Thursday, August 2, 2018

ಇಂದಿನ ಇತಿಹಾಸ History Today ಆಗಸ್ಟ್ 02

ಇಂದಿನ ಇತಿಹಾಸಆಗಸ್ಟ್ 02

2018: ನವದೆಹಲಿ: ಕರ್ನಾಟಕವನ್ನು ವಿಭಜಿಸುವ ಯಾವುದೇ ಯತ್ನವನ್ನು ಇಲ್ಲಿ ವಿರೋಧಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಾವು ಅಥವಾ ತಮ್ಮ ಮಗ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರದು ಎಂದು ಹೇಳಿದರು.  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ೧೩ ಜಿಲ್ಲೆಗಳಲ್ಲಿ ಈದಿನ ಒಂದು ದಿನದ ಬಂದ್ ಆಚರಿಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಬಂದ್ ದಿನವೇ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ ಜೆಡಿ(ಎಸ್) ರಾಷ್ಟ್ರೀಯ ಮುಖ್ಯಸ್ಥ ಬಿಜೆಪಿಯ ಪ್ರಚೋದನೆಗಳಿಗೆ ಬಲಿಯಾಗಬೇಡಿ ಎಂದು ಜನತೆಗೆ ಮನವಿ ಮಾಡಿದರು.  ‘ರಾಜ್ಯ ಮುಂಗಡಪತ್ರದಲ್ಲಿ ನೀಡಲಾಗಿರುವ ಅನುದಾನದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಹೇಳಿದ ಅವರು ’ದುರುದ್ದೇಶಪೂರಿತ ಪ್ರಚಾರದ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದಕ್ಕಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.  ‘ಯಡಿಯೂರಪ್ಪ ಅವರು ಮಾಡಿರುವ ಪ್ರಚೋದನೆ ಸತ್ಯವಾಗುವುದಿಲ್ಲ. ನಾವು ಅದರ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಯಾರಾದರೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಆಗ್ರಹಿಸುತ್ತಿದ್ದರೆ, ಇದು ನನ್ನ ಮತ್ತು ನನ್ನ ಮಗನ ಜೀವಿತಾವಧಿಯಲ್ಲಿ ಸಂಭವಿಸುವುದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ ಎಂದು ದೇವೇಗೌಡ ನುಡಿದರು.  ಸಾಕಷ್ಟು ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚಿಸಲು ವಿಫಲರಾದ ಬಳಿಕ ಹುಟ್ಟಿಕೊಂಡ ಸಿಟ್ಟು ಇನ್ನೂ ಆರದ ಕಾರಣ ಬಿಜೆಪಿಯ ರಾಜ್ಯ ಅಧ್ಯಕ್ಷರು ಉತ್ತರಕರ್ನಾಟಕದ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಆಪಾದಿಸಿದರು.   ‘ಮಾಜಿ ಮುಖ್ಯಮಂತ್ರಿಯವರು ಅಶಾಂತಿ ಸೃಷ್ಟಿಸುವ ಏಕೈಕ ಉದ್ದೇಶದಿಂದ ಕೃಷಿ ಸಾಲಮನ್ನಾ, ರಾಜ್ಯ ಮುಂಗಡಪತ್ರ ಮತ್ತು ಇತರ ವಿಷಯಗಳನ್ನು  ಎತ್ತಿಕೊಂಡು ಜನರನ್ನು ’ಬೆದರಿಸಲು ಆರಂಭಿಸಿದ್ದಾರೆ ಎಂದೂ ದೇವೇಗೌಡ ದೂರಿದರು.  ರಾಜ್ಯದ ಏಕೀಕರಣಕ್ಕಾಗಿ ಹಲವಾರು ನಾಯಕರು ತ್ಯಾಗಗಳನ್ನು ಮಾಡಿದ್ದಾರೆ ಎಂದು ಹೇಳಿದ ಮಾಜಿ ಪ್ರಧಾನಿ, ಪ್ರಚೋದನೆಗಳಿಗೆ ಬಲಿಯಾಗದಂತೆ ಮತ್ತು ಹಾಲಿ ಸರ್ಕಾರದ ಮೇಲೆ ವಿಶ್ವಾಸ ಇರಿಸುವಂತೆ ಜನತೆಗೆ ಮನವಿ ಮಾಡಿದರು.  ಕುಮಾರ ಸ್ವಾಮಿಯವರು ಈಗಾಗಲೇ ಕೆಲವು ಪ್ರಮುಖ ಸರ್ಕಾರಿ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದಾರೆ ಎಂದೂ ದೇವೇಗೌಡ ನುಡಿದರು.  ನಿರಂತರವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕ ಪ್ರದೇಶವನ್ನು ನಿರ್ಲಕ್ಷಿಸುತ್ತಾ ಬಂದಿರುವುದರಿಂದ ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಲು ಸಮಿತಿ ಬಂದ್ ಗೆ ಕರೆ ಕೊಟ್ಟಿತ್ತು.  ಕುಮಾರ ಸ್ವಾಮಿ ಅವರು ಜುಲೈ ೫ರಂದು ಮಂಡಿಸಿದ ಮುಂಗಡಪತ್ರದಲ್ಲೂ ಅನುದಾನ ನೀಡುವಲ್ಲಿ ಉತ್ತರ ಕರ್ನಾಟಕ ಪ್ರದೇಶದ ಬಗ್ಗೆ ತಾರತಮ್ಮಯ ಮಾಡಲಾಗಿದೆ. ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಲ್ಲೂ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಲಾಗಿಲ್ಲ ಎಂದು ಸಮಿತಿ ಆಪಾದಿಸಿತ್ತು. (ಎಚ್.ಡಿ.ದೇವೇಗೌಡರ ಈ ವಿಶಿಷ್ಟ ಚಿತ್ರ ಕ್ಲಿಕ್ ಮಾಡಿದ್ದು: ಅನುಪ ಕೃಷ್ಣ ಭಟ್ ನೆತ್ರಕೆರೆ)
2018: ನವದೆಹಲಿ:  ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್ಸಿಬಿಸಿ)  ಸಾಂವಿಧಾನಿಕ ಸ್ಥಾನಮಾನ ನೀಡುವ ಮಹತ್ವದ ಮಸೂದೆ ಈದಿನ ಲೋಕಸಭೆಯಲ್ಲಿ ಮೂರನೇ ಎರಡಂಶಕ್ಕಿಂತಲೂ ಅಧಿಕ ಬಹುಮತದೊಂದಿಗೆ ಅಂಗೀಕಾರಗೊಂಡಿತು. ಸದನದಲ್ಲಿ  2017 123ನೇ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಐದು ತಾಸುಗಳ ಚರ್ಚೆ ನಡೆದು 30ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರುಮತದಾನದ ವೇಳೆ ಸದನದಲ್ಲಿ ಉಪಸ್ಥಿತರಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಸೂದೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವ ಥಾವರಚಂದ್ಗೆಹ್ಲೋಟ್ ಅವರನ್ನು ಅಭಿನಂದಿಸಿದರುಚರ್ಚೆಯ ವೇಳೆ ಕೆಲವು ಸದಸ್ಯರು 2014 ಸಾಮಾಜಿಕ - ಆರ್ಥಿಕ ಸಮೀಕ್ಷೆಯ ವರದಿಯನ್ನು ಬಹಿರಂಗಗೊಳಿಸಬೇಕೆಂದು ಆಗ್ರಹಿಸಿದರೆ ಇನ್ನು ಕೆಲವರು ದೇಶದಲ್ಲಿನ ಒಬಿಸಿ ಜನಸಂಖ್ಯೆಯನ್ನು ನಿರ್ಧರಿಸಲು ಜನಗಣತಿ ನಡೆಸಬೇಕೆಂದು ಒತ್ತಾಯಿಸಿದರು.


2018: ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ತಾವು ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೇ ವಿದೇಶೀ ನಾಯಕರನ್ನೂ ಆಹ್ವಾನಿಸದೇ ಇರಲು ಇಮ್ರಾನ್ ಖಾನ್ ನಿರ್ಧರಿಸಿದರು. ತಮ್ಮ ಪದಗ್ರಹಣ ಸಮಾರಂಭವನ್ನು ಅತ್ಯಂತ ಸರಳ ಸಮಾರಂಭವನ್ನಾಗಿ ಇರಿಸಲು ಇಮ್ರಾನ್ ಖಾನ್ ಬಯಸಿದ್ದಾರೆ ಎಂದು ‘ಡಾನ್ ಪತ್ರಿಕೆ ವರದಿ ಮಾಡಿತು.  ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಜುಲೈ ೨೫ರ ಚುನಾವಣೆಯಲ್ಲಿ  ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿತ್ತು. ಇಮ್ರಾನ್ ಖಾನ್ ಅವರ ಪಕ್ಷವು ಈ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ನಾಯಕರನ್ನು, ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್, ಭಾರತೀಯ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ನವಜೋತ್ ಸಿಂಗ್ ಸಿಧು ಅವರನ್ನು ಸಮಾರಂಭಕ್ಕೆ ಆಮಂತ್ರಿಸಲು ಯೋಜಿಸಿತ್ತು. ಆದರೆ ಈದಿನ ತಮ್ಮ ಮನಸ್ಸು ಬದಲಾಯಿಸಿದ ಇಮ್ರಾನ್ ಖಾನ್ ಸಮಾರಂಭವನ್ನು ಅದ್ದೂರಿಯಾಗಿಸದೇ ಸರಳ ಸಮಾರಂಭವನ್ನಾಗಿ ಮಾಡಲು ಬಯಸಿದ್ದಾರೆ ಎಂದು ಪತ್ರಿಕಾ ವರದಿ ಹೇಳಿತು. ಪ್ರಮಾಣ ವಚನ ಸಮಾರಂಭವು ಅತ್ಯಂತ ಸಂಯಮದ ಸಮಾರಂಭವಾಗಿರಬೇಕು ಎಂದು ಪಿಟಿಐ ಅಧ್ಯಕ್ಷ ನಿರ್ದೇಶಿದ್ದಾರೆ ಎಂದು ಪಿಟಿಐ ವಕ್ತಾರ ಫವದ್ ಚೌಧರಿ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿತು.  ‘ಅವರು ಐವಾನ್-ಇ-ಸದ್ರ್‌ನಲ್ಲಿ (ಪ್ರೆಸಿಡೆಂಟ್ ಹೌಸ್) ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವಕ್ತಾರ ನುಡಿದರು.  ‘ಯಾವ ವಿದೇಶೀ ಗಣ್ಯರನ್ನೂ ಸಮಾರಂಭಕ್ಕೆ ಆಹ್ವಾನಿಸದೇ ಇರಲು ತೀರ್ಮಾನಿಸಲಾಗಿದೆ. ಅದು ಸಂಪೂರ್ಣವಾಗಿ ರಾಷ್ಟ್ರೀಯ ಸಮಾರಂಭವಾಗಲಿದೆ. ಇಮ್ರಾನ್ ಖಾನ್ ಅವರ ಕೆಲವು ನಿಕಟ ಗೆಳೆಯರನ್ನು ಮಾತ್ರವೇ ಆಹ್ವಾನಿಸಲಾಗುವುದು ಎಂದು ವಕ್ತಾರ ಹೇಳಿದರು.  ‘ಸಮಾರಂಭದಲ್ಲಿ ಯಾವುದೇ ದುಂದುಗಾರಿಕೆ ಇರುವುದಿಲ್ಲ ಎಂದು ಚೌಧರಿ ಹೇಳಿದರು. ಏನಿದ್ದರೂ ’ಇಮ್ರಾನ್ ಖಾನ್ ಅವರ ಕೆಲವೇ ಕೆಲವು ವಿದೇಶೀ ಗೆಳೆಯರನ್ನು ಸಮಾರಂಭಕ್ಕೆ ಆಮಂತ್ರಿಸಲಾಗುತ್ತದೆ ಎಂದು ಅವರು ಹೇಳಿದರು. ಅಧ್ಯಕ್ಷ ಮಮ್ನೂನ್ ಹುಸೈನ್ ಅವರು ಇಮ್ರಾನ್ ಖಾನ್ ಅವರಿಗೆ ಹುದ್ದೆಯ ಗೌಪ್ಯತಾ ಪ್ರಮಾಣ ವಚನವನ್ನು ಬೋಧಿಸುವರು.  ಚುನಾವಣೆಯಲ್ಲಿ ತಮ್ಮ ಪಕ್ಷವು ವಿಜಯ ಗಳಿಸಿದ ಬಳಿಕ ಖಾನ್ ಅವರು ತೆರಿಗೆದಾತರ ಹಣ ಉಳಿಸಲು ವೆಚ್ಚ ಕಡಿತದ ಕ್ರಮಗಳನ್ನು ಕೈಗೊಳ್ಳುವುದಾಗಿ ಪಣತೊಟ್ಟಿದ್ದರು.  ತಾವು ಪ್ರಧಾನ ಮಂತ್ರಿಯ ಕಚೇರಿಗೆ ತೆರಳುವುದಿಲ್ಲ ಎಂದೂ ಅವರು ಪ್ರಕಟಿಸಿದ್ದರು. ಈ ಕಟ್ಟಡದ ಹಣೆ ಬರಹ ಬಗ್ಗೆ ಪಕ್ಷವು ಅಂತಿಮ ನಿರ್ಧಾರ ಕೈಗೊಳ್ಳುವುದು ಎಂದೂ ಅವರು ಹೇಳಿದ್ದರು.

2018: ನವದೆಹಲಿ: ಅಸ್ಸಾಂ ಭೇಟಿಗೆ ಹೊರಟಿದ್ದ ಒಬ್ಬ ಮಹಿಳಾ ಶಾಸಕಿ ಸೇರಿದಂತೆ ಸೇರಿದಂತೆ ೮ ಸದಸ್ಯರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಯೋಗವನ್ನು ಅಸ್ಸಾಂ ಪೊಲೀಸರು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿಯೇ ತಡೆದು ಬಂಧಿಸಿದರು. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಕರಡಿಗೆ ಸಂಬಂಧಿಸಿದಂತೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಳ್ಳಲು ನಿಯೋಗ ನಗರಕ್ಕೆ ಆಗಮಿಸಿತ್ತು.  ಸುಖೇಂದು ಸೇಖರ್ ರೇ, ಕಕೋಲಿ ಘೋಷ್ ದಸ್ತಿದಾರ್, ರತ್ನಾ ಡೆ ನಾಗ್, ನದಿಮುಲ್ ಹಖ್, ಅರ್ಪಿತಾ ಘೋಷ್, ಶಾಸಕಿ ಮಹುವಾ ಮೊಯಿತ್ರ ಮತ್ತು ಮಮತಾ ಥಾಕೂರ್ ಅವರನ್ನು ಒಳಗೊಂಡ ನಿಯೋಗದ ನೇತೃತ್ವವನ್ನು ಪಶ್ಚಿಮ ಬಂಗಾಳದ  ನಗರಾಭಿವೃದ್ಧಿ ಸಚಿವ ಸಚಿವ ಫಿರ್‍ಹಾದ ಹಕೀಮ್ ಅವರು ವಹಿಸಿದ್ದರು. ನಿಯೋಗದ ಸದಸ್ಯರು ವಿಮಾನ ನಿಲ್ದಾಣಕ್ಕೆ ಬಂದು ಇಳಿಯುತ್ತಿದ್ದಂತೆಯೇ ಆಡಳಿತವು ಅವರನ್ನು ತಡೆದು ವಿಮಾನ ನಿಲ್ದಾಣದಿಂದ ಹೊರಕ್ಕೆ ಕರೆದುಕೊಂಡು ಹೋಯಿತು.  ತಮ್ಮನ್ನು ಥಳಿಸಲಾಯಿತು ಎಂದು ಟಿಎಂಸಿ ಸಂಸತ್ ಸದಸ್ಯರು ಆಪಾದಿಸಿದರು. ’ನಮ್ಮ ನಿಯೋಗವನ್ನು ವಿಮಾನ ನಿಲ್ದಾಣದಲ್ಲಿ ತಡೆದು ಬಂಧಿಸಲಾಯಿತು. ಜೊತೆಗೇ ಪೊಲೀಸರು ನಮ್ಮನ್ನು ಥಳಿಸಿದರು ಎಂದು ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಹೇಳಿದರು. ಘಟನೆಯ ವಿಡಿಯೋ ಒಂದು ಕೂಡಾ ತಂಡದ ಮೇಲೆ ಕೈ ಮಾಡಿದ್ದನ್ನು ತೋರಿಸಿತು.  ‘ನಮ್ಮ ನಿಯೋಗವನ್ನು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು. ಜನರನ್ನು ಭೇಟಿ ಮಾಡುವುದು ನಮ್ಮ ಪ್ರಜಾತಾಂತ್ರಿಕ ಹಕ್ಕಾಗಿದ್ದು, ಇದು ಸೂಪರ್ ಎಮರ್ಜೆನ್ಸಿಯಂತಹ ಪರಿಸ್ಥಿತಿ ಎಂದು ಟಿಎಂಸಿ ಸಂಸದ ಡೆರೆಕ್ ಒ ಬ್ರಿಯಾನ್ ಹೇಳಿದರು.  ನಿಯೋಗದ ಸದಸ್ಯರು ಸಿಲ್ಚಾರಿನ ಸ್ಥಳೀಯ ನಾಗರಿಕರ ವೇದಿಕೆಯೊಂದು ಮಧ್ಯಾಹ್ನ ೨ ಗಂಟೆಗೆ ಸಂಘಟಿಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ನಿಯೋಗದ ಸದಸ್ಯರು ಪಾಲ್ಗೊಳ್ಳಬೇಕಾಗಿತ್ತು. ’ಯಾವ ಆಧಾರದಲ್ಲಿ ಎನ್ ಆರ್ ಸಿ ಅಂತಿಮ ಕರಡಿನಲ್ಲಿ ಜನರನ್ನು ಕೈಬಿಡಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಾಯ ಯತ್ನಿಸುತ್ತೇವೆ ಎಂದು ಪಕ್ಷದ ಸದಸ್ಯರೊಬ್ಬರು ಹೇಳಿದರು. ತಂಡವು ಗುವಾಹಟಿಯ ನಾಗಾಂವ್‌ಗೆ ತೆರಳಿ ಅಸ್ಸಾಮಿನ ಬುದ್ಧಿಜೀವಿಗಳು ಮತ್ತು ಗಣ್ಯ ನಿವಾಸಿಗಳನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು, ಅಲ್ಲಿಂದ ಸಂಜೆ ಅವರು ದೆಹಲಿಗೆ ತೆರಳಬೇಕಿತ್ತು.  ಟಿಎಂಸಿ ಮುಖ್ಯಸ್ಥೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೆಹಲಿಯಲ್ಲಿ ವಿಪಕ್ಷ ನಾಯಕರನ್ನು ಭೇಟಿ ಮಾಡಿ ಬಿಜೆಪಿಯನ್ನು ಎದುರಿಸುವ ವ್ಯೂಹ ರಚನೆ ಬಗ್ಗೆ ಚರ್ಚಿಸಿದ್ದರು.  ‘ನಾವು ಸಿಲ್ಚಾರ್ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಗಳ ತಂಡ ನಮಗೆ ಎದುರಾಯಿತು. ಪೊಲೀಸ್ ಅಧಿಕಾರಿಯೊಬ್ಬರು ನನ್ನ ಎದೆಗೆ ಗುದ್ದಿದರು. ಪೊಲೀಸರು ಕಕೋಲಿ ಘೋಷ್ ದಸ್ತಿದಾರ, ಮಮತಾ ಬಾಲಾ ಥಾಕೂರ್ ಮತ್ತು ಮಹುವಾ ಮೊಯಿತ್ರ ಅವರ ಮೇಲೂ ಹಲ್ಲೆ ನಡೆಸಿದರು ಎಂದು ಹೃದ್ರೋಗಿಯೂ ಆಗಿರುವ ಸುಖೇಂದು ಸೇಖರ್ ರೇ ಹೇಳಿದರು.  ಪೊಲೀಸರು ನಮ್ಮ ಸೆಲ್ ಫೋನ್ ಗಳನ್ನು ಕಿತ್ತುಕೊಂಡರು. ಮಹುವಾ ಮೊಯಿತ್ರ, ಮಮತಾ ಬಾಲಾ ಥಾಕೂರ್ ಮತ್ತು ನನ್ನನ್ನೂ ಅವರು ಥಳಿಸಿದರು. ಸುಖೇಂದು ಸೇಖರ್ ಅವರಿಗೂ ಹೊಡೆಯಲಾಯಿತು ಎಂದು ಬರಾಸತ್ ನ ಲೋಕಸಭಾ ಸದಸ್ಯ ಘೋಷ್ ದಸ್ತಿದಾರ್ ಹೇಳಿದರು. ನಮ್ಮನ್ನು ಎಷ್ಟು ಹೊತ್ತು ಹೊರಕ್ಕೆ ಹೋಗಲು ಬಿಡುವುದಿಲ್ಲವೋ ಅಷ್ಟು ಹೊತ್ತು ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ ಎಂದು ರೇ ನುಡಿದರು.  ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ಪಕ್ಷ ನಾಯಕತ್ವದ ಸೂಚನೆಗಾಗಿ ಕಾಯುತ್ತಿದ್ದೇವೆ. ಅವರು ಸಂಸತ್ತಿನಲ್ಲಿ ಹಕ್ಕುಚ್ಯುತಿ ನಿಲುವಳಿ ಮಂಡಿಸಲಿದ್ದಾರೆ ಎಂದು ರೇ ಹೇಳಿದರು.  ತೃಣಮೂಲ ಕಾಂಗ್ರೆಸ್ ನಿಯೋಗ ಸದಸ್ಯರ ಮೇಲೆ ಪೊಲೀಸರು ಕೈಮಾಡಿದ ವಿಡಿಯೋ ದೃಶ್ಯಾವಳಿಗಳನ್ನು ಟಿವಿ ವಾಹಿನಿಗಳು ಪ್ರಸಾರ ಮಾಡಿದವು. ’ನಮ್ಮನ್ನು ಕೋಣೆಯೊಂದರಲ್ಲಿ ಇರಿಸಿದಾಗ ವಿಮಾನ ನಿಲ್ದಾಣದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೂಡಾ ಹಾಜರಿದ್ದರು. ಅವರು ನಮ್ಮ ಮಾತು ಕೇಳಲು ಅವರು ಸಿದ್ದರಿರಲಿಲ್ಲ ಎಂದು ಘೋಷ್ ದಸ್ತಿದಾರ್ ನುಡಿದರು.  ಏನಿದ್ದರೂ ಭಾರತೀಯ ಜನತಾ ಪಕ್ಷವು, ಅಸ್ಸಾಮಿನಲ್ಲಿ ಇವರಿಗೆ ಏನೂ ಕೆಲಸವಿರಲಿಲ್ಲ. ಪ್ರಕ್ಷುಬ್ಧತೆ ಹರಡಲು ಮತ್ತು ಸಮಸ್ಯೆ ಹುಟ್ಟುಹಾಕಲು ನಿಯೋಗ ಅಲ್ಲಿಗೆ ತೆರಳಿತ್ತು ಎಂದು ಪ್ರತಿಪಾದಿಸಿತು.  ‘ಅವರೇ ಸಮಸ್ಯೆಯಾಗಿದ್ದರು. ಅಲ್ಲಿಗೆ ಹೋಗಲು ತೃಣಮೂಲ ಸಂಸದರಿಗೆ ಯಾರು ಹೇಳಿದ್ದರು? ಬೇರೆ ಯಾರೂ ಅಲ್ಲಿಗೆ ಹೋಗಿಲ್ಲ. ಅವರು ವಾಪಸಾಗಬೇಕು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಘಟಕ ಹೇಳಿತು.  ಅವರು ಅಸ್ಸಾಮಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದರೆ ಆಡಳಿತವು ಕ್ರಮ ಕೈಗೊಳ್ಳುತ್ತದೆ. ಅವರನ್ನು ಬಲಾತ್ಕಾರವಾಗಿ ರಾಜ್ಯದಿಂದ ಹೊರತಳ್ಳಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹ ನುಡಿದರು.

2018: ಗುವಾಹಟಿ: ಅಸ್ಸಾಮಿನ ೪೦ ಲಕ್ಷ ನಿವಾಸಿಗಳನ್ನು ಹೊರಗಿಟ್ಟ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಕರಡು ಬಗ್ಗೆ ಮಮತಾ ಬ್ಯಾನರ್ಜಿ ಅವರು ತಳೆದ ನಿಲುವನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಸ್ಸಾಂ ಘಟಕದ ಅಧ್ಯಕ್ಷ ಮತ್ತು ಇತರ ಇಬ್ಬರು ರಾಜ್ಯ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು.  ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ದ್ವಿಪೇನ್ ಪಾಠಕ್ ಅವರು ಎನ್ ಆರ್ ಸಿ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ಅರಿವಿನ ಅಭಾವಕ್ಕಾಗಿ ತಾವು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.  ಪಾಠಕ್ ಅವರು ೨೦೧೧-೨೦೧೬ರ ಅವಧಿಯಲ್ಲಿ ರಾಜ್ಯ ವಿಧಾನಸಭೆಯ ಏಕೈಕ ಟಿಎಂಸಿ ಶಾಸಕರಾಗಿದ್ದರು.  ತಾನು ಮಾತನಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಕನಿಷ್ಠ ಜ್ಞಾನವೂ ಇಲ್ಲದ ನಾಯಕಿಯ ಹಿಂದೆ ನಿಲ್ಲಲು ತಮಗೆ ಸಾಧ್ಯವಿಲ್ಲ ಎಂದು ದ್ವಿಪೇನ್ ಪಾಠಕ್ ಹೇಳಿದರು.  ಇದಕ್ಕೆ ಮುನ್ನ ಈದಿನ ಟಿಎಂಸಿ ರಾಜ್ಯ ನಾಯಕರಾದ ದಿಗಂತ ಸೈಕಿಯಾ ಮತ್ತು ಪ್ರದೀಪ್ ಪಚೋನಿ ಅವರೂ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ’ಮಮತಾ ಬ್ಯಾನರ್ಜಿ ಅವರಿಗೆ ಅಸ್ಸಾಮಿನ ವಾಸ್ತವ ಸ್ಥಿತಿಯ ಅರಿವಿಲ್ಲ. ಯಾವುದೇ ಜ್ಞಾನವೂ ಇಲ್ಲದೆ ಅವರು (ಮಮತಾ ಬ್ಯಾನರ್ಜಿ) ಎನ್ ಆರ್ ಸಿಯನ್ನು ಟೀಕಿಸುತ್ತಿದ್ದಾರೆ. ವಾಸ್ತವಸ್ಥಿತಿ ಸಂಪೂರ್ಣ ಭಿನ್ನವಾಗಿದೆ ಎಂದು ಸೈಕಿಯಾ ನುಡಿದರು. ಬ್ಯಾನರ್ಜಿ ಅವರು ಮೋದಿ ಸರ್ಕಾರವು ರಾಜಕೀಯ ಲಾಭಕ್ಕಾಗಿ ಲಕ್ಷಾಂತರ ಮಂದಿಯನ್ನು ಅಸ್ಸಾಮಿನಲ್ಲಿ ’ರಾಜ್ಯ ರಹಿತರನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದು ಆಪಾದಿಸಿ, ಪೌರತ್ವ ರದ್ದು ಪಡಿಸುವ ಈ ಕ್ರಮವು ರಾಷ್ಟ್ರದಲ್ಲಿ ರಕ್ತಪಾತ ಮತ್ತು ಅಂತರ್ಯುದ್ಧಕ್ಕೆ ಕಾರಣವಾಗಬಹುದು ಎಂದು ಹೇಳಿದ್ದರು.  ರಾಜಕೀಯ ಉದ್ದೇಶದೊಂದಿಗೆ ಎನ್ ಆರ್ ಸಿಯನ್ನು ಮಾಡಲಾಗುತ್ತಿದೆ. ಇದು ಸಂಭವಿಸಲು ನಾವು ಬಿಡುವುದಿಲ್ಲ. ಅವರು (ಬಿಜೆಪಿ) ಜನರನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಸಹಿಸಲಾಗದು. ರಾಷ್ಟ್ರದಲ್ಲಿ ಅಂತರ್ಯುದ್ಧ ಮತ್ತು ರಕ್ತಪಾತವಾದೀತು ಎಂದು ಬ್ಯಾನರ್ಜಿ ನವದೆಹಲಿಯ ಸಭೆಯೊಂದರಲ್ಲಿ ಹೇಳಿದ್ದರು.  ತಮ್ಮ ಹೇಳಿಕೆ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ಸಿನಿಂದ ತೀವ್ರ ಟೀಕೆ ವ್ಯಕ್ತವಾದರೂ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಲು ಹೋಗುವ ಮುನ್ನ ತಮ್ಮ ಹೇಳಿಕೆಯನ್ನು ಮಮತಾ ಬುಧವಾರ ಪುನರುಚ್ಚರಿಸಿದ್ದರು. ಅಸ್ಸಾಮಿನಲ್ಲಿ ಸಹಬಾಳ್ವೆ ನಡೆಸುತ್ತಿರುವ ಸಮುದಾಯಗಳ ಮಧ್ಯೆ ದ್ವೇಷ ಮತ್ತು ಪ್ರಕ್ಷುಬ್ಧತೆ ಪ್ರಚೋದಿಸುತ್ತಿರುವುದಕ್ಕಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ವಿರುದ್ಧ ಪೊಲೀಸ್ ದೂರು ಕೂಡಾ ದಾಖಲಾಗಿತ್ತು. ಎನ್ ಆರ್ ಸಿ ವಿಷಯದ ಬಗ್ಗೆ ಪರಿಶೀಲಿಸುವುದಕ್ಕಾಗಿ ಮಮತಾ ಅವರು ಅಸ್ಸಾಮಿಗೆ ಟಿಎಂಸಿ ನಾಯಕರ ನಿಯೋಗವನ್ನೂ ಕಳುಹಿಸಿದ್ದರು. ಆದರೆ ಆ ನಿಯೋಗದ ಸದಸ್ಯರನ್ನು ಪೊಲೀಸರು ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿಯೇ ತಡೆದಿದ್ದರು.

2018: ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಲೋಲಬ್ ನಲ್ಲಿ ಭದ್ರತಾ ಪಡೆಗಳು ಮಧ್ಯಾಹ್ನ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ತಿಳಿಸಿದರು. ಕುಪ್ವಾರದ ಶರತ್ ಮುಖಮ್‌ನ ಬಿಲಾಲ್ ಶಾ ಮತ್ತು ಕಲರೂಸ್ ನ ಝಹೂರ್ ಅವರ ವಿರುದ್ಧ ಭದ್ರತಾ ಪಡೆಗಳು ಈದಿನ ಕಾರ್ಯಾಚರಣೆಗೆ ಇಳಿದಾಗ ಈ ಇಬ್ಬರೂ ವಾಹನವೊಂದರಲ್ಲಿ ಪ್ರಯಾಣ ಹೊರಟಿದ್ದರು ಎಂದು ವೈದ್ ಹೇಳಿದರು.  ಸೇನೆಯ ೪೧ನೇ ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸ್ ವಿಶೇಷ ಕಾರ್ಯಾಚರಣಾ ತಂಡವು ಶುಮ್ರಿಯಾಲ್‌ನಲ್ಲಿ ಅವರ ವಾಹನವನ್ನು ಅಡ್ಡ ಗಟ್ಟಿತು. ಘರ್ಷಣೆಯ ಮಧ್ಯೆ ವಾಹನದ ಚಾಲಕ ಗಾಯಗಳಿಲ್ಲದೆ ಪರಾರಿಯಾದ ಎಂದು ಅವರು ನುಡಿದರು.  ಲೋಲಬ್ ನ ಮೈದಾನ ಪೋರಾದ ಕಂಧಹಾರ ಪ್ರದೇಶದಲ್ಲಿ ಉಗ್ರಗಾಮಿಗಳು ಪೊಲೀಸ್ ಪೇದೆಯೊಬ್ಬರಿಂದ ಕಸಿದಿದ್ದ ಇನ್ ಸಾಸ್ ರೈಫಲನ್ನೂ ಈದಿನ ಹತ ಉಗ್ರಗಾಮಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ವೈದ್ ಹೇಳಿದರು.

2018: ನವದೆಹಲಿ: ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ (ಎಸ್ಸಿ / ಎಸ್ಟಿ ಕಾಯ್ದೆ) ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೇ ಅಂಗೀಕರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈದಿನ ಲೋಕಸಭೆಗೆ ತಿಳಿಸಿದರು.  ಸುಪ್ರೀಂಕೋರ್ಟ್ ತನ್ನ ಆದೇಶದ ಮೂಲಕ ಸೇರ್ಪಡೆ ಮಾಡಿರುವ ವಿಧಿಗಳಿಂದ ಎಸ್ಸಿ / ಎಸ್ಟಿ ಕಾಯ್ದೆಯು ದುರ್ಬಲಗೊಂಡಿದೆ ಎಂದು ರೊಚ್ಚಿಗೆದ್ದಿರುವ ದಲಿತ ಸಂಘಟನೆಗಳು ಸುಪ್ರೀಂಕೋರ್ಟ್ ತೀರ್ಪನ್ನು ನಿರರ್ಥಕಗೊಳಿಸಲು ಸಂಸತ್ತಿನ ಹಾಲಿ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.   ಕಾಯ್ದೆ ಅನ್ವಯಕ್ಕೆ ಪ್ರಾಥಮಿಕ ತನಿಖೆ, ನಿರೀಕ್ಷಣಾ ಜಾಮೀನು ಇತ್ಯಾದಿ ನಿಯಮಗಳನ್ನು ಸುಪ್ರೀಂಕೋರ್ಟ್ ಅಳವಡಿಸಿದ ಬಳಿಕ, ಈ ಕಾಯ್ದೆಯು ತನ್ನ ಹಲ್ಲುಗಳನ್ನು ಕಳೆದುಕೊಳ್ಳದಂತೆ ಮತ್ತು ಇನ್ನಷ್ಟು ಬಲವಾಗುವಂತೆ ಮಾಡುವ ಸಲುವಾಗಿ ಸರ್ಕಾರವು ತಿದ್ದುಪಡಿ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು ಎಂದು ಸಿಂಗ್ ನುಡಿದರು.   ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸುಪ್ರೀಂಕೋರ್ಟ್ ತೀರ್ಪು ಬಂದು ನಾಲ್ಕು ತಿಂಗಳುಗಳಾಗಿದ್ದರೂ ದಲಿತರು ಮತ್ತು ಬುಡಕಟ್ಟು ಜನರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದಾಗಿ ಆಪಾದಿಸಿದ್ದಕ್ಕೆ ಶೂನ್ಯವೇಳೆಯಲ್ಲಿ ಉತ್ತರ ನೀಡಿದ ಸಚಿವ ರಾಜನಾಥ್ ಸಿಂಗ್ ಈ ಭರವಸೆ ನೀಡಿದರು.  ರಾಜೀವ್ ಕೊಡುಗೆ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, ೧೯೮೯ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ  ಕೊಡುಗೆಯಾಗಿದ್ದು ೧೯೮೯ರ ಸೆಪ್ಟೆಂಬರ್ ತಿಂಗಳಲ್ಲಿ, ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸುವುದಕ್ಕೆ ಮೂರು ತಿಂಗಳು ಮೊದಲೇ ಶಾಸನವಾಗಿ ಅಂಗೀಕರಿಸಲ್ಪಟ್ಟಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ನುಡಿದರು.  ಕನಿಷ್ಠ ೧೭ ಪಕ್ಷಗಳು ಮತ್ತು ಹಲವಾರು ಸಂಸತ್ ಸದಸ್ಯರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಮಾರ್ಚ್ ೨೪ರಂದು ಭೇಟಿ ಮಾಡಿ ಸುಪ್ರೀಂಕೋರ್ಟ್ ಆದೇಶವನ್ನು ತೊಡೆದುಹಾಕುವಂತೆ ರಾಷ್ಟ್ರಪತಿ ಮತ್ತು ಸರ್ಕಾರಕ್ಕೆ ಮನವಿ ಮಾಡಿದ್ದರು. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೂಡಾ ಪ್ರಧಾನಿಯವರಿಗೆ ಈ ಬಗ್ಗೆ ಪತ್ರ ಬರೆದಿದ್ದರು ಎಂದು ಖರ್ಗೆ ಬೊಟ್ಟು ಮಾಡಿದರು.  ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ರೀಡಾ ವಿಶ್ವ ವಿದ್ಯಾಲಯ, ಕೇಂದ್ರೀಯ ಹೋಮಿಯೋಪತಿ ಮಂಡಳಿ, ದಿವಾಳಿತನ ಸಂಹಿತೆ ಮತ್ತು ವಾಣಿಜ್ಯ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದರೂ, ದಲಿತರಿಗೆ ಕಾಯ್ದೆಯನ್ನು ದುರ್ಬಲಗೊಳಿಸಿದ್ದರಿಂದ ಆಗಿರುವ ಅನ್ಯಾಯವನ್ನು ನಿವಾರಿಸಲು ಸುಗ್ರೀವಾಜ್ಞೆ ತರುವಲ್ಲಿ ವಿಫಲವಾಗಿದೆ ಎಂದು ಖರ್ಗೆ ದೂರಿದರು.  ‘ನೀವು ನಾಳೆಯೇ ಮಸೂದೆ ತನ್ನಿ. ನಾವು ಅದನ್ನು ಅನುಮೋದಿಸುತ್ತೇವೆ ಎಂದು ಖರ್ಗೆ ನುಡಿದರು. ರಾಜನಾಥ್ ಸಿಂಗ್ ಅವರು ತಮ್ಮ ಉತ್ತರದಲ್ಲಿ ಖರ್ಗೆಯವರು ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟವು ಮಸೂದೆಯನ್ನು ಅನುಮೋದಿಸಿದ ಒಂದು ದಿನದ ಬಳಿವಷ್ಟೇ ದೂರು ನೀಡುತ್ತಿದ್ದಾರಲ್ಲ ಎಂದು ಅಚ್ಚರಿ ವ್ಯಕ್ತ ಪಡಿಸಿದರು. ಕೇಂದ್ರ ಸರ್ಕಾರವು ಮುಂಗಾರು ಅಧಿವೇಶನ ಅಂತ್ಯಗೊಳ್ಳುವ ಮುನ್ನವೇ ಮಸೂದೆಯನ್ನು ಅಂಗೀಕರಿಸಲು ಇಚ್ಛಿಸಿದೆ ಎಂದು ಅವರು ನುಡಿದರು.

2018: ನವದೆಹಲಿ: ಬಿಜೆಪಿ ವಿರುದ್ಧ ವಿಪಕ್ಷಗಳ ಏಕತೆಯನ್ನು ಬಲಪಡಿಸುವ ಯತ್ನವಾಗಿ ತೃಣಮೂಲ ಕಾಂಗ್ರೆಸ್ ಸೇರಿದಂತೆ ೧೭ ರಾಜಕೀಯ ಪಕ್ಷಗಳು ಚುನಾವಣಾ ಆಯೋಗವನ್ನು ಭೇಟಿ ಮಾಡಿ ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೆ ತರುವಂತೆ ಒತ್ತಾಯಿಸಲು ಮುಂದಾದವು. ಯೋಜನೆ ಬಗ್ಗೆ ಚರ್ಚಿಸಲು ೧೭ ವಿರೋಧ ಪಕ್ಷಗಳು ಮುಂದಿನವಾರ ಸಭೆ ಸೇರಲಿವೆ.  ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಿರೋಧ ಪಕ್ಷಗಳೂ ಒಪ್ಪಿವೆ. ಮುಂದಿನವಾರ ಸಭೆ ಸೇರಲು ನಾವು ಯೋಜಿಸುತ್ತಿದ್ದೇವೆ. ಚುನಾವಣಾ ಆಯೋಗದ ಬಳಿಗೆ ಹೋಗಲು ಮತ್ತು ಮುಂಬರುವ ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ವ್ಯವಸ್ಥೆಯ ಅಡಿಯಲ್ಲಿ ನಡೆಸುವಂತೆ ಒತ್ತಾಯಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಟಿಎಂಸಿ ನಾಯಕ ಡೆರೆಕ್ ಒಬ್ರಿಯನ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.  ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಿಪಕ್ಷಗಳ ಬೆಂಬಲ ಪಡೆಯುವ ನಿಟ್ಟಿನಲ್ಲಿ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಪ್ರಯತ್ನ ಆರಂಭಿಸಿದ್ದರು. ಜನವರಿ ೧೯ರಂದು ಕೋಲ್ಕತದಲ್ಲಿ ನಡೆಸಲು ಯೋಜಿಸಲಾಗಿರುವ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ವಿಪಕ್ಷ ನಾಯಕರನ್ನು ಆಹ್ವಾನಿಸುವ ಸಲುವಾಗಿ ಸಂಸತ್ತಿಗೆ ಹಿಂದಿನ ದಿನ ಬಂದಿದ್ದ ಮಮತಾ ಬ್ಯಾಲೆಟ್ ಪೇಪರ್ ವಿಚಾರವನ್ನೂ ಪ್ರಸ್ತಾಪಿಸಿದ್ದರು.  ೨೦೧೯ರ ಮಹಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ವ್ಯವಸ್ಥೆ ಅಡಿಯಲ್ಲೇ ನಡೆಸುವಂತೆ ಒತ್ತಾಯಿಸಲು ಮತ್ತು ವಿದ್ಯುನ್ಮಾನ ಮತಯಂತ್ರಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತ ವರದಿಗಳ ಬಗ್ಗೆ ಚುನಾವಣಾ ಆಯೋಗದ ಗಮನ ಸೆಳೆಯಲು ಎಲ್ಲ ಪಕ್ಷಗಳು ಒಟ್ಟಾಗಿ ಚುನಾವಣಾ ಆಯೋಗದ ಬಳಿಕ ಜಂಟಿ ನಿಯೋಗ ಒಯ್ಯಬೇಕು ಎಂದು ಮಮತಾ ಎಲ್ಲ ಪಕ್ಷಗಳನ್ನೂ ಸಂಸತ್ ಭವನದ ಟಿಎಂಸಿ ಕಚೇರಿಯಲ್ಲಿ ಭೇಟಿ ಮಾಡಿದಾಗ ಕೋರಿದ್ದರು.  ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ತಟಸ್ಥತೆ ಬಗ್ಗೆ ಪ್ರಶ್ನಿಸಿ ಟಿಎಂಸಿ ಸಂಸತ್ತಿನ ಹೊರಗೆ ಪ್ರತಿಭಟನೆಗಳನ್ನು ನಡೆಸಿತ್ತು ಮತ್ತು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿತ್ತು. ಎಲ್ಲ ವಿರೋಧ ಪಕ್ಷಗಳನ್ನೂ ಒಗ್ಗೂಡಿಸಬಲ್ಲ ಸಾಮಾನ್ಯ ಕಾರ್ಯಕ್ರಮ ಇದು ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷ ಹೇಳಿತ್ತು. ಅತ್ಯಂತ ಕುತೂಹಲಕರವಾಗಿ ಬ್ಯಾನರ್ಜಿ ಅವರು ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆಯನ್ನೂ ಚುನಾವಣಾ ಆಯೋಗದ ಬಳಿಗೆ ತೆರಳುವ ವಿಪಕ್ಷ ನಿಯೋಗದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದರು. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಹಿಂದೆಯೇ ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯನ್ನೇ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದರು. 
2017: ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಆರಂಭಿಸಲು ಉದ್ದೇಶಿಸಿರುವ ಕಿಶನ್‌ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆ ಅನುಷ್ಠಾನಕ್ಕೆ ವಿಶ್ವಬ್ಯಾಂಕ್‌ ಷರತ್ತುಬದ್ಧ ಅನುಮತಿ ನೀಡಿತು. ಝೇಲಂ ಮತ್ತು ಚೆನಾಬ್‌ ನದಿಗಳ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಭಾರತದ ಯೋಜನೆಗೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕಿಶನ್‌ಗಂಗಾ (330 ಮೆಗಾವಾಟ್‌) ಮತ್ತು ರಾಟ್ಲೆಯಲ್ಲಿ (850 ಮೆಗಾವಾಟ್‌) ಜಲ ವಿದ್ಯುತ್‌ ಸ್ಥಾವರ ನಿರ್ಮಿಸುವ ಭಾರತದ ಕ್ರಮವನ್ನು ವಿರೋಧಿಸಿದ್ದ ಪಾಕಿಸ್ತಾನ, ಈ ಯೋಜನೆಯು 1960 ಸಿಂಧೂ ಜಲ ಒಪ್ಪಂದಕ್ಕೆ ವಿರುದ್ಧವಾಗಿದೆಯೇ ಎಂದು ಪರಿಶೀಲಿಸುವಂತೆಯೂ ವಿಶ್ವಬ್ಯಾಂಕ್‌ಗೆ ಮನವಿ ಮಾಡಿತ್ತು. ಎರಡೂ ನದಿಗಳನ್ನು ಸಿಂಧೂ ಜಲ ಒಪ್ಪಂದದಲ್ಲಿ ‘ಪಶ್ಚಿಮದ ನದಿಗಳು’ ಎಂದು ಕರೆಯಲಾಗಿದ್ದು, ಯಾವುದೇ ತಡೆಯಿಲ್ಲದೆ ಇವುಗಳ ನೀರನ್ನು ಬಳಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶವಿದೆ. ಹಾಗೆಯೇ ಭಾರತಕ್ಕೆ ಜಲವಿದ್ಯುತ್ ಸ್ಥಾವರ ನಿರ್ಮಿಸಲೂ ಒಪ್ಪಂದದಲ್ಲಿ ನಿರ್ಬಂಧವಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿತು. ಸಿಂಧೂ ಜಲ ಒಪ್ಪಂದದ ತಾಂತ್ರಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ವಾರ ಮಾತುಕತೆ ನಡೆಸಲಾಗುವುದು ಎಂದೂ ವಿಶ್ವಬ್ಯಾಂಕ್‌ ಪ್ರಕಟಣೆ ತಿಳಿಸಿತು. 
2017: ನವದೆಹಲಿ/ಶ್ರೀನಗರ: ಭದ್ರತಾ ಪಡೆಯಿಂದ ಆ.1ರಂದು ಹತ್ಯೆಯಾದ ಲಷ್ಕರ್–ಇ–ತೊಯಬಾ(ಎಲ್‌ಇಟಿ)
ಸಂಘಟನೆಯ ಕಮಾಂಡರ್ ಅಬು ದುಜಾನಾ ಮೃತದೇಹವನ್ನು ಪಡೆದುಕೊಳ್ಳಲು ಪಾಕಿಸ್ತಾನವು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅಬು ದುಜಾನಾ ಅಂತ್ಯಸಂಸ್ಕಾರವನ್ನು ಜಮ್ಮು ಕಾಶ್ಮೀರದ ಉರಿ ಸೇನಾ ವಲಯದ ಬಳಿ ನೆರವೇರಿಸಲಾಗಿದೆ ಎಂದು ವರದಿ ತಿಳಿಸಿತು. ಕೇಂದ್ರ ಗೃಹ ಸಚಿವಾಲಯವು ಉಗ್ರನ ಮೃತದೇಹವನ್ನು ಪಡೆದುಕೊಳ್ಳುವಂತೆ ಪಾಕಿಸ್ತಾನದ ಉನ್ನತ ಸಚಿವಾಲಯಕ್ಕೆ ಹೇಳಿತ್ತು. ಆದರೆ ಸಚಿವಾಲಯವು ನಿರಾಕರಿಸಿತು.ದೆ. ಈ  ಸಂಬಂಧ ಉಗ್ರನ ಕುಟುಂಬಸ್ಥರಿಗೆ  ಕೊನೆಯ ಬಾರಿ ಮುಖ ನೋಡಲು ಅವಕಾಶ ನೀಡಲಾಗಿತ್ತು ಎಂದು ಐಜಿಪಿ ಮುನೀರ್ ಖಾನ್ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಆ.1ರ ಮಂಗಳವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಯ ಸಿಬ್ಬಂದಿ ಲಷ್ಕರ್‌–ಎ–ತೊಯಬಾ ಭಯೋತ್ಪಾದಕ ಸಂಘಟನೆಯ ಕಮಾಂಡರ್‌ ಅಬು ದುಜಾನಾ (27) ಮತ್ತು ಇನ್ನೊಬ್ಬ ಉಗ್ರನನ್ನು ಹತ್ಯೆ ಮಾಡಿದ್ದರು.
2017: ಪಟ್ನಾ: ಬಿಹಾರದ ಜೆಡಿ(ಯು) ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿರುವ ಶೇಕಡ 76ರಷ್ಟು
ಸಚಿವರು ಅಪರಾಧ ಪ್ರಕರಣ ಎದುರಿಸುತ್ತಿರುವುದು ಪ್ರಜಾಪ್ರಭುತ್ವ ಸುಧಾರಣಾ ಸಂಘಟನೆಯ (ಎಡಿಆರ್) ವರದಿಯಿಂದ ಬೆಳಕಿಗೆ ಬಂದಿತು. ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಸಂದರ್ಭ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ ಆಧಾರದಲ್ಲಿ ಎಡಿಆರ್ ಈ ವರದಿ ಸಿದ್ಧಪಡಿಸಿತು. ಅಂದರೆ, ಒಟ್ಟು 29 ಸಚಿವರ ಪೈಕಿ 22 ಮಂದಿ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿವೆ. ಹಿಂದಿನ ಮಹಾಮೈತ್ರಿಕೂಟ ಸರ್ಕಾರದ ಸಚಿವ ಸಂಪುಟದಲ್ಲಿ ಶೇಕಡ 69ರಷ್ಟು ಸಚಿವರು (19 ಸಚಿವರು) ಅಪರಾಧ ಪ್ರಕರಣ ಎದುರಿಸುವವರಾಗಿದ್ದರು. ಹೊಸ ಸರ್ಕಾರದ 22 ಕಳಂಕಿತ ಸಚಿವರ ಪೈಕಿ ಮೂವರು ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷದ ಇಬ್ಬರು ಸಚಿವರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307ರ ಅನ್ವಯ ‘ಕೊಲೆ ಯತ್ನ’ ಪ್ರಕರಣ ಎದುರಿಸುತ್ತಿದ್ದಾರೆ. ಇನ್ನೂ ಹಲವು ಸಚಿವರು ಡಕಾಯಿತಿ, ಅಕ್ರಮ, ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಸಂಪುಟದ 21 ಸಚಿವರು (72%) ಕೋಟ್ಯಧಿಪತಿಗಳಾಗಿದ್ದಾರೆ. ಹಿಂದಿನ ಮಹಾಮೈತ್ರಿ ಸರ್ಕಾರದಲ್ಲಿ 22 ಸಚಿವರು (79%) ಕೋಟ್ಯಧಿಪತಿಗಳಾಗಿದ್ದರು.
2017: ನವದೆಹಲಿ:  ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಪಡೆದುಕೊಂಡಿರುವ  ಸುಮಾರು
11.44 ಲಕ್ಷ ಪಾನ್‌ ಕಾರ್ಡ್‌ಗಳನ್ನು  ನಿಷ್ಕ್ರಿಯಗೊಳಿಸಲಾಗಿದೆ ಇಲ್ಲವೇ ರದ್ದು ಮಾಡಲಾಗಿದೆ. ಪಾನ್‌ ಕಾರ್ಡ್‌ ಗೆ ಆಧಾರ್‌ ಕಾರ್ಡ್‌ ನಂಬರ್‌ ಜೋಡಿಸುವುದನ್ನು ಸರಕಾರ ಕಡ್ಡಾಯ ಮಾಡಿದ ಬಳಿಕದಲ್ಲಿ  ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಕ್ರಮವಾಗಿ ಹೊಂದಿರುವ 11 ಲಕ್ಷಕ್ಕೂ ಮೀರಿದ ಪಾನ್‌ ಕಾರ್ಡ್‌ಗಳು ಈ ತನಕ ಪತ್ತೆಯಾಗಿವೆ. ಈ ವಿಷಯವನ್ನು  ಕೇಂದ್ರ ಸಹಾಯಕ ಹಣಕಾಸುಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಅವರು ರಾಜ್ಯಸಭೆಗೆ ನೀಡಿದ  ಉತ್ತರದಲ್ಲಿ ತಿಳಿಸಿದರು. 2017ರ ಜುಲೈ 27ರ ವರೆಗೆ 11,44,211 ಅಕ್ರಮ ಪಾನ್‌ ಕಾರ್ಡ್‌ಗಳು ಪತ್ತೆಯಾಗಿದ್ದು ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ ಅಥವಾ ರದ್ದು ಮಾಡಲಾಗಿದೆ ಎಂದು ಸಚಿವರು ಹೇಳಿದರು. ಒಬ್ಬ ವ್ಯಕ್ತಿ ಒಂದೇ ಪಾನ್‌ ಕಾರ್ಡ್‌ ಹೊಂದಿರಬೇಕಾಗಿದ್ದು ಅದರ ಅಡಿ ಆತನು ತನ್ನ ಎಲ್ಲ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ನಮೂದಿಸಿ ವರ್ಷಂಪ್ರತಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬೇಕಾಗುತ್ತದೆ. ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪಾನ್‌ ಕಾರ್ಡ್‌ ಹೊಂದುವುದು ಕಾನೂನು ಪ್ರಕಾರ ದುರುದ್ದೇಶದ ಅಪರಾಧವಾಗುತ್ತದೆ. "ಜುಲೈ 27ರ ವರೆಗೆ 1,566 ನಕಲಿ ಪಾನ್‌ ಕಾರ್ಡ್‌ಗಳನ್ನು ಪತ್ತೆ ಹಚ್ಚಲಾಗಿದೆ; ಇಂತಹ ಕಾರ್ಡುಗಳನ್ನು ಅಸ್ತಿತ್ವದಲ್ಲೇ ಇರದ ವ್ಯಕ್ತಿಗಳ ಹೆಸರಲ್ಲಿ ಅಥವಾ ಸುಳ್ಳು ಗುರುತಿನ ವ್ಯಕ್ತಿಗಳ ಹೆಸರಿನಲ್ಲಿ ಮೋಸದಿಂದ ಪಡೆಯಲಾಗಿತ್ತು ಎಂದು ಸಚಿವರು ಹೇಳಿದರು.


2017: ಬೀಜಿಂಗ್‌ : ಭಾರತ ಯಾವುದೇ ಶರತ್ತುಗಳನ್ನು ಒಡ್ಡದೇ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ
ಸೇನೆಯನ್ನು ಈ ಕೂಡಲೇ ಹಿಂದೆಗೆದುಕೊಳ್ಳಬೇಕು ಎಂದು ಚೀನ ಮತ್ತೆ ಹೊಸ ಎಚ್ಚರಿಕೆಯನ್ನು ನೀಡಿತು. ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಮ್ ಟ್ರೈ ನೇಶನ್‌ ಜಂಕ್ಷನ್‌ ಪ್ರದೇಶವು ತನ್ನದೆಂದು ಚೀನ ಹೇಳಿಕೊಂಡಿತು. ಅದೇ ವೇಳೆ ಭೂತಾನ್‌, ಡೋಕ್ಲಾಮ್ ತನಗೆ ಸೇರಿದ್ದೆಂದು ಹೇಳಿ ಚೀನಕ್ಕೆ ಪ್ರತಿಭಟನೆ ಸಲ್ಲಿಸಿತು. ತನ್ನ ಮತ್ತು ಭೂತಾನ್‌ ಭದ್ರತೆಗೆ ಬದ್ಧನಾಗಿರುವ ಭಾರತ, ಡೋಕ್ಲಾಮ್ ನಲ್ಲಿ ಚೀನ ಸೇನೆಯ ರಸ್ತೆ ನಿರ್ಮಾಣ ಕಾರ್ಯವನ್ನು ತಡೆದಿದೆ. ಅಲ್ಲಿಯ ಬಳಿಕ ಕಳೆದ ಜೂನ್‌ 16ರಿಂದ ಡೋಕ್ಲಾಮ್ ನಲ್ಲಿ ಭಾರತ - ಚೀನ ಸೇನೆಯ ಮುಖಾಮುಖಿ ಮುಂದುವರಿದಿತ್ತು. ಭಾರತ ಮತ್ತು ಚೀನ ಪರಸ್ಪರ 3,488 ಕಿ.ಮೀ.ಉದ್ದದ ಗಡಿಯನ್ನು ಹೊಂದಿದ್ದು  ಇದರಲ್ಲಿ 220 ಕಿ.ಮೀ. ಭಾಗವು ಸಿಕ್ಕಿಂ ಪ್ರದೇಶದಲ್ಲಿದೆ.  ಕಳೆದ ಜು.28ರಂದು ಬ್ರಿಕ್ಸ್‌ ಎನ್‌ಎಸ್‌ಎಗಳ ಸಮಾವೇಶದಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಚೀನದ ಸಮಾನಾಧಿಕಾರಿ ಯಾಂಗ್‌ ಜೇಶೀ ಅವರೊಂದಿಗೆ ಮೊದಲ ಬಾರಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ವಿವರಗಳನ್ನು ನೀಡಿರುವ ಚೀನದ ವಿದೇಶ ಸಚಿವಾಲಯ, ಉಭಯ ಅಧಿಕಾರಿಗಳು ಬ್ರಿಕ್ಸ್‌ ಸಹಕಾರ, ದ್ವಿಪಕ್ಷೀಯ ಸಂಬಂಧ ಮತ್ತು ಉಭಯ ರಾಷ್ಟ್ರಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು ಎಂದು ತಿಳಿಸಿತು. 

2017: ಲಾಸ್‌ಏಂಜಲೀಸ್‌: ಭಾರತದಲ್ಲಿ ಬರಗಾಲ ಬರಲು ಯುರೋಪ್‌ನ ಮಾಲಿನ್ಯವೇ ಕಾರಣ
ಎಂದು ಇತ್ತೀಚೆಗೆ ಲಂಡನ್‌ನ ಸಂಶೋಧಕರ ವರದಿಯೊಂದು ತಿಳಿಸಿದ್ದು,  ಯುರೋಪ್‌ನ ವಿದ್ಯುತ್‌ ಸ್ಥಾವರಗಳಲ್ಲಿ ಉತ್ಪತ್ತಿಯಾಗುವ ಸಲ್ಫರ್‌ ಡಯಾಕ್ಸೈಡ್‌ನಿಂದ ಮಾಲಿನ್ಯ ಹೆಚ್ಚಾಗಿ, ಅದರ ದುಷ್ಪರಿಣಾಮ ನೇರವಾಗಿ ಭಾರತಕ್ಕೆ ತಲುಪಿತ್ತಿದೆ ಎಂದು  ಹೇಳಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ, ಹವಾಮಾನ ವೈಪರೀತ್ಯವೇ ಭಾರತದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದು ಅಮೆರಿಕದ ಸಂಶೋಧಕರ ತಂಡವೊಂದು ಹೇಳಿತು. ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ 59 ಸಾವಿರಕ್ಕೂ ಹೆಚ್ಚು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಚಟುವಟಿಕೆಗಳ ಕಾಲದಲ್ಲಿ ತಾಪಮಾನ ಹೆಚ್ಚಳ ಮತ್ತು ಮಳೆಯ ಕೊರತೆಯಿಂದ ರೈತರು ಹತಾಶೆಗೊಳಗಾಗುತ್ತಾರೆ. ನಿರೀಕ್ಷೆಯೆಲ್ಲ ಹುಸಿಯಾದಾಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ಅಧ್ಯಯನ ವರದಿ ಹೇಳಿತು. ಜಾಗತಿಕ ತಾಪಮಾನ ಹೆಚ್ಚಿದಂತೆ ರೈತರ ಆತ್ಮಹತ್ಯೆ ಪ್ರಮಾಣವೂ ಹೆಚ್ಚಳವಾಗಲಿದೆ ಎಂಬ ಎಚ್ಚರಿಕೆಯನ್ನೂ ವರದಿ ನೀಡಿದೆ. ಜತೆಗೆ, ಸರಕಾರವು ಸೂಕ್ತ ನೀತಿಗಳನ್ನು ತಂದರೆ ಅನ್ನದಾತರ ಜೀವವನ್ನು ಉಳಿಸಲು ಸಾಧ್ಯ ಎಂದೂ ವರದಿ ಹೇಳಿತು. 2050ರ ವೇಳೆಗೆ ತಾಪಮಾನ ಇನ್ನೂ 3 ಡಿ.ಸೆ.ನಷ್ಟು ಹೆಚ್ಚಾಗಲಿದೆ ಎಂಬ ಆತಂಕಕಾರಿ ಭವಿಷ್ಯವನ್ನೂ ಸಂಶೋಧಕರು ನುಡಿದರು. ಜಗತ್ತಿನ ಆತ್ಮಹತ್ಯೆಗಳಲ್ಲಿ ಶೇ.75ರಷ್ಟು ನಡೆಯುತ್ತಿರುವುದು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ. ಈ ಪೈಕಿ ಐದನೇ ಒಂದರಷ್ಟು ಪ್ರಕರಣಗಳು ಭಾರತದ‌ಲ್ಲೇ ಘಟಿಸುತ್ತಿವೆ.

2015: ನವದೆಹಲಿಕೋಲ್ಕತಮೂರು ದಿನಗಳಿಂದ ನಿರಂತರಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಹಲವಡೆ ಪ್ರವಾಹಪರಿಸ್ಥಿತಿ ಉಂಟಾಗಿ 70ಕ್ಕೂ ಹೆಚ್ಚು ಮಂದಿ ಅಸು ನೀಗಿದರುಪಶ್ಚಿಮ ಬಂಗಾಳದ13 ಜಿಲ್ಲೆಗಳು ಜಲಾವೃತಗೊಂಡು 18 ಲಕ್ಷಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡು, 50ಕ್ಕೂ ಹೆಚ್ಚು ಮಂದಿ ಮೃತರಾದರು. ಒಡಿಶಾದಲ್ಲೂ ಪ್ರವಾಹ ಸ್ಥಿತಿಉಂಟಾಗಿದ್ದುಮಣಿಪುರದಲ್ಲಿ ಭೂಕುಸಿತಗಳಿಗೆ 20 ಮಂದಿ ಬಲಿಯಾದರು.ಗುಜರಾತ್ ಮತ್ತು ರಾಜಸ್ತಾನದಲ್ಲಿ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆಸೇನಾ ಪಡೆಗಳು ಕಾರ್ಯಾಚರಣೆ ಆರಂಭಿಸಿದವು. ಹಗಲು ರಾತ್ರಿಸುರಿಯುತ್ತಿರುವ ಮಳೆಯ ಜೊತೆಗೆ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎದ್ದಪರಿಣಾಮವಾಗಿ ರಾತ್ರಿ ಇಡೀ ಹೆಚ್ಚುವರಿ ಮಳೆಯೂ ಸುರಿದಿದ್ದು ಪರಿಸ್ಥಿತಿ ಇನ್ನಷ್ಟುಬಿಗಡಾಯಿಸಿತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಲಂಡನ್ ಪ್ರವಾಸವನ್ನು ಅರ್ಧಕ್ಕೇ ಸ್ಥಗಿತಗೊಳಿಸಿ ವಾಪಸಾದರು. ಮಣಿಪುರದಲ್ಲಿಭೂಕುಸಿತದಲ್ಲಿ ಹಲವಾರು ಮನೆಗಳುಸೇತುವೆಗಳು ಹಾನಿಗೊಂಡವು.
2015: ನವದೆಹಲಿಕೂದಲು ಉದುರುವಿಕೆ ತಡೆಯುವ ಚಿಕಿತ್ಸೆಗಾಗಿ ಅರಶಿನ,ದೇವದಾರು ತೊಗಟೆ/ಚಕ್ಕೆ ಮತ್ತು ಹಸಿರು ಚಹಾ ಹೊಂದಿದ ವೈದ್ಯಕೀಯಮಿಶ್ರಣಕ್ಕೆ ಪೇಟೆಂಟ್ ಪಡೆಯುವ ಇಂಗ್ಲೆಂಡಿನ ಖ್ಯಾತ ಲ್ಯಾಬೋರೇಟರಿ ಒಂದರಯತ್ನವನ್ನು ತಡೆಯುವ ಮೂಲಕ ತನ್ನ ಪರಂಪರಾಗತ ಜ್ಞಾನವನ್ನುರಕ್ಷಿಸಿಕೊಳ್ಳುವಲ್ಲಿ ಭಾರತ ಮಹತ್ವದ ಯಶಸ್ಸು ಸಾಧಿಸಿದೆ ಎಂದು ವಿಜ್ಞಾನಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್ಪರಂಪರಾಗತಜ್ಞಾನದ ಡಿಜಿಲ್ ಲೈಬ್ರೆರಿ (ಟಿಕೆಡಿಎಲ್ಪ್ರಕಟಿಸಿತುಗಿಡಮೂಲಿಕೆಗಳ ಸಾರಹೊಂದಿದ ಮೌತ್ವಾಶ್ ಫಾರ್ಮುಲಾಕ್ಕೆ ಪೇಟೆಂಟ್ ಪಡೆಯಲು ಅಮೆರಿಕಮೂಲದ ಗ್ರಾಹಕ ವಸ್ತುಗಳ ದೈತ್ಯ ಕೋಲ್ಗೇಟ್-ಪಾಮೋಲಿವ್ ನಡೆಸಿದ್ದಇಂತಹುದೇ ಯತ್ನವನ್ನು ವಿಫಲಗೊಳಿಸಿದ ಬೆನ್ನಲ್ಲೇ ಭಾರತಕ್ಕೆ  ಯಶಸ್ಸುಪ್ರಾಪ್ತವಾಗಿದೆವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ಐಆರ್ಪರಂಪರಾಗತ ಜ್ಞಾನದ ಡಿಜಿಲ್ ಲೈಬ್ರೆರಿ (ಟಿಕೆಡಿಎಲ್ವಹಿಸಿದ್ದನಿರಂತರ ಜಾಗೃತಿಯು  ನಿಟ್ಟಿನಲ್ಲಿ ಭಾರತಕ್ಕೆ ನೆರವಾಗಿದೆಐರೋಪ್ಯಪೇಟೆಂಟ್ ಕಚೇರಿಗೆ ಮಂಡಳಿಯು ಸಲ್ಲಿಸಿದ ಪತ್ರವು ಭಾರತದ ಪ್ರಾಚೀನವೈದ್ಯಕೀಯ ವ್ಯವಸ್ಥೆಗಳಾದ ಆಯುರ್ವೆದ ಮತ್ತು ಯುನಾನಿ ಪದ್ಧತಿಗಳಲ್ಲಿಪುರಾತನ ಕಾಲದಿಂದಲೇ ಕೂದಲು ನಷ್ಟಕ್ಕೆ ಚಿಕಿತ್ಸೆ ನೀಡಲು ಅರಶಿನ,ದೇವದಾರು ತೊಗಟೆ/ಚಕ್ಕೆ ಮತ್ತು ಹಸಿರು ಚಹಾ ಬಳಸಲಾಗುತ್ತಿತ್ತುಎಂಬುದನ್ನು ಸಾಬೀತು ಪಡಿಸಿದೆಇಂಗ್ಲೆಂಡ್ ಮೂಲದ ಪಾಂಗೆಯಿಯಲ್ಯಾಬೋರೇಟರೀಸ್ ಲಿಮಿಟೆಡ್ 2011 ಫೆಬ್ರುವರಿಯಲ್ಲಿ ತನ್ನ ಪೇಟೆಂಟ್ ಅರ್ಜಿಯನ್ನು ಸಲ್ಲಿಸಿತ್ತುಆದರೆ ಐರೋಪ್ಯ ಪೇಟೆಂಟ್ ಕಚೇರಿಯ ವೆಬ್ಸೈಟ್ನಲ್ಲಿ ಪೇಟೆಂಟ್ ಅರ್ಜಿ ಪ್ರಕಟಗೊಂಡ ಬೆನ್ನಲ್ಲೇ ಸಿಎಸ್ಐಆರ್-ಟಿಕೆಡಿಎಲ್ ಘಟಕವು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಲ್ಲದೆ 2014 ಜನವರಿ13ರಂದು ತನ್ನ ಆಕ್ಷೇಪಕ್ಕೆ ಸಾಕ್ಷ್ಯಾರಗಳನ್ನೂ ಸಲ್ಲಿಸಿತ್ತುಭಾರತದ ಸಾಕ್ಷ್ಯಾಧಾರವನ್ನು ಆಧರಿಸಿ ಅಂತಿಮವಾಗಿ  ವರ್ಷ ಜೂನ್ 29ರಂದುಅರ್ಜಿದಾರ ಸಂಸ್ಥೆಯು ತನ್ನ ಪೇಟೆಂಟ್ ಅರ್ಜಿಯನ್ನು ಹಿಂತೆಗೆದುಕೊಂಡಿತುಈವರೆಗೆ ಸುಮಾರು 200 ಪ್ರಕರಣಗಳಲ್ಲಿ ಸರ್ಕಾರಿ ಬೊಕ್ಕಸಕ್ಕೆಯಾವುದೇ ಹೆಚ್ಚಿನ ವೆಚ್ಚವೂ ಆಗದಂತೆ ಪರಿಸ್ಥಿತಿ ನಿಭಾಯಿಸಿ ಯಶಸ್ಸು ಗಳಿಸಿರುವ ಟಿಕೆಡಿಎಲ್ ಕಿರೀಟಕ್ಕೆ ಕೋಲ್ಗೇಟ್ಪಾಮೋಲಿವ್ ಮತ್ತುಪಾಂಗೇಯಿಯ ಲ್ಯಾಬೋರೇಟರೀಸ್ ಲಿಮಿಟೆಡ್ ವಿರುದ್ಧದ ಯಶಸ್ಸು ಇನ್ನೊಂದು ಗರಿ ಮೂಡಿಸಿದೆ. ‘ಜಯಫಲ್’ (ಜಾಯಿಕಾಯಿಸಾರ ಹೊಂದಿದಮೌತ್ ವಾಶ್ ಫಾರ್ಮುಲಾಕ್ಕೆ ಪೇಟೆಂಟ್ ಗಳಿಸುವ ಕೋಲ್ಗೇಟ್-ಪಾಮೋಲಿವ್ ಯತ್ನವನ್ನು ಟಿಕೆಡಿಎಲ್ ಇತ್ತೀಚೆಗೆ ವಿಫಲಗೊಳಿಸಿತ್ತುಹಿರಿಯವಿಜ್ಞಾನಿ ಅರ್ಚನಾ ಶರ್ಮಾ ನೇತೃತ್ವದ ಸಿಎಸ್ಐಆರ್  ಪರಂಪರಾಗತ ಜ್ಞಾನದ ಡಿಜಿಟಲ್ ಲೈಬ್ರೆರಿಯು ಪ್ರಾಚೀನ ಗ್ರಂಥಗಳಲ್ಲಿನಉಲ್ಲೇಖಗಳನ್ನು ಸಾಕ್ಷ್ಯಾಧಾರವಾಗಿ ಸಲ್ಲಿಸಿ ಗಿಡಮೂಲಿಕೆಗಳು ಮತ್ತು ಅವುಗಳ ಸಾರವನ್ನು ಭಾರತೀಯ ವೈದ್ಯಕೀಯ ಪದ್ಧತಿಗಳಲ್ಲಿ ಮೌಖಿಕವ್ಯಾಧಿಗಳಿಗೆ ಚಿಕಿತ್ಸೆಗಾಗಿ ಬಳಸಲಾಗುತ್ತಿತ್ತು ಎಂದು ತಿಳಿಸಿತ್ತು ಎಂದು ಟಿಕೆಡಿಎಲ್ ಪ್ರಕಟಣೆ ಹೇಳಿತುಆಯುರ್ವೆದಯುನಾನಿಸಿದ್ಧ ಮತ್ತುಯೋಗ ಇತ್ಯಾದಿ ಭಾರತದ ಪ್ರಾಚೀನ ವೈದ್ಯಕೀಯ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದ್ದ 25,000ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಪಟ್ಟಿ ಮಾಡಿರುವಟಿಕೆಡಿಎಲ್ರಾಷ್ಟ್ರದ  ಪರಂಪಾರಗತ ವೈದ್ಯಕೀಯ ಜ್ಞಾನವು ಅಂತಾರಾಷ್ಟ್ರೀಯ ಪೇಟೆಂಟ್ ಕಚೇರಿಗಳಲ್ಲಿ ದುರುಪಯೋಗವಾಗದಂತೆ ನಿಗಾಇಟ್ಟು ಕಾರ್ಯ ನಿರ್ವಹಿಸುತ್ತಿದೆ.
2015: ರಾಝುನ್ (ರಷ್ಯಾ): ರಷ್ಯಾದಲ್ಲಿ ಮೊದಲ ಸೇನಾ ಒಲಿಂಪಿಕ್ಸ್ನಲ್ಲಿ ಸ್ಪರ್ಧೆಯ ಅಂಗವಾಗಿ ರಾಝುನ್ ಸಮೀಪ ನಡೆಸುತ್ತಿದ್ದ ವೈಮಾನಿಕಕವಾಯತು ವೇಳೆಯಲ್ಲಿ ಸೇನಾ ಹೆಲಿಕಾಪ್ಟರ್ ಮಿ-28ಎನ್ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಒಬ್ಬ ಪೈಲಟ್ ಸಾವನ್ನಪ್ಪಿದಹೆಲಿಕಾಪ್ಟರ್ ದುರಂತಕ್ಕೆಈಡಾಗುವ ವೇಳೆಯಲ್ಲಿ ಹೊರಹಾರಲು ಸಫಲನಾದ ಒಬ್ಬ ಪೈಲಟ್ ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾನೆಆದರೆ ಇನ್ನೊಬ್ಬ ಪೈಲಟ್ಅಸು ನೀಗಿದ್ದಾನೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿತುಕವಾಯತಿನ ಕಾಲದಲ್ಲಿ ಸ್ಟಂಟ್ ಪ್ರದರ್ಶಿಸುತ್ತಿದ್ದಾಗ ಬೆರ್ಕುಟಿ ವೈಮಾನಿಕಕವಾಯತು ತಂಡಕ್ಕೆ ಸೇರಿದ ಹೆಲಿಕಾಪ್ಟರ್ ಒಂದೇ ಕಡೆಗೆ ವಾಲಿ ನೆಲದತ್ತ ಸಾಗತೊಡಗಿತುಹಾಗೆಯೇ ಮುಂದುವರೆದ ವಿಮಾನ ಸ್ವಲ್ಪಹೊತ್ತಿನಲ್ಲೇ ನೆಲಕ್ಕೆ ಅಪ್ಪಳಿಸಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿತು.

2015: ಮುಂಬೈವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧ ಹೇರಲಾಗಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ಅಸೋಸಿಯೇಶನ್ (ಎಂಸಿಎಭಾನುವಾರ ರದ್ದು ಪಡಿಸಿತು. 2012ರಲ್ಲಿ ಶಾರುಖ್ ಖಾನ್ ವಿರುದ್ಧ ನಿಷೇಧ ಹೇರಲಾಗಿತ್ತುಇಂಡಿಯನ್ಪ್ರೀಮಿಯರ್ ಲೀಗ್ ಅಂತಿಮ ಪಂದ್ಯವು ಮುಂಬೈಗೆ ಸ್ಥಳಾಂತರಗೊಂಡರೆ ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧಹೇರಲಾಗಿದ್ದ ನಿಷೇಧವನ್ನು ರದ್ದು ಪಡಿಸಲು ತಾನು ಸಿದ್ಧ ಎಂದು ಅಸೋಸಿಯೇಶನ್ ಇತ್ತೀಚೆಗೆ ಪ್ರಕಟಿಸಿತ್ತುಎಂಸಿಎ ಅಧಿಕಾರಿಗಳ ಜೊತೆಗೆಘರ್ಷಣೆ ನಡೆಸಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಶಾರುಖ್ ಖಾನ್ ಅವರಿಗೆ ವಾಖೇಡೆ ಕ್ರೀಡಾಂಗಣ ಪ್ರವೇಶವನ್ನು ನಿಷೇಧಿಸಲಾಗಿತ್ತು.

2015: ಜೋಧಪುರಅತ್ಯಾಚಾರ ಆರೋಪ ಎದುರಿಸುತ್ತಿರುವ ‘ಸ್ವಯಂಘೊಷಿತ ದೇವಮಾನವ’ ಅಸಾರಾಂ ಬಾಪು ಹೆಸರು ರಾಜಸ್ತಾನದಜಿಲ್ಲೆಯೊಂದರ ಮೂರನೇ ತರಗತಿಯ ಪಠ್ಯಪುಸ್ತಕವೊಂದರಲ್ಲಿ ಸಂತರಿಗೆ ಸಂಬಂಧಿಸಿದ ಅಧ್ಯಾಯದಲ್ಲಿ ವಿವೇಕಾನಂದಮದರ್ ತೆರೇಸಾ,ಮತ್ತು ರಾಮಕೃಷ್ಣ ಪರಮಹಂಸರ ಹೆಸರುಗಳ ಜೊತೆಗೆ ಸೇರ್ಪಡೆಯಾಗಿರುವುದು ಬೆಳಕಿಗೆ ಬಂದಿತುಜಿಲ್ಲೆಯ ಹಲವಾರು ಶಾಲೆಗಳಲ್ಲಿಬಳಕೆಯಾಗುತ್ತಿರುವ ’ನಯಾ ಉಜಾಲಾ’ ಸಾಮಾನ್ಯ ಜ್ಞಾನ ಪಠ್ಯಪುಸ್ತಕದಲ್ಲಿ ನೀತಿಪಾಠದಲ್ಲಿರುವ ಸಂತರ ಹೆಸರುಗಳ ಪಟ್ಟಿಯಲ್ಲಿ ಯೋಗಗುರುರಾಮದೇವ್ ಅವರ ಹೆಸರೂ ಸೇರಿದೆ. ಅಧ್ಯಾಯದಲ್ಲಿ ಗುರುನಾನಕ್ಕಬೀರ್ಮೀರಾಬಾಯಿ ಮತ್ತು ಶಂಕರಾಚಾರ್ಯ ಅವರ ಚಿತ್ರಗಳು ಇವೆ.ಚಿತ್ರದಲ್ಲಿ ಇರುವವರನ್ನು ಗುರುತಿಸುವಂತೆ ಮಕ್ಕಳಿಗೆ ಸೂಚಿಸಲಾಗಿದ್ದುಅಸಾರಾಂ ಹೆಸರೂ ಅದರಲ್ಲಿ ಸೇರಿದೆದೆಹಲಿ ಮೂಲದ ಪ್ರಕಾಶಕರಾದಗುರುಕುಲ ಎಜುಕೇಷನ್ ಬುಕ್ಸ್  ಪುಸ್ತಕವನ್ನು ಸರಬರಾಜು ಮಾಡಿದೆ. ‘ಪುಸ್ತಕ ಪ್ರಕಟವಾದಾಗ ಅಸಾರಾಂ ವಿರುದ್ಧ ಯಾವುದೇ ಪ್ರಕರಣವೂಇರಲಿಲ್ಲ’ ಎಂದು ಪ್ರಕಾಶಕ ಸಂಸ್ಥೆಯ ಪ್ರತಿನಿಧಿ ಪಠ್ಯ ಪುಸ್ತಕದಲ್ಲಿ ಅಸಾರಾಂ ಹೆಸರು ಸೇರಿರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದರುನಾವು ಈಗಮಾರುಕಟ್ಟೆಯಿಂದ  ಪುಸ್ತಕದ ಪ್ರತಿಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇವೆಮತ್ತು ಅಸಾರಾಂ ರಹಿತವಾದ ನೂತನ ಆವೃತ್ತಿಯನ್ನು ಸಿದ್ಧಪಡಿಸುತ್ತಿದ್ದೇವೆ’ ಎಂದು ಅವರು ನುಡಿದರುಶಿಕ್ಷಣ ಇಲಾಖೆಯ ಅಧಿಕಾರಿಗಳು  ಬಗ್ಗೆ ತಮಗೆ ಅರಿವು ಇಲ್ಲ ಎಂದು ತಿಳಿಸಿದರುಏನಿದ್ದರೂ ಪುಸ್ತಕವು ಪಠ್ಯದ ಭಾಗವಾಗಿರುವ ಶಾಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಹೇಳಿದರು. 16 ಹರೆಯದಬಾಲಕಿಯೊಬ್ಬಳು ಅಸಾರಾಂ ಅವರ ಜೋಧಪುರ ಆಶ್ರಮದಲ್ಲಿ ಸ್ವಯಂಘೊಷಿತ ದೇವಮಾನವ ತನ್ನ ಮೇಲೆ ಲೈಂಗಿಕ ಹಲ್ಲೆ ನಡೆಸಿರುವುದಾಗಿಆಪಾದಿಸಿ ಪೊಲೀಸರಿಗೆ ದೂರು ನೀಡಿದ ಬಳಿಕ 2013 ಆಗಸ್ಟ್ ತಿಂಗಳಲ್ಲಿ ಅಸಾರಾಂ ಬಂಧನವಾಗಿದ್ದು ಈಗಲೂ ಸೆರೆವಾಸ ಮುಂದುವರೆದಿದೆ.

2015: ಮುಂಬೈಸದಾ ಒಂದಲ್ಲಾ ಒಂದು ವಿವಾದದಿಂದ ಸುದ್ದಿಯಾಗುತ್ತಲೇ ಇರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ತನ್ನ ಸಹೋದರಿಅರ್ಪಿತಾ ಖಾನ್ ಮಾಡಿಕೊಂಡ ಅವಾಂತರದಿಂದ ಸುದ್ದಿಯಾದರುಪಾರ್ಟಿ ಹೆಸರಲ್ಲಿ ಎಲ್ಲೆಮೀರುವಂತೆ ಮ್ಯೂಸಿಕ್ ಹಾಕಿಕೊಂಡು ಕುಣಿದುಕುಪ್ಪಳಿಸುತ್ತಿದ್ದ ಹಿನ್ನೆಲೆಯಲ್ಲಿ ಈದಿನ ನಸುಕಿನಲ್ಲಿ ನೆರೆಹೊರೆಯವರ ದೂರು ಆಧರಿಸಿ ಪೊಲೀಸರು ದಿಢೀರ್ ದಾಳಿ ನಡೆಸಿದರುಪಾರ್ಟಿಯಲ್ಲಿಬಾಲಿವುಡ್ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರುಪಾರ್ಟಿ ಅರ್ಪಿತಾ ಖಾನ್ ಹೆಸರಲ್ಲಿ ಸಂತೋಷ್ ಮಾನೆ ಎನ್ನುವವರು ಆಯೋಜಿಸಿದ್ದರುಎನ್ನಲಾಯಿತು ಘಟನೆ ನಡೆದಿರುವುದು ತಡರಾತ್ರಿ 2.30 ಸುಮಾರಿಗೆಪಾಲಿ ಹಿಲ್ನಲ್ಲಿರುವ  ಮನೆಯಲ್ಲಿ ರಾತ್ರಿಯೆಲ್ಲಾ ಜೋರಾಗಿಮ್ಯೂಸಿಕ್ ಹಾಕಿಕೊಂಡು ಕುಣಿದು ಸದ್ದು ಮಾಡುತ್ತಿರುವುದರಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ನೆರೆಹೊರೆಯವರು ತಕ್ಷಣ ಸಮೀಪದ ಖಾರ್ಪೊಲೀಸ್ ಠಾಣೆಗೆ ದೂರು ನೀಡಿದ್ದರುತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಅರ್ಪಿತಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರುಪೊಲೀಸರನ್ನುಕಾಣುತ್ತಿದ್ದಂತೆ ಮ್ಯೂಸಿಕ್ ನಿಲ್ಲಿಸಿದ ಆಯೋಜಕ ಮಾನೆಗೆ ನಿಯಮದಂತೆ 12,500 ರೂಪಾಯಿ ದಂಡ ವಿಧಿಸಲಾಯಿತುಅಲ್ಲದೇ ಮಾನೆ ವಿರುದ್ಧಮಹಾರಾಷ್ಟ್ರ ಪೊಲೀಸ್ ಕಾಯ್ದೆಯಡಿ ಸೆಕ್ಷನ್ 33 (ಆರ್) (3) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.

2015: ಕೋಲ್ಕತ್ತಾಎಲ್ಲವೂ ಅಂದುಕೊಂಡಂತೆ ಆದರೆ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿವಾರಣೆಗೆ ಕೆಲವೇ ದಿನಗಳಲ್ಲಿಡ್ರೋಣ್ ಬಳಕೆ ಆರಂಭವಾಗಲಿದೆಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿಯಂತ್ರಿಸಲು ಡ್ರೋಣ್ ಬಳಕೆ ಮಾಡಲುಡೆಹ್ರಾಡೋನ್ ‘ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ’ ವಿಜ್ಞಾನಿಗಳು ನಿರ್ಧರಿಸಿದರುಗ್ರಾಮಗಳಿಗೆ ಹೊಂದಿಕೊಂಡಂತಿರುವ ಅರಣ್ಯಪ್ರದೇಶಗಳ ಪರಿಧಿಯಲ್ಲಿ  ಡ್ರೋಣ್ ಹಾರಿ ಬಿಡಲಾಗುತ್ತದೆಹುಲಿಆನೆಯಂತಹ ಯಾವುದೇ ಅಪಾಯಕಾರಿ ಪ್ರಾಣಿ ಗ್ರಾಮದತ್ತ ಬರುತ್ತಿದ್ದಲ್ಲಿಡ್ರೋಣ್ನಲ್ಲಿ ಅಳವಡಿಸಲಾಗಿರುವ ಕ್ಯಾಮರಾ ಮೂಲಕ ಪತ್ತೆಯಾಗಲಿದೆತಕ್ಷಣ ಕಾರ್ಯಪ್ರವೃತ್ತರಾಗುವ ಅರಣ್ಯ ಇಲಾಖೆ ಅಧಿಕಾರಿಗಳುಗ್ರಾಮಸ್ಥರಿಗೆ ತೊಂದರೆಯಾಗದಂತೆ ಕ್ರಮವಹಿಸುತ್ತಾರೆ ಎಂದು ವನ್ಯ ಜೀವಿ ವಿಜ್ಞಾನಿ ಹಾಗೂ ಯೋಜನೆ ಉಸ್ತುವಾರಿ ಕೆ.ರಮೇಶ್ ತಿಳಿಸಿದರು.

2015: ಶ್ರೀನಗರಪಾಕಿಸ್ತಾನ ಪಡೆ ಮತ್ತೆ ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದುಭಾರತೀಯ ಯೋಧರುಮತ್ತು ಪಾಕ್ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತುಆರ್ಎಸ್ ಪುರ ಸೆಕ್ಟರ್ ವ್ಯಾಪ್ತಿಯಲ್ಲಿ ಗಡಿ ಒಳಪ್ರವೇಶಕ್ಕೆ ಮುಂದಾದ ಪಾಕ್ ಪಡೆಈದಿನ ಬೆಳಗ್ಗೆಯೂ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ಮಳೆ ಗರೆಯಿತುಭಾರತೀಯ ಯೋಧರೂ ತಕ್ಕ ಉತ್ತರ ನೀಡಿದರುಕಳೆದೊಂದುತಿಂಗಳಿಂದ ಪಾಕ್ ಪಡೆ ಭಾರತದೊಳಕ್ಕೆ ನುಸುಳಲು ಪದೇ ಪದೇ ಮುಂದಾಗುತ್ತಲೇ ಇದೆಕೆಲ ದಿನಗಳ ಹಿಂದಷ್ಟೇ ಪಾಕ್ ಪಡೆಯ ದಾಳಿಗೆಭಾರತೀಯ ಯೋಧನೋರ್ವ ಅಸುನೀಗಿದ್ದ.
2015: ಜಕಾರ್ತ (ಇಂಡೋನೇಷ್ಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ಜೊಂಗ್-ಉನ್ ಅವರು ‘ಜಾಗತಿಕ ಮುತ್ಸದ್ಧಿ’ ಪ್ರಶಸ್ತಿಗೆಪಾತ್ರರಾದರುಬಾಲಿಯ ಸುಕರ್ಣೋ ಕೇಂದ್ರದಲ್ಲಿ ಕಿಮ್ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಇಂಡೋನೇಷ್ಯಾದ ಸ್ಥಾಪಕಅಧ್ಯಕ್ಷರ ಪುತ್ರಿ ರಚ್ಮಾವತಿ ಸುಕರ್ಣೋಪುತ್ರಿ ಪ್ರಕಟಿಸಿದರು. ‘ಸಾಮ್ಯಾಜ್ಯ ಶಾಹಿ ವಿರುದ್ಧ ಹೋರಾಡಿದ ಕಿಮ್ಸುಂಗ್ ಅವರ ತತ್ವಾದರ್ಶಗಳನ್ನುಅಧ್ಯಕ್ಷ ಕಿಮ್ಜೊಂಗ್ ಮುಂದಕ್ಕೆ ಒಯ್ಯುತ್ತಿದ್ದಾರಾದ್ದರಿಂದ ಅವರಿಗೆ ನಾವು  ಪ್ರಶಸ್ತಿಯನ್ನು ನೀಡುತ್ತಿದ್ದೇವೆ’ ಎಂದು ಅವರು ನುಡಿದರುಹಿಂದೆ ಮಹಾತ್ಮಾ ಗಾಂಧಿಅಂಗ್ ಸಾನ್ ಸೂ-ಕಿ ಅವರಿಗೆ  ಪ್ರಶಸ್ತಿ ಲಭಿಸಿತ್ತು.

2015: ಕೋಪೆನ್ ಹೊಗನ್ಭಾರತದ ಮಹಿಳಾ ರಿಕರ್ವ್ ಅರ್ಚರಿ ತಂಡ ರಷ್ಯಾ ವಿರುದ್ಧದ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ 4-5ರಿಂದಸೋಲನುಭವಿಸಿಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತುಭಾರತದ ಮಹಿಳಾ ರಿಕರ್ವ್ ತಂಡ ಫೈನಲ್ನಲ್ಲಿ ರಷ್ಯಾದೊಂದಿಗೆ ಸಮಬಲ ಹೊಂದಿತ್ತು.ಆದರೆ ಟೈಬ್ರೇಕರ್ನಲ್ಲಿ (27-28) ಕೇವಲ ಒಂದು ಅಂಕದ ವ್ಯತ್ಯಾಸದಲ್ಲಿ ಚಿನ್ನದ ಪದಕವನ್ನು ರಷ್ಯಾ ತಂಡಕ್ಕೆ ಬಿಟ್ಟುಕೊಟ್ಟಿತು.

2015: ನವದೆಹಲಿಭಾರತ ಹಂತಹಂತವಾಗಿ ಜಾಗತಿಕ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ತಾಣವಾಗಿ ಮಾರ್ಪಡುತ್ತಿದೆಇಲ್ಲಿ ಶಸ್ತ್ರಚಿಕಿತ್ಸೆ ಶುಲ್ಕಕಡಿಮೆ ಇರುವುದಲ್ಲದೆಗುಣಮಟ್ಟದ ಸೇವೆಗಳು ದೊರೆಯುತ್ತವೆ ಎಂಬುದು ಇದಕ್ಕೆ ಕಾರಣಒಂದು ಮೂಲದ ಪ್ರಕಾರ ಬ್ರಿಟನ್ನಲ್ಲಿಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆಗೆ 40 ಲಕ್ಷ ರೂಶುಲ್ಕ ತಗಲುತ್ತದೆ ಶಸ್ತ್ರಚಿಕಿತ್ಸೆ ಅಲ್ಲಿನ ನ್ಯಾಷನಲ್ ಹೆಲ್ತ್ ಸರ್ವಿಸ್ನಲ್ಲಿ ಸೇರ್ಪಡೆಗೊಂಡಿದ್ದು,ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಜನರಿಗೆ ಕೊಡಲಾಗುತ್ತಿದೆಆದರೆ  ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಈಗಾಗಲೆ ಲಕ್ಷಾಂತರಜನರು ಹೆಸರು ನೋಂದಾಯಿಸಿಕೊಂಡಿದ್ದಾರೆಹಾಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಜನರು ನಾಲ್ಕಾರು ವರ್ಷಗಳವರೆಗೆ ಕಾಯಬೇಕಾದಪರಿಸ್ಥಿತಿ ಇದೆ ಹಿಂದೆ ಜಾಗತಿಕ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸಾ ಕೇಂದ್ರ ಎಂಬ ಹೆಗ್ಗಳಿಕೆ ಥಾಯ್ಲೆಂಡ್ನದ್ದಾಗಿತ್ತುಅಲ್ಲಿ ಈಗ ಲಿಂಗಪರಿವರ್ತನೆಶಸ್ತ್ರಚಿಕಿತ್ಸೆಗಾಗಿ 7.5 ಲಕ್ಷ ರೂಗಳಿಂದ 11 ಲಕ್ಷ ರೂ.ವರೆಗೆ ಶುಲ್ಕ ಇದೆಇಷ್ಟು ಮೊತ್ತ ಕೊಟ್ಟರೂ ಗುಣಮಟ್ಟದ ಸೇವೆ ಲಭಿಸುವ ಖಾತ್ರಿಇಲ್ಲವಾಗಿದೆರಷ್ಯಾದಲ್ಲಿ ಕೂಡ ಶಸ್ತ್ರಚಿಕಿತ್ಸೆ ಶುಲ್ಕ ಕಡಿಮೆ ಇದೆಆದರೆ ಭಾರತದಲ್ಲಿ ದೊರೆಯುವಂತಹ ಗುಣಮಟ್ಟದ ಸೇವೆ ಲಭಿಸುವುದಿಲ್ಲವೆಂಬಕಾರಣಕ್ಕಾಗಿ ಅಲ್ಲಿನ ವೈದ್ಯರೇ ತಮ್ಮ ಬಳಿ ಬರುವವರನ್ನು ಭಾರತಕ್ಕೆ ಕಳುಹಿಸಿ ಕೊಡಲಾರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ ಕುರಿತುಅಧ್ಯಯನ ನಡೆಸಿರುವ ಕೆಪಿಎಂಜಿ-ಎಫ್ಐಸಿಸಿಐ ಸಂಸ್ಥೆಗಳ ವರದಿ ಪ್ರಕಾರ ಲಿಂಗಪರಿವರ್ತನೆ ಶಸ್ತ್ರಚಿಕಿತ್ಸೆ ಬಯಸಿ ವಿಶ್ವದ ನಾನಾ ಭಾಗಗಳಿಂದಸುಮಾರು 32 ಕೋಟಿ ತೃತೀಯ ಲಿಂಗಿಗಳು ಭಾರತಕ್ಕೆ ಬರುವ ಸಾಧ್ಯತೆಯಿದೆಮುಂದೆ  ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇಅನುಮಾನವಿಲ್ಲವೆಂದು ಹೇಳಲಾಗಿದೆ.
2008: ಕೊಲಂಬೋದಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರ ಶ್ರೀಲಂಕಾದಲ್ಲಿ ಸೇನೆ ಹಾಗೂ ಎಲ್ ಟಿ ಟಿ ಇ ನಡುವಣ ಕಾಳಗದಲ್ಲಿ 52 ಮಂದಿ ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹದಿನಾಲ್ಕು ಮಂದಿ ಸೈನಿಕರು ಹಾಗೂ 38 ಮಂದಿ ಎಲ್ ಟಿ ಟಿ ಐ ಉಗ್ರರು ಎಂದು ಸೇನೆ ಹೇಳಿತು.

2007: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಸ್ಟ್ 30ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆ ನಡೆಯಬೇಕಿದ್ದ 208 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 163 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಈಗ ಚುನಾವಣೆ ನಡೆಯಲಿದೆ ಎಂದು ಆಯೋಗದ ಮುಖ್ಯ ಆಯುಕ್ತ ಎಂ.ಆರ್. ಹೆಗಡೆ ಹಾಗೂ ಅಧೀನ ಕಾರ್ಯದರ್ಶಿ ಎಚ್. ಎಸ್. ಉದಯಶಂಕರ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ನವದೆಹಲಿಯ ಗುತ್ತಿಗೆದಾರರೊಬ್ಬರಿಂದ ರೂ 5 ಕೋಟಿಗಳನ್ನು ಬಲವಂತವಾಗಿ ವಸೂಲಿ ಮಾಡಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಭೂಗತ ದೊರೆ ಅಬು ಸಲೇಂನನ್ನು ಈ ಹಿಂದೆ ಹಾಜರುಪಡಿಸಲು ವಿಫಲವಾಗಿರುವ ಮುಂಬೈ ಪೊಲೀಸರಿಗೆ ಈಗ ಆತನನ್ನು ತನ್ನ ಮುಂದೆ ಹಾಜರುಪಡಿಸುವಂತೆ ಸ್ಥಳೀಯ ನ್ಯಾಯಾಲಯವೊಂದು ವಾರಂಟ್ ಹೊರಡಿಸಿತು. ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಕೌರ್ ಅವರು ಆಗಸ್ಟ್ 21ರಂದು ಅಬು ಸಲೇಂನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕ್ರಮ ಕೈಗೊಳ್ಳುವಂತೆ ಮುಂಬೈನ ಅರ್ಥರ್ ಕಾರಾಗೃಹ ಆಡಳಿತಕ್ಕೆ ನಿರ್ದೇಶನ ನೀಡಿದರು. ದಕ್ಷಿಣ ದೆಹಲಿಯ ಗುತ್ತಿಗೆದಾರ ಅಶೋಕ್ ಗುಪ್ತ ಎಂಬವರಿಗೆ ಸಲೇಂ ಮತ್ತು ಆತನ ಸಹಚರರು 2002ರಲ್ಲಿ ಬೆದರಿಕೆ ಹಾಕಿರುವ ಆರೋಪವಿತ್ತು.

2007: ಅಮೆರಿಕದ ಮಿನ್ನಿಯಾಪೊಲೀಸ್ ಹೆದ್ದಾರಿಯಲ್ಲಿ ಮಿಸಿಸಿಪ್ಪಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕುಸಿದು ಐವರು ಮೃತಪಟ್ಟು 20 ಜನರು ನಾಪತ್ತೆಯಾದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ಅಮೆರಿಕದ ಪೊಲೀಸ್ ಇಲಾಖೆ ಖಚಿತಪಡಿಸಿತು.

2007: ಪತ್ನಿ ಶಕೀರಾ ಅವರನ್ನು ಕೊಲೆ ಮಾಡಿದ ಸ್ವಾಮಿ ಶ್ರದ್ಧಾನಂದ ಅವರಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಪ್ರಕರಣದ ವಿಚಾರಣಾ ಪೀಠದಲ್ಲಿ ಕುಳಿತುಕೊಳ್ಳಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕರ್ನಾಟಕ ಮೂಲದ ಆರ್.ವಿ. ರವೀಂದ್ರನ್ ನಿರಾಕರಿಸಿದರು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠದ ಮುಂದೆ ಪ್ರಕರಣ ಬಂದಾಗ, ರವೀಂದ್ರನ್ ಅವರು ತಮ್ಮನ್ನು ವಿಚಾರಣಾ ಪೀಠದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡರು. ಈ ಬೆಳವಣಿಗೆಯಿಂದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳಿರುವ ಮತ್ತೊಂದು ಪೀಠಕ್ಕೆ ವರ್ಗಾಯಿಸಿದರು. ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾದ ಬೇಗಂ ಶಕೀರಾ ಅವರ ಅಪಾರ ಪ್ರಮಾಣದ ಆಸ್ತಿ ಲಪಟಾಯಿಸಲು ಶ್ರದ್ಧಾನಂದ 1986ರಲ್ಲಿ ಮದುವೆಯಾಗಿದ್ದರು. ನಂತರ 1991ರಲ್ಲಿ ಶಕೀರಾ ಅವರನ್ನು ಜೀವಂತವಾಗಿ ಬೆಂಗಳೂರಿನಲ್ಲಿರುವ ತಮ್ಮ ಬಂಗ್ಲೆಯ ಆವರಣದಲ್ಲಿಯೇ ಹೂತುಹಾಕಿದ್ದರು. ಸ್ವಯಂ ಘೋಷಿತ ಸ್ವಾಮಿ ಶ್ರದ್ಧಾನಂದ ಅವರು ತಮ್ಮ ಪತ್ನಿಯನ್ನು ಹತ್ಯೆ ಮಾಡಿದರು ಎಂದು ವಿಚಾರಣಾ ನ್ಯಾಯಾಲಯ ತೀರ್ಪುನೀಡಿ, ಮರಣ ದಂಡನೆ ವಿಧಿಸಿತು. ಈ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿಯಿತು. 2005ರಲ್ಲಿ ಹೈಕೋರ್ಟ್ ತೀರ್ಪನ್ನು ಶ್ರದ್ಧಾನಂದ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದರು. 2007ರ ಮೇ 19ರಂದು ಶ್ರದ್ಧಾನಂದ ಅವರನ್ನು ತಪ್ಪಿತಸ್ಥರೆಂದು ತೀರ್ಪು ನೀಡಿದ ದ್ವಿಸದಸ್ಯ ನ್ಯಾಯಪೀಠ, ಶಿಕ್ಷೆ ಪ್ರಮಾಣ ಪ್ರಕಟಿಸುವಲ್ಲಿ ವಿಭಿನ್ನ ಅಭಿಪ್ರಾಯ ತಾಳಿತು. ನ್ಯಾಯಮೂರ್ತಿ ಎಸ್.ಬಿ. ಸಿನ್ಹಾ ಅವರು ಜೀವಾವಧಿ ಶಿಕ್ಷೆ ನೀಡಿದರೆ, ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಮರಣ ದಂಡನೆಯನ್ನು ಎತ್ತಿ ಹಿಡಿದಿದ್ದರು. ಇದರಿಂದಾಗಿ ಶಿಕ್ಷೆಯ ಪ್ರಮಾಣವನ್ನು ಸ್ಪಷ್ಟಗೊಳಿಸಲು ಉನ್ನತ ಪೀಠಕ್ಕೆ ಪ್ರಕರಣವನ್ನು ರವಾನಿಸಲಾಗಿತ್ತು.

2007: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ಕೇರಳದಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವನ್ನು (ಆರ್ ಜಿ ಸಿ ಬಿ) ತನ್ನ ವಶಕ್ಕೆ ತೆಗೆದುಕೊಂಡು ಅದಕ್ಕೆ ಸ್ವಾಯತ್ತತೆ ನೀಡುವ ನಿರ್ಧಾರ ಕೈಗೊಂಡಿತು. ಆರ್ ಜಿ ಸಿ ಬಿ ವಶಕ್ಕೆ ತೆಗೆದುಕೊಳ್ಳುವುದರಿಂದ ರಾಜ್ಯ ಹಾಗೂ ಆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ವಾರ್ತಾ ಹಾಗೂ ಪ್ರಸಾರ ಸಚಿವ ಪಿ.ಆರ್. ದಾಸ್ ಮುನ್ಷಿ ಸಂಪುಟ ಸಭೆಯ ನಂತರ ಪ್ರಕಟಿಸಿದರು.

2007: ರಷ್ಯದ ಎರಡು ಮಿನಿ ಜಲಾಂತರ್ಗಾಮಿಗಳು 27 ನಿಮಿಷಗಳ ಅಂತರದಲ್ಲಿ ಉತ್ತರ ಧ್ರುವದಲ್ಲಿರುವ ಆರ್ಕ್ಟಿಕ್ ಸಮುದ್ರದ ತಳವನ್ನು ಯಶಸ್ವಿಯಾಗಿ ಮುಟ್ಟಿದವು. ಮೀರ್- 1 ಮತ್ತು ಮೀರ್- 2 ಹೆಸರಿನ ಈ ಜಲಾಂತರ್ಗಾಮಿಗಳಲ್ಲಿ ಸಾಹಸಿ ನಾವಿಕರು 4,300 ಮೀಟರ್ ಆಳಕ್ಕೆ ತೆರಳಿ ತಮ್ಮ ಪಾರಮ್ಯ ಪ್ರದರ್ಶಿಸಿದರು. ಈ ಸಮುದ್ರ ಪ್ರದೇಶ ತನಗೆ ಸೇರಿದ್ದೆಂದು ರಷ್ಯ ಹೇಳುತ್ತ ಬಂದಿದ್ದು, ಕೆಲವು ರಾಷ್ಟ್ರಗಳು ಇದನ್ನು ವಿರೋಧಿಸಿದ್ದವು. ಜಲಾಂತರ್ಗಾಮಿಗಳ ಸಾಹಸದಿಂದಾಗಿ ರಷ್ಯ ಮೊದಲ ಬಾರಿಗೆ ಆರ್ಕ್ಟಿಕ್ ಸಮುದ್ರದ ಮೇಲೆ ತನ್ನ ಹಿಡಿತ ಸಾಧಿಸಿದಂತಾಯಿತು. ಅದರ ನಾವಿಕರು ಸಮುದ್ರದ ಗರ್ಭದೊಳಗೆ ಲೋಹದ ಧ್ವಜ ನೆಟ್ಟು ಬಂದರು. ಆರ್ಕ್ಟಿಕ್ ಸಮುದ್ರದಲ್ಲಿ ವಿಶ್ವದ ಶೇಕಡ 25ರಷ್ಟು ತೈಲ ನಿಕ್ಷೇಪ ಇದೆ ಎಂದು ತಜ್ಞರು ಹೇಳಿದ್ದು ಈ ಪ್ರದೇಶದ ಹಿಡಿತಕ್ಕೆ ಸ್ಪರ್ಧೆ ಆರಂಭಕ್ಕೆ ಕಾರಣವಾಯಿತು.

2007: 2007ರ ಸಾಲಿನ `ಜಿ.ಆರ್. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ'ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಎಸ್ ಐ ಆರ್ ಭಟ್ನಾಗರ್ ಫೆಲೋ ಆಗಿರುವ ಅವರು, ಸಾವಯವ ಸಮನ್ವಯ ಸಿದ್ಧಾಂತದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಈ ನೂತನ ಪರಿಕಲ್ಪನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.

2006: ಮೂರು ವರ್ಷಗಳ ಹಿಂದೆ ತಂಪು ಪಾನೀಯಗಳಲ್ಲಿ ಕೀಟನಾಶಕಗಳು ಪತ್ತೆಯಾಗಿ ಎದ್ದಿದ್ದ ಭಾರಿ ವಿವಾದ ತಣ್ಣಗಾಗುವ ಮೊದಲೇ ಕೋಕಾ ಕೋಲಾ ಮತ್ತು ಪೆಪ್ಸಿಯ 11 ಜನಪ್ರಿಯ ಬಾಂಡುಗಳಲ್ಲಿ ಅಪಾಯಕಾರಿ ಮಟ್ಟದ ಕೀಟ ನಾಶಕಗಳ ಅಂಶ ಪತ್ತೆಯಾಗಿರುವುದಾಗಿ ದೆಹಲಿಯ ಸರ್ಕಾರೇತರ ಸಂಸ್ಥೆ (ಎನ್ಜಿಓ) ವಿಜ್ಞಾನ ಮತ್ತು ಪರಿಸರ ಕೇಂದ್ರವು ನವದೆಹಲಿಯಲ್ಲಿ ಪ್ರಕಟಿಸಿತು. ಕೇಂದ್ರವು 25 ಉತ್ಪಾದನಾ ಕೇಂದ್ರಗಳಿಂದ ಸಂಗ್ರಹಿಸಿದ 11 ತಂಪು ಪಾನೀಯಗಳ 57 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ 3ರಿಂದ 5 ವಿವಿಧ ಕೀಟನಾಶಕಗಳ ಅಂಶಗಳು ಪತ್ತೆಯಾದವು ಎಂದು ಕೇಂದ್ರದ ನಿರ್ದೇಶಕಿ ಸುನೀತಾ ನಾರಾಯಣ್ ಪ್ರಕಟಿಸಿದರು.

2006: ಚೆನ್ನೈಯ ಎಂಜಿನಿಯರಿಂಗ್ ಪದವೀಧರ ಅಭಿಷೇಕ್ ಕುಮಾರ (22) ಅವರು ಮೈಕ್ರೋಸಾಫ್ಟ್ ಕಂಪೆನಿಯ ರೆಡ್ಮೊಂಡ್ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮುಖ್ಯ ಶಿಲ್ಪಿ ಬಿಲ್ ಗೇಟ್ಸ್ ಜೊತೆಗೆ ಕೆಲಸ ಮಾಡುವ ಅಪರೂಪದ ಗೌರವ ಪಡೆದರು.

2001: ಕೊಲಂಬೋದಲ್ಲಿ ನಡೆದ ಕೊಕಾ-ಕೋಲಾ ಟ್ರೋಫಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 100 ರನ್ನುಗಳನ್ನು ಗಳಿಸುವ ಮೂಲಕ ವೀರೇಂದ್ರ ಸೆಹ್ ವಾಗ್ ಅವರು ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಎರಡನೇ `ವೇಗದ ಶತಕ' (69 ಬಾಲ್ ಗಳಿಗೆ) ಬಾರಿಸಿದ ಭಾರತೀಯ ಎನಿಸಿದರು.

2006: ಮಾಜಿ ಒಲಿಂಪಿಯನ್, ಫುಟ್ ಬಾಲ್ ಆಟಗಾರ ಬಲರಾಂ ಪರಬ್ ಮುಂಬೈಯಲ್ಲಿ ನಿಧನರಾದರು.

2006: ಸಮಾಜ ಶಾಸ್ತ್ರಜ್ಞೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನಾಡೋಜ ಪ್ರೊ. ಸಿ. ಪಾರ್ವತಮ್ಮ (40) ಮೈಸೂರಿನಲ್ಲಿ ನಿಧನರಾದರು.

1990: ಸದ್ದಾಂ ಹುಸೇನ್ ಕುವೈಟ್ ಮೇಲೆ ದಾಳಿ ನಡೆಸಿದರು.

1990: ಕ್ಯೂಬಾದ ಹೆವಿವೇಯ್ಟ್ ಬಾಕ್ಸರ್ ಟಿಯೋಫಿಲೋ ಸ್ಟೀವನ್ ಸನ್ (ಲೊರೆಂಝೊ) ಅವರು ಒಂದೇ ವಿಭಾಗದಲ್ಲಿ ಸತತವಾಗಿ ಮೂರು ಬಾರಿ ಒಲಿಂಪಿಕ್ ಸ್ವರ್ಣ ಗ್ದೆದ ಪ್ರಥಮ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾದರು. ಈ ಮೊದಲು ಅವರು 1972ರಲ್ಲಿ ಮ್ಯೂನಿಚ್ ಮತ್ತು 1976ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹೆವಿ ವೇಯ್ಟ್ ಬಾಕ್ಸಿಂಗ್ ಸ್ವರ್ಣ ಗೆದ್ದಿದ್ದರು.

1938: ಡಾ. ಸಿ. ಅಶ್ವತ್ಥ ಜನನ.

1925: ಮನೋಹರ ಬಾಲಚಂದ್ರ ಘಾಣೇಕರ್ ಜನನ.

1923: ಅಮೆರಿಕದ 29ನೇ ಅಧ್ಯಕ್ಷ ವಾರನ್ ಜಿ ಹರ್ಡಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು.

1899: ಡಿ.ಸಿ. ಪಾವಟೆ ಜನನ.

1887: ಹದಿನೆಂಟನೇ ಶತಮಾನದ ಖ್ಯಾತ ಇಂಗ್ಲಿಷ್ ಚಿತ್ರ ಕಲಾವಿದ ಥಾಮಸ್ ಗೇಯಿನ್ಸ್ ಬೊರೊ ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.

1876: `ವೈಲ್ಡ್ಬಿಲ್' ಎಂದೇ ಹೆಸರಾಗಿದ್ದ ಹಿಕ್ ಕಾಕ್ ಅವರು ದಕ್ಷಿಣ ಡಕೋಟಾದ ಡೆಡ್ ವುಡ್ ನ ಸಲೂನ್ ನಲ್ಲಿ ಫೋಕರ್ ಆಡುತ್ತಿದ್ದಾಗ ಗುಂಡೇಟಿನಿಂದ ಸಾವನ್ನಪ್ಪಿದರು.

1858: ಬ್ರಿಟಿಷ್ ಸಂಸತಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಆಡಳಿತವನ್ನು ಹಸ್ತಾಂತರಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತೀರ್ಮಾನದ ಬಳಿಕ ಭಾರತದ ಆಡಳಿತ ನಿರ್ವಹಣೆಗೆ ವೈಸ್ ರಾಯ್ ಅವರನ್ನು ನೇಮಕ ಮಾಡಲಾಯಿತು.

1852: ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯ (2-8-1852ರಿಂದ 26-12-1943) ಅವರು ಚನ್ನಪಟ್ಟಣದಲ್ಲಿ ಜನಿಸಿದರು.

No comments:

Post a Comment