Saturday, December 22, 2018

ಇಂದಿನ ಇತಿಹಾಸ History Today ಡಿಸೆಂಬರ್ 22

ಇಂದಿನ ಇತಿಹಾಸ History Today ಡಿಸೆಂಬರ್  22
2018: ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಬಯಸಿದ ವ್ಯಕ್ತಿಯೊಬ್ಬ, ಮೊಬೈಲ್ ಗೋಪುರವನ್ನು ಏರಿ ತನ್ನನ್ನು ಪಾಕಿಸ್ತಾನದ ಪ್ರಧಾನಿಯನ್ನಾಗಿ ಮಾಡುವಂತೆ ಪಟ್ಟು ಹಿಡಿದ ಘಟನೆ ಇಸ್ಲಾಮಾಬಾದಿನಲ್ಲಿ ಘಟಿಸಿತು. ಮುಹಮ್ಮದ್ ಅಬ್ಬಾಸ್ ಎಂಬುದಾಗಿ ಗುರುತಿಸಲಾದ ವ್ಯಕ್ತಿ ಪಾಕ್ ಧ್ವಜ ಹಿಡಿದುಕೊಂಡು ಇಸ್ಲಾಮಾಬಾದಿನ ಬ್ಲೂ ಏರಿಯಾದಲ್ಲಿ ಮೊಬೈಲ್ ಗೋಪುರ ಏರಿದ. ತತ್ ಕ್ಷಣ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರುಪೊಲೀಸರು ಆತನನ್ನು ಕೆಳಗಿಳಿಸಲು ಯತ್ನಿಸಿದಾಗ ಆತ ತನ್ನನ್ನು ಪಾಕಿಸ್ತಾನ ಪ್ರಧಾನಿಯನ್ನಾಗಿ ಮಾಡುವ ಭರವಸೆ ಕೊಟ್ಟರೆ ಅಥವಾ ಅಧಿಕಾರಿಗಳು ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತನಾಡಲು ಅವಕಾಶ ಕಲ್ಪಿಸಿದರೆ ಮಾತ್ರ ಗೋಪುರದಿಂದ ಕೆಳಕ್ಕೆ ಇಳಿಯುವೆ ಎಂದು ಪಟ್ಟು ಹಿಡಿದ.  ರಾಷ್ಟ್ರವನ್ನು ಸಾಲ ಮತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವ ಸಲುವಾಗಿ ತನಗೆ ಪ್ರಧಾನಿ ಹುದ್ದೆ ಬೇಕು ಎಂದುಆತ ಪಟ್ಟು ಹಿಡಿದ ಎಂದು ಪೊಲೀಸರು ತಿಳಿಸಿದರು. ವ್ಯಕ್ತಿಯನ್ನು ಕೆಳಕ್ಕೆ ಇಳಿಸುವ ಯಾವ ಯತ್ನಗಳೂ ಫಲ ಕೊಡದೇ ಹೋದಾಗ ಪೊಲೀಸರು ಮಿಮಿಕ್ರಿ ಕಲಾವಿದ ಶಫಾತ್ ಅಲಿ ಅವರ ಬಳಿ ಪ್ರಧಾನಿ ಖಾನ್ ಸ್ವರದಲ್ಲಿ ಆತನ ಜೊತೆ ಮಾತನಾಡುವಂತೆ ಕೋರಿದರು. ಮಿಮಿಕ್ರಿ ಕಲಾವಿದನ ಜೊತೆ ಗೋಪುರದ ಮೇಲಿನಿಂದಲೇ ಆತ ಐದು ನಿಮಿಷ ಮಾತನಾಡಿದ. ತಾನು ಪ್ರಧಾನಿ ಜೊತೆಗೇ ಮಾತನಾಡಿದ್ದೇನೆ ಎಂದು ಭಾವಿಸಿ ಬಳಿಕ ಕೆಳಕ್ಕೆ ಇಳಿದು ಬಂದ. ಕೆಳಕ್ಕೆ ಬಂದೊಡನೆಯೇ ಪೊಲೀಸರು ಆತನನ್ನು ವಶಕ್ಕೆ ಪಡೆದು ಪ್ರದೇಶದ ಠಾಣೆಗೆ ಒಯ್ದಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತದೆ ಎಂದು ಪೊಲೀಸರು ಬಳಿಕ ಹೇಳಿದರು.

2018: ತಿರುವನಂತಪುರಂ: ತಮಿಳುನಾಡು ಮೂಲದ ಮಹಿಳಾ ಸಾಮಾಜಿಕ ಕಾರ್ಯಕರ್ತರ ಗುಂಪೊಂದು ಕೇರಳದ ಶಬರಿಮಲೈ ಬೆಟ್ಟ ಏರಲು ಯತ್ನಿಸುವುದಾಗಿ ಪ್ರಕಟಿಸಿತು. ಬಲಪಂಥೀಯ ಸಂಘಟನೆಗಳು ಅವರನ್ನು ತಡೆಯುವುದಾಗಿ ಬೆದರಿಕೆ ಹಾಕಿದವು.  ಇದರೊಂದಿಗೆ ಶಬರಿಮಲೈಯಲ್ಲಿ ಮತ್ತೆ ಉದ್ವಿಗ್ನತೆ ಉಂಟಾಗಿ, ಪೊಲೀಸರು ಬಿಗಿ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡರು. ೨೨ರಿಂದ ೪೫ರ ನಡುವಣ ವಯೋಮಾನದ ಸುಮಾರು ೪೦ ಮಂದಿ ಮಹಿಳಾ ಭಕ್ತರು ಕೊಟ್ಟಾಯಂ ತಲುಪಲಿದ್ದು  ಸಣ್ಣ ಸಣ್ಣ ತಂಡಗಳಲ್ಲಿ ದೇವಾಲಯದತ್ತ ತೆರಳಲಿದ್ದಾರೆ ಎಂದುಮರ್ಯಾದಾ ಹತ್ಯೆಗಳ ಹಿನ್ನೆಲೆಯಲ್ಲಿ ರಚನೆಯಾಗಿರುವ ಚೆನ್ನೈ ಮೂಲದಮಾನಿತಿ ಸಂಘಟನೆಯ ಪದಾಧಿಕಾರಿಗಳು ಪ್ರಕಟಿಸಿದರು. ರಾಜ್ಯ ಸರ್ಕಾರವು ಭದ್ರತೆ ಒದಗಿಸುವ ಭರವಸೆ ಕೊಟ್ಟಿದ್ದು, ತಾವು ಕೊಟ್ಟಾಯಂ ಮತ್ತು ಪಟ್ಟಣಂತಿಟ್ಟ ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿ ಇರುವುದಾಗಿ ಅವರು ನುಡಿದರು.  ‘ನಮ್ಮಲ್ಲಿ ಬಹುತೇಕ ಮಂದಿ ಸಾಂಪ್ರದಾಯಿಕ ಉಪವಾಸ ನಡೆಸುತ್ತಿದ್ದು, ನಾವು ಭಕ್ತರಾಗಿ ಶಬರಿಮಲೈಗೆ ಬರುತ್ತಿದ್ದೇವೆ, ಸಾಮಾಜಿಕ ಕಾರ್ಯಕರ್ತೆಯರಾಗಿ ಅಲ್ಲ. ನಾವು ರಾಜ್ಯ ಸರ್ಕಾರಕ್ಕೆ ನಮ್ಮ ಯಾತ್ರೆಯ ಬಗ್ಗೆ ತಿಳಿಸಿದ್ದೇವೆ ಮತ್ತು ಬೆಟ್ಟದ ಮೇಲಿನ ದೇಗುಲದಲ್ಲಿ ಪೂಜೆ ಸಲ್ಲಿಸಲು ರಕ್ಷಣೆಯನ್ನು ನಿರೀಕ್ಷಿಸಿದ್ದೇವೆ ಎಂದು ಪದಾಧಿಕಾರಿ ಎಲ್. ವಸಂತಿ ಹೇಳಿದರು. ಆದರೆ ಪುರಾತನ ದೇವಾಲಯಕ್ಕೆ ಋತುಮತಿ ವಯೋಮಾನದ ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿರುವ ಸಂಘಟನೆಗಳ ನೇತೃತ್ವ ವಹಿಸಿರುವ ಶಬರಿಮಲೈ ಕರ್ಮ ಸಮಿತಿಯು, ಮಹಿಳೆಯರನ್ನು ತಡೆಯುವ ತನ್ನ ಯೋಜನೆಯನ್ನು ಪ್ರಕಟಿಸಿತು.  ಸಂಘಟನೆಯ ಕಾರ್ಯಕರ್ತರನ್ನು ಹಲವಾರು ರೈಲ್ವೇ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್ಗಳಲ್ಲಿ ಮಹಿಳೆಯರನ್ನು ಪತ್ತೆ ಹಚ್ಚಲು ನಿಯೋಜಿಸಿತು. ‘ದೇವಾಲಯದ ಶತಮಾನಗಳಷ್ಟು ಹಳೆಯದಾದ ವಿಧಿ ವಿಧಾನಗಳನ್ನು ಭಂಗಗೊಳಿಸಲು ನಾವು ಅವರಿಗೆ ಅವಕಾಶ ನೀಡುವುದಿಲ್ಲ. ಇದು ಸಾಮಾಜಿಕ ಕಾರ್ಯಕರ್ತೆಯರಿಗಾಗಿ ಇರುವ ಪಿಕ್ ನಿಕ್ ಸ್ಥಳ ಅಲ್ಲ ಎಂದು ಸಮಿತಿ ನಾಯಕಿ ಕೆ.ಪಿ. ಶಶಿಕಲಾ ಹೇಳಿದರು. ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ಸೆಪ್ಟೆಂಬರ್ ೨೮ರಂದು ತೀರ್ಪು ನೀಡಿದ ಬಳಿಕ ಪಟ್ಟಣಂತಿಟ್ಟ ಜಿಲ್ಲೆಯಲ್ಲಿನ ಶತಮಾನಗಳಷ್ಟು ಹಳೆಯದಾದ ಶಬರಿಮಲೈ ದೇಗುಲದಲ್ಲಿ ಪ್ರಕ್ಷುಬ್ಧತೆ ಉಂಟಾಯಿತು.  ಬಲಪಂಥೀಯ ಸಂಘಟನೆಗಳು ಸುಪ್ರೀಂಕೋರ್ಟ್ ತೀರ್ಪನ್ನು ಜಾರಿಗೊಳಿಸಲು ಸರ್ಕಾರ ಕೈಗೊಂಡ ತರಾತುರಿಯ ನಿರ್ಧಾರವನ್ನು ವಿರೋಧಿಸಿದವು.  ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ ಭಕ್ತರ ಹೋರಾಟಕ್ಕೆ ಬೆಂಬಲ ನೀಡಿದವು.  ದೇವಾಲಯಕ್ಕೆ ಮಹಿಳಾ ಪ್ರವೇಶವನ್ನು ಸಮರ್ಥಿಸಿ ಸರ್ಕಾರ ಸುಪ್ರೀಂಕೋರ್ಟಿಗೆ ನೀಡಿದ ಪ್ರಮಾಣಪತ್ರದಿಂದ ಇಂತಹ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದು ವಿರೋಧ ಪಕ್ಷಗಳೆರಡೂ ಭಾವಿಸಿದವು. ನವೆಂಬರ್ ೧೭ರಂದು ದೇವಾಲಯವು ವಾರ್ಷಿಕ ಯಾತ್ರಾ ಋತುವಿಗಾಗಿ ತೆರೆಯಲ್ಪಟ್ಟಾಗ ಸರ್ಕಾರವು ಪ್ರತಿಭಟನಕಾರರನ್ನು ತಡೆಯಲು ನಿಷೇಧಾಜ್ಞೆ ಸೇರಿದಂತೆ ಹಲವಾರು ನಿರ್ಬಂಧಗಳನ್ನು ಹೇರಿತು. ೧೦,೦೦೦ಕ್ಕೂ ಹೆಚ್ಚು ಪೊಲೀಸರನ್ನೂ ನಿಯೋಜಿಸಲಾಯಿತು. ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಮೂರು ಹರತಾಳಗಳನ್ನೂ ಕಂಡಿತು. ದೇವಾಲಯ ಪ್ರದೇಶದಲ್ಲಿ ಉದ್ವಿಗ್ನತೆ ಮುಂದುವರೆಯಿತು. ತಮಿಳುನಾಡಿನ ಮಹಿಳೆಯರ ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿ ವಾಪಸಾಗುವಂತೆ ಮನವಿ ಮಾಡಲಾಗುವುದು. ಅವರು ಆಗ್ರಹಿಸಿದರೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವ ಬಗ್ಗೆ ಸರ್ಕಾರವನ್ನು ಸಂಪರ್ಕಿಸುವರು. ಈಗ ಯಾತ್ರೆಯು ಶಾಂತಿಯುತವಾಗಿ ನಡೆಯುತ್ತಿರುವುದರಿಂದ ದೇವಾಲಯ ಪರಿಸ್ಥಿತಿಯನ್ನು ಹದಗೆಡಿಸುವ ಸ್ಥಿತಿ ಉದ್ಭವಿಸಬಾರದು ಎಂದು ತಿರುವಾಂಕೂರು ದೇವಸ್ವಂಮಂಡಳಿ ಅಭಿಪ್ರಾಯ ಪಟ್ಟಿತು.

2018: ನವದೆಹಲಿ: ಐವತ್ತು ವಿದ್ಯಾರ್ಥಿಗಳನ್ನು ಒಯ್ಯುತ್ತಿದ್ದ ಬಸ್ಸೊಂದು ಸಂಜೆ ಗುಜರಾತಿನಲ್ಲಿ ಕಣಿವೆಗೆ ಉರುಳಿತು. ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಅಸು ನೀಗಿದ್ದಾರೆ ಎಂದು ವರದಿ ಹೇಳಿತು. ಬಸ್ಸು ಡಂಗ್ ಜಿಲ್ಲೆಯ ಮಹಲ್- ಬದ್ರಿಪಾದದ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಾಗ ದುರಂತ ಸಂಭವಿಸಿತು.

2018: ನವದೆಹಲಿ: ಟ್ವಿಟ್ಟರ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಂತೆ ಸೋಗು ಹಾಕಿದ ವಂಚಕ ಇನ್ನೂ ಪೊಲೀಸರ ಕೈಗೆ ಸಿಗದೆ ಅಡ್ಡಾಡುತ್ತಿರುವುದನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಕೇಂದ್ರ ಸರ್ಕಾರವು, ಯಾವುದೇ ಕಂಪ್ಯೂಟರಿನಲ್ಲಿ ಸಂಗ್ರಹವಾಗಿರುವ ಯಾವುದೇ ಮಾಹಿತಿಯನ್ನು ಪ್ರತಿಬಂಧಿಸುವ ಅಧಿಕಾರವನ್ನು ೧೦ ಕೇಂದ್ರೀಯ ಸಂಸ್ಥೆಗಳಿಗೆ ನೀಡಿದ ಡಿಸೆಂಬರ್ ೨೦ರ ತನ್ನ ಆದೇಶವನ್ನು ಪ್ರಬಲವಾಗಿ ಸಮರ್ಥಿಸಿತು. ಕೆಲವು ನಾಗರಿಕರ ಕರೆ ವಿವರ ದಾಖಲೆ (ಸಿಡಿಆರ್) ಅನಧಿಕೃತ ವ್ಯಕ್ತಿಗಳ ಸಾಮ್ಯದಲ್ಲಿ ಇರುವುದು ಸೇರಿದಂತೆ ಕೆಲವು ಅಸಮಂಜಸತೆಗಳೂ ಕೂಡಾ ಬೆಳಕಿಗೆ ಬಂದಿವೆ ಎಂದೂ ಸರ್ಕಾರ ತಿಳಿಸಿತುಸೇವೆ ಒದಗಿಸುವ ಸಂಸ್ಥೆಗಳು ಮಾಹಿತಿ ಪೋಸ್ಟ್ ಮಾಡುತ್ತಿರುವ/ ಹಂಚಿಕೊಳ್ಳ್ಳುತ್ತಿರುವ ಜನರ ಬಗೆಗಿನ ವಿವರಗಳನ್ನು ಒದಗಿಸದ ಪರಿಣಾಮವಾಗಿ ಅಪರಾಧಿಗಳು ಇನ್ನೂ ಆರಾಮವಾಗಿ ಅಡ್ಡಾಡುತ್ತಿದ್ದಾರೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ನಕಲಿ ಟ್ವಿಟ್ಟರ್ ಖಾತೆ ಸೃಷ್ಟಿಕರ್ತನನ್ನು ಉದಾಹರಿಸಿ ಸರ್ಕಾರ ಹೇಳಿತು. ಕಾನೂನು ಬದ್ಧ ಕೋರಿಕೆಗಳ ಹೊರತಾಗಿಯೂ ಅಪರಾಧಿಗಳ ಪತ್ತೆಗೆ ಬೇಕಾದ ಮಾಹಿತಿ ಪಡೆಯುವಲ್ಲಿ ಭದ್ರತಾ ಸಂಸ್ಥೆಗಳು ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ೧೦ ಸಂಸ್ಥೆಗಳಿಗೆ ಯಾವುದೇ ಕಂಪ್ಯೂಟರುಗಳಲ್ಲಿ ಸಂಗ್ರಹಿಸಿ ಇಡಲಾದ ಮಾಹಿತಿ ಮೇಲೆ ಕಣ್ಣಿಡುವ ಅಧಿಕಾರಕ್ಕೆ ಅನುಮತಿ ನೀಡಬೇಕಾದ ಅನಿವಾರ್ಯತೆ ಉದ್ಭವಿಸಿತು ಎಂದು ಸರ್ಕಾರ ಹೇಳಿತುಭಯೋತ್ಪಾದಕ ಪ್ರಚಾರ, ಭಯೋತ್ಪಾದಕರ ನೇಮಕಗಳಿಗೆ ಹಲವಾರು ತಂತ್ರಜ್ಞಾನ ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳು ಮತ್ತು ಸೇವೆ ಒದಗಿಸುವ ಸಂಸ್ಥೆಗಳಿಗೆ ಪುನರಾವರ್ತಿತ ಮನವಿಗಳ ಹೊರತಾಗಿಯೂ ಇಂತಹ ಮಾಹಿತಿಯನ್ನು ಪೋಸ್ಟ್ ಮಾಡುವ ಹಂಚಿಕೊಳ್ಳುವ ವ್ಯಕ್ತಿಗಳ ವಿವರಗಳನ್ನು ಪಡೆಯುವಲ್ಲಿ ಸರ್ಕಾರಕ್ಕೆ ಸಹಕಾರ ಲಭಿಸಿಲ್ಲ ಎಂದು ಕೇಂದ್ರದ ಹೇಳಿಕೆ ತಿಳಿಸಿತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ ಕಾಯ್ದೆ) ಸೆಕ್ಷನ್ ೬೯ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಮೂಲಕ ಯಾವುದೇ ಮಾಹಿತಿಯನ್ನು  ನಿರ್ಬಂಧಿಸುವ ಅಥವಾ ಅದರ ಮೇಲೆ ನಿಗಾ ಇಡುವ ಅಥವಾ ಗೂಢಲಿಪೀಕರಣಕ್ಕೆ ನಿರ್ದೇಶನ ನೀಡುವ ಅಧಿಕಾರಕ್ಕೆ ಸಂಬಂಧಿಸಿದಂತೆ ವ್ಯವಹರಿಸುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೯ಕ್ಕೆ ೨೦೦೮ರಲ್ಲಿ . ರಾಜಾ ಅವರು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದಾಗ ಹಾಗೂ ಪಿ. ಚಿದಂಬರಂ ಅವರು ಗೃಹ ಸಚಿವರಾಗಿದ್ದಾಗಲೇ ತಿದ್ದುಪಡಿ ಮಾಡಲಾಗಿತ್ತು ಎಂದು ಸರ್ಕಾರವು ಡಿಸೆಂಬರ್ ೨೦ರ ಆದೇಶಕ್ಕೆ ಅನುಮೋದನೆ ನೀಡಿದ ಬಳಿಕ ಸ್ಪಷ್ಟನೆ ನೀಡಿತು. ಆದರೆ ವಿರೋಧ ಪಕ್ಷಗಳು ಇದನ್ನು ಆಲಿಸುವ ಮನಃಸ್ಥಿತಿಯಲ್ಲಿ ಇಲ್ಲ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಆನಂದ ಶರ್ಮ ಅವರ ಆಪಾದನೆಗೆ ಉತ್ತರ ನೀಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರುವಿರೋಧ ಪಕ್ಷವು ವಿಷಯವನ್ನು ಪ್ರಸ್ತಾಪಿಸುವ ಮುನ್ನ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಹೇಳಿದರು. ಇತ್ತೀಚಿಗಿನ ಅಧಿಸೂಚನೆಯುಹೊಸತು ಅಲ್ಲ, ಬದಲಿಗೆ ಸಂಸ್ಥೆಗಳು/ ವ್ಯಕ್ತಿಗಳು ಪ್ರತಿಬಂಧ ಅಧಿಕಾರಗಳನ್ನು ದುರುಪಯೋಗ ಮಾಡದಂತೆ ತಡೆಯುವ ನಿಟ್ಟಿನಲ್ಲಿ ಸ್ಪಷ್ಟತೆ ಮತ್ತು ಪಾರದರ್ಶಕತೆಯನ್ನು ತರುವ ಯತ್ನ ಮಾತ್ರ ಎಂದು ಸರ್ಕಾರ ಒತ್ತಿ ಹೇಳಿತು. ಸಾಮಾಜಿಕ ಮಾಧ್ಯಮ ಜಾಲಗಳು ಮತ್ತು ಇತರ ಅಂತರ್ಜಾಲ ತಾಣಗಳು ಅಪರಾಧಗಳ ಸಂದರ್ಭಗಳಲ್ಲಿ ಮಾಹಿತಿ ನೀಡುವಲ್ಲಿ ವಿಳಂಬ ಮಾಡುತ್ತಿರುವ ಅನುಭವವಾಗಿರುವುದನ್ನೂ ಸರ್ಕಾರ ಉದಾಹರಿಸಿತು. ವಿರೋಧ ಪಕ್ಷಗಳು ಆದೇಶವನ್ನುಸಂವಿಧಾನಬಾಹಿರ, ಪ್ರಜಾತಂತ್ರ ವಿರೋಧಿ ಮತ್ತು ಮೂಲಭೂತ ಹಕ್ಕುಗಳ ಮೇಲಿನ ಪ್ರಹಾರ ಎಂಬುದಾಗಿ ಟೀಕಿಸಿದ್ದವು.

2018: ಬೆಂಗಳೂರು: ಹಲವರ ಅಸಮಾಧಾನ, ಭಿನ್ನಮತ, ಪ್ರತಿಭಟನೆ ನಡುವೆಯೂ ದೋಸ್ತಿ ಸರ್ಕಾರದ ಮೊದಲ ಸಚಿವ ಸಂಪುಟ ಪುನರ್ರಚನೆಯಾಗಿ, ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾದರು. ಸಂಜೆ .೨೦ಕ್ಕೆ ಸರಿಯಾಗಿ ರಾಜಭವನದ ಗಾಜಿನ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್. ವಾಲಾ ಅವರು ಅಧಿಕಾರ ಗೌಪ್ಯತೆ ಬೋಧಿಸಿದರು. ಸಂಪುಟಕ್ಕೆ ಸೇರ್ಪಡೆ ಯಾದ ಎಲ್ಲರೂ ಸಂಪುಟ ದರ್ಜೆಯ ಸಚಿವರು. ಆರ್. ಬಿ. ತಿಮ್ಮಾಪುರ ಅವರನ್ನು ಮಾತ್ರ ಮೇಲ್ಮನೆ ಯಿಂದ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ. ಉಳಿದಂತೆ ಮಂದಿ ಶಾಸಕರು ವಿಧಾನಸಭಾಗೆ ಸೇರಿದವರು. ಇದರಲ್ಲಿ ತುಕಾರಾಂ, ಎಂ.ಟಿ.ಬಿ. ನಾಗರಾಜ್, ರಹೀಂಖಾನ್ ಹಾಗೂ ಸಿ.ಎಸ್.ಶಿವಳ್ಳಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಇನ್ನು ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ. ಅರ್.ಬಿ. ತಿಮ್ಮಾಪುರ ಮತ್ತು ಟಿ.ಪಿ ಪರಮೇಶ್ವರ್ ನಾಯ್ಕ್ ಹಿಂದೆ ಸಚಿವರಾದ ಅನುಭವವನ್ನು ಹೊಂದಿದ್ದರು.


2018: ನವದೆಹಲಿ: ವಿಡಿಯೋ ಗೇಮ್ಸ್, ೩೨" ಎಲ್‌ಇಡಿ ಟಿವಿಗಳು ಸೇರಿ ದಂತೆ ಜನಸಾಮಾನ್ಯರ ದಿನಬಳಕೆ ಯ ೩೩ ವಸ್ತುಗಳನ್ನು ಶೇ. ೧೮ರ ಜಿಎಸ್‌ಟಿ ದರದಿಂದ ಶೇ.೧೨ ಮತ್ತು ಶೇಕಡಾ ೫ರ ದರಕ್ಕೆ ಇಳಿಕೆ ಮಾಡ ಲಾಯಿತು.  ಈ ಮೂಲಕ  ಕೇಂದ್ರ ಸರ್ಕಾರವು  ಕ್ರಿಸ್ ಮಸ್, ಹೊಸ ವರ್ಷಕ್ಕೆ ಜನ ಸಾಮಾನ್ಯರಿಗೆ ಗಿಫ್ಟ್ ನೀಡಿತು. ದೆಹಲಿಯಲ್ಲಿ  ನಡೆದ ೩೧ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆ ಬಳಿಕ ಮಾತನಾಡಿದ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ, ೩೪ ಉತ್ಪನ್ನಗಳನ್ನು ಹೊರತುಪಡಿಸಿ ಉಳಿದೆಲ್ಲ ವಸ್ತುಗಳನ್ನು ಶೇಕಡಾ ೧೮ ಹಾಗೂ ಅದಕ್ಕಿಂತ ಕಡಿಮೆ ದರಕ್ಕೆ ಇಳಿಕೆ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್, ಐಷಾರಾಮಿ ವಸ್ತುಗಳನ್ನು ಬಿಟ್ಟು ಉಳಿದ ವಸ್ತುಗಳ ಜಿ.ಎಸ್.ಟಿ. ದರವನ್ನು ಶೇಕಡಾ ೧೮ ಅಥವಾ ಅದಕ್ಕಿಂತ ಕಡಿಮೆ ಮಾಡಬೇಕೆಂದು ಬೇಡಿಕೆಯಿಟ್ಟಿತ್ತು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತ್ತು.  ಬೆಳಿಗ್ಗೆ ನಡೆದ ಅರುಣ್ ಜೇಟ್ಲಿ ನೇತೃತ್ವದ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ಹಿಂದೆ ೩೯ ಉತ್ಪನ್ನಗಳು ಶೇಕಡಾ ೨೮ರ ಜಿಎಸ್‌ಟಿ ದರದಲ್ಲಿ ಬರುತ್ತತ್ತು. ಈಗ ಈ  ಸಂಖ್ಯೆ ೩೪ ಆಯಿತು. ಕೆಲ ದಿನಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಹೇಳಿಕೆ ನೀಡಿ, ಶೇಕಡಾ ೯೯ ರಷ್ಟು ಉತ್ಪನ್ನಗಳನ್ನು ಶೇಕಡಾ ೧೮ ಅಥವಾ ಅದಕ್ಕಿಂತ ಕಡಿಮೆ ಜಿಎಸ್‌ಟಿ ದರದಡಿ ತಂದು ನೆಮ್ಮದಿ ನೀಡುವುದಾಗಿ ಹೇಳಿದ್ದರು.

 2017: ನವದೆಹಲಿ: ರಾಜ್ಯಸಭೆಯಲ್ಲಿ ಕ್ರೀಡೆ ಬಗ್ಗೆ ಚೊಚ್ಚಲ ಭಾಷಣ ಮಾಡಲು 21 ಡಿಸೆಂಬರ್ 2017ರ ಗುರುವಾರ ವಿಫಲರಾದ ಸಚಿನ್ ತೆಂಡೂಲ್ಕರ್ ಅವರು ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಕ್ರೀಡೆಗೆ ಇರುವ ಮಹತ್ವದ ಬಗೆಗಿನ ತಮ್ಮ ಮನದಾಳದ ಮಾತುಗಳನ್ನು ಹೇಳಲು ಈದಿನ  ಸಾಮಾಜಿಕ ಜಾಲತಾಣ ಮಾಧ್ಯಮದ (ಸೋಷಿಯಲ್ ಮೀಡಿಯಾ) ಮೊರೆ ಹೊಕ್ಕರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ ತೆಂಡೂಲ್ಕರ್, ಭಾರತವನ್ನು ಕ್ರೀಡಾಪ್ರೇಮಿ ರಾಷ್ಟ್ರದ ಬದಲು ಕ್ರೀಡೆ ಆಡುವ ರಾಷ್ಟ್ರವನ್ನಾಗಿ ಪರಿವರ್ತಿಸಬೇಕು ಎಂಬುದು ನನ್ನ ಪ್ರಯತ್ನ. ನನ್ನ ಕನಸನ್ನು ನಮ್ಮ ಕನಸಾಗಿ ಮಾಡುವ ಪ್ರಯತ್ನದಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ. ಕನಸುಗಳು ಸತ್ಯವಾಗುತ್ತವೆ ಎಂಬುದನ್ನು ನಾನು ಸದಾ ನೆನಪಿಡುತ್ತೇನೆ, ಜೈ ಹಿಂದ್ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದರು. ‘ನಿನ್ನೆ ಕೆಲವು ವಿಚಾರಗಳನ್ನು ಮಾತನಾಡಬೇಕು (ಸಂಸತ್ತಿನಲ್ಲಿ) ಎಂದು ನಾನು ಬಯಸಿದ್ದೆ ಮತ್ತು ಈಗ ನಾನು ಇಲ್ಲಿ ಅದನ್ನೇ ಮಾಡಲು ಯತ್ನಿಸುತ್ತಿದ್ದೇನೆ. ನನ್ನನ್ನು ಯಾವುದು ಇಲ್ಲಿಗೆ ಕರೆತಂದಿತು ಎಂದು ನನಗೆ ಅಚ್ಚರಿಯಾಗುತ್ತಿದೆ. ಕ್ರಿಕೆಟ್ನಲ್ಲಿನ ಪುಟ್ಟ ಮಗುವಿನ ಹೆಜ್ಜೆಗಳು ನನ್ನನ್ನು ಬದುಕಿನ ನೆನಪುಗಳತ್ತ ಒಯ್ಯುತ್ತವೆ  ಎಂಬುದು ನನಗೆ ಗೊತ್ತಿರಲಿಲ್ಲ. ನಾನು ಯಾವಾಗಲೂ ಆಟ ಆಡುವುದನ್ನು ಪ್ರೀತಿಸುತ್ತಿದ್ದೆ ಮತ್ತು ಕ್ರಿಕೆಟ್ ನನ್ನ ಬದುಕಾಗಿದೆ ಎಂದು ಅವರು ತೆಂಡೂಲ್ಕರ್ ಹೇಳಿದರು. ‘ನನ್ನ ತಂದೆ ರಮೇಶ್ ತೆಂಡೂಲ್ಕರ್ ಕವಿ ಮತ್ತು ಬರಹಗಾರರಾಗಿದ್ದರು. ಅವರು ಸದಾ ಕಾಲವೂ ಬದುಕಿನಲ್ಲಿ ನಾನು ಏನಾಗಬಯಸಿದ್ದೆನೋ ಅದು ಆಗುವಂತೆ ಪ್ರೋತ್ಸಾಹಿಸುತ್ತಿದ್ದರು. ಅವರಿಂದ ನನಗೆ ಲಭಿಸಿದ ಅತ್ಯಂತ ದೊಡ್ಡ ಕೊಡುಗೆ ಎಂದರೆ ಆಟ ಆಡುವ ಸ್ವಾತಂತ್ರ್ಯ ॒ಆಟ ಆಡುವ ಹಕ್ಕು. ಇದಕ್ಕಾಗಿ ನಾನು ಎಂದೆಂದೂ ಅವರಿಗೆ ಚಿರ ಋಣಿಯಾಗಿದ್ದೇನೆ ಎಂದೂ ಅವರು ಹೇಳಿದರು. ‘ತುರ್ತು ಗಮನ ಹರಿಸಬೇಕಾದಂತಹ ಹಲವಾರು ವಿಷಯಗಳು ರಾಷ್ಟ್ರದ ಮುಂದಿವೆ. ಆದರೆ ಕ್ರೀಡಾಪಟುವಾಗಿ ನಾನು ಆಟಕ್ಕೆ ಮತ್ತು ಫಿಟ್ನೆಸ್ ಗೆ ಅಂಟಿಕೊಳ್ಳಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಆರ್ಥಿಕ ಪ್ರಗತಿ, ಬಡತನ, ಆಹಾರ ಭದ್ರತೆ, ಆರೋಗ್ಯ ಕಾಳಜಿ ಇತ್ಯಾದಿ ರಾಷ್ಟ್ರ ಗಮನ ಹರಿಸಬೇಕಾದ ಇತರ ಮುಖ್ಯ ವಿಷಯಗಳು. ಕ್ರೀಡಾಪಟುವಾಗಿ ನಾನು ಭಾರತದ ಕ್ರೀಡೆ,  ಆರೋಗ್ಯ ಮತ್ತು ಯುಕ್ತತೆ ಹಾಗೂ ನಮ್ಮ ಆರ್ಥಿಕತೆ ಮೇಲೆ ಅದು ಬೀರುವ ಪರಿಣಾಮದ ಬಗ್ಗೆ ಮಾತನಾಡ ಬಯಸಿದ್ದೇನೆ. ಆರೋಗ್ಯಕರವಾದ ಯುಕ್ತ ಭಾರತದ ಕಡೆಗೆ ನನ್ನ ದೃಷ್ಟಿ ಎಂದು ತೆಂಡೂಲ್ಕರ್ ಹೇಳಿದರು. ತೆಂಡೂಲ್ಕರ್ ಅವರು ರಾಜ್ಯಸಭೆಯಲ್ಲಿ ಆಡುವ ಹಕ್ಕು ಮತ್ತು ಭಾರತದಲ್ಲಿ ಕ್ರೀಡೆಯ ಭವಿಷ್ಯ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯಿಂದಾಗಿ ಸದನ ಕಲಾಪ ಅಸ್ತವ್ಯಸ್ತಗೊಂಡು ಕಲಾಪ ಮುಂದೂಡಿಕೆಯಾದ ಕಾರಣ ತೆಂಡೂಲ್ಕರ್ ಅವರಿಗೆ ಚೊಚ್ಚಲ ಭಾಷಣ ಮಾಡಲು ಸಾಧ್ಯವಾಗಿರಲಿಲ್ಲ.  ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸಂಬಂಧಿಸಿದಂತೆ ಮಾಡಿದ ಟೀಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಸದಸ್ಯರು ಘೋಷಣೆ ಕೂಗುತ್ತಿದ್ದ ಪರಿಣಾಮವಾಗಿ ಸದನ ಕಲಾಪ ಅಸ್ತವ್ಯಸ್ತಗೊಂಡಿತ್ತು. ಸಭಾಪತಿ ಎಂ. ವೆಂಕಯ್ಯ ನಾಯ್ಡು ತೆಂಡೂಲ್ಕರ್ ಅವರಿಗೆ ಮಾತನಾಡಲು ಅವಕಾಶ ನೀಡುವಂತೆ ಕಾಂಗ್ರೆಸ್ ಸದಸ್ಯರನ್ನು ಕೋರಿದರೂ ಪ್ರಯೋಜನವಾಗಿರಲಿಲ್ಲ. ಸದನದ ಗೌರವಾರ್ಹ ಸದಸ್ಯ, ಭಾರತ ರತ್ನ ಪುರಸ್ಕೃತ ವ್ಯಕ್ತಿ ಕ್ರೀಡೆಯಂತಹ ಮಹತ್ವದ ವಿಷಯದ ಬಗ್ಗೆ ಮಾತನಾಡಬಯಸಿದ್ದಾರೆ. ಅವರಿಗೆ ಮಾತನಾಡಲು ಬಿಡಿ, ಎಲ್ಲ ಗಮನ ಸಚಿನ್ ಜಿ ಕಡೆಗಿರಲಿ ಎಂದು ನಾಯ್ಡು ಹೇಳಿದ್ದರು.

ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಅವರು ತೆಂಡೂಲ್ಕರ್ ಅವರ ಬಳಿ ಏನನ್ನೂ ಉಸುರಿದ್ದರು. ಪ್ರತಿಭಟನೆಗಳು ನಿಲ್ಲುವವರೆಗೆ ಕುಳಿತುಕೊಳ್ಳಲು ನಾನು ತೆಂಡೂಲ್ಕರ್ ಅವರಿಗೆ ಹೇಳಿದೆ ಎಂದು ಜಯಾ ಬಳಿಕ ವರದಿಗಾರರಿಗೆ ತಿಳಿಸಿದ್ದರು. ಆದರೆ ಕಾಂಗೆಸ್ ಸದಸ್ಯರು ಘೋಷಣೆ ಕೂಗುತ್ತಾ ತಮ್ಮ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪ ದಿನದ ಮಟ್ಟಿಗೆ ಮುಂದೂಡಿಕೆಯಾಗಿತ್ತು.

2017: ಅಹಮದಾಬಾದ್: ಭಾರತೀಯ ಜನತಾ ಪಕ್ಷದ ಶಾಸಕಾಂಗ ಸಭೆಯು ವಿಜಯ್ ರೂಪಾನಿ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ್ದು, ಅವರು ಎರಡನೇ ಅವಧಿಗೆ ಗುಜರಾತಿನ ಮುಖ್ಯಮಂತ್ರಿಯಾಗಲಿದ್ದಾರೆ. ಸಭೆಯಲ್ಲಿ ಕೇಂದ್ರ ವೀಕ್ಷಕರಾಗಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ಬಳಿಕ ವಿಚಾರವನ್ನು ತಿಳಿಸಿದರು. ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಎರಡನೇ ಅವಧಿಗೆ ಅದೇ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಪಟೇಲ್ ಅವರನ್ನು ಶಾಸಕಾಂಗ ಪಕ್ಷದ ಉಪ ನಾಯಕರಾಗಿ ಜೇಟ್ಲಿ ನೇಮಕ ಮಾಡಿದರು.
ಡಿಸೆಂಬರ್ ೧೮ರಂದು ೧೮೨ ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ೯೯ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಪಶ್ಚಿಮ ರಾಜ್ಯದಲ್ಲಿ ಸತತ ಆರನೇ ಅವಧಿಗೆ ಅಧಿಕಾರದ ಚುಕ್ಕಾಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಕಾಂಗ್ರೆಸ್ ಪಕ್ಷವು ಬಾರಿ ಚೇತರಿಸಿಕೊಂಡು ೭೭ ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾದರೂ, ಬಿಜೆಪಿಯನ್ನು ಅಧಿಕಾರದಿಂದ ಇಳಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

2017: ಮುಂಬೈ: ಆದರ್ಶ ಹೌಸಿಂಗ್ ಸೊಸೈಟಿ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಅಶೋಕ ಚವಾಣ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಸಿಎಚ್. ವಿದ್ಯಾಸಾಗರ ರಾವ್ ಅವರು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಅನುಮತಿಯನ್ನು ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು. ನ್ಯಾಯಮೂರ್ತಿಗಳಾದ ರಣಜಿತ್ ಮೋರೆ ಮತ್ತು ಸಾಧನಾ ಜಾಧವ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಚವಾಣ್ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ಕೋರುವ ವೇಳೆಯಲ್ಲಿ ಸಿಬಿಐ ತನ್ನ ಬಳಿ ಹೊಸ ಸಾಕ್ಷ್ಯಾಧಾರ ಇರುವುದಾಗಿ ಪ್ರತಿಪಾದಿಸಿತ್ತು, ಆದರೆ ಯಾವುದೇ ಹೊಸ ಸಾಕ್ಷ್ಯಾಧಾರವನ್ನು ಹಾಜರು ಪಡಿಸುವಲ್ಲಿ ಅದು ವಿಫಲವಾಗಿದೆ ಎಂದು ಹೇಳಿತು. ಸಿಬಿಐ ರಾಜ್ಯಪಾಲ ವಿದ್ಯಾಸಾಗರ ರಾವ್ ಎದುರು ನೀಡಿದ ಮಾಹಿತಿಯನ್ನು ಹೊಸ ವಿಶ್ವಾಸಾರ್ಹ ಸಾಕ್ಷಿಯಾಗಿ ಪರಿವರ್ತಿಸಲಾಗದು ಎಂದು ಪೀಠ ಹೇಳಿತು. ಅನುಮತಿ ನೀಡುವ ಪ್ರಾಧಿಕಾರವು ಸ್ವಾಯತ್ತ ಸಂಸ್ಥೆಯಾಗಿದ್ದು, ಅದು ಯಾವುದೇ ವ್ಯಕ್ತಿಯ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗಲು ಅವಕಾಶ ನೀಡುವಂತಿಲ್ಲ ಎಂದು  ಕೋರ್ಟ್ ಹೇಳಿತು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಒಳಸಂಚು ಮತ್ತು ವಂಚನೆಗೆ ಸಂಬಂಧಿಸಿದ ವಿವಿಧ ಸೆಕ್ಷನ್ಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿಧಿಗಳ ಅಡಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ೨೦೧೬ರ ಫೆಬ್ರುವರಿ ತಿಂಗಳಲ್ಲಿ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ಚವಾಣ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿತ್ತು. ರಾಜ್ಯಪಾಲರ ಅನುಮತಿ ನಿರಂಕುಶ, ಅಕ್ರಮ, ಅನ್ಯಾಯದ್ದಾಗಿದ್ದು ದುರುದ್ದೇಶದಿಂದ ಕೂಡಿದೆ ಎಂದು ಚವಾಣ್ ದೂರಿದ್ದರು. ಚವಾಣ್ ಅವರು ಪ್ರಸ್ತುತ ಕಾಂಗ್ರೆಸ್ ಪಕ್ಷದ ಮಹಾರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದು, ಆದರ್ಶ ಹಗರಣದ ಭ್ರಷ್ಟಾಚಾರ ಸಂಬಂಧಿ ಆರೋಪಗಳ ಹಿನ್ನೆಯಲ್ಲಿ ರಾಜೀನಾಮೆ ನೀಡುವ ಮುನ್ನ ೨೦೦೮ರ ಡಿಸೆಂಬರ್ ನಿಂದ ೨೦೧೦ರ ನವೆಂಬರ್ವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಚವಾಣ್ ಅವರು ದಕ್ಷಿಣ ಮುಂಬೈಯಲ್ಲಿ ಆದರ್ಶ ಸೊಸೈಟಿಗೆ ಹೆಚ್ಚುವರಿ ಮಹಡಿಗಳಿಗೆ ಅನುಮತಿ ನೀಡಿದ್ದರು. ಸಂದರ್ಭದಲ್ಲಿ ತಮ್ಮ ಬಂಧುಗಳಿಗೆ ಎರಡು ಫ್ಲಾಟ್ ಗಳನ್ನು ಪಡೆದಿದ್ದರು ಎಂದು ಸಿಬಿಐ ಆಪಾದಿಸಿತ್ತು. ಇದಕ್ಕೆ ಮುನ್ನ ಕಂದಾಯ ಸಚಿವರಾಗಿದ್ದ ಚವಾಣ್, ಸೊಸೈಟಿಯು ಮೂಲತಃ ರಕ್ಷಣಾ ಸಿಬ್ಬಂದಿಗಾಗಿ ಇದ್ದರೂ ಶೇಕಡಾ ೪೦ರಷ್ಟು ಫ್ಲ್ಯಾಟ್ ಗಳನ್ನು ಇತರ ನಾಗರಿಕರಿಗೆ ವಿತರಿಸಲೂ ಅಕ್ರಮವಾಗಿ ಅನುಮತಿ ನೀಡಿದ್ದರು ಎಂದೂ ಸಿಬಿಐ ಆಪಾದಿಸಿತ್ತು.

2017: ಪಾಟ್ನಾ: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ರಾಜಧಾನಿ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ 23 ಡಿಸೆಂಬರ್ 2017ರ ಶನಿವಾರ ತನ್ನ ತೀರ್ಪು ನೀಡಲಿದೆ. ಆರ್ಜೆಡಿ ಮುಖ್ಯಸ್ಥ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ಬಿಹಾರಿನ ಇನ್ನೊಬ್ಬ ಮುಖ್ಯಮಂತ್ರಿ ಜಗನ್ನಾಥ ಮಿಶ್ರ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ೧೯೯೪ ಮತ್ತು ೧೯೯೬ರಲ್ಲಿ ಲಾಲೂ ಪ್ರಸಾದ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದಾಗ ದೇವಗಢ ಜಿಲ್ಲಾ ಬೊಕ್ಕಸದಿಂದ ೮೪. ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂಪಡೆದುದಕ್ಕೆ ಸಂಬಂಧಿಸಿದ ಪ್ರಕರಣ ಇದು.
ಲಾಲೂ ಪ್ರಸಾದ್ ಅವರು ಪುತ್ರ ತೇಜಸ್ವಿ ಜೊತೆಗೆ ಶುಕ್ರವಾರ ಸಂಜೆ ಜಾರ್ಖಂಡ್ ರಾಜಧಾನಿಗೆ ತೆರಳಲಿದ್ದಾರೆ. ಶನಿವಾರ ಬೆಳಗ್ಗೆ ೧೦.೩೦ಕ್ಕೆ ರಾಂಚಿಯಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ಶಿವಪಾಲ್ ಸಿಂಗ್ ತಮ್ಮ ತೀರ್ಪು ಪ್ರಕಟಿಸುವ ನಿರೀಕ್ಷೆ ಇದೆ. ಪ್ರಕರಣದ  ೩೪ ಮಂದಿ ಆರೋಪಿಗಳಲ್ಲಿ ೧೧ ಮಂದಿ ವಿಚಾರಣೆ ವೇಳೆಯಲ್ಲಿ ಸಾವನ್ನಪ್ಪಿದ್ದು, ಒಬ್ಬ ವ್ಯಕ್ತಿ ಮಾಫಿ ಸಾಕ್ಷಿಯಾಗಿ (ಅಪ್ರೂವರ್) ಬದಲಾಗಿದ್ದಾನೆ. ಲಾಲೂ ಪ್ರಸಾದ್ ಮತ್ತು ಜಗನ್ನಾಥ ಮಿಶ್ರ ಅವರು ಸಿಬಿಐ ಕೋರ್ಟಿನಿಂದ ಮೇವು ಹಗರಣಕ್ಕೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿದ್ದಾರೆ. ಚೈಬಾಸಾ ಬೊಕ್ಕಸದಿಂದ ೩೭. ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯ ಲಾಲು ಅವರಿಗೆ ವರ್ಷಗಳ ಸೆರೆವಾಸ ಮತ್ತು ೨೫ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿತ್ತು. ೨೦೧೩ರ ಡಿಸೆಂಬರಿನಲ್ಲಿ ಸುಪ್ರೀಂಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.  ೨೦೧೪ರಲ್ಲಿ ಜಾರ್ಖಂಡ್ ಹೈಕೋರ್ಟ್ ಉಳಿದಿರುವ ನಾಲ್ಕು ಮೇವು ಹಗರಣ ಪ್ರಕರಣಗಳಲ್ಲಿ ಲಾಲು ವಿರುದ್ಧದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ಒಂದು ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯನ್ನು ಅದೇ ಸಾಕ್ಷಿದಾರರು ಮತ್ತು ಸಾಕ್ಷಿಗಳನ್ನು ಹೊಂದಿರುವ ಇಂತಹುದೇ ಪ್ರಕರಣಗಳಲ್ಲಿ ವಿಚಾರಣೆಗೆ ಗುರಿಪಡಿಸುವಂತಿಲ್ಲ ಎಂದು ಕೋರ್ಟ್ ಹೇಳಿತ್ತು.  ಆದರೆ ಬಳಿಕ, ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ವರ್ಷ ಮೇ ತಿಂಗಳಲ್ಲಿ ರದ್ದು ಪಡಿಸಿತ್ತು ಮತ್ತು ಬಾಕಿ ಉಳಿದಿರುವ ಎಲ್ಲ ಪ್ರಕರಣಗಳಲ್ಲೂ ವಿಚಾರಣೆ ಎದುರಿಸುವಂತೆ ಲಾಲೂ ಅವರಿಗೆ ಆಜ್ಞಾಪಿಸಿತ್ತು.

2017: ಪುಣೆ: ಶಿವಸೇನಾ ನಾಯಕ ಹಾಗೂ ಕೇಂದ್ರ ಸಚಿವ ಅನಂತ ಗೀತೆ ಅವರು ರಾಯಗಢ ಜಿಲ್ಲೆಯ ಪಾಲಿ ಸಮೀಪ ಈದಿನ ಮಧ್ಯಾಹ್ನ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡರು. ಗೀತೆ ಅವರ ತಲೆಗೆ ಅಲ್ಪಸ್ವಲ್ಪ ಗಾಯಗಳಾಗಿದ್ದರೂ, ಅವರು ಅಪಾಯದಿಂದ ಪಾರಾದರು. ಗೀತೆ ಅವರು ಕೇಂದ್ರದಲ್ಲಿ ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ರಂಗದ ಉದ್ಯಮಗಳ ಸಚಿವರಾಗಿದ್ದು ಕೇಂದ್ರ ಸಂಪುಟದಲ್ಲಿ ಇರುವ ಏಕೈಕ ಶಿವಸೇನಾ ನಾಯಕ.  ದುರಂತದ ವೇಳೆಯಲ್ಲಿ ಅವರು ಪಾಲಿಯಿಂದ ಖೊಪೋಲಿ ನಡುವಣ ೪೦ ಕಿಮೀ ದೂರದ ಮಾರ್ಗದಲ್ಲಿ ಪಯಣ ಹೊರಟಿದ್ದರು. ಮೂಲಗಳ ಪ್ರಕಾರ ಪೈಲಟ್ ವಾಹನದ ಚಾಲಕ ದಾರಿಯಲ್ಲಿ ಅಡ್ಡ ಬಂದ ದ್ವಿಚಕ್ರ ವಾಹನ ಸವಾರನ್ನು ರಕ್ಷಿಸುವ ಸಲುವಾಗಿ ದಿಢೀರನೆ ಬ್ರೇಕ್ ಹಾಕಿದ. ಪರಿಣಾಮವಾಗಿ ಪೈಲಟ್ ವಾಹನದ ಹಿಂದಿದ್ದ ಸಚಿವರ ಕಾರು ಮತ್ತು ಇತರ ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು ಎಂದು ಮೂಲಗಳು ಹೇಳಿದವು. ‘ಸಚಿವರು ಸ್ವಸ್ಥರಾಗಿದ್ದು, ಅಲ್ಪ ವಿಶ್ರಾಂತಿಯ ಬಳಿಕ ಪಯಣ ಮುಂದುವರೆಸುವರು. ನಾನು ಅವರ ಬಳಿ ಮಾತನಾಡಿದ್ದೇನೆ. ಅದೃಷ್ಟವಶಾತ್ ಅವರಿಗೆ ಗಂಭೀರ ಗಾಯಗಳಾಗಿಲ್ಲ ಎಂದು ರಾಯಗಢ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪಾರಸ್ಕರ್ ಹೇಳಿದರು.

2017: ಲಕ್ನೋ: ಸ್ವಚ್ಛ ಭಾರತ ಅಭಿಯಾನದ ಅನುಕೂಲಗಳನ್ನು ಸತ್ತವರೂ ಪಡೆಯುತ್ತಿರುವ ಆಘಾತಕಾರಿ ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದವು. ಇಷ್ಟೇ ಅಲ್ಲ, ಸತ್ತ ವ್ಯಕ್ತಿಗಳು ತಮ್ಮ ಅನುದಾನದ ಹಣವನ್ನು ಪಡೆಯುತ್ತಲೂ ಇದ್ದಾರೆ. ಉತ್ತರ ಪ್ರದೇಶದ ಬಾರಾಬಂಕಿ ಜಿಲೆಯ ಕುರೋಲಿ ಗ್ರಾಮದಿಂದ ವರದಿ ಬಂದಿತು. ಯೋಜನೆಯ ಅಡಿಯಲ್ಲಿ ಜನರಿಗೆ ಸ್ವಚ್ಛ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ೧೨,೦೦೦ ರೂಪಾಯಿ ಒದಗಿಸಲಾಗುತ್ತದೆ. ದುಷ್ಕರ್ಮಿಗಳು ಸತ್ತವರ ಪರವಾಗಿ ಹಣವನ್ನು ಪಡೆದು ಕೊಳ್ಳುತ್ತಿದ್ದಾರೆ. ಅಚ್ಚರಿಯ ಅಂಶವೆಂದರೆ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರಿ ಅಧಿಕಾರಿಗಳು ಸಮೀಕ್ಷೆಯ ಬಳಿಕ ತಯಾರಿಸಿದ್ದಾರೆ! ಫಲಾನುಭವಿಗಳ ಪಟ್ಟಿಗೆ ಮಂದಿ ಸತ್ತ ವ್ಯಕ್ತಿಗಳ ಹೆಸರು ಸೇರ್ಪಡೆಯಾಗಿದೆ, ಇನ್ನೂ ನಿರ್ಮಾಣವಾಗದ ಶೌಚಾಲಯಗಳನ್ನು ನಿರ್ಮಾಣವಾಗಿದೆ ಎಂಬುದಾಗಿ ತೋರಿಸಿ ಹಣ ಪಡೆದ ಪ್ರಕರಣಗಳು ಬೆಳಕಿಗೆ ಬಂದವು. ಇನ್ನೂ ಅಚ್ಚರಿಯೆಂದರೆ ಫಲಾನುಭವಿಗಳ ಪಟ್ಟಿಯಲ್ಲಿರುವ ೧೧೧ ಹೆಸರುಗಳಲ್ಲಿ ಬಹುತೇಕ ಮಂದಿ ಈಗಾಗಲೇ ಒಂದೊಂದು ಶೌಚಾಲಯ ಹೊಂದಿದ್ದರೆ, ಬಿಪಿಎಲ್ ಫಲಾನುಭವಿಗಳ ಪಟ್ಟಿಯಲ್ಲಿರುವ ೨೦ ಮಂದಿ ಆರ್ಥಿಕವಾಗಿ ಹಿಂದುಳಿದವರೇ ಅಲ್ಲ. ಫಲಾನುಭವಿಗಳ ಪಟ್ಟಿಯಲ್ಲಿ ಹಲವಾರು ವ್ಯಾಪಾರಿಗಳು, ಸರ್ಕಾರಿ ಅಧಿಕಾರಿಗಳು ಮತ್ತು ಒಬ್ಬ ಹಾಲಿ ನ್ಯಾಯಾಧೀಶರೂ ಸೇರಿದ್ದಾರೆ. ಮಾಧ್ಯಮ ಪ್ರತಿನಿಧಿ ಸ್ಥಳಕ್ಕೆ ತೆರಳಿದಾಗ ಹಲವಾರು ಅರ್ಹರ ಹೆಸರುಗಳು ಫಲಾನುಭವಿಗಳ ಪಟ್ಟಿಯಿಂದ ಕಣ್ಮರೆಯಾಗಿರುವುದು ಬೆಳಕಿಗೆ ಬಂತು. ಹಾಲಿ ನ್ಯಾಯಾಧೀಶರ ಕುಟುಂಬ ಸದಸ್ಯರ ಬಳಿ ವಿಚಾರಿಸಿದಾಗ ಅವರು ಈಗಾಗಲೇ ಶೌಚಾಲಯ ಹೊಂದಿದ್ದು, ಸ್ವಂತ ವೆಚ್ಚದಿಂದಲೇ ಅದನ್ನು ನಿರ್ಮಿಸಿದ್ದಾಗಿ ತಿಳಿಸಿದರು. ಒಬ್ಬನೇ ವ್ಯಕ್ತಿ ಹೆಸರು ಬದಲಾಯಿಸಿಕೊಂಡು ಎರಡೆರಡು ಬಾರಿ ಹಣ ಪಡೆದ ಉದಾಹರಣೆಯೂ ಇದೆ ಎಂಬುದು ಮಾಧ್ಯಮ ಪ್ರತಿನಿಧಿಗೆ ಗ್ರಾಮಸ್ಥನೊಬ್ಬ ನೀಡಿದ ಮಾಹಿತಿ. ಎರಡೆರಡು ಶೌಚಾಲಯಗಳು ಮಂಜೂರಾದ ಪ್ರಕರಣಗಳೂ ಇವೆ. ಅಂತಹ ಸ್ಥಳಗಳಲ್ಲಿ ಇರುವುದು ಒಂದೊಂದೇ ಶೌಚಾಲಯ, ಅದೂ ತುಂಬಾ ಹಳೆಯದು. ಐದಾರು ಮಂದಿ ಸತ್ತ ವ್ಯಕ್ತಿಗಳ ಹೆಸರುಗಳೂ ಫಲಾನುಭವಿಗಳ ಪಟ್ಟಿಯಲ್ಲಿದೆ. ನಾನು ಬಗ್ಗೆ ಮುಖ್ಯಮಂತ್ರಿ ಮತ್ತು ಪ್ರಧಾನಿಯವರಿಗೆ ಪತ್ರಗಳನ್ನೂ ಬರೆದಿದ್ದೇನೆ. ಬಹುಶಃ ಗ್ರಾಮ ಪ್ರಧಾನರು ಮತ್ತು ಅಧಿಕಾರಿಗಳ ಮಧ್ಯೆ ಹೊಂದಾಣಿಕೆ ಇದೆ ಎಂಬುದು ನನ್ನ ಭಾವನೆ ಎಂದು ವ್ಯಕ್ತಿ ತಿಳಿಸಿದ. ಸರ್ಕಾರದ ಪಟ್ಟಿಯ ಪ್ರಕಾರ ೨೦೦ ಶೌಚಾಲಯಗಳನ್ನು ಗ್ರಾಮದಲ್ಲಿ ನಿರ್ಮಿಸಲಾಗಿದೆ. ನಮಗೆ ಬಂದಿರುವ ಹಣ ೫೦ ಶೌಚಾಲಯಗಳ ನಿರ್ಮಾಣಕ್ಕೆ ಮಾತ್ರ. ಅವುಗಳನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ. ಫಲಾನುಭಿವಿಗಳ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ನನಗೆ ಕಲ್ಪನೆ ಇಲ್ಲ ಎಂದು ಗ್ರಾಮ ಪ್ರಧಾನರು ಪ್ರಶ್ನೆಗಳಿಗೆ ಉತ್ತರಿಸಿದರು. ಬಾರಾಬಂಕಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಅಂಜನಿ ಕುಮಾರ ಸಿಂಗ್ ಅವರು ಫಲಾನುಭವಿಗಳ ಪಟ್ಟಿಯಲ್ಲಿನ ಲೋಪದೋಷಗಳ ಬಗ್ಗೆ ತಮಗೆ ಗೊತ್ತಿಲ್ಲ ಎಂದು ತಿಳಿಸಿದರು. ಸೂಕ್ತ ಸಮೀಕ್ಷೆಯ ಬಳಿಕ ಸಮಿತಿಯೊಂದರ ಮಾರ್ಗದರ್ಶನದಲ್ಲಿ ಪಟ್ಟಿ ತಯಾರಿಸಲಾಗಿದೆ. ಇಂತಹದ್ದೇನಾದರೂ ಘಟಿಸಿದ್ದರೆ, ಶಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ನುಡಿದರು.

2017: ಚೆನ್ನೈ: ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಆರ್ ಕೆ ನಗರ ಉಪಚುನಾವಣೆಯಲ್ಲಿ ಎಐಎಡಿಎಂಕೆಯಲ್ಲಿ ಮೂಲೆಗುಂಪಾಗಿರುವ ಶಶಿಕಲಾ ನಿಕಟಸಂಬಂಧಿ ಟಿಟಿವಿ ದಿನಕರನ್ ಅವರು ಗೆಲ್ಲುವ ಸಾಧ್ಯತೆ ಇದೆ ಎಂದು ಟವಿ ಚಾನೆಲ್ ಒಂದು ನಡೆಸಿದ ಮತಗಟ್ಟೆ ಸಮೀಕ್ಷೆ ಭವಿಷ್ಯ ನುಡಿಯಿತು. ಎಐಎಡಿಎಂಕೆಯ ಮಧುಸೂದನನ್ ಮತ್ತು ಡಿಎಂಕೆಯ ಮರುತುಗಣೇಶ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ನಿಲ್ಲಲಿದ್ದಾರೆ ಎಂದು ಸಮೀಕ್ಷೆ ಹೇಳಿತು. ೧,೦೭೧ ಮತದಾರರು ಪಾಲ್ಗೊಂಡಿದ್ದ ಮತಗಟ್ಟೆ ಸಮೀಕ್ಷೆಯು ದಿನಕರನ್ ಅವರು ಶೇಕಡಾ ೩೭ರಷ್ಟು ಮತಗಳನ್ನು ಪಡೆಯಲಿದ್ದಾರೆ, ಮಧುಸೂದನನ್ ಮತ್ತು ಮರುತುಗಣೇಶ್ ಅವರು ಶೇಕಡಾ ೨೬ ಮತ್ತು ಶೇಕಡಾ ೧೮ರಷ್ಟು ಮತಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿತು. ಶೇಕಡಾ ೯೦ರಷ್ಟು ಮತದಾರರು ತಾವು ಯಾವುದೇ ಪಕ್ಷದಿಂದ ಲಂಚ ಪಡೆದಿಲ್ಲ ಎಂದಿದ್ದರೆ, ಶೇಕಡಾ ೧೦ರಷ್ಟು ಮಂದಿ ತಮಗೆ ಪಕ್ಷಗಳಿಂದ ಹಣ ಲಭಿಸಿದೆ ಎಂದು ಹೇಳಿದರು. ಶೇಕಡಾ ೯೫ ರಷ್ಟು ಮತದಾರರು ಚುನಾವಣೆಗೆ ಒಂದು ದಿನ ಮುಂಚಿತವಾಗಿ ಬಿಡುಗಡೆಯಾದ ಜಯಲಲಿತಾ ಅವರ ಆಸ್ಪತ್ರೆವಾಸದ ವಿಡಿಯೋದಿಂದ ಯಾವ ಪರಿಣಾಮವೂ ಆಗದು ಎಂದು ಹೇಳಿದ್ದರೆ, ಶೇಕಡಾ ೫ರಷ್ಟು ಮಂದಿ ಸ್ವಲ್ಪ ಪರಿಣಾಮ ಆಗಬಹುದು ಎಂದು ಹೇಳಿದರು. ಆರ್ ಕೆ ನಗರ ಕ್ಷೇತ್ರ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ ಎಂದು ಶೇಕಡಾ ೩೯ ಮತದಾರರು, ಸ್ವಚ್ಛತಾ ಸಮಸ್ಯೆ ಇದೆ ಎಂದು ಶೇಕಡಾ ೨೯ ಮಂದಿ, ರಸ್ತೆಗಳು ಕುಲಗೆಟ್ಟಿವೆ ಎಂದು ಶೇಕಡಾ ೨೦ ಮಂದಿ ಹಾಗೂ ಸಾರಾಯಿ ಅಂಗಡಿಗಳಲ್ಲಿ ಸಮಸ್ಯೆಗಳಿವೆ ಎಂದು ಶೇಕಡಾ ೧೪ ಮಂದಿ ಸಮೀಕ್ಷೆಯಲ್ಲಿ ದೂರಿದರು.


2016: ನವದೆಹಲಿ: ದೆಹಲಿಯ ಲೆಫ್ಟಿನೆಂಟ್ಗವರ್ನರ್ನಜೀಬ್ಜಂಗ್ಅವರು ಡಿಢೀರನೆ ತಮ್ಮ
ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.  ತಮ್ಮ ರಾಜೀನಾಮೆ ಪತ್ರವನ್ನು ಭಾರತ ಸರ್ಕಾರಕ್ಕೆ ಸಲ್ಲಿಸಿರುವ ಜಂಗ್ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿದವು. 2013 ಜುಲೈ 9ರಂದು ದೆಹಲಿಯ 20ನೇ ಲೆಫ್ಟಿನೆಂಟ್ಗವರ್ನರ್ಆಗಿ ಅವರು ಅಧಿಕಾರ ಸ್ವೀಕರಿಸಿದ್ದರು. ಅವಧಿ ಪೂರ್ಣಗೊಳ್ಳುವ ಮೊದಲೇ ನಜೀಬ್ ಜಂಗ್ ಅನಿರೀಕ್ಷಿತ ರಾಜೀನಾಮೆ ಚರ್ಚೆಗೆ ಗ್ರಾಸವಾಯಿತು.. ನಿವೃತ್ತಿ ಜೀವನವನ್ನು ಸಂಶೋಧನೆ ಮತ್ತು ಅಧ್ಯಯನಕ್ಕೆ ಮೀಸಲಿರಿಸಲಿದ್ದಾರೆ ಎಂದು ರಾಜಭವನ ತಿಳಿಸಿತು. ಕಳೆದ ಎರಡು ವರ್ಷಗಳಿಂದ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ನಜೀಬ್ ಜಂಗ್ ಮಧ್ಯೆ ರಾಜತಾಂತ್ರಿಕ ವಿಚಾರವಾಗಿ ನಿರಂತರವಾಗಿ ತಿಕ್ಕಾಟ ಮುಂದುವರಿದಿತ್ತು

2016: ನವದೆಹಲಿ: ಸ್ವಚ್ಛ ಭಾರತದ ಭಾಗವಾಗಿ ಹತ್ತಿರದ ಸಾರ್ವಜನಿಕ ಶೌಚಗೃಹ ಪತ್ತೆ ಮಾಡುವ
ಗೂಗಲ್ ಮ್ಯಾಪ್ ಟಾಯ್ಲೆಟ್ ಲೊಕೆಟರ್ ಎಂಬ ಆಪ್ಗೆ ಕೇಂದ್ರ ಸರ್ಕಾರ ಚಾಲನೆ ನೀಡಿತು. ಇದರಿಂದ ಸಾರ್ವಜನಿಕರು ಸುಲಭವಾಗಿ ಸ್ವಚ್ಛ ಶೌಚಗೃಹ ಪಚ್ಚೆ ಹಚ್ಚಲು ಅನುಕೂಲವಾಗಲಿದೆ. ಸಾರ್ವಜನಿಕ ಶೌಚಗೃಹ ಎಲ್ಲಿ ಎಂದು ಆಪ್ನಲ್ಲಿ ಹುಡುಕಿದರೆ ಹತ್ತಿರದ ಶೌಚಗೃಹದ ಮಾಹಿತಿ ಸಿಗುತ್ತದೆ. ಪ್ರಸ್ತುತ ದೇಹಲಿ ಮತ್ತು ಮಧ್ಯಪ್ರದೇಶದ ಎಲ್ಲ ಶೌಚಗೃಹದ ಮಾಹಿತಿ ಆಪ್ನಲ್ಲಿ ಲಭ್ಯ. ಪ್ರಸ್ತುತ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಆಪ್ ಕಾರ್ಯಾಚರಿಸಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದ ಪ್ರಮುಖ ಭಾಷೆಗಳನ್ನು ಆಪ್ಗೆ ಅಳವಡಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವಾಲಯ ತಿಳಿಸಿತು. ನೂತನ ಆಪ್ಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯನಾಯ್ಡು, ಗುಜರಾತ್, ಆಂಧ್ರ ಪ್ರದೇಶ ಮತ್ತು ಸಿಕ್ಕಿಂ ರಾಜ್ಯದ ಎಲ್ಲ ನಗರ ಮತ್ತು ಪಟ್ಟಣಗಳು ಬಯಲು ಶೌಚಮುಕ್ತಗೊಂಡಿವೆ. ಮಾರ್ಚ್ 2018ಕ್ಕೆ ಕೇರಳವು ಪಟ್ಟಿಗೆ ಸೇರ್ಪಡೆಗೊಳ್ಳಲಿದೆ ಎಂದು ತಿಳಿಸಿದರು.

2016: ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ (ಐಸಿಸಿ) ಪ್ರತಿವರ್ಷದಂತೆ ವರ್ಷ
ಪ್ರಕಟಿಸಿದ ವರ್ಷದ ಟೆಸ್ಟ್ ಟೀಮಿನಲ್ಲಿ ಸ್ಥಾನ ಪಡೆದುಕೊಳ್ಳಲು ವಿಫಲರಾಗಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈಗ 12 ಮಂದಿ ಸದಸ್ಯರ ಐಸಿಸಿ ಏಕದಿನ ತಂಡದ ನಾಯಕರಾಗಿ ಆಯ್ಕೆಯಾದರು. ಈದಿನ ಪ್ರಕಟಿಸಲಾದ ಏಕದಿನ ತಂಡದಲ್ಲಿ,.ನಾಲ್ಕು ಮಂದಿ ದಕ್ಷಿಣ ಆಫ್ರಿಕ ಆಟಗಾರರು, ಆಸ್ಟ್ರೇಲಿಯಾದ ಮೂವರು ಆಟಗಾರರು, ಕೊಹ್ಲಿ ಸೇರಿ ಮೂವರು ಭಾರತೀಯ ಆಟಗಾರರು ಹಾಗೂ ಇಂಗ್ಲೆಂಡ್ ಮತ್ತು ವೆಸ್ಟ್ಇಂಡೀಸ್ ತಲಾ ಒಬ್ಬ ಆಟಗಾರರು ಸೇರಿದ್ದಾರೆ. ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಎಬಿ ಡಿ ವಿಲಿಯರ್ಸ್, ವಿಕೆಟ್ ಕೀಪರ್ ಸ್ಥಾನವನ್ನೂ ನಿಭಾಯಿಸಬಲ್ಲ ಕ್ವಿಂಟಾನ್ ಡಿ ಕಾಕ್, ವೇಗಿ ಕಾಗಿಸೊ ರಬದಾ, ಲೆಗ್ ಸ್ಪಿನ್ನರ್ ಇಮ್ರಾನ್ ತಾಹಿರ್, ಡೇವಿಡ್ ವಾರ್ನರ್ ಮತ್ತು ಮಿಚೆಲ್ ಸ್ಟಾರ್ಕ್ ಸ್ಥಾನ ಪಡೆದುಕೊಂಡವರಾಗಿದ್ದಾರೆ. ರೋಹಿತ್ ಶರ್ಮ, ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದುಕೊಂಡ ಉಳಿದ ಇಬ್ಬರು ಭಾರತೀಯ ಆಟಗಾರರು. ತಂಡ ಹೀಗಿದೆ: ವಿರಾಟ್ ಕೊಹ್ಲಿ, ಡೇವಿಡ್ ವಾರ್ನರ್, ಕ್ವಿಂಟಾನ್ ಡಿ ಕಾಕ್, ರೋಹಿತ್ ಶರ್ಮ, ಎಬಿ ಡಿ ವಿಲಿಯರ್ಸ್, ಜೋ ಬಟ್ಲರ್, ಮಿಚೆಲ್ ಮಾರ್ಷ್, ರವೀಂದ್ರ ಜಡೇಜಾ, ಮಿಚೆಲ್ ಸ್ಟಾರ್ಕ್, ಕಾಗಿಸೊ ರಬದಾ, ಸುನಿಲ್ ನಾರಾಯಣ್, ಇಮ್ರಾನ್ ತಾಹಿರ್.

2016: ದುಬೈ: ಪ್ರಸಕ್ತ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಶಸ್ತಿ
ಪ್ರಕಟವಾಗಿದ್ದು, ಭಾರತದ ಆಲ್ರೌಂಡರ್ ಆರ್. ಅಶ್ವಿನ್ ಅವರಿಗೆ ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿ ಲಭಿಸಿತು. ಕಳೆದ ವಾರವಷ್ಟೇ ಅಂತ್ಯಗೊಂಡಿರುವ ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಅದಕ್ಕೂ ಮೊದಲು ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೇರಿ ಕಳೆದೊಂದು ವರ್ಷದಲ್ಲಿ ನಡೆದ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಹಿನ್ನೆಲೆಯಲ್ಲಿ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ಒಲಿದುಬಂದಿತು. ಇದೇ ವೇಳೆ ಅಶ್ವಿನ್ ಸೋಬರ್ಸ್ ಪ್ರಶಸ್ತಿಗೂ ಪಾತ್ರರಾದರು.  ದಕ್ಷಿಣ ಆಫ್ರಿಕಾದ ಡಿಕಾಕ್ ಅವರಿಗೆ ವರ್ಷದ ಏಕದಿನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ, ಬಾಂಗ್ಲಾದೇಶದ ಮುಸ್ತಫಿಜೂರ್ ರೆಹಮಾನ್ಗೆ ವರ್ಷದ ಅತ್ಯುತ್ತಮ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ನೀಡಲಾಯಿತು. ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಪ್ರಶಸ್ತಿಗೆ ವೆಸ್ಟ್ ಇಂಡೀಸ್ ಕಾಲೋಸ್ ಬ್ರಾಥ್ವೇಟ್ರನ್ನು ಆಯ್ಕೆ ಮಾಡಲಾಯಿತು. ಇನ್ನು ಪ್ರಸಕ್ತ ಸಾಲಿನ ಐಸಿಸಿ ಅಫಿಲಿಯೇಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಫ್ಘಾನ್ ಮಹಮದ್ ಶಹಜಾದ್ ಅವರನ್ನು ಆಯ್ಕೆ ಮಾಡಲಾಯಿತು. ವರ್ಷದ ಅತ್ಯುತ್ತಮ ತೀರ್ಪಗಾರ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಅಂಪೈರ್ ಮರೇಸ್ ಎರಾಸ್ಮಸ್ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿ ಪಟ್ಟಿ ಹೀಗಿದೆ: * ರವಿಚಂದ್ರನ್ ಅಶ್ವಿನ್ (ಭಾರತ) ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ, *  ರವಿಚಂದ್ರನ್ ಅಶ್ವಿನ್ (ಭಾರತ) – ಸರ್ ಗಾರ್ಫೀಲ್ಡ್ ಸೋಬರ್ಸ ಪ್ರಶಸ್ತಿ,, * ಡಿಕಾಕ್ (.ಆಫ್ರಿಕಾ) ಐಸಿಸಿ ವರ್ಷದ ಏಕದಿನ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ, * ಮುಸ್ತಫಿಜುರ್ ರೆಹಮಾನ್ (ಬಾಂಗ್ಲಾ)- ವರ್ಷದ ಅತ್ಯುತ್ತಮ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ, * ಕಾಲೋಸ್ ಬ್ರಾಥ್ ವೇಟ್ (ವೆಸ್ಟ್ ಇಂಡೀಸ್) -ವರ್ಷದ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಪ್ರಶಸ್ತಿ, *ಮಹಮದ್ ಶಹಜಾದ್ (ಆಫ್ಘಾನಿಸ್ತಾನ) ಅಫಿಲಿಯೇಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ, *ಮರೇಸ್ ಎರಾಸ್ಮಸ್ (.ಆಫ್ರಿಕಾ)- ವರ್ಷದ ಅತ್ಯುತ್ತಮ ತೀರ್ಪಗಾರ ಗೌರವ, *ಸುಜಿ ಬೇಟ್ಸ್ (ನ್ಯೂಜಿಲೆಂಡ್)- ವರ್ಷದ ಅತ್ಯುತ್ತಮ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ, * ಸುಜಿ ಬೇಟ್ಸ್ (ನ್ಯೂಜಿಲೆಂಡ್)- ವರ್ಷದ ಅತ್ಯುತ್ತಮ ಏಕದಿನ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ, * ಮಿಸ್ಬಾ ಉಲ್ ಹಕ್ (ಪಾಕಿಸ್ತಾನ)-ಐಸಿಸಿ ಸ್ಪಿರಿಟ್ ಆಫ್ ದಿ ಇಯರ್ ಪ್ರಶಸ್ತಿ
 2016: ಬೆಂಗಳೂರು: ನಮ್ಮ ಸಾವಿರಾರು ಸೈನಿಕರು ಪ್ರಾಣವನ್ನೇ ಒತ್ತೆಯಾಗಿಟ್ಟು ರಕ್ಷಿಸುತ್ತಿರುವ
ಸಿಯಾಚಿನ್ ನೀರ್ಗಲ್ಲು ಚೀನಾದಲ್ಲಿದೆ ಎಂದು ಟ್ವಿಟ್ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಮುಜುಗರಕ್ಕೀಡಾದರು. ಜತೆಗೆ ಸಿಎಂ ಟ್ವಿಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದದ್ದು ಏನು:  ಚೀನಾದ ಸಿಚುವಾನ್  ಎಂಬ ಪ್ರಾಂತ್ಯದಿಂದ ನಿಯೋಗವೊಂದು ಬಂದು ಬುಧವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತ್ತು. ಚೀನಾ ನಿಯೋಗದೊಂದಿಗೆ ಸಿದ್ದರಾಮಯ್ಯ ಅವರು ಬೆಂಗಳೂರಿನ ಮೂಲಸೌಕರ್ಯಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದ್ದರು. ಸಿಎಂ ಅವರ ಮಾಧ್ಯಮ ವಿಭಾಗದ ಸಿಬ್ಬಂದಿ ಸಭೆಯ ಚಿತ್ರಗಳನ್ನು ಮತ್ತು ಮಾಹಿತಿಯನ್ನು ಟ್ವಿಟರ್ ಮತ್ತ ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರು. ಆದರೆ ಸಿಚುವಾನ್  ಎಂದು ಬರೆಯುವ ಬದಲು ಸಿಯಾಚಿನ್ ಎಂದು ಬರೆದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿ,  ಸಿಎಂ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾದ ನಂತರ ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದ ಸಿಬ್ಬಂದಿ ಟ್ವಿಟ್ನ್ನು ಅಳಿಸಿ ಹಾಕಿದರು. ಜತೆಗೆ ಫೇಸ್ಬುಕ್ನಲ್ಲಿ ಸಿಯಾಚಿನ್ ಪದವನ್ನು ತೆಗೆದು ಹಾಕಿದರು..

2016: ವಾರಾಣಸಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡುವುದನ್ನು ಕಲಿಯುತ್ತಿದ್ದಾರೆ, ಇದನ್ನು ನೋಡಿ ನನಗೆ ಅತೀವ ಸಂತಸವಾಗಿದೆ. ಆದರೆ ರಾಹುಲ್ ಮಾತನಾಡಿದರೆ ಭೂಕಂಪನವಾಗಲು ಸಾಧ್ಯವೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು. ತಮ್ಮ ಸ್ವಕ್ಷೇತ್ರ ವಾರಾಣಸಿಗೆ ಭೇಟಿ ನೀಡಿದ ನರೇಂದ್ರ ಮೋದಿ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಗುದ್ದಲಿಪೂಜೆ ನೆರವೇರಿ ನಂತರ ಮಾತನಾಡಿದರು. ಕಾಂಗ್ರೆಸ್ ಯುವ ನಾಯಕ ಈಗ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಇದು ಸಂತಸದ ವಿಷಯ. 2009ರಲ್ಲಿ ರಾಹುಲ್ ಗಾಂಧಿಗೆ ಮಾತನಾಡಲು ಬರುತ್ತಲೇ ಇರಲಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ದೇಶದ ಜನರು ಕಳೆದ 10 ವರ್ಷಗಳಿಂದ ರಾಹುಲ್ ಗಾಂಧಿಯನ್ನು ಸಹಿಸಿಕೊಂಡು ಬಂದಿದ್ದಾರೆ. ಈಗಲೂ ರಾಹುಲ್ ಗಾಂಧಿ ಮಾತನಾಡದಿದ್ದರೆ ಖಂಡಿತವಾಗಿಯೂ ಭೂಕಂಪವಾಗುತ್ತಿತ್ತು. ಆದರೆ ಅವರು ಮಾತನಾಡಲು ಪ್ರಾರಂಭಿಸಿದ್ದಾರೆ. ಹಾಗಾಗಿ ಭೂಕಂಪವಾಗುವ ಸಾಧ್ಯತೆ ಇಲ್ಲವೇ ಇಲ್ಲ. ಗುಜರಾತ್ ಮೆಹ್ಸಾನದಲ್ಲಿ ರಾಹುಲ್ ಗಾಂಧಿ ಮಾತನಾಡಿದ ನಂತರ ಭೂಕಂಪವಾಯಿತೋ ಇಲ್ಲವೋ ಎಂದು ಎಲ್ಲರಿಗೂ ತಿಳಿದಿದೆ ಎಂದು ಮೋದಿ ರಾಹುಲ್ಗೆ ತಿರುಗೇಟು ನೀಡಿದರು. ನರೇಂದ್ರ ಮೋದಿ ಸಹಾರಾ ಸಂಸ್ಥೆಯಿಂದ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ರಾಹುಲ್ ಗಾಂಧಿ ಮೆಹ್ಸಾನದಲ್ಲಿ ಆರೋಪಿಸಿದ್ದರು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ಆಧಾರ ರಹಿತವಾದುದು ಎಂದು ಸಾಬೀತಾಗಿರುವಾಗ ಮತ್ತೆ ರಾಹುಲ್ ವಿಷಯವನ್ನು ಪ್ರಸ್ತಾಪಸುತ್ತಿದ್ದಾರೆ ಎಂದು ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
2016: ನವದೆಹಲಿ: ಹೆಚ್ಚು ಹೆಚ್ಚು ಜನರು ಸಾರ್ವಜನಿಕ ಬಸ್ಗಳಲ್ಲಿ ಪ್ರಯಾಣ ಮಾಡುವಂತೆ ಉತ್ತೇಜಿಸುವ ಸಲುವಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಬಸ್ ದರಗಳಲ್ಲಿ ಶೇ. 75 ರವರೆಗೆ ಕಡಿತ ಮಾಡಿತು. 2017 ಜನವರಿ 1 ರಿಂದ 31ರವರೆಗೆ ಪ್ರಯಾಣಿಕರು ರಿಯಾಯತಿ ಪಡೆಯಲಿದ್ದಾರೆ ಎಂದು ದೆಹಲಿ ಸರ್ಕಾರ ತಿಳಿಸಿತು. ಹವಾನಿಯಂತ್ರಿತವಲ್ಲದ ಬಸ್ಗಳಲ್ಲಿ ಕೇವಲ 5 ರೂ. ಮತ್ತು ಹವಾನಿಯಂತ್ರಿತ ಬಸ್ಗಳಲ್ಲಿ 10 ರೂ. ದರ ನಿಗದಿ ಮಾಡಲಾಗಿದೆ. ಪ್ರಸ್ತುತ ಸಾಮಾನ್ಯ ಬಸ್ಗಳಲ್ಲಿ 5 ರಿಂದ 15 ರೂ. ಟಿಕೆಟ್ ದರ ಇದೆ ಮತ್ತು ಎಸಿ ಬಸ್ಗಳಲ್ಲಿ 10 ರಿಂದ 25 ರೂ. ದರ ಇದೆ. ಜತೆಗೆ 21 ವರ್ಷದೊಳಗಿನ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಫ್ರೀ ಪಾಸ್ ವಿತರಣೆ ಮಾಡಲೂ ಸಹ ದೆಹಲಿ ಸರ್ಕಾರ ನಿರ್ಧರಿಸಿತು. ದೆಹಲಿ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ಕಡಿಮೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿದರೆ ವಾಯು ಮಾಲಿನ್ಯ ಸಹ ತಗ್ಗಲಿದೆ. ಬಸ್ ದರ ಕಡಿಮೆ ಮಾಡುವುದರಿಂದ ಹೆಚ್ಚಿನ ಜನರು ಬಸ್ನಲ್ಲಿ ಪ್ರಯಾಣ ಮಾಡುವ ವಿಶ್ವಾಸವಿದೆ. ಸಂಬಂಧ ದೆಹಲಿ ಸರ್ಕಾರ ಇನ್ನು 2-3 ದಿನಗಳಲ್ಲಿ ಸಂಬಂಧ ಅಧಿಸೂಚನೆ ಹೊರಡಿಸಲಿದೆ ಎಂದು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದರು.
2016: ನವದೆಹಲಿನೀವು (ಮೋದಿ) ನನ್ನನ್ನು ಎಷ್ಟು ಬಾರಿ ಬೇಕಾದರೂ ಅಣಕಿಸಿ. ಆದರೆ,
ಭ್ರಷ್ಟಾಚಾರದ ಆರೋಪಗಳಿಗೆ ಉತ್ತರ ಕೊಡಿಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು. ತಮ್ಮ ಹಿಂದಿನ ದಿನದ ಭಾಷಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಣಕಕ್ಕೆ ರಾಹುಲ್ ರೀತಿ ತಿರುಗೇಟು ನೀಡಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಜರಾತ್ ಮೆಹ್ಸಾನದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಆರೋಪ ಠುಸ್ ಪಟಾಕಿಯಾದ ನಂತರ ಸಹ ಕಾಂಗ್ರೆಸ್ ಪ್ರಧಾನಿ ವಿರುದ್ಧ ಹೊಸ ಆರೋಪ ಮಾಡಲು ಸಿದ್ಧತೆ ನಡೆಸಿತು. ಮೋದಿ ಭ್ರಷ್ಟಾಚಾರದ ಕುರಿತ ಇನ್ನಷ್ಟು ಹೊಸ ದಾಖಲೆ ಇದೆ, ಅದನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು. ಮೋದಿ ಹೊಂದಿರುವ ಕಪ್ಪು ಹಣದ ಕುರಿತು ನಮ್ಮ ಬಳಿ ಇನ್ನಷ್ಟು ಹೊಸ ಮಾಹಿತಿ ಮತ್ತು ದಾಖಲೆಗಳಿವೆ. ಇವುಗಳನ್ನು ಯಾವಾಗ ಬಿಡುಗಡೆ ಮಾಡಬೇಕು ಎಂಬುದರ ಕುರಿತು ರಾಹುಲ್ ಗಾಂಧಿ ನಿರ್ಧರಿಸಲಿದ್ದಾರೆ. ನಾವು ಬಿಡುಗಡೆ ಮಾಡಲಿರುವ ಹೊಸ ದಾಖಲೆಗಳು ಅನಾಣ್ಯೀಕರಣದ ಕುರಿತು ಅಲ್ಲ, ಕಪ್ಪು ಹಣದ ಕುರಿತಾಗಿರಲಿವೆ. ಹೊಸ ದಾಖಲೆಗಳಿಂದ ಮೋದಿ ನಿಜವಾದ ಬಣ್ಣ ಬಯಲಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ಸ್ಪಷ್ಟಪಡಿಸಿದವು. ರಾಹುಲ್ ಗಾಂಧಿ ಮೆಹ್ಸಾನದಲ್ಲಿ ಪ್ರಧಾನಿ ವಿರುದ್ಧ ಮಾಡಿದ ಆರೋಪ ಸಾಜಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಜತೆಗೆ ಸುಪ್ರೀಂ ಕೋರ್ಟ್ ಈಗಾಗಲೇ ಆಧಾರರಹಿತ ಎಂದು ತಿರಸ್ಕರಿಸಿರುವ ಪ್ರಕರಣವನ್ನು ರಾಹುಲ್ ಮತ್ತೆ ಉಲ್ಲೇಖಿಸಿ ಮುಖಭಂಗಕ್ಕೆ ಒಳಗಾಗಿದ್ದರು. ಜತೆಗೆ ಕಾಂಗ್ರೆಸ್ ಕೆಲ ಹಿರಿಯ ನಾಯಕರು ರಾಹುಲ್ ವಿರುದ್ಧ ತಮ್ಮ ಅಸಮಧಾನ ವ್ಯಕ್ತ ಪಡಿಸಿದ್ದರು.
2016: ನವದೆಹಲಿಹಳೆಯ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ರದ್ದತಿಯ
ಬಳಿಕ ದೇಶದ ವಿವಿಧ ಭಾಗಗಳಲ್ಲಿ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಒಟ್ಟು ರೂ.3,300 ಕೋಟಿ ಕಪ್ಪುಆದಾಯ ಪತ್ತೆಯಾಯಿತು.  ನವೆಂಬರ್‌ 9 ಬಳಿಕ ದೇಶದ 734 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ದಾಳಿಗಳಲ್ಲಿ ದಾಖಲೆ ಇಲ್ಲದ ಒಟ್ಟು ರೂ.3,300 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಆಸ್ತಿ ಪತ್ತೆಯಾಗಿದೆ. ಪೈಕಿ ರೂ.92 ಕೋಟಿ ಮೌಲ್ಯದ ಹೊಸ ನೋಟುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿದವು. ದಾಳಿ ವೇಳೆ ರೂ.500 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ರೂ.92 ಕೋಟಿ ಮೌಲ್ಯದ ರೂ.2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರು. ರೂ. 421 ಕೋಟಿಗೂ ಹೆಚ್ಚು ನಗದು ಹಾಗೂ ರೂ.500 ಕೋಟಿ ಆಸ್ತಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್‌ 20ರವೆರೆಗೆ ಒಟ್ಟು ರೂ.3,300 ಕೋಟಿ ಕಪ್ಪು ಆದಾಯ ಪತ್ತೆಯಾಗಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದರು. ದಾಖಲೆ ಇಲ್ಲದ ಆದಾಯ ಮಾತ್ರವಲ್ಲದೆ ಬೇನಾಮಿ ಆಸ್ತಿ ಪತ್ತೆಗೂಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಪ್ಪುಆದಾಯ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದರು.
2016: ಅಲ್ಜೇರ್ಸ್‌: ಸಹರಾ ಮರುಭೂಮಿಯಲ್ಲಿ 37 ವರ್ಷಗಳ ಬಳಿಕ ಹಿಮಮಳೆಯಾಯಿತು. ಉತ್ತರ ಆಫ್ರಿಕಾದ ಅಲ್ಜೇರಿಯಾದ ಸಹರಾ ಮರುಭೂಮಿಯಲ್ಲಿ ಹಿಮಮಳೆಯಾಗಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ಸಹರಾದ ಯೇನ್ಸೆಫ್ರಾದಲ್ಲಿ 1979ರಲ್ಲಿ ಹಿಮಮಳೆಯಾಗಿತ್ತು. ಬಳಿಕ ಇತ್ತೀಚೆಗೆ ಅಲ್ಜೇರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಮಳೆಯಾಯಿತು. ಮರಳ ಮೇಲೆ ಹಿಮ ಸುರಿದಿರುವ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಕರೀಮ್ಬೋಚೆಟಟ (Karim Bouchetata) ಎಂಬುವರು ಕ್ಲಿಕ್ಕಿಸಿರುವ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ಆದವು. ಮರುಭೂಮಿಯ ಮಂಜಿನ ಮಳೆಗೆ ಸ್ಥಳೀಯರು ಪುಳಕಗೊಂಡಿದ್ದಾರೆ. 2005 ಮತ್ತು 2012ರಲ್ಲಿ ಸಹರಾದ ಕೆಲ ಪ್ರದೇಶಗಳಲ್ಲಿ ಅಲ್ಪ ಪ್ರಮಾಣದಲ್ಲಿ ಹಿಮಮಳೆಯಾಗಿತ್ತು.

 2008: ಗಣಿಗಾರಿಕೆ ಅಕ್ರಮಗಳ ಕುರಿತು ತನಿಖೆ ನಡೆಸಿದ ಲೋಕಾಯುಕ್ತರು, ಈ ಹಗರಣದಲ್ಲಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಇತರ 12 ಮಂದಿ ಹಿರಿಯ ಅಧಿಕಾರಿಗಳಿಂದ 745.56 ಕೋಟಿ ರೂಪಾಯಿ ವಸೂಲಿ ಮಾಡುವಂತೆಯೂ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿತು. ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು; ಭ್ರಷ್ಟಾಚಾರ ನಿರ್ಮೂಲನೆ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕ್ದದಮೆ ಹೂಡಬೇಕು ಎಂದು ಸಲಹೆ ನೀಡಲಾಗಿದೆ. ಆದರೆ, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ನಿಯಮಬಾಹಿರವಾಗಿ ಗಣಿ ಪರವಾನಗಿ ಕೊಟ್ಟಿರುವುದರಿಂದ ಸುಮಾರು 23.22 ಕೋಟಿ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ಮೊತ್ತವನ್ನು ಅವರಿಂದಲೂ ವಸೂಲಿ ಮಾಡುವಂತೆ ಸಲಹೆ ನೀಡಿತು. ಐಪಿಎಸ್ ಅಧಿಕಾರಿ ಆದ ಡಿಜಿಪಿ ಜೀಜಾ ಮಾಧವನ್ ಹರಿಸಿಂಗ್, ಐಎಎಸ್ ಅಧಿಕಾರಿಗಳಾದ ಗಂಗಾರಾಮ್ ಬಡೇರಿಯಾ, ಮಹೇಂದ್ರ ಜೈನ್, ಡಿ.ಎಸ್.ಅಶ್ವತ್ಥ್, ಕೆ.ಎಸ್.ಮಂಜುನಾಥ್, ಐ.ಆರ್.ಪೆರುಮಾಳ್, ವಿ.ಉಮೇಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಜಿ ನಿರ್ದೇಶಕ ಡಾ.ಬಸಪ್ಪ ರೆಡ್ಡಿ, ಎಂಎಂಎಲ್‌ನ ಡಿಜಿಎಂಗಳಾದ ಕೆ.ಶ್ರೀನಿವಾಸ್, ರಾಮಪ್ಪ ಮತ್ತು ಶಂಕರಲಿಂಗಯ್ಯ ಅವರು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ವರದಿ ಹೇಳಿತು.

2008: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರೀಯ ಸಲಹಾ ಮಂಡಲಿಯ (ಎನ್‌ಎಸಿ) ಅಧ್ಯಕ್ಷರಾಗುವ ಮೂಲಕ ಲಾಭದ ಹುದ್ದೆ ಕಾಯ್ದೆಯನ್ನು ಉಲ್ಲಂಘಿಸಿಲ್ಲ ಎಂದು ಸಂಸದೀಯ ಸಮಿತಿ ತಿಳಿಸಿತು. ಕೇಂದ್ರ ಮತ್ತು ರಾಜ್ಯಗಳಲ್ಲಿಯ ಸಲಹಾ ಮಂಡಲಿಗಳು ಲಾಭದ ಹುದ್ದೆಗಳ ವ್ಯಾಪ್ತಿಯಿಂದ ಹೊರಗಿರುವ ಮೂರು ವಿಭಾಗಗಳಲ್ಲಿ ಒಂದಾಗಿವೆ ಎಂದು ಸಂಸತ್ತಿನ ಜಂಟಿ ಸಮಿತಿಯು ಅಭಿಪ್ರಾಯಪಟ್ಟಿತು. ಸಮಿತಿಯ ವರದಿಯನ್ನು ಲೋಕಸಭೆಯ ಮುಂದಿಡಲಾಯಿತು. ಇತರ ಎರಡು ವಿಭಾಗಗಳೆಂದರೆ ಕೇಂದ್ರ ಮತ್ತು ರಾಜ್ಯಗಳ ಸಚಿವರು, ಸಂಸತ್ತು ಹಾಗೂ ರಾಜ್ಯ ವಿಧಾನ ಮಂಡಲಗಳು. ಸಲಹಾ ಮಂಡಲಿಗಳು ನಿರ್ದಿಷ್ಟ ವಿಷಯ ಅಥವಾ ನೀತಿಗಳ ಬಗ್ಗೆ ಸಲಹೆ, ಶಿಫಾರಸ್ಸುಗಳನ್ನು ನೀಡುವ ಕೆಲಸ ಮಾಡುತ್ತವೆ. ಈ ಮಂಡಲಿಯ ಸದಸ್ಯರಿಗೆ ಸಂಬಳ ಅಥವಾ ಸಂಭಾವನೆ ಇರುವುದಿಲ್ಲ. ಬದಲಿಗೆ ಭತ್ಯೆ ನೀಡಲಾಗುತ್ತದೆ. ಆದ್ದರಿಂದ ಇವು ಲಾಭದ ಹುದ್ದೆಯ ವ್ಯಾಖ್ಯಾನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಂಸದ ಇಕ್ಬಾಲ್ ಅಹಮದ್ ಸರಡಗಿ ಅವರ ನೇತೃತ್ವದ ಜಂಟಿ ಸಮಿತಿಯು ಅಭಿಪ್ರಾಯಪಟ್ಟಿತು. ಲಾಭದ ಹುದ್ದೆ ವಿವಾದದಲ್ಲಿ ಜಯಾ ಬಚ್ಚನ್ ಅವರ ರಾಜ್ಯಸಭಾ ಸದಸ್ಯತ್ವ ರದ್ದಾದ ನಂತರ ಸೋನಿಯಾ ವಿರುದ್ಧ ಲಾಭದ ಹುದ್ದೆಯ ಟೀಕಾಸ್ತ್ರವನ್ನು ವಿರೋಧ ಪಕ್ಷಗಳು ಪ್ರಯೋಗಿಸಿದ್ದರಿಂದ ಸೋನಿಯಾ ಅವರು ಎನ್‌ಎಸಿಗೆ ರಾಜೀನಾಮೆ ನೀಡಿದ್ದರು. ಬಿಜೆಪಿ ಮತ್ತು ಟಿಡಿಪಿ ಸದಸ್ಯರು ಆಗಿನ ರಾಷ್ಟ್ರಪತಿ ಕಲಾಮ್ ಅವರಿಗೆ ದೂರು ಸಲ್ಲಿಸಿ ಸೋನಿಯಾ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಪಡಿಸುವಂತೆ ಒತ್ತಾಯಿಸಿದ್ದರು. ನೆಹರು, ಗಾಂಧಿ ಕುಟುಂಬದ ಅನೇಕ ಪ್ರತಿಷ್ಠಾನಗಳು ಸೇರಿದಂತೆ ಸೋನಿಯಾ ಅವರು ಸರ್ಕಾರದ ಅನುದಾನ ಬರುವ ಎಲ್ಲ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

2008: ಕಳೆದ ಸೆಪ್ಟೆಂಬರಿನಲ್ಲಿ ದೆಹಲಿಯ ಐದು ಕಡೆಗಳಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಿಗೆ ಸ್ಫೋಟಕವನ್ನು ಉಡುಪಿ ಜಿಲ್ಲೆಯ ಮಣಿಪಾಲದಿಂದ ತರಲಾಗಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ತಿಳಿಸಿದರು. ಪೊಲೀಸರು ನವದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಸಲ್ಲಿದ ಆರೋಪಪಟ್ಟಿಯ ಪ್ರಕಾರ 'ಇಂಡಿಯನ್ ಮುಜಾಹಿದ್ದೀನ್ ಗುಂಪಿನವರೆಂದು ಹೇಳಿಕೊಂಡ ಮಹಮ್ಮದ್ ಸೈಫ್ ಮತ್ತು ಮಹಮ್ಮದ್ ಖಾಲಿದ್ ಎಂಬ ಇಬ್ಬರು ಯುವಕರು ಮಣಿಪಾಲಕ್ಕೆ ತೆರಳಿ ಸಹಚರ ಶಾರೂಖ್‌ನಿಂದ ಸ್ಫೋಟಕಗಳನ್ನು ಪಡೆದಿದ್ದರು. ಅದನ್ನು ನೇರವಾಗಿ ದೆಹಲಿಗೆ ತರದೆ ಫರಿದಾಬಾದಿನಲ್ಲಿ ಇಳಿಸಿದ್ದರು.. ಅಲ್ಲಿಂದ ಕಾರಿನಲ್ಲಿ ಜಾಮಿ ಯಾ ನಗರದದಲ್ಲಿನ ಬಾಟ್ಲಾಹೌಸಿಗೆ ತರಲಾಗಿತ್ತು' ಇಪ್ಪತ್ತೊಂದು ಮಂದಿಯನ್ನು ಬಲಿತೆಗೆದುಕೊಂಡ ದೆಹಲಿ ಬಾಂಬ್ ಸ್ಫೋಟದ ನಂತರ ಪೊಲೀಸರು ಸೈಫ್ ಮತ್ತು ಖಾಲಿದ್ ಎಂಬ ಇಬ್ಬರು ಯುವಕರನ್ನು ಬಂಧಿಸಿದ್ದರು. ಬಂಧಿತ ಯುವಕರಿಂದ ಮಾಹಿತಿ ಪಡೆದ ನಂತರ ಇಬ್ಬರನ್ನೂ ಉಡುಪಿ -ಮಣಿಪಾಲಕ್ಕೆ ಕರೆದೊಯ್ದು ಬಾಂಬ್ ಸ್ಫೋಟದ ಹಿಂದಿನ ಸಂಚಿನ ವಿವರ ಪಡೆದಿದ್ದರು. ಆದರೆ ಸ್ಫೋಟದ ಸಂಚಿನಲ್ಲಿ ಕರ್ನಾಟಕದ ಹೆಸರು ಸೇರಿಕೊಳ್ಳಲು ಕಾರಣನಾದ ಶಾರುಖ್ ಬಗ್ಗೆ ಮಾತ್ರ ಪೊಲೀಸರ ಆರೋಪ ಪಟ್ಟಿಯಲ್ಲಿ ಉಲ್ಲೇಖ ಇರಲಿಲ್ಲ.

2008: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 'ಆಳ್ವಾಸ್ ವಿರಾಸತ್'ನಲ್ಲಿ ನೀಡಲಾಗುವ ಗೌರವಕ್ಕೆ ಖ್ಯಾತ ಬಾನ್ಸುರಿ ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರನ್ನು ಆಯ್ಕೆ ಮಾಡಲಾಯಿತು.

2008: ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯವನ್ನು ದೆಹಲಿಯಲ್ಲಿ ಸ್ಥಾಪಿಸುವ ಮಸೂದೆಗೆ ರಾಜ್ಯ ಸಭೆ ಅನುಮೋದನೆ ನೀಡಿತು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿನ ಉನ್ನತ ಸಂಶೋಧನೆ ಪ್ರಯೋಜನಗಳು ಸಾರ್ಕ್ ದೇಶಗಳಿಗೆ ಲಭ್ಯವಾಗುವುವು. ಅಲ್ಲದೆ ಪ್ರಾದೇಶಿಕ ಶಾಂತಿ ಸ್ಥಾಪನೆಗೂ ಇದು ಸಹಕಾರಿಯಾಗಲಿದೆ. ಈ ಮಸೂದೆ ದಕ್ಷಿಣ ಏಷ್ಯಾ ದೇಶಗಳಲ್ಲಿ ವಿಶ್ವಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗಲಿದೆ. ಹೇಮಂತ್ ಕರ್ಕರೆ ಸಾವಿನ ಕುರಿತು ಸಚಿವ ಎ.ಆರ್.ಅಂತುಳೆ ವಿವಾದಾತ್ಮಕ ಹೇಳಿಕೆ ಕುರಿತು ಸರ್ಕಾರ ವಿವರಣೆ ನೀಡಬೇಕು ಎಂದು ಬಿಜೆಪಿ ಸದಸ್ಯರು ಸದನದಲ್ಲಿ ಗದ್ದಲ ನಡೆಸುತ್ತಿದ್ದರೂ ಈ ಮಸೂದೆ ಮಾತ್ರ ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾಯಿತು. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಸದನದಲ್ಲಿ ಮಸೂದೆಯನ್ನು ಮಂಡಿಸಿದ್ದರು. ಈ ಮಸೂದೆ ಪ್ರಕಾರ ದಕ್ಷಿಣ ಏಷ್ಯಾದ ಪ್ರತಿಭಾವಂತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಬದ್ಧತೆ ಹೊಂದಿರುವ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗುತ್ತದೆ. ಹಾಗೂ ಸಂಶೋಧನೆ ಮತ್ತು ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ, ಹಲವು ವಿಷಯಗಳ ಅಧ್ಯಯನಕ್ಕೂ ಅವಕಾಶ ನೀಡುತ್ತದೆ. 2007 ರ ಏಪ್ರಿಲ್ 4 ರಂದು ನಡೆದಿದ್ದ 14 ನೇ ಸಾರ್ಕ್ ಸಮ್ಮೇಳನದಲ್ಲಿ ದಕ್ಷಿಣ ಏಷ್ಯಾ ವಿವಿ ಸ್ಥಾಪನೆಯ ಒಪ್ಪಂದಕ್ಕೆ ಸಾರ್ಕ್ ಸದಸ್ಯ ರಾಷ್ಟ್ರದ ಪ್ರತಿನಿಧಿಗಳು ಸಹಿ ಹಾಕಿದ್ದರು.

2007: ಕನ್ನಡ ಸಾಹಿತ್ಯ ಸಂವರ್ಧಕ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ `ಕಾವ್ಯಾನಂದ ಪುರಸ್ಕಾರ'ವನ್ನು ಹಿರಿಯ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಪ್ರದಾನ ಮಾಡಿದರು.

2007: ಚುನಾವಣಾ ಪ್ರಚಾರ ಸಮಯದಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ನೋಟಿಸ್ ಪಡೆದಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತನ್ನ ನೋಟಿಸುಗಳಿಗೆ ನೀಡಿರುವ ಸ್ಪಷ್ಟನೆಗಳಿಗೆ ಚುನಾವಣಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. `ಸೊಹ್ರಾಬ್ದುದೀನ್ ಎನ್ಕೌಂಟರ್ ಕುರಿತಂತೆ ಮೋದಿ ನೀಡಿದ ಹೇಳಿಕೆ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ `ಸಾವಿನ ವ್ಯಾಪಾರಿ' ಶಬ್ದ ಬಳಕೆಯನ್ನು ಒಪ್ಪುವಂತಿಲ್ಲ. ಎಲ್ಲ ವಿವರಗಳನ್ನು ಸಾಕಷ್ಟು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ, ಇವರಿಬ್ಬರೂ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದು ಸ್ಪಷ್ಟ' ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿತು.

2007: ಮಂಗಳೂರಿನ ಕಸಬ ಬೆಂಗ್ರೆಯಲ್ಲಿ ನಡೆಸುತ್ತಿದ್ದ ಗೋವಧೆ ತಡೆಯಲು ಹೋದ ಪೊಲೀಸರನ್ನು ಕಲ್ಲೆಸೆದು ಗಾಯಗೊಳಿಸಿದ ಹಿನ್ನೆಲೆಯಲ್ಲಿ ಗುಂಪು ಚದುರಿಸಲು ಲಾಠಿಪ್ರಹಾರ ಮಾಡಿದ ಘಟನೆ ಈದಿನ ನಡೆಯಿತು. ಕಸಬ ಬೆಂಗ್ರೆಯಲ್ಲಿ ಸಾರ್ವಜನಿಕವಾಗಿ ಗೋವಧೆ ಮಾಡಲಾಗುತ್ತಿದೆ ಎಂಬ ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪಣಂಬೂರು ಪೊಲೀಸರ ಮೇಲೆ ಗುಂಪೊಂದು ಕಲ್ಲುಗಳಿಂದ ಹಲ್ಲೆ ನಡೆಸಿತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಬಹಿರಂಗವಾಗಿ ಮಾಡುತ್ತಿದ್ದ ಗೋವಧೆಯನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದೇ ಈ ಅಹಿತಕರ ಘಟನೆ ನಡೆಯಲು ಕಾರಣ ಎನ್ನಲಾಯಿತು. ಸ್ಥಳಕ್ಕೆ ಆಗಮಿಸಿದ ಕೆ ಎಸ್ ಆರ್ ಪಿ ತುಕಡಿ ಕಲ್ಲು ತೂರಿದ ಗುಂಪಿನ ಮೇಲೆ ಬೆತ್ತ ಪ್ರಹಾರ ಮಾಡಿ ಗುಂಪನ್ನು ಚದುರಿಸಿತು. 26 ಮಂದಿಯನ್ನು ಬಂಧಿಸಲಾಯಿತು.

2007: ಐಸಿಐಸಿಐ ಬ್ಯಾಂಕಿನ ಸಾಲದ ಕಂತು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ಧರಾಜುವಿನ ಶವಸಂಸ್ಕಾರವು ಜಿಲ್ಲಾಧಿಕಾರಿಗಳ ಮಧ್ಯ ಪ್ರವೇಶದ ಫಲವಾಗಿ, ಕೊನೆಗೂ ನಾಲ್ಕನೇ ದಿನವಾದ ಈದಿನ ಚಾಮರಾಜ ನಗರ ತಾಲೂಕಿನ ಹರವೆಯಲ್ಲಿ ನಡೆಯಿತು. ಶವ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳು ಮೃತನ ಕುಟುಂಬದವರ ಹಾಗೂ ಪ್ರತಿಭಟನೆಕಾರರ ಬೇಡಿಕೆಗಳನ್ನು ಆಲಿಸಿ ಘಟನೆಯ ಬಗ್ಗೆ ತನಿಖೆ ನಡೆಸಿ ಪರಿಹಾರ ನೀಡುವುದಾಗಿ ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರವಷ್ಟೇ ಪ್ರತಿಭಟನಕಾರರು ಶವಸಂಸ್ಕಾರಕ್ಕೆ ಒಪ್ಪಿದರು. ಮೃತ ರೈತ ಸಿದ್ದರಾಜು ಮನೆ ಮುಂದೆ ಶವ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗಿತ್ತು.

2007: ದೀರ್ಘಕಾಲದ ಅನಾರೋಗ್ಯದಿಂದ ಕೊನೆಯುಸಿರೆಳೆದ ತೇಜಿ ಬಚ್ಚನ್ ಅವರ ಅಂತ್ಯಸಂಸ್ಕಾರ ಈದಿನ ಮುಂಬೈಯ ರುಯಿ ಪಾರ್ಕಿನಲ್ಲಿನ ರುದ್ರಭೂಮಿಯಲ್ಲಿ ನೆರವೇರಿತು. ಪುತ್ರ ಅಮಿತಾಭ್ ಬಚ್ಚನ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು.

2007: ಭಾರತೀಯ ಅಂತಾರಾಷ್ಟ್ರೀಯ ಕೇಂದ್ರವು ನವವದೆಹಲಿಯಲ್ಲಿ ಸಂಘಟಿಸಿದ, ಖ್ಯಾತ ಕಲಾವಿದ ಎಂ.ಎಫ್. ಹುಸೇನರ ಕಲಾ ಪ್ರದರ್ಶನವನ್ನು ಭಜರಂಗದಳದ ಬೆದರಿಕೆ ಹಿನ್ನೆಲೆಯಲ್ಲಿ ರದ್ದು ಪಡಿಸಲಾಯಿತು.
ಈ ಪ್ರದರ್ಶನದಲ್ಲಿ ಹುಸೇನರ ಮೊಘಲ್ ಇಂಡಿಯಾ ಸರಣಿಯಿಂದ ಆಯ್ದ 20 ವಿವಿಧ ವಿಶಿಷ್ಟ ಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಇದು 19 ವರ್ಶಗಳಲ್ಲೇ ಹುಸೇನರ ಮೊದಲ ಹಾಗೂ ಬಹುದೊಡ್ಡ ಪ್ರದರ್ಶನವಾಗಿತ್ತು. ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ್ದಾರೆ ಎಂದು ದೂರಿ ಹಿಂದೂ ಸಂಘಟನೆಗಳು ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಹುಸೇನ್ ಅವರು ಸ್ವಯಂ ಪ್ರೇರಣೆಯಿಂದ ದುಬೈಯಲ್ಲಿ ವಾಸವಾಗಿದ್ದಾರೆ.

2007: ಪಾಕಿಸ್ಥಾನದ ವಾಯವ್ಯ ಗಡಿಪ್ರಾಂತ್ಯದ ಮಸೀದಿಯಲ್ಲಿ ನಡೆದ ದಾಳಿಯಲ್ಲಿ 54 ಮಂದಿ ಸಾವನ್ನಪ್ಪಿ, 100 ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ಹಜ್ ಯಾತ್ರೆಯ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಉಗ್ರರನ್ನು ಸೌದಿ ಅಧಿಕಾರಿಗಳು ಬಂಧಿಸಿದರು. ಇವರು ಕುಖ್ಯಾತ ಭಯೋತ್ಪಾದಕ ಸಂಘಟನೆಯಾದ ಅಲ್ ಖೈದಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಸ್ಥಳೀಯ ಟಿ.ವಿ ಚಾನೆಲ್ ಒಂದು ವರದಿ ಮಾಡಿತು.

2007: ರಾಜ್ಯದ ವಿವಿಧೆಡೆಗಳಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಮಂಜೂರು ಮಾಡಿದ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಗ್ರಾಹಕ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖಯ್ಯ ಅವರು ಬೆಂಗಳೂರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಕಟ್ಟಡ ನಿರ್ಮಾಣ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರವು ಮಂಜೂರು ಮಾಡಿರುವ 986.72 ಲಕ್ಷ ರೂ.ಗಳಲ್ಲಿ 234.61 ಲಕ್ಷ ರೂಪಾಯಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸೇರಿದ್ದರೂ ಅದು ಕಟ್ಟಡ ಕಾಮಗಾರಿಯ ಉಸ್ತುವಾರಿ ವಹಿಸಿದ ಭೂಸೇನಾ ನಿಗಮದ ಕೈ ಸೇರಿಲ್ಲ ಎಂದು ಅವರು ನುಡಿದರು. ಡಿಸೆಂಬರ್ 24ರಂದು ಗ್ರಾಹಕರ ದಿನವನ್ನು ಆಚರಿಸಲಾಗುತ್ತಿದೆ. ಪ್ರಕರಣಗಳ ಇತ್ಯರ್ಥದಲ್ಲಿ ರಾಜ್ಯ ವೇದಿಕೆಯು ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಅವರು ವಿವರಿಸಿದರು.

2007: ರಾಜಧಾನಿಯ ಮೂಲಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಹೆಚ್ಚು ಮುತುವರ್ಜಿ ವಹಿಸಿದ ಕರ್ನಾಟಕದ ರಾಜ್ಯಪಾಲರ ಆಡಳಿತವು ದೇವನಹಳ್ಳಿ ಸಮೀಪದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ನಡುವಿನ ಅತಿ ವೇಗದ ಮೇಲುಪ್ಪರಿಗೆ (ಎಲಿವೇಟೆಡ್) ರೈಲು ಯೋಜನೆಯ ಜಾರಿಗೆ ಅಂತಿಮ ಒಪ್ಪಿಗೆ ನೀಡಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟಕ್ಕೆ ಸಮನಾದ ರಾಜ್ಯ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

2006: ಮೈಸೂರು ಜಿಲ್ಲೆಯ ಕಾಮನಕೆರೆಹುಂಡಿ ಗ್ರಾಮದಲ್ಲಿ ದಲಿತರ ಎಂಟು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ ಘಟನೆಯ ಬಗ್ಗೆ ಎರಡು ವಾರದ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಮೈಸೂರು ಜಿಲ್ಲಾ ಆಡಳಿತಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ) ನೋಟಿಸ್ ನೀಡಿತು. ಕಳೆದ ಮೂರು ವರ್ಷಗಳಿಂದ ಗ್ರಾಮದ ಸವರ್ಣೀಯರ ಬಹಿಷ್ಕಾರಕ್ಕೆ ಗುರಿಯಾಗಿದ್ದ ಈ ಕುಟುಂಬಗಳು ಕಷ್ಟಕರ ಜೀವನ ಸಾಗಿಸಿದ್ದವು. ಈ ಕುರಿತ ಪತ್ರಿಕಾ ವರದಿಯನ್ನು ಗಮನಿಸಿ ಸ್ವ ಇಚ್ಛೆಯ ಕ್ರಮ ಕೈಗೊಂಡ ಆಯೋಗವು ಇದು ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ವಿಷಯ ಎಂಬುದಾಗಿ ಪರಿಗಣಿಸಬೇಕು ಎಂದು ಹೇಳಿತು. ಸವರ್ಣೀಯರ ಆದೇಶಗಳನ್ನು ಪಾಲಿಸಲು ನಿರಾಕರಿಸಿದ್ದಕ್ಕಾಗಿ ಈ ಕುಟುಂಬಗಳಿಗೆ ಬಹಿಷ್ಕಾರ ಹಾಕಿ, ನೀರು, ಅಂಗಡಿಗಳು, ದೂರವಾಣಿ, ಆಸ್ಪತ್ರೆ, ಕೇಬಲ್ ಸೌಲಭ್ಯ ಮತ್ತು ಒಳಚರಂಡಿ ಸವಲತ್ತುಗಳನ್ನು ಕೂಡಾ ನಿರಾಕರಿಸಲಾಗಿತ್ತು. ಈ ಕುಟುಂಬಗಳ ಸದಸ್ಯರನ್ನು ಗ್ರಾಮದ ದೇವಾಲಯ ಪ್ರವೇಶಿಸದಂತೆ ನಿರ್ಬಂಧಿಸಿದ್ದು ಮಾತ್ರವಲ್ಲದೆ, ಸವರ್ಣೀಯರ ಸಮೀಪ ಹಾಗೂ ಅವರ ಹೊಲದ ಬಳಿ ಸುಳಿಯದಂತೆ ಕೂಡಾ ನಿರ್ಬಂಧಿಸಲಾಗಿತ್ತು. ಈ ಎಂಟು ಕುಟುಂಬಗಳ ಸದಸ್ಯರನ್ನು ಯಾವುದೇ ಕೆಲಸಗಳಿಗೆ ಕರೆಯದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿತ್ತು.

2005: ಭವಿಷ್ಯದಲ್ಲಿ ಮನೆಗೆ ನೇರ ಪ್ರಸಾರ (ಡಿಟಿಎಚ್) ಸೇವೆಗೆ ನೆರವಾಗುವ ಉದ್ದೇಶದ ಇನ್ಸಾಟ್ 4ಎ ಉಪಗ್ರಹವನ್ನು ಫ್ರೆಂಚ್ ಗಯಾನದ ಕೌರು ಉಪಗ್ರಹ ಉಡಾವಣಾ ಕೇಂದ್ರದಿಂದ ಏರಿಯನ್ 5ನೇ ಪೀಳಿಗೆಯ ರಾಕೆಟ್ ಮೂಲಕ ನಸುಕಿನ 4.03 ಗಂಟೆಗೆ ಯಶಸ್ವಿಯಾಗಿ ಉಡಾಯಿಸಲಾಯಿತು. ಉಪಗ್ರಹದಿಂದ 4.32ಕ್ಕೆ ಪ್ರಥಮ ಸಂಕೇತ ರವಾನೆಯಾುತು. 12 ವರ್ಷ ಆಯುಸ್ಸಿನ, ಡಿಟಿಎಚ್ ಸಾಮರ್ಥ್ಯ ವೃದ್ಧಿಸುವ ಈ ಉಪಗ್ರಹದ ಉಡಾವಣೆ ವೆಚ್ಚ 225 ಕೋಟಿ ರೂಪಾಯಿಗಳು.

2005: ಅಹಮದಾಬಾದಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟೆಸ್ಟಿನಲ್ಲಿ ಭಾರತಕ್ಕೆ 259 ರನ್ನುಗಳ ಭರ್ಜರಿ ಗೆಲುವಿನೊಂದಿಗೆ 2-0 ಅಂತರದ ಸರಣಿ ಜಯ ಪ್ರಾಪ್ತವಾಯಿತು. ಹರ್ ಭಜನ್ ಸಿಂಗ್ ಪಂದ್ಯಪುರುಷ ಎನಿಸಿದರು.

1989: ರೊಮೇನಿಯಾದ ಜನ ದಂಗೆ ಎದ್ದು ಕಮ್ಯೂನಿಸ್ಟ್ ಆಡಳಿತಗಾರ ನಿಕೋಲೇ ಸಿಯಾಸ್ಕೂ ಅವರನ್ನು ಪದಚ್ಯುತಿಗೊಳಿಸಿದರು.

1989: ಐರಿಷ್ ನಾಟಕಕಾರ ಸ್ಯಾಮ್ಯುಯೆಲ್ ಬೆಕೆಟ್ ತಮ್ಮ 83ನೇ ವಯಸ್ಸಿನಲ್ಲಿ ಪ್ಯಾರಿಸ್ಸಿನಲ್ಲಿ ನಿಧನರಾದರು.

1947: ಭಾರತದ ಮಾಜಿ ಕ್ರಿಕೆಟಿಗ ದಿಲಿಪ್ ದೋಶಿ ಹುಟ್ಟಿದ ದಿನ.

1918: ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಆಶ್ರಮದ ಹಿತೈಷಿಗಳ ವಿಶೇಷ ಸಭೆಯೊಂದರಲ್ಲಿ ಟ್ಯಾಗೋರರ ವಿಶ್ವಭಾರತಿ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಶಾಂತಿ ನಿಕೇತನದ ಮಾವಿನ ತೋಪಿನಲ್ಲಿ ಈ ಸಭೆ ನಡೆಯಿತು. ಮೂರು ವರ್ಷಗಳ ಬಳಿಕ 1921ರಲ್ಲಿ ಇದೇ ದಿನ ವಿಶ್ವಭಾರತಿ ವಿಶ್ವ ವಿದ್ಯಾಲಯವನ್ನು ಔಪಚಾರಿಕವಾಗಿ ಅದರ ಕುಲಪತಿ, ಭಾರತದ ಖ್ಯಾತ ವಿದ್ವಾಂಸ ಭೃಜೇಂದ್ರನಾಥ ಸಿಯಲ್ ಅವರ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು.

1887: ಭಾರತದ ಖ್ಯಾತ ಗಣಿತ ತಜ್ಞ ಶ್ರೀನಿವಾಸ ರಾಮಾನುಜಂ (1887-1920) ಹುಟ್ಟಿದ ದಿನ. ಫೆಲೋ ಆಫ್ ರಾಯಲ್ ಸೊಸೈಟಿಗೆ ಆಯ್ಕೆಯಾದ ಭಾರತದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಇವರು ಭಾಜನರಾಗಿದ್ದಾರೆ.

No comments:

Post a Comment