Sunday, October 21, 2018

ನೇತಾಜಿಗೆ ಪ್ರಧಾನಿ ಮೋದಿ ಗೌರವ, ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ

ನೇತಾಜಿಗೆ ಪ್ರಧಾನಿ ಮೋದಿ ಗೌರವ, ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ


ನವದೆಹಲಿ: ಆಜಾದ್ ಹಿಂದ್ ಫೌಜ್ ಸರ್ಕಾರ ಸ್ಥಾಪನೆಯ 75ನೇ ವರ್ಷಾಚರಣೆಯ ಅಂಗವಾಗಿ 21 ಅಕ್ಟೋಬರ್ 2018 ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಅರಳಿಸಿ, ನಾಮಫಲಕವನ್ನು ಅನಾವರಣಗೊಳಿಸಿದರು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೇವಲ ಒಂದು ಕುಟುಂಬದ ಅನುಕೂಲಕ್ಕಾಗಿ ನೇತಾಜಿ ಸುಭಾಶ್ ಚಂದ್ರ ಬೋಸ್ ಮತ್ತು ಸರ್ದಾರ್ ಪಟೇಲ್ ಅವರ ಕೊಡುಗೆಯನ್ನು ಗೌಣಗೊಳಿಸಲು ನಡೆಸಿದ ಯತ್ನಗಳಿಗಾಗಿ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿದರು.

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಹೋದರನ ಮಗ ಚಂದ್ರ ಕುಮಾರ ಬೋಸ್, ಐಎನ್ ನೇತಾರ ಲಾಲ್ತಿ ರಾಮ್ ಮತ್ತು ಬ್ರಿಗೇಡಿಯರ್ ಆರ್.ಎಸ್. ಚಿಕ್ಕಾರ ಅವರೂ ಸಂದರ್ಭದಲ್ಲಿ ಹಾಜರಿದ್ದರು.

1943 ಅಕ್ಟೋಬರ್ 21ರಂದು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿದ್ದರು.  ನೇತಾಜಿ ಬೋಸ್ ಅವರು ತಾತ್ಕಾಲಿಕ ಗಡೀಪಾರು ಭಾರತೀಯ ಸರ್ಕಾರದ ಮುಖ್ಯಸ್ಥರಾಗಿದ್ದರು.ನೇತಾಜಿ ಅವರು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಸಮಾನ ಅವಕಾಶಗಳಿರುವ ಭಾರತದ ಭರವಸೆಯನ್ನು ನೀಡಿದ್ದರು. ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಹೆಮ್ಮೆ ಹೊಂದಿದ್ದ ಹಾಗೂ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ ಸಮೃದ್ಧ ರಾಷ್ಟ್ರದ ವಚನವನ್ನು ಅವರು ನೀಡಿದ್ದರು. ಒಡೆದು ಆಳುವ ನೀತಿಯನ್ನು ಬೇರು ಸಹಿತವಾಗಿ ನಿರ್ಮೂಲನಗೈಯುವ ಭರವಸೆಯನ್ನು ಅವರು ಕೊಟ್ಟಿದ್ದರು. ಇಷ್ಟೊಂದು ವರ್ಷಗಳಾದರೂ ಅವರ ಕನಸುಗಳು ನನಸಾಗಿಯೇ ಉಳಿದವು ಎಂದು ಮೋದಿ ಹೇಳಿದರು.

ಅಗಣಿತ ತ್ಯಾಗ, ಬಲಿದಾನಗಳ ಬಳಿಕ ನಾವು ಸ್ವರಾಜ್ಯದತ್ತ ತಲುಪಿದ್ದೇವೆ. ಬಂದೂಕು ಮತ್ತು ರಕ್ತದ ಮೂಲಕ ನಾವು ನಮ್ಮ ಸ್ವಾತಂತ್ರ್ಯವನ್ನು ಗಳಿಸಬೇಕು ಎಂದು ನೇತಾಜಿ ಹೇಳಿದ್ದರು. ಸ್ವಾತಂತ್ರ್ಯ  ಗಳಿಸಿದ ಬಳಿಕ ನಮಗೆ ಸದೃಢ ರಕ್ಷಣಾ ಪಡೆಯ ಅಗತ್ಯವಿದೆ ಎಂದು ಅವರು ಹೇಳಿದ್ದರು. ಪ್ರಬಲ ರಕ್ಷಣಾ ಪಡೆಯ ಕನಸು ಇಂದು ನನಸಾಗಿದೆ ಎಂದು ಘೋಷಿಸಲು ನಾನು ಹೆಮ್ಮೆ ಪಡುತ್ತೇನೆ ಎಂದು ಪ್ರಧಾನಿ ಹೇಳಿದರು.

ಸ್ವಾತಂತ್ರ್ಯ ಸಮರದ ಭಾಗವಾಗಿದ್ದ ಆಜಾದ್ ಹಿಂದ್ ಫೌಜ್ 1940 ದಶಕದಲ್ಲಿ ಮಿತ್ರಪಡೆಗಳ ಜೊತೆ ಸೇರಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಸೆಣಸುವ ಉದ್ದೇಶದೊಂದಿಗೆ ವಿದೇಶದಲ್ಲಿ ಜನ್ಮತಾಳಿತ್ತು.

ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಆಜಾದ್ ಹಿಂದ್ ಸರ್ಕಾರದ ಅಸ್ತಿತ್ವವು ಹೆಚ್ಚಿನ ಕಾನೂನು ಬದ್ಧತೆಯನ್ನು ಒದಗಿಸಿತ್ತು. ನಿರ್ದಿಷ್ಟವಾಗಿ, ಆಜಾದ್ ಹಿಂದ್ ಫೌಜ್ ಅಥವಾ ಇಂಡಿಯನ್ ನ್ಯಾಷನಲ್ ಆರ್ಮಿಯು (ಐಎನ್ ) ಸ್ವಾತಂತ್ರ್ಯ ಹಸ್ತಾಂತರಕ್ಕೆ ನಿರ್ಣಾಯಕ ಪ್ರಚೋದನೆಯಾಗಿತ್ತು.


ಪ್ರಧಾನಿ ಮೋದಿ ಅವರಿಂದ ಧ್ವಜಾರೋಹಣ ಸಂದರ್ಭದ ವಿಡಿಯೋಗಳನ್ನು ವೀಕ್ಷಿಸಲು ಕೆಳಗೆ ಕ್ಲಿಕ್ಕಿಸಿ:


 
'ಬೋಸ್ ಹಾಗೂ ಐಎನ್ ಪ್ರತಿನಿಧಿಗಳನ್ನು "ದೇಶಭಕ್ತರಲ್ಲೇ ಶ್ರೇಷ್ಟರು" ಎಂದು ಬ್ರಿಟಿಷ್ರಾಜ್ ಪರಿಗಣಿಸಿತು'- ಉಲ್ಲೇಖ: ಎಡ್ವಡ್ಸ್ ಮೈಕಲ್, ದಿ ಲಾಸ್ಟ್ ಇಯರ್ಸ್ ಆಫ್ ಬ್ರಿಟಿಷ್ ಇಂಡಿಯಾ, ಕ್ಲೀವ್ಲ್ಯಾಂಡ್ ಪ್ರಕಾಶನ, 1964, ಪುಟ: 93.

ಆಜಾದ್ ಹಿಂದ್ ಫೌಜ್ ಕುರಿತ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ:
https://shreyankasranade.blogspot.com/2018/10/75-azad-hind-provisional-govt-of-free.html


No comments:

Post a Comment