ಇಂದಿನ ಇತಿಹಾಸ History Today ಆಗಸ್ಟ್ 31
2018: ನವದೆಹಲಿ: ಮಲಯಾಳಿ ಚಲನ ಚಿತ್ರವೊಂದರಲ್ಲಿ ’ಕಣ್ಸನ್ನೆ’ ಮೂಲಕ ಎಲ್ಲರ ಗಮನ ಸೆಳೆದಿದ್ದ ೧೮ರ ಹರೆಯದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ವಿರುದ್ಧ ’ಧರ್ಮನಿಂದೆ ಕೃತ್ಯ’ ಎಸಗಿದ್ದಾಗಿ ಆಪಾದಿಸಿ ದಾಖಲಿಸಲಾಗಿದ್ದ ಎಫ್ಐಆರ್ನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು. ಪ್ರಿಯಾ ಪ್ರಕಾಶ್ ವಾರಿಯರ್ ಅವರಿಗೆ ’ಕಣ್ಣು ಹೊಡೆಯುವ’ ಮೂಲಕ ಮಲಯಾಳಿ ಚಲನಚಿತ್ರದ ಹಾಡಿನ ದೃಶ್ಯದಲ್ಲಿ ತನ್ನ ಸೃಜನಾತ್ಮಕ ಭಾವನೆಯನ್ನು ವ್ಯಕ್ತ ಪಡಿಸುವ ಸ್ವಾತಂತ್ರ್ಯ ಇರುವುದನ್ನು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಎತ್ತಿ ಹಿಡಿಯಿತು. ’ಕಣ್ಸನ್ನೆಯು ಯಾವುದೇ ನೈತಿಕತೆಯನ್ನು ಹಾಳುಮಾಡುವುದಿಲ್ಲ ಅಥವಾ ಸಾರ್ವಜನಿಕ ವ್ಯವಸ್ಥೆಗೆ ಅಪಮಾನ ಎಸಗುವುದಿಲ್ಲ’ ಎಂದು ಹೇಳಿದ ಪೀಠ, ’ಕಣ್ಸನ್ನೆ’ಗೆ ಸಂಬಂಧಿಸಿದಂತೆ ನೀಡಲಾದ ದೂರುಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸದಂತೆ ಪೊಲೀಸರನ್ನು ದೇಶಾದ್ಯಂತ ನಿರ್ಬಂಧಿಸಿತು. ’ವೀಕ್ಷಕರು ಚಲನಚಿತ್ರವನ್ನು ಪ್ರೌಢತ್ವ, ಪ್ರಾಮಾಣಿಕತೆ ಮತ್ತು ಬೌದ್ಧಿಕ ಸಹನೆಯೊಂದಿಗೆ ನೋಡುವುದನ್ನು ಕಲಿಯಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು. ’ಒಳಗೆ ಹೋಗಿ ಚಲನಚಿತ್ರ ನೋಡುವುದು ಮತ್ತು ಹೊರಕ್ಕೆ ಬಂದು ಪ್ರಸಿದ್ಧಿಗಾಗಿ ದೂರು ದಾಖಲಿಸುವುದು ಮಾಡಬಾರದು’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ಪ್ರಿಯಾ ವಾರಿಯರ್ ಅವರು ವಕೀಲ ಹ್ಯಾರಿಸ್ ಬೀರನ್ ಮೂಲಕ ಸುಪ್ರೀಂಕೋರ್ಟಿನಲ್ಲಿ ಇಸ್ಲಾಮಿಗೆ ಅವಮಾನ ಎಸಗಲಾಗಿದೆ ಎಂಬುದಾಗಿ ನಂಬಿದ ಗುಂಪುಗಳಿಂದ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಪ್ರಾಣ ಬೆದರಿಕೆ ಬಂದಿರುವುದರ ವಿರುದ್ಧ ದೂರು ದಾಖಲಿಸಿದ್ದರು.
’ಒರು ಅಡಾರ್ ಲವ್’ ಚಿತ್ರಕ್ಕಾಗಿ ನಿರ್ಮಿಸಲಾಗಿದ್ದ ಪ್ರಚಾರ ಹಾಡಿನಲ್ಲಿ ವಾರಿಯರ್ ಅವರು ಕಣ್ಣು ಹೊಡೆದ ದೃಶ್ಯ ಆಕೆಗೆ ಭಾರೀ ಖ್ಯಾತಿಯನ್ನು ತಂದು ಕೊಟ್ಟಿತ್ತು. ಅದರೆ ಜೊತೆಜೊತೆಗೇ ಆಕೆಗೆ, ಮತ್ತು ಸುಪ್ರೀಂಕೋರ್ಟಿನಲ್ಲಿ ಸಹ ಅರ್ಜಿದಾರರಾಗಿರುವ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಸಂಕಷ್ಟವನ್ನು ತಂದೊಡ್ಡಿತ್ತು. ತೆಲಂಗಾಣ ಮತ್ತು ಮಹಾರಾಷ್ಟ್ರ ಪೊಲೀಸರು ಕೆಲವು ಗುಂಪುಗಳು ನೀಡಿದ ದೂರುಗಳನ್ನು ಆಧರಿಸಿ ಸೆಕ್ಷನ್ ೨೯೫ಎ (ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಪ್ರಿಯಾ ವಾರಿಯರ್, ನಿರ್ದೇಶಕ ಹಾಗೂ ನಿರ್ಮಾಪಕರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
’ಕಣ್ನನ್ನೆಯು ದುರುದ್ದೇಶದ ಕೃತ್ಯವಾಗುವುದಿಲ್ಲ ಅಥವಾ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸುವ ಉದ್ದೇಶಪೂರಿತ ಕೃತ್ಯವೂ ಆಗುವುದಿಲ್ಲ’ ಎಂದು ಸುಪ್ರೀಂಕೋರ್ಟ್ ಪ್ರಕರಣದ ಬಗ್ಗೆ ತನ್ನ ತೀರ್ಪು ನೀಡುತ್ತಾ ಹೇಳಿತು. ಕೇರಳದ ತ್ರಿಶ್ಯೂರು ಜಿಲ್ಲೆಯ ಪದವೀಧರ ವಿದ್ಯಾರ್ಥಿನಿಯಾಗಿರುವ ಪ್ರಿಯಾ ವಾರಿಯರ್ ತನ್ನ ವಿರುದ್ಧ ಫತ್ವಾಗಳನ್ನೂ ಜಾರಿ ಮಾಡಲಾಗಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಬಾಲಿವುಡ್ ಚಿತ್ರ ’ಪದ್ಮಾವತ್’ ಬಿಡುಗಡೆಗೆ ಒಲವು ತೋರಿ ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪಿನ ಕಡೆಗೆ ಪ್ರಿಯಾ ವಾರಿಯರ್ ನ್ಯಾಯಾಲಯದ ಗಮನ ಸೆಳೆದಿದ್ದರು. ಮತ್ತು ತಮ್ಮ ಪ್ರಕರಣವು ಸೃಜನಾತ್ಮಕ ಸ್ವಾತಂತ್ರ್ಯದ ಪ್ರಕರಣ ಎಂದು ಪ್ರತಿಪಾದಿಸಿದ್ದರು. ’ಸೃಜನಾತ್ಮಕತೆ ಸತ್ತಾಗ, ನಾಗರೀಕತೆಯ ಮೌಲ್ಯಗಳೂ ನಶಿಸುತ್ತವೆ’ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ’ಪದ್ಮಾವತ್’ ಪ್ರಕರಣದ ತೀರ್ಪಿನಲ್ಲಿ ಹೇಳಿದ್ದರು. ತಪ್ಪು ತಿಳಿವಳಿಕೆಯ ಪರಿಣಾವಾಗಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಅಂತರ್ಜಾಲದಲ್ಲಿ ವೈರಲ್ ಆದ ಮಲಯಾಳಿ ಹಾಡಿನ ಭಾಷಾಂತರವು ಹಾಡಿನ ಸಾಹಿತ್ಯದ ಅರ್ಥವನ್ನು ತಿರುಚಿದೆ ಎಂದು ಪ್ರಿಯಾ ವಾರಿಯರ್ ಸುಪ್ರೀಂಕೋರ್ಟಿಗೆ ತಿಳಿಸಿದ್ದರು.
ಈ ಹಾಡಿನ ಸಾಹಿತ್ಯವನ್ನು ಮೊದಲಿಗೆ ೧೯೭೮ರಲ್ಲಿ ಬರೆಯಲಾಗಿತ್ತು ಮತ್ತು ಕೇರಳದ ಮುಸ್ಲಿಮ್ ಸಮುದಾಯದಲ್ಲಿ ಇದು ಜನಪ್ರಿಯವೂ ಆಗಿದೆ. ಚಲನಚಿತ್ರವು ಅದೇ ಸಾಹಿತ್ಯವನ್ನು ಬಳಸಿತ್ತು ಎಂದು ಅವರು ಹೇಳಿದ್ದರು.
’ಮಾಣಿಕ್ಯ ಮಲರಯ ಪೂವಿ’ಯು ಮಾಪಿಳ್ಳೆ ಹಾಡು, ಕೇರಳದ ಮಲಬಾರ್ ಪ್ರದೇಶದಲ್ಲಿ ಇದು ಸಾಂಪ್ರದಾಯಿಕ ಮುಸ್ಲಿಮ್ ಹಾಡು. ಈ ಹಾಡು ಪ್ರವಾದಿ ಮೊಹಮ್ಮದ್ ಮತ್ತು ಅವರ ಮೊದಲ ಪತ್ನಿ ಖದೀಜಾ ನಡುವಣ ಪ್ರೇಮವನ್ನು ಹೊಗಳುತ್ತದೆ. ಇದು ಕೇರಳದ ಮುಸ್ಲಿಮ್ ಸಂಪ್ರದಾಯದ ಒಂದು ಭಾಗವಾಗಿದ್ದು, ಯಾವುದೇ ಸಮುದಾಯ ಅಥವಾ ವ್ಯಕ್ತಿಯ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡುವುದಿಲ್ಲ’ ಎಂದು ಚಿತ್ರನಟಿ ತಮ್ಮ ಅರ್ಜಿಯಲ್ಲಿ ವಿವರಿಸಿದ್ದರು.
2018: ನವದೆಹಲಿ: ಘನ ತ್ಯಾಜ್ಯ ನಿರ್ವಹಣಾ ನೀತಿ ರೂಪಿಸುವವರೆಗೆ
ದೇಶಾದ್ಯಂತ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ
ಚಟುವಟಿಕೆಗಳು ನಡೆಯದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಬಿಜೆಪಿ ಆಡಳಿತವಿರುವ
ಮಹಾರಾಷ್ಟ್ರ, ಮಧ್ಯಪ್ರದೇಶ ಉತ್ತರಾಖಂಡ ಮತ್ತು ಚಂಡೀಗಢ ಸೇರದಂತೆ ಎಲ್ಲ ರಾಜ್ಯಗಳು ಮತ್ತು
ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆಯುವಂತಿಲ್ಲ ಎಂದು 31 ಆಗಸ್ಟ್
2018ರ ಶುಕ್ರವಾರ ಸುಪ್ರೀಂಕೋರ್ಟ್ ನೀಡಿದ ಆದೇಶ ತಿಳಿಸಿತು. ಯಾವ ರಾಜ್ಯಗಳು ಈವರೆಗೂ ಘನ
ತ್ಯಾಜ್ಯ ನಿರ್ವಹಣಾ ನೀತಿಯನ್ನು ರೂಪಿಸಿಲ್ಲವೇ ಅಂತಹ ಯಾವುದೇ ರಾಜ್ಯ ನಿರ್ಮಾಣ ಚಟುವಟಿಕೆ
ನಡೆಸುವಂತಿಲ್ಲ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ
ಹೇಳಿತು. ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಸರ್ಕಾರಗಳು ಅನಾಸಕ್ತಿ ತೋರುತ್ತಿರುವ ಬಗ್ಗೆ ಗರಂ
ಆದ ಸುಪ್ರೀಂಕೋರ್ಟ್ ಈ ಕಠಿಣ ಕ್ರಮ ಕೈಗೊಂಡಿತು. ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಬ್ರೇಕ್
ಹಾಕಿದ ಸುಪ್ರೀಂಕೋರ್ಟ್ ಪೀಠ ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಚಂಡೀಗಢ ಈ ನಾಲ್ಕು
ರಾಜ್ಯಗಳಿಗೆ ಪೀಠದ ಆದೇಶ ಪಾಲಿಸದೇ ಇದ್ದುದಕ್ಕಾಗಿ ಮತ್ತು ಘನ ತ್ಯಾಜ್ಯ ನಿರ್ವಹಣಾ ನೀತಿ
ರೂಪಿಸದೇ ಇದ್ದುದಕ್ಕಾಗ ತಲಾ 3 ಲಕ್ಷ ರೂಪಾಯಿಗಳ ದಂಡ ಮತ್ತು ಪ್ರಕರಣದಲ್ಲಿ ವಕೀಲರ ಮೂಲಕ
ಪ್ರತಿನಿಧಿಸದೇ ಇದ್ದುದಕ್ಕಾಗಿ ಆಂಧ್ರಪ್ರದೇಶಕ್ಕೆ 5 ಲಕ್ಷ ರೂಪಾಯಿಗಳ ದಂಡ ವಿಧಿಸಿತು. ಪ್ರಕರಣದ
ಮುಂದಿನ ವಿಚಾರಣೆಯನ್ನು ಪೀಠವು ಅಕ್ಟೋಬರ್ 9ಕ್ಕೆ ನಿಗದಿ ಪಡಿಸಿತು.
2018: ನವದೆಹಲಿ: ೨೦೧೬ರ ಜೂನ್ ತಿಂಗಳಲ್ಲಿ ೨೧ನೇ ಭಾರತೀಯ ಕಾನೂನು ಆಯೋಗಕ್ಕೆ ಸಂವಿಧಾನದಲ್ಲಿ
ತಿಳಿಸಿರುವ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಸೂಚಿಸಲಾಗಿತ್ತು. ಎರಡು ವರ್ಷಗಳ ಬಳಿಕ ವಿವಿಧ ವರ್ಗಗಳ ಭೇಟಿ, ಸಮಾಲೋಚನೆಗಳ ಬಳಿಕ ಆಯೋಗವು ಹಲವಾರು ತಿದ್ದುಪಡಿಗಳು ಮತ್ತು ವೈಯಕ್ತಿಕ ಕಾನೂನುಗಳಿಗೆ ಬದಲಾವಣೆಗಳನ್ನು ಸೂಚಿಸಿ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿತು. ನೈಜ ಅರ್ಥದಲ್ಲಿ ಸಮಾನತೆ ಸಾಧಿಸಲು ಆಯೋಗವು ಮಾಡಿರುವ ಶಿಫಾರಸುಗಳಲ್ಲಿ ಪುರುಷರು ಮತ್ತು ಮಹಿಳೆಯರ ಕಾನೂನು ಬದ್ಧ ವೈವಾಹಿಕ ವಯೋಮಿತಿ ೧೮ ವರ್ಷವಾಗಿರಬೇಕು ಎಂದು ಹೇಳಿತು. ಪ್ರಸ್ತುತ ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸು ೧೮ ವರ್ಷವಾಗಿದ್ದರೆ, ಪುರುಷರ ವಿವಾಹದ ವಯಸ್ಸು ೨೧ ವರ್ಷ.
ನೈಜ ಅರ್ಥದಲ್ಲಿ ಸಮಾನತೆ ಸಾಧಿಸಲು ವಯಸ್ಕರ ಕಾನೂನುಬದ್ಧ ವಿವಾಹ ವಯಸ್ಸಿನಲ್ಲಿರುವ ತಾರತಮ್ಯ ನಿವಾರಣೆ ಆಗಬೇಕು. ಪ್ರೌಢತ್ವವನ್ನು ಸಮಾನವಾಗಿ ಮಾನ್ಯ ಮಾಡಬೇಕು ಮತ್ತು ಪುರುಷರು ಹಾಗೂ ಮಹಿಳೆಯರ ವಿವಾಹದ ವಯಸ್ಸು ೧೮೭೫ರ ಭಾರತೀಯ ವಯಸ್ಕರ ಕಾಯ್ದೆ ತಿಳಿಸಿರುವಂತೆ ೧೮ ವರ್ಷ ಆಗಿರಬೇಕು ಎಂದು ಶಿಫಾರಸು ಹೇಳಿತು. ಆಯೋಗವು ಮುಸ್ಲಿಮರಲ್ಲಿನ ನಿಖಾ ಹಲಾಲ ಮತ್ತು ಬಹುಪತ್ನಿತ್ವದಂತಹ ಕ್ಷೇತ್ರಗಳ ಬಗ್ಗೆ ಹೆಚ್ಚು ಕೈಯಾಡಿಸಿಲ್ಲ. ಆದರೆ ಮುಸ್ಲಿಮರಲ್ಲಿ ಇರುವ ಅಪರೂಪದ ಬಹುಪತ್ನಿತ್ವದ ಅವಕಾಶವನ್ನು ಆನಂದಕ್ಕಾಗಿ ಬಳಸಿಕೊಳ್ಳಲು ಇಸ್ಲಾಮಿಗೆ ಮತಾಂತರಗೊಳ್ಳುವುದು ನೈಜ ಅಪಾಯವಾಗಿದೆ ಎಂದು ಹೇಳಿತು. ’ಇಸ್ಲಾಮಿನಲ್ಲಿ ಬಹುಪತ್ನಿತ್ವಕ್ಕೆ ಅನುಮತಿ ನೀಡಲಾಗಿದ್ದರೂ, ಭಾರತೀಯ ಮುಸ್ಲಿಮರಲ್ಲಿನ ಈ ಅಪರೂಪದ ಪದ್ಧತಿಯನ್ನು ಕೇವಲ ಮದುವೆಯಾಗುವುದಕ್ಕಾಗಿಯೇ ಇತರ ಧರ್ಮದವರು ಮತಾಂತರಗೊಂಡು ದುರುಪಯೋಗ ಮಾಡುವುದು ಪ್ರಮುಖ ಅಪಾಯವಾಗಿದೆ’ ಎಂದು ನ್ಯಾಯಮೂರ್ತಿ (ನಿವೃತ್ತ) ಬಲಬೀರ್ ಸಿಂಗ್ ಚೌಹಾಣ್ ಅವರ ಆಯೋಗ ಸಿದ್ಧ ಪಡಿಸಿದ ವರದಿ ತಿಳಿಸಿತು. ಪತಿ, ಪತ್ನಿ ಇಬ್ಬರಿಗೂ ವಿಚ್ಛೇದನಕ್ಕೆ ವ್ಯಭಿಚಾರವನ್ನು ಕಾರಣವಾಗಿ ಸೇರ್ಪಡೆ ಮಾಡಲು ಮುಸ್ಲಿಂ ವಿವಾಹ ರದ್ದು ಕಾಯ್ದೆ, ೧೯೩೯ಕ್ಕೆ ತಿದ್ದುಪಡಿ ತರುವ ಅಗತ್ಯ ಇದೆ ಎಂದು ವರದಿ ಹೇಳಿತು. ವಿಚ್ಛೇದನ ಪ್ರಕರಣಗಳ ವಿಳಂಬಗಳನ್ನು ಹೋಗಲಾಡಿಸಲು ವಿವಿಧ ವಿಚ್ಛೇದನ ಕಾಯ್ದೆಗಳಿಗೆ ’ನೋ ಫಾಲ್ಟ್’ (ತಪ್ಪಿಲ್ಲದ) ವಿಚ್ಛೇದನ ವ್ಯವಸ್ಥೆಯನ್ನು ತರುವಂತೆ ಆಯೋಗ ಶಿಫಾರಸು ಮಾಡಿತು. ಮದುವೆ ರದ್ದಾದಾಗ, ವಾಸ್ತವವಾಗಿ ವಿಚ್ಛೇದನವನ್ನು ಸಮಸ್ಯೆಗೆ ಪರಿಹಾರವಾಗಿ ಕಾಣುವಂತಾಗಬೇಕು. ಇಂತಹ ವಿಚ್ಛೇದನವು ಬದಲಾದ ಪರಿಸ್ಥಿತಿಯಲ್ಲಿ ಬಾಂಧವ್ಯಗಳನ್ನು ನಿಯಂತ್ರಿಸಲು ಸಮಾಧಾನಕರವಾದ ನೆಲೆಯನ್ನು ಒದಗಿಸಬೇಕು ಎಂದು ವರದಿ ಹೇಳಿತು. ಮರುಹೊಂದಾಣಿಕೆ ಸಾಧ್ಯವೇ ಇಲ್ಲದಂತಹ ಸಂದರ್ಭಗಳಲ್ಲಿ ಕಕ್ಷಿದಾರರು ವೃಥಾರೋಪಗಳನ್ನು ಮಾಡದಂತೆ ನಿಯಂತ್ರಿಸಲು ವಿಚ್ಛೇದನ ಪ್ರಕ್ರಿಯೆಯನ್ನು ಸರಳೀಕರಿಸಬೇಕು. ಬಹಳಷ್ಟು ಸಂದರ್ಭಗಳಲ್ಲಿ ವೃಥಾರೋಪದಿಂದಾಗಿಯೇ ವಿಚ್ಛೇದನ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ವರದಿ ತಿಳಿಸಿತು.
2018: ನವದೆಹಲಿ: ಕೃಷಿ ಮತ್ತು ಉತ್ಪಾದನಾ ರಂಗಗಳಲ್ಲಿನ ಮಹತ್ವದ ಸಾಧನೆಯ ಪರಿಣಾಮವಾಗಿ ಎಪ್ರಿಲ್ ನಿಂದ ಜೂನ್ ವರೆಗಿನ ತ್ರೈಮಾಸಿಕದ ಅವಧಿಯಲ್ಲಿ ಭಾರತದ ಆರ್ಥಿಕತೆಯು ಶೇಕಡಾ ೮.೨ರ ಅಪೂರ್ವ ಬೆಳವಣಿಗೆಯನ್ನು ದಾಖಲಿಸಿತು. ಈ ಪ್ರಗತಿಯು ೨೦೧೬ರ ಮೊದಲ ತ್ರೈಮಾಸಿಕದಿಂದ ಈವರೆಗಿನ ಎಲ್ಲ ೧೫ ತ್ರೈಮಾಸಿಕಗಳಲ್ಲೇ ಗರಿಷ್ಠ ಪ್ರಗತಿಯಾಗಿದ್ದು, ವಿಶ್ಲೇಷಕರ ಎಲ್ಲ ನಿರೀಕ್ಷೆಗಳನ್ನೂ ತಲೆಕೆಳಗಾಗಿಸಿತು. ಭಾರತ ಸರ್ಕಾರವು ಈದಿನ
ಜಿಡಿಪಿ ಬೆಳವಣಿಗೆಗೆ ಸಂಬಂಧಿಸಿದ ವಿವರಗಳನ್ನು ಪ್ರಕಟಿಸಿತು. ಈ ಆರ್ಥಿಕ ಬೆಳವಣಿಗೆಯು ಹಿಂದಿನ ದಾಖಲೆಗಳನ್ನು ಮುರಿದಿರುವುದರಿಂದ ಪ್ರದಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಭೀಮಬಲವನ್ನು ಕೊಡುವ ಸಾಧ್ಯತೆ ಇದೆ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿನ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ಶೇಕಡಾ ೧೦ನ್ನು ದಾಟಿತ್ತು ಎಂಬ ಚರ್ಚೆಯ ಮಧ್ಯೆ ಈಗಿನ ಏರುಮುಖದ ದಾಖಲೆ ಹೆಚ್ಚಿನ ಮಹತ್ವ ಪಡೆದಿದೆ. ಭಾರತ ಸರ್ಕಾರವು ಜಿಡಿಪಿ ಲೆಕ್ಕಾಚಾರದ ಮೂಲ ವರ್ಷವನ್ನು ೨೦೦೪-೦೫ರಿಂದ ೨೦೧೧-೧೨ಕ್ಕೆ ಬದಲಿಸಿದ್ದು, ಈ ಕ್ರಮವು ಭಾರೀ ವಿವಾದವನ್ನು ಹುಟ್ಟು ಹಾಕಿತ್ತು. ಮೊದಲ ತ್ರೈಮಾಸಿಕದಲ್ಲಿ ಶೇಕಡಾ ೭.೫ರಿಂದ ಶೇಕಡಾ ೭.೬ರಷ್ಟು ಆರ್ಥಿಕತೆಯ ಬೆಳವಣಿಗೆ ಆಗಬಹುದು ಎಂಬುದಾಗಿ ಆರ್ಥಿಕ ತಜ್ಞರು ಲೆಕ್ಕ ಹಾಕಿದ್ದರು. ಆದರೆ ಆರ್ಥಿಕ ವಿಶ್ಲೇಷಕರ ಲೆಕ್ಕಾಚಾರವನ್ನು ಆರ್ಥಿಕತೆಯ ಬೆಳವಣಿಯು ತಲೆಕೆಳಗಾಗಿಸಿದೆ. ಎರಡನೇ ತ್ರೈಮಾಸಿಕದಲ್ಲಿ ಹೀಗೆ ಆರ್ಥಿಕತೆಯ ಬೆಳವಣಿಗೆಯು ವಿಶ್ಲೇಷಕರ ನಿರೀಕ್ಷೆಯನ್ನು ಮೀರಿದೆ. ಜನವರಿಯಿಂದ ಮಾರ್ಚ್ವರೆಗಿನ ತ್ರೈಮಾಸಿಕದಲ್ಲಿ ಚೀನಾವು ಶೇಕಡಾ ೬.೮ರಷ್ಟು ಬೆಳವಣಿಗೆ ಸಾಧಿಸಿತ್ತು. ಈ ಅವಧಿಯಲ್ಲಿ ಶೇಕಡಾ ೭.೭ರ ಬೆಳವಣಿಗೆ ದಾಖಲಿಸುವ ಮೂಲಕ ಭಾರತ ಚೀನವನ್ನು ಹಿಂದಿಕ್ಕಿತ್ತು. ೨೦೧೭ರ ಏಪ್ರಿಲ್- ಜೂನ್ ಅವಧಿಯಲ್ಲಿ ಆರ್ಥಿಕತೆಯು ಶೇಕಡಾ ೫.೬ರ ಬೆಳವಣಿಗೆಯನ್ನು ದಾಖಲಿಸಿತ್ತು. ಈಗ ಶೇಕಡಾ ೮.೨ರ ಬೆಳವಣಿಗೆ ಮೂಲಕ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ತನ್ನ ಹೆಸರನ್ನು ಭಾರತ ಉಳಿಸಿಕೊಳ್ಳಲಿದೆ. ಏಪ್ರಿಲ್- ಜೂನ್ ನಡುವಣ ತ್ರೈಮಾಸಿಕದಲ್ಲಿ ಚೀನಾಕ್ಕೆ ಶೇಕಡಾ ೬.೮ ಬೆಳವಣಿಗೆಯನ್ನು ದಾಖಲಿಸಲಷ್ಟೇ ಸಾಧ್ಯವಾಗಿದೆ. ಉತ್ಪಾದನಾ ಕ್ಷೇತ್ರದ ಪ್ರಬಲ ಸಾಧನೆ ಮತ್ತು ಗ್ರಾಹಕ ವೆಚ್ಚವು ಆರ್ಥಿಕತೆಯ ಬೆಳವಣಿಗೆಗೆ ಪ್ರಮುಖ ಕಾರಣ ಎಂದು ಕೇಂದ್ರೀಯ ಅಂಕಿಸಂಖ್ಯಾ ಕಚೇರಿ ತಿಳಿಸಿದೆ.
ಈದಿನದ ಜಿಡಿಪಿ ಮಾಹಿತಿಯು ೨೦೧೮ರ ಏಪ್ರಿಲ್ ೧ರಿಂದ ಆರಂಭವಾದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ವರದಿಯಾಗಿದೆ. ೨೦೧೪-೧೫ರ ಜುಲೈ -ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ದಾಖಲಾಗಿದ್ದ ಶೇಕಡಾ ೮.೪ರ ಆರ್ಥಿಕ ಬೆಳವಣಿಗೆಯ ಈವರೆಗಿನ ಅತ್ಯಧಿಕ ಜಿಡಿಪಿ ಬೆಳವಣಿಗೆಯ ದಾಖಲೆಯಾಗಿತ್ತು. ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ೨೦೧೧-೧೨ರ ಮೂಲ ವರ್ಷದ ಬೆಲೆಗಳಿಗೆ ಹೋಲಿಸಿದರೆ ೨೦೧೮-೧೯ರ ಮೊದಲ ತೈಮಾಸಿಕದಲ್ಲಿ ೩೩.೭೪ ಲಕ್ಷ ಕೋಟಿ ರೂಪಾಯಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ೨೦೧೭-೧೮ರ ಮೊದಲ ತ್ರೈಮಾಸಿಕದಲ್ಲಿ ಇದು ೩೧.೧೮ ಲಕ್ಷ ಕೋಟಿ ರೂಪಾಯಿಯಾಗಿತ್ತು. ಅಂದರೆ ಶೇಕಡಾ ೮.೨ರ ಷ್ಟು ಬೆಳವಣಿಗೆಯಾಗಿದೆ ಎಂದು ಕೇಂದ್ರೀಯ ಅಂಕಿಸಂಖ್ಯಾ ಕಚೇರಿ ತಿಳಿಸಿತು. 2೦೧೮ರ ಸಾಲಿನ ಮೊದಲ ಮೂರು ತಿಂಗಳುಗಳಲ್ಲಿ ಭಾರತವು ಶೇಕಡಾ ೭.೭ರ ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿತ್ತು. ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದ ಚೀನಾವು ಜೂನ್ ವರೆಗಿನ ತ್ರೈಮಾಸಿಕದಲ್ಲಿ ಶೇಕಡಾ ೬.೭ ಮತ್ತು ಮಾರ್ಚ್ ವರೆಗಿನ ತ್ರೈಮಾಸಿಕದಲ್ಲಿ ಶೇಕಡಾ ೬.೮ರ ಪ್ರಗತಿಯನ್ನು ದಾಖಲಿಸಿತ್ತು. ೨.೫೯೭ ಟ್ರಿಲಿಯನ್ ಡಾಲರ್ (೨೫೯೭ ಕೋಟಿ ಡಾಲರ್) ಮೊತ್ತದ ಭಾರತದ ಆರ್ಥಿಕತೆಯು ೨೦೧೭ರಲ್ಲಿ ವಿಶ್ವದ ೬ನೇ ಅತಿದೊಡ್ಡ ಆರ್ಥಿಕತೆಯಾದ ಫ್ರಾನ್ಸಿನ ಆರ್ಥಿಕತೆಯನ್ನು ಮೀರಿಸಿತ್ತು. ಭಾರತದ ಆರ್ಥಿಕತೆಯ ಪ್ರಗತಿಗೆ ಆರ್ಥಿಕ ವಿಶ್ಲೇಷಕರು ಮತ್ತು ವ್ಯವಹಾರ ಕ್ಷೇತ್ರದ ನಾಯಕರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ. ಅಂಕಿಸಂಖ್ಯೆಗಳು ದೃಢವಾಗಿದ್ದು, ಸಾರ್ವಜನಿಕ ಹೂಡಿಕೆ ಮತ್ತು ಹೆಚ್ಚಿನ ಬಳಕೆಯಿಂದ ಈ ಪ್ರಗತಿ ಸಾಧ್ಯವಾಗಿದೆ. ವಿಶೇಷವಾಗಿ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣೆಗೆ ಮುಂಚಿನ ವರ್ಷವಾಗಿರುವ ಈ ವರ್ಷದ ಸಾಧನೆ ಮಹತ್ವಪೂರ್ಣವಾಗಲಿದೆ ಎಂದು ಎಎನ್ ಝಡ್ ಬ್ಯಾಂಕಿನ ಆರ್ಥಿಕ ವಿಶ್ಲೇಷಕ ಹಷಂಕ್ ಮೆಂಡಿರೆಟ್ಟ ಹೇಳಿದರು.
2018: ಪುಣೆ:
ಪುಣೆ ಜಿಲ್ಲೆಯಲ್ಲಿ ಒಂದು ವರ್ಷ ಹಿಂದೆ ಸಂಭವಿಸಿದ್ದ ಹಿಂಸಾಚಾರ ಪೂರ್ವಯೋಜಿತವಾಗಿತ್ತು. ಚುನಾಯಿತ ಸರ್ಕಾರವನ್ನು ಕಿತ್ತೆಯುವುದು ಮತ್ತು ರಾಜೀವ್ ಗಾಂಧಿ ಮಾದರಿ ಕೃತ್ಯ ಎಸಗುವುದು ಅದರ ಗುರಿಯಾಗಿತ್ತು. ಇದನ್ನು ಸಾಬೀತು ಪಡಿಸುವಂತಹ ನಿರ್ಣಾಯಕ ಸಾಕ್ಷ್ಯಾಧಾರಗಳು ಪೊಲೀಸರ ಬಳಿ ಇವೆ ಎಂದು ಹಿರಿಯ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಗಳು ತಿಳಿಸಿದರು. ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಎಂಟು ತಿಂಗಳು ಮೊದಲೇ ಸಿದ್ಧತೆ ಆರಂಭವಾಗಿತ್ತು ಎಂದು ಹೇಳಿದರು. ಭಾರೀ ಸಂಖ್ಯೆಯ ದಾಖಲೆಗಳು ಮತ್ತು ಇತರ ಸಾಕ್ಷ್ಯಾಧಾರಗಳ ಮೂಲಕ ಭೀಮಾ ಕೋರೆಗಾಂವ್ ಹಿಂಸಾಚಾರ ಪೂರ್ವ ಯೋಜಿತವಾಗಿತ್ತು ಮತ್ತು ಡಿಸೆಂಬರ್ ೩೧ರ ಎಲ್ಗರ್ ಪರಿಷದ್ ಅದರ ಒಂದು ಭಾಗವಾಗಿತ್ತು ಎಂಬುದಾಗಿ ನ್ಯಾಯಾಲಯದಲ್ಲಿ ಸಾಬೀತು ಪಡಿಸುವ ವಿಶ್ವಾಸ ನಮಗಿದೆ ಎಂದು ಗುರುತು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ನುಡಿದರು. ಪುಣೆಯಿಂದ ೪೦ ಕಿಮೀ ದೂರದ ಭೀಮಾ ಕೋರೆಗಾಂವ್ನಲ್ಲಿ ನಡೆದ ಜಾತಿ ದಂಗೆಗಳ ಕುರಿತು ಎರಡು ವಿಭಿನ್ನ ಮಾರ್ಗಗಳಲ್ಲಿ ತನಿಖೆ ನಡೆಸಲಾಗಿತ್ತು. ಒಂದು- ಮಾವೋವಾದಿಗಳು ಶಾಮೀಲಾಗಿರಬಹುದೇ ಎಂಬ ಸಂಶಯದ ನಿಟ್ಟನಲ್ಲಿ ನಡೆದ ತನಿಖೆಯಾಗಿದ್ದರೆ ಇನ್ನೊಂದು ಬಲಪಂಥೀಯ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿದ್ದ ವ್ಯಕ್ತಿಗಳ ಪಾತ್ರ ಇರಬಹುದೇ ಎಂಬ ಪ್ರಶ್ನೆಯನ್ನು ಆಧರಿಸಿದ ತನಿಖೆಯಾಗಿತ್ತು. ಪುಣೆಯಲ್ಲಿ ಕಳೆದ ವರ್ಷ ಡಿಸೆಂಬರ್ ೩೧ರಂದು ನಡೆದ ಎಲ್ಗರ್ ಪರಿಷದ್ ಸಮಾವೇಶಕ್ಕೂ ಮಾವೋವಾದಿಗಳಿಗೂ ಸಂಪರ್ಕ ಇದೆಯೇ ಎಂಬ ಕುರಿತ ತನಿಖೆಯನ್ನು ಪುಣೆ ನಗರ ಪೊಲೀಸರು ಕೈಗೊಂಡರೆ, ಇನ್ನೊಂದು ತನಿಖೆಯನ್ನು ಪುಣೆ ಗ್ರಾಮೀಣ ಪೊಲೀಸರು ಕೈಗೊಂಡಿದ್ದರು. ಗ್ರಾಮೀಣ ಪೊಲೀಸರು ಸಂಸ್ಥಾ ಹಿಂದುತ್ವ ಅಘಾದಿ ನಾಯಕ ಮಿಲಿಂದ್ ಎಕಬೋಟೆ ಮತ್ತು ಶಿವ ಛತ್ರಪತಿ ಪ್ರತಿಷ್ಠಾನ ಸ್ಥಾಪಕ ಸಂಭಾಜಿ ಭಿಡೆ ಅವರ ವಿರುದ್ಧ ಜನವರಿ೧ರಂದು ಭೀಮಾ ಕೋರೆಗಾಂವ್ ನಲ್ಲಿ ಹಿಂಸಾಚಾರ ಪ್ರಚೋದಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದರು. ಭೀಮಾ ಕೋರೆಗಾಂವ್ ಹಿಂಸಾಚಾರ ಕುರಿತ ಈ ತನಿಖೆ ಎರಡು ತಿಂಗಳುಗಳಿಂದಾಚೆಗೆ ಮುಂದುವರೆಯಲಿಲ್ಲ. ಎಕಬೋಟೆಯನ್ನು ಜಾಮೀನಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಈವರೆಗೂ ದೋಷಾರೋಪ ಪಟ್ಟಿಯನ್ನು ಕೂಡಾ ಸಲ್ಲಿಸಲಾಗಿಲ್ಲ. ಎಲ್ಗರ್ ಪರಿಷದ್ ಪ್ರಕರಣದಲ್ಲಿ ಮಾಡಲಾಗಿದ್ದ ಬಂಧನಗಳಿಗೂ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧವಿಲ್ಲ ಎಂಬ ಹೊಸ ನಿಲುವನ್ನು ಇದೀಗ ಪುಣೆ ಪೊಲೀಸರು ತಳೆದಿದ್ದಾರೆ. ನಿಷೇಧಿತ ಸಂಘಟನೆ ಸಿಪಿಐಯ (ಮಾವೋವಾದಿ) ಸಂಪರ್ಕಗಳಿಗೆ ಸಂಬಂಧಿಸಿದಂತೆ ಜೂನ್ ೬ರಂದು ಪುಣೆ ಪೊಲೀಸರು ಮೊದಲಿಗೆ ಐವರು ಕಾರ್ಯಕರ್ತರನ್ನು ಬಂಧಿಸಿದ್ದರು. ಅವೆರಲ್ಲರೂ ಎಲ್ಗರ್ ಪರಿಷದ್ ಪದಾಧಿಕಾರಿಗಳಾಗಿದ್ದು ಎಲ್ಗರ್ ಪರಿಷದ್ಗೆ ಹಣ ಒದಗಿಸಿದವರು ಎಂದು ಪೊಲೀಸರು ಹೇಳಿದರು. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರು ಹಾಗೂ ಕಾರ್ಮಿಕ ಸಂಘದ ಕಾರ್ಯಕರ್ತೆ ಸುಧಾ ಭಾರದ್ವಾಜ್, ಕವಿ ಪಿ.ವರವರ ರಾವ್, ಕಾರ್ಯಕರ್ತ ಗೌತಮ್ ನವಲಖ ಮತ್ತು ವಕೀಲರಾದ ಅರುಣ್ ಫೆರೇರಿಯಾ ಮತ್ತು ವೆರ್ನೋನ್ ಗೋನ್ಸಾಲ್ವೆಸ್ ಈ ಐವರನ್ನು ಬಂಧಿಸಿದರು. ಅವೆರಲ್ಲರನ್ನೂ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಸೆಪ್ಟೆಂಬರ್ ೬ರ ವರೆಗೆ ಗೃಹ ಬಂಧನದಲ್ಲಿ ಇರಿಸಲಾಯಿತು. ’ಮಾವೋವಾದಿ ಸಂಘಟನೆಗೆ ಸಂಬಂಧಪಟ್ಟ ಕಾರ್ಯಕರ್ತರನ್ನು ಒಳಗೊಂಡಿರುವ ಈ ಪ್ರಕರಣದ ವ್ಯಾಪ್ತಿ ಎಲ್ಗರ್ ಪರಿಷದ್ ಗಷ್ಟೇ ಸೀಮಿತವಲ್ಲ. ಅದು ಇನ್ನೂ ದೊಡ್ಡದು’ ಎಂದು ಪುಣೆ ಪೊಲೀಸ್ ಕಮೀಷನರ್ ಕೆ.ವೆಂಕಟೇಶನ್ ಹೇಳಿದರು. ಸಿಪಿಐ (ಮಾವೋವಾದಿ) ಯೋಜನೆ ಅಶಾಂತಿ ಹುಟ್ಟು ಹಾಕಿ ಹಾಲಿ ಸರ್ಕಾರವನ್ನು ಕಿತ್ತೊಗೆಯುವುದಾಗಿತ್ತು. ಇದನ್ನು ಸಾಬೀತು ಪಡಿಸುವ ಸಾಕ್ಷ್ಯಾಧಾರಗಳು ನಮ್ಮ ಬಳಿ ಇವೆ’ ಎಂದು ಜಂಟಿ ಪೊಲೀಸ್ ಕಮೀಷನರ್ ಶಿವಾಜಿ ಬೋಡ್ಖೆ ನುಡಿದರು. ’ಬಂಧಿತರ ಮನೆಗಳ ಮೇಲೆ ನಡೆಸಿದ ಇತ್ತೀಚೆಗಿನ ದಾಳಿಯಲ್ಲಿ ಸರ್ಕಾರವನ್ನು ಕಿತ್ತೊಗೆಯಲು ಮಾವೋವಾದಿಗಳು ರೂಪಿಸಿದ್ದ ಸಂಚು ಬಗ್ಗೆ ಸುಳಿವು ನೀಡುವ ಸಾಕ್ಷ್ಯಾಧಾರಗಳು ಲಭಿಸಿವೆ ಎಂದು ಅಧಿಕಾರಿಗಳು ಹೇಳಿದರು. ಬಂಧಿತ ವ್ಯಕ್ತಿಗಳೆಲ್ಲರಿಗೂ ಕಬೀರ್ ಕಾಲಾ ಮಂಚ್ ಜೊತೆಗೆ ಸಂಬಂಧವಿತ್ತು. ರೋನಾ ವಿಲ್ಸನ್ ಮತ್ತು ಸುರೇಂದ್ರ ಗಡ್ಲಿಂಗ್ ಅವರ ನಡುವಣ ಸಂರಕ್ಷಿತ ಸಂಪರ್ಕದ ಮಾಹಿತಿ ಪೊಲೀಸರಿಗೆ ಲಭಿಸಿದೆ. ಸಂರಕ್ಷಿತ ಪಾಸ್ ವರ್ಡ್ ಭೇದಿಸುವಲ್ಲಿ ಪುಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇದು ಸರ್ಕಾರವನ್ನು ಕಿತ್ತೊಗೆಯಲು ಮಾವೋವಾದಿಗಳು ಹೂಡಿದ ಸಂಚನ್ನು ಅನಾವರಣಗೊಳಿಸಿದೆ. ಬಂಧಿತರ ಮಧ್ಯೆ ವಿನಿಮಯವಾಗಿರುವ ಪತ್ರವೊಂದು ಇನ್ನೊಂದು ’ರಾಜೀವ್ ಗಾಂಧಿ ಮಾದರಿ ಘಟನೆ’ಯನ್ನು ಯೋಜಿಸುವ ಬಗ್ಗೆ ಕಾರ್ಯಕರ್ತರು ಮಾತನಾಡುತ್ತಿದ್ದುದನ್ನು ಬೆಳಕಿಗೆ ತಂದಿದೆ ಎಂದು ಮಹಾರಾಷ್ಟ್ರ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪರಂಬೀರ್ ಸಿಂಗ್ ಹೇಳಿದ್ದಾರೆ. ’ಇದಕ್ಕೆ ಸಂಬಂಧಿಸಿದ ಸಿಪಿಐ ಮಾವೋವಾದಿಗಳ ಮಿನಿಟ್ಗಳು, ಮಿಂಚಂಚೆ ಪತ್ರಗಳು ಲಭಿಸಿವೆ ಎಂದು ಅವರು ನುಡಿದರು. ಮಾಧ್ಯಮ ಗೋಷ್ಠಿಯಲ್ಲಿ ಅವರು ಕೆಲವು ಮಂದಿ ಬಂಧಿತ ಕಾರ್ಯಕರ್ತರ ಮಧ್ಯೆ ವಿನಿಮಯ ಗೊಂಡಿತ್ತು ಎಂದು ಆಪಾದಿಸಲಾದ ಪತ್ರಗಳನ್ನೂ ಪ್ರದರ್ಶಿಸಿದರು. ಈ ಪತ್ರಗಳು ಬಂಧಿತ ಕಾರ್ಯಕರ್ತರು ಮತ್ತು ಮಾವೋವಾದಿ ಸಂಘಟನೆಗಳಿಗೆ ಪರಸ್ಪರ ಸಂಪರ್ಕವಿತ್ತು ಎಂಬುದಕ್ಕೆ ಸಾಕ್ಷ್ಯಾಧಾರಗಳಾಗಿವೆ ಎಂದು ಅವರು ಹೇಳಿದರು. ಈ ಮಧ್ಯೆ ಎಲ್ಗರ್ ಪರಿಷದ್ ಸಂಘಟಕರಲ್ಲಿ ಒಬ್ಬರಾದ ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೋಲ್ಸೆ ಪಾಟೀಲ್ ಅವರು ಭೀಮಾ ಕೋರೆಗಾಂವ್ ಹಿಂಸಾಚಾರವನ್ನು ಮೊದಲೇ ಯೋಜಿಸಲಾಗಿತ್ತು ಎಂಬುದನ್ನು ನಿರಾಕರಿಸಿದರು. ’ಹಿಂಸಾಚಾರವನ್ನು ಏನಾದರೂ ಯೋಜಿಸಲಾಗಿದ್ದರೆ ಅದನ್ನು ಹಿಂದುತ್ವ ಕಾರ್ಯಕರ್ತರು ಮಾಡಿದ್ದಾರೆ’ ಎಂದು ಕೋಲ್ಸೆ ಪಾಟೀಲ್ ನುಡಿದರು. ಬಂಧಿಸಲಾಗಿರುವ ಐವರು ಕಾರ್ಯಕರ್ತರು ಮಾವೋವಾದಿ ವ್ಯವಸ್ಥೆಯ ಪಿರಮಿಡ್ ನ ಶಿಖರದಲ್ಲಿ ಇದ್ದವರಾಗಿದ್ದು, ತಳಮಟ್ಟದ ’ಯೋಧರಿಗೆ’ ಎರಡನೇ ಹಂತದ ನಾಯಕತ್ವದ ಮೂಲಕ ಸೂಚನೆಗಳನ್ನು ಕೊಡುತ್ತಿದ್ದರು. ಈ ಎರಡನೇ ಹಂತದ ನಾಯಕತಲ್ಲಿ ಕೆಲವರನ್ನು ಜೂನ್ ೬ರ ಬಹುನಗರ ಕಾರ್ಯಾಚರಣೆ ವೇಳೆ ಬಂಧಿಸಲಾಗಿತ್ತು ಎಂದು ಪ್ರಾಸೆಕ್ಯೂಷನ್ ನ್ಯಾಯಾಲಯಕ್ಕೆ ತಿಳಿಸಿತ್ತು. ಜೂನ್ ೬ರಂದು ಬಂಧಿಸಲ್ಪಟ್ಟವರಲ್ಲಿ ವಕೀಲ ಸುರೇಂದ್ರ ಗಡ್ಲಿಂಗ್, ರಿಪಬ್ಲಿಕನ್ ಪ್ಯಾಂಥರ್ಸ್ ಕಾರ್ಯಕರ್ತ ಸುಧೀರ್ ಧವಳೆ, ಮಾನವ ಹಕ್ಕುಗಳ ಕಾರ್ಯಕರ್ತ ರೋನಾ ವಿಲ್ಸನ್,
ಮಾಜಿ ಪ್ರಧಾನ ಮಂತ್ರಿಗಳ ಗ್ರಾಮೀಣಾಭಿವೃದ್ಧಿ ಫೆಲೋ ಮಹೇಶ ರೌತ್ ಮತ್ತು ನಿವೃತ್ತ ನಾಗಪುರ ವಿಶ್ವ ವಿದ್ಯಾಲಯದ ಪ್ರೊಫೆಸರ್ ಸೋಮಸೇನ್ ಸೇರಿದ್ದರು.
2016: ನವದೆಹಲಿ : ಟಾಟಾ ಮೋಟಾರ್ಸ್ನ ಮಹತ್ವಾಕಾಂಕ್ಷಿ ನ್ಯಾನೊ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಪಶ್ಚಿಮ ಬಂಗಾಳದ ಸಿಂಗೂರ್ನಲ್ಲಿ 2006ರಲ್ಲಿ ಮಾಡಿಕೊಳ್ಳಲಾಗಿದ್ದ 997.11 ಎಕರೆ ಭೂಸ್ವಾಧೀನವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು. ಭೂಸ್ವಾಧೀನ ಪ್ರಕ್ರಿಯೆ ಮೇಲೆ ಈ ತೀರ್ಪು ದೂರಗಾಮಿ ಪರಿಣಾಮ ಬೀರುವಂತಿದ್ದು, ತೀರ್ಪಿನಿಂದಾಗಿ ಟಾಟಾ ಮೋಟಾರ್ಸ್ಗೆ ಭಾರಿ ಹಿನ್ನಡೆಯಾಯಿತು. ಆಗ ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿದ್ದ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಸರ್ಕಾರ ಭೂಸ್ವಾಧೀನ ನಿರ್ಧಾರ ಕೈಗೊಂಡಿತ್ತು. ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ ಮತ್ತು ಅರುಣ್ ಮಿಶ್ರಾ ಅವರನ್ನೊಳಗೊಂಡ ಪೀಠ ನೀಡಿದ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸರಿಯಾದ ಪ್ರಕ್ರಿಯೆ ಅನುಸರಿಸಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಆದರೆ ಖಾಸಗಿ ಸಂಸ್ಥೆಗಾಗಿ ಸರ್ಕಾರ ಭೂಸ್ವಾಧೀನ ನಡೆಸುವುದು ಕಾನೂನುಬಾಹಿರವೇ ಎಂಬ ಬಗ್ಗೆ ಇಬ್ಬರು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದರು. ಟಾಟಾ ಮೋಟಾರ್ಸ್ಗಾಗಿ ಭೂಸ್ವಾಧೀನ ಮಾಡಿಕೊಂಡಿರುವುದರಿಂದ ಅದನ್ನು ಸಾರ್ವಜನಿಕ ಉದ್ದೇಶ ಎಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಗೋಪಾಲಗೌಡ ಅಭಿಪ್ರಾಯಪಟ್ಟರು.. ಆದರೆ ಈ ಯೋಜನೆಯಿಂದ ಪಶ್ಚಿಮ ಬಂಗಾಳದ ಸಾವಿರಾರು ಜನರಿಗೆ ಕೆಲಸ ಸಿಗಬಹುದಿತ್ತು. ಹಾಗಾಗಿ ಸಾರ್ವಜನಿಕ ಉದ್ದೇಶದ ಯೋಜನೆ ಎಂದು ಪರಿಗಣಿಸಬಹುದೆಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ಹೇಳಿದರು. ಮಮತಾಗೆ ವರವಾದ ಅಭಿಯಾನ: ಈ ಭೂ ಸ್ವಾಧೀನದಿಂದ ಸಂತ್ರಸ್ತರಾಗಿದ್ದ ರೈತರ ಪರ ಚಳವಳಿಯನ್ನೇ ನಡೆಸಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ 2011ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಪರಿಹಾರದ ಹಣ ವಾಪಸ್ ನೀಡಬೇಕಿಲ್ಲ: ರೈತರಿಗೆ ಈಗಾಗಲೇ ನೀಡಿರುವ ಪರಿಹಾರದ ಮೊತ್ತವನ್ನು ಹಿಂದಕ್ಕೆ ಪಡೆಯುವಂತಿಲ್ಲ ಎಂದೂ ತೀರ್ಪಿನಲ್ಲಿ ಹೇಳಲಾಯಿತು. ಕಳೆದ 10 ವರ್ಷ ತಮ್ಮ ಭೂಮಿಯ ಮೇಲಿನ ಹಕ್ಕನ್ನು ಕಳೆದುಕೊಂಡದ್ದಕ್ಕೆ ಈ ಮೊತ್ತ ಅವರಿಗೆ ಪರಿಹಾರ ಎಂದು ಕೋರ್ಟ್ ಹೇಳಿತು.
2016: ನವದೆಹಲಿ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಆಗ್ರಹಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ನೇತೃತ್ವದ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ರಾಜನಾಥ ಸಿಂಗ್ ಅವರಿಗೆ ಮನವಿ ಸಲ್ಲಿಸಿತು. ತುಳು ಭಾಷೆಯು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗುವ ಎಲ್ಲ ಅರ್ಹತೆ ಹೊಂದಿದೆ ಎಂದು ಪ್ರಧಾನಿಯವರಿಗೆ ತಿಳಿಸಿದ ನಿಯೋಗವು, ಅದರ ಅಗತ್ಯದ ಕುರಿತೂ ಮನವರಿಕೆ ಮಾಡಿತು. ತುಳು ಕುರಿತು ವಿವರ ಪಡೆದ ಮೋದಿ ಹಾಗೂ ರಾಜನಾಥ ಸಿಂಗ್, ಸಕಾರಾತ್ಮಕವಾಗಿ ಸ್ಪಂದಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಎಂ.ಜಾನಕಿ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಬಿ.ಸುಬ್ಬಯ್ಯ ರೈ, ಡಿ.ಸುರೇಂದ್ರಕುಮಾರ್, ಡಾ.ವಾಮನ ನಂದಾವರ, ಉಮಾನಾಥ ಕೋಟ್ಯಾನ್, ಎ.ಸಿ. ಭಂಡಾರಿ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಪ್ರಧಾನ ಕಾರ್ಯದರ್ಶಿ ಸಿ.ಎಂ. ನಾಗರಾಜ, ತುಳು ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಹಾಜರಿದ್ದರು.
2016: ನವದೆಹಲಿ : ರಿಯೊ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರನ್ನು ದೆಹಲಿ ಸರ್ಕಾರ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಿತು. ಈದಿನ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಿಂಧು ಅವರಿಗೆ ₹ 2 ಕೋಟಿ ಹಾಗೂ ಕಂಚು ಜಯಿಸಿದ್ದ ಸಾಕ್ಷಿಗೆ ₹ 1 ಕೋಟಿ ಚೆಕ್ನ ಜೊತೆಗೆ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಇದೇ ವೇಳೆ ಸಿಂಧು ಅವರ ಕೋಚ್ ಪುಲ್ಲೇಲಾ ಗೋಪಿಚಂದ್ ಮತ್ತು ಸಾಕ್ಷಿ ಅವರ ತರಬೇತುದಾರ ಕುಲದೀಪ್ ಸಿಂಗ್ ಅವರಿಗೆ ತಲಾ ₹ 5 ಲಕ್ಷ ನೀಡಲಾಯಿತು. ರಿಯೊ ಕ್ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಟೇಬಲ್ ಟೆನಿಸ್ ಆಟಗಾರ್ತಿ ಮಾಣಿಕಾ ಬಾತ್ರ ಮತ್ತು ಪುರುಷರ 4X400 ಮೀಟರ್ಸ್ ರಿಲೇ ತಂಡದಲ್ಲಿದ್ದ ಅಥ್ಲೀಟ್ ಲಲಿತ್ ಮಾಥೂರ್ ಅವರಿಗೂ ತಲಾ ₹ 3 ಲಕ್ಷ ನೀಡಿ ಗೌರವಿಸಲಾಯಿತು.
2008: ಎರಡು ತಿಂಗಳ ಕಾಲ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ತಾಂಡವವಾಡಲು ಕಾರಣವಾದ ಅಮರನಾಥ ಭೂವಿವಾದ ಬಗೆಹರಿಸುವ ಸಂಬಂಧ ಒಪ್ಪಂದ ಏರ್ಪಟ್ಟಿತು. ಅಮರನಾಥ ಯಾತ್ರೆಯ ಎರಡು ತಿಂಗಳ ಅವಧಿಯಲ್ಲಿ ಮಾತ್ರ ಬಲ್ಟಾಲಿನಲ್ಲಿನ 40 ಹೆಕ್ಟೇರ್ ಪ್ರದೇಶವನ್ನು ಶ್ರೀ ಅಮರನಾಥ ದೇವಸ್ಥಾನ ಮಂಡಳಿ ಬಳಸಿಕೊಳ್ಳಬಹುದು. ಈ ಸ್ಥಳ ಮುಂದೆಯೂ ರಾಜ್ಯ ಅರಣ್ಯ ಇಲಾಖೆಯ ವಶದ್ಲಲೇ ಇರುತ್ತದೆ ಎಂಬ ಬಗ್ಗೆ ಶ್ರೀ ಅಮರನಾಥ ಸಂಘರ್ಷ ಸಮಿತಿ ಮತ್ತು ರಾಜ್ಯಪಾಲರಿಂದ ನೇಮಕಗೊಂಡ 4 ಸದಸ್ಯರ ಸಮಿತಿಯ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.
2008: ವೃದ್ಧಾಪ್ಯದಿಂದ ಬಳಲುತ್ತಿದ್ದ ಮಲಯಾಳಂ ಸಿನಿಮಾ ನಿರ್ದೇಶಕ ಹಾಗೂ ಕಾದಂಬರಿಕಾರ ಎನ್. ಎನ್. ಪಿಶಾರ್ದಿ (82) ಕೋಚಿಯಲ್ಲಿ ನಿಧನರಾದರು. ಬ್ರಹ್ಮಚಾರಿಯಾಗಿದ್ದ ಅವರು 6 ಸಿನಿಮಾ ನಿರ್ದೇಶಿಸಿದ್ದರು. ಅವುಗಳಲ್ಲಿ `ನಿನಮಣಿಜ ಕಲ್ ಪ್ಪದುಗಲ್' ಅತ್ಯುತ್ತಮ ಸಿನಿಮಾ ಎಂದು 1962ರಲ್ಲಿ ಬೆಳ್ಳಿ ಪದಕ ಪಡೆದಿತ್ತು. ಅಲ್ಲದೆ ರಾಜ್ಯ ಪ್ರಶಸ್ತಿಯೂ ಇದಕ್ಕೆ ಲಭಿಸಿತ್ತು.
2007: ರಾಮೇಶ್ವರದ ಬಳಿ ಸಮುದ್ರದಲ್ಲಿನ ಐತಿಹಾಸಿಕ ರಾಮರ್ ಸೇತುವೆಯನ್ನು (ರಾಮಸೇತು) ಒಡೆಯದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕಡಲುಗಾಲುವೆ ನಿರ್ಮಾಣಕ್ಕಾಗಿ ಭಾರತ ಹಾಗೂ ಶ್ರೀಲಂಕಾ ಮಧ್ಯೆ ಸಮುದ್ರದ ಪಾಕ್ ಮತ್ತು ಮನ್ನಾರ್ ಜಲಸಂಧಿಯಲ್ಲಿ ಹೂಳೆತ್ತುವ ಕೆಲಸಕ್ಕೆ ಕೋರ್ಟ್ ಕೆಲವು ನಿರ್ಬಂಧ ಹೇರಿತು. ಇದರೊಂದಿಗೆ ಸೇತುಸಮುದ್ರಂ ಕಾಲುವೆ ಯೋಜನೆ ವಿವಾದ ಹೊಸ ತಿರುವು ಪಡೆದುಕೊಂಡಿತು. `ರಾಮಸೇತು'ಗೆ ಯಾವುದೇ ಅಪಾಯವಾಗದಂತೆ ಸೇತುಸಮುದ್ರಂ ಕಾಮಗಾರಿ ಮುಂದುವರಿಸಬಹುದು ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ನೇತೃತ್ವದ ನ್ಯಾಯಪೀಠ ಕೇಂದ್ರಕ್ಕೆ ಸೂಚಿಸಿತು. ವಿಚಾರಣೆ ವೇಳೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಹ್ಮಣ್ಯಂ ಅವರು ಈ ಆದೇಶದ ಬಗ್ಗೆ ವಿವರಣೆ ಕೋರಿದಾಗ, `ರಾಮಸೇತುವಿಗೆ ಧಕ್ಕೆಯಾಗದ ರೀತಿಯಲ್ಲಿ ಹೂಳೆತ್ತುವ (ಡ್ರೆಜ್ಜಿಂಗ್) ಕೆಲಸವನ್ನು ನಡೆಸಬಹುದು. ಸೆಪ್ಟೆಂಬರ್ 14ರಂದು ನಡೆಯುವ ವಿಚಾರಣೆಯ ವೇಳೆಗೆ ಸರ್ಕಾರ ತನ್ನ ಹೇಳಿಕೆಯನ್ನು ದಾಖಲಿಸಬೇಕು' ಎಂದು ನ್ಯಾಯಪೀಠ ತಿಳಿಸಿತು. ಸೇತುಸಮುದ್ರಂ ಕಾಲುವೆ ಯೋಜನೆ ಜಾರಿ ಮಾಡುವಾಗ ಡೈನಮೈಟ್ ಸ್ಫೋಟ ಅಥವಾ ಇನ್ನಾವುದೇ ಕಾಮಗಾರಿಯಿಂದ 40 ಕಿ. ಮೀ. ಉದ್ದದ ರಾಮಸೇತುವಿಗೆ (ಆಡಮ್ ಸೇತುವೆ) ಯಾವುದೇ ರೀತಿಯ ಧಕ್ಕೆ ಉಂಟು ಮಾಡದಂತೆ ಕೇಂದ್ರ ಸರ್ಕಾರ ಮತ್ತು ಸೇತುಸಮುದ್ರಂ ಕಾರ್ಪೊರೇಷನ್ನಿಗೆ ನಿರ್ದೇಶನ ನೀಡುವಂತೆ ಕೇಂದ್ರದ ಮಾಜಿ ಸಚಿವ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಅರ್ಜಿಯಲ್ಲಿ ಕೋರಿದ್ದರು. ಆಗಸ್ಟ್ 26ರಂದು ರಾಮೇಶ್ವರಕ್ಕೆ ಭೇಟಿ ನೀಡಿದ್ದಾಗ ಆರ್ ಡಿ ಎಕ್ಸ್ ತುಂಬಿ ಸ್ಫೋಟಿಸಲು ರಾಮಸೇತುಗೆ ರಂಧ್ರ ಕೊರೆಯಲಾಗುತ್ತಿತ್ತು. ಒಮ್ಮೆ ಈ ಸೇತುವೆಯನ್ನು ಹಾಳು ಮಾಡಿದರೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ಧಕ್ಕೆಯಾಗುವುದರ ಜತೆಗೆ ಅಸಂಖ್ಯಾತ ಜನರ ಧಾರ್ಮಿಕ ಭಾವನೆಯನ್ನು ಕೆರಳಿಸಿದಂತಾಗುತ್ತದೆ ಎಂದು ಸ್ವಾಮಿ ಅವರು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು.
2007: ಹನ್ನೊಂದು ವರ್ಷಗಳ ಹಿಂದೆ ಸಿವಾನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದು ಸಾಬೀತಾಗಿರುವುದರಿಂದ ಆರೋಪಿ ಆರ್ ಜೆಡಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಗೆ ಹತ್ತು ವರ್ಷಗಳ ಕಠಿಣ ಸಜೆ ಮತ್ತು ಎರಡು ಸಾವಿರ ರೂಪಾಯಿ ದಂಡ ವಿಧಿಸಲಾಯಿತು. ಭಾರತೀಯ ದಂಡ ಸಂಹಿತೆಯ 307 ಕಲಂನನ್ವಯ ಶಹಾಬ್ದುದೀನ್ ಅವರನ್ನು ತಪ್ಪಿತಸ್ಥರೆಂದು ಸಿವಾನಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಜ್ಞಾನೇಶ್ವರ ಪ್ರಸಾದ್ ಶ್ರೀವಾಸ್ತವ್ ತೀರ್ಪು ನೀಡಿದರು. ಇದಲ್ಲದೆ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ 353ನೇ ಕಲಂ ಪ್ರಕಾರ ಎರಡು ವರ್ಷ ಶಿಕ್ಷೆ, 500 ರೂಪಾಯಿ ದಂಡ ಹಾಗೂ ಶಸ್ತ್ರಾಸ್ತ್ರ ಕಾಯಿದೆಯಡಿ ಏಳು ವರ್ಷ ಶಿಕ್ಷೆ ಮತ್ತು ಒಂದು ಸಾವಿರ ರೂಪಾಯಿ ದಂಡವನ್ನು ಸಹ ಶಹಾಬ್ದುದೀನ್ ಗೆ ವಿಧಿಸಲಾಯಿತು. ಶಹಾಬ್ದುದೀನ್ ಅವರ ಪೊಲೀಸ್ ಅಂಗ ರಕ್ಷಕರಾದ ಜಹಾಂಗೀರ್ ಮತ್ತು ಖಾಲಿಕ್ ಅವರನ್ನು ಸಹ ಈ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿ ಅಷ್ಟೇ ಪ್ರಮಾಣದ ಶಿಕ್ಷೆ ನೀಡಲಾಯಿತು. ಹನ್ನೊಂದು ವರ್ಷಗಳ ಹಿಂದೆ ಶಹಾಬ್ದುದೀನ್ ಅವರು ಜೀರಾದಿ ಕ್ಷೇತ್ರದ ಶಾಸಕರಾಗಿದ್ದಾಗ ಈ ಪ್ರಕರಣ ನಡೆದಿತ್ತು.
2007: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದಲ್ಲಿ ಮಾತ್ರವಲ್ಲ, ವಿಶ್ವದಲ್ಲೂ ಅತ್ಯಂತ ಪ್ರಭಾವ ಬೀರುತ್ತಿರುವ ಮಹಿಳೆ ಎಂದು ಗುರುತಿಸಿದ್ದಲ್ಲದೆ ಪೆಪ್ಸಿ ಅಧ್ಯಕ್ಷೆ, ಕರ್ನಾಟಕದ ಸೊಸೆ ಇಂದ್ರಾ ನೂಯಿ ಅವರನ್ನು ವಿಶ್ವದ 10 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸೇರಿಸಲಾಯಿತು. ಅಮೆರಿಕದ `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ಈ ಪಟ್ಟಿಯಲ್ಲಿ ಸೋನಿಯಾ 6ನೇ ಸ್ಥಾನ ಪಡೆದರು. ಕಳೆದ ವರ್ಷ ಅವರು 13ನೇ ಸ್ಥಾನದಲ್ಲಿದ್ದರು. ಸೋನಿಯಾ ಕಣಕ್ಕಿಳಿಸಿದ ಅಭ್ಯರ್ಥಿ ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವುದು ಅವರ ಹೆಚ್ಚುತ್ತಿರುವ ಪ್ರಭಾವಕ್ಕೆ ಸಾಕ್ಷಿ ಎಂದು ಪತ್ರಿಕೆ ಹೇಳಿತು. ಆದರೆ 2006ರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಇಂದ್ರಾ ನೂಯಿ ಐದನೇ ಸ್ಥಾನಕ್ಕೆ ಇಳಿದರು. ಜಗತ್ತಿನ ಒಂದು ನೂರು ಪ್ರಭಾವಿ ಮಹಿಳೆಯರಿರುವ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಉಳಿಸಿಕೊಂಡರು.
ಇನ್ನೊಬ್ಬ ಭಾರತೀಯ ಮಹಿಳೆ ಅಮೆರಿಕದ ಜಂಬೋ ಗ್ರೂಪ್ ಅಧ್ಯಕ್ಷೆ ವಿದ್ಯಾ ಛಾಬ್ರಿಯಾ 97ನೇ ಸ್ಥಾನದಲ್ಲಿದ್ದರೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು `ಪ್ರಭಾವಿ ಮಹಿಳೆಯ ಹಿಂದಿರುವ ಇನ್ನೊಬ್ಬಳು ಪ್ರಭಾವಿ ಮಹಿಳೆ' ಎಂದು ಪತ್ರಿಕೆ ಹೇಳಿತು.
2006: ದಕ್ಷಿಣ ಆಫ್ರಿಕಾದ ಡರ್ಬಾನಿನ ಬಡ ಕರಿಯರ ವಸತಿ ಪ್ರದೇಶದ ಪ್ರೌಢಶಾಲೆಯೊಂದಕ್ಕೆ ಅಬ್ದುಲ್ ಕಲಾಂ ಅವರು ಕಳುಹಿಸಿರುವ 2 ಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಪ್ರಯೋಗಾಲಯ ಉಪಕರಣ ತಲುಪಿತು. 2004ರಲ್ಲಿ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದ್ದ ಕಾಲದಲ್ಲಿ ಕಲಾಂ ಅವರು ಉಮ್ಲಾಝಿ ಪಟ್ಟಣದ ಮೆಂಝಿ ಹೈಸ್ಕೂಲಿಗೆ ವಿಜ್ಞಾನ ಉಪಕರಣ ಒದಗಿಸುವ ಭರವಸೆ ನೀಡಿದ್ದರು. ಭಾರತೀಯ ರಾಜತಾಂತ್ರಿಕ ಅಜಯ್ ಸ್ವರೂಪ್ ಅವರು ಅಧಿಕೃತ ಸಮಾರಂಭದಲ್ಲಿ ಉಪಕರಣವನ್ನು ಶಾಲೆಯ ಪ್ರಾಂಶುಪಾಲರಾದ ಫೆಲಿಕ್ಸ್ ಶೊಲೋಲೊ ಮತ್ತು ಕ್ವಾಝುಲು-ನೇಟಾಲ್ ಪ್ರಾಂತದ ಶಿಕ್ಷಣ ಸಚಿವೆ ಇನಾ ಕ್ರೋನೆ ಅವರಿಗೆ ಹಸ್ತಾಂತರಿಸಿದರು.
2006: ಜಾಗತಿಕ ಐಟಿ ಸಂಸ್ಥೆಯಾಗಿರುವ ಇನ್ಫೋಸಿಸ್ ಟೆಕ್ನಾಲಜೀಸ್ ಒಂದು ಲಕ್ಷ ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪೆನಿಗಳ ಸಾಲಿಗೆ ಸೇರ್ಪಡೆಗೊಂಡಿತು. ಈ ಪ್ರಮಾಣದ ಬಂಡವಾಳ ಹೊಂದಿರುವ ಎಲೈಟ್ ಕ್ಲಬ್ಬಿನಲ್ಲಿ ಈಗಾಗಲೇ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎನ್ ಟಿಪಿಸಿ ಸೇರ್ಪಡೆಯಾಗಿದ್ದು, ಇನ್ಫೋಸಿಸ್ ಈ ಸಾಲಿಗೆ ಸೇರಿದ ನಾಲ್ಕನೆ ಕಂಪೆನಿಯಾಯಿತು.
2006: ವಿಶ್ವದ ಮೊತ್ತ ಮೊದಲ ಸಂಗೀತಮಯ ರೊಬೋಟ್ `ಮಿಯುರೊ'ವನ್ನು ರೂಪದರ್ಶಿಯೊಬ್ಬಳು ಟೋಕಿಯೋದಲ್ಲಿ ಪ್ರದರ್ಶಿಸಿದಳು. ಮೊಟ್ಟೆ ಆಕಾರದಲ್ಲಿರುವ ಈ ರೊಬೋಟ್ ಸ್ವಯಂಚಾಲಿತವಾಗಿ ಚಲಿಸುವುದಲ್ಲದೆ ಸಂಗೀತಕ್ಕೆ ನೃತ್ಯವನ್ನೂ ಮಾಡುತ್ತದೆ.
2006: ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಳಿಗಾಗಿ ನೀಡಲಾಗುವ `ಪ್ರಿಯದರ್ಶಿನಿ' ಪ್ರಶಸ್ತಿಗೆ ಇನ್ಫೋಸಿಸ್ ಟೆಕ್ನಾಲಜೀಸ್ ಸ್ಥಾಪಕ ಎನ್. ಆರ್. ನಾರಾಯಣಮೂರ್ತಿ ಮತ್ತು ಬಾಲಿವುಡ್ ತಾರೆ ಕರೀನಾ ಕಪೂರ್ ಆಯ್ಕೆಯಾದರು.
1997: ವೇಲ್ಸ್ ರಾಜಕುಮಾರಿ ಡಯಾನಾ ಪ್ಯಾರಿಸ್ಸಿನಲ್ಲಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಮೃತರಾದರು. ಆಕೆಯ ಗೆಳೆಯ ಎಮಾಡ್ ಮಹಮ್ಮದ್ `ಡೋಡಿ'ಅಲ್ ಫಯಾಜ್ ಕೂಡಾ ಅಪಘಾತದಲ್ಲಿ ಸಾವನ್ನಪ್ಪಿದರು. ಬ್ರಿಟನ್ ರಾಜಕುಮಾರ ಚಾರ್ಲ್ಸ್ ಜೊತೆ ವಿವಾಹವಾಗಿದ್ದ ರಾಜಕುಮಾರಿ ಡಯಾನಾ 15 ವರ್ಷ ದಾಂಪತ್ಯ ಜೀವನ ನಡೆಸಿದ್ದರು. ದುರಂತ ಸಾವಿಗೆ ಒಂದು ವರ್ಷ ಮೊದಲು (1996ರ ಆಗಸ್ಟ್ 28) ವಿವಾಹ ವಿಚ್ಛೇದನ ಪಡೆದಿದ್ದರು.
1995: ಪಂಜಾಬಿನ ಮುಖ್ಯಮಂತ್ರಿ ಬೇ ಆಂತ್ ಸಿಂಗ್ ಅವರು ಚಂಡೀಗಢದಲ್ಲಿ ನಡೆದ ಬಾಂಬ್ ದಾಳಿಯ್ಲಲಿ ಅಸುನೀಗಿದರು.
1993: ಕೇಂದ್ರ ವಾಣಿಜ್ಯ ಸಚಿವರಾಗಿ ಪ್ರಣವ್ ಮುಖರ್ಜಿ ಅಧಿಕಾರ ಸ್ವೀಕಾರ.
1982: ಭಾರತದ ಮಾಜಿ ಉಪರಾಷ್ಟ್ರಪತಿ ಜಿ.ಎಸ್. ಪಾಠಕ್ ನಿಧನ.
1981: ಒಂದು ದಿನ ಹಿಂದೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿದ್ದ ಇರಾನಿನ ನೂತನ ಅಧ್ಯಕ್ಷ ಮಹಮ್ಮದ್ ಅಲ್ ಹಜಾಯಿ (48) ಮತ್ತು ಪ್ರಧಾನಿ ಮಹಮ್ಮದ್ ಜಾನದ್ ಅವರು ಈದಿನ ಬೆಳಗ್ಗೆ ಅಸು ನೀಗಿದರು. ಇದೇ ದಿನ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.
1981: ಮದ್ರಾಸಿನಿಂದ (ಈಗಿನ ಚೆನ್ನೈ) ದೆಹಲಿಗೆ ಹೋಗುತ್ತಿದ್ದ ತಮಿಳುನಾಡು ಎಕ್ಸ್ ಪ್ರೆಸ್ ರೈಲು ಕಾಜಿಪೇಟ್-ಬಲದ್ ಷಾ ವಿಭಾಗದ ಮಧ್ಯೆ ಹಳಿ ತಪ್ಪಿ ಮಗುಚಿದ ಪರಿಣಾಮವಾಗಿ 25ಜನ ಮೃತರಾಗಿ 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
1979: ಭಾರತದ ಉಪರಾಷ್ಟ್ರಪತಿಯಾಗಿ ಎಂ. ಹಿದಾಯತುಲ್ಲಾ (1979-84) ನೇಮಕ.
1969: ಭಾರತದ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಜನ್ಮದಿನ.
1969: ಬಾಕ್ಸರ್ ರಾಕಿ ಮರ್ಸಿಯಾನೋ ಅವರು ಅಯೋವಾದಲ್ಲಿ ಸಂಭವಿಸಿದ ಹಗುರ ವಿಮಾನ ಅಪಘಾತದಲ್ಲಿ ತಮ್ಮ ಹುಟ್ಟು ಹಬ್ಬಕ್ಕಿಂತ ಒಂದು ದಿನ ಮೊದಲು ಮೃತರಾದರು.
1963: ವಾಷಿಂಗ್ಟನ್ ಡಿ.ಸಿ. ಮತ್ತು ಮಾಸ್ಕೊ ಮಧ್ಯೆ ಹಾಟ್ ಲೈನ್ ಸಂವಹನ (ಕಮ್ಯೂನಿಕೇಷನ್ಸ್) ಸಂಪರ್ಕ ಆರಂಭವಾಯಿತು.
1956: ಪ್ರಾಂತ್ಯಗಳ ಪುನರ್ ವಿಂಗಡಣಾ ಮಸೂದೆಗೆ ರಾಷ್ಟ್ರಾಧ್ಯಕ್ಷರು ಸಮ್ಮತಿ ಮುದ್ರೆ ಒತ್ತಿದರು. ವಾರದ ಹಿಂದೆ ಸಂಸತ್ತು ಈ ಮಸೂದೆಯನ್ನು ಅಂಗೀಕರಿಸಿತ್ತು.
1956: ಪದ್ಮಶ್ರೀ ನೇತ್ರದಾನಿ ಡಾ. ಎಂ.ಸಿ. ಮೋದಿ ಅವರು ಕರ್ನಾಟಕದ ಹೊಸಪೇಟೆಯಲ್ಲಿನಡೆಸಿದ ತಮ್ಮ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಕುರುಡನೊಬ್ಬನಿಗೆ ಕೋಳಿಮರಿಯ ಕಣ್ಣುಗುಡ್ಡೆಗಳನ್ನು ಹಾಕಿ ನೇತ್ರ ಶಸ್ತ್ರಚಿಕಿತ್ಸೆ ನಡೆಸಿ ದೃಷ್ಟಿ ತಂದುಕೊಡುವಲ್ಲಿ ಯಶಸ್ವಿಯಾದರು.
1952: ಸಾಹಿತಿ ಕೆ. ಜಯಪ್ರಕಾಶ ರಾವ್ ಜನನ.
1938: ಸಾಹಿತಿ, ಪ್ರವಚನಕಾರ, ಕೀರ್ತನಕಾರ ದಾನಪ್ಪ ಜತ್ತಿ ಅವರು ಸಿದ್ರಾಮಪ್ಪ ಜತ್ತಿ- ದೊಡ್ಡಮ್ಮ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ತಿಕೋಟದಲ್ಲಿ ಜನಿಸಿದರು. ಹಲವಾರು ಸಾಹಿತ್ಯ ಕೃತಿಗಳನ್ನು ರಚಿಸಿದ ಅವರಿಗೆ ಕರ್ನಾಟಕ ರಾಜ್ಯ ಸಂಗೀತ ಮತ್ತು ನೃತ್ಯ ಅಕಾಡೆಮಿಯಿಂದ `ಕರ್ನಾಟಕ ಕಲಾ ತಿಲಕ' ಬಿರುದು ಹಾಗೂ ಪ್ರಶಸ್ತಿ ಲಭಿಸಿದೆ.
1919: ಭಾರತದ ಖ್ಯಾತ ಬರಹಗಾರ್ತಿ, ಕವಯಿತ್ರಿ, ಕಾದಂಬರಿಗಾರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಅಮೃತಾ ಪ್ರೀತಮ್ ಜನ್ಮದಿನ.
1907: ರಾಮೋನ್ ಮ್ಯಾಗ್ಸೇಸೆ (1907-57) ಜನ್ಮದಿನ. ಫಿಲಿಪ್ಪೀನ್ಸ್ ಅಧ್ಯಕ್ಷರಾಗಿದ್ದ ಇವರು ಕಮ್ಯೂನಿಸ್ಟ್ ನೇತೃತ್ವದ (ಹಕ್) ಚಳವಳಿಯನ್ನು ಯಶಸ್ವಿಯಾಗಿ ಸೋಲಿಸಿದ ವ್ಯಕ್ತಿ. ಅವರ ನೆನಪಿಗಾಗಿ ಪ್ರತಿವರ್ಷ ಮ್ಯಾಗ್ಸೇಸೆ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
1887: ಥಾಮಸ್ ಆಲ್ವ ಎಡಿಸನ್ ಕಂಡು ಹಿಡಿದ `ಕೈನೆಟೋಸ್ಕೋಪ್' ಗೆ ಹಕ್ಕು ಸ್ವಾಮ್ಯ ನೀಡಲಾಯಿತು. ಈ ಯಂತ್ರವನ್ನು ಚಲಿಸುವ ಚಿತ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತಿತ್ತು.
1881: ಅಮೆರಿಕದ ಮೊದಲ ಟೆನಿಸ್ ಚಾಂಪಿಯನ್ ಶಿಪ್ ರೋಡ್ ಐಲ್ಯಾಂಡಿನ ನ್ಯೂಪೋರ್ಟ್ ಕ್ಯಾಸಿನೋದಲ್ಲಿ ಆರಂಭವಾಯಿತು. ರಿಚರ್ಡ್ ಸಿಯರ್ಸ್ ಅವರು ವಿಲಿಯಂ ಗ್ಲೈನ್ ಅವರನ್ನು ಪರಾಭವಗೊಳಿಸಿ ಮೊದಲ ಪುರುಷರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು. 1887ರಲ್ಲಿ ಮಹಿಳೆಯರ ಆಟವನ್ನು ಆರಂಭಿಸಲಾಯಿತು.