ನಾನು ಮೆಚ್ಚಿದ ವಾಟ್ಸಪ್

Thursday, August 30, 2018

ಇಂದಿನ ಇತಿಹಾಸ History Today ಆಗಸ್ಟ್ 30

2018: ಜಕಾರ್ತ: ಇಂಡೋನೇಷ್ಯದ ಜಕಾರ್ತದಲ್ಲಿ ನಡೆಯುತ್ತಿರುವ ೨೦೧೮ರ ಕ್ರೀಡಾಕೂಟದಲ್ಲಿ ಪುರುಷರ ೧೫೦೦ ಮೀಟರ್ ಓಟದಲ್ಲಿ ಭಾರತದ ಜಿನ್ಸನ್ ಜಾನ್ಸನ್ ಮತ್ತು ಹಿಮಾದಾಸ್ ನೇತೃತ್ವದ ಮಹಿಳೆಯರ ೪x೪೦೦ ಮೀಟರ್ ರಿಲೇ ತಂಡದ ಸದಸ್ಯರು ಭಾರತದ ಮುಡಿಗೆ ಎರಡು ಸ್ವರ್ಣ ಪದಕಗಳನ್ನು ಏರಿಸಿದರು. ಇದರೊಂದಿಗೆ ಭಾರತವು ಒಟ್ಟು ೧೩ ಚಿನ್ನದ ಪದಕಗಳನ್ನು ಗೆದ್ದಂತಾಯಿತು. ಧರುಣ್ ಅಯ್ಯಸ್ವಾಮಿ, ಅರೋಕಿಯಾರ್ ರಾಜೀವ್, ಮುಹಮ್ಮದ್ ಅನಸ್, ಮತ್ತು ಕುನ್ಹು ಮುಹಮ್ಮದ್ ಅವರ ತಂಡವು ೪x೪೦೦ ಮೀಟರ್ ರಿಲೇಯಲ್ಲಿ ಭಾರತಕ್ಕೆ ರಜತ ಪದಕ ತಂದು ಕೊಟ್ಟಿತು. ಇದೇ ವೇಳೆಗೆ ಮಹಿಳೆಯರ ಡಿಸ್ಕಸ್ ಮತ್ತು ೧೫೦೦ ಮೀ ಫೈನಲ್ ನಲ್ಲಿ ಸೀಮಾ ಪುನಿಯಾ ಮತ್ತು ಪಿಯು ಚಿತ್ರಾ ಅವರು ಕಂಚಿನ ಪದಕಗಳನ್ನು ಗೆದ್ದುಕೊಂಡರು. ಜಿನ್ಸನ್ ಜಾನ್ಸನ್ ಅವರು ೧೫೦೦ ಮೀಟರ್ ಫೈನಲ್‌ನಲ್ಲಿ ೩:೪೪:೭೨ ಸೆಕೆಂಡುಗಳಲ್ಲಿ ಗಮ್ಯಸ್ಥಾನವನ್ನು ತಲುಪುವ ಮೂಲಕ ಇರಾನಿನ ಅಮೀರ್ ಮೊರಾಡಿ ಅವರನ್ನು ಪರಾಭವಗೊಳಿಸಿ ಚಿನ್ನದ ಪದಕವನ್ನು ಗೆದ್ದುಕೊಂಡರು. ಮೊರಾಡಿ ಅವರು ಗುರಿ ತಲುಪಲು ೩:೪೫.೬೨ ಸೆಕೆಂಡ್ ತೆಗೆದುಕೊಂಡು ಬೆಳ್ಳಿ ಪದಕಕ್ಕೆ ತೃಪ್ತರಾದರು. ಇದಕ್ಕೆ ಮುನ್ನ ಜಾನ್ಸನ್ ಅವರು ೮೦೦ ಮೀಟರ್ ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ೮೦೦ ಮೀಟರ್ ಫೈನಲ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದ ಮನಜಿತ್ ಸಿಂಗ್ ಅವರು ೧೫೦೦ ಮೀಟರ್ ಫೈನಲ್‌ನಲ್ಲಿ ೪ನೇ ಸ್ಥಾನ ಪಡೆದರು.  ಕ್ರೀಡಾಕೂಟದ ೧೧ನೇ ದಿನ ಅರ್ಪಿಂದರ್ ಸಿಂಗ್ ಮತ್ತು ಸ್ವಪ್ನ ಬರ್ಮನ್ ಅವರು ಕ್ರಮವಾಗಿ ಪುರುಷರ ಟ್ರಿಪಲ್ ಜಂಪ್ ಮತ್ತು ಮಹಿಳಾ ಹೆಪ್ಲಾಥ್ಲಾನಿನಲ್ಲಿ ಸ್ವರ್ಣ ಪದಕ ಗೆದ್ದರೆ, ದ್ಯುತೀ ಚಾಂದ್ ಅವರು ಇನ್ನೊಂದು ಬೆಳ್ಳಿ ಪದಕ ಗೆದ್ದಿದ್ದರು.

2018: ನವದೆಹಲಿ: ನಿರುದ್ಯೋಗದಂತಹ ಸಮಸ್ಯೆಗಳು ತೀವ್ರವಾಗಿದ್ದ ಹೊತ್ತಿನಲ್ಲಿ ಜನರಿಗೆ ಇಂತಹ ಆಳವಾದ ಗಾಯವನ್ನು ಮಾಡಿದ್ದು ಏಕೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಕೊಡಬೇಕು ಎಂದು ನೋಟು ಅಮಾನ್ಯೀಕರಣವನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಲ್ಲಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ನೋಟು ಅಮಾನ್ಯೀಕರಣವು ರಾಷ್ಟ್ರದ ಅತ್ಯಂದ ದೊಡ್ಡ ಹಗರಣ ಎಂಬುದಾಗಿ ಬಣ್ಣಿಸಿ, ಈ ಕ್ರಮದ ಮೂಲಕ ಸಾಮಾನ್ಯ ಜನರ ಹಣವನ್ನು ಕಿತ್ತುಕೊಂಡು ’ಬಂಡವಾಳ ಶಾಹಿಗಳಿಗೆ ನೀಡಲಾಯಿತು ಎಂದು ಆಪಾದಿಸಿದರು. ನಿರುದ್ಯೋಗ ಮತ್ತು ಜಿಡಿಪಿ ಕುಸಿತದಂತಹ ಸಮಸ್ಯೆಗಳು ಇದ್ದಾಗ, ನೋಟು ಆಮಾನ್ಯೀಕರಣದಂತಹ ಆಳವಾದ ಗಾಯವನ್ನು ಜನರ ಮೇಲೆ ಮಾಡಿದ್ದು ಏಕೆ ಎಂಬುದಾಗಿ ಪ್ರಧಾನಿ ಮೋದಿ ಅವರು ವಿವರಿಸಬೇಕು ಎಂದು ಹೇಳಿದರು.  ಅಮಾನ್ಯೀಕರಣ ಮಾಡಲಾದ ಕರೆನ್ಸಿ ನೋಟುಗಳ ಪೈಕಿ ಶೇಕಡಾ ೯೯ರಷ್ಟು ನಿಷೇಧಿತ ಕರೆನ್ಸಿ ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿದೆ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸಲ್ಲಿಸಿದ ವರದಿಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ’ನೋಟು ಅಮಾನ್ಯೀಕರಣದಿಂದ ಸಾಧಿಸಿದ್ದೇನು?’ ಎಂದು ಪ್ರಶ್ನಿಸಿದರು. ‘ನೋಟು ಅಮಾನ್ಯೀಕರಣವು ಒಂದು ತಪ್ಪಲ್ಲ, ಅದು ಜನರ ಮೇಲಿನ ಉದ್ದೇಶಪೂರ್ವಕ ದಾಳಿ ಎಂದು ರಾಹುಲ್ ದೂರಿದರು. ಪ್ರಧಾನಿಯವರ ೧೫-೨೦ ಮಂದಿ ಬೃಹತ್ ವರ್ತಕ ಗೆಳೆಯರಿಗೆ ಕಾಳಧನವನ್ನು ಬಿಳಿ ಹಣವನ್ನಾಗಿ ಮಾಡಲು ನೆರವಾಗುವ ಸಲುವಾಗಿ ಸಣ್ಣ ಉದ್ಯಮಿಗಳನ್ನು ಬಲಿಗೊಟ್ಟು ನೋಟು ಅಮಾನ್ಯೀಕರಣ ಮಾಡಲಾಯಿತು ಎಂದು ರಾಹುಲ್ ದೂರಿದರು. ಮೋದಿಯವರು ನೇರವಾಗಿ ನಿಮ್ಮ ಹಣವನ್ನು ಕಿತ್ತುಕೊಂಡು ತಮ್ಮ ಗೆಳೆಯರಾದ ಬಂಡವಾಳ ಶಾಹಿಗಳ ಕಿಸೆಗಳಿಗೆ ನೀಡಿದರು ಎಂದು ಅವರು ನುಡಿದರು. ಇದನ್ನು ಜುಮ್ಲಾ ಎಂಬುದಾಗಿ ಕರೆಯಲಾಗದು. ಇದನ್ನು ಭಾರೀ ಹಗರಣ ಎಂಬುದಾಗಿ ಕರೆಯಬಹುದು ಎಂದು ಅವರು ನುಡಿದರು.  ೨೦೧೬ರ ನವೆಂಬರ್ ೮-೯ರ ನಡುವಣ ಮಧ್ಯರಾತ್ರಿ ೧೫.೪೪ ಲಕ್ಷ ಕೋಟಿ ರೂಪಾಯಿ ಮೌಲ್ಯದ ೫೦೦ ಮತ್ತು ೧,೦೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸುವ ಕ್ರಮವನ್ನು ಮೋದಿ ಕೈಗೊಂಡರು. ಭಾರತೀಯ ಜನತಾ ಪಕ್ಷ ಸರ್ಕಾರವು ಇದನ್ನು ಕಾಳಧನ, ತೆರಿಗೆ ನೀಡದ ಹಣ, ಅಪ್ರಾಮಾಣಿಕ ವ್ಯಕ್ತಿಗಳು ಮತ್ತು ನಕಲಿ ನೋಟುಗಳನ್ನು ಹೊಂದಿದವರು ಇಟ್ಟುಕೊಂಡಿದ್ದ ಲೆಕ್ಕ ಇಡದ ನಗದು ಹಣದ ಮೇಲಿನ ದಾಳಿ ಎಂಬುದಾಗಿ ಬಣ್ಣಿಸಿತ್ತು ಎಂದು ರಾಹುಲ್ ಹೇಳಿದರು. ಅಮಾನ್ಯೀಕರಣ ಮಾಡಲಾದ ನೋಟುಗಳ ಪೈಕಿ ಶೇಕಡಾ ೯೯.೩ರಷ್ಟು ಅಥವಾ ೧೫.೩ ಲಕ್ಷ ಕೋಟಿಯಷ್ಟು ಮೌಲ್ಯದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಆರ್ ಬಿಐ ಬುಧವಾರ ಬಿಡುಗಡೆ ಮಾಡಲಾದ ತನ್ನ ವರದಿಯಲ್ಲಿ ಹೇಳಿತ್ತು.
2018: ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬೇಟಿ ಮಾಡಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು. ಜೆಡಿ(ಎಸ್) - ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವದ ಅಡಿಯಲ್ಲಿ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ನುಡಿದರು. ರಾಹುಲ್ ಗಾಂಧಿ ಅವರ ನಿವಾಸದಲ್ಲಿ ನಡೆದ ಸಂಕ್ಷಿಪ್ತ ಮಾತುಕತೆಯಲ್ಲಿ ಕುಮಾರ ಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ೧೦೦ ದಿನಗಳ ಸಾಧನೆಯನ್ನು ರಾಹುಲ್ ಗಾಂಧಿ ಅವರಿಗೆ ವಿವರಿಸಿದರು.  ‘ಸಭೆಯಲ್ಲಿ ನಾನು ಕಾಂಗ್ರೆಸ್ ಅಧ್ಯಕ್ಷರ ಬಳಿ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದೆ ಎಂದು ಕುಮಾರ ಸ್ವಾಮಿ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡುತ್ತಾ ಹೇಳಿದರು. ಪ್ರಸ್ತುತ ಸಂಪುಟವು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸೇರಿದಂತೆ ಒಟ್ಟು ೧೬ ಮಂದಿ ಕಾಂಗ್ರೆಸ್ ಮತ್ತು ೧೦ ಮಂದಿ ಜೆಡಿ(ಎಸ್) ಸದಸ್ಯರನ್ನು ಒಳಗೊಂಡಿದೆ. ನಿಯಮದ ಪ್ರಕಾರ ಇನ್ನೂ ನಾಲ್ವರು ಸಚಿವರನ್ನು (ಒಬ್ಬರು ಜೆಡಿ(ಎಸ್) ಮತ್ತು ಮೂವರು ಕಾಂಗ್ರೆಸ್) ಸಂಪುಟಕ್ಕೆ ಸೇರ್ಪಡೆ ಮಾಡಬಹುದು. ಮಧುಚಂದ್ರ ಮುಗಿದಿದೆ: ನೂರು ದಿನಗಳನ್ನು ಪೂರೈಸುವಲ್ಲಿ ಸಮ್ಮಿಶ್ರ ಸರ್ಕಾರವು ಯಶಸ್ವಿಯಾಗಿದೆ ಎಂಬುದಾಗಿ ನುಡಿದ ಮುಖ್ಯಮಂತ್ರಿ ’ರಾಜ್ಯದ ಜನರಿಗೆ ಹಲವಾರು ನಿರೀಕ್ಷೆಗಳಿವೆ. ಮುಂಬರುವ ದಿನಗಳಲ್ಲಿ ನನ್ನ ಮೊದಲ ಗುರಿ ಅವರ ನಿರೀಕ್ಷೆಗಳನ್ನು ಈಡೇರಿಸುವುದು ಎಂದು ಹೇಳಿದರು.  ‘ನೂರು ದಿನಗಳ ಮಧುಚಂದ್ರದ ಅವಧಿ ಮುಗಿದಿದೆ. ಮುಂಬರುವ ದಿನಗಳಲ್ಲಿ ಸರ್ಕಾರವು ನೀಲನಕ್ಷೆಯ ಅನುಷ್ಠಾನವನ್ನು ಆರಂಭಿಸುವುದು. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರವು ಯಶಸ್ವಿಯಾಗಿದೆ. ಸಮ್ಮಿಶ್ರ ಸರ್ಕಾರದ ಉದ್ದಗಲ ಪರಿಶೀಲನೆಯ ಕಾರ್‍ಯವನ್ನು ಅವರು ಮಾಡಬೇಕು ’ ಎಂದು ಕುಮಾರ ಸ್ವಾಮಿ ಹೇಳಿದರು. ಸರ್ಕಾರ ಈಗಾಗಲೇ ರೈತಸಾಲಮನ್ನಾವನ್ನು ಘೋಷಿಸಿದೆ ಮತ್ತು ಮುಂಗಡಪತ್ರ ಪ್ರಸ್ತಾವಗಳ ಜಾರಿಗೆ ಕೆಲವೊಂದು ನಿರ್ದೇಶನಗಳನ್ನು ಅಧಿಕಾರಿಗಳಿಗೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

2018: ರಾಂಚಿ: ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಅಧ್ಯಕ್ಷ ಹಾಗೂ ಮೇವು ಹಗರಣದ ಅಪರಾಧಿ ಲಾಲು ಪ್ರಸಾದ್ ಯಾದವ್ ಅವರು ತಮ್ಮ ತಾತ್ಕಾಲಿಕ ಜಾಮೀನು ಅವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗತರಾದರು. ಪಾಟ್ನಾದಿಂದ ರಾಂಚಿಗೆ ಹಿಂದಿನ ಸಂಜೆ ತಲುಪಿದ್ದ ಲಾಲು ಪ್ರಸಾದ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ಆಗಸ್ಟ್ ೩೦ರ ಒಳಗಾಗಿ ಸಿಬಿಐ ನ್ಯಾಯಾಲಯದ ಮುಂದೆ ಶರಣಾಗುವಂತೆ ಆದೇಶ ನೀಡಿತ್ತು. ನ್ಯಾಯಾಧೀಶ ಎಸ್.ಎಸ್. ಪ್ರಸಾದ್ ಅವರ ಮುಂದೆ ಶರಣಾದ ಬಳಿಕ, ಆರ್ ಜೆಡಿ ಮುಖ್ಯಸ್ಥರ ಪರ ವಕೀಲ ಪ್ರಭಾತ್ ಕುಮಾರ್ ಅವರು ತಮ್ಮ ಕಕ್ಷಿದಾರರು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.  ಆಗ, ಮಾಜಿ ಮುಖ್ಯಮಂತ್ರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಜೊತೆ ಸಮಾಲೋಚನೆ ನಡೆಸುವಂತೆ ಬಿರ್ಸಾ ಮುಂಡಾ ಸೆರೆಮನೆಯ ವೈದ್ಯರಿಗೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಲಾಲು ಪ್ರಸಾದ್ ಅವರು ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ  ಡಾ. ಉಮೇಶ ಪ್ರಸಾದ್ ಅವರಿಂದಲೂ ಚಿಕಿತ್ಸೆ ಪಡೆಯಬಹುದು ಎಂದು ನ್ಯಾಯಾಧೀಶರು ನುಡಿದರು.  ಮೇವು ಹಗರಣ ಪ್ರಕರಣಗಳಲ್ಲಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಪರಾಧ ಸಾಬೀತಾಗಿ ಸೆರೆವಾಸದ ಶಿಕ್ಷೆಗೆ ಗುರಿಯಾದ ಬಳಿಕ ಲಾಲು ಪ್ರಸಾದ್ ಅವರು ಸಾಕಷ್ಟು ಕಾಲ ರಾಂಚಿಯ ರಿಮ್ಸ್ ಆಸ್ಪತ್ರೆಗೆ ಮತ್ತು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತ ಕಾಲ ಕಳೆದಿದ್ದರು. ಮುಂಬೈ ಆಸ್ಪತ್ರೆಯಲ್ಲೂ ಮೂರು ವಾರಗಳ ಕಾಲ ಚಿಕಿತ್ಸೆ ಪಡೆದಿದ್ದ ಅವರನ್ನು ಆಗಸ್ಟ್ ೨೫ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಕಳುಹಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಯ ಸಲುವಾಗಿ ಜಾರ್ಖಂಡ್ ಹೈಕೋರ್ಟ್ ಲಾಲು ಪ್ರಸಾದ್ ಅವರಿಗೆ ೬ ವಾರಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಿತ್ತು. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಮಾರಂಭ ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅವರನ್ನು ನಿರ್ಬಂಧಿಸಲಾಗಿತ್ತು. ಬಳಿಕ ಹೈಕೋರ್ಟ್ ಅವರ ಜಾಮೀನು ಅವಧಿಯನ್ನು ಆಗಸ್ಟ್ಟ್ ೨೭ರ ವರೆಗೆ ವಿಸ್ತರಿಸಿತ್ತು ಮತ್ತು ಅದನ್ನು ಇನ್ನಷ್ಟು ಕಾಲ ವಿಸ್ತರಿಸಲು ನಿರಾಕರಿಸಿತ್ತು ಮತ್ತು ಆಗಸ್ಟ್ ೩೦ರ ಒಳಗಾಗಿ ಶರಣಾಗುವಂತೆ ಆದೇಶ ನೀಡಿತ್ತು.

2018: ನವದೆಹಲಿ: ’ಆಪ್ ಕಿ ಅಪ್ನಿ ಪಾರ್ಟಿ (ಪೀಪಲ್ಸ್) ಪಕ್ಷವನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡುವಲ್ಲಿ ತಾನು ಸಲ್ಲಿಸಿದ್ದ ಆಕ್ಷೇಪವನ್ನು ತಿರಸ್ಕರಿಸಿ ಚುನಾವಣಾ ಆಯೋಗ ಕೈಗೊಂಡ ನಿರ್ಧಾರ ವಿರುದ್ಧ ಆಮ್ ಆದ್ಮಿ ಪಾರ್ಟಿ ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲು ಏರಿದ್ದು, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು. ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಅವರು ಚುನಾವಣಾ ಆಯೋಗ ಮತ್ತು ಆಪ್ ಕಿ ಅಪ್ನಿ ಪಾರ್ಟಿಗೆ (ಪೀಪಲ್ಸ್), ಆಮ್ ಆದ್ಮಿ ಪಕ್ಷವು ನೂತನ ಪಕ್ಷದ ನೋಂದಣಿಯನ್ನು ರದ್ದು ಪಡಿಸುವಂತೆ ಕೋರಿದ ಮನವಿ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿತು. ಎರಡೂ ಪಕ್ಷಗಳ ಸಂಕ್ಷಿಪ್ತ ನಾಮವು ’ಆಪ್ ಎಂಬುದಾಗಿಯೇ ಆಗುವುದರಿಂದ ಮತದಾರರಿಗೆ ಗೊಂದಲವಾಗುತ್ತದೆ ಎಂಬ ನೆಲೆಯಲ್ಲಿ ನೂತನ ಪಕ್ಷದ ಮಾನ್ಯತೆಯನ್ನು ರದ್ದು ಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷ ಕೋರಿತು. ಅನುಪಮ್ ಶ್ರೀವಾಸ್ತವ ಅವರು ಸಲ್ಲಿಸಿರುವ ಅರ್ಜಿಯು ಹೊಸ ಪಕ್ಷದ ಹೆಸರು ಆಮ್ ಆದ್ಮಿ ಪಕ್ಷದ ಹೆಸರಿನಂತೆಯೇ ಧ್ವನಿಸುವುದರಿಂದ ಮತದಾರರು ಗೊಂದಲದಲ್ಲಿ ಬೀಳುತ್ತಾರೆ ಎಂದು ಪ್ರತಿಪಾದಿಸಿದೆ.
ಆಪ್ ಕಿ ಅಪ್ನಿ ಪಾರ್ಟಿ (ಪೀಪಲ್ಸ್) ಪಕ್ಷವನ್ನು ರಾಜಕೀಯ ಪಕ್ಷವಾಗಿ ಜನತಾ ಪ್ರಾತಿನಿಧ್ಯ ಕಾಯ್ದೆಯ ಅಡಿಯಲ್ಲಿ ನೋಂದಾಯಿಸುವುದರ ವಿರುದ್ಧ ತಾನು ಸಲ್ಲಿಸಿದ್ದ ಆಕ್ಷೇಪವನ್ನು ತಿರಸ್ಕರಿಸಿ ಚುನಾವಣಾ ಆಯೋಗವು ಜುಲೈ ೧೬ರಂದು ನೀಡಿದ ಆದೇಶವನ್ನು ರದ್ದು ಪಡಿಸಬೇಕು ಎಂದು ಆಪ್ ಕೋರಿತು.

2018: ಲಕ್ನೋ: ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ಎಮ್ಮೆ ಕದ್ದ ಆರೋಪದಲ್ಲಿ ಗುಂಪುದಾಳಿಗೆ ಗುರಿಯಾದ ೨೦ರ ಹರೆಯದ ತರುಣನೊಬ್ಬ ಸಾವನ್ನಪ್ಪಿದ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದರು. ಇತರ ಇಬ್ಬರ ಜೊತೆಗೆ ಕಂಟೋನ್ಮೆಂಟ್ ಪ್ರದೇಶದ ಭೋಲಾಪುರ ಗ್ರಾಮಕ್ಕೆ ಹೋಗಿದ್ದ ಶಾರುಖ್ ಖಾನ್ ಮೇಲೆ ಜನರ ಗುಂಪೊಂದು ತೀವ್ರ ಹಲ್ಲೆ ನಡೆಸಿದ್ದು, ಆತನ ಕುಟುಂಬ ಸದಸ್ಯರು ಶಾರುಖ್ ಖಾನನನ್ನು ಆ ಗ್ರಾಮಕ್ಕೆ ಕರೆದೊಯ್ದಿದ್ದ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ತಿಳಿಸಿದರು. ಶಾರುಖ್ ಸಹೋದರ ಮೊಹಮ್ಮದ್ ಫಿರೋಜ್ ಸಲ್ಲಿಸಿರುವ ದೂರಿನ ಪ್ರಕಾರ ಮಜೀದ್ ಅಲಿ ಮತ್ತು ಪಪ್ಪು ಎಂಬ ಇಬ್ಬರು ಆತನ ಸಹೋದರನನ್ನು ಹಿಂದಿನ ಸಂಜೆ ತಮ್ಮೊಂದಿಗೆ ಕರೆದೊಯ್ದಿದ್ದರು. ತಡರಾತ್ರಿಯವರೆಗೂ ಶಾರುಖ್ ಮನೆಗೆ ಹಿಂತಿರುಗಲಿಲ್ಲ.  ಈದಿನ ಬೆಳಗ್ಗೆ ಪೊಲೀಸರಿಂದ ಬಂದ ಕರೆ ಆಸ್ಪತ್ರೆಗೆ ಬರುವಂತೆ ಮೊಹಮ್ಮದ್ ಫಿರೋಜ್ ಗೆ ತಿಳಿಸಿತು. ‘ಆಸ್ಪತ್ರೆಯಲ್ಲಿ ನನ್ನ ಸಹೋದರ ಅತ್ಯಂತ ದಯನೀಯ ಸ್ಥತಿಯಲ್ಲಿ ಹಾಸಿಗೆಯಲ್ಲಿ ಮಲಗಿದ್ದುದನ್ನು ನಾನು ಕಂಡೆ. ಆತನ ದೇಹದ ತುಂಬೆಲ್ಲ ಗಾಯಗಳಿದ್ದವು. ಅವನು ನನ್ನ ಬಳಿ ಮಜೀದ್ ಮತ್ತು ಅಲಿ ಹೆಸರುಗಳನ್ನು ಉಸುರಿ ಕೆಲ ಕ್ಷಣಗಳ ಬಳಿಕ ಅಸು ನೀಗಿದ ಎಂದು ಫಿರೋಜ್ ಹೇಳಿದರು. ಶಾರುಖ್‌ನನ್ನು ಕರೆದೊಯ್ದಿದ್ದ ವ್ಯಕ್ತಿಗಳು ಆತನಿಗೆ ಕೆಲವು ಮಾದಕ ದ್ರವ್ಯ ನೀಡಿ ಭೋಲಾಪುರ ಗ್ರಾಮಕ್ಕೆ ಕರೆದೊಯ್ದಿದ್ದರು. ಅಲ್ಲಿ ಆತನ ಮೇಲೆ ಜನರಿಂದ ದಾಳಿ ನಡೆಯಿತು ಎಂದು ಫಿರೋಜ್ ಹೇಳಿದರು. ಫಿರೋಜ್ ದೂರನ್ನು ಆಧರಿಸಿ ಪೊಲೀಸರು ಮಜೀದ್, ಪಪ್ಪು ಮತ್ತು ಇತರ ಕೆಲವು ಅನಾಮಿಕ ವ್ಯಕ್ತಿಗಳ ವಿರುದ್ಧ ಕೊಲೆಗಾಗಿ ಎಫ್ ಐ ಆರ್ ದಾಖಲಿಸಿದ್ದರು. ಮಜೀದ್ ಮತ್ತು ಪಪ್ಪು ಎಂಬ ಇಬ್ಬರ ಜೊತೆಗೆ ಶಾರುಖ್ ಖಾನ್ ಗ್ರಾಮಕ್ಕೆ ಎಮ್ಮೆ ಕದಿಯಲು ಬಂದಿದ್ದ ಎಂಬುದಾಗಿ ಭೋಲಾಪುರ ಗ್ರಾಮಸ್ಥರು ಪ್ರತಿಪಾದಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದರು ಎಂದು ಎಸ್ ಎಸ್ ಪಿ ನುಡಿದರು. ಭೋಲಾಪುರದ ನಿವಾಸಿ ಗಜೇಂದ್ರ ಪಾಲ್ ಅವರೂ ಪೊಲೀಸರು ದೂರು ಸಲ್ಲಿಸಿ, ಮೂವರ ತಂಡ ತಮ್ಮ ಎಮ್ಮೆಯನ್ನು ಕದ್ದಿದೆ ಎಂದು ತಿಳಿಸಿದರು. ‘ಮೂವರ ತಂಡ ನನ್ನ ಎಮ್ಮೆಯನ್ನು ಎಳೆದೊಯ್ಯುತ್ತಿದ್ದಾಗ, ನಾನು ಗ್ರಾಮಸ್ಥರನ್ನು ಎಚ್ಚರಿಸಿದೆ ಮತ್ತು ಅವರನ್ನು ತಡೆಯಲು ಯತ್ನಿಸಿದೆ. ಅವರ ಪೈಕಿ ಇಬ್ಬರು ನಾಲೆಗೆ ಜಿಗಿದು ಪರಾರಿಯಾದರು. ಆದರೆ ಶಾರುಖ್‌ನನ್ನು ಹಿಡಿಯಲು ಸಾಧ್ಯವಾಯಿತು ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ಕೆಲವು ಗ್ರಾಮಸ್ಥರು ಶಾರುಖ್ ಮೇಲೆ ಹಲ್ಲೆ ನಡೆಸಿದರು., ನಾನು ಅವರನ್ನು ತಡೆಯಲು ಪೊಲೀಸರಿಗೆ ಕರೆ ಮಾಡಿದೆ ಎಂದು ಗಜೇಂದ್ರ ಪಾಲ್ ನುಡಿದರು. ಬಟ್ಟೆ ಹೊಲಿಯುವ ದರ್ಜಿಯಾಗಿ (ಟೈಲರ್) ಕೆಲಸ ಮಾಡುತ್ತಿದ್ದ ಶಾರುಖ್ ಇತ್ತೀಚೆಗಷ್ಟೇ ಈದ್ ಸಲುವಾಗಿ ದುಬೈಯಿಂದ ಹಿಂದಿರುಗಿದ್ದ.

2018: ನವದೆಹಲಿ: ’ರಫೇಲ್ ಯುದ್ಧ ವಿಮಾನ ವ್ಯವಹಾರದ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆ ಕುರಿತ ನಿರ್ಣಯಕ್ಕಾಗಿ ಯುವ ಭಾರತವು ಎದುರು ನೋಡುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಸವಾಲು ಹಾಕಿದರು. ವಿಷಯದ ಬಗ್ಗೆ ಪರಿಶೀಲಿಸಿಕೊಂಡು ಮತ್ತೆ ಬರಲು ಜೇಟ್ಲಿ ಮತ್ತು ರಾಹುಲ್ ಗಾಂಧಿ ಅವರು ಪರಸ್ಪರ ೨೪ ಗಂಟೆಗಳ ಗಡುವು ನೀಡಿಕೊಂಡ  ಒಂದು ದಿನದ ಬಳಿಕ ರಾಹುಲ್ ಗಾಂಧಿ ಅವರು ಟ್ವೀಟ್ ಮೂಲಕ ಜೇಟ್ಲಿ ಅವರಿಗೆ ಜಂಟಿ ಸಂಸದೀಯ ಸಮಿತಿ ರಚನೆ ಬಗ್ಗೆ ನೆನಪಿಸಿ ಟ್ವೀಟ್ ಮಾಡಿದರು. ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸುವ ಸಲುವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯು ಸಿದ್ಧತೆ ನಡೆಸುತ್ತಿದ್ದು, ಭಾರೀ ಸಂಖ್ಯೆಯಲ್ಲಿ ಯುವ ಕಾಂಗ್ರೆಸ್ ಕಾರ್‍ಯಕರ್ತರು ರಾಜಧಾನಿಯ ಪಕ್ಷದ ಕಚೇರಿಯಲ್ಲಿ ಜಮಾಯಿಸಿದ್ದಾರೆ. ಇದೇ ವೇಳೆಗೆ ರಾಹುಲ್ ಗಾಂಧಿಯವರು ಟ್ವಿಟ್ಟರ್ ಮೂಲಕ ಅರುಣ್ ಜೇಟ್ಲಿ ಅವರಿಗೆ ಮತ್ತೆ ಸವಾಲು ಹಾಕಿದರು. ‘ಪ್ರಿಯ ಶ್ರೀ ಜೇಟ್ಲಿಯವರೇ, ರಫೇಲ್ ಜೆಪಿಸಿ ಕುರಿತ ನಿಮ್ಮ ಗಡುವಿನಲ್ಲಿ ೬ ಗಂಟೆಗಳು ಮಾತ್ರ ಉಳಿದಿವೆ. ಯುವ ಭಾರತ ಕಾಯುತ್ತಿದೆ. ಮೋದಿ ಜಿ ಮತ್ತು ಅನಿಲ್ ಅಂಬಾನಿ ಜಿ ಅವರು ನಿಮ್ಮ ಮಾತುಗಳನ್ನು ಏಕೆ ಕೇಳಬಾರದು ಮತ್ತು ಇದಕ್ಕೆ ಮಂಜೂರಾತಿಯನ್ನು ಏಕೆ ನೀಡಬಾರದು ಎಂಬುದಾಗಿ  ಮನವೊಲಿಸುವಲ್ಲಿ ನೀವು ಮಗ್ನರಾಗಿದ್ದೀರಿ ಎಂದು ನಾನು ಹಾರೈಸುವೆ ಎಂದು ರಾಹುಲ್ ಅವರು ಈದಿನ ಬೆಳಗ್ಗೆ ಮಾಡಿದ ಟ್ವೀಟ್ ಹೇಳಿದೆ. ರಫೇಲ್ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಮೇಲೆ ತೀವ್ರ ದಾಳಿ ನಡೆಸಿರುವ ಕಾಂಗ್ರೆಸ್, ವ್ಯವಹಾರದ ಬಗ್ಗೆ ಜನರಿಗೆ ತಿಳಿಸಲು ’ಪಾನ್ ಇಂಡಿಯಾ ಚಳವಳಿ ಹೂಡಲು ಹೊರಟಿದೆ. ಪಕ್ಷದ ನಾಯಕರು ದೇಶಾದ್ಯಂತ ಪತ್ರಿಕಾಗೋಷ್ಠಿಗಳನ್ನು ಕರೆದು ವಿಷಯದ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದ ಚಳವಳಿಗಳನ್ನು ಸಂಘಟಿಸುವ ಯೋಜನೆಗಳ ವಿವರ ನೀಡಲಿದ್ದಾರೆ. ಶ್ರೀ ಜೇಟ್ಲಿಯವರೇ, ’ಮಹಾನ್ ರಫೇಲ್ ದರೋಡೆ ಬಗ್ಗೆ ರಾಷ್ಟ್ರದ ಗಮನವನ್ನು ಮತ್ತೆ ಸೆಳೆದುದಕ್ಕಾಗಿ ಧನ್ಯವಾದಗಳು. ಜಂಟಿ ಸಂಸದೀಯ ಸಮಿತಿಯು ಈ ವಿಷಯವನ್ನು ಇತ್ಯರ್ಥ ಪಡಿಸಬಹುದಲ್ಲವೇ? ಸಮಸ್ಯೆ ಏನೆಂದರೆ, ನಿಮ್ಮ ’ಪರಮೋಚ್ಚ ನಾಯಕ ತನ್ನ ’ಗೆಳೆಯನನ್ನು ರಕ್ಷಿಸುತ್ತಿದ್ದಾರೆ. ಹಾಗಾಗಿ ಇದು ಮುಜುಗರದ ವಿಷಯ. ಪರಿಶೀಲಿಸಿ, ೨೪ ಗಂಟೆಗಳ ಒಳಗೆ ಮತ್ತೆ ಬನ್ನಿ. ನಾವು ಕಾಯುತ್ತಿರುತ್ತೇವೆ ಎಂದು ರಾಹುಲ್ ಗಾಂಧಿ ಅವರು ಜೇಟ್ಲಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಳಿಕ  ಟ್ವೀಟ್ ಮಾಡಿದ್ದರು. ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ’ಅಸತ್ಯವನ್ನು ಪ್ರತಿಪಾದಿಸುತ್ತಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಆಪಾದಿಸಿದ್ದರು. ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ನೀಡಿರುವ ಏಳು ’ದರಗಳು ಹಾಗೂ  ಆ ಕುರಿತ ಚರ್ಚೆ ಕಿಂಡರ್ ಗಾರ್ಟನ್ ಅಥವಾ ಪ್ರಾಥಮಿಕ ಶಾಲಾ ಮಕ್ಕಳ ಚರ್ಚೆಯಂತೆ ಇವೆ ಎಂದೂ ಅವರು ಛೇಡಿಸಿದ್ದರು.  ‘ವಿರೋಧ ಪಕ್ಷ ಮತ್ತು ಅದರ ನಾಯಕ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ’ಸುಳ್ಳು ಪ್ರಚಾರವು ರಾಷ್ಟ್ರೀಯ ಭದ್ರತೆ ಜೊತೆಗಿನ ಗಂಭೀರ ರಾಜಿಯಾಗಿದೆ ಎಂದು ಹೇಳಿದ ಜೇಟ್ಲಿ, ಫೇಸ್ ಬುಕ್ ಬ್ಲಾಗ್ ಪೋಸ್ಟ್ ನಲ್ಲಿ ರಾಹುಲ್ ಗಾಂಧಿ ಅವರಿಗೆ ಜೇಟ್ಲಿ ೧೫ ಪ್ರಶ್ನೆಗಳನ್ನು ಕೇಳಿದ್ದರು.  ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ ಸರ್ಕಾರವು ೨೦೧೫ರ ಏಪ್ರಿ ಲ್ ೧೦ರಂದು ಫ್ರಾನ್ಸ್ ಜೊತೆಗೆ ೩೬ ರಫೇಲ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತು. ಈ ಒಪ್ಪಂದದ ಷರತ್ತುಗಳು ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರವು ೨೦೦೭ರಲ್ಲಿ ಒಪ್ಪಿದ್ದ ಒಪ್ಪಂದದ ಷರತ್ತುಗಳಿಗಿಂತ ಉತ್ತಮವಾಗಿವೆ ಎಂದು ಜೇಟ್ಲಿ ಬರೆದಿದ್ದರು. ‘ರಾಹುಲ್ ಗಾಂಧಿ ಅವರು ದುಸ್ಸಾಹಸವು ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿರುವುದರಿಂದ ನಾನು ಈ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ ಮತ್ತು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷವು ತತ್ ಕ್ಷಣವೇ ಪ್ರತಿಕ್ರಿಯಿಸುತ್ತದೆ ಎಂದು ನಾನು ಹಾರೈಸಿದ್ದೇನೆ ಎಂದು ಜೇಟ್ಲಿ ಬರೆದಿದ್ದರು.  ‘ರಾಹುಲ್ ಗಾಂಧಿಯವರು ವಿಮಾನದ ದರಕ್ಕೆ ಸಂಬಂಧಿಸಿದಂತೆ ಜೈಪುರದಲ್ಲಿ ಎರಡು ಸಂಖ್ಯೆಯನ್ನು ಹೇಳಿದ್ದಾರೆ- ಪ್ರತಿಯೊಂದು ಯುದ್ಧ ವಿಮಾನದ ಬೆಲೆ ೫೨೦ ಕೋಟಿ ರೂಪಾಯಿ ಎಂಬುದಾಗಿ ಒಂದು ಕಡೆ ಮತ್ತು ೫೪೦ ಕೋಟಿ ರೂಪಾಯಿ ಎಂಬುದಾಗಿ ಇನ್ನೊಂದು ಕಡೆ ತಿಳಿಸಿದ್ದಾರೆ. ರಫೇಲ್ ವಿಮಾನವೊಂದರ ಬೆಲೆ ೭೦೦ ಕೋಟಿ ರೂಪಾಯಿ ಎಂಬುದಾಗಿ ರಾಹುಲ್ ಗಾಂಧಿ ಅವರು ಈ ವರ್ಷ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೆಹಲಿ ಮತ್ತು ಕರ್ನಾಟಕದಲ್ಲಿ ಹೇಳಿದ್ದಾರೆ. ಸಂಸತ್ತಿನಲ್ಲಿ ಈ ಮೊತ್ತವನ್ನು ಅವರು ೫೨೦ ಕೋಟಿ ರೂಪಾಯಿಗಳಿಗೆ ಇಳಿಸಿದರು. ರಾಯ್ ಪುರದಲ್ಲಿ ಮತ್ತು ಅದನ್ನು ೫೪೦ ರೂಪಾಯಿಗಳಿಗೆ ಏರಿಸಿದರು. ಹೈದರಾಬಾದಿನಲ್ಲಿ ಅವರು ೫೨೬ ಕೋಟಿ ರೂಪಾಯಿಗಳ ಹೊಸ ದರವನ್ನು ಸಂಶೋಧಿಸಿದರು. ಸತ್ಯ ಯಾವಾಗಲೂ ಒಂದೇ ಆಗಿರುತ್ತದೆ. ತಪ್ಪುಗಳು ಹಲವು. ರಫೇಲ್ ಖರೀದಿಯ ವಾಸ್ತವಾಂಶಗಳ ಸ್ಪಷ್ಟ ಅರಿವು ಇಲ್ಲದೆಯೇ ಈ ಆರೋಪಗಳನ್ನು ಮಾಡಲಾಗುತ್ತಿದೆಯೇ? ಎಂದು ಜೇಟ್ಲಿ ಪ್ರಶ್ನಿಸಿದ್ದರು.  ಡಸ್ಸಾಲ್ಟ್ ನಿರ್ಮಿತ ೩೬ ರಫೇಲ್ ಯುದ್ಧ ವಿಮಾನಗಳನ್ನು ೮೭೦ ಕೋಟಿ (೮.೭ ಬಿಲಿಯನ್) ಡಾಲರ್ ಮೊತ್ತಕ್ಕೆ ಖರೀದಿಸುವ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ ಸರ್ಕಾರ ೨೦೧೫ರ ಏಪ್ರಿಲ್‌ನಲ್ಲಿ ಪ್ರಕಟಿಸಿತು. ಒಂದು ವರ್ಷದ ಬಳಿಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಮಾತುಕತೆ ನಡೆಸಿದ್ದಕಿಂತ ಹೆಚ್ಚಿನ ದರವನ್ನು ಫ್ರಾನ್ಸಿನ ಡಸ್ಸಾಲ್ಟ್ ವಿಮಾನಕ್ಕೆ ನೀಡಲಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತು.  ‘೨೦೧೫ ರಿಂದ ೨೦೧೬ರವರೆಗೆ ನಡೆದ ಮಾತುಕತೆಯನ್ನು ಅಂತಿಮವಾಗಿ ೨೦೧೬ರಲ್ಲಿ ಜಾರಿಗೊಳಿಸಲಾಗಿದೆ. ವಿಮಾನದ ಮೂಲ ದರವು ಶೇಕಡಾ ೯ರಷ್ಟು ಇಳಿದಿದೆ. ಕಾಂಗ್ರೆಸ್ ಪಕ್ಷಕ್ಕೆ ಇದರ ಅರಿವು ಇದೆಯೇ? ಎಂದು ಜೇಟ್ಲಿ ಪ್ರಶ್ನಿಸಿದ್ದರು.

2008: ಅಮೆರಿಕದ ನ್ಯೂಜೆರ್ಸಿಯಲ್ಲಿ ಆರಂಭದ ಮೂರು ದಿನಗಳ ವಿಶ್ವ ಗುಜರಾತಿ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಗುಜರಾತ್ ಮುಖ್ಯ ಮಂತ್ರಿ ನರೇಂದ್ರ ಮೋದಿ ಅವರಿಗೆ ವೀಸಾವನ್ನು ಕೊಡುವುದಿಲ್ಲ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿತು. ಗುಜರಾತಿನಲ್ಲಿ 2002ರಲ್ಲಿ ಮುಸ್ಲಿಮರ ವಿರುದ್ಧ ನಡೆದ ಗಲಭೆಯಲ್ಲಿ ಮೋದಿ ಅವರು ಷಾಮೀಲಾಗಿರುವ ಆರೋಪದ ಹಿನ್ನೆಲೆಯಲ್ಲಿ ವೀಸಾ ಕೊಡದಿರಲು ನಿರ್ಧರಿಸಲಾಗಿದೆ ಎಂದು ಇಲಾಖೆ ಹೇಳಿತು.

2007: ಮಲೇಷ್ಯಾದಲ್ಲಿ ನೆಲೆಸಿರುವ ಭಾರತೀಯ ಮೂಲದ ರತಕೃಷ್ಣನ್ ವೇಲು ಎಂಬಾತ ಕ್ವಾಲಾಲಂಪುರದಲ್ಲಿ ತನ್ನ ಬಲಿಷ್ಠ ಹಲ್ಲುಗಳ ಶಕ್ತಿಯಿಂದ ಏಳು ಬೋಗಿಗಳನ್ನು ಹೊಂದಿದ್ದ ರೈಲುಗಾಡಿಯನ್ನು ಎಳೆದು ಪರಾಕ್ರಮ ಮೆರೆದ. ಈತ 297.1 ಮೆಟ್ರಿಕ್ ಟನ್ ಭಾರದ ರೈಲನ್ನು 2.8 ಮೀಟರ್ ದೂರ ಎಳೆಯುವಲ್ಲಿ ಯಶಸ್ವಿಯಾದ. ಕಬ್ಬಿಣದ ಸರಪಳಿಯನ್ನು ರೈಲಿಗೆ ಕಟ್ಟಲಾಗಿತ್ತು. ಅದರ ಮತ್ತೊಂದು ತುದಿಯನ್ನು ಹಲ್ಲಿನಿಂದ ಕಚ್ಚಿ ಹಿಡಿದ ವೇಲು ಸರ್ವಶಕ್ತಿಯನ್ನೂ ಉಪಯೋಗಿಸಿ ರೈಲನ್ನು ಎಳೆದ. ಇದೊಂದು ವಿಶ್ವದಾಖಲೆ ಎಂದು ಸಂಘಟಕರು ತಿಳಿಸಿದರು. ದಾಖಲೆಗಳ ಪರಿಶೀಲನೆ ಬಳಿಕ ಈ ಸಾಧನೆಗೆ ಗಿನ್ನೆಸ್ ವಿಶ್ವದಾಖಲೆಯ ಮಾನ್ಯತೆ ಲಭಿಸಬಹುದು ಎಂದು ವೇಲುವಿನ ಮ್ಯಾನೇಜರ್ ಅಣ್ಣ ಚಿದಂಬರ್ ಹೇಳಿದರು. `ಕಿಂಗ್ ಟೂಥ್' ಎಂದೇ ಜನಪ್ರಿಯನಾಗಿರುವ ವೇಲು ಅಪ್ಪಟ ಸಸ್ಯಾಹಾರಿ. ಈತ 2003ರ ಅಕ್ಟೋಬರ್ 18 ರಂದು 260.8 ಮೆಟ್ರಿಕ್ ಟನ್ ಭಾರದ ರೈಲನ್ನು 4.2 ಮೀ. ದೂರ ಎಳೆದು ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಹೆಸರು ಪಡೆದಿದ್ದ. ವೇಲು ಈ ಸಾಹಸ ಮಾಡಿದ್ದು ಯೋಗ, ಧ್ಯಾನದ ಬಲದಿಂದ. ಪ್ರಯತ್ನ ಅರಂಭಿಸುವ ಮೊದಲು ಈತ ಎರಡೂ ಕಣ್ಣುಗಳನ್ನು ಮುಚ್ಚಿ ನಿಡಿದಾದ ಉಸಿರು ಎಳೆದು ಧ್ಯಾನ ನಿರತನಾಗಿದ್ದ.

2007: ಸಣ್ಣ ಮತ್ತು ಅತಿಸಣ್ಣ ಕೈಗಾರಿಕೆಗಳಿಗೆ ಹಣಕಾಸು ನೆರವು ನೀಡುವಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬ್ಯಾಂಕಿಗೆ ಕೇಂದ್ರ ಸರ್ಕಾರ ನೀಡುವ ಪ್ರಥಮ ರಾಷ್ಟ್ರೀಯ ಪ್ರಶಸ್ತಿಯನ್ನು ಕೆನರಾ ಬ್ಯಾಂಕ್ ಪಡೆದುಕೊಂಡಿತು. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಂ.ಬಿ.ಎನ್. ರಾವ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

2007: ನಂದಿ ಇನ್ ಫ್ರಾಸ್ಟ್ರಕ್ಷರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ವಶದಲ್ಲಿರುವ ಹೆಚ್ಚುವರಿ ಜಮೀನು ಪರಾಭಾರೆಗೆ ಅವಕಾಶ ಕಲ್ಪಿಸಿದ್ದ ಒಪ್ಪಂದವನ್ನು ರದ್ದುಪಡಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿತು. 2002ರ ಆಗಸ್ಟ್ 6ರಂದು ನೈಸ್ ಮತ್ತು ಸರ್ಕಾರದ ನಡುವೆ ಆದ ಒಪ್ಪಂದದ ಉಪ ವಿಧಿ 1.1.3ರ ಪ್ರಕಾರ ಸರ್ಕಾರದಿಂದ ಪಡೆದ ಜಮೀನು ಮಾರಾಟ ಮಾಡಲು ನೈಸ್ ಗೆ ಅವಕಾಶವಿತ್ತು. ಈ ಉಪ ವಿಧಿಯನ್ನು ರದ್ದು ಮಾಡಲು ಕೈಗಾರಿಕಾ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಂಪುಟ ಸಭೆಯ ನಂತರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಪ್ರಕಟಿಸಿದರು.

2007: ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಹಿರಿಯ ಕಲಾವಿದೆ ಎಂ.ಎನ್.ಲಕ್ಷ್ಮೀದೇವಿ, ಜೀವಮಾನ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಸ್ವೀಕರಿಸಿದರು. ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಸಿಂಗೀತಂ ಶ್ರೀನಿವಾಸರಾವ್ ಪರವಾಗಿ ನಟ ರಮೇಶ್ ಸ್ವೀಕರಿಸಿದರು. `ಸೈನೇಡ್' ಚಿತ್ರದಲ್ಲಿನ ಅಭಿನಯಕ್ಕಾಗಿ ತಾರಾ ಹಾಗೂ `ದುನಿಯಾ'ದ ನಟನೆಗಾಗಿ ವಿಜಯ್ ಕ್ರಮವಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ಪಡೆದರು.

2007: ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕಡೆಗೂ ಎಡಪಕ್ಷಗಳ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಈ ಪಕ್ಷಗಳು ಎತ್ತಿರುವ ಆಕ್ಷೇಪಗಳನ್ನು ನಿವಾರಿಸಲು ರಚಿಸಲಾಗುವ ರಾಜಕೀಯ ಸಮಿತಿ ತನ್ನ ವರದಿ ನೀಡುವವರೆಗೆ ಒಪ್ಪಂದವನ್ನು ಕಾರ್ಯಗತಗೊಳಿಸುವುದಿಲ್ಲ ಎಂದು ಹೇಳಿತು. ಹೀಗಾಗಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮಧ್ಯೆ ಉದ್ಭವಿಸಿದ್ದ ಮೂರು ವಾರಗಳ ಬಿಕ್ಕಟ್ಟು ಶಮನಗೊಂಡಿತು.

2007: ವರನಟ ಡಾ. ರಾಜ್ ಕುಮಾರ ಅವರಿಗೆ ಮರಣೋತ್ತರವಾಗಿ ರಾಘವೇಂದ್ರ ಅನುಗ್ರಹ (ಸಾಮಾಜಿಕ), ಧಾರವಾಡದ ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ರಾಘವೇಂದ್ರ ಅನುಗ್ರಹ (ಧಾಮರ್ಿಕ) ಹಾಗೂ ಪ್ರಸಿದ್ಧ ಕರ್ನಾಟಕ ಸಂಗೀತ ಕಲಾವಿದ ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಅವರಿಗೆ ಅಸ್ಥಾನ ವಿದ್ವಾನ್ ಗೌರವ ಪ್ರಶಸ್ತಿ ಪ್ರದಾನ ಸಮಾರಂಭವು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ನಡೆಯಿತು. ರಾಯರ 336ನೇ ಆರಾಧನಾ ಮಹೋತ್ಸವ ಅಂಗವಾಗಿ ಮಧ್ಯಾರಾಧನೆ ದಿನದಂದು ಮಠದ ಪೀಠಾಧಿಪತಿ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳು, ಉತ್ತರಾಧಿಕಾರಿ ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದಂಗಳು ಪ್ರಶಸ್ತಿ ಪ್ರದಾನ ಮಾಡಿದರು. ಡಾ.ರಾಜಕುಮಾರ ಅವರಿಗೆ ಕೊಡಮಾಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಪಾರ್ವತಮ್ಮ ರಾಜ್ ಕುಮಾರ, ಕರ್ನಾಟಕ ಇತಿಹಾಸ ಸಂಶೋಧನಾ ಸಂಸ್ಥೆಗೆ ನೀಡಿದ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಡಾ.ಎ.ಆರ್. ಪಂಚಮುಖಿ, ಹಾಗೂ ಆಸ್ಥಾನ ವಿದ್ವಾನ್ ಪ್ರಶಸ್ತಿಯನ್ನು ಚೆನ್ನೈನ ಟಿ.ವಿ. ಗೋಪಾಲಕೃಷ್ಣನ್ ಸ್ವೀಕರಿಸಿದರು.

2007: ಜೈಲಿನಲ್ಲಿರುವ ಆರ್ ಜೆಡಿ ಸಂಸದ ಶಹಾಬ್ದುದೀನ್ ಅವರ ವಿರುದ್ಧ ಸಿವಾನ್ ಪೊಲೀಸ್ ವರಿಷ್ಠಾಧಿಕಾರಿ ಎಸ್.ಕೆ.ಸಿಂಘಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಅಪರಾಧ ಸಾಬೀತಾಗಿದೆ ಎಂದು ಸಿವಾನಿನ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. 1996ರ ಮೇ 3ರಂದು ಸಿವಾನ್ ಜಿಲ್ಲೆಯಲ್ಲಿ ಸಿಂಘಾಲ್ ಮೇಲೆ ನಡೆದ ಹಲ್ಲೆಯಲ್ಲಿ ಶಹಾಬ್ದುದೀನ್ ಭಾಗಿಯಾಗಿದ್ದರು ಎಂಬುದು ಸಾಬೀತಾಗಿದೆ ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾಸ್ತವ್ ಹೇಳಿದರು. ಸಂಸದ ಶಹಾಬ್ದುದೀನ್ ಅವರಿಗೆ ರಕ್ಷಣೆ ಒದಗಿಸಿದ್ದ ಪೊಲೀಸರಾದ ಜಹಂಗೀರ್ ಮತ್ತು ಖಲಿ ಅವರ ಅಪರಾಧವೂ ಸಾಬೀತಾಗಿದೆ ಎಂದು ನ್ಯಾಯಾಲಯಯ ಹೇಳಿತು.

2007: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಮರಾವ್ ಅದಿಕ್ ಈದಿನ ಮುಂಬೈಯ ಲೀಲಾವತಿ ಆಸ್ಪತೆಯಲ್ಲಿ ಕೊನೆಯುಸಿರೆಳೆದರು. 1978 ರಿಂದ 1996 ತನಕ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅದಿಕ್, ವಸಂತದಾದಾ ಪಾಟೀಲ್, ಎ.ಆರ್. ಅಂತುಳೆ, ಬಾಬಾಸಾಹೇಬ್ ಭೋಸ್ಲೆ, ಶರದ್ ಪವಾರ್ ಹಾಗೂ ಸುಧಾಕರ ರಾವ್ ನಾಯಕ್ ಸಂಪುಟದಲ್ಲಿ ದಶಕಕ್ಕೂ ಹೆಚ್ಚು ಕಾಲ ಸಚಿವರಾಗಿದ್ದರು.

2006: ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಡಾ. ಶ್ರೀನಿವಾಸ ಸಂಪತ್ ಅವರು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಮಿತಿಯು ನೀಡುವ 2006ನೇ ಸಾಲಿನ ಪ್ರತಿಷ್ಠಿತ ಎಸ್.ಎಸ್. ಭಟ್ನಾಗರ್ ಪ್ರಶಸ್ತಿಗೆ ಆಯ್ಕೆಯಾದರು. ರಾಸಾಯನಿಕ ವಿಜ್ಞಾನದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಸಂಪತ್ ಮತ್ತು ತಿರುವನಂತಪುರದ ವಿಜ್ಞಾನಿ ಥಾಮಸ್ ಅವರಿಗೆ ಘೋಷಿಸಲಾಯಿತು.

2006: ಮುಂಬೈಯ ಸ್ಥಳೀಯ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ಗಣೇಶನ ವಿವಾದಾತ್ಮಕ ವ್ಯಂಗ್ಯಚಿತ್ರ (ಕಾರ್ಟೂನ್) ಪ್ರಕಟಿಸ್ದಿದಕ್ಕಾಗಿ ಮುಖಪುಟದಲ್ಲಿ ಕ್ಷಮೆಯಾಚಿಸಿತು. ಪತ್ರಿಕೆ ಪ್ರಕಟಿಸಿದ ವ್ಯಂಗ್ಯಚಿತ್ರ ವಿರುದ್ಧ ಅರುಣ್ಗೌಳಿ ನೇತೃತ್ವದ ಅಖಿಲ ಭಾರತೀಯ ಸೇನಾ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದು, ಸಂಘಟನೆಗಳ 20-25ಮಂದಿ 29ರ ರಾತ್ರಿ ದಕ್ಷಿಣ ಕೇಂದ್ರ ಮುಂಬೈಯಲ್ಲಿರುವ ಪತ್ರಿಕೆಯ ಕಾರ್ಯಾಲಯಕ್ಕೆ ಮೆರವಣಿಗೆ ನಡೆಸಿ ಸಂಪಾದಕರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು.. ಪತ್ರಿಕೆ ಹಿಟ್ಲರ್, ಬಿನ್ ಲಾಡೆನ್ ಹಾಗೂ ಜಾರ್ಜ್ ಬುಷ್ ರಂತೆ ಕಾಣುವ ಗಣಪತಿಯ ಕಾರ್ಟೂನುಗಳನ್ನು ಪ್ರಕಟಿಸಿದ್ದೇ ಅಲ್ಲದೆ `ನಾವು ಈ ತರದ ವೈವಿಧ್ಯಮಯ ಗಣೇಶನನ್ನು ಇನ್ನೆಲ್ಲೂ ಕಾಣೆವು'ಎಂಬುದಾಗಿ ಅಡಿಬರಹ ನೀಡಿತ್ತು.

1991: ಉರಗ ಮಿತ್ರ ಡಾ. ಪಿ.ಜೆ. ದೇವ್ರಾಸ್ ನಿಧನ.

1990: ಪ್ರಸಾರ ಭಾರತಿ ಕಾಯ್ದೆಗೆ ಸಂಸತ್ತಿನಲ್ಲಿ ಅವಿರೋಧ ಸಮ್ಮತಿ.

1987: ಕೆನಡಾದ ಬೆನ್ ಜಾನ್ಸನ್ 9.83 ಸೆಕೆಂಡುಗಳಲ್ಲಿ 100 ಮೀಟರ್ ಓಡಿ ವಿಶ್ವ ದಾಖಲೆ ನಿರ್ಮಿಸಿದ.

1983: ಭಾರತದ ಇನ್ ಸಾಟ್-1ಬಿ ವಿವಿಧೋದ್ಧೇಶ ಉಪಗ್ರಹವನ್ನು ಅಮೆರಿಕದ ಕೇಪ್ ಕ್ಯಾನವರಾಲಿನಿಂದ ಚಾಲೆಂಜರ್ ಮೂಲಕ ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಹಾರಿಸಲಾಯಿತು. ಅದು ಅಕ್ಟೋಬರ್ 15ರ ವೇಳೆಗೆ ಪೂರ್ಣ ಕಾರ್ಯಾಚರಣೆ ಆರಂಭಿಸಿತು.

1983: ಗುಯೋನ್ ಎಸ್ ಬ್ಲುಫೋರ್ಡ್ ಜ್ಯೂನಿಯರ್ ಅವರು ಚಾಲೆಂಜರ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ ಮೊತ್ತ ಮೊದಲ ಕರಿಯ ಅಮೆರಿಕನ್ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967: ಅಮೆರಿಕದ ಸುಪ್ರೀಂಕೋರ್ಟಿಗೆ ಮೊತ್ತ ಮೊದಲ ಕರಿಯ ನ್ಯಾಯಾಧೀಶ ತುರ್ ಗುಡ್ ಮಾರ್ಶಲ್ ಅವರ ನೇಮಕಾತಿಯನ್ನು ಅಮೆರಿಕದ ಸೆನೆಟ್ ದೃಢಪಡಿಸಿತು.

1945: ಜಪಾನಿನಿಂದ ಹಾಂಕಾಂಗ್ ಸ್ವತಂತ್ರ.

1941: ದ್ವಿತೀಯ ಮಹಾಸಮರದ ಕಾಲದಲ್ಲಿ ನಾಝಿ ಪಡೆಗಳಿಂದ ಲೆನಿನ್ ಗ್ರಾಡ್ ಕೈವಶ ಆರಂಭ.

1934: ಕ್ರಿಕೆಟಿಗ ಬಾಲಕೃಷ್ಣ ಪಂಡರಿನಾಥ ಗುಪ್ತ (ಬಾಲೂ) ಜನನ.

1913: ಸರ್ ರಿಚರ್ಡ್ ಸ್ಟೋನ್ (1913-1991) ಜನ್ಮದಿನ. ಖ್ಯಾತ ಬ್ರಿಟಿಷ್ ಆರ್ಥಿಕ ತಜ್ಞರಾದ ಇವರು ರಾಷ್ಟ್ರೀಯ ಆದಾಯ ಲೆಕ್ಕಾಚಾರ ಕುರಿತು ಮಾಡಿದ ಕೆಲಸಕ್ಕಾಗಿ 1984ರ ನೊಬೆಲ್ ಪ್ರಶಸ್ತಿ ಗಳಿಸಿದರು.

1849: ಭಾರತದ ಖ್ಯಾತ ಕೈಗಾರಿಕೋದ್ಯಮಿ ಹಾಗೂ ದಾನಿ ನವರೋಜಿ ವಾಡಿಯಾ (1849-1999) ಜನ್ಮದಿನ. ಇವರು 1879ರಲ್ಲಿ ಉಡುಪುಗಳ ಉತ್ಪಾದನೆಗಾಗಿ ಬಾಂಬೆ ಡೈಯಿಂಗ್ ಅಂಡ್ ಟೆಕ್ಸ್ ಟೈಲ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕಂಪೆನಿಯನ್ನು ಸ್ಥಾಪಿಸಿದರು.

1569: ಭಾರತದ ಮೊಘಲ್ ಸಾಮ್ರಾಟ ಜಹಾಂಗೀರ್ (1569-1627) ಜನ್ಮದಿನ. ಈತ ಅಕ್ಬರ್ನ ಪುತ್ರ.

No comments:

Post a Comment