ನಾನು ಮೆಚ್ಚಿದ ವಾಟ್ಸಪ್

Thursday, July 5, 2018

ಇಂದಿನ ಇತಿಹಾಸ History Today ಜುಲೈ 05

ಇಂದಿನ ಇತಿಹಾಸ History Today ಜುಲೈ 05

2018: ಬೆಂಗಳೂರು:  ಯುವ ಕಲಾವಿದ, ಭರವಸೆ ಹುಟ್ಟಿಸುತ್ತಿದ್ದ ಯುವ ಛಾಯಾಗ್ರಾಹಕ ಹಾಗೂ ವಿಡಿಯೋ ಎಡಿಟರ್  ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮೂಲದ ಅನುಪ ಕೃಷ್ಣ ಭಟ್ ನೆತ್ರಕೆರೆ (27) ಅವರು ಈದಿನ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು. ಫೊಟೋಗ್ರಫಿ ಮತ್ತು ವಿಡಿಯೋ ಎಡಿಟಿಂಗಿನಲ್ಲಿ ಭರವಸೆ ಹುಟ್ಟಿಸುವಂತಹ ಸಾಧನೆ ನಿರತಾಗಿದ್ದ ಅನುಪಕೃಷ್ಣ ಬೆಂಗಳೂರಿನ ಕೆನ್ ಕಲಾ ಶಾಲೆಯ ವಿದ್ಯಾರ್ಥಿಯಾಗಿದ್ದು ಶಿಕ್ಷಕರು, ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ವಿದ್ಯಾರ್ಥಿ ಹಾಗೂ ಸಹಪಾಠಿಯಾಗಿದ್ದರು. ಸ್ವಯಂ ಆಸಕ್ತಿಯಿಂದಲೇ ಫೊಟೋಗ್ರಫಿಯನ್ನು ಕಲಿತಿದ್ದ ಅವರು ಮೈಸೂರು ದಸರಾ ಸ್ಪರ್ಧೆಯಲ್ಲಿ ರಾಜ್ಯಪ್ರಶಸ್ತಿಯನ್ನೂ ಗಳಿಸಿದ್ದರು. ಅವರ ಫೊಟೋಗಳು ‘ಪ್ರಜಾವಾಣಿ’, ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಬೆಳಕು ಕಂಡಿದ್ದವು. ‘ಸುವರ್ಣ’ ಸುದ್ದಿ ಚಾನೆಲಿನಲ್ಲಿ ವಿಡಿಯೋ ಎಡಿಟಿಂಗ್ ತರಬೇತಿ ಪಡೆದಿದ್ದ ಅವರು  ‘ಟೈಮ್ಸ್ ಮೊಬೈಲ್ ಟಿವಿ’, 'ಪರಿಮಳ ಟಿವಿ'   ಸೇರಿದಂತೆ ಕೆಲವು ಟಿವಿ ವಾಹಿನಿಗಳಲ್ಲಿ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ್ದರು.  ಇರುವೆಯಂತಹ ಪುಟ್ಟ ಜೀವಿಗಳೂ ಅನುಭವಿಸುವ ನೋವನ್ನು, ಮಾನವರಿಗೆ ಆಹಾರವಾಗುವ ಮುನ್ನ ಪ್ರಾಣಿಗಳು ಅನುಭವಿಸುವ ನೋವನ್ನು ಮನಮುಟ್ಟುವಂತೆ ಮಾಡುವ ಪುಟ್ಟ ಪುಟ್ಟ ವಿಡಿಯೋಗಳನ್ನು ಮಾಡಿದ್ದರು. ಅರಣ್ಯ ಕಾಲೇಜು ವಿದ್ಯಾರ್ಥಿಗಳ ಸುದೀರ್ಘ ಹೋರಾಟದ ವಿಡಿಯೋ ನಿರ್ಮಿಸಿದ್ದರು.    ಮೂರು ವರ್ಷಗಳಿಂದ ತನ್ನನ್ನು ಬಾಧಿಸಿದ್ದ ಲ್ಯುಕೇಮಿಯಾ ವಿರುದ್ಧ ದಿಟ್ಟ ತನದಿಂದ ಹೋರಾಡಿದ್ದ ಅನುಪಕೃಷ್ಣ ‘ನನಗೆ ಕ್ಯಾನ್ಸರ್ ಇದೆ, ಆದರೆ ಕ್ಯಾನ್ಸರ್ ಕೈಯಲ್ಲಿ  ನಾನಿಲ್ಲ’,  ‘ಕ್ಯಾನ್ಸರ್ ನನ್ನ ಪಾಲಿಗೆ ಜ್ವರ ಇದ್ದಂತೆ ಅಷ್ಟೆ’  ಇತ್ಯಾದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಮೂಲಕ ಹಲವಾರು ಮಂದಿ ಕ್ಯಾನ್ಸರ್ ರೋಗಿಗಳಲ್ಲಿ ಜೀವನೋತ್ಸಾಹ ತುಂಬಲು ನೆರವಾಗಿದ್ದರು. ತಮ್ಮ ಚಿಕಿತ್ಸೆಯ  ವಿಡಿಯೋವನ್ನು ಸ್ವತಃ  ನಿರ್ಮಿಸಿದ್ದರು.  ತನ್ನ ಮುಗ್ಧ ನಗು, ಆತ್ಮೀಯ ಮಾತುಗಳಿಂದ  ಬಂಧು ಮಿತ್ರರು, ಗೆಳೆಯ ಗೆಳತಿಯರು ಮಾತ್ರವೇ ಅಲ್ಲ ತಾನು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ, ಶುಶ್ರೂಷಕರ  ಆತ್ಮೀಯತೆಯನ್ನು ಗಳಿಸಿದ್ದರು. ಆತನಿಗೆ ಚಿಕಿತ್ಸೆ ನೀಡಿದ ಹಿರಿಯ ವೈದ್ಯ ಡಾ. ಹರಿಮೆನನ್ ಅವರಂತೂಅನುಪ ಅತ್ಯಂತ ಕಡಿಮೆ ಅವಧಿಯಲ್ಲಿ ನನಗೆ  ಅತ್ಯಂತ ಆಪ್ತನಾಗಿದ್ದಎಂದು ಹೇಳಿದರು.

2018: ನವದೆಹಲಿ:  ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅಧಿಕಾರಗಳಿಗೆ ಚೌಕಟ್ಟು ಹಾಕಿದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪಿನ ಒಂದು ದಿನದ ಬಳಿಕ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ’ವಿಷಯಗಳ ಕುರಿತ ಮೌನವನ್ನು ತೀರ್ಪು ಯಾರೇ ಒಬ್ಬರ ಪರ ಎಂದು ಅರ್ಥೈಸಲಾಗದು. ಕೇಂದ್ರವು ಈಗಲೂ ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ಮೇಲೆ ನಿರ್ದಿಷ್ಟ ಸಂದರ್ಭಗಳಲ್ಲಿ ಮೇಲುಗೈ ಹೊಂದಿದೆ ಎಂದು ಹೇಳಿದರು.  ‘ದೆಹಲಿ ಸರ್ಕಾರದ ಜೊತೆಗೆ ಲೆಫ್ಟಿನೆಂಟ್ ಗವರ್ನರ್ ಅವರು ಕಾರಣಗಳನ್ನು ಉಲ್ಲೇಖಿಸಿ ಭಿನ್ನಮತ ಹೊಂದಿದ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರವು ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ವಿರುದ್ಧ ಮೇಲುಗೈ ಹೊಂದಿದ್ದಾರೆ ಎಂದು ಜೇಟ್ಲಿ ಅಭಿಪ್ರಾಯಪಟ್ಟರು.  ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನಪೀಠದ ತೀರ್ಪು ಆಮ್ ಆದ್ಮಿ ಪಕ್ಷದ ವಿಜಯ ಎಂಬುದಾಗಿ ಹಲವಾರು ಮಂದಿ ತೀರ್ಪನ್ನು ಶ್ಲಾಘಿಸಿದ ಬಳಿಕ ಅರುಣ್ ಜೇಟ್ಲಿ ಅವರು ಈ ಪ್ರತಿಕ್ರಿಯೆ ನೀಡಿದರು.  ಪ್ರಜಾಪ್ರಭುತ್ವ ಮತ್ತು ಒಕ್ಕೂಟ ರಾಜಕೀಯದ ವಿಶಾಲ ಹಿತಾಸಕ್ತಿ ದೃಷ್ಟಿಯಿಂದ ಲೆಫ್ಟಿನೆಂಟ್ ಗವರ್ನರ್ ಅವರು ರಾಜ್ಯದ ಅಧಿಕಾರ ಚಲಾವಣೆಯನ್ನು ಒಪ್ಪಿದರೂ, ಭಿನ್ನಮತ ಹೊಂದಲು ಪ್ರಬಲ ಕಾರಣಗಳು ಇದ್ದಲ್ಲಿ ಆಗ ಕೇಂದ್ರ ಸರ್ಕಾರದ ನಿರ್ಧಾರ  ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರಕ್ಕೆ ಬಂಧನಕಾರಿಯಾಗುತ್ತದೆ ಎಂದು ಜೇಟ್ಲಿ ನುಡಿದರು.  ಒಪ್ಪದೇ ಇರಲು ಮಾಹಿತಿ ಸಹಿತವಾದ ಉತ್ತಮ ಕಾರಣಗಳು ಇದ್ದರೆ, ಅವರು ಅದನ್ನು ಲಿಖಿತವಾಗಿ ದಾಖಲಿಸಿ ರಾಷ್ಟ್ರಪತಿಗೆ (ಕೇಂದ್ರ ಸರ್ಕಾರಕ್ಕೆ) ಒಪ್ಪಿಸಬಹುದು. ಆಗ ಕೇಂದ್ರ ಸರ್ಕಾರವು ಕೈಗೊಳ್ಳುವ ನಿರ್ಧಾರವು ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿಯ ಚುನಾಯಿತ ಸರ್ಕಾರ ಎರಡಕ್ಕೂ ಬಂಧನಕಾರಿಯಾಗುತ್ತದೆ. ಹೀಗೆ ಕೇಂದ್ರದ ಅಭಿಪ್ರಾಯ ಇವೆರಡನ್ನೂ ಮೀರಬಲ್ಲುದು ಎಂದು ಜೇಟ್ಲಿ ಹೇಳಿದರು.  ಕೇಂದ್ರ, ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರ ಜನರ ಹಿತಾಸಕ್ತಿಗಳ ಸಲುವಾಗಿ ಪರಸ್ಪರ ಸೌಹಾರ್ದ, ಸಾಮರಸ್ಯದೊಂದಿಗೆ ಕೆಲಸ ಮಾಡಬೇಕು ಎಂಬುದು ಸಂವಿಧಾನದ ಆದ್ಯತೆಯಾಗಿದೆ ಎಂಬುದಾಗಿ ಸುಪ್ರೀಂಕೋರ್ಟ್ ಅಧಿಕಾರಯುತವಾಗಿ ತೀರ್ಪು ನೀಡಿದ್ದು ಇದೇ ಪ್ರಥಮ.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ಪಂಚ ಸದಸ್ಯ ಪೀಠವು ’ಪ್ರಜಾಪ್ರಭುತ್ವದಲ್ಲಿ ಸಾರ್ವಭೌಮರಾದ ಜನರ ಇಚ್ಛೆಯನ್ನು ಪ್ರತಿನಿಧಿಸುವ ಚುನಾಯಿತ ಸರ್ಕಾರಕ್ಕೆ ಕಾರ್ಯ ನಿರ್ವಹಣೆಯ ಅಧಿಕಾರವನ್ನು ನೀಡಲಾಗಿದೆ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ. ಏನಿದ್ದರೂ, ದೆಹಲಿಯು ತನ್ನನ್ನು ಇತರ ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಹೋಲಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದಷ್ಟೇ ಅಲ್ಲ, ಯಾವುದೇ ತನಿಖಾ ಸಂಸ್ಥೆಯನ್ನೂ ಅದು ರಚಿಸಲು ಸಾಧ್ಯವಿಲ್ಲ ಎಂದು ಜೇಟ್ಲಿ ಹೇಳಿದರು. ದೆಹಲಿಯು ಪೊಲೀಸ್ ಅಧಿಕಾರವನ್ನು ಹೊಂದಿಲ್ಲವಾದರೆ, ಈ ಹಿಂದೆ ಮಾಡಿದಂತೆ ಅಪರಾಧಗಳ ತನಿಖೆ ನಡೆಸಲು ಅದು ತನಿಖಾ ಸಂಸ್ಥೆಯನ್ನು ರಚಿಸಲು ಸಾಧ್ಯವಿಲ್ಲ. ಎರಡನೆಯದಾಗಿ, ದೆಹಲಿಯು ತನ್ನನ್ನು ಇತರ ರಾಜ್ಯಗಳ ಜೊತೆಗೆ ಹೋಲಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಕೇಂದ್ರಾಡಳಿತ ಪ್ರದೇಶದ ಆಡಳಿತದ ವಿಚಾರದಲ್ಲಿ ದೆಹಲಿ ಸರ್ಕಾರದ ಪರವಾಗಿ ತೀರ್ಪು ಬಂದಿದೆ ಎಂಬುದಾಗಿ ಭಾವಿಸುವುದು ಸಂಪೂರ್ಣ ತಪ್ಪಾಗುತ್ತದೆ ಎಂದು ಜೇಟ್ಲಿ ತಮ್ಮ ಪಬ್ಲಿಕ್ ಪೋಸ್ಟಿನಲ್ಲಿ ವಿಶ್ಲೇಷಿಸಿದರು. ದೆಹಲಿ ಸರ್ಕಾರ ಇಲ್ಲದೇ ಇದ್ದಲ್ಲಿ ದೆಹಲಿಯಲ್ಲಿ ಕಾನೂನು, ಸುವ್ಯವಸ್ಥೆ ಪೊಲೀಸನ್ನು ಯಾರು ನಿಯಂತ್ರಿಸುತ್ತಾರೆ ಎಂದು ಜೇಟ್ಲಿ ಪ್ರಶ್ನಿಸಿದರು.
ದೆಹಲಿಯು ಪ್ರಶ್ನಾತೀತವಾಗಿ ಕೇಂದ್ರಾಡಳಿತ ಪ್ರದೇಶ. ಅದರ ಅಧಿಕಾರ ರಚನೆಯು ಪ್ರತ್ಯೇಕ ಹಾಗೂ ವಿಶಿಷ್ಟ. ಅದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್, ರಾಷ್ಟ್ರಪತಿ ಭವನ, ಕೇಂದ್ರ ಸರ್ಕಾರದ ಕಚೇರಿಗಳು, ವಿದೇಶಗಳ ರಾಜತಾಂತ್ರಿಕ ಕಚೇರಿಗಳು ಇರುವ ಹಾಗೂ ವಿದೇಶಗಳ ಮುಖ್ಯಸ್ಥರ ಆಗಾಗ ಭೇಟಿ ನೀಡುವ ಪ್ರದೇಶ. ಆದ್ದರಿಂದ ಇಲ್ಲಿ ಯಾರು ಕಾನೂನು, ಸುವ್ಯವಸ್ಥೆ, ಪೊಲೀಸ್ ನಿಯಂತ್ರಣವನ್ನು ನಿಯಂತ್ರಿಸಬೇಕು? ಎಂದು ಜೇಟ್ಲಿ ಪ್ರಶ್ನಿಸಿದರು. ಲೆಫ್ಟಿನೆಂಟ್ ಗವರ್ನರ್ ಅವರು ಅಡಚಣೆ ಒಡ್ಡುವಂತಹ ರೀತಿಯಲ್ಲಿ ಕಾರ್ಯ ನಿರ್ವಹಿಸಬಾರದು ಮತ್ತು ಸಚಿವ ಸಂಪುಟವು ಅವರಿಗೆ ಒಪ್ಪಿಸುವ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತ ಪಡಿಸುವ ಅಧಿಕಾರ ಅವರಿಗೆ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದ್ದರೂ, ತೀರ್ಪಿನ ಪ್ರಕಾರ ಸಚಿವ ಮಂಡಳವು ಕೈಗೊಳ್ಳುವ ಎಲ್ಲ ತೀರ್ಮಾನಗಳನ್ನೂ ಲೆಫ್ಟಿನೆಂಟ್ ಗವರ್ನರ್ ಗೆ ತಿಳಿಸಬೇಕಾಗುತ್ತದೆ ಎಂದು ಜೇಟ್ಲಿ ಅಭಿಪ್ರಾಯ ಪಟ್ಟರು. ಲೆಫ್ಟಿನೆಂಟ್ ಗವರ್ನರ್ ಅವರು ರಾಜ್ಯ ಸಚಿವ ಸಂಪುಟದ ನೆರವು ಮತ್ತ ಸಲಹೆಗೆ ಬದ್ಧರಾಗಿರಬೇಕು ಮತ್ತು ಅವರಿಗೆ ರಾಜ್ಯ ಸಂಪುಟದ ಅಧಿಕಾರವನ್ನು ಬದಿಗೊತ್ತುವ ಸ್ವತಂತ್ರ ಅಧಿಕಾರ ಇಲ್ಲ. ಏನಿದ್ದರೂ ರಾಜ್ಯ ಸರ್ಕಾರವೂ ಈ ಅಧಿಕಾರಗಳ ಚಲಾವಣೆ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿಸುತ್ತಿರಬೇಕು ಎಂದು ಜೇಟ್ಲಿ ನುಡಿದರು.   ಐಎಎಸ್ ಅಧಿಕಾರಿಗಳು ಆಪ್ ಸರ್ಕಾರದಿಂದ ಆದೇಶಗಳನ್ನು ಪಡೆಯುವಂತಿಲ್ಲ ಎಂಬುದಾಗಿ ೨೦೧೫ರಲ್ಲಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ಉಲ್ಲೇಖಿಸಿದ ಜೇಟ್ಲಿ, ಈ ಬಗ್ಗೆ ತಮ್ಮ ನಿಲುವು ಏನೆಂಬುದನ್ನ ನ್ಯಾಯಮೂರ್ತಿಗಳು ಸ್ಪಷ್ಟ ಪಡಿಸಿಲ್ಲ, ಬದಲಿಗೆ ವಿಶಾಲ ವಿಷಯಗಳನ್ನು ನಿಯಮಿತ ಪೀಠಕ್ಕೆ ಒಪ್ಪಿಸಿದ್ದಾರೆ ಎಂದು ಜೇಟ್ಲಿ ನುಡಿದರು.
ಕೆಲವು ವಿಷಯಗಳ ಬಗ್ಗೆ ಸುಪ್ರೀಂಕೋರ್ಟ್ ಮೌನವಾಗಿದೆ ಎಂದರೆ ಅದು ಯಾರೇ ಒಬ್ಬರ ಪರವಾಗಿದೆ ಎಂದು ಅರ್ಥ ಮಾಡಿಕೊಳ್ಳುವಂತಿಲ್ಲ. ನೇರವಾಗಿ ಟಿಪ್ಪಣಿ ಮಾಡದ ಹಲವಾರು ವಿಷಯಗಳಿವೆ. ಇಂತಹ ವಿಷಯಗಳ ಬಗ್ಗೆ ನಿರ್ದಿಷ್ಟವಾಗಿ ಚರ್ಚಿಸಿ ಅಭಿಪ್ರಾಯ ನೀಡದೇ ಇದ್ದರೆ, ಆ ಮೌನವನ್ನು ಯಾರೋ ಒಬ್ಬರ ಪರವಾದ ಅಭಿಪ್ರಾಯ ಎಂದು ಹೇಳಲಾಗದು ಎಂದು ಜೇಟ್ಲಿ ಪ್ರತಿಪಾದಿಸಿದರು.

2018: ಲಂಡನ್: ಇಂಗ್ಲೆಂಡ್ ಹೈಕೋರ್ಟ್ ನ್ಯಾಯಾಧೀಶರು ೧೩ ಭಾರತೀಯ ಬ್ಯಾಂಕುಗಳ ಪರವಾಗಿ  ಆದೇಶ ನೀಡಿದ್ದು, ಲಂಡನ್ ಸಮೀಪದ ಹೆರ್ಟ್‌ಫೋರ್ಡ್‌ಶೈರಿನಲ್ಲಿರುವ ೬೨ರ ಹರೆಯದ ಮದ್ಯ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸೇರಿದ ಆಸ್ತಿಯನ್ನು ಪ್ರವೇಶಿಸಲು ಇಂಗ್ಲೆಂಡ್ ಹೈಕೋರ್ಟ್ ಜಾರಿ ಅಧಿಕಾರಿಗೆ ಅನುಮತಿ ನೀಡಿದರು.  ಸುಮಾರು ೯೦೦೦ ಕೋಟಿ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಭಾರತದ ೧೩ ಬ್ಯಾಂಕುಗಳು ವಿಜಯ್ ಮಲ್ಯ ಅವರಿಂದ ಹಣ ವಸೂಲಿಗಾಗಿ ಹೋರಾಡುತ್ತಿದ್ದ, ಭಾರತವು ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಕೋರಿತ್ತು. ಮಲ್ಯ ಅವರು ಪಸ್ತುತ ವಾಸವಾಗಿರುವ ವೆಲ್ವಿನ್ ನ ಟೆವಿನ್‌ನಲ್ಲಿರುವ ಬ್ರಾಂಬ್ಲ್ ಲಾಜ್ ಮತ್ತು ಲೇಡಿವಾಕ್ ಗೆ ಪ್ರವೇಶ ಪಡೆಯಲು ಅಧಿಕಾರಿ ಮತ್ತು ಅವರ ಏಜೆಂಟರಿಗೆ ನ್ಯಾಯಾಲಯ ಅನುಮತಿ ಕೊಟ್ಟಿದೆ.  ಏನಿದ್ದರೂ ಅದು ಪ್ರವೇಶಕ್ಕೆ ಸೂಚನೆಯಲ್ಲ. ಬ್ಯಾಂಕುಗಳು ಅಂದಾಜು ೧.೧೪೫ ಬಿಲಿಯನ್ (೧೧೪೫೦ ಕೋಟಿ) ಪೌಂಡ್ ನಿಧಿಯನ್ನು ಮರು ವಸೂಲಿ ಮಾಡಲು ಈ ಆದೇಶವನ್ನು ಬಳಸಿಕೊಳ್ಳಬಹುದು.   ‘ಹೈಕೋರ್ಟ್ ಜಾರಿ ಅಧಿಕಾರಿಯು ತಮ್ಮ ಕೈಕೆಳಗಿನ ಅವರ ಜಾರಿ ಏಜೆಂಟರ ಜೊತೆಗೆ ವೆಲ್ವಿನ್ ನ ಟೆವಿನ್ ನಲ್ಲಿರುವ ಕ್ವೀನ್ ಹೂ ಲೇನಿನಲ್ಲಿರು ಲೇಡಿವಾಕ್ ಮತ್ತು ಬ್ರಾಂಬ್ಲ್ ಲಾಜ್ ನ್ನು ಮೊದಲ ಪ್ರತಿವಾದಿ (ವಿಜಯ್ ಮಲ್ಯ) ಅವರ ವಸ್ತುಗಳನ್ನು ಶೋಧಿಸುವ ಸಲುವಾಗಿ ಪ್ರವೇಶಿಸಬಹುದು ಎಂದು ನ್ಯಾಯಮೂರ್ತಿ ಬೈರನ್ ಅವರ ಜೂನ್ ೨೬ರ ಆದೇಶ ಟಿಪ್ಪಣಿ ಹೇಳಿತು.  ಅಧಿಕಾರಿಯು ತನ್ನ ಕೈಕೆಳಗೆ ಕೆಲಸ ಮಾಡುವ ಏಜೆಂಟರೊಂದಿಗೆ, ಅಗತ್ಯ ಬಲದೊಂದಿಗೆ ಅಗತ್ಯವಿದ್ದರೆ ಆಸ್ತಿಯನ್ನು ಪ್ರವೇಶಿಸಬಹುದು ಎಂದು ಆದೇಶ ಹೇಳಿತು.

2018: ನವದೆಹಲಿ : ವರ್ಷಾಂತ್ಯದೊಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯವನ್ನು ಆರಂಭಿಸಲು ಸಾಧ್ಯವಾಗುವಂತೆ ಸುಪ್ರೀಂ ಕೋರ್ಟ್ ರಾಮ ಜನ್ಮಭೂಮಿ ವಿವಾದವನ್ನು ಬೇಗನೆ ಬಗೆಹರಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಆಲೋಕ್ ಕುಮಾರ್ ಆಗ್ರಹಿಸಿದರು. ಒಂದೊಮ್ಮೆ ಸುಪ್ರೀಂ ಕೋರ್ಟ್ ತೀರ್ಪು ವಿಳಂಬಿಸಿದರೆ ನಾವು ಹೋರಾಟಕ್ಕೆ ಇಳಿಯುವೆವು ಎಂದು ಅವರು  ಹೇಳಿದರು.  ರಾಮ ಮಂದಿರ ಮಾತ್ರವಲ್ಲದೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಆಲೋಕ್ ಕುಮಾರ್ ಅವರು ವಿಎಚ್‌ಪಿಗೆ ಸಿಐಎ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲು ಮುಂದಾಗಿರುವ ವಿಷಯವನ್ನೂ ಚರ್ಚಿಸಿದರು.  ಅಯೋಧ್ಯೆಯ ವಿವಾದಿತ ತಾಣವು ರಾಮ ಲಲ್ಲಾನಿಗೆ ಸೇರಿದ್ದೆಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುವುದು ಸುಲಭವಾಗುವುದು ಎಂದು ಅವರು ಹೇಳಿದರು. 

2017: ಜೆರುಸಲೇಂ(ಇಸ್ರೇಲ್): ವಿಮಾನಯಾನ, ಬಾಹ್ಯಾಕಾಶ, ಕೃಷಿ,  ಕುಡಿಯುವ ನೀರು, ಗ್ರಾಮ ನೈರ್ಮಲ್ಯ, ಗಂಗಾನದಿ ಸ್ವಚ್ಛತೆ ಸೇರಿದಂತೆ 7  ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿದವು.  ಪ್ರಧಾನಿ ನರೇಂದ್ರ ಮೋದಿ ಅವರ 2ನೇ ದಿನದ ಇಸ್ರೇಲ್ ಪ್ರವಾಸದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್  ನೇತನ್ಯಾಹು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಭಯೋತ್ಪಾದಕರನ್ನು ಮಟ್ಟ ಹಾಕುವ  ಬಗ್ಗೆ ಉಭಯ ದೇಶಗಳ ನಾಯಕರು ಸುದೀರ್ಘ ಚರ್ಚೆ ಮಾತುಕತೆ ನಡೆಸಿದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರುಇಸ್ರೇಲ್ ತಂತ್ರಜ್ಞಾನದಲ್ಲಿ ಮುಂದುವರೆದ ದೇಶವಾಗಿದೆ. ಹೊಸ, ಹೊಸ ಆವಿಷ್ಕಾರಗಳ ದೇಶವಾಗಿದೆಹಾಗಾಗಿ ಮೇಕ್ ಇನ್ ಇಂಡಿಯಾ ಯೋಜನೆಯ ಆರಂಭಕ್ಕೆ ಇಸ್ರೇಲ್ ತಂತ್ರಜ್ಞಾನ ನಮಗೆ ಬಹಳಷ್ಟು ಸಹಕಾರಿಯಾಗಬಲ್ಲದು ಎಂದು ಸಂದರ್ಭದಲ್ಲಿ  ಮೋದಿ ಹೇಳಿದರು. ಭಾರತ ಮತ್ತು ಇಸ್ರೇಲ್ ಸೇರಿ ಇತಿಹಾಸ ನಿರ್ಮಿಸುತ್ತೇವೆ. ತಮ್ಮನ್ನು ಇಸ್ರೇಲ್ ಗೆ ಆಹ್ವಾನಿಸಿದ್ದಕ್ಕೆ ಇಸ್ರೇಲ್ ಪ್ರಧಾನಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟಕ್ಕೆ ನಿರ್ಧರಿಸಲಾಗಿದೆ..ಇದರಿಂದಾಗಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಅಧ್ಯಾಯ
ಆರಂಭವಾದಂತಾಗಿದೆ ಎಂದು ನುಡಿದರು. ಇಸ್ರೇಲ್ ನೀರಿನ ಬಳಕೆ ಮತ್ತು ಉಳಿತಾಯ ಮಹತ್ವದ್ದಾಗಿದೆ. ಕುರಿತು ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಬೇಕಾಗಿದೆ. ಇದರಿಂದ ಭಾರತಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು. ಬೇಬಿ ಮೋಶೆಯನ್ನು ಭೇಟಿಯಾದ ಪ್ರಧಾನಿ ಮೋದಿಮುಂಬೈನ ಭಯೋತ್ಪಾದನಾ ದಾಳಿಯಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಬೇಬಿ ಮೋಶೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾದರು. ಮೋಶೆ 2008 ಮುಂಬೈ ದಾಳಿ ಪ್ರಕರಣದ ಸಂತ್ರಸ್ತ ಬಾಲಕ. ದಾಳಿ ನಡೆದ ಸಂದರ್ಭದಲ್ಲಿ ಮೋಶೆ 2ವರ್ಷದ ಮಗುವಾಗಿದ್ದ. ಮುಂಬೈಗೆ ಮತ್ತೆ ಭೇಟಿ ನೀಡುವುದಾಗಿ ಮೋಶೆ ಸಂದರ್ಭದಲ್ಲಿ ಹೇಳಿದ್ದು, ಮುಂದಿನ ಬಾರಿ ಭಾರತಕ್ಕೆ ಭೇಟಿ ನೀಡುವ ವೇಳೆ ಮೋಶೆಯನ್ನು ಕರೆತರುವುದಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ಭರವಸೆ ನೀಡಿದ್ದಾರೆಂದು ಮಾಧ್ಯಮದ ವರದಿ ತಿಳಿಸಿತು.
2017: ಜೆರುಸಲೆಮ್‌: ಭಾರತದಲ್ಲಿ ಯೆಹೂದಿಗಳ ಇತಿಹಾಸವನ್ನು ಸಾರುವ  ಪ್ರಾಚೀನ ಅವಶೇಷಗಳ ಪ್ರತಿಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿ ಹಿಂದಿನ ರಾತ್ರಿ ಇಸ್ರೇಲ್ ಪ್ರಧಾನಿ ಬೆಂಜಾಮಿನ್ ನೆತನ್ಯಾಹು ಅವರಿಗೆ ಉಡುಗೊರೆಯಾಗಿ ನೀಡಿದರು. ಕ್ರಿ..9–10ನೇ ಶತಮಾನದಲ್ಲಿ ತಾಮ್ರದ ತಟ್ಟೆಗಳ ಮೇಲೆ ಕೆತ್ತಲಾಗಿರುವ ಶಾಸನಗಳನ್ನು ಒಳಗೊಂಡಿರುವ ಉಡುಗೊರೆ ಇದಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವಿಟರ್ನಲ್ಲಿ ಪ್ರಕಟಿಸಿತು. ಹಿಂದು ರಾಜ ಚೆರಮನ್ಪೆರುಮಾಳ್‌(ಭಾಸ್ಕರ ರವಿ ವರ್ಮಾ) ಅವರು ಯೆಹೂದಿ ಮುಖಂಡ ಜೋಸೆಫ್ರಬ್ಬನ್ರಿಗೆ ನೀಡಲಾದ ರಾಜಯೋಗ್ಯ ಸವಲತ್ತು ಹಾಗೂ ವಿಶೇಷ ಹಕ್ಕುಗಳ ಕುರಿತಾದ ಬರಹಗಳು ಇದರಲ್ಲಿವೆ. ಕೊಚ್ಚಿನ್ನಲ್ಲಿ ವಾಸಿಸುತ್ತಿದ್ದ ಯೆಹೂದಿಗಳಿಗೆ ಅನೇಕ ಸವಲತ್ತುಗಳನ್ನು ನೀಡಲಾಗಿತ್ತು. ದಕ್ಷಿಣ ಭಾರತೀಯ ವಿನ್ಯಾಸ ಹೊಂದಿರುವ ಚಿನ್ನಲೇಪಿತ ಲೋಹದ ಮುಕುಟ ಹಾಗೂ ಕೇರಳದ ಪ್ರದೇಶಿ ಯೆಹೂದಿ ಸಮುದಾಯ ನೀಡಿದ್ದ ತೊರಾ(ಯೆಹೂದಿ ಉಪದೇಶ ಒಳಗೊಂಡ) ಶಾಸನ ಪ್ರತಿಗಳನ್ನು ಇಸ್ರೇಲ್ಪ್ರಧಾನಿಗೆ ನೀಡಲಾಯಿತು.
2017: ಟೆಲ್ ಅವೀವ್: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸ್ಮರಣಾರ್ಥಕಾಗಿ ಇಸ್ರೇಲ್ ಹೂವೊಂದಕ್ಕೆ 'ಮೋದಿ' ಎಂದು ಹೆಸರಿಡಲಾಗಿದೆ. ಮೊದಲ ಬಾರಿ ಇಸ್ರೇಲ್ಗೆ ಭೇಟಿ ನೀಡಿದ ಮೋದಿ ಅಲ್ಲಿನ ಡಾಂಜಿಗರ್ ಪುಷ್ಪ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಪುಷ್ಪೋದ್ಯಮದ ಆವಿಷ್ಕಾರ ಮತ್ತು ಅಭಿವೃದ್ಧಿ ಮಾದರಿಗಳನ್ನು ವೀಕ್ಷಿಸಿದರು. ಇಸ್ರೇಲ್ನೊಂದಿಗೆ ಭಾರತದ ಸಂಬಂಧದ ದ್ಯೋತಕವಾಗಿ ಅಲ್ಲಿನ ಕ್ರಿಸಾಂತುಮಮ್ (ಅತೀ ಬೇಗನೆ ಬೆಳೆಯುವ ಬಣ್ಣದ ಹೂ ಗಿಡ) ಎಂಬ ಹೂವಿಗೆ ಮೋದಿ ಎಂದು ಹೆಸರಿಟ್ಟಿರುವುದಾಗಿ ಟೆಲ್ ಅವೀವ್ ಅಧಿಕೃತರು ಹೇಳಿದರು. ಬೇಗನೆ ಬೆಳೆದು ಬಿಡುವ ಇಸ್ರೇಲಿನ ಕ್ರಿಸಾಂತುಮಮ್ ಹೂವಿಗೆ ಪ್ರಧಾನಿ ನರೇಂದ್ರ ಮೋದಿ ಗೌರವಾರ್ಥ ಮೋದಿ ಎಂದು ಹೆಸರಿಡಲಾಗಿದೆ. ನಮ್ಮ ಬಾಂಧವ್ಯ ಬೆಳೆಯುತ್ತಿದೆ ಎಂದು ಇಸ್ರೇಲ್ ಸರ್ಕಾರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿತು.

2017: ನವದೆಹಲಿಭಾರತ ಗಡಿ ರೇಖೆಯ ಬಳಿ ಚೀನಾವನ್ನು ಪ್ರಚೋದಿಸುತ್ತಿದೆ. ಕೂಡಲೆ ತನ್ನ ನಡೆಯನ್ನು
ಬದಲಿಸಿಕೊಳ್ಳದಿದ್ದರೆ, 1962 ಯುದ್ಧದಲ್ಲಿ ಕಂಡ ಸೋಲಿಗಿಂತಲೂ ದೊಡ್ಡ ಸೋಲನ್ನು ಅನುಭವಿಸಬೇಕಾಗುತ್ತದೆ ಎಂದು ಚೀನಾದಗ್ಲೋಬಲ್ಟೈಮ್ಸ್‌’ ಮತ್ತುಚೀನಾ ಡೈಲಿಪತ್ರಿಕೆಗಳು ಬರೆದುಕೊಂಡವು. ಸಿಕ್ಕಿಂನ ಡೊಕಲಾಮ್ಪ್ರದೇಶದಲ್ಲಿ ಭಾರತ ನಿಯೋಜಿಸಿರುವ ಸೇನೆಯನ್ನುಘನತೆಯಿಂದ ವಾಪಸ್ಸು ಕರೆಯಿಸಿಕೊಳ್ಳಲಿ ಇಲ್ಲವಾದರೆ, ಸೋಲಿಸಿ ಹಿಮ್ಮೆಟ್ಟಿಸಲಾಗುವುದು ಎಂದು ಅವು ಎಚ್ಚರಿಕೆಯ ಧಾಟಿಯಲ್ಲಿ ಹೇಳಿದವು. ಗ್ಲೋಬಲ್ಟೈಮ್ಸ್ಪತ್ರಿಕೆ, ಹಿಂದೆ ಕಲಿತ ಕಹಿ ಪಾಠದ ಬಗ್ಗೆ ಭಾರತ ಚಿಂತಿಸಲಿ. ಅದು ನೀಡುತ್ತಿರುವ ಪ್ರಚೋದನೆಯಿಂದ ಚೀನಾ ಸಾರ್ವಜನಿಕರು ಕೋಪಗೊಂಡಿದ್ದಾರೆ. ಚೀನಾ ಪೀಪಲ್ಲಿಬರೇಷನ್ಸೇನೆ(ಪಿಎಲ್ಎ) ಭಾರತ ಸೇನೆಗಿಂತ ಬಲಿಷ್ಟವಾಗಿದೆ. ಗಡಿ ಪ್ರದೇಶದಿಂದ ಘನತೆಯಿಂದ ವಾಪಸ್ಸಾಗಬೇಕೆ ಅಥವಾ ಚೀನಾ ಸೈನಿಕರಿಂದ ಸೋತು ಹಿನ್ನಡೆ ಅನುಭವಿಸಬೇಕೆ ಎಂಬುದನ್ನು ಭಾರತೀಯ ಸೇನೆ ನಿರ್ಧರಿಸಲಿ ಎಂದು ಹೇಳಿತು. ನಾವು ಭಾರತಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡುವ ಅಗತ್ಯವಿದೆ. ಸಮಯದಲ್ಲಿ ಚೀನಿಯರು ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕಾಗಿದೆ ಎಂದೂ ಅದು ಒತ್ತಾಯಿಸಿತು. ಕೆಲದಿನಗಳ ಹಿಂದೆಎರಡೂವರೆ ದಿಕ್ಕುಗಳಲ್ಲಿ ಯುದ್ಧ ನಡೆಸಲು ಸೇನೆ ಸಿದ್ಧವಾಗಿದೆಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದ ಹೇಳಿಕೆ ಹಾಗೂ ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರ, ‘ಭಾರತ 1962ಕ್ಕಿಂತ ಈಗ ಭಿನ್ನವಾಗಿದೆಎಂಬ ಹೇಳಿಕೆಯನ್ನು ಉಲ್ಲೇಖಿಸಿರುವ ಪತ್ರಿಕೆ, ಬಹುಶಃ ಕೆಲವು ಭಾರತೀಯರು 1962 ಸೋಲನ್ನು ಅವಮಾನ ಎಂದು ಭಾವಿಸಿದ್ದಾರೆ. ಹಾಗಾಗಿಯೇಅವರು ಯುದ್ಧವನ್ನು ಬಯಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿತು. ಮತ್ತೊಂದು ಪತ್ರಿಕೆಚೀನಾ ಡೈಲಿ’, ‘ಭಾರತ, ಭೂತಾನ್ಮೂಲಕ ಅಕ್ರಮವಾಗಿ ಚೀನಾ ಗಡಿ ಪ್ರವೇಶಿಸುತ್ತಿದೆ ಎಂಬುದನ್ನು ನಿರಾಕರಿಸಲು ಸಾಧ್ಯವಿಲ್ಲ. ಗಡಿ ಭಾಗದಲ್ಲಿ ಚೀನಾ ಕೈಗೊಂಡಿರುವ ರಸ್ತೆ ಕಾಮಗಾರಿಗೆ ಅಡ್ಡಿ ಪಡಿಸುವುದೇ ಭಾರತದ ಉದ್ದೇಶವಾಗಿದೆ ಎಂದು ದೂರಿತು.
2016: ನವದೆಹಲಿಮುಂಬರುವ ಚುನಾವಣೆಯನ್ನೇ ಗುರಿಯಾಗಿಸಿಕೊಂಡು ಹೆಜ್ಜೆ ಇಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟಕ್ಕೆ ರಾಜ್ಯದ ಹಿರಿಯ ರಾಜಕಾರಣಿ, ಸಂಸದ ರಮೇಶ್ ಜಿಗಜಿಣಗಿ  ಸೇರಿದಂತೆ 19 ಸಚಿವರು ಸಚಿವ ಸಂಪುಟ ಸೇರ್ಪಡೆಗೊಂಡರು. ರಾಷ್ಟ್ರಪತಿ ಭವನದಲ್ಲಿ ಬೆಳಗ್ಗೆ ನಡೆದ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪ್ರತಿಜ್ಞಾವಿಧಿ ಬೋಧಿಸಿದರು.
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಂಸದರು.
  1. ಪ್ರಕಾಶ್ ಜಾವಡೇಕರ್ ಸಂಪುಟ ಸಚಿವರಾಗಿ ಬಡ್ತಿ
2.      ವಿಜಯಪುರ ಸಂಸದ ರಮೇಶ್ ಜಿಗಜಿಣಗಿ – ರಾಜ್ಯ ಖಾತೆ ಸಚಿವ
3.      ಮಧ್ಯಪ್ರದೇಶದ ಸಂಸದ ಫಗ್ಗನ್ ಸಿಂಗ್ ಕುಲಸ್ತೆ ರಾಜ್ಯ ಖಾತೆ ಸಚಿವ
4.      ದಾರ್ಜಿಲಿಂಗ್ ಸಂಸದ ಎಸ್. ಎಸ್.ಅಹ್ಲುವಾಲಿಯಾ ರಾಜ್ಯ ಖಾತೆ ಸಚಿವ
5.      ರಾಜ್ಯಸಭಾ ಸದಸ್ಯ ವಿಜಯ್ ಗೋಯೆಲ್ ರಾಜ್ಯ ಖಾತೆ ಸಚಿವ
6.      ಮಹಾರಾಷ್ಟ್ರ ಆರ್ಪಿಐ ಸಂಸದ ರಾಮದಾಸ್ ಆಠವಲೆ ರಾಜ್ಯ ಖಾತೆ ಸಚಿವ
7.      ಅಸ್ಸಾಂನ ಸಂಸದ ರಾಜೆನ್ ಗೋಹೆನ್ ರಾಜ್ಯ ಖಾತೆ ಸಚಿವ
8.      ಮಧ್ಯಪ್ರದೇಶದ ಸಂಸದ ಅನಿಲ್ ಮಾಧವ್ ದವೆ ರಾಜ್ಯ ಖಾತೆ ಸಚಿವ
9.      ಗುಜರಾತ್ ರಾಜ್ಯಸಭೆ ಸದಸ್ಯ ಪುರುಷೋತ್ತಮಭಾಯ್ ರೂಪಲ್ ರಾಜ್ಯ ಖಾತೆ ಸಚಿವ
10.  ಜಾರ್ಖಂಡ್ ರಾಜ್ಯಸಭಾ ಸದಸ್ಯ ಎಂ.ಜೆ.ಅಕ್ಬರ್ ರಾಜ್ಯ ಖಾತೆ ಸಚಿವ
11.  ರಾಜಸ್ಥಾನದ ಸಂಸದ ಅರ್ಜುನ್ ರಾಮ್ ಮೇಘವಾಲ್ ರಾಜ್ಯ ಖಾತೆ ಸಚಿವ
12.  ಗುಜರಾತ್ ದಾಹೋದ್ ಸಂಸದ ಜಸ್ವಂತ್ ಸಿಂಗ್ ಭಾಬೋರ್ ರಾಜ್ಯ ಖಾತೆ ಸಚಿವ
13.  ಉತ್ತರ ಪ್ರದೇಶದ ಸಂಸದ ಮಹೇಂದ್ರ ನಾಥ್ ಪಾಂಡೆ ರಾಜ್ಯ ಖಾತೆ ಸಚಿವ
14.  ಉತ್ತರಾಖಂಡದ ದಲಿತ ಸಂಸದ ಅಜಯ್ ತಮ್ಟಾ ರಾಜ್ಯ ಖಾತೆ ಸಚಿವ
15.  ಉತ್ತರ ಪ್ರದೇಶದ ಸಹಾರನ್ಪುರದ ದಲಿತ ಸಂಸದೆ ಕೃಷ್ಣ ರಾಜ್ ರಾಜ್ಯ ಖಾತೆ ಸಚಿವೆ
16.  ಗುಜರಾತ್ ಸಂಸದ ಮನ್ಸುಕ್ ಮಾಂಡವ್ಯ ರಾಜ್ಯ ಖಾತೆ ಸಚಿವ
17.  ಉತ್ತರ ಪ್ರದೇಶದ ಸಂಸದೆ ಅನುಪ್ರಿಯಾ ಪಾಟೀಲ್ ರಾಜ್ಯ ಖಾತೆ ಸಚಿವೆ
18.  ರಾಜಸ್ಥಾನದ ನಾಗೌರ್ ಸಂಸದ ಸಿ.ಆರ್.ಚೌಧರಿ ರಾಜ್ಯ ಖಾತೆ ಸಚಿವ
19.  ರಾಜಸ್ಥಾನದ ಸಂಸದ ಪಿ.ಪಿ.ಚೌಧರಿ ರಾಜ್ಯ ಖಾತೆ ಸಚಿವ
20.  ಮಹಾರಾಷ್ಟ್ರದ ಸಂಸದ ಡಾ. ಸುಭಾಷ್ ರಾಮರಾವ್ ಭಾಮ್ರೆ ರಾಜ್ಯ ಖಾತೆ ಸಚಿವ

2016: ನವದೆಹಲಿಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಮಾಡಿದ ಪ್ರಧಾನಿ ನರೇಂದ್ರ ಮೋದಿ 19 ಹೊಸಮುಖಗಳಿಗೆ ಮಣೆ ಹಾಕುತ್ತಿದ್ದಂತೆಯೇ ಐವರು ಸಚಿವರು ಸಂಪುಟದಿಂದ ನಿರ್ಗಮಿಸಿದರು.. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಸಲ್ಲಿಸಲಾದ ರಾಜೀನಾಮೆ ಅಂಗೀಕಾರವಾಗಿದೆ.  ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಅವಕಾಶ ನೀಡಿರುವುದು ಆಯಾ ರಾಜ್ಯಗಳಲ್ಲಿ ಪಕ್ಷದ ಪ್ರಾಬಲ್ಯ ಹೆಚ್ಚಿಸಲು ಮೋದಿ ಕ್ರಮ  ಕೈಗೊಂಡಿದ್ದು, ಸಚಿವ ಸಂಪುಟದಿಂದ ಐವರು ರಾಜ್ಯಖಾತೆ ಸಚಿವರು ನಿರ್ಗಮಿಸಿದರು.  ನಿಹಾಲ್ಚಂದ್ ರಸಾಯನಿಕ ಮತ್ತು ಗೊಬ್ಬರ ಖಾತೆ ರಾಜ್ಯ ಸಚಿವ, ರಾಮ್ ಶಂಕರ್ ಕಥೇರಿಯ ಮಾನವ ಸಂಪನ್ಮೂಲ ಅಭಿವೃದ್ಧಿ, ಸನ್ವರ್ ಲಾಲ್ಜತ್ ನೀರಾವರಿ ಸೌಲಭ್ಯ, ಮನುಷ್ಕಭಾಯ್ ಡಿ ವಾಸವಾ ಬುಡಕಟ್ಟು ವ್ಯವಹಾರ, ಎಮ್ ಕೆ. ಕುಂದರಿಯಾ ಕೃಷಿ ಸಚಿವ ಸಂಪುಟದಿಂದ ನಿರ್ಗಮಿಸಿರುವ ಸಚಿವರು.
ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟಿರುವ ಪ್ರಧಾನಿ ಮೋದಿ ಬಹುತೇಕ ಎಲ್ಲ ರಾಜ್ಯಗಳಿಗೆ ಸಮಾನ ಅವಕಾಶ ಕಲ್ಪಿಸಲು ಯತ್ನಿಸಿದ್ದಾರೆ. ಮೋದಿಯವರ ನಡೆ ಜಾತಿ ಸಮೀಕರಣಕ್ಕೆ ಸೈ ಹೇಳಿದೆ ಎಂದು ಕೆಲ ತಜ್ಞರು ಹೇಳಿದ್ದಾರೆ. ಪ್ರಮುಖ ಹಿಂದುಳಿದ ಸಮುದಾಯದ ನಾಯಕರಿಗೆ ಮಂತ್ರಿಗಿರಿ ಒದಗಿಸಿರುವುದು ಮುಖಂಡರಿಗೆ ಅದೃಷ್ಟ ಖುಲಾಯಿಸಿದೆ.

2016: ನವದೆಹಲಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್-3 ರಲ್ಲಿ ಪ್ರತಿಷ್ಠಾಪಿಸಿದ  ಜಗತ್ತಿನ ಅತಿದೊಡ್ಡ ಚರಕವನ್ನು ಚರಕವನ್ನು ಬಿಜೆಪಿ  ರಾಷ್ಟ್ರಾಧ್ಯಕ್ಷ ಅಮಿತ್ ಷಾ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದೆಹಲಿಯ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಕೂಡ ಭಾಗವಹಿಸಿದ್ದರು. ಸಮಾರಂಭದಲ್ಲಿ ಶಾ ಮಾತನಾಡುತ್ತ ಚರಕ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜನರಿಗೆ ಸ್ವಾವಲಂಬನೆ ದೊರಕಿಸಿದ ವಸ್ತುವಾಗಿದೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ನಂಬರ್ 4 ಮತ್ತು 5 ಮಧ್ಯೆ ಭಾರತದ ಸಂಸ್ಕೃತಿ ಎತ್ತಿಹಿಡಿಯಲು ಸಾಧ್ಯ. ವಿವಿಧ ಇತರೆ ಕೆತ್ತನೆಗಳು ಚರಕಕ್ಕೆ ಪೂರಕವಾಗಿ ನಿರ್ಮಿಸಲಾಗಿದೆ ಎಂದರು. ಚರಕ ಪ್ರತಿಷ್ಠಾಪಿಸಿರುವುದು ಭಾರತದ ಗತವೈಭವ ಸಾರಲು ಮತ್ತು ಸಾಮರಸ್ಯ ಮೌಲ್ಯಗಳನ್ನು ಬಿಂಬಿಸಲು, ಮಹಾತ್ಮ ಗಾಂಧಿಜಿಯವರ ಆದರ್ಶ ಸಮಾನತಾವಾದ ಸಾರುವುದು ನಮ್ಮ ಉದ್ದೇಶ ಎಂದು ಪ್ರಧಾನಿ ಮೋದಿ ಲಿಖಿತ ಹೇಳಿಕೆ ನೀಡಿದರು.  ಮುದ್ರೆಗಳು, ಆನೆ ಚಿತ್ರ, ಸೂರ್ಯನ ಪ್ರತಿಮೆ, ಚರಕದ ಜತೆ ನಿರ್ಮಾಣ ಮಾಡಲಾಗಿದೆ. 27 ಅಡಿ ಉದ್ಧ ,15 ಅಡಿ ಎತ್ತರವಿರುವ ಚರಕ ನಿರ್ಮಿಸಲು ಅಹಮದಾಬಾದಿನ 42 ಕಾರ್ವಿುಕರು 50 ದಿನ ಸತತ ಕೆಲಸ ಮಾಡಿದ್ದರು.

2016: ಧರ್ಮಶಾಲಾ: ವಿಶ್ವಖ್ಯಾತಿಯ ಟಿಬೆಟಿಯನ್ ಬೌದ್ಧ ಧರ್ಮಗುರು ದಲೈ ಲಾಮಾ ಇಂದು 80 ವಸಂತ ಪೂರೈಸಿ 81 ಕ್ಕೆ ಅಡಿ ಇಟ್ಟರು. ಪ್ರಾಯ ಎಷ್ಟಾದರೇನಂತೆ, ನಮ್ಮ ಆಚರಣೆ ಮತ್ತು ಧರ್ಮ ಬಿಡಬಾರದು ಎಂದು ಸಂದೇಶ ನೀಡಿರುವ ಲಾಮಾ ಈದಿನವೂ  ಬ್ರಾಹ್ಮೀ ಮುಹೂರ್ತದ 3 ಗಂಟೆಗೇ ಎದ್ದು ಧ್ಯಾನ ಮತ್ತು ಪ್ರಾರ್ಥನೆಯೊಂದಿಗೆ ದಿನಚರಿ ಆರಂಭಿಸಿದರು. ಲಘು ವ್ಯಾಯಾಮ ಮಾಡಿದರು.ಮಧ್ಯಾಹ್ನ 12.30ರಿಂದ 3.30 ವರೆಗೆ ತಮ್ಮ ಪೀಠದಲ್ಲಿ ಕುಳಿತು ನಿತ್ಯದ ಜವಾಬ್ದಾರಿ ನಿರ್ವಹಿಸಿದರು. ನಿತ್ಯವೂ ಮಿತ ಶಾಕಾಹಾರದಿಂದಲೇ ಲವಲವಿಕೆಯಿಂದ ಕಾರ್ಯ ನಿರ್ವಹಿಸುವುದು ನನ್ನ ಉತ್ಸಾಹದ ಗುಟ್ಟು ಎಂದವರು ಜನ್ಮದಿನದ ಸಂದರ್ಭ ಹೇಳಿದರು..
2016: ರಿಯಾಧ್ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಬಳಿ ನಡೆದ ಆತ್ಮಾಹುತಿ ಬಾಂಬರ್ ಅಬ್ದುಲ್ಲಾ ವಕಾರ್ ಖಾನ್ (35) ಎಂಬಾತ ಪಾಕಿಸ್ತಾನಿ ಪ್ರಜೆಯಾಗಿದ್ದ ಎಂಬ ಮಾಹಿತಿ ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ಹೇಳಿತು. ಅಮೆರಿಕದ ಸ್ವಾತಂತ್ರ್ಯ ದಿನದಂದು ಜೆಡ್ಡಾದ ರಾಯಭಾರ ಕಚೇರಿ ಬಳಿ ದಾಳಿ ಮಾಡಿದ್ದ ಅಬ್ದುಲ್ಲಾ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತ ಕಳೆದ 12 ವರ್ಷಗಳಿಂದ ಸೌದಿಯಲ್ಲಿ ನೆಲೆಸಿದ್ದ ಎನ್ನಲಾಯಿತು. ಬಾಂಬ್ ದುರಂತದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದರುದಾಳಿಯನ್ನು ಖಂಡಿಸಿದ್ದ ಪಾಕ್ ಪ್ರಧಾನಿ ನವಾಜ್ ಷರೀಫ್ ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳಲು ಹೇಳಿದ್ದರು. ಇದೀಗ ಆತ ಐಸಿಸ್ ಸಂಪರ್ಕದ ಪಾಕಿಸ್ತಾನದ ಜಿಹಾದಿ ಸಂಘಟನೆ ಸದಸ್ಯ ಎಂದು ಬಹಿರಂಗಗೊಂಡ ಮೇಲೆ ಪೆಚ್ಚಾಗಿದ್ದಾರೆ ಷರೀಫ್. ಇದೇ ಜಿಹಾದಿ ಸಂಘಟನೆ ಸದಸ್ಯರು ಬಾಗ್ದಾದ್ನಲ್ಲಿ ಕಳೆದ ವಾರ ನಡೆಸಿದ ದಾಳಿಯಲ್ಲಿ 200 ಜನ ಮೃತರಾಗಿದ್ದರು.

2016: ನವದೆಹಲಿಬಾಂಗ್ಲಾದ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ 20 ಜನ ನಾಗರಿಕರ ಹತ್ಯೆ ಮಾಡಿದ್ದ ಬಾಂಗ್ಲಾ ಭಯೋತ್ಪಾದಕರು ಭಯೋತ್ಪಾದಕರಾದದ್ದು ಮುಂಬೈ ಮೂಲದ ಜಾಕೀರ್ ನಾಯಕ್ ಮತ್ತು ಬೆಂಗಳೂರು ಮೂಲದ ಮೆಹದಿ ಮಸರೂರ್ ಬಿಸ್ವಾಸ್ ಎಂಬುವರ ಪಠಣ ಕೇಳಿ ಎಂಬ ಮಾಹಿತಿ ಲಭ್ಯವಾಗಿದೆ. ‘ಪೀಸ್ ಟಿ ವಿಎಂಬ ಮುಸ್ಲಿಂ ಚಾನಲ್ನಲ್ಲಿ ನಿರಂತರ ಪಾಠ, ಕಥೆ ಹೇಳುತ್ತ ಪ್ರಸಿದ್ಧನಾದ ನಾಯಕ್ ಮುಸ್ಲಿಮರೆಲ್ಲ ಉಗ್ರಗಾಮಿಗಳಾಗಬೇಕು ಎಂಬ ಕರೆ ನೀಡಿದ್ದ. ಇದನ್ನು ಮೃತ ಉಗ್ರರಲ್ಲಿ ಒಬ್ಬನಾದ ಬಾಂಗ್ಲಾ ಆವಾಮಿ ಲೀಗ್ ನಾಯಕನ ಮಗ ರೋಹನ್ ಇಮ್ತಿಯಾಜ್ ಕಳೆದ ವರ್ಷ ಫೇಸ್ಬುಕ್ನಲ್ಲಿ ಪೇಜ್ನಲ್ಲಿ ಶೇರ್ ಮಾಡಿ ಸಹಮತ ಹೇಳಿದ್ದ. 50 ವರ್ಷದ ನಾಯಕ್ ರೀತಿಯ ಹೇಳಿಕೆಗಳಿಂದ ಯುಕೆ, ಮಲೇಷ್ಯಾ, ಕೆನಡಾ. ಬ್ರಿಟನ್ ದೇಶಗಳು ಆತನ ಪ್ರವೇಶ ನಿರ್ಬಂಧಿಸಿವೆ. ಒಸಾಮಾ ಬಿನ್ ಲಾಡೆನ್ನನ್ನು ಉಗ್ರಗಾಮಿ ಅಲ್ಲ ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ.


2016: ಚೆನ್ನೈ: ಏರ್ಸೆಲ್-ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತು. ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ತನಿಖೆ ಪ್ರಮುಖ ಹಂತದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು. ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂಗೆ ಸಮನ್ಸ್ ಜಾರಿ ಮಾಡಿತು. ನನ್ನ ಮಗನನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಕಾರ್ತಿ ಚಿದಂಬರಂ ಕಾನೂನು ಬದ್ಧವಾಗಿ ವ್ಯವಹಾರ ಮಾಡುತ್ತಿದ್ದಾರೆ. ಆತನ ವಿರುದ್ಧ ಹೊರಿಸಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದು ಪಿ ಚಿದಂಬರಂ ತಮ್ಮ ಮಗನನ್ನು ಸಮರ್ಥಿಸಿಕೊಂಡಿದ್ದರು.

2008: ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಾ. ಕೆ.ಜಿ. ಬಾಲಕೃಷ್ಣನ್ ಅವರು ಗುಲ್ಬರ್ಗದ ಸಂಚಾರಿ ಹೈಕೋರ್ಟ್ ಪೀಠವನ್ನು ಉದ್ಘಾಟಿಸಿ ಈ ಭಾಗದ ಜನರ ಐದು ದಶಕಗಳ ಕನಸನ್ನು ನನಸು ಮಾಡಿದರು. ರಾಜ್ಯ ಹೈಕೋರ್ಟ್ ಕಟ್ಟಡದ ಮಾದರಿಯಲ್ಲೇ ನಿರ್ಮಾಣಗೊಂಡಿರುವ ಸಂಚಾರಿ ಹೈಕೋರ್ಟ್ ಪೀಠ ಉದ್ಘಾಟನೆಯನ್ನು ಗುಲ್ಬರ್ಗ, ಬೀದರ್, ವಿಜಾಪುರ ಮತ್ತು ರಾಯಚೂರು ಜಿಲ್ಲೆಗಳಿಂದ ಆಗಮಿಸಿದ್ದ ಸಹಸ್ರಾರು ಜನರು ವೀಕ್ಷಿಸಿದರು.

2007: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಕೆರೆ ಗ್ರಾಮ ಪಂಚಾಯಿತಿಯ ಹುಲುಗಾರುಬೈಲಿನ ಕೃಷಿಕ ಕೇಶವ ಹೆಗ್ಡೆ ಅವರ ಮನೆಯಲ್ಲಿ ಈದಿನ ಪ್ರತ್ಯಕ್ಷರಾದ ಶಸ್ತ್ರಸಜ್ಜಿತ ನಕ್ಸಲೀಯರ ತಂಡವು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಇದೇ ಮೊತ್ತ ಮೊದಲ ಬಾರಿಗೆ ದರೋಡೆ ನಡೆಸಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿನ ಹೆಗ್ಡೆ ಅವರ ಒಂಟಿ ಮನೆ ಬಳಿ ರಾತ್ರಿ 9.30ರ ವೇಳೆಗೆ ದಿಢೀರನೆ ಪ್ರತ್ಯಕ್ಷವಾದ ನಕ್ಸಲೀಯರ ಗುಂಪು ಮನೆಯಲ್ಲಿದ್ದ ಒಂದು ತೋಟಾ ಕೋವಿ, ಬಂದೂಕಿಗೆ ಬಳಸುವ ಎರಡು ತೋಟಾ, 55 ಸಾವಿರ ನಗದು ಹಣವನ್ನು ಅಪಹರಿಸಿತು.

2007: ವರದಕ್ಷಿಣೆ ಹಿಂಸೆಯ ದೂರನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದನ್ನು ಪ್ರತಿಭಟಿಸಿ ರಾಜಕೋಟ್ನ ಪೂಜಾ ಚೌಹಾನ್ ನವದೆಹಲಿಯಲ್ಲಿ ಅರೆಬೆತ್ತಲೆ ನಡಿಗೆ ನಡೆಸಿದರು. ಪೂಜಾ ನೆರವಿಗೆ ಬಂದ ರಾಷ್ಟ್ರೀಯ ಮಹಿಳಾ ಆಯೋಗವು ಆಕೆ ವಿರುದ್ಧ ಪ್ರಕರಣ ದಾಖಲಿಸದಂತೆ ಪೊಲೀಸರಿಗೆ ಎಚ್ಚರಿಕೆ ನೀಡಿತು.

2007: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಹಾಲಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅಧಿಕಾರಾವಧಿ ಆ.18ಕ್ಕೆ ಮುಕ್ತಾಯಗೊಳ್ಳುವುದು.

2007: ಅಮೆರಿಕದ ಪರಮಾಣು ವಿದ್ಯುತ್ ಚಾಲಿತ ನಿಮಿಜ್ ಯುದ್ಧ ವಿಮಾನಗಳನ್ನು ಹೊತ್ತ ನೌಕೆ ಈದಿನ ಮುಂಜಾನೆ ಚೆನ್ನೈ ಬಂದರಿನಿಂದ ನಿರ್ಗಮಿಸಿತು. ಜುಲೈ 2ರಂದು `ನಿಮಿಜ್' ಇಲ್ಲಿಗೆ ಆಗಮಿಸಿದಾಗ ಪರಿಸರ ಪ್ರೇಮಿಗಳು ಅದನ್ನು ವಿರೋಧಿಸಿದ್ದರು. ಅದರಲ್ಲಿರುವ ಪರಮಾಣು ವಿಕಿರಣಗಳು ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಆದ್ದರಿಂದ ನೌಕೆಗೆ ಲಂಗರು ಹಾಕಲು ಅವಕಾಶ ನೀಡಬಾರದೆಂದು ಪರಸರ ಪ್ರೇಮಿಗಳು ವಾದಿಸಿದ್ದರು. ಇಷ್ಟೆಲ್ಲ ವಿರೋಧದ ಮಧ್ಯೆಯೂ ನೌಕೆಯ ಸಿಬ್ಬಂದಿ ನಾಲ್ಕು ದಿನ ಚೆನ್ನೈಯಲ್ಲಿ ಶಾಪಿಂಗ್, ವಿಹಾರ ಮುಗಿಸಿಕೊಂಡು ಕೊಲ್ಲಿ ದೇಶಗಳತ್ತ ಸಂಚಾರ ಮುಂದುವರೆಸಿದರು.

2007: ಮೆಕ್ಸಿಕೊದ ಪುಯೆಬ್ಲಾ ಪ್ರಾಂತ್ಯದ ಪರ್ವತ ಬಳಿ ಈದಿನ ರಾತ್ರಿ ಭೂ ಕುಸಿತ ಉಂಟಾಗಿ, ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಸೊಂದು ಭೂಮಿಯಲ್ಲಿ ಹುದುಗಿ ಸುಮಾರು 60 ಪ್ರಯಾಣಿಕರು ಸಾವನ್ನಪ್ಪಿದರು.

2007: ಚೀನಾದ ಲಿಯೊನಿಂಗ್ ಪ್ರಾಂತ್ಯದ ಬೆಂಕ್ಸಿ ಪಟ್ಟಣದ ರಾತ್ರಿ ಕ್ಲಬ್ ಒಂದರಲ್ಲಿ ಸ್ಪೋಟ ಸಂಭವಿಸಿ 25 ಜನರು ಸಾವನ್ನಪ್ಪಿದರು. 33 ಮಂದಿ ಗಾಯಗೊಂಡರು.

2007: ರಷ್ಯದ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ವಿಶೇಷ ಆಸಕ್ತಿಯ ಪರಿಣಾಮವಾಗಿ 2014ರ ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಆತಿಥ್ಯವು ಇದೇ ಮೊದಲ ಬಾರಿ ರಷ್ಯಾದ ಪಾಲಾಯಿತು. ಚಳಿಗಾಲದ ಒಲಿಂಪಿಕ್ ಸೋಚಿಯ ಬ್ಲಾಕ್ ಸೀ ರೆಸಾರ್ಟಿನಲ್ಲಿ ನಡೆಯುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧ್ಯಕ್ಷ ಜಾಕ್ ರಾಂಗ್ ಗ್ವಾಟೆಮಾಲಾ ಸಿಟಿಯಲ್ಲಿ ಪ್ರಕಟಿಸಿದರು.

2006: ವಿವಾದಿತ ಎನ್ರಾನ್ ವಿದ್ಯುತ್ ಸಂಸ್ಥೆಯ ಸ್ಥಾಪಕ ಕೆನಿತ್ (64) ಹೃದಯಾಘಾತದಿಂದ ಹ್ಯೂಸ್ಟನ್ನಿನಲ್ಲಿ ನಿಧನರಾದರು. ಕೋಟ್ಯಂತರ ರೂಪಾಯಿಗಳ ಮೊತ್ತದ ಎನ್ರಾನ್ ಅವ್ಯವಹಾರ ಹಗರಣದಲ್ಲಿ ವಿಚಾರಣೆ ಎದುರಿಸಿದ್ದ ಎನ್ರಾನ್ ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳು ಸಾಬೀತಾಗಿದ್ದವು. ಪರಿಣಾಮವಾಗಿ ಅವರು 45 ವರ್ಷಗಳ ಕಠಿಣ ಸೆರೆವಾಸದ ಶಿಕ್ಷೆಗೆ ಗುರಿಯಾಗಬೇಕಿತ್ತು.

2006: ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರದ ನಿವೃತ್ತ ಉಪ ಮಹಾನಿರ್ದೇಶಕ ಆರ್. ಸಿ. ಭೂಸನೂರಮಠ (84) ಬೆಂಗಳೂರಿನಲ್ಲಿ ನಿಧನರಾದರು.

2006: ಮುಂಬೈಯಲ್ಲಿ ಮಹಾಮಳೆಯ ಆರ್ಭಟ ಮುಂದುವರೆದು, ಮಹಾರಾಷ್ಟ್ರದ್ಲಲಿ ಮತ್ತೆ 24 ಮಂದಿ ಅಸು ನೀಗಿದರು.

2006: ಅಮೆರಿಕದ ಎಚ್ಚರಿಕೆಯ ಹೊರತಾಗಿಯೂ ಉತ್ತರ ಕೊರಿಯಾ 6 ಕ್ಷಿಪಣಿಗಳ ಪರೀಕ್ಷೆ ನಡೆಸಿತು.

1940: ಜ್ಞಾನಾನಂದ ಜನನ.

1939: ಎಂ. ರಾಮಚಂದ್ರ ಜನನ.

1938: ಶೇಖರಪ್ಪ ಹುಲಗೇರಿ ಜನನ.

1930: ಪಳಕಳ ಸೀತಾರಾಮಭಟ್ಟ ಜನನ.

1916: ಸಾಹಿತಿ ಅರ್ಚಿಕ ವೆಂಕಟೇಶ್ ಅವರು ಗೋಪಾಲಕೃಷ್ಣಾಚಾರ್ಯ- ರಾಧಾಬಾಯಿ ದಂಪತಿಯ ಪುತ್ರನಾಗಿ ಧಾರವಾಡದಲ್ಲಿ ಈದಿನ ಜನಿಸಿದರು. ಪೂರ್ವೀಕರು ಅರ್ಚಕ ವೃತ್ತಿಯನ್ನು ನಡೆಸಿಕೊಂಡು ಬಂದದ್ದರಿಂದ ಅವರ ಹೆಸರಿಗೆ `ಅರ್ಚಿಕ' ಅನ್ವರ್ಥನಾಮವಾಗಿ ಸೇರಿಕೊಂಡಿತು. ಪತ್ರಕರ್ತ, ಸಾಹಿತಿಯಾಗಿ ಹಲವಾರು ಕೃತಿಗಳನ್ನು ರಚಿಸಿದ ಅವರು 1997ರ ಡಿಸೆಂಬರ್ 20ರಂದು ತಿರುಚೆಂಡೂರಿನಲ್ಲಿ ಅಕಾಲ ಮೃತ್ಯುವಿಗೀಡಾದರು.

1 comment:

  1. ನೆನೆಪಿನ ಪುಟಗಳು ಕೆಲವು ಬಾರಿ ಅಚ್ಚಳಿಯದೇ ಉಳಿಯುತ್ತವೆ, ಅದರಲ್ಲಿ ಅನುಪ ಕೃಷ್ಣ ಭಟ್ ನೆತ್ರಕೆರೆ ಅವರ ನೆನಪು...

    ReplyDelete