ಶಬರಿಮಲೈ:ಸುಪ್ರೀಂಕೋರ್ಟಿನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ
ನವದೆಹಲಿ: ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ 10ರಿಂದ 50ರ ನಡುವಣ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧ ವಿಚಾರದಲ್ಲಿ ಸುಪ್ರೀಂಕೋರ್ಟ್, ಭಕ್ತರೆಂದು ಹೇಳಿಕೊಳ್ಳದೇ ಇದ್ದವರು ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ಹಸ್ತಕ್ಷೇಪ ಮಾಡಬಾರದಾಗಿತ್ತು ಎಂದು ಸುಪ್ರೀಂಕೋರ್ಟಿನಲ್ಲಿ 2018ರ ಅಕ್ಟೋಬರ್ 8ರ ಸೋಮವಾರ ಸಲ್ಲಿಸಿದ ಪುನರ್ ಪರಿಶೀಲನಾ ಅರ್ಜಿ ಪ್ರತಿಪಾದಿಸಿದೆ.
ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅಧ್ಯಕ್ಷೆ ಶೈಲಜಾ ವಿಜಯನ್ ಅವರ ಪುನರ್ ಪರಿಶೀಲನಾ ಅರ್ಜಿಯನ್ನು ವಕೀಲ ವಕೀಲರಾದ ಮ್ಯಾಥ್ಯೂ ನೆಡುಂಪಾರ ಅವರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದಾರೆ. ಪಂಚ ಸದಸ್ಯ ಸಂವಿಧಾನ ಪೀಠದಲ್ಲಿ ಭಿನ್ನಮತದ ತೀರ್ಪು ನೀಡಿದ ಏಕೈಕ ನ್ಯಾಯಮೂರ್ತಿ ಇಂದು ಮಲ್ಹೋತ್ರ ಅವರು ನೀಡಿದ್ದ ಅಭಿಪ್ರಾಯಗಳ ನೆಲೆಯಲ್ಲೇ ಈ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ.
ದೇವಾಲಯದ ಯಾರೇ ಭಕ್ತರೂ ದೇವಾಲಯದಲ್ಲಿ ಶತ ಶತಮಾನಗಳಿಂದ ಅನುಸರಿಸುತ್ತಾ ಬರಲಾಗಿರುವ ಪದ್ಧತಿಗಳ ಬಗ್ಗೆ ಆಪಾದಿಸಿಲ್ಲ. ದೇಗುಲದ ಆರಾಧ್ಯ ದೈವ ಬ್ರಹ್ಮಚಾರಿ ಅಯ್ಯಪ್ಪ ಸ್ವಾಮಿಯ ವೈಶಿಷ್ಟಗಳ ಆಧಾರದಲ್ಲಿ ಇಲ್ಲಿನ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾ ಬರಲಾಗಿದೆ. ಹೀಗಿರುವಾಗ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಸಂವಿಧಾನದ 32ನೇ ಅನುಚ್ಛೇದದ ಅಡಿಯಲ್ಲಿ, ತಾನು ಅಯ್ಯಸ್ವಾಮಿಯ ಭಕ್ತ ಎಂಬುದಾಗಿ ಎಲ್ಲಿಯೂ ಪ್ರತಿಪಾದಿಸದೇ ಇದ್ದಂತಹ ಭಾರತೀಯ ಯುವ ವಕೀಲರ ಸಂಘ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಲು ಹೇಗೆ ಸಾಧ್ಯ? ಎಂಬುದಾಗಿ ಅರ್ಜಿ ಕೇಳಿದೆ.
ಸಂವಿಧಾನದ 32ನೇ ಅನುಚ್ಛೇದದ ಅಡಿಯಲ್ಲಿ ಸಹಭಕ್ತರು ಮಾತ್ರವೇ ರಿಟ್ ಅರ್ಜಿ ಸಲ್ಲಿಸಲು ಅವಕಾಶವಿದೆ. ತಾನು ಅಯ್ಯಪ್ಪ ಸ್ವಾಮಿಯ ಭಕ್ತ/
ಅಯ್ಯಪ್ಪ ಸ್ವಾಮಿಯಲ್ಲಿ ನಂಬಿಕೆ ಇರಿಸಿದವ ಎಂಬುದಾಗಿ ಹೇಳಿಕೊಳ್ಳದೇ ಇರುವ ವಕೀಲರ ಸಂಘದ ಮೂಲಭೂತ ಹಕ್ಕುಗಳು ಹೇಗೆ ಉಲ್ಲಂಘನೆಯಾಗಿವೆ ಎಂಬುದಾಗಿ ಪುನರ್ ಪರಿಶೀಲನಾ ಅರ್ಜಿ ಪ್ರಶ್ನಿಸಿದೆ.
ಧಾರ್ಮಿಕ ವಿಚಾರಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದರಿಂದ, ಭಕ್ತರಲ್ಲದವರು ಹಾಗೂ ನಂಬಿಕೆ ಇಲ್ಲದ ಅಧಿಕ ಪ್ರಸಂಗಿಗಳಿಗೆ ಧಾರ್ಮಿಕ ನಂಬಿಕೆ ಮತ್ತು ಪದ್ಧತಿಗಳನ್ನು ಪ್ರಶ್ನಿಸಲು ‘ಪ್ರವಾಹದ ಬಾಗಿಲುಗಳನ್ನು ತೆರೆದಂತಾಗಬಹುದು’ ಎಂದು ನ್ಯಾಯಮೂರ್ತಿ ಇಂದು ಮಲ್ಹೋತ್ರ ತಮ್ಮ ಭಿನ್ನಮತದ ತೀರ್ಪಿನಲ್ಲಿ ಸಹ ನ್ಯಾಯಮೂರ್ತಿಗಳನ್ನು ಎಚ್ಚರಿಸಿದ್ದರು.
ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ:
No comments:
Post a Comment