ನಾನು ಮೆಚ್ಚಿದ ವಾಟ್ಸಪ್

Saturday, December 22, 2018

ಪಾಕ್ ಪ್ರಧಾನಿಯಾಗಲು ಮೊಬೈಲ್ ಟವರ್ ಏರಿದ ಭೂಪ!


ಪಾಕ್ ಪ್ರಧಾನಿಯಾಗಲು ಮೊಬೈಲ್ ಟವರ್ ಏರಿದ ಭೂಪ!

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಬಯಸಿದ ವ್ಯಕ್ತಿಯೊಬ್ಬ, ಮೊಬೈಲ್ ಗೋಪುರವನ್ನು ಏರಿ ತನ್ನನ್ನು ಪಾಕಿಸ್ತಾನದ ಪ್ರಧಾನಿಯನ್ನಾಗಿ ಮಾಡುವಂತೆ ಪಟ್ಟು ಹಿಡಿದ ಘಟನೆ ಇಸ್ಲಾಮಾಬಾದಿನಲ್ಲಿ 2018 ಡಿಸೆಂಬರ್ 22ರ ಶನಿವಾರ ಘಟಿಸಿತು.

ಮುಹಮ್ಮದ್ ಅಬ್ಬಾಸ್ ಎಂಬುದಾಗಿ ಗುರುತಿಸಲಾದ ವ್ಯಕ್ತಿ ಪಾಕ್ ಧ್ವಜ ಹಿಡಿದುಕೊಂಡು ಇಸ್ಲಾಮಾಬಾದಿನ ಬ್ಲೂ ಏರಿಯಾದಲ್ಲಿ ಮೊಬೈಲ್ ಗೋಪುರ ಏರಿದ. ತತ್ ಕ್ಷಣ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.

ಪೊಲೀಸರು ಆತನನ್ನು ಕೆಳಗಿಳಿಸಲು ಯತ್ನಿಸಿದಾಗ ಆತ ತನ್ನನ್ನು ಪಾಕಿಸ್ತಾನ ಪ್ರಧಾನಿಯನ್ನಾಗಿ ಮಾಡುವ ಭರವಸೆ ಕೊಟ್ಟರೆ ಅಥವಾ ಅಧಿಕಾರಿಗಳು ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತನಾಡಲು ಅವಕಾಶ ಕಲ್ಪಿಸಿದರೆ ಮಾತ್ರ ಗೋಪುರದಿಂದ ಕೆಳಕ್ಕೆ ಇಳಿಯುವೆ ಎಂದು ಪಟ್ಟು ಹಿಡಿದ.

ರಾಷ್ಟ್ರವನ್ನು ಸಾಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಸಲುವಾಗಿ ತನಗೆ ಪ್ರಧಾನಿ ಹುದ್ದೆ ಬೇಕು ಎಂದುಆತ ಪಟ್ಟು ಹಿಡಿದ ಎಂದು ಪೊಲೀಸರು ತಿಳಿಸಿದರು.

ವ್ಯಕ್ತಿಯನ್ನು ಕೆಳಕ್ಕೆ ಇಳಿಸುವ ಯಾವ ಯತ್ನಗಳೂ ಫಲ ಕೊಡದೇ ಹೋದಾಗ ಪೊಲೀಸರು ಮಿಮಿಕ್ರಿ ಕಲಾವಿದ ಶಫಾತ್ ಅಲಿ ಅವರ ಬಳಿ ಪ್ರಧಾನಿ ಖಾನ್ ಸ್ವರದಲ್ಲಿ ಆತನ ಜೊತೆ ಮಾತನಾಡುವಂತೆ ಕೋರಿದರು.

ಮಿಮಿಕ್ರಿ ಕಲಾವಿದನ ಜೊತೆ ಗೋಪುರದ ಮೇಲಿನಿಂದಲೇ ಆತ ಐದು ನಿಮಿಷ ಮಾತನಾಡಿದ. ತಾನು ಪ್ರಧಾನಿ ಜೊತೆಗೇ ಮಾತನಾಡಿದ್ದೇನೆ ಎಂದು ಭಾವಿಸಿ ಬಳಿಕ ಕೆಳಕ್ಕೆ ಇಳಿದು ಬಂದ.

ಕೆಳಕ್ಕೆ ಬಂದೊಡನೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರದೇಶದ ಠಾಣೆಗೆ ಒಯ್ದಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತದೆ ಎಂದು ಪೊಲೀಸರು ಬಳಿಕ ಹೇಳಿದರು.

No comments:

Post a Comment