Saturday, October 27, 2018

ಶಬರಿಮಲೈ ತೀರ್ಪು ಬೆಂಬಲಿಸಿದ್ದ ಸ್ವಾಮಿ ಆಶ್ರಮದ ಮೇಲೆ ದಾಳಿ


ಶಬರಿಮಲೈ ತೀರ್ಪು ಬೆಂಬಲಿಸಿದ್ದ ಸ್ವಾಮಿ ಆಶ್ರಮದ ಮೇಲೆ ದಾಳಿ

ತಿರುವನಂತಪುರಂ: ಕೇರಳದ ಪ್ರಸಿದ್ಧ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಬೆಂಬಲಿಸಿದ್ದ ತಿರುವನಂತಪುರದ ಕುಂಡಮನ್ ಕಡಾವೂವಿನಲ್ಲಿರುವ ಸ್ವಾಮಿ ಸಂದೀಪಾನಂದಾ ಗಿರಿ ಅವರ ಆಶ್ರಮದ ಮೇಲೆ ಅಪರಿಚಿತ ವ್ಯಕ್ತಿಗಳು 2018 ಅಕ್ಟೋಬರ್ 27ರ ಶನಿವಾರ ನಸುಕಿನಲ್ಲಿ  ದಾಳಿ ನಡೆಸಿದ ಘಟನೆ ಘಟಿಸಿದೆ.

ಆಶ್ರಮದೊಳಗೆ ನುಗ್ಗಿದ ದುಷ್ಕರ್ಮಿಗಳು ಎರಡು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವುದಾಗಿ ವರದಿ ವಿವರಿಸಿದೆ. ಸ್ವಾಮಿ ಗಿರಿ ಅವರು ಭಗವದ್ಗೀತಾ ಶಾಲೆಯ ನಿರ್ದೇಶಕರಾಗಿದ್ದಾರೆ.


ದಾಳಿಯ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀಧರನ್ ಪಿಳ್ಳೈ, ತಂಝಾಮೋನ್ ತಂತ್ರಿ ಹಾಗೂ ಪಂದಳಂ ರಾಜಮನೆತನದವರ ಕೈವಾಡ ಇದೆ ಎಂದು ಸ್ವಾಮಿ ಆಪಾದಿಸಿದ್ದಾರೆ.


 ಸಾರ್ವಜನಿಕವಾಗಿ ಯಾರು ಸತ್ಯ ಹೇಳುತ್ತಾರೋ ಅವರನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯರು ಘಟನೆ ಕುರಿತು ಮಾಹಿತಿ ನೀಡಿದ ನಂತರ ತನಗೆ ವಿಷಯ ತಿಳಿಯಿತು ಎಂದು ಸ್ವಾಮಿ ಹೇಳಿರುವುದಾಗಿ ಮಾತೃಭೂಮಿ ದೈನಿಕ ವರದಿ ಮಾಡಿತು.

ಸಂದೀಪಾನಂದ ಗಿರಿ ಸ್ವಾಮಿ ಅವರ ಆಶ್ರಮದ ಮೇಲೆ ನಡೆದಿರುವ ದಾಳಿ ಖಂಡನೀಯ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದಾರೆ. ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಸಮರ್ಥಿಸಿಕೊಳ್ಳಲು ಸಾಧ್ಯವಾಗದಿದ್ದಾಗ ರೀತಿ ದೈಹಿಕ ಹಲ್ಲೆ ನಡೆಸುವ ಪ್ರವೃತ್ತಿ ಹೆಚ್ಚಳವಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಕಾನೂನನ್ನು
ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ ಎಂದು ಪಿಣರಾಯಿ ಹೇಳಿದ್ದಾರೆ.

No comments:

Post a Comment