Thursday, August 30, 2018

ರಕ್ಷಾ ಬಂಧನ: ಏನಿದರ ಮಹತ್ವ?


ರಕ್ಷಾ ಬಂಧನ: ಏನಿದರ ಮಹತ್ವ?

 ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ರಕ್ಷಾ ಬಂಧನ ಆಚರಿಸಲು ಶಾಸ್ತ್ರ ಹೇಳಿದೆ. ಇದರ ಬಗ್ಗೆ ಭವಿಷ್ಯಪುರಾಣದಲ್ಲಿ, ಬ್ರಹ್ಮವೈವರ್ತದಲ್ಲಿ ಹೇಳಲಾಗಿದೆ. ಹಾಗೆಯೇ ಧರ್ಮಸಿಂಧು, ನಿರ್ಣಯಸಿಂಧು, ಹೇಮಾದ್ರಿ, ಮದನರತ್ನ ಇತ್ಯಾದಿ ಧರ್ಮಶಾಸ್ತ್ರ ಗ್ರಂಥಗಳಲ್ಲಿ ವಿವರಿಸಲಾಗಿದೆ.

ರಕ್ಷಾ ಬಂಧನಕ್ಕೂ ಮತ್ತು ಕೇವಲ ಅಕ್ಕ-ತಂಗಿ, ಅಣ್ಣ-ತಮ್ಮಂದಿರಿಗೆ ಸಂಬಂಧ ಇದೆ ಎನ್ನುವುದು ತಪ್ಪು!! ಇಂದಿನ ರಕ್ಷಾ ಬಂಧನದ ವಿಕೃತ ರೂಪ ಮತ್ತು ಅದರ ವಿಕೃತ ಸಂದೇಶ ಶಾಸ್ತ್ರಕ್ಕೆ ಸಮ್ಮತವಲ್ಲ. ಅಕ್ಕ-ತಂಗಿಯರು ತಮ್ಮ ರಕ್ಷಣೆಯನ್ನು ಕೋರಿ ತಮ್ಮ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟುವುದು ಹುಚ್ಚು ಕಲ್ಪನೆ. ಹೆಣ್ಣು ಅಷ್ಟೊಂದು ಅಬಲೆಯೇ? ಇಲ್ಲ! ಇದು ಶಾಸ್ತ್ರದ ಮತವಲ್ಲ. ಹಿಂದಿ ಸಿನೆಮಾಗಳನ್ನೂ ನೋಡಿ ನೋಡಿ ನಮ್ಮ ಜನರು ಏನೇನೋ ಆಚರಣೆ ಪ್ರಾರಂಭಿಸಿದ್ದಾರೆ. ಸಿನೆಮ-ಟಿವಿ ಇದು ಶಾಸ್ತ್ರವಲ್ಲ. ಅದರಿಂದ ಧರ್ಮದ ವಿಷಯದಲ್ಲಿ ಪ್ರೇರಣೆಯನ್ನು ಪಡೆಯುವ ಕಾರಣವಿಲ್ಲ, ಯೋಗ್ಯವೂ ಅಲ್ಲ.

ಹಾಗಾದರೆ ಏನಿದು ರಕ್ಷಾ ಬಂಧನ?

ಪ್ರಾಚೀನ ಕಾಲದಲ್ಲಿ ಎಲ್ಲರಿಗೂ ರಕ್ಷಾಸೂತ್ರವನ್ನು ಕಟ್ಟುವ ಪದ್ಧತಿ ಇದ್ದಿತು. ಹೆಂಡತಿಯು ಗಂಡನಿಗೆ, ಗುರುಗಳು ಶಿಷ್ಯರಿಗೆ, ಪುರೋಹಿತರು ರಾಜರಿಗೆ, ಅಜ್ಜಿ-ತಾಯಂದಿರು ಮಕ್ಕಳಿಗೆ-ಮೊಮ್ಮಕ್ಕಳಿಗೆ ಇತ್ಯಾದಿ. ಇಷ್ಟೇ ಏಕೆ, ಮನೆಯ ಗೋಮಾತೆಗೂ ಕೂಡ ರಕ್ಷಾ ಕಟ್ಟಲಾಗುತ್ತಿತ್ತು! ಯಾರ ರಕ್ಷಣೆಯನ್ನು ನಾವು ಬಯಸುವೆವೋ ಅವರಿಗೆ ಮಂತ್ರಪೂರಿತವಾದ ರಕ್ಷೆಯನ್ನು ಕಟ್ಟುವುದು. ಕಟ್ಟಿಸಿಕೊಳ್ಳುವವರ ರಕ್ಷಣೆಯೇ ವಿನಹ ಕಟ್ಟುವವರ ರಕ್ಷಣೆಯ ಉದ್ದೇಶ ಅಲ್ಲ! ಇದೆ ರಕ್ಷಾ ಬಂಧನ. ಪುರಾಣಗಳಲ್ಲಿ ಶಚಿದೇವಿಯು ತನ್ನ ಪತಿಯಾದ ದೇವೇಂದ್ರನಿಗೆ ರಕ್ಷೆಯನ್ನು ಕಟ್ಟಿದ ಉಲ್ಲೇಖವಿದೆ. ಬಲಿ ಚಕ್ರವರ್ತಿಗೆ ಆತನ ರಾಣಿಯಾದ ವಿಂಧ್ಯಾವಳಿಯು ರಕ್ಷೆ ಕಟ್ಟಿದ್ದುಂಟು.

ರಕ್ಷೆಯನ್ನು ನಿರ್ಮಿಸುವ ರೀತಿ:

ದೂರ್ವೆ (ಗರಿಕೆ), ಅಕ್ಷತೆ (ತುಂಡಾಗಿರದ ಅಕ್ಕಿ), ಶ್ವೇತ ಸರ್ಷಪ (ಬಿಳಿ ಸಾಸಿವೆ), ಚಂದನ, ಕೇಶರ ಐದನ್ನು ರೇಷ್ಮೆಯ ಬಟ್ಟೆಯ ಚಿಕ್ಕ ತುಂಡಿನಲ್ಲಿ ಸುಂದರವಾಗಿ ಕಟ್ಟಿ, ಹೊಲಿದು, ಶುಭಾಪ್ರದವಾದರಕ್ಷಾ ಪೋಟಲಿಕಾ ತಯಾರಿಸಬೇಕು.  ಚಿನ್ನದ ಅಥವಾ ಬೆಳ್ಳಿಯ ತಂತಿಯಿಂದ ಅಲಂಕರಿಸಬೇಕು. ನಂತರ ಚಿನ್ನದ/ರೇಷ್ಮೆಯ ಸೂತ್ರಕ್ಕೆ ಅದನ್ನು ಪೋಣಿಸಬೇಕು. ಇದನ್ನು ಪೂಜಿಸಿ ಭಗವಂತನಿಗೆ ಸಮರ್ಪಿಸಬೇಕು. ನಂತರ ಅಪರಾಹ್ನ ಕಾಲದಲ್ಲಿ ಇದನ್ನು ಸಂಕಲ್ಪ-ಪೂರ್ವಕವಾಗಿ ಕಟ್ಟಬೇಕು. ಗೋಮಯದಿಂದ ನೆಲವನ್ನು ಶುದ್ಧೀಕರಿಸಿ, ಚೌಕು ಮಂಡಲ ನಿರ್ಮಿಸಿ, ಅದರಲ್ಲಿ ರಕ್ಷಸೂತ್ರವನ್ನು ಕಟ್ಟಿಸಿಕೊಳ್ಳುವವರು ಕುಳಿತುಕೊಳ್ಳಬೇಕು. ಅಂದು ಪ್ರಾತಃಕಾಲದಲ್ಲಿ ಅವರು ಶುಭ ಸ್ನಾನ ಮಾಡಿ ಶುದ್ಧರಾಗಿ ಉಪಾಕರ್ಮವನ್ನು ಆಚರಿಸಬೇಕು. ನಂತರ ಅಪರಾಹ್ನಕಾಲದಲ್ಲಿ ರಕ್ಷಾಬಂಧನ. ಮಂತ್ರಪಠಣ ಪೂರ್ವಕವಾಗಿ ರಕ್ಷಾಬಂಧನವನ್ನು ಮಾಡಬೇಕು. ಇದನ್ನು ಭದ್ರಾ-ರಹಿತವಾದ ಸಮಯದಲ್ಲಿ ಮಾಡಬೇಕು ಎಂದು ನಿಯಮ.

ರಕ್ಷೆಯಲ್ಲಿ ಬಳಸುವ ಐದರ ಸಂಕೇತ-

ಗರಿಕೆ/ದೂರ್ವೆ ಇದು ವಂಶವೃದ್ಧಿಯ ಸಂಕೇತ. ಹಾಗೆಯೇ ಸದಾಚಾರ, ಪವಿತ್ರತೆಗಳಿಗೂ ದ್ಯೋತಕ. ದೂರ್ವೆಯು ಅತಿಶೀಘ್ರವಾಗಿ ಬೆಳೆಯುವಂತೆ, ಕಟ್ಟಿಸಿಕೊಳ್ಳುವವರಲ್ಲಿ ಇವು ಎಲ್ಲ ಬೆಳೆಯಲಿ ಎಂದು ಪ್ರಾರ್ಥನೆ (ನಮ್ಮ ಅಜ್ಜಿಯು ಆಶೀರ್ವದಿಸುವಾಗಕರಿಕೆ ಬೇರಾಗು ಎಂದು ಆಶೀರ್ವದಿಸುತ್ತಿರುವುದು ನೆನಪಿಗೆ ಬರುತ್ತದೆ..)

ಅಕ್ಷತೆ ಎಂದರೆ ಕ್ಷತಿ ಆಗದೆ ಇದ್ದದ್ದು, ತುಂಡಾಗದೆ ಇದ್ದದ್ದು. ಭಗವಂತನಲ್ಲಿ ನಮ್ಮ ಭಕ್ತಿಯು ಅಕ್ಷತವಾಗಿ ಇರಲಿ, ನಮ್ಮ ಜೀವನವು ವಿಘ್ನರಹಿತವಾಗಿ ಅಕ್ಷತವಾಗಿ ನಡೆಯಲಿ ಎಂದು ಪ್ರಾರ್ಥನೆ.

ಶ್ವೇತ ಸರ್ಷಪ ಇದು ದುಷ್ಟ ಶಕ್ತಿಗಳನ್ನು ಹೋಗಲಾಡಿಸುತ್ತದೆ. ಹೋಮ-ಶಾಂತಿ ಇತ್ಯಾದಿ ಕಾರ್ಯಗಳಲ್ಲಿ ಇದನ್ನು ಮನೆಯ ಸುತ್ತಲೂ ಚೆಲ್ಲುವದನ್ನು ಕೆಲವರು ನೋಡಿರಬಹುದು. ತೀಕ್ಷ್ಣ ಪ್ರಕೃತಿಯ ಸಾಸಿವೆ ದುರ್ಗುಣಗಳನ್ನು, ಕಂಟಕಗಳನ್ನು ದೂರ ಮಾಡುತ್ತದೆ.

ಚಂದನದಿಂದ ಜೀವನದಲ್ಲಿ ಸುಗಂಧ, ಶೀತಲತೆ ಇರಲಿ. ಮಾನಸಿಕ ಉದ್ವಿಗ್ನತೆ ಬರದೆ ಇರಲಿ. ಜೀವನದಲ್ಲಿ ಪರೋಪಕಾರ, ಸದಾಚಾರ, ಸಂಯಮ ಇತ್ಯಾದಿ ಗುಣಗಳು ಅರಳಲಿ ಎಂದು ಪ್ರಾರ್ಥನೆ.

ಕೇಶರ ಇದು ತೇಜಸ್ಸಿನ ಪ್ರತೀಕ. ಕಾಶ್ಮೀರದ ಕೇಶರದಿಂದ ಮಾಡಿದ ಕುಂಕುಮದ ಗುಣಗಳನ್ನು ಆಯುರ್ವೇದ ಬಹಳ ಹೇಳಿದೆ. ಇಂತಹ ಕೇಶರದಿಂದ ತೇಜಸ್ಸು,ಬರಲಿ. ಆಧ್ಯಾತ್ಮಿಕತೆ, ಭಕ್ತಿ, ಬುದ್ಧಿ, ಯಶಸ್ಸು ಇವುಗಳಲ್ಲಿ ಸದಾ ತೇಜಸ್ವಿಗಳಾಗಿ ಇರಬೇಕೆಂದು ಪ್ರಾರ್ಥನೆ.

ರಕ್ಷಾ ಸೂತ್ರ ಕಟ್ಟುವಾಗ ಹೇಳುವ ಮಂತ್ರ ಹೀಗಿದೆ -

येन बद्धो बलि राजा दानवेन्द्रो महाबल: |

तेन त्वां प्रतिबध्नामी रक्षे माचल माचल ||

ಅರ್ಥಯಾವುದರಿಂದ ದಾನವೇಂದ್ರನಾದ ಮಹಾಬಲಿಯು ಬದ್ಧನಾಗಿದ್ದನೋ, ಅದರಿಂದಲೇ ನಿನ್ನನ್ನು ಬಂಧನ ಮಾಡುತ್ತೇನೆ. ಹೇ ರಕ್ಷೆ, ನೀನು ಅಚಲವಾಗಿರು, ಸ್ಥಿರವಾಗಿರು.

ರಕ್ಷಬಂಧನವುಸಮಯ-ನಿಯತ ಇದ್ದಿದ್ದರಿಂದ ಗ್ರಹಣದ ದಿನದಂದೂ ಕೂಡ ರಕ್ಷಾ ಬಂಧನವನ್ನು ಮಾಡಬಹುದು.  ಕೇವಲ ಭದ್ರಾ ತೀರಿದ ಬಳಿಕ ಅಪರಾಹ್ನದಲ್ಲಿ ಮಾಡಬೇಕು.


ರೀತಿ ರಕ್ಷಾ-ಸೂತ್ರವನ್ನು ಕಟ್ಟಿಸಿಕೊಂಡವರು ವರ್ಷವಿಡೀ ಸುರಕ್ಷಿತರಾಗಿ, ಸುಖಿಯಾಗಿ, ಯಶಸ್ವಿಗಳಾಗಿ ಇರುತ್ತಾರೆ. ಇಂದಿನ ಭಯಾನಕ ಅನಿಶ್ಚಿತತೆಯ ಕಾಲದಲ್ಲಿ ಇದರ ಆವಶ್ಯಕತೆ ಅತ್ಯಂತವಾಗಿದೆ. ಆದರೆ ಕೇಳುವವರು ಯಾರಿದ್ದಾರೆ? ಪರಂಪರೆಯು ಅವ್ಯಾಹತವಾಗಿ ಯುಗಯುಗಾಂತರಗಳಲ್ಲಿಯೂ ನಡೆದಿತ್ತು. ಕಳೆದ ೧೦೦ ವರ್ಷಗಳಲ್ಲಿ ಇದರ ಶುದ್ಧ ಸ್ವರೂಪ ಮಾಯವಾಗಿ ವಿಕೃತಗೊಂಡಿದೆ. ಯಾರೋ ಹೇಗೋ ಮಾಡಿದ ವಿಚಿತ್ರ ಪರಿಯ (ಕೆಲವು ಸಲ ಅಶುಭ-ಸೂಚಕವಾದ) ಎಂಥದನ್ನೋ ರಾಖಿ ಎಂದು ಪೇಟೆಯಿಂದ ಕೊಂಡುತಂದು ಅಣ್ಣ-ತಮ್ಮಂದಿರ ಕೈಗೆ ಬಿಗಿದು, ಬಾಯಿಯಲ್ಲಿ ಮಾಂಸದ ರಸ ಬೆರೆತ ಚಾಕಲೇಟ್ ತುರುಕಿ, ಕೈಯಲ್ಲಿ ದುಡ್ಡು ಇಸಿದುಕೊಳ್ಳುವ ವಿಚಿತ್ರ ಕಾರ್ಯವಾಗಿದೆ ಹಬ್ಬ ಇಂದು! ಅಂತಹ ಹೊಲಸು ರಾಖಿ ಕಟ್ಟಿ ಏನು ರಕ್ಷೆ ಆಗುವುದು? ಅದರಲ್ಲಿ ದೈವತ್ವವಿದೆಯೇ? ಮಂತ್ರದ ಶಕ್ತಿ ಇದೆಯೇ? ಸುಮ್ಮನೆ ಒಂದು ಫ್ಯಾಷನ್ ಆಗಿ ನಾವು ಇದನ್ನು ಅನುಸರಿಸುತ್ತಿರುವುದು. ನಿಜಕ್ಕೂ ಶೋಚನೀಯ!! ಸಮಾಜದವರು ತಾವು ಎತ್ತ ಹೋಗುತ್ತಿದ್ದೇವೆ ಎಂದು ವಿಚಾರ ಮಾಡಬೇಕು. ಪ್ರಾಚೀನ ಪದ್ಧತಿಗಳನ್ನು ಪುನರುಜ್ಜೀವಿಸಲು ಪ್ರಯತ್ನ ನಡೆಯಬೇಕು.

ಶ್ರೀ ಕೃಷ್ಣಾರ್ಪಣಮಸ್ತು !!

 (ರಕ್ಷಾ ಬಂಧನ ಕುರಿತು ಒಂದು ಲೇಖನ ಬರೆಯುವ ಹವಣಿಕೆ ಬಹಳೇ ಕಾಡುತ್ತಿತ್ತು. ಬಯಕೆಗೆ ಇಂದು ಮೂರ್ತ ಸ್ವರೂಪ ಸಿಕ್ಕಿದೆ. ತಾವೆಲ್ಲರೂ ಓದಿರಿ, ಅಭಿಪ್ರಾಯ ತಿಳಿಸಿರಿ ಎಂದು ಪ್ರಾರ್ಥನೆ.)
  

No comments:

Post a Comment