Tuesday, August 7, 2018

ಇಂದಿನ ಇತಿಹಾಸ History Today ಆಗಸ್ಟ್ 07

ಇಂದಿನ ಇತಿಹಾಸಆಗಸ್ಟ್ 07

2018: ಚೆನ್ನೈ: ’ಕಲೈನ್ಯಾರ್ (ಕಲಾವಿದ) ಎಂಬುದಾಗಿಯೇ ಜನಪ್ರಿಯರಾದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ (ಎಂ. ಕರುಣಾನಿಧಿ) ಅವರು ಈದಿನ  ಸಂಜೆ ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೯೪ ವರ್ಷ ವಯಸ್ಸಾಗಿತ್ತು.  ಕಾವೇರಿ ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಪ್ರಕಾರ ಸಂಜೆ ೬.೧೦ ಗಂಟೆಗೆ ಕರುಣಾನಿಧಿ ಅವರು ಕೊನೆಯುಸಿರು ಎಳೆದರು. ಬಹು ಅಂಗಾಂಗ ವೈಫಲ್ಯದ ಪರಿಣಾಮವಾಗಿ ಅವರ ಸಾವು ಸಂಭವಿಸಿದೆ ಎಂದು ಆಸ್ಪತ್ರೆ ಬುಲೆಟಿನ್ ಹೇಳಿತು.
ಹಿಂದಿನ ೨೪ ಗಂಟೆಯಿಂದ ಕರುಣಾನಿಧಿ ಅವರ ಆರೋಗ್ಯ ಗಣನೀಯವಾಗಿ ಕುಸಿದಿತ್ತು. ಗರಿಷ್ಠ ವೈದ್ಯಕೀಯ ಬೆಂಬಲದ ಹೊರತಾಗಿಯೂ ಅವರ ಚೇತರಿಕೆ ಸಾಧ್ಯವಾಗಲಿಲ್ಲ ಎಂದು ವೈದರು ಹೇಳಿದರು. ‘ಕಲೈನ್ಯಾರ್’  ನಿಧನದ ಸುದ್ದಿ ಹೊರಬೀಳುತ್ತಿದ್ದಂತೆಯೇ ಆಸ್ಪತೆಯ ಹೊರಭಾಗದಲ್ಲಿ ಸೇರಿದ್ದ ಭಾರಿ ಸಂಖ್ಯೆಯ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ದುಃಖದ ಕಟ್ಟೆಯೊಡೆಯಿತು.  ರಾಷ್ಟ್ರಪತಿ, ಪ್ರಧಾನಿ ದುಃಖ:  ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರಪತಿ ರಾಮನಾಥ್ ಕೋವಿಂದ್,  ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಕರುಣಾನಿಧಿ ಅವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ಒಡನಾಟದ ಸಂದರ್ಭಗಳನ್ನು ಸ್ಮರಿಸಿದ ಪ್ರಧಾನಿ ತುರ್ತುಸ್ಥಿತಿ ವಿರುದ್ಧ ನಿಂತಿದ್ದ ಅವರ ಹೋರಾಟವನ್ನು ಮರೆಯಲಾಗದು ಎಂದು ಹೇಳಿದರು. ‘ಕಲೈನ್ಯಾರ್’  ಕರುಣಾನಿಧಿ ಅವರು ಪ್ರಾದೇಶಿಕ ಆಶಯಗಳ ಜೊತೆಗೇ ರಾಷ್ಟ್ರದ ಅಭಿವೃದ್ಧಿಯ ಪರವಾಗಿ ನಿಂತಿದ್ದರು. ತಮಿಳರ ಕಲ್ಯಾಣಕ್ಕಾಗಿ ಕಟಿಬದ್ಧರಾಗಿದ್ದ ಅವರು ತಮಿಳುನಾಡಿನ ಸ್ವರ ಪರಿಣಾಮಕಾರಿಯಾಗಿ ಕೇಳುವಂತೆ ಮಾಡಿದ್ದರು ಎಂದು ಪ್ರಧಾನಿ ತಮ್ಮ ಟ್ವೀಟಿನಲ್ಲಿ ತಿಳಿಸಿದರು. ಕರುಣಾನಿಧಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ದೆಹಲಿಯಲ್ಲಿದ್ದ ಕಮಲಹಾಸನ್ ಅವರು ತಮ್ಮ ಎಲ್ಲ ಕಾರ್‍ಯಕ್ರಮ ರದ್ದು ಪಡಿಸಿ ಚೆನ್ನೈಯತ್ತ ಹೊರಟರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಚೆನ್ನೈಯೆಡೆಗೆ ಹೊರಟರು.  ಆರೋಗ್ಯದಲಿ ಏರಿಳಿತ: ರಕ್ತದ ಒತ್ತಡ ಕಡಿಮೆಯಾದ ಹಿನ್ನೆಲೆಯಲ್ಲಿ ಜುಲೈ ೨೮ರಂದು ನಸುಕಿನ ವೇಳೆಯಲ್ಲಿ ಕರುಣಾನಿಧಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ದೇಹಾರೋಗ್ಯದಲ್ಲಿ ಅಂದಿನಿಂದಲೂ ಏರಿಳಿತವಾಗುತ್ತಲೇ ಇತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ರಾಜಕಾರಣಿಗಳಾಗಿ ಪರಿವರ್ತನೆಗೊಂಡಿರುವ ಚಿತ್ರ ನಟ ಕಮಲಹಾಸನ್, ರಜನೀಕಾಂತ್, ಚಿತ್ರನಟರಾದ ವಿಜಯ್ ಅಜಿತ್ ಮತ್ತಿತರರು ಈ ಅವಧಿಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದರು.  ಐದು ಬಾರಿ ಮುಖ್ಯಮಂತ್ರಿ: ೧೯೨೪ರ ಜೂನ್ ೩ರಂದು ಜನಿಸಿದ ಕರುಣಾನಿಧಿ ಅವರು ೧೯೬೯ರಿಂದ ೨೦೧೧ರವರೆಗಿನ ಅವಧಿಯಲ್ಲಿ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.  ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವನ್ನು ಹತ್ತುಬಾರಿ ಅಧ್ಯಕ್ಷರಾಗಿ ಮುನ್ನಡೆಸಿದ ಅವರು ದ್ರಾವಿಡ ಸ್ವಾಭಿಮಾನ ಚಳವಳಿಯ ಮುಂಚೂಣಿ ನಾಯಕರಾಗಿದ್ದರು. ರಾಜಕೀಯಕ್ಕೆ ಬರುವ ಮುನ್ನ ಕರುಣಾನಿಧಿ ಅವರು ತಮಿಳು ಚಿತ್ರೋದ್ಯಮದಲ್ಲಿ ಚಿತ್ರಕಥೆಗಾರರಾಗಿ (ಸ್ಕ್ರೀನ್‌ರೈಟರ್) ದುಡಿದಿದ್ದರು. ಕಥೆಗಳು, ನಾಟಕಗಳು, ಕಾದಂಬರಿಗಳನ್ನು ಬರೆಯುವ ಮೂಲಕ ಅವರು ತಮಿಳು ಸಾಹಿತ್ಯಕ್ಕೂ ಅಪಾರ ಕೊಡುಗೆ ಕೊಟ್ಟಿದ್ದರು.  ನಾಗಪಟ್ಟಿನಂ ಜಿಲ್ಲೆಯ ತಿರುಕ್ಕುವಲೈ ಗ್ರಾಮದಲ್ಲಿ ಮುತ್ತುವೇಲು ಮತ್ತು ಅಂಜು ದಂಪತಿಯ ಮಗನಾಗಿ ಜನಿಸಿದ್ದ ಕರುಣಾನಿಧಿ ಅವರಿಗೆ ಶಾಲಾದಿನಗಳಿಂದಲೇ ನಾಟಕ, ಕವನ, ಸಾಹಿತ್ಯದಲ್ಲಿ ಅಪಾರ ಅಭಿರುಚಿ ಇತ್ತು. ಜಸ್ಟೀಸ್ ಪಾರ್ಟಿಯ ಸ್ಥಂಭ ಎಂಬುದಾಗಿಯೇ ಪರಿಗಣಿತರಾಗಿದ್ದ ಅಳಗಿರಿ ಸ್ವಾಮಿ ಅವರ ಭಾಷಣಗಳಿಂದ ಸ್ಫೂರ್ತಿ ಪಡೆದ ಕರುಣಾನಿಧಿ ೧೪ನೇ ವಯಸ್ಸಿನಲ್ಲೇ ಸಾಮಾಜಿಕ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಜ್ಯಮಟ್ಟದ ಆಲ್ ಸ್ಟೂಡೆಂಟ್ಸ್ ಕ್ಲಬ್ ಸ್ಥಾಪಿಸಿಕೊಂಡಿದ್ದರು. ಇದು ದ್ರಾವಿಡ ಚಳವಳಿಗೆ ಧುಮುಕಿದ್ದ ಮೊತ್ತ ಮೊದಲ ವಿದ್ಯಾರ್ಥಿ ಸಂಘಟನೆಯಾಗಿತ್ತು.  ಜಸ್ಟೀಸ್ ಪಾರ್ಟಿಯ ನೇತೃತ್ವದಲ್ಲಿ ನಡೆದ  ಹಿಂದಿವಿರೋಧಿ ಚಳವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ರಾಜಕೀಯಕ್ಕೆ ಇಳಿದ ಕರುಣಾನಿಧಿ ’ಮನಾವರ್ ನೇಸನ್ ಎಂಬ ಕೈಬರಹದ ಪತ್ರಿಕೆಯನ್ನು ರೂಪಿಸಿ ಪ್ರಸಾರ ಮಾಡಿದ್ದರು. ಬಳಿಕ ತಮಿಳು ಮನಾವರ್ ಮಂದ್ರಮ್ ಎಂಬ ಸಂಘಟನೆಯನ್ನು ಸ್ಥಾಪಿಸಿದ್ದರು. ಅದರು ದ್ರಾವಿಡ ಚಳವಳಿಯ ವಿದ್ಯಾರ್ಥಿ ವಿಭಾಗವಾಗಿ ಕೆಲಸ ಮಾಡಿತ್ತು. ಸಂಘಟನೆಯ ಸದಸ್ಯರಿಗಾಗಿ ಅವರು ಆರಂಭಿಸಿದ್ದ ಪತ್ರಿಕೆ ಮುಂದೆ ’ಮುರಸೋಲಿ ಹೆಸರಿನಲ್ಲಿ ಡಿಎಂಕೆಯ ಮುಖವಾಣಿಯಾಯಿತು.  ಅಸೆಂಬ್ಲಿ ಪ್ರವೇಶ: ೩೩ನೇ ವಯಸ್ಸಿನಲ್ಲಿ ಕರುಣಾನಿಧಿ ಕುಲಿತ್ತಾಲೈ ಕ್ಷೇತ್ರದಿಂದ ಗೆದ್ದು ೧೯೫೭ರಲ್ಲಿ ತಮಿಳುನಾಡು ವಿಧಾನಸಭೆಯನ್ನು ಪ್ರವೇಶಿಸಿದರು. ೧೯೬೧ರಲ್ಲಿ ಅವರು ಡಿಎಂಕೆ ಖಜಾಂಚಿಯಾದರು. ೧೯೬೨ರಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪನಾಯಕರಾದರು. ೧೯೬೭ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಾಗ ಅವರು ಲೋಕೋಪಯೋಗಿ ಇಲಾಖೆಯ ಸಚಿವರಾದರು.  ೧೯೬೯ರಲ್ಲಿ ಮುಖ್ಯಮಂತ್ರಿ ಅಣ್ಣಾದುರೈ ಅವರು ನಿಧನರಾದಾಗ ಕರುಣಾನಿಧಿ ಮೊತ್ತ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾದರು. ೧೯೭೫ರಲ್ಲಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದಾಗ ಅದನ್ನು ವಿರೋಧಿಸಿದ್ದ ಏಕೈಕ ಆಡಳಿತಾರೂಢ ಪಕ್ಷ ಡಿಎಂಕೆ ಆಗಿತ್ತು. ಇಂದಿರಾಗಾಂಧಿ ಅವರು ಸರ್ಕಾರವನ್ನು ವಜಾಗೊಳಿಸಿ, ಡಿಎಂಕೆಯ ಹಲವಾರು ನಾಯಕರನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ಅವೆರಲ್ಲರೂ ತುರ್ತುಪರಿಸ್ಥಿತಿ ಮುಗಿಯುವವರೆಗೂ ಸೆರೆಯಲ್ಲಿದ್ದರು. ಬಳಿಕ ಕರುಣಾನಿಧಿ ಅವರು ಜನತಾ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡರು.  ಕರುಣಾನಿಧಿ ಅವರ ಗೆಳೆಯನಾಗಿದ್ದ ಎಂ.ಜಿ. ರಾಮಚಂದ್ರನ್ ಅವರು ಕರುಣಾನಿಧಿಯವರಿಂದ ಪಕ್ಷದಿಂದ ಹೊರಹಾಕಲ್ಪಟ್ಟ ಬಳಿಕ ಎಐಡಿಎಂಕೆ ಪಕ್ಷವನ್ನು ಸ್ಥಾಪಿಸಿದರು. ಎಂಜಿಆರ್ ಪಕ್ಷ ಬಲಗೊಂಡ ಪರಿಣಾಮವಾಗಿ ೧೯೮೭ರಲ್ಲಿ ಎಂಜಿಆರ್ ನಿಧನರಾಗುವವರೆಗೂ ಅವರ ಎದುರು ಹಲವಾರು ಬಾರಿ ಕರುಣಾನಿಧಿ ಪರಾಭವಗೊಂಡಿದ್ದರು.  ೧೯೯೬ರಲ್ಲಿ ಕರುಣಾನಿಧಿ ಪುನಃ ಭಾರಿ ಬಹುಮತದೊಂದಿಗೆ ಮುಖ್ಯಮಂತ್ರಿಯಾದರು. ಐದು ವರ್ಷದ ಬಳಿಕ ೨೦೦೧ರಲ್ಲಿ ಜೆ. ಜಯಲಲಿತಾ ಅವರ ಎಐಎಡಿಎಂಕೆ ಎದುರು ಪರಾಭವಗೊಂಡರು. ೨೦೦೬ರ ಚುನಾವಣೆಯಲ್ಲಿ ಜಯಲಲಿತಾ ಪಕ್ಷದ ಪರಾಭವ ಬಳಿಕ ೨೦೦೬ರ ಮೇ ೧೩ರಂದು ಅವರು ಪುನಃ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದರು. ೨೦೧೧ರ ಚುನಾವಣೆಯಲ್ಲಿ ಡಿಎಂಕೆ ಸೋತು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಧಿಕಾರಕ್ಕೆ ಬಂತು. ೨೦೧೬ರ ಚುನಾವಣೆಯಲ್ಲೂ ಕರುಣಾನಿಧಿ ಅವರಿಗೆ ಜಯ ಪ್ರಾಪ್ತಿಯಾಗಲಿಲ್ಲ.  ಪ್ರಸ್ತುತ ವಿಧಾನಸಭೆಯಲ್ಲಿ ತಿರುವಾರೂರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕರುಣಾನಿಧಿ ೧೯೫೭ರಿಂದ ೨೦೧೬ರವರೆಗೆ ೧೩ ಬಾರಿ ತಮಿಳುನಾಡು ವಿಧಾನಸಭೆಗೆ ಆಯ್ಕೆಯಾಗಿದ್ದರು. ಒಮ್ಮೆ ಈಗ ರದ್ದಾಗಿರುವ ತಮಿಳುನಾಡು ವಿಧಾನಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು.  ತಮಿಳು ವಿಶ್ವ ಸಮ್ಮೇಳನ: ೧೯೭೦ರಲ್ಲಿ ಪ್ಯಾರಿಸ್ಸಿನಲ್ಲಿ ನಡೆದ ವಿಶ್ವ ತಮಿಳು ಸಮ್ಮೇಳನದಲ್ಲಿ ಕರುಣಾನಿಧಿ ವಿಶೇಷ ಭಾಷಣ ಮಾಡಿದ್ದರು. ಕೌಲಾಲಂಪುರದ ೬ನೇ ವಿಶ್ವ ತಮಿಳುಸಮ್ಮೇಳನದಲ್ಲೂ ಅವರು ಪಾಲ್ಗೊಂಡಿದ್ದರು. ೨೦೧೦ರ ವಿಶ್ವ ತಮಿಳು ಸಮ್ಮೇಳನದಲ್ಲಿ ಕರುಣಾನಿಧಿ ಕವನವನ್ನು ಎ.ಆರ್. ರಹಮಾನ್ ಹಾಡಿದ್ದರು.  ಚಿತ್ರಕಥೆಗಾರ, ಸಾಹಿತಿಯಾಗಿ: ಚಿತ್ರ ಕಥೆಗಾರರಾಗಿದ್ದ ಕರುಣಾನಿಧಿ ಅವರ ಮೊದಲ ತಮಿಳುಚಿತ್ರ ’ರಾಜಕುಮಾರಿ. ಎ.ಎಸ್.ಎ. ಸಾಮಿ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಎಂ.ಜಿ. ರಾಮಚಂದ್ರನ್ ನಟಿಸಿದ್ದರು. ಎಐಎಡಿಎಂಕೆ ಸ್ಥಾಪನೆ ಬಳಿಕ ಕರುಣಾನಿಧಿ ಮತ್ತು ಎಂಜಿಆರ್ ಪ್ರತಿಸ್ಪರ್ಧಿಗಳಾದರೂ ಜ್ಯೂಪಿಟರ್ ಪಿಕ್ಚರ್‍ಸ್ ನಂಟು ಮುಂದುವರೆದು ಅವರ ಚಿತ್ರಕಥೆಯಾಗಿದ್ದ ಅಭಿಮನ್ಯು, ಇಳವರಸಿ ಇತ್ಯಾದಿ ಚಿತ್ರಗಳು ನಿರ್ಮಾಣವಾಗಿದ್ದವು. ಕರುಣಾನಿಧಿ ಚಿತ್ರಕಥೆಯ ಗಮನಾರ್ಹ ಚಿತ್ರ ’ಪರಾಸಕ್ತಿ. ಇದು ದ್ರಾವಿಡ ಚಳವಳಿಯ ಸಿದ್ಧಾಂತವನ್ನು ಪರಿಚಯಿಸಿತ್ತು. ಸೆನ್ಸಾರ್ ಸಮಸ್ಯೆಗಳನ್ನು ಎದುರಿಸಿದರೂ ಚಿತ್ರ ಕಡೆಗೆ  ಹಿಟ್ ಆಗಿತ್ತು. ಈ ಚಿತ್ರ ಶಿವಾಜಿ ಗಣೇಶನ್ ಮತ್ತು ಎಸ್.ಎಸ್. ರಾಜೇಂದ್ರನ್ ಅವರನ್ನು ತಮಿಳು ಚಿತ್ರೋದ್ಯಮಕ್ಕೆ ಪರಿಚಯಿಸಿತ್ತು.  ಕರುಣಾನಿಧಿ ಅವರು ಬರೆದ ಸಂಗ ತಮಿಳ್, ತಿರುಕ್ಕುರಲ್ ಉರೈ, ಪೊನ್ನಾರ್ ಸಂಕರ್, ರಾಮಾಪುರಿ ಪಾಂಡ್ಯನ್, ತೆನ್ನಪಂಡಿ ಸಿಂಗಮ್ ಇತ್ಯಾದಿ ಪುಸ್ತಕಗಳೂ ಜನಪ್ರಿಯವಾಗಿದ್ದವು.  ಮಣಿಮಗುದಂ, ಒರೆ ರತಮ್, ಪಳನಿಯಪ್ಪನ್, ತೂತು ಮೆದೈ, ಕಗಿಥಾ ಇತ್ಯಾದಿ ನಾಟಕಗಳೂ ಅವರಿಂದ ರಚನೆಯಾಗಿದ್ದು ಜನಪ್ರಿಯವಾಗಿದ್ದವು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರ ಗೌರವಾರ್ಥ ತಮಿಳುನಾಡಿನಲ್ಲಿ ಆಗಸ್ಟ್ ೮ರಂದು ರಜೆ ಘೋಷಿಸಲಾಯಿತು. , ೭ ದಿನ ಶೋಕಾಚರಣೆ ಆಚರಿಸಲಾಗುವುದು ಎಂದು ತಮಿಳುನಾಡು ಸರ್ಕಾರ ಪ್ರಕಟಿಸಿತು.

2018: ನವದೆಹಲಿ: ಮೂತ್ರಪಿಂಡ (ಕಿಡ್ನಿ) ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಆಗಸ್ಟ್ ತಿಂಗಳ ಮೂರನೇ ವಾರದಿಂದ ಮತ್ತೆ ವಿತ್ತ ಸಚಿವಾಲಯದ ಹೊಣೆ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿದವು. ಜೇಟ್ಲಿ ಅವರು ಚೆನ್ನಾಗಿ ಚೇತರಿಸುತ್ತಿದ್ದು, ವಿತ್ತ ಸಚಿವಾಲಯದ ಹೊಣೆಗಾರಿಕೆ ವಹಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂದು ಮೂಲಗಳು ಹೇಳಿದವು. ಶಸ್ತ್ರಚಿಕಿತ್ಸೆಯ ಬಳಿಕ ಜೇಟ್ಲಿ ಅವರು ಸಾಮಾಜಿಕ ಮಾಧ್ಯಮ ಹಾಗೂ ಬ್ಲಾಗಿನಲ್ಲಿ ಆರ್ಥಿಕ ಹಾಗೂ ಆರ್ಥಿಕೇತರ ವಿಷಯಗಳ ಬಗ್ಗೆ ಬರಹಗಳನ್ನು ಬರೆಯುವ ಮೂಲಕ ಸಕ್ರಿಯರಾಗಿದ್ದರು. ಈ ಅವಧಿಯಲ್ಲಿ ಅವರು ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ), ರಫೇಲ್ ಯುದ್ಧ ವಿಮಾನ ವ್ಯವಹಾರ ಮತ್ತು ಜಿಎಸ್ ಟಿ ಕುರಿತು ಬರಹಗಳನ್ನು ಬರೆದಿದ್ದರು.  ಬ್ಯಾಂಕಿಂಗ್ ಸಮ್ಮೇಳನ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅನುಷ್ಠಾನದ ಮೊದಲ ವಾರ್ಷಿಕೋತ್ಸವದಲ್ಲಿ ವಿಡಿಯೋ ಸಮ್ಮೇಳನ (ವಿಡಿಯೋ ಕಾನ್ಫರೆನ್ಸಿಂಗ್) ಮೂಲಕ ಅವರು ಪಾಲ್ಗೊಂಡಿದ್ದರು.  ಮೇ ೧೪ರಂದು ಜೇಟ್ಲಿ ಅವರು ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲಿ ರೈಲ್ವೇ ಮತ್ತು ಕಲ್ಲಿದ್ದಲು ಸಚಿವ ಪೀಯೂಶ್ ಗೋಯೆಲ್ ಅವರಿಗೆ ತಾತ್ಕಾಲಿಕವಾಗಿ ವಿತ್ತ ಸಚಿವಾಲಯದ ಹೆಚ್ಚುವರಿ ಹೊಣೆಗಾರಿಕೆ ವಹಿಸಲಾಗಿತ್ತು.
೨೦೧೪ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರ ವಹಿಸಿಕೊಂಡಂದಿನಿಂದ ಅರುಣ್ ಜೇಟ್ಲಿ ಅವರು ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ರಾಜ್ಯಸಭೆಯಲ್ಲಿ ಸದನದ ನಾಯಕರೂ ಕೂಡ.

2018: ನವದೆಹಲಿ: ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಕರಡಿನಲ್ಲಿ ಹೆಸರು ಬಿಟ್ಟು ಹೋಗಿರುವವರ ಪೌರತ್ವ ಮರುಪ್ರತಿಪಾದನೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ವಿವಿಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಎನ್‌ಆರ್‌ಸಿ ಸಮನ್ವಯಕಾರ ಮತ್ತು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಅವರನ್ನು ಸುಪ್ರೀಂಕೋರ್ಟ್ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಎನ್ ಆರ್ ಸಿ ಸಮನ್ವಯಕಾರ ಪ್ರತೀಕ್ ಹಜೇಲ ಮತ್ತು ರಿಜಿಸ್ಟ್ರಾರ್ ಜನರಲ್ ಸೈಲೇಶ್ ಅವರನ್ನು ನ್ಯಾಯಾಲಯಕ್ಕೆ ಕರೆಸಿದ ಸುಪ್ರೀಂಕೋರ್ಟ್ ’ನಿಮ್ಮ ವರ್ತನೆಯಿಂದ ನಮಗೆ ದಿಗಿಲು ಮತ್ತು ಚಿಂತೆಯಾಗಿದೆ ಎಂದು ಹೇಳಿತು.  ‘ನೀವಿಬ್ಬರೂ ನ್ಯಾಯಾಲಯ ನಿಂದನೆ ಮಾಡಿದ್ದೀರಿ. ನಾವು ನಿಮ್ಮನ್ನು ಸೆರೆಮನೆಗೆ ಕಳಹಿಸಲೋ? ನಿಮ್ಮಿಬ್ಬರನ್ನೂ ಶಿಕ್ಷಿಸಬೇಕು ಎಂದು ನ್ಯಾಯಮೂರ್ತಿಗಳಾದ ರಂಜನ್ ಗೊಗೋಯಿ ಮತ್ತು ರೊಹಿಂಟನ್ ನಾರಿಮನ್ ಅವರನ್ನು ಒಳಗೊಂಡ ಪೀಠ ಹೇಳಿತು.  ಹಜೇಲ ಮತ್ತು ಸೈಲೇಶ್ ಇಬ್ಬರೂ ಕ್ಷಮಾಯಾಚನೆ ಮಾಡಿದಾಗ, ’ನೀವಿಬ್ಬರೂ ನ್ಯಾಯಾಲಯದಿಂದ ನೇಮಕಗೊಂಡಿರುವ ಅಧಿಕಾರಿಗಳು. ಆದರೆ ನೀವು ಪತ್ರಿಕೆಗಳಿಗೆ ಪ್ರತಿಪಾದನೆ ಮತ್ತು ಆಕ್ಷೇಪಗಳ ವೇಳೆಯಲ್ಲಿ ಯಾವುದೇ ಹೊಸ ದಾಖಲೆಯನ್ನು ಪರಿಗಣಿಸಬಹುದು ಎಂದು ಹೇಳುತ್ತೀರಿ. ಅದನ್ನು ಹೇಳಲು ನೀವು ಯಾರು? ನಿಮಗೆ ಈ ಅಧಿಕಾರ ಕೊಟ್ಟವರು ಯಾರು?’ ಎಂದು ಪೀಠ ಪ್ರಶ್ನಿಸಿತು. ‘ಪತ್ರಿಕೆಗಳಿಗೆ ಹೋಗುವುದು, ಯಾರಿಗೆ ಬೇಕಿದ್ದರೂ ವಿವರಣೆ ನೀಡುವುದು ನಿಮ್ಮ ಕೆಲಸವಲ್ಲ, ನೀವು ನ್ಯಾಯಾಲಯದ ಅಧಿಕಾರಿ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಸಿದ್ಧ ಪಡಿಸುವ ಕೆಲಸವನ್ನು ನಿಮಗೆ ನೀಡಲಾಗಿದೆ. ನೀವು ಮಾಡಬೇಕಾಗಿರುವ ಇನ್ನಷ್ಟು ಕೆಲಸಗಳು ಬಾಕಿ ಉಳಿದಿವೆ. ಇಲ್ಲದೇ ಇದ್ದಲ್ಲಿ ನಾವು ಈ ಬಗ್ಗೆ ಇನ್ನಷ್ಟು ಕಠಿಣ ಅಭಿಪ್ರಾಯ ತಳೆಯುತ್ತಿದ್ದೆವು ಎಂದು ಪೀಠ ಹೇಳಿತು.  ತಾನು ಈಗಾಗಲೇ ವಿಷಯವನ್ನು ಆಗಸ್ಟ್ ೧೬ರಂದು ವಿಚಾರಣೆಗೆ ನಿಗದಿ ಪಡಿಸಿದ್ದೇನೆ ಎಂದು ಬೊಟ್ಟು ಮಾಡಿದ ಪೀಠ, ’ಪ್ರತಿಪಾದನೆಗಳು ಮತ್ತು ಆಕ್ಷೇಪಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆಯ ಮಾನದಂಡವನೊಂದನ್ನು ಕೇಂದ್ರ ಸರ್ಕಾರವು ಸಲ್ಲಿಸಲಿ ಎಂದು ಸೂಚಿಸಿತು.
ಅಟಾರ್ನಿ ಜನರಲ್ ಅವರು ಇನ್ನೂ ತಮ್ಮ ಅಭಿಪ್ರಾಯವನ್ನು ನಮಗೆ ನೀಡಬೇಕಷ್ಟೆ. ಆದರೆ ನೀವು ಪತ್ರಿಕೆಗಳಿಗೆ ಎಲ್ಲ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದೀರಿ. ನೀವು ಕೋರ್ಟಿನ ಒಬ್ಬ ಅಧಿಕಾರಿ, ನೀವು ಏನು ಹೇಳುತ್ತೀರೋ ಅದು ನಮ್ಮ ಮೇಲೂ ಪ್ರತಿಫಲಿಸುತ್ತದೆ ಎಂಬುದನ್ನು ನೀವು ಮರೆತುಬಿಟ್ಟಿದ್ದೀರಿ ಎಂದು ಪೀಠ ಹೇಳಿತು.  ‘ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ ಎಂಬ ಏಕೈಕ ಕಾರಣಕ್ಕಾಗಿ ನಿಮ್ಮನ್ನು  ಬಿಟ್ಟು ಬಿಡುತ್ತಿದ್ದೇವೆ ಎಂದು ಪೀಠ ಅಧಿಕಾರಿಗಳಿಬ್ಬರನ್ನೂ ಎಚ್ಚರಿಸಿತು.  ತನ್ನ ಆದೇಶದಲ್ಲಿ ಹಜೇಲ ಮತ್ತು ಸೈಲೇಶ್ ಅವರಿಗೆ ನೀಡಿದ ಎಚ್ಚರಿಕೆಯನ್ನು ದಾಖಲಿಸಿದ ಪೀಠ, ಪೀಠದ ಅನುಮತಿ ಇಲ್ಲದೆ  ಎನ್ ಆರ್ ಸಿ ಬಗ್ಗೆ ಯಾವುದೇ ಹೇಳಿಕೆಯನ್ನು ಪತ್ರಿಕೆಗಳಿಗೆ ನೀಡದಂತೆ ನಿರ್ಬಂಧಿಸಿತು.  ಹಜೇಲ ಮತ್ತು ಸೈಲೇಶ್ ಅವರು ಸಂದರ್ಶನಗಳಲ್ಲಿ ಎನ್ ಆರ್ ಸಿಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆಗಳ ಕುರಿತು ಮಾತನಾಡಿದ್ದರು ಮತ್ತು ಜುಲೈ ೩೦ರಂದು ಪ್ರಕಟಗೊಂಡಿರುವ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಕರಡಿನಲ್ಲಿ ಹೆಸರು ಬಿಟ್ಟು ಹೋಗಿರುವವರು ಸಲ್ಲಿಸಬಹುದಾದ ದಾಖಲೆಗಳ ಬಗ್ಗೆ ಮಾತನಾಡಿದ್ದರು.

2018: ನವದೆಹಲಿ: ಬಿಜೆಪಿ ವಿರುದ್ಧದ ತಮ್ಮ ವಾಗ್ದಾಳಿಯನ್ನು  ಇಲ್ಲಿ ಇನ್ನಷ್ಟು ಬಿರುಸುಗೊಳಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾಲ್ಕು ವರ್ಷಗಳ ಎನ್ ಡಿಎ ಆಳ್ವಿಕೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ’ಮ್ಯಾಜಿಕ್ ರೈಲು ಭೀಕರ ದುರಂತದಡೆಗೆ ಹೊರಟಿರುವಂತೆ ಕಾಣುತ್ತಿದೆ ಎಂದು ಹೇಳಿದರು.  ದೆಹಲಿಯ ಸಂಸತ್ ಭವನದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ’ನಾಲ್ಕು ವರ್ಷಗಳ ಮೋದಿ ಆಳ್ವಿಕೆಯ ಬಳಿಕ ಈಗ ಭಾರತವನ್ನು ನೋಡುತ್ತಿದ್ದರೆ, ಪ್ರಯಾಣಿಕರ ಗತಿ ಏನಾದೀತು ಎಂಬ ಯೋಚನೆ ಕೂಡಾ ಇಲ್ಲದೆ ಸರ್ವಾಧಿಕಾರಿ, ಅದಕ್ಷ ಮತ್ತು ಸಿಡುಕಿನ ಚಾಲಕನಿಂದ ನಡೆಸಲ್ಪಡುತ್ತಿರುವ ರೈಲು ಭಾರಿ ದುರಂತದ ಕಡೆಗೆ ಸಾಗುತ್ತಿರುವಂತೆ ಅನಿಸುತ್ತಿದೆ. ಭಾರತದ ಜನತೆ ಬದಲಾವಣೆಗಾಗಿ ಆಗ್ರಹಿಸುತ್ತಿದ್ದಾರೆ. ಅತ್ಯಂತ ಭೀಕರ ಅಪಘಾತದತ್ತ ಹೊರಟಿರುವ ನಿಮ್ಮ ಮ್ಯಾಜಿಕ್ ರೈಲನ್ನು ನೋಡುತ್ತಾ ಜನರಿನ್ನು ಮೂರ್ಖರಾಗುವುದಿಲ್ಲ ಎಂದು ನುಡಿದರು.  ಮಹಿಳಾ ಸುರಕ್ಷತೆ ವಿಚಾರವನ್ನೂ ಹಿಡಿದುಕೊಂಡು ರಾಹುಲ್ ಅವರು ಪ್ರಧಾನಿ ಮೋದಿ ಅವರನ್ನು ತಿವಿದರು. ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಬಾಲಿಕಾ ಆಶ್ರಯಧಾಮಗಳಲ್ಲಿ ನಡೆದಿದೆ ಎನ್ನಲಾದ ಬಾಲಕಿಯರ ಮೇಲಿನ ಅತ್ಯಾಚಾರ ಆರೋಪದ ಘಟನೆಗಳ ಪ್ರಧಾನಿ ಏಕೆ ಮೌನವಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.  ‘ರಾಷ್ಟ್ರದಲ್ಲಿ ಕಳೆದ ೩೦೦೦ ವರ್ಷಗಳಲ್ಲಿ ಮಹಿಳೆಯರ ವಿರುದ್ಧ ನಡೆಯದೇ ಇದ್ದ ಘಟನೆಗಳು ಕಳೆದ ನಾಲ್ಕು ವರ್ಷಗಳಲ್ಲಿ ಘಟಿಸಿವೆ ಎಂದು ಕಾಂಗ್ರೆಸ್ ನಾಯಕ ನುಡಿದರು.  ಬಿಜೆಪಿಯ ತಾತ್ವಿಕ ಮಾರ್ಗದರ್ಶಕ ಆರೆಸ್ಸೆಸ್ ನ್ನು ಟೀಕಿಸಿದ ರಾಹುಲ್ ಗಾಂಧಿ, ಆರೆಸ್ಸೆಸ್ ಪುರುಷಾಭಿಮಾನಿ ಸಂಘಟನೆ. ಕಾಂಗ್ರೆಸ್ಸಿನಲ್ಲಿ ಮಹಿಳೆಯರು ಇರುವಂತೆ ಆರೆಸ್ಸೆಸ್ ನಲ್ಲಿ ನೀವು ಮಹಿಳೆಯರನ್ನು ಕಾಣಲಾರಿರಿ ಎಂದು ಹೇಳಿದರು.  ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ತಮ್ಮ ಪಕ್ಷವು ಪೂರ್ಣ ಬೆಂಬಲ ನೀಡುವುದು ಎಂದು ನುಡಿದ ಕಾಂಗ್ರೆಸ್ ಮುಖ್ಯಸ್ಥ, ಮೋದಿ ಸರ್ಕಾರವು ಮಹಿಳಾ ಮೀಸಲಾತಿ ಮಸೂದೆಯನ್ನು ತಾರದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದೊಡನೆಯೇ ಅದನ್ನು ತರುವುದು ಎಂದು ನುಡಿದರು.  ಇತರ ಪ್ರಾದೇಶಿಕ ಪಕ್ಷಗಳೂ ನಾಯಕತ್ವ ಪಾತ್ರ ವಹಿಸಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಆಳುವ ಪಕ್ಷದ ವಿರುದ್ಧದ ಹೋರಾಟದಲ್ಲಿ ನಾಯಕತ್ವ ಪಾತ್ರವನ್ನು ವಹಿಸುವ ಯತ್ನವಾಗಿ ರಾಹುಲ್ ಗಾಂಧಿ ಅವರು ಪ್ರಧಾನಿ ವಿರುದ್ಧ ನೇರ ದಾಳಿಗೆ ಇಳಿದಿದ್ದಾರೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಯಿತು. ಆರೆಸ್ಸೆಸ್ ಮತ್ತು ಬಿಜೆಪಿ ’ಪ್ರಜಾಪ್ರಭುತ್ವ ದೇಗುಲವನ್ನು ನಾಶಪಡಿಸುವ ಸಲುವಾಗಿ ಪ್ರಜಾತಾಂತ್ರಿಕ ಸಂಸ್ಥೆಗಳ ವಿರುದ್ಧ ವ್ಯವಸ್ಥಿತ ದಾಳಿ ನಡೆಸುತ್ತಿವೆ ಎಂದೂ ರಾಹುಲ್ ಗಾಂಧಿ ಆಪಾದಿಸಿದರು. ಪ್ರತಿಯೊಂದು ಸಂಸ್ಥೆಗೂ ಅವರ ವ್ಯಕ್ತಿಗಳು ನುಸುಳುತ್ತಿದ್ದಾರೆ ಮತ್ತು ಸಂಸ್ಥೆಗಳ ಸ್ವರೂಪವನ್ನೇ ಬದಲಾಯಿಸಲಾಗುತ್ತಿದೆ ಎಂದು ಅವರು ನುಡಿದರು.  ಭ್ರಷ್ಟಾಚಾರ, ಆರ್ಥಿಕ ವೈಫಲ್ಯ, ಅದಕ್ಷತೆ ಮತ್ತು ಸಾಮಾಜಿಕ ವಿಭಜನೆ ನರೇಂದ್ರ ಮೋದಿ ಆಡಳಿತದಲ್ಲಿ ರಾರಾಜಿಸುತ್ತಿದೆ. ಇದಕ್ಕೆ ಪರ್ಯಾಯ ನೀಡಲು ಸಜ್ಜಾಗಿ ಎಂದು ಕಾಂಗ್ರೆಸ್ ಅಧ್ಯಕ್ಷ ಪಕ್ಷದ ಸಂಸತ್ ಸದಸ್ಯರಿಗೆ ಕರೆ ನೀಡಿದರು.  ಮೋದೀ ಜಿ ಅವರ ಪೊಳ್ಳು ಅಚ್ಛೇ ದಿನ್ ಭರವಸೆ ವಿರುದ್ಧ ಜನರಿಗೆ ಪರ್ಯಾಯ ನೀಡಲು ಪಕ್ಷದ ಸಂಸತ್ ಸದಸ್ಯರು ಕಠಿಣ ಶ್ರಮ ವಹಿಸಬೇಕು ಎಂದು ಅವರು ಹೇಳಿದರು.  ಮೋದಿ ಸರ್ಕಾರವನ್ನು ಕಿತ್ತು ಹಾಕಿ, ಆ ಸ್ಥಾನದಲ್ಲಿ ತಮ್ಮನ್ನು ಆಲಿಸುವ, ತಮ್ಮ ಸಮಸ್ಯೆಗಳನ್ನು ಆರ್ಥ ಮಾಡಿಕೊಳ್ಳುವ ಮತ್ತು ಬಡತನ, ನಿರುದ್ಯೋಗ ಮತ್ತು ರಾಷ್ಟ್ರದಲ್ಲಿನ ಅಸಮಾನತೆ ತೊಡೆದುಹಾಕುವ ಸರ್ಕಾರವನ್ನು ಕೂರಿಸಲು ಜನತೆ ಬಯಸಿದ್ದಾರೆ ಎಂದು ರಾಹುಲ್ ಗಾಂಧಿ ನುಡಿದರು.  ‘ನಮ್ಮೆಲ್ಲರ ಮೇಲೆ ಇಂದು ಮಹಾನ್ ಹೊಣೆಗಾರಿಕೆಯಿದೆ. ಪ್ರಜಾತಾಂತ್ರಿಕ ಶಕ್ತಿಗಳು ಮತ್ತು ಸಾಮಾಜಿಕ ನ್ಯಾಯದ ಶಕ್ತಿಗಳು ಮತ್ತು ಸರ್ವಾಧಿಕಾರ ಹಾಗೂ ಸಮಾಜದ ಶ್ರೇಣೀಕೃತ ವ್ಯವಸ್ಥೆಗಳ ನಡುವಣ ಈ ಚಾರಿತ್ರಿಕ ಸಮರದಲ್ಲಿ ಜಯ ಗಳಿಸಬೇಕಾಗಿದೆ ಎಂದು ಅವರು ಹೇಳಿದರು.  ದ್ವೇಷ, ವಿಭಜನೆ ಮತ್ತು ಸಂವಿಧಾನವನ್ನು ತುಳಿಯುತ್ತಿರುವ ಶಕ್ತಿಗಳು ಮತ್ತೆ ಅಧಿಕಾರಕ್ಕೆ ಬಾರದಂತೆ ನಾವು ಜನತೆಗೆ ಖಾತರಿ ನೀಡಬೇಕು ಎಂದು ರಾಹುಲ್ ಗಾಂಧಿ ನುಡಿದರು. ೨೦೧೪ರಲ್ಲಿ ಮೋದಿ ಅವರನ್ನು ಆಯ್ಕೆ ಮಾಡುವವರೆಗೆ ಭಾರತವು ೭೦ ವರ್ಷ ಕಾಲ ನಿಧಾನಗತಿಯ ’ಪ್ಯಾಸೆಂಜರ್ ರೈಲನ್ನು ಹೊಂದಿತ್ತು. ತಮ್ಮ ಮಾರ್ಗದರ್ಶನದ ಆಡಳಿತದಲ್ಲಿ ಈ ಪ್ಯಾಸೆಂಜರ್ ರೈಲುಗಾಡಿ ಹೊಳೆಯುವ ’ಮ್ಯಾಜಿಕ್ ರೈಲು ಆಗಿ ಪರಿವರ್ತನೆಗೊಳ್ಳಲಿದ್ದು, ಅಚ್ಛೇದಿನ್ ಬರಲಿದೆ ಎಂದು ಮೋದಿ ಹೇಳಿದ್ದನ್ನು ರಾಹುಲ್ ಉಲ್ಲೇಖಿಸಿದರು.  ‘ನನಗೆ ನಿಮ್ಮ ವೋಟು ಕೊಡಿ, ನಾನು ನಿಮ್ಮನ್ನು ಬದುಕಿನ ಅತ್ಯುತ್ತಮ ಪಯಣದತ್ತ ಒಯ್ಯುತ್ತೇನೆ.’ ಎಂದು ಮೋದಿ ಭರವಸೆ ಕೊಟ್ಟರು. ಈಗ ನಾಲ್ಕು ವರ್ಷಗಳ ಬಳಿಕ ಈ ರೈಲು ಭಾರೀ ದುರಂತದ ಕಡೆಗೆ ಸಾಗುತ್ತಿದೆ ಎಂದು ಅವರು ಹೇಳಿದರು.

2018: ಬೆಂಗಳೂರು: ಹಿರಿಯ ಕವಿ, ವಿಮರ್ಶಕ ಸುಮತೀಂದ್ರ ನಾಡಿಗ (83) ಇನ್ನಿಲ್ಲ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಾಡಿಗ ಅವರು ಈದಿನ  ಬೆಳಗ್ಗೆ 6.29 ವೇಳೆಗೆ ಹೃದಯಾಘಾತದಿಂದ ಬನ್ನೇರುಘಟ್ಟ ರಸ್ತೆಯ ಪೋರ್ಟಿಸ್ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪತ್ನಿ ಮಾಲತಿ, ಪುತ್ರಿಯರಾದ ಸ್ವಪ್ನ ಮತ್ತು ರಶ್ಮಿ ಹಾಗೂ ಪುತ್ರ ಅಪೂರ್ವ ಸೇರಿ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದರು.  ಜು.31ರಿಂದ ಅವರು  ಕಿಡ್ನಿ, ಉಸಿರಾಟದ ತೊಂದರೆಯಿಂದಾಗಿ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುದ್ದಿ ತಿಳಿದ ಸಾರಸ್ವತ ಲೋಕದ ಹಿರಿಯರು ನಾಡಿಗ ಅವರ ಜೆ.ಪಿ. ನಗರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರುಸಾಹಿತಿ ಚಂದ್ರಶೇಖರ ಪಾಟೀಲ, ಚುಟುಕು ಕವಿ ಡುಂಡಿರಾಜ್‌, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್‌, ವೈ.ಕೆ ಮುದ್ದುಕೃಷ್ಣ ಸೇರಿ ಹಲವರು ಅಂತಿಮ ನಮನ ಸಲ್ಲಿಸಿದರು. ಸಂಜೆ 5 ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಬ್ರಾಹ್ಮಣ ವಿಧಿವಿಧಾನ ಪ್ರಕಾರ ಅಂತ್ಯಕ್ರಿಯೆ ನಡೆಯಿತು.ಕಾವ್ಯದ ಬಗ್ಗೆ ವಿಶೇಷ ಅಧ್ಯಯನ: ಚಿಕ್ಕಮಗಳೂರು ಜಿಲ್ಲೆ ಕಳಸದಲ್ಲಿ 1935 ಮೇ 4ರಂದು ಜನಿಸಿದ ಸುಮತೀಂದ್ರ ನಾಡಿಗರು, ಮೈಸೂರು ವಿವಿ ಮತ್ತು ಅಮೆರಿಕದ ಫಿಲಡೆಲ್ಫಿಯಾ ವಿವಿಗಳಿಂದ ಇಂಗ್ಲಿಷ್ಎಂ.. ಪದವಿ ಪಡೆದಿದ್ದರು. ಇಂಗ್ಲಿಷ್‌, ಕನ್ನಡ ಸಾಹಿತ್ಯದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಅವರು, 1985ರಲ್ಲಿ ಬೆಂಗಳೂರು ವಿವಿಯಿಂದ ಕನ್ನಡದಲ್ಲಿ ಡಾಕ್ಟರೇಟ್ಗಳಿಸಿದ್ದರು. "ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು' ಎಂಬ ವಿಷಯದ ಮೇಲೆ ಪ್ರೌಢ ಪ್ರಬಂಧ ಮಂಡಿಸಿದ್ದ ಅವರು, ಗೋಪಾಲಕೃಷ್ಣ ಅಡಿಗ ಮತ್ತು ಕೆ.ಎಸ್‌. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ಮಾಡಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು. 1996-1999 ಅವಧಿಯಲ್ಲಿ ನ್ಯಾಷನಲ್ಬುಕ್ಟ್ರಸ್ಟ್ಅಧ್ಯಕ್ಷರಾಗಿದ್ದ ಇವರಿಗೆ ಹರಿದ್ವಾರದ ಗುರುಕುಲ ಕಾಂಗ್ದಿ ವಿವಿ ಗೌರವ ಡಾಕ್ಟರೇಟ್ನೀಡಿ ಗೌರವಿಸಿತ್ತು. ಸಾಹಿತ್ಯ ಕೊಡುಗೆ: ಅಧ್ಯಾಪನ ವೃತ್ತಿಯಲ್ಲಿದ್ದುಕೊಂಡು ಸಾಹಿತ್ಯ ಕ್ಷೇತ್ರಕ್ಕೆ ನಿರಂತರ ಕೊಡುಗೆ ನೀಡಿರುವ ಅವರು, ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿದ್ದರು. ನಾಡಿಗರು ಬರೆದಿರುವ "ದಾಂಪತ್ಯ ಗೀತ' ಮತ್ತು "ಪಂಚಭೂತಗಳು' ಕವನ ಸಂಕಲನಗಳು ಪ್ರಸಿದ್ಧಿ ಪಡೆದಿದ್ದು ಇಂಗ್ಲಿಷ್‌, ಸಂಸ್ಕೃತ, ಬಂಗಾಳಿ, ಮಲಯಾಳ ಸೇರಿ ಹಲವು ಭಾಷೆಗಳಿಗೆ ಅನುವಾದಗೊಂಡಿದ್ದವು.  "ಮೌನದಾಚೆಯ ಮಾತು', "ನಾಲ್ಕನೆಯ ಸಾಹಿತ್ಯ ಚರಿತ್ರೆ', "ಮತ್ತೂಂದು ಸಾಹಿತ್ಯ ಚರಿತ್ರೆ,"ಅಡಿಗರು ಮತ್ತು ನವ್ಯಕಾವ್ಯ' ಮತ್ತಿತರ ವಿಮರ್ಶ ಕೃತಿಗಳನ್ನು ರಚಿಸಿದ್ದರು. ಮಕ್ಕಳ ಸಾಹಿತ್ಯಕ್ಕೂ ಕೊಡುಗೆ ನೀಡಿರುವ ನಾಡಿಗರು,"ಡಕ್ಕಣಕ್ಕ ಡಕ್ಕಣ', "ಧ್ರುವ ಮತ್ತು ಪ್ರಹ್ಲಾದ', "ದಿಡಿಲಕ್ದಿಡಿಲಕ್‌', "ಗೂಬೆಯ ಕಥೆ', "ಇಲಿ ಮದುವೆ', "ಗಾಳಿಪಟ', ಮತ್ತು "ಹನ್ನೊಂದು ಹಂಸಗಳು' ಎಂಬ ಮಕ್ಕಳ ನಾಟಕಗಳನ್ನು ರಚಿಸಿದ್ದರು. ಸಾಹಿತ್ಯದ ಅಭಿರುಚಿ ಬೆಳೆಸಿದ ನಾಡಿಗರು ಅಲ್ಲಿ ಅನಾಥ ಭಾವನೆ ಕಾಡುತ್ತಿತ್ತು. ನೆರೆಯ ಸ್ನೇಹಿತನನ್ನು ಕಳೆದುಕೊಂಡ ಮನಸು ಮರುಗುತ್ತಿತ್ತು. ಮಾಲೀಕನಿಲ್ಲದೆ ಟೆರೇಸ್ತೋಟ ಬಣಗುಡುತ್ತಿತ್ತು. ದೊರೆಯಿಲ್ಲದ ಆಸನದ ಮುಂದೆ ಲೇಖನಿಗಳು, ಪುಸ್ತಕಗಳು ಬಿಡಿ, ಬಿಡಿಯಾಗಿ ಬಿದ್ದಿದ್ದವು. ಸನ್ನಿವೇಶ ಕಂಡು ಬಂದಿದ್ದು, ಸಾಹಿತಿ ಸುಮತೀಂದ್ರ ನಾಡಿಗ ಅವರು ನೆಲೆಸಿದ್ದ ಜೆಪಿ ನಗರದ 6ನೇ ಹಂತದ ಮಾಯಾ ಇಂದ್ರಪ್ರಸ್ಥಾ ಅಪಾರ್ಟ್ಮೆಂಟ್ 1ನೇ ಮಹಡಿಯ, ಎಸ್‌-12 ನಿವಾಸದಲ್ಲಿನವ್ಯಕಾವ್ಯಘಟ್ಟದ ಸಾಹಿತಿ ಸುಮತೀಂದ್ರ ನಾಡಿಗರು ತಾವು ಉಳಿದುಕೊಂಡ ಅಪಾರ್ಟ್ಮೆಂಟ್ನಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿದ್ದರು. 106 ಕುಟುಂಬಗಳು ವಾಸವಾಗಿರುವ ಅಪಾರ್ಟ್‌ ಮೆಂಟ್ನಲ್ಲಿ ನಾಡಿಗರು ತಿಂಗಳಿಗೆ ಒಂದು ಸಾಹಿತ್ಯದ ಕುರಿತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ದಕ್ಷಿಣ ಭಾರತ ಮತ್ತು ಉತ್ತರ ಭಾರತದವರು ಇಲ್ಲಿ ನೆಲೆಸಿದ್ದುಅವರೆಲ್ಲರಿಗೂ ಸಾಹಿತ್ಯದ ಹುಚ್ಚು ಹಿಡಿಸಿದ್ದರುತಮ್ಮ ನೆರೆಯವರಿಗೂ ತಾವು ಬರೆದ ಪುಸ್ತಕ ಗಳನ್ನು ಓದಲು ಕೊಡುತ್ತಿದ್ದರು. ಎಲ್ಲಾ ಸಾಹಿತಿಗಳ ರೀತಿಯಲ್ಲಿ ಇರಲಿಲ್ಲ. ಎಲ್ಲರನ್ನೂ ನಗಿಸುತ್ತಿದ್ದರು. ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡುತ್ತಿದ್ದರು. ಅವರು ಕನ್ನಡ ಸಾಹಿತ್ಯ ಲೋಕದ ಸಾಧಕರು ಎಂಬುವುದು ತಿಳಿದಿದ್ದೇ ಇತ್ತೀಚೆಗೆಷ್ಟೇ ಟಿವಿಯೊಂದರ ಸಿಬ್ಬಂದಿ ಇಲ್ಲಿಗೆ ಸಂದರ್ಶನಕ್ಕೆಂದು ಬಂದಾಗ ಎಂದು, ಅಪಾರ್ಟ್ಮೆಂಟ್ ಅಧ್ಯಕ್ಷ ಕೇಸರಿ ಪ್ರಸಾದ್ಹೇಳಿದರು. ನಾಡಿಗರು "ಶ್ರೀವತ್ಸ ಸ್ಮತಿ' ಎಂಬ ಕೃತಿಯನ್ನು ಬರೆದಿದ್ದರು. ಕೆಲವೇ ದಿನಗಳಲ್ಲಿ ಅದು ಬಿಡುಗಡೆಯಾಗಬೇಕಾಗಿತ್ತು. ಆದರೆ ಅದು ಬಿಡುಗಡೆಯಾಗುವ ಮುನ್ನವೇ ಹೀಗಾಯಿತು. ಅಪ್ಪ ಆಸ್ಪತ್ರೆಯಲ್ಲಿದ್ದಾಗ ಮನೆಗೆ ಹೋಗೋಣ. ಎಲ್ಲರೂ ಸೇರಿ ಕಾರ್ಡ್ಸ್ ಆಡೋಣ ಎಂದು ಹಂಬಲಿಸುತ್ತಿದ್ದರು ಎಂದು ಪುತ್ರಿ ಸ್ವಪ್ನ ಕಣ್ಣೀರಿಟ್ಟರು.


2017: ಮುಂಬೈ: ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ದಹಿ-ಹಂಡಿಯಲ್ಲಿ (ಮೊಸರು ಗಡಿಗೆ ಒಡೆಯುವ “ಮೊಸರು ಕುಡಿಕೆ” ಆಚರಣೆ) 14 ವರ್ಷದೊಳಗಿನ ಮಕ್ಕಳು ಭಾಗವಹಿಸುವಂತಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿತು. ಮುಂಬೈ, ಥಾಣೆ, ರಾಯಗಢ, ಪಾಲ್ಘಾರ್‌, ಪುಣೆ ಸೇರಿದಂತೆ ಮಹಾರಾಷ್ಟ್ರದ ಹಲವಡೆ ಮೊಸರು ಕುಡಿಕೆ  ಆಚರಣೆ ಸಂಭ್ರಮದಿಂದ ನಡೆಯುತ್ತದೆ. ಈ ಆಚರಣೆಗೆಂದೇ ಮಹಾರಾಷ್ಟ್ರದಲ್ಲಿ ಸಾವಿರಾರು ಯುವಕ ಸಂಘಗಳಿವೆ. ದಹಿ-ಹಂಡಿ ಆಚರಣೆಯಲ್ಲಿ ಭಾವಹಿಸುವವರ ವಯಸ್ಸಿನ ಬಗ್ಗೆ ಮಾತ್ರ ನಿರ್ಬಂಧ ವಿಧಿಸಿರುವ ಹೈಕೋರ್ಟ್‌ ಮಾನವ ಪಿರಮಿಡ್‌ನ ಎತ್ತರದ ಬಗ್ಗೆ ಯಾವುದೇ ನಿರ್ದೇಶನ ನೀಡಲಿಲ್ಲ. ದಹಿ-ಹಂಡಿ ಆಚರಣೆಯ ಮಾನವ ಪಿರಮಿಡ್‌ನ ಎತ್ತರ 20 ಅಡಿಗಿಂತ ಹೆಚ್ಚು ಇರಬಾರದು ಮತ್ತು 18 ವರ್ಷದೊಳಗಿನವರು ಈ ಆಚರಣೆಯಲ್ಲಿ ಭಾಗವಹಿಸಬಾರದು ಎಂದು ಈ ಹಿಂದೆ ಬಾಂಬೆ ಹೈಕೋರ್ಟ್‌ ಹೇಳಿತ್ತು. ಮಕ್ಕಳು ಹೆಚ್ಚು ಎತ್ತರದ ಮಾನವ ಪಿರಮಿಡ್‌ಗಳಿಂದ ಬಿದ್ದು ಪ್ರಾಣ ಕಳೆದುಕೊಳ್ಳುವುದನ್ನು ತಪ್ಪಿಸಲು ಈ ಆಚರಣೆಯ ಮೇಲೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಈ ನಿರ್ಬಂಧಗಳ ತೆರವಿಗಾಗಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್‌ ಮೆಟ್ಟಿಲನ್ನೂ ಏರಿತ್ತು.
2017: ಶ್ರೀನಗರ: ಲಷ್ಕರ್–ಎ–ತೊಯಿಬಾ (ಎಲ್ ಇ ಟಿ)  ಸಂಘಟನೆಗೆ ಸೇರಿದ ಉಗ್ರನನ್ನು ಜಮ್ಮು–ಕಾಶ್ಮೀರದ
ಪುಲ್ವಾಮ ಜಿಲ್ಲೆಯಲ್ಲಿ  ಭದ್ರತಾ ಪಡೆ ಕೊಂದು ಹಾಕಿತು. ಅಬು ಇಸ್ಮಾಯಿಲ್ ಗುಂಪಿಗೆ ಸೇರಿದ ಲಷ್ಕರ್–ಎ–ತೊಯಿಬಾ ಸಂಘಟನೆಯ ಉಮರ್‌ ಹತ್ಯೆಯಾದ ಉಗ್ರ ಎಂದು ಹೇಳಲಾಯಿತು. ಉಗ್ರರು ಪುಲ್ವಾಮ ಜಿಲ್ಲೆಯ ಸಂಬೋರಾದಲ್ಲಿ ಅಡಗಿರುವ ಮಾಹಿತಿ ಮೇರೆಗೆ ಭದ್ರತಾ ಪಡೆ ಹಿಂದಿನ ದಿನ ಸಂಜೆ ಅಲ್ಲಿಗೆ ಮುತ್ತಿಗೆ ಹಾಕಿತ್ತು.  ಭದ್ರತಾ ಪಡೆ ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ  ಒಬ್ಬ ಉಗ್ರನನ್ನು ಹತ್ಯೆಗೈಯ್ಯಲಾಗಿದೆ ಎಂದು ಪೊಲೀಸರು ಹೇಳಿದರು. ಹತ್ಯೆಯಾದ ಉಗ್ರ ಉಮರ್, ಅಬು ಇಸ್ಮಾಯಿಲ್ ಗುಂಪು ನಡೆಸಿದ ಹಲವು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದನು. ಎನ್‌ಕೌಂಟರ್ ನಡೆದ ಸ್ಥಳದಲ್ಲಿದ್ದ ಎಕೆ47 ರೈಫಲ್‌ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದರು. ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಕತ್ತಲು ಆವರಿಸಿದ್ದ ಪರಿಣಾಮ ಇಬ್ಬರು ಉಗ್ರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದವು.
2017: ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌
ಮೋದಿ ಅವರು ‘ರಕ್ಷಾ ಬಂಧನ’ ಪ್ರಯುಕ್ತ ಮರಗಳಿಗೆ ರಾಖಿ ಕಟ್ಟುವ ಮೂಲಕ ರಾಜ್ಯದ ಜನರಿಗೆ ಅರಣ್ಯ ರಕ್ಷಣೆಯ ಕರೆ ನೀಡಿದರು. 2001ರಿಂದಲೂ ಅರಣ್ಯ ರಕ್ಷಣೆ ಸಂದೇಶ ಸಾರಲು ಮರಗಳಿಗೆ ರಾಖಿ ಕಟ್ಟುತ್ತಿರುವುದಾಗಿ ಹೇಳಿದ ನಿತೀಶ್‌ ಕುಮಾರ್‌ ಅವರು, ‘ಇದು ಹಸಿರು ರಕ್ಷಣೆಯ ಸಂಕೇತ. ಪರಿಸರ ಸಂರಕ್ಷಣೆಗೆ ಈ ನಡೆ ಸಹಕಾರಿಯಾಗಲಿದ್ದು, ಇತ್ತೀಚಿನ ಕೆಲವು ವರ್ಷಗಳಲ್ಲಿ ರಾಜ್ಯದ ಅರಣ್ಯ ಪ್ರದೇಶದ ವಿಸ್ತೀರ್ಣ ಹೆಚ್ಚಾಗಿದೆ’ ಎಂದು ತಿಳಿಸಿದರು. ಜತೆಗೆ ಜನರು ಭೂಮಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಹಸಿರನ್ನು ಹೆಚ್ಚಿಸಲು ಕೈಜೋಡಿಸಬೇಕು ಎಂದು ಅವರು ಕೋರಿದರು. ಸುಶೀಲ್‌ ಕುಮಾರ್‌ ಮೋದಿ ಅವರು, ‘ನಾವು ಪ್ರತಿಯೊಬ್ಬರೂ ಕನಿಷ್ಟ ಒಂದಾದರೂ ಮರವನ್ನು ಬೆಳಸುವ ಮತ್ತು ರಕ್ಷಿಸುವ ಕಾರ್ಯ ಮಾಡಬೇಕಿದೆ’ ಎಂದರು. ಕಾರ್ಯಕ್ರಮದಲ್ಲಿ ಆಡಳಿತಾರೂಢ ಜನತಾ ದಳ ಹಾಗೂ ಬಿಜೆಪಿ ಸರ್ಕಾರದ ಹಲವು ಸಚಿವರು, ಶಾಸಕರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು.

2016: ರಿಯೋ
ಡಿ ಜನೈರೋ: ಪಂದ್ಯದ ದ್ವಿತೀಯಾರ್ಧದಲ್ಲಿ ಉತ್ತಮ ನಿರ್ವಹಣೆ ತೋರಿದ ಮಹಿಳಾ ಹಾಕಿ ತಂಡ
ಪ್ರಬಲ ಜಪಾನ್ ವಿರುದ್ಧ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಟೂರ್ನಿಯಲ್ಲಿ ಉತ್ತಮ ಆರಂಭ ಪಡೆಯಿತು.  ಪಂದ್ಯದ ಮೇಲೆ ಮೊದಲಿನಿಂದಲೂ ಹಿಡಿತ ಸಾಧಿಸಿದ ಜಪಾನ್ 14ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆಯಿತು. ಜಪಾನ್ ಪರ ನಿಷಿಕೊರಿ ಎಮಿ ಮೊದಲ ಗೋಲು ಗಳಿಸಿದರು. ನಂತರ ನಕಷಿಮ ಮಿ 27ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ 2-0 ಅಂತರದ ಮುನ್ನಡೆ ದೊರೆಕಿಸಿಕೊಟ್ಟರು. 2-0 ಅಂತರದ ಹಿನ್ನಡೆಯೊಂದಿಗೆ ದ್ವಿತೀಯಾರ್ಧದ ಆಟ ಆರಂಭಿಸಿದ ಭಾರತ ಉತ್ತಮ ಆಟ ಪ್ರದರ್ಶಿಸಿತು. ಆಟ ಪ್ರಾರಂಭವಾದ ಕೆಲವೇ ಕ್ಷಣಗಳಲ್ಲಿ ಭಾರತದ ರಾಣಿ ಗೋಲು ಗಳಿಸಿ ಹಿನ್ನಡೆಯನ್ನು ತಗ್ಗಿಸಿದರು. ನಂತರ ಮಿಂಜ್ ಲಿಲಿಮಾ 39ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡ ಸಮಬಲ ಸಾಧಿಸಲು ನೆರವಾದರು. ಅಂತಿಮವಾಗಿ ನಿಗದಿತ ಸಮಯದ ಅಂತ್ಯಕ್ಕೆ ಭಾರತ ಮತ್ತು ಜಪಾನ್ ತಲಾ 2 ಗೋಲು ಗಳಿಸಿದ್ದರಿಂದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು. ಜಯದೊಂದಿಗೆ ಭಾರತ ತಂಡ 1 ಅಂಕ ಪಡೆಯಿತು.

2016: ರಿಯೋ ಡಿ ಜನೈರೋ: ಬೊಂಬಾಯ್ಲ ದೇವಿ ಹಾಗೂ ಲಕ್ಷ್ಮಿರಾಣಿ ಅವರ ಉತ್ತಮ ಹೋರಾಟದಿಂದಾಗಿ ಭಾರತ ಅರ್ಚರಿ ತಂಡ ಕೊಲಂಬಿಯಾ ವಿರುದ್ಧ 5-3 ಅಂತರದಲ್ಲಿ ಗೆಲುವು ದಾಖಲಿಸಿತು. ಇದರೊಂದಿಗೆ ತಂಡವು ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಭಾನುವಾರ ತಡ ರಾತ್ರಿ (ಭಾರತೀಯ ಕಾಲಮಾನ) ಕ್ವಾರ್ಟರ್ ಫೈನಲ್ನಲ್ಲಿ ರಷ್ಯಾ ತಂಡವನ್ನು ಭಾರತೀಯರು ಎದುರಿಸುವರು. ಬೊಂಬಾಯ್ಲ ದೇವಿ ಆರಂಭದಿಂದಲೇ ಉತ್ತಮ ಪ್ರಧರ್ಶನ ನೀಡಿ ಕೊಲಂಬಿಯಾಕ್ಕೆ ಆಘಾತ ನೀಡಿದರು. ಸ್ಟಾರ್ ಆಟಗಾರ್ತಿ ದೀಪಿಕಾ ಕುಮಾರಿ ಆರಂಭಿಕ ಹಿನ್ನಡೆ ಅನುಭವಿಸಿದರು ಇದರಿಂದಾಗಿ ಕೊಲಂಬಿಯಾ ಪುಟಿದೆದ್ದಿತು. ಆದರೂ ಭಾರತೀಯರು ಒಂದು ಅಂಕದಿಂದ ಅಂದರೇ 52-51 ಅಂತರದಲ್ಲಿ ಪ್ರಥಮ ಸೆಟ್ ಜಯಿಸಿದರು. ಆದರೆ ಎರಡನೆ ಸೆಟ್ನಲ್ಲಿ ಕೊಲಂಬಿಯಾ 50-49 ಅಂತರದಲ್ಲಿ ಜಯ ಸಾಧಿಸಿ ಸಮಭಲ ಸಾಧಿಸಿತು. ಮೂರನೆ ಸೆಟ್ ಡ್ರಾ ಮಾಡಿಕೊಳ್ಳುವ ಮೂಲಕ ಪಂದ್ಯ ರೋಚಕತೆಗೆ ತಿರುಗಿತು. ಆದರೆ ಭಾರತೀಯರು ಅಂತಿಮ ಎರಡು ಸೆಟ್ ಜಯಿಸುವ ಮೂಲಕ ಸುಲಭವಾಗಿ ಕ್ವಾರ್ಟರ್್  ಫೈನಲ್ ಪ್ರವೇಶಿಸಿದರು.

2016: ರಿಯೋ ಡಿ ಜನೈರೋ: ಫ್ರಾನ್ಸ್ ಜಿಮ್ನಾಸ್ಟ್ ಸಮೀರ್ ಅಯತ್ ಸೈಯದ್ ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ ವೇಳೆ ಗಂಭೀರ ಗಾಯದಿಂದ ಕಾಲು ಮುರಿದುಕೊಂಡ ದುರ್ಘಟನೆ ನಡೆಯಿತು. ಹಿಂದಿನ ದಿನ (ಆ.6)  ನಡೆದ ಪುರುಷರ ಅರ್ಹತಾ ಸುತ್ತಿನ ವಾಲ್ಟ್ ವಿಭಾಗದ ಸ್ಪರ್ಧೆಯಲ್ಲಿ 26 ವರ್ಷದ ಸಮೀರ್ ಜಂಪ್ ಮಾಡಿ ಕಾಲು ನೆಲಕ್ಕೂರಿಸಿದ ವೇಳೆ ಸ್ಥಳದಲ್ಲೇ ಎಡ ಮೊಣಕಾಲಿನ ಮುರಿತಕ್ಕೊಳಗಾದರು. ಸೈಯದ್ ಎತ್ತರವಾಗಿ ಹಾರಿ 2 ಹಿಮ್ಮುಖ ಚಲನೆಯ ನಂತರ ಎರಡೂ ಕಾಲನ್ನೂ ನೆಲಕ್ಕೆ ರಭಸವಾಗಿ ಇಡುತ್ತಿದ್ದಂತೆ ಕುಸಿದುಬಿದ್ದರು. ಕ್ಷಣ ಕಾಲ ತನಗೇನಾಯಿತು ಎಂದು ಸೈಯದ್ ನೋಡುತ್ತಿದ್ದಂತೆ ಎಡ ಮೊಣಕಾಲಿನ ಕೆಳಗಿನ ಭಾಗ ಮುರಿದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ವೈದ್ಯಕೀಯ ಸಿಬ್ಬಂದಿ ಸ್ಟ್ರೇಚರ್ ಮೂಲಕ ಅವರನ್ನು ಚಿಕಿತ್ಸೆಗೆ ಸಾಗಿಸಿದರು. ಇದರಿಂದ ಸೈಯದ್ ಚೊಚ್ಚಲ ಒಲಿಂಪಿಕ್ಸ್ ಪದಕ ಗೆಲ್ಲುವ ಕನಸೂ ಭಗ್ನವಾಯಿತು. ಸೈಯದ್ ಕಾಲಿನ ಗಾಯ ಎಷ್ಟು ಗಂಭೀರವಾಗಿತ್ತೆಂದರೆ ನೇರಪ್ರಸಾರದಲ್ಲೂ ಎಲುಬು ಮುರಿತದ ಶಬ್ದ ಕೇಳಿತ್ತು. ಗಾಯ ಬಹಳ ಗಂಭೀರ ಎಂದು ತಿಳಿಯುತ್ತಿದ್ದಂತೆ ಟಿವಿ ಪ್ರಸಾರ ಕಡಿತಗೊಳಿಸಲಾಯಿತು. ಇದರಿಂದ ಮಾದರಿಯ ಅಪಾಯಕಾರಿ ಅಂಕ ಮಾದರಿಯ ಶೈಲಿಯನ್ನು ಜಿಮ್ನಾಸ್ಟಿಕ್ಸ್ನಲ್ಲಿ ಉಳಿಸಬೇಕೇ ಎಂಬ ಅಸಮಾಧಾನ ಹಲವು ಜಿಮ್ನಾಸ್ಟ್ಗಳಿಂದ ವ್ಯಕ್ತವಾಗಿದೆ. ವಾಲ್ಟ್ ವಿಭಾಗದಲ್ಲಿ ಜಿಮ್ನಾಸ್ಟ್ಗಳು ಗರಿಷ್ಠ ಅಂಕ ಪಡೆಯಲು ತಮ್ಮದೇ ಆದ ಅಪಾಯಕಾರಿ ಶೈಲಿಯಲ್ಲಿ ಜಂಪ್ ಮಾಡುತ್ತಾರೆ.

2016: ತೆಲಂಗಾಣ: ತೆಲಂಗಾಣಕ್ಕೆ ನೀಡಿದ ತಮ್ಮ ಚೊಚ್ಚಲ ಭೇಟಿಯ ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುನಕಲಿ ಗೋ ರಕ್ಷಕರವಿರುದ್ಧ ಮತ್ತೆ ತೀವ್ರ ವಾಗ್ದಾಳಿ ನಡೆಸಿದರು.  ‘ನಕಲಿ ಗೋ ರಕ್ಷಕರು ರಾಷ್ಟ್ರವನ್ನು ವಿಭಜಿಸುತ್ತಿದ್ದಾರೆ. ಅವರನ್ನು ಪ್ರತ್ಯೇಕಿಸಿ ಶಿಕ್ಷಿಸಬೇಕುಎಂದು ಮೋದಿ ಹೇಳಿದರು. ನಕಲಿ ಗೋ ರಕ್ಷಕರ ಬಗ್ಗೆ ಬಗ್ಗೆ ಎಚ್ಚರದಿಂದಿರಿ. ಅವರಿಗೆ ಗೋವಿನ ಬಗ್ಗೆ ಕಾಳಜಿಯೇನಿಲ್ಲ. ಸರ್ಕಾರಗಳು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕುಎಂದು ಮೇಡಕ್ ಗಜ್ವೆಲ್ನಲ್ಲಿ ನೀರಿನ ಕೊಳವೆ ಅಳವಡಿಸುವ ಸಮಾರಂಭದಲ್ಲಿ ಮಾತನಾಡುತ್ತಾ ಮೋದಿ ನುಡಿದರು. ಗೋ ರಕ್ಷಕರ ವರ್ತನೆಗಳು ತಮ್ಮನ್ನು ಸಿಟ್ಟಿಗೆಬ್ಬಿಸುತ್ತದೆ ಎಂದು ಎರಡನೇ ಬಾರಿ ಮೋದಿ ಹೇಳಿದರು. ಬಹುತೇಕ ಗೋ ರಕ್ಷಕರನ್ನು ಸಮಾಜವಿರೋಧಿಗಳು ಎಂದು ಹೇಳಿದ ಅವರುಗೋ ಭಕ್ತಿ ಬೇರೆ. ಗೋ ಸೇವೆ ಬೇರೆ. ಬೇರೆ ಬೇರೆ ಅಪರಾಧ ಕೃತ್ಯಗಳಲ್ಲಿ ತಲ್ಲೀನರಾಗಿರುವವರು ಗೋ ರಕ್ಷಕರ ವೇಷ ಧರಿಸುತ್ತಿರುವುದನ್ನು ನಾನು ಕಂಡಿದ್ದೇನೆಎಂದು ನುಡಿದರು. ತೆಲಂಗಾಣದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರಧಾನಿ ಚಾಲನೆ ನೀಡಿದರು.

2016: ನವದೆಹಲಿ: 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನಿಷ್ಠಾನಗೊಳಿಸಿರುವ ಕೇಂದ್ರ ಸರ್ಕಾರ ನಿವೃತ್ತ ನೌಕರರಿಗೆ ಬಂಪರ್ ಕೊಡುಗೆ ನೀಡಿತು.  ಕನಿಷ್ಠ ಪಿಂಚಣಿಯನ್ನು ಶೇ. 157 ರಷ್ಟು ಹೆಚ್ಚಿಸಿದ್ದು, ಇದರನ್ವಯ ಪಿಂಚಣಿದಾರರು 3,500 ರೂ. ಬದಲು 9,000 ರೂ. ಕನಿಷ್ಠ ಪಿಂಚಣಿ ಪಡೆಯಲಿದ್ದಾರೆ. ಸಂಬಂಧ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿತು. ಹೊಸ ಆದೇಶದನ್ವಯ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ 9000 ರೂ. ಇರಲಿದ್ದು, ಗರಿಷ್ಠ 1 ಲಕ್ಷದ 25 ಸಾವಿರ ರೂ. ಇರಲಿದೆ. ಇದರ ಲಾಭವನ್ನು 58 ಲಕ್ಷ ಕೇಂದ್ರ ಸರ್ಕಾರಿ ನಿವೃತ್ತ ನೌಕರರು ಪಡೆಯಲಿದ್ದಾರೆ. 2016 ಜನವರಿ 1 ರಿಂದ ಹೊಸ ನಿಯಮಾವಳಿಗಳು ಜಾರಿಗೆ ಬರಲಿದೆ ಎಂದು ಸಚಿವಾಲಯ ತಿಳಿಸಿತು. ಸಚಿವಾಲಯವು ಗ್ರಾಚುಟಿಯ ಗರಿಷ್ಠ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ಮಾಡಿದೆ. ಜತೆಗೆ ಡಿಎ ಶೇ. 50ರಷ್ಟು ಹೆಚ್ಚಾದಾಗ ಗ್ರಾಚುಟಿಯ ಮಿತಿಯನ್ನು ಶೇ. 25 ರಷ್ಟು ಹೆಚ್ಚಿಸಲಾಗುವುದು. ಜತೆಗೆ ಕೆಲಸದ ಮೇಲೆ ತೆರಳಿದ್ದಾಗ ಅಪಘಾತದಲ್ಲಿ, ಸಮಾಜ ಘಾತುಕ ಶಕ್ತಿಗಳ ದಾಳಿ ಮತ್ತು ಉಗ್ರರ ದಾಳಿಯಲ್ಲಿ ಮೃತರಾಗುವ ನೌಕರರ ಕುಟುಂಬಸ್ಥರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು 10 ಲಕ್ಷದಿಂದ 25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದು ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು ಭದ್ರತಾ ಪಡೆಗಳ ಯೋಧರಿಗೆ ಅನ್ವಯವಾಗಲಿದೆ ಎಂದು ಸಚಿವಾಲಯ ತಿಳಿಸಿತು.

2016: ನವದೆಹಲಿ: ಗೆಳತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಆರೋಪದ ಅಡಿಯಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಂಡನ್ ಪ್ಯಾರಾ ಒಲಿಂಪಿಯನ್ ದಕ್ಷಿಣ ಆಫ್ರಿಕಾದ ಆಸ್ಕರ್ ಪಿಸ್ಟೋರಿಯಸ್ ಅವರ ಮಣಿಕಟ್ಟಿಗೆ ಗಂಭೀರ ಗಾಯವಾಗಿದ್ದು, ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಮಿಂಚಿನ ಓಟದ ಮೂಲಕ 2012ರಲ್ಲಿ ಲಂಡನ್ನಲ್ಲಿ ನಡೆದ ಒಲಿಂಪಿಕ್ನಲ್ಲಿ ಬಂಗಾರದ ಬೇಟೆಯಾಡಿದ್ದ ಪಿಸ್ಟೋರಿಯಸ್ 2013 ಫೆಬ್ರವರಿಯಲ್ಲಿ ತನ್ನ ಸ್ನೇಹಿತೆ ರೀವಾ ಸ್ಟೀಕಂಪ್ರನ್ನು ಕೊಲೆ ಮಾಡಿದ ಆರೋದಲ್ಲಿ ಬಂಧಿತರಾದರು. ಇದರಿಂದ ನೊಂದ ಪಿಸ್ಟೋರಿಯಸ್ 2014ರಲ್ಲಿ ಆತ್ಮಹತ್ಯೆಗೆ ಕೂಡ ಪ್ರಯತ್ನಿಸಿದ್ದರು. ಜುಲೈ 2016ರಂದು ಪ್ರಕರಣದ ಅಂತಿಮ ವಿಚಾರಣೆ ನಡೆಸಿದ ಕೋರ್ಟ್ ಪಿಸ್ಟೋರಿಯಸ್ ಆರೋಪಿ ಎಂದು ತೀರ್ಪು ನೀಡಿತು. ಇದರಿಂದಾಗಿ ಮಾಜಿ ಒಲಿಂಪಿಯನ್ಗೆ ಆರು ವರ್ಷಗಳ ಕಾರಾಗೃಹ ಶಿಕ್ಷೆ ನೀಡಲಾಯಿತು. ಕೋರ್ಟ್ ತೀರ್ಪಿನಿಂದ ಪಿಸ್ಟೋರಿಯಸ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಜೈಲಿನ ಕೊಠಡಿಯಲ್ಲಿ ಸ್ವತಃ ತಾವೆ ಮಣಿಕಟ್ಟುಗಳನ್ನು ಕೊಯ್ದುಕೊಂಡಿದ್ದಾಗಿ ಪಿಸ್ಟೋರಿಯಸ್ ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿಕೊಂಡಿದ್ದಾರೆ ಎಂದು ವರದಿ ತಿಳಿಸಿತು. ಆತನ ಕೊಠಡಿ ಪರಿವೀಕ್ಷಣೆ ಸಂದರ್ಭದಲ್ಲಿ ಬ್ಲೇಡ್ಗಳು ಸಿಕ್ಕಿರುವುದು ಆತ ಸ್ವತಃ ಮಣಿಕಟ್ಟುಗಳನ್ನು ಕೊಯ್ದುಕೊಂಡಿದ್ದಾನೆ ಎನ್ನುವುದಕ್ಕೆ ಪುಷ್ಟಿ ನೀಡಿತು.

2016: ಗಾಂಧಿನಗರ: ಆನಂದಿಬೆನ್ ಪಟೇಲ್ ಅವರ ಸ್ವಯಂಪ್ರೇರಿತ ನಿರ್ಧಾರದಿಂದ ತೆರವಾದ ಹಿನ್ನೆಲೆಯಲ್ಲಿ ನೂತನ  ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ  ನೇಮಕಗೊಂಡಿದ್ದ ವಿಜಯ್ ರೂಪಾನಿ ಈದಿನ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ .ಪಿ. ಕೊಹ್ಲಿ ಪ್ರಮಾಣ ಬೋಧಿಸಿದರುಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ವಿತ್ತ ಸಚಿವ ಅರುಣ್ ಜೇಟ್ಲಿ ಸೇರಿ ಅನೇಕ ನಾಯಕರು ಉಪಸ್ಥಿತರಿದ್ದರು. 70 ವರ್ಷ ವಯಸ್ಸಾದವರು ಅಧಿಕಾರ ಬಿಟ್ಟುಕೊಡಬೇಕೆನ್ನುವ ನೀತಿಯ ಹಿನ್ನೆಲೆಯಲ್ಲಿ ಆನಂದಿಬೆನ್ ಸಿಎಂ ಸ್ಥಾನಕ್ಕೆ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಇದರಿಂದಾಗಿ ಸಿಎಂ ಸ್ಥಾನ ತೆರವಾಗಿತ್ತು. ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರುವ 60 ವರ್ಷ ಪ್ರಾಯದ ವಿಜಯ್  ರೂಪಾನಿ ಕಳೆದ ಅನೇಕ ಚುನಾವಣೆಗಳಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ಯಶಸ್ವಿಯಾದ ಅನುಭವ ಹೊಂದಿದವರು. ಇದೀಗ ಸಾಕಷ್ಟು ಸವಾಲುಗಳ ನಡುವೆಯೇ ಬಿಜೆಪಿ ವರಿಷ್ಠರ ನಿರ್ಧಾರದಂತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

2016: ನವದೆಹಲಿ: ಚೀನಾ ಜನನಿಬಿಡ ರಸ್ತೆಗಳಲ್ಲಿ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ನಿರ್ಮಿಸಿರುವ ಪ್ರಾಯೋಗಿಕ ಎಲೆವೇಟೆಡ್ ಬಸ್ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿದ್ದು, ಭಾರತದಲ್ಲೂ ಇಂತಹ ಬಸ್ ಓಡಿಸಲು ಸಾಧ್ಯವೇ ಎಂದು ಪರಿಶೀಲಿಸಲು ರಸ್ತೆ ಸಾರಿಗೆ ಸಚಿವಾಲಯಕ್ಕೆ ಸೂಚಿಸಿದರು. ಚೀನಾ ಇತ್ತೀಚೆಗೆ ಎಲೆವೇಟೆಡ್ ಬಸ್ ಮಾದರಿಯನ್ನು ತಯಾರಿಸಿ ಪರೀಕ್ಷಾರ್ಥ ಸಂಚಾರ ನಡೆಸಿತ್ತು. ವಾರ ನರೇಂದ್ರ ಮೋದಿ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದರು. ಜತೆಗೆ ಭಾರತದ ಜನನಿಬಿಡ ರಸ್ತೆಯಲ್ಲಿ ಇಂತಹ ಬಸ್ ಸಂಚಾರ ನಡೆಸಲು ಸಾಧ್ಯವೇ ಎಂದು ಪರಿಶೀಲಿಸಿ ಮತ್ತು ಬಸ್ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಕಲೆ ಹಾಕಿ ಎಂದು ಮೋದಿ ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳಿಗೆ ಸೂಚಿಸಿದರು. ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಸದಾ ಮುಂದಿರುವ ನರೇಂದ್ರ ಮೋದಿ ಗುಜರಾತ್ನಲ್ಲಿ ಹಲವಾರು ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೀನಾ ನಿರ್ಮಿಸಿರುವ ಎಲೆವೇಟೆಡ್ ಬಸ್ ಆಗಸ್ಟ್ 3ರಂದು ಮೊದಲ ಪರೀಕ್ಷಾರ್ಥ ಸಂಚಾರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತ್ತು. ಬಸ್ ಒಂದು ಸಲಕ್ಕೆ ಸುಮಾರು 300 ರಿಂದ 1200 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಬಸ್ ಸಂಚರಿಸುತ್ತಿದ್ದಾಗಲೇ ಕಾರು, ಸ್ಕೂಟರ್ನಂತಹ ಸಣ್ಣ ವಾಹನಗಳು ಇದರ ಕೆಳಗಿನಿಂದಲೇ ತೂರಿಕೊಂಡು ಓಡಾಡಬಹುದು. ಬಸ್ ಕುರಿತು ಈಗಾಗಲೇ ಬ್ರೆಜಿಲ್ ಮತ್ತು ಇಂಡೋನೇಷ್ಯಾ ಆಸಕ್ತಿ ತೋರಿಸಿವೆ.

2016: ಬೆಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಟೀಕೆಗೆ ಗುರಿಯಾಗಿದ್ದ ಬಿಡಿಎ ಅಧ್ಯಕ್ಷ ಟಿ. ಶ್ಯಾಂಭಟ್ ಅವರನ್ನು ಕಡೆಗೂ ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯ್ ವಾಲಾ ಆದೇಶ ಹೊರಡಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ಸರ್ಕಾರ ಶ್ಯಾಂಭಟ್ ಅವರನ್ನು ನೇಮಕ ಮಾಡುವ ಸಂಬಂಧ ರಾಜ್ಯಪಾಲರ ಅಂಕಿತಕ್ಕಾಗಿ ಶಿಫಾರಸು ಮಾಡಿತ್ತು. ಪರಿಶೀಲನೆ ನಡೆಸಿದ ರಾಜ್ಯಪಾಲರು ನೇಮಕಕ್ಕೆ ಆದೇಶಿಸಿದ್ದಾರೆ. ಲೋಕಾಯುಕ್ತದಲ್ಲಿರುವ ಪ್ರಕರಣಕ್ಕೆ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ನೇಮಕ ಆದೇಶ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದವು.

 

2016: ಅಲಹಾಬಾದ್: ಆಗಸ್ಟ್ 15ರಂದು ರಾಷ್ಟ್ರಗೀತೆಯನ್ನು ಒಳಗೊಂಡ ಕಾರ್ಯಕ್ರಮ ಸಂಘಟಿಸಲು ಆಡಳಿತ ಮಂಡಳಿಯು ಅನುಮತಿ ನಿರಾಕರಿಸಿದ್ದನ್ನು ಅನುಸರಿಸಿ ಅಲಹಾಬಾದಿನ ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಸೇರಿದಂತೆ ಎಲ್ಲಾ ಶಿಕ್ಷಕರು ರಾಜೀನಾಮೆ ನೀಡಿದರು. ಭಾರತ ಭಾಗ್ಯ ವಿಧಾತವಾಕ್ಯ ಬರುವುದರಿಂದ ಕಾರ್ಯಕ್ರಮವನ್ನು ಸಂಘಟಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ರಾಜೀನಾಮೆ ನೀಡಿರುವ ಶಾಲಾ ಪ್ರಾಂಶುಪಾಲರು ತಿಳಿಸಿದರು.  ‘ಇಂತಹ ಕಾರ್ಯಕ್ರಮಗಳನ್ನು ಶಾಲೆ ಸ್ಥಾಪನೆಯಾದಾಗಿನಿಂದಲೂ (ಸುಮಾರು 15 ವರ್ಷ) ಸಂಘಟಿಸಿಲ್ಲ. ಆದ್ದರಿಂದ ವರ್ಷವೂ ಇಂತಹ ಕಾರ್ಯಕ್ರಮ ಸಂಘಟಿಸುವಂತಿಲ್ಲ ಎಂದು ಆಡಳಿತ ಮಂಡಳಿ ನನಗೆ ತಿಳಿಸಿತು ಎಂದು ಪ್ರಾಂಶುಪಾಲರು ಹೇಳಿದರು. ‘ಆಗಸ್ಟ್ 15ರಿಂದ ರಾಷ್ಟ್ರಗೀತೆ ಹಾಡುವುದು, ಸರಸ್ವತಿ ವಂದನಾದಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಅನುಮತಿ ಕೋರಿ ನಾನು ಶಾಲಾ ಆಡಳಿತ ಮಂಡಳಿಗೆ ಮನವಿ ಮಾಡಿದ್ದೆಎಂದು ಪ್ರಾಂಶುಪಾಲರು ನುಡಿದರು.. ‘ತಮ್ಮ ಭವಿಷ್ಯವನ್ನು ಜನರು ತಾವೇ ಬರೆದುಕೊಳ್ಳುತ್ತಾರೆ, ಒಬ್ಬನ ಹಣೆಬರಹವನ್ನು ನಿರ್ಧರಿಸುವುದು ರಾಷ್ಟ್ರವಲ್ಲ ಎಂಬುದು ನನ್ನ ನಂಬಿಕೆಎಂದು ಅವರು ಹೇಳಿದರು. ಶಾಲೆಗೆ ಸರ್ಕಾರ ಮಾನ್ಯತೆ ನೀಡಿಲ್ಲ. ಶಾಲೆಯನ್ನು ಮುಚ್ಚುವಂತೆ ಸೂಚಿಸಿ ವಾರದ ಹಿಂದೆ ಮೂಲ ಶಿಕ್ಷಣ ಅಧಿಕಾರಿ ನೋಟಿಸ್ ಜಾರಿ ಮಾಡಿದ್ದರು ಎನ್ನಲಾಯಿತು.

2008: ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ಪಾಕಿಸ್ಥಾನದ ಆಡಳಿತಾರೂಢ ಸಮ್ಮಿಶ್ರ ಸರ್ಕಾರ ನಿರ್ಧರಿಸಿತು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಸಂಸತ್ತಿನ ವಿಶ್ವಾಸಮತ ಪಡೆಯುವಲ್ಲಿ ಮುಷರಫ್ ವಿಫಲರಾದ ಕಾರಣಕ್ಕೆ ಅವರನ್ನು ವಾಗ್ದಂಡನೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ ಎಂದು ಪಾಕಿಸ್ಥಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ಥಾನ ಮುಸ್ಲಿಂ ಲೀಗ್- ನವಾಜ್ (ಪಿಎಂಎಲ್-ಎನ್) ಜಂಟಿಯಾಗಿ ಇಸ್ಲಾಮಾಬಾದಿನಲ್ಲಿ ಪ್ರಕಟಿಸಿದವು.

2007: ವಿವಾದದ ಸುಳಿಗೆ ಸಿಕ್ಕಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದ 2005ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೊನೆಗೂ ಪ್ರಕಟಿಸಲಾಯಿತು. ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಕನ್ನಡದ ಅತ್ಯುತ್ತಮ ಚಿತ್ರ, ಪಿ.ಶೇಷಾದ್ರಿ ನಿರ್ದೇಶನದ `ತುತ್ತೂರಿ' ಪರಿಸರ ಸಂರಕ್ಷಣೆಯ ವಿಭಾಗದಲ್ಲಿ ಅತ್ಯುತ್ತಮ ರಾಷ್ಟ್ರೀಯ ಚಿತ್ರ ಪ್ರಶಸ್ತಿಗೆ ಪಾತ್ರವಾದವು. `ತಾಯಿ' ಚಿತ್ರದ ಗೀತೆ ರಚನೆಗಾಗಿ ಬರಗೂರು ರಾಮಚಂದ್ರಪ್ಪ ಅವರಿಗೆ ಅತ್ಯುತ್ತಮ ಗೀತರಚನೆಯ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಬುದ್ದದೇವ ದಾಸಗುಪ್ತಾ ನಿರ್ದೇಶನದ ಬಂಗಾಳಿ ಚಿತ್ರ `ಕಾಲಪುರುಷ್' ಅತ್ಯುತ್ತಮ ಚಿತ್ರಕ್ಕೆ ನೀಡಲಾಗುವ ಸ್ವರ್ಣಕಮಲ ಪ್ರಶಸ್ತಿಗೆ ಪಾತ್ರವಾಯಿತು. ಅತ್ಯುತ್ತಮ ನಿರ್ದೇಶಕನ ಸ್ವರ್ಣಕಮಲ ಪ್ರಶಸ್ತಿಯನ್ನು `ಪರ್ಜಾನಿಯಾ' ಚಿತ್ರದ ನಿರ್ದೇಶಕ ರಾಮ್ ದೋಲಾಕಿಯಾ ಗಳಿಸಿದರು. `ಬ್ಲ್ಯಾಕ್' ಹಿಂದಿ ಚಿತ್ರದಲ್ಲಿ ಅಭಿನಯಿಸಿದ್ದ ಅಮಿತಾಭ್ ಬಚ್ಚನ್ ಅತ್ಯುತ್ತಮ ನಟ, `ಪರ್ಜಾನಿಯಾ' ಇಂಗ್ಲಿಷ್ ಚಿತ್ರದ ಮೂಲಕ ಮರಳಿ ನಟನೆಗೆ ಮರಳಿದ ಸಾರಿಕಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾದರು. ಕನ್ನಡದ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದ `ತಾಯಿ' ಮ್ಯಾಕ್ಸಿಮ್ ಗಾರ್ಕಿ ಅವರ `ಮದರ್' ಕಾದಂಬರಿ ಆಧಾರಿತ ಚಿತ್ರ. ನಟಿ ಪ್ರಮೀಳಾ ಜೋಷಾಯ್ ಇದರ ನಿರ್ಮಾಪಕರು. ಪರಿಸರ ಸಂರಕ್ಷಣೆ ವಿಭಾಗದ ಪ್ರಶಸ್ತಿ ವಿಜೇತ `ತುತ್ತೂರಿ'ಯ ನಿರ್ಮಾಪಕರು ಇನ್ನೊಬ್ಬ ನಟಿ ಜಯಮಾಲಾ ರಾಮಚಂದ್ರ. ನಗರದ ಪರಿಸರ ರಕ್ಷಣೆಗೆ ಮಕ್ಕಳು ನಡೆಸುವ ಹೋರಾಟದ ಕತೆಯನ್ನು ಇದು ಒಳಗೊಂಡಿದೆ. `ತಾಯಿ' ಚಿತ್ರದ `ಬರುತ್ತೇವೆ ನಾವು ಬರುತ್ತೇವೆ' ಹಾಡಿನ ಸಾಹಿತ್ಯಕ್ಕಾಗಿ ಪ್ರೊ.ಬರಗೂರು ರಾಮಚಂದ್ರಪ್ಪ ಗೀತರಚನೆ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾದರು. ಚೊಚ್ಚಲ ನಿರ್ದೇಶನಕ್ಕಾಗಿ ನೀಡುವ ಇಂದಿರಾಗಾಂಧಿ ಪ್ರಶಸ್ತಿಯನ್ನು `ಪರಿಣಿತಾ' ಹಿಂದಿ ಚಿತ್ರದ ನಿರ್ದೇಶಕ ಪ್ರದೀಪ್ ಸರ್ಕಾರ್, ರಾಷ್ಟ್ರ್ರೀಯ ಭಾವೈಕ್ಯಕ್ಕೆ ನೀಡಿದ ಕೊಡುಗೆಗಾಗಿ ನೀಡುವ ನರ್ಗಿಸ್ ದತ್ ಪ್ರಶಸ್ತಿಯನ್ನು ತಮಿಳು ಚಿತ್ರ ದೈವನಮಿತಲ್ ಮತ್ತು ಸಾಮಾಜಿಕ ವಿಷಯಗಳನ್ನು ಆಧಾರಿತ ಚಿತ್ರಗಳಿಗೆ ನೀಡುವ ಪ್ರಶಸ್ತಿಯನ್ನು ಹಿಂದಿ ಚಿತ್ರ `ಇಕ್ಬಾಲ್' ಪಡೆದವು. ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಯನ್ನು `ರಂಗ್ ದೇ ಬಸಂತಿ' ಗಳಿಸಿತು. ವರ್ಷದ ಹಿಂದೆಯೇ ಪ್ರಕಟವಾಗಬೇಕಾಗಿದ್ದ 53ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕಾನೂನಿನ ಸಮರದಲ್ಲಿ ಸಿಲುಕಿಹಾಕಿಕೊಂಡಿತ್ತು. ಸೆನ್ಸಾರ್ ಆಗದ ಡಾಕ್ಯುಮೆಂಟರಿ ಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲು ನಿರ್ದೇಶನ ನೀಡಬೇಕೆಂದು ಕೋರಿ ಚಿತ್ರ ನಿರ್ದೇಶಕರಾದ ಆನಂದ್ ಪಟವರ್ಧನ್, ಗೌರವ್ ಜಾನಿ ಮತ್ತು ಸೀಮಂತಿನಿ ದುರು ಮುಂಬೈ ಹೈಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯಿಂದಾಗಿ ಪ್ರಶಸ್ತಿ ಘೋಷಣೆಯನ್ನು ಮುಂದೂಡಲಾಗಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟುಗಳೆರಡೂ ಈ ಕೋರಿಕೆಯನ್ನು ತಿರಸ್ಕರಿಸಿದ್ದವು. ಅದರ ನಂತರ ಪ್ರಶಸ್ತಿ ವಿತರಣೆಯಲ್ಲಿ ಕೆಲವು ತೀರ್ಪುಗಾರರು ಪಕ್ಷಪಾತ ಧೋರಣೆ ಅನುಸರಿಸಿದ್ದಾರೆ ಎಂದು ಆರೋಪಿಸಿ ತೀರ್ಪುಗಾರರಲ್ಲಿ ಒಬ್ಬರಾದ ಶ್ಯಾಮಲಿ ಬ್ಯಾನರ್ಜಿ ದೆಹಲಿ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜುಲೈ 31ರಂದು ಹೈಕೋರ್ಟ್ ವಜಾಗೊಳಿಸಿದ ನಂತರ ಪ್ರಶಸ್ತಿ ಘೋಷಣೆಯ ದಾರಿ ಸುಗಮವಾಯಿತು.

2007: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಗುಜರ್ ಮಲ್ ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಹೈದರಾಬಾದಿನ ಇನ್ ಸ್ಟಿಟ್ಯೂಟ್ ಆಫ್ ಲೈಫ್ ಸೈನ್ಸ್ ನ ಪ್ರಮುಖ ಪ್ರೊಫೆಸರ್ ಮೆಹ್ತಾ ಅವರು ರಸಾಯನ ಶಾಸ್ತ್ರ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಹೊಸ ಸಾವಯವ ಸಮನ್ವಯ ಸಿದ್ದಾಂತ ವಿಧಾನಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಅಸಾಧಾರಣ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ಮೆಹ್ತಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಗುಜರ್ ಮಲ್ ಮೋದಿ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಸತೀಶ್ ಕುಮಾರ್ ಪ್ರಕಟಿಸಿದರು. ಈ ಹಿಂದೆ ಪ್ರೊ. ಸತೀಶ್ ಧವನ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಪ್ರೊ.ಯು.ಆರ್. ರಾವ್ ಅವರು ಜಿ.ಎಂ. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ ಪಡೆದಿದ್ದರು. ಪ್ರಶಸ್ತಿಯು ಎರಡು ಲಕ್ಷ ರೂಪಾಯಿ ನಗದು ಹಾಗೂ ರಜತ ಫಲಕವನ್ನು ಒಳಗೊಂಡಿದೆ. ಗೋವರ್ಧನ್ ಮೆಹ್ತಾ ಅವರು 400ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದು, ವಿಶ್ವದಾದ್ಯಂತ 200ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಮೆಹ್ತಾ ಅವರಿಗೆ ಭಾರತ ಸರ್ಕಾರ `ಪದ್ಮಶ್ರೀ ಪ್ರಶಸ್ತಿ' ಹಾಗೂ ಫ್ರಾನ್ಸ್ ಸರ್ಕಾರ `ಚೆವಾಲೈರ್ ಡೆ ಲ ಲೀಜನ್ ಡಿ ಹಾನರ್' ಪ್ರಶಸ್ತಿ ನೀಡಿ ಸನ್ಮಾನಿಸಿವೆ.

2007: ಮೆಕ್ಸಿಕೋದ ದೂರಸಂಪರ್ಕ ಕ್ಷೇತ್ರದ ಉದ್ಯಮಿ ಕಾರ್ಲೋಸ್ ಸ್ಲಿಮ್ ವಿಶ್ವದ ನಂ.1 ಶತ ಕೋಟ್ಯಾಧಿಪತಿಯಾಗಿ ಸ್ಥಾನ ಗಿಟ್ಟಿಸಿಕೊಂಡರು. ಇದುವರೆಗೆ ಈ ಸ್ಥಾನ ಅಲಂಕರಿಸಿದ್ದ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ 2ನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 5900 ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಕಾರ್ಲೋಸ್ ತನ್ನ ಆಸ್ತಿಯನ್ನು ಈ ವರ್ಷ ಜುಲೈ ಅಂತ್ಯದಲ್ಲಿ 1200 ಕೋಟಿ ಡಾಲರಿನಷ್ಟು ಹೆಚ್ಚಿಸಿಕೊಂಡರು ಎಂದು `ಫಾರ್ಚೂನ್' ನಿಯತಕಾಲಿಕ ವರದಿ ಮಾಡಿತು. 67 ವರ್ಷದ ಸ್ಲಿಮ್ ಲೆಬನಾನ್ ಮೂಲದವರಾಗಿದ್ದು ಲ್ಯಾಟಿನ್ ಅಮೆರಿಕದ ಅತ್ಯಂತ ದೊಡ್ಡ ಮೊಬೈಲ್ ದೂರವಾಣಿ ಕಂಪೆನಿ `ಅಮೆರಿಕ ಮೊವಿಲ್'ನ ಮಾಲೀಕ. ಉಪಹಾರಗೃಹದಿಂದ ಹಿಡಿದು ಬ್ಯಾಂಕಿನವರೆಗೂ ವಹಿವಾಟು ವಿಸ್ತರಿಸಿರುವ ಸ್ಲಿಮ್ ಅವರ ಕಂಪೆನಿ ಷೇರುಗಳು ಮೆಕ್ಸಿಕೊ ಷೇರು ಮಾರುಕಟ್ಟೆಯಲ್ಲಿ ಮೂರನೇ ಒಂದು ಪಾಲನ್ನು ಹೊಂದಿವೆ.

2007: ವಿಪ್ರೊ ಲಿಮಿಟೆಡ್ ನ ಜಾಗತಿಕ ಐಟಿ ಸೇವಾ ವಹಿವಾಟು ನಡೆಸುವ ವಿಪ್ರೊ ಟೆಕ್ನಾಲಜೀಸ್, ಅಮೆರಿಕದ ಇನ್ಫೊಕ್ರಾಸಿಂಗ್ ಇಂಕ್ ಅನ್ನು 60 ಕೋಟಿ ಡಾಲರಿಗೆ (ಅಂದಾಜು ರೂ 2400 ಕೋಟಿಗಳಿಗೆ) ಸ್ವಾಧೀನಪಡಿಸಿಕೊಂಡಿತು. ಐ.ಟಿ ಮೂಲಸೌಕರ್ಯ ನಿರ್ವಹಣೆ, ಉದ್ದಿಮೆ ಸಂಸ್ಥೆಗಳಿಗೆ ಸೇವೆ ಒದಗಿಸುವ ಮತ್ತು ಹೊರಗುತ್ತಿಗೆ ಸೇವೆ ನಿರ್ವಹಿಸುತ್ತಿರುವ ಇನ್ಫೊಕ್ರಾಸಿಂಗ್ ಇಂಕ್ ನ್ನು ಪ್ರತಿ ಷೇರಿಗೆ 18.70 ಡಾಲರ್ ದರದಲ್ಲಿ ಖರೀದಿಸಿತು. ಈ ಸ್ವಾಧೀನ ಪ್ರಕ್ರಿಯೆಯು ಡಿಸೆಂಬರ್ ತಿಂಗಳ ಹೊತ್ತಿಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವಿಪ್ರೊದ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ ಒ) ಸುರೇಶ್ ಸೇನಾಪತಿ ಪ್ರಕಟಿಸಿದರು. ಕಳೆದ ಎರಡು ವರ್ಷಗಳಲ್ಲಿ ವಿಪ್ರೊ ಸ್ವಾಧೀನಪಡಿಸಿಕೊಂಡ 9ನೇ ಕಂಪೆನಿ ಇದು. ಅವುಗಳ ಪೈಕಿ ಇನ್ಫೊಕ್ರಾಸಿಂಗ್ ಇಂಕ್ ಅತಿ ದೊಡ್ಡ ಕಂಪೆನಿ.

2007: ಕರ್ನಾಟಕ ಲಲಿತಕಲಾ ಅಕಾಡೆಮಿಯ ಆಶ್ರಯದಲ್ಲಿ ಗುಲ್ಬರ್ಗದಲ್ಲಿ ನಡೆದ ಸಮಾರಂಭದಲ್ಲಿ 2006ನೇ ಸಾಲಿನ ಗೌರವ ಪ್ರಶಸ್ತಿಯನ್ನು ಬೆಂಗಳೂರಿನ ಎಚ್. ಎನ್. ಸುರೇಶ ಅವರಿಗೆ ಪ್ರದಾನ ಮಾಡಲಾಯಿತು.

2007: ಜಪಾನಿನ ದಕ್ಷಿಣ ಭಾಗದ ಒಕಿನೊವಾ ದ್ವೀಪ ಪ್ರದೇಶದಲ್ಲಿ ಈದಿನ ಬೆಳಗ್ಗೆ 9 ಗಂಟೆ ಸುಮಾರಿಗೆ ಪ್ರಬಲ ಭೂಕಂಪ ಸಂಭವಿಸಿತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.4 ರಷ್ಟಿತ್ತು.

2007: ವಯಾಗ್ರಾ ಮಾತ್ರೆ ತಯಾರಿಸಿ ಖ್ಯಾತಿಗೆ ಬಂದ ಫಿಟ್ಜರ್ ಅಂತಾರಾಷ್ಟ್ರೀಯ ಔಷಧ ಕಂಪೆನಿ ಎಚ್ ಐವಿ ನಿಯಂತ್ರಣಕ್ಕೆ ತಯಾರಿಸಿದ ಔಷಧಕ್ಕೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಅಂಗೀಕಾರ ನೀಡಿತು. ಎಚ್ಐವಿ ಸೋಂಕು ಪೀಡಿತರ ಆರೋಗ್ಯಕರ ಜೀವಕೋಶಗಳಲ್ಲಿ ಎಚ್ ಐವಿ ವೈರಸ್ ಪ್ರವೇಶಿಸುವುದನ್ನು ಸೆಲ್ ಝೆಂಟ್ರಿ ಎಂಬ ಈ ಹೊಸ ಔಷಧ ತಡೆಯುತ್ತದೆ. ಇದನ್ನು ಬಾಯಿಯ ಮೂಲಕ ಸೇವಿಸಬಹುದು. ಈ ಮೊದಲು ತಯಾರಿಸಲಾದ ಔಷಧ ವೈರಸ್ ಮೇಲೆ ದಾಳಿ ನಡೆಸುತ್ತಿತ್ತು. ಮಾರ್ವಿರೋಕ್ ಎಂದೂ ಕರೆ ಯಲ್ಪಡುವ ಈ ಔಷಧ ಎಚ್ ಐವಿ ವೈರಸ್ ಪ್ರವೇಶಿಸುವ ಆರೋಗ್ಯಕರ ಕೋಶದಲ್ಲಿನ ಸಿಸಿಆರ್-5 ಎಂಬ ಪ್ರವೇಶ ದ್ವಾರವನ್ನು ಮುಚ್ಚುತ್ತದೆ. ಆದರೆ ಈ ಔಷಧ ಯಕೃತ್ತಿನ ಮೇಲೆ ಪರಿಣಾಮ ಬೀರಬಹುದು. ಹೃದಯಾಘಾತವಾಗುವ ಸಂಭವವೂ ಇದೆ ಎಂಬ ಎಚ್ಚರಿಕೆಯನ್ನು ಔಷಧದ ಮೇಲೆ ಮುದ್ರಿಸಲಾಗಿದೆ. ಈ ಔಷಧದ ಮೇಲೆ ಅಧ್ಯಯನ ನಡೆಸುವಾಗ ಕೆಲವು ರೋಗಿಗಳು ಕೆಮ್ಮು, ಜ್ವರ, ಶ್ವಾಸಕೋಶ ಸೋಂಕು, ಹೊಟ್ಟೆ ನೋವು ಅನುಭವಿಸಿದರು.
ಔಷಧ ಸೇವಿಸಿದ ರೋಗಿಗಳಲ್ಲಿ ಶೇ 45ರಷ್ಟು ಮಂದಿಗೆ ಏಡ್ಸ್ ರೋಗ ಪತ್ತೆ ಮಾಡಲು ಸಾಧ್ಯವಾಗದಷ್ಟು ನಿಯಂತ್ರ ಣಕ್ಕೆ ಬಂದಿತು.

2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿ ವಿರೋಧಿಸಿ ಏಳು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟ ಅವಧಿಯ ಬಂದ್ ನ್ನು ಹಿಂತೆಗೆದು ಕೊಳ್ಳಲಾಯಿತು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘದ ಪದಾಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಮುಷ್ಕರ ಹಿಂತೆಗೆದುಕೊಳ್ಳಲು ನಿರ್ಧರಿಸಲಾಯಿತು.

2006: ತಂಪು ಪಾನೀಯಗಳಲ್ಲಿ ಹೆಚ್ಚಿನ ಮಟ್ಟದ ಕೀಟನಾಶಕ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಮತ್ತು ರಾಜ್ಯ ಸಚಿವಾಲಯ ಸೇರಿದಂತೆ ಛತ್ತೀಸ್ ಗಢ ರಾಜ್ಯದ ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಕೋಕ-ಕೋಲಾ ಮತ್ತು ಪೆಪ್ಸಿ ಬಳಕೆಯನ್ನು ಸರ್ಕಾರ ನಿಷೇಧಿಸಿತು.

2006: ರಷ್ಯಾದ ಮರಿಯಾ ಶರ್ಪೋವಾ ಅವರು ಸ್ಯಾನ್ ಡಿಯಾಗೊದಲ್ಲಿ ಮುಕ್ತಾಯವಾದ ಅಕ್ಯುರಾ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಅವರು ಬೆಲ್ಜಿಯಂನ ಕಿಮ್ ಕ್ಲೈಸ್ಟರ್ಸ್ ಅವರನ್ನು ಪರಾಭವಗೊಳಿಸಿದರು.

2006: ಇರಾಕಿನ ಆಹಾರಕ್ಕಾಗಿ ತೈಲ ಹಗರಣದ ತನಿಖೆ ನಡೆಸಿದ ನ್ಯಾಯಮೂರ್ತಿ ಆರ್. ಎಸ್. ಪಾಠಕ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿತು. ಪ್ರಧಾನಿ ವಿರುದ್ಧದ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ನಡೆದ ಭಾರಿ ಕೋಲಾಹಲದ ಮಧ್ಯೆ ವರದಿ ಹಾಗೂ ಕ್ರಮ ಕೈಗೊಂಡ ವರದಿಯನ್ನು ಮಂಡಿಸಿ ಅಂಗೀಕರಿಸಲಾಯಿತು.

1998: ಟಾಂಜಾನಿಯಾದ ದಾರ್-ಎ-ಸಲಾಮ್, ಹಾಗೂ ಕೀನ್ಯಾದ ನೈರೋಬಿಯ ಅಮೆರಿಕನ್ ರಾಜತಾಂತ್ರಿಕ ಕಚೇರಿಗಳಲ್ಲಿ ಟ್ರಕ್ ಬಾಂಬುಗಳು ಸ್ಫೋಟಗೊಂಡವು. ದಾರ್ ಎಸ್ ಸಲಾಮಿನಲ್ಲಿ 10, ನೈರೋಬಿಯಲ್ಲಿ 12 ಮಂದಿ ಅಮೆರಿಕನ್ನರು ಸೇರಿ ಒಟ್ಟು 247 ಮಂದಿ ಮೃತರಾದರು. ಮುಲ್ಲಾ ಒಮರ್ ಮತ್ತು ಒಸಾಮಾ ಬಿನ್ ಲಾಡೆನ್ ಈ ದಾಳಿಗಳನ್ನು ಯೋಜಿಸಿದ್ದರು.

1985: ಗೀತ್ ಸೇಥಿ ಅವರು ನವದೆಹಲಿಯಲ್ಲಿ ವಿಶ್ವ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. ಆಗ ಇವರಿಗೆ 24 ವರ್ಷ. ಅತ್ಯಂತ ಕಿರಿಯ ಅಮೆಚೂರ್ ಬಿಲಿಯರ್ಡ್ಸ್ ಚಾಂಪಿಯನ್ ಎಂಬ ಹೆಗ್ಗಳಿಕೆ ಇವರದಾಯಿತು.

1956: ಮಹಾರಾಷ್ಟ್ರ, ಗುಜರಾತ್, ಸೌರಾಷ್ಟ್ರ, ಮರಾಠಾವಾಡ, ವಿದರ್ಭ, ಕಛ್ ಮತ್ತು ಮುಂಬೈ ನಗರಗಳನ್ನು ಒಳಗೊಂಡ ಬೃಹತ್ ದ್ವಿಭಾಷಾ ಮುಂಬೈ ಪ್ರಾಂತ್ಯ ರಚನೆ ಸಲಹೆಯನ್ನು ಒಪ್ಪಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಪಂಡಿತ ಪಂತ್ ಲೋಕಸಭೆಯಲ್ಲಿ ಪ್ರಕಟಿಸಿದರು.

1956: ಕರ್ನಾಟಕ, ಕೇರಳ ಮತ್ತು ಕೊಡಗನ್ನು ಒಳಗೊಂಡ ದ್ವಿಭಾಷಾ ಪ್ರಾಂತ್ಯ ರಚಿಸುವಂತೆ ಸಂಸತ್ ಸದಸ್ಯರಾದ ಸಿ.ಪಿ. ಮ್ಯಾಥೆನ್ ಮತ್ತು ಶಿವರಾವ್ ಅವರು ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಸಂಧಿಸಿ ಒತ್ತಾಯಿಸಿದರು.

1954: ಸಾಹಿತಿ ಗಾಯತ್ರಿ ನಾವಡ ಜನನ.

1949: ಸಾಹಿತಿ ಆನೇಕಲ್ ಕೃಷ್ಣಮೂರ್ತಿ ಜನನ.

1941: ರಬೀಂದ್ರನಾಥ ಟ್ಯಾಗೋರ್ ಅವರು ಉತ್ತರ ಕಲ್ಕತ್ತದ (ಈಗಿನ ಕೋಲ್ಕತ್ತಾ) ಜೊರಾಸಂಕೊದ ದ್ವಾರಕಾನಾಥ ಟ್ಯಾಗೋರ್ ಗಲ್ಲಿಯ ನಂಬರ್ 6ರ ಮನೆಯಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. ಅದೇ ಮನೆಯಲ್ಲಿ ಅವರು ಜನಿಸಿದ್ದರು.

1940: ರಬೀಂದ್ರನಾಥ ಟ್ಯಾಗೋರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಸಲುವಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಶಾಂತಿನಿಕೇತನದಲ್ಲಿ ವಿಶೇಷ ಪದವೀದಾನ ಸಮಾರಂಭವನ್ನು ಏರ್ಪಡಿಸಿತು.

1938: ಸಾಹಿತಿ ಹ.ಕ. ರಾಜೇಗೌಡ ಜನನ.

1925: ಎಂ.ಎಸ್. ಸ್ವಾಮಿನಾಥನ್ ಜನ್ಮದಿನ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕೃಷಿ ತಜ್ಞ ಹಾಗೂ ಆಡಳಿತಗಾರರಾದ ಇವರು ಭಾರತದ `ಹಸಿರು ಕ್ರಾಂತಿ'ಯಲ್ಲಿ ಮಹತ್ವದ ಪಾತ್ರ ವಹಿಸಿದವರು.

1924: ಶಿಕ್ಷಣ ಕ್ಷೇತ್ರದಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದಿದ್ದ ಕರ್ನಾಟಕ ವಿವಿ ಕುಲ ಸಚಿವ ಸಾಹಿತಿ ಸದಾಶಿವ ಒಡೆಯರ್ (7-8-1924ರಿಂದ 11-9-1996) ಅವರು ಶಿವದೇವ ಒಡೆಯರ್- ಗಿರಿಜಾದೇವಿ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಮರೇವಾಡ ಗ್ರಾಮದಲ್ಲಿ ಜನಿಸಿದರು. ಆಡಳಿತ, ಶಿಕ್ಷಣ, ಸಾಹಿತ್ಯ ಈ ಮೂರೂ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮೆರೆದ ವ್ಯಕ್ತಿ ಇವರು.

1914: ಗಮಕಿ ರಾಘವೇಂದ್ರರಾವ್ ಜನನ.

1905: ವಿದೇಶೀ ವಸ್ತುಗಳ ಬಹಿಷ್ಕಾರ ಚಳವಳಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಆರಂಭಗೊಂಡಿತು. 1905 ಅಕ್ಟೋಬರ್ 16ರ ಪಶ್ಚಿಮ ಬಂಗಾಳ ವಿಭಜನೆ ದಿನದಂತೆಯೇ ಬಹು ವರ್ಷಗಳವರೆಗೆ ಈ ದಿನವನ್ನು ವಿದೇಶೀ ವಸ್ತುಗಳ ಬಹಿಷ್ಕಾರ ದಿನವಾಗಿ ಆಚರಿಸಲಾಯಿತು.

1887: ರಾಜಕಾರಣಿ, ಪತ್ರಕರ್ತೆ ಕಸ್ತೂರಿ ಶ್ರೀನಿವಾಸ ಅಯ್ಯಂಗಾರ್ ಜನನ.

1868: ಆಧುನಿಕ ಬಂಗಾಳಿ ಕವಿ, ವಿಮರ್ಶಕ ಪ್ರಥಮ್ ಚೌಧರಿ ಜನನ.

1702: ಮೊಘಲ್ ಚಕ್ರವರ್ತಿ ಮಹಮ್ಮದ್ ಶಹ (1702-48) ಜನ್ಮದಿನ. ಈತ ಶಹಜಹಾನನ ಮಗ.

No comments:

Post a Comment