Saturday, October 13, 2018

ಇಂದಿನ ಇತಿಹಾಸ History Today ಅಕ್ಟೋಬರ್ 13

ಇಂದಿನ ಇತಿಹಾಸ History Today ಅಕ್ಟೋಬರ್ 13


2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ೨೦೧೯ರ ನವೆಂಬರ್ ತಿಂಗಳಲ್ಲಿ ಹತ್ಯೆ ಮಾಡಲಾಗುವುದು ಎಂಬುದಾಗಿ ನೇರ ಬೆದರಿಕೆ ಹಾಕಿದ ಇ-ಮೇಲ್ (ಮಿಂಚಂಚೆ) ಒಂದು ದೆಹಲಿ ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಿಕ್ ಅವರ ಅಧಿಕೃತ ಕಚೇರಿಗೆ ಬಂದಿದ್ದು, ಪ್ರಧಾನಿಯ ಭದ್ರತಾ ವ್ಯವಸ್ಥೆಗೆ ಆಘಾತ ಉಂಟು ಮಾಡಿತು. ಬೆದರಿಕೆಯ ಮೇಲ್ ಬಂದ ಬೆನ್ನಲ್ಲೇ ಭದ್ರತಾ ಸಂಸ್ಥೆಗಳು ಪ್ರಧಾನಿಯ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್‍ಯಾಚರಣೆಗೆ ಇಳಿದವು. ಪೊಲೀಸ್ ಅಧಿಕಾರಿಗಳ ಪ್ರಕಾರ, ಭಾರತದ ಈಶಾನ್ಯಭಾಗದಿಂದ ದೆಹಲಿ ಪೊಲೀಸ್ ಕಮೀಷನರ್ ಅವರಿಗೆ ಬೆದರಿಕೆ ಇ-ಮೇಲ್ ಕಳುಹಿಸಲಾಗಿದೆ. ಇ-ಮೇಲ್ ಬಂದ ತತ್ ಕ್ಷಣವೇ ವ್ಯಾಪಕ ಶೋಧ ಕಾರ್‍ಯಾಚರಣೆ ಕೈಗೊಳ್ಳಲಾಗಿದೆ. ಇ-ಮೇಲ್ ಕಳುಹಿಸಲಾದ ಹಾಗೂ ತಲುಪಿದ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಲಿಲ್ಲ. ಇ-ಮೇಲ್ ಒಂದೇ ಒಂದು ವಾಕ್ಯದ ಸಂದೇಶವನ್ನು ಹೊಂದಿದೆ. ಅದರಲ್ಲಿ ಹತ್ಯೆ ಯೋಜನೆಯನ್ನು ಜಾರಿಗೊಳಿಸಲಾಗುವ ೨೦೧೯ನೇ ಇಸವಿಯ ನವಂಬರ್ ತಿಂಗಳು ಹಾಗೂ ದಿನಾಂಕವನ್ನು ನಮೂದಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿದವು. ಈ ವರ್ಷ ನವೆಂಬರ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.  ಬೆದರಿಕೆ ಇ-ಮೇಲ್ ಕಳುಹಿಸಿದ ವ್ಯಕ್ತಿಯನ್ನು ಬಂಧಿಸಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ದೆಹಲಿ ಪೊಲೀಸ್ ಕಮೀಷನರ್ ಅವರಿಗೆ ಬೆದರಿಕೆ ಇ-ಮೇಲ್ ಬಂದ ತತ್ ಕ್ಷಣವೇ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಗಳು ಹೇಳಿದವು. ಭೀಮಾ-ಕೋರೆಗಾಂವ್ ಹಿಂಸಾಚಾರದ ತನಿಖೆ ಕಾಲದಲ್ಲಿ ಪ್ರಧಾನಿ ಮೋದಿ ಹತ್ಯೆ ಸಂಚಿನ ವಿವರಗಳು ಲಭ್ಯವಾಗಿದ್ದ ಹಿನ್ನೆಲೆಯಲ್ಲಿ, ಈ ಬಾರಿಯೂ ಎಲ್ಲ ಭದ್ರತಾ ಸಂಸ್ಥೆಗಳೂ ವಿಸ್ತೃತ ತನಿಖೆಯನ್ನು ನಡೆಸುತ್ತಿವೆ.  ಈ ಮುನ್ನ ಜೂನ್ ತಿಂಗಳಲ್ಲಿ ಪುಣೆ ಪೊಲೀಸರು ಮುಂಬೈ, ನಾಗಪುರ, ದೆಹಲಿಯ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಪುಣೆಯ ಶನಿವಾರ ವಾಡಾದಲ್ಲಿ ೨೦೧೭ರ ಡಿಸೆಂಬರ್ ೩೧ರಂದು ನಡೆದಿದ್ದ ಎಲ್ಗರ್ ಪರಿಷತ್ ಹಾಗೂ ಆ ಬಳಿಕ ಜನವರಿ ೧ರಂದು ಭೀಮಾ -ಕೋರೆಗಾಂವ್ ನಲ್ಲಿ ಸಂಭವಿಸಿದ್ದ ವ್ಯಾಪಕ ಹಿಂಸಾಚಾರದ ಸಂಬಂಧವಾಗಿ ಉನ್ನತ ನಗರ ನಕ್ಸಲರು ಎನ್ನಲಾದ ಐವರನ್ನು ಬಂಧಿಸಿದ್ದರು. ಎಲ್ಗರ್ ಪರಿಷತ್ ಪ್ರಚೋದನೆಯಿಂದಲೇ ಭೀಮಾ-ಕೋರೆಗಾಂವ್ ಹಿಂಸಾಚಾರ ಸಂಭವಿಸಿದೆ ಎಂದು ಪೊಲೀಸರು ಆಪಾದಿಸಿದ್ದರು.   ಪ್ರಕರಣದ ತನಿಖೆಯ ವೇಳೆಯಲ್ಲಿ ಪುಣೆ ಪೊಲೀಸರಿಗೆ ಕೆಲವು ಸೂಕ್ಷ್ಮ ಸ್ವರೂಪದ ಪತ್ರಗಳು ಲಭಿಸಿದ್ದವು. ಈ ಪತ್ರಗಳ ಪೈಕಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್ ಯು) ಹಳೆ ವಿದ್ಯಾರ್ಥಿ ಹಾಗೂ ಮಾವೋವಾದಿ ಬೆಂಬಲಿಗ ರೋನಾ ವಿಲ್ಸನ್ ಅವರ ದೆಹಲಿ ಮನೆಯಲ್ಲಿ ಲಭಿಸಿದ್ದ ೨೦೧೭ರ ಏಪ್ರಿಲ್ ೧೮ರ ದಿನಾಂಕದ ಪತ್ರವೊಂದರಲ್ಲಿ ಮಾವೋವಾದಿಗಳು ರಾಜೀವ್ ಗಾಂಧಿ ಹತ್ಯೆ ಮಾದರಿಯ ಹತ್ಯೆ ಸಂಚೊಂದನ್ನು ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಟ್ಟುಕೊಂಡು ಅವರ ರೋಡ್ ಶೋ ಸಂದರ್ಭದಲ್ಲಿ ಸಂಘಟಿಸುವ ಬಗ್ಗೆ ಸುಳಿವು ಲಭಿಸಿತ್ತು. ’ಆರ್’  ಎಂಬುದಾಗಿ ಹೆಸರಿಸಲಾಗಿದ್ದ ವ್ಯಕ್ತಿ ’ಕಾಮ್ರೇಡ್ ಪ್ರಕಾಶ್’ ಎಂಬ ವ್ಯಕ್ತಿಯನ್ನು ಉದ್ದೇಶಿಸಿ ಬರೆಯಲಾಗಿದ್ದ ಈ ಪತ್ರ ರಾಜೀವ್ ಗಾಂಧಿ ಮಾದರಿಯಲ್ಲಿ ರೋಡ್ ಶೋ ವೇಳೆಯಲ್ಲಿ ಪ್ರಧಾನಿ ಮೋದಿ ಗುರಿಯಾಗಿಟ್ಟು ಕಾರ್‍ಯಾಚರಣೆ ನಡೆಸಬಹುದು ಎಂದು ಸಲಹೆ ಮಾಡಿತ್ತು. ಕಳೆದ ಹಲವಾರು ವರ್ಷಗಳಲ್ಲಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡ ಹತ್ಯೆ ಬೆದರಿಕೆಯ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ವರ್ಷ ಮೇ ತಿಂಗಳಲ್ಲಿ ಕೊಯಮತ್ತೂರು ಪೊಲೀಸರು, ಕರುಂಬುಕಾದೈ ಸಮೀಪದ ಸರಮೆಡುವಿನಲ್ಲಿ ೫೩ರ ಹರೆಯದ ಮೊಹಮ್ಮದ್ ರಫೀಕ್ ಎಂಬಾತನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್ ಎಸ್ ಎ) ಅಡಿಯಲ್ಲಿ  ಎಪ್ರಿಲ್ ೨೩ರಂದು ಬಂಧಿಸಿದ್ದರು. ಆತ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಯೋಜನೆಯನ್ನು ರೂಪಿಸಿದ್ದ ಎಂದು ಆಪಾದಿಸಲಾಗಿತ್ತು. ಇದಲ್ಲದೆ ೨೦೧೮ರ ಜೂನ್ ತಿಂಗಳಲ್ಲಿ ಗಾಜಿಯಾಬಾದಿನ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಟ್ಟು ಕೊಲ್ಲುವುದಾಗಿ ಫೇಸ್ ಬುಕ್‌ನಲ್ಲಿ ಬೆದರಿಕೆ ಹಾಕಿದ್ದ. ಬಳಿಕ ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು. ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವುದರ ಜೊತೆಗೆ ಪಂಚರಾಜ್ಯ ವಿಧಾನಸಭಾ ಚುನಾವಣೆಗಳೂ ಘೋಷಣೆಯಾಗಿರುವುದರಿಂದ, ಪ್ರಧಾನಿ ಮೋದಿ ಅವರ ಹತ್ಯೆ ಬೆದರಿಕೆ ಹೊತ್ತ ಇ-ಮೇಲ್ ಸಂದೇಶ ವ್ಯಾಪಕ ಆತಂಕಕ್ಕೆ ಎಡೆ ಮಾಡಿತು. ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ನವೆಂಬರ್ ತಿಂಗಳಲ್ಲಿ ಬಿಜೆಪಿ ವತಿಯಿಂದ ಸಾಲುಸಾಲಾಗಿ ಕಾರ್‍ಯಕ್ರಮಗಳು ನಡೆಯಲಿವೆ. ಇವುಗಳಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು ಮೋದಿ ಅವರನ್ನು ಮುಗಿಸಿಬಿಡಲು ಈಶಾನ್ಯ ಭಾರತದ ಉಗ್ರರು ಸಂಚು ರೂಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಕಟ್ಟೆಚ್ಚರ ವಹಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪ್ರಧಾನಿ ಹತ್ಯೆಗೆ ಈ ಬಾರಿ ದೊಡ್ಡ ಮಟ್ಟದಲ್ಲಿಯೇ ಸಂಚು ರೂಪಿಸಿರುವ ಸಾಧ್ಯತೆಯ ಸುಳಿವನ್ನು ಗುಪ್ತಚರ ಇಲಾಖೆ ನೀಡಿತು.ಈಶಾನ್ಯ ಭಾರತದಲ್ಲಿ ಇತ್ತೀಚೆಗೆ ಉಗ್ರರ ಚಟುವಟಿಕೆಗಳು  ಚುರುಕುಗೊಂಡಿವೆ. ಪ್ರಧಾನಿ ಹತ್ಯೆಗೆ ಉಗ್ರಗಾಮಿಗಳ  ಜೊತೆಗೆ ಮಾದಕ ಕಳ್ಳಸಾಗಣೆದಾರರೂ ಕುತಂತ್ರ ರೂಪಿಸಿದ್ದಾರೆ ಎಂದು ಹೇಳಲಾಯಿತು. ಈ ಹಿನ್ನೆಲೆಯಲ್ಲಿ ಮೋದಿ ಅವರಿಗೆ ವಿಶೇಷ ಭದ್ರತೆ ಒದಗಿಸಲಾಗಿದ್ದು, ಬಿಜೆಪಿ ಹಮ್ಮಿಕೊಳ್ಳುವ ಎಲ್ಲ ಸಭೆ ಸಮಾರಂಭಗಳಲ್ಲೂ ಅಭೂತಪೂರ್ವ ಬಂದೋಬಸ್ತ್ ವ್ಯವಸ್ಥೆಗೆ ಸೂಚನೆ ನೀಡಲಾಯಿತು.

2018: ತಿರುವನಂತಪುರಂ: ಮುಂದಿನವಾರ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಾಲಯದ ಮಹಾದ್ವಾರವನ್ನು ಮಾಸಿಕ ಪೂಜಾವಿಧಿಗಳಿಗಾಗಿ ತೆರೆಯುವುದಕ್ಕೆ ಮುನ್ನವೇ ಶಿವಸೇನೆಯ ಕೇರಳ ಘಟಕವು ಯಾರಾದರೂ ಯುವತಿ ದೇವಾಲಯ ಪ್ರವೇಶಕ್ಕೆ ಯತ್ನಿಸಿದರೆ ಶಿವಸೇನೆಯ ಮಹಿಳಾ ಕಾರ್‍ಯಕರ್ತರು ಆತ್ಮಾಹುತಿ ಮಾಡಿಕೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿತು. ಇದೇ ವೇಳೆಗೆ ಸಹಸ್ರಾರು ಮಂದಿ ಅಯ್ಯಪ್ಪ ಭಕ್ತರು ಈದಿನ ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಕೋಚಿಯಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರು. ಶಿವಸೇನಾ ಕೇರಳ ಘಟಕದ ಸದಸ್ಯ ಪೆರಿಂಗಮ್ಮಳ ಅಜಿ ಅವರು ಸಂಘಟನೆಯ ಮಹಿಳಾ ದಳವು ಅಕ್ಟೋಬರ್ ೧೭ ಮತ್ತು ೧೮ರಂದು ಪಂಬಾ ನದಿಯ ಸಮೀಪ ಆತ್ಮಾಹುತಿ ಯೋಜನೆ ಸಲುವಾಗಿಯೇ ಸಮಾವೇಶಗೊಳ್ಳಲಿದೆ ಎಂದು ಹೇಳಿದರು.  ’ನಮ್ಮ ಮಹಿಳಾ ಕಾರ್‍ಯಕರ್ತರು ಅಕ್ಟೋಬರ್ ೧೭ ಮತ್ತು ೧೮ರಂದು ಆತ್ಮಾಹುತಿ ಕಾರ್‍ಯಕ್ರಮದ ಅಂಗವಾಗಿಯೇ ಪಂಬಾ ನದಿಯ ಸಮೀಪ ಸಮಾವೇಶಗೊಳ್ಳಲಿದ್ದಾರೆ. ಯಾರಾದರೂ ಯುವತಿ ಶಬರಿಮಲೈ ದೇವಾಲಯ ಪ್ರವೇಶಿಸಲು ಯತ್ನಿಸಿದರೆ, ನಮ್ಮ ಕಾರ್‍ಯಕರ್ತೆಯರು ಆತ್ಮಾಹುತಿ ಮಾಡಿಕೊಳ್ಳುವರು’ ಎಂದು ಅಜಿ ನುಡಿದರು. ಕೇರಳದ ಆಡಳಿತಾರೂಢ ಎಡರಂಗ ಸರ್ಕಾರಕ್ಕೆ ಶಿವಸೇನೆ ಒಂದೇ ತಲೆನೋವಾಗಿ ಉಳಿದಿಲ್ಲ. ಲಿಂಗ ಸಮಾನತೆಯನ್ನು ಪ್ರತಿಪಾದಿಸುತ್ತಿರುವ ಕಾರ್‍ಯಕರ್ತೆ ತೃಪ್ತಿ ದೇಸಾಯಿ ಅವರು ಸೋಮವಾರ ಮುಂಬೈಯಲ್ಲಿ ತಾನು ಶೀಘ್ರದಲ್ಲೇ ದೇವಾಲಯಕ್ಕೆ ಭೇಟಿ ನೀಡುವುದಾಗಿ ಶನಿವಾರ ಪ್ರಕಟಿಸಿ ಸರ್ಕಾರದ ತಲೆನೋವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಮುಂಬೈಯ ಹಾಜಿ ಅಲಿ ದರ್ಗಾ ಮತ್ತು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಶನಿ ಶಿಂಗ್ಣಾಪುರ ದೇವಾಲಯದಂತಹ ಧಾರ್ಮಿಕ ಸ್ಥಳಗಳಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ತಮ್ಮ ಬ್ರಿಗೇಡ್ ಜೊತೆಗೆ ಅಭಿಯಾನ ಕೈಗೊಂಡಿದ್ದರು. ಸುಪ್ರೀಂಕೋರ್ಟ್ ತೀರ್ಪಿನ ಅನುಷ್ಠಾನಕ್ಕೆ ತೀರ್ಮಾನಿಸಿರುವ ಕೇರಳ ರಾಜ್ಯ ಸರ್ಕಾರವು ಈದಿನ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಬೇಕಾದ ವ್ಯವಸ್ಥೆಗಳ ಸಿದ್ಧತೆಯನ್ನು ಪರಿಶೀಲಿಸಿತು. ಮಾಸಿಕ ಪೂಜಾ ವಿಧಿಗಳಿಗಾಗಿ ದೇವಾಲಯದ ಮಹಾದ್ವಾರವನ್ನು ಅಕ್ಟೋಬರ್ ೧೭ರ ಸಂಜೆ ತೆರೆಯಲಾಗುವುದು. ಶಬರಿಮಲೈ ದೇವಾಲಯಕ್ಕೆ ಭೇಟಿ ನೀಡುವ ತೃಪ್ತಿ ದೇಸಾಯಿ ಯೋಜನೆಗೆ ಸರ್ಕಾರ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಅಯ್ಯಪ್ಪ ಭಕ್ತರು ಮತ್ತು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ತೃಪ್ತಿ ದೇಸಾಯಿ ಹೇಳಿಕೆಗೆ ಖಾರ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಜೆಪಿ ಮತ್ತು ಅಯ್ಯಪ್ಪ ಭಕ್ತರಿಂದ ದೇವಾಲಯಕ್ಕೆ ಮಹಿಳಾ ಪ್ರವೇಶದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಪಂದಳ ರಾಜಕುಟುಂಬದ ಸದಸ್ಯ ಶಶಿ ಕುಮಾರ್ ಅವರು ದೇಸಾಯಿ ಅವರನ್ನು ಟೀಕಿಸಿ ಯಾವುದೇ ಪ್ರಚೋದನಾತ್ಮಕ ಕ್ರಮದಿಂದ ದೂರವಿರುವಂತೆ ಆಗ್ರಹಿಸಿದರು.  ಯಾವುದೇ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳುವಂತೆ ಎಡ ಪಕ್ಷ ಸರ್ಕಾರವನ್ನು ಅವರು ಒತ್ತಾಯಿಸಿದರು.  ’ಭೂಮಾತಾ ಬ್ರಿಗೇಡ್’ ನಾಯಕಿ ತೃಪ್ತಿ ದೇಸಾಯಿ ಅವರು ಈದಿನ ಮುಂಬೈಯಲ್ಲಿ ತಾವು ಮಹಿಳಾ ಗುಂಪಿನೊಂದಿಗೆ ಶೀಘ್ರದಲ್ಲೇ ಪ್ರಾರ್ಥನೆಯ ಸಲುವಾಗಿ ಶಬರಿಮಲೈ ದೇವಾಲಯಕ್ಕೆ ಭೇಟಿ ನೀಡಲಿರುವುದಾಗಿ ಪ್ರಕಟಿಸಿದ್ದರು.  ’ನಾವು ಶೀಘ್ರದಲ್ಲೇ ಶಬರಿಮಲೈಗೆ ಭೇಟಿ ನೀಡಲಿದ್ದೇವೆ’ ಎಂದು ನುಡಿದ ದೇಸಾಯಿ, ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಭಕ್ತರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿ ’ಪ್ರಾರ್ಥನೆಗಾಗಿ ಬೆಟ್ಟದ ಮೇಲಿನ ದೇಗುಲಕ್ಕೆ ಬರುವ ಮಹಿಳೆಯರನ್ನು ಸ್ವಾಗತಿಸಿ ಎಂದು ನಾನು ಚಳವಳಿ ನಿರತ ಭಕ್ತರಿಗೆ ಮನವಿ ಮಾಡುತ್ತೇನೆ’ ಎಂದು ಹೇಳಿದರು.  ’ನೀವು ಮಹಿಳೆಯರ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿದ್ದೀರಾ ಎಂಬುದಾಗಿ ನಾನು ಕಾಂಗ್ರೆಸ್ ಮತ್ತು ಬಿಜೆಪಿಗೆ ಕೇಳಬಯಸುತ್ತೇನೆ. ಪಕ್ಷಗಳು ಈ ಬಗ್ಗೆ ಕೂಡಾ ತಮ್ಮ ನಿಲುವು ಏನೆಂದು ವಿವರಿಸಬೇಕು’ ಎಂದು ದೇಸಾಯಿ ನುಡಿದರು. ಕೋಚಿಯಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರಗಳಿರುವ ಫಲಕಗಳನ್ನು ಹಿಡಿದು,  ಅಯ್ಯಪ್ಪ ಮಂತ್ರಗಳನ್ನು ಪಠಿಸುತ್ತಾ ಅಯ್ಯಪ್ಪ ಸ್ವಾಮಿ ಭಕ್ತರು ನಗರದ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಖ್ಯಾತ ಶಿವ ದೇವಾಲಯದಿಂದ ಅವರು ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿದರು.  ಭಾರೀ ಸಂಖ್ಯೆಯ ಮಹಿಳೆಯರು ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು. ಬೆಟ್ಟದ ಮೇಲಿನ ದೇವಾಲಯದ ಶತಮಾನಗಳಷ್ಟು ಹಳೆಯದಾದ ಧಾರ್ಮಿಕ ವಿಧಿಗಳು ಮತ್ತು ಸಂಪ್ರದಾಯಗಳ ಪಾವಿತ್ರ್ಯವನ್ನು ರಕ್ಷಿಸಿ ಎಂದು ಅವರು ಉಭಯ ಸರ್ಕಾರಗಳನ್ನೂ ಆಗ್ರಹಿಸಿದರು. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೈ ದೇವಾಲಯವು ಅಯ್ಯಪ್ಪ ಸ್ವಾಮಿಯ ದೇವಾಲಯವಾಗಿದ್ದು, ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿಯಾಗಿರುವುದರಿಂದ ದೇವಾಲಯ ಪ್ರವೇಶಿಸದಂತೆ ಋತುಮತಿಯರಾದ ಮಹಿಳೆಯರಿಗೆ ನಿಷೇಧ ವಿಧಿಸಲಾಗಿತ್ತು ಎಂದು ದೇವಾಲಯದ ಆಡಳಿತ ಮಂಡಳಿಯು ಹೇಳಿತು.

2018: ಮುಂಬಯಿ: ಪ್ರಖ್ಯಾತ ಹಿಂದುಸ್ಥಾನಿ ಗಾಯಕಿ ಅನ್ನಪೂರ್ಣ ದೇವಿ (91) ಅವರು ವಾರ್ಧಕ್ಯದಿಂದ ನಗರದ ಬ್ರೀಚ್ಕ್ಯಾಂಡಿ ಆಸ್ಪತ್ರೆಯಲ್ಲಿ  ನಸುಕಿನ 3.51 ವೇಳೆಗೆ  ಇಹಲೋಕ ತ್ಯಜಿಸಿದರು. ಸಂಗೀತ ಲೊಕಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು ಪ್ರಖ್ಯಾತ ಸಂಗೀತ ದಿಗ್ಗಜ ಅಲ್ಲಾವುದ್ದೀನ್ಖಾನ್ಅವರ ಪುತ್ರಿಯಾಗಿದ್ದರು. ಸೀತಾರ್ಮಾಂತ್ರಿಕ ರವಿಶಂಕರ್ಅವರನ್ನು ವಿವಾಹವಾದ ಬಳಿಕ ಅನ್ನಪೂರ್ಣ ಆಗಿದ್ದರುಅನ್ನಪೂರ್ಣ ದೇವಿ ಅವರ ನಿಧನಕ್ಕೆ ಅಪಾರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದರು.


2018: ನವದೆಹಲಿ: ಗುರುಗ್ರಾಮದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣ ಕಾಂತ್ ಶರ್ಮ ಅವರ ಪತ್ನಿ ಮತ್ತು ಮಗನಿಗೆ ಸೆಕ್ಟರ್ ೪೯ರ ಕಿಕ್ಕಿರಿದ ಮಾರುಕಟ್ಟೆಯಲ್ಲಿ ಅಧಿಕೃತ ಅಂಗರಕ್ಷಕನೇ ಗುಂಡು ಹಾರಿಸಿದ ಘಟನೆ ಘಟಿಸಿತು. ಶರ್ಮ ಅವರ ಪತ್ನಿ ರಿತು ಮತ್ತು ಪುತ್ರ ಧ್ರುವ ಅವರು ಅರ್ಕಾಡಿಯ ಮಾರುಕಟ್ಟೆಗೆ ಖರೀದಿಗಾಗಿ ತೆರಳಿದ್ದಾಗ, ಮಧ್ಯಾಹ್ನ .೩೦ರ ವೇಳೆಗೆ ಘಟನೆ ಘಟಿಸಿದೆ ಎಂದು ಪೊಲೀಸರು ತಿಳಿಸಿದರು.  ರಿತು  ಮತ್ತು ಧ್ರುವ ಜೊತೆಗೆ ನ್ಯಾಯಾಧೀಶರ ಅಂಗರಕ್ಷಕ ಮಹಿಪಾಲ್ ಕೂಡಾ ಮಾರುಕಟ್ಟೆಗೆ ತೆರಳಿದ್ದ. ’ಅರ್ಕಾಡಿಯ ಮಾರುಕಟ್ಟೆಯ ಹೊರಭಾಗದಲ್ಲಿ ಗುಂಡು ಹಾರಾಟದ ಸದ್ದುಗಳು ಕೇಳಿ ಬಂದಿವೆ ಎಂದು ಕೆಲವು ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಪೊಲೀಸರ ತಂಡ ಸ್ಥಳಕ್ಕೆ ತಲುಪಿದಾಗ ರಿತು  ಮತ್ತು ಧ್ರುವ ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಡಿಸಿಪಿ (ಪೂರ್ವ) ಸುಲೋಚನಾ ಗಜರಾಜ್ ಹೇಳಿದರು.  ರಿತು  ಅವರ ಎದೆಯಲ್ಲಿ ಗುಂಡೇಟಿನ ಗಾಯವಾಗಿದ್ದರೆ, ಧ್ರುವ ತಲೆಗೆ ಗುಂಡೇಟು ಬಿದ್ದಿತ್ತು ಎಂದು ಸುಲೋಚನಾ ನುಡಿದರುಇಬ್ಬರನ್ನೂ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸ್ ಅಧಿಕಾರಿ ನುಡಿದರು.  ಘಟನೆಯ ಬಳಿಕ ಆರೋಪಿ ಮಹಿಪಾಲ್ ನೇರವಾಗಿ ಸದರ್ ಪೊಲೀಸ್ ಠಾಣೆಗೆ ತೆರಳಿ ಅಲ್ಲಿದ್ದ ಅಧಿಕಾರಿಗಳತ್ತ ಗುಂಡು ಹಾರಿಸಿದ.  ಎಸ್ಎಚ್ ಅವರು ಆತನನ್ನು ತಡೆಯಲು ಯತ್ನಿಸಿದಾಗ ಆತ ತಪ್ಪಿಸಿಕೊಂಡು ಪರಾರಿಯಾದ. ಬಳಿಕ ಆತನನ್ನು ಫರೀದಾಬಾದ್ ರಸ್ತೆಯಲ್ಲಿ ಬಂಧಿಸಲಾಯಿತು. ಆರೋಪಿಯು ಖಿನ್ನತೆಯಿಂದ ನರಳುತ್ತಿದ್ದಾನೆ ಎಂದು ಹೇಳಿರುವ ಗುರುಗ್ರಾಮ ಪೊಲೀಸ್ ಕಮೀಷನರ್ ಅವರು ತನಿಖೆ ಮುಂದುವರೆದಿದೆ ಎಂದರು.

2018: ರಾಯ್ ಪುರ: ಚುನಾವಣೆ ಘೋಷಣೆಯಾದ ಛತ್ತೀಸ್ ಗಢ ಕಾಂಗ್ರೆಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಹಾಗೂ ಪಲಿ -ಟಣಖಾರ್ ಕ್ಷೇತ್ರದ ಶಾಸಕ ರಾಮದಯಾಳ್ ಉಯಿಕೆ ಅವರು ಪಕ್ಷಕ್ಕೆ ೧೫ ವರ್ಷಗಳ ಸೇವೆಯ ಬಳಿಕ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮರುಸೇರ್ಪಡೆಯಾದರು. ಬಿಲಾಸ್ಪುರ ಪ್ರದೇಶದ ಬುಡಕಟ್ಟು ನಾಯಕನಾಗಿರು ರಾಮದಯಾಳ್ ಅವರ ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಆಪಾದಿಸಿದರು.  ‘ಬುಡಕಟ್ಟು ನಾಯಕರನ್ನು ನಿರ್ಲಕ್ಷಿಸಲಾಗುತ್ತಿದೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಅವರ ಬಗ್ಗೆ ಯಾವುದೇ ಒಲವು ಕೂಡಾ ಇಲ್ಲ. ಅವರು ಹೇಳುವುದಕ್ಕೂ ಮಾಡುವುದಕ್ಕೂ ಅಜಗಜಾಂತರ ಇದೆ ಎಂದು ಉಯಿಕೆ ಹೇಳಿದರುಕಾಂಗ್ರೆಸ್ ಪಕ್ಷವು ಬುಡಕಟ್ಟು ಜನರ ಮತ್ತು ಬಡಜನರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ, ಬುಡಕಟ್ಟು ನಾಯಕನಾದ ನನಗೆ ಇದರಿಂದ ಅತ್ಯಂತ ಬೇಸರವಾಗಿದೆ. ಮುಖ್ಯಮಂತ್ರಿ ರಮಣ್ ಸಿಮಗ್ ಅವರು ಬುಡಕಟ್ಟು ಜನರು ಮತ್ತು ಹಿಂದುಳಿದ ಜನರ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಅಭಿವೃದ್ಧಿ ಆಧಾರಿತ ನೀತಿಗಳು ನನ್ನ ಹಳೆಯ ಪಕ್ಷವನ್ನು ಮತ್ತೆ ಸೇರುವಂತೆ ನನಗೆ ಪ್ರೇರಣೆ ನೀಡಿವೆ ಎಂದು ರಾಮದಯಾಳ್ ನುಡಿದರು.
ತಮ್ಮ ಬಿಜೆಪಿ ಪುನರಾಗಮನವನ್ನು ಉಯಿಕೆಘರ್ ವಾಪ್ಸಿ ಎಂದು ಬಣ್ಣಿಸಿದರು. ಕಾಂಗ್ರೆಸ್ಸಿನಲ್ಲಿ ನನಗೆ ಉಸಿರು ಕಟ್ಟುವ ಅನುಭವವಾಗಿತ್ತು ಎಂದು ಅವರು ಹೇಳಿದರುಕಾಂಗ್ರೆಸ್ ಪಕ್ಷವು ಸಿಡಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದೆ. ದೆಹಲಿಯ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಭೂಪೇಶ್ ಬಘೇಲ್ ಅವರಿಗೆ ಸಿಡಿಗಳಲ್ಲಿ ಶಾಮೀಲಾಗುವಂತೆ ಸೂಚಿಸಿದಂತೆ ಕಾಣುತ್ತದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ನುಡಿದರು. ರಾಜ್ಯ ಬಿಜೆಪಿ ಸಚಿವರೊಬ್ಬರಿಗೆ ಸಂಬಂಧಿಸಿದಸೆಕ್ಸ್ ಸಿಡಿ ಪ್ರಸಾರದಲ್ಲಿ ಶಾಮೀಲಾದ ಆಪಾದನೆಗೆ ಛತ್ತೀಸ್ ಗಢ ಕಾಂಗ್ರೆಸ್ ಮುಖ್ಯಸ್ಥ ಭೂಪೇಶ್ ಬಘೇಲ್ ಗುರಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ೨೦೦೦ದಲ್ಲಿ ಉಯಿಕೆ ಅವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು ಮತ್ತು ರಾಜ್ಯದಲ್ಲಿ ಮೊದಲ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಅಜಿತ್ ಜೋಗಿ ಅವರಿಗೆ ಛತ್ತೀಸ್ ಗಢ ವಿಧಾನಸಭೆ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲು ತಮ್ಮ ಮಾರ್ವಾಹಿ ಸ್ಥಾನವನ್ನು ತೆರವುಗೊಳಿಸಿದ್ದರುಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಕೇಳಲಾದ ಪ್ರಶ್ನೆಗೆ ವಿಚಾರದಲಿ ತಾವು ಪಕ್ಷ ನಾಯಕತ್ವದ ನಿರ್ದೇಶನಗಳನ್ನು ಪಾಲಿಸುವುದಾಗಿ ರಾಮದಯಾಳ್ ನುಡಿದರು೯೦ ಸದಸ್ಯಬಲದ ಛತ್ತೀಸ್ ಗಢ ವಿಧಾನಸಭೆಗೆ ನವೆಂಬರ್ ೧೨ ಮತ್ತು ನವೆಂಬರ್ ೨೦ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉಯಿಕೆ ಅವರ ಸ್ಥಾನ ತುಂಬುವಂತಹ ನಾಯಕರಿಗೇನೂ ಪಕ್ಷದಲ್ಲಿ ಕೊರತೆ ಇಲ್ಲ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ಪಕ್ಷವು ಧೈರ್ಯವನ್ನು ಪ್ರದರ್ಶಿಸಿತು. ಜೋಗಿ ಅವರ ನೆರವಿನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಹೇಳಿದ ಕಾರಣಗಳಿಗಾಗಿಯೇ ಅವರು ಬಿಜೆಪಿಗೆ ವಾಪಸಾಗಿದ್ದಾರೆ. ನಿನ್ನೆಯವರೆಗೆ ಅವರು ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಸಕ್ರಿಯರಾಗಿಯೇ ಇದ್ದರು. ಇದು ಕಳೆದ ರಾತ್ರಿ ಸಂಚು ರೂಪುಗೊಂಡಿತು ಎಂಬುದನ್ನು ಸೂಚಿಸುತ್ತದೆ. ಅವರ ನಿರ್ಗಮನದಿಂದ ನಮಗೇನೂ  ನಷ್ಟವಾಗಿಲ್ಲ. ಏಕೆಂದರೆ ನಮ್ಮ ಬಳಿ ಇತರ ಆಯ್ಕೆಗಳಿವೆ ಎಂದು ಕಾಂಗ್ರೆಸ್ ವಕ್ತಾರ ಶೈಲೇಶ್ ನಿತಿನ್ ತ್ರಿವೇದಿ ಹೇಳಿದರು.

2016: ನವದೆಹಲಿ: 26/11 ಮುಂಬೈ ತಾಜ್ ಹೊಟೇಲ್ ಮೇಲಿನ ಉಗ್ರರ ದಾಳಿಯನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸೀಸರ್ ನಾಯಿ ಈದಿನ ರಾತ್ರಿ  ಮರಣವನ್ನಿಪ್ಪಿತು. ಹನ್ನೊಂದು ವರ್ಷದ ಸೀಸರ್ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ, ಹಲವು ದಿನಗಳಿಂದ ನೆಲ ಹಿಡಿದಿತ್ತು. 26/11 ಮುಂಬೈ ತಾಜ್ ಹೊಟೇಲ್ ಮೇಲಿನ ಉಗ್ರರ ಜಾಡು ಹುಡುಕಲು ಇದೇ ಸೀಸರ್, ಮ್ಯಾಕ್ಸ್, ಸುಲ್ತಾನ್ ಮತ್ತು ಟೈಗರ್ ಎಂಬ ನಾಯಿಗಳು ಸಹಾಯ ಮಾಡಿದ್ದವು. ನಾಲ್ಕು ಪೊಲೀಸ್ ನಾಯಿಗಳಲ್ಲಿ ಮ್ಯಾಕ್ಸ್ ಮತ್ತು ಸುಲ್ತಾನ್ ನಾಯಿ ಕೆಲ ವರ್ಷಗಳ ಹಿಂದೇ ಸಾವನ್ನಪ್ಪಿದ್ದವು. ವರ್ಷ ಟೈಗರ್ ಕೂಡ ಸಾವನ್ನಪ್ಪಿದ್ದರಿಂದ ಸೀಸರ್ ಏಕಾಂಗಿಯಾಗಿತ್ತು. ಸೀಸರ್ ಸಾವಿನಿಂದ ಈಡೀ ಮುಂಬೈ ಶೋಕಾಚರಣೆ ಆಚರಿಸಲು ಮುಂದಾಯಿತು. ಅಷ್ಟೇ ಅಲ್ಲ ಮುಂಬೈ ಪೊಲೀಸ್ ಅಧಿಕಾರಿಗಳು ತ್ತು ಸೈನಿಕರು ಸಕಲ ಗೌರವನ್ನು ಅರ್ಪಿಸಿದರು. ಫಿಜಾ ಶಾ ಎಂಬ ವ್ಯಕ್ತಿ ನಾಯಿಯನ್ನು ಪೋಷಿಸುತ್ತಿದ್ದು, ಸೀಸರ್ ಸಾವಿನ ಕುರಿತು ಅತೀವ ದುಃಖ ವ್ಯಕ್ತಪಡಿಸಿದರು. ಸೀಸರ್ ಆರೋಗ್ಯದಲ್ಲಿ ಕಳೆದೊಂದು ವಾರದಲ್ಲಿ ತಕ್ಕ ಮಟ್ಟಿನ ಚೇತರಿಕೆ ಕಂಡಿತ್ತು. ಇದರಿಂದ ಸೀಸರ್ ಮೊದಲಿನಂತೆ ಓಡಾಡಬಹುದು ಎಂಬ ಆಶಾಭಾವ ಹೊಂದಿದ್ದೇವು. ಆದರೆ ಅದು ಹುಸಿಯಾಗಿದೆ ಎಂದು ಅವರು ಹೇಳಿದರು. 
2016: ಬ್ಯಾಂಕಾಕ್‌: ಸತತ 70 ವರ್ಷಗಳ ಆಡಳಿತ ನಡೆಸಿದ್ದ ಥಾಯ್ಲೆಂಡ್ ದೊರೆ ಭೂಮಿಬೋಲ್ಅದುಲ್ಯದೇಜ್‌  ನಿಧನರಾದರು. ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜನೆಂಬ ಖ್ಯಾತಿ ಹೊಂದಿರುವ 88 ವರ್ಷದ ಭೂಮಿಬೋಲ್ಅದುಲ್ಯದೇಜ್ಇಲ್ಲಿನ ಸಿರಿರಾಜ್ಆಸ್ಪತ್ರೆಯಲ್ಲಿ ಮಧ್ಯಾಹ್ನ 3:52ಕ್ಕೆ ಕೊನೆಯುಸಿರೆಳೆದರು ಎಂದು ಅರಮನೆ ಪ್ರಕಟಣೆ ತಿಳಿಸಿತು. ಕಳೆದ 2 ವರ್ಷಗಳಿಂದ ಅವರು ಬಹು ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದರು. ಥಾಯ್ಲೆಂಡ್ಜನತೆಯಿಂದ ದೇವಮಾನವ ಎಂದೇ ಕರೆಯಲ್ಪಡುತ್ತಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿದ್ದರು. ಅಣ್ಣನ ಸಾವಿನ ನಂತರ 1946ರಲ್ಲಿ ಪಟ್ಟಕ್ಕೇರಿದ್ದ ಅವರಿಗೆರಾಮ 9’ ಎಂದೂ ಕರೆಯಲಾಗುತ್ತಿತ್ತು. 63 ವರ್ಷದ ಯುವರಾಜ ಮಹಾ ವಾಚಿರಾಲೋನ್ಕೊನ್ ಮುಂದಿನ ದೊರೆಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಧಾನಿ ಪ್ರಯುತ್ಚಾನ್‌–ಓಚಾ ತಿಳಿಸಿದರು. 2014 ನಂತರದ ಘರ್ಷಣೆ ಬಳಿಕ ಜಾರಿಯಲ್ಲಿರುವ ಮಿಲಿಟರಿ ಆಡಳಿತ ದೊರೆಯ ನಿಧನದ ನಂತರವೂ ಮುಂದುವರಿಯಲಿದೆ. 2016 ಬ್ರಿಕ್ಸ್ ಸಮ್ಮೇಳನದಲ್ಲಿ  ಪ್ರಧಾನಿ ಪ್ರಯುತ್ಅವರು ಭಾಗವಹಿಸಬೇಕಿತ್ತು. ಅಧಿಕೃತ ಭಾರತ ಭೇಟಿಯನ್ನು ಅವರು ರದ್ದು ಪಡಿಸಿದ್ದಾರೆ ಎಂದು ಹೇಳಲಾಯಿತು. ವೈದ್ಯರ ತಂಡ ಅವಿರತ ಶ್ರಮ ಪಟ್ಟು ಚಿಕಿತ್ಸೆ ನೀಡಿದರೂ ದೊರೆಯ ಆರೋಗ್ಯ ಸ್ಥಿತಿ ಸುಧಾರಣೆಯಾಗಲಿಲ್ಲ, ಬದಲಿಗೆ ಗುರುವಾರ ಇನ್ನಷ್ಟು ವಿಷಮಿಸಿತು ಎಂದು ಅರಮನೆ ಹೇಳಿಕೆ ತಿಳಿಸಿತು.
2016: ಸ್ಟಾಕ್ ಹೋಮ್:  ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಹಾಗೂ ಕಲಾವಿದರಾದ ಬಾಬ್ಡೈಲನ್‌ 2016ನೇ ಸಾಲಿನ ಸಾಹಿತ್ಯ ನೊಬೆಲ್ಪ್ರಶಸ್ತಿಗೆ ಪಾತ್ರರಾದರು. ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನು ಸಾಹಿತಿ ಬಾಬ್ ಡೈಲನ್ ಗೆದ್ದಿದ್ದಾರೆ ಎಂದು ಸ್ವೀಡಿಷ್ ಅಕಾಡೆಮಿ ಪ್ರಕಟಿಸಿತು. ಅಮೆರಿಕದ ಹಾಡಿನ ಪ್ರಕಾರದಲ್ಲಿ ಹೊಸತನದ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ಸೃಷ್ಟಿಸಿರುವ ಗೀತರಚನೆಕಾರ ಬಾಬ್ಡೈಲನ್ಗೆ ಅವರಿಗೆ 80 ಲಕ್ಷ ಸ್ವೀಡಿಷ್ ಕ್ರೌನ್ (927,740 ಡಾಲರ್) ಮೊತ್ತದ ಪ್ರಶಸ್ತಿ ಸಂದಿದೆ. 1901ರಿಂದ ಈವರೆಗೆ ಒಟ್ಟು 108 ಸಾಹಿತ್ಯ ನೊಬೆಲ್ನೀಡಲಾಗಿದ್ದು, ಇದರಲ್ಲಿ ಪ್ರಶಸ್ತಿಗೆ ಪಾತ್ರರಾಗಿರುವ ಮಹಿಳಾ ಸಾಹಿತಿಗಳು 14.  ಬಾಬ್ಡೈಲನ್‌: ಜನನ: ಮೇ 24,1941. ಸ್ಥಳ: ಮಿನೆಸೊಟಾ, ಅಮೆರಿಕ.  ಮಧ್ಯಮ ವರ್ಗದ ಜೂಯಿಷ್ಕುಟುಂಬದಲ್ಲಿ ಬೆಳೆದ ಬಾಬ್ಡೈಲನ್ಅವರಿಗೆ ಚಿಕ್ಕಂದಿನಿಂದಲೂ ಸಂಗೀತದ ಕಡೆಗೆ ಹೆಚ್ಚಿನ ಒಲವು. ಅನೇಕ ಬ್ಯಾಂಡ್ಗಳಲ್ಲಿ ಭಾಗಿಯಾದ ಬಾಬ್ಅವರಿಗೆ ಅಮೆರಿಕದ ಜಾನಪದ ಸಂಗೀತ ಮತ್ತು ಬ್ಲೂಸ್‌(ಆಫ್ರಿಕನ್ಅಮೆರಿಕನ್ಸಂಗೀತ ಶೈಲಿ) ಬಗ್ಗೆ ಆಸಕ್ತಿ ಹೆಚ್ಚಿತು. ಆಧುನಿಕ ಕವಿಗಳು ಮತ್ತು ಬೀಟ್ಪೀಳಿಗೆಯಿಂದಲೂ ಪ್ರಭಾವಿತರಾಗಿದ್ದ ಬಾಬ್ಅವರು ಅಮೆರಿಕದ ಸಂಗೀತದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿದ್ದರು. ನ್ಯೂಯಾರ್ಕ್ ಕ್ಲಬ್ಮತ್ತು ಕೆಫೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಡುತ್ತಿದ್ದವರು ರೆಕಾರ್ಡ್ಪ್ರೊಡ್ಯೂಸರ್ಒಬ್ಬರ ಸಹಕಾರದಿಂದ 1962ರಲ್ಲಿಬಾಬ್ಡೈಲನ್‌’ ಹೆಸರಿನ ಆಲ್ಬಂ ಹೊರ ತಂದರು. ಅಲ್ಲಿಂದ ಮುಂದೆ ಬಾಬ್ಅವರ ಹಾಡುಗಳ ಖ್ಯಾತಿ ಜಗತ್ತಿನಾದ್ಯಂತ ಹರಡಿತು. ಮಾಡರ್ನ್ಟೈಮ್ಸ್‌, ಟೈಮ್ಔಟ್ಆಫ್ಮೈಂಡ್‌, ಓಹ್ಮರ್ಸಿ ಬಾಬ್ಅವರ ಕೆಲವು ಪ್ರಮುಖ ಆಲ್ಬಂಗಳು. ವರ್ಷದ ನೊಬೆಲ್ ಪ್ರಶಸ್ತಿ ಪಟ್ಟಿಯಲ್ಲಿ ಸಾಹಿತ್ಯಕ್ಕೆ ನೀಡಲಾಗುವ ಪ್ರಶಸ್ತಿ ಕೊನೆಯದಾಗಿದೆ. ಡೈನಮೈಟ್ ಸಂಶೋಧಕ ಅಲ್ಪ್ರೆಡ್ ನೊಬೆಲ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು 1901ರಿಂದ ಪ್ರತಿವರ್ಷ ವಿಜ್ಞಾನ, ಸಾಹಿತ್ಯ ಮತ್ತು ಶಾಂತಿ ಸ್ಥಾಪನೆ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಅಲ್ಪ್ರೆಡ್ ನೊಬೆಲ್ ಅವರ ಆಶಯದಂತೆ ನೀಡುತ್ತಾ ಬರಲಾಗಿದೆ.

2016: ಮುಂಬೈ: ಬಾಲಿವುಡ್ನಟಿ ಶಿಲ್ಪಾ ಶೆಟ್ಟಿ ತಮ್ಮ ತಂದೆ ಸುರೇಂದ್ರ ಡಿಜೋ ಶೆಟ್ಟಿ ಅವರ ನಿಧನವನ್ನು ನೆನೆದು ಭಾವನಾತ್ಮಕ ಪದಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡರು.  ಅಕ್ಟೋಬರ್‌ 10 ರಂದು ಸುರೇಂದ್ರ ಡಿಜೋ ಶೆಟ್ಟಿ ಅವರು ಹೃದಯ ಸಂಬಂಧಿತ ಕಾಯಿಲೆಗೆ ತುತ್ತಾಗಿ ಅಂಧೇರಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ಅವರನ್ನು ನೆನೆದು ಶಿಲ್ಪಾ ಶೆಟ್ಟಿ ಭಾವನಾತ್ಮಕ ಮಾತುಗಳನ್ನು ಬರೆದರು.


2016: ನವದೆಹಲಿ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿಗಳು ದಸರಾ ಪ್ರಯುಕ್ತ ಅ.11ರಂದು  ರಾವಣನ ಪ್ರತಿಕೃತಿ ದಹನ ಮಾಡುವುದರ ಬದಲು ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹನ ಮಾಡುವ ಮೂಲಕ ಹೊಸ ವಿವಾದವನ್ನು ಹುಟ್ಟು ಹಾಕಿದ ಘಟನೆ ಸಂಬಂಧ ವಿವರವಾದ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿತು.
ಘಟನೆ ಸಂಬಂಧ ಜೆಎನ್ಯುು ವಿವಿಯ ಉಪಕುಲಪತಿಗಳೂ ಸಹ ತನಿಖೆ ನಡೆಸುವಂತೆ ಆದೇಶಿಸಿದರು.  ವಿವಿ ಆವರಣದಲ್ಲಿ ಪ್ರತಿಭಟನೆ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಜೆಎನ್ಯುು ವಿದ್ಯಾರ್ಥಿಗಳ ಸಂಘ ನರೇಂದ್ರ ಮೋದಿ ಅವರ ಪ್ರತಿಕೃತಿಯನ್ನು ದಹಿಸಿತ್ತು. ಮೋದಿ ಜತೆಯಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ನಾತೂರಾಂ ಗೂಡ್ಸೆ, ಸಾಧಿ್ವ ಪ್ರಜ್ಞಾ, ಬಾಬಾ ರಾಮ ದೇವ್ ಅವರ ಪ್ರತಿಕೃತಿಗಳನ್ನೂ ಸಹ ದಹಿಸಲಾಗಿತ್ತು. ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಲು ವಿದ್ಯಾರ್ಥಿಗಳು ಪ್ರತಿಕೃತಿ ದಹನ ಮಾಡಿದ್ದಾರೆ. ಕೇಂದ್ರ ಸರ್ಕಾರದ ರಾಕ್ಷಸೀ ಪ್ರವೃತ್ತಿಯನ್ನು ಸುಟ್ಟು, ಜನರ ಪರವಾದ ಮತ್ತು ವಿದ್ಯಾರ್ಥಿಗಳ ಪರವಾದ ಸರ್ಕಾರ ರಚನೆಯಾಗಲಿ ಎಂಬುದು ನಮ್ಮ ಉದ್ದೇಶವಾಗಿತ್ತು ಎಂದು ಜೆಎನ್ಯುು ವಿದ್ಯಾರ್ಥಿ ಸನ್ನಿ ಡಿಮನ್ ತಿಳಿಸಿದರು.
2016: ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಮ್ಮುವಿನಲ್ಲಿ ಇಂಡಿಯನ್ಇನ್ಸ್ಟಿಟ್ಯೂಟ್ಆಫ್ಮ್ಯಾನೇಜ್ಮೆಂಟ್‌ (ಐಐಎಂ) ಕಾರ್ಯಾರಂಭಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಪ್ರಧಾನ ಮಂತ್ರಿಗಳ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಯೋಜನೆ ಅಡಿ ಐಐಎಂ ಕಾರ್ಯಾರಂಭಿಸಲಿದೆ. ಜಮ್ಮುವಿನ ಇಂಜಿನಿಯರಿಂಗ್ಮತ್ತು ತಂತ್ರಜ್ಞಾನ ಸರ್ಕಾರಿ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲು ಸಚಿವ ಸಂಪುಟದ ಸಮ್ಮತಿ ದೊರೆತಿದ್ದು, ಮುಂದೆ ಕಾಶ್ಮೀರ ಭಾಗದಲ್ಲಿ ಐಐಎಂ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ತಾತ್ಕಾಲಿಕ ಕ್ಯಾಂಪಸ್ನಲ್ಲಿ 2016ರಿಂದ 2020ರವರೆಗಿನ ಶೈಕ್ಷಣಿಕ ಚಟುವಟಿಕೆಗಳಿಗಾಗಿ ₹61.90 ಕೋಟಿ ಮೀಸಲಿಡಲಾಗಿದೆ. ಸಾಲಿನಲ್ಲಿ ಮ್ಯಾನೇಜ್ಮೆಂಟ್ವಿಷಯದಲ್ಲಿನ ಸ್ನಾತಕೋತ್ತರ ಡಿಪ್ಲೊಮಾ ಕಾರ್ಯಕ್ರಮ(ಪಿಜಿಡಿಪಿ)ಕ್ಕೆ 54 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸೊಸೈಟಿಗಳ ನೋಂದಣಿ ಕಾಯ್ದೆ,1860 ಅಡಿ ಐಐಎಂ ಜಮ್ಮು ಸೊಸೈಟಿ ಸ್ಥಾಪನೆಗೂ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಮೂಲಕ ಐಐಎಂ ಜಮ್ಮು, ಕೇಂದ್ರ ಸರ್ಕಾರ ರಚಿಸುವ ಅಧ್ಯಕ್ಷೀಯ ಮಂಡಳಿ ಮತ್ತು ಸೊಸೈಟಿಯ ಮೂಲಕ ನಿರ್ವಹಿಸಲ್ಪಡಲಿದೆ. ಪ್ರಸ್ತುತ ದೇಶದಲ್ಲಿ 19 ಐಐಎಂಗಳಿವೆ. ಇದರಲ್ಲಿ ಅಹಮದಾಬಾದ್‌, ಬೆಂಗಳೂರು, ಕೋಲ್ಕತ್ತ, ಲಖನೌ, ಇಂದೋರ್‌, ಕೋಯಿಕೋಡ್‌, ಶಿಲ್ಲಾಂಗ್‌, ರಾಂಚಿ, ರಾಯ್ಪುರ್, ರೋಹ್ಟಕ್‌, ಕಾಶೀಪುರ್‌, ತ್ರಿಚಿ ಹಾಗೂ ಉದಯ್ಪುರ್ನಲ್ಲಿ 13 ಐಐಎಂಗಳು ಕಾರ್ಯನಿರ್ವಹಿಸುತ್ತಿವೆ. ಅಮೃತಸರ, ಸಿರ್ಮೌರ್‌, ನಾಗ್ಪುರ, ಬುದ್ಧಗಯ, ಸಂಬಾಲ್ಪುರ ಹಾಗೂ ವಿಶಾಖಪಟ್ಟಣಂನಲ್ಲಿ 2015ರಿಂದ ಆರು ಐಐಎಂಗಳನ್ನು ಪ್ರಾರಂಭಿಸಲಾಗಿತ್ತು.
2016: ವಿಶ್ವಸಂಸ್ಥೆ : ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ಅವರನ್ನು ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ  ಸಾಮಾನ್ಯ ಸಭೆಯು ಅ.13ರ ಗುರುವಾರ (ಭಾರತದಲ್ಲಿ ಶುಕ್ರವಾರ) ಅಧಿಕೃತವಾಗಿ ಆಯ್ಕೆ ಮಾಡಲಿದೆ. 15 ರಾಷ್ಟ್ರಗಳ ಸದಸ್ಯರನ್ನು ಒಳಗೊಂಡ ಭದ್ರತಾ ಮಂಡಳಿಯು ಕಳೆದ ವಾರ ನಡೆಸಿದ ರಹಸ್ಯ ಸಭೆಯಲ್ಲಿ ಗುಟೆರಸ್ಆಯ್ಕೆಗೆ ತೀರ್ಮಾನ ತೆಗೆದುಕೊಂಡಿದ್ದು, ಅನುಮೋದನೆಗಾಗಿ ಅವರ ಹೆಸರನ್ನು 193 ದೇಶಗಳ ಸಾಮಾನ್ಯ ಸಭೆಗೆ  ಕಳುಹಿಸಿತ್ತು. ಸಾಮಾನ್ಯ ಸಭೆಯ ಅಧ್ಯಕ್ಷ ಪೀಟರ್ಥಾಮ್ಸನ್ಅವರು ಅ.11ರಂದು  ಪ್ರಕಟಣೆ ಹೊರಡಿಸಿ, ಅಕ್ಟೋಬರ್‌ 13ರಂದು ಸಾಮಾನ್ಯ ಸಭೆಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹಾಪ್ರಧಾನ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದರು. ಬಾನ್ಕಿ ಮೂನ್ಅವರ ಉತ್ತರಾಧಿಕಾರಿಯಾಗಿ, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗುಟೆರಸ್ಅವರ ಹೆಸರು ಹಿಂದೆ ಅನೇಕ ಬಾರಿ ಕೇಳಿಬಂದಿತ್ತು. ಥಾಮ್ಸನ್ಅವರು ಮುಂದಿನ ವಾರ ಗುಟೆರಸ್ಅವರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಲಿದ್ದು,
ಸಭೆಯಲ್ಲಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಭಾಗವಹಿಸಲಿವೆ. ವಿಶ್ವಸಂಸ್ಥೆಯ ಈಗಿನ ಮಹಾಪ್ರಧಾನ ಕಾರ್ಯದರ್ಶಿ ಬಾನ್ಕಿ ಮೂನ್ಅವರ ಅವಧಿ ಡಿಸೆಂಬರ್‌ 31ಕ್ಕೆ ಮುಕ್ತಾಯವಾಗಲಿದೆ.  67 ವರ್ಷದ ಗುಟೆರಸ್ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದು, 2017 ಜನವರಿ 1ರಿಂದ 2022 ಡಿಸೆಂಬರ್‌ 31ರವರೆಗೆ ಅವರ ಅಧಿಕಾರ ಅವಧಿ ಇರಲಿದೆ. ಗುಟೆರಸ್ಅವರು 1995ರಿಂದ 2002ರವರೆಗೆ ಪೋರ್ಚುಗಲ್ ಪ್ರಧಾನಿಯಾಗಿದ್ದರು. ಬಳಿಕ 2005ರಿಂದ 2015ರವರೆಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ಆಗಿ ಕರ್ತವ್ಯ ನಿರ್ವಹಿಸಿದ್ದರು. 
2016: ಮುಂಬೈ: ಪೂರ್ವ ಬಾಂದ್ರಾದ ಬೆಹರಾಂಪಾದ ಕೊಳಗೇರಿಯಲ್ಲಿ ಐದಂತಸ್ತಿನ ಕಟ್ಟಡ ಕುಸಿದು, ಸುಮಾರು 6-7 ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಯಿತು. ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದರು.  ಮಧ್ಯಾಹ್ನ 1.20 ಸುಮಾರಿಗೆ ಕಟ್ಟಡ ಕುಸಿಯಿತು. ಕಟ್ಟಡದ ಅವಶೇಷಗಳಡಿಯಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ 6-7 ಜನರು ಸಿಲುಕಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದರು. ಓರ್ವ ವ್ಯಕ್ತಿಯನ್ನು ರಕ್ಷಿಸಿ, ಬಾಂದ್ರಾದ ಆಸ್ಪತ್ರೆಗೆ ದಾಖಲಿಸಲಾಯಿತು. ಕಳೆದ ಆಗಸ್ಟ್ನಲ್ಲಿ ಮುಂಬೈನ ಭಿವಂಡಿ ಬಳಿ ಕಟ್ಟಡವೊಂದು ಕುಸಿದು 8 ಜನರು ಮೃತರಾಗಿ 23 ಜನರು ಗಾಯಗೊಂಡಿದ್ದರು.

2016: ಭುಜ್: ಗುಜರಾತಿನ ಕಛ್ ಜಿಲ್ಲೆಯಯಲ್ಲಿ ಇಬ್ಬರು ಐಎಸ್ ಎಜೆಂಟರನ್ನು ರಾಜ್ಯ ಎಟಿಎಸ್ ಹಿಂದಿನ ರಾತ್ರಿ ಬಂಧಿಸಿತು. ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಗೆ ಸಂಬಂಧಿಸಿದ ಸೂಕ್ಷ ವಿವರಗಳನ್ನು ಪಾಕಿಸ್ತಾನದ ಐಎಸ್ ಅಧಿಕಾರಿಗಳಿಗೆ ನೀಡುತ್ತಿರುವ ಬಗ್ಗೆ ಮಾಹಿತಿ ಲಭಿಸಿತು. ಇದನ್ನು ಅನುಸರಿಸಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಗುಜರಾತ್ ಎಟಿಎಸ್ ಡಿಎಸ್ಪಿ ಬಿ.ಎಸ್. ಚಾವ್ಡಾ ಹೇಳಿದರು. ವಿಚಾರಣೆಯ ಬಳಿಕ ಇಬ್ಬರೂ ವ್ಯಕ್ತಿಗಳು ಸೂಕ್ಷ್ಮ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದುದು ದೃಢಪಟ್ಟಿತು. ತನಿಖೆ ಮುಂದುವರೆಯುತ್ತಿದೆ. ಬಂಧಿತರು ಬಳಸುತ್ತಿದ್ದ ಮೊಬೈಲ್ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಚಾವ್ಡಾ ನುಡಿದರು.

2016: ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ವಿರೋಧ ವ್ಯಕ್ತ ಪಡಿಸಿತು.ಏಕರೂಪ ನಾಗರಿಕ ಸಂಹಿತೆ ರಾಷ್ಟ್ರಕ್ಕೆ ಒಳ್ಳೆಯದಲ್ಲ. ದೇಶದಲ್ಲಿ ಹಲವಾರು ಸಂಸ್ಕೃತಿಗಳಿವೆ. ಅವೆಲ್ಲವನ್ನೂ ಗೌರವಿಸಬೇಕಾದ ಅಗತ್ಯವಿದೆ ಎಂದು ಮಂಡಳಿ ಹೇಳಿತು. ಅಮೆರಿಕದಲ್ಲಿ ಪ್ರತಿಯೊಬ್ಬರೂ ಅವರವರ ವೈಯಕ್ತಿಕ ಕಾನೂನು ಹಾಗೂ ಗುರುತನ್ನು ಅನುಸರಿಸುತ್ತಾರೆ. ನಮ್ಮ ದೇಶ ವಿಚಾರದಲ್ಲಿ ಅವರನ್ನು ಏಕೆ ಅನುಸರಿಸಬಾರದು ? ಎಂದು ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪ್ರಮುಖರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಮುಸ್ಲಿಮರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಮಾನವಾಗಿ ಪಾಲ್ಗೊಂಡಿದ್ದರು. ಆದರೆ ಅವರು ಪಾಲ್ಗೊಂಡಿರುವುದನ್ನು ಕಡೆಗಣಿಸಲಾಗಿದೆ. ಸಂವಿಧಾನಕ್ಕೆ ಅನುಗುಣವಾಗಿ ನಾವು ರಾಷ್ಟ್ರದಲ್ಲಿ ಬದುಕುತ್ತಿದ್ದೇವೆ. ಸಂವಿಧಾನವು ನಮಗೆ ಬದುಕಲು ಮತ್ತು ನಮ್ಮ ಧರ್ಮವನ್ನು ಅನುಸರಿಸಲು ಅವಕಾಶ ಒದಗಿಸಿದೆ ಎಂದು ಅವರು ನುಡಿದರು.

2016: ನವದೆಹಲಿ: ಏಕರೂಪ ನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ ಹಾಗೂ ಮಹಿಳೆಯರಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಕಾನೂನು ಆಯೋಗ ಹೊರಡಿಸಿರುವ ಪ್ರಶ್ನಾವಳಿ ಬಗ್ಗೆ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತಾಳಿರುವ ವಿರೋಧಾತ್ಮಕ ನಿಲುವನ್ನು ಸಾಮಾಜಿಕ ಕಾರ್ಯಕರ್ತೆ ಝುಕಿಯಾ ಸೋಮನ್ ಖಂಡಿಸಿದರು. ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಅಂದರೆ ಏನು? ಇತರ ಲಕ್ಷಾಂತರ ಸರ್ಕಾರೇತರ ಸಂಘಟನೆಗಳ (ಎನ್ಜಿಒ) ಹಾಗೆ ಇದೂ ಒಂದು ಅಷ್ಟೆಎಂದು ಅವರು ಹೇಳಿದರು. ಇನ್ಕೊ ಡರ್ ಲಗ್ ರಹಾಹೈ ಕಿ ಇನ್ಕಿ ಥೇಕೇದಾರಿ ಕಹೀಂ ಖತಮ್ ಹೊ ಜಾಯೇ’ (ಇವರಿಗೆ ತಮ್ಮ ಗುತ್ತಿಗೆ ಎಲ್ಲಿ ಕೊನೆಯಾಗಿ ಬಿಡುತ್ತದೋ ಎಂದು ಹೆದರಿಕೆ ಆಗುತ್ತಿದೆ) ಎಂದು ಅವರು ಛೇಡಿಸಿದರು. ಇದಕ್ಕೆ ಮುನ್ನ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಮುಖಂಡರು ಏಕರೂಪ ನಾಗರಿಕ ಸಂಹಿತೆ ದೇಶಕ್ಕೆ ಒಳ್ಳೆಯದಲ್ಲ ಎಂದು ಹೇಳಿ ಅದರ ಜಾರಿಗೆ ವಿರೋಧ ವ್ಯಕ್ತ ಪಡಿಸಿದ್ದರು. ಜೊತೆಗೇ ತ್ರಿವಳಿ ತಲಾಖ್ ಮತ್ತು ಮಹಿಳೆಯರಿಗೆ ಸಂಬಂಧಿಸಿದ ಇತರ ವಿಷಯಗಳ ಕುರಿತು ಕಾನೂನು ಆಯೋಗವು ಹೊರಡಿಸಿ ಪ್ರಶ್ನಾವಳಿಯನ್ನು ಬಹಿಷ್ಕರಿಸುವುದಾಗಿಯೂ ಅವರು ಪ್ರಕಟಿಸಿದ್ದರು.

2016: ಶ್ರೀನಗರ: ಕಳೆದ 3 ತಿಂಗಳಿಂದ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ವಿಳಂಬವಾಗಿದ್ದ ಪುಲ್ವಾಮ ಜಿಲ್ಲೆಯ ಕಾಶ್ಮೀರಿ ಪಂಡಿತ ಜೋಡಿಯ ಮದುವೆಗೆ ಮುಸ್ಲಿಮ್ ಮತ್ತು ಸಿಖ್ ಬಾಂಧವರು ನೆರವಾಗುವ ಮೂಲಕ ಸೌಹಾರ್ದತೆ ಮೆರೆದರು.  ಪುಲ್ವಾಮ ಜಿಲ್ಲೆಯ ತಹಾಬ ಗ್ರಾಮದ ಅಂಶು ಟಿಕು ಮತ್ತು ಲೋಸ್ವಾನಿ ಗ್ರಾಮದ ನೀಶು ಪಂಡಿತ ಜೋಡಿ ಅ.12ರ ಬುಧವಾರ ಸಪ್ತಪದಿ ತುಳಿಯಿತು. ಜೋಡಿಯ ಕುಟುಂಬಸ್ಥರು ಕಾಶ್ಮೀರದಿಂದ ವಲಸೆ ಹೋಗದೆ ಅಲ್ಲೇ ನೆಲೆಸಿದ್ದರು. ಇವರ ಮನೆಯ ಅಕ್ಕ ಪಕ್ಕ ನೆಲೆಸಿರುವವರು ಮುಸ್ಲಿಮರು ಮತ್ತು ಸಿಖ್ ಸಮುದಾಯದವರು. ಎರಡೂ ಸಮುದಾಯದ ಜನರು ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಕಾಶ್ಮೀರ ಪಂಡಿತ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದರು. ಮದುವೆಯ ಸಿದ್ಧತೆ ಸೇರಿದಂತೆ ಮದುವೆ ಮುಗಿದ ನಂತರದ ಶುಚಿತ್ವದ ಕೆಲಸದವರೆಗೂ ಅಕ್ಕಪಕ್ಕದ ಮನೆಯವರು ನೆರವು ನೀಡಿದರು. ಜತೆಗೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಸೂಕ್ತ ಸತ್ಕಾರವನ್ನೂ ಸಹ ಮಾಡಿದರು. ನಾವು ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಅವರು ನಮ್ಮ ಸಹೋದರರಿದ್ದಂತೆ. ಅದರಲ್ಲಿ ಹೆಮ್ಮೆ ಪಡುವಂತಹದ್ದು ಏನೂ ಇಲ್ಲ ಎಂದು ಮುಸ್ಲಿಮ್ ಬಾಂಧವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

2016: ಕಾನ್ಪುರ: ಮನ ಕಲಕುವ ವರದಿಯೊಂದು ಇಲ್ಲಿದೆಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಕರೆಗೆ ಓಗೊಟ್ಟ ಮಹಿಳೆ ತನ್ನ ಮನೆಯಲ್ಲಿ ಶೌಚ ಗೃಹ ನಿರ್ಮಿಸುವ ಸಲುವಾಗಿ ತನ್ನ ಮಾಂಗಲ್ಯವನ್ನೇ ಮಾರಾಟ ಮಾಡಿದಳು. ಈಕೆಯ ಹೆಸರು ಲತಾದೇವಿ ದಿವಾಕರ. ‘ನಮಗೆ ನಿತ್ಯ ಹತ್ತಾರು ಸಮಸ್ಯೆಗಳಾಗುತ್ತಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರಾಂದೋಲನದ ಸ್ಪೂರ್ತಿಯಿಂದ ಕಡೆಗೂ ನಾವು ಶೌಚಗೃಹ ನಿರ್ಮಿಸಲು ನಿರ್ಧರಿಸಿದೆವುಎಂದು ಲತಾದೇವಿ ಹೇಳಿದರು. ಚಿನ್ನಾಭರಣಕ್ಕಿಂತಲೂ ಹೆಚ್ಚಾಗಿ ಶೌಚಗೃಹ ಮನೆಯಲ್ಲಿ ಇರಬೇಕಾದ ಅಗತ್ಯ ಸೌಲಭ್ಯ. ಕಾರಣವೇ ಶೌಚಗೃಹ ಕಟ್ಟುವ ಸಲುವಾಗಿ ನಾನು ಚಿನ್ನವನ್ನು ಮಾರಿದೆ. ಸರ್ಕಾರದಿಂದ ನಮಗೆ ಯಾವುದೇ ನೆರವೂ ಸಿಕ್ಕಿಲ್ಲ ಎಂದು ಲತಾ ದೇವಿ ನುಡಿದರು. 2014 ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆಗೆ ಚಾಲನೆ ನೀಡಿದ್ದರು. ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ವರ್ಷವಾದ 2019 ವೇಳೆಗೆ ಬಯಲು ಶೌಚವನ್ನು ಸಂಪೂರ್ಣವಾಗಿ ನಿವಾರಿಸಬೇಕು ಎಂಬ ಉದ್ದೇಶದೊಂದಗೆ ಪ್ರಧಾನಿ ಯೋಜನೆಗೆ ಚಾಲನೆ ನೀಡಿದ್ದರು.

1911, 1987: ಭಾರತೀಯ ಚಿತ್ರರಂಗದ ಇಬ್ಬರು ಖ್ಯಾತ ಸಹೋದರರ ಹುಟ್ಟಿದ ಹಾಗೂ ಮರಣದ ದಿನ ಇದು. 1911ರಲ್ಲಿ ಈ ದಿನ ಖ್ಯಾತ ಚಿತ್ರ ನಟ ಅಶೋಕ ಕುಮಾರ್ ಹುಟ್ಟಿದರು. ಆಗ ಅವರಿಗೆ ಇಡಲಾಗಿದ್ದ ಹೆಸರು ಕುಮುದ್ ಲಾಲ್ ಕುಂಜಿಲಾಲ್ ಗಂಗೂಲಿ. 1987ರಲ್ಲಿ ಇದೇ ದಿನ ಅವರ ಸಹೋದರ ಖ್ಯಾತ ಹಿನ್ನೆಲೆ ಗಾಯಕ ನಟ, ಕಿಶೋರ ಕುಮಾರ್ ತಮ್ಮ 58ನೇ ವಯಸ್ಸಿನಲ್ಲಿ ಮೃತರಾದರು.

2008: ಅಮೆರಿಕ ಅರ್ಥ ಶಾಸ್ತ್ರಜ್ಞ ಪಾಲ್ ಕ್ರುಗಮನ್ (55) ಅವರಿಗೆ ಪ್ರಸಕ್ತ ಸಾಲಿನ ಅರ್ಥಶಾಸ್ತ್ರದ ನೋಬೆಲ್ ಪ್ರಶಸ್ತಿ ದೊರಕಿತು.. `ಅನಾಲಿಸಿಸ್ ಆಫ್ ಟ್ರೇಡ್ ಪ್ಯಾಟರ್ನ್ಸ್' ಎನ್ನುವ ಅವರ ಸಿದ್ಧಾಂತಕ್ಕೆ ಈ ಪ್ರಶಸ್ತಿ ನೀಡಲಾಗಿದೆ ಎಂದು ತೀರ್ಪುಗಾರರು ತಿಳಿಸಿದರು.. ಪಾಲ್ ಅವರು ಪ್ರಿನ್ಸ್ ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್..

2008: ಮೌಂಟ್ ಎವರೆಸ್ಟಿಗಿಂತಲೂ ಎತ್ತರ ಪ್ರದೇಶ ಅಂದರೆ 29,480 ಅಡಿಗಳಷ್ಟು ಎತ್ತರದಿಂದ ಆಕಾಶದಿಂದ ಜಿಗಿಯುವ ಮೂಲಕ ಪಾಕಿಸ್ಥಾನದ ಮಹಿಳೆ ಸಲೀಮಾ ದಾಖಲೆ ನಿರ್ಮಿಸಿದರು. ಇಡೀ ಏಷ್ಯಾದಲ್ಲಿ ಈ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಕೀರ್ತಿಯನ್ನೂ ಅವರು ಸಂಪಾದಿಸಿದರು. 2007 ರ ಏಪ್ರಿಲ್ ಮತ್ತು 2008 ರ ಜನವರಿಯಲ್ಲಿ ಉತ್ತರ ಮತ್ತು ದಕ್ಷಿಣ ಧ್ರುವ ತಲುಪಿದ ಸಾಧನೆಯನ್ನೂ ಅವರು ಮಾಡಿದ್ದರು.

2008: ರಾಸಾಯನಿಕ ಮೆಲಮೈನ್ಯುಕ್ತ ಹಾಲು ಪೂರೈಕೆ ಮಾಡಿದ್ದ ತಪ್ಪಿಗೆ ಚೀನಾದ ಮೂರು ಪ್ರಮುಖ ಡೇರಿಗಳು ಕ್ಷಮೆಯಾಚಿಸಿದವು. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ 50,000 ಮಕ್ಕಳು ಈ ದೋಷಪೂರಿತ ಹಾಲು ಸೇವನೆಯಿಂದ ತೊಂದರೆಗೊಳಗಾಗಿದ್ದರು. ವಿಷಕಾರಕ ಮೆಲಮೈನ್ ಯುಕ್ತ ಹಾಲು ಪೂರೈಕೆ ಪ್ರಕರಣ ಸೆಪ್ಟೆಂಬರ್ ಆರಂಭದಲ್ಲಿ ಬಹಿರಂಗಗೊಂಡಿತ್ತು. ಈ ಹಾಲು ಸೇವಿಸಿ ನಾಲ್ಕು ಮಕ್ಕಳು ಅಸು ನೀಗಿದ್ದವು.

2008: ಕೀಲಿನೊಚ್ಚಿ ಪಟ್ಟಣವನ್ನು ಸುತ್ತುವರಿದ ಶ್ರೀಲಂಕಾ ಭದ್ರತಾ ಪಡೆಗಳು ಎಲ್ಟಿಟಿಇಗೆ ಸೇರಿದ ನಾಲ್ಕು ಅಡಗುತಾಣಗಳನ್ನು ನಾಶ ಮಾಡಿದವು. ಉತ್ತರ ಪ್ರಾಂತ್ಯದಲ್ಲಿ ನಡೆದ ಭೀಕರ ಕದನದಲ್ಲಿ ಭದ್ರತಾ ಪಡೆಯ ಆರು ಮಂದಿ ಯೋಧರು ಮತ್ತು 35 ಉಗ್ರಗಾಮಿಗಳು ಮೃತರಾದರು.

2007: ಮರ್ಕ್ ಅಂಡ್ ಕಂಪೆನಿ ನೂತನವಾಗಿ ತಯಾರಿಸಿದ ಏಡ್ಸ್ ಚಿಕಿತ್ಸಾ ಔಷಧಕ್ಕೆ ಅಮೆರಿಕದ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ ಅನುಮೋದನೆ ನೀಡಿತು. ಇನ್ನು ಎರಡು ವಾರಗಳಲ್ಲಿ ಈ ಔಷಧ ಮಾರುಕಟ್ಟೆಯಲ್ಲಿ ದೊರೆಯುತ್ತದೆ, ಇತರ ಔಷಧಗಳಿಗೆ ಹೋಲಿಸಿದರೆ ಇದು ಏಡ್ಸ್ ವೈರಾಣು ಪ್ರಸರಣ ತಡೆಗೆ ಅತ್ಯಂತ ಸುರಕ್ಷಿತ ಎಂದು ಕಂಪೆನಿ ಹೇಳಿತು.

2007: ಹದಿನಾರು ವರ್ಷಗಳ ಹಿಂದೆ ಮುಚ್ಚಲು ತೀರ್ಮಾನಿಸಲಾಗಿದ್ದ ಸರ್ಕಾರಿ ಸ್ವಾಮ್ಯದ ಕರ್ನಾಟಕ ಪಲ್ಪ್ ವುಡ್ ಲಿಮಿಟೆಡ್ಡಿನ (ಕೆಪಿಎಲ್) 81 ಉದ್ಯೋಗಿಗಳು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ (ಕೆಎಫ್ಡಿಸಿಎಲ್) ಸೇವೆಯಲ್ಲಿ ಮುಂದುವರಿಯಲು ಅರ್ಹರಲ್ಲ ಎಂದು ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್ ಈ ಸುದೀರ್ಘ ವಿವಾದಕ್ಕೆ ತೆರೆ ಎಳೆಯಿತು. ಕೆಪಿಎಲ್ ಮುಚ್ಚಲು ಅಧಿಕೃತ ಸಮ್ಮತಿ ನೀಡಿದ ನ್ಯಾಯಮೂರ್ತಿ ಎಸ್.ಬಿ. ಸಿನ್ಹ ಹಾಗೂ ಹರಿಜಿತ್ ಬೇಡಿ ಅವರನ್ನು ಒಳಗೊಂಡ ಪೀಠವು, 1947 ರ ಕೈಗಾರಿಕಾ ವಿವಾದ ಕಾಯ್ದೆ ಅನ್ವಯ ಅದರ ಉದ್ಯೋಗಿಗಳು ಕೇವಲ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿತು. ಕರ್ನಾಟಕ ಸರ್ಕಾರಕ್ಕೂ ಯಾವುದೇ ಹಂತದಲ್ಲಿ ನಿರ್ದಿಷ್ಟ ನಿಲುವು ತಳೆಯದೇ ಇದ್ದುದಕ್ಕಾಗಿ ಕೋರ್ಟ್ ಛೀಮಾರಿ ಹಾಕಿತು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಹರಿಹರ ಪಾಲಿಫೈಬರ್ಸ್ ಜಂಟಿ ಸಹಯೋಗದಲ್ಲಿ ಕರ್ನಾಟಕ ಪಲ್ಪ್ ವುಡ್ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಆದರೆ ಆರಂಭದಿಂದಲೇ ನಿರಂತರ ನಷ್ಟ ಅನುಭವಿಸುತ್ತಲೇ ಬಂದ ಕಾರಣ 1991ರ ಅ. 24 ರಂದು ಇದನ್ನು ಮುಚ್ಚಲು ಮತ್ತು ಇದರಲ್ಲಿನ 81 ಸಿಬ್ಬಂದಿಯನ್ನು ಅರಣ್ಯ ಅಭಿವೃದ್ಧಿ ನಿಗಮದಲ್ಲಿ ವಿಲೀನಗೊಳಿಸಲು ಸರ್ಕಾರ ನಿರ್ಧರಿಸಿತ್ತು. ಈ ಹಂತದಲ್ಲಿ ತಮ್ಮನ್ನು ಮಾತೃ ಸಂಸ್ಥೆಗೆ ಸೇರಿಸಿಕೊಳ್ಳಬೇಕೆಂದು ಕೋರಿ ಕಂಪೆನಿಯ ಉದ್ಯೋಗಿಗಳು ಅರ್ಜಿ ಸಲ್ಲಿಸಿದ್ದರು. ಇದನ್ನು ಹೈಕೋರ್ಟ್ ಪುರಸ್ಕರಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಇದನ್ನು ತಳ್ಳಿ ಹಾಕಿತು. ಉದ್ಯೋಗಿಗಳು ಸ್ವಯಂ ನಿವೃತ್ತಿ ಯೋಜನೆ (ವಿಆರ್ ಎಸ್) ವ್ಯಾಪ್ತಿಗೂ ಒಳಪಡುವುದಿಲ್ಲ ಎಂದೂ ಸ್ಪಷ್ಟಪಡಿಸಿತು.

2007: ಅಧಿಕಾರ ಹಸ್ತಾಂತರ ವಿಚಾರದಲ್ಲಿನ `ರಾಜಕೀಯ ಆಟ'ದಿಂದ ಬೇಸತ್ತು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಜನತಾದಳ (ಎಸ್) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದವರ ಸಂಖ್ಯೆ ಮೂರಕ್ಕೆ ಏರಿತು. ಈ ಮೊದಲು ಮಾಜಿ ಸಂಸದ ವಿಜಯ ಸಂಕೇಶ್ವರ, ಶಾಸಕ ಮಹಿಮ ಪಟೇಲ್ ಸಹ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

2007: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ನಾಯಕನಟಿಯಾಗಿ ಮಾಡಿ ವಿವಾದಕ್ಕೆ ಕಾರಣವಾದ `ಚೆಲುವಿನ ಚಿತ್ತಾರ' ಚಲನಚಿತ್ರ ಹೈಕೋರ್ಟ್ ಮೆಟ್ಟಿಲೇರಿತು. ಇದೇ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗವು ಕಳೆದ 21ರಂದು ತಮಗೆ ನೀಡಿರುವ ನೋಟಿಸನ್ನು ರದ್ದು ಮಾಡುವಂತೆ ಕೋರಿ ಚಿತ್ರದ ನಿರ್ದೇಶಕ ಎಸ್.ನಾರಾಯಣ್ ನ್ಯಾಯಾಲಯದ ಮೊರೆ ಹೋದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಅಮೂಲ್ಯಳನ್ನು ನಾಯಕನಟಿಯನ್ನಾಗಿ ಮಾಡಿದ್ದು ನಿಯಮ ಬಾಹಿರ ಎಂಬುದು ಆಯೋಗದ ಆರೋಪ. ಶಾಲೆಯ ಸಮವಸ್ತ್ರ ಧರಿಸಿ, ಆಕೆಗಿಂತ ಎರಡು ಪಟ್ಟು ವಯಸ್ಸಾಗಿರುವ ಹೀರೋ ಗಣೇಶ್ ಜೊತೆ ಸುತ್ತಾಡುವುದನ್ನು ಚಿತ್ರದಲ್ಲಿ ತೋರಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಯೋಗ, ಈ ಬಗ್ಗೆ ಕಾರಣ ನೀಡುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಿತು. ಇದೇ ಆರೋಪದ ಸಂಬಂಧ ನಾರಾಯಣ್ ವಿರುದ್ಧ ಎನ್. ವಿ.ವೆಂಕಟರಮಣಯ್ಯ ಹಾಗೂ ಇತರರು ಕೂಡ ದೂರು ದಾಖಲಿಸಿದ್ದು, ಇದನ್ನು ಕೂಡಾ ರದ್ದುಪಡಿಸುವಂತೆ ನಾರಾಯಣ್ ಹೈಕೋರ್ಟಿನ ಮೊರೆ ಹೊಕ್ಕಿದ್ದರು.

2006: ಕಡು ಬಡವರ ಸರ್ವತೋಮುಖ ಅಭಿವೃದ್ಧಿಗೆ ಆರ್ಥಿಕ ಮತ್ತು ಸಾಮಾಜಿಕ ಅವಕಾಶಗಳನ್ನು ಹೆಚ್ಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಮಹಮ್ಮದ್ ಯೂನಸ್ ಮತ್ತು ಅವರು ಸ್ಥಾಪಿಸಿದ ಗ್ರಾಮೀಣ ಬ್ಯಾಂಕಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಓಸ್ಲೋದಲ್ಲಿ ಪ್ರಕಟಿಸಲಾಯಿತು. ಚಿಕ್ಕ ಪ್ರಮಾಣದ ಸಾಲ ಪದ್ಧತಿಯಂತಹ ಹೊಸ ಹೊಸ ರೀತಿಯ ಆರ್ಥಿಕ ಕಾರ್ಯಕ್ರಮಗಳ ಮೂಲಕ ತಮ್ಮ ತಾಯ್ನಾಡಿನಲ್ಲಿ ತಳಹಂತದಿಂದಲೇ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ನಡೆಸಿದ ಯತ್ನಗಳಿಗಾಗಿ ಈ ಪುರಸ್ಕಾರ ನೀಡಲಾಯಿತು.

2006: ಅಭಿವೃದ್ಧಿಶೀಲ ರಾಷ್ಟ್ರಗಳ ಯುವ ಗಣಿತ ಶಾಸ್ತ್ರಜ್ಞರಿಗೆ ನೀಡಲಾಗುವ 2006ನೇ ಸಾಲಿನ ರಾಮಾನುಜನ್ ಪ್ರಶಸ್ತಿಗೆ ಬೆಂಗಳೂರು ಮೂಲದ ಪ್ರೊ. ರಾಮದೊರೈ ಸುಜಾತ ಆಯ್ಕೆಯಾದರು. ಟಾಟಾ ಇನ್ ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಸಂಸ್ಥೆಯಲ್ಲಿ ಸುಜಾತ ಅಂಕಗಣಿತದಲ್ಲಿ ಮಹತ್ವದ ಸಂಶೋಧನೆ ಮಾಡಿದ್ದರು.

2006: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಧ್ಯಾಹ್ನ 3.25ರಿಂದ 3.30ರ ಅವಧಿಯಲ್ಲಿ ಭೂಕಂಪ ಸಂಭವಿಸಿತು. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.2ರಷ್ಟು ಇತ್ತು.

1988: ಸಮಾಧಿ ಸಂದರ್ಭದಲ್ಲಿ ಕ್ರಿಸ್ತನಿಗೆ ಹೊದಿಸಿದ್ದು ಎನ್ನಲಾದ ಲಿನನ್ ಬಟ್ಟೆ `ಟುರಿನ್ ಶ್ರೌಡ್' ಖೋಟಾ ಎಂಬುದು ಪತ್ತೆಯಾಯಿತು. ಶತಮಾನಗಳಿಂದ ಈ ಬಟ್ಟೆ ಕ್ರಿಸ್ತನಿಗೆ ಸಮಾಧಿ ಕಾಲದಲ್ಲಿ ಹೊದಿಸಿದ್ದು ಎಂದು ಹೇಳುತ್ತಾ ಬರಲಾಗಿತ್ತು. ಈ ಬಗ್ಗೆ ಶಂಕೆ ವ್ಯಕ್ತ ಪಡಿಸುತ್ತಾ ಬಂದ ರೋಮನ್ ಕ್ಯಾಥೋಲಿಕ್ ಚರ್ಚ್ ವ್ಯಾಪಕ ಶೋಧಗಳ ಬಳಿಕ ಈ ಕುರಿತು ಪ್ರಕಟಿಸಲಾದ ತೀರ್ಮಾನಗಳನ್ನು ಅಂಗೀಕರಿಸಿತು.

1946: ಸಾಹಿತಿ ಎಸ್.ಬಿ. ಉತ್ನಾಳ್ ಜನನ.

1943: ಇಟಲಿಯು ಜರ್ಮನಿಯ ವಿರುದ್ಧ ಸಮರ ಸಾರಿತು. ಒಂದು ಕಾಲದಲ್ಲಿ ಜರ್ಮನಿ ಅದರ ಮಿತ್ರರಾಷ್ಟ್ರವಾಗಿತ್ತು.

1936: ಸಾಹಿತಿ ಪಿ.ವಿ. ಶಾಸ್ತ್ರಿ ಕಿಬ್ಬಳ್ಳಿ ಜನನ.

1928: ಖ್ಯಾತ ಸಾಹಿತಿ ಕೀರ್ತಿನಾಥ ಕುರ್ತಕೋಟಿ ಜನನ.

1925: ಬ್ರಿಟಿಷ್ ಕನ್ಸರ್ ವೇಟಿವ್ ರಾಜಕಾರಣಿ ಹಾಗೂ ಇಂಗ್ಲೆಂಡಿನ ಪ್ರಧಾನಿಯಾದ ಮಾರ್ಗರೆಟ್ ಥ್ಯಾಚರ್ ಜನ್ಮದಿನ. 1979-90ರ ಅವಧಿಯಲ್ಲಿ ಇಂಗ್ಲೆಂಡಿನ ಪ್ರಧಾನಿಯಾದ ಅವರು ಯುರೋಪಿನ ಮೊದಲ ಮಹಿಳಾ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾದರು.

1911: ವಿವೇಕಾನಂದರ ಶಿಷ್ಯೆ ಸಿಸ್ಟರ್ ನಿವೇದಿತಾ ಎಂದೇ ಖ್ಯಾತರಾದ ಎಲಿಜಬೆತ್ ನೋಬೆಲ್ ನಿಧನರಾದರು. ಐರ್ಲೆಂಡಿನಲ್ಲಿ 1867ರ ಅಕ್ಟೋಬರ್ 20ರಂದು ಜನಿಸಿದ್ದ ಇವರು ಸ್ವಾಮಿ ವಿವೇಕಾನಂದರ ಅಪ್ಪಟ ಶಿಷ್ಯೆಯಾಗಿದ್ದರು.

1860: ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವ ವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಸಾಹಿತಿ ಎಚ್.ವಿ. ನಂಜುಂಡಯ್ಯ (13-10-

1860ರಿಂದ 7-5-1920) ಅವರು ಸುಬ್ಬಯ್ಯ- ಅನ್ನಪೂರ್ಣಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1815: ನೆಪೋಲಿನ್ ನ ಸಹೋದರಿ ಕರೋಲಿನ್ ಳನ್ನು ಮದುವೆಯಾಗಿ ನೇಪಲ್ಸ್ ರಾಜನಾದ ಫ್ರೆಂಚ್ ಮಾರ್ಷಲ್ ಜಾಕಿಮ್ ಮುರಾತ್ ನನ್ನು ಸೇನಾ ವಿಚಾರಣೆ (ಕೋರ್ಟ್ ಮಾರ್ಷಲ್) ಬಳಿಕ ಮರಣದಂಡನೆಗೆ ಗುರಿಪಡಿಸಲಾಯಿತು.

1792: ಜಾರ್ಜ್ ವಾಷಿಂಗ್ಟನ್ ಅವರು ಶ್ವೇತಭವನಕ್ಕೆ (ವೈಟ್ ಹೌಸ್) ಮೂಲೆಗಲ್ಲು ಹಾಕಿದರು. ಅಧ್ಯಕ್ಷ ಆಡಮ್ಸ್ ಮತ್ತು ಆತನ ಪತ್ನಿ ಅಬಿಗೈಲ್ ಅವರು 1800ರಲ್ಲಿಪೂರ್ಣಗೊಂಡ ಕಟ್ಟಡದಲ್ಲಿ ವಾಸಿಸಿದ ಮೊದಲ ವ್ಯಕ್ತಿಗಳೆನಿಸಿದರು. 1809ರ ವೇಳೆಗೆ ಜನರು ಇದನ್ನು `ವೈಟ್ ಹೌಸ್' ಎಂದು ಕರೆಯದೊಡಗಿದರು. ಅಕ್ಕಪಕ್ಕದ ಕೆಂಪು ಇಟ್ಟಿಗೆಯ ಕಟ್ಟಡಗಳ ನಡುವೆ ಬಿಳಿ-ಕಂದು ಬಣ್ಣದ ಮರಳುಕಲ್ಲಿನ ಕಾರಣ ಈ ಕಟ್ಟಡ ಎ್ದದು ಕಾಣುತ್ತಿದ್ದುದು ಇದಕ್ಕೆ ಕಾರಣ. 1902ರಲ್ಲಿ ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಈ ಕಟ್ಟಡಕ್ಕೆ `ವೈಟ್ ಹೌಸ್' ಎಂಬ ಹೆಸರನ್ನೇ ಅಧಿಕೃತಗೊಳಿಸಿದರು.

No comments:

Post a Comment