Monday, October 22, 2018

ಇಂದಿನ ಇತಿಹಾಸ History Today ಅಕ್ಟೋಬರ್ 22

ಇಂದಿನ ಇತಿಹಾಸ History Today ಅಕ್ಟೋಬರ್ 22
2018: ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ಉನ್ನತ ಅಧಿಕಾರಿಗಳಾದ ನಿರ್ದೇಶಕ ಅಲೋಕ್ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ಕಲಹ ತಾರಕಕ್ಕೆ ಏರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರದ ಮುಂಚೂಣಿ ತನಿಖಾ ಸಂಸ್ಥೆಯೊಳಗಿನ ಘಟನಾವಳಿಗಳ ವಿವರ ಸಂಗ್ರಹಕ್ಕಾಗಿ ಉಭಯರಿಗೂ ಸಮನ್ಸ್ ಕಳುಹಿಸಿದರು. ಇದೇ ವೇಳೆಗೆ ಅಸ್ತಾನಾ ಲಂಚಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಸ್ತಾನ ಕೈಕೆಳಗಿನ ಡಿಎಸ್ಪಿ ದೇವೇಂದ್ರ ಕುಮಾರ್ ಅವರನ್ನು  ಬಂಧಿಸಿತು. ಪ್ರಧಾನಿಯವರು ಘಟನಾವಳಿಗಳ ಪೂರ್ಣ ವಾಸ್ತವಾಂಶ ಪಡೆಯಬಯಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಅಧಿಕಾರಿ ತಿಳಿಸಿದರು.  ಸಿಬಿಐ, ತನ್ನ ಡಿಎಸ್ಪಿ (ಡೆಪ್ಯಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್) ದೇವೇಂದ್ರ ಕುಮಾರ್ ಅವರನ್ನು ಅಸ್ತಾನ ಮತ್ತು ಇತರರ ವಿರುದ್ಧದ ಲಂಚ ಆರೋಪಗಳಿಗೆ ಸಂಬಂಧಿಸಿದಂತೆ  ಹಿಂದಿನ ದಿನ ಬಂಧಿಸಿತ್ತು. ಮೊಯಿನ್ ಖುರೇಶಿ ಪ್ರಕರಣದಲ್ಲಿ ಹೈದರಾಬಾದ್ ಮೂಲದ ವ್ಯಾಪಾರೋದ್ಯಮಿ ಸತೀಶ್ ಸನಾ ಅವರು ನೀಡಿದ ಹೇಳಿಕೆಯನ್ನು ಕುಮಾರ್ ಅವರು ತಿರುಚಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಆಪಾದಿಸಲಾಗಿತ್ತು. ಡಿಎಸ್ಪಿ ದೇವೇಂದ್ರ ಕುಮಾರ್ ಅವರು ಆಗ ಪ್ರಕರಣದ ತನಿಖಾ ಅಧಿಕಾರಿಯಾಗಿದ್ದರುಸನಾ ಅವರು ಇತ್ತೀಚೆಗೆ ಸಲ್ಲಿಸಿದ ದೂರನ್ನು ಆಧರಿಸಿ ಅಸ್ತಾನ ಮತ್ತು ಡಿಎಸ್ಪಿ ಸೇರಿದಂತೆ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಸನಾ ಅವರು ಸೆಪ್ಟೆಂಬರ್ ೨೬ರಂದು ದೆಹಲಿಯಲ್ಲಿ ಹೇಳಿಕೆ ನೀಡಿದಂತೆ ದಾಖಲೆಯಲ್ಲಿ ತೋರಿಸಲಾಗಿದೆ, ಆದರೆ ಆದಿನ ಅವರು ವಾಸ್ತವವಾಗಿ ಹೈದರಾಬಾದಿನಲ್ಲಿ ಇದ್ದರು ಎಂದು ಸಿಬಿಐ ಆಪಾದಿಸಿತು. ವಿಶೇಷ ನಿರ್ದೇಶಕರು ಕೇಂದ್ರೀಯ ಜಾಗೃತಾ ಆಯುಕ್ತರಿಗೆ ನಿರ್ದೇಶಕರ ವಿರುದ್ಧ ಆಗಸ್ಟ್ ತಿಂಗಳಲ್ಲಿ ಸಲ್ಲಿಸಿದ್ದ  ದೂರಿಗೆ ಸಮರ್ಥನೆ ಒದಗಿಸುವ ಸಲುವಾಗಿ ಬಳಿಕ ಮಾಡಿದ ಯೋಚನೆಯಂತೆ ನಕಲಿ ದಾಖಲೆಯನ್ನು ಸೃಷ್ಟಿಸಲಾಯಿತು ಎಂದು ಸಿಬಿಐ ಹೇಳಿತು. ಮೊಯಿನ್ ಖುರೇಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಸಮನ್ಸ್ ಅನುಸರಿಸಿ ಸನಾ ಅವರು ಅಕ್ಟೋಬರ್ ೧ರಂದು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು ಮತ್ತು ಅಕ್ಟೋಬರ್ ೩ರಂದು ತಮ್ಮ ಹೇಳಿಕೆ ನೀಡಿದ್ದರು ಎಂದು ಸಿಬಿಐ ಹೇಳಿತು. ಮೊಯಿನ್ ಖುರೇಶಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಪಾತ್ರದ ಬಗ್ಗೆಗೂ ತಾನು ಪರಿಶೀಲಿಸುತ್ತಿರುವುದಾಗಿ ಸಿಬಿಐ ತಿಳಿಸಿತು. ಪ್ರಕರಣದಲ್ಲಿ ಸಿಬಿಐ ಮಾಜಿ ಮುಖ್ಯಸ್ಥ .ಪಿ. ಸಿಂಗ್ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲಾಗಿತ್ತು. ಸಿಬಿಐ ಎಫ್ ಐಆರ್ ನಲ್ಲಿ ಅಸ್ತಾನ, ದೇವೇಂದ್ರ ಕುಮಾರ್, ದುಬೈ ಮೂಲದ ಹೂಡಿಕೆದಾರ ಬ್ಯಾಂಕರ್ ಮನೋಜ್ ಪ್ರಸಾದ್ ಮತ್ತು ಅವರ ಸಹೋದರ ಸೋಮೇಶ್ ಪ್ರಸಾದ್ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿತ್ತು.  ಮೊಯಿನ್ ಖುರೇಶಿ ಪ್ರಕರಣದಲ್ಲಿ ಸಮನ್ಸ್ ನಿಂದ ಮುಕ್ತನಾಗಲು ದೂರುದಾರರು ಕೋಟಿ ರೂಪಾಯಿಗೂ ಹೆಚ್ಚು ಲಂಚ ಪಾವತಿ ಮಾಡಿದ್ದಾರೆ ಎಂದು ಆಪಾದಿಸಲಾಗಿತ್ತು. ಇದಕ್ಕೆ ಮುನ್ನ ಸಿಬಿಐ ಆಕ್ಟೋಬರ್ ೧೬ರ ಸಂಜೆ ಮನೋಜ್ ಅವರನ್ನು ಬಂಧಿಸಿತ್ತು. ತನಿಖಾ ಅಧಿಕಾರಿಯ ಆವರಣದಲ್ಲಿ ಶೋಧ ನಡೆಸಿ ಎಂಟು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸಿಬಿಐ ನಿರ್ದೇಶಕರ ಬಳಿ ಮಾತನಾಡಿದ ಬಳಿಕ ತೆಲುಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯ ಸಿಎಂ ರಮೇಶ್ ಅವರು ಪ್ರಕರಣದಲ್ಲಿ ತಮ್ಮನ್ನು ಪುನಃ ಕರೆಸಲಾಗುವುದಿಲ್ಲ ಎಂದು ವರ್ಷ ಜೂನ್ ತಿಂಗಳಲ್ಲಿ ಭರವಸೆ ಕೊಟ್ಟರು ಎಂದು ಸನಾ ಹೇಳಿದುದಾಗಿ ಹೇಳಿಕೆಯಲ್ಲಿ ನಮೂದಿಸಲಾಗಿತ್ತು. ಜೂನ್ ತಿಂಗಳ ಬಳಿಕ ಸಿಬಿಐ ನನ್ನನ್ನು ಕರೆಯಲಿಲ್ಲ. ನನ್ನ ವಿರುದ್ಧದ ತನಿಖೆ ಪೂರ್ಣಗೊಂಡಿದೆ ಎಂದು ನಾನು ಭಾವಿಸಿದ್ದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದರು ಎನ್ನಲಾಯಿತು. ದೇವೇಂದ್ರ ಕುಮಾರ್ ಅವರು ಹೇಳಿಕೆಯನ್ನು ನಿರ್ದೇಶಕ ಅಲೋಕ ವರ್ಮ ಅವರ ವಿರುದ್ಧ ಸಿವಿಸಿಗೆ (ಕೇಂದ್ರೀಯ ಜಾಗೃತಾ ಆಯುಕ್ತರು) ನೀಡಿದ್ದ ದೂರಿನಲ್ಲಿ ಮಾಡಲಾಗಿದ್ದ ಬುಡರಹಿತ ಆರೋಪಗಳಿಗೆ ಪೂರಕವಾಗುವಂತೆ ತಿದ್ದಿದ್ದರು ಎಂದು ಸಿಬಿಐ ಈಗ ಆಪಾದಿಸಿತ್ತು. ಅಸ್ತಾನಾ ನೇತೃತ್ವದ ವಿಶೇಷ ತನಿಖಾ ತಂಡದ ಇತರ ಸದಸ್ಯರ ಪಾತ್ರದ ಬಗ್ಗೆ ಕೂಡಾ ಈಗ ಸಿಬಿಐ ಪರಿಶೀಲಿಸುತ್ತಿದೆ ಎಂದು ಸಿಬಿಐ ಮೂಲಗಳು ಹೇಳಿದವು. ಲಂಚ ಪ್ರಕರಣದಲ್ಲಿ ಈಗ ಎಫ್ ಆರ್ ನಲ್ಲಿ ಆಪಾದನೆಗೆ ಒಳಗಾಗಿರುವ ಸಿಬಿಐ ವಿಶೇಷ ನಿರ್ದೇಶಕ ಅಸ್ತಾನ ಅವರು ೨೦೧೮ರ ಆಗಸ್ಟ್ ೨೪ರಂದು ಸಿಬಿಐ ನಿರ್ದೇಶಕ ಅಲೋಕ್ ವರ್ಮ ವಿರುದ್ಧ ದೂರು ಸಲ್ಲಿಸಿ ಅವರು ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ಕಾಟದಿಂದ ಮುಕ್ತಿ ಪಡೆಯಲು ಸನಾ ಅವರಿಂದ ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಆಪಾದಿಸಿದ್ದರು.

2018: ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧ ಸ್ವತಃ ಕೇಂದ್ರೀಯ ತನಿಖಾ ದಳವೇ (ಸಿಬಿಐ) ಭ್ರಷ್ಟಾಚಾರ ಖಟ್ಲೆ ದಾಖಲಿಸಿಕೊಂಡಿರುವ ಪ್ರಕರಣವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿಗೆ ಬಳಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ಮೇಲೆ ಟ್ವೀಟಾಸ್ತ್ರ ಪ್ರಯೋಗಿಸಿದರು. ಪ್ರಧಾನಿ ಮೋದಿ ಅವರ ಕೈಕೆಳಗೇ ಸಿಬಿಐ ಅಧಿಕಾರಕ್ಕಾಗಿ ಉನ್ನತ ಅಧಿಕಾರಿಗಳು ಗುದ್ದಾಟ ನಡೆಸುವ ಮೂಲಕ ಸಿಬಿಐ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆ ವಿವಾದದಲ್ಲಿ ಸಿಲುಕಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.  ’ರಾಷ್ಟ್ರದ ಮುಂಚೂಣಿಯ ತನಿಖಾ ಸಂಸ್ಥೆಯಾಗಿರುವ ಕೇಂದ್ರೀಯ ತನಿಖಾ ದಳವು (ಸಿಬಿಐ) ಒಳಜಗಳದಲ್ಲಿ ತಲ್ಲೀನವಾಗಿದೆ ಎಂದು ಬಣ್ಣಿಸಿದ ರಾಹುಲ್ತನ್ನೊಳಗೆ ತಾನೇ ಘರ್ಷಿಸಿಕೊಳ್ಳುತ್ತಾ ಈಗ ಅವಸಾನದತ್ತ ಸಾಗುತ್ತಿರುವ ಸಿಬಿಐ ಮೋದಿ ಅವರ ಆಡಳಿತದಲ್ಲಿ ರಾಜಕೀಯ ಸೇಡಿನ ಅಸ್ತ್ರವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದರು. ಸಿಬಿಐ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಸ್ಥೆಯು ತನ್ನ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರ ವಿರುದ್ಧ ಪ್ರಕರಣ ದಾಖಲಿಸಿದೆ. ಹೈದರಾಬಾದ್ ಮೂಲದ ವ್ಯಾಪಾರಿ ಸನಾ ಸತೀಶ ಬಾಬು ದೂರಿನ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣವೊಂದರಲ್ಲಿ ನೆರವಾಗಲು ಅಸ್ತಾನ ಅವರು ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂದು ಸನಾ ಸತೀಶ ಬಾಬು ಪ್ರತಿಪಾದಿಸಿದ್ದರು. ಸಿಬಿಐಯು ಅಸ್ತಾನ ವಿರುದ್ಧವೇ ಪ್ರಕರಣ ದಾಖಲಿಸಿದ ಬಳಿಕಸಂಸ್ಥೆಯು ತನ್ನೊಳಗೆ ಘರ್ಷಿಸಿಕೊಳ್ಳುತ್ತಾ ಅವಸಾನದ ಹಾದಿ ಹಿಡಿದಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು.
ಅಸ್ತಾನ ಅವರನ್ನು ಸರ್ಕಾರವು ೨೦೧೬ರಲ್ಲಿ ಸಿಬಿಐಗೆ ತಂದಿದ್ದು, ಅವರನ್ನೇ ಸಿಬಿಐ ಮುಖ್ಯಸ್ಥರನ್ನಾಗಿ ಮಾಡಬಹುದು ಎಂಬ ವ್ಯಾಪಕ ವದಂತಿಗಳು ಹರಡಿದ್ದವು. ಗುಜರಾತ್ ಕೇಡರಿನ ಪೊಲೀಸ್ ಅಧಿಕಾರಿಯಾಗಿರುವ ಅಸ್ತಾನ ಅವರು ಗೋಧ್ರಾ ರೈಲು ದಹನ ಘಟನೆಯ ಪ್ರಾಥಮಿಕ ತನಿಖೆಯ ಉಸ್ತುವಾರಿ ವಹಿಸಿದ್ದರು. ಆಗ ಅವರು ರಾಜ್ಯದ ವಡೋದರಾ ವಲಯದ ಐಜಿಪಿಯಾಗಿದ್ದರು. ೨೦೧೬ರ ಡಿಸೆಂಬರಿನಲ್ಲಿ ಅಸ್ತಾನ ಅವರನ್ನು ಸಿಬಿಐ ಮಧ್ಯಂತರ ನಿರ್ದೆಶಕರಾಗಿ ನೇಮಕ ಮಾಡಲಾಗಿತ್ತು. ಇದು ವಿರೋಧ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಐದು ವಾರಗಳ ಬಳಿಕ ಅಲೋಕ್ ವರ್ಮ ಅವರನ್ನು ಸಿಬಿಐಯ ಪೂರ್ಣಾವಧಿ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ಅಸ್ತಾನ ಅವರನ್ನು ಪ್ರಧಾನಿ ಮೋದಿ ಅವರನೀಲಿ ಕಣ್ಣಿನ ಹುಡುಗ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದರು. ‘ಪ್ರಧಾನಿಯ ನೀಲಿಕಣ್ಣಿನ ಹುಡುಗ, ಪ್ರಸ್ತುತ ಸಿಬಿಐಯಲ್ಲಿ ನಂಬರ್ ೨ನೇ ಸ್ಥಾನದಲ್ಲಿರುವ ಗೋಧ್ರಾ ಎಸ್ ಐಟಿ ಖ್ಯಾತಿಯ ಗುಜರಾತಿನ ಕೇಡರ್ ಅಧಿಕಾರಿ. ಈಗ ಲಂಚಗಳನ್ನು ತೆಗೆದುಕೊಳ್ಳುವಾಗ ಸಿಕ್ಕಿಹಾಕಿಕೊಂಡಿದ್ದಾರೆ. ಪ್ರಧಾನಿಯ ಕೈಕೆಳಗೆ ಸಿಬಿಐ ರಾಜಕೀಯ ಸೇಡು ತೀರಿಸುವ ಅಸ್ತ್ರವಾಗಿದೆ ಎಂದು ರಾಹುಲ್ ಟ್ವೀಟ್ ಮಾಡಿದರು. ಸಿಬಿಐ ನಿರ್ದೇಶಕ ಅಲೋಕ್ ವರ್ಮ ಅವರ ಜೊತೆಗೆ ಕಳೆದ ವರ್ಷ ಅಕ್ಟೋಬರಿನಿಂದೀಚೆಗೆ ಅಸ್ತಾನ ಅವರು ನಡೆಸುತ್ತಿರುವ ಘರ್ಷಣೆಯ ಫಲವಾಗಿಯೇ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಭಾವಿಸಲಾಗಿದೆ. ಅಸ್ತಾನ ಅವರನ್ನು ಸಿಬಿಐ ವಿಶೇಷ ನಿರ್ದೇಶಕರಾಗಿ ನೇಮಕ ಮಾಡುವ ಸಂದರ್ಭದಲ್ಲಿ ಅದನ್ನು ತಡೆಯಲು ವರ್ಮ ಅವರು ಯತ್ನಿಸಿದ ಬಳಿಕ ಇಬ್ಬರ ನಡುವೆ ಶೀತಲ ಸಮರ ಶುರುವಾಗಿತ್ತು. ಗುಜರಾತ್ ಮೂಲದ ಸ್ಟರ್ಲಿಂಗ್ ಬಯೋಟೆಕ್ ಕಂಪೆನಿಯ ದಿನಚರಿಯೊಂದರಲ್ಲಿ ಅಸ್ತಾನ ಹೆಸರು ಕಂಡು ಬಂದಿದೆ ಎಂಬ ನೆಲೆಯಲ್ಲಿ ಸಿಬಿಐ ಉನ್ನತ ಹುದ್ದೆಗೆ ಅವರ ನೇಮಕಾತಿಗೆ ಅಲೋಕ್ ವರ್ಮ ವಿರೋಧಿಸಿದ್ದರು. ಒಟ್ಟು . ಕೋಟಿ ರೂಪಾಯಿಗಳನ್ನು ಅಸ್ತಾನ ಅವರಿಗೆ ನೀಡಲಾಗಿದೆ ಎಂಬುದಾಗಿ ದಿನಚರಿಯಲ್ಲಿ ನಮೂದಾಗಿತ್ತು ಎನ್ನಲಾಯಿತು. ಆ ಬಳಿಕ ಉಭಯ ಅಧಿಕಾರಿಗಳ ಮಧ್ಯೆ ತನಿಖೆಗಳು ಹಾಗೂ ಆಂತರಿಕ ವರ್ಗಾವಣೆಗಳಿಗೆ ಸಂಬಂಧಿಸಿದಂತೆ ಆರೋಪ- ಪ್ರತ್ಯಾರೋಪಗಳ ಸುರಿಮಳೆಯಾಗಿತ್ತು. ಅಸ್ತಾನ ಅವರು ಸಂಪುಟ ಕಾರ್ಯದರ್ಶಿ ಪ್ರದೀಪ ಸಿಂಗ್ ಅವರಿಗೆ ಆಗಸ್ಟ್ ೨೪ರಂದು ಔಪಚಾರಿಕ ದೂರು ಸಲ್ಲಿಸಿ ವರ್ಮ ಅವರು ತಾವು ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ದೂರಿ ಅದಕ್ಕೆ ಸನಾ ಸತೀಶ್ ಬಾಬು ಉದಾಹರಣೆಯನ್ನು ನೀಡಿದ್ದರು. ತಮ್ಮ ವಿರುದ್ಧ ಎಫ್ ಆರ್ ದಾಖಲಾಗುವುದಕ್ಕೆ ಮುನ್ನ ಅಸ್ತಾನ ಅವರು ಕೇಂದ್ರೀಯ ಜಾಗೃತಾ ಆಯೋಗಕ್ಕೆ (ಸಿವಿಸಿ) ದೂರು ನೀಡಿ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಕುಟುಂಬ ಸದಸ್ಯರಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ನಿರ್ದೇಶಕರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು. ಅಧಿಕೃತ ಪತ್ರಿಕಾಪ್ರಕಟಣೆಯಲ್ಲಿ ಇದನ್ನು ತಳ್ಳಿಹಾಕಿದ್ದ ಸಿಬಿಐ ಅಸ್ತಾನ ಅವರ ವಿರುದ್ಧವೇ ಹಲವಾರು ತನಿಖೆಗಳು ನಡೆಯುತ್ತಿವೆ ಎಂದು ತಿಳಿಸಿತ್ತು.  ಕೇಜ್ರಿವಾಲ್ ದಾಳಿ: ಸಿಬಿಐ ಭ್ರಷ್ಟಾಚಾರ ಪ್ರಕರಣ ಬಗ್ಗೆ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸರ್ಕಾರವು ರಾಷ್ಟ್ರೀಯ ಅಪಮಾನವಾಗಿ ಅಪಮಾನವಾಗಿ ಸಿಬಿಐಯನ್ನು ಪರಿವರ್ತಿಸಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗ ಅದರ ಕಟು ಟೀಕಾಕಾರರಾಗಿದ್ದ ಆಪ್ ಮುಖ್ಯಸ್ಥ ಕೇಜ್ರಿವಾಲ್ಬಿಜೆಪಿಯು ಕಾಂಗ್ರೆಸ್ಸನ್ನು ಮೀರಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಸುಪ್ರಿಂಕೋಟ್ ಸಿಬಿಐಯನ್ನು ಗೂಡಿನೊಳಗಿನ ಪಾರಿವಾಳ ಎಂದು ಬಣ್ಣಿಸಿತ್ತು. ಮೋದಿ ಸರ್ಕಾರವು ರಾಜಕೀಯ ವಿರೋಧಿಗಳನ್ನು ಮಣಿಸುವ ತನ್ನ ದಾಹದಲ್ಲಿ ಕಾಂಗ್ರೆಸ್ ದಾಖಲೆಯನ್ನು ಮುರಿದು ರಾಷ್ಟ್ರೀಯ ಅಪಮಾನವಾಗಿ ಸಿಬಿಐಯನ್ನು ಪರಿವರ್ತಿಸಿದೆ ಎಂದು ಕೇಜ್ರಿವಾಲ್ ಹೇಳಿದರು.

2018: ಪಂಬಾ (ಕೇರಳ): ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಿಸುವ ಸಲುವಾಗಿ ಇನ್ನೂ ಒಬ್ಬ ಮಹಿಳೆ ವಿಫಲ ಯತ್ನ ನಡೆಸಿದ್ದು, ಪ್ರತಿಭಟನಕಾರರ ತೀವ್ರ ವಿರೋಧದ ಮಧ್ಯೆ ಆಕೆ ಹಿಂದಕ್ಕೆ ಹೋಗಬೇಕಾಯಿತು. ಈಮಧ್ಯೆ ಋತುಮತಿ ವಯೋಮಾನದ ಇನ್ನಷ್ಟು ಮಹಿಳೆಯರು ಈದಿನ ಮಧ್ಯರಾತ್ರಿ ದೇವಾಲಯದ ಬಾಗಿಲು ಮುಚ್ಚುವ ಮುನ್ನ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಯಿತು. ದಲಿತ ಚಳವಳಿಗಾರ್ತಿಯೊಬ್ಬರು ಪೊಲೀಸ್ ರಕ್ಷಣೆಯಲ್ಲಿ ಈದಿನ ಶಬರಿಮಲೈ ದೇವಾಲಯದ ಮೂಲಶಿಬಿರವಾದ ಪಂಪಾದತ್ತ ಬಂದು ಅಲ್ಲಿಂದ ಕಿಮೀ ದೂರವನ್ನು ಕಾಲ್ನಡಿಗೆ ಮೂಲಕ ಸಾಗಬಯಸಿದ್ದರು. ಆದರೆ ಮಹಿಳೆ ಪಯಣಿಸುತ್ತಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸು ಪಂಬಾ ತಲುಪುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮತ್ತು ೧೦ರಿಂದ ೫೦ರ ನಡುವಣ ವಯೋಮಾನದ ಮಹಿಳಾ ಪ್ರವೇಶವನ್ನು ವಿರೋಧಿಸುತ್ತಿದ್ದ ಮಹಿಳಾ ಭಕ್ತರ ಗುಂಪು ರಸ್ತೆಯಲ್ಲಿ ಬಸ್ಸನ್ನು ತಡೆದು ಕೆಳಗಿಳಿಯುವಂತೆ ಆಗ್ರಹಿಸಿತು. ಬಳಿಕ ಪೊಲೀಸರು ಆಕೆಯನ್ನು ಪೊಲೀಸ್ ಜೀಪಿನಲ್ಲಿ ವಾಪಸ್ ಕರೆದೊಯ್ದರುಅಕ್ಟೋಬರ್ ೧೭ರಂದು ಐದು ದಿನಗಳ ಪೂಜೆಗಾಗಿನೈಸ್ತಿಕ ಬ್ರಹ್ಮಚಾರಿ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ತೆರೆದ ಬಳಿಕ ಈವರೆಗೆ ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಿಸಲು ಯತ್ನಿಸಿದ ಸುಮಾರು ೧೨ ಮಂದಿ ಮಹಿಳೆಯರನ್ನು ಉದ್ರಿಕ್ತ ಪ್ರತಿಭಟನಕಾರರು ತಡೆದು ವಾಪಸ್ ಕಳುಹಿಸಿದರು.  ದೇವಸ್ಥಾನದ ಬಾಗಿಲು ತೆರೆದ ಮೊದಲ ದಿನ ಯಾವುದೇ ಪೂಜೆ ನಡೆಯಲಿಲ್ಲ. ಸೋಮವಾರ ರಾತ್ರಿ ೧೦ ಗಂಟೆಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುವುದುದಟ್ಟಡವಿಯಲ್ಲಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಋತುಮತಿ ವಯೋಮಾನದ ಮಹಿಳೆಯರು ಪ್ರವೇಶಿಸದಂತೆ ತಡೆಯಲು ನೂರಾರು ಮಂದಿ ಭಕ್ತರು ಶಬರಿಮಲೈ ಸನ್ನಿಧಾನ ಸಮುಚ್ಛಯದಲ್ಲಿ ಬೀಡು ಬಿಟ್ಟರು. ಶಬರಿಮಲೈ ಸನ್ನಿಧಾನ, ಪಂಬಾ, ನಿಲಕ್ಕಲ್ ಮತ್ತು ಎಲವುಮಕಲ್ ನಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದ್ದರೂ, ನೂರಾರು ಮಂದಿ ಭಕ್ತರು ಅಚಲರಾಗಿ ಅಲ್ಲಿ ಜಮಾಯಿಸಿದ್ದಾರೆ. ಕೆಲವು ಮಹಿಳೆಯರು ಈದಿನ ಭೇಟಿ ನೀಡುವರು ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಸನ್ನಿಧಾನ ಮತ್ತು ಇತರ ಪ್ರದೇಶಗಳಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದರುಕಣ್ಣೀರಿನೊಂದಿಗೆ ಪೊಲೀಸ್ ಅಧಿಕಾರಿ ಪ್ರಾರ್ಥನೆ: ಮಧ್ಯೆ, ಭದ್ರತಾ ವ್ಯವಸ್ಥೆ ನೋಡಿಕೊಳ್ಳುವ ಸಲುವಾಗಿ ಶಬರಿಮಲೈ ಪ್ರದೇಶಕ್ಕೆ ನಿಯೋಜನೆಗೊಂಡಿರುವ ಐಜಿಪಿ ಎಸ್. ಶ್ರೀಜಿತ್ ಅವರು ಬೆಳಗ್ಗೆ ದೇವಾಲಯದಲ್ಲಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.ಅಯ್ಯಪ್ಪಸ್ವಾಮಿಯ ಮುಂದೆ ಕಣ್ಣೀರಿನೊಂದಿಗೆ ಪೊಲೀಸ್ ಅಧಿಕಾರಿ ಪ್ರಾರ್ಥನೆ ಸಲ್ಲಿಸಿದ ವಿಡಿಯೋ ದೃಶ್ಯಾವಳಿಗಳು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಸಾರಗೊಂಡವು. ಹೋರಾಟಗಾರ್ತಿ ರೆಹಾನಾ ಫಾತಿಮಾ ಮತ್ತಿತರರನ್ನು ಪೊಲೀಸ್ ಭದ್ರತೆಯಲ್ಲಿ ದೇವಾಲಯಕ್ಕೆ ಕರೆತಂದುದಕ್ಕಾಗಿ ಶ್ರೀಜಿತ್ ಅವರು ಪ್ರತಿಭಟನಕಾರ ಭಕ್ತರಿಂದ ತೀವ್ರ ವಾಗ್ದಾಳಿಗೆ ಗುರಿಯಾಗಿದ್ದರು. ಆದರೆ ಅಯ್ಯಪ್ಪ ಭಕ್ತರ ಪ್ರಬಲ ಪ್ರತಿಭಟನೆಯ ಪರಿಣಾಮವಾಗಿ ಆಕೆಗೆ ದೇವಾಲಯಕ್ಕೆ ಪ್ರವೇಶ ಕಲ್ಪಿಸಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲಭಾನುವಾರ ಒಂದೇ ದಿನ ಆಂಧ್ರಪ್ರದೇಶದ ಆರು ಮಂದಿ ಮಹಿಳೆಯರನ್ನು ಶಬರಿಮಲೈ ದೇವಾಲಯ ಪ್ರವೇಶಿಸದಂತೆ ತಡೆಯಲಾಗಿತ್ತು. ೧೦ರಿಂದ ೫೦ ವರ್ಷಗಳ ನಡುವಣ ಮಹಿಳೆಯರಿಗೆ ದೇಗುಲ ಪ್ರವೇಶದ ಮೇಲಿದ್ದ ನಿಷೇಧವನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ ಕೇರಳ ಸರ್ಕಾರದ ವಿರುದ್ಧ ಭಕ್ತರು ತೀವ್ರವಾಗಿ ಪ್ರತಿಭಟಿಸಿದರು.

2018: ಜಲಂಧರ: ಕ್ರೈಸ್ತ ಸನ್ಯಾಸಿನಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಜಲಂಧರದ ಮಾಜಿ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರ ವಿರುದ್ಧ ಸಾಕ್ಷ್ಯ ನೀಡಿದ್ದ ಹಿರಿಯ ಪಾದ್ರಿ ಫಾದರ್ ಕುರಿಯಕೋಸ್ ಕಟ್ಟುಥಾರ ಅವರು ಈದಿನ  ಬೆಳಗ್ಗೆ ಜಲಂಧರದಲ್ಲಿ ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿತು. ಕಟ್ಟುಥಾರ ಅವರು ರಾಜ್ಯ ರಾಜಧಾನಿ ಚಂಡೀಗಢದಿಂದ ೧೮೦ ಕಿಮೀ ದೂರದ ದಸ್ಯುಯ ಪಟ್ಟಣದ ಸೈಂಟ್ ಮೇರೀಸ್ ಚರ್ಚ್ ಸಮುಚ್ಚಯದ ಕೊಠಡಿಯೊಂದರಲ್ಲಿ ಸಾವನ್ನಪ್ಪಿರುವುದು ಪತ್ತೆಯಾಯಿತು. ಅವರು ಮುಲಕ್ಕಲ್ ನೇತೃತ್ವದ ಜಲಂಧರ ಡಯೋಸಿಸ್ ಅಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು೬೭ರ ಹರೆಯದ ಪಾದ್ರಿಯ ಸಾವಿನ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದರು. ‘ಅವರು ಮಂಚದಲ್ಲಿ ರಕ್ತವಾಂತಿ ಮಾಡಿದ್ದು ಕಂಡು ಬಂದಿದೆ. ಸ್ಥಳದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕಾಗಿ ಬಳಸುವ ಗುಳಿಗೆಗಳು ಲಭಿಸಿವೆ. ತನಿಖೆ ನಡೆಯುತ್ತಿದೆ. ಅವರಿಗೆ ಯಾವುದೇ ಭದ್ರತೆಯನ್ನೂ ಒದಗಿಸಲಾಗಿರಲಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ದಸುಯ ಡಿಎಸ್ಪಿ .ಆರ್. ಶರ್ಮ ಹೇಳಿದರು. ಏನಿದ್ದರೂ, ಕಟ್ಟುಥಾರ ಅವರ ಕುಟುಂಬವು ಸಾವಿನ ಹಿಂದೆ ಕಾಣದ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತ ಪಡಿಸಿತು. ಜಲಂಧರದ ಚರ್ಚ್ ಅಧಿಕಾರಿಗಳು ಈದಿನ ಬೆಳಗ್ಗೆ ತಮಗೆ ಕರೆ ಮಾಡಿ ತನ್ನ ಸಹೋದರ ತಮ್ಮ ಕೊಠಡಿಯಲ್ಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು ಎಂದು ಫಾದರ್ ಕುರಿಯಕೋಸ್ ಅವರ ಸಹೋದರ ಕೇರಳ ಮೂಲದ ಜೋಸ್ ಕಟ್ಟುಥಾರ ಅವರು ಸ್ಥಳೀಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದರು. ಫಾದರ್ ಕುರಿಯಕೋಸ್ ಅವರ ಕೊಠಡಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಫಾದರ್ ಅವರು ಹೃದಯಾಘಾತದಿಂದ ನಿಧನರಾಗಿರಬಹುದು ಎಂಬುದಾಗಿ ಚರ್ಚ್ ಅಧಿಕಾರಿಗಳು ತಮಗೆ ತಿಳಿಸಿದರು ಎಂದು ಜೋಸ್ ಕಟ್ಟುಥಾರ ಹೇಳಿದರು. ಏನಿದ್ದರೂ ಜೋಸ್ ಕಟ್ಟುಥಾರ ಅವರಿಗೆ ಸಹೋದರನ ಸಾವಿನ ಬಗ್ಗೆ ಅನುಮಾನ ಇದೆ. ಫ್ರಾಂಕೋ ಮುಲಕ್ಕಲ್ ಅವರಿಗೆ ನೀಡಲಾಗಿರುವ ಜಾಮೀನು ರದ್ದು ಪಡಿಸುವಂತೆ ಕೋರಿ ಕೇರಳ ಹೈಕೋರ್ಟಿಗೆ ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿದರು. ಜಲಂಧರದ ಫಾದರ್ ಮೈಕೆಲ್ ಅನ್ನಿಕುಳಿಕಟಿಲ್ ಅವರು ದೂರವಾಣಿ ಮೂಲಕ ಸಹೋದರನ ಸಾವಿನ ಬಗ್ಗೆ ಸುದ್ದಿ ನೀಡಿದರು. ನಮಗೆ ಅವರ ಸಾವಿನ ಬಗ್ಗೆ ಗಂಭೀರ ಅನುಮಾನಗಳಿವೆ. ಅವರನ್ನು ಕೊಂದಿರಬಹುದು ಎಂದು ನಾವು ನಂಬಿದ್ದೇವೆ ಎಂದು ಸಹೋದರ ಜೋಸ್ ಕಟ್ಟುಥಾರ ಹೇಳಿದರು. ಕುಟುಂಬದ ಪ್ರಕಾರ ಹಿಂದಿನ ದಿನ  ಬೆಳಗ್ಗೆ ೧೧ ಗಂಟೆ ಸುಮಾರಿಗೆ ಬಂದ ಕರೆಯೊಂದು ಅವರಿಗೆ ರಾತ್ರಿ ಕುರಿಯಕೋಸ್ (೬೨) ಅವರು ನಿಧನರಾಗಿದ್ದಾರೆ ಎಂದು ತಿಳಿಸಿತು. ಸಾವಿನ ಬಗ್ಗೆ ತಿಳಿಸುವಲ್ಲಿನ ವಿಳಂಬವು ತಮ್ಮ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಜೋಸ್ ನುಡಿದರು. ಪ್ರಸ್ತುತ ಕೇರಳದಲ್ಲಿ ಇರುವ ಕುಟುಂಬವು ಎರಡು ವಾರಗಳ ಹಿಂದೆ ಕುರಿಯಕೋಸ್ ಅವರು ಮಾತನಾಡಿದ್ದೇ ಕೊನೆ ಎಂದು ತಿಳಿಸಿತು. ‘ಈದಿನ ಬೆಳಗ್ಗೆ ೧೦ ಗಂಟೆಯಾದರೂ ಫಾದರ್ ಕುರಿಯಕೋಸ್ ಅವರು ಏಳದೇ ಇದ್ದುದನ್ನು ಗಮನಿಸಿ ಸಿಸ್ಟರ್ಗಳು ಕೊಠಡಿ ಬಳಿಗೆ ಹೋಗಿ ಕರೆದರು. ಬಾಗಿಲು ತೆರೆಯದೇ ಇದ್ದಾಗ ನೆರವಿಗಾಗಿ ಇತರರನ್ನು ಕರೆದರು. ಬಾಗಿಲನ್ನು ಒಡೆದು ಕೊಠಡಿ ಪ್ರವೇಶಿಸಿದಾಗ ಕುರಿಯಕೋಸ್ ಅವರು ಪ್ರಜ್ಞಾಹೀನರಾಗಿದ್ದುದು ಗೊತ್ತಾಯಿತು. ಕೊಠಡಿಯಲ್ಲಿ ವಾಂತಿ ಮಾಡಿದ್ದುದು ಕಂಡು ಬಂತು. ನಾವು ಆಸ್ಪತ್ರೆಗೆ ಒಯ್ದೆವು. ಅಲ್ಲಿ ವೈದ್ಯರು ಫಾದರ್ ಅವರು ಮೃತರಾಗಿದ್ದಾರೆ ಎಂದು ಘೋಷಿಸಿದರು ಎಂದು ಜಲಂಧರ ಡಯೋಸಿಸ್ನ ಫಾದರ್ ಪೀಟರ್ ಹೇಳಿದರು.  ಕುರಿಯಕೋಸ್ ಅವರ ಸಾವಿನ ಬಗ್ಗೆ ಕುಟುಂಬವು ವ್ಯಕ್ತ ಪಡಿಸಿರುವ ಶಂಕೆಗೆ ಯಾವುದೇ ಆಧಾರವಿಲ್ಲ. ನಾವು ಶತ್ರುಗಳಲ್ಲ, ನಾವು ಒಳ್ಳೆಯ ಗೆಳೆಯರಾಗಿದ್ದೆವು ಎಂದು ಫಾದರ್ ಪೀಟರ್ ನುಡಿದರುಬಿಷಪ್ ಮುಲಕ್ಕಲ್ ವಿರುದ್ಧ ಕ್ರೈಸ್ತ ಸನ್ಯಾಸಿನಿ ಲೈಂಗಿಕ ಹಲ್ಲೆಯ ಆರೋಪ ಹೊರಿಸಿ ನೀಡಿರುವ ದೂರಿನ ಪ್ರಕರಣವನ್ನು ಮುಚ್ಚಿಹಾಕಲು ಚರ್ಚ್ನಿಂದ ಪ್ರಯತ್ನಗಳು ನಡೆಯುತ್ತಿವೆ ಎಂದು ಫಾದರ್ ಕುರಿಯಕೋಸ್ ಕಟ್ಟುಥಾರ ಅವರು ಆಪಾದಿಸಿದ್ದರು. ಚರ್ಚ್ ತ್ಯಜಿಸಿದ ಹಲವಾರು ಕ್ರೈಸ್ತ ಸನ್ಯಾಸಿನಿಯರು ತಮ್ಮನ್ನು ಸಂಪರ್ಕಿಸಿ, ಬಿಷಪ್ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ. ಫಾದರ್ ಮುಲಕ್ಕಲ್ ಬಗೆಗಿನ ಭೀತಿಯಿಂದ ಸತ್ಯ ಬಹಿರಂಗ ಪಡಿಸಲು ಅವರು ನಿರಾಕರಿಸಿದ್ದಾರೆ ಎಂದು ಫಾದರ್ ಕಟ್ಟುಥಾರ ಪ್ರತಿಪಾದಿಸಿದ್ದರು. ಮುಲಕ್ಕಲ್ ಅವರನ್ನು ೨೦೧೪ ಮತ್ತು ೨೦೧೬ರ ನಡುವಣ ಅವಧಿಯಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪಗಳನ್ನು ಅನುಸರಿಸಿ ಮುಲಕ್ಕಲ್ ಅವರನ್ನು ಸೆಪ್ಟೆಂಬರ್ ೨೧ರಂದು ಬಂಧಿಸಲಾಗಿತ್ತು. ಅವರನ್ನು ಸೆಪ್ಟೆಂಬರ್ ೨೪ರಂದು ಎರಡು ವಾರಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ೨೦೧೪-೨೦೧೬ರ ನಡುವಣ ಅವಧಿಯಲ್ಲಿ ತಮ್ಮ ವಿರುದ್ಧ ಹಲವಾರು ಬಾರಿ ಅತ್ಯಾಚಾರ ಎಸಗಲಾಗಿತ್ತು ಎಂದು ಕ್ರೈಸ್ತ ಸನ್ಯಾಸಿನಿ ಆಪಾದಿಸಿದ್ದರು. ಫಾದರ್ ಕುರಿಯಕೋಸ್ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಬಹುದು. ದೇಹದಲ್ಲಿ ಕಣ್ಣಿಗೆ ಕಾಣುವಂತಹ ಯಾವುದೇ ಗಾಯದ ಗುರುತುಗಳು ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕೊಠಡಿಯಲ್ಲಿ ವಾಂತಿಮಾಡಿದ್ದ ಗುರುತುಗಳಿದ್ದವು ಎಂದು ಡಿಎಎಸ್ಪಿ ಶರ್ಮ ಹೇಳಿದರು. ವಿಸೇರಾವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇದರಿಂದಲೂ ಸಾವಿನ ನಿಖರ ಕಾರಣಗಳು ಗೊತ್ತಾಗುವ ಸಾಧ್ಯತೆಗಳಿವೆ ಎಂದು ಅವರು ನುಡಿದರು. ಫಾದರ್ ಕುರಿಯಕೋಸ್ ಅವರನ್ನು ೧೫ ದಿನಗಳ ಹಿಂದೆ ದಸುಯ ಚರ್ಚಿಗೆ ವರ್ಗಾವಣೆ ಮಾಡಲಾಗಿತ್ತು. ಅವರು ಚರ್ಚ್ ಆವರಣದಲ್ಲೆ ವಾಸವಾಗಿದ್ದರು. ಕ್ರೈಸ್ತ ಸನ್ಯಾಸಿನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಗುರಿಯಾದ ಬಿಷಪ್ ಮುಲಕ್ಕಲ್ ವಿರುದ್ಧ ಕುರಿಯಕೋಸ್ ಅವರು ಸಾಕ್ಷ್ಯ ನೀಡಿದ್ದರು. ಕೇರಳದ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಫಾದರ್ ಕುರಿಯಕೋಸ್ ಅವರು ತಮಗೆ ಪ್ರಾಣಭೀತಿ ಇದೆ ಎಂದಿದ್ದರು. ಫಾದರ್ ಕುರಿಯಕೋಸ್ ಅವರು ಬಿಷಪ್ ಫ್ರಾಂಕೋ ಮುಲಕ್ಕಲ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದ ಮಿಷನರೀಸ್ ಆಫ್ ಜೇಸಸ್ ಸನ್ಯಾಸಿನಿಯನ್ನು ಬೆಂಬಲಿಸಿದ್ದರು. ಕ್ರೈಸ್ತ ಸನ್ಯಾಸಿನಿಗೆ ಬೆಂಬಲ ನೀಡಿದ್ದಕ್ಕಾಗಿ ಚರ್ಚ್ ಅಧಿಕಾರಿಗಳಿಂದ ತಮಗೆ ನಿರಂತರ ಬೆದರಿಕೆ ಬರುತ್ತಿದೆ ಎಂದು ಅವರು ಪತ್ರಿಕಾ ಸಂದರ್ಶನದಲ್ಲಿ ತಿಳಿಸಿದ್ದರು.  ರೋಮನ್ ಕ್ಯಾಥೋಲಿಕ್ ಬಿಷಪ್ ಮುಲಕ್ಕಲ್ ಅವರಿ ಕೇರಳ ಹೈಕೋರ್ಟ್ ಕಳೆದ ವಾರ ಶರತ್ತಿನ ಜಾಮೀನು ನೀಡಿತ್ತು. ಸೆಪ್ಟೆಂಬರ್ ೨೧ರಂದು ಅವರನ್ನು ಬಂಧಿಸಲಾಗಿತ್ತು. ಪೊಲೀಸರಿಂದ ಸಮನ್ಸ್ ಬಾರದ ವಿನಃ ಕೇರಳಕ್ಕೆ ತಲೆಹಾಕಬಾರದು ಎಂದು ಜಲಂಧರದ ಮಾಜಿ ಬಿಷಪ್ ಗೆ ಹೈಕೋರ್ಟ್ ಆಜ್ಞಾಪಿಸಿತ್ತು. ಹೀಗಾಗಿ ಅವರು ಜಲಂಧರಕ್ಕೆ ಹಿಂತಿರುಗಿದ್ದು, ಸಂದರ್ಭದಲ್ಲಿ ಅವರಿಗೆ ಬೆಂಬಲಿಗರು ಭವ್ಯ ಸ್ವಾಗತ ನೀಡಿದ್ದರು

2014: ಒಟ್ಟಾವ: ಕೆನಡಾದ ರಾಜಧಾನಿ ನಗರ ಒಟ್ಟಾವದಲ್ಲಿರುವ ಸಂಸತ್ತು ಈದಿನ ಭಯೋತ್ಪಾದಕ ದಾಳಿಗೆ ಗುರಿಯಾಯಿತು. ಯುದ್ಧ ಸ್ಮಾರಕವನ್ನು ಕಾಯುತ್ತಿದ್ದ ಸೈನಿಕನನ್ನು ಗುಂಡಿಟ್ಟುಕೊಂಡ ಕೆಲವೇ ಕ್ಷಣಗಳಲ್ಲಿ ಈ ದಾಳಿ ನಡೆದಿದ್ದು, ಸಂಸತ್ತಿನ ಒಳಗೆ 40-50 ಗುಂಡುಗಳು ಹಾರಿದ ಸದ್ದುಗಳು ಕೇಳಿಬಂದವು. ಸಂಸತ್ತಿನ ಒಳಗಿದ್ದ ಶಸ್ತ್ರಧಾರಿ ಸಾರ್ಜೆಂಟ್​ಗಳು ದಾಳಿಕೋರನನ್ನು ಕೊಂದು ಹಾಕಿದರು ಎಂದು ಸಿಬಿಸಿ ವರದಿ ಮಾಡಿತು. ಈ ಘಟನೆಗಳಿಗೆ ಸಂಸತ್ ಸದಸ್ಯರು ಮತ್ತು ಇತರರು ಪ್ರತ್ಯಕ್ಷ ಸಾಕ್ಷಿಗಳಾದರು ಎಂದು ವರದಿ ತಿಳಿಸಿತು. ಇರಾಕ್ ಮತ್ತು ಸಿರಿಯಾದ ಐಎಸ್ ಭಯೋತ್ಪಾದಕ ಗುಂಪಿನ ದಮನ ಯತ್ನವನ್ನು ಬೆಂಬಲಿಸಲು ಸಿಎಫ್ ಹಾರ್ನೆಟ್ ಯೋಧರನ್ನು ಒಳಗೊಂಡ ತನ್ನ ಪಡೆಗಳನ್ನು ಕೆನಡಾ ಕಳುಹಿಸಿಕೊಟ್ಟ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಇಡೀ ದೇಶ ದಿಗ್ಭ್ರಮೆಗೊಂಡಿತು. ಘಟನೆ ಸಂಭವಿಸಿದ ಹಿನ್ನೆಲೆಯಲ್ಲಿ ಕೆನಡಾ ಮಾತ್ರವಲ್ಲ ಅಮೆರಿಕದಲ್ಲೂ ಕಟ್ಟೆಚ್ಚರ ವಹಿಸಲಾಯಿತು. ಈ ಹೊತ್ತಿನಲ್ಲಿ ಒಟ್ಟಾವ ಮೇಯರ್​ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಘೋಷಿಸಿದರು.  ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೂ ಕೆನಡಾ ಸಂಸತ್ತಿನಲ್ಲಿ ನಡೆದ ದಾಳಿಯನ್ನು ಕಳವಳಕಾರಿ ಎಂದು ಬಣ್ಣಿಸಿ, ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುವೆ ಎಂದು ಟ್ವೀಟ್ ಮಾಡಿದರು. ಯುದ್ಧ ಸ್ಮಾರಕ ಕಾಯುತ್ತಿದ್ದ ಸೈನಿಕನನ್ನು ಭಯೋತ್ಪಾದಕ ಕಗ್ಗೊಲೆಗೈದಿದ್ದಾನೆ ಎಂದು ಕೆನಡಾದ ಪ್ರಧಾನಿ ಸ್ಟೆಫನ್ ಹಾರ್ಪರ್ ಹೇಳಿದರೆ, 'ಬಹುಶಃ ಗುಂಡು ಹಾರಿಸಿದ್ದು ಒಬ್ಬನೇ ವ್ಯಕ್ತಿ. ಆತನೀಗ ಸತ್ತಿದ್ದಾನೆ' ಎಂದು ಒಟ್ಟಾವ ಮೇಯರ್ ಜಿಮ್​ವಾಟ್ಸನ್ ಸಿಎನ್​ಎನ್​ಗೆ ತಿಳಿಸಿದರು. '’ನಗರಕ್ಕೆ ಮಾತ್ರವೇ ಅಲ್ಲ, ರಾಷ್ಟ್ರಕ್ಕೇ ಇದೊಂದು ಆಘಾತಕಾರಿ, ಮನಕ್ಷೋಭೆ ಉಂಟು ಮಾಡಿದ ಘಟನೆ' ಎಂದು ಅವರು ಹೇಳಿದರು. 'ರಾಜಧಾನಿ ಒಟ್ಟಾವದಲ್ಲಿ ಮೊದಲು ಯುದ್ಧ ಸ್ಮಾರಕವನ್ನು ಕಾಯುತ್ತಿದ್ದ ಸೈನಿಕನ್ನು ಗುಂಡು ಹಾರಿಸಿ ಕೊಲ್ಲಲಾಯಿತು. ಕೆಲವೇ ಕ್ಷಣಗಳಲ್ಲಿ ರಾಷ್ಟ್ರದ ಸಂಸತ್ತಿನಲ್ಲಿ ಗುಂಡಿನ ಸದ್ದುಗಳು ಕೇಳಿಬಂದವು'. ಕೆನಡಾದ ರಾಜಧಾನಿ ಒಟ್ಟಾವದಲ್ಲಿ ಬುಧವಾರ ಸಂಭವಿಸಿದ ಈ ಎರಡು ಗುಂಡುಹಾರಾಟದ ಪ್ರಕರಣಗಳು ಸಂಭವಿಸುತ್ತಿದ್ದಂತೆಯೇ ಕೆನಡಾ ಸಂಸತ್ತಿಗೆ ಪೊಲೀಸ್ ಸರ್ಪಗಾವಲು ಬಿತ್ತು. ನಗರದ ಬಹುತೇಕ ಭಾಗಗಳಲ್ಲಿ ಲಾಕ್​ಡೌನ್ ಘೋಷಿಸಿದ ಪೊಲೀಸರು ಹಲವಾರು ತಾಸು ಕಾಲ ಶಂಕಿತರಿಗಾಗಿ ಹುಡುಕಾಟ ನಡೆಸಿದರು. ಇಡೀ ನಗರದ ಜನಜೀವನ ಸ್ಥಗಿತಗೊಂಡಿತು. ರಾತ್ರಿವೇಳೆಗೆ 'ಲಾಕ್​ಡೌನ್' ತೆರವುಗೊಳಿಸಲಾಗಿದೆ ಎಂದು ತಿಳಿಸಿದ ಒಟ್ಟಾವ ಪೊಲೀಸರು ಸಾರ್ವಜನಿಕರಿಗೆ ಈಗ ಯಾವುದೇ ಬೆದರಿಕೆ ಇಲ್ಲ ಎಂದು ಹೇಳಿದರು. ಆದರೆ ಗುಂಡು ಹಾರಿಸಿದವರು ಯಾರು? ಗುಂಡು ಹಾರಿಸಿದ್ದು ಏಕೆ ಎಂಬ ಪ್ರಶ್ನೆ ನಿಗೂಢವಾಗಿ ಉಳಿದಿದೆ ಎಂದು ಸಿಎನ್​ಎನ್ ವರದಿ ಮಾಡಿತು.

2014: ನವದೆಹಲಿ: ಕಪ್ಪು ಹಣಕ್ಕೆ ಸಂಬಂಧಿಸಿದಂತೆ 'ಆಯ್ದ ಸೋರಿಕೆ'ಗಳಲ್ಲಿ ತೊಡಗುವುದನ್ನು ಬಿಟ್ಟು ಸಂಪೂರ್ಣ ಮಾಹಿತಿಯನ್ನು ಬಹಿರಂಗ ಪಡಿಸುವಂತೆ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿತು. ವಿದೇಶೀ ಬ್ಯಾಂಕುಗಳಲ್ಲಿ ಕಪ್ಪುಹಣ ಹೊಂದಿರುವವರ ಹೆಸರುಗಳನ್ನು ಬಹಿರಂಗ ಪಡಿಸಿದರೆ ವಿರೋಧ ಪಕ್ಷಕ್ಕೆ ಮುಜುಗರವಾಗುತ್ತದೆ ಎಂಬುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಹಿಂದಿನ ದಿನ ನೀಡಿದ ಹೇಳಿಕೆಗೆ ಅಕ್ಟೋಬರ್ 22ರಂದು ಕಾಂಗ್ರೆಸ್ ಈ ಎದಿರೇಟು ನೀಡಿತು. 'ವಿದೇಶಗಳಲ್ಲಿ ಅಕ್ರಮ ಖಾತೆಗಳನ್ನು ಇಟ್ಟುಕೊಂಡವರ ಹೆಸರುಗಳನ್ನು ಸುಪ್ರೀಂಕೋರ್ಟಿಗೆ ತಿಳಿಸಲು ಸರ್ಕಾರ ಯೋಜಿಸುತ್ತಿದೆ. ಯುರೋಪಿನ ವಿವಿಧ ರಾಷ್ಟ್ರಗಳು ಒದಗಿಸಿರುವ ಸುಮಾರು 800 ಹೆಸರುಗಳ ಪೈಕಿ 135 ಹೆಸರುಗಳು ಮೊದಲ ಪಟ್ಟಿಯಲ್ಲಿ ಬಹಿರಂಗಗೊಳ್ಳಲಿವೆ' ಎಂದು ವರದಿಗಳು ತಿಳಿಸಿದ್ದವು. 'ಇಂತಹ ಬೆದರಿಕೆಗಳಿಂದ ಕಾಂಗ್ರೆಸ್ ಪಕ್ಷವು ಬ್ಲಾಕ್​ಮೇಲ್​ಗೆ ಒಳಗಾಗುವುದಿಲ್ಲ. ನಮ್ಮನ್ನು ಬ್ಲಾಕ್​ಮೇಲ್ ಮಾಡಲು ಪ್ರಯತ್ನಿಸಬೇಡಿ' ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಹೇಳಿದರು. 'ಇದರಲ್ಲಿ ಯಾರೇ ಷಾಮೀಲಾಗಿದ್ದರೂ ಸಂಭಾವ್ಯ ಬಿಗಿ ಕ್ರಮ ಕೈಗೊಳ್ಳಬೇಕು. ಆದರೆ ಅದು ಸೇಡು ತೀರಿಸುವ ಉದ್ದೇಶದ್ದಾಗಿರಬಾರದು ಮತ್ತು ಅರ್ಧ ಸತ್ಯವೂ ಆಗಿರಬಾರದು' ಎಂದು ಮಾಕನ್ ನುಡಿದರು. ಕಪ್ಪುಹಣದ ವಿರುದ್ಧ ಕ್ರಮ ಕೈಗೊಳ್ಳುವುದು ಏಪ್ರಿಲ್​ನಲ್ಲಿ ನಡೆದ ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿದ್ದ ಪ್ರಮುಖ ಅಂಶ. ಅಧಿಕಾರಕ್ಕೆ ಬಂದ ತತ್ ಕ್ಷಣವೇ ಮೋದಿ ಸರ್ಕಾರ ಸುಪ್ರೀಂಕೋರ್ಟ್ ಆದೇಶದಂತೆ ಈ ವಿಷಯದ ಬಗ್ಗೆ ಅಧ್ಯಯನಕ್ಕಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಿತ್ತು. ಆದರೆ, ತೆರಿಗೆ ಒಪ್ಪಂದಗಳ ಉಲ್ಲಂಘನೆಯಾಗುವ ಕಾರಣ ವಿದೇಶಗಳಲ್ಲಿ ಹಣ ಠೇವಣಿ ಇಟ್ಟ ಎಲ್ಲರ ಹೆಸರುಗಳನ್ನೂ ಬಹಿರಂಗ ಪಡಿಸಲಾಗದು ಎಂದು ಸರ್ಕಾರ ಕಳೆದ ವಾರ ಸುಪ್ರೀಂಕೋರ್ಟಿಗೆ ತಿಳಿಸಿತ್ತು. 'ಬಿಜೆಪಿಯು ಕಾಂಗ್ರೆಸ್ ನಿಲುವನ್ನೇ ಪ್ರತಿಧ್ವನಿಸಿದೆ ಮತ್ತು ಅದನ್ನು ಸಮರ್ಥಿಸಿದೆ' ಎಂದು ಸರ್ಕಾರದ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯಿಸಿತ್ತು. ಇದಕ್ಕೆ ವಾಹಿನಿಯೊಂದರ ಸಂದರ್ಶನದಲ್ಲಿ ಪ್ರತ್ಯುತ್ತರ ನೀಡಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ 'ಹೆಸರುಗಳನ್ನು ಶೀಘ್ರದಲ್ಲೇ ಬಹಿರಂಗಗೊಳಿಸಲಾಗುವುದು. ಹೆಸರುಗಳು ಬಹಿರಂಗಗೊಂಡಾಗ ಬಿಜೆಪಿಗೆ ಯಾವುದೇ ಮುಜುಗರವಾಗುವುದಿಲ್ಲ ಎಂದು ನಾನು ಭರವಸೆ ನೀಡಬಲ್ಲೆ, ಅದರೆ ಆ ಹೆಸರುಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮುಜುಗರವಾಗುವುದು' ಎಂದು ಹೇಳಿದ್ದರು.

2008: ಚಂದ್ರನ ಕಡೆಗೆ ತನ್ನ ಚೊಚ್ಚಲ ಯಾನ (ಚಂದ್ರಯಾನ-1) ಆರಂಭಿಸುವ ಮೂಲಕ ಚಂದ್ರನತ್ತ ಪಯಣಿಸಿದ ಜಗತ್ತಿನ ಆರನೇ ರಾಷ್ಟ್ರವೆನಿಸಿದ ಭಾರತ ವಿಶ್ವದ ಅತ್ಯಂತ ಅಗ್ಗದ `ಬಾಹ್ಯಾಕಾಶ ಯಾನ' ನಡೆಸಿದ ಮೊತ್ತ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಇದರೊಂದಿಗೆ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದಂತೆ ಭಾರತವು ಜಾಗತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ತೆರೆಯಿತು. ಚಂದ್ರಯಾನ -1 ಗಗನನೌಕೆಯು ಏರಿದ ಎತ್ತರದ ಕಥೆಯು ಬಂಗಾರದ ಅಕ್ಷರಗಳೊಂದಿಗೆ ವಿಜ್ಞಾನದ ನವಯುಗಕ್ಕೆ ಮುನ್ನುಡಿ ಬರೆಯಿತು. ಆಂಧ್ರದ ನೆಲಕ್ಕೆ ತಾಗಿದಂತಿರುವ ಬಂಗಾಳಕೊಲ್ಲಿಯ ಶ್ರೀಹರಿಕೋಟಾ ಪುಟ್ಟ `ದ್ವೀಪ'ದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈದಿನ ಭಾರತೀಯ ಕಾಲಮಾನ ಬೆಳಗ್ಗೆ 6.22ಕ್ಕೆ ಸರಿಯಾಗಿ ಚಂದ್ರಯಾನ-1 ಗಗನನೌಕೆಯನ್ನು ಹೊತ್ತ ಪಿಎಸ್ಸೆಲ್ವಿ (ಪಿ ಎಸ್ ಎಲ್ ವಿ) -ಸಿ 11 ಉಡಾವಣಾ ವಾಹಕ ಬೆಂಕಿ ಉಗುಳುತ್ತಾ ಶರವೇಗದಲ್ಲಿ ಬಾನಿಗೆ ಏರಿ, ಕ್ಷಣಾರ್ಧದಲ್ಲಿ ಆಕಾಶದಲ್ಲಿ ಮಾಯವಾಯಿತು. 386 ಕೋಟಿ ರೂಪಾಯಿ ವೆಚ್ಚದ ಭಾರತದ ಈ `ಚಂದ್ರಯಾನ-1' ಯೋಜನೆ ವಿಶ್ವದಲ್ಲೇ ಅತ್ಯಂತ ಅಗ್ಗದ್ದು ಎಂದು ಪರಿಗಣಿತವಾಗಿದ್ದು, ಭೂಮಿಯ ಏಕೈಕ ಉಪಗ್ರಹದ ಚೊಚ್ಚಲ ಸಮಗ್ರ ನಕ್ಷೆ ರೂಪಿಸಲು ಸಹಕರಸುವಲ್ಲಿ ಮಹತ್ವದ ಪಾತ್ರ ವಹಿಸುವುದು. 'ಭಾರತದ ಪಾಲಿಗೆ ಇದು ಚರಿತ್ರಾರ್ಹ ಕ್ಷಣ. ನಾವು ಚಂದ್ರನೆಡೆಗೆ ನಮ್ಮ ಯಾನದ ಮೊದಲ ಹಂತವನ್ನು ಆರಂಭಿಸಿದ್ದು ಇದು ಯಶಸ್ವಿಯಾಗಿದೆ' ಎಂದು ಹರ್ಷಭರಿತರಾಗಿದ್ದ ಇಸ್ರೋ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಭಾರತದ ದೇಶೀ ನಿರ್ಮಿತ ರಾಕೆಟ್ ಪಿಎಸ್ಸೆಲ್ವಿ ಸಿ-11 ಇಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಂಡ ನಂತರ ಹೇಳಿದರು.

2008: ರಾಜ್ಯದ ವಿವಿಧೆಡೆ 13 ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಹಾಗೂ ಸಂಬಂಧಿಗಳ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು 15 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಮಾಡಿದರು. ಪೊಲೀಸ್ ಮಹಾನಿರ್ದೇಶಕರ ಕಚೇರಿಯ ಡಿ ವೈ ಎಸ್ ಪಿ ಕೆ. ಸುರೇಂದ್ರ ರಾವ್, ಬೆಂಗಳೂರು ಉತ್ತರ ಉಪ ತಹಶೀಲ್ದಾರ್ ಕೃಷ್ಣ ನಾಯಕ್, ಮಾಲೂರು ಸಬ್ ರಿಜಿಸ್ಟ್ರಾರ್ ಲಕ್ಷ್ಮಣಪ್ರಸಾದ್, ಪೊಲೀಸ್ ಇನ್ಸ್ ಪೆಕ್ಟರುಗಳಾದ ಕೋನಪ್ಪರೆಡ್ಡಿ (ಕನಕಪುರ), ಓಬಳೇಶ್ (ಯಲಹಂಕ), ನಾರಾಯಣ ವಿ. ಭರಮನಿ (ಸವದತ್ತಿ), ಗುಲ್ಬರ್ಗ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್ ಮಹದೇವ ಎಚ್. ಭೀಮಕ್ಕನವರ್, ಬಾಗಲಕೋಟೆ ಜಿ.ಪಂ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಮಹೇಶ್ ಕೃಷ್ಣಪ್ಪ ಕಕ್ಕಾರೆಡ್ಡಿ, ವಿಜಾಪುರ ಮೋಟಾರು ವಾಹನ ನಿರೀಕ್ಷಕ ಶಿವಪ್ರಸಾದ್, ನಗರದ ಥಣಿಸಂದ್ರ ಗ್ರಾ.ಪಂ. ಕಾರ್ಯದರ್ಶಿ ಆರ್. ನಾಗರಾಜ, ದೇವನಹಳ್ಳಿಯ ಗ್ರಾಮ ಲೆಕ್ಕಿಗ ವಾಲಿಜಾನ್, ಬಿಬಿಎಂಪಿ ಕಾಮಗಾರಿ ನಿರೀಕ್ಷಕ ರಂಗಸ್ವಾಮಯ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವ್ಯವಸ್ಥಾಪಕ (ರಾಜಾಜಿನಗರ) ವೆಂಕಟರಮಣಸ್ವಾಮಿ ದಾಳಿಗೆ ಒಳಗಾದ ಅಧಿಕಾರಿಗಳು.

2008: ಕರ್ನಾಟಕದ ಯುವ ಚಿತ್ರ ಕಲಾವಿದೆ ರಂಜನಿ ಶೆಟ್ಟರ್ ಅವರು ಪ್ರತಿಷ್ಠಿತ ಸಂಸ್ಕೃತಿ ಪ್ರತಿಷ್ಠಾನದ 2008ನೇ ಸಾಲಿನ ಸಂಸ್ಕೃತಿ ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರಿನಲ್ಲಿ ನೆಲೆಸಿದ ರಂಜನಿ, ದೇಶ-ವಿದೇಶಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಲಾಪ್ರದರ್ಶನ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದವರು. ಜೈವಿಕ ವಸ್ತುಗಳನ್ನು ಬಳಸಿಕೊಂಡು ನಿರ್ಮಿಸಿದ ಕಲಾಕೃತಿಗಳು ಅವರ ಇತ್ತೀಚಿನ ಪ್ರಯೋಗ. ಬೆಂಗಳೂರಿನ ಚಿತ್ರಕಲಾ ಪರಿಷತಿನಲ್ಲಿ ಶಿಲ್ಪಕಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ರಂಜನಿ 2003ರಲ್ಲಿ ಹೆಬ್ಬಾರ್ ಪ್ರತಿಷ್ಠಾನದ ಪ್ರಶಸ್ತಿ ಪಡೆದಿದ್ದರು. ಅಶೋಕ್ ವಾಜಪೇಯಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಈ ವರ್ಷದ ಕಲಾ ಕ್ಷೇತ್ರದ ಪ್ರಶಸ್ತಿಗೆ ರಂಜನಿ ಅವರನ್ನು ಆಯ್ಕೆ ಮಾಡಿತು.

2008: ಬಿಹಾರಿನ ಖಗರಿಯಾ ಸಮೀಪ ಅಧಿಕ ಜನರಿಂದ ಕೂಡಿದ ದೋಣಿ ಮಗುಚಿದ ಪರಿಣಾಮ 24 ಜನ ಮೃತರಾದರು. ದುಢೇಲಾ ಗ್ರಾಮದಲ್ಲಿ ಹುಲ್ಲು ಕತ್ತರಿಸಲು ಮಹಿಳೆಯರನ್ನು ಸಾಗಿಸುತ್ತಿದ್ದ ದೋಣಿ ಮಗುಚಿ ಈ ದುರಂತ ಸಂಭವಿಸಿತು.

2007: ಭಾರತದಲ್ಲಿ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ನೀಡಿದ ಮಹತ್ವದ ಕೊಡುಗೆಗಾಗಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಲಂಡನ್ನಿನ ರಾಯಲ್ ಸೊಸೈಟಿಯಲ್ಲಿ `ಕಿಂಗ್ ಚಾರ್ಲ್ಸ್-2' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಯಲ್ ಸೊಸೈಟಿಯ ಅಧ್ಯಕ್ಷ ಲಾರ್ಡ್ ಮಾರ್ಟಿನ್ ರೀಸ್ ಅವರು ಕಲಾಂ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. 1997ರಲ್ಲಿ ಆರಂಭವಾದ ಪ್ರಶಸ್ತಿಯನ್ನು ಪಡೆದ ಎರಡನೇ ವ್ಯಕ್ತಿ ಎಂಬ ಹಿರಿಮೆಗೂ ಕಲಾಂ ಪಾತ್ರರಾದರು. ಈ ಹಿಂದೆ 1998ರಲ್ಲಿ ಜಪಾನಿನ ಸಾಮ್ರಾಟ ಅಖಿಹಿಟೋ ಅವರಿಗೆ ಈ ಗೌರವ ನೀಡಲಾಗಿತ್ತು. ಅನಿವಾಸಿ ಭಾರತೀಯ ಉದ್ಯಮಿ ಸ್ವರಾಜ್ ಪಾಲ್, ಇಂಗ್ಲೆಂಡಿನಲ್ಲಿರುವ ಭಾರತದ ಹಂಗಾಮಿ ಹೈ ಕಮಿಷನರ್ ಅಶೋಕ್ ಮುಖರ್ಜಿ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

2007: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಬಾಲಿವುಡ್ ನಟ ಸಂಜಯ್ ದತ್ ಈದಿನ ತೀರ್ಪಿನ ಪ್ರತಿ ಪಡೆದು ಮುಂಬೈ ಟಾಡಾ ನ್ಯಾಯಾಲಯಕ್ಕೆ ಶರಣಾದರು. ನಂತರ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪುಣೆಯ ಯೆರವಾಡ ಜೈಲಿಗೆ ಕರೆದೊಯ್ದರು. ಸಂಜಯ್ ದತ್ ಅವರಿಗೆ ನೀಡಲಾಗಿರುವ 4340 ಪುಟಗಳ ತೀರ್ಪಿನ ಒಟ್ಟು ಭಾರ 25 ಕಿಲೊ. ತೀರ್ಪಿನ ಪ್ರತಿ ಸಿಕ್ಕ ಕೂಡಲೆ ಟಾಡಾ ಕೋರ್ಟಿಗೆ ಶರಣಾಗಬೇಕು ಎಂದು ಈ ಮುನ್ನ ಅವರಿಗೆ ತಾತ್ಕಾಲಿಕ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಪ್ರತಿ ಸಿಕ್ಕ ನಂತರ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದೂ ಅದು ಹೇಳಿತ್ತು.

2007: ಚಿತ್ರದುರ್ಗ ಮುರುಘಾಮಠದ ಪ್ರತಿಷ್ಠಿತ `ಬಸವಶ್ರೀ ಪ್ರಶಸ್ತಿ'ಯನ್ನು ಸರ್ವಧರ್ಮ ಸಂಸತ್ತಿನ ಸಂಸ್ಥಾಪಕ ಸ್ವಾಮಿ ಅಗ್ನಿವೇಶ್ ಅವರಿಗೆ ಈದಿನ ಚಿತ್ರದುರ್ಗದ ಭರಮಣ್ಣ ನಾಯಕನ ವೇದಿಕೆಯಲ್ಲಿ ಪ್ರದಾನ ಮಾಡಲಾಯಿತು. ಶರಣ ಸಂಸ್ಕೃತಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ.

2007: ಹಣಕ್ಕಾಗಿ 27 ಕೊಲೆ ಮಾಡಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಸುಪಾರಿ ಹಂತಕ ಶ್ಯಾಮ್ ಉರುಫ್ ಕಿಲ್ಲರ್ ಶ್ಯಾಮ್ ನನ್ನು ಬೆಂಗಳೂರಿನ ವಿಶೇಷ ಪೊಲೀಸ್ ತಂಡ ಬಂಧಿಸಿತು. ಏಳು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶ್ಯಾಮ್ ಕಳೆದ ಆಗಸ್ಟಿನಲ್ಲಿ ಕೋಲಾರ ಜೈಲಿನಿಂದ ಪರಾರಿಯಾಗಿದ್ದ. ಈತನ ಜೊತೆಗೆ ಶಬನಮ್ ಡೆವಲಪರ್ಸ್ ಉದ್ಯೋಗಿಗಳ ಕೊಲೆ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ (30) ಹಾಗೂ ಹೊಸಕೋಟೆಯ ವಿಜಿ (29), ಆನಂದ (23), ಮಾರತ್ಹಳ್ಳಿಯ ಪ್ರಕಾಶ್ (34) ಎಂಬುವರು ಸಹ ಪೊಲೀಸರ ಬಲೆಗೆ ಬಿದ್ದರು. ಹೆದ್ದಾರಿಗಳಲ್ಲಿ ಲಾರಿ, ಕಾರನ್ನು ತಡೆದು ಚಾಲಕ ಪ್ರಯಾಣಿಕರನ್ನು ಕೊಲೆ ಮಾಡಿ ಹಣ ದೋಚುತ್ತಿದ್ದ ಶ್ಯಾಮ್ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಮೈಸೂರು, ತುಮಕೂರು ಮತ್ತು ತಮಿಳುನಾಡಿನಲ್ಲಿ ಒಟ್ಟು 27 ಕೊಲೆ ಮತ್ತು ಅಷ್ಟೇ ಸಂಖ್ಯೆಯ ದರೋಡೆಗಳನ್ನು ಮಾಡಿದ ಆರೋಪವಿತ್ತು. ಇದರಲ್ಲಿ ಏಳು ಕೊಲೆ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ಆಗಿತ್ತು. ಒಂದು ಪ್ರಕರಣದಲ್ಲಿ 10 ವರ್ಷ ಸಜೆ, ಎರಡು ಪ್ರಕರಣದಲ್ಲಿ ಏಳು ವರ್ಷ ಮತ್ತು ಒಂದು ಪ್ರಕರಣದಲ್ಲಿ ಆರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.

2007: ಹು ಜಿಂಟಾವೊ ಅವರು ಮತ್ತು ಐದು ವರ್ಷಗಳ ಅವಧಿಗೆ ಚೀನಾ ಅಧ್ಯಕ್ಷರಾಗಿ ಪುನರಾಯ್ಕೆಯಾದರು.

2007: ಪರಿಸರಸ್ನೇಹಿ ಮತ್ತು ಅತಿ ಶೀಘ್ರವಾಗಿ ಅಡುಗೆ ಮಾಡುವ ಒಲೆಯನ್ನು ಪ್ರಚಾರ ಮಾಡಿದ ಹಾವೇರಿಯ ಮಂಜುನಾಥ ಪಂಚಾನನ ಮೈಸೂರಿನಲ್ಲಿ ಹೈಟೆಕ್ ಯಜ್ಞಕುಂಡವೊಂದನ್ನು ಸಿದ್ಧಪಡಿಸಿ ಆಸ್ತಿಕರ ಮನಗೆದ್ದರು. ಮೈಸೂರಿನ ಜೆಎಸ್ಸೆಸ್ಸ್ ಅರ್ಬನ್ ಹಾತಿನಲ್ಲಿ ಈ ಹೈಟೆಕ್ ಹೋಮಕುಂಡ ಜನರ ಗಮನ ಸೆಳೆಯಿತು. ಜೇಡಿ ಮಣ್ಣಿನಿಂದ ತಯಾರಿಸಿದ ಹೂಮ ಕುಂಡಕ್ಕೆ ವಿದ್ಯುತ್ ಒಲೆಯನ್ನು ಸೇರಿಸಲಾಗಿದ್ದು, ಸ್ಪೀಕರ್ ಜೋಡಿಸಲಾಗಿದೆ. ಒಲೆಯ ಕೆಳಗೇ ಟೇಪ್ ಹಾಕುವ ಸೌಲಭ್ಯವೂ ಇದ್ದು ಹೋಮದ ಮಂತ್ರವನ್ನೂ ಕೇಳಬಹುದು. ಜೊತೆಗೆ ನೀವು ಲೋಬಾನ ಅಥವಾ ಪಂಚಾನನ ಅವರೇ ತಯಾರಿಸಿದ ಧೂಪವನ್ನು ಬಳಸಬಹುದು. ನಿಮ್ಮ ಮನೆಯಲ್ಲಿ ಗಣ ಹೋಮ ಮಾಡಬೇಕಾದರೆ ಗಣಹೋಮದ ಮಂತ್ರ, ಮೃತ್ಯುಂಜಯ ಹೋಮ ಮಾಡಿಸಬೇಕು ಎಂದರೆ ಮೃತ್ಯುಂಜಯ ಹೋಮದ ಮಂತ್ರದ ಕ್ಯಾಸೆಟ್ ಹಾಕಬಹುದು. ಜೊತೆಗೆ ಐದು ಮಂತ್ರಗಳು ಇರುವ ಕ್ಯಾಸೆಟ್ಟನ್ನೂ ಮಂಜುನಾಥ ಹಾಕಿಕೊಡುತ್ತಾರೆ. ಧೂಪವನ್ನು ಹಾಕಿದಾಗ ಒಲೆಯಿಂದ ಹೊಗೆ ಬರುತ್ತದೆ. ಆದರೆ ಪಂಚಾನನ ಅವರು ಸಿದ್ಧಪಡಿಸಿದ ವಿವಿಧ ಮರಗಳ ಪುಡಿಯನ್ನು ಹಾಕಿದಾಗ ಮಾತ್ರ ಈ ಒಲೆಯಲ್ಲಿ ಸುವಾಸನೆ ಬರುತ್ತದೆ. ನೀವೇ ಬೇರೆ ಸುವಾಸನೆ ಪುಡಿಯನ್ನು ಹಾಕಿದರೆ ಹೊಗೆ ಮಾತ್ರ ಬರುತ್ತದೆ. ಸುವಾಸನೆ ಬರುವುದಿಲ್ಲ. ಪಂಚಾನನ ಅವರು ಹಾವೇರಿಯ ಪುರೋಹಿತರ ಸಲಹೆ ಪಡೆದು ಈ ಹೋಮಕುಂಡವನ್ನು ಸೃಷ್ಟಿಸಿದ್ದಾರೆ. ಅವರ ಸಲಹೆ ಮೇರೆಗೇ ಸುವಾಸನೆ ಬರುವಂತಹ ಮರಗಳ ಪುಡಿಯ ಮಿಶ್ರಣ ಸಿದ್ಧ ಪಡಿಸಿದ್ದಾರೆ. ಈ ಹೋಮಕುಂಡವನ್ನು ಬಳಸಿ ಬೆಳಿಗ್ಗೆ ಮತ್ತು ಸಂಜೆ ಹೊಗೆ ಹಾಕಿದರೆ ಮನೆಯಲ್ಲಿ ಆರೋಗ್ಯ ನೆಲೆಸುತ್ತದೆ. ಮುಖ್ಯವಾಗಿ ಸೊಳ್ಳೆ ಮತ್ತು ಇತರ ಕೀಟಗಳು ಬರುವುದಿಲ್ಲ ಎಂಬುದು ಪಂಚಾನನ ಅವರ ಪ್ರತಿಪಾದನೆ. ಮೂಲತಃ ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರಿನವರಾದ ಮಂಜುನಾಥ ಪಂಚಾನನ ಕೇವಲ ಎಸ್ಸೆಸ್ಸೆಲ್ಸಿವರೆಗೆ ಮಾತ್ರ ಓದಿದವರು. ಉದ್ಯೋಗ ಹುಡುಕಿಕೊಂಡು ಹಾವೇರಿಗೆ ಬಂದ ಅವರು ಮರಗೆಲಸವನ್ನು ಮಾಡುತ್ತಾ ಎಲೆಕ್ಟ್ರಿಕಲ್ ಎಂಜಿನಿಯರಿಂಗಿನಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ಯಂತ್ರಗಳನ್ನು ಸಿದ್ಧಪಡಿಸಿದರು. ಪರಿಸರ ಸ್ನೇಹಿ ಒಲೆ, ಕಾಲಿಂಗ್ ಬೆಲ್, ತಾರಾಲಯ, ಇಸ್ತ್ರಿ ಪೆಟ್ಟಿಗೆ ಮುಂತಾದವುಗಳನ್ನು ಹೊಸ ಮಾದರಿಯಲ್ಲಿ ರೂಪಿಸಿದರು. ಇವರ ವಿನೂತನ ಎಲೆಕ್ಟ್ರಿಕಲ್ ಹೋಮ ಕುಂಡವನ್ನು ಎಲ್ಲಿಗೆ ಬೇಕಾದರೂ ಒಯ್ಯಬಹುದು. (ಮಂಜುನಾಥ ಪಂಚಾನನ ದೂರವಾಣಿ 9900437066)

2007: ಖ್ಯಾತ ರಂಗಕರ್ಮಿ ಹಾಗೂ ಚಲನಚಿತ್ರ ನಟ, ಮೂಲತಃ ವಿಜಾಪುರ ಜಿಲ್ಲೆಯವರಾದ ಅಶೋಕ ಬಾದರದಿನ್ನಿ ಅವರನ್ನು ಸಾಣೇಹಳ್ಳಿಯ ಶಿವಕುಮಾರ ಕಲಾಸಂಘವು ಕೊಡಮಾಡುವ 2007ರ ಶಿವಕುಮಾರ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬಾದರದಿನ್ನಿ ಅವರ ನಾಟಕಗಳು ಹೊಸ ವ್ಯಾಖ್ಯೆಗೆ, ನವೀನ ಸಂಯೋಜನೆಗೆ, ಹದವಾದ ಸಂಗೀತ ಬಳಕೆಗೆ, ಅನನುಭವಿ ಕಲಾವಿದರ ಪ್ರತಿಭಾ ಪೋಷಣೆಗೆ, ಸಂಘಟನೆಯ ಸಂದರ್ಭದಲ್ಲಿ ಮಿತವಾದ ವೆಚ್ಚಕ್ಕೆ, ಪ್ರೇಕ್ಷಕರ ಮನ್ನಣೆಗೆ ಪಾತ್ರವಾಗಿವೆ. ಬೆಂಗಳೂರೇತರ ರಂಗಭೂಮಿಯ ಚಾಂಪಿಯನ್ ಎಂದೇ ಹೆಸರಾದ ಇವರ ನಾಟಕಗಳು ಕೇರಳ, ಮುಂಬೈ, ನವದೆಹಲಿಯಲ್ಲೂ ಪ್ರದರ್ಶನ ಕಂಡಿವೆ. `ಅಭಿಜ್ಞಾನ ಶಾಕುಂತಲಾ, ಮೃಚ್ಛ ಕಟಿಕ, ಮ್ಯಾಕಬೆತ್, ಕಿಂಗ್ ಲಿಯರ್, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್, ಈಡಿಪಸ್, ಸಂಕ್ರಾಂತಿ, ತುಘಲಕ್, ಸಿಂಗಾರೆವ್ವ ಮತ್ತು ಅರಮನೆ, ವಿಶ್ವಬಂಧು ಮರುಳಸಿದ್ಧ, ಮರಣವೇ ಮಹಾನವಮಿ, ಶರಣಸತಿ, ಲಿಂಗಪತಿ, ಉದ್ಭವ' ಇವು ಬಾದರ ದಿನ್ನಿ ನಿರ್ದೇಶಿಸಿದ್ದ ಪ್ರಮುಖ ನಾಟಕಗಳು.

2007: ಪವರ್ ಲಿಫ್ಟರ್ ವೀರೇಶ್ ರಾವ್ (33) ಮಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 2007ರ ಸಾಲಿನ ದಸರಾ ಕ್ರೀಡಾಕೂಟದ ಪವರ್ ಲಿಫ್ಟಿಂಗ್ ಸ್ಪರ್ಧೆ 125 ಕೆ.ಜಿ. ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು ದ್ವಿತೀಯ ಸ್ಥಾನ ಹಾಗೂ ಬೆಳ್ಳಿ ಪದಕ ಪಡೆದಿದ್ದರು. ರಾಜ್ಯ ಮಾತ್ರವಲ್ಲ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಹಲವು ಬಾರಿ ಭಾಗವಹಿಸಿದ್ದ ವೀರೇಶ್ ರಾವ್ ಅನೇಕ ಬಹುಮಾನಗಳನ್ನು ಪಡೆದು ಉತ್ತಮ ಪವರ್ ಲಿಫ್ಟರ್ ಎನಿಸಿದ್ದರು.

2006: ಗುಜರಾತಿನ ಕಛ್ ಜಿಲ್ಲೆಯ ಲುನಾ ಗ್ರಾಮದ ರಾಣಾದಲ್ಲಿ ಭೂಮಿಯ ಆಚಿನ ಕಾಯವೊಂದು ಅಪ್ಪಳಿಸಿ ಉಂಟಾಗಿರಬಹುದಾದ ವೃತ್ತಾಕಾರದ ಕುಳಿಯೊಂದನ್ನು ಪತ್ತೆ ಹಚ್ಚಿರುವುದಾಗಿ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದ ಭೂಗರ್ಭ ಶಾಸ್ತ್ರಜ್ಞರಾದ ಆರ್. ವಿ. ಕಾರಂತ್ ಮತ್ತು ಎಂ.ಎಸ್. ಗಾಧವಿ ಅವರು `ಕರೆಂಟ್ ಸೈನ್ಸ್' ಪತ್ರಿಕೆಗೆ ಬರೆದ ಲೇಖನದಲ್ಲಿ ಪ್ರಕಟಿಸಿದರು. ವೇದಗಳ ಕಾಲದಲ್ಲಿ ಭೂಮಿಯ ಹೊರಗಿನ ಕಾಯವೊಂದು ಈ ಪ್ರದೇಶಕ್ಕೆ ಅಪ್ಪಳಿಸಿ ಈ ಕುಳಿಯ ರಚನೆಯಾಗಿರಬಹುದು ಎನ್ನಲಾಗಿದೆ. ಕುಳಿ ಪತ್ತೆಯಾದ ನಿವೇಶನವು ಪ್ರಾಚೀನ ಹರಪ್ಪ ನಾಗರಿಕತೆಗೆ ಸಂಬಂಧಿಸಿದ ಕುರುಹುಗಳಿರುವ ನಿವೇಶನಕ್ಕೆ ಕೇವಲ ಒಂದು ಕಿಲೋಮೀಟರ್ ದೂರದಲ್ಲಿದೆ. ಪ್ರಾಚೀನ ಸಂಸ್ಕೃತ ಪಠ್ಯಗಳಲ್ಲೂ ಸುಮಾರು 4000-5000 ವರ್ಷಗಳ ಹಿಂದೆ ಉರಿಯುತ್ತಿರುವ ಅನ್ಯ ಕಾಯವೊಂದು ಪಶ್ಚಿಮ ಭಾರತದ ಪ್ರದೇಶವೊಂದಕ್ಕೆ ಅಪ್ಪಳಿಸಿತ್ತು ಎಂಬ ಬಗೆಗೆ ಮಾಹಿತಿಗಳು ಲಭ್ಯವಿವೆ. ಮಹಾರಾಷ್ಟ್ರದ ಲೊನಾರ್ ಹಾಗೂ ರಾಜಸ್ಥಾನದ ರಾಮಗಢ ಎಂಬಲ್ಲಿ ಇದೇ ತರಹದ ರಚನೆಗಳು ಪತ್ತೆಯಾಗಿದ್ದು, ಲುನಾದಲ್ಲಿ ಪತ್ತೆಯಾದ ಈ `ಕುಳಿ' ದೇಶದಲ್ಲಿ ಪತ್ತೆಯಾದ ಮೂರನೇ ಕುಳಿಯಾಗಿದೆ.

1938: ಚೆಸ್ಟರ್ ಎಫ್. ಕಾರ್ಲ್ ಸನ್ ತನ್ನ ಸಹಾಯಕನೊಬ್ಬನ ನೆರವಿನೊಂದಿಗೆ `ಜೆರೋಗ್ರಫಿ'ಯನ್ನು ಪ್ರದರ್ಶಿಸಿದ. ಇಂದು ಇದು ಫೊಟೋ ಕಾಪಿಯಿಂಗ್ ಅಥವಾ ಜೆರಾಕ್ಸಿಂಗ್ ಎಂದೇ ಖ್ಯಾತಿ ಪಡೆದಿದೆ. ಹತ್ತು ವರ್ಷಗಳ ಬಳಿಕ 1948 ರಲ್ಲಿ ಹಾಲೋಯಿಡ್ ಕಂಪೆನಿಯು (ಮುಂದೆ ಇದೇ ಜೆರಾಕ್ಸ್ ಕಂಪೆನಿ ಎಂದೇ ಖ್ಯಾತಿ ಪಡೆಯಿತು) ಜೆರಾಗ್ರಫಿ ಕುರಿತು ಸಾರ್ವಜನಿಕವಾಗಿ ಪ್ರಕಟಿಸಿತು. 1950ರಿಂದ ಜೆರಾಕ್ಸ್ ಪ್ರತಿಗಳು ಲಭಿಸಲಾರಂಭವಾದವು. ಜೆರಾಕ್ಸ್ ಎಂಬುದು ಜೆರಾಗ್ರಫಿ ಪದದಿಂದ ಬಂದಿದ್ದು, ಗ್ರೀಕಿನಲ್ಲಿ `ಒಣಬರಹ' (ಕನ್ನಡದಲ್ಲಿ `ನೆರಳಚ್ಚು') ಎಂಬ ಅರ್ಥವಿದೆ. ಈಗ ಅದು ಕಂಪೆನಿಯ `ಟ್ರೇಡ್ ಮಾರ್ಕ್' ಆಗಿದೆ.

1873: ಸ್ವಾಮೀ ರಾಮತೀರ್ಥರ (1873-1906) ಜನನ. ವೇದವಿದ್ವಾಂಸರಾದ ಇವರು ಆಧ್ಯಾತ್ಮಿಕವಾದಿಯಾಗಿದ್ದು, ವೈಯಕ್ತಿಕ ಹಾಗೂ ರಾಷ್ಟ್ರೀಯ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದಕರಾಗಿದ್ದರು.

1797: ಆಂಡ್ರೆ ಜಾಕಿಸ್ ಗಾರ್ನೆರಿನ್ ಅವರು ಮೊತ್ತ ಮೊದಲ ಬಾರಿಗೆ ಯಶಸ್ವಿಯಾಗಿ ಪ್ಯಾರಾಶೂಟ್ ಮೂಲಕ ಕೆಳಗಿಳಿದರು. ಪ್ಯಾರಿಸ್ಸಿನಲ್ಲಿ ಅವರು 2,200 ಮೀಟರ್ ಬಲೂನಿನಿಂದ ಪ್ಯಾರಾಶೂಟ್ ಮೂಲಕ ಕೆಳಕ್ಕೆ ಹಾರಿದರು. ಇವರು ಪ್ಯಾರಾಶೂಟಿನ ಸಂಶೋಧಕರಲ್ಲ. ಆದರೆ ಹೆಚ್ಚು ಎತ್ತರದಿಂದ ನೆಗೆಯಲು ಅನುಕೂಲವಾಗುವಂತೆ ಈ ಸಾಧನವನ್ನು ಸುಧಾರಿಸಿದರು. ಇವರ ಪ್ಯಾರಾಶೂಟನ್ನು ಬಿಳಿ ಕ್ಯಾನ್ವಾಸಿನಿಂದ ಮಾಡಲಾಗಿತ್ತು. ಅದರ ವ್ಯಾಸ 23 ಅಡಿಗಳಾಗಿದ್ದವು.

1764: ಹೆಕ್ಟರ್ ಮುನ್ರೋ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಸೇನೆಯು ಪಟ್ನಾದಿಂದ 120 ಕಿ.ಮೀ. ಪಶ್ಚಿಮಕ್ಕಿರುವ ಬಕ್ಸಾರ್ ಕದನದಲ್ಲಿ ಮೀರ್ ಕಾಸಿಮನನ್ನು ಪರಾಭವಗೊಳಿಸಿತು. ಮೀರ್ ಕಾಸಿಮ್ ಪಲಾಯನ ಮಾಡಿ, 1777 ರಲ್ಲಿ ಸಾಮಾನ್ಯನಂತೆ ಮೃತನಾದ.

1746: ಕಾಲೇಜ್ ಆಫ್ ನ್ಯೂಜೆರ್ಸಿ ಸ್ಥಾಪನೆಗೊಂಡಿತು. 1896 ರಲ್ಲಿ ಇದನ್ನು ಪ್ರಿನ್ಸ್ ಟನ್ ಯುನಿವರ್ಸಿಟಿಯಾಗಿ ಮಾರ್ಪಡಿಸಲಾಯಿತು.

No comments:

Post a Comment