Tuesday, January 29, 2019

ಇಂದಿನ ಇತಿಹಾಸ History Today ಜನವರಿ 29

ಇಂದಿನ ಇತಿಹಾಸ History Today ಜನವರಿ 29
ನವದೆಹಲಿ:  ಮಾಜಿ ರಕ್ಷಣಾ ಸಚಿವ, ಖ್ಯಾತ ಕಾರ್ಮಿಕ ಹೋರಾಟಗಾರ, ತುರ್ತು ಪರಿಸ್ಥಿತಿ ವಿರೋಧಿ ಹೋರಾಟಗಾರ, ಕೊಂಕಣ ರೈಲ್ವೇಯ ರೂವಾರಿ ಜಾರ್ಜ್ ಫರ್ನಾಂಡಿಸ್ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಜಾರ್ಜ್ ಫರ್ನಾಂಡಿಸ್ ಅವರು ಕಳೆದ ಕೆಲವು ವರ್ಷಗಳಿಂದ ಮರೆಗುಳಿ ಕಾಯಿಲೆ (ಅಲ್ಜಮೀರ್ಸ್ ಡಿಸೀಸ್) ತುತ್ತಾಗಿದ್ದರು. ‘ಈದಿನ ನಸುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ನಿಧನರಾದರು ಎಂಬ ಸುದ್ದಿಯನ್ನು ಪ್ರಕಟಿಸಲು ನಮಗೆ ಅತ್ಯಂತ ಬೇಸರವಾಗಿದೆ. ಫರ್ನಾಂಡಿಸ್ ಅವರ ಆರೋಗ್ಯ ಪರಿಶೀಲಿಸುವ ಸಲುವಾಗಿ ಮ್ಯಾಕ್ಸ್ ಹೆಲ್ತ್ ಕೇರ್ ತಂಡವು ಅವರ ಮನೆಗೆ ತೆರಳಿತ್ತು. ಅವರಿಂದ ಯಾವುದೇ ಸ್ಪಂದನೆಯೂ ಇಲ್ಲದೇ ಇದ್ದುದನ್ನು ತಂಡವು ಗಮನಿಸಿತು ಮತ್ತು ೨೯ ಜನವರಿ ೨೦೧೯ರ ಬೆಳಗ್ಗೆ ೬.೪೨ ಗಂಟೆಗೆ ಅವರು ನಿಧನರಾಗಿದ್ದಾರೆ ಎಂದು ಘೋಷಿಸಿತು ಎಂದು ಮ್ಯಾಕ್ಸ್ ಹೆಲ್ತ್ ಕೇರ್ ಆಸ್ಪತ್ರೆಯು ಹೇಳಿಕೆ ತಿಳಿಸಿತು. ೧೯೩೦ರ ಜೂನ್ ೩ರಂದು ಕರ್ನಾಟಕದ ಮಂಗಳೂರಿನಲ್ಲಿ ಜನಿಸಿದ್ದ ಜಾರ್ಜ್ ಫರ್ನಾಂಡಿಸ್ ಅವರು ಖ್ಯಾತ ಕಾರ್ಮಿಕ ಹೋರಾಟಗಾರ, ರಾಜಕಾರಣಿ, ಪತ್ರಕರ್ತ, ಕೃಷಿಕ ಮತ್ತು ಬಿಹಾರದಿಂದ ರಾಜ್ಯಸಭೆಯ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಜನತಾ ದಳದ ಪ್ರಮುಖ ಸದಸ್ಯರಾಗಿದ್ದ ಫರ್ನಾಂಡಿಸ್ ಸಮತಾ ಪಕ್ಷದ ಸಂಸ್ಥಾಪಕರೂ ಆಗಿದ್ದರು. ೨೦೦೯ರ ಆಗಸ್ಟ್‌ನಿಂದ ೨೦೧೦ರ ಜುಲೈವರೆಗೆ ಅವರು ರಾಜ್ಯಸಭೆಯ ಸದಸ್ಯರಾಗಿ ಕೊನೆಯ ಸೇವೆ ಸಲ್ಲಿಸಿದ್ದರು.
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ರಕ್ಷಣಾ ಸಚಿವರಾಗಿದ್ದರು. ಅವರು ರಕ್ಷಣಾ ಸಚಿವರಾಗಿದ್ದ ವೇಳೆಯಲ್ಲೇ ೧೯೯೯ರಲ್ಲಿ ಕಾರ್ಗಿಲ್ ಸಮರ ನಡೆದಿತ್ತು. ಅವರು ರಕ್ಷಣಾ ಸಚಿವರಾಗಿದ್ದ ಕಾಲದಲ್ಲೇ ೧೯೯೮ರಲ್ಲಿ ಭಾರತವು ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ನಡೆಸಿತ್ತು.  ೧೯೭೭ರಲ್ಲಿ ತುರ್ತು ಪರಿಸ್ಥಿತಿಯ ಬಳಿಕ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರನ್ನು ಪರಾಭವಗೊಳಿಸಿದ್ದ ಜನತಾ ಪಕ್ಷವು ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ರಚಿಸಿದ್ದ ಕೇಂದ್ರ ಸರ್ಕಾರದಲ್ಲಿ ಜಾರ್ಜ್ ಫರ್ನಾಂಡಿಸ್ ಅವರು ಕೈಗಾರಿಕಾ ಸಚಿವರಾಗಿದ್ದರು.
೨೦೧೦ರಲ್ಲಿ ಅಲ್ಜಿಮೀರ್ ಕಾಯಿಲೆ ಕಾಡಿದ ಬಳಿಕ ಜಾರ್ಜ್ ಫರ್ನಾಂಡಿಸ್ ಅವರು ಸಕ್ರಿಯ ಸಮಾಜಸೇವೆ, ರಾಜಕಾರಣದಿಂದ ಕ್ರಮೇಣ ಮರೆಯಾಗಿದ್ದರು.  ಪ್ರಚಂಡ ಕಾರ್ಮಿಕ ಹೋರಾಟಗಾರರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರದ್ದು ಬಹುಮುಖ ವ್ಯಕ್ತಿತ್ವದ ಜೀವನ.  ಮಾನವ ಹಕ್ಕುಗಳ ಹೋರಾಟಗಾರರಾಗಿ, ಪತ್ರಕರ್ತರಾಗಿ, ಸಮಾಜವಾದಿಯಾಗಿ ಮತ್ತು ರಾಜಕಾರಣಿಯಾಗಿ ಕ್ರಿಯಾಶೀಲರಾಗಿದ್ದ ಜಾರ್ಜ್ ಫರ್ನಾಂಡೀಸ್ ಮಂಗಳೂರಿನ ಕ್ಯಾಥೋಲಿಕ್ ಕ್ರೈಸ್ತ ಕುಟುಂಬದ ಜೋಸೆಫ್ ಫರ್ನಾಂಡಿಸ್ ಮತ್ತು ಅಲೀಸ್ ಮಾರ್ಥಾ ಫರ್ನಾಂಡಿಸ್ ದಂಪತಿಯ ೬ ಮಂದಿ ಮಕ್ಕಳಲ್ಲಿ ಹಿರಿಯವರು. ಎಸ್ ಎಸ್ ಎಲ್ ಸಿ ಓದಿದ ಬಳಿಕ ತಂದೆಯವರು ಜಾರ್ಜ್ ಕಾನೂನು ಪದವಿ ಓದಿ ವಕೀಲನಾಗಬೇಕೆಂದು ಬಯಸಿದ್ದರು. ಆದರೆ ಅದರಲ್ಲಿ ಆಸಕ್ತಿ ಇಲ್ಲದ ಜಾರ್ಜ್ ಪಾದ್ರಿಯಾಗಬೇಕೆಂದು ಬಯಸಿ ಅದರಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಿದರು. ಆದರೆ ಅಲ್ಲಿ ಆಚಾರಕ್ಕೂ ವಿಚಾರಕ್ಕೂ ಇದ್ದ ವ್ಯತ್ಯಾಸಗಳನ್ನು ಕಂಡು ಬೇಸರ ಪಟ್ಟುಕೊಂಡ ಜಾರ್ಜ್ ಅಲ್ಲಿಂದ ವಾಪಸಾಗಿದ್ದರು. ಅಲ್ಲಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ದಿನಗಳಲ್ಲೇ ಮಂಗಳೂರಿನ ಸರಕು ಸಾಗಣೆ ಸಂಸ್ಥೆಗಳಲ್ಲಿ ಮತ್ತು ಹೋಟೆಲುಗಳಲ್ಲಿ ಕೆಲಸ ಮಾಡುತ್ತಿದ್ದ ಅಸಂಘಟಿತ ಶೋಷಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರ ಪರವಾದ ಹೋರಾಟಗಳಿಗೆ ಧ್ವನಿಯಾದರು. ಮುಂದೆ ಮುಂಬಯಿಗೆ ಬಂದು ಕೆಲಸ ಹುಡುಕುತ್ತಾ ಹಲವಾರು ಬಾರೀ ರಸ್ತೆಗಳ ಬದಿಯಲ್ಲಿ ಮಲಗಿ ಬದುಕು ಸವೆಸಿದರು. ಬಳಿಕ ಒಬ್ಬ ಪ್ರೂಫ್ ರೀಡರ್ ಆಗಿ ಬಳಿಕ ಪತ್ರಕರ್ತರಾದ ಜಾರ್ಜ್ ಹಲವಾರು ಪತ್ರಿಕೆಗಳನ್ನು ನಡೆಸುತ್ತಾ ರೈತರ ಮತ್ತು ಕಾರ್ಮಿಕರ ಧ್ವನಿಯಾದರು. ಪ್ಲಾಸಿಡ್ ಡಿಮೆಲ್ಲೋ, ರಾಮ್ ಮನೋಹರ್ ಲೋಹಿಯಾ ಅವರ ಸಹಚರ್ಯೆಗೆ ಬಂದ ಜಾರ್ಜ್ ಫರ್ನಾಂಡೀಸ್, ಅವರ ಕಾರ್ಯದಿಂದ ಪ್ರೇರಣೆ ಪಡೆದು ಹೋಟೆಲ್ ಕಾರ್ಮಿಕರು ಮತ್ತು ಸಣ್ಣ ಸಣ್ಣ ಉದ್ಯಮಗಳಲ್ಲಿ ಕೂಲಿ ಮಾಡುತ್ತಿದ್ದ ಶೋಷಿತ ಕಾರ್ಮಿಕರ ಸಂಘಟನೆಗಾಗಿ ಕೆಲಸ ಮಾಡತೊಡಗಿದರು. ಹೀಗೆ ೫೦-೬೦ರ  ದಶಕದಲ್ಲಿ ಅವರು ಮುಂಬಯ ಪ್ರಭಾವಿ ಕಾರ್ಮಿಕ ನಾಯಕರಾಗಿ ರೂಪುಗೊಂಡಿದ್ದರು. ೧೯೬೧ರಿಂದ ೧೯೬೮ರ ಅವಧಿಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೋರೇಷನ್ನಿನ ಸದಸ್ಯರಾಗಿ ಜನಪ್ರಿಯ ಸೇವೆ ಸಲ್ಲಿಸಿದರು. ೧೯೬೭ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಸದಾಶಿವ ಕಣೋಜಿ ಪಾಟಿಲ್ ಅವರಂತಹ ಜನಪ್ರಿಯ ಕಾಂಗ್ರೆಸ್ ನಾಯಕರನ್ನು ಭಾರೀ ಅಂತರದಿಂದ ಸೋಲಿಸಿದರು. ಕ್ರಮೇಣ ಮುಂಬಯಿಯ ಕಾರ್ಮಿಕ ಸಂಘಟನೆಗಳಲ್ಲಿ ಜಾರ್ಜ್ ಫರ್ನಾಂಡೀಸ್ ಅವರ ಪ್ರಭಾವ ಕಡಿಮೆಯಾಗತೊಡಗಿದರೂ, ರೈಲ್ವೇ ಫೆಡರೇಶನ್ನಿನ ಅಧ್ಯಕ್ಷರಾಗಿ ಅವರು ಭಾರತಾದ್ಯಂತ ರೈಲ್ವೇ ಚಳುವಳಿಯನ್ನು ಸಂಘಟಿಸಿದರು. ಈ ಚಳುವಳಿಯಿಂದ ಇಡೀ ಭಾರತವೇ ಸ್ತಬ್ಧಗೊಂಡಿತ್ತು. ಜಾರ್ಜ್  ಫರ್ನಾಂಡೀಸ್ ತಮ್ಮ ಓದಿನ ದಿನಗಳಿಂದಲೇ ಬರವಣಿಗೆಯಲ್ಲಿ ತೊಡಗಿದ್ದರು. ೧೯೪೯ರಲ್ಲಿ ಅವರು ‘ಕೊಂಕಣಿ ಯುವಕ್ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದೇ ಸಮಯದಲ್ಲಿ ಕನ್ನಡದಲ್ಲಿ ‘ರೈತವಾಣಿ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. ೧೯೫೨-೫೩ರ ಅವಧಿಯಲ್ಲಿ ತನ್ನ ಕಾರ್ಯನಿಲ್ಲಿಸಿದ್ದ ’ಡಾಕ್‌ಮ್ಯಾನ್ ವಾರಪತ್ರಿಕೆಗೆ ಪುನಃಶ್ಚೇತನ ನೀಡಿದ್ದರು.  ವಾಟ್ ಏಲ್ಸ್ ದಿ ಸೋಶಿಯಲಿಸ್ಟ್ಸ್, ದಿ ಕಾಶ್ಮೀರ್ ಪ್ರಾಬ್ಲೆಮ್, ರೈಲ್ವೇ ಸ್ಟ್ರೈಕ್ ಆಫ್ ೧೯೭೪, ಇತ್ಯಾದಿ ವೈಚಾರಿಕ ಪುಸ್ತಕಗಳ ಜೊತೆಗೆ ’ಜಾರ್ಜ್ ಫರ್ನಾಂಡಿಸ್ ಸ್ಪೀಕ್ಸ್ ಎಂಬ ಶೀರ್ಷಿಕೆಯಲ್ಲಿ ತಮ್ಮ ಆತ್ಮಚರಿತ್ರೆಯನ್ನೂ ಅವರು ಬರೆದಿದ್ದರು.  ಅವರು ಇಂಗ್ಲಿಷ್ ಮಾಸಿಕ ’ದಿ ಅದರ್ ಸೈಡ್ ಸಂಪಾದಕರೂ ಆಗಿದ್ದರು. ಹಿಂದಿಯಲ್ಲಿ ಮೂಡಿಬರುತ್ತಿದ್ದ ‘ಪ್ರತಿಪಕ್ಷ್ ಪತ್ರಿಕೆಯ ಸಂಪಾದಕೀಯ ಮಂಡಲಿಯ ಅಧ್ಯಕ್ಷರಾಗಿದ್ದರು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿದ್ದರು. ಮಾನವ ಹಕ್ಕುಗಳ ಹೋರಾಟಗಾರರಾಗಿ ಅಮ್ನೆಸ್ಟಿ ಇಂಟರ್ ನ್ಯಾಷನಲ್, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಗಳ ಸದಸ್ಯರಾಗಿದ್ದರು.  ೧೯೭೫ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿ ಅವರ ಸರ್ವಾಧಿಕಾರತ್ವದ ವಿರುದ್ಧ ಭೂಗತರಾಗಿ ಬಂಡೆದ್ದಿದ್ದವರು ಜಾರ್ಜ್ ಫರ್ನಾಂಡೀಸ್. ಇಂದಿರಾಗಾಂಧಿ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು ಬಂಧಿಸಲು ವಾರಂಟ್ ಹೊರಡಿಸಿದಾಗ ತಪ್ಪಿಸಿಕೊಂಡು ಭೂಗತ ಚಟುವಟಿಕೆಗಳಿಗೆ ಮೊದಲು ಮಾಡಿದರು. ಜಾರ್ಜ್ ಕೈಗೆ ಸಿಗದಿದ್ದಾಗ ಪೋಲೀಸರು ಅವರ ಸಹೋದರ ಲಾರೆನ್ಸ್ ಫರ್ನಾಂಡೀಸ್ ಅವರನ್ನು ಬಂಧಿಸಿ ಚಿತ್ರಹಿಂಸೆಗೆ ಒಳಪಡಿಸಿದರು. ಅವರೊಡನೆ ಸಂಪರ್ಕ ಹೊಂದಿದ್ದರೆಂಬ ಕಾರಣದಿಂದ ’ಸಂಸ್ಕಾರ ಚಿತ್ರದ ಖ್ಯಾತಿಯ ಸ್ನೇಹಲತಾರೆಡ್ಡಿ ಅವರನ್ನು ಅಸ್ವಸ್ಥರಾಗಿದ್ದರೂ ಲೆಕ್ಕಿಸದೆ ಬಂಧಿಸಿ ಚಿತ್ರಹಿಂಸೆಗೆ ಗುರಿ ಪಡಿಸಿದ್ದರು.  ಜಾರ್ಜ್ ಫರ್ನಾಂಡೀಸ್ ಅವರು ಇದೇ ವೇಳೆಯಲ್ಲಿ ಕೆಲವೊಂದು ಸರ್ಕಾರಿ ಶೌಚಾಲಯಗಳಲ್ಲಿ ಮತ್ತು ಇಂದಿರಾ ಗಾಂಧಿಯವರು ಭಾಷಣ ಮಾಡುತ್ತಿದ್ದ ಸ್ಥಳಗಳ ಸುತ್ತಮುತ್ತ ಸಾವು ನೋವುಗಳು ಸಂಭವಿಸದ ರೀತಿಯಲ್ಲಿ ಡೈನಮೈಟ್ ಸಿಡಿಸಿ ಗಾಬರಿ ಹುಟ್ಟಿಸುವುದರ ಮೂಲಕ ಇಂದಿರಾಗಾಂಧಿ ಅವರ ತುರ್ತುಪರಿಸ್ಥಿತಿಯನ್ನು ವಿರೋಧಿಸುವ ಯೋಜನೆಗಳನ್ನು ಹೆಣೆದಿದ್ದರು. ಇಂದಿರಾ ಗಾಂಧಿ ಭಾಷಣ ಮಾಡಬೇಕಿದ್ದ ವಾರಾಣಸಿಯಲ್ಲಿ ವೇದಿಕೆಯನ್ನು ಕಾರ್ಯಕ್ರಮಕ್ಕೆ ನಾಲ್ಕು ಗಂಟೆಗಳ ಮುಂಚೆ ಸ್ಫೋಟಿಸುವ ಪ್ರಯತ್ನಗಳು ನಡೆದವು. ಇದು ಬರೋಡ ಡೈನಮೈಟ್ ಪ್ರಕರಣ ಎಂದು ಪ್ರಸಿದ್ಧವಾಗಿತ್ತು. ಮುಂದಿನ ದಿನಗಳಲ್ಲಿ ಸೆರೆಸಿಕ್ಕಿದ ಜಾರ್ಜ್ ಫರ್ನಾಂಡಿಸ್ ಅವರನ್ನು ಇಂದಿರಾಗಾಂಧಿ ಸರ್ಕಾರ ಖೈದಿಯಾಗಿ ಜೈಲಿನಲ್ಲಿರಿಸಿತ್ತು.  ೧೯೭೭ರಲ್ಲಿ ಮಹಾ ಚುನಾವಣೆ ಘೋಷಿತವಾದಾಗ ಜೈಲಿನಿಂದಲೇ ಬಿಹಾರದ ಮುಜಾಫ್ಫರಪುರ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ನಾಮಪತ್ರ ಸಲ್ಲಿಸಿದ ಜಾರ್ಜ್ ಫರ್ನಾಂಡಿಸ್, ಒಮ್ಮೆ ಕೂಡಾ ಚುನಾವಣಾ ಪ್ರಚಾರ ಮಾಡುವ ಅವಕಾಶ ಸಿಗದಿದ್ದರೂ ೩ ಲಕ್ಷ ಮತಗಳ ಅಂತರದಲ್ಲಿ ಪ್ರಚಂಡ ಜಯ ಸಾಧಿಸಿದ್ದರು. ಮುರಾರ್ಜಿ ದೇಸಾಯಿಯವರ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಗಳಾದ ಅವರು ತಮ್ಮ ಖಾತೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದರು. ಮುಂದೆ ಪ್ರಧಾನಿ ವಿ.ಪಿ ಸಿಂಗ್ ನೇತೃತ್ವದ ಸರ್ಕಾರದಲ್ಲಿ ರೈಲ್ವೇ ಸಚಿವರಾದಾಗ ಕೊಂಕಣ ರೈಲ್ವೇ ಯೋಜನೆಯನ್ನು ರೂಪಿಸಿ ಅಸ್ತಿತ್ವಕ್ಕೆ ತಂದರು. ಅತ್ಯಂತ ಕ್ಲಿಷ್ಟಕರವಾಗಿದ್ದ ಈ ಯೋಜನೆಗೆ ಹಣದ ಕೊರತೆಯ ಕಾರಣ ಮುಂದಕ್ಕೆ ಬಂದಾಗ ಕೊಂಕಣ ರೈಲ್ವೇ ನಿಗಮ ಸ್ಥಾಪಿಸಿ ಜನರಿಂದ ಹಣ ಸಂಗ್ರಹಿಸೋಣ ಎಂಬ ಸಹೆಯನ್ನು ಜಾರ್ಜ್ ಮುಂದಿಟ್ಟಿದ್ದರು. ವಿಪಿಸಿಂಗ್ ಅದಕ್ಕೆ ತತ್ ಕ್ಷಣ ಒಪ್ಪಿದ್ದರು.  ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಅವರು ರಕ್ಷಣಾ ಸಚಿವರಾಗಿದ್ದಾಗ ಭಾರತವು ಪಾಕಿಸ್ತಾನದ ಜೊತೆಗೆ ಕಾರ್ಗಿಲ್ ಯುದ್ಧ ನಡೆಸಿತು. ಅವರು ರಕ್ಷಣಾ ಸಚಿವರಾಗಿದ್ದಾಗಲೇ ಭಾರತ ಧೈರ್ಯದಿಂದ ಪರಮಾಣು ಸ್ಪೋಟ ನಡೆಸಿತು. ಚೀನಾ ದೇಶ ಭಾರತದ ವಿರುದ್ಧ ಆಗಾಗ ನಡೆಸುತ್ತಿದ್ದ ಕುತಂತ್ರಗಳನ್ನು ಧೈರ್ಯದಿಂದ ಬಯಲಿಗೆಳೆದರು. ’ಶವಪೆಟ್ಟಿಗೆ ಹಗರಣದಂತಹ ಕೆಲವೊಂದು ಹಗರಣಗಳಲ್ಲಿ ಅವರ ಹೆಸರು ಸಿಲುಕಿತ್ತಾದರೂ ಅವರು ಧೈರ್ಯವಾಗಿ ಎದುರಿಸಿ ನಿಂತು ಸಮಜಾಯಿಷಿ ನೀಡಿದರು. ಅವರನ್ನು ವಿಚಾರಣೆಗೆ ಗುಣಪಡಿಸಿದ ಆಯೋಗಗಳೆಲ್ಲವೂ ಅವರನ್ನು ನಿರ್ದೋಷಿಯೆಂದು ತೀರ್ಪು ನೀಡಿದವು. ೨೦೧೦ರಲ್ಲಿ ಮರೆಗುಳಿ (ಅಲ್ಜಮೀರ್‍ಸ್) ಕಾಯಿಲೆಗೆ ತುತ್ತಾದ ಬಳಿಕ ಅವರು ಕ್ರಮೇಣ ಸಾಮಾಜಿಕ ಜೀವನದಿಂದ ಕಣ್ಮರೆಯಾದರು.  ಕೊಂಕಣಿ, ತುಳು, ಹಿಂದಿ, ಇಂಗ್ಲೀಷ್, ಮರಾಠಿ, ತಮಿಳು, ಉರ್ದು, ಲ್ಯಾಟಿನ್ ಭಾಷೆಯಲ್ಲಿ ಪರಿಣತರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಬಂಗಾಳಿ ಕವಿ, ಕಾದಂಬರಿಕಾರ, ಮಾಜಿ ಕೇಂದ್ರ ಸಚಿವ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು ವಿವಾಹವಾಗಿದ್ದರು. ಜಾರ್ಜ್, ಲೈಲಾ ದಂಪತಿಗೆ ಸಿಯಾನ್ ಫರ್ನಾಂಡಿಸ್ ಎಂಬ ಪುತ್ರ ಜನಿಸಿದ್ದ. 1984ರಲ್ಲಿ ಲೈಲಾ ಅವರಿಂದ ವಿಚ್ಛೇದನ ಪಡೆದಿದ್ದ ಜಾರ್ಜ್ ಫರ್ನಾಂಡಿಸ್ ಅವರು ಜಯಾ ಜೇಟ್ಲಿ ಅವರೊಂದಿಗೆ ವಾಸ್ತವ್ಯ ಹೂಡಿದ್ದರು.

2019: ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಚಿವ ಸಂಪುಟವು ಇದೇ ಪ್ರಥಮಬಾರಿಗೆ ಪ್ರಯಾಗರಾಜ್‌ನಲ್ಲಿ ಸಭೆ ನಡೆಸಿ ಬಳಿಕ ಸಂಗಮದಲ್ಲಿ ಮುಳುಗು ಹಾಕುವ ಮೂಲಕ ಪವಿತ್ರ ಸ್ನಾನವನ್ನೂ ನಡೆಸಿತು. ಉತ್ತರ ಪ್ರದೇಶ ಸಚಿವ ಸಂಪುಟವು ಆದಿತ್ಯನಾಥ್ ಅವರ ಅವಧಿಯಲ್ಲಿ ಲಕ್ನೋದಿಂದ ಹೊರಗೆ ಅಧಿಕೃತ ಸಭೆ ನಡೆಸಿದ್ದು ಇದೇ ಮೊದಲು. ಮುಂಬರುವ ಮಹಾಚುನಾವಣೆಗೆ ಮುಂಚಿತವಾಗಿ ಪಕ್ಷದ ಪ್ರಚಾರಕ್ಕೆ ಒತ್ತು ಕೊಡುವುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ವರ್ಷದ ಕುಂಭಮೇಳವು ಬಿಜೆಪಿ ಪಾಲಿಗೆ ನಿರ್ಣಾಯಕ.  ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮಾವೇಶ ಎಂಬುದಾಗಿ ಪರಿಗಣಿತವಾಗಿರುವ ’ಪ್ರಯಾಗರಾಜ್ ಕುಂಭಮೇಳಕ್ಕೆ ಪ್ರಚಾರದ ಮೆರುಗು ನೀಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡಿರುವ ಸರಣಿ ಕ್ರಮಗಳಲ್ಲಿ ಕುಂಭಮೇಳದಲ್ಲಿ ಸಚಿವರ ಸಂಪುಟ ಸಭೆ ನಡೆಸಿರುವುದು ಕೂಡಾ ಒಂದು. ಸಂಗಮದಲ್ಲಿ ಪವಿತ್ರ ಸ್ನಾನದ ಬಳಿಕ ಸಚಿವರು ಇಲ್ಲಿನ ಮೊಬೈಲ್ ಥಿಯೇಟರಿನಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುತ್ತಿರುವ ೨೦೧೬ರ ಸರ್ಜಿಕಲ್ ದಾಳಿಗಳಿಗೆ ಸಂಬಂಧಿಸಿದ ವಿಕಿ ಕೌಶಲ್ ನಟನೆಯ ’ಉರಿ ಚಿತ್ರವನ್ನು ವೀಕ್ಷಿಸಿದರು. ಲೋಕಸಭೆಗೆ ೮೦ ಮಂದಿ ಶಾಸನಕರ್ತರನ್ನು ಕಳುಹಿಸುವ ಉತ್ತರ ಪ್ರದೇಶದ ಚುನಾವಣೆಯು ಬಿಎಸ್‌ಪಿ- ಎಸ್‌ಪಿ ಮೈತ್ರಿಯ ಹಿನ್ನೆಲೆಯಲ್ಲಿ ಬಿಜೆಪಿಗೆ ಕಠಿಣ ಸವಾಲು ಒಡ್ಡುವ ಸಾಧ್ಯತೆಗಳಿವೆ. ಇದರ ಜೊತೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ರಾಜಕೀಯ ಪ್ರವೇಶವು ಚುನಾವಣೆಗೆ ಹೊಸ ಆಯಾಮವನ್ನು ನೀಡಿದೆ.  ಸಚಿವ ಸಂಪುಟ ಸಭೆ  ಹಾಗೂ ಸಚಿವರ ಪವಿತ್ರ ಸ್ನಾನದ ಹಿನ್ನೆಲೆಯಲ್ಲಿ ಸಂಗಮದ ಸುತ್ತಮುತ್ತಣ ಪ್ರದೇಶವನ್ನು ಸ್ವಚ್ಛಗೊಳಿಸಿದ್ದಲ್ಲದೆ ವಿಶೇಷವಾಗಿ ಅಲಂಕರಿಸಲಾಗಿತ್ತು. ಇತರ ಹಲವಾರು ರಾಜಕಾರಣಿಗಳೂ ಈ ಸಲದ ಕುಂಭಮೇಳಕ್ಕೆ ಧುಮ್ಮಿಕ್ಕುತ್ತಿದ್ದಾರೆ. ಭಾನುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೂ ಕುಂಭಮೇಳದಲ್ಲಿ ಸಂಗಮದಲ್ಲಿ ಮುಳುಗು ಹಾಕಿ ಪವಿತ್ರ ಸ್ನಾನ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಮಾರ್ಚ್ ತಿಂಗಳಲ್ಲಿ ಕುಂಭಮೇಳ ಮುಕ್ತಾಯವಾಗುವ ಮುನ್ನವೇ ಆಗಮಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶದ ಪೂರ್ವ ಭಾಗಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಹುದ್ದೆ ವಹಿಸಿಕೊಳ್ಳುವ ಮುನ್ನ ಅಥವಾ ನಂತರ ಕುಂಭಮೇಳಕ್ಕೆ ಆಗಮಿಸಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ಸಕ್ರಿಯ ರಾಜಕಾರಣ ಪ್ರವೇಶಿಸುವ ನಿರೀಕ್ಷೆ ಇದೆ.

2019: ಪ್ರಯಾಗರಾಜ್: ವಿಶ್ವದಲ್ಲೇ ಅತ್ಯಂತ ಉದ್ದವಾದ ೬೦೦ ಕಿಲೋ ಮೀಟರ್ ಉದ್ದದ ಷಟ್ಪಥ ಎಕ್ಸ್ ಪ್ರೆಸ್ ವೇ (ಆರು ಪಥಗಳ ಎಕ್ಸ್‌ಪ್ರೆಸ್ ಮಾರ್ಗ) ನಿರ್ಮಾಣವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಯಾಗರಾಜ್ ಕುಂಭಮೇಳದಲ್ಲಿ ನಡೆದ ಪ್ರಪ್ರಥಮ ಸಚಿವ ಸಂಪುಟ ಸಭೆಯಲ್ಲಿ ಪ್ರಕಟಿಸಿದರು. ಅಂದಾಜು ೩೬,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಷಟ್ಪಥ ಎಕ್ಸ್‌ಪ್ರೆಸ್ ಮಾರ್ಗವು ರಾಜ್ಯದ ಪಶ್ಚಿಮ ಭಾಗವನ್ನು ಪೂರ್ವಭಾಗದೊಂದಿಗೆ ಜೋಡಿಸಲಿದೆ.  ‘ಇದು ವಿಶ್ವದ ಅತ್ಯಂತ ಉದ್ದದ ಎಕ್ಸ್‌ಪ್ರೆಸ್ ಮಾರ್ಗವಾಗಲಿದೆ. ಸುಮಾರು ೬೦೦ ಕಿಮೀ ಉದ್ದದ ಈ ಮಾರ್ಗಕ್ಕೆ ೬,೫೫೬ ಹೆಕ್ಟೇರ್ ಭೂಮಿ ಬೇಕಾಗುತ್ತದೆ. ಯೋಜನೆಯ ಅಂದಾಜು ವೆಚ್ಚ ೩೬,೦೦೦ ಕೋಟಿ ರೂಪಾಯಿಗಳು ಎಂಬುದಾಗಿ ಯೋಗಿ ಆದಿತ್ಯನಾಥ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಎಕ್ಸ್‌ಪ್ರೆಸ್ ಮಾರ್ಗವು ಮೀರತ್, ಅಮ್ರೋಹ, ಬುಲಂದಶಹರ್, ಬದೌನ್, ಶಹಜಾನಪುರ, ಕನೋಜ್, ಉನ್ನಾವೋ, ರಾಯ್ ಬರೇಲಿ, ಪ್ರತಾಪಗಢ ಮೂಲಕ ಪ್ರಯಾಗರಾಜ್‌ನ್ನು ಸಂಪರ್ಕಿಸುವುದು ಎಂದು ಕುಂಭದಲ್ಲಿ ನಡೆದ ಪ್ರಪ್ರಥಮ ಸಚಿವ ಸಂಪುಟ ಸಭೆಯ ಬಳಿಕ ಯೋಗಿ ಆದಿತ್ಯನಾಥ್ ಅವರು ನುಡಿದರು. ಕುಂಭ ಮೇಳವನ್ನು ಸಂಘಟಿಸುವ ಪ್ರಯಾಗರಾಜ್ ಮೇಳ ಪ್ರಾಧಿಕಾರದ ಕಚೇರಿಯಲ್ಲಿ ಸಚಿವ ಸಂಪುಟದ ಸಭೆ ನಡೆಯಿತು.  ವಿಶ್ವದ ಅತಿದೊಡ್ಡ ಯಾತ್ರಾ ಸಮಾವೇಶಗಳಲ್ಲಿ ಒಂದಾಗಿರುವ ಕುಂಭಮೇಳವನ್ನು ಇನ್ನಷ್ಟು ಜನಪ್ರಿಯಗೊಳೀಸುವ ನಿಟ್ಟಿನಲ್ಲಿ ಆದಿತ್ಯನಾಥ್ ಅವರು ಕೈಗೊಂಡಿರುವ ಸರಣಿ ನಿರ್ಧಾರಗಳಲ್ಲಿ ಪ್ರಯಾಗರಾಜ್ ಸಚಿವ ಸಂಪುಟ ಸಭೆಯೂ ಒಂದಾಗಿದೆ.  ೨೯೬ ಕಿಮೀ ಉದ್ದದ ಬುಂದೇಲ್‌ಖಂಡ ಎಕ್ಸ್‌ಪ್ರೆಸ್ ಮಾರ್ಗಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳೀಸಲೂ ಸಚಿವ ಸಂಪುಟ ಸಭೆ ನಿರ್ಧರಿಸಿತು. ಯೋಜನೆಗಾಗಿ ೩೬೪೧ ಹೆಕ್ಟೇರ್ ಭೂಸ್ವಾಧೀನಕ್ಕಾಗಿ ೮೮೬೪ ಕೋಟಿ ರೂಪಾಯಿಗಳನ್ನೂ ಸಭೆ ಮಂಜೂರು ಮಾಡಿತು.  ಗೋರಖ್ ಪುರವನ್ನು ಸಂಪರ್ಕಿಸುವ ಪೂರ್ವಾಂಚಲ ಎಕ್ಸ್ ಪ್ರೆಸ್ ಮಾರ್ಗವನ್ನು ೫೫೫೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲೂ ಸಂಪುಟ ಒಪ್ಪಿಗೆ ಕೊಟ್ಟಿತು. ಸಚಿವ ಸಂಪುಟವು ಸಭೆಗೆ ಮುನ್ನ ವೀಕ್ಷಿಸಿದ ’ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಚಲನಚಿತ್ರಕ್ಕೆ ಎಸ್‌ಜಿಎಸ್‌ಟಿ ವಿನಾಯ್ತಿ ನೀಡಲಾಗುವುದು ಎಂದೂ ಆದಿತ್ಯನಾಥ್ ಪ್ರಕಟಿಸಿದರು. ಸಂಪುಟವು ಕೈಗೊಂಡ ಇನ್ನೊಂದು ನಿರ್ಣಯದಲ್ಲಿ ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ಸಂಸ್ಥೆಯು (ಎಸ್ ಜಿ ಪಿಜಿಐ) ಇನ್ನು ಮುಂದೆ ಏಮ್ಸ್ ವೈದ್ಯರಿಗೆ ಸರಿಸಮವಾದ ಭತ್ಯೆ ಮತ್ತು ಇತರ ಸವಲತ್ತುಗಳನ್ನು ಪಡೆಯಲಿದೆ. ಅಯೋಧ್ಯೆಯ ರಾಮ ಮಂದಿರ ಪ್ರಕರಣದಲ್ಲಿನ ವಿವಾದಿತ ನಿವೇಶನದ ಆಸುಪಾಸಿನ ವಿವಾದಿತವಲ್ಲದ ಸುಮಾರು ೬೦ ಎಕರೆಗಳಿಗೂ ಹೆಚ್ಚಿನ  ಹೆಚ್ಚುವರಿ ಖಾಲಿ ಭೂಮಿಯನ್ನು ರಾಮ ಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸುವಂತೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರವನ್ನು ಕೂಡಾ ಯೋಗಿ ಸ್ವಾಗತಿಸಿದರು.

2019: ತಿರುವಂತಪುರಂ (ಕೇರಳ): ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಫ್ರಾನ್ಸ್ ಜೊತೆಗೆ ಮಾಡಿಕೊಂಡಿರುವ ಹೊಸ ರಫೇಲ್ ಒಪ್ಪಂದಕ್ಕೂ ತಮಗೂ ಸಂಬಂಧವಿಲ್ಲ ಎಂಬುದಾಗಿ ಮಾಜಿ ರಕ್ಷಣಾ ಸಚಿವ, ಗೋವಾದ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ತಮ್ಮ ಬಳಿ ಹೇಳಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೊಸ ಬಾಂಬ್ ಸಿಡಿಸಿದರು. ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ಕಡತಗಳು ತಮ್ಮ ಬೆಡ್‌ರೂಮಿನಲ್ಲಿ ಇರುವುದಾಗಿ ಪರಿಕ್ಕರ್ ಹೇಳಿದ್ದಾರೆ ಎಂಬುದಾಗಿ ಗೋವಾದ ಸಚಿವರೊಬ್ಬರು ನೀಡಿದ ಹೇಳಿಕೆಯ ಆಡಿಯೋ ವಿವಾದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ್ದಕ್ಕಾಗಿ ಟೀಕಿಸಿದ್ದ ರಾಹುಲ್ ಗಾಂಧಿ ಬೆಳಗ್ಗೆ ದಿಢೀರನೆ ಮನೋಹರ ಪರಿಕ್ಕರ್ ಅವರನ್ನು ಭೇಟಿ ಮಾಡಿದ್ದರು. ಭೇಟಿಯ ಬಳಿಕ ’ಇದೊಂದು ಸೌಜನ್ಯದ ಭೇಟಿ ಮಾತ್ರ ಎಂಬುದಾಗಿ ರಾಹುಲ್ ಜೊತೆಗೆ ಇದ್ದ ಕಾಂಗ್ರೆಸ್ಸಿನ ಗೋವಾ ಘಟಕದ ಮುಖ್ಯಸ್ಥರು ಹೇಳಿದ್ದರು. ರಾಹುಲ್ ಅವರು ಆರೋಗ್ಯದ ವಿಚಾರಿಸಿದ್ದು ಬಿಟ್ಟು ಬೇರೆ ಯಾವ ವಿಷಯದ ಬಗೆಗೂ ಮಾತನಾಡಿಲ್ಲ ಎಂದು ಅವರು ಹೇಳಿದ್ದರು. ಆದರೆ ಆ ಬಳಿಕ ಕೇರಳದ ಕೋಚಿಯಲ್ಲಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ ಅವರು ’ಹೊಸ ರಫೇಲ್ ಒಪ್ಪಂದಕ್ಕೂ ತಮಗೂ ಸಂಬಂಧ ಇಲ್ಲ ಎಂಬುದಾಗಿ ಮನೋಹರ ಪರಿಕ್ಕರ್ ಅವರು ತಮ್ಮ ಬಳಿ ಹೇಳಿದ್ದಾರೆ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದರು. ಹೊಸ ರಫೇಲ್ ಒಪ್ಪಂದಕ್ಕೂ ತಮಗೂ ಸಂಬಂಧವಿಲ್ಲ ಎಂಬುದಾಗಿ ಮಾಜಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದ್ದಾರೆ ಎಂದಷ್ಟೇ ಹೇಳಿದ ರಾಹುಲ್ ಈ ಬಗ್ಗೆ ಹೆಚ್ಚಿನ ವಿವರ ನೀಡಲಿಲ್ಲ.  ಭಾಷಣ ಮುಂದುವರೆಸಿದ ಅವರು ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪುಂಖಾನುಪುಂಖವಾಗಿ ಪ್ರಶ್ನೆಗಳನ್ನು ಕೇಳಿದರು.  ‘ಸಿಬಿಐ ಮುಖ್ಯಸ್ಥರನ್ನು ರಾತ್ರಿ ೧.೩೦ ಗಂಟೆಗೆ ಏಕೆ ಕಿತ್ತು ಹಾಕಲಾಯಿತು? ಸುಪ್ರೀಂಕೋರ್ಟ್ ಸಿಬಿಐ ಮುಖ್ಯಸ್ಥರನ್ನು ಮರುನೇಮಕ ಮಾಡಿದರೂ, ನರೇಂದ್ರ ಮೋದಿ ಸರ್ಕಾರವು ಅವರನ್ನು ಪುನಃ ಕಿತ್ತು ಹಾಕಿದ್ದು ಯಾಕೆ? ಫ್ರಾನ್ಸಿನ ಮಾಜಿ ಅಧ್ಯಕ್ಷರು ಪತ್ರಿಕಾಗೋಷ್ಠಿಯಲ್ಲಿ ತಮಗೆ ಭಾರತದ ಪ್ರಧಾನಿಯವರು ರಫೇಲ್ ಗುತ್ತಿಗೆಯನ್ನು ಅನಿಲ್ ಅಂಬಾನಿ ಅವರಿಗೆ ನೀಡಲು ತಿಳಿಸಿದರು ಎಂದು ಹೇಳಿದ್ದು ಯಾಕೆ? ಯಾವ ಅನುಭವವೂ ಇಲ್ಲದ ವ್ಯಕ್ತಿಗೆ, ೭೦ ವರ್ಷಗಳಿಂದ ವಿಮಾನ ನಿರ್ಮಾಣ ಮಾಡುತ್ತಿದ್ದವರನ್ನು ಬಿಟ್ಟು ರಫೇಲ್ ವಹಿವಾಟನ್ನು ಕೊಟ್ಟದ್ದು ಏಕೆ?  ವಿಮಾನದ ಬೆಲೆ ೫೨೬ ಕೋಟಿ ರೂಪಾಯಿಗಳಿಂದ ೧೬೦೦ ಕೋಟಿ ರೂಪಾಯಿಗಳಿಗೆ ಏರಿದ್ದು ಏಕೆ? ಎಂದು ಪ್ರಶ್ನೆಗಳ ಮಳೆಗರೆದ ರಾಹುಲ್ ’ಇವೆಲ್ಲವುಗಳಿಗೂ ಇರುವ ಏಕೈಕ ಉತ್ತರ ಏನೆಂದರೆ ಭಾರತದ ಪ್ರಧಾನಿ ಭ್ರಷ್ಟರಾಗಿದ್ದಾರೆ ಎಂಬುದು. ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಸಿಬಿಐ ಮುಖ್ಯಸ್ಥರನ್ನೇ ಕಿತ್ತು ಹಾಕಿದ್ದಾರೆ ಎಂದು ಆಪಾದಿಸಿದರು.

2019: ನವದೆಹಲಿ: ಸರ್ಕಾರವು ಈ ಹಿಂದೆ ವಶಪಡಿಸಿಕೊಂಡಿದ್ದ ಅಯೋಧ್ಯೆಯ ವಿವಾದಿತ ಭೂಮಿಯ ಆಸುಪಾಸಿನ ವಿವಾದ ರಹಿತವಾದ ಸುಮಾರು ೬೭ ಎಕರೆ ಭೂಮಿಯನ್ನು  ರಾಮಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ದಿನವೇ ಬಿಹಾರಿನಲ್ಲಿ ರಾಮನಂತೆ ರಾಹುಲ್  ಗಾಂಧಿ ಅವರನ್ನು ಚಿತ್ರಿಸಿರುವ ಪೋಸ್ಟರುಗಳು ಕಂಡು ಬಂದಿದ್ದು, ಕಾಂಗ್ರೆಸ್ ಮೇಲೆ ದಾಳಿಗೆ ಬಿಜೆಪಿಗೆ ಹೊಸ ಅಸ್ತ್ರವನ್ನು ನೀಡಿತು. ರಾಮನ ಅವತಾರ ತಾಳಿದ ರಾಹುಲ್ ಗಾಂಧಿ ಅವರು ಈಗ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ೬೭ ಎಕರೆ ಭೂಮಿಯನ್ನು ರಾಮಜನ್ಮಭೂಮಿ ನ್ಯಾಸಕ್ಕೆ ಹಸ್ತಾಂತರಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ಬಗ್ಗೆ ಏನು ಹೇಳುತ್ತಾರೆ ಎಂದು ಬಿಜೆಪಿ ಪ್ರಶ್ನಿಸಿತು. ರಾಹುಲ್ ಗಾಂಧಿ ಅವರನ್ನು ’ರಾಮನಾಗಿ ಚಿತ್ರಿಸಿದ ಈ ಪೋಸ್ಟರ್ ಪಾಟ್ನಾದಲ್ಲಿ ಕಂಡು ಬಂದ ಕ್ಷಣ ಮಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲೂ ಮಿಂಚಿತು. ಕಾಂಗ್ರೆಸ್ ಪೋಸ್ಟರನ್ನು ಛೇಡಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ’ವಿವಾದ ರಹಿತ ಭೂಮಿ ಬಗ್ಗೆ ಕೇಂದ್ರ ಸರ್ಕಾರವು ಈದಿನ ಸಲ್ಲಿಸಿದ ಅರ್ಜಿ ಬಗ್ಗೆ ಕಾಂಗ್ರೆಸ್ಸಿನ ನಿಲುವು ಏನು ಎಂಬುದಾಗಿ ತಿಳಿಯಬಯಸುವೆ ಎಂದು ಟ್ವೀಟ್ ಮಾಡಿದರು. ಹೊಗಳುಭಟ್ಟಂಗಿತನ-ಕಾಂಗ್ರೆಸ್ಸಿಗರ ಏಕೈಕ ಗುರಿ ಶೀರ್ಷಿಕೆಯ ಟ್ವಿಟ್ಟರ್ ಸಂದೇಶದಲ್ಲಿ ಸಂಬಿತ್ ಪಾತ್ರ ಅವರು ’ಕೇಂದ್ರ ಸರ್ಕಾರವು ಸುಪ್ರೀಂಕೋರ್ಟಿಗೆ ಈದಿನ ಸಲ್ಲಿಸಿದ ಅರ್ಜಿ ಬಗ್ಗೆ ನಿಮ್ಮ (ಕಾಂಗ್ರೆಸ್) ನಿಲುವು ಏನು?’ ಎಂಬುದಾಗಿ ಪ್ರಶ್ನಿಸಿದರು. ಇದು ಪಾಟ್ನಾದಲ್ಲಿ ಪ್ರತ್ಯಕ್ಷವಾಗಿರುವ ಕಾಂಗ್ರೆಸ್ಸಿನ ಪೋಸ್ಟರ್. ಕಾಂಗೆಸ್ಸಿಗರ ಏಕೈಕ ಗುರಿ ಹೊಗಳು ಭಟ್ಟಂಗಿತನ. ಮೊದಲು ರಾಮನ ಅಸ್ತಿತ್ವವನ್ನೇ ಅಲ್ಲಗಳೆಯುವುದು. ಬಳಿಕ ಶ್ರೀರಾಮನಂತೆ ರಾಹುಲ್ ವೇಷ ಧರಿಸುವುದು.. ಒಳ್ಳೆಯದು. (ನೀವು) ಶ್ರೀರಾಮನಾಗಿದ್ದೀರಿ. ಈಗ ಸುಪ್ರೀಂಕೋರ್ಟಿಗೆ ಕೇಂದ್ರ ಸರ್ಕಾರವು ಈದಿನ ಸಲ್ಲಿಸಿದ ಅರ್ಜಿಯ ಬಗ್ಗೆ ನಿಮ್ಮ ನಿಲುವು ಏನು ಎಂಬುದನ್ನು ಈ ಕಾಂಗ್ರೆಸ್ ಮಂದಿಗೆ ಹೇಳಿ ಎಂದು ಸಂಬಿತ್ ಪಾತ್ರ ಟ್ವೀಟ್ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿತು. ಇದಕ್ಕೆ ಮುನ್ನ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯವಾಗಿ ಅತ್ಯಂತ ಮಹತ್ವದ ಕ್ರಮವಾಗಿ ಕೇಂದ್ರ ಸರ್ಕಾರವು ವಿವಾದಿತ ರಾಮಜನ್ಮಭೂಮಿ -ಬಾಬರಿ ಮಸೀದಿಯ ಸುತ್ತಮುತ್ತಣ ಹೆಚ್ಚುವರಿ ಜಾಗವನ್ನು ಅದರ ಮೂಲ ಮಾಲೀಕರಿಗೆ ಹಸ್ತಾಂತರಿಸಲು ಅನುಮತಿ ನೀಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ೨.೭೭ ಎಕರೆ ವಿವಾದಿತ ರಾಮಜನ್ಮಭೂಮಿ-ಬಾಬರಿ ಮಸೀದಿ ನಿವೇಶನ ಸೇರಿದಂತೆ ಒಟ್ಟು ೬೭ ಎಕರೆ ಭೂಮಿಯನ್ನು ತಾನು ತಾನು ಸ್ವಾಧೀನ ಪಡಿಸಿಕೊಂಡಿದ್ದುದಾಗಿ ಅರ್ಜಿಯಲ್ಲಿ ತಿಳಿಸಿದ ಕೇಂದ್ರ ಸರ್ಕಾರವು, ವಿವಾದ ರಹಿತವಾದ ಈ ೬೭ ಎಕರೆ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಲು ಅನುಮತಿ ನೀಡುವಂತೆ ಕೋರಿತ್ತು. ರಾಮ ಮಂದಿರ ನ್ಯಾಸಕ್ಕೆ ಈ ಭೂಮಿಯನ್ನು ಹಸ್ತಾಂತರಿಸಲು ಈ ಕ್ರಮ ಎಂಬುದಾಗಿ ಅರ್ಥೈಸಲಾಗಿತ್ತು. ೧೯೯೩ರ ಅಯೋಧ್ಯಾ ಕಾಯ್ದೆಯ ಅಡಿಯಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ ಕೆಲವು ಹೆಚ್ಚುವರಿ / ಅನಗತ್ಯ ಭೂಮಿಯನ್ನು ಹಿಂದಿರುಗಿಸುವ / ಹಸ್ತಾಂತರಿಸುವ ತನ್ನ ಕರ್ತವ್ಯವನ್ನು ಈಡೇರಿಸಲು ಅರ್ಜಿದಾರನಿಗೆ ಅನುಮತಿ ನೀಡುವಂತೆ ಕೋರಿ ಅರ್ಜಿದಾರರನು (ಕೇಂದ್ರ ಸರ್ಕಾರ) ಈ ಅರ್ಜಿ ಸಲ್ಲಿಸುತ್ತಿದ್ದಾರೆ ಎಂದು ಅರ್ಜಿ ತಿಳಿಸಿತ್ತು. 


2018: ವಿಜಯವಾಡ: ಹಾಲಿವುಡ್‌, ಬಾಲಿವುಡ್‌, ಸ್ಯಾಂಡಲ್ವುಡ್‌, ಟಾಲಿವುಡ್‌... ಹೀಗೆ ಖ್ಯಾತ ಸಿನೆಮಾ ತಾರೆಯರನ್ನೋ ಅಥವಾ ಸಚಿನ್‌, ಕೊಹ್ಲಿ, ದ್ರಾವಿಡ್ರಂಥ ಖ್ಯಾತನಾಮ ಕ್ರೀಡಾಪಟುಗಳನ್ನೋ ಸರಕಾರಗಳು ತಮ್ಮ ಬ್ರಾಂಡ್ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವುದು ಗೊತ್ತು.  ಆದರೆ, ಸೌರಮಂಡಲದ ಅಧಿಪತಿ ಸೂರ್ಯನನ್ನು ಯಾವುದೇ ಸರ್ಕಾರ ಬ್ರಾಂಡ್ಅಂಬಾಸಡರ್ಮಾಡಿಕೊಂಡಿರಲಿಲ್ಲ.  ಈಗ ಆಂಧ್ರಪ್ರದೇಶ ಸರ್ಕಾರ   ಕೆಲಸವನ್ನೂ ಮಾಡಿದೆ.  ಪ್ರಕೃತಿ ಜತೆ ಪುನರ್ಸಂಪರ್ಕ ಸಾಧಿಸಲು ಹಾಗೂ ಪ್ರಕೃತಿಯ ಆರಾಧನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದರು. ಚಂದ್ರಬಾಬು ನಾಯ್ಡು ಅವರು ವಿಜಯವಾಡದ ಐಜಿಎಂಸಿ ಸ್ಟೇಡಿಯಮ್ನಲ್ಲಿ 'ಸೂರ್ಯ ಆರಾಧನಾ (ಸೂರ್ಯದೇವನ ಪೂಜೆ) ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರ್ಕಾರವೊಂದು ಅಧಿಕೃತವಾಗಿ ಪ್ರಕೃತಿ ಪೂಜೆಯಂಥ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದೇ ಮೊದಲು. ಶ್ರೀ ದುರ್ಗಾ ಮಲ್ಲೇಶ್ವರ ಸ್ವಾಮಿವರ್ಲಾ ದೇವಸ್ಥಾನದ ಪುರೋಹಿತರು ಮಂತ್ರ ಪಠಿಸುತ್ತಿರುವ ನಡುವೆಯೇ ನಾಯ್ಡು ಅವರು ಸೂರ್ಯ ದೇವರಿಗೆ ನೈವೇದ್ಯ ಅರ್ಪಿಸಿದರು. ಕ್ರಿಶ್ಚಿಯನ್ಮತ್ತು ಮುಸ್ಲಿಂ ಪಂಡಿತರೂ ಆಚರಣೆಯಲ್ಲಿ ಭಾಗಿಯಾಗಿ, ಅಲ್ಲಿ ನೆರೆದಿದ್ದ ಭಕ್ತಜನ ಕೋಠಿಗೆ ಸೂರ್ಯನ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.  ಸೂರ್ಯನ ಪೂಜೆಯು ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ಅದು ವಿಜ್ಞಾನ. ಜಾತಿ, ಧರ್ಮದ ಹೆಸರಿನಲ್ಲಿ ಪ್ರತ್ಯೇಕವಾಗಿರ ಬಯಸುವವರೆಲ್ಲರೂ ಸೂರ್ಯನ ಆರಾಧನೆಯನ್ನು ವೀಕ್ಷಿಸಲೇ ಬೇಕು. ಸೂರ್ಯನ ಆರಾಧನೆಯನ್ನು ದಿನಚರಿಯನ್ನಾಗಿ ಮಾಡಿಕೊಂಡರೆ ದೃಢಕಾಯ ಹಾಗೂ ಆರೋಗ್ಯ ಕಾಯ್ದುಕೊಳ್ಳಬಹುದು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.  ವಿದ್ಯುತ್ಉತ್ಪಾದನೆಗೆ ಸೌರಶಕ್ತಿ ಅತ್ಯಂತ ಉಪಯುಕ್ತವೆನಿಸಿಕೊಂಡಿದೆ. 1 ಸಾವಿರ ಮೆಗಾ ವ್ಯಾಟ್ಸ್ವಿದ್ಯುತ್ತಯಾರಿಸುವ ನಿಟ್ಟಿನಲ್ಲಿ ಕರ್ನೂಲ್ಜಿಲ್ಲೆಯ ಒರ್ವಕಲ್ಲುವಿನಲ್ಲಿ 'ಸೌರ ಶಕ್ತಿ ಪಾರ್ಕ್‌' ನಿರ್ಮಿಸಲು ಸರಕಾರ ಯೋಜನೆ ರೂಪಿಸಿದೆ,'' ಎಂದರು. ಏತನ್ಮಧ್ಯೆ, ಸೂರ್ಯ ಮೊದಲು ಉದಯವಾಗುವುದೇ ಆಂಧ್ರಪ್ರದೇಶದಲ್ಲಿ ಎಂದು ಹೇಳಲು ಮುಖ್ಯಮಂತ್ರಿ ಮರೆಯಲಿಲ್ಲ. ''ಸೂರ್ಯ ನಮ್ಮ ಬ್ರಾಂಡ್ಅಂಬಾಸಡರ್‌. ಆದ್ದರಿಂದ, ರಾಜ್ಯವನ್ನು 'ಸನ್ರೈಸ್ಆಂಧ್ರಪ್ರದೇಶ' ಎಂದು ಕರೆಯಲಾಗುತ್ತಿದೆ. ಸೂರ್ಯನನ್ನು ಆರಾಧಿಸುವ ದಿಸೆಯಲ್ಲಿ ನಮ್ಮ ಸರ್ಕಾರ ವನಂ-ಮನಂ, ನೀರು-ಚೆಟ್ಟು, ಜಲಸಿರಿಕಿ ಹಾರತಿಯಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ,'' ಎಂದು ಅವರು ಹೇಳಿದರು.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  ಈದಿನ ಲೋಕಸಭೆಯಲ್ಲಿ ಆರಂಭಗೊಂಡ ಬಜೆಟ್ ಅಧಿವೇಶನದಲ್ಲಿ ೨೦೧೭-೨೦೧೮ರ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದರು. ೨೦೧೮-೧೯ರ ಸಾಲಿನಲ್ಲಿ ಪ್ರಮುಖ ಸುಧಾರಣಾ ಕ್ರಮಗಳ ಪರಿಣಾಮವಾಗಿ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇಕಡಾ ೭ರಿಂದ .೫ರಷ್ಟು ಬೆಳವಣಿಗೆ ಸಾಧಿಸಲಿದೆ ಎಂದು ಸಮೀಕ್ಷೆಯು ನಿರೀಕ್ಷಿಸಿತು. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಜಾರಿ ಬಳಿಕ ೧೮ ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದು, ಪರೋಕ್ಷ ತೆರಿಗೆದಾರರ ಸಂಖ್ಯೆ ಶೇ.೫೦ರಷ್ಟು ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿತು.  ಆದರೆ ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದೆಂದು ಆರ್ಥಿಕ ಸಮೀಕ್ಷೆ ಎಚ್ಚರಿಸಿತು. ಪ್ರಸಕ್ತ ಸಾಲಿನ ಮಾರ್ಚ್ ಅಂತ್ಯದೊಳಗೆ ದೇಶದ ಜಿಡಿಪಿ ಶೇ..೭೫ರಷ್ಟು ಬೆಳವಣಿಗೆ ಕಾಣಲಿದೆ ಎಂದು ಆರ್ಥಿಕ ಸಮೀಕ್ಷೆ ಹೇಳಿತು. ೨೦೧೪-೧೫ನೇ ಸಾಲಿನಲ್ಲಿ ಜಿಡಿಪಿ ಬೆಳವಣಿಗೆಯ ಸರಾಸರಿ ಪ್ರಮಾಣ ಶೇ .೩ರಷ್ಟಿತ್ತು. ಇದು ವಿಶ್ವದ ಪ್ರಮುಖ ಆರ್ಥಿಕ ಸದೃಢ ರಾಷ್ಟ್ರಗಳಿಗಿಂತಲೂ ಹೆಚ್ಚು ಎಂದು ಸಮೀಕ್ಷೆಯಲ್ಲಿ ಹೇಳಲಾಯಿತು.
೨೦೧೮- ೧೯ರ ಸಾಲಿನಲ್ಲಿ ಜಿಡಿಪಿ ಏರಿಕೆ ಕಾಣುವ ನಿಟ್ಟಿನಲ್ಲಿ ಹಿಂದಿನ ವರ್ಷಗಳಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಾಗಿದೆ. ಹಿನ್ನೆಲೆಯಲ್ಲಿ ಜಗತ್ತಿನಲ್ಲಿ ವೇಗದ ಆರ್ಥಿಕ  ಬೆಳವಣಿಗೆ ಕಾಣುತ್ತಿರುವ ಸಾಲಿನಲ್ಲಿ ಭಾರತ  ನಿಂತಿದೆ. ನೋಟು ನಿಷೇಧ, ಜಿಎಎಸ್ಟಿ ಪರಿಣಾಮ:  ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದ ಬಳಿಕ ತೆರಿಗೆದಾರರ ಸಂಖ್ಯೆ ಹೆಚ್ಚಾಗಿದೆ ಎಂದು ಸಮೀಕ್ಷಾ ವರದಿ ತಿಳಿಸಿತು.  ಆರ್ಥಿಕ ಸುಧಾರಣೆಯ ಕ್ರಮಗಳಿಂದಾಗಿ ಉಳಿತಾಯ ಕೂಡ ಹೆಚ್ಚಾಗಿದೆ ಎಂದು ಸಮೀಕ್ಷೆ ಹೇಳಿತು. ಮುಕ್ತಾಯಗೊಂಡ ಆರ್ಥಿಕ ವರ್ಷದಲ್ಲಿ ಸರ್ಕಾರದ ಯೋಜನೆಗಳ ಪ್ರಗತಿ-ವೈಫಲ್ಯಗಳ ಒಟ್ಟಾರೆ ಸಮೀಕ್ಷೆ ಇದಾಗಿದ್ದು, ಅಲ್ಪಾವಧಿ ಮತ್ತು ಮಧ್ಯಾವಧಿಯಲ್ಲಿ ಆರ್ಥಿಕ ಪ್ರಗತಿಯ ಭವಿಷ್ಯದ ಚಿತ್ರಣವನ್ನು ಸಮೀಕ್ಷೆ ತೆರೆದಿಟ್ಟಿತು. ಕಳೆದ ಮೂರು ವರ್ಷಗಳಲ್ಲಿ ಭಾರತದ ಆರ್ಥಿಕತೆ ಶೇ ೪ರ ಅಂಕಗಳಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, ಅತ್ಯುತ್ತಮ ನಿರ್ವಹಣೆಯ ಆರ್ಥಿಕತೆಗಳ ಸಾಲಿನಲ್ಲಿ ಭಾರತಕ್ಕೆ ಸ್ಥಾನ ದೊರೆಯುವುದು ಖಚಿತ ಎಂದು ಸಮೀಕ್ಷೆ ಹೇಳಿತು. ಇತರ ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಪ್ರಗತಿಶೀಲ ಆರ್ಥಿಕತೆಗಳಿಗೆ ಹೋಲಿಸಿದರೆ ಭಾರತ ಶೇ ೩ಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಸಮೀಕ್ಷೆ ತಿಳಿಸಿತು. ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಜಾರಿ ಬಳಿಕ ೧೮ ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದು, ಪರೋಕ್ಷ ತೆರಿಗೆದಾರರ ಸಂಖ್ಯೆ ಶೇ ೫೦ರಷ್ಟು ಹೆಚ್ಚಿದೆ. ಜಿಎಸ್ಟಿ ಗಳಿಕೆ ಹಿಂದಿನ ಎಲ್ಲ ತೆರಿಗೆಗಳಿಗಿಂತ ಅಧಿಕವಾಗಿದೆ.  ಕೃಷಿ ಸ್ಥಿತಿಗತಿ: ಹವಾಮಾನ ಬದಲಾವಣೆಯ ವ್ಯತಿರಿಕ್ತ ಪರಿಣಾಮದಿಂದ ರೈತರ ಆದಾಯದಲ್ಲಿ ಇಳಿಕೆಯಾಗಬಹುದೆಂದು ೨೦೧೭-೧೮ನೇ ಸಾಲಿನ ಆರ್ಥಿಕ ಸಮೀಕ್ಷೆ ಎಚ್ಚರಿಸಿತು.  ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವುದು, ನೀರಾವರಿಯಲ್ಲಿ ಆಗಬೇಕಾದ ಅಭಿವೃದ್ಧಿ ಹಾಗೂ ನೂತನ ತಂತ್ರಜ್ಞಾನದ ಸಮರ್ಥ ಬಳಕೆ ಕುರಿತು ಆರ್ಥಿಕ ಸಮೀಕ್ಷೆ ಸಲಹೆಗಳನ್ನು ನೀಡಿದೆ.
ಹವಾಮಾನ ಬದಲಾವಣೆಯ ಪರಿಣಾಮದಿಂದ ರೈತರ ವಾರ್ಷಿಕ ಆದಾಯದಲ್ಲಿ ಶೇ ೧೫-೧೮ರಷ್ಟು ಹಾಗೂ ನೀರಾವರಿ ಇರದ ಪ್ರದೇಶದಲ್ಲಿ ಶೇ ೨೦-೨೫ರಷ್ಟು ಇಳಿಕೆಯಾಗುವ ಸಾಧ್ಯತೆ ಇರುವುದಾಗಿ ಸಮೀಕ್ಷೆ ಹೇಳಿತು. ಅಂತರ್ಜಲ ಮೂಲಗಳು ಬರಿದಾಗುತ್ತಿರುವುದು, ಹೆಚ್ಚುತ್ತಿರುವ ನೀರಿನ ಕೊರತೆಗೆ ಪರಿಹಾರವಾಗಿ ದೇಶದಲ್ಲಿ ನೀರಾವರಿ ಪ್ರದೇಶ ವಿಸ್ತರಿಸುವ ಅಗತ್ಯವಿದೆ. ಪ್ರಸ್ತುತ ಒಟ್ಟು ಕೃಷಿ ಭೂಮಿಯಲ್ಲಿ ಶೇ ೪೫ರಷ್ಟು ಪ್ರದೇಶ ನೀರಾವರಿ ಸವಲತ್ತು ಹೊಂದಿದೆ. ನೀರಾವರಿ ಇರದ ಕರ್ನಾಟಕ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಚತ್ತೀಸ್ಗಢ ಹಾಗೂ ಜಾರ್ಖಂಡ್ ಕೆಲ ಭಾಗಗಳು ಬಹುಬೇಗ ಹವಾಮಾನ ಬದಲಾವಣೆಯ ಪರಿಣಾಮಕ್ಕೆ ಒಳಗಾಗುತ್ತಿವೆ ಎಂದು ಸಮೀಕ್ಷೆ ಉಲ್ಲೇಖಿಸಿತು. ಕೃಷಿಯಲ್ಲಿ ಮಹಿಳಾ ಪ್ರಾಬಲ್ಯ: ಪುರುಷರು ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದು ಹೆಚ್ಚಿದ ಹಿನ್ನೆಲೆಯಲ್ಲಿ ಕೃಷಿ ರಂಗದಲ್ಲಿ ಮಹಿಳೆಯರ ಪ್ರಭಾವ ಹೆಚ್ಚಾಗಿರುವುದು ಸಮೀಕ್ಷೆಯಲ್ಲಿ ವ್ಯಕ್ತವಾಯಿತು.  ಬೇಸಾಯಗಾರರು, ಕೃಷಿ ಉದ್ಯಮಗಳು ಮತ್ತು ಕೃಷಿ ಕಾರ್ಮಿಕರಾಗಿ ಮಹಿಳೆಯರು ಬಹುವಿಧದ ಪಾತ್ರಗಳನ್ನು ವಹಿಸುತ್ತಿರುವುದು ಹೆಚ್ಚಿದೆ. ಮಹಿಳೆಯರಿಗೆ ಮಹಿಳಾ ರೈತರಾಗಿ ಬೆಳೆಯಲು ಭೂಮಿ, ನೀರು, ಸಾಲ, ತಂತ್ರಜ್ಞಾನ ಮತ್ತು ತರಬೇತಿಯಂತಹ ವಿಸ್ತರಿತ ಅವಕಾಶಗಳನ್ನು ಒದಗಿಸುವ ಮೂಲಕ ಬೆಳವಣಿಗೆಯ ಲಾಭವನ್ನು ಪಡೆದುಕೊಳ್ಳಬೇಕು ಎಂದು ಸಮೀಕ್ಷೆ ಹೇಳಿತು.  ಕಚ್ಚಾ ತೈಲಬೆಲೆಯ ಅಡ್ಡಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದು ಜಿಡಿಪಿ ಬೆಳವಣಿಗೆ ದರ ಹೆಚ್ಚಳಕ್ಕೆ ತೊಡಕಾಗಬಹುದಾದರೂ ಇತರ ಅನೇಕ ಅಂಶಗಳು ಜಿಡಿಪಿ ವೃದ್ಧಿಗೆ ನೆರವಾಗಲಿದೆ ಎಂದು ಸಮೀಕ್ಷೆ ಅಭಿಪ್ರಾಯ ಪಟ್ಟಿತು. ಬಳಕೆದಾರ ವಸ್ತುಗಳ ಬೇಡಿಕೆಯು ಮುಂದಿನ ವರ್ಷ ಉತ್ತಮ ಬೆಳವಣಿಗೆ ಕಾಣಲಿದೆ. ಆದರೆ ತೈಲ ಬೆಲೆಗಳಿಂದ ಪ್ರಭಾವಿತವಾಗುವ ಸಾಧ್ಯತೆಯೂ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಅರವಿಂದ ಸುಬ್ರಹ್ಮಣ್ಯನ್ ತಿಳಿಸಿದರು.  ಜಾಗತಿಕ ತೈಲ ಬೆಲೆಯಲ್ಲಿ ೧೦ ಡಾಲರ್ ಏರಿಕೆಯಾಗಿದ್ದು, ಜಿಡಿಪಿ ಶೇ . ಅಥವಾ .೩ರಷ್ಟು ಇಳಿಕೆಯಾಗಲಿದೆ ಎಂದು ಅವರು ತಿಳಿಸಿದರು. ಆಗಸ್ಟ್ ತಿಂಗಳಲ್ಲಿ ಮಂಡಿಸಲಾದ ಮಧ್ಯಾವಧಿ ಆರ್ಥಿಕ ಸಮೀಕ್ಷೆಯಲ್ಲಿ ವಾರ್ಷಿಕ ಜಿಡಿಪಿ ಶೇ .೫ರಷ್ಟಾಗಬಹುದೆಂದು ಭವಿಷ್ಯ ನುಡಿಯಲಾಗಿತ್ತು. ಉತ್ಪಾದನಾ ವಲಯ ಮುಂದಿನ ಆರ್ಥಿಕ ವರ್ಷದಲ್ಲಿ ಶೇ ೮ರ ಪ್ರಗತಿ ಸಾಧಿಸಲಿದೆ. ಉದ್ಯೋಗ ಮತ್ತು ಕೃಷಿ ಪ್ರಮುಖ ಆದ್ಯತಾ ಕ್ಷೇತ್ರಗಳು. ಜಿಎಸ್ಟಿಯನ್ನು ಸ್ಥಿರಗೊಳಿಸುವುದು ಮತ್ತು ಏರ್ ಇಂಡಿಯಾ ಕುರಿತ ನಿರ್ಣಯವನ್ನು ಅಂತಿಮಗೊಳಿಸುವುದು ಎಂದು ವರದಿ ತಿಳಿಸಿತು. ಕೃಷಿಕ್ಷೇತ್ರ ವರ್ಷ ಶೇ .೧ರ ಬೆಳವಣಿಗೆ ಸಾಧಿಸಿದೆ. ಖಾಸಗಿ ಬಂಡವಾಳ ಹೂಡಿಕೆ ಮತ್ತೆ ಪುಟಿದೇಳುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ತಿಳಿಸಿತು. ೧೦ ಹೊಸ ಆರ್ಥಿಕ ವಾಸ್ತವಂಶಗಳು: ಆರ್ಥಿಕ ಸಮೀಕ್ಷೆಯು ಭಾರತೀಯ ಅರ್ಥ ವ್ಯವಸ್ಥೆಯ ೧೦ ಹೊಸ ಆರ್ಥಿಕ ವಾಸ್ತವಾಂಶಗಳತ್ತ ಗಮನ ಸೆಳೆದಿದೆ. ಕಳೆದ ವರ್ಷದ ಸಾಧನೆಗಳತ್ತ ಪತ್ರಿಕಾಗೋಷ್ಠಿಯಲ್ಲಿ ಗಮನ ಸೆಳೆದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಸರ್ಕಾರ ಮೂಲಭೂತವಾಗಿ ಯಾವುದನ್ನೂ ಹೊಸದಾಗಿ ಮಾಡಿಲ್ಲ; ಈಗಾಗಲೇ ಜಾರಿಯಲ್ಲಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ ಅಷ್ಟೇ ಎಂದು ವಿವರಿಸಿದರು.  ಜಿಎಸ್ಟಿ ದತ್ತಾಂಶಗಳ ಬಗ್ಗೆ ಹೊಸ ಒಳನೋಟಗಳನ್ನು ಆರ್ಥಿಕ ಸಮೀಕ್ಷೆ ಪಟ್ಟಿ ಮಾಡಿದೆ.  ಜಿಎಸ್ಟಿ ಮಂಡಳಿಯ ಕಾರ್ಯವೈಖರಿ ಸಹಕಾರಿ ಒಕ್ಕೂಟ ತತ್ವ ಪರಿಣಾಮಕಾರಿಯಾಗಿ ಹೇಗೆ ಕೆಲಸ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಸುಬ್ರಹ್ಮಣ್ಯನ್ ನುಡಿದರು. ವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಭಾರತದ ಬದ್ಧತೆ, ದೆಹಲಿಯ ವಾಯುಮಾಲಿನ್ಯ,  ಕೋರ್ಟುಗಳಲ್ಲಿ ದೀರ್ಘಕಾಲದಿಂದ ಉಳಿದಿರುವ ಪ್ರಕರಣಗಳ ಇತ್ಯರ್ಥ, ಲಿಂಗ ಸಮಾನತೆ, ಗ್ರಾಮೀಣ ಮಹಿಳೆಯರು ಶೌಚಾಲಯು ಬಳಸುವ ಮೂಲಕ ಹೇಗೆ ಉಳಿತಾಯ ಮಾಡಬಹುದು, ಅಂತರ್ಜಾಲ ಬಳಕೆ ಇತ್ಯಾದಿಗಳ ಬಗೆಗೂ ಸಮೀಕ್ಷೆ ಗಮನ ಸೆಳೆಯಿತು.

2018: ನವದೆಹಲಿ: ಗೋಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಪ್ರಕಾರ ಕ್ರಮ ಕೈಗೊಳ್ಳದೇ ಇರುವುದಕ್ಕಾಗಿ ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರಗಳ ವಿರುದ್ಧ ಸಲ್ಲಿಸಲಾದ ನ್ಯಾಯಾಲಯ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ಏಪ್ರಿಲ್ ೩ರ ಒಳಗಾಗಿ ಉತ್ತರ ನೀಡುವಂತೆ ಮೂರೂ ರಾಜ್ಯಗಳಿಗೆ ನಿರ್ದೇಶಿಸಿತು.  ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ ಗಾಂಧಿ ಅವರು ಅರ್ಜಿಯನ್ನು ಸಲ್ಲಿಸಿದ್ದು ಮೂರೂ ರಾಜ್ಯಗಳೂ ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು. ತುಷಾರ ಗಾಂಧಿ ಅವರ ಪರವಾಗಿ ಹಾಜರಾದ ಹಿರಿಯ ವಕೀಲ ಇಂದಿರಾ ಜೈಸಿಂಗ್ ಅವರು ನ್ಯಾಯಾಲಯದ ಆದೇಶದ ಹೊರತಾಗಿಯೂ ರಾಜ್ಯಗಳ ವಿವಿಧೆಡೆಗಳಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿರುವುದು ಕಂಡು ಬಂದಿದೆ ಎಂದು ಹೇಳಿದರು. ತುಷಾರ ಗಾಂಧಿಯವರು ಹಿಂದೆ ಸಲ್ಲಿಸಿದ ಮುಖ್ಯ ಅರ್ಜಿಯ ಜೊತೆಗೇ ನ್ಯಾಯಾಲಯ ನಿಂದನೆ ಅರ್ಜಿಯ ವಿಚಾರಣೆಯನ್ನೂ ನಡೆಸುವುದಾಗಿ ಪೀಠ ತಿಳಿಸಿತು.  ೨೦೧೭ರ ಸೆಪ್ಟೆಂಬರ್ ೬ರಂದು ನ್ಯಾಯಾಲಯವು ಗೋ ಸಂರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ನಿಲ್ಲಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಗಳಿಗೆ ಆಜ್ಞಾಪಿಸಿತ್ತು. ಪ್ರತಿ ಜಿಲ್ಲೆಯಲ್ಲೂ ನೋಡಲ್ ಅಧಿಕಾರಿಗಳನ್ನು ವಾರದ ಒಳಗಾಗಿ ನೇಮಿಸಿ ಗೋಸಂರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರಗಳು ನಡೆಯದಂತೆ ಮತ್ತು ಗೋರಕ್ಷಕರು ಕಾನೂನು ಕೈಗೆ ತೆಗೆದುಕೊಳ್ಳದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿತ್ತು. ಇಂತಹ ಹಿಂಸಾತ್ಮಕ ಕೃತ್ಯಗಳು ನಿಲ್ಲಲೇಬೇಕು ಎಂದು ಹೇಳಿದ್ದ ಕೋರ್ಟ್, ಪ್ರತಿಜಿಲ್ಲೆಯಲ್ಲೂ ಇದೇ ಉದ್ದೇಶಕ್ಕಾಗಿ ಕಾರ್ಯಪಡೆಗಳನ್ನು ರಚಿಸುವಂತೆಯೂ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಗೋ ಸಂರಕ್ಷಣೆ ಹೆಸರಿನಲ್ಲಿ ನಡೆಯುವ ಹಿಂಸಾಚಾರಗಳನ್ನು ನಿಗ್ರಹಿಸಲು ಕೈಗೊಂಡ ಕ್ರಮಗಳ ವಿವರ ಸಹಿತವಾಗಿ ವಾಸ್ತವ ವರದಿ ಸಲ್ಲಿಸುವಂತೆಯೂ ಕೋರ್ಟ್ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಗೋ ಜಾಗೃತಿ ಗುಂಪುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧ ಪಟ್ಟ ವಿಷಯಗಳ ಕುರಿತು ಎಲ್ಲ ರಾಜ್ಯ ಸರ್ಕಾರಗಳಿಗೆ ಸಂವಿಧಾನದ ೨೫೬ನೇ ಪರಿಚ್ಛೇದ ಅಡಿಯಲ್ಲಿ ನೀಡಬಹುದಾದ ನಿರ್ದೇಶನಗಳಿಗೆ ಸಂಬಂಧಿಸಿದಂತೆ ತನ್ನ ಪ್ರತಿಕ್ರಿಯೆಯನ್ನು ಸಲ್ಲಿಸಬೇಕು ಎಂದೂ ಕೋರ್ಟ್ ಹೇಳಿತ್ತು. ಇಂತಹ ಹಿಂಸಾಚಾರ ಹೆಚ್ಚದಂತೆ ನೋಡಿಕೊಳ್ಳಲು ಒಂದು ರೀತಿಯ ಯೋಜಿತ ಕ್ರಮ ಇರಬೇಕು. ಮತ್ತು ಇಂತಹ ಹಿಂಸಾಚಾರ ನಿಲ್ಲಿಸಲು ಪ್ರಯತ್ನಗಳನ್ನು ಕೈಗೊಳ್ಳಬೇಕು. ರಾಜ್ಯಗಳು ಹೇಗೆ ವರ್ತಿಸುತ್ತವೆಯೋ ಗೊತ್ತಿಲ್ಲ, ಆದರೆ ಹಿಂಸಾಚಾರ ನಿಲ್ಲಬೇಕು ಎಂದು ಪೀಠ ಹೇಳಿತ್ತು. ವಾಹನಗಳಲ್ಲಿ ಪ್ರಾಣಿಗಳನ್ನು ಒಯ್ಯುವಾಗ ಹೆಚ್ಚಾಗಿ ಇಂತಹ ಹಲ್ಲೆಗಳು ನಡೆಯುವುದರಿಂದ ಹೆದ್ದಾರಿ ಪಹರೆ ಬಗ್ಗೆ ರಾಜ್ಯಗಳು ಖಾತರಿ ನೀಡಬೇಕು ಎಂದೂ ಪೀಠ ಹೇಳಿತ್ತು.
ತುಷಾರ ಗಾಂಧಿ ಅವರಲ್ಲದೆ ಕಾಂಗ್ರೆಸ್ ನಾಯಕ ತೆಹ್ಸೀನ್ ಪೋನಾವಾಲಾ ಅವರು ಇಂತಹುದೇ ಅರ್ಜಿ ಸಲ್ಲಿಸಿದ್ದರು.

2018: ಬೀಜಿಂಗ್‌: ಡೊಕ್ಲಾಮ್  ಪ್ರದೇಶ ತನ್ನ ವ್ಯಾಪ್ತಿಗೆ ಸೇರಿರುವುದರಿಂದ ಅಲ್ಲಿ ಸೇನಾ ಮೂಲಸೌಕರ್ಯ ನಿರ್ಮಾಣ ಕಾರ್ಯ ಕೈಗೊಂಡಿರುವುದಾಗಿ ಸಮರ್ಥಿಸಿಕೊಂಡಿರುವ ಚೀನಾ, ಸದ್ಯ ಚಾಲ್ತಿಯಲ್ಲಿರುವ ಕಾರ್ಯತಂತ್ರಗಳ ಮೂಲಕ ಶಾಂತ ರೀತಿಯಿಂದ 'ಭಾರತ-ಚೀನಾ ನಡುವಣ ಗಡಿ ಭಿನ್ನಾಭಿಪ್ರಾಯ'ಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದು ಪ್ರತಿಪಾದಿಸಿತು.  3,488 ಕಿ.ಮೀ. ಉದ್ದದ ಗಡಿಯಲ್ಲಿರುವ ಸೂಕ್ಷ್ಮ ಪ್ರದೇಶಗಳಲ್ಲಿನ ಯಥಾಸ್ಥಿತಿಗೆ ಭಂಗ ತರಬಾರದು ಎಂದು ಚೀನಾದಲ್ಲಿನ ಭಾರತೀಯ ರಾಯಭಾರಿ ಗೌತಮ್ ಬಂಬಾವಾಲೆ ಅವರು ಚೀನಾದ ದಿನಪತ್ರಿಕೆ 'ದಿ ಗ್ಲೋಬಲ್ಟೈಮ್ಸ್‌'ಗೆ ನೀಡಿದ ಸಂದರ್ಶನಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ಪ್ರತಿಕ್ರಿಯೆ ನೀಡಿದರು.
''
ನೀವು ಅದಕ್ಕೆ (ಡೊಕ್ಲಾಮ್ ಸಂಘರ್ಷ) ಅಗತ್ಯಕ್ಕಿಂತ ಹೆಚ್ಚು ಪ್ರಚಾರ ನೀಡುತ್ತಿದ್ದೀರಿ ಎಂಬುದು ನನ್ನ ಅನಿಸಿಕೆ. ಡೊಕ್ಲಾಮ್ ಸಂಘರ್ಷದ ನಂತರದ ದಿನಗಳಲ್ಲಿ ಭಾರತ ಮತ್ತು ಚೀನಾ ಮಾತುಕತೆ ನಡೆಸುವ ಅಗತ್ಯವಿತ್ತು. ಗಡಿ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ, ಮುಖಂಡರ ಹಂತವೂ ಒಳಗೊಂಡಂತೆ ವಿವಿಧ ಹಂತಗಳಲ್ಲಿ ಹಿಂದಿಗಿಂತ ಹೆಚ್ಚು ಚರ್ಚೆ ನಡೆಸಬೇಕಿತ್ತು,'' ಎಂದು ಪತ್ರಿಕೆ ಜತೆ ಮಾತನಾಡುತ್ತಾ ಬಂಬಾವಾಲೆ ಹೇಳಿದ್ದರು. ಪಿಎಲ್ (ಪೀಪಲ್ಸ್ಲಿಬರೇಷನ್ಆರ್ಮಿ) ಡೊಕ್ಲಾಮ್  ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ ಬಳಿಕ, ಕಳೆದ ವರ್ಷ ಆಗಸ್ಟ್‌ 28ರಂದು 73 ದಿನಗಳಾವಧಿಯ ಡೋಕ್ಲಾಂ ಸಂಘರ್ಷಕ್ಕೆ ಭಾರತ ಹಾಗೂ ಚೀನಾ ಅಂತ್ಯಹಾಡಿದ್ದವು.

2017: ವಾಷಿಂಗ್ಟನ್: ಮನುಷ್ಯರಿಗೆ ದಿನಕ್ಕೆ ಕನಿಷ್ಟ 7 ತಾಸುಗಳ ನಿದ್ದೆ ಅಗತ್ಯ. ಇದಕ್ಕಿಂತ ಕಡಿಮೆ ನಿದ್ದೆ ಮಾಡುವ ಅಥವಾ ಇಷ್ಟು ಅವಧಿಯಲ್ಲಿ ಸಮರ್ಪಕ ನಿದ್ದೆ ಬಾರದವರಿಗೆ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ ಎಂದು ಸಂಶೋಧನೆಯೊಂದು ತಿಳಿಸಿತು.. ವಾಷಿಂಗ್ಟನ್ ವಿವಿಯ ಸಂಶೋಧಕರು 11 ಅವಳಿಜವಳಿ ಯುವಕರ ರಕ್ತದ ಮಾದರಿ ಪರೀಕ್ಷೆ ನಡೆಸಿ ಅಂಶವನ್ನು ಪತ್ತೆ ಮಾಡಿದ್ದಾರೆ. ಏಳು ತಾಸು ಅಥವಾ ಅದಕ್ಕಿಂತ ಹೆಚ್ಚು ಸಮಯ ನಿದ್ರಿಸುವವರ ರೋಗ ನಿರೋಧಕ ವ್ಯವಸ್ಥೆ ಕಡಿಮೆ ನಿದ್ದೆ ಮಾಡುವವರಿಗೆ ಹೋಲಿಸಿದರೆ ಬಲಿಷ್ಟವಾಗಿರುತ್ತದೆ. ಹಾಗಾಗಿ ದಿನಕ್ಕೆ 7 ತಾಸು ನಿದ್ರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಸಂಶೋಧಕ ನಾಥನೀಲ್ ವಾಟ್ಸನ್ ಹೇಳಿದರು. ಕಾಯಿಲೆ ಬಂದ ಸಂದರ್ಭ ಕಡಿಮೆ ನಿದ್ದೆ ಮಾಡುವವರಿಗೆ ಕೊಡುವ ಚುಚ್ಚುಮದ್ದು ಸಮರ್ಪಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಯಾಕೆಂದರೆ ದೇಹದಲ್ಲಿರುವ ರೋಗನಿರೋಧಕ ಕಣಗಳು ಇದಕ್ಕೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ಕಡಿಮೆ ನಿದ್ದೆ ಮಾಡುವವರಿಗೆ ರೋಗ ಬರುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ ಎಂದು ವಾಟ್ಸನ್ ಅಭಿಪ್ರಾಯಪಟ್ಟರು. ನಗರಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಐಟಿ ಮತ್ತಿತರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಯಿತು.

2009: ಲಂಚ ತೆಗೆದಕೊಂಡ ಪ್ರಕರಣವೊಂದರಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಕ್ರಿಮಿನಲ್ ಪ್ರಕರಣವೊಂದನ್ನು ಇತ್ಯರ್ಥಪಡಿಸುವ ಸಂಬಂಧ ಶಾಸಕರ ಭವನದ ಕೊಠಡಿಯಲ್ಲೇ ವ್ಯಕ್ತಿಯೊಬ್ಬರಿಂದ ಐದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕೆಜಿಎಫ್‌ನ ಬಿಜೆಪಿ ಶಾಸಕ ವೈ. ಸಂಪಂಗಿ ಅವರನ್ನು ಈದಿನ ಮಧ್ಯಾಹ್ನ ಬಂಧಿಸಲಾಯಿತು. ಲಂಚ ತೆಗೆದುಕೊಳ್ಳುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರನ್ನು ಪಕ್ಷದಿಂದ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡ ತಿಳಿಸಿದರು. ಅಂಡರ್‌ಸನ್ ಪೇಟೆಯ ಹುಸೇನ್ ಮೊಯಿನ್ ಫರೂಕ್ ಎಂಬವರು ನೀಡಿದ್ದ ದೂರನ್ನು ಆಧರಿಸಿ ಈ ಕಾರ್ಯಾಚರಣೆ ನಡೆಸಲಾಯಿತು. ಅಲ್ಲಿನ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಬ್ ಇನ್ಸ್‌ಪೆಕ್ಟರ್ ಪಾಷಾ ವಿರುದ್ಧವೂ ಈ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಯಿತು.

2009: ಎಲ್‌ಟಿಟಿಇ ನೆಲೆಗಳನ್ನು ಒಂದೊಂದಾಗಿ ತನ್ನ ವಶಕ್ಕೆ ತೆಗೆದುಕೊಳ್ಳುತ್ತಾ ಸಾಗಿದ ಶ್ರೀಲಂಕಾ ಸೇನೆ ಈದಿನ ವಿಸುವಮಡು ಪಟ್ಟಣವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಇದು ಎಲ್‌ಟಿಟಿಗಳ ಪಾಲಿನ ಫಿರಂಗಿಗಳ ಉಗ್ರಾಣ ಸ್ಥಾನವಾಗಿದ್ದು ಈ ಪ್ರದೇಶದಲ್ಲಿ 35 ಅಡಿ ಉದ್ದದ ಸಬ್‌ಮೆರಿನ್ ತರಹದ ಜಲಾಂತರ್ಗಾಮಿ ನೌಕೆಯನ್ನು ವಶಪಡಿಸಿಕೊಳ್ಳಲಾಯಿತು.. ಇದಕ್ಕೂ ಮುನ್ನ ಈ ಪ್ರದೇಶದಲ್ಲಿ ಎಲ್‌ಟಿಟಿಇ ಪಡೆಗಳ ಜೊತೆ ಸೇನೆ ತೀವ್ರ ಕಾಳಗ ನಡೆಸಿತು. ವಿಸುವಮಡು ಎಲ್‌ಟಿಟಿಇ ಪಡೆಗಳ ಪಾಲಿಗೆ ಭದ್ರ ಆಶ್ರಯ ಸ್ಥಾನವಾಗಿತ್ತು. ಈಗ ಇದೂ ಕೂಡಾ ಸೇನೆಯ ವಶಕ್ಕೆ ಸರಿಯಿತು.

2009: ಖ್ಯಾತ ಚಿತ್ರನಟ ಶಂಕರ್‌ನಾಗ್ ಸಾವಿಗೆ ಸಂಬಂಧಿಸಿದಂತೆ, ಅವರ ಕುಟುಂಬ ವರ್ಗಕ್ಕೆ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಹೈಕೋರ್ಟ್, ಆದೇಶ ಹೊರಡಿಸಿತು. ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದ್ದ 25 ಲಕ್ಷ ರೂಪಾಯಿಗಳನ್ನು 26,80,155 ರೂಪಾಯಿಗೆ ಹೆಚ್ಚಿಸಲು ನ್ಯಾಯಮೂರ್ತಿಗಳಾದ ಕೆ.ಶ್ರೀಧರ ರಾವ್ ಹಾಗೂ ಎಸ್.ಎನ್.ಸತ್ಯನಾರಾಯಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿತು. ಈ ಪರಿಹಾರದ ಮೊತ್ತವನ್ನು ಘಟನೆ ನಡೆದ ದಿನದಿಂದ ಶೇ 6ರ ಬಡ್ಡಿದರ ಸೇರಿಸಿ ನೀಡುವಂತೆ ನ್ಯಾಯಮೂರ್ತಿಗಳು ನಿರ್ದೇಶಿಸಿದರು. ಶಂಕರ್‌ನಾಗ್ ಅವರು, ದಾವಣಗೆರೆ ಜಿಲ್ಲೆಯ ಅರುಗೋಡು ಗ್ರಾಮದ ಬಳಿ 1990ರ ಸೆ.30ರಂದು ನಡೆದ ಅಪಘಾತದಲ್ಲಿ ಮೃತರಾಗಿದ್ದರು. 'ಜೋಕುಮಾರಸ್ವಾಮಿ' ಚಿತ್ರದ ನಿರ್ಮಾಪಕರಾಗಿದ್ದ ಶಂಕರ್‌ನಾಗ್ ಅವರು ಇದೇ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲು ಆ ಮಾರ್ಗವಾಗಿ ತಮ್ಮ ಪತ್ನಿ ಅರುಂಧತಿ ಹಾಗೂ ಪುತ್ರಿ ಕಾವ್ಯಾ ಜೊತೆ ಕಾರಿನಲ್ಲಿ ಪಯಣಿಸುತಿದ್ದ ವೇಳೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅರುಂಧತಿ ಹಾಗೂ ಕಾವ್ಯಾ ಅವರು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಶಂಕರ್‌ನಾಗ್ ಅವರ ಮರಣಕ್ಕೆ ಪರಿಹಾರ ಕೋರಿ ಅರುಂಧತಿ ಹಾಗೂ ಕಾವ್ಯಾ ಅವರು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿಯು ಅವರಿಗೆ 25 ಲಕ್ಷ ರೂಪಾಯಿ ಪರಿಹಾರ ನೀಡಿತ್ತು. ಈ ಪರಿಹಾರವನ್ನು ಹೆಚ್ಚಿಸುವಂತೆ ಕೋರಿ ಅವರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಶಂಕರ್‌ನಾಗ್ ಅವರ ಆದಾಯ, ಖರ್ಚು-ವೆಚ್ಚ ಎಲ್ಲವನ್ನೂ ಗಣನೆಗೆ ತೆಗೆದುಕೊಂಡ ಪೀಠ, ಪರಿಹಾರದ ಹಣವನ್ನು 1.80 ಲಕ್ಷ ರೂಪಾಯಿ ಹೆಚ್ಚಿಸಿತು.

2009: ರಾಷ್ಟ್ರದ ನೂತನ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ ಸರ್ಕಾರ ಸಿದ್ಧಪಡಿಸಿದ 819 ಶತಕೋಟಿ ಡಾಲರ್ (40 ಲಕ್ಷ ಕೋಟಿ ರೂ.) ಆರ್ಥಿಕ ನೆರವಿನ ಪ್ಯಾಕೇಜಿಗೆ ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟಿಟೀವ್ಸ್ ಒಪ್ಪಿಗೆ ಸೂಚಿಸಿತು. ಡೆಮಾಕ್ರೆಟಿಕ್ ಪಕ್ಷದ ಬಹುಮತವಿರುವ ಜನಪ್ರತಿನಿಧಿ ಸಭೆ, ಒಬಾಮ ಅಧ್ಯಕ್ಷರಾದ ನಂತರದಲ್ಲಿ ಮಂಡಿಸಿದ ಪ್ರಥಮ-ಮಹತ್ವದ ಆರ್ಥಿಕ ಉತ್ತೇಜನ ಕ್ರಮ ಯೋಜನೆಗೆ ಹಸಿರು ನಿಶಾನೆ ತೋರಿತು. ಅಧ್ಯಕ್ಷ ಒಬಾಮ ಮಂಡಿಸಿದ ಪ್ಯಾಕೇಜಿನಲ್ಲಿ 'ತುರ್ತು ವೆಚ್ಚ ಕ್ರಮ ಹಾಗೂ ತೆರಿಗೆ ರಿಯಾಯಿತಿ' ಸೌಲಭ್ಯ ಅಡಕವಾಗಿದ್ದವು. ನಾಗರಿಕರು, ವಾಣಿಜ್ಯೋದ್ಯಮ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡಲು 275 ಶತಕೋಟಿ ಡಾಲರಿನ ತಾತ್ಕಾಲಿಕ ತೆರಿಗೆ ರಿಯಾಯಿತಿ ಕಲ್ಪಿಸಲಾಗಿತ್ತು. ಉದ್ಯೋಗ ಕಡಿತದ ಭೀತಿಯಲ್ಲಿರುವ ಅಮೆರಿಕನ್ನರ 'ಒತ್ತಡ' ಕಡಿಮೆ ಮಾಡಲು ಒಬಾಮ ಆಡಳಿತ 544 ಶತಕೋಟಿ ಡಾಲರ್ ಮೂಲಕ 'ನೌಕರಿ ಸೃಷ್ಟಿ'ಯ ಹೊಸ ಯೋಜನೆ ಸಿದ್ಧಪಡಿಸಿತ್ತು. ಆರೋಗ್ಯ ಅಭಿವೃದ್ಧಿ ಕ್ಷೇತ್ರ, ಬಡವರು ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ನೆರವು, ಶಿಕ್ಷಣ ಕ್ಷೇತ್ರ ಅಭಿವೃದ್ಧಿಗೆ ಈ ಹಣ ವಿನಿಯೋಜಿಸಲು ಯೋಜಿಸಲಾಗಿತ್ತು.

2008: ಭಾರತ ಕ್ರಿಕೆಟ್ ತಂಡದ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ವಿರುದ್ಧ ಆಸ್ಟ್ರೇಲಿಯಾ ತಂಡದವರು ಮಾಡಿದ್ದ ಜನಾಂಗೀಯ ನಿಂದನೆ ಆರೋಪ ಸಾಬೀತಾಗಲಿಲ್ಲ. ಹೀಗಾಗಿ ಅವರ ಮೇಲೆ ಹೇರಲಾಗಿದ್ದ ಮೂರು ಪಂದ್ಯಗಳ ನಿಷೇಧ ಶಿಕ್ಷೆ ರದ್ದಾಯಿತು. ಆದರೆ ಸಿಡ್ನಿ ಟೆಸ್ಟ್ ಸಂದರ್ಭದಲ್ಲಿ ಆತಿಥೇಯ ತಂಡದ ಆಂಡ್ರ್ಯೂ ಸೈಮಂಡ್ಸ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದ `ಭಜ್ಜಿ' ಮೇಲೆ ಪಂದ್ಯ ಸಂಭಾವನೆಯ ಅರ್ಧದಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಯಿತು. ಅಡಿಲೇಡಿನಲ್ಲಿ ನಡೆದ ಮೇಲ್ಮನವಿ ವಿಚಾರಣೆ ಕಾಲದಲ್ಲಿ ಟೀಮ್ ಇಂಡಿಯಾ ಮ್ಯಾನೇಜರ್ ಎಂ.ವಿ. ಶ್ರೀಧರ್ ಜೊತೆಗೆ ಹರಭಜನ್ ಸಿಂಗ್ ಹಾಗೂ ಸಚಿನ್ ತೆಂಡೂಲ್ಕರ್ ಹಾಜರಿದ್ದರು. (`ಭಜ್ಜಿ' ಜನಾಂಗೀಯ ನಿಂದನೆ `ಪ್ರಹಸನ'ದ ಘಟನಾವಳಿಗಳು: * ಜನವರಿ 4: ಆಕ್ಷೇಪಾರ್ಹ ವರ್ತನೆ ಹಾಗೂ ಜನಾಂಗೀಯ ನಿಂದನೆ ದೂರು. * ಜ.5: ವಿಚಾರಣೆ ಮುಂದೂಡಿದ ಐಸಿಸಿ ಮ್ಯಾಚ್ ರೆಫರಿ ಮೈಕ್ ಪ್ರಾಕ್ಟರ್. * ಜ.6: ಮ್ಯಾಚ್ ರೆಫರಿಯಿಂದ `ಭಜ್ಜಿ'ಗೆ ಮೂರು ಪಂದ್ಯಗಳ ನಿಷೇಧ ಶಿಕ್ಷೆ. * ಜ.7: ತೀರ್ಪು ಬದಲಿಸುವುದಿಲ್ಲ-ಪ್ರಾಕ್ಟರ್ ಸ್ಪಷ್ಟನೆ; ಬಿಸಿಸಿಐಯಿಂದ ಮೇಲ್ಮನವಿ. * ಜ.8: ಪ್ರವಾಸ ರದ್ದು ಬೆದರಿಕೆ ತಾತ್ಕಾಲಿಕವಾಗಿ ಕೈಬಿಟ್ಟ ಬಿಸಿಸಿಐ. * ಜ.9: ಐಸಿಸಿಯಿಂದ ಮೇಲ್ಮನವಿ ಆಯುಕ್ತರ ನೇಮಕ. * ಜ.10: ಸೈಮಂಡ್ಸ್ ಕೆಣಕಿದ್ದೇ ಹರಭಜನ್ ಪ್ರತ್ತ್ಯುತ್ತರ ನೀಡಲು ಕಾರಣ: ಭಾರತದ ವಾದ. * ಜ.11: ಪ್ರವಾಸ ರದ್ದು ತೀರ್ಮಾನದ ಅಧಿಕಾರ ಬಿಸಿಸಿಐ ಅಧ್ಯಕ್ಷ ಶರದ್ ಪವಾರ್ ಅವರಿಗೆ. * ಜ.12: ಸರಣಿಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಪವಾರ್ ಹೇಳಿಕೆ. * ಜ.13: ಕುಂಬ್ಳೆ ಹಾಗೂ ಪಾಂಟಿಂಗ್ ನಡುವೆ ಸಂಧಾನಕ್ಕೆ ರಂಜನ್ ಮದುಗಲೆ ಮಧ್ಯಸ್ಥಿಕೆ. * ಜ.14: ಟೆಸ್ಟ್ ಸರಣಿಯ ನಂತರ ಮೇಲ್ಮನವಿ ವಿಚಾರಣೆಗೆ ಪ್ರಸ್ತಾವ. * ಜ.25: ಆಸ್ಟ್ರೇಲಿಯಾದವರ ವಾದವನ್ನು ಪರಾಮರ್ಶಿಸದೆ ಒಪ್ಪಿಕೊಂಡ ಪ್ರಾಕ್ಟರ್ ವಿರುದ್ಧ ಕಿಡಿ. * ಜ.26: ಸಿಡ್ನಿ ಟೆಸ್ಟಿನಲ್ಲಿ ಮ್ಯಾಚ್ ರೆಫರಿಗೆ ಭಾರಿ ಸವಾಲು: ಪ್ರಾಕ್ಟರ್ ಅಭಿಪ್ರಾಯ. * ಜ.28: ಹೊಸ ಸಾಕ್ಷಿ ಪರಿಗಣಿಸುವ ನಿರ್ಧಾರಕ್ಕೆ ಬಿಸಿಸಿಐ ಆಕ್ಷೇಪ. * ಜ. 29: ಮೇಲ್ಮನವಿ ವಿಚಾರಣೆ ನಂತರ ಜನಾಂಗೀಯ ನಿಂದನೆ ಆರೋಪ ತಿರಸ್ಕೃತ.)

2008: ಕರ್ನಾಟಕದ ಆಳಂದ ತಾಲ್ಲೂಕಿನ ಭೂಸನೂರು ಸಕ್ಕರೆ ಕಾರ್ಖಾನೆ ಬಳಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಆರು ವರ್ಷದ ಬಾಲಕ ನವನಾಥ ಕಾಶಪ್ಪ ಕಾಂಬಳೆಯನ್ನು ಸತತ ಎಂಟು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ಹೊರತರಲಾಯಿತು. ಬೆಳಗ್ಗೆ ಸುಮಾರು 11ಗಂಟೆಗೆ ಆಟವಾಡುವ ವೇಳೆ, ತೆರೆದ ಕೊಳವೆ ಬಾವಿಗೆ ಬಿದ್ದ ಕಾಂಬಳೆಯನ್ನು ಸಂಜೆ 7.30ಕ್ಕೆ ಹಗ್ಗದ ಸಹಾಯದಿಂದ ಹೊರತರಲಾಯಿತು.

2008: ಜೀವ್ ಮಿಲ್ಕಾಸಿಂಗ್ ಅವರನ್ನು ಹಿಂದಿಕ್ಕಿದ ಜ್ಯೋತಿ ರಾಂಧವ ಭಾರತದ ನಂಬರ್ 1 ಗಾಲ್ಫ್ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾದರು. ಈದಿನ ನವದೆಹಲಿಯಲ್ಲಿ ಬಿಡುಗಡೆಯಾದ ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ರಾಂಧವ 84ನೇ ಸ್ಥಾನ ಪಡೆದರೆ, ಜೀವ್ 86ನೇ ಸ್ಥಾನ ತಮ್ಮದಾಗಿಸಿಕೊಂಡರು. ಯುರೋಪಿಯನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ರಾಂಧವ ಕತಾರ್ ಮಾಸ್ಟರ್ಸಿನಲ್ಲಿ ಜಂಟಿ ಏಳನೇ ಸ್ಥಾನ ಪಡೆದಿದ್ದರು.

2008: ಕಾಂಗ್ರೆಸ್ ಮುಖಂಡ ಎಚ್. ವಿಶ್ವನಾಥ್ ಅವರ ಆತ್ಮಕಥನ `ಹಳ್ಳಿ ಹಕ್ಕಿಯ ಹಾಡು' ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಮೈಸೂರು ಪತ್ರಕರ್ತರ ಸಂಘದಲ್ಲಿ ಬಿಡುಗಡೆಯಾಯಿತು. ಹಿಂದಿನ ದಿನ ಸಮಾರಂಭದಲ್ಲಿ ಗದ್ದಲ ನಡೆದು ಪುಸ್ತಕ ಬಿಡುಗಡೆ ತಡೆ ಹಿಡಿಯಲ್ಪಟ್ಟಿತ್ತು.

2008: ಸೇತುಸಮುದ್ರಂ ವಿವಾದದ ಬಳಿಕ ರಾಮೇಶ್ವರಂನ ಪುರಾತನ ಸ್ಥಳಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಅವರನ್ನು ಸೇತುವೆ ಸಮೀಪ ಕೊಂಡೊಯ್ಯುವುದು ವ್ಯವಹಾರದ ರೂಪ ಪಡೆಯಿತು. ಸೂಕ್ತ ಅನುಮತಿಯಿಲ್ಲದೆ ಯಾತ್ರಾರ್ಥಿಗಳನ್ನು ಹೊತ್ತು ರಾಮೇಶ್ವರಂ ಸೇತುವೆಗೆ ಆಗಮಿಸಿದ ನಾಲ್ಕು ಮೀನುಗಾರಿಕೆ ದೋಣಿಗಳನ್ನು ಪೊಲೀಸರು ವಶಪಡಿಸಿಕೊಂಡರು.

2008: ವಿಶ್ವದ ಅತ್ಯಂತ ಶ್ರೀಮಂತ ಹತ್ತು ಉದ್ಯಮಿಗಳ ಪಟ್ಟಿಯಲ್ಲಿ ಕರ್ನಾಟಕದವರಾದ ವಿಪ್ರೋ ಮುಖ್ಯಸ್ಥ ಅಜೀಮ್ ಪ್ರೇಮ್ ಜಿ ಸೇರಿದಂತೆ ನಾಲ್ವರು ಭಾರತೀಯರು ಸ್ಥಾನ ಗಿಟ್ಟಿಸಿದರು. ಅಮೆರಿಕದ ಪ್ರಸಿದ್ಧ ವಾಣಿಜ್ಯ ನಿಯತಕಾಲಿಕ ಫೋಬ್ಸ್ ತಯಾರಿಸಿದ ಈ ಪಟ್ಟಿಯಲ್ಲಿ ಭಾರತೀಯ ಮುಂಚೂಣಿ ಉದ್ಯಮ ಸಂಸ್ಥೆಗಳ ಮುಖ್ಯಸ್ಥರಾದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಅಂಬಾನಿ ಸೋದರರಾದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಹಾಗೂ ಐಟಿ ಉದ್ಯಮಿ ಅಜೀಮ್ ಪ್ರೇಮ್ ಜಿ ಸೇರಿದರು.

2007: ಭಾರತೀಯ ಅಣುಶಕ್ತಿ ಆಯೋಗದ ಸದಸ್ಯ ಸಿ.ಎನ್.ಆರ್. ರಾವ್ ಅವರಿಗೆ ಪಶ್ಚಿಮ ಬಂಗಾಳದ ವಿಶ್ವ ಭಾರತಿ ವಿಶ್ವ ವಿದ್ಯಾನಿಲಯದ ಕುಲಪತಿ ರಜತ್ ಕಾಂತ ರೇ ಅವರು ಅತ್ಯುನ್ನತ ಪದವಿಯಾದ ದೇಶಿಕೋತ್ತಮ (ಡಿ.ಲಿಟ್) ಪದವಿಯನ್ನು ಪ್ರದಾನ ಮಾಡಿದರು. ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳನ್ನು ಹೊಂದಿರುವ ರಾವ್ ಅವರು 34 ವಿಶ್ವ ವಿದ್ಯಾಲಯಗಳ ಡಾಕ್ಟರೇಟ್ ಗೆ ಪಾತ್ರರಾಗಿದ್ದಾರೆ.

2007: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯವು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಹಾಗೂ ಖ್ಯಾತ ಸಾಹಿತಿ ನಾ.ಡಿಸೋಜಾ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು.

2006: ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರದ ಹೊರವಲಯದಲ್ಲಿ ಇರುವ ಬಟು ಗುಹಾ ದೇವಾಲಯದ ಬಳಿ 2.4 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ವಿಶ್ವದ ಅತಿ ಎತ್ತರದ ಸುಬ್ರಹ್ಮಣ್ಯ ಸ್ವಾಮಿಯ ಬೃಹತ್ ಪ್ರತಿಮೆಯನ್ನು ಸಾವಿರಾರು ಹಿಂದೂ ಮತ್ತು ಇತರ ಧರ್ಮೀಯರ ಸಂಭ್ರಮೋತ್ಸಾಹದ ಮಧ್ಯೆ ಅನಾವರಣಗೊಳಿಸಲಾಯಿತು. ಬಟು ಗುಹೆಯ ಸುಬ್ರಹ್ಮಣ್ಯ ದೇವಾಲಯದ ಹೊರಭಾಗದಲ್ಲಿ ಭಾರತೀಯ ವಾಸ್ತುಶಿಲ್ಪಿಗಳು ಕೆತ್ತನೆ ಮಾಡಿರುವ ಈ ವಿಗ್ರಹದ ಎತ್ತರ 42.7 ಮೀಟರುಗಳು. ಇದನ್ನು ನಿರ್ಮಿಸಲು 250 ಟನ್ ಉಕ್ಕು ಹಾಗೂ 300 ಲೀಟರ್ ಚಿನ್ನದ ದ್ರಾವಣ ಬಳಸಲಾಗಿದ್ದು, 15 ಮಂದಿ ಭಾರತೀಯ ಶಿಲ್ಪಿಗಳು ಸತತ 3 ವರ್ಷಕಾಲ ಶ್ರಮಿಸಿದರು. ಈ ಪ್ರತಿಮೆಗೆ ಹೆಲಿಕಾಪ್ಟರುಗಳಿಂದ ಪುಷ್ಪಾರ್ಪಣೆ ಮಾಡಲಾಯಿತು. ಈ ಪ್ರತಿಮೆ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಯಿತು.

2006: ಹಾಲೆಂಡಿನ ವಿಕ್ ಆನ್ ಜೀಯಲ್ಲಿ ಮುಕ್ತಾಯಗೊಂಡ ಕೋರಸ್ ಚೆಸ್ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ವಿಶ್ವದಾಖಲೆ ನಿರ್ಮಿಸಿದರು. ಐದನೇ ಬಾರಿಗೆ ಈ ಪ್ರಶಸ್ತಿ ಗೆದ್ದು ವಿಶ್ವದಾಖಲೆ ನಿರ್ಮಿಸಿದ ಅವರು ಈ ಬಾರಿ ಮಾತ್ರ ಪ್ರಶಸ್ತಿಯನ್ನು ಆನಂದ್ ವಸಿಲಿನ್ ಟೊಪಲೊವ್ ಅವರ ಜೊತೆಗೆ ಹಂಚಿಕೊಳ್ಳಬೇಕಾಯಿತು.

2006: ಪೋಲೆಂಡಿನ ಕಟೋವೈಸ್ ನಗರದಲ್ಲಿ ಪಾರಿವಾಳ ಹಾರಾಟ ಸ್ಪರ್ಧೆಯ ಸಂದರ್ಭದಲ್ಲಿ ಪ್ರದರ್ಶನ ಕಟ್ಟಡ ಒಂದರ ಛಾವಣಿ ಕುಸಿದು ಕನಿಷ್ಠ 65 ಮಂದಿ ಮೃತರಾಗಿ 160ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಭಾರತ ತಂಡದ ಎಡಗೈ ಮಧ್ಯಮ ವೇಗದ ಬೌಲರ್ ಇರ್ಫಾನ್ ಪಠಾಣ್ ಕರಾಚಿಯಲ್ಲಿ ನಡೆದ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ತಂಡದ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಐತಿಹಾಸಿಕ ದಾಖಲೆ ನಿರ್ಮಿಸಿದರು. ಟೆಸ್ಟ್ ಇತಿಹಾಸದಲ್ಲೇ ಪಂದ್ಯದ ಮೊದಲ ಓವರಿನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೊದಲ ಬೌಲರ್ ಎಂಬ ಗೌರವಕ್ಕೂ ಪಠಾಣ್ ಪಾತ್ರರಾದರು. ಇದಕ್ಕೆ ಮುನ್ನ ಶ್ರೀಲಂಕಾದ ನುವಾನ್ ಜೋಯ್ಸಾ 2000-01ರಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಎರಡನೇ ಓವರಿನಲ್ಲಿ ಹ್ಯಾಟ್ರಿಕ್ ಸಂಪಾದಿಸಿದ್ದು ಈವರೆಗಿನ ದಾಖಲೆಯಾಗಿತ್ತು.

1970: ಕಲಾವಿದ ಮಧು ಪ್ಯಾಟಿ ಜನನ.

1955: ಅಂತಾರಾಷ್ಟ್ರೀಯ ಮಟ್ಟದ ಖ್ಯಾತ ನೃತ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಅವರು ಪ್ರಹ್ಲಾದ್- ಪ್ರೇಮಾ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು.

1954: ಕಲಾವಿದ ಮೋಹನ ಸೋನ ಜನನ.

1930: ಕಲಾವಿದ ಕೆ.ಜೆ. ರಾವ್ ಜನನ.

1886: ಮೊತ್ತ ಮೊದಲ `ಪೆಟ್ರೋಲಿನಿಂದ ಚಲಿಸುವ ವಾಹನ'ಕ್ಕೆ ಕಾರ್ಲ್ ಬೆಂಝ್ ಪೇಟೆಂಟ್ ಪಡೆದ. ಮೂರು ಚಕ್ರದ ವಾಹನ ಮೂಲ `ಬೆಂಝ್ ಕಾರು' 1885ರಲ್ಲೇ ಮೊದಲ ಬಾರಿಗೆ ಚಲಿಸಿದ್ದರೂ ಅದರ ವಿನ್ಯಾಸಕ್ಕೆ 1886ರ ವರೆಗೂ ಪೇಟೆಂಟ್ ಲಭಿಸಿರಲಿಲ್ಲ.

1866: ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಕಾರ, ನಾಟಕಕಾರ, ಪ್ರಬಂಧಕಾರ ರೊಮೈನ್ ರೋಲ್ಲಂಡ್(1866-1944) ಹುಟ್ಟಿದ. ಈತ ಮಹಾತ್ಮಾ ಗಾಂಧಿ ಹಾಗೂ ರಾಮಕೃಷ್ಣ ಪರಮಹಂಸ ಅವರ ಜೀವನಚರಿತ್ರೆಗಳನ್ನೂ ಬರೆದ ವ್ಯಕ್ತಿ.

1856: ಬ್ರಿಟನ್ನಿನ ಅತ್ಯುನ್ನತ ಸೇನಾ ಗೌರವ `ವಿಕ್ಟೋರಿಯಾ ಕ್ರಾಸ್' ರಾಣಿ ವಿಕ್ಟೋರಿಯಾ ಅವರಿಂದ ಆರಂಭಗೊಂಡಿತು.

1820: ಮೂರನೇ ಜಾರ್ಜ್ ವಿಂಡ್ಸರ್ ಕ್ಯಾಸಲಿನಲ್ಲಿ 81ನೇ ವಯಸ್ಸಿನಲ್ಲಿ ನಿಧನನಾದ. 59 ವರ್ಷಗಳ ಕಾಲ ಬ್ರಿಟನ್ನನ್ನು ಆಳಿದ ಈತ ದೀರ್ಘಕಾಲ ಆಡಳಿತ ನಡೆಸಿದ ಬ್ರಿಟಿಷ್ ದೊರೆ.

1803: ಇಂಗ್ಲಿಷ್ ಜನರಲ್ ಹಾಗೂ ಭಾರತೀಯ ರಾಜಕೀಯ ಅಧಿಕಾರಿ ಸರ್ ಜೇಮ್ಸ್ ಔಟ್ ರಾಮ್ (1803-1863) ಹುಟ್ಟಿದ. ಈತ 1856ರಲ್ಲಿ ಅವಧ್ ರಾಜ್ಯವನ್ನು ಬ್ರಿಟಿಷ್ ಆಳ್ವಿಕೆಯ ಭಾರತಕ್ಕೆ ಸೇರ್ಪಡೆ ಮಾಡಿದ.

1780: ಭಾರತದ ಮೊತ್ತ ಮೊದಲ ಪತ್ರಿಕೆ `ಹಿಕ್ಕೀಸ್ ಬೆಂಗಾಲ್ ಗಝೆಟ್' ಅಥವಾ `ಕಲ್ಕತ್ತಾ ಜನರಲ್ ಅಡ್ವರ್ ಟೈಸರ್' ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ) ಇಂಗ್ಲಿಷಿನಲ್ಲಿ ಜೇಮ್ಸ್ ಆಗಸ್ಟಸ್ ಹಿಕ್ಕಿ ಅವರಿಂದ ಪ್ರಕಟಿತವಾಯಿತು. `ಹಿಕ್ಕೀಸ್ ಬೆಂಗಾಲ್ ಗಝೆಟ್' ನಲ್ಲಿ ಮೊತ್ತ ಮೊದಲ ಜಾಹೀರಾತು ಪ್ರಕಟಗೊಳ್ಳುವುದರೊಂದಿಗೆ ಭಾರತದಲ್ಲಿ ವಾಣಿಜ್ಯ ಜಾಹೀರಾತು ಆರಂಭಗೊಂಡಿತು.

No comments:

Post a Comment