ಇಂದಿನ ಇತಿಹಾಸ History Today ಅಕ್ಟೋಬರ್ 02
2018:
ನವದೆಹಲಿ: ಸಾಲ ಮನ್ನಾ ಮತ್ತು ಇಂಧನ ಬೆಲೆ ಇಳಿಕೆ ಸೇರಿದಂತೆ ೧೫ ಅಂಶಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನೇತೃತ್ವದಲ್ಲಿ ದೆಹಲಿಯತ್ತ ಹೊರಟ ಕಿಸಾನ್ ಕ್ರಾಂತಿ ಯಾತ್ರೆಯನ್ನು ದೆಹಲಿ -ಉತ್ತರ ಪ್ರದೇಶ ಗಡಿಯಲ್ಲೇ ತಡೆದ ಪೊಲೀಸರು ಯಾತ್ರೆಯಲ್ಲಿದ್ದ ಸಹಸ್ರಾರು ಸಂಖ್ಯೆಯ ಪ್ರದರ್ಶನ ನಿರತ ರೈತರನ್ನು ಚದುರಿಸಲು ಜಲಫಿರಂಗಿ ಮತ್ತು ಆಶ್ರುವಾಯು ಶೆಲ್ ಪ್ರಯೋಗಿಸಿದರು. ಜಲಫಿರಂಗಿ ಅಶ್ರುವಾಯು ಪ್ರಯೋಗದ ಬಳಿಕ ಪ್ರತಿಭಟನಾ ನಿರತ ರೈತರೂ ಸಿಟ್ಟಿಗೆದ್ದು ಹಿಂಸಾಚಾರಕ್ಕೆ ಇಳಿದಿದ್ದು, ಪೊಲೀಸರತ್ತ ಕಲ್ಲು ತೂರಾಟದ ಜೊತೆಗೆ ಲಾಠಿಗಳನ್ನೂ ಬೀಸಿದರು. ಪರಿಣಾಮವಾಗಿ ಹಲವಾರು ಪೊಲೀಸರೂ ಗಾಯಗೊಂಡಿದ್ದಾರೆ. ಪ್ರತಿಭಟನಕಾರ ರೈತರು ರಾತ್ರಿ ಪೂರ್ತಿ ಉತ್ತರಪ್ರದೇಶ-ದೆಹಲಿ ಗಡಿಯಲ್ಲೇ ತಂಗಲು ನಿರ್ಧರಿಸಿದ್ದು, 03-10-2018ರ
ಬುಧವಾರವೂ ಪ್ರತಿಭಟನೆ ನಡೆಸಲು ತೀರ್ಮಾನಿಸಿದರು. ಕಿಸಾನ್ ಘಾಟ್ ಕಡೆಗೆ ಮೆರವಣಿಗೆ ನಡೆಸುವ ಬಗ್ಗೆ ರಾತ್ರಿ ನಿರ್ಧರಿಸಲಾಗುವುದು ಎಂದು ರೈತ ನಾಯಕರು ಪ್ರಕಟಿಸಿದರು.
ಜಲ ಫಿರಂಗಿ, ಅಶ್ರವಾಯು ಶೆಲ್ ಪ್ರಯೋಗದ ಸಂದರ್ಭದಲ್ಲಿ ಹಲವು ರೈತರು ಗಾಯಗೊಂಡು, ಭಾರತೀಯ ಕಿಸಾನ್ ಯೂನಿಯನ್
ನಾಯಕರೊಬ್ಬರು ಅಸ್ವಸ್ಥರಾದ ಬಳಿಕ ರೈತರ ಮನವೊಲಿಸಲು ಮುಂದಾದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರೈತರ ಜೊತೆಗೆ ಮಾತುಕತೆ ನಡೆಸಿದರು. ಮಾತುಕತೆಗಳ ಬಳಿಕ ಸರ್ಕಾರ ರೈತರ ೭ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿದೆ, ಆದರೆ ಸಾಲಮನ್ನಾ ಮತ್ತು ಸ್ವಾಮಿನಾಥನ್ ಶಿಫಾರಸು ಸೇರಿದಂತೆ ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒಪ್ಪಿಲ್ಲ ಎಂದು ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ರೈತರು ಹೋರಾಟ ಮುಂದುವರೆಸಲು ತೀರ್ಮಾನಿಸಿದ್ದಾರೆ ಎಂದು ವರದಿಗಳು ಹೇಳಿದವು.
ಸರ್ಕಾರದ ಭರವಸೆಗಳನ್ನು ರೈತರು ಅಂಗೀಕರಿಸುವುದಿಲ್ಲ, ಪ್ರತಿಭಟನೆಯನ್ನು ಮುಂದುವರೆಸುತ್ತಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದರು. ಇದಕ್ಕೂ ಮುನ್ನ,
ರಾಜನಾಥ್ ಸಿಂಗ್ ಅವರು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಮತ್ತು ಇತರ ಕೆಲವರ ಜೊತೆಗೆ ರೈತ ವಿಷಯಗಳನ್ನು ಇತ್ಯರ್ಥ ಪಡಿಸುವ ಬಗ್ಗೆ ಮತ್ತು ಅವರನ್ನು ಸಮಾಧಾನಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು ಎಂದು ಅಧಿಕಾರಿಗಳು ತಿಳಿಸಿದರು. ಗೃಹ ಸಚಿವ ರಾಜನಾಥ್ ಸಿಂಗ್ ಅವರು ರೈತ ನಾಯಕರನ್ನು ಭೇಟಿ ಮಾಡಿ ಅವರ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಿದ್ದು ಪ್ರಮುಖ ವಿಷಯಗಳ ಬಗ್ಗೆ ಒಪ್ಪಂದಕ್ಕೆ ಬಂದಿದ್ದಾರೆ. ರೈತ ನಾಯಕರು, ಉತ್ತರ ಪ್ರದೇಶದ ಸಚಿವರಾದ ಲಕ್ಷ್ಮೀ ನಾರಾಯಣ್, ಸುರೇಶ ರಾಣಾ ವತ್ತು ನಾನು ರೈತರನ್ನು ಭೇಟಿ ಮಾಡಲಿದ್ದೇವೆ’ ಎಂದು ಕೃಷಿ ರಾಜ್ಯ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೇಳಿದ್ದರು. ಆದರೆ ಭೇಟಿಯಾಗಲು ಬಂದ ಕೃಷಿ ಸಚಿವರನ್ನು ರೈತರು ಆಚೆಗೆ ತಳ್ಳಿದರು ಎಂದು ವರದಿಗಳು ಹೇಳಿದವು.
ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ಕೃಷಿ ಸಚಿವ ಶೆಖಾವತ್, ಕೃಷಿಗೆ ಬೇಕಾದ ಸ್ಪ್ರಿಂಕ್ಲರ್ನಂತಹ ಸಲಕರಣೆಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ ಟಿ) ಶೇಕಡಾ ೧೨ರಿಂದ ೫ಕ್ಕೆ ಇಳಿಸಲು ಒಪ್ಪಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ೩ ತಿಂಗಳುಗಳ ಒಳಗೆ ಕ್ರಮಬದ್ಧಗೊಳಿಸಲಾಗುವುದು. ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಮೂರು ದಿನಗಳ ಒಳಗಾಗಿ ಜಾರಿಗೊಳಿಸಲಾಗುವುದು. ಹಿಂಗಾರು ಬೆಳೆಗಳ ಬಗ್ಗೆ ಇನ್ನೂ ತೀರ್ಮಾನಿಸಬೇಕಾಗಿದೆ ಎಂದು ಹೇಳಿದರು. ಬೇಳೆ ಮತ್ತು ಗೋಧಿಯನ್ನು ಇನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ. ರಾಜನಾಥ್ ಸಿಂಗ್ ಅವರು ಎಲ್ಲ ರೈತ ನಾಯಕರನ್ನು ಒಂದು ವಾರದ ಒಳಗಾಗಿ ಭೇಟಿ ಮಾಡುವರು. ವಿಶೇಷ ಸಮಿತಿಯನ್ನೂ ರಚಿಸಲಾಗುವುದು ಎಂದು ಅವರು ಪ್ರಕಟಿಸಿದರು. ಆದರೆ ಅವರ ಮಾತಿನಿಂದ ಸಂತುಷ್ಟರಾಗದ ರೈತರು ಇಲ್ಲ ಎಂದು ಕೂಗುತ್ತಾ ಅವರ ವಿರುದ್ಧವೂ ಪ್ರತಿಭಟಿಸಿದರು. ಪರಿಣಾಮವಾಗಿ ಸಚಿವರು ವೇದಿಕೆಯಿಂದ ಕೆಳಗಿಳಿದು ಅಲ್ಲಿಂದ ತೆರಳಬೇಕಾಯಿತು ಎಂದು ವರದಿಗಳು ತಿಳಿಸಿದವು.
ಟ್ರಾಕ್ಟ್ಯರುಗಳು ಮತ್ತು ಟ್ರಾಲಿಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ದೆಹಲಿಯತ್ತ ಹೊರಟ ರೈತರು ಮೊದಲು ಉತ್ತರ ಪ್ರದೇಶ ಪೊಲೀಸರು ನಿರ್ಮಿಸಿದ್ದ ಅಡೆತಡೆಗಳನ್ನು ಕಿತ್ತು ಹಾಕಿ ದೆಹಲಿ ಪೊಲೀಸರು ನಿರ್ಮಿಸಿದ್ದ ಅಡೆತಡೆಗಳತ್ತ ಮುಂದುವರೆದರು. ಆಗ ಘೋಷಣೆ ಕೂಗುತ್ತಾ ಮುಂದುವರೆಯುತ್ತಿದ್ದ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಬಳಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನುಡಿದರು. ಹರಿದ್ವಾರದಿಂದ ಹೊರಟ ಸಹಸ್ರಾರು ಮಂದಿ ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಮಂಗಳವಾರ ರಾಜಧಾನಿ ತಲುಪಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ನಗರ ಪೊಲೀಸರು ಈಶಾನ್ಯ ದೆಹಲಿಯಲ್ಲಿ ಸೋಮವಾರವೇ ನಿಷೇಧಾಜ್ಞೆ ಜಾರಿ ಗೊಳಿಸಿದ್ದರು. ಪೂರ್ವದೆಹಲಿಯಲ್ಲಿ ಡಿಸಿಪಿ (ಪೂರ್ವ) ಪಂಕಜ್ ಸಿಂಗ್ ಅವರು ಪ್ರೀತ್ ವಿಹಾರ್, ಜಗತ್ ಪುರಿ, ಶಕಾರ್ ಪುರ, ಮಧು ವಿಹಾರ್, ಘಾಜಿಪುರ, ಮಯೂರ ವಿಹಾರ್, ಮಾಂಡವ್ಲಿ, ಪಾಂಡವನಗರ, ಕಲ್ಯಾಣಪುರ ಮತ್ತು ನ್ಯೂ ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ಟೋಬರ್ ೮ರವರೆಗೂ ಆರ್ ಪಿಸಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ
ಜಾರಿಗೊಳಿಸಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಅಕ್ಟೋಬರ್ ೪ರವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನಾ ನಿರತ ರೈತರನ್ನು ತಡೆಯಲು ಭಾರೀ ಅಡೆತಡೆಗಳನ್ನೂ ನಿರ್ಮಿಸಲಾಗಿತ್ತು. ಕಾಂಗ್ರೆಸ್ ಟೀಕೆ: ಈ ಮಧ್ಯೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು
ರೈತರ ವಿರುದ್ಧ ಬಲಪ್ರಯೋಗ ಮಾಡಿದ್ದನ್ನು ಖಂಡಿಸಿತು. ಅಂತಾರಾಷ್ಟ್ರೀಯ ಅಹಿಂಸಾ ದಿನದಂದೇ ಬಿಜೆಪಿಯ ದೆಹಲಿ ಗಡಿಯಲ್ಲಿ ರೈತರನ್ನು ಕ್ರೂರವಾಗಿ ಥಳಿಸಿದೆ ಎಂದು ಆಪಾದಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ರೈತರು ತಮ್ಮ ಕಷ್ಟ ಹೇಳಿಕೊಳ್ಳಲು ರಾಷ್ಟ್ರದ ರಾಜಧಾನಿಗೂ ಬರುವಂತಿಲ್ಲ ಎಂದು ಟೀಕಿಸಿದರು.
ಕೇಜ್ರಿವಾಲ್ ಆಗ್ರಹ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ’ರೈತರಿಗೆ ದೆಹಲಿ ಪ್ರವೇಶಿಸಲು ಅವಕಾಶ ನೀಡಬೇಕು. ಅವರನ್ನು ಏಕೆ ದೆಹಲಿ ಪ್ರವೇಶಿಸಲು ಬಿಡುತ್ತಿಲ್ಲ? ಇದು ತಪ್ಪು. ನಾವು ರೈತರ ಜೊತೆಗಿದ್ದೇವೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು. ಪೊಲೀಸರ ಜಲಫಿರಂಗಿ, ಆಶ್ರುವಾಯು ಪ್ರಯೋಗದ ಪರಿಣಾಮವಾಗಿ ಹಲವಾರು ರೈತರು ಗಾಯಗೊಂಡಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಘಟಕದ ಮುಖ್ಯಸ್ಥ ಅವರ ಮುಖದ ಸಮೀಪವೇ ಅಶ್ರುವಾಯು ಶೆಲ್ ಸಿಡಿದ ಪರಿಣಾಮವಾಗಿ ಪ್ರಜ್ಞೆ ತಪ್ಪಿದರು ಎಂದು ವರದಿಗಳು ಹೇಳಿವೆ.
2016: ವಾಷಿಂಗ್ಟನ್: ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರವೆಂದು ಘೋಷಿಸಲು ವೈಟ್ ಹೌಸ್ ವೆಬ್ಸೈಟ್ನಲ್ಲಿ ನಡೆಸುತ್ತಿರುವ ಸಮೀಕ್ಷೆಗೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು, ಲಕ್ಷಾಂತರ ಜನರು ಪಾಕಿಸ್ತಾನದ ವಿರುದ್ಧವಾಗಿ ಮತ ಚಲಾಯಿಸಿದರು. ಭಯೋತ್ಪಾದನೆ ಉಪಸಮಿತಿಯ ಅಧ್ಯಕ್ಷ ಮತ್ತು ಸಂಸದ ಟೇಡ್ ಪೋ ಮತ್ತು ಸಂಸದ ಡಾನಾ ರೋಹರ್ಬಚೆರ್ ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರ ಎಂದು ಘೋಷಿಸಬೇಕು ಎಂದು ಸೂಚಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಸಂಸತ್ತಿನಲ್ಲಿ ಮಸೂದೆ ಮಂಡನೆಯಾದ ನಂತರ ಇದರ ಕುರಿತು ಜನರ ಅಭಿಪ್ರಾಯ ತಿಳಿಯಲು ವೈಟ್ ಹೌಸ್ ವೆಬ್ಸೈಟ್ನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ. ಸೆಪ್ಟೆಂಬರ್ 21 ರಂದು ವೆಬ್ಸೈಟ್ನಲ್ಲಿ ಸಮೀಕ್ಷೆ ಪ್ರಾರಂಭವಾಗಿದೆ. ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರ ಎಂದು ಘೋಷಿಸಲು ಸಮೀಕ್ಷೆಯಲ್ಲಿ ಕನಿಷ್ಠ 1 ಲಕ್ಷ ಜನರು ಸಹಿ ಮಾಡಬೇಕಿತ್ತು. ಸಮೀಕ್ಷೆ ಪ್ರಾರಂಭವಾದ 10 ದಿನಗಳಲ್ಲೇ ಸುಮಾರು 5 ಲಕ್ಷದ 28 ಸಾವಿರ ಜನರು ಸಹಿ ಮಾಡಿ ಮಸೂದೆಗೆ ಬೆಂಬಲ ಸೂಚಿಸಿದ್ದಾರೆ. ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ 20 ದಿನ ಬಾಕಿ ಇರುವುದರಿಂದ ಇನ್ನಷ್ಟು ಜನರು ಸಹಿ ಮಾಡುವ ನಿರೀಕ್ಷೆ ಇದೆ. ಪಾಕಿಸ್ತಾನವನ್ನು ಭಯೋತ್ಪಾದನೆ ಪ್ರಾಯೋಜಕ ರಾಷ್ಟ್ರ ಎಂದು ಘೋಷಿಸಲು ಈಗ ಅವಕಾಶ ಒದಗಿ ಬಂದಿದೆ. ನಾವು ಅದಕ್ಕೆ ಬೆಂಬಲ ನೀಡುತ್ತೇವೆ. ಇದಕ್ಕಾಗಿ ಅಭಿಯಾನ ಪ್ರಾರಂಭಿಸಿದ್ದು, ಆದಷ್ಟು ಹೆಚ್ಚು ಜನರು ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಜಾರ್ಜ್ ಟೌನ್ ವಿಶ್ವವಿದ್ಯಾಯದ ವಿಜ್ಞಾನಿ ಅಂಜು ಪ್ರೀತ್ ತಿಳಿಸಿದ್ದಾರೆ. ನೀವೂ ಕೂಡ ಕೆಳಗಿನ ಲಿಂಕ್ಗೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ.
2018:
ಸ್ಟಾಕ್ ಹೋಮ್: ಭೌತಶಾಸ್ತ್ರ ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ೨೦೧೮ರ ಸಾಲಿನಲ್ಲಿ ಮೂವರು ಹಂಚಿಕೊಂಡಿದ್ದು, ೫೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಪ್ರಶಸ್ತಿಗೆ ಭಾಜನರಾದರು. ಅಮೆರಿಕದ ವಿಜ್ಞಾನ್ ಆರ್ಥರ್ ಅಶ್ಕಿನ್, ಫ್ರೆಂಚ್ ಎಂಜಿನಿಯರ್ ಗೆರಾಲ್ಡ್ ಮೌರೋವು ಮತ್ತು ಇಂಗ್ಲಿಷ್ ಪ್ರಾಧ್ಯಾಪಕ ಡೊನ್ನಾ ಸ್ಟ್ರಿಕ್ಲ್ಯಾಂಡ್ ಅವರಿಗೆ ಲೇಸರ್ ಭೌತಶಾಸ್ತ್ರ ಸಂಶೋಧನಾ
ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ
ಪ್ರಸಕ್ತ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.
ಡಾ. ಅಶ್ಕಿನ್ ಅವರಿಗೆ ಆಪ್ಟಿಕಲ್ ಟ್ವೀಜರ್ಗಳು ಮತ್ತು ಜೈವಿಕ ವ್ಯವಸ್ಥೆಗಳಲ್ಲಿ ಅವುಗಳ ಅನ್ವಯ ಕುರಿತ ಸಂಶೋಧನೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ರಾಯಲ್ ಸ್ವೀಡಿಶ್ ವಿಜ್ಞಾನ ಅಕಾಡೆಮಿಯ ಟ್ವಿಟ್ಟರ್ ಖಾತೆಯಲ್ಲಿನ ಅಧಿಕಾರಿ ಟ್ವೀಟ್ ಮಾಡಿದರು.
ಡಾ. ಮೌರೋವು ಮತ್ತು ಡಾ. ಸ್ಟ್ರಿಕ್ಲಾಂಡ್ ಅವರಿಗೆ ಅತಿ ತೀವ್ರತೆಯ ಅಲ್ಟ್ರಾ -ಶಾಟ್ ಆಪ್ಟಿಕಲ್ ಪಲ್ಸಸ್ ವಿಧಾನವನ್ನು ಕಂಡು ಹಿಡಿದದ್ದಕಾಗಿ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ನೀಡುವ ರಾಯಲ್ ಸ್ವೀಡಿಶ್ ಅಕಾಡೆಮಿಯ ಟ್ವೀಟ್ ಹೇಳಿತು. ಲೇಸರ್ ಭೌತಶಾಸ್ತ್ರ ಕ್ಷೇತ್ರವನ್ನು ತಮ್ಮ ಸಂಶೋಧನೆ ಮೂಲಕ ಕ್ರಾಂತಿಕಾರಕವನ್ನಾಗಿ ಮಾಡಿದ್ದಕ್ಕಾಗಿ ಈ ಮೂವರು ವಿಜ್ಞಾನಿಗಳಿಗೆ ಈ ವರ್ಷದ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಇವರ ಸಂಶೋಧನೆಗಳು ಕೈಗಾರಿಕೆ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಅತ್ಯುಪಯುಕ್ತ ಎಂದು ಅಕಾಡೆಮಿಯ ಅಧಿಕೃತ ವೆಬ್ ಸೈಟ್ ತಿಳಿಸಿತು. ಡೊನ್ನಾ ಸ್ಟ್ರಿಕ್ಲ್ಯಾಂಡ್ ಅವರು ೫೫ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಶಸ್ತಿ ಪಡೆದ ಮಹಿಳೆಯಾಗಿದ್ದಾರೆ.
‘ಮಹಿಳಾ ಭೌತ ವಿಜ್ಞಾನಿಗಳು ಸಂಭ್ರಮಿಸಬೇಕಾದ ಕ್ಷಣವಿದು. ನಾವು ಈ ಹಿಂದಿನಿಂದಲೂ ಈ ಕ್ಷೇತ್ರದಲ್ಲಿ ಇದ್ದೆವು. ನಾನು ಅಂತಹ ಮಹಿಳೆಯರ ಪೈಕಿ ಗೌರವಕ್ಕೆ ಪಾತ್ರಳಾದ ಒಬ್ಬ ಮಹಿಳೆ ಅಷ್ಟೆ’ ಎಂದು ಸ್ಟ್ರಿಕ್ಲ್ಯಾಂಡ್ ಸ್ಟಾಕ್ ಹೋಮ್ ನಲ್ಲಿ ಪ್ರಶಸ್ತಿ ಘೋಷಣೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಪ್ರಶಸ್ತಿ ಪಡೆದ ಮೂರನೇ ಮಹಿಳೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ’ಇನ್ನು ಮುಂದೆ ಇದು ವೇಗ ಪಡೆಯಲಿದೆ’ ಎಂದು ಹೇಳಿದರು. ಅಶ್ಕಿನ್ ಅವರು ಅಮೆರಿಕನ್ ವಿಜ್ಞಾನಿಯಾಗಿದ್ದರೆ, ಮೌರೋವು ಅವರು ಫ್ರೆಂಚ್ ಹಾಗೂ ಸ್ಟ್ರಿಕ್ಲ್ಯಾಂಡ್ ಅವರು ಕೆನಡಾದ ವಿಜ್ಞಾನಿಗಳಾಗಿದ್ದಾರೆ.
2018:
ಭೋಪಾಲ್: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವುದಕ್ಕೆ ಮುಂಚಿತವಾಗಿ, ಸಾಮಾನ್ಯ ಪಿಚ್ಹಾರ ಅಲ್ಪಸಂಖ್ಯಾತ ಕಲ್ಯಾಣ ಸಮಾಜ ನೇತೃತ್ವದಲ್ಲಿ ಸುಮಾರು ೭೦ ಮೀಸಲು ವಿರೋಧಿ ಸಂಘಟನೆಗಳು ಒಗ್ಗಟ್ಟಾಗಿ ಮಂಗಳವಾರ ನೂತನ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದವು.
ಸಪಕ್ಸ್ ಪೋಷಕ ಹೀರಾಲಾಲ್ ತ್ರಿವೇದಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಲಾಗಿದ್ದು, ನಾಲ್ವರು ಉಪಾಧ್ಯಕ್ಷರು ಮತ್ತು ಯುವ ವಿಭಾಗ ಸೇರಿದಂತೆ ಇತರ ಪದಾಧಿಕಾರಿಗಳನ್ನು ಒಳಗೊಂಡ ರಾಜ್ಯ ಕಾರ್ಯಕಾರಿಣಿಯನ್ನೂ ಪ್ರಕಟಿಸಲಾಯಿತು.
ಪಕ್ಷವು ತನ್ನ ಧ್ವಜವನ್ನೂ ಈದಿನ ಅನಾವರಣಗೊಳಿಸಿತು.
ಕರ್ಣಿ ಸೇನಾ, ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಮತ್ತು ಇತರರು ಸೇರಿದಂತೆ ೭೦ ಸಾಮಾಜಿಕ ಸಂಘಟನೆಗಳ ಬೆಂಬಲ ತನಗೆ ಇದೆ ಎಂಬುದಾಗಿ ಪಕ್ಷ ಘೋಷಿಸಿತು.
ನಾವು ಶೀಘ್ರದಲ್ಲೇ ಜಿಲ್ಲಾ ಮಟ್ಟದಲ್ಲಿ ನಮ್ಮ ಸಂಘಟನೆಯನ್ನು ವಿಸ್ತರಿಸಲಿದ್ದೇವೆ ಮತ್ತು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಿದ್ದೇವೆ ಎಂದು ಪಕ್ಷದ ಅಧ್ಯಕ್ಷ ಹೀರಾಲಾಲ್ ತ್ರಿವೇದಿ ಹೇಳಿದರು. ಟಿಕೆಟ್ ಹಂಚಿಕೆಗೆ ಏನಾದರೂ ಮಾನದಂಡ ಇದೆಯೇ ಎಂಬ ಪ್ರಶ್ನೆಗೆ, ಮತದಾರರು ಸಲಹೆ ಮಾಡುವ ಹೆಸರುಗಳನ್ನು ನಾವು ಅಂಗೀಕರಿಸುತ್ತೇವೆ ಎಂದು ತ್ರಿವೇದಿ ಉತ್ತರಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ೨೩೦ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಇಳಿಸಲು ಪಕ್ಷವು ಬಯಸಿದೆ ಎಂದು ಅವರು ನುಡಿದರು. ಪಕ್ಷದ ಲಾಂಛನಕ್ಕೆ ಇನ್ನೂ ಮಾನ್ಯತೆ ಲಭಿಸಬೇಕಾಗಿದೆ. ಚುನಾವಣಾ ಆಯೋಗದ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಅವರು ಹೇಳಿದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆ ಮತ್ತು ಬಡ್ತಿಯಲ್ಲಿ ಮೀಸಲಿಗೆ ವಿರೋಧ ನೂತನ ಪಕ್ಷದ ಪ್ರಮುಖ ಕಾರ್ಯಸೂಚಿಯಲ್ಲಿ ಸೇರಿವೆ ಎಂದು ತ್ರಿವೇದಿ ನುಡಿದರು. ಮೇಲ್ಜಾತಿಗಳ ಬೆಂಬಲದ ಜೊತೆಗೆ ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬೆಂಬಲ ಪಕ್ಷಕ್ಕೆ ಇದೆ ಎಂಬುದಾಗಿ ಪಕ್ಷವು ಪ್ರತಿಪಾದಿಸಿರುವುದು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧಿ ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಚಿಂತೆಗೆ ಕಾರಣವಾಗಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಬಡ್ತಿಯಲ್ಲಿ ಮೀಸಲು ವಿಸ್ತರಿಸಲು ಕೈಗೊಂಡಿರುವ ಕ್ರಮದ ವಿರುದ್ಧ ಹೋರಾಟ ನಡೆಸುವ ಕಾರ್ಯಸೂಚಿ
ಯೊಂದಿಗೆ ಸಪಕ್ಸ್ ಸಂಘಟನೆಯನ್ನು ರಚಿಸಲಾಗಿತ್ತು. ನಿವೃತ್ತ ಅಧಿಕಾರಿಗಳು ಮತ್ತು ಮಾಜಿ ಪೊಲೀಸ್ ಅಧಿಕಾರಿಗಳು ವ್ಯಕ್ತ ಪಡಿಸಿದ ಇದೇ ಮಾದರಿಯ ಇತರ ಸಿದ್ದಾಂತಗಳಿಂದಲೂ ನೂತನ ಪಕ್ಷವು ಪ್ರೇರಣೆ ಪಡೆದಿದೆ.
2018: ನವದೆಹಲಿ: ಸಾರ್ವಜನಿಕ ನೆರವು, ಪಾಲುದಾರಿಕೆ ಮತ್ತು ಜನರ ಪಾಲ್ಗೊಳ್ಳುವಿಕೆ ಮತ್ತು ರಾಜಕೀಯ ನಾಯಕತ್ವವು ಜಗತ್ತನ್ನು ಸಂಪೂರ್ಣ ನೈರ್ಮಲ್ಯದ ಕಡೆಗೆ ಒಯ್ಯಲು ನೆರವಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಮಹಾತ್ಮಾ ಗಾಂಧೀಜಿ ಅವರು ೧೪೯ನೇ ಜನ್ಮ ದಿನೋತ್ಸವ ಅಂಗವಾಗಿ ನಗರದಲ್ಲಿ ಸಂಘಟಿಸಲಾಗಿದ್ದ ಮಹಾತ್ಮಾ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲ್ಯೀಕರಣ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ನಾಲ್ಕು ವರ್ಷಗಳ ಹಿಂದಿನವರೆಗೆ, ಜಗತ್ತಿನ ಬಯಲು ಶೌಚ ಮಾಡುತ್ತಿದ್ದ ಜನಸಂಖ್ಯೆಯ ಶೇಕಡಾ ೬೦ ಪಾಲು ಭಾರತದ್ದಾಗಿತ್ತು. ಈಗ ಅದು ಶೇಕಡಾ ೨೦ಕ್ಕಿಂತಲೂ ಕೆಳಕ್ಕೆ ಇಳಿದಿದೆ ಎಂದು ನುಡಿದರು.
ನಿರ್ಮಿಸಲಾದ ಶೇಕಡಾ ೯೦ರಷ್ಟು ಶೌಚಾಲಯಗಳನ್ನು ಬಳಸಲಾಗುತ್ತಿದ್ದರೂ, ಬಯಸಲು ಶೌಚ ಮುಕ್ತ ಎಂಬುದಾಗಿ ಘೋಷಿಸಿದ ನಗರಗಳು ಮತ್ತೆ ಹಳೆ ಚಾಳಿಗೆ ಬೀಳದಂತೆ ನೋಡಿಕೊಳ್ಳುವ ಸಲುವಾಗಿ ಸರ್ಕಾರವು ಈ ಶೌಚಾಲಯಗಳ ಬಳಕೆ ವಿಚಾರದಲ್ಲಿ ತೀವ್ರ ನಿಗಾ ಇರಿಸಿದೆ ಎಂದು ಪ್ರಧಾನಿ ಹೇಳಿದರು.
ಸಾರ್ವಜನಿಕ ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ಗ್ರಾಮೀಣ ನೈರ್ಮಲ್ಯೀಕರಣವು ೨೦೧೪ಕ್ಕೆ ಮೊದಲು ಇದ್ದ ಶೇಕಡಾ ೩೮ರಿಂದ ಈಗ ಶೇಕಡಾ ೯೪ಕ್ಕೆ ಏರಿದೆ ಎಂದು ಪ್ರಧಾನಿ ನುಡಿದರು. ೨೫ ರಾಜ್ಯಗಳು ಬಯಲು ಶೌಚಮುಕ್ತ ರಾಜ್ಯಗಳು ಎಂಬುದಾಗಿ ಘೋಷಿಸಿದ್ದು, ಇಂತಹ ಗ್ರಾಮಗಳ ಸಂಖ್ಯೆ
೫ ಲಕ್ಷದವರೆಗೆ ಏರಿದೆ ಎಂದು ಪ್ರಧಾನಿ ಹೇಳಿದರು. ಈ ವರ್ಷದ ಅಕ್ಟೋಬರ್ ೨ ಮಹಾತ್ಮಾ ಗಾಂಧಿಯವರ ೧೫೦ನೇ ಜನ್ಮ ದಿನೋತ್ಸವ ಆಚರಣೆಗಳ ಆರಂಭದ ದಿನವಾಗಿದ್ದು, ಅದನ್ನು ದೇಶಾದ್ಯಂತ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಜೊತೆಗೆ ಸಂಭ್ರಮೋತ್ಸಾಹದೊಂದಿಗೆ ಆಚರಿಸಲಾಯಿತು.
ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಅವರಿಗೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ೧೨೪ ರಾಷ್ಟ್ರಗಳ ಕಲಾವಿದರು ಮಹಾತ್ಮಾ ಗಾಂಧಿಯವರಿಗೆ ಪ್ರಿಯವಾಗಿದ್ದ ’ವೈಷ್ಣವ ಜನ ತೋ’ ಗೀತೆಯನ್ನು ಮರುಸೃಷ್ಟಿ ಮಾಡಿದ ಪೋಸ್ಟ್ ನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಶೇರ್ ಮಾಡಿದರು. ‘ನಾಳೆ ವಿಶೇಷ ದಿನ. ನಮ್ಮ ಪ್ರೀತಿಯ ಬಾಪು ಅವರ ೧೫೦ನೇ ಜನ್ಮದಿನಾಚರಣೆ ಕಾರ್ಯಕ್ರಮಗಳು ಆರಂಭವಾಗುವ ದಿನ’ ಎಂದು ಪ್ರಧಾನಿ ಮೋದಿ ಸೋಮವಾರವೇ ಟ್ವೀಟ್ ಮಾಡಿದ್ದರು. ಮಹಾತ್ಮಾಗಾಂಧಿ ಅಂತಾರಾಷ್ಟ್ರೀಯ ನೈರ್ಮಲ್ಯೀಕರಣ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ತಾವು ಪಾಲ್ಗೊಳ್ಳಲಿದ್ದು, ಅಂತಾರಾಷ್ಟ್ರೀಯ ಸೌರ ಮೈತ್ರಿಯ ಮೊದಲ ಸಮಾವೇಶದ ಉದ್ಘಾಟನೆಯನ್ನೂ ನೆರವೇರಿಸುವುದಾಗಿ ಅವರು ಹೇಳಿದ್ದರು. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮಹಾತ್ಮಾ ಗಾಂಧಿ ಜನ್ಮದಿನದ ಅಂಗವಾಗಿ ಟ್ವೀಟ್ ಮೂಲಕ ಶುಭ ಹಾರೈಸಿದರೆ, ಮರಳು ಚಿತ್ರ ಕಲಾವಿದ ಸುದರ್ಶನ್ ಪಟ್ನಾಯಿಕ್ ಅವರು ವಿಶಿಷ್ಟ ಮರಳು ಶಿಲ್ಪದ ಮೂಲಕ ತಮ್ಮ ಗೌರವ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ವಾರ್ಧಾದಲ್ಲಿ ಗಾಂಧಿ ಜನ್ಮದಿನದ ಅಂಗವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ’ಮಹಾತ್ಮಾ ಗಾಂಧಿ ಅವರು ಭಾರತವನ್ನು ಒಗ್ಗೂಡಿಸುವ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಒಡೆಯುತ್ತಿದ್ದಾರೆ’ ಎಂದು ಅವರು ಹೇಳಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಹಾತ್ಮಾ ಗಾಂಧಿಯವರ ಚಿಂತನೆಗಳಿಂದ ಸ್ಫೂರ್ತಿ ಪಡೆದು ಅವರ ತೋರಿದ ಮಾರ್ಗದಲ್ಲಿ ನಡೆಯವುದೇ ನಾವು ಅವರಿಗೆ ಸಲ್ಲಿಸಬಹುದಾದ ನೈಜ ಶ್ರದ್ಧಾಂಜಲಿ ಎಂದು ಹೇಳಿದರು.
ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯ ರಾಜಧಾನಿಯ ಹಜರತ್ ಗಂಜ್ ನಲ್ಲಿ ಇರುವ ಮಹಾತ್ಮಾ ಗಾಂಧಿ ಆಶ್ರಮದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮೂಲಕ ಗೌರವ ಸಲ್ಲಿಸಿದರು. ಉಭಯ ನಾಯಕರೂ ಬಳಿಕ ಅವಧ್ ಶಿಲ್ಪಗ್ರಾಮದಲ್ಲಿ ನಡೆದ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾರತವು ಮಹಾತ್ಮಾ ಗಾಂಧಿಯವರ ಜನ್ಮದಿನ ಆಚರಿಸುವ ಈ ಕ್ಷಣವನ್ನು ರಾಷ್ಟ್ರಪಿತ ನೀಡಿದ ಅಹಿಂಸೆಯ ಸಂದೇಶವನ್ನು ಪ್ರಚುರಪಡಿಸಲು ಬಳಸಿಕೊಳ್ಳೋಣ
ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದರು. ಮರಣೋತ್ತರದ ಸ್ವರ್ಣ ಪದಕ: ಮಹಾತ್ಮಾ ಗಾಂಧಿಯವರು ಪ್ರತಿಪಾದಿಸಿದ ಶಾಂತಿ ಮತ್ತು ಅಹಿಂಸೆಗೆ ಮಾನ್ಯತೆ ನೀಡುವ ಸಲುವಾಗಿ ಪ್ರತಿಷ್ಠಿತ ಕಾಂಗ್ರೆಸ್ ಸ್ವರ್ಣ ಪದಕವನ್ನು ಗಾಂಧಿಯವರಿಗೆ ಮರಣೋತ್ತರವಾಗಿ ನೀಡಬೇಕು ಎಂದು ಭಾರತೀಯ ಮೂಲದ ನಾಲ್ವರು ಸೇರಿದಂತೆ ಅಮೆರಿಕದ ಆರು ಮಂದಿ ಪ್ರಭಾವೀ ಶಾಸನಕರ್ತರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ನಿರ್ಣಯವೊಂದನ್ನು ಮಂಡಿಸಿದರು. ನ್ಯೂಯಾರ್ಕ್‌ನ ಕಾಂಗೆಸ್ಸಿಗ ಕರೊಲಿನ್ ಮಲೋನಿ ಅವರು ನಾಲ್ವರು ಭಾರತೀಯ ಮೂಲದ ಅಮೆರಿಕನ್ ಶಾಸನಕರ್ತರಾದ ಅಮಿ ಬೆರಾ, ರಾಜಾ ಕೃಷ್ಣಮೂರ್ತಿ, ರೊ ಖನ್ನಾ ಮತ್ತು ಪ್ರಮೀಳಾ ಜಯಪಾಲ್ ಅವರ ಬೆಂಬಲದೊಂದಿಗೆ ನಿರ್ಣಯವನ್ನು ಮಂಡಿಸಿದ್ದಾರೆ. ಕಾಂಗ್ರೆಸ್ ಸ್ವರ್ಣ ಪದಕವು ಅಮೆರಿಕದ ಕಾಂಗ್ರೆಸ್ ನೀಡುವಂತಹ ಅತ್ಯಂತ ಉನ್ನತ ನಾಗರಿಕ ಗೌರವವಾಗಿದ್ದು, ಕೆಲವೇ ಕೆಲವು ವಿದೇಶೀಯರು ಇದನ್ನು ಪಡೆದಿದ್ದಾರೆ. ಮದರ್ ತೆರೇಸಾ (೧೯೯೭), ನೆಲ್ಸನ್ ಮಂಡೇಲಾ (೧೯೯೮), ಪೋಪ್ ಜಾನ್ ಪಾಲ್ ೨ (೨೦೦೦), ದಲಾಯಿ ಲಾಮಾ (೨೦೦೬), ಅಂಗ್ ಸಾನ್ ಸು ಕೀ (೨೦೦೮), ಮುಹಮ್ಮದ್ ಯೂನಸ್ (೨೦೧೦) ಮತ್ತು ಶಿಮೋನ್ ಪೆರೆಸ್ (೨೦೧೪) ಈ ಗೌರವ ಪಡೆದ ಕೆಲವರು.
2016: ಕಾಠ್ಮಂಡು (ನೇಪಾಳ): ತಮ್ಮ ತಮ್ಮ ಪ್ರದೇಶವನ್ನು ಗಡಿಯಾಚೆಯ ಭಯೋತ್ಪಾದನೆಗೆ ಬಳಸಿಕೊಳ್ಳಲು ಆಸ್ಪದ ನೀಡುವುದಿಲ್ಲ ಎಂಬುದಾಗಿ ಸಾರ್ಕ್ ಸದಸ್ಯ ರಾಷ್ಟ್ರಗಳು ಖಚಿತ ಪಡಿಸಬೇಕು ಎಂದು ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಯ (ಸಾರ್ಕ್) ಹಾಲಿ ಅಧ್ಯಕ್ಷನಾಗಿರುವ ನೇಪಾಳ ಭಾನುವಾರ ಸದಸ್ಯ ರಾಷ್ಟ್ರಗಳಿಗೆ ತಾಕೀತು ಮಾಡಿತು. ಸಾರ್ಕ್ ಶೃಂಗಸಭೆ ನಡೆಯಲು ಪೂರಕವಾದ ಪರಿಸರ ಸೃಷ್ಟಿಗೆ ಅಡಚಣೆಯಾಗುವಂತೆ ಒಂದು ರಾಷ್ಟ್ರ ನಡೆದುಕೊಳ್ಳುತ್ತಿದೆ ಎಂಬುದಾಗಿ ಪಾಕಿಸ್ತಾನದ ಬಗ್ಗೆ ಭಾರತ ಮತ್ತು ಇತರ ನಾಲ್ಕು ರಾಷ್ಟ್ರಗಳು ಆಪಾದಿಸಿ 19ನೇ ಸಾರ್ಕ್ ಶೃಂಗಸಮ್ಮೇಳನದಲ್ಲಿ ಪಾಲ್ಗೊಳ್ಳದಿರುವ ನಿರ್ಧಾರ ಕೈಗೊಂಡ ಕೆಲವು ದಿನಗಳ ಬಳಿಕ ಈ ಪ್ರತಿಕ್ರಿಯೆ ನೀಡಿದ ನೇಪಾಳ, ಅರ್ಥಪೂರ್ಣವಾದ ಪ್ರಾದೇಶಕ ಸಹಕಾರಕ್ಕೆ ಶಾಂತಿ ಮತ್ತು ಸ್ಥಿರತೆಯ ಪರಿಸರ ಅತ್ಯಂತ ಅಗತ್ಯ’ ಎಂದು ಹೇಳಿತು. ಭಾರತ ಮತ್ತು ಪಾಕಿಸ್ತಾನದ ನಡುವಣ ಬಿಕ್ಕಟ್ಟು ತೀವ್ರಗೊಂಡ ಬಳಿಕ ನೀಡಿರುವ ತನ್ನ ಮೂರನೇ ಹೇಳಿಕೆಯಲ್ಲಿ ನೇಪಾಳ, ಸಾರ್ಕ್ ಶೃಂಗ ಸಮ್ಮೇಳನ ನಡೆಯಲು ಪೂರಕವಾದ ಪರಿಸರ ಸೃಷ್ಟಿಸುವಂತೆ ಸದಸ್ಯ ರಾಷ್ಟ್ರಗಳನ್ನು ಕೋರಿತು. ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ಸೆಪ್ಟೆಂಬರ್ 18ರಂದು ಪಾಕ್ ಪ್ರಚೋದಿತ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಭಾರತ ಇಸ್ಲಾಮಾಬಾದಿನಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗ ಸಮ್ಮೇಳನವನ್ನು ಬಹಿಷ್ಕರಿಸಲು ನಿರ್ಧರಿಸಿತ್ತು. ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಭೂತಾನ್ ಮತ್ತು ಶ್ರೀಲಂಕಾ ಬಳಿಕ ಭಾರತದ ಹಾದಿಯನ್ನೇ ತುಳಿದಿದ್ದವು.
2016: ಬೆಂಗಳೂರು: ಪ್ರಕಾಶ್ ರೈ ಅವರ ಇದೊಳ್ಳೆ ರಾಮಾಯಣ ಚಿತ್ರ ತೆರೆಮೇಲೆ ಬರಲು ಸರ್ವಸನ್ನದ್ಧವಾಗಿದೆ. ಹೆಸರಿನಿಂದಲೇ ಕುತೂಹಲ ಕೆರಳಿಸಿರುವ ಈ ಚಿತ್ರದಲ್ಲಿ ಐವರು ರಾಷ್ಟ್ರಪ್ರಶಸ್ತಿ ವಿಜೇತರಿರುವುದು ವಿಶೇಷ. ನಟ, ನಿದೇರ್ಶಕ ಪ್ರಕಾಶ್ ರೈ, ನಟಿ ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳೆಯರಾಜ, ಸಂಕಲನಕಾರ ಶ್ರೀಕರ್ ಪ್ರಸಾದ ಹಾಗೂ ಕಲಾ ನಿರ್ದೇಶಕ ಶಶಿಧರ್ ಅಡಪ ರಾಷ್ಟ್ರ ಪ್ರಶಸ್ತಿ ವಿಜೇತರು. ಈ ಪಂಚ ತಾರೆಗಳ ಪ್ರಯತ್ನದ ಫಲವೇ ಇದೊಳ್ಳೆ ರಾಮಾಯಣ. ಈ ಕುರಿತು ಪ್ರಕಾಶ್ ರೈ ಪ್ರತಿಕ್ರಿಯಿಸಿ, ಈ ಚಿತ್ರದಲ್ಲಿ ಹಲವು ರಾಷ್ಟ್ರಪ್ರಶಸ್ತಿ ವಿಜೇತರು ಕಾರ್ಯನಿರ್ವಹಿಸಿರುವದು ಸಂತಸದ ಸಂಗತಿ. ಇದು ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ. ಇಳೆಯರಾಜ ಅವರ ಸಂಗೀತ ಕೇಳುತ್ತಿದ್ದರೆ ನಮ್ಮಲ್ಲಿನ ಭಾವನೆ ಹೊರಬರುತ್ತದೆ. ಅದೇ ರೀತಿ ಉಳಿದ ಕಲಾವಿದರು ತಮ್ಮತನವನ್ನು ಕಾಯ್ದುಕೊಂಡಿದ್ದಾರೆ ಎಂದು ತಿಳಿಸಿದರು.
2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿ ಸೇನಾ ನೆಲೆ ಮೇಲಿನ ದಾಳಿಗೆ ಪ್ರತೀಕಾರವಾಗಿ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ನಡೆಸಲಾಗಿರುವ ಸೀಮಿತ ದಾಳಿಯ ಸಾಕ್ಷ್ಯ ಚಿತ್ರ, ವಿಡಿಯೋಗಳಿಗಾಗಿ ಕಾದು ನೋಡಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಲ್ಲಿ ಹೇಳಿದರು. ಭಾರತೀಯ ಯೋಧರು ತಮ್ಮ ಅಪ್ರತಿಮ ಶೌರ್ಯವನ್ನು ಇಡಿ ಜಗತ್ತಿಗೆ ಪ್ರದರ್ಶಿಸಿದ್ದಾರೆ ಮತ್ತು ರಾಷ್ಟ್ರ ಹೆಮ್ಮೆ ಪಡುವ ರೀತಿಯಲ್ಲಿ ಈ ದಾಳಿಗಳನ್ನು ನಡೆಸಿದ್ದಾರೆ. ಇಡೀ ಭಾರತ ಮಾತ್ರವಲ್ಲ, ಸಮಸ್ತ ವಿಶ್ವಕ್ಕೆ ಈ ಸೀಮಿತ ದಾಳಿ ಬಗ್ಗೆ ಗೊತ್ತಿದೆ. ನಮ್ಮ ಸೈನಿಕರು ಈ ಕಾರ್ಯಾಚರಣೆ ನಡೆಸಿದ ವಿಧಾನವು ಭಾರತವು ಹೆಮ್ಮೆ ಪಡುವಂತೆ ಮಾಡಿದೆ ಎಂದು ಗೃಹ ಸಚಿವರು ನುಡಿದರು. ಕಾರ್ಯಾಚರಣೆಗೆ ಸಂಬಂಧಿಸಿದ ಯಾವುದೇ ಫೊಟೋ, ವಿಡಿಯೋವನ್ನು ಭಾರತ ಬಹಿರಂಗಗೊಳಿಸಿಲ್ಲವಾದ್ದರಿಂದ, ಪಾಕಿಸ್ತಾನ ಕಾರ್ಯಾಚರಣೆಯ ಬಗೆಗೇ ಶಂಕೆ ವ್ಯಕ್ತ ಪಡಿಸುತ್ತಿದೆಯಲ್ಲ ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ‘ಕಾದು ನೋಡಿ’ ಎಂದು ಗೃಹ ಸಚಿವರು ಉತ್ತರಿಸಿದರು. ಕಾರ್ಯಾಚರಣೆ ಕಾಲದಲ್ಲಿ ಭಾರತೀಯ ಯೋಧರು ಸತ್ತಿದ್ದಾರೆ ಎಂಬ ಪಾಕ್ ಮಾಧ್ಯಮ ವರದಿಗಳನ್ನು ಭಾರತೀಯ ಸೇನೆ ತಳ್ಳಿ ಹಾಕಿತ್ತು.
2016: ನವದೆಹಲಿ: ಪಾಕಿಸ್ತಾನಕ್ಕೆ ಸೇರಿದ ದೋಣಿಯೊಂದು ಗುಜರಾತ್ನ ಪೋರ್ಬಂದರ್ನಲ್ಲಿ ಕಾಣಿಸಿಕೊಂಡಿತು. ಕರಾವಳಿ ಕಾವಲು ಪಡೆಯ ಸಮುದ್ರ ಪಾವಕ್ ನೌಕೆಯು ದೋಣಿಯನ್ನು ಜಪ್ತಿ ಮಾಡಿ, ಅದರಲ್ಲಿ ಇದ್ದ ಒಂಭತ್ತು ಜನರನ್ನು ವಶಕ್ಕೆ ಪಡೆದುಕೊಂಡಿತು. ಬೆಳಿಗ್ಗೆ ಅಂತಾರಾಷ್ಟ್ರೀಯ ಗಡಿದಾಟಿದ ದೋಣಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು ತನಿಖೆ ಮುಂದುವರೆಸಿದರು. ಗಡಿಯಲ್ಲಿ ನಡೆದ ಉರಿ ದಾಳಿ ಹಾಗೂ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನಡೆಸಿದ ಸೀಮಿತ ದಾಳಿಯಿಂದ ಗಡಿ ಪ್ರದೇಶದಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಸಚಿವರಾದ ಮನೋಹರ ಪರಿಕ್ಕರ್ ಗಡಿಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
2016: ಭೋಪಾಲ್ (ಮಧ್ಯ ಪ್ರದೇಶ): ‘ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಬಸ್ಸೊಂದು ನದಿಗೆ ಬಿದ್ದ ಪರಿಣಾಮವಾಗಿ ಕನಿಷ್ಠ 9 ಮಂದಿ ಪ್ರಯಾಣಿಕರು ಸಾವನ್ನಪ್ಪಿ ಇತರ ಹಲವರು ಗಾಯಗೊಂಡರು. ರಕ್ಷಣಾ ಕಾರ್ಯಾಚರಣೆ ಜಾರಿಯಲ್ಲಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚುವ ಭೀತಿ ಇದೆ ಎಂದು ವರದಿಗಳು ತಿಳಿಸಿದವು.
2016: ನವದೆಹಲಿ: ಭಾರತವು ಗಡಿದಾಟಿ ಬಂದು ಪಾಕಿಸ್ತಾನದಲ್ಲಿ ಸೀಮಿತ ದಾಳಿ ನಡೆಸಿಯೇ ಇಲ್ಲ ಎಂದು ಸಾಬೀತು ಪಡಿಸಲು ಶತಾಯ ಗತಾಯ ಯತ್ನಿಸುತ್ತಿರುವ ಪಾಕಿಸ್ತಾನ ಇದಕ್ಕಾಗಿ ಸುಮಾರು 40 ವಿದೇಶೀ ಹಾಗೂ ಸ್ಥಳೀಯ ಪತ್ರಕರ್ತರನ್ನು ಹಿಂದಿನ ದಿನ ವಿಮಾನದ ಮೂಲಕ ಸುತ್ತಾಡಿಸಿ ಗಡಿ ನಿಯಂತ್ರಣ ರೇಖೆಗಳನ್ನು ತೋರಿಸಿತು ಎಂದು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ಈದಿನ ವರದಿ ಮಾಡಿದವು. ಪತ್ರಕರ್ತರನ್ನು ವಿಮಾನದ ಮೂಲಕ ಕರೆದೊಯ್ದ ಪಾಕಿಸ್ತಾನದ ಕ್ರಮವನ್ನು ಫ್ರೆಂಚ್ ಸುದ್ದಿ ಸಂಸ್ಥೆ ಏಜಿನ್ಸ್ ಫ್ರಾನ್ಸ್ ಪ್ರೆಸ್ (ಎಎಫ್ಪಿ) ‘ಅತ್ಯಂತ ಅಪರೂಪದ ಕ್ರಮ’ ಎಂದು ಬಣ್ಣಿಸಿತು. ‘ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಗಡಿ ನಿಯಂತ್ರಣ ರೇಖೆಗೆ ಕರೆದೊಯ್ದು ತೋರಿಸುವ ಅತಿ ಅಪರೂಪದ ಕ್ರಮವನ್ನು ಕೈಗೊಳ್ಳುವ ಮೂಲಕ ಭಾರತದ ಪ್ರತಿಪಾದನೆಯಂತೆ ಸೀಮಿತ ದಾಳಿ ನಡೆದುದಕ್ಕೆ ಯಾವ ಕುರುಹೂ ಇಲ’ ಎಂದು ಜಗತ್ತಿಗೆ ತೋರಿಸಿಕೊಡುವ ಯತ್ನವನ್ನು ಪಾಕಿಸ್ತಾನ ಮಾಡಿದೆ ಎಂದು ಎಎಫ್ಪಿ ತಿಳಿಸಿತು. ಭಾರತದ ಪ್ರತಿಪಾದನೆ ಅಪ್ಪಟ ಸುಳ್ಳು ಎಂದು ಪಾಕಿಸ್ತಾನಿ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಸಿಮ ಬಜ್ವಾ ಹೇಳಿರುವುದಾಗಿ ಡಾನ್ ಮತ್ತು ನ್ಯೂಸ್ ಇಂಟರ್ನ್ಯಾಷನಲ್ ವರದಿ ತಿಳಿಸಿತು.
2016: ನವದೆಹಲಿ: ಭಾರತವು ಎಂದೂ ಇನ್ನೊಂದು ರಾಷ್ಟ್ರದ ಮೇಲೆ ದಾಳಿ ನಡೆಸಲಿಲ್ಲ, ಬೇರೆ ನೆಲಕ್ಕಾಗಿ ದುರಾಸೆ ಪಡಲಿಲ್ಲ, ಅಲ್ಲಿ ಆಳ್ವಿಕೆ ನಡೆಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಇಲ್ಲಿ ಹೇಳಿದರು. ಉರಿ ದಾಳಿ ಹಾಗೂ ಪ್ರತೀಕಾರವಾಗಿ ಭಾರತವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೀಮಿತ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ವೈಷಮ್ಯ ಇನ್ನಷ್ಟು ಹೆಚ್ಚಬಹುದೆಂಬ ಆತಂಕಗಳ ಮಧ್ಯೆ ಪ್ರವಾಸೀ ಭಾರತೀಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಈ ಮಾತುಗಳನ್ನು ಹೇಳಿದರು.
ಅನಿವಾಸಿ ಭಾರತೀಯರು ಮತ್ತು ಭಾರತೀಯ ಮೂಲದ ಜನರ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ಈ ರಾಷ್ಟ್ರಕ್ಕೆ ಎಂದೂ ನೆಲದ ಹಸಿವು ಇರಲಿಲ್ಲ. ನಾವು ಎಂದೂ ಬೇರೆ ರಾಷ್ಟ್ರಗಳ ಮೇಲೆ ದಾಳಿ ನಡೆಸಲಿಲ್ಲ, ಬದಲು ಸಹಸ್ರಾರು ವರ್ಷಗಳಿಂದ ಇತರಿಗಾಗಿ ಭಾರತ ಬದುಕಿದೆ. ಎರಡು ವಿಶ್ವ ಸಮರಗಳ ಕಾಲದಲ್ಲಿ 1.5 ಲಕ್ಷಕ್ಕೂ ಹೆಚ್ಚು ಭಾರತೀಯರು ಹುತಾತ್ಮರಾದರು. ದುರದೃಷ್ಟವೆಂದರೆ ಇದನ್ನು ಜಗತ್ತಿಗೆ ಪ್ರಭಾವಿಯಾಗಿ ತಿಳಿ ಹೇಳುವಲ್ಲಿ ನಾವು ಯಶಸ್ವಿಯಾಗಿಲ್ಲ ’ ಎಂದು ನುಡಿದರು. ಮಹಾತ್ಮ ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಸ್ಥಾಪಿಸಲಾಗಿರುವ ಪ್ರವಾಸೀ ಭಾರತೀಯ ಕೇಂದ್ರವು ವಿದೇಶದಲ್ಲಿನ ಭಾರತೀಯ ಸಮುದಾಯಕ್ಕೆ ಸವಲತ್ತುಗಳನ್ನು ಒದಗಿಸಲಿದೆ.
2016: ಮುಜಫರಾಬಾದ್ (ಪಿಒಕೆ): ಪಾಕ್ ಆಕ್ರಮಿತ ಕಾಶ್ಮೀರದ ಕೋಟ್ಲಿ ಪ್ರದೇಶದ ಜನರು ಪಾಕ್ ಸೇನೆ ಮತ್ತು ಐಎಸ್ಐ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಪಾಕಿಸ್ತಾನ ಸೇನೆ ನಡೆಸುತ್ತಿರುವ ನಕಲಿ ಎನ್ಕೌಂಟರ್ಗಳು, ಕಾನೂನು ಬಾಹಿರ ಕೊಲೆಗಳು ಮತ್ತು ಆಜಾದಿ ಪರ ಹೋರಾಟಗಾರರ ವಿರುದ್ಧದ ದೌರ್ಜನ್ಯವನ್ನು ಪ್ರತಿಭಟನಾಕಾರರು ಖಂಡಿಸಿದರು. ಕಾಶ್ಮೀರಿ ರಾಷ್ಟ್ರವಾದಿ ನಾಯಕ ಮತ್ತು ಆಲ್ ಪಾರ್ಟೀಸ್ ನ್ಯಾಷನಲ್ ಅಲಯನ್ಸ್ನ ಅಧ್ಯಕ್ಷ ಹಾಗೂ ಜಮ್ಮು ಕಾಶ್ಮೀರ ನ್ಯಾಷನಲ್ ಲಿಬರೇಷನ್ ಕಾನ್ಸರೆನ್ಸ್ನ ಅಧ್ಯಕ್ಷ ಆರಿಫ್ ಶಾಹಿದ್ ಕೊಲೆಯ ತನಿಖೆಯನ್ನು ಸ್ವತಂತ್ರ ಆಯೋಗಕ್ಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 2013ರ ಮೇ 14 ರಂದು ರಾವಲ್ಪಿಂಡಿಯಲ್ಲಿ ಆರಿಫ್ ಶಾಹಿದ್ ಹತ್ಯ ನಡೆದಿತ್ತು. ಈ ಹತ್ಯೆಯ ಹಿಂದೆ ಐಎಸ್ಐ ಕೈವಾಡವಿದೆ. ಕಳೆದ 2 ವರ್ಷಗಳಲ್ಲಿ ಆಜಾದಿ ಪರ ಹೋರಾಟಗಾರರ ವಿರುದ್ಧ ಐಎಸ್ಐ ದೌರ್ಜನ್ಯ ಎಸಗುತ್ತಿದ್ದು, ಸುಮಾರು 100 ಕ್ಕೂ ಹೆಚ್ಚು ಹೋರಾಟಗಾರರನ್ನು ಹತ್ಯೆ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದಕ್ಕೂ ಮುನ್ನ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚುನಾವಣೆಯನ್ನು ವಿರೋಧಿಸಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅಮೆರಿಕ ಸಹ ಕಳವಳ ವ್ಯಕ್ತಪಡಿಸಿತ್ತು ಮತ್ತು ಪಿಒಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನಕ್ಕೆ ಮನವಿ ಮಾಡಿತ್ತು.
1869: ಇಂದು ಅಂತಾರಾಷ್ಟ್ರೀಯ ಅಹಿಂಸಾ ದಿನ. ಮಹಾತ್ಮ ಗಾಂಧಿ ಜನ್ಮದಿನ. ಭಾರತದ `ರಾಷ್ಟ್ರಪಿತ' ಗೌರವಕ್ಕೆ ಪಾತ್ರರಾದ ಮೋಹನದಾಸ ಕರಮಚಂದ್ ಗಾಂಧಿ (1869-1948) ಅವರು ಈದಿನ ಗುಜರಾತಿನ ಪೋರ್ ಬಂದರಿನಲ್ಲಿ ಜನಿಸಿದರು. ಗಾಂಧೀಜಿ ಅವರು ಪ್ರತಿಪಾದಿಸಿದ ಶಾಂತಿ ಮತ್ತು ಭ್ರಾತೃತ್ವದ ತತ್ವಕ್ಕೆ ಗೌರವ ನೀಡುವ ಸಲುವಾಗಿ 191 ಸದಸ್ಯ ಬಲದ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು ಅಕ್ಟೋಬರ್ 2ನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಆಚರಿಸುವ ನಿರ್ಣಯವನ್ನು 2007ರ ಜೂನ್ 17ರಂದು ಸರ್ವಾನುನುಮತದಿಂದ ಅಂಗೀಕರಿಸಿತು. ಭಾರತದ ಇನ್ನೊಬ್ಬ ಮುತ್ಸದ್ಧಿ ಲಾಲ್ ಬಹಾದುರ್ ಶಾಸ್ತ್ರಿ (1904-1966) ಅವರು ಹುಟ್ಟಿದ್ದು ಕೂಡಾ ಇದೇ ದಿನ. ಜವಾಹರಲಾಲ್ ನೆಹರೂ ಬಳಿಕ 1964ರಿಂದ 1966ರವರೆಗೆ ಭಾರತದ ಪ್ರಧಾನಿಯಾಗಿದ್ದ ಶಾಸ್ತ್ರಿ, 1965ರ ಭಾರತ ಪಾಕ್ ಸಮರಕಾಲದಲ್ಲಿ ರಾಷ್ಟ್ರಕ್ಕೆ `ಜೈ ಜವಾನ್ ಜೈ ಕಿಸಾನ್' ಘೋಷಣೆ ನೀಡಿದ ಧುರೀಣ.
2014: ನವದೆಹಲಿ: ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ ಕೈಯಲ್ಲಿ ಪೊರಕೆ ಹಿಡಿದುಕೊಂಡು ಸ್ವತಃ ಗುಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 'ಸ್ವಚ್ಛ ಭಾರತ' ಅಭಿಯಾನಕ್ಕೆ ಚಾಲನೆ ನೀಡಿದರು. 2019ರಲ್ಲಿ ರಾಷ್ಟ್ರಪಿತನ 150ನೇ ಜನ್ಮದಿನ ಆಚರಿಸುವ ವೇಳೆಗೆ ಮಹಾತ್ಮಾ ಗಾಂಧೀಜಿಯವರ ಕಸಮುಕ್ತ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವ ಸಾಮೂಹಿಕ ಚಳವಳಿಯಾಗಿ 'ಸ್ವಚ್ಛ ಭಾರತ ಅಭಿಯಾನ' ರೂಪುಗೊಂಡಿದೆ. ಬಳಿಕ ಪ್ರಧಾನಿಯವರು 30 ಲಕ್ಷ ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರಿಂದ ಸ್ವಚ್ಛ ಭಾರತದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಮೊದಲ ಬಾರಿ ವಾರಾಣಸಿಗೆ ಭೇಟಿ ನೀಡಿದ್ದ ವೇಳೆ ಅವರು 'ಸ್ವಚ್ಛ ಭಾರತ'ದ ಕನಸು ಬಿತ್ತಿದ್ದರು. ಸ್ವಾತಂತ್ರ್ಯದಿನಾಚರಣೆ ಭಾಷಣದ ವೇಳೆ ಸ್ವಚ್ಛ ಭಾರತಕ್ಕಾಗಿ ಅಭಿಯಾನ ಮಾಡುವುದಾಗಿ ಘೋಷಿಸಿದ್ದರು.. ಪರಿಸರದ ಸ್ವಚ್ಛತೆಗಾಗಿ ವಾರಕ್ಕೆ 2 ಗಂಟೆಯಂತೆ ವರ್ಷಕ್ಕೆ ಕನಿಷ್ಠ 100 ಗಂಟೆ ಮೀಸಲಿಡಬೇಕು. ರಸ್ತೆ ಬದಿ ತ್ಯಾಜ್ಯ ಚೆಲ್ಲುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರನ್ನು ವಿನಂತಿಸಿತು. ದೇಶಾದ್ಯಂತ 31 ಲಕ್ಷಕ್ಕೂ ಅಧಿಕ ಕೇಂದ್ರ ಸರ್ಕಾರಿ ನೌಕರರು ಸ್ವಚ್ಛತೆಯ ಶಪಥ ಸ್ವೀಕರಿಸಿದರು. ರಜಾ ದಿನವಾದರೂ ಕಚೇರಿಗೆ ಹಾಜರಾದ ಸರ್ಕಾರಿ ನೌಕರರು, ಕಚೇರಿ ಹಾಗೂ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಡುವುದಾಗಿ ಪ್ರಮಾಣವಚನ ಸ್ವೀಕರಿಸಿದರು. ಕೇವಲ ರಸ್ತೆ, ಕಟ್ಟಡಗಳಲ್ಲಿನ ಕಸ ತೆಗೆಯುವುದಷ್ಟೇ ಈ ಅಭಿಯಾನದ ಉದ್ದೇಶವಲ್ಲ. ನದಿ, ಸರೋವರ, ಕೆರೆ... ಮತ್ತಿತರ ಜಲಾಶಯಗಳನ್ನು ಸ್ವಚ್ಛಗೊಳಿಸುವುದೂ ಪ್ರಮುಖ ಆದ್ಯತೆ. 2019ರ ವೇಳೆಗಿನ ಗುರಿ 1.04 ಕೋಟಿ ಮನೆಗಳಲ್ಲಿ ಶೌಚಾಲಯ 2.6 ಲಕ್ಷ ಸಾರ್ವಜನಿಕ ಶೌಚಾಲಯ ನಿರ್ಮಾಣ. 2.5 ಲಕ್ಷ ಸಮುದಾಯ ಶೌಚಾಲಯ ನಿರ್ಮಾಣ. 1,96,009 ಕೋಟಿ ರೂಪಾಯಿ ಅಂದಾಜು ವೆಚ್ಚ 1,34,000 ಕೋಟಿ ರೂ. ಗ್ರಾಮೀಣ ಅಭಿವೃದ್ಧಿ ಸಚಿವಾಲಯದಿಂದ 62,009 ಕೋಟಿ ರೂಪಾಯಿ ನಗರಾಭಿವೃದ್ಧಿ ಸಚಿವಾಲಯದಿಂದ ಈಗಿನ ಸ್ಥಿತಿ 1.31 ಕೋಟಿ ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಶೌಚಾಲಯವಿಲ್ಲ (2011ರ ಗಣತಿ)
2014: ನವದೆಹಲಿ: ಕೊಳಕು ಸ್ಥಳಗಳ ಚಿತ್ರಗಳನ್ನು ಮತ್ತು ವಿಡಿಯೋಗಳನ್ನು ಮತ್ತು ಅವುಗಳು ಹೇಗೆ ಸ್ವಚ್ಛಗೊಂಡವು ಎಂಬುದನ್ನು ತೋರಿಸುವ ಚಿತ್ರ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜನತೆಯನ್ನು ಆಗ್ರಹಿಸಿದರು. ದೆಹಲಿಯ ವಾಲ್ಮೀಕಿ ಬಸ್ತಿಯಲ್ಲಿ 'ಸ್ವಚ್ಛ ಭಾರತ ಅಭಿಯಾನ'ಕ್ಕೆ ಚಾಲನೆ ನೀಡಿದ ಬಳಿಕ ಬೃಹತ್ ಜನಸ್ತೋಮವನ್ನು ಉದ್ಧೇಶಿಸಿ ಮಾತನಾಡಿದ ಮೋದಿ ಮೊತ್ತ ಮೊದಲಿಗೇ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 'ರಾಷ್ಟ್ರವ್ಯಾಪಿ ಅಭಿಯಾನವನ್ನು ಇನ್ನಷ್ಟು ವ್ಯಾಪಿಸುವಂತೆ ಮಾಡಲು 'ಮೈಗವ್' (MyGov) ಮೊಬೈಲ್ ಅಪ್ಲಿಕೇಷನ್, ಫೇಸ್ ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣ ಮಾಧ್ಯಮಗಳನ್ನು ಬಳಸಿಕೊಳ್ಳುವಂತೆ ಅವರು ಜನತೆಗೆ ಕರೆ ನೀಡಿದರು. 'ಸ್ವಚ್ಛ ಭಾರತ' ಅಭಿಯಾನದ ಯಶಸ್ಸು ನನ್ನ ಸರ್ಕಾರದ್ದು ಎಂದು ನಾನು ಪ್ರತಿಪಾದಿಸುವುದಿಲ್ಲ. ಎಲ್ಲ ಸರ್ಕಾರಗಳೂ ತಮ್ಮ ತಮ್ಮ ಕೊಡುಗೆ ಕೊಟ್ಟಿವೆ ಅವರೆಲ್ಲರನ್ನೂ ಅಭಿನಂದಿಸುವೆ' ಎಂದು ಅವರು ನುಡಿದರು. 'ಈ ಕಾರ್ಯಕ್ರಮ ಯಶಸ್ವಿಯಾಗಬೇಕೆಂಬ ಆಶಯದೊಂದಿಗೆ ನಾನು ವಿವಿಧ ಪಕ್ಷಗಳು, ವಿವಿಧ ಸಂಘಟನೆಗಳು, ಚಿತ್ರನಟರು, ಆಧ್ಯಾತ್ಮಿಕ ಕ್ಷೇತ್ರದ ಧುರೀಣರು ಸೇರಿದಂತೆ ಎಲ್ಲ ಕ್ಷೇತ್ರಗಳ ಪ್ರಮುಖರಿಗೆ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ವಿನಂತಿ ಮಾಡಿದ್ದೇನೆ. ಈ ಕಾರ್ಯಕ್ರಮವನ್ನು ಯಾರೂ ರಾಜಕೀಯಗೊಳಿಸಬಾರದು' ಎಂದು ಅವರು ಕೋರಿದರು. 'ಪ್ರತಿದಿನ ನಾವು 2 ಗಂಟೆಗಳನ್ನು ಭಾರತವನ್ನು ಸ್ವಚ್ಛಗೊಳಿಸುವುದಕ್ಕಾಗಿ ಮೀಸಲಿಡೋಣ. ಬಾಪೂಜಿ ನಮಗೆ ಕ್ವಿಟ್ ಇಂಡಿಯಾ ಮತ್ತು ಕ್ಲೀನ್ ಇಂಡಿಯಾ ಎಂಬ ಎರಡು ಘೊಷಣೆಗಳನ್ನು ನೀಡಿದರು. ಕ್ಲೀನ್ ಇಂಡಿಯಾ ಕನಸು ಇನ್ನೂ ನನಸಾಗಿಲ್ಲ.'ಮಹಾತ್ಮಾ ಗಾಂಧಿಯವರು ಪ್ರತಿಯೊಂದು ಗ್ರಾಮವನ್ನೂ ಸ್ವಚ್ಛಗೊಳಿಸಲಿಲ್ಲ. ಆದರೆ ಪ್ರತಿಯೊಬ್ಬರಿಗೂ ಪ್ರೇರಣೆ ನೀಡಿದರು. ಈ ಕೆಲಸ ಮಾಡುವವರನ್ನು ನಾವು ಗುರುತಿಸಬೇಕು. ಇದು ರಾಜಕೀಯವಲ್ಲ. ದೇಶಪ್ರೇಮವೊಂದೇ ಇದರ ಹಿಂದಿನ ಪ್ರೇರಣೆ' ಎಂದು ನುಡಿದ ಪ್ರಧಾನಿ 'ಈ ಕಾರ್ಯದಲ್ಲಿ ನಾನು ಏಕಾಂಗಿಯಲ್ಲ, ನನೊಂದಿಗೆ 125 ಕೋಟಿ ಜನರಿದ್ದಾರೆ' ಎಂದು ಜನರ ಹಷೋದ್ಘಾರಗಳ ಮಧ್ಯೆ ನುಡಿದರು. 'ಗೋವಾ ರಾಜ್ಯಪಾಲರು, ಬಾಬಾ ರಾಮ್ೇವ್, ಶಶಿ ತರೂರ್, ಕಮಲಹಾಸನ್, ಸಲ್ಮಾನ್ ಖಾನ್, ಪ್ರಿಯಾಂಕಾ ಛೋಪ್ರಾ, ತೆಂಡೂಲ್ಕರ್, ಅನಿಲ್ ಅಂಬಾನಿ, ತಾರಕ್ ಮೆಹ್ತಾ ಮತ್ತಿತರರನ್ನೆಲ್ಲ ನಾನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಭಾರತಕ್ಕೆ ಸ್ವಚ್ಛಗೊಳಿಸುವುದಕ್ಕೇ 6500 ಕೋಟಿ ರೂಪಾಯಿ ಹೊರೆ ಬೀಳುತ್ತಿದೆ ಎಂದು ವಿಶ್ವ ಸ್ವಾಸ್ಥ್ಯಸಂಸ್ಥೆಯೇ ಹೇಳಿದೆ' ಎಂದು ಮೋದಿ ಹೇಳಿದರು. ಕ್ವಿಟ್ ಇಂಡಿಯಾ ಸಾಮೂಹಿಕ ಚಳವಳಿಯಾಗಿತ್ತು, ಕ್ಲೀನ್ ಇಂಡಿಯಾ ಕೂಡಾ ಸಾಮೂಹಿಕ ಚಳವಳಿಯಾಗಬೇಕು ಎಂದು ಹಾರೈಸಿದ ಪ್ರಧಾನಿ, ಕ್ಲೀನ್ ಇಂಡಿಯಾ ಚಳವಳಿಯು ನಮಗೆ ಕ್ವಿಟ್ ಇಂಡಿಯಾ ಚಳವಳಿಯಂತೆಯೇ ಹುಮ್ಮಸ್ಸು ನೀಡಬೇಕು ಎಂದರು. 'ನನ್ನನ್ನು ಅಥವಾ ನನ್ನ ಸರ್ಕಾರವನ್ನು ನಂಬಬೇಡಿ. ಮಹಾತ್ಮಾ ಗಾಂಧಿಯವರ ಸ್ವಚ್ಛ ಭಾರತದ ಕನಸನ್ನು ನಂಬಿ. ಗ್ರಾಮೀಣ ಭಾರತದ ಶೇಕಡಾ 60 ಮಂದಿ ಈಗಲೂ ಬಯಲಲ್ಲೇ ಶೌಚ ಮಾಡಬೇಕಾಗಿದೆ. ಮಹಾತ್ಮಾ ಗಾಂಧೀಜಿಯವರ ಜೊತೆಗೆ ನಿಮ್ಮ ಕೈಗಳನ್ನು ಮತ್ತು ತಲೆಗಳನ್ನು ಜೋಡಿಸುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ನಾನು ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ' ಎಂದು ಹೇಳಿದ ಮೋದಿ ಬಳಿಕ ಪ್ರಮಾಣ ವಚನವನ್ನು ಬೋಧಿಸಿದರು. ಚಿತ್ರ ನಟ ಸಲ್ಮಾನ್ ಖಾನ್ ವೇದಿಕೆಯಲ್ಲಿ ಪ್ರಧಾನಿ ಜೊತೆಗಿದ್ದರು. ವಾಲ್ಮೀಕಿ ಬಸ್ತಿಯಲ್ಲಿ ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಬಳಿಕ ವಾಕಥಾನ್ ಮೂಲಕ ಸಮಾರಂಭ ಸ್ಥಳಕ್ಕೆ ಅವರು ಆಗಮಿಸಿದರು. ಸ್ವಚ್ಛ ಭಾರತದ ಲಾಂಛನವನ್ನು ವಿನ್ಯಾಸ ಮಾಡಿದ ಘೊಷಣೆಯನ್ನು ಸೃಷ್ಟಿಸಿದ ಭಾಗ್ಯಶ್ರೀ ಸೇಥ್ ಅವರಿಗೆ ಪ್ರಧಾನಿ ಬಹುಮಾನ ನೀಡಿದರು. ಲಾಂಛನ ವಿನ್ಯಾಸ ಸ್ಪರ್ಧೆಯಲ್ಲಿ 1000 ಮಂದಿ ಮತ್ತು ಘೊಷಣೆ ರಚನೆ ಸ್ಪರ್ಧೆಯಲ್ಲಿ 5000 ಮಂದಿ ಪಾಲ್ಗೊಂಡಿದ್ದರು. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರೂ ಈ ಸಂದರ್ಭದಲ್ಲಿ ಮಾತನಾಡಿ ಸ್ವಚ್ಛತೆ ರಾಜಕೀಯ ಸ್ವಾತಂತ್ರ್ಯ್ಕತಲೂ ಮಹತ್ವದ್ದು ಎಂದು ಹೇಳಿದರು.
2014: ನವದೆಹಲಿ: ಆಮ್ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಹೃದಯ ಭಾಗದಲ್ಲಿ ಇರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿಯ ಸಣ್ಣ ವಸತಿ ಪ್ರದೇಶವೊಂದರ ಚರಂಡಿಯನ್ನು ಸ್ವಚ್ಛಗೊಳಿಸಲು ಕಸಗುಡಿಸುವವರಿಗೆ ನೆರವಾದರು. ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಅಭಿಯಾನವನ್ನು ಉದ್ಘಾಟಿಸಿದ ದಿನವನ್ನೇ ತಮ್ಮ ಈ ಕಾಯಕಕ್ಕೆ ಆರಿಸಿಕೊಂಡ ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿ ಕಡಿಮೆ ಆದಾಯದ ಪ್ರದೇಶ ಎಂದೇ ಪರಿಚಿತವಾಗಿರುವ ಬಿ.ಆರ್. ಕ್ಯಾಂಪಿನಲ್ಲಿ ಹಲವಾರು ಮಂದಿ ಕಾರ್ಮಿಕರ ಜೊತೆಗೂಡಿಕೊಂಡು ಚರಂಡಿ ಸ್ವಚ್ಛಗೊಳಿಸಿದರು. ಬಳಿಕ ಕಾಮಿಕರ ಜೊತೆಗೇ ಕೇಜ್ರಿವಾಲ್ ಚಹಾ ಸೇವಿಸಿದರು. ಬಿ.ಆರ್. ಕ್ಯಾಂಪ್ ದೆಹಲಿ ವಿಧಾನಸಭೆಯಲ್ಲಿ ಕೇಜ್ರಿವಾಲ್ ಅವರು ಗೆದ್ದಿರುವ ಕ್ಷೇತ್ರದ ವ್ಯಾಪ್ತಿಯಲ್ಲೇ ಇದೆ. ಎಎಪಿ ಕಾರ್ಯಕರ್ತರು ಪೊರಕೆಗಳನ್ನು ಹಿಡಿದುಕೊಂಡು ರಾಜಧಾನಿಯ ಹಲವಾರು ಭಾಗಗಳಲ್ಲಿ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛ ಭಾರತಕ್ಕೆ ತಮ್ಮ ಬದ್ಧತೆಯನ್ನು ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಸೇರದೆಯೇ ಪ್ರದರ್ಶಿಸಿದರು.
2014: ಪಣಜಿ: ಮಹದಾಯಿ ಜಲವಿವಾದ ಮಂಡಳಿಯ ಮುಂದೆ ರಾಜ್ಯದ ಹಿತಾಸಕ್ತಿ ಕಾಪಾಡುವ ಸಲುವಾಗಿ ಮಹದಾಯಿ ನದಿ ನೀರಿನ ಬಗ್ಗೆ ಅಧ್ಯಯನ ಮಾಡಲು ಸಂಸ್ಥೆಯೊಂದರ ನೇಮಕಾತಿಗೆ ಗೋವಾ ಸರ್ಕಾರ ಒಪ್ಪಿಗೆ ನೀಡಿತು. ಮಹದಾಯಿ ನದಿ ನೀರಿನ ಅಧ್ಯಯನ ಕಾರ್ಯವನ್ನು ಡಿಎಚ್ಐ (ಇಂಡಿಯಾ) ಜಲ ಮತ್ತು ಪರಿಸರ ಖಾಸಗಿ ಲಿಮಿಟೆಡ್ ಸಂಸ್ಥೆಗೆ ವಹಿಸಲಾಗಿದ್ದು ಇದಕ್ಕಾಗಿ 1.34 ಕೋಟಿ ರೂಪಾಯಿಗಳನ್ನು ನೀಡಿತು. ಡಿಎಚ್ಐ ಸಂಸ್ಥೆಯು ಮಹದಾಯಿ ನದಿಯ ಜೀವ ವೈವಿಧ್ಯ, ಸಸ್ಯಗಳು, ಪರಿಸರ ಬಗ್ಗೆ ಅಧ್ಯಯನ ಮಾಡಲಿದೆ. ಮಹಾದಾಯಿ ಮತ್ತು ಜುವಾರಿ ನದಿಗಳ ಹಿನ್ನೀರು ಪ್ರದೇಶಗಳ(ಸಮುದ್ರ ಸೇರುವ ಪ್ರದೇಶ)ಬಗೆಗೂ ಸಂಸ್ಥೆಯು ಸಮೀಕ್ಷೆ ನಡೆಸಲಿದೆ.
2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಪುರುಷರ ಸೂಪರ್ ಹೆವಿ (ಪ್ಲಸ್ 91ಕೆಜಿ) ಸೆಮಿ ಫೈನಲ್ನಲ್ಲಿ ಕಝುಕಸ್ಥಾನದ ಡೈಚ್ಕೊ ಅವರಿಂದ ಪರಾಭವಗೊಳ್ಳುವುದರೊಂದಿ ಭಾರತದ ಬಾಕ್ಸರ್ ಸತೀಶ ಕುಮಾರ್ ಅವರು ಕಂಚಿನ ಪದಕ್ಕೆ ತೃಪ್ತಿ ಪಡಬೇಕಾಯಿತು. ಒಲಿಂಪಿಕ್ ಪದಕವಿಜೇತ ಹಾಗೂ ವಿಶ್ವಚಾಂಪಿಯನ್ ಡೈಚ್ಕೊ ವಿರುದ್ಧ ತನ್ನ ಸಂಪೂರ್ಣ ಸಾಮರ್ಥ್ಯ ಬಳಸಿ ಸೆಣಸಿದರೂ, 25ರ ಹರೆಯದ ಸತೀಶ ಕುಮಾರ್ ಪರಾಭವ ಅನುಭವಿಸಬೇಕಾಯಿತು. ಏನಿದ್ದರೂ ಭಾರತದ ಪುರುಷ ಬಾಕ್ಸರ್ಗಳು ಖಾಲಿ ಕೈಯಲ್ಲಿ ವಾಪಸಾಗುವುದಿಲ್ಲ ಎಂಬುದನ್ನು ಸತೀಶ ಕುಮಾರ್ ಖಚಿತ ಪಡಿಸಿದರು. ಸತೀಶ ಕುಮಾರ್ ಅವರ ಕಂಚಿನ ಪದಕದೊಂದಿಗೆ ಭಾರತದ ಪದಕ 51ಕ್ಕೆ ಏರಿತು. ಇದರಲ್ಲಿ 7 ಚಿನ್ನ, 9 ಬೆಳ್ಳಿ ಮತ್ತು 35 ಕಂಚಿನ ಪದಕಗಳು ಸೇರಿವೆ.
2014: ಬೆಂಗಳೂರು: ಗಾಂಧೀಜಿ ಅನುಯಾಯಿಗಳು ಸ್ವಾರ್ಥಿಗಳಲ್ಲ. ಕಾರಣ ಗಾಂಧಿ ಹೆಸರಲ್ಲಿ ಜಾತಿ ವಿಷ ಬೀಜ ಬಿತ್ತಬೇಡಿ. ಅಹಿಂಸಾ ಹೋರಾಟ ಬಾಂಬ್ಗಿಂತಲೂ ಪ್ರಭಾವಶಾಲಿಯಾದುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.. ರಾಜ್ಯ ಸರ್ಕಾರ ಇದೇ ವರ್ಷ ಪ್ರದಾನ ಮಾಡುತ್ತಿರುವ ಪ್ರತಿಷ್ಠಿತ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಚೊಚ್ಚಲ ಗಾಂಧಿ ಸೇವಾ ಪ್ರಶಸ್ತಿಯನ್ನು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ಹೋರಾಟಗಾರ ಎಸ್.ಎನ್. ಸುಬ್ಬರಾವ್ ಅವರಿಗೆ ಸಿದ್ದರಾಮಯ್ಯ ಪ್ರದಾನ ಮಾಡಿದರು.
2014: ಟೋಕಿಯೊ: ಹಾಲಿ ಡೇವಿಸ್ ಕಪ್ ವಿಜೇತರಾದ ಲಿಯಾಂಡರ್ ಪೇಸ್-ರೋಹನ್ ಬೋಪಣ್ಣ ಜೋಡಿ ಜಪಾನ್ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಇವಾನ್ ಡೋಡಿಕ್- ಮರ್ಸಿಲಾ ಮಿಲೋ ಜೋಡಿ ವಿರುದ್ಧ ನೇರ ಸೆಟ್ಗಳಿಂದ ಸೋತು ಹೊರನಡೆದರು.ಈದಿನ ನಡೆದ ಪಂದ್ಯದಲ್ಲಿ ಭಾರತದ ಶ್ರೇಯಾಂಕ ರಹಿತ ಜೋಡಿ ೨ನೇ ಶ್ರೇಯಾಂಕದ ಕ್ರೊಷಿಯಾ-ಬ್ರೆಜಿಲ್ ಜೋಡಿ ವಿರುದ್ಧ ೫೧ ನಿಮಿಷಗಳ ಹೋರಾಟದಲ್ಲಿ ೩-೬, ೨-೬ ಅಂತರದಿಂದ ಪರಾಭವಗೊಂಡಿತು.
2014: ಇಂಚೋನ್: ಭಾರತದ ಇಂದ್ರಜೀತ್ ಸಿಂಗ್ ೧೭ನೇ ಏಷ್ಯನ್ ಕ್ರೀಡಾಕೂಟದ ಶಾಟ್ ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡರು. ೧೯.೬೩ ಮೀಟರ್ ದೂರಕ್ಕೆ ಎಸೆದ ಇಂದ್ರಜೀತ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸೌದಿ ಅರೇಬಿಯಾದ ಸುಲ್ತಾನ್ ಅಬ್ದುಲ್ವಾಜೀದ್ ಅಲ್ಹೆಬ್ಶಿ ೧೯.೯೯ ಮೀಟರ್ ದೂರಕ್ಕೆಸೆದು ಸ್ವರ್ಣ ಗೆದ್ದುಕೊಂಡರೆ, ಚೀನಾ ತೈಪೆಯ ಛಾಂಗ್ ಮಿಂಗ್ ಹುವಾಂಗ್ ೧೯.೯೭ ಮೀಟರ್ ದೂರಕ್ಕೆಸೆದು ಬೆಳ್ಳಿ ತಮ್ಮದಾಗಿಸಿಕೊಂಡರು.
2014: ಇಂಚೋನ್: ಕರ್ನಾಟಕದ ಪೂವಮ್ಮ ಒಳಗೊಂಡ ಭಾರತ ರಿಲೆ ತಂಡಕ್ಕೆ ಚಿನ್ನ ಇಂಚೋನ್: ಭಾರತ ಹಾಕಿ ತಂಡ ಏಷ್ಯನ್ ಗೇಮ್ಸ್ನ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಪೆನಾಲ್ಟಿ ಶೂಟ್‌ಔಟ್ನಲ್ಲಿ ೪-೨ ಗೋಲುಗಳ ಅಂತರದಿಂದ ಮಣಿಸಿ ಸ್ವರ್ಣ ಪದಕವನ್ನು ತನ್ನದಾಗಿಸಿಕೊಂಡಿತು. ಈ ಮೂಲಕ ಭಾರತ ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಡುವ ಅರ್ಹತೆ ಪಡೆದುಕೊಂಡಿತು. ನಿಗದಿತ ಸಮಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡವು. ನಂತರ ನಡೆದ ಪೆನಾಲ್ಟಿ ಶೂಟ್‌ಔಟ್ನಲ್ಲಿ ಭಾರತ ೪ ಗೋಲುಗಳನ್ನು ಯಶಸ್ವಿಯಾಗಿ ಗಳಿಸಿ ಗೆಲುವಿನ ನಗೆ ಬೀರಿತು. ಪೆನಾಲ್ಟಿಯಲ್ಲಿ ಗುರ್ವಿಂದರ್ ಮೊದಲ ಗೋಲುಗಳಿಸಿದರೆ, ರೂಪಿಂದರ್ ಪಾಲ್ ೨ನೇ ಗೋಲು ಗಳಿಸಿ ೨-೦ ಮುನ್ನಡೆ ತಂದುಕೊಟ್ಟರು. ೩ನೇ ಅವಕಾಶದಲ್ಲಿ ಭಾರತಕ್ಕೆ ಗೋಲು ಸಿಗಲಿಲ್ಲವಾದರೂ ೪ ಮತ್ತು ೫ನೇ ಅವಕಾಶದಲ್ಲಿ ಇನ್ನರಡು ಗೋಲುಗಳಿಸುವುದರೊಂದಿಗೆ ೧೯೯೮ರ ಬಳಿಕ ಇನ್ನೊಮ್ಮೆ ಸ್ವರ್ಣ ಸಂಭ್ರಮ ಅನುಭವಿಸಿತು. ಭಾರತ ಬ್ಯಾಂಕಾಕ್ ಏಷ್ಯಾಡ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಗೆಲುವು ಸಾಧಿಸಿ ಚಿನ್ನ ತನ್ನದಾಗಿಸಿಕೊಂಡಿತ್ತು. ಆ ಗೇಮ್ಸ್ನಲ್ಲಿ ಪಾಕಿಸ್ತಾನ ಕಂಚಿಗೆ ತೃಪ್ತಿಪಟ್ಟುಕೊಂಡಿತ್ತು. * ರಿಲೆಯಲ್ಲಿ ಬಂಗಾರ: ಅಚ್ಚರಿ ಎನ್ನುವಂತೆ ಭಾರತದ ಮಹಿಳಾ ರಿಲೇ ತಂಡ ೪ಗಿ೪೦೦ ವಿಭಾಗದಲ್ಲಿ ಚಿನ್ನ ಸಂಪಾದಿಸಿತು. ಪ್ರಿಯಾಂಕ ಪನ್ವಾರ್, ಟಿಂಟು ಲೂಕಾ, ಮನ್ದೀಪ್ ಕೌರ್ ಮತ್ತು ಕರ್ನಾಟಕದ ಎಂ. ಪೂವಮ್ಮ ಅವರನ್ನೊಳಗೊಂಡ ತಂಡ ಹೊಸ ಕೂಟ ದಾಖಲೆ ನಿರ್ವಿ?ಸುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದೆ. ಭಾರತ ೩ನಿಮಿಷ ೨೮.೬೮ ಸೆಕೆಂಡ್ಗಳಲ್ಲಿ ಗುರಿ ತಲುಪಿತು. ಜಪಾನ್ ಬೆಳ್ಳಿ ಪದಕ ಸಂಪಾದಿಸಿದರೆ, ಚೀನಾ ಕಂಚಿನ ಪದಕ ಗೆದ್ದುಕೊಂಡಿತು.
2014: ಇಂಚೋನ್:: ಭಾರತದ ಬಾಕ್ಸರ್ ವಿಕಾಸ್ ಕೃಷ್ಣನ್ ಕಂಚಿನ ಪದಕ ಖಚಿತಪಡಿಸಿಕೊಂಡರು. ೭೫ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ವಿಕಾಸ್ ಸೆಮಿಫೈನಲ್ನಲ್ಲಿ ಕಜಕ್ಸ್ತಾನದ ಝಾನಿಬೆಕ್ ಅಲಿಮ್?ನುಲಿ ವಿರುದ್ಧ ೨-೧ ಅಂತರದಿಂದ ಗೆಲುವು ಸಾಧಿಸಿ ಕಂಚು ಗೆದ್ದುಕೊಂಡರು.
2008: ಭಾರತದದ್ಯಂತ ಈದಿನ ಧೂಮಪಾನ ನಿಷೇಧ ಜಾರಿಗೆ ಬಂದಿತು. ಹೋಟೆಲ್, ಉಪಾಹಾರ ಗೃಹ, ಪಬ್, ಕಚೇರಿಗಳು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಧೂಮಪಾನಿಗಳ ವ್ಯಾಪ್ತಿಯಿಂದ ಹೊರಗಿಡಲಾಯಿತು. ಹುಕ್ಕಾ ಬಾರುಗಳು, ಖಾಸಗಿ ಕಚೇರಿಗಳು, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣಗಳಲ್ಲಿ ಸಹ ಧೂಮಪಾನ ನಿಷೇಧ ಜಾರಿಗೊಳಿಸಲಾಯಿತು. ಕೇಂದ್ರ ಆರೋಗ್ಯ ಸಚಿವಾಲಯ, ಸಿಗರೇಟ್ ಹಾಗೂ ಇತರ ತಂಬಾಕು ಉತ್ಪನ್ನಗಳ ಕಾಯ್ದೆ 2003ರ (ಜಾಹೀರಾತು, ವ್ಯಾಪಾರ ನಿಯಂತ್ರಣ ಹಾಗೂ ಉತ್ಪಾದನೆ, ಪೂರೈಕೆ ಹಾಗೂ ವಿತರಣೆ) ಅನ್ವಯ ನಿಷೇಧ ವಿಧಿಸಲು ಅಧಿಸೂಚನೆ ಹೊರಡಿಸಿತು. ಜಾರ್ಖಂಡ್, ದೆಹಲಿ, ಛತ್ತೀಸ್ ಗಢಗಳು ತಮ್ಮ ರಾಜ್ಯದಲ್ಲಿ ಈ ಮೊದಲೇ ಇದ್ದ ನಿಷೇಧವನ್ನು ಮುಂದುವರೆದವು. ಆರೋಗ್ಯ ಸಚಿವ ಎ. ರಾಮದಾಸ್, ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ನಿಷೇಧ ವಿಧಿಸುವಂತೆ ಸೂಚಿಸಿ ಪತ್ರ ಬರೆದಿದ್ದರು.2008: ಭಾರತ-ಅಮೆರಿಕ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸೆನೆಟ್ ಬಹುಮತದೊಂದಿಗೆ ಒಪ್ಪಿಗೆ ನೀಡಿತು. ಇದರೊಂದಿಗೆ ಒಪ್ಪಂದದ ವಿರುದ್ಧ ಮಂಡಿಸಲಾಗಿದ್ದ ಮಸೂದೆಯನ್ನು ಧ್ವನಿಮತದಿಂದ ತಿರಸ್ಕರಿಸಲಾಯಿತು.. ಇದರಿಂದಾಗಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅಧ್ಯಕ್ಷ ಜಾರ್ಜ್ ಬುಷ್ ಅವರು 2005ರಲ್ಲಿ ಮಾಡಿಕೊಂಡ ಈ ಐತಿಹಾಸಿಕ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ಸಿನ ಸಮ್ಮತಿಯ ಮುದ್ರೆ ಬಿದ್ದಂತಾಯಿತು. ಇದು ಯುಪಿಎ ಸರ್ಕಾರ ಮತ್ತು ಬುಷ್ ಆಡಳಿತಕ್ಕೆ ಸಂದ ಜಯ ಎಂದೇ ಭಾವಿಸಲಾಯಿತು.. ಒಪ್ಪಂದಕ್ಕೆ ಸಂಬಂಧಿಸಿದ ಮಸೂದೆ ಮೇಲೆ ಸೆನೆಟಿನಲ್ಲಿ ಇಡೀ ರಾತ್ರಿ ಸುದೀರ್ಘ ಚರ್ಚೆ ನಡೆದು ಬೆಳಿಗ್ಗೆ ಮತದಾನಕ್ಕೆ ಹಾಕಿದಾಗ ಪರವಾಗಿ 86 ಮತ್ತು ವಿರುದ್ಧವಾಗಿ 13 ಮತಗಳು ಚಲಾವಣೆಗೊಂಡವು. ಇದೇ ಸಂದರ್ಭದಲ್ಲಿ ಒಪ್ಪಂದವನ್ನು ವಿರೋಧಿಸಿ ಇಬ್ಬರು ಡೆಮಾಕ್ರಟಿಕ್ ಸೆನೆಟರುಗಳು ಮಂಡಿಸಿದ್ದ `ಕಿಲ್ಲರ್ ಮಸೂದೆ'ಯನ್ನು ಬಹುತೇಕ ಸದಸ್ಯರು ತಿರಸ್ಕರಿಸಿದರು.
2008: ಗುಜರಾತಿನ ಅಬ್ದುಲ್ ಗಣಿ ಅಬ್ದುಲಾ ಭಾಯಿ ಖುರೇಶಿ, ಜಮ್ಮು ಹಾಗೂ ಕಾಶ್ಮೀರದ ಗುಲಾಂ ಅಹ್ಮದ್ ಭಟ್ ಅವರಿಗೆ 2008ನೇ ಸಾಲಿನ ಕಬೀರ್ ಪುರಸ್ಕಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತು. ಕೋಮು ಗಲಭೆಯ ಸಂದರ್ಭದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಇವರಿಬ್ಬರು ನೀಡಿದ ಕಾಣಿಕೆ ಪರಿಗಣಿಸಿ ಈ ಪುರಸ್ಕಾರ ನೀಡಲಾಯಿತು. 2006 ಹಾಗೂ 2007ರಲ್ಲಿ ನಡೆದ ಕೋಮು ಗಲಭೆ ಸಂದರ್ಭದಲ್ಲಿ ವಡೋದರಾ ನಿವಾಸಿ ಖುರೇಶಿ ಅವರು ಎರಡು ಹಿಂದೂ ಕುಟುಂಬಗಳನ್ನು ಹಾಗೂ ಒಬ್ಬ ಯುವಕನನ್ನು ರಕ್ಷಿಸಿದ್ದರು.
2008: ಹೊಗೆ ಉಗುಳುತ್ತ ಸಾಗುತ್ತಿದ್ದ ಆಟೊಗಳಿಗೆ ಪರ್ಯಾಯವಾಗಿ ದೆಹಲಿಯಲ್ಲಿ ಸೌರ ವಿದ್ಯುತ್ ಚಾಲಿತ ಸೋಲಾರ್ ಎಲೆಕ್ಟ್ರಿಕ್ ರಿಕ್ಷಾಗಳು ರಸ್ತೆಗೆ ಇಳಿದವು. ದುರ್ಗಾಪುರ ಮೂಲದ ಕೇಂದ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ (ಸಿಎಂಇಆರ್ಐ) ಅಭಿವೃದ್ಧಿಪಡಿಸಿದ ಈ ರಿಕ್ಷಾಗಳಿಗೆ `ಸೋಲೆಕ್ಷಾ' ಎಂದು ಹೆಸರಿಸಲಾಯಿತು.. ಪ್ರಾಯೋಗಿಕವಾಗಿ ದೆಹಲಿ ರಸ್ತೆಯ ಮೇಲೆ ಇಳಿದ ಈ ರಿಕ್ಷಾಗಳಿಗೆ ಕೇಂದ್ರ ವಿಜ್ಞಾನ ಸಚಿವ ಕಪಿಲ್ ಸಿಬಲ್ ಚಾಲನೆ ನೀಡಿದರು. ಸುಮಾರು 200 ಕೆ.ಜಿ ತೂಕದ ಈ ರಿಕ್ಷಾಗಳು ಸೋಲಾರ್ (ಸೌರಶಕ್ತಿ) ಬ್ಯಾಟರಿಗಳ ಮೇಲೆ ಚಲಿಸುತ್ತವೆ. ಪ್ರತಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇವುಗಳಿಗಿದೆ. ದೆಹಲಿಯಲ್ಲಿ ಇವು ಯಶಸ್ವಿಯಾದರೆ ದೇಶದ ಇತರ ನಗರಗಳಲ್ಲಿಯೂ ಸೋಲಾರ್ ರಿಕ್ಷಾ ಬಳಕೆಗೆ ಬರಲಿವೆ.
2007: ಅಧಿಕಾರ ಹಸ್ತಾಂತರಕ್ಕೆ ಒತ್ತಡ ಹೇರುವ ಸಲುವಾಗಿ ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿಯ ಎಲ್ಲ ಸಚಿವರು ಈದಿನ ರಾತ್ರಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು. ಈ ಬೆಳವಣಿಗೆಯಿಂದಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ತಾರಕಕ್ಕೆ ಏರಿತು. ಯಡಿಯೂರಪ್ಪ ನಿವಾಸದಲ್ಲಿ ಸಂಜೆ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಕೂಡಲೇ ಬಿಜೆಪಿ ಸಚಿವರೆಲ್ಲರೂ ಮುಖ್ಯಮಂತ್ರಿಯವರ ಗೃಹ ಕಚೇರಿ `ಕೃಷ್ಣಾ'ಕ್ಕೆ ತೆರಳಿದರು. ಅಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಡಿ.ವಿ.ಸದಾನಂದಗೌಡರು ಮೂರು ಪುಟಗಳ ಪತ್ರದ ಜೊತೆಗೆ ಸಚಿವರ ರಾಜೀನಾಮೆ ಪತ್ರಗಳನ್ನು ಕುಮಾರಸ್ವಾಮಿ ಅವರಿಗೆ ಸಲ್ಲಿಸಿದರು. ಇಪ್ಪತ್ತು ತಿಂಗಳ ಹಿಂದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಆದ ಒಪ್ಪಂದವನ್ನು ನೆನಪಿಸಿದ ಸದಾನಂದಗೌಡರು, `ಒಪ್ಪಂದದಂತೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಪತ್ರ ಮತ್ತು ಯಡಿಯೂರಪ್ಪನವರಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಬೇಕು. ಆ ಮೂಲಕ ಅಧಿಕಾರ ಹಸ್ತಾಂತರ ಸುಗಮವಾಗಿ ಜರುಗಲು ಅನುವು ಮಾಡಿಕೊಡಬೇಕು' ಎಂದು ಕೋರಿದರು.
2007: ಮಹಾತ್ಮ ಗಾಂಧೀಜಿ ಅವರ ಜನ್ಮದಿನವನ್ನು ವಿಶ್ವಸಂಸ್ಥೆಯ ಮಹಾ ಅಧಿವೇಶನವು ವಿಶ್ವ ಅಹಿಂಸಾದಿನವನ್ನಾಗಿ ಆಚರಿಸಿತು. ಈ ಅಧಿವೇಶನದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಜಾಗತಿಕ ನಿಶ್ಯಸ್ತ್ರೀಕರಣದ ಕನಸನ್ನು ಸಾಕಾರಗೊಳಿಸಲು ಅಂತಾರಾಷ್ಟ್ರೀಯ ಸಮುದಾಯ ವಿಫಲವಾಗಿದೆ. ಕೆಲವು ರಾಷ್ಟ್ರಗಳಿಂದಾಗಿ ಇಡೀ ಜಗತ್ತಿಗೆ ಭಯೋತ್ಪಾದನೆ ಹರಡುತ್ತಿದೆ ಎಂದು ಹೇಳಿದರು.
2007: ಪಾಕಿಸ್ಥಾನದ ಗುಪ್ತಚರ ಇಲಾಖೆ ಐ ಎಸ್ ಐ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಶ್ಫಾಕ್ ಪರ್ವೇಜ್ ಕಿಯಾನಿ ಅವರನ್ನು ಪಾಕಿಸ್ಥಾನ ಸೇನೆಯ ಮುಂದಿನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಹೊಸ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸೇನಾ ಮುಖ್ಯಸ್ಥರ ಹುದ್ದೆಯನ್ನು ಬಿಟ್ಟುಕೊಡುವುದಾಗಿ ಅಧ್ಯಕ್ಷ ಪರ್ವೇಜ್ ಮುಷರಫ್ ಘೋಷಿಸಿದ್ದು, ನಂತರ ಅಶ್ಫಾಕ್ ಪರ್ವೇಜ್ ಕಿಯಾನಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವರು.
2007: ಇಂಡೋನೇಷ್ಯಾದ ಸುಮಾತ್ರ ದ್ವೀಪದ ಪಶ್ಚಿಮ ತೀರದಲ್ಲಿ ಪ್ರಬಲ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.4ರಷ್ಟಿದ್ದ ಈ ಭೂಕಂಪದ ಕೇಂದ್ರ, ಕರಾವಳಿ ಪಟ್ಟಣ ಬೆಂಗಕುಲುವಿನಿಂದ 160 ಕಿ.ಮೀ. ದೂರದಲ್ಲಿ ಸಮುದ್ರದಲ್ಲಿ 20 ಕಿ.ಮೀ. ಆಳದಲ್ಲಿತ್ತು.
2007: ಮಹಾತ್ಮ ಗಾಂಧಿ ಅವರಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಸಾಧ್ಯವಾಗದೇ ಇದ್ದುದಕ್ಕೆ ಭಾರತವು 138ನೇ ಗಾಂಧಿ ಜಯಂತಿ ಆಚರಿಸುತ್ತಿರುವ ಸಂದರ್ಭದಲ್ಲಿ `ನೊಬೆಲ್ ಪ್ರತಿಷ್ಠಾನ' ಖೇದ ವ್ಯಕ್ತಪಡಿಸಿತು. ಗಾಂಧಿಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ಕೊಡಲು ಒಟ್ಟು ಐದು ಬಾರಿ ನಾಮ ನಿರ್ದೇಶನ ಮಾಡಲಾಗಿತ್ತು. ಆದರೆ `ಗಾಂಧಿ ನಿಜವಾದ ರಾಜಕಾರಣಿಯೂ ಅಲ್ಲ- ಪೂರ್ಣ ಪ್ರಮಾಣದಲ್ಲಿ ಮಾನವೀಯ ಸಂಕಷ್ಟಗಳ ಪರಿಹಾರದ ಕಾರ್ಯಕರ್ತರೂ ಅಲ್ಲ' ಎಂದು ಆಯ್ಕೆ ಸಮಿತಿ ಅಭಿಪ್ರಾಯ ಪಟ್ಟು ಪ್ರಸ್ತಾಪವನ್ನು ತಳ್ಳಿ ಹಾಕಿತ್ತು. ಇಷ್ಟು ವರ್ಷ ಕಳೆದ ನಂತರ ನೊಬೆಲ್ ಸಮಿತಿಗೆ ತನ್ನ ತಪ್ಪಿನ ಅರಿವಾಗಿದೆ. `ಗಾಂಧಿಗೆ ನೊಬೆಲ್ ಪ್ರಶಸ್ತಿ ನಿರಾಕರಿಸಿದ್ದು ತಪ್ಪು' ಎಂದು ಸ್ವೀಡನ್ನಿನ ನೊಬೆಲ್ ಪ್ರತಿಷ್ಠಾನದ ಕಾರ್ಯ ನಿರ್ವಾಹಕ ನಿರ್ದೇಶಕ ಮೈಕೆಲ್ ಸೊಲಾಮ್ ಖಾಸಗಿ ವಾಹಿನಿಯೊಂದರಲ್ಲಿ ಒಪ್ಪಿಕೊಂಡರು. ಮಹಾತ್ಮ ಗಾಂಧಿ ಅವರು 1937, 1938, 1939, 1947 ಮತ್ತು ಸಾಯುವುದಕ್ಕೇ ಕೆಲವೇ ದಿನ ಮೊದಲು ಅಂದರೆ ಜನವರಿ 1948ರಲ್ಲಿ ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು. 1948ರಲ್ಲಿ `ಪ್ರಶಸ್ತಿ ಗಳಿಸುವ ಅರ್ಹರು ಯಾರೂ ಇಲ್ಲ' ಎಂದು ತೀರ್ಮಾನಿಸಿದ್ದ ಸಮಿತಿ ಯಾರಿಗೂ ಪ್ರಶಸ್ತಿ ನೀಡಿರಲಿಲ್ಲ. ನೊಬೆಲ್ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಇಲ್ಲದಿರುವುದು ಪ್ರಮುಖ ಕೊರೆತೆಯೇ ಆಗಿದೆ. ಪ್ರಶಸ್ತಿ ಪುರಸ್ಕೃತರ ಸಾಲಿನಲ್ಲಿ ಗಾಂಧಿ ಇರಲೇಬೇಕಿತ್ತು. ಅವರಿಲ್ಲದೆ ಬಹು ದೊಡ್ಡ ಶೂನ್ಯ ಆವರಿಸಿದೆ. ಕ್ಷಮಿಸಲಾರದ ತಪ್ಪು ಇದು ಎಂದು ನೊಬೆಲ್ ವಸ್ತು ಸಂಗ್ರಹಾಲಯದ ಕ್ಯುರೇಟರ್ ಡಾ. ಆಂಡರ್ಸ್ ಬರನಿ ಹೇಳಿದರು.
2007: ವಾಷಿಂಗ್ಟನ್ನಿನ ಸಾಗರೋತ್ತರ ವ್ಯವಹಾರ ಸಚಿವಾಲಯವು ತನ್ನ ಯೋಜನೆಗಳ ಅನುಷ್ಠಾನಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ವಾಷಿಂಗ್ಟನ್ನಿನಲ್ಲಿ ಸಮುದಾಯ ಅಭಿವೃದ್ಧಿ ಅಧಿಕಾರಿಯಾಗಿ (ಸಿಡಿಒ)ಭಾರತೀಯ ರಾಯಭಾರಿ ಕಚೇರಿಯಲ್ಲಿ ಏಳು ವರ್ಷಗಳ ಕಾಲ ಸಮುದಾಯ ವ್ಯವಹಾರಗಳ ವಿಭಾಗದಲ್ಲಿ ಕೆಲಸ ಮಾಡಿರುವ ಕನ್ನಡತಿ ಆರತಿ ಕೃಷ್ಣ ಅವರನ್ನು ನೇಮಿಸಿರುವುದಾಗಿ ಸಾಗರೋತ್ತರ ವ್ಯವಹಾರ ಸಚಿವ ವಯಲಾರ್ ರವಿ ಪ್ರಕಟಿಸಿದರು.
2006: ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಅಮೆರಿಕದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಆಂಡ್ರ್ಯೂ ಜೆಡ್. ಫೈರ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಕ್ರೆಗ್ ಸಿ.ಮೆಲ್ಲೋ ಅವರು ಆಯ್ಕೆಯಾದರು. ವೈರಸ್ಸಿನಿಂದ ಹಬ್ಬುವ ಕಾಯಿಲೆಗಳ ವಿರುದ್ಧ ದೇಹದಲ್ಲಿನ ಆರ್ ಎನ್ ಎ ವಹಿಸುವ ಮಹತ್ವದ ಪಾತ್ರವನ್ನು ಆವಿಷ್ಕರಿಸಿರುವುದಕ್ಕಾಗಿ ಇವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ತಮ್ಮ ಸಂಶೋಧನಾ ಪ್ರಬಂಧವನ್ನು ಫೈರ್ ಮತ್ತು ಮೆಲ್ಲೋ 1998ರಲ್ಲೇ ಸವಿವರವಾಗಿ ಪ್ರಕಟಿಸಿದ್ದರು. ಈ ಜೋಡಿಯಲ್ಲಿ ಫೈರ್ ಅವರಿಗೆ ಈಗ ಇನ್ನೂ ಕೇವಲ 47 ವರ್ಷವಾಗಿದ್ದರೆ, ಮೆಲ್ಲೋ ಇನ್ನೂ ಒಂದು ವರ್ಷ ಚಿಕ್ಕವರು.
2006: ಎರಡು ವಿಮಾನಗಳ ಪರಸ್ಪರ ಡಿಕ್ಕಿಯ ಬಳಿಕ ಬ್ರೆಜಿಲಿನ ಅಮೆಜಾನ್ ಅರಣ್ಯ ಪ್ರದೇಶದಲ್ಲಿ 29-9-2006ರಂದು ನೆಲಕ್ಕೆ ಅಪ್ಪಳಿಸಿದ ಬ್ರೆಜಿಲ್ ಜೆಟ್ ವಿಮಾನದಲ್ಲಿದ್ದ 115 ಜನರ ಪೈಕಿ ಯಾರೊಬ್ಬರೂ ಈವರಗೆ ಬದುಕಿ ಉಳಿದಿಲ್ಲ ಎಂದು ವಿಮಾನಯಾನ ಅಧಿಕಾರಿಗಳು ಪ್ರಕಟಿಸಿದರು. ಬ್ರೆಜಿಲಿನ ಇತಿಹಾಸದಲ್ಲೇ ಇದು ಅತಿ ಭೀಕರ ವಿಮಾನ ದುರಂತ ಎನಿಸಿತು. ಬೋಯಿಂಗ್ 737-800 (ಗೋಲ್ ಏರ್ ಲೈನ್ಸ್ ಫ್ಲೈಟ್ 1907) ವಿಮಾನ ಮತ್ತು ಸಣ್ಣ ಎಕ್ಸಿಕ್ಯೂಟಿವ್ ವಿಮಾನ ಗಗನದಲ್ಲಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮವಾಗಿ ಗೋಲ್ ಏರ್ ಲೈನ್ಸ್ ವಿಮಾನ ಅಮೆಜಾನ್ ದಟ್ಟ ಅರಣ್ಯದಲ್ಲಿ ನೆಲಕ್ಕೆ ಅಪ್ಪಳಿಸಿತ್ತು. ಬ್ರೆಜಿಲಿನಲ್ಲಿ ಹಿಂದೆ 1982ರಲ್ಲಿ ಸಂಭವಿಸಿದ್ದ ಬೋಯಿಂಗ್ 727 ವಿಮಾನ ಅಪಘಾತದಲ್ಲಿ 137 ಜನ ಮೃತರಾಗಿದ್ದುದೇ ರಾಷ್ಟ್ರದ ಅತಿ ಭೀಕರ ಅಪಘಾತವಾಗಿತ್ತು. ವಾಸ್ಪ್ ಏರ್ ಲೈನ್ಸಿನ ಈ ವಿಮಾನ ಅಪಘಾತಫೋರ್ಟ್ಲೇಜಾ ನಗರದ ಈಶಾನ್ಯ ಭಾಗದಲ್ಲಿ ಸಂಭವಿಸಿತ್ತು.
2006: ಬಹು ನಿರೀಕ್ಷಿತ ಮೆಟ್ರೊ ರೈಲು ಯೋಜನೆಯ ಕಾಮಗಾರಿ ಬೆಂಗಳೂರಿನಲ್ಲಿ ವಿಜಯದಶಮಿಯ ದಿನವಾದ ಈದಿನ ಮಹಾತ್ಮ ಗಾಂಧಿ ರಸೆಯಲ್ಲಿ ಆರಂಭಗೊಂಡಿತು. ಪೂಜೆ ನಡೆಸಿ ನಂತರ ಕಾಮಗಾರಿಗೆ ಚಾಲನೆ ನೀಡಲಾಯಿತು.
2006: ಮೈಸೂರಿನ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಮ್- ಶ್ರೀ ಸಂಸ್ಥಾನ ಗೋಕರ್ಣವು ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಭಾರತೀಯ ಗೋವು ತಳಿ ಸಂರಕ್ಷಣಾ ಕಾರ್ಯಕ್ರಮದ ಅಂಗವಾಗಿ ರೂಪಿಸಿದ `ಕಾಮದುಘಾ' ಭಾಗವಾಗಿ ಏರ್ಪಡಿಸಿದ್ದ ಗೋ ಸಂಸತ್ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಉದ್ಘಾಟಿಸಿದರು. ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಪಾಲ್ಗೊಂಡು ರಾಮಚಂದ್ರಾಪುರ ಮಠದ ಗೋವು ತಳಿ ಸಂರಕ್ಷಣಾ ಕಾರ್ಯಕ್ಕೆ ಸರ್ಕಾರ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಗೋವು ತಳಿ ಸಂರಕ್ಷಣೆಗಾಗಿ 2.70 ಕೋಟಿ ರೂಪಾಯಿಗಳನ್ನು ಸಮ್ಮಿಶ್ರ ಸರ್ಕಾರವು ಮುಂಗಡಪತ್ರದಲ್ಲಿ ತೆಗೆದಿರಿಸಿದೆ ಎಂದು ಮುಖ್ಯಮಂತ್ರಿ ಹೇಳಿದರು.
2006: ನಿವೃತ್ತ ಸೇನಾ ದಂಡನಾಯಕ ಸರಯೂದ್ ಚಲನೊಂಟ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡರು. ಸೆಪ್ಟೆಂಬರ್ 19ರಂದು ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ಪ್ರಧಾನಿ ತಕ್ ಸಿನ್ ಶಿನವಾತ್ರ ಅವರನ್ನು ಪದಚ್ಯುತಗೊಳಿಸಲಾಗಿತ್ತು.
1985: ಚಿತ್ರ ನಟ ರಾಕ್ ಹಡ್ಸನ್ ಅವರು ಕ್ಯಾಲಿಫೋರ್ನಿಯಾದ ಬೆವೆರ್ಲಿ ಹಿಲ್ಸಿನಲ್ಲಿ ತಮ್ಮ 59ನೇ ವಯಸಿನಲ್ಲಿ ಏಡ್ಸ್ ರೋಗದ ಪರಿಣಾಮವಾಗಿ ಮೃತರಾದರು. ಈ ರೋಗಕ್ಕೆ ಬಲಿಯಾದ ಮೊತ್ತ ಮೊದಲ ಗಣ್ಯ ವ್ಯಕ್ತಿ ಇವರು.
1967: ತುರ್ ಗುಡ್ ಮಾರ್ಷಲ್ ಅವರು ಅಮೆರಿಕದ ಸುಪ್ರೀಂ ಕೋರ್ಟಿನ ಅಸೋಸಿಯೇಟ್ ಜಸ್ಟೀಸ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರದ ಉನ್ನತ ಕೋರ್ಟ್ ಹುದ್ದೆಗೆ ನೇಮಕ ಗೊಂಡ ಮೊದಲ ಆಫ್ರಿಕನ್-ಅಮೆರಿಕನ್ ಎಂಬ ಹೆಗ್ಗಳಿಕೆ ಇವರದಾಯಿತು.
1950: ಚಾರ್ಲ್ಸ್ ಎಂ ಶುಜ್ ಅವರು ರಚಿಸಿದ ಕಾಮಿಕ್ ಸ್ಟ್ರಿಪ್ `ಪೀನಟ್ಸ್' ಮೊತ್ತ ಮೊದಲ ಬಾರಿಗೆ ಒಂಭತ್ತು ವೃತ್ತ ಪತ್ರಿಕೆಗಳಲ್ಲಿ ಪ್ರಕಟವಾಯಿತು.
1946: ಭಾರತದ ಖ್ಯಾತ ಚಿತ್ರನಟಿ ಆಶಾ ಪರೇಖ್ ಜನ್ಮದಿನ.
No comments:
Post a Comment