Thursday, December 20, 2018

ಇಂದಿನ ಇತಿಹಾಸ History Today ಡಿಸೆಂಬರ್ 20

ಇಂದಿನ ಇತಿಹಾಸ History Today ಡಿಸೆಂಬರ್  20
 2017: ನವದೆಹಲಿ: ಪತ್ನಿಯನ್ನು ಕೊಲೆಗೈದ ಅಪರಾಧಕ್ಕಾಗಿ ಟಿವಿ ಚಿತ್ರ ನಿರೂಪಕ ಸುಹೈಬ್ ಇಲ್ಯಾಸಿ ಅವರಿಗೆ ದೆಹಲಿಯ ಸೆಷನ್ಸ್ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು. ಸುಹೈಬ್ ಪತ್ನಿ ಅಂಜು ಇಲ್ಯಾಸಿ ಅವರನ್ನು ೧೭ ವರ್ಷಗಳ ಹಿಂದೆ ಆಕೆಯ ಪೂರ್ವ ದೆಹಲಿಯ ಮನೆಯಲ್ಲಿ ಇರಿದು ಕೊಲ್ಲಲಾಗಿತ್ತು. ಡಿಸೆಂಬರ್ ೧೬ರಂದು ಈ ಪ್ರಕರಣದಲ್ಲಿ ಸುಹೈಬ್ ತಪ್ಪಿತಸ್ಥ ಎಂದು ಕೋರ್ಟ್  ತೀರ್ಪು ನೀಡಿತ್ತು. ಅಪರಾಧಿಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಾಸೆಕ್ಯೂಷನ್ ಕೋರಿತ್ತು. ಸುಹೈಬ್ ಸಾರ್ವಜನಿಕ ಬದುಕಿನಲ್ಲಿ ಉತ್ತಮ ವ್ಯಕ್ತಿಯ ವರ್ಚಸ್ಸು ತೋರಿಸುತ್ತಲೇ ಖಾಸಗಿಯಾಗಿ ಕೊಲೆಯ ಸಂಚು ಹೂಡಿದ್ದುದಾಗಿ ಪ್ರಾಸೆಕ್ಯೂಷನ್ ವಾದಿಸಿತ್ತು. ಏನಿದ್ದರೂ ನ್ಯಾಯಾಲಯವು ಇಲ್ಯಾಸಿಗೆ ಮರಣದಂಡನೆ ವಿಧಿಸದೇ ಇರಲು ತೀರ್ಮಾನಿಸಿತು. ಸುಹೈಬ್ ಪರ ವಕೀಲರು ಅಪರಾಧಿ ಖಿನ್ನನಾಗಿದ್ದು, ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಶಿಕ್ಷೆ ವಿಧಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಮರಣ ದಂಡನೆ ವಿಧಿಸಲಾಗುತ್ತದೆ ಎಂದು ಅವರು ವಾದಿಸಿದರು. ಸಾಂದರ್ಭಿಕ ಸಾಕ್ಷಿಗಳನ್ನು ಆಧರಿಸಿ ಅಪರಾಧಿ ಎಂಬುದಾಗಿ ತೀರ್ಮಾನಿಸಲಾಗಿದೆ. ಆದ್ದರಿಂದ ಮರಣದಂಡನೆ ವಿಧಿಸಲಾಗದು. ಸಮರ್ಪಕ ಪರೀಕ್ಷೆ ನಡೆಸದೆ ಇರುವುದರಿಂದ ಈ ಪ್ರಕರಣ ಅಪರೂಪದಲ್ಲಿ ಅಪರೂಪದ ಪ್ರಕರಣ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಪ್ರತಿಪಾದಿಸಿದರು. ಅಂಜು ಅವರನ್ನು ೨೦೦೦ ದ ಜನವರಿ ೧೧ರಂದು ಇರಿತದ ಗಾಯಗಳೊಂದಿಗೆ ಆಕೆಯ ಪೂರ್ವ ದೆಹಲಿ ನಿವಾಸದಿಂದ  ಆಸ್ಪತ್ರೆಗೆ ಒಯ್ಯಲಾಗಿತ್ತು. ‘ಇಂಡಿಯಾಸ್ ಮೋಸ್ಟ್ ವಾಂಟೆಡ್ ಟಿವಿ ಸರಣಿ ಚಿತ್ರದೊಂದಿಗೆ ಖ್ಯಾತಿ ಪಡೆದಿದ್ದ  ಸುಹೈಬ್ ಇಲ್ಯಾಸಿ ಅವರನ್ನು ಮಾರ್ಚ್ ೨೮ರಂದು ಬಂಧಿಸಲಾಗಿತ್ತು. ವರದಕ್ಷಿಣೆಗಾಗಿ ಕಿರುಕುಳ ನೀಡುತಿದ್ದುದಾಗಿ  ಆತನ ಅತ್ತಿಗೆ ಮತ್ತು ಅತ್ತೆ  ಆರೋಪ ಮಾಡಿದ್ದನ್ನು ಅನುಸರಿಸಿ ಇಲ್ಯಾಸಿ ವಿರುದ್ಧ ಪ್ರಕರಣ ದಾಖಲಿಸಿ ದೋಷಾರೋಪ ಹೊರಿಸಲಾಗಿತ್ತು.


2017: ನವದೆಹಲಿ: ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್  ಉಸುರಿ ವಿಚ್ಛೇದನ ನೀಡುವ ಪದ್ಧತಿಯನ್ನು ಅಪರಾಧವನ್ನಾಗಿ ಮಾಡುವ ಕರಡು ಮಸೂದೆಯನ್ನು ರೂಪಿಸುವ ಮುನ್ನ ಸರ್ಕಾರವು ಮುಸ್ಲಿಂ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಈದಿನ ಲೋಕಸಭೆಗೆ ತಿಳಿಸಲಾಯಿತು. ಉದ್ದೇಶಿತ ಮಸೂದೆಯು ಲಿಂಗ ನ್ಯಾಯ, ಲಿಂಗ ಸಮಾನತೆ ಮತ್ತು ಮಹಿಳೆಯರಿಗೆ ಘನತೆಯನ್ನು ಖಚಿತ ಪಡಿಸಲು ನೆರವಾಗುತ್ತದೆ ಎಂದು ಸರ್ಕಾರ ನಂಬಿದೆ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಹೇಳಿದರು.
ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವ ಕ್ರಮ ಅಥವಾ ’ತಲಾಖ್-ಇ-ಬಿದ್ದತ್ ಕ್ರಮವು ಸುಪ್ರೀಂಕೋರ್ಟ್ ಅದನ್ನು ರದ್ದು ಪಡಿಸಿದ ಬಳಿಕವೂ ಮುಂದುವರಿದಿದ್ದ ಕಾರಣ ಕಾನೂನು ತರುವುದು ಅನಿವಾರ್ಯ  ಎಂದು ಸರ್ಕಾರ ತೀರ್ಮಾನಿಸಿತು ಎಂದು ಅವರು ನುಡಿದರು. ಕರಡು ಕಾನೂನು  ರಚಿಸುವ ಮುನ್ನ ಸರ್ಕಾರ ಮುಸ್ಲಿಮ್ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿದೆಯೇ ಎಂಬ ಲಿಖಿತ ಪ್ರಶ್ನೆಗೆ ಕಾನೂನು ಇಲಾಖೆ ರಾಜ್ಯ ಸಚಿವ ಪಿ.ಪಿ. ಚೌಧರಿ ’ಇಲ್ಲ ಎಂದು ಉತ್ತರ ನೀಡಿದ್ದರು. ಪ್ರತ್ಯೇಕ ಲಿಖಿತ ಉತ್ತರದಲ್ಲಿ ರವಿ ಶಂಕರ ಪ್ರಸಾದ್ ಅವರು ’ ಲಿಂಗ ನ್ಯಾಯ, ಲಿಂಗ ಸಮಾನತೆ ಮತ್ತು ಮಹಿಳೆಯರ ಘನತೆಯ  ಮಾನವೀಯ ಕಲ್ಪನೆಯ ಹಿನ್ನೆಲೆಯಲ್ಲಿ ವಿಷಯ ಉದ್ಭವಿಸಿದೆ ಹೊರತು ಧರ್ಮ ಅಥವಾ ನಂಬಿಕೆಯ ಕಾರಣದಿಂದಲ್ಲ ಎಂದು ಹೇಳಿದರು. ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವ ಪದ್ಧತಿಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ ಬಳಿಕ ಈ ವಿಧಾನದಲ್ಲಿ ಗಂಡ ತನ್ನ ಪತ್ನಿಗೆ ವಿಚ್ಛೇದನ ನೀಡಿದ ೬೬ ಪ್ರಕರಣಗಳು ವರದಿಯಾಗಿವೆ ಎಂದು ಅವರು ನುಡಿದರು. ಮ್ಯಾಜಿಸ್ಟ್ರೇಟ್ ಗೆ ಅಧಿಕಾರ: ಕೇಂದ್ರ ಸರ್ಕಾರವು ಮುಸ್ಲಿಮ್ ಮಹಿಳಾ ವಿವಾಹ ಹಕ್ಕುಗಳ ರಕ್ಷಣೆ ಮಸೂದೆಗೆ ಒಪ್ಪಿಗೆ ನೀಡಿತ್ತು. ಮಸೂದೆಯು ಒಂದೇ ಉಸಿರಿನಲ್ಲಿ ತ್ರಿವಳಿ ತಲಾಖ್ ಉಸುರುವ ಮೂಲಕ ವಿಚ್ಛೇದನ ನೀಡುವ ಕ್ರಮವನ್ನು ಅಕ್ರಮ ಮತ್ತು  ಕಾನೂನು ಬಾಹಿರ ಎಂಬುದಾಗಿ ಪರಿಗಣಿಸಿದ್ದು, ಈ ಅಪರಾಧಕ್ಕೆ ಗಂಡನಿಗೆ ಸೆರೆವಾಸದ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದೆ. ಪತಿಗೆ ಸೆರೆವಾಸದ ಜೊತೆಗೆ ದಂಡ ವಿಧಿಸಲೂ ಅವಕಾಶ ಕಲ್ಪಿಸಲಾಗಿದ್ದು, ದಂಡದ ಪ್ರಮಾಣವನ್ನು ನಿರ್ಧರಿಸುವ ಅಧಿಕಾರವನ್ನ ಪ್ರಕರಣದ ವಿಚಾರಣೆ ನಡೆಸುವ ಮ್ಯಾಜಿಸ್ಟ್ರೇಟ್ ಅವರಿಗೆ ನೀಡಲಾಗಿದೆ. ಪ್ರಸ್ತಾಪಿತ ಮಸೂದೆಯು ಒಂದೇ ಉಸಿರಿನ ತ್ರಿವಳಿ ತಲಾಖ್ ಅಥವಾ ’ತಲಾಖ್ -ಇ-ಬಿದ್ದತ್ ಗೆ ಮಾತ್ರ ಅನ್ವಯಿಸುತ್ತದೆ. ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಿ ಆಕೆಗೆ ಮತ್ತು ಮಕ್ಕಳಿಗೆ ’ಜೀವನೋಪಾಯ ಭತ್ಯೆ ಕೋರುವ ಅಧಿಕಾರವನ್ನೂ  ಮಸೂದೆಯು ಸಂತ್ರಸ್ತ ಮಹಿಳೆಗೆ  ಒದಗಿಸಿದೆ. ಅಪ್ರಾಪ್ತ ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆ ಮ್ಯಾಜಿಸ್ಟ್ರೇಟರ ಬಳಿ ಕೋರುವ ಅವಕಾಶವನ್ನೂ ಮಸೂದೆ ಸಂತ್ರಸ್ಥ ಮಹಿಳೆಗೆ ಕಲ್ಪಿಸಿಕೊಟ್ಟಿದೆ. ವಿಷಯಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಅಂತಿಮ ನಿರ್ಧಾರ ಕೈಗೊಳ್ಳಬಹುದು. ಕರಡು ಮಸೂದೆಯ ಪ್ರಕಾರ ಮೌಖಿಕ, ಲಿಖಿತ ಅಥವಾ ಎಲೆಕ್ಟ್ರಾನಿಕ್ ರೂಪ ಸೇರಿದಂತೆ ಯಾವುದೇ ರೂಪದಲ್ಲಿ ನೀಡಲಾಗುವ  (ಇ-ಮೇಲ್, ಎಸ್ ಎಂಎಸ್  ಮತ್ತು ವಾಟ್ಸ್ ಆಪ್) ಒಂದೇ ಉಸಿರಿನ ತ್ರಿವಳಿ ತಲಾಖ್  ಕಾನೂನುಬಾಹಿರ ಮತ್ತು ನಿರರ್ಥಕವಾಗುತ್ತದೆ.

2017: ಚೆನ್ನೈ: ನಿರ್ಣಾಯಕವಾದ ಆರ್ ಕೆ ನಗರ ಉಪಚುನಾವಣೆಗೆ ಒಂದು ದಿನ ಮೊದಲು ಎಐಎಡಿಎಂಕೆಯ ಟಿಟಿವಿ ದಿನಕರನ್ ಬಣವು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರದ್ದೆನ್ನಲಾದ ವಿಡಿಯೋ ಒಂದನ್ನು ಚೆನ್ನೈಯಲ್ಲಿ ಬಿಡುಗಡೆ ಮಾಡಿತು. ವಿಡಿಯೋದಲ್ಲಿ ಎಐಎಡಿಎಂಕೆ ಮುಖ್ಯಸ್ಥೆ ಲೋಟ ಹಿಡಿದುಕೊಂಡು ಟಿವಿ ನೋಡುತ್ತಾ ನೀರು ಕುಡಿಯುವ ದೃಶ್ಯವಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅಸು ನೀಗುವ ಮುನ್ನ ಆರ್ ಕೆ ನಗರ ಕ್ಷೇತ್ರವನ್ನು ಜಯಲಲಿತಾ ಅವರು ಪ್ರತಿನಿಧಿಸಿದ್ದರು. ಸೋಂಕು, ತೀವ್ರ ನಿರ್ಜಲೀಕರಣದ ಕಾರಣಕ್ಕಾಗಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಸಾವಿಗೆ ಸಂಬಂಧಿಸಿದ ನಿಗೂಢವು ಆಪಾದನೆಗಳು ಹಾಗೂ ಹಲವಾರು ವದಂತಿಗಳಿಗೆ ಕಾರಣವಾಗಿದ್ದವು. ಹಲವರು ವಿಡಿಯೋ ಸೆರೆ ಹಿಡಿದದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ. ಇದನ್ನು ಜಯಲಲಿತಾ ಅವರನ್ನು ತೀವ್ರ ನಿಗಾ ಘಟಕದಿಂದ ಹೊರಕ್ಕೆ ಕರೆದುಕೊಂಡು ಬಂದಾಗ ವಿಕೆ ಶಶಿಕಲಾ ಅವರು ಸೆರೆ ಹಿಡಿದಿದ್ದಾರೆ.  ನಾನು ಈ ವಿಡಿಯೋವನ್ನು ಟಿಟಿವಿ ದಿನಕರನ್ ಅಥವಾ ಶಶಿಕಲಾ ಅವರ ಜೊತೆ ಸಮಾಲೋಚಿಸದೆ ಬಿಡುಗಡೆ ಮಾಡಿದ್ದೇನೆ. ಎಐಎಡಿಎಂಕೆಯಲ್ಲಿ ವಿಲೀನವಾಗಿರುವ ಬಣವು ಜಯಲಲಿತಾ ಅವರ ಆಸ್ಪತ್ರೆವಾಸಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಎತ್ತುತ್ತಿದೆ. ಎಲ್ಲ ಒಳಸಂಚು ಸಿದ್ಧಾಂತಗಳಿಗೆ ತೆರೆ ಎಳೆಯಲು ನಾನು ನಿರ್ಧರಿಸಿದ್ದೇನೆ ಎಂದು ದಿವಂಗತ ಮುಖ್ಯಮಂತ್ರಿಯದ್ದು ಎನ್ನಲಾಗಿರುವ ವಿಡಿಯೋವನ್ನು ಬಿಡುಗಡೆ ಮಾಡಿದ ಶಾಸಕ ಎಸ್. ವೆಟ್ರಿವೆಲ್ ಹೇಳಿದರು. ಪ್ರತಿಸ್ಪರ್ಧಿ ಬಣವು ವಿಡಿಯೋ ಬಿಡುಗಡೆ ಮಾಡಿದ್ದನ್ನು ತರಾಟಗೆ ತೆಗೆದುಕೊಂಡಿರುವ ತಮಿಳುನಾಡು ಮೀನುಗಾರಿಕಾ ಸಚಿವ ಜಯಕುಮಾರ್ ಅವರು ವಿಡಿಯೋ ಬಗ್ಗೆ ಹಲವಾರು ಪ್ರಶ್ನೆಗಳನ್ನು ಕೇಳಿದರು. ಈ ವಿಡಿಯೋವನ್ನು ದುರುದ್ದೇಶದೊಂದಿಗೆ ಬಿಡುಗಡೆ ಮಾಡಲಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣಾ ಸಮಿತಿಯನ್ನು ರಚಿಸಿರುವಾಗ ಸಾಕ್ಷ್ಯಾಧಾರವಿದ್ದರೆ ಸಮಿತಿಗೆ ಕೊಡುವುದು ಕ್ರಮ, ಮೊದಲು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಲ್ಲ. ಜಯಲಲಿತಾ ಅವರಿಗೆ ಝೆಡ್ ಪ್ಲಸ್ ಭದ್ರತೆ ಇತ್ತು. ಈ ಭದ್ರತಾ ಕವಚವನ್ನು ಭೇದಿಸಿ ಒಳನುಗ್ಗಿ ಈ ವಿಡಿಯೋ ಸೆರೆ ಹಿಡಿದವರು ಯಾರು? ಈ ವಿಡಿಯೋವನ್ನು ಯಾವಾಗ, ಎಲ್ಲಿ ಚಿತ್ರೀಕರಿಸಲಾಯಿತು ಎಂಬ ಬಗ್ಗೆ ಕೂಡಾ  ಸ್ಪಷ್ಟತೆ ಇಲ್ಲ. ಜಯಲಲಿತಾ ಅವರು ಹಲವಾರು ಕಾರಣಗಳಿಗಾಗಿ ಇದಕ್ಕೆ ಮುನ್ನವೂ  ಹಲವು ಸಲ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂದು ಜಯಕುಮಾರ್ ಹೇಳಿದರು. ಜಯಲಲಿತಾ ಅವರು ಶಶಿಕಲಾ ಮತ್ತು ಆಕೆಯ ಕುಟುಂಬದಿಂದ ಜೀವಂತ ಇದ್ದಾಗಲೂ ತೊಂದರೆಗಳನ್ನು ಎದುರಿಸಿದ್ದರುಎಂದೂ ಸಚಿವರು ನುಡಿದರು. ‘ಚುನಾವಣೆಯಲ್ಲಿ ಜಯಗಳಿಸುವುದಕ್ಕಾಗಿ ಅವರು ಅಮ್ಮನಿಗೆ ಕಾಟ ನೀಡಿದ್ದರು. ಇದು ಸ್ವೀಕಾರಯೋಗ್ಯವಲ್ಲದ ವರ್ತನೆ. ಯಾರೇ ಸಚಿವರಿಗೂ ಅಮ್ಮ ಅವರನ್ನು ಭೇಟಿ ಮಾಡಲು ಅವಕಾಶ ಇರಲಿಲ್ಲ. ಯಾರೇ ಗಣ್ಯರೂ ಅವರನ್ನು ಭೇಟಿ ಮಾಡುವಂತಿರಲಿಲ್ಲ. ಹಾಗಿರುವಾಗ ವಿಡಿಯೋ ತೆಗೆದವರು ಯಾರು?’ ಎಂದು ಅವರು ಪ್ರಶ್ನಿಸಿದರು. ಜಯಲಲಿತಾ ಅವರು ಕಳೆದ ವರ್ಷ ಡಿಸೆಂಬರ್ ೫ರಂದು ಕೊನೆಯ ಉಸಿರು ಎಳೆಯುವವರೆಗೂ ಆಸ್ಪತ್ರೆಯಲ್ಲಿ ಇದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರು ನಿಧನರಾಗಿದ್ದರು. ರಾಜಕೀಯ ಉದ್ಧೇಶಗಳಿಗಾಗಿ ಅವರನ್ನು ಆಸ್ಪತ್ರೆಯಲ್ಲಿ ಇರಿಸಲಾಗಿತ್ತು ಎಂದು ಹಲವರು ಹೇಳುತ್ತಾರೆ. ಈ ಮಧ್ಯೆ ಅಪೋಲೋ ಆಸ್ಪತ್ರೆಯು ಸೆಪ್ಟೆಂಬರ್ ೨೨ರಂದು ಅಸ್ಪತ್ರೆಗೆ ಕರೆತಂದಾಗ ಜಯಲಲಿತಾ ಪ್ರಜ್ಞಾಹೀನರಾಗಿದ್ದರು ಎಂದು ಹೇಳಿತ್ತು. ಉಪಚುನಾವಣೆಗೆ ಮುನ್ನ  ವಿಡಿಯೋ ಬಿಡುಗಡೆ ಮಾಡಿರುವುದು,  ಜಯಲಲಿತಾ ಸಾವಿನ ಸಂಬಂಧ ಎದ್ದಿರುವ ಶಂಕೆಗಳನ್ನು ನಿವಾರಿಸಲು ಟಿಟಿವಿ ದಿನಕರನ್ ಬಣ ನಡೆಸಿದ ಯತ್ನ ಎಂದು ಹೇಳಲಾಯಿತು. ಜಯಲಲಿತಾ ಸಾವಿನ ಬಗ್ಗೆ ನ್ಯಾಯಾಂಗ ಆಯೋಗ ತನಿಖೆ ನಡೆಸುತ್ತಿದೆ. ಆರ್ ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆಯ ಪ್ರತಿಸ್ಪರ್ಧಿ ಬಣಗಳು ತೀವ್ರ ಸೆಣಸಾಟ ನಡೆಸುತ್ತಿವೆ. ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿ ಟಿವಿ ನೋಡುತ್ತಿರುವ ವಿಡಿಯೋವನ್ನು ಅವರ ನಿಕವರ್ತಿಯಾಗಿದ್ದ ವಿಕೆ ಶಶಿಕಲಾ ದಾಖಲಿಸದ್ದಾರೆ ಎಂದು ಹಿಂದೆ ದಿನಕರನ್ ಪ್ರತಿಪಾದಿಸಿದ್ದರು. ತಮಿಳುನಾಡು ಅರಣ್ಯ ಸಚಿವ ಡಿಂಡಿಗಲ್ ಸಿ ಶ್ರೀನಿವಾಸನ್ ಅವರು ಜಯಲಲಿತಾ ಆರೋಗ್ಯ ಸುಧಾರಿಸುತ್ತಿದೆ ಎಂಬುದಾಗಿ ತಾನು ಸುಳ್ಳು ಹೇಳಿದ್ದುದಾಗಿ ಹೇಳಿಕೆ ನೀಡಿದ ಬಳಿಕ ಟಿಟಿವಿ ದಿನಕರನ್ ಈ ಪ್ರತಿಪಾದನೆ ಮಾಡಿದ್ದರು. ‘ನಮ್ಮ ಬಳಿ ವಿಡಿಯೋ ರೆಕಾರ್ಡಿಂಗ್ ಗಳು ಇವೆ. ಆದರೆ ನಾವು ಅವರ (ಜಯಲಲಿತಾ) ಘನತೆಯನ್ನು ಕುಗ್ಗಿಸಲು ಇಷ್ಟ ಪಡುವುದಿಲ್ಲ. ಏಕೆಂದರೆ ಅದರಲ್ಲಿ ಅವರು ರಾತ್ರಿಯ ಉಡುಪು ಧರಿಸಿದ್ದಾರೆ. ನನ್ನ ಚಿಕ್ಕಮ್ಮ (ಶಶಿಕಲಾ) ನ್ಯಾಯಾಂಗ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಅದನ್ನು ಬಳಸಲು ನಮಗೆ ಅನುಮತಿ ಕೊಟ್ಟಿಲ್ಲ. ಅವರು ಜಯಲಲಿತಾ ಟೆಲಿವಿಷನ್ ನೋಡುತ್ತಿರುವ ವಿಡಿಯೋ ಸೆರೆ ಹಿಡಿದಿದ್ದರು ಎಂದು ದಿನಕರನ್ ಹೇಳಿದ್ದರು. ವಿಡಿಯೋದಾಖಲೆಯನ್ನು ಜಯಲಲಿತಾ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಹಸ್ತಾಂತರಿಸಲೂ ತಾನು ಸಿದ್ಧ ಎಂದೂ ಅವರು ಹೇಳಿದ್ದರು.

2017: ಇಸ್ಲಾಮಾಬಾದ್:  ಗೂಢಚರ್ಯೆ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಸಂಪರ್ಕಿಸಲು ರಾಜತಾಂತ್ರಿಕರು ನಡೆಸಿದ ಯತ್ನಗಳಿಗೆ ನಿರಂತರ ನಕಾರ ಹೇಳಿದ್ದ ಪಾಕಿಸ್ತಾನ ಕಡೆಗೂ ಜಾಧವ್ ಪತ್ನಿ ಮತ್ತು ತಾಯಿಗೆ ಡಿಸೆಂಬರ್ ೨೫ರಂದು ಜಾಧವ್ ಅವರನ್ನು ಭೇಟಿ ಮಾಡಲು ಈದಿನ ವೀಸಾ ನೀಡಿತು. ಜಾಧವ್ ಅವರನ್ನು ಬಂಧಿಸಿದ ೨೧ ತಿಂಗಳ ಬಳಿಕ ಅವರ ಕುಟುಂಬಕ್ಕೆ ವೀಸಾ ಬಂದಿತು. ನವದೆಹಲಿಯಲ್ಲಿನ ತನ್ನ ಹೈ ಕಮೀಷನ್ ಗೆ ವೀಸಾ ವಿತರಣೆ ಮಾಡುವಂತೆ ಪಾಕ್ ಸರ್ಕಾರ ಕಳೆದ ವಾರ ನಿರ್ದೇಶನ ನೀಡಿತ್ತು. ಪಾಕಿಸ್ತಾನ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್  ಫೈಸಲ್ ಅವರು ಡಿಸೆಂಬರ್ ೧೧ರಂದು ಜಾಧವ್ ಕುಟುಂಬದ ವೀಸಾ ಅರ್ಜಿಗಳು ಬಂದಿದ್ದು ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದರು. ಜಾಧವ್ ಕುಟುಂಬ ಸದಸ್ಯರ ವಾಸ್ತವ್ಯ ಕಾಲದಲ್ಲಿ ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮೀಷನ್ ನ ರಾಜತಾಂತ್ರಿಕರೊಬ್ಬರಿಗೆ ಅವರ ಜೊತೆಗೆ ಇರಲು ಅನುಮತಿ ನೀಡಲಾಗಿದೆ. ಪಾಕಿಸ್ತಾನ ಭೇಟಿ ಕಾಲದಲ್ಲಿ ಜಾಧವ್ ಕುಟುಂಬಕ್ಕೆ ಗರಿಷ್ಠ ಭದ್ರತೆ ಒದಗಿಸಲೂ ಪಾಕಿಸ್ತಾನ ಒಪ್ಪಿತು. ೪೬ರ ಹರೆಯದ ಜಾಧವ್ ಅವರನ್ನು ಪಾಕಿಸ್ತಾನವು ಪ್ರಕ್ಷುಬ್ಧ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ೨೦೧೬ರಲ್ಲಿ ಬಂಧಿಸಿದ್ದು, ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯವು ಗೂಢಚರ್‍ಯೆ ಮತ್ತು ಭಯೋತ್ಪಾದನೆ ಆರೋಪದಲ್ಲಿ ಅವರಿಗೆ ಮರಣ ದಂಡನೆ ವಿಧಿಸಿದೆ.
ಭಾರತವು ಜಾಧವ್ ಅವರನ್ನು ಕುಟುಂಬ ಸದಸ್ಯರ ಸಹಿತವಾಗಿ ಭೇಟಿ ಮಾಡಲು ಹಲವಾರು ಬಾರಿ ಯತ್ನಿಸಿತ್ತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ಪ್ರಧಾನಿಯ ರಾಷ್ಟ್ರೀಯ ಭದ್ರತಾ ಸಹೆಗಾರ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವ ಸತ್ರಾಜ್ ಅಜೀಜ್  ಅವರಿಗೆ ವೈಯಕ್ತಿಕ ಪತ್ರವನ್ನೂ ಬರೆದು ಜಾಧವ್ ತಾಯಿಗೆ ಪಾಕಿಸ್ತಾನ ಪ್ರವಾಸ ಸಾಧ್ಯವಾಗುವಂತೆ ವೀಸಾ ಮಂಜೂರು ಮಾಡಲು ಕೋರಿದ್ದರು. ಜಾಧವ್ ವಿರುದ್ಧ ಪಾಕಿಸ್ತಾನ ಮಾಡಿದ ಆರೋಪಗಳನ್ನು ನಿರಾಕರಿಸಿರುವ ಭಾರತ, ಜಾಧವ್ ಅವರನ್ನು ನೌಕಾಪಡೆಯಿಂದ ನಿವೃತ್ತರಾದ ಬಳಿಕ ಇರಾನಿನಲ್ಲಿ ವಹಿವಾಟು ಸಂಬಂಧ ತೆರಳಿದ್ದಾಗ ಅಪಹರಿಸಿ ಬಂಧಿಸಲಾಗಿದೆ ಎಂದು ಹೇಳಿತ್ತು.  ಜಾಧವ್ ಗಲ್ಲು ಶಿಕ್ಷೆ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲನ್ನೂ ಭಾರತ ತುಳಿದಿತ್ತು. ಜಾಧವ್ ಗಲ್ಲು ಜಾರಿಗೆ ತಡೆ ನೀಡಿದ್ದ ನ್ಯಾಯಾಲಯ  ಜೂನ್ ೧೩, ಸೆಪ್ಟೆಂಬರ್ ೧೩ ಮತ್ತು ಡಿಸೆಂಬರ್ ೧೩ರಂದು ಪ್ರಕರಣ ಸಂಬಂಧಿತ ದಾಖಲೆಗಳನ್ನು ಸಲ್ಲಿಸಲು ಭಾರತ ಮತ್ತು ಪಾಕಿಸ್ತಾನಕ್ಕೆ ಸೂಚಿಸಿತ್ತು.


2016: ಮುಂಬೈ: ಪ್ರವಾಸಿ ಇಂಗ್ಲೆಂಡ್ ತಂಡವನ್ನು 4-0 ಅಂತರದಿಂದ ಮಣಿಸಿ ಸರಣಿಯನ್ನು ಗೆದ್ದುಕೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು. ಮೂಲಕ ತವರಲ್ಲೇ ಭಾರತ 2012 ಸರಣಿ ಸೋಲಿನ ಸೇಡು ತೀರಿಸಿಕೊಂಡಿತು. ಒಟ್ಟಾರೆ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಭಾರತೀಯ ಆಟಗಾರರಿಗೆ ಹಲವು ದಾಖಲೆಗಳ ಸಾಧನೆಗೆ ಎಡೆಮಾಡಿಕೊಟ್ಟಿತು. ಸತತ 18 ಪಂದ್ಯಗಳಲ್ಲಿ ಸೋಲನುಭವಿಸದೆ ಅತಿಹೆಚ್ಚು ಸತತ ಪಂದ್ಯಗಳ ಗೆಲುವು ಸಾಧಿಸಿದ ಕೀರ್ತಿಗೂ ಭಾರತ ಪಾತ್ರವಾಯಿತು. ಅಂತಿಮ ಟೆಸ್ಟ್ 4ನೇ ದಿನ ಸಂಪೂರ್ಣ ಕನ್ನಡಿಗ ಕರುಣ್ ನಾಯರ್ ಮಯವಾಗಿದ್ದರೆ, 5ನೇ ದಿನ ಸಂಪೂರ್ಣ ಸ್ಪಿನ್ನರ್ ರವೀಂದ್ರ ಜಡೇಜಾಮಯವಾಗಿತ್ತು. ಕೇವಲ 48 ರನ್ಗಳಿಗೆ 7 ವಿಕೆಟ್ಗಳನ್ನು ಕಬಳಿಸುವ ಮೂಲಕ ರವೀಂದ್ರಾ ಜಡೇಜಾ ಜೀವಮಾನದ ಶ್ರೇಷ್ಠ ಪ್ರದರ್ಶನ ನೀಡಿದರು. ಚೆನ್ನೈನ ಚಿದಂಬರಂ ಮೈದಾನದಲ್ಲಿ ನಡೆದ 5ನೇ ಟೆಸ್ಟ್ನಲ್ಲಿ ಜಡೇಜಾರ ಅಮೋಘ ಸ್ಪಿನ್ ದಾಳಿಯಿಂದ ನಾಯಕ ವಿರಾಟ್ ಕೊಹ್ಲಿ ಪಡೆ ಇನ್ನಿಂಗ್ಸ್ ಮತ್ತು 75 ರನ್ಗಳ ಅಮೋಘ ಜಯ ಸಾಧಿಸಿತು. 12ರನ್ಗಳೊಂದಿಗೆ ದಿನದಾಟ ಮುಂದುವರಿಸಿದ ಇಂಗ್ಲೆಂಡ್ ಮದ್ಯಾಹ್ನದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 97 ರನ್ಗಳಿಸಿ ಪಂದ್ಯ ಡ್ರಾ ಮಾಡಿಕೊಳ್ಳುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದ್ದರು. ಆರಂಭಿಕ ಆಟಗಾರರಾದ ಅಲಸ್ಟೈರ್ ಕುಕ್(49) ಮತ್ತು ಕೀಟನ್ ಜೆನ್ನಿಂಗ್ಸ್(54) ಜತೆಯಾಟ(103) ಹೊರತುಪಡಿಸಿ ಬೇರೆ ಯಾರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಇಂಗ್ಲೆಂಡ್ 207 ರನ್ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಇಂಗ್ಲೆಂಡ್ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದರು. 4ನೇ ಟೆಸ್ಟ್ ಪಂದ್ಯದಲ್ಲಿ ಮೋಡಿ ಮಾಡಿದ್ದ ರವಿಚಂದ್ರ ಅಶ್ವಿನ್ 5ನೇ ಪಂದ್ಯದ 5ನೇ ದಿನ ಶೂನ್ಯ ವಿಕೆಟ್ ಸಂಪಾದಿಸಿದರು. ಆದರೆ ಸರಣಿಯಲ್ಲಿ 28 ವಿಕೆಟ್ ಗಳಿಸುವ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದರು. ಸರಣಿಯಲ್ಲಿ ರವೀಂದ್ರ ಜಡೇಜಾ 26 ವಿಕೆಟ್ಗಳನ್ನು ಗಳಿಸಿದರು. ಪ್ರಥಮ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ನೀಡಿದ 400 ರನ್ಗಳ ಗುರಿ ಬೆಂಬತ್ತಿದ ಭಾರತ ತಂಡ ಕನ್ನಡಿಗ ಕರುಣ್ ನಾಯರ್ ಅಮೋಘ ತ್ರಿಶತಕ ಸಾಧನೆ ಜತೆಗೆ 7 ವಿಕೆಟ್ ನಷ್ಟಕ್ಕೆ 759 ರನ್ ಪೇರಿಸಿ, 282 ರನ್ಗಳ ಮುನ್ನಡೆ ಸಾಧಿಸಿತ್ತು. 4ನೇ ದಿನ 2ನೇ ಇನ್ನಿಂಗ್ಸ್ ಆರಂಭಿಸಿದ್ದ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 5 ಓವರ್ಗಳಿಗೆ 12 ರನ್ಗಳಿಸಿತ್ತು. ವಿಶೇಷಗಳು: 5ನೇ ಪಂದ್ಯದಲ್ಲಿ ಭಾರತಕ್ಕೆ ಇನ್ನಿಂಗ್ಸ್ ಮತ್ತು 75 ರನ್ಗಳ ಜಯ * ಜಡೇಜಾ ಸ್ಪಿನ್ ದಾಳಿಗೆ ತತ್ತರಿಸಿದ ಕುಕ್ ಪಡೆ * 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್  207ಕ್ಕೆ ಆಲೌಟ್ * 48 ರನ್ಗಳಿಗೆ 7 ವಿಕೆಟ್ ಕಬಳಿಸಿದ ರವೀಂದ್ರಾ ಜಡೇಜಾ * ಸರಣಿಯಲ್ಲಿ 655 ರನ್ ಗಳಿಸಿದ ಕೊಹ್ಲಿಗೆ ಮ್ಯಾನ್ ಆಫ್ ಸಿರೀಸ್
2016: ಇಸ್ಲಾಮಾಬಾದ್: ಕಪ್ಪು ಹಣ ನಿಯಂತ್ರಣ ಮಾಡುವ ಸಲುವಾಗಿ  ರೂ. 5000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲು ಪಾಕಿಸ್ತಾನ ಮುಂದಾಯಿತು.  ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಬಗ್ಗೆ ಪಾಕಿಸ್ತಾನ ಸೆನೆಟಿನಲ್ಲಿ ಗೊತ್ತುವಳಿ ಅಂಗೀಕಾರವಾಯಿತು. ಪಾಕಿಸ್ತಾನ ಮುಸ್ಲಿಂ ಲೀಗ್ ನೇತಾರ ಉಸ್ಮಾನ್ ಸೈಫ್ ಉಲ್ಲಾ ಅವರು ಗೊತ್ತುವಳಿ ಮಂಡಿಸಿದ್ದು, ಮೇಲ್ಮನೆಯಲ್ಲಿದ್ದ ಹೆಚ್ಚಿನ ಸದಸ್ಯರು ಗೊತ್ತುವಳಿಯನ್ನು ಅನುಮೋದಿಸಿದರು. ದಾಖಲೆ ರಹಿತ ಆರ್ಥಿಕತೆಯ ಗಾತ್ರ ಕುಗ್ಗಿಸುವ ಸಲುವಾಗಿ ಮತ್ತು ಬ್ಯಾಂಕ್ ಖಾತೆಗಳ ಬಳಕೆಯನ್ನು ಪ್ರೋತ್ಸಾಹಿಸುವ ಸಲುವಾಗಿ  5000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗುತ್ತದೆ ಎಂದು ಡಾನ್ ಪತ್ರಿಕೆ ವರದಿ ಮಾಡಿತು. ಅದೇ ವೇಳೆಗೆ ನೋಟುಗಳ ಚಲಾವಣೆ ರದ್ದು ಮಾಡುವ ಪ್ರಕ್ರಿಯೆ ಮೂರರಿಂದ ಐದು ವರ್ಷಗಳ ವರೆಗೆ ನಡೆಯಬಹುದು ಎಂದು ಪತ್ರಿಕೆ ಹೇಳಿತು. ಭಾರತದಲ್ಲಿ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಪ್ರಕ್ರಿಯೆಯಿಂದ ಪ್ರೇರಿತವಾಗಿ ಪಾಕಿಸ್ತಾನವೂ ನೋಟು ರದ್ದು ತೀರ್ಮಾನ ಕೈಗೊಳ್ಳಲು ಮುಂದಾಯಿತು.
2016: ನವದೆಹಲಿ: ಭಾರತದಾದ್ಯಂತ ದಾಳಿ ನಡೆಸಲು ಐಎಸ್ ಯೋಜನೆ ರೂಪಿಸಿದ್ದು, ನಿಟ್ಟಿನಲ್ಲಿ ಪಾಕಿಸ್ತಾನದ ಲಾಂಚ್ ಪ್ಯಾಡ್ಗಳಲ್ಲಿ ಉಗ್ರರ ಚಲನವಲನಗಳು ಕಂಡು ಬಂದಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತು. ಉಗ್ರರು ಮತ್ತು ಉಗ್ರ ನಾಯಕರ ಜತೆಗಿನ ಫೋನ್ ಸಂಭಾಷಣೆಗಳು ಪತ್ತೆಯಾಗಿವೆ. ಎಲ್ಒಸಿ ಸಮೀಪ ಪಾಕಿಸ್ತಾನದ ಉಗ್ರ ನೆಲೆಗಳಲ್ಲಿ ಹಲವು ತಾಲಿಬಾನ್ ಉಗ್ರರು ಬೀಡುಬಿಟ್ಟಿದ್ದಾರೆ. ಪಾಷ್ಟೋ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿರುವ ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತು. ಐಎಸ್ ಮತ್ತು ಅಫ್ಘಾನಿಸ್ತಾನ ಉಗ್ರರ ನೆರವಿನೊಂದಿಗೆ ಭಾರತದೊಳಗೆ ಉಗ್ರ ಕೃತ್ಯ ನಡೆಸಲು ತಾಲಿಬಾನ್ ಪ್ರಯತ್ನಿಸುತ್ತಿದೆ. ಪಾಕ್ ಉಗ್ರ ನೆಲೆಗಳಲ್ಲಿ ನೆಲೆಸಿರುವ ಉಗ್ರರಿಗೆ ಸ್ವಾಟ್ ವ್ಯಾಲಿ ಮತ್ತು ಟೊರಾ ಬೊರಾ ಪರ್ವತ ಪ್ರದೇಶಗಳಲ್ಲಿ ತರಬೇತಿ ನೀಡಲಾಗಿದೆ ಎಂದು ಗುಪ್ತಚರ ಇಲಾಖೆ ತಿಳಿಸಿತು. ಐಎಸ್ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಯುವಕರನ್ನು ಭಾರತದ ವಿರುದ್ಧ ಉಗ್ರ ಕೃತ್ಯ ನಡೆಸುವಂತೆ ಮನವೊಲಿಸಲು ವಿಫಲಗೊಳ್ಳುತ್ತಿದೆ. ಹಾಗಾಗಿ ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಉಗ್ರರ ನೆರವಿನೊಂದಿಗೆ ಭಾರತದಲ್ಲಿ ಅಸ್ಥಿರ ಸ್ಥಿತಿ ನಿಮ್ಮಿಸುವತ್ತ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿದವು.
2016: ತಿರುವನಂತಪುರಂ: ತಿರುವಂತಪುರಂನಿಂದ 180 ಕಿಮೀ ದೂರದಲ್ಲಿರುವ ವೈಕೋಮ್ ನಿಂದ
ಜನವರಿ 12ರಂದು ರಾಷ್ಟ್ರದ ಮೊತ್ತ ಮೊದಲ ಸೌರಶಕ್ತಿ ಚಾಲಿತ ದೋಣಿ ಸೇವೆಯನ್ನು ಆರಂಭಿಸುವುದರೊಂದಿಗೆ ಕೇರಳ ತನ್ನ ಸಾರಿಗೆ ರಂಗದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ. ಸೌರಶಕ್ತಿ ಚಾಲಿತ ದೋಣಿಯು ತನ್ನ ಮೊದಲ ಸೇವೆಯನ್ನು ಜನವರಿ 12ರಂದು 75 ಮಂದಿ ಪ್ರಯಾಣಿಕರನ್ನು ಒಯ್ಯುವುದರೊಂದಿಗೆ ಆರಂಭಿಸಲಿದೆ. ದೋಣಿಯು ವೈಕೋಮ್ ನಿಂದ ಸಮೀಪದ ಕೊಚ್ಚಿಗೆ ತೆರಳಲಿದೆ ಎಂದು ರಾಜ್ಯ ಸಾರಿಗೆ ಸಚಿವ .ಕೆ. ಶಶೀಂದ್ರನ್  ಸುದ್ದಿಗಾರರಿಗೆ ತಿಳಿಸಿದರು. ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ಪೆಟ್ರೋಲ್, ಡೀಸೆಲ್ ಬದಲಿಗೆ ಬೇರೆ ಇಂಧನ ಮೂಲಗಳತ್ತ ಸಾಗಬೇಕು ಎಂಬ ರಾಜ್ಯ ಸರ್ಕಾರದ ಚಿಂತನೆಗೆ ಅನುಗುಣವಾಗಿ ಸೌರಶಕ್ತಿ ಚಾಲಿತ ದೋಣಿಯ ಯೋಜನೆ ರೂಪುಗೊಂಡಿದೆ ಎಂದು ಶಶೀಂದ್ರನ್ ಹೇಳಿದರು. ಇದೇ ರೀತಿಯಾಗಿ ರಾಜ್ಯದಲ್ಲಿ ಸಿಎನ್ಜಿ ಮತ್ತು ಎಲ್ಎನ್ಜಿ ವಾಹನಗಳ ಸೇವೆಗೂ ಸರ್ಕಾರ ಗಮನ ಹರಿಸಿದೆ ಎಂದು ಅವರು ನುಡಿದರು.
2016: ನವದೆಹಲಿ: ಬ್ಯಾಂಕ್ ಖಾತೆಗಳಿಗೆ 5000 ರೂಪಾಯಿ ಮೇಲಿನ ಹಳೆ ನೋಟುಗಳನ್ನು
ಡಿಸೆಂಬರ್ 30ರವರೆಗಿನ ಅವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಜಮಾ ಮಾಡಬಹುದು, ಪ್ರತಿದಿನ 5000 ರೂ. ಮೀರಿದ ಜಮಾ ಮಾಡುವಂತಿಲ್ಲ ಎಂಬುದಾಗಿ ಸರ್ಕಾರ ಹೊರಡಿಸಿರುವ ಹೊಸ ನಿಯಮ ವಿಪಕ್ಷಗಳ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರುಪದೇ ಪದೇ ಜಮಾ ಮಾಡುವುದರಿಂದ ಸಂಶಯ ಹುಟ್ಟುತ್ತದೆಎಂದು ಹೇಳಿದರು. 500 ಮತ್ತು 1000 ರೂಪಾಯಿಗಳ ಹಳೆ ನೋಟು ಜಮಾ ಮಾಡುವವರು 5000 ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪದೇ ಪದೇ ಜಮಾ ಮಾಡಲು ಬಂದಲ್ಲಿ ಈವರೆಗೂ ಏಕೆ ಹಣವನ್ನು ಜಮಾ ಮಾಡಿಲ್ಲ ಎಂದು ವಿವರಿಸಬೇಕಾಗುತ್ತದೆ. ಏಕಗಂಟಿನಲ್ಲಿ ತಮ್ಮಲ್ಲಿರುವ ಎಲ್ಲ ಹಳೆ ನೋಟುಗಳನ್ನು ಜಮಾ ಮಾಡಿದರೆ ಅವರನ್ನು ಪ್ರಶ್ನಿಸಲಾಗುವುದಿಲ್ಲ. ಆದರೆ ಪದೇ ಪದೇ ಜಮಾ ಅವರು ವಿಚಾರಣೆಗೆ ಗುರಿಯಾಗಬಹುದು ಎಂದು ಜೇಟ್ಲಿ ಹೇಳಿದರು. ಸರ್ಕಾರ ಸಂಪೂರ್ಣ ಸಿದ್ಧತೆಯೊಂದಿಗೇ ನೋಟು ರದ್ದು ಕ್ರಮ ಕೈಗೊಂಡಿದೆ. ಅಗತ್ಯ ಇರುವಷ್ಟು ನೋಟುಗಳನ್ನು ಆರ್ಬಿಐ ಮುದ್ರಿಸಿಕೊಂಡಿದೆ ಎಂದು ಅವರು ನುಡಿದರು. 5000 ರೂ. ಮೀರಿದ ಹಳೆ ನೋಟುಗಳ ಜಮಾ ಮೇಲೆ ಮಿತಿ ವಿಧಿಸಿದ ಸರ್ಕಾರ ಹಾಗೂ ಆರ್ಬಿಐ ಕ್ರಮವನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಪಿಐ (ಎಂ) ಟೀಕಿಸಿವೆ. ರಾಹುಲ್ ಗಾಂಧಿ ಅವರು ಪ್ರಧಾನಿಯವರು ಉಡುಪು ಬದಲಾಯಿಸುವ ಹಾಗೆ ಆರ್ಬಿಐ ನೀತಿಗಳು ಬದಲಾಗುತ್ತಿವೆ ಎಂದು ಟೀಕಿಸಿದರೆ, ಸಿಪಿಐ (ಎಂ) ಇದು ಹುಚ್ಚಾಟದ ಕ್ರಮ ಎಂದು ಬಣ್ಣಿಸಿ ಆದೇಶವನ್ನು ತತ್ ಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತ್ತು.
2016: ಚಂಡೀಗಢ: ರಾಜ್ಯ ವಿಧಾನ ಸಭೆಯ ನಿರ್ಣಾಯಕ ಚುನಾವಣೆಗಳಿಗೆ ಕೇವಲ ಕೆಲವು ವಾರಗಳಷ್ಟೇ ಬಾಕಿ ಉಳಿದಿರುವಾಗ ನಡೆದಿರುವ ಚಂಡೀಗಢ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಂಯುಕ್ತ ಅಕಾಲಿ ದಳ (ಎಸ್ಎಡಿ) ಮೈತ್ರಿಕೂಟ ಪ್ರಚಂಡ ವಿಜಯ ಸಾಧಿಸಿತು. ವರದಿಗಳ ಪ್ರಕಾರ ಆಡಳಿತಾರೂಢ ಬಿಜೆಪಿ-ಎಸ್ಎಡಿ ಮೈತ್ರಿಕೂಟವು 26 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಗೆದ್ದಿತು.  ಕಾಂಗ್ರೆಸ್ ಕೇವಲ 4 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು.. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಯಿತು.. ಹೊರ ಹೋಗುತ್ತಿರುವ ಪಾಲಿಕೆಯಲ್ಲಿ ಬಿಜೆಪಿ -ಅಕಾಲಿದಳ ಮೈತ್ರಿಕೂಟ 12, ಕಾಂಗ್ರೆಸ್ 11 ಮತ್ತು ಮಾಯಾವತಿ ಅವರ ಬಹುಜನ ಸಮಾಜ ಪಕ್ಷ ಎರಡು ಸ್ಥಾನಗಳನ್ನು ಹೊಂದಿದ್ದವು. ರಾಜ್ಯದಲ್ಲಿ 10 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಪಿ-ಎಸ್ಎಡಿ ಮೈತ್ರಿಕೂಟವು ಆಡಳಿತ ವಿರೋಧಿ ಅಲೆಯಿಂದ ಬಾರಿ ಸೋಲು ಅನುಭವಿಸಬಹುದು ಎಂಬ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಚಂಡೀಗಢ ಮಹಾನಗರ ಪಾಲಿಕೆಯ ಚುನಾವಣೆ ಭಾರಿ ಮಹತ್ವ ಗಳಿಸಿತ್ತು.  ನವೆಂಬರ್ 8ರಂದು ನೋಟು ರದ್ದತಿ ಕ್ರಮ ಕೈಗೊಂಡ ಬಳಿಕ ನಡೆದ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಜಯಗಳಿಸಿದ್ದು, ಚಂಡೀಗಢದಲ್ಲೂ ಇದು ಮುಂದುವರೆದಿದೆ. ಜನ ನೋಟು ರದ್ದು ಕ್ರಮವನ್ನು ಅನುಮೋದಿಸಿದ್ದಾರೆ ಎಂಬುದು ಇದರ ಅರ್ಥ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಪ್ರತಿಕ್ರಿಯಿಸಿದರು.
2016: ನವದೆಹಲಿ: ಕೇಂದ್ರ ಏಷ್ಯಾ ಪ್ರದೇಶದಲ್ಲಿ ಸುಸ್ಥಿರ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಒತ್ತು ನೀಡುವುದರ ಜೊತೆಗೆ ರಕ್ಷಣೆ, ಆರೋಗ್ಯ, ಐಟಿ, ಪ್ರವಾಸೋದ್ಯಮ, ಕೃಷಿ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವರ್ಧನೆಗೆ ಭಾರತ ಮತ್ತು ಕಿರ್ಗಿಸ್ತಾನ ಇಲ್ಲಿ ಒಪ್ಪಿಕೊಂಡವು. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉಭಯ ರಾಷ್ಟ್ರಗಳು ವಿನಿಮಯ ಮಾಡಿಕೊಂಡ ಬಳಿಕ ಕಿರ್ಗಿಸ್ತಾನದ ಅಧ್ಯಕ್ಷ ಅಲ್ಮಾಜ್ಬೆಕ್ ಅತಂಬಾಯೆವ್ ಅವರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಏಷ್ಯಾ ಪ್ರದೇಶದಲ್ಲಿ ಸುಸ್ಥಿರ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಸಾಧಿಸುವ ಸಮಾನ ಯತ್ನದಲ್ಲಿ ಕಿರ್ಗಿಸ್ತಾನ ಗಣರಾಜ್ಯ ನಮ್ಮ ಪ್ರಮುಖ ಪಾಲುದಾರ ಎಂದು ಹೇಳಿದರು. ಅಧ್ಯಕ್ಷ ಅಲ್ಮಾಜ್ಬೆಕ್ ಮತ್ತು ನಾನು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನಿಟ್ಟಿನಲ್ಲಿ ಪರಿಶೀಲಿಸಿದ್ದೇವೆ. ಭಯೋತ್ಪಾದನೆ, ಉಗ್ರವಾದಗಳ ಸವಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಯುವಕರು ಮತ್ತು ಸಮಾಜವನ್ನು ಅದರ ವಿರುದ್ಧ ಸಜ್ಜಾಗಿಸುವ ಬಗ್ಗೆ ನಾವು ರ್ಚಚಿಸಿದೆವು ಎಂದು ಪ್ರಧಾನಿ ನುಡಿದರು. ಉಭಯ ರಾಷ್ಟ್ರಗಳ ಆರ್ಥಿಕತೆಯನ್ನು ಸಂರ್ಪಸುವ ಅಗತ್ಯವನ್ನು ನಾವಿಬ್ಬರೂ ಒಪ್ಪಿದ್ದೇವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕದ ಮೂಲಕ ಜನರಿಗೆ ಹೆಚ್ಚಿನ ಸವಲತ್ತು ಒದಗಿಸಲು ಮತ್ತು ಉಭಯ ರಾಷ್ಟ್ರಗಳ ಜನರ ಮಧ್ಯೆ ಹೆಚ್ಚಿನ ವಿನಿಮಯ ಸಾಧ್ಯವಾಗಿಸುವ ನಿಟ್ಟಿನಲ್ಲಿ ಶ್ರಮಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಮೋದಿ ಹೇಳಿದರು. ತರಬೇತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಯುವಕರಿಗೆ ಹೆಚ್ಚಿನ ತರಬೇತಿ ಕಲ್ಪಿಸುವುದರ ಜೊತೆಗೆ ಆರೋಗ್ಯ, ಪ್ರವಾಸೋದ್ಯಮ, ಐಟಿ, ಕೃಷಿ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ವರ್ಧನೆಗೆ ಪ್ರೋತ್ಸಾಹಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ನುಡಿದರು. ಭಾರತಕ್ಕೆ ಸ್ವಾಗತಿದ್ದಕ್ಕಾಗಿ ಮತ್ತು ಆತ್ಮೀಯ ಆತಿಥ್ಯ ನೀಡಿದ್ದಕ್ಕಾಗಿ ಆಭಾರಿಯಾಗಿದ್ದೇನೆ ಎಂದು ಕಿರ್ಗಿಸ್ತಾನದ ಅಧ್ಯಕಷ ಅಲ್ಮಾಜ್ಬೆಕ್ ಅತಂಬಾಯೆವ್ ಹೇಳಿದರು.
2016: ನವದೆಹಲಿ: ಕಪ್ಪು ಹಣ ಹೊಂದಿರುವವರ ಕುರಿತು ಮೇಲ್ ಮೂಲಕ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದ ನಂತರ 72 ಗಂಟೆಗಳಲ್ಲಿ ಸುಮಾರು 4000 ಸಂದೇಶಗಳು ಆದಾಯ ತೆರಿಗೆ ಇಲಾಖೆಯ ಮೇಲ್ ಐಡಿಗೆ ಬಂದವು. ಡಿ.16ರ ಶುಕ್ರವಾರ ಕೇಂದ್ರ ಸರ್ಕಾರ ಮೇಲ್ ಕಳುಹಿಸುವಂತೆ ಮಾಡಿರುವ ಮನವಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರಸ್ತುತ ಬಂದಿರುವ ಮೇಲ್ಗಳನ್ನು ಕೂಲಂಕುಶವಾಗಿ ತಪಾಸಣೆಗೆ ಒಳಪಡಿಸಲಾಗುವುದು, ಕಪ್ಪುಹಣ ಹೊಂದಿರುವವರ ಕುರಿತು ನೀಡಿರುವ ಮಾಹಿತಿ ನಿಜವಾಗಿದ್ದಲ್ಲಿ ತನಿಖೆ ಪ್ರಾರಂಭಿಸಲಾಗುವುದು. ಕಪ್ಪು ಹಣ ಹೊಂದಿರುವವ ಕುರಿತು ಜನರು ಒದಗಿಸುತ್ತಿರುವ ಮಾಹಿತಿಯಿಂದ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ್ಥವಾಗಿ ಹೋರಾಡಲು ಸಾಧ್ಯವಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಪ್ರತೀ ದಿನ ಬ್ಯಾಂಕುಗಳಲ್ಲಿ ಜಮೆಯಾಗುತ್ತಿರುವ ಹಣ ಮತ್ತು ವಿಥ್ಡ್ರಾ ಆಗುತ್ತಿರುವ ಮೊತ್ತ, ಹಾಗೂ ಎಲ್ಲಾ ವಿಧದ ವ್ಯವಹಾರಗಳ ಕುರಿತು ಹಣಕಾಸು ಸಚಿವಾಲಯಕ್ಕೆ ಮಾಹಿತಿ ರವಾನೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಸೇರಿದಂತೆ ಇತರೆ ತನಿಖಾ ಸಂಸ್ಥೆಗಳಿಗೂ ಸಹ ಮಾಹಿತಿಯನ್ನು ಒದಿಗಸಲಾಗುತ್ತಿದೆ. ಚಿನ್ನಾಭರಣಗಳು, ಐಷಾರಾಮಿ ವಸ್ತುಗಳು ಮತ್ತು ಆಸ್ತಿ ಖರೀದಿ ಸೇರಿದಂತೆ ಅಧಿಕ ಮೊತ್ತದ ಸಂಶಯಾಸ್ಪದ ವ್ಯವಹಾರಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದರು.
2016: ಅಂಕಾರ: ಟರ್ಕಿಯ ಅಂಕಾರದಲ್ಲಿ ರಷ್ಯಾದ ರಾಯಭಾರಿಯನ್ನು ಹತ್ಯೆ ಮಾಡಿದ ಬೆನ್ನಲ್ಲೇ ಅಮೆರಿಕ ರಾಯಭಾರಿ ಕಚೇರಿಯ ಮುಂದೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಅಮೆರಿಕ ತಿಳಿಸಿತು. ಈದಿನ ನಸುಕಿನ 3.50 ಸುಮಾರಿಗೆ ವ್ಯಕ್ತಿಯೋರ್ವ ಅಂಕಾರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಗೇಟ್ ಮುಂಭಾಗದಲ್ಲಿ ಗುಂಡಿನ ದಾಳಿ ನಡೆಸಿದ.  ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಗುಂಡು ಹಾರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಸ್ತಾಂಬುಲ್ ಮತ್ತು ಅಂಕಾರದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ರಾಯಭಾರ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿತು. ರಷ್ಯಾ ರಾಯಭಾರಿಯ ಮೇಲೆ ಹಿಂದಿನ ದಿನ ಗುಂಡಿನ ದಾಳಿ ನಡೆದ ಸ್ಥಳದ ಹಿಂಭಾಗದ ರಸ್ತೆಯಲ್ಲೇ ಅಮೆರಿಕ ರಾಯಭಾರ ಕಚೇರಿ ಇದ್ದು, ರಾಯಭಾರ ಕಚೇರಿಗೆ ಭದ್ರತೆಯನ್ನು ಹೆಚ್ಚಿಸಲಾಯಿತು..
2016: ಅಗರ್ತಲ: ಕೋಲಾಹಲದ ಮಧ್ಯೆ ತೃಣಮೂಲ ಕಾಂಗ್ರೆಸ್(ಟಿಎಂಸಿ) ಶಾಸಕರೊಬ್ಬರು ವಿಧಾನಸಭಾಧ್ಯಕ್ಷರವಿಧ್ಯುಕ್ತ ದಂಡವನ್ನು ಕಿತ್ತುಕೊಂಡು ಓಡಿದ ಘಟನೆ ತ್ರಿಪುರಾ ವಿಧಾನಸಭೆಯಲ್ಲಿ ಘಟಿಸಿತು. ಅರಣ್ಯ ಸಚಿವ ನರೇಶ ಜಮಾತಿಯಾ ಅವರ ಸ್ತ್ರೀಮೋಹ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಘಟನೆ ಘಟಿಸಿತು. ಬಿರುಸಿನ ಚರ್ಚೆ, ಕೋಲಾಹಲದ ಮಧ್ಯೆ ಹಲವಾರು ತೃಣ ಮೂಲ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಧಾವಿಸಿ ಘೊಷಣೆಗಳನ್ನು ಕೂಗತೊಡಗಿದರು. ಮಧ್ಯೆ, ತೃಣಮೂಲ ಕಾಂಗ್ರೆಸ್ ಶಾಸಕ ಸುದೀಪ್ ರಾಯ್ ಬರ್ಮನ್ (50)ಅವರು ಹಠಾತ್ತನೆ ಸಭಾಧ್ಯಕ್ಷ ಪೀಠದ ಮುಂಭಾಗದ ಪೋಡಿಯಂ ಏರಿ, ಸಭಾಧ್ಯಕ್ಷರ ಮುಂದೆ ಇರಿಸಲಾಗಿದ್ದ ವಿಧ್ಯುಕ್ತ ದಂಡವನ್ನು ತೆಗೆದುಕೊಂಡು ಧಡಧಡನೆ ಓಡತೊಡಗಿದರು. ತತ್ ಕ್ಷಣವೇ ಅವರನ್ನು ತಡೆಯಲು ಮಾರ್ಷಲ್ಗಳೂ ಓಡಿದರು. ಆದರೆ ಮಾರ್ಷಲ್ಗಳ ಕೈಗೆ ಸಿಗದಷ್ಟೂ ವೇಗವಾಗಿ ಬರ್ಮನ್ ಓಟ ಕಿತ್ತರು. ಬರ್ಮನ್ ಏತಕ್ಕಾಗಿ ವಿಧ್ಯುಕ್ತ ದಂಡ ಕಿತ್ತುಕೊಂಡು ಓಡುತ್ತಿದ್ದಾರೆ, ಅವರೇನು ಯೋಚಿಸುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ಕೊನೆಗೂ ಅವರನ್ನು ತಡೆದ ಮಾರ್ಷಲ್ಗಳು ದಂಡವನ್ನು ಅವರ ಕೈಯಿಂದ ಕಿತ್ತುಕೊಂಡು ಸ್ವಸ್ಥಾನಕ್ಕೆ ಮರಳಿಸಿದರು. ‘ಬರ್ಮನ್ ವರ್ತನೆ ಸಂಸದೀಯ ಸಂಪ್ರದಾಯ, ನಿಯಮಾವಳಿಗಳಿಗೆ ವಿರುದ್ಧವಾದುದು , ಅವರು ಹಾಗೆ ಮಾಡಬಾರದಿತ್ತು ಎಂದು ಸಭಾಧ್ಯಕ್ಷ ರಾಮೇಂದ್ರ ಚಂದ್ರ ದೇಬನಾಥ್ ಅವರು ಬಳಿಕ ತಮ್ಮ ಕೊಠಡಿಯಲ್ಲಿ ಪತ್ರಕರ್ತರ ಬಳಿ ಮಾತನಾಡುತ್ತಾ ಹೇಳಿದರು. ಬರ್ಮನ್ ಅವರು ಮುನ್ಸೂಚನೆ ಇಲ್ಲದೆಯೇ ವಿಷಯ ಪ್ರಸ್ತಾಪಿಸಿ, ಬಳಿಕ ಇತರ ಸದಸ್ಯರೊಂದಿಗೆ ಪ್ರತಿಭಟನೆ ಆರಂಭಿಸಿದರು ಎಂದೂ ಅವರು ನುಡಿದರು.

2016: ಮುಂಬೈ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಈದಿನ ಬೆಳಗ್ಗೆ 7.30ಕ್ಕೆ ಬಾಲಿವುಡ್ ನಟಿ ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯದಿಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದವು. ಕರೀನಾ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿರುವ ಸಂಬಂಧ ಅವರ ತಂದೆ ರಣಧೀರ್ ಕಪೂರ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಕರೀನಾ ಕಪೂರ್ ಹೆರಿಗೆಯ ಸಂದರ್ಭದಲ್ಲಿ ಅವರ ಪತಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಸೇರಿದಂತೆ ಕಪೂರ್ ಪರಿವಾರದ ಎಲ್ಲಾ ಸದಸ್ಯರು ಮತ್ತು ಖಾನ್ ಪರಿವಾರದ ಸದಸ್ಯರು ಆಸ್ಪತ್ರೆಯಲ್ಲಿ ಉಪಸ್ಥಿತರಿದ್ದು, ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿದವು.  ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿ ಹೆಣ್ಣು ಮಗುವಿನ ನಿರೀಕ್ಷೆಯಲ್ಲಿದ್ದರು ಮತ್ತು ಮಗುವಿಗೆ ಸೈಫೀನಾ ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ ಎಂದು ವರದಿಯಾಗಿತ್ತು.
2008: ಗಣಿಗಾರಿಕೆ ಅಕ್ರಮಗಳ ಕುರಿತು ಲೋಕಾಯುಕ್ತರು ನೀಡಿರುವ ವರದಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಜನಪತ್ರಿನಿಧಿಗಳ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬಹುದು ಎಂಬುದನ್ನು ಸೂಚಿಸಲು ಮೂರು ಮಂದಿಯನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯಲ್ಲಿ ಪ್ರಕಟಿಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಒಂದು ತಿಂಗಳ ಒಳಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ಅವರು ನುಡಿದರು.

2008: ತಾವು ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡ ಆಕಸ್ಮಿಕದಲ್ಲಿ ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಅರ್ಜುನ ಮುಂಡಾ ಹಾಗೂ ಬಿಜೆಪಿಯ ಇನ್ನಿಬ್ಬರು ಹಿರಿಯ ಮುಖಂಡರು ಜೀವಾಪಾಯದಿಂದ ಪಾರಾದರು. ಡಿ.29ರ ವಿಧಾನಸಭಾ ಉಪಚುನಾವಣೆ ಸಂಬಂಧ ತಮರ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿ ವಾಪಸ್ಸಾಗುತ್ತಿದ್ದಾಗ ದುರಂತ ಸಂಭವಿಸಿತು.

2008: ನಂದಿತಾ ದಾಸ್ ನಿರ್ದೇಶನದ 'ಫಿರಾಕ್' ಮತ್ತು ದೀಪಾ ಮೆಹ್ತಾ ಅವರ 'ಹೆವನ್ ಆನ್ ಅರ್ಥ್' ಚಿತ್ರಗಳು ದುಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದುಕೊಂಡವು. ಏಷ್ಯಾ-ಆಫ್ರಿಕಾ ವಿಭಾಗದಲ್ಲಿಯ ಸ್ಪರ್ಧೆಗೆ ಈ ಪ್ರಶಸ್ತಿ ಲಭಿಸಿದ್ದು, ಫಿರಾಕ್ ಚಿತ್ರದ ಸಂಕಲನಕಾರ ಶ್ರೀಕರ್ ಪ್ರಸಾದ್ ಅವರಿಗೆ ಉತ್ತಮ ಸಂಕಲನಕಾರ ಪ್ರಶಸ್ತಿ ದೊರಕಿತು.

2008: ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ (ಜೆಎನ್‌ಎಎಸ್‌ಆರ್) ಉಪ ನ್ಯಾಸಕಿ ಡಾ. ರಮಾ ಗೋವಿಂದರಾಜನ್ ಸೇರಿದಂತೆ ಬೆಂಗ ಳೂರಿನ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ 7 ವಿಜ್ಞಾನಿಗಳಿಗೆ 2007ರ ಶಾಂತಿ ಸ್ವರೂಪ ಭಟ್ನಾಗರ್ ಪ್ರಶಸ್ತಿ ಲಭಿಸಿತು. ಡಾ. ರಮಾ ಗೋವಿಂದರಾಜನ್ (ಎಂಜಿನಿಯರಿಂಗ್ ವಿಜ್ಞಾನ), ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಡಾ. ನಾರಾಯಣಸ್ವಾಮಿ ಶ್ರೀನಿವಾಸನ್, ರಾಷ್ಟ್ರೀಯ ಜೀವಶಾಸ್ತ್ರ ವಿಜ್ಞಾನಗಳ ಸಂಸ್ಥೆಯ (ಎನ್‌ಸಿಬಿಎಸ್) ಡಾ. ಉಪಿಂದರ್ ಸಿಂಗ್ ಭಲ್ಲಾ ಜೀವಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ (ಐಎಸ್‌ಐ) ಉಪನ್ಯಾಸಕ ಡಾ. ಬಿ.ವಿ. ರಾಜಾರಾಮ ಭಟ್ (ಗಣಿತ ವಿಜ್ಞಾನ), ಐಐಎಸ್‌ಸಿಯ ಉಪನ್ಯಾಸಕ ಡಾ. ಪುಂಡಿ ನರಸಿಂಹನ್ ರಂಗರಾಜನ್ (ವೈದ್ಯಕೀಯ ವಿಜ್ಞಾನ), ಜೆಎನ್‌ಸಿಎಎಸ್‌ಆರ್ ಸಂಸ್ಥೆ ಉಪನ್ಯಾಸಕ ಡಾ. ಶ್ರೀಕಾಂತ್ ಶಾಸ್ತ್ರಿ (ಭೌತಿಕ ವಿಜ್ಞಾನ) ಮತ್ತು ಐಐಎಸ್‌ಸಿ ಸಂಸ್ಥೆಯ ಡಾ. ಪಿ.ಎನ್. ವಿನಯ್ ಚಂದ್ರನ್ (ಭೂಮಿ, ಪರಿಸರ, ಸಮುದ್ರ ಮತ್ತು ಗ್ರಹ ವಿಜ್ಞಾನ) ಪ್ರಶಸ್ತಿಗೆ ಪಾತ್ರರಾದರು.

2008: ಹಿಜಡಾಗಳ ಕುತಂತ್ರಕ್ಕೆ ಬಲಿಯಾಗಿ ಹೆಣ್ಣಾಗಿದ್ದ ಬೆಂಗಳೂರಿನ ಟಿ.ದಾಸರಹಳ್ಳಿಯ ಚಂದ್ರಶೇಖರ್ (17) ಎಂಬಾತನಿಗೆ ಶಸ್ತ್ರ ಚಿಕಿತ್ಸೆ ನಡೆಸಿದ ಅಪೊಲೋ ಆಸ್ಪತ್ರೆ ವೈದ್ಯರು ಆತನನ್ನು ಪುನಃ ಬಾಲಕನನ್ನಾಗಿ ಪರಿವರ್ತಿಸಿದರು. ಎರಡು ಹಂತದಲ್ಲಿ ಒಟ್ಟು 17 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರು ಆತನನ್ನು ಮೊದಲಿನಂತೆ ಮಾಡುವಲ್ಲಿ ಯಶಸ್ವಿಯಾದರು. ಚಂದ್ರಶೇಖರ್ ಮೂತ್ರ ವಿಸರ್ಜನೆ ಮಾಡಬಲ್ಲ. ಕೆಲ ದಿನಗಳ ನಂತರ ಲೈಂಗಿಕ ಕ್ರಿಯೆ ಸಹ ನಡೆಸಬಲ್ಲ ಎಂದು ವೈದ್ಯರು ತಿಳಿಸಿದರು. 'ಬಾಲಕನಿಗೆ ಪುನರ್‌ನಿರ್ಮಾಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ, ತೋಳಿನ ಮಾಂಸಖಂಡಗಳನ್ನು ಬಳಸಿ ಆತನ ಜನನೇಂದ್ರಿಯವನ್ನು ನಿರ್ಮಿಸಲಾಗಿದೆ. ಸರ್ಜಿಕಲ್ ಮೈಕ್ರೋಸ್ಕೋಪ್ ಬಳಸಿ ನರಗಳನ್ನು ಜೋಡಿಸಲಾಗಿದೆ. ಆತನ ತೊಡೆಯ ಮೇಲಿದ್ದ ನಾಡಿಯನ್ನು ಸೀಳಿ ಕಾಲಿನ ನರಗಳಿಗೆ ಜೋಡಿಸಲಾಗಿದೆ. ಜನನೇಂದ್ರಿಯಕ್ಕೆ ರಕ್ತ ಪೂರೈಕೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ವೈದ್ಯರು ಹೇಳಿದರು. ಒಟ್ಟು 8 ಮಂದಿ ವೈದ್ಯರು ಮತ್ತು ಐದು ಮಂದಿ ಆಸ್ಪತ್ರೆ ಸಿಬ್ಬಂದಿಯ ತಂಡ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿತು.. ಶಸ್ತ್ರಚಿಕಿತ್ಸೆಗೆ ಸುಮಾರು ಎಂಟು ಲಕ್ಷ ರೂಪಾಯಿ ವೆಚ್ಚವಾಗಿದ್ದು ಇದನ್ನು ಆಸ್ಪತ್ರೆಯೇ ಭರಿಸಿತು.

2007: ಹಿಂದೂಗಳ ಭಾವನೆಗಳಿಗೆ ಗೌರವ ನೀಡುವ ಸಲುವಾಗಿ ಬಕ್ರೀದ್ ಹಬ್ಬದಲ್ಲಿ ಗೋವುಗಳ ಹತ್ಯೆ ಮಾಡಬಾರದು ಎಂದು ಧಾರ್ಮಿಕ ತರಬೇತಿ ಸಂಸ್ಥೆ `ದಾರುಲ್ ಉಲೂಮ್ ದೇವಬಂದ್' ಮುಸ್ಲಿಮ್ ಬಾಂಧವರನ್ನು ಕೋರಿತು. ಈ ಸಂಬಂಧ ಕಿರುಹೊತ್ತಿಗೆಯೊಂದನ್ನು ಹೊರತಂದ ಧಾರ್ಮಿಕ ತರಬೇತಿ ಸಂಸ್ಥೆ, ಅದರಲ್ಲಿ ಧಾರ್ಮಿಕ ಬಲಿ `ಕುರ್ಬಾನಿ' ಕುರಿತು ಮಾಹಿತಿಯನ್ನು ಪ್ರಕಟಿಸಿತು.

2007: ಯಾವುದೇ ಕಾರಣಕ್ಕೂ ಕೋಲ್ಕತ್ತಕ್ಕೆ ತೆರಳದೇ ದೆಹಲಿಯ `ಅಜ್ಞಾತ ಸ್ಥಳ'ದಲ್ಲೇ ಮುಂದುವರೆಯಬೇಕು ಎಂದು ಕೇಂದ್ರ ಸರ್ಕಾರ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲಿಮಾ ನಸ್ರೀನ್ ಅವರಿಗೆ ತಾಕೀತು ಮಾಡಿತು.
ಇದಕ್ಕೆ ಪ್ರತಿಯಾಗಿ ಕೋಲ್ಕತದಲ್ಲಿ ವಾಸಿಸಲು ಅವಕಾಶ ನೀಡದಿದ್ದರೆ ಭಾರತವನ್ನು ತೊರೆಯುವುದಾಗಿ ತಸ್ಲಿಮಾ ಸ್ಪಷ್ಟಪಡಿಸಿದರು. ಕೋಲ್ಕತದಲ್ಲಿ ಕಳೆದ ನವೆಂಬರಿನಲ್ಲಿ ನಡೆದ ಘರ್ಷಣೆಯ ಬಳಿಕ ತಸ್ಲಿಮಾ ದೆಹಲಿಯ ಗುಪ್ತ ಸ್ಥಳಕ್ಕೆ ತೆರಳಿದ್ದರು.

2007: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ವೊಕಾರ್ಡ್ ಆಸ್ಪತ್ರೆಯಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ವಿವೇಕ್ ಜವಳಿ ನೇತೃತ್ವದ ಎಂಟು ಮಂದಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ನಡೆಸಿತು.

2007: ಜೈಪುರದ ಕೊರಾಪುಟ್ ನ 60 ವರ್ಷದ ಟೈಲರ್ ಎ.ವಿ.ಗಿರಿ ಬೃಹತ್ ಗಾತ್ರದ ಒಳಉಡುಪು (ಚಡ್ಡಿ) ಹೊಲಿಯುವ ಮೂಲಕ `ಗಿನ್ನೆಸ್ ಬುಕ್' ನಲ್ಲಿ ತಮ್ಮ ಹೆಸರು ದಾಖಲಿಸಲು ಮುಂದಾದರು. ಐದು ದಿನಗಳ ಕಾಲ ನಿರಂತರ ಶ್ರಮಿಸಿ 38 ಅಡಿ 10 ಅಂಗುಲ ಉದ್ದ ಮತ್ತು 50.3 ಅಡಿ ಸೊಂಟದ ಸುತ್ತಳತೆಯ ಈ ಉಡುಪು ಸಿದ್ಧಪಡಿಸಿದರು. ಈ ಭಾಗದಲ್ಲಿ ಖ್ಯಾತ ಟೈಲರ್ ಎಂದು ಹೆಸರು ಮಾಡಿದ ಗಿರಿ ಅವರು ಈ ಒಳಉಡುಪು ಹೊಲಿಯಲು 450 ಮೀಟರ್ ಬಟ್ಟೆ ಬಳಸಿದರು. ಸಿದ್ದ ಪಡಿಸಿದ ಈ ಒಳಉಡುಪನ್ನು ಮುಂದಿನ ಪರೀಕ್ಷೆಗಾಗಿ ಲಂಡನ್ನಿನ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಗೆ ಕೊರಿಯರ್ ಮೂಲಕ ಕಳುಹಿಸಲಾಗುವುದು ಎಂದು ಗಿರಿ ಹೇಳಿದರು. ಗಿರಿ ಅವರು ಈ ಹಿಂದೆ ಥರ್ಮಾಕೋಲಿನಲ್ಲಿ `ಸರಪಳಿ' ರಚಿಸಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಹೆಸರು ದಾಖಲಿಸಿ, ಸುದ್ದಿಯಾಗಿದ್ದರು.

2007: ಮೂವರು ವಿದ್ಯಾರ್ಥಿಗಳನ್ನು ಬಲಿ ತೆಗೆದುಕೊಂಡ ಧರ್ಮಪುರಿ ಬಸ್ಸಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಒಳಗಾದ ಮೂವರು ಎಐಎಡಿಎಂಕೆಯ ಅಂದಿನ ಧರ್ಮಪುರಿ ಘಟಕದ ಕಾರ್ಯದರ್ಶಿನೆಡುಂಚೆಳಿಯನ್, ಎಂಜಿಆರ್ ಫೋರಂನ ಮಧಿ ಅಲಿಯಾಸ್ ರವಿಚಂದ್ರನ್ ಮತ್ತು ಮಾಜಿ ಪಂಚಾಯತ್ ಅಧ್ಯಕ್ಷ ಪಿ. ಮುನಿಯಪ್ಪನ್ ಅವರನ್ನು 2008ರ ಜನವರಿ 10ರಂದು ಗಲ್ಲಿಗೆ ಏರಿಸಬೇಕು ಎಂದು ಸೇಲಂನ ಪ್ರಥಮ ದರ್ಜೆ ನ್ಯಾಯಾಲಯ ಆದೇಶ ನೀಡಿತು. ಮರಣದಂಡನೆಯ ವಿರುದ್ಧ ಅಪರಾಧಿಗಳು ಸಲ್ಲಿಸಿದ ಮೇಲ್ಮನವಿಯನ್ನು ಹೈಕೋರ್ಟ್ ತಳ್ಳಿಹಾಕಿದ್ದರಿಂದ ನ್ಯಾಯಾಲಯ ಈ ಆದೇಶ ಹೊರಡಿಸಿತು. ಜನವರಿ 10ರಂದು ಬೆಳಿಗ್ಗೆ 6 ಗಂಟೆಗೆ ಮರಣದಂಡನೆ ಜಾರಿಗೊಳಿಸಬೇಕೆಂದು ನ್ಯಾಯಾಧೀಶ ಮಾಣಿಕಂ ಜೈಲು ಅಧಿಕಾರಿಗಳಿಗೆ ಸೂಚಿಸಿದರು. 2000ದ ಫೆಬ್ರುವರಿ ಎರಡರಂದು ಧರ್ಮಪುರಿಯಲ್ಲಿ ವಿದ್ಯಾರ್ಥಿಗಳಿದ್ದ ಬಸ್ಸಿಗೆ ಎಐಎಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿದ್ದರಿಂದ ಮೂವರು ವಿದ್ಯಾರ್ಥಿನಿಯರು ಸುಟ್ಟು ಕರಕಲಾಗಿದ್ದರು. ಇದನ್ನು ಅತ್ಯಂತ ಕ್ರೂರ ಹತ್ಯೆ ಎಂದು ಬಣ್ಣಿಸಿದ್ದ ಸೇಲಂ ಕೋರ್ಟಿನ ನ್ಯಾಯಾಧೀಶ ಮಾಣಿಕಂ ಅವರು ಕಳೆದ ಫೆಬ್ರುವರಿ 16ರಂದು ಮೂವರಿಗೆ ಮರಣ ದಂಡನೆ ವಿಧಿಸಿದ್ದರು. ಇತರ 25 ಮಂದಿಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅಪರಾಧಿಗಳು ಇದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿ ಯ ವಿಚಾರಣೆ ನಡೆಸಿದ ಹೈಕೋರ್ಟ್ `ಇಂಥ ಹೀನಾಯ ಕೃತ್ಯಕ್ಕೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ನೀಡುವುದು ಸಾಧ್ಯವಿಲ್ಲ' ಎಂದು ಕಟುವಾಗಿ ಹೇಳಿತ್ತು.

2007: ವಿವಾದಿತ ಭದ್ರತಾ ಕಾಯ್ದೆಯಡಿ ಮಲೇಷ್ಯಾದಲ್ಲಿ ಭಾರತೀಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಧ್ವನಿ ಎತ್ತಿದ್ದಕ್ಕಾಗಿ ಬಂಧನಕ್ಕೆ ಒಳಗಾದ ಹಿಂದೂ ಹಕ್ಕುಗಳ ಕ್ರಿಯಾ ವೇದಿಕೆಯ (ಹಿಂಡ್ರಾಫ್) ಐವರು ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಲು ಆಗ್ರಹಿಸಿ ಭಾರತೀಯ ಮೂಲದವರು ಕ್ವಾಲಾಲಂಪುರದಲ್ಲಿ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದರು.

2007: ಮದ್ಯದ ದೊರೆ ವಿಜಯ್ ಮಲ್ಯ ನೇತೃತ್ವದ ಕಿಂಗ್ಫಿಶರ್ ಮತ್ತು ಅಗ್ಗದ ದರದ ವಿಮಾನಯಾನ ಸಂಸ್ಥೆ ಏರ್ ಡೆಕ್ಕನ್ ವಿಲೀನಗೊಳ್ಳಲು ನಿರ್ಧರಿಸಿದವು. ಬೆಂಗಳೂರಿನಲ್ಲಿ ನಡೆದ ಎರಡೂ ಕಂಪೆನಿಗಳ ಆಡಳಿತ ಮಂಡಳಿಗಳ ಜಂಟಿ ಸಭೆಯಲ್ಲಿ ವಿಲೀನ ಸಂಬಂಧ ಸರ್ವ ಸಮ್ಮತ ನಿರ್ಧಾರಕ್ಕೆ ಬರಲಾಯಿತು.

2006: ಐದು ವರ್ಷಗಳ ಹಿಂದೆ ಭಯೋತ್ಪಾದಕರು ಆತ್ಮಹತ್ಯಾ ದಾಳಿ ನಡೆಸಿ ಅಪಹೃತ ವಿಮಾನಗಳ ಮೂಲಕ ಧ್ವಂಸಗೊಳಿಸಿದ್ದ ನ್ಯೂಯಾಕರ್ಿನ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡ ಸ್ಥಳದಲ್ಲಿ ಸ್ವಾತಂತ್ರ್ಯ ಗೋಪುರ (ಫ್ರೀಡಂ ಟವರ್) ಸ್ಮಾರಕ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು. ಇಲ್ಲಿ ಉಕ್ಕಿನ ಮೂರು ಗೋಪುರಗಳನ್ನು ನಿರ್ಮಿಸಿ ಅದರಲ್ಲಿ ಒಂದಕ್ಕೆ `ಫ್ರೀಡಂ ಟವರ್' ಎಂಬುದಾಗಿ ನಾಮಕರಣ ಮಾಡಲಾಗುವುದು. ಉಳಿದೆರಡು ಗೋಪುರಗಳಲ್ಲಿ ದುರಂತದ ಬಗ್ಗೆ ಸಾರ್ವಜನಿಕರು ನೀಡಿದ ಶೋಕ ಸಂದೇಶಗಳು ಇರುತ್ತವೆ. 2001ರ ಸೆಪ್ಟೆಂಬರ್ 11ರ ದಾಳಿಯಲ್ಲಿ 2,749 ಜನ ಮೃತರಾಗಿದ್ದರು.

2006: ಡಿಸ್ಕವರಿ ನೌಕೆಯ ಗಗನಯಾತ್ರಿಗಳು 13 ದಿನಗಳ ಬಾಹ್ಯಾಕಾಶ ವಾಸ್ತವ್ಯ ಪೂರೈಸಿ ಭೂಮಿಯೆಡೆಗೆ ಮರುಪಯಣ ಆರಂಭಿಸಿದರು. ಈ ಸಲ ಗಗನಯಾತ್ರೆ ಕೈಗೊಂಡ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರು ಮುಂದಿನ ಆರು ತಿಂಗಳ ಕಾಲ ಬಾಹ್ಯಾಕಾಶದ ಅಟ್ಟಣಿಗೆಯಲ್ಲಿ ಉಳಿಯಲಿದ್ದು, ಕಳೆದ 6 ತಿಂಗಳಿಂದ ಬಾಹ್ಯಾಕಾಶದಲ್ಲಿದ್ದ ಜರ್ಮನಿಯ ಥಾಮಸ್ ರೈಟರ್ ಭೂಮಿಯತ್ತ ಹೊರಟರು. ಸುನೀತಾ ಅವರು ತಮ್ಮ ತಲೆಗೂದಲನ್ನು ಕೂದಲು ಕಳೆದುಕೊಂಡಿರುವ ರೋಪೀಡಿತ ವ್ಯಕ್ತಿಗೆ `ವಿಗ್' ಮಾಡಿಸಲು ಬಾಹ್ಯಾಕಾಶದಿಂದ ಭೂಮಿಗೆ ಕೊಡುಗೆಯಾಗಿ ಕಳುಹಿಸಿದರು. ಗಗನಯಾತ್ರಿ ಜಾನ್ ಹಿಗ್ಗಿಮ್ ಬಾತಮ್ ಮತ್ತು ಮತ್ತೊಬ್ಬ ಮಹಿಳಾ ಗಗನಯಾತ್ರಿ ಸುನೀತಾಗೆ ಬಾಹ್ಯಾಕಾಶದಲ್ಲಿ ಕೇಶಮುಂಡನ ಮಾಡಿದ್ದರು.

2006: ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನು ಶರ್ಮಾಗೆ ದೆಹಲಿ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ನ್ಯಾಯಮೂರ್ತಿ ಆರ್. ಎಸ್. ಸೋಧಿ ಮತ್ತು ನ್ಯಾಯಮೂರ್ತಿ ಪಿ.ಕೆ. ಭಾಸಿನ್ ಶಿಕ್ಷೆಯ ಸ್ವರೂಪವನ್ನು ಕಿಕ್ಕಿರಿದ ನ್ಯಾಯಾಲಯದಲ್ಲಿ ಪ್ರಕಟಿಸಿದರು.

2006: ಕರ್ನಾಟಕದಲ್ಲಿ ಪೆಪ್ಸಿ ಕೋಲಾ ಸಹಿತ ರಾಸಾಯನಿಕ ಅಂಶಗಳಿರುವ ತಂಪು ಪಾನೀಯಗಳನ್ನು ಶಾಲಾ- ಕಾಲೇಜು, ವಸತಿಗೃಹ ಮತ್ತು ಆಸ್ಪತ್ರೆ ಆವರಣಗಳಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಡಿಸೆಂಬರ್ 18ರಿಂದಲೇ ಜಾರಿಗೆ ಬರುವಂತೆ ಆದೇಶವನ್ನು ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಆರ್. ಅಶೋಕ್ ಬೆಂಗಳೂರಿನಲ್ಲಿ ಪ್ರಕಟಿಸಿದರು.

2006: ಹಿರಿಯ ಪತ್ರಕರ್ತ ಸುರೇಂದ್ರ ದಾನಿ ಅವರಿಗೆ ಹುಬ್ಬಳ್ಳಿಯಲ್ಲಿ ಗೃಹ ಸಚಿವ ಎಂ.ಪಿ. ಪ್ರಕಾಶ್ ಅವರು ಟಿಯೆಸ್ಸಾರ್ ಪ್ರಶಸ್ತಿ ಪ್ರದಾನ ಮಾಡಿದರು.

2006: ಗುಜರಾತಿನ ನದಿಯಾಡ್ ಪಟ್ಟಣದ ಅನಾಥ ಬಾಲಕಿ ಆಶಾಳನ್ನು ಅಮೆರಿಕ ಉಟಾ ರಾಜ್ಯದ ಗವರ್ನರ್ ಹಂಟ್ಸ್ ಮ್ಯಾನ್ ಮತ್ತು ಪತ್ನಿ ಮೇರಿ ಕಾಯ್ನೆ ಅವರು ಅಹಮದಾಬಾದಿನಲ್ಲಿ ದತ್ತು ಪಡೆದುಕೊಂಡರು.

2005: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರಿಗೆ ಪ್ರತಿಷ್ಠಿತ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಪರಿಸರ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅನ್ನಾನ್ ಅವರು ನೀಡಿರುವ ಕೊಡುಗೆ ಗಮನಿಸಿ ನೀಡಲಾಗಿರುವ ಈ `ಜಾಗತಿಕ ನಾಯಕತ್ವಕ್ಕಾಗಿ ಜಾಯದ್ ಅಂತಾರಾಷ್ಟ್ರೀಯ ಪ್ರಶಸ್ತಿ'ಯು ಒಂದು ಲಕ್ಷ ಡಾಲರ್ ನಗದು ಮೊತ್ತವನ್ನು ಒಳಗೊಂಡಿದೆ.

2005: ಆಪರೇಷನ್ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದ ಲೋಕಸಭೆಯ ಐವರು ಸದಸ್ಯರ ವಿರುದ್ಧ ತನಿಖೆಗೆ ಆದೇಶಿಸಿದ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಇದಕ್ಕಾಗಿ ಪವನಕುಮಾರ್ ಬನ್ಸಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು. ತಪ್ಪಿತಸ್ಥರಲ್ಲ ಎಂದು ಸಾಬೀತಾಗದ ಹೊರತು ಸದನಕ್ಕೆ ಬರಬೇಡಿ ಎಂದೂ ಕಳಂಕಿತ ಸದಸ್ಯರಿಗೆ ಸಭಾಧ್ಯಕ್ಷರು ತಾಕೀತು ಮಾಡಿದರು. ರಾಜ್ಯಸಭೆಯಲ್ಲಿ ಇಬ್ಬರು ಕಳಂಕಿತ ಸದಸ್ಯರ ನಡವಳಿಕೆಯನ್ನು ಸಭಾಪತಿ ಭೈರೋನ್ಸಿಂಗ್ ಶೆಖಾವತ್ ನೀತಿ ಸಂಹಿತೆ ಸಮಿತಿಗೆ ಒಪ್ಪಿಸಿದರು.

2000: ಅಮಿತಾಭ್ ಬಚ್ಚನ್ ಅವರು ಲಂಡನ್ನಿನ ಮ್ಯಾಡಮ್ ಟುಸ್ಸಾಡ್ಸ್ ವ್ಯಾಕ್ಸ್ ಮ್ಯೂಸಿಯಮ್ಮಿನಲ್ಲಿ ತಮ್ಮದೇ ಪ್ರತಿಮೆಯನ್ನು ಅನಾವರಣಗೊಳಿಸಿದರು. ಈ ರೀತಿ ಗೌರವಿತರಾದ ಭಾರತದ ಐದನೆಯ ವ್ಯಕ್ತಿ ಹಾಗೂ ಇಂತಹ ಗೌರವಕ್ಕೆ ಪಾತ್ರರಾದ ಭಾರತೀಯ ಚಿತ್ರರಂಗದ ಮೊದಲಿಗರು ಇವರು. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಪಿವಿ ನರಸಿಂಹರಾವ್ ಅವರ ಪ್ರತಿಮೆಗಳು ಅಲ್ಲಿ ಇವೆ.

1998: ಖ್ಯಾತ ಜ್ಯೋತಿಷಿ ಬಿ.ವಿ. ರಾಮನ್ ಬೆಂಗಳೂರಿನಲ್ಲಿ ನಿಧನರಾದರು.

1996: ಖಗೋಳ ವಿಜ್ಞಾನಿ, ಕಾದಂಬರಿಕಾರ ಕಾರ್ಲ್ ಸಾಗನ್ ಅವರು ತಮ್ಮ 62ನೇ ವಯಸ್ಸಿನಲ್ಲಿ ಸಿಯಾಟೆಲ್ನಲ್ಲಿ ಮೃತರಾದರು.

1989: ಅಮೆರಿಕಾವು `ಆಪರೇಷನ್ ಜಸ್ಟ್ ಕಾಸ್' ಆರಂಭಿಸಿತು. ಈ ಕಾರ್ಯಾಚರಣೆಯನ್ವಯ ಜನರಲ್ ಮ್ಯಾನ್ಯುಯೆಲ್ ನೊರಿಯೇಗಾ ಸರ್ಕಾರವನ್ನು ಉರುಳಿಸುವ ಸಲುವಾಗಿ ಪಡೆಗಳನ್ನು ಪನಾಮಾಕ್ಕೆ ಕಳುಹಿಸಿತು.

1987: ಫಿಲಿಪ್ಪೀನ್ಸ್ ದ್ವೀಪದ ಸಮೀಪ ಪ್ರಯಾಣಿಕರ ಹಡಗೊಂದು `ಫೆರಿ' ತೈಲ ತುಂಬಿಸಿಕೊಂಡು ಬರುತ್ತಿದ್ದ ಇನ್ನೊಂದು ಹಡಗಿಗೆ ಡಿಕ್ಕಿ ಹೊಡೆದು ಸಂಭಸಿದ ಭೀಕರ ದುರಂತದಲ್ಲಿ 3000ಕ್ಕೂ ಹೆಚ್ಚು ಮಂದಿ ಮೃತರಾದರು. 657ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಯಿತು. ಹೆಚ್ಚಿನ ಮಂದಿ ಕಣ್ಮರೆಯಾದರು. ಸಮುದ್ರದಲ್ಲಿ ಎದ್ದ ಹಠಾತ್ ಚಂಡಮಾರುತ ಹಾಗೂ ಸಾಮರ್ಥ್ಯಕ್ಕಿಂತ 614 ಮಂದಿ ಹೆಚ್ಚು ಪ್ರಯಾಣಿಕರು ಹಡಗಿನಲ್ಲಿ ಇದ್ದುದು ಈ ಭೀಕರ ಅವಘಡಕ್ಕೆ ಕಾರಣ ಎಂದು ಮನಿಲಾ ನೌಕಾಪಡೆ ವರದಿ ತಿಳಿಸಿತು.

1959: ಕಾನ್ಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ಜಸುಭಾಯಿ ಪಟೇಲ್ ಅವರು 69 ರನ್ನುಗಳಿಗೆ 9 ವಿಕೆಟುಗಳನ್ನು ಉರುಳಿಸಿ ದಾಖಲೆ ಸೃಷ್ಟಿಸಿದರು. 1999ರವರೆಗೂ ಇದು ಭಾರತೀಯನೊಬ್ಬರ ಅತ್ಯುತ್ತಮ ಬೌಲಿಂಗ್ ದಾಖಲೆಯಾಗಿ ಉಳಿಯಿತು. 1999ರಲ್ಲಿ ನವದೆಹಲಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ಈ ದಾಖಲೆಯನ್ನು ಮುರಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment