Saturday, August 18, 2018

ಇಂದಿನ ಇತಿಹಾಸ History Today ಆಗಸ್ಟ್ 18

ಇಂದಿನ ಇತಿಹಾಸ History Today ಆಗಸ್ಟ್ 18

2018: ತಿರುವನಂತಪುರ: ಶತಮಾನದ ಭೀಕರ ಮಳೆ, ಪ್ರವಾಹದಿಂದ ತತ್ತರಿಸಿದ ಕೇರಳ ರಾಜ್ಯವು, ಪ್ರವಾಹ ಪರಿಸ್ಥಿತಿ ನಿಭಾಯಿಸಲು ತೀವ್ರ ಹೋರಾಟ ನಡೆಸುತ್ತಿರುವ ಹೊತ್ತಿನಲ್ಲಿ ಶೈಕ್ಷಣಿಕ ಅಗತ್ಯ ಪೂರೈಸಲು ಮೀನು ಮಾರಲು ಹೊರಟು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲ್ ಆಗಿದ್ದ ೨೧ರ ಹರೆಯದ ಕಾಲೇಜು ವಿದ್ಯಾರ್ಥಿನಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ೧.೫ ಲಕ್ಷ ರೂಪಾಯಿಗಳ ದೇಣಿಗೆ ಸಲ್ಲಿಸಿ ತನ್ನ ಮಾನವೀಯತೆ ಮೆರೆದಳು. ಇದೇ ವೇಳೆಗೆ ವಿವಿಧ ರಾಜ್ಯಗಳಿಂದಲೂ ಕೇರಳಕ್ಕೆ ನೆರವಿನ ಮಹಾಪೂರ ಹರಿದು ಬಂತು. ಈ ಮುಂಗಾರು ಮಳೆ, ಪ್ರವಾಹ, ಭೂಕುಸಿತಗಳಿಂದ ೩೪೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ವರದಿಗಳು ಬಂದಿದ್ದು, ಮೂರೂ ಪಡೆಗಳ ಸಿಬ್ಬಂದಿ ರಕ್ಷಣಾ ಕಾರ್ಯ ನಿರತವಾಗಿರುವಾಗಲೇ ಈದಿನ ಮತ್ತೆ ೨೩ ಶವಗಳು ಪತ್ತೆಯಾದವು. ಈ ಮಧ್ಯೆ ಕೇರಳದ ೧೧ ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನ ತೀವ್ರ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಈ ಜಿಲ್ಲೆಗಳಲ್ಲಿ ಕಟ್ಟೆಚ್ಚರ (ರೆಡ್ ಅಲರ್ಟ್) ಘೋಷಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ೫೦೦ ಕೋಟಿ ರೂಪಾಯಿಗಳ ಹೆಚ್ಚುವರಿ ನೆರವನ್ನು ಘೋಷಿಸಿದ ಬಳಿಕ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪರಿಸ್ಥಿತಿ ನಿಭಾಯಿಸಲು ವಿವಿಧೆಡೆಗಳಿಂದ ನೆರವು ಹರಿದು ಬರುತ್ತಿದೆ. ಈಗ ಪರಸ್ಪರ ಟೀಕೆ ಮಾಡುವ ಸಮಯವಲ್ಲ ಎಂದು ಹೇಳಿದ್ದಲ್ಲದೆ, ಕೇಂದ್ರ ಸರ್ಕಾರವೂ ಚೆನ್ನಾಗಿ ಸ್ಪಂದಿಸುತ್ತಿದೆ ಎಂದು ತಿಳಿಸಿದರು. ಕೋಚಿಯ ಹನನ್ ಎಂಬ ಕಾಲೇಜು ವಿದ್ಯಾರ್ಥಿನಿ ವಿವಿಧ ಜನರಿಂದ ತಾನು ಅಧ್ಯಯನ ಮುಂದುವರೆಸುವ ಮತ್ತು ಕುಟುಂಬ ನಿರ್ವಹಣೆ ಸಲುವಾಗಿ ಮೀನು ಮಾರುವ ಮೂಲಕ ೧.೫೦ ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿದ  ವಿಡಿಯೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಾನು ಈ ಹಣವನ್ನು ಜನರಿಂದ ಪಡೆದಿದ್ದೇನೆ ಮತ್ತು ಅದನ್ನು ಅಗತ್ಯ ಉಳ್ಳ ಜನರಿಗಾಗಿ ಹಿಂದಿರಗಿಸಲು ಸಂತಸ ಪಡುತ್ತೇನೆ ಎಂದು ಆಕೆ ಹೇಳಿದಳು. ಆಂಕರ್ ಮತ್ತು ಹೂ ಮಾರಾಟದ ಹುಡುಗಿಯಾಗಿಯೂ ದುಡಿಯುತ್ತಿರುವ ಹನನ್, ಪ್ರವಾಹ ಪರಿಹಾರ ಕಾರ್ಯಕ್ಕೆ ದೇಣಿಗೆ ನೀಡುವಂತೆ ಜನರಿಗೆ ಮನವಿ ಮಾಡಿದಳು. ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಖಾಸಗಿ ಕಾಲೇಜು ಒಂದರಲ್ಲಿ ಬಿಎಸ್ ಸಿ ವಿದ್ಯಾರ್ಥಿನಿಯಾಗಿರುವ ಹನನ್, ತಾನು ಬದುಕು ಸಾಗಿಸುತ್ತಿರುವುದಕ್ಕಾಗಿ ಮಾಡುತ್ತಿರುವ ವೃತ್ತಿಗಳ ಬಗ್ಗೆ ಹೇಳಿಕೊಂಡದ್ದು ಮಲಯಾಳಂ ದಿನಪತ್ರಿಕೆಯೊಂದರಲ್ಲಿ ವರದಿಯಾದ ಬಳಿಕ ಆಕೆಯ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಜಾಲತಾಣಿಗರ ಒಂದು ವರ್ಗ ಆಕೆಯ ಹೋರಾಟಗಳ ಬಗ್ಗೆ ಸಂಶಯ ವ್ಯಕ್ತ ಪಡಿಸಿ, ’ಇದೆಲ್ಲ ನಕಲಿ ಎಂದು ಪ್ರತಿಪಾದಿಸಿತ್ತು.  ಹನನ್ ಹೊರತಾಗಿ ವಿವಿಧ ರಂಗಗಳ ಜನರೂ ಪ್ರವಾಹ ಸಂತ್ರಸ್ಥರಿಗೆ ನೆರವು ನೀಡಲು ಮುಂದೆ ಬಂದರು. ಸೇವಾ ಕಾಲದಲ್ಲಿ ಅಂಟಿಕೊಂಡ ನಿಫಾ ಜ್ವರದಿಂದ ಸಾವನ್ನಪ್ಪಿದ ದಾದಿ ಲಿನಿ ಪುಥುಸ್ಸೆರಿಯ ಪತಿ, ಸರ್ಕಾರಿ ನೌಕರ ಸಾಜೀಶ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗೆ ೨೫,೦೦೦ ರೂಗಳ ದೇಣಿಗೆ ನೀಡಿದರು. ಲಿನಿಯ ನಿಸ್ವಾರ್ಥ ಸೇವೆಯನ್ನು ಮನ್ನಿಸಿ ಸರ್ಕಾರದ ಆರೋಗ್ಯ ಖಾತೆ ಸಾಜೀಶ್ ಅವರಿಗೆ ನೌಕರಿ ನೀಡಿತ್ತು.  ೬೦೦ ರೂಪಾಯಿಗಳ ಮಾಸಿಕ ಪಿಂಚಣಿಯ ಆದಾಯವನ್ನಷ್ಟೇ ಹೊಂದಿರುವ ೬೮ರ ಹರೆಯದ ಕಣ್ಣೂರು ಜಿಲ್ಲೆಯ ತಲಶ್ಸೇರಿಯ ರೋಹಿಣಿ ಎಂಬವರು ಆನ್ ಲೈನ ಮೂಲಕ ೧೦೦೦ ರೂ ದೇಣಿಗೆ ನೀಡಿದರು. ಸಾಮಾಜಿಕ ಮಾಧ್ಯಮ ಗುಂಪುಗಳು, ವಿದ್ಯಾರ್ಥಿಗಳು, ನಟ ನಟಿಯರು, ಸರ್ಕಾರೇತರ ಸಂಘಟನೆಗಳು ತಾವಾಗಿಯೇ ಪರಿಹಾರ ನಿಧಿಗೆ ಕಾಣಿಕೆಗಳನ್ನು ಸಲ್ಲಿಸಿದರು. ವಿವಿಧ ರಾಜ್ಯಗಳಿಂದ ನೆರವು: ವಿವಿಧ ರಾಜ್ಯಗಳಿಂದಲೂ ಕೇರಳಕ್ಕೆ ನೆರವಿನ ಮಹಾಪೂರ ಹರಿದು ಬಂತು. ತಮಿಳುನಾಡಿನಿಂದ ೧೦ ಕೋಟಿ ರೂಪಾಯಿ, ೫೦೦ ಮೆಟ್ರಿಕ್ ಟನ್ ಅಕ್ಕಿ, ೩೦೦ ಮೆಟ್ರಿಕ್ ಟನ್ ಹಾಲಿನ ಪುಡಿ, ೧೫,೦೦೦ ಲೀಟರ್ ಹಾಲು ಮತ್ತು ಇತರ ಪರಿಹಾರ ವಸ್ತುಗಳು ರವಾನೆಯಾದವು. ಕರ್ನಾಟಕ, ಗುಜರಾತ್, ಬಿಹಾರ, ಆಂಧ್ರಪ್ರದೇಶ, ದೆಹಲಿ, ಹರಿಯಾಣ, ಪಂಜಾಬ್ ಮುಖ್ಯಮಂತ್ರಿಗಳು ತಲಾ ೧೦ ಕೋಟಿ ರೂಪಾಯಿಗಳ ನೆರವು ಘೋಷಿಸಿದ್ದಾರೆ.  ತೆಲಂಗಾಣ ೨೫ ಕೋಟಿ ರೂಪಾಯಿ, ಮಹಾರಾಷ್ಟ್ರ ೨೦ ಕೋಟಿ ರೂಪಾಯಿ ಮತ್ತು ೧.೫ ಕೋಟಿ ರೂಪಾಯಿಯ ಆಹಾರದ ಪೊಟ್ಟಣ, ೧೧ ಟನ್ ಒಣ ಆಹಾರದ ನೆರವು ಘೋಷಣೆ ಮಾಡಿದೆ. ರಾಜಸ್ಥಾನ ವೆಲ್ ಫೇರ್ ಅಸೋಸಿಯೇಶನ್ ಮತ್ತು ಜಿಟೋ ಇಂಟರ್ ನ್ಯಾಷನಲ್ ತಲಾ ೫೧ ಲಕ್ಷ ರೂಪಾಯಿಗಳ ನೆರವು ಘೋಷಿಸಿದವು. ಜಮ್ಮು - ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲ ಒಂದು ತಿಂಗಳ ವೇತನವನ್ನು ಕೇರಳ ಪ್ರವಾಹ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದರು.
ಮಲಪ್ಪುರಂನಲ್ಲಿ ಶವ ಪತ್ತೆ: ಫಸಲ್ ಎಂಬ ಎಳೆಯ ಬಾಲಕನೊಬ್ಬನ ಶವ ತಿರುರಂಗಡಿ ಸಮೀಪದ ಕೊಡನಿಹಿಯಲ್ಲಿ ಪ್ರವಾಹದ ನೀರಿನಲ್ಲಿ ತೇಲುವುದು ಈದಿನ ಪತ್ತೆಯಾಯಿತು.  ಮಲಪ್ಪುರಂ ಜಿಲ್ಲೆಯಲ್ಲಿ ಅಗ್ನಿಶಾಮಕದ ದಳ ಮತ್ತು ರಕ್ಷಣಾ ಸಿಬ್ಬಂದಿ ಜಲಾವೃತ ಸ್ಥಳಗಳಲ್ಲಿ ಸಿಕ್ಕಿ ಬಿದ್ದಿದ ೧,೧೫೦ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಪುರಥೂರಿನಲ್ಲಿ ೯೦ ಜನ, ಕಲ್ಲೂರಿನಲ್ಲಿ ೨೦೦ ಜನರನ್ನು, ಪೊನ್ನಾನಿ ಸಮೀಪದ ಈಶ್ವರಮಂಗಲಂನಲ್ಲಿ ೪೩೦ ಜನ, ಪಾಲಕ್ಕಾಡ್ ಸಮೀಪದ ಮಟ್ಟತ್ತೂರಿನಲ್ಲಿ ೩೭೪ ಜನ, ವಂಗರದ ಮುತ್ತಲಮಡುವಿನಲ್ಲಿ ೪೫ ಜನರನ್ನು ರಕ್ಷಿಸಲಾಯಿತು. ಚಲಿಯಾರ್ ಮತ್ತು ಕಡಲುಂಡಿಪುಳಗಳಲ್ಲಿ ಪ್ರವಾಹದ ನೀರು ಇಳಿಮುಖವಾಗಿದ್ದರೂ, ಮಲಪ್ಪುರಂ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ನೂರಾರು ಮನೆಗಳು ಇನ್ನೂ ಜಲಾವೃತಗೊಂಡಿವೆ. ಮಳೆ, ಪ್ರವಾಹ, ಭೂಕುಸಿತಗಳಿಂದಾಗಿ ಈದಿನ ಇನ್ನೂ ಕನಿಷ್ಠ ೨೩ ಸಾವುಗಳು ಸಂಭವಿಸಿರುವ ಬಗ್ಗೆ ವರದಿಗಳು ಬಂದಿವೆ. ೧೫ ಶವಗಳು ಪ್ರವಾಹದ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿದೆ ಎಂದು ವರದಿಗಳು ಹೇಳಿದವು. ಸಮರೋಪಾದಿಯಲ್ಲಿ ರಕ್ಷಣಾ ಯತ್ನಗಳನ್ನು ಮಾಡಲಾಗುತ್ತಿದ್ದರೂ, ವಿದ್ಯುತ್ ಸರಬರಾಜು ಮತ್ತು ಸಂಪರ್ಕ ಜಾಲಗಳು ಕಡಿದುಹೋಗಿರುವುದು, ಆಹಾರ, ಕುಡಿಯುವ ನೀರು, ಆಹಾರದ ಕೊರತೆಯ ಕಾರಣದಿಂದ ಸಹಸ್ರಾರು ಜನರು ಸಂತ್ರಸ್ಥ ಪ್ರದೇಶಗಳಲ್ಲಿ ಇನ್ನೂ ಸಂಕಷ್ಟದಲ್ಲಿ ಇದ್ದಾರೆ ಎಂದು ವರದಿಗಳು ತಿಳಿಸಿದವು.

2018: ಕೋಚಿ: ಕೋಚಿಯ ದಕ್ಷಿಣ ನೌಕಾ ಕಮಾಂಡ್‌ನಲ್ಲಿ ಕೇರಳ ಜಲಪ್ರಳಯ ಪರಿಸ್ಥಿತಿ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ೫೦೦ ಕೋಟಿ ರೂಪಾಯಿಗಳ ಹೆಚ್ಚುವರಿ ಮಧ್ಯಂತರ ಪರಿಹಾರವನ್ನು ಘೋಷಿಸಿದರು. ರಾಜ್ಯ ಸರ್ಕಾರ ೨೦೦೦ ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರ ಮಂಜೂರು ಮಾಡುವಂತೆ ಕೋರಿಕೆ ಮಂಡಿಸಿತ್ತು.  ರಾಜ್ಯದಲ್ಲಿ ಕೆಲದಿನಗಳ ಹಿಂದೆ ವೈಮಾನಿಕ ಸಮೀಕ್ಷೆ ನಡೆಸಿದಾಗ ಗೃಹಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದ ೧೦೦ ಕೋಟಿ ರೂಪಾಯಿಗಳ ಪರಿಹಾರದ ಹೊರತಾಗಿ ಈ ಪರಿಹಾರ ನೀಡಲಾಗುವುದು. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪ್ರವಾಹದಲ್ಲಿ ಮೃತರಾದವರ ವಾರಸುದಾರರಿಗೆ ತಲಾ ೨ ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ ೫೦,೦೦೦ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದು ಪ್ರಧಾನಿ ಮೋದಿ ಪ್ರಕಟಿಸಿದರು.  ಪ್ರವಾಹ ಸ್ಥಿತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರದ ರಾಜ್ಯಖಾತೆ ಸಚಿವ ಕೆ.ಜೆ. ಅಲ್ಫೋನ್ಸ್, ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್, ಮುಖ್ಯ ಕಾರ್‍ಯದರ್ಶಿ ಟಾಮ್ ಜೋಸ್ ಮತ್ತು ಹೆಚ್ಚುವರಿ ಮುಖ್ಯ ಕಾರ್‍ಯದರ್ಶಿ ಹಾಗೂ ಪರಿಹಾರ ಕಮೀಷನರ್ ಪಿ.ಎಚ್. ಕುರಿಯನ್ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಾಥಮಿಕ ಅಂದಾಜಿನ ಪ್ರಕಾರ ಮಳೆ, ಪ್ರವಾಹ, ಭೂಕುಸಿತಗಳಿಂದಾಗಿ ಅಂದಾಜು ೧೯,೫೧೨ ಕೋಟಿ ರೂಪಾಯಿ ನಷ್ಟ ಸಂಭವಿಸಿರುವುದಾಗಿ ಮೋದಿ ಅವರಿಗೆ ತಿಳಿಸಿದರು.. ಪ್ರವಾಹದ ನೀರು ಇಳಿದ ಬಳಿಕವಷ್ಟೇ ನೈಜ ಅಂದಾಜು ಸಾಧ್ಯ ಎಂದು ಅವರು ಹೇಳಿದರು. ಪ್ರಧಾನಿ ಮೋದಿಯವರು ಪ್ರವಾಹ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪರಿಶೀಲನಾ ಸಭೆ ನಡೆಸಲು ಮೊದಲು ಯೋಜಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣ ಮೊದಲು ಯೋಜಿಸಿದ್ದ ವೈಮಾನಿಕ ಸಮೀಕ್ಷೆಯನ್ನು ಅಮಾನತುಗೊಳಿಸಲಾಯಿತು. ಆದರೆ, ಸಭೆಯ ಬಳಿಕ ಅಲುವ- ತ್ರಿಶ್ಯೂರು ಭಾಗದಲ್ಲಿ ಪ್ರಧಾನಿ ಸಂಕ್ಷಿಪ್ತ ವೈಮಾನಿಕ ಸಮೀಕ್ಷೆ ನಡೆಸಿದರು.  ‘ಕೇರಳದಲ್ಲಿ ಮೇ ೨೯ರಂದು ಮುಂಗಾರು ಕಾಲಿಟ್ಟ ಬಳಿಕ ಈವರೆಗೆ ಒಟ್ಟು ೩೫೭ ಜನ ಪ್ರಾಣ ಕಳೆದುಕೊಂಡಿದ್ದಾರೆ. ೪೦,೦೦೦ ಹೆಕ್ಟೇರ್ ಗಳಿಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ೨೬,೦೦೦ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಇಲ್ಲವೇ ಭಾಗಶಃ ಹಾನಿಗೊಂಡಿವೆ. ೩,೦೨೬ ಪರಿಹಾರ ಶಿಬಿರಗಳಲ್ಲಿ ರಾಜ್ಯವು ೩,೫೩,೦೦೦ ಮಂದಿಯ ಆಶ್ರಯ ಕಲ್ಪಿಸಿದೆ. ೪೬,೦೦೦ ಜಾನುವಾರುಗಳು, ೨ ಲಕ್ಷಕ್ಕೂ ಹೆಚ್ಚು ಕೋಳಿಗಳು ಪ್ರವಾಹದಲ್ಲಿ ನಶಿಸಿವೆ ಎಂದು ಪಿಣರಾಯಿ ವಿಜಯನ್ ಪ್ರಧಾನಿಯವರಿಗೆ ವಿವರಿಸಿದರು. ೧೬,೦೦೦ ಕಿಮೀಯಷ್ಟು ಉದ್ದದ ಲೋಕೋಪಯೋಗಿ ರಸ್ತೆಗಳು, ೮೨,೦೦೦ ಕಿಮೀಯಷ್ಟು ಉದ್ದದ ಸ್ಥಳೀಯ ರಸ್ತೆಗಳು, ೧೩೪ ಸೇತುವೆಗಳು ತೀವ್ರವಾಗಿ ಹಾನಿಗೊಂಡಿವೆ. ರಸ್ತೆಗಳ ಹಾನಿಯಿಂದ ಅಂದಾಜು ೧೩,೦೦೦ ಕೋಟಿಯಷ್ಟು ಮತ್ತು ಸೇತುವೆಗಳ ಹಾನಿಯಿಂದ ಅಂದಾಜು ೮೦೦  ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
೨೦ ಹೆಚ್ಚುವರಿ ಹೆಲಿಕಾಪ್ಟರುಗಳು ಮತ್ತು ೬೦೦ ಯಾಂತ್ರಿಕ ದೋಣಿಗಳನ್ನು ತತ್ ಕ್ಷಣ ಮಂಜೂರು ಮಾಡುವಂತೆಯೂ, ಎನ್ ಡಿಆರ್ ಎಫ್ ನ ಇನ್ನೂ ೪೦ ತಂಡಗಳು, ನಾಲ್ಕು ಸೇನಾ ಎಂಜಿನಿಯರ್ ಕಾರ್‍ಯ ಪಡೆಗಳು ಮತ್ತು ೧೦ ಹೆಚ್ಚಿನ ನೌಕಾ ತಂಡಗಳನ್ನು ಕಳುಹಿಸುವಂತೆಯೂ ವಿಜಯನ್ ಮನವಿ ಮಾಡಿದರು.  ತೊಂದರೆಗೆ ಒಳಗಾದ ಕುಟುಂಬಗಳಿಗೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಸಕಾಲಿಕ ನೆರವು ಒದಗಿಸುವಂತೆ ಮತ್ತು ಸಾವು-ನೋವುಗಳ ಸಮೀಕ್ಷೆಗಾಗಿ ವಿಶೇಷ ಶಿಬಿರಗಳನ್ನು ನಡೆಸುವಂತೆ ವಿಮಾಕಂಪೆನಿಗಳಿಗೆ ಮೋದಿ ಅವರು ಸೂಚಿಸಿದರು.  ಕೃಷಿಕರಿಗೆ ಫಸಲ್ ಬಿಮಾ ಯೋಜನೆಯ ಹಣವನ್ನು ಬೇಗನೆ ಬಿಡುಗಡೆ ಮಾಡುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಪ್ರಧಾನಿಯವರ ಕಚೇರಿ ತಿಳಿಸಿತು. ಹಾನಿಗೊಂಡಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಆದ್ಯತೆ ಮೇರೆಗೆ ದುರಸ್ತಿ ಪಡಿಸುವಂತೆ ಭಾರತದ ರಾಷ್ಟ್ರೀಯ ಹೆದ್ದಾರಿಗಳ ನಿಗಮಕ್ಕೆ ಮೋದಿ ಸೂಚಿಸಿದರು.. ವಿದ್ಯುತ್ ಸಂಪರ್ಕಗಳನ್ನು ತುರ್ತಾಗಿ ಮರುಸ್ಥಾಪಿಸುವ ನಿಟ್ಟಿನಲ್ಲಿ ರಾಜ್ಯಕ್ಕೆ ಅಗತ್ಯ ನೆರವು ನೀಡುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್ ಟಿಪಿಸಿ ಮತ್ತು ಪಿಜಿ ಸಿಐಎಲ್‌ಗಳಿಗೆ ನಿರ್ದೇಶನ ನೀಡಲಾಗಿದೆ. ಗ್ರಾಮಗಳಲ್ಲಿ ಕಚ್ಛಾ ಮನೆಗಳನ್ನು ಕಳೆದುಕೊಂಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನಾ -ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ಆದ್ಯತೆ ಮೇರೆಗೆ ಮನೆಗಳನ್ನು ಕಟ್ಟಿಸಿಕೊಡುವಂತೆಯೂ ಸೂಚನೆ ನೀಡಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ೨೦೧೮-೧೯ರ ಸಾಲಿಗೆ ೫.೫ ಕೋಟಿ ಮಾನವ ದಿನಗಳನ್ನು ಮಂಜೂರು ಮಾಡಲಾಗಿತ್ತು. ಇದನ್ನು ಹೆಚ್ಚಿಸುವಂತೆ ಮಾಡುವ ಮನವಿಯನ್ನು ಪರಿಗಣಿಸಲಾಗುವುದು. ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ ಅಡಿಯಲ್ಲಿ ರೈತರಿಗೆ ಹಾನಿಯಾಗಿರುವ ತೋಟಗಾರಿಕಾ ಬೆಳೆಗಳ ಗಿಡಗಳನ್ನು ಪುನಃ ನೆಡಲು ನೆರವು ಒದಗಿಸಲಾಗುವುದು ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿದವು.

2018: ಜಿನೇವ: ವಿಶ್ವ ಸಂಸ್ಥೆಯ ಮಾಜಿ ಮಹಾ ಕಾರ್ಯದರ್ಶಿ ( ಸೆಕ್ರೆಟರಿ ಜನರಲ್), ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನಾನ್ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಈದಿನ ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು.  ‘ವಿಶ್ವ ಸಂಸ್ಥೆಯ ಮಾಜಿ ಸೆಕ್ರೆಟರಿ ಜನರಲ್, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೋಫಿ ಅನ್ನಾನ್ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ಆಗಸ್ಟ್ ೧೮ರ ಶನಿವಾರ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಲು ದುಃಖಿಸುತ್ತೇವೆ ಎಂದು ಅನ್ನಾನ್ ಕುಟುಂಬ ಮತ್ತು ಕೋಫಿ ಅನ್ನಾನ್ ಫೌಂಡೇಶನ್ ಟ್ವಿಟ್ಟರಿನಲ್ಲಿ ಈದಿನ ಪ್ರಕಟಿಸಿತು.  ನೊಬೆಲ್ ಪ್ರಶಸ್ತಿ ಪುರಸ್ಕೃತ ಅನ್ನಾನ್ ಅವರು ಸಿರಿಯಾದಲ್ಲಿ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿದ್ದರು ಮತ್ತು ಸೆಕ್ರೆಟರಿ ಜನರಲ್ ಆಗಿ ನೇಮಕಗೊಂಡ ಮೊತ್ತ ಮೊದಲ ಕರಿಯ ಆಫ್ರಿಕನ್ ಆಗಿದ್ದರು. ೧೯೯೬-೨೦೦೬ರ ನಡುವಣ ಅವಧಿಯಲ್ಲಿ ಅನ್ನಾನ್ ಅವರು ಎರಡು ಅವಧಿಗಳಿಗೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿ ಸೇವೆ ಸಲ್ಲಿಸಿದ್ದರು. ೨೦೧೬ರಲ್ಲಿ ಮ್ಯಾನ್ಮಾರ್ ಸರ್ಕಾರವು ರಾಖೈನ್ ರಾಜ್ಯದ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ರಚಿಸಲಾದ ಸಮಿತಿಯೊಂದರ ಮುಖ್ಯಸ್ಥರಾಗಿ ಅನ್ನಾನ್ ಅವರನ್ನು ಹೆಸರಿಸಿತ್ತು. ಈ ರಾಜ್ಯದಲ್ಲಿ ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ವ್ಯಾಪಕ ದೂಷಣೆ ಮಾಡಲಾಗುತ್ತಿದ್ದುದನ್ನು ಮಾನವ ಹಕ್ಕುಗಳ ಸಂಘಟನೆಗಳು  ದಾಖಲಿಸಿದ್ದವು. ಅನ್ನಾನ್ ನೇತೃತ್ವದಲ್ಲಿ ವಿಶ್ವಸಂಸ್ಥೆಯು ೨೦೦೦ದಲ್ಲಿ ಮಿಲೆನಿಯಂ ಡೆವಲಪ್ ಮೆಂಟ್ ಗೋಲ್ಸ್‌ನ್ನು ಅಳವಡಿಸಿತ್ತು. ಇದರಲ್ಲಿ ವಿಶ್ವದ ವಿವಿಧ ರಾಷ್ಟ್ರಗಳು ೧೫ ವರ್ಷಗಳ ಒಳಗಾಗಿ ದಾರಿದ್ರ್ಯವನ್ನು ಕೊನೆಗೊಳಿಸಲು ಬದ್ಧತೆ ವ್ಯಕ್ತ ಪಡಿಸಿದ್ದವು. ಕೋಫಿ ನಾಯಕತ್ವದಲ್ಲಿ ಪೀಸ್ ಬಿಲ್ಡಿಂಗ್ ಕಮೀಷನ್ ಮತ್ತು ಮಾನವ ಹಕ್ಕುಗಳ ಮಂಡಳಿ (ಹ್ಯೂಮನ್ ರೈಟ್ಸ್ ಕಮೀಷನ್) ಈ ಎರಡು ಅಂತರ ಸರ್ಕಾರಿ ಸಂಸ್ಥೆಗಳನ್ನು ರಚಿಸಲಾಗಿತ್ತು.   ೨೦೦೧ರಲ್ಲಿ ಕೋಫಿ ಅನ್ನಾನ್ ಮತ್ತು ವಿಶ್ವ ಸಂಸ್ಥೆಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿತ್ತು. ಏಡ್ಸ್, ಕ್ಷಯ ಮತ್ತು ಮಲೇರಿಯಾ ವಿರುದ್ಧ ಹೋರಾಡಲು ಜಾಗತಿಕ ನಿಧಿ ಸೃಷ್ಟಿಸುವಲ್ಲಿ ಅನ್ನಾನ್ ಪ್ರಮುಖ ಪಾತ್ರ ವಹಿಸಿದ್ದರು. ೧೯೯೯ರಲ್ಲಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಬೆಳೆಸುವ ಸಲುವಾಗಿ ಜಾಗತಿಕ ಯತ್ನ ನಡೆಸಲು ಗ್ಲೋಬಲ್ ಕಾಂಪ್ಯಾಕ್ಟ್ ಇನಿಷಿಯೇಟಿವ್ ನ್ನು ಕೋಫಿ ಆರಂಭಿಸಿದ್ದರು.   ‘ಅವರ ಪತ್ನಿ ನೇನ್, ಮಕ್ಕಳಾದ ಅಮ, ಕೊಜೊ ಮತ್ತು ನಿನ ಅವರು ಕೊನೆಯ ದಿನಗಳಲ್ಲಿ ಕೋಫಿ ಅನ್ನಾನ್ ಜೊತೆಗಿದ್ದರು ಎಂದು ಟ್ವಿಟ್ಟರಿನಲ್ಲಿ ನೀಡಲಾದ ಹೇಳಿಕೆ ತಿಳಿಸಿತು. ಘಾನಾ ಪ್ರಜೆಯಾಗಿದ್ದ ಅನ್ನಾನ್ ಸ್ವಿಜರ್ಲೆಂಡಿನಲ್ಲಿ ವಾಸವಾಗಿದ್ದರು. ರಾಜತಾಂತ್ರಿಕರಾಗಿ ಬದುಕು ಆರಂಭಿಸಿದ್ದ  ಅವರು ೧೯೯೭ರಿಂದ ೨೦೦೬ರ ನಡುವೆ ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಗಿ ನೇಮಕಗೊಂಡ ಅವಧಿಯಲ್ಲಿ ಜಾಗತಿಕ ರಾಜಕೀಯದಲ್ಲಿ ವಿಶ್ವಸಂಸ್ಥೆಯ ಹೆಸರನ್ನು ಬೆಳೆಸುವ ನಿಟ್ಟಿನಲ್ಲಿ ಅಪಾರವಾಗಿ ಶ್ರಮಿಸಿದರು. ಪತ್ರಿಕೆಗಳಲ್ಲಿ ಆಗಾಗ ಬರುವ ಮೂಲಕ ಶೀಘ್ರದಲ್ಲೇ ಅನ್ನಾನ್ ಅವರು ಟೆಲಿವಿಷನ್ನಿನಲ್ಲಿ ಪರಿಚಿತ ವ್ಯಕ್ತಿಯಾಗಿ ಬೆಳೆದರು. ಮಹತ್ವದ ಕಾರ್‍ಯಕ್ರಮಗಳು ಮತ್ತು ನ್ಯೂಯಾರ್ಕ್ ಡಿನ್ನರ್ ಪಾರ್ಟಿಗಳಲ್ಲಿ ಅವರು ಮುಖ್ಯ ಅತಿಥಿಯಾಗಿ ಇರುತ್ತಿದ್ದರು. ವಿಶ್ವಸಂಸ್ಥೆಯ ಹಾಲಿ ಮುಖ್ಯಸ್ಥ ಆಂಟೋನಿಯೋ ಗುಟೆರ್ರೆಸ್ ಅವರು ಕೋಫಿ ಅನ್ನಾನ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿ ’ಒಳ್ಳೆಯ ವಿಚಾರಗಳ ಮಾರ್ಗದರ್ಶಕ ಶಕ್ತಿ ಅವರಾಗಿದ್ದರು. ಹಲವಾರು ರೀತಿಗಳಲ್ಲಿ ಅನ್ನಾನ್ ಅವರೇ ವಿಶ್ವಸಂಸ್ಥೆಯಾಗಿದ್ದರು ಎಂದು ಹೇಳಿದರು. ಸಬ್ ಸಹರಾನ್ ಆಫ್ರಿಕದ ಮೊದಲ ಸೆಕ್ರೆಟರಿ ಜನರಲ್ ಆಗಿದ್ದ ಅನ್ನಾನ್ ಇರಾಕ್ ಯುದ್ಧದ ವಿಭಜಕ ವರ್ಷಗಳಲ್ಲಿ ವಿಶ್ವಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿದ್ದರು.  ಬಳಿಕ ’ಆಹಾರಕ್ಕಾಗಿ ತೈಲ ಹಗರಣದಲ್ಲಿ ಅವರು ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿದ್ದರು.   ಘಾನಾದ ಅಶಾಂತಿ ಪ್ರದೇಶದ ರಾಜಧಾನಿ ನಗರ ಕುಮಾಸಿಯಲ್ಲಿ ಜನಿಸಿದ್ದ ಅನ್ನಾನ್, ಆಂಗ್ಲೋ-ಡಚ್ ಬಹುರಾಷ್ಟ್ರೀಯ ಯುನಿಲಿವರ್ ಕಂಪೆನಿಯ ಆಧೀನ ಸಂಸ್ಥೆಯದ ಐರೋಪ್ಯ ವ್ಯಾಪಾರಿ ಕಂಪೆನಿ ’ಯುನೈಟೆಡ್ ಆಫ್ರಿಕಾ ಕಂಪೆನಿಯ ಎಕ್ಸಿಕ್ಯೂಟಿವ್ ಒಬ್ಬರ ಮಗನಾಗಿದ್ದರು. ವಿಶ್ವಸಂಸ್ಥೆಯ ಮುಖ್ಯಸ್ಥರಾಗಿ ತಮ್ಮ ಅವಧಿ ಮುಕ್ತಾಯವಾದ ಬಳಿಕ ಅನ್ನಾನ್ ಅವರು ಕೀನ್ಯಾ ಮತ್ತು ಸಿರಿಯಾದಲ್ಲಿ ಸಂಧಾನ ಮಾತುಕತೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಳಿಕ ಬಿಕ್ಕಟ್ಟುಗಳ ಇತ್ಯರ್ಥಕ್ಕಾಗಿ ತಮ್ಮ ಫೌಂಡೇಶನ್ ಸ್ಥಾಪಿಸಿದ್ದ ಕೋಫಿ ಅನ್ನಾನ್, ಜಾಗತಿಕ ವಿಷಯಗಳ ಬಗ್ಗೆ ನಿಯಮಿತವಾಗಿ ಚರ್ಚಿಸುವ ಹಿರಿಯ ಮುತ್ಸದ್ದಿಗಳ ಗುಂಪಿಗೆ ಸೇರ್ಪಡೆಯಾಗಿದ್ದರು.  ಪ್ರಧಾನಿ ಮೋದಿ ಶೋಕ: ಕೋಫಿ ಅನ್ನಾನ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ’ಅನ್ನಾನ್ ಅವರು ಆಫ್ರಿಕದ ಮಹಾನ್ ರಾಜತಾಂತ್ರಿಕ ಮತ್ತು ಮಾನವತಾವಾದಿ ಮಾತ್ರವೇ ಅಲ್ಲ, ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಬಗ್ಗೆ ನಿರಂತರ ನಿಗಾ ಇಟ್ಟುಕೊಳ್ಳುತ್ತಿದ್ದ ವ್ಯಕ್ತಿ ಎಂದು ಹೇಳಿದರು.

2018: ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್ -ಇ-ಇನ್ಸಾಫ್ (ಪಿಟಿಐ) ಪಕ್ಷದ ಅಧ್ಯಕ್ಷ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಅವರು ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.  ಮಾಜಿ ಕ್ರಿಕೆಟ್ ಹೀರೋ ಇಮ್ರಾನ್ ಖಾನ್ (೬೫) ಅವರು ತಾವು ರಾಜಕೀಯ ಪ್ರವೇಶಿಸಿದ ೨೨ ವರ್ಷಗಳ ಬಳಿಕ ಪಾಕಿಸ್ತಾನದ ೨೨ನೇ ಪ್ರಧಾನಿಯಾಗಿ ಅಧಿಕಾರಕ್ಕೆ ಏರಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಇಸ್ಲಾಮಾಬಾದಿನ ಐವಾನ್-ಇ-ಸದ್ರ್‌ನಲ್ಲಿ  (ರಾಷ್ಟ್ರಪತಿ ಭವನ) ನಡೆದ ಸರಳ ಸಮಾರಂಭದಲ್ಲಿ ಖಾನ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಮಾರಂಭ ರಾಷ್ಟ್ರಗೀತೆಯೊಂದಿಗೆ ಆರಂಭವಾಯಿತು. ರಾಷ್ಟ್ರಗೀತೆಯ ಬಳಿಕ ಪವಿತ್ರ ಖುರಾನ್ ಶ್ಲೋಕಗಳನ್ನು ಪಠಿಸಲಾಯಿತು. ಕರಿಯ ಶೆರ್ವಾನಿ ಧರಿಸಿದ್ದ ಖಾನ್ ಅವರು ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ ಉರ್ದು ಪದಗಳನ್ನು ಉಚ್ಚರಿಸುವಲ್ಲಿ ಕಷ್ಟಕರವಾಗಿ ಕೆಲವು ತಪ್ಪಾದದ್ದರಿಂದ ಸ್ವಲ್ಪ ತಳಮಳಗೊಂಡಿದ್ದರು. ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ’ರೋಜ್-ಇ-ಖಯಾದತ್ (ನಾಯಕತ್ವದ ದಿನ) ಎಂಬುದಾಗಿ ಹೇಳುವ ಬದಲು ’ರೋನ್-ಇ-ಖಯಾಮತ್ (ತೀರ್ಪಿನ ದಿನ) ಎಂದು ಉಚ್ಚರಿಸಿದರು. ಅಧ್ಯಕ್ಷ ಮಮ್ನೂನ್ ಹುಸೇನ್ ಪದವನ್ನು ಪುನಃ ಉಚ್ಚರಿಸಿ ತಪ್ಪನ್ನು ತಿದ್ದಿದರು. ೧೯೯೨ರಲ್ಲಿ ಪಾಕಿಸ್ತಾನದ ಕ್ರಿಕೆಟ್ ತಂಡವನ್ನು ವಿಶ್ವಕಪ್ ವಿಜಯದೊಂದಿಗೆ ಉತ್ತುಂಗಕ್ಕೆ ಒಯ್ದಿದ್ದ ಕ್ಯಾಪ್ಟನ್ ಇಮ್ರಾನ್ ಖಾನ್, ಪ್ರಮಾಣವಚನ ಸಮಾರಂಭಕ್ಕೆ ತಮ್ಮ ಕೆಲವು ಕ್ರಿಕೆಟಿಗ ಮಿತ್ರರನ್ನು ಆಹ್ವಾನಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ, ಭಾರತದ ಮಾಜಿ ಕ್ರಿಕೆಟಿಗೆ ನವಜೋತ್ ಸಿಂಗ್ ಸಿಧು, ಕಮೆಂಟೇಟರ್ ಆಗಿ ಬದಲಾದ ಕ್ರಿಕೆಟಿಗ  ರಮೀಜ್ ರಾಜ, ಮಾಜಿ ಗಗನಯಾತ್ರಿ ವಾಸಿಮ್ ಅಕ್ರಮ್ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಹಾಜರಿದ್ದರು. ಖಾನ್ ಅವರ ತೃತೀಯ ಪತ್ನಿ ಬುಶ್ರ ಮನೇಕ ಕೂಡಾ ಸಮಾರಂಭದಲ್ಲಿ ಹಾಜರಿದ್ದರು.. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಪ್ ಪಕ್ಷದ ಉಪಾಧ್ಯಕ್ಷ ಹಾಗೂ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ಖೈಬರ್ ಫಕ್ತೂನ್ ಖ್ವಾ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿ ಪರ್ವೇಜ್ ಖಟ್ಟಕ್, ಪಾಕ್ ಆಕ್ರಮಿತ ಕಾಶ್ಮೀರದ ಮಸೂದ್ ಖಾನ್ ಮತ್ತಿತರರು ಸಮಾರಂಭದಲ್ಲಿ ಮುಂದಿನ ಸಾಲುಗಳಲ್ಲಿಯೇ ಆಸೀನರಾಗಿದ್ದರು. ಆಕ್ಸ್ ಫರ್ಡ್‌ನಲ್ಲಿ ಶಿಕ್ಷಣ ಪಡೆದ ಇಮ್ರಾನ್ ಖಾನ್ ಅವರು ತಮ್ಮ ಏಕೈಕ ಪ್ರತಿಸ್ಪರ್ಧಿ ಪಾಕಿಸ್ತಾನಿ ಮುಸ್ಲಿಂ ಲೀಗ್ ನಾಯಕರಾದ ನವಾಜ್ ಶಾಬಾಜ್ ಶರೀಫ್ ಮತ್ತು ಅವರ ಪಕ್ಷವನ್ನು ನ್ಯಾಷನಲ್ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಪರಾಭವಗೊಳಿಸಿದ್ದರು. ಖಾನ್ ಅವರು ೧೭೬ ಮತಗಳನ್ನು ಗಳಿಸಿದರೆ, ಶರೀಫ್ ೯೬ ಮತಗಳನ್ನು ಗಳಿಸಿದ್ದರು. ೩೪೨ ಸದಸ್ಯ ಬಲದ ಅಸೆಂಬ್ಲಿಯಲ್ಲಿ ಸರ್ಕಾರ ರಚಿಸಲು ೧೭೨ ಮತಗಳನ್ನು ಪಡೆಯಬೇಕಾಗಿತ್ತು. ದೇಶವು ಕಾದಿರುವ ತಬ್ದೀಲಿಯನ್ನು (ಬದಲಾವಣೆ) ತರುವ ಭರವಸೆಯನ್ನು ನಾನು ನೀಡುತ್ತೇನೆ ಎಂದು ಇಮ್ರಾನ್ ಖಾನ್ ಚುನಾವಣಾ ಗೆಲುವಿನ ಬಳಿಕ ಶುಕ್ರವಾರ ಹೇಳಿದ್ದರು. ಈ ದೇಶಕ್ಕಾಗಿ ಕಠಿಣ ಜವಾಬ್ದಾರಿಯನ್ನು ನಾವು ಹೊರುತ್ತೇವೆ. ಈ ದೇಶವನ್ನು ಲೂಟಿ ಹೊಡೆದ ಜನರ ವಿರುದ್ಧ ಶ್ರಮಿಸುವುದಾಗಿ ನಾನು ಭರವಸೆ ನೀಡುತ್ತೇವೆ ಎಂದು ಖಾನ್ ಹೇಳಿದ್ದರು.  ‘ಲೂಟಿ ಹೊಡೆಯಲಾದ ಹಣವನ್ನು ನಾವು ಹಿಂದಕ್ಕೆ ತರುತ್ತೇವೆ. ಜನರ ಆರೋಗ್ಯ, ಶಿಕ್ಷಣ ಮತ್ತು ನೀರಿನ ಸಲುವಾಗಿ ವೆಚ್ಚವಾಗಬೇಕಾಗಿದ್ದ ಹಣ ಈ ಜನರ ಕಿಸೆಗಳಿಗೆ ಹೋಗಿದೆ ಎಂದು ಅವರು ನುಡಿದಿದ್ದರು. ಪಾಕಿಸ್ತಾನದ ಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರನ್ನು ತಮ್ಮ ನಾಯಕ ಎಂಬುದಾಗಿ ಬಣ್ಣಿಸಿದ್ದ ಖಾನ್ ಭ್ರಷ್ಟಾಚಾರ ಪೀಡಿತ ಪಾಕಿಸ್ತಾನವನ್ನು ಇಸ್ಲಾಮಿಕ್ ಕಲ್ಯಾಣ ರಾಜ್ಯವಾಗಿ ಮಾಡುವ ಭರವಸೆ ಕೊಟ್ಟಿದ್ದರು.


2016: ರಿಯೋ ಡಿ ಜನೈರೋ: ಕಡೆಗೂ ಭಾರತದ ಪದಕದ ಕೊರತೆ ನೀಗಿಸುವಲ್ಲಿ ಮಹಿಳಾ ಕುಸ್ತಿಪಟು ಸಾಕ್ಷಿ ಮಾಲಿಕ್ ಯಶಸ್ವಿಯಾದರು. ರಿಯೋ ಒಲಿಂಪಿಕ್ ಕ್ರೀಡಾಕೂಟದ ಪದಕ ಗೆದ್ದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಹೆಸರೂ ಸೇರ್ಪಡೆಗೊಂಡಿತು. ಮಹಿಳೆಯರ 58 ಕೆ.ಜಿ. ವಿಭಾಗದ ಫ್ರೀ ಸ್ಟೈಲ್ ಕುಸ್ತಿಯಲ್ಲಿ ಸಾಕ್ಷಿ ಮಾಲಿಕ್ ಕಂಚಿನ ಪದಕ ಗೆದ್ದು ದೇಶವೇ ಸಂಭ್ರಮಿಸುವಂತೆ ಮಾಡಿದರು. ಕೆಚ್ಚೆದೆಯಿಂದ ಕಾದಾಡಿದ ಸಾಕ್ಷಿ ಕಿರ್ಗಿಸ್ತಾನದ ಐಸುಲು ಟಿನಿಬೇಕೋವಾ ವಿರುದ್ಧ 8-5ರಿಂದ ಗೆಲುವು ಸಾಧಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಪೋಡಿಯಂ ಮೇಲೆ ನಿಂತು ಸಂಭ್ರಮಿಸಿದರು. ಒಲಂಪಿಕ್ಸ್ ಮಹಾ ಕೂಟ ಆರಂಭವಾಗಿ ಹನ್ನೆರಡು ದಿನಗಳು ಕಳೆದು, ಬಹುತೇಕ ಕ್ರೀಡಾ ಪ್ರಕಾರಗಳ ಸ್ಪರ್ಧೆ ಮುಗಿದರೂ ಒಂದೇ ಒಂದು ಪದಕ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂದು ಕೊರಗುತ್ತಿದ್ದ ಕ್ರೀಡಾಭಿಮಾನಿಗಳಲ್ಲಿ ಸಂತಸ ಮೂಡಿಸಲು ಸಾಕ್ಷಿ ಕಾರಣರಾದರು. ಸಾಕ್ಷಿಗೆ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. 23 ಹರೆಯದ ಹರಿಯಾಣದ ಸಾಕ್ಷಿ ಮಾಲಿಕ್ ಪದಕ ಗೆಲ್ಲುವ ಮೂಲಕ ಹೊಸದೊಂದು ಇತಿಹಾಸ ನಿರ್ಮಿಸಿದರು. ವನಿತೆಯರ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಚೊಚ್ಚಲ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟ ಕೀರ್ತಿಗೆ ಸಾಕ್ಷಿ ಸಾಕ್ಷಿಯಾದರು. ಕುಸ್ತಿಯಲ್ಲಿಯೇ ಒಟ್ಟಾರೆ 5ನೇ ಪದಕ ಇದಾಗಿದ್ದರೂ, ಮೊದಲು ವನಿತೆಯರು ಗೆದ್ದಿರಲಿಲ್ಲ. ಸಾಧನೆ ಮಾಡಿದ ಹೆಮ್ಮೆ ಸಾಕ್ಷಿಯದ್ದಾಯಿತು. ಸಾಕ್ಷಿ ಕ್ವಾರ್ಟರ್ ಫೈನಲ್ನಲ್ಲಿ ಫೈನಲ್ ಪ್ರವೇಶಿಸಿದ್ದ ಕೊಬ್ಲೊವಾ ಝೊಲೊಬೋವ ವಿರುದ್ಧ ಸೋಲು ಕಂಡಿದ್ದರಿಂದ ಅವರಿಗೆ ರೆಪಿಚಾಜ್ (ಹೆಚ್ಚುವರಿ ಅವಕಾಶ) ಆಧಾರದ ಮೇಲೆ ಕಂಚಿನ ಪದಕಕ್ಕಾಗಿ ಹೋರಾಡುವ ಮತ್ತೊಂದು ಅವಕಾಶ ದೊರಕಿತು. ಅವಕಾಶದಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದ ಸಾಕ್ಷಿ ಕಡೆಗೂ ಕಂಚಿನ ಪದಕವನ್ನು ಕೊರಳಿಗೇರಿಸಿಕೊಂಡರು. ಕಂಚಿಗಾಗಿ ಎರಡು ಸ್ಪರ್ಧಿಗಳನ್ನು ಎದುರಿಸಿದ ಸಾಕ್ಷಿ ಮಾಲಿಕ್, ಕರ್ಗಿಸ್ತಾನದ ಎದುರಾಳಿಗೂ ಮೊದಲು ಮಂಗೋಲಿಯಾದ ಜಾಕ್ರೂನ್ರನ್ನು 10-3ರಿಂದ ಸೋಲಿಸಿದರು. ಅದೇ ಚಾಮರ್್ನಲ್ಲಿ ಕಣಕ್ಕಿಳಿದ ಸಾಕ್ಷಿ ಪ್ರಬಲ ಸ್ಪರ್ಧಿ ರ್ಕಿಗಿಸ್ತಾನದ ಐಸುಲು ಟಿನಿಬೇಕೋವಾರನ್ನು ಸೋಲಿಸಿ ಪದಕ ತಮ್ಮದಾಗಿಸಿಕೊಂಡರು. ಯಾರೀಕೆ ಸಾಕ್ಷಿ ಮಾಲಿಕ್? 64 ಕೆಜಿ ಭಾರದ 1.62 ಮೀಟರ್ ಎತ್ತರದ ಸಾಧಾರಣ ಅಥ್ಲೀಟ್ ಮೈಕಟ್ಟು ಹೊಂದಿರುವ ಸಾಕ್ಷಿ ಮಾಲಿಕ್ ಹರಿಯಾಣದ ರೋಹಟಕ್ನವರು. 1992, ಸೆಪ್ಟೆಂಬರ್ 3 ಸಾಕ್ಷಿ ಜನ್ಮದಿನ. ಸುದೇಶ್ ಮತ್ತು ಸುಕ್ಬೀರ್ ದಂಪತಿಯ ಮಗಳು ಸಾಕ್ಷಿ ಮಾಲಿಕ್. ತಂದೆ-ತಾಯಿ ಪ್ರೋತ್ಸಾಹದಿಂದ ಸಾಕ್ಷಿ  ಒಲಿಂಪಿಕ್ ಕಂಚಿನ ಪದಕ ಗೆದ್ದುಕೊಂಡರು.

2016: ರಿಯೋ ಡಿ ಜನೈರೋ: ಬ್ರೆಜಿಲ್ ಫುಟ್ಬಾಲ್ ಸ್ಟಾರ್ ನೇಮರ್ ಒಲಿಂಪಿಕ್ಸ್ ಇತಿಹಾಸದಲ್ಲೆ ಎಂದೂ ಕೇಳರಿಯದ ವೇಗದ ಗೋಲು ದಾಖಲಿಸಿದರು. ಹೊಂಡುರಾಸ್ ಜತೆ ನಡೆದ ರಿಯೋ ಒಲಿಂಪಿಕ್ಸ್ ಸೆಮಿಫೈನಲ್ ಪಂದ್ಯದಲ್ಲಿ ಆಟ ಪ್ರಾರಂಭವಾದ ಕೇವಲ 15 ಸೆಕೆಂಡುಗಳಲ್ಲಿ ಮೊದಲ ಗೋಲು ಬಾರಿಸಿದ ನೇಮರ್ ಫುಟ್ಬಾಲ್ ಜಗತ್ತಿನ ವೇಗದ ಗೋಲು ಎಂಬ ವಿಶ್ವದಾಖಲೆ ಬರೆದರು.  ಬಾರ್ಸಿಲೋನಾ ಕ್ಲಬ್ ಪರ ಆಟವಾಡುವ ನೇಮರ್ ತಂಡದ ಫಾರ್ವರ್ಡ್ ಆಟಗಾರ ಜಾನಿ ಪಲಸಿಯೊ ಪಾಸ್ ಮಾಡಿದ ಚೆಂಡನ್ನು ಗೋಲನ್ನಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ದೊರಕಿಸಿದರು. ಮೊದಲು ಕೆನಡಾದ ಜನಿನ್ ಬೆಕಿ ಆಸ್ಟ್ರೇಲಿಯ ವಿರುದ್ಧ 19 ಸೆಕೆಂಡುಗಳಲ್ಲಿ ಗಳಿಸಿದ್ದ ಗೋಲಿನ ದಾಖಲೆ ಅಳಿಸಿ ಹಾಕಿದ ನೇಮರ್ ಬ್ರೆಜಿಲ್ ತಂಡ ರಿಯೋ ಕಪ್ ಫೈನಲ್ಗೆ ಲಗ್ಗೆ ಇಡುವ ಮುನ್ನಡಿ ಬರೆದರು. ಪಂದ್ಯದಲ್ಲಿ ಬ್ರೆಜಿಲ್ ಹೊಂಡುರಾಸ್ ತಂಡವನ್ನು 6-0 ಗೋಲುಗಳಿಂದ ಬಗ್ಗುಬಡಿದು ಫೈನಲ್ ಪ್ರವೇಶಿಸಿತು.

2016: ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಪಿ.ವಿ. ಸಿಂಧು ಮಹಿಳೆಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ನಲ್ಲಿ ಜಪಾನ್ ನೋಜೋಮೊ ಒಕುಹರಾ ಅವರನ್ನು ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟರು. ಮೂಲಕ ಒಂದು ಪದಕವನ್ನು ಖಚಿತಪಡಿಸಿಕೊಂಡರು. ಈದಿನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಂಧು 21-19, 21-10 ಗೇಮ್ ಗಳ ಅಂತರದಿಂದ ಸುಲಭವಾಗಿ ಜಯ ಗಳಿಸಿದರು. ಈಗಾಗಲೇ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಕ್ಸಿರುಯಿ ಲಿ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿರುವ ಸ್ಪೇನ್ ಕ್ಯಾರೋಲಿನಾ ಮರೀನ್ ಅವರನ್ನು ಸಿಂಧು ಫೈನಲ್ನಲ್ಲಿ ಎದುರಿಸಲಿದ್ದಾರೆ. ಆಗಸ್ಟ್ 19 ರಂದು ರಾತ್ರಿ 7.30 (ಭಾರತೀಯ ಕಾಲಮಾನ) ಕ್ಕೆ ಫೈನಲ್ ಪಂದ್ಯ ನಡೆಯಲಿದೆ.

2016: ನವದೆಹಲಿಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ತಿಳಿಸಿದಂತೆ ಕೇಂದ್ರ ಸರ್ಕಾರವು ಸ್ವಾತಂತ್ರ್ಯ ಹೋರಾಟಗಾರರ ಮಾಸಿಕ ಪಿಂಚಣೆಯನ್ನು 5 ಸಾವಿರ ರೂ. ಏರಿಕೆ ಮಾಡಿತು.  ಅಂಡಮಾನ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರು ಇನ್ನು ಮುಂದೆ 24,775 ರೂ. ಬದಲಾಗಿ 30,000 ರೂ. ಪಿಂಚಣೆ ಪಡೆಯಲಿದ್ದಾರೆ. ಭಾರತದ ಹೊರಗೆ ಶಿಕ್ಷೆ ಅನುಭವಿಸಿದ ಸ್ವಾತಂತ್ರ ಹೋರಾಟಗಾರರ ಪಿಂಚಣೆಯನ್ನು 23,085 ರೂ.ನಿಂದ 28,000 ರೂ.ಗೆ ಏರಿಕೆ ಮಾಡಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿತು.  ಇಂಡಿಯನ್ ನ್ಯಾಷನಲ್ ಆರ್ವಿು ಸದಸ್ಯರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ 21,395 ರೂ. ಬದಲಾಗಿ 26,000 ರೂ. ಪಿಂಚಣೆಯನ್ನು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತು.  70ನೇ ಸ್ವಾತಂತ್ರ್ಯೊತ್ಸವದ ಸಂದರ್ಭದಲ್ಲಿ ನರೇಂದ್ರ ಮೋದಿ ಸ್ವಾತಂತ್ರ್ಯ ಹೋರಾಟಗಾರರ ಪಿಂಚಣೆಯನ್ನು ಶೇ. 20 ರಷ್ಟು ಹೆಚ್ಚಿಸುವುದಾಗಿ ತಿಳಿಸಿದ್ದರುಸ್ವತಂತ್ರ್ಯ ಸೈನಿಕ ಸಮ್ಮಾನ್ ಪೆನ್ಶನ್ ಯೋಜನೆಯಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣೆ ನೀಡಲಾಗುತ್ತಿದೆ. ದೇಶದಲ್ಲಿ ಸುಮಾರು 37 ಸಾವಿರ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

2016: ಕೋಲ್ಕತ: ತೈವಾನ್ನಲ್ಲಿ 1945ರಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮೃತರಾದರೆಂಬ ವರದಿಗಳ ಬಳಿಕವೂ ನೇತಾಜಿ ಜೀವಂತವಾಗಿದ್ದರು ಎಂದು ನಂಬಲಾಗಿರುವ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಂದಘಾಸಿಗೊಳಿಸುವಂತಹ ಟ್ವೀಟ್ಪ್ರಕಟವಾದುದು ತಮಗೆ ಆಘಾತ ಹಾಗೂ ನೋವು ಉಂಟು ಮಾಡಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.  ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸ್ವಲ್ಪ ಸಮಯ ಮುನ್ನ ಬಿಜೆಪಿ ಸೇರಿದ್ದ ನೇತಾಜಿ ಅವರ ಮೊಮ್ಮಗ ಚಂದ್ರ ಬೋಸ್ ಅವರೂ ಜೇಟ್ಲಿ ಅವರು ಕ್ಷಮಾಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.  ಅರುಣ್ ಜೇಟ್ಲಿ ಅವರ ಟ್ವಿಟ್ಟರ್ ಪುಟದಲ್ಲಿ ಈದಿನ ಸ್ವಲ್ಪ ಕಾಲ ಕಾಣಿಸಿಕೊಂಡು ನಂತರ ಕಣ್ಮರೆಯಾದ ಟ್ವೀಟ್ನಲ್ಲಿನೇತಾಜಿ ಅವರನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಎಂದು ಬಣ್ಣಿಸಿ ಪುಣ್ಯತಿಥಿ ಅಂಗವಾಗಿ ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಅರ್ಪಿಸಲಾಗಿತ್ತು. 1945 ಆಗಸ್ಟ್ 18ರಂದು ಸಂಭವಿಸಿದ್ದ ವಿಮಾನ ದುರಂತದಲ್ಲಿ ಐಕಾನಿಕ್ ನಾಯಕ ನಿಧನರಾಗಿದ್ದರು ಎಂಬುದಕ್ಕೆ ಸರ್ಕಾರ ನೀಡಿರುವ ಪ್ರಥಮ ಒಪ್ಪಿಗೆ ಇದು ಎಂದು ಟ್ವಿಟನ್ನು ಅರ್ಥೈಸಿಕೊಳ್ಳಲಾಗಿತ್ತು. ನೇತಾಜಿ ಸಾವಿನ ವಿಷಯ ಭಾರತದ ಅತ್ಯಂತ ದೊಡ್ಡ ನಿಗೂಢ ಎನಿಸಿದ್ದು ಬಂಗಾಳದಲ್ಲಿ ಅತ್ಯಂತ ಭಾವನಾತ್ಮಕ ವಿಚಾರವಾಗಿ ಪರಿಣಮಿಸಿತ್ತು. ಎರಡು ತನಿಖಾ ಆಯೋಗಗಳು ನೇತಾಜಿ ಸಾವನ್ನಪ್ಪಿದ್ದರು ಎಂದು ದೃಢ ಪಡಿಸಿದರೆ, ಮೂರನೇ ಆಯೋಗವು ಇದನ್ನು ಒಪ್ಪದೆ, ತೈಪೆ ವಿಮಾನ ದುರಂತದ ಬಳಿಕವೂ ನೇತಾಜಿ ಸುಭಾಷ್ ಚಂದ್ರ ಬೋಸ್ ಜೀವಂತವಾಗಿದ್ದರು ಎಂದು ಹೇಳಿತ್ತು.

2016: ಇಸ್ಲಾಮಾಬಾದ್ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಲೂಚಿಸ್ತಾನದ ಕುರಿತು ಹೇಳಿಕೆ ನೀಡುವ ಮೂಲಕ ತಮ್ಮ ಎಲ್ಲೆಯನ್ನು ಮೀರಿ ಪಾಕಿಸ್ತಾನದ ಆಂತರಿಕ ವಿಷಯದ ಕುರಿತು ಮಾತನಾಡಿದ್ದಾರೆ ಎಂದು ಪಾಕಿಸ್ತಾನ ಮೋದಿ ಹೇಳಿಕೆಯನ್ನು ಖಂಡಿಸಿತು. ನರೇಂದ್ರ ಮೋದಿ ತಮ್ಮ ಸ್ವಾತಂತ್ರ್ಯೊತ್ಸವದ ಭಾಷಣದಲ್ಲಿ ಬಲೂಚಿಸ್ತಾನದ ಕುರಿತು ಮಾತನಾಡುವ ಮೂಲಕ ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಮೀರಿದ್ದಾರೆ. ಮೋದಿ ಬಲೂಚಿಸ್ತಾನದ ಕುರಿತು ಹೇಳಿಕೆ ನೀಡುವ ಮೂಲಕ ಜಗತ್ತಿನ ಗಮನವನ್ನು ಕಾಶ್ಮೀರದಿಂದ ಬಲೂಚಿಸ್ತಾನದ ಕಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ಕಳೆದ ವರ್ಷ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದರು. ವರ್ಷವೂ ಸಹ ಪಾಕಿಸ್ತಾನ ಸಾಮಾನ್ಯ ಸಭೆಯಲ್ಲಿ ಕಾಶ್ಮೀರದ ಕುರಿತು ಚರ್ಚೆ ನಡೆಸಲಿದೆ. ಪ್ರಧಾನಿ ನವಾಜ್ ಷರೀಫ್ ಅವರ ನೇತೃತ್ವದ ನಿಯೋಗ ಕಾಶ್ಮೀರ ಕುರಿತು ಸಭೆಯಲ್ಲಿ ವಿಷಯ ಮಂಡನೆ ಮಾಡಲಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ತಿಳಿಸಿದರು. ಭಾರತ ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಪಾಕ್ ವಿರೋಧಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಕಾಶ್ಮೀರದಲ್ಲಿ ಗಲಭೆಯನ್ನು ಹತ್ತಿಕ್ಕಲು ಭಾರತ ಭದ್ರತಾ ಪಡೆಗಳನ್ನು ಬಳಕೆ ಮಾಡುತ್ತಿದೆ. ಇದುವರೆಗೂ ಭಾರತದ ದಮನಕಾರಿ ನೀತಿಗಳಿಂದ ಸುಮಾರು 80 ಕ್ಕೂ ಹೆಚ್ಚು ಜನರು ಮೃತರಾಗಿದ್ದು, 100 ಕ್ಕೂ ಹೆಚ್ಚು ಜನರು ಶಾಶ್ವತವಾಗಿ ಅಂಧರಾಗಿದ್ದಾರೆ. ಅಂತಾರಾಷ್ಟ್ರೀಯ ಸಮುದಾಯ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ಕಾಶ್ಮೀರದಲ್ಲಿ ಭಾರತದ ದಮನಕಾರಿ ನೀತಿಯನ್ನು ವಿರೋಧಿಸಬೇಕು ಎಂದು ಜಕಾರಿಯಾ ಭಾರತದ ವಿರುದ್ಧ ವಾಗ್ದಾಳಿ ನಡೆಸಿದರು.

2016: ನವದೆಹಲಿ: ಬ್ರಿಟಿಷರ ಆಳ್ವಿಕೆಯಲ್ಲಿ ಕಾಂಗ್ರೆಸ್ ಅನುಭವಿರಬಹುದಾದ ಪ್ರತಿಕೂಲತೆಗಿಂತ ಹೆಚ್ಚಿನ ಪ್ರತಿಕೂಲತೆಗಳನ್ನು ಬಿಜೆಪಿಯು ಸ್ವತಂತ್ರ ಭಾರತದಲ್ಲಿ ಅನುಭವಿಸಿದೆ ಎಂದು ಇಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಪಕ್ಷದ ಪ್ರತಿಯೊಂದು ಪ್ರಯತ್ನವನ್ನೂಕೆಟ್ಟ ದೃಷ್ಟಿಯಿಂದಲೇ ನೋಡಲಾಗುತ್ತಿದೆ ಎಂದು ದೂರಿದರುಬೇರೆ ಯಾವುದೇ ಪಕ್ಷಕ್ಕಿಂತ ಹೆಚ್ಚಿನ ತ್ಯಾಗ, ಬಲಿದಾನವನ್ನು ಬಿಜೆಪಿ ಮಾಡಿದೆ ಎಂದು ಪಕ್ಷದ ನೂತನ ಕೇಂದ್ರ ಕಚೇರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಾ ಹೇಳಿದ ಪ್ರಧಾನಿ, ‘ರಾಷ್ಟ್ರದ ಶಕ್ತಿ ಹೆಚ್ಚುತ್ತಿದ್ದಂತೆಯೇ ವಿಚ್ಛಿದ್ರಕಾರಿ ಶಕ್ತಿಗಳೂ ಹೆಚ್ಚು ಸಕ್ರಿಯವಾಗಿವೆ. ಈಗ ಸಮಾಜವು ಹೆಚ್ಚು ಬಲಶಾಲಿಯಾಗುವಂತೆ ಮತ್ತು ಸಾಮರಸ್ಯ ಹೆಚ್ಚುವಂತೆ ಮಾಡಬೇಕಾದ ಅಗತ್ಯವಿದೆಎಂದು ಒತ್ತಿ ನುಡಿದರು. ‘ಸಬ್ ಕಾ ಸಾಥ್. ಸಬ್ ಕಾ ವಿಕಾಸ್ಗುರಿಯನ್ನಿಟ್ಟುಕೊಂಡು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿದ ಮೋದಿ, ಸಿದ್ಧಾಂತಗಳಿಗೆ ಬದ್ಧವಾದ ಮತ್ತು ವಂಶಾಡಳಿತದಿಂದ ಮುಕ್ತವಾದ ಕೇಸರಿ ಸಂಘಟನೆಯು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಡಬೇಕು ಎಂದು ಹೇಳಿದರು. ತನ್ನ ಹುಟ್ಟಿನ ಜೊತೆಗೇ ಪ್ರತಿಕೂಲತೆಯನ್ನು ಎದುರಿಸಿದ ಏಕೈಕ ಪಕ್ಷ ಬಿಜೆಪಿ. ಪ್ರತಿ ತಿರುವಿನಲ್ಲೂ ಅದು ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಿದೆ. ಅದರ ಪ್ರತಿಯೊಂದು ಪ್ರಯತ್ನವನ್ನೂ ಕೆಟ್ಟ ದೃಷ್ಟಿಯಿಂದಲೇ ನೋಡಲಾಗುತ್ತದೆ. ನಾವು, ನಮ್ಮ ಕಾರ್ಯಕರ್ತರು 50-60 ವರ್ಷಗಳಲ್ಲಿ ಅನುಭವಿಸಿದಂತಹ ಪ್ರತಿಕೂಲತೆಗಳನ್ನು ಕಾಂಗ್ರೆಸ್ ಪಕ್ಷವು ಬ್ರಿಟಿಷರ ಆಳ್ವಿಕೆಯಲ್ಲಿ ಕೂಡಾ ಅನುಭವಿಸಿರಲು ಸಾಧ್ಯವಿಲ್ಲ ಎಂದು ಅವರು ನುಡಿದರು. ಪಕ್ಷಾಧ್ಯಕ್ಷ ಅಮಿತ್ ಷಾ, ಎಲ್.ಕೆ. ಅಡ್ವಾಣಿ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತಿತರ ನಾಯಕರು ಹಾಜರಿದ್ದರು.

2016: ನವದೆಹಲಿದೇಶದಲ್ಲಿ ಅತಿ ಹೆಚ್ಚು ವರ್ಷ ಬದುಕುಳಿದ ಹುಲಿ, ವಿಶ್ವದಲ್ಲಿಯೇ ಅತಿ ಹೆಚ್ಚು ಭಾರಿ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟ ಹುಲಿ ಎನಿಸಿಕೊಂಡಿದ್ದ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿದ್ದಮಚ್ಲಿಹೆಣ್ಣು ಹುಲಿ ಈದಿನ ಬೆಳಗ್ಗೆ ಸಾವನ್ನಪ್ಪಿತು.  ಕಳೆದೊಂದು ವಾರದಿಂದಮಚ್ಲಿತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ವೈದ್ಯರು ತಿಳಿಸಿದರು. 20 ವರ್ಷದ ಹುಲಿಯನ್ನು ರಣಥಂಬೋರ್ ರಾಣಿ, ಲೇಡಿ ಆಫ್ ದಿ ಲೇಕ್, ಕ್ರೊಕಡೈಲ್ (ಮೊಸಳೆ) ಕಿಲ್ಲರ್ ಎಂದೆಲ್ಲಾ ಕರೆಯಲಾಗುತ್ತಿತ್ತು. ಕಳೆದ ಕೆಲವು ತಿಂಗಳಿಂದೀಚೆಗೆ ಹುಲಿಯ ಎಲ್ಲಾ ಕೋರೆ ಹಲ್ಲುಗಳು ಉದುರಿದ್ದವು. ಆರು ವರ್ಷಗಳ ಹಿಂದೆಯೇ ಮೊಸಳೆ ಜತೆ ಸೆಣಸಾಡಿಕೊಂಡು ಸಾಕಷ್ಟು ಹಲ್ಲುಗಳನ್ನು ಕಳೆದುಕೊಂಡಿತ್ತು. ಉಳಿದ ಕೆಲವು ಹಲ್ಲುಗಳೂ ಉದುರಿದ್ದರಿಂದ ಆಹಾರ ಸೇವನೆಯ ಶೈಲಿಯೇ ಬದಲಾಗಿತ್ತು. ಕಳೆದ ಏಳೆಂಟು ದಿನಗಳಿಂದ ಯಾವುದೇ ಆಹಾರ ಸೇವನೆಗೆ ಸಾಧ್ಯವಾಗದೇ ತೀವ್ರ ಅಸ್ವಸ್ಥಗೊಂಡು ಕೊನೆಯುಸಿರೆಳೆಯಿತು. ಆರು ವರ್ಷಗಳ ಹಿಂದೆಮಚ್ಲಿ’ 14 ಅಡಿ ಉದ್ದದ ಭಾರಿ ಗಾತ್ರದ ಮೊಸಳೆಯ ದಾಳಿಯನ್ನು ಸಮರ್ಥವಾಗಿ ಎದುರಿಸಿ, ಸಾಯಿಸಿದ್ದಕ್ಕಾಗಿಯೇ ಕ್ರೊಕಡೈಲ್ ಕಿಲ್ಲರ್ ಎಂದು ಕರೆಯಿಸಿಕೊಳ್ಳುತ್ತಿತ್ತು. ಇಲ್ಲಿನ ಬಹುತೇಕ ಗೈಡ್ಗಳು ಪ್ರವಾಸಿಗರಿಗೆ ಇದೇ ಕತೆಯನ್ನು ಹೇಳಿ ಆಕರ್ಷಿಸುವಂತೆ ಮಾಡುತ್ತಿದ್ದರು

2016: ನವದೆಹಲಿ: ನೇಮಕಾತಿಗೆ ಸಂಬಂಧಪಟ್ಟ ದೂರು ಒಂದನ್ನು ಅನುಸರಿಸಿ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ದೆಹಲಿ ಮಹಿಳಾ ಆಯೋಗದ (ಡಿಸಿಡಬ್ಲ್ಯೂ) ಕಚೇರಿ ಮೇಲೆ ದಾಳಿ ನಡೆಸಿತು.  ದೆಹಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಬರ್ಖಾ ಶುಕ್ಲಾ ಸಿಂಗ್ ಅವರು ಆಯೋಗದ ನೇಮಕಾತಿಗಳಲ್ಲಿ ಸ್ವಜನಪಕ್ಷಪಾತ ನಡೆಯುತ್ತಿದೆ ಎಂದು ಅಪಾದಿಸಿ ದೂರು ನೀಡಿದ್ದರು. ಮಹಿಳಾ ಆಯೋಗದ ಹಾಲಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ, ಅವಕಾಶವಾದಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಬರ್ಖಾ ಶುಕ್ಲಾ ಸಿಂಗ್ ತಮ್ಮ ದೂರಿನಲ್ಲಿ ಆಪಾದಿಸಿದ್ದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಂಗ್ ಆಮ್ ಆದ್ಮಿ ಪಕ್ಷದ (ಆಪ್) ಬೆಂಬಲಿಗರಿಗೆ ಒಳ್ಳೆಯ ಹುದ್ದೆಗಳನ್ನು ನೀಡಲಾಗಿದೆ. ನೇಮಕಾತಿಗಳನ್ನು ಮಾಡಿಕೊಳ್ಳುವಲ್ಲಿ ನೇಮಕಾತಿಯ ಮೂಲ ನಿಯಮಗಳನ್ನು ಬದಿಗೊತ್ತಲಾಗಿದೆ. 85 ಮಂದಿಗೆ ಯಾವುದೇ ಅರ್ಹತೆಗಳನ್ನೂ ಪರಿಗಣಿಸದೆ ನೌಕರಿ ನೀಡಲಾಗಿದೆ. ಲಕ್ಷಾಂತರ ರೂಪಾಯಿಗಳನ್ನು ಅವರು ದೆಹಲಿ ಸರ್ಕಾರದ ಬೊಕ್ಕಸದಿಂದ ಪಡೆಯುತ್ತಿದ್ದಾರೆ ಎಂದು ಸಿಂಗ್ ದೂರಿದರು. ಆದರೆ ಆಪಾದನೆಗಳನ್ನು ತಳ್ಳಿ ಹಾಕಿದ ಮಲಿವಾಲ್ ಅವರುಆಯೋಗಕ್ಕೆ ಬಂದಿರುವ ದೊಡ್ಡ ಪ್ರಮಾಣದ ದೂರುಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಹಾಲಿ ಸಿಬ್ಬಂದಿಯ ಅಗತ್ಯ ಇದೆ. ಬರ್ಖಾ ಶುಕ್ಲಾ ಸಿಂಗ್ ಅವರು ತಮ್ಮ ಅಧಿಕಾರಾವಧಿಯ 9 ವರ್ಷಗಳಲ್ಲಿ 50 ಮಂದಿ ಅಧಿಕಾರಿಗಳ ಸಿಬ್ಬಂದಿ ತಂಡವನ್ನು ಇಟ್ಟುಕೊಂಡು ಒಂದೇ ಒಂದು ಪ್ರಕರಣವನ್ನು ನಿಭಾಯಿಸಿದ್ದಾರೆ. ಕೇವಲ 6 ಸ್ಥಳಗಳಿಗೆ ಭೇಟಿ ಕೊಟ್ಟಿದ್ದು, ಸರ್ಕಾರಕ್ಕೆ ಒಂದೇ ಒಂದು ವರದಿ ಕೂಡಾ ಸಲ್ಲಿಸಿಲ್ಲ ಎಂದು ಹೇಳಿದರು.

2016: ನವದೆಹಲಿ: ಸಹ ಕುಸ್ತಿ ಪಟು ಸಾಕ್ಷಿ ಮಾಲಿಕ್ ರಿಯೋ ಒಲಿಂಪಿಕ್ಸ್ನಲ್ಲಿ ಪ್ರಥಮ ಪದಕ ತಂದುಕೊಟ್ಟ ಸಂಭ್ರಮವನ್ನು ರಾಷ್ಟ್ರ ಆಚರಿಸುತ್ತಿದ್ದ ವೇಳೆಯಲ್ಲೇ ಗಾಯಗೊಂಡು ಸ್ಟ್ರಚರ್ನಲ್ಲಿ ಮಲಗಿಕೊಂಡು ಕ್ವಾರ್ಟರ್ ಫೈನಲ್ ಪಂದ್ಯ ಕಣದಿಂದ ನಿರ್ಗಮಿಸಬೇಕಾಗಿ ಬಂದ ಕುಸ್ತಿ ಪಟು ವಿನೇಶ್ ಪೊಗತ್ ಅವರಿಗೆ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಟ್ವಿಟರ್ನಲ್ಲಿ ಸಾಂತ್ವನದ ಮಾತುಗಳನ್ನು ಹೇಳಿದರು. 21 ಹರೆಯದ ವಿನೇಶ್ ಪೊಗತ್ ಪದಕ ತಂದು ಕೊಡುವರೆಂಬ ನಿರೀಕ್ಷೆ ವ್ಯಾಪಕವಾಗಿತ್ತು. ಆದರೆ ಕ್ವಾರ್ಟರ್ ಫೈನಲ್ನಲ್ಲಿ ಗಾಯಗೊಂಡು ಕಣ್ಣೀರಿನೊಂದಿಗೆ ಅವರು ಕ್ವಾರ್ಟರ್ ಫೈನಲ್ ಪಂದ್ಯ ಕಣದಿಂದ ನಿರ್ಗಮಿಸಬೇಕಾಗಿ ಬಂತು. ಚೇತರಿಸಿಕೊಳ್ಳಲು ಅವರಿಗೆ ಒಂದು ವಾರ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳಿದರು. ತನ್ನ ದುಃಖವನ್ನು ಈದಿನ ಬೆಳಗ್ಗೆ ಟ್ವಿಟರ್ನಲ್ಲಿ ಹಂಚಿಕೊಂಡ ವಿನೇಶ್ ಪೊಗತ್ನಾನು ಚೆನ್ನಾಗಿದ್ದೇನೆ ಎಂದು ನಿಮಗೆ ಹೇಳಿದರೆ ನನಗೆ ನಾನೇ ಸುಳ್ಳು ಹೇಳಿಕೊಂಡಂತಾಗುತ್ತದೆ. ಕ್ಷಣಕ್ಕೆ ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಘಾಸಿಗೊಂಡಿದ್ದೇನೆ. ಬೇಗನೇ ಚೇತರಿಸಿಕೊಳ್ಳುತ್ತೇನೆ. ನಿಮಗೆಲ್ಲರಿಗೂ ವಂದನೆಗಳುಎಂದು ಬರೆದಿದ್ದರುಆಕೆಯ ಟ್ವೀಟ್ ಗಮನಿಸಿದ ಸುಷ್ಮಾ ಸ್ವರಾಜ್ ತತ್ ಕ್ಷಣವೇ ವಿನೀತ್ ಟ್ವೀಟನ್ನು ಮರುಟ್ವೀಟ್ ಮಾಡಿವಿನೀತ್, ನೀನು ನಮ್ಮ ಪುತ್ರಿ. ಇಡೀ ಭಾರತ ನಿನ್ನ ಕುಟುಂಬ. ನಿನಗೆ ಯಾವುದೇ ನೆರವು ಬೇಕಿದ್ದರೂ ಕೇಳುಎಂದು ಟ್ವೀಟ್ ಮಾಡುವ ಮೂಲಕ ವಿನೀತ್ಗೆ ಸಾಂತ್ವನ ಹೇಳಿದರು.


2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಕಚೇರಿಯ ನೂತನ ಕಟ್ಟಡಕ್ಕೆ ಇಲ್ಲಿ ಭೂಮಿ ಪೂಜೆ ನೆರವೇರಿಸಿದರು. ಇದೇ ವೇಳೆಯಲ್ಲಿ ಶಾಲಾ ಮಕ್ಕಳ ಜೊತೆಗೆ ರಕ್ಷಾಬಂಧನವನ್ನೂ ಆಚರಿಸಿದರು. ಶಾಲಾ ಮಕ್ಕಳಿಂದ ತಮ್ಮ ಕೈಗೆ ರಾಕಿ ಕಟ್ಟಿಸಿಕೊಂಡ ಪ್ರಧಾನಿ ಅವರನ್ನ ಹರಸಿದರು. ಒಲಿಂಪಿಕ್ಸ್ ಮಹಿಳಾ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ತಂದು ಕೊಟ್ಟ ಸಾಕ್ಷಿ ಮಾಲಿಕ್ ಅವರನ್ನು ಇದೇ ಸಂದರ್ಭದಲ್ಲಿ ಮೋದಿ ಅವರು ಅಭಿನಂದಿಸಿದರು. ‘ಭಾರತದ ಪುತ್ರಿ ಸಾಕ್ಷಿಗೆ ನನ್ನ ಶುಭಾಶಯ ಮತ್ತು ಅಭಿನಂದನೆಗಳು. ಆಕೆ ತ್ರಿವರ್ಣ ಧ್ವಜಕ್ಕೆ ಹೊಸ ಶಕ್ತಿ ಮತ್ತು ಗೌರವವನ್ನು ತಂದು ಕೊಟ್ಟಿದ್ದಾಳೆಎಂದು ಅವರು ನುಡಿದರು.

2008: ಸಂಸತ್ತಿನಿಂದ ವಾಗ್ದಂಡನೆಯ ಭೀತಿ ಎದುರಿಸುತ್ತಿದ್ದ ಪಾಕಿಸ್ಥಾನದ ವಿವಾದಾತ್ಮಕ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಇಸ್ಲಾಮಾಬಾದಿನಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದರು. ಟೆಲಿವಿಷನ್ ಮತ್ತು ರೇಡಿಯೊ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು ಒಂಬತ್ತು ವರ್ಷಗಳ ತಮ್ಮ ಅಧಿಕಾರಾವಧಿಯನ್ನು ಕೊನೆಗೊಳಿಸುವ ಇಂಗಿತವನ್ನು ವ್ಯಕ್ತಪಡಿಸಿದರು. ಸೇನಾ ಮುಖ್ಯಸ್ಥರಾಗಿದ್ದ ಮುಷರಫ್, 1999ರ ಅಕ್ಟೋಬರಿನಲ್ಲಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಸರ್ಕಾರವನ್ನು ಪದಚ್ಯುತಗೊಳಿಸಿ, ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದರು.

2007: ನಿಧನರಾದ 20 ದಿನಗಳ ನಂತರ ವಿಶ್ವದ ಖ್ಯಾತ ಚಲನಚಿತ್ರ ನಿರ್ದೇಶಕ ಇಂಗ್ಮರ್ ಬರ್ಗ್ ಮನ್ ಅವರ ಅಂತ್ಯಕ್ರಿಯೆ ಈದಿನ ಬಾಲ್ಟಿಕ್ ಸಮುದ್ರದ ಫರೊ ದ್ವೀಪದಲ್ಲಿ ನಡೆಯಿತು. ಸ್ಪೀಡಿಷ್ ದೇಶದ ಬರ್ಗ್ ಮನ್ ತಮ್ಮ 89ನೇ ಇಳಿ ವಯಸ್ಸಿನಲ್ಲಿ ಫೆರೊ ದ್ವೀಪದಲ್ಲಿರುವ ತಮ್ಮ ಮನೆಯಲ್ಲಿ ಜೂನ್ 30ರಂದು ನಿದ್ದೆಯಲ್ಲಿದ್ದಾಗಲೇ ಸುಖದ ಸಾವನ್ನಪ್ಪಿದ್ದರು.

2007: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ಬೆಳಿಗ್ಗೆ 9.35ರಿಂದ ರಾತ್ರಿ 12.30ರವರೆಗೆ ಐದು ಸಾವಿರ ಅರ್ಜಿಗಳನ್ನು ಸ್ವೀಕರಿಸುವ ಮೂಲಕ 15 ತಾಸುಗಳ ಸುದೀರ್ಘ ಜನತಾದರ್ಶನದ ದಾಖಲೆ ನಿರ್ಮಿಸಿದರು.

2007: ಉಡುಪಿ ಅಷ್ಟಮಠಗಳಲ್ಲಿ ಒಂದಾದ ಸೋದೆ ಮಠಾಧೀಶ ವಿಶ್ವೋತ್ತಮ ತೀರ್ಥ ಶ್ರೀಪಾದಂಗಳು (77) ಈದಿನ ಮಧ್ಯಾಹ್ನ 2 ಗಂಟೆಗೆ ಶಿರಸಿಗೆ ಸಮೀಪದ ಸೊಂದಾದಲ್ಲಿನ ವಾದಿರಾಜ ಮಠದಲ್ಲಿ ಹೃದಯಾಘಾತದಿಂದ ನಿಧನರಾದರು. ಉಡುಪಿ ಕೃಷ್ಣ ಮಠದ ನಾಲ್ಕು ಪರ್ಯಾಯಗಳನ್ನು ಪೂರೈಸಿರುವ ಶ್ರೀಗಳು ಮಧ್ಯಾಹ್ನ ಸೋಂದಾ ಮಠದಲ್ಲಿ ಭಕ್ತರೆಲ್ಲರಿಗೂ ಮಂತ್ರಾಕ್ಷತೆ ನೀಡಿದ ನಂತರ ಕುಳಿತಲ್ಲಿಯೇ ಕುಸಿದರು.

2007: ಟರ್ಕಿಯ ಉತ್ತರ ಸೈಪ್ರಸ್ಸಿನಿಂದ ಇಸ್ತಾಂಬುಲ್ ಗೆ ಹೊರಟಿದ್ದ ಟರ್ಕಿ ವಿಮಾನವನ್ನು ಅಪಹರಿಸಿದ್ದ ಪ್ಯಾಲೆಸ್ಟೈನ್ ಹಾಗೂ ಮತ್ತೊಬ್ಬ ಟರ್ಕಿ ದೇಶದ ಇಬ್ಬರು ಅಪಹರಣಕಾರರು ಐದು ಗಂಟೆಗಳ ನಂತರ ಶರಣಾಗುವುದರೊಂದಿಗೆ ಇಡೀ ಪ್ರಕರಣ ಸುಖಾಂತ್ಯ ಕಂಡಿತು. 136 ಮಂದಿ ಪ್ರಯಾಣಿಕರು ಮತ್ತು 6 ಮಂದಿ ಸಿಬ್ಬಂದಿ ಯಾವುದೇ ಗಾಯ ಕೂಡಾ ಇಲ್ಲದೆ ಅಪಾಯದಿಂದ ಪಾರಾದರು.

2007: ಪೂರ್ವ ಚೀನಾದ ಎರಡು ಕಲ್ಲಿದ್ದಲು ಗಣಿಗಳಲ್ಲಿ ಭಾರಿ ಪ್ರವಾಹದಿಂದ ಕನಿಷ್ಠ 181 ಗಣಿ ಕಾರ್ಮಿಕರು ಸಾವು ಬದುಕಿನ ನಡುವೆ ಹೊಯ್ದಾಡಿದ ದುರ್ಘಟನೆ ಸಂಭವಿಸಿತು. ದಕ್ಷಿಣ ಜಿನಾನ್ ಪ್ರಾಂತ್ಯದ ಹ್ಯೂಯನ್ ಗಣಿಯಲ್ಲಿ ಮತ್ತು ಶಾನ್ ಡಾಂಗ್ ಕಲ್ಲಿದ್ದಲು ಗಣಿ ಪ್ರದೇಶದಲ್ಲಿ ಈ ದುರಂತಗಳು ಸಂಭವಿಸಿದವು. ಪೂರ್ವ ಚೀನಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವೆನ್ ನದಿ ಅಪಾಯದ ಮಟ್ಟ ತಲುಪಿ, ಪ್ರವಾಹದ ನೀರು ಕಲ್ಲಿದ್ದಲು ಗಣಿಗೆ ಸಾಗುವ ಕಡಿದಾದ ಸುರಂಗ ಮಾರ್ಗದ ಮೂಲಕ ಹಾದು ಗಣಿಗಳಲ್ಲಿ ಪ್ರವಾಹ ಉಂಟಾಯಿತು. ಅಲ್ಲಿದ್ದ ಕಾರ್ಮಿಕರು ಅಪಾಯಕ್ಕೆ ಸಿಲುಕಿದರು. ಕಾರ್ಮಿಕರ ಪೈಕಿ 584 ಮಂದಿ ದುರ್ಘಟನೆಯಿಂದ ಪಾರಾಗುವಲ್ಲಿ ಯಶಸ್ವಿಯಾದರು.

2006: ಸಂಸತ್ತು ಎರಡನೇ ಬಾರಿಗೆ ಅಂಗೀಕರಿಸಿದ ವಿವಾದಾತ್ಮಕ ಲಾಭದಾಯಕ ಹುದ್ದೆಗೆ ಸಂಬಂಧಿಸಿದ ಸಂಸತ್ (ಅನರ್ಹತೆ ತಡೆ) ತಿದ್ದುಪಡಿ ಮಸೂದೆಗೆ (2006) ತಮ್ಮ ಅಂಕಿತ ಹಾಕುವ ಮೂಲಕ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಸುಮಾರು 15 ದಿನಗಳಿಂದ ಇದ್ದ ಅನುಮಾನಗಳಿಗೆ ತೆರೆ ಎಳೆದರು. ಸಂಸತ್ತು ತಮಗೆ ಎರಡನೇ ಬಾರಿ ಕಳುಹಿಸಿದ ಮಸೂದೆಗೆ `ಯಾವುದು ಲಾಭದಾಯಕ ಹುದ್ದೆ' ಎಂಬುದನ್ನು ವಿವರಿಸಿ ಶಿಫಾರಸು ಮಾಡಲು ಜಂಟಿ ಸಂಸದೀಯ ಸಮಿತಿ ರಚಿಸಲು ಸರ್ಕಾರ ಸಂಸತ್ತಿನಲ್ಲಿ ಕ್ರಮ ಕೈಗೊಂಡ 24 ಗಂಟೆಗಳ ಒಳಗಾಗಿ ರಾಷ್ಟ್ರಪತಿ ಅಂಕಿತ ಹಾಕಿದರು. ರಾಷ್ಟ್ರಪತಿಯವರು ಹಿಂದಕ್ಕೆ ಕಳುಹಿಸಿದ್ದ ಮಸೂದೆಯನ್ನು ಮುಂಗಾರು ಅಧಿವೇಶನದ ಮೊದಲ ವಾರದಲ್ಲೇ ಸಂಸತ್ತು ಯಾವುದೇ ಬದಲಾವಣೆಗಳನ್ನೂ ಮಾಡದೆಯೇ ಎರಡನೇ ಬಾರಿಗೆ ಅಂಗೀಕರಿಸಿ ರಾಷ್ಟ್ರಪತಿಯವರಿಗೆ ಆಗಸ್ಟ್ 1ರಂದು ಕಳುಹಿಸಿತ್ತು. ಶಾಂತಿನಿಕೇತನ ಶ್ರೀನಿಕೇತನ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿರುವ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ, ಉತ್ತರ ಪ್ರದೇಶ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಸಮಾಜವಾದಿ ಪಕ್ಷದ ಸಂಸದ ಅಮರ್ ಸಿಂಗ್ ಸೇರಿದಂತೆ ಸುಮಾರು 40 ಮಂದಿ ಸಂಸದರ ವಿರುದ್ಧ ಲಾಭದಾಯಕ ಹುದ್ದೆಗಳನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸಂಸತ್ತಿನಿಂದ ಅನರ್ಹಗೊಳಿಸಲು ಕೋರಲಾಗಿರುವ ಅರ್ಜಿಗಳು ಇತ್ಯರ್ಥಗೊಳ್ಳಲು ಬಾಕಿ ಉಳಿದಿದ್ದು, ರಾಷ್ಟ್ರಪತಿ ಒಪ್ಪಿಗೆಯೊಂದಿಗೆ ಮಸೂದೆ ಪೂರ್ವಾನ್ವಯವಾಗಿ ಜಾರಿಗೆ ಬರುವುದರಿಂದ ಇವರೆಲ್ಲರ ಮೇಲಿನ ತೂಗು ಕತ್ತಿ ತಪ್ಪಿದಂತಾಯಿತು. ಸಮಾಜವಾದಿ ಪಕ್ಷದ ಸಂಸತ್ ಸದಸ್ಯೆ ಜಯಾ ಬಚ್ಚನ್ ಅವರ ಅನರ್ಹತೆಯಿಂದ ಉದ್ಭವಿಸಿದ ತೀವ್ರ ವಿವಾದದ ಹಿನ್ನೆಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ಸಂಸತ್ತು ಲಾಭದಾಯಕ ಹುದ್ದೆಗೆೆ ಸಂಬಂಧಿಸಿದ ಮೂಲ ಮಸೂದೆಯನ್ನು ಅಂಗೀಕರಿಸಿ ರಾಷ್ಟ್ರಪತಿಗೆ ಕಳುಹಿಸಿತ್ತು. ಲಾಭದ ಹುದ್ದೆ ಕುರಿತ ವಿವರಣೆಗೆ ಸಮಗ್ರ ಹಾಗೂ ಸಾಮಾನ್ಯ ಮಾನದಂಡದ ಅಗತ್ಯವಿದೆ ಎಂಬ ಸಲಹೆ ನೀಡಿ ರಾಷ್ಟಪತಿಗಳು ಅದನ್ನು ಹಿಂತಿರುಗಿಸಿದ್ದರು.

2006: ಎಂಟನೇ ತರಗತಿಗೆ ಪ್ರವೇಶ ಪಡೆಯುವ ಗ್ರಾಮೀಣ ಪ್ರದೇಶದ ಕಡು ಬಡ ಕುಟುಂಬದ ಬಾಲಕಿಯರಿಗೆ ಉಚಿತ ಸೈಕಲ್ ವಿತರಿಸುವ ಮಹತ್ವದ ಯೋಜನೆಗೆ ಕರ್ನಾಟಕ ಸರ್ಕಾರ ಚಾಲನೆ ನೀಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಾಂಕೇತಿಕವಾಗಿ ಮಕ್ಕಳಿಗೆ ಸೈಕಲ್ ವಿತರಿಸಿದರು.

2006: ಸಂಸತ್ ಸದಸ್ಯರ ವೇತನ ಮತ್ತು ಭತ್ಯೆಗಳನ್ನು ಗಮನಾರ್ಹವಾಗಿ ಹೆಚ್ಚಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತು. ಇದರ ಪ್ರಕಾರ ಸಂಸದರ ಮಾಸಿಕ ವೇತನ 12,000 ರೂಪಾಯಿಗಳಿಂದ 16,000 ರೂಪಾಯಿಗಳಿಗೆ ಏರುವುದು. ಸಂಸದರ ವೇತನ, ಭತ್ಯೆಗಳಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯು ಮೇ 22ರ ವರದಿಯಲ್ಲಿ ವೇತನ, ಭತ್ಯೆ ಹೆಚ್ಚಳಕ್ಕೆ ಶಿಫಾರಸು ಮಾಡಿತ್ತು. ವೇತನ ಭತ್ಯೆ ಹೆಚ್ಚಳದಿಂದ ಸರ್ಕಾರಿ ಬೊಕ್ಕಸಕ್ಕೆ ವಾರ್ಷಿಕ 60 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳುವುದು.

2006: ದೇಶದಲ್ಲಿ ಇದೇ ಮೊದಲ ಬಾರಿಗೆ ಆಹಾರ ಕಲಬೆರಕೆ ಕಾಯ್ದೆ ಅಡಿಯಲ್ಲಿ ಕೋಕಾ ಕೋಲಾ ಕಂಪೆನಿ ವಿರುದ್ಧ ಕರ್ನಾಟಕದಲ್ಲಿ ಪ್ರಕರಣ ದಾಖಲಾಯಿತು. ಕಂಪೆನಿಯ ತಂಪು ಪಾನೀಯಗಳಲ್ಲಿ ಕ್ರಿಮಿನಾಶಕ ಅಂಶ ಮಿತಿ ಮೀರಿರುವುದೇ ಪ್ರಕರಣ ದಾಖಲಿಸಲು ಕಾರಣ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಆರ್. ಅಶೋಕ್ ಪ್ರಕಟಿಸಿದರು.

2006: ಕೇರಳದಲ್ಲಿ ಪೆಪ್ಸಿ ಮತ್ತು ಕೋಕಾ ಕೋಲಾ ಮಾರಾಟ ನಿಷೇಧಿಸಿದ್ದನ್ನು ಪ್ರಶ್ನಿಸಿ ಎರಡೂ ಕಂಪೆನಿಗಳು ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದವು.

2006: ಇರಾಕಿನ ಆಹಾರಕ್ಕಾಗಿ ತೈಲ ಹಗರಣದಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾದ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಮತ್ತು ಅವರ ಪುತ್ರ ಶಾಸಕ ಜಗತ್ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಲಾಯಿತು.

1960: ಸರ್ಲ್ ಡ್ರಗ್ ಕಂಪೆನಿಯು ಇಲ್ಲಿನೋಯಿಸ್ಸಿನ ಸ್ಕೋಬೀಯಲ್ಲಿ `ಎನೋವಿಡ್ 10' ಹೆಸರಿನ ಗರ್ಭನಿರೋಧಕ ಗುಳಿಗೆಗಳನ್ನು ಮೊತ್ತ ಮೊದಲ ಬಾರಿಗೆ ವಾಣಿಜ್ಯ ಪ್ರಮಾಣದಲ್ಲಿ ತಯಾರಿಸಿ ಬಿಡುಗಡೆ ಮಾಡಿತು.

1956: ಸಾಹಿತಿ ಚುಟುಕು ಕವಿ ಡುಂಡಿರಾಜ್ ಜನನ.

1951: ಖರಗಪುರದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸ್ಥಾಪನೆಗೊಂಡಿತು. ಇದು ಎಲ್ಲ ಐಐಟಿಗಳ ಪೈಕಿ ಮೊಟ್ಟ ಮೊದಲನೆಯದು ಹಾಗೂ ದೊಡ್ಡದು.

1945: ತೈವಾನ್ ಸಮೀಪದ ಮತ್ಸುಯಾಮಾ ವಿಮಾನನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ನಿಧನರಾದರು ಎಂಬ ಸುದ್ದಿ ಪ್ರಸಾರಗೊಂಡಿತು. ಆದರೆ ಅವರ ಸಾವಿನ ಸಂದರ್ಭ ಹಾಗೂ ಸಮಯಕ್ಕೆ ಸಂಬಂಧಿಸಿದಂತೆ ಈಗಲೂ ಗೊಂದಲ, ಗುಮಾನಿಗಳು ಉಳಿದುಕೊಂಡಿವೆ. ಒಂದು ಮೂಲ ಈ ಅಪಘಾತ ರಾತ್ರಿ 11.40ಕ್ಕೆ ನಡೆದಿದೆ ಎಂದು ಹೇಳಿದರೆ ಇನ್ನೊಂದು ಮೂಲ ಅಪಘಾತ ಸಂಭವಿಸ್ದಿದು ರಾತ್ರಿ 8 ಗಂಟೆ ಕಳೆದ ತಕ್ಷಣ ಎಂದು ಹೇಳಿದೆ. ಅವರ ಸಾವಿನ ಸುದ್ದಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಭಾರತದಾದ್ಯಂತ ಹಲವರು ಅವರು ಇತ್ತೀಚಿನವರೆಗೂ ಬದುಕಿದ್ದರೆಂದೇ ನಂಬಿದ್ದಾರೆ. ಅವರ ಸಾವಿಗೆ ಸಂಬಂಧಿಸಿದಂತೆ ಸತ್ಯ ತಿಳಿಯಲು ಭಾರತ ಸರ್ಕಾರ ತನಿಖಾ ಆಯೋಗವನ್ನೂ ರಚಿಸಿದೆ.

1933: ಸಾಹಿತಿ ಬಿ.ಎ. ಸನದಿ ಜನನ.

1927: ಖ್ಯಾತ ಕತೆಗಾರ , ಪ್ರಸ್ತುತ ಸಮಸ್ಯೆಗಳ ಬರಹಗಾರ ಶೇಷನಾರಾಯಣ ಅವರು ಬಿ.ವಿ. ಸುಬ್ರಹ್ಮಣ್ಯ- ಕಾವೇರಮ್ಮ ದಂಪತಿಯ ಪುತ್ರನಾಗಿ ಕೊಯಮತ್ತೂರು ಜಿಲ್ಲೆಯ ತಾಳವಾಡಿ ಪಿರ್ಕಾಕ್ಕೆ ಸೇರಿದ ಪಾಳ್ಯದಲ್ಲಿ ಜನಿಸಿದರು. ಓದಿದ್ದು ಕೇವಲ ನಾಲ್ಕನೇ ತರಗತಿಯಾದರೂ ಯಾವ ಪದವೀಧರ ಪ್ರಾಧ್ಯಾಪಕರಿಗೂ ಕಡಿಮೆ ಇಲ್ಲದಷ್ಟು ಕೊಡುಗೆಯನ್ನು ಸಾಹಿತ್ಯಕ್ಕೆ ನೀಡಿರುವ ಶೇಷನಾರಾಯಣ ಅವರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ, ದಕ್ಷಿಣ ಭಾಷಾ ಪುಸ್ತಕ ಸಂಸ್ಥೆ ಬಹುಮಾನ, ತಮಿಳುನಾಡು ಸರ್ಕಾರದಿಂದ ಕುರಳ್ ಪೀಠ ಪ್ರಶಸ್ತಿ, ಅನಕೃ ಪ್ರತಿಷ್ಠಾನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.

1902: ಸಾಹಿತಿ ಆನಂದ ಜನನ.

1900: ವಿಜಯಲಕ್ಷ್ಮಿ ಪಂಡಿತ್ (1900-1990) ಜನ್ಮದಿನ. ಜವಾಹರಲಾಲ್ ನೆಹರೂ ಅವರ ಸಹೋದರಿಯಾದ ವಿಜಯಲಕ್ಷ್ಮಿ 1953ರಲ್ಲಿ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯ ಚುನಾಯಿತ ಅಧ್ಯಕ್ಷರಾದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.
1899: ಸಾಹಿತಿ ಬುರ್ಲಿ ಬಿಂದು ಮಾಧವ ಜನನ.

1872: ಭಾರತದ ಖ್ಯಾತ ಶಾಸ್ತ್ರೀಯ ಸಂಗೀತಗಾರ ವಿಷ್ಣು ದಿಗಂಬರ ಪಲುಸ್ಕರ್ (1872-1931) ಜನ್ಮದಿನ.

1227: ಮೊಂಗೋಲನ್ನು ಗೆದ ಚೆಂಗಿಸ್ ಖಾನ್ (1167-1227) ಮೃತನಾದ. ಆತನ ಶವವನ್ನು ಮಂಗೋಲಿಯಾದ ಗುಪ್ತ ಸ್ಥಳವೊಂದರಲ್ಲಿ ಹೂಳಲಾಯಿತು. ಏಕೀಕೃತ ಮೊಂಗೋಲ್ ರಾಷ್ಟ್ರದ ನಿರ್ಮಾತೃ ಎಂದು ಈಗಲೂ ಈತನನ್ನು ಸ್ಮರಿಸಲಾಗುತ್ತದೆ.

No comments:

Post a Comment