ಇಂದಿನ ಇತಿಹಾಸ History Today ಅಕ್ಟೋಬರ್ 26
2018: ನವದೆಹಲಿ: ಅಧಿಕಾರದಿಂದ ಮುಕ್ತಗೊಳಿಸಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧದ ತನಿಖೆಯನ್ನು ಸುಪ್ರೀಂಕೋರ್ಟ್ ನಿಗಾದಲ್ಲಿ ಎರಡು ವಾರದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಕೇಂದ್ರೀಯ ಜಾಗೃತಾ ಆಯೋಗಕ್ಕೆ (ಸಿವಿಸಿ) ಆಜ್ಞಾಪಿಸಿತು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎ.ಕೆ. ಪಟ್ನಾಯಿಕ್ ಅವರ ಉಸ್ತುವಾರಿಯಲ್ಲಿ ಸಿವಿಸಿ ತನ್ನ ತನಿಖೆಯನ್ನು ನಡೆಸಬೇಕು ಎಂದು ಆದೇಶಿಸಿದ ಪೀಠ, ಪ್ರಕರಣದ ಮುಂದಿನ ವಿಚಾರಣೆಗೆ ನವೆಂಬರ್ ೧೨ನೇ ದಿನಾಂಕವನ್ನು ನಿಗದಿ ಪಡಿಸಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕೃಷ್ಣನ್ ಕೌಲ್ ಹಾಗೂ ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ಸಿಬಿಐ ಹಂಗಾಮೀ ಮುಖ್ಯಸ್ಥ ಎಂ. ನಾಗೇಶ್ವರ ರಾವ್ ಅವರು ’ಸಿಬಿಐ ಕಾರ್ಯನಿರ್ವಹಣೆ ಸಲುವಾಗಿ ದೈನಂದಿನ ಕೆಲಸಗಳನ್ನಷ್ಟೇ ನೋಡಿಕೊಳ್ಳುವರು. ಯಾವುದೇ ಪ್ರಮುಖ ನೀತಿ ನಿರ್ಣಯಗಳನ್ನು ಕೈಗೊಳ್ಳುವಂತಿಲ್ಲ’ ಎಂಬುದಾಗಿ ಸೂಚಿಸುವ ಮೂಲಕ ರಾವ್ ಅಧಿಕಾರಗಳ ಮೇಲೂ ಅಂಕುಶ ಹಾಕಿತು.
‘ಅಕ್ಟೋಬರ್ ೨೩ರಿಂದ ಈ ಕ್ಷಣದವರೆಗೆ ನಾಗೇಶ್ವರ ರಾವ್ ಅವರು ಕೈಗೊಂಡ ಎಲ್ಲ ನಿರ್ಧಾರಗಳನ್ನೂ ಸುಪ್ರೀಂಕೋರ್ಟ್ ಪರಿಶೀಲಿಸುವುದು’ ಎಂದು ಹೇಳಿದ ಪೀಠ, ರಾವ್ ಅವರು ಈ ಅವಧಿಯಲ್ಲಿ ಕೈಗೊಂಡ ಎಲ್ಲ ನಿರ್ಧಾರಗಳ ಪಟ್ಟಿಯನ್ನೂ ನವೆಂಬರ್ ೧೨ರಂದು ಮೊಹರಾದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತು. ಸಿವಿಸಿಯನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ನ್ಯಾಯಮೂರ್ತಿ ಪಟ್ನಾಯಿಕ್ ನೇಮಕವು ಆಯೋಗದ ಮೇಲೆ ಪರಿಣಾಮ ಬೀರಬಹುದು ಎಂಬುದಾಗಿ ಆತಂಕ ವ್ಯಕ್ತ ಪಡಿಸಿದರು. ಸಿವಿಸಿ ತನಿಖೆಯ ಪಾರದರ್ಶಕತೆ ಬಗ್ಗೆ ಒತ್ತು ನೀಡಿದ ಮೆಹ್ತ, ’ಬೇರೆಯವರ ನಿಗಾದಲ್ಲಿ ತನಿಖೆ ನಡೆಸುವ ಬದಲು ಸಿವಿಸಿ ಏಕಾಂಗಿಯಾಗಿ ಈ ವಿಚಾರವನ್ನು ಪರಿಶೀಲಿಸಲು ಅವಕಾಶ ಕೊಡಿ’ ಎಂದು ಕೋರಿದರು. ಸಿಬಿಐ ತನ್ನ ಕಾರ್ಯ ನಿರ್ವಹಣೆಯಲ್ಲಿ ಕಾನೂನಿಗೆ ಉತ್ತರದಾಯಿಯಾಗಿರುತ್ತದೆ ಎಂಬ ವಾಸ್ತವಾಂಶವನ್ನು ದೃಡ ಪಡಿಸಿಲು ೨೦೦೩ರ ಸಿವಿಸಿ ಕಾಯ್ದೆಯ ಸೆಕ್ಷನ್ ೧೪ನ್ನು ಮೆಹ್ತ ಉಲ್ಲೇಖಿಸಿದರು. ಕಾಯ್ದೆಯ ಸೆಕ್ಷನ್ ೧೪ರ ಅಡಿಯಲ್ಲಿ ಸಿವಿಸಿಯು ರಾಷ್ಟ್ರಪತಿಗೆ ತನ್ನ ವಾರ್ಷಿಕ ವರದಿಯನ್ನು ಸಲ್ಲಿಸಬೇಕು. ಅದರಲ್ಲಿ ವಿಶೇಷವಾಗಿ ಸಿಬಿಐ ಕಾರ್ಯ ನಿರ್ವಹಣೆ ಕುರಿತ ವಿಷಯವೂ ಸೇರಿರುತ್ತದೆ. ವರದಿಯನ್ನು ಸಂಸತ್ತಿನಲ್ಲೂ ಮಂಡಿಸಲಾಗುತ್ತದೆ ಎಂದು ಮೆಹ್ತ ನುಡಿದರು.’ಪ್ರಕರಣದ ನಿರ್ದಿಷ್ಟ ವಾಸ್ತವಾಂಶಗಳನ್ನು ಪರಿಗಣಿಸಿ ಒಂದು ಸಲದ ಅಪವಾದವಾಗಿ ನ್ಯಾಯಮೂರ್ತಿ ಪಟ್ನಾಯಿಕ್ ನೇಮಕವನ್ನು ಮಾಡಲಾಗಿದೆ’ ಎಂದು ಪೀಠವು ತನ್ನ ಆದೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿತು. ಇದು ಭಾರತ ಸರ್ಕಾರದ ಕಾರ್ಯನಿರ್ವಹಣೆಯ ಮೇಲಿನ ಪ್ರತಿಫಲನವಲ್ಲ ಎಂದೂ ಪೀಠ ಹೇಳಿತು. ವಹಿಸಲಾದ ಕಾರ್ಯವನ್ನು ಅಂಗೀಕರಿಸುವಂತೆ ಮತ್ತು ನಿಗದಿತ ಗಡುವಿನ ಒಳಗೆ ತನಿಖೆ ಪೂರ್ಣಗೊಳಿಸುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆ ಪೀಠ ನ್ಯಾಯಮೂರ್ತಿ ಪಟ್ನಾಯಿಕ್ ಅವರಿಗೆ ಪೀಠ ನಿರ್ದೇಶಿಸಿತು.ಅಲೋಕ್ ವರ್ಮ ಅವರ ಅರ್ಜಿಯ ಜೊತೆಗೆ ಕಾಮನ್ ಕಾಸ್ ಸರ್ಕಾರೇತರ ಸಂಸ್ಥೆಯು ಸಲ್ಲಿಸಿದ ಅರ್ಜಿಯನ್ನೂ ಪೀಠ ಸೇರ್ಪಡೆ ಮಾಡಿತು. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ವಿರುದ್ಧದ ಭ್ರಷ್ಟಾಚಾರ ಆಪಾದನೆಗಳ ತನಿಖೆಗೆ ವಿಶೇಷ ತಂಡವನ್ನು ನಿಯೋಜಿಸಬೇಕು ಎಂದು ಕಾಮನ್ ಕಾಸ್ ಸಂಸ್ಥೆಯ ಅರ್ಜಿ ಕೋರಿತ್ತು. ವರ್ಮ ಮತ್ತು ಅಸ್ತಾನ ಅವರು ಆಂತರಿಕ ಕದನಕ್ಕೆ ಇಳಿದಿದ್ದು, ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲೇ ಉಭಯರನ್ನೂ ಅಧಿಕಾರಗಳಿಂದ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಬೇಕಾದ ಪರಿಸ್ಥಿತಿ ಉದ್ಭವಿಸಿತು ಎಂದು ಸರ್ಕಾರ ರಾತ್ರೋರಾತ್ರಿ ಹೊರಡಿಸಿದ ತನ್ನ ನಾಟಕೀಯ ಆದೇಶಕ್ಕೆ ಕಾರಣ ನೀಡಿತ್ತು. ವರ್ಮ ವಿರುದ್ಧದ ಆರೋಪಗಳ ತನಿಖೆಯನ್ನು ತಾನು ನಡೆಸಿದ್ದರೂ, ವರ್ಮ ಅವರು ಅದಕ್ಕೆ ಸಹಕರಿಸಿಲ್ಲ ಎಂದು ಸಿವಿಸಿ ಹೇಳಿತ್ತು. ವರ್ಮ ಮತ್ತು ಕಾಮನ್ ಕಾಸ್ ಸಂಸ್ಥೆ ಸಲ್ಲಿಸಿದ ಎರಡೂ ಅಜಿಗಳು ಅಸ್ತಾನ ಅವರನ್ನು ಸಿಬಿಐಯಿಂದ ಕಿತ್ತು ಹಾಕಬೇಕು ಮತ್ತು ಎಂ. ನಾಗೇಶ್ವರ ರಾವ್ ಅವರನ್ನು ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ ಆದೇಶವನ್ನು ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದವು. ಈದಿನ ಬೆಳಗ್ಗೆ ಅಸ್ತಾನ ಅವರೂ ತಮ್ಮನ್ನು ರಜೆಯಲ್ಲಿ ಕಳುಹಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ತಮಗೆ ಅವರ ಅರ್ಜಿಯ ಪ್ರತಿ ಬಂದಿಲ್ಲ ಎಂಬುದಾಗಿ ನುಡಿದ ನ್ಯಾಯಮೂರ್ತಿಗಳು ’ಅವರು ಬಹುಶಃ ಬಸ್ಸು ತಪ್ಪಿಸಿಕೊಂಡಿರಬಹುದು’ ಎಂಚು ಚಟಾಕಿ ಹಾರಿಸಿದರು.
2018: ನವದೆಹಲಿ: ದೇಶದ ಮುಂಚೂಣಿ ತನಿಖಾ ಸಂಸ್ಥೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಮುಖ್ಯ ನಿರ್ದೇಶಕ ಅಲೋಕ್ ವರ್ಮ ಅವರನ್ನು ಅಧಿಕಾರದಿಂದ ಮುಕ್ತಗೊಳಿಸಿದ ನರೇಂದ್ರ ಮೋದಿ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ದೆಹಲಿಯ ಸಿಬಿಐ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಂಧನಕ್ಕೆ ಒಳಗಾದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇತರ ನಾಯಕರು ಬಳಿಕ ಲೋಧಿ ಕಾಲೋನಿ ಪೊಲೀಸ್ ಠಾಣೆಯಲ್ಲಿ ಸುಮಾರು ಒಂದು ಗಂಟೆ ಕಾಲವನ್ನು
ಕಳೆದರು. ರಾಹುಲ್ ಗಾಂಧಿ ಅವರು ಇತರ ನಾಯಕರೊಂದಿಗೆ ಠಾಣೆಯಲ್ಲೇ ಧರಣಿಯನ್ನೂ ನಡೆಸಿದರು. ‘ಪ್ರಧಾನಿ ಮೋದಿಯವರು ಓಡಬಹುದು, ಪಲಾಯನಗೈಯ್ಯಬಹುದು, ಆದರೆ ಸತ್ಯವನ್ನು ಅಡಗಿಸಿ ಇಡಲಾಗದು. ಸತ್ಯವು ಹೊರಬಂದೇ ಬರುತ್ತದೆ. ಸಿಬಿಐ ಮುಖ್ಯಸ್ಥರನ್ನು ಕಿತ್ತು ಹಾಕುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ. ಪ್ರಧಾನಿಯವರು ಭೀತಿಗ್ರಸ್ತರಾಗಿ ಸಿಬಿಐ ನಿರ್ದೇಶಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ’ ಎಂದು ಪೊಲೀಸ್ ಠಾಣೆಯಿಂದ ಹೊರಬರುತ್ತಾ ರಾಹುಲ್ ಗಾಂಧಿ ಅವರು ರಫೇಲ್ ವ್ಯವಹಾರಕ್ಕೂ ಅಲೋಕ್ ವರ್ಮ ವಿರುದ್ಧದ ಕ್ರಮಕ್ಕೂ ಸಂಪರ್ಕ ಕಲ್ಪಿಸಿ ಹೇಳಿದರು.ವರ್ಮ ಅವರು ರಫೇಲ್ ವ್ಯವಹಾರದ ಬಗ್ಗೆ ತನಿಖೆ ಆರಂಭಿಸುವರು ಎಂಬ ಭೀತಿಯಿಂದ ಅವರನ್ನು ಅಧಿಕಾರದಿಂದ ಕಿತ್ತು ಹಾಕಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷರು ಗುರುವಾರ ಹೇಳಿದ್ದರು. ಇದಕ್ಕೆ ಎದಿರೇಟು ನೀಡಿದ್ದ ಸರ್ಕಾರ ರಾಹುಲ್ ಗಾಂಧಿಯವರು ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರ ವಿಷಯಕ್ಕೆ ಸಂಬಂಧಿಸಿದಂತೆ ’ಸುಳ್ಳುಗಳನ್ನು ಹರಡುತ್ತಿದ್ದಾರೆ. ಅವರು ಭ್ರಮೆಯಲ್ಲಿ ಬದುಕುತ್ತಿದ್ದಾರೆ’ ಎಂದು ಟೀಕಿಸಿತ್ತು.
ಈದಿನ ಬೆಳಗ್ಗೆ ಪಕ್ಷದ ನೂರಾರು ಮತ್ತು ಕಾರ್ಯಕರ್ತರು ಮತ್ತು ನಾಯಕರೊಂದಿಗೆ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧದ ಫಲಕಗಳು ಮತ್ತು ಘೋಷಣೆಗಳೊಂದಿಗೆ ದಯಾಳ್ ಸಿಂಗ್ ಕಾಲೇಜಿನಿಂದ ಲೋಧಿ ರಸ್ತೆಯಲ್ಲಿನ ಸಿಬಿಐ ಕೇಂದ್ರ ಕಚೇರಿಯವರೆಗೆ ಸುಮಾರು ಒಂದು ಕಿಲೋಮೀಟರ್ ಮೆರವಣಿಗೆ ನಡೆಸಿದರು. ಮೆರವಣಿಗೆಯ ಮಾರ್ಗದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಸಿಬಿಐ ಕಚೇರಿಯಲ್ಲಿ ಪ್ರತಿಭಟನಾ ಪ್ರದರ್ಶನದೊಂದಿಗೆ ಮೆರವಣಿಗೆ ಕೊನೆಗೊಂಡಿತ್ತು. ಅಲ್ಲಿ ಪ್ರತಿಭಟನಕಾರರು ಕಟ್ಟಡದತ್ತ ಸಾಗದಂತೆ ತಡೆಯಲು ಇರಿಸಲಾಗಿದ್ದ ಪೊಲೀಸ್ ಅಡ್ಡಗಟ್ಟೆಗಳ ಮುಂಬಾಗದಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ವಾಹನವನ್ನು ಏರುವ ಮೂಲಕ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಬಂಧನಕ್ಕೆ ಒಳಗಾದರು. ಅಶೋಕ್ ಗೆಹ್ಲೋಟ್, ಅಹ್ಮದ್ ಪಟೇಲ್, ಮೋತಿಲಾಲ್ ವೋರಾ, ವೀರಪ್ಪ ಮೊಯ್ಲಿ ಮತ್ತು ಆನಂದ ಶರ್ಮ ಮತ್ತಿತರ ಹಿರಿಯ ನಾಯಕರು ರಾಹುಲ್ ಗಾಂಧಿ ಜೊತೆಗಿದ್ದರು. ಲೋಕತಾಂತ್ರಿಕ ಜನತಾದಳ ನಾಯಕ ಶರದ್ ಪವಾರ್, ಸಿಪಿಐ ನಾಯಕ ಡಿ. ರಾಜಾ ಮತ್ತು ತೃಣಮೂಲ ಕಾಂಗ್ರೆಸ್ಸಿನ ನದಿಮುಲ್ ಹಖ್ ಮತ್ತಿತರ ನಾಯಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
2018: ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷವು ಬಿಹಾರಿನ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಸಂಯುಕ್ತ) ಜೊತೆಗೆ ಸ್ಥಾನಹೊಂದಾಣಿಕೆಯನ್ನು ಅಂತಿಮಗೊಳಿಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಲ್ಲಿ ಪ್ರಕಟಿಸಿದರು. ಹಂಚಿಕೆ ಮಾಡಿಕೊಳ್ಳಲಾಗಿರುವ ಸ್ಥಾನಗಳ ಸಂಖ್ಯೆಯನ್ನು ಬಿಜೆಪಿ ಮುಖ್ಯಸ್ಥರು ಪ್ರಕಟಿಸಲಿಲ್ಲವಾದರೂ, ಉಭಯ ಪಕ್ಷಗಳೂ ಚುನಾವಣೆಯಲ್ಲಿ ಸಮಾನ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲಿವೆ ಎಂದು ಹೇಳಿದರು. ಪಕ್ಷಗಳು ಸ್ಪರ್ಧಿಸಲಿರುವ ನಿರ್ದಿಷ್ಟ ಸ್ಥಾನಗಳ ಸಂಖ್ಯೆಯನ್ನು ಎರಡು, ಮೂರು ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಅವರು ನುಡಿದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಅವರ ಬಳಿ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ಬಳಿಕ ಅಮಿತ್ ಶಾ ಅವರು ಈ ಪ್ರಕಟಣೆಯನ್ನು ಮಾಡಿದರು.ಮೂಲಗಳ ಪ್ರಕಾರ ಬಿಜೆಪಿ ಮತ್ತು ಜೆಡಿ(ಯು) ೪೦ ಸದಸ್ಯಬಲದ ವಿಧಾನಸಭೆಯಲ್ಲಿ ತಲಾ ೧೭ ಸ್ಥಾನಗಳಿಗೆ ಸ್ಪರ್ಧಿಸಲಿದ್ದು, ಎಂಟು ಸ್ಥಾನಗಳನ್ನು ರಾಜ್ಯದಲ್ಲಿನ ಎನ್ ಡಿಎ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಿವೆ. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿಗೆ ೪ ಸ್ಥಾನ, ಉಪೇಂದ್ರ ಕುಶವಾಹ ನೇತೃತ್ವದ ಆರ್ ಎಲ್ ಎಸ್ ಪಿಗೆ ೨ಸ್ಥಾನ ಬಿಟ್ಟುಕೊಡುವ ನಿರೀಕ್ಷೆ ಇದೆ. ‘ಉಪೇಂದ್ರ ಕುಶವಾಹ ಮತ್ತು ರಾಮ್ ವಿಲಾಸ ಪಾಸ್ವಾನ್ ನಮ್ಮ ಜೊತೆಗೆ ಇರುತ್ತಾರೆ. ಹೊಸ ಮಿತ್ರ ಪಕ್ಷ ನಮ್ಮ ಜೊತೆ ಸೇರಿದಾಗ ಪ್ರತಿಯೊಬ್ಬರ ಪಾಲಿನ ಸ್ಥಾನಗಳೂ ಕಡಿಮೆಯಾಗುವುದು ಸಹಜ ಎಂದು ಶಾ ನುಡಿದರು.
2018: ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧದ ತನಿಖೆಗೆ ಎರಡು ವಾರಗಳ ಗಡುವು ವಿಧಿಸಿದ ಸುಪ್ರೀಂಕೋರ್ಟ್ ಆದೇಶವು ನ್ಯಾಯಪರತೆಯ ಮಾನದಂಡವನ್ನು ಬಲಪಡಿಸಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದರು. ‘ತನಿಖೆಯಲ್ಲಿ ಕೂಡಾ ನ್ಯಾಯೋಚಿತತೆಯ ಉನ್ನತ ಮೌಲ್ಯವನ್ನು ಖಾತರಿ ಪಡಿಸುವ ಸಲುವಾಗಿ ಅವರು (ನ್ಯಾಯಮೂರ್ತಿಗಳು) ಗಡುವು ನಿಗದಿ ಪಡಿಸಿದ್ದಾರೆ. ಸಿವಿಸಿ ತನಿಖೆಯು ಅತ್ಯಂತ ಪ್ರಾಮಾಣಿಕವಾಗಿದೆ ಎಂಬುದನ್ನು ಖಾತರಿ ಪಡಿಸುವ ಸಲುವಾಗಿ ತನಿಖೆಯ ಮೇಲೆ ನಿಗಾ ಇಡಲು ಅವರು ನಿವೃತ್ತ ನ್ಯಾಯಮೂರ್ತಿಯನ್ನು ನೇಮಕ ಮಾಡಿದ್ದಾರೆ’ ಎಂದು ಹೇಳುವ ಮೂಲಕ ಜೇಟ್ಲಿ ಅವರು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸರ್ಕಾರದ ಪ್ರಥಮ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದರು. ಇದಕ್ಕೆ ಮುನ್ನ ಅಧಿಕಾರದಿಂದ ಮುಕ್ತಗೊಳಿಸಿ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿರುವ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ವಿರುದ್ಧದ ಕೇಂದ್ರೀಯ ಜಾಗೃತಾ ಆಯೋಗದ ತನಿಖೆಯ ಮೇಲೆ ನಿಗಾ ಇಡಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಟ್ನಾಯಿಕ್ ಅವರನ್ನು ತ್ರಿಸದಸ್ಯ ಪೀಠವು ನೇಮಕ ಮಾಡಿತ್ತು.ಕೇಂದ್ರೀಯ ಜಾಗೃತಾ ಆಯೋಗದ ತನಿಖೆಯ ಮೇಲೆ ನ್ಯಾಯಾಲಯಕ್ಕೆ ವಿಶ್ವಾಸವಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪನ್ನು ಕಾಂಗ್ರೆಸ್ ಅರ್ಥೈಸಿತ್ತು. ’ಈ ವಿಶ್ವಾಸದ ಕೊರತೆಗೆ ನೀವೇ ಏಕೈಕ ಕಾರಣ!’ ಎಂಬುದಾಗಿ ಟ್ವೀಟ್ ಮಾಡುವ ಮೂಲಕ ರಣದೀಪ್ ಸಿಂಗ್ ಸುರ್ಜೆವಾಲ ಸರ್ಕಾರದ ವಿರುದ್ಧ ದಾಳಿ ನಡೆಸಿದ್ದರು.ನಿರ್ದೇಶಕ ಅಲೋಕ್ ವರ್ಮ ಮತ್ತು ಅವರ ಸಹಾಯಕ ರಾಕೇಶ್ ಅಸ್ತಾನ ನಡುವಣ ಜಗಳದಲ್ಲಿ ಸರ್ಕಾರವು ಯಾರೋ ಒಬ್ಬರ ಪರವಾಗಿ ನಿಲುವು ತಾಳಿದೆ ಎಂಬ ಗ್ರಹಿಕೆಯನ್ನು ಸರಿಪಡಿಸುವ ಸಲುವಾಗಿ ಜೇಟ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಭಾವಿಸಲಾಯಿತು. ‘ಸರ್ಕಾರಕ್ಕೆ ಯಾರೇ ವ್ಯಕ್ತಿಯ ಪರ ಅಥವಾ ವಿರುದ್ಧವಾದ ಆಸಕ್ತಿ ಇಲ್ಲ. ಸರ್ಕಾರವು ಸಿಬಿಐಯ ವೃತ್ತಿ ಪರತೆ, ವರ್ಚಸ್ಸು ಮತ್ತು ಸಾಂವಿಧಾನಿಕ ಸಮಗ್ರತೆಯನ್ನು ಕಾಪಾಡುವ ಬಗೆಗಷ್ಟೇ ಆಸಕ್ತಿ ಹೊಂದಿದೆ’ ಎಂದು ಜೇಟ್ಲಿ ಹೇಳಿದರು.ಇತ್ತೀಚಿನ ಬೆಳವಣಿಗೆಗಳು ಸಿಬಿಐಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡಿವೆ ಎಂಬುದಾಗಿ ಒತ್ತೆ ಹೇಳಿದ ಜೇಟ್ಲಿ, ಈ ಕಾರಣದಿಂದಲೇ ಸಿವಿಸಿ ಮಧ್ಯಪ್ರವೇಶ ಮಾಡಿ ಅಲೋಕ್ ವರ್ಮ ಮತ್ತು ಅಸ್ತಾನ ಅವರು ತನಿಖೆ ಮುಗಿಯುವವರೆಗೆ ಸಿಬಿಐ ಕಾರ್ಯ ನಿರ್ವಹಣೆಯಿಂದ ದೂರ ಇರಬೇಕು ಎಂದು ನಿರ್ಧರಿಸಿತು ಎಂದು ತಿಳಿಸಿದರು.
’ಸಿಬಿಐಯ ಎಲ್ಲ ಅಧಿಕಾರಿಗಳು, ನಿರ್ದಿಷ್ಟವಾಗಿ ಉನ್ನತ ಸ್ಥಾನದ ಇಬ್ಬರು ಅಧಿಕಾರಿಗಳು ಸೀಸರನ ಪತ್ನಿಯಂತೆ ಸಂಶಯಾತೀತರಾಗಿರಬೇಕು. ಈ ಕಾರಣಕ್ಕಾಗಿಯೇ ವಿಶಾಲ ರಾಷ್ಟ್ರೀಯ ಹಿತಾಸಕ್ತಿಗಾಗಿ ಉನ್ನತವಾದ ನ್ಯಾಯೋಚಿತ ಮತ್ತು ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸುವ ಮೂಲಕ ಮೂಲಕ ಸತ್ಯವನ್ನು ಸಾಬೀತು ಪಡಿಸಲಾಗುತ್ತದೆ’ ಎಂದು ಅವರು ನುಡಿದರು.ವರ್ಮ ವಿರುದ್ಧದ ಆರೋಪಗಳ ಬಗೆಗಿನ ಸಿವಿಸಿ ತನಿಖೆಯ ಉಸ್ತುವಾರಿಯನ್ನು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಕೆ ಪಟ್ನಾಯಿಕ್ ನೋಡಿಕೊಳ್ಳುವರು ಮತ್ತು ಎರಡು ವಾರಗಳ ಒಳಗಾಗಿ ವರದಿಯನ್ನು ತನ್ನ ಮುಂದೆ ಮಂಡಿಸಬೇಕು, ರಾಷ್ಟ್ರೀಯ ಮಹತ್ವದ ವಿಚಾರದಲ್ಲಿ ಯಾವುದೇ ವಿಳಂಬವಾಗಬಾರದು ಎಂದು ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ಹೇಳಿತ್ತು.ಪ್ರಕರಣದ ಮಹತ್ವದ ಕಾರಣ ವರ್ಮ ವಿರುದ್ಧದ ಸಿವಿಸಿ ತನಿಖೆಯ ಉಸ್ತುವಾರಿಯನ್ನು ನಿವೃತ್ತ ನ್ಯಾಯಮೂರ್ತಿ ವಹಿಸುವರು. ಇದು ಯಾವುದೇ ಸಾಂವಿಧಾನಿಕ ಸಂಸ್ಥೆಯ ಕಾರ್ಯನಿರ್ವಹಣೆ ಮೇಲಿನ ಪ್ರತಿಫಲನ ಅಲ್ಲ’ ಎಂದೂ ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತ್ತು.’ತನಿಖೆಗೆ ಹೆಚ್ಚಿನ ಕಾಲಾವಕಾಶ ಬೇಕೇ ಎಂಬುದನ್ನು ನಿರ್ಧರಿಸಲು ೧೦ ದಿನಗಳ ಒಳಗಾಗಿ ಪ್ರಾಥಮಿಕ ವರದಿಯನ್ನು ನಾವು ನೋಡಬಯಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠ ಹೇಳಿತ್ತು.
2018: ಕೊಲಂಬೋ (ಶ್ರೀಲಂಕಾ): ಶ್ರೀಲಂಕೆಯಲ್ಲಿ ಸಂಭವಿಸಿದ ದಿಢೀರ್ ಬೆಳವಣಿಗೆಯಲ್ಲಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾ ಮಾಡಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದರು. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಪಕ್ಷವು ಆಡಳಿತಾರೂಢ ಏಕತಾ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡ ಬಳಿಕ ಈ ಬೆಳವಣಿಗೆ ಸಂಭವಿಸಿದೆ ಎಂದು ಹಿರಿಯ ಸಚಿವರೊಬ್ಬರನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿತು. ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾ ಮಾಡಿ, ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದಾರೆ ಎಂದು ಅಧ್ಯಕ್ಷರ ಕಚೇರಿ ತಿಳಿಸಿದೆ.
ರಾಜಪಕ್ಸೆ ಅವರಿಗೆ ನಿಷ್ಠವಾದ ಟೆಲಿವಿಜನ್ ಜಾಲವೊಂದು ರಾಜಪಕ್ಸೆ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಡಿಯೋ ದೃಶ್ಯಾವಳಿಯನ್ನೂ
ಪ್ರಸಾರ ಮಾಡಿತು.ಶ್ರೀಲಂಕನ್ ಫ್ರೀಡಮ್ ಪಾರ್ಟಿ (ಎಸ್ ಎಲ್ ಎಫ್ ಪಿ) ಮತ್ತು ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ ಪಿ) ಯನ್ನು ಒಳಗೊಂಡ ಏಕತ್ರಾ ಸರ್ಕಾರವು ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ನೂತನ ಪಕ್ಷವು ಕಳೆದ ಫೆಬ್ರುವರಿಯಲ್ಲಿ ನಡೆದ ಸ್ಥಳೀಯ ಚುನಾವಣೆಗಳಲ್ಲಿ ವಿಸ್ಮಯಕರವಾಗಿ ಪ್ರಚಂಡ ವಿಜಯ ಸಾಧಿಸಿದ ಬಳಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಈ ಚುನಾವಣೆಯು ಆಡಳಿತಾರೂಢ ಮೈತ್ರಿ ಕುರಿತ ಜನಾಭಿಪ್ರಾಯ ಎಂದೇ ಪರಿಗಣಿತವಾಗಿತ್ತು.ಯುನೈಟೆಡ್ ಪೀಪಲ್ಸ್ ಫ್ರೀಡಮ್ ಅಲಯನ್ಸ್ (ಯುಪಿಎಫ್ ಎ) ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿದೆ ಎಂದು ಯುಪಿಎಫ್ ಎ ಪ್ರಧಾನ ಕಾರ್ಯದರ್ಶಿ ಮಹಿಂದ ಅಮರವೀರ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಏಕತ್ರಾ ಸರ್ಕಾರದಿಂದ ಯುಪಿಎಫ್ ಎ ಹೊರಬಂದಿದೆ ಎಂದು ಮಹಿಂದ ಅಮರವೀರ ಹೇಳಿದರು. ಹಿಂದಿನ ವಾರ ಮೈತ್ರಿಪಾಲ ಸಿರಿಸೇನಾ ಅವರು ಹಿರಿಯ ಪಾಲುದಾರ ಪಕ್ಷವಾದ ಯುಎನ್ ಪಿಯು ತಮ್ಮ ಹಾಗೂ ರಕ್ಷಣಾ ಸಚಿವಾಲಯದ ಮಾಜಿ ಉನ್ನತ ಅಧಿಕಾರಿ ಗೊಟಭಾಯ ರಾಜಪಕ್ಸ ಅವರ ಹತ್ಯೆಗೆ ನಡೆದ ಸಂಚು ಆರೋಪವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಆಪಾದಿಸಿದ್ದರು. ೨೦೧೫ರಲ್ಲಿ ಸಿರಿಸೇನಾ ಅವರು ಅಧ್ಯಕ್ಷರಾಗಿ ವಿಕ್ರಮಸಿಂಘೆ ಬೆಂಬಲದೊಂದಿಗೆ ಆಯ್ಕೆಯಾದಾಗ ಏಕತಾ ಸರ್ಕಾರವನ್ನು ರಚಿಸಿ ರಾಜಪಕ್ಸೆ ಅವರ ದಶಕಕ್ಕೂ ಹೆಚ್ಚಿನ ರಾಜ್ಯಭಾರಕ್ಕೆ
ತೆರೆ ಎಳೆಯಲಾಗಿತ್ತು.
2016: ಬೆಂಗಳೂರು: ಕಿಕ್ಬ್ಯಾಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟವಾಗಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರರು ಹಾಗೂ ಅಳಿಯ ಸೇರಿದಂತೆ ಎಲ್ಲ ಆರೋಪಿಗಳು ದೋಷಮುಕ್ತರಾದರು. ಅಕ್ರಮ ಗಣಿಗಾರಿಕೆಗಾಗಿ ಕಂಪೆನಿಗಳಿಂದ ಲಂಚ ಪಡೆದ (ಕಿಕ್ಬ್ಯಾಕ್) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರರಾದ ಸಂಸದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ, ಅಳಿಯ ಆರ್.ಎನ್.ಸೋಹನ್ ಕುಮಾರ್ , ಜಿಂದಾಲ್ ಕಂಪನಿ ಅಧಿಕಾರಿಗಳು, ಮಾಜಿ ಸಚಿವ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ಸೇರಿದಂತೆ ಹಲವು ಆರೋಪಿಗಳ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ನಡೆಸಿತ್ತು. ಸಿಬಿಐ ವಿಶೇಷ ಕೋರ್ಟ್ ನ್ಯಾ.ಆರ್.ಬಿ.ಧರ್ಮಗೌಡರ್ ಅವರು ತೀರ್ಪು ಪ್ರಕಟಿಸಿದರು. ಪ್ರೇರಣಾ ಟ್ರಸ್ಟ್ ನಿಂದ ಲಂಚ ಪಡೆದಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲಾ 13 ಆರೋಪಿಗಳನ್ನು ಖುಲಾಸೆ ಮಾಡಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ನೀಡಿತು.
2016:
ಬೆಂಗಳೂರು: ‘ಪ್ರಜಾವಾಣಿ’, ‘ಸುಧಾ’ ಹಾಗೂ ‘ಮಯೂರ’ ಪತ್ರಿಕೆಗಳ ಸಂಪಾದಕರಾಗಿದ್ದ ಎಂ.ಬಿ. ಸಿಂಗ್ (91) ಅವರು ಅಕ್ಟೋಬರ್ 11ರ ರಾತ್ರಿ ಬೆಂಗಳೂರು ಸಹಕಾರನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. 1925ರ ಮೇ 24ರಂದು ಮೈಸೂರಿನಲ್ಲಿ ಜನಿಸಿದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಮುಗಿಸಿದರು. ವಿದ್ಯಾರ್ಥಿ ದೆಸೆಯಲ್ಲೇ ‘ಮಾತೃಭೂಮಿ’ ಪತ್ರಿಕೆಯ ಮೈಸೂರು ವರದಿಗಾರ ಹಾಗೂ ಏಜೆಂಟರಾಗಿ ಕಾರ್ಯನಿರ್ವಹಿಸಿದರು. ನಂತರ ‘ವಾರ್ತಾ’, ‘ಚಿತ್ರಗುಪ್ತ’ ಹಾಗೂ ‘ವಿಶ್ವ ಕರ್ನಾಟಕ’ ಪತ್ರಿಕೆಗಳಲ್ಲಿ ಕೆಲ ವರ್ಷ ದುಡಿದ ಅವರು, 1953ರಲ್ಲಿ ‘ಪ್ರಜಾವಾಣಿ’ ಬಳಗ ಸೇರಿದರು. ಉಪ ಸಂಪಾದಕ ಮತ್ತು ವರದಿಗಾರರಾಗಿ ‘ಪ್ರಜಾವಾಣಿ’ಯಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು, ನಂತರ ಅದೇ ಪತ್ರಿಕೆಯ ಸಂಪಾದಕರಾಗಿ ನಿವೃತ್ತರಾದರು. ಸಿಂಗ್ ಅವರ ಮಾಧ್ಯಮ ಕ್ಷೇತ್ರದ ಸೇವೆಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ’, ‘ಖಾದ್ರಿ ಶಾಮಣ್ಣ ಪ್ರಶಸ್ತಿ’ ಹಾಗೂ ‘ಟೀಯೆಸ್ಸಾರ್ ಪ್ರಶಸ್ತಿ’ಗಳು ಸಂದಿದ್ದವು. 90 ವರ್ಷಕ್ಕೆ ಕಾಲಿಟ್ಟಿದ್ದ ಅವರನ್ನು ಕಳೆದ ವರ್ಷ ಅಭಿನಂದಿಸಿ, ‘ಎಂ.ಬಿ. ಸಿಂಗ್ : ಕನ್ನಡ ಪತ್ರಿಕೋದ್ಯಮದ ಕಟ್ಟಾಳು’ ಎಂಬ ಕೃತಿಯನ್ನು ಕೂಡ ಹೊರತರಲಾಗಿತ್ತು.
2016:
ಇಸ್ಲಾಮಾಬಾದ್: ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್ ಮುಖಪುಟದಲ್ಲಿ ಫೋಟೊ ಪ್ರಕಟವಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದ ಬೆಕ್ಕಿನ ಕಣ್ಣುಗಳ
(ಹಸಿರು ಕಣ್ಣುಗಳು) ಚೆಲುವೆ 'ಅಫ್ಘಾನ್ ಗರ್ಲ್' ಶರಬತ್ ಬೀಬಿ ಅವರನ್ನು ಭ್ರಷ್ಟಾಚಾರದ ಆರೋಪದಲ್ಲಿ ಪಾಕಿಸ್ತಾನದಲ್ಲಿ ಬಂಧಿಸಲಾಯಿತು. ಕಂಪ್ಯೂಟರೀಕೃತ ರಾಷ್ಟ್ರೀಯ ಗುರುತಿನ ಚೀಟಿ (ಸಿಎನ್ಐಸಿ) ನಕಲು ಮಾಡಿರುವ ಪ್ರಕರಣದಲ್ಲಿ ಪೇಶಾವರದಲ್ಲಿ ಬೀಬಿ ಅವರನ್ನು ಫೆಡರಲ್ ತನಿಖಾ ಸಂಸ್ಥೆ (ಎಫ್ ಐಎ) ಅಧಿಕಾರಿಗಳು ಬಂಧಿಸಿದರು. ಬೀಬಿ ಅವರು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಪೌರತ್ವವನ್ನು ಹೊಂದಿದ್ದು, ಅವರ ಕೈಯಿಂದ ನಕಲಿ ಗುರುತಿನ ಚೀಟಿಯನ್ನು ಅಧಿಕಾರಿಗಳು ವಶ ಪಡಿಸಿಕೊಂಡರು. ಬೀಬಿ ಅವರಿಗೆ ನಕಲಿ ಗುರುತಿನ ಚೀಟಿ ನೀಡಿದ ಅಧಿಕಾರಿ ಈಗ ತೆರಿಗೆ ಇಲಾಖೆಯಲ್ಲಿ ಡೆಪ್ಯುಟಿ ಕಮಿಷನರ್ ನಕಲಿ ಗುರುತಿನ ಚೀಟಿ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳದಂತೆ ಮುಂಗಡ ಜಾಮೀನು ಪಡೆದಿದ್ದಾರೆ ಎಂದು ಎಫ್ಐಎ ಅಧಿಕಾರಿಗಳು ಹೇಳಿದರು. ಕಳೆದ ವರ್ಷ ರಾಷ್ಟ್ರೀಯ ಅಂಕಿ ಅಂಶ ಮತ್ತು ನೋಂದಣಿ ಪ್ರಾಧಿಕಾರವು ಶರಬತ್ ಬೀಬಿ ಮತ್ತು ಇಬ್ಬರು ಪುರುಷರಿಗೆ ಸಿಎನ್ಐಸಿ ಗುರುತಿನ ಚೀಟಿ ನೀಡಿತ್ತು. ಈ ಇಬ್ಬರು ಪುರುಷರು ಶರಬತ್ ಬೀಬಿ ಅವರ ಮಕ್ಕಳು ಎಂದು ಹೇಳಲಾಯಿತು. ಆದರೆ ಬೀಬಿ ನೀಡಿದ ಮಾಹಿತಿಯಲ್ಲಿ ಈ ಪುರುಷರು ಯಾರೆಂಬುದು ಬೀಬಿಯವರ ಬಂಧುಗಳಿಗೂ ಗೊತ್ತಿಲ್ಲ, ಈ ಬಗ್ಗೆ ತನಿಖೆ ನಡೆಸಿದಾಗ ವಿದೇಶಿ ವ್ಯಕ್ತಿಗಳಿಗೆ ಸಿಎನ್ಐಸಿ ಗುರುತಿನ ಚೀಟಿ ನೀಡಿರುವುದು ಬೆಳಕಿಗೆ ಬಂದಿತು ಎಂದು ಪಾಕಿಸ್ತಾನದ ಪತ್ರಿಕೆ ವರದಿ ಮಾಡಿತು. ನ್ಯಾಷನಲ್ ಜಿಯೋಗ್ರಾಫಿಕ್ ಫೋಟೋಗ್ರಾಫರ್ ಸ್ಟೀವ್ ಮೆಕ್ ಕರಿ 1984ರಲ್ಲಿ ಪೇಶಾವರ ಸಮೀಪದ ನಿರಾಶ್ರಿತರ ಶಿಬಿರದಲ್ಲಿ 1984ರಲ್ಲಿ ಬೀಬಿಯ ಫೋಟೋ ಸೆರೆ ಹಿಡಿದಿದ್ದರು. ಈ ಫೋಟೋ ನ್ಯಾಷನಲ್ ಜಿಯೋಗ್ರಾಫಿಕ್ ನಿಯತಕಾಲಿಕದ 1985ರ ಜೂನ್ ಸಂಚಿಕೆಯಲ್ಲಿ ಮುಖಪುಟ ಚಿತ್ರವಾಗಿ ಪ್ರಕಟಗೊಂಡ ಬಳಿಕ ಈಕೆ ‘ಅಫ್ಘಾನ್ ಗರ್ಲ್’ ಎಂಬುದಾಗಿ ವಿಶ್ವಾದ್ಯಂತ ಖ್ಯಾತಿ ಪಡೆದಿದ್ದಳು. ಆಗ ಆಕೆಗೆ 12 ವರ್ಷ ವಯಸ್ಸಾಗಿತ್ತು. ನ್ಯಾಷನಲ್ ಜಿಯೊಗ್ರಾಫಿಕ್ ಆಕೆಯ ಬಗ್ಗೆ ಸಾಕ್ಷ್ಯಚಿತ್ರವನ್ನೂ ಮಾಡಿದ್ದು ಈಕೆಯನ್ನು 'ಮೊನಾಲಿಸಾ ಆಫ್ ಅಫ್ಘಾನ್ ವಾರ್' ಎಂದು ಬಣ್ಣಿಸಿತ್ತು.
2016:
ಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಳಗಿನ ಬಿಕ್ಕಟ್ಟು ಮುಂದುವರಿಯಿತು. ಈದಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರೊಬ್ಬರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
ಅಖಿಲೇಶ್ ಅವರ ಆಪ್ತ ತೇಜ್ ನರಾಯಿನ್ ಪಾಂಡೆ ಅಲಿಯಾಸ್ ಪವನ್ ಪಾಂಡೆ ಅವರನ್ನು ಸಮಾಜವಾದಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಶಿವಪಾಲ್ ಯಾದವ್ ಉಚ್ಚಾಟಿಸಿದರು. ಪವನ್ ಪಾಂಡೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವಪಾಲ್ ಹೇಳಿದರು. ಈ ಎಲ್ಲ ಬೆಳವಣಿಗೆಗಳ ನಡುವೆ ಅಖಿಲೇಶ್ ಅವರು ರಾಜ್ಯಪಾಲ ರಾಮ್ ನಾಯಕ್ ಅವರನ್ನು ಭೇಟಿಯಾಗಿ ಮಾತುಕತೆ
ನಡೆಸಿದರು. ಆದರೆ
ಇದು ಅನೌಪಚಾರಿಕ ಭೇಟಿಯಾಗಿತ್ತು. ನಾಯಕ್ ಅವರು ದೀಪಾವಳಿ ಹಬ್ಬದಾಚರಣೆ ವೇಳೆ ರಾಜ್ಯದಿಂದ ಹೊರಗಿರುತ್ತಾರೆ. ಆದ ಕಾರಣ ಅವರಿಗೆ ಶುಭಾಶಯವನ್ನು ಕೋರುವುದಕ್ಕಾಗಿ ಅಖಿಲೇಶ್ ಭೇಟಿಯಾಗಿದ್ದರು ಎಂದು ರಾಜಭವನದ ವಕ್ತಾರರು ಹೇಳಿದರು. ಆದರೂ ಅಖಿಲೇಶ್ ಅವರು ದಿಢೀರನೆ ರಾಜ್ಯಪಾಲರನ್ನು ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿತ್ತು .
2016:
ಶ್ರೀನಗರ: ಜಮ್ಮು– ಕಾಶ್ಮೀರದ ಖ್ಯಾತ ಗಾಯಕಿ ರಾಜ್ ಬೇಗಂ ಅವರು ಅನಾರೋಗ್ಯದಿಂದಾಗಿ ಕೊನೆಯುಸಿರೆಳೆದರು.. ರಾಜ್ ಬೇಗಂ ಅವರು ಇಬ್ಬರು ಪುತ್ರರು, ಒಬ್ಬ ಪುತ್ರಿಯನ್ನು ಮತ್ತು ಮೊಮ್ಮಕ್ಕಳನ್ನು
ಅಗಲಿದರು. ರಾಜ್ ಬೇಗಂ ಅವರಿಗೆ 2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿತ್ತು. 2013ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಜಮ್ಮು– ಕಾಶ್ಮೀರ ಸರ್ಕಾರ 2009ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ರಾಜ್ ಬೇಗಂ ಅವರು ತಮ್ಮ ಮಧುರ ಸ್ವರದಿಂದ ಕಾಶ್ಮೀರದ ಸಂಗೀತ ಪ್ರೇಮಿಗಳನ್ನು ದಶಕಗಳ ಕಾಲ ರಂಜಿಸಿದ್ದರು. ಮದುವೆ ಸಮಾರಂಭಗಳಲ್ಲಿ ಹಾಡುವುದರೊಂದಿಗೆ ತಮ್ಮ ವೃತ್ತಿ ಆರಂಭಿಸಿದ ರಾಜ್ ಬೇಗಂ ಕ್ರಮೇಣ ಕಾಶ್ಮೀರದ ಪ್ರಭಾವಿ ಗಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಕಾಶ್ಮೀರ ರೇಡಿಯೋದಲ್ಲಿ
ಸೇವೆ ಸಲ್ಲಿಸಿದ್ದರು.
2008: ಅಸಮರ್ಪಕ ನಿರ್ವಹಣೆಯಿಂದಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಎನ್ ಆರ್ ಇ ಜಿ) ಯೋಜನೆಗೆ ಹಿನ್ನಡೆ ಉಂಟಾದುದನ್ನು ಮಹಾಲೇಖಪಾಲರ (ಸಿಎಜಿ) ವರದಿ ಅನಾವರಣಗೊಳಿಸಿತು. ವಿಳಂಬ ವೇತನ, ಉದ್ಯೋಗಾಕಾಂಕ್ಷಿಗಳ ಅರ್ಜಿಯ ಅಪೂರ್ಣ ದಾಖಲೆ ಇತ್ಯಾದಿಗಳಿಂದ ಈ ಮಹತ್ವದ ಯೋಜನೆಯ ಉದ್ದೇಶ ವಿಫಲವಾಗುತ್ತಿದ್ದು ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಹೊಣೆ ಎಂದು ವರದಿ ಅಭಿಪ್ರಾಯಪಟ್ಟಿತು. 2006ರ ಫೆಬ್ರುವರಿಯಿಂದ 2007ರ ಮಾರ್ಚಿವರೆಗೆ 26 ರಾಜ್ಯಗಳ 558 ಗ್ರಾಮ ಪಂಚಾಯಿತಿಗಳನ್ನು ವರದಿ ಒಳಗೊಂಡಿತ್ತು. ``ವಿಳಂಬ ವೇತನದ ಹಲವಾರು ಪ್ರಕರಣಗಳನ್ನು ಉದಾಹರಿಸಿದ ವರದಿ, ಈವರೆಗೂ ಈ ಸಂಬಂಧದ ನಿಯಮ ಉಲ್ಲಂಘನೆಗಾಗಿ ಯಾರೊಬ್ಬರಿಗೂ ಶಿಕ್ಷೆ ವಿದಿಸಿಲ್ಲ. ಇದು ದೂರು ನಿರ್ವಹಣೆ ಕಾರ್ಯತಂತ್ರದ ಕೊರತೆಯನ್ನು ಎತ್ತಿ ತೋರಿಸುತ್ತದೆ. 100 ದಿನಗಳವರೆಗೆ ಉದ್ಯೋಗಕ್ಕಾಗಿ ಆಗ್ರಹಿಸುವ ಕಾನೂನುಬದ್ಧ ಹಕ್ಕನ್ನು ಗ್ರಾಮೀಣ ಕುಟುಂಬಗಳಿಗೆ ಒದಗಿಸುವ ಕಾಯ್ದೆಯ ಉದ್ದೇಶಕ್ಕ್ಕೆ ಧಕ್ಕೆಯಾಗಿದೆ'' ಎಂದು ಹೇಳಿತು.
2008: ರಾಜ್ಯದಲ್ಲಿ ಈಗಲೂ ಅತಿದೊಡ್ಡ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕೃಷಿ ಕ್ಷೇತ್ರ ಬೆಳವಣಿಗೆಯಲ್ಲಿ ಹಿಂದುಳಿದಿದ್ದು, ರೈತರಿಗೆ ಹೆಚ್ಚಿನ ಉತ್ಪಾದನಾ ಅವಕಾಶಗಳನ್ನು ಕಲ್ಪಿಸುವ ಅಗತ್ಯವಿದೆ ಎಂದು ರಾಜ್ಯ ಯೋಜನಾ ಮಂಡಳಿಯು ರೂಪಿಸಿದ `ವಿಷನ್ 2020' ಒತ್ತಿ ಹೇಳಿತು. ರಾಜ್ಯದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ರೂಪಿಸಲಾದ ಈ ಕರಡು ಪ್ರಸ್ತಾವವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯ `ವಿಷನ್ ಗ್ರೂಪ್' ಮುಂದೆ ಮಂಡಿಸಲಾಯಿತು. ಶೇಕಡ 61ರಷ್ಟು ಜನರಿಗೆ ಉದ್ಯೋಗ ನೀಡುತ್ತಿರುವ ಕೃಷಿ ಕ್ಷೇತ್ರ ಕೇವಲ 0.8ರಷ್ಟು ಮಾತ್ರ ಬೆಳವಣಿಗೆ ಸಾಧಿಸಿದೆ. 1993ರಿಂದ 2005ರ ಅವಧಿಯಲ್ಲಿ ಕೃಷಿ ಕ್ಷೇತ್ರವನ್ನು ಅವಲಂಬಿಸಿದ ಉದ್ಯೋಗಿಗಳ ಸಂಖ್ಯೆ ಶೇಕಡ 65ರಿಂದ ಶೇ 61ಕ್ಕೆ ಕುಸಿದಿದೆ. ರಾಜ್ಯದ ಒಟ್ಟು ಉತ್ಪನ್ನದಲ್ಲಿ ಕೃಷಿಯ ಪಾಲು ಶೇ 36ರಿಂದ ಶೇ 18ಕ್ಕೆ ಕುಸಿದಿದೆ ಎಂದೂ ಈ ವರದಿ ತಿಳಿಸಿತು.
2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಷಿಕ ಬಾಡಿಗೆ ತೆರಿಗೆ ಪದ್ಧತಿ (ಎ ಆರ್ ವಿ) ವಿಧಾನದ ಮೂಲಕ ತೆರಿಗೆ ಸಂಗ್ರಹಿಸುವ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರು ಅನುಮತಿ ನೀಡಿದರು. 1976ರ ಕರ್ನಾಟಕ ಪಟ್ಟಣ ಪಂಚಾಯಿತಿ ಕಾಯ್ದೆಯ 108(ಎ) ವಿಧಿಗೆ ತಿದ್ದುಪಡಿ ತಂದು ಏಕರೂಪದ ತೆರಿಗೆ ಸಂಗ್ರಹ ಪದ್ಧತಿ ಜಾರಿ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲ ರಾಮೇಶ್ವರ ಠಾಕೂರ್ ಅಂಗೀಕಾರ ನೀಡಿದರು. `ನೂತನ ತೆರಿಗೆ ಪದ್ಧತಿ ಕುರಿತು ವಾರದೊಳಗೆ ನಿಯಮ ರೂಪಿಸಲಾಗುವುದು. ನಂತರ ನಿಯಮಗಳ ಕರಡು ಪ್ರತಿಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುವುದು. ಹಾಗಾಗಿ ನವೆಂಬರ್ ಮಾಸಾಂತ್ಯದ ವೇಳೆಗೆ ಹೊಸ ಪದ್ಧತಿ ಅಡಿ ತೆರಿಗೆ ಸಂಗ್ರಹಣೆ ಆರಂಭಿಸುವ ಸಾಧ್ಯತೆ ಇದೆ' ಎಂದು ಬಿಬಿಎಂಪಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
2007: ಹುಬ್ಬಳ್ಳಿಯ ಪ್ರತಿಷ್ಠಿತ ಡಾ.ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿಗೆ ಕಾಂತಾವರದ ಡಾ.ನಾ. ಮೊಗಸಾಲೆ ಅವರು ಆಯ್ಕೆಯಾದರು. ಅವರು ಕವಿ, ಕಾದಂಬರಿಕಾರ ಹಾಗೂ ಸಾಹಿತ್ಯ ಸಂಘಟಕರಾಗಿ ಪ್ರಸಿದ್ಧರು. 2006ನೇ ಸಾಲಿನ ಅತ್ಯುತ್ತಮ ಕವನ ಸಂಕಲನವೆಂದು ಡಾ.ನಾ. ಮೊಗಸಾಲೆ ಅವರು ಬರೆದ `ಇಹಪರದ ಕೊಳ' ಆಯ್ಕೆಯಾಯಿತು. ಡಾ.ಡಿ.ಎಸ್. ಕರ್ಕಿ ಜನ್ಮ ಶತಮಾನೋತ್ಸವದ ಈ ವರ್ಷದಲ್ಲಿ ವಿಶೇಷವಾಗಿ ನೀಡಲಾದ ಕಾವ್ಯ ಪ್ರಶಸ್ತಿಯನ್ನು ವಿಭಾ ಅವರು ಬರೆದ `ಜೀವ ಮಿಡಿತದ ಸದ್ದು' ಕವನ ಸಂಕಲನಕ್ಕೆ ಘೋಷಿಸಲಾಯಿತು.
2007: ಕೌಟುಂಬಿಕ ದೌರ್ಜನ್ಯ ಕಾಯ್ದೆ ಜಾರಿಯಾದ ಒಂದು ವರ್ಷದ ಅವಧಿಯೊಳಗೆ ದೇಶಾದ್ಯಂತ ಸುಮಾರು 10 ಸಾವಿರ ಪ್ರಕರಣಗಳು ದಾಖಲಾಗಿದ್ದು, ಹಲವು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕಾಯ್ದೆ ಜಾರಿ ತರುವಲ್ಲಿ ಹಿಂದುಳಿದಿವೆ ಎಂದು ವರದಿಯೊಂದು ತಿಳಿಸಿತು. 2007ರ ಜುಲೈ 31ರಂದು ಕೊನೆಗೊಂಡ ಅವಧಿಯಲ್ಲಿ ಈ ಕಾಯ್ದೆಯಡಿ ಒಟ್ಟು 7,913 ದೂರುಗಳು ದಾಖಲಾಗಿದ್ದು, ಇಲ್ಲಿಯವರೆಗೆ ದೂರುಗಳ ಸಂಖ್ಯೆ ಹತ್ತು ಸಾವಿರಕ್ಕೆ ತಲುಪಿದೆ. ಇವುಗಳಲ್ಲಿ ಬಹಳಷ್ಟು ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಇದೆ. ರಾಜಸ್ಥಾನದಲ್ಲಿ ಅತಿ ಹೆಚ್ಚು ಅಂದರೆ 3,440 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿವೆ. ನಂತರ ಕೇರಳ (1,028), ಆಂಧ್ರ ಪ್ರದೇಶ (731), ದೆಹಲಿ (607), ಬಿಹಾರ (64), ಪಶ್ಚಿಮ ಬಂಗಾಳ (54) ಹಾಗೂ ಒರಿಸ್ಸಾ (12)ದಲ್ಲಿ ಪ್ರಕರಣಗಳು ವರದಿಯಾಗಿವೆ. ದೆಹಲಿ ಹಾಗೂ ಆಂಧ್ರ ಪ್ರದೇಶದಲ್ಲಿ ಸುರಕ್ಷಾ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಇನ್ನುಳಿದ ರಾಜ್ಯಗಳಲ್ಲಿ ಪೂರ್ಣಾವಧಿಗೆ ಯಾರನ್ನೂ ನೇಮಿಸಿಲ್ಲ ಎಂದು ವರದಿ ಹೇಳಿತು.
2007: ಎಲ್.ಕೆ. ಅಡ್ವಾಣಿ ಭೇಟಿ ಸಂದರ್ಭದಲ್ಲಿ ಸಂಭವಿಸಿದ 1998ರ ಕೊಯಮತ್ತೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಫಿ ಸಾಕ್ಷಿಯಾಗಿದ್ದ ಮೈಸೂರಿನ ರಿಯಾಜ್-ಉಲ್-ರೆಹಮಾನ್ ಅವರನ್ನು ಕೊಯಮತ್ತೂರಿನ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿತು. ರಿಯಾಜ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲಾಗಲಿ ಅಥವಾ ಅವರ ವಿರುದ್ಧ ವಿಚಾರಣೆ ನಡೆಸಲಾಗಲಿ ಸರ್ಕಾರಿ ವಕೀಲರು ಬಯಸಲಿಲ್ಲ. ಆದ್ದರಿಂದ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ನ್ಯಾಯಮೂತರ್ಿ ಕೆ. ಉದಿರಪತಿ ಹೇಳಿದರು. ಮೈಸೂರಿನವರಾದ ರಿಯಾಜ್ ಸ್ಫೋಟಕ ವಸ್ತುಗಳ ವ್ಯಾಪಾರಿ. ಕೊಯಮತ್ತೂರಿನಲ್ಲಿ ಸ್ಫೋಟಗೊಂಡ ಬಾಂಬುಗಳನ್ನು ತಯಾರಿಸಲು ಸ್ಪೋಟಕ ವಸ್ತುಗಳನ್ನು ಇವರು ಪೂರೈಸಿದ್ದರು ಎಂದು ಆರೋಪಿಸಲಾಗಿತ್ತು. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರಿಗೆ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತು. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದಂತಾಯಿತು. 1998ರ ಫೆಬ್ರುವರಿ 14ರಂದು ನಡೆದ ಸ್ಫೋಟದಲ್ಲಿ 58 ಜನರು ಹತ್ಯೆಗೀಡಾಗಿದ್ದರು. 43 ಮಂದಿ ಶಿಕ್ಷಿತರ ಪೈಕಿ 26 ಜನರಿಗೆ ಎರಡು ಅವಧಿಗೆ ಜೀವಾವಧಿ ಶಿಕ್ಷೆ, 15 ಜನರಿಗೆ ಒಂದು ಅವಧಿಗೆ ಜೀವಾವಧಿ ಶಿಕ್ಷೆ, ಒಬ್ಬನಿಗೆ ಮೂರು ಅವಧಿಗೆ ಜೀವಾವಧಿ ಶಿಕ್ಷೆ ಹಾಗೂ ಇನ್ನೊಬ್ಬನಿಗೆ ನಾಲ್ಕು ಅವಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
2007: ವಿದೇಶಿ ಬಂಡವಾಳ ಹರಿವಿಗೆ ಕಡಿವಾಣ ವಿಧಿಸುವ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಕ್ರಮಗಳಿಂದ ಧೃತಿಗೆಡದ ಹೂಡಿಕೆದಾರರು, ಷೇರು ಖರೀದಿಗೆ ಆದ್ಯತೆ ನೀಡಿದ್ದರಿಂದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಇನ್ನೊಂದು ದಾಖಲೆ ಬರೆಯಿತು. ಕಳೆದ ವಾರ ದಾಖಲೆ ಮಟ್ಟದಿಂದ (19 ಸಾವಿರ ಅಂಶಗಳಿಂದ) ತೀವ್ರ ಕುಸಿತ ದಾಖಲಿಸಿದ್ದ ಸೂಚ್ಯಂಕವು ಈದಿನದ ವಹಿವಾಟಿನಲ್ಲಿ 472 ಅಂಶಗಳ ಏರಿಕೆ ದಾಖಲಿಸಿ, 19,243 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿ, ಇನ್ನೊಂದು ಮೈಲಿಗಲ್ಲು ದಾಟಿತು. ರಾಷ್ಟ್ರೀಯ ಷೇರುಪೇಟೆ (ಎನ್ಎಸ್ಇ) ನಿಫ್ಟಿ ಕೂಡ 5702 ಅಂಶಗಳಿಗೆ ಏರಿಕೆ ಕಂಡು ಹೊಸ ದಾಖಲೆ ಬರೆಯಿತು.
2007: ಅಧಿಕಾರ ದುರುಪಯೋಗ ಹಾಗೂ ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಸೇರಿದ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಎರಡು ಪ್ರಕರಣಗಳಲ್ಲಿ ಆರೋಪ ಮುಕ್ತರಾದರು. ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಖಲೀದಾ ವಿರುದ್ಧ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಭ್ರಷ್ಟಾಚಾರ ನಿರ್ಮೂಲನೆ ಆಯೋಗ ತಿಳಿಸಿತು.
2006: ಗಂಡ ಅಥವಾ ಸಂಗಾತಿ ಮತ್ತು ಅವರ ಸಂಬಂಧಿಕರು ನೀಡುವ ಹಿಂಸೆಯಿಂದ ರಕ್ಷಿಸಲು ರೂಪಿಸಲಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ- 2005 ಭಾರತದಲ್ಲಿ ಜಾರಿಗೆ ಬಂತು. ಈ ಕಾಯ್ದೆಯ ಅನುಷ್ಠಾನದೊಂದಿಗೆ ಪತ್ನಿಯರನ್ನು ಹೊಡೆಯುವ ಅಥವಾ ಅವಮಾನಿಸುವ ಗಂಡಂದಿರು ಸೆರೆಮನೆ ಶಿಕ್ಷೆ ಅಥವಾ 20,000 ರೂಪಾಯಿಗಳವರೆಗೆ ದಂಡ ತೆರಬೇಕಾಗಿ ಬರುತ್ತದೆ. ಸಂಸತಿನಲ್ಲಿ ಈ ಕಾಯ್ದೆಯನ್ನು ಕಳೆದ ವರ್ಷದ ಆಗಸ್ಟಿನಲ್ಲಿ ಮಂಡಿಸಿ, ಸೆಪ್ಟೆಂಬರ್ 13ರಂದು ರಾಷ್ಟ್ರಪತಿಗಳಿಂದ ಅನುಮೋದನೆ ಪಡೆಯಲಾಗಿತ್ತು. ಕಾಯ್ದೆಯನ್ನು 2006ರ ಅಕ್ಟೋಬರ್ 26ರಂದು ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು. ನೇರ ಅಥವಾ ದೈಹಿಕ, ಲೈಂಗಿಕ, ಮೌಖಿಕ ಬೈಗುಳ, ಮಾನಸಿಕ ಅಥವಾ ಆರ್ಥಿಕ ಕಿರುಕುಳಗಳು, ಬೆದರಿಕೆ ಹಾಕುವುದು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬರುತ್ತವೆ. ಹೆಚ್ಚು ವರದಕ್ಷಿಣೆ ತರುವಂತೆ ಮಹಿಳೆ ಅಥವಾ ಅವಳ ಸಂಬಂಧಿಕರನ್ನು ಪೀಡಿಸುವುದೂ ಈ ಕಾಯ್ದೆಯಡಿ ಸೇರುತ್ತದೆ. ಹಿಂಸೆ ನೀಡಿದ ವ್ಯಕ್ತಿಯ ಜೊತೆಗೆ ಒಂದೇ ಮನೆಯಲ್ಲಿ ಒಟ್ಟಾಗಿ ಬಾಳಿದ್ದರೆ, ರಕ್ತ ಸಂಬಂಧ ಹೊಂದಿದ್ದರೆ ಅಥವಾ ಮದುವೆ ಇಲ್ಲವೇ ಮದುವೆ ಮಾದರಿಯ ಬೇರಾವುದೇ ರೀತಿಯ ಬಾಂಧವ್ಯ ಅಥವಾ ದತ್ತು ಸ್ವೀಕಾರದಂತಹ ಬಾಂಧವ್ಯ ಹೊಂದಿದ್ದರೆ ಅಂತಹ ಮಹಿಳೆಗೆ ಕಾನೂನು ರಕ್ಷಣೆ ಒದಗಿಸುತ್ತದೆ. ಇದಲ್ಲದೆ ದೈಹಿಕವಾಗಿ ಹೊಡೆಯುವುದು, ಕಪಾಳಮೋಕ್ಷ ಮಾಡುವುದು, ವ್ಯಂಗ್ಯವಾಡುವುದು, ಒದೆಯುವುದು, ತಳ್ಳುವುದು, ಬಲಾತ್ಕಾರದ ಲೈಂಗಿಕತೆ, ಪತ್ನಿ ಅಥವಾ ಜೊತೆಗಾತಿಯನ್ನು ನಗ್ನ ಇಲ್ಲವೇ ಅಸಭ್ಯ ಚಿತ್ರಗಳನ್ನು ನೋಡುವಂತೆ ಬಲಾತ್ಕರಿಸುವುದು, ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವುದು, ಹೆಸರು ಹಿಡಿದು ಕೂಗಿ ಅವಮಾನಿಸುವುದು, ಪತ್ನಿಯನ್ನು ಕೆಲಸಕ್ಕೆ ಸೇರದಂತೆ ತಡೆಯುವುದು, ಅಥವಾ ಕೆಲಸ ಬಿಡುವಂತೆ ಒತ್ತಾಯಿಸುವುದು ಕೂಡಾ ಈ ಕಾಯ್ದೆಯ ವ್ಯಾಪ್ತಿಗೆ ಬರುತ್ತವೆ. ಕಾಯ್ದೆಯ ಅತ್ಯಂತ ಪ್ರಮುಖ ವೈಶಿಷ್ಟ್ಯವೇನೆಂದರೆ ಮಹಿಳೆಗೆ ವಸತಿ ಸೌಕರ್ಯದ ಹಕ್ಕು. ಮಹಿಳೆಗೆ ತವರು ಮನೆಯಲ್ಲಿ ವಾಸಿಸುವ ಮತ್ತು ಪಾಲಾದ ಮನೆಯಲ್ಲಿ ಆಕೆಗೆ ಯಾವುದೇ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ವಾಸಿಸುವ ಹಕ್ಕನ್ನು ಈ ಕಾನೂನು ನೀಡುತ್ತದೆ. ಸಂರಕ್ಷಣಾ ಆದೇಶ ಅಥವಾ ತಾತ್ಕಾಲಿಕ ಸಂರಕ್ಷಣಾ ಆದೇಶವನ್ನು ಪ್ರತಿವಾದಿ ಉಲ್ಲಂಘಿಸುವುದನ್ನು ಕಾನೂನು ಶಿಕ್ಷಾರ್ಹ, ಜಾಮೀನು ರಹಿತ ಅಪರಾಧವನ್ನಾಗಿ ಮಾಡಿದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಹಾಗೂ/ ಅಥವಾ 20,000 ರೂಪಾಯಿಗಳವರೆಗಿನ ದಂಡವನ್ನು ವಿಧಿಸಬಹುದು. ನಿಂದಕ ಪ್ರತಿವಾದಿಯು ಯಾವುದೇ ಕೌಟುಂಬಿಕ ಹಿಂಸಾಚಾರ ಎಸಗದಂತೆ, ಅಂತಹ ಕೃತ್ಯಕ್ಕೆ ನೆರವಾಗದಂತೆ ಅಥವಾ ಇಂತಹ ಬೇರೆ ಯಾವುದೇ ನಿರ್ದಿಷ್ಟ ಕೃತ್ಯ ಎಸಗುವುದು, ಕೆಲಸದ ಜಾಗ ಅಥವಾ ಇತರ ಸ್ಥಳಕ್ಕೆ ಪ್ರವೇಶಿಸುವುದು, ಸಂಪರ್ಕ ಸಾಧಿಸಲು ಯತ್ನಿಸುವುದು, ಉಭಯ ಕಕ್ಷಿದಾರರ ಯಾವುದೇ ಆಸ್ತಿಪಾಸ್ತಿಯನ್ನು ಪ್ರತ್ಯೇಕಿಸುವುದು ಇತ್ಯಾದಿ ಕೃತ್ಯಗಳನ್ನು ಎಸಗದಂತೆ ನಿಂದಕ ಪ್ರತಿವಾದಿಯನ್ನು ಪ್ರತಿಬಂಧಿಸಿ ಸಂರಕ್ಷಣಾ ಆದೇಶ ಹೊರಡಿಸುವ ಅಧಿಕಾರವನ್ನೂ ಕಾಯ್ದೆ ನ್ಯಾಯಾಲಯಕ್ಕೆ ನೀಡಿತು.
2006: ಮೈಸೂರು ಹೊರವಲಯದ ವಿಜಯನಗರ ವರ್ತುಲ ರಸ್ತೆ ಬಳಿ ಹಿಂದಿನ ರಾತ್ರಿ ಗುಂಡಿನ ಚಕಮಕಿ ಬಳಿಕ ಪೊಲೀಸರು ಇಬ್ಬರು ಪಾಕಿಸ್ತಾನಿ ಉಗ್ರಗಾಮಿಗಳನ್ನು ಬಂಧಿಸಿದರು.
2006: ಅಂತಾರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವದ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಕ್ಕೆ ಗಿರೀಶ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು' ಚಿತ್ರ ಆಯ್ಕೆಯಾಯಿತು. `ಸಯನೈಡ್' ಮತ್ತು ಬರಗೂರು ರಾಮಚಂದ್ರಪ್ಪ ನಿರ್ದೇಶನದ `ತಾಯಿ' ಸೇರಿದಂತೆ ಕನ್ನಡದ 4 ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು.
2006: ಸೂರ್ಯನ ಕಿರಣದ ಮೂಲಕ ಹೊರಸೂಸುವ ವಿಕರಣಗಳಿಂದ ಬಾಹ್ಯಾಕಾಶ ನೌಕೆ, ಸಂಪರ್ಕ ವ್ಯವಸ್ಥೆ ಮತ್ತು ಗಗನಯಾನಿಗಳ ಮೇಲೆ ಆಗುವ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಪ್ ಕೆನವರಾಲ್ ವಾಯು ನೆಲೆಯಿಂದ ಎರಡು ಬಾಹ್ಯಾಕಾಶ ನೌಕೆಗಳನ್ನು ಬಾನಿಗೆ ಹಾರಿ ಬಿಡಲಾಯಿತು.
2006: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗುರುಜ್ಯೋತಿ ಕಲಾ ಸಂಘವು 2005ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಮರದ ಮೇಲೆ ಪ್ರದರ್ಶಿಸಿದ್ದ `ನೆಲೆ' ನಾಟಕ ಲಿಮ್ಕಾ ದಾಖಲೆಗೆ ಸೇರ್ಪಡೆಯಾಯಿತು. ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ
2005ರ ಜೂನ್ 5ರಂದು ರಂಗಭೂಮಿ ಕಲಾವಿದ ಮತ್ತು ನಿರ್ದೇಶಕ ನಾಗರಾಜ ಕೋಟೆ ತಾವೇ ನಾಟಕ ರಚಿಸಿ ನಿರ್ದೇಶಿಸಿದ್ದ ಈ ನಾಟಕ ಮರದ ಮೇಲೆ ಪ್ರದರ್ಶಿತವಾದ ಪ್ರಥಮ ನಾಟಕ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. 40 ನಿಮಿಷಗಳ ಅವದಿಯಲ್ಲಿ 11 ಕಲಾವಿದರು ಅಭಿನಯಿಸಿದ ಈ ನಾಟಕಕ್ಕೆ ಮರದ ಮೇಲೆ ಯಾವುದೇ ರಂಗಸಜ್ಜಿಕೆ, ಕೃತಕ ವಿದ್ಯುತ್ ದೀಪ ಇತ್ಯಾದಿ ಪರಿಕರ ಬಳಸಿರಲಿಲ್ಲ. ಕೇವಲ ಬೆಳದಿಂಗಳಲ್ಲೇ ಅದನ್ನು ನಡಸಿದ್ದು ಜನ ಮೆಚ್ಚುಗೆ ಗಳಿಸಿತ್ತು.
2006: ಬಾಲಿವುಡ್ ತಾರೆಯರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಫೆಬ್ರವರಿಯಲ್ಲಿ ಹಸೆಮಣೆ ಏರುವುದು ಖಚಿತವಾಗಿದೆ ಎಂದು ಬೆಂಗಳೂರಿನ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ದೃಢಪಡಿಸಿದರು.
2006: ಖ್ಯಾತ ಬಾಲಿವುಡ್ ನಟಿ, ರಾಜ್ಯಸಭಾ ಸದಸ್ಯೆ ಶಬಾನಾ ಆಜ್ಮಿ ಅವರಿಗೆ ಲಂಡನ್ನಿನ ಹೌಸ್ ಆಫ್ ಕಾಮನ್ಸಿನಲ್ಲಿ ಪ್ರಸ್ತುತ ವರ್ಷದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಗಾಂಧಿ ಪ್ರತಿಷ್ಠಾನ ಶಾಂತಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು. ಮುಂಬೈಯ ಕೊಳಚೆ ಪ್ರದೇಶದ ಜನರ ಮೂಲಭೂತ ಹಕ್ಕುಗಳಿಗಾಗಿ `ನಿವಾರ ಹಕ್' ಸಂಘಟನೆ ಸ್ಥಾಪಿಸಿ ಕಳೆದ ಎರಡು ದಶಕಗಳಿಂದ ನಡೆಸುತ್ತಾ ಬಂದ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಯಿತು.
1990: ಚಿತ್ರ ನಿರ್ಮಾಪಕ, ನಿರ್ದೇಶಕ ದಾದಾ ಸಾಹೇಬ್ ಫಾಲ್ಕೆ ಪ್ರ್ರಶಸ್ತಿ ಪುರಸ್ಕೃತ ವಿ. ಶಾಂತಾರಾಮ್ (90) ನಿಧನ.
1981: ಕಾವ್ಯವನ್ನೇ ತಮ್ಮ ಜೀವನ ಧರ್ಮವಾಗಿ ಸ್ವೀಕರಿಸಿ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ ಜ್ಞಾನಪೀಠ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವರಕವಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ದ.ರಾ. ಬೇಂದ್ರೆ) ಈದಿನ ನಿಧನರಾದರು.
1972: ರಷ್ಯ ಸಂಜಾತ ಅಮೆರಿಕನ್ ವೈಮಾನಿಕ ಎಂಜಿನಿಯರ್ ಇಗೊರ್ ಸಿಕ್ರೊಸ್ಕಿ ತಮ್ಮ 83ನೇ ವಯಸ್ಸಿನಲ್ಲಿ ಕನೆಕ್ಟಿಕಟ್ ನ ಈಸ್ಟನ್ನಿನಲ್ಲಿ ಮೃತರಾದರು. 1939ರಲ್ಲಿ ಅವರು ಮೊತ್ತ ಮೊದಲ ಹೆಲಿಕಾಪ್ಟರನ್ನು ಯಶಸ್ವಿಯಾಗಿ ನಿರ್ಮಿಸಿದ್ದರು.
1962: ರಾಷ್ಟ್ರದ ಮೇಲೆ ಚೀನಾವು ನಡೆಸಿದ ದಾಳಿಯನ್ನು ಅನುಸರಿಸಿ ಭಾರತದ ರಾಷ್ಟ್ರಪತಿಗಳು `ತುರ್ತುಪರಿಸ್ಥಿತಿ' ಘೋಷಣೆ ಮಾಡಿದರು. ಭಾರತದ ಇತಿಹಾಸದಲ್ಲಿ ಈ ರೀತಿ `ತುರ್ತು ಪರಿಸ್ಥಿತಿ' ಘೋಷಣೆ ಆದದ್ದು ಇದೇ ಪ್ರಥಮ.
1959: ಸಾಹಿತಿ ಶಶಿಕಲಾ ಶಿವಶಂಕರ ಜನನ.
1940: ಸಾಹಿತಿ ಶಚಿದೇವಿ ಟಿ. ಜನನ.
1933: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಜನನ.
1931: ಸಾಹಿತಿ ತ.ಪು. ವೆಂಕಟರಾವ್ ಜನನ.
1919: ಮಹಮ್ಮದ್ ರೇಝಾ ಶಹ ಪಹ್ಲವಿ (1919-1980) ಜನ್ಮದಿನ. 1941ರಿಂದ 1979ರವರೆಗೆ ಇರಾನಿನ ಶಹಾ ಆಗಿದ್ದ ಇವರು ಅಯತೊಲ್ಲ ಖೊಮೇನಿಯಿಂದ ಪದಚ್ಯುತರಾದರು.
1917: ಸಾಹಿತಿ ಬೈಕಾಡಿ ವೆಂಕಟಕೃಷ್ಣರಾಯರ ಜನನ.
1906: ಇಟೆಲಿಯ ಹೆವಿವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಪ್ರಿಮೊ ಕಾರ್ನೆರಾ (1906-1967) ಜನ್ಮದಿನ. ಇವರು 1933 ರ ಜನವರಿಯಿಂದ 1934ರ ಜೂನ್ ವರೆಗೆ ವಿಶ್ವ ಹೆವಿ ವೇಯ್ಟ್ ಚಾಂಪಿಯನ್ ಆಗಿದ್ದರು. 1933ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಪಂದ್ಯದಲ್ಲಿ ಜ್ಯಾಕ್ ಶಾರ್ಕಿಯನ್ನು ಪರಾಜಿತಗೊಳಿಸಿ ಇವರು ವಿಶ್ವ ಚಾಂಪಿಯನ್ ಶಿಪ್ ಗಳಿಸಿದರು.
1902: ಅಮೆರಿಕದ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಜ್ಯಾಕ್ ಶಾರ್ಕಿ (1902-1994) ಜನ್ಮದಿನ. 1932ರಲ್ಲಿ ನ್ಯೂಯಾರ್ಕಿನ ಲಾಂಗ್ ಐಲ್ಯಾಂಡ್ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಮ್ಯಾಕ್ಸ್ ಶಿಮೆಲಿಂಗ್ ಅವರನ್ನು ಪರಾಭವಗೊಳಿಸಿ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಚಾಂಪಿಯನ್ ಆದ ಜ್ಯಾಕ್ ಶಾರ್ಕಿ 1933ರ ಜೂನಿನಲ್ಲಿ ಪ್ರಿಮೊ ಕಾರ್ನೆರಾ ಅವರಿಂದ ಪರಾಜಿತರಾದರು.
1868: ಸಂಸ್ಕೃತ ಹಾಗೂ ಕನ್ನಡ ಪಂಡಿತರಾಗಿದ್ದ ಸಾಹಿತಿ ಸೀತಾರಾಮ ಶಾಸ್ತ್ರಿಗಳು (26-10-1868ರಿಂದ 20-12-1933) ಗುಂಡಾವಧಾನಿಗಳು- ಪಾರ್ವತಮ್ಮ ದಂಪತಿಯ ಮಗನಾಗಿ ಮೈಸೂರಿನ ಹಳ್ಳದಕೇರಿಯಲ್ಲಿ ಜನಿಸಿದರು.
1846: ಬ್ರಿಟಿಷ್ ಪತ್ರಕರ್ತ ಚಾರ್ಲ್ಸ್ ಪ್ರಸ್ಟ್ ವಿಕ್ ಸ್ಕಾಟ್ (1846-1932) ಜನ್ಮದಿನ. ಇವರು 1959ರಿಂದ 57 ವರ್ಷಗಳ ಕಾಲ `ಮ್ಯಾಂಚೆಸ್ಟರ್ ಗಾರ್ಡಿಯನ್' (ದಿ ಗಾರ್ಡಿಯನ್) ಪತ್ರಿಕೆಯನ್ನು ಸಂಪಾದಿಸಿದರು.
ಕ್ರಿ.ಪೂ. 4004: ಕ್ರಿಸ್ತಪೂರ್ವ 4004ರಲ್ಲಿ ಈದಿನ ಬೆಳಗ್ಗೆ 9 ಗಂಟೆಗೆ ಭೂಮಿಯ ಸೃಷ್ಟಿಯಾಯಿತು ಎಂಬ ಲೆಕ್ಕಾಚಾರ ಇದೆ. ಐರ್ಲೆಂಡಿನ ಇಗರ್ಜಿಯೊಂದರ ಬಿಷಪ್ ಜೇಮ್ಸ್ ಉಷರ್ ಅವರು ಕಿ.ಶ. 1650ರಲ್ಲಿ ಈ ತೀರ್ಮಾನಕ್ಕೆ ಬಂದರು. ಅವರ ತರ್ಕಕ್ಕೆ ಬೈಬಲ್ ಆಧಾರವಾಗಿತ್ತು. ಅಧುನಿಕ ವಿಶ್ವವಿದ್ಯಾಲಯದ ಭೂಗೋಳ ವಿಭಾಗದಲ್ಲಿ ಈ ದಿನವನ್ನು ಭೂಮಿಯ ಜನ್ಮದಿನ ಎಂಬುದಾಗಿ ಆಚರಿಸಲಾಗುತ್ತದೆ. ಭೂಮಿಯ ಸದ್ಯದ ನಿಖರವಾದ ವಯಸ್ಸು 4.5 ಶತಕೋಟಿ ವರ್ಷಗಳು. ಆದರೆ ಜನ್ಮದಿನದ ಬಗ್ಗೆ ಸ್ಪಷ್ಟ ಆಧಾರವೇನೂ ಇಲ್ಲ.
No comments:
Post a Comment