ಇಂದಿನ ಇತಿಹಾಸ, History Today , ಆಗಸ್ಟ್ 03
2018: ನವದೆಹಲಿ: ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ನಡುವೆ ನಡೆಯುತ್ತಿದ್ದ ಬಹುದಿನಗಳ ಸಂಘರ್ಷಕ್ಕೆ ಕೊನೆಗೂ ವಿರಾಮ ಬಿದ್ದಿತು. ಉತ್ತರಾಖಂಡ ಮುಖ್ಯನ್ಯಾಯಮೂರ್ತಿ ಕುಟ್ಟಿಯಿಲ್ ಮ್ಯಾಥ್ಯೂ
ಜೋಸೆಫ್ (ಕೆ. ಎಂ. ಜೋಸೆಫ್) ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡುವಂತೆ ಕೊಲಿಜಿಯಂ ನೀಡಿದ್ದ ಶಿಫಾರಸ್ಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ಇದರ ಜತೆಗೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಮತ್ತು ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿನೀತ್ ಶರಣ್ ಅವರಿಗೂ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡಲಾಯಿತು. ಇದೇ ವರ್ಷದ ಜನವರಿ ೧೦ರಂದು ನ್ಯಾ. ಕೆ. ಎಂ. ಜೋಸೆಫ್ ಹೆಸರನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಹಿರಿಯ ವಕೀಲೆ ಇಂದು ಮಲ್ಹೋತ್ರಾ ಹೆಸರಿನ ಜತೆ ಜೋಸೆಫ್ ಹೆಸರನ್ನೂ ಶಿಫಾರಸ್ಸು ಮಾಡಲಾಗಿತ್ತು. ಆದರೆ ಜೋಸೆಫ್ ಹೆಸರನ್ನು ಹಿಂದಕ್ಕೆ ಕಳುಹಿಸಿದ ಕೇಂದ್ರ ಸರ್ಕಾರ ಮಲ್ಹೋತ್ರಾರನ್ನು ಮಾತ್ರ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಯಾಗಿ ನೇಮಕ ಮಾಡಲು ಒಪ್ಪಿಕೊಂಡಿತ್ತು. ಏಪ್ರಿಲ್ ೨೬ರಂದು ಮುಖ್ಯ ನ್ಯಾಯಮೂರ್ತಿ ಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಕಾನೂನು ಸಚಿವ ರವಿಂಶಕರ್ ಪ್ರಸಾದ್, ಕೆ. ಎಂ. ಜೋಸೆಫ್ ಅವರ ಹಿರಿತನದ ಶ್ರೇಣಿಯನ್ನು ಪ್ರಶ್ನಿಸಿದ್ದರು. ಜತೆಗೆ ಸುಪ್ರಿಂ ಕೋರ್ಟ್ನಲ್ಲಿ ಈಗಾಗಲೇ ಕೇರಳ ಹೈಕೋರ್ಟ್‌ನ ಪ್ರತಿನಿಧಿಗಳಿದ್ದಾರೆ. ಬೇರೆ ಹೈಕೋರ್ಟ್‌ನ ಪ್ರತಿನಿಧಿಗಳಿಲ್ಲ. ಪ್ರಾದೇಶಿಕ ಪ್ರಾತಿನಿಧ್ಯಕ್ಕೆ ಒತ್ತು ನೀಡುವುದು ಒಳಿತು ಎಂದು ಹೇಳಿ ಕೆ. ಎಂ. ಜೋಸೆಫ್ ಹೆಸರನ್ನು ಮರುಪರಿಶೀಲನೆ ಮಾಡುವಂತೆ ತಿಳಿಸಿದ್ದರು. ಆದರೆ ಆಳದಲ್ಲಿ ಕೆ.ಎಂ.ಜೋಸೆಫ್ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ವೇಳೆ ಉತ್ತರಾಖಂಡ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿದ್ದ ಕೇಂದ್ರ ಸರ್ಕಾರದ ತೀರ್ಮಾನವನ್ನು ರದ್ದುಗೊಳಿಸಿದ್ದರು. ಇದಕ್ಕೆ ಸೇಡು ತೀರಿಸಲು ಕೇಂದ್ರ ಸರ್ಕಾರ ಅವರ ನೇಮಕವನ್ನು ತಡೆ ಹಿಡಿಯುತ್ತಿದೆ ಎಂಬ ಸುದ್ದಿಗಳು ಓಡಾಡುತ್ತಿದ್ದವು. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೆ. ಎಂ. ಜೋಸೆಫ್ ನೇಮಕಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದ್ದು ಸುಪ್ರಿಂ ಕೋರ್ಟ್ನಲ್ಲಿ ದೊಡ್ಡಮಟ್ಟದ ಕೋಲಾಹಲವನ್ನೇ ಸೃಷ್ಟಿಸಿತ್ತು. ಸದ್ಯ ನಿವೃತ್ತರಾಗಿರುವ ಜೆ. ಚೆಲಮೇಶ್ವರ್, ಕೊಲಿಜಿಯಂನ ಇತರ ಸದಸ್ಯರಾದ ಕುರಿಯನ್ ಜೋಸೆಫ್, ರಂಜನ್ ಗೊಗೋಯಿ ಮತ್ತು ಮದನ್ ಬಿ ಲೋಕೂರ್ ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಎಲ್ಲಾ ನ್ಯಾಯಾಮೂರ್ತಿಗಳಿಗೂ ಪ್ರತ್ಯೇಕ ಪತ್ರಗಳನ್ನು ಬರೆದು ಪೂರ್ಣ ನ್ಯಾಯಾಲಯದಲ್ಲಿ ಇದರ ಬಗ್ಗೆ ಚರ್ಚೆಯಾಗಬೇಕು ಎಂದು ಕೋರಿಕೊಂಡಿದ್ದರು. ಮತ್ತು ನ್ಯಾಯಾಲಯದ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ನಂತರ ಜುಲೈ ೧೬ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಅಲಹಾಬಾದ್ ಹೈಕೋರ್ಟ್ ಮೂಲದ ವಿನೀತ್ ಶರಣ್ ಮತ್ತು ಕೊಲ್ಕತ್ತಾ ಹೈಕೋರ್ಟ್ ಮೂಲದ ಇಂದಿರಾ ಬ್ಯಾನರ್ಜಿ ಅವರ ಹೆಸರಿನ ಜತೆಗೆ ಕೆ. ಎಂ. ಜೋಸೆಫ್ ಹೆಸರನ್ನು ಶಿಫಾರಸ್ಸು ಮಾಡಲಾಗಿತ್ತು. ಈ ಮೂಲಕ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯ ಎಲ್ಲವನ್ನೂ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಕೊಲಿಜಿಯಂ ಶಿಫಾರಸ್ಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು. ಕೆ.ಎಂ.ಜೋಸೆಫ್ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾಗಲಿದ್ದಾರೆ. ಕೊಲಿಜಿಯಂನ ಇತರ ಶಿಫಾರಸ್ಸುಗಳಿಗೂ ಒಪ್ಪಿಗೆ: ಇದೇ ವೇಳೆ ಮೇ ೧೬ರಂದು ದೆಹಲಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ರನ್ನು ಜಮ್ಮು ಮತ್ತು ಕಾಶ್ಮೀರ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಶಿಫಾರಸ್ಸಿಗೂ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಕೇರಳ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನು ಅದೇ ಕೋರ್ಟ್ಗೆ ಖಾಯಂ ನೇಮಕ ಮಾಡಿಕೊಳ್ಳುವುದು, ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿ ಕೆ. ಎಸ್. ಝವೇರಿ ಅವರನ್ನು ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಮತ್ತು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಎಂ.ಆರ್. ಶಾರನ್ನು ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿಕೊಳ್ಳಲು ಕೇಂದ್ರ ಒಪ್ಪಿಕೊಂಡಿತು. ಕೊಲಿಜಿಯಂನ ನೂತನ ಶಿಫಾರಸ್ಸಿನ ಪ್ರಕಾರ ಹಾಲಿ ಪಾಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮೆನನ್ ದೆಹಲಿ ಹೈಕೋರ್ಟ್ಗೆ ವರ್ಗವಾಗಲಿದ್ದಾರೆ. ಕೊಲ್ಕತ್ತಾ ಹೈಕೋರ್ಟ್ಮುಖ್ಯ ನ್ಯಾಯಮೂರ್ತಿ ಅನಿರುದ್ಧ ಬೋಸ್ ಜಾರ್ಖಂಡ್‌ನ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
2018: ನವದೆಹಲಿ: ಮುಂಬರುವ ’ಆಕ್ಸಿಡೆಂಟಲ್
ಪ್ರೈಮ್ ಮಿನಿಸ್ಟರ್’ ಚಲನಚಿತ್ರ ನಿರ್ದೇಶಕ
ವಿಜಯ್ ರತ್ನಾಕರ್ ಗುಟ್ಟೆ ಅವರನ್ನು ಕನಿಷ್ಠ ೩೪ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್
ಟಿ) ವಂಚನೆ ಆರೋಪ ಪ್ರಕರಣದಲ್ಲಿ ಬಂಧಿಸಲಾಯಿತು. ಗುಟ್ಟೆ
ಅವರನ್ನು ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯವು (ಡಿಜಿಜಿಎಸ್ ಟಿ ಐ) ಮುಂಬೈಯಲ್ಲಿ
ಬಂಧಿಸಿದೆ ಎಂದು ವರದಿಗಳು ತಿಳಿಸಿದವು. ಮುಂಬೈ ನ್ಯಾಯಾಲಯವೊಂದು ಗುಟ್ಟೆ ಅವರನ್ನು ಆಗಸ್ಟ್ ೧೪ರ ವರೆಗೆ
ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು ಅವರನ್ನು ಆರ್ಥರ್ ರೋಡ್ ಸೆರೆಮನೆಗೆ ಕಳುಹಿಸಲಾಗಿದೆ ಎಂದು ವರದಿಗಳು
ಹೇಳಿದವು. ವರದಿಗಳ ಪರಕಾರ ವಿಜಯ್ ಗುಟ್ಟೆ ಅವರ ಸಂಸ್ಥೆ ವಿಆರ್ ಜಿ ಡಿಜಿಟಲ್ ಕಾರ್ಪೋರೇಷನ್ ಪ್ರೈವೇಟ್
ಲಿಮಿಟೆಡ್ ಸಂಸ್ಥೆಯು ಹೊರಿಜನ್ ಔಟ್ ಸೋರ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯಿಂದ ಅನಿಮೇಶನ್
ಮತ್ತು ಮ್ಯಾನ್ ಪವರ್ ಸೇವೆಗಳಿಗಾಗಿ ಸುಮಾರು ೩೪ ಕೋಟಿ ರೂಪಾಯಿ ಮೊತ್ತದ ಜಿಎಸ್ ಟಿಗೆ ಸಂಬಂಧಿಸಿದ ’ನಕಲ್ ಇನ್‌ವಾಯ್ಸ್’ಗಳನ್ನು ಪಡೆದಿತ್ತು
ಎಂದು ಆಪಾದಿಸಲಾಯಿತು. ೧೭೦ ಕೋಪಾಯಿ ಜಿ ಎಸ್ ಟಿ ವಂಚನೆಗಾಗಿ ಹೊರಿಜನ್ ಔಟ್ ಸೋಸ್ ಸೊಲ್ಯೂಷನ್ಸ್ ಪ್ರೈವೇಟ್
ಲಿಮಿಟೆಡ್ ಕಂಪೆನಿ ಮೇಲೆ ಸರ್ಕಾರಿ ಸಂಸ್ಥೆಯು ಕಣ್ಣಿಟ್ಟಿತ್ತು. ವಿಜಯ್ ಗುಟ್ಟೆ ವಿರುದ್ಧ ಸಿಜಿಎಸ್ಟಿ ಕಾಯ್ದೆಯ ಸೆಕ್ಷನ್
೧೩೨(೧)(ಸಿ) ಅಡಿಯಲ್ಲಿ ಯಾವುದೇ ವಸ್ತು ಸರಬರಾಜು ಅಥವಾ ಸೇವೆ ಇಲ್ಲದೆ ಬಿಲ್‌ಗಳು ಮತ್ತು ಇನ್ ವಾಯ್ಸ್
ಗಳನ್ನು ಬಳಸಿಕೊಂಡು ಇಂಪುಟ್ ಟ್ಯಾಕ್ಸ್ ಕ್ರೆಡಿಟ್ ಮಾಡಿಕೊಂಡದ್ದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಯಿತು. ವಿಜಯ್
ಗುಟ್ಟೆ ಅವರು ಈವರೆಗೆ ಎಮೋಷನಲ್ ಅತ್ಯಾಚಾರ್, ಟೈಮ್ ಬಾರಾ ವೈಟ್ ಮತ್ತು ಬದ್ಮಾಶಿಯಾಂ ಈ ಮೂರು ಚಲನಚಿತ್ರಗಳನ್ನು
ಮಾಡಿದ್ದರು. ‘ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಲನಚಿತ್ರವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಅವರ ಮಾಧ್ಯಮ ಸಲಹೆಗಾರ ಸಂಜಯ್ ಬರು ಅವರು ಬರೆದ ಇದೇ ಶೀರ್ಷಿಕೆಯ ಪುಸ್ತಕವನ್ನು ಆಧರಿಸಿದ್ದು ಅನುಪಮ್
ಖೇರ್ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾತ್ರವನ್ನು, ಅಕ್ಷಯ್ ಖನ್ನಾ ಅವರು ಬರು ಪಾತ್ರವನ್ನು
ಹಾಗೂ ದಿವ್ಯಾ ಸೇಠ್ ಶಾ ಅವರು ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಪಾತ್ರವನ್ನು ಈ ಚಿತ್ರದಲ್ಲಿ
ಮಾಡುತ್ತಿದ್ದಾರೆ. ಚಲನ ಚಿತ್ರವು ಡಿಸೆಂಬರ್ ೨೧ಕ್ಕೆ
ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಗಿತ್ತು. ವಿಆರ್ ಜಿ ಡಿಜಿಟಲ್ ಕಾಪೋರೇಷನ್ ಪಾವತಿ ಮಾಡಲಾಗಿದ್ದ
೨೮ ಕೋಟಿ ರೂಪಾಯಿಗಳ ಸೆನ್ ವ್ಯಾಟ್ (ಸೆಂಟ್ರಲ್ ವ್ಯಾಲ್ಯೂ ಆಡೆಡ್ ಟ್ಯಾಕ್ಸ್) ಮರುಪಾವತಿಗೂ ಸರ್ಕಾರಿ
ಸಂಸ್ಥೆಯನ್ನು ಕೋರಿತ್ತು ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿದ ವರದಿ ತಿಳಿಸಿತು. ಜುಲೈ ೧೭ರಿಂದ
ನಕಲಿ ಇನ್ ವಾಯ್ಸ್ ಗಳ ಅಡಿಯಲ್ಲಿ ಈ ಹಣ ಪಾವತಿ ಮಾಡಲಾಗಿತ್ತು. ವಿಜಯ್ ಅವರ ತಂದೆ ರತ್ನಾಕರ ಗುಟ್ಟೆ ಅವರು ೨೦೧೪ರ ವಿಧಾನಸಭಾ
ಚುನಾವಣೆಯಲ್ಲಿ ಪರ್ಭಾನಿ ಜಿಲ್ಲೆಯ ಗಂಗಾಖೇಡ್ ಕ್ಷೇತ್ರದಿಂದ ಬಿಜೆಪಿ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಯಾಗಿ
ಸ್ಪರ್ಧಿಸಿದ್ದರು. ಆದರೆ ಪರಾಭವಗೊಂಡಿದ್ದರು. ತೆರಿಗೆ
ವಂಚನೆ ಅಥವಾ ಮೋಸದಿಂದ ಇಂಪುಟ್ ಟ್ಯಾಕ್ಸ್ ಕ್ರೆಡಿಟ್ ಮಾಡಿಕೊಂಡು ಬಳಸಿದರೆ ಅಥವಾ ೫ ಕೋಟಿ ರೂಪಾಯಿಗಿಂತ
ಹೆಚ್ಚಿನ ಹಣವನ್ನು ಈ ರೀತಿ ಮರುಪಾವತಿ ಪಡೆದರೆ ಅಪರಾಧಿಗೆ ದಂಡ ಹಾಗೂ ೫ ವರ್ಷಗಳವರೆಗಿನ ಸೆರೆವಾಸ
ವಿಧಿಸಬಹುದು. ‘ಆರೋಪಿಯು (ಗುಟ್ಟೆ) ಇಲ್ಲದೇ ಇದ್ದ
ಇಂಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಂಡದ್ದಷ್ಟೇ ಅಲ್ಲ, ವಂಚನೆಯ ಮೂಲಕ ಜಿ ಎಸ್ ಟಿ ಇಲಾಖೆಯಿಂದ
ಈ ಐಟಿಸಿಯನ್ನು ನಕಲಿ/ ಬೋಗಸ್ ಇನ್ ವಾಯ್ಸ್ ಗಳ ಬಲದಿಂದ ಮರುಪಾವತಿಗೂ ಕೋರಿದ್ದಾರೆ, ತನ್ಮೂಲಕ ಬೊಕ್ಕಸಕ್ಕೆ
ವಂಚನೆ ಎಸಗಿದ್ದಾರೆ’ ಎಂದು ನ್ಯಾಯಾಲಯಕ್ಕೆ
ಸಲ್ಲಿಸಲಾದ ರಿಮಾಂಡ್ ಅರ್ಜಿಯಲ್ಲಿ ತಿಳಿಸಲಾಗಿದೆ ಎಂದು ವರದಿ ಹೇಳಿತು. ವಿಜಯ್ ಗುಟ್ಟೆ ಅವರು ತನಿಖೆಯಲ್ಲೂ
ಸಹಕರಿಸುತ್ತಿಲ್ಲ ಎಂದು ಏಜೆನ್ಸಿ ತಿಳಿಸಿರುವುದಾಗಿ ವರದಿ ಹೇಳಿತು. ಗುಟ್ಟೆ
ಅವರ ತಂದೆ ೫,೫೦೦ ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣ ಎದುರಿಸುತ್ತಿರುವ ವೇಳೆಯಲ್ಲೇ ವಿಜಯ್
ಗುಟ್ಟೆ ಅವರ ಬಂಧನವಾಯಿತು.
2018: ನವದೆಹಲಿ: ಮುಜಾಫ್ಫರಪುರ ಬಾಲಿಕಾಧಾಮ ಅತ್ಯಾಚಾರ ಪ್ರಕರಣಗಳ ಬಗ್ಗೆ ತಮ್ಮ
ಮೌನ ಮುರಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಘಟನೆಯಿಂದ ತಮ್ಮ ಸರ್ಕಾರಕ್ಕೆ ನಾಚಿಕೆಯಾಗಿದೆ
ಎಂದು ಹೇಳಿ, ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ‘ಮುಜಾಫ್ಫರಪುರ ಮೇ ಐಸಿ ಘಟನಾ ಘಟ್ ಗಯಿ ಕಿ ಹಮ್ ಶರಮ್ಸಾರ್
ಹೋ ಗಯೆ. ಸಿಬಿಐ ಜಾಂಜ್ ಕರ್ ರಹೀ ಹೈ, ಹೈಕೋರ್ಟ ಇಸ್ಕಿ ಮಾನಿಟರಿಂಗ್ ಕರೆ (ಮುಜಾಫ್ಫರಪುರದಲ್ಲಿ ನಮಗೆ
ನಾಚಿಕೆಯಾಗುವಂತಹ ಘಟನೆ ಘಟಿಸಿದೆ. ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ. ಹೈಕೋರ್ಟ್ ಕೂಡಾ ಅದರ
ಮೇಲೆ ನಿಗಾ ಇಡಬೇಕು’ ಎಂದು ಮುಖ್ಯಮಂತ್ರಿ
ನುಡಿದರು. ‘ಯಾರ ಬಗೆಗೂ ಉದಾರತೆ ತೋರಿಸಲಾಗುವುದಿಲ್ಲ.
ತಪ್ಪಿತಸ್ಥರು ಎಂದು ಕಂಡು ಬಂದ ಎಲ್ಲರನ್ನೂ ಕಠಿಣವಾಗಿ ಶಿಕ್ಷಿಸಲಾಗುವುದು ಎಂದು ನಾನು ಪ್ರತಿಯೊಬ್ಬರಿಗೂ
ಭರವಸೆ ನೀಡಬಯಸುತ್ತೇನೆ’ ಎಂದು ನಿತೀಶ್ ಹೇಳಿದರು.
ಪಾಟ್ನಾದಲ್ಲಿ ’ಕನ್ಯಾ ಉತ್ಥಾನ ಯೋಜನಾ’ ಉದ್ಘಾಟಿಸಿ ಮಾತನಾಡುತ್ತಿದ್ದ
ಮುಖ್ಯಮಂತ್ರಿ, ಪ್ರಕರಣದ ವಿವರಗಳನ್ನು ತಿಳಿದು ತಮಗೆ ಅತ್ಯಂತ ನೋವಾಯಿತು. ಆದರೆ ಯಾವಾಗಲೂ ಪ್ರಕರಣದ
ತನಿಖೆಯ ಪ್ರಗತಿ ಬಗ್ಗೆ ಮುಖ್ಯಕಾರ್ಯದರ್ಶಿ ದೀಪಕ್ ಕುಮಾರ್ ಮತ್ತು ಪ್ರಿನ್ಸಿಪಲ್ ಕಾರ್‍ಯದರ್ಶಿ
(ಸಮಾಜ ಕಲ್ಯಾಣ ಇಲಾಖೆ) ಅತುಲ್ ಪ್ರಸಾದ್ ಜೊತೆಗೆ ನಿರಂತರ ಸಂಪರ್ಕ ಇಟ್ಟುಕೊಂಡು ವಿಚಾರಿಸುತ್ತಿದ್ದೆ
ಎಂದು ನುಡಿದರು. ಯಾರು ಬೇಕಾದರೂ ಮುಂದೆ ಬಂದು ಸಕಾಲದಲ್ಲಿ
ತಮ್ಮ ಕಾಳಜಿ ವ್ಯಕ್ತ ಪಡಿಸಲು ಸಾಧ್ಯವಾಗುವಂತೆ ಇನ್ನಷ್ಟು ಪಾರದರ್ಶಕತೆ ತರುವ ಸಲುವಾಗಿ ವ್ಯವಸ್ಥೆಯನ್ನು
ಆಮೂಲಾಗ್ರ ಸುಧಾರಿಸಬೇಕು ಎಂದೂ ಮುಖ್ಯಮಂತ್ರಿ ಹೇಳಿದರು.
ಮುಜಾಫ್ಫರಪುರ ಬಾಲಿಕಾಧಾಮದಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ ನಡೆಸಿದ ಪ್ರಕರಣದ
ವಿರುದ್ಧ ಮಹಾ ಮೈತ್ರಿಯ ಬೆಂಬಲದೊಂದಿಗೆ ಎಡಪಕ್ಷಗಳು ನೀಡಿದ್ದ ಬಿಹಾರ್ ಬಂದ್ ಕರೆ ಸಂದರ್ಭದಲ್ಲಿ ಗುರುವಾರ
ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು
ವಿಷಯ ಕುರಿತು ಮಾತನಾಡುವಂತೆ ಒತ್ತಡ ಹೇರುವುದಾಗಿ ಪ್ರತಿಜ್ಞೆ ಗೈದಿದ್ದರು. ‘ನಾನು ಮತ್ತು ನನ್ನ ಪಕ್ಷ ಮುಖ್ಯಮಂತ್ರಿ ನಿತೀಶ್ ಕುಮಾರ್
ಅವರು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವಂತೆ ಒತ್ತಡ ಹಾಕುವುದು’ ಎಂದು ತೇಜಸ್ವಿ ಹೇಳಿದ್ದರು.
೩೦ ಬಾಲಕಿಯರ ವಿರುದ್ಧ ನಡೆದ ಲೈಂಗಿಕ ಶೋಷಣೆ ಬಗ್ಗೆ ನಿತೀಶ್ ಕುಮಾರ್ ಅವರ ಮೌನವು ರಾಜ್ಯಪಾಲ ಸತ್ಯಪಾಲ
ಮಲಿಕ್ ಅವರನ್ನೂ ಸಲಹೆ ನೀಡುವಂತೆ ಪ್ರಚೋದಿಸಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ಪಾಟ್ನಾ ಹೈಕೋರ್ಟಿನ
ಮುಖ್ಯ ನ್ಯಾಯಮೂರ್ತಿ ಮತ್ತು ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರಿಗೆ ಬರೆದ ಪತ್ರದಲ್ಲಿ
ಮಲಿಕ್ ಅವರು ಲೈಂಗಿಕ ಶೋಷಣೆ ಪ್ರಕರಣಗಳನ್ನು ಸಕಾಲದಲ್ಲಿ ಇತ್ಯರ್ಥ ಪಡಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳನ್ನು
ರಚಿಸುವಂತೆ ಸಲಹೆ ಮಾಡಿದ್ದರು. ಬಾಲಿಕಾಧಾಮದ ಹಗರಣ ಬಗ್ಗೆ ಮೊದಲಿಗೆ ಬೆಳಕು ಚೆಲ್ಲಿದ ಟಾಟಾ ಇನ್ ಸ್ಟಿಟ್ಯೂಟ್
ಆಫ್ ಸೋಶಿಯಲ್ ಸೈನ್ಸಸ್ (ಟಿಐಎಸ್ ಎಸ್) ವರದಿ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆಯೂ ಅವರು ಸೂಚಿಸಿದ್ದರು. ಮುಜಾಫ್ಫರಪುರ ಮೂಲದ ಸರ್ಕಾರೇತರ ಸಂಘಟನೆ ಸೇವಾ ಸಂಕಲ್ಪ
ಏವಂ ವಿಕಾಸ ಸಮಿತಿಯು ನಡೆಸುತ್ತಿದ್ದ ಬಾಲಿಕಾಧಾಮದ ೪೨ ಬಾಲಕಿಯರ ಪೈಕಿ ೩೪ ಮಂದಿ ಲೈಂಗಿಕ ಶೋಷಣೆಗೆ
ಒಳಗಾದದ್ದು ವೈದ್ಯಕೀಯ ವರದಿಗಳಿಂದ ದೃಢ ಪಟ್ಟಿತ್ತು. ಸಮಿತಿಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ
ಮುಖ್ಯ ಆರೋಪಿ ಬೃಜೇಶ್ ಥಾಕೂರ್ ಮತ್ತು ಇತರ ೧೦ ಮಂದಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶಿಫಾರಸು ಮೇರೆಗೆ ಪ್ರಸ್ತುತ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.
2018: ನವದೆಹಲಿ: ದೇಶಭ್ರಷ್ಟ ವಜ್ರಾಭರಣ
ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ಹೂಡಿಕೆ ಘಟಕದಿಂದ ಪೌರತ್ವ ಒದಗಿಸಲು ಪೂರಕ ವರದಿ ನೀಡಲಾಗಿತ್ತು
ಎಂಬ ವರದಿಗಳನ್ನು ಭಾರತದ ಭದ್ರತಾ ವಿನಿಯಮಯ ಮಂಡಳಿ (ಸೆಬಿ) ತಳ್ಳಿಹಾಕಿತು. ಈ ವರದಿಯನ್ನು ಆಧರಿಸಿಯೇ ಕೆರಿಬಿಯನ್ ರಾಷ್ಟ್ರದ ಪೌರತ್ವವನ್ನು
ನೀಡಲಾಗಿದೆ ಎಂದು ಆಂಟಿಗುವಾ ಸರ್ಕಾರ ಪ್ರತಿಪಾದಿಸಿತು. ಆಂಟಿಗುವಾದ ಹೂಡಿಕೆ ಘಟಕದಿಂದ (ಸಿಐಯು) ಪೌರತ್ವಕ್ಕಾಗಿ
ಯಾವುದೇ ಮನವಿಯೂ ಬಂದಿರಲಿಲ್ಲ ಅಥವಾ ಯಾವುದೇ ತನಿಖೆಯ ಪ್ರಗತಿ ಬಗ್ಗೆ ಆಂಟಿಗುವಾದ ಹೂಡಿಕೆ ಘಟಕ ಕೋರಿರಲಿಲ್ಲ.
ಸಿಐಯುಗೆ ಅಂತಹ ಮಾಹಿತಿಯನ್ನು ಕೊಟ್ಟದ್ದೂ ಇಲ್ಲ’ ಎಂದು ಮಾರುಕಟ್ಟೆ ನಿಯಂತ್ರಕ
ಸಂಸ್ಥೆ ಹೇಳಿಕೆಯಲ್ಲಿ ಸ್ಪಷ್ಟ ಪಡಿಸಿತು. ಭಾರತ ಸರ್ಕಾರದ
ಸಂಸ್ಥೆಗಳು ಕಳೆದ ವರ್ಷ ಚೊಕ್ಸಿ ವಿರುದ್ಧ ಯಾವುದೇ ಪ್ರತಿಕೂಲ ಮಾಹಿತಿ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದನ್ನು
ಅನುಸರಿಸಿ ಆತ ಆಂಟಿಗುವಾ ಪೌರತ್ವಕ್ಕೆ ಸೂಕ್ತ ಅಭ್ಯರ್ಥಿ ಎಂಬುದಾಗಿ ಪರಿಗಣಿಸಲಾಯಿತು ಎಂದು ಆಂಟಿಗುವಾ
ಸರ್ಕಾರ ಹೇಳಿದ್ದನ್ನು ಅನುಸರಿಸಿ ಸೆಬಿ ಈ ಸ್ಪಷ್ಟನೆ ನೀಡಿತು. ಚೊಕ್ಸಿ ಹಿನ್ನೆಲೆ ಬಗ್ಗೆ ತಪಾಸಣೆ
ನಡೆಸಿದ ಸಂದರ್ಭದಲ್ಲಿ ವಜ್ರಾಭರಣ ಉದ್ಯಮಿ ವಿರುದ್ಧ ತಾನು ಹೂಡಿದ್ದ ಎರಡು ಪ್ರಕರಣಗಳನ್ನು ಸೆಬಿ ಮುಕ್ತಾಯಗೊಳಿಸಿದ್ದು
ಸ್ಪಷ್ಟವಾಯಿತು ಎಂದು ಆಂಟಿಗುವಾದ ಹೂಡಿಕಾ ಘಟಕ ತಿಳಿಸಿತ್ತು. ತನಿಖೆಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡುವಂತೆ ತಾನು ಕೋರಿದ್ದು,
ಸೆಬಿ ನೀಡಿದ ದೃಢೀಕರಣದ ದಾಖಲೆ ತನಗೆ ಲಭಿಸಿತು. ಅದರಲ್ಲಿ ಒಂದು ಪ್ರಕರಣದಲ್ಲಿ ವಿಷಯವನ್ನು ತೃಪ್ತಿಕರವಾಗಿ
ಮುಕ್ತಾಯಗೊಳಿಸಲಾಗಿದೆ ಮತ್ತು ಇನ್ನೊಂದರಲ್ಲಿ ಎರಡನೇ ಪ್ರಕರಣ ಮುಂದುವರೆಸಲು ಸಾಕಷ್ಟು ಸಾಕ್ಷ್ಯಾಧಾರಗಳು
ಇಲ್ಲ ಎಂಬುದಾಗಿ ದೃಢ ಪಡಿಸಲಾಗಿತ್ತು ಎಂದು ಆಂಟಿಗುವಾದ ಸಿಐಯು ತಿಳಿಸಿತ್ತು. ಕಠಿಣ ಹಿನ್ನೆಲೆ ತಪಾಸಣೆಗಳನ್ನು ತಾನು ನಡೆಸಿದ್ದಾಗಿಯೂ
ಆಗ ಮುಂಬೈ ಪೊಲೀಸರು ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಲಭಿಸಿದುದಾಗಿಯೂ
ದ್ವೀಪರಾಷ್ಟ್ರ ಸರ್ಕಾರ ಪ್ರತಿಪಾದಿಸಿತ್ತು. ‘ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ
ಸ್ಪಷ್ಟನೆ ನೀಡುವ ಯತ್ನವಾಗಿ ಈ ಮಾಹಿತಿಗಳನ್ನು ಬಹಿರಂಗ ಪಡಿಸಲಾಗಿದೆ ಎಂಬುದಾಗಿ ಸಿಐಯು ಹೇಳಿಕೆ ತಿಳಿಸಿದ್ದು
ಅದನ್ನು ಆಂಟಿಗುವಾ ಅಬ್ಸರ್ವರ್ ಪತ್ರಿಕೆಯ ವೆಬ್ ಸೈಟ್ ಪ್ರಕಟಿಸಿತು. ಓಪನ್ ಸೋರ್ಸ್ ಇಂಟರ್ ನೆಟ್
ತಪಾಸಣೆ, ಥಾಂಪ್ಸನ್ ರಾಯಿಟರ್‍ಸ್ ವರ್ಲ್ಡ -ಚೆಕ್, ವಿವಿಧ ಸ್ಯಾಕ್ಷನ್ ಪಟ್ಟಿಗಳ ಬಗೆಗಿನ ತಪಾಸಣೆ,
ಇಂಟರ್ ಪೋಲ್ ನಂತಹ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ಜೊತೆಗಿನ ವ್ಯವಹಾರ ಇತ್ಯಾದಿಗಳ
ಬಗೆಗಿನ ತನಿಖೆಗಳು ಈ ತಪಾಸಣೆಗಳಲ್ಲಿ ಸೇರಿದ್ದವು ಎಂದು ಅದು ಹೇಳಿತು. ‘ಈ ಎಲ್ಲ ತಪಾಸಣೆಗಳ ಫಲಿತಾಂಶಗಳು ಲಭಿಸಿದ ಬಳಿಕ ಮತ್ತು
ಅವುಗಳನ್ನು ಅಂದಾಜು ಮಾಡಿದ ಬಳಿಕ ಅರ್ಜಿ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಅರ್ಜಿದಾರನ
ಬಗ್ಗೆ ಯಾವುದೇ ಅವಹೇಳನಕಾರಿ ಮಾಹಿತಿ ಇರಲಿಲ್ಲ’ ಎಂದು ಅದು ತಿಳಿಸಿತು.
ಚೊಕ್ಸಿ ಮತ್ತು ಅಳಿಯ ನೀರವ್ ಮೋದಿ ೧೩,೫೭೮ ಕೋಟಿ ರೂಪಾಯಿ ಮೌಲ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ
ಪ್ರಕರಣದಲ್ಲಿ ಬೇಕಾಗಿದ್ದು, ಪ್ರಕರಣದ ತನಿಖೆಯನ್ನು ಪ್ರಸ್ತುತ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು
ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿವೆ. ಹೂಡಿಕೆ
ನೀತಿಯನ್ವಯ ಸುಮಾರು ೧.೩ ಕೋಟಿ ರೂಪಾಯಿಗಳನ್ನು ಪಾವತಿ ಮಾಡಿ ಚೊಕ್ಸಿ ಆಂಟಿಗುವಾ ಪೌರತ್ವವನ್ನು ಖರೀದಿಸಿರಬಹುದು
ಎನ್ನಲಾಗುತ್ತಿದೆ. ಜನವರಿ ಮೊದಲವಾರದಲ್ಲಿ ಭಾರತ ತ್ಯಜಿಸಿದ್ದ ಚೊಕ್ಸಿ ಜನವರಿ ೧೫ರಂದು ಅಲ್ಲಿನ ಪೌರನಾಗಿ
ಪ್ರಮಾಣ ಸ್ವೀಕರಿಸಿದ್ದರು. ಜನವರಿ ೨೯ರಂದು ಸಿಬಿಐ ಪ್ರಕರಣ ದಾಖಲಿಸಿ ಚೊಕ್ಸಿ ಮತ್ತು ನೀರವ್ ಮೋದಿ
ವಿರುದ್ಧ ತನಿಖೆ ಆರಂಭಿಸಿತ್ತು. ಕಾಂಗ್ರೆಸ್ ಟೀಕೆ:
ಆಂಟಿಗುವಾ ಸರ್ಕಾರದ ಪ್ರತಿಪಾದನೆಯ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್
’ಆಘಾತಕಾರೀ ವಿವರಗಳು ಕೆರಿಬಿಯನ್ ರಾಷ್ಟ್ರಕ್ಕೆ ಚೊಕ್ಸಿ ಪರಾರಿಯಾಗುವಲ್ಲಿ ಮೋದಿ ಸರ್ಕಾರ ಶಾಮೀಲಾಗಿದ್ದುದನ್ನು ಬಯಲು ಮಾಡಿವೆ’ ಎಂದು ಹೇಳಿತು. ‘ಲೂಟಿ ಮಾಡಿ ಮತ್ತು ಅವರು
ಓಡುವಂತೆ ಮಾಡಿ ಎಂಬುದು ಮೋದಿ ಸರ್ಕಾರದ ಮುಖ್ಯನೀತಿಯಾಗಿದೆ. ಈ ಆಘಾತಕಾರಿ ವಿವರಗಳು ಮೋದಿ ಸರ್ಕಾರದ
ಮಹಾ ಹಗರಣವನ್ನು ಅನಾವರಣಗೊಳಿಸಿದೆ’ ಎಂದು ಕಾಂಗ್ರೆಸ್ ಮುಖ್ಯ
ವಕ್ತಾರ ರಣದೀಪ್ ಸುರ್ಜಿವಾಲ ಹೇಳಿಕೆಯೊಂದರಲ್ಲಿ ತಿಳಿಸಿದರು. ಪ್ರಧಾನಿ
ನರೇಂದ್ರ ಮೋದಿ ಅವರು ೨೦೧೮ರ ಏಪ್ರಿಲ್‌ನಲ್ಲಿ ಗ್ಯಾಸ್ಟನ್ ಬ್ರೌನ್ ನಲ್ಲಿ ಆಂಟಿಗುವಾ ಪ್ರಧಾನಿಯನ್ನು
ಭೇಟಿ ಮಾಡಿದ್ದಾಗ ಈ ವಿಷಯವನ್ನು ಏಕೆ ಪ್ರಸ್ತಾಪಿಸಲಿಲ್ಲ ಎಂದು ಸುರ್ಜಿವಾಲಾ ಪ್ರಶ್ನಿಸಿದರು. ಚೊಕ್ಸಿ
ವಿರುದ್ಧ ದೂರುಗಳು ಬಾಕಿ ಇದ್ದಾಗಲೇ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೊಕ್ಸಿಗೆ ಕ್ಲೀನ್ ಚಿಟ್
ನೀಡಿದೆ ಎಂದೂ ಅವರು ಆಪಾದಿಸಿದರು. ಸಿಬಿಐ/ ಜಾರಿ
ನಿರ್ದೇಶನಾಲಯ ಮೆಹುಲ್ ಚೊಕ್ಸಿ ವಿರುದ್ಧ ಇಂಟರ್ ಪೋಲ್ ಗೆ ಏಕೆ ದೂರು ನೀಡಲಿಲ್ಲ ಅಥವಾ ಚೊಕ್ಸಿ ವಿರುದ್ಧದ
ಕ್ರಿಮಿನಲ್ ದಾಖಲೆಗಳ ಅಗತ್ಯ ಸಾಕ್ಷ್ಯಧಾರಗಳನ್ನು ಒದಗಿಸಲಿಲ್ಲ? ಸಿಬಿಐ/ ಜಾರಿ ನಿರ್ದೇಶನಾಲಯಗಳ ಈ
ಉದ್ದೇಶಪೂರ್ವಕ ವೈಫಲ್ಯವೇ ಚೊಕ್ಸಿಗೆ ಇಂಟರ್ ಪೋಲ್ ಕ್ಲೀನ್ ಚಿಟ್ ನೀಡಲು ಕಾರಣವಾಯಿತು ಎಂಬುದು ಸರಿಯಲ್ಲವೇ?
ಎಂದೂ ಸುರ್ಜಿವಾಲ ಪ್ರಶ್ನಿಸಿದರು.
2018: ನವದೆಹಲಿ: ಪಂಜಾಬ್ ನ್ಯಾಷನಲ್
ಬ್ಯಾಂಕಿನ ೨೦೦ ಕೋಟಿ (೨ ಬಿಲಿಯನ್) ಡಾಲರ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ಬೇಕಾಗಿರುವ, ತಲೆಮರೆಸಿಕೊಂಡಿರುವ
ವಜ್ರಾಭರಣ ಉದ್ಯಮಿ ನೀರವ್ ಮೋದಿಯನ್ನು ಗಡೀಪಾರು ಮಾಡುವಂತೆ ಭಾರತ ಸರ್ಕಾರವು ಇಂಗ್ಲೆಂಡಿಗೆ ಮನವಿ
ಮಾಡಿತು. ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ. ಸಿಂಗ್ ಅವರು ವಿಷಯಕ್ಕೆ ಸಂಬಂಧಿಸಿದಂತೆ ನೀರವ್ ಮೋದಿ
ವಿರುದ್ಧ ಎರಡು ರೆಡ್ ಕಾರ್ನರ್ ನೋಟಿಸ್ ಗಳನ್ನು ಇಂಟರ್ ಪೋಲ್ ಜಾರಿಮಾಡಿದೆ ಎಂದು ತಿಳಿಸಿದರು. ‘ಇಂಗ್ಲೆಂಡಿನಿಂದ (ಯುಕೆ) ಭಾರತಕ್ಕೆ ನೀರವ್ ದೀಪಕ್ ಮೋದಿಯ
ಗಡೀಪಾರಿಗಾಗಿ ಗೃಹ ವ್ಯವಹಾರಗಳ ಸಚಿವಾಲಯದಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಗಡೀಪಾರು ಮನವಿ
ತಲುಪಿದೆ’ ಎಂದು ಸಿಂಗ್ ನುಡಿದರು. ಇಂಗ್ಲೆಂಡಿನ ಅಧಿಕಾರಿಗಳಿಗೆ ಕಳುಹಿಸಿಕೊಡುವ ಸಲುವಾಗಿ ಸ್ಪೇಷಲ್
ಡಿಪ್ಲಮ್ಯಾಟಿಕ್ ಬ್ಯಾಗ್ ಕಳುಹಿಸಿದ ಮನವಿಯು ಲಂಡನ್ನಿನಲ್ಲಿನ ಭಾರತೀಯ ಹೈ ಕಮೀಷನ್ ಗೆ (ಎಚ್ ಸಿಐ)
ತಲುಪಿದೆ ಎಂದು ಸಿಂಗ್ ಅವರು ರಾಜ್ಯಸಭೆಗೆ ಪ್ರಶ್ನೆಯೊಂದಕ್ಕೆ
ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದರು. ಭಾರತದ ಅತಿದೊಡ್ಡ
ಬ್ಯಾಂಕಿಂಗ್ ವಂಚನೆ ಹಗರಣದಲ್ಲಿ ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೊಕ್ಸಿ ಮುಖ್ಯ ಆರೋಪಿಗಳಾಗಿದ್ದಾರೆ.
ವಂಚನೆ ಹಗರಣದ ವಿವರಗಳು ಜನವರಿ ೧೬ರಂದು ಬಹಿರಂಗಗೊಳ್ಳುವುದಕ್ಕೆ ಮುಂಚಿತವಾಗಿಯೇ ಇಬ್ಬರೂ ಭಾರತ ತ್ಯಜಿಸಿದ್ದರು. ಮೆಹುಲ್ ಚೊಕ್ಸಿ ಕೆರಿಬಿಯನ್ ದ್ವೀಪರಾಷ್ಟ್ರ ಆಂಟಿಗುವಾದ
ಪೌರತ್ವ ಪಡೆದಿರುವುದಾಗಿ ಈದಿನ ಬಂದ ವರದಿಗಳು ತಿಳಿಸಿದ್ದರೆ, ಮೋದಿಯ ಚಲನವಲನಗಳ ಬಗ್ಗೆ ಯಾವುದೇ ಸ್ಪಷ್ಟತೆ
ಲಭಿಸಿಲ್ಲ.
2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ
’ಪ್ರಧಾನಿ ಅಭ್ಯರ್ಥಿ’ಯನ್ನು ಬಿಂಬಿಸಲು ಹಿಂದೇಟು ಹೊಡೆದಿರುವ ಕಾಂಗ್ರೆಸ್,
ಶಿವಸೇನೆ ಜೊತೆಗೆ ಮೈತ್ರಿ ಪ್ರಸ್ತಾಪ ತಮ್ಮ ಮುಂದಿಲ್ಲ ಎಂದು ಹೇಳಿತು. ೨೦೧೯ರ ಮಹಾಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ)
ಬಿರುಗಾಳಿಗೆ ತಡೆ ಹಾಕುವ ಸಲುವಾಗಿ ತಾನು ಅನುಸರಿಸಲಿರುವ ನಡೆಯನ್ನು ಇಲ್ಲಿ ಬಹಿರಂಗ ಪಡಿಸಿದ ಕಾಂಗ್ರೆಸ್,
ಶಿವಸೇನೆಯ ಜೊತೆಗೆ ಮೈತ್ರಿ ಸಾಧಿಸುವ ಊಹಾಪೋಹಗಳಿಗೆ ತಡೆ ಒಡ್ಡಿತು. ಪ್ರಧಾನಿ ಅಭ್ಯರ್ಥಿ ಬಗ್ಗೆ ಚುನಾವಣೆ ಫಲಿತಾಂಶದ ಬಳಿಕ ನಿರ್ಧಾರ
ಕೈಗೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ
ಸಾಧ್ಯತೆಯನ್ನು ರಾಜ್ಯ ಘಟಕಗಳಿಗೆ ಬಿಟ್ಟು ಬಿಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿದವು. ಪ್ರಧಾನ
ಮಂತ್ರಿ ಅಭ್ಯರ್ಥಿಯನ್ನು ಪ್ರಕಟಿಸದೇ ಇರುವ ಕಾಂಗ್ರೆಸ್ಸಿನ ಕ್ರಮವು, ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ
ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸುವುದಾಗಿ ಪದೇ ಪದೇ ಹೇಳುತ್ತಿದ್ದ ನಿಲುವಿನಿಂದ
ಪಕ್ಷವು ದೂರ ಸರಿದಿರುವುದನ್ನು ತೋರಿಸಿತು. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ನಾಯಕತ್ವವು
ರಾಹುಲ್ ಗಾಂಧಿಯವರು ಕಾಂಗ್ರೆಸ್ಸಿನ ಮುಖ ಎಂಬುದಾಗಿ ಹೇಳಿದ್ದಲ್ಲದೆ, ವಿರೋಧ ಪಕ್ಷಗಳ ಮಹಾಮೈತ್ರಿಯನ್ನು
ರಾಹುಲ್ ಗಾಂಧಿ ಅವರು ಮುನ್ನಡೆಸಬೇಕು ಎಂದು ಹೇಳಿ ವಿಪಕ್ಷ ನಾಯಕತ್ವಕ್ಕೆ ಅವರನ್ನು ಬೆಂಬಲಿಸಿತ್ತು. ಏನಿದ್ದರೂ, ರಾಹುಲ್ ಗಾಂಧಿಯವರು ಆರೆಸ್ಸೆಸ್ ಬೆಂಬಲಿಸದ,
ಮಿತ್ರ ಪಕ್ಷಗಳ ಯಾರೇ ಒಬ್ಬ ಅಭ್ಯರ್ಥಿಯನ್ನು ಬೆಂಬಲಿಸಲು ತಾವು ಹಿಂಜರಿಯುವುದಿಲ್ಲ ಎಂದು ಸ್ಪಷ್ಟ
ಪಡಿಸಿದ್ದರು. ಚುನಾವಣೆ ಕಾಲದ ಹಲವಾರು ಕ್ರಮಯೋಜನೆಗಳು
ಮತ್ತು ವಿಕಲ್ಪಗಳ ಹಿನ್ನೆಲೆಯಲ್ಲಿ ಸಮಾನ ಮನಸ್ಕ ಪಕ್ಷಗಳ ಒಕ್ಕೂಟವನ್ನು ಹೆಣೆಯುವ ಕೆಲಸದತ್ತ ಕಾಂಗ್ರೆಸ್
ಗಮನ ಹರಿಸುವ ನಿರೀಕ್ಷೆಯಿದೆ. ಶಿವಸೇನೆಯು
ಬಿಜೆಪಿ ಜೊತೆಗೆ ಹೊಂದಿರುವ ವೈರುದ್ಯಮಯ ಬಾಂಧವ್ಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜಕೀಯ
ಲಾಭ ಪಡೆಯುವ ಸಾಧ್ಯತೆಗಳಿವೆ ಎಂಬ ಪುಕಾರುಗಳು ವ್ಯಾಪಕವಾಗಿದ್ದವು. ಆದರೆ, ಕಾಂಗ್ರೆಸ್ ಪಕ್ಷವು ’ಸೈದ್ಧಾಂತಿಕ ಭಿನ್ನಮತಗಳನ್ನು’ ಉಲ್ಲೇಖಿಸಿ, ಶಿವಸೇನೆಯ ಜೊತೆಗೆ ಮೈತ್ರಿ
ಸಾಧ್ಯತೆಗಳು ತನ್ನ ಮುಂದಿಲ್ಲ ಎಂದು ಸ್ಪಷ್ಟ ಪಡಿಸಿತು.
ಶಿವಸೇನಾ
ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇತ್ತೀಚೆಗೆ ಮೋದಿ ಸರ್ಕಾರದ ವಿರುದ್ಧ ಅದರ ನೀತಿಗಳಿಗಾಗಿ ದಾಳಿ
ನಡೆಸುತ್ತಾ ರಾಹುಲ್ ಗಾಂಧಿ ಅವರ ನಾಯಕತ್ವ ಕೌಶಲಗಳನ್ನು ಹೊಗಳಿದ್ದರು. ಠಾಕ್ರೆ ಅವರ ಜನ್ಮದಿನದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೂ
ಅಭಿನಂದನೆಗಳನ್ನು ಹೇಳಿದ್ದರು. ಉಭಯ ಪಕ್ಷಗಳ ನಡುವೆ ಬಾಂಧವ್ಯ ಬೆಸೆಯುವ ಸೂಚನೆಯನ್ನು ಕಾಂಗೆಸ್ ಅಧ್ಯಕ್ಷರು
ನೀಡಿದ್ದಾರೆ ಎಂದೇ ಆಗ ಭಾವಿಸಲಾಗಿತ್ತು. ಬಿಜೆಪಿ
ವಿರುದ್ಧ ಫೆಡರಲ್ ಫ್ರಂಟ್ ರಚನೆ ನಿಟ್ಟಿನಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ಸನ್ನು ಹತ್ತಿರ ತರಲು
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹತ್ವದ ಪಾತ್ರ ವಹಿಸುವರು ಎಂಬ ವರದಿಗಳೂ ಇದ್ದವು.
2018: ನವದೆಹಲಿ: ಅಜ್ಜಿ ದಿವಂಗತ ಮಾಜಿ
ಪ್ರಧಾನಿ ಇಂದಿರಾ ಗಾಂಧಿ ಅವರನ್ನೇ ಹೋಲುವ ಮೊಮ್ಮಗಳು ಪ್ರಿಯಾಂಕಾ ವಾದ್ರಾ ೨೦೧೯ರ ಲೋಕಸಭಾ ಚುನಾವಣೆಗೆ
ತನ್ನ ತಾಯಿ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಗಳು
ಹೇಳಿದವು. ರಾಯ್ ಬರೇಲಿ ಕ್ಷೇತ್ರದಿಂದ ಲೋಕಸಭೆಗೆ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸುವ ಬಗ್ಗೆ
ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕಾಂಗ್ರೆಸ್ ಅಧ್ಯಕ್ಷ ರಾಹುಲ್
ಗಾಂಧಿ ಅವರು ಎಂದಿನಂತೆ, ನಿರಂತರ ನಾಲ್ಕನೇ ಬಾರಿಗೆ,
ತಮ್ಮ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ; ಆದರೆ ರಾಯ್ ಬರೇಲಿ ಕ್ಷೇತ್ರದಲ್ಲಿ ತನ್ನ ಅಮ್ಮ ಸೋನಿಯಾ
ಗಾಂಧಿ ಅವರ ಸ್ಥಾನದಲ್ಲಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸಲಿದ್ದಾರೆ ಎಂದು ವರದಿ ತಿಳಿಸಿತು. ರಾಹುಲ್
ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ೨೦೦೪ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಬಳಿಕ ೨೦೦೯ ಮತ್ತು
೨೦೧೪ರಲ್ಲಿ ಅವರು ಈ ಕ್ಷೇತ್ರವನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದರು. ಸೋನಿಯಾಗಾಂಧಿ ಅವರು ರಾಯ್ ಬರೇಲಿ ಕ್ಷೇತ್ರದಿಂದ ೨೦೦೪, ೨೦೦೯
ಮತ್ತು ೨೦೧೪ರಲ್ಲಿ ಲೋಕಸಭೆಗೆ ಗೆದ್ದು ಬಂದಿದ್ದರು. ೧೯೯೯ರಲ್ಲಿ ಸೋನಿಯಾ ಅವರು ಅಮೇಥಿ ಕ್ಷೇತ್ರದಿಂದ
ಸ್ಪರ್ಧಿಸುವ ಮೂಲಕ ಚುನಾವಣಾ ರಾಜಕಾರಣವನ್ನು ಪ್ರವೇಶಿಸಿದ್ದರು. ಬಳಿಕ ಅವರು ಆ ಕ್ಷೇತ್ರವನ್ನು ತಮ್ಮ
ಪುತ್ರ ರಾಹುಲ್ ಗಾಂಧಿ ಅವರಿಗೆ ಬಿಟ್ಟುಕೊಟ್ಟಿದ್ದರು. ಅಮೇಥಿ ಕ್ಷೇತ್ರ ಹಿಂದಿನಿಂದಲೂ ನೆಹರೂ - ಗಾಂಧಿ ಕುಟುಂಬದ
ಭದ್ರ ಕೋಟೆಯೇ. ಈ ಕ್ಷೇತ್ರದಿಂದ ಗಾಂಧಿ ಕುಟುಂಬದ ನಾಲ್ವರು ತಮ್ಮ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದ್ದರು.
ರಾಹುಲ್ ಗಾಂಧಿ ಅವರ ಚಿಕ್ಕಪ್ಪ, ಸಂಜಯ್ ಗಾಂಧಿ ಅವರು ತುರ್ತು ಪರಿಸ್ಥಿತಿ ಬಳಿಕ ೧೯೭೭ರ ಲೋಕಸಭಾ ಚುನಾವಣೆಯಲ್ಲಿ
ಈ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದರು. ಆದರೆ ಸೋತಿದ್ದರು. ಆ ಬಳಿಕ ೧೯೮೦ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ
ಲೋಕಸಭೆಗೆ ಆಯ್ಕೆಯಾಗಿದ್ದರು. ಸಂಜಯ್ ಗಾಂಧಿ ನಿಧನದ
ಬಳಿಕ ಅವರ ಹಿರಿಯ ಸಹೋದರ, ರಾಜೀವ್ ಗಾಂಧಿ ಅವರು ೧೯೮೧, ೧೯೮೪ ಮತ್ತು ೧೯೮೯ರಲ್ಲಿ ಇದೇ ಕ್ಷೇತ್ರದಿಂದ
ಲೋಕಸಭೆಗೆ ನಿರಂತರವಾಗಿ ಗೆದ್ದು ಬಂದಿದ್ದರು. ೧೯೯೧ರಲ್ಲೂ ರಾಜೀವ್ ಗಾಂಧಿ ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು.
ಸೋನಿಯಾ ಗಾಂಧಿ ಅವರ ಆರೋಗ್ಯ ಅಷ್ಟೇನೂ ಚೆನ್ನಾಗಿಲ್ಲದ ಕಾರಣ ಅವರು ತಮ್ಮ ರಾಯ್‌ಬರೇಲಿ ಕ್ಷೇತ್ರವನ್ನು
ಮಗಳು ಪ್ರಿಯಾಂಕಾ ವಾದ್ರಾಗೆ ಬಿಟ್ಟು ಕೊಡುತ್ತಿರುವುದಾಗಿ ವರದಿಗಳು ತಿಳಿಸಿದವು. ಪ್ರಿಯಾಂಕಾ ವಾದ್ರಾ
ಅವರು ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರಾಭಿಯಾನವನ್ನು ಕೈಗೊಂಡಿದ್ದು ತಳಮಟ್ಟದಲ್ಲಿ
ಪಕ್ಷದ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿದ್ದಾರೆ. ಲೋಕಸಭಾ ಚುನಾವಣೆಗೆ ನಿಂತಲ್ಲಿ ಇದು ಅವರಿಗೆ ಬಹುವಾಗಿ ಪ್ರಯೋಜನವಾಗಲಿದೆ ಎಂದು ಭಾವಿಸಲಾಗಿದೆ.
2018: ಕರಾಚಿ/ ಇಸ್ಲಾಮಾಬಾದ್: ಬಾಲಕಿಯರ ಆರು ಶಾಲೆಗಳು
ಸೇರಿದಂತೆ ೧೨ ಶಾಲೆಗಳಿಗೆ ಪಾಕಿಸ್ತಾನದ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಉಗ್ರಗಾಮಿಗಳು ಎಂದು ಶಂಕಿಸಲಾಗಿರುವ
ಅಪರಿಚಿತ ವ್ಯಕ್ತಿಗಳು ಸಮನ್ವಯಿತ ದಾಳಿ ನಡೆಸಿ ಬೆಂಕಿ ಹಚ್ಚಿದ್ದು, ಸ್ಥಳೀಯರು ಇದನ್ನು ತೀವ್ರವಾಗಿ
ಪ್ರತಿಭಟಿಸಿದರು. ಉಗ್ರಗಾಮಿಗಳಿಂದ ಪದೇ ಪದೇ ದಾಳಿಗೆ ಗುರಿಯಾಗುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ರಕ್ಷಣೆ
ಒದಗಿಸಬೇಕು ಎಂದು ಸ್ಥಳೀಯ ನಿವಾಸಿಗಳು ಪ್ರತಿಭಟನೆ ಆರಂಭಿಸಿದರು. ಗಿಲ್ಗಿಟ್ ನಿಂದ ೧೩೦ ಕಿಮೀ ದೂರದ
ಡಯಾಮೆರ್ ಜಿಲ್ಲೆಯ ಚಿಲಾಸ್ ಪಟ್ಟಣದ ಶಾಲೆಗಳಿಗೆ ರಾತ್ರಿ ತಡವಾಗಿ ಉಗ್ರಗಾಮಿಗಳು ಎಂದು ಶಂಕಿಸಲಾಗಿರುವ
ಅಪರಿಚಿತ ವ್ಯಕ್ತಿಗಳು ಕಿಚ್ಚಿಟ್ಟು ಆಸ್ತಿಪಾಸಿಗೆ ಅಪಾರ ಹಾನಿ ಉಂಟು ಮಾಡಿದರು. ಡಯಾಮೆರ್ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ರಾಯ್ ಅಜ್ಮಲ್ ಅವರು ಒಟ್ಟು ೧೨ ಶಾಲೆಗಳು ದಾಳಿಗೀಡಾಗಿದ್ದು ಅವುಗಳ ಪೈಕಿ
ಅರ್ಧದಷ್ಟು ಶಾಲೆಗಳು ಬಾಲಕಿಯರ ಶಾಲೆಗಳು ಎಂದು ಹೇಳಿದ್ದಾರೆ. ಬಂಡುಕೋರರು ಈ ಕೃತ್ಯ ಎಸಗಿದ್ದಾರೆ
ಎಂದು ಶಂಕಿಸಲಾಗಿದ್ದು, ಕಿಚ್ಚು ಹಚ್ಚಿದ ಬಳಿಕ ಅವರು ಪರಾರಿಯಾಗಿದ್ದಾರೆ ಎಂದು ಹೇಳಿದರು. ಯಾವುದೇ ಶಾಲೆಯ ಮೇಲೆ ಬಾಂಬ್ ದಾಳಿ ನಡೆಸಿದ ಕುರುಹು ಇಲ್ಲ
ಎಂದು ಡಯಾಮೇರ್ ಕಮೀಷನರ್ ಅಬ್ದುಲ್ ವಹೀದ್ ಶಾ ಹೇಳಿದರು. ನಿರ್ಮಾಣ ಹಂತದ ಕೆಲವು ಕಟ್ಟಡಗಳ ಮೇಲೂ ದಾಳಿ
ನಡೆದಿದೆ ಎಂದು ಅಧಿಕಾರಿಗಳು ನುಡಿದರು. ಈವರೆಗೂ ಯಾರೂ
ದಾಳಿಯ ಹೊಣೆಗಾರಿಕೆ ಹೊತ್ತುಕೊಂಡಿಲ್ಲ. ಇತ್ತೀಚಿನ
ದಿನಗಳಲ್ಲಿ ವಾಯವ್ಯ ಪಾಕಿಸ್ತಾನದಲ್ಲಿ ನೂರಾರು ಶಾಲೆಗಳ ಮೇಲೆ ತಾಲೀಬಾನ್ ಉಗ್ರಗಾಮಿಗಳು ದಾಳಿ ನಡೆಸಿದ್ದರು.
ಪಾಕಿಸ್ತಾನದ ಉತ್ತರ ಭಾಗದಲ್ಲಿ ಬಾಲಕಿಯರ ಶಾಲೆಗಳನ್ನೇ ಗುರಿಯಾಗಿಟ್ಟುಕೊಂಡು ದಾಳಿಗಳನ್ನು ನಡೆಸಲಾಗುತ್ತಿದೆ.
೨೦೧೧ರ ಡಿಸೆಂಬರಿನಲ್ಲಿ ಚಿಲಾಸ್ ನಲ್ಲಿ ಬಾಲಕಿಯರ ಕನಿಷ್ಠ ಎರಡು ಶಾಲೆಗಳನ್ನು ಬಾಂಬ್ ದಾಳಿ ನಡೆಸಿ
ಭಾಗಶಃ ಹಾನಿ ಪಡಿಸಲಾಗಿತ್ತು. ೨೦೦೪ರಲ್ಲಿ ಚಿಲಾಸ್ನ
೮ ಬಾಲಕಿಯರ ಶಾಲೆಗಳು ಸೇರಿ ೯ ಶಾಲೆಗಳ ಮೇಲೆ ದಾಳಿಗಳು ನಡೆದಿದ್ದವು. ಭಯೋತ್ಪಾದಕರು ಖೈಬರ್ ಫಕ್ತೂನ್
ಖ್ವಾದಲ್ಲಿನ ಶಿಕ್ಷಣ ಸಂಸ್ಥೆಗಳನ್ನು ಬುಡಕಟ್ಟು ಪ್ರದೇಶದಲ್ಲಿ ಬಾಂಬ್ ಇಟ್ಟು ನಾಶ ಪಡಿಸಿದ್ದರು.
ವರದಿಯೊಂದರ ಪ್ರಕಾರ ಈ ಪ್ರದೇಶದ ೧೫೦೦ ಶಾಲೆಗಳನ್ನು ಕಳೆದ ೧೦ ವರ್ಷಗಳ ಅವಧಿಯಲ್ಲಿ ನಾಶ ಪಡಿಸಲಾಗಿತ್ತು.
ನೊಬೆಲ್ ಪ್ರಶಸ್ತಿ ಪುರಸ್ಕೃತೆ ಶಿಕ್ಷಣ ತಜ್ಞೆ ಮಲಾಲಾ ಯೂಸುಫ್ ಜೈ ಅವರನ್ನು ೨೦೧೨ರಲ್ಲಿ ಸ್ವಾತ್
ಕಣಿವೆಯಲ್ಲಿ ಬಾಲಕಿಯರ ಶಿಕ್ಷಣದ ಪ್ರತಿಪಾದನೆ ಮಾಡಿದ್ದಕ್ಕಾಗಿಯೇ ತಾಲಿಬಾನ್ ಉಗ್ರರು ಗುಂಡು ಹಾರಿಸಿ
ಕೊಲ್ಲಲು ಯತ್ನಿಸಿದ್ದರು.
ಪ್ರಣಬ್ ಅವರೇ, ನಾನು ಅಧಿಕಾರಕ್ಕೆ ಬಂದಾಗ ನೀವು ರಾಷ್ಟ್ರಪತಿ ಹುದ್ದೆಯಲ್ಲಿ ಎರಡು ವರ್ಷಗಳನ್ನು ಪೂರೈಸಿದ್ದಿರಿ. ನಾನು ಹೊಸಬನಾಗಿದ್ದೆ. ಆಗ ನನ್ನ ಮುಂದೆ ಹಲವು ಸವಾಲುಗಳಿದ್ದವು. ಆಗ ನೀವು ತಂದೆ
ಸ್ಥಾನದಲ್ಲಿ ನಿಂತು ಸಲಹೆ ನೀಡಿದ್ದೀರಿ. ಮಾರ್ಗದರ್ಶನ ನೀಡಿದ್ದೀರಿ. ಸತತ ಸಭೆ ಮತ್ತು ಅಭಿಯಾನಗಳಲ್ಲಿ ಬಿಡುವಿಲ್ಲದೆ ತೊಡಗಿಕೊಂಡಿದ್ದಾಗ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ದೂರವಾಣಿ ಮೂಲಕ ಕರೆ ಮಾಡಿ ಹೇಳಿದ್ದಿರಿ. ಅದು ನನಗೆ ಇನ್ನಷ್ಟು ಶಕ್ತಿ ನೀಡಿತ್ತು ಎಂದು ಮೋದಿ ಅವರು ಪ್ರಣವ್ ಅವರು ತೋರಿದ್ದ ಪಿತೃ ವಾತ್ಸಲ್ಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೀವು ತುಂಬಾ ಮಮತಾಮಯಿ ಹೃದಯದವರು. ನನ್ನ ಮೇಲೆ ಕಾಳಜಿ ತೋರುತ್ತಿದ್ದೀರಿ... –ಹೀಗೆ, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣವ್ ಅವರ ಕಾರ್ಯಕ್ಷಮತೆ, ದಕ್ಷತೆ, ಆತ್ಮವಿಶ್ವಾಸ ಎಲ್ಲವನ್ನೂ ಮನದುಂಬಿ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.
ರಾಜಕೀಯ ವಲಯದಲ್ಲಿ ಬೆನ್ನೆಲುಬಾಗಿ ನಿಂತಿದ್ದ ಪ್ರತಿಕ್ಷಣವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
2017: ಇಸ್ಲಾಮಾಬಾದ್
: ಪಾಕಿಸ್ಥಾನ ಸರಕಾರದ ವೆಬ್‌ಸೈಟನ್ನು
ಹ್ಯಾಕರ್‌ಗಳು ಹ್ಯಾಕ್ ಮಾಡಿರುವುದಾಗಿ ವರದಿಯಾಯಿತು. ಹ್ಯಾಕ್ ಮಾಡಲ್ಪಟ್ಟ ಪಾಕ್ ಸರಕಾರಿ ವೈಬ್ ಸೈಟಿನಲ್ಲಿ ಹ್ಯಾಕರ್‌ಗಳು ಭಾರತದ ರಾಷ್ಟ್ರ ಗೀತೆ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹಾಕಿದ್ದಾರೆ. ಈ ಹ್ಯಾಕಿಂಗ್ ಕೃತ್ಯದ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಇದು ಭಾರತೀಯ ಹ್ಯಾಕರ್‌ಗಳ ಕೃತ್ಯವೆಂಬಂತೆ ಇದನ್ನು ಬಿಂಬಿಸಲಾಗಿದೆ ಎಂದು ವರದಿಗಳು ಹೇಳಿದವು.
ಹ್ಯಾಕರ್‌ಗಳು ಹ್ಯಾಕ್ ಮಾಡಿರುವುದಾಗಿ ವರದಿಯಾಯಿತು. ಹ್ಯಾಕ್ ಮಾಡಲ್ಪಟ್ಟ ಪಾಕ್ ಸರಕಾರಿ ವೈಬ್ ಸೈಟಿನಲ್ಲಿ ಹ್ಯಾಕರ್‌ಗಳು ಭಾರತದ ರಾಷ್ಟ್ರ ಗೀತೆ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹಾಕಿದ್ದಾರೆ. ಈ ಹ್ಯಾಕಿಂಗ್ ಕೃತ್ಯದ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಇದು ಭಾರತೀಯ ಹ್ಯಾಕರ್‌ಗಳ ಕೃತ್ಯವೆಂಬಂತೆ ಇದನ್ನು ಬಿಂಬಿಸಲಾಗಿದೆ ಎಂದು ವರದಿಗಳು ಹೇಳಿದವು.
2017: ಮುಂಬಯಿ : ದೇಹದಲ್ಲಿ ನೀರಿನ ಕೊರತೆ
ಮತ್ತು ಮೂತ್ರನಾಳದ ಸೋಂಕಿನಿಂದ ಅಸ್ವಸ್ಥರಾಗಿ ನಗರದ
ಹೊರವಲಯದ ಬಾಂದ್ರಾದಲ್ಲಿನ ಲೀಲಾವತಿ
ಆಸ್ಪತ್ರೆಗೆ ಆಗಸ್ಟ್ 2ರ ಬುಧವಾರ ದಾಖಲಾಗಿದ್ದ
94ರ ಹರೆಯದ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರ ದೇಹಾರೋಗ್ಯ ಕೊಂಚ
ಬಿಗಡಾಯಿಸಿದ್ದು ಅವರನ್ನು ಐಸಿಯುಗೆ ಸೇರಿಸಲಾಗಿದೆ ಎಂದು ವರದಿ ತಿಳಿಸಿತು. ದಿಲೀಪ್ ಕುಮಾರ್ ಅವರಿಗೆ ಕಿಡ್ನಿ ತೊಂದರೆಗಳು
ಕಾಣಿಸಿಕೊಂಡಿವೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದರು. ವೈದ್ಯರು
ಹೇಳುವ ಪ್ರಕಾರ, ದಿಲೀಪ್ ಕುಮಾರ್ ಅವರ ರಕ್ತದಲ್ಲಿನ ಕ್ರೀಟಿನೈನ್ ಮಟ್ಟ ಹೆಚ್ಚುತ್ತಿದೆ.
ಪರಿಣಾಮವಾಗಿ ಕಿಡ್ನಿ ವೈಫಲ್ಯ ಕಾಣಿಸಿಕೊಂಡಿದೆ. ಅವರ ವಯಸ್ಸಿನ ದೃಷ್ಟಿಯಿಂದ ಹೇಳುವುದಾದರೆ
ಇದು ಗಂಭೀರ ಪರಿಸ್ಥಿತಿ.
2017:
ನವದೆಹಲಿ: ದೇಶಾದ್ಯಂತ ಟೊಮೆಟೊ ಬೆಲೆ ಏರಿಕೆಯನ್ನು ಖಂಡಿಸಿ, ಉತ್ತರ ಪ್ರದೇಶದ ಲಖನೌದಲ್ಲಿ
‘ಸ್ಟೇಟ್ ಬ್ಯಾಂಕ್ ಆಫ್
ಟೊಮೆಟೊ’ ಶಾಖೆಯನ್ನು ಪ್ರಾರಂಭಿಸುವ ಮೂಲಕ ಕಾಂಗ್ರೆಸ್ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿತು. ರೈತರು
ಬೆಳೆದ ಟೊಮೆಟೊವನ್ನು ಈ ಬ್ಯಾಂಕಿನಲ್ಲಿ ಠೇವಣಿ ಇಡಬಹುದು. ಜತೆಗೆ, ಟೊಮೆಟೊ ಖರೀದಿಸುವವರು
ಬ್ಯಾಂಕಿನಿಂದ ಆರ್ಥಿಕ ನೆರವನ್ನು ಪಡೆಯಬಹುದು ಎಂದು ಪ್ರತಿಭಟನಾನಿರತರು ತಿಳಿಸಿದರು. ‘ನಾನು 0.5
ಕೆ.ಜಿ ಟೊಮೆಟೊವನ್ನು ಈ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದೇನೆ, ಆರು ತಿಂಗಳ ನಂತರ 1 ಕೆ.ಜಿ
ಟೊಮೆಟೊವನ್ನು ಹಿಂಪಡೆಯಲಿದ್ದೇನೆ. ನನಗೆ 103 ವರ್ಷ ವಯಸ್ಸಾಗಿದೆ. ಈ ರೀತಿ ವಹಿವಾಟನ್ನು ಎಲ್ಲೂ
ನೋಡಿರಲಿಲ್ಲ’ ಎಂದು ಸ್ಥಳೀಯರೊಬ್ಬರು ತಿಳಿಸಿದರು. ಬಡ ರೈತರು ಬ್ಯಾಂಕಿನಲ್ಲಿ ಟೊಮೆಟೊವನ್ನು
ಶೇಖರಿಸಲು ಅವಕಾಶವಿದ್ದು, ಅದಕ್ಕೆ ಶೇಕಡಾ 80ರಷ್ಟು ವಿಶೇಷ ಲಾಕರ್ ವ್ಯವಸ್ಥೆಯನ್ನು ಮಾಡಲಾಗಿದೆ
ಎಂದು ವರದಿ ತಿಳಿಸಿತು.2016: ನವದೆಹಲಿ: ದೇಶದಲ್ಲಿ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದ ಬಹುನಿರೀಕ್ಷಿತ ಸರಕು
ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಸೂದೆ ರಾಜ್ಯಸಭೆ ಅನುಮೋದನೆ ನೀಡಿತು. ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯ ಹೆಜ್ಜೆ ಎಂಬ ಹೆಗ್ಗಳಿಕೆಯ ಈ ಮಸೂದೆ 2017ರ ಏಪ್ರಿಲ್ನಿಂದ ದೇಶಾದ್ಯಂತ ಜಾರಿಗೆ ಬರಲಿದೆ. 2006ರಲ್ಲಿ ಆಗಿನ ಹಣಕಾಸು ಸಚಿವ ಪಿ.ಚಿದಂಬರಂ ಮಂಡಿಸಿದ್ದ ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಈ ವಿಧೇಯಕ 9 ವರ್ಷಗಳ ಕಾಲ ಆಡಳಿತ ಮತ್ತು ವಿಪಕ್ಷಗಳ ನಡುವಣ ಹಗ್ಗಜಗ್ಗಾಟಕ್ಕೆ ಕಾರಣ ವಾಗಿತ್ತು. ಎನ್ಡಿಎ ಸರ್ಕಾರ ಬಂದ ಬಳಿಕ 2015ರ ಮೇ 6ರಂದು ಲ ೆ ೂ ೕ ಕ ಸ ಭ ೆ ಯ ು ಲಿ ್ಲ ಮಸೂದೆ ಅನುಮೋ ದನೆಯಾಗಿತ್ತು. ಆದರೆ ಮಸೂದೆ ತಿದ್ದುಪಡಿ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ತೆರಿಗೆಗೆ ಶೇ.18ರ ಮಿತಿ ಮತ್ತು ಕೆಲರಾಜ್ಯಗಳಿಗೆ ಶೇ.1 ಹೆಚ್ಚುವರಿ ತೆರಿಗೆ ವಿಧಿಸಲು ಅವಕಾಶ ನೀಡದಂತೆ ಒತ್ತಾಯಿಸಿತ್ತು. ಕಡೆಗೂ ಮಣಿದ ಕೇಂದ್ರ ಸರ್ಕಾರ ಕಾಂಗ್ರೆಸ್ ಬೇಡಿಕೆಗಳಿಗೆ ಸಮ್ಮತಿಸಿತ್ತು. ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆಗೆ ಎಐಡಿಎಂಕೆ ಹೊರತಾಗಿ ಉಳಿದೆಲ್ಲ ಪಕ್ಷಗಳು ಬೆಂಬಲ ಸೂಚಿಸಿದವು. ಇದೊಂದು ಅಸಂವಿಧಾನಾತ್ಮಕ ಮಸೂದೆ. ಈ ವಿಧೇಯಕದಿಂದ ಆದಾಯ ಸಂಗ್ರಹದಲ್ಲಿ ತಮಿಳುನಾಡಿಗೆ ಭಾರೀನಷ್ಟವಾಗಲಿದೆ ಎಂದು ಎಐಎಡಿಎಂಕೆ ಸದಸ್ಯ ನವನೀತ ಕೃಷ್ಣನ್ ಆರೋಪಿಸಿದರು. ಮತದಾನದ ವೇಳೆ ಎಐಎಡಿಎಂಕೆ ಸದಸ್ಯರು ಸಭಾತ್ಯಾಗ ನಡೆಸಿದರು
2016: ಕಾಠ್ಮಂಡು: ನೇಪಾಳದ ನೂತನ ಪ್ರಧಾನ ಮಂತ್ರಿಯಾಗಿ ಮಾವೋವಾದಿ ಬಂಡುಕೋರ ಮುಖ್ಯಸ್ಥ
ಪ್ರಚಂಡ ಎಂದೇ ಖ್ಯಾತರಾದ ಪುಷ್ಪ ಕಮಲ್ ದಹಲ್ (61) ಅವರನ್ನು ನೇಪಾಳೀ ಸಂಸತ್ತು ಆಯ್ಕೆ ಮಾಡಿತು. ಅವಿಶ್ವಾಸದ ಗೊತ್ತುವಳಿಯಲ್ಲಿ ಪರಾಭವಗೊಳ್ಳುವ ಸಾಧ್ಯತೆಯಿಂದ ಪಾರಾಗಲು ಕೆ.ಪಿ. ಒಲಿ ಅವರು ರಾಜೀನಾಮೆ ನೀಡಿದ ಬಳಿಕ ಸಂಸತ್ತು ಪ್ರಚಂಡ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿತು. ಹಿಂದೂ ಅರಸೊತ್ತಿಗೆಯನ್ನು ಕಿತ್ತೊಗೆಯಲು ದಶಕಗಳ ಕಾಲ ಬಂಡಾಯ ಹೋರಾಟ ನಡೆಸಿದ್ದ ಪ್ರಚಂಡ, 1990ರಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಹಿಮಾಲಯ ತಪ್ಪಲಿನ ರಾಷ್ಟ್ರ ಅಂಗೀಕರಿಸಿದ ಬಳಿಕದ 26 ವರ್ಷಗಳಲ್ಲಿ 24ನೆಯ ಪ್ರಧಾನಿಯಾಗಿದ್ದಾರೆ. 595 ಸದಸ್ಯ ಬಲದ ಸಂಸತ್ತಿನಲ್ಲಿ ಮತ ಚಲಾವಣೆಯಾದ 573 ಮತಗಳಲ್ಲಿ 363 ಮತಗಳು ಮತಗಳು ಪ್ರಚಂಡ ಅವರಿಗೆ ಲಭಿಸಿವೆ ಎಂದು ಸಭಾಧ್ಯಕ್ಷ ಓನ್ಸಾರಿ ಘರ್ತಿ ನುಡಿದರು. 239 ವರ್ಷಗಳ ಅರಸೊತ್ತಿಗೆ ಅಂತ್ಯಗೊಂಡ ಬಳಿಕದ 8 ವರ್ಷಗಳಲ್ಲಿ ಆಯ್ಕೆಯಾದ 8ನೆಯ ಪ್ರಧಾನಿಯಾಗಿದ್ದಾರೆ ಪುಷ್ಪ ಕಮಲ್ ದಹಲ್. 2008ರಬ ರಾಷ್ಟ್ರೀಯ ಚುನಾವಣೆಯಲ್ಲಿ ಹಿಂದಿನ ಗೆರಿಲ್ಲಾ ಯೋಧರ ಪಕ್ಷ ಬಹುಮತ ಗಳಿಸಿದಾಗ ಮೊದಲ ಬಾರಿಗೆ ನೇಪಾಳದ ಪ್ರಧಾನಿಯಾಗಿದ್ದ ಪ್ರಚಂಡ ಇದೀಗ ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದರು.
2016: ತಿರುವನಂತಪುರಂ: ತಿರುವನಂತಪುರಂನಿಂದ ಹೊರಟ ಎಮಿರೇಟ್ಸ್ ಸಂಸ್ಥೆಗೆ ಸೇರಿದ ವಿಮಾನ ದುಬೈಯಲ್ಲಿಇಳಿಯುವ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ವಿಮಾನದಲ್ಲಿದ್ದ 282 ಪ್ರಯಾಣಿಕರು ಸುರಕ್ಷಿತರಾಗಿ ಪಾರಾದರು. ರನ್ವೇಯಲ್ಲಿ ವಿಮಾನ ಹಠಾತ್ತನೆ ಬಂದಿಳಿದ ಪರಿಣಾಮ ಬಲಬದಿಯ ರೆಕ್ಕೆ ನೆಲಕ್ಕೆ ತಾಗಿ ಬೆಂಕಿ ಕಾಣಿಸಿಕೊಂಡಿತು ಎಂದು ಪ್ರತ್ಯಕ್ಷದರ್ಶಿ ಪೈಲಟ್ ಮಾದ್ಯಮಗಳಿಗೆ ತಿಳಿಸಿದರು. ಘಟನೆಯಲ್ಲಿ ಬೆಂಕಿಯ ಜ್ವಾಲೆಗೆ ವಿಮಾನದ ಬಲಗಡೆಯ ರೆಕ್ಕೆ ಸುಟ್ಟು ಕರಕಲಾಯಿತು.
ತಿರುವನಂತಪುರದಿಂದ ದುಬೈಗೆ ಹೊರಟ ಬೋಯಿಂಗ್ 777-300 ಎ6 ವಿಮಾನದಲ್ಲಿ ಇಳಿಯವ ವೇಳೆ ಬೆಂಕಿ ಕಾಣಿಸಿಕೊಂಡಿತು, ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಎಮಿರೇಟ್ಸ್ ಸಂಸ್ಥೆ ಘಟನೆ ಬಗ್ಗೆ ಹೇಳಿಕೆ ನೀಡಿತು.
2016: ಸಿಯೋಲ್: ಉತ್ತರ ಕೊರಿಯಾ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ್ದು, ಕೊರಿಯಾದ ಕ್ಷಿಪಣಿ ಜಪಾನ್ನ
ಜಲಗಡಿಯೊಳಗೆ ಸ್ಪೋಟಗೊಂಡಿತು. ಇದಕ್ಕೆ ಜಪಾನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೊರಿಯಾ ಕ್ರಮವನ್ನು ಖಂಡಿಸಿತು. ಉತ್ತರ ಕೊರಿಯಾ 2 ಕ್ಷಿಪಣಿಗಳನ್ನು ಪರೀಕ್ಷಿಸಿತ್ತು. ಆದರೆ ಒಂದು ಕ್ಷಿಪಣಿ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಸ್ಪೋಟಗೊಂಡಿತು. ಆದರೆ ಮತ್ತೊಂದು ಕ್ಷಿಪಣಿ ಉತ್ತರ ಜಪಾನ್ನ ಕಡಲ ತೀರದಿಂದ ಕೇವಲ 250 ಕಿ.ಮೀ. ದೂರದಲ್ಲಿ ಜಪಾನ್ಗೆ ಸೇರಿದ ಸಮುದ್ರಕ್ಕೆ ಅಪ್ಪಳಿಸಿತು. ದಕ್ಷಿಣ ಕೊರಿಯಾ ಮತ್ತು ಅಮೆರಿಕ ಜಂಟಿ ಸಮರಾಭ್ಯಾಸ ನಡೆಸಲು ತೀರ್ಮಾನಿಸಿದ್ದು, ಸಮರಾಭ್ಯಾಸಕ್ಕೆ ಕೆಲವೇ ವಾರಗಳು ಬಾಕಿ ಇರುವಾಗ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿತು ಎಂದು ಅಮೆರಿಕ ಸೇನೆ ತಿಳಿಸಿತು. ಉತ್ತರ ಕೊರಿಯಾ ಉಡಾಯಿಸಿದ ಕ್ಷಿಪಣಿ ಜಪಾನ್ಗೆ ಸೇರಿದ ಸಮುದ್ರದಲ್ಲಿ ಅಪ್ಪಳಿಸಿತು. ಕ್ಷಿಪಣಿಯು ದೇಶದ ಎಕ್ಸ್ಕ್ಲೂಸೀವ್ ಎಕನಾಮಿಕ್ ಜೋನ್ನಲ್ಲಿ ಅಪ್ಪಳಿಸಿದ್ದು, ಜಪಾನ್ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಇದು ದೇಶದ ಭದ್ರತೆಗೆ ಧಕ್ಕೆ ತರುವಂತಹ ವಿಷಯವಾಗಿದೆ. ಉತ್ತರ ಕೊರಿಯಾದ ಈ ಕ್ರಮವನ್ನು ಸಹಿಸಲು ಸಾಧ್ಯವಿಲ್ಲ ಎಂದು ಜಪಾನ್ನ ಪ್ರಧಾನಿ ಶಿಂಜೋ ಅಬೆ ತಿಳಿಸಿದರು.
2016: ನ್ಯೂಯಾರ್ಕ್: ಸೆಲ್ಫಿ ಫೋಟೋದ ಕೃತಿಸ್ವಾಮ್ಯಕ್ಕಾಗಿ ಸುದೀರ್ಘ ಹೋರಾಟ ನಡೆಸಿ ಜಗತ್ತಿನ ಗಮನ ಸೆಳೆದಿದ್ದ ನಾರುಟೋ ಮಂಗದ ಪರವಾಗಿ ಪೇಟಾ ಮತ್ತೊಂದು ಸುತ್ತಿನ ಕಾನೂನು ಸಮರ ಪ್ರಾರಂಭಿಸಿತು. ನಾರುಟೋಗೆ ಸೆಲ್ಫಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಮೇಲ್ಮನವಿ ಸಲ್ಲಿಸಲಾಯಿತು..
ಫೋಟೋಗ್ರಾಫರ್ ಡೇವಿಡ್ ಸ್ಲಾಟರ್ ಕ್ಯಾಮೆರಾ ಬಳಸಿ ಮಂಗ ತನ್ನ ಫೋಟೋ ತೆಗೆದುಕೊಂಡಿದೆ. ಎಲ್ಲಾ ವಿಧದಲ್ಲೂ ನಾರುಟೋ ಫೋಟೋದ ನಿಜವಾದ ಹಕ್ಕುದಾರ. ಹಾಗಾಗಿ ನಾರುಟೋಗೆ ಫೊಟೋದ ಕೃತಿಸ್ವಾಮ್ಯ ನೀಡಬೇಕು. ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಫೋಟೋದ ನಿಜವಾದ ಮಾಲೀಕ ಯಾರು ಎಂಬುದನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಬೇಕು. ಕೃತಿಸ್ವಾಮ್ಯ ಮಾಲೀಕ ಮನುಷ್ಯನೇ ಆಗಿರಬೇಕು ಎಂದು ತಿಳಿಸುವುದಿಲ್ಲ. ಹಾಗಾಗಿ ಮೇಲ್ಮನವಿಯನ್ನು ಪುರಸ್ಕರಿಸಿ ನಾರುಟೋಗೆ ಕೃತಿಸ್ವಾಮ್ಯ ನೀಡಬೇಕು. ಈ ಮೊದಲು ಯಾವುದೇ ಪ್ರಾಣಿಗೆ ಕೃತಿಸ್ವಾಮ್ಯ ನೀಡಿಲ್ಲವೆಂದ ಮಾತ್ರಕ್ಕೆ ಈ ಪ್ರಕರಣದಲ್ಲಿ ನಾರುಟೋಗೆ ಕೃತಿಸ್ವಾಮ್ಯ ನಿರಾಕರಿಸುವುದು ಸರಿಯಲ್ಲ ಎಂದು ಪೇಟಾ ತಿಳಿಸಿದತು. 2011ರಲ್ಲಿ ಫೋಟೋಗ್ರಾಫರ್ ಸ್ಲಾಟರ್ ಇಂಡೋನೇಷ್ಯಾಗೆ ತೆರಳಿದ್ದಾಗ ಕಾಡಿನಲ್ಲಿ ತನ್ನ ಕ್ಯಾಮೆರಾ ಇಟ್ಟು ಬೇರೆ ಕೆಲಸದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ 6 ವರ್ಷದ ಗಂಡು ಮಂಗ ನಾರುಟೋ ಕ್ಯಾಮೆರಾದಲ್ಲಿ ಸೆಲ್ಫಿ ಸೇರಿದಂತೆ ಹಲವು ಫೋಟೋ ತೆಗೆದಿತ್ತು. ನಂತರ ಸ್ಲಾಟರ್ ಮತ್ತು ಅತನ ಕಂಪನಿ ಚಿತ್ರದ ಕೃತಿಸ್ವಾಮ್ಯ ತಮ್ಮದೆಂದು ವಾದಿಸಿದ್ದವು. ಪೇಟಾ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿತ್ತು. 2016ರ ಜನವರಿಯಲ್ಲಿ ಕೋರ್ಟ್ ಮಾನವರಲ್ಲದವರಿಗೆ ಕೃತಿಸ್ವಾಮ್ಯದ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.
2016: ಮುಂಬೈ: ಮಹಾರಾಷ್ಟ್ರದ ಕೊಂಕಣದ ರಾಯಗಡ ಜಿಲ್ಲೆಯಲ್ಲಿನ ಮುಂಬೈ -ಗೋವಾ ಹೆದ್ದಾರಿಯಲ್ಲಿ ಮಹದ್ ಮತ್ತು ಪೊಲಾದ್ಪುರವನ್ನು ಸಂರ್ಪಸುವ ಬ್ರಿಟಿಷರ ಕಾಲದ ಹಳೆಯ ಸೇತುವೆ ನಸುಕಿನಲ್ಲಿ ಕುಸಿದು ಬಿದ್ದ ಪರಿಣಾಮವಾಗಿ ರಾಜ್ಯ ಸಾರಿಗೆ ಸಂಸ್ಥೆಯ ಎರಡು ಬಸ್ಸುಗಳು ಸಾವಿತ್ರಿ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಒಟ್ಟು ಇಬ್ಬರು ಮೃತರಾಗಿ ಸುಮಾರು 44 ಮಂದಿ ಕಣ್ಮರೆಯಾದರು. ಎರಡು ಬಸ್ಸುಗಳಲ್ಲಿದ್ದ 22 ಮಂದಿ ಸಾವನ್ನಪ್ಪಿರುವರೆಂದು ಭಯ ಪಡಲಾಗಿದ್ದು ಇತರ ಹಲವು ವಾಹನಗಳೂ ನದಿಗೆ ಬಿದ್ದಿವೆ ಎನ್ನಲಾಯಿತು. ಬಸ್ಸುಗಳಲ್ಲಿ 18 ಮಂದಿ ಪ್ರಯಾಣಿಕರು ಇಬ್ಬರು ಚಾಲಕರು ಮತ್ತು ಇಬ್ಬರು ಕಂಡಕ್ಟರ್ಗಳು ಇದ್ದರು. ಕಣ್ಮರೆಯಾಗಿರುವ ಪ್ರಯಾಣಿಕರ ಬಂಧುಗಳು ಸಹಾಯವಾಣಿ ಸಂಖ್ಯೆ (02141) 222118 ಮತ್ತು ಟೋಲ್ ಫ್ರೀ ಸಂಖ್ಯೆ 1077ನ್ನು ಸಂಪರ್ಕಿಸುವಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮನವಿ ಮಾಡಿತು. ಭಾರತೀಯ ಕರಾವಳಿ ರಕ್ಷಣಾ ಪಡೆ (ಐಸಿಜಿ), ಚೇತಕ್ ಹೆಲಿಕಾಪ್ಟರ್ ಮತ್ತು ಸೀ ಕಿಂಗ್ 42 ಸಿ ಸರ್ವ ಋತು ವಿಮಾನಗಳನ್ನು ಮುಳುಗುಕಾರರ ತಂಡದ ಸಹಿತವಾಗಿ ಶೋಧ ಕಾರ್ಯಕ್ಕೆ ನಿಯೋಜಿಸಲಾಯಿತು.. ಕರಾವಳಿ ರಕ್ಷಣಾ ಪಡೆಯು ಇನ್ನೊಂದು ಸಿ ಕಿಂಗ್ 42ಬಿ ಹೆಲಿಕಾಪ್ಟರನ್ನೂ ನೆರವಿಗಾಗಿ ನಿಯೋಜಿಸಿದೆ ಎಂದು ವಕ್ತಾರರು ತಿಳಿಸಿದರು..
2016: ಗಾಂಧಿನಗರ: ಇಶ್ರತ್ ಜಹಾಂ ನಕಲಿ ಎನ್ಕೌಂಟರ್ ಪ್ರಕರಣದ ಆರೋಪಿ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪಿ.ಪಿ. ಪಾಂಡೆ ಅವರನ್ನು ಉಸ್ತುವಾರಿ ಪೊಲೀಸ್ ಮುಖ್ಯಸ್ಥರನ್ನಾಗಿ (ಉಸ್ತುವಾರಿ ಡಿಜಿಪಿ) ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಬುಧವಾರ ವಜಾ ಮಾಡಿತು. ಮುಖ್ಯ ನ್ಯಾಯಮೂರ್ತಿ ಆರ್. ಸುಭಾಶ್ ರೆಡ್ಡಿ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 16ರಂದು ಪ್ರಕರಣದ ಆಲಿಕೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. 2004ರಲ್ಲಿ ಪಾಂಡೆ ವಿರುದ್ಧ ಇಶ್ರತ್ ಜಹಾಂ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. 80ರ ದಶಕದ ಮಧ್ಯಾವಧಿಯಲ್ಲಿ ಗುಜರಾತ್ ಹಿಂಸಾಕಾಂಡ ಸಂಭವಿಸಿದ ಸಮಯದಲ್ಲಿ ಗುಜರಾತಿನಲ್ಲಿ ಡಿಜಿಪಿಯಾಗಿ ಸೇವೆ ಸಲ್ಲಿಸಿದ್ದ 1953ರ ತಂಡದ ನಿವೃತ್ತ ಐಪಿಎಸ್ ಅಧಿಕಾರಿ (ಮಹಾರಾಷ್ಟ್ರ) ಜೂಲಿಯೋ ರೀಬೀರೊ ಅವರು ಪಾಂಡೆ ಅವರು ಪಾಂಡೆ ನೇಮಕಾತಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಪಾಂಡೆ ಅವರನ್ನು ಉಸ್ತುವಾರಿ ಡಿಜಿಪಿಯಾಗಿ ಬಡ್ತಿ ನೀಡಿ ನೇಮಕ ಮಾಡಿದ್ದರ ಕಾನೂನು ಬದ್ಧತೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.
2016: ನವದೆಹಲಿ: ನಾಡಾ ನಡೆಸಿದ ಡೋಪ್ ಟೆಸ್ಟ್ನಲ್ಲಿ 200ಮೀ ಓಟಗಾರ ಧರ್ಮವೀರ್ ಸಿಂಗ್ ವಿಫಲರಾದರು. ಇದರಿಂದಾಗಿ 36 ವರ್ಷದ ನಂತರ ಪುರುಷ ಓಟಗಾರನೋರ್ವ ಒಲಿಂಪಿಕ್ಸ್ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಳ್ಳವ ಸ್ಥಿತಿ
ನಿರ್ಮಾಣಗೊಂಡಿತು. ರಿಯೋ ಒಲಿಂಪಿಕ್ಸ್ಗೆ ಕೇವಲ ಎರಡು ದಿನ ಬಾಕಿ ಇದ್ದು, ಡೋಪ್ ಟೆಸ್ಟ್ನಲ್ಲಿ ಭಾರತದ ಮೂರನೇ ಕ್ರೀಡಾಪಟು ವೈಫಲ್ಯ ಅನುಭವಿಸಿರುವುದು ಭಾರತೀಯ ಕ್ರೀಡಾ ವಲಯವೇ ತಲೆತಗ್ಗಿಸುವಂತಾಯಿತು. ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ಧರ್ಮವೀರ್ ಸಿಂಗ್ರ ರಕ್ತದ ಸ್ಯಾಂಪಲ್ ಪಡೆದು ಪರೀಕ್ಷೆ ನಡೆಸಿತ್ತು. ಮೊದಲ ಪರೀಕ್ಷೆಯ ಫಲಿತಾಂಶದಲ್ಲಿ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾಗಿದೆ. ಹರಿಯಾಣ ಮೂಲದ 27ರ ಹರೆಯದ ಈ ಓಟಗಾರ ರಿಯೋ ಒಲಿಂಪಿಕ್ಸ್ಗೆ ಅರ್ಹತೆ ಪಡೆಯುವ ಮೂಲಕ 36 ವರ್ಷದ ನಂತರ ಟ್ರ್ಯಾಕ್ ಅಂಡ್ ಫೀಲ್ಡ್ನಲ್ಲಿ ಪುರುಷ ಓಟಗಾರನೋರ್ವ ಅರ್ಹತೆ ಪಡೆದುಕೊಂಡ ಸಾಧನೆಗೆ ಕಾರಣರಾಗಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಧರ್ಮವೀರ್ ಸಿಂಗ್ ರಿಯೋದಲ್ಲಿರುತ್ತಿದ್ದರು. ಆದರೆ ನಾಡಾ ಶಿಸ್ತು ಸಮಿತಿ ಇವರ ಡೋಪ್ ಟೆಸ್ಟ್ ನಡೆಸುವ ಸಲುವಾಗಿ ರಿಯೋಗೆ ತೆರಳು ಅವಕಾಶ ಕರುಣಿಸಿರಲಿಲ್ಲ. ಪ್ರಥಮ ಹಂತದ ಡೋಪ್ ಟೆಸ್ಟ್ನಲ್ಲಿ ಧರ್ಮವೀರ್ ವೈಫಲ್ಯ ಅನುಭವಿಸಿರುವುದರಿಂದ ರಿಯೋ ಕನಸು ಭಗ್ನವಾದಂತಾಯಿತು. ಈ ಹಿಂದೆ ಕುಸ್ತಿಪಟು ನರಸಿಂಗ್ ಯಾದವ್ ಹಾಗೂ ಶಾಟ್ಪುಟ್ ಪಟು ಇಂದ್ರಜಿತ್ ಸಿಂಗ್ ಡೋಪ್ ಟೆಸ್ಟ್ನಲ್ಲಿ ವೈಫಲ್ಯ ಅನುಭವಿಸಿದ್ದರು. ಆದರೆ ನರಸಿಂಗ್ ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದರು.
2016: ನವದೆಹಲಿ: ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರ ರಾಜೀನಾಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಯಿತು ಎಂದು ಸಚಿವ ಎಂ. ವೆಂಕಯ್ಯ ನಾಯ್ಡು ತಿಳಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರನ್ನು ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಲಾಗಿಲ್ಲ. ಅವರು ರಾಷ್ಟ್ರಮಟ್ಟದಲ್ಲೇ ಪಕ್ಷದ ಸೇವೆಯಲ್ಲಿ ಮುಂದುವರೆಯಲಿದ್ದಾರೆ. ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯ ಆಯ್ಕೆ ಕುರಿತು ನಿರ್ಧರಿಸಲಾಗುವುದು. ನಿತಿನ್ ಗಡ್ಕರಿ ಮತ್ತು ಸರೋಜ್ ಪಾಂಡೆ ಕೇಂದ್ರ ವೀಕ್ಷಕರಾಗಿ ಗುಜರಾತ್ಗೆ ತೆರಳಲಿದ್ದಾರೆ. ಅಮಿತ್ ಷಾ ಸಹ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವೆಂಕಯ್ಯ ನಾಯ್ಡು ತಿಳಿಸಿದರು.
2008: ಹಿಮಾಚಲಪ್ರದೇಶದ ಬಿಲಾಸ್ ಪುರ ಖ್ಯಾತ ನಯನಾ ದೇವಿ ದೇವಾಲಂಯದಲ್ಲಿ ಕಾಲ್ತುಳಿತಕ್ಕೆ ಸಿಕ್ಕಿ 30 ಮಕ್ಕಳು ಮತ್ತು 38 ಮಹಿಳೆಯರು ಸೇರಿದಂತೆ 146 ಜನರು ಮೃತರಾಗಿ, 50ಕ್ಕೂ ಹೆಚ್ಚು ಭಕ್ತರು ಗಾಯಗೊಂಡರು. ಶಿಮ್ಲಾದಿಂದ ಸುಮಾರು 160 ಕಿ.ಮೀ. ದೂರದ ಈ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪೂಜೆ ಸಲ್ಲಿಸಲು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ದೇವಸ್ಥಾನದ ಸಮೀಪದ ಗುಡ್ಡ ಕುಸಿದು ಬಂಡೆ ಉರುಳುತ್ತಿದೆ ಎಂಬ ವದಂತಿ ಹರಡಿದಾಗ ಕಂಗಾಲಾಗಿ ಯದ್ವಾತದ್ವ ಓಡಿದ್ದರಿಂದ ಈ ಕಾಲ್ತುಳಿತದ ದುರಂತ ಸಂಭವಿಸಿತು.
2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಪಠ್ಯವನ್ನು ಈದಿನ ಬಿಡುಗಡೆ ಮಾಡಲಾಯಿತು. ಭಾರತದ ಪರಮಾಣು ಸ್ಥಾವರಗಳಿಗೆ ಅಗತ್ಯವಿರುವ ಇಂಧನವನ್ನು ಎರಡೂ ದೇಶಗಳ ನಡುವಿನ 123 ಒಪ್ಪಂದಗಳನ್ವಯ ಪೂರ್ಣ ಪ್ರಮಾಣದಲ್ಲಿ ಸರಬರಾಜು ಮಾಡುವ ಭರವಸೆಯೊಂದಿಗೆ ಅಮೆರಿಕ ತನ್ನ ಬದ್ಧತೆಯನ್ನು ಈ ಪಠ್ಯದಲ್ಲಿ ಪ್ರಕಟಿಸಿತು. ಯಾವುದಾದರೂ ಕಾರಣದಿಂದ ಒಪ್ಪಂದಕ್ಕೆ ಹಿನ್ನಡೆಯುಂಟಾಗಿ ಕೊನೆಗೊಳ್ಳುವ ಹಂತ ತಲುಪಿದಾಗಲೂ ಸೂಕ್ತ ಸಮಾಲೋಚನೆಗೆ ಅವಕಾಶವನ್ನು ಈ ಪಠ್ಯವು ಕಲ್ಪಿಸಿತು.
2007: ತೀವ್ರ ಸುಟ್ಟಗಾಯಗಳಿಂದಾಗಿ ಒಂದು ತಿಂಗಳಿನಿಂದ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಗ್ಲಾಸ್ಗೊ ವಿಫಲ ಬಾಂಬ್ ಸ್ಫೋಟದ ಆರೋಪಿ ಬೆಂಗಳೂರು ಮೂಲದ ಕಫೀಲ್ ಅಹ್ಮದ್, ಈ ರಾತ್ರಿ ಮೃತನಾದ. ಇರಾಕ್ ಮೂಲದ ವೈದ್ಯ ಬಿಲಾಲ್ ಅಬ್ದುಲ್ಲಾನೊಂದಿಗೆ ಬೆಂಗಳೂರಿನ ಏರೋನಾಟಿಕಲ್ ಎಂಜಿನಿಯರ್ ಕಫೀಲ್ ಅಹ್ಮದ್ (27) ಜೂನ್ 30ರಂದು ಗ್ಲಾಸ್ಗೊ ವಿಮಾನ ನಿಲ್ದಾಣ ಸ್ಫೋಟಿಸುವ ಉದ್ದೇಶದಿಂದ ಸ್ಫೋಟಕಗಳು ತುಂಬಿದ್ದ ಜೀಪನ್ನು ವಿಮಾನ ನಿಲ್ದಾಣದ ಟರ್ಮಿನಲ್ ಒಂದಕ್ಕೆ ಗುದ್ದಿಸಲು ಯತ್ನಿಸಿದ್ದ. ಜೀಪ್ ಹೊತ್ತಿ ಉರಿದಾಗ ಸುಟ್ಟುಹೋಗಿದ್ದ ಕಫೀಲ್ ಗೆ `ಗ್ಲಾಸ್ಗೋ ರಾಯಲ್ ಇನ್ಫರ್ಮರಿ'ಯಲ್ಲಿ (ಆಸ್ಪತ್ರೆ) ಚಿಕಿತ್ಸೆ ನೀಡಲಾಗುತ್ತಿತ್ತು. ಜೀಪ್ ಸ್ಫೋಟಿಸಿದಾಗ ಸುರಕ್ಷಿತವಾಗಿ ಪಾರಾಗಿ, ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಬಿಲಾಲ್ ಅಬ್ದುಲ್ಲಾನನ್ನೂ ಬಂಧಿಸಲಾಗಿತ್ತು.
2007: ವಿಶೇಷ ತನಿಖಾ ತಂಡದ ವರದಿಯಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಅಪರಾಧದ ಆರೋಪ ಸಾಬೀತಾಗದ ಕಾರಣ ವಿಚಾರಣೆಯನ್ನು ಕೊನೆಗೊಳಿಸುತ್ತಿರುವುದಾಗಿ ನ್ಯಾಯಮೂರ್ತಿಗಳಾದ ಆರ್. ಎಸ್. ಸೋಧಿ ಮತ್ತು ಪಿ.ಕೆ. ಭಾಸೀನ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿತು. ಇದಕ್ಕೂ ಮುನ್ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಪೊಲೀಸ್ ಅಧಿಕಾರಿಗಳ ವಿರುದ್ಧ ಮಾಡಲಾದ ಆರೋಪಗಳು ವಿಶೇಷ ತನಿಖಾ ತಂಡದ ಶೋಧನೆಯಲ್ಲಿಪತ್ತೆಯಾಗಿಲ್ಲ ಎಂದು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.
2007: ಸೇನೆಯನ್ನು ಟೀಕಿಸಿದ್ದಕ್ಕಾಗಿ ನಾಲ್ಕು ವರ್ಷಗಳ ಹಿಂದೆ 23 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದ ಪಿಎಂಎಲ್- ಎನ್ ಮುಖಂಡ ಜಾವೇದ್ ಹಷ್ಮಿ ಅವರನ್ನು ಬಿಡುಗಡೆ ಮಾಡಲು ಪಾಕಿಸ್ಥಾನ ಸುಪ್ರೀಂ ಕೋರ್ಟ್ ಆದೇಶ ನೀಡುವುದರೊಂದಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಅವರಿಗೆ ಎರಡನೇ ಬಾರಿ ಮುಖಭಂಗವಾಯಿತು. ಮುಷರಫ್ ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್ (ಎನ್) ಹಂಗಾಮಿ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಕಟುವಾಗಿ ಟೀಕಿಸಿ 2003ರಲ್ಲಿ ಸೇನಾ ಯೋಧರಿಗೆ ಕರಪತ್ರ ಹಂಚಿದ್ದ ಹಷ್ಮಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಮುಷರಫ್ ವಿರುದ್ಧದ ಟೀಕೆಗಳ ಸುರಿಮಳೆಯೇ ಕರಪತ್ರದಲ್ಲಿ ಇತ್ತು. ರಾಷ್ಟ್ರೀಯ ಸಭೆಯ ಸದಸ್ಯರೂ ಆಗಿದ್ದ ಹಷ್ಮಿ ಅವರು ಸೇನೆಯಲ್ಲಿ ಒಡಕು ಮೂಡಿಸಲು ಯತ್ನಿಸಿದ್ದರು ಎಂದು ಆಪಾದಿಸಲಾಗಿತ್ತು.
2006: ಬೆಂಗಳೂರಿನ ಎನ್ ಎಎಲ್ ವಿಜ್ಞಾನಿ ಡಾ. ಕೋಟಾ ಹರಿನಾರಾಯಣ ಅವರಿಗೆ ಜಿ.ಎಂ. ಮೋದಿ ಪ್ರಶಸ್ತಿ ಲಭಿಸಿತು.
2006: ಇರಾಕ್ ತೈಲ ಹಗರಣದ ತನಿಖಾ ವರದಿಯನ್ನು ಪಾಠಕ್ ಆಯೋಗವು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವ ನಟವರ್ ಸಿಂಗ್ ಮತ್ತು ಅವರ ಪುತ್ರ ಜಗತ್ ಸಿಂಗ್ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು ಎಂದು 110 ಪುಟಗಳ ಈ ವರದಿ ಆರೋಪಿಸಿತು.
2006: ಪ್ರಜಾಪ್ರಭುತ್ವ ಪರ ರ್ಯಾಲಿಗಳನ್ನು ಹತ್ತಿಕ್ಕುವಲ್ಲಿ ಸೇನೆ ವಹಿಸಿದ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಉನ್ನತ ಮಟ್ಟದ ನ್ಯಾಯಾಂಗ ಆಯೋಗವು ಕಠ್ಮಂಡುವಿನಲ್ಲಿ ನೇಪಾಳದ ಸೇನಾ ಮುಖ್ಯಸ್ಥ ಜನರಲ್ ಪ್ಯಾರ್ ಜಂಗ್ ಥಾಪಾ ಅವರನ್ನು ಪ್ರಶ್ನಿಸಿತು. ದೊರೆ ಜ್ಞಾನೇಂದ್ರ ಅವರ 14 ತಿಂಗಳುಗಳ ನೇರ ಆಡಳಿತಕ್ಕೆ ಮಂಗಳ ಹಾಡಿ, ಪ್ರಜಾಪ್ರಭುತ್ವ ಸ್ಥಾಪನೆಗೆ ಕಾರಣವಾದ ಜನತಾ ಚಳವಳಿಯನ್ನು ಹತ್ತಿಕ್ಕುವಲ್ಲಿ ಸೇನೆ ಷಾಮೀಲಾದ ಆಪಾದನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಆಯೋಗದಿಂದ ವಿಚಾರಣೆಗೆ ಒಳಗಾದ ಮೊತ್ತ ಮೊದಲ ಸೇನಾ ಅಧಿಕಾರಿ ಥಾಪಾ. ಏಪ್ರಿಲ್ ತಿಂಗಳ ಚಳವಳಿ ಕಾಲದಲ್ಲಿ ಸಹಸ್ರಾರು ಮಂದಿ ನಿರಾಯುಧ ಪ್ರದರ್ಶನಕಾರರ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿದಾಗ 22 ಮಂದಿ ಮೃತರಾಗಿ ನೂರಾರು ಮಂದಿ ಗಾಯಗೊಂಡಿದ್ದರು.
2006: ಸುವಿಹಾರಿ ಬಸ್ಸುಗಳಲ್ಲಿ ದೂರವಾಣಿ ಸೌಲಭ್ಯ ಕಲ್ಪಿಸುವ ವಿನೂತನ ಸೇವೆಯನ್ನು ರಿಲಯನ್ಸ್ ಕಮ್ಯೂನಿಕೇಷನ್ಸ್ ಕರ್ನಾಟಕದಲ್ಲಿ ಆರಂಭಿಸಿತು. ಭಾರತದ ಅತಿದೊಡ್ಡ ಸಾರಿಗೆ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ವಿ.ಆರ್. ಎಲ್. ಟ್ರಾವಲ್ಸ್ ಬಸ್ಸಿನಲ್ಲಿ ಹುಬ್ಬಳ್ಳಿಯಲ್ಲಿ ಈ ಸೇವೆ ಆರಂಭಗೊಂಡಿತು.
1996: ಲಿಯಾಂಡರ್ ಪೇಸ್ ಅವರು ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ ಬ್ರೆಝಿಲ್ ನ ಫರ್ನಾಂಡೋ ಮೆಲಿಗೆನಿ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡರು. 1952ರಲ್ಲಿ ಕೆ. ಜಾಧವ್ ಅವರು ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. ನಂತರದ ವರ್ಷಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಕೀರ್ತಿ ಲಿಯಾಂಡರ್ ಪೇಸ್ ಅವರಿಗೆ ಲಭಿಸಿತು.
1957: ಸಾಹಿತಿ ಭಾರತಿ ಪಾಟೀಲ ಜನನ.
1949: ಸಾಹಿತಿ ಟಿ.ಆರ್. ಅನಂತರಾಮು ಜನನ.
1943: ಸಿಸಿಲಿಯ ಸೇನಾ ಆಸ್ಪತ್ರೆಯಲ್ಲಿ ಜನರಲ್ ಜಾರ್ಜ್ ಎಸ್. ಪ್ಯಾಟ್ಟನ್ ಖಾಸಗಿ ವ್ಯಕ್ತಿಯೊಬ್ಬನನ್ನು ಹೇಡಿ ಎಂದು ನಿಂದಿಸಿ ಆತನ ಕಪಾಳಕ್ಕೆ ಹೊಡೆದ. ಈ ಕೃತ್ಯಕ್ಕಾಗಿ ಕ್ಷಮೆ ಬೇಡುವಂತೆ ಜನರಲ್ ಡ್ವೈಟ್ ಡಿ. ಐಸೆನ್ ಹೊವರ್ ಮಾಡಿದ ಆಜ್ಞೆಗೆ ಅನುಗುಣವಾಗಿ ನಂತರ ಪ್ಯಾಟ್ಟನ್ ತನ್ನ ತಪ್ಪಿಗಾಗಿ ಕ್ಷಮೆ ಬೇಡಿದ.
1936: ಖ್ಯಾತ ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ ಜನನ.
1928: ಕನ್ನಡದ ಪ್ರತಿಭಾನ್ವಿತ, ಸೃಜನಶೀಲ, ಗದ್ಯ ಲೇಖಕ ಯಶವಂತ ಚಿತ್ತಾಲ ಅವರು ವಿಠೋಬ- ರುಕ್ಮಿಣಿ ದಂಪತಿಯ ಪುತ್ರನಾಗಿ ಉತ್ತರ ಕನ್ನಡ ಜಿಲ್ಲೆಯ ಹನೇನಹಳ್ಳಿಯಲ್ಲಿ ಜನಿಸಿದರು. ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲ ಅವರು ಯಶವಂತ ಚಿತ್ತಾಲರ ಅಣ್ಣ.
1928: ಎನ್. ವಿ. ಶಂಕರನಾರಾಯಣ ರಾವ್ ಜನನ.
1921: ಒಹೈಯೊದ ಟ್ರಾಯ್ ಯಲ್ಲಿ ಎಲೆ ಕೊರಕ ಹುಳಗಳ ನಿವಾರಣೆಗಾಗಿ ಮೊತ್ತ ಮೊದಲ ಬಾರಿಗೆ ವೈಮಾನಿಕ ಔಷಧಿ ಸಿಂಪರಣೆ ಮಾಡಲಾಯಿತು.
1916: ಐರಿಷ್ ರಾಷ್ಟ್ರೀಯವಾದಿ ಸರ್ ರೋಗರ್ ಕೇಸ್ ಮೆಂಟ್ ಅವರನ್ನು ರಾಜದ್ರೋಹದ ಆಪಾದನೆಗಾಗಿ ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು. ಐರಿಷ್ ಹೋರಾಟಕ್ಕೆ ಬೆಂಬಲ ನೀಡುವಂತೆ ಜರ್ಮನಿಯ ಮನವೊಲಿಸಲು ಕೇಸ್ ಮೆಂಟ್ ಪ್ರಯತ್ನಿಸಿದ್ದರು.
1914: ಜರ್ಮನಿಯು ಫ್ರಾನ್ಸ್ ವಿರುದ್ಧ ಸಮರ ಘೋಷಣೆ ಮಾಡಿತು.
1900: ಕ್ರಾಂತಿಕಾರಿ ನಾನಾ ಪಾಟೀಲ್ ಜನನ.
1886: ಖ್ಯಾತ ಹಿಂದಿ ಕವಿ ಮೈಥಿಲಿ ಶರಣ್ ಗುಪ್ತ ಜನ್ಮದಿನ. ಆಧುನಿಕ ಹಿಂದಿ ಸಾಹಿತ್ಯದಲ್ಲಿ ಮೊತ್ತ ಮೊದಲ ಮಹಾಕಾವ್ಯ ರಚಿಸಿದ ಹೆಗ್ಗಳಿಕೆ ಇವರದು.
1811: ಸೇಫ್ಟಿ ಎಲೆವೇಟರನ್ನು ಸಂಶೋಧಿಸಿದ ಎಲಿಸಾ ಗ್ರೇವ್ಸ್ ಓಟಿಸ್ (1811-1861) ಜನ್ಮದಿನ.
1492: ಹೊಸ ಜಗತ್ತನ್ನು ಶೋಧಿಸುವ ಗುರಿಯೊಂದಿಗೆ ಕ್ರಿಸ್ಟೋಫರ್ ಕೊಲಂಬಸ್ ಹಲವು ನಾವಿಕರೊಂದಿಗೆ ಮೊದಲ ಬಾರಿಗೆ ಸಮುದ್ರಯಾನ ಆರಂಭಿಸಿದ. ಸ್ಪೇನಿನ ಪಾಲೋಸ್ ನಿಂದ `ಸಾಂತಾ ಮಾರಿಯಾ', `ನಿನಾ' ಮತ್ತು `ಫಿಂಟ' ಎಂಬ ಮೂರು ಹಡಗುಗಳೊಂದಿಗೆ ಕೊಲಂಬಸನ ಯಾನ ಆರಂಭಗೊಂಡಿತು.
No comments:
Post a Comment