ಇಂದಿನ ಇತಿಹಾಸ History Today ಅಕ್ಟೋಬರ್ 27
2018: ನವದೆಹಲಿ/ ಪುಣೆ/ ಫರೀದಾಬಾದ್: ಭೀಮಾ -ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ಮಾವೋವಾದಿ ನಕ್ಸಲೀಯರ ಜೊತೆಗೆ ಸಂಪರ್ಕ ಹೊಂದಿದ್ದರೆನ್ನಲಾದ
ಐವರು ’ನಗರ ನಕ್ಸಲರ’ ಬಂಧನವನ್ನು ಎತ್ತಿ ಹಿಡಿದು ನೀಡಲಾಗಿದ್ದ ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ಬಹುಮತದ ತೀರ್ಪನ್ನು ಪುನರ್ ಪರಿಶೀಲಿಸಲು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ನಿರಾಕರಿಸಿತು. ಈ ಮಧ್ಯೆ ಕಾರ್ಯಕರ್ತರಾದ ಅರುಣ್ ಫೆರೇರಿಯಾ ಮತ್ತು ವೆರ್ನನ್ ಗೋನ್ಸಾಲ್ವೆಸ್ ಅವರನ್ನು ಪೊಲೀಸರು ಈದಿನ ಬೆಳಗ್ಗೆ ಅವರ ಮುಂಬೈಯ ಮನೆಗಳಿಂದ ಬಂಧಿಸಿ ಪುಣೆ ವಿಶೇಷ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, ನ್ಯಾಯಾಲಯವು ಅವರನ್ನು ನವೆಂಬರ್ ೬ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿತು. ಇನ್ನೊಂದು ಬೆಳವಣಿಗೆಯಲ್ಲಿ ಐವರು ’ನಗರ
ನಕ್ಸಲರ’ ಬಂಧನ ಎತ್ತಿಹಿಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಖ್ಯಾತ ಇತಿಹಾಸಕಾರರಾದ ರೊಮೀಲಾ ಥಾಪರ್ ಮತ್ತು ಇತರ ನಾಲ್ವರು ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಈದಿನ ವಜಾಗೊಳಿಸಿದ ಬಳಿಕ ಮಧ್ಯಾಹ್ನ ೧ ಗಂಟೆಗೆ ಪುಣೆ ಪೊಲೀಸರು ಸಾಮಾಜಿಕ ಕಾರ್ಯಕರ್ತೆ ಸುಧಾ ಭಾರದ್ವಾಜ್ ಅವರನ್ನು ಫರೀದಾಬಾದಿನಲ್ಲಿ ಬಂಧಿಸಿದರು. ಅವರನ್ನು ಬಂಧಿಸಲು ಪುಣೆ ಪೊಲೀಸರು ಫರೀದಾಬಾದ್ ನಿವಾಸಕ್ಕೆ ಹಿಂದಿನ ದಿನ ಮಧ್ಯರಾತ್ರಿಯಲ್ಲೇ ಆಗಮಿಸಿದ್ದರು. ಭಾರದ್ವಾಜ್ ಅವರನ್ನು ಪುಣೆ ಪೊಲೀಸರು ಪುಣೆ ನ್ಯಾಯಾಲಯದಲ್ಲಿ ಹಾಜರು ಪಡಿಸುವರು ಎಂದು ಸುಧಾ ವಕೀಲ ಸೌತಿಕ್ ಬ್ಯಾನರ್ಜಿ ತಿಳಿಸಿದರು. ಪುಣೆ
ನ್ಯಾಯಾಲಯ ಕೂಡಾ ಭಾರದ್ವಾಜ್, ಫೆರೇರಿಯಾ ಮತ್ತು ಗೋನ್ಸಾಲ್ವೆಸ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿತ್ತು. ಭಾರದ್ವಾಜ್ ಜಾಮೀನು ಅರ್ಜಿ ತಿರಸ್ಕರಿಸಿದ ಆದೇಶವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗುವುದು
ಎಂದು ಸುಧಾ ವಕೀಲ ಬ್ಯಾನರ್ಜಿ ಹೇಳಿದರು. ಮೂರೂ ಮಂದಿ ಕಾರ್ಯಕರ್ತರನ್ನು
ಮೊದಲಿಗೆ ಆಗಸ್ಟ್ ೨೮ರಂದು ಕವಿ - ಕಾರ್ಯಕರ್ತ ವರವರರಾವ್ ಮತ್ತು ಗೌತಮ್ ನವಲಖ ಅವರ ಜೊತೆಗೆ ಮಾವೋವಾದಿ ನಕ್ಸಲೀಯರ ಜೊತೆಗಿನ ಸಂಪರ್ಕ ಮತ್ತು ವಿವಾದಾತ್ಮಕ ಎಲ್ಗರ್ ಪರಿಷದ್ ಹಾಗೂ ಆ ಬಳಿಕದ ಭೀಮಾ -ಕೋರೆಗಾಂವ್ ಹಿಂಸಾಚಾರದಲ್ಲಿನ ಪಾತ್ರಗಳಿಗಾಗಿ ಬಂಧಿಸಲಾಗಿತ್ತು. ಬಂಧಿತರೆಲ್ಲರನ್ನೂ
ಆಗಸ್ಟ್ ೨೯ರಿಂದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಸೆಪ್ಟೆಂಬರ್ ೨೮ರಂದು ನೀಡಲಾದ ತನ್ನ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಬಂಧಿತರಿಗೆ ಕಾನೂನು ಬದ್ಧ ಪರಿಹಾರ ಪಡೆಯಲು ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು. ಈ ಕಾಲಾವಕಾಶದ ಅವಧಿ ಶುಕ್ರವಾರ ಮುಕ್ತಾಯಗೊಂಡಿತ್ತು. ಶನಿವಾರ ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ ಪವಾರ್ ಅವರು ಗೋನ್ಸಾಲ್ವೆಸ್ ಮತ್ತು ಫೆರೇರಿಯಾ ಅವರನ್ನು ೧೪ ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ನೀಡುವಂತೆ ವಿಶೇಷ ನ್ಯಾಯಾಧೀಶರನ್ನು ಕೋರಿದರು. ಆರೋಪಗಳು ನಿಷೇಧಿತ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪಕ್ಷದಿಂದ ಹಣ ಪಡೆಯುತ್ತಿದ್ದರು
ಹಾಗೂ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಮತ್ತು ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯದಂತಹ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ನಕ್ಸಲ್ ವಾದ ಹರಡಲು ಕಾರ್ಯಕರ್ತರನ್ನು ನೇಮಕ ಮಾಡುತ್ತಿದ್ದರು ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ಉಜ್ವಲ ಪವಾರ್ ವಾದ ಮಂಡಿಸಿದರು. ಆರೋಪಿಗಳನ್ನು ಪೊಲೀಸ್ ವಶಕ್ಕೆ ಒಪ್ಪಿಸುವುದನ್ನು ವಿರೋಧಿಸಿದ ಆರೋಪಿಗಳ ಪರ ವಕೀಲರಾದ ರಾಹುಲ್ ದೇಶಮುಖ್ ಅವರು ಪುಣೆ ಪೊಲೀಸರು ಗೃಹಬಂಧನದ ಅವಧಿ ಮುಗಿದ ಬಳಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲು ಸೂಕ್ತವಾದ ಕಾನೂನು ಪ್ರಕ್ರಿಯೆಯನ್ನು
ಅನುಸರಿಸುವಲ್ಲಿ ವಿಫಲರಾಗಿದ್ದಾರೆ
ಎಂದು ಪ್ರತಿಪಾದಿಸಿದರು.
ಆಗಸ್ಟ್ ೨೮ರಂದು ಬಂಧಿಸಿದ ಬಳಿಕ, ಸುಪ್ರೀಂಕೋರ್ಟ್ ಆಗಸ್ಟ್ ೨೯ರಂದು ನಿರ್ದೇಶನದಂತೆ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇಡಲಾಗಿದ್ದ ಅವಧಿಯನ್ನು ’ನ್ಯಾಯಾಂಗ ಬಂಧನ’ ಎಂಬುದಾಗಿ ಪರಿಗಣಿಸಬೇಕು. ಬಂಧಿಸಿದ ೩೦ ದಿನಗಳ ಒಳಗಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಕೋರಿ ಪ್ರಮಾಣಪತ್ರ ಸಲ್ಲಿಸುವಲ್ಲಿ ಪುಣೆ ಪೊಲೀಸರು ವಿಫಲರಾಗಿದ್ದಾರೆ ಎಂದು ವಕೀಲ ದೇಶಮುಖ್ ಹೇಳಿದರು. ಬಂಧಿಸಿದ ಮೊದಲ ೩೦ ದಿನಗಳ ಒಳಗಾಗಿ ಮಾತ್ರವೇ ಬಂಧಿತರನ್ನು ಪೊಲೀಸ್ ವಶಕ್ಕೆ ನೀಡಬಹುದು ಎಂಬುದಾಗಿ ಸಿಬಿಐ ವರ್ಸಸ್ ಅನುಪಮ್ ಕುಲಕರ್ಣಿ ಪ್ರಕರಣವನ್ನು (೧೯೯೨) ಉಲ್ಲೇಖಿಸಿ ದೇಶಮುಖ್ ವಾದಿಸಿದರು. ಏನಿದ್ದರೂ ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ಗೃಹ ಬಂಧನಕ್ಕೆ ಒಳಪಡಿಸಲಾದ ಅವಧಿಯನ್ನು ’ನ್ಯಾಯಾಂಗ ವಶ’ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಪ್ರಾಸೆಕ್ಯೂಷನ್ ವಾದಿಸಿತು. ಸುಪ್ರೀಂಕೋರ್ಟ್ ನಿರ್ದೇಶನ ಪ್ರಕಾರ ಗೃಹಬಂಧನದ ಪೂರ್ಣ ಅವಧಿ ಮುಗಿಯುವ ಮುನ್ನವೇ ಬಂಧಿಸುವ ಮೂಲಕ ಪುಣೆ ಪೊಲೀಸರು ಸುಪ್ರೀಂಕೋರ್ಟ್ ನಿರ್ದೇಶನದ ನಿಂದನೆ ಮಾಡಿದ್ದಾರೆ ಎಂದು ಆರೋಪಿಗಳ ಪರವಾಗಿ ಇನ್ನೊಬ್ಬ ವಕೀಲ ಸಿದ್ಧಾರ್ಥ ಪಾಟೀಲ್ ವಾದಿಸಿದರು. ವಾದಗಳು ಮುಕ್ತಾಯಗೊಂಡ ಬಳಿಕ ವಿಶೇಷ ನ್ಯಾಯಾಧೀಶ ಕೆ ಡಿ ವಡನೆ ಅವರು ಫೆರೇರಿಯಾ ಮತ್ತು ಗೋನ್ಸಾಲ್ವೆಸ್ ಅವರನ್ನು ೧೦ ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ನೀಡಿದರು. ಸುಪ್ರೀಂಕೋರ್ಟಿನಲ್ಲಿ: ಸುಪ್ರೀಂಕೋರ್ಟಿನಲ್ಲಿ ಈದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪುನರ್ ಪರಿಶೀಲನಾ ಪೀಠವು ’ಸೆಪ್ಟೆಂಬರ್ ೨೮, ೨೦೧೮ರ ತೀರ್ಪಿನ ಪುನರ್ ಪರಿಶೀಲನೆ ಮಾಡುವ ಅಗತ್ಯ ಇಲ್ಲ ಎಂಬುದು ನಮ್ಮ ಅಭಿಪ್ರಾಯ’ ಎಂದು ತೀರ್ಪು ನೀಡಿತು. ಈ ಕಾರಣ ಅರ್ಜಿಯನ್ನು ವಜಾಗೊಳಿಸಲಾಗಿದೆ
ಎಂದು ಥಾಪರ್ ಅವರ ಮೌಖಿಕ ವಾದ ಆಲಿಸಿದ ಬಳಿಕ ನೀಡಿದ ತನ್ನ ಒಂದು ಪುಟದ ತೀರ್ಪಿನಲ್ಲಿ ಪೀಠ ತಿಳಿಸಿತು. ಆಗಸ್ಟ್ ೨೮ರಂದು ನಡೆದ ದೇಶವ್ಯಾಪಿ ದಾಳಿಯಲ್ಲಿ ಕವಿ ವರವರ ರಾವ್, ವಕೀಲರಾದ ಸುಧಾ ಭಾರದ್ವಾಜ್, ಕಾರ್ಯಕರ್ತರಾದ ಅರುಣ್ ಫೆರೇರಿಯಾ ಮತ್ತು ವೆರ್ನನ್ ಗೋನ್ಸಾಲ್ವೆಸ್ ಹಾಗೂ ಗೌತಮ್ ನವಲಖ ಅವರನ್ನು ಬಂಧಿಸಿದ್ದರ ವಿರುದ್ದ ಸಲ್ಲಿಸಲಾಗಿದ್ದ ರಿಟ್ ಅರ್ಜಿ ತಿರಸ್ಕೃತಗೊಂಡ ಬಳಿಕ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಈ ಬಂಧನಗಳು ರಾಷ್ಟ್ರದಲ್ಲಿನ ಭಿನ್ನಮತದ ಸ್ವರಗಳನ್ನು ಅಡಗಿಸುವ ಯತ್ನದ ಸಲುವಾಗಿ ನಡೆಸಿದ ಯತ್ನವಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಸಂವಿಧಾನ ಪೀಠವು ತನ್ನ ಬಹುಮತದ ತೀರ್ಪಿನಲ್ಲಿ ತಿಳಿಸಿತ್ತು. ಈ ತೀರ್ಪು ಅಕ್ರಮ ಚಟುವಟಿಕೆಗಳ ಕಾಯ್ದೆಯ ಅಡಿಯಲ್ಲಿ ಐವರು ಕಾರ್ಯಕರ್ತರ ವಿರುದ್ಧದ ಪ್ರಕರಣ ಮುಂದುವರೆಸಲು ಮಹಾರಾಷ್ಟ್ರ ಪೊಲೀಸರಿಗೆ ಒಪ್ಪಿಗೆ ನೀಡಿತ್ತು. ಈದಿನದ ತಮ್ಮ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ತಮ್ಮ ಪೂರ್ವಾಧಿಕಾರಿ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರ ಜೊತೆಗೆ ನ್ಯಾಯಮೂರ್ತಿ ಖಾನ್ವಿಲ್ಕರ್ ಅವರು ಸೆಪ್ಟೆಂಬರ್ ೨೮ರಂದು ಪ್ರಕಟಿಸಿದ ಪೀಠದ ಬಹುಮತದ ತೀರ್ಪಿಗೆ ಸಹಮತ ವ್ಯಕ್ತ ಪಡಿಸಿದರು. ತೀರ್ಪು ಪ್ರಕಟಿಸಿದ ಕೆಲವು ದಿನಗಳ ಬಳಿಕ ಅಕ್ಟೋಬರ್ ೨ರಂದು ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ನಿವೃತ್ತರಾಗಿದ್ದರು.
ಅವರ ಉತ್ತರಾಧಿಕಾರಿ ಹಾಗೂ ಹಾಲಿ ಮುಖ್ಯ ನ್ಯಾಯಮೂರ್ತಿ ಗೊಗೋಯ್ ಅವರು ಪುನರ್ ಪರಿಶೀಲನಾ ಪೀಠದಲ್ಲಿ ಮಿಶ್ರ ಅವರ ಸ್ಥಾನವನ್ನು ತುಂಬಿದ್ದರು. ಪುನರ್ ಪರಿಶೀಲನಾ ಅರ್ಜಿಗಳನ್ನು ಸಾಮಾನ್ಯವಾಗಿ ಮೂಲ ತೀರ್ಪು ನೀಡಿದ ಪೀಠಗಳೇ ಆಲಿಸುತ್ತವೆ. ಇದು ಅತ್ಯಂತ ಅಪರೂಪದ ಪರಿಹಾರ. ಪುನರ್ ಪರಿಶೀಲನಾ ಅರ್ಜಿಯ ವ್ಯಾಪ್ತಿ ಅತ್ಯಂತ ಸೀಮಿತವಾಗಿರುತ್ತದೆ.
ತೀರ್ಪು ಸಂಪೂರ್ಣ ಅನ್ಯಾಯವನ್ನು ಮಾಡದೆಯೇ? ಸಹಜ ನ್ಯಾಯದ ತತ್ವಗಳಿಗೆ ತೀರ್ಪು ವಿರುದ್ಧವಾಗಿದೆಯೇ ಅಥವಾ ಪಕ್ಷಪಾತದಿಂದ ಕೂಡಿದೆಯೇ ಎಂಬುದಾಗಿ ಪುನರ್ ಪರಿಶೀಲನಾ ಪೀಠವು ವಿಶ್ಲೇಷಿಸುತ್ತದೆ. ತೀರ್ಪಿನ ಬಳಿಕ, ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆಯಾಗುವ ಮಧ್ಯೆ ನ್ಯಾಯ ಮೂರ್ತಿ ಮಿಶ್ರ ಅವರಂತೆ ನ್ಯಾಯಾಧೀಶರು ನಿವೃತ್ತರಾದರೆ, ಮುಖ್ಯ ನ್ಯಾಯಮೂರ್ತಿಯವರು ಪೀಠಕ್ಕೆ ಇನ್ನೊಬ್ಬ ನ್ಯಾಯಮೂರ್ತಿಯನ್ನು
ನೇಮಕ ಮಾಡುತ್ತಾರೆ. ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನ್ಯಾಯಮೂರ್ತಿ ಮಿಶ್ರ ಅವರ ಸ್ಥಾನವನ್ನು ಭರ್ತಿ ಮಾಡಿದ್ದರು. ಪುನರ್ ಪರಿಶೀಲನಾ ಅರ್ಜಿ ವಜಾಗೊಂಡದ್ದರಿಂದ
ಸೆಪ್ಟೆಂಬರ್ ೨೮ರ ತೀರ್ಪಿನಲ್ಲಿ ಭಿನ್ನಮತದ ತೀರ್ಪು ನೀಡಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಭಿಪ್ರಾಯ ಈಗ ಅಲ್ಪಸಂಖ್ಯಾತ ಅಭಿಪ್ರಾಯವಾಗಿ ಉಳಿಯಿತು. ನ್ಯಾಯಮೂರ್ತಿ ಚಂದ್ರ ಚೂಡ್ ಅವರು ಐವರು ಕಾರ್ಯಕರ್ತರ ವಿರುದ್ಧದ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಬೇಕು ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದರು.
2018: ರಾಯ್ ಪುರ: ವಿಧಾನಸಭಾ ಚುನಾವಣೆ ಹೊಸ್ತಿನಲ್ಲಿ ಇರುವ ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿ ನಕ್ಸಲೀಯರು ಸ್ಫೋಟಕ ಸಂರಕ್ಷಿತ ವಾಹನವನ್ನೇ (ಎಂಪಿವಿ) ಸ್ಫೋಟಿಸುವ ಮೂಲಕ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಕನಿಷ್ಠ ನಾಲ್ಕು ಮಂದಿ ಸಿಬ್ಬಂದಿಯನ್ನು ಬಲಿ ತೆಗೆದುಕೊಂಡರು. ದಾಳಿಯಲ್ಲಿ ಇತರ ಇಬ್ಬರು ಗಾಯಗೊಂಡರು. ಅವಾಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಧ್ಯಾಹ್ನ ೪.೩೦ರ ಸುಮಾರಿಗೆ ಈ ಘಟನೆ ಘಟಿಸಿದೆ. ಸಿಆರ್ ಪಿಎಫ್ ನ ೧೬೮ನೇ ಬೆಟಾಲಿಯನ್‌ನ ತಂಡವೊಂದು ಪಹರೆಗಾಗಿ ಪ್ರದೇಶದತ್ತ ತೆರಳಿದ್ದಾಗ ಈ ದಾಳಿ ನಡೆಯಿತು ಎಂದು ಪೊಲೀಸರು ಹೇಳಿದರು. ಎಂಪಿವಿ ಆರು ಮಂದಿ ಸಿಬ್ಬಂದಿಯನ್ನು ಒಯ್ಯುತ್ತಿತ್ತು. ಸಿಆರ್ ಪಿಎಫ್ ಶಿಬಿರದಿಂದ ಒಂದು ಕಿಮೀ ದೂರದಲ್ಲಿದ್ದಾಗ ಮಾವೋವಾದಿಗಳು ಸಿಡಿಮದ್ದು ಸ್ಫೋಟಿಸಿದರು. ನಾಲ್ವರು ಹುತಾತ್ಮರಾದರೆ, ಇಬ್ಬರು ಸ್ಫೋಟದಿಂದ ಗಾಯಗೊಂಡರು ಎಂದು ಬಸ್ತಾರ್ ಐಜಿ ವಿವೇಕಾನಂದ ಸಿನ್ಹ ತಿಳಿಸಿದರು. ಮಾಮೂಲಿ ಸ್ಫೋಟಕಗಳ ಬದಲಿಗೆ ಉಗ್ರಗಾಮಿಗಳು ೫೦-೧೦೦ ಕಿಗಾಂ ಸ್ಫೋಟಕಗಳಿದ್ದ ಕಂಟೇನರ್ಗಳನ್ನು ಬಳಸಿದ್ದಾರೆ. ಹೀಗಾಗಿ ಅವು ವಿಶೇಷವಾಗಿ ನಿರ್ಮಿಸಿದ ಸ್ಫೋಟಕ ಸಂರಕ್ಷಿತ ವಾಹನವನ್ನೇ ಛಿದ್ರಗೊಳಿಸಿತು ಎಂದು ಪೊಲೀಸರು ಹೇಳಿದರು. ಹೆಚ್ಚುವರಿ ತುಕಡಿಗಳನ್ನು ತತ್ ಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದ್ದು, ಮೃತರ ಪಾರ್ಥಿವ ಶರೀರಗಳನ್ನು ಹಾಗೂ ಗಾಯಾಳು ಯೋಧರನ್ನು ಘಟನಾ ಸ್ಥಳದಿಂದ ಸ್ಥಳಾಂತರಿಸಲಾಗಿದೆ
ಎಂದು ಐಜಿ ನುಡಿದರು. ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು. ನವೆಂಬರ್ ೧೨ರಂದು ನಡೆಯಲಿರುವ ಚುನಾವಣೆಗಾಗಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಛತ್ತೀಸ್ ಗಢದ ಬಿಜಾಪುರ ಜಿಲ್ಲೆಗೆ ಸಮೀಪದ ಸುಕ್ಮಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ದಿನವೇ ನಕ್ಸಲೀಯರು ಈ ದಾಳಿ ನಡೆಸಿದರು. ಮಾವೋವಾದಿ ನಕ್ಸಲೀಯ ಹಾವಳಿ ಇರುವ ಬಸ್ತಾರ್, ಕಂಕೇರ್ ಸುಕ್ಮಾ, ಬಿಜಾಪುರ, ದಾಂಟೆವಾಡ, ನಾರಾಯಣಪುರ, ಕೊಂಡಗಾಂವ್ ಮತ್ತು ರಾಜ್ನಂದಗಾಂವ್ ಈ ೮ ಜಿಲ್ಲೆಗಳು ಸೇರಿದಂತೆ ೧೮ ಜಿಲ್ಲೆಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಪೊಲೀಸ್ ದಾಖಲೆಗಳ ಪ್ರಕಾರ ೨೦೦೫ರಿಂದೀಚೆಗೆ ಮಾವೋವಾದಿಗಳು ಬಸ್ತಾರ್ ಪ್ರದೇಶದಲ್ಲಿ ಒಂಬತ್ತು ಸ್ಫೋಟಕ ಸಂರಕ್ಷಿತ ವಾಹನಗಳನ್ನು (ಎಂಪಿವಿ) ಸ್ಫೋಟಿಸಿದ್ದು ೪೨ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ,
೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಬಸ್ತಾರ್ ಪ್ರದೇಶದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುವಂತೆ
ಕರೆ ನೀಡಿದ ಭಿತ್ತಿಚಿತ್ರಗಳನ್ನು ನಕ್ಸಲೀಯರು ಪ್ರದರ್ಶಿಸಿದ್ದರು.
2018: ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬೆಂಬಲಿಸಿದ್ದ ತಿರುವನಂತಪುರದ ಕುಂಡಮನ್ಕಡಾವೂವಿನಲ್ಲಿರುವ
ಸ್ವಾಮಿ ಸಂದೀಪಾನಂದಾಗಿರಿ
ಅವರ ಆಶ್ರಮದ ಮೇಲೆ ಅಪರಿಚಿತ ವ್ಯಕ್ತಿಗಳು ನಸುಕಿನಲ್ಲಿ ದಾಳಿ
ನಡೆಸಿದ ಘಟನೆ ಘಟಿಸಿತು. ಆಶ್ರಮದೊಳಗೆ ನುಗ್ಗಿದ ದುಷ್ಕರ್ಮಿಗಳು ಎರಡು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿ ತಿಳಿಸಿತು. ಸ್ವಾಮಿ ಗಿರಿ ಅವರು ಭಗವದ್ಗೀತಾ ಶಾಲೆಯ ನಿರ್ದೇಶಕರಾಗಿದ್ದರು. ಈ ದಾಳಿಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ, ತಂಝಾಮೋನ್ತಂತ್ರಿ ಹಾಗೂ ಪಂದಳಂ ರಾಜಮನೆತನದವರ ಕೈವಾಡ ಇದೆ ಎಂದು ಸ್ವಾಮಿ ಆಪಾದಿಸಿದರು. ಸಾರ್ವಜನಿಕವಾಗಿ ಯಾರು ಸತ್ಯ ಹೇಳುತ್ತಾರೋ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದ ನಂತರ ತನಗೆ ವಿಷಯ ತಿಳಿಯಿತು ಎಂದು ಸ್ವಾಮಿ ಹೇಳಿರುವುದಾಗಿ ಮಲಯಾಳಿ ಪತ್ರಿಕೆಗಳು ವರದಿ ಮಾಡಿದವು. ಸಂದೀಪಾನಂದಗಿರಿ ಸ್ವಾಮಿ ಅವರ ಆಶ್ರಮದ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದರು. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಲು
ಸಾಧ್ಯವಾಗದಿದ್ದಾಗ ಈ ರೀತಿ ದೈಹಿಕ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ
ಎಂದು ಅವರು ಟೀಕಿಸಿದರು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಪಿಣರಾಯಿ ಹೇಳಿದರು. ಕೇರಳದ ಸಚಿವರಾದ ಕೆ.ಕೆ.ಶೈಲಜ ಅವರು ಆಶ್ರಮಕ್ಕೆ ಭೇಟಿ ನೀಡಿದ್ದು, ದುಷ್ಕೃತ್ಯದ ಹಿಂದೆ ಬಲಪಂಥೀಯ ಸಂಘಟನೆಗಳ ಕೈವಾಡ ಇದೆ ಎಂದು ಶಂಕಿಸಿದರು.
2018: ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ತಳೆಯಲಾಗಿದ್ದ ಹಲವು ತಿಂಗಳುಗಳ ಮೌನವನ್ನು ಮುರಿದ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಪರಿಕ್ಕರ್ ಅವರು ಮೇಧೋಜೀರಕ ಗ್ರಂಥಿ ಕ್ಯಾನ್ಸರಿನಿಂದ ನರಳುತ್ತಿದ್ದಾರೆ
ಎಂದು ಬಹಿರಂಗ ಪಡಿಸಿದರು. ‘ಅವರು ಗೋವಾದ ಮುಖ್ಯಮಂತ್ರಿ ಮತ್ತು ಅವರು ಸ್ವಸ್ಥರಾಗಿಲ್ಲ ಎಂಬುದು ವಾಸ್ತವ. ಅವರಿಗೆ ಮೇಧೋಜೀರಕ ಗ್ರಂಥಿ ಕ್ಯಾನ್ಸರ್ ಇದೆ. ಈ ವಾಸ್ತವಾಂಶವನ್ನು
ಮುಚ್ಚಿಡುವ ಪ್ರಶ್ನೆ ಇಲ್ಲ’ ಎಂದು ರಾಣೆ ಪತ್ರಕರ್ತರೊಂದಿಗೆ
ಮಾತನಾಡುತ್ತಾ ಹೇಳಿದರು. ಮುಖ್ಯಮಂತ್ರಿಯವರ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ವಾಸ್ತವಾಂಶವನ್ನು ತಿಳಿಸಬೇಕು ಮತ್ತು ಪರಿಕ್ಕರ್ ಅವರು ಆಡಳಿತ ನಡೆಸಲು ಸಮರ್ಥರಾಗಿ ಇದ್ದಾರೆಯೇ ಅಥವಾ ಇಲ್ಲವೇ ಎಂದು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸುತ್ತಿರುವ
ಕಾಂಗ್ರೆಸ್ ಮಾಹಿತಿ ಬಹಿರಂಗ ಪಡಿಸಲು ನಾಲ್ಕು ದಿನಗಳ ಗಡುವು ನೀಡಿ ಇಲ್ಲದೇ ಇದ್ದಲ್ಲಿ ನ್ಯಾಯಾಲಯದ ಮೆಟ್ಟಿಲು ಏರುವುದಾಗಿ ಎಚ್ಚರಿಸಿತ್ತು.
‘ಅವರಿಗೆ ಕುಟುಂಬದ ಜೊತೆಗೆ ಶಾಂತಿ ಇರಲು ಬಿಡಿ. ಗೋವಾದ ಜನರಿಗೆ ಸೇವೆ ಸಲ್ಲಿಸಿರುವ ಅವರು ಅಷ್ಟು ಹಕ್ಕು ಇದೆ. ಅವರು ಕುಟುಂಬದ ಜೊತೆಗೆ ಇರಲು ಬಯಸಿದರೆ ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.
ಅದನ್ನು ಘೋಷಿಸುವುದು ಕುಟುಂಬಕ್ಕೆ ಬಿಟ್ಟ ವಿಚಾರ’ ಎಂದು ರಾಣೆ ಹೇಳಿದರು. ಮುಖ್ಯಮಂತ್ರಿಯವರ ಆರೋಗ್ಯ ದ ವಿಚಾರದಲ್ಲಿ ರಾಜಕೀಯ ನಡೆಸುತ್ತಿರುವುದಕ್ಕಾಗಿ ಕಾಂಗ್ರೆಸ್ಸನ್ನು ಟೀಕಿಸಿದ ರಾಣೆ ’ಅವರ ಆರೋಗ್ಯ ಸ್ಥಿತಿಯನ್ನು ಔಪಚಾರಿಕವಾಗಿ ತಿಳಿಯುವ ಸಲುವಾಗಿಯೇ ಕಾಂಗ್ರೆಸ್ ಕೋರ್ಟಿಗೆ ಹೋಗ ಬಯಸುವುದಿದ್ದರೆ, ಹಾಗೆ ಮಾಡಲು ಅದು ಸಂಪೂರ್ಣ ಮುಕ್ತವಾಗಿದೆ ಎಂದು ನುಡಿದರು.
ಪರಿಕ್ಕರ್ ಅವರು ಕಳೆದ ೭ ತಿಂಗಳುಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದು ವಾಪಸಾದ ಬಳಿಕ ಈಗ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಮನೆಯಲ್ಲೇ ಅವರಿಗೆ ಚಿಕತ್ಸೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿದ್ದವು.
2016: ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸಿಂಧೂ ನದಿಗೆ ಅಣೆಕಟ್ಟೆ ನಿರ್ಮಿಸುವ ಪಾಕಿಸ್ತಾನದ ಯೋಜನೆಗೆ ಹಣಕಾಸು ಸಹಕಾರ ನೀಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್(ಎಡಿಬಿ) ನಿರಾಕರಿಸಿತು. ಭಾರತದಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆಯಲು ಪಾಕಿಸ್ತಾನ ನಿರಾಕರಿಸಿದ ಹಿನ್ನೆಲೆಯಲ್ಲಿ 93 ಸಾವಿರ ಕೋಟಿ ರೂಪಾಯಿಗಳ (14 ಬಿಲಿಯನ್ ಡಾಲರ್) ಯೋಜನೆಗೆ ಹಣಕಾಸು ನೆರವು ನೀಡಲು ಎರಡು ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ತಿರಸ್ಕರಿಸಿತ್ತು. ಇದು ಬೃಹತ್ ಯೋಜನೆಯಾಗಿದ್ದು, ಸಹಕಾರ ನೀಡುವ ವಚನ ನೀಡಲಾಗುವುದಿಲ್ಲ ಎಂದು ಮಧ್ಯ ಏಷ್ಯಾ ಪ್ರಾದೇಶಿಕ ಆರ್ಥಿಕ ಸಹಕಾರ(ಸಿಎಆರ್ಇಸಿ) ಕಾರ್ಯಕ್ರಮದ 15ನೇ ಸಚಿವರ ಸಭೆಯಲ್ಲಿ ಅಕ್ಟೋಬರ್ 26ರಂದು ಎಡಿಬಿ ಅಧ್ಯಕ್ಷ ತಾಕಿಹಿಕೋ ನಕಾವೋ ಹೇಳಿದರು. ಈ ಯೋಜನೆ ಮೂಲಕ 4,500 ಮೆ.ವ್ಯಾ ವಿದ್ಯುತ್ ಉತ್ಪಾದನೆಯ ಸಾಧ್ಯತೆಯಿದೆ.
2016: ಬೆಂಗಳೂರು: ಬೆಂಗಳೂರು ನಗರದ ವರ್ತರು ಸಮೀಪದ ರಾಮಗೊಂಡನಹಳ್ಳಿ ನಿವಾಸಿ
ವಾಟರ್ ಟ್ಯಾಂಕರ್ ಚಾಲಕ ಜಿ. ಬಾಲಕೃಷ್ಣ ಅವರು. ತಮ್ಮ ಪರಿಶ್ರಮದಿಂದ ವಿಶ್ವವೇ ತನ್ನೆಡೆಗೆ ತಿರುಗಿ ನೋಡುವಂತ ಸಾಧನೆಯೊಂದನ್ನು ಮಾಡಿದರು.
ಫಿಲಿಪೈನ್ಸ್ನಲ್ಲಿ ನಡೆದ 5ನೇ ಏಷ್ಯಾ ಬಾಡಿಬಿಲ್ಡಿಂಗ್ ಚಾಂಪಿಯನ್ಷಿಪ್ ಫೈನಲ್ನಲ್ಲಿ ವಿಜೇತರಾಗಿ ಹೊರಹೊಮ್ಮುವ ಮೂಲಕ ವಿಸ್ಟರ್ ಏಷ್ಯಾ ಗೌರವಕ್ಕೆ ಅವರು
ಭಾಜನರಾದರು. ಪರಿಶ್ರಮದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರು ಪ್ರತ್ಯಕ್ಷ ಉದಾಹರಣೆ. ಬಿಡುವಿನ ಸಮಯದಲ್ಲಿ ಜಿಮ್ ಬೋಧಕರಾಗಿ ಸಹ ಕಾರ್ಯನಿರ್ವಹಿಸುತ್ತಿದ್ದರು. 25ರ ಹರೆಯದ ಬಾಲಕೃಷ್ಣ ಈ ಕುರಿತು ಪ್ರತಿಕ್ರಿಯಿಸಿ, ನನ್ನ ಸಾಧನೆಗೆ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ. ಪ್ರಶಸ್ತಿಯಿಂದ ದೊರೆತ ಮೊತ್ತ ಕುಟುಂಬಕ್ಕೆ ಆರ್ಥಿಕ ಸಹಾಯವಾಗಲಿದ್ದು, ನನ್ನ ಈ ಸಾಧನೆಯ ಹಿಂದೆ ತಾಯಿ ಪಾರ್ವತಮ್ಮ ಮತ್ತು ಸಹೋದರ ರಾಜೇಶ್ ಅವರ ಪರಿಶ್ರಮ ಕೂಡ ಇದೆ ಎಂದು ತಿಳಿಸಿದರು. ಬಾಲಕೃಷ್ಣ ಅವರು ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರ ದೊಡ್ಡ ಅಭಿಮಾನಿ. ಇನ್ನು ತಮ್ಮ ದೇಹ ಸೌಂದರ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಡಯೇಟ್ ಮಾಡುತ್ತೇನೆ. 750 ಗ್ರಾಂ ಚಿಕನ್,
25 ಮೊಟ್ಟೆ, 300 ಗ್ರಾಂ ಅನ್ನ,
250 ಗ್ರಾಂ ತರಕಾರಿ, ಮೀನು ಮತ್ತು ಹಣ್ಣುಗಳನ್ನು ಸೇವಿಸುತ್ತಿರುವುದಾಗಿ ಮಾಹಿತಿ ನೀಡಿದರು.
2016:
ನವದೆಹಲಿ: ವಿವಾದಿತ ಹೇಳಿಕೆಯಿಂದಲೇ ಸುದ್ದಿಯಾಗುತ್ತಿದ್ದ ಇಸ್ಲಾಂ ಧರ್ಮ ಪ್ರಚಾರಕ ಜಕೀರ್ ನಾಯಕ್ ಅವರ ಎನ್ಜಿಒ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ (ಐಆರ್ಎಫ್) ಶೀಘ್ರದಲ್ಲೇ ನಿಷೇಧಕ್ಕೊಳಗಾಗಲಿದೆ. ಉಗ್ರ ನಿಗ್ರಹ ಕಾಯ್ದೆಯಡಿಯಲ್ಲಿ ಐಆರ್ಎಫ್ಗೆ ನಿಷೇಧ ಹೇರಲು ಈಗಾಗಲೇ ಕೇಂದ್ರ ಗೃಹ ಸಚಿವಾಲಯ ತಯಾರಿ ನಡೆಸಿದೆ ಎಂದು ಸುದ್ದಿ ಮೂಲಗಳು
ತಿಳಿಸಿದವು. ಕಾನೂನು ವಿರುದ್ಧ ಚಟುವಟಿಕೆ ನಿಯಂತ್ರಣ ಕಾಯ್ದೆ ಪ್ರಕಾರ ಐಆರ್ಎಫ್ನ್ನು ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗುವುದು. ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪವಿರುವ ಪೀಸ್ ಟಿ.ವಿ ಜತೆ ಪ್ರಸ್ತುತ ಸಂಘಟನೆ ನಂಟು ಇರಿಸಿದೆ ಎಂದು ಗೃಹ ಸಚಿವಾಲಯ ನಡೆಸಿದ ತನಿಖೆಯಿಂದ ತಿಳಿದು ಬಂದಿರುವುದಾಗಿ ಮೂಲಗಳು ಹೇಳಿದವು. ಜಕೀರ್ ನಾಯಕ್ ಅವರು ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಮೂಲಕ ಭಯೋತ್ಪಾದನೆಗೆ ಪ್ರೇರೇಪಿಸುತ್ತಾರೆ ಎಂದು ಮಹಾರಾಷ್ಟ್ರ ಪೊಲೀಸರು ನಾಯಕ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲದೆ ನಾಯಕ್ ಅವರು ಪೀಸ್ ಟೀವಿಯಲ್ಲಿ ಕಾರ್ಯಕ್ರಮ ನೀಡುವುದಕ್ಕಾಗಿ ವಿದೇಶದಿಂದ ಹಣ ಪಡೆದಿದ್ದರು. ಪೀಸ್ ಟಿ.ವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಭಾರತದಲ್ಲಿ ತಯಾರಿಸಿದ್ದು, ಪ್ರಚೋದನಾಕಾರಿ ಭಾಷಣಗಳನ್ನು ಇದರಲ್ಲಿ ಪ್ರಸಾರ ಮಾಡಲಾಗಿದೆ. ಜಕೀರ್ ನಾಯಕ್ ಅವರು ತಮ್ಮ ಭಾಷಣದಲ್ಲಿ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಪೀಸ್ ಟಿ.ವಿ ಮೂಲಕ ಕರೆ ನೀಡಿದ್ದರು. ಈ ಎಲ್ಲ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡು ಐಆರ್ಎಫ್ಗೆ ನಿಷೇಧ ಹೇರಲು ಗೃಹ ಸಚಿವಾಲಯ ತೀರ್ಮಾನಿಸಿದೆ ಎಂದು ಮೂಲಗಳು
ಹೇಳಿದವು.
2016:
ಕರಾಚಿ: ಸದ್ಯದ ಪರಿಸ್ಥಿತಿಯಲ್ಲಿ ಬೇರೆ ದೇಶಗಳ ತಂಡಗಳನ್ನು ಪಾಕಿಸ್ತಾನಕ್ಕೆ ಆಹ್ವಾನಿಸುವುದು ಬೇಡ ಎಂದು ಮಾಜಿ ಕ್ರಿಕೆಟಿಗ ಶೊಯೇಬ್ ಅಖ್ತರ್ ಹೇಳಿದರು. ಎರಡು ದಿನಗಳ ಹಿಂದೆ ಕ್ವೆಟ್ಟಾದಲ್ಲಿ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿ ನಡೆದಿತ್ತು, ಈ ದಾಳಿಯಲ್ಲಿ 62 ಪೊಲೀಸರು, ಇಬ್ಬರು ಯೋಧರು ಹತ್ಯೆಯಾಗಿದ್ದು, 170 ಮಂದಿ ಗಾಯಗೊಂಡಿದ್ದರು. ಈ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅಖ್ತರ್, ಸದ್ಯ ದೇಶದಲ್ಲಿ ಭದ್ರತಾ ಸ್ಥಿತಿ ಉತ್ತಮವಾಗಿಲ್ಲ ಎಂದು ನುಡಿದರು. ಜಿಯೊ ಸುದ್ದಿವಾಹಿನಿಯಲ್ಲಿ ಮಾತನಾಡಿದ ಅಖ್ತರ್, ಇಲ್ಲಿನ ವಾತಾವರಣ ಸಹಜ ಸ್ಥಿತಿಗೆ ಮರಳುವವರೆಗೆ ಕಾಯಿರಿ. ಸುರಕ್ಷಿತ ವಾತಾವರಣ ಇಲ್ಲದೇ ಇರುವಾಗ ವಿದೇಶಿ ರಾಷ್ಟ್ರಗಳನ್ನು ಪಾಕಿಸ್ತಾನಕ್ಕೆ ಆಮಂತ್ರಿಸಿ ಅಪಾಯಕ್ಕೀಡಾಗುವುದು ಬೇಡ. ಅಂತರರಾಷ್ಟ್ರೀಯ ಕ್ರಿಕೆಟ್ ಪಾಕಿಸ್ತಾನಕ್ಕೆ ಮರಳಿ ಬರಲಿದೆ. ಆದರೆ ಒಂದಷ್ಟು ಕಾಲಾವಕಾಶ ಬೇಕು ಎಂದರು.
2016:
ಮುಂಬೈ: ಟಾಟಾ ಸಂಸ್ಥೆಯಿಂದ ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ಸಂಸ್ಥೆ, ಸೈರಸ್ ಮಿಸ್ತ್ರಿ ಆರೋಪ ಆಧಾರ ರಹಿತವಾದದ್ದು ಮತ್ತು ದುರುದ್ದೇಶಪೂರಿತವಾದದ್ದು ಎಂದು ಹೇಳಿತು. ಟಾಟಾ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮುಖ್ಯಸ್ಥನಾಗಿ ಕಂಪನಿಯನ್ನು ಬದಲಾವಣೆ ಮಾಡಲು ಹೊರಟಿದ್ದೆ. ಆದರೆ ರತನ್ ಟಾಟಾ ಅವರು ಪದೇ ಪದೇ ಮೂಗುತೂರಿಸುವ ಮೂಲಕ ನನ್ನನ್ನು ನಿಷ್ಕ್ರಿಯರನ್ನಾಗಿಸುತ್ತಿದ್ದರು ಎಂದು ಮಿಸ್ತ್ರಿ ಆಪಾದನೆ ಮಾಡಿದ್ದರು. ಅದೇ ವೇಳೆ ತನಗೆ ಸಮರ್ಥನೆ ಮಾಡಿಕೊಳ್ಳಲು ಅವಕಾಶವನ್ನೂ ನೀಡದೇ ವಜಾ ಗೊಳಿಸಲಾಗಿದೆ. ಈ ವಿಚಾರದಲ್ಲಿ ಟಾಟಾ ಕಂಪನಿ ತನ್ನ ಘನತೆಗೆ ತಕ್ಕಂತೆ ನಡೆದುಕೊಂಡಿಲ್ಲ. ನನ್ನನ್ನು ವಜಾಗೊಳಿಸಿದ ರೀತಿಯಿಂದ ದಿಗ್ಭ್ರಮೆಯಾಗಿದೆ ಎಂದು ಮಿಸ್ತ್ರಿ ನಿರ್ದೇಶಕ ಮಂಡಳಿಗೆ ಇ-ಮೇಲ್ ರವಾನಿಸಿದ್ದರು. ಟಾಟಾ ಕಂಪನಿಯಿಂದ ವಜಾಗೊಂಡ ನಂತರ ಮಿಸ್ತ್ರಿ ಮಾಡಿರುವ ಆರೋಪಗಳ ಬಗ್ಗೆ ವಿವರಣೆ ನೀಡಬೇಕು ಎಂದು ಮುಂಬೈ ಷೇರು ಮಾರುಕಟ್ಟೆ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ (ಎನ್ಎಸ್ಇ) ಟಾಟಾ ಕಂಪನಿಗೆ ಒತ್ತಾಯಿಸಿದ್ದವು. ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್, ಮಿಸ್ತ್ರಿಯವರ ಆರೋಪಗಳು ಸತ್ಯಕ್ಕೆ ದೂರವಾದುದು. ಸಮಯ ಬಂದಾಗ ನಾವು ತಕ್ಕ ದಾಖಲೆಗಳನ್ನು ಬಹಿರಂಗ ಪಡಿಸುತ್ತೇವೆ ಎಂದು ಹೇಳಿತು.
2016: ರಾಂಚಿ: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತೊಂದು ವಿಶ್ವ ದಾಖಲೆ ಸೃಷ್ಟಿಸಿದರು. ಭಾರತ– ನ್ಯೂಜಿಲೆಂಡ್ ನಡುವಿನ 4ನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 45 ರನ್ ಗಳಿಸುವ ಮೂಲಕ ಅಂತಾ ರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ವೇಗವಾಗಿ 7500 ರನ್ ಕಲೆಹಾಕಿದ ಹೆಗ್ಗಳಿಕೆಗೆ ಅವರು ಪಾತ್ರರಾದರು. ಈ ಹಿಂದೆ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿವಿಲಿರ್ಯಸ್ 174 ಇನ್ನಿಂಗ್ಸ್‌ನಲ್ಲಿ 7500 ರನ್ ಗಳಿಸಿದ್ದರು. ಆದರೆ ವಿರಾಟ್ ಕೊಹ್ಲಿ 167 ಇನ್ನಿಂಗ್ಸ್‌ಗಳಲ್ಲಿ 7500 ರನ್ ಗಳಿಸಿದ್ದು, ಎಬಿ ಡಿವಿಲಿರ್ಯಸ್ ಅವರ ದಾಖಲೆಯನ್ನು ಹಿಂದಿಕ್ಕಿದರು.
2016: ದುಬೈ: ಮಾತನಾಡುವ ಗಿಣಿಯೊಂದು ಮನೆಯಲ್ಲಿರಲಿ ಎಂದು ಎಷ್ಟೋ ಜನ ಹಂಬಲಿಸುತ್ತಾರೆ. ಅದರಂತೆ ಪ್ರೀತಿಯಿಂದ ತಂದ ಗಿಣಿ ತನ್ನ ಮಾಲೀಕನ ಅಕ್ರಮ ಸಂಬಂಧವನ್ನೇ ಬಯಲುಗೊಳಿಸುವ ಮೂಲಕ ಸುದ್ದಿ ಮಾಡಿತು. ನಡೆದಿದ್ದಿಷ್ಟು... ಕುವೈತ್ನ ವ್ಯಕ್ತಿಯೊಬ್ಬ ತನ್ನ ಮನೆಕೆಲಸದಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಷಯವನ್ನು ಗಿಣಿ ಆತನ ಪತ್ನಿಗೆ ತಿಳಿಸಿತು.. ಮನೆಯೊಡೆಯ ಮತ್ತು ಮನೆಕೆಲಸದಾಕೆ ನಡುವಿನ ಸಂಭಾಷಣೆಯನ್ನು ಅನುಕರಿಸಿರುವ ಗಿಣಿ ಅದರ ಪೂರ್ಣ ಪಾಠವನ್ನು ಮನೆಯೊಡತಿಯ ಮುಂದೆ ಒಪ್ಪಿಸಿತು. ಇದರಿಂದ ಕೆಂಡಾಮಂಡಲವಾದ ಪತ್ನಿ ಪೊಲೀಸ್ ಠಾಣೆಯ ಮೆಟ್ಟಿಲೇರಿ, ತನಗೆ ನ್ಯಾಯ ಕೊಡಿಸಿ ಎಂದು ಕೋರಿದರು.
ಗಿಣಿಯ ಸಾಕ್ಷ್ಯ ಆಧಾರದ ಮೇಲೆ ಪತಿಯ ಮೇಲೆ ಕ್ರಮ ತೆಗೆದುಕೊಳ್ಳುವುದು ಕಷ್ಟ. ಗಿಣಿ ಟಿವಿ ಅಥವಾ ರೇಡಿಯೋದಲ್ಲಿ ಬಂದ
ಸಂಭಾಷಣೆಯನ್ನು ಅನುಕರಿಸಿರುವ ಸಾಧ್ಯತೆ ಇದೆ. ಈ ಪ್ರಕರಣದ ಕುರಿತು ಹೆಚ್ಚಿನ ಸಾಕ್ಷ್ಯಾಧಾರಗಳು ಬೇಕಾಗುತ್ತದೆ. ಹಾಗಾಗಿ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೋರ್ಟ್ ತಿಳಿಸಿತು. ಕೋರ್ಟ್ ತೀರ್ಪು ಕೇಳಿ ಪತಿ ನಿಟ್ಟುಸಿರು ಬಿಟ್ಟ ಎಂದು
ವರದಿ ಹೇಳಿತು.
2016: ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರು ಮತ್ತು ಸೈನಿಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮನಾದ.
ಈ ಕುರಿತು ಭಾರತೀಯ ಸೇನೆ ಸ್ಪಷ್ಟನೆ ನೀಡಿದ್ದು, ಉಗ್ರರು ಗಡಿ ನಿಯಂತ್ರಣಾ ರೇಖೆ ದಾಡಿ ಒಳನುಸುಳಲು ಪ್ರಯತ್ನಿಸಿದಾಗ ಗುಂಡಿನ ಕಾಳಗ ನಡೆಯಿತು. ಈ ಸಂದರ್ಭದಲ್ಲಿ ಓರ್ವ ಯೋಧ ಹುತಾತ್ಮನಾದ.. ಇನ್ನೋರ್ವ ಯೋಧನಿಗೆ ಗಂಭೀರ ಗಾಯವಾಯಿತು ಎಂದು ತಿಳಿಸಿತು. ಇದೇ ಸಂದರ್ಭದಲ್ಲಿ ಬಿಎಸ್ಎಫ್ ಪಡೆ ಆರ್.ಎಸ್ ಪುರಾ ಮತ್ತು ಅರ್ನಿಯಾ ವಲಯದಲ್ಲಿ ಓರ್ವ ಪಾಕ್ ರೆಂಜರ್ನನ್ನು ಸಾಯಿಸಿರುವುದಾಗಿ ಮಾಹಿತಿ ನೀಡಿತು.
2016: ನವದೆಹಲಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪಂಜಾಬ್ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆ ನಡೆಯಿತು.. ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಹಿನ್ನಡೆ ಅನುಭವಿಸಿದ ಆಮ್ ಆದ್ಮಿ ಪಕ್ಷ ಇದೀಗ ಆವಾಜ್ ಎ ಪಂಜಾಬ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರಿಗೆ ಆಹ್ವಾನ ನೀಡಿ, ಉಪಮುಖ್ಯಮಂತ್ರಿ ಆಫರ್ ನೀಡಿತ ಎಂದು ಹೇಳಲಾಯಿತು. ಆಮ್ ಆದ್ಮಿ ಪಕ್ಷ ಸಿಧು ಅವರ ಪಕ್ಷವನ್ನು ತಮ್ಮ ಪಕ್ಷದೊಂದಿಗೆ ವಿಲೀನ ಗೋಳಿಸುವ ಮೂಲಕ ಮತ ಬೇಟೆ ಆಡಲು ರಣತಂತ್ರ ರೂಪಿಸಿದೆ. ಈ ನಡುವೆ ಕಾಂಗ್ರೆಸ್ ಕೂಡ ಇದೇ ತಂತ್ರವನ್ನು ಅನುಸರಿಸುತ್ತಿದೆ. ಆದರೆ ಆಮ್ ಆದ್ಮಿ ಸಿಧು ಮತ್ತು ಅವರ ಪಕ್ಷಕ್ಕೆ ಆಫರ್ ನೀಡಿರುವುದರಿಂದ ಅವರೆಡೆಗೆ ವಾಲುವ ಸಾಧ್ಯತೆ ಅಧಿಕ ಎನ್ನಲಾಯಿತು. ವಿಧಾನಸಭೆಯಲ್ಲಿ ಐದು ಸೀಟುಗಳನ್ನು ಸಹ ನೀಡುವುದಾಗಿ ಭರವಸೆ ನೀಡಿದೆ.
ಸಿಧು ಮತ್ತು ಅವರ ಪಕ್ಷ ಆಮ್ ಆದ್ಮಿ ಪಕ್ಷ ಸೇರಿದರೆ 117 ವಿಧಾನ ಸಭಾ ಕ್ಷೇತ್ರದಲ್ಲಿ 96 ಸೀಟುಗಳನ್ನು ಸುಲಭವಾಗಿ ಜಯಿಸಬಹುದು ಎಂದು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರು ಲೆಕ್ಕ ಹಾಕಿದ್ದಾರೆ ಎಂದು ವರದಿಗಳು ತಿಳಿಸಿದವು. ಪಂಜಾಬ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು 59 ಸ್ಥಾನ ಅಗತ್ಯ.
ಸಿಧು ಮತ್ತು ಅವರ ಪಕ್ಷ ಆಮ್ ಆದ್ಮಿ ಪಕ್ಷ ಸೇರಿದರೆ 117 ವಿಧಾನ ಸಭಾ ಕ್ಷೇತ್ರದಲ್ಲಿ 96 ಸೀಟುಗಳನ್ನು ಸುಲಭವಾಗಿ ಜಯಿಸಬಹುದು ಎಂದು ಆಪ್ ಮುಖ್ಯಸ್ಥ ಕೇಜ್ರಿವಾಲ್ ಅವರು ಲೆಕ್ಕ ಹಾಕಿದ್ದಾರೆ ಎಂದು ವರದಿಗಳು ತಿಳಿಸಿದವು. ಪಂಜಾಬ್ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು 59 ಸ್ಥಾನ ಅಗತ್ಯ.
2008: ಬಾಂಗ್ಲಾದೇಶದ ನೈಋತ್ಯ ದಿಕ್ಕಿನ ಕಡಲ ತೀರದಲ್ಲಿ ಈದಿನ (27ಅಕ್ಟೋಬರ್ 2008) ಬೆಳಗಿನ ಜಾವ ಬೀಸಿದ ಚಂಡ ಮಾರುತದಿಂದ ಉಂಟಾದ ಅವಘಡಗಳಲ್ಲಿ 10 ಮಂದಿ ಸಾವಿಗೀಡಾಗಿ ಹಲವಾರು ಮಂದಿ ನಾಪತ್ತೆಯಾದರು. ಈ ಚಂಡ ಮಾರುತದಲ್ಲಿ ಸತ್ತವರು ಬಹುತೇಕ ಮನೆಗಳು ಕುಸಿದು ಅವಶೇಷಗಳ ಅಡಿ ಸಿಲುಕಿ ಸತ್ತರು. ಈ ಬಾರಿಯ ಚಂಡಮಾರುತವನ್ನು 'ರಶ್ಮಿ' ಎಂದು ಹೆಸರಿಸಲಾಯಿತು. ಕಳೆದ ಬಾರಿ ಇದೇ ಸಮಯಕ್ಕೆ ಕರಾವಳಿಯಲ್ಲಿ ಬೀಸಿ ಸಾಕಷ್ಟು ಪ್ರಮಾಣದಲ್ಲಿ ಹಾನಿ ಮಾಡಿದ್ದ ಚಂಡಮಾರುತಕ್ಕೆ 'ಸಿದ್ರ' ಎಂದು ಹೆಸರಿಸಲಾಗಿತ್ತು.
2007: ಅತ್ಯಂತ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ಕೈಜೋಡಿಸಿದ ಬಿಜೆಪಿ ಮತ್ತು ಜನತಾದಳ (ಎಸ್) ಜಂಟಿಯಾಗಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಗೆ ಅವಕಾಶ ಕೋರುವ ಪತ್ರಗಳನ್ನು ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ಸಲ್ಲಿಸಿದವು. ಸಂವಿಧಾನ ಪ್ರಕಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಇದಕ್ಕೆ ರಾಜ್ಯಪಾಲರು ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ ಕಾಂಗ್ರೆಸ್ ಜೊತೆಗೆ ಸಖ್ಯ ಬೆಳೆಸುವ ಯತ್ನದಲ್ಲಿ ಜನತಾದಳದಲ್ಲಿ ಪರ್ಯಾಯ ನಾಯಕರಾಗಲು ಹೊರಟಿದ್ದ ಎಂ.ಪಿ.ಪ್ರಕಾಶ್ ಅವರ ಆಸೆಗೆ ಆರಂಭದಲ್ಲೇ ವಿಘ್ನ ಉಂಟಾಯಿತು.
2007: ಮಾಜಿ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜ್ಯೋತಿಷಿಗಳ ಸಲಹೆ ಮೇರೆಗೆ ತಮ್ಮ ಹೆಸರನ್ನು 'ಬಿ.ಎಸ್. ಯಡ್ಯೂರಪ್ಪ' ಎಂಬುದಾಗಿ ಬದಲಾಯಿಸಿಕೊಂಡರು. ಅಕ್ಟೋಬರ್ 11ರಂದೇ ಪ್ರಮಾಣಪತ್ರ ಸಲ್ಲಿಸಿ ಈ ಬದಲಾವಣೆ ಮಾಡಲಾಗಿದೆ ಎಂದು ಅವರ ಪತ್ರಿಕಾ ಪ್ರಕಟಣೆ ತಿಳಿಸಿತು. ಕೆಲವೇ ದಿನಗಳಲ್ಲಿ ಇನ್ನೊಂದು ಪ್ರಕಟಣೆ ನೀಡಿದ ಅವರು ಇಂಗ್ಲಿಷಿನಲ್ಲಿ ಮಾತ್ರ 'ಯಡಿಯೂರಪ್ಪ' ಬದಲಿಗೆ 'ಯಡ್ಯೂರಪ್ಪ' ಎಂದು ಬದಲಿಸಲಾಗಿದ್ದು, ಕನ್ನಡದಲ್ಲಿ ಉಚ್ಚಾರಣೆ ಹಿಂದಿನಂತೆಯೇ ಇರುತ್ತದೆ ಎಂದು ಸ್ಷಷ್ಟ ಪಡಿಸಿದರು.
2007: ಜಾರ್ಖಂಡ್ ರಾಜ್ಯದ ಮಾಜಿ ಮುಖ್ಯಮಂತ್ರಿ, ಸಂಸದ ಬಾಬುಲಾಲ್ ಮರಾಂಡಿ ಅವರ ಪುತ್ರ ಪುತ್ರ ಅನೂಪ್ ಸೇರಿದಂತೆ 18 ಜನರನ್ನು ಬಿಹಾರ ಗಡಿಗೆ ಹೊಂದಿಕೊಂಡಿರುವ ಗಿರಿದಿಹ್ ಜಿಲ್ಲೆಯ ಚಿಲ್ಖಾಡಿಯಾ ಗ್ರಾಮದಲ್ಲಿ ಮಾವೋವಾದಿ ಉಗ್ರರು ಹತ್ಯೆ ಮಾಡಿದರು. ರಾತ್ರಿ 1 ಗಂಟೆಗೆ ಗ್ರಾಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ದಾಳಿ ನಡೆಸಿದ 25ರಿಂದ 30 ಜನ ಮಾವೋವಾದಿ ಉಗ್ರರು ಗುಂಡಿನ ಮಳೆಗರೆಯುವುದರೊಂದಿಗೆ ಬಾಂಬ್ಗಳನ್ನು ಸಿಡಿಸಿದರು. ಘಟನಾ ಸ್ಥಳದಲ್ಲಿ 14 ಜನರು ಸಾವಿಗೀಡಾದರು. ನಂತರ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರು ಮೃತರಾದರು.
2007: ಉತ್ತರ ಚೀನಾದ ಕೆಲವು ಭಾಗಗಳಲ್ಲಿ ನಶಿಸಿವೆ ಎಂದು ನಂಬಲಾಗಿದ್ದ ಅಪಾಯಕಾರಿ ಹುಲಿಗಳು ಇನ್ನೂ ಅಸ್ತಿತ್ವದಲ್ಲಿ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಹುಲಿ ಬೇಟೆಯನ್ನು ನಿಷೇಧಿಸಲಾಯಿತು. ಈ ಪ್ರದೇಶದಲ್ಲಿ ಕಂಡು ಬಂದ ಹುಲಿಗಳು ನಶಿಸಿಹೋಗುತ್ತಿರುವ ಪ್ರಾಣಿ ಸಂಕುಲಕ್ಕೆ ಸೇರಿವೆ ಎಂದು ತಜ್ಞರು ದೃಢಪಡಿಸಿದ್ದಾರೆ. ಈ ಪ್ರಾಂತ್ಯದಲ್ಲಿ 1950ರಲ್ಲಿ ಇಂತಹ 4000 ಹುಲಿಗಳು ಇದ್ದವು.
2007: 'ಕರ್ನಾಟಕ ರಾಜ್ಯದಲ್ಲಿ ಗೋ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲಾ ಸ್ವಯಂ ಸೇವಾ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ದುಂಡು ಮೇಜಿನ ಸಭೆಯೊಂದನ್ನು ನಡೆಸುವ ಮೂಲಕ, ಗೋ ಸಂರಕ್ಷಣೆ ಕುರಿತ ಕೆಲ ನಿರ್ಣಯಗಳನ್ನು ಕೈಗೊಳ್ಳುವ ಅಗತ್ಯವಿದೆ' ಎಂದು ಸಂಸತ್ ಸದಸ್ಯ ಅನಂತಕುಮಾರ್ ಬೆಂಗಳೂರಿನಲ್ಲಿ ಅಭಿಪ್ರಾಯ ಪಟ್ಟರು. ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಗಿರಿನಗರದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಗೋತಳಿಗಳ ಸಂರಕ್ಷಣೆ ಮತ್ತು ಸಂವರ್ಧನೆಯ ಮಹತ್ವ ಸಾರುವ `ಗೋಸಂಧ್ಯಾ' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಗೋ ಸಂಪತ್ತಿನಿಂದ ಪರಿಸರಕ್ಕೆ ಆಗುವ ಅನುಕೂಲ, ಗ್ರಾಮೀಣ ಪ್ರದೇಶದ ಆರ್ಥಿಕತೆ ಹಾಗೂ ಗೋ ಸಂಪತ್ತಿಗೆ ಇರುವ ಸಂಬಂಧವನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಚರ್ಚೆ ನಡೆಯಬೇಕು. ಆ ಮೂಲಕ ರಾಷ್ಟ್ರೀಯ ಗೋ ನೀತಿ ಜಾರಿಗೆ ತರುವ ಅವಶ್ಯಕತೆ ಇದೆ' ಎಂದು ಅವರು ಪ್ರತಿಪಾದಿಸಿದರು. ರಾಜ್ಯದಲ್ಲಿ 300ರಷ್ಟಿದ್ದ ಕಸಾಯಿಖಾನೆಗಳು ಇದೀಗ 36 ಸಾವಿರಕ್ಕೆ ಏರಿದೆ. ಇದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಲ್ಲದೆ ಮನೆಗೊಂದು ಮರದಂತೆ ಮನೆಗೊಂದು ದೇಶಿ ತಳಿಯ ಗೋವು ಸಾಕುವ ಸಂಕಲ್ಪವನ್ನು ಎ್ಲಲರೂ ತೊಡಬೇಕು' ಎಂದು ಅವರು ಆಗ್ರಹಿಸಿದರು. ಹಿರಿಯ ರಂಗ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಮಾತನಾಡಿ, ನವಿಲನ್ನು ಕೊಂದವರಿಗೆ ಶಿಕ್ಷೆ ನೀಡುವ ಕಾನೂನು ನಮ್ಮ ದೇಶದಲ್ಲಿದೆ. ಆದರೆ ಗೋವನ್ನು ಕೊಂದು ತಿನ್ನುವವರಿಗೆ ಯಾವ ಶಿಕ್ಷೆಯಿಲ್ಲ. ಗೋವನ್ನು ತಿನ್ನುವುದು ನಮ್ಮ ಸಂಸ್ಕೃತಿಯೇ?' ಎಂದು ಪ್ರಶ್ನಿಸಿದರು. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಶ್ವಭಾರತಿ ಗೃಹನಿರ್ಮಾಣ ಸಂಘದ ಅಧ್ಯಕ್ಷ ಬಿ.ಕೃಷ್ಣ ಭಟ್, ಬಿಜೆಪಿ ನಗರ ಉಪಾಧ್ಯಕ್ಷ ರವಿ ಸುಬ್ರಹ್ಮಣ್ಯ, ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಹಾಜರಿದ್ದರು.
2006: ರಜಪೂತ ವಂಶಜ ಮಹಾರಾಜ ಎರಡನೆಯ ಗಜಸಿಂಗ್ ಅವರಿಗೆ ನ್ಯೂಯಾರ್ಕಿನಲ್ಲಿ ಈ ಸಾಲಿನ ಅಮೆರಿಕದ ಪ್ರತಿಷ್ಠಿತ ಹಾಡ್ರಿಯನ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಪ್ರಾಚೀನ ವಾಸ್ತುಶಿಲ್ಪ ಸಂರಕ್ಷಣೆಗೆ ವಹಿಸಿರುವ ಆಸ್ಥೆಯನ್ನು ಪರಿಗಣಿಸಿ ಅವರಿಗೆ ಈ ಪುರಸ್ಕಾರ ನೀಡಲಾಯಿತು. ಅಮೆರಿಕದಲ್ಲಿರುವ ಭಾರತದ ರಾಯಭಾರಿ ರೊನೆನ್ ಸೇನ್ ಅವರು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಿ ಮಹಾರಾಜ ಗಜಸಿಂಗ್ ಅವರನ್ನು ಸನ್ಮಾನಿಸಿದರು. ಶತಮಾನಗಳಷ್ಟು ಹಳೆಯದಾದ ವಾಸ್ತುಶಿಲ್ಪ ಹಾಗೂ ಅವುಗಳ ಸಂರಕ್ಷಣೆಗೆ ನೀಡುವ ಮಹತ್ತರ ನೆರವು ಆಧರಿಸಿ ಅಮೆರಿಕದ `ವಿಶ್ವ ಸ್ಮಾರಕ ನಿಧಿ' (ವರ್ಲ್ಡ್ ಮಾನ್ಯುಮೆಂಟ್ ಫಂಡ್) ಸೇವಾ ಸಂಸ್ಥೆಯು ಪ್ರತಿವರ್ಷ ಈ ಪ್ರಶಸ್ತಿಯನ್ನು ನೀಡುತ್ತದೆ.
2006: ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ವರನಟ ಡಾ. ಡಾ. ರಾಜಕುಮಾರ್ ಅವರ ಪಂಚಲೋಹದ ಪುತ್ಥಳಿಯನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣ ಮಾಡಿದರು.
2006: ಹಿರಿಯ ತಬಲಾ ವಾದಕ ಪ್ರೊ. ಕರವೀರಪ್ಪ ಶಿವಪ್ಪ ಹಡಪದ (ಕೆ. ಎಸ್. ಹಡಪದ) (76) ಗುಲ್ಬರ್ಗದಲ್ಲಿ ನಿಧನರಾದರು.
2006: ಅತ್ಯಾಚಾರ, ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಕೃತ ಕಾಮಿ ಉಮೇಶ ರೆಡ್ಡಿಗೆ ಬೆಂಗಳೂರು ನಗರದ ಏಳನೇ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿತು. ನ್ಯಾಯಾಧೀಶರಾದ ಕೆ. ಸುಕನ್ಯಾ ಈ ತೀರ್ಪು ನೀಡಿದರು. 1998ರ ಫೆಬ್ರುವರಿ 28ರ ಮಧ್ಯಾಹ್ನ ಉಮೇಶ ರೆಡ್ಡಿ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಜಯಶ್ರೀ ಮರಡಿ ಸುಬ್ಬಯ್ಯ (37) ಮನೆಗೆ ನುಗ್ಗಿ ಅವರ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಹತ್ಯೆಗೈದು ಮನಯಲ್ಲಿದ್ದ ನಗನಾಣ್ಯ ದರೋಡೆ ಮಾಡಿ ಪರಾರಿಯಾಗಿದ್ದ.
2000: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಂದ ವಿಶ್ವದಾಖಲೆ. ಭಾರತದ ವಿರುದ್ಧ ಶಾರ್ಜಾದಲ್ಲಿ ನಡೆದ ಕೋಕಾಕೋಲಾ ಏಕದಿನ ಪಂದ್ಯದಲ್ಲಿ 30 ರನ್ನುಗಳಿಗೆ 7 ವಿಕೆಟ್ ಉರುಳಿಸುವ ಮೂಲಕ ಅವರಿಂದ ಈ ದಾಖಲೆ ಸ್ಥಾಪನೆಯಾಯಿತು.
1999: ಲೋಕಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಪಿ.ಎಂ. ಸಯೀದ್ ಪುನರಾಯ್ಕೆಯಾದರು.
1992: ಕರ್ನಾಟಕದಲ್ಲಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಂಪುಟದ ಸಂಸದೀಯ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯ್ಲಿ ರಾಜೀನಾಮೆ ನೀಡಿದರು.
1969: ಚಂಡೀಗಢವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿ ಆಮರಣ ನಿರಶನ ನಡೆಸಿದ ಸಿಖ್ ಧುರೀಣ ದರ್ಶನ್ ಸಿಂಗ್ ಫೆರುಮಾನ್ ಅವರು ತಮ್ಮ ನಿರಶನದ 74ನೇ ದಿನವಾದ ಈದಿನ ಮೃತರಾದರು.
1947: ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಒಪ್ಪಂದಕ್ಕೆ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ಸಹಿ ಹಾಕಿದರು. ಪಾಕಿಸ್ಥಾನಿ ದಾಳಿಗಳ ವಿರುದ್ಧ ನೆರವು ನೀಡುವಂತೆ ಮನವಿ ಮಾಡಿದ ಅವರು ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆ ಮಾಡುವ ಕೊಡುಗೆಯನ್ನು ಮುಂದಿಟ್ಟರು. ಭಾರತ ಸರ್ಕಾರ ಮಹಾರಾಜ ಹರಿಸಿಂಗ್ ಅವರ ಈ ಕೊಡುಗೆಯನ್ನು ಅಂಗೀಕರಿಸಿ ಕಾಶ್ಮೀರಕ್ಕೆ ತನ್ನ ಸೇನೆಯನ್ನು ಕಳುಹಿಸಿತು. ಪಾಕಿಸ್ಥಾನಿ ಸರ್ಕಾರವು ಪಠಾಣರ ದಾಳಿಗಳಿಗೆ ಕಾಶ್ಮೀರವನ್ನು ದೂರಿತು ಹಾಗೂ ಕಾಶ್ಮೀರವನ್ನು ಭಾರತಕ್ಕೆ ಸೇರ್ಪಡೆಗೊಳಿಸಿದದನ್ನು ಮಾನ್ಯ ಮಾಡಲು ನಿರಾಕರಿಸಿತು.
1940: ಆರತಿ ಸಹಾ (1940-1994) ಜನ್ಮದಿನ. ಇವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿನ ಪ್ರಥಮ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1920: ಭಾರತದ ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಜನ್ಮದಿನ. ಇವರು 1997-2002ರ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.
1911: ಸಿಖ್ ಧಾರ್ಮಿಕ ನಾಯಕ ಸಂತ ಫತೇಸಿಂಗ್ (1911-72) ಜನ್ಮದಿನ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪಂಜಾಬಿ ಮಾತನಾಡುವ ಜನರಿಗಾಗಿ ಪ್ರತ್ಯೇಕ ರಾಜ್ಯ ಸ್ಥಾಪಿಸುವಂತೆ ಮಾಸ್ಟರ್ ತಾರಾಸಿಂಗ್ ಅವರ ಜೊತೆಗೂಡಿ ತೀವ್ರ ಪ್ರಚಾರ ಅಭಿಯಾನ ಕೈಗೊಂಡ ವ್ಯಕ್ತಿ ಫತೇಸಿಂಗ್.
1907: ಹರಿವಂಶರಾಯ್ ಬಚ್ಚನ್ ಜನ್ಮದಿನ. ಭಾರತೀಯ ಸಾಹಿತಿ, ಕವಿಯಾದ ಇವರು ಚಿತ್ರನಟ ಅಮಿತಾಭ್ ಬಚ್ಚನ್ ಅವರ ತಂದೆ.
1906: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27/10/1906-8/5/1971) ಜನ್ಮದಿನ. ಸಂಶೋಧನೆ, ವಿಮರ್ಷಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.
1904: ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಜತೀಂದ್ರನಾಥ ದಾಸ್ (1904-1929) ಜನ್ಮದಿನ. ಅವರು ಲಾಹೋರ್ ಜೈಲಿನಲ್ಲಿ ತಮ್ಮ ಆಮರಣ ನಿರಶನದ 63ನೇ ದಿನ ಮೃತರಾದರು.
1858: ಥಿಯೋಡೋರ್ ರೂಸ್ ವೆಲ್ಟ್ (1858-1919) ಜನ್ಮದಿನ. ಇವರು 1901-1909ರ ಅವಧಿಯಲ್ಲಿ ಅಮೆರಿಕದ 26ನೇ ಅಧ್ಯಕ್ಷರಾಗಿದ್ದರು.
1811: ಅಮೆರಿಕದ ಸಂಶೋಧಕ ಐಸಾಕ್ ಮೆರ್ರಿಟ್ ಸಿಂಗರ್ (1811-75) ಜನ್ಮದಿನ. ಗೃಹ ಬಳಕೆಗೆ ಬಳಸುವಂತಹ ಮೊತ್ತ ಮೊದಲ ಹೊಲಿಗೆ ಯಂತ್ರವನ್ನು ಇವರು ಅಭಿವೃದ್ಧಿ ಪಡಿಸಿದರು. ಕಂತು ಸಾಲ ಯೋಜನೆಯನ್ನು ಜಾರಿಗೆ ತಂದವರೂ ಇವರೇ. ಇವರ ಕಂತು ಸಾಲ ಯೋಜನೆ ಆಧುನಿಕ ಸಮಾಜದಲ್ಲಿ ವ್ಯಾಪಕ ಪ್ರಭಾವ ಬೀರಿತು.
No comments:
Post a Comment