Monday, August 27, 2018

ಇಂದಿನ ಇತಿಹಾಸ History Today ಆಗಸ್ಟ್ 27

ಇಂದಿನ ಇತಿಹಾಸ History Today ಆಗಸ್ಟ್ 27

2018: ನವದೆಹಲಿ: ಭಾರತದ ಮೊತ್ತ ಮೊದಲ ಜೈವಿಕ ಇಂಧನ ಚಾಲಿತ ವಿಮಾನದ ಚೊಚ್ಚಲ ಹಾರಾಟವನ್ನು ಈದಿನ ಸ್ಪೈಸ್ಜೆಟ್ಯಶಸ್ವಿಯಾಗಿ ಕೈಗೊಂಡಿತು. ಆಂಶಿಕ ಜೈವಿಕ ಇಂಧನ ಬಳಕೆಯ 78 ಆಸನಗಳ ಬೊಂಬಾರ್ಡಿಯರ್ಕ್ಯೂ 400 ವಿಮಾನ ಇಂದು ಡೆಹರಾಡೂನ್ನಿಂದ ಗಗನಕ್ಕೆ ಏರಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಕೆಳಗಿಳಿಯಿತು.  ಡೆಹರಾಡೂನ್ ಸಿಎಸ್ಐಆರ್‌ - ಇಂಡಿಯನ್ಇನ್ಸ್ಟಿಟ್ಯೂಟ್ಆಫ್ ಪೆಟ್ರೋಲಿಯಂ (ಐಪಿ) ಅಭಿವೃದ್ಧಿ ಪಡಿಸಿರುವ  ಇಂಧನವು ಶೇ.75ರಷ್ಟು ವೈಮಾನಿಕ ಟರ್ಬೈನ್ಇಂಧನ ಮತ್ತು ಶೇ.25ರಷ್ಟು ಜೈವಿಕ ಇಂಧನವನ್ನು ಒಳಗೊಂಡಿದೆ. ಜೈವಿಕ ಇಂಧನವನ್ನು ಜತ್ರೋಫಾ ಬೆಳೆಯಿಂದ ಅಭಿವೃದ್ದಿಪಡಿಸಲಾಗಿದೆ.  "ದೇಶದ ವೈಮಾನಿಕ ಮತ್ತು ಇಂಧನ ವಲಯದಲ್ಲಿ ಇದೊಂದು ಐತಿಹಾಸಿಕ ದಿನ. ಜೈವಿಕ ಇಂಧನ ಚಾಲಿತ ವಿಮಾನ ಇಂದು ದಿಲ್ಲಿಯಯಲ್ಲಿ  ಯಶಸ್ವಿಯಾಗಿ ಲ್ಯಾಂಡ್ಆಗಿದೆ. ಇಂಡಿಯನ್ಇನ್ಸ್ಟಿಟ್ಯೂಟ್ಆಫ್ ಪೆಟ್ರೋಲಿಯಂ ಇದನ್ನು ಅಭಿವೃದ್ಧಿಪಡಿಸಿದೆ' ಎಂದು ದೂರದರ್ಶನ್ಟ್ವೀಟ್ಮಾಡಿತು. ಜೈವಿಕ ಇಂಧನ ಚಾಲಿತ ಸ್ಪೈಸ್ಜೆಟ್ವಿಮಾನದ ಇಂದಿನ ಪ್ರಾಯೋಗಿಕ, ಐತಿಹಾಸಿಕ ಹಾರಾಟದಲ್ಲಿ ಡಿಜಿಸಿ ಅಧಿಕಾರಿಗಳು ಮತ್ತು ಸ್ಪೈಸ್ಜೆಟ್ಅಧಿಕಾರಿಗಳು ಸೇರಿದಂತೆ ಒಟ್ಟು 20 ಮಂದಿ ಇದ್ದರು. ವಿಮಾನದ ಹಾರಾಟ ಅವಧಿಯು ಸುಮಾರು 25 ನಿಮಿಷಗಳದ್ದಾಗಿತ್ತು ಎಂದು ಏರ್ಲೈನ್ಸ್ಕಾರ್ಯನಿರ್ವಹಣಾಧಿಕಾರಿ ಹೇಳಿದರು. ವಿಮಾನವು ದೆಹಲಿಯಲ್ಲಿ ಇಳಿದಾಗ ಕೇಂದ್ರ ಸಚಿವ ನಿತಿನ್ಗಡ್ಕರಿ, ಸುರೇಶ್ಪ್ರಭು, ಧರ್ಮೇಂದ್ರ ಪ್ರಧಾನ್‌, ಡಾ. ಹರ್ಷವರ್ಧನ್ಮತ್ತು ಜಯಂತ್ಸಿನ್ಹಾ ಇದ್ದರು.


2018: ನವದೆಹಲಿ: ಕೃಷಿ, ಆರೋಗ್ಯ ಮತ್ತು ವಿಪತ್ತು ಪರಿಹಾರದಂತಹ ರಂಗಗಳಲ್ಲಿ ನೂತನ ನಿಯಮಾವಳಿಗಳಿಗೆ ಅನುಗುಣವಾಗಿ ಡ್ರೋಣ್ ಗಳ ವಾಣಿಜ್ಯ ಬಳಕೆಗೆ ಸರ್ಕಾರ ಒಪ್ಪಿಗೆ ನೀಡಿತು. ಡಿಸೆಂಬರ್ 1ರಿಂದ ಈ ನಿಯಮಾವಳಿಗಳು ಜಾರಿಗೆ ಬರಲಿದ್ದು ಅಂದಿನಿಂದ ಸೂಚಿತ ರಂಗಗಳಲ್ಲಿ ಡ್ರೋಣ್ ವಾಣಿಜ್ಯ ಬಳಕೆ ಕಾನೂನುಬದ್ಧವಾಗಲಿದೆ. ಆಹಾರ ವಸ್ತುಗಳು ಸೇರಿದಂತೆ ತೂಕದ ವಸ್ತುಗಳ (ಪೇಲೋಡ್) ವಿತರಣೆಗೆ ಈಗಿನಂತೆಯೇ ಅವಕಾಶ ನೀಡಲಾಗುವುದಿಲ್ಲ  ಎಂದು ಸರ್ಕಾರ  ಈದಿನ ತಿಳಿಸಿತು. ಎಲ್ಲ ನಾಗರಿಕ ಡ್ರೋಣ್ ಕಾರ್ಯಾಚರಣೆಗಳನ್ನು ಹಗಲಿನ ಹೊತ್ತಿಗೆ ಮಾತ್ರ ಮಿತಿಗೊಳಿಸಲಾಗಿದೆ ಮತ್ತು ಕಣ್ಣಿಗೆ ಕಾಣಸುವಷ್ಟು ಎತ್ತರದಲ್ಲಿ ಅಂದರೆ ಸಾಮಾನ್ಯವಾಗಿ 450 ಮೀಟರ್ ಎತ್ತರದಲ್ಲಿ ಮಾತ್ರ ಡ್ರೋಣ್ ಹಾರಿಸಬಹುದು ಎಂದು ನಿಯಮಾವಳಿಗಳು ಹೇಳುತ್ತವೆ.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ’ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಬಗ್ಗೆ ಪ್ರತಿಪಾದಿಸಿದ ಬೆನ್ನಲ್ಲೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಒ.ಪಿ ರಾವತ್ ಅವರು ’ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಗೆ ತಮ್ಮ ಅಸಮ್ಮತಿಯನ್ನು ಪುನರುಚ್ಚರಿಸಿದರು. ಹಲವಾರು ವಿರೋಧ ಪಕ್ಷಗಳು ’ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯನ್ನು ವಿರೋಧಿಸಿದ್ದು, ಕಳವಳ ವ್ಯಕ್ತ ಪಡಿಸಿವೆ ಎಂದು ಹೇಳುವ ಮೂಲಕ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು, ಏಕಕಾಲಕ್ಕೆ ಸಂಸತ್ ಮತ್ತು ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸುವ ಕಲ್ಪನೆ ಬಗೆಗಿನ ತಮ್ಮ ಅಸಮ್ಮತಿಯನ್ನು ಪುನಃ ವ್ಯಕ್ತ ಪಡಿಸಿದರು. ಏಕಕಾಲದ ಚುನಾವಣೆ ವಿಷಯದ ಬಗ್ಗೆ ಚರ್ಚಿಸಲು ಸರ್ವ ಪಕ್ಷ ಸಭೆ ಕರೆಯುವುದು ಅತ್ಯಗತ್ಯ ಎಂದೂ ರಾವತ್ ಹೇಳಿದರು.  ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಚರ್ಚೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆರೋಗ್ಯಕರ ಲಕ್ಷಣ ಮತ್ತು ಭಾರತದ ರಾಜಕೀಯ ಸಂಸ್ಕೃತಿಯನ್ನು ಬದಲಿಸಿದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸೂಕ್ತವಾದ ಶ್ರದ್ಧಾಂಜಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದರು. ತಮ್ಮ ಮಾಸಿಕ ’ಮನ್ ಕಿ ಬಾತ್ ರೇಡಿಯೋ ಭಾಷಣ ಮಾಡುತ್ತಿದ್ದ ಪ್ರಧಾನಿ, ’ಸರ್ಕಾರ ಮತ್ತು ವಿರೋಧ ಪಕ್ಷಗಳು ತಮ್ಮ ಅಭಿಪ್ರಾಯಗಳನ್ನು ಮುಂದಿಡುತ್ತಿವೆ. ಇದು ನಮ್ಮ ಪ್ರಜಾಪ್ರಭುತ್ವದ ಪಾಲಿಗೆ ಒಳ್ಳೆಯ ಲಕ್ಷಣ. ಸದೃಢ ಪ್ರಜಾಪ್ರಭುತ್ವಕ್ಕಾಗಿ ಆರೋಗ್ಯಕರ ಸಂಪ್ರದಾಯಗಳನ್ನು ಆರಂಭಿಸುವುದು, ಪ್ರಜಾಪ್ರಭುತ್ವವನ್ನು ಬಲಪಡಿಸಲು ನಿರಂತರ ಪ್ರಯತ್ನಗಳನ್ನು ನಡೆಸುವುದು, ಮುಕ್ತ ಮನಸ್ಸಿನ ಚರ್ಚೆಗಳನ್ನು ಪ್ರೋತ್ಸಾಹಿಸುವುದು ಕೂಡಾ ಅಟಲ್ ಜಿ ಅವರಿಗೆ ಸಲ್ಲಿಸುವ ಸೂಕ್ತ ಶ್ರದ್ಧಾಂಜಲಿಯಾಗುತ್ತದೆ ಎಂದು ಹೇಳಿದ್ದರು. ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಅಂಗ ಪಕ್ಷಗಳಾದ ಶಿರೋಮಣಿ ಅಕಾಲಿದಳ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ, ಸಮಾಜವಾದಿ ಪಕ್ಷ ಮತ್ತು ತೆಲಂಗಾಣ ರಾಷ್ಟ್ರಸಮಿತಿ ಪ್ರಸ್ತಾಪವನ್ನು ಬೆಂಬಲಿಸುತ್ತಿವೆ. ಕಾಂಗ್ರೆಸ್, ತೆಲುಗುದೇಶಂ ಪಕ್ಷ, ಎಡ ಪಕ್ಷಗಳು ಮತ್ತು ಜನತಾದಳ (ಜಾತ್ಯತೀತ) ಏಕಕಾಲದ ಚುನಾವಣೆಯನ್ನು ವಿರೋಧಿಸಿದ್ದವು.  ’ಹಲವಾರು ಪಕ್ಷಗಳು ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯನ್ನು ವಿರೋಧಿಸಿವೆ. ಇದೇ ವೇಳೆಗೆ ಕೆಲವು ಪಕ್ಷಗಳು ಏಕ  ಕಾಲಕ್ಕೆ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದ ಸತ್ವಯುತ ಅಂಶಗಳನ್ನೂ ಮುಂದಿಟ್ಟಿವೆ ಎಂದು ರಾವತ್ ಅವರು ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡುತ್ತಾ ನುಡಿದರು. ರಾವತ್ ಮತ್ತು ಚುನಾವಣಾ ಆಯೋಗದ ಇತರ ಹಿರಿಯ ಅಧಿಕಾರಿಗಳು ಸೋಮವಾರ ಎಲ್ಲ ರಾಷ್ಟ್ರೀಯ ಹಾಗೂ ಮಾನ್ಯತೆ ಪಡೆದ ಪ್ರಾದೇಶಿಕ ರಾಜಕೀಯ ಪಕ್ಷಗಳ ಸಭೆಯನ್ನು ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸುವ ಸಲುವಾಗಿ ಸಂಘಟಿಸಿದ್ದರು. ಕಳೆದ ವಾರ ಚುನಾವಣಾ ಆಯೋಗದ ಮುಖ್ಯಸ್ಥರು ಏಕಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ’ಇದು ಭಾರತದಲ್ಲಿ ಘಟಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಅವರು ಹೇಳಿದ್ದರು. ಇದನ್ನು ನಡೆಸುವ ಮುನ್ನ ಕಾನೂನಿನ ಚೌಕಟ್ಟು ರೂಪಿಸುವ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದ್ದರು. ಮಧ್ಯಪ್ರದೇಶ, ಛತ್ತೀಸ್ ಗಢ, ರಾಜಸ್ಥಾನ ಮತ್ತು ಮಿಜೋರಂನಲ್ಲಿ ಈ ವರ್ಷ ನಡೆಯಬೇಕಾಗಿರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡಿ ೨೦೧೯ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಗಳ ಜೊತೆಗೇ ನಡೆಸಬಹುದು ಎಂಬ ಊಹಾಪೋಹಗಳು ಇತ್ತೀಚಿನ ವಾರಗಳಲ್ಲಿ ಕೇಳಿಬಂದಿದ್ದವು. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ರೂಪಿಸಲು ಶಾಸನಕರ್ತರು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುವರು. ಈ ಪ್ರಕ್ರಿಯೆ ಸಮಯ ತೆಗೆದುಕೊಳ್ಳುತ್ತದೆ. ಸಂವಿಧಾನ ತಿದ್ದುಪಡಿಗೆ ಮಸೂದೆ ಸಿದ್ಧವಾದ ತತ್ ಕ್ಷಣ, ನಮಗೆ (ಚುನಾವಣಾ ಆಯೋಗ) ವಿಷಯಗಳು ಹೇಗೆ ಸಾಗುತ್ತಿವೆ ಎಂಬುದು ಗೊತ್ತಾಗುತ್ತದೆ ಎಂದು ರಾವತ್ ಈ ಮುನ್ನ ಹೇಳಿದ್ದರು. ಬಿಜೆಪಿಯ ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಯನ್ನು ಪ್ರತಿಪಾದಿಸುತ್ತಿರುವುದರ ಮಧ್ಯೆಯೇ ಚುನಾವಣಾ ಆಯೋಗದಿಂದ ಈ ಅಭಿಪ್ರಾಯ ಪುನರುಚ್ಚಾರಗೊಂಡಿದೆ. ಇದಕ್ಕೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾನೂನು ಆಯೋಗಕ್ಕೆ ಒಂದು ರಾಷ್ಟ್ರ, ಒಂದು ಚುನಾವಣೆ ಕಲ್ಪನೆಗೆ ಬೆಂಬಲ ವ್ಯಕ್ತ ಪಡಿಸಿ ಪತ್ರ ಬರೆದಿದ್ದರು. ಈ ಕಲ್ಪನೆಗೆ ಬರುತ್ತಿರುವ ವಿರೋಧ ರಾಜಕೀಯ ಉದ್ದೇಶದ್ದು ಎಂದು ಅವರು ಈ ತಿಂಗಳ ಆದಿಯಲ್ಲಿ ಬರೆದ ಪತ್ರದಲ್ಲಿ ವಾದಿಸಿದ್ದರು.  ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವುದರಿಂದ ಚುನಾವಣೆಗಳನ್ನು ನಡೆಸುವ ವೆಚ್ಚ ಗಣನೀಯವಾಗಿ ತಗ್ಗುತ್ತದೆ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಕಾನೂನು ಆಯೋಗವು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಒಂದು ಪತ್ರ ಕೂಡಾ ಲೋಕಸಭಾ ಚುನಾವಣೆ ಜೊತೆಗೇ ರಾಜ್ಯ ವಿಧಾನಸಭೆಗಳ ಚುನಾವಣೆಗಳನ್ನು ೨೦೧೯ರಿಂದ ಎರಡು ಹಂತಗಳಲ್ಲಿ ನಡೆಸುವ ಬಗ್ಗೆ ಶಿಫಾರಸು ಮಾಡಿತ್ತು. ವಿದ್ಯುನ್ಮಾನ ಮತಯಂತ್ರ: ಹಿಂದಿನ ಚುನಾವಣೆಗಳಲ್ಲಿ ಹಲವಾರು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಅಸಮರ್ಪಕವಾಗಿ ಕಾರ್‍ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಮತ್ತೆ ಹಿಂದಿನ ಪೇಪರ್ ಬ್ಯಾಲೆಟ್ ವ್ಯವಸ್ಥೆಗೆ ಹಿಂತಿರುಗಬೇಕೆಂಬ ಚರ್ಚೆ ಬಗ್ಗೆ ಸಭೆಯ ಬಳಿಕ ಮಾತನಾಡಿದ ರಾವತ್ ’ಬ್ಯಾಲೆಟ್ ವ್ಯವಸ್ಥೆಯು ಮತಗಟ್ಟೆ ವಶದಂತಹ ದುಷ್ಕೃತ್ಯಗಳನ್ನು ಮರಳಿ ತರುವ ಸಾಧ್ಯತೆ ಇರುವುದರಿಂದ ಅದಕ್ಕೆ ಪುನಃ ಹೋಗದಿರುವುದೇ ಒಳ್ಳೆಯುದು ಎಂದು ಕೆಲವು ಪಕ್ಷಗಳು ಅಭಿಪ್ರಾಯ ಪಟ್ಟವು ಎಂದು ನುಡಿದರು.  ‘ಎಲೆಕ್ಟ್ರಾನಿಕ್ ಮತ ಯಂತ್ರಗಳೂ (ಇವಿಎಂ) ಮತ್ತಿ ವಿವಿಪ್ಯಾಟ್ ಗಳಲ್ಲಿ ಸಮಸ್ಯೆಗಳಿವೆ ಎಂದು ಕೆಲವು ರಾಜಕೀಯ ಪಕ್ಷಗಳು ಹೇಳಿದವು. ಈ ಅಂಶಗಳನ್ನು ಆಯೋಗವು ಗುರುತಿಸಿಕೊಂಡಿದೆ ಎಂದು ರಾವತ್ ಹೇಳಿದರು.

2018: ನವದೆಹಲಿ: ಶ್ರೀನಗರದ ಹೋಟೆಲ್‌ನಲ್ಲಿ ಸ್ಥಳೀಯ ಮಹಿಳೆಯೊಬ್ಬಳ ಜೊತೆಗೆ ಕಂಡು ಬಂದ ಬಳಿಕ ಕೋರ್ಟ್ ಆಫ್ ಇನ್‌ಕ್ವಯರಿ ಎದುರಿಸುತ್ತಿದ್ದ ಮೇಜರ್ ಲೀತುಲ್ ಗೊಯೋಯ್ ಅವರು ಕೋರ್ಟ್ ಮಾರ್ಶಲ್ ಗೆ ಗುರಿಯಾಗುವ ಸಾಧ್ಯತೆಗಳಿವೆ ಎಂದು ಸೇನಾ ಮೂಲಗಳು ತಿಳಿಸಿದವು. ‘ಮೇಜರ್ ಲೀತುಲ್ ಗೊಗೋಯ್ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲು ಆದೇಶ ನೀಡಲಾಗಿದೆ. ನಿರ್ದೇಶನಗಳಿಗೆ ವಿರುದ್ಧವಾಗಿ ಗೊಗೋಯ್ ಅವರು ಸ್ಥಳೀಯ ಮಹಿಳೆಯ ಜೊತೆಗೆ ಆಪ್ತನಂತೆ ನಡೆದುಕೊಂಡದ್ದಲ್ಲದೆ ತಾನು ಕರ್ತವ್ಯ ನಿರ್ವಹಿಸಬೇಕಾದ ಕಾರ್‍ಯಕ್ಷೇತ್ರದಿಂದ ಹೊರಕ್ಕೆ ವಿನಾಕಾರಣ ತೆರಳಿದ ತಪ್ಪು ಎಸಗಿರುವುದಾಗಿ ಕೋರ್ಟ್ ಆಫ್ ಇನ್‌ಕ್ವಯರಿ ವರದಿ ನೀಡಿದೆ ಎಂದು ಸೇನಾ ಮೂಲವೊಂದು ತಿಳಿಸಿತು.  ಮೇಜರ್ ಗೊಗೋಯ್ ಅವರನ್ನು, ೧೮ರ ಹರೆಯದ ಸ್ಥಳೀಯ ಮಹಿಳೆಯೊಬ್ಬಳ ಜೊತೆಗೆ ಹೊಟೇಲ್ ಗೆ ಹೋಗಲು ಯತ್ನಿಸುತ್ತಿದ್ದಾಗ ಪ್ರಶ್ನಿಸಿದ ತಮ್ಮೊಂದಿಗೆ ಘರ್ಷಣೆ ನಡೆಸಿದ್ದುದಕ್ಕಾಗಿ ಪೊಲೀಸರು ಬಂಧಿಸಿದ್ದರು. ಈ ಘಟನೆಯನ್ನು ಅನುಸರಿಸಿ ವಾಸ್ತವಾಂಶ ಪತ್ತೆಗಾಗಿ ಮೇಜರ್ ಲೀತುಲ್ ಗೊಗೋಯ್ ವಿರುದ್ಧ ಕೋರ್ಟ್ ಆಫ್ ಇನ್‌ಕ್ವಯರಿಗೆ ಆದೇಶ ನೀಡಲಾಗಿತ್ತು. ಈ ಘಟನೆ ಘಟಿಸಿದ ಸ್ವಲ್ಪ ಸಮಯದಲ್ಲೇ ಜಮ್ಮು ಮತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮೇಜರ್ ಗೊಗೋಯ್ ಅವರು ತಪ್ಪಿತಸ್ಥರು ಎಂಬುದಾಗಿ ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದರು. ’ಭಾರತೀಯ ಸೇನೆಯ ಯಾರಾದರೂ ಅಧಿಕಾರಿ ಯಾವುದೇ ತಪ್ಪೆಸಗಿದ್ದು ಸಾಬೀತಾದಲ್ಲಿ ನಾವು ಸಾಧ್ಯವಿರುವ ಅತ್ಯಂತ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದರು. ಈ ತಿಂಗಳ ಆದಿಯಲ್ಲಿ ಕೋರ್ಟ್ ಆಫ್ ಇನ್ ಕ್ವಯರಿ ಆದೇಶಿಸಿದ ಬಳಿಕ, ಶ್ರೀನಗರದ ೧೫ ಕೋರ್ ಕೇಂದ್ರಕಚೇರಿಗೆ ತನಿಖಾ ವರದಿ ತಲುಪಿದ್ದು, ಕ್ರಮಕ್ಕೆ ಶಿಫಾರಸು ಮಾಡಿದೆ ಎನ್ನಲಾಗಿದೆ. ಬ್ರಿಗೇಡಿಯರ್ ಒಬ್ಬರು ಈ ಕೋರ್ಟ್ ಆಫ್ ಇನ್‌ಕ್ವಯರಿ ನಡೆಸಿದ್ದರು. ಶ್ರೀನಗರದ ೧೫ ಕೋರ್ ಕೇಂದ್ರ ಕಚೇರಿಯು ಜನರಲ್ ಆಫೀಸರ್ ಆಫ್ ಕಮಾಂಡಿಂಗ್ ಅವರು ತನಿಖಾ ವರದಿಯನ್ನು ಅನುಮೋದಿಸಿದ್ದರು. ಏಪ್ರಿಲ್ ನಲ್ಲಿ ’ಮಾನವ ಗುರಾಣಿ ಪ್ರಕರಣ: ಮೇಜರ್ ಲೀತುಲ್ ಗೊಗೋಯ್ ಅವರು ಏಪ್ರಿಲ್ ತಿಂಗಳಲ್ಲಿ ಸ್ಥಳೀಯ ವ್ಯಕ್ತಿ ಫಾರೂಕ್ ದರ್ ಎಂಬಾತನನ್ನು ಶ್ರೀನಗರ ಲೋಕಸಭಾ ಉಪ ಚುನಾವಣೆ ಕಾಲದಲ್ಲಿ ಕಲ್ಲೆಸೆಯುತ್ತಿದ್ದವರ ವಿರುದ್ಧ ’ಮಾನವ ಗುರಾಣಿಯಾಗಿ ಬಳಸಿಕೊಂಡದ್ದು ವ್ಯಾಪಕ ಸುದ್ದಿಯಾಗಿತ್ತು. ಸೇನಾ ತುಕಡಿ ಮೇಲೆ ಕಲ್ಲೇಟಿನ ದಾಳಿ ತಡೆಯುವ ಸಲುವಾಗಿ ತಮ್ಮ ಜೀಪಿನ ಮುಂಭಾಗದಲ್ಲಿ ಕಾಶ್ಮೀರಿ ನಾಗರಿನನ್ನು ಕಟ್ಟಿ ಹಾಕಿದ್ದ ಕ್ರಮದಿಂದಾಗಿ ಗೊಗೋಯ್ ತೀವ್ರ ವಿವಾದಕ್ಕೆ ಗುರಿಯಾಗಿದ್ದರು. ಈ ವಿವಾದವು ಸೇನೆ-ನಾಗರಿಕರ ನಡುವಣ ಘರ್ಷಣೆಯನ್ನು ಇನ್ನಷ್ಟು ತೀವ್ರಗೊಳಿಸಿ, ಹಿಂಸಾತ್ಮಕ ಪ್ರತಿಭಟನೆಗಳು ಉಲ್ಬಣಗೊಳ್ಳಲು ಕಾರಣವಾಗತ್ತು.
ಏನಿದ್ದರೂ, ಆ ಬಳಿಕ ಬಂಡಾಯ ನಿಗ್ರಹ ಕಾರ್‍ಯಾಚರಣೆಯಲ್ಲಿ ನಡೆಸುತ್ತಿದ್ದ ನಿರಂತರ ಪ್ರಯತ್ನಗಳಿಗಾಗಿ ಜನರಲ್ ರಾವತ್ ಅವರನ್ನು ಅಭಿನಂದಿಸಿ ’ಚೀಫ್ ಆಫ್ ಆರ್ಮಿ ಸ್ಟಾಫ್ಸ್ ಕಮೆಂಡೇಷನ್ ಕಾರ್ಡ್ ಪ್ರದಾನ ಮಾಡಲಾಗಿತ್ತು.

2018: ಅಹಮದಾಬಾದ್: ಸಬರಮತಿ ಎಕ್ಸ್ ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿದ್ದ ೫೯ ಮಂದಿ ಕರಸೇವಕರನ್ನು ೨೦೦೨ರ ಫೆಬ್ರುವರಿ ೨೭ರಂದು ಸುಟ್ಟು ಕರಕಲಾಗಿಸಿದ ೨೦೦೨ರ ಗೋಧ್ರಾ ರೈಲು ದಹನ ಹತ್ಯಾಕಾಂಡ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಅಹಮದಾಬಾದಿನ ವಿಶೇಷ ತನಿಖಾ ತಂಡ (ಎಸ್ ಐಟಿ) ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿತು. ಇತರ ಮೂವರನ್ನು ಖುಲಾಸೆ ಮಾಡಿತು. ವಿಶೇಷ ನ್ಯಾಯಾಧೀಶ ಎಚ್.ಸಿ. ವೋರಾ ಅವರು ಫರೂಖ್ ಭಾನಾ ಮತ್ತು ಇಮ್ರಾನ್ ಶೇರು ಅವರಿಗೆ ಜೀವಾವಧಿ ಸಜೆ ವಿಧಿಸಿದರು. ರೈಲಿನ ಎರಡು ಬೋಗಿಗಳನ್ನು ಸುಟ್ಟ ಪ್ರಕರಣದಲ್ಲಿ ಇವರಿಬ್ಬರು ವಹಿಸಿದ ಸಂಚುಗಾರರ ಪಾತ್ರವನ್ನ ಪ್ರಾಸೆಕ್ಯೂಷನ್ ಸಾಬೀತು ಪಡಿಸಿದ ಬಳಿಕ ನ್ಯಾಯಾಲಯವು ಈ ಶಿಕ್ಷೆಯನ್ನು ಪ್ರಕಟಿಸಿತು. ಹುಸೈನ್ ಸುಲೇಮಾನ್ ಮೋಹನ್, ಕಸಮ್ ಭಮೇಡಿ ಮತ್ತು ಫರೂಖ್ ಧಂತಿಯಾ ಅವರನ್ನು ನ್ಯಾಯಾಲಯವು ಖುಲಾಸೆ ಮಾಡಿತು. ಐವರೂ ಆರೋಪಿಗಳನ್ನು ೨೦೧೫-೨೦೧೬ರಲ್ಲಿ ಬಂಧಿಸಲಾಗಿತ್ತು ಮತ್ತು ವಿಚಾರಣೆಗಾಗಿ ಸಬರಮತಿ ಕೇಂದ್ರೀಯ ಸೆರೆಮನೆಯಲ್ಲಿ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಲಾಗಿತ್ತು. ಸುಲೇಮಾನ್ ಮೋಹನನ್ನು ಮಧ್ಯಪ್ರದೇಶದ ಝಬುವಾದಲ್ಲಿ, ಭಮೇಡಿಯನ್ನು ಗುಜರಾತಿನ ದಹೊದ್ ರೈಲ್ವೇ ನಿಲ್ದಾಣದಲ್ಲಿ ಮತ್ತು ಧಂತಿಯಾ ಹಾಗೂ ಭಾನಾ ಅವರನ್ನು ಗೋಧ್ರಾದ ಅವರ ಮನೆಗಳಲ್ಲಿ ಹಾಗೂ ಭಟುಕ್‌ನನ್ನು ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ ಬಂಧಿಸಲಾಗಿತ್ತು. ಪ್ರಕರಣದ ಎಂಟು ಮಂದಿ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದರು. ೨೦೧೧ರ ಮಾರ್ಚ್ ೧ರಂದು ನ್ಯಾಯಾಲಯವು ಪ್ರಕರಣದಲ್ಲಿ ೩೧ ಮಂದಿಯನ್ನು ತಪ್ಪಿತಸ್ಥರು ಎಂಬುದಾಗಿ ಪ್ರಕಟಿಸಿತ್ತು. ಬಳಿಕ ಅವರಲ್ಲಿ ೧೧ ಮಂದಿಗೆ ಮರಣದಂಡನೆಯನ್ನೂ ಇತರ ೨೦ ಮಂದಿಗೆ ಜೀವಾವಧಿ ಸಜೆಯನ್ನೂ ವಿಧಿಸಿತ್ತು. ಆದರೆ ಗುಜರಾತ್ ಹೈಕೋರ್ಟ್ ೨೦೧೭ರ ಅಕ್ಟೋಬರಿನಲ್ಲಿ ೧೧ ಮಂದಿಗೆ ನೀಡಲಾಗಿದ್ದ ಮರಣದಂಡನೆಯನ್ನು ಜೀವಾವಧಿ ಸಜೆಗೆ ಇಳಿಸಿತ್ತು ಮತ್ತು ಎಸ್ ಐಟಿ ನ್ಯಾಯಾಲಯ ಉಳಿದ ೨೦ ಮಂದಿಗೆ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ರೈಲಿನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿದ ಈ ಘಟನೆಯು ಗುಜರಾತಿನ ಇತಿಹಾಸದಲ್ಲೇ ಅತ್ಯಂತ ಭೀಕರ ಕೋಮು ಹಿಂಸಾಚಾರಕ್ಕೆ ಕಾರಣವಾಗಿತ್ತು. ಬಹುತೇಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ೧೦೦೦ಕ್ಕೂ ಹೆಚ್ಚು ಮಂದಿ ಈ ಹಿಂಸಾಚಾರಗಳಿಗೆ ಬಲಿಯಾಗಿದ್ದರು ಎನ್ನಲಾಗಿತ್ತು.

2018: ಜಕಾರ್ತ: ಇಂಡೋನೇಷ್ಯದ ಜಕಾರ್ತದಲ್ಲಿ ನಡೆದ ೨೦೧೮ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಮೂರು ರಜತ ಪದಕಗಳ ಜೊತೆಗೆ ಒಂದು ಸ್ವರ್ಣ ಪದಕವನ್ನು ತನ್ನ ಮುಡಿಗೆ ಏರಿಸಿಕೊಂಡಿತು.  ಪುರುಷರ ಜಾವೆಲಿನ್ ಥ್ರೋ ದಲ್ಲಿ ಚಿನ್ನದ ಪದಕವನ್ನು ಗೆದ್ದ ಭಾರತದ ನೀರಜ್ ಚೋಪ್ರಾ, ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆಯನ್ನೂ ಮುರಿದರು. ಜಾವೆಲಿನ್ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಅದಕ್ಕೂ ಮುನ್ನ ಸುಧಾ ಸಿಂಗ್, ನೀನಾ ವರಕಿಲ್ ಮತ್ತು ಧರುಣ್ ಅಯ್ಯಸಾಮಿ ಅವರು ಭಾರತಕ್ಕೆ ಮೂರು ಬೆಳ್ಳಿಯ ಪದಕಗಳನ್ನು ತಂದು ಕೊಟ್ಟರು. ಭಾನುವಾರ ಹಿಮಾದಾಸ್, ಡ್ಯೂಟೀ ಚಾಂದ್ ಮತ್ತು ಮುಹಮ್ಮದ್ ಅನಸ್ ಅವರು ಬೆಳ್ಳಿ ಪದಕಗಳನ್ನು ಗೆದ್ದ ಮರುದಿನವೇ ಭಾರತಕ್ಕೆ ಮತ್ತೆ ಪದಕಗಳ ಸರಮಾಲೆಯ ಸಂಭ್ರಮ ಪ್ರಾಪ್ತಿಯಾಯಿತು. ೨೦೧೮ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಧ್ವಜ ಹೊತ್ತು ಮುನ್ನಡೆದ ನೀರಜ್ ಚೋಪ್ರಾ ಜಾವೆಲಿನ್ ಥ್ರೋದಲ್ಲಿ ೮೮.೦೬ ಮೀಟರ್ ದೂರಕ್ಕೆ ಎಸೆಯುವ ಮೂಲಕ ಚಿನ್ನದ ಪದಕ ಗೆಲ್ಲುವುದರ ಜೊತೆಗೆ ವೈಯಕ್ತಿಕ ಹಾಗೂ ರಾಷ್ಟ್ರೀಯ ದಾಖಲೆಯನ್ನೂ ನಿರ್ಮಿಸಿದರು. ೨೦ರ ಹರೆಯದ ಚೋಪ್ರಾ ಕಾಮನ್ ವೆಲ್ತ್  ಕ್ರೀಡಾಕೂಟದಲ್ಲಿ ೮೬.೪೭ ಮೀ ಎಸೆತದೊಂದಿಗೆ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈದಿನ ಅದನ್ನು ಅವರು ಸ್ವತಃ ಮುರಿದರು. ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ೮ನೇ ಸ್ವರ್ಣ ಪದಕವನ್ನು ತಂದುಕೊಟ್ಟ ಚೋಪ್ರಾ ಅವರನ್ನು ಟ್ವಿಟ್ಟರ್ ಮೂಲಕ ಅಭಿನಂದಿಸಿದ್ದಾರೆ. ’ನೀರಜ್ ಚೋಪ್ರಾ ಅವರು ಕ್ರೀಡಾಂಗಣದಲ್ಲಿದ್ದಾಗ ಅವರಿಂದ ಅತ್ಯುತ್ತಮ ಸಾಧನೆಯನ್ನು ನಾನು ನಿರೀಕ್ಷಿಸಿದ್ದೆ. ಈ ಯುವಕ ಪುರುಷರ ಜಾವೆಲಿನ್ ಥ್ರೋ ಫೈನಲ್ ನಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ಭಾರತವನ್ನು ಸಂತಸದಲ್ಲಿ ತೇಲಾಡಿಸಿದ್ದಾನೆ. ಹೊಸ ರಾಷ್ಟ್ರೀಯ ದಾಖಲೆಯನ್ನು ಬರೆದುದಕ್ಕಾಗಿ ಕೂಡಾ ನಾವು ಅವರನ್ನು ಅಭಿನಂದಿಸುತ್ತೇವೆ ಎಂದು ಪ್ರಧಾನಿ ಟ್ವೀಟ್ ಮಾಡಿದರು. ಇದಕ್ಕೆ ಮುನ್ನ ನೀನಾ ವರಕಿಲ್, ಧರುಣ್ ಅಯ್ಯಸಾಮಿ ಮತ್ತು ಸುಧಾಸಿಂಗ್ ಅವರೂ ತಮ್ಮ ಕೈಗಳಲ್ಲಿ ಪದಕಗಳನ್ನು ಹಿಡಿದುಕೊಂಡು ಈದಿನ ಸಂಭ್ರಮಿಸಿದರು.  ೩೨ರ ಹರೆಯದ ಸುಧಾಸಿಂಗ್ ಅವರು ಮಹಿಳೆಯರ ೩೦೦೦ ಮೀಟರ್ ಫೈನಲ್ ನಲ್ಲಿ ರಜತ ಪದಕವನ್ನು ಗೆದ್ದರೆ, ನೀನಾ ವರಕಿಲ್ ಅವರು ಲಾಂಗ್ ಜಂಪ್ ನಲ್ಲಿ ೬.೫೧ ಮೀ. ನೆಗೆಯುವ ಮೂಲಕ ೨ನೇ ಸ್ಥಾನ ಗಳಿಸಿದರು. ೨೧ರ ಹರೆಯದ ಧರುಣ್ ಅಯ್ಯಸಾಮಿ ಅವರು ಪುರುಷರ ೪೦೦ಮೀಟರ್ ಹರ್ಡಲ್ಸ್ ನಲ್ಲಿ ಬೆಳ್ಳಿ ಪದಕ ಗಳಿಸಿದರು.


2018: ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಅಧ್ಯಕ್ಷ ಕೊನ್ರಾಡ್ ಕೆ. ಸಂಗ್ಮಾ ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್ಸಿನ ಚಾರ್ಲೊಟ್ಟೆ ಡಬ್ಲ್ಯೂ ಮೊಮಿನ್ ಅವರನ್ನು ೮,೪೦೦ಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ದಕ್ಷಿಣ ತುರಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಸಂಗ್ಮಾ ಅವರಿಗೆ ೧೩,೬೫೫ ಮತಗಳು ಬಂದರೆ, ಮೊಮಿನ್ ಅವರಿಗೆ ೫,೨೩೫ ಮತಗಳು ಲಭಿಸಿದವು. ಸಂಗ್ಮಾ ಅವರ ಸಹೋದರಿ ಅಗಾಥಾ ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುವಂತೆ ತಮ್ಮ ಸ್ಥಾನವನ್ನು ತೆರವುಗೊಳಿಸಿದ್ದರು. ಉಪಚುನಾವಣಾ ಫಲಿತಾಂಶದ ಬಳಿಕ ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಎನ್ ಪಿಪಿ ಬಲವು ೨೦ ಸದಸ್ಯರೊಂದಿಗೆ ಹಾಗೆಯೇ ಮುಂದುವರೆಯಿತು. ಕಾಂಗ್ರೆಸ್ ಒಂದು ಸ್ಥಾನವನ್ನು ಕಳೆದುಕೊಂಡಿತು. ರಾನಿಕೋರ್: ಯುನೈಟೆಡ್ ಡೆಮಾಕ್ರಟಿಕ್ ಪಕ್ಷದ (ಯುಡಿಪಿ) ಅಭ್ಯರ್ಥಿ ಪಯಸ್ ಮರ್ವಿನ್ ಅವರು ೯೦೨೮ ಮತಗಳನ್ನು ಪಡೆಯುವ ಮೂಲಕ ರಾನಿಕೋರ್ ವಿಧಾನಸಭಾ ಕ್ಷೇತ್ರವನ್ನು ಗೆದ್ದುಕೊಂಡರು. ಅವರು ತಮ್ಮ ಸಮೀಪ ಸ್ಪರ್ಧಿ ಮಾರ್ಟಿನ್ ಎಂ. ಡಂಗ್ಗೊ ಅವರನ್ನು ಪರಾಭವಗೊಳಿಸಿದರು. ವಿಶೇಷವೆಂದರೆ, ರಾಣಿಕೋರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಚುನಾಯಿತರಾಗಿದ್ದ ಡಾಂಗ್ಗೊ ಬಳಿಕ ಎನ್ ಪಿಪಿ ಸೇರಿ ಮರು ಆಯ್ಕೆ ಬಯಸಿದ್ದರು. ಐದು ಬಾರಿ ಗೆದ್ದಿದ್ದ ಅವರು ಈ ಬಾರಿ ಕೇವಲ ೬೨೮೭ ಓಟುಗಳಿಗೆ ಸಂತೃಪ್ತಿ ಪಡಬೇಕಾಯಿತು. ಕಾಂಗ್ರೆಸ್ ಅಭ್ಯರ್ಥಿ ಜಾಕುಯಿಶ್ ಎ. ಸಂಗ್ಮಾ ಅವರು ಕೇವಲ ೭೧೧ ಮತಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿ ಉಳಿಯಬೇಕಾಯಿತು.  ಎನ್ ಪಿಪಿ ಮತ್ತು ಯುಡಿಪಿ ಮೇಘಾಲಯದಲ್ಲಿ ಸರ್ಕಾರ ರಚಿಸಿರುವ ಆರು ಪಕ್ಷಗಳ ಮೇಘಾಲಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎಂಡಿಎ) ಅಂಗಪಕ್ಷಗಳೇ ಆಗಿದ್ದರೂ ರಾನಿಕೋರ್ ನಲ್ಲಿ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.  ಮೇಘಾಲಯ ಪ್ರಜಾತಾಂತ್ರಿಕ ಮೈತ್ರಿಕೂಟವು ಎನ್ ಪಿಪಿ ಹೊರತಾಗಿ ಬಿಜೆಪಿ (೨), ಯುಡಿಪಿ (೮)  ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ (೪), ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (೨) ಇಬ್ಬರು ಪಕ್ಷೇತರರನ್ನು ಹೊಂದಿತ್ತು. 
2016: ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು ಜಾಗತಿಕ ಮಟ್ಟದಲ್ಲಿ ಹೈಲೈಟ್ ಮಾಡುವ ಸಲುವಾಗಿ ಪಾಕಿಸ್ತಾನ ಸರಕಾರ 22 ಸಂಸತ್ ಸದಸ್ಯರ ನಿಯೋಗವೊಂದನ್ನು ಜಗತ್ತಿನ ವಿವಿಧ ಪ್ರದೇಶಗಳಿಗೆ ಕಳುಹಿಸಲು ತೀರ್ಮಾನಿಸಿತು.  ಕಾಶ್ಮೀರದಲ್ಲಿ ಭಾರತ ಸರಕಾರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕಲು ಪಾಕಿಸ್ತಾನ ನಿರ್ಧಾರ ತೆಗೆದುಕೊಂಡಿದೆ ಎಂದು ಶನಿವಾರ ಪಾಕ್ ಮಾಧ್ಯಮಗಳು ವರದಿ ಮಾಡಿದವು. ಕಾಶ್ಮೀರದ ಪರವಾಗಿ ದನಿಯೆತ್ತಲು 22 ಸದಸ್ಯರನ್ನು ಜಗತ್ತಿನ ವಿವಿಧ ಭಾಗಗಳಿಗೆ ಕಳುಹಿಸಲಾಗುವುದು ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಹೇಳಿದ್ದಾರೆ ಎಂದು ಪಾಕ್  ಮಾಧ್ಯಮಗಳಲ್ಲಿ ಉಲ್ಲೇಖಿಸಲಾಯಿತು.  ಕಾಶ್ಮೀರದಲ್ಲಿ ಭುಗಿಲೆದ್ದಿರುವ ಹಿಂಸಾಚಾರವನ್ನು ನಿಲ್ಲಿಸಲು ಭಾರತ ಪ್ರಯತ್ನಿಸುತ್ತಿರುವ ಹೊತ್ತಲ್ಲೇ ಪಾಕ್ ರೀತಿಯ ನಿರ್ಧಾರವೊಂದನ್ನು ಕೈಗೊಂಡಿತು.  ಪಾಕಿಸ್ತಾನದ ಜನರ ಸಾಮರ್ಥ್ಯ  ಮತ್ತು ಗಡಿ ನಿಯಂತ್ರಣಾ ರೇಖೆ ಬಳಿ ವಾಸಿಸುವ ಕಾಶ್ಮೀರಿಗಳ ಪ್ರಾರ್ಥನೆ, ಸಂಸತ್ತಿನ ಅಧಿಕಾರ, ಸರಕಾರದ ಬೆಂಬಲ ಸದಸ್ಯರಿಗೆ ಇರುತ್ತದೆ. ಸದಸ್ಯರಿಗೆ ಧೈರ್ಯ ತುಂಬಲು ನಾನಿದ್ದೇನೆ. ಸಪ್ಟೆಂಬರ್ ತಿಂಗಳಿನಲ್ಲಿ ವಿಶ್ವಸಂಸ್ಥೆಯನ್ನುದ್ದೇಶಿಸಿ ಮಾತನಾಡುವಾಗ ಅದರಲ್ಲಿ ನಾನು ಕಾಶ್ಮೀರ ಸಮಸ್ಯೆಯನ್ನೂ ಪ್ರಸ್ತಾಪಿಸುತ್ತೇನೆ ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಹೇಳಿಕೆ ನೀಡಿದರು. 
2016: ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಮುಂದುವರಿದು 50 ದಿನಗಳಾದರೂ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಜುಲೈ 8 ರಂದು ಹಿಜ್ಬುಲ್ ಕಮಾಂಡರ್ ಬುರ್ಹಾನ್ ವನಿಯ ಹತ್ಯೆಯನ್ನು ಪ್ರತಿಭಟಿಸಿ ಆರಂಭವಾದ  ಹಿಂಸಾಚಾರ ತಿಂಗಳು ಕಾಲ ಮುಂದುವರಿದಿದ್ದು, ಈವರೆಗೆ ಹಿಂಸಾಚಾರಕ್ಕೆ 70 ಮಂದಿ ಬಲಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಮುಫ್ತಿಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿಯವರು ಮುತುವರ್ಜಿ ವಹಿಸಿದ್ದಾರೆ. ಅಲ್ಲಿನ ಹಿಂಸಾಚಾರ ಕೊನೆಗೊಂಡು ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಪ್ರಧಾನಿ ಬಯಸುತ್ತಿದ್ದಾರೆ. ಕಾಶ್ಮೀರದಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡಿದ್ದು, ರಾಜ್ಯ ಸರಕಾರವೂ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ಯಾವುದೇ ಹಕ್ಕು ಇಲ್ಲ. ಆದರೆ ಅಲ್ಲಿನ ಜನರನ್ನು ಪ್ರಚೋದಿಸುವ ಮೂಲಕ ಪಾಕಿಸ್ತಾನ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ಪ್ರಧಾನಿ ಮೋದಿಯವರು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ನವಾಜ್ ಶರೀಫ್ ಅವರನ್ನು ಆಮಂತ್ರಿಸಿದರು, ಅವರಾಗಿಯೇ ಲಾಹೋರ್ ಗೆ ಭೇಟಿ ನೀಡಿದ್ದು ಎಲ್ಲವೂ ನನಗೆ ಖುಷಿ ಕೊಟ್ಟಿದೆ. ಆದರೆ ಇದಾದ ನಂತರ ಪಠಾಣ್ಕೋಟ್ ದಾಳಿ ನಡೆದಿರುವುದು ದುರದೃಷ್ಟಕರ, ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳುವ ಅವಕಾಶವನ್ನೂ ಪಾಕಿಸ್ತಾನ ಕಳೆದುಕೊಂಡಿದೆ. ಕೆಲವು ದಿನಗಳಿಂದ ಕಾಶ್ಮೀರದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಾ ಬರುತ್ತಿವೆ. ಆದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಹಾಯ ಮಾಡುವ ಬದಲು ಪಾಕಿಸ್ತಾನ ಗಡಿಯಾಚೆಯಿಂದ ಸಮಸ್ಯೆಗಳನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತಿದೆ ಎಂದು ಮುಫ್ತಿ ಹೇಳಿದರು.

2016: ಸಿಂಗಪುರ: ವಿಶ್ವದ ಮೊದಲ ಚಾಲಕ ರಹಿತ ಟ್ಯಾಕ್ಸಿ  ಸೇವೆ ಸಿಂಗಪುರದಲ್ಲಿ 25ರಂದು  ಆರಂಭವಾಯಿತು. ಪ್ರಾಯೋಗಿಕವಾಗಿ ಇಲ್ಲಿನ ಸಂಶೋಧನಾ ಕ್ಯಾಂಪಸ್ಆವರಣದಲ್ಲಿ   ಮಾತ್ರ ರೋಬೊ ಟ್ಯಾಕ್ಸಿಸೇವೆ ಆರಂಭಿಸಲಾಯಿತು. ಪ್ರಯೋಗ ಯಶಸ್ವಿಯಾದರೆ  2018 ವೇಳೆಗೆ ನಗರದ ಹೃದಯ ಭಾಗದಲ್ಲಿ ಸೇವೆ ಜಾರಿಮಾಡಲಾಗುವುದು ಎಂದು ಟ್ಯಾಕ್ಸಿಗೆ ಸಾಫ್ಟ್ವೇರ್ ಅಭಿವೃದ್ಧಿಪಡಿಸಿರುವ ಅಮೆರಿಕದ ಸ್ಟಾರ್ಟ್ಅಫ್ನುಟೊನೊಮಿ ಹೇಳಿತು.
ಪರೀಕ್ಷೆಯ ನಂತರ ಗ್ರಾಹಕರಿಂದ ಅಭಿಪ್ರಾಯ ಸಂಗ್ರಹಿಸಲಾಗುವುದುಎಂದು ನುಟೊನೊಮಿ ಮುಖ್ಯ ಕಾರ್ಯ ನಿರ್ವಾಹಕ ಹಾಗೂ ಸಹ ಸಂಸ್ಥಾಪಕ ಕಾರ್ಲ ಲೆಗ್ನೆಮ್ಮ ಹೇಳಿದ್ದಾರೆಪ್ರಾಯೋಗಿಕವಾಗಿ ಆರು ಟ್ಯಾಕ್ಸಿಗಳ ಸೇವೆ ಆರಂಭವಾಗಿದೆ. ಇವುಗಳಿಗೆ ಟ್ರಿಪ್ಗಳನ್ನು ಸ್ಮಾರ್ಟ್ಫೋನ್ಆ್ಯಪ್ಮೂಲಕ ಬುಕ್ ಮಾಡಲಾಗಿತ್ತುಆಗಸ್ಟ್ ಅಂತ್ಯದಲ್ಲಿ ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಚಾಲಕರಹಿತ ಕಾರ್ಗಳನ್ನು ಆರಂಭಿಸುವುದಾಗಿ  ಉಬರ್ಕಳೆದ ವಾರ ಹೇಳಿತ್ತು.

2016: ನ್ಯೂಯಾರ್ಕ್ :ಫೋರ್ಬ್ಸ್ ಬಿಡುಗಡೆ ಮಾಡಿರುವ,  2016ನೇ ಸಾಲಿನ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 20 ಚಿತ್ರನಟರ ಪಟ್ಟಿಯಲ್ಲಿ  ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ಕುಮಾರ್‌, ಅಮಿತಾಭ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಸ್ಥಾನ ಪಡೆದರು.

ಸುಮಾರು
₹ 220 ಕೋಟಿ ಸಂಭಾವನೆ ಪಡೆಯುವ ಮೂಲಕ ಶಾರುಖ್ ಖಾನ್ ಮತ್ತು ಡ್ವೇನಿ ಜೆ.ಆರ್ 8ನೇ ಸ್ಥಾನ ಹಂಚಿಕೊಂಡರು. ಸುಮಾರು ₹ 210 ಕೋಟಿ ಸಂಭಾವನೆ ಪಡೆದ ಹಾಲಿವುಡ್ ನಟ ಪಿಟ್ ಮತ್ತು ಭಾರತೀಯ ನಟ ಅಕ್ಷಯ್ಕುಮಾರ್ 10ನೇ ಸ್ಥಾನ ಪಡೆದರು.. ಸಲ್ಮಾನ್ ಖಾನ್ 14 ಸ್ಥಾನದಲ್ಲಿದ್ದರೆ,  ಅಮಿತಾಭ್  ಬಚ್ಚನ್  18ನೇ  ಸ್ಥಾನ ಪಡೆದರು.


2015: ಶ್ರೀನಗರ: ಪಾಕಿಸ್ತಾನದ ಉಗ್ರ ಮಹಮ್ಮದ್ ನವೀದ್ ಯಾಕೂಬ್ ಸೆರೆ ಸಿಕ್ಕ 22 ದಿನಗಳ ಬಳಿಕ, ಕಾಶ್ಮೀರದಲ್ಲಿ ಮತ್ತೋರ್ವ ಪಾಕ್ ಉಗ್ರನನ್ನು ಭಾರತೀಯ ಸೇನಾಪಡೆ ಬಲೆಗೆ ಕೆಡವಿತು. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಗಡಿಯಲ್ಲಿ ಉಗ್ರರ ತಂಡವಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಸೇನಾಪಡೆ ಬುಧವಾರವೇ ಜಮ್ಮು-
ಕಾಶ್ಮೀರ ಪೊಲೀಸರ ಸಹಯೋಗದಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿತ್ತು. ಓರ್ವ ಉಗ್ರನನ್ನು ಹತ್ಯೆಗೈದ ನಂತರ ಕಾರ್ಯಾಚರಣೆ ಸ್ಥಗಿತಗೊಳಿ ಸಲು ನಿರ್ಧರಿಸಿದಾಗ ಮತ್ತಷ್ಟು ಉಗ್ರರು ಅಡಗಿರುವ ಸುಳಿವು ಸಿಕ್ಕಿತ್ತು. ಈದಿನ ಅಲ್ಲಿನ ಗುಹೆಯೊಂದರ ಬಳಿ ಸೈನಿಕರು ತೆರಳುತ್ತಿದ್ದಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಸೇನಾಪಡೆ ಪ್ರತಿದಾಳಿ ನಡೆಸಿ ದಾಗ ಮೂವರು ಉಗ್ರರು ಬಲಿಯಾದರೆ, ಓರ್ವ ಉಗ್ರ ಸೆರೆಸಿಕ್ಕಿದ.. ಕಾರ್ಯಾಚರಣೆ ವೇಳೆ ಓರ್ವ ಯೋಧನಿಗೂ ಗಾಯವಾಯಿತು. ಶ್ರೀನಗರದಲ್ಲಿ ವಿಚಾರಣೆ: ಬಂಧಿತ ಉಗ್ರ ಸಜ್ಜದ್ ಅಹ್ಮದ್​ನನ್ನು ಶ್ರೀನಗರಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾಗ. ಆತನಿಗೆ ಅಬು ಉಬೇದ್ ಉಲ್ಲಾ ಎಂಬ ಕೋಡ್​ನೇಮ್ ನೀಡಲಾಗಿತ್ತು ಎಂಬ ಮಾಹಿತಿ ಹೊರಬಿದ್ದಿತು.

2008: ಜಮ್ಮುವಿನಲ್ಲಿ ಮೂವರು ಪಾಕ್ ಉಗ್ರರು ಮನೆಯೊಂದಕ್ಕೆ ನುಗ್ಗಿ ನಾಲ್ಕು ಮಕ್ಕಳು ಹಾಗೂ ಅವರ ತಾಯಿ ಮತ್ತು ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಒತ್ತೆಯಾಗಿಟ್ಟುಕೊಂಡಿದ್ದ ಪ್ರಕರಣ 16 ಗಂಟೆಗಳ ಗುಂಡಿನ ಚಕಮಕಿ ಬಳಿಕ ಅಂತ್ಯಗೊಂಡಿತು. ಅಟ್ಟಹಾಸ ಮೆರೆದ ಉಗ್ರರು ಗುಂಡಿನ ಘರ್ಷಣೆಯ ಬಳಿಕ ಭದ್ರತಾ ಪಡೆ ಸಿಬ್ಬಂದಿಗೆ ಮಣಿದರು. ಗುಂಡಿನ ಕಾಳಗದಲ್ಲಿ ಮೂವರು ಉಗ್ರರೂ ಹತರಾದರು.

2007: ಚೆನ್ನೈಯ 57 ವರ್ಷದ ಅಳಗಪ್ಪನ್ ಅವರ ಪತ್ನಿ ವೃಂದಾ ಅವರು 56ರ ಹರೆಯದಲ್ಲಿ ದಾಂಪತ್ಯದ ಸುದೀರ್ಘ 26 ವರ್ಷದ ಬಳಿಕ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈಕೆಗೆ ಋತುಚಕ್ರ ನಿಂತು 11 ವರ್ಷಗಳಾಗಿದ್ದು ಚೆನ್ನೈಯ ಅಕ್ಷಯ ಫರ್ಟಿಲಿಟಿ ಸೆಂಟರ್ ನೀಡಿದ ಚಿಕಿತ್ಸೆಯಿಂದ ಗರ್ಭವತಿಯಾದರು. ಸತತ ಒಂದು ಗಂಟೆ ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರತೆಗೆಯಲಾಯಿತು. ವೈದ್ಯ ವಿಜ್ಞಾನದಲ್ಲಿ ಮೈಲಿಗಲ್ಲು ಎನಿಸಿರುವ ಇಂತಹ ಪ್ರಕರಣ ರಾಷ್ಟ್ರದಲ್ಲಿಯೇ ಮೊತ್ತ ಮೊದಲನೆಯದು ಎನ್ನಲಾಗಿದೆ.

2007: ದೆಹಲಿ ಕುತುಬ್ ಮಿನಾರ್ ಆವರಣದಲ್ಲಿರುವ ಪುರಾತನ ಕಬ್ಬಿಣದ ಸ್ತಂಭದ ಮೇಲಿರುವ ಬ್ರಾಹ್ಮಿ ಲಿಪಿಯ ಬರಹಗಳು ಆ ಸ್ತಂಭದ ಮೇಲೆ ಕೆತ್ತಿದ್ದಲ್ಲ. ಬದಲಾಗಿ ಅದರ ಮೇಲೆ ಲೋಹವನ್ನು ಪಡಿಯಚ್ಚಿನ ನೆರವಿನಿಂದ ಎರಕ ಹೊಯ್ದು ನಿರ್ಮಿಸಿದ್ದು ಎಂದು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.ಈ ಬರಹ ಈವರೆಗೆ ದೊರೆತಿರುವ ಗುಪ್ತರ ಕಾಲದ ಶಾಸನಗಳಲ್ಲೇ ಅತಿ ಹಿಂದಿನದು. 1,600 ವರ್ಷಗಳಿಂದ ಮಳೆ, ಗಾಳಿ ಹೊಡೆತಕ್ಕೆ ಸಿಲುಕಿದರೂ ಒಂದಿನಿತೂ ಸವೆದಿಲ್ಲ. ಕಬ್ಬಿಣದ ಸ್ತಂಭದಲ್ಲಿ ಆರು ಸಾಲುಗಳಲ್ಲಿ ಬರೆಯಲಾದ 227 ಅಕ್ಷರಗಳನ್ನು ಅಧ್ಯಯನ ಮಾಡಿದ ಕಾನ್ಪುರ ಐಐಟಿ `ಮೆಟಲರ್ಜಿಕಲ್ ಎಂಜಿನಿಯರಿಂಗ್' (ಲೋಹಶಾಸ್ತ್ರ) ವಿಭಾಗದ ವಿಜ್ಞಾನಿಗಳು, ಐದನೇ ಶತಮಾನದ ಆರಂಭದಲ್ಲಿ ಕಬ್ಬಿಣದ ಸ್ತಂಭ ಲಂಬವಾಗಿ ನಿಂತ ಸ್ಥಿತಿಯಲ್ಲೇ ಬ್ರಾಹ್ಮಿ ಲಿಪಿಯ ಅಕ್ಷರಗಳನ್ನು ಎರಕ ಹೊಯ್ಯಲಾಗಿದೆ ಎಂದು ಹೇಳಿದರು. ಅಕ್ಷರಗಳನ್ನು ಕೆತ್ತಿದ್ದರೆ ಅವುಗಳ ತುದಿ ಮೊಂಡಾಗಿರುತ್ತಿತ್ತು. ಗುಪ್ತರ ಕಾಲದ ಲೋಹಶಾಸ್ತ್ರಜ್ಞರ ನೈಪುಣ್ಯಕ್ಕೆ ಇದು ಸಾಕ್ಷಿ ಎಂದು ಅಧ್ಯಯನದ ನೇತೃತ್ವ ವಹಿಸಿದ್ದ ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.

2007: ಪೂರ್ವ ಉಗಾಂಡದ ಕಪ್ ಚೊರ್ವಾ ಬಳಿ ಸುಮಾರು 100ಕ್ಕೂ ಮೇಲ್ಪಟ್ಟು ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ ಟ್ರಕ್, ರಸ್ತೆ ತಡೆಗೋಡೆಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಸಂಭವಿಸಿದ ಅಪಘಾತದಲ್ಲಿ 70 ಕ್ಕೂ ಹೆಚ್ಚು ಮಂದಿ ಮೃತರಾದರು. ಇವರಲ್ಲಿ ಅಂದಾಜು 57 ಮಂದಿ ಸೇನಾ ಯೋಧರು.

2007: ಅಮೆರಿಕದ ಟೆನಿಸ್ ಅಂಗಣಗಳಲ್ಲಿ ದಿನೇದಿನೇ ಪುಟಿದೆದ್ದ ಭಾರತದ ಸಾನಿಯಾ ಮಿರ್ಜಾ ಸಿಂಗಲ್ಸ್ ಹಾಗೂ ಡಬಲ್ಸ್ ವಿಶ್ವ ರ್ಯಾಂಕಿಂಗ್ ಪಟ್ಟಿಗಳಲ್ಲಿ ಮೇಲೇರಿದರು. ಅವರು ಸಿಂಗಲ್ಸ್ ನಲ್ಲಿ 27ನೇ ಸ್ಥಾನಕ್ಕೆ ಹಾಗೂ ಡಬಲ್ಸ್ ನಲ್ಲಿ 20ನೇ ಸ್ಥಾನಕ್ಕೆ ಜಿಗಿದರು. ಪೈಲಟ್ ಪೆನ್ ಓಪನ್ ಡಬಲ್ಸಿನಲ್ಲಿ ಸಾನಿಯಾ ಹಾಗೂ ಮಾರಾ ಸ್ಯಾಂಟೆಂಜಲೊ ಚಾಂಪಿಯನ್ ಆದ ಕಾರಣ ಭಾರತದ ಆಟಗಾರ್ತಿ ರ್ಯಾಂಕಿಂಗಿನಲ್ಲಿ ನಾಲ್ಕು ಸ್ಥಾನ ಮೇಲೇರಿದರು.

2006: ಖ್ಯಾತ ಚಿತ್ರ ನಿರ್ದೇಶಕ ಹೃಶಿಕೇಶ್ ಮುಖರ್ಜಿ (84) ಮುಂಬೈಯಲ್ಲಿ ನಿಧನರಾದರು. ನಲವತ್ತಕ್ಕೂ ಹೆಚ್ಚು ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಆನಂದ್, ಖೂಬ್ ಸೂರತ್, ಗೋಲ್ ಮಾಲ್, ಅನುಪಮಾ ಅವರಿಗೆ ಹೆಸರು ತಂದು ಕೊಟ್ಟ ಹಿಂದಿ ಚಿತ್ರಗಳ ಪೈಕಿ ಮುಖ್ಯವಾದವು. ಅವರ ಬಹುತೇಕ ಚಿತ್ರಗಳಿಗೆ ಎಸ್.ಡಿ. ಬರ್ಮನ್ ಸಂಗೀತ ಸಂಯೋಜನೆ ಮಾಡಿದ್ದರು. ಪಿ.ಲಂಕೇಶ್ ಅವರ `ಪಲ್ಲವಿ' ಚಿತ್ರದ ಸಂಕಲನದ ಸಂದರ್ಭದಲ್ಲಿ ಸಹಕಾರ ನೀಡುವ ಮೂಲಕ ಅವರು ಕನ್ನಡ ಚಿತ್ರರಂಗದ ನಂಟನ್ನು ಹೊಂದಿದ್ದರು. `ಝೂಟ್ ಬೋಲೆ ಕವ್ವಾ ಕಾಟೆ' ಅವರ ನಿರ್ದೇಶನದ ಕೊನೆಯ ಚಿತ್ರ. `ತಲಾಶ್' ಎಂಬ ಟೆಲಿವಿಷನ್ ಧಾರಾವಾಹಿಯನ್ನೂ ನಿರ್ದೇಶಿಸಿದ್ದ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಸೇರಿದಂತೆ ಪ್ರಮುಖ ಪ್ರಶಸ್ತಿಗಳು ಸಂದಿದ್ದವು.

2006: ಭೂಮಿ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎಂಬುದಾಗಿ ಗಿನ್ನೆಸ್ ದಾಖಲೆಗಳ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿದ್ದ 116 ವರ್ಷದ ಮರಿಯಾ ಎಸ್ತರ್ ದೆ ಕಾಪೊವಿಲ್ಲಾ ಎಂಬ ಮಹಿಳೆ ಈಕ್ವಡೋರಿನ ಕ್ವೆಟ್ಟಾದಲ್ಲಿ ನಿಧನಳಾದಳು. ನ್ಯೂಮೋನಿಯಾ ಪರಿಣಾಮವಾಗಿ ಆಕೆ ಮೃತಳಾದಳು ಎಂದು ಆಕೆಯ ಮೊಮ್ಮಗಳು ಕ್ಯಾಥರೀನ್ ಕಾಪೊವ್ಲಿಲಾ ಹೇಳಿದಳು. ಈ ಅಜ್ಜಿ 1889ರ ಸೆಪ್ಟೆಂಬರ್ 14ರಂದು ಜನಿಸಿದ್ದಳು. ಇದೇ ವರ್ಷ ಚಾರ್ಲಿನ್ ಮತ್ತು ಅಡಾಲ್ಫ್ ಹಿಟ್ಲರ್ ಜನಿಸಿದ್ದರು.

1995: ತೆಲುಗುದೇಶಂ ಪಕ್ಷದ ಒಡಕಿನ ಹಿನ್ನೆಲೆಯಲ್ಲಿ ಆಗಸ್ಟ್ 31ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಅವರಿಗೆ ರಾಜ್ಯಪಾಲರು ಸೂಚಿಸಿದರು.

1982: `ಸೋಯುಜ್ ಟಿ-7' ಗಗನನೌಕೆ ಭೂಮಿಗೆ ವಾಪಸಾಯಿತು.

1979: ಭಾರತದ ಕೊನೆಯ ವೈಸ್ ರಾಯ್ ಲಾರ್ಡ್ ಲೂಯಿ ಮೌಂಟ್ ಬ್ಯಾಟನ್ ಐರ್ಲೆಂಡ್ ಕರಾವಳಿಯಲ್ಲಿ ಸಂಭವಿಸಿದ ದೋಣಿ ಸ್ಫೋಟವೊಂದರಲ್ಲಿ ಅಸು ನೀಗಿದರು. ಐರಿಷ್ ರಿಪಬ್ಲಿಕನ್ ಆರ್ಮಿ ಈ ಕೃತ್ಯಕ್ಕೆ ತಾನು ಹೊಣೆ ಎಂದು ಘೋಷಿಸಿತು.

1975: ಇಥಿಯೋಪಿಯಾದ ಪದಚ್ಯುತ ದೊರೆ ಹೈಲೆ ಸೆಲಾಸ್ಸೀ ತಮ್ಮ 83ನೇ ವಯಸ್ಸಿನಲ್ಲಿ ಅಡ್ಡಿಸ್ ಅಬಾಬಾದಲ್ಲಿ ಮೃತರಾದರು. ಅಧಿಕೃತ ಮೂಲಗಳ ಪ್ರಕಾರ ಅವರದ್ದು ಸಹಜ ಸಾವು. ಆದರೆ ನಂತರ ಲಭಿಸಿದ ಸಾಕ್ಷ್ಯಗಳು ಅವರನ್ನು ಸೇನಾ ಆಡಳಿತದ ಆದೇಶದ ಮೇರೆಗೆ ನೇಣುಹಾಕಲಾಯಿತು ಎಂಬುದನ್ನು ಬೆಳಕಿಗೆ ತಂದವು.

1955: `ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಸಿಜರ್ಡ್ಸ್ ನ 198 ಪುಟಗಳ ಮೊದಲ ಪ್ರತಿ ಸಿದ್ಧಗೊಂಡಿತು. ನೊರ್ರಿಸ್ ಮತ್ತು ರೋಸ್ ಮೆಕ್ ರೈಟರ್ ಹೆಸರಿನ ಅವಳಿ-ಜವಳಿಗಳು ಸಂಪಾದಿಸಿದ ಈ ಪುಸ್ತಕ ಭಾರೀ ಜನಪ್ರಿಯತೆ ಗಳಿಸಿತು. ಇಂಗ್ಲಿಷ್ ಆವೃತ್ತಿ 70 ರಾಷ್ಟ್ರಗಳಲ್ಲಿ ವಿತರಣೆಗೊಂಡರೆ ಇತರ 22 ಆವೃತ್ತಿಗಳು ವಿದೇಶಿ ಭಾಷೆಗಳಲ್ಲಿ ಪ್ರಕಟಗೊಂಡವು.

1939: ಜಗತ್ತಿನ ಮೊತ್ತ ಮೊದಲ ಜೆಟ್ ಪ್ರೊಪೆಲ್ಲರ್ ಚಾಲಿತ ವಿಮಾನ (ಏರ್ ಪ್ಲೇನ್) `ಹೀನ್ ಕೆಲ್ 178' ಉತ್ತರ ಜರ್ಮನಿಯ ಮರೀನ್ಚೆಯಲ್ಲಿ ಚೊಚ್ಚಲ ಹಾರಾಟ ನಡೆಸಿತು.

1928: ಪ್ಯಾರಿಸ್ಸಿನಲ್ಲಿ ಕ್ಲ್ಲೆಲಾಗ್-ಬ್ರೈಂಡ್ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಯುದ್ಧಗಳನ್ನು ನಿಷೇಧಿಸಿದ ಈ ಒಪ್ಪಂದ ವಿವಾದಗಳನ್ನು ಶಾಂತಿಯುತವಾಗಿ ಇತ್ಯರ್ಥಪಡಿಸಲು ಅವಕಾಶ ಕಲ್ಪಿಸಿತು.

1910: ಕಲ್ಕತ್ತದ (ಈಗಿನ ಕೋಲ್ಕತ್ತಾ) ಮದರ್ ತೆರೇಸಾ (1910-1997) ಎಂದೇ ಖ್ಯಾತರಾದ ಏಗ್ನೆಸ್ ಗೊಂಕ್ಷಾ ಬೊಜಾಕ್ಷ್ ಹಿಯು ಅವರ ಜನ್ಮದಿನ.

1859: ಅಮೆರಿಕದ ಪೆನ್ಸಿಲ್ವೇನಿಯಾದ ಟಿಟುಸ್ವಿಲೆ ಬಳಿ ಮೊತ್ತ ಮೊದಲ ಬಾರಿಗೆ ಕೊರೆದ ತೈಲ ಬಾವಿ ಯಶಸ್ವಿಯಾಯಿತು.

1783: ಮೊತ್ತ ಮೊದಲ ಮಾನವ ರಹಿತಯ ಜಲಜನಕ ಬಲೂನ್ ಹಾರಾಟ ಯಶಸ್ವಿಯಾಯಿತು.

1604: ಅಮೃತಸರದ ಸ್ವರ್ಣಮಂದಿರದಲ್ಲಿ ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥ ಸಾಹಿಬ್' ಪ್ರತಿಷ್ಠಾಪನೆ ನಡೆಯಿತು.

No comments:

Post a Comment