ನಾನು ಮೆಚ್ಚಿದ ವಾಟ್ಸಪ್

Tuesday, October 9, 2018

ಇಂದಿನ ಇತಿಹಾಸ History Today ಅಕ್ಟೋಬರ್ 09

ಇಂದಿನ ಇತಿಹಾಸ History Today ಅಕ್ಟೋಬರ್ 09

2018: ನವದೆಹಲಿ: ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಬಾಗಿಲು ತೆರೆದ ಪಂಚ ಸದಸ್ಯ ಸಂವಿಧಾನ  ಪೀಠದ : ಬಹುಮತದ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸೆಫ್ ಅವರನ್ನು ಒಳಗೊಂಡ ಪೀಠವು ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘದ ಅಧ್ಯಕ್ಷೆ ಶೈಲಜಾ ವಿಜಯನ್ ಅವರು ವಕೀಲ ಮ್ಯಾಥ್ಯೂಸ್ ಜೆ. ನೆಡುಂಪಾರ ಅವರ ಮೂಲಕ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿತು. ಋತುಮತಿಯರಾದ ಮಹಿಳೆಯರ ದೇವಾಲಯ ಪ್ರವೇಶದ ಮೇಲಿದ್ದ ನಿಷೇಧವನ್ನು ರದ್ದು ಪಡಿಸಿದ ಪಂಚ ಸದಸ್ಯ ಸಂವಿಧಾನ ಪೀಠದ ತೀರ್ಪು ಅಸಮರ್ಥನೀಯ ಮತ್ತು ತರ್ಕಬಾಹಿರ ಎಂಬುದಾಗಿ ಶೈಲಜಾ ಅವರ ಅರ್ಜಿ ಹೇಳಿತ್ತು.  ‘ಇದು ಸಂಬಂಧಪಟ್ಟ ನ್ಯಾಯಾಲಯದಲ್ಲಿ ಪಟ್ಟಿಗೆ ಬರಲಿದೆ. ಯಾವುದೇ ಪ್ರಕರಣದಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಕೊಠಡಿಯಲ್ಲಿ ನಡೆಸಲಾಗುತ್ತದೆ. ಮುಕ್ತ  ನ್ಯಾಯಾಲಯದಲ್ಲಿ ಅಲ್ಲ ಎಂದು ಪೀಠ ತಿಳಿಸಿತು. ಅಯ್ಯಪ್ಪ ಭಕ್ತರ ಸಂಘದ ಪರವಾಗಿ ಹಾಜರಾಗಿದ್ದ ವಕೀಲರು ದೇವಾಲಯವು ಪ್ರಸಕ್ತ ಸಾಲಿನ ಯಾತ್ರೆ ಸಲುವಾಗಿ ಅಕ್ಟೋಬರ್ ೧೬ರಂದು ತೆರೆಯಲ್ಪಡುವ ಕಾರಣ ತೀರ್ಪಿಗೆ ತಡೆಯಾಜ್ಞೆ  ಕೊಡಬೇಕು ಎಂದು ಕೋರಿದರು. ಏನಿದ್ದರೂ, ಪುನರ್ ಪರಿಶೀಲನಾ ಅರ್ಜಿಯನ್ನು ದಸರಾ ರಜೆಯ ಬಳಿಕ ಮಾತ್ರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿತು. ಅಯ್ಯಪ್ಪ ಭಕ್ತರ ಸಂಘದ ಹೊರತಾಗಿ, ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಕೋರಿ ನಾಯರ್ ಸೇವಾ ಸಮಾಜ (ಎನ್ ಎಸ್ ಎಸ್) ಕೂಡಾ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿತ್ತು. ಭಾರತದ ಆಗಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಪೀಠವು : ಬಹುಮತದ ತೀರ್ಪು ನೀಡಿ, ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಿದ್ದು ಲಿಂಗ ತಾರತಮ್ಯದ ಕ್ರಮವಾಗಿದ್ದು, ಇದು ಹಿಂದೂ ಮಹಿಳೆಯರ ಹಕ್ಕುಗಳನ್ನೂ ಉಲ್ಲಂಘಿಸುತ್ತದೆ ಎಂದು ಹೇಳಿತ್ತು.  ‘ನಂಬಿಕೆಯನ್ನು  ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳು ಅಥವಾ ವಾದಗಳನ್ನು ಆಧರಿಸಿ ತೀರ್ಮಾನಿಸಲು ಬರುವುದಿಲ್ಲ ಎಂದು ವಿಜಯನ್ ಅವರ ಪುನರ್ ಪರಿಶೀಲನಾ ಅರ್ಜಿ ಹೇಳಿತು.  ‘ಪುನರ್ ವಿಮರ್ಶೆಗೊಳ್ಳಬೇಕಾಗಿರುವ ತೀರ್ಪು ಕ್ರಾಂತಿಕಾರಕ, ಮುಟ್ಟನ್ನು ಕೊಳಕು ಅಥವಾ ಮಾಲಿನ್ಯ ಎಂಬುದಾಗಿ ಹೇಳುವ ಕಲ್ಪನೆ ಅಥವಾ  ಕಳಂಕವನ್ನು ನಿವಾರಿಸಿದೆ ಎಂಬ ಅಭಿಪ್ರಾಯಕ್ಕೆ ಯಾವುದೇ ಆಧಾರವೂ ಇಲ್ಲ. ಇದು ಮಾಧ್ಯಮಗಳಲ್ಲಿ ಮಿಂಚಬೇಕೆಂದು ಬಯಸುವ ಆಷಾಢಭೂತಿಗಳು ಸ್ವಾಗತಿಸಿರುವ ತೀರ್ಪು. ಅರ್ಹತೆಯ ಆಧಾರದಲ್ಲಿ, ಸದರಿ ತೀರ್ಪು ಮೂರ್ಖತನದ್ದಲ್ಲದೇ ಹೋದರೂ, ಅಸಮರ್ಥನೀಯ ಮತ್ತು ತರ್ಕಬಾಹಿರವಾದದ್ದು ಎಂದು ಅರ್ಜಿ ವಾದಿಸಿತು. ನಾಯರ್ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ನಾಯರ್ ಸೇವಾ ಸಮಾಜವು (ಎನ್ ಎಸ್ ಎಸ್) ಸಲ್ಲಿಸಿರುವ ಎರಡನೇ ಪುನರ್ ಪರಿಶೀಲನಾ ಅರ್ಜಿಯುದೇವಾಲಯದ ಆರಾಧ್ಯ ದೈವರಾಗಿರುವ ಅಯ್ಯಪ್ಪ ಸ್ವಾಮಿ ನೈಸ್ತಿಕ ಬ್ರಹ್ಮಚಾರಿಯಾಗಿದ್ದು, ೧೦ ವರ್ಷಕ್ಕಿಂತ ಮೊದಲಿನ ಮತ್ತು ೫೦ ವರ್ಷ ಬಳಿಕದ ಮಹಿಳೆಯರು ಆತನನ್ನು ಪೂಜೆ ಮಾಡಲು ಅರ್ಹರಾಗಿದ್ದಾರೆ. ಮಹಿಳೆಯರನ್ನು ಪ್ರಾರ್ಥನೆಯಿಂದ ಹೊರಗಿಡಲಾಗಿಲ್ಲ ಎಂದು ಪ್ರತಿಪಾದಿಸಿತು. ಆದ್ದರಿಂದ ಪೂಜೆ ಮಾಡಲು ಆಗುವ ವಿಳಂಬ ಅಥವಾ ೪೦ ವರ್ಷಗಳ ಕಾಯುವಿಕೆಯನ್ನು ಹೊರಗಿಡುವಿಕೆ ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗೆ ಪರಿಗಣಿಸಿರುವುದು ತೀರ್ಪಿನಲ್ಲಿ ಆಗಿರುವ ಲೋಪವಾಗುತ್ತದೆ ಎಂದು ಅದು ವಾದಿಸಿತು. ಕ್ರಾಂತಿಕಾರಕತ್ವದ ತತ್ವದ ಹೆಸರಿನಲ್ಲಿ ಸಂವಿಧಾನದ ೧೪ನೇ ಅನುಚ್ಛೇದದ ಅಡಿಯಲ್ಲಿ ಸಮಾನತೆಯ ತತ್ವವನ್ನು ಧಾರ್ಮಿಕ ಪದ್ಧತಿಗಳಿಗೆ ಅನ್ವಯಿಸಲು ಹೋದರೆ ಹಲವಾರು ಅತ್ಯಗತ್ಯ ಧಾರ್ಮಿಕ ಆಚರಣೆಗಳು ಅಕ್ರಮ ಎಂದು ಪರಿಗಣಿಸಲ್ಪಡಬಹುದು ಮತ್ತು ಧರ್ಮವೇ ಅಸ್ತಿತ್ವ ಕಳೆದುಕೊಳ್ಳಬಹುದು ಎಂದೂ ಎನ್ ಎಸ್ ಎಸ್ ಹೇಳಿತು. ಅಸಾಂವಿಧಾನಿಕವಾದ ಮತ್ತು ಮೇಲ್ನೋಟಕ್ಕೇ ತಪ್ಪುಗಳು ತುಂಬಿರುವ, ವ್ಯಾಪ್ತಿ ಮೀರಿದ, ಸಹಜ ನ್ಯಾಯದ ತತ್ವವನ್ನು ಉಲ್ಲಂಘಿಸಿದ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿರುವ ತೀರ್ಪು ಮತ್ತು ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಭಕ್ತರ ಸಂಘದ ಮನವಿ ಕೋರಿತು.

2018: ನವದೆಹಲಿ: ಯಾವುದೇ ಮೈತ್ರಿಕೂಟದಲ್ಲಿ ಸೀಟುಗಳಿಗಾಗಿಭಿಕ್ಷೆ ಬೇಡುವುದಕ್ಕಿಂತ ತಮ್ಮ ಪಕ್ಷವು ಚುನಾವಣೆಯಲ್ಲಿ ಏಕಾಂಗಿ ಹೋರಾಟ ನಡೆಸುವುದು ಎಂದು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಇಲ್ಲಿ ದೃಢ ಪಡಿಸಿದರು. ಮುಂಬರುವ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗಾಗಿ ಕಾಂಗ್ರೆಸ್ ಜೊತೆಗಿನ ಮಾತುಕತೆಗಳನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಮಾಯಾವತಿ ಹೇಳಿಕೆ ಮಹತ್ವ ಪಡೆದಿದೆ. ಬಿಎಸ್ಪಿ ಆಗ್ರಹಿಸಿದಷ್ಟು ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಪಕ್ಷವು ಒಪ್ಪದ ಕಾರಣ ಪಕ್ಷವು ಮೂರು ರಾಜ್ಯಗಳಲ್ಲಿ ಏಕಾಂಗಿ ಹೋರಾಟ ನಡೆಸಲಿದೆ ಎಂದು ಮಾಯಾವತಿ ಪ್ರಕಟಿಸಿದ್ದರು. ಮಾಯಾವತಿ ಅವರನ್ನು ಉಲ್ಲೇಖಿಸಿದ ಹೇಳಿಕೆಯು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ದಲಿತರು, ಬುಡಕಟ್ಟು ಜನ, ಹಿಂದುಳಿದವರು, ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರು ಹಾಗೂ ಮೇಲ್ಜಾತಿಗಳ ಬಡವರ ಸ್ವಾಭಿಮಾನದ ಜೊತೆಗೆ ಬಿಎಸ್ಪಿಯು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿತು. ಈ ಕಾರಣಕ್ಕಾಗಿಯೇ ಬಿಎಸ್ಪಿಯು ಚುನಾವಣಾ ಮೈತ್ರಿ ಮಾಡಿಕೊಳ್ಳಬೇಕಿದ್ದರೆಗೌರವಾರ್ಹ ಸಂಖ್ಯೆಯ ಸ್ಥಾನಗಳನ್ನು  ನೀಡಬೇಕು ಎಂದು ಮೊದಲೇ ಪ್ರಕಟಿಸಿದೆ ಎಂದು ಹೇಳಿಕೆ ತಿಳಿಸಿತು. ‘ಇದರ ಸ್ಪಷ್ಟವಾದ ಅರ್ಥವೇನೆಂದರೆ ಬಿಎಸ್ ಪಿಯು ಯಾವುದೇ ಮೈತ್ರಿಕೂಟದಲ್ಲಿ ಸ್ಥಾನಗಳಿಗಾಗಿ ಭಿಕ್ಷೆ ಬೇಡುವುದಿಲ್ಲ. ಇದು (ಗೌರವಾರ್ಹ ಸಂಖ್ಯೆಯ ಸ್ಥಾನಗಳುಸಿಗದೇ ಹೋದರೆ ಪಕ್ಷವು ಚುನಾವಣೆಗಳಲ್ಲಿ ಸ್ವಂತ ಸಾಮರ್ಥ್ಯದಿಂದಲೇ ಹೋರಾಟ ನಡೆಸುವುದು ಎಂದು ಮಾಯಾವತಿ ಹೇಳಿದರು.
ಬಿಎಸ್ಪಿ ಸಂಸ್ಥಾಪಕ ಕಾನ್ಶೀರಾಮ್  ಅವರ ವಾರ್ಷಿಕ ಪುಣ್ಯತಿಥಿಯ ಸಂದರ್ಭದಲ್ಲಿ ಮಾತನಾಡಿದ ಅವರುಕಾಂಗ್ರೆಸ್ ಅಥವಾ ಬಿಜೆಪಿ ಮೇಲ್ಜಾತಿಯವರು, ಬಡವರು ಮತ್ತು ಇತರ ಬಹುಸಂಖ್ಯಾತರ ಹಿತಾಸಕ್ತಿಗಳಿಗಾಗಿ ದುಡಿಯುತ್ತಿಲ್ಲ ಎಂದು ನುಡಿದರುಭಾರತೀಯ ಜನತಾ ಪಕ್ಷದ ಸರ್ಕಾರವನ್ನು ಕಿತ್ತೊಗೆಯುವ ನಿಟ್ಟಿನಲ್ಲಿ ತಮ್ಮ ಪಕ್ಷವು ಯತ್ನ ಮುಂದುವರೆಸುವುದು  ಎಂದು ನುಡಿದ ಮಾಯಾವತಿ ಬಿಜೆಪಿ ಸರ್ಕಾರವನ್ನು ಜಾತಿವಾದಿ, ಕೋಮುವಾದಿ, ಸೊಕ್ಕಿನ, ದ್ವೇಷಪೂರ್ಣ ಮತ್ತು ಸಂಕುಚಿನ ಮನಸ್ಸಿನ ಸರ್ಕಾರ ಎಂದು ಬಣ್ಣಿಸಿದರುಲೋಕಸಭೆಗೆ ೮೦ ಸದಸ್ಯರನ್ನು ಆಯ್ಕೆ ಮಾಡುವ ಉತ್ತರಪ್ರದೇಶದಲ್ಲಿ ಬಿಎಸ್ಪಿಯು ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ೨೦೧೪ರ ಚುನಾವಣೆಯಲ್ಲಿ ೭೧ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಗೆ ಬಿಎಸ್ಪಿ ಮತ್ತು ಎಸ್ಪಿ ಒಟ್ಟುಗೂಡಿದರೆ ಅಪಾಯ ಖಂಡಿತ ಎಂದು ಹೇಳಲಾಗುತ್ತಿದೆ. ಮೂರು ಲೋಕಸಭಾ ಉಪಚುನಾವಣೆಗಳಲ್ಲಿ ಎರಡು ಪಕ್ಷಗಳು ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ಬಿಜೆಪಿಯು  ಅವಮಾನಕಾರೀ ಸೋಲು ಅನುಭವಿಸಿತ್ತು. ಬಿಎಸ್ಪಿ ಏಕಾಂಗಿಯಾಗಿಯೇ ಮುಂದುವರೆದರೆ ಬಿಜೆಪಿ ೨೦೧೯ರಲ್ಲೂ ಉತ್ತಮ ಸಾಧನೆ ಮಾಡಬಹುದು ಎಂದು ತಜ್ಞರು ಹೇಳಿದ್ದರು.

2018: ಚೆನ್ನೈ: ರಾಜಭವನದ ಅಧಿಕಾರಿಗಳ ದೂರನ್ನು ಆಧರಿಸಿ ಪೊಲೀಸರಿಂದ ದಿಢೀರ್ ಬಂಧನಕ್ಕೆ ಒಳಗಾದನಕ್ಕೀರನ್ ತಮಿಳು ನಿಯತಕಾಲಿಕದ ಸಂಪಾದಕ ಆರ್.ಆರ್. ಗೋಪಾಲ್ ಅವರನ್ನು ಸೆರೆಮನೆಗೆ ಕಳುಹಿಸಲು ನಿರಾಕರಿಸಿದ ಸ್ಥಳೀಯ ನ್ಯಾಯಾಲಯ ಅವರನ್ನು ಬಂಧಮುಕ್ತಗೊಳಿಸಿತು. ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ವಿರುದ್ಧ ಮಾನಹಾನಿಕರ ಲೇಖನ ಪ್ರಕಟಿಸಿದ್ದ್ಕಾಗಿ ಪೊಲೀಸರು ಈದಿನ ಗೋಪಾಲ್ ಅವರನ್ನು ಬಂಧಿಸಿದ್ದರು. ಹಿರಿಯ ಪತ್ರಕರ್ತನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪುಣೆಗೆ ಹೋಗುವ ಮಾರ್ಗದಲ್ಲಿದ್ದಾಗ ಬಂಧಿಸಲಾಗಿತ್ತು.  ಸಹಾಯಕ ಪ್ರಾಧ್ಯಾಪಕಿಯೊಬ್ಬರಿಗೆ ಸಂಬಂಧಿಸಿದಲೈಂಗಿಕ ಹಗರಣದಲ್ಲಿ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರ ವಿರುದ್ಧ ಲೇಖನ ಪ್ರಕಟಿಸಿದ್ದಾರೆಂದು ಆಪಾದಿಸಿ ಗೋಪಾಲ್ ವಿರುದ್ಧ ರಾಜಭವನದ ಅಧಿಕಾರಿಗಳು ದೂರು ನೀಡಿದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು.  ‘ಇದು ಒಂದು ವಿಜಯ. ರಾಜಭವನದ ಕಪಾಳಕ್ಕೆ ಬಿದ್ದ ಪೆಟ್ಟು. ಇದು ರಾಜ್ಯಪಾಲರ ಆಶಯದಂತೆ ವರ್ತಿಸಿದ ಬೆನ್ನೆಲುಬು ಇಲ್ಲದ ತಮಿಳುನಾಡು ಸರ್ಕಾರಕ್ಕೆ ಬಿದ್ದ ತಪರಾಕಿ ಕೂಡಾ. ನ್ಯಾಯಾಲಯ ಅತ್ಯಂತ ಚೆನ್ನಾಗಿ ನಿರ್ಣಯಿಸಿದೆ ಎಂದು ಗೋಪಾಲ್ ತಮ್ಮನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರ್ಟ್ ನಿರಾಕರಿಸಿದ ಬಳಿಕ ಪ್ರತಿಕ್ರಿಯಿಸಿದರುಆರ್.ಆರ್. ಗೋಪಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ ೧೨೪ರ ಅಡಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಅಡ್ಡಿ ಪಡಿಸಿದ ಆಪಾದನೆಗಾಗಿ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ಹೇಳಿದವು.

2018: ನವದೆಹಲಿ: ತೊಂದರೆಗೆ ಒಳಗಾದ ಮನೆ ಖರೀದಿದಾರರು ಸಲ್ಲಿಸಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಮ್ರಪಾಲಿ ರಿಯಲ್ ಎಸ್ಟೇಟ್ ಸಮೂಹದ ಪ್ರವರ್ತಕ ಅನಿಲ್ ಶರ್ಮ ಮತ್ತು ಇತರ ಇಬ್ಬರು ನಿರ್ದೇಶಕರನ್ನು ನ್ಯಾಯಾಲಯ ಕೊಠಡಿಯಲ್ಲೇ  ನಾಟಕೀಯವಾಗಿ ಬಂಧಿಸಲಾಯಿತು. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ ಮತ್ತು ಉದಯ್ ಯು ಲಲಿತ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು, ಆಮ್ರಪಾಲಿ ರಿಯಲ್ ಎಸ್ಟೇಟ್ ಸಮೂಹವು ಕೋರ್ಟ್ ಆದೇಶ ಪಾಲಿಸುವಲ್ಲಿಕಣ್ಣಾ ಮುಚ್ಚಾಲೆ ಆಡುತ್ತಿದೆ ಎಂದು ರೊಚ್ಚಿಗೆದ್ದು ಕೋರ್ಟ್ ಆದೇಶಗಳನ್ನು ಅಕ್ಷರಶಃ ಪಾಲಿಸುವವರೆಗೂ ಮೂವರನ್ನೂ ಬಂಧಿಸಿ ವಶದಲ್ಲಿ ಇಟ್ಟುಕೊಳ್ಳುವಂತೆ ಆಜ್ಞಾಪಿಸಿತು. ಆಮ್ರಪಾಲಿ ನಿರ್ದೇಶಕರು ಕಳೆದ ಎರಡು ತಿಂಗಳುಗಳ ಅವಧಿಯಲ್ಲಿ ಸಂಬಂಧಪಟ್ಟ ವಿವಿಧ ದಾಖಲೆಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಪ್ಪಿಸಲು ವಿಫಲರಾಗಿದ್ದಾರೆ  ಎಂಬುದು ಅರಿವಿಗೆ ಬಂದಾಗ, ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆ ಕಾಲ ವಿಚಾರಣೆ ನಡೆಸಿದ್ದ ಪೀಠವು ಆಕ್ರೋಶಗೊಂಡಿತುಮನೆ ಖರೀದಿದಾರರು ಸಮೂಹದಲ್ಲಿ ಹೂಡಿಕೆ ಮಾಡಿದ ಹಣವನ್ನು ಬೇರೆ ಯಾವುದಾದರೂ ಉದ್ದೇಶಕ್ಕೆ ವರ್ಗಾವಣೆ ಮಾಡಲಾಗಿದೆಯೇ ಎಂಬುದಾಗಿ ತಿಳಿಯ ಬಯಸಿದ್ದ ಕೋರ್ಟ್ ದಾಖಲೆಗಳ ವಿಧಿ ವಿಜ್ಞಾನ ಪರೀಕ್ಷೆಗೆ ಆಜ್ಞಾಪಿಸಿತ್ತು. ದಾಖಲೆಗಳು ಎರಡು ತಿಂಗಳುಗಳಾದರೂ ವಿಧಿ ವಿಜ್ಞಾನ ಪರೀಕ್ಷೆಗೆ ಲಭ್ಯವಾಗಿರಲಿಲ್ಲ. ಇದನ್ನು ಅರಿತ ಪೀಠ ಸಮನ್ಸ್ ನೀಡಿ ಕರೆಸಲಾಗಿದ್ದ ಸಮೂಹದ ಪ್ರವರ್ತಕ ಶರ್ಮ ಮತ್ತು ಇತರ ಇಬ್ಬರು ನಿರ್ದೇಶಕರನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿತು. ‘ಒಂದು ದಿನವೋ, ಅಥವಾ ಒಂದು ತಿಂಗಳು ಆಗುತ್ತದೋ ನಮಗೆ ಗೊತ್ತಿಲ್ಲ. ದಾಖಲೆಗಳು ತಜ್ಞರಿಗೆ ಲಭ್ಯವಾಗುವವರೆಗೂ ನೀವು ಪೊಲೀಸ್ ವಶದಲ್ಲೇ ಇರುತ್ತೀರಿ ಎಂದು ನುಡಿದ ಪೀಠ, ಸಂಬಂಧಪಟ್ಟ ದಾಖಲೆಗಳನ್ನು ವಶ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸ್ ಮತ್ತು ನೋಯಿಡಾ ಪೊಲೀಸರಿಗೆ ಆಜ್ಞಾಪಿಸಿತು. ಪೊಲೀಸರೂ ಮೂವರನ್ನೂ ಕರೆದುಕೊಂಡು ಆಮ್ರಪಾಲಿ ಕಚೇರಿಗಳು ಮತ್ತು ದಾಖಲೆಗಳು ಇರಬಹುದಾದ ಇತರ ಸ್ಥಳಗಳಲ್ಲಿ ತಪಾಸಣೆ ನಡೆಸಬೇಕು ಎಂದು ಪೀಠ ಆದೇಶಿಸಿತು.  ‘ವಿಧಿವಿಜ್ಞಾನ ತಜ್ಞರಿಗೆ ಅಗತ್ಯ ದಾಖಲೆಗಳು ಲಭಿಸಿರುವ ಬಗ್ಗೆ ಸಮಾಧಾನವಾದ ಬಳಿಕ ಮಾತ್ರವೇ ನಿಮಗೆ ಇನ್ನು ಬಿಡುಗಡೆ ಎಂದು ಬಂಧಿತರಿಗೆ ತಿಳಿಸಿದ ಕೋರ್ಟ್, ಔಪಚಾರಿಕ ನ್ಯಾಯಾಲಯ ನಿಂದನೆ ನೋಟಿಸ್ಗಳನ್ನೂ ಜಾರಿಗೊಳಿಸಿತು. ಮೂರೂ ಮಂದಿಯ ಪಾಸ್ ಪೋರ್ಟ್ಗಳನ್ನು ವಶ ಪಡಿಸಿಕೊಳ್ಳುವಂತೆಯೂ ಆಜ್ಞಾಪಿಸಿದ ಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ ೨೪ಕ್ಕೆ ನಿಗದಿ ಪಡಿಸಿತು. ನ್ಯಾಯಾಲಯ ಕೊಠಡಿಯಲ್ಲೇ ರೀತಿ ಬಂಧನವಾಗುತ್ತಿರುವುದು ಇದು ಮೂರನೇ ಪ್ರಕರಣ.  ಹೂಡಿಕೆದಾರರಿಗೆ ಮರುಪಾವತಿ ಮಾಡಬೇಕಾದ ಹಣ ಮರುಪಾವತಿ ಮಾಡುವಂತೆ ನೀಡಲಾಗಿದ್ದ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಇದ್ದುದಕ್ಕಾಗಿ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೋ ರಾಯ್ ಅವರನ್ನು ಹಿಂದೆ ಬಂಧಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಹಾರಾ ಸಮೂಹದ ಆಸ್ತಿ ಖರೀದಿಸುವ ತನ್ನ ನಿಲುವಿನಿಂದ ಹಿಮ್ಮೆಟ್ಟಿದ್ದಕ್ಕಾಗಿ ಇನ್ನೊಬ್ಬರನ್ನು ನ್ಯಾಯಾಲಯದ ಕೊಠಡಿಯಲ್ಲೇ ಬಂಧಿಸಲಾಗಿತ್ತು.
2018: ಧೋಲ್ ಪುರ: ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಹಾಗೂ ಕೃಷಿ ನೀತಿಗಳನ್ನು ಇಲ್ಲಿ ತೀಕ್ಷ್ಣವಾಗಿ ಟೀಕಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಸರ್ಕಾರದಿಂದ ರೈತರ ಒಂದು ರೂಪಾಯಿ ಸಾಲವನ್ನು ಕೂಡಾ ಮನ್ನಾ ಮಾಡಲಾಗಿಲ್ಲ. ಮೇಕ್ ಇನ್ ಇಂಡಿಯಾ ಅಭಿಯಾನ ನೆಲಕಚ್ಚಿದೆ. ಫೋನ್ ಮತ್ತು ಟೀ ಶರ್ಟ್ಗಳು ಚೀನಾದಿಂದ ಬರುತ್ತಿವೆ ಎಂದು  ಹೇಳಿದರು. ತಮ್ಮ ಪಕ್ಷವು ಭಾರತದಲ್ಲೇ ಫೋನುಗಳನ್ನು ನಿರ್ಮಾಣ ಮಾಡಲು ಬಯಸಿದೆ. ಅವುಗಳಲ್ಲಿ ಮೇಡ್ ಇನ್ ಧೋಲ್ ಪುರ ಚೀಟಿ ಹಾಕಬಯಸಿದೆ ಎಂದು ಅವರು ನುಡಿದರು. ಪೂರ್ವ ರಾಜಸ್ಥಾನದ ದೋಲ್ ಪುರ ಜಿಲ್ಲೆಯ ಮನಿಯಾದಿಂದ ೧೫೦ ಕಿಮೀ ಉದ್ದದ ರೋಡ್ ಶೋ ಆರಂಭಿಸಿದ ರಾಹುಲ್ ಗಾಂಧಿ ರಫೇಲ್ ವ್ಯವಹಾರ, ಕಾನೂನು ಮತ್ತು ಸುವ್ಯವಸ್ಥೆಯಿಂದ ಹಿಡಿದು ನೋಟು ಅಮಾನ್ಯೀಕರಣದವರೆಗೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಹರಿ ಹಾಯ್ದರುರಾಜಸ್ಥಾನದಲ್ಲಿ ಡಿಸೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ೨೦೧೪ರ ಲೋಕಸಭಾ ಚುನಾವಣೆ ವೇಳೆಯಲ್ಲಿ ಪ್ರಧಾನಿಯವರು ತಾವು ಪ್ರಧಾನಿಯಾಗಲು ಇಚ್ಛಿಸುವುದಿಲ,  ’ಚೌಕೀದಾರನಾಗಲು ಬಯಸಿರುವುದಾಗಿ ಹೇಳಿದ್ದರು. ಆದರೆ ತಾವು ಯಾರ ಚೌಕೀದಾರನಾಗ ಬಯಸಿರುವುದಾಗಿ ಅವರು ಎಂದೂ ಸ್ಪಷ್ಟ ಪಡಿಸಲಿಲ್ಲ. ಯುವಕರು ಮೋದಿಯನ್ನು ನಂಬಿದರು. ಈಗ ಜನರು ನಗುತ್ತಿದ್ದಾರೆ. ಅನಿಲ್ ಅಂಬಾನಿಯನ್ನು ರಕ್ಷಿಸಲಾಗುತ್ತಿದೆ ಎಂಬುದು ಜನರಿಗೆ ಈಗ ಗೊತ್ತಾಗಿದೆ ಎಂದು ರಾಹುಲ್ ಗಾಂಧಿ ತಮ್ಮ ಮೊದಲ ರೋಡ್ ಶೋ ಸಭೆಯಲ್ಲಿ ಚಾಟಿ ಬೀಸಿದರು. ರೈತರ ಬದಲಿಗೆ ೧೫-೨೦ ಮಂದಿ ಉನ್ನತ ಕೈಗಾರಿಕೋದ್ಯಮಿಗಳಿಗೆ ಮೋದಿ ಅನುಕೂಲ ಮಾಡಿಕೊಟ್ಟರು ಎಂದು ಕಾಂಗ್ರೆಸ್ ನಾಯಕ ಹೇಳಿದರು. ರಫೇಲ್ ವ್ಯವಹಾರವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಅಧ್ಯಕ್ಷ, ಹಿಂದೂಸ್ಥಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ ಎಎಲ್) ಸಂಸ್ಥೆಯನ್ನು ನಿರ್ಲಕ್ಷಿಸಲಾಯಿತು ಎಂಬ ತಮ್ಮ ಆಪಾದನೆಯನ್ನು ಪುನರುಚ್ಚರಿಸಿದರು. ವ್ಯವಹಾರದ ಮೂಲಕ ಪ್ರಧಾನಿಯ ಕೈಗಾರಿಕಾ ಮಿತ್ರನಿಗೆ ಯುಪಿಎ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚಿನ ದರವನ್ನು ಅಂತಿಮಗೊಳಿಸಿ ಅನುಕೂಲ ಮಾಡಿಕೊಡಲಾಯಿತು ಎಂದು ರಾಹುಲ್ ವಿವರಿಸಿದರು. ತಾವು ರಫೇಲ್ ವಿಷಯವನ್ನು ಪ್ರಸ್ತಾಪಿಸಿದಾಗ, ಮೋದಿಯವರು ಒಂದೇ ಒಂದು ಪದವನ್ನೂ ಆಡಲಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು. ನೀರವ್ ಮೋದಿ, ಮೆಹಲ್ ಚೊಕ್ಸಿ, ಲಲಿತ್ ಮೋದಿ ಮತ್ತು ಅನಿಲ್ ಅಂಬಾನಿ ಮತ್ತಿತರ ಕೆಲವು ಉದ್ಯಮಿಗಳನ್ನು ಹೆಸರಿಸಿದ ಕಾಂಗ್ರೆಸ್ ಅಧ್ಯಕ್ಷ, ಪ್ರಧಾನಿ ಇವರಿಗೆ ಲಾಭ ಮಾಡಿಕೊಟ್ಟರು ಮತ್ತು ರೈತರು, ಯುವಕರು ಮತ್ತಿತರರ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ನುಡಿದರು. ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಸರ್ಕಾರವು ೭೦,೦೦೦ ಕೋಟಿ ರೂಪಾಯಿಗಳವರೆಗಿನ ರೈತರ ಸಾಲವನ್ನು ಮನ್ನಾ ಮಾಡಿತ್ತು. ಆದರೆ ಮೋದಿ ನೇತೃತ್ವದ ಈಗಿನ ಸರ್ಕಾರವು . ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೆಟ್ಟ ಸಾಲಗಳನ್ನು (ಮರುವಸೂಲಿಯಾಗದ ಸಾಲ) ಮನ್ನಾ ಮಾಡಿತು. ಪ್ರಧಾನಿ ರೈತರ ಒಂದೇ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಲಿಲ್ಲ ಎಂದು ರಾಹುಲ್ ದೂರಿದರು.

2018: ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾ ದನೆ ಸಂಘಟಕ ಜೈಶ್- ಮುಜಾಹಿದ್ದೀನ್  (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್ ಪ್ರಾ ಣಾಂತಿಕ ಕಾಯಿಲೆ ಯಿಂದ ಹಾಸಿಗೆ ಹಿಡಿದಿ ದ್ದಾನೆ ಎಂದು ಭಾರತೀ ಗುಪ್ತಚರ ಅಧಿಕಾರಿ ಮೂಲಗಳು ತಿಳಿಸಿದವು. ಕುಖ್ಯಾತ ದಿಯೊಬಂದಿ ಸಿದ್ಧಾಂತದ ಜಿಹಾದಿ ಉಗ್ರ ಕಾರ್ಯಚರಣೆಗಳು ಈಗ ಆತನ ಇಬ್ಬರು ಸಹೋದರರಾದ ರೌಫ್ ಅಸಘರ್ ಮತ್ತು ಅಥರ್ ಇಬ್ರಾಹಿಂರ ನಡುವೆ ಭಾರತ ಮತ್ತು ಅಫಘಾನಿ ಸ್ತಾನಗಳಲ್ಲಿ ಹಂಚಿಹೋಗಿದೆ. ಅಜರ್(೫೦) ಬೆನ್ನುಹುರಿ ಮತ್ತು ಮೂತ್ರಪಿಂಡಗಳು ಧಕ್ಕೆಗೊಳಗಾಗಿದ್ದು ಅಧಿಕಾರಿಗಳು ಆತನ ಸ್ಥಿತಿಯ ಬಗ್ಗೆ ವಿವರ ನೀಡಲು ನಿರಾಕರಿಸಿದರು. ರಾವಲಪಿಂಡಿಯ ಸೇನಾ ಸಹಯೋಗಿ ಆಸ್ಪತ್ರೆಯಲ್ಲಿ ಜಿಹಾದಿ ಮುಖಂಡ ಬೆನ್ನುಹುರಿ ಮತ್ತು ಗುದದ್ವಾರ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದು, ಸುಮಾರು ಒಂದೂವರೆ ವರ್ಷಕಾಲ ಹಾಸಿಗೆಯಲ್ಲೆ ಇರಬೇಕಾಗುತ್ತದೆ ಎಂದು ಹೆಸರು ಹೇಳದ ಪಾಕ್ ಗುಪ್ತಚರ ಮೂಲಗಳು ತಿಳಿಸಿವೆ. ವಿಶ್ವಸಂಸ್ಥೆಯಿಂದ ಭಾರತವು ಸೂಚಿಸಿದಂತೆ ಜಾಗತಿಕ ಉಗ್ರಗಾಮಿ ಯಾಗಿದ್ದು ಚೀನಾ ಆತನ ಬಗ್ಗೆ ಆರೋಪಿಸಲು ನಿರಾಕರಿಸಿತ್ತು. ಹಾಸಿಗೆ ಹಿಡಿದ ಆತ ತನ್ನ ತವರು ಭಾವಲ್ಪುರ್ ಅಥವಾ ಪಾಕಿಸ್ತಾನದಲ್ಲಿ, ಎಲ್ಲಿಯೂ ಕಾಣಸಿಕೊಳ್ಳುತ್ತಿರಲಿಲ್ಲ. ಇದರಿಂದ ಭಾರತದ ಕೆಲಸ ಕೆಲ ಮಟ್ಟಿಗೆ ಸುಗಮವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಹಾಸಿಗೆ ಹಿಡಿದಿರುವ ಅಜರ್ನನ್ನು ಜಾಗತಿಕ ಉಗ್ರನೆಂದು ಚೀನಾ ಒಪ್ಪದ ಹಿನ್ನೆಲೆಯಲ್ಲಿ ಭಾರತವೇನೂ ಚೀನಾ ಬಗ್ಗೆ ಸಡಿಲ ನೀತಿಯನ್ನೇನೂ ಅನುಸ ರಿಸುತ್ತಿಲ್ಲ ಎಂದು ದೆಹಲಿಯ ಉಗ್ರ-ನಿಗ್ರಹ ಕಚೇರಿ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಸೇನಾನೆಲೆ ಇರುವ ರಾವಲ್ಪಿಂಡಿಯ ಮಿಲಿಟರಿ   ಆಸ್ಪತ್ರೆಯಲ್ಲಿಯೇ ಗುಪ್ತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಸದ್ಯದ ಮಟ್ಟಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಗುಪ್ತಚರ ಅಧಿಕಾರಿಗಳು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿತು. ಭಾರತದಲ್ಲಿ ಪಾಕ್ ಮೂಲದ ಉಗ್ರರು ನಡೆಸಿದ ಒಟ್ಟು ಮೂರು ಪ್ರಮುಖ ದಾಳಿಗಳಲ್ಲಿ ಭಾರತದ ತನಿಖಾ ಸಂಸ್ಥೆಗಳು ಮಸೂದ್ ಅಜರ್‌ನನ್ನು ಆರೋಪಿ ಎಂದು ಹೆಸರಿಸಿವೆ. ಸಂಸತ್ತಿನ ಮೇಲೆ ದಾಳಿ (೨೦೦೧), ಅಯೋಧ್ಯೆ ಸ್ಫೋಟ (೨೦೦೫) ಮತ್ತು ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಗೆ (೨೦೧೬) ಇವನೇ ಸೂತ್ರಧಾರ ಎಂಬುದು ಭಾರತದ ಆರೋಪ. ೨೦೦೮ರಲ್ಲಿ ಮುಂಬೈನಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಮಸೂದ್ ಅಜರ್‌ನ ಕೈವಾಡವಿತ್ತು ಎಂದು ಭಾರತ ಹೇಳಿತ್ತು. ಭಾರತದಲ್ಲಿ ಕೋಮುಗಲಭೆ ಹುಟ್ಟುಹಾಕಬೇಕು, ಪಾಕಿಸ್ತಾನದೊಂದಿಗೆ ಭಾರತ ಸಶಸ್ತ್ರ ಸಂಘರ್ಷಕ್ಕೆ ಇಳಿಯಬೇಕು ಎನ್ನುವ ಉದ್ದೇಶ ಈ ಎಲ್ಲ ದಾಳಿಗಳ ಉದ್ದೇಶವಾಗಿತ್ತು. ೨೦೦೧ರಲ್ಲಿ ಸಂಸತ್ ಭವನದ ಮೇಲೆ, ೨೦೦೫ರಲ್ಲಿ ಅಯೋಧ್ಯೆ ಮೇಲೆ ಹಾಗೂ ೨೦೧೬ರಲ್ಲಿ ಪಠಾಣ್‌ಕೋಟ್ ಸೇನಾ ವಿಮಾನ ಅಡ್ಡೆ ಮೇಲೆ ಆತ್ಮಹತ್ಯಾ ಉಗ್ರರ ದಾಳಿ ನಡೆ ಯಲು ಈ ಭಯಾನಕ ಇಸ್ಲಾಂ ಉಗ್ರವಾದಿ ಅಜರ್ ಕಾರಣಕರ್ತನಾಗಿದ್ದು, ಈ ದಾಳಿಗಳು ಭಾಗಶಃ ಈಡೇರಿದ್ದವು. ಈ ದಾಳಿಗಳು ಭಾರತದಲ್ಲಿ ಪಾಕ್‌ನೊಂದಿಗೆ ಸೇನಾವೈರತ್ವಕ್ಕೆ ಕುಮ್ಮಕ್ಕು ನೀಡಿದ್ದಲ್ಲದೆ ಭಾರತದೇಶಗಳಲ್ಲಿ ಕೋಮುದಳ್ಳುರಿ ತಲೆ ಎತ್ತುವಂತೆ ಮಾಡಿದ್ದಾಗಿ ಭಾರತೀಯ ಮೂಲಗಳು ತಿಳಿಸಿದವು. ಕಂದಹಾರದಲ್ಲಿ  ೧೯೯೯ ರಲ್ಲಿ ಐಸಿ-೮೧೪ರ ಪ್ರಯಾಣಿಕ ವಿಮಾನವನ್ನು ಅಪಹರಿಸಿದ ಘಟನೆಯಲ್ಲಿ ಪ್ರಯಾಣಿಕರ ಬಿಡುಗಡೆಗೆ ಬದಲಾಗಿ ಭಾರತದಲ್ಲಿನ ಬಂಧಿತನಾಗಿದ್ದ ಅಜರ್‌ನನ್ನು ಬಿಡುಗಡೆ ಗೊಳಿಸಲಾಗಿತ್ತು. ಈ ಅಪಹರಣದಲ್ಲಿ ಅಂದಿನ ತಾಲಿಬಾನ್, ಆಲಖೈದಾ ಮುಖ್ಯಸ್ಥರು ಮತ್ತು ಐಎಸ್‌ಐ ಭಾಗಿಯಾಗಿದ್ದರು. ೮೧೪ ವಿಮಾನವನ್ನು ಅಥವಾ ಇಬ್ರಾಹಿಂ ಅಪಹರಿಸಿದ್ದ ಆತ ಈಗ ಅಫಘಾನಿಸ್ಥಾನ ಮತ್ತು ಬಲುಚಿಸ್ಥಾನದ ಫಕ್ತೂನ್ಖ್ವಾ ಪ್ರದೇಶದಲ್ಲಿ ಉಗ್ರದಾಳಿಯನ್ನು ನಡೆಸುತ್ತಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಅಫಘಾನಿಸ್ಥಾನದಲ್ಲಿ ತಾಲಿಬಾನ್‌ನೊಂದಿಗೆ ಜೈಶ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ದಿಯೊಬಂದಿ ಸಿದ್ದಾಂತದಲ್ಲಿ ಭಾಗಿಯಾಗಿ ಘನಿಪ್ರಾಂತದ ಅಶ್ರಫ್ ಘನಿ ಸರಕಾರದ ವಿರುದ್ಧ ಇವರು ಆಗಸ್ಟ್‌ನಲ್ಲಿ ದಾಳಿ ನಡೆಸಿದ್ದರು. ಅಜರ್‌ನ ಇನ್ನೊಬ್ಬ ಸಹೋದರ ರೌಫ್ ಅಸಘರ್ ಭಾರತ ಮತ್ತು ಜಮ್ಮು ಕಾಶ್ಮೀರ ಕಣಿವೆ ರಾಜ್ಯದಲ್ಲಿ ಉಗ್ರ ಕಾರ್ಯಾಚರಣೆ ನಡೆಸಿದ್ದಾರೆ. ಭಾರತ ಮತ್ತು ಅಮೆರಿಕ ಅಸಘರ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಲು ಚರ್ಚಿಸುತ್ತಿದ್ದು, ಟ್ರಂಪ್ ಆಡಳಿತ ಮತ್ತು ವಿಶ್ವಸಂಸ್ಥೆ ೧೨೬೭ರ ಸಮಿತಿ ಈ ಬಗ್ಗೆ ತೀರ್ಮಾನಿಸಿದೆ ಎಂದು ಗುಪ್ತಚರ ಮೂಲಗಳು ತಿಳಿಸಿದವು. ಬಲೂಚಿಸ್ತಾನ ಬುಡಕಟ್ಟು ನಾಯಕರು ಇಸ್ಲಾಂಬಾದ್ ಮತ್ತು ರಾವಲಪಿಂಡಿ ನಡುವೆ ಸಂಧಾನಕ್ಕಾಗಿ ಯತ್ನಿಸುತ್ತಿದ್ದು ಜೈಶ್ ಪಾಕಿಸ್ತಾನದ ಸೇನೆಯಂತೆ ಇದರಲ್ಲಿ ಭಾಗಿಯಾಗಿತ್ತು.

2018: ಬ್ಯೂನೊಸ್ ಐರಿಸ್: ೧೫ ವರ್ಷದ ಜೆರೆಮಿ ಲಾಲ್ರಿನ್ನುಂಗ ೬೨ ಕೆಜಿ ವಿಭಾಗದ ವೇಟ್ಲಿಫ್ಟಿಂಗ್ ಯಶಸ್ಸಿನೊಡನೆ ಯುವ ಒಲಿಂಪಿಕ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಗಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೆರಮಿ ಒಟ್ಟು ೨೭೪ ಕೆಜಿ (೧೨೪ ಕೆಜಿ+ ೧೫೦ ಕೆಜಿ) ಭಾರ ಎತ್ತುವ ಮೂಲಕ ಹಿರಿಮೆಗೆ ಪಾತ್ರರಾದರು. ಬಾಕ್ಸಿಂಗ್ನಲ್ಲಿ ಆಸಕ್ತಿ ಹೊಂದಿದ್ದ ಮಿಜೊರಾಮ್ ಜೆರಮಿ ವರ್ಷದವರಾಗಿದ್ದಾಗ ಕೋಚ್ ಅವರ ಸಲಹೆಯಂತೆ ವೇಟ್ಲಿಫ್ಟಿಂಗ್ನಲ್ಲಿ ತೊಡಗಿಸಿಕೊಂಡರು. ಟರ್ಕಿಯ ಟೊಪ್ಟಾಸ್ ಕ್ಯಾನರ್ (೨೬೩ ಕೆಜಿ (೧೨೨+೧೪೧) ಹಾಗೂ ಕೊಲಂ ಬಿಯಾದ ವಿಲ್ಲಾರ್ ಎಸ್ಟಿವೆನ್ (೨೬೦ ಕೆಜಿ (೧೧೫+೧೪೫) ಅವರು ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು. ಭಾರತದ ಸ್ನೇಹಾ ಸೊರೆನ್ ಅವರು ಮಹಿಳಾ ೪೮ ಕೆಜಿ ವಿಭಾಗದ ವೇಟ್ಲಿಫ್ಟಿಂಗ್ನಲ್ಲಿ ಐದನೆಯವರಾಗಿ ವಿಜಯ ವೇದಿಕೆಗೇರಲು ವಿಪಲರಾದರು. ೧೮ ವರ್ಷದ ಮೆಹುಲ್ ಘೋಷ ಅವರು ಮಹಿಳಾ ೧ಒ ಮೀಟರ್ ಏರ್ ರೈಫಲ್ ಶೂಟಿಂಗ್ನಲ್ಲಿ ೨೪೮. ಪಾಯಿಂಟ್ಗಳೊಡನೆ ಬೆಳ್ಳಿ ಪದಕಕ್ಕೇ ತೃಪ್ತಿ ಪಟ್ಟರು. ಡೆನ್ಮಾರ್ಕ್ ಸ್ಟೆಫನೀ ಗ್ರುಂಡ್ಸೊಯೀ (೨೪೮.) ಅವರು ಚಿನ್ನದ ಪದಕ ಗಳಿಸಿದರುಭಾರತ ಮಹಿಳಾ ತಂಡದವರು ಐವರ ಹಾಕಿ ಪಂದ್ಯದಲ್ಲಿ ಉರುಗ್ವೆ ವಿರುದ್ಧ - ಗೋಲುಗಳಿಂದ ಜಯಿಸಿ ೨ನೇ ಗೆಲುವು ದಾಖಲಿಸಿದರು. ಆಸ್ಟ್ರಿಯಾವನ್ನು ಮೊದಲ ಪಂದ್ಯದಲ್ಲಿ - ಗೋಲಗಳಿಂದ ಸೋಲಿಸಿದ್ದ ಭಾರತದ ಕಡೆ ಲಾಲ್ರೆಮ್ಸಿಯಾಮಿ (, ೧೯) ಅವರು ಗೋಲು ಗಳಿಸಿದರೆ, ಉರುಗ್ವೆಯ ಏಕೈಕ ಗೋಲನ್ನು ಮ್ಯಾಗ್ಡಲೆನಾ ವೆರ್ಗ (೧೦) ಗಳಿಸಿದರು.


2018: ಜಕಾರ್ತ: ಭಾರತದ ಏಕ್ತಾ ಭ್ಯಾನ್ ಹಾಗೂ ನಾರಾಯಣ್ ಥಾಕುರ್ ಅವರು ವಿಕಲಾಂಗರ ಏಷ್ಯನ್  ಕ್ರೀಡಾಕೂಟದಲ್ಲಿ ಕ್ರಮವಾಗಿ ಮಹಿಳಾ ಕ್ಲಬ್ (ಮರದ ದೊಣ್ಣೆ) ಎಸೆತ ಹಾಗೂ ಪುರುಷರ ೧೦೦ ಮೀಟರ್  ಓಟದಲ್ಲಿ ಸ್ವರ್ಣ ಪದಕ ಗಳಿಸಿದರು. ಏಕ್ತಾ ಎಫ್೩೨/೫೧ ವಿಭಾಗದ ದೊಣ್ಣೆ ಎಸೆತದ ನಾಲ್ಕನೆ ಪ್ರಯತ್ನದಲ್ಲಿನ ೧೬.೦೨ ಮೀಟರ್ ದೂರದ ಸಾಧನೆಯೊಡನೆ ಚಿನ್ನದ ಪದಕ ಗಳಿಸುವ ಮುನ್ನ ನಾರಾಯಣ್ ಥಾಕುರ್ ಪುರು? ಟಿ೩೫ ವಿಭಾಗದ ೧೦೦ ಮೀಟರ್ರ್ಸ್ ಓಟದಲ್ಲಿ ದೂರವನ್ನು ೧೪.೦೨ ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದರು. ಭಾರತ ಇದಲ್ಲದೆ ಜಯಂತಿ ಬೆಹೆರಾ, ಆನಂದನ್ ಗುಣಶೇಕರನ್ ಹಾಗೂ ಮೊನು ಘಂಗಾಸ್ ಮೂಲಕ ಮೂರು ಕಂಚಿನ ಪದಕಗಳನ್ನೂ ಗಳಿಸಿತು. ಜಯಂತಿ ಮಹಿಳಾ ಟಿ೪೫/೪೬/೪೭ ವಿಭಾಗದ ೨೦೦ ಮೀಟರ್ಸ್ ಓಟದಲ್ಲಿ, ಮೊನು ಪುರುಷರ ಎಫ್೧೧ ಶಾಟ್ಪುಟ್ನಲ್ಲಿ ಕಂಚಿನ ಪದಕ ಪಡೆದರು. ಸಂದೀಪ್ ಚೌಧರಿ ಅವರು ಸೋಮವಾರ ವಿಶ್ವ ದಾಖಲೆ ಯೊಡನೆ ಜಾವೆಲಿನ್ ಎಸೆತದ ಚಿನ್ನ ಗಳಿಸಿದ್ದರು. ಭಾರತ ಚಿನ್ನ, ಬೆಳ್ಳಿ ಹಾಗೂ ೧೩ ಕಂಚಿನ ಪದಕಗಳೊಡನೆ (ಒಟ್ಟು ೨೭) ಪದಕ ಪಟ್ಟಿಯಲ್ಲಿ ೮ನೇ ಸ್ಥಾನದಲ್ಲಿದೆ. ಚೀನಾ ಒಟ್ಟು ೧೨೫ ಪದಕಗಳೊಂದಿಗೆ (೬೬ ಚಿನ್, ೩೧ ಬೆಳ್ಳಿ ಹಾಗೂ ೨೮ ಕಂಚು) ಅಗ್ರ ಸ್ಥಾನದಲ್ಲಿದೆ.

2016: ಮುಂಬೈ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಚಿತ್ರ ದಿಲ್ ಹೆ ಮುಷ್ಕಿಲ್ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೇ ಭಾರಿ ಸದ್ದು ಮಾಡುತ್ತಿದೆ. ಮಧ್ಯೆ ಐಶ್ವರ್ಯಾ ರೈ ಕೂಡ ವರ್ಷದ ಹೆಸರಾಂತ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗುವ ಮೂಲಕ ಸುದ್ದಿಯಾದರು.  ಔಟ್ಲುಕ್ ಸಂಸ್ಥೆ ನೀಡುವಔಟ್ಸ್ಟ್ಯಾಂಡಿಂಗ್ ಸೆಲೆಬ್ರಿಟಿ ವುಮನ್ ಆಫ್ ಈಯರ್ಪ್ರಶಸ್ತಿಗೆ ಐಶ್ವರ್ಯಾ ರೈ ಭಾಜನರಾದರು. ಔಟ್ಲುಕ್ ಬಿಜಿನೆಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 19 ಮಹಿಳಾ ಉದ್ಯಮಿಗಳು ತಮ್ಮ ಔದ್ಯಮಿಕ ಜೀವನ ಹಾಗೂ ಯಶಸ್ಸಿನ ಪ್ರಯಾಣದ ಕುರಿತು ವಿಚಾರಗಳನ್ನು ಮಂಡಿಸಿದರು. ಪೈಕಿ ಬಾಲಿವುಡ್ ಬೆಡಗಿ ಐಶ್ಗೆ ಪ್ರಶಸ್ತಿ ಒಲಿಯಿತು. 42 ವರ್ಷದ ಐಶ್ವರ್ಯಾ ರೈ ಅವರ ಜೀವನದ ಅತ್ಯಂತ ಸುಮಧುರ ಅನುಭವ ಎಂದರೆ, ಆರಾಧ್ಯಾ ಬಚ್ಚನ್ ಅಂತೆ. ಹೀಗೆ ತಮ್ಮ ಜೀವನದ ಬಗ್ಗೆ ಮಾತನಾಡುತ್ತ ಅವರು ಇತರ ಮಹಿಳೆಯರಿಗೂ ಪ್ರೇರಣೆಯಾದರು. ಯಶಸ್ಸಿನ ಸೂತ್ರಗಳ ಬಗ್ಗೆ ತಿಳಿಸುತ್ತ, ಮಹಿಳೆಯರು ಪ್ರತಿದಿನ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳಲು ಸದಾ ಶ್ರಮಿಸುತ್ತಿರಬೇಕು ಎಂಬ ಕಿವಿಮಾತನ್ನೂ ಹೇಳಿದರು.
 2016: ನವದೆಹಲಿ/ ಬಾರಾಮುಲ್ಲಾ: ಭಾರತೀಯ ಯೋಧರು ಸೆಪ್ಟೆಂಬರ್ 28 ಮತ್ತು 29 ನಡುವಣ ರಾತ್ರಿ ಗಡಿ ದಾಟಿ ಪಾಕ್ ಆಕ್ರಮಿತ ಪ್ರದೇಶಕ್ಕೆ ನುಗ್ಗಿ ಭಯೋತ್ಪಾದಕ ತರಬೇತಿ ನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್--ತೊಯ್ಬಾ ಭಯೋತ್ಪಾದಕ ಸಂಘಟನೆಗೆ ಭಾರಿ ಪ್ರಮಾಣದ ಹಾನಿ ಸಂಭವಿಸಿರುವುದು
ಭಾರತಕ್ಕೆ ಲಭಿಸಿರುವ ಪಾಕಿಸ್ತಾನಿ ರೇಡಿಯೋ ಸಂಭಾಷಣೆಗಳ ತುಣುಕಿನಿಂದ ಖಾತ್ರಿಯಾಯಿತು.  ದಾಳಿಯಲ್ಲಿ ಉಗ್ರ ಸಂಘಟನೆಯ ಕನಿಷ್ಠ 20 ಭಯೋತ್ಪಾದಕರು ಹತರಾಗಿದ್ದಾರೆ ಎಂಬುದು ಇದರಿಂದ ಖಚಿತಗೊಂಡಿತು. ಭಾರತೀಯ ಸೇನೆಯ ಕ್ಷೇತ್ರ ಘಟಕಗಳು ವಿವಿಧ ಪಾಕಿಸ್ತಾನಿ ಘಟಕಗಳ ನಡುವಣ ಸಂಭಾಷಣೆಗಳ ಮಾಹಿತಿಯನ್ನು ಸಂಗ್ರಹಿಸಿದವು. ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ದುಡಿಯಾಲ್ ತರಬೇತಿ ನೆಲೆಯಲ್ಲಿ ಎಲ್ಇಟಿಗೆ ಗರಿಷ್ಠ ಪ್ರಮಾಣದ ನಷ್ಟ ಸಂಭವಿಸಿದೆ. ಉತ್ತರ ಕಾಶ್ಮೀರದ ಕುಪ್ವಾರ ವಿಭಾಗದ ವಿರುದ್ಧ ಭಾಗದಲ್ಲಿ ನೆಲೆ ಇತ್ತು. ಸೇನಾ ವಿಭಾಗದ ಐದು ತಂಡಗಳಿಗೆ ಕೆಲ್ ಎಂದೇ ಗುರುತಿಸಲಾದ ಕೈಲ್ ಮತ್ತು ಡುಡಿನಿಯಾಲ್ನಲ್ಲಿ ಇದ್ದ ಭಯೋತ್ಪಾದಕ ತರಬೇತಿ ನೆಲೆಗಳನ್ನು ಧ್ವಂಸಗೊಳಿಸುವ ಉಸ್ತುವಾರಿ ವಹಿಸಲಾಗಿತ್ತು ಎಂದು ಮೂಲಗಳು ಹೇಳಿದವು. ಅತ್ಯಂತ ವ್ಯವಸ್ಥಿತವಾದ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯು ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದ 4 ತರಬೇತಿ ನೆಲೆಗಳ ಮೇಲೆ ದಾಳಿ ಮಾಡಿತು. ಭಯೋತ್ಪಾದಕರು ಮಾದರಿಯ ದಾಳಿಯನ್ನು ನಿರೀಕ್ಷಿಸಿರಲಿಲ್ಲ ಎಂದು ಮೂಲಗಳು ತಿಳಿಸಿದವು.
2016: ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಕಾರು ಈದಿನ ಸಂಜೆ ಅಪಘಾತಕ್ಕೆ ಈಡಾಯಿತು.  ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಂಡಾ ಸಿಟಿಯ ಜುಹುದಲ್ಲಿ ನಡೆದ ದುರ್ಘಟನೆಯಲ್ಲಿ ಬಾಲಿವುಡ್ ನಟ ಕೂದಲೆಳೆಯ ಅಂತರದಲ್ಲಿ ಪಾರಾದರು. ಕುರಿತು ಸ್ವತಃ ವರುಣ್ ಟ್ವೀಟ್ ಮಾಡಿದ್ದು, ನನ್ನ ಕಾರು ರಸ್ತೆ ಅಪಘಾತಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ನನಗೆ ಮತ್ತು ನನ್ನ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ಗಾಯವಾಗಿಲ್ಲ. ಆದರೆ ಕಾರು ಸಂಪೂರ್ಣ ಜಖಂ ಆಗಿದೆ. ಯಾರು ಆತಂಕಪಡಬೇಕಾಗಿಲ್ಲ ಎಂದು ತಿಳಿಸಿದರು. ಇದೀಗ ಬದ್ರಿನಾಥ್ ಕಿ ದುಲ್ಹನಿಯಾ ಮತ್ತು ಜುಡ್ವಾ 2 ಚಿತ್ರೀಕರಣದಲ್ಲಿ ವರುಣ್ ಬ್ಯುಸಿ.  ಕೆಲದಿನಗಳ ಹಿಂದಷ್ಟೇ ಡಿಶೂಂ ಚಿತ್ರದಲ್ಲಿ ವರುಣ್ ಆಕ್ಷನ್ ಪಾತ್ರ ನಿರ್ವಹಿಸಿ, ಮೆಚ್ಚುಗೆಗಳಿಸಿದ್ದರು.

2016: ಬೆಂಗಳೂರುಕೆಲವು ತಿಂಗಳ ಹಿಂದೆ ಉದ್ಯಮಿ ಗಗನ್ ದೀಪ್ ಸಿಂಗ್ ಜತೆ ನಟಿ ನಿಖಿತಾ ತುಕ್ರಾಲ್ ಮದುವೆ  ಮುಂಬೈನ ಪಂಚತಾರಾ ಹೋಟೆಲ್ವೊಂದರಲ್ಲಿ ಸೆ.8ರ ಶನಿವಾರ ನಡೆಯಿತು. ಈದಿನ ಸಂಜೆ ಅದ್ದೂರಿಯಾಗಿ ಆರತಕ್ಷತೆ ಕೂಡ ಜರುಗಿತು. ಗಗನ್ ಅವರು ಸಿಖ್ ಸಮುದಾಯಕ್ಕೆ ಸೇರಿದವರಾದ್ದರಿಂದ ಪಕ್ಕಾ ಪಂಜಾಬಿ ಶೈಲಿಯಲ್ಲಿಯೇ ಜೋಡಿ ಹೊಸ ಜೀವನಕ್ಕೆ ಕಾಲಿಟ್ಟಿತು.  ಅದಕ್ಕೂ ಮೊದಲು ನಡೆದ ಮೆಹೆಂದಿ ಮತ್ತು ಸಂಗೀತ ಸಮಾರಂಭದಲ್ಲಿ ನಿಖಿತಾ ಸಖತ್ ಎಂಜಾಯ್ ಮಾಡಿದರು. ಆಪ್ತ ಸ್ನೇಹಿತರು ಮತ್ತು ಕುಟುಂಬದವರ ಜತೆ ಹಾಡಿ ಕುಣಿದರು. ಎಲ್ಲ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಯಿತು. ಒಟ್ಟಾರೆ ವಿವಾಹ ಸಮಾರಂಭದಲ್ಲಿ ನಿಖಿತಾ ಹೇಗೆಲ್ಲ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಫೋಟೋಗಳು ಸಾಕ್ಷಿಯಾದವು..

2016: ವಿಶಾಖಪಟ್ಟಣ/ ಶ್ರೀನಗರ: ವಿಶಾಖ ಪಟ್ಟಣ ಮತ್ತು ಶ್ರೀನಗರದಿಂದ ಎರಡು ಮಾನವೀಯ ಘಟನೆಗಳು ಘಟಿಸಿರುವ ವರದಿಗಳು ಬಂದವು. ಗುಂಡಿನ ಘರ್ಷಣೆಯಲ್ಲಿ ಗಂಭೀರವಾಗಿ ಗಾಯಗೊಂಡ ಮಾವೋವಾದಿಗಳಿಗೆ ಪೊಲೀಸರೇ ರಕ್ತದಾನ ಮಾಡಿದ ಬಗೆಗಿನ ವರದಿ ವಿಶಾಖ ಪಟ್ಟಣದಿಂದ ಬಂದರೆ, ಅಪಘಾತಕ್ಕೆ ಈಡಾದ ಸೇನೆಯ ಯೋಧರಿಗೆ ಸ್ಥಳೀಯರು ನೆರವಾದ ಘಟನೆ ಕಾಶ್ಮೀರದಲ್ಲಿ ಘಟಿಸಿತು.  ವಿಶಾಖ ಪಟ್ಟಣದಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇಬ್ಬರು ಮಾವೋವಾದಿ ನಕ್ಸಲೀಯರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ ಪೊಲೀಸರು ಸ್ವತಃ ರಕ್ತ ನೀಡಿ ಅವರನ್ನು ರಕ್ಷಿಸಿದರು. ಚೇತರಿಸಿದ ಬಳಿಕ ಪೊಲೀಸರು ಮಾವೋವಾದಿ ನಕ್ಸಲೀಯರನ್ನು ಬಂಧಿಸಿದರು.  ಶ್ರೀನಗರದಲ್ಲಿ ಶ್ರೀನಗರ ಹೆದ್ದಾರಿಯ ಸಮೀಪ ಲಸ್ಜನ್ ಪ್ರದೇಶದಲ್ಲಿ ಸೇನಾ ಯೋಧರ ವಾಹನವೊಂದು ಅಪಘಾತಕ್ಕೆ ಈಡಾಗಿ ಸೈನಿಕರು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಸ್ಥಳೀಯರು ತತ್ ಕ್ಷಣವೇ ಸ್ಥಳಕ್ಕೆ ಧಾವಿಸಿ ವಾಹನದೊಳಗೆ ಸಿಕ್ಕಿ ಹಾಕಿಕೊಂಡಿದ್ದ ಸೈನಿಕರಿಗೆ ವಾಹನದಿಂದ ಹೊರಬರಲು ನೆರವಾದರು. ದೃಶ್ಯ ವಿಡಿಯೋ ಒಂದರಲ್ಲಿ ದಾಖಲಾಯಿತು.

2016: ನವದೆಹಲಿ: ನಿಗೂಢವಾಗಿ ಸಾವನ್ನಪ್ಪಿದ ಸುಗಂಧ ದ್ರವ್ಯ ಉದ್ಯಮಿ ಮೋನಿಕಾ ಘುರ್ದೆ ಪ್ರಕರಣದಲ್ಲಿ ಸಂದೇಹಾಸ್ಪದ ವ್ಯಕ್ತಿಯೊಬ್ಬನನ್ನು ಗೋವಾ ಪೊಲೀಸರು ಬಂಧಿಸಿದರು. ಸಂಗೋಲ್ಡಾದಲ್ಲಿರುವ ಗೋವಾ ನಿವಾಸದಲ್ಲಿ ಮೋನಿಕಾ ಸಂದೇಹಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದರು. ಮೈ ಮೇಲೆ ಗಾಯದ ಕಲೆಗಳು ಗೋಚರಿಸಿದ ಹಿನ್ನೆಲೆಯಲ್ಲಿ ಇದು ಕೊಲೆ ಇರಬೇಕೆಂದು ಶಂಕಿಸಲಾಗಿತ್ತು. ಪ್ರಕರಣದಲ್ಲಿ ಇಬ್ಬರು ಸಂದೇಹಾಸ್ಪದ ವ್ಯಕ್ತಿಗಳನ್ನು ಗುರುತಿಸಿದ ಪೊಲೀಸರು ಓರ್ವನನ್ನು ತಮ್ಮ ವಶಕ್ಕೆ ಪಡೆದರು. ಇವರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿತು. ರಾಜ್ಕುಮಾರ್ ಸಿಂಗ್ ಎಂಬ ಯುವಕ ಮೋನಿಕಾ ಅವರ ಮನೆಯಿಂದ ಮೂರು ಕಿ.ಮೀ ದೂರದಲ್ಲಿರುವ ಪೂವೋರಿಂ ಎಟಿಎಂನಲ್ಲಿ ಮೋನಿಕಾ ಅವರ ಎಟಿಎಂ ಕಾರ್ಡ್ನಿಂದ ಹಣ ಡ್ರಾ ಮಾಡಿಕೊಳ್ಳುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದು ಪ್ರಕರಣಕ್ಕೆ ತಿರುವು ನೀಡಿತು. ಗೋವಾ ಹಾಗೂ ಮಂಗಳೂರು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

2016: ಲಕ್ನೋ: ದೇಶಾದ್ಯಂತ ಇದೀಗ ಹಬ್ಬಗಳ ಸಂಭ್ರಮದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಗುಪ್ತಚರ ಇಲಾಖೆ ಆಗ್ರಾದಲ್ಲಿನ ತಾಜ್ ಮಹಲ್ ಸೇರದಂತೆ ದೇಶದ ಹಲವು ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಯಿತು. ಗಡಿಯಲ್ಲಿ ಉಗ್ರರ ಅಟ್ಟಹಾಸ ಕೂಡ ಸರ್ಪಗಾವಲಿಗೆ ಕಾರಣವಾಯಿತು. ಉತ್ತರ ಪ್ರದೇಶದಾದ್ಯಂತ ಭಾರೀ ಬಂದೊಬಸ್ತ್ ಏರ್ಪಡಿಸಲಾಯಿತು. ಪ್ರೇಮದ ಸಂಕೇತವಾದ ಜಗತ್ಪ್ರಸಿದ್ಧ ತಾಜ್ ಮಹಲ್ಗೆ ಹೆಚ್ಚುವರಿ 36 ಕಮಾಂಡರ್ಗಳನ್ನು ನೇಮಿಸಲಾಯಿತು. ಸಿಐಎಸ್ಎಫ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟರು. ಮೀರತ್, ಕಾನ್ಪುರ, ಲಖನೌ, ಬರೇಲಿ, ವಾರಾಣಸಿ, ಅಲಹಾಬಾದ್, ಮುಜಾಫರ್ ನಗರ ಸೇರಿದಂತೆ ದೇಶದ ಹಲವು ಪ್ರದೇಶದಲ್ಲಿ ಅಧಿಕ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

2016: ವಾಷಿಂಗ್ಟನ್: ತನ್ನ ಪತಿ ಡೊನಾಲ್ಡ್ ಟ್ರಂಪ್ ಅವರು 2005ರಲ್ಲಿ ತನ್ನನ್ನು ಮದುವೆಯಾದ ಸ್ವಲ್ಪವೇ ಸಮಯದಲ್ಲಿ ಮಹಿಳೆಯರನ್ನು ಸೆಳೆದುಕೊಳ್ಳುವ ಬಗಗೆ ಆಡಿದ ಕೀಳು ಮಾತುಗಳುಒಪ್ಪುವಂತಹವಲ್ಲ ಜೊತೆಗೆ ಆಕ್ರಮಣಕಾರಿ ಕೂಡಾಎಂದು ಟ್ರಂಪ್ ಪತ್ನಿ ಮೆಲೆನಿಯಾ ಟ್ರಂಪ್ ಹೇಳಿದರು.  ಆದರೆ ಬಗ್ಗೆ ಟ್ರಂಪ್ ಅವರು ಮಾಡಿರುವ ಕ್ಷಮಾಯಾಚನೆಯನ್ನು ಅಂಗೀಕರಿಸಿ ಎಂದು ಆಕೆ ಜನತೆಗೆ ಮನವಿ ಮಾಡಿದರು. ಡೊನಾಲ್ಡ್ ಟ್ರಂಪ್ ಅವರು ಮಹಿಳೆಯರ ಬಗ್ಗೆ ಆಡಿದ ಕೀಳು ದರ್ಜೆಯ ಮಾತುಗಳ ಬಗ್ಗೆ ತಿರುಗಿ ಬಿದ್ದಿರುವ ಮೆಲೆನಿಯಾನನ್ನ ಗಂಡ ಆಡಿರುವ ಮಾತುಗಳು ನನಗೆ ಸಮ್ಮತವಲ್ಲ. ಅವು ಆಕ್ರಮಣಕಾರಿ ಕೂಡಾ. ನನಗೆ ಗೊತ್ತಿರುವಂತಹ ವ್ಯಕ್ತಿಯನ್ನು ಮಾತುಗಳು ಪ್ರತಿನಿಧಿಸುವುದಿಲ್ಲಎಂದು ಹೇಳಿಕೆಯೊಂದರಲ್ಲಿ ತಿಳಿಸಿದರು.  ಅವರಿಗೆ ನಾಯಕನ ಹೃದಯ ಮತ್ತು ಮನಸ್ಸು ಇದೆ. ಅವರ ಕ್ಷಮಾಯಾಚನೆಯನ್ನು ಜನರು ಅಂಗೀಕರಿಸುತ್ತಾರೆ ಎಂದು ನಾನು ಹಾರೈಸುವೆ, ಮತ್ತು ರಾಷ್ಟ್ರ ಹಾಗೂ ವಿಶ್ವಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಬಗ್ಗೆ ಗಮನ ಹರಿಸುತ್ತಾರೆ ಎಂದು ಭಾವಿಸುವೆ ಎಂದು ಮೆಲೆನಿಯಾ ಟ್ರಂಪ್ ಹೇಳಿದರು.

2016: ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಐದು ಕೋಟಿಗೂ ಹೆಚ್ಚು ಮಂದಿ ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರಲ್ಲಿ ಶೇಕಡಾ 20ರಷ್ಟು ಮಂದಿ ಮಕ್ಕಳಾಗಿದ್ದರೆ, ಶೇಕಡಾ 15ರಿಂದ 35ರಷ್ಟು ಜನ ವಯಸ್ಕರಾಗಿದ್ದಾರೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿತು. ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಅಗಾ ಖಾನ್ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ. ಅಯೇಶಾ ಮಿಯಾನ್, ‘ಹೆಚ್ಚೂಕಡಿಮೆ ಎರಡು ಕೋಟಿಯಷ್ಟು ಮಕ್ಕಳು ಮನೋರೋಗದಿಂದ ಬಳಲುತ್ತಿದ್ದಾರೆ. ಅಂದರೆ ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 10ರಷ್ಟು ಮಂದಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಕಾರಣ ದೇಶದಲ್ಲಿ ಮಾನಸಿಕ ರೋಗ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇದೆಎಂದು ಕಳಕಳಿ ವ್ಯಕ್ತಪಡಿಸಿದರು. ಸೋಮವಾರ (.10) ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ಆಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಡಾನ್ಪತ್ರಿಕೆಗೆ ಡಾ. ಅಯೇಶಾ ಬಗ್ಗೆ ಮಾಹಿತಿ ನೀಡಿದರು.

2016: ಲಖನೌ: ಉತ್ತರ ಪ್ರದೇಶದಲ್ಲಿ  ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಬಹಿರಂಗ ಸಭೆಯ ವೇಳೆಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿ, 28ಕ್ಕೂ ಹೆಚ್ಚು ಮಂದಿ ಗಾಯಗೊಂಡರು.  ಬಹಳಷ್ಟು ಮಕ್ಕಳು ಸೇರಿದಂತೆ ನೂರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ವರದಿಗಳು ತಿಳಿಸಿದವು. ಲಖನೌದ ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಮೈದಾನದ ಕಾನ್ಶೀರಾಮ್ ಸ್ಮಾರಕದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಸುಮಾರು ಒಂದು ಲಕ್ಷ ಮಂದಿ ಸೇರಿದ್ದರು. ಮಾಯಾವತಿ ಅವರ ಭಾಷಣದ ಬಳಿಕ ಮೈದಾನದಿಂದ ಹೊರ ಹೋಗುವಾಗ ಗೊಂದಲ ಉಂಟಾಗಿ ಕಾಲ್ತುಳಿತ ಸಂಭವಿಸಿತು ಎಂದು ವರದಿಗಳು ಹೇಳಿದವು.  ಬಿಎಸ್ಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಮಂದಿ ಅತ್ಯಂತ ಬಡವರು ಎಂದು ವರದಿಗಳು ಹೇಳಿದವು. ಈ ಮಧ್ಯೆ ಉತ್ತರ ಪ್ರದೇಶ ಬಿಎಸ್ಪಿ ಅಧ್ಯಕ್ಷ ರಾಮಾಚಲ್ ರಾಜ್ಭರ್ ಅವರು ಹೇಳಿಕೆಯೊಂದನ್ನು ನೀಡಿ ಮಹಿಳೆಯೊಬ್ಬರು ಸಾವನ್ನು ಅಪ್ಪಿದ್ದು ಆದ್ರತೆಯಿಂದಲೇ ಹೊರತು ಯಾವುದೇ ಕಾಲ್ತುಳಿತದಿಂದ ಅಲ್ಲ ಎಂದು ಪ್ರತಿಪಾದಿಸಿದರು.

2016: ನವದೆಹಲಿ: ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ವಿಕಿರಣ ಸೋರಿಕೆಯಿಂದ ಯಾವುದೇ ಅಪಾಯವಿಲ್ಲ, ಅದು ಅತ್ಯಂತ ಅಲ್ಪ ಪ್ರಮಾಣದ ಸೋರಿಕೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದರು. ಏರ್ ಫ್ರಾನ್ಸ್ ವಿಮಾನದಲ್ಲಿದ್ದ ಕ್ಯಾನ್ಸರ್ ಔಷಧದ ಪೊಟ್ಟಣದಿಂದ ವಿಕಿರಣ ಸೋರಿಕೆಯಾಗಿತ್ತು. ಪರೀಕ್ಷೆಯ ಬಳಿಕ ಪರಮಾಣು ಔಷಧದಲ್ಲಿದ್ದ ವಿಕಿರಣ ಅತ್ಯಂತ ಅತ್ಯಂತ ಅಲ್ಪ ಪ್ರಮಾಣದ್ದಾಗಿದ್ದು ಅಪಾಯಕಾರಿಯಲ್ಲ ಎಂಬುದು ಸ್ಪಷ್ಟವಾಯಿತು ಎಂದು ಅವರು ಹೇಳಿದ್ದಾರೆ. ಟಿ3 ಕಾಗೋ ಟರ್ವಿುನಲ್ ನಿಂದ ಇಲಾಖೆಗೆ ಬಂದ ದೂರವಾಣಿ ಕರೆಯೊಂದು ಯಾವುದೋ ಸರಕಿನಿಂದ ವಿಕಿರಣ ವಸ್ತು ಸೋರಿಕೆಯಾಗುತ್ತಿದೆ ಎಂದು ಪ್ರಾಥಮಿಕ ವರದಿ ತಿಳಿಸಿತ್ತು. ತತ್ ಕ್ಷಣವೇ ಮುಂಜಾಗರೂಕತಾ ಕ್ರಮವಾಗಿ ಸರಕು ಸಮುಚ್ಚಯವನ್ನು ಅಧಿಕಾರಿಗಳು ತೆರವುಗೊಳಿಸಲಾಗಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಂಡವೊಂದರ ಜೊತೆಗೆ ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿದ್ದವು.

2016: ನವದೆಹಲಿ: ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿ 38 ಭಯೋತ್ಪಾದಕರನ್ನು ಕೊಂದ ಸುದ್ದಿ ಬೆನ್ನಲ್ಲೇ 2011ರಲ್ಲಿ ಭಾರತ ಪಾಕ್ ವಿರುದ್ಧ ಭೀಕರವಾದಆಪರೇಷನ್ ಜಿಂಜರ್ಹೆಸರಿನ ಸೀಮಿತ ದಾಳಿ ನಡೆಸಿದ ಹಾಗೂ 13 ಸೈನಿಕರನ್ನು ಕೊಂದು ಅವರಲ್ಲಿ ಕೆಲವರ ರುಂಡಗಳನ್ನು ಚೆಂಡಾಡಿದ್ದ ಸುದ್ದಿ ಬಹಿರಂಗಕ್ಕೆ ಬಂದಿತು. ಇಬ್ಬರು ಭಾರತೀಯ ಯೋಧರ ತಲೆ ಕಡಿದ ಪಾಕ್ ಕೃತ್ಯಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದ ಭಾರತೀಯ ಯೋಧರು ಮೂವರು ಪಾಕ್ ಸೈನಿಕರ ತಲೆ ಕಡಿದಿದ್ದರು ಎಂದು ವರದಿಗಳು ತಿಳಿಸಿದವು.  2011 ಜುಲೈ 30ರಂದು ಪಾಕ್ ಸೇನೆ ಗುಗಲ್ಧರ್ ಸೇನಾ ನೆಲೆ ಮೇಲೆ ದಾಳಿ ನಡೆಸಿ ಹವಿಲ್ದಾರ್ ಜೈಪಾಲ್ ಸಿಂಗ್ ಅಧಿಕಾರಿ ಮತ್ತು ಲಾನ್ಸ್ ನಾಯಕ್ ದೇವಿಂದರ್ ಸಿಂಗ್ ಅವರ ತಲೆ ಕಡಿದಿತ್ತು. ಇದಕ್ಕೆ ಪ್ರತಿಯಾಗಿ ಜೋರ್, ಹಿಫಾಜತ್ ಮತ್ತು ಲಶ್ದತ್ನಲ್ಲಿನ ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಪೊಲೀಸ್ ಚೌಕಿ ಮೇಲೆ ಕುಪ್ವಾರದ 28ನೇ ಡಿವಿಷನ್ 2011 ಆಗಸ್ಟ್ 30ರಂದುಆಪರೇಷನ್ ಜಿಂಜರ್ದಾಳಿಯನ್ನು ಸಂಘಟಿಸಿತ್ತು. ಈದ್ ಮುನ್ನಾದಿನ ಆಗಸ್ಟ್ 29ರಂದು ನಸುಕಿನ 3 ಗಂಟೆಗೆ ವೈರಿ ನೆಲಕ್ಕೆ ನುಗ್ಗಿದ ಭಾರತೀಯ ಸೈನಿಕರು ರಾತ್ರಿ 10 ಗಂಟೆಯವರೆಗೆ ಕಾದು, ಪಾಕ್ ಸೈನಿಕರ ಮೇಲೆ ದಾಳಿಗೆ ಮಣ್ಣಿನ ಉಂಡೆಯಲ್ಲಿ ಸ್ಪೋಟಕಗಳನ್ನು ಇರಿಸಿ ಸಜ್ಜಾಗಿದ್ದರು. ಬಳಿಕ ಜುಲೈ 30ರಂದು ಪಾಕ್ ಸೈನಿಕರತ್ತ ಗ್ರೆನೇಡ್ ದಾಳಿ ಜೊತೆಗೆ ಗುಂಡು ಹಾರಾಟವನ್ನೂ ನಡೆಸಿದ್ದಲ್ಲದೆ, ಸತ್ತ ಪಾಕ್ ಸೈನಿಕನ ಶವವೊಂದರಲ್ಲಿ ಸುಧಾರಿತ ಸ್ಪೋಟಕ ಸಾಧನವನ್ನೂ ಇರಿಸಿದ್ದರು. ದಾಳಿಯಲ್ಲಿ ಹತರಾದ ಮೂವರು ಪಾಕ್ ಸೈನಿಕರ ತಲೆ ಕಡಿದು ತಮ್ಮ ಬಳಿ ಇಟ್ಟುಕೊಳ್ಳುವುದರ ಜೊತೆ ಅವರ ಬಳಿಯಿದ್ದ ಶಸ್ತ್ರಾಸ್ತ್ರ ಮತ್ತಿತರ ವಸ್ತುಗಳನ್ನು ಸಂಗ್ರಹಿಸಿಕೊಂಡು ವಾಪಸ್ ಹೊರಟಾಗ, ಸ್ಪೋಟದ ಸದ್ದು ಕೇಳಿ ಪಾಕ್ ಸೈನಿಕರು ನುಗ್ಗಿ ಬಂದಿದ್ದರು. ಪಾಕ್ ಸೈನಿಕರ ಮೇಲೆ ಭಾರತೀಯ ಸೇನೆಯ ಇನ್ನೊಂದು ತಂಡ ದಾಳಿ ನಡೆಸಿತು. ಕಾರ್ಯಾಚರಣೆ ಮುಗಿಸಿ ವಾಪಸಾಗುವ ಮುನ್ನ ಭೂ ಸ್ಪೋಟಕಗಳನ್ನು ಸಿಡಿದ ಇತರ ನಾಲ್ವರು ಪಾಕ್ ಸೈನಿಕರನ್ನು ಕೊಂದು ಭಾರತೀಯ ಯೋಧರು ವಾಪಸಾಗಿದ್ದರು ಎಂದು ವರದಿಗಳು ಹೇಳಿದವು.

2016: ಟೋಕಿಯೋ: ಜಪಾನ್ನಲ್ಲಿ ಅತಿಯಾದ ಕೆಲಸದ ಒತ್ತಡದ ಪರಿಣಾಮವಾಗಿ ಐದರಲ್ಲಿ ಒಂದು ಕಂಪನಿಯ ನೌಕರರು ಸಾವನ್ನು ಅಪ್ಪುತ್ತಿದ್ದಾರೆ ಎಂದು ಜಪಾನ್ ಸರ್ಕಾರ ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿತು. ಅತಿಯಾದ ಕೆಲಸದ ಒತ್ತಡದಿಂದಾಗಿ ನೂರಾರು ಕಾರ್ಮಿಕರು ಪಾರ್ಶ್ವವಾಯು, ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಜತೆಗೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಸಹ ಗಣನೀಯವಾಗಿ ಹೆಚ್ಚಾಗಿದೆ. ಜತೆಗೆ ನೌಕರರು ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬುದು ಸಮೀಕ್ಷೆ ತಿಳಿಸಿತು. ಡಿಸೆಂಬರ್ 2015 ಮತ್ತು ಜನವರಿ 2016ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ. 22.7 ರಷ್ಟು ಕಂಪನಿಗಳಲ್ಲಿ ನೌಕರರು ಓವರ್ ಟೈಮ್ ದುಡಿಯುತ್ತಿದಾರೆ. ನೌಕರರು ಪ್ರತೀ ತಿಂಗಳೂ 80 ಗಂಟೆಗೂ ಹೆಚ್ಚು ಸಮಯ ಓವರ್ ಟೈಮ್ ಕೆಲಸ ಮಾಡುತ್ತಿದ್ದಾರೆ. ಶೇ. 21.3 ರಷ್ಟು ನೌಕರರು ವಾರಕ್ಕೆ 49 ಗಂಟೆ ಅಥವಾ ಅದಕ್ಕಿಂತಲೂ ಹೆಚ್ಚು ಸಮಯ ಕೆಲಸ ಮಾಡುತ್ತಿದ್ದಾರೆ. ಇದು ಅಮೆರಿಕದಲ್ಲಿ ಪ್ರತೀ ಕಾರ್ಮಿಕನ ಕೆಲಸದ ಸಮಯಕ್ಕಿಂತ ಶೇ. 16.4ರಷ್ಟು ಹೆಚ್ಚು, ಬ್ರಿಟನ್ಗಿಂತಲೂ ಶೇ. 12.5 ರಷ್ಟು ಮತ್ತು ಫ್ರಾನ್ಸ್ಗಿಂತಲೂ ಶೇ. 10.4ರಷ್ಟು ಹೆಚ್ಚು ಇದೆ. ಇದರಿಂದಾಗಿ ನೌಕರರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
2016: ಅಮೃತಸರ: ಭಾರತ ವಿರೋಧಿ ಸಂದೇಶ ಇರುವ ಚೀಟಿ ಹೊತ್ತು ಬಂದಿದ್ದ ಪಾರಿವಾಳಕ್ಕೆ ತನಿಖೆ ಮುಗಿಯುವವರಿಗೂ ಮುಕ್ತಿ ಸಿಗುವುದಿಲ್ಲ. ಅದಕ್ಕೆ ಜೈಲುವಾಸವೇ ಗತಿ ಎಂದು ಪಂಜಾಬ್ ಪೊಲೀಸರು ತಿಳಿಸಿದರು. ಅಕ್ಟೋಬರ್ 1 ರಂದು ಪಂಜಾಬ್ ಪಠಾಣ್ಕೋಟ್ ಗಡಿ ಭಾಗದಲ್ಲಿ ಒಂದು ಪಾರಿವಾಳ ಪತ್ತೆಯಾಗಿತ್ತು. ಅದರ ಕಾಲಿಗೆ ಕಟ್ಟಿದ್ದ ಚೀಟಿಯಲ್ಲಿ ಭಾರತಕ್ಕೆ ಎಚ್ಚರಿಕೆ ನೀಡುವ ಸಂದೇಶವನ್ನು ಉರ್ದುವಿನಲ್ಲಿ ಬರೆಯಲಾಗಿತ್ತು. ‘ಮೋದಿ ಜಿ ನಾವು 1971ರಲ್ಲಿ ಇದ್ದಂತೆ ಇಲ್ಲ, ಜೈಷ್ ಮೊಹಮ್ಮದ್ಎಂದು ಸಂದೇಶವಿತ್ತು. ಪಾರಿವಾಳವನ್ನು ಬಿಎಸ್ಎಫ್ ಯೋಧರು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅಂದಿನಿಂದಲೂ ಪಾರಿವಾಳ ಪೊಲೀಸರ ವಶದಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ವಿಧದಲ್ಲಿ ತನಿಖೆ ನಡೆಸಬೇಕು ಎಂದು ಮೇಲಾಧಿಕಾರಿಗಳು ಮತ್ತು ಸರ್ಕಾರ ಯಾವುದೇ ಸೂಚನೆ ನೀಡಿಲ್ಲ. ಹಾಗಾಗಿ ಪೊಲೀಸರು 300 ರೂ. ಕೊಟ್ಟು ವಿಶೇಷ ಪಂಜರ ತಂದು ಅದರಲ್ಲಿ ಪಾರಿವಾಳವನ್ನು ಕೂಡಿ ಹಾಕಿದ್ದಾರೆ, ಜತೆಗೆ ಅದಕ್ಕೆ ಆಹಾರ, ನೀರು ಒದಗಿಸಿ ಆರೈಕೆ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿದವು. ಈ ಪಾರಿವಾಳದ ಕುರಿತು ಮಾಧ್ಯಮಗಳಲ್ಲಿ ದಿನಕ್ಕೊಂದು ವರದಿ ಪ್ರಕಟವಾಗುತ್ತಿದೆ. ಹಾಗಾಗಿ ಇದನ್ನು ಈಗಲೇ ಬಿಟ್ಟು ಬಿಡಲು ಸಾಧ್ಯವಿಲ್ಲ. ತನಿಖೆ ಮುಗಿದ ಬಳಿಕವಷ್ಟೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಪಾರಿವಾಳದ ಒಳಗೆ ಸಿಮ್ ಕಾರ್ಡ್ ಅಡಗಿಸಿ ಇಡಲಾಗಿದೆಯೇ ಅಥವಾ ಬೇರಾವುದೇ ವಸ್ತುಗಳಿವೆಯೇ ಎಂಬುದನ್ನು ತಿಳಿಯಬೇಕಿದೆ. ಹಾಗಾಗಿ ಪಾರಿವಾಳವನ್ನು ಸ್ಕ್ಯಾನಿಂಗ್ ಮಾಡಿಸಬೇಕೆಂದಿದ್ದೇವೆ. ತನಿಖೆ ಮುಗಿಯುವವರೆಗೂ ನಾವು ಪಾರಿವಾಳವನ್ನು ಜೋಪಾನವಾಗಿ ಕಾಪಾಡಬೇಕಿದೆ. ಇದು ದೇಶ ವಿರೋಧಿ ಸಂದೇಶ ಹೊತ್ತು ಬಂದ ಆರೋಪ ಎದುರಿಸುತ್ತಿದೆ. ಆದರೆ ಪಾರಿವಾಳಕ್ಕೆ ತಾನು ಎಂಥಹ ತಪ್ಪು ಮಾಡಿದ್ದೇನೆ ಎಂಬುದೇ ತಿಳಿದಿಲ್ಲ ಎಂದು ಪೊಲೀಸ್ ಆಧಿಕಾರಿಯೊಬ್ಬರು ತಿಳಿಸಿದರು.

2016: ಯೆಮೆನ್: ಯೆಮೆನ್ ಸನ್ನಾದಲ್ಲಿ ಅಂತ್ಯಕ್ರಿಯೆಯ ಸಮಾರಂಭದಲ್ಲಿ ಭಾಗವಹಿಸಿದ್ದವರ ಮೇಲೆ ಸೌದಿ ಅರೇಬಿಯಾ ನೇತೃತ್ವದ ಮಿತ್ರ ಪಡೆ ನಡೆಸಿದ ವಾಯು ದಾಳಿಯಲ್ಲಿ 140 ಕ್ಕೂ ಹೆಚ್ಚು ಜನರು ಮೃತರಾಗಿ  500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿತು. ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯ ಸಮಾರಂಭಕ್ಕಾಗಿ ನೂರಾರು ಜನರು ಸಮುದಾಯ ಭವನದಲ್ಲಿ ನೆರೆದಿದ್ದರು. ಕಟ್ಟಡದ ಮೇಲೆ ಬಾಂಬ್ ಬಿದ್ದ ಪರಿಣಾಮ ಅನಾಹುತ ಸಂಭವಿಸಿತು. ಘಟನೆ ಕುರಿತು ತುರ್ತಾಗಿ ತನಿಖೆ ನಡೆಯಬೇಕು. ಜತೆಗೆ ಅಂತಾರಾಷ್ಟ್ರೀಯ ಸಮುದಾಯ ಯೆಮೆನ್ನಲ್ಲಿ ನಾಗರಿಕರನ್ನು ರಕ್ಷಿಸಲು ಮುಂದಾಗಬೇಕು ಎಂದು ವಿಶ್ವಸಂಸ್ಥೆಯ ಮಾನವೀಯ ಪಡೆಯ ಸಂಚಾಲಕ ಜೆಮ್ಮಿ ಮೆಕ್ಗೋಲ್ಡ್ರಿಕ್ ತಿಳಿಸಿದರು. ಯೆಮೆನ್ನಲ್ಲಿ ಹೌತಿ ಬಂಡುಕೋರರ ಹಾವಳಿ ಹೆಚ್ಚಾದ ನಂತರ ಸೌದಿ ಅರೇಬಿಯಾ ಮತ್ತು ಮಿತ್ರ ರಾಷ್ಟ್ರಗಳು ಯೆಮೆನ್ ಅಧ್ಯಕ್ಷರ ನೆರವಿಗೆ ಬಂದವು. ನಂತರ ಮಾರ್ಚ್ 2015ರಲ್ಲಿ ಹೌತಿ ಬಂಡುಕೋರರ ಮೇಲೆ ದಾಳಿ ಪ್ರಾರಂಭಿಸಲಾಗಿತ್ತು. ಸೌದಿ ಪಡೆಗಳಿಂದ ದಾಳಿ ಪ್ರಾರಂಭವಾದ ನಂತರ ಸಂಭವಿಸಿದ ಅತಿ ದೊಡ್ಡ ಅನಾಹುತ ಇದಾಗಿದೆ. ದಾಳಿ ಪ್ರಾರಂಭವಾದ ನಂತರ ಇದುವರೆಗೂ ಸುಮಾರು 6700 ನಾಗರಿಕರು ಮೃತಪಟ್ಟಿದ್ದಾರೆ ಸ್ಥಳೀಯರು ತಿಳಿಸಿದರು.

1945, 1946: ಇಬ್ಬರು ಖ್ಯಾತ ಸರೋದ್ ವಾದಕರ ಜನ್ಮದಿನವಿದು. ಸರೋದ್ ವಾದಕ ಅಮ್ಜದ್ ಅಲಿಖಾನ್ ಅವರು 1945 ರಲ್ಲಿ ಈದಿನ ಜನಿಸಿದರೆ, ಇನ್ನೊಬ್ಬ ಸರೋದ್ ವಾದಕ ಝರೀನೆ ಸೊಹ್ರಾಬ್ ದಾರೂವಾಲಾ ಅವರು 1946ರ ಅಕ್ಟೋಬರ್ 9ರಂದು ಜನಿಸಿದರು. ಇದು ವಿಶ್ವ ಅಂಚೆ ದಿನವೂ ಹೌದು. ಸ್ವಿಸ್ ರಾಜಧಾನಿ ಬರ್ನಿನಲ್ಲಿ 1874ರ ಈ ದಿನ ಯುನಿವರರ್ಸಲ್ ಪೋಸ್ಟಲ್ ಯೂನಿಯನ್ (ಯುಪಿಯು) ಸ್ಥಾಪಿಸಲಾಯಿತು. 1969ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಯುಪಿಯು ಕಾಂಗ್ರೆಸ್ಸಿನಲ್ಲಿ ಯುಪಿಯು ಸ್ಥಾಪನಾ ದಿನವನ್ನು (ಅಕ್ಟೋಬರ್ 9) ವಿಶ್ವ ಅಂಚೆ ದಿನವಾಗಿ ಆಚರಿಸಲು ಕರೆ ನೀಡಲಾಯಿತು. ವಿಶ್ವದಾದ್ಯಂತ ಹಲವು ರಾಷ್ಟ್ರಗಳು ಅಂಚೆ ಉತ್ಪನ್ನಗಳ ಬಿಡುಗಡೆ ಅಥವಾ ಅಂಚೆ ಸೇವೆ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ಕಾರ್ಯಕ್ರಮಗಳನ್ನು ಇದೇ ದಿನ ಸಂಘಟಿಸುತ್ತವೆ. ವಿಶ್ವದಾದ್ಯಂತ 66 ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಲ್ಲಿ 50 ಲಕ್ಷಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಕಾಗದ ಪತ್ರಗಳ ರವಾನೆ ಜೊತೆಗೆ ಇತರ ಸೇವೆಗಳನ್ನು ಮಾಡುತ್ತಿರುವ ಅಂಚೆ ಇಲಾಖೆಯಿಂದ ಬರುವ ಪತ್ರಗಳ ಜೊತೆಗೆ ಜನರಿಗೆ ಭಾವನಾತ್ಮಕ ಸಂಬಂಧ ಬೆಸೆದಿರುವುದು ವಿಶೇಷ.

2014: ಸ್ಟಾಕ್ಹೋಂ, ಸ್ವೀಡನ್ : ನಾಜಿ ಅತಿಕ್ರಮಣ ಮತ್ತು ಅದರಿಂದ ದೇಶದ ಮೇಲಾದ ಪರಿಣಾಮದ ಬಗ್ಗೆ ಜೀವನ­ವಿಡೀ ಅಧ್ಯಯನ ಮಾಡಿ ಪುಸ್ತಕಗಳನ್ನು ಬರೆದ ಫ್ರಾನ್ಸಿನ ಲೇಖಕ ಪ್ಯಾಟ್ರಿಕ್ ಮೊಡಿಯಾನೊ ಅವರು 2014ರ ಸಾಲಿನ  ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದರು. ನಾಜಿ ದಾಳಿಯಿಂದ ಮಾನವ ಕುಲದ ಮೇಲೆ ಆದ ಅತಿ ಕೆಟ್ಟ ­ಅನು­ಭವ­­ಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟ ಪ್ಯಾಟ್ರಿಕ್ ಅವರಿಗೆ ₨6.6 ಕೋಟಿ ($11 ಲಕ್ಷ ) ನಗದು ಬಹು­ಮಾನ ಸಿಗಲಿದೆ. 69 ವರ್ಷದ ಪ್ಯಾಟ್ರಿಕ್  ಅವರ  ಕಾದಂ­ಬರಿ ‘ಮಿಸ್ಸಿಂಗ್  ಪರ್ಸ­ನ್’ಗೆ 1978­­ರಲ್ಲಿ ಪ್ರತಿ­ಷ್ಠಿತ ‘ಪ್ರಿಸ್ ಗೊನ್ಕೋರ್ಟ್’ ಪ್ರಶಸ್ತಿ ಲಭಿಸಿತ್ತು. ಅವರ ಯುರೋಪಿಯನ್ ಸಾಹಿತ್ಯಕ್ಕೆ 2012ರಲ್ಲಿ ಆಸ್ಟ್ರೇಲಿಯಾ ದೇಶದ ಪ್ರಶಸ್ತಿ ಲಭಿಸಿದೆ. ಪ್ಯಾಟ್ರಿಕ್ ಕೃತಿಗಳಲ್ಲಿ ಯಹೂ­­­ದಿ­­ತನ, ನಾಜಿಗಳ ಕ್ರೌರ್ಯ ಮತ್ತು ಅಸ್ಮಿತತೆ ಕಳೆದುಕೊಂಡು ಪರಿ­ತಪಿ­ಸುವ ವಿಚಾ­ರವೇ ಕಥಾ  ವಸ್ತು­­ಗಳು. ಅವರ 40ಕ್ಕೂ ಹೆಚ್ಚು ಕೃತಿ­ಗಳು ಪ್ರೆಂಚ್ ಭಾಷೆ­­ಯಲ್ಲಿ  ಪ್ರಕಟ­­­­ಗೊಂಡಿವೆ. ಅಲ್ಲದೆ, ಕೆಲವು ಪ್ರಮುಖ ಕೃತಿ­ಗಳು ಇಂಗ್ಲಿಷ್ಗೆ ಭಾಷಾಂತರ­ಗೊಂಡಿವೆ.  ‘ಲಾ ಪ್ಲೇಸ್ ಡಿ ಎಲೈಟ್’, ‘ರಿಂಗ್ ಆಫ್ ರೋಡ್್ಸ’, ‘ಎ ವಿಲ್ಲಾ ಟ್ರಿಸ್ಟೆ’, ‘ಎ ಟ್ರೇಸ್ ಮಲೈಸ್’ ಮತ್ತು ‘ಹನಿ­ಮೂನ್’ ಅವರ ಪ್ರಮುಖ ಕೃತಿಗಳು. ಅವರು ಮಕ್ಕ­ಳಿಗಾಗಿ ಬರೆದ ಪುಸ್ತಕ 1974­­ರಲ್ಲಿ ‘ಲಾಕೊಂಬೆ, ಲೂಸಿ­ಯೆನ್’ ಹೆಸ­ರಿನ ಸಿನಿಮಾ ಆಯಿತು. ಪ್ಯಾಟ್ರಿಕ್ 1945ರಲ್ಲಿ ಎರಡನೇ ಮಹಾ ಯುದ್ಧ ಅಂತ್ಯಗೊಂಡ ಎರಡು ತಿಂಗಳ ನಂತರ ಪ್ಯಾರಿಸ್ನ ಉಪ­ನಗ­ರದಲ್ಲಿ ಜನಿಸಿದರು. ಅವರು ಬಹಳ ಅಪರೂಪಕ್ಕೆ ಸಂದರ್ಶನ ನೀಡುತ್ತಾರೆ. ಇಟಲಿ ಮೂಲದ ಯಹೂದಿ ಸಮು­ದಾಯಕ್ಕೆ ಸೇರಿದ ಪ್ಯಾಟ್ರಿಕ್ ತಂದೆ ಬೆಲ್ಜಿಯಂ ಮೂಲದ ನಟಿಯನ್ನು ಮದುವೆಯಾಗಿದ್ದರು.

2008: ಭಾರತದೊಂದಿಗಿನ ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಸಹಿ ಹಾಕಿದರು. ವಾಷಿಂಗ್ಟನ್ನಿನಲ್ಲಿ ಅಮೆರಿಕ ಕಾಲಮಾನ (8-10-2009) ಮಧ್ಯಾಹ್ನ 2.34ಕ್ಕೆ ಮತ್ತು ಭಾರತೀಯ ಕಾಲಮಾನ (9-10-2008) ಬೆಳಿಗ್ಗೆ 4 ಗಂಟೆಗೆ ಈ ಐತಿಹಾಸಿಕ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅದು ಶಾಸನವಾಯಿತು. ವಾಷಿಂಗ್ಟನ್ನಿನ ಶ್ವೇತಭವನದಲ್ಲಿ ಈ ಸಹಿ ಹಾಕುವ ಕಾರ್ಯಕ್ರಮ ನಡೆಯಿತು. ನ್ಯೂಯಾರ್ಕ್ ಡೆಮಾಕ್ರಟಿಕ್ ಪ್ರತಿನಿಧಿ ಎಲಿಯಟ್ ಏಂಜೆಲ್, ವಿದೇಶಾಂಗ ಕಾರ್ಯದರ್ಶಿ ಕಾಂಡೊಲೀಸಾ ರೈಸ್ ಈ ಸಂದರ್ಭದಲ್ಲಿಹಾಜರಿದ್ದರು.

2008: ಫ್ರಾನ್ಸಿನ ಕಾದಂಬರಿಕಾರ ಜಾನ್ ಮರಿ ಗುಸ್ತಾವ್ ಲಿ ಕ್ಲೆಜಿವೊ, 2008ನೇ ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾದರು.. ಕಾವ್ಯಾತ್ಮಕ ಮತ್ತು ಸಂವೇದನಾಶೀಲ ಭಾವಪರವಶತೆಯ ಬರವಣಿಗೆ ಶೈಲಿಗಾಗಿ ಅವರನ್ನು ಆಯ್ಕೆ ಮಾಡಲಾಯಿತು. ಲಿ ಕ್ಲೆಜಿಯೊ (68) ಅವರ ಕಾದಂಬರಿಗಳಲ್ಲಿ ನಾಗರಿಕ ಸಮುದಾಯದ ಮಾನವೀಯತೆಯ ಎಲ್ಲ ಮುಖಗಳನ್ನು ದಾಖಲಿಸಲಾಗಿದೆ. 1980ರಲ್ಲಿ `ಡೆಸರ್ಟ್' ಕಾದಂಬರಿ ಮೂಲಕ ಕ್ಲೆಜಿಯೊ, ವಿಶ್ವ ಸಾಹಿತ್ಯ ಲೋಕದಲ್ಲಿ ಗಮನ ಸೆಳೆದರು. `ಟೆರ್ರಾ ಅಮಟಾ', `ದ ಬುಕ್ ಆಫ್ ಫ್ಲೈಟ್ಸ್', `ವಾರ್' ಮತ್ತು `ದ ಗೇಂಟ್ಸ್ ' ಇತರ ಕೃತಿಗಳು.. ಕಳೆದ ವರ್ಷ ಪ್ರಶಸ್ತಿಯು ಬ್ರಿಟನ್ನಿನ ಡೋರಿಸ್ ಲೆಸ್ಸಿಂಗ್ ಪಾಲಾಗಿತ್ತು. ಲಿ ಕೆಜ್ಲಿವೊ ಅವರು ಮುಕ್ಕಳಿಗಾಗಿಯೂ ಅನೇಕ ಕತೆಗಳನ್ನು ಬರೆದಿದ್ದು, ಕಥಾಸಂಗ್ರಹಗಳು `ಲಲ್ಲಾಬೈ ಮತ್ತು `ಬಲಾಬಿಲೊವೊ' ಹೆಸರಿನಲ್ಲಿ ಪ್ರಕಟಗೊಂಡಿವೆ.

2008: ಹಸಿರು ವರ್ಣದ ಪ್ರಕಾಶಮಾನ ಪ್ರೊಟೀನನ್ನು (ಜಿ ಎಫ್ ಪಿ) ಶೋಧಿಸಿ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಪಾನಿನ ಒಸಮು ಶಿಮೊಮುರಾ, ಅಮೆರಿಕದ ಮಾರ್ಟಿನ್ ಚಲ್ಫಿ ಹಾಗೂ ರೋಜರ್ ಸೈನ್ ಅವರಿಗೆ ರಸಾಯನ ವಿಜ್ಞಾನ ನೊಬೆಲ್ ಪ್ರಶಸ್ತಿ ದೊರಕಿತು.. `ಜಿ ಎಫ್ ಪಿ' ಮೊದಲ ಬಾರಿ ಲೋಳೆ ಮೀನಿನಲ್ಲಿ (ಜೆಲ್ಲಿ ಫಿಶ್) ಕಂಡುಬಂದಿದೆ. ಮೆದುಳು ಕೋಶಗಳ ಬೆಳವಣಿಗೆ ಅಥವಾ ಕ್ಯಾನ್ಸರ್ ಕೋಶಗಳ ಪ್ರಸರಣದಂಥ ಸೂಕ್ಷ್ಮಜೀವಿಗಳನ್ನು ಕಂಡುಹಿಡಿಯಲು ಪ್ರಯೋಗಾಲಯ ಸಾಧನವಾಗಿ ಈ ಪ್ರೋಟೀನನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಎಂದು `ದಿ ರಾಯಲ್ ಸ್ವಿಡಿಷ್ ಸೈನ್ಸ್ ಅಕಾಡೆಮಿ' ಹೇಳಿತು.. ಶಿಮೊಮುರಾ ಅವರು ಉತ್ತರ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ದೊರೆತ ಲೋಳೆ ಮೀನಿನಿಂದ `ಜಿ ಎಫ್ ಪಿ'ಯನ್ನು ಪ್ರತ್ಯೇಕಿಸಿದರು. ಬರಿಗಣ್ಣಿಗೆ ಕಾಣದ ನೇರಳೆ ಬಣ್ಣದ ಬೆಳಕಿನಲ್ಲಿ ಈ ಪ್ರೋಟೀನ್ ಪ್ರಕಾಶಮಾನವಾದ ಹಸಿರು ವರ್ಣದಿಂದ ಹೊಳೆಯುತ್ತದೆ ಎನ್ನುವ ಅಂಶವನ್ನು ಶಿಮೊಮುರಾ ಮೊದಲು ಪತ್ತೆಮಾಡಿದರು. 1990 ರ ದಶಕದಲ್ಲಿ ಚಲ್ ಫಿ ಅವರು `ಜಿ ಎಫ್ ಪಿ' ಯನ್ನು ತಳಿವಿಜ್ಞಾನದ ಮಹತ್ವದ ಭಾಗ ಎಂದು ಗುರುತಿಸಿದರು. ರೋಜರ್ ಸೈನ್ ಅವರು `ಜಿ ಎಫ್ ಪಿ' ಯಾವ ರೀತಿಯಲ್ಲಿ ಬೆಳಕು ಚೆಲ್ಲುತ್ತದೆ ಎನ್ನುವುದನ್ನು ಕಂಡುಹಿಡಿದಿದ್ದಾರೆ ಎಂದು ಅಕಾಡೆಮಿ ಹೇಳಿತು..

2008: ಎರಡು ತಿಂಗಳ ಹಿಂದೆ ನೌಕೆ ಅಪಹರಿಸಿ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಫಿಲಿಪ್ಪೀನ್ಸಿನ 15 ಮಂದಿ ಹಾಗೂ ಇತರ ನಾಲ್ವರು ಚಾಲಕ ಸಿಬ್ಬಂದಿಯನ್ನು ಸೋಮಾಲಿಯಾ ಸಮುದ್ರಗಳ್ಳರು ಬಿಡುಗಡೆ ಮಾಡಿದರು. ಆದರೆ ಅಪಹೃತ ಹಡಗಿನಲ್ಲಿದ್ದ ಫಿಲಿಪ್ಪೀನ್ಸಿನ ಇನ್ನೂ 67 ಸಿಬ್ಬಂದಿಯನ್ನು ಅಪಹರಣಕಾರರು ಒತ್ತೆಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

2007: ಕಿರುಗಾತ್ರದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ತಯಾರಿಕೆಗೆ ಸಹಕಾರಿಯಾದ ತಂತ್ರಜ್ಞಾನ ಅಭಿವೃದ್ಧಿಗಾಗಿ ಫ್ರಾನ್ಸಿನ ಅಲ್ಬರ್ಟ್ ಫರ್ಟ್ ಮತ್ತು ಜರ್ಮನಿಯ ಪೀಟರ್ ಗ್ರುಯೆನ್ ಬರ್ಗ್ ಅವರಿಗೆ ಭೌತಶಾಸ್ತ್ರ ಕ್ಷೇತ್ರದ 2007ನೇ ಸಾಲಿನ ನೊಬೆಲ್ ಪ್ರಶಸ್ತಿ ಘೋಷಿಸಲಾಯಿತು. ಫರ್ಟ್ ಮತ್ತು ಗ್ರುಯೆನ್ ಬರ್ಗ್ ಸಿದ್ಧಪಡಿಸಿದ `ಜಯಂಟ್ ಮ್ಯಾಗ್ನೆಟೊ ರೆಸಿಸ್ಟೆನ್ಸ್ (ಜಿಎಂಆರ್)' ತತ್ವದಿಂದಾಗಿ ಆಧುನಿಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಜಿಎಂಆರ್ ನಿಂದ ನ್ಯಾನೋ ತಂತ್ರಜ್ಞಾನದ ಅಳವಡಿಕೆ ಸಾಧ್ಯ ಎನ್ನುವುದು ಮೊದಲ ಬಾರಿಗೆ ರುಜುವಾತಾಗಿತ್ತು ಎಂದು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿತು.

2007: ಉದ್ದೀಪನ ಮದ್ದು ಸೇವಿಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಅಮೆರಿಕಾದ ಖ್ಯಾತ ಅಥ್ಲೆಟ್ 31 ವರ್ಷದ ಮೇರಿಯನ್ ಜೋನ್ಸ್ ಮೇಲೆ ಎರಡು ವರ್ಷಗಳ ನಿಷೇಧ ಹೇರಲಾಯಿತು. `ಸಿಡ್ನಿಯಲ್ಲಿ ನಾನು ನ್ಯಾಯೋಚಿತವಾಗಿ ಪದಕಗಳನ್ನು ಗೆದ್ದಿರಲಿಲ್ಲ. ಅವುಗಳನ್ನು ಹಿಂದಿರುಗಿಸಿದ್ದೇನೆ' ಎಂದು ಜೋನ್ಸ್ ಉತ್ತರ ಕರೋಲಿನಾದ ಸಾಲ್ವೋದಲ್ಲಿ ಪ್ರಕಟಿಸಿದರು. ಸಿಡ್ನಿ ಒಲಿಂಪಿಕ್ ನಲ್ಲಿ ಗೆದ್ದಿದ್ದ ಎಲ್ಲ ಪದಕಗಳನ್ನು ಹಿಂದಿರುಗಿಸುವಂತೆ ಅಮೆರಿಕಾ ಒಲಿಂಪಿಕ್ ಸಮಿತಿಯು (ಯುಎಸ್ಒಸಿ) ನಿರ್ದೇಶನ ನೀಡಿತ್ತು. ಹಾಗಾಗಿ ಈ ಅಥ್ಲೆಟ್ ತಾವು 2000ನೇ ಇಸವಿಯ ಒಲಿಂಪಿಕ್ ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪಡೆದಿದ್ದ ಎಲ್ಲ ಪದಕಗಳನ್ನು ಹಿಂದಿರುಗಿಸಿದರು. `ದಿ ಕ್ಲಿಯರ್' ಎನ್ನುವ ಅನ್ವರ್ಥಕ ನಾಮವನ್ನೂ ಪಡೆದಿರುವ `ಟೆಟ್ರಾಹೈಡ್ರೊಜೆಸ್ಟ್ರಿನೊನ್' (ಟಿಎಚ್ಜಿ) ಉದ್ದೀಪನ ಮದ್ದನ್ನು ಬಹಳ ಹಿಂದಿನಿಂದಲೂ ಜೋನ್ಸ್ ತೆಗೆದುಕೊಳ್ಳುತ್ತಾ ಬಂದಿದ್ದರು.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಈದಿನ ವಹಿವಾಟಿನಲ್ಲಿ ದಾಖಲೆ 789 ಅಂಶಗಳಷ್ಟು ಏರಿಕೆ ಕಂಡು, 18 ಸಾವಿರ ಅಂಶಗಳ ಗಡಿ ದಾಟುವ ಮೂಲಕ ಇನ್ನೊಂದು ಮೈಲಿಗಲ್ಲು ಸಾಧಿಸಿತು. ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ನೇತೃತ್ವದಲ್ಲಿ ಮುಂಚೂಣಿ ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಖರೀದಿಸಿದ್ದು ಈ ದಾಖಲೆ ಕಾಣಲು ಸಾಧ್ಯವಾಯಿತು. 17 ಸಾವಿರ ಅಂಶಗಳಿಂದ 18 ಸಾವಿರ ಅಂಶಗಳಿಗೆ ಅಲ್ಪಾವಧಿಯಲ್ಲಿ ತಲುಪಿದ ಎರಡನೇ ದಾಖಲೆಯೂ ಇದಾಯಿತು. 30 ಪ್ರಮುಖ ಷೇರುಗಳನ್ನು ಒಳಗೊಂಡ ಸಂವೇದಿ ಸೂಚ್ಯಂಕವು ಸೆಪ್ಟೆಂಬರ್ 26ರಂದು 17 ಸಾವಿರ ಅಂಶಗಳ ಗಡಿ ದಾಟಿತ್ತು.

2007: ದೇವನಹಳ್ಳಿಯ ಸರೋಜಾದೇವಿ ಆಚಾರ್ಯ, ಉಡುಪಿಯ ಟಿ. ರಾಘವ ಆಚಾರ್ಯ, ಕೋಲಾರ ಜಿಲ್ಲೆಯ ಎಸ್.ಬಿ. ನಂಜುಂಡಾಚಾರ್ಯ, ಬಾಗಲಕೋಟೆಯ ಕೃಷ್ಣಪ್ಪ ರಾಮಪ್ಪ ಬಡಿಗೇರ, ಸುರಪುರದ ಬಸಣ್ಣ ಮೋನಪ್ಪ ಬಡಿಗೇರ ಮತ್ತು ಶಿರಸಿಯ ಸೂರ್ಯಕಾಂತ ಗುಡಿಗಾರ ಅವರನ್ನು 2007ನೇ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರು ಮಾಡಿದ ಶಿಫಾರಸಿನ ಬಗ್ಗೆ ಚರ್ಚೆ ನಡೆಸಿದ ಕೇಂದ್ರ ಸಚಿವ ಸಂಪುಟವು ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರಲು ನಿರ್ಧರಿಸಿತು. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈ ನಿರ್ಣಯಕ್ಕೆ ಸಹಿ ಹಾಕಿದರು. ಇದರಿಂದಾಗಿ ರಾಜ್ಯ ರಾಜಕೀಯದ ಮೈದಾನ ಮುಂದಿನ ಆಟಕ್ಕೆ ಇನ್ನೂ ಮುಕ್ತವಾಗಿ ಉಳಿಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ಸ್ಪಷ್ಟ ಆದೇಶದ ಪ್ರಕಾರ ಸಂವಿಧಾನದ 356ನೇ ವಿಧಿ ಪ್ರಕಾರ ರಾಷ್ಟ್ರಪತಿಗಳು ವಿಧಾನಸಭೆಯನ್ನು ಅಮಾನತ್ತಿನಲ್ಲಿ ಮಾತ್ರ ಇಡಬಹುದು. ಸಂಸತ್ತಿನ ಎರಡೂ ಸದನಗಳ ಒಪ್ಪಿಗೆ ಇಲ್ಲದೆ, ವಿಧಾನಸಭೆಯನ್ನು ಯಾವುದೇ ಕಾರಣಕ್ಕೂ ವಿಸರ್ಜಿಸುವಂತಿಲ್ಲ. ಅಮಾನತು ಮಾಡಿದ ಎರಡು ತಿಂಗಳ ಒಳಗೆ ಸಂಸತ್, ರಾಷ್ಟ್ರಪತಿಯ ಆದೇಶವನ್ನು ಸಮರ್ಥಿಸದೇ ಹೋದರೆ ಮತ್ತೆ ವಿಧಾನಸಭೆ ಚಾಲ್ತಿಗೆ ಬರುತ್ತದೆ. ಒಂದು ವೇಳೆ ಅದಕ್ಕೆ ಒಪ್ಪಿಗೆ ಕೊಟ್ಟರೆ, ವಿಧಾನಸಭೆ ವಿಸರ್ಜನೆ ಆಗುವುದು ಎಂದು ಸುಪ್ರೀಂಕೋರ್ಟ್ 1994ರ ಮಾರ್ಚ್ 11ರಂದು ತನ್ನ ಆದೇಶದಲ್ಲಿ ತಿಳಿಸಿತ್ತು.

2006: ಅಮೆರಿಕದ ಅರ್ಥಶಾಸ್ತ್ರಜ್ಞ ಎಡ್ಮಂಡ್ ಎಸ್. ಫೆಲ್ಪ್ಸ್ ಅವರನ್ನು ಸೂಕ್ಷ್ಮ ಆರ್ಥಿಕ ನೀತಿಯಲ್ಲಿ ಅಲ್ಪಕಾಲೀನ ಹಾಗೂ ದೀರ್ಘಕಾಲೀನ ವ್ಯಾಪಾರ ಹೊಂದಾಣಿಕೆ ಕುರಿತ ವಿಶ್ಲೇಷಣೆಗಾಗಿ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2006: ದಕ್ಷಿಣ ಕೊರಿಯಾದ ವಿದೇಶಾಂಗ ಸಚಿವ ಬಾನ್ ಕಿ-ಮೂನ್ ಅವರನ್ನು ಜನವರಿ 1ರಿಂದ ಐದು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯ ಎಂಟನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿಸಲು 15 ಸದಸ್ಯ ಬಲದ ಭದ್ರತಾ ಮಂಡಳಿಯು 192 ಸದಸ್ಯ ಬಲದ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಗೆ ಶಿಫಾರಸು ಮಾಡಿತು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದಲ್ಲಿ ಆರೋಪಿಯಾಗಿದ್ದ ಫಾರೂಕ್ ಪಾವಳೆ ಎಂಬಾತನನ್ನು ಅಪರಾಧಿ ಎಂಬುದಾಗಿ ವಿಶೇಷ ಟಾಡಾ ನ್ಯಾಯಾಲಯ ಘೋಷಿಸಿತು. ದಾದರಿನ ಶಿವಸೇನಾ ಭವನ ಮತ್ತು ಏರ್ ಇಂಡಿಯಾ ಕಟ್ಟಡದ ಬಳಿ ಕಾರುಗಳಲ್ಲಿ ಆರ್ ಡಿಎಕ್ಸ್ ಬಾಂಬುಗಳನ್ನು ಇಟ್ಟ ಆರೋಪ ಈತನ ಮೇಲಿದೆ. ಪಾವಳೆ ಮೊದಲು ತಪ್ಪು ಒಪ್ಪಿಕೊಂಡರೂ ನಂತರ ಅದನ್ನು ಹಿಂತೆಗೆದುಕೊಂಡಿದ್ದ.

2006: ವಿಶ್ವ ಸಮುದಾಯದ ಮನವಿ ಹಾಗೂ ಎಚ್ಚರಿಕೆಯನ್ನು ಧಿಕ್ಕರಿಸಿ ಉತ್ತರ ಕೊರಿಯಾ ತನ್ನ ಮೊತ್ತ ಮೊದಲ ಪರಮಾಣು ಬಾಂಬ್ ಪರೀಕ್ಷೆಯನ್ನು ನಡೆಸಿತು. ಭಾರತೀಯ ಕಾಲಮಾನ ಬೆಳಗ್ಗೆ 7.06ಕ್ಕೆ ಈಶಾನ್ಯ ಕರಾವಳಿಯಲ್ಲಿನ ವಡಯೆರಿಯಲ್ಲಿ ಈ ಭೂಗರ್ಭ ಪರಮಾಣು ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ವೇಳೆಯಲ್ಲಿ ಉತ್ತರ ಕೊರಿಯಾದಲ್ಲಿ ರಿಕ್ಟರ್ ಮಾಪಕದಲ್ಲಿ 4.2ರಷ್ಟು ತೀವ್ರತೆಯ ಭೂಕಂಪ ದಾಖಲಾಯಿತು. ಸ್ವದೇಶೀ ತಂತ್ರಜ್ಞಾನ ಆಧಾರಿತವಾದ ಈ ಪರಮಾಣು ಪರೀಕ್ಷೆ ಅತ್ಯಂತ ಸುರಕ್ಷಿತವಾಗಿದ್ದು, ಪರೀಕ್ಷಾ ಪ್ರದೇಶದಲ್ಲಿ ವಿಕಿರಣ ಸೋರಿಕೆ ಆಗಿಲ್ಲ ಎಂದು ಉತ್ತರ ಕೊರಿಯಾ ಪ್ರತಿಪಾದಿಸಿತು.

1993: ಕ್ರಿಕೆಟಿಗ ಸಿ.ಆರ್. ರಂಗಾಚಾರಿ ನಿಧನ.

1975: ಸೋವಿಯತ್ ನ ಮಾನವ ಹಕ್ಕುಗಳ ಪ್ರತಿಪಾದಕ, ಭಿನ್ನಮತೀಯ ಆಂದ್ರೇಯಿ ಸಖರೊವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.

1967: ಲ್ಯಾಟಿನ್ ಅಮೆರಿಕಾದ ಗೆರಿಲ್ಲಾ ನಾಯಕ ಚೆ ಗ್ಯುವರಾ ಅವರನ್ನು ಬೊಲಿವಿಯಾದ್ಲಲಿ ದಂಗೆಗೆ ಪ್ರಚೋದನೆ ನೀಡಲು ಯತ್ನಿಸುತ್ತಿದ್ದಾಗ ಬಂಧಿಸಿ ಮರಣದಂಡನೆಗೆ ಗುರಿಪಡಿಸಲಾಯಿತು.

1962: ಎಪ್ಪತ್ತು ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಉಗಾಂಡಾ ಸ್ವತಂತ್ರವಾಯಿತು. ಮಿಲ್ಟನ್ ಒಬೋಟೆ ರಾಷ್ಟ್ರದ ಮೊದಲ ಪ್ರಧಾನಮಂತ್ರಿಯಾದರು.

1961: ಬ್ರಿಟನ್ನಿನ ಮಾಜಿ ಪ್ರಧಾನಿ ಸರ್ ಅಲೆಕ್ ಡಗ್ಲಾಸ್ ಹೋಮ್ ಅವರು ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು.

1948: ಸಾಹಿತಿ ಭಾಗ್ಯ ಜಯ ಸುದರ್ಶನ ಜನನ.

1930: ಸಾಹಿತಿ ಅಂಬುಜಾ ತರಾಸು ಜನನ.

1920: ಚತುರ್ಭಾಷಾ ಕೋವಿದ, ವೃತ್ತಿಯಿಂದ ವೈದ್ಯರಾದ ಕವಿ ಡಾ. ಕೆ. ಮುದ್ದಣ್ಣ (9-10-1920ರಿಂದ 16-3-2002) ಅವರು ಪ್ರಭುರಾವ್- ಸೂಗಮ್ಮ ದಂಪತಿಯ ಮಗನಾಗಿ ಗುಲ್ಬರ್ಗದ ಸುರಪುರದ ರಂಗಂಪೇಟೆಯಲ್ಲಿ ಜನಿಸಿದರು.

1877: ಭಾರತದ ಸ್ವಾತಂತ್ರ್ಯ ಯೋಧ, ಕವಿ, ಸಾಹಿತಿ ಗೋಪಬಂಧು ದಾಸ್ (1877-1928) ಜನ್ಮದಿನ.

1877: ಸ್ವಾತಂತ್ರ್ಯ ಹೋರಾಟಗಾರ ಉತ್ಕಲ ಮಣಿ ಪಂಡಿತ್ ಜನನ.

1873: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಜನರಲ್ ಡಯರ್ ಜನನ.

1562: ಹದಿನಾರನೇ ಶತಮಾನದ ಖ್ಯಾತ ದೇಹತಜ್ಞ ಇಟಲಿಯ ಗೇಬ್ರಿಯಲ್ ಫ್ಲಾಲೋಪಿಯಸ್ (1523-62) ಮೃತನಾದ. ಕಿವಿ ಮತ್ತು ಸಂತಾನೋತ್ಪತ್ತಿ ಅಂಗಗಳಿಗೆ ಸಂಬಂಧಿಸಿದಂತೆ ಈತ ಬಹಳಷ್ಟು ಸಂಶೋಧನೆಗಳನ್ನು ನಡೆಸಿ ಈ ಕ್ಷೇತ್ರಕ್ಕೆ ತನ್ನ ಕಾಣಿಕೆ ಸಲ್ಲಿಸಿದ್ದ.

No comments:

Post a Comment