ಜೈಶೆ ಕೇಂದ್ರ ಕಚೇರಿ ಮುಟ್ಟುಗೋಲು
ಜಾಗತಿಕ ಆಕ್ರೋಶಕ್ಕೆ ಮಣಿದ ಪಾಕ್
ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುತ್ತಿರುವ ಜಾಗತಿಕ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಶುಕ್ರವಾರ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯ ಕೇಂದ್ರ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡು ಅದರ ವ್ಯವಹಾರ ನೋಡಿಕೊಳ್ಳಲು ಆಡಳಿತಾಧಿಕಾರಿಯನ್ನು ನೇಮಕ ಮಾಡಿತು.
ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ೧೪ರಂದು ಸಿಆರ್ಪಿಎಫ್ ಬೆಂಗಾವಲು ವಾಹನದ ಮೇಲೆ ನಡೆದ ಪೈಶಾಚಿಕ ಭಯೋತ್ಪಾದಕ ದಾಳಿಯ ಹೊಣೆಯನ್ನು ಭಯೋತ್ಪಾದಕ ಮೌಲಾನಾ ಮಸೂದ್
ಅಜರ್ ನೇತೃತ್ವದ ಜೈಶ್-ಇ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿತ್ತು.
ಜೈಶ್-ಇ-ಮೊಹಮ್ಮದ್ ಸಂಘಟನೆಯ ಕೇಂದ್ರ ಕಚೇರಿ ಎನ್ನಲಾಗಿರುವ ಬಹಾವಲ್ಪುರದ ಮದ್ರೆಸ್ಸಾತುಲ್ ಸಬೀರ್ ಮತ್ತು ಜಮಾ-ಇ-ಮಸ್ಜಿದ್ ಸುಭಾನಲ್ಲಾ ಆವರಣಗಳನ್ನು ಪಂಜಾಬ್ ಪ್ರಾಂತದ ಸರ್ಕಾರವು ಮುಟ್ಟುಗೋಲು ಹಾಕಿಕೊಂಡಿದ್ದು ಅಲ್ಲಿನ ವ್ಯವಹಾರಗಳ ನಿರ್ವಹಣೆಗೆ ಆಡಳಿತಾಧಿಕಾರಿಯನ್ನು ನೇಮಿಸಿದೆ ಎಂದು ಒಳಾಡಳಿತ ಸಚಿವಾಲಯದ ಹೇಳಿಕೆ ತಿಳಿಸಿದೆ.
೪೦ ಮಂದಿ ಸಿಆರ್ ಪಿಎಫ್ ಯೋಧರನ್ನುಬಲಿ ಪಡೆದ ಪುಲ್ವಾಮ ಭಯೋತ್ಪಾದಕ ದಾಳಿಯನ್ನು ಉಗ್ರವಾಗಿ ಖಂಡಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿ ಪ್ರಕಟಣೆ ಹೊರಡಿಸುವುದರ ಜೊತೆಗೆ, ಅಂತಾರಾಷ್ಟ್ರೀಯ ಭಯೋತ್ಪಾದನೆ ಹಣಕಾಸು ಕಣ್ಗಾವಲು ಸಮಿತಿಯಾಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ ಎಟಿಎಫ್) ತನ್ನ ಸಭೆಯಲ್ಲಿ ಪಾಕಿಸ್ತಾನ ಪ್ರೇರಿತ ಹಿಂಸಾತ್ಮಕ ಭಯೋತ್ಪಾದನಾ ದಾಳಿ ಹೆಚ್ಚುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತ ಪಡಿಸಿದ ಬೆನ್ನಲ್ಲೇ ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ.
ಪ್ರಧಾನಿ ಇಮ್ರಾನ್ ಖಾನ್ ಸರ್ಕಾರವು ಗುರುವಾರ ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್ -ದವಾ (ಜೆಯುಡಿ) ಸಂಘಟನೆಯನ್ನು ನಿಷೇಧಿಸಿದ್ದರು.
No comments:
Post a Comment