ಇಂದಿನ ಇತಿಹಾಸ History Today ಆಗಸ್ಟ್ 29
2018:
ಹೈದರಾಬಾದ್: ತೆಲಂಗಾಣದ ನಲ್ಗೊಂಡಾದ ಅನ್ನೆಪರ್ತಿ ಬಳಿ ಈದಿನ ಬೆಳಗಿನ ಜಾವ 4.30 ರ ವೇಳೆಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ರಾಜಕಾರಣಿ, ನಟ ನಂದಮೂರಿ ಹರಿಕೃಷ್ಣ (61) ಅವರು ದುರ್ಮರಣಕ್ಕೀಡಾದರು. ಹೈದರಾಬಾದ್ನಿಂದ ನೆಲ್ಲೂರಿಗೆ ತೆರಳುತ್ತಿದ್ದ ಕಾರು
ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದ್ದು, ಕಾರನ್ನು ಹರಿಕೃಷ್ಣ ಅವರೇ ಚಲಾಯಿಸುತ್ತಿದ್ದರು
ಎಂದು ತಿಳಿದು ಬಂದಿತು. ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿತು. ಆಪ್ತರೊಬ್ಬರ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿತು. ಕಾರು
ನಿಯಂತ್ರಣ ತಪ್ಪಿದ ಬಳಿಕ 10 ಅಡಿ ಎತ್ತರ ಗಾಳಿಯಲ್ಲಿ ಹಾರಿ ನೆಲಕ್ಕೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷ್ಯ ದರ್ಶಿಯೊಬ್ಬರು ಮಾಧ್ಯಮಗಳಿಗೆ ಹೇಳಿದರು. ಹರಿಕೃಷ್ಣ
ಅವರ ನಿಧನದ ವಿಚಾರ ತಿಳಿದ ಬಳಿಕ ಬಾವ ಹಾಗೂ ಆಂಧ್ರ ಸಿಎಂ ಚಂದ್ರ ಬಾಬು ನಾಯ್ಡು ಎಲ್ಲಾ ಕಾರ್ಯಕ್ರಮಗಳನ್ನು
ಬದಿಗೊತ್ತಿ ಆಸ್ಪತ್ರೆಗೆ ಧಾವಿಸಿ ಬಂದರು. ಹಲವು ಟಿಡಿಪಿ ಶಾಸಕರು,ಸಚಿವರು ಆಸ್ಪತ್ರೆಯತ್ತ ಧಾವಿಸಿದರು. ಹರಿಕೃಷ್ಣ ಅವರು ಟಿಡಿಪಿ ಸಂಸ್ಥಾಪಕ, ಆಂಧ್ರ ಮಾಜಿ ಸಿಎಂ ನಂದಮೂರಿ ತಾರಕ ರಾಮರಾವ್ ಅವರ ನಾಲ್ಕನೇ ಪುತ್ರ. 1964 ರಲ್ಲಿ
ಶ್ರೀ ಕೃಷ್ಣಾವತಾರಂ ಎಂಬ ಚಿತ್ರದಲ್ಲಿ ಬಾಲ ನಟನಾಗಿ ಬಣ್ಣದ ಬದುಕಿಗೆ ಕಾಲಿರಿಸಿದ್ದರು. ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅವರು ನಾಯಕ ನಟನಾಗಿ, ಪೋಷಕರ ಪಾತ್ರ, ಹಾಸ್ಯ ಪಾತ್ರಗಳು ಮತ್ತು ನಿರ್ಮಾಪಕನಾಗಿಯೂ
ಗುರುತಿಸಿಕೊಂಡಿದ್ದರು. ಮೊದಲ
ಪತ್ನಿಯ ಮೂವರು ಮಕ್ಕಳಾದ ನಟ ಕಲ್ಯಾಣ್ ರಾಮ್, ಪುತ್ರಿ ಸುಹಾಸಿನಿ ಮತ್ತು 2 ನೇ
ಪತ್ನಿಯ ಪುತ್ರ ಜ್ಯೂನಿಯರ್ ಎನ್‌ಟಿಆರ್ ಎಂದು ಪ್ರಖ್ಯಾತರಾಗಿರುವ ತಾರಕ ರಾಮ್ ಅವರನ್ನು ಹರಿಕೃಷ್ಣ ಅಗಲಿದರು. ಮೊದಲ ಪುತ್ರ ಜಾನಕಿ
ರಾಮ್ ಅವರು ಕಾರು ಅಪಘಾತದಲ್ಲಿ ಕೆಲ ವರ್ಷಗಳ ಹಿಂದೆ ದುರ್ಮರಣಕ್ಕೀಡಾಗಿದ್ದರು.
2016: ನವದೆಹಲಿ: ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ ಪಿ.ವಿ. ಸಿಂಧು, ಕಂಚಿನ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ ಪಟು ದೀಪಾ ಕರ್ಮಾಕರ್ ಮತ್ತು ಶೂಟರ್ ಜಿತು ರಾಯ್ ಅವರಿಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಜೀವಗಾಂಧಿ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ರಿಯೊ ಒಲಿಂಪಿಕ್ಸ್ನಲ್ಲಿ ಸಾಧನೆ ತೋರಿದ ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಖೇಲ್ ರತ್ನ ನೀಡಿರುವುದು ರಾಷ್ಟ್ರೀಯ ಕ್ರೀಡಾ ಪುರಸ್ಕಾರದ ಇತಿಹಾಸದಲ್ಲಿ ಇದೇ ಮೊದಲು. ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯ ಮಹಿಳೆಯರ ಸಿಂಗಲ್ಸ್ನಲ್ಲಿ ಹೈದರಾಬಾದಿನ ಸಿಂಧು ಬೆಳ್ಳಿ ಗೆದ್ದಿದ್ದರು. ವನಿತೆಯರ 58 ಕೆಜಿ ಕುಸ್ತಿ ವಿಭಾಗದಲ್ಲಿ ಹರಿಯಾಣದ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಿದ್ದರು. ಒಲಿಂಪಿಕ್ಸ್ ವನಿತೆಯರ ಜಿಮ್ನಾಸ್ಟಿಕ್ಸ್ ನಲ್ಲಿ ಸ್ಪರ್ಧಿಸಿದ ಪ್ರಥಮ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಜೀತು ರಾಯ್ ಏಷ್ಯನ್ ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಜಯಿಸಿದ್ದರು. ರಿಯೊ ಒಲಿಂಪಿಕ್ಸ್ ನಲ್ಲಿಯೂ ಅವರು ಸ್ಪರ್ಧಿಸಿದ್ದರು. ಪದಕ, ಪ್ರಮಾಣಪತ್ರ ಹಾಗೂ ₹ 7.5 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಖೇಲ್ ರತ್ನ ಪ್ರಶಸ್ತಿಯನ್ನು ಪ್ರಣವ್ ಮುಖರ್ಜಿ ಅವರಿಂದ ಕ್ರೀಡಾಪಟುಗಳು ಸ್ವೀಕರಿಸಿದರು.
2018: ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರ ಬಂಧನ ಕ್ರಮವು ಭಿನ್ನಮತದ ಧ್ವನಿಯನ್ನು ಹತ್ತಿಕ್ಕುವ ಯತ್ನವೇ ಎಂಬ ವಿಚಾರವನ್ನು ತಾನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತು.ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ರಾಷ್ಟ್ರವ್ಯಾಪಿ ದಾಳಿ ಕಾಲದಲ್ಲಿ ಬಂಧಿಸಲ್ಪಟ್ಟ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ತತ್ ಕ್ಷಣಕ್ಕೆ ಸೆರೆಮನೆಗೆ ಕಳುಹಿಸುವಂತಿಲ್ಲ, ಬದಲಾಗಿ ಸೆಪ್ಟೆಂಬರ್ 6ರಂದು ತಾನು ಪ್ರಕರಣದ ವಿಚಾರಣೆ ನಡೆಸುವವರೆಗೆ ಅವರವರ ಮನೆಗಳಲ್ಲೇ ಗೃಹ ಬಂಧನದಲ್ಲಿ ಇರಿಸಬೇಕು ಎಂದು ಆಜ್ಞಾಪಿಸುವ ಮೂಲಕ ಮಧ್ಯಂತರ ಪರಿಹಾರ ನೀಡಿತು.ಅಸಮ್ಮತಿ ಅಥವಾ ಭಿನ್ನಮತವು ಪ್ರಜಾಪ್ರಭುತ್ವದ ಸುರಕ್ಷಾ ಕವಾಟ. ನೀವು ಭಿನ್ನಮತಕ್ಕೆ ಅವಕಾಶ ನೀಡದೇ ಇದ್ದಲ್ಲಿ ಪ್ರಜಾಪ್ರಭುತ್ವದ ಒತ್ತಡ ಕವಾಟವು ಸ್ಫೋಟಗೊಳ್ಳಬಹುದು ಎಂದು ಕೋರ್ಟ್
ಹೇಳಿತು.ನಾಗರಿಕ ಹಕ್ಕುಗಳ ಕಾರ್ಯಕರ್ತರ ಬಂಧನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸುಗಳನ್ನು ಜಾರಿ ಮಾಡಿತು. ಒಂದೇ ಮಾದರಿಯ ದಾಳಿಗಳಲ್ಲಿ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಆಗಸ್ಟ್ 28ರಂದು ಬಂಧಿಸಲಾಗಿತ್ತು.
2018: ಜಕಾರ್ತ: ಇಂಡೋನೇಷ್ಯದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದು, ಈ ಸಾಧನೆ ಗೈದ ಮೊದಲ ಭಾರತೀಯ ಹೆಪ್ಲಾಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಸ್ವಪ್ನ ಬರ್ಮನ್ ಅವರು ಜಕಾರ್ತದಲ್ಲಿ
ಇತಿಹಾಸ ನಿರ್ಮಿಸಿದರು. ಹಲ್ಲು ನೋವಿನ ನಡುವೆಯೂ ಈ ಅಮೋಘ ಸಾಧನೆಯನ್ನು ಸ್ವಪ್ನ ಮಾಡಿದರು.
೨೧ರ ಹರೆಯದ ಸ್ವಪ್ನ ಬರ್ಮನ್ ಎರಡು ದಿನಗಳಲ್ಲಿ ೭ ಆಟೋಟಗಳಲ್ಲಿ ಒಟ್ಟು ೬೦೨೬ ಅಂಕಗಳನ್ನು ಗಳಿಸುವ ಮೂಲಕ ಈ ಸಾಧನೆ ಮೆರೆದರು. ಹೈ ಜಂಪ್ ನಲ್ಲಿ ೧೦೦೩, ಜಾವೆಲಿನ್ ಥ್ರೋದಲ್ಲಿ ೮೭೨ ಅಂಕಗಳೊಂದಿಗೆ ಪ್ರಶಸ್ತಿ ಗೆದ್ದ ಅವರು ಶಾಟ್ ಪುಟ್ ನಲ್ಲಿ ೭೦೭ ಅಂಕ ಮತ್ತು ಲಾಂಗ್ ಜಂಪ್ ನಲ್ಲಿ ೮೬೫ ಅಂಕಗಳೊಂದಿಗೆ ಎರಡನೇ ಅತ್ಯುತ್ತಮ ಸ್ಥಾನ ಗಳಿಸಿದರು. ೧೦೦ ಮೀ, (೯೮೧ ಅಂಕ, ೫ನೇ ಸ್ಥಾನ), ೨೦೦ ಮೀ (೭೯೦ ಅಂಕ, ೭ನೇ ಸ್ಥಾನ) ಅವರ ದುರ್ಬಲ ಆಟಗಳಾಗಿದ್ದವು.
2018: ನವದೆಹಲಿ: ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ’ಅಸತ್ಯವನ್ನು ಪ್ರತಿಪಾದಿಸುತ್ತಿದೆ’ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಆಪಾದಿಸಿದರು. ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ನೀಡಿರುವ ಏಳು ’ದರಗಳು’ ಹಾಗೂ ಆ ಕುರಿತ ಚರ್ಚೆ ಕಿಂಡರ್ ಗಾರ್ಟನ್ ಅಥವಾ ಪ್ರಾಥಮಿಕ ಶಾಲಾ ಮಕ್ಕಳ ಚರ್ಚೆಯಂತೆ ಇವೆ ಎಂದೂ ಅವರು ಛೇಡಿಸಿದರು.’ವಿರೋಧ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ’ಸುಳ್ಳು ಪ್ರಚಾರ’ವು ರಾಷ್ಟ್ರೀಯ ಭದ್ರತೆ ಜೊತೆಗಿನ ಗಂಭೀರ ರಾಜಿಯಾಗಿದೆ’ ಎಂದು ಜೇಟ್ಲಿ ಹೇಳಿದರು. ಫೇಸ್ ಬುಕ್ ಬ್ಲಾಗ್ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಜೇಟ್ಲಿ ೧೫ ಪ್ರಶ್ನೆಗಳನ್ನು ಕೇಳಿದರು.
ರಾಷ್ಟ್ರೀಯ
ಪ್ರಜಾತಾಂತ್ರಿಕ ಮೈತ್ರಿಕೂಟ ಸರ್ಕಾರವು ೨೦೧೫ರ ಏಪ್ರಿಲ್ ೧೦ರಂದು ಫ್ರಾನ್ಸ್ ಜೊತೆಗೆ ೩೬ ರಫೇಲ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದದ ಷರತ್ತುಗಳು ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ೨೦೦೭ರಲ್ಲಿ ಒಪ್ಪಿದ್ದ ಒಪ್ಪಂದದ ಷರತ್ತುಗಳಿಗಿಂತ ಉತ್ತಮವಾಗಿವೆ ಎಂದು ಜೇಟ್ಲಿ ಬರೆದರು. ’ರಾಹುಲ್ ಗಾಂಧಿ ಅವರು ದುಸ್ಸಾಹಸವು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿರುವುದರಿಂದ ನಾನು ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ತತ್ ಕ್ಷಣವೇ ಪ್ರತಿಕ್ರಿಯಿಸುತ್ತದೆ ಎಂದು ನಾನು ಹಾರೈಸಿದ್ದೇನೆ’ ಎಂದು ಜೇಟ್ಲಿ ಬರೆದರು.
’ರಫೇಲ್ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ತಪ್ಪು ಪ್ರಚಾರವು ಸಂಪೂರ್ಣ ಅಸತ್ಯವಾಗಿದ್ದು, ಅಂತಾರಾಷ್ಟ್ರೀಯ ಒಪ್ಪಂದದ ಬಗ್ಗೆ ತಪ್ಪು ತಿಳಿವಳಿಕೆ ಉಂಟು ಮಾಡುತ್ತದೆ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಗಂಭೀರವಾದ ಅಪಾಯವನ್ನು ಉಂಟು ಮಾಡುತ್ತದೆ’ ಎಂದು ಅವರು ಹೇಳಿದರು.
ರಫೇಲ್ ವಿವಾದವು ಸಂಪೂರ್ಣ ಸುಳ್ಳನ್ನು ಆಧರಿಸಿದೆ ಎಂದು ಆಪಾದಿಸಿದ ಜೇಟ್ಲಿ, ’ರಕ್ಷಣಾ ವಹಿವಾಟಿಗೆ ಸಂಬಂಧಿಸಿದಂತೆ ಬಹಿರಂಗ ಉಪನ್ಯಾಸಕ್ಕೆ ಇಳಿಯುವ ಮುನ್ನ ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಅವುಗಳ ಜವಾಬ್ದಾರಿಯುತ ನಾಯಕರು ಮೂಲಭೂತ ವಾಸ್ತವಾಂಶಗಳನ್ನು ಮನನ ಮಾಡಿಕೊಂಡಿರಬೇಕು ಎಂಬುದು ಸಾಮಾನ್ಯವಾದ ನಿರೀಕ್ಷೆಯಾಗಿರುತ್ತದೆ’ ಎಂದು ಹೇಳಿದರು.
ದಶಕಕ್ಕೂ
ಹೆಚ್ಚು ಕಾಲ ವ್ಯವಹಾರವನ್ನು ವಿಳಂಬಗೊಳಿಸುವ ಮೂಲಕ ರಾಷ್ಟ್ರೀಯ ಭದ್ರತೆಯ ಜೊತೆಗೆ ರಾಜಿ ಮಾಡಿಕೊಂಡಿರುವುದು. ಬೆಲೆ ನಿಗದಿ ಪಡಿಸುವ ಪ್ರಕ್ರಿಯೆ ಬಗ್ಗೆ ತಪ್ಪು ಪ್ರಚಾರ ಮಾಡುತ್ತಿರುವುದು ಮತ್ತು ಈ ವಿಷಯಗಳನ್ನು ಎತ್ತುವ ಮೂಲಕ ರಕ್ಷಣಾ ದಾಸ್ತಾನು ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸುವುದು ಈ ಮೂರು ತಪ್ಪುಗಳನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಮಾಡಿದ್ದಾರೆ ಎಂದು ಜೇಟ್ಲಿ ಆಪಾದಿಸಿದರು. ’ಒಪ್ಪಂದದಲ್ಲಿ ಇರುವ ರಹಸ್ಯ ಕಾಯ್ದುಕೊಳ್ಳುವ ನಿಯಮವು ನನಗೆ ಬಂಧನಕಾರಿಯಾಗಿದೆ ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಮತ್ತು ನಾನು ಕೇಳುವ ಮತ್ತು ಉತ್ತರಿಸುವ ವಿಷಯವು ಈ ಮಿತಿಗೆ ಒಳಪಟ್ಟಿರುತ್ತದೆ’ ಎಂದು ಸಚಿವರು ಹೇಳಿದರು. ’ರಾಹುಲ್ ಗಾಂಧಿಯವರು ವಿಮಾನದ ದರಕ್ಕೆ ಸಂಬಂಧಿಸಿದಂತೆ ಜೈಪುರದಲ್ಲಿ ಎರಡು ಸಂಖ್ಯೆಯನ್ನು ಹೇಳಿದ್ದಾರೆ- ಪ್ರತಿಯೊಂದು ಯುದ್ಧ ವಿಮಾನದ ಬೆಲೆ ೫೨೦ ಕೋಟಿ ರೂಪಾಯಿ ಎಂಬುದಾಗಿ ಒಂದು ಕಡೆ ಮತ್ತು ೫೪೦ ಕೋಟಿ ರೂಪಾಯಿ ಎಂಬುದಾಗಿ ಇನ್ನೊಂದು ಕಡೆ ತಿಳಿಸಿದ್ದಾರೆ’ ಎಂದು ಜೇಟ್ಲಿ ನುಡಿದರು. ರಫೇಲ್ ವಿಮಾನವೊಂದರ ಬೆಲೆ ೭೦೦ ಕೋಟಿ ರೂಪಾಯಿ ಎಂಬುದಾಗಿ ರಾಹುಲ್ ಗಾಂಧಿ ಅವರು ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೆಹಲಿ ಮತ್ತು ಕರ್ನಾಟಕದಲ್ಲಿ ಹೇಳಿದ್ದಾರೆ. ಸಂಸತ್ತಿನಲ್ಲಿ ಈ ಮೊತ್ತವನ್ನು ಅವರು ೫೨೦ ಕೋಟಿ ರೂಪಾಯಿಗಳಿಗೆ ಇಳಿಸಿದರು. ರಾಯ್ ಪುರದಲ್ಲಿ ಮತ್ತು ಅದನ್ನು ೫೪೦ ರೂಪಾಯಿಗಳಿಗೆ ಏರಿಸಿದರು ಎಂದು ಜೇಟ್ಲಿ ಬರೆದರು.
ಹೈದರಾಬಾದಿನಲ್ಲಿ ಅವರು ೫೨೬ ಕೋಟಿ ರೂಪಾಯಿಗಳ ಹೊಸ ದರವನ್ನು ಸಂಶೋಧಿಸಿದರು. ಸತ್ಯ ಯಾವಾಗಲೂ ಒಂದೇ ಆಗಿರುತ್ತದೆ. ತಪ್ಪುಗಳು ಹಲವು. ರಫೇಲ್ ಖರೀದಿಯ ವಾಸ್ತವಾಂಶಗಳ ಸ್ಪಷ್ಟ ಅರಿವು ಇಲ್ಲದೆಯೇ ಈ ಆರೋಪಗಳನ್ನು ಮಾಡಲಾಗುತ್ತಿದೆಯೇ? ಎಂದು ಜೇಟ್ಲಿ ಪ್ರಶ್ನಿಸಿದರು. ಡಸ್ಸಾಲ್ಟ್ ನಿರ್ಮಿತ ೩೬ ರಫೇಲ್ ಯುದ್ಧ ವಿಮಾನಗಳನ್ನು ೮೭೦ ಕೋಟಿ (೮.೭ ಬಿಲಿಯನ್) ಡಾಲರ್ ಮೊತ್ತಕ್ಕೆ ಖರೀದಿಸುವ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ ಸರ್ಕಾರ ೨೦೧೫ರ ಏಪ್ರಿಲ್ನಲ್ಲಿ ಪ್ರಕಟಿಸಿತು. ಒಂದು ವರ್ಷದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾತುಕತೆ ನಡೆಸಿದ್ದಕಿಂತ ಹೆಚ್ಚಿನ ದರವನ್ನು ಫ್ರಾನ್ಸಿನ ಡಸ್ಸಾಲ್ಟ್ ವಿಮಾನಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ’೨೦೧೫ ರಿಂದ ೨೦೧೬ರವರೆಗೆ ನಡೆದ ಮಾತುಕತೆಯನ್ನು ಅಂತಿಮವಾಗಿ ೨೦೧೬ರಲ್ಲಿ ಜಾರಿಗೊಳಿಸಲಾಗಿದೆ. ವಿಮಾನದ ಮೂಲ ದರವು ಶೇಕಡಾ ೯ರಷ್ಟು ಇಳಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಇದರ ಅರಿವು ಇದೆಯೇ? ಎಂದು ಜೇಟ್ಲಿ ಪ್ರಶ್ನಿಸಿದರು.
2018: ನವದೆಹಲಿ: ಅಮಾನ್ಯೀಕರಣ ಗೊಳಿಸಲಾದ ೫೦೦ ಮತ್ತು ೧೦೦೦ ರೂಪಾಯಿ ಮುಖಬೆಲೆಯ ನೋಟುಗಳ ಪೈಕಿ ಶೇಕಡಾ ೯೯.೩ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಟಿಸಿದ ಬಳಿಕ ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು
ಕೊಂಡರು. ಅಮಾನ್ಯೀಕರಣಗೊಂಡ ಶೇಕಡಾ ೯೯.೩ರಷ್ಟು ನೋಟುಗಳು ವಾಪಸಾಗಿವೆ, ಆದರೆ ನೋಟು ಅಮಾನ್ಯೀಕರಣದ ಪರಿಣಾಮವಾಗಿ ಸಂಭವಿಸಿದ ಉದ್ಯೋಗ ನಷ್ಟ, ಕೈಗಾರಿಕೆಗಳು ಮುಚ್ಚಿಕೊಂಡದ್ದು ಮತ್ತು ಜಿಡಿಪಿ ಬೆಳವಣಿಗೆ ಕುಸಿತದಿಂದ ಭಾರತದ ಆರ್ಥಿಕತೆ ಭಾರೀ ನಷ್ಟ ಅನುಭವಿಸಿದೆ ಎಂದು ಚಿದಂಬರಂ ಹೇಳಿದರು. ಸರಣಿ ಟ್ವೀಟ್ ಗಳನ್ನು ಮಾಡಿದ ಮಾಜಿ ವಿತ್ತ ಸಚಿವ ಆರ್ ಬಿಐ ಅಂಕಿ ಸಂಖ್ಯೆಗಳು ಸರ್ಕಾರ ಕೇವಲ ೧೩,೦೦೦ ಕೋಟಿ ರೂಪಾಯಿಗಳನ್ನು ಮಾತ್ರ ಅಮಾನ್ಯೀಕರಣ ಮಾಡಿರುವುದಾಗಿ ಹೇಳಿದೆ, ಆದರೆ ಸರ್ಕಾರ ಅದಕ್ಕೆ ಭಾರೀ ಬೆಲೆ ತೆತ್ತಿದೆ ಎಂದು ನುಡಿದರು. ಭಾರತದ ಆರ್ಥಿಕತೆಯು ಬೆಳವಣಿಗೆಯ ಲೆಕ್ಕಾಚಾರದಲ್ಲಿ ಶೇಕಡಾ ೧.೫ರಷ್ಟು ಜಿಡಿಪಿಯನ್ನು ಕಳೆದುಕೊಂಡಿದೆ. ಕೇವಲ ಜಿಡಿಪಿ ಕುಸಿತವೊಂದರಿಂದಲೇ ಒಂದು ವರ್ಷದಲ್ಲಿ ಆಗಿರುವ ನಷ್ಟ ೨.೨೫ ಕೋಟಿ ರೂಪಾಯಿಗಳು. ೧೦೦ಕ್ಕೂ ಹೆಚ್ಚು ಜೀವಗಳು ಬಲಿಯಾಗಿವೆ. ೧೫ ಕೋಟಿಯಷ್ಟು ದಿನಗೂಲಿ ನೌಕರರು ಹಲವಾರು ವಾರಗಳ ಕಾಲ ತಮ್ಮ ಬದುಕಿನ ಆಧಾರವನ್ನೇ ಕಳೆದುಕೊಂಡರು. ಸಹಸ್ರಾರು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಬಾಗಿಲೆಳೆದುಕೊಂಡವು. ಲಕ್ಷಾಂತರ ಉದ್ಯೋಗಗಳು ನಷ್ಟವಾದವು’ ಎಂದು ಚಿದಂಬರಂ ಟ್ವೀಟ್ ಮಾಡಿದರು. ’೧೩,೦೦೦ ಕೋಟಿ ರೂಪಾಯಿಗಳ ಸಣ್ಣ ಮೊತ್ತವನ್ನು ಹೊರತುಪಡಿಸಿ, ೧೫.೪೨ ಲಕ್ಷ ಕೋಟಿ ರೂಪಾಯಿಗಳ ಪೈಕಿ ಪ್ರತಿಯೊಂದು ರೂಪಾಯಿಯೂ ಆರ್ ಬಿಐಗೆ ವಾಪಸ್ ಬಂತಲ್ಲವೇ?’ ಎಂದು ಚಿದಂಬರಂ ಪ್ರಶ್ನಿಸಿದರು.’೧೩,೦೦೦ ಕೋಟಿ ರೂಪಾಯಿಗಳ ಪೈಕಿ ಕೆಲವು ಕರೆನ್ಸಿಗಳು ನೇಪಾಳ ಮತ್ತು ಭೂತಾನ್ ಕರೆನ್ಸಿಗಳಾಗಿರಬಹುದು ಮತ್ತು ಕೆಲವು ಕಳೆದುಹೋಗಿರಬಹುದು ಅಥವಾ ನಾಶ ಪಡಿಸಿರಬಹುದು. ೩ ಲಕ್ಷ ಕೋಟಿ ರೂಪಾಯಿ ವಾಪಸ್ ಬರುವುದಿಲ್ಲ ಮತ್ತು ಅದು ಸರ್ಕಾರಕ್ಕೆ ಲಾಭಕರವಾಗಿದೆ ಎಂದು ಎಂದು ಯಾರು ಹೇಳಿದ್ದಾರೆ ?’ ಎಂದು ಕಾಂಗ್ರೆಸ್ ನಾಯಕ ನುಡಿದರು. ಅಮಾನ್ಯೀಕರಣಗೊಳಿಸಲಾದ ೫೦೦ ಮತ್ತು ೧೦೦೦ ರೂಪಾಯ ನೋಟುಗಳ ಪೈಕಿ ಶೇಕಡಾ ೯೯.೩ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಆರ್ ಬಿಐ ಹೇಳಿದೆ. ತನ್ಮೂಲಕ ಕಾಳಧನ ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವ ಸಲುವಾಗಿ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣ ಕ್ರಮದ ಬಳಿಕ ಅತ್ಯಂತ ಸ್ವಲ್ಪ ಪ್ರಮಾಣದ ಕರೆನ್ಸಿ ಮಾತ್ರ ವ್ಯವಸ್ಥೆಯಿಂದ ಹೊರಗುಳಿದಿದೆ ಎಂದು ಆರ್ ಬಿಐ ಹೇಳಿದೆ.ಅಮಾನ್ಯೀಕರಣ
ಗೊಂಡ ನೋಟುಗಳ ವಿನಿಮಯಕ್ಕೆ ನೀಡಲಾಗಿದ್ದ ನಿರ್ದಿಷ್ಟ ಗಡುವಿನ ಒಳಗಾಗಿ ವ್ಯವಸ್ಥೆಗೆ ವಾಪಸಾದ ಕರೆನ್ಸಿಯನ್ನು ಲೆಕ್ಕ ಹಾಕಲು ಸುದೀರ್ಘ ಸಮಯವನ್ನು ತೆಗೆದುಕೊಂಡ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ೨೦೧೭-೧೮ರ ವಾರ್ಷಿಕ ವರದಿಯಲ್ಲಿ ಬ್ಯಾಕಿಂಗ್ ವ್ಯವಸ್ಥೆಗೆ ವಾಪಸಾದ ಅಮಾನ್ಯೀಕರಣಗೊಂಡ ನೋಟುಗಳನ್ನು ಎಣಿಸುವ ಪ್ರಕ್ರಿಯೆ ಕಡೆಗೂ ಮುಕ್ತಾಯಗೊಂಡಿದೆ ಎಂದು ಹೇಳಿದೆ.೨೦೧೬ರ ನವೆಂಬರ್ ೮ರಂದು ನೋಟು ಅಮಾನ್ಯೀಕರಣ ಘೋಷಿಸಿದಾಗ ಚಲಾವಣೆಯಲ್ಲಿದ್ದ ೫೦೦ ರೂಪಾಯಿ ಮತ್ತು ೧೦೦೦ ರೂಪಾಯಿ ಮುಖ ಬೆಲೆಯ ೧೫.೪೧ ಲಕ್ಷ ಕೋಟಿ ರೂಪಾಯಿಗಳ ಪೈಕಿ ೧೫.೩೧ ಲಕ್ಷ ಕೋಟಿ ರೂಪಾಯಿ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಿಸಿತ್ತು.
2016: ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕರ್ನಾಟಕದ ಹಾಕಿ ಆಟಗಾರ ವಿ.ಆರ್.ರಘುನಾಥ್ ಅವರಿಗೆ ಅರ್ಜುನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅರ್ಜುನ್ ಪ್ರಶಸ್ತಿಯು ಪ್ರಮಾಣಪತ್ರ ಹಾಗೂ ₹ 5 ಲಕ್ಷ ನಗದು ಬಹುಮಾನ ಒಳಗೊಂಡಿದೆ.
2016: ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಉದ್ದೇಶಪೂರ್ವಕವಾಗಿ ತಮ್ಮ ಎಲ್ಲ ಆಸ್ತಿಯ ವಿವರವನ್ನು ಬಹಿರಂಗ ಮಾಡಿಲ್ಲ ಎಂದು ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟ ಸುಪ್ರೀಂ ಕೋರ್ಟ್ಗೆ ತಿಳಿಸಿತು. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು
ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ಪೀಠದ ಎದುರು ಹಾಜರಾದ ಅಟಾರ್ನಿ ಜನರಲ್ ಮುಖುಲ್ ರೋಹಟಗಿ, ಮಲ್ಯ ಫೆಬ್ರುವರಿಯಲ್ಲಿ ಬ್ರಿಟಿಷ್ ಸಂಸ್ಥೆಯಿಂದ ಪಡೆದಿದ್ದ ₹ 4 ಕೋಟಿ ಸೇರಿದಂತೆ ತಮ್ಮ ಸಂಪೂರ್ಣ ಆಸ್ತಿ ವಿವರವನ್ನು ಬಹಿರಂಗಪಡಿಸಿಲ್ಲ ಎಂದು ನುಡಿದರು. ಭಾರತ ಮತ್ತು ವಿದೇಶಗಳಲ್ಲಿ ಇರುವ ಆಸ್ತಿ ವಿವರವನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಲ್ಯ ಅವರಿಗೆ ಸೂಚಿಸಿತ್ತು. ಆದರೂ ಅವರು ಆಸ್ತಿ ವಿವರವನ್ನು ಸಂಪೂರ್ಣವಾಗಿ ನೀಡಿಲ್ಲ. ಹೀಗಾಗಿ, ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲಾಗುವುದು ಎಂದು ಅವರು ಹೇಳಿದರು. ಮಲ್ಯ ಪರ ವಕೀಲ ಸಿ.ಎಸ್.ವೈದ್ಯನಾಥನ್, ‘ಆಸ್ತಿ ವಿವರ ನೀಡುವಂತೆ ಅಪೆಕ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಸಂಬಂಧಿಸಿದಂತೆ ಮಲ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹೀಗಾಗಿ, ಅವರಿಂದ ನ್ಯಾಯಾಂಗ ನಿಂದನೆ ಆಗಿಲ್ಲ’ ಎಂದರು.2016: ಅಡೆನ್: ಯೆಮನ್‌ನ ಅಡೆನ್‌ನಗರದಲ್ಲಿನ ಸೇನಾ ತರಬೇತಿ ಕೇಂದ್ರದ ಮೇಲೆ ಆತ್ಮಹತ್ಯೆ ಬಾಂಬ್ ದಾಳಿ ನಡೆದು, 60 ಜನ ಸಾವಿಗೀಡಾದರು. ಐಸಿಸ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿತು. ಸೇನಾ ತರಬೇತಿ ಕೇಂದ್ರದಲ್ಲಿ ನೂತನ ನೇಮಕಾತಿಗಾಗಿ ಜನರು ಸೇರಿದ್ದಾಗ ಆತ್ಮಹತ್ಯಾ ಕಾರು ಬಾಂಬ್ ಸ್ಫೋಟಗೊಂಡಿತು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದರು. ಘಟನೆಯಲ್ಲಿ 60 ಜನ ಸಾವನ್ನಪ್ಪದ್ದು, 29 ಮಂದಿ ಗಾಯಗೊಂಡರು.
2016: ಪುದುಚೇರಿ: ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ಸತತ 11 ಗಂಟೆ ಕಾಲ ಸಭೆ ನಡೆಸಿ ದಾಖಲೆ ನಿರ್ಮಿಸಿದರು. ಈದಿನ ಅವರು ಪುದುಚೇರಿಯ 2016–17ನೆ ಸಾಲಿನ ಬಜೆಟ್ ಮಂಡಿಸಲಿದ್ದು, ಅದಕ್ಕೆ ಅಂತಿಮ ಸ್ವರೂಪ ನೀಡಲು ಪೂರ್ವಭಾವಿಯಾಗಿ 27ರಂದು ಸಚಿವರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು. ‘27ರ ಸಂಜೆ 6 ಗಂಟೆಗೆ ಆರಂಭವಾದ ಸಭೆ 18ರಂದು ನಸುಕಿನ 4.30ಕ್ಕೆ ಮುಕ್ತಾಯವಾಯಿತು’ ಎಂದು ಅಧಿಕಾರಿಗಳು ಹೇಳಿದರು. ಸರ್ಕಾರ ಈ ವರೆಗೆ ಜಾರಿಮಾಡಿರುವ ವಿವಿಧ ಯೋಜನೆಗಳು, ಇನ್ನಷ್ಟು ಜನರಿಗೆ ಅನುಕೂಲವಾಗುವಂತೆ ಈ ಯೋಜನೆಗಳನ್ನು ವಿಸ್ತರಿಸುವುದೇ ಮುಂತಾದ ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.
2016: ನಾರ್ವೆ: ಸಿಡಿಲು ಬಡಿದು 300 ಕ್ಕೂ ಹೆಚ್ಚು ಹಿಮಸಾರಂಗಗಳು ಸಾವನ್ನಪ್ಪಿರುವ ಘಟನೆ ನಾರ್ವೆಯ ಹರ್ದನ್
ಗೆರ್ವಿಡಾ ಬೆಟ್ಟದ ತಪ್ಪಲಿನಲ್ಲಿ ಘಟಿಸಿತು.
ನಾರ್ವೆಯಲ್ಲಿ ನೆಲೆಸಿದ ವನ್ಯಜೀವಿಗಳು ಆಗಾಗ ಸಿಡಿಲಿನ ಹೊಡೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ ಸಂಗತಿ ಎಂದು ನಾರ್ವೆ ಪರಿಸರ ರಕ್ಷಣಾ ಸಂಸ್ಥೆ ವಕ್ತಾರ ಜರ್ತಾನ್ ನುತ್ಸೆನ್ ಹೇಳಿದರು.. ಭಾರಿ ಮಳೆ ಬೀಳುವಾಗ ಹಿಮಸಾರಂಗಗಳು ಒಟ್ಟಾಗಿ ನೆಲೆಸಿ ರಕ್ಷಣೆಗೆ ಯತ್ನಸಿಸುತ್ತವೆ ಇದೇ ಅವುಗಳ ಸಾಮೂಹಿಕ ಸಾವಿಗೆ ಕಾರಣ ಎಂದು
ಅವರು ನುಡಿದರು.
2016: ನವದೆಹಲಿ: ರಿಯೋ ಒಲಿಂಪಿಕ್ಸ್ ರಜತ ಪದರ ವಿಜೇತೆ ಪಿ ವಿ ಸಿಂಧುವನ್ನು ದೇಶದ ಅತಿದೊಡ್ಡ ಅರೆ ಸೇನಾಪಡೆ ಸಿಆರ್ ಪಿಎಫ್ ನೂತನ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳುವುದರ ಜತೆಗೆ ಗೌರವ ಕಮಾಂಡಂಟ್ ಆಗಿ ನೇಮಕ ಮಾಡಲಿದೆ ಕೇಂದ್ರ ಗೃಹ ಇಲಾಖೆಗೆ ಔಪಚಾರಿಕ ಪ್ರಸ್ತಾಪನೆ ಸಲ್ಲಿಸಿದ್ದು ಅದು ಅಂಗೀಕಾರಗೊಂಡ ನಂತರ ಸಿಂಧುಗೆ ಯಾವ ಶ್ರೇಯಾಂಕದ ಬ್ಯಾಡ್ಜ್ ನೀಡಬೇಕು ಎಂದು ನಿರ್ಧರಿಸಲಾಗುವುದು ಎಂದು ಸಿಆರ್ ಪಿಎಫ್ ಉನ್ನತ ಮೂಲಗಳು ತಿಳಿಸಿದವು.
2016: ನವದೆಹಲಿ: ಎಡೆಬಿಡದೆ ಸುರಿದ ಭಾರಿ ಮಳೆಗೆ ದೆಹಲಿಯ ಜನಜೀವನ ಅಸ್ತವ್ಯಸ್ತವಾಯಿತು. ರಸ್ತೆ ಮೇಲೆ ಹರಿದ ನೀರಿನಲ್ಲಿ ಮುಂದೆ ಸಾಗಲು ವಾಹನ ಸವಾರರು ಪರಿಪಾಟಲು ಅನುಭವಿಸಿದರು. ಸಂಜೆಯಿಂದ ಸುರಿದ ಮಳೆಗೆ ದೆಹಲಿ-ಗುರುಗ್ರಾಮ ರಸ್ತೆಯಲ್ಲಿ ಸುಮಾರು 2 ಕಿ ಮೀ ವರೆಗೆ ವಾಹನಗಳು ಸಾಲುಗಟ್ಟಿ ನಿಂತವು. ಇದಲ್ಲದೇ, ಹೀರೊ ಹೊಂಡಾ ಸರ್ಕಲ್, ಸೊಹ್ನಾ ಚೌಕ್, ಉದ್ಯೋಗ ವಿಹಾರ ಪ್ರದೇಶದಲ್ಲಿ ಮೊಣಕಾಲುದ್ದ ನೀರು ನಿಂತಿತು. ಸಾರ್ವಜನಿಕರು ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದರು.. ಜೂನ್ 28 ರಂದು ಮಳೆಯಿಂದ ಇದೇ ಮಾದರಿ ಸಮಸ್ಯೆ ಎದುರಿಸಿದ್ದ ದೆಹಲಿ ಜನತೆ ಮನೆ ಸೇರಿದ್ದು ಒಂದು ದಿನದ ನಂತರವಾಗಿತ್ತು.
ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಿಗಾಗಿ ಮೊದಲ ಹಂತದ
10,000 ಸಾವಿರ ಪ್ಯಾಂಟ್ ಪ್ರಧಾನ ಕಚೇರಿ ನಾಗ್ಪುರಕ್ಕೆ ಆಗಮಿಸಿತು. ಮುಂಬರುವ ಅಕ್ಟೋಬರ್ 11
ವಿಜಯ ದಶಮಿಯಂದು ಸಂಘ ತನ್ನ ಸದಸ್ಯರಿಗೆ ಖಾಕಿ ಚಡ್ಡಿ ಬದಲು ಖಾಕಿ ಪ್ಯಾಂಟನ್ನು ಪರಿಚಯಿಸಲಿದ್ದು ಪ್ರತಿ ಪ್ಯಾಂಟನ್ನು
250 ರೂ. ಗೆ ವಿತರಿಸಲಿದೆ. 90 ವರ್ಷದ ಇತಿಹಾಸ ಹೊಂದಿರುವ ಖಾಕಿ ಚಡ್ಡಿಗೆ ಇತಿಶ್ರೀ ಹಾಡಿ ಖಾಕಿ ಪ್ಯಾಂಟನ್ನು ಸಮವಸ್ತ್ರವನ್ನಾಗಿಸುವ ನಿರ್ಧಾರವನ್ನು
ಸಂಘ ತೆಗೆದುಕೊಂಡಿತ್ತು. ಈ ನಿರ್ಧಾರಕ್ಕೆ ಸಂಘ ಪರವಾರದ ಹಳೆ ತಲೆಗಳು ವಿರೋಧಿಸಿದ್ದು, ಸಮರ ಕಲೆ ಮತ್ತು ಪಥಸಂಚಲನದ
ಸಂದರ್ಭದಲ್ಲಿ ಪ್ಯಾಂಟು ತೊಡಕಾಗುವುದು ಎಂದಿದ್ದರು.
2016: ಮುಂಬೈ: ‘ನೀವು ಹೊರಟಿರುವುದು ದೇವರ ಕೆಲಸಕ್ಕೆ, ಚಿಂತೆ ಬಿಡಿ ನಿಮ್ಮನ್ನು ಆರಾಮವಾಗಿ ಮಸೀದಿಗೆ
ತಲುಪಿಸುತ್ತೇನೆ’! ಹೀಗೆಂದು ಹೇಳಿದ ಪಕ್ಕಾ ಗಣಪತಿ ಭಕ್ತ ಆಟೋ ಚಾಲಕ ಮುಂಬೈ ನಿವಾಸಿ ಶೇಖ್ ಎಂಬವರನ್ನು ಸುರಕ್ಷಿತವಾಗಿ ಮಸೀದಿಗೆ ತಲುಪಿಸಿದ್ದದಲ್ಲದೆ, ತಿರುಗಿ ಬರಲು ಸ್ವಲ್ಪ ಹಣವನ್ನೂ ಕೈಗಿಟ್ಟು ಮಾನವೀಯತೆ ಮೆರೆದರು. ಅಷ್ಟಕ್ಕೂ ಶೇಖ್ ಅವರಿಗೆ ಆಗಿದ್ದಿಷ್ಟೆ. 26ರಂದು ನಮಾಜಿಗೆಂದು ಆಟೋ ಏರಿದ ಶೇಖ್ ಹಣ ಮರೆತು ಬಂದಿದ್ದರು. ಅರ್ಧ ದಾರಿ ಕ್ರಮಿಸಿದ ಮೇಲೆ ಹಣ ಮರೆತು ಬಂದಿರುವುದು ಅರಿವಾಯಿತು. ಶೇಖ್ ಗಾಬರಿಯಾಗಿರುವುದನ್ನು ಗಮನಿಸಿದ ಆಟೋ ಲಕ ಅವರಿಂದ ವಿಷಯ ತಿಳಿದುಕೊಂಡು ಡೋಟ್ ವರೀ... ಸುರಕ್ಷಿತವಾಗಿ ಪ್ರಾರ್ಥನೆ ಮಾಡಿ ಬನ್ನಿ ಎಂದು ಮಾನವೀಯತೆ ಮೆರೆದಿದ್ದಾರೆ. ಶೇಖ್ ಅವರು ಇದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು,
2016: ಕೋಲ್ಕತ: ವಿಧಾನಸಭೆಯಲ್ಲಿ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಪಶ್ವಿಮ ಬಂಗಾಳ ಇನ್ಮುಂದೆ ಬಂಗಾಳಿ ಭಾಷೆಯಲ್ಲಿ ‘ಬಾಂಗ್ಲಾ’ ಎಂದು, ಇಂಗ್ಲಿಷ್
ನಲ್ಲಿ ‘ಬೆಂಗಾಲ್’ ಎಂದು, ಹಿಂದಿಯಲ್ಲಿ ‘ಬಂಗಾಲ್’ ಎಂದೂ ಕರೆಯಿಸಿಕೊಳ್ಳಲಿದೆ.
2016: ನವದೆಹಲಿ: ಜೈನಗುರು ತರುಣ್ ಸಾಗರ್ ಅವರನ್ನು ಅಪಮಾನ ಮಾಡಿ ಜೈನ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಗಾಯಕ ಹಾಗೂ ಆಮ್ ಆದ್ಮಿ ಮುಖಂಡ ವಿಶಾಲ್ ದದ್ಲಾನಿ ವಿರುದ್ಧ ಪೊಲೀಸರು ಎಫ್
ಐಆರ್ ದಾಖಲಿಸಿಕೊಂಡರು. ವಿಶಾಲ್ ದದ್ಲಾನಿ ಹಿಂದಿ
ದಿನವಜೈನ ಸಮುದಾಯಕ್ಕೆ ಕ್ಷಮೆಯಾಚಿಸಿ ರಾಯಕೀಯ ನಿವೃತ್ತಿ ಹೇಳಿದ್ದರು.
ಛತ್ರಪಾರಾ (ಮಧ್ಯಪ್ರದೇಶ): ಪ್ರಸವ ವೇದನೆಯಿಂದ ಬಳಲುತ್ತಿದ್ದ ಗರ್ಭಿಣಿ ಸಹಾಯಕ್ಕೆ ಅಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದ ಕಾರಣ 6 ಕಿ ಮೀ ದೂರದ ಆಸ್ಪತ್ರೆಗೆ ಸೈಕಲ್ ನಲ್ಲಿ ಕರೆದೊಯ್ದ ಘಟನೆ ಮಧ್ಯಪ್ರದೇಶದ ಛತ್ರಪಾರಾ ಜಿಲ್ಲೆಯಲ್ಲಿ ಘಟಿಸಿತು. ಪಾಲಿ ನಿವಾಸಿಯಾದ ಮಹೇಶ್ ಆದಿವಾಸಿಯ ಪತ್ನಿ ಪಾರ್ವತಿ ಹೆರಿಗೆಗಾಗಿ ತವರು ಮನೆಗೆ ಆಗಮಿಸಿದ್ದಳು. ಹಿಂದಿನ
ದಿನ ಹೆರಿಗೆ ನೋವು ಕಾಣಿಸಿಕೊಂಡಾಗ ಆಕೆಯ ತಂದೆ ನನ್ಹೆ ಭಾಯ್ ಆಸ್ಪತ್ರೆ ಅಂಬ್ಯುಲೆನ್ಸ್ ಗಳಿಗೆ ಕರೆ ಮಾಡಿದ್ದಾರೆ. 108 ಸೇವಾ ವಾಹನ ಬೇರೆ ಪ್ರಕರಣದ ಚಿಕಿತ್ಸೆಗೆ ತೆರಳಿತ್ತು.ಇನ್ನುಳಿದ ಸೇವೆಯಾದ ಜನನಿ ಎಕ್ಸ್ ಪ್ರೆಸ್ ಕಳೆದೊಂದು ತಿಂಗಳಿಂದ ಗುತ್ತಿಗೆದಾರನ ತಿಕ್ಕಾಟದಿಂದ ಸೇವೆ ಸ್ಥಗಿತಗೊಳಿಸಿತ್ತು. ವಿಧಿಯಿಲ್ಲದೆ ತನ್ನ ಸೈಕಲ್ ನಲ್ಲಿ ಆಸ್ಪತ್ರೆಗೆ ಕರೆದೊಯ್ದ ಎಂದು ವರದಿ
ತಿಳಿಸಿತು.
2015: ನವದೆಹಲಿ: ಭಾರತದ ಶ್ರೇಷ್ಠ ಟೆನಿಸ್ ತಾರೆ ಸಾನಿಯಾ ಮಿರ್ಜಾ ‘ರಾಜೀವ್ಗಾಂಧಿ ಖೇಲ್ರತ್ನ’ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದಸ್ವೀಕರಿಸಿದರು. ಉಳಿದಂತೆ 12 ಕ್ರೀಡಾ ಸಾಧಕರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕದ ಪ್ಯಾರಾಈಜುಪಟು ಶರತ್ ಗಾಯಕ್ವಾಡ್ ಸೇರಿದಂತೆ 12 ಕ್ರೀಡಾಪಟುಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು. ಸಾನಿಯಾ ಖೇಲ್ರತ್ನ ಪ್ರಶಸ್ತಿ ಪಡೆದ 2ನೇ ಟೆನಿಸ್ಪಟುವಾಗಿದ್ದಾರೆ. ಲಿಯಾಂಡರ್ ಪೇಸ್ ಮೊದಲಿಗರು. ಸಾನಿಯಾ ಮಿರ್ಜಾ ಖೇಲ್ರತ್ನ
2015: ವಾಷಿಂಗ್ಟನ್: ಮಂಗಳನ ಅಂಗಳಕ್ಕೆ ಪ್ರಯಾಣಬೆಳೆಸಲಿರುವ ಗಗನಯಾತ್ರಿಗಳ ‘ಪರೀಕ್ಷಾರ್ಥ ಜೀವನ’ಆರಂಭಗೊಂಡಿತು. ಇದೇನಿದು ‘ಪರೀಕ್ಷಾರ್ಥ ಜೀವನ’ ಎನ್ನುವನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ: ನಾಸಾ ಗಗನಯಾತ್ರಿಗಳುಅಂದುಕೊಂಡಂತೆ ಮಂಗಳಯಾನ ಆರಂಭಕ್ಕೂ ಮುನ್ನ ಅಲ್ಲನಜೀವನ ಶೈಲಿಗೆ ಒಗ್ಗಿಕೊಳ್ಳುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿನಡೆಸಬೇಕೆಂದುಕೊಂಡ ಒಂದು ವರ್ಷದ ಜೀವನ ಆರಂಭಿಸಿದರು. ಇದಕ್ಕೆಂದೇ ಹವಾಯಿ ದ್ವೀಪದಲ್ಲಿ ನಿರ್ಮಿಸಲಾದ ಚೆಂಡಿನಾಕಾರದಪರೀಕ್ಷಾರ್ಥ ಮನೆಯಲ್ಲಿ ಮುಂದಿನ 12 ತಿಂಗಳು ತಂಗಲಿದ್ದಾರೆ.ಈದಿನ ಮಧ್ಯಾಹ್ನ 1 ಗಂಟೆ ಸುಮಾರಿಗೆ (ಸ್ಥಳೀಯ ಸಮಯಮಧ್ಯಾಹ್ನ 3ಗಂಟೆ, ಶುಕ್ರವಾರ) ಆರು ಮಂದಿ ಗಗನಯಾತ್ರಿಗಳು ಮನೆ ಪ್ರವೇಶಿಸಿದರು. ಇನ್ನೊಂದು ವರ್ಷ ಇವರುಇಲ್ಲಿಯೇ ವಾಸವಿರಬೇಕು. ಗಗನಯಾನಿಗಳು ಅನ್ಯ ಗ್ರಹದಲ್ಲಿ ಹೇಗೆ ಇರಬೇಕೋ ಆ ಎಲ್ಲಾ ನಿಯಮಗಳನ್ನು ಅನುಸರಿಸಿವಾಸಿಸಬೇಕು. ಒಂದೊಮ್ಮೆ ಮನೆಯಿಂದ ಆಚೆ ಬರಬೇಕೆಂದರೆ ‘ಸ್ಪೇಸ್ ಸೂಟ್’ ಧರಿಸಿ ಬರಬೇಕು. ಮನೆಯಲ್ಲಿ ನಾಸಾಇದಕ್ಕಾಗಿಯೇ ಕಳುಹಿಸಿದ ಆಹಾರವನ್ನೇ ಸೇವಿಸಬೇಕು. ಅಪ್ಪಿತಪ್ಪಿಯೂ ಈ ಕೃತಕ ಮನೆಯಲ್ಲಿ ಪರಿಶುದ್ಧ ಗಾಳಿಸಿಗುವುದಿಲ್ಲ. ಸೌರಶಕ್ತಿ ಬೆಳಕನ್ನು ಹೊರತುಪಡಿಸಿ ಬೇರೆ ಯಾವ ಬೆಳಕೂ ಲಭ್ಯವಿಲ್ಲ. ಸ್ವಾತಂತ್ರ್ಯ ಅನ್ನೋದನ್ನು ಮರೆತುದಿನಕಳೆಯಬೇಕು. ಇದೀಗ ಈ ಮನೆಯಲ್ಲಿ ಬಂಧಿಯಾಗಿರುವವರಲ್ಲಿ ಫ್ರಾನ್ಸ್ನ ಆಸ್ಟ್ರೋಬಯಾಲಜಿಸ್ಟ್, ಜರ್ಮನಿಯಭೌತವಿಜ್ಞಾನಿ ಮತ್ತು ಅಮೆರಿಕದ ಒಬ್ಬ ಪೈಲಟ್ ಇದ್ದಾರೆ. ಜೊತೆಗೆ ವಾಸ್ತು ಶಾಸ್ತ್ರಜ್ಞ, ಪತ್ರಕರ್ತ ಹಾಗೂ ಮಣ್ಣಿನಗುಣಲಕ್ಷಣ ಅರಿಯಬಲ್ಲ ವಿಜ್ಞಾನಿ ಸೇರಿದ್ದಾರೆ. ಇನ್ನೊಂದು ವಿಚಾರ ಗೊತ್ತಾ, ಇದು ಭಾರಿ ಗಾತ್ರದ ಬಂಗಲೇಯೇನಲ್ಲ.ಅಬ್ಬಬ್ಬಾ ಅಂದರೆ 36 ಅಡಿ ಉದ್ದಗಲ, ಅಮ್ಮಮ್ಮಾ ಅಂದ್ರೆ 20 ಅಡಿ ಎತ್ತರವಿದೆ. ಮನೆಗೆ ಸದಾಕಾಲ ಬೆಳಕುಇರಬೇಕೆಂದು ಉತ್ತಮ ಸಾಮರ್ಥ್ಯದ ಸೌರಶಕ್ತಿ ಅಳವಡಿಸಲಾಗಿದೆ. 2030ರ ವೇಳೆಗೆ ಮಂಗಳನ ಅಂಗಳಕ್ಕೆಗಗನಯಾನಿಗಳನ್ನು ಕಳುಹಿಸಬೇಕೆನ್ನುವ ಯೋಜನೆ ಇರಿಸಿಕೊಂಡಿರುವ ನಾಸಾ ಈ ಪರೀಕ್ಷಾರ್ಥ ಮನೆಗೆ ಅಂದಾಜು 8ಕೋಟಿ ರೂಪಾಯಿ ವ್ಯಯ ಮಾಡಿದೆ ಎಂದು ಪ್ರಧಾನ ಸಂಶೋಧಕಿ ಕಿಮ್ ಬಿನ್ಸ್ಟೆಡ್ ಹೇಳಿದರು.
2015: ಬೆಂಗಳೂರು: ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪ್ರಮುಖ ರಾಜಕೀಯ ಪಕ್ಷಗಳು ಕಸರತ್ತು ನಡೆಸುತ್ತಿರುವಾಗಲೇ ಮೇಯರ್ ಹಾಗೂ ಉಪಮೇಯರ್ ಆಯ್ಕೆ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತು. ನಗರಾಭಿವೃದ್ಧಿ ಇಲಾಖೆ ಮೂಲಕ ನೂತನವಾಗಿ ಆಯ್ಕೆಯಾಗಿರುವ ಬಿಬಿಎಂಪಿ ಸದಸ್ಯರ ಪಟ್ಟಿಯನ್ನು ಅಧಿಸೂಚನೆ ಮೂಲಕ ಪ್ರಕಟಿಸಲಾಯಿತು. ಪ್ರಾದೇಶಿಕ ಆಯುಕ್ತರು ಬಹುತೇಕ ಆ.31ರಂದು ಚುನಾವಣೆ ದಿನಾಂಕ ಪ್ರಕಟಿಸುವ ನಿರೀಕ್ಷೆ ಇದೆ. ಈ ನಡುವೆ ಈವರೆಗೂ ರಾಜ್ಯ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದ ‘ರೆಸಾರ್ಟ್’ ರಾಜಕೀಯದ ರಂಗು ಇದೀಗ ಪಾಲಿಕೆ ಚುನಾವಣೆಗೂ ವಿಸ್ತರಣೆಯಾಯಿತು. ಸ್ವತಃ ಜೆಡಿಎಸ್ ನಾಯಕ ಎಚ್.ಡಿ.ಕುಮಾರ ಸ್ವಾಮಿ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ವೊಂದರಲ್ಲಿ ಬೀಡು ಬಿಟ್ಟರೆ, ಜೆಡಿಎಸ್ ಸದಸ್ಯರ ಇನ್ನೊಂದು ಗುಂಪು ಖಾಸಗಿ ಬಸ್ಸಿನಲ್ಲಿ ಕೇರಳದತ್ತ ಹೊರಟಿತು. ಬೆಂಗಳೂರಿನಲ್ಲಿ ಬಿಜೆಪಿ ಕಾರ್ಪೆರೇಟರ್ಗಳು ಆರ್. ಅಶೋಕ್ ಮನೆಯಲ್ಲಿ ಸಮಾಲೋಚನೆ ನಿರತರಾದರೆ, ಕೆಪಿಸಿಸಿ ಸಭೆ ಬೆಂಗಳೂರಿನಲ್ಲಿ ವಿಷಯ ಚರ್ಚಿಸಿತು. ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಅವರು ಜನತಾದಳ ಮುಖ್ಯಸ್ಥ ಎಚ್.ಡಿ. ದೇವೇಗೌಡರನ್ನು ಮಾತನಾಡಿಸಿ ಬಂದರು.
2015: ನವದೆಹಲಿ: ನಿವೃತ್ತ ಯೋಧರಿಗೆ ’ಏಕ ಶ್ರೇಣಿ ಏಕ ಪಿಂಚಣಿ’ ವ್ಯವಸ್ಥೆಯ ತ್ವರಿತ ಜಾರಿಗಾಗಿ ಆಗ್ರಹಿಸಿ ಸರದಿ ಉಪವಾಸ ಮುಷ್ಕರ ನಡೆಸುತ್ತಿದ್ದ ನಿವೃತ್ತ ಯೋಧರಲ್ಲಿ ಒಬ್ಬರಾದ ಸೇನಾ ಹವಿಲ್ದಾರ್ ಅಭಿಲಾಸ್ ಸಿಂಗ್ ಅವರು ಈದಿನ ನಿರಶನ ಜಾಗದಲ್ಲಿ ಅಸ್ವಸ್ಥರಾದರು. ತತ್ ಕ್ಷಣವೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಯಿತು. ’ಸಿಂಗ್ ಅವರನ್ನು ಆಸ್ಪತ್ರೆಗೆ ಒಯ್ಯಲಾಗಿದೆ. ಅವರು ಸರದಿ ನಿರಶನದಲ್ಲಿ ಪಾಲ್ಗೊಂಡಿದ್ದರು’ ಎಂದು ನಿವೃತ್ತ ಯೋಧರ ಸಂಯುಕ್ತ ರಂಗ ದ ಅಧಿಕಾರಿಯೊಬ್ಬರು ತಿಳಿಸಿದರು. ಸಿಂಗ್ ಹೊರತಾಗಿ ಆಮರಣ ನಿರಶನ ನಡೆಸುತ್ತಿರುವ ಇತರ ನಾಲ್ವರನ್ನೂ ಆರೋಗ್ಯ ವಿಷಮಿಸಿದ್ದನ್ನು ಅನುಸರಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿವೃತ್ತ ಯೋಧರ ಪ್ರತಿಭಟನೆಯು ಈದಿನ 76ನೇ ದಿನಕ್ಕೆ ಕಾಲಿರಿಸಿತು. ಏಕ ಶ್ರೇಣಿ, ಏಕ ಪಿಂಚಣಿ ವ್ಯವಸ್ಥೆ ಜಾರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರ ಹಿಂದಿನ ದಿನ ಕೋರಿತ್ತು. 22 ಲಕ್ಷ ಮಂದಿ ನಿವೃತ್ತ ಯೋಧರು ಮತ್ತು 6 ಲಕ್ಷಕ್ಕೂ ಹೆಚ್ಚು ಮೃತ ಯೋಧರ ಪತ್ನಿಯರಿಗೆ ಯೋಜನೆ ಅನ್ವಯಿಸುತ್ತದೆ. ಒಂದೇ ಶ್ರೇಣಿಯಲ್ಲಿ ನಿವೃತ್ತರಾದ ಎಲ್ಲ ಯೋಧರಿಗೂ ನಿವೃತ್ತಿಯ ದಿನಾಂಕದ ಮಿತಿಯನ್ನು ರದ್ದು ಪಡಿಸಿ ಸಮಾನ ಪಿಂಚಣಿ ವ್ಯವಸ್ಥೆ ಮಾಡುವಂತೆ ನಿವೃತ್ತ ಯೋಧರು ಆಗ್ರಹಿಸಿದ್ದರು. ಹಾಲಿ ಪಿಂಚಣಿ ವ್ಯವಸ್ಥೆಯಂತೆ 1996ರಲ್ಲಿ ನಿವೃತ್ತನಾದ ಮೇಜರ್ ಜನರಲ್, 1996ರ ನಂತರ ನಿವೃತ್ತರಾದ ಮೇಜರ್ ಜನರಲ್ಗಿಂತ ಕಡಿಮೆ ವೇತನ ಪಡೆಯುತ್ತಾರೆ.
2015: ನವದೆಹಲಿ: ಮಾಜಿ ರಾಷ್ಟ್ರೀಯ ಕುಸ್ತಿ ಕೋಚ್ ಮುಖ್ಯಸ್ಥ ವಿನೋದ್ ಕುಮಾರ್ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್ನ ಏಕಸದಸ್ಯ ಪೀಠದ ಆದೇಶಕ್ಕೆ ದೆಹಲಿ ಹೈಕೋರ್ಟ್ನ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿತು.
ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಜಯಂತ್ ನಾಥ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಶೇಷ ಕಲಾಪ ನಡೆಸಿ ವಿನೋದ ಕುಮಾರ್ ಅವರಿಗೆ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿತು. ರಾಷ್ಟ್ರಪತಿ ಭವನದಲ್ಲಿ ಈದಿನ ಸಂಜೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಹೈಕೋರ್ಟ್ನ ಏಕಸದಸ್ಯ ಪೀಠ ಹಿಂದಿನ ದಿನ ನೀಡಿದ್ದ ಆದೇಶ ವಿರುದ್ಧ ಕೇಂದ್ರ ಸರ್ಕಾರವು ಮೇಲ್ಮನವಿ ಸಲ್ಲಿಸಿತ್ತು. ಆ ಅರ್ಜಿಯ ವಿಶೇಷ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸಿತು. ಹೈಕೋರ್ಟ್ನ ಏಕಸದಸ್ಯ ಪೀಠವು ನೀಡಿದ ಆದೇಶಕ್ಕೆ ವಿಭಾಗೀಯ ಪೀಠವು ತಡೆ ನೀಡಿದೆ. ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ವಿಚಾರಣೆ ನಡೆಸದೆಯೇ ಏಕಸದಸ್ಯ ಪೀಠವು ತೀರ್ಪು ನೀಡಿದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಹೇಳಿದರು. ದ್ರೋಣಾಚಾರ್ಯ ಪ್ರಶಸ್ತಿ ಸಮಿತಿಯು ಪ್ರತಿಷ್ಠಿತ ಪ್ರಶಸ್ತಿಗೆ ತನ್ನನ್ನು ನಿರ್ಲಕ್ಷಿಸಿದ್ದನ್ನು ಪ್ರಶ್ನಿಸಿ ವಿನೋದ್ ಕುಮಾರ್ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಶಸ್ತಿ ಸಮಿತಿಯು ಈ ಪ್ರಶಸ್ತಿಗೆ ಅನೂಪ್ ಸಿಂಗ್ ದಹಿಯಾ ಹೆಸರನ್ನು ಶಿಫಾರಸು ಮಾಡಿತ್ತು. 2010ರಿಂದ 2015ರವರೆಗೆ ರಾಷ್ಟ್ರೀಯ ಪುರುಷರ ತಂಡದ ಕೋಚ್ ಮುಖ್ಯಸ್ಥ ವಿನೋದ್ ಕುಮಾರ್ ಅವರು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಗಳ ಸಾಧನೆಗಳಲ್ಲಿ ತಾವು ಅನೂಪ್ ಅವರಿಗಿಂತ ಹೆಚ್ಚು ಪಾಯಿಂಟ್ಗಳನ್ನು ಗಳಿಸಿದ್ದುದಾಗಿ ವಿನೋದ್ ಕುಮಾರ್ ಪ್ರತಿಪಾದಿಸಿದ್ದರು.
2015: ಲಂಡನ್: ಮದ್ಯ ಸೇವನೆಯ ಬಳಿಕ ನಿಮಗೆ ಇಷ್ಟವಾದ ಆಹಾರ ಅಥವಾ ನೀರು ಸೇವಿಸುವ ಮೂಲಕ ಮರುದಿನ ಬೆಳಗಿನ ಆಲಸ್ಯ (ಹ್ಯಾಂಗೋವರ್) ತಡೆಯಲು ಸಾಧ್ಯವಿಲ್ಲ ಎಂಬ ಎಂಬ ಕುತೂಹಲಕಾರಿ ವಿಚಾರವನ್ನು ಸಂಶೋಧನೆಯೊಂದು ಬಹಿರಂಗ ಪಡಿಸಿತು. ರಾತ್ರಿ ಮದ್ಯ ಸೇವನೆಯ ಬಳಿಕ ಇಷ್ಟವಾದ ಆಹಾರ ತಿಂದರೆ ಅಥವಾ ಚೆನ್ನಾಗಿ ನೀರು ಕುಡಿದರೆ ಮರುದಿನ ಬೆಳಗ್ಗೆ ’ಹ್ಯಾಂಗೋವರ್’ ಇರುವುದಿಲ್ಲ ಎಂಬುದು ಅತ್ಯಂತ ಜನ ಜನಿತವಾದ ನಂಬಿಕೆ. ಶೇಕಡಾ 25ರಿಂದ 30ರಷ್ಟು ಕುಡುಕರು ಸಾಮಾನ್ಯವಾಗಿ ಇದನ್ನೇ ಪ್ರತಿಪಾದಿಸುತ್ತಾರೆ. ಆದರೆ ಯಾರಿಗಾದರೂ ಇಷ್ಟವಾದ ತಿಂಡಿ ತಿಂದ ಬಳಿಕವೋ ಅಥವಾ ಚೆನ್ನಾಗಿ ನೀರು ಕುಡಿದ ಬಳಿಕವೋ ಹ್ಯಾಂಗೋವರ್ ಕಾಣಿಸದೇ ಇದ್ದಲ್ಲಿ ಅವರು ಕಡಿಮೆ ಕುಡಿದಿದ್ದಾರೆ ಅಥವಾ ಅವರು ಸತ್ಯ ಹೇಳುತ್ತಿಲ್ಲ ಎಂದೇ ಅದರ ಅರ್ಥ ಎಂದು ಸಂಶೋಧನೆ ಹೇಳಿತು. ‘ಹೆಚ್ಚು ಕುಡಿದಷ್ಟೂ ನೀವು ಹೆಚ್ಚು ಆಲಸಿಗಳಾಗುತ್ತೀರಿ ಅಥವಾ ಹೆಚ್ಚು ಹ್ಯಾಂಗೋವರ್ಗೆ ಒಳಗಾಗುತ್ತೀರಿ ಎಂಬುದು ಅತ್ಯಂತ ಸರಳವಾದ ಸತ್ಯ’ ಎಂದು ಈ ಕುರಿತು ಸಂಶೋಧನೆ ನಡೆಸಿದ ನೆದರ್ಲ್ಯಾಂಡ್ನ ಉಟ್ರೆಚ್ಟ್ ಯುನಿವರ್ಸಿಟಿಯ ತಂಡದ ನೇತಾರ ಡಾ. ಜೊರಿಸ್ ವರ್ಸ್ಟೆರ್ ಹೇಳಿದರು. ತಮಗೆ ಹ್ಯಾಂಗೋವರ್ ಅನುಭವವಾಗಿಲ್ಲ ಎಂದು ಹೇಳುವವರು ಹ್ಯಾಂಗೋವರ್ಗೆ ಕಾರಣವಾಗಬಹುದು ಎಂದು ಗ್ರಹಿಸಿಕೊಂಡು ವಾಸ್ತವವಾಗಿ ಕಡಿಮೆ ಕುಡಿದಿರುತ್ತಾರೆ ಎಂಬುದು ಜೊರಿಸ್ ಹೇಳಿಕೆ. ಈ ತೀರ್ಮಾನಕ್ಕೆ ಬರುವ ಮುನ್ನ ನೆದರ್ಲ್ಯಾಂಡ್ಸ್ ಮತ್ತು ಕೆನಡಾದ ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಕುಡಿತದ ಹವ್ಯಾಸ ಇದ್ದವರ ಸಮೀಕ್ಷೆ ನಡೆಸಿತ್ತು. ತಂಡವು ಸುಮಾರು 789 ಮಂದಿ ಕೆನಡಾ ವಿದ್ಯಾರ್ಥಿಗಳ ಕುಡಿತದ ಹವ್ಯಾಸ ಮತ್ತು ಹ್ಯಾಂಗೋವರ್ ತೀವ್ರತೆಯ ಬಗ್ಗೆ ಸಮೀಕ್ಷೆ ನಡೆಸಿತ್ತು. ಮದ್ಯ ಸೇವನೆಯ ಬಳಿಕ ಅವರು ನೇರವಾಗಿ ಏನಾದರೂ ಆಹಾರ ಸೇವಿಸಿದ್ದರೇ ಅಥವಾ ನೀರನ್ನು ಕುಡಿದಿದ್ದರೇ ಎಂಬ ಬಗೆಗೂ ತಂಡ ಸಮೀಕ್ಷೆ ನಡೆಸಿತ್ತು. ಮದ್ಯ ಸೇವನೆಯ ಬಳಿಕ ಆಹಾರ ತಿಂದ ಮೇಲೆ ಅಥವಾ ನೀರು ಕುಡಿದ ಬಳಿಕ ಅವರ ಹ್ಯಾಂಗೋವರ್ ಅನುಭವ ಏನು ಎಂಬ ಮಾಹಿತಿಯನ್ನೂ ತಂಡ ಕಲೆ ಹಾಕಿತ್ತು. ಮೈಮರೆಯುವಂತೆ ಕುಡಿದ 826 ಡಚ್ ವಿದ್ಯಾರ್ಥಿಗಳನ್ನು ಅವರು ಮದ್ಯ ಸೇವನೆ ಬಳಿಕ ಆಹಾರ ತಿಂದಿದ್ದರೇ ಅಥವಾ ನೀರು ಕುಡಿದಿದ್ದರೇ ಎಂದು ತಂಡ ಪ್ರಶ್ನಿಸಿತ್ತು. ಇವರ ಪೈಕಿ ಸುಮಾರು 450 ಮಂದಿ ಮದ್ಯ ಸೇವನೆಯ ಬಳಿಕ ಇಷ್ಟವಾದ ತಿಂಡಿ ತಿಂದಿದ್ದರು. ಅವರ ಹ್ಯಾಂಗೋವರ್ ಪ್ರಮಾಣವನ್ನು ತಿಳಿಸುವಂತೆಯೂ ತಂಡ ಅವರಿಗೆ ಸೂಚಿಸಿತ್ತು. ಉಭಯ ತಂಡಗಳಲ್ಲಿಯೂ ಹ್ಯಾಂಗೋವರ್ ತೀವ್ರತೆ ವಿಚಾರದಲ್ಲಿ ಹೆಚ್ಚಿನ ಭಿನ್ನಾಭಿಪ್ರಾಯ ಇರಲಿಲ್ಲ. ಮದ್ಯ ಸೇವನೆ ಬಳಿಕ ಆಹಾರ ತಿಂದ ಅಥವಾ ನೀರು ಕುಡಿದವರು ನೀಡಿದ ಅಂಕಿ ಅಂಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವ್ಯತ್ಯಾಸವಿತ್ತು. ಅದರೆ ಅದನ್ನೊಂದು ಅರ್ಥಪೂರ್ಣ ವ್ಯತ್ಯಾಸ ಎಂದು ಹೇಳಲು ಸಾಧ್ಯವಿರಲಿಲ್ಲ. ಈ ಸಮೀಕ್ಷೆಯಿಂದ ನಾವು ಅರಿತ ವಿಚಾರ ಏನೆಂದರೆ ಹ್ಯಾಂಗೋವರ್ನಿಂದ ಪಾರಾಗಲು ಇರುವ ಏಕೈಕ ಮಾರ್ಗ ಎಂದರೆ ಕಡಿಮೆ ಮದ್ಯ ಕುಡಿಯುವುದು ಎಂದು ಡಾ. ವರ್ಸ್ಟರ್ ಹೇಳಿದರು. ಆಮ್ ಸ್ಟರ್ ಡ್ಯಾಮಿನಲ್ಲಿ ಇತ್ತೀಚೆಗೆ ನಡೆದ ಯುರೋಪಿಯನ್ ಕಾಲೇಜ್ ಆಫ್ ನ್ಯೂರೋಸೈಕೊಫಾರ್ಮಕಾಲಜಿ (ಇಸಿಎನ್ಪಿ) ಕಾಂಗ್ರೆಸ್ನಲ್ಲಿ ಸಂಶೋಧನೆಯನ್ನು ಪ್ರಸ್ತುತ ಪಡಿಸಲಾಗಿತ್ತು.
2015: ಮುಂಬೈ: ರಾಷ್ಟ್ರವ್ಯಾಪಿ ಕುತೂಹಲ ಕೆರಳಿಸಿದ ಶೀನಾ ಬೋರಾ ಕೊಲೆ ಪ್ರಕರಣದ ತನಿಖೆಯ ದಿಕ್ಕು ರಾಯಗಡ ಜಿಲ್ಲೆಯಲ್ಲಿ ಲಭಿಸಿದ ಕಳೇಬರದ ಅವಶೇಷಗಳ ಬಗೆಗಿನ ವಿಧಿ ವಿಧಾನ ತಜ್ಞರ (ಫಾರೆನ್ಸಿಕ್) ವಿಶ್ಲೇಷಣೆಯತ್ತ ತಿರುಗಿತು. ಮೂರು ವರ್ಷಗಳ ಹಿಂದೆ ಕೊಲೆಯ ಬಳಿಕ ಶೀನಾ ಶವ ಹುಗಿದಿಡಲಾಗಿತ್ತು ಎನ್ನಲಾದ ಜಾಗದಲ್ಲಿ ಈ ಅವಶೇಷಗಳು ಲಭಿಸಿದ್ದವು. ‘ಎಲುಬು ಮತ್ತ ಅಸ್ತಿಪಂಜರದ ಅವಶೇಷಗಳನ್ನು ನಾವು ವಿಧಿವಿಧಾನ ತಜ್ಞರಿಗೆ ವಿಶ್ಲೇಷಣೆಗಾಗಿ ಕಳುಹಿಸಿದ್ದು ವರದಿಗಾಗಿ ಕಾಯುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 2012ರಲ್ಲಿ ರಾಯಗಡ ಪೊಲೀಸರಿಂದ ಪಡೆದಿದ್ದ ಕೆಲವು ಎಲುಬುಗಳನ್ನು ಜೆ.ಜೆ. ಆಸ್ಪತ್ರೆಯು ಖಾರ್ ಪೊಲೀಸರಿಗೆ ಒಪ್ಪಿಸಿತ್ತು. 2012ರ ಏಪ್ರಿಲ್ 24ರಂದು ಇಂದ್ರಾಣಿ ಮತ್ತು ಸಂಜೀವ ಖನ್ನಾ ಅವರು ಶೀನಾ ಬೋರಾಳನ್ನು ಭೇಟಿ ಮಾಡಿ ಕರೆದೊಯ್ಯವ ಕೆಲವೇ ಗಂಟೆಗಳ ಮುನ್ನ ಇಂದ್ರಾಣಿಯು ತನ್ನ ಮಗನಾದ ಮೈಖೆಲ್ನನ್ನೂ ಎಳೆತಂದು ಕೊಲ್ಲಲೆತ್ನಿಸಿದ್ದಳು ಎಂಬುದಾಗಿ ಮೈಖೆಲ್ ಬೋರಾ ಮಾಡಿರುವ ಪ್ರತಿಪಾದನೆ ಬಗೆಗೂ ಪೊಲೀಸರು ತನಿಖೆ ನಡೆಸಿದರು. ವರದಿಯೊಂದರ ಪ್ರಕಾರ ಖನ್ನಾ ಅವರು ಮೈಖೆಲ್ ಬೋರಾ ಹೇಳಿಕೆಯನ್ನು ದೃಢೀಕರಿಸಿದ್ದಾರೆ ಎನ್ನಲಾಯಿತು. ಆಸ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸುವ ನೆಪದಲ್ಲಿ ವರ್ಲಿಯ ತನ್ನ ಹೋಟೇಲ್ ಕೊಠಡಿಯಲ್ಲಿ ಮಾತನಾಡಲು ಬಂದಿದ್ದ ತನಗೆ ಮಾದಕ ದ್ರವ್ಯ ಕುಡಿಸಿದ ಬಳಿಕ ಇಂದ್ರಾಣಿ ಮತ್ತು ಸಂಜೀವ್ ಶೀನಾಳನ್ನು ಭೇಟಿ ಮಾಡಲು ತೆರಳಿದ್ದರು ಎಂದು ಮೈಖೆಲ್ ಪೊಲೀಸರಿಗೆ ಹೇಳಿಕೆ ನೀಡಿದ್ದ. ಅವರು ವಾಪಸ್ ಬರುವ ಹೊತ್ತಿಗಾಗಲೇ ಸಂಶಯ ಬಂದ ಹಿನ್ನೆಲೆಯಲ್ಲಿ ಅಮಲಿನಲ್ಲೇ ಇದ್ದ ತಾನು ಪರಾರಿಯಾಗಿದ್ದುದಾಗಿ ಮೈಖೆಲ್ ಹೇಳಿದ್ದ.
2015: ಪಟ್ನಾ: ಪರಿಸರ ಸಂರಕ್ಷಣೆ ಬಗ್ಗೆ ಜನ ಜಾಗೃತಿ ಮೂಡಿಸುವ ಸಲುವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮರಕ್ಕೆ ರಾಖಿ ಕಟ್ಟುವ ವಿನೂತನ ವಿಧಾನ ಅನುಸರಿಸಿ, ಬಿಹಾರಿನ ಹಸಿರು ಉಳಿಸುವಂತೆ ಜನತೆಯನ್ನು ಒತ್ತಾಯಿಸಿದರು. ‘ಆರೋಗ್ಯಪೂರ್ಣ ಪರಿಸರಕ್ಕಾಗಿ ಹೆಚ್ಚು ಸಸಿಗಳನ್ನು ನೆಡಲು ಮತ್ತು ಅವುಗಳನ್ನು ರಕ್ಷಿಸಲು ಜನತೆ ಮುಂದೆ ಬರಬೇಕು’ ಎಂದು ಇಲ್ಲಿನ ರಾಜಧಾನಿ ವಾಟಿಕಾದಲ್ಲಿ ಮರಕ್ಕೆ ರಾಖಿ ಕಟ್ಟಿದ ಬಳಿಕ ನಿತೀಶ್ ಕುಮಾರ್ ಹೇಳಿದರು. ಬಿಳಿಯ ಹತ್ತಿ ಬಟ್ಟೆಯ ಕುರ್ತಾ-ಪೈಜಾಮ ಧರಿಸಿದ್ದ ಮುಖ್ಯಮಂತ್ರಿ ‘ಪರಿಸರ ಸಂರಕ್ಷಣೆಗಾಗಿ ಮರಗಳಿಗೆ ರಾಖಿ ಕಟ್ಟುವಂತೆ ನಾನು ಜನರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ಭೂಮಿ ಮತ್ತು ಮನುಷ್ಯರನ್ನು ರಕ್ಷಿಸಲು ಇದು ಹೊಸ ಆರಂಭ’ ಎಂದು ನುಡಿದರು. ಗಿಡಗಳನ್ನು ನೆಡಲು ಮತ್ತು ರಾಜ್ಯದ ಹಸಿರು ಸಂರಕ್ಷಣೆ ಮಾಡಲು ಜನರಿಗೆ ಪ್ರೋತ್ಸಾಹ ಹಾಗೂ ನೆರವನ್ನು ರಾಜ್ಯ ಸರ್ಕಾರ ನೀಡಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಆಡಳಿತಾರೂಢ ಜನತಾದಳದ (ಸಂಯುಕ್ತ) ಹಲವಾರು ನಾಯಕರು, ಸರ್ಕಾರಿ ಅಧಿಕಾರಿಗಳು, ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ಕೆಲವು ವರ್ಷಗಳ ಹಿಂದೆ ನಿತೀಶ್ ಕುಮಾರ್ ಅವರು ರಾಜ್ಯದ ಕಾಡುಪ್ರದೇಶವನ್ನು ಹೆಚ್ಚಿಸುವ ಸಲುವಾಗಿ ‘ಹಸಿರು ಚಳವಳಿ’ ಹಮ್ಮಿಕೊಂಡಿದ್ದರು. ಪಟ್ನಾದಿಂದ 230 ಕಿಮೀ. ದೂರದ ಭಾಗಲ್ಪುರ ಜಿಲ್ಲೆಯ ಸಣ್ಣ ಗ್ರಾಮ ಧರ್ತಾರದಲ್ಲಿ ಗ್ರಾಮಸ್ಥರು ಮಾವು ಮತ್ತು ಲಿಚಿ ಸೇರಿದಂತೆ ಹಣ್ಣಿನ ಮರಗಳನ್ನು ನೆಡುವ ಮೂಲಕ ಎರಡು ವರ್ಷದ ಹಿಂದೆ ಸುದ್ದಿ ಮಾಡಿದ್ದುದರಿಂದ ಸ್ಪೂರ್ತಿ ಪಡೆದ ನಿತೀಶ್ ’ಹಸಿರು ಚಳವಳಿ’ಯನ್ನು ರೂಪಿಸಿದ್ದರು. ಪ್ರತಿಯೊಂದು ಹೆಣ್ಣು ಮಗುವಿನ ಜನ್ಮದಿನ ಆಚರಣೆಗಾಗಿ ಧರ್ತಾರ ಗ್ರಾಮಸ್ಥರು ಹಣ್ಣುಗಳ ಗಿಡ ನೆಡುವ ಪರಂಪರೆ ಹುಟ್ಟು ಹಾಕಿದ್ದರು. ಪರಿಣಾಮವಾಗಿ ಈ ಗ್ರಾಮ ಹಚ್ಚ ಹಸಿರಿನ ಗ್ರಾಮವಾಗಿ ಪರಿವರ್ತನೆಗೊಂಡಿತ್ತು.
2015: ವಡೋದರಾ: ಖ್ಯಾತ ಶಿಲ್ಪಿ ಮಹೇಂದ್ರ ಪಾಂಡ್ಯ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ತಮ್ಮ ಸ್ವಗೃಹದಲ್ಲೇ ಹಿಂದಿನ ದಿನ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿದವು. 89ರ ಹರೆಯದ ಪಾಂಡ್ಯ ಅವರು ಬರೋಡದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಲಲಿತ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿಯನ್ನು ಅಗಲಿದರು. ಕಲಾವಿದ ಹಾಗೂ ಪದ್ಮಶ್ರೀ ವಿಜೇತರಾದ ಗುಲಾಂ ಶೇಖ್, ಶಿಲ್ಪಿಗಳಾದ ನಾಗ್ಜಿ ಪಟೇಲ್, ರಾಘವ್ ಕನೇರಿಯಾ, ಜ್ಯೋತಿ ಭಟ್ ಮತ್ತಿತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಶಿಲ್ಪಕಲಾ ಕ್ಷೇತ್ರದಲ್ಲಿ ಪಾಂಡ್ಯ ಅವರು ಅಪಾರ ಸಿದ್ಧಾಂತ ಹಾಗೂ ಪ್ರಾಯೋಗಿಕ ಜ್ಞಾನ ಹೊಂದಿದ್ದರು.
2015: ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿನ ಸೇನಾ ಶಿಬಿರವೊಂದರಲ್ಲಿ ಆಕಸ್ಮಿಕವಾಗಿ ಸಂಭವಿಸಿದ ಸ್ಪೋಟವೊಂದರಲ್ಲಿ ಕನಿಷ್ಠ 18 ಮಂದಿ ಸೇನಾ ಯೋಧರು ಗಾಯಗೊಂಡರು. ಅವರ ಪೈಕಿ 7 ಜನರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಯಿತು. ಪುಲ್ವಾಮ ಜಿಲ್ಲೆಯ ಅವಂತಿಪೊರ ಪ್ರದೇಶದ ಕ್ರ್ಯೂನ ಕೋರ್ ಬ್ಯಾಟಲ್ ಸ್ಕೂಲ್ನಲ್ಲಿ (ಸಿಬಿಎಸ್) ಸಂಭವಿಸಿದ ಸ್ಪೋಟದಲ್ಲಿ ಕನಿಷ್ಠ 18 ಜನ ಗಾಯಗೊಂಡಿದ್ದಾರೆ. ಅವರ ಪೈಕಿ 7 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ವಿಶೇಷ ಚಿಕಿತ್ಸೆಗಾಗಿ ಅವರನ್ನು ವಿಮಾನದ ಮೂಲಕ ಇಲ್ಲಿನ ಬಾದಾಮಿಬಾಗ್ನಲ್ಲಿರುವ 92 ಬೇಸ್ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಉಳಿದ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅವರು ನುಡಿದರು. ಸ್ಫೋಟ ಹೇಗೆ ಸಂಭವಿಸಿತು ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ. ‘ಅದು ಆಕಸ್ಮಿಕವಾಗಿ ಸಂಭವಿಸಿರಬಹುದು. ಏನಿದ್ದರೂ ವಾಸ್ತವಾಂಶ ಏನು ಎಂಬುದು ತನಿಖೆಯ ಮೇಲಷ್ಟೇ ಗೊತ್ತಾಗಬಹುದು. ಈಗ ಏನೂ ಹೇಳಲಾಗದು’ ಎಂದು ಅಧಿಕಾರಿ ನುಡಿದರು.
2015: ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಾ ಬಂಧನ ಉತ್ಸವದ ಸಂದರ್ಭದಲ್ಲಿ ರಾಷ್ಟ್ರವನ್ನು ಅಭಿನಂದಿಸಿದರು. ‘ಪವಿತ್ರ ರಾಖಿಯು ಸಹೋದರಿಯರು ಮತ್ತು ಸಹೋದರರನ್ನು ಪ್ರೇಮ ಮತ್ತು ವಿಶ್ವಾಸದ ಬಂಧನದಲ್ಲಿ ಬೆಸೆಯುವುದು. ನಾವೆಲ್ಲರೂ ಈದಿನ ಭಾರತದ ಮಹಿಳೆಯರು ಅದರಲ್ಲೂ ನಿರ್ದಿಷ್ಟವಾಗಿ ಹೆಣ್ಣು ಮಗುವಿನ ಕಲ್ಯಾಣಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಳ್ಳುವ ಪ್ರತಿಜ್ಞೆಗೈಯೋಣ’ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಸಂದೇಶದಲ್ಲಿ ತಿಳಿಸಿದರು. ‘ರಕ್ಷಾ ಬಂಧನದ ಸಂದರ್ಭದಲ್ಲಿ ನಾನು ಭಾರತದ ನಾಗರಿಕರೆಲ್ಲರಿಗೂ ಶುಭಾಶಯಗಳನ್ನು ಸಲ್ಲಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದರು. ರಕ್ಷಾ ಬಂಧನವು ಸಹೋದರ - ಸಹೋದರಿಯರ ನಡುವಣ ಪ್ರೇಮ ಹಾಗೂ ಕರ್ತವ್ಯವನ್ನು ನೆನಪಿಸುವ ಹಬ್ಬವಾಗಿದ್ದು, ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಇದು ಸಹೋದರರ ಬಗೆಗಿನ ಸಹೋದರಿಯರ ಪ್ರೇಮ ಮತ್ತು ಅವರ ಹಿತಕ್ಕಾಗಿ ಪ್ರಾರ್ಥನೆ ಮಾಡುವ ಸಂಕೇತವಾಗಿದ್ದು, ಸಹೋದರರು ಜೀವನ ಪರ್ಯಂತ ಸಹೋದರಿಯರನ್ನು ರಕ್ಷಿಸುವ ಪ್ರತಿಜ್ಞೆ ಮಾಡುತ್ತಾರೆ.2008: ಖ್ಯಾತ ಅಂಕಣಕಾರ ಎಚ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) (90) ಅವರು ತೀವ್ರ ಹೃದಯಾಘಾತದಿಂದ ಮೈಸೂರಿನಲ್ಲಿ ನಿಧನರಾದರು. `ಪ್ರಜಾವಾಣಿ'ಯಲ್ಲಿ ಆರ್ಥಿಕ ಚಿಂತನೆ ಮತ್ತು ಸುಧಾದಲ್ಲಿ ವಾರದ ವ್ಯಕ್ತಿ ಕಾಲಂನ್ನು ಹಲವಾರು ವರ್ಷಗಳ ಕಾಲ ಬರೆದಿದ್ದ ಅವರು ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶವನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪ್ರಬಂಧಕಾರರೂ ಆಗಿದ್ದ ಅವರು ಸುಮಾರು 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದರು. ಅವರ ಸಮಗ್ರ ಪ್ರಬಂಧ ಕಳೆದ ಆಗಸ್ಟ್ 26ರಂದು ಅವರ 90ನೇ ಹುಟ್ಟಿದ ಹಬ್ಬದ ದಿನ ಬಿಡುಗಡೆಯಾಗಿತ್ತು. ಸಾಹಿತ್ಯ ಅಕಾಡೆಮಿ, ಗೌರವ ಡಾಕ್ಟರೇಟ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿದ್ದರು. ಹರ್ನಿಯಾ ಸಮಸ್ಯೆಯಿಂದ ಅವರನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
2008: ಷಿಕಾಗೋ ನಗರದಲ್ಲಿ ಅಮೆರಿಕಾದ ಕನ್ನಡ ಕೂಟಗಳ ಒಕ್ಕೂಟ (ಅಕ್ಕ) ಆಯೋಜಿಸಿದ 5ನೇ ವಿಶ್ವ ಕನ್ನಡ ಸಮ್ಮೇಳನವನ್ನು ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಉದ್ಘಾಟಿಸಿದರು.
2007: ಭಾರತದ ಫುಟ್ ಬಾಲ್ ಇತಿಹಾಸದಲ್ಲಿ ಈದಿನದ ರಾತ್ರಿ ಒಂದು ಸುಂದರ ರಾತ್ರಿ. ಭಾರತ ತಂಡದವರು ಮೊದಲ ಬಾರಿ ಒಎನ್ ಜಿಸಿ ನೆಹರೂ ಕಪ್ ಫುಟ್ ಬಾಲ್ ಟ್ರೋಫಿ ಗೆದ್ದು ಚಾಂಪಿಯನ್ ಶಿಪ್ ಪಡೆದುದು ಇದಕ್ಕೆ ಕಾರಣ. ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸೊಗಸಾದ ಆಟ ಪ್ರದರ್ಶಿಸಿದ ಭಾರತ ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಸಿರಿಯಾ ತಂಡವನ್ನು ಮಣಿಸಿ ಈ ಮಹತ್ವದ ಸಾಧನೆ ಮಾಡಿತು. ಇದಕ್ಕಾಗಿ ಭಾರತ ತಂಡ 40 ಸಾವಿರ ಡಾಲರ್ ಬಹುಮಾನ ಪಡೆಯಿತು.
2007: ಖ್ಯಾತ ಟ್ರ್ಯಾಪ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕಾ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ 14 ಮಂದಿಗೆ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಇತರ ಪ್ರಶಸ್ತಿ ವಿಜೇತರು: ಅರ್ಜುನ ಪ್ರಶಸ್ತಿ- ಜಯಂತಾ ತಾಲ್ಲೂಕ್ದಾರ್ (ಆರ್ಚರಿ), ಕೆ.ಎಂ.ಬಿನು (ಅಥ್ಲೆಟಿಕ್ಸ್), ಬಿ. ಚೇತನ್ ಆನಂದ್ (ಬ್ಯಾಡ್ಮಿಂಟನ್), ವಿಜೇಂದರ್ (ಬಾಕ್ಸಿಂಗ್), ಪಿ. ಹರಿಕೃಷ್ಣ (ಚೆಸ್), ಅಂಜುಮ್ ಚೋಪ್ರಾ (ಕ್ರಿಕೆಟ್), ಜ್ಯೋತಿ ಸುನಿತಾ ಕುಲ್ಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಷಾಲ್ (ಸ್ಕ್ವಾಷ್), ಸುಭಜಿತ್ ಸಾಹಾ (ಟೇಬಲ್ ಟೆನಿಸ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ನವನೀತ್ ಗೌತಮ್ (ಕಬಡ್ಡಿ), ರೋಹಿತ್ ಬಾಕರ್ (ಬ್ಯಾಡ್ಮಿಂಟನ್, ಅಂಗವಿಕಲರ ವಿಭಾಗ). ಧ್ಯಾನ್ ಚಂದ್ ಪ್ರಶಸ್ತಿ: ವರಿಂದರ್ ಸಿಂಗ್ (ಹಾಕಿ), ಶಂಷೇರ್ ಸಿಂಗ್ (ಕಬಡ್ಡಿ), ರಾಜೇಂದ್ರ ಸಿಂಗ್ (ಕುಸ್ತಿ); ದ್ರೋಣಾಚಾರ್ಯ ಪ್ರಶಸ್ತಿ: ಆರ್. ಡಿ. ಸಿಂಗ್ (ಅಂಗವಿಕಲರ ಅಥ್ಲೆಟಿಕ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್), ಕೊನೇರು ಅಶೋಕ್ (ಚೆಸ್).
2007: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಪ್ರತಿವರ್ಷ ಉತ್ತಮ ಶಿಕ್ಷಕರಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಗುಲ್ಬರ್ಗದ ಕಪನೂರ ನೆಹರು ಗಂಜ್ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದೇವೇಂದ್ರಪ್ಪ ಎಸ್. ತೋಟನಹಳ್ಳಿ ಅವರು ಆಯ್ಕೆಯಾದರು.
2007: ಶಾಬೇ ಬರಾತ್ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಲಾರಿ ಹರಿದು ನಾಲ್ವರು ಯುವಕರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಬೀದಿಗೆ ಇಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಆಗ್ರಾದಲ್ಲಿ ವ್ಯಾಪಕ ಹಿಂಸಾಕೃತ್ಯ ಸಂಭವಿಸಿ ಒಬ್ಬ ಬಾಲಕ ಗೋಲಿಬಾರಿಗೆ ಬಲಿಯಾದ.
2006: ಆಲಮಟ್ಟಿ ಜಲಾಶಯದ ಮುಂಭಾಗದ ಸೇತುವೆಯಿಂದ ಮ್ಯಾಕ್ಸಿಕ್ಯಾಬ್ ಒಂದು ಕೃಷ್ಣಾ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 29 ಜನ ಜಲ ಸಮಾಧಿಯಾದರು. ವರ್ಷದ ಹಿಂದೆ ನಡೆದಿದ್ದ ಸೋದರರ ಮದುವೆಯ ಬಾಸಿಂಗವನ್ನು ಕೂಡಲ ಸಂಗಮದಲ್ಲಿ ಬಿಟ್ಟು ಆಲಮಟ್ಟಿ ವೀಕ್ಷಣೆಗಾಗಿ ಹೊರಟಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನರಿದ್ದ ತಂಡವನ್ನು ಒಯ್ಯುತ್ತಿದ್ದ ಈ ಟೆಂಪೋದಲ್ಲಿ 32 ಜನರಿದ್ದರು. ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟೆಂಪೋ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಈ ದುರಂತಕ್ಕೆ ಕಾರಣ.
2006: ಆಧುನಿಕ ವಚನ ರಚನೆಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಅನ್ನದಾನಯ್ಯ ಪುರಾಣಿಕ, ವಚನ ಸಂಗೀತದ ಸುಧೆ ಹರಿಸಿದ ಧಾರವಾಡದ ಪಂಡಿತ ಸೋಮನಾಥ ಮರಡೂರ, ಸಂಶೋಧನಾ ಕ್ಷೇತ್ರದ್ಲಲಿ ಸೇವೆ ಸ್ಲಲಿಸಿದ ಧಾರವಾಡದ ಸಂಶೋಧಕ ವೀರಣ್ಣ ರಾಜೂರ ಅವರಿಗೆ ಪ್ರತಿಷ್ಠಿತ ರಮಣಶ್ರೀ ಪ್ರಶಸ್ತಿ ಪ್ರಕಟಿಸಲಾಯಿತು.
2006: ಅಂಥ್ರಾಕ್ಸ್ ವೈರಾಣು ದೇಹದ ಮೇಲೆ ದಾಳಿ ಮಾಡಲಾಗದಂತೆ ತಡೆಯಬಲ್ಲ ಹಾಗೂ ಸಾರ್ಸ್ ಸೋಂಕು ಹಾಗೂ ಏಡ್ಸ್ನಂತಹ ರೋಗಗಳನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕವನ್ನು ಪತ್ತೆ ಹಚುವಲ್ಲಿ ಯಶಸ್ವಿಯಾಗಿರುವುದಾಗಿ ನ್ಯೂಯಾರ್ಕಿನ ರೆನ್ಸೆಲೀರ್ ಪಾಲಿಟೆಕ್ನಿಕ್ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯ ರವಿಕಾನೆ ಮತ್ತು ಸಹೋದ್ಯೋಗಿಗಳು ಮೊದಲು ಈ ಮದ್ದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು ಅವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಥ್ರಾಕ್ಸ್ ನಿಂದ ಪಾರಾದವು ಎಂದು ಬಿಬಿಸಿಯ ಆನ್ ಲೈನ್ ಸಂಚಿಕೆ ವರದಿ ಮಾಡಿತು.
2006: ಖ್ಯಾತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಕರ್ನಾಟಕದ ಪಂಕಜ್ ಅಡ್ವಾಣಿ ಅವರಿಗೆ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.
2006: ಜಪಾನಿನ ರಕ್ಷಣೆ, ಪಶ್ಚಿಮ ಫೆಸಿಫಿಕ್ನ ಸ್ಥಿರತೆ ಹಾಗೂ ಶಾಂತಿಗೆ ಶ್ರಮಿಸುವ ಉದ್ದೇಶದೊಂದಿಗೆ ಅಮೆರಿಕದ ಕ್ಷಿಪಣಿ ನಿರೋಧಕ ಯುದ್ಧ ನೌಕೆ `ಯುಎಸ್ಎಸ್ ಶಿಲೋಹ್' ಜಪಾನಿನ ಯೊಕೊಸುಕಾ ಬಂದರಿಗೆ ಆಗಮಿಸಿತು. 360 ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯ ತೂಕ 10,000 ಟನ್ನುಗಳು. ನೌಕೆಯಿಂದ ಆಕಾಶಕ್ಕೆ ಚಿಮ್ಮುವ ಎಸ್ ಎಂ -3 ಕ್ಷಿಪಣಿ ನಿರೋಧಕಗಳ ಮೂಲಕ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.
1994: ಖ್ಯಾತ ಪತ್ರಕರ್ತ ತುಷಾರ್ ಕ್ರಾಂತಿ ಘೋಷ್ ನಿಧನ.
1982: ಮಾತಾ ಆನಂದ ಮಯಿ ನಿಧನ.
1974: ಚೌಧರಿ ಚರಣ್ ಸಿಂಗ್ ಅಧ್ಯಕ್ಷತಯಲ್ಲಿ ಲೋಕದಳ ಅಸ್ತಿತ್ವಕ್ಕೆ.
1926: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು. ಐದು ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಹೆಗಡೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು.
1915: ಸಾಹಿತಿ ಗುರುದೇವಿ ಹಿರೇಮಠ ಜನನ.
1913: ಸಾಹಿತ್ಯವಲಯದಲ್ಲಿ ಎನ್ಕೆ ಎಂದೇ ಖ್ಯಾತರಾದ ಎನ್ಕೆ ಕುಲಕರ್ಣಿ (20-8-1913ರಿಂದ 23-4-2005) ಅವರು ಕೃಷ್ಣರಾವ್ ನರಸಿಂಹ ಕುಲಕರ್ಣಿ - ಸೋನಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಧಾರವಾಡದ ಮಂದಿಗೆ `ನಾನೀಕಾಕ' ಎಂದೇ ಆತ್ಮೀಯರಾಗಿದ್ದ ಎನ್ಕೆ ಹಾಸ್ಯ ಪ್ರಹಸನ, ಕಾದಂಬರಿ, ನಗೆ ಲೇಖನ, ಲಲಿತ ಪ್ರಬಂಧ, ಜೀವನ ಚರಿತ್ರೆ ಇತ್ಯಾದಿ ವೈವಿಧ್ಯಮಯ ಬರವಣಿಗೆಯ ಕೃಷಿ ನಡೆಸಿದವರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರ್ಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1905: ಭಾರತದ ಖ್ಯಾತ ಹಾಕಿ ಆಟಗಾರ ಧ್ಯಾನ್ ಚಂದ್ (1905-1979) ಜನ್ಮದಿನ. ಇವರ ಜನ್ಮದಿನವನ್ನು ಭಾರತದ್ಲಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಇವರ ಹಾಕಿ ಆಟದ ಕೌಶಲ್ಯಗಳು ಮ್ಯಾಜಿಕ್ಕಿನಂತೆ ಭಾಸವಾಗುತ್ತಿದ್ದವು. ವಿದೇಶೀ ತಂಡಗಳು ಅವರ ಹಾಕಿ ಸ್ಟಿಕ್ಕಿನಲ್ಲಿ `ಅಯಸ್ಕಾಂತ' ಮತ್ತು `ಗೋಂದು/ ಮರವಜ್ರ'ಕ್ಕಾಗಿ ತಡಕಾಟ ನಡೆಸಿದ್ದೂ ಉಂಟು. 1936ರ ಬಲರ್ಿನ್ ಒಲಿಂಪಿಕ್ಸ್ ಬಳಿಕ ಜರ್ಮನಿಗೆ ವಲಸೆ ಬಂದದ್ದೇ ಆದರೆ ಕರ್ನಲ್ ಹುದ್ದೆ ನೀಡುವುದಾಗಿ ಹಿಟ್ಲರ್ ಅವರಿಗೆ ಆಹ್ವಾನ ಕೂಡಾ ನೀಡಿದ್ದ.
1896: ಅಮೆರಿಕಕ್ಕೆ ಭೇಟಿ ನೀಡಿದ ಚೀನಾದ ರಾಯಭಾರಿ ಲಿ ಹಂಗ್-ಚಾಂಗ್ ಅವರಿಗಾಗಿ ಚೀನಾ- ಅಮೆರಿಕದ `ಚಾಪ್-ಸ್ವೇ' ಹೆಸರಿನ ಹೊಚ್ಚ ಹೊಸ ಭಕ್ಷ್ಯವನ್ನು ನ್ಯೂಯಾರ್ಕ್ ನಗರದಲ್ಲಿ ತಯಾರಿಸಲಾಯಿತು.
1882: ಲಂಡನ್ನಿನ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು ಮೊದಲ ಬಾರಿಗೆ ಸೋಲಿಸಿತು. ಈ ಪಂದ್ಯವನ್ನು `ಆಷಸ್ ಟೆಸ್ಟ್' (ಬೂದಿ ಪಂದ್ಯ!) ಎಂದು ಕರೆಯಲಾಯಿತು. ಪಂದ್ಯ ಮುಗಿದ ಒಂದು ದಿನದ ಬಳಿಕ `ಸ್ಪೋರ್ಟಿಂಗ್ ಟೈಮ್' ಪತ್ರಿಕೆ `ಇನ್ ಮೆಮೋರಿಯಮ್' ವಿಭಾಗದಲ್ಲಿ ಇಂಗ್ಲಿಷ್ ಕ್ರಿಕೆಟ್ಟಿನ ಸಾವು ಕುರಿತ ಪ್ರಕಟಣೆಯನ್ನು ಪ್ರಕಟಿಸಿತು. `ಶವವನ್ನು ದಹಿಸಲಾಯಿತು ಮತ್ತು ಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು' ಎಂದು ಅದು ಬರೆದಿತ್ತು.
1842: `ನಾನ್ ಕಿಂಗ್ ಒಪ್ಪಂದ'ದ ಮೂಲಕ ಚೀನಾ ಮತ್ತು ಬ್ರಿಟನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರಿ ಘರ್ಷಣೆ ಕೊನೆಗೊಂಡಿತು. ಈ ಘರ್ಷಣೆ ಮೊದಲ `ಅಫೀಮು ಯುದ್ಧ' (1839-42) ಎಂದೇ ಖ್ಯಾತಿ ಪಡೆದಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಚೀನಾವು ಹಾಂಕಾಂಗ್ ಭೂಪ್ರದೇಶವನ್ನು ಬಿಟ್ಟು ಕೊಟ್ಟದ್ದಲ್ಲದೆ, ಐದು ಬಂದರುಗಳಲ್ಲಿ ವ್ಯಾಪಾರ ನಡೆಸಲು ಬ್ರಿಟಿಷರಿಗೆ ಅವಕಾಶ ನೀಡಿತು. ಒಪ್ಪಂದಕ್ಕೆ ಎಚ್ ಎಂಎಸ್ ಕಾರ್ನವಾಲಿಸ್ ಹಡಗಿನಲ್ಲಿ ಸಹಿ ಮಾಡಲಾಯಿತು. ಈ ಹಡಗನ್ನು 19ನೇ ಶತಮಾನದಲ್ಲಿ ಭಾರತದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ವಾಡಿಯಾಸ್ ಹಡಗು ನಿರ್ಮಾಣ ಸಂಸ್ಥೆ ಬಾಂಬೆ ಡಾಕ್ಸ್ ನಿರ್ಮಿಸಿತ್ತು.
1831: ಮೂಲ ವಿದ್ಯುತ್ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಮಬಲದ ಎರಡನೇ ಸರ್ಕಿಟ್ ವಿದ್ಯುತ್ ಪ್ರವಾಹ ಕುರಿತ ತನ್ನ ಸಂಶೋಧನೆಗಳನ್ನು ಮೈಕೆಲ್ ಫ್ಯಾರಡೆ ನಡೆಸಿದ. ಈ ವರ್ಷದಲ್ಲೇ ನಂತರ ಅಯಸ್ಕಾಂತ (ಮ್ಯಾಗ್ನೆಟ್) ಬಳಸಿ ನಡೆದ ಪ್ರಯೋಗಗಳು ಮೊತ್ತ ಮೊದಲ `ಡೈನಮೊ' ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.
No comments:
Post a Comment