್ಟ್ರಾ ಪವರ್ ಫುಲ್ ಹೀಟ್ ಶೀಲ್ಡ್) ಸಂರಕ್ಷಿಸಲ್ಪಟ್ಟಿದೆ. ಈ ಶಾಖ ಕವಚವು ಸೌರ ಮೇಲ್ಮೈಯಿಂದ ೩೮.೩ ಲಕ್ಷ (೩.೮೩ ಮಿಲಿಯನ್) ಮೈಲುಗಳಷ್ಟು ಒಳಗಿನಿಂದ ಬರುವಾಗ ಅತಿಯಾದ ಶಾಖದಿಂದ ಕಾರು ಗಾತ್ರದ ಈ ಬಾಹ್ಯಾಕಾಶ ನೌಕೆಯನ್ನು ರಕ್ಷಿಸುವ ಸಾಮರ್ಥ್ಯ ಹೊಂದಿದೆ. ಭೂಮಿಯ ಮೇಲಿನ ಸೌರ ವಿಕಿರಣದ ೫೦೦ ಪಟ್ಟು ವಿಕಿರಣವನ್ನು ತಡೆದುಕೊಳ್ಳಬಲ್ಲಂತಹ ಶಕ್ತಿ ಈ ಶಾಖ ಕವಚಕ್ಕೆ ಇದೆ.

2018: ಕೋಲ್ಕತ: ಕೋಲ್ಕತದ ಮೇಯೋ ರಸ್ತೆಯಲ್ಲಿ ಭಾರತೀಯ ಜನತಾ ಯುವ ಮೋರ್ಚಾ ಸಂಘಟಿಸಿದ್ದ ಬೃಹತ್ ಸಭೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಿರುದ್ಧ ಪ್ರಬಲ ವಾಗ್ದಾಳಿ ನಡೆಸಿದ ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರು ’ಬಾಂಗ್ಲಾದೇಶೀ ಅತಿಕ್ರಮಣಕಾರರು ತನ್ನ ಪಕ್ಷದ ವೋಟ್ ಬ್ಯಾಂಕ್ ಆಗಿರುವುದರಿಂದ  ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಾಂಗ್ಲಾದೇಶೀ ಅತಿಕ್ರಮಣಕಾರರಿಗೆ ಆಶ್ರಯ ನೀಡಬಯಸುತ್ತಿದ್ದಾರೆ ’ಎಂದು ಆಪಾದಿಸಿದರು.  ‘ನಾವು ಬಾಂಗ್ಲಾ ವಿರೋಧಿಗಳಲ್ಲ, ಮಮತಾ ವಿರೋಧಿಗಳು ಮಾತ್ರ.. ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಬೇರುಗಳನ್ನು ಕಿತ್ತೊಗೆಯದಿದ್ದರೆ ನಮ್ಮ ೧೯ ರಾಜ್ಯಗಳ ಗೆಲುವು ಅರ್ಥಪೂರ್ಣವಾಗುವುದಿಲ್ಲ ಎಂದು ಶಾ ಹೇಳಿದರು. ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ ಆರ್ ಸಿ) ಬಿಜೆಪಿ ವಿರುದ್ಧ ಹರಿಹಾಯಲು ಬಳಸಿಕೊಳ್ಳುತ್ತಿರುವುದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಮುಖ್ಯಸ್ಥ  ’ಅಸ್ಸಾಮಿನಲ್ಲಿ ಎನ್ ಆರ್ ಸಿ ಪ್ರಕ್ರಿಯೆಯನ್ನು ನಾವು ಶಾಂತಿಯುತವಾಗಿ ಪೂರೈಸುತ್ತೇವೆ. ಮಮತಾ ಬ್ಯಾನರ್ಜಿಯವರಾಗಲೀ, ರಾಹುಲ್ ಗಾಂಧಿಯವರಾಗಲೀ ಅದನ್ನು ಮಾಡದಂತೆ ನಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಘೋಷಿಸಿದರು.  ‘ಬಾಂಗ್ಲಾದೇಶಿ ಅತಿಕ್ರಮಣಕಾರರನ್ನು ರಕ್ಷಿಸಲು ಅವರು ಏಕೆ ಬಯಸಿದ್ದಾರೆ ಎಂದು ನಾವು ಮಮತಾ ಬ್ಯಾನರ್ಜಿ ಅವರನ್ನು ಕೇಳಬಯಸುತ್ತೇವೆ. ರಾಹುಲ್ ಗಾಂಧಿಯವರೂ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ರಾಜಕಾರಣ ಎಂದು ಶಾ ಚುಚ್ಚಿದರು. ‘ನಮಗೆ ವೋಟ್ ಬ್ಯಾಂಕಿನ ಮುಂದೆ ರಾಷ್ಟ್ರವೇ ಪ್ರಥಮ. ನಮ್ಮನ್ನು ಎಷ್ಟು ಬೇಕಿದ್ದರೂ ವಿರೋಧಿಸಿ, ಆದರೆ ನಾವು ಎನ್ ಆರ್ ಸಿ ಪ್ರಕ್ರಿಯೆಯನ್ನು ನಿಲ್ಲಿಸುವುದಿಲ್ಲ ಎಂದು ಅವರು ನುಡಿದರು. ತಮ್ಮ ೨೫ ನಿಮಿಷಗಳ ಭಾಷಣದ ಬಹುಭಾಗವನ್ನು ಅಮಿತ್ ಶಾ ಪೌರತ್ವ ಪ್ರಶ್ನೆಗೇ ವಿನಿಯೋಗಿಸಿದರು. ಮಮತಾ ಬ್ಯಾನರ್ಜಿಯವರು ಹೇಗೆ ಅದರಿಂದ ರಾಜಕೀಯ ಲಾಭ ಗಳಿಸಲು ಯತ್ನಿಸುತ್ತಿದ್ದಾರೆ ಎಂದು ವಿವರಿಸಿದರು. ಆದರೆ ರಾಜ್ಯದಲ್ಲೂ ಅದನ್ನು ಮಾಡಲಾಗುವುದೇ ಎಂದು ಅವರು ಹೇಳಲಿಲ್ಲ. ಬದಲಿಗೆ ’ರಾಜ್ಯದಲ್ಲೂ ನೀವು ಇದನ್ನು ಬಯಸುತ್ತಿದ್ದೀರಾ?’ ಎಂದು ಸಭೆಯನ್ನು ಉದ್ದೇಶಿಸಿ ಪ್ರಶ್ನಿಸಿದರು. ಸಭೆಯು ಅದಕ್ಕೆ ’ಹೌದು ಎಂದು ಕೂಗಿತು.  ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸನ್ನು ನಿರ್ಮೂಲನ ಮಾಡುವುದಾಗಿ ಹೇಳಿದ ನಾಲ್ಕು ವರ್ಷಗಳ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶನಿವಾರ ಅದನ್ನು ಪುನರುಚ್ಚರಿಸಿದರು. ‘ಮಮತಾ ಅವರ ಬೇರುಗಳನ್ನು ಕಿತ್ತೊಗೆಯಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ಶಾ ನುಡಿದರು.  ‘ಬಂಗಾಳಿ ವಿರೋಧಿ ಅಮಿತ್ ಶಾ ಹಿಂದಕ್ಕೆ ಹೋಗಿ ಎಂಬುದಾಗಿ ಪ್ರದರ್ಶಿಸಲಾದ ಬ್ಯಾನರುಗಳ ಬಗ್ಗೆ ಪ್ರಸ್ತಾಪಿಸಿದ ಬಿಜೆಪಿ ಅಧ್ಯಕ್ಷ, ’ನಾನು ಬಂಗಾಳೀ ವಿರೋಧಿಯಾಗಲು ಹೇಗೆ ಸಾಧ್ಯ? ನಮ್ಮ ಪಕ್ಷವನ್ನು ಸ್ಥಾಪಿಸಿದ್ದೇ ಬಂಗಾಳದ ಮಹಾನ್ ಪುತ್ರ ಶ್ಯಾಮ ಪ್ರಸಾದ್ ಮುಖರ್ಜಿ ಎಂದು ಹೇಳಿದರು. ಮುಂದಿನ ವರ್ಷದ ಮಹಾಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ೪೨ ಸ್ಥಾನಗಳ ಪೈಕಿ ಕನಿಷ್ಠ  ೨೨ ಸ್ಥಾನಗಳನ್ನು ಪಕ್ಷವು ಗೆಲ್ಲಬೇಕು ಎಂಬ ಗುರಿಯನ್ನು ಬಿಜೆಪಿ ಅಧ್ಯಕ್ಷರು ರಾಜ್ಯದ ಪಕ್ಷ ಕಾರ್‍ಯಕರ್ತನಿಗೆ ನೀಡಿದರು. ತಮ್ಮ ಸಭೆಯ ಪ್ರಸಾರಕ್ಕೆ ಕೂಡಾ ಆಡಳಿತ ಪಕ್ಷ ಅಡ್ಡಿ ಉಂಟು ಮಾಡಿದೆ ಎಂದು ಅಮಿತ್ ಶಾ ಆಪಾದಿಸಿದರು.  ‘ಜನರು ನಮ್ಮನ್ನು ನೋಡದಂತೆ ಮಾಡಲು ಬಂಗಾಳಿ ಟಿವಿ ವಾಹಿನಿಗಳ ಸಿಗ್ನಲ್ ಗಳನ್ನು ದುರ್ಬಲಗೊಳಿಸಲಾಗಿದೆ ಎಂದು ಆಪಾದಿಸಿದ ಶಾ, ’ನಮ್ಮ ಧ್ವನಿಗಳನ್ನು ದಮನಿಸಲು ನೀವು ಯತ್ನಿಸಿದರೂ, ನಾವು ಬಂಗಾಳದ ಪ್ರತಿಯೊಂದು ಜಿಲ್ಲೆಗೂ ತಲುಪಿ ಟಿಎಂಸಿಯನ್ನು ಹೊರಕ್ಕೆ ಎಸೆಯುತ್ತೇವೆ ಎಂದು ಹೇಳಿದರು.  ಬಿಜೆಪಿ ಯುವ ಮೋರ್ಚಾ ಅಧ್ಯಕ್ಷೆ ಪೂನಂ ಮಹಾಜನ್ ಅವರು ಬಂಗಾಳದಲ್ಲಿ ಯಾವುದೇ ’ಪರಿವರ್ತನೆಯೂ ಆಗಿಲ್ಲ. ಟಿಎಂಸಿಯ ಭೀತಿ ಸೃಷ್ಟಿಸುವ ಯಂತ್ರವಾಗಿದೆ. ಹಗರಣಕಾರರಿಗೆ ಮಾತ್ರ ಪರಿವರ್ತನೆ ಆಗಿದೆ ಎಂದು ಆಪಾದಿಸಿದರು.   ‘ಬಂಗಾಳದ ಯುವಕರು ಕೆಲಸಕ್ಕಾಗಿ ಬೇರೆ ಕಡೆಗಳಿಗೆ ವಲಸೆ ಹೋಗುತ್ತಿದ್ದಾರೆ. ಆದರೆ ರೊಹಿಂಗ್ಯಾಗಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ ಎಂದು ಬಿಜೆಪಿ ಬಂಗಾಳ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ನುಡಿದರು. ಕರಿಪತಾಕೆ ಪ್ರದರ್ಶನ: ಇದಕ್ಕೆ ಮುನ್ನ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಪಶ್ಚಿಮ ಬಂಗಾಳ ಯುವ ಕಾಂಗ್ರೆಸ್ ಕಾರ್‍ಯಕರ್ತರು ಮೋದಿ ಅವರ ವಿರುದ್ಧ ಕರಿಪತಾಕೆ ಪ್ರದರ್ಶನ ಮಾಡಿದರು. ಬೈಕಿನಲ್ಲಿ ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಶಾ ಅವರಿಗೆ ಕರಿಪತಾಕೆಗಳನ್ನು ತೋರಿಸಿತು. ಅವರು ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಬಳಿಕ ಪೊಲೀಸರು ಅವರನ್ನು ಅಲ್ಲಿಂದ ಹೊರಕ್ಕೆ ಕರೆದೊಯ್ದರು. ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮಧ್ಯೆ ನಂಟಿದೆ ಎಂದು ದೂರಿದರು.  ಅವರು ’ಮೋದಿ -ದೀದಿ ಭಾಯಿ ಭಾಯಿ ಘೋಷಣೆಯನ್ನೂ ಕೂಗಿದರು. ಕೇಂದ್ರ ಕೋಲ್ಕತದ ಮೇಯೋ ರಸ್ತೆಯಲ್ಲಿ ಶಾ ಅವರ ಸಭೆ ನಡೆಯುವುದಕ್ಕೂ ಮುನ್ನ ತೃಣಮೂಲ ಕಾಂಗ್ರೆಸ್ ಬೆಂಬಲಿಗರು ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಪ್ರಕಟಿಸಿದ್ದರ ವಿರುದ್ಧ ರಾಜ್ಯಾದ್ಯಂತ ’ಖಂಡನಾ ದಿನ ಆಚರಿಸಿದರು.

2018: ಲಕ್ನೋ: ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸಿದ್ದರೂ, ತನ್ನ ಮದುವೆಯನ್ನು ನೋಂದಾಯಿಸಲು ಅನಗತ್ಯ ತೊಂದರೆಗಳನ್ನು ನೀಡುತ್ತಿದ್ದಾರೆ ಎಂದು ಬಾಗ್ಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿರುದ್ಧ ಉಕ್ರೇನ್ ಮಹಿಳೆಯೊಬ್ಬರು ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ರಾಜನಾಥ್ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರಣಿ ಟ್ವೀಟ್ ಗಳ ಮೂಲಕ ದೂರು ನೀಡಿದರು.  ಉಕ್ರೇನಿನ ಮಹಿಳೆ ವೆರೋನಿಕಾ ಖಿಲೆಬೊವ ಅವರು ಬಾಗ್ಪತ್ ಮೂಲದ ಬಾಯ್ ಫ್ರೆಂಡ್ ಅಕ್ಷತ್ ತ್ಯಾಗಿ ಅವರ ಜೊತೆ ವಿವಾಹವಾಗುವುದಕ್ಕಾಗಿ ಜೂನ್ ೪ರಂದು ಭಾರತಕ್ಕೆ ಬಂದಿದ್ದರು. ಮದುವೆ ನೋಂದಣಿ ಪ್ರಕ್ರಿಯೆ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಭಾರತೀಯ ರಾಜತಾಂತ್ರಿಕ ಕಚೇರಿಯು ನೀಡಿದ್ದ ನಿರಾಕ್ಷೇಪಣಾ ಪತ್ರವನ್ನು (ಎನ್ ಒಸಿ) ಸ್ವೀಕರಿಸಲು ನಿರಾಕರಿಸುವ ಮೂಲಕ ಕಿರುಕುಳ ನೀಡಿದರು ಎಂದು ವೆರೋನಿಕಾ ಆಪಾದಿಸಿದರು. ತನ್ನ ಮೊದಲ ಟ್ವೀಟಿನಲ್ಲಿ ವೆರೋನಿಕಾ ’ಹಲೋ ಸರ್, ನನಗೆ ನಿಮ್ಮ ನೆರವು ಬೇಕು. ನಾನು ಉಕ್ರೇನಿನ ಪ್ರಜೆಯಾಗಿದ್ದು, ಬಾಗ್ಪತ್ ಜಿಲ್ಲೆಯ ನಿವಾಸಿಯಾದ ಭಾರತೀಯ ಪುರುಷನನ್ನು ಪ್ರೀತಿಸುತ್ತಿದ್ದೇನೆ. ನಾವು ಬಾಗ್ಪತ್ ಜಿಲ್ಲಾ ಮ್ಯಾಜಿಸ್ಟೇಟ್ ಕಚೇರಿಯಲ್ಲಿ ವಿವಾಹ ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದೇವೆ ಮತ್ತು ಅವರು ಕೇಳಿದ ಎಲ್ಲ ದಾಖಲೆಗಳನ್ನೂ ಒದಗಿಸಿದ್ದೇವೆ ಎಂದು ತಿಳಿಸಿದರು. ತನ್ನ ಎರಡನೇ ಟ್ವೀಟಿನಲ್ಲಿ ಆಕೆ ಬಾಗ್ಪತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಶಿರೇಂದ್ರ ಕುಮಾರ್ ಅವರು, ಸಕ್ರಮವಾದ ನಿರಾಕ್ಷೇಪಣಾ ಪತ್ರ (ಎನ್ ಒಸಿ) ನೀಡಿದ್ದಲ್ಲದೆ, ಪೊಲೀಸರಿಂದ ಪರಿಶೀಲನೆ ಕೂಡಾ ನಡೆದ ಬಳಿಕ ದಂಪತಿ ಜೊತೆಗೆ ಒರಟಾಗಿ ವರ್ತಿಸಿದ್ದಾರೆ. ತಾವು ಅಗತ್ಯ ದಾಖಲೆಗಳನ್ನು ಸಲ್ಲಿಸಿ ೩೫ ದಿನಗಳಾಗಿದ್ದರೂ ಜಿಲ್ಲಾ ಮ್ಯಾಜಿಸ್ಟ್ರೇಟರು ಮದುವೆಯನ್ನು ನೋಂದಾಯಿಸಲು ಒಪ್ಪುತ್ತಿಲ್ಲ ಎಂದು ಬರೆದಿದ್ದಾರೆ.  ’ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮದುವೆಯನ್ನು ನೋಂದಾಯಿಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ತಮಗೆ ಭರವಸೆ ನೀಡಿತ್ತು, ಆದರೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಬಳಿಗೆ ಹೋದಾಗ, ’ಉಕ್ರೇನ್ ಕಪ್ಪು ಪಟ್ಟಿಗೆ ಸೇರಿದ ರಾಷ್ಟ್ರವಾಗಿದೆ. ಆದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ಹೇಳಿದರು. ಬಿರುಸಿನ ವಾಗ್ವಾದದ ಬಳಿಕ ತಮ್ಮ ಮದುವೆಯನ್ನು ನೋಂದಾಯಿಸಿದರು ಮತ್ತು ದಾಖಲೆಗಳ ಪರಿಶೀಲನೆಗೆ ದಿನಾಂಕ ನಿಗದಿ ಮಾಡಿದರು ಎಂದು ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ ವೆರೋನಿಕಾ ಪತಿ ಅಕ್ಷತ್ ತ್ಯಾಗಿ ವಿವರಿಸಿದರು. ನಿಗದಿ ಪಡಿಸಲಾಗಿದ್ದ ದಿನಾಂಕದಂದು ಜಿಲ್ಲಾ ಮ್ಯಾಜಿಸ್ಟ್ರೇಟರ ಕಚೇರಿಗೆ ಎಲ್ಲ ಅಗತ್ಯ ದಾಖಲೆಗಳ ಜೊತೆಗೆ ಹೋದಾಗ ಜಿಲ್ಲಾ ಮ್ಯಾಜಿಸ್ಟ್ರೇಟರು ನಿರಾಕ್ಷೇಪಣಾ ಪತ್ರವನ್ನು (ಎನ್ ಒಸಿ) ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕಚೇರಿಯ ಸಿಬ್ಬಂದಿ ಕೂಡಾ ವಿದೇಶೀ ಪ್ರಜೆಯಾಗಿರುವುದರಿಂದ ೨ ಲಕ್ಷ ರೂಪಾಯಿ ನೀಡುವಂತೆ ತಮ್ಮನ್ನು ಒತ್ತಾಯಿಸಿದರು ಎಂದು ತ್ಯಾಗಿ ಹೇಳಿದರು.  ‘ನೀವು ನಿಮ್ಮ ಮದುವೆಯಲ್ಲಿ ಕುದುರೆ ಸವಾರಿ ಮಾಡಲು ೨೧,೦೦೦ ರೂಪಾಯಿ ವೆಚ್ಚ ಮಾಡಿದ್ದೀರಿ. ಆದ್ದರಿಂದ ನೀವು ೧ ಲಕ್ಷ ರೂಪಾಯಿ ಕೊಡಲೇಬೇಕು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು ಎಂದು ಅಕ್ಷತ್ ನುಡಿದರು. ಘಟನೆಯ ಬಳಿಕ ಅಸಹಾಯಕ ದಂಪತಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಲಖಿತ ದೂರನ್ನು ಫ್ಯಾಕ್ಸ್ ಮಾಡಿದರು. ಏನಿದ್ದರೂ ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಶಿರೇಂದ್ರ ಕುಮಾರ್ ತಮ್ಮ ವಿರುದ್ಧ ಮಾಡಲಾದ ಎಲ್ಲ ಆಪಾದನೆಗಳನ್ನೂ ತಿರಸ್ಕರಿಸಿದರು.  ‘ನನ್ನ ವಿರುದ್ಧದ ಆಪಾದನೆಗಳಿಂದ ನಾನು ಭ್ರಮನಿರಸನಗೊಂಡಿದ್ದೇನೆ. ಹುಡುಗ ಉಕ್ರೇನ್ ಹುಡುಗಿಯ ಜೊತೆ ಮದುವೆ ನೋಂದಣಿಗಾಗಿ ಎಡಿಎಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ. ಆದ್ದರಿಂದ ನನ್ನ ವಿರುದ್ಧ ಹಾಗೂ ನನ್ನ ಸಿಬ್ಬಂದಿ ವಿರುದ್ಧದ ಆಪಾದನೆಗಳು ಬುಡರಹಿತ. ನಾನು ದಂಪತಿಯನ್ನು ಜುಲೈ ೨ರಂದು ಭೇಟಿ ಮಾಡಿದ್ದು ಅವರ ಅರ್ಜಿಯನ್ನು ಪರಿಶೀಲಿಸಿ ಆನ್ ಲೈನ್ ನೋಂದಣಿ ಪ್ರಕ್ರಿಯೆ ಆರಂಭಿಸಿದ್ದೇನೆ. ಯಾವ ಕಾರಣಕ್ಕಾಗಿ ಅವರು ಇಂತಹ ಗಂಭೀರ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಈ ಆಪಾದನೆಗಳಿಂದ ನನಗೆ ವೈಯಕ್ತಿಕವಾಗಿ ಮತ್ತು ಇಡೀ ಆಡಳಿತದ ಘನತೆಗೆ ಧಕ್ಕೆಯಯಾಗಿದೆ ಎಂದು ರಿಶಿರೇಂದ್ರ ನುಡಿದರು.

2018: ಜೈಪುರ: ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿರುವಂತೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯದ ರಾಜಧಾನಿ ಜೈಪುರದಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ‘ನರೇಂದ್ರ ಮೋದಿಯವರೇ ನಿಮ್ಮ ಸರ್ಕಾರಕ್ಕೆ ಧನ್ಯವಾದಗಳು. ಭಾರತದ ಮಹಿಳೆಯರ ಪರಿಸ್ಥಿತಿ ಕೇವಲ ೭೦ ವರ್ಷವಲ್ಲ, ೩೦೦೦ ವರ್ಷಗಳಷ್ಟು ಹಿಂದಕ್ಕೆ ಹೋಗಿದೆ ಎಂದು ರಾಹುಲ್ ಗಾಂಧಿ ದೂರಿದರು.  ‘ಕೇವಲ ಮಹಿಳೆಯರಷ್ಟೇ ಅಲ್ಲ, ಸಣ್ಣ ರೈತರು ಮತ್ತು ವರ್ತಕರನ್ನು ಉದ್ಧರಿಸುವುದಾಗಿ ನೀವು ನೀಡಿದ್ದ ಭರವಸೆಯೂ ಹುಸಿಯಾಗಿದೆ ಎಂದು ಅವರು ನುಡಿದರು.  ‘ಮೋದಿ ಮತ್ತು ವಸುಂಧರಾ ರಾಜೆ ಅವರ ಸರ್ಕಾರಗಳ ಅಡಿಯಲ್ಲಿ ಮಹಿಳೆಯರು ಯಾವುದೇ ಭಯವಿಲ್ಲದೆ ತಮ್ಮ ಮನೆಗಳಿಂದ ಹೊರಬರಲು ಸಾಧ್ಯವೇ ಇಲ್ಲ. ಜನರ ಕಲ್ಯಾಣದ ಬಗ್ಗೆ  ಸರ್ಕಾರಕ್ಕೆ ಕಾಳಜಿಯೇ ಇಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು.  ಪ್ರಧಾನಿ ಮೋದಿಯವರು ೨ ಕೋಟಿ ನೌಕರಿ ಸೃಷ್ಟಿ, ಪ್ರತಿಯೊಬ್ಬರ ಖಾತೆ ೧೫ ಲಕ್ಷ ರೂಪಾಯಿ ಜಮಾ ಮತ್ತು ಮಹಿಳೆಯರ ಸುರಕ್ಷತೆಯ ಭರವಸೆ ಕೊಟ್ಟಿದ್ದರು. ಆದರೆ  ಈ ಎಲ್ಲ ರಂಗಗಳಲ್ಲೂ ಅವರು ವಿಫಲರಾಗಿದ್ದಾರೆ. ನಾನು ರಫೇಲ್ ವ್ಯವಹಾರ ಮತ್ತು ಅದರಲ್ಲಿನ ಭ್ರಷ್ಟಾಚಾರದ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ, ಪ್ರಧಾನಿ ಮೋದಿಯವರು  ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಒಂದು ನಿಮಿಷವನ್ನು ಕೂಡಾ ನೀಡಲಿಲ್ಲ. ಅವರಿಗೆ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲಾಗಲಿಲ್ಲ ಎಂದು ರಾಹುಲ್ ನುಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಪರಿಸ್ಥಿತಿಯನ್ನು ನಿರ್ಲಕ್ಷಿಸುತ್ತಿದೆ ಮತ್ತು ದೊಡ್ಡ ವ್ಯವಹಾರಸ್ಥರಿಗೆ ಸಾಲಮನ್ನಾದ ಸವಲತ್ತು ನೀಡುತ್ತಿದೆ ಎಂದು ರಾಹುಲ್ ಹೇಳಿದರು.  ಕಳೆದ ಎರಡು ವರ್ಷಗಳಲ್ಲಿ ಮೋದಿಜಿ ಅವರ ಸರ್ಕಾರವು ೧೫ ಉದ್ಯಮಿಗಳ ೨,೦೦,೦೦೦ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಿದೆ. ನಾನು ರೈತರ ಸಾಲಮನ್ನಾ ಮಾಡುವಂತೆ ಕೋರಿದೆ, ಅದಕ್ಕೆ ಮೌನವೇ ಅವರ ಉತ್ತರವಾಗಿತ್ತು ಎಂದು ಗಾಂಧಿ ಜೈಪುರದ ರಾಮಲೀಲಾ ಮೈದಾನದಲ್ಲಿ ನಡೆದ ಸಭೆಯಲ್ಲಿ ನುಡಿದರು. ಕೈಗಾರಿಕೋದ್ಯಮಿಗಳು ಸಾಲ ಮರುಪಾವತಿ ಮಾಡದೇ ಇದ್ದಾಗ ಅದನ್ನು ಅನುತ್ಪಾದಕ ಆಸ್ತಿ ಎಂಬುದಾಗಿ ಕರೆಯಲಾಗುತ್ತದೆ. ಆದರೆ ರೈತನಿಗೆ ಸಾಲ ಮರುಪಾವತಿ ಸಾಧ್ಯವಾಗದೇ ಹೋದಾಗ ಅವನನ್ನು ’ಸುಸ್ತಿದಾರ ಎಂದು ಕರೆಯಲಾಗುತ್ತದೆ. ಪ್ರಧಾನಿಯವರು ಕೈಗಾರಿಕೋದ್ಯಮಿಗಳನ್ನು ಆಲಂಗಿಸುತ್ತಾರೆ, ಆದರೆ ರೈತರನ್ನು ಅಲ್ಲ ಎಂದು ರಾಹುಲ್ ಟೀಕಿಸಿದರು. ರಾಹುಲ್ ಗಾಂಧಿ ಅವರು ಬಳಿಕ ತಮ್ಮ ಪ್ರಿಯ ವಿಷಯವಾದ ರಫೇಲ್ ವ್ಯವಹಾರವನ್ನು ಪ್ರಸ್ತಾಪಿಸಿದರು ಮತ್ತು ಫ್ರಾನ್ಸಿನಿಂದ ಯುಪಿಎ ಸರ್ಕಾರ ಖರೀದಿಸಿದ್ದ ವಿಮಾನವನ್ನು ಮೂರು ಪಟ್ಟು ಬೆಲೆ ಕೊಟ್ಟು ಪ್ರಧಾನಿ ಮೋದಿ ಅವರ ಸರ್ಕಾರ ಹೇಗೆ ಖರೀದಿಸಿತು ಎಂದು ವಿವರಿಸಿದರು.  ‘ಯುಪಿಎ ಸರ್ಕಾರ ಫ್ರೆಂಚ್ ವಿಮಾನವೊಂದನ್ನು ೫೪೦ ಕೋಟಿ ರೂಪಾಯಿಗಳಿಗೆ ಖರೀದಿಸಿತ್ತು.  ಮೋದಿ ಸರ್ಕಾರ ಅದಕ್ಕೆ ೧,೬೦೦ ಕೋಟಿ ರೂಪಾಯಿ ಕೊಟ್ಟಿದೆ ಎಂದು ರಾಹುಲ್ ನುಡಿದರು. ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯದಲ್ಲಿ ಗುಂಪು ಹತ್ಯೆಗಳು ಸಾಮಾನ್ಯವಾಗುತ್ತಿದ್ದು ಜನರ ಬಿಜೆಪಿ ದುರಾಡಳಿತದಿಂದ ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದರು.  ಜೈಪುರ ವಿಮಾನ ನಿಲ್ದಾಣದಲಿ ರಾಹುಲ್ ಗಾಂಧಿ ಅವರನ್ನು ರಾಜಸ್ಥಾನದಲ್ಲಿ ಪಕ್ಷ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ ಮತ್ತು ಅಶೋಕ ಗೆಹ್ಲೋಟ್ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಮತ್ತಿತರರು ಸ್ವಾಗತಿಸಿದರು. ಕಾಂಗ್ರೆಸ್ ಮುಖ್ಯಸ್ಥರ ರೋಡ್ ಶೋ ಮತ್ತು ರಾಮಲೀಲಾ ಮೈದಾನದ ಸಾರ್ವಜನಿಕ ಸಭೆಗೆ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದರು.

2018: ನವದಹಲಿ: ಭಾರತೀಯ ರೈಲ್ವೇಯು ಸೆಪ್ಟೆಂಬರ್ ೧ರಿಂದ ತನ್ನ ಪ್ರಯಾಣಿಕರಿಗೆ ಉಚಿತ ಪ್ರವಾಸೀ ವಿಮಾ ಸವಲತ್ತನ್ನು ಒದಗಿಸುವುದಿಲ್ಲ ಎಂದು ಅಧಿಕಾರಿಯೊಬ್ಬರು ಇಲ್ಲಿ ತಿಳಿಸಿದರು. ಭಾರತೀಯ ರೈಲ್ವೇಯ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್  (ಐಆರ್ ಸಿಟಿಸಿ) ಉಚಿತ ಪ್ರವಾಸೀ ವಿಮಾವನ್ನು ಸೆಪ್ಟೆಂಬರ್ ೧ರಿಂದ ನಿಲ್ಲಿಸಲು ನಿರ್ಧರಿಸಿದೆ ಎಂದು ಹಿರಿಯ ರೈಲ್ವೇ ಅಧಿಕಾರಿ ತಿಳಿಸಿದರು. ಉಚಿತ ಪ್ರವಾಸೀ ವಿಮಾ ಇನ್ನು ಮುಂದೆ ಐಚ್ಛಿಕವಾಗಲಿದೆ ಎಂದು ಅವರು ನುಡಿದರು.  ಐಆರ್ ಸಿಟಿಸಿ ವೆಬ್ ಸೈಟ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿ ಟಿಕೆಟ್ ಬುಕ್ ಮಾಡುವಾಗ ಪ್ರವಾಸೀ ವಿಮೆಯನ್ನು ಆಯ್ಕೆ ಮಾಡಿಕೊಳ್ಳಲು ಅಥವಾ ಬಿಟ್ಟು ಬಿಡಲು ಎರಡು ಅವಕಾಶಗಳಿರುತ್ತವೆ ಎಂದು ಅವರು ಹೇಳಿದರು. ಡಿಜಿಟಲ್ ವಹಿವಾಟು ಅಭಿವೃದ್ಧಿ ಸಲುವಾಗಿ, ಐಆರ್‌ಸಿಟಿಸಿಯು ೨೦೧೭ರ ಡಿಸೆಂಬರ್‌ನಿಂದ ರೈಲ್ವೇ ಪ್ರಯಾಣಿಕರಿಗೆ ಉಚಿತ ಪ್ರವಾಸೀ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ ಎಂದು ಅವರು ನುಡಿದರು. ರೈಲ್ವೇಯು ಈ ಹಿಂದೆ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡುವ ಬಳಕೆದಾರರಿಗೆ ಬುಕಿಂಗ್ ಶುಲ್ಕ ಮನ್ನಾ ಮಾಡಿತ್ತು. ಐಆರ್ ಸಿಟಿಸಿಯು ಒದಗಿಸಿದ್ದ ವಿಮಾ ಸವಲತ್ತಿನಲ್ಲಿ ರೈಲ್ವೇ ಪ್ರಯಾಣದ ವೇಳೆ ವ್ಯಕ್ತಿ ಸಾವನ್ನಪ್ಪಿದರೆ ಗರಿಷ್ಠ ೧೦ ಲಕ್ಷ ರೂಪಾಯಿಗಳು ಮತ್ತು ಅಪಘಾತದ ಪರಿಣಾಮವಾಗಿ ಅಂಗವಿಕಲನಾದರೆ ೭.೫ ಲಕ್ಷ ರೂಪಾಯಿ, ಗಾಯಗೊಂಡರೆ ೨ ಲಕ್ಷ ರೂಪಾಯಿ ಮತ್ತು ಮೃತರ ಪಾರ್ಥಿವ ಶರೀರ ಒಯ್ಯುವ ಸಲುವಾಗಿ ೧೦,೦೦೦ ರೂಪಾಯಿಗಳನ್ನು ಭರಿಸಲು ಅವಕಾಶವಿತ್ತು.  ಪ್ರವಾಸೀ ವಿಮಾ ಬದಲಾವಣೆಗೆ ಸಂಬಂಧಿಸಿದ ಆದೇಶವನ್ನು ಕೆಲವೇ ದಿನಗಳಲ್ಲಿ ಹೊರಡಿಸಲಾಗುವುದು. ಏನಿದ್ದರೂ ಪ್ರವಾಸೀ ವಿಮಾ ಆಯ್ಕೆ ಬಯಸುವವರು ಎಷ್ಟು ಹಣ ಪಾವತಿ ಮಾಡಬೇಕಾಗುತ್ತದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.


2018: ತಿರುವನಂತಪುರಂ: ಭಾರೀ ಮಳೆ ಹಾಗೂ ಪ್ರವಾಹದಿಂದ ಕೇರಳದ ೧೪ ಜಿಲ್ಲೆಗಳ ಪೈಕಿ ೧೧ ಜಿಲ್ಲೆಗಳು ಸಂತ್ರಸ್ತಗೊಂಡಿದ್ದು, ಬಹುತೇಕ ಭೂಪ್ರದೇಶ ನೀರಿನಡಿ ಮುಳುಗಿವೆ ಎಂದು ಕೇಂದ್ರ ಸಚಿವ ಕೆ ಜೆ ಅಲ್ಫೋನ್ಸ್ ಹೇಳಿದರು. ಈ ಮಧ್ಯೆ ಮುಂದಿನ ಮೂರು ದಿನಗಳ ಕಾಲ ಕೇರಳದಲ್ಲಿ ಇನ್ನೂ ಭಾರಿ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿಪಕ್ಷ ನಾಯಕ ರಮೇಶ ಚೆನ್ನಿತ್ತಲ ಅವರ ಜೊತೆಗೆ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮೃತರ ಕುಟುಂಬಗಳಿಗೆ ತಲಾ ೪ ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದರು. ಕೇಂದ್ರದಿಂದ ಕಳುಹಿಸಲ್ಪಟ್ಟ ಸಶಸ್ತ್ರ ಪಡೆಗಳು ಕಳೆದ ಮೂರು ದಿನಗಳಿಂದ ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರಕ್ಕೆ ನೆರವಾದವು. ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ ಡಿ ಆರ್ ಎಫ್) ಸಿಬ್ಬಂದಿಯನ್ನು ಈಗಾಗಲೇ ಕೇರಳಕ್ಕೆ ಕಳುಹಿಸಲಾಗಿದೆ ಎಂದು ಕೇರಳದವರೇ ಆದ ಸಚಿವ ಅಲ್ಫೋನ್ಸ್ ನುಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆಗೆ ಪರಿಸ್ಥಿತಿ ಬಗ್ಗೆ ಚರ್ಚಿಸಿದರು. ಇಡುಕ್ಕಿ ಮತ್ತು ವೇನಾಡ್ ಜಿಲ್ಲೆಗಳಲ್ಲಿ ಆಗಸ್ಟ್ ೧೪-೧೫ರವರೆಗೂ ಭಾರಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಿರುವ ಭಾರತೀಯ ಹವಾಮಾನ ಇಲಾಖೆ ಕಟ್ಟೆಚ್ಚರ ನೀಡಿದೆ. ಕಣ್ಣೂರಿನಲ್ಲಿ ಕೂಡಾ ಆಗಸ್ಟ್ ೧೩-೧೫ರವರೆಗೆ ಭಾರಿ ಮಳೆಯ ಎಚ್ಚರಿಕೆ ನೀಡಲಾಯಿತು. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ಕನಿಷ್ಠ ೩೦ ಮಂದಿ ಬಲಿಯಾಗಿ, ಸುಮಾರು ೫೪,೦೦೦ ಮಂದಿ ಮನೆ ಮಾರು ಕಳೆದುಕೊಂಡು ನಿರ್ವಸಿತರಾದರು.  ನದಿಗಳು ಉಕ್ಕಿ ಹರಿಯುತ್ತಿದ್ದು, ಅಣೆಕಟ್ಟುಗಳು ತುಂಬಿ ತುಳುಕಿದವು. ಹೆದ್ದಾರಿಗಳು ಅಲ್ಲಲ್ಲಿ ಕುಸಿದಿದ್ದರೆ, ರಾಜ್ಯಾದ್ಯಂತ ಮಳೆ ಪ್ರವಾಹಕ್ಕೆ ಹಲವಾರು ಮನೆಗಳು ಕೊಚ್ಚಿ ಹೋದವು. ಇಡುಕ್ಕಿ ಅಣೆಕಟ್ಟಿನ ಎಲ್ಲ ಐದೂ ತೂಬುಗಳನ್ನು ತೆರೆದ ಬಳಿಕ ಪ್ರವಾಹ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಇದರ ಜೊತೆಗೆ ೨ ಡಜನ್ ಗೂ ಹೆಚ್ಚು ಅಣೆಕಟ್ಟುಗಳ ತೂಬುಗಳನ್ನು ತೆರೆಯಲಾಗಿದ್ದು, ಭಾರೀ ಮಳೆಯ ನೀರಿನ ಜೊತೆಗೆ ಅಣೆಕಟ್ಟಿನ ಹೆಚ್ಚುವರಿ ನೀರೂ ಸೇರಿಕೊಂಡು ಪೆರಿಯಾರ್ ನದಿಯ ಅಬ್ಬರ ಇನ್ನಷ್ಟು ಹೆಚ್ಚಿದೆ. ರಾಜ್ಯದಲ್ಲಿ ಇರುವ ೪೦ಕ್ಕೂ ಹೆಚ್ಚು ನದಿಗಳು ಬಹುತೇಕ ಭೋರ್ಗರೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದರು. ಮಳೆ ಪ್ರವಾಹಕ್ಕೆ ಸಿಲುಕಿ ಮನೆಮಾರು ಕಳೆದುಕೊಳ್ಳುವುದರ ಜೊತೆಗೆ ಮೃತರಾದವರ ಕುಟುಂಬಗಳಿಗೆ ತಲಾ ೪ ಲಕ್ಷ ರೂಪಾಯಿಗಳ ಪರಿಹಾರವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಕಟಿಸಿದರು. ಮಳೆ ಪ್ರವಾಹದಲ್ಲಿ ಆಸಿಪಾಸ್ತಿ ಮನೆ ಕಳೆದುಕೊಂಡವರಿಗೆ ಭೂಮಿ ಖರೀದಿಗೆ ೬ ಲಕ್ಷ ರೂಪಾಯಿ ಹಾಗೂ ಮನೆಕಟ್ಟಲು ೪ ಲಕ್ಷ ರೂಪಾಯಿ ಹೀಗೆ ತಲಾ ೧೦ ಲಕ್ಷ ರೂಪಾಯಿಗಳ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಭಾರಿ ಮಳೆಯಿಂದಾಗಿ ಎಂಟು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ಕಟ್ಟೆಚ್ಚರವನ್ನು ಘೋಷಿಸಿದೆ. ಆಗಸ್ಟ್ ೧೧ರಿಂದ ೧೫ರವರೆಗೆ ಸಮುದ್ರದಲ್ಲೂ ಅಲೆಗಳ ಉಬ್ಬರ ಸಾಧ್ಯತೆ ಬಗ್ಗೆ ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವಾ ಕೇಂದ್ರ ಎಚ್ಚರಿಕೆ ನೀಡಿತು. ವೇನಾಡ್ ಜಿಲ್ಲೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿಪಕ್ಷ ನಾಯಕ ರಮೇಶ ಚೆನ್ನಿತ್ತಲ ಅವರು ಒಟ್ಟಿಗೆ ಪ್ರವಾಹ ಪ್ರದೇಶದ ಸಮೀಕ್ಷೆ ನಡೆಸಿದ ಅಪರೂಪದ ಘಟನೆ ಘಟಿಸಿತು.  ಮಳೆ ಪ್ರವಾಹದಿಂದಾಗಿ ತಮ್ಮ ಮಹತ್ವದ ದಾಖಲೆಗಳನ್ನು ಕಳೆದುಕೊಂಡವರಿಗೆ ಉಚಿತವಾಗಿ ಅವುಗಳನ್ನು ನವೀಕರಿಸಿ ಕೊಡಲಾಗುವುದು ಎಂದೂ ವಿಜಯನ್ ಹೇಳಿದರು.

2016: ರಿಯೋ ಡಿ ಜನೈರೋ: ಭಾರತದ ಅಗ್ರ ಕ್ರಮಾಂಕದ ಶೆಟ್ಲರ್ಗಳಾದ ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಪಿ.ವಿ.ಸಿಂಧು ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು.  ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಸಿಂಗಲ್ಸ್ನಲ್ಲಿ ತಮ್ಮ ಮೊದಲ ಪಂದ್ಯದಲ್ಲಿ ಬ್ರೆಜಿಲ್ ಲೋಹೈನಿ ವಿಸೆಂಟೆ ವಿರುದ್ಧ ಭರ್ಜರಿ ಗೆಲುದು ದಾಖಲಿಸಿದರು. ಸೈನಾ ನೆಹ್ವಾಲ್ ಲೋಹೈನಿ ಅವರನ್ನು 21-17, 21-17 ಗೇಮ್ಳಿಂದ ಸೋಲಿಸಿದರು. ಸೈನಾ ಎರಡನೇ ಪಂದ್ಯದಲ್ಲಿ ಆಗಸ್ಟ್ 14 ರಂದು ಉಕ್ರೇನ್ ಮರಿಯಾ ಉಲಿಟಿನಾ ಅವರನ್ನು ಎದುರಿಸುವರು. ಈದಿನ ನಡೆದ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಪಿ.ವಿ.ಸಿಂಧು ಹಂಗೇರಿಯ ಲೌರಾ ಸರೋಸಿ ವಿರುದ್ಧ 21-8, 21-9 ನೇರ ಗೇಮ್ಳಿಂದ ಸುಲಭದ ಜಯ ಸಾಧಿಸಿದರು. ಪಿ.ವಿ.ಸಿಂಧು 27 ನಿಮಿಷ ನಡೆದ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದರು. ಸಿಂಧು ಮುಂದಿನ ಪಂದ್ಯದಲ್ಲಿ ಆಗಸ್ಟ್ 14 ರಂದು ಕೆನಡಾದ ಲಿ ಮಿಷಲ್ ಅವರನ್ನು ಎದುರಿಸಲಿದ್ದಾರೆಮಹಿಳೆಯರ ಡಬಲ್ಸ್ ವಿಭಾದಲ್ಲಿ ಭಾರತದ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ ಜೋಡಿ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಮೂಡಿಸಿದರು. ಜ್ವಾಲಾ-ಅಶ್ವಿನಿ ಜೋಡಿ ಜಪಾನಿನ ವಿಶ್ವ ನಂ. 1 ಜೋಡಿ ಅಯಕ ತಕಹಶಿ ಮತ್ತು ಮಿಸಕಿ ಮತಸುಮೋಟೋ ಜೋಡಿ ವಿರುದ್ಧ 15-21, 10-21 ನೇರ ಗೇಮ್ಳಿಂದ ಸೋಲನುಭವಿಸಿದರು. ಪುರುಷರ ಡಬಲ್ಸ್ ವಿಭಾಗದಲ್ಲೂ ಸಹ ಭಾರತಕ್ಕೆ ಗುರುವಾರ ನಿರಾಸೆಯ ದಿನ. ಪುರುಷರ ಡಬಲ್ಸ್ ವಿಭಾಗದಲ್ಲಿ ಮನು ಅತ್ರಿ ಮತ್ತು ಬಿ ಸುಮೀತ್ ರೆಡ್ಡಿ ಜೋಡಿ ಇಂಡೋನೇಷ್ಯಾದ ವಿಶ್ವ ನಂ.2 ಜೋಡಿ ಮೊಹಮ್ಮದ್ ಆಶಾನ್ ಮತ್ತು ಹೆಂಡ್ರ ಸೆತವಾನ್ ಜೋಡಿ ವಿರುದ್ಧ 18-21, 13-21 ನೇರ ಗೇಮ್ಳಿಂದ ಸೋಲನುಭವಿಸಿದರು.

2016: ನವದೆಹಲಿ: ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಪ್ರತಿನಿತ್ಯ ಬೊಬ್ಬಿರಿಯುತ್ತಿರುವ ಪಾಕಿಸ್ತಾನವು ತಾನು ಆಕ್ರಮಿಸಿಕೊಂಡಿರುವ ಗಿಲ್ಗಿಟ್ಬಾಲ್ಟಿಸ್ತಾನದಲ್ಲಿ ಮಾನವ ಹಕ್ಕುಗಳನ್ನು ಹೇಗೆ ಉಲ್ಲಂಘಿಸುತ್ತಿದೆ ಎಂಬುದು ಬಹಿರಂಗಗೊಂಡಿತು. ಏಷ್ಯಾದ ಮಾನವ ಹಕ್ಕುಗಳ ಆಯೋಗವು (ಎಎಚ್ಆರ್ಸಿಪಾಕ್ ಆಕ್ರಮಿತ ಗಿಲ್ಗಿಟ್ಬಾಲ್ಟಿಸ್ತಾನದಲ್ಲಿ ಪೊಲೀಸ್ ದೌರ್ಜನ್ಯ ಕುರಿತ ವರದಿಯನ್ನು ಚಿತ್ರಗಳ ಸಹಿತವಾಗಿ ಬಿಡುಗಡೆ ಮಾಡಿತು.ಚಿತ್ರಹಿಂಸೆಗೆ ಒಳಗಾಗಿರುವವರಿಗೆ ಸೇಡು ತೀರಿಸಿಕೊಳ್ಳುವ ಹಕ್ಕಿಲ್ಲವಾದ್ದರಿಂದ ಮೌನವಾಗಿ  ದೌರ್ಜನ್ಯಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂದು ಎಎಚ್ಆರ್ಸಿ ವರದಿ ಹೇಳಿತು.

2016: ರಿಯೋ ಡಿ ಜನೈರೋ: ಭಾರತದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿರುವ ಬೆನ್ನಲ್ಲೆ ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟಿರುವ ಜನತೆಗೆ ಪದಕ ಗೆದ್ದು ತೋರಿಸುವ ವಿಶ್ವಾಸವನ್ನು ದೀಪಾ  ವ್ಯಕ್ತಪಡಿಸಿದರು. ನಾನು ನರ್ವಸ್ ಆಗಿಲ್ಲ ಬದಲಾಗಿ ಪುಳಕಿತಗೊಂಡಿರುವೆ, ಮುಂದಿನ ಪಂದ್ಯದಲ್ಲಿ ಶಕ್ತಿಮೀರಿ ಪ್ರಯತ್ನ ಮಾಡಿ ನನ್ನಲ್ಲಿನ ಅತಿ ಉತ್ತಮ ಆಟ ಹೊರಹಾಕುವೆಎಂದು ವಿಶ್ವಾಸದಿಂದ ನುಡಿದಿರುವ ದೀಪಾ ತಮ್ಮ ಅಭಿಮಾನಿಗಳಿಗೆ ಆಗಸ್ಟ್ 14 ಶುಭದಿನವಾಗಲಿ ಎಂದು ಹಾರೈಸುವಂತೆ ಕೋರಿದರು.

2016: ನವದೆಹಲಿ: ಅಂತರಿಕ್ಷ್-ದೇವಾಸ್ ವ್ಯವಹಾರ ಪ್ರಕರಣದಲ್ಲಿ ಇಸ್ರೋದ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ದಾಖಲಿಸಿತು. ಮಾಧವನ್ ಇಸ್ರೋ ಅಧ್ಯಕ್ಷರಾಗಿದ್ದಾಗ ನಡೆದ ಸರ್ಕಾರಿ ಸ್ವಾಮ್ಯದ ಅಂತರಿಕ್ಷ್ ಹಾಗೂ ಮಲ್ಟಿ ಮೀಡಿಯಾ ಕಂಪನಿ ದೇವಾಸ್ ನಡುವಣ ವ್ಯವಹಾರದಲ್ಲಿ ನಡೆದಿದೆ ಎನ್ನಲಾದ 578 ಕೋಟಿ ವಂಚನೆ ಆರೋಪದ ಪ್ರಕರಣದಲ್ಲಿ ಈಗಾಗಲೇ ಸಿಬಿಐ ಮಾಧವನ್ರನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೆ, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಡೀಲ್ ಬಗ್ಗೆ ಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿತ್ತು. ಕಳೆದ ವರ್ಷ ಸಿಬಿಐ ಬೆಂಗಳೂರು ಮೂಲದ ದೇವಾಸ್ ಮಲ್ಟಿಮೀಡಿಯಾ ಹಾಗೂ ಅದರ ನಿರ್ದೇಶಕ ಕೆ ಆರ್ ಶ್ರೀಧರನ್ ಮೂರ್ತಿ, ಎಮ್ ಜಿ ಚಂದ್ರಶೇಖರ್, ಆರ್. ವಿಶ್ವನಾಥನ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಲ್ಲದೆ ಕಂಪನಿ ಆವರಣದಲ್ಲಿ ಶೋಧ ಕಾರ್ಯ ನಡೆಸಿತ್ತು.
ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ಸಿಬಿಐ, ಸರ್ಕಾರಿ ಅಧಿಕಾರಿಗಳು ಸ್ವಹಿತಾಸಕ್ತಿಗಾಗಿ ಅಧಿಕಾರ ದುರ್ಬಳಕೆ ಹಾಗೂ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ್ಲ ಉಲ್ಲೇಖಿಸಿತ್ತು. ಜಿಸ್ಯಾಟ್-6 ಮತ್ತು ಜಿಸ್ಯಾಟ್-6 ಉಪಗ್ರಹ ಉಡಾವಣೆ ಮೂಲಕ ಮಲ್ಟಿಮೀಡಿಯಾ ಹಾಗೂ ಮೊಬೈಲ್ ಸೇವೆಗಳಿಗೆ ಎಸ್-ಬ್ಯಾಂಡ್ ತರಂಗಾಂತರವನ್ನು ಒದಗಿಸುವ ಬಗ್ಗೆ ಬಹುಕೋಟಿ ವ್ಯವಹಾರದ ಒಪ್ಪಂದವನ್ನು ಇಸ್ರೋ ಹಾಗೂ ದೇವಾಸ್ ನಡುವೆ ಮಾಡಿಕೊಳ್ಳಲಾಗಿತ್ತು.

2016: ಕರಾಚಿ: ಪಾಕಿಸ್ತಾನದ ಖ್ಯಾತ ಕ್ರಿಕೆಟಗ ಹನೀಫ್ ಮೊಹಮ್ಮದ್ ಈದಿನ ಸಂಜೆ ನಿಧನರಾದರು ಎಂದು ಆಘಾ ಖಾನ್ ಅಸ್ಪತ್ರೆಯ ವಕ್ತಾರರು ಧೃಢಪಡಿಸಿದರು. ಹನೀಫ್ ಮೊಹಮ್ಮದ್ ಅವರಿಗೆ  ಮಧ್ಯಾಹ್ನ ಹೃದಯ ಸ್ಥಂಭನವಾಗಿ 6 ನಿಮಿಷಗಳ ಕಾಲ ಅವರ ಉಸಿರಾಟ ನಿಂತಿತ್ತು. ಆದರೆ ವೈದ್ಯರ ನಿರಂತರ ಪ್ರಯತ್ನದ ಫಲವಾಗಿ ಅವರು ಮತ್ತೆ ಉಸಿರಾಡಿದ್ದರು. ನಂತರ ಅವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತರಾದರು ಎಂದು ಆಸ್ಪತ್ರೆ ವಕ್ತಾರರು ತಿಳಿಸಿದರು. ಹನೀಫ್ ಅವರಿಗೆ ಹೃದಯಾಘಾತವಾಗಿ ಮೃತರಾಗಿದ್ದಾರೆ ಎಂದು ಪುತ್ರ ಶೋಯೆಬ್ ಮಧ್ಯಾಹ್ನ ತಿಳಿಸಿದ್ದರು. ಶೋಯೆಬ್ ನೀಡಿದ ಮಾಹಿತಿಯನ್ನು ಆಧರಿಸಿ ಮಾಧ್ಯಮಗಳು ಹನೀಫ್ ಮೃತರಾಗಿದ್ದಾರೆ ಎಂದು ವರದಿ ಮಾಡಿದವು. ಆದರೆ ಕ್ಷಣಗಳ ನಂತರ ಶೋಯೆಬ್ ತಮ್ಮ ತಂದೆ ಮೃತರಾಗಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು. ಹನೀಫ್ ಅವರ ಹೃದಯ ಸುಮಾರು 6 ನಿಮಿಷಗಳವರೆಗೆ ಸ್ಥಬ್ಧವಾಗಿತ್ತು. ವೈದ್ಯರು ನಿರಂತರವಾಗಿ ಪ್ರಯತ್ನಿಸಿದ ನಂತರ ಅವರು ಹೃದಯ ಬಡಿತ ಪ್ರಾರಂಭವಾಗಿದೆ. ಪ್ರಸ್ತುತ ಅವರನ್ನು ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ಮುಂದುವರೆಸಲಾಗಿದೆ. ತಂದೆಗೆ ದೇವರು ಎರಡನೇ ಅವಕಾಶ ನೀಡಿದ್ದಾರೆ. ಇದು ಹನೀಫ್ ಅವರ ಲಕ್ಷಾಂತರ ಅಭಿಮಾನಿಗಳ ಪ್ರಾರ್ಥನೆಯಿಂದ ಸಾಧ್ಯವಾಗಿದೆ ಎಂದು ಶೋಯೆಬ್ ತಿಳಿಸಿದ್ದರು.

2016: ಬೀಜಿಂಗ್: ಡಾಂಗ್ಯಾಂಗ್ ನಗರದ ಹುಬೆ ಮಧ್ಯ ಪ್ರಾಂತ್ಯದಲ್ಲಿರುವ ವಿದ್ಯುತ್ ಸ್ಥಾವರದಲ್ಲಿ ಭಾರಿ ಒತ್ತಡದ ಸ್ಟೀಮ್ ಪೈಪ್ನಲ್ಲಿ ಉಂಟಾದ ಲೀಕೆಜ್ನಿಂದ ಏಕಾಏಕಿ ಭಾರಿ ಸ್ಫೋಟ ಸಂಭವಿಸಿದ್ದರಿಂದ ಕನಿಷ್ಠ 21 ಜನ ಮೃತರಾಗಿ ಐವರು ಜನ ಗಂಭೀರವಾಗಿ ಗಾಯಗೊಂಡರು. ಕರ್ತವ್ಯನಿರತ ನೌಕರರು ಸ್ಪೋಟದ ರಭಸಕ್ಕೆ ಛಿದ್ರಗೊಂಡರು. ಚೀನಾ ರಕ್ಷಣಾ ಪಡೆ ಸ್ಥಳಕ್ಕೆ ತೆರಳಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿತು.  ಕಳೆದ ಆಗಸ್ಟ್ನಲ್ಲಿ ತಿಯಾಂಜಿನ್ ನಗರದಲ್ಲಿರುವ ರಸಾಯನಿಕ ಘಟಕದಲ್ಲಿ ಉಂಟಾದ ಸ್ಪೋಟದಲ್ಲಿ 170 ಜನ ಮೃತರಾಗಿದ್ದರು.

2016: ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚುನಾವಣಾ ಅಕ್ರಮಗಳು ಮತ್ತು ಪಾಕ್ ಅತಿಕ್ರಮಣವನ್ನು ವಿರೋಧಿಸಿ ಪ್ರತಿಭಟನೆಗಳು ಭುಗಿಲೆದ್ದಿದ್ದು, ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫ್ಪರಾಬಾದ್ ನಿಂದ ಬಂದಿರುವ ವಿಡಿಯೋ ಹಾಗೂ ಚಿತ್ರಗಳು ವರದಿಗಳನ್ನು ದೃಢ ಪಡಿಸಿದವು.
ಪಾಕ್ ಅತಿಕ್ರಮಣವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರುಆಜಾದಿಕಹಳೆ ಮೊಳಗಿಸಿದ್ದು, ಚುನಾವಣಾ ಆಕ್ರಮಗಳ ಕುರಿತು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿದವು. ಪ್ರತಿಭಟನಕಾರರು ಸ್ವಾತಂತ್ರ್ಯ ಪರ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು. ವಿಡಿಯೋದಲ್ಲಿ ಪ್ರತಿಭಟನಕಾರರ ಘೋಷಣೆಗಳ ವಿವರಗಳು ಪ್ರಕಟಗೊಂಡವು.
 2016: ನವದೆಹಲಿ: ಮಹಿಳೆಯರ ಅನುಕೂಲಕ್ಕಾಗಿ ಹೆರಿಗೆ ರಜೆಯನ್ನು 12 ವಾರದಿಂದ 26 ವಾರದವರೆಗೆ ವಿಸ್ತರಿಸಲು ಅವಕಾಶ ಮಾಡಿಕೊಡುವ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ತನ್ನ ಅನುಮೋದನೆಯನ್ನು ನೀಡಿತು.
ಮಾತೃತ್ವ ರಜೆಗೆ ತೆರಳುವ ಸ್ತ್ರೀಯರು ಪ್ರಸೂತಿ ಸಮಯದಲ್ಲಿ ತಗಲಿದ ವೆಚ್ಚವನ್ನು ಹಿಂಪಡೆಯಲು ಕೆಲ ಕಂಪನಿಗಳಿಗೆ ವೆಚ್ಚದ ಪ್ರತಿ ಸಲ್ಲಿಸಬಹುದಾಗಿದೆ ಇದರಿಂದ ಮಹಿಳಾ ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಿಸಲು ಸಹಕಾರಿ ಎಂದು ಮಸೂದೆ ಹೇಳಿದೆ. ಹಿಂದಿನ ದಿನ ಕೇಂದ್ರ ಸಚಿವ ಸಂಪುಟವು ಎಕ್ಸ್ ಪೋಸ್ಟ್ ಫ್ಯಾಕ್ಟೊಗೆ ಹಸಿರು ನಿಶಾನೆ ತೋರಿದ ನಂತರ ಪ್ರಸೂತಿ ಕಾಯ್ದೆ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿತ್ತು. ಪ್ರಸೂತಿ ಕಾಯ್ದೆ 1961 ಅನ್ವಯ ಗರ್ಭ ಧರಿಸಿದ ನಂತರ ಹಾಗೂ ಶಿಶು ಪಾಲನೆಗೆ ಗೈರಾಗುವ ದಿನದಲ್ಲಿ ಪೂರ್ಣ ಸಂಬಳ ಪಡೆಯಲು ಮಹಿಳೆಯರು ಅರ್ಹರಿದ್ದಾರೆ. ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 10 ಕ್ಕೂ ಅಧಿಕ ಉದ್ಯೋಗಸ್ಥ ಮಹಿಳೆಯರಿಗೆ ಇದು ಅನ್ವಯಿಸುತ್ತದೆ. ಕಾಯ್ದೆ ತಿದ್ದುಪಡಿಯಿಂದ 1.8 ಕೋಟಿ ಉದ್ಯೋಗಸ್ಥ ಮಹಿಳೆಯರಿಗೆ ಸಹಾಯವಾಗಲಿದೆ. ಮಸೂದೆ ತಿದ್ದುಪಡಿಯಲ್ಲಿ ಮೊದಲ ಎರಡು ಹೆರಿಗೆಗೆ ರಜೆ ಅವಧಿಯನ್ನು 12 ರಿಂದ 26 ವಾರಗಳಿಗೆ ಹೆಚ್ಚಳ, ನಂತರದ ಹೆರಿಗೆಗೆ 12 ವಾರ ರಜಗೆ ಅವಕಾಶ ನೀಡಲಾಗಿದೆ. 50 ಕ್ಕೂ ಹೆಚ್ಚು ನೌಕರರನ್ನು ಹೊಂದಿರುವ ಸಂಸ್ಥೆ ಅಥವಾ ಕಚೇರಿಗಳಿಗೆ ನಿಯಮ ಅನ್ವಯಿಸುತ್ತದೆ.

2016: ಮುಂಬೈ: ಎಂಟು ದಿನದ ಹಿಂದೆ ಗೋವಾ-ಮುಂಬೈ ನಡುವಣ ಹೆದ್ದಾರಿಯಲ್ಲಿ, ಮುಂಬೈನಿಂದ ಸುಮಾರು 170 ಕಿಮಿ ದೂರದ ಮಹಾಡ್ ಎಂಬಲ್ಲಿ ಸಾವಿತ್ರಿ ನದಿಗೆ ನಿರ್ವಿುಸಲಾಗಿದ್ದ ಬ್ರಿಟಿಷ್ ಕಾಲದ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋದ ಪರಿಣಾಮ ಕಣ್ಮರೆಯಾಗಿದ್ದ ಎರಡು ಬಸ್ಸುಗಳನ್ನು ಶೋಧಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಯಿತು. ಈ ಕುರಿತು ರಕ್ಷಣಾ ಅಧಿಕಾರಿ ಪ್ರತಿಕ್ರಿಯಿಸಿ, ಬಸ್ಗಳ ಎರಡು ಭಗ್ನಾವಶೇಷಗಳು ಗೋಚರಿಸಿವೆ. ಸೇತುವೆ ಕುಸಿದ ಸ್ಥಳದಿಂದ ಸುಮಾರು 170ರಿಂದ 200 ಮೀಟರ್ ದೂರದಲ್ಲಿ ನದಿಯಲ್ಲಿ ಅವಶೇಷಗಳು ಕಂಡುಬಂದಿವೆ ಎಂದು ತಿಳಿಸಿದರು. ಘಟನೆಯಲ್ಲಿ 2 ಬಸ್, ನಾಲ್ಕು ಕಾರುಗಳ ಸಮೇತ ಹಲವು ಜನರು ನಾಪತ್ತೆಯಾಗಿದ್ದರು. ಇದುವರೆಗೆ 26 ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ಮೃತದೇಹಗಳು ಮತ್ತು ವಾಹನಗಳನ್ನು ಪತ್ತೆಮಾಡುವಲ್ಲಿ ಎನ್ಡಿಆರ್ಎಫ್, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಪಡೆಯ ಯೋಧರು ಕಾರ್ಯಾಚರಣೆ ಮುಂದುವರೆಸಿದರು.

2008: ಚಂಬಲ್ ಕಣಿವೆಯ ಪ್ರಸಿದ್ಧ ಜೆಪರನಾಥ್ ಗುಹಾ ದೇವಾಲಯದ ಏಣಿ ಕುಸಿದ ಘಟನೆಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಎಲ್ಲಾ ಭಕ್ತಾದಿಗಳನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಸೈನಿಕರು ಯಶಸ್ವಿಯಾದರು. 16ನೇ ಶತಮಾನದಲ್ಲಿ ನಿರ್ಮಿಸಲಾದ ಈ ಶೈವ ದೇವಾಲಯದಲ್ಲಿನ ದೇವರ ದರ್ಶನಕ್ಕ್ಕೆ 300 ಮೆಟ್ಟಿಲುಗಳನ್ನು ಏರಿ ಹೋಗಬೇಕು. ಭಾರಿ ಮಳೆ ಹಾಗೂ ಜನ ದಟ್ಟಣೆಯಿಂದ ಮೆಟ್ಟಿಲ ಏಣಿ ಕುಸಿದು ಬಿದ್ದಿತ್ತು.

2015: ಭಾರತದ ಜನಪ್ರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ದೇಶದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಭಾಜನರಾದರು. ಕ್ರೀಡಾ ಸಚಿವಾಲಯ ಇದನ್ನು ಖಚಿತ ಪಡಿಸಿತು. ಲಿಯಾಂಡರ್ ಪೇಸ್ (1996-97ನೇ ಸಾಲಿನಲ್ಲಿ) ಬಳಿಕ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಎರಡನೇ ಟನಿಸ್ ತಾರೆ ಎನ್ನುವ ಕೀರ್ತಿ ಸಾನಿಯಾ ಅವರದ್ದಾಯಿತು. ಕಳೆದ ಋತುವಿನಲ್ಲಿನ ಸಾಧನೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2015: ನವದೆಹಲಿ: ಅಡುಗೆ ಅನಿಲ (ಎಲ್ಪಿಜಿ)ವಿತರಣೆ ಮತ್ತು ಸಾರ್ವಜನಿಕರ ವಿತರಣಾ ವ್ಯವಸ್ಥೆಯನ್ನು (ಪಿಡಿಎಸ್) ಹೊರತು ಪಡಿಸಿ ಉಳಿದ ಎಲ್ಲಾ ಸರ್ಕಾರಿ ಕಲ್ಯಾಣ ಯೋಜನೆಗಳಿಗೆ ಆಧಾರ್ ಕಾರ್ಡ್ ಇನ್ನು ಮುಂದೆ ಐಚ್ಛಿಕವಾಗಿ ಉಳಿಯಲಿದೆ. ಆಧಾರ್ ಕಾರ್ಡ್ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಈದಿನ ನೀಡಿದ ತೀರ್ಪಿನಲ್ಲಿ ಈ ವಿಚಾರವನ್ನು ಸ್ಪಷ್ಟ ಪಡಿಸಿದ ಸುಪ್ರೀಂಕೋರ್ಟ್, ಆಧಾರ್ ಕಾರ್ಡದಾರರು ನೀಡಿದ ಯಾವುದೇ ವೈಯಕ್ತಿಕ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಬೇರೆ ಯಾರ ಜೊತೆಗೂ ಹಂಚಿಕೊಳ್ಳುವಂತಿಲ್ಲ ಎಂದು ಹೇಳಿತು. ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಿ ಖಾತರಿ ಪಡಿಸಬೇಕು ಎಂಬುದಾಗಿಯೂ ನ್ಯಾಯಮೂರ್ತಿ ಚಲಮೇಶ್ವರ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಆಜ್ಞಾಪಿಸಿತು. ಇದಕ್ಕೆ ಮುನ್ನ

ಸರ್ಕಾರದ ಮಹತ್ವಾಕಾಂಕ್ಷಿ ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳೆಲ್ಲವನ್ನೂ ಸುಪ್ರೀಂಕೋರ್ಟ್ ಬೆಳಗ್ಗೆ ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು. ಖಾಸಗಿತನದ ಹಕ್ಕು ಮೂಲಭೂತ ಹಕ್ಕೇ ಅಥವಾ ಅಲ್ಲವೇ ಎಂಬ ಬಗ್ಗೆ ಅಧಿಕೃತ ಘೋಷಣೆ ಬೇಕು ಎಂದು ಸುಪ್ರೀಂಕೋರ್ಟ್ ಈದಿನ ನೀಡಿದ ತನ್ನ ತೀರ್ಪಿನಲ್ಲಿ ಕೋರಿತ್ತು. ನ್ಯಾಯಮೂರ್ತಿ ಚಲಮೇಶ್ವರ ನೇತೃತ್ವದ ತ್ರಿಸದಸ್ಯ ಪೀಠವು ವಿಷಯನ್ನು ವಿಶಾಲ ಪೀಠಕ್ಕೆ ಒಪ್ಪಿಸಬೇಕೆ ಎಂಬ ಕುರಿತ ತನ್ನ ತೀರ್ಪನ್ನು ಆಗಸ್ಟ್ 4ರ ಮಂಗಳವಾರ ಕಾಯ್ದಿರಿಸಿತ್ತು. ಖಾಸಗಿತನದ ಉಲ್ಲಂಘನೆಯಾಗುವುದರಿಂದ ಆಧಾರ್ ಕಾರ್ಡ್ ಯೋಜನೆ ಸಾವಿಧಾನಿಕವಾಗಿ ಸಿಂಧುವಲ್ಲ ಎಂದು ಅರ್ಜಿಗಳಲ್ಲಿ ವಾದಿಸಲಾಗಿತ್ತು. ಆದರೆ ಖಾಸಗಿತನದ ಹಕ್ಕು ಮೂಲಭೂತ ಹಕ್ಕಿನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ಪ್ರತಿಪಾದಿಸಿತ್ತು. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಮನವಿ ಮಾಡಿತ್ತು. ಖರಕ್ ಸಿಂಗ್ ಪ್ರಕರಣದಲ್ಲಿ 6 ಸದಸ್ಯರ ಸುಪ್ರೀಂಕೋರ್ಟ್ ಪೀಠ ಮತ್ತು ಎಂಪಿ ಶರ್ಮಾ ಪ್ರಕರಣದಲ್ಲಿ 8 ಸದಸ್ಯರ ಸುಪ್ರೀಂ ಕೋರ್ಟ್ ಪೀಠ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ ಖಾಸಗಿತನದ ಹಕ್ಕು ಭಾರತೀಯ ಸಂವಿಧಾನದ ಮೂರನೇ ಭಾಗದಲ್ಲಿ ಖಾತರಿ ನೀಡಲಾಗಿರುವ ಮೂಲಭೂತ ಹಕ್ಕುಗಳ ವ್ಯಾಪ್ತಿಯಲ್ಲಿ ಬರುತ್ತದೆಯೇ ಎಂಬುದು ಪ್ರಶ್ನಾರ್ಹ ಎಂದು ಕೇಂದ್ರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹೇಳಿದ್ದರು.

2015: ನವದೆಹಲಿ: ಕಾಂಗ್ರೆಸ್ ಪಕ್ಷದ ವಿರೋಧ ಹಾಗೂ ಕೋಲಾಹಲದ ಮಧ್ಯೆಯೇ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಅವರು ರಾಜ್ಯಸಭೆಯಲ್ಲಿ ವಸ್ತುಗಳು ಮತ್ತು ಸೇವಾ ತೆರಿಗೆ ಮಸೂದೆ (ಜಿಎಸ್ಟಿ ಬಿಲ್) ಮಂಡಿಸಿದರು. ಆದರೆ ಕಾಂಗ್ರೆಸ್ ಪ್ರತಿಭಟನೆ, ಕೋಲಾಹಲ ಪರಿಣಾಮವಾಗಿ ಚರ್ಚೆಗೆ ಎತ್ತಿಕೊಳ್ಳುವ ಮೊದಲೇ ಕಲಾಪ ಮುಂದೂಡಲ್ಪಟ್ಟಿತು. ಹಣಕಾಸು ಸಚಿವರು ಮಸೂದೆ ಮಂಡನೆ ಮಂಡಿಸುವುದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು. ಕಲಾಪ ಸಲಹಾ ಸಮಿತಿಯಲ್ಲಿ ಮಸೂದೆ ಮಂಡನೆಗೆ ಒಪ್ಪಿಗೆ ನೀಡಲಾಗಿಲ್ಲ ಎಂದು, ಸಂವಿಧಾನ ತಿದ್ದುಪಡಿ ಮಸೂದೆಗೆ ಸಮಯ ನೀಡಲಾಗಿಲ್ಲ ಎಂದು ಕಾಂಗ್ರೆಸ್ಸಿನ ಆನಂದ ಶರ್ಮಾ ವಾದಿಸಿದರು. ಅದರೂ ಗದ್ದಲದ ಮಧ್ಯೆ ಅರುಣ್ ಜೇಟ್ಲಿ ಅವರು ಮಸೂದೆ ಮಂಡನೆ ಮಾಡಿದರು. ತತ್ ಕ್ಷಣವೇ ಕಾಂಗ್ರೆಸ್ ಸದಸ್ಯರು ಸಭಾಪತಿಯವರ ಪೀಠದ ಮುಂಭಾಗಕ್ಕೆ ನುಗ್ಗಿದರು. ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವುದಕ್ಕೂ ಮೊದಲೇ ಸದನ ಕಲಾಪಗಳನ್ನು ಕೋಲಾಹಲದ ಮಧ್ಯೆ ನಾಲ್ಕನೇ ಬಾರಿಗೆ ದಿನದ ಮಟ್ಟಿಗೆ ಮುಂದೂಡಲಾಯಿತು. ಇದಕ್ಕೂ ಮುನ್ನ ಲಲಿತ್ ಮೋದಿ ಮತ್ತು ವ್ಯಾಪಂ ವಿಷಯಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಪ್ರತಿಭಟನೆ ಪರಿಣಾಮವಾಗಿ ಉಂಟಾದ ಕೋಲಾಹಲದ ಮಧ್ಯೆ ರಾಜ್ಯಸಭಾ ಕಲಾಪಗಳು ಪದೇ ಪದೇ ಮುಂದೂಡಲ್ಪಟ್ಟವು.

2015: ನವದೆಹಲಿ: ಕಾಂಗ್ರೆಸ್ ಸದಸ್ಯರ ವರ್ತನೆಯನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂಬುದಾಗಿ ಖಂಡಿಸಿದ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕಾಗದಪತ್ರಗಳನ್ನೂ ಹರಿದು ಹಾಕಿ ಪ್ರತಿಭಟಿಸಿದ ಬೆನ್ನಲ್ಲೇ ಸದನ ಕಲಾಪಗಳನ್ನು ದಿನ ಮಟ್ಟಿಗೆ ಮುಂದೂಡಿದರು. ಉದ್ರಿಕ್ತ ಕಾಂಗ್ರೆಸ್ ಸದಸ್ಯರು ಕಾಗದಪತ್ರಗಳನ್ನು ಹರಿದು ಹಾಕಿ ಲೋಕಸಭೆಯಲ್ಲಿ ಕೋಲಾಹಲ ಎಬ್ಬಿಸಿದ ಹಿನ್ನೆಲೆಯಲ್ಲಿ ಉಪಸಭಾಧ್ಯಕ್ಷ ಎಂ. ತಂಬಿದುರೈ ಅವರು ಹಠಾತ್ತನೆ ಲೋಕಸಭಾ ಕಲಾಪಗಳನ್ನು ಮುಂದೂಡಿದರು. ಅದಕ್ಕೂ ಮುನ್ನ ಮೂವರು ಬಿಜೆಪಿ ನಾಯಕರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಲೋಕಸಭೆಯಲ್ಲಿ  ಬೆಳಗ್ಗೆಯಿಂದಲೇ ತೀವ್ರ ಕೋಲಾಹಲ ನಡೆಸಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಇದನ್ನು ‘ಪ್ರಜಾಪ್ರಭುತ್ವದ ಕೊಲೆ’ ಎಂದು ಬಣ್ಣಿಸಿದರು. ಕಾಂಗ್ರೆಸ್ ಸದಸ್ಯರ ವರ್ತನೆಯಿಂದ ರೊಚ್ಚಿಗೆದ್ದ ಸುಮಿತ್ರಾ ಅವರು ಒಂದು ಹಂತದಲ್ಲಿ ‘ಈ ಪ್ರತಿಭಟನೆಗಳನ್ನು ಲೋಕಸಭಾ ಟಿವಿಯಲ್ಲಿ ತೋರಿಸಿ. ಈ ದೃಶ್ಯಗಳನ್ನು ಜನರು ಸ್ವತಃ ನೋಡಲಿ’ ಎಂದೂ ಹೇಳಿದರು.

2015: ನವದೆಹಲಿ: ಅಕ್ರಮ ದೂರವಾಣಿ ವಿನಿಮಯ ಕೇಂದ್ರ (ಟೆಲಿಫೋನ್ ಎಕ್ಸ್ಚೇಂಜ್) ಸ್ಥಾಪನೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ರದ್ದು ಪಡಿಸಿದ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಮಾಜಿ ಸಚಿವ, ಡಿಎಂಕೆ ನಾಯಕ ದಯಾನಿಧಿ ಮಾರನ್ ಅವರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದರು. ಪ್ರಕರಣದ ಮುಖ್ಯ ಆರೋಪಿ ಮಾರನ್ ಅವರಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನು ರದ್ದು ಪಡಿಸಿದ ಮದ್ರಾಸ್ ಹೈಕೋರ್ಟ್ ಶರಣಾಗಲು ಮೂರು ದಿನಗಳ ಗಡುವು ನೀಡಿತ್ತು.

2015: ಮುಂಬೈ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಬೆದರಿಕೆ ಪತ್ರವೊಂದು ಬಂದಿದ್ದು, ದೆಹಲಿ ಮುಖ್ಯಮಂತ್ರಿಯೊಂದಿಗೆ ಗುರುತಿಸಿಕೊಳ್ಳುವ ದುಸ್ಸಾಹಸಕ್ಕೆ ಮುಂದಾಗಬೇಡಿ. ಒಂದೊಮ್ಮೆ ಮುಂದಾದರೆ ಜೀವ ಕಳೆದುಕೊಳ್ಳುತ್ತೀರಿ ಎನ್ನುವುದಾಗಿ ಬೆದರಿಕೆ ಹಾಕಲಾಯಿತು. ಆಗಸ್ಟ್ 7ರಂದು ಬರೆಯಲಾದ ಈ ಪತ್ರದಲ್ಲಿ ಹೆಚ್ಚೂ ಕಡಿಮೆ ಇಂಗ್ಲಿಷ್ ಭಾಷೆಯನ್ನೇ ಬಳಸಲಾಗಿದೆ ಎಂದು ಪೊಲೀಸರು ತಿಳಿಸಿದರು. 78 ವರ್ಷ ಪ್ರಾಯದ ಹಜಾರೆ ಅವರಿಗೆ ಬೆದರಿಕೆ ಪತ್ರ ಬರೆದಿರುವವರ ವಿರುದ್ಧ ಸೆಕ್ಷನ್ 506ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದರು.

2015: ನವದೆಹಲಿ: ‘ಸ್ವರಾಜ್ ಅಭಿಯಾನ’ಕ್ಕೆ ಅಣಿಯಾಗಿದ್ದ ಆಪ್ ಬಂಡಾಯ ನಾಯಕ ಯೋಗೇಂದ್ರ ಯಾದವ್ ಅವರನ್ನು ಹಿಂದಿನ ದಿನ ತಡರಾತ್ರಿ ದೆಹಲಿ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು. ಯೋಗೇಂದ್ರ ಯಾದವ್ ಅವರನ್ನು ಹಠಾತ್ತಾಗಿ ಬಂಧಿಸಿದ ಸಂಸತ್ ಮಾರ್ಗ ಪೊಲೀಸರ ಕ್ರಮವನ್ನು ಉಳಿದ ಸದಸ್ಯರಾದ ಪ್ರಶಾಂತ್ ಭೂಷಣ್ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್  ಖಂಡಿಸಿದರು. ಘಟನೆ ಬಗ್ಗೆ ಟ್ವಿಟರ್ನಲ್ಲಿ ಫೋಟೊ ಸಹಿತ ಘಟನೆ ಬಗ್ಗೆ ವಿವರಿಸಿದ ಯೋಗೇಂದ್ರ ಯಾದವ್, ಪೊಲೀಸರು ಬಲಾತ್ಕಾರವಾಗಿ ಎಳೆದೊಯ್ದಿದ್ದಾರೆ. ತಳ್ಳಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. ಬಂಧನಕ್ಕೂ ಮೊದಲು ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರೈತರ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ನಿವಾಸದೆದುರು ಟ್ರಾಕ್ಟರ್ ರ‍್ಯಾಲಿ ನಡೆಸಿದ್ದರು.

2015: ನ್ಯೂಯಾರ್ಕ್: ಭಾರತ ಮೂಲದ ಸುಂದರ್ ಪಿಚೈ ‘ಆಲ್ಪಬೆಟ್’ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಎಂದು ಅಂತರ್ಜಾಲ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಿಂದ ಜನಪ್ರಿಯತೆ ಗಳಿಸಿರುವ ‘ಗೂಗಲ್’ ಸಂಸ್ಥೆ ಪ್ರಕಟಿಸಿತು. ‘ಆಲ್ಪಬೆಟ್’ ಗೂಗಲ್ನ ಅಂಗ ಸಂಸ್ಥೆ. ಈ ಕುರಿತು ಸಂಸ್ಥೆಯ ಸಹ ಸಂಸ್ಥಾಪಕ ಲ್ಯಾರಿ ಪೇಜ್ ಈದಿನ ಪ್ರಕಟಿಸಿದರು. ಗೂಗಲ್ ಕಾಯನಿರ್ವಹಣಾ ಕ್ಷೇತ್ರದಲ್ಲಿ ಅಲ್ಪಾಬೆಟ್ ವಿಶೇಷವಾದ ಪಾತ್ರವಹಿಸಲಿದೆ. ಸುಂದರ್, ಸಂಸ್ಥೆಯನ್ನು ಉತ್ತಮವಾಗಿ ಮುನ್ನಡೆಸುತ್ತಾರೆನ್ನುವ ವಿಶ್ವಾಸ ನಮಗಿದೆ ಎಂದು ಹೇಳಿದ್ದಾರೆ. ಅಂತೆಯೇ ಗೂಗಲ್ ಸಂಸ್ಥೆಯ ಸಹ ಸಂಸ್ಥಾಪಕರಾದ ಸೆರ್ಜಿ ಬ್ರಿನ್ ‘ಆಲ್ಪಬೆಟ್’ಗೆ ಅಧ್ಯಕ್ಷರಾಗಿರುತ್ತಾರೆ ಎಂದೂ ತಿಳಿಸಿದರು. ಸುಂದರ್ ಪಿಚೈ ಹುಟ್ಟಿದ್ದು ಚೆನ್ನೈನಲ್ಲಿ. ಅವರಿಗೀಗ 43 ವರ್ಷ ಪ್ರಾಯ. ಖರಗ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಅಂತರ್ಜಾಲ ಕ್ಷೇತ್ರದಲ್ಲಿ ವಿಶೇಷವಾದ ಅನುಭವ ಇವರದ್ದಾಗಿದೆ. ಕಳೆದ ವರ್ಷ ಗೂಗಲ್ ಸಂಸ್ಥೆಗೆ ಸೇರಿ, ಇದೀಗ ಅದರದೇ ಅಂಗ ಸಂಸ್ಥೆ ‘ಆಲ್ಪಬೆಟ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಸುಂದರ್ ಅವರಿಗೆ ಕ್ರಿಕೆಟ್ ಎಂದರೆ ಪಂಚಪ್ರಾಣ. ಅಷ್ಟೇ ಅಲ್ಲ, ಸ್ವತಃ ಕ್ರಿಕೆಟಿಗರೂ ಹೌದು. ಶಾಲಾ ದಿನಗಳಲ್ಲಿ ಶಾಲಾ ತಂಡದ ನಾಯಕನಾಗಿ ತಂಡ ಮುನ್ನಡೆಸಿ ತಮಿಳುನಾಡು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಗೆಲ್ಲುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇದಲ್ಲದೇ ಸುಂದರ್ ಪಿಚೈಗೆ ವಾಣಿಜ್ಯ ಉದ್ಯಮದಲ್ಲೂ ವಿಶೇಷವಾದ ಆಸಕಿ.

2007: ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಭಾರತದ 13ನೇ ಉಪರಾಷ್ಟ್ರಪತಿಯಾಗಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಮಾಣವಚನ ಬೋಧಿಸಿದರು. ಮಾಜಿ ರಾಯಭಾರಿ 70 ವರ್ಷದ ಅನ್ಸಾರಿ ಅವರು ರಾಜ್ಯಸಭೆಯ ಸಭಾಪತಿಯಾಗಿಯೂ ಕಾರ್ಯ ನಿರ್ವಹಿಸುವರು.

2007: ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಎಂಐಎಂ ಸಂಘಟನೆಯಿಂದ ಹಲ್ಲೆಗೆ ಒಳಗಾದ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ವಿರುದ್ಧ `ಕೋಮುಗಳ ಮಧ್ಯೆ ಕೆಟ್ಟ ಭಾವನೆ' ಮೂಡಿಸಿದ ಆಪಾದನೆ ಹೊರಿಸಿ ಪೊಲೀಸರು ಪ್ರಕರಣ ದಾಖಲು ಮಾಡಿದರು. ಧರ್ಮ, ಜನಾಂಗ ಮತ್ತು ಭಾಷೆಯ ಆಧಾರದ ಮೇಲೆ ವೈರತ್ವ ಅಥವಾ ಕೆಟ್ಟ ಭಾವನೆ ಮೂಡಿಸಿದ ಕಾರಣಕ್ಕೆ ಭಾರತೀಯ ದಂಡ ಸಂಹಿತೆ ಕಲಂ 153(ಎ) ಅನ್ವಯ ಪ್ರಕರಣ ದಾಖಲು ಮಾಡಲಾಯಿತು. ಎಂಐಎಂನ ಶಾಸಕ ಅಕ್ಬರ್ದುದೀನ್ ಒಯಸಿ ಅವರು ನೀಡಿದ ದೂರಿನ ಆಧಾರದ ಮೇಲೆ ನಸ್ರೀನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

2007: ಈದಿನ ಬೆಳಗಿನ ಜಾವ ಜಮ್ಮು ನಗರದ ಮಧ್ಯ ಭಾಗದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ದಾಳಿಯಲ್ಲಿ 2005ರ ಅಯೋಧ್ಯೆ ದಾಳಿಯ ಸೂತ್ರಧಾರ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಉಗ್ರಗಾಮಿ ಹತನಾದ. ಆತನ ಐವರು ಸಹಚರರನ್ನು ಸೆರೆ ಹಿಡಿಯಲಾಯಿತು. ನಗರದ ಜಾನಿಪುರ ಪ್ರದೇಶದ ಮೇಲೆ ದೆಹಲಿ ಮತ್ತು ಜಮ್ಮು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಜೈಷ್ ಎ ಮೊಹಮ್ಮದ್ ನ ವಿಭಾಗೀಯ ಕಮಾಂಡರ್ ಸೈಫುಲ್ಲಾ ಕರಿ ಹತನಾದ ಎಂದು ಜಮ್ಮು ವಿಭಾಗದ ಐಜಿಪಿ ಎಸ್.ಪಿ. ವೈದ್ ಪ್ರಕಟಿಸಿದರು.

2007: ಕಾಶ್ಮೀರದ ಅನಂತನಾಗ್ ಜಿಲ್ಲೆ ಖಂದ್ರೂದಲ್ಲಿರುವ ಸೇನೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಸಂಭವಿಸಿದ ಬೆಂಕಿ ದುರಂತದದಲ್ಲಿ ಮೂವರು ಮೃತರಾಗಿ, ಸೇನೆ ಹಾಗೂ ಅಗ್ನಿ ಶಾಮಕ ದಳದ ಯೋಧರು ಸೇರಿದಂತೆ 50 ಜನರು ಗಾಯಗೊಂಡರು. 21ನೇ ಸಂಖ್ಯೆಯ ಶಸ್ತ್ರಾಸ್ತ್ರ ಡಿಪೋದಲ್ಲಿ ಬೆಳಗ್ಗೆ 9. 15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತು. ಅದರ ಬೆನ್ನಲ್ಲಿಯೇ ಸರಣಿ ಸ್ಫೋಟಗಳು ಸಂಭವಿಸಿದವು.

2007: ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ (ನೀರು ಕುದುರೆ ) ವಿದ್ಯಾ ಮುದ್ದಾದ ಮರಿಯೊಂದಕ್ಕೆ ಜನ್ಮ ನೀಡಿತು. ಹದಿನೈದು ವರ್ಷ ವಯಸ್ಸಿನ ಕಾರ್ತಿಕ್ ಎಂಬ ಹಿಪ್ಪೊ ಹಾಗೂ ಆರು ವರ್ಷದ ಹಿಪ್ಪೊ ವಿದ್ಯಾಳ ದಾಂಪತ್ಯದಿಂದ ಜನಿಸಿದ ಈ ಮರಿ ಆಕರ್ಷಕವಾಗಿದ್ದು ಆರೋಗ್ಯವಾಗಿದೆ. ಇದು ವಿದ್ಯಾಳಿಗೆ ಜನಿಸಿದ ಮೊದಲನೆ ಮರಿ. ನೂತನ ಅತಿಥಿಯ ಆಗಮನದಿಂದ ಬನ್ನೇರುಘಟ್ಟ ಜೈವಿಕ ಉದ್ಯಾನದ ಹಿಪ್ಪೊಪೊಟಮಸ್ ಕುಟುಂಬದ ಸದಸ್ಯರ ಸಂಖ್ಯೆ ಏಳಕ್ಕೇರಿತು.

2006: ಡಾ. ರಾಜಕುಮಾರ್ ಅವರು ಜೀವನಧಾರೆ ಚಿತ್ರಕ್ಕಾಗಿ ಕಟ್ಟ ಕಡೆಯದಾಗಿ ಹಾಡಿದ್ದ ಧ್ವನಿ ಸುರುಳಿಯನ್ನು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಬಿಡುಗಡೆ ಮಾಡಿದರು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಧರ್ಮಸಿಂಗ್ ಮುಖ್ಯ ಅತಿಥಿಯಾಗಿದ್ದರು.

2006: ಶಿವಮೊಗ್ಗದಲ್ಲಿ ನಡೆಯುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಆಯ್ಕೆಯಾದರು. ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯ ನಿಸಾರ್ ಅವರನ್ನು ಸಮ್ಮೇಳನಾಧ್ಯಕ್ಷತೆಗೆ ಆಯ್ಕೆ ಮಾಡಿತು.

2006: ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಲೋಕಸಭೆಯಲ್ಲಿ ಮಂಡಿಸಲಾದ ಹಕ್ಕುಚ್ಯುತಿ ನೋಟಿಸನ್ನು ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ತಿರಸ್ಕರಿಸಿದರು.

2006: ಚೀನಾದ ಜೇಜಿಯಾಂಗ್ ಪಶ್ಚಿಮ ಪ್ರಾಂತ್ಯದ ಕಾಂಗ್ಲಾನ್ ಕೌಂಟಿಯಲ್ಲಿ ಕಳೆದ 50 ವರ್ಷಗಳ ಅವಧಿಯಲ್ಲಿ ಬೀಸಿದ ಪ್ರಚಂಡ ಬಿರುಗಾಳಿಗೆ ಸಿಲುಕಿ ಕನಿಷ್ಠ 98 ಜನ ಮೃತರಾಗಿ, 149 ಜನ ನಾಪತ್ತೆಯಾದರು.

2004: ಖ್ಯಾತ ಬರಹಗಾರ ಶಂಕರ ಮೊಕಾಶಿ ಪುಣೇಕರ ನಿಧನರಾದರು.

2000: ಭಾರತದ ಕೊನೇರು ಹಂಪಿ ಅವರು ಸ್ಮಿತ್ ಮತ್ತು ವಿಲಿಯಮ್ ಸನ್ ಬ್ರಿಟಿಷ್ ಚೆಸ್ ಚಾಂಪಿಯನ್ ಶಿಪ್ ನ ಹನ್ನೊಂದನೆಯ ಹಾಗೂ ಅಂತಿಮ ಸುತ್ತಿನಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಲೇಡೀಸ್ ಚೆಸ್ ಚಾಂಪಿಯನ್ ಆಗಿ ಆಯ್ಕೆಯಾದರು. 10, 12 ಮತ್ತು 14 ವಯೋಮಿತಿಯೊಳಗಿನ ಜಾಗತಿಕ ಪ್ರಶಸ್ತಿಗಳನ್ನು ಗೆದ್ದು ಹ್ಯಾಟ್ರಿಕ್ ಸಾಧಿಸಿದ ಹಾಗೂ ಚೆಸ್ ನಲ್ಲಿ ಜಾಗತಿಕ ಚೆಸ್ ಪ್ರಶಸ್ತಿ ಗೆದ್ದ ಭಾರತದ ಪ್ರಥಮ ಹುಡುಗಿ ಎಂಬ ಹೆಗ್ಗಳಿಕೆಗೂ ಆಕೆ ಪಾತ್ರರಾದರು.

1956: ಅಮೂರ್ತ ಕಲಾವಿದ ಜಾಕ್ಸನ್ ಪೊಲ್ಲೋಕ್ ಅವರು ನ್ಯೂಯಾರ್ಕಿನ ಈಸ್ಟ್ ಹ್ಯಾಂಪ್ಟನ್ನಲ್ಲಿ ಅಪಘಾತ ಒಂದರಲ್ಲಿ ಅಸು ನೀಗಿದರು. ಆಗ ಅವರಿಗೆ 44 ವರ್ಷ ವಯಸ್ಸು.

1954: ಭಾರತದ ಮಾಜಿ ಕ್ರಿಕೆಟ್ ಆಟಗಾರ ಯಶಪಾಲ್ ಶರ್ಮಾ (1954) ಜನ್ಮದಿನ.

1944: ಸಾಹಿತಿ ಗಣಪತಿ ಶಿವರಾಮ ಅವಧಾನಿ (ಜಿ.ಎಸ್. ಅವಧಾನಿ) (11-8-1944ರಿಂದ 20-8-2000) ಅವರು ಶಿವರಾಮ ಅವಧಾನಿ- ಸಾವಿತ್ರಿ ದಂಪತಿಯ ಮಗನಾಗಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಮೂಡಗೇರಿಯಲ್ಲಿ ಈದಿನ ಜನಿಸಿದರು.

1932: ಲಾಸ್ ಏಂಜೆಲಿಸ್ ಒಲಿಂಪಿಕ್ಸ್ ನಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತವು ಅಮೆರಿಕವನ್ನು 24-1 ಅಂತರದಿಂದ ಸೋಲಿಸಿತು. ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗರಿಷ್ಠ ಅಂತರದಲ್ಲಿ ವಿಜಯ ಸಾಧಿಸಿದ ದಾಖಲೆ ಇದು.

1922: ಖ್ಯಾತ ತಾರೆ ಮನಮೋಹನ ಕೃಷ್ಣ ಜನನ.

1919: ಸ್ಕಾಟಿಷ್ ಸಂಜಾತ ಅಮೆರಿಕನ್ ಕೈಗಾರಿಕೋದ್ಯಮಿ ಹಾಗೂ ದಾನಿ ಆಂಡ್ರ್ಯೂ ಕಾರ್ನೆಗೀ ಅವರು ಮೆಸಾಚ್ಯುಸೆಟ್ಸಿನ ಲೆನೋಕ್ಸಿನಲ್ಲಿ 83ನೇ ವಯಸ್ಸಿನಲ್ಲಿ ಮೃತರಾದರು. ಇವರು 35 ಕೋಟಿ ಡಾಲರುಗಳಿಗೂ ಹೆಚ್ಚಿನ ದಾನ ರೂಪದ ನೆರವನ್ನು ಗ್ರೇಟ್ ಬ್ರಿಟನ್ ಮತ್ತು ಅಮೆರಿಕಕ್ಕೆ ನೀಡಿದ್ದರು.

1914: ಸಾಹಿತಿ ವಿ.ಜಿ. ಕೃಷ್ಣಮೂರ್ತಿ ಜನನ.

1911: ಖ್ಯಾತ ಪತ್ರಕರ್ತ ಪ್ರೇಮ್ ಭಾಟಿಯಾ ಜನನ.

1908: ಭಾರತದ ಸ್ವಾತಂತ್ರ್ಯ ಸೇನಾನಿಗಳಲ್ಲಿ ಒಬ್ಬರಾಗಿದ್ದ 19 ವರ್ಷದ ತರುಣ ಖುದೀರಾಮ್ ಬೋಸ್ ಅವರನ್ನು ಬ್ರಿಟಿಷರು ಈದಿನ ಮರಣದಂಡನೆಗೆ ಗುರಿಪಡಿಸಿದರು. ಈ ದಿನವನ್ನು ಭಾರತದಲ್ಲಿ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಇನ್ನೊಬ್ಬ ದೇಶಭಕ್ತ ಪ್ರಫುಲ್ಲ ಚಾಕಿ ಅವರೊಡನೆ ಸೇರಿಕೊಂಡು ಖುದೀರಾಮ್ ಬೋಸ್ ಅವರು 1908ರ ಏಪ್ರಿಲ್ 30ರಂದು ನ್ಯಾಯಾಧೀಶ ಕಿಂಗ್ಸ್ ಫೋರ್ಡ್ ಪ್ರಯಾಣಿಸುತ್ತಿದ್ದ ಗಾಡಿಯ ಮೇಲೆ ಬಾಂಬ್ ಹಾಕಿದ್ದರು. ಆದರೆ ಕಿಂಗ್ಸ್ ಫೋರ್ಡ್ ಬದುಕಿ ಉಳಿದು ಇತರ ಇಬ್ಬರು ಐರೋಪ್ಯ ಮಹಿಳೆಯರು ಅಸು ನೀಗಿದ್ದರು. ಗಲ್ಲಿಗೇರುವ ಮುನ್ನ ಉಚ್ಚರಿಸಿದ `ವಂದೇ ಮಾತರಂ' ಘೋಷಣೆಯೇ ಖುದೀರಾಮ್ ಬೋಸ್ ಅವರ ಕೊನೆಯ ವಾಕ್ಯವಾಯಿತು.

1897: ಬ್ರಿಟಿಷ್ ಕಥೆಗಾರ ಎನಿಡ್ ಬ್ಲೈಟನ್ (1897-1968) ಜನ್ಮದಿನ. ಮಕ್ಕಳ ಪುಸ್ತಕಗಳನ್ನು ಬರೆಯುವುದದಲ್ಲಿ ಸಿದ್ದಹಸ್ತರು ಎಂದು ಇವರು ಖ್ಯಾತಿ ಪಡೆದಿದ್ದರು.

No comments:

Post a Comment