Wednesday, October 31, 2018

ವಿಶ್ವದಲ್ಲೇ ಎತ್ತರದ ‘ಏಕತೆಯ ಪ್ರತಿಮೆ’ ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ವಿಶ್ವದಲ್ಲೇ ಎತ್ತರದ  ‘ಏಕತೆಯ ಪ್ರತಿಮೆ’

ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

ಅಹಮದಾಬಾದ್: ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ  182 ಮೀಟರ್ ಎತ್ತರದಉಕ್ಕಿನ ಮನುಷ್ಯ’ ಸರ್ದಾರ್ವಲ್ಲಭ ಭಾಯ್ ಪಟೇಲ್ ಅವರ 'ಏಕತೆಯ ಪ್ರತಿಮೆ'ಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 31 ಅಕ್ಟೋಬರ್ 2018 ಬುಧವಾರ  ಲೋಕಾರ್ಪಣೆ ಮಾಡಿದರು.
ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಇದಕ್ಕೆ ಮೊದಲು ಸಾಂಕೇತಿಕವಾಗಿ ಮಣ್ಣು ಹಾಗೂ ನರ್ಮದಾ ನದಿ ನೀರನ್ನು ಮೋದಿ ಅವರು ಕಲಶಕ್ಕೆ ಅರ್ಪಿಸಿದರು. ಬಳಿಕ ಲಿವರ್ಒತ್ತುವ ಮೂಲಕ ಪ್ರತಿಮೆಯ ಮೇಲೆ ಅಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಮೆಯ ಪೀಠದ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಪ್ರತಿಮೆ ಅನಾವರಣ ವೇಳೆ ವಾಯುಪಡೆಯ ಎರಡು ವಿಮಾನಗಳು ಪ್ರತಿಮೆಯ ಮೇಲೆ ಹಾರಾಟ ನಡೆಸಿ ಬಣ್ಣಗಳ ಮೂಲಕ ಆಗಸದಲ್ಲಿ ತಿರಂಗಾದ ಚಿತ್ತಾರ ಮೂಡಿಸಿದವು. ಜತೆಗೆ ವಿಮಾನಗಳ ಮೂಲಕ ಪುಷ್ಪಾರ್ಚನೆಯೂ ನಡೆಯಿತು.

ಗುಜರಾತಿನ ಕೆವಾಡಿಯಾ ಗ್ರಾಮದ ಬಳಿ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿರುವ 182 ಮೀಟರ್ (597 ಅಡಿಗಳು) ಎತ್ತರದ ಸರ್ದಾರ್ ಪಟೇಲರ ಭವ್ಯವಾದ  ಏಕತಾ ಪ್ರತಿಮೆಯನ್ನು ನಿರ್ಮಿಸಲಾಗಿದೆ.

ಲೋಕಾರ್ಪಣೆಯ ಬಳಿಕ  ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಇತಿಹಾಸದಲ್ಲಿ ನೆನಪಿಡಬೇಕಾದ ದಿನ  ಇದು. ಈ ಹೊತ್ತಿನಲ್ಲಿ ಭಾರತದ ಇತಿಹಾಸವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವಾಗಿದೆ. ರಾಜರ ಆಳ್ವಿಕೆಯಲ್ಲಿದ್ದ 550 ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಪಟೇಲ್’ ಎಂದು ಹೇಳಿದರು.


‘ಪಟೇಲ್ ಅವರ 143ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ  ಇಂದು  ಏಕತಾ ದಿವಸವನ್ನು ಆಚರಿಸಲಾಗುತ್ತಿದೆ. ಅಲ್ಲದೇ ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂಬುದಾಗಿ ಭಾವಿಸುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.


ಸರ್ದಾರ್ ಪಟೇಲ್ ಅವರು ದಿಟ್ಟತನ, ಏಕತೆಯ ಸಂಕಲ್ಪ ತೋರಿಸದಿದ್ದರೆ ಇಂದು ನಾವು ಸೋಮನಾಥ ಹಾಗೂ ಹೈದರಾಬಾದಿನ ಚಾರ್ ಮಿನಾರ್ ನೋಡಲು ವೀಸಾ ಹೊಂದಿರಬೇಕಿತ್ತು. ಇಂಥ ಲೋಹಪುರುಷ ಪಟೇಲರಿಗೆ ನೊರೊಂದು ನಮನಗಳು ಎಂದು ಪ್ರಧಾನಿ ನುಡಿದರು.


‘ದೇಶದಲ್ಲಿ ಆಗಲೂ ಸಹ ನಿರಾಶಾವಾದಿಗಳು ಇದ್ದರು. ಇನ್ನು ನಾವು ಯಾರಿಗೂ ಗುಲಾಮರಾಗುವ ಅಗತ್ಯವಿಲ್ಲ ಎಂದು ಪಟೇಲರು 1947ರಲ್ಲಿ ಹೇಳಿದ್ದರು. ಇಂದಿಗೂ ಕೂಡಾ ನಾವು ಗುಲಾಮರಾಗಿ ಬದುಕಬೇಕಾಗಿಲ್ಲ. ದೇಶ ಇಂದು ತನ್ನದೇ ಇತಿಹಾಸ ನಿರ್ಮಿಸಿಕೊಂಡಿದೆ’ ಎಂದು ಮೋದಿ ಹೇಳಿದರು.


ಸರ್ದಾರ್ಪಟೇಲರ ದೂರದೃಷ್ಟಿಯ ಕೊಡುಗೆ ಇಲ್ಲದಿದ್ದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ನೇರ ರೈಲು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಹೇಳಿದರು.

ಏಕತೆಯ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು. ಹೀಗೆ ಒಂದು ಬೃಹತ್ ಆಂದೋಲನವೆ ನಡೆಯಿತು ಎಂದು ಪ್ರತಿಮೆ ಸ್ಥಾಪನೆಯ ಹಿನ್ನೆಲೆಯನ್ನು ಪ್ರಧಾನಿ ನೆನಪಿಸಿದರು.

ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಪ್ರತಿಮೆಯ ಸ್ಥಾಪನೆಯ ಕನಸು ಕಂಡಿದ್ದೆ. ಅದು ಈಗ ಸಾಕಾರವಾಗಿದೆ’ ಎಂದು  ಪ್ರಧಾನಿ ಹೇಳಿದರು. 

No comments:

Post a Comment