ಇಂದಿನ ಇತಿಹಾಸ History Today ಅಕ್ಟೋಬರ್ 29
16: ಜಮ್ಮು: ಭಾರತೀಯ ಯೋಧನೊಬ್ಬನನ್ನು ಕೊಂದು ದೇಹವನ್ನು ಛಿದ್ರಗೊಳಿಸಿದ್ದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆ ಪ್ರತಿದಾಳಿ ನಡೆಸಿ ಕನಿಷ್ಠ 4 ಪಾಕಿಸ್ತಾನಿ ಸೇನಾ ನೆಲೆಗಳನ್ನು ಧ್ವಂಸಗೊಳಿಸಿ, ಕನಿಷ್ಠ 20 ಮಂದಿ ಪಾಕ್ ಸೈನಿಕರನ್ನು ಕೊಂದು ಹಾಕಿತು. ಈ ದಾಳಿಯಿಂದ ಪಾಕ್ ಪಡೆಯಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಮೂಲಗಳು ಹೇಳಿದವು. ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಆರ್ಪುರ ವಿಭಾಗದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಸ್ವಲ್ಪ ಹೊತ್ತಿನ ಬಳಿಕ ಕೇರನ್ ವಿಭಾಗದಲ್ಲಿ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಳ್ಳಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ. ಪಾಕ್ ಕಡೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಉನ್ನತ ಸೇನಾ ಮೂಲಗಳು ಹೇಳಿದವು. ಆರ್ಎಸ್ ಪುರ ವಿಭಾಗದ ಕಥುವಾದಲ್ಲಿ ಪಾಕಿಸ್ತಾನಿ ರೇಂಜರ್ಗಳು ಪದೇ ಪದೇ ಕದನ ವಿರಾಮ ಉಲ್ಲಂಘಿಸಿದಾಗ ಭಾರತೀಯ ಸೇನೆ ಕೇರನ್ ವಿಭಾಗದಲ್ಲಿ ಪಾಕ್ ಪಡೆಗಳ ಮೇಲೆ ಉಗ್ರ ಗುಂಡಿನ ದಾಳಿ ನಡೆಸಿತು . ಮಚಿಲ್ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧನೊಬ್ಬನನ್ನು ಕೊಂದು ದೇಹವನ್ನು ಛಿದ್ರಗೊಳಿಸಿ ತನ್ನ ಕ್ರೌರ್ಯವನ್ನು ಮೆರೆದಿತ್ತು. ಪಾಕ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವನ್ನು ಸರ್ವನಾಶ ಮಾಡಿ ಎಂದು ಯೋಧನ ಪತ್ನಿ ಪ್ರಧಾನಿಯವರನ್ನು ಆಗ್ರಹಿಸಿದ್ದರು. ಪಾಕ್ ಕ್ರೌರ್ಯಕ್ಕೆ ತಕ್ಕ ಉತ್ತರ ನೀಡುವುದಾಗಿ ಭಾರತೀಯ ಸೇನಾ ಅಧಿಕಾರಿಗಳೂ ಗುಡುಗಿದ್ದರು.
2018: ನವದೆಹಲಿ:
ಬಹುನಿರೀಕ್ಷಿತ ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ೨೦೧೯ರ ಜನವರಿಗೆ ಮುಂದೂಡಿದ್ದು, ಬೆನ್ನಲ್ಲೇ ವಿಶ್ವ ಹಿಂದೂ ಪರಿಷದ್ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸಂಸತ್ತಿನ ಚಳಿಗಾಲದ ಅಧಿವೇಶನಲ್ಲೇ ಶಾಸನ ರೂಪಿಸಬೇಕು ಎಂದು ಆಗ್ರಹಿಸಿತು. ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ತ್ವರಿತವಾಗಿ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಮಾಡಿದ ಮನವಿಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದಿತ ಭೂಮಿಯನ್ನು ಮೂರು ಭಾಗಗಳಾಗಿ ವಿಭಜಿಸುವಂತೆ ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳ ವಿಚಾರಣೆಯನ್ನು ೨೦೧೯ರ ಜನವರಿ ತಿಂಗಳಿಗೆ ಮುಂದೂಡಿತು. ಜನವರಿ ತಿಂಗಳಲ್ಲಿ ವಿಷಯವು ಸೂಕ್ತ ಪೀಠದ ಮುಂದೆ ವಿಚಾರಣೆಗೆ ಬರಲಿದ್ದು ವಿಚಾರಣೆಯ ದಿನಾಂಕವನ್ನು ಪೀಠವೇ ನಿರ್ಧರಿಸುವುದು ಎಂದು ಸುಪ್ರೀಂಕೋರ್ಟ್ ಹೇಳಿತು. ವಿಚಾರಣೆಗಾಗಿ ಪೀಠ ರಚನೆ ವಿಚಾರವಾಗಿ ಸುಪ್ರೀಂಕೋರ್ಟ್ ಈದಿನ ಯಾವುದೇ ನಿರ್ಧಾರವನ್ನೂ ಕೈಗೊಳ್ಳಲಿಲ್ಲ. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ದೀಪಾವಳಿ ರಜೆಯ ಬಳಿಕ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಸೂಕ್ತವಾದ ಪೀಠವು ವಿಚಾರಣೆಯ ದಿನಾಂಕವನ್ನು ಜನವರಿ ತಿಂಗಳಲ್ಲಿ ನಿರ್ಧರಿಸಲಿದೆ ಎಂದು ಹೇಳಿದರು. ’ಪೀಠವು ಯಾವ ದಿನ ವಿಷಯವನ್ನು ಆಲಿಸುವುದು ಎಂಬುದು ನಮಗೆ ಗೊತ್ತಿಲ್ಲ’ ಎಂದು ಗೊಗೋಯ್ ಹೇಳಿದರು. ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿದ ಅರ್ಜಿಗಳನ್ನು ನ್ಯಾಯಾಲಯ ಜನವರಿ ಮೊದಲ ವಾರದಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ಈಗ ನಿರೀಕ್ಷಿಸಲಾಗಿದೆ. ಸುಪ್ರೀಂಕೋರ್ಟಿನ ಈದಿನದ ನಿರ್ಧಾರವು ನ್ಯಾಯಾಲವು ಪ್ರಕರಣದ ವಿಚಾರಣೆಯನ್ನು ೨೦೧೯ರ ಮಹಾ ಚುನಾವಣೆಗೆ ಮುಂಚಿನ ದಿನಗಳಲ್ಲೇ ಕೈಗೆತ್ತಿಕೊಳ್ಳಬಹುದು ಎಂಬ ಸೂಚನೆ ನೀಡಿತು. ಅಲಹಾಬಾದ್ ಹೈಕೋರ್ಟ್ ತೀರ್ಪು: ವಿವಾದಿತ ಭೂಮಿಯನ್ನು ನಿರ್ಮೋಹಿ ಅಖಾಡ, ರಾಮಲಲ್ಲಾ ಮತ್ತು ಸುನ್ನಿ ಮುಸ್ಲಿಮ್ ವಕ್ಫ್ ಮಂಡಳಿಯ ಮಧ್ಯೆ ಮೂರು ಭಾಗವಾಗಿ ವಿಂಗಡಿಸಬೇಕು ಎಂದು ೨೦೧೦ರ ಸೆಪ್ಟೆಂಬರಿನಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ತತ್ ಕ್ಷಣವೇ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ೧೬ನೇ ಶತಮಾನದ ಬಾಬರಿ ಮಸೀದಿಯನ್ನು ತಮ್ಮ ಆರಾಧ್ಯ ದೈವ ಶ್ರೀರಾಮನ ಜನ್ಮಸ್ಥಳ ಎಂಬುದಾಗಿ ಭಾವಿಸಲಾಗಿರುವ ಜಾಗದಲ್ಲಿ ನಿರ್ಮಿಸಲಾಗಿತ್ತು ಎಂದು ಹಿಂದುಗಳು ನಂಬಿದ್ದಾರೆ. ಇಲ್ಲಿದ್ದ ಮಸೀದಿಯನ್ನು ೧೯೯೨ರಲ್ಲಿ ಸಹಸ್ರಾರು ಮಂದಿಯ ಗುಂಪು ಕೆಡವಿ ಹಾಕಿತ್ತು. ಈ ಘಟನೆಯು ದೇಶಾದ್ಯಂತ ಹಿಂಸಾಚಾರಗಳಿಗೆ ಕಾರಣವಾಗಿತ್ತು. ಸೆಪ್ಟೆಂಬರ್ ೨೭ರಂದು ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಮಸೀದಿಯು ಇಸ್ಲಾಮ್ ಧರ್ಮದ ಅವಿಭಾಜ್ಯ ಅಂಗವಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ್ದ ೧೯೯೪ರ ತೀರ್ಪನ್ನು ಪುನರ್ ಪರಿಶೀಲಿಸುವ ಸಲುವಾಗಿ ಸಂವಿಧಾನ ಪೀಠಕ್ಕೆ ಒಪ್ಪಿಸಲು ನಿರಾಕರಿಸಿತ್ತು. ಪೀಠವು ಅಕ್ಟೋಬರ್ ೨೯ರಂದು ಮುಖ್ಯ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ ಎಂದು ಸಿಜೆಐ ಅವರ ಜೊತೆಗೆ ತೀರ್ಪನ್ನು ನ್ಯಾಯಾಲಯದಲ್ಲಿ ಪ್ರಕಟಿಸಿದ್ದ ನ್ಯಾಯಮೂರ್ತಿ ಅಶೋಕ ಭೂಷಣ್ ಹೇಳಿದ್ದರು. ೨:೧ ರ ಬಹುಮತದ ತೀರ್ಪು ನೀಡಿದ್ದ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಪೀಠವು ಬಾಬರಿ ಮಸೀದಿ- ರಾಮಜನ್ಮಭೂಮಿ ಭೂ ವಿವಾದದ ಸಿವಿಲ್ ಖಟ್ಲೆಯನ್ನು ಸಾಕ್ಷ್ಯಾಧಾರಗಳನ್ನು ಆಧರಿಸಿ ತೀರ್ಮಾನಿಸಬೇಕು. ಹಿಂದಿನ ತೀರ್ಪು ಅದಕ್ಕೆ ಪ್ರಸ್ತುತವಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿತ್ತು. ಇದರೊಂದಿಗೆ ಅಯೋಧ್ಯಾ ಪ್ರಕರಣದ ವಿಚಾರಣೆಗೆ ಇದ್ದ ಪ್ರಮುಖ ಅಡಚಣೆ ನಿವಾರಣೆಗೊಂಡಿತ್ತು. ವಿಶ್ವ ಹಿಂದೂ ಪರಿಷದ್ ಆಗ್ರಹ: ಸುಪ್ರೀಂಕೋರ್ಟಿನ ಸೋಮವಾರದ ನಿರ್ಧಾರ ಹೊರಬಿದ್ದ ಕೆಲವೇ ನಿಮಿಷಗಳಲ್ಲಿ ವಿಶ್ವ ಹಿಂದೂ ಪರಿಷದ್ ’ದೇಗುಲ ನಿರ್ಮಿಸಲು ಅನುಕೂಲವಾಗುವಂತೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಕಾನೂನು’ ತರುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿತು. ’ಸುಪ್ರೀಂಕೋರ್ಟ್ ಮತ್ತೊಮ್ಮೆ ವಿಚಾರಣೆಯನ್ನು ಮುಂದೂಡಿದೆ. ಏಳು ವರ್ಷಗಳಿಂದ ಬಾಕಿ ಬಿದ್ದಿರುವ ಮೇಲ್ಮನವಿಗಳ ವಿಚಾರಣೆಗಾಗಿ ನಿರಂತರ ಕಾಯುತ್ತಾ ಕುಳಿತುಕೊಳ್ಳುವುದು ರಾಮ ಜನ್ಮಭೂಮಿ ವಿಷಯಕ್ಕೆ ಪರಿಹಾರವಲ್ಲ ಎಂಬ ವಿಶ್ವ ಹಿಂದೂ ಪರಿಷತ್ತಿನ ನಿಲುವನ್ನು ಸುಪ್ರೀಂಕೋರ್ಟಿನ ಸೋಮವಾರದ ತೀರ್ಮಾನ ಇನ್ನಷ್ಟು ಬಲಪಡಿಸಿದೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದರು. ಅಯೋಧ್ಯೆಯ ಜನ್ಮಸ್ಥಾನದಲ್ಲಿ ಶ್ರೀರಾಮನಿಗಾಗಿ ಭವ್ಯ ದೇಗುಲ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಲು ಕೇಂದ್ರವು ಕಾನೂನು ತರಬೇಕೆಂಬ ನಮ್ಮ ಮನವಿಯನ್ನು ನಾವು ಪುನುರುಚ್ಚರಿಸುತ್ತೇವೆ ಎಂದು ಅಲೋಕ್ ಕುಮಾರ್ ನುಡಿದರು. ’ಹಿಂದುಗಳ ತಾಳ್ಮೆ ತಪ್ಪುತ್ತಿದೆ. ಇದು ಪರಿಣಾಮಗಳನ್ನು ಬೀರುವ ಭೀತಿ ಇದೆ’ ಎಂಬುದಾಗಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಹೇಳಿದ ಕೆಲವೇ ತಾಸುಗಳಲ್ಲಿ ಅಲೋಕ್ ಕುಮಾರ್ ಅವರ ಹೇಳಿಕೆ ಹೊರಬಿದ್ದಿತು. ಕಾಂಗ್ರೆಸ್ ಪಕ್ಷವು ಹಿಂದು -ಮುಸ್ಲಿಮ್ ವಿಷಯವನ್ನು ವಿವಾದವನ್ನಾಗಿ ಮಾಡಲು ನಿರ್ಧರಿಸಿದೆ. ಶ್ರೀರಾಮ ಹಿಂದುಗಳ ನಂಬಿಕೆಯ ಅಡಿಗಲ್ಲು. ಹಿಂದುಗಳ ತಾಳ್ಮೆ ಮುಗಿದುಹೋಗುತ್ತಿದೆ. ಹಿಂದುಗಳು ಸಹನೆ ಕಳೆದುಕೊಂಡರೆ ಏನಾಗುವುದೋ ಎಂಬ ಭೀತಿ ನನಗೆ ಉಂಟಾಗಿದೆ’ ಎಂದು ಸಚಿವರು ಸುಪ್ರೀಂಕೋರ್ಟ್ ಕಲಾಪಕ್ಕೆ ಮುನ್ನ ಹೇಳಿದ್ದರು. ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ’ಬಾಬರ್ ಹೆಸರಿನ ಯಾವುದೇ ರಚನೆಗೆ ಅಯೋಧ್ಯೆಯಲ್ಲಿ ಅವಕಾಶ ನೀಡಲಾಗುವುದಿಲ್ಲ’ ಎಂದು ಹೇಳಿದ್ದರು. ’ಸರ್ವೋಚ್ಚ ನ್ಯಾಯಾಲಯವು ಲಕ್ಷಾಂತರ ಜನರ ನಂಬಿಕೆಯ ವಿಷಯಕ್ಕೆ ಪರಿಹಾರವನ್ನು ಒದಗಿಸುವುದು ಎಂದು ನಾವು ಹಾರೈಸಿದ್ದೇವೆ’ ಎಂದು ಮೌರ್ಯ ಹೇಳಿದ್ದರು. ಸೋಮವಾರ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಮೌರ್ಯ ಅವರು ’ಇದು ಸುಪ್ರೀಂಕೋರ್ಟ್ ತೀರ್ಮಾನವಾಗಿರುವುದರಿಂದ ನಾನು ಪ್ರತಿಕ್ರಿಯಿಸಬಯಸುವುದಿಲ್ಲ. ಏನಿದ್ದರೂ ಮುಂದೂಡಿಕೆಯು ಒಳ್ಳೆಯ ಸಂದೇಶವನ್ನು ನೀಡುವುದಿಲ್ಲ’ ಎಂದು ಹೇಳಿದರು. ಸುಪ್ರೀಂಕೋರ್ಟ್ ಶಬರಿಮಲೈ ಕುರಿತು ತೀರ್ಪು ಕೊಡಲು ಸಾಧ್ಯವಿದ್ದರೆ, ಅದು ರಾಮ ಮಂದಿರ ವಿಷಯದಲ್ಲೂ ತೀರ್ಪು ನೀಡಬೇಕು. ಹಾಗೆ ಮಾಡುವಂತೆ ನಾನು ನ್ಯಾಯಾಲಯಕ್ಕೆ ಮನವಿ ಮಾಡುತ್ತೇನೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನವದೆಹಲಿಯಲ್ಲಿ ಹೇಳಿಕೆ ನೀಡಿದ ಬೆನ್ನಲ್ಲೇ ಮೌರ್ಯ ಅವರು ಈ ಹೇಳಿಕೆ ನೀಡಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕೇಂದ್ರವು ಶಾಸನ ರಚಿಸಬೇಕು ಎಂದು ಅಕ್ಟೋಬರ್ ೧೮ರಂದು ಕರೆ ನೀಡಿದ್ದರು. ಕಾಂಗ್ರೆಸ್ ಪ್ರತಿಕ್ರಿಯೆ: ಈ ಮಧ್ಯೆ ಬಿಜೆಪಿ ನಿಲುವನ್ನು ’ಚುನಾವಣೆಗೆ ಮುಂಚೆ ಆಗುವಂತಹ ಗೊತ್ತಿರುವುದೇ ಕಥೆ ಇದು’ ಎಂದು ಹೇಳುವ ಮೂಲಕ ತಳ್ಳಿಹಾಕಿತು. ‘ಇದು ಎಲ್ಲರಿಗೂ ಗೊತ್ತಿರುವ ಕಥೆ. ಪ್ರತಿ ೫ ವರ್ಷಕ್ಕೊಮ್ಮೆ ಚುನಾವಣೆ ಬರುವ ಮುನ್ನ ಬಿಜೆಪಿಯು ರಾಮಮಂದಿರ ವಿಚಾರದಲ್ಲಿ ಅಭಿಪ್ರಾಯಗಳ ಧ್ರುವೀಕರಣಕ್ಕೆ ಯತ್ನಿಸುತ್ತದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ವಿಷಯ ಸುಪ್ರೀಂಕೋರ್ಟ್ ಮುಂದಿದೆ. ಪ್ರತಿಯೊಬ್ಬರೂ ಸುಪ್ರೀಂಕೋರ್ಟ್ ನಿರ್ಧರಿಸುವವರೆಗೆ ಕಾಯಬೇಕು. ನಾವು ಸಿಡಿಮದ್ದಿನ ಮೇಲಕ್ಕೆ ನೆಗೆಯಬಾರದು ಎಂದು ನಾನು ಭಾವಿಸುತ್ತೇನೆ’ ಎಂದು ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಮ್ ಹೇಳಿದರು.
2018: ಜಮ್ಮು:
ಪೂಂಚ್ ಮತ್ತು ಜ್ಹಲ್ಲಾಸ್ನಲ್ಲಿ ಇತ್ತೀಚೆಗೆ ಪಾಕಿಸ್ತಾನ ನಡೆಸಿದ್ದ ಶೆಲ್ ದಾಳಿಗೆ ಉತ್ತರವಾಗಿ ಗಡಿ ನಿಯಂತ್ರಣ ರೇಖೆಯಾಚೆಯ ಪಾಕಿಸ್ತಾನಿ ಸೇನಾ ಆಡಳಿತ ಕೇಂದ್ರ ಕಚೇರಿಯನ್ನು ಭಾರತೀಯ ಸೇನೆ ಪುಡಿಗಟ್ಟಿದೆ ಎಂದು ಭದ್ರತಾ ಅಧಿಕಾರಿಗಳು ಬಹಿರಂಗ ಪಡಿಸಿದರು. ಭಾರತೀಯ ಸೇನೆಯು ಪಾಕ್ ಆಕ್ರಮಿಕ ಕಾಶ್ಮೀರದ ಖುಯಿರಟ್ಟ ಮತ್ತು ಸಾಮನಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ತೀಕ್ಷ್ಣ ದಾಳಿ ನಡೆಸಿದ್ದು, ಪಾಕಿಸ್ತಾನದ ಸೇನಾ ಕೇಂದ್ರ ಕಚೇರಿ ಪುಡಿಪುಡಿಯಾಗಿದೆ ಎಂದು ಅಧಿಕಾರಿಗಳು ಹೇಳಿದರು. ಪಾಕ್ ಸೇನೆಯು ಅಕ್ಟೋಬರ್ ೨೩ರಂದು ಜಮ್ಮು ಮತ್ತು ಕಾಶ್ಮೀರದ ಪೂಂಚನಲ್ಲಿ ಬ್ರಿಗೇಡ್ ಕೇಂದ್ರ ಮತ್ತು ಇತರ ಸೇನಾ ನೆಲೆಗಳ ಮೇಲೆ ಶೆಲ್ ದಾಳಿ ನಡೆಸಿತ್ತು. ಇದಕ್ಕೆ ಸೇಡು ತೀರಿಸಿದ ಭಾರತೀಯ ಸೇನೆ ಅದೇ ದಿನ ಪಾಕ್ ಮೇಲೆ ದಾಳಿ ನಡೆಸಿತ್ತು ಎಂದು ಅಧಿಕಾರಿಗಳು ತಿಳಿಸಿದರು.
2018: ಶ್ರಿನಗರ: ಶ್ರೀನಗರ ನಗರದ ಹೊರವಲಯದ ಪಂತಾ ಚೌಕದಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಮೇಲೆ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಬಿಎಸ್ಎಫ್ ಸಿಬ್ಬಂದಿ ಗಾಯಗೊಂ, ಡು ಒಬ್ಬ ಯೋಧನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು. ಬಿಎಸ್ಎಫ್ ಯೋಧರು ತಮ್ಮ ವಾಹನದ ಮೂಲಕ ಸಂಜೆ ೬.೧೫ರ ವೇಳೆಗೆ ಪಂತಾಚೌಕದಲ್ಲಿ ಪಹರೆ ನಡೆಸುತ್ತಿದ್ದಾಗ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದರು. ದಾಳಿಯಲ್ಲಿ ಐವರು ಯೋಧರು ಗಾಯಗೊಂಡರು ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ಹೇಳಿದರು. ಗಾಯಾಳು ಯೋಧರು ೧೬೩ನೇ ಬೆಟಾಲಿಯನ್ಗೆ ಸೇರಿದವರು. ಅವರ ಪೈಕಿ ಒಬ್ಬ ಯೋಧನ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರಿದಿದ್ದು, ಹಂತಕರಿಗಾಗಿ ಶೋಧ ನಡೆಸುತ್ತಿವೆ ಎಂದು ಅಧಿಕಾರಿ ನುಡಿದರು.
2018: ಟೋಕಿಯೋ/ ನವದೆಹಲಿ: ದ್ವಿಪಕ್ಷೀಯ ಕರೆನ್ಸಿ ವಿನಿಮಯ, , ಬುಲೆಟ್ ರೈಲು, ನೌಕಾ, ಬಾಹ್ಯಾಕಾಶ, ಆಯುರ್ವೇದ, ಯೋಗ, ಯುನಾನಿ, ಹೋಮಿಯೋಪಥಿ (ಆಯುಷ್) ಇತ್ಯಾದಿ ಪರಂಪರಾಗತ ಭಾರತೀಯ ವೈದ್ಯಪದ್ಧತಿಗಳ ಅಭಿವೃದ್ಧಿ, ಬಳಕೆಯಲ್ಲಿ ಪರಸ್ಪರ ಸಹಕರಿಸುವ ಪ್ರಮುಖ ಒಪ್ಪಂದಗಳಿಗೆ ಭಾರತ ಮತ್ತು ಜಪಾನ್ ಈದಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಝೋ ಅಬೆ ಶೃಂಗ ಸಭೆ ಕಾಲದಲ್ಲಿ ಸಹಿ ಹಾಕಿವೆ. ಉಭಯ ಪ್ರಧಾನ ಮಂತ್ರಿಗಳೂ ಅಬೆ ಅವರ ಯಮನಾಶಿಯ ರಜಾಕಾಲೀನ ನಿವಾಸದಲ್ಲಿ ಭಾನುವಾರ ಎಂಟು ಗಂಟೆಗಳನ್ನು ಕಳೆದ ಬಳಿಕ ಭಾನುವಾರ ಈದಿನ ಸಂಜೆ ಟೋಕಿಯೋ ರೈಲು ಏರಿದ್ದರು. ಸೋಮವಾರ ಬೆಳಗ್ಗೆ ಮೋದಿಯವರು ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಬಳಿಕ ಉಭಯ ಪ್ರಧಾನ ಮಂತ್ರಿಗಳು ೧೩ನೇ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಂಡರು. ಭಾರತ ಮತ್ತು ಜಪಾನ್ ಶೃಂಗಸಭೆ ಕಾಲದಲ್ಲಿ ೭೫ ಬಿಲಿಯನ್ (೭೫೦೦ ಕೋಟಿ) ಡಾಲರ್ ಮೊತ್ತದ ಕರೆನ್ಸಿ ವಿನಿಮಯ ಒಪ್ಪಂದ ಹಾಗೂ ಪರಂಪರಾಗತ ಭಾರತೀಯ ವೈದ್ಯ ಪದ್ಧತಿಗಳ ಅಭಿವೃದ್ಧಿಗೆ ಸಹಕರಿಸುವ ಮಹತ್ವದ ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ ಎಂದು ಉಭಯ ಪ್ರಧಾನಿಗಳು ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿದರು. ೭೫೦೦ ಕೋಟಿ ಡಾಲರ್ ದ್ವಿಪಕ್ಷೀಯ ಕರೆನ್ಸಿ ವಿನಿಮಯ ಒಪ್ಪಂದವು ವಿದೇಶೀ ವಿನಿಮಯ ಮತ್ತು ಭಾರತದಲ್ಲಿನ ಬಂಡವಾಳ ಮಾರುಕಟ್ಟೆಗಳಿಗೆ ಸ್ಥಿರತೆ ತರಲು ನೆರವಾಗಲಿವೆ ಎಂದು ಹೇಳಿಕೆ ತಿಳಿಸಿತು. ಪ್ರಗತಿ ಎಂಬುದು ಹೊಸತು ಮತ್ತು ಹಳೆಯದರ ನಡುವಣ ಘರ್ಷಣೆಯಲ್ಲ, ಬದಲಿಗೆ ಅವುಗಳ ಮಿಲನ ಎಂಬುದನ್ನು ಜಪಾನ್ ಕಲಿಸಿದೆ. ನಾವು ೨+೨ ಮಾತುಕತೆಗಳಿಗೆ ಒಪ್ಪಿದ್ದೇವೆ. ಭಾರತ ಮತ್ತು ಜಪಾನ್ ಬಾಂಧವ್ಯ ಹಿಂದೂ ಮಹಾಸಾಗರ ಮತ್ತು ಶಾಂತ ಸಾಗರದ (ಫೆಸಿಫಿಕ್) ರೀತಿಯಲ್ಲಿ ಆಳವಾದದ್ದು ಎಂದು ಹೇಳಿಕೆ ತಿಳಿಸಿತು. ಇದೇ ಮೊತ್ತ ಮೊದಲ ಬಾರಿಗೆ ಭಾರತ ಮತ್ತು ಜಪಾನ್ ಭಾರತದ ಯೋಗ, ಆಯುರ್ವೇದದಂತಹ ಪರಂಪರಾಗತ ವೈದ್ಯಕೀಯ ವಿಧಾನಗಳನ್ನು ಉಭಯ ರಾಷ್ಟ್ರಗಳಲ್ಲೂ ಜನರ ಆರೋಗ್ಯ ರಕ್ಷಣೆಗಾಗಿ ಅಭಿವೃದ್ಧಿ ಪಡಿಸಲು ಮತ್ತು ಬಳಸುವಲ್ಲಿ ಪರಸ್ಪರ ಸಹಕರಿಸಲು ನಿರ್ಧರಿಸಲಾಗಿದೆ ಎಂದು ಹೇಳಿಕೆ ತಿಳಿಸಿತು. ಭಾರತದ ಆಯುಷ್ (ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ) ಸಚಿವಾಲಯ ಮತ್ತು ಕನಗವಾ ಪ್ರಿಫೆಕ್ಚುರಲ್ ಸರ್ಕಾರವು ಪ್ರಧಾನಿ ಮೋದಿ ಅವರು ಜಪಾನ್ ಭೇಟಿ ಕಾಲದಲ್ಲಿ ಪರಸ್ಪರ ಸಹಕಾರದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದವು. ಕಂಟೇಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಝೋ ಅಬೆ ಅವರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು ಎಂದು ವಿದೇಶಾಂವ ವ್ಯವಹಾರಗಳ ಸಚಿವಾಲಯದ ವಕ್ತರ ರವೀಶ್ ಕುಮಾರ್ ಟ್ವೀಟ್ ಮಾಡಿದರು. ಸಾಂಪ್ರದಾಯಿಕ ಆಯುರ್ವೇದ ವೈದ್ಯಕೀಯದ ಜೊತೆಗೆ ಜಪಾನ್ ತಂತ್ರಜ್ಞಾನ ಕ್ಷೇತ್ರದಲ್ಲೂ ಉಭಯ ರಾಷ್ಟ್ರಗಳು ಸಹಕಾರ ವಿಸ್ತರಿಸಲಿವೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಜಪಾನಿನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ವೃದ್ಧಿಯಲ್ಲಿ ಜಪಾನಿನಲ್ಲಿರುವ ಭಾರತೀಯರು ನೀಡುತ್ತಿರುವ ಕೊಡುಗೆಯನ್ನು ಶ್ಲಾಘಿಸಿದರು. ‘ಕೆಲವು ವರ್ಷಗಳ ಹಿಂದೆ ನಾನು ಭಾರತದಲ್ಲಿ ಮಿನಿ ಜಪಾನ್ ಮಾಡುವ ಬಗ್ಗೆ ಮಾತನಾಡಿದ್ದೆ. ನೀವು ಭಾರತದಲ್ಲಿ ಇನ್ನೋ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ್ದೀರಿ ಎಂಬುದನ್ನು ಈದಿನ ತಿಳಿಸುವುದು ನನಗೆ ಅತ್ಯಂತ ಹರ್ಷದ ವಿಚಾರ. ೨೦೧೪ರಲ್ಲಿ ನಾನು ಸರ್ಕಾರದ ಜವಾಬ್ದಾರಿಯನ್ನು ಹೊತ್ತುಕೊಂಡಾಗ ವಿಶ್ವ ಬ್ಯಾಂಕಿನ ಶ್ರೇಯಾಂಕದಲ್ಲಿ ಭಾರತವು ವಹಿವಾಟಿಗೆ ಸಂಬಂಧಿಸಿದಂತೆ ೧೪೦ನೇ ಸ್ಥಾನದಲ್ಲಿ ಇತ್ತು. ಈಗ ಭಾರತವು ೧೦೦ನೇ ಸ್ಥಾನಕ್ಕೆ ಏರಿದೆ. ಇನ್ನೂ ಮೇಲ್ದರ್ಜೆಗೆ ಏರುವ ನಿಟ್ಟಿನಲ್ಲಿ ನಾವು ಶ್ರಮಿಸುತ್ತಿದ್ದೇವೆ’ ಎಂದು ನುಡಿದ ಮೋದಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭಾರತದ ವಿವಿಧ ಕ್ಷೇತ್ರಗಳಲ್ಲಿ ಆಗಿರುವ ಸಾಧನೆಗಳನ್ನು ವಿವರಿಸಿದರು. ಪಾಕಿಸ್ತಾನಕ್ಕೆ ಆಗ್ರಹ: ಮುಂಬೈ ಮತ್ತು ಪಠಾಣ್ ಕೋಟ್ ಭಯೋತ್ಪಾದಕ ದಾಳಿಗಳ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಂಝೋ ಅಬೆ ಅವರು ಪಾಕಿಸ್ತಾನವನ್ನು ಆಗ್ರಹಿಸಿದರು. ೨೦೦೮ರ ನವೆಂಬರ್ನಲ್ಲಿ ಮುಂಬೈಯಲ್ಲಿ ,ತ್ತಿ ೨೦೧೬ರ ಜನವರಿಯಲ್ಲಿ ಪಠಾಣ್ ಕೋಟ್ ನಲ್ಲಿ ನಡೆದ ಭಯೋತ್ಪಾದಕ ದಾಳಿ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಾಗಿ ಉಭಯ ನಾಯಕರೂ ತಮ್ಮೆ ಎರಡು ದಿನಗಳ ಶೃಂಗಸಭೆಯ ಬಳಿಕ ನೀಡಲಾದ ಭಾರತ -ಜಪಾನ್ ವಿಷನ್ ಹೇಳಿಕೆಯಲ್ಲಿ ಪಾಕಿಸ್ತಾನವನ್ನು ಒತ್ತಾಯಿಸಿದರು. ಲಷ್ಕರ್ -ಇ-ತೊಯ್ಬಾ ಭಯೋತ್ಪಾದಕರು ೨೦೦೮ರ ನವೆಂಬರಿನಲ್ಲಿ ಕರಾಚಿಯಿಂದ ದೋಣಿಯಲ್ಲಿ ಬಂದು ಮುಂಬೈಯಲ್ಲಿ ವ್ಯವಸ್ಥಿತ ದಾಳಿ ನಡೆಸಿ ೧೬೬ ಮಂದಿಯನ್ನು ಕೊಂದು, ೩೦೦ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ್ದರು.
2018: ಕೊಲಂಬೋ:
ಗುಂಡು ಹಾರಿಸಿ ಒಬ್ಬ ವ್ಯಕ್ತಿಯನ್ನು ಕೊಲೆಗೈಯಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಪೊಲೀಸರು ಪದಚ್ಯುತ ತೈಲ ಸಚಿವ ಅರ್ಜುನ ರಣತುಂಗ ಅವರನ್ನು ಬಂಧಿಸಿದ್ದಾರೆ. ‘ಕೊಲಂಬೋ ಅಪರಾಧ ವಿಭಾಗವು ಗುಂಡು ಹಾರಾಟದ ಘಟನೆಯ ಸಂಬಂಧದಲ್ಲಿ ರಣತುಂಗ ಅವರನ್ನು ಬಂಧಿಸಿದ್ದು, ಶೀಘ್ರದಲ್ಲೇ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುವುದು ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಕರ ಸುದ್ದಿ ಸಂಸ್ಥೆಗೆ ತಿಳಿಸಿದರು. ನೂತನ ಪ್ರಧಾನಿಯ ನೇಮಕದೊಂದಿಗೆ ಸಚಿವ ಸಂಪುಟವನ್ನು ವಿಸರ್ಜಿಸಲಾಗಿದೆ ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಈ ಮುನ್ನ ಪ್ರಕಟಿಸಿದ್ದರು. ಅಂದಿನಿಂದ ನೂತನ ಪ್ರಧಾನಿ ಮಹಿಂದ ರಾಜಪಕ್ಸೆ ಅವರಿಗೆ ನಿಷ್ಠವಾದ ಕಾರ್ಮಿಕ ಸಂಘಗಳ ಸದಸ್ಯರು ಹಳೆಯ ಸಂಪುಟದ ಸಚಿವರನ್ನು ತಮ್ಮ ತಮ್ಮ ಸಚಿವಾಲಯಗಳನ್ನು ಪ್ರವೇಶಿಸಿದಂತೆ ತಡೆದಿದ್ದರು. ಈದಿನದ ಘರ್ಷಣೆಗಿಂತ ಮುನ್ನ, ರಣತುಂಗ ಅವರು ತಮ್ಮ ಕಚೇರಿ ಪ್ರವೇಶಿಸಲು ಯತ್ನಿಸಿದಾಗ ಅವರ ಭದ್ರತಾ ಅಂಗರಕ್ಷಕ ಗುಂಡು ಹಾರಿಸಿ ಒಬ್ಬ ವ್ಯಕ್ತಿಯನ್ನು ಕೊಂದು ಇನ್ನಿಬ್ಬರನ್ನು ಗಾಯಗೊಳಿಸಿದ್ದ.
2018: ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯ ರಸ್ತೆಗಳಲ್ಲಿ ೧೫ ವರ್ಷ ಹಳೆಯ ಪೆಟ್ರೋಲ್ ಮತ್ತು ೧೦ ವರ್ಷ ಹಳೆಯ ಡೀಸೆಲ್ ವಾಹನಗಳ ಬಳಕೆಯನ್ನು ಈದಿನ ನಿಷೇಧಿಸಿದ ಸುಪ್ರೀಂಕೋರ್ಟ್ ಇಂತಹ ವಾಹನಗಳು ರಾಜಧಾನಿ ರಸ್ತೆಗಳಲ್ಲಿ ಓಡಾಡಿದರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆಜ್ಞಾಪಿಸಿತು. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಪ್ರಸ್ತುತ ವಾಯುಮಾಲಿನ್ಯದ ಪರಿಸ್ಥಿತಿ ಅತ್ಯಂತ ಗಂಭೀರ ಎಂದು ಬಣ್ಣಿಸಿದ ಸುಪ್ರೀಂಕೋರ್ಟ್ ೧೫ ವರ್ಷ ಹಳೆಯ ಪೆಟ್ರೋಲ್ ಮತ್ತು ೧೦ ವರ್ಷ ಹಳೆಯ ಡೀಸೆಲ್ ವಾಹನಗಳ ಪಟ್ಟಿಯನ್ನು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಸಾರಿಗೆ ಇಲಾಖೆಯ ವೆಬ್ ಸೈಟ್ ಗಳಲ್ಲಿ ಪ್ರಕಟಿಸುವಂತೆ ಆದೇಶ ನೀಡಿತು. ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್, ಎಸ್. ಅಬ್ದುಲ್ ನಜೀರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠವು ಈ ವಿಚಾರದ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತನ್ನೂ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಿತು. ಮಾಲಿನ್ಯ ಕುರಿತು ನಾಗರಿಕರಿಗೆ ನೇರವಾಗಿ ದೂರು ದಾಖಲಿಸಲು ಸಾಧ್ಯವಾಗುವಂತೆ ತತ್ ಕ್ಷಣ ಸಾಮಾಜಿಕ ಜಾಲತಾಣ ಖಾತೆಗಳನ್ನು ತೆರೆಯುವಂತೆಯೂ ಸಿಪಿಸಿಬಿಗೆ ನಿರ್ದೇಶನ ನೀಡಿದ ಪೀಠವು, ಇಂತಹ ದೂರುಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಆದೇಶಿಸಿತು. ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ನ್ಯಾಯಾಲಯಕ್ಕೆ ನೆರವಾದ ವಕೀಲೆ ಅಪರಾಜಿತಾ ಸಿಂಗ್ ಅವರು ವಾಯು ಮಾಲಿನ್ಯ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ ಟಿಪ್ಪಣಿಯ ಮೇಲೆ ಸುಪ್ರೀಂಕೋಟ್ ಪೀಠ ಈ ಆದೇಶ ನೀಡಿತು. ರಾಜಧಾನಿಯ ವಾಯುಮಾಲಿನ್ಯ ನಿವಾರಣೆಗೆ ತುರ್ತು ನಿರ್ದೇಶನ ನೀಡುವಂತೆ ಸಿಂಗ್ ಕೋರಿದ್ದರು. ಇದಕ್ಕೆ ಮುನ್ನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ಕೂಡಾ ದೆಹಲಿ- ಎನ್ ಸಿಆರ್ ಪ್ರದೇಶದಲ್ಲಿ ೧೫ ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ನಿಷೇಧಿಸಿತ್ತು. ಎನ್ ಜಿಟಿಯ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಯನ್ನು ಕೂಡಾ ಸುಪ್ರೀಂಕೋರ್ಟ್ ವಜಾ ಮಾಡಿತು.
2018: ಢಾಕಾ:
ಭ್ರಷ್ಟಾಚಾರ ಪ್ರಕರಣದಲ್ಲಿ ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿತು. ಅವರಿ ಗೆ ೭ ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ ಆದೇಶ ನೀಡಲಾಯಿತು. ಈದಿನ ಖಲೀದಾ ಜಿಯಾ ಮೇಲಿದ್ದ ಭ್ರ?ಚಾರ ಪ್ರಕರಣದ ತೀರ್ಪು ಪ್ರಕಟವಾಗಿದ್ದು ೭ ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಲಾಯಿತು. ಜಿಯಾ ಅನಾಥಾಶ್ರಮ ಟ್ರಸ್ಟ್’ ಹೆಸರಿನಲ್ಲಿ ದೇಣಿಗೆ ಪಡೆಯಲಾಗಿದ್ದ ೧೬.೨೧ ಕೋಟಿ ಮೊತ್ತ ವನ್ನು ಖಲೀದಾ ಜಿಯಾ ಮತ್ತು ಇತರರು ದುರ್ಬಳಕೆ ಮಾಡಿಕೊಂಡಿದ್ದರು ಎಂದು ಆರೋಪಿಸಲಾಗಿತ್ತು.೭೩ ವ?ದ ಖಲೀದಾ ಜಿಯಾ ಅವರು ಹಣ ದುರು ಪಯೋಗದ ಮತ್ತೊಂದು ಪ್ರಕರಣದಲ್ಲಿ ೫ ವ?ದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು.
ನಾಲ್ವರು ಅಪರಾಧಿಗಳಿಗೆ ಜೈಲು ಶಿಕ್ಷೆ ಜತೆ ೧ ಮಿಲಿಯನ್ ದಂಡವನ್ನು ವಿಧಿಸಲಾಗಿದ್ದು, ಇದನ್ನು ಪಾವತಿಸದೇ ಹೋದರೆ ೬ ತಿಂಗಳು ಹೆಚ್ಚಿಗೆ ಜೈಲು ವಾಸ ಅನುಭವಿಸಬೇಕಾಗುತ್ತದೆ.
2018: ಜಕಾರ್ತಾ:
ಇಂಡೋನೇಷ್ಯದ ಜಕಾ ರ್ತಾದಿಂದ ಪಂಗ್ಕಾಲ್ ಪಿನಾಂಗ್ ಗೆ ತೆರಳುತ್ತಿದ್ದ ಲಯನ್ ಏರ್ ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರಕ್ಕೆ ಪತನಗೊಂಡ ಘಟನೆ ಬೆಳಿಗ್ಗೆ ೭.೩೦ರ ಸಮಯ ದಲ್ಲಿ ಸಂಭವಿಸಿತು. ಸುಮಾರು ೨೧೦ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಈ ವಿಮಾನ ಹೊಂದಿತ್ತು. ದುರಂತದ ವೇಳೆ ವಿಮಾನದಲ್ಲಿ ೧೮೯ ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗು ತ್ತಿದೆ. ದುರಂತದಲ್ಲಿ ಬದುಕುಳಿದಿರಬ ಹುದಾದ ಪ್ರಯಾಣಿಕರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯ ಸಮರೋಪಾ ದಿಯಲ್ಲಿ ನಡೆಯಿತು. ಜಕಾರ್ತದಿಂದ ವಿಮಾನ ಟೇಕ್ಆಫ್ ಆದ ೧೩ ನಿಮಿಷಗಳಲ್ಲೇ ಸಂಪರ್ಕ ಕಳೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದರು. ಬೋಯಿಂಗ್ ೭೩೭ ಮಾಕ್ಸ್ ೮ ಸರಣಿಯ ವಿಮಾನ ಇದಾಗಿದ್ದು ಸ್ಥಳೀಯ ಕಾಲಮಾನ ಬೆಳಿಗ್ಗೆ ೬.೩೦ ನಿಮಿಷಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಸಂಪ ರ್ಕ ಕಳೆದುಕೊಂಡ ಜಾಗದಲ್ಲೇ ವಿಮಾನ ದ ಅವಶೇಷಗಳೂ ಪತ್ತೆಯಾಗಿವೆ. ಸುಮಾತ್ರಾದ ಪಂಗ್ಕಲ್ ಪಿನಂಗ್ ನಿಲ್ದಾ ಣಕ್ಕೆ ತೆರಳುತ್ತಿದ್ದ ವಿಮಾನ ಪತನದ ವೇಳೆ ೩,೦೦೦ ಮೀಟರ್ ಎತ್ತರದಲ್ಲಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮುದ್ರದ ಬಳಿಯಿರುವ ತೈಲ ಸಂಸ್ಕರಣಾ ಘಟಕದ ಅಸುಪಾಸಿನಲ್ಲಿ ವಿಮಾನದ ಆಸನಗಳ ಸಹಿತ ವಿವಿಧ ಬಗೆಯ ಅವಶೇಷಗಳು ತೇಲುತ್ತಿರುವುದು ಕಂಡು ಬಂದಿದೆ ಎಂದು ವರದಿಗಳು ತಿಳಿಸಿವೆ. ಜಕಾರ್ತದಿಂದ ಬೆಳಗ್ಗೆ ಸುಮಾರು ೬.೩೩ರ ಸುಮಾರಿಗೆ ವಿಮಾನ ಏರ್ ಟ್ರಾಫಿಕ್ ಕಂಟ್ರೋಲರ್‌ನ ಸಂಪರ್ಕ ಕಳೆದುಕೊಂಡಿತ್ತು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದರು. ವಿಮಾನದಲ್ಲಿದ್ದ ಪ್ರಯಾಣಿಕರ ಕುರಿತು ಯಾವುದೇ ಮಾಹಿತಿ ಲಭ್ಯವಾ ಗಿಲ್ಲ. ಸಮುದ್ರದಲ್ಲಿ ವಿಮಾನದ ಬಿಡಿಭಾಗ ಗಳು ತೇಲುತ್ತಿದ್ದು ಹಲವು ಜನರು ಮೃತ ಪಟ್ಟಿರುವಶಂಕೆ ವ್ಯಕ್ತವಾಗಿದೆ. ವಿಮಾನದಲ್ಲಿ ಇದ್ದವರು ಏನಾದರೂ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇದರಲ್ಲಿದ್ದ ಪ್ರಯಾಣಿ ಕರು ಉಳಿದುಕೊಂಡಿರುವ ಸಾಧ್ಯತೆ ಕ್ಷೀಣ ವಾಗಿದೆ ಎಂದು ಹುಡುಕಾಟ ಮತ್ತು ರಕ್ಷಣಾ ವಿಭಾಗದ ಮುಖ್ಯಸ್ಥ ಮುಹಮ್ಮದ್ ಸ್ಯಗಿ ಹೇಳಿದರು. ‘ನಮಗೆ ಪ್ರಯಾಣಿಕರು ಉಳಿದುಕೊಂಡಿರುವುದರ ಬಗ್ಗೆ ನಂಬಿಕೆ ಇದೆ. ನಾವು ಪ್ರಾರ್ಥಿಸುತ್ತೇವೆ. ಆದರೆ ಖಚಿತಪಡಿಸಲು ಸಾಧ್ಯವಿಲ್ಲ,’ ಎಂದವರು ತಿಳಿಸಿದರು. ೨೦೧೪ರಲ್ಲಿ ಏರ್ ಏಷ್ಯಾ ವಿಮಾನ ಇದೇ ರೀತಿ ಸಮುದ್ರದಲ್ಲಿ ಪತನ ಗೊಂಡು ೧೬೨ ಜನರು ಸಾವನ್ನಪ್ಪಿದ್ದರು. ಇದೀಗ ನಡೆದಿರುವ ದುರಂತ ಹಳೆಯ ಘಟನೆಯನ್ನೂ ಮೀರಿಸಿತು. ವಿಮಾನ ದಲ್ಲಿ ಒಟ್ಟು ಮೂವರು ಮಕ್ಕಳು ಸೇರಿ ೧೮೧ ಜನರು ಪ್ರಯಾಣಿಸುತ್ತಿದ್ದರು. ಪೈಲೆಟ್ ಭಾರತೀಯ ಮೂಲದವ. ಪತನಗೊಂಡ ಇಂಡೋನೇಷ್ಯ ವಿಮಾನದ ಪೈಲಟ್ ಭಾರತೀಯ ಮೂಲದ ಭಾವೈ ಸುನೆಜಾ ಎಂದು ಗುರುತಿಸಲಾಯಿತು. ದೆಹಲಿ ಮೂಲದ ಭಾವೈ ಸುನೇಜಾ ಅವರು ದೆಹಲಿಯ ಮಯೂರ್ ವಿಹಾರ್ ನಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ್ದರು. ಲಯನ್ ಏರ್ ಫ್ಲೈಟ್ ವಿಮಾನದ ಕ್ಯಾಪ್ಟನ್ ಆಗಿದ್ದರು.ಈ ಹಿಂದೆ ಟ್ರೈನಿ ಪೈಲೆಟ್ ಆಗಿ ಎಮಿರೇಟ್ಸ್ ಸಂಸ್ಥೆಗೆ ಸೇರಿದ್ದರು. ೨೦೦೯ರಲ್ಲಿ ಬೆಲ್ ಏರ್ ಇಂಟರ್ ನ್ಯಾ?ನಲ್ ಸಂಸ್ಥೆಯಿಂದ ಪೈಲೆಟ್ ಆಗಿ ಲೈಸೆನ್ಸ್ ಪಡೆದಿದ್ದರು. ಇಂಡೋನೇಷ್ಯದ ಲಯನ್ ಏರ್ ಫ್ಲೈಟ್ ಸಂಸ್ಥೆಗೆ ೨೦೧೧ರಲ್ಲಿ ಪೈಲೆಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.
16: ಜಮ್ಮು: ಭಾರತೀಯ ಯೋಧನೊಬ್ಬನನ್ನು ಕೊಂದು ದೇಹವನ್ನು ಛಿದ್ರಗೊಳಿಸಿದ್ದಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಂಡಿರುವ ಭಾರತೀಯ ಸೇನೆ ಪ್ರತಿದಾಳಿ ನಡೆಸಿ ಕನಿಷ್ಠ 4 ಪಾಕಿಸ್ತಾನಿ ಸೇನಾ ನೆಲೆಗಳನ್ನು ಧ್ವಂಸಗೊಳಿಸಿ, ಕನಿಷ್ಠ 20 ಮಂದಿ ಪಾಕ್ ಸೈನಿಕರನ್ನು ಕೊಂದು ಹಾಕಿತು. ಈ ದಾಳಿಯಿಂದ ಪಾಕ್ ಪಡೆಯಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ಮೂಲಗಳು ಹೇಳಿದವು. ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಆರ್ಪುರ ವಿಭಾಗದಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ ಸ್ವಲ್ಪ ಹೊತ್ತಿನ ಬಳಿಕ ಕೇರನ್ ವಿಭಾಗದಲ್ಲಿ ಪ್ರತಿದಾಳಿ ನಡೆಸಿ ಸೇಡು ತೀರಿಸಿಕೊಳ್ಳಲಾಯಿತು ಎಂದು ಭಾರತೀಯ ಸೇನೆ ತಿಳಿಸಿದೆ. ಪಾಕ್ ಕಡೆಯಲ್ಲಿ ಕನಿಷ್ಠ 20 ಮಂದಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಉನ್ನತ ಸೇನಾ ಮೂಲಗಳು ಹೇಳಿದವು. ಆರ್ಎಸ್ ಪುರ ವಿಭಾಗದ ಕಥುವಾದಲ್ಲಿ ಪಾಕಿಸ್ತಾನಿ ರೇಂಜರ್ಗಳು ಪದೇ ಪದೇ ಕದನ ವಿರಾಮ ಉಲ್ಲಂಘಿಸಿದಾಗ ಭಾರತೀಯ ಸೇನೆ ಕೇರನ್ ವಿಭಾಗದಲ್ಲಿ ಪಾಕ್ ಪಡೆಗಳ ಮೇಲೆ ಉಗ್ರ ಗುಂಡಿನ ದಾಳಿ ನಡೆಸಿತು . ಮಚಿಲ್ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧನೊಬ್ಬನನ್ನು ಕೊಂದು ದೇಹವನ್ನು ಛಿದ್ರಗೊಳಿಸಿ ತನ್ನ ಕ್ರೌರ್ಯವನ್ನು ಮೆರೆದಿತ್ತು. ಪಾಕ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನವನ್ನು ಸರ್ವನಾಶ ಮಾಡಿ ಎಂದು ಯೋಧನ ಪತ್ನಿ ಪ್ರಧಾನಿಯವರನ್ನು ಆಗ್ರಹಿಸಿದ್ದರು. ಪಾಕ್ ಕ್ರೌರ್ಯಕ್ಕೆ ತಕ್ಕ ಉತ್ತರ ನೀಡುವುದಾಗಿ ಭಾರತೀಯ ಸೇನಾ ಅಧಿಕಾರಿಗಳೂ ಗುಡುಗಿದ್ದರು.
2016: ದುಬೈ: ವಿಶ್ವದ ಪ್ರತಿಷ್ಠಿತ ವಿಮಾನ ನಿಲ್ದಾಣಗಳಲ್ಲಿ ಒಂದಾದ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ ಅಪರಿಚಿತ ಡ್ರೋನ್ ಹಾರಾಟ ನಡೆಸಿದ್ದರ ಪರಿಣಾಮ ಸುಮಾರು ಒಂದುವರೆ ಗಂಟೆ ಹೈಅಲರ್ಟ್ ಪ್ರಕಟಿಸಿ ವಿಮಾನಗಳ ಹಾರಾಟಗಳನ್ನು ಸ್ಥಗಿತಗೊಳಿಸಿದ ಘಟನೆ ಘಟಿಸಿತು. ಕಳೆದ ಐದು ತಿಂಗಳಾವಧಿಯಲ್ಲಿ ಈ ರೀತಿ ನಡೆಯುತ್ತಿರುವ ಘಟನೆ ಇದು ಮೂರನೇ ಬಾರಿ. ಸಂಜೆ 7.25ರಿಂದ 8.49ರ ತನಕ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಇನ್ನಷ್ಟು ವಿಮಾನಗಳ ದಿಕ್ಕು ಬದಲಾಯಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಕೇಸು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು.
2016: ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವ ರಾವ್ ಟ್ರಸ್ಟ್‌ನ ಪ್ರಾಯೋಜಕತ್ವದ 2016ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ಪ್ರೊ. ಟಿ.ಯಲ್ಲಪ್ಪ ಆಯ್ಕೆಯಾದರು.
ಯಲ್ಲಪ್ಪ ಅವರ ‘ಕಣ್ಣ ಪಾಪೆಯ ಬೆಳಕು’ ಎಂಬ ಕವನ ಸಂಕಲನ ಹಸ್ತಪ್ರತಿಯು ಪ್ರಶಸ್ತಿಗೆ ಆಯ್ಕೆಯಾಗಿದೆ ಎಂದು ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಅವರು ತಿಳಿಸಿದರು. ಪ್ರಶಸ್ತಿ ₹ 10 ಸಾವಿರ ಗೌರವ ಸಂಭಾವನೆ ಮತ್ತು ಸನ್ಮಾನವನ್ನು ಒಳಗೊಂಡಿದೆ. 2017ರ ಫೆಬ್ರುವರಿ 12ರಂದು ಕಾಂತಾವರದ 'ಕನ್ನಡ ಭವನ'ದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
2016: ಹರಿಯಾಣ: ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯಲ್ಲಿ ಈಗಾಗಲೇ ನಮ್ಮ 7ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಆ
ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹುತಾತ್ಮ ಯೋಧ ಮನ್ ದೀಪ್ ಸಿಂಗ್ ಪತ್ನಿ ಮನವಿ ಮಾಡಿ, ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಎಸ್ ಎಫ್ ಯೋಧ ಮನ್ ದೀಪ್ ಸಿಂಗ್ ಅವರನ್ನು ಪಾಕ್ ಸೈನಿಕರು ಹಿಂದಿನ ದಿನ ಹತ್ಯೆಗೈದಿದ್ದರು. ಈದಿನ ಹುತಾತ್ಮ ಮನ್ ದೀಪ್ ಸಿಂಗ್ (27ವರ್ಷ) ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಹರಿಯಾಣದ ಕುರುಕ್ಷೇತ್ರಕ್ಕೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಪತ್ನಿ ಎಎನ್ಐ ಜೊತೆ ಮಾತನಾಡುತ್ತ ಈ
ರೀತಿ ಆಕ್ರೋಶದ ನುಡಿಗಳನ್ನು ವ್ಯಕ್ತಪಡಿಸಿದರು. “ಸರ್ಕಾರಕ್ಕೆ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ.. ಪಾಕಿಸ್ತಾನಕ್ಕೆ ಬುದ್ಧಿ ಹೇಳಿ, ಒಂದು ವೇಳೆ ಅದು ಮಾತು ಕೇಳದಿದ್ದರೆ ಪಾಕಿಸ್ತಾನವನ್ನು ಸರ್ವನಾಶ ಮಾಡಿಬಿಡಿ. ಕನಿಷ್ಠ ಪಕ್ಷ ಪ್ರತಿದಿನ ಕಪ್ಪು ದೀಪಾವಳಿ ಆಗುವುದು ಬೇಡ’ ಎಂದು ಅವರು ನುಡಿದರು.
ಎಲ್ಲ ಹುತಾತ್ಮ ಯೋಧರಿಗೂ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ದೇಶ ರಕ್ಷಣೆಗಾಗಿ ಪ್ರಾಣವನ್ನು ಅರ್ಪಿಸಿದ್ದಾರೆ. ಎಲ್ಲಾ ಜವಾನರಿಗೂ ನನ್ನ ಸಲಾಂ, ನನ್ನ ಪತಿ ಕೂಡಾ ಧೈರ್ಯಶಾಲಿ ಎಂದು ಮನ್ ದೀಪ್ ಸಿಂಗ್ ಪತ್ನಿ ಹೇಳಿದರು.
2016: ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಬಂಧಿತನಾದ ಪಾಕ್ ಹೈಕಮಿಷನ್ ಸಿಬ್ಬಂದಿ
2016:
ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಬಂಧಿತನಾದ ಪಾಕ್ ಹೈಕಮಿಷನ್ ಸಿಬ್ಬಂದಿ
ಮೆಹಮೂದ್ ಅಖ್ತರ್ ಭಾರತ ಬಿಡುವ ಮುನ್ನ ನವದೆಹಲಿಯಲ್ಲಿ ಪಾಕಿಸ್ತಾನದ ಗೂಢಚಾರ ಸಂಸ್ಥೆಗಾಗಿ (ಐಎಸ್‍ಐ) ಕಾರ್ಯ ನಿರ್ವಹಿಸುತ್ತಿದ್ದ 10 ಮಂದಿಯ ಹೆಸರನ್ನು ಬಹಿರಂಗ ಪಡಿಸಿರುವದು ಬೆಳಕಿಗೆ
ಬಂತು. ಸಿಎನ್ಎನ್- ನ್ಯೂಸ್ 18 ವರದಿ ಪ್ರಕಾರ ಕರ್ನಲ್ ಸಯ್ಯದ್ ಫರೂಖ್, ಅವರ ಸಹಾಯಕ ಅಧಿಕಾರಿ ಖದೀಮ್ ಹುಸೈನ್, ಮೇಜರ್ ಸಹೀದ್ ಇಕ್ಬಾಲ್ ಮತ್ತು ಡೆಪ್ಯುಟಿ ಡೈರೆಕ್ಟರ್ ಡಾ. ಮುದಾಸಿರ್ ಇಕ್ಬಾಲ್ ಮೊದಲಾದ ಐಎಸ್ಐ ಅಧಿಕಾರಿಗಳ ಹೆಸರುಗಳನ್ನು ಅಖ್ತರ್ ಬಹಿರಂಗ ಪಡಿಸಿದ್ದಾನೆ. ಈ ವ್ಯಕ್ತಿಗಳು ಐಎಸ್ಐ ಅಥವಾ ಸೇನೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ? ಎಂದು ಕೇಳಿದಾಗ, ಅವರ ಕೆಲಸಗಳು ಬದಲಾಗುತ್ತಲೇ ಇರುತ್ತದೆ ಎಂದು ಆತ ಹೇಳಿರುವುದಾಗಿ ಮಾಧ್ಯಮ ವರದಿ ಮಾಡಿತು. ಅಖ್ತರ್ ನನ್ನು ಭಾರತದಲ್ಲಿ ಇರಿಸಿಕೊಳ್ಳಲು ‘ಸಮ್ಮತಿ ಇಲ್ಲ’ (persona non-grata) ಎಂಬ ಕಾರಣದಿಂದ ಆತನನ್ನು ಈದಿನ ಬೆಳಗ್ಗೆಯೇ ಪಾಕಿಸ್ತಾನಕ್ಕೆ ರವಾನಿಸಲಾಯಿತು. ಅಖ್ತರ್ ಕುಟುಂಬದ ಮೂವರು ಸದಸ್ಯರು ಅಮೃತಸರದಲ್ಲಿರುವ ಅತ್ತಾರಿ ಎಂಬಲ್ಲಿಗೆ ಬಂದ ತತ್ ಕ್ಷಣವೇ ಈದಿನ ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನಕ್ಕೆ ಕಳುಹಿಸಲಾಯಿತು.
2016:
ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಗುಂಡಿನ ಚಕಮಕಿ ವೇಳೆ
ಉಗ್ರರ ಗುಂಡೇಟಿಗೆ ಬಲಿಯಾದ ಭಾರತದ ಯೋಧನ ದೇಹವನ್ನು ಕತ್ತರಿಸಿ ಪೈಶಾಚಿಕ ಕೃತ್ಯವೆಸಗಿದ ಪಾಕ್ಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಭಾರತೀಯ ಸೇನೆ ಗುಡುಗಿತು. ಪಾಕ್ ಅಪ್ರಚೋದಿತ ದಾಳಿಯಲ್ಲಿ ಸಿಪಾಯಿ ಮನ್ದೀಪ್ ಸಿಂಗ್ (27) ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳು ಹೇಳಿದವು. ಅ.28ರಂದು ಶುಕ್ರವಾರ ನಡೆದ ದಾಳಿ- ಪ್ರತಿ ದಾಳಿಯಲ್ಲಿ ಓರ್ವ ಉಗ್ರನನ್ನು ಸೇನೆ
ಕೊಲೆಗೈದಿದೆ. ಹಿಂದಿನ ದಿನ ಸಂಜೆ ಗಡಿ ನಿಯಂತ್ರಣ ರೇಖೆ ಬಳಿ ನಡೆದ ಎನ್ಕೌಂಟರ್ನಲ್ಲಿ ಒಬ್ಬ ಯೋಧ ಹುತಾತ್ಮನಾಗಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಯೋಧನ ದೇಹವನ್ನು ಛಿದ್ರಗೊಳಿಸಿ ಉಗ್ರರು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಓಡಿ ಮರೆಯಾಗಿದ್ದಾರೆ. ಆ ಹೊತ್ತು ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸಿದೆ ಎಂದು ಸೇನಾ ವಕ್ತಾರ ತಿಳಿಸಿದರು. ಮಚ್ಚಲ್ ಪ್ರದೇಶದ ಗಡಿನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿದಾಗ ಉಭಯ ರಾಷ್ಟ್ರಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಆ ವೇಳೆ ಪಾಕ್ ಉಗ್ರರು ಬಿಎಸ್ಎಫ್ ಯೋಧನ ಮೇಲೆ ದಾಳಿ ನಡೆಸಿ ಆತನ ದೇಹವನ್ನು ತುಂಡು ತುಂಡು ಮಾಡಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆ ಪಲಾಯನ ಮಾಡಿದರು. ಪಾಕಿಸ್ತಾನ ಸೇನೆ ಗುಂಡಿನ ದಾಳಿ ನಡೆಸುವ ಮೂಲಕ ಉಗ್ರರು ಪರಾರಿಯಾಗಲು ಸಹಾಯ ಮಾಡಿದೆ ಎಂದು ಭಾರತೀಯ ಸೇನೆ ದೂರಿದ್ದು, ಗಡಿಭಾಗದಲ್ಲಿ ಪಾಕ್ ಸೇನೆ ಪ್ರೇರೇಪಿತ ಉಗ್ರ ಕೃತ್ಯ ಇದಾಗಿದೆ. ಈ ಬರ್ಬರ ಕೃತ್ಯಕ್ಕೆ ಪಾಕ್ ತಕ್ಕ ಬೆಲೆ ತೆರಬೇಕಾಗುತ್ತದೆ ಗುಡುಗಿತು.
2016:
ಚೆನ್ನೈ: ತಮಿಳುನಾಡಿನ ಅರವಕುರುಚಿ, ತಂಜಾವೂರು ಮತ್ತು ತಿರುಪ್ಪಾನ್ಕುಂದ್ರಮ್
ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಎಐಎಡಿಎಂಕೆ ಅಭ್ಯರ್ಥಿಗಳ ನಾಮಪತ್ರದಲ್ಲಿ ಪಕ್ಷದ ಅಧ್ಯಕ್ಷೆ, ತಮಿಳುನಾಡು ಸಿಎಂ ಜಯಲಲಿತಾ ಅವರು ಸಹಿ ಮಾಡುವ ಬದಲು ಹೆಬ್ಬೆಟ್ಟು ಒತ್ತಿರುವುದು ಬೆಳಕಿಗೆ ಬಂದಿತು. ಚುನಾವಣೆ ನಿಯಮಗಳ ಪ್ರಕಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ನಮೂನೆ ಎ ಮತ್ತು ನಮೂನೆ ಬಿ ಅರ್ಜಿಗಳಲ್ಲಿ ಪಕ್ಷದ ಅಧ್ಯಕ್ಷರ ಸಹಿ ಇರಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಚುನಾವಣೆ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಆದರೆ ಜಯಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸಹಿ ಮಾಡುವಷ್ಟು ಶಕ್ತಿ ಅವರಲ್ಲಿಲ್ಲ. ಆದ ಕಾರಣ ಅವರು ಸಹಿ ಬದಲು ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿದವು. ಬಲಗೈಯಲ್ಲಿ ಸಹಿ ಹಾಕಲು ನಿಶ್ಶಕ್ತರಾದ ಕಾರಣ ಜಯಾ ಎಡಗೈ ಬೆರಳಿನಿಂದ ಹೆಬ್ಬೆಟ್ಟು ಒತ್ತಿಸಲಾಗಿದೆ ಎಂದು ಮದ್ರಾಸ್ ಮೆಡಿಕಲ್ ಕಾಲೇಜಿನ ಡಾ. ಪಿ. ಬಾಲಾಜಿ ಹೇಳಿರುವ ಸಾಕ್ಷ್ಯಪತ್ರವನ್ನೂ ನಾಮಪತ್ರದೊಂದಿಗೆ ಲಗತ್ತಿಸಲಾಗಿತ್ತು.
2016: ಚೆನ್ನೈ: ಒಂದೇ ರಾಕೆಟ್ ಮೂಲಕ ಒಟ್ಟಿಗೆ 83 ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸಿತು. 2017ರಲ್ಲಿ ವಿದೇಶದ 81 ಉಪಗ್ರಹಗಳೊಂದಿಗೆ ಭಾರತದ 2 ಉಪಗ್ರಹಗಳನ್ನು ಹೊತ್ತು ಪಿಎಸ್ಎಲ್ವಿ ಬಾಹ್ಯಾಕಾಶಕ್ಕೆ ಹಾರಲಿದೆ. ವಿದೇಶ ಉಪಗ್ರಹಗಳಲ್ಲಿ ಹೆಚ್ಚಿನವು ನ್ಯಾನೊ ಉಪಗ್ರಹಗಳಾಗಿದ್ದು, ಒಟ್ಟು ತೂಕ 1600 ಕೆಜಿ ಇರಬಹುದು ಎಂದು ಇಸ್ರೋ ಮೂಲಗಳು
ತಿಳಿಸಿದವು. ಈ ಎಲ್ಲ ಉಪಗ್ರಹಗಳನ್ನು ಒಂದೇ ಕಕ್ಷೆಗೆ ಸೇರಿಸಲಾಗುವುದು ಎಂದು ಇಸ್ರೋದ ವಾಣಿಜ್ಯ ಅಂಗ ಸಂಸ್ಥೆ 'ಆ್ಯಂಟ್ರಿಕ್ಸ್' ಕಾರ್ಪರೇಷನ್ ಅಧ್ಯಕ್ಷ, ಮ್ಯಾನೇಜಿಂಗ್ ಡೈರೆಕ್ಟರ್ ರಾಕೇಶ್ ಶಶಿ ಭೂಷಣ್ ಹೇಳಿದರು.
2016:
ಶಿಕಾಗೋ: 161 ಪ್ರಯಾಣಿಕರು ಮತ್ತು 9 ಮಂದಿ ವಿಮಾನ ಸಿಬ್ಬಂದಿ ಸೇರಿ 170
ಮಂದಿಯನ್ನು ಹೊತ್ತು ಮಿಯಾಮಿಗೆ ಹಾರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಅಮೆರಿಕದ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡಿತು. ಈ ಘಟನೆಯಲ್ಲಿ 20 ಮಂದಿಗೆ ಗಾಯಗಳಾದವು. ಶಿಕಾಗೋದ ಓಹ್ರೆ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅ,28ರಂದು ಅಮೆರಿಕದ ಬೋಯಿಂಗ್ 767 ವಿಮಾನ ಟೇಕಾಫ್ ಆಗುವ ಹೊತ್ತಲ್ಲಿ ಎಂಜಿನ್ನಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ಪೈಲಟ್
ಸಮಯ ಪ್ರಜ್ಞೆಯಿಂದ ಸಂಭಾವ್ಯ ದುರಂತ ತಪ್ಪಿತು. ತುರ್ತು ನಿರ್ಗಮನ ದಾರಿ ಮೂಲಕ ಪ್ರಯಾಣಿಕರು ಪಾರಾಗಲು ಯತ್ನಿಸುತ್ತಿದ್ದಾಗ ಹಲವರಿಗೆ ಗಾಯಗಳಾದವು. ಗಾಯಾಳುಗಳಿಗೆ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿತು. ಹೊತ್ತಿ ಉರಿಯುತ್ತಿರುದ್ದ ವಿಮಾನದ ದೃಶ್ಯವನ್ನು ಪ್ರಯಾಣಿಕರು ವಿಡಿಯೋ ಮೂಲಕ ಸೆರೆ ಹಿಡಿದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡಿತ್ತು, ಪೈಲಟ್ ಕೂಡಲೇ ವಿಮಾನವನ್ನು ರನ್ ವೇಯಿಂದ ದೂರಕ್ಕೆ ಚಲಿಸಿ, ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸುವಂತೆ ಸೂಚಿಸಿದ್ದರು. ವಿಮಾನ ನೋಡ, ನೋಡುತ್ತಿದ್ದಂತೆಯೇ ಬೆಂಕಿಯಿಂದ ಹೊತ್ತಿ ಉರಿದಿತ್ತು..
2008: ಬೆಂಗಳೂರು ಮಹದೇವಪುರ ಸಮೀಪದ ಸಿದ್ಧಾಪುರ ಗ್ರಾಮದ ಕೆರೆಗೆ ಹಾನಿಕಾರಕ ತ್ಯಾಜ್ಯ ಹರಿದು ಬಂದ ಪರಿಣಾಮ ಈದಿನ ಮುಂಜಾನೆ ಮೂವತ್ತು ಸಾವಿರಕ್ಕೂ ಹೆಚ್ಚು ಮೀನುಗಳು ಸತ್ತವು. ಕೆರೆಯ ಸುತ್ತಮುತ್ತಲ ವಸತಿ ಸಮುಚ್ಛಯಗಳಿಂದ ಹೊರಬರುವ ತ್ಯಾಜ್ಯವೇ ಮೀನುಗಳ ಸಾವಿಗೆ ಮುಖ್ಯ ಕಾರಣ. ಅಲ್ಲದೇ, ಕೆರೆಗೆ ಹೊಂದಿಕೊಂಡ ಕೆಲವು ಸಣ್ಣ ಕೈಗಾರಿಕಾ ಕೇಂದ್ರಗಳಿಂದಲೂ ವಿಷಯುಕ್ತ ಕೊಳಕು ನೀರನ್ನು ಕೆರೆಗೆ ಹರಿಯಬಿಡುತ್ತಿದ್ದುದು ಮತ್ತು ಬೆಮೆಲ್ ಬಡಾವಣೆಯಿಂದ ಒಳಚರಂಡಿ ನೀರು ಸಹ ಯಥೇಚ್ಛವಾಗಿ ಕೆರೆಯ ಒಡಲನ್ನು ಸೇರುತ್ತಿದ್ದುದರ ಪರಿಣಾಮವಾಗಿ ಈ ದುರಂತ ಸಂಭವಿಸಿತು.
2008: ಜರ್ಮನಿಯ ಬಾನ್ ನಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್ ಫೈನಲಿನಲ್ಲಿ ಒಟ್ಟು 6.5 ಪಾಯಿಂಟ್ ಸಂಗ್ರಹಿಸುವ ಮೂಲಕ ಭಾರತದ ಗ್ರ್ಯಾಂಡ್ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ ಅವರು ರಷ್ಯಾದ ಗ್ರ್ಯಾಂಡ್ ಮಾಸ್ಟರ್ ವ್ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಪರಾಭವಗೊಳಿಸಿ ಮತ್ತೆ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ವಿಶ್ವ ಚದುರಂಗ ಲೋಕದಲ್ಲಿ ಭಾರತ ಮತ್ತೊಮ್ಮೆ ತನ್ನ ಪಾರಮ್ಯ ಮೆರೆಯಲು ಆನಂದ್ ಕಾರಣರಾದರು. ಕೇವಲ 4.5 ಪಾಯಿಂಟ್ ಗಳಿಸಿದ ಕ್ರಾಮ್ನಿಕ್ ನಿರಾಶೆ ಅನುಭವಿಸಿದರು. 2007ರಲ್ಲಿ ಮೆಕ್ಸಿಕೋದಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ಕಿರೀಟ ಕೂಡ ಆನಂದ್ ಪಾಲಾಗಿತ್ತು. 2000ದಲ್ಲಿ ಟೆಹರಾನಿನಲ್ಲಿ ಆನಂದ್ ಮೊದಲ ಬಾರಿ ವಿಶ್ವ ಚಾಂಪಿಯನ್ ಆಗಿದ್ದರು.
2008: ನೈಋತ್ಯ ಪಾಕಿಸ್ಥಾನದ ಬಲೂಚಿಸ್ಥಾನದಲ್ಲಿ ಬೆಳಗಿನ ಜಾವ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಕನಿಷ್ಠ 170 ಜನ ಸತ್ತು, ಸಾವಿರಾರು ಜನ ಗಾಯಗೊಂಡರು. ಸುಮಾರು 500ಕ್ಕೂ ಹೆಚ್ಚು ಮನೆಗಳು ನಾಶವಾಗಿ, 15,000ಕ್ಕೂ ಹೆಚ್ಚು ಜನ ನಿರ್ವಸಿತರಾದರು. ಪ್ರಾಂತ್ಯ ರಾಜಧಾನಿ ಕ್ವೆಟ್ಟಾದ ಈಶಾನ್ಯಕ್ಕೆ 60 ಕಿ.ಮೀ. ದೂರದಲ್ಲಿ ಕೇಂದ್ರ ಬಿಂದು ಹೊಂದಿದ್ದ ರಿಕ್ಟರ್ ಮಾಪಕದಲ್ಲಿ 6.4ರಷ್ಟು ತೀವ್ರತೆ ಇದ್ದ ಈ ಭೂಕಂಪ ಬೆಳಿಗ್ಗೆ 5.10ಕ್ಕೆ ಸಂಭವಿಸಿತು. ಜéಿಯಾರತ್ ಮತ್ತು ಪಿಶಿನ್ ಜಿಲ್ಲೆಗಳು ಅತಿ ಹೆಚ್ಚು ಹಾನಿಗೆ ತುತ್ತಾದವು.
2008: ಹಿಂದೂ ಮಹಾಸಾಗರದ ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡೀವ್ಸಿನಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಇದೇ ಮೊತ್ತಮೊದಲ ಬಾರಿಗೆ ಹಿಂದಿನ ದಿನ ನಡೆದ ರಾಷ್ಟ್ರಾಧ್ಯಕ್ಷ ಚುನಾವಣೆಯಲ್ಲಿ ಮಾಜಿ ರಾಜಕೀಯ ಕೈದಿ ಮೊಹಮ್ಮದ್ ನಶೀದ್ ನಿಚ್ಚಳ ಗೆಲುವು ಸಾಧಿಸಿದರು. ಈ ಮೂಲಕ ಏಷ್ಯಾದ ದೀರ್ಘ ಕಾಲದ ಅಧ್ಯಕ್ಷರೆನಿಸಿಕೊಂಡಿದ್ದ ಮೊಹಮ್ಮದ್ ಅಬ್ದುಲ್ ಗಯೂಂ ಅಧಿಕಾರದಿಂದ ಪತನಗೊಂಡರು. 41ರ ಪ್ರಾಯದ ನಶೀದ್ ಪ್ರವಾಸಿಗರ ಸ್ವರ್ಗವೆಂಬ ಖ್ಯಾತಿಯ ಈ ನಾಡಿನಲ್ಲಿ ನಡೆದ ಪ್ರಜಾಪ್ರಭುತ್ವ ಪರ ಹೋರಾಟಗಳ ನೇತೃತ್ವ ವಹಿಸಿದ್ದರು. `ವರ್ಚಸ್ವೀ ನಾಯಕ'ರೆಂಬ ಹಾಗೂ `ಅಂತಃಸಾಕ್ಷಿಯಿರುವ ಕೈದಿ' ಎಂಬ ಹೆಗ್ಗಳಿಕೆಗಳನ್ನೂ ಅವರು ಹೊಂದಿದ್ದರು.
2008: ಅಗ್ಗದ ದರದ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಡೆನ್ಮಾರ್ಕಿನ ಸ್ಟೆರ್ಲಿಂಗ್ ಏರ್ ಲೈನ್ಸ್ ತಾನು ದಿವಾಳಿ ಎಂದು ಕೊಪೆನ್ ಹೇಗನ್ನಿನಲ್ಲಿ ಘೋಷಿಸಿಕೊಂಡು, ತನ್ನೆಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತು. ಇದರಿಂದಾಗಿ ಈ ಸಂಸ್ಥೆಯಲ್ಲಿದ್ದ 1,100 ಉದ್ಯೋಗಿಗಳ ಭವಿಷ್ಯ ಅತಂತ್ರವಾಯಿತು. ಜೊತೆಗೆ ಟಿಕೆಟ್ ಪಡೆದ ಸಾವಿರಾರು ಪ್ರಯಾಣಿಕರೂ ಹತಾಶರಾದರು. ವೆಬ್ ಸೈಟಿನಲ್ಲಿ ತಾನು ದಿವಾಳಿ ಎಂದು ಹೇಳಿದ ಸಂಸ್ಥೆ, ಜಾಗತಿಕ ಆರ್ಥಿಕ ಬಿಕ್ಕಟ್ಟು, ಹೆಚ್ಚಿದ ತೈಲ ಬೆಲೆಗಳಿಂದಾಗಿ ಸಂಸ್ಥೆಯ ಷೇರುದಾರರು ತೀವ್ರ ನಷ್ಟಕ್ಕೆ ಸಿಲುಕಿದರು, ಇದರಿಂದ ಸಂಸ್ಥೆಯನ್ನು ದಿವಾಳಿ ಎಂದು ಘೋಷಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿತು.
2008: ಮಾಲೆಗಾಂವ್ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಿವೃತ್ತ ಮೇಜರ್ ರಮೇಶ್ ಚಂದ್ರ ಉಪಾಧ್ಯ ಮತ್ತು ಕಾರ್ಯಕರ್ತ ಸಮೀರ್ ಕುಲಕರ್ಣಿ ಎಂಬುವವರನ್ನು ಪೊಲೀಸರು ಪುಣೆಯಲ್ಲಿ ಬಂಧಿಸಿದರು. ಈ ನಡುವೆ ಅವರಿಗೆ ಸಂಬಂಧಿಸಿದ ಹಿಂದುತ್ವ ಸಂಘಟನೆ `ಅಭಿನವ್ ಭಾರತ್'ಯ ವೆಬ್ ಸೈಟ್ ಅಂತರ್ಜಾಲ ತಾಣದಿಂದ ಕಣ್ಮರೆಯಾಯಿತು.
2007: ತೀವ್ರವಾಗಿ ಅಸ್ವಸ್ಥರಾಗಿದ್ದ ಖ್ಯಾತ ರಂಗಕರ್ಮಿ ಪ್ರೇಮಾ ಕಾರಂತ (73) ಬೆಂಗಳೂರಿನ ಟ್ರಿನಿಟಿ ಆಸ್ಪತ್ರೆಯಲ್ಲಿ ಈದಿನ ಮಧ್ಯಾಹ್ನ ನಿಧನರಾದರು. ಸಂಜೆ ವಿಲ್ಸನ್ ಗಾರ್ಡನ್ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಪ್ರಸಿದ್ಧ ವ್ಯಕ್ತಿಯ ಪತ್ನಿಯಾಗಿದ್ದೂ ಅಸ್ತಿತ್ವವನ್ನು ಉಳಿಸಿಕೊಂಡ ಅಪರೂಪದ ಮಹಿಳೆಯರ ಸಾಲಿಗೆ ಸೇರಿದವರು ಪ್ರೇಮಾ ಕಾರಂತ. ಅವರ ಆಸಕ್ತಿ ಹಾಗೂ ಸಾಧನೆ ಸಿನಿಮಾ, ರಂಗಭೂಮಿ, ಭಾಷಾಂತರ, ಬೋಧನೆ- ಹೀಗೆ ಹಲವು ಕ್ಷೇತ್ರಗಳಲ್ಲಿ ಹಂಚಿಹೋಗಿತ್ತು. ದೆಹಲಿಯ `ರಾಷ್ಟ್ರೀಯ ನಾಟಕ ಶಾಲೆ'ಯಲ್ಲಿ ರಂಗಭೂಮಿಯ ಪಟ್ಟುಗಳನ್ನು ಕಲಿಯುವಾಗ ಅಂಕುರಿಸಿದ ಪ್ರೇಮ ಬಿ.ವಿ. ಕಾರಂತರೊಂದಿಗೆ ಪ್ರೇಮ ವಿವಾಹದಲ್ಲಿ ಪರ್ಯವಸಾನಗೊಂಡಿತ್ತು. ಪ್ರೇಮ ವಿವಾಹದ ಸಂಕಷ್ಟ, ಆರ್ಥಿಕ ಅಡಚಣೆಗಳ ನಡುವೆ ಸಾಗಿದ ಅವರ ಬಾಳ ಹಾದಿಯಲ್ಲಿ ಗುರಿ ನಿಚ್ಚಳವಾಗಿತ್ತು. ರಂಗಭೂಮಿಯ ಹಾದಿಯ ಪಯಣ ಲೌಕಿಕ ತೊಂದರೆಗಳನ್ನು ಮರೆಸುವಷ್ಟು ಪ್ರಭಾವಶಾಲಿಯಾಗಿತ್ತು. ಅರವತ್ತು ಎಪ್ಪತ್ತರ ದಶಕ ಕಾರಂತರು ನಾಟಕ ಹಾಗೂ ಸಿನಿಮಾಗಳಲ್ಲಿ ನಿರಂತರ ಪ್ರಯೋಗಶೀಲರಾಗಿದ್ದಾಗ, ಆರಂಭವಾದ ಕನ್ನಡದ ಹೊಸ ಅಲೆಯ ಚಿತ್ರಗಳ ನಿರ್ಮಾಣ ಸೇರಿದಂತೆ ಪತಿಯ ಎಲ್ಲ ಪ್ರಯೋಗಗಳಲ್ಲಿ ಪ್ರೇಮಾ ಸಹಕಾರವಿತ್ತು. `ಹಂಸಗೀತೆ' ಚಿತ್ರಕ್ಕೆ ಪ್ರೇಮಾ ಅವರೇ ವಸ್ತ್ರವಿನ್ಯಾಸ ಮಾಡಿದ್ದರು. ಜೊತೆಗೆ ಪ್ರೇಮಾ ತಮ್ಮದೇ ಆದ ದಾರಿಯಲ್ಲಿಯೂ ನಡೆದರು. ಅವರು ನಿರ್ದೇಶಿಸಿದ `ಫಣಿಯಮ್ಮ' ರಾಷ್ಟ್ರಪ್ರಶಸ್ತಿ ಪಡೆಯಿತು. ಎಂ.ಕೆ. ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರದಲ್ಲಿ ಪ್ರೇಮಾ ಎಳೆಯ ವಯಸ್ಸಿನಲ್ಲಿ ವಿಧವೆಯಾದ ಹೆಣ್ಣುಮಗಳ ತವಕ ತಲ್ಲಣಗಳನ್ನು ಅದ್ಭುತವಾಗಿ ಚಿತ್ರಿಸಿದ್ದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಪ್ರೇಮಾ ನಿರ್ದೇಶಿಸಿದ `ಬಂಧ್ ಝರೋಕೆ' ಹಿಂದಿಚಿತ್ರ ರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಹೆಸರು ತಂದು ಕೊಟ್ಟಿತ್ತು. `ನಕ್ಕಳಾ ರಾಜಕುಮಾರಿ', `ಲಕ್ಷ್ಮೀ ಕಟಾಕ್ಷ', `ಅಬ್ದುಲ್ಲಾ ಗೋಪಾಲ' ಅವರ ನಿರ್ದೇಶನದ ಇತರ ಚಿತ್ರಗಳು. ಮಕ್ಕಳನ್ನು ಕಂಡರೆ ಪ್ರೇಮಾ ಅವರಿಗೆ ಮೈಮರೆಯುವಷ್ಟು ಅಕ್ಕರೆ. `ಬೆನಕ' ಮಕ್ಕಳ ರಂಗತಂಡದ ಮೂಲಕ ಅವರು ಮಕ್ಕಳ ನಾಟಕಗಳನ್ನು ರೂಪಿಸಲಿಕ್ಕೆ ಈ ಅಕ್ಕರೆಯೇ ಕಾರಣ. ಅವರ ನಿರ್ದೇಶನದ `ಆಲೀಬಾಬಾ' ನಾಟಕ- ಆ ನಾಟಕದ ಸಂಗೀತ- ಮಕ್ಕಳಿಗೆ ತುಂಬಾ ಇಷ್ಟವಾಗಿತ್ತು, `ಸಿಂದಾಬಾದ್', `ನಕ್ಕಳಾ ರಾಜಕುಮಾರಿ', `ಇಸ್ಪೀಟ್ ರಾಜ್ಯ', `ಪಂಜರಶಾಲೆ', `ಅಳಿಲು ರಾಮಾಯಣ', `ಸುಣ್ಣದ ಸುತ್ತು', `ಕುಣಿಯೋ ಕತ್ತೆ', `ಹಿಂದುಮುಂದಾದ ಕಾಳಿ' ಅವರ ಕೆಲವು ಜನಪ್ರಿಯ ಮಕ್ಕಳ ನಾಟಕಗಳು. ಷೇಕ್ಸ್ಪಿಯರ್ನ `ಕಿಂಗ್ಲಿಯರ್' ಹಾಗೂ ಎಚ್.ಎಸ್. ವೆಂಕಟೇಶಮೂರ್ತಿಯವರ `ಹುಚ್ಚುದೊರೆ ಮತ್ತು ಮೂವರು ಮಕ್ಕಳು' ನಾಟಕಗಳು ಪ್ರೇಮಾ ಅವರ ಯಶಸ್ವಿ ನಾಟಕಗಳಲ್ಲಿ ಕೆಲವು. ವಿಪರ್ಯಾಸವೆಂದರೆ ಮಕ್ಕಳ ಬಗ್ಗೆ ಇಷ್ಟೆಲ್ಲ ಕಾಳಜಿ ಹೊಂದಿದ್ದ ಪ್ರೇಮಾ ಅವರಿಗೆ ಸಂತಾನವಿರಲಿಲ್ಲ. ಭಾಷಾಂತರದಲ್ಲೂ ಪ್ರೇಮಾ ಪ್ರವೀಣೆಯಾಗಿದ್ದರು. ಹಿಂದಿಯಿಂದ ಶಂಭುಮಿತ್ರ, ವಿಜಯ್ ತೆಂಡೂಲ್ಕರರ ಕೃತಿಗಳನ್ನು, ಗುಜರಾತಿ ಏಕಾಂಕಗಳನ್ನು, ಇಂಗ್ಲಿಷಿನ ಕೆಲವು ಕೃತಿಗಳನ್ನು ಕನ್ನಡಕ್ಕೆ ತಂದಿದ್ದರು. ರಾಷ್ಟ್ರೀಯ ಪುಸ್ತಕ ಟ್ರಸ್ಟಿನಿಂದ ಭಾಷಾಂತರಕಾರಳಾಗಿ ಮನ್ನಣೆ ಪಡೆದಿದ್ದರು. ಪ್ರೇಮಾ ಅವರು ರಂಗಕ್ಕೆ ತಂದ ದ.ರಾ. ಬೇಂದ್ರೆಯವರ `ಸಾಯೋ ಆಟ', ಗಿರೀಶ್ ಕಾರ್ನಾಡರ `ಹಿಟ್ಟಿನ ಹುಂಜ', ವಿಜಯ್ ತೆಂಡೂಲ್ಕರರ `ಹಕ್ಕಿ ಹಾರುತಿದೆ ನೋಡಿದಿರಾ', ಶ್ರೀರಂಗರ `ಸ್ವಗತ ಸಂಭಾಷಣೆ', ಲಂಕೇಶರ `ಪೊಲೀಸರಿದ್ದಾರೆ ಎಚ್ಚರಿಕೆ' ನಾಟಕಗಳು ಅವರ ರಂಗಪ್ರೀತಿ ಹಾಗೂ ಬದ್ಧತೆಗೆ ಸಾಕ್ಷಿಯಾಗಿದ್ದವು. ದೇಶದ ವಿವಿಧ ಭಾಗಗಳಲ್ಲಿ ರಂಗಭೂಮಿಗೆ ಸಂಬಂಧಿಸಿದ ಕಮ್ಮಟಗಳನ್ನು ನಡೆಸಿದ್ದರು. ಸಿನೆಮಾಗಳಿಗೆ ಲಭಿಸಿದ ರಾಷ್ಟ್ರಪ್ರಶಸ್ತಿಗಳ ಜೊತೆಗೆ ಪ್ರೇಮಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಲಭಿಸಿತ್ತು. ಪತಿ ಬಿ.ವಿ. ಕಾರಂತರ ನಿಧನದ ಬಳಿಕ ಅವರು ಸ್ಥಾಪಿಸಿದ್ದ `ಬಾಬುಕೋಡಿ ಪ್ರತಿಷ್ಠಾನ'ದ ಮೂಲಕ ಪತಿಯ ಕನಸುಗಳನ್ನು ನನಸಾಗಿಸುವ ಯತ್ನದಲ್ಲಿ ಪ್ರೇಮಾ ಸಕ್ರಿಯರಾಗಿದ್ದರು. ಕಾರಂತರ ಬೃಹತ್ ಪುಸ್ತಕ ಸಂಗ್ರಹ ಹಾಗೂ ದೇಶವಿದೇಶಗಳ- ಅಪರೂಪದ ವಾದ್ಯಗಳನ್ನೊಳಗೊಂಡ- ವಸ್ತು ಸಂಗ್ರಹವನ್ನು ಜೋಪಾನವಾಗಿರಿಸುವ ಕನಸು ಅವರಿಗಿತ್ತು.
2007: ವಾಯುಭಾರ ಕುಸಿತದಿಂದಾಗಿ ವರ್ಷದ ಅತ್ಯಂತ ಬಿರುಸಿನ ಮಳೆಯ ಆರ್ಭಟಕ್ಕೆ ಸಿಲುಕಿದ ತಮಿಳುನಾಡಿನ ವಿವಿಧೆಡೆಗಳಲ್ಲಿ 48 ಗಂಟೆಗಳ ಅವಧಿಯಲ್ಲಿ 30 ಜನ ಮೃತರಾಗಿ ಕೋಟ್ಯಂತರ ರೂಪಾಯಿಗಳ ಆಸ್ತಿಪಾಸ್ತಿ ನಷ್ಟವಾಯಿತು. ತಂಜಾವೂರು, ಕಡಲೂರು, ಚೆನ್ನೈ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಯಿತು.
2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನಲ್ಲಿ ದೀಪಾವಳಿಯ ರಾಕೆಟ್ನಂತೆ ಚಿಮ್ಮಿ 20 ಸಾವಿರ ಅಂಶಗಳ ಮಾಂತ್ರಿಕ ಸಂಖ್ಯೆ ದಾಟಿ ಹೊಸ ಇತಿಹಾಸ ಬರೆಯಿತು.
2007: ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್, ನಟ ಅನಂತನಾಗ್, ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಆಡ್ವಾಣಿ ಸಹಿತ ವಿವಿಧ ಕ್ಷೇತ್ರಗಳ ಗಣ್ಯರಿಗೆ 2007ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಯಿತು. 51ನೇ ರಾಜ್ಯೋತ್ಸವ ನಿಮಿತ್ತ 51 ಮಂದಿಯನ್ನು ಪ್ರಶಸ್ತಿಗೆ ಆರಿಸಲಾಯಿತು.
2007: ನಿರೀಕ್ಷಿತ ಬೆಂಬಲ ಸಿಗದೆ ಮುಗ್ಗರಿಸಿದ ಎಂ.ಪಿ.ಪ್ರಕಾಶ್ ಬಣ, ರಾಜ್ಯಪಾಲರ ಮುಂದೆ ಬಿಜೆಪಿ- ಜೆಡಿಎಸ್ ಮೈತ್ರಿ ಕೂಟದ ಸ್ವಯಂ ಪ್ರೇರಿತ ಶಕ್ತಿ ಪ್ರದರ್ಶನ, ರಾಜಭವನದಲ್ಲಿ 129 ಶಾಸಕರ ಖುದ್ದು ಹಾಜರಿ ಹಾಜರಿ, ಮರು ಮೈತ್ರಿಗೆ ಕಾಂಗ್ರೆಸ್ಸಿನಿಂದ ಮುಂದುವರೆದ ಕಿರಿಕಿರಿ, ತಮಗೆ ಅವಕಾಶ ನೀಡುವಲ್ಲಿ ರಾಜ್ಯಪಾಲರು ವಿಳಂಬ ಮಾಡುತ್ತಿದ್ದಾರೆಂಬ ಮಿತ್ರ ಪಕ್ಷಗಳ ತೀವ್ರ ಅಸಮಾಧಾನ- ಈ ಪ್ರಮುಖ ಬೆಳವಣಿಗೆಗಳು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಈದಿನ ನಡೆದವು. ಇಡೀದಿನ ರಾಜಕೀಯ ಚಟುವಟಿಕೆಗಳು ನಡೆದರೂ ರಾಜ್ಯಪಾಲರ ಮನದಿಂಗಿತ ಬಹಿರಂಗಗೊಳ್ಳದ ಕಾರಣ ಪರ್ಯಾಯ ಸರ್ಕಾರ ರಚನೆ ಸಂಬಂಧದ ಅನಿಶ್ಚಿತತೆ ಮುಂದುವರೆಯಿತು. ಬಿಜೆಪಿ ಮತ್ತು ಜೆಡಿಎಸ್ ಜಂಟಿ ಶಾಸಕಾಂಗ ಪಕ್ಷದ ನಾಯಕರಾಗಿ ಬಿ.ಎಸ್. ಯಡಿಯೂರಪ್ಪ ಆಯ್ಕೆಯಾದರು. ವಿಂಡ್ಸರ್ ಮ್ಯಾನರಿನಲ್ಲಿ ಸಂಜೆ ಹದಿನೈದು ನಿಮಿಷಗಳ ಕಾಲ ನಡೆದ ಜಂಟಿ ಸಭೆಯಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೆಸರನ್ನು ಸೂಚಿಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಿಜೆಪಿ- ಜೆಡಿಎಸ್ ರಾಜ್ಯ ಘಟಕಗಳ ಅಧ್ಯಕ್ಷರಾದ ಸದಾನಂದಗೌಡ ಮತ್ತು ಮೆರಾಜ್ದುದೀನ್ ಪಟೇಲ್, ಶಾಸಕರು ಭಾಗವಹಿಸಿದ್ದರು.
2006: ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಅಕ್ಟೋಬರ್ 27ರಂದು ಮಧ್ಯಪ್ರದೇಶದಲ್ಲಿ ನಿಧನರಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಗುನಾದಲ್ಲಿ ತನಿಖೆ ಆರಂಭಿಸಿದರು. ಮಧ್ಯ ಪ್ರದೇಶದ ಅಶೋಕ ನಗರ ಜಿಲ್ಲೆಯ ಸಾಯಿಜಿ ಗ್ರಾಮದಲ್ಲಿ 30 ವರ್ಷಗಳಿಂದ ವಾಸವಾಗಿದ್ದ 100ಕ್ಕೂ ಹೆಚ್ಚು ವಯಸ್ಸಿನ ಸಂತ ಬಾಬಾ ಲಾಲ್ ಜಿ ಮಹಾರಾಜ್ ಎರಡು ದಿನಗಳ ಹಿಂದೆ ಮರಣಶಯ್ಯೆಯಲ್ಲಿ ಇದ್ದಾಗ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದಾರೆ ಎಂಬುದಾಗಿ ಮಾಜಿ ಗ್ರಾಮ ಸರಪಂಚ ಗಜೇಂದ್ರ ಸಿಂಗ್ ರಘುವಂಶಿ ಪ್ರಕಟಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ವಾಪಸಾಗುವಾಗ ಬಾಬಾ ತಾವೇ ನೇತಾಜಿ ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಒಪ್ಪಿಕೊಂಡಿದ್ದು, ಅಂತ್ಯಕ್ರಿಯೆ ಪೂರ್ಣಗೊಳ್ಳುವವರೆಗೆ ಈ ವಿಚಾರವನ್ನು ಬಹಿರಂಗ ಪಡಿಸಬಾರದು ಎಂದು ನಮಗೆ ಸೂಚಿಸಿದ್ದರು' ಎಂದು ರಘುವಂಶಿ ಹೇಳಿದರು. ಸಾಯಿಜಿ ಗ್ರಾಮಕ್ಕೆ ಬರುವ ಮುನ್ನ ಬಾಬಾ ಲಾಲ್ ಜಿ ಮಹಾರಾಜ್ ಅವರು ನೆರೆಯ ಚಾಕ್ ಚಿರೋಲಿ ಗ್ರಾಮದಲ್ಲಿ 20 ವರ್ಷಗಳ ಕಾಲ ವಾಸವಾಗಿದ್ದರು. ಸಾಯುವ ಮುನ್ನ ಲಾಲ್ ಜಿ ಅವರು ತಮ್ಮ ಬಳಿ ಇದ್ದ ಹಲವಾರು ಪುಸ್ತಕಗಳನ್ನು ರಘುವಂಶಿ ಅವರಿಗೆ ನೀಡಿದ್ದರು. ಇದಲ್ಲದೆ ಬೌದ್ಧಮತಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳು, ಹಳೆಯ ರೈಲು ಮತ್ತು ಬಸ್ ಟಿಕೆಟ್ಟುಗಳು, ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಹಳೆ ವೃತ್ತ ಪತ್ರಿಕಾ ತುಣುಕುಗಳು ಮತ್ತು ಫೊಟೋಗಳು ಆಶ್ರಮದಲ್ಲಿ ಲಭಿಸಿದವು.
2006: ಬಾಂಗ್ಲಾದೇಶದ ರಾಷ್ಟ್ರಪತಿ ಇವಾಜ್ದುದೀನ್ ಅಹ್ಮದ್ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅವರೇ ಜನವರಿ ತಿಂಗಳಲ್ಲಿ ನಡೆಯಲಿರುವ ಮಹಾಚುನಾವಣೆಯ ಮೇಲುಸ್ತುವಾರಿ ನೋಡಿಕೊಳ್ಳುವುದಾಗಿ ಪ್ರಕಟಿಸಿದರು. ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ಹಂಗಾಮಿ ಆಡಳಿತಗಾರರಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ವಿರೋಧ ಪಕ್ಷಗಳಿಂದ ವ್ಯಕ್ತವಾದ ತೀವ್ರ ಪ್ರತಿಭಟನೆ ಹಾಗೂ ಹಸನ್ ಅವರು ಹಠಾತ್ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸಮಾರಂಭ ಮುಂದೂಡಿದ್ದ ಇವಾಜುದ್ದೀನ್ ಅಹ್ಮದ್ ಅವರು ಮೌನ ಮುರಿದು ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡರು.
2006: ನೈಜೀರಿಯಾದ ರಾಜಧಾನಿ ಅಬುಜಾ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ವಿಮಾನ ಕೆಲ ಕ್ಷಣಗಳಲ್ಲೇ ಪತನಗೊಂಡು 100ಕ್ಕೂ ಹೆಚ್ಚು ಮಂದಿ ಮೃತರಾದರು. ವಿಮಾನದಲ್ಲಿ 110ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
2006: ಇನ್ಫೋಸಿಸ್ ಟೆಕ್ನಾಲಜೀಸ್ ಸಿಇಓ ನಂದನ್ ನೀಲೇಕಣಿ ಅವರಿಗೆ 2006ನೇ ಸಾಲಿನ ಡೇಟಾ ಕ್ವೆಸ್ಟ್ ಐಟಿ ವ್ಯಕ್ತಿ ಪ್ರಶಸ್ತಿ ಲಭಿಸಿತು. ಡೇಟಾಕ್ವೆಸ್ಟ್ ಜೀವಮಾನದ ಸಾಧನೆ ಪ್ರಶಸ್ತಿಯನ್ನು ಪ್ಲೆಕ್ಸ್ ಟ್ರಾನಿಕ್ಸ್ ಸಾಫ್ಟ್ ವೇರ್ ಮುಖ್ಯಸ್ಥರಾಗಿದ್ದ ಅರುಣ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಯಿತು.
2006: ಕನ್ನಡದ ಹಿರಿಯ ನಟಿ ಜಯಶ್ರೀ (77) ಅವರು ಮೈಸೂರಿನಲ್ಲಿ ನಿಧನರಾದರು. `ಭಕ್ತ ಕುಂಬಾರ' ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು.ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾದಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುವ ಮೂಲಕ ಆ ಕಾಲದಲ್ಲೇ ಪ್ರೇಕ್ಷಕರು ಹುಬ್ಬೇರಿಸುವಂತೆ ಮಾಡಿದ್ದರು. 1970-71ರ ಸಾಲಿನಲ್ಲಿ `ಅಮರ ಭಾರತಿ' ಚಿತ್ರಕ್ಕೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಲಭಿಸಿತ್ತು.
2006: ಕನಕದಾಸರ ನೆಲೆವೀಡಾದ ಹಾವೇರಿ ಜಿಲ್ಲೆ ಕಾಗಿನೆಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಎರಡನೇ ಜಗದ್ಗುರುಗಳಾಗಿ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಧಿಕಾರ ಸ್ವೀಕರಿಸಿದರು.
2005: ಆಂಧ್ರಪ್ರದೇಶದ ನಲಗೊಂಡ ಜಿಲ್ಲೆಯಲ್ಲಿ ನಸುಕಿನ 4.40ರ ವೇಳೆಗೆ ಸಿಕಂದರಾಬಾದ್ ಡೆಲ್ಟಾ ಫಾಸ್ಟ್ ಪ್ಯಾಸೆಂಜರ್ ರೈಲಿನ ಬೋಗಿಗಳು ಪ್ರವಾಹದಿಂದ ಕೊಚ್ಚಿಹೋದ ಸೇತುವೆ ಮೇಲೆ ಹಳಿತಪ್ಪಿದವು. 150ಕ್ಕೂ ಹೆಚ್ಚು ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಗಾಯಗೊಂಡರು.
2005: ದೆಹಲಿಯ ಪಹಾಡ್ ಗಂಜ್, ಸರೋಜಿನಿ ನಗರ ಮಾರುಕಟ್ಟೆ, ಗೋವಿಂದ ಪುರಿಯ ಬಸ್ಸುಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 62 ಜನ ಮೃತರಾಗಿ ನೂರಾರು ಮಂದಿ ಗಾಯಗೊಂಡರು.
2005: ಇಪ್ಪತ್ಮೂರು ವರ್ಷಗಳ ಕಾನೂನು ಸಮರದ ಬಳಿಕ ಬೆಂಗಳೂರು ನಗರ ರೇಸ್ ಕೋರ್ಸ್ ರಸ್ತೆಯ ಸಂಖ್ಯೆ 3ರ ಪಕ್ಷದ ಕಚೇರಿ ಕಟ್ಟಡವನ್ನು ತೆರವುಗೊಳಿಸಿ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವಂತೆ ಬೆಂಗಳೂರಿನ ಸಿವಿಲ್ ನ್ಯಾಯಾಲಯ ಜನತಾದಳಕ್ಕೆ (ಎಸ್) ಆದೇಶ ನೀಡಿತು. ಈ ಕಟ್ಟಡದ ಮಾಲೀಕತ್ವ ಕೋರಿ ಕಾಂಗ್ರೆಸ್ 1982ರಲ್ಲಿ ಅರ್ಜಿ ಸಲ್ಲಿಸಿತ್ತು. ಅಂದಿನ ಜನತಾ ಪಕ್ಷವೂ ಇಂತಹುದೇ ಅರ್ಜಿ ಸಲ್ಲಿಸಿತ್ತು. ನಂತರ ಕಟ್ಟಡ ವಶಪಡಿಸಿಕೊಂಡ ಜನತಾದಳ (ಎಸ್) ಪ್ರತಿವಾದಿಯಾಗಿ ಸೇರಿಕೊಂಡು ಕಟ್ಟಡ ತನಗೆ ಸೇರಬೇಕು ಎಂದು ವಾದಿಸಿತ್ತು.
2005: ಮಂಗಳ ಗ್ರಹವು ಭೂಮಿಗೆ ಅತ್ಯಂತ ಸಮೀಪ ಬಂತು. ನಾಸಾದ ಹಬಲ್ ಬಾಹ್ಯಾಕಾಶ ದೂರದರ್ಶಕವು ಈ ವಿದ್ಯಮಾನವನ್ನು ಸೆರೆ ಹಿಡಿಯಿತು. 2018ರಲ್ಲಿ ಇನ್ನೊಮ್ಮೆ ಇಂತಹ ಘಟನೆ ಘಟಿಸಲಿದೆ.
2000: ಶಾರ್ಜಾದಲ್ಲಿ ನಡೆದ ಕೋಕಾ-ಕೋಲಾ ಪಂದ್ಯದಲ್ಲಿ ಭಾರತವು ಶ್ರೀಲಂಕೆಯ ಎದುರಲ್ಲಿ ಅತ್ಯಂತ ಹೀನಾಯ ಸೋಲು ಅನುಭವಿಸಿತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಅಂದರೆ 54 ರನ್ನುಗಳಿಗೆ ಅದು ಆಲ್ ಔಟ್ ಆಯಿತು. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಕೇವಲ 63 ರನ್ ಗಳಿಕೆಯೊಂದಿಗೆ ಭಾರತ ಸೋಲು ಅನುಭವಿಸಿತ್ತು.
1990: ಖ್ಯಾತ ಹಿಂದಿ ನಟ ವಿನೋದ ಮೆಹ್ರಾ ನಿಧನ.
1987: ಥಾಮಸ್ ಹೀಯರ್ನ್ಸ್ ಲಾಸ್ ಏಂಜೆಲಿಸ್ ನಲ್ಲಿ ಜಾಗತಿಕ ಮಿಡ್ಲ್ ವೇಯ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಇದರೊಂದಿಗೆ ನಾಲ್ಕು ಬೇರೆ ಬೇರೆ ವೇಯ್ಟ್ ಗಳಲ್ಲಿ ಜಾಗತಿಕ ಪ್ರಶಸ್ತಿಗಳನ್ನು ಗೆದ್ದ ಪ್ರಥಮ ಬಾಕ್ಸರ್ ಎಂಬ ಎಂಬ ಹೆಗ್ಗಳಿಕೆ ಅವರದಾಯಿತು.
1967: ತತ್ವಜ್ಞಾನಿ ಕುರ್ತಕೋಟಿ ಲಿಂಗನಗೌಡ ನಿಧನ.
1959: `ಆಸ್ಟೆರಿಕ್ಸ್' ಎಂಬ ಕಾಮಿಕ್ಸ್ ಕಥಾಸರಣಿ ಫ್ರೆಂಚ್ ಸಾಪ್ತಾಹಿಕ ಮ್ಯಾಗಜಿನ್ `ಪೈಲೊಟ್' ನಲ್ಲಿ ಜನಿಸಿತು. ಈವರೆಗೆ `ಆಸ್ಟೆರಿಕ್ಸ್' ನ 35 ಕಥೆಗಳು ಪ್ರಕಟವಾಗಿದ್ದು 40 ಭಾಷೆಗಳಿಗೆ ಅದು ಭಾಷಾಂತರಗೊಂಡಿದೆ. 22 ಕೋಟಿ ಪ್ರತಿಗಳು ಮಾರಾಟವಾಗಿವೆ.
1936: ಸಾಹಿತಿ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು ನೈಲಾಡಿ ರಾಮಭಟ್ಟ- ಮೂಕಾಂಬಿಕೆ ದಂಪತಿಯ ಮಗನಾಗಿ ಶಿವಮೊಗ್ಗದಲ್ಲಿ ಜನಿಸಿದರು.
1931: ಸಾಹಿತಿ ಎಂ.ಜಿ. ಭೀಮರಾವ್ (ವಂಶಿ) ಜನನ.
1931: ಸಾಹಿತಿ ಆರ್.ಜಿ. ಕುಲಕರ್ಣಿ ಜನನ.
1929: ಅಮೆರಿಕದ ಸ್ಟಾಕ್ ಮಾರ್ಕೆಟ್ `ಕರಾಳ ಮಂಗಳವಾರ'ದ ದಿನ ಕುಸಿಯಿತು. 1.60 ಕೋಟಿ ಷೇರುಗಳ ಮಾರಾಟಗೊಂಡವು. ಇದರಿಂದಾಗಿ ಸ್ಟಾಕ್ ಮಾರ್ಕೆಟಿನಲ್ಲಿ ಬೆಲೆಗಳು ಸಂಪೂರ್ಣ ಕುಸಿದು ಬಿದ್ದವು. ಬ್ಯಾಂಕ್ ಸಾಲಗಳನ್ನು ಭರಿಸಲು ಸಾಧ್ಯವಾಗುವುದಿಲ್ಲ ಎಂಬದಾಗಿ ಹರಡಿದ ಊಹಾಪೋಹಗಳು ಸ್ಟಾಕ್ ಮಾರ್ಕೆಟಿನ ಈ ಭಾರೀ ಕುಸಿತಕ್ಕೆ ಕಾರಣವಾಗಿದ್ದವು. ಇದರಿಂದಾಗಿ ಭಾರೀ ಬೆಲೆ ಇಳಿಕೆ ಉಂಟಾಗಿ ಪಶ್ಚಿಮದ ಕೈಗಾರಿಕಾ ದೇಶಗಳಲ್ಲಿ 10 ವರ್ಷಗಳ ಕಾಲ ಆರ್ಥಿಕತೆ ಸ್ಥಗಿತಗೊಂಡಿತು.
1923: `ಟರ್ಕಿಶ್' ರಿಪಬ್ಲಿಕ್ ಜನಿಸಿತು. ಕೆಮಲ್ ಅಟಾಟರ್ಕ್ ಮೊದಲ ಅಧ್ಯಕ್ಷರಾದರು. ಅಂಕಾರಾ ಅದರ ರಾಜಧಾನಿಯಾಯಿತು.
1920: ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಮಹಮೂದ್ ಹಸನ್ ಅವರಿಂದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಕ್ಕೆ ಅಡಿಗಲ್ಲು ಹಾಕಲಾಯಿತು.
1916: ಸಾಹಿತಿ ಚಂದ್ರಭಾಗಿ ಕೆ. ರೈ ಜನನ.
1907: ಸಾಹಿತಿ ಡಿ.ವಿ. ಶೇಷಗಿರಿ ರಾವ್ ಜನನ.
1903: ಇಪ್ಪತ್ತನೇ ಶತಮಾನದಲ್ಲಿ ಮಹಿಳೆಯರ ಉನ್ನತಿಗಾಗಿ ದುಡಿದ ಕಮಲಾದೇವಿ ಚಟ್ಟೋಪಾಧ್ಯಾಯ ನಿಧನರಾದರು.
1897: ಅಡಾಲ್ಫ್ ಹಿಟ್ಲರನ ಪ್ರಚಾರ ಸಚಿವ ಜೋಸೆಫ್ ಗೋಬೆಲ್ಸ್ (1897-1945) ಜನ್ಮದಿನ. ಜರ್ಮನ್ನರಲ್ಲಿ ಹಿಟ್ಲರನ ನಾಝಿ ಆಡಳಿತ ಬಗ್ಗೆ ಅನುಕಂಪ ಮೂಡುವಂತೆ ಮಾಡುವಲ್ಲಿ ಈತನ ಪ್ರಚಾರ ತಂತ್ರಗಳೇ ಪ್ರಮುಖ ಪಾತ್ರ ವಹಿಸಿದ್ದವು.
1863: ಹೆನ್ರಿ ಡ್ಯುನಾನ್ ಅವರು ಇಂಟರ್ ನ್ಯಾಷನಲ್ ರೆಡ್ ಕ್ರಾಸ್ ಸಂಸ್ಥೆಯನ್ನು ಸ್ಥಾಪಿಸಿದರು. ಉತ್ತರ ಇಟಲಿಯ ಮಂಟುವಾ ಸಮೀಪ ಸೊಲ್ಫರಿನೋ ಕದನದಲ್ಲಿ ಗಾಯಗೊಂಡವರ ಪರಿಸ್ಥಿತಿಯನ್ನು ಕಂಡು ಮನಮಿಡಿದ ಹೆನ್ರಿ ಅವರ ನೆರವಿಗಾಗಿ ಈ ಸಂಸ್ಥೆ ಸ್ಥಾಪನೆಗೆ ಮುಂದಾದರು.
No comments:
Post a Comment