Tuesday, August 14, 2018

ಇಂದಿನ ಇತಿಹಾಸ History Today ಆಗಸ್ಟ್ 14

ಇಂದಿನ ಇತಿಹಾಸ History Today ಆಗಸ್ಟ್ 14

2018: ನವದೆಹಲಿ: ಕುಡಿಯುವ ಉದ್ದೇಶಕ್ಕಾಗಿ ೫.೫ ಟಿಎಂಸಿ ಹೆಚ್ಚುವರಿ ನೀರು ಸೇರಿದಂತೆ ಒಟ್ಟು ೧೩.೫ ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹಂಚಿಕೆ ಮಾಡುವ ಮೂಲಕ ಮಹದಾಯಿ ನದಿ ನೀರು ನ್ಯಾಯಾಧಿಕರಣವು ಗೋವಾ ಜೊತೆಗಿನ ೫೦ ವರ್ಷಗಳಷ್ಟು ಹಳೆಯದಾದ ಮಹದಾಯಿ ಜಲ ವಿವಾದಕ್ಕೆ ತೆರೆ  ಎಳೆಯಿತು. ನ್ಯಾಯಾಧಿಕರಣದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಜೆ.ಎಂ ಪಾಂಚಾಲ್ ಅವರು ದೆಹಲಿಯಲ್ಲಿ ಈದಿನ ತಮ್ಮ ತೀರ್ಪು ನೀಡಿ, ಮುಂಬೈ -ಕರ್ನಾಟಕ ಪ್ರದೇಶಕ್ಕೆ ಕುಡಿಯುವ ಉದ್ದೇಶಕ್ಕಾಗಿ ೫.೫ ಟಿಂಎಸಿ ಅಡಿ , ವಿದ್ಯುತ್ ಉತ್ಪಾದನೆಗಾಗಿ ೮.೨ ಟಿಎಂಸಿ ಅಡಿ ನೀರು, ಕಳಸಾ ಮತ್ತು ಬಂಡೂರಿ ನಾಲೆಗಳಿಗೆ ಕ್ರಮವಾಗಿ ೧.೧೨ ಟಿಎಂಸಿ ಅಡಿ ಹಾಗೂ ೨.೧೮ ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿದರು.  ಮುಂಗಾರು ವೇಳೆಯಲ್ಲಿ ೫.೫ ಟಿಎಂಸಿ ಅಡಿ ನೀರನ್ನು ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಲು ನ್ಯಾಯಾಧಿಕರಣ ಒಪ್ಪಿಗೆ ನೀಡುವುದರೊಂದಿಗೆ ಕರ್ನಾಟಕಕ್ಕೆ ಭಾಗಶಃ ಪರಿಹಾರ ಲಭಿಸಿದಂತಾಯಿತು. ಕರ್ನಾಟಕವು ಈ ಉದ್ದೇಶಕ್ಕಾಗಿ ೭.೫ ಟಿಎಂಸಿ ಅಡಿ ನೀರನ್ನು ನೀಡುವಂತೆ ಕೋರಿತ್ತು. ತೀರ್ಪಿನ ಪರಿಣಾಮವಾಗಿ ಹುಬ್ಬಳ್ಳಿ ಧಾರವಾಡ ಅವಳಿನಗರ ಮತ್ತು ಪ್ರದೇಶದ ೧೫೦ಕ್ಕೂ ಹೆಚ್ಚು ಗ್ರಾಮಗಳು ಮಹದಾಯಿ ನದಿಯಂದ ಕುಡಿಯುವ ನೀರು ಪಡೆಯುವ ನಿರೀಕ್ಷೆ ಇದೆ.  ಮಹದಾಯಿ ಹೋರಾಟ ಸಮಿತಿಯು ತೀರ್ಪನ್ನು ಸ್ವಾಗತಿಸಿ, ಅಂತಿಮವಾಗಿ ಕರ್ನಾಟಕದ ಜನತೆಗೆ ನ್ಯಾಯ ಲಭಿಸಿದೆ ಎಂದು ಹೇಳುವ ಮೂಲಕ ತನ್ನ ತೃಪ್ತಿಯನ್ನು ವ್ಯಕ್ತ ಪಡಿಸಿತು. ಮಹದಾಯಿ ಜಲ ವಿವಾದವು ಗೋವಾ ಮತ್ತು ಕರ್ನಾಟಕದ ಮಧ್ಯೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತು. ಕರ್ನಾಟಕದ ಆಡಳಿತಾರೂಢ ಜೆಡಿಎಸ್- ಕಾಂಗ್ರೆಸ್ ಮೈತ್ರಿಕೂಟ ಮತ್ತು ವಿರೋಧಿ ಬಿಜೆಪಿ ಮಧ್ಯೆ ಈ ವಿಚಾರಕ್ಕೆ ಸಂಬಂಧಿಸಿದಂತೆ ತೀವ್ರ ವಾಕ್ಸಮರ ನಡೆದಿತ್ತು. ಕರ್ನಾಟಕ ಮತ್ತು ಗೋವಾ ನಡುವಣ ಈ ಜಲ ವಿವಾದದಲ್ಲಿ ಮಹಾರಾಷ್ಟ್ರ ಕೂಡಾ ಕಕ್ಷಿದಾರನಾಗಿತ್ತು. ಮೂರೂ ರಾಜ್ಯಗಳಿಗೆ ವಿವಾದವನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ೨೦೧೦ರಲ್ಲಿ ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ -೨ ಸರ್ಕಾರವು ವಿವಾದವನ್ನು ನ್ಯಾಯಾಧಿಕರಣಕ್ಕೆ ವಹಿಸಿತ್ತು. ಮೂರೂ ರಾಜ್ಯಗಳ ಅಹವಾಲು, ವಾದ - ಪ್ರತಿವಾದಗಳ ಆಲಿಕೆಯ ಬಳಿಕ ನ್ಯಾಯಾಧಿಕರಣ ಈದಿನ ತನ್ನ ತೀರ್ಪು ಪ್ರಕಟಿಸಿತು. ನ್ಯಾಯಾಧಿಕರಣವು ಮಂಜೂರು ಮಾಡಿರುವ ೮.೦೨ ಟಿಎಂಸಿ ಅಡಿ ನೀರಿನಿಂದ ಮಹದಾಯಿ ಜಲ ವಿದ್ಯುತ್ ಯೋಜನೆ ಮೂಲಕ ಕರ್ನಾಟಕವು ವಿದ್ಯುತ್ ಉತ್ಪಾದನೆ ಮಾಡಿಕೊಳ್ಳಬಹುದಾಗಿದೆ. ಕರ್ನಾಟಕವು ಮೊದಲಿಗೆ ಕಳಸಾ ನಾಲೆಗೆ ೪ ಟಿಎಂಸಿ ಮತ್ತು ಬಂಡೂರಿ ನಾಲೆಗೆ ೩.೫೬ ಟಿಎಂಸಿ ಅಡಿ ನೀರು ಸೇರಿದಂತೆ ೭.೫೬ ಟಿಎಂಸಿ ನೀರಿಗೆ ಬೇಡಿಕೆ ಮುಂದಿಟ್ಟಿತ್ತು. ೨೦೧೬ರ ಜುಲೈ ತಿಂಗಳಲ್ಲಿ ನ್ಯಾಯಾಧಿಕರಣವು ಕರ್ನಾಟಕದ ಬೇಡಿಕೆಯನ್ನು ತಿರಸ್ಕರಿಸಿದ್ದು, ಉತ್ತರ ಕರ್ನಾಟಕದಾದ್ಯಂತ ಪ್ರತಿಭಟನೆಗಳು ಭುಗಿಲೇಳಲು ಕಾರಣವಾಗಿತ್ತು.  ಈದಿನ ತೀರ್ಪಿನ ಸುದ್ದಿ ಬರುತ್ತಿದ್ದಂತೆಯೇ ಬೆಳಗಾವಿಯ ರೈತ ನಾಯಕ ಮೊಡಗಿ ಅವರು ತೀರ್ಪಿನ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ’ಈ ನಾಲ್ಕು ಜಿಲ್ಲೆಗಳಲ್ಲಿ ಕುಡಿಯುವ ಉದೇಶಕ್ಕೆ ಮತ್ತು ನೀರಾವರಿಗೆ ನೀರು ಪಡೆಯುವುದಕ್ಕಾಗಿ ನಾವು ಹೋರಾಟ ನಿರತರಾಗಿದ್ದೇವೆ. ೫.೫ ಟಿಎಂಸಿ ಅಡಿ ನೀರನ್ನು ಮಂಜೂರು ಮಾಡಿರುವುದರಿಂದ ನಮಗೆ ಖುಷಿಯಾಗಿದೆ. ಆದರೆ ಲಭಿಸಬೇಕಾಗಿದ್ದ ಇನ್ನೂ ಎರಡು ಟಿಎಂಸಿ ಅಡಿ ನೀರಿಗಾಗಿ ನಾವು ಚಳವಳಿ ಮುಂದುವರೆಸುತ್ತೇವೆ’ ಎಂದು ಅವರು ನುಡಿದರು.  ಬಿಜೆಪಿಯ ಹಿರಿಯ ನಾಯಕಿ ಶೋಭಾ ಕರಂದ್ಲಾಜೆ ಅವರು ತೀರ್ಪನ್ನು ಶ್ಲಾಘಿಸಿ, ಕರ್ನಾಟಕ ಸರ್ಕಾರವು ತನ್ನ ಮಹದಾಯಿ ನೀರಾವರಿ ಯೋಜನೆಗಳನ್ನು ತತ್ ಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು. ಏನಿದ್ದರೂ, ಕರ್ನಾಟಕ ಸರ್ಕಾರವು ತೀರ್ಪಿನ ಬಗ್ಗೆ ಇನ್ನೂ ತನ್ನ ಪ್ರತಿಕ್ರಿಯೆ ನೀಡಿಲ್ಲ. ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ತೀರ್ಪು ಬರುವ ಮುನ್ನ ಪತ್ರಕರ್ತರ ಜೊತೆ ಮಾತನಾಡುತ್ತಾ ರಾಜ್ಯ ನ್ಯಾಯ ದೊರೆಯುವ ನಿರೀಕ್ಷೆ ಇದೆ. ನ್ಯಾಯ ಲಭಿಸದೇ ಇದ್ದಲ್ಲಿ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದ್ದರು. ಮಹದಾಯಿ ವಿವಾದವು ಇತ್ತಿಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಪ್ರಮುಖ ಚುನಾವಣಾ ವಿಷಯವಾಗಿತ್ತು. ಈ ಬಿಕ್ಕಟ್ಟನ್ನು ಇತ್ಯರ್ಥ ಪಡಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆಪಾದಿಸಿದ್ದವು. ಬಿಜೆಪಿ ನಡೆಸಿದ ಪ್ರಯತ್ನವನ್ನು ರಾಜ್ಯ ಸರ್ಕಾರ ನಿಷ್ಫಲಗೊಳಿಸಿತ್ತು ಎಂದು ಬಿಜೆಪಿ ದೂರಿತ್ತು.
ಏನಿದು ಮಹದಾಯಿ ವಿವಾದ?
ಮಹದಾಯಿ ನದಿ ಗೋವಾದಲ್ಲಿ ಮಾಂಡೋವಿ ನದಿ ಎಂಬುದಾಗಿಯೇ ಪರಿಚಿತವಾಗಿರುವ ನದಿ. ಗೋವಾದ ರಾಜಧಾನಿ ಪಣಜಿ ಮಾಂಡೋವಿ ನದಿದಂಡೆಯ ಮೇಲಿದ್ದು, ಇದು ಭಾರತದಲ್ಲಿಯೇ ಅತ್ಯಂತ ಸಣ್ಣ ನದಿ. ವಾಸ್ತವವಾಗಿ ಪಶ್ಚಿಮ ಘಟ್ಟದಲ್ಲಿ ಬೆಳಗಾವಿಯ ಭೀಮಗಢದಲ್ಲಿ ಹುಟ್ಟಿ ಕರ್ನಾಟಕದಲ್ಲಿ ೩೫ ಕಿಮೀ,  ಗೋವಾದಲ್ಲಿ  ೫೨ ಕಿಮೀ ಸೇರಿಒಟ್ಟು ೮೭ ಕಿಮೀ ದೂರ ಹರಿದು ಅರಬ್ಬಿ ಸಮುದ್ರವನ್ನು ಸೇರುವ ಮಹದಾಯಿ ಅಥವಾ ಮಾಂಡೋವಿ ನದಿ ಗೋವಾದ ಜೀವನದಿ ಎಂದೇ ಖ್ಯಾತ. ಕೆಲವೆಡೆಗಳಲ್ಲಿ ಈ ನದಿಗೆ ಗೋಮತಿ ಎಂಬ ಹೆಸರೂಇದೆ. ಉತ್ತರಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ರೈಲ್ವೇ ನಿಲ್ದಾಣದ ಸಮೀಪ ಕರ್ನಾಟಕದ ಉತ್ತರಕನ್ನಡ ಜಿಲ್ಲೆಯಿಂದ ಗೋವಾದ ಸತ್ತಾರಿ ತಾಲೂಕಿನಲ್ಲಿ ಗೋವಾ ಪ್ರವೇಶಿಸುವ ಮಾಂಡೋವಿ ನದಿ ಕರ್ನಾಟಕದ ಬೆಳಗಾವಿ, ಉತ್ತರಕನ್ನಡ ಮತು ಗೋವಾದ ಕುಂಬರ್ಜುವಾ, ದಿವಡಿ ಮತ್ತುಛೊಡ್ನೆ ಮೂಲಕ ಹರಿದು ಸಮುದ್ರವನ್ನು ಸೇರುತ್ತದೆ. ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳು ನೀರಿಗಾಗಿ ಮಹದಾಯಿ ನದಿಯನ್ನು ಆಶ್ರಯಿಸಿವೆ. ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ೧೯೭೦ರಲ್ಲಿ ಜಲತಜ್ಞ ಎಸ್.ಜಿ. ಬಾಳೆಕುಂದ್ರಿ ಅವರು ಮಹದಾಯಿ ನದಿ ತಿರುವು ಯೋಜನೆಯನ್ನು ರೂಪಿಸಿದರು. ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿಯಿಂದ ೭.೫೬ ಟಿಎಂಸಿ ನೀರನ್ನು ಮಹಲಪ್ರಭಾ ಅಣೆಕಟ್ಟಿಗೆ ನಾಲಾ ಮೂಲಕ ಹರಿಸುವ ಯೋಜನೆಯನ್ನು ಕರ್ನಾಟಕ ರೂಪಿಸಿತು.  ಮಲಪ್ರಭಾ ನದಿಗೆ ಮಹದಾಯಿ ನದಿಯ ನೀರು ಹರಿಸಿ ನವಿಲುತೀರ್ಥದ ಅಣೆಕಟ್ಟಿನಲ್ಲಿ ಅದನ್ನು ಸಂಗ್ರಹಿಸಿ ಕರ್ನಾಟಕದ ಧಾರವಾಡ ಜಿಲ್ಲೆಗೆ ನೀರು ಒದಗಿಸುವುದು ಈ ಯೋಜನೆಯ ಗುರಿಯಾಗಿತ್ತು. ೧೯೭೦ರಲ್ಲಿ ಅಣೆಕಟ್ಟು ನಿರ್ಮಿಸಿದರೂ ಮೂರು ಅಥವಾ ನಾಲ್ಕು ಬಾರಿ ಬಿಟ್ಟಿರೆ ಎಂದೂ ಅದು ಸಾಮರ್ಥ್ಯಕ್ಕೆ ಸರಿಯಾಗಿ ತುಂಬಿರಲಿಲ್ಲ. ಮುಂಬೈ -ಕರ್ನಾಟಕ ಪ್ರದೇಶದ ಕುಡಿಯುವ ನೀರಿನ ಅಗತ್ಯ ಪೂರೈಸಲು ಕರ್ನಾಟಕವು ಮಹದಾಯಿ ನದಿಯಿಂದ ೭.೫೬ ಟಿಎಂಸಿ ಅಡಿ ನೀರು ಪೂರೈಸುವಂತೆ ಆಗ್ರಹಿಸಿತು. ಮಹದಾಯಿ ನದಿಯ ಉಪನದಿಗಳಾದ ಕಳಸಾ ಮತ್ತು ಬಂಡೂರಿಗಳಿಗೆ ಬ್ಯಾರೇಜ್ ನಿರ್ಮಿಸಲು ಅದು ಬಯಸಿತು. ಈ ಮೂಲಕ ೧೮೦ ಗ್ರಾಮಗಳು ಮತ್ತು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಿಗೆ ನೀರು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು. ೨೦೦೨ರಲ್ಲಿ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿತು. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೇತೃತ್ವದ ಕರ್ನಾಟಕ ಸರ್ಕಾರ ಕಾಮಗಾರಿಯನ್ನೂ ಆರಂಭಿಸಿತು. ಆದರೆ  ಮನೋಹರ ಪರಿಕ್ಕರ್ ನೇತೃತ್ವದ ಗೋವಾದ ಬಿಜೆಪಿ ಸರ್ಕಾರ ಯೋಜನೆಯನ್ನು ವಿರೋಧಿಸಿತು. ಪರಿಣಾಮವಾಗಿ ಕೇಂದ್ರದ ಎನ್‌ಡಿಎ ಸರ್ಕಾರ ಯೋಜನೆ ಮಂಜೂರಾತಿ, ಧನ ಸಹಾಯವನ್ನುತಡೆ ಹಿಡಿಯಿತು. ಅಂದಿನಿಂದಲೂಉಭಯ ರಾಜ್ಯಗಳ ಮಧ್ಯೆ ಯೋಜನೆ ಬಗ್ಗೆ ಕದನ ನಡೆಯುತ್ತಲೇ ಇತ್ತು.  ೪ ವರ್ಷದ ಬಳಿಕ ಎಚ್. ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿ, ಬಿ.ಎಸ್. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದ ಬಳಿಕ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಿಂದ ೨೦೦೬ರಲ್ಲಿ ಯೋಜನೆಗೆ ಚಾಲನೆ ಸಿಕ್ಕಿತು. ಬೆಳಗಾವಿ ತಾಲೂಕಿನ ಖಾನಾಪುರ ಜಿಲ್ಲೆಯ ಕನಕುಂಬಿಯಲ್ಲಿ ಸೆಪ್ಟೆಂಬರ್ ೨೨ರಂದು ಅದರ ಉದ್ಘಾಟನೆಯಾಯಿತು. ಆದರೆ ಗೋವಾ ಸರ್ಕಾರ ಸುಪ್ರೀಂಕೋರ್ಟಿಗೆ ಹೋಗಿ ಅದಕ್ಕೆ ತಡೆಯಾಜ್ಞೆ ತಂದಿತು. ಸಂಧಾನದ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಯುಪಿಎ-೨ ಸರ್ಕಾರವು ೨೦೧೦ರಲ್ಲಿ ಮಹದಾಯಿ ಜಲ ವಿವಾದ ನ್ಯಾಯಾಧಿಕರಣವನ್ನು ರಚಿಸಿ ವಿವಾದವನ್ನು ಅದಕ್ಕೆ ಒಪ್ಪಿಸಿತು. ನ್ಯಾಯಾಧಿಕರಣವು ತನ್ನ ಮಧ್ಯಂತರ ಆದೇಶದಲ್ಲಿ ೭.೫೬ ಟಿಎಂಸಿ ನೀರು ಬಿಡುವಂತೆ ಕರ್ನಾಟಕ ಮಾಡಿದ ಕೋರಿಕೆಯನ್ನು ತಿರಸ್ಕರಿಸಿತ್ತು. ಪರಿಣಾಮವಾಗಿ ಮುಂಬೈ ಕರ್ನಾಟಕ ಪ್ರದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಕರ್ನಾಟಕಕ್ಕೆ ನೀರು ತಿರುಗಿಸಲು ಅವಕಾಶ ನೀಡಿದರೆ, ೭೦೦ ಹೆಕ್ಟೇರ್ ಪ್ರದೇಶ ನೀರಿನ ಅಡಿ ಮುಳುಗುತ್ತದೆ ಮತ್ತು ೬೦,೦೦೦ ಮರಗಳನ್ನು ಕಡಿಯಬೇಕಾಗುತ್ತದೆ ಎಂಬುದು ಗೋವಾ ಸರ್ಕಾರದ ವಾದವಾಗಿತ್ತು. ೨೦೦ ಟಿಎಂಸಿ ಅಡಿಗಳಷ್ಟು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿರುವಾಗ ಅದನ್ನು ಕರ್ನಾಟಕ- ಗೋವಾ ರಾಜ್ಯಗಳು ಹಂಚಿಕೊಳ್ಳುವುದರಿಂದ ಉಭಯ  ರಾಜ್ಯಗಳಿಗೂ ಅನುಕೂಲ ಎಂಬುದು ಕರ್ನಾಟಕದ ಭಾವನೆಯಾಗಿತ್ತು. ಸ್ವಲ್ಪಾಂಶ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿದರೆ ಕರ್ನಾಟಕದ ಬರಪೀಡಿತ ಜಿಲ್ಲೆಗಳು ನೀರಿನ ಅಭಾವದಿಂದ ಪಾರಾಗುತ್ತವೆ ಎಂಬುದು ರಾಜ್ಯದ ವಾದವಾಗಿತ್ತು. ಇತ್ತಿಚೆಗೆಗಿನ ಪ್ರತಿಭಟನೆಗಳ ಬಳಿಕ ಬಿಜೆಪಿಯ ಕರ್ನಾಟಕ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ನವದೆಹಲಿಗೆ ತೆರಳಿ ಬಿಕ್ಕಟ್ಟಿಗೆ ತತ್ ಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದರು. ಆಗ ಅಮಿತ್ ಶಾ ಅವರು ಪರಿಕ್ಕರ್ ಮತ್ತು ಯಡಿಯೂರಪ್ಪ ಭೇಟಿಗೆ ವ್ಯವಸ್ಥೆ ಮಾಡಿದ್ದರು.  ಆದರೆ ಕರ್ನಾಟಕಕ್ಕೆ ಕುಡಿಯುವ ನೀರು ಒದಗಿಸಲು ಮುಂದಾದ ಪರಿಕ್ಕರ್ ಸರ್ಕಾರದ ತೀರ್ಮಾನವನ್ನು ಗೋವಾ ಬಿಜೆಪಿ ಸರ್ಕಾರದ ಪಾಲುದಾರ ಪಕ್ಷವಾದ ಗೋವಾ ಫಾರ್ವಡ್ ಪಕ್ಷವು ಕರ್ನಾಟಕದ ಜೊತೆಗೆ ಸಂಧಾನವನ್ನು ವಿರೋಧಿಸಿದ್ದರಿಂದ ಮಾತುಕತೆಯಿಂದ ಯಾವುದೇ ಪ್ರಯೋಜನವೂ ಆಗಲಿಲ್ಲ. ಗೋವಾದ ಕಾಂಗ್ರೆಸ್ ಕೂಡಾ ಕರ್ನಾಟಕಕ್ಕೆ ನೀರು ಬಿಡಲು ವಿರೋಧ ವ್ಯಕ್ತ ಪಡಿಸಿತ್ತು.

2018: ನವದೆಹಲಿ: ಭಾರತದ ೭೨ನೇ ಸ್ವಾತಂತ್ರ್ಯ ದಿನೋತ್ಸವ ಮುನ್ನಾದಿನ ಟಿವಿ ಹಾಗೂ ಬಾನುಲಿ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರೈತರು, ಯೋಧರು ಮತ್ತು ಮಹಿಳಾ ಸಬಲೀಕರಣಕ್ಕೆ ಕರೆ ನೀಡಿದರು. ಮಹಿಳೆಯರು ನಮ್ಮ ಸಮಾಜದಲ್ಲಿ ವಿಶೇಷ ಮಹತ್ವವನ್ನು ಹೊಂದಿದ್ದಾರೆ. ಮನೆ, ಕೆಲಸ ಮಾಡುವ ಸ್ಥಳ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಾರ್‍ಯದಲ್ಲಿ ತಮ್ಮ ಕೌಶಲ ಬಳಸಲು ಮಹಿಳೆಯರು ಬಯಸಿದಾಗ ತಮ್ಮ ಮಾರ್ಗವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಅವರಿಗೆ ಇರಬೇಕು ಎಂದು ರಾಷ್ಟ್ರಪತಿ ಹೇಳಿದರು. ಭಾರತೀಯ ಸಮಾಜದಲ್ಲಿ ಮಹಿಳೆಯರ ಪಾತ್ರ ಮತ್ತು ಭಾರತೀಯ ಪಡೆಗಳ ಪಾತ್ರವನ್ನು ಅವರು ಪ್ರಸ್ತಾಪಿಸಿದರು. ಮಹಿಳೆಯರಿಗೆ ಸಮಾಜಕ್ಕೆ ಕೊಡುಗೆ ಸಲ್ಲಿಸುವ ಅವಕಾಶಗಳು ಲಭಿಸುವಂತೆ ನಾವು ಮಾಡಬೇಕು. ಇದು ನಮ್ಮ ಕನಸಿನ ಭಾರತವನ್ನು ಸೃಷ್ಟಿಸುವ ರೀತಿ. ಮಹಿಳೆಯರನ್ನು ಸಬಲೀಕರಿಸುವುದು ಎಂದರೆ ನಮ್ಮ ಸ್ವಾತಂತ್ರ್ಯವನ್ನು ಬಲಪಡಿಸುವುದು ಎಂದೇ ಅರ್ಥ ಎಂದು ರಾಷ್ಟ್ರಪತಿ ಹೇಳಿದರು.  ಸ್ವಾತಂತ್ರ್ಯ ಪದದ ವ್ಯಾಖ್ಯೆ ವಿಸ್ತಾರಗೊಳ್ಳಬೇಕು. ನಾವು ನಮ್ಮ ರೈತರು ಮತ್ತು ಯೋಧರಿಗೆ ನೆರವಾದಾಗ, ನಾವು ನಮ್ಮ ಸ್ವಾತಂತ್ರ್ಯವನ್ನು ಬಲ ಪಡಿಸುತ್ತೇವೆ ಎಂದು ರಾಷ್ಟ್ರಪತಿ ಹೇಳಿದರು. ನಮ್ಮ ರೈತರು ಕೋಟಿಗಟ್ಟಲೆ ಭಾರತೀಯರಿಗಾಗಿ ಉತ್ಪಾದನೆ ಮಾಡುತ್ತಾರೆ. ಅವರು ನಮ್ಮ ರಾಷ್ಟ್ರಕ್ಕೆ ಶಕ್ತಿಯನ್ನು ನೀಡುತ್ತಾರೆ. ವ್ಯವಸಾಯವನ್ನು ಆಧುನೀಕರಿಸಿದಾಗ ನಾವು ನಮ್ಮ ಹಿರಿಯರ ಕನಸನ್ನು ನನಸಾಗಿಸುವ ಭಾರತವನ್ನು ಸೃಷ್ಟಿಸುತ್ತೇವೆ ಎಂದು ಕೋವಿಂದ್ ಹೇಳಿದರು.  ಯುವಕರು ತಮ್ಮ ಬದುಕನ್ನು ಭಾರತದ ಪ್ರಗತಿಗಾಗಿ ಸಮರ್ಪಿಸಲು ಮುಂದಾಗುತ್ತಿರುವುದನ್ನು ಕಂಡಾಗ ತಮಗೆ ಅತ್ಯಂತ ಹರ್ಷವಾಗುತ್ತದೆ ಎಂದು ನುಡಿದ ಅವರು ಒಟ್ಟಾಗಿ ಶ್ರಮಿಸುವ ಮೂಲಕ ದಾರಿದ್ರ್ಯವನ್ನು ನಾವು ನಿರ್ಮೂಲನ ಮಾಡಬಹುದು ಎಂದು ಹೇಳಿದರು. ಸರ್ಕಾರಕ್ಕೆ ರಾಷ್ಟ್ರದ ಅಭಿವೃದ್ಧಿ ಮಾಡುವ ಪಾತ್ರವಿದೆ, ಆದರೆ ನಾಗರಿಕರೂ ತಮ್ಮದೇ ಆದ ಪಾತ್ರವಿದೆ. ಅದನ್ನು ಅವರು ನಿರ್ವಹಿಸಬೇಕು. ಪ್ರತಿಯೊಬ್ಬ ನಾಗರಿಕನೂ ತನ್ನ ಕರ್ತವ್ಯವನ್ನು ಮಾಡಿದಾಗ ನಮ್ಮ ಸ್ವಾತಂತ್ರ್ಯ ಬಲಗೊಳ್ಳುತ್ತದೆ ಎಂದು ರಾಷ್ಟ್ರಪತಿ ನುಡಿದರು.  ವಿವಾದಾತ್ಮಕ ವಿಷಯಗಳು ಮತ್ತು ಬಾಹ್ಯ ಚರ್ಚೆಗಳು ನಮ್ಮನ್ನು ದಿಕ್ ಚ್ಯುತಿ ಮಾಡದಿರಲಿ. ಮಹಾತ್ಮಾ ಗಾಂಧಿಯವರು ಜಾತಿ ಮತ್ತು ಸಾಮಾಜಿಕ ವಿಭಜನೆಗಳನ್ನು ಅಂಗೀಕರಿಸಿರಲಿಲ್ಲ. ಚಂಪಾರಣ್ಯ ಮತ್ತು ಇತರ ಹಲವಾರು ಕಡೆಗಳಲ್ಲಿ ಗಾಂಧೀಜಿಯವರು ಸ್ವಚ್ಛ ಅಭಿಯಾನದ ಪ್ರಚಾರ ಮಾಡಿದ್ದರು ಎಂದು ಕೋವಿಂದ್ ಹೇಳಿದರು. ’ನಮ್ಮ ರಾಷ್ಟ್ರದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಮಹಾತ್ಮಾ ಗಾಂಧೀಜಿ ಅವರ ಅಹಿಂಸಾ ತತ್ವ ಇಂದಿಗೂ ಪ್ರಸ್ತುತವೇ ಎಂದು ಅವರು ನುಡಿದರು. ಸರತಿಯ ಸಾಲಿನಲ್ಲಿ ತಮ್ಮ ಸರದಿ ಬರುವವರೆಗೆ ಕಾಯುವ ಪ್ರಜೆಯು ವಾಸ್ತವವಾಗಿ ತನ್ನ ಮುಂದೆ ನಿಂತ ವ್ಯಕ್ತಿಯ ಹಕ್ಕುಗಳನ್ನು ಗೌರವಿಸುವವನಾಗಿರುತ್ತಾನೆ. ಸ್ವಾತಂತ್ರ್ಯ ಯೋಧರ ಕನಸುಗಳನ್ನು ನನಸಾಗಿಸುವಂತಹ ಭಾರತವನ್ನು ಸೃಷ್ಟಿಸೋಣ. ಇದು ಅತ್ಯಂತ ಸಣ್ಣ ಪ್ರಯತ್ನ. ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗುವಂತೆ ಮಾಡೋಣ ಎಂದು ಕೋವಿಂದ ನುಡಿದರು. ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಪಡೆಯುವಲ್ಲಿ ಸ್ವಾತಂತ್ರ್ಯ ಹೋರಾಟಗಾರರು ವಹಿಸಿದ ಪಾತ್ರವನ್ನು ತಮ್ಮ ಭಾಷಣದ ಆರಂಭದಲ್ಲೇ ಸ್ಮರಿಸಿದ ರಾಷ್ಟ್ರಪತಿ ’ಜೈಹಿಂದ್’ ಘೋಷಣೆಯೊಂದಿಗೆ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಯ ಜೊತೆಗೇ ೧೧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನೂ ನಡೆಸಲು ಸರ್ಕಾರವು ಬಯಸಿದರೆ ಹೆಚ್ಚು ವಿವಿಪ್ಯಾಟ್ ಯಂತ್ರಗಳಿಗಾಗಿ ಆರ್ಡರ್ ನೀಡಬೇಕು ಮತ್ತು ಒಂದೆರಡು ತಿಂಗಳ ಒಳಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಒಪಿ ರಾವತ್ ಅವರು ಇಲ್ಲಿ ಹೇಳಿದರು. ೨೦೧೯ರ ಲೋಕಸಭಾ ಚುನಾವಣೆಯ ಜೊತೆಗೇ ೧೧ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನೂ ನಡೆಸಲು ಭಾರತೀಯ ಚುನಾವಣಾ ಆಯೋಗದ ಬಳಿ ಸಾಕಷ್ಟು ಸಂಖ್ಯೆಯಲ್ಲಿ ವಿವಿಪ್ಯಾಟ್ ಯಂತ್ರಗಳಿಲ್ಲ. ಅಂತಹ ಪ್ರಯತ್ನವನ್ನೇನಾದರೂ ಮಾಡಬೇಕಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ವಿವಿಪ್ಯಾಟ್ ಯಂತ್ರಗಳಿಗಾಗಿ ಆದೇಶ ನೀಡಬೇಕು ಮತ್ತು ಒಂದೆರಡು ತಿಂಗಳುಗಳ ಒಳಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸಿಇಸಿ ನುಡಿದರು. ೨೦೧೯ರ ಲೋಕಸಭಾ ಚುನಾವಣೆ ಜೊತೆಗೇ ೧೧ ರಾಜ್ಯಗಳ ವಿಧಾನಸಭೆಗಳಿಗೂ ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಯನ್ನು ಬಿಜೆಪಿ ಪ್ರಕಟಿಸಿದ ಒಂದು ದಿನದ ಬಳಿಕ ಭಾರತದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಈ ಪ್ರತಿಕ್ರಿಯೆ ನೀಡಿದರು. ಚುನಾವಣಾ ಆಯೋಗದ ಕಾನೂನು ತಜ್ಞ ಎಸ್ ಕೆ ಮೆಂಡಿರಟ್ಟ ಅವರೂ ವಿವಿಪ್ಯಾಟ್ ಯಂತ್ರಗಳ ಕೊರತೆ ಬಗ್ಗೆ ಹೇಳಿದರು.  ’ಈಗ ಇರುವ  ವಿದ್ಯುನ್ಮಾನ ಮತಯಂತ್ರ ಮತ್ತು ವಿವಿಪ್ಯಾಟ್ ಯಂತ್ರಗಳ ಮೂಲಕ ಏಕಕಾಲಕ್ಕೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಅಗತ್ಯ ಇರುವಷ್ಟು ಯಂತ್ರಗಳನ್ನು ದಾಸ್ತಾನು ಮಾಡಲು ಆಯೋಗಕ್ಕೆ ಕನಿಷ್ಠ ಮೂರು ವರ್ಷಗಳು ಬೇಕು ಎಂದು ಮೆಂಡಿರಟ್ಟ ನುಡಿದರು. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಮುಂದಿನ ವರ್ಷದ ಕೊನೆಗೆ ಚುನಾವಣೆ ನಡೆಯಬೇಕಾಗಿದ್ದು, ಬಿಹಾರದಲ್ಲಿ ೨೦೨೦ರಲ್ಲಿ ಚುನಾವಣೆ ನಡೆಯಬೇಕಾಗಿದೆ. ಏಕಕಾಲದಲ್ಲಿ ಚುನಾವಣೆ ನಡೆಸುವ ಬಿಜೆಪಿ ಕರೆಗೆ ಜೆಡಿ(ಯು) ಬೆಂಬಲ ನೀಡಿರುವುದರಿಂದ ಒಟ್ಟಿಗೆ ಚುನಾವಣೆ ನಡೆಸುವ ಪ್ರಸ್ತಾಪಕ್ಕೆ ಬಿಹಾರದ ಒಪ್ಪಿಗೆ ಲಭಿಸುವುದು ಕಷ್ಟಕರವಲ್ಲ.  ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಈ ವರ್ಷದ ಕೊನೆಗೆ ಚುನಾವಣೆ ನಡೆಯಬೇಕಾಗಿದೆ. ಇವುಗಳನ್ನು ೨೦೧೯ರಲ್ಲಿ ನಡೆಯುವ ಮಹಾಚುನಾವಣೆಯಲ್ಲಿ ಒಡಿಶಾ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಿಜೋರಂ ಚುನಾವಣೆಗಳ ಜೊತೆಗೆ ಸೇರಿಸಬಹುದು ಎಂದು ಮೂಲಗಳು ಹೇಳಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಶೀಘ್ರದಲ್ಲೇ ಸರ್ವ ಪಕ್ಷಗಳ ಸಭೆ ಕರೆಯುವ ಸಾಧ್ಯತೆ ಇದೆ.  ಪ್ರಧಾನಿ ನರೇಂದ್ರ ಮೋದಿಯವರು ಏಕಕಾಲದಲ್ಲಿ ಚುನಾವಣೆ ನಡೆಸುವ ಕಲ್ಪನೆಗೆ ಆಗಾಗ ಒತ್ತು ನೀಡುತ್ತಾ ಬಂದಿರುವುದರಿಂದ ಲೋಕಸಭಾ ಚುನಾವಣೆ ಜೊತೆಗೇ ಸಾಧ್ಯವಿದ್ದಷ್ಟು ಹೆಚ್ಚು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸುವುದು ತನ್ನ ಪರವಾಗಿ ಧನಾತ್ಮಕ ಕ್ರಮವಾಗಬಲ್ಲುದು ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ. ಈ ಪ್ರಸ್ತಾಪ ಅನುಷ್ಠಾನಗೊಂಡರೆ ದೊಡ್ಡ ಪ್ರಮಾಣದಲ್ಲಿ ಹಣದ ಉಳಿತಾಯವೂ ಆಗಲಿದೆ ಎಂದು ಅದು ಹೇಳಿದೆ. ಇದಕ್ಕೆ ಮುನ್ನ ಏಕ ಕಾಲದಲ್ಲಿ ಚುನಾವಣೆ ನಡೆಸುವ ಸರ್ಕಾರದ ಪ್ರಸ್ತಾಪಕ್ಕೆ ಪರ್‍ಯಾಯವಾಗಿ ಚುನಾವಣಾ ಆಯೋಗ ಒಂದು ವರ್ಷದಲ್ಲ ಒಂದೇ ಚುನಾವಣೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿತ್ತು. ಏಕಕಾಲದಲ್ಲಿ ಚುನಾವಣೆ ನಡೆಸಲು ಹೆಚ್ಚಿನ ಭದ್ರತಾ ವ್ಯವಸ್ಥೆಗೆ ಏರ್ಪಾಡು ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಕಾನೂನಿನ ಚೌಕಟ್ಟು ರೂಪಿಸಬೇಕಾಗುತ್ತದೆ ಎಂದೂ ಸಿಇಸಿ ಈ ಮುನ್ನ ಹೇಳಿದ್ದರು. ಹಿಂದಿನ ದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕಾನೂನು ಆಯೋಗಕ್ಕೆ ಪತ್ರ ಬರೆದು ಏಕಕಾಲದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸುವುದರಿಂದ ಇರುವ ಲಾಭಗಳನ್ನು ವಿವರಿಸಿದ್ದರು. ಇದರಿಂದ ದೇಶವು ವರ್ಷಪೂರ್ತಿ ಚುನಾವಣೆಯ ಗುಂಗಿನಲ್ಲಿ ಇರುವುದು ತಪ್ಪುತ್ತದೆ ಎಂದು ಅವರು ಹೇಳಿದ್ದರು. ಏಕಕಾಲದಲ್ಲಿ ಜಂಟಿಯಾಗಿ ಎರಡು ಚುನಾವಣೆಗಳನ್ನು ನಡೆಸುವುದು ರಾಷ್ಟ್ರದ ಒಕ್ಕೂಟ ವ್ಯವಸ್ಥೆಗೆ ಹಾನಿಕರ ಎಂಬುದು ಬುಡರಹಿತ ಆರೋಪ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದ ಅಮಿತ್ ಶಾ, ವಾಸ್ತವವಾಗಿ ಈ ಕ್ರಮದಿಂದ ರಾಷ್ಟ್ರದ ಒಕ್ಕೂಟ ವ್ಯವಸ್ಥೆ ಬಲಗೊಳ್ಳುವುದು ಎಂದು ಹೇಳಿದ್ದರು.
2018: ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲು ಬಳಸಬೇಕಾಗಿದ್ದ ೧೮,೦೦೦ ಕೋಟಿ ರೂಪಾಯಿ ಹಣವನ್ನು ಗುಳುಂಕರಿಸಿದ ಆಪಾದನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಸುಪ್ರಿಂಕೋರ್ಟ್ ಒಪ್ಪಿಗೆ ನೀಡಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ಕೋರಿ ವಕೀಲ ಎಂ.ಎಲ್. ಶರ್ಮ ಅವರು ಮಾಡಿದ ಅಹವಾಲನ್ನು ಮನ್ನಿಸಿತು.  ಶರ್ಮ ಅವರು ತಮ್ಮ ಅರ್ಜಿಯಲ್ಲಿ ಮಹಾಲೇಖಪಾಲ ಯಾನೆ ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕ ಪರಿಶೋಧಕರು (ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ ಆಫ್ ಇಂಡಿಯಾ- ಸಿಎಜಿ) ತಮ್ಮ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳಿಗೆ ವಿದ್ಯಾರ್ಥಿ ವೇತನಕ್ಕಾಗಿ ಇರಿಸಲಾಗಿದ್ದ ೧೮,೦೦೦ ಕೋಟಿ ರೂಪಾಯಿಗಳಷ್ಟು ಮೊತ್ತದ ಹಣವನ್ನು ಸರ್ಕಾರಿ ನೌಕರರು ಮತ್ತು ಇತರರು ನುಂಗಿಹಾಕಿದ್ದಾರೆ ಎಂದು ತಿಳಿಸಿರುವುದನ್ನು ಉಲ್ಲೇಖಿಸಿದ್ದರು. ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪತ್ರ ಪರಿಶೋಧಕರು ೨೦೧೩ರಿಂದ ೨೦೧೭ರ ನಡುವಣ ತಮ್ಮ ಆಡಿಟ್ ವರದಿಯಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಉತ್ತರ ಪ್ರದೇಶ, ಪಂಜಾಬ್, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ವಂಚನೆ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ.

2018: ರಾಯ್ ಪುರ: ಛತ್ತೀಸ್ ಗಢದ ರಾಜ್ಯಪಾಲ ಬಲರಾಮ್‌ಜಿ ದಾಸ್ ಟಂಡನ್ (೯೦) ಅವರು ಹೃದಯಾಘಾತದ ಪರಿಣಾಮವಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು.  ಬಿಜೆಪಿಯ ಮೂಲ ಸಂಸ್ಥೆ ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಟಂಡನ್ ಅವರು ಡಾ.ಬಿ.ಆರ್. ಅಂಬೇಡ್ಕರ್ ಸ್ಮಾರಕ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು ಎಂದು ರಾಜ್ಯಪಾಲರ ಕಾರ್‍ಯದರ್ಶಿ ಸುರೇಂದ್ರ ಕುಮಾರ್ ಜೈಸ್ವಾಲ್ ನುಡಿದರು. ಬೆಳಗ್ಗೆ ಅಸ್ವಸ್ಥತೆ ಕಾಡಿದ ಪರಿಣಾಮವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಟಂಡನ್ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ರಾಜ್ಯಪಾಲರ ನಿಧನದ ಸುದ್ದಿ ಬರುತ್ತಿದ್ದಂತೆಯೇ ರಾಜ್ಯದಲಿ ೭ ದಿನಗಳ ಶೋಕಾಚರಣೆಯನ್ನು ಘೋಷಿಸಿದರು. ಬುಧವಾರ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಪ್ರದಾಯಕ್ಕೆ ಅನುಗುಣವಾಗಿ ಆಚರಿಸಲಾಗುವುದು ಆದರೆ ಯಾವುದೇ ಸಾಂಸ್ಕೃತಿಕ ಕಾರ್‍ಯಕ್ರಮಗಳು ಇರುವುದಿಲ್ಲ ಎಂದು ಸರ್ಕಾರದ ಪ್ರಕಟಣೆ ತಿಳಿಸಿತು. ಟಂಡನ್ ಅವರು ೨೦೧೪ರಲ್ಲಿ ಛತ್ತೀಸ್‌ಗಢದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು.

2018: ತಿರುವನಂತಪುರಂ: ಕೇರಳದ ವೇನಾಡ್ ಜಿಲ್ಲೆಯಲ್ಲಿ ಮತ್ತು ಇತರ ಜಿಲ್ಲೆಗಳಲ್ಲಿ ವರ್ಷಧಾರೆ, ಭೂಕುಸಿತ, ಪ್ರವಾಹದ ಅಬ್ಬರ ಮುಂದುವರೆಯಿತು. ಮಲಂಪುಳ ಅಣೆಕಟ್ಟು, ಪಾಲಕ್ಕಾಡಿನ ಚುಲ್ಲಿಯಾರ್ ಅಣೆಕಟ್ಟು, ಭವಾನಿ ಅಣೆಕಟ್ಟಿನ ಮೇಲ್ದಂಡೆ ಮತ್ತು ವಯಲಾರ್ ಅಣೆಕಟ್ಟು, ಪಡಿನ್ಹರೆಥಾರದ ಬನಸೂರ ಅಣೆಕಟ್ಟುಗಳ ತೂಬುಗಳನ್ನು ಎತ್ತರಿಸಿ, ನೀರಿನ ಹರಿವಿಗೆ ವ್ಯವಸ್ಥೆ ಮಾಡಲಾಯಿತು. ಮುಲ್ಲಪೆರಿಯಾರ್ ಅಣೆಕಟ್ಟಿನ ಕೆಳಭಾಗದ ಜನರ ತೆರವುಕಾರ್ಯ ಆರಂಭಗೊಂಡಿತು. ಮಳೆ, ಪ್ರವಾಹ, ಭೂಕುಸಿತಗಳ ಪರಿಣಾಮವಾಗಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಅಧಿಕಾರಿಗಳು ತಿಳಿಸಿದರು. ಕಣ್ಣೂರು, ಕಾಸರಗೋಡು, ಕೋಯಿಕ್ಕೋಡ್, ಮಲಪ್ಪುರಂ ಮತ್ತು ಪಾಲಕ್ಕಾಡ್ ಸೇರಿದಂತೆ ಉತ್ತರ ಕೇರಳ ಜಿಲ್ಲೆಗಳು ಸೋಮವಾರ ರಾತ್ರಿ ಇಡೀ ಎಡೆಬಿಡದ ಮಳೆಗೆ ತತ್ತರಿಸಿದವು. ಮುಲ್ಲಪೆರಿಯಾರ್ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕಿಂತ ಕೇವಲ ೫ ಅಡಿಗಳಷ್ಟು ಕೆಳಗಿರುವುದನ್ನು ಅನುಸರಿಸಿ ಜಲಾಶಯದ ಕೆಳಭಾಗಗಳ ಜನರನ್ನು ತೆರವುಗೊಳಿಸಲು ಬಿಕ್ಕಟ್ಟು ನಿರ್ವಹಣಾ ತಂಡ ನಿರ್ಧರಿಸಿದೆ. ೧೪೨ ಅಡಿಗಳ ಗರಿಷ್ಠ ಮಟ್ಟವನ್ನು ಮೀರಿದರೆ ಮುಲ್ಲಪೆರಿಯಾರ್ ಜಲಾಶಯದ ನೀರನ್ನು ಇಡುಕ್ಕಿ ಜಲಾಶಯದ ಮೇಲ್ಬಾಗದಲ್ಲಿರುವ ಪೆರಿಯಾರ್ ನದಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಮಳೆ ಈಗಿನಂತೆಯೇ ಮುಂದುವರೆದರೆ ಕೇವಲ ೨೬-೨೭ ಗಂಟೆಗಳಲ್ಲಿ ಜಲಾಶಯದ ನೀರು ಗರಿಷ್ಠ ಮಟ್ಟವನ್ನು ದಾಟುವುದು ಎಂದು ಅವರು ಹೇಳಿದ್ದಾರೆ.
ಇಡುಕ್ಕಿಯಲ್ಲೂ ಭಾರೀ ಮಳೆಯಾಗುತ್ತಿದ್ದು ಇಡುಕ್ಕಿ ಅಣೆಕಟ್ಟಿಗೆ ತಾಸಗೆ ೯೦೧ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಎಂದು ವರದಿ ತಿಳಿಸಿತು. ಈ  ಮಧ್ಯೆ ಈದಿನ ನಡೆದ ಸಚಿವ ಸಂಪುಟ ಸಭೆಯು ಮಳೆ ಪ್ರವಾಹದ ಹಿನ್ನೆಲೆಯಲ್ಲಿ ಓಣಂ ವಾರದ ಆಚರಣೆ ರದ್ದು, ಪರಿಹಾರ, ಮರು ನಿರ್ಮಾಣ ಕಾರ್‍ಯಕ್ಕಾಗಿ ಸಂಪುಟ ಉಪಸಮಿತಿ ರಚನೆಗೆ ತೀರ್ಮಾನಿಸಿತು. ೪೪೩ ಗ್ರಾಮಗಳನ್ನು ಪ್ರವಾಹ ಸಂತ್ರಸ್ಥ ಗ್ರಾಮಗಳು ಎಂಬುದಾಗಿ ಘೋಷಿಸಿದ ಸಚಿವ ಸಂಪುಟ ಸಭೆಯು ಒಟ್ಟು ೮೩೧೬ ಕೋಟಿ ರೂಪಾಯಿ ನಷ್ಟದ ಅಂದಾಜು ಮಾಡಿತು.  ಮಳೆ ಪ್ರವಾಹದಿಂದಾಗಿ ೧೦,೦೦೦ ಕಿಮೀ ರಸ್ತೆಗಳು ಹಾನಿಯಾಗಿವೆ, ೨೦,೦೦೦ ಮನೆಗಳು ಧ್ವಂಸವಾಗಿವೆ, ೩೦,೦೦೦ ಜನರಿಗೆ ಪರಿಹಾರ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ತಿಳಿಸಿರುವ ಸಭೆ ಪ್ರವಾಹ ಸಂತ್ರಸ್ಥರಿಗೆ ಹಣಕಾಸು ನೆರವಿಗೆ ಒಪ್ಪಿಗೆ ನೀಡಿತು. ಕೇಂದ್ರ ಸರ್ಕಾರ, ವಿರೋಧ ಪಕ್ಷಗಳ ರಚನಾತ್ಮಕ ಸಹಕಾರವನ್ನು ಶ್ಲಾಘಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಹಾಗೂ ವಿಪಕ್ಷ ಸಹಕಾರವು ಸರ್ಕಾರಕ್ಕೆ ಬಲ ನೀಡಿದ್ದು ದುರಂತದ ಗಹನತೆಯ ಹೊರೆಯನ್ನು ತಗ್ಗಿಸಿದೆ ಎಂದು ನುಡಿದರು.
2018: ನವದೆಹಲಿ: ಸ್ಟಾರ್ಟ್ ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್ ಟ್ಯಾಪ್ಗಳ ಬಳಕೆಯನ್ನು ಕಡಿಮೆಗೊಳಿಸುವ ಸಮಯ ಬಹುಶಃ ಬಂದಿದೆಏಕೆಂದರೆ ಹೊಸ ಅಧ್ಯಯನ ಒಂದರ ಪ್ರಕಾರ ಎಲೆಕ್ಟ್ರಾನಿಕ್ ಸಾಧನಗಳ ಪರದೆಗಳ ಮೂಲಕ ಹೊರಸೂಸುವ ನೀಲ ಬೆಳಕು ನಾವು ಯೋಚಿಸುವುದಕ್ಕಿಂತಲೂ ಅಪಾಯಕಾರಿ ಎಂದು ವೈಜ್ಞಾನಿಕ ವರದಿಗಳು ಹೇಳುತ್ತಿವೆ. ನೀಲ ಬೆಳಕು ಕ್ರಮೇಣ, ಖಚಿತವಾಗಿ ನಮ್ಮನ್ನು ಕುರುಡರನ್ನಾಗಿ ಮಾಡುವತ್ತ ಸಾಗುತ್ತಿದೆ. ಸರಣಿ ಸೆಲ್ ಕಲ್ಚರ್ ಮತ್ತು ಇಮೇಜಿಂಗ್ ಪರೀಕ್ಷೆಗಳ ಬಳಿಕ ಟೊಲೆಡೊ ವಿಶ್ವ ವಿದ್ಯಾಲಯದ ಸಂಶೋಧಕರ ತಂಡವೊಂದು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಡಿಸ್ ಪ್ಲೇಯಾಗುವ ಮತ್ತು ಅವುಗಳ ಪರದೆಯ ಮೂಲಕ ಹೊರಸೂಸುವ ನೀಲ ಬೆಳಕು ನಮ್ಮ ಕಣ್ಣುಗಳಲ್ಲಿನ ಸಣ್ಣ ಕಣಗಳು ನಂಜು ಅಥವಾ ವಿಷಯುಕ್ತವಾಗುವಂತೆ ಮಾಡಿ, ಕಣ್ಣಪೊರೆ ಅಥವಾ ಅಕ್ಷಿಪಟದಲ್ಲಿನ (ರೆಟಿನಾ) ಫೊಟೋ ರೆಸೆಪ್ಟರ್ ಸೆಲ್ ಕೊಲ್ಲುತ್ತದೆ ಎಂಬುದನ್ನು ಪತ್ತೆ ಹಚ್ಚಿದೆ.  ಈ ಫೊಟೋ ರಿಸೆಪ್ಟರ್ ಸೆಲ್ ಗಳು ಮಾನವ ದೇಹದಲ್ಲಿ ಹುಟ್ಟುವುದಿಲ್ಲ. ಒಮ್ಮೆ ಹೋದವು ಎಂದಾದರೆ ಅವು ಶಾಶ್ವತವಾಗಿ ಹೋದವು ಎಂದೇ ಅರ್ಥ.


2016: ನವದೆಹಲಿ: ಕಳೆದ ಜನವರಿಯಲ್ಲಿ ಪಂಜಾಬ್ ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದ ಸಂದರ್ಭದಲ್ಲಿ ಹುತಾತ್ಮರಾಗಿದ್ದ ಕನ್ನಡಿಗ ಯೋಧ ಲೆ.ಕರ್ನಲ್ ನಿರಂಜನ್ ಕುಮಾರ್ ಅವರಿಗೆ ಕೇಂದ್ರ ಸರ್ಕಾರಶೌರ್ಯ ಚಕ್ರಪುರಸ್ಕಾರವನ್ನು ಪ್ರಕಟಿಸಿತು. 70 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೇಂದ್ರ ಸರ್ಕಾರವು, ಅಭೂತ ಪೂರ್ವ ಶೌರ್ಯ ಮೆರೆದ ಸೇನಾ ಪಡೆ ಮತ್ತು ಅರೆ ಸೇನಾ ಪಡೆಯ ಯೋಧರಿಗೆ 82 ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಿತು. 1 ಅಶೋಕ ಚಕ್ರ, 14 ಶೌರ್ಯ ಚಕ್ರ, 63 ಸೇನಾ ಮೆಡಲ್, 2 ನೌ ಸೇನಾ ಮೆಡಲ್ ಮತ್ತು 2 ವಾಯು ಸೇನಾ ಮೆಡಲ್ ನೀಡಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದರು. ಆಗಸ್ಟ್ 15ರ ಸೋಮವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಎನ್ಎಸ್ಜಿ ಕಮಾಂಡೋ ಪಡೆಯ ಬಾಂಬ್ ನಿಷ್ಕ್ರಿಯ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿರಂಜನ್ ಕುಮಾರ್ ಜನವರಿ 1 ರಿಂದ ಪಠಾಣ್ಕೋಟ್ ದಾಳಿಕೋರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆ ಮುಗಿದ ನಂತರ ಮೃತ ಭಯೋತ್ಪಾದಕರನ್ನು ಪರೀಕ್ಷಿಸುತ್ತಿದ್ದಾಗ ಭಯೋತ್ಪಾದಕರು ಹೆಣೆದ ಸಂಚಿನ ಫಲವಾಗಿ ಗ್ರೆನೇಡ್ ಸ್ಪೊಟಗೊಂಡು ನಿರಂಜನ್ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

2016: ನವದೆಹಲಿ: ಪಾಕಿಸ್ತಾನವು ನಮ್ಮ ದೇಶಕ್ಕೆ ಭಯೋತ್ಪಾದಕರನ್ನು, ಶಸ್ತಾಸ್ತ್ರಗಳನ್ನು, ಮಾದಕ ವಸ್ತುಗಳನ್ನು ಮತ್ತು ನಕಲಿ ನೋಟುಗಳನ್ನು ರಫ್ತು ಮಾಡಿರುವುದು ಸಾಕು, ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದು ಬೇಕಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪಾಕ್ಗೆ ತಿರುಗೇಟು ನೀಡಿತು. ಕಳೆದ ಒಂದು ತಿಂಗಳಿಂದ ಹಿಂಸಾಚಾರಕ್ಕೆ ತುತ್ತಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾಶ್ಮೀರಿಗಳಿಗೆ ನೆರವು ನೀಡಲು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮೌಖಿಕ ಪ್ರಸ್ತಾವನೆ ಸಲ್ಲಿಸಿತ್ತು. ಪ್ರಸ್ತಾವನೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟವಾಗಿ ತಿರಸ್ಕರಿಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವುದಾಗಿ ಪಾಕಿಸ್ತಾನವು ನಮ್ಮ ರಾಯಭಾರ ಕಚೇರಿಗೆ ಆಗಸ್ಟ್ 12 ರಂದು ಪ್ರಸ್ತಾವನೆ ಸಲ್ಲಿಸಿದೆ. ಆದರೆ ಪಾಕಿಸ್ತಾನದ ಪ್ರಸ್ತಾವನೆ ಅಸಂಬದ್ಧವಾದುದು. ಪಾಕಿಸ್ತಾನ ಭಾರತಕ್ಕೆ ಈಗಾಗಲೇ ಭಯೋತ್ಪಾದನೆ, ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುವುದು, ಶಸ್ತಾಸ್ತ್ರಗಳು, ಮಾದಕ ವಸ್ತುಗಳು ಮತ್ತು ನಕಲಿ ನೋಟುಗಳನ್ನು ಸಾಕಷ್ಟು ರಫ್ತು ಮಾಡಿದೆ. ಈಗ ಪಾಕ್ ರಫ್ತು ಮಾಡಿರುವ ವಸ್ತುಗಳೇ ಸಾಕಷ್ಟಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಭಾರತದಲ್ಲಿ ಪಾಕ್ ರಾಯಭಾರಿ ಅಬ್ದುಲ್ ಬಸಿತ್ ಈದಿನ ಬೆಳಗ್ಗೆ ಪಾಕ್ ಸ್ವಾತಂತ್ರ್ಯ ದಿನಾಚರಣೆ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕಾಗಿ ಪಾಕಿಸ್ತಾನದ ಇಂದಿನ ಸ್ವಾತಂತ್ರ್ಯ ದಿನವನ್ನು ಸಮರ್ಪಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಜತೆಗೆ ಪೂಂಚ್ ವಲಯದಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿತ್ತು. ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

2016: ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರವಾದ ವಾರಾಣಸಿಯಲ್ಲಿ ಯುವಕರು ಪ್ರಧಾನಿಯವರಿಗೆ ತಮ್ಮ ವಾಗ್ದಾನವನ್ನು ನೆನಪಿಸುವ ಸಲುವಾಗಿ 70ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿಯೇವಿ ವಾಂಟ್ ಪಿಒಕೆ ಬ್ಯಾಕ್ಟ್ಯಾಟೂ ಚಳವಳಿ ಆರಂಭಿಸಿದರು. ಮೋದಿ ಅವರುಪಾಕ್ ಆಕ್ರಮಿತ ಕಾಶ್ಮೀರ ಬಾರದ ವಿನಃ ಭಾರತ ಅಪೂರ್ಣ ದೇಶಎಂದು ಹೇಳಿದ್ದನ್ನು ಯುವಕರು ನೆನಪಿಸಿದರು. ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತ ತನ್ನ ಅಧಿಕಾರವನ್ನು ಸ್ಥಾಪಿಸಬೇಕು ಎಂದು ಯುವಕರು ಆಗ್ರಹಿಸಿದರು. ತಮ್ಮ ಆಗ್ರಹ ವ್ಯಕ್ತ ಪಡಿಸಲು ವಾರಣಸಿಯ ಯುವಕರು ತಮ್ಮ ಕೈಗಳಿಗೆವಿ ವಾಂಟ್ ಪಿಒಕೆ ಬ್ಯಾಕ್’ (ನಮಗೆ ವಾಪಸ್ ಬೇಕು ಪಾಕ್ ಆಕ್ರಮಿತ ಕಾಶ್ಮೀರ) ಎಂಬ ಬರಹದ ಟ್ಯಾಟೂಗಳನ್ನು ಹಾಕಿಸಿಕೊಂಡರು. ಕಾಶ್ಮೀರ ವಿಷಯಕ್ಕೆ ಸಂಬಂಧ ಪಟ್ಟಂತೆ ನಡೆದ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಅವರುಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗಎಂಬುದಾಗಿ ಹೇಳಿದ್ದಾರೆ. ಅದನ್ನು ಬೇಗನೇ ಈಡೇರಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ಯುವಕರು ಆಗ್ರಹಿಸಿದರು.

2016: ರಿಯೋ ಡಿ ಜನೈರೋ: ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಅಗ್ರಕ್ರಮಾಂಕದ ಶೆಟ್ಲರ್ ಸೈನಾ ನೆಹ್ವಾಲ್ ರಿಯೋ ಒಲಿಂಪಿಕ್ಸ್ ಲೀಗ್ ಹಂತದಲ್ಲಿ ಸೋತು ನಿರ್ಗಮಿಸಿದ್ದು, ಮತ್ತೊಂದು ಒಲಿಂಪಿಕ್ಸ್ ಪದಕದ ಆಸೆ ಕಮರಿತು. ಈದಿನ ನಡೆದ ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ಜಿ ಗುಂಪಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ ಉಕ್ರೇನ್ ಮರಿಯಾ ಉಲಿಟಿನಾ ವಿರುದ್ಧ ಸೋಲನುಭವಿಸಿದರು. ಸೈನಾ 18-21, 19-21 ನೇರ ಗೇಮ್ ಗಳಿಂದ ಸೋಲನುಭವಿಸುವ ಮೂಲಕ ಪದಕದ ರೇಸ್ನಿಂದ ಹೊರಬಿದ್ದರು.
.
2016: ಕ್ಸಿನ್ಹ್ವಾ: ಕಾಂಗೋ ದೇಶದ ಉತ್ತರ ಕಿವು ಪ್ರಾಂತ್ಯದ ಬೆನಿ ಎಂಬ ನಗರದಲ್ಲಿ ಆ.13ರ  ರಾತ್ರಿ ನಡೆದ ಉಗ್ರರ ದಾಳಿಯಲ್ಲಿ 45 ಜನರು ಸಾವನ್ನಪ್ಪಿರುವುದಾಗಿ ಅಲ್ಲಿನ ಮೇಯರ್ ನ್ಯೋನಿ ಬ್ವಾನಕಾವ ತಿಳಿಸಿದರುದಾಳಿಯ ಹಿಂದೆ ಕಾಂಗೋ ಬಂಡುಕೋರರು ಹಾಗೂ ಉಗಾಂಡ ಮೂಲದ ಸಶಸ್ತ್ರ ಗುಂಪುಗಳ ಕೈವಾಡ ಇರುವುದಾಗಿ ಅಲ್ಲಿನ ಸೇನಾ ವಕ್ತಾರ ಮಕ್ ಅಜೂಕಿ ಹೇಳಿದರು. ದಾಳಿಗೆ ಸಂಬಂಧಪಟ್ಟಂತೆ ಅಲ್ಲಿನ ಅಧ್ಯಕ್ಷ ಕಬಿಲಾ ಇದು ಉಗ್ರರ ಕೃತ್ಯವಾಗಿದೆ ಎಂದು ಹೇಳಿಕೆ ನೀಡಿದರು. ಕಿವು ಪ್ರಾಂತ್ಯದ ಸ್ಥಳೀಯ ಅಧಿಕಾರಿಗಳ ಪ್ರಕಾರ ಕಳೆದ ಒಂದು ವರ್ಷದಿಂದ ಪ್ರದೇಶದಲ್ಲಿ ನಡೆಯುತ್ತಿರುವ ಉಗ್ರರ ದಾಳಿಗೆ ಸಾವಿರಕ್ಕೂ ಹೆಚ್ಚು ಜನರು ಬಲಿಯಾಗಿದ್ದರು..

2016: ದುಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಮಾತಿನ ಚಕಮಕಿ ನಡೆಸಿದ ಭಾರತದ ರೋಹಿತ್ ಶರ್ಮಾ ಮತ್ತು ಡರೇನ್ ಬ್ರಾವೋಗೆ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ. 15 ರಷ್ಟು ದಂಡ ವಿಧಿಸಿದರು.  3ನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದ ಸಮಯದಲ್ಲಿ ಶರ್ಮಾ ಮತ್ತು ಬ್ರಾವೋ ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು. ಅಂಪೈರ್ಗಳು ಮಧ್ಯಪ್ರವೇಶಿಸಿ ಪರಿಸ್ತಿತಿಯನ್ನು ತಿಳಿಗೊಳಿಸಲು ಯತ್ನಿಸಿದ್ದರು. ಆದರೆ ಅಂಪೈರ್ಗಳ ಮಾತಿಗೆ ಬೆಲೆ ಕೊಡದೆ ಇಬ್ಬರೂ ಕೆಲ ಸಮಯ ಮಾತಿನ ಚಕಮಕಿ ಮುಂದುವರೆಸಿದ್ದರು. ರೋಹಿತ್ ಶರ್ಮಾ ಮತ್ತು ಡರೇನ್ ಬ್ರಾವೋ ನಡವಳಿಕೆ ಕ್ರೀಡಾ ಸ್ಪೂರ್ತಿಗೆ ವಿರುದ್ಧವಾದದ್ದು, ಅವರು ಐಸಿಸಿ 2.1.1 ನಿಯಮಾವಳಿಯನ್ನು ಉಲ್ಲಂಘಿಸಿದ್ದಾರೆ. ಇಬ್ಬರೂ ಆಟಗಾರರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದ ಅವರಿಗೆ ಪಂದ್ಯದ ಸಂಭಾವನೆಯ ಶೇ. 15 ರಷ್ಟು ಮೊತ್ತವನ್ನು ದಂಡ ವಿಧಿಸಿ ಪಂದ್ಯದ ರೆಫ್ರಿ ರಂಜನ್ ಮದುಗಲೆ ಆದೇಶಿಸಿದರು.

2016: ನವದೆಹಲಿ: ಉತ್ತರ ಕಾಶ್ಮೀರದಲ್ಲಿ ಭಯೋತ್ಪಾದಕರ ನುಸುಳುವಿಕೆ ಪ್ರಯತ್ನವನ್ನು ತಡೆಯುವಲ್ಲಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಸೇನೆಯ ಲ್ಯಾಬ್ರಡಾರ್ ನಾಯಿಮಾನಸಿಮತ್ತು ನಾಯಿಯನ್ನು ನೋಡಿಕೊಳ್ಳುತ್ತಿದ್ದ ಯೋಧ ಬಶೀರ್ ಅಹಮದ್ ವಾರ್ ಅವರಿಗೆ ಕೇಂದ್ರ ಸರ್ಕಾರವು ಮರಣೋತ್ತರ ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಇದರೊಂದಿಗೆ ತನ್ನ ಶೌರ್ಯಕ್ಕಾಗಿ ಮರಣೋತ್ತರ ಪ್ರಶಸ್ತಿ ಪಡೆದ ಮೊತ್ತ ಮೊದಲ ಶ್ವಾನ ಎಂಬ ಹೆಗ್ಗಳಿಕೆಗೆಮಾನಸಿಗೆ ಭಾಜನವಾಯಿತು.  ಮಾನಸಿಗೆ ಈದಿನಮೆನ್ಷನ್ ಆಫ್ ಡಿಸಪ್ಯಾಚಸ್ಪ್ರಮಾಣ ಪತ್ರದ ಗೌರವ ಪ್ರಕಟಿಸಲಾಯಿತು. ರಾಷ್ಟ್ರಕ್ಕಾಗಿ ಮಹೋನ್ನತ ಬಲಿದಾನ ಮಾಡಿದ್ದಕ್ಕಾಗಿ ಮಾನಸಿಯ ಹೆಸರು ಭಾರತದ ರಾಜಪತ್ರದಲ್ಲಿ (ಗಜೆಟ್ ಆಫ್ ಇಂಡಿಯಾ) ಮೂಡಿ ಬರಲಿದೆ. ಮಾನಸಿಯನ್ನು ನೋಡಿಕೊಳ್ಳುತ್ತಿದ್ದ ಕುಪ್ವಾರದ ನಿವಾಸಿ ಬಶೀರ್ ಅಹಮದ್ ವಾರ್ ಅವರಿಗೆ ಶ್ರೀನಗರದಿಂದ 150 ಕಿ.ಮೀ. ದೂರದ ತಂಗ್ಧರ್ಗೆ ನುಸುಳಿದ ಭಯೋತ್ಪಾದಕರ ವಿರುದ್ಧ ನಡೆದ ಗುಂಡಿನ ಘರ್ಷಣೆಯಲ್ಲಿ ಹುತಾತ್ಮರಾದುದನ್ನು ಸ್ಮರಿಸಿಸೇನಾ ಪದಕನೀಡಲಾಯಿತು.  2015ರಲ್ಲಿ ಮೂವರು ಭಯೋತ್ಪಾದಕರ ಹತ್ಯೆಯ ಯಶಸ್ವಿಗೆ ಮಾನಸಿ ಮತ್ತು ವಾರ್ ಕಾರಣರಾಗಿದ್ದರು. ತಂಗ್ಧರ್ ಕೈಸೂರಿಯಲ್ಲಿ ಒಬ್ಬ ಭಯೋತ್ಪಾದಕ, 2015 ಜುಲೈ 21ರಂದು ಇಬ್ಬರು ಉಗ್ರಗಾಮಿಗಳ ಸಾವಿಗೆ ಜೋಡಿ ಕಾರಣವಾಗಿತ್ತು. 2015 ಆಗಸ್ಟ್ ತಿಂಗಳಲ್ಲಿ ನಡೆದ ಇನ್ನೊಂದು ಭಯೋತ್ಪಾದಕ ದಾಳಿಯಲ್ಲಿ ವಾರ್ ಮತ್ತು ಮಾನಸಿ ಹುತಾತ್ಮರಾಗಿದ್ದರು.

2016: ನವದೆಹಲಿ: ಉತ್ತರ ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಅತೀವ ಧೈರ್ಯದಿಂದ ಹೋರಾಡಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿ ಹುತಾತ್ಮರಾಗಿದ್ದ ಹವಾಲ್ದಾರ್ ಹಂಗ್ಪನ್ ದಾದಾಗೆ ಕೇಂದ್ರ ಸರ್ಕಾರ ಶಾಂತಿ ಕಾಲದ ಅತ್ಯುನ್ನತ ಸೇನಾ ಗೌರವವಾದಅಶೋಕ ಚಕ್ರವನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು. ಸ್ವಾತಂತ್ರ್ಯ ದಿನಾಚರಣೆ ದಿನ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಶೋಕ ಚಕ್ರ ಪ್ರಶಸ್ತಿ ಮತ್ತು ಇತರ ಸೇನಾ ಪ್ರಶಸ್ತಿಗಳನ್ನು ನೀಡಲಾಗುವುದು. ರಾಷ್ರಪತಿ ಪ್ರಣಬ್ ಮುಖರ್ಜಿ ಸೇನಾ ಪಡೆ ಮತ್ತು ಅರೆ ಸೇನಾ ಪಡೆಯ ಯೋಧರಿಗೆ 82 ಶೌರ್ಯ ಪ್ರಶಸ್ತಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಒಂದು ಅಶೋಕ ಚಕ್ರ, 14 ಶರ್ಯ ಚಕ್ರ, 63 ಸೇನಾ ಮೆಡಲ್, 2 ನೌ ಸೇನಾ ಮೆಡಲ್ ಮತ್ತು 2 ವಾಯು ಸೇನಾ ಮೆಡಲ್ ನೀಡಲಾಗುವುದು. ಮೇ 27 ರಂದು ಉತ್ತರ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ದಾಡಾ ಹುತಾತ್ಮರಾಗಿದ್ದರು. ದಾದಾ ಮರಣ ಹೊಂದುವ ಮುನ್ನ ನಾಲ್ವರು ಭಯೋತ್ಪಾದಕರನ್ನು ಕೊಂದಿದ್ದರು ಇವರ ಶೌರ್ಯವನ್ನು ಗುರುತಿಸಿದ ಸೇನಾ ಪಡೆ ಅಶೋಕ ಚಕ್ರ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.

2016: ಮುಂಬೈ: ಮಹಾಡ್ನಲ್ಲಿ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕುಸಿದ ಪರಿಣಾಮ ನೀರಿನಲ್ಲಿ ಕೊಚ್ಚಿಹೋಗಿದ್ದ ಕಾರಿನ ಅವಶೇಷಗಳು ಪತ್ತೆಯಾದವು. ಕಾರಿನಲ್ಲಿ ಇಬ್ಬರ ಮೃತದೇಹ ಇರುವ ಶಂಕೆ ವ್ಯಕ್ತಪಡಿಸಲಾಯಿತು. ನೌಕಾಪಡೆಯ ಮುಳುಗುಕಾರರು (ಡೈವರ್ಗಳು) ಸೇತುವೆಯ ಆಸುಪಾಸಿನಲ್ಲಿ ನೀರಿನಲ್ಲಿ ಹುಡುಕಾಟ ಮುಂದುವರೆಸಿದ್ದು, ಭಾನುವಾರ ಕಾರಿನ ಅವಶೇಷ ಪತ್ತೆಯಾಯಿತು. 11ನೇ ದಿನ ಶೋಧ ಕಾರ್ಯಾಚರಣೆಯಲ್ಲಿ ನೌಕಾಪಡೆ ಯೋಧರು ತವೇರಾ ಕಾರಿನ ಅವಶೇಷ ಪತ್ತೆ ಹಚ್ಚಿದರು. ಸೇತುವೆಯಿಂದ ಸುಮಾರು 300 ಮೀಟರ್ ದೂರದಲ್ಲಿ ಕಾರು ಪತ್ತೆಯಾಗಿದ್ದು, 4-5 ಮೀಟರ್ ಆಳದ ನೀರಿನಲ್ಲಿ ಮುಳುಗಿತ್ತು. ಹಿಂದಿನ ದಿನ ನಾಪತ್ತೆಯಾಗಿದ್ದ 2ನೇ ಬಸ್ಸಿನ ಅವಶೇಷ ಪತ್ತೆಯಾಗಿತ್ತು. ಕಾರಿನಲ್ಲಿರುವ ಮೃತದೇಹಗಳನ್ನು ಹೊರತುಪಡಿಸಿ ಇನ್ನೂ 12 ಜನರು ಕಾಣೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ 26 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಸುಹಾಸ್ ದಿವಾಸೆ ತಿಳಿಸಿದರು. ದುರಂತದಲ್ಲಿ ಸಾವನ್ನಪ್ಪಿದ ಸಾರಿಗೆ ಸಂಸ್ಥೆ ಬಸ್ಸಿನಲ್ಲಿದ್ದ ಪ್ರಯಾಣಿಕರ ಕುಟುಂಬಸ್ಥರಿಗೆ ತಲಾ 14 ಲಕ್ಷ ರೂ. ಮತ್ತು ಇತರ ವಾಹನಗಳಲ್ಲಿದ್ದವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಮಂಡಳಿ ಘೋಷಿಸಿತು.

2016: ಮುಂಬೈ: ದಿನನಿತ್ಯ ನಡೆಯುವ ಕೊಲೆ, ಅತ್ಯಾಚಾರ, ಭ್ರಷ್ಟಾಚಾರ, ವರದಕ್ಷಿಣೆ, ಬಾಲ್ಯ ವಿವಾಹದಂತಹ ಸಮಸ್ಯೆಗಳು ದೇಶದಿಂದ ತೊಲಗಬೇಕು. ಇದು ಸಾಧ್ಯವಾಗಬೇಕಾದರೆ ಮೊದಲು ನಾವು ನಮ್ಮ ದೇಶವನ್ನು ಪ್ರೀತಿಸಬೇಕು. ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರಿಗೆ ಗೌರವ ಸೂಚಿಸಬೇಕು ಎಂದು ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸ್ವಾತಂತ್ರ್ಯ ದಿನದ ಅಂಗವಾಗಿಲವ್ ಯುವರ್ ಕಂಟ್ರಿಎಂಬ ವಿಡಿಯೋದಲ್ಲಿ ವಿಶಿಷ್ಟವಾಗಿ ದೇಶಕ್ಕೆ ಗೌರವ ಸಲ್ಲಿಸಿ, ಸಾಮಾಜಿಕ ಸಂದೇಶ ಸಾರಿದರು. ಮೂರು ನಿಮಿಷದ ವಿಡಿಯೋ ತುಣುಕಿನಲ್ಲಿ ಕಂಗನಾ ಶ್ವೇತ ವರ್ಣದ ಉಡುಗೆಯಲ್ಲಿ ರಾಷ್ಟ್ರಪ್ರೇಮ ಸಾರಿದರು. ಪ್ರತಿನಿತ್ಯ ಪತ್ರಿಕೆ, ಟಿವಿಗಳಲ್ಲಿ ಅಪರಾಧದ ಸುದ್ದಿಗಳೇ ರಾರಾಜಿಸುತ್ತಿದ್ದು, ಇದರಿಂದ ತಲೆ ಸಿಡಿದು ಹೋಗುತ್ತಿದೆ. ಇದಕ್ಕೆ ತಿಲಾಂಜಲಿ ಹಾಡಿ, ನವ ವಸಂತಕ್ಕೆ ನಾಂದಿ ಹಾಡಬೇಕಾದ ಅಗತ್ಯತೆಯಿದೆ. ಇದಕ್ಕಾಗಿ ಪ್ರತಿಯೊಬ್ಬರು ದೇಶವನ್ನು ಪ್ರೀತಿಸಬೇಕು, ದೇಶ ಕಾಯುವವರನ್ನು ಗೌರವಿಸಬೇಕು ಎಂದು ಸಂದೇಶ ನೀಡಿದರು. ನೀವು ಮತ ಚಲಾಯುಸುತ್ತೀರಾ? ಎಂದು ಕಂಗನಾ ಪ್ರಶ್ನಿಸಿದಾಗ ಜನತೆ ಹೌದು ಎಂಬ ಭಿತ್ತಿಪತ್ರ ತೋರಿಸುತ್ತಾರೆ. ವಿಡಿಯೋದಲ್ಲಿ ಪುಟಾಣಿ ಮಕ್ಕಳು, ವಿದ್ಯಾರ್ಥಿಗಳು, ಕಾಲೇಜು ಯುವಕ-ಯುವತಿಯರು, ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಎಲ್ಲಾ ವಯೋಮಾನದ ವ್ಯಕ್ತಿಗಳು ಬಂದು ಹೋಗುತ್ತಾರೆ. ಸಿದ್ಧಾರ್ಥ ಶರ್ಮ, ಪಿಯುಶ್ ವಾಸಂಕಿ, ಯಶ್ ಚೌಹಾಣ್ ಗೀತೆಯನ್ನು ಹಾಡಿದ್ದಾರೆ. ಕೆಲವು ದಿನಗಳ ಹಿಂದೆ ಕಂಗನಾ ಜನತೆಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಲಕ್ಷ್ಮಿ ಅವತಾರದಲ್ಲಿ ಬೀದಿಗಿಳಿದಿದ್ದರು.

2008: ಮಂಗಳೂರು ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿ (ಮೂಡುಬಿದಿರೆ ರಸ್ತೆ) ಗುರುಪುರ ಸೇತುವೆ ಬದಿಯ ಉಳಾಯಿಬೆಟ್ಟು ಎಂಬಲ್ಲಿ ಶಾಲಾ ವಾಹನವೊಂದು ಫಲ್ಗುಣಿ ನದಿಗೆ ಉರುಳಿ ಬಿದ್ದು (ಪಲ್ಟಿಯಾಗಿ) ಏಳು ಮಕ್ಕಳೂ ಸೇರಿದಂತೆ 11 ಮಂದಿ ಮೃತರಾದ ದಾರುಣ ಘಟನೆ ನಡೆಯಿತು. ಗ್ರಾಮಸ್ಥರು ಸೇರಿ ವಾಹನದಲ್ಲಿ 36 ಮಂದಿ ಇದ್ದರು. ನದಿಗೆ ಉರುಳಿದ ಶಾಲಾ ವಾಹನದಲ್ಲಿದ್ದ 24 ಮಂದಿಯನ್ನು ರಕ್ಷಿಸಲಾಯಿತು.

2007: ದೇಶಕ್ಕಾಗಿ ಪ್ರಾಣತೆತ್ತ ಬೆಂಗಳೂರಿನ ಕರ್ನಲ್ ವಸಂತ್ ವೇಣುಗೋಪಾಲ್ ಅವರಿಗೆ ಕೇಂದ್ರ ಸರ್ಕಾರವು ಈ ಬಾರಿಯ ಮರಣೋತ್ತರ ಅಶೋಕ ಚಕ್ರ ಶೌರ್ಯ ಪ್ರಶಸ್ತಿ ಘೋಷಿಸಿತು. 9 ಮರಾಠಾ ಲೈಟ್ ಇನ್ ಫೆಂಟ್ರಿಯ ಬೆಟಾಲಿಯನ್ ಕಮಾಂಡಿಂಗ್ ಅಧಿಕಾರಿಯಾಗಿದ್ದ ವಸಂತ್ ಕಾಶ್ಮೀರದ ಉರಿ ವಿಭಾಗದಲ್ಲಿ ನಿಯಂತ್ರಣ ರೇಖೆ ಬಳಿ ಕಾರ್ಯ ನಿರ್ವಹಿಸುತ್ತಿದ್ದರು. 2007ರ ಜುಲೈ 31ರಂದು ನಿಯಂತ್ರಣ ರೇಖೆ ಮೂಲಕ ಗಡಿಯೊಳಗೆ ನುಗ್ಗಲೆತ್ನಿಸಿದ ಭಯೋತ್ಪಾದಕರನ್ನು ತಡೆಯಲು ಅವರೇ ಸ್ವತಃ ಸೈನ್ಯದ ನೇತೃತ್ವ ವಹಿಸಿದ್ದರು. ಗಾಯಗೊಂಡರೂ ಲೆಕ್ಕಿಸದೆ ಮೂವರು ಭಯೋತ್ಪಾದಕರನ್ನು ಕೊಂದ ವಸಂತ್ ವೀರಮರಣ ಹೊಂದಿದ್ದರು.

2007: ಭಾರತ- ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಡಪಕ್ಷಗಳನ್ನು ಮನವೊಲಿಸುವ ಕ್ರಮವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಮತ್ತು ಸಿಪಿಐ ಪ್ರಧಾನ ಕಾರ್ಯದರ್ಶಿ ಎ.ಬಿ. ಬರ್ಧನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ನಡೆಸಿದ ಮಾತುಕತೆ ಫಲಪ್ರದವಾಗಲಿಲ್ಲ. ಭಿನ್ನಾಭಿಪ್ರಾಯ ಪರಿಹರಿಸಲು ಯತ್ನಿಸಲಾಗುವುದು ಎಂದು ಈ ಮುಖಂಡರು ಹೇಳಿದರಾದರೂ ಕೊನೆಯಲ್ಲಿ ಕಾರಟ್ ತಮ್ಮ ನಿಲುವಿಗೇ ಬಲವಾಗಿ ಅಂಟಿಕೊಂಡರು. ಸಭೆಯ ನಂತರ ಸಿಪಿಎಂ ಪಾಲಿಟ್ ಬ್ಯೂರೊ, ಪ್ರಧಾನಿ ಸಂಸತ್ತಿನಲ್ಲಿ ನೀಡಿದ ಹೇಳಿಕೆಯ ಪ್ರತಿಯೊಂದು ಅಂಶವನ್ನೂ ಕಟುವಾಗಿ ಟೀಕಿಸಿತು.

2007: ಇಂಗ್ಲೆಂಡ್ ವಿರುದ್ಧದ ಸರಣಿ ವಿಜಯದೊಂದಿಗೆ ಭಾರತ ಕ್ರಿಕೆಟ್ ತಂಡವು ಟೆಸ್ಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ಒಮ್ಮೆಲೇ ಎರಡು ಸ್ಥಾನ ಮೇಲೇರಿತು. ಮೂರು ಪಂದ್ಯಗಳ ಸರಣಯಲ್ಲಿ 1-0 ಗೆಲುವು ಪಡೆದ ರಾಹುಲ್ ನೇತೃತ್ವದ ಪಡೆಯು ಎಲ್ ಜಿ ಪ್ರಾಯೋಜಿತ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆಯಿತು. ಅದು ತನ್ನ ಖಾತೆಯಲ್ಲಿ ಒಟ್ಟು 107 ರ್ಯಾಂಕಿಂಗ್ ಪಾಯಿಂಟುಗಳನ್ನು ಹೊಂದಿತು. ಶ್ರೀಲಂಕಾ ಕೂಡ ಭಾರತದಷ್ಟೇ ಪಾಯಿಂಟುಗಳನ್ನು ಗಳಿಸಿತು. ಐಸಿಸಿ ರೂಪಿಸಿರುವ ರ್ಯಾಂಕಿಂಗ್ ಲೆಕ್ಕಾಚಾರದಲ್ಲಿ ಭಾರತವು ಸಿಂಹಳೀಯರ ನಾಡಿನ ಪಡೆಗಿಂತ ಮೇಲಿನ ಸ್ಥಾನವನ್ನು ಗಿಟ್ಟಿಸಿತು. ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರಸ್ಥಾನವನ್ನು ಕಾಯ್ದುಕೊಂಡಿತು.

2007: ಅನಿವಾಸಿ ಭಾರತೀಯ ಕೈಗಾರಿಕೋದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರ ಕಪಾರೊ ಸಂಸ್ಥೆ, ಪಾಲ್ ಅವರ ಹುಟ್ಟೂರು ಜಲಂಧರಿನಲ್ಲಿ ಉತ್ಕೃಷ್ಟ ದರ್ಜೆಯ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿತು. ಉತ್ಪಾದನಾ ಕ್ಷೇತ್ರ, ಎಂಜಿನಿಯರಿಂಗ್ ಹಾಗೂ ಮ್ಯಾನೇಜ್ ಮೆಂಟಿಗೆ ಸಂಬಂಧಿಸಿದ ಶಿಕ್ಷಣವನ್ನು ಈ ಸಂಸ್ಥೆ ನೀಡುತ್ತದೆ.
`ದಿ ಕಪಾರೊ ಸ್ಕೂಲ್ ಆಫ್ ಎಕ್ಸಲೆನ್ಸಿ' ನನ್ನ ಮಗಳು ಅಂಬಿಕಾ ಹೆಸರಿನಲ್ಲಿ ಭಾರತಕ್ಕೆ ನಾನು ನೀಡುತ್ತಿರುವ ಕೊಡುಗೆ. ನನ್ನ ಹುಟ್ಟೂರು ಜಲಂಧರಿಗೆ ನಾನು ಏನನ್ನಾದರೂ ನೀಡಲು ಸಾಧ್ಯವಾಗುತ್ತಿರುವ ಬಗ್ಗೆ ನನಗೆ ಹೆಮ್ಮೆ ಉಂಟಾಗುತ್ತಿದೆ' ಎಂದು ಸ್ವರಾಜ್ ಪಾಲ್ ಪ್ರತಿಕ್ರಿಯಿಸಿದರು. ಜಲಂಧರದಿಂದ 16 ಕಿ.ಮೀ. ದೂರದಲ್ಲಿ ಸ್ಥಾಪನೆಯಾಗಿರುವ `ಸ್ಕೂಲ್ ಆಫ್ ಎಕ್ಸಲೆನ್ಸಿ'ಯಲ್ಲಿ ಅಮೆರಿಕ ಮತ್ತು ಇಂಗ್ಲೆಂಡಿನ ಆಯ್ದ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ `ಡ್ರೀಮ್ ಟೀಮ್ ಆಫ್ ಎಂಜಿನಿಯರ್ಸ್' ಎಂಬ ತಂಡವನ್ನು ಕಟ್ಟಲಾಗುವುದು. ಈ ಭಾಗದಲ್ಲಿ ಉತ್ಕೃಷ್ಟ ಮಟ್ಟದ ಎಂಜಿನಿಯರಿಂಗ್ ತಾಂತ್ರಿಕ ಶಿಕ್ಷಣ ನೀಡುವ ಏಕೈಕ ಸಂಸ್ಥೆ ಇದಾಗಿದೆ. ರಕ್ತ ಕ್ಯಾನ್ಸರ್ (ಲ್ಯುಕೇಮಿಯಾ) ಕಾಯಿಲೆಯಿಂದ 1968ರಲ್ಲಿ ಮರಣ ಹೊಂದಿದ ಅಂಬಿಕಾ ಪಾಲ್ ಅವರ ಸ್ಮಾರಕಾರ್ಥವಾಗಿ ಈ ಶಿಕ್ಷಣ ಸಂಸ್ಥೆಯನ್ನು ಕಪಾರೊ ಆರಂಭಿಸಿತು.

2007: ಭಾರತವು ತನ್ನ 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಸಂಭ್ರಮದಲ್ಲಿದ್ದಾಗ ಅಮೆರಿಕ ಮೂಲದ `ಬ್ಯುಸಿನೆಸ್ ವೀಕ್' ನಿಯತಕಾಲಿಕವು ಮಾಹಿತಿ ತಂತ್ರಜ್ಞಾನ ಮಾತ್ರವಲ್ಲದೆ, ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರಬಲ್ಲ ಸಾಮರ್ಥ್ಯವಿರುವ 50 ಪ್ರಭಾವಿ ಭಾರತೀಯ ಗಣ್ಯರನ್ನು ಪಟ್ಟಿ ಮಾಡಿತು. ಈ ಪಟ್ಟಿಯಲ್ಲಿ ಉದ್ಯಮ ದೊರೆಗಳಾದ ರತನ್ ಟಾಟಾ, ಮುಖೇಶ್ ಅಂಬಾನಿ, ಸುನೀಲ್ ಮಿತ್ತಲ್, ಆನಂದ್ ಮಹೀಂದ್ರ, ಅನಿಲ್ ಅಗರವಾಲ್, ಬಿ. ಮುತ್ತುರಾಮನ್, ಎ.ಎಂ. ನಾಯ್ಕ್, ವಾಣಿಜ್ಯ ಸಚಿವ ಕಮಲನಾಥ್, ವಾಯುಯಾನ ಸಚಿವ ಪ್ರಫುಲ್ ಪಟೇಲ್, ಉತ್ತರಪ್ರದೇಶದ ಮುಖ್ಯಮಂತ್ರಿ ಮಾಯಾವತಿ, ದೆಹಲಿ ಮೆಟ್ರೋ ಮುಖ್ಯಸ್ಥ ಇ. ಶ್ರೀಧರನ್, ಚಿತ್ರ ನಟರಾದ ಅಮಿತಾಭ್ ಬಚ್ಚನ್, ರಜನಿಕಾಂತ್, ಶಾರೂಖ್ ಖಾನ್, ಐಶ್ವರ್ಯ ರೈ ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್, ಆಟಗಾರ ಸಚಿನ್ ತೆಂಡೂಲ್ಕರ್, ಬ್ಯಾಂಕರುಗಳಾದ ಕೆ.ವಿ. ಕಾಮತ್, ದೀಪಕ್ ಪಾರೇಖ್ ಸೇರ್ಪಡೆಯಾದರು. ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿರುವ ಮಾಹಿತಿ ತಂತ್ರಜ್ಞಾನ ದಿಗ್ಗಜರಾದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನ ಎಸ್. ರಾಮದೊರೈ ಸಹ ಈ ಪಟ್ಟಿಯಲ್ಲಿ ಸೇರ್ಪಡೆಯಾದರು.

2007: ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್ ಮುಖ್ಯ ಸಲಹೆಗಾರ ಎನ್. ಆರ್. ನಾರಾಯಣ ಮೂರ್ತಿ ಅವರ ವಿರುದ್ಧ ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತು. ಈ ಸಂಬಂಧ ಬೆಂಗಳೂರು ಎರಡನೇ ಹೆಚ್ಚುವರಿ ಮುಖ್ಯ ಮೆಟ್ರೋ ಪಾಲಿಟನ್ ನ್ಯಾಯಾಧೀಶರು (ಎರಡನೇ ಎಸಿಎಂಎಂ) ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಾರಾಯಣ ಮೂರ್ತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿ ಕೆ. ಭಕ್ತವತ್ಸಲ ಅವರು, `ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಆದ್ದರಿಂದ ಈ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸಲು ಅವಕಾಶವಿಲ್ಲ' ಎಂದು ಆದೇಶಿಸಿ ವಿಚಾರಣೆಯನ್ನು ರದ್ದುಗೊಳಿಸಿದರು. ಮೈಸೂರಿನ ಇನ್ಫೋಸಿಸ್ ಗ್ಲೋಬಲ್ ಟ್ರೈನಿಂಗ್ ಸೆಂಟರಿಗೆ ಆಗಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಷ್ಟ್ರಗೀತೆಯನ್ನು ಹಾಡುವ ಬದಲು, ವಾದ್ಯದ ಮೂಲಕ ನುಡಿಸಲಾಗಿತ್ತು. ಇದರಿಂದ ರಾಷ್ಟ್ರದ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೂರಿ ಕರ್ನಾಟಕ ರಕ್ಷಣಾ ವಕೀಲರ ವೇದಿಕೆ ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ರಾಷ್ಟ್ರಗೀತೆಯನ್ನು ಹಾಡುವ ಬದಲಾಗಿ, ಸಂಗೀತ ವಾದ್ಯದ ಮೂಲಕ ನುಡಿಸಲು ಅವಕಾಶವಿದೆ ಎಂದು ನ್ಯಾಯಾಲಯ ಹೇಳಿತು. `ರಾಷ್ಟ್ರೀಯ ಗೌರವ ಕಾಯ್ದೆ'ಯ ಪ್ರಕಾರ ಹಾಡುವುದು ಅಥವಾ ಸಂಗೀತ ವಾದ್ಯದ ಮೂಲಕ ನುಡಿಸುವುದು ಎರಡಕ್ಕೂ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ನಾರಾಯಣ ಮೂರ್ತಿ ಯಾವುದೇ ತಪ್ಪು ಮಾಡಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

2007: ಕಣ್ಣಿನ ಕೆಳ ಭಾಗದ ಮತ್ತು ಮೂಗಿನ ಪಕ್ಕದಲ್ಲಿರುವ ಮೂಳೆಯೊಂದಿಗೆ ಕೃತಕ ಹಲ್ಲುಗಳನ್ನು ಜೋಡಿಸುವ `ಜೈಗೊಮ್ ಇಂಪ್ಲಾಂಟ್ಸ್' ಶಸ್ತ್ರಚಿಕಿತ್ಸೆಯನ್ನು ಬೆಂಗಳೂರಿನ ಸಾಗರ್ ಅಪೊಲೋದಲ್ಲಿ ನೆರವೇರಿಸಲಾಯಿತು. ಆರು ತಿಂಗಳ ಹಿಂದೆ ಅಮೆರಿಕ, ಫ್ರಾನ್ಸಿನಲ್ಲಿ ಜಾರಿಗೆ ಬಂದ ಈ ವಿಧಾನದ ಈ ಶಸ್ತ್ರಚಿಕಿತ್ಸೆಯನ್ನು ಆಸ್ಪತ್ರೆಯ ಸರ್ಜನ್ ಡಾ. ಗಿರೀಶ್ ರಾವ್ ಮತ್ತು ಡಾ. ಆನಂದ ಕೃಷ್ಣ ಅವರಿಬ್ಬರ ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾಲ ಮಾಡಲಾಯಿತು. ಕೆಲ ವರ್ಷಗಳ ಹಿಂದೆ ವಸಡಿನ ಒಳಗಿರುವ ದವಡೆಯ ಮೂಳೆ ಜತೆ ಕೃತಕ ಹಲ್ಲುಗಳನ್ನು ಶಾಶ್ವತವಾಗಿ ಜೋಡಿಸುವ ಚಿಕಿತ್ಸಾ ವಿಧಾನವನ್ನು ಕಂಡು ಹಿಡಿದ ಬಳಿಕ ಕೃತಕ ಹಲ್ಲು ಸೆಟ್ಟುಗಳ ಜೊತೆಗೆ ಆಗುವ ಕಿರಿ ಕಿರಿಗೆ ಬಹುತೇಕ ಪರಿಹಾರ ಸಿಕ್ಕಿತ್ತು. ಆದರೆ ದವಡೆ ಮೂಳೆಯೂ ಸವೆದು ಹೋಗಿರುವವರಿಗೆ ಕೃತಕ ಹಲ್ಲುಗಳನ್ನು ಜೋಡಿಸುವುದು ಸಾಧ್ಯವಿರಲಿಲ್ಲ. ಇದೀಗ 'ಜೈಗೋಮ್ ಇಂಪ್ಲಾಂಟ್' ಮೂಳೆಗೇ ಕೃತಕ ಹಲ್ಲು ಕೂರಿಸುವಲ್ಲಿ ಯಶಸ್ವಿಯಾಗುವ ಮೂಲಕ ಈ ಸಮಸ್ಯೆಗೂ ಪರಿಹಾರ ಲಭಿಸಿದಂತಾಯಿತು.

2006: ಕಾರ್ಪೊರೇಟ್ ವಲಯದ ಬಲಿಷ್ಠ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಇಂದ್ರಾ ನೂಯಿ ಅವರು ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ ಪೆಪ್ಸಿಕೊದ ಮುಂದಿನ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆಗಿ ನೇಮಕಗೊಂಡರು. ಭಾರತದ ತಮಿಳುನಾಡಿನ ಚೆನ್ನೈ ಮೂಲದವರಾದ ಪ್ರಸ್ತುತ ಕನೆಕ್ಟಿಕಟ್ ನಲ್ಲಿ ಪತಿ ರಾಜ್ ಹಾಗೂ ಇಬ್ಬರು ಪುತ್ರಿಯರ ಜೊತೆಗೆ ವಾಸವಾಗಿರುವ ನೂಯಿ 41 ವರ್ಷಗಳ ಪೆಪ್ಸಿಕೊ ಇತಿಹಾಸದಲ್ಲಿ 5ನೇ ಸಿಇಓ.

2006: ಸಾರ್ವಜನಿಕ ಪ್ರದೇಶಗಳಾದ ಶಾಲೆ, ಕಾಲೇಜು, ವಿದ್ಯಾರ್ಥಿ ನಿಲಯ ಹಾಗೂ ಆಸ್ಪತ್ರೆಗಳ ಆವರಣಗಳ ಜೊತೆಗೆ ಸರ್ಕಾರಿ ಕಚೇರಿ ಆವರಣದಲ್ಲೂ ತಂಪು ಪಾನೀಯಗಳ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತು.

2006: ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಕೊಲಂಬೊ ನಿವಾಸದ ಬಳಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು 7 ಮಂದಿ ಅಸು ನೀಗಿದರು. ಪ್ರವಾಸಿ ಭಾರತದ ಕ್ರಿಕೆಟ್ ತಂಡದ ಸದ್ಯಸ್ಯರಾರಿಗೂ ಯಾವುದೇ ತೊಂದರೆ ಆಗಲಿಲ್ಲ.

2006: ಐದು ವಾರಗಳಿಂದ ನಡೆಯುತ್ತಿದ್ದ ಇಸ್ರೇಲ್- ಲೆಬನಾನ್ ಸಂಘರ್ಷ ಕೊನೆಗೊಳಿಸಲು ವಿಶ್ವಸಂಸ್ಥೆ ರೂಪಿಸಿದ ಕದನ ವಿರಾಮ ಈ ದಿನ ಬೆಳಗ್ಗೆ 5 ಗಂಟೆ (ಭಾರತೀಯ ಕಾಲಮಾನ ಬೆಳಗ್ಗೆ 10.30) ಜಾರಿಗೆ ಬಂದಿತು.

2006: ಹೈಕೋರ್ಟ್ ತೀರ್ಪಿನ ಹಿನ್ನೆಲೆಯ್ಲಲಿ ಕರ್ನಾಟಕದ 250 ಕೇಂದ್ರಗಳಲ್ಲಿ `ಪ್ಲೇವಿನ್' ಲಾಟರಿ ಮಾರಾಟ ಪುನರಾರಂಭಗೊಂಡಿತು.

2006: ಇರಾಕಿನ ರಾಜಧಾನಿ ಬಾಗ್ದಾದಿನ ಆಗ್ನೇಯ ಭಾಗದಲ್ಲಿ ಜನ ದಟ್ಟಣೆಯ ವಾಣಿಜ್ಯ ಸಂಕೀರ್ಣಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿ 57 ಜನ ಸತ್ತು 150ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಉತ್ತರ ಕರ್ನಾಟಕದ ಉದ್ಯಮಶೀಲ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ ಹುಬ್ಬಳ್ಳಿಯ `ವಿಮೆನ್ ಇನ್ ಬಿಸಿನೆಸ್' ಸಂಸ್ಥೆಯ ಲೀಲಾ ಕರವೀರ ಶೆಟ್ಟರ (42) ನಿಧನರಾದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸ್ವತಃ ಹುಟ್ಟು ಹಾಕಿದ `ವಿನ್ ಬಿ' ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳೆಯರೂ ಸೇರಿದಂತೆ ಮಹಿಳೆಯರಿಗಾಗಿ 400ಕ್ಕೂ ಹೆಚ್ಚು ವಿವಿಧ ತರಬೇತಿ ಶಿಬಿರಗಳನ್ನು ಲೀಲಾ ಸಂಘಟಿಸಿದ್ದರು. ಜೈಂಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆ ಅವರಿಗೆ `ವುಮನ್ ಅಚೀವರ್' ಪ್ರಶಸ್ತಿ ನೀಡಿ ಗೌರವಿಸಿತ್ತು.

1995: ವಿದೇಶ ಸಂಚಾರ ನಿಗಮ ನಿಯಮಿತವು (ವಿಎಸ್ಸೆನ್ನೆಲ್) ಭಾರತದಲ್ಲಿ ತನ್ನ ಇಂಟರ್ ನೆಟ್ ಅಭಿವೃದ್ಧಿ ಸೇವೆಯನ್ನು ಆರಂಭಿಸಿತು.

1953: ಸರಜೂ ಕಾಟ್ಕರ್ ಜನನ.

1951: ವೃತ್ತಪತ್ರಿಕಾ ಪ್ರಕಾಶಕ ವಿಲಿಯಮ್ ರಾಂಡಾಲ್ಫ್ ಹಿಯರೆಸ್ಟ್ ತಮ್ಮ 88ನೇ ವಯಸ್ಸಿನಲ್ಲಿ ಬೆವೆರ್ಲಿ ಹಿಲ್ಸಿನಲ್ಲಿ ಮೃತರಾದರು.

1947: ಭಾರತವು ವಿಭಜನೆಗೊಂಡು, ಪಾಕಿಸ್ತಾನವು ಸ್ವತಂತ್ರ ರಾಷ್ಟ್ರವಾಯಿತು. ಎಂ.ಎ. ಜಿನ್ನಾ ಅವರು ರಾಷ್ಟ್ರದ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡರು.

1945: ಜಪಾನ್ ಬೇಷರತ್ತಾಗಿ ಶರಣಾಗತವಾಗಿದೆ ಎಂದು ಅಧ್ಯಕ್ಷ ಟ್ರೂಮನ್ ಪ್ರಕಟಿಸಿದರು. ಇದರೊಂದಿಗೆ ಎರಡನೇ ಜಾಗತಿಕ ಸಮರ ಅಂತ್ಯಗೊಂಡಿತು. ಔಪಚಾರಿಕ ಶರಣಾಗತಿಯು ಸೆಪ್ಟೆಂಬರ್ 2ರಂದು ಯುಎಸ್ಸೆಸ್ ಮಿಸ್ಸೌರಿಯಲ್ಲಿ ನಡೆಯಿತು.

1941: ಅಧ್ಯಕ್ಷ ರೂಸ್ ವೆಲ್ಟ್ ಮತ್ತು ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಅವರು ಉಭಯ ದೇಶಗಳು ಪರಸ್ಪರ ದಾಳಿ ನಡೆಸದಂತೆ ರೂಪಿಸಲಾದ ನಿಯಮಗಳ `ಅಟ್ಲಾಂಟಿಕ್ ಚಾರ್ಟರ್' ಬಿಡುಗಡೆ ಮಾಡಿದರು.

1931: ಸಾಹಿತಿ ಪಳಕಳ ಸೀತಾರಾಮ ಭಟ್ಟ ಜನನ.

1892: ಸಂಶೋಧಕ, ಗ್ರಂಥ ಸಂಪಾದಕ, ಪತ್ರಕರ್ತ ಕ.ಗಿ. ಕುಂದಣಗಾರ ಅವರು ಗಿರಿಯಪ್ಪ- ಶಾಕಾಂಬರಿ ದಂಪತಿಯ ಮಗನಾಗಿ ಬೆಳಗಾವಿ ಜ್ಲಿಲೆ ಗೋಕಾಕ ತಾಲ್ಲೂಕಿನ ಕೌಜಲಗಿಯಲ್ಲಿ ಜನಿಸಿದರು.

1777: ಡ್ಯಾನಿಷ್ ಭೌತವಿಜ್ಞಾನಿ ಮತ್ತು ರಾಸಾಯನಿಕ ತಜ್ಞ ಹ್ಯಾನ್ಸ್ ಕ್ರಿಸ್ಟಿಯನ್ ಓರ್ ಸ್ಟೆಡ್ (1777-1851) ಜನ್ಮದಿನ. ತಂತಿಯಲ್ಲಿನ (ವಯರ್) ವಿದ್ಯುತ್ ಅಲೆಯು ಆಯಸ್ಕಾಂತೀಯ ಕಂಪಾಸ್ ನ ಸೂಜಿಯನ್ನು ಪಕ್ಕಕ್ಕೆ ಬಾಗಿಸುತ್ತದೆ ಎಂಬುದಾಗಿ ಇವರು ಮಾಡಿದ ಸಂಶೋಧನೆಯು `ಎಲೆಕ್ಟ್ರೋ ಮ್ಯಾಗ್ನಟಿಕ್ ಸಿದ್ಧಾಂತ'ದ ಅಭಿವೃದ್ಧಿಗೆ ಸ್ಫೂರ್ತಿ ನೀಡಿತು.

No comments:

Post a Comment