Monday, December 24, 2018

ಇಂದಿನ ಇತಿಹಾಸ History Today ಡಿಸೆಂಬರ್ 24

ಇಂದಿನ ಇತಿಹಾಸ History Today ಡಿಸೆಂಬರ್  24
2018: ನವದೆಹಲಿ: ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥ, ಪ್ರಧಾನಿ ನರೇಂದ್ರ ಮೋದಿ ಅವರು, ೧೦೦ ರೂ. ನಾಣ್ಯವನ್ನು ಬಿಡುಗಡೆ ಮಾಡಿದರು. ವಾಜಪೇಯಿ ಅವರ ೯೪ನೇ ಜನ್ಮ ವಾರ್ಷಿಕೋತ್ಸವದ ಹಿನ್ನೆಲೆ ಯಲ್ಲಿ ಒಂದು ದಿನ ಮುಂಚಿತವಾಗಿ ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ನಾಣ್ಯದ ಮೇಲೆ ವಾಜ ಪೇಯಿ ಅವರ ಭಾವಚಿತ್ರವಿದ್ದು, ಹಿಂದಿ ಹಾಗೂ ಇಂಗ್ಲಿಷಿನಲ್ಲಿ ಅವರ ಹೆಸರನ್ನು ಮುದ್ರಿಸಲಾಯಿತು.. ವಾಜಪೇಯಿ ಅವರ ಜನನ ಹಾಗೂ ಮರ ಣದ ವರ್ಷವನ್ನು ಸೂಚಿಸಲು ೧೯೨೪ -೨೦೧೮ ಎಂದು ನಾಣ್ಯದ ಮೇಲೆ ಮುದ್ರಣ ಮಾಡಲಾಗಿದೆ. ನಾಣ್ಯ ೩೫ ಗ್ರಾಂ ತೂಕವಿದೆ. ಇನ್ನು ನಾಣ್ಯದ ಮತ್ತೊಂದು ಬದಿಯಲ್ಲಿ ಅಶೋಕ ಸ್ತಂಭದ ಲಾಂಛನವಿದ್ದು, ಸತ್ಯಮೇವ ಜಯತೇ ಹಾಗೂ ೧೦೦ ಎಂಬ ಮುದ್ರಣವಿದೆ. ನಾಣ್ಯ ಬಿಡುಗಡೆ ಬಳಿಕ ಮಾತನಾಡಿದ ಮೋದಿ, ಅಟಲ್ ಜೀ ನಮ್ಮೊಂದಿಗಿಲ್ಲ ಎನ್ನು ವುದನ್ನು ನನ್ನ ಮನಸ್ಸು ಇನ್ನೂ ನಂಬಲು ಸಿದ್ಧವಿಲ್ಲ. ಸಮಾಜದ ಎಲ್ಲಾ ವರ್ಗದವರು ಪ್ರೀತಿ ಹಾಗೂ ಗೌರವದಿಂದ ಕಾಣುತ್ತಿದ್ದ ನಾಯಕ ವಾಜಪೇಯಿ ಎಂದು ಹೇಳಿದ್ದರು. ಒಂದು ಬದಿಯಲ್ಲಿ ಭಾರತ ಹಾಗೂ ಮತ್ತೊಂದು ಬದಿಯಲ್ಲಿ ಇಂಡಿಯಾ ಎಂದು ದೇವನಾಗರಿ ಮತ್ತು ಇಂಗ್ಲಿಷಿನಲ್ಲಿ ಬರೆಯಲಾಗಿದೆ. ಕಾರ್ಯಕ್ರಮದಲ್ಲಿ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಉಪಸ್ಥಿತರಿದ್ದರು.ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ ೧೬ರಂದು ವಾಜಪೇಯಿ(೯೩) ನಿಧನರಾದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅಜಾತಶತ್ರುವಾಗಿ ದೇಶದ ಅಭಿವೃದ್ಧಿಗೆ ಹೋರಾಡಿದ ಅಟಲ್ ಜೀ ಜನ್ಮ ದಿನ(ಡಿಸೆಂಬರ್ ೨೫)ವನ್ನು ಬಿಜೆಪಿಉತ್ತಮ ಆಡಳಿತ ದಿನವಾಗಿ ಆಚರಿಸುತ್ತದೆ. ಅಟಲ್ ಅವರ ಗೌರವಾರ್ಥ ಹಲವಾರು ಸ್ಥಳಗಳನ್ನ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲಾಗಿದೆ. ಹಿಮಾಲ ಯದ ನಾಲ್ಕು ಶಿಖರಗಳಿಗೆ ಅಟಲ್ ಹೆಸರು ಇಡಲಾಗಿದೆ. ಹಾಗೇ ಛತ್ತೀಸ್‌ಗಢದ ನಯಾ ರಾಯ್ಪುರ್‌ಗೆ ಅಟಲ್ ನಗರ್ ಎಂದು ಮರುನಾಮಕರಣ ಮಾಡಲಾಗಿತ್ತು.
2018: ಇಸ್ಲಾಮಾಬಾದ್: ಇಲ್ಲಿನ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯವು ಪಾಕಿಸ್ತಾನದ ಪದಚ್ಯುತ ಪ್ರಧಾನಮಂತ್ರಿ ನವಾಜ್ ಷರೀಫ್ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಕಳೆದ ವಾರ ನ್ಯಾಯಾಲಯವು ತೀರ್ಪು ಪ್ರಮಾಣವನ್ನು ಈದಿನಕ್ಕೆ ಕಾಯ್ದಿರಿಸಿತ್ತು. ಅಲ್-ಅಝಿಝಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಅಲ್-ಅಝಿಝಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ಹೆಚ್ಚಿನ ದಾಖಲೆ ನೀಡಲು ಷರೀಫ್ ಪರ ವಕೀಲರು ಕಾಲಾವಕಾಶ ಕೇಳಿದ್ದರು. ಆದರೆ, ಇದಕ್ಕೆ ಕೋರ್ಟ್ ನಿರಾಕರಣೆ ಮಾಡಿತ್ತು. ಡಿಸೆಂಬರ್ ೨೪ರೊಳಗಾಗಿ ಎಲ್ಲ ರೀತಿಯ ದಾಖಲೆ ನೀಡಲು ಗಡುವು ನೀಡಿತ್ತು. ಇನ್ನು ಲಂಡನ್‌ನಲ್ಲಿ ಲಕ್ಸುರಿ ಅಪಾರ್ಟ್‌ಮೆಂಟ್ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಗೆ ೧೦ ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು. ಉತ್ತರದಾಯಿತ್ವ ನ್ಯಾಯಾಲಯ (ಅಕೌಂಟಬೆಲಿಟಿ ಕೋರ್ಟ್) ನ್ಯಾಯಾಧೀಶ ಮಹಮದ್ ಅರ್ಶದ್ ಮಲ್ಲಿಕ್, ೬೮ ವರ್ಷದ ನವಾಜ್ ವಿರುದ್ಧದ ಫ್ಲಾಗ್‌ಶಿಪ್ ಇನ್ವೆಸ್‌ಮೆಂಟ್ ಮತ್ತು ಅಲ್-ಅಝಿಝಿಯಾ ಪ್ರಕರಣಗಳ ವಿಚಾರಣೆಗಳನ್ನು ಪೂರ್ಣ ಗೊಳಿಸಿದ ನಂತರ ಡಿ.೨೪ರಂದು ತೀರ್ಪು ನೀಡುವುದಾಗಿ ಘೋಷಿಸಿದ್ದರು.ಅವೆನ್‌ಫೀಲ್ಡ್ ಪ್ರಾಪರ್ಟಿಸ್, ಫ್ಲಾಗ್‌ಶಿಪ್ ಇನ್ವೆಸ್ಟ್‌ಮೆಂಟ್ ಹಾಗೂ ಅಲ್-ಅಝಿಝಿಯಾ ಮೂರು ಭ್ರಷ್ಟಾಚಾರ ಪ್ರಕರಣಗಳು ನವಾಜ್ ಕೊರಳು ಸುತ್ತಿಕೊಂಡಿವೆ. ೨೦೧೭ರ ಜುಲೈನಲ್ಲಿ ಪನಾಮ ಪೇಪರ್ಸ್ ಹಗರಣದಲ್ಲಿ ಸುಪ್ರೀಂಕೋರ್ಟ್ ನವಾಜ್‌ರನ್ನು ಪ್ರಧಾನಿ ಹುದ್ದೆಯಿಂದ ಪದಚ್ಯುತಗೊ ಳಿಸಿತ್ತು. ೨೦೧೮ರ ಜುಲೈನಲ್ಲಿ ಅವೆನ್‌ಫೀಲ್ಡ್ ಭ್ರಷ್ಟಾಚಾರ ಹಗರಣದಲ್ಲಿ ನವಾಜ್, ಅವರ ಪುತ್ರಿ ಮಾರ್ಯಾಮ್ ಮತ್ತು ಅಳಿಯ-ನಿವೃತ್ತ ಸೇನಾಧಿಕಾರಿ ಮಹಮದ್ ಸಫ್ಡರ್ ಅವ ರನ್ನು ಅನುಕ್ರಮವಾಗಿ ೧೧, ಮತ್ತು ವರ್ಷ ಜೈಲು ಶಿಕ್ಷೆಗೆ ಗುರಿಯಾದರು.

2018: ಮುಂಬೈ: ಭಾರತವು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ತೆರಿಗೆ ದರಗಳನ್ನು ಇನ್ನಷ್ಟು ಇಳಿಸುವ ಮತ್ತು ರಾಷ್ಟ್ರ ಮಟ್ಟದ ಏಕ ಮಾರಾಟ ತೆರಿಗೆ ದರ ಜಾರಿಯತ್ತ ಸಾಗುವ ಸುಳಿವನ್ನು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನೀಡಿದರು. ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ಸಲುವಾಗಿ ಭಾರತವು ರಾಷ್ಟ್ರ ಮಟ್ಟದ ಏಕ ಮಾರಾಟ ತೆರಿಗೆ ದರ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್‍ಯೋನ್ಮುಖವಾಗಿದೆ. ದರವು ಶೇಕಡಾ ೧೨ ಮತ್ತು ಶೇಕಡಾ ೧೮ರ ನಡುವೆ ಇರುವ ಸಾಧ್ಯತೆ ಇದೆಎಂದು ಜೇಟ್ಲಿ ಹೇಳಿದರು. ತಮ್ಮ ಬ್ಲಾಗ್ ಪೋಸ್ಟಿನಲ್ಲಿ ಏಕ ತೆರಿಗೆ ಜಾರಿ ಸುಳಿವು ನೀಡಿದ ವಿತ್ತ ಸಚಿವರು ಇದೇ ವೇಳೆಗೆ ಹೊಸ ತೆರಿಗೆ ವ್ಯವಸ್ಥೆ ಬಗೆಗಿನ ಟೀಕೆಗಾಗಿ ವಿರೋಧಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರವು ವಿವಿಧ ಶ್ರೇಣಿಯ ಸರಕು ಮತ್ತು ಸೇವೆಗಳಿಗೆ ಶೇಕಡಾ ೨೮ರಿಂದ ಶೇಕಡಾ ೫ರವರೆಗೆ ತೆರಿಗೆ ನಿಗದಿ ಪಡಿಸಿದೆ. ಯಾವುದೇ ಉತ್ಪನ್ನದ ತೆರಿಗೆ ಅತಿಯಾಗಿ ಏರಬಾರದು ಎಂಬ ಕಾರಣಕ್ಕಾಗಿ ತೆರಿಗೆಯ ಹಲವು ಹಂತಗಳನ್ನು ನಿಗದಿ ಪಡಿಸಲಾಗಿದೆ. ಆದರೆ ಬಹುತೇಕ ಉತ್ಪನ್ನ, ಸೇವೆಗಳ ಮೇಲೆ ಕಡಿಮೆ ತೆರಿಗೆ ದರ ವಿಧಿಸಲಾಗಿದೆ. ಇದು ಹಣದುಬ್ಬರವನ್ನು ನಿಯಂತ್ರಿಸಿದೆ ಎಂದು ಜೇಟ್ಲಿ ಬರೆದರು. ಶೇಕಡಾ ೨೮ರ ತೆರಿಗೆ ಈಗ ಸಾಯುತ್ತಿರುವ ತೆರಿಗೆ ಹಂತವಾಗಿದೆಎಂದು ೨೩ ಉತ್ಪನ್ನಗಳ ತೆರಿಗೆ ಇಳಿಸಿದ  ಬೆನ್ನಲ್ಲೇ ಪ್ರಕಟಿಸಿರುವ ತಮ್ಮ ಬ್ಲಾಗ್ ಪೋಸ್ಟಿನಲ್ಲಿ ಜೇಟ್ಲಿ ಬರೆದರು. ಶೇಕಡಾ ೧೨ ಮತ್ತು ಶೇಕಡಾ ೧೮ರ ಎರಡು ಎರಡು ಪ್ರಮಾಣಿತ ದರಗಳ ಬದಲಿಗೆ ಇವುಗಳ ನಡುವಣ ಏಕ ಪ್ರಮಾಣಿತ ದರವನ್ನು (ಸರಾಸರಿ ದರ) ನಿಗದಿ ಪಡಿಸುವುದು ನಮ್ಮ ಭವಿಷ್ಯದ ಯತ್ನವಾಗಿದೆ ಎಂದು ಜೇಟ್ಲಿ ಹೇಳಿದರು. ಚಲನಚಿತ್ರ ಟಿಕೆಟ್, ಟಿವಿ ಮತ್ತು ಕಂಪ್ಯೂಟರ್ ಮಾನಿಟರ್ ಸ್ಕ್ರೀನ್ ಗಳು, ಪವರ್ ಬ್ಯಾಂಕ್ ಸೇರಿದಂತೆ ಒಟ್ಟು ೨೩ ಸರಕು ಮತ್ತು ಸೇವೆಗಳ ದರವನ್ನು ಇಳಿಸಿದ ಹಾಗೂ ಸಂರಕ್ಷಿತ ತರಕಾರಿಗಳನ್ನು ತೆರಿಗೆ ಮುಕ್ತ ಗೊಳಿಸಿದ ಕೇಂದ್ರದ ಕ್ರಮದ ಹಿನ್ನೆಲೆಯಲ್ಲಿ ವಿತ್ತ ಸಚಿವರು ನೀಡಿರುವ ಹೇಳಿಕೆ ಮಹತ್ವ ಪಡೆದಿದೆ. ಇಳಿಸಲಾಗಿರುವ ತೆರಿಗೆ ದರಗಳು ೨೦೧೯ರ ಜನವರಿ ೧ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ ಎಂದು ಜೇಟ್ಲಿ ಹೇಳಿದರು. ಈ ಮಧ್ಯೆ, ವಿಧಾನಸಭಾ ಚುನಾವಣೆಗಳಲ್ಲಿ ಅನುಭವಿಸಿರುವ ಪರಾಭವವು ಏಕಹಂತದ ಜಿಎಸ್‌ಟಿ ಬಗೆಗಿನ ಮೋದಿ ಸರ್ಕಾರದ ನಿಲುವನ್ನು ಬದಲಾಯಿಸಿದೆಯೇ ಎಂದು ಮಧ್ಯೆ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಪ್ರಶ್ನಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಪ್ರಧಾನಿಯವರು ತಮ್ಮ ಸುಖನಿದ್ದೆಯಿಂದ ಹೊರಬರುತ್ತಿದ್ದಾರೆಎಂದು ಛೇಡಿಸಿದ್ದರುರಾಷ್ಟ್ರವು ಶೂನ್ಯ ತೆರಿಗೆ ಹಂತ, ಶೇಕಡಾ ೫ರ ತೆರಿಗೆ ಹಂತ ಮತ್ತು ಲಕ್ಷುರಿ ಮತ್ತು ಆಲ್ಕೋಹಾಲ್, ಮಾದಕ ದ್ರವ್ಯ, ಸಿಗರೇಟ್ ಇತ್ಯಾದಿಪಾಪದ ಉತ್ಪನ್ನಗಳಿಗೆಏಕದರದ ಪ್ರಮಾಣಿತ ತೆರಿಗೆ ಹೊಂದುವತ್ತ ರಾಷ್ಟ್ರ ಗಮನಿಸಬೇಕಾಗಿದೆ ಎಂದೂ ಜೇಟ್ಲಿ ಹೇಳಿದರು. ೨೦೧೯ರ ಲೋಕಸಭಾ ಚುನಾವಣೆಗಳಿಗೆ ಮುಂಚಿತವಾಗಿ ಮಧ್ಯಮ ವರ್ಗದ ಜನರನ್ನು ಸೆಳೆಯುವ ಯತ್ನ ಇದು ಎಂದು ರಾಜಕೀಯ ವಲಯಗಳಲ್ಲಿ ಭಾವಿಸಲಾಯಿತು. ಮುಂದಿನ ಆದ್ಯತೆಯಾಗಿ ಸರ್ಕಾರವು ಸಿಮೆಂಟನ್ನು ಕಡಿಮೆ ತೆರಿಗೆಯ ಹಂತಕ್ಕೆ ವರ್ಗಾಯಿಸುವ ಬಗ್ಗೆ ಪರಿಶೀಲಿಸಲಿದೆ ಎಂದೂ ಜೇಟ್ಲಿ ಬರೆದರು. ಹೊಸ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೊಳಿಸಿದ್ದಕ್ಕೆ ಮತ್ತು ಹೆಚ್ಚಿನ ಮೊತ್ತದ ತೆರಿಗೆ ದರ ನಿಗದಿಪಡಿಸಿದ್ದಕ್ಕಾಗಿ ಕೇಂದ್ರವನ್ನು ಟೀಕಿಸುತ್ತಿರುವುದಕ್ಕಾಗಿ ವಿರೋಧ ಪಕ್ಷಗಳ ವಿರುದ್ಧ ಇದೇ ಬರಹದಲ್ಲ ಹರಿಹಾಯ್ದ ಜೇಟ್ಲಿ, ಏಕ ತೆರಿಗೆ ವ್ಯವಸ್ಥೆಯು ಉದ್ಯಮಿಗಳನ್ನು ಕಾಡುತ್ತಿದ್ದ ಬಹುವಿಧ ತೆರಿಗೆಗಳ ಕಾಟದಿಂದ ಮುಕ್ತಗೊಳಿಸಿದೆ. ೧೭ ರಿಟರ್ನ್ಸ್ ಸಲ್ಲಿಕೆ ಮತ್ತು ೧೭ ಇನ್‌ಸ್ಪೆಕ್ಟರ್‌ಗಳ ಜೊತೆ ವ್ಯವಹರಿಸಬೇಕಾಗಿದ್ದ ಉದ್ಯಮಿಗಳನ್ನು ಜಿಎಸ್‌ಟಿಯು ಈಗ ಎಲ್ಲ ತೆರಿಗೆಗಳ ಏಕ ಸೂರಿನ ಅಡಿಗೆ ತಂದಿದೆ ಎಂದು ವಿವರಿಸಿದರು. ಕಾಂಗ್ರೆಸ್ ಸರ್ಕಾರದ ಶೇಕಡಾ ೩೧ರ ಪರೋಕ್ಷ ತೆರಿಗೆಗೆ ಹೋಲಿಸಿದರೆ ಜಿಎಸ್‌ಟಿ ಅಡಿಯಲ್ಲಿನ ತೆರಿಗೆ ದರಗಳು ಅತ್ಯಂತ ಕಡಿಮೆಯಾಗಿವೆ ಎಂದು ಜೇಟ್ಲಿ ಪ್ರತಿಪಾದಿಸಿದರು. ಶೇಕಡಾ ೩೧ರಷ್ಟು ಪರೋಕ್ಷ ತೆರಿಗೆ ಹೇರಿ ಭಾರತವನ್ನು ಶೋಷಿಸಿದವರು ಮತ್ತು ನಿರಂತರವಾಗಿ ಜಿಎಸ್‌ಟಿಯನ್ನು ಗೌಣಗೊಳಿಸುತ್ತಿರುವವರು ಗಂಭೀರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬೇಜವಾಬ್ದಾರಿ ರಾಜಕೀಯ ಮತ್ತು ಬೇಜವಾಬ್ದಾರಿ ಆರ್ಥಿಕತೆಯು ರಸಾತಳದ ಕಡೆಗಿನ ಓಟ ಮಾತ್ರಎಂದುಜಿಎಸ್‌ಟಿಯ ೧೮ ತಿಂಗಳುಗಳುಶೀರ್ಷಿಕೆಯ ಬ್ಲಾಗ್ ಪೋಸ್ಟಿನಲ್ಲಿ ಜೇಟ್ಲಿ ಬರೆದರು. ಕೆಲವು ಉತ್ಪನ್ನಗಳನ್ನು ನಾವು ಶೇಕಡಾ ೨೮ರ ತೆರಿಗೆ ಹಂತದಲ್ಲಿ ಇರಿಸಿದ್ದು ಕ್ಷಣಿಕವಷ್ಟೆ. ಆದಾಯ ಹೆಚ್ಚುತ್ತಿದ್ದಂತೆಯೇ ನಾವು ತೆರಿಗೆ ದರಗಳನ್ನು ಇಳಿಸಲು ಆರಂಭಿಸಿದೆವು. ಬಹುತೇಕ ಉತ್ಪನ್ನಗಳು ಈಗ ತೆರಿಗೆ ದರದ ಇಳಿಕೆಯನ್ನು ಕಂಡಿವೆಎಂದು ಅವರು ಹೇಳಿದರು. ಕಳೆದ ವಾರಾಂತ್ಯದಲ್ಲಿ ಜಿಎಸ್‌ಟಿ ಮಂಡಳಿಯು ಎರಡು ಡಜನ್ ವಸ್ತುಗಳ ತೆರಿಗೆ ಕಡಿತಗೊಳಿಸಿದ್ದು, ಅದರ ಪರಿಣಾಮವಾಗಿ ಗರಿಷ್ಠ ತೆರಿಗೆ ಹಂತವಾದ ಶೇಕಡಾ ೨೮ರ ತೆರಿಗೆ ವ್ಯಾಪ್ತಿಯಲ್ಲಿ ಉಳಿದಿರುವ ಉತ್ಪನ್ನಗಳ ಸಂಖ್ಯೆ ಈಗ ಗಣನೀಯವಾಗಿ ಇಳಿದಿದೆ. ರಾಹುಲ್ ಗಾಂಧಿ ಅವರುಗಬ್ಬಾರ್ ಸಿಂಗ್ ಟ್ಯಾಕ್ಸ್ಎಂಬುದಾಗಿ ಟೀಕಿಸಿದ್ದ ನೂತನ ಜಿಎಸ್‌ಟಿ ವ್ಯವಸ್ಥೆಯ ಜಾರಿಯೊಂದಿಗೆ ತೆರಿಗೆ ದರ ಕ್ರಮೇಣ ಇಳಿಯಲಿದೆ ಎಂಬ ನಂಬಿಕೆ ತಮಗಿತ್ತು ಎಂದೂ ಜೇಟ್ಲಿ ಹೇಳಿದರು.
2018: ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ತನ್ನ ರಥಯಾತ್ರೆಗಳಿಗೆ ಅನುಮತಿ ನೀಡಿದ್ದ ಕಲ್ಕತ್ತ ಹೈಕೋರ್ಟಿನ ಏಕಸದಸ್ಯ ಪೀಠದ ಆದೇಶವನ್ನು ರದ್ದು ಪಡಿಸಿದ ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ಭಾರತೀಯ ಜನತಾ ಪಕ್ಷವು ಸಲ್ಲಿಸಿದ ಮನವಿಯ ತುರ್ತು ವಿಚಾರಣೆಗೆ ಸುಪೀಂಕೋರ್ಟ್ ನಿರಾಕರಿಸಿತು.ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ಕೋರಿ ಬಿಜೆಪಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಕೋರಿಕೆಯನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆಯನ್ನು ಜನವರಿ ಎರಡರಂದು ಕೋರ್ಟ್ ಪುನರಾಂಭವಾದಾಗ ಆಲಿಸಲಾಗುವುದು ಎಂದು ಹೇಳಿತು.ರಾಜ್ಯದಲ್ಲಿ ಮೂರು ರಥಯಾತ್ರೆಗಳನ್ನು ನಡೆಸಲು ಪಕ್ಷಕ್ಕೆ ಅನುಮತಿ ನೀಡಿ ಕಲ್ಕತ್ತ ಹೈಕೋರ್ಟಿನ ಏಕಸದಸ್ಯ ಪೀಠವು ನೀಡಿದ್ದ ತೀರ್ಪನ್ನು ವಿಭಾಗೀಯ ಪೀಠವು ಡಿಸೆಂಬರ್ ೨೨ರಂದು ರದ್ದು ಪಡಿಸಿತ್ತು. ಬಿಜೆಪಿಯು ತನ್ನ ಮೊದಲ ರ್‍ಯಾಲಿಗೆ ಬೀರ್ ಭೂಮ್ ಜಿಲ್ಲೆಯ ತಾರಾಪೀಠ ದೇಗುಲ ನಗರಿಯಲ್ಲಿ ಹಸಿರು ನಿಶಾನೆ ತೋರಿಸಲು ಯೋಜಿಸಿತ್ತು.ಬಿಜೆಪಿಯ ಪ್ರಾಥಮಿಕ ಯೋಜನೆಯಂತೆ ರಾಜ್ಯದಲ್ಲಿ ಡಿಸೆಂಬರ್ ೭ರಂದು ರಥಯಾತ್ರೆಗಳು ಆರಂಭವಾಗಬೇಕಾಗಿತ್ತು. ರಾಜ್ಯ ಸರ್ಕಾರವು ರಥಯಾತ್ರೆಗೆ ಅನುಮತಿ ನಿರಾಕರಿಸಿದ್ದರ ವಿರುದ್ಧ ಬಿಜೆಪಿ ಕಲ್ಕತ್ತ ಹೈಕೋರ್ಟ್ ಮೆಟ್ಟಿಲೇರಿತ್ತು.ಬಿಜೆಪಿಯ ಅಹವಾಲು ಆಲಿಕೆಯ ಬಳಿಕ ಕಲ್ಕತ್ತ ಹೈಕೋರ್ಟಿನ ಏಕಸದಸ್ಯ ಪೀಠವು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಪರಿಷ್ಕೃತ ವೇಳಾಪಟ್ಟಿಯಂತೆ ಹಸಿರುಧ್ವಜ ತೋರಿಸಬೇಕಾಗಿದ್ದ ಡಿಸೆಂಬರ್ ೨೮ರಿಂದ ೩೧ರವರೆಗಿನ ಬೃಹತ್ ಕಾರ್‍ಯಕ್ರಮಕ್ಕೆ ಅನುಮತಿ ನೀಡಿತ್ತು.ಏನಿದ್ದರೂ ಒಂದು ದಿನದ ಬಳಿಕ ಅದೇ ನ್ಯಾಯಾಲಯದ ದ್ವಿಸದಸ್ಯ ವಿಭಾಗೀಯ ಪೀಠವು ನ್ಯಾಯಾಲಯ ನೀಡಿದ್ದ ಅನುಮತಿಗೆ ತಡೆಯಾಜ್ಞೆ ನೀಡಿತು. ಪಶ್ಚಿಮ ಬಂಗಾಳ ಪೊಲೀಸರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ಹಿರಿಯ ವಕೀಲ ಮತ್ತು ಕಾಂಗ್ರೆಸ್ ಸಂಸತ್ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರು ಏಕಸದಸ್ಯ ಪೀಠದ ನ್ಯಾಯಮೂರ್ತಿಯವರು ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ್ದ ಗುಪ್ತಚರ ವರದಿಗಳನ್ನು ತಮ್ಮ ಆದೇಶ ನೀಡುವ ಮುನ್ನ ಅಧ್ಯಯನ ಮಾಡಲಿಲ್ಲ ಎಂದು ವಾದಿಸಿದ್ದರು.ಗುಪ್ತಚರ ವರದಿಗಳು ವಿವರವಾಗಿದ್ದು ಯಾತ್ರೆಯ ಮಾರ್ಗದಲ್ಲಿ ಉದ್ಭವಿಸಬಹುದಾದ ಅಪಾಯಗಳನ್ನು ಪೊಲೀಸರು ವಿವರಿಸಿದ್ದರು ಎಂದು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದ್ದರು.ಏಕಸದಸ್ಯ ಪೀಠವು ತನ್ನ ತೀರ್ಪು ಪ್ರಕಟಿಸುವ ಮುನ್ನ ವರದಿಗಳನ್ನು ಪರಿಶೀಲಿಸಬೇಕಾಗಿತ್ತು ಎಂದು ಮುಖ್ಯ ನ್ಯಾಯಮೂರ್ತಿ ದೇಬಸಿಸ್ ಕರ್ ಗುಪ್ತ ಮತ್ತು ನ್ಯಾಯಮೂರ್ತಿ ಶಂಪಾ ಸರ್ಕಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ಅಭಿಪ್ರಾಯ ಪಟ್ಟಿತ್ತು. ’ವಿಭಾಗೀಯ ಪೀಠವು ಯಾತ್ರೆಗೆ ಅವಕಾಶ ನಿರಾಕರಿಸಿಲ್ಲ. ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ. ಹಾಗೆಯೇ ನಮ್ಮ ಚಳವಳಿ ಮತ್ತು ವಿವಿಧ ಜಿಲ್ಲೆಗಳ ಕಾರ್‍ಯಕ್ರಮಗಳು ಮುಂದುವರೆಯುತ್ತವೆಎಂದು ಬಿಜೆಪಿ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದರು.ರಾಜ್ಯ ಸರ್ಕಾರವು ಶತಾಯಗತಾಯ ಕಾರ್‍ಯಕ್ರಮವನ್ನು ತಡೆಯಲು ಬಯಸಿದೆ. ಹೀಗಾಗಿಯೇ ನಾವು ನಮ್ಮ ರ್‍ಯಾಲಿಯನ್ನುಗಣತಂತ್ರ ರಕ್ಷಣಾ ರ್‍ಯಾಲಿಎಂಬುದಾಗಿ ಕರೆದಿದ್ದೇವೆಎಂದು ಬಿಜೆಪಿ ಬಂಗಾಳ ಘಟಕದ ಉಪಾಧ್ಯಕ್ಷ ಜಯಪ್ರಕಾಶ್ ಮಜುಂದಾರ್ ಹೇಳಿದ್ದರು.

2018: ನವದೆಹಲಿ:  ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ ಮೂರು ರಾಜ್ಯಗಳಲ್ಲಿ ಹೊಸದಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದೊಡನೆಯೇ ಕೃಷಿ ಸಾಲ ಮನ್ನಾ ಘೋಷಿಸಿದ ಬಳಿಕ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೊಕ್ಕಸ ಬರಿದಾಗಿದ್ದು, ಇತರ ಚುನಾವಣಾ ಭರವಸೆಗಳ ಈಡೇರಿಕೆಗೆ ಅಗತ್ಯವಾದ ಸಂಪನ್ಮೂಲ ಹೊಂದಿಲ್ಲ ಎಂದು ಮೂರೂ ರಾಜ್ಯಗಳ ಅಧಿಕಾರಿಗಳು ತಿಳಿಸಿರುವುದಾಗಿ ಪತ್ರಿಕಾ ವರದಿಯೊಂದು ತಿಳಿಸಿತು. ಈ  ಮೂರು ರಾಜ್ಯಗಳಲ್ಲಿ ಅಧಿಕಾರದಿಂದ ಹೊರಹೋಗಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರಗಳು ಪ್ರಸ್ತುತ ಹಣಕಾಸು ವರ್ಷದ ಮೊದಲ ಏಳು ತಿಂಗಳುಗಳಲ್ಲಿ ವರ್ಷದ ಮುಂಗಡಪತ್ರದಲ್ಲಿ ನಿಗದಿ ಪಡಿಸಲಾಗಿದ್ದ ಅನುದಾನದಲ್ಲಿ  ೭೦% ರಷ್ಟು ಹಣವನ್ನು ಖರ್ಚು ಮಾಡಿವೆ. ಪ್ರಸ್ತುತ ಸಾಲಿನ ವಿತ್ತ ವರ್ಷ ಮಾರ್ಚ್ ೩೧ಕ್ಕೆ ಕೊನೆಗೊಳ್ಳುತ್ತದೆ.ಮೂರೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ೧೦ ದಿನಗಳ ಒಳಗೆ ರೈತರ ಲಕ್ಷ ರೂಪಾಯಿಗಳವರೆಗಿನ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂದಿ ಅವರು ನೀಡಿದ್ದ ಭರವಸೆಯಂತೆ ಮಧ್ಯಪ್ರದೇಶ  ಮತ್ತು ಛತ್ತೀಸ್‌ಗಢದ ಕಾಂಗ್ರೆಸ್  ಸರ್ಕಾರಗಳು ಹಿಂದಿನ ವಾರ ಅಧಿಕಾರಕ್ಕೆ ಬಂದೊಡನೆಯೇ  ಡಿಸೆಂಬರ್ ೧೭ರಂದು ಸಾಲ ಮನ್ನಾ ಜಾರಿಯ ಘೋಷಣೆ ಮಾಡಿದವು.. ರಾಜಸ್ಥಾನದ ಮುಖ್ಯಮಂತ್ರಿ ಎರಡು ದಿನದ ಬಳಿಕ ಸಾಲಮನ್ನಾ ಜಾರಿಯ ಘೋಷಣೆ ಮಾಡಿದರು.ಮಧ್ಯಪ್ರದೇಶ ಮತ್ತು ರಾಜಸ್ಥಾನ ಎಲ್ಲಾ ಅಲ್ಪಾವಧಿಯ ಬೆಳೆ ಸಾಲಗಳನ್ನು ಮನ್ನಾ ಮಾಡಿವೆ. ರಾಜ್ಯದ ಗ್ರಾಮೀಣ ಬ್ಯಾಂಕುಗಳಿಂದ  ರೈತರು ಪಡೆದ ಸಾಲವನು ಚತ್ತೀಸ್‌ಗಢ ಸರ್ಕಾರ ಪಾವತಿಸಲಿದೆ. ಸಾಲ ಮನ್ನಾದಿಂದ ಮಧ್ಯಪ್ರದೇಶದಲ್ಲಿ ೩೫,೦೦೦ ರಿಂದ ೩೮,೦೦೦ ಕೋಟಿ ರೂ., ರಾಜಸ್ಥಾನದಲ್ಲಿ ೧೮,೦೦೦ ಕೋಟಿ ಮತ್ತು ಛತ್ತೀಸ್‌ಗಢದಲ್ಲಿ ,೧೦೦ ಕೋಟಿ ರೂ.ಗಳ ಹೊರೆ ಖಜಾನೆಯ ಮೇಲೆ ಬೀಳುವುದು.ಬೊಕ್ಕಸ ಬರಿದಾಗಿರುವ ಹಿನ್ನೆಲೆಯಲ್ಲಿ ಸಂಪನ್ಮೂಲ ಕ್ರೋಢೀಕರಣಕ್ಕೆ ಮಾರುಕಟ್ಟೆ ಸಾಲ ಸೇರಿದಂತೆ ಈಗ ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. "ನಾವು ನಿಧಿ ಕ್ರೋಢೀಕರಣದ ಮಾರ್ಗ ಹುಡುಕುತ್ತಿದ್ದೇವೆಎಂದು ಮಧ್ಯಪ್ರದೇಶ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.ಅಧಿಕಾರಿಗಳು ಸೂಚಿಸಿರುವ  ನಿಧಿ ಸಂಪನ್ಮೂಲ ಮಾರ್ಗಗಳು ಸೀಮಿತವಾಗಿರುವುದರಿಂದ  ಪ್ರಸಕ್ತ ಹಣಕಾಸು ವರ್ಷದಲ್ಲಿ ಇತರ ಪ್ರಮುಖ ಚುನಾವಣಾ ಭರವಸೆಗಳನ್ನು ಜಾರಿಗೆ ತರುವುದು ಕಷ್ಟ ಎನ್ನಲಾಗಿದೆ. ೨೦೧೯ರ  ಏಪ್ರಿಲ್-ಮೇ  ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಫೆಬ್ರುವರಿ- ಮಾರ್ಚ್ ತಿಂಗಳುಗಳಲ್ಲಿ ಮೂರೂ  ರಾಜ್ಯಗಳಲ್ಲಿ ಮುಂದಿನ ಸಾಲಿನ ಮುಂಗಡಪತ್ರಗಳ ಮಂಡನೆಯಾಗಲಿದೆ.ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕಾಂಗ್ರೆಸ್ ನೀಡಿರುವ ಇತರ ಪ್ರಮುಖ ಭರವಸೆಗಳಲ್ಲಿ  ಪ್ರತಿ ಕುಟುಂಬಕ್ಕೆ ೧೦,೦೦೦ ರೂಪಾಯಿ ಮತ್ತು ಕುಟುಂಬದ ಪ್ರತಿ ಸದಸ್ಯನಿಗೆ ೩೫೦೦ ರೂ. ನಿರುದ್ಯೋಗ ಭತ್ಯೆ ಸೇರಿದೆ. ಛತ್ತೀಸ್‌ಗಢದಲ್ಲಿ ಅನಿರ್ದಿಷ್ಟ ಮೊತ್ತದ ಒಂದು ವೇತನವನ್ನು ನೀಡುವ ಭರವಸೆಯನ್ನು ಕಾಂಗ್ರೆಸ್ ಕೊಟ್ಟಿತ್ತು. ಜೊತೆಗೆ ಮೂರೂ ರಾಜ್ಯಗಳಲ್ಲಿ ಬಡವರಿಗೆ ವಿದ್ಯುತ್ ಬಿಲ್ಲುಗಳ  ಮನ್ನಾ ಮತ್ತು ಇತರರಿಗೆ ಅರ್ಧದಷ್ಟು ವಿದ್ಯುತ್  ಬಿಲ್ ಕಡಿತದ ಭರವಸೆ ನೀಡಲಾಗಿದ್ದು, ಉಚಿತ ಶಿಕ್ಷಣ ಮತ್ತು ಉಚಿತ ಔಷಧ, ರೈತರಿಗೆ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಕೂಡಾ ಭರವಸೆಗಳಲ್ಲಿ ಸೇರಿದ್ದವು. ಛತ್ತೀಸ್‌ಗಢದಲ್ಲಿ ಪಾನ ನಿಷೇಧದ ಭರವಸೆಯನ್ನೂ ಪಕ್ಷ ಕೊಟ್ಟಿದೆ. ಇದು ಕೂಡಾ ಬೊಕ್ಕಸಕ್ಕೆ ಬರುವ ಆದಾಯಕ್ಕೆ ಕತ್ತರಿ ಹಾಕುತ್ತದೆ.ಹಿಂದಿನ ಮುಂಗಡಪತ್ರಗಳಲ್ಲಿ  ನೀಡಲಾದ ಅನುದಾನದಲ್ಲಿ  ಶೇಕಡಾ ೫೦ರಿಂದ ೭೦ರಷ್ಟು ಹಣವನ್ನು ಹೊರಹೋಗಿರುವ ಬಿಜೆಪಿ ಸರ್ಕಾರಗಳು ಖರ್ಚು ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ  ಅಶೋಕ ಗೆಹ್ಲೋಟ್ ಅವರು ಹಿಂದಿನ ಬಿಜೆಪಿ ಸರ್ಕಾರಗಳು ಬೊಕ್ಕಸಗಳನ್ನು ಬರಿದು ಮಾಡಿ ಹೋಗಿವೆ ಎಂದು ಆಪಾದಿಸಿದ್ದು, ಆದಾಯ ಸೃಷ್ಟಿಗೆ ಹೊಸ ಮಾರ್ಗ ಹುಡುತ್ತಿರುವುದಾಗಿ ಹೇಳಿದರು. ಮಧ್ಯಪ್ರದೇಶದಲ್ಲಿ ಕೃಷಿ ಸಾಲ ಮನ್ನಾ ಹೊರೆ ೨೦೧೮-೧೯ರ ಒಟ್ಟಾರೆ ವೆಚ್ಚ ,೮೬,೬೮೩ ಕೋಟಿ ರೂಪಾಯಿಗಳ  ಐದನೇ ಒಂದು ಭಾಗದಷು ಆಗುತ್ತದೆಬಿಜೆಪಿ ಸರ್ಕಾರ  ಈಗಾಗಲೇ  ಸುಮಾರು ,೨೫,೦೦೦ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದೆ.ಸಾಲದ ನಿಧಿಗೆ ಪಡೆಯಲು ಸಾಧ್ಯವಿದ್ದ ೬೦,೦೦೦ ಕೋಟಿ ರೂಪಾಯಿಯಲ್ಲಿ  ಶೇಕಡಾ  ೯೦% ರಷ್ಟನ್ನು ಸರ್ಕಾರ ಚುನಾವಣೆಗೆ ಮುನ್ನವೇ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು. ರಾಜಸ್ಥಾನದಲ್ಲಿ, ಕೃಷಿ ಸಾಲ ಮನ್ನಾ ಹೊರೆ ರೂ.,೦೭,೮೬೫ ಕೋಟಿ ರೂಪಾಯಿಯಾಗಿದ್ದು ಇದು ಒಟ್ಟು ಮುಂಗಡಪತ್ರದ ಆರನೇ ಒಂದು ಭಾಗದಷ್ಟಾಗುತ್ತದೆ. ಇದರಲ್ಲಿ  ಸುಮಾರು ೭೭,೦೦೦ ಕೋಟಿ ರೂಪಾಯಿಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ.ರಾಜಸ್ಥಾನದ ಅರ್ಥಶಾಸ್ತ್ರ ಪ್ರಾಧ್ಯಾಪಕ ವಿ.ವಿ. ಸಿಂಗ್ ಅವರು ಚುನಾವಣಾ ಭರವಸೆಯನ್ನು ಈಡೇರಿಸಲು ಮುಂಗಡಪತ್ರದ  ೨೫% ರಷ್ಟು ಹಣ ಬೇಕಾಗುತ್ತದೆ ಎಂದು ನುಡಿದರು.ಯಾವುದೇ ಹೆಚ್ಚುವರಿ ಖರ್ಚು ಹಣಕಾಸಿನ ಕೊರತೆಯ ಹೆಚ್ಚಳಕ್ಕೆ ಕಾರಣವಾಗಲಿದೆ, ಇದು ರಾಜ್ಯದ ಒಟ್ಟು ದೇಶೀಯ ಉತ್ಪನ್ನದ (ಜಿಎಸ್ ಡಿಪಿ) ಶೇಕಡಾ .೦೧ ಷ್ಟು ಆಗುತ್ತದೆ.ಪಸ್ತುತ ಸಾಲಿನ ಮುಂಗಡಪತ್ರದ ಪ್ರಕಾರ ರಾಜ್ಯ ಸರ್ಕಾರಕ್ಕೆ  ೩೬,೦೦೦ಕೋಟಿ ರೂಪಾಯಿಗಳ ಸಾಲ ಪಡೆಯುವ ಸಾಮರ್ಥ್ಯಇದೆ. ಆದರೆ ರಾಜ್ಯ ಈಗಾಗಲೇ ರಾಜ್ಯ ಈಗಾಗಲೇ ೨೫ ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ತೆಗೆದುಕೊಂಡಿದೆ ಎಂದು ಗೆಹ್ಲೋಟ್ ಒಪ್ಪಿಕೊಂಡರು. ಛತ್ತೀಸ್‌ಗಢದಲ್ಲಿ ಕೃಷಿ ಸಾಲದ ಮನ್ನಾ ಮತ್ತು ಭತ್ತ ಮತ್ತು ಮೆಕ್ಕೆ ಜೋಳದ ಕನಿಷ್ಠ ಬೆಂಬಲ ಬೆಲೆಯು ಕ್ವಿಂಟಲಿಗೆ ,೫೦೦ ರೂಪಾಯಿಗಳಷ್ಟು ಹೆಚ್ಚಾಗುವುದರಿಂದ ರಾಜ್ಯದ ಮುಂಗಡಪತ್ರದ ೮೩,೧೭೯ ಕೋಟಿ ರೂಪಾಯಿಯ ಹತ್ತನೇ ಒಂದರಷ್ಟು  ಹಣ ಸರ್ಕಾರಕ್ಕೆ ನಷ್ಟವಾಗುತ್ತದೆ.ಚತ್ತೀಸ್ ಗಢ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ಕೊರತೆಯ ಗುರಿಯನ್ನು ಉಲ್ಲಂಘಿಸದೆ ಭರವಸೆಗಳನ್ನು ಜಾರಿಗೆ ತರಲು ಸಾಧ್ಯವಾಗಬಹುದು ಎಂದು ಹಾರೈಸಿದರು.

2018: ಶಬರಿಮಲೈ: ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಲೇಬೇಕು ಎಂದು ಪಟ್ಟು ಹಿಡಿದು ದೇಗುಲದತ್ತ ಹೊರಟಿದ್ದ ಇಬ್ಬರು ಮಹಿಳೆಯರನ್ನು ದೇವಾಲಯದ ಮಾರ್ಗದಲ್ಲಿ ದೇಗುಲದಿಂದ ಕಿಮೀ ದೂರದಲ್ಲಿ ವಿವಿಧ ರಾಜ್ಯಗಳಿಂದ ಬಂದಿದ್ದ ಭಕ್ತರೇ ಪ್ರತಿಭಟಿಸಿ ತಡೆದು ವಾಪಸ್ ಕಳುಹಿಸಿದ ಘಟನೆ ಶಬರಿಮಲೈಯಲ್ಲಿ ಬೆಳಗ್ಗೆ ಘಟಿಸಿತು.ದೇವಾಲಯಕ್ಕೆ ಹೊರಟಿದ್ದ ಋತುಮತಿ ವಯಸ್ಸಿನ ತಮಿಳುನಾಡಿನಮಾನಿಥಿಸಂಘಟನೆಯ ೧೧ ಮಂದಿ ಮಹಿಳೆಯರನ್ನು ಮತ್ತು ಅವರಿಗೆ ರಕ್ಷಣೆ ಒದಗಿಸಿದ್ದ ಪೊಲೀಸರನ್ನು ಪ್ರತಿಭಟನಕಾರರು ಭಾನುವಾರ ಅಟ್ಟಾಡಿಸಿ ಓಡಿಸಿದ್ದರು. ಘಟನೆಯ ೧೦ ಗಂಟೆಗಳ ಬಳಿಕ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಮಹಿಳೆಯರು ದೇವಾಲಯದತ್ತ ಹೊರಟಿದ್ದರು.ಭಕ್ತರ ತೀವ್ರ ಪ್ರತಿಭಟನೆಯ ಮಧ್ಯೆ ಕನಕದುರ್ಗ ಎಚ್ಚರತಪ್ಪಿ ಬಿದ್ದರು. ಪೊಲೀಸರು ಆಕೆಗೆ ಸಮೀಪದ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಒದಗಿಸಿದರು. ಇನ್ನೊಬ್ಬ ಮಹಿಳೆ ಸಿಂಧು ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸರ್ಕಾರ ಮತ್ತು ಪೊಲೀಸರು ತಮಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲೇಬೇಕು ಎಂದು ಪಟ್ಟು ಹಿಡಿದರು. ಸ್ಥಳೀಯ ಪ್ರತಿಭಟನಕಾರರಿಗಿಂತಲೂ ಹೆಚ್ಚಾಗಿ, ಹೊರರಾಜ್ಯಗಳ ವಿವಿಧ ಕಡೆಗಳಿಂದ ಬಂದಿದ್ದ ಭಕ್ತರೇ ಒಟ್ಟಾಗಿಅಯ್ಯಪ್ಪ ಜಪಆರಂಭಿಸಿ ಮಹಿಳೆಯರನ್ನು ಅಡ್ಡಗಟ್ಟಿದಾಗ ಪೊಲೀಸರು ಅವರಿಗೆ ರಕ್ಷಣೆ ನೀಡಿದರು.ಪ್ರತಿಭಟನೆ ತೀವ್ರಗೊಂಡಾಗ ಪೊಲೀಸರು ವಾಪಸಾಗುವಂತೆ ಮಹಿಳೆಯರ ಮನವೊಲಿಸಲು ಯತ್ನಿಸಿದರು. ಆದರೆ ಬಿಂದು ಎಂಬ ಮಹಿಳೆ ಅವರ ಮಾತುಗಳಿಗೆ ಬಗ್ಗದೆ ಸುಪ್ರೀಂಕೋರ್ಟ್ ತೀರ್ಪನ್ನು ಪುನರುಚ್ಚರಿಸಿ ದೇವಾಯಲಯತ್ತ ಸುರಕ್ಷಿತವಾಗಿ ಸಾಗಲು ರಕ್ಷಣೆ ಒದಗಿಸುವಂತೆ ಪಟ್ಟು ಹಿಡಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದುದನ್ನು ಗಮನಿಸಿ ಪೊಲೀಸರು ಇಬ್ಬರೂ ಮಹಿಳೆಯರನ್ನು ವಾಪಸ್ ಕರೆದೊಯ್ಯಲು ನಿರ್ಧರಿಸಿದರು ಮತ್ತು ಅರಣ್ಯ ಇಲಾಖೆಯ ತುರ್ತು ರಕ್ಷಣಾ ವಾಹನದಲ್ಲಿ ಅವರನ್ನು ಪಂಪಾದ ಕಡೆಗೆ ಕರೆದೊಯ್ದರು ಎಂದು ವರದಿಗಳು ಹೇಳಿದವು. ಕೇರಳದ ಕೋಯಿಕ್ಕೋಡ್ ಮತ್ತು ಮಲಪ್ಪುರಂನಿಂದ ಕೆಎಸ್ ಆರ್ ಟಿಸಿ ಬಸ್ಸಿನ ಮೂಲಕ ಬಂದಿದ್ದ ಯುವತಿಯರಿಬ್ಬರೂ ಪೊಲೀಸರ ಪ್ರಬಲ ರಕ್ಷಣೆಯೊಂದಿಗೆ ದೇಗುಲದತ್ತ ಪಾದಯಾತ್ರೆ ಹೊರಟಿದ್ದರು. ಬೆಳಗ್ಗೆ .೩೦ರ ವೇಳೆಗೆ ಅವರು ಮರಕ್ಕೂಟ್ಟಂ ತಲುಪಿದ್ದರು. ಅಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಚದರಿಸಲು ಬಲಪ್ರಯೋಗ ಮಾಡಿದರು.ಆಗ ಸನ್ನಿಧಾನದಿಂದ ವಾಪಸಾಗುತ್ತಿದ್ದ ಭಕ್ತರೂ ಮಹಿಳೆಯರು ಮತ್ತು ಪೊಲೀಸ್ ಕ್ರಮದ ವಿರುದ್ಧ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಜೊತೆ ಸೇರಿದರು.ಪರಸ್ಪರ ಕೈಹಿಡಿದುಕೊಂಡಿದ್ದ ಮಹಿಳೆಯರಿಬ್ಬರೂ ಪೊಲೀಸ್ ಬೆಂಗಾವಲಿನಲ್ಲಿ ಮರಕ್ಕೂಟಂ ದಾಟಿ ವಸ್ತುಶಃ ಸರತಿ ಸಾಲಿನ ಮಹಾದ್ವಾರದದ ಮೂಲಕ ಸನ್ನಿಧಾನದತ್ತ ಹೊರಟಿದ್ದರು. ಆಗ ಪ್ರತಿಭಟನಕಾರರು ಮತ್ತು ಭಕ್ತರು ಚಂದ್ರನಂದನ ರಸ್ತೆಯಲ್ಲಿ ನಡಿಗೆ ದಾರಿಯನ್ನು ಬಂದ್ ಮಾಡಿದರು. ಮಹಿಳೆಯರು, ಮಕ್ಕಳು ಮತ್ತು ಹಿರಿಯರನ್ನು ಒಳಗೊಂಡಂತೆ ನೂರಾರು ಸಂಖ್ಯೆಯಲ್ಲಿದ್ದ ಭಕ್ತ ಪ್ರತಿಭಟನಕಾರರ ವಿರುದ್ಧ ಕ್ರಮಕೈಗೊಳ್ಳಲು ಭದ್ರತೆಗಾಗಿ ನಿಯೋಜಿಸಲಾಗಿದ್ದ ಕೇಂದ್ರೀಯ ಪಡೆಗಳಿಗೂ ಕಷ್ಟವಾಯಿತು ಎನ್ನಲಾಗಿದೆ. ವರದಿಗಳ ಪ್ರಕಾರ ಬಿಂದು ಅವರು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎನ್ನಲಾಯಿತು. ತಾವು ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ. ಬುಡಕಟ್ಟು ಮಂದಿ ಮತ್ತು ದಲಿತರ ಹಕ್ಕುಗಳ ರಕ್ಷಣೆ ತಮ್ಮ ಉದ್ದೇಶ ಎಂದು ಬಿಂದು ಮತ್ತು ಕನಕದುರ್ಗ ಇದಕ್ಕೂ ಮುನ್ನ ಹೇಳಿದ್ದರು. ಹಲವಾರು ಮಹಿಳಾ ಸಂಘಟನೆಗಳು ತಮಗೆ ಬೆಂಬಲ ನೀಡಿವೆ ಎಂದು ಬಿಂದು ಹೇಳಿದ್ದರು. ಶಬರಿಮಲೈಯ ತಂತ್ರಿ ಕೂಡ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಯುವತಿಯರ ಹಕ್ಕನ್ನು ನಿರಾಕರಿಸುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು. ಮಧ್ಯೆ ಅಗತ್ಯ ಬಿದ್ದಲ್ಲಿ ದೇವಾಲಯದ ಪರಂಪರಾಗತ ವಿಧಿವಿಧಾನಗಳ ರಕ್ಷಣೆಗಾಗಿ ಗರ್ಭಗುಡಿಯನ್ನು ಮುಚ್ಚುವಂತೆ ಪಂದಳ ರಾಜಕುಟುಂಬವು ದೇವಾಲಯದ ತಂತ್ರಿಗಳಿಗೆ ಸಲಹೆ ಮಾಡಿತ್ತುಏನನ್ಮಧ್ಯೆ ಕೇರಳದ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ಪೊಲೀಸರು ಇಬ್ಬರೂ ಮಹಿಳೆಯರಿಗೆ ರಕ್ಷಣೆ ಕೊಡಲೇಬೇಕಾಗುತ್ತದೆ ಎಂದು ಪ್ರತಿಪಾದಿಸಿದ್ದರು.ಭಾನುವಾರ ಶಬರಿಮಲೈಗೆ .೨೭ ಲಕ್ಷ ಯಾತ್ರಿಕರು ಆಗಮಿಸಿದ್ದರು.



2018: ನವದೆಹಲಿ: ರಾಮಜನ್ಮಭೂಮಿ -ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆಯನ್ನು 2019ರ ಜನವರಿ ೪ರಂದು ಸುಪ್ರೀಂಕೋರ್ಟ್ ಕೈಗೆತ್ತಿಕೊಳ್ಳಲಿದೆ.ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರನ್ನು ಒಳಗೊಂಡ ಪೀಠದ ಮುಂದೆ ಪ್ರಕರಣವನ್ನು ೨೦೧೯ರ ಜನವರಿ ೪ರಂದು ವಿಚಾರಣೆಗಾಗಿ ಪಟ್ಟಿ ಮಾಡಲಾಯಿತು. ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ೧೪ ಮೇಲ್ಮನವಿಗಳ ವಿಚಾರಣೆಗೆ ನ್ಯಾಯಾಲಯವು ತ್ರಿಸದಸ್ಯ ಪೀಠವನ್ನು ರಚಿಸುವ ಸಾಧ್ಯತೆಗಳಿವೆ. ಅಲಹಾಬಾದ್ ಹೈಕೋರ್ಟ್ ತನ್ನ ತೀರ್ಪಿನಲ್ಲಿ .೭೭ ಎಕರೆಯ ಭೂಮಿಯನ್ನು ರಾಮಲಲ್ಲಾ, ನಿರ್ಮೋಹಿ ಅಖಾರ ಮತ್ತು ಸುನ್ನಿ ವಕ್ಫ್ ಮಂಡಳಿ ಮೂರು ಕಕ್ಷಿದಾರರಿಗೆ ಸಮಾನವಾಗಿ ವಿಭಾಗಿಸಿಕೊಡಬೇಕು ಎಂದು ತೀರ್ಪು ನೀಡಿತ್ತು. ರಾಮಮಂದಿರ ಭೂ ವಿವಾದವನ್ನು ಸುಪ್ರಿಂಂಕೋರ್ಟ್ ಪ್ರತಿದಿನವೂ ಆಲಿಸಬೇಕು ಮತ್ತು ಆದಷ್ಟೂ ಬೇಗನೆ ತೀರ್ಪು ನೀಡಬೇಕು ಎಂಬುದು ಬಿಜೆಪಿ ಅಭಿಪ್ರಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಅವರು ಹೇಳಿದರು.ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಕಳೆದ ತಿಂಗಳು ಅಯೋಧ್ಯೆಯಲ್ಲಿ ಬೃಹತ್ ಸಭೆಯನ್ನು ನಡೆಸಿ, ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಆರೆಸ್ಸೆಸ್ ಮತ್ತು ವಿಶ್ವಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಗಳು ರಾಮಮಂದಿರ ನಿರ್ಮಾಣಕ್ಕಾಗಿ ಶಾಸನ ರಚಿಸುವಂತೆ ಕೇಂದ್ರವನ್ನು ಆಗ್ರಹಿಸಿದ್ದವು. ಆದರೆ ಬಿಜೆಪಿ ಕಾನೂನು ರಚನೆ ಬಗ್ಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸಲಿಲ್ಲ. ವಿವಾದದ ಬಗ್ಗೆ ತುರ್ತು ವಿಚಾರಣೆ ನಡೆಸಲು ಅಕ್ಟೋಬರ್ ತಿಂಗಳಲ್ಲಿ ನಿರಾಕರಿಸಿದ್ದ ಸುಪ್ರೀಂಕೋರ್ಟ್ ಜನವರಿ ತಿಂಗಳಲ್ಲಿಸೂಕ್ತ ಪೀಠದ ಮುಂದೆಜನವರಿ ತಿಂಗಳ ಮೊದಲ ವಾರ ವಿಷಯ ವಿಚಾರಣೆಗೆ ಬರಲಿದೆ ಎಂದು ಹೇಳಿತ್ತು.


 2017: ಶಿಮ್ಲಾ: ಐದು ಬಾರಿ ಶಾಸಕರಾಗಿ ಗೆದ್ದಿರುವ ಜೈರಾಮ್ ಥಾಕೂರ್ ಅವರು ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಭಾರತೀಯ ಜನತಾ ಪಕ್ಷದ ಶಾಸಕರು ಶಾಸಕಾಂಗ ಪಕ್ಷದ ಸಭೆಯಲ್ಲಿ ಜೈರಾಮ್ ಥಾಕೂರ್ ಅವರನ್ನು ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಿದರು. ಪಕ್ಷದ ಕೇಂದ್ರ ವೀಕ್ಷಕರಾದ ನಿರ್ಮಲಾ ಸೀತಾರಾಮನ್ ಮತ್ತು ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಪಾಲ್ಗೊಂಡಿದ್ದ ಸಭೆಯ ಬಳಿಕ, ಥಾಕೂರ್ ಅವರು ಡಿಸೆಂಬರ್ ೨೭ರಂದು ಪ್ರಮಾಣವಚನ ಸ್ವೀಕರಿಸುವರು ಎಂದು ಬಿಜೆಪಿ ಪ್ರಕಟಿಸಿತು. ಚುನಾವಣೆಗೆ ೧೦ ದಿನ ಮುಂಚೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂಬುದಾಗಿ ಬಿಜೆಪಿ ಘೋಷಿಸಿದ್ದ ಪ್ರೇಮ್ ಕುಮಾರ್ ಧುಮಾಲ್ ಅವರು ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಿಂದ ಹಿಂತೆಗೆದ ಬಳಿಕ ಶಾಸಕರು ಥಾಕೂರ್ ಅವರನ್ನು ನಾಯಕನಾಗಿ ಆಯ್ಕೆ ಮಾಡುವ ನಿರ್ಧಾರಕ್ಕೆ ಪಕ್ಷದ ಶಾಸಕರು ಬಂದರು. ಪಕ್ಷವು ರಾಜ್ಯ ವಿಧಾನಸಭೆಯ ೬೮ ಸ್ಥಾನಗಳ ಪೈಕಿ ೪೪ ಸ್ಥಾನಗಳನ್ನು ಗೆದ್ದರೂ, ಕಾಂಗ್ರೆಸ್ ಪಕ್ಷದ  ಪ್ರತಿಸ್ಪರ್ಧಿ ರಾಜೇಂದ್ರ ರಾಣಾ ಅವರ ಎದುರು ಸೋತ ೭೩ರ ಹರೆಯದ ಧುಮಾಲ್ ಅವರು ಹಲವಾರು ನಿಷ್ಠರು ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಮುಂದುವರೆದಿದ್ದರು. ಆದರೆ ಈದಿನ ಸ್ಪರ್ಧೆಯಿಂದ ಹಿಂದೆ ಸರಿದ ಧುಮಾಲ್ ಸ್ವತಃ ಜೈರಾಮ್ ಥಾಕೂರ್ ಅವರ ಹೆಸರನ್ನು ಪಕ್ಷದ ಶಾಸಕಾಂಗ ನಾಯಕ ಸ್ಥಾನಕ್ಕೆ ಸೂಚಿಸಿದರು. ಶಾಂತ ಕುಮಾರ್ ಮತ್ತು ಜೆ.ಪಿ ನಡ್ಡಾ ಅವರು ಕೂಡಾ ಪ್ರಸ್ತಾಪವನ್ನು ಬೆಂಬಲಿಸಿದರು ಎಂದು ತೋಮರ್ ಹೇಳಿದರು. ‘ಹಿಮಾಚಲಪ್ರದೇಶದ ಅಭಿವೃದ್ಧಿಯ ಖಾತರಿಗಾಗಿ ಹಗಲಿರುಳೂ ಶ್ರಮಿಸುತ್ತೇವೆ, ನಿಟ್ಟಿನಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಥಾಕೂರ್ ನುಡಿದರು. ಮಂಡಿ ಸಮೀಪದ ಸೆರಾಜ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ೫೨ರ ಹರೆಯದ, ಥಾಕೂರ್ ಅವರು ಧುಮಾಲ್ ಸಂಪುಟದಲ್ಲಿ ಸಚಿವರಾಗಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತಗಳ ಎಣಿಕೆ ನಡೆಯುತ್ತಿದ್ದಾಗ ಧುಮಾಲ್ ಸೋಲುವ ಸೂಚನೆಗಳು ಕಂಡು ಬರುತ್ತಿದ್ದಂತೆಯೇ ಪಕ್ಷದ ವರಿಷ್ಠ ನಾಯಕರನ್ನು ಭೇಟಿ ಮಾಡಲು ಮೊದಲು ವಿಮಾನ ಏರಿದ್ದ ವ್ಯಕ್ತಿ ಥಾಕೂರ್. ಆದರೆ ಮುಖ್ಯಮಂತ್ರಿ ಸ್ಥಾನಕ್ಕೆ ಅವರೊಬ್ಬರೇ  ಸ್ಪರ್ಧೆಯಲ್ಲಿ ಇದ್ದವರಲ್ಲ. ಚತುರ ಸಂಘಟಕ, ಪಕ್ಷಾಧ್ಯಕ್ಷ ಅಮಿತ್ ಶಾ ಅವರ ಆಪ್ತ, ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರೂ ಸ್ಪರ್ಧೆಯಲ್ಲಿದ್ದರು. ಆದರೆ ದೆಹಲಿ ಬಿಜೆಪಿ ಘಟಕದ ಕಾರ್ಯದರ್ಶಿಯಾಗಿ ನೇಮಕ ಮಾಡುವುದರೊಂದಿಗೆ ಅವರೂ ಸ್ಪರ್ಧೆಯಿಂದ ಹೊರಬಿದ್ದರು. ೨೦೦೬ರಿಂದ ೨೦೦೯ರವರೆಗಿನ ಅವಧಿಯಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಥಾಕೂರ್ ಪಕ್ಷದಲ್ಲಿ ಕಚ್ಚಾಟ ನಿರತವಾಗಿದ್ದ ಬಣಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ಪಕ್ಷವನ್ನು ಮುಂದಕ್ಕೆ ಒಯ್ದಿದ್ದರು. ಸಲದ ಚುನಾವಣೆಯಲ್ಲಿ ಬಿಜೆಪಿಯು ಅಧಿಕಾರಾರೂಢ ಕಾಂಗ್ರೆಸ್ ಪಕ್ಷವನ್ನು ಪ್ರಚಂಡ ಬಹುಮತದೊಂದಿಗೆ ಸೋಲಿಸಿ, ಅಧಿಕಾರವನ್ನು ಕೈವಶ ಮಾಡಿಕೊಂಡಿತ್ತು.


2017: ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುವ ಮೂಲಕ ಭಾರತೀಯ ಸೇನೆಯ ನಾಲ್ವರನ್ನು ಬಲಿತೆಗೆದುಕೊಂಡ ಪಾಕಿಸ್ತಾನಿ ಪಡೆಗಳು ಪೂಂಚ್ ಜಿಲ್ಲೆಯಲ್ಲಿನ ನಿಯಂತ್ರಣ ರೇಖೆಯಲ್ಲಿ ಈದಿನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದವು. ಮಧ್ಯಾಹ್ನ ೧೨.೫೫ರ ಸಮಯದಲಿ ಶಾಹಪುರದಲ್ಲಿನ ಗ್ರಾಮಗಳು ಮತ್ತು ಸೇನಾ ಹೊರಠಾಣೆಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ಪಡೆಗಳು ಭಾರಿ ಮತ್ತು ಹಗುರ ಶಸ್ತ್ರಗಳ ಮೂಲಕ ಗುಂಡಿನ ದಾಳಿ ಆರಂಭಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಗಡಿಯಲ್ಲಿ ಕಾವಲು ನಡೆಸುತ್ತಿರುವ ಭಾರತೀಯ ಪಡೆಗಳು ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದು, ಗುಂಡಿನ ಘರ್ಷಣೆ ಮುಂದುವರೆದಿದೆ ಎಂದು ವರದಿಗಳು ಹೇಳಿವೆ. ಏನಿದ್ದರೂ ಗುಂಡಿನ ಘರ್ಷಣೆಯಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ಅಧಿಕಾರಿ ಹೇಳಿದರು. ನೆರೆಯ ರಾಜೌರಿ ಜಿಲ್ಲೆಯ ಕೇರಿ ವಿಭಾಗದಲ್ಲಿ ಶನಿವಾರ ಪಾಕಿಸ್ತಾನಿ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಸೇನಾ ಮೇಜರ್ ಮತ್ತು ಮೂವರು ಯೋಧರು ಹುತಾತ್ಮರಾಗಿದ್ದರು.  ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷ ಈವರೆಗೆ ಪಾಕಿಸ್ತಾನದಿಂದ ೮೮೧ ಬಾರಿ ಕದನ ವಿರಾಮ ಉಲ್ಲಂಘನೆಯಾಗಿದ್ದು, ಕಳೆದ ಏಳು ವರ್ಷಗಳಲ್ಲಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಇದು ಗರಿಷ್ಠ ಉಲ್ಲಂಘನೆಯಾಗಿದ್ದು ೩೪ ಮಂದಿ ಸಾವನ್ನಪ್ಪಿದ್ದಾರೆ. ಅಧಿಕಾರಿಗಳ ಪ್ರಕಾರ ಪಾಕಿಸ್ತಾನವು ಡಿಸೆಂಬರ್ ೧೦ರವರೆಗೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣರೇಖೆಯಲ್ಲಿ ೭೭೧ ಬಾರಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವರ್ಷ ನವೆಂಬರ್ ಅಂತ್ಯದವರೆಗೆ ೧೧೦ ಬಾರಿ ಕದನ ವಿರಾಮ ಉಲ್ಲಂಘಿಸಿದೆ. ೧೪ ಮಂದಿ ಸೇನಾ ಸಿಬ್ಬಂದಿ, ೧೨ ಮಂದಿ ನಾಗರಿಕರು ಮತ್ತು ನಾಲ್ವರು ಬಿಎಸ್ ಎಫ್ ಸಿಬ್ಬಂದಿ ಸೇರಿ ೩೦ ಮಂದಿ ದಾಳಿ ಘಟನೆಗಳಲ್ಲಿ ಅಸು ನೀಗಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮದ ಒಪ್ಪಂದ ೨೦೦೩ರ ನವೆಂಬರ್ ತಿಂಗಳಲ್ಲಿ ಜಾರಿಗೆ ಬಂದಿತ್ತು.
2017: ಮುಜಾಫ್ಫರನಗರ:  ಉತ್ತರ ಪ್ರದೇಶದ ಸಚಿವ ಸುರೇಶ ರಾಣಾ, ಬಿಜೆಪಿ ಶಾಸಕ ಸಂಗೀತ್ ಸೋಮ್ ಮತ್ತು ಬಿಜೆಪಿ ಸಂಸತ್ ಸದಸ್ಯ ಭರತೇಂದು ಸಿಂಗ್ ಅವರ ವಿರುದ್ಧ ದಾಖಲಾಗಿದ್ದ ೨೦೧೩ರ ದಂಗೆ ಪ್ರಕರಣದಲ್ಲಿ ಹೊರಡಿಸಲಾಗಿದ್ದ ಜಾಮೀನು ರಹಿತ ವಾರಂಟ್ ಗಳನ್ನು ಸ್ಥಳೀಯ ನ್ಯಾಯಾಲಯ ರದ್ದು ಪಡಿಸಿತು. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದನ್ನು ಅನುಸರಿಸಿ ನವೆಂಬರ್ ೧೫ರಂದು ಜಾಮೀನು ರಹಿತ ವಾರಂಟ್ ಗಳನ್ನು ಜಾರಿ ಮಾಡಲಾಗಿತ್ತು. ಅಡಿಷನಲ್ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಮಧು ಗುಪ್ತ ಅವರು ಡಿಸೆಂಬರ್ ೨೩ರಂದು ಇಲ್ಲಿ ರಾಣಾ, ಸೋಮ್, ಸಿಂಗ್ ಮತ್ತು ಚಂದ್ರಪಾಲ್ ಸಿಂಗ್ ಎಂಬ ನಾಲ್ವರ ವಿರುದ್ಧ ಜಾರಿ ಮಾಡಲಾಗಿದ್ದ ಜಾಮೀನುರಹಿತ ವಾರಂಟ್ ಗಳನ್ನು ರದ್ದು ಪಡಿಸಿದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ೧೫೩ ಸೆಕ್ಷನ್ ಅಡಿಯಲ್ಲಿ ಈಗಾಗಲೇ ಜಾಮೀನು ನೀಡಲಾಗಿದೆ. ಹಿನ್ನೆಲೆಯಲ್ಲಿ ವಾರಂಟ್ ಗಳನ್ನು ರದ್ದು ಪಡಿಸಬೇಕು ಎಂದು ಆರೋಪಿಗಳ ಪರ ವಕೀಲರು ಕೋರಿದರು. ಸರ್ಕಾರಿ ನೌಕರರಿಗೆ ಅಕ್ರಮ ಅಡೆತಡೆಗಳನು ಒಡ್ಡುವ ಮೂಲಕ ತಮ್ಮ ಸೇವೆ ಸಲ್ಲಿಸದಂತೆ  ಅವರನ್ನು ತಡೆಯುವ ಮೂಲಕ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳನ್ನು ಉಲ್ಲಂಘಿಸಿದ ಆರೋಪಗಳನ್ನು ಆರೋಪಿಗಳೂ ಎದುರಿಸುತ್ತಿದ್ದರು. ೨೦೧೩ರ ಆಗಸ್ಟ್ ತಿಂಗಳ ಕೊನೆಯ ವಾರ ಮಹಾಪಂಚಾಯತ್ನಲ್ಲಿ ಪಾಲ್ಗೊಂಡಿದ್ದ ಆರೋಪಿಗಳು ಭಾಷಣದ ಮೂಲಕ ಹಿಂಸೆಗೆ ಪ್ರಚೋದನೆ ನೀಡಿದ್ದರು ಎಂದು ಆಪಾದಿಸಲಾಗಿತ್ತು.

2017: ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರತಿನಿಧಿಸುತ್ತಿದ್ದ ಡಾ. ರಾಧಾಕೃಷ್ಣನ್ ನಗರ (ಆರ್.ಕೆ. ನಗರ) ಉಪಚುನಾವಣೆಯಲ್ಲಿ ಎಐಎಡಿಎಂಕೆಯಲ್ಲಿ ಮೂಲೆಗೆ ತಳ್ಳಲ್ಪಟ್ಟಿದ್ದ ಶಶಿಕಲಾ ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ಪ್ರಚಂಡ ವಿಜಯ ಗಳಿಸಿದರು.  ಜಯಲಲಿತಾ ಅವರ ನಿಧನದಿಂದ ತೆರವಾಗಿ, ಕಳೆದ ಒಂದು ವರ್ಷದಿಂದ ಖಾಲಿ ಬಿದ್ದಿದ್ದ ಸ್ಥಾನಕ್ಕೆ ಡಿಸೆಂಬರ್ ೨೧ರಂದು ಉಪಚುನಾವಣೆ ನಡೆದಿತ್ತು. ದಿನಕರನ್ ಅವರು ೪೦,೭೦೭ ಮತಗಳ ಅಂತರದಿಂದ ಸಮೀಪ ಸ್ಪರ್ಧಿ ಎಐಎಡಿಎಂಕೆ ಅಭ್ಯರ್ಥಿ . ಮಧುಸೂಧನನ್ ಅವರನ್ನು ಪರಾಭವಗೊಳಿಸಿದರು.  ದ್ವಿತೀಯ ಸ್ಥಾನಕ್ಕೆ ಇಳಿದ ಮಧುಸೂದನನ್ ಅವರು ಠೇವಣಿ ಉಳಿಸಿಕೊಂಡಿದ್ದು, ಡಿಎಂಕೆ ಅಭ್ಯರ್ಥಿ ಮರುತು ಗಣೇಶ ಸೇರಿದಂತೆ ಕಣದಲ್ಲಿದ್ದ ಇತರ ೫೭ ಅಭ್ಯರ್ಥಿಗಳು ಇಡುಗಂಟು ಕಳೆದುಕೊಂಡರು. ದಿನಕರನ್ ಅವರು ಇತರ ೫೮ ಮಂದಿ ಅಭ್ಯರ್ಥಿಗಳು ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚು ಮತ ಗಳಿಸಿದರು.  ೨೦೦೧ರ ಬಳಿಕ ಜಯ ಗಳಿಸಿದ ಮೊತ್ತ ಮೊದಲ ಸ್ವತಂತ್ರ (ಪಕ್ಷೇತರ) ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ದಿನಕರನ್ ಪಾತ್ರರಾದರು.  ೨೦೦೧ರಲ್ಲಿ ರಾಧಾಪುರಮ್ ಕ್ಷೇತ್ರದಲ್ಲಿ ಎಂ. ಅಪ್ಪಾವು ಅವರು ಸ್ವತಂತ್ರ ಅಭ್ಯರ್ಥಿಯಾಗಿ ಜಯ ಗಳಿಸಿದ್ದರು. ವಿಜಯ ಪ್ರಮಾಣ ಪತ್ರ ಪಡೆಯಲು ದಿನಕರನ್ ಮನೆಯಿಂದ ಹೊರಡುತ್ತಿದ್ದಂತೆಯೇ ಅವರಿಗೆ ನಿಷ್ಠರಾದ ವೆಟ್ರಿವೇಲ್ ಅವರುಹಲವಾರು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು. ಆದರೆ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ ವೆಟ್ರಿವೇಲ್ಸರ್ಕಾರದ ಪತನ ಶೇಕಡಾ ೧೦೦ರಷ್ಟು ಖಚಿತ ಎಂದು ನುಡಿದರು. ತಿಂಗಳಲ್ಲಿ ಸರ್ಕಾರ ಪತನ: ಇದಕ್ಕೆ ಮುನ್ನ ಉಪಚುನಾವಣೆಯ ಫಲಿತಾಂಶ ತಮ್ಮತ್ತ ವಾಲುವ ಪ್ರವೃತ್ತಿ ಕಂಡು ಬರುತ್ತಿದ್ದಂತೆಯೇನಾನೇ ಅಮ್ಮಾ ಉತ್ತರಾಧಿಕಾರಿ. ಮೂರು ತಿಂಗಳಲ್ಲಿ ಇಪಿಎಸ್-ಒಪಿಎಸ್ ಸರ್ಕಾರ ಪತನಗೊಳ್ಳಲಿದೆ ಎಂದು ಟಿಟಿವಿ ದಿನಕರನ್ ಮಧುರೈಯಲ್ಲಿ ಘೋಷಣೆ ಮಾಡಿದರು. ಸುದ್ದಿಗಾರರ ಜೊತೆ ಮಾತನಾಡಿದ ದಿನಕರನ್ಜನತೆ ಆಡಳಿತದ ಬದಲಾವಣೆಯನ್ನು ಅಪೇಕ್ಷಿಸಿದ್ದಾರೆ. ಅವರುಅಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು. ಚುನಾವಣಾ ಆಯೋಗದಲ್ಲಿ ತಮ್ಮದೇ ನೈಜ ಎಐಎಡಿಎಂಕೆ ಎಂಬುದಾಗಿ ಪ್ರತಿಪಾದಿಸಿಎರಡೆಲೆ ಚಿಹ್ನೆಯನ್ನು ಕೆ. ಪಳನಿಸ್ವಾಮಿ- . ಪನ್ನೀರಸೆಲ್ವಮ್ ಬಣ ಪಡೆದುಕೊಂಡಿರುವುದನ್ನು ಅವರು ಗೌಣವಾಗಿ ಪರಿಗಣಿಸಿದರು. ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನದ ಬಳಿಕ ಖಾಲಿ ಬಿದ್ದಿದ್ದ ಪ್ರತಿಷ್ಠಿತ ಆರ್ ಕೆ ನಗರ ಕ್ಷೇತ್ರದ ಚುನಾವಣೆ ವಿಲೀನಗೊಂಡಿರುವ ಎಐಎಡಿಎಂಕೆ ಬಣಕ್ಕೆ ಅಗ್ನಿ ಪರೀಕ್ಷೆಯಾಗಿತ್ತು. ೨ಜಿ ತರಂಗಾಂತರ ಪ್ರಕರಣದಲ್ಲಿ ಬಂದ ಅನುಕೂಲಕರ ತೀರ್ಪಿನ ಹಿನ್ನೆಲೆಯಲ್ಲಿ ಚೇತರಿಕೆಯ ವಿಶ್ವಾಸವನ್ನು ಡಿಎಂಕೆಯೂ ಹೊಂದಿತ್ತು. ಆದರೆ ಎಐಡಿಎಂಕೆಯಲ್ಲಿ ಮೂಲೆಗೆ ಒತ್ತರಿಸಲ್ಪಟ್ಟ ಶಶಿಕಲಾ ಸೋದರ ಸಂಬಂಧಿ ಟಿಟಿವಿ ದಿನಕರನ್ ಚುನಾವಣೆಯಲ್ಲಿ ವಿಜಯಪಥದಲ್ಲಿ ಸಾಗಿ ಹಲವರಿಗೆ ಮುಜುಗರ ಉಂಟು ಮಾಡಿದರು. ‘ಇತ್ತೀಚೆಗೆ ಅವಿನಾಶಿ (ತಿರುಪುರ್) ಮತ್ತು ಅರುಮನೈ (ಕನ್ಯಾಕುಮಾರಿ) ಮುಂತಾದ ತಮಿಳುನಾಡಿನ ವಿವಿಧ ಭಾಗಗಳಿಗೆ ನಾನು ಭೇಟಿ ಕೊಟ್ಟಾಗ ಜನರು ಪ್ರಷರ್ ಕುಕರ್ (ಆರ್ ಕೆ ನಗರದ ತಮ್ಮ ಚುನಾವಣಾ ಚಿಹ್ನೆ) ಗೆಲ್ಲುವುದೆಂದು ಹೇಳಿದ್ದರು. ಅವರು ಆಡಳಿತವನ್ನು ಬದಲಿಸಲು ಬಯಸಿದ್ದಾರೆ ಎಂದು ಅವರು ನುಡಿದರು. ಆರ್ ಕೆ ನಗರ ಕ್ಷೇತ್ರದಲ್ಲಿ ಎಐಎಡಿಎಂಕೆ ಅಭ್ಯರ್ಥಿ . ಮುಧುಸೂದನನ್ ಮತ್ತು ಡಿಎಂಕೆ ಅಭ್ಯರ್ಥಿ ಎನ್. ಮರುತು ಗಣೇಶ್ ಅವರನ್ನು ಹಿಂದೆ ಹಾಕಿದ ದಿನಕರನ್ನನ್ನ ವಿಜಯವು ಪಕ್ಷದ . ಕೋಟಿ ಬೆಂಬಲಿಗರಿಗೆ ಪಕ್ಷದ ಸಂಸ್ಥಾಪಕ ಎಂಜಿ ರಾಮಚಂದ್ರನ್ ಅವರ ೩೦ನೇ ಪುಣ್ಯತಿಥಿ ಅಂಗವಾಗಿ ಕೊಡುವ ಕೊಡುಗೆ ಎಂದು ಬಣ್ಣಿಸಿದರು.
ಪಕ್ಷದ ಚುನಾವಣಾ ಚಿಹ್ನೆಯನ್ನು ಚುನಾವಣಾ ಆಯೋಗವು ಇತ್ತೀಚೆಗೆ ಪಳನಿಸ್ವಾಮಿ ನೇತೃತ್ವದ ಬಣಕ್ಕೆ ನೀಡಿದ ಬಗ್ಗೆ ಪ್ರಸ್ತಾಪಿಸಿದ ದಿನಕರನ್ಚಿಹ್ನೆಯನ್ನು ನಿರ್ಧರಿಸುವುದು ಕೇವಲ ಅಭ್ಯರ್ಥಿ ಎಂದು ಹೇಳಿದರು. ‘ನಾವೇ ನಿಜವಾದ ಎಐಎಡಿಎಂಕೆ. ಅಭ್ಯಥಿ ಚಿಹ್ನೆಯನ್ನು ನಿರ್ಧರಿಸುತ್ತಾನೆ. ಎರಡೆಲೆ ಚಿಹ್ನೆಯು ಪುರುಚ್ಚಿ ತಲೈವರ್ (ಎಂಜಿಆರ್) ಮತ್ತು ಅಮ್ಮಾ (ಜಯಲಲಿತಾ) ಜೊತೆಗೆ ಇದ್ದರೆ ಮಾತ್ರವೇ ಅದು ಯಶಸ್ವಿ ಚಿಹ್ನೆಯಾಗುತ್ತದೆ ಎಂದು ನಾನು ಈಗಾಗಲೇ ಹೇಳಿದ್ದೇನೆ. ಅದನ್ನು ಎಂಎನ್ ನಂಬಿಯಾರ್ ಮತ್ತು ಪಿಎಸ್ ವೀರಪ್ಪ ಅವರಿಗೆ ಕೊಟ್ಟರೆ ಜನರು ಅವರಿಗೆ ಓಟು ನೀಡುತ್ತಾರೆಯೇ?’ ಎಂದು ಬೆಂಬಲಿಗರ ಹರ್ಷೋದ್ಘಾರಗಳ ಮಧ್ಯೆ ಅವರು ಪ್ರಶ್ನಿಸಿದರು. ನಂಬಿಯಾರ್ ಮತ್ತು ವೀರಪ್ಪ ಎಂಜಿ ರಾಮಚಂದ್ರನ್ ಅವರ ಚಿತ್ರಗಳಲ್ಲಿ ಖಳನಾಯಕರಾಗಿ ಎಂಜಿಆರ್ ವಿರುದ್ಧ ನಟಿಸುತ್ತಿದ್ದವರು. ಪಳನಿಸ್ವಾಮಿ ಸರ್ಕಾರ ಮೂರು ತಿಂಗಳಲ್ಲಿ ಪತನಗೊಳ್ಳಲಿದೆ ಎಂದು ದಿನಕರನ್ ಹೇಳಿದರು. ದಿನಕರನ್ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ  ತಮ್ಮ ನಾಯಕನ ವಿಜಯಕ್ಕೆ ಸಂಭ್ರಮಿಸಿದರು.

2017: ನವದೆಹಲಿ: ಒಂದೇ ಉಸಿರಿನ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವ ವಿಧಾನವನ್ನು ಅಪರಾಧವನ್ನಾಗಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಬಾರದು ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಸರ್ಕಾರವನ್ನು ಒತ್ತಾಯಿಸಿತು. ಸರ್ಕಾರವು ತ್ರಿವಳಿ ತಲಾಖ್ ನ್ನು ಅಪರಾಧವನ್ನಾಗಿಸುವ ಮಸೂದೆಯನ್ನು ಸರ್ಕಾರ ಸಂಸತ್ತಿನಲ್ಲಿ ಮಂಡಿಸಬಾರದು ಎಂದು ಎಐಎಂಪಿಎಲ್ ಬಿ ಆಗ್ರಹಿಸುತ್ತದೆ ಎಂದು ಸಂಘಟನೆ ತನ್ನ ಹೇಳಿಕೆಯಲ್ಲಿ ತಿಳಿಸಿತು. ತ್ರಿವಳಿ ತಲಾಖ್ ಮಸೂದೆಯು ಮುಸ್ಲಿಮ್ ಕುಟುಂಬಗಳನ್ನು ಹಾಳು ಮಾಡಲಿದೆ ಮತ್ತು ಅದು ಮಹಿಳಾ ಕಲ್ಯಾಣಕ್ಕೆ ವಿರುದ್ಧ ಎಂದು ಸಂಘಟನೆ ಪ್ರತಿಪಾದಿಸಿತು. ಮುಸ್ಲಿಮ್ ಮಹಿಳಾ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆ, ೨೦೧೭ನ್ನು ರೂಪಿಸುವ ವೇಳೆಯಲ್ಲಿ ಯಾವುದೇ ಮುಸ್ಲಿಮ್ ಸಂಘಟನೆ ಅಥವಾ ಮುಸ್ಲಿಮ್ ವಿಧ್ವಾಂಸರ ಜೊತೆಗೂ ಸಮಾಲೋಚಿಸಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಮಂಡಳಿಯು ಮಸೂದೆಯನ್ನು ವಿರೋಧಿಸಿದೆ ಎಂದು ಎಐಎಂಪಿಎಲ್ ಬಿ ಹೇಳಿಕೆ ತಿಳಿಸಿತು. ‘ಮಸೂದೆ ರೂಪಿಸುವಾಗ ಯಾವುದೇ ನೀತಿ ನಿಯಮಾವಳಿಯನ್ನೂ ಅನುಸರಿಸಿಲ್ಲ ಅಥವಾ ಅದಕ್ಕೆ ಸಂಬಂಧ ಪಟ್ಟವರ ಜೊತೆ ಸಮಾಲೋಚಿಸಿಲ್ಲ. ಎಐಎಂಪಿಎಲ್ ಬಿ ಅಧ್ಯಕ್ಷರು ನಿಲುವನ್ನು ಪ್ರಧಾನಿಯವರಿಗೆ ತಿಳಿಸಿ ಮಸೂದೆಯನ್ನು ತಡೆ ಹಿಡಿಯುವಂತೆ ಮತ್ತು ಹಿಂಪಡೆಯುವಂತೆ ಕೋರಲಿದ್ದಾರೆ ಎಂದು ಮಂಡಳಿ ಸದಸ್ಯ ಸಜ್ಜದ್ ನೋಮಾನಿ ಹೇಳಿದರು.  ಮಸೂದೆಯನ್ನು ಅಪಾಯಕಾರಿಯಾಗಿ ರೂಪಿಸಲಾಗಿದೆ. ವಿಚಾರದಲ್ಲಿ ತುರ್ತು ಸಭೆಯನ್ನು ಎಐಎಂಪಿಎಲ್ ಬಿ ಕರೆದಿದೆ. ಮೌಲ್ವಿಗಳು ತ್ರಿವಳಿ ತಲಾಖ್ ಮಸೂದೆಯನ್ನು ವಿರೋಧಿಸಿದ್ದಾರೆ ಮತ್ತು ಇದು ಇಸ್ಲಾಮ್ ನಲ್ಲಿ ನಡೆದಿರುವ ಹಸ್ತಕ್ಷೇಪ ಎಂದು ಹೇಳಿದ್ದಾರೆ ಎಂದು ಅವರು ನುಡಿದರು.
ಅಗತ್ಯ ಬಿದ್ದಲ್ಲಿ ನಾವು ಪ್ರಧಾನಿಯನ್ನು ಭೇಟಿ ಮಾಡುತ್ತೇವೆ. ಕಾನೂನು ಷರಿಯಾಕ್ಕೆ ವಿರುದ್ಧ. ಇದು ಮುಸ್ಲಿಮ್ ಪುರುಷರಿಂದ ವಿಚ್ಛೇದನದ ಹಕ್ಕನ್ನು ಕಿತ್ತುಕೊಳ್ಳುವ ಯತ್ನ ಎಂಬುದಾಗಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಭಾವಿಸಿದೆ ಎಂದು ನೊಮಾನಿ ಹೇಳಿದರು.


2016: ಮುಂಬೈ: ಮೊಘಲ್ ಚಕ್ರವರ್ತಿಗಳ ಬೆವರಿಳಿಸಿದ್ದ ಕೆಚ್ಚೆದೆಯ ಮರಾಠಾ ದೊರೆ ಛತ್ರಪತಿ ಶಿವಾಜಿ ಮಹಾರಾಜರ ಅತಿ ಎತ್ತರದ ಪ್ರತಿಮೆ ಮುಂಬೈ ಸಮೀಪ ಅರಬ್ಬಿ  ಸಮುದ್ರದಲ್ಲಿ ನಿರ್ಮಾಣವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಜಲಪೂಜೆ ನಡೆಸಿ ಕಾಮಗಾರಿಗೆ ಚಾಲನೆ ನೀಡಿದರು. ಅಮೆರಿಕನ್ನರ ಹೆಮ್ಮೆಯ ಪ್ರತೀಕ ನ್ಯೂಯಾರ್ಕ್ನಲ್ಲಿರುವ ಲಿಬರ್ಟಿ ಪ್ರತಿಮೆಗಿಂತ ಶಿವಾಜಿ ಪ್ರತಿಮೆ ಎರಡು ಪಟ್ಟು ಎತ್ತರವಿರುವುದು ವಿಶೇಷ. ಮುಂಬೈ ಕರಾವಳಿಯಿಂದ 1.5 ಕಿಮೀ ದೂರದ 37 ಎಕರೆ ವಿಸ್ತಾರದ ನಡುಗಡ್ಡೆಯ ಮೇಲೆ ಪ್ರತಿಮೆ ನಿರ್ಮಾಣಗಲಿದೆ. ಪ್ರತಿಮೆಯ ಶೇ.40ರಷ್ಟು ಎತ್ತರವನ್ನು ನಡುಗಡ್ಡೆ ಹೊಂದಿದೆ. ಪ್ರತಿಮೆ ಸುತ್ತ 12 ಮಹಡಿಯ ಕಟ್ಟಡ ನಿರ್ಮಾಣವಾಗಲಿದ್ದು ಪ್ರವಾಸಿಗರಿಗೆ ಶಿವಾಜಿ ಇತಿಹಾಸದ ಕುರಿತು ವಿವಿಧ ಭಾಷೆಗಳಲ್ಲಿ ಧ್ವನಿ ಮುದ್ರಣ ಹಾಗೂ ಹಾಗೂ ದೃಶ್ಯಾವಳಿಗಳ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ಬಾರಿಗೆ 10 ಸಾವಿರ ಜನರು ಭೇಟಿ ನೀಡುವಷ್ಟು ಸ್ಥಳಾವಕಾಶವಿರಲಿದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕ, ಅಕ್ವೇರಿಯಂ ಹಾಗೂ ಫುಡ್ ಕೋರ್ಟ್ ಮತ್ತಿತರ ಸೌಕರ್ಯಗಳೂ ಇಲ್ಲಿರಲಿವೆ. ಗಿರ್ಗಾಂವ್ ಚೌಪಾಟಿಯಿಂದ ತ್ವರಿತ ದೋಣಿಯಲ್ಲಿ 10 ನಿಮಿಷ ಹಾಗೂ ಸಾಮಾನ್ಯ ದೋಣಿಯಲ್ಲಿ 20 ನಿಮಿಷ ಅವಧಿಯಲ್ಲಿ ಸ್ಮಾರಕವನ್ನು ತಲುಪಬಹುದಾಗಿದೆ. ನಾರಿಮನ್ ಪಾಯಿಂಟ್ ಹಾಗೂ ಗೇಟ್ವೇಯಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿದೆ. 
2016: ಮುಂಬೈ: ಮುಂಬೈಯಲ್ಲಿ ಮರಾಠ ದೊರೆ ಛತ್ರಪತಿ ಶಿವಾಜಿ ಮಹಾರಾಜರಿಗಾಗಿ ನಿರ್ಮಿಸಲಾಗುವ ಸ್ಮಾರಕಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅರಬ್ಬಿ ಸಮುದ್ರದಲ್ಲಿ ಹೊವರ್ಕ್ರಾಫ್ಟ್ನಲ್ಲಿ ನಿಂತುಕೊಂಡು ಭೂಮಿಪೂಜೆ ಮತ್ತು ಜಲಪೂಜೆಯನ್ನು ನೆರವೇರಿಸಿದರು. 3600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಸ್ಮಾರಕವು 192 ಮೀಟರ್ ಎತ್ತರದ ಶಿವಾಜಿ ಪ್ರತಿಮೆಯನ್ನೂ ಹೊಂದಿರುತ್ತದೆ. ರಾಜಭವನ ಕರಾವಳಿಯಿಂದ ಸುಮಾರು 1.5 ಕಿ.ಮೀ. ದೂರದ ಕಲ್ಲಿನ ಕುದ್ರುವಿನಲ್ಲಿ ಭವ್ಯ ಸ್ಮಾರಕ ತಲೆ ಎತ್ತಲಿದೆ. ಜಲಪೂಜೆ ನೆರವೇರಿಸಿದ ಬಳಿಕ ಮೋದಿ ಅವರೊಂದಿಗೆ ನೌಕಾಸಿಬ್ಬಂದಿ ಸೆಲ್ಪಿ ತೆಗೆದುಕೊಂಡರು. ಮುಂದಿನ ಕೆಲವೇ ತಿಂಗಳುಗಳಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೋದಿ ಅವರ ಮುಂಬೈ ಭೇಟಿಗೆ ರಾಜಕೀಯ ಮಹತ್ವ ಲಭಿಸಿದೆ. ಶಿವ ಸ್ಮಾರಕವು ರಾಷ್ಟ್ರದಲ್ಲಷ್ಟೇ ಅಲ್ಲ ವಿಶ್ವದಲ್ಲೇ ಅತ್ಯಂತ ಎತ್ತರದ ಸ್ಮಾರಕವಾಗಲಿದೆ. ಎಂದು ಇತ್ತೀಚೆಗೆ ಹೇಳಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರುಇದನ್ನು ಸಾಧ್ಯವಾಗಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದರು.
2016: ಮುಂಬೈ: ನೋಟು ರದ್ದತಿಯಾದ ದಿನದಿಂದ 50 ದಿನಗಳ ಬಳಿಕ ಅಂದರೆ ಡಿಸೆಂಬರ್ 30ರಿಂದ ಪ್ರಾಮಾಣಿಕರ ಸಮಸ್ಯೆಗಳು ಕಡಿಮೆಯಾಗುತ್ತಾ ಹೋಗುತ್ತವೆ ಆದರೆ ಭ್ರಷ್ಟರು ಮತ್ತು ಅಪ್ರಾಮಾಣಿಕರ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈಯಲ್ಲಿ ಈದಿನ ಎಚ್ಚರಿಕೆ ನೀಡಿದರು. ಮುಂಬೈಯಲ್ಲಿ ಎರಡು ಮೆಟ್ರೊ ರೈಲು ಯೋಜನೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಪ್ರಧಾನಿ 500 ಮತ್ತು 1000 ರೂಪಾಯಿ ನೋಟುಗಳ ರದ್ದತಿ ಕ್ರಮವನ್ನು ಸರ್ಕಾರದ ಚಾರಿತ್ರಿಕ ನಿರ್ಧಾರ ಎಂದು ಬಣ್ಣಿಸಿದರು. ಭಾರತದ ಜನ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ಅಂಗೀಕರಿಸುವುದಿಲ್ಲ ಎಂದು ಅವರು ನುಡಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟ ನಾವು ಅಧಿಕಾರ ವಹಿಸಿಕೊಂಡ ದಿನದಿಂದಲೇ ಆರಂಭವಾಗಿದ್ದು, ಜಯಗಳಿಸುವವರೆಗೂ ಮುಂದುವರೆಯುತ್ತದೆ. ನಿಟ್ಟಿನಲ್ಲೇ ನವೆಂಬರ್ 8ರಂದು ಚಾರಿತ್ರಿಕ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಪ್ರಧಾನಿ ಹೇಳಿದರು. ಇದಕ್ಕೆ ಮುನ್ನ ಪ್ರಧಾನಿಯವರು 3600 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಮತ್ತು ಸ್ಮಾರಕಕ್ಕೆ ಜಲಪೂಜೆ ಮತ್ತು ಭೂಮಿ ಪೂಜೆ, ರಾಯಗಢದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೆಕ್ಯೂರಿಟೀಸ್ ಮಾರ್ಕೆಟ್ (ಎನ್ಐಎಸ್ಎಂ) ನೂತನ ಕ್ಯಾಂಪಸ್ ಉದ್ಘಾಟನೆ ನೆರವೇರಿಸಿದರು.
2016: ನ್ಯೂಯಾರ್ಕ್: ಇರುವೆ ಆಕಾರದ ಮರುಭೂಮಿಯ ಜೇನುಹುಳಗಳನ್ನುಪತ್ತೆ ಹಚ್ಚಿರುವುದಾಗಿ ಸಂಶೋಧಕರು ಪ್ರಕಟಿಸಿದರು.. ಉತ್ತರ ಅಮೆರಿಕದ ಸ್ಥಳೀಯ ಜೇನುಹುಳಗಳ ಜಾತಿ ಜೀನಸ್ ಪೆರ್ಡಿಟಾಗೆ ಸೇರಿದ 9 ಹೊಸ ಪ್ರಭೇದಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ ಎರಡು ಜಾತಿಯ ಗಂಡು ಜೇನುಹುಳಗಳು ಇರುವೆಗಳನ್ನು ಹೋಲುತ್ತಿವೆ. ಇಲ್ಲಿನ ಜೇನುಹುಳಗಳು ಕೃಷಿ ಬೆಳೆಗಳ ಸಂತಾನೋತ್ಪತ್ತಿ ಕ್ರಿಯೆಗೆ ಮಾತ್ರವಲ್ಲ, ಇಲ್ಲಿನ ಪರಿಸರ ವ್ಯವಸ್ಥೆಯ ಸ್ಥಿರತೆ ಮೇಲೂ ಇವುಗಳ ಪ್ರಮುಖ್ಯತೆ ಅಧಿಕ. ಕ್ಯಾಲಿಫೋರ್ನಿಯಾದ ಡೆತ್ ವ್ಯಾಲಿಯ ಮರಳುಭೂಮಿಯ ವಾತಾವರಣ ಹದಗೆಡದಂತೆ ಕಾಪಾಡುವಲ್ಲಿ ಜೀವಿಗಳ ಕೊಡುಗೆ ಅಪಾರ ಎಂದು ಸಂಶೋಧಕರು ತಿಳಿಸಿದರು. ಗಂಡು ಹೆಣ್ಣಿಗಿಂತ ಪೂರ್ತಿ ಭಿನ್ನ: ಅಮೆರಿಕದ ಯೂಟಾ ಸ್ಟೇಟ್ ವಿಶ್ವವಿದ್ಯಾಲಯ ಸಂಶೋಧಕರು ಪತ್ತೆ ಮಾಡಿರುವ ನೂತನ ಜೀವವೈವಿಧ್ಯಗಳ ಪೈಕಿ ಇರುವೆಗಳಂತಿರುವ ಗಂಡು ಜೇನುಹುಳಗಳು ಗಮನ ಸೆಳೆದಿವೆ. ಸಾಮಾನ್ಯವಾಗಿ ಎಲ್ಲ ಜಾತಿಯ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣಿನ ನಡುವೆ ಸಾಮ್ಯತೆ ಇರುತ್ತದೆ. ಆದರೆ ಇಲ್ಲಿ ಎರಡು ಜಾತಿಯ ಹುಳುಗಳಲ್ಲಿ ಹೆಣ್ಣು ಜೇನಿಗಿಂತ ಗಂಡು ಹುಳು ಸಂಪೂರ್ಣವಾಗಿ ಭಿನ್ನತೆ ಕಂಡುಕೊಂಡಿರುವುದು ವಿಸ್ಮಯ ಮೂಡಿಸುತ್ತಿದೆ. ಗೂಡಿನಲ್ಲಿ ಹೆಚ್ಚು ಕಾಲ ಕಳೆಯುವ ಪರಿಣಾಮ ಗಂಡು ಜೇನು ಹುಳುಗಳು ಇರುವೆಗಳಂತಿವೆ ಎಂಬುದು ಸಂಶೋಧಕರ ಪ್ರಾಥಮಿಕ ಅಭಿಪ್ರಾಯ. ಹೆಣ್ಣು ಜೇನು ಹೂಗಳಿಂದ ಮಕರಂದ ಹೀರಿ ಗೂಡಿನೊಳಗೆ ಶೇಖರಿಸಿಡುತ್ತದೆ. ತನ್ನ ಮರಿಗಳ ಬೆಳವಣಿಗೆಗೆ ಸಾಕಷ್ಟು ಮಕರಂದ ಶೇಖರಗೊಂಡ ನಂತರ ಮೊಟ್ಟೆಗಳನ್ನು ಇರಿಸುತ್ತದೆ. ಕ್ರಿಂಕಲ್ವೆುೕಟ್ಸ್ ಸ್ನೇಹಿ: ಮರಳುಗಾಡಿನ ಸಾಮಾನ್ಯ ಸಸ್ಯಗಳಿಗೆ, ಮುಖ್ಯವಾಗಿ ಕ್ರಿಂಕಲ್ವೆುೕಟ್ಸ್ ಎಂಬ ಸಸ್ಯಗಳ ಸಂತತಿ ಬೆಳವಣಿಗೆಗೆ ನೂತನ ಜೇನುಹುಳುಗಳು ಕೊಡುಗೆ ಅಪಾರ. ಪರಾಗಸ್ಪರ್ಷದ ಮೂಲಕ ಸಸ್ಯಗಳ ಸಂತಾನೋತ್ಪತ್ತಿಗೆ ಸಹಾಯಕ ಮಾಡುತ್ತವೆ. ಜೀನಸ್ ಟಿಕ್ಯೂಲಿಯಾ ಜಾತಿಗೆ ಸೇರಿದ ಹೂಬಿಡುವ ಕ್ರಿಂಕಲ್ವೆುೕಟ್ಸ್, ರೋಮಗಳಿಂದ ಕೂಡಿದ ಸಣ್ಣ ಎಲೆಗಳು, ಕೊಳವೆ ಆಕಾರದ ಸಣ್ಣ ನೀಲಿ ಪಕಳೆಗಳನ್ನು ಹೊಂದಿರುವ ಅತ್ಯಂತ ಗಿಡ್ಡದ ಸಸ್ಯ.
2016: ಇಸ್ಲಾಮಾಬಾದ್: ಪಾಕಿಸ್ತಾನದ ಸಂಸ್ಥಾಪಕ ಎಂ..ಜಿನ್ನಾ ಅವರ ಜನ್ಮ ದಿನಾಚರಣೆಯ ಪ್ರಯುಕ್ತ ಭಾಷಣ ಮಾಡಲು ತಾನು ಸಿದ್ದಪಡಿಸಿದ್ದ ಭಾಷಣದ ಪ್ರತಿಯನ್ನು ರಾಷ್ಟ್ರಪತಿ ಕಚೇರಿ ಕದ್ದು ಬೇರೆಯವರಿಗೆ ನೀಡಿದೆ ಎಂದು ಆರೋಪಿಸಿ 11 ವರ್ಷದ ಬಾಲಕನೊಬ್ಬ ಕೋರ್ಟ್ ಮೆಟ್ಟಿಲೇರಿದ. 6 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮೊಹಮ್ಮದ್ ಸಬೀಲ್ ಹೈದರ್ ಎಂಬ ಬಾಲಕ ತನ್ನ ತಂದೆಯ ಮೂಲಕ ಇಸ್ಲಾಮಾಬಾದ್ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ.. ನನ್ನ ಅನುಮತಿ ಇಲ್ಲದೆ ಭಾಷಣದ ಪ್ರತಿಯನ್ನು ಇತರರಿಗೆ ನೀಡಲಾಗಿದೆ ಎಂದು ಬಾಲಕ ಆರೋಪಿಸಿದ.  ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತು. ನಡೆದದ್ದು ಏನು: ಈ ವರ್ಷ ಮಾರ್ಚ್ 23 ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೈದರ್ ಭಾಷಣ ಮಾಡಿದ್ದ, ಇದಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಂಸಾ ಪತ್ರವನ್ನೂ ಸಹ ಪಡೆದಿದ್ದ. ನಂತರ ಪಾಕಿಸ್ತಾನದ ಸಂಸ್ಥಾಪಕ ಜಿನ್ನಾ ಅವರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಆಚರಿಸಲು ರಾಷ್ಟ್ರಪತಿ ಭವನ ಹೈದರ್ಗೆ ಜಿನ್ನಾ ಕುರಿತು ಭಾಷಣ ಮಾಡಲು ಕೋರಿತ್ತು. ರಾಷ್ಟ್ರಪತಿ ಭವನದ ಕೋರಿಕೆಯಂತೆ ಭಾಷಣವನ್ನು ಸಿದ್ಧಪಡಿಸಿ ಡಿಸೆಂಬರ್ 14 ರಿಂದ ಅಭ್ಯಾಸ ನಡೆಸಿದ್ದ. ಸಂದರ್ಭದಲ್ಲಿ ಭಾಷಣದ ಪ್ರತಿಯನ್ನು ಅಂತಿಮ ಒಪ್ಪಿಗೆ ಪಡೆಯುವ ಸಲುವಾಗಿ ರಾಷ್ಟ್ರಪತಿ ಕಚೇರಿಗೆ ಹೈದರ್ ಸಲ್ಲಿಸಿದ್ದ.ಇದೇ ಸಂದರ್ಭದಲ್ಲಿ ತನ್ನ ವಾರ್ಷಿಕ ಪರೀಕ್ಷೆಗಳಿಗೂ ಸಹ ಹಾಜರಾಗದೆ ಹೈದರ್ ಭಾಷಣ ಅಭ್ಯಾಸ ಮಾಡಿದ್ದ.. ಆದರೆ ಡಿಸೆಂಬರ್ 22 ರಂದು ಭಾಷಣವನ್ನು ರೆಕಾರ್ಡ್ ಮಾಡಲು ರಾಷ್ಟ್ರಪತಿ ಭವನ ತಲುಪಿದ ಹೈದರ್ಗೆ ಆಘಾತವೊಂದು ಎದುರಾಗಿತ್ತು. ತಾನು ಸಿದ್ಧಪಡಿಸಿದ ಭಾಷಣವನ್ನು ಬೇರೊಬ್ಬ ಬಾಲಕಿಗೆ ನೀಡಲಾಗಿತ್ತು. ಆಕೆ ಮಾಡಿದ ಭಾಷಣವನ್ನು ರೆಕಾರ್ಡ್ ಮಾಡಲಾಯಿತು. ಸಂಬಂಧ ಹೈದರ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಜತೆಗೆ ಕಾರ್ಯಕ್ರಮದಲ್ಲಿ ಹೈದರ್ ಮನವಿಯನ್ನು ಅಧಿಕಾರಿಗಳು ಪುರಸ್ಕರಿಸಲಿಲ್ಲ ಎಂದು ಹೈದರ್ ಕೋರ್ಟಿಗೆ ತಿಳಿಸಿದ.
2016: ನವದೆಹಲಿ: 500 ಮತ್ತು 1000 ರೂಪಾಯಿಗಳ ನೋಟುಗಳನ್ನು ರದ್ದು ಮಾಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪ್ರಧಾನಿಯವರಿಗೆ ಶಿಫಾರಸು ಮಾಡಿದ್ದು ನವೆಂಬರ್ 8 ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಅಚ್ಚರಿಯ ನೋಟು ರದ್ದು ನಿರ್ಧಾರ ಪ್ರಕಟಿಸಿ ಮಾಡಿದ ಭಾಷಣಕ್ಕೆ ಕೆಲವೇ ಗಂಟೆಗಳ ಮೊದಲು ಎಂಬುದು ಬೆಳಕಿಗೆ ಬಂದಿತು. ಪತ್ರಿಕಾ ಸಂಸ್ಥೆಯೊಂದು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ವಿಚಾರವನ್ನು ಆರ್ಬಿಐ ಬಹಿರಂಗ ಪಡಿಸಿತು. ಸರ್ಕಾರ ಮತ್ತು ಆರ್ಬಿಐ ಸುಧಾರಣಾ ಕ್ರಮಗಳ ಬಗ್ಗೆ ದೀರ್ಘ ಕಾಲದಿಂದ ಸಮಾಲೋಚನೆಗಳನ್ನು ನಡೆಸುತ್ತಾ ಬಂದಿದ್ದರೂ ರಾಷ್ಟ್ರದಲ್ಲಿ ಚಲಾವಣೆಯಲ್ಲಿದ್ದ ನಗದು ಹಣದ ಶೇಕಡಾ 80ರಷ್ಟು ನೋಟುಗಳನ್ನು ರದ್ದು ಪಡಿಸುವ ಶಿಫಾರಸು ರಿಸರ್ವ್ ಬ್ಯಾಂಕಿನಿಂದ ಬಂದದ್ದು ಕಟ್ಟ ಕಡೆಯ ಗಳಿಗೆಯಲ್ಲಿ ಎಂಬುದನ್ನು ಮಾಹಿತಿ ಅನಾವರಣಗೊಳಿಸಿತು. ಮಾಹಿತಿಯ ಪ್ರಕಾರ ನವೆಂಬರ್ 8ರಂದು ನಡೆದ ಆರ್ಬಿಐ ನಿರ್ದೇಶಕರ ಕೇಂದ್ರೀಯ ಮಂಡಳಿ ಸಭೆಯಲ್ಲಿ ಗರಿಷ್ಟ ಮೌಲ್ಯದ ನೋಟು ರದ್ದು ಮಾಡುವ ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸುವ  ನಿರ್ಧಾರ ಕೈಗೊಳ್ಳಲಾಯಿತು. 10 ಮಂದಿ ನಿರ್ದೇಶಕರ ಪೈಕಿ 8 ಮಂದಿ ಮಾತ್ರ ನಿರ್ಣಾಯಕ ಸಭೆಯಲ್ಲಿ ಹಾಜರಿದ್ದರು. ಆರ್ಬಿಐ ಮುಖ್ಯಸ್ಥ ಉರ್ಜಿತ್ ಪಟೇಲ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿ ಕಾಂತ ದಾಸ್ ಅವರಲ್ಲದೆ ಆರ್ಬಿಐ ಡೆಪ್ಯುಟಿ ಗವರ್ನರ್ಗಳಾದ ಆರ್. ಗಾಂಧಿ, ಎಸ್.ಎಸ್. ಮುಂದ್ರಾ, ನಚಿಕೇತ ಎಂ.ಮೊರ್ (ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್ ನಿರ್ದೇಶಕ), ಭರತ್ ನರೋತಮ ದೋಶಿ (ಮಹೀಂದ್ರ ಅಂಡ್ ಮಹೀಂದ್ರ ಫೈನಾನಿನ್ಷಿಯಲ್ ಸರ್ವೀಸಸ್ ಲಿಮಿಟೆಡ್ ಮಾಜಿ ಅಧ್ಯಕ್ಷ), ಗುಜರಾತಿನ ಮಾಜಿ ಮುಖ್ಯಕಾರ್ಯದರ್ಶಿ ಸುಧೀರ್ ಮಂಕಡ್, ವಿತ್ತ ಸೇವಾ ಕಾರ್ಯದರ್ಶಿ ಅಂಜುಲೆ ಚಿಬ್ ದುಗ್ಗಲ್ ಸಭೆಯಲ್ಲಿ ಹಾಜರಿದ್ದರು. ಶಿಫಾರಸು ಬಂದ ಕೆಲವೇ ಗಂಟೆಗಳ ಬಳಿಕ ಪ್ರಧಾನಿ ಅಚ್ಚರಿಯ ನಿರ್ಧಾರವನ್ನು ಪ್ರಕಟಿಸಿದರು.
2016: ನವದೆಹಲಿ: ಕೇಂದ್ರ ಸಚಿವಾಲಯಗಳ ಪೈಕಿ ಸಾಮಾಜಿಕ ತಾಣಗಳಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ವಿದೇಶಾಂಗ ಸಚಿವಾಲಯದ ಖಾತೆಯು 10 ಲಕ್ಷಕ್ಕಿಂತ ಹೆಚ್ಚು ಹಿಂಬಾಲಕರನ್ನು  ಹೊಂದುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿತು.  @IndianDiplomacy ಖಾತೆಯು ಕಳೆದ ವರ್ಷ ಡಿಜಿಟಲ್ ಇಂಡಿಯಾ ಅವಾರ್ಡ್ ಪಡೆದಿತ್ತು. ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ನೆರವು ನೀಡುವ ಮೂಲಕ ಸಚಿವೆ ಸುಷ್ಮಾ ಸ್ವರಾಜ್ ಜಾಗತಿಕವಾಗಿ ಹೆಚ್ಚು ಗಮನ ಸೆಳೆದಿದ್ದಾರೆ. ಸುಷ್ಮಾ ಟ್ವಿಟರ್ನಲ್ಲಿ 68 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಹಿಂದಿನ ದಿನವಷ್ಟೇ ವಿದೇಶಾಂಗ ಸಚಿವಾಲಯ ಟ್ವಿಟರ್ ಸೇವಾ ಎಂಬ ಹೊಸ ಯೋಜನೆ ಆರಂಭಿಸಿದೆ. ಮೂಲಕ ನಾಗರಿಕರಿಗೆ ಸಮಯೋಚಿತ, ಪಾರದರ್ಶಕ ಪ್ರತಿಕ್ರಿಯೆಗಳು ಲಭ್ಯವಾಗಲಿದೆ. ನಿಟ್ಟಿನಲ್ಲಿ ನೂತನ ಯೋಜನೆಗೆ ಭಾರತೀಯ 198 ಕಚೇರಿಗಳು ಬೆಂಬಲಿಸಿವೆ. 29 ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗಳು ಸ್ಪಂದಿಸಿವೆ. ಇದರಿಂದ ಸಂಕಷ್ಟದಲ್ಲಿರುವ ಭಾರತೀಯ ನಾಗರಿಕರಿಗೆ ನೆರವು ನೀಡಲು ಸಹಕಾರವಾಗಲಿದೆ ಎಂದು ವಿದೇಶಾಂಗ ವಕ್ತಾರ ತಿಳಿಸಿದರು.
2016: ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಡಿಜಿಟಲ್ ಇಂಡಿಯಾದ ಭಾಗವಾದ ಆಧಾರ್ ಪೇಮೆಂಟ್ ಅಪ್ಲಿಕೆಷನನ್ನು ಡಿಸೆಂಬರ್ 25ರಂದು ಬಿಡುಗಡೆ ಮಾಡಲು ನಿರ್ಧರಿಸಿತು. ಡೆಬಿಟ್/ಕ್ರೆಡಿಟ್ ಕಾರ್ಡ್ಗಳಿಗೆ ಬದಲಾಗಿ ಅತ್ಯಂತ ಸುಲಭವಾಗಿ ನೂತನ ಆ್ಯಪ್ ಬಳಸಬಹುದಾಗಿದ್ದು, ನಗದು ರಹಿತ ವ್ಯವಹಾರ ಸುಗಮಗೊಳ್ಳಲಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಪೇಟಿಎಂ ಸಮನಾಗಿ ಆಧಾರ್ ಪೇಮೆಂಟ್ ಆ್ಯಪ್ ಬಳಕೆಗೆ ಬರಲಿದೆಆ್ಯಂಡ್ರಾಯ್ಡ್ ಫೋನ್ ಮೂಲಕ ಸುಲಭವಾಗಿ ನೂತನ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು.. ಜನಸಾಮಾನ್ಯರಿಗೆ ಸುಲಭವಾಗಿ ವ್ಯವಹಾರ ನಡೆಸಲು ಅನುಕೂಲವಾಗುವ ರೀತಿಯಲ್ಲಿ ಆ್ಯಪ್ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಯುಎಡಿಎಐ, ಭಾರತದ ರಾಷ್ಟ್ರೀಯ ಪಾವತಿ ಸಹಕಾರ ಸಂಘ ಮತ್ತು ಐಡಿಎಫ್ಸಿ ಬ್ಯಾಂಕ್ ಜತೆಯಾಗಿ ನೂತನ ಆ್ಯಪ್ ಅಭಿವೃದ್ಧಿ ಪಡಿಸಿವೆ.

2016: ಧರ್ಮಶಾಲಾ (ಹಿಮಾಚಲ ಪ್ರದೇಶ): ಕಾಳಸಂತೆಕೋರರು ತಮ್ಮ ಕಪ್ಪು ಹಣವನ್ನು ಕೇವಲ ನಗದು ರೂಪದಲ್ಲಿ ಸಂಗ್ರಹಿಸಿ ಇಟ್ಟಿಲ್ಲ. ರಿಯಲ್ ಎಸ್ಟೇಟ್, ಚಿನ್ನಾಭರಣ ಇತ್ಯಾದಿಗಳಲ್ಲಿ ಇಟ್ಟಿದ್ದಾರೆ. ಹಿಂದುಸ್ಥಾನದಲ್ಲಿ ಶೇಕಡಾ 6ರಷ್ಟು ಕಾಳಧನ ಮಾತ್ರ ನಗದುರೂಪದಲ್ಲಿದೆ. ಶೇಕಡಾ 94ರಷ್ಟು ಕಾಳಧನ ರಿಯಲ್ ಎಸ್ಟೇಟ್, ಚಿನ್ನ ಮತ್ತು ವಿದೇಶೀ ಬ್ಯಾಂಕುಗಳಲ್ಲಿ ಇದೆ  ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಧರ್ಮಶಾಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ‘ನಾನು ಗಂಭೀರವಾದ ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಮೋದಿಯವರು ನನ್ನನ್ನು ತಮಾಷೆ ಮಾಡುತ್ತಿದ್ದಾರೆ. ನನ್ನನ್ನು ಎಷ್ಟು ಬೇಕಾದರೂ ತಮಾಷೆ ಮಾಡಿ, ಆದರೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿಎಂದು ರಾಹುಲ್ ಪ್ರಧಾನಿಯನ್ನು ಆಗ್ರಹಿಸಿದರು. ನೋಟು ರದ್ದತಿ ಹಿಂದುಸ್ಥಾನದ ನಗದು ಆರ್ಥಿಕತೆ ಮೇಲಿನ ಫೈರ್ ಬಾಂಬ್ ದಾಳಿ. ದೆಹಲಿಯಲ್ಲಿ ಬಡವರು ಸಾಲಿನಲ್ಲಿ ನಿಂತಿದ್ದಾರೆ. ಬಿಜೆಪಿ ಅವರಿಗೆ 3 ರೂಪಾಯಿಯ ಲಾಡು ತಿನ್ನಿಸಿದೆ. ವಿಜಯ್ ಮಲ್ಯಗೆ 1,200 ಕೋಟಿ ರೂಪಾಯಿಗಳ ಲಾಡು ತಿನ್ನಿಸಿದೆ ಎಂದು ಚುಚ್ಚಿದ ಕಾಂಗ್ರೆಸ್ ಉಪಾಧ್ಯಕ್ಷ, ‘ಸ್ವಿಸ್ ಬ್ಯಾಂಕ್ ಕೊಟ್ಟ ಠೇವಣಿದಾರರ ಪಟ್ಟಿಯನ್ನು ಸಂಸತ್ತಿನಲ್ಲಿ ಏಕೆ ಮಂಡಿಸಿಲ್ಲ ಎಂದು ಪ್ರಧಾನಿಯನ್ನು ಕೇಳಬಯಸುವೆಎಂದು ಹೇಳಿದರು. ಮೋದಿಯವರು ಭಾರತವನ್ನು ಶೇಕಡಾ 1ರಷ್ಟು ಶ್ರೀಮಂತರು ಮತ್ತು ಇತರ ಶೇಕಡಾ 99ರಷ್ಟು ಬಡ ಮತ್ತು ಮಧ್ಯಮ ವರ್ಗಗಳಾಗಿ ವಿಭಜಿಸಿದ್ದಾರೆ. ನೋಟ್ಬಂದಿ ಕ್ರಮವು ಕೃಷಿ, ತೋಟಗಾರಿಕೆ ಮತ್ತು ಪ್ರವಾಸೋದ್ಯಮದ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ ಎಂದು ರಾಹುಲ್ ನುಡಿದರು.
2008: ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿದ್ದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಬಾಂಗ್ಲಾ ನ್ಯಾಷನಲ್ ಪಾರ್ಟಿ ಅಧ್ಯಕ್ಷೆ ಖಲೀದಾ ಜಿಯಾ ಅವರನ್ನು ಭ್ರಷ್ಟಾಚಾರ ನಿಗ್ರಹ ಆಯೋಗವು ಆರೋಪದಿಂದ ಮುಕ್ತಗೊಳಿಸಿತು. ಈ ಮೂಲಕ ಅವರಿಗೆ ಡಿಸೆಂಬರ್ 29ರಂದು ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಅಡಚಣೆ ನಿವಾರಣೆಯಾಯಿತು. ಹಿಂದಿನ ದಿನವಷ್ಟೇ ಭ್ರಷ್ಟಾಚಾರ ನಿಗ್ರಹ ಆಯೋಗದ ಉನ್ನತ ಸಮಿತಿ ಮಾಜಿ ಪ್ರಧಾನಿ ಮತ್ತು ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಆಕ್ರಮ ಆಸ್ತಿ ಸಂಪಾದನೆ ಆರೋಪದಿಂದ ಮುಕ್ತಗೊಳಿಸಿತ್ತು. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದಾರೆ ಎಂಬ ಆರೋಪವನ್ನು ಈ ಮಾಜಿ ಪ್ರಧಾನಿಗಳ ಮೇಲೆ ಹೊರಿಸಲಾಗಿತ್ತು. ಆನಂತರ ಇವರಿಬ್ಬರೂ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ತನಿಖೆಯಲ್ಲಿ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅಪಾದನೆಯಿಂದ ಮುಕ್ತಗೊಳಿಸಲಾಗಿದೆ ಎಂದು ಆಯೋಗ ತಿಳಿಸಿತ್ತು.

2008: 2000ದಿಂದ 2008ರ ಡಿಸೆಂಬರ್ 24ರವರೆಗೆ ರಾಜ್ಯದ ಗಣಿಗಾರಿಕೆ ಕ್ಷೇತ್ರದಲ್ಲಿ ನಡೆದಿರಬಹುದಾದ ಅವ್ಯವಹಾರಗಳ ಕುರಿತು ತನಿಖೆಯನ್ನು ಲೋಕಾಯುಕ್ತರಿಗೆ ವಹಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತು. 2000ದಿಂದ 2006ರವರೆಗಿನ ಅವ್ಯವಹಾರಗಳ ಕುರಿತು ಹಿಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಲೋಕಾಯುಕ್ತ ತನಿಖೆಗೆ ಆದೇಶಿಸಿದ್ದರು. 2008ರ ಸೆಪ್ಟೆಂಬರ್ 9ರವರೆಗಿನ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸುವಂತೆ ಅವಧಿಯನ್ನು ವಿಸ್ತರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದರು. ಈಗ ಮತ್ತೊಮ್ಮೆ ತನಿಖಾ ಅವಧಿಯನ್ನು ವಿಸ್ತರಿಸಲಾಯಿತು. ಹಿಂದಿನ ಸರ್ಕಾರ 2007ರ ಮಾರ್ಚ್ 12ರಂದು 2000ದಿಂದ 2006ರವರೆಗಿನ ಅವ್ಯವಹಾರಗಳ ಕುರಿತ ತನಿಖೆಗೆ ಆದೇಶ ನೀಡುವ ಸಂದರ್ಭದಲ್ಲಿ ನಿಗದಿಗೊಳಿಸಿರುವ ಅಂಶಗಳ ಆಧಾರದಲ್ಲೇ ಮುಂದುವರೆದ ಅವಧಿಯ ತನಿಖೆಯೂ ನಡೆಯಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿತು.

2008: ವಿದ್ವಾಂಸ ಪ್ರೊ.ಎಲ್. ಬಸವರಾಜು, ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ, ತೊಗಲುಗೊಂಬೆ ಕಲಾವಿದ ಯಡ್ರಾಮನಹಳ್ಳಿ ದೊಡ್ಡಭರಮಪ್ಪ, ಸಾಹಿತಿಗಳಾದ ಪ್ರೊ.ಕಮಲಾ ಹಂಪನಾ ಹಾಗೂ ಡಾ.ಶ್ರೀನಿವಾಸ ಹಾವನೂರ ಅವರು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಈ ಸಾಲಿನ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ ಎಂದು ಕುಲಪತಿ ಡಾ.ಎ. ಮುರಿಗೆಪ್ಪ ಪ್ರಕಟಿಸಿದರು.

2007: ಬಾಲಿವುಡ್ಡಿನ ಹಿರಿಯ ನಿರ್ಮಾಪಕ - ನಿರ್ದೇಶಕ ಜಿ.ಪಿ.ಸಿಪ್ಪಿ (93) ಅವರು ಮುಂಬೈಯಲ್ಲಿ ಈದಿನ ರಾತ್ರಿ ನಿಧನರಾದರು. 1975ರಲ್ಲಿ ತೆರೆ ಕಂಡ ಸೂಪರ್ ಹಿಟ್ `ಶೋಲೆ' ಚಿತ್ರದ ಮೂಲಕ ಮನೆಮಾತಾಗಿದ್ದ ಸಿಪ್ಪಿ, ಕೆಲವು ತಿಂಗಳುಗಳಿಂದ ವಯೋಸಹಜವಾದ ಅನಾರೋಗ್ಯದಿಂದ ಬಳಲಿದ್ದರು. ಸಿಪ್ಪಿ ಅವರು ನಿರ್ಮಿಸಿದ ಪ್ರಮುಖ ಚಿತ್ರಗಳ ಪಟ್ಟಿಗೆ ಸಾಗರ್, ರಾಜು ಬನ್ ಗಯಾ ಜಂಟಲ್ ಮನ್, ಜಮಾನಾ ದಿವಾನಾ ಸಿನೆಮಾಗಳೂ ಸೇರುತ್ತವೆ. 1968 ಹಾಗೂ 1982 ರಲ್ಲಿ ಸಿಪ್ಪಿ ಅವರು ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದರು. 1955 ರಲ್ಲಿ `ಮರೈನ್ ಡ್ರೈವ್' ಚಿತ್ರದ ಮೂಲಕ ಅವರು ಚಿತ್ರರಂಗವನ್ನು ಪ್ರವೇಶಿಸಿದ್ದರು.

2007: 2007: ಗುಜರಾತಿನ ಗಾಂದಿನಗರದ ಟೌನ್ ಹಾಲಿನಲ್ಲಿ ನಡೆದ ಬಿಜೆಪಿ ಶಾಸಕರ ಸಭೆಯಲ್ಲಿ ನರೇಂದ್ರ ಮೋದಿ ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧ ಆಯ್ಕೆಯಾದರು.

2007: ಲೂದಿಯಾನ ನಗರಾಭಿವೃದ್ಧಿ ಯೋಜನೆಯ ಬಹುಕೋಟಿ ರೂಪಾಯಿ ಹಗರಣಕ್ಕೆ ಸಂಬಂಧಿಸಿ ಪಂಜಾಬಿನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಇತರ 34 ಮಂದಿಯ ವಿರುದ್ಧ ಸ್ಥಳೀಯ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿತು. ಬಹುಕೋಟಿ ರೂಪಾಯಿಗಳ ನಗರ ಕೇಂದ್ರ ನಿರ್ಮಾಣ ಯೋಜನೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದ ಮೇಲೆ ತನಿಖೆ ನಡೆಸಿದ ರಾಜ್ಯ ಗುಪ್ತದಳವು ಅಮರಿಂದರ್ ಸೇರಿದಂತೆ 36 ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಈ ಸಂಬಂಧ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ.ಕೆ. ರೈ ಅವರು ಅಮರಿಂದರ್ ಸೇರಿದಂತೆ 35 ಮಂದಿಗೆ ಸಮನ್ಸ್ ಜಾರಿಗೊಳಿಸಿ, ಜ.10ರಂದು ನ್ಯಾಯಾಲಯಕ್ಕೆ ಹಾಜರಾಗುಂತೆ ಸೂಚಿಸಿದರು. ಆದರೆ ತಲೆಮರೆಸಿಕೊಂಡ ಲೂದಿಯಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಪಿ.ಎಸ್. ಸಿಬಿಯಾ ಅವರಿಗೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಲಿಲ್ಲ. ತನಿಖೆ ನಡೆಸಿದ್ದ ರಾಜ್ಯ ಗುಪ್ತದಳ ಈ ಹಗರಣಕ್ಕೆ ಸಂಬಂಧಪಟ್ಟಂತೆ 106 ಪುಟಗಳ ಆರೋಪ ಪಟ್ಟಿಯನ್ನು ಡಿಸೆಂಬರ್ ತಿಂಗಳ 12ರಂದು ಸಲ್ಲಿಸಿತ್ತು. ಇದರಲ್ಲಿ ಅಮರಿಂದರ್ ಅವರ ಪುತ್ರ ರಾಣಿಂದರ್ ಸಿಂಗ್, ಅಳಿಯ ರಾಮಿಂದರ್ ಸಿಂಗ್, ಮಾಜಿ ಸ್ಥಳೀಯಾಡಳಿತ ಸಚಿವ ಜಗಜೀತ್ ಸಿಂಗ್, ಲೂದಿಯಾನ ಅಭಿವೃದ್ಧಿ ಟ್ರಸ್ಟಿನ ಅಧಿಕಾರಿಗಳು ಹಾಗೂ ದೆಹಲಿ ಮೂಲದ ಕಂಪೆನಿ `ಟುಡೇ ಹೋಮ್ಸ್' ಭಾಗಿಯಾಗಿರುವುದಾಗಿ ಆರೋಪಿಸಲಾಗಿತ್ತು. ಅಮರಿಂದರ್ ಅವರ ಆಡಳಿತಾವಧಿಯಲ್ಲಿ ಲೂದಿಯಾನ ಅಭಿವೃದ್ಧಿಗೆಂದು ರೂ 3,000 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿ, ಇದರ ಅನುಷ್ಠಾನಕ್ಕಾಗಿ `ಲೂದಿಯಾನ ಅಭಿವೃದ್ಧಿ ಟ್ರಸ್ಟ್' ಹುಟ್ಟುಹಾಕಲಾಗಿತ್ತು.

2007: ಎಲ್ಲ ಬಗೆಯ ಟ್ರಸ್ಟ್ಗಳು ಷೇರುಪೇಟೆಯಲ್ಲಿ ಹಣ ತೊಡಗಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತು. ಕೇಂದ್ರ ಸಚಿವ ಸಂಪುಟ ಕೈಗೊಂಡ ಈ ಮಹತ್ವದ ನಿರ್ಧಾರವು, ಈಗಾಗಲೇ ಉತ್ಕರ್ಷದಲ್ಲಿ ಇರುವ ಷೇರುಪೇಟೆಯಲ್ಲಿ ಇನ್ನಷ್ಟು ಉತ್ಸಾಹ ಮೂಡಿಸಲಿದೆ ಎಂಬುದು ಆರ್ಥಿಕ ವಲಯಗಳ ಅಭಿಪ್ರಾಯ.

2007: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಸೀದಿಯಲ್ಲಿ ಒತ್ತೆಯಾಳಾಗಿ ಇರಿಸಿಕೊಂಡ ಐವರು ನಾಗರಿಕರಲ್ಲಿ ಮೂವರನ್ನು ಉಗ್ರಗಾಮಿಗಳು ಹತ್ಯೆ ಮಾಡಿದರು. ಪ್ಲಾನೋ ಗ್ರಾಮದ ಯರಿಪುರ ಪ್ರದೇಶದಲ್ಲಿನ ಮಸೀದಿಗೆ ಪ್ರಾರ್ಥನೆಗೆ ಬಂದಿದ್ದಾಗ ಮೂವರು ಉಗ್ರರು ಈ ಐವರನ್ನು ಅಪಹರಿಸಿದ್ದರು. ಈ ಉಗ್ರರು ಹಿಜ್ಬುಲ್ ಮುಜಾಹಿದೀನ್ ಸಂಘಟನೆ ಜತೆ ಸಂಪರ್ಕ ಇರಿಸಿಕೊಂಡವರು. ಈ ಉಗ್ರರನ್ನು ಶಿರಾಜ್ ಅಹ್ಮದ್ ಭಟ್ ಅಲಿಯಾಸ್ ಅಸ್ಗರ್, ಮುದಾಸೀರ್ ಅಹ್ಮದ್ ಮಿರ್ ಅಲಿಯಾಸ್ ಜಹಾಂಗಿರ್ ಹಾಗೂ ಇಷ್ಪಕ್ ಅಹ್ಮದ್ ವಗೇ ಎಂದು ಗುರುತಿಸಲಾಯಿತು.

2007: ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ಪ್ರಸಕ್ತ ಸಾಲಿನ ಡಾ. ಬಿ.ಎಸ್. ಗದ್ದಗೀಮಠ ಹಾಗೂ ಡಾ.ಜೀ.ಶಂ.ಪ ಗೌರವ ಪ್ರಶಸ್ತಿಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಜಾನಪದ ಪ್ರಾಧ್ಯಾಪಕ ಡಾ. ಡಿ.ಬಿ.ನಾಯಕ್ ಹಾಗೂ ಸಾಗರದ ಡಾ.ಜಿ.ಎಸ್.ಭಟ್ ಅವರನ್ನು ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷ ಕೆರೆಮನೆ ಶಂಭು ಹೆಗಡೆ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು.

2007: ವಿಶ್ವ ಮಾನವ ಸಂಸ್ಥೆ ವತಿಯಿಂದ ನೀಡಲಾಗುವ ವಿಶ್ವಮಾನವ ಪ್ರಶಸ್ತಿಗೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಪ್ರೊ.ಯು. ಆರ್. ರಾವ್ ಆಯ್ಕೆಯಾದರು.

2006: ಕರ್ನಟಕದ ಜೆಡಿ ಎಸ್ - ಬಿಜೆಪಿ ಮೈತ್ರಿ ಸರ್ಕಾರದ ಮುಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಂದು ಲಖನೌದಲ್ಲಿ ಘೋಷಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಈ ಕುರಿತು ಎದ್ದಿದ್ದ ಎಲ್ಲ ಅನಿಶ್ಚಿತತೆಗಳಿಗೆ ತೆರೆ ಎಳೆದರು.

2006: ವೆಸ್ಟ್ ಇಂಡೀಸ್ ತಂಡದ ಆಟಗಾರ ಬ್ರಯನ್ ಲಾರಾ ಅವರು ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಬಳಿಕ ಏಕದಿನ ಪಂದ್ಯದಿಂದ ನಿವೃತ್ತಿ ಹೊಂದುವುದಾಗಿ ಸಿಡ್ನಿಯಲ್ಲಿ ಸೂಚನೆ ನೀಡಿದರು.

2006: ದೇಶದೊಳಗೆ ಸಂಚರಿಸುವ ವಿಮಾನ ದೆಹಲಿಯಿಂದ ಯಾವುದೇ ಕಾರಣಕ್ಕೆ ನಿಗದಿತ ಅವಧಿಯಿಂದ ಎರಡು ಗಂಟೆ ವಿಳಂಬವಾಗಿ ಹೊರಟರೆ ಅಥವಾ ತಲುಪಿದರೆ ಪ್ರತಿ ಪ್ರಯಾಣಿಕರಿಗೆ ಕನಿಷ್ಠ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಅಂತಾರಾಷ್ಟ್ರೀಯ ಮಾರ್ಗದದಲ್ಲಿ ಆದರೆ ಪ್ರತಿ ಪ್ರಯಾಣಿಕರಿಗೆ ತಲಾ 20ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ದೆಹಲಿಯ ಗ್ರಾಹಕ ನ್ಯಾಯಾಲಯ ಏಕರೂಪದ ಚಾರಿತ್ರಿಕ ಆದೇಶ ನೀಡಿತು. ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಜೆ.ಡಿ. ಕಪೂರ್ ಈ ತೀರ್ಪು ನೀಡಿದರು.

2005: ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವಿಜ್ಞಾನಿ ಡಾ. ಅಬ್ರಹಾಂ ವರ್ಗೀಸ್ ಅವರು ಲಂಡನ್ನಿನ ಪ್ರತಿಷ್ಠಿತ ರಾಯಲ್ ಎಂಟಮಲಾಜಿಕಲ್ ಸೊಸೈಟಿಯ ಫೆಲೋಶಿಪ್ ಗೆ ಪಾತ್ರರಾದರು. 28 ವರ್ಷಗಳಿಂದ ಕೀಟಶಾಸ್ತ್ರದಲ್ಲಿ ಮಾಡಿರುವ ಸಾಧನೆಗೆ ಈ ಗೌರವ ಲಭಿಸಿತು. ಇದರೊಂದಿಗೆ ಈ ಹಿಂದೆ ಈ ಸಾಧನೆ ಮಾಡಿದ ಚಾಲ್ಸರ್್ ಡಾರ್ವಿನ್, ಅಲ್ಫ್ರೆಡ್ ವ್ಯಾಲೇಸ್ ಅವರ ಸಾಲಿಗೆ ವರ್ಗೀಸ್ ಸೇರ್ಪಡೆಯಾದರು. ಏಷ್ಯಾ ಖಂಡದಲ್ಲಿ ಕೆಲವೇ ಕೆಲವರಿಗೆ ಈ ಗೌರವ ಲಭಿಸಿದ್ದು, ಇದಕ್ಕೆ ಪಾತ್ರರಾದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆ ಇವರದಾಯಿತು.

2005: ದಕ್ಷಿಣ ಭಾರತದ ಹಿರಿಯ ನಟಿ ಭಾನುಮತಿ (80) ಈ ರಾತ್ರಿ ತಮಿಳುನಾಡಿನ ಚೆನ್ನೈಯಲ್ಲಿ ನಿಧನರಾದರು. ಇವರ ಪತಿ ಚಿತ್ರ ನಿರ್ಮಾಪಕ, ನಿರ್ದೇಶಕ ಪಿ. ರಾಮಕೃಷ್ಣ ಎರಡು ದಶಕಗಳಷ್ಟು ಹಿಂದೆಯೇ ನಿಧನರಾಗಿದ್ದರು. ಚಿತ್ರ ನಿರ್ಮಾಪಕಿ, ನಿರ್ದೇಶಕಿ, ಕತೆಗಾರ್ತಿ, ಗಾಯಕಿ, ಸಂಕಲನಗಾರ್ತಿ ಮತ್ತು ನಟಿಯಾಗಿ ಸಿನೆಮಾದ ಎಲ್ಲ ಕ್ಷೇತ್ರಗಳಲ್ಲೂ ಕೈಯಾಡಿಸಿದವರು ಭಾನುಮತಿ. ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿರುವ ಇವರನ್ನು ಚಿತ್ರರಂಗ 'ಅಷ್ಟಾವಧಾನಿ' ಎಂದೇ ಗುರುತಿಸುತ್ತದೆ. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಭಾನುಮತಿ ಸುಮಧುರ ಕಂಠದಿಂದಾಗಿ ಉತ್ತಮ ಹಿನ್ನೆಲೆ ಗಾಯಕಿಯೂ ಆಗಿದ್ದರು. ಕಿರಿಯ ವಯಸ್ಸಿನಲ್ಲೇ ಸಿನೆಮಾ ರಂಗಕ್ಕೆ ಪದಾರ್ಪಣೆ ಮಾಡಿದ ಭಾನುಮತಿ ತೆಲುಗಿನಲ್ಲಿ ಎನ್. ಟಿ. ರಾಮರಾವ್, ನಾಗೇಶ್ವರ ರಾವ್, ತಮಿಳಿನಲ್ಲಿ ಎಂ.ಜಿ. ರಾಮಚಂದ್ರನ್ ಹಾಗೂ ಶಿವಾಜಿ ಗಣೇಶನ್ ಜೊತೆ ನಟಿಸಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿದ್ದರು.

2000: ಭಾರತದ ವಿಶ್ವನಾಥನ್ ಆನಂದ್ ಟೆಹರಾನಿನಲ್ಲಿ ನಡೆದ ಸ್ಪರ್ಧೆಯಲ್ಲಿ ಸ್ಪೇನಿನ ಅಲೆಕ್ಸಿ ಶಿರೊವ್ ಅವರನ್ನು 3.5-.5 ಅಂತರದಲ್ಲಿ ಸೋಲಿಸುವ ಮೂಲಕ 15ನೇ ಎಫ್ ಐ ಡಿ ಇ ವಿಶ್ವ ಚೆಸ್ ಚಾಂಪಿಯನ್ ಆದರು. ಅವರು ಮೂರು ಆಟಗಳಲ್ಲಿ ನಿರಂತರವಾಗಿ ಜಯಗಳಿಸಿದರು. ವಿಶ್ವ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಈ ರೀತಿಯಾಗಿ ಜಯಗಳಿಸಿದ್ದು ವಿಲ್ಹೆಮ್ ಸ್ಟೀನಿಟ್ಜ್ ಅವರ ಬಳಿಕ ಇದೇ ಮೊದಲು. ವಿಲ್ಹೆಮ್ ಅವರು ಮೂರು ಆಟಗಳಲ್ಲಿನಿರಂತರವಾಗಿ ಜಯಗಳಿಸಿದ್ದರು.

1989: ಭಾರತದ ಮೊತ್ತ ಮೊದಲ ಮನರಂಜನಾ ಉದ್ಯಾನ (ಅಮ್ಯೂಸ್ ಮೆಂಟ್ ಪಾರ್ಕ್) `ಎಸ್ಸೆಲ್ ವರ್ಲ್ಡ್' ಬಾಂಬೆಯಲ್ಲಿ (ಈಗಿನ ಮುಂಬೈ) ಉದ್ಘಾಟನೆಗೊಂಡಿತು.

1987: ಎಂ.ಜಿ.ಆರ್. ಎಂದೇ ಖ್ಯಾತಿ ಪಡೆದ ಎಂ.ಜಿ. ರಾಮಚಂದ್ರನ್ ಈದಿನ ನಿಧನರಾದರು. 1917ರ ಜನವರಿ 17ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಜನಿಸಿದ ಎಂ.ಜಿ.ಆರ್. ಚಿತ್ರರಂಗ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದವರು. 1977ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾದ ಅವರು 1987ರಲ್ಲಿ ಮೃತರಾಗುವವರೆಗೂ ತಮಿಳುನಾಡಿದ ಮುಖ್ಯಮಂತ್ರಿಯಾಗಿದ್ದರು. ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದ್ದ ಅವರು 1953ರಲ್ಲಿ ಡಿಎಂಕೆ ಸೇರಿದರು. 1962ರಲ್ಲಿ ವಿಧಾನಸಭೆಯ ಅಧ್ಯಕ್ಷರಾದರು. ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅವರು ಶಿಕ್ಷಣದ ಬೆಳವಣಿಗೆ, ಸಾಮಾಜಿಕ ವಿಜ್ಞಾನದ ಬೆಳವಣಿಗೆಗೆ ಆದ್ಯತೆ ನೀಡಿದರು. ವೈದ್ಯಕೀಯ ಕಾಲೇಜು, ತಮಿಳುನಾಡು ಮಹಿಳಾ ವಿಶ್ವ ವಿದ್ಯಾಲಯಗಳು ಇವರ ಕಾಲದಲ್ಲೇ ಸ್ಥಾಪನೆಗೊಂಡವು. ಎಂ.ಜಿ.ಆರ್. ಅವರ ಸೇವೆಯನ್ನು ಸ್ಮರಿಸಿ ಅವರಿಗೆ `ಮರಣೋತ್ತರ ಭಾರತ ರತ್ನ' ಪ್ರಶಸ್ತಿ ನೀಡಲಾಯಿತು.

1961: `ಬಿಲ್ಲಿ ಬಂಟರ್' ನ್ನು ಪರಿಚಯಿಸಿದ ಫ್ರಾಂಕ್ ರಿಚರ್ಡ್ಸ್ ಅವರು ತಮ್ಮ 85ನೇ ವಯಸ್ಸಿನಲ್ಲಿ ಮೃತರಾದರು.

1959: ಹಿಂದೀ ಚಿತ್ರನಟ ಅನಿಲ್ ಕಪೂರ್ ಹುಟ್ಟಿದ ದಿನ.

1924: ಹಿನ್ನೆಲೆ ಗಾಯಕ ಮಹಮ್ಮದ್ ರಫಿ (1924-1980) ಹುಟ್ಟಿದ ದಿನ.

1914: ಬಾಬಾ ಆಮ್ಟೆ (ಮುರಳೀಧರ ದೇವದಾಸ ಆಮ್ಟೆ) ಹುಟ್ಟಿದರು. ಭಾರತೀಯ ಸಮಾಜ ಸೇವಕ ಹಾಗೂ ಪರಿಸರವಾದಿ ಚಿಂತಕರಾದ ಇವರು ಕುಷ್ಠ ರೋಗಿಗಳಿಗೆ ಸಲ್ಲಿಸಿದ ಸೇವೆಗಾಗಿ ಖ್ಯಾತರಾಗಿದ್ದಾರೆ.

1910: ಅಮೆರಿಕನ್ ಎಂಜಿನಿಯರ್ ವಿಲಿಯಮ್ ಹೇವರ್ಡ್ ಪಿಕರಿಂಗ್ ಹುಟ್ಟಿದ ದಿನ. ಭೌತ ತಜ್ಞರಾದ ಇವರು ಅಮೆರಿಕದ ಮೊತ್ತ ಮೊದಲ `ಎಕ್ಸ್ ಪ್ಲೋರರ್ 1' ಉಪಗ್ರಹವನ್ನು ಅಭಿವೃದ್ಧಿ ಪಡಿಸಿದ ತಂಡದ ನಾಯಕ.

1898: ಕನ್ನಡ ಸಾಹಿತ್ಯ ವಿಮರ್ಶೆಗೆ ಹೊಸದಾರಿ ತೋರಿದ ಎಸ್. ವಿ. ರಂಗಣ್ಣ ಅವರು ವೆಂಕಟಸುಬ್ಬಯ್ಯ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಸಾಲಗಾಮೆಯಲ್ಲಿ ಜನಿಸಿದರು.

1524: ಪೋರ್ಚುಗೀಸ್ ನಾವಿಕ ವಾಸ್ಕೊ ಡ ಗಾಮಾ ಭಾರತದ ಕೊಚ್ಚಿನಿನಲ್ಲಿ (ಈಗಿನ ಕೋಚಿ) ಮೃತನಾದ. ಈತ ಆಫ್ರಿಕಾದ ಮೂಲಕ ಭಾರತಕ್ಕೆ ಬರುವ ಸಮುದ್ರಮಾರ್ಗವನ್ನು ಕಂಡು ಹಿಡಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment