Tuesday, October 23, 2018

ದೀಪಾವಳಿ, ಹೊಸವರ್ಷ: ಪಟಾಕಿ ಅಬ್ಬರಕ್ಕೆ ಸುಪ್ರೀಂ ಕಡಿವಾಣ


ದೀಪಾವಳಿ, ಹೊಸವರ್ಷ: ಪಟಾಕಿ ಅಬ್ಬರಕ್ಕೆ ಸುಪ್ರೀಂ ಕಡಿವಾಣ

ನವದೆಹಲಿ: ಪಟಾಕಿ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಮಂಗಳವಾರ ನಿರಾಕರಿಸಿರುವ ಸುಪ್ರೀಂಕೋರ್ಟ್ ರಾಷ್ಟ್ರಾದ್ಯಂತ ಶರತ್ತಗಳೊಂದಿಗೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಇದೇ ವೇಳೆಗೆ ದೀಪಾವಳಿ, ಹೊಸ ವರ್ಷಾಚರಣೆ ಸಂದರ್ಭಗಳಲ್ಲಿ ಪಟಾಕಿ ಅಬ್ಬರಕ್ಕೆ ಕಡಿವಾಣ ಹಾಕಿದೆ.

ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 10 ಗಂಟೆ ನಡುವಣ ಅವಧಿಯಲ್ಲಿ  2 ಗಂಟೆ ಮಾತ್ರವೇ ಪಟಾಕಿಗಳನ್ನು ಸಿಡಿಸಬಹುದು. ಹಾಗೆಯೇ  ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾತ್ರಿ 11.55 ರಿಂದ ನಸುಕಿನ 12.30 ನಡುವಣ 35 ನಿಮಿಷ ಮಾತ್ರ ಪಟಾಕಿ ಸಿಡಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಭಾರತದ 14 ನಗರಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಾಯುಮಾಲಿನ್ಯಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಕಟ್ಟು ನಿಟ್ಟಿನ  ಆದೇಶ ನೀಡಿರುವ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವು ನಿಗದಿ ಪಡಿಸುವ  ಸದ್ದು ಮತ್ತು ಮಾಲಿನ್ಯ ಹೊರಸೂಸುವಿಕೆ ಮಿತಿಯನ್ನು ಮೀರುವ  ಎಲ್ಲ ಪಟಾಕಿಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಿದೆ. ಪಟಾಕಿಗಳ ಆನ್ ಲೈನ್ ಮಾರಾಟವನ್ನೂ ಸುಪ್ರೀಂಕೋರ್ಟ್ ಸಾರಾಸಗಟು ನಿಷೇಧಿಸಿದೆ.

ಪಟಾಕಿಗಳ ಆನ್ ಲೈನ್ ಮಾರಾಟವನ್ನು ನಿಷೇಧಿಸಿದ ಸುಪ್ರೀಂಕೋರ್ಟ್ ಪರವಾನಗಿ ಹೊಂದಿರುವ ಮಾರಾಟಗಾರರ ಮೂಲಕ ಮಾತ್ರವೇ ಪಟಾಕಿಗಳ ಮಾರಾಟವನ್ನು ನಡೆಸಬಹುದು  ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು.

ತೀರ್ಪು ದೀಪಾವಳಿಗೆ ಮಾತ್ರವೇ ಸೀಮಿತವಲ್ಲ,  ಇತರ ಎಲ್ಲ ಧಾರ್ಮಿಕ ಸಮಾರಂಭಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಪಡಿಸಿತು.

ಪಟಾಕಿ ತಯಾರಕರ ಮೂಲಭೂತ  ಬದುಕಿನ ಹಕ್ಕು  ಮತ್ತು ರಾಷ್ಟ್ರದ  130 ಕೋಟಿ (1.3 ಬಿಲಿಯನ್ ) ಜನರ ಆರೋಗ್ಯಗ ಹಕ್ಕುಗಳು ಸೇರಿದಂತೆ ಎಲ್ಲ ಅಂಶಗಳನ್ನು ಕೂಡಾ ತಾನು  ಗಮನದಲ್ಲಿ ಇಟ್ಟುಕೊಂಡು ಪಟಾಕಿ ನಿಷೇಧಿಸುವಂತೆ ಕೋರಿದ ಮನವಿಗಳ ಬಗ್ಗೆ ತಾನು ನಿರ್ಧಾರ ಕೈಗಳ್ಳಬೇಕಾಗಿದೆ ಎಂದು ಸುಪ್ರೀಂಕೋರ್ಟ್ ಮುನ್ನ ತಿಳಿಸಿತ್ತು.

ಸಂವಿಧಾನದ 21ನೇ ಅನುಚ್ಛೇದವು (ಬದುಕುವ ಹಕ್ಕು) ಎಲ್ಲ ವರ್ಗಗಳ ಜನರಿಗೂ ಅನ್ವಯಿಸುತ್ತದೆ ಮತ್ತು ಪಟಾಕಿ ನಿಷೇಧ ವಿಚಾರವನ್ನು ಪರಿಗಣಿಸುವ ಮುನ್ನ ಸಮತೋಲನವನ್ನು ಕಾಯ್ದುಕೊಳ್ಳುವ ಬಗ್ಗೆ ಗಮನಿಸುವ ಅಗತ್ಯವಿದೆ ಎಂದೂ ಸುಪ್ರೀಂಕೋರ್ಟ್ ಹೇಳಿತ್ತು.

ಮಾಲಿನ್ಯ ನಿಯಂತ್ರಣ ಮತ್ತು ಪಟಾಕಿಗಳಿಂದ ಸಾರ್ವಜನಿಕರ ಮೇಲೆ ಆಗುವ ದುಷ್ಪರಿಣಾಮಗಳನ್ನು ನಿಗ್ರಹಿಸಲು ಸೂಕ್ತ ಕ್ರಮಗಳನ್ನು ಸಲಹೆ ಮಾಡುವಂತೆ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತಿಲ್ಲ, ಆದರೆ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಪಟಾಕಿ ತಯಾರಕರು ಇದಕ್ಕೆ ಮುನ್ನ ನ್ಯಾಯಾಲಯಕ್ಕೆ ತಿಳಿಸಿದ್ದರು. ವಾಯುಮಾಲಿನ್ಯಕ್ಕೆ ಪಟಾಕಿಯೊಂದೇ ಕಾರಣವಲ್ಲ, ಗಾಳಿ, ಹವಾಮಾನ ಇತ್ಯಾದಿಗಳೂ ವಾಯುಮಾಲಿನ್ಯಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತವೆ ಎಂದು ಅವರು ವಾದಿಸಿದ್ದರು.

ಕಳೆದ ವರ್ಷ  ಅಕ್ಟೋಬರ್ 9ರಂದು ದೀಪಾವಳಿಗೆ ಮುನ್ನವೇ ಸುಪ್ರೀಂಕೋರ್ಟ್ ತಾತ್ಕಾಲಿಕವಾಗಿ ಪಟಾಕಿ ಮಾರಾಟವನ್ನು ನಿಷೇಧಿಸಿತ್ತು. ಆದೇಶವನ್ನು ಸಡಿಲಿಸುವಂತೆ ಮಾರಾಟಗಾರರು ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿತ್ತು.
2017  ಅಕ್ಟೋಬರಿನಲ್ಲಿ ಕನಿಷ್ಠ ದೀಪಾವಳಿಗೆ ಒಂದೆರಡು ದಿನವಾದರೂ ಮುಂಚಿತವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡುವಂತೆ ಮಾರಾಟಗಾರರು ಮನವಿ ಮಾಡಿದ್ದರು.

No comments:

Post a Comment