ನಾನು ಮೆಚ್ಚಿದ ವಾಟ್ಸಪ್

Sunday, October 28, 2018

ಇಂದಿನ ಇತಿಹಾಸ History Today ಅಕ್ಟೋಬರ್ 28

ಇಂದಿನ ಇತಿಹಾಸ History Today ಅಕ್ಟೋಬರ್ 28
2018: ಕೊಲಂಬೋ: ರಾನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ಹುದ್ದೆಯಿಂದ ವಜಾ ಮಾಡಿದ ಮೂರು ದಿನಗಳ ಬಳಿಕ, ಈದಿನ ವಿಕ್ರಮಸಿಂಘೆ ಅವರು ರಾಷ್ಟ್ರದ ಕಾನೂನುಬದ್ಧ ಪ್ರಧಾನಿ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್  ಕರು ಜಯಸೂರ್ಯ  ಮಾನ್ಯತೆ ನೀಡಿದರು. ಇದರೊಂದಿಗೆ ದ್ವೀಪರಾಷ್ಟ್ರವು ಸಾಂವಿಧಾನಿಕ ಅರಾಜಕತೆಯಲ್ಲಿ ಸಿಲುಕಿತು. ತಮನ್ನು ದಿಢೀರನೆ ವಜಾಗೊಳಿಸಿರುವ ಆಘಾತಕಾರಿ ಕ್ರಮವು ಅಕ್ರಮ ಎಂಬುದಾಗಿ ಬಣ್ಣಿಸಿರುವ ವಿಕ್ರಮಸಿಂಘೆ ಅವರು ಅಧಿಕೃತ ನಿವಾಸವನ್ನು ತೆರವುಗೊಳಿಸಲು ನಿರಾಕರಿಸಿದರು. ಮತ್ತು ಬೆಂಬಲ ಕ್ರೋಡೀಕರಣಕ್ಕಾಗಿ ಮಿತ್ರ ಪಕ್ಷಗಳ ಬಿಕ್ಕಟ್ಟು ಸಭೆಗಳನ್ನು ನಡೆಸಿದರು. ಪ್ರಧಾನಿಯಾಗಿ ತಮಗೆ ಒದಗಿಸಲಾಗಿರುವ ಭದ್ರತೆ ಮತ್ತು ಸವಲತ್ತುಗಳನ್ನು ಉಳಿಸಿಕೊಳ್ಳಬೇಕು ಎಂಬುದಾಗಿ ವಿಕ್ರಮಸಿಂಘೆ ಅವರು ಮಾಡಿರುವ ಮನವಿಯು ಬೇರೊಬ್ಬ ಅಭ್ಯರ್ಥಿ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸುವವರೆಗೂ ನ್ಯಾಯೋಚಿತ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಜಯಸೂರ್ಯ ಹೇಳಿದರು. ವಿಕ್ರಮಸಿಂಘೆ ಅವರ ಮನವಿಯು ಪ್ರಜಾಸತ್ತಾತ್ಮಕ ಮತ್ತು ನ್ಯಾಯೋಚಿತ ಎಂಬುದಾಗಿ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಬರೆದ ಪತ್ರದಲ್ಲಿ ಜಯಸೂರ್ಯ ತಿಳಿಸಿದರು.  ಮೂರು  ವಾರಗಳ ಅವಧಿಗೆ ಸಂಸತ್ತನ್ನು ಅಮಾನತುಗೊಳಿಸಿರುವ ಕ್ರಮವು ಹಿಂದೂ ಮಹಾಸಾಗರದ ದ್ವೀಪರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಗೊಳಿಸೀತು ಎಂದೂ ಜಯಸೂರ್ಯ ಅವರು ಅಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ಎಚ್ಚರಿಕೆ ನೀಡಿದರು.
ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿದ ಅಧ್ಯಕ್ಷರು ತಮ್ಮ ಮಾಜಿ ಪ್ರತಿಸ್ಪರ್ಧಿ ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಕ ಮಾಡಿದ್ದರು ಮತ್ತು ತಮ್ಮ ನೇಮಕಾತಿಗೆ ಸವಾಲು ಎಸೆಯುವುದನ್ನು ತಡೆಯಲು ಸಂಸತ್ತನ್ನೇ ಮೂರು ವಾರಗಳ ಅವಧಿಗೆ ಅಮಾನತುಗೊಳಿಸಿದ್ದರು.  ‘ಜನಾದೇಶ ಪಡೆದ ವಿಕ್ರಮಸಿಂಘೆ ಅವರನ್ನು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಉತ್ತಮ ಆಡಳಿತಕ್ಕಾಗಿ ಸರ್ಕಾರದ ನಾಯಕ ಎಂಬುದಾಗಿ ಮಾನ್ಯ ಮಾಡಿರುವುದಾಗಿ ಸ್ಪೀಕರ್ ಜಯಸೂರ್ಯ ಅವರು ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ತಿಳಿಸಿದರು. ಸ್ಪೀಕರ್ ಆಗಿ ಜಯಸೂರ್ಯ ಅವರು ತಟಸ್ಥ ಸ್ಥಾನವನ್ನು ಹೊಂದಿದ್ದಾರೆ. ಆದರೆ ಅವರು ಮೂಲತಃ ಸಿರಿಸೇನಾ ಅವರ ಜೊತೆಗೆ ಶ್ರೀಲಂಕಾದ ಆಡಳಿತ ನಡೆಸಿದ ಸಮ್ಮಿಶ್ರ ಸರ್ಕಾರ ನಡೆಸಿದ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ ಪಿ) ಪಕ್ಷದಿಂದ ಬಂದವರಾಗಿದ್ದಾರೆ. ಪ್ರಧಾನಿ ಸ್ಥಾನದಿಂದ ವಜಾಗೊಳಿಸಿದ ಬೆನ್ನಲ್ಲೇ ಪ್ರಧಾನಿಯಾಗಿ ವಿಕ್ರಮಸಿಂಘೆ ಅವರಿಗೆ ಒದಗಿಸಲಾಗಿದ್ದ ಭದ್ರತೆ ಮತ್ತು ವಾಹನಗಳನ್ನು ಹಿಂತೆಗೆದುಕೊಳ್ಳಲೂ ಸಿರಿಸೇನಾ ಆದೇಶ ನೀಡಿದ್ದರು. ವಿಕ್ರಮಸಿಂಘೆ ಅವರು ತಮ್ಮ ಬಹುಮತ ಸಾಬೀತಿಗಾಗಿ ಶೀಘ್ರದಲ್ಲೇ ಸಂಸತ ಅಧಿವೇಶನ ಕರೆಯಬೇಕು ಎಂದು ಆಗ್ರಹಿಸಿದರೆ, ಸಿರಿಸೇನಾ ಅವರು ಇದಕ್ಕೆ ಬದಲಾಗಿ ಸಂಸತ್ತನ್ನೇ ಅಮಾನತುಗೊಳಿಸಿದ್ದರು.  ‘ನವೆಂಬರ್ ೧೬ರವರೆಗೆ ಸಂಸತ್ ಅಮಾನತನ್ನು ಮುಂದುವರೆಸುವುದರಿಂದ ನಮ್ಮ ರಾಷ್ಟ್ರದ ಮೇಲೆ ಅನಪೇಕ್ಷಣೀಯವಾದ ಗಂಭೀರ ಪರಿಣಾಮಗಳಿಗೆ ಕಾರಣವಾಗುತ್ತದೆ. ಆದ್ದರಿಂದ ನಿಮ್ಮ ನಿರ್ಧಾರವನ್ನು ದಯವಿಟ್ಟು ಹಿಂತೆಗೆದುಕೊಳ್ಳಿ ಎಂದು ಜಯಸೂರ್ಯ ಅಧ್ಯಕ್ಷರಿಗೆ ಮನವಿ ಮಾಡಿದರು.  ಸಂಸತ್ತನ್ನು ಅಮಾನತುಗೊಳಿಸುವ ಮುನ್ನ ಸಿರಿಸೇನಾ ಅವರು ತಮ್ಮ ಜೊತೆ ಸಮಾಲೋಚನೆ ನಡೆಸುವಲ್ಲೂ ವಿಫಲರಾಗಿದ್ದಾರೆ ಎಂದು ಜಯಸೂರ್ಯ ಬೊಟ್ಟು ಮಾಡಿದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಾಜಪಕ್ಸೆ ಅವರು ರಾಷ್ಟ್ರದ ಉನ್ನತ ಬೌದ್ಧ ಭಿಕ್ಷುಗಳ ಆಶೀರ್ವಾದ ಪಡೆಯುವ ಸಲುವಾಗಿ ಕೇಂದ್ರೀಯ ಕ್ಯಾಂಡಿ ಪಟ್ಟಣಕ್ಕೆ ಪ್ರಯಾಣ ಮಾಡಿದರು. ಇತ್ತ ವಿಕ್ರಮಸಿಂಘೆ ಅವರ ಟೆಂಪಲ್ ಟ್ರೀ ನಿವಾಸದ ಹೊರಗೆ ಹೊರಭಾಗದಲ್ಲಿ ಸಹಸ್ರಾರು ಮಂದಿ ಬೆಂಬಲಿಗರು ಜಮಾಯಿಸಿದ್ದು ಅನತಿ ದೂರದಲ್ಲೇ ಸೇನಾ ಪಡೆಗಳೂ ಜಮಾವಣೆಗೊಂಡು ನಿಂತವು..  ಅದೇ ರೀತಿ ಅಧ್ಯಕ್ಷರ ಕಚೇರಿ ಸಮೀಪವೂ ಸೈನಿಕರು ಜಮಾಯಿಸಿದರು. ಪ್ರಸ್ತುತ ಪರಿಸ್ಥಿತಿಯಲ್ಲಿ ವಿಕ್ರಮಸಿಂಘೆ (೬೯) ಅವರನ್ನು ತೆರವುಗೊಳಿಸಲು ಪೊಲೀಸರು ಕೋರ್ಟಿನ ಮೊರೆಹೋಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರುಸಂಯಮಕ್ಕೆ ಕರೆ: ಭಾರತ ಸೇರಿದಂತೆ ನೆರೆಹೊರೆಯ ದೇಶಗಳು ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಉಭಯ ಕಡೆಗಳಿಗೂ ಸಂಯಮ ತೋರುವಂತೆ ಮತ್ತು ಸಂವಿಧಾನವನ್ನು ಗೌರವಿಸುವಂತೆ ಸೂಚಿಸಿದವು. ಎರಡು ದಶಕಗಳ ಕಾಲ ಆಡಳಿತ ನಡೆಸಿದ್ದ ಮತ್ತು ತಮಿಳು ಟೈಗರ್ಗಳ ಹುಟ್ಟಡಗಿಸಿದ್ದ ಮಹಿಂದ ರಾಜಪಕ್ಸೆ ಅವರ ನಿಷ್ಠರು ರಾಷ್ಟ್ರದ ರಾಜಧಾನಿಯಲ್ಲಿನ ಸರ್ಕಾರಿ ಸ್ವಾಮ್ಯದ ಎರಡು ಟೆಲಿವಿಷನ್ ಚಾನೆಲ್ಗಳ ಮೇಲೆ ಈಗಲೂ  ತಮ್ಮ ನಿಯಂತ್ರಣ ಹೊಂದಿದ್ದಾರೆ. ರಾಜಪಕ್ಸೆ ಅವರು ಚೀನಾದ ಜೊತೆಗೆ ಹೆಚ್ಚಿನ ಸಾಮೀಪ್ಯ ಹೊಂದಿದ್ದರೆ, ವಿಕ್ರಮಸಿಂಘೆ ಅವರು ಭಾರತ ಸೇರಿದಂತೆ ಪ್ರಾದೇಶಿಕ ನೆರೆಹೊರೆ ದೇಶಗಳ ಜೊತೆಗೆ ಪ್ರಬಲ ಬಾಂಧವ್ಯ ಸ್ಥಾಪನೆಗೆ ಯತ್ನಿಸಿದ್ದರು. ನೆರೆಯ ಮಾಲ್ದೀವ್ಸ್ ನಲ್ಲಿ ಅಧ್ಯಕ್ಷರ ಚುನಾವಣಾ ಬಿಕ್ಕಟ್ಟಿನ ಬಳಿಕ ಇದೀಗ ಶ್ರೀಲಂಕಾ ಬಿಕ್ಕಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿಂದೂ ಮಹಾಸಾಗರ ದೇಶಗಳ ಕುರಿತು ಗಮನ ಸೆಳೆಯಿತು. ಕೊಲಂಬೋದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮೇಲೆ ನಿರಂತರ ಗಮನ ಇಟ್ಟಿರುವ ಭಾರತವುನಿಕಟ ಮಿತ್ರರಾಷ್ಟ್ರವಾಗಿರುವ ಶ್ರೀಲಂಕಾದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಾಂವಿಧಾನಿಕ ಪ್ರಕ್ರಿಯೆಯನ್ನು ಗೌರವಿಸಲಾಗುತ್ತದೆ ಎಂದು ಹಾರೈಸಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದರು. ಭಾರತವು ಶ್ರೀಲಂಕೆಗೆ ತನ್ನ ಅಭಿವೃದ್ಧಿ ನೆರವನ್ನು ಮುಂದುವರೆಸುವುದು ಎಂದು ಅವರು ನುಡಿದರು.

2018: ಪಾಟ್ನಾ: ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜನತಾದಳ (ಸಂಯುಕ್ತ) ಲೋಕಸಭಾ ಚುನಾವಣೆಗಾಗಿ ಬಿಹಾರಿನಲ್ಲಿ ಸ್ಥಾನಗಳನ್ನು ಸಮಾನವಾಗಿ ಹಂಚಿಕೊಳ್ಳಲು ನಿರ್ಧರಿಸಿದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ವಿರೋಧಿ ಮಹಾಮೈತ್ರಿಯ ಮಿತ್ರ ಪಕ್ಷ ರಾಷ್ಟ್ರೀಯ ಜನತಾದಳ (ಆರ್ ಜೆಡಿ) ಜೊತೆಗೆ ೨೦-೨೦ ಸೀಟು ಹಂಚಿಕೆ ಸೂತ್ರವನ್ನು ಮುಂದಿಟ್ಟಿತು. ಇದರೊಂದಿಗೆ ವಿರೋಧ ಮಹಾಮೈತ್ರಿಯ ಸೀಟು ಹಂಚಿಕೆಗೆ ಹೊಸ ತಿರುವು ಲಭಿಸಿತು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ ಜೊತೆಗಿನ ಹೋರಾಟದಲ್ಲಿ ತನ್ನನ್ನು ತಾನೇ ಪ್ರಮುಖ ಆಟಗಾರನನ್ನಾಗಿ ಭಾವಿಸಿಕೊಂಡಿರುವ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಮಹಾಮೈತ್ರಿ ಶಿಬಿರದಲ್ಲಿ ೨೦ ಸ್ಥಾನಗಳನ್ನು ತಾನು ತೆಗೆದುಕೊಂಡು ೨೦ ಸ್ಥಾನಗಳನ್ನು ಆರ್ ಜೆಡಿಗೆ ಬಿಡುವ ಸೂತ್ರ ಮುಂದಿಟ್ಟಿತು. ಇದರಿಂದ ಪಕ್ಷದ ಪಾಲಿನಲ್ಲೇ ಇತರ ಪಕ್ಷಗಳಿಗೂ ಅವಕಾಶ ಕಲ್ಪಿಸಲು ಅನುಕೂಲವಾಗಲಿದೆ. ೨೦೨೦ರ ವಿಧಾನಸಭಾ ಚುನಾವಣೆಯಲ್ಲಿ ಪಾತ್ರ ಬದಲಾಯಿಸಲು ಪಕ್ಷ ಸಿದ್ಧವಿದೆ. ಎನ್ ಡಿಎಯಿಂದ ಬರಬಹುದಾದ ಪಕ್ಷಕ್ಕೆ ತನ್ನ ೨೦ ಸೀಟುಗಳ ಕೋಟಾದಿಂದ ಸ್ಥಾನಕಲ್ಪಿಸಲು ಇದರಿಂದ ಪಕ್ಷಕ್ಕೆ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ಕಾಯಾಧ್ಯಕ್ಷ ಕೌಕಾಬ್ ಖಾದ್ರಿ ಹೇಳಿದರು. ಪ್ರಾಥಮಿಕ ಹೊಂದಾಣಿಕೆಗಳ ಪ್ರಕಾರ ಆರ್ ಜೆಡಿ ೨೦-೨೨ ಸ್ಥಾನಗಳಿಗೆ ಸ್ಪರ್ಧಿಸಿ, ಉಳಿದ ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಹಂಚಲು ಬಯಸಿದೆ. ಸೂತ್ರದಂತೆ ಕಾಂಗ್ರೆಸ್ ಪಕ್ಷಕ್ಕೆ , ಹಿಂದುಸ್ಥಾನಿ ಆವಾಮ್ ಮೋರ್ಚಾಕ್ಕೆ (-), ಎಡ ಪಕ್ಷಗಳಿಗೆ , ಲೋಕತಾಂತ್ರಿಕ ಜನತಾದಳ, ಸಮಾಜವಾದಿ ಪಕ್ಷಗಳಿಗೆ ತಲಾ ಸ್ಥಾನ ಲಭಿಸುವುದು. ಕೇಂದ್ರ ಸಚಿವ ಉಪೇಂದ್ರ ಕುಶವಾಹ ನೇತೃತ್ವದ ರಾಷ್ಟ್ರೀಯ ಲೋಕಸಮತಾ ಪಕ್ಷವು ಮಹಾಮೈತ್ರಿಗೆ ಬಂದರೆ ಸ್ಥಾನ ಮೀಸಲಿರಿಸಲು ಅದು ಬಯಸಿತು. ಕಾಂಗ್ರೆಸ್ ಪಕ್ಷವು ಎಂದೂ ನಿರ್ಣಾಯಕ ಹೋರಾಟದಲ್ಲಿ ಬಿ-ಟೀಮ್ ಆಗಲು ಸಾಧ್ಯವಿಲ್ಲ. ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಲ್ಲಿ ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ನಾಯಕರಾಗಲಿದ್ದಾರೆ. ಮೈತ್ರಿ ಸರ್ಕಾರ ನಡೆಸುವ ಸಾಮರ್ಥ್ಯವನ್ನು ನಾವು ತೋರಿಸಿದ್ದೇವೆ ಎಂದು ಖಾದ್ರಿ ನುಡಿದರು. ಏನಿದ್ದರೂ, ಆರ್ ಜೆಡಿ ಶಾಸಕ ಹಾಗೂ ಪಕ್ಷದ ವಕ್ತಾರ ಭಾಯಿ ಬೀರೇಂದ್ರ ಅವರು ಮಹಾಮೈತ್ರಿಯ ಸೀಟು ಹಂಚಿಕೆ ಬಹುತೇಕ ಪೂರ್ಣಗೊಂಡಿದೆ. ಇದರಲ್ಲಿ ಯಾವುದೇ ವಿವಾದವೂ ಇಲ್ಲ. ನಾವು ಇದನ್ನು ಪತ್ರಿಕಾಗೋಷ್ಠಿಯಲ್ಲಿ (ಎನ್ ಡಿಎ ರೀತಿ) ಪ್ರಕಟಿಸಬೇಕಾಗಿಲ್ಲ. ಛಾತ್ ಉತ್ಸವದ ಬಳಿಕ ಅಥವಾ ನವೆಂಬರ್ ಕೊನೆಗೆ ಎಲ್ಲವೂ ಬಹಿರಂಗವಾಗುತ್ತದೆ ಎಂದು ಹೇಳಿದರುಬಿಹಾರ ಕಾಂಗ್ರೆಸ್ ಅಧ್ಯಕ್ಷ ಮದನ್ ಮೋಹನ್ ಝಾ ಅವರು ಎಐಸಿಸಿ ಮುಖ್ಯಸ್ಥರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ್ದು, ಮಿತ್ರ ಪಕ್ಷಗಳ ಜೊತೆಗೆ ಪ್ರಾಥಮಿಕ ಮಾತುಕತೆ ನಡೆಸಲು ಅವರಿಗೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಮಹಾಮೈತ್ರಿಯ ಅಂಗಪಕ್ಷಗಳು ಈವರೆಗೆ ಬಹಿರಂಗ ಪ್ರತಿಭಟನೆ ನಡೆಸುವಲ್ಲಿ ಸಂಯಮ ವಹಿಸಿವೆ. ಆದರೆ ಸ್ಥಾನ ಹಂಚಿಕೆ ಅಂತಿಮಗೊಂಡ ಬಳಿಕವೂ ಸಂಯಮ ಇರುತ್ತದೆಯೇ ಎಂಬ ಪ್ರಶ್ನೆ ಇದೀಗ ರಾಜಕೀಯ ವರ್ತುಲಗಳಲ್ಲಿ ಎದ್ದಿತು.

2018: ತಿರುವನಂತಪುರಂ: ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಇಸ್ರೋ ಮಾಜಿ ಮುಖ್ಯಸ್ಥ ಮಾಧವನ್ ನಾಯರ್ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಮುಖ್ಯಸ್ಥ ಜಿ. ರಾಮನ್ ನಾಯರ್ ಅವರು ಸೇರಿದಂತೆ ಐವರು ಗಣ್ಯರು ಕೇರಳದಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಮಾಧವನ್ ನಾಯರ್, ರಾಜ್ಯ ಮಹಿಳಾ ಆಯೋಗದ ಸದಸ್ಯೆ ಜೆ. ಪ್ರಮೀಳಾ ದೇವಿ, ಜನತಾದಳ (ಎಸ್) ಮಾಜಿ ಜಿಲ್ಲಾ ಉಪಾಧ್ಯಕ್ಷ ಕರಕುಲಂ ದಿವಾಕರನ್ ಮತ್ತು ಮಲಂಕಾರ ಚರ್ಚ್ ಥಾಮಸ್ ಜಾನ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಸಮ್ಮುಖದಲ್ಲಿ ಪಕ್ಷದ ಸದಸ್ಯತ್ವ ನೀಡಿ ಬರಮಾಡಿಕೊಳ್ಳಲಾಯಿತು.
೨೦೦೩ರಿಂದ ೨೦೦೯ರವರೆಗೆ ಇಸ್ರೋ ಮುಖ್ಯಸ್ಥರಾಗಿದ್ದ ಮಾಧವನ್ ನಾಯರ್ ಅವರು ಭಾರತದ ಪ್ರಪ್ರಥಮ ಚಂದ್ರಯಾನ ಯೋಜನೆಯ ಉಸ್ತುವಾರಿ ವಹಿಸಿದ್ದರು. ಬಳಿಕ ಅವರು ಆಂಟ್ರಿಕ್ಸ್-ದೇವಾಸ್ ವ್ಯವಹಾರ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಬೊಕ್ಕಸಕ್ಕೆ ೫೭೮ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ ಆಪಾದನೆ ಹೊರಿಸಿ ೨೦೧೬ರ ಆಗಸ್ಟ್ ತಿಂಗಳಲ್ಲಿ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ಶೀಟ್) ಮಾಧವನ್ ನಾಯರ್ ಅವರ ಹೆಸರೂ ಸೇರ್ಪಡೆಯಾಗಿತ್ತು. ಖಾಸಗಿ ಮಲ್ಟಿಮೀಡಿಯಾ ಕಂಪೆನಿ ದೇವಾಸ್ ಮತ್ತು ಇಸ್ರೋದ ವಾಣಿಜ್ಯ ವಿಭಾಗವಾದ ಆಂಟ್ರಿಕ್ಸ್ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು., ಸ್ವಲಾಭ ಮಾಡಿಕೊಳ್ಳುವ ಸಲುವಾಗಿ ಆಂಟ್ರಿಕ್ಸ್ ಕಾರ್ಪೋರೇಷನ್ ಮತ್ತು ಇಸ್ರೋಕ್ಕೆ ನಷ್ಟ ಉಂಟು ಮಾಡಲು ಆರೋಪಿಗಳು ಕ್ರಿಮಿನಲ್ ಸಂಚು ಹೆಣೆದಿದ್ದರು ಎಂದು ಸಿಬಿಐ ತನ್ನ ಚಾರ್ಜ್ಶೀಟಿನಲ್ಲಿ ಆಪಾದಿಸಿತ್ತು. ತಾವು ಪ್ರಧಾನಿ ನರೇಂದ್ರ ಮೋದಿ ಅವರ ಸಿದ್ಧಾಂತದಲ್ಲಿ ಆಸಕ್ತರಾಗಿರುವುದಾಗಿ ಮಾಧವನ್ ನಾಯರ್ ಹೇಳಿದ್ದಾರೆ. ’ನಾನು ಕೆಲ ಸಮಯದಿಂದ ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದೆ. ಆದರೆ ಶನಿವಾರ ಅಮಿತ್ ಶಾ ಜಿ ಅವರು ನನ್ನನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿದ್ದಾರೆ. ನಾನು ಮೋದಿಜಿ ಅವರ ಭಾರತ ಅಭಿವೃದ್ಧಿಯ ಸಿದ್ಧಾಂತದ ಬಗ್ಗೆ ಆಸಕ್ತಿ ಹೊಂದಿದ್ದು ಕಾರಣದಿಂದ ಬಿಜೆಪಿಗಾಗಿ ಕೆಲಸ ಮಾಡಬಯಸಿದ್ದೇನೆ ಎಂದು ಮಾಧವನ್ ನಾಯರ್ ಹೇಳಿದರು. ಮೋದಿಯವರ ರಾಷ್ಟ್ರ ನಿರ್ಮಾಣ ಕಾರ್ಯಸೂಚಿಗೆ ತಾಂತ್ರಿಕ ಸಾಮರ್ಥ್ಯವನ್ನು ಒದಗಿಸಲು ತಾವು ನೆರವಾಗುವುದಾಗಿ ಮಾಜಿ ಇಸ್ರೋ ಮುಖ್ಯಸ್ಥ ಪತ್ರಕರ್ತರಿಗೆ ತಿಳಿಸಿದರು. ’ಇದರ ಹೊರತಾಗಿ ನನ್ನ ಮನಸ್ಸಿನಲ್ಲಿ ಬೇರೇನೂ ಇಲ್ಲ ಎಂದು ಅವರು ಹೇಳಿದರು. ಅಮಿತ್ ಶಾ ಅವರು ಕಣ್ಣೂರಿನಲ್ಲಿ ಪಕ್ಷವು ಅಯ್ಯಪ್ಪಸ್ವಾಮಿ ಭಕ್ತರ ಜೊತೆಗೆ ಕಲ್ಲಿನಂತೆ ನಿಂತಿದೆ ಎಂಬುದಾಗಿ ಘೋಷಿಸಿದ ಬೆನ್ನಲ್ಲೇ ತಿರುವಾಂಕೂರು ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಜಿ. ರಾಮನ್ ಅವರು ಕಾಂಗ್ರೆಸ್ ನೌಕೆಯಿಂದ ಬಿಜೆಪಿಗೆ ಹಾರಿರುವುದು ಮಹತ್ವ ಪಡೆದಿದೆ. ಕೇರಳದಲ್ಲಿ ರಾಜ್ಯ ಸರ್ಕಾರವು ಶಬರಿಮಲೈ ದೇವಾಲಯದ ವಿವಾದಕ್ಕೆ ಸಂಬಂಧಿಸಿದಂತೆ ಅಯ್ಯಪ್ಪ ಸ್ವಾಮಿ ಭಕ್ತರ ಪ್ರತಿಭಟನೆಯನ್ನು ದಮನಿಸಲು ಬಲಪ್ರಯೋಗ ನಡೆಸುವ ಮೂಲಕಬೆಂಕಿಯೊಂದಿಗೆ ಸರಸವಾಡುತ್ತಿದೆ ಎಂದು ದೂರಿದ್ದ ಅಮಿತ್ ಶಾ ಅವರುಕೇರಳದಲ್ಲಿ ತುರ್ತುಪರಿಸ್ಥಿತಿಯಂತಹ ಸನ್ನಿವೇಶ ಸೃಷ್ಟಿಯಾಗಿದೆ ಎಂದು ಹೇಳಿದ್ದರು. ದೇವಾಲಯಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ಕಲ್ಪಿಸುವುದನ್ನು ಪ್ರತಿಭಟಿಸಿ ಶಬರಿಮಲೈ, ನೀಲಕ್ಕಲ್ ಮತ್ತು ಪಂಬಾ ಸೇರಿದಂತೆ ಕೇರಳದ ವಿವಿಧ ಸ್ಥಳಗಳಲ್ಲಿ ಭಕ್ತರಿಂದ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಅಕ್ಟೋಬರ್ ೧೭ರಿಂದ ೨೨ರವರೆಗಿನ ಐದು ದಿನಗಳ ಅವಧಿಯಲ್ಲಿ ಶಬರಿಮಲೈ ದೇವಾಲಯದ ಬಾಗಿಲುಗಳನ್ನು ಮಾಸಿಕ ಪೂಜೆಗಾಗಿ ತೆರೆದಿದ್ದಾಗ, ಸುಪ್ರೀಂಕೋರ್ಟ್ ತೀರ್ಪನ್ನು ಅನುಷ್ಠಾನಗೊಳಸಲು ಕೇರಳ ಸರ್ಕಾರ ಕೈಗೊಂಡ ನಿರ್ಧಾರದ ವಿರುದ್ಧ ಅಯ್ಯಪ್ಪ ಭಕ್ತರಿಂದ ತೀವ್ರ ಪ್ರತಿಭಟನೆ ನಡೆದ ಪರಿಣಾಮವಾಗಿ ಮಹಿಳೆಯರಿಗೆ ದೇವಾಲಯ ಪ್ರವೇಶ ಸಾಧ್ಯವಾಗಿರಲಿಲ್ಲ.

2018: ಕೊಲಂಬೋ: ಪ್ರಧಾನಿ ರಾನಿಲ್ ವಿಕ್ರಮಸಿಂಘೆ ವಜಾದಿಂದ ಉದ್ಭವಿಸಿರುವ ಸಾಂವಿಧಾನಿಕ ಬಿಕ್ಕಟ್ಟು ಹಿಂಸೆಗೆ ತಿರುಗಿ, ಮಾಜಿ ಸಚಿವರೊಬ್ಬರ ಅಂಗರಕ್ಷಕ ಗುಂಡು ಹಾರಿಸಿದ ಪರಿಣಾಮವಾಗಿ ಒಬ್ಬ ವ್ಯಕ್ತಿ ಮೃತನಾಗಿ ಇತರ ಇಬ್ಬರು ಗಾಯಗೊಂಡರು. ರಾನಿಲ್ ವಿಕ್ರಮಸಿಂಘೆ ಅವರಿಗೆ ನಿಷ್ಠರಾಗಿರುವ ಪೆಟ್ರೋಲಿಯಂ ಸಚಿವ ಅರ್ಜುನ ರಣತುಂಗ ಅವರ ಅಂಗರಕ್ಷಕ, ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿ ನಿಷ್ಠರಾದ ಜನರ ಗುಂಪು ಸಂಪುಟ ಸಚಿವರಿಗೆ ಬೆದರಿಕೆ ಹಾಕಿದಾಗ ಐದು ಸುತ್ತು ಗುಂಡು ಹಾರಿಸಿದ ಎಂದು ಪೊಲೀಸರು ತಿಳಿಸಿದರು. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ, ಮಹಿಂದ ರಾಜಪಕ್ಸೆ ಅವರನ್ನು ನೂತನ ಪ್ರಧಾನಿಯಾಗಿ ನೇಮಿಸಿದ್ದರಿಂದ ಉದ್ಭವಿಸಿದ ಸಾಂವಿಧಾನಿಕ ಬಿಕ್ಕಟ್ಟಿನ ಬಳಿಕ ಬಂದಿರುವ ಹಿಂಸಾಚಾರದ ಮೊದಲ ವರದಿ ಇದು ಎಂದು ಮೂಲಗಳು ಹೇಳಿದವು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅತ್ಯಂತ ವಿಶ್ವಾಸಾರ್ಹ ಗೆಳೆಯರಲ್ಲಿ ಒಬ್ಬರು ಎಂಬುದಾಗಿ ಬಣ್ಣಿಸಿದ ಜಪಾನ್ ಪ್ರಧಾನಿ ಶಿಂಝೊ ಅಬೆ ಅವರು ಭಾರತದ ನಾಯಕನ ಜೊತೆಗೂಡಿ ಭಾರತ-ಫೆಸಿಫಿಕ್ ಮುಕ್ತ ವ್ಯಾಪಾರ ವ್ಯವಹಾರಕ್ಕಾಗಿ ಭಾರತದ ಜೊತೆಗಿನ ದ್ವಿಪಕ್ಷೀಯ ಸಹಕಾರವನ್ನು ಇನ್ನಷ್ಟು ಬಲಪಡಿಸಲು ತಾವು ಇಚ್ಛಿಸುವುದಾಗಿ ಹೇಳಿದರು. ಜಪಾನಿನಲ್ಲಿ ಉಭಯ ನಾಯಕರ ಶೃಂಗಸಭೆಗೆ ಒಂದು ದಿನ ಮುಂಚಿತವಾಗಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಸಂದೇಶದಲ್ಲಿ ಅಬೆ ಅವರು ಭಾರತವು ಪ್ರದೇಶ ಮತ್ತು ಜಗತ್ತಿನ ಸಮೃದ್ಧಿಯನ್ನು ಜಾಗತಿಕ ಶಕ್ತಿಯನ್ನಾಗಿ ಮುನ್ನಡೆಸುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿಯವರು ಅವರು ತಮ್ಮ ಮಹಾನ್ ರಾಷ್ಟ್ರದ ಅಪ್ರತಿಮ ನಾಯಕ ಎಂದು ಜಪಾನ್ ಪ್ರಧಾನಿ ಹೇಳಿ್ದರು. ‘ಭಾರತ ಮತ್ತು ಜಪಾನ್ ನಡುವಣ ಬಾಂಧವ್ಯವು ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಸಾಧ್ಯತೆಗಳ ಆಶೀರ್ವಾದ ಪಡೆದಿದೆ ಎಂಬುದಾಗಿ ನಾನು ಯಾವಾಗಲೂ ನಂಬಿದ್ದೇನೆ ಮತ್ತು ಹೇಳುತ್ತಲೂ ಬಂದಿದ್ದೇನೆ ಎಂದು ಅಬೆ ತಿಳಿಸಿದರು. ಭದ್ರತೆ, ಹೂಡಿಕೆ, ಮಾಹಿತಿ ತಂತ್ರಜ್ಞಾನ, ಕೃಷಿ, ಆರೋಗ್ಯ, ಪರಿಸರ ಮತ್ತು ಪ್ರವಾಸೋದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಜಪಾನ್ - ಭಾರತ ಸಹಕಾರ ವಿಸ್ತೃತವಾಗಿ ಮುಂದುವರೆದಿದೆ ಎಂದು ಅಬೆ ಹೇಳಿದರು. ಎಲ್ಲ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದ ಯಶಸ್ಸನ್ನು ನಾವು ಹಂಚಿಕೊಂಡಿದ್ದೇವೆ. ಜಪಾನ್ ಭಾರತದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಮತ್ತು ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಹೈಸ್ಪೀಡ್ ರೈಲು, ಸಬ್ ವೇಗಳು ಮತ್ತು ಇತರ ಮೂಲಸವಲತ್ತುಗಳನ್ನು ಒದಗಿಸುವ ಮತ್ತು ಜಪಾನಿನ ವಿಶ್ವವ್ಯಾಪಿ ತಂತ್ರಜ್ಞಾನವನ್ನು ಒದಗಿಸುವ ಬದ್ಧತೆಯನ್ನು ಮುಂದುವರೆಸುತ್ತದೆ ಎಂದು ಅವರು ಹೇಳಿದರು. ಜಪಾನಿನ ಶಿಂಕನ್ಸೇನ್ ಬುಲೆಟ್ ರೈಲುಗಳು ಮುಂಬೈ ಮತ್ತು ಅಹಮದಾಬಾದ್ ಮಧ್ಯೆ ಸಹಕಾರದೊಂದಿಗೆ ಓಡಲು ಆರಂಭಿಸುವ ದಿನವು ಭವಿಷ್ಯದಲ್ಲಿ ಜಪಾನ್- ಭಾರತದ ಮೈತ್ರಿಯ ಸಂಕೇತವಾಗಿ ಹೊಳೆಯಲಿದೆ ಎಂದು ಅಬೆ ತಿಳಿಸಿದರು.  ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿಯವರು ನನ್ನ ಅತ್ಯಂತ ವಿಶ್ವಾಸಾರ್ಹ ಮತ್ತು ಮೌಲ್ಯಯುತ ಗೆಳೆಯರಲ್ಲಿ ಒಬ್ಬರು. ಇಡೀ ಜಪಾನ್ ಸರ್ಕಾರದ ಪರವಾಗಿ, ಅವರಿಗೆ ಅತ್ಯಂತ ಹಾರ್ದಿಕ ಸ್ವಾಗತ ನೀಡಲು ನನಗೆ ಅತ್ಯಂತ ಹರ್ಷವಾಗುತ್ತದೆ ಎಂದು ಅಬೆ ಸಂದೇಶ ತಿಳಿಸಿತು.

2018: ಚೆನ್ನೈ: ತಮಿಳು ಚಿತ್ರನಟ ರಜನೀಕಾಂತ್ ಅವರನ್ನುಬಿಜೆಪಿ ಕೈಗೊಂಬೆ ಎಂಬುದಾಗಿ ವಾರ ಪ್ರಕಟಗೊಂಡ ತನ್ನ ಲೇಖನವೊಂದರಲ್ಲಿ ಟೀಕಿಸಿದ್ದಕ್ಕಾಗಿ ಡಿಎಂಕೆ ಮುಖವಾಣಿಮುರಸೋಳಿ ಈದಿನ ವಿಷಾದ ವ್ಯಕ್ತ ಪಡಿಸಿತು. ‘ನಮ್ಮ ಲೇಖನವು ಸೂಪರ್ ಸ್ಟಾರ್ ರಜನೀಕಾಂತ್ ಅವರ ಅಭಿಮಾನಿಗಳನ್ನು ನೋಯಿಸಿದೆ ಎಂಬುದು ನಮಗೆ ತಿಳಿದು ಬಂದ ಕಾರಣ, ನಮ್ಮ ಸಂಪಾದಕೀಯ ತಂಡವು ಇಂತಹ ಟೀಕೆಗಳನ್ನು ಬಳಸದಿರಲು ಸೂಚನೆ ನೀಡಿದೆ. ರಜನೀಕಾಂತ್ ವಿರುದ್ಧ ಲೇಖನ ಪ್ರಕಟಿಸಿದ್ದಕ್ಕಾಗಿ ನಾವು ವಿಷಾದಿಸುತ್ತೇವೆ ಎಂದು ಹೇಳಿಕೆ ತಿಳಿಸಿತು. ಪಕ್ಷದ ಪಿತಾಮಹ ಎಂ. ಕರುಣಾನಿಧಿ ಅವರು ೧೯೪೨ರಲ್ಲಿ ಕೈಬರಹದ ಪತ್ರಿಕೆಯಾಗಿ ಆರಂಭಿಸಿದ್ದ ಮುರಸೋಳಿ ಪತ್ರಿಕೆ ತಾನು ಪ್ರಕಟಿಸಿದ ಲೇಖನಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದು ಇದೇ ಪ್ರಪ್ರಥಮ.



2016: ನವದೆಹಲಿ/ ಜಮ್ಮು: ಪೂಂಚ್ ಜಿಲ್ಲೆಯ ಮೆಂಡರ್ ವಿಭಾಗದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಗೆ ಈದಿನ ಎರಡನೇ ನಾಗರಿಕ ಬಲಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಸೇಡು ತೀರಿಸಿಕೊಂಡಿರುವ ಭಾರತ ಕನಿಷ್ಠ 15 ಮಂದಿ ಪಾಕಿಸ್ತಾನಿ ರೇಂಜರ್ಗಳನ್ನು ಕೊಂದು ಹಾಕಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್) ತಿಳಿಸಿತು. ಭಾರತದ ಪ್ರತಿದಾಳಿಗೆ  ಹಿಂದಿನ ದಿನ ಕೂಡಾ ಒಬ್ಬ ಪಾಕಿಸ್ತಾನಿ ರೇಂಜರ್ ಹತನಾಗಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಪಾಕಿಸ್ತಾನಿ ಪಡೆಗಳು ಐದು ವಿಭಾಗಗಳ ನೈಜ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿದವು.  ನಾವು ಎಂದಿಗೂ ನಾಗರಿಕರ ಮೇಲೆ ಗುಂಡು ಹಾರಿಸುವುದಿಲ್ಲ. ಆದರೆ ಪಾಕಿಸ್ತಾನ ಮೊದಲು ಗುಂಡು ಹಾರಿಸಿದರೆ, ಖಂಡಿತವಾಗಿ ನಾವು ಸೇಡು ತೀರಿಸಿಕೊಳ್ಳುತ್ತೇವೆ ಎಂದು ಗಡಿ ಭದ್ರತಾ ಪಡೆಯ ಎಡಿಜಿ ಅರುಣ್ ಕುಮಾರ್ ಹೇಳಿದರು.. ಕಡೆಯಲ್ಲಿ ಎಷ್ಟು ಸಾವು ನೋವು ಸಂಭವಿಸಿದೆ ಎಂಬುದು ನಮಗೆ ಸ್ಪಷ್ಟವಾಗಿಲ್ಲ. ಆದರೆ ಅಂದಾಜು 15 ಮಂದಿ ಪಾಕ್ ಸೈನಿಕರು ಸತ್ತಿದ್ದಾರೆ ಎಂದು ಅವರು ನುಡಿದರು. ಹಿಂದಿನ ದಿನ  ನಡೆದ ಪಾಕ್ ದಾಳಿಯಲ್ಲಿ ಒಬ್ಬ ಬಿಎಸ್ಎಫ್ ಯೋಧ ಹುತಾತ್ಮನಾಗಿದ್ದು, 13 ಮಂದಿ ನಾಗರಿಕರು ಗಾಯಗೊಂಡಿದ್ದರು. ಭಾರತವು ಸೆಪ್ಟೆಂಬರ್ 28-29ರಂದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರ ವಿರುದ್ಧ ಸೀಮಿತ ದಾಳಿ ನಡೆಸಿದಂದಿನಿಂದ ಈವರೆಗೆ ನಾಲ್ವರು ಭದ್ರತಾ ಸಿಬ್ಬಂದಿ ಸೇರಿದಂತೆ ಐವರು ಭಾರತೀಯರು ಪಾಕಿಸ್ತಾನದ ಕದನವಿರಾಮ ಉಲ್ಲಂಘನೆಯಿಂದ ಸಾವನ್ನಪ್ಪಿದ್ದು, 34 ಮಂದಿ ಗಾಯಗೊಂಡಿದ್ದಾರೆ. ಎರಡನೇ ನಾಗರಿಕ ಈದಿನ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿದವು.
 
2016: ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಬಂಧಿತನಾದ ಮೆಹಮೂದ್ಅಖ್ತರ್ಪಾಕ್
ಹೈಕಮಿಷನ್ಸಿಬ್ಬಂದಿ, ಪಶ್ಚಿಮ ಕರಾವಳಿಯಲ್ಲಿ ಭಾರತೀಯ ರಕ್ಷಣಾ ಪಡೆಗಳು ನಿಯೋಜಿತವಾಗಿರುವ ಮಾಹಿತಿಯನ್ನು ಸಂಗ್ರಹಿಸಿ 2008ರಲ್ಲಿ ಮುಂಬೈ ದಾಳಿ ರೀತಿಯಲ್ಲಿ ಉಗ್ರ ದಾಳಿ ನಡೆಸಲು ಸಂಚು ಹೂಡಿದ್ದ ಎನ್ನಲಾಯಿತು. ಈತ  ಪಶ್ಚಿಮ ಕರಾವಳಿ, ಸರ್ ಕ್ರೀಕ್, ಕಚ್ ಪ್ರದೇಶ ಮತ್ತು ಗುಜರಾತ್, ಮಹಾರಾಷ್ಟ್ರ ಗೋವಾದಲ್ಲಿನ ಮಿಲಿಟರಿ ನಿಯೋಜನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದರು. ಭಾರತದಲ್ಲಿ ಮುಂಬೈ ದಾಳಿ ಮಾದರಿಯ ಉಗ್ರ ಕೃತ್ಯ ನಡೆಸುವುದಕ್ಕಾಗಿ ಪಾಕಿಸ್ತಾನದ ಐಎಸ್ಐ ಸಮುದ್ರ ಮಾರ್ಗವಾಗಿ ಉಗ್ರರನ್ನು ಕಳುಹಿಸಲು ಯೋಜನೆ ರೂಪಿಸಿತ್ತು. ನಿರ್ದೇಶನದ ಪ್ರಕಾರ ಅಖ್ತರ್ ಪಶ್ಚಿಮ ಕರಾವಳಿ ಬಗ್ಗೆ ಮಾಹಿತಿ  ಸಂಗ್ರಹಿಸಿದ್ದರು. 2008 ನವೆಂಬರ್ನಲ್ಲಿ ಕರಾಚಿಯಿಂದ ಸಮುದ್ರ ಮಾರ್ಗವಾಗಿ ಬಂದ 10 ಉಗ್ರರು ಮುಂಬೈನಲ್ಲಿ ನಡೆಸಿದ ದಾಳಿಯಲ್ಲಿ 166 ಮಂದಿ ಸಾವಿಗೀಡಾಗಿದ್ದರು. ಮೆಹಮೂದ್ಅಖ್ತರ್ಎಂಬ ವ್ಯಕ್ತಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐಗಾಗಿ ಗೂಢಚರ್ಯೆ ಜಾಲವೊಂದನ್ನು ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಭಾರತಪಾಕ್ಗಡಿಯಲ್ಲಿ ಗಡಿಭದ್ರತಾ ಪಡೆ (ಬಿಎಸ್ಎಫ್‌) ಯೋಧರ ನಿಯೋಜನೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ಗೋಪ್ಯ ದಾಖಲೆಗಳನ್ನು ಅಖ್ತರ್ಅವರಿಂದ ವಶಕ್ಕೆ ಪಡೆಯಲಾಯಿತು.  ಆಖ್ತರ್ಹಾಗೂ ಅವನಿಗೆ ಮಾಹಿತಿ ನೀಡುತ್ತಿದ್ದ ಸುಭಾಷ್ಜಂಗೀರ್ಹಾಗೂ ಮೌಲಾನಾ ರಮ್ಜಾನ್ಅವರನ್ನು ಅ. 26ರ ಬೆಳಗ್ಗೆ 10 ಗಂಟೆಗೆ ದೆಹಲಿ ಮೃಗಾಲಯದ ಸಮೀಪ ವಶಕ್ಕೆ ಪಡೆಯಲಾಗಿತ್ತು.
2016:  ಪಣಜಿ: ಗೋವಾದ ಮೊದಲ ಮಹಿಳಾ ಮುಖ್ಯಮಂತ್ರಿ ಶಶಿಕಲಾ ಕಾಕೋಡ್ಕರ್ ಅವರು  ತಮ್ಮ
81ನೇ ವಯಸ್ಸಿನಲ್ಲಿ ಅಲ್ಟಿನ್ಹೋದ ತಮ್ಮ ನಿವಾಸದಲ್ಲಿ ನಿಧನರಾದರು. ದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ಶಶಿಕಲಾ ಕಾಕೋಡ್ಕರ್ ಅವರು ಈದಿನ ನಿಧನರಾದರು ಎಂದು ಶಶಿಕಲಾ ಅವರ ಪುತ್ರ ಸಮೀರ್ ಕಾಕೋಡ್ಕರ್ ತಿಳಿಸಿದರು. ಶಶಿಕಲಾ ಅವರ ಗೋವಾ ರಾಜ್ಯದ ಮೊದಲ ಮುಖ್ಯಮಂತ್ರಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ನಾಯಕ ದಯಾನಂದ ಬಾಂದೋಡ್ಕರ್ ಅವರ ಪುತ್ರಿ. 1973ರಲ್ಲಿ ತಂದೆ ಬಾಂದೋಡ್ಕರ್ ಅವರು ಅಧಿಕಾರದಲ್ಲಿದ್ದಾಗಲೇ ನಿಧನರಾದ ಬಳಿಕ ಶಶಿಕಲಾ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ 1977 ಚುನಾವಣೆಯಲ್ಲಿ ಅವರು ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವನ್ನು ವಿಜಯದತ್ತ ಮುನ್ನಡೆಸಿದರು. ಪಕ್ಷದ ಒಳಗಿನ ಬಂಡಾಯದ ಬಳಿಕ ಅವರನ್ನು ಹುದ್ದೆಯಿಂದ ಉಚ್ಚಾಟಿಸಲಾಗಿತ್ತು. ಕಾಕೋಡ್ಕರ್ ಅವರು ಭಾರತೀಯ ಭಾಷಾ ಸುರಕ್ಷಾ ಮಂಚದ ನಾಯಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಕೊಂಕಣಿ ಮತ್ತು ಮರಾಠಿಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಲಿಕಾ ಮಾಧ್ಯಮ ಭಾಷೆಯನ್ನಾಗಿ ಮಾಡಬೇಕು ಎಂದು ಭಾರತೀಯ ಭಾಷಾ ಸುರಕ್ಷಾ ಮಂಚ ಸರ್ಕಾರವನ್ನು ಒತ್ತಾಯಿಸಿತ್ತು. ಶಶಿಕಲಾ ಕಾಕೋಡ್ಕರ್ ಗೌರವಾರ್ಥ ರಾಜ್ಯದಲ್ಲಿ ಎರಡು ದಿನಗಳ ಶೋಕಾಚರಣೆ ಘೊಷಿಸಲಾಯಿತು. ಸರ್ಕಾರಿ ಕಚೇರಿಗಳಿಗೆ ಒಂದು ದಿನದ ರಜೆ ಘೋಷಿಸಲಾಯಿತು. ಕಾಕೋಡ್ಕರ್ ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ವರದಿಗಳು ತಿಳಿಸಿದವು.
2016: ನವದೆಹಲಿ: ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಗಡಿಯಲ್ಲಿ ದೇಶ ಕಾಯುತ್ತಿರುವ ವೀರ
ಯೋಧರಿಗೆ ದೇಶದ ಜನತೆಯಿಂದ ವಿಡಿಯೋಗಳೂ ಸೇರಿದಂತೆ ಶುಭ ಸಂದೇಶದ ಸುರಿಮಳೆಯಾಯಿತು.  ಸೈನಿಕರಿಗೆ ದೀಪಾವಳಿ ಸಂದೇಶ ಕಳಿಸಿ ಹರಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ ಬಳಿಕ ಈವರೆಗೆ 10 ಲಕ್ಷಕ್ಕೂ ಹೆಚ್ಚು ಸಂದೇಶಗಳು ಸೈನಿಕರಿಗೆ ಬಂದಿವೆ. ಅಕ್ಷಯ ಕುಮಾರ್, ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ, ಆನಂದ ಮಹಿಂದ್ರ ಸಂದೇಶ ನೀಡಿರುವವರಲ್ಲಿ ಸೇರಿದ್ದರು. ಹಲವಾರು ಮುಖ್ಯಮಂತ್ರಿಗಳು, ಸಂಪುಟ ಸಚಿವರು, ಸಂಸತ್ ಸದಸ್ಯರೂ ಯೋಧರನ್ನು ಹರಸಿ ದೀಪಾವಳಿ ಸಂದೇಶ ಕಳುಹಿಸಿದರು.  ಅಕ್ಟೋಬರ್ 25ರಂದು ಯೋಧರಿಗೆ ಸಂದೇಶ ಅಭಿಯಾನ ಆರಂಭವಾಗಿದ್ದು ಅಕ್ಟೋಬರ್ 30ರವರೆಗೂ ಮುಂದುವರೆಯುವುದು. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ನಾನು ನನ್ನ ಸಂದೇಶವನ್ನು #Sandesh2Soldiers ಗೆ ಕಳುಹಿಸಿದ್ದೇನೆ. ನೀವು ಕೂಡಾ ಇದನ್ನು ಮಾಡಬಹುದು. ನಿಮ್ಮ ಹಾರೈಕೆಗಳು ನಮ್ಮ ಪಡೆಗಳನ್ನು ಅತ್ಯಂತ ಸಂತಸ ಪಡಿಸುವುದು ಎಂದು ತಿಳಿಸಿದ್ದರು. #Sandesh2Soldiers ಅಭಿಯಾನದ ಅಡಿಯಲ್ಲಿ ಜನರು ತಮ್ಮ ಸಂದೇಶಗಳನ್ನು ನರೇಂದ್ರ ಮೋದಿ ಆಪ್, ಮೈಗವ್.ಇನ್ ( MyGov.in )ಆಲ್ ಇಂಡಿಯಾ ರೇಡಿಯೋ, ದೂರದರ್ಶನಗಳ ಮೂಲಕವೂ ಕಳಿಸಬಹುದು.

2016: ಬೆಂಗಳೂರು: ಹೀಗಾಗದಿರಲಿ, ಎಲ್ಲಿಯಾದರೂ ಭಾರತದ ಸ್ಟಾರ್ಟಪ್ ಮಾರುಕಟ್ಟೆ ಕುಸಿದರೆ, ಬೆಂಗಳೂರಿನ ಮಹಿಳೆ ವಾಣಿ ಕೋಲಾ ತೆರಬಹುದಾದಷ್ಟು ಬೆಲೆಯನ್ನು ಬೇರೆ ಯಾರೂ ತೆರಲು ಸಾಧ್ಯವಿಲ್ಲ. ಹೌದು ನಂಬಿದರೆ ನಂಬಿ, ಬಿಟ್ಟರೆ ಬಿಡಿ ಬೆಂಗಳೂರು ಮೂಲದ ಕಲಾರಿ ಕ್ಯಾಪಿಟಲ್ ಸಹ ಸಂಸ್ಥಾಪಕಿ 52 ಹರೆಯದ ವಾಣಿ ಕೋಲಾ ಅವರು ರಾಷ್ಟ್ರದಲ್ಲೇ ಸ್ಟಾರ್ಟ್ಪ್ ಉದ್ಯಮ (ಹೊಸ ಉದ್ಯಮ) ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ನಮಗೆ ಅದೆಲ್ಲಾ ಆಗ್ಲಿಕ್ಕಿಲ್ ಮಗಳೇ ಎಂಬುದಾಗಿ ಸರ್ಕಾರಿ ನೌಕರಿಯಲ್ಲಿದ್ದ ಅಪ್ಪ ಹೇಳಿದ್ದರೂ ಧೈರ್ಯದಿಂದ ಹೆಜ್ಜೆ ಮುಂದಿಟ್ಟ ಮಹಿಳೆಯ ಯಶಸ್ಸಿನ ಕಥೆ ಇದು. ಕೋಲಾ ಅವರು 650 ಮಿಲಿಯ ಡಾಲರ್ (4,344 ಕೋಟಿ ರೂಪಾಯಿ) ಮೊತ್ತವನ್ನು ಸುಮಾರು 60 ಸ್ಟಾರ್ಟಪ್ ಉದ್ಯಮಗಳಲ್ಲಿ ಹೂಡಿದ್ದಾರೆ. ಉದ್ಯಮಗಳಲ್ಲಿ ಫ್ಲಿಪ್ಕಾರ್ಟ್ ಆನ್ಲೈನ್ ಸರ್ವೀಸ್ ಪ್ರೖೆವೇಟ್ ಮತ್ತು ಜಸ್ಪರ್ ಇನ್ಫೋಟೆಕ್ ಪ್ರೖೆವೇಟ್ನ ಸ್ನಾಪ್ಡೀಲ್ ಕೂಡಾ ಸೇರಿವೆ. ಆದರೆ ವರ್ಷ ಭಾರತದ ತಂತ್ರಜ್ಞಾನ ಕಂಪೆನಿಗಳಿಗೆ ಅತ್ಯಂತ ಕಠಿಣ ವರ್ಷವಾಗಿರುವಂತೆ ಕಾಣುತ್ತಿದ್ದು, ಹಲವಾರು ಸ್ಟ್ಟಾರ್ಟಪ್ ಉದ್ಯಮಗಳು ತಮ್ಮ ಹೂಡಿಕೆಯನ್ನು ಕಡಿಮೆಗೊಳಿಸಿರುವ ಹಿನ್ನೆಲೆಯಲ್ಲಿ ವಿದೇಶೀ ದೈತ್ಯ ಕಂಪೆನಿಗಳಾದ ಅಮೆಜಾನ್.ಕಾಮ್ ಇನ್ಕಾರ್ಪೋರೇಷನ್ ಮತ್ತು ಉಬೆರ್ ಟೆಕ್ನಾಲಜೀಸ್ ಇನ್ಕಾರ್ಪೋರೇಷನ್ ಎಚ್ಚರಿಕೆಯ ನಡೆ ಇಟ್ಟಿವೆ. ಆದರೆ ಕೋಲಾ ಹೆಜ್ಜೆ ಹಿಂದಿಟ್ಟಿಲ್ಲ, ಬದಲು ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ತನ್ನ ಹೂಡಿಕೆಯ ವೇಗವನ್ನು ಇನ್ನಷ್ಟು ವರ್ಧಿಸಿದೆಭಾರತದ ಬಹುತೇಕ ಸ್ಟಾರ್ಟಪ್ ಉದ್ಯಮಗಳ ಕಥೆ ಮುಗಿಯಿತು, ಉಬೆರ್ ಮತ್ತು ಅಮೆಜಾನ್ ವಿಜಯಘೊಷಣೆ ಮಾಡಬಹುದು ಎಂಬುದು ಇತ್ತೀಚಿನ ಅಭಿಪ್ರಾಯ. ಆದರೆ ನಾನು ಎಂದೂ ಉದ್ಯಮಿಗಳ ಸಾಮರ್ಥ್ಯನ್ನು ಕಡೆಗಣಿಸುವುದಿಲ್ಲ. ಸಮಸ್ಯೆಯಿಂದ ಹೊರಬರುವ ದಾರಿ ಹುಡುಕಲು ಅವರು ಸಮರ್ಥರಿದ್ದಾರೆ ಎಂದು ವಾಣಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದರು. ಕೋಲಾ ಅವರ ಯಶಸ್ಸು ಒಂದು ದಾಖಲೆ. 2006ರಲ್ಲಿ ಅವರು 210 ಮಿಲಿಯ ಡಾಲರ್ ಹಣವನ್ನು ಚೊಚ್ಚಲ ಹೂಡಿಕೆಯಾಗಿ ಇಂಟೆಲ್ ಪೆಂಟಿಯಮ್ ಚಿಪ್ ಅಭಿವೃದ್ಧಿಗೆ ಹೆಸರಾದ ವಿನೋದ ಧಾಮ್ ಉದ್ಯಮದಲ್ಲಿ ಹೂಡಿದರು. ಬಳಿಕ ಮೊತ್ತವನ್ನು 440 ಮಿಲಿಯ ಡಾಲರ್ಗಳಿಗೆ ಹೆಚ್ಚಿಸಿದರು. ಪರಿಣಾಮವಾಗಿ ಮಹಿಳೆಯಿಂದ ನಡೆಸಲ್ಪಡುವ ಭಾರತದ ಅತಿದೊಡ್ಡ ಉದ್ಯಮ ಎಂಬ ಹೆಗ್ಗಳಿಕೆಗೆ ವಿನೋದ ಧಾಮ್ ಪಾತ್ರವಾಯಿತು. ಪ್ರಸ್ತುತ ತಾನು ಹೂಡಿಕೆ ಮಾಡಿರುವ 84 ಕಂಪನಿಗಳ ಪೈಕಿ 21 ಸ್ಟಾರ್ಟಪ್ಗಳನ್ನು ಮಾರಾಟ ಮಾಡುವಲ್ಲಿ ಕೋಲಾ ಯಶಸ್ವಿಯಾಗಿದ್ದಾರೆ ಎಂದು ಸಂಶೋಧಕ ಪ್ರಕ್ವಿನ್ ಲಿಮಿಟೆಡ್ ಹೇಳಿತು.
 
2016: ಬೆಂಗಳೂರು: ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಸಂಪರ್ಕ ಕಲ್ಪಿಸುವ ವಿವಾದಿತ
ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 4 ವಾರಗಳ ತಾತ್ಕಾಲಿಕ ತಡೆ ನೀಡಿತು.  ಇದರಿಂದಾಗಿ ನವೆಂಬರ್ 1ರಿಂದ ಯೋಜನೆ ಆರಂಭಿಸಲು ಉದ್ದೇಶಿಸಿದ್ದ ಬಿಡಿಎಗೆ ಹಿನ್ನಡೆಯಾಯಿತು. ಬೆಂಗಳೂರು ನಗರದಲ್ಲಿ ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ 800ಕ್ಕೂ ಹೆಚ್ಚು ಮರಗಳು ನಾಶ ಮಾಡಬೇಕಾಗುತ್ತದೆ. ಹೀಗಾಗಿ ಯೋಜನೆಗೆ ತಡೆಯಾಜ್ಞೆ ನೀಡಬೇಕೆಂದು ಬೆಂಗಳೂರಿನ ನಾಗರಿಕರ ವೇದಿಕೆ ದೂರು ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿತು. ರೂ.1761 ಕೋಟಿ ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ನಾಗರಿಕರಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು, ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ನ್ಯಾಯಮಂಡಳಿ ತಾತ್ಕಾಲಿಕ ತಡೆ ನೀಡಿರುವುದರಿಂದ 'ಸ್ಟೀಲ್ ಫ್ಲೈಓವರ್ ಬೇಡ' ಎಂದು ಪ್ರತಿಭಟಿಸುವವರಿಗೆ ಜಯ ಸಿಕ್ಕಿದಂತಾಯಿತು..
2016: ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಭೇಟಿ ನೀಡುವುದಕ್ಕೆ ಚೀನಾ ತೀವ್ರ ವಿರೋಧ ವ್ಯಕ್ತಪಡಿಸಿ,ತು.  ಇದರಿಂದ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ ಎಂದು ಚೀನಾ ಎಚ್ಚರಿಕೆ ನೀಡಿತು. ದಲೈಲಾಮಾ ಅರುಣಾಲ ಪ್ರದೇಶಕ್ಕೆ ಭೇಟಿ ನೀಡುವುದಿರಂದ ವಿವಾದಾತ್ಮಕ ಪ್ರದೇಶದಲ್ಲಿ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗಲಿದೆ. ಜತೆಗೆ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧಕ್ಕೂ ಧಕ್ಕೆಯುಂಟಾಗುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ ತಿಳಿಸಿದರು.  ಮುಖ್ಯಮಂತ್ರಿ ಪಿಮಾ ಖಂಡು ಅವರ ಆಹ್ವಾನದ ಮೇರೆಗೆ ದಲೈ ಲಾಮಾ ಮುಂದಿನ ವರ್ಷದ ಪ್ರಾರಂಭದಲ್ಲಿ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ದಲೈ ಲಾಮಾ ಬೌದ್ಧರ ಪವಿತ್ರ ಯಾತ್ರಾ ಸ್ಥಳ ತವಾಂಗ್ಗೆ ಸಹ ಭೇಟಿ ನೀಡುವ ಸಾಧ್ಯತೆ ಇದೆ. ಅರುಣಾಚಲ ಪ್ರದೇಶವನ್ನು ವಿವಾದಿತ ಭೂ ಪ್ರದೇಶವೆಂದು ಚೀನಾ ಘೋಷಿಸಿದ್ದು, ಅಲ್ಲಿಗೆ ಭಾರತೀಯ ರಾಜಕೀಯ ನಾಯಕರು ಮತ್ತು ವಿದೇಶಿ ಅಧಿಕಾರಿಗಳು ಮತ್ತು ವಿದೇಶಿ ಗಣ್ಯರು ಭೇಟಿ ನೀಡುವುದನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ.
 2016: ಮೆಲ್ಬೋರ್ನ್: ಭೀಭತ್ಸ ಘಟನೆಯೊಂದರಲ್ಲಿ ಭಾರತೀಯ ಮೂಲದ 29 ಹರೆಯದ ಬಸ್
ಚಾಲಕರೊಬ್ಬರನ್ನು ಆಸ್ಟ್ರೇಲಿಯಾದಲ್ಲಿ ಸಜೀವವಾಗಿ ದಹಿಸಿ ಕೊಲ್ಲಲಾಯಿತು.  ಆಸ್ಟ್ರೇಲಿಯಾದ ಬ್ರಿಸ್ಬೇನ್ ನಗರದಲ್ಲಿ ಘಟಿಸಿದ ಘಟನೆಯಿಂದ ಇತರ ಪ್ರಯಾಣಿಕರು ಆಘಾತಕ್ಕೆ ಒಳಗಾದರು. ಪಂಜಾಬಿ ಸಮುದಾಯದ ಜನಪ್ರಿಯ ಗಾಯಕ ಮನ್ ಮೀತ್ ಅಲಿಶೆರ್ ಅವರು ಬ್ರಿಸ್ಬೇನ್ ಸಿಟಿ ಕೌನ್ಸಿಲ್ ಬಸ್ ಚಲಾಯಿಸುತ್ತಿದ್ದಾಗ ವ್ಯಕ್ತಿಯೊಬ್ಬ ದಿಢೀರನೆ ಅವರ ಮೇಲೆ ದಹ್ಯದ್ರಾವಣ ಸುರಿದು ದಹಿಸುವ ವಸ್ತುವನ್ನು ಅವರ ಮೇಲೆ ಎಸೆದ. ತತ್ ಕ್ಷಣವೇ ಅವರ ಮೈಗೆ ಬೆಂಕಿ ಹತ್ತಿಕೊಂಡಿತು. ಘಟನೆಯಲ್ಲಿ ಅಲಿಶೆರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಬಸ್ಸಿನಲ್ಲಿದ್ದ ಇತರ ಹಲವಾರು ಪ್ರಯಾಣಿಕರು ಹೇಗೋ ಅನಾಹುತದಿಂದ ತಪ್ಪಿಸಿಕೊಂಡರು ಎಂದು ಪೊಲೀಸರು ತಿಳಿಸಿದರು. 6 ಮಂದಿಯನ್ನು ಸುಟ್ಟ ಗಾಯಗಳು ಹಾಗೂ ಉಸಿರಾಟದ ಸಮಸ್ಯೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆಯ ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. 48 ವ್ಯಕ್ತಿಯೊಬ್ಬನನ್ನು ಘಟನೆ ಸಂಬಂಧ ಪೊಲೀಸರು ವಶಕ್ಕೆ ಪಡೆದರು.

2016: ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಲಕ್ನೋಗೆ ಬಂದಿದ್ದಪೇಟಿಎಂಸಿಇಒ ವಿಜಯ್ ಶೇಖರ್ ಶರ್ಮಾ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ಬೇಸತ್ತು ಮಾರ್ಗ ಮಧ್ಯೆ ಕಾರಿನಿಂದ ಇಳಿದು ಸೈಕಲ್ ರಿಕ್ಷಾ ಏರಿ ಸಿಎಂ ಮನೆ ತಲುಪಿದ ಘಟನೆ ಹಿಂದಿನ ದಿನ ಘಟಿಸಿತು.ವಿಜಯ್ ಶೇಖರ್ ಶರ್ಮಾಯಶ್ ಭಾರತಿಪ್ರಶಸ್ತಿ ಪಡೆಯಲು ಲಕ್ನೋಗೆ ಆಗಮಿಸಿದ್ದರು. ವಿಜಯ್ ಶೇಖರ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು. ಆದರೆ ಲಕ್ನೋದ ಟ್ರಾಫಿಕ್ನಿಂದ ಬೇಸತ್ತ ಶರ್ಮಾ ತಮ್ಮ ಕಾರು ಬಿಟ್ಟು ಸೈಕಲ್ ರಿಕ್ಷಾ ಏರಿ ಸಿಎಂ ಮನೆ ತಲುಪಿದರು. ಸಿಎಂ ಭದ್ರತಾ ಸಿಬ್ಬಂದಿ ಕೂಲಂಕುಷ ವಿಚಾರಣೆ ನಡೆಸಿದ ಬಳಿಕ ಶರ್ಮಾ ನಿಜವಾಗಿಯೂ ಪೇಟಿಎಂ ಸಿಇಒ ಎಂದು ಖಾತ್ರಿ ಪಡಿಸಿಕೊಂಡು ಸಿಎಂ ಭೇಟಿಗೆ ಅವಕಾಶ ಕಲ್ಪಸಿದರು.  ಶರ್ಮಾ ಸೈಕಲ್ ರಿಕ್ಷಾದಲ್ಲಿ ತಮ್ಮನ್ನು ಭೇಟಿ ಮಾಡಲು ಬಂದಿದ್ದರಿಂದ ಖುಷಿಪಟ್ಟ ಅಖಿಲೇಶ್ ಯಾದವ್ ಅವರನ್ನು ಅಭಿನಂದಿಸಿದರು. ಜತೆಗೆ ಸೈಕಲ್ ರಿಕ್ಷಾ ಚಾಲಕ ಮಣಿರಾಮ್ೆ ದೀಪಾವಳಿ ಉಡುಗೊರೆಯಾಗಿ 6000 ರೂ. ನೀಡಿದರು ಮತ್ತು ಮನೆ ಹಾಗೂ ರಿಕ್ಷಾ ಕೊಡುವುದಾಗಿ ಭರವಸೆ ನೀಡಿದರು. ಮಣಿರಾಮ್ ಪತ್ನಿಗೆ ಸಮಾಜವಾದಿ ಪಿಂಚಣಿ ಯೋಜನೆಯಲ್ಲಿ ಪಿಂಚಣಿ ನೀಡುವುದಾಗಿ ತಿಳಿಸಿದರು.


2016: ಜಿನೇವಾ: ತನ್ನ ಪ್ರಬಲ  ನೆಲೆಯಾಗಿದ್ದ ಮೊಸುಲ್ ನಗರದಲ್ಲಿ ಐಸಿಸ್ (ಐಎಸ್ ಐಎಸ್)
ಭಯೋತ್ಪಾದಕರು ಅಕ್ಟೋಬರ್ 19ರ  ಬುಧವಾರ ಕನಿಷ್ಠ 232 ಜನರರನ್ನು ಕೊಂದು ಹಾಕಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿತು. ಕಳೆದ ಬುಧವಾರ 232 ಮಂದಿ ನಾಗರಿಕರನ್ನು ಮೊಸುಲ್ ಸಮೀಪ ಗುಂಡಿಟ್ಟು ಕಗ್ಗೊಲೆ ಗೈಯಲಾಗಿದೆ ಎಂದು ವಿಶ್ವಸಂಸ್ಥೆ ಹಕ್ಕುಗಳ ಕಚೇರಿಯ ವಕ್ತಾರ ರವೀನಾ ಶಮದಾಸನಿ ಅವರು ಜಿನೇವಾದಲ್ಲಿ ವರದಿಗಾರರಿಗೆ ತಿಳಿಸಿದರು. ಹತರಾದವರ ಪೈಕಿ 190 ಮಂದಿ ಇರಾಕಿ ಭದ್ರತಾ ಪಡೆಗಳ ಮಾಜಿ ಅಧಿಕಾರಿಗಳು ಎಂದು ಅವರು ನುಡಿದರು. ಇತ್ತೀಚಿ ದಿನಗಳಲ್ಲೇ ಅತ್ಯಂತ ಅಧಿಕ ಸಂಖ್ಯೆಯ ನಾಗರಿಕ ನರಮೇಧ ಇದು ಎಂದು ಹೇಳಲಾಯಿತು. ಮೊಸುಲ್ ನಗರವನ್ನು ಮರುವಶ ಪಡಿಸಿಕೊಳ್ಳಲು ನಡೆದ ಸಮರ ಕಾರ್ಯಾಚರಣೆಯಲ್ಲಿ ಸುಮಾರು 900 ಮಂದಿ ಐಸಿಸ್ ಉಗ್ರಗಾಮಿಗಳು ಹತರಾದರು. ಅಕ್ಟೋಬರ್ 17ರಂದು ಸಹಸ್ರಾರು ಮಂದಿ ಇರಾಕಿ ಯೋಧರು ದಕ್ಷಿಣ, ಪೂರ್ವ ಮತ್ತು ಉತ್ತರದ ಕಡೆಯಿಂದ ಐಸಿಸ್ ನಿಯಂತ್ರಣದಲ್ಲಿದ್ದ ಕಟ್ಟ ಕಡೆಯ ಪ್ರಮುಖ ಇರಾಕಿ ನಗರವನ್ನು ವಶಕ್ಕೆ ತೆಗೆದುಕೊಳ್ಳಲು ದಾಳಿ ನಡೆಸಿದ್ದರು. ರಕ್ಷಣಾತ್ಮಕ ಹೋರಾಟಕ್ಕೆ ಇಳಿದ ಐಸಿಸ್ ಉಗ್ರಗಾಮಿಗಳು ಗಡ್ಡ ಬೋಳಿಸಿಕೊಂಡು ಹೋರಾಟ ನಡೆಸಿದ್ದರು. ಟರ್ಕಿ ಕೂಡಾ ಹೋರಾಟದಲ್ಲಿ ಇರಾಕ್ ಜೊತೆ ಕೈಜೋಡಿಸಿತ್ತು. ಅಮೆರಿಕ ನೇತೃತ್ವದ ಒಕ್ಕೂಟದ ವಾಯು ಪಡೆ ಹಾಗೂ ಸೇನಾ ಪಡೆಯ ಬೆಂಗಾವಲಿನೊಂದಿಗೆ ನುಗ್ಗಿದ್ದ ಇರಾಕ್ ಸೇನೆ ಐಸಿಸ್ ವಶದಲ್ಲಿದ್ದ ಪಟ್ಟಣಗಳು ಮತ್ತು ಗ್ರಾಮಗಳನ್ನು ಐಸಿಸ್ನಿಂದ ವಿಮೋಚನೆಗೊಳಿಸುತ್ತಾ ಕಟ್ಟ ಕಡೆಯದಾಗಿ ಮೊಸುಲ್ ನಗರಕ್ಕೆ ಮುತ್ತಿಗೆ ಹಾಕಿತ್ತು. ಭೀಕರ ಕದನದ ಹಿನ್ನೆಲೆಯಲ್ಲಿ 10,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತ್ಯಜಿಸಿ ಹೋಗಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅಂತಾರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ತಿಳಿಸಿತ್ತು.

2008: ಮಹಾರಾಷ್ಟ್ರದ ನಾಂದೇಡಿನಲ್ಲಿ ಶ್ವೇತವರ್ಣದ ಅಮೃತಶಿಲೆಯಲ್ಲಿ ನಿರ್ಮಿಸಲಾದ ಸ್ವರ್ಣಗೋಪುರ ಇರುವ ಸಚ್ ಖಂಡ್ ಗುರುದ್ವಾರಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಯಾತ್ರಿಗಳು ಹಾಲಿನ ಸ್ನಾನ ಮಾಡಿಸಿ, ಶುಚಿಗೊಳಿಸಿ ಧನ್ಯತಾಭಾವ ಅನುಭವಿಸಿದರು. ಸಿಖ್ಖರ ಧರ್ಮಗ್ರಂಥ `ಗುರು ಗ್ರಂಥಸಾಹಿಬ್'ಗೆ ಪಟ್ಟಕಟ್ಟಿದ 300ನೇ ವರ್ಷದ ಆಚರಣೆಯ `ಗುರು ತಾ ಗದ್ದಿ' ಉತ್ಸವದ ಮೊದಲ ದಿನವಾದ ಈದಿನ `ತಖ್ತ್ ಸ್ನಾನ'ದ ಮೂಲಕ ಆಚರಣೆಯ ವಿಧಿವಿಧಾನಗಳು ವಿಧ್ಯುಕ್ತವಾಗಿ ಆರಂಭವಾದವು.

2008: ಗಿನ್ನೆಸ್ ದಾಖಲೆ ನಿರ್ಮಿಸುವುದಕ್ಕಾಗಿಯೇ ಮೀಸಲಾದ ಸಭಾಂಗಣವೊಂದನ್ನು ದುಬೈಯಲ್ಲಿ ಚಳಿಗಾಲದ ಸಂಸ್ಕೃತಿ ಮತ್ತು ಮನರಂಜನಾ ಕಾರ್ಯಕ್ರಮ ಏರ್ಪಡಿಸುವ `ಗ್ಲೋಬಲ್ ವಿಲೇಜ್' ಸಂಸ್ಥೆ ಸ್ಥಾಪಿಸಿತು. ಇಲ್ಲಿ ನವೆಂಬರ್ 12ರಿಂದ ಫೆ.21ರ ತನಕ ವಿವಿಧ ವಿಭಾಗಗಳಲ್ಲಿ ಪ್ರದರ್ಶನಗಳು ನಡೆಯುತ್ತವೆ. ಯಾವುದೇ ವ್ಯಕ್ತಿಯೂ ಈ ವೇದಿಕೆ ಏರಿ ತಮ್ಮ ಸಾಧನೆ ಪ್ರದರ್ಶಿಸಿ ಹಿಂದಿನ ವಿಶ್ವದಾಖಲೆ ಮುರಿದು ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯಬಹುದು ಎಂದು ಗ್ಲೋಬಲ್ ವಿಲೇಜಿನ ಯೋಜನಾ ನಿರ್ದೇಶಕ ಅಬ್ದುಲ್ ರೆಧಾ ಆಲಿ ಬಿನ್ ರೆಧಾ ಪ್ರಕಟಿಸಿದರು. ಗಿನ್ನೆಸ್ ವಿಶ್ವದಾಖಲೆಯ ವ್ಯವಸ್ಥಾಪಕ ನಿರ್ದೇಶಕ ಆಲಿಸ್ಟೈರ್ ರಿಚರ್ಡ್ಸ್ ಈ ವೇದಿಕೆಯನ್ನು ಜಗತ್ತಿಗೆ ಪರಿಚಯಿಸಿದರು.

2008: ಅಪೂರ್ವ ತಳಿಯ ಮಿಡತೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಒಳಗಾದ ಚೆಕ್ ಗಣರಾಜ್ಯದ ಕೀಟಶಾಸ್ತ್ರಜ್ಞ ಎಮಿಲ್ ಕ್ಯುಸೇರ ಭಾರತದಿಂದ ತಪ್ಪಿಸಿಕೊಂಡು ತನ್ನ ದೇಶ ಸೇರಿದ ಪ್ರಕರಣ ಬೆಳಕಿಗೆ ಬಂತು. ಕೃತ್ಯ ನಡೆಸಿದ ಬಳಿಕ ನ್ಯಾಯಾಲಯದಿಂದ ಜಾಮೀನು ಶರ್ತಗಳನ್ನು ಉಲ್ಲಂಘಿಸಿ ಎಮಿಲ್ ಚೆಕ್ ಗಣರಾಜ್ಯವನ್ನು ಸೇರಿದರು.. ಭಾರತದಲ್ಲಿರುವ ಆ ದೇಶದ ರಾಯಭಾರಿ ಹೀನೆಕ್ ಮೊನಿಸೆಕ್ ತಿಳಿಸಿರುವಂತೆ, ಗೆಳೆಯನಾದ ಇನ್ನೋರ್ವ ಕೀಟ ಶಾಸ್ತ್ರಜ್ಞ ಅನಾರೋಗ್ಯದಿಂದ ಬಳಲುತ್ತಿದ್ದರೂ ಬೇರೆ ದಾರಿ ಇಲ್ಲದೆ ಎಮಿಲ್ ದೇಶದಿಂದ ಪಲಾಯನ ಮಾಡಿದ ಎನ್ನಲಾಯಿತು. ಆದರೆ ಇದಕ್ಕೆ ಚೆಕ್ ಸರ್ಕಾರ ಹೊಣೆಯಲ್ಲ, ಕಾನೂನು ಕ್ರಮಕ್ಕೆ ಎಲ್ಲಾ ಸಹಕಾರ ನೀಡುವುದು ಎಂದು ಮೊನಿಸೆಕ್ ಹೇಳಿದರು. ಕಳೆದ ಜೂನ್ 22ರಂದು ಎಮಿಲ್ ಮತ್ತು ಸಂಗಡಿಗ ಸ್ವಾಚಾ ಅವರನ್ನು ಅಪೂರ್ವ ಜಾತಿಯ ಮಿಡತೆಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಆರೋಪದನ್ವಯ ಸಿಂಗಾಲಿಯಾ ರಾಷ್ಟ್ರೀಯ ಉದ್ಯಾನದಲ್ಲಿ ಬಂಧಿಸಲಾಗಿತ್ತು. ನಂತರ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 60 ಸಾವಿರ ರೂ. ದಂಡ ವಿಧಿಸಲಾಗಿತ್ತು.

2008: ದಾವಣಗೆರೆ ನಗರದ ಎಸ್ ಎಸ್ ಆಸ್ಪತ್ರೆಯಲ್ಲಿ ಹಿಂದಿನ ದಿನ ರಾತ್ರಿ ನಿಧನರಾದ ಜಾನಪದ ತಜ್ಞ ಮುದೇನೂರು ಸಂಗಣ್ಣ ಅವರ ದೇಹವನ್ನು ಪೂರ್ವನಿರ್ಧರಿತ ಇಚ್ಛೆಯಂತೆ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ದಾನ ನೀಡಲಾಯಿತು.

2008: ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ ಬಾಲ್ ಕ್ಲಬ್ಬಿನ ಕ್ರಿಸ್ಟಿಯಾನೊ ರೊನಾಲ್ಡೊ ಅವರು `ಎಫ್ ಐ ಎಫ್ ಪ್ರೋ ವರ್ಷದ ವೃತ್ತಿಪರ ಆಟಗಾರ' ಪ್ರಶಸ್ತಿಗೆ ಆಯ್ಕೆಯಾದರು. ವಿಶ್ವದ ನಲ್ವತ್ತು ರಾಷ್ಟ್ರಗಳ ವೃತ್ತಿಪರ ಫುಟ್ ಬಾಲ್ ಆಟಗಾರರ ಮತದಾನದ ಆಧಾರದಲ್ಲಿ ರೊನಾಲ್ಡೊ ಅವರನ್ನು ಈ ಮಹತ್ವದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಕಳೆದ ಫುಟ್ ಬಾಲ್ ಋತುವಿನಲ್ಲಿನ ಪ್ರದರ್ಶನವನ್ನು ಪರಿಗಣಿಸಿ ಅವರ ಹೆಸರನ್ನು ಪ್ರಶಸ್ತಿಯ ಸ್ಪರ್ಧೆಯಲ್ಲಿರುವ ಆಟಗಾರರ ಪಟ್ಟಿಗೆ ಸೇರಿಸಲಾಗಿತ್ತು.

2007: ಕರ್ನಾಟಕದ ಕೈಗಾ ಅಣುವಿದ್ಯುತ್ ಸ್ಥಾವರದ ಎರಡನೇ ಘಟಕವು ಸತತ 436 ದಿನ ವಿದ್ಯುತ್ ಉತ್ಪಾದಿಸುವ ಮೂಲಕ ವಿಶ್ವದಾಖಲೆಗೆ ಅರ್ಹವಾಯಿತು. 2006ರ ಆಗಸ್ಟ್ 19ರಂದು ಆರಂಭವಾದ ಕೈಗಾದ ಎರಡನೇ ಘಟಕ ಒಂದೇ ಒಂದು ದಿನವೂ ಸಹ ವಿದ್ಯುತ್ ಉತ್ಪಾದನೆ ನಿಲ್ಲಿಸದೆಯೇ ಕಾರ್ಯ ನಿರ್ವಹಿಸುವ ಮೂಲಕ ಅಮೆರಿಕಾದ ಅಣುವಿದ್ಯುತ್ ಘಟಕ ಸ್ಥಾಪಿಸಿದ್ದ ಸತತ 406 ದಿನಗಳ ವಿದ್ಯುತ್ ಉತ್ಪಾದನೆಯ ದಾಖಲೆಯನ್ನು ಮುರಿಯಿತು. ದೇಶದಲ್ಲಿರುವ ಒಟ್ಟು 18 ಅಣುವಿದ್ಯುತ್ ಘಟಕಗಳಲ್ಲಿ ಈ ಘಟಕ ಮಾತ್ರ ಈ ಸಾಧನೆಗೆ ಅರ್ಹವಾಗಿದ್ದು, ವಿಶ್ವದಲ್ಲಿಯೇ ಈ ಸಾಧನೆ ಮಾಡಿದ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನೂ ಪಡೆಯಿತು.

2007: ವಿಶೇಷ ಆರ್ಥಿಕ ವಲಯಕ್ಕಾಗಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ನಂದಿಗ್ರಾಮದಲ್ಲಿ ನಡೆದ ಸಂಗ್ರಾಮ ಮತ್ತೊಮ್ಮೆ ಉಗ್ರ ಸ್ವರೂಪ ಪಡೆಯಿತು. ಈದಿನ ಇಲ್ಲಿ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಸಿಪಿಎಂನ ನಾಲ್ವರು ಕಾರ್ಯಕರ್ತರು ಮೃತರಾಗಿ, ಐವರು ಗಾಯಗೊಂಡರು. ನಂದಿಗ್ರಾಮಕ್ಕೆ ಸಮೀಪದ ಖೆಜೂರಿ ಪೊಲೀಸ್ ಠಾಣೆ ವ್ಯಾಪ್ತಿಯ ಶೇರ್ಖನ್ ಚಕ್ ಎಂಬಲ್ಲಿ ಈ ದುರಂತ ಸಂಭವಿಸಿತು. ಪೂರ್ವ ಮಿಡ್ನಾಪುರ ಜಿಲ್ಲೆಯಲ್ಲಿ ರೈತರ ತೀವ್ರ ವಿರೋಧದ ಮಧ್ಯೆ ವಿಶೇಷ ವಿತ್ತ ವಲಯಕ್ಕಾಗಿ ಬಲವಂತದಿಂದ ಭೂಮಿ ಸ್ವಾಧೀನ ಪಡೆಯಲು ಸರ್ಕಾರ ಮುಂದಾದುದರ ವಿರುದ್ಧ ಹೋರಾಟದ ನೇತೃತ್ವ ವಹಿಸಿದ ಭೂಮಿ ಉಚೇಡ್ ಪ್ರತಿರೋಧ ಕಮಿಟಿ (ಬಿಯುಪಿಸಿ)ಯು ಹಿಂದಿನ ದಿನ ನಡೆದ ಘರ್ಷಣೆಯನ್ನು ಖಂಡಿಸಿ ನೀಡಿದ್ದ 12 ಗಂಟೆಗಳ ಬಂದ್ ಸಂದರ್ಭದಲ್ಲಿ ಈ ಘಟನೆ ನಡೆಯಿತು.

2007: ಭಾರತದ ಮೊದಲ 500 ಮೆಗಾ ವಾಟ್ ಸಾಮರ್ಥ್ಯದ ಅಣು ಸ್ಥಾವರದ (ಫಾಸ್ಟ್ ಬ್ರೀಡರ್ ರಿಯಾಕ್ಟರ್) ನಿರ್ಮಾಣ ನಿರ್ಣಾಯಕ ಹಂತ ತಲುಪಿದ್ದು, ಸುಮಾರು 165 ಟನ್ ಭಾರದ ಸುರಕ್ಷಾ ಕವಾಟವನ್ನು ಅಳವಡಿಸಲು ಸಿದ್ಧತೆಗಳು ನಡೆದವು. ಸುಮಾರು ರೂ.3,492 ಕೋಟಿ ವೆಚ್ಚದಲ್ಲಿ ತಮಿಳುನಾಡಿನ ಕಲ್ಪಾಕಮ್ಮಿನಲ್ಲಿ ನಿರ್ಮಿಸಲಾಗುತ್ತಿರುವ ಈ ಪ್ರಾಯೋಗಿಕ ಅಣು ವಿದ್ಯುತ್ ಸ್ಥಾವರ ಹಲವಾರು ದಾಖಲೆಗಳನ್ನು ಹೊಂದಿದೆ. ಈಗ ಇದಕ್ಕೆ ಅಳವಡಿಸಲಾದ ಸುರಕ್ಷಾ ಕವಾಟ ಕೂಡ ಇದೇ ಮೊದಲನೆಯದು ಎನ್ನಲಾಗಿದೆ. ಅಣು ಸ್ಥಾವರ 2010ರ ವೇಳೆಗೆ ವಿದ್ಯುತ್ ಉತ್ಪಾದನೆ ಪ್ರಾರಂಭಿಸಲಿದ್ದು, 2020ರ ವೇಳೆಗೆ ಇಂತಹ ಇನ್ನೂ ನಾಲ್ಕು ಸ್ಥಾವರಗಳು ಕಾರ್ಯಾರಂಭ ಮಾಡುವುವು.

2007: ಆಫ್ಘಾನಿಸ್ಥಾನದಲ್ಲಿ ಉಗ್ರಗಾಮಿಗಳ ಹಠಾತ್ ದಾಳಿಗೆ ಪ್ರತಿಯಾಗಿ ಅಮೆರಿಕ ನೇತೃತ್ವದ ಸೇನೆ ಮತ್ತು ಆಫ್ಘನ್ ಸೇನೆ ಜಂಟಿಯಾಗಿ ಆರು ಗಂಟೆಗಳ ಕಾಲ ಹೋರಾಟ ನಡೆಸಿ, ಸುಮಾರು 80 ಮಂದಿ ತಾಲಿಬಾನ್ ಉಗ್ರರನ್ನು ಕೊಂದವು ಎಂದು ಅಮೆರಿಕ ಸೇನೆ ಪ್ರಕಟಿಸಿತು. ಹೆಲ್ಮಾಂಡ್ ಪ್ರಾಂತ್ಯದ ಸೇನಾ ಶಿಬಿರದ ಮೇಲೆ ತಾಲಿಬಾನ್ ಉಗ್ರರು ಸ್ವಯಂಚಾಲಿತ ಕೋವಿ ಮತ್ತು ರಾಕೆಟ್ ಇರುವ ಗ್ರೆನೇಡುಗಳಿಂದ ದಾಳಿ ನಡೆಸಿದರು. ತತ್ ಕ್ಷಣ ಇದಕ್ಕೆ ಪ್ರತಿಯಾಗಿ ಸೇನೆ ದಾಳಿ ನಡೆಸಿತು. ಸೆಪ್ಟೆಂಬರ್ 1ರಿಂದ ಇಲ್ಲಿ ನಡೆದ ದಾಳಿಗಳಲ್ಲಿ ಸುಮಾರು 250 ತಾಲಿಬಾನ್ ಉಗ್ರರನ್ನು ಕೊಲ್ಲಲಾಯಿತು.

2007: ಕರ್ನಾಟಕದಲ್ಲಿ ಮರುಮೈತ್ರಿಗೆ ಮುಂದಾದ ಬಿಜೆಪಿ-ಜೆಡಿಎಸ್ ಪಕ್ಷಗಳಿಗೆ ಮತ್ತೊಮ್ಮೆ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತ್ವತ್ವದಲ್ಲಿ ಕಾಂಗ್ರೆಸ್ ನಾಯಕರ ದಂಡೊಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಆಗ್ರಹಿಸಿತು. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಚ್. ಕೆ. ಪಾಟೀಲ್ ಜೊತೆಗಿದ್ದರು.

2007: ಸಿಟ್ಟಿನ ಭರದಲ್ಲಿ ಹೆಂಡತಿಗೆ ಗಂಡ ಮೂರು ಬಾರಿ ತಲಾಖ್ ಹೇಳಿದರೆ ಅಥವಾ ನಿಗದಿತ ಅವಧಿಯೊಳಗೆ ಆಕೆಗೆ ಅದನ್ನು ತಿಳಿಸದೇ ಹೋದರೆ ಅಂಥ `ತಲಾಖ್' ಗೆ ಮಾನ್ಯತೆ ಇಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ತೀವ್ರ ಕೋಪದಿಂದ ಸ್ವಯಂ ನಿಯಂತ್ರಣ ಕಳೆದುಕೊಂಡ ಪತಿ, `ತಲಾಖ್, ತಲಾಖ್, ತಲಾಖ್' ಎಂದು ಹೇಳಿದರೆ ಅದನ್ನು ಒಪ್ಪಲಾಗದು. ಅಷ್ಟೇ ಅಲ್ಲದೆ ಪತ್ನಿಯ ಅನುಪಸ್ಥಿತಿಯಲ್ಲಿ ಕೊಟ್ಟ ತಲಾಖ್ ಪತ್ನಿಗೆ ತಿಳಿಸದ್ದಿದರೆ ಅದು ಸಹ ಕ್ರಮಬದ್ಧವಾಗದು ಎಂದು ನ್ಯಾಯಮೂರ್ತಿ ಬಿ.ಡಿ.ಅಹ್ಮದ್ ಹೇಳಿದರು. ಆಯೇಷಾ ಅಂಜುಂ ಅವರು ತಮ್ಮಿಂದ ದೂರವಾದ ಪತಿ ಮಸೂರ್ ಅಹ್ಮದ್ ವಿರುದ್ಧ ಮಾಡಿರುವ ಅತ್ಯಾಚಾರದ ಆರೋಪವನ್ನೂ ತಿರಸ್ಕರಿಸಿದ ನ್ಯಾಯಾಲಯ, 2005ರ ಅಕ್ಟೋಬರಿನಲ್ಲಿ ಸಾರಲಾದ ತಲಾಖ್ ಕ್ರಮಬದ್ಧವಲ್ಲ, ಆದ್ದರಿಂದ ಅತ್ಯಾಚಾರದ ಆರೋಪ ಮಾಡಿದ ಸಂದರ್ಭದಲ್ಲಿಯೂ ೂ ಅವರು ಪತಿ-ಪತ್ನಿಯಾಗಿಯೇ ಇದ್ದರು ಎಂದು ಹೇಳಿತು. ತಲಾಖ್ ಕ್ರಮಬದ್ಧವಲ್ಲದ ಕಾರಣ ಕಾನೂನುಬದ್ಧವಾಗಿ ಮದುವೆಯಾದ ಪತ್ನಿಯೊಂದಿಗೆ ಪತಿ ಹೊಂದುವ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಹೇಳಿತು. 'ಅಕ್ಟೋಬರ್ 2005 ರಂದು ನನಗೆ ತಲಾಖ್ ನೀಡಿದ್ದರೂ ಮಸೂರ್ ಅಹ್ಮದ್ 2006ರ ಏಪ್ರಿಲ್ 13 ರಿಂದ 19ರವರೆಗೆ ತವರು ಮನೆಯಲ್ಲಿದ್ದ ನನ್ನ ಮೇಲೆ ಅತ್ಯಾಚಾರವೆಸಗಿದ' ಎಂಬುದು ಆಯೆಷಾ ಅಂಜುಂ ನೀಡಿದ ದೂರಿನ ಸಾರಾಂಶವಾಗಿತ್ತು.

2006: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಸುಪ್ರೀಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಹಸನ್ ತೀವ್ರ ಅನಾರೋಗ್ಯಕ್ಕೆ ಈಡಾಗಿ ಅಧಿಕಾರ ಸ್ವೀಕರಿಸಲು ಅಶಕ್ತರಾಗಿದ್ದಾರೆ ಎಂಬ ಕಾರಣ ನೀಡಿ ರಾಷ್ಟ್ರಪತಿ ಇಯಾಜ್ದುದೀನ್ ಅಹ್ಮದ್ ಅವರು ಹಂಗಾಮಿ ಮುಖ್ಯಸ್ಥರ ಪ್ರಮಾಣವಚನ ಸಮಾರಂಭವನ್ನು ಮುಂದೂಡಿದರು.

2006: ಭಾರತದಲ್ಲಿ ಹೊಸದಾಗಿ ಜಾರಿಯಾಗಿರುವ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಅನ್ವಯ ತಿರುನಲ್ವೇಲಿ ಸಮೀಪದ ಮೆಲಪಾಳ್ಯಂನಲ್ಲಿ ಸರ್ಕಾರಿ ನೌಕರ ಜೋಸೆಫ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದರು. ಈ ಕಾಯ್ದೆಯ ಅಡಿಯಲ್ಲಿ ಬಂಧಿತನಾದ ಮೊತ್ತ ಮೊದಲ ವ್ಯಕ್ತಿ ಈತ. ಅಕ್ಟೋಬರ್ 25ರಂದು ತನ್ನ ಪತ್ನಿ ಬೆನೆಡಿಕ್ಟ್ ಮೇರಿಯನ್ನು ಈತ ಛತ್ರಿಯ ಮೊನೆಯಿಂದ ತಿವಿದು ಹಿಂಸಿಸಿದ್ದ. ಕತ್ತು ಹಾಗೂ ಮೂಗಿಗೆ ಗಾಯಗಳಾಗಿ ರಕ್ತ ಸೋರುತ್ತ್ದಿದ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2005: ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕ್ಷೇತ್ರದಲ್ಲಿ ಮಾಡಿದ ಜೀವಮಾನದ ಸಾಧನೆಗಾಗಿ ಕರ್ನಾಟಕದ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ಅವರು 2005ನೇ ಸಾಲಿನ ಆದಿತ್ಯ ವಿಕ್ರಮ್ ಬಿರ್ಲಾ ಕಲಾ ಪುರಸ್ಕಾರಕ್ಕೆ ಆಯ್ಕೆಯಾದರು. ಈ ಪ್ರಶಸ್ತಿಯ ಮೊತ್ತ 1.50 ಲಕ್ಷ ರೂಪಾಯಿಗಳು.

1997: ಮೈಸೂರು ಸಂಪ್ರದಾಯದ ಸಂಗೀತ ಸುಧೆಯನ್ನು ಹರಡಿ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ವೈಣಿಕ ಡಾ. ವಿ. ದೊರೆಸ್ವಾಮಿ ಅಯ್ಯಂಗಾರ್ (77) ಬೆಂಗಳೂರಿನಲ್ಲಿ ನಿಧನರಾದರು.

1965: ಅಮೆರಿಕದ ಮಿಸ್ಸೌರಿಯ ಸೈಂಟ್ ಲೂಯಿಯಲ್ಲಿ ಜಗತ್ತಿನ ಅತ್ಯಂತ ಎತ್ತರದ ಸ್ಮಾರಕ ಸ್ಟೆಯಿನ್ ಲೆಸ್ ಸ್ಟೀಲಿನ `ಗೇಟ್ ವೇ ಟು ದಿ ವೆಸ್ಟ್' (ಜೆಫರ್ಸನ್ ನ್ಯಾಷನಲ್ ಎಕ್ಸ್ ಪಾನ್ಶನ್ ಮೆಮೋರಿಯಲ್) ನಿರ್ಮಾಣ ಕಾರ್ಯ ಪೂರ್ಣಗೊಂಡಿತು. 1803ರಲ್ಲಿ ಲೂಸಿಯಾನಾ ಖರೀದಿಯ ಬಳಿಕ ಪಶ್ಚಿಮದೆಡೆಗಿನ ವಿಸ್ತರಣೆಯ ನೆನಪಿಗಾಗಿ ಇದನ್ನು ನಿರ್ಮಿಸಲಾಯಿತು. ಫಿನ್ನಿಶ್- ಅಮೆರಿಕನ್ ಶಿಲ್ಪಿ ಎರೋ ಸಾರಿನೆನ್ ಅವರ ವಿನ್ಯಾಸ ಮಾಡಿದ ಈ ಸ್ಮಾರಕ 630 ಅಡಿಗಳಷ್ಟು ವಿಸ್ತಾರ ಹಾಗೂ ಅಷ್ಟೇ ಎತ್ತರವಾಗಿದೆ.

1955: ಅಮೆರಿಕದ ಕಂಪ್ಯೂಟರ್ ತಜ್ಞ, ಉದ್ಯಮಿ ಮೂರನೆಯ ವಿಲಿಯಂ ಹೆನ್ರಿ `ಬಿಲ್' ಗೇಟ್ಸ್ ಜನ್ಮದಿನ. ಜಗತ್ತಿನ ಪ್ರಪ್ರಥಮ ಪರ್ಸನಲ್ ಕಂಪ್ಯೂಟರ್ ಸಾಫ್ಟ್ ವೇರ್ ಕಂಪೆನಿ `ಮೈಕ್ರೋಸಾಫ್ಟ'ನ್ನು ಸ್ಥಾಪಿಸಿದ ಇವರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

1935: ಕನ್ನಡ ಸಾಹಿತಿ ಬೆಂಗಳೂರು ಜಿಲ್ಲೆ ದೇವನಹಳ್ಳಿಯ ಕಮಲಾ ಹಂಪನಾ ಹುಟ್ಟಿದ ದಿನ. `ಅತ್ತಿಮಬ್ಬೆ' ಪ್ರಶಸ್ತಿ ವಿಜೇತರಾದ ವಿವರು `ನಕ್ಕಿತು ಹಾಲಿನ ಬಟ್ಟಲು', `ಬಿಂದಲಿ', `ಬುಗುಡಿ' ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

1933: ಸಾಹಿತಿ ಕೆ. ಶಾಂತಾ ಜನನ.

1926: ಸಾಹಿತಿ ವೈ.ಎಂ.ಎನ್. ಮೂರ್ತಿ ಜನನ.

1898: ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಊಧಮ್ ಸಿಂಗ್ (1898-1940) ಜನ್ಮದಿನ. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ' ಡೈಯರನನ್ನು ಕೊಲೆಗೈದುದಕ್ಕಾಗಿ 1940ರಲ್ಲಿ ಊಧಮ್ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1886: ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವ ಸಂದರ್ಭದಲ್ಲಿ ಫ್ರಾನ್ಸ್ ನೀಡಿದ ಕೊಡುಗೆಯಾದ `ಸ್ಟಾಚ್ಯೂ ಆಫ್ ಲಿಬರ್ಟಿಯನ್ನು ಅಧ್ಯಕ್ಷ ಗ್ರೋವರ್ ಕ್ಲೆವ್ ಲ್ಯಾಂಡ್ ಅನಾವರಣ ಮಾಡಿದರು.

1881: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28/10/1881-8/5/1971) ಜನ್ಮದಿನ. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1867: ಸ್ವಾಮಿ ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ (1867-1911) ಜನ್ಮದಿನ. ಇಂಗ್ಲೆಂಡಿನಲ್ಲಿ ಹುಟ್ಟಿದ ಮಾರ್ಗರೆಟ್ ಎಲಿಜಬೆತ್ ನೊಬಲ್ ಅವರು ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾಗಿ ಅವರ ಶಿಷ್ಯೆಯಾಗಿ ಸಿಸ್ಟರ್ ನಿವೇದಿತಾ ಎಂಬುದಾಗಿ ಹೆಸರು ಇಟ್ಟುಕೊಂಡದ್ದಷ್ಟೇ ಅಲ್ಲ, ತಮ್ಮ ಸಾಮಾಜಿಕ, ರಾಜಕೀಯ ಸುಧಾರಣಾ ಕಾರ್ಯಗಳಿಗೆ ಭಾರತವನ್ನೇ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು

1636: ಮೆಸಾಚ್ಯುಸೆಟ್ಸಿನ ಕೇಂಬ್ರಿಜಿನಲ್ಲಿ ಹಾರ್ವರ್ಡ್ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲಾಯಿತು. ಇಂಗ್ಲಿಷ್ ಸಂಜಾತ ಪ್ಯುರಿಟನ್ ಸಚಿವ ಜಾನ್ ಹಾರ್ವರ್ಡ್ ಅವರ ಗೌರವಾರ್ಥ ಅದಕ್ಕೆ ಹಾರ್ವರ್ಡ್ ವಿಶ್ವ ವಿದ್ಯಾಲಯ ಎಂಬ ಹೆಸರು ಇಡಲಾಯಿತು.

No comments:

Post a Comment