Friday, October 19, 2018

ಅಮೃತಸರ: ರಾವಣ ಪ್ರತಿಕೃತಿ ದಹನ ವೇಳೆ ಜನರ ಮೇಲೆ ಹರಿದ ರೈಲು: ಕನಿಷ್ಠ 60 ಸಾವು


ಅಮೃತಸರ: ರಾವಣ ಪ್ರತಿಕೃತಿ ದಹನ ವೇಳೆ
ಜನರ ಮೇಲೆ ಹರಿದ ರೈಲು: ಕನಿಷ್ಠ 60 ಸಾವು

ಅಮೃತಸರ (ಪಂಜಾಬ್): ದಸರಾ ಆಚರಣೆ ಸಂಭ್ರಮದಲ್ಲಿದ್ದ ಜನರ ಮೇಲೆ ರೈಲು ಹರಿದ ಪರಿಣಾಮವಾಗಿ ಕನಿಷ್ಠ 60 ಜನ ಮೃತರಾಗಿ, 70ಕ್ಕೂ  ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಪಂಜಾಬಿನ ಅಮೃತಸರದಲ್ಲಿ 19 ಅಕ್ಟೋಬರ್ 2018 ರ ಶುಕ್ರವಾರ ಸಂಜೆ ಘಟಿಸಿತು.

ಅಮೃತಸರದ ಜೊಧಾ ಫಾಟಕ್ ಸಮೀಪದ ಧೋಬಿಘಾಟಿನಲ್ಲಿ ವಿಜಯದಶಮಿಯ ಅಂಗವಾಗಿ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ದುರಂತ ಸಂಭವಿಸಿತು.

ರಾವಣ ಪ್ರತಿಕೃತಿ ದಹನ ವೀಕ್ಷಣೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಮಂದಿ ತಲ್ಲೀನರಾಗಿದ್ದ ವೇಳೆಯಲ್ಲಿ ಜಲಂಧರದಿಂದ ಅಮೃತಸರದತ್ತ ಬರುತ್ತಿದ್ದ ರೈಲು ರೈಲ್ವೆ ಹಳಿಗಳ ಮೇಲಿದ್ದ ಜನರ ಮೇಲೆ ಹರಿಯಿತು ಎಂದು ವರದಿಗಳು ಹೇಳಿವೆ.

ಸುಮಾರು 60 ಜನ ಮೃತರಾಗಿದ್ದು 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಅಮೃತಸರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಸಂಜೆ 6.45ರ ವೇಳೆಯಲ್ಲಿ ರಾವಣ ಪ್ರತಿಕೃತಿ ದಹಿಸುತ್ತಿದ್ದಾಗ ಇಡೀ ಪ್ರದೇಶದಲ್ಲಿ ಪಟಾಕಿಗಳ ಸದ್ದು ವ್ಯಾಪಿಸಿತ್ತು. ಆಗ ಬಂದ ನಕೊದರ್ ಜಲಂಧರ್ ಡಿಎಂಯು ನಂ. 74943 ರೈಲುಗಾಡಿಯು ರೈಲು ಹಳಿಗಳ ಮೇಲೆ ರಾವಣ ಪ್ರತಿಕೃತಿ ದಹನವನ್ನು ವೀಕ್ಷಿಸುತ್ತಿದ್ದ ಜನರ ಮೇಲೆ ಹರಿಯಿತು ಎಂದು ವರದಿಗಳು ಹೇಳಿವೆ.

ಪ್ರಧಾನಿ ನರೇಂದ್ರ ಮೋದಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತಿತರರು ದುರಂತಕ್ಕೆ ಆಘಾತ ವ್ಯಕ್ತ ಪಡಿಸಿ ಶೋಕ ಸೂಚಿಸಿದರು.

ವಿಡಿಯೋ  ವೀಕ್ಷಿಸಿ:


No comments:

Post a Comment