Saturday, December 29, 2018

ಇಂದಿನ ಇತಿಹಾಸ History Today ಡಿಸೆಂಬರ್ 29

ಇಂದಿನ ಇತಿಹಾಸ History Today ಡಿಸೆಂಬರ್  29
2018: ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಬಂಧಿತ ಮಧ್ಯವರ್ತಿ ಕ್ರಿಸ್ಟಿಯನ್ ಮೈಕಲ್ ತನ್ನ ವಕೀಲರಿಗೆ ಹಸ್ತಲಾಘವ (ಹ್ಯಾಂಡ್ ಶೇಕ್) ನೆಪದಲ್ಲಿಶ್ರೀಮತಿ ಗಾಂಧಿ ಕುರಿತ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂಬುದಾಗಿ ಕೋರುವ ಚೀಟಿ ರವಾನಿಸಿರುವುದಾಗಿ ಜಾರಿ ನಿರ್ದೇಶನಾಲಯವು ವಿಶೇಷ ನ್ಯಾಯಾಲಯಕ್ಕೆ ತಿಳಿಸಿತು. ತನ್ನ ವಿಚಾರಣೆಯ ವೇಳೆಯಲ್ಲಿ ಮೈಕೆಲ್ ತನ್ನ ವಕೀಲನಿಗೆ ಚೀಟಿ ರವಾನಿಸಿದ್ದನ್ನು ತಾನು ಗಮನಿಸಿದುದಾಗಿ ಜಾರಿ ನಿರ್ದೇಶನಾಲಯವು ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ತಿಳಿಸಿತು. ಮೈಕೆಲ್ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆತನನ್ನು ಮತ್ತು ದಿನಗಳ ಅವಧಿಗೆ ನಿರ್ದೇಶನಾಲಯಕ್ಕೆ ಒಪ್ಪಿಸಿತು. ದುಬೈಯಿಂದ ಇತ್ತೀಚೆಗೆ ಗಡೀಪಾರಾಗಿ ಭಾರತಕ್ಕೆ ಬಂದಿರುವ ಕ್ರಿಸ್ಟಿಯನ್ ಮೈಕೆಲ್ನನ್ನು ಜಾರಿ ನಿರ್ದೇಶನಾಲಯವು ಡಿಸೆಂಬರ್ ೨೨ರಂದು ಬಂಧಿಸಿದ್ದು, ಹಗರಣದ ಹಣ ವರ್ಗಾವಣೆ ಆರೋಪಗಳ ತನಿಖೆ ಸಲುವಾಗಿ ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿತ್ತು. ನ್ಯಾಯಾಲಯದ ಮುಂದೆ ತನ್ನ ಅಹವಾಲು ಮಂಡಿಸಿದ ಜಾರಿ ನಿರ್ದೇಶನಾಲಯವು ಮೈಕಲ್ ಹೇಗೆ ತನ್ನ ವಕೀಲ ಅಲಿಜೊ ಜೋಸೆಫ್ ಅವರಿಗೆ ಚೀಟಿಯನ್ನು ರವಾನಿಸಿದ ಎಂದು ವಿವರಿಸಿತುವೈದ್ಯಕೀಯ ಪರೀಕ್ಷೆಯ ವೇಳೆಯಲ್ಲಿ ಮೈಕೆಲ್ ಎದ್ದು ನಿಂತು, ತನ್ನ ಪಕ್ಕದಲ್ಲೇ ನಿಂತುಕೊಂಡಿದ್ದ  ತನ್ನ ವಕೀಲನ ಕಡೆಗೆ ಹಸ್ತಲಾಘವ (ಹ್ಯಾಂಡ್ ಶೇಕ್) ನೆಪದಲ್ಲಿ ಕೈಚಾಚಿದ. ’ಕ್ರಿಸ್ಟಿಯನ್ ಮೈಕೆಲ್ ಮಡಚಲ್ಪಟ್ಟಿದ್ದ ಚೀಟಿಯೊಂದನ್ನು ತನ್ನ ವಕೀಲ ಅಲಿಜೋ ಜೋಸೆಫ್ಗೆ ರಹಸ್ಯವಾಗಿ ಹಸ್ತಾಂತರಿಸಿದ್ದು ಗಮನಕ್ಕೆ ಬಂತು. ಅಲಿಜೋ ಜೋಸೆಫ್ ಅವರು ಕೈಯಲ್ಲಿ ಹಿಡಿದುಕೊಂಡಿದ್ದ ಮೊಬೈಲ್ ಫೋನಿನ ಕೆಳಗೆ ಅದನ್ನು ಅಡಗಿಸಿ ಇಟ್ಟುಕೊಂಡರು ಮತ್ತು ಮೆಲ್ಲನೆ ತನ್ನ ಮಡಚಿದ ಚೀಟಿಯನ್ನು ತಮ್ಮ ಜಾಕೆಟ್ಟಿನ ಕಿಸೆಯೊಳಕ್ಕೆ ಇಳಿಸಿದರು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ತಿಳಿಸಿತು. ಜೋಸೆಫ್ ಅವರಿಗೆ ಮಡಚಿದ ಚೀಟಿಯನ್ನು ತೋರಿಸುವಂತೆ ಸೂಚಿಸಲಾಯಿತು. ’ಮಡಚಿದ ಚೀಟಿಯ ಪರಿಶೀಲನೆಯಿಂದ ಅದು ಶ್ರೀಮತಿ ಗಾಂಧಿ ಅವರ ಬಗೆಗಿನ ಪ್ರಶ್ನೆಗಳಿಗೆ ಸಂಬಂಧಿಸಿದ ಚೀಟಿ ಎಂಬುದು ಗೊತ್ತಾಯಿತು. ಆರೋಪಿಯನ್ನು ಪ್ರಶ್ನಿಸುವ ಮೂಲಕ ಸಂಗ್ರಹಿಸಬಹುದಾದ ಸಾಕ್ಷ್ಯವನ್ನು ರಕ್ಷಿಸುವ/ ಅದರಲ್ಲಿ ಹಸ್ತಕ್ಷೇಪ ನಡೆಸುವ ಸಂಚು ಇರುವುದು ಇದರಿಂದ ಸ್ಪಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತು. ಆರೋಪಿಗೆ ನೀಡಲಾಗಿರುವ ಕಾನೂನು ಸಂಪರ್ಕದ ನೆರವನ್ನು ದುರುಪಯೋಗಿಸಲಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸಬೇಕಾದ ಅಗತ್ಯವಿದೆ ಎಂದೂ ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಮನವಿ ಮಾಡಿತು. ಕ್ರಿಸ್ಟಿಯನ್ ಮೈಕಲ್ ಗಡೀಪಾರನ್ನು ಬಿಜೆಪಿಯು ಕಾಂಗ್ರೆಸ್ ವಿರುದ್ಧ ದಾಳಿಗೆ ಬಳಸಿಕೊಂಡಿದ್ದು, ಅದು ಮೊದಲಿನಿಂದಲೇ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ವಿರೋಧ ಪಕ್ಷದ ಕೆಲವು ನಾಯಕರು ಶಾಮೀಲಾಗಿದ್ದಾರೆ ಎಂದು ಆಗಾಗ ಆಪಾದಿಸಿತ್ತು.  ‘ಕಳವು ಸಾಬೀತು ಪಡಿಸುವ ಸಾಕ್ಷ್ಯಗಳು ನಮಗೆ ಈಗ ಲಭಿಸಲಾರಂಭವಾಗಿವೆ ಮತ್ತು ಶೀಘ್ರದಲ್ಲೆಚೋರನನ್ನು ಹಿಡಿಯಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು. ಎಲ್ಲ ಸಾಕ್ಷ್ಯಾಧಾರಗಳು ಒಂದು ಪಕ್ಷ ಮತ್ತು ಒಂದು ಕುಟುಂಬದ ಕಡೆಗೆ ಬೊಟ್ಟು ಮಾಡುತ್ತಿವೆ. ಭ್ರಷ್ಟಾಚಾರದ ನೈಜ ಕತೆ ಹೊರಬರುತ್ತಿದೆ ಎಂದೂ ಅವರು ನುಡಿದರುಸಹೋದ್ಯೋಗಿಯ ಮಾತನ್ನು ಬೆಂಬಲಿಸಿದ ಕಾನೂನು ಸಚಿವ ರವಿಶಂಕರ ಪ್ರಸದ್ ಅವರು ಆರೋಪಗಳ ಬಗ್ಗೆ ಕಾಂಗ್ರೆಸ್ ಸಾರ್ವಜನಿಕರಿಗೆ ಉತ್ತರ ನೀಡುವ ಅಗತ್ಯವಿದೆ ಎಂದು ಹೇಳಿದರುಕ್ರಿಸ್ಟಿಯನ್ ಮೈಕೆಲ್ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಮೂವರು ಆರೋಪಿದ ಮಧ್ಯವತಿಗಳ ಪೈಕಿ ಒಬ್ಬನಾಗಿದ್ದಾನೆ. ಗುಯಿಡೋ ಹಶ್ಚಕೆ ಮತ್ತು ಕಾರ್ಲೋ ಗೆರೋಸ ಅವರು ಪ್ರಕರಣಕ್ಕೆ ಸಂಬಂಧಿಸಿದ ಉಳಿದಿಬ್ಬರು ಆರೋಪಿಗಳಾಗಿದ್ದಾರೆ.

2018: ಗಾಜಿಪುರ (ಉತ್ತರಪ್ರದೇಶ):ಈಡೇರದ ಸಾಲಮನ್ನಾ ಭರವಸೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು  ಕಾಂಗ್ರೆಸ್ ಪಕ್ಷದ ಮೇಲಿನ ತಮ್ಮ ದಾಳಿಯನ್ನು ಮುಂದುವರೆಸಿದರು. ಗಾಜಿಪುರದಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಬಳಿಕ ಅಧಿಕಾರಕ್ಕೆ ಬಂದಿರುವ ಜೆಡಿ(ಎಸ್)-ಕಾಂಗ್ರೆಸ್ ಸರ್ಕಾರದಿಂದ ಹಿಡಿಯಷ್ಟು ರೈತರ ಸಾಲ ಮಾತ್ರ ಮನ್ನಾ ಆಗಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷವನ್ನುಲಾಲಿಪೊಪ್ ಕಂಪೆನಿ ಎಂಬುದಾಗಿ ಬಣ್ಣಿಸಿದ ಅವರು ಪಕ್ಷಕ್ಕೆ ರಾಷ್ಟ್ರದ ರೈತರ ಬಗ್ಗೆ ನೈಜ ಕಾಳಜಿ ಇಲ್ಲ ಎಂದು ನುಡಿದರು. ‘ ವ್ಯಕ್ತಿಗಳು ಅಲ್ಪಾವಧಿ ಲಾಭದ ಪ್ರಕಟಣೆಗಳು ಮತ್ತು ಭರವಸೆಗಳ ಮೂಲಕ ನಿಮ್ಮನ್ನು ಸೆಳೆಯಲು ಯತ್ನಿಸುತ್ತಾರೆ, ಆದರೆ ಇವು ಯಾವುವೂ ನೆರವಾಗುವುದಿಲ್ಲ ಎಂದು ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಆಡಳಿತಾರೂಢ ಬಿಜೆಪಿಯನ್ನು ಪರಾಭವಗೊಳಿಸಿ ಅಧಿಕಾರಕ್ಕೆ ಏರಿದ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.  ‘ತಾತ್ಕಾಲಿಕ್ ಫಾಯದೆ ಕೆ ಲಿಯೆ ಕಿ ಗಯೀ ಘೋಷಣಾಯೇಂ ಕಭೀ ಸಾರ್ಥಕ್ ನಹೀಂ ಹೋ ಸಕ್ತಿ (ತಾತ್ಕಾಲಿಕ ಲಾಭಕ್ಕಾಗಿ ಮಾಡುವ ಘೋಷಣೆಗಳು ದೀರ್ಘಾವಧಿಯಲ್ಲಿ ಯಶಸ್ವಿಯಾಗುವುದಿಲ್ಲ) ಎಂದು ನುಡಿದ ಅವರು ಪ್ರಕಟಣೆಗಳನ್ನೆಲ್ಲ ಜನರನ್ನು ಮೂರ್ಖರನ್ನಾಗಿಸಲು ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು೧೫ ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಮಧ್ಯಪ್ರದೇಶದಲ್ಲಿ ಯೂರಿಯಾ ರಸಗೊಬ್ಬರಕ್ಕಾಗಿ ರೈತರ ಬೃಹತ್ ಸಾಲುಗಳು ಕಂಡು ಬರುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ, ಚುನಾವಣೆಯಲ್ಲಿ ಮತಗಳಿಕೆ ಮೇಲೆ ಕಣ್ಣಿಟ್ಟುಕೊಂಡು ನೀಡಲಾಗುವ ಅವಸರದ ಭರವಸೆಗಳು ಎತ್ತ ಕರೆದೊಯ್ಯುತ್ತವೆ ಎಂಬುದಕ್ಕೆ ರೈತರ ಸಾಲುಗಳೂ ಉದಾಹರಣೆ ಎಂದು ನುಡಿದರು.  ‘ಮಧ್ಯಪ್ರದೇಶದಲ್ಲಿ ಕಾಳಸಂತೆಕೋರರು ಆಟವಾಡಲು ಶುರುಮಾಡಿದ್ದಾರೆ ಮತ್ತು ಸುಳ್ಳು ಹಾಗೂ ಪೊಳ್ಳು ಭರವಸೆ ನೀಡಿದವರಿಗೆ ವೋಟು ನೀಡಿದ್ದಕ್ಕಾಗಿ ಜನರು ಈಗ ಬೆಲೆ ತೆರುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
ಕರ್ನಾಟಕದ ಕಾಂಗ್ರೆಸ್ ಬೆಂಬಲಿತ ಜೆಡಿ(ಎಸ್) ಸರ್ಕಾರವನ್ನೂ ಮೋದಿ ಝಾಡಿಸಿದರುಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ರೈತಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿತ್ತು ಮತ್ತು ಹಿಂಬಾಗಿಲ ಮೂಲಕ ಸರ್ಕಾರ ರಚಿಸಿ, ರಾಜ್ಯದ ರೈತರನ್ನು ವಂಚಿಸಿತು ಎಂದು ಅವರು ನುಡಿದರು.  ‘ಅವರು ಸಾಲಮನ್ನಾ ಎಂಬಲಾಲಿಪೊಪ್ನ್ನು ಕೊಟ್ಟು ಮತಗಳನ್ನು ಕದ್ದರು, ಆದರೆ ಈವರೆಗೆ ಕೇವಲ ೮೦೦ ರೈತರ ಸಾಲಮನ್ನಾ ಮಾಡಲಾಗಿದೆ ಎಂದು ನುಡಿದ ಮೋದಿಇಂತಹ ಆಟಗಳನ್ನು ಅರ್ಥ ಮಾಡಿಕೊಳ್ಳಿ ಎಂದು ಜನರಿಗೆ ಮನವಿ ಮಾಡಿದರು.  ‘ಇದು ಎಂತಹ ಭರವಸೆಗಳು ಮತ್ತು ಎಂತಹ ಆಟಗಳು..’ ಎಂದು ಪ್ರಧಾನಿ ಪುನರುಚ್ಚರಿಸಿದಾಗ ಸಭೆ ಹರ್ಷೋದ್ಘಾರ ಮಾಡಿತು. ವೈದ್ಯಕೀಯ ಕಾಲೇಜು ಒಂದರ ಶಿಲಾನ್ಯಾಶ ಸಮಾರಂಭದಲ್ಲಿ ಪಾಲ್ಗೊಳ್ಳಲು ಮೋದಿ ಅವರು ನಗರಕ್ಕೆ ಬಂದಿದ್ದರು. ಅವರು ಮಹಾರಾಜ ಸುಹೆಲ್ ದೇವ್ ಅವರ ಸ್ಮಾರಕ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿದರುಪೂವಾಂಚಲವನ್ನು ಬೃಹತ್ ವೈದ್ಯಕೀಯ ಆಡುಂಬೊಲವಾಗಿ ಪರಿವರ್ತಿಸಲು ಮತ್ತು ಉತ್ತರ ಪ್ರದೇಶದಲ್ಲಿ ಸಣ್ಣ ಉದ್ಯಮಗಳನ್ನು ಬಲಪಡಿಸಲು ಹಲವಾರು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

2018: ನವದೆಹಲಿ: ಪ್ರದಾನಿ ನರೇಂದ್ರ ಮೋದಿ ಅವರ ಉತ್ತರಪ್ರದೇಶದ ಗಾಜಿಯಾಬಾದ್ ಸಭೆಯಿಂದ  ವಾಪಸಾಗುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಪ್ರತಿಭಟನಾ ನಿರತರ ಗುಂಪೊಂದರ ಕಲ್ಲೇಟಿಗೆ ಸಿಲುಕಿ ಸಾವನ್ನಪ್ಪಿದ ವರದಿಗಳು ಬಂದವು. ಮಧ್ಯಾಹ್ನ ಪ್ರಧಾನಿಯವರ ಸಭೆ ಮುಗಿದ ಕೆಲವೇ ಗಂಟೆಗಳ ಬಳಿಕ ಘಟನೆ ಘಟಿಸಿತು. ಮೃತ ಪೇದೆಯನ್ನು ಸುರೇಶ್ ವಾಟ್ಸ್ ಎಂಬುದಾಗಿ ಗುರುತಿಸಲಾಯಿತು. ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ನಿಶಾದ್ ಸಮುದಾಯದ ಮಂದಿಯನ್ನು ಚದುರಿಸಲು ಪೊಲೀಸರು ಮಧ್ಯಪ್ರವೇಶ ಮಾಡಿದಾಗ ಪ್ರತಿಭಟನಕಾರರು ಅವರತ್ತ ಕಲ್ಲೆಸೆದರು ಎಂದು ವರದಿಗಳು ಹೇಳಿದವು.

2018: ನವದೆಹಲಿ/ ಬೆಂಗಳೂರು: ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿ ಪರಿಗಣಿಸುವ ಐತಿಹಾಸಿಕ ಪರಿಷ್ಕೃತ ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿದ ಬಳಿಕ, ಬೆಂಗಳೂರಿನ ಮಹಿಳೆಗೆ ಅಮೆರಿಕದಲ್ಲಿ ನೆಲೆಸಿರುವ ಪತಿ ವಾಟ್ಸಪ್ ಮೂಲಕ ದಿಢೀರ್ ತಲಾಖ್ ನೀಡಿದ ಮೊತ್ತ ಮೊದಲ ಪ್ರಕರಣದಲ್ಲಿ ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಸಂತ್ರಸ್ತ ಮಹಿಳೆಯ ನೆರವಿಗೆ ಧಾವಿಸಿದರು. ತಾನು ಸಂತ್ರಸ್ತ ಮಹಿಳೆ ರೇಷ್ಮಾ ಅಜೀಜ್ ಅವರನ್ನು ಸಂಪರ್ಕಿಸಿದ್ದು, ಪ್ರಕರಣದ ವಿವರಗಳನ್ನು ನೀಡುವಂತೆ ಕೋರಿರುವುದಾಗಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಟ್ವೀಟ್ ಮಾಡಿದರು. ‘ನನ್ನ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ತ್ರಿವಳಿ ತಲಾಖ್ ಪ್ರಕರಣವನ್ನು ಅಗ್ರ ಪ್ರಾಶಸ್ತ್ಯ ನೀಡಿ ಕೈಗತ್ತಿಕೊಂಡಿದೆ. ಮುಸ್ಲಿಂ ಸಮುದಾಯದಲ್ಲಿ ಅನುಸರಿಸಲಾಗುವ ದಿಢೀರ್ ತಲಾಖ್ ನೀಡುವಿಕೆಯನ್ನು ಅಪರಾಧವನ್ನಾಗಿ ಮಾಡುವ ಮಸೂದೆ ಅಂಗೀಕರಿಸಿದ ಬಳಿಕ ಸಂಭವಿಸಿರುವ ಚೊಚ್ಚಲ ಪ್ರಕರಣ ಇದಾಗಿದ್ದು, ಸಂತ್ರಸ್ತ ಮಹಿಳೆಗೆ ನ್ಯಾಯದ ಖಾತರಿಯನ್ನು ನಾವು ಒದಗಿಸುತ್ತೇವೆ ಎಂದು ಮೇನಕಾ ಗಾಂಧಿ ಹೇಳಿದರು. ರೇಷ್ಮಾ ಅವರು  ಎದುರಿಸಬೇಕಾಗಿ ಬಂದ ದುಃಸ್ಥಿತಿ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ರೇಷ್ಮಾ ಅವರು ವೃತ್ತಿಯಿಂದ ಸರ್ಜನ್ ಆಗಿರುವ ಜಾವೀದ್ ಖಾನ್ ಅವರನ್ನು ೨೦೦೩ರಲ್ಲಿ ಮದುವೆಯಾಗಿದ್ದರು. ಆರು ತಿಂಗಳಲ್ಲೇ ಸಮಸ್ಯೆ ಆರಂಭವಾಗಿತ್ತು. ಮದುವೆಯ ಮೊದಲ ದಿನಗಳಲ್ಲಿ ದಂಪತಿ ಇಂಗ್ಲೆಂಡಿನಲ್ಲಿ ವಾಸವಾಗಿದ್ದರು. ಬಳಿಕ ಅಮೆರಿಕ್ಕೆ ಸ್ಥಳಾಂತರಗೊಂಡಿದ್ದರು. ಕಳೆದ ತಿಂಗಳು ಖಾನ್ ಅವರು ರೇಷ್ಮಾ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು. ಬಳಿಕ ರೇಷ್ಮಾ ಅವರಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ತೆಗೆದುಕೊಂಡು ಅಮೆರಿಕಕ್ಕೆ ವಾಪಸಾಗಿದ್ದರುಅವರು ನನ್ನನ್ನು ಭಾವನಾತ್ಮಕವಾಗಿ ನಿಂದಿಸಿ, ಅಪಮಾನಿಸುತ್ತಿದ್ದರು ಎಂದು ರೇಷ್ಮಾ ಪೊಲೀಸರಿಗೆ ಸಲ್ಲಿಸಿರುವ ದೂರಿನಲ್ಲಿ ಆಪಾದಿಸಿದ್ದರು.. ಖಾನ್ ಅವರು ಎಂದೂ ಕಾನೂನುಬದ್ಧ ವಿಚ್ಛೇದನವನ್ನು ಕೋರಿರಲಿಲ್ಲ, ಬದಲಿಗೆ ತನ್ನನ್ನು ತ್ಯಜಿಸಿ ಹೋಗುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದರು ಎಂದೂ ರೇಷ್ಮಾ ದೂರಿದ್ದರು.   ಕುಟುಂಬದ ಜೊತೆಗೆ ಮಾತನಾಡಿದ ಬಳಿಕ ಉಭಯರ ನಡುವಣ ಸಮಸ್ಯೆಗಳನ್ನ ಇತ್ಯರ್ಥ ಪಡಿಸಲು ತಾನು ಬಯಸಿರುವುದಾಗಿ ಖಾನ್ ತನ್ನೊಂದಿಗೆ ಹೇಳಿದ್ದುದಾಗಿ ರೇಷ್ಮಾ ಹೇಳಿದ್ದರು. ದಂಪತಿ ೧೩ ಮತ್ತು ೧೦ ವರ್ಷದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.   ‘ಬೆಂಗಳೂರು ತಲುಪಿದ ಬಳಿಕ ಆತ ತನ್ನ ಕುಟುಂಬದ ಜೊತೆಗೆ ಹೊರಟು ಹೋದರು. ನಾನು ವಿಮಾನ ನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡೆ. ಆತ ನನ್ನ ಪಾಸ್ ಪೋರ್ಟ್, ಶೈಕ್ಷಣಿಕ ಸರ್ಟಿಫಿಕೇಟುಗಳು ಮತ್ತು ಇತರ ಗುರುತಿನ ಚೀಟಿಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಡಿಸೆಂಬರ್ ೪ರಂದು ನಾನು ಪೊಲೀಸರಿಗೆ ದೂರು ನೀಡಿದ ಒಂದು ದಿನದ ಬಳಿಕ ಖಾನ್ ಅವರು ನನಗೆ ವಾಟ್ಸಪ್ನಲ್ಲಿ ತಲಾಖ್ ನೀಡಿದ್ದಾರೆ. ಭಾರತದಲ್ಲಿ ಬಿಟ್ಟು ಹೋದ ಬಳಿಕ ತನಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ರೇಷ್ಮಾ ತಿಳಿಸಿದರು. ವಾಟ್ಸಪ್ನಲ್ಲಿ ಕುಟುಂಬದ ಗ್ರೂಪ್ ಗೂ ಕಳುಹಿಸಲಾದ ಸಂದೇಶದಲ್ಲಿ ಜಾವೀದ್ ಹೀಗೆ ಬರೆದಿದ್ದಾರೆ: ’ತಲಾಖ್, ನಾನು ಸಂದೇಶವನ್ನು ನನ್ನ ಪರಿಪೂರ್ಣ ತಿಳುವಳಿಕೆಯೊಂದಿಗೆ ಕಳುಹಿಸುತ್ತಿದ್ದೇನೆ ಮತ್ತು ನಾನು ಸಿಟ್ಟು ಮತ್ತು ಮದ್ಯಪಾನದ ಅಮಲಿನ ಪ್ರಭಾವಕ್ಕೆ ಒಳಗಾಗಿಲ್ಲ. ಅಲ್ಲಾನನ್ನು ನನ್ನ ಸಾಕ್ಷಿಯನ್ನಾಗಿಸಿ, ನಾನು, ಡಾ. ಜಾವೀದ್ ಖಾನ್ (ಜನ್ಮದಿನಾಂಕ ೦೧/೧೯/೧೯೭೬), ದಿವಂಗತ ತಾಜ್ ಅಹ್ಮದ್ ಅವರ ಪುತ್ರ, ರೇಷ್ಮಾ ಅಜೀಜ್ (ಜನ್ಮದಿನಾಂಕ ೧೨/೦೬/೧೯೭೮), ಅಜೀಜುದ್ದೀನ್ ಅವರ ಪುತ್ರಿ, ಇವರಿಗೆ ಇಸ್ಲಾಮಿಕ್ ಶರಿಯಾ ಕಾನೂನಿನ ಅಡಿಯಲ್ಲಿ ತಲಾಖ್ ಘೋಷಿಸುತ್ತಿದ್ದೇನೆ. ಮೆಹರ್ನ್ನು ಸಂಪೂರ್ಣವಾಗಿ ಪೂರೈಸಲಾಗಿದೆ. ಮಕ್ಕಳು ಇಲಿನೋಯಿಸ್ ನಲ್ಲಿ ಖಾನ್ ಜೊತೆಗೆ ವಾಸವಾಗಿದ್ದುಖಾನ್ ತನ್ನ ಜೊತೆಗಿನ ಎಲ್ಲ ಸಂಪರ್ಕಗಳನ್ನೂ ಕಡಿತಗೊಳಿಸಿರುವುದಾಗಿಯೂ ರೇಷ್ಮಾ ಆಪಾದಿಸಿದರು. ಶಾಲೆಯ ಸಿಬ್ಬಂದಿ ಮೂಲಕ ನಾನು ನನ್ನ ಮಕ್ಕಳ ಜೊತೆ ಮಾತನಾಡುತ್ತಿದ್ದೇನೆ ಎಂದು ರೇಷ್ಮಾ ಹೇಳಿದರು. ತನ್ನ ಮಿಂಚಂಚೆ (-ಮೇಲ್) ಅಕೌಂಟ್ ಮತ್ತು ಬ್ಯಾಂಕ್ ಕಾರ್ಡ್ಗಳನ್ನು ಕೂಡಾ ಸ್ಥಗಿತಗೊಳಿಸಲಾಗಿದೆ ಎಂದೂ ರೇಷ್ಮಾ ಆಪಾದಿಸಿದರು. ರೇಷ್ಮಾ ಅವರು ದೂರು ದಾಖಲಿಸುವ ವೇಳೆಗೆ ಖಾನ್ ದೇಶದಲ್ಲಿ ಇರಲಿಲ್ಲ. ಆತ ವಾಪಸಾದ ಬಳಿಕ ಅಧಿಕಾರಿಗಳು ತಮಗೆ ಮಾಹಿತಿ ನೀಡುತ್ತಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.  ತಮಗೆ ವಾಟ್ಸಪ್ ತಲಾಖ್ ಬಗ್ಗೆ ಗೊತ್ತಿಲ್ಲ. ದೂರು ದಾಖಲಿಸಿದ ಬಳಿಕ ಅದನ್ನು ನೀಡಿರಬಹುದು ಎಂದು ಪೊಲೀಸರು ಹೇಳಿದರು. 
ಸುಪ್ರೀಂಕೋರ್ಟ್ ಕಳೆದ ವರ್ಷ ತನ್ನ ಐತಿಹಾಸಿಕ ತೀರ್ಪಿನಲ್ಲಿ ಮುಸ್ಲಿಮ್ ಸಮುದಾಯದಲ್ಲಿ ಜಾರಿಯಲ್ಲಿರುವ ದಿಢೀರ್ ತ್ರಿವಳಿ ತಲಾಖ್ ಪದ್ಧತಿಯ ಸಿಂಧುತ್ವವನ್ನು ರದ್ದು ಪಡಿಸಿತ್ತು. ಸುಪ್ರೀಂಕೋರ್ಟ್ ತೀರ್ಪನ್ನು ಅನುಸರಿಸಿ ಕೇಂದ್ರ ಸರ್ಕಾರವು ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಕ್ರಿಮಿನಲ್ ಅಪರಾಧವಾಗಿ ಪರಿಗಣಿಸುವ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿತ್ತು.  ಸುಗ್ರೀವಾಜ್ಞೆಯ ಸ್ಥಾನಕ್ಕೆ ತರಲಾಗುವ ಪರಿಷ್ಕೃತ ಮಸೂದೆಯನ್ನು ಲೋಕಸಭೆ ಗುರುವಾರ ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆ ಅಂಗೀಕರಿಸಿತ್ತು. ಮಸೂದೆಯು ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿರುಲಿಲ್ಲ.
  
2018: ಅಮೃತಸರ: ಪಂಚರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರ ನಡೆಸಿದಂದಿನಿಂದ ಪಂಜಾಬಿನ ಸ್ಥಳೀಯ ಸಂಸ್ಥೆಗಳು, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ನವಜೋತ್ ಸಿಂಗ್ ಸಿಧು ಅವರ ಸ್ವರ ಬಿದ್ದುಹೋಗಿದ್ದು, ಅವರ ಖಾತೆಗಳಿಗೆ ಸಂಬಂಧಿಸಿದ ಅಧಿಕೃತ ಕೆಲಸಗಳ ಉಸ್ತುವಾರಿಯನ್ನು ಅವರ ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರೇ ನೋಡಿಕೊಂಡರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರಾಗಿ ೧೭ ದಿನಗಳ ಕಾಲ ಸಂಚರಿಸುತ್ತಾ ೭೦ಕ್ಕೂ ಹೆಚ್ಚು ಸಭೆಗಳಲ್ಲಿ ಭಾಷಣ ಮಾಡಿದ್ದ ನವಜೋತ್ ಸಿಂಗ್ ಸಿಧು ಅವರ ಧ್ವನಿ ತಂತುಗಳಿಗೆ ಹಾನಿಯಾಗಿದ್ದು, ಐದು ದಿನಗಳ ಸಂಪೂರ್ಣ ವಿಶ್ರಾಂತಿ ಪಡೆಯುಂತೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿತು. ಡಿಸೆಂಬರ್ ೭ರಂದು ಮತದಾನ ಮುಗಿದಂದಿನಿಂದ ಸಚಿವರು ರಾಜ್ಯದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.  ನವಜೋತ್ ಕೌರ್ ಅವರು ಪ್ರವಾಸಿಗಳನ್ನು ಆಕರ್ಷಿಸಲು ನಡೆಯುತ್ತಿರುವ ನಿರ್ಮಾಣ ಕೆಲಸಗಳ ಪರಿಶೀಲನೆ ಸಲುವಾಗಿ ಸಟ್ಲೆಜ್ ಮತ್ತು ಬಿಯಾಸ್ ನದಿಗಳ ಸಂಗಮವಾದ ಹರಿಕೆ ಸರೋವರಕ್ಕೆ ಭೇಟಿ ನೀಡಿದ್ದರು.  ಒಂದು ವ್ಯಾಖ್ಯಾನ ಕೇಂದ್ರ, ಕೆಫೆಟೇರಿಯಾ ಮತ್ತು ಕಾರು ಪಾರ್ಕಿಂಗ್ಗಳನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಇಲ್ಲಿ ನಿರ್ಮಿಸುತ್ತಿದೆ.  ಅಮೃತಸರ ಮೇಯರ್ ಕರಮ್ ಜಿತ್ ಸಿಂಗ್ ರಿಂಟು ಮತ್ತು ಮುನಿಸಿಪಲ್ ಕಾರ್ಪೋರೇಷನ್ ಅಧಿಕಾರಿಗಳ ಜೊತೆ ಕೌರ್ ಗುರುವಾರ ಮಾತುಕತೆ ನಡೆಸಿ ಡಿಸೆಂಬರ್ ೩೧ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಯ ಸಭೆಯಲ್ಲಿ ಮಂಡಿಸಬೇಕಾದ ಕಾರ್ಯಸೂಚಿ ಮತ್ತು ನಿರ್ಣಯಗಳ ಬಗ್ಗೆ ಚರ್ಚಿಸಿದರು. ನನ್ನ ಪತಿ ಯಾವಾಗಲೂ ಜನರ ಮಧ್ಯಯೇ ಇರುತ್ತಿದ್ದರು. ದಸರಾ ರೈಲು ದುರಂತವಾದಾಗ  ಒಂದೂವರೆ ತಿಂಗಳ ಕಾಲ ಅವರು ನಗರದ ಬೀದಿಗಳಲ್ಲಿ ಹೇಗೆ ಸುತ್ತಿದರು ಎಂಬುದನ್ನು ನೀವು ನೋಡಿದ್ದೀರಿ. ಅವರ ಕೈಕೆಳಗೆ ಒಂದು ತಂಡ ಕೆಲಸ ಮಾಡುತ್ತಿದೆ. ನಾನು ತಂಡದ ಪಾತ್ರವನ್ನು ವಹಿಸಿದ್ದೇನೆ. ಅವರ ಪ್ರತಿನಿಧಿಯಾಗಿ ನಾನು ಸಾರ್ವಜನಿಕರ ಕಲ್ಯಾಣಕ್ಕಾಗಿ ಎಂಟು ಗಂಟೆಗಳ ಕಾಲ ಬೀದಿ ಸುತ್ತಿದರೆ ತಪ್ಪೇನು? ಅದಕ್ಕೂ ಹೆಚ್ಚಾಗಿ ಇದಕ್ಕಾಗಿ ನಾನು ಏನೂ ವೇತನ ಅಥವಾ ಭತ್ಯೆ ಪಡೆಯುತ್ತಿಲ್ಲ ಎಂದು ಕೌರ್ ಹೇಳಿದರು.  ‘ಅವರ (ಸಿಧು) ಕ್ಷೇತ್ರದ (ಅಮೃತಸರ ಪೂರ್ವ) ಯಾರೂ ಸಿಧು ಅವರು ತಮ್ಮನ್ನು ಭೇಟಿ ಮಾಡಿಲ್ಲ ಎಂದು ಆಕ್ಷೇಪಿಸಿಲ್ಲ. ಏನಿದ್ದರೂ, ಅಭಿವೃದ್ಧಿ ಯೋಜನೆಗಳಿಗಾಗಿ ಕೇಂದ್ರದ ಹಣಕಾಸು ನೆರವನ್ನು ಅವರೇ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ, ಅವರು ರಾಜ್ಯವನ್ನು ಪ್ರತಿನಿಧಿಸುತ್ತಾರೆ ಮತ್ತು ಎಲ್ಲ ಪಂಜಾಬಿಗಳ ಕಾಳಜಿ ವಹಿಸುವುದು ಅವರ ಕರ್ತವ್ಯ ಕೂಡಾ ಎಂದು ಸಿಧು ಪತ್ನಿ ನುಡಿದರು. ಮಾಧ್ಯಮವೊಂದು ಸಂಪರ್ಕಿಸಿದಾಗ ಸಿಧು ಅವರು ತಾವು ಗಂಟಲಿನ ಸಮಸ್ಯೆಯಿಂದ ಬಹುತೇಕ ಚೇತರಿಸಿಕೊಂಡಿದ್ದು, ಒಂದು ವಾರದಲ್ಲಿ ಅಮೃತಸರಕ್ಕೆ ಹಿಂದಿರುಗುವುದಾಗಿ ಹೇಳಿದರು. ’ನನ್ನ ಪತ್ನಿ ಜನರ ಜೊತೆ ದೀರ್ಘ ಕಾಲದಿಂದ ಕೆಲಸ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳನ್ನು ನಿವಾರಿಸುವುದರಲ್ಲಿ ತಪ್ಪೇನೂ ಇಲ್ಲ ಎಂದು ಅವರು ಹೇಳಿದರು. 
 2017: ಮುಂಬೈ: ಜನ್ಮದಿನದ ಸಂತೋಷ ಕೂಟ ನಡೆಯುತ್ತಿದ್ದ ತಾರಸಿ ಮೇಲಿನ ಪಬ್ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಮಾತ್ರದಲ್ಲೇ ಇಡೀ ಕಟ್ಟಡಕ್ಕೆ ವ್ಯಾಪಿಸಿದ ಪರಿಣಾಮವಾಗಿ ಬಹುತೇಕ ಮಹಿಳೆಯರು ಸೇರಿದಂತೆ ಕನಿಷ್ಠ ೧೪ ಜನ ಸಾವನ್ನಪ್ಪಿ ಇತರ ೨೧ ಮಂದಿ ಸುಟ್ಟ ಗಾಯಗಳಿಗೆ ಒಳಗಾದ ದುರಂತ ಘಟನೆ ಮುಂಬೈಯ ಐಷಾರಾಮಿ ಪ್ರದೇಶದಲ್ಲಿ ನಸುಕಿನ ವೇಳೆಯಲ್ಲಿ ಘಟಿಸಿತು. ‘ಒನ್ ಎಬವ್ ಪಬ್ ಇದ್ದ ತಾರಸಿಯಲ್ಲಿ ನಡುರಾತ್ರಿ ೧೨.೩೦ರ ಬಳಿಕ ದುರಂತ ಸಂಭವಿಸಿದ್ದು, ಮೂರನೇ ಮಹಡಿಯಲ್ಲಿದ್ದ ಮೋಜೋ ಪಬ್‌ಗೆ ಕ್ಷಣಮಾತ್ರದಲ್ಲಿ ವ್ಯಾಪಿಸಿತು ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.  ೧೧ ಮಂದಿ ಮಹಿಳೆಯರು ಸೇರಿದಂತೆ ದುರಂತದಲ್ಲಿ ಸಾವನ್ನಪ್ಪಿದ ಬಹುತೇಕ ಮಂದಿ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಕೆಇಎಂ ಆಸ್ಪತ್ರೆಯ ಡೀನ್ ಅವಿನಾಶ್ ಸುಪೆ ಹೇಳಿದರು. ಮೃತರು ಮತ್ತು ಗಾಯಾಳುಗಳನ್ನು ಕೆಇಎಂ ಆಸ್ಪತ್ರೆಗೆ ದಾಖಲಿಸಲಾಯಿತು. ತನ್ನ ಜನ್ಮದಿನ  ಆಚರಿಸುತ್ತಿದ್ದ ಮಹಿಳೆಯೂ ಸಾವನ್ನಪ್ಪಿದವರಲ್ಲಿ ಸೇರಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿದವು. ಬೆಂಕಿಯಲ್ಲಿ ಕರಟಿಹೋಗಿರುವ ಎರಡೂ ಪಬ್‌ಗಳು ಲೋವರ್ ಪರೇಲ್ ಪ್ರದೇಶದ ಕಮಲಾ ಮಿಲ್ಸ್ ಕಾಂಪೌಂಡಿನಲ್ಲಿರುವ ಟ್ರೇಡ್ ಹೌಸ್ ಕಟ್ಟಡದಲ್ಲಿ ಇದ್ದವು. ರಾಷ್ಟ್ರೀಯ ಟೆಲಿವಿಷನ್ ಚಾನೆಲ್ ಗಳ ಕಚೇರಿಗಳೂ ಇರುವ ಈ ಕಟ್ಟಡ ಪ್ರಮುಖ ವಾಣಿಜ್ಯ ಪ್ರದೇಶವಾಗಿದ್ದು, ರಾತ್ರಿಯ ಕೂಟಗಳಿಗೆ ಜನಪ್ರಿಯವಾದ ತಾಣ. ‘ನಾನು ರಾತ್ರಿ ಪಾಳಿಯಲ್ಲಿದ್ದೆ. ಪಬ್ ನಲ್ಲಿ ಜನರು ಚೀರಾಡುವುದು ನಮಗೆ ಕೇಳಿಸಿತು. ಮೊದಲಿಗೆ ನಾವು ಅಲ್ಲಿ ನಡೆಯುತ್ತಿದ್ದ ಸಂತೋಷಕೂಟದ ಸದ್ದು ಎಂದು ಭಾವಿಸಿದೆವು ಎಂದು ಸುದ್ದಿವಾಹಿನಿ ಒಂದರ ಕಾರ್ಯಕ್ರಮ ನಿರ್ಮಾಪಕ ಸಂಜಯ್ ಜಾಧವ್ ಹೇಳಿದರು. ’ನಾನು ಕಚೇರಿಯಿಂದ ಹೊರಬಂದಾಗ ಕಟ್ಟಡದ ತುದಿಯ ಪಬ್ ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಕಾಣಿಸಿತು. ಬೆಂಕಿಯ ಕೆನ್ನಾಲಿಗೆ ಪರಿಣಾಮವಾಗಿ ನಮ್ಮ ಕಚೇರಿಯ ಮುಖ್ಯದ್ವಾರ ಮುಚ್ಚಲ್ಪಟ್ಟಿತ್ತು ಎಂದು ಅವರು ನುಡಿದರು.  ಭಾರಿ ಬೆಂಕಿ ಸುಮಾರು ೩೦ ನಿಮಿಷದಲ್ಲಿ ಇಡೀ ಕಟ್ಟಡವನ್ನು ಆವರಿಸಿತು. ಅದನ್ನು ಆರಿಸಲು ಹಲವಾರು ಗಂಟೆಗಳೇ ಬೇಕಾದವು. ಅಗ್ನಿ ದುರಂತಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಲಿಲ್ಲ. ಅಗ್ನಿಶಾಮಕ ಕಚೇರಿಗೆ ದುರಂತದ ಬಗ್ಗೆ ೧೨.೨೭ಕ್ಕೆ ಮೊದಲ ಕರೆ ಬಂತು. ತತ್ ಕ್ಷಣವೇ ಎಂಟು ಅಗ್ನಿಶಾಮಕ ವಾಹನಗಳು ಮತ್ತು ಐದು ಟ್ಯಾಂಕರುಗಳು ಸ್ಥಳಕ್ಕೆ ಧಾವಿಸಿದವು. ಸಣ್ಣ ಪ್ರಮಾಣದ ಬೆಂಕಿ ಎಂಬುದಾಗಿ ಮೊದಲು ಘೋಷಿಸಿದರೂ ಬಳಿಕ ಅಗ್ನಿ ದುರಂತ ದೊಡ್ಡ ಪ್ರಮಾಣದ್ದು ಎಂದು ಬಳಿಕ ಘೋಷಿಸಲಾಯಿತು. ತನಿಖೆಗೆ ಸಿಎಂ ಆದೇಶ: ಅಗ್ನಿ ದುರಂತಕ್ಕೆ ದುಃಖ ವ್ಯಕ್ತ ಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘಟನೆಯ ಕೂಲಂಕಷ ತನಿಖೆಗೆ ಆಜ್ಞಾಪಿಸಿದರು. ಕಮಲಾ ಮಿಲ್ಸ್ ಅಗ್ನಿ ದುರಂತದಲ್ಲಿಆಗಿರುವ ಜೀವ ನಷ್ಟ ದುರದೃಷ್ಟಕರ. ಮೃತರ ಕುಟುಂಬಗಳ ದುಃಖದಲ್ಲಿ ನಾವೂ ಇದ್ದೇವೆ. ಗಾಯಾಳುಗಳು ಬೇಗನೇ ಚೇತರಿಸಿಕೊಳ್ಳಲಿ ಎಂದು ಹಾರೈಸುವೆ ಎಂದು ಎಂದು ಹೇಳಿದ ಸಿಎಂ, ಕೂಲಂಕಷ ತನಿಖೆ ನಡೆಸುವಂತೆ ಬಿಎಂಸಿ ಆಯುಕ್ತರಿಗೆ ನಿರ್ದೇಶಿಸಿದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಸೂಚಿಸಿದರು. ಪ್ರಧಾನಿ ಶೋಕ: ಅಗ್ನಿ ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದುಃಖದ ಈ ಹೊತ್ತಿನಲ್ಲಿ ನಾವು ಮೃತರ ಕುಟುಂಬಗಳ ಜೊತೆಗಿದ್ದೇವೆ. ಗಾಯಾಳುಗಳು ಶೀಘ್ರ ಚೇತರಿಸಲಿ ಎಂದು ಪ್ರಾರ್ಥಿಸುವೆ ಎಂದು ಪ್ರಧಾನಿ ಕಚೇರಿ ಟ್ವೀಟ್ ಮಾಡಿತು. ಅಧಿಕಾರಿಗಳ ಅಮಾನತು: ದುರಂತದ ಹಿನ್ನೆಲೆಯಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ವಾರ್ಡಿನ ಸಹಾಯಕ ಆಯುಕ್ತರನ್ನೂ ವರ್ಗಾವಣೆ ಮಾಡಲಾಯಿತು.


2017: ಮುಂಬೈ: ಮುಂಬೈಯ ಕಮಲಾ ಮಿಲ್ಸ್ ಆವರಣದಲ್ಲಿ ೧೧ ಮಂದಿ ಮಹಿಳೆಯರು ಮತ್ತು ಮೂವರು ಪುರುಷರನ್ನು ಬಲಿತೆಗೆದುಕೊಂಡ ಅಗ್ನಿ ದುರಂತಕ್ಕೆ ಹೆಚ್ಚಿದ ಜನಸಂಖ್ಯೆಯೇ ಕಾರಣ ಎಂಬ ವಿವಾದಾತ್ಮಕ ಹೇಳಿಕೆಯನ್ನು ಸಂಸತ್ ಸದಸ್ಯೆಯಗಿರುವ ಚಿತ್ರನಟಿ ಹೇಮಾ ಮಾಲಿನಿ ನೀಡಿದರು. ಸಂಸತ್ತಿನ ಹೊರಗೆ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಬಿಜೆಪಿ ಸಂಸದೆ, ’ಪೊಲೀಸರು ತಮ್ಮ ಕೆಲಸ ಮಾಡುತ್ತಿಲ್ಲ ಎಂದಲ್ಲ. ಅವರು ತಮ್ಮ ಕೆಲಸ ಮಾಡುತ್ತಾರೆ. ಆದರೆ ಜನಸಂಖ್ಯೆ ಅತಿಯಾಗಿದೆ. ಮುಂಬೈಯ ವ್ಯಾಪ್ತಿ ಮುಗಿದಾಗ, ಹೊಸ ನಗರ ಆರಂಭವಾಗಬೇಕು. ಆದರೆ ಮುಂಬೈಯಲ್ಲಿ ಜನಸಂಖ್ಯೆ ನಿಯಂತ್ರಣವೇ ಇಲ್ಲದಂತೆ ಹೆಚ್ಚುತ್ತಲೇ ಇದೆ..’ ಎಂದು ಹೇಳಿದರು. ಪ್ರತಿಯೊಂದು ನಗರಕ್ಕೂ ನಿರ್ದಿಷ್ಟ ಜನಸಂಖ್ಯಾ ಮಿತಿ ಇರಬೇಕು. ಆ ಬಳಿಕ ಅಲ್ಲಿ ಜನಸಂಖ್ಯೆ ಹೆಚ್ಚಲು ಅವಕಾಶ ನೀಡಬಾರದು. ಆ ಬಳಿಕ ಜನರಿಗೆ ಬೇರೊಂದು ನಗರಕ್ಕೆ ತೆರಳಲು ಬಿಡಬೇಕು ಎಂದು ಹೇಮಾ ನುಡಿದರು. ಗ್ರೀನ್ ಕಾರ್ಡ್ ಹೊಂದಿದ್ದ ಬಾಲಕಿ ರಜಾ ಸಲುವಾಗಿ ನಗರಕ್ಕೆ ಬಂದಿದ್ದು ಜನ್ಮದಿನ ಆಚರಿಸಿಕೊಂಡಿದ್ದು ಅಗ್ನಿ ದುರಂತದಲ್ಲಿ ಆಕೆಯೂ ಅಸು ನೀಗಿದ್ದಾಳೆ ಎಂದು ವರದಿಗಳು ಹೇಳಿದವು.
2017: ಅಲಹಾಬಾದ್: ಹಿಂದು ಸಾಧುಗಳ ವರಿಷ್ಠ ಮಂಡಳಿಯಾದ ಅಖಿಲ ಭಾರತೀಯ ಅಖಾರ ಪರಿಷದ್ ’ನಕಲಿ ಬಾಬಾಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಎರಡನೆ ಪಟ್ಟಿಯು ವೀರೇಂದ್ರ ದೀಕ್ಷಿತ್ ಕಲ್ನೇಮಿ (ದೆಹಲಿ), ಸಚ್ಚಿದಾನಂದ ಸರಸ್ವತಿ (ಬಸ್ತಿ, ಉ.ಪ್ರ) ಮತ್ತು ತ್ರಿಕಾಲ ಭವಂತ್ (ಅಲಹಾಬಾದ್) ಹೆಸರುಗಳನ್ನು ಒಳಗೊಂಡಿತ್ತು. ಪಟ್ಟಿ ಬಿಡುಗಡೆ ಮಾಡಿ ಮಾತನಾಡಿದ ಪರಿಷದ್ ಅಧ್ಯಕ್ಷ ಸ್ವಾಮಿ ನರೇಂದ್ರ ಗಿರಿ ಅವರು ’ಯಾವುದೇ ಪರಂಪರೆಗೂ ಸೇರದ ಮತ್ತು ತಮ್ಮ ಪ್ರಶ್ನಾರ್ಹ ಕೃತ್ಯಗಳಿಂದ ಸಾಧುಗಳು ಮತ್ತು ಸನ್ಯಾಸಿಗಳಿಗೆ ಕೆಟ್ಟ ಹೆಸರು ತರುವ ಇಂತಹ ವ್ಯಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನಾವು ಜನಸಾಮಾನ್ಯರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು. ಹಿಂದು ಧರ್ಮವನ್ನು ರಕ್ಷಿಸುವ ಸಲುವಾಗಿ ೮ನೇ ಶತಮಾನದ ಸನ್ಯಾಸಿ ಆದಿ ಶಂಕರರು ಸ್ಥಾಪಿಸಿದ್ದ ಸಮರ ಸನ್ಯಾಸಿ ವ್ಯವಸ್ಥೆಯ ಸ್ಫೂರ್ತಿಯಿಂದ ಅಖಾರ ಮಂಡಳಿಯನ್ನು ರಚಿಸಲಾಗಿದೆ. ಸೆಪ್ಟೆಂಬರ್ ೧೦ರಂದು ಮಂಡಳಿಯು ಇಂತಹ ೧೪ ಮಂದಿ ಸ್ವಯಂಘೋಷಿತ ದೇವ ಮಾನವರ ಹೆಸರುಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ರಾಮ್ ರಹೀಮ್ ಸಿಂಗ್, ರಾಧೇ ಮಾ, ನಿರ್ಮಲ್ ಬಾಬಾ, ರಾಂಪಾಲ್, ಅಸಾರಾಂ ಬಾಪು ಮತ್ತು ಅವರ ಪುತ್ರ ನಾರಾಯಣ ಸಾಯಿ ಮತ್ತಿತರ ಹೆಸರುಗಳಿದ್ದವು. ಸ್ವಯಂಘೋಷಿತ ದೇವಮಾನವರ ಸುತ್ತ ಏಳುತ್ತಿರುವ ವಿವಾದಗಳ ಹಿನ್ನೆಲೆಯಲ್ಲಿ ಅಂತಹವರ ಹೆಸರುಗಳನ್ನು ಪ್ರಕಟಿಸುವ ಕ್ರಮವನ್ನು ಮಂಡಳಿ ಆರಂಭಿಸಿತ್ತು.

2017: ನವದೆಹಲಿ: ೨೦೧೫-೧೬ರಲ್ಲಿ ಶೇಕಡಾ ೮ರಷ್ಟು ಇದ್ದ ಭಾರತದ ಸಮಗ್ರ ರಾಷ್ಟ್ರೀಯ ಉತ್ಪನ್ನ (ಸಮಗ್ರ ಆಂತರಿಕ ಉತ್ಪನ್ನ- ಜಿಡಿಪಿ) ೨೦೧೬-೧೭ರಲ್ಲಿ ಸ್ವಲ್ಪ ಕುಂಠಿತಗೊಂಡಿದ್ದು ಶೇಕಡಾ ೭.೧ಕ್ಕೆ ಇಳಿಯಿತು ಎಂದು ಸರ್ಕಾರ ಲೋಕಸಭೆಗೆ ತಿಳಿಸಿತು. ಆರ್ಥಿಕ ಪ್ರಗತಿ ಕುಂಠಿತಗೊಂಡದ್ದು ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಬೆಳವಣಿಗೆ ಕಡಿಮೆಯಾದುದನ್ನು ಪ್ರತಿಫಲಿಸಿದೆ. ಆಂತರಿಕ, ಬಾಹ್ಯ ಮತ್ತು ಆರ್ಥಿಕ ಕಾರಣಗಳ ಪರಿಣಾಮವಾಗಿ ಪ್ರಗತಿ ಕುಂಠಿತಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದರು.  ೨೦೧೬ರಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಥಿಕ ಪ್ರಗತಿ ದರ ಕುಂಠಿತಗೊಂಡಿದ್ದುದರ ಜೊತೆಗೆ ಜಿಡಿಪಿ ಅನುಪಾತಕ್ಕೆ ಅನುಗುಣವಾಗಿ ಒಟ್ಟು ಸ್ಥಿರ ಹೂಡಿಕೆಯಲ್ಲಿ ಆದ ಇಳಿಕೆ, ಕಾರ್ಪೋರೇಟ್ ರಂಗದ ಒತ್ತಡಭರಿತ ಬ್ಯಾಲೆನ್ಸ್ ಶೀಟ್, ಕೈಗಾರಿಕಾ ರಂಗದಲ್ಲಿ ಸಾಲ ಪ್ರಮಾಣ ಕಡಿಮೆಯಾದದ್ದು ಇತ್ಯಾದಿ ೨೦೧೬-೧೭ರ ಸಾಲಿನಲ್ಲಿ ಪ್ರಗತಿದರ ಇಳಿಯಲು ಕೆಲವು ಕಾರಣಗಳು ಎಂದು ಜೇಟ್ಲಿ ಲೋಕಸಭೆಗೆ ತಿಳಿಸಿದರು.  ‘೨೦೧೬-೧೭ರ ಸಾಲಿನ ಮಂದ ಪ್ರಗತಿಯು ಕೈಗಾರಿಕೆ ಮತ್ತು ಸೇವಾ ರಂಗದಲ್ಲಿನ ಮಂದ ಪ್ರಗತಿಯನ್ನು ಪ್ರತಿಫಲಿಸಿದೆ. ರಾಷ್ಟ್ರದ ಆರ್ಥಿಕ ಪ್ರಗತಿಯು ಸ್ವರೂಪಾತ್ಮಕ, ಬಾಹ್ಯ ಮತ್ತು ಆರ್ಥಿಕ ವಿಚಾರಗಳು ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿದೆ ಎಂದು ಪ್ರಶ್ನೋತ್ತರ ವೇಳೆಯಲ್ಲಿ ಜೇಟ್ಲಿ ನುಡಿದರು. ಕೇಂದ್ರೀಯ ಅಂಕಿಸಂಖ್ಯೆ ಕಚೇರಿಯ ಇತ್ತೀಚಿನ ಅಂದಾಜಿನ ಪ್ರಕಾರ, ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ೨೦೧೪-೧೫, ೨೦೧೫-೧೬ ಮತ್ತು ೨೦೧೬-೧೭ರಲ್ಲಿ ಕ್ರಮವಾಗಿ ಶೇಕಡಾ ೭.೫, ಶೇಕಡಾ ೮.೦ ಮತ್ತು ಶೇಕಡಾ ೭.೧ರಷ್ಟು ಇತ್ತು. ನಿರಂತರ ಮಾರುಕಟ್ಟೆ ದರಗಳಲ್ಲಿ ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ ಶೇಕಡಾ ೫.೭, ದ್ವಿತೀಯ ದ್ವೈಮಾಸಿಕದಲ್ಲಿ ಶೇಕಡಾ ೬.೩ ಇತ್ತು.
ಪ್ರಗತಿದರ ಕುಂಠಿತವಾಗಿದ್ದರೂ ಭಾರತದ ಆರ್ಥಿಕತೆ ೨೦೧೬ರಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಹಾಗೂ ೨೦೧೭ರಲ್ಲಿ ವಿಶ್ವದಲ್ಲಿ ಅತಿವೇಗದಿಂದ ಬೆಳೆಯುತ್ತಿರುವ ೨ನೇ ಪ್ರಮುಖ ಆರ್ಥಿಕತೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ ಎಂದು ಜೇಟ್ಲಿ ಪ್ರತಿಪಾದಿಸಿದರು. ಆರ್ಥಿಕತೆಯ ಬೆಳವಣಿಗೆಗೆ ಒತ್ತು ನೀಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದನೆಗೆ ಅನುಕೂಲವಾಗುವಂತೆ ಸಾರಿಗೆ ಮತ್ತು ವಿದ್ಯುತ್ ರಂಗಗಳಲ್ಲಿ ವಿದೇಶೀ ನೇರ ಹೂಡಿಕೆ ನೀತಿಗಳಲ್ಲಿ ಸಮಗ್ರ ಸುಧಾರಣೆಗಳನ್ನು ಮಾಡುತ್ತಿದೆ.  ಜವುಳಿ ಉದ್ಯಮಕ್ಕಾಗಿ ವಿಶೇಷ ಪ್ಯಾಕೇಜ್ ನೀಡಿದೆ ಎಂದು ಅವರು ವಿವರಿಸಿದರು.

2017: ಚೆನ್ನೈ: ರಾಧಾಕೃಷ್ಣ ನಗರ (ಆರ್ ಕೆ ನಗರ) ಉಪಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಭಾರಿಸಿದ, ಮೂಲೆಗೆ ಒತ್ತಲ್ಪಟ್ಟಿರುವ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರು ತಮಿಳುನಾಡು ವಿಧಾನಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು. ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕ್ಷೇತ್ರವನ್ನು ದಿನಕರನ್ ಪ್ರತಿನಿಧಿಸಿದ್ದಾರೆ. ಹೊಸದಾಗಿ ಚುನಾಯಿತರಾಗಿರುವ ಶಾಸಕರಿಗೆ ೧೫ನೇ ವಿಧಾನಸಭೆಯ ಸದಸ್ಯರಾಗಿ ವಿಧಾನಸಭಾಧ್ಯಕ್ಷ ಪಿ. ಧನಪಾಲ್ ಅವರು ತಮ್ಮ ಕಚೇರಿಯಲ್ಲಿ ಪ್ರಮಾಣವಚನ ಬೋಧಿಸಿದರು. ಅನರ್ಹಗೊಂಡಿರುವ ಕೆಲಸವು ಶಾಸಕರು ಮತ್ತು ಥಂಗತಮಿಳ್ ಸೆಲ್ವನ್ ಮತ್ತು ಪಿ.ವೆಟ್ರಿವೇಲ್ ಸೇರಿದಂತೆ ಕೆಲವು ನಿಕಟವರ್ತಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.  ಪ್ರಮಾಣ ವಚನದ ಬಳಿಕ ಧನಪಾಲ್ ಅವರು ದಿನಕರನ್ ಅವರಿಗೆ ಹಸ್ತಲಾಘವ ನೀಡಿದರು. ಜಯಲಲಿತಾ ಅವರ ನಿಧನದಿಂದಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಬೇಕಾಗಿ ಬಂದಿತ್ತು. ದಿನಕರನ್ ಅವರು ತಮ್ಮ ಸಮೀಪಸ್ಪರ್ಧಿ ಎಐಎಡಿಎಂಕೆಯ ಇ ಮಧುಸೂದನನ್ ಅವರನ್ನು ೪೦,೦೦೦ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. ಕೆಲ ತಿಂಗಳ ಹಿಂದೆ, ಆಡಳಿತಾರೂಢ ಪಕ್ಷದಲ್ಲಿ ಮೂಲೆಗೆ ಒತ್ತಲ್ಪಟ್ಟಿದ್ದ ದಿನಕರನ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

2017: ನವದೆಹಲಿ: ಹಿಮಾಚಲ ಪ್ರದೇಶದ ಕಾಂಗ್ರೆಸ್ ಶಾಸಕಿ ಆಶಾ ಕುಮಾರಿ ಅವರು ಶಿಮ್ಲಾದಲ್ಲಿ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಕಪಾಳಕ್ಕೆ ಭಾರಿಸಿ, ಬೆನ್ನಲ್ಲೇ ಪೇದೆಯಿಂದಲೂ ಕಪಾಳ ಮೋಕ್ಷ ಮಾಡಿಸಿಕೊಂಡ ಘಟನೆ ಘಟಿಸಿತು. ಡಾಲ್ ಹೌಸಿ ಕ್ಷೇತ್ರದ ಶಾಸಕಿ ಆಶಾ ಕುಮಾರಿ ಅವರು ರಾಹುಲ್ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಪರಿಶೀಲನಾ ಸಭೆಗೆ ಹೋಗಲು ದಾರಿ ಹುಡುಕುವ ಯತ್ನದಲ್ಲಿದ್ದರು. ಆದರೆ ಆಕೆಗೆ ಪ್ರವೇಶ ನಿರಾಕರಿಸಲಾಯಿತು. ಸಿಟ್ಟಿಗೆದ್ದ ಆಶಾ ಕುಮಾರಿ ಮಹಿಳಾ ಕಾನ್‌ಸ್ಟೇಬಲ್ ಒಬ್ಬರ ಕಪಾಳಕ್ಕೆ ಭಾರಿಸಿದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಯಿತು. ತತ್ ಕ್ಷಣವೇ ಮಹಿಳಾ ಕಾನ್‌ಸ್ಟೇಬಲ್ ಕೂಡಾ ಅಷ್ಟೇ ಜೋರಾಗಿ ಆಶಾ ಕುಮಾರಿ ಅವರ ಕಪಾಳಕ್ಕೆ ಭಾರಿಸಿದ ದೃಶ್ಯವೂ ಕ್ಯಾಮರಾದಲ್ಲಿ ಸೆರೆಯಾಯಿತು. ಬಳಿಕ ಟ್ವಿಟ್ಟರ್ ಪೋಸ್ಟ್ ನಲ್ಲಿ ಮಹಿಳಾ ಕಾನ್‌ಸ್ಟೇಬಲ್ ಕಪಾಳಕ್ಕೆ ಭಾರಿಸಬೇಕಾಗಿ ಬಂದ ಸಂದರ್ಭವನ್ನು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಸೊಸೆಯಾಗಿರುವ ಆಶಾ ಕುಮಾರಿ ವಿವರಿಸಿದರು. ’ಕರ್ತವ್ಯದಲ್ಲಿದ್ದ ಮಹಿಳಾ ಕಾನ್‌ಸ್ಟೇಬಲ್ ನನ್ನದೇ ಪಕ್ಷದ ಕಾರ್ಯಕ್ರಮಕ್ಕೆ ಹೋಗಲು ನನಗೆ ಪ್ರವೇಶ ನಿರಾಕರಿಸಿದರು. ಪಾಸ್ ತೋರಿಸಿದರೂ ಒಳಕ್ಕೆ ಹೋಗಲು ಬಿಡಲಿಲ್ಲ. ಜೊತೆಗೆ ಅಸಾಂಸದೀಯ ಪದ ಕೂಡಾ ಬಳಸಿದರು ಎಂದು ಅವರು ವಿವರಿಸಿದರು.  ತಮ್ಮ ವರ್ತನೆಗಾಗಿ ಟ್ವಿಟ್ಟರ್‌ನಲ್ಲಿ ಶಾಸಕಿ ಆಶಾ ಅವರು ವಿಷಾದವನ್ನೂ ವ್ಯಕ್ತ ಪಡಿಸಿ, ಕ್ಷಮೆ ಕೇಳಿದರು.  ‘ಮಹಿಳಾ ಕಾನ್‌ಸ್ಟೇಬಲ್ ನನ್ನನ್ನು ನಿಂದಿಸಿ, ತಳ್ಳಿದರು. ಆಕೆ ತಾಳ್ಮೆ ವಹಿಸಬೇಕಿತ್ತು. ನಾನು ಆಕೆಯ ತಾಯಿಯ ವಯಸ್ಸಿನವಳು. ಆದರೆ ನಾನು ಕೂಡಾ ಸಹನೆ ಕಳೆದುಕೊಳ್ಳಬಾರದಿತ್ತು ಎಂಬುದನ್ನು ನಾನು ಒಪ್ಪಿಕೊಳ್ಳುವೆ. ನಾನು ಕ್ಷಮೆ ಯಾಚಿಸುತ್ತೇನೆ ಎಂದು ಆಶಾ ಕುಮಾರಿ ಹೇಳಿದರು.

2017: ತಿರುಮಲ: ಪವಿತ್ರ ವೈಕುಂಠ ಏಕಾದಶಿ ಉತ್ಸವ ಪ್ರಯುಕ್ತ ತಿರುಮಲದಲ್ಲಿ ಭಕ್ತರ ಭಾರೀ ಸಂದಣಿ ಕಂಡು ಬಂದಿದ್ದು, ಸುಮಾರು ೧೫ ಮಂದಿ ಭಕ್ತರು ಅಸ್ವಸ್ಥರಾದರು ಎಂದು ವರದಿಗಳು ತಿಳಿಸಿದವು. ಭಾರೀ ಜನದಟ್ಟಣೆ ಪರಿಣಾಮವಾಗಿ ಭಕ್ತರು ದೇವರ ದರ್ಶನಕ್ಕಾಗಿ ಗಡ ಗಡ ನಡುಗುವ ಚಳಿಯಲ್ಲಿ ದೀರ್ಘಕಾಲ ಸರತಿಯ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ಉಂಟಾಯಿತು. ಸರತಿಯ ಸಾಲಿನಲ್ಲಿ ಇದ್ದ ೧೫ಕ್ಕೂ ಹೆಚ್ಚು ಭಕ್ತರು ತೀವ್ರ ಚಳಿಯ ಕಾರಣ ಅಸ್ವಸ್ಥರಾದರು. ಅವರಿಗೆ ಅಶ್ವಿನ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು ಎಂದು ಮೂಲಗಳು ತಿಳಿಸಿದವು. ಭಕ್ತರಿಗೆ ಸುಲಲಿತ ದರ್ಶನಕ್ಕೆ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ ಎಂಬುದಾಗಿ ಟಿಟಿಡಿ ಆಡಳಿತ ಮಂಡಳಿ ಹೇಳಿದ್ದರೂ, ಭಕ್ತರು ತೀವ್ರ ಸಮಸ್ಯೆಗಳನ್ನು ಎದುರಿಸಬೇಕಾಯಿತು. ವೈಕುಂಠಮ್ ಸಮುಚ್ಛಯ ಕಿಕ್ಕಿರಿದಿತ್ತು. ದರ್ಶನದ ಸರತಿ ಸಾಲುಗಳು ಹೂದೋಟಗಳನ್ನೂ ದಾಟಿ ೩ ಕಿಮೀ ಆಚೆಗೆ ರಿಂಗ್ ರಸ್ತೆಯವರೆಗೂ ವ್ಯಾಪಿಸಿದ್ದವು. ಹಿಂದಿನ ದಿನ ಸಂಜೆಯಿಂದ ವಿಧಿಸಲಾದ ಸಂಚಾರಿ ನಿರ್ಬಂಧಗಳಿಂದ ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡು ದೂರದ ಊರುಗಳಿಂದ ಬಂದ ಯಾತ್ರಿಕರು ಬಹುದೂರದಿಂದಲೇ ನಡೆದುಕೊಂಡು ಬರಬೇಕಾದ ಸ್ಥಿತಿ ಉಂಟಾಗಿತ್ತು.  ಆಹಾರ ಮತ್ತು ನೀರಿನ ಸಮರ್ಪಕ ಸರಬರಾಜು ಇಲ್ಲದ ಕಾರಣಕ್ಕಾಗಿ ಯಾತ್ರಿಕರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ವಾಶ್ ರೂಂಗಳ ಕೊರತೆ ಕಾರಣ, ಭಕ್ತರು ಕೈಕಾಲು ಮುಖ ತೊಳೆದುಕೊಳ್ಳಲೂ ಉದ್ದದ ಕ್ಯೂಗಳಲ್ಲಿ ಕಾಯಬೇಕಾಯಿತು. ಆಡಳಿತ ಮಂಡಳಿಯ ಹಿರಿಯ ಅಧಿಕಾರಿಗಳು ಅತಿಗಣ್ಯ ವ್ಯಕ್ತಿಗಳ ವ್ಯವಸ್ಥೆಯಲ್ಲಿ ಮಗ್ನರಾಗಿದ್ದರೆ, ಸಾಮಾನ್ಯ ಯಾತ್ರಿಕರ ಗೋಳನ್ನು ಕೇಳುವವರು ಇರಲಿಲ್ಲ.


2016: ನವದೆಹಲಿ: ನೋಟು ರದ್ದತಿ ಕ್ರಮದ ನಂತರ 60 ಲಕ್ಷಕ್ಕೂಹೆಚ್ಚು ಜನ ಹಾಗೂ ಕಂಪೆನಿಗಳಿಂದ ಸುಮಾರು 7 ಲಕ್ಷ ಕೋಟಿ ರೂಪಾಯಿಗೂಹೆಚ್ಚು ಹಣ ಬ್ಯಾಂಕ್ಗಳಿಗೆ ಜಮೆಯಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಮಾಹಿತಿ ನೀಡಿದರು. ರೂ. 7 ಲಕ್ಷ ಕೋಟಿಗೂಹೆಚ್ಚು ಮೌಲ್ಯದ ಹಳೆಯ ನೋಟುಗಳು ಬ್ಯಾಂಕ್ಗಳಲ್ಲಿ ಜಮೆಯಾಗಿವೆ. ಆದರೆ, ಬ್ಯಾಂಕ್ಗಳಲ್ಲಿ ಜಮೆ ಮಾಡಿದ ಮಾತ್ರಕ್ಕೆ ಕಪ್ಪುಹಣ ಬಿಳಿಯಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದರು. ತೆರಿಗೆ ವಂಚಕರ ಮೇಲೆ ಸರ್ಕಾರ ಯಾವುದೇ ದಯೆ ತೋರುವುದಿಲ್ಲ. ವಂಚಕರಿಂದ ಪ್ರತಿ ಪೈಸೆ ತೆರಿಗೆ ವಸೂಲಿ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.  ಸರ್ಕಾರ ಪ್ರಾಮಾಣಿಕರಿಗೆ ತೊಂದರೆ ಕೊಡುವುದಿಲ್ಲ. ಅದೇ ವೇಳೆ ವಂಚಕರ ಮೇಲೆ ಕರುಣೆ ತೋರುವ ಪ್ರಶ್ನೆಯೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಕಪ್ಪುಹಣವನ್ನು ಬ್ಯಾಂಕ್ಖಾತೆಯಲ್ಲಿ ಜಮೆ ಮಾಡಿದರೆ ಅದು ಬಿಳಿಹಣವಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ, ಅದು ಸುಳ್ಳು. ನಿತ್ಯ ರೂ.2 ಲಕ್ಷದಿಂದ ರೂ.5 ಲಕ್ಷದವರೆಗೆ ಹಣ ಜಮೆಯಾಗುವ ಬ್ಯಾಂಕ್ಖಾತೆಗಳ ಮೇಲೆ ಸರ್ಕಾರ ನಿಗಾ ಇಟ್ಟಿದೆ. ಇಂಥ ಪ್ರತಿ ಖಾತೆ ಹಾಗೂ ವ್ಯಕ್ತಿಗಳ ವಿವರವನ್ನೂ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು..
2016: ನವದೆಹಲಿ: ನೋಟು ನಿಷೇಧವನ್ನು ಸಮರ್ಥಿಸಿ ದೇಶವ್ಯಾಪಿ ಪ್ರಚಾರಾಂದೋಲನಕ್ಕೆ ಕೇಂದ್ರ ಸರ್ಕಾರ ಸಜ್ಜಾಗಿದ್ದು, ಡಿಸೆಂಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದರೊಂದಿಗೆ ಆಂದೋಲನ ಚಾಲನೆ ಪಡೆಯಲಿದೆ. ಕನಿಷ್ಠ 10 ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕ ಪ್ರದರ್ಶನ, ಸಭೆಗಳನ್ನು ಸಂಘಟಿಸುವ ಮೂಲಕ ನೋಟು ರದ್ದು ಕ್ರಮವನ್ನು ಸಮರ್ಥಿಸುವಂತೆ ಎಲ್ಲ ಸಚಿವರಿಗೂ ಸೂಚನೆ ನೀಡಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 60 ಪುಟಗಳ ದಾಖಲೆಯನ್ನು ವಿತ್ತ ಸಚಿವಾಲಯವು ಎಲ್ಲ ಸಚಿವರಿಗೂ ಈಗಾಗಲೇ ವಿತರಿಸಿದೆ. ದಾಖಲೆಯಲ್ಲಿ ಪ್ರತಿಯೊಂದು ಅಂಶದ ಬಗೆಗೂ ವಿವರಿಸಲಾಗಿದೆ ಎಂದು ಮೂಲಗಳು ಹೇಳಿದವು.
 2016: ನವದೆಹಲಿ: ನೋಟು ನಿಷೇಧ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಭ್ರಷ್ಟಾಚಾರ
ಆರೋಪ ಎರಡು ಅವಳಿ ವಿಷಯಗಳನ್ನು ಮುಂದಿಟ್ಟುಕೊಂಡು ಪಕ್ಷವು ಜನವರಿ 6ರಿಂದ ರಾಷ್ಟ್ರವ್ಯಾಪಿ ಪ್ರತಿಭಟನಾ ಚಳವಳಿ ಹಮ್ಮಿಕೊಂಡಿದೆ ಎಂದು ಕಾಂಗ್ರೆಸ್ ಪ್ರಕಟಿಸಿತು. ‘ಕಾಂಗ್ರೆಸ್ ಪಕ್ಷವು ಮೂರು ಹಂತದ ರಾಷ್ಟ್ರವ್ಯಾಪಿ ಚಳವಳಿ ನಡೆಸಲಿದೆ. ಮೊದಲ ಹಂತದ ಚಳವಳಿ ಜನವರಿ 6ರಂದು ಆರಂಭವಾಗಲಿದೆ ಎಂದು ಕಾಂಗ್ರೆಸ್ ಸಂಪರ್ಕ ವಿಭಾಗದ ಉಸ್ತುವಾರಿ ವಹಿಸಿರುವ ರಣದೀಪ್ ಸುರ್ಜಿವಾಲ ಇಲ್ಲಿ ಹೇಳಿದರು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಕಾರ್ಪೊರೇಟ್ ಕಂಪೆನಿಗಳಿಂದ 65 ಕೋಟಿ ರೂ. ಲಂಚ ಪಡೆದ ಆರೋಪ ಹೊರಿಸಿದ್ದಾರೆ. ನಮ್ಮದು ಅತ್ಯಂತ ಸರಳ ಪ್ರಶ್ನೆ, ನೀವು (ಮೋದಿ) ಹಣ ಪಡೆದಿದ್ದೀರಾ ಆಥವಾ ಇಲ್ಲವೇ? ಇಲ್ಲವಾದರೆ, ಬಗ್ಗೆ ಸ್ವತಂತ್ರ ತನಿಖೆಗೆ ನೀವು ಆದೇಶ ನೀಡುತ್ತಿಲ್ಲ ಏಕೆ?’ ಎಂದು ಸುರ್ಜಿವಾಲ ಪ್ರಶ್ನಿಸಿದರು. ಉದ್ಯಮಿ ಮಹೇಶ ಷಾ ಅವರು ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಗಾಗ ಭೇಟಿ ಮಾಡುತ್ತಿದ್ದರು. ಅವರ ಭೇಟಿಗೆ ಯಾವುದೇ ಅಡೆತಡೆ ಇರುತ್ತಿರಲಿಲ್ಲ ಎಂಬುದಾಗಿ ಗುಜರಾತಿನ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಸುರೇಶ ಮೆಹ್ತಾ ಹೇಳಿದ್ದಾರೆ. ಆದಾಯ ಘೋಷಣಾ ಯೋಜನೆಯಡಿ ಮಹೇಶ ಮೆಹ್ತಾ 13,860 ಕೋರಿ ರೂ. ಕಪ್ಪು ಹಣ ತಮ್ಮ ಬಳಿ ಇರುವುದಾಗಿ ಘೋಷಿಸಿದ್ದಾರೆ. 13,860 ಕೋಟಿ ರೂ. ಬಗ್ಗೆ ಮೋದೀಜಿ ನಮಗೇಕೆ ಸತ್ಯ ಹೇಳುತ್ತಿಲ್ಲ, ಬಗ್ಗೆ ಏನಾದರೂ ತನಿಖೆಯನ್ನು ಅವರು ನಡೆಸುತ್ತಿದ್ದಾರೆಯೇ ಎಂದು ಸುರ್ಜಿವಾಲ ಕೇಳಿದರು.
2016: ನವದೆಹಲಿ: ಚಹಾ ಮಾರುವವರು ಕೂಡಾ ಡಿಜಿಟಲ್ ಪಾವತಿ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸುತ್ತಿದ್ದಾರೆ. ಹಾಗಾದರೆ ಬಿಜೆಪಿ ಕೇಂದ್ರ ಕಚೇರಿಯಿಂದ ಪಕ್ಷಾಧ್ಯಕ್ಷ ಅಮಿತ್ ಷಾ ಅವರು ಇತ್ತೀಚೆಗೆ 3 ರೂಪಾಯಿಗಳ ನಗದು ಹಣವನ್ನು ಉತ್ತರ ಪ್ರದೇಶ ಪಕ್ಷ ಕಚೇರಿಗೆ ಕಳುಹಿಸಿದ್ದು ಏಕೆ? ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸಿತು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಆರ್.ಎಸ್. ಸುರ್ಜಿವಾಲಾ ಅವರು ನೋಟು ರದ್ದತಿ ವಿಚಾರವಾಗಿ ಬಿಜೆಪಿಯನ್ನು ಪ್ರಬಲವಾಗಿ ತರಾಟೆಗೆ ತೆಗೆದುಕೊಂಡು ಪ್ರಶ್ನೆ ಕೇಳಿದರು. ಗಾಜಿಯಾಬಾದಿನಲ್ಲಿ ಪೊಲೀಸರು ಇಬ್ಬರು ಕಾರಿನಲ್ಲಿ ಸಾಗಿಸುತ್ತಿದ್ದ 3 ಕೋಟಿ ರೂಪಾಯಿಗಳನ್ನು ವಶ ಪಡಿಸಿಕೊಂಡು ಠಾಣೆಗೆ ಒಯ್ದಿದ್ದರು. ಬಳಿಕ ಹಣವನ್ನು ಬಿಜೆಪಿಯ ಕೇಂದ್ರ ಕಚೇರಿಯಿಂದ ಉತ್ತರ ಪ್ರದೇಶದ ಪಕ್ಷ ಕಚೇರಿಗೆ ಕಳುಹಿಸಲಾಗಿದೆ ಎಂಬುದಾಗಿ ಪಕ್ಷಾಧ್ಯಕ್ಷ ಅಮಿತ್ ಷಾ ಪರ ಕಳುಹಿಸಲಾದ ಪತ್ರದ ಜೊತೆಗೆ ಬಂದ ಬಿಜೆಪಿ ನಾಯಕ ಅಶೋಕ ಮೊಂಗಾ ಅವರು ಹಣವನ್ನು ಬಿಜೆಪಿ ಕಚೇರಿಗೆ ಒಯ್ದಿದ್ದರು ಎಂದು ಸುರ್ಜಿವಾಲಾ ವಿವರಿಸಿದರು.
2016: ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಉತ್ತರಾಧಿಕಾರಿಯಾಗಿ ಶಶಿಕಲಾ ನಟರಾಜನ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಳ್ಳುತ್ತಿದ್ದಂತೆಯೇ ಜಯಲಲಿತಾ ಅವರ ಸಾವಿನ ಬಗ್ಗೆ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ವೈದ್ಯಲಿಂಗಮ್ ಅವರು ಸಂಶಯ ವ್ಯಕ್ತ ಪಡಿಸಿ, ಪಾರ್ಥಿವ ಶರೀರವನ್ನು ಹೊರತೆಗೆದು ಏಕೆ ಮರು ಪರೀಕ್ಷೆ ಮಾಡಬಾರದು ಎಂದು ಪ್ರಶ್ನಿಸಿದರು. ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆಗೆ ಒತ್ತಾಯಿಸಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆ ಕಾಲದಲ್ಲಿ ನ್ಯಾಯಮೂರ್ತಿ ವೈದ್ಯಲಿಂಗಮ್ ಅವರು ಪ್ರಶ್ನೆ ಎತ್ತಿದರು. ಆಸ್ಪತ್ರೆಗೆ ದಾಖಲಾದಾಗ ಅವರು ಸಮರ್ಪಕವಾಗಿ ಆಹಾರ ಸೇವನೆ ಮಾಡುತ್ತಿದ್ದರು ಎನ್ನಲಾಗಿತ್ತು. ಅವರಿಗೆ ಏನು ಚಿಕಿತ್ಸೆ ನೀಡಲಾಗಿತ್ತು ಎಂಬ ವಿವರ ಸಹಿತ ಕನಿಷ್ಠ ಆಕೆಯ ಸಾವಿನ ಬಳಿಕವಾದರೂ ಸತ್ಯ ಹೊರಬರಬೇಕು ಎಂದು ನ್ಯಾಯಮೂರ್ತಿ ಹೇಳಿದರು. ಮಾಧ್ಯಮಗಳು ಸಾಕಷ್ಟು ಸಂಶಯಗಳನ್ನು ಎತ್ತಿವೆ. ವೈಯಕ್ತಿಕವಾಗಿ ನನಗೂ ಜಯಲಲಿತಾ ಸಾವಿನ ಬಗ್ಗೆ ಸಂಶಯಗಳಿವೆ ಎಂದು ಅವರು ನುಡಿದರು.
2016: ಚೆನ್ನೈ: ಜಯಲಲಿತಾ ನಿಧನ ಬಳಿಕ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಚಿಕ್ಕಮ್ಮ(ಚಿನ್ನಮ್ಮ) ಎಂದೇ ಬಿಂಬಿಸಲ್ಪಡುತ್ತಿರುವ ಶಶಿಕಲಾ ನಟರಾಜನ್ ಅವಿರೋಧವಾಗಿ ಆಯ್ಕೆಯಾದರು. ಚೆನ್ನೈಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಶಶಿಕಲಾ ನಟರಾಜನ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡುವ ನಿರ್ಣಯ ಕೈಗೊಳ್ಳಲಾಯಿತು.  ಜತೆಗೆ ಇನ್ನಿತರ 14 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ ಪ್ರಮುಖ ಉಪಸ್ಥಿತರಿದ್ದರು. ಬಳಿಕ ನಿರ್ಣಯದ ಪ್ರತಿಯನ್ನು ಸೆಲ್ವಂ ಅವರು ಶಶಿಕಲಾ ಅವರಿಗೆ ತಲಪಿಸಿದರು. ಜನವರಿ 2ರಂದು ನಿಯಮನಿಷ್ಠವಾಗಿ ಶಶಿಕಲಾ ನಟರಾಜನ್ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಘೋಷಣೆ ಮಾಡಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿದವು. ಜಯಲಲಿತಾ ಅವರ ಆಪ್ತರಲ್ಲಿ ಶಶಿಕಲಾ ಪ್ರಮುಖರು. ಸುಮಾರು 33 ವರ್ಷಗಳ ದೀರ್ಘಾವಧಿ ನಿಕಟ ಸಂಬಂಧ ಹೊಂದಿದ್ದರು. ಅಮ್ಮಾಗೆ ಭಾರತ ರತ್ನ ನೀಡಿ: 6 ಬಾರಿ ಸಿಎಂ ಆಗಿ ತಮಿಳರ ಪಾಲಿಗೆ ಅಮ್ಮ ಆಗಿದ್ದ ಜಯಲಲಿತಾ ಅವರಿಗೆ ಭಾರತ ರತ್ನ ನೀಡಬೇಕು. ಸಂಸತ್ತಿನಲ್ಲಿ ಜಯಲಲಿತಾ ಅವರ ಪ್ರತಿಮೆ ನಿರ್ಮಿಸಬೇಕು ಎಂದೂ ಎಐಎಡಿಎಂಕೆ ಒತ್ತಾಯಿಸಿತು..
2016: ನವದೆಹಲಿ: ಕಂಪೆನಿಯ ಗೋಪ್ಯತಾ ಪಾಲನೆ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿಗೆ ತಮ್ಮ ಬಳಿ ಇರುವ ಎಲ್ಲಾ ರಹಸ್ಯ ದಾಖಲೆಗಳನ್ನು 48 ಗಂಟೆಗಳೊಳಗೆ ಹಿಂದಿರುಗಿಸುವಂತೆ ಟಾಟಾ ಸನ್ಸ್ ಸೂಚನೆ ನೀಡಿತು. ಟಾಟಾ ಸನ್ಸ್ ಮಿಸ್ತ್ರಿಗೆ ಈದಿನ ನೋಟಿಸ್ ನೀಡಿದ್ದು, ರಹಸ್ಯ ದಾಖಲೆ ಕೂಡಲೇ ಹಿಂದಿರುಗಿಸುವಂತೆ ಸೂಚಿಸಿತು. ಕಳೆದ ಮೂರು ದಿನಗಳಲ್ಲಿ ಟಾಟಾ ಸನ್ಸ್ ಮಿಸ್ತ್ರಿಗೆ ಎರಡು ನೋಟಿಸ್ ನೀಡಿದ್ದು, ಕಂಪೆನಿಗೆ ಸಂಬಂಧಿಸಿದ ಎಲ್ಲಾ ರಹಸ್ಯ ದಾಖಲೆಗಳನ್ನು ತತ್ ಕ್ಷಣ ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಮಿಸ್ತ್ರಿ ಕಂಪನಿಯ ಅನುಮತಿಯಿಲ್ಲದೆ ರಹಸ್ಯ ದಾಖಲೆಗಳನ್ನು ಹೊರಗೆ ಕೊಂಡೊಯ್ದಿದ್ದಾರೆ. ಜತೆಗೆ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಟಾಟಾ ಸನ್ಸ್ ತಿಳಿಸಿತು. ಮಿಸ್ತ್ರಿಯನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಮಿಸ್ತ್ರಿ ಕುಟುಂಬಸ್ಥರ ಹೂಡಿಕೆ ಇರುವ ಕಂಪನಿಗಳು ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ಲಿನಲ್ಲಿಅರ್ಜಿ ಸಲ್ಲಿಸಿವೆ. ಅರ್ಜಿಗಳೊಂದಿಗೆ ಟಾಟಾ ಸನ್ಸ್ಗೆ ಹಲವಾರು ರಹಸ್ಯ ದಾಖಲೆಗಳನ್ನು ಲಗತ್ತಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ ಸನ್ಸ್ ಮಿಸ್ತ್ರಿಗೆ ಒಂದು ನೋಟಿಸ್ ನೀಡಿ ರಹಸ್ಯ ದಾಖಲೆ ದುರುಪಯೋಗ ಪಡಿಸಿಕೊಳ್ಳದಂತೆ ಸೂಚಿಸಿತ್ತು. ಜತೆಗೆ ದಾಖಲೆ ದುರುಪಯೋಗ ಸಂಬಂಧ ಮಿಸ್ತ್ರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ತಿಳಿಸಿತ್ತು.
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ರದ್ದತಿ ಕ್ರಮ ಫಲ ನೀಡುತ್ತಿದೆ, ಕಸರತ್ತಿನ ಕಷ್ಟಕರ ಭಾಗ ಕೊನೆಗೊಂಡಿದೆ. ನೋಟು ರದ್ದು ಕ್ರಮವನ್ನು ದೃಢವಾಗಿ ಬೆಂಬಲಿದ್ದಕ್ಕಾಗಿ ನಾವು ಭಾರತದ ಜನತೆಗೆ ಕೃತಜ್ಞರಾಗಿದ್ದೇವೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ನವದೆಹಲಿಯಲ್ಲಿ ಹೇಳಿದರುನೋಟು ರದ್ದತಿ ಪರಿಣಾಮವಾಗಿ ದೇಶದಲ್ಲಿ ಅರಾಜಕತೆ ಉಂಟಾಗಿದೆ ಎಂಬುದಾಗಿ ಕಾಂಗ್ರೆಸ್ ಆಪಾದಿಸಿದ ಬಳಿಕ ಪತ್ರಕರ್ತರ ಜೊತೆಗೆ ಮಾತನಾಡಿದ ವಿತ್ತ ಸಚಿವರು ಜೀವ ವಿಮೆ, ಪ್ರವಾಸೋದ್ಯಮ, ಪೆಟ್ರೋಲಿಯಂ ಬಳಕೆ, ಮ್ಯೂಚುವಲ್ ಫಂಡ್ಗಳಲ್ಲಿ ಹಣದ ಹೂಡಿಕೆ ಅವಧಿಯಲ್ಲಿ ಹೆಚ್ಚಿದೆ ಎಂದು ನುಡಿದರು. ನವೆಂಬರ್ 8 ನೋಟು ರದ್ದತಿ ಕ್ರಮಕ್ಕಾಗಿ ತೀವ್ರ ಟೀಕೆಗೆ ಗುರಿಯಾದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ವ್ಯಾಪಕ ಪ್ರಚಾರಾಂದೋಲನ ಕೈಗೊಳ್ಳುವ ಮೂಲಕ ಜನತೆಯನ್ನು ತಲುಪಲು ಯೋಜಿಸಿದೆ. ಕೇಂದ್ರ ಸಚಿವರಾದ ಪೀಯೂಷ್ ಗೋಯೆಲ್ ಮತ್ತು ರವಿ ಶಂಕರ ಪ್ರಸಾದ್ ಅವರು ನೋಟು ರದ್ದು ಕ್ರಮದ ಫಲಿತಾಂಶ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ವರದಿಗಾರರ ಜೊತೆ ಮಾತನಾಡಿದ ಜೇಟ್ಲಿ, ನೇರ ತೆರಿಗೆ ಸಂಗ್ರಹ ದರ ಈಗ ಶೇ.14.4 ಪ್ರಮಾಣಕ್ಕೆ ಏರಿದೆ. ಇದು ಕಳೆದ ವರ್ಷಕ್ಕಿಂತ ಹೆಚ್ಚಿನದಾಗಿದ್ದು, ಕಳೆದ ವರ್ಷದ ನೇರ ತೆರಿಗೆ ಸಂಗ್ರಹ ದರ ಕೇವಲ 8.3 ಮಾತ್ರ ಇತ್ತು ಎಂದು ವಿವರಿಸಿದರು. ನೋಟು ನಿಷೇಧ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರದ ವಿರುದ್ಧ ಜನವರಿ 6ರಿಂದ ರಾಷ್ಟ್ರವ್ಯಾಪಿ ಚಳವಳಿ ಆರಂಭಿಸುವುದಾಗಿ ಕಾಂಗ್ರೆಸ್ ಪ್ರಕಟಿಸಿದ ಬಳಿಕ ಜೇಟ್ಲಿ ಅವರು ನೋಟು ರದ್ದತಿ ಬಳಿಕ ಆಗಿರುವ ಸಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡಿದರು. ಜೇಟ್ಲಿ ಅವರಿಗಿಂತ ಮುನ್ನ ಜಂಟಿ ಪತ್ರಿಕಾಗೋಷ್ಠಿ ಕರೆದ ಪೀಯೂಷ್ ಗೋಯೆಲ್ ಮತ್ತು ರವಿ ಶಂಕರ ಪ್ರಸಾದ್, ಕಾಂಗ್ರೆಸ್ ಪೊಳ್ಳು ಆರೋಪಗಳನ್ನು ಮುಂದುವರೆಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದರು.
2016: ಲಖನೌ: ಉತ್ತರ ಪ್ರದೇಶದಲ್ಲಿ ಯಾದವೀ ಕಲಹ ಮತ್ತೆ ಭುಗಿಲೆದ್ದಿದ್ದು, ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಂದೆ ಮುಲಾಯಂ ಸಿಂಗ್ ವಿರುದ್ಧ ಬಂಡೇಳಲು ಸಜ್ಜಾಗಿದ್ದಾರೆ. ತಂದೆಯ ಪಟ್ಟಿಯನ್ನು ಬದಿಗೊತ್ತಿ ತಮಗೆ ಆಪ್ತರಾದ 167 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಅವರು ಇಷ್ಟರಲ್ಲೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಅಖಿಲೇಶ್ ಯಾದವ್ ಅವರ ಪ್ರಕಟಿಸುವ ಪಟ್ಟಿಯ ಅಭ್ಯರ್ಥಿಗಳು ವಿವಿಧ ಲಾಂಛನಗಳ ಅಡಿಯಲ್ಲಿ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಯಿತು. ಈ ದಿನ ಬೆಳಗ್ಗೆ ಪ್ರಾರಂಭವಾದ ತುರುಸಿನ ರಾಜಕೀಯ ಚಟುವಟಿಕೆಗಳ ಮಧ್ಯೆ ಪಕ್ಷದ ಅನೇಕ ನಾಯಕರು ಅಖಿಲೇಶ್ ಮತ್ತು ಮುಲಾಯಂ ಸಿಂಗ್ ಯಾದವ್ ಮನೆಗಳ ಬಳಿ ಜಮಾಯಿಸಿದ್ದರು. ಇನ್ನೊಂದಷ್ಟು ಜನರ ಗುಂಪು ಮುಲಾಯಂ ಸಹೋದರ ಶಿವಪಾಲ್ ಮನೆಯ ಬಳಿಯೂ ಜಮಾಯಿಸಿತ್ತು. ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಹೊರಗಿಟ್ಟದ್ದರಿಂದ ಭ್ರಮನಿರಸನಗೊಂಡ ಅಖಿಲೇಶ್ ಯಾದವ್ ತಮ್ಮ ನಂ.5 ಕಾಳಿದಾಸ ಮಾರ್ಗ ನಿವಾಸದಲ್ಲಿ ಬೆಂಬಲಿಗರ ಜೊತೆಗೆ ಸಮಾಲೋಚಿಸಿದರು. ಪಕ್ಷದ ಅಧಿಕೃತ ಪಟ್ಟಿಯಲ್ಲಿ ಹೆಸರು ಇಲ್ಲದೇ ಇದ್ದ ಅನೇಕ ಶಾಸಕರು, ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ತಂದೆ ಮುಲಾಯಂ ಬಳಿ ಮಾತನಾಡಿದ ಅಖಿಲೇಶ್ ತಮ್ಮ ಬೆಂಬಲಿಗರ ಹೆಸರು ಪಟ್ಟಿಯಲ್ಲಿ ಕಣ್ಮರೆಯಾದ ಬಗ್ಗೆ ಅತೃಪ್ತಿ ವ್ಯಕ್ತ ಪಡಿಸಿದರು ಎಂದು ಮೂಲಗಳು ಹೇಳಿದವು. ಮುಲಾಯಂ ಸಿಂಗ್ ಮತ್ತು ಅವರ ಸಹೋದರ ಪಕ್ಷದ ರಾಜ್ಯ ಅಧ್ಯಕ್ಷ ಶಿವಪಾಲ್ ಸಿಂಗ್ ಹಿಂದಿನ ದಿನ 403 ಸದಸ್ಯ ಬಲದ ವಿಧಾನಸಭೆಗೆ 325 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದರು.
2008: ಬೆಂಗಳೂರು ನಗರದ ಈಜಿಪುರದ ಭೂಮಿಯನ್ನು ಮೇವರಿಕ್ ಹೋಲ್ಡಿಂಗ್ಸ್ ಸಂಸ್ಥೆಗೆ ನೀಡುವ ಸರ್ಕಾರದ ನಿರ್ಣಯ ಕುರಿತಂತೆ ಮುಖ್ಯಮಂತ್ರಿಗಳ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯ ಸರ್ಕಾರವು ಬೆಂಗಳೂರು ನಗರ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿತು.

2008: ನೇಪಾಳವನ್ನು ಗಣರಾಜ್ಯವನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಾವೊವಾದಿಗಳು ವಿಶ್ವವಿಖ್ಯಾತ ಪಶುಪತಿನಾಥ ದೇಗುಲದಲ್ಲಿ ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕದ ಬ್ರಾಹ್ಮಣರನ್ನು ಅರ್ಚಕರನ್ನಾಗಿ ನೇಮಿಸುವ ಸುಮಾರು ಮೂರು ಶತಮಾನಗಳಷ್ಟು ಹಳೆಯ ಪದ್ಧತಿ ತೆಗೆದುಹಾಕುವಲ್ಲಿ ಕೊನೆಗೂ ಯಶಸ್ವಿಯಾದರು. ಅರಸೊತ್ತಿಗೆ ಅಂತ್ಯಗೊಂಡ ತತ್ ಕ್ಷಣವೇ ಈ ಪ್ರಕ್ರಿಯೆ ಸದ್ದಿಲ್ಲದೆಯೇ ಆರಂಭಗೊಂಡಿತ್ತು. ಕೊನೆಗೂ ಈ ಪದ್ಧತಿ ಅಂತ್ಯಗೊಳಿಸಿ ಸ್ಥಳೀಯ ಬ್ರಾಹ್ಮಣರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವಲ್ಲಿ ಮಾವೋವಾದಿ ಸರ್ಕಾರ ಸಫಲವಾಯಿತು. ಪಶುಪತಿನಾಥ ದೇಗುಲದ ಪೂಜೆಗೆ ದಕ್ಷಿಣ ಭಾರತದ ಭಟ್ಟ ಬ್ರಾಹ್ಮಣರ ಬದಲು ಪ್ರಧಾನ ಅರ್ಚಕ ವಿಷ್ಣು ಪ್ರಸಾದ ದಹಲ್ ಸೇರಿದಂತೆ ನೇಪಾಳದ ಭಟ್ಟ ಬ್ರಾಹ್ಮಣರನ್ನು ನೇಮಿಸಲಾಯಿತು. ಈ ನಡುವೆ, ದೇಗುಲದ ಪ್ರಧಾನ ಅರ್ಚಕ ಮಹ್ಗಾಲೇಶ್ವರ ಭಟ್ಟ, ಅರ್ಚಕರಾದ ಕೃಷ್ಣ ಯೋಗ ಭಟ್ಟ ಮತ್ತು ಕೆ.ಪಿ.ರಾಮಚಂದ್ರ ಭಟ್ಟ ಅವರ ರಾಜೀನಾಮೆಯನ್ನು ಪಶುಪತಿ ಪ್ರದೇಶಾಭಿವೃದ್ಧಿ ಮಂಡಳಿ (ಪಿಎಡಿಟಿ) ಅಂಗೀಕರಿಸಿತು. ನೇಪಾಳಿ ಜನರ ಒಳಿತಿಗಾಗಿ ಪ್ರಾರ್ಥನೆ ಮಾಡಿಕೊಳ್ಳುವುದರೊಂದಿಗೆ ತಾವು ಪೂಜಾ ಕೈಂಕರ್ಯ ಆರಂಭಿಸುವುದಾಗಿ ನೂತನ ಪ್ರಧಾನ ಅರ್ಚಕ ದಹಲ್ ಹೇಳಿದರು. 1747 ರಿಂದ ನೇಪಾಳದ ದೊರೆಗಳು ಪಶುಪತಿನಾಥ ದೇಗುಲದ ಪೂಜೆಗೆ ದಕ್ಷಿಣ ಭಾರತದ ಬ್ರಾಹ್ಮಣರನ್ನು ನೇಮಿಸಿಕೊಳ್ಳಲು ಆರಂಭಿಸಿದ್ದರು.

2008: ಭಾರತೀಯ ತೈಲಚಿತ್ರ ಕಲೆಯಲ್ಲಿ ಹೊಸ ಶೈಲಿಯ ಹುಟ್ಟಿಗೆ ಕಾರಣರಾದ ಹೆಸರಾಂತ ಕಲಾವಿದ ಮಂಜಿತ್ ಬಾವಾ (67) ಅವರು ದಕ್ಷಿಣ ದೆಹಲಿಯಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು. ದೀರ್ಘಕಾಲದಿಂದ ಅಸ್ವಸ್ಥರಾಗಿದ್ದ ಮಂಜಿತ್ ಬಾವಾ ಮೂರು ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿದ್ದರು. ದೆಹಲಿಯ ಕಲಾ ಕಾಲೇಜು ಹಾಗೂ ಲಂಡನ್ನಿನ ಪ್ರಿಂಟಿಂಗ್ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದ ಬಾವಾ ಅವರು 1964 ರಲ್ಲಿ ತಮ್ಮ ವರ್ಣ ಚಿತ್ರದ ವೃತ್ತಿ ಜೀವನವನ್ನು ಲಂಡನ್ ಸಿಲ್ಕ್ ಸ್ಕ್ರೀನ್ ಪ್ರಿಂಟ್‌ನಲ್ಲಿ ಪ್ರಾರಂಭಿಸಿದ್ದರು. ಕಂದು ಮತ್ತು ಬೂದು ಬಣ್ಣಗಳನ್ನಷ್ಟೇ ಬಳಸುತ್ತಿದ್ದ ಪಾಶ್ಚಾತ್ಯ ಚಿತ್ರ ಕಲೆಯಲ್ಲಿ ಭಾರತೀಯರ ನೆಚ್ಚಿನ ಕೆಂಪು ಮತ್ತು ನೇರಳೆ ವರ್ಣವನ್ನು ಪಾರದರ್ಶಿಕೆಯಲ್ಲಿ ಬಳಸುವ ಮೂಲಕ ಹೊಸ ಅಲೆಯನ್ನೇ ಸೃಷ್ಟಿಸಿದ  ಕೀರ್ತಿ ಇವರಿಗೆ ಸಲ್ಲುತ್ತದೆ.

2008: ಪಂಡಿತ ಮಾಧವ ಗುಡಿ ಅವರ ಪುತ್ರ ಪ್ರಸನ್ನ ಗುಡಿ ಅವರು ಧಾರವಾಡದ ಡಾ. ಮಲ್ಲಿಕಾರ್ಜುನ ಮನ್ಸೂರ ಕಲಾಭವನದಲ್ಲಿ ನಿರಂತರವಾಗಿ 24 ಗಂಟೆ 16 ನಿಮಿಷಗಳವರೆಗೆ ಹಾಡುವ ಮೂಲಕ ಸಂಗೀತ ಕ್ಷೇತ್ರದಲ್ಲಿಯೇ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ತೋಡಿ ರಾಗದ ಮೂಲಕ ಗಾಯನ ಆರಂಭಿಸಿದ ಪ್ರಸನ್ನ, ಭೈರವಿ ರಾಗದಲ್ಲಿ ಕೊನೆಯ ಹಾಡನ್ನು ಹಾಡುವುದರೊಂದಿಗೆ ಗಿನ್ನೆಸ್ ದಾಖಲೆಗೆ ಅರ್ಹರಾದರು. ಈ ಹಿಂದೆ ಪಾಶ್ಚಾತ್ಯ ಸಂಗೀತದಲ್ಲಿ 24 ಗಂಟೆ 3 ಸೆಕೆಂಡುಗಳವರೆಗೆ ಹಾಡುವ ಮೂಲಕ ಗಿನ್ನೆಸ್ ಪುಸ್ತಕದಲ್ಲಿ ಅಮೆರಿಕದ ಕ್ರಿಸ್ ಚಿಟ್ಹಾನ್ ಎಂಬವರು ಹೆಸರು ದಾಖಲಿಸಿದ್ದರು. ಪ್ರಸನ್ನ ಗುಡಿಯವರು ಶಾಸ್ತ್ರೀಯ ಸಂಗೀತದಲ್ಲಿ ನಿರಂತರವಾಗಿ ಹಾಡುವ ಮೂಲಕ ಹಳೆಯ ದಾಖಲೆಯನ್ನು ಮೆಟ್ಟಿ ನಿಂತರು. ಧಾರವಾಡದ ಕಿರಾಣಾ ಸಂಗೀತ ಅಕಾಡೆಮಿ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಆಯೋಜಿಸಿದ್ದ ಸ್ವರ ಮಹಾಯಾಗದಲ್ಲಿ ನೂರಾರು ಜನ ಸಂಗೀತ ರಸಿಕರು ಚಪ್ಪಾಳೆ ತಟ್ಟುವ ಮೂಲಕ ಹೊಸ ದಾಖಲೆ ನಿರ್ಮಿಸಿದ ಪ್ರಸನ್ನ ಗುಡಿಯವರಿಗೆ ಶುಭಾಶಯ ತಿಳಿಸಿದರು. ಗಿನ್ನೆಸ್ ದಾಖಲೆ ನಿರ್ಮಿಸಿದ ನಂತರ ಅವರ ತಂದೆ ಮತ್ತು ತಾಯಿಗೆ ನಮಸ್ಕರಿಸಿದರು. ಹಿಂದಿನ ದಿನ ಬೆಳಿಗ್ಗೆ 9ಕ್ಕೆ ಗಾಯನ ಆರಂಭಿಸಿದ ಪ್ರಸನ್ನ, ಈದಿನ ಬೆಳಿಗ್ಗೆ 11.40ಕ್ಕೆ ಹಾಡುವುದನ್ನು ನಿಲ್ಲಿಸಿದರು. ಆರಂಭದಲ್ಲಿದ್ದ ಉತ್ಸಾಹ, ಧ್ವನಿ ದಾಖಲೆ ನಿರ್ಮಿಸುವವರೆಗೂ ಒಂದೇ ತೆರನಾಗಿ ಇತ್ತು. ಯಾವುದೇ ಸಂದರ್ಭದಲ್ಲೂ ಅವರು ಬಳಲಿದಂತೆ ಕಂಡುಬರಲಿಲ್ಲ.

2007: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈ ಚಿನಿವಾರ ಪೇಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯು ರೂ 105 ರಷ್ಟು ಏರಿಕೆಯಾಗುವ ಮೂಲಕ ಸಾರ್ವಕಾಲಿಕ ದಾಖಲೆ ನಿರ್ಮಿಸಿತು. ದಿನದ ವಹಿವಾಟು ಅಂತ್ಯಗೊಂಡಾಗ ಪ್ರತಿ 10 ಗ್ರಾಂ ಚಿನ್ನದ ದರವು ರೂ 10715ಕ್ಕೆ ತಲುಪಿತು. ಈ ಹಿಂದೆ ನವೆಂಬರ್ 26, 2007ರಲ್ಲಿ ಪ್ರತಿ 10ಗ್ರಾಂ ಚಿನ್ನದ ಬೆಲೆಯು ರೂ 10695 ರಷ್ಟಾಗಿತ್ತು. ಉದ್ಯಮ ಬೇಡಿಕೆಗೆ ಸ್ಪಂದಿಸಿದ ಬೆಳ್ಳಿಯಲ್ಲೂ ಸಹ ದರ ಏರಿಕೆಯಾಗಿ, ಪ್ರತಿ ಕೆಜಿಗೆ ರೂ 19455ಕ್ಕೆ ತಲುಪಿತು.

2007: ಹಿಮಾಚಲ ಪ್ರದೇಶದ 16ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಿಜೆಪಿಯ ಪ್ರೇಮ್ ಕುಮಾರ್ ಧುಮಾಲ್ ಅವರಿಗೆ ರಾಜ್ಯಪಾಲ ವಿ.ಎಸ್. ಕೊಕ್ಜೆ ಆಹ್ವಾನ ನೀಡಿದರು. ಅದಕ್ಕೆ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಬಿಜೆಪಿ ಶಾಸಕಾಂಗ ನಾಯಕರಾಗಿ ಆಯ್ಕೆಯಾದರು.

2007: ಉತ್ತರ ಪ್ರದೇಶದ ಮೂರು ನ್ಯಾಯಾಲಯಗಳಲ್ಲ್ಲಿ ನವೆಂಬರ್ 23ರಂದು ಸರಣಿ ಬಾಂಬ್ ಸ್ಫೋಟಿಸಿದ ಶಂಕಿತ ಹೂಜಿ ಉಗ್ರನೊಬ್ಬನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಯಿತು. ಮುಖ್ತರ್ ಆಲಿಯಾಸ್ ರಾಜು ಬಂಧಿತ ಉಗ್ರ. ಈತ ವಾರಣಾಸಿ ಜಿಲ್ಲಾ ನ್ಯಾಯಾಲಯಗಳಲ್ಲಿ ನಡೆದ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದ್ದು, ಘಟನೆಯಲ್ಲಿ 9 ಮಂದಿ ಮೃತರಾಗಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

2007: ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಆಡಮ್ ಗಿಲ್ ಕ್ರಿಸ್ಟ್ ಅವರು ಮೆಲ್ಬೋರ್ನಿನಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ನೂತನ ವಿಕ್ರಮ ಸಾಧಿಸಿದರು. ಗಿಲ್ ಕ್ರಿಸ್ಟ್ ಅವರು ಅತಿ ಹೆಚ್ಚು ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಎಂಬ ಖ್ಯಾತಿಗೆ ಪಾತ್ರರಾದರು. ಅವರು ಇಯಾನ್ ಹೀಲಿ (395) ಅವರ ದಾಖಲೆಯನ್ನು ಅಳಿಸಿ ಹಾಕಿದರು. ಪಂದ್ಯದ ನಾಲ್ಕನೇ ದಿನ ಬ್ರೆಟ್ ಲೀ ಬೌಲಿಂಗಿನಲ್ಲಿ ವಾಸೀಂ ಜಾಫರ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಗಿಲಿ ಈ ಗೌರವ ಪಡೆದರು. ಅವರು ಈ ಪಂದ್ಯದಲ್ಲಿ ಒಟ್ಟು ಎಂಟು ಕ್ಯಾಚ್ ಪಡೆದರು. ಇದರೊಂದಿಗೆ ಅವರು ಒಟ್ಟು ಬಾರಿ 399 ಮಂದಿ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾದರು. ಗಿಲಿ ಆಡಿರುವ ಟೆಸ್ಟ್ ಸಂಖ್ಯೆ 93. ಈ ವಿಭಾಗದಲ್ಲಿ ವಿಶ್ವ ದಾಖಲೆಯು ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಮಾರ್ಕ್ ಬೌಷರ್ ಅವರ ಹೆಸರಿನಲ್ಲಿ ಇದೆ. ಅವರು ಒಟ್ಟು 406 ಸಲ ಬ್ಯಾಟ್ಸ್ ಮನ್ನರು ಔಟ್ ಆಗಲು ಕಾರಣರಾಗಿದ್ದರು.

2007: ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ವಿಜಯಾ ಬ್ಯಾಂಕಿನ 1000ನೇ ಶಾಖೆಯನ್ನು, ಬನ್ನೇರುಘಟ್ಟ ರಸ್ತೆಯ ಮುಲ್ಕಿ ಸುಂದರ ರಾಮಶೆಟ್ಟಿ ನಗರದಲ್ಲಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಉದ್ಘಾಟಿಸಿದರು.

2007: ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಬಿಡಿಸಲಾರದ ಬಂಧ ಇರುವುದನ್ನು ಸಂಕೇತಿಸುವ ಹೊಸ ಬ್ರ್ಯಾಂಡ್ ಲಾಂಛನದೊಂದಿಗೆ ಕೆನರಾ ಬ್ಯಾಂಕ್ ಕಂಗೊಳಿಸಿತು. ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರು ಹೊಸ ಲಾಂಛನವನ್ನು ಅನಾವರಣಗೊಳಿಸಿದರು.

2007: ಹೊಸಪೇಟೆಯ ಬಿ.ಎಸ್. ಆನಂದ್ ಸಿಂಗ್ ಮತ್ತು ಕುಟುಂಬದವರು ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಮರಿಯಾನೆ `ಯಶಸ್ವಿ'ಯನ್ನು ಕೊಡುಗೆಯಾಗಿ ನೀಡಿದರು. ಧಾರ್ಮಿಕ ವಿಧಿವಿಧಾನ ಹಾಗೂ ದಾಖಲೆ ಹಸ್ತಾಂತರಿಸುವ ಮೂಲಕ ಯಶಸ್ವಿಯನ್ನು ವಿಧ್ಯುಕ್ತವಾಗಿ ದೇವಳಕ್ಕೆ ಅರ್ಪಿಸಲಾಯಿತು.

2007: ಮೈಸೂರಿನ ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಮತ್ತು ದೇಜಗೌ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಜನ್ಮ ದಿನಾಚರಣೆಯಲ್ಲಿ ವಿಮರ್ಶಕ ಡಾ.ನರಹಳ್ಳಿ ಬಾಲ ಸುಬ್ರಹ್ಮಣ್ಯ ಅವರಿಗೆ `ವಿಶ್ವಮಾನವ ಪ್ರಶಸ್ತಿ', ಪತ್ರಿಕೋದ್ಯಮಿ ರಾಜಶೇಖರ ಕೋಟಿ ಅವರಿಗೆ `ಎಚ್. ಕೆ. ವೀರಣ್ಣಗೌಡ ಪತ್ರಿಕೋದ್ಯಮ ಪ್ರಶಸ್ತಿ' ಮತ್ತು ಹೃದ್ರೋಗ ತಜ್ಞೆ ಡಾ.ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ `ಸಾವಿತ್ರಮ್ಮ ದೇಜಗೌ ಪ್ರಶಸ್ತಿ'ಯನ್ನು ಲೋಕಸಭಾ ಸದಸ್ಯ ಎಸ್. ಬಂಗಾರಪ್ಪ ಅವರು ಪ್ರದಾನ ಮಾಡಿದರು.

2007: ದಕ್ಷಿಣ ಏಷ್ಯಾದಲ್ಲಿಯೇ ಮೊತ್ತ ಮೊದಲನೆಯದಾದ, 60 ಸಾವಿರ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲ (ಎಲ್ ಪಿ ಜಿ) ಸಂಗ್ರಹಿಸುವ ವಿಶಿಷ್ಟ ಸುರಕ್ಷಿತ ನೆಲದಾಳದ ಸುರಂಗ ಕಳೆದ ವಾರ ವಿಶಾಕಪಟ್ಟಣದಲ್ಲಿ ಕಾರ್ಯಾರಂಭ ಮಾಡಿತು ಎಂದು ವರುಣ್ ಶಿಪ್ಪಿಂಗ್ ಸಂಸ್ಥೆ ಪ್ರಕಟಿಸಿತು. ಈ ಸಂಸ್ಥೆಗೆ ಸೇರಿರುವ 40 ಸಾವಿರ ಮೆಟ್ರಿಕ್ ಟನ್ನುಗಳಷ್ಟು ಎಲ್ ಪಿ ಜಿ ಸಾಗಿಸುವ ಮಹರ್ಷಿ ಭಾರದ್ವಾಜ್ ನೌಕೆಯಿಂದ 39,200 ಮೆಟ್ರಿಕ್ ಟನ್ನುಗಳಷ್ಟು ದ್ರವರೂಪದ ಪೆಟ್ರೋಲಿಯಂ ಅನಿಲವನ್ನು ಮೊದಲ ಬಾರಿಗೆ ಈ ಸುರಂಗದಲ್ಲಿ ತುಂಬಲಾಯಿತು ಎಂದು ಸಂಸ್ಥೆ ಹೇಳಿತು. ಇಷ್ಟು ಭಾರಿ ಪ್ರಮಾಣದ ಎಲ್ ಪಿ ಜಿ ಹೊತ್ತ ನೌಕೆಯು ದೇಶಕ್ಕೆ ಆಗಮಿಸಿದ್ದು ಕೂಡಾ ಕೂಡ ಇದೇ ಮೊದಲು. ಫ್ರಾನ್ಸಿನ ತೈಲ ದೈತ್ಯ ಸಂಸ್ಥೆ ಟೋಟಲ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ನ (ಎಚ್ ಪಿ ಸಿ ಎಲ್) ಸಹಯೋಗದ ದಕ್ಷಿಣ ಏಷ್ಯಾ ಎಲ್ ಪಿ ಜಿ ಕಂಪೆನಿಯು ಈ ಸುರಂಗವನ್ನು ಕೊರೆಯಿತು. ಸಮುದ್ರ ಪಾತಳಿಯಿಂದ 162 ಮೀಟರ್ ಆಳದಲ್ಲಿ ಗಟ್ಟಿ ಬಂಡೆ ಕೊರೆದು ಈ ಸುರಂಗ ನಿರ್ಮಿಸಲಾಯಿತು. ನೈಸರ್ಗಿಕ ಪ್ರಕೋಪ, ವಿಧ್ವಂಸಕ ಕೃತ್ಯ ಮತ್ತು ವೈಮಾನಿಕ ಬಾಂಬ್ ದಾಳಿಯಿಂದಲೂ ಸುರಕ್ಷಿತವಾಗಿರುವಂತೆ ಈ ಸುರಂಗ ನಿರ್ಮಿಸಲಾಗಿದ್ದು, ಇದು ಬೆಂಕಿ ನಿರೋಧಕ ಮತ್ತು ಸೋರಿಕೆ ಮುಕ್ತವಾಗಿದೆ. ವಿಶಾಖಪಟ್ಟಣ ಬಳಿಯ ಲೋವಾ ಗಾರ್ಡನ್ ಎಂಬಲ್ಲಿ ಈ ವಿಶಿಷ್ಟ ಸುರಂಗವು 333 ಕೋಟಿ ರೂ. ವೆಚ್ಚದಲ್ಲಿ ಅಸ್ತಿತ್ವಕ್ಕೆ ಬಂದಿದೆ.

2006: ಕ್ಯಾನ್ಸರ್ ಕುರಿತು ನಡೆಸಿದ ಸಂಶೋಧನೆಗಾಗಿ ಭಾರತೀಯ ಸಂಜಾತ ವಿಜ್ಞಾನಿ ಶಿಲಾದಿತ್ಯ ಸೇನ್ ಗುಪ್ತ ಅವರು ಅಮೆರಿಕದ 41 ಡಾಲರ್ ಮೌಲ್ಯದ `ಇರಾ ಆಫ್ ಹೋಪ್ ಸ್ಕಾಲರ್ ಅವಾರ್ಡ್' ಗೆ ಪಾತ್ರರಾದರು. ಹಾರ್ವರ್ಡ್ ಎಂಐಟಿಯಲ್ಲಿ ವೈದ್ಯಕೀಯ ವಿಭಾಗ ಸಹಾಯಕ ಪ್ರೊಫೆಸರ್ ಆಗಿರುವ ಸೇನ್ ಗುಪ್ತ ಅವರು `ಸ್ತನದ ಕ್ಯಾನ್ಸರ್' ಬಗ್ಗೆ ನಡೆಸಿದ ಸಂಶೋಧನೆಗಾಗಿ ಈ ಪ್ರಶಸ್ತಿಗೆ ಪಾತ್ರರಾದರು.

2006: ವಿಶ್ವಮಾನವ ಸಂಸ್ಥೆಯು ನೀಡುವ ಪ್ರತಿಷ್ಠಿತ `ವಿಶ್ವ ಮಾನವ' ಪ್ರಶಸ್ತಿಯನ್ನು ಆದಿ ಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು..

2006: ಕರ್ನಾಟಕದ ಖ್ಯಾತ ರಂಗಕರ್ಮಿ ಮತ್ತು ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಆರ್. ನಾಗೇಶ್ ಹಾಗೂ ಭರತನಾಟ್ಯ ಕಲಾವಿದೆ ಎಸ್. ನರ್ಮದಾ ಅವರು ಪ್ರತಿಷ್ಠಿತ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರು. ಇದರ ಜತೆಗೆ ತಬಲಾ ವಾದಕ ಕಿಶನ್ ಮಹಾರಾಜ್, ಪಿಟೀಲು ವಿದ್ವಾನ್ ಟಿ.ಎನ್. ಕೃಷ್ಣನ್, ಕಥಕ್ ನರ್ತಕಿ ರೋಹಿಣಿ ಭಾತೆ, ಖ್ಯಾತ ರಂಗಕರ್ಮಿ ಗುರುಶರಣ್ ಸಿಂಗ್ ಅವರನ್ನು `ಅಕಾಡೆಮಿ ರತ್ನ' (ಫೆಲೋ) ಆಗಿ ಆಯ್ಕೆ ಮಾಡಲಾಯಿತು. ಸಂಗೀತ ವಿಭಾಗದಲ್ಲಿ ತಬಲಾ ವಾದಕ ಕುಮಾರ್ ಬೋಸ್, ಹಿಂದೂಸ್ಥಾನಿ ಗಾಯಕ ರಶೀದ್ ಖಾನ್, ಸಿತಾರ್ ವಾದಕ ಶಾಹಿದ್ ಪರ್ವೇಜ್ ಖಾನ್, ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕರಾದ ಡಿ. ಪಶುಪತಿ ಹಾಗೂ ಚೆಂಗಲ್ ಪಟ್ಟು ರಂಗನಾಥನ್, ಕರ್ನಾಟಕ ಶೈಲಿಯ ಚಿತ್ರವೀಣಾ ವಾದಕ ಎನ್. ರವಿಕಿರಣ್, ಮೃದಂಗ ಪಟು ತಿರುವಾರೂರು ಭಕ್ತವತ್ಸಲಂ ಅವರು ಪ್ರಶಸ್ತಿಗೆ ಪಾತ್ರರಾದರು. ನೃತ್ಯ ವಿಭಾಗದಲ್ಲಿ ಕೊಟ್ಟಕ್ಕಲ್ ಚಂದ್ರಶೇಖರನ್ (ಕಥಕ್ಕಳಿ), ಕಲಾ ಮಂಡಲಂ ವಿಮಲಾ ಮೆನನ್ (ಮೋಹಿನಿಯಾಟ್ಟಂ), ಮತ್ತು ಪಶುಮರ್ತಿ ರಟ್ಟಯ್ಯ (ಕೂಚುಪುಡಿ), ನಾಟಕ ವಿಭಾಗದಲ್ಲಿ ಇ. ಜಯಚಂದ್ರ ಸಿಂಗ್ (ನಿರ್ದೇಶನ) ಮತ್ತು ತಮಿಳುನಾಡಿನ ಕೆ. ಅರ್ವಾಮುದ ಚಾರಿಯರ್ (ಹರಿಕಥೆ) ಈ ಗೌರವಕ್ಕೆ ಪಾತ್ರರಾದರು.

2006: ಸತೀಶ್ ಅಲಿಯಾಸ್ ಸುರೇಂದ್ರ ಎಂಬ ಸರಣಿ ಹಂತಕನೊಬ್ಬನನ್ನು ಉತ್ತರ ಪ್ರದೇಶದ ನೋಯಿಡಾ ಪೊಲೀಸರು ಬಂಧಿಸಿ, ಆತ ಕೊಲೆ ಮಾಡಿ ನಾಲೆಯಲ್ಲಿ ಬಿಸಾಡಿದ್ದ ಶವಗಳ ಅಸ್ಥಿ ಪಂಜರಗಳನ್ನು ವಶಪಡಿಸಿಕೊಂಡರು. ಪಾಯಲ್ ಎಂಬ ಬಾಲಕಿಯ ಅಪಹರಣ ಪ್ರಕರಣದ ಸಂಬಂಧ ತನಿಖೆ ನಡೆಸುತ್ತಿದ್ದಾಗ ಈ ಸರಣಿ ಹಂತಕ ಸಿಕ್ಕಿಬಿದ್ದ. ನೋಯಿಡಾ ಸಮೀಪದ ನಿತಾರಿ ಎಂಬ ಗ್ರಾಮದಲ್ಲಿ ಪೊಲೀಸರು ಈತನನ್ನು ಬಂಧಿಸಿದರು. ತಾನು ಈವರೆಗೆ ಆರು ಮಕ್ಕಳನ್ನು ಕೊಲೆ ಮಾಡಿರುವುದಲ್ಲದೆ ಪಾಯಲಳನ್ನು ಕೂಡ ತಾನೇ ಅಪಹರಿಸಿ, ನಂತರ ಕೊಲೆ ಮಾಡಿದ್ದಾಗಿ ವಿಚಾರಣೆ ಸಮಯದಲ್ಲಿ ಆತ ಒಪ್ಪಿಕೊಂಡ. `ಸಿಹಿ ಮತ್ತು ಚಾಕಲೇಟುಗಳನ್ನು ತೋರಿಸಿ, ಮಕ್ಕಳನ್ನು ತನ್ನ ಬಲೆಗೆ ಬೀಳಿಸಿಕೊಳ್ಳುತ್ತಿದ್ದೆ. ನಂತರ ಈ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಅವರನ್ನು ಕೊಂದು ಹಾಕಿ ಶವಗಳನ್ನು ನಾಲೆಗೆ ಎಸೆಯುತ್ತಿದ್ದೆೆ' ಎಂದು ಸುರೇಂದ್ರ ತಾನು ಅನುಸರಿಸುತ್ತಿದ್ದ ತಂತ್ರವನ್ನು ವಿವರಿಸಿದ. ಹಂತಕನು ಮೂಲತಃ ಉತ್ತರಾಂಚಲದ ಅಲ್ಮೋರಾದವನು. ಒಂದೂವರೆ ವರ್ಷದಿಂದ ಈಚೆಗೆ ಈ ಪರಿಸರದಿಂದ 38 ಮಕ್ಕಳು ಕಾಣೆಯಾಗಿದ್ದರು.

2006: ಮೈಸೂರು ವಿಶ್ವವಿದ್ಯಾಲಯವು ಹೊರತಂದಿರುವ ಇಂಗ್ಲಿಷ್-ಕನ್ನಡ ನಿಘಂಟನ್ನು ವೆಬ್ ಸೈಟಿನಲ್ಲಿ ಹಾಕಲು ವಿಶ್ವ ವಿದ್ಯಾಲಯವು ನಿರ್ಧರಿಸಿತು.

2006: ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಭಾರತೀಯ ಸಂಜಾತ ನ್ಯೂಜೆರ್ಸಿಯ ಸಾರಿಗೆ ಆಯುಕ್ತ ಕ್ರಿಸ್ ಕೊಲ್ಲೂರಿ (38) ಅವರು ಅಮೆರಿಕದ ನ್ಯೂಜೆರ್ಸಿ ಪ್ರಾಂತ್ಯದ ರಾಜ್ಯಪಾಲರಾಗಿ (ಗವರ್ನರ್) ಒಂದು ದಿನದ ಮಟ್ಟಿಗೆ ಕಾರ್ಯ ನಿರ್ವಹಿಸಿದರು. ರಾಜ್ಯಪಾಲ ಜಾನ್ ಕೊರಿಜಿನ್ ಹಾಗೂ ಅವರ ನಂತರದ ಅಧಿಕಾರಿಗಳಾದ ಸೆನೆಟ್ ಅಧ್ಯಕ್ಷ ರಿಚರ್ಡ್ ಕೊಡೇ ಮತ್ತು ಸ್ಪೀಕರ್ ಹೋಯಿ ರಾಬರ್ಟ್ ರಜೆಯ ಮೇಲೆ ತೆರಳಿದ್ದರಿಂದ ಕೊಲ್ಲೂರಿ `ಏಕ್ ದಿನ್ ಕಾ ಸುಲ್ತಾನ್' ಆಗಬೇಕಾಯಿತು.

2005: ಅಂತಾರಾಷ್ಟ್ರೀಯ ಬೆಳಕು ತಜ್ಞ ವಿ.ರಾಮಮೂರ್ತಿ ಅವರಿಗೆ ರಾಷ್ಟ್ರೀಯ ನಾಟಕ ಶಾಲೆಯ ಡಾ. ಬಿ.ವಿ. ಕಾರಂತ ಪ್ರಶಸ್ತಿ ಲಭಿಸಿತು. ರಾಮಮೂರ್ತಿ ಅವರು 40 ವರ್ಷಗಳಿಂದ ರಂಗಭೂಮಿಯಲ್ಲಿ ಶ್ರೇಷ್ಠ ಬೆಳಕು ತಜ್ಞ ಹಾಗೂ ನಟರಾಗಿ ದುಡಿದವರು.

2005: ಮುಂಬೈಯ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ (ಟಿ ಐ ಎಫ್ ಆರ್ ಯು) ಪ್ರೊ. ಆರ್. ಪರಿಮಳ ಅವರಿಗೆ ಅಭಿವೃದ್ಧಿಶೀಲ ರಾಷ್ಟ್ರಗಳ ವಿಜ್ಞಾನ ಅಕಾಡೆಮಿ `ತ್ವಾಸ್' ನೀಡುವ ಪ್ರಸಕ್ತ ವರ್ಷದ ಪ್ರಶಸ್ತಿ ಲಭಿಸಿತು. ಇದರೊಂದಿಗೆ `ತ್ವಾಸ್' ನೀಡುವ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದಾಯಿತು. ಗಣಿತ ಮತ್ತು ಭೌತಶಾಸ್ತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ನೀಡಲಾಗುವ ಈ ಪ್ರಶಸ್ತಿಯು 10,000 ಅಮೆರಿಕನ್ ಡಾಲರ್ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

2005: ಅಪರಾಧ ವರದಿಗಾರಿಕೆಯಲ್ಲಿ ವಿಶೇಷ ಛಾಪು ಮೂಡಿಸಿದ್ದ ಹಿರಿಯ ಪತ್ರಕರ್ತ ಕರಣಂ ರಾಜಾರಾವ್ (70) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅನಂತಪುರ ಜಿಲ್ಲೆ ಮಡಕಶಿರಾ ಬಳಿಯ ಫಳಾರಂನಲ್ಲಿ ಜನಿಸಿದ್ದ ರಾಜಾರಾವ್ ಪತ್ರಿಕಾರಂಗದಲ್ಲಿ 'ಕ್ರೈಂ ರಾಜಾರಾವ್' ಎಂದೇ ಹೆಸರು ಪಡೆದಿದ್ದರು. 'ಸಂಯುಕ್ತ ಕರ್ನಾಟಕ' ಪತ್ರಿಕೆ ಮೂಲಕ 1962ರಲ್ಲಿ ಪತ್ರಿಕಾರಂಗಕ್ಕೆ ಕಾಲಿಟ್ಟ ರಾಜಾರಾವ್ 'ವಾಯ್ಸ್ ಆಫ್ ಡೆಕ್ಕನ್', 'ಮುಂಜಾನೆ', 'ಸಂಜೆ ನುಡಿ', 'ಇಂದು' ಪತ್ರಿಕೆಗಳಲ್ಲಿ ಹಾಗೂ ಸಿಟಿ ಕೇಬಲ್ ವಾಹಿನಿಯಲ್ಲಿ ಸೇವೆ ಸಲ್ಲಿಸಿದ್ದರು.

2005: ನವದೆಹಲಿಯಲ್ಲಿ 1984ರಲ್ಲಿ ನಡೆದಿದ್ದ ಸಿಖ್ ವಿರೋಧಿ ಗಲಭೆಗಳ ಸಂತ್ರಸ್ತರಿಗೆ ಹೆಚ್ಚುವರಿ ಎಕ್ಸ್ ಗ್ರೇಷಿಯಾ ಸೇರಿದಂತೆ ಪರಿಹಾರ ಧನ ಮತ್ತು ಪುನರ್ ವಸತಿಗೆ 715 ಕೋಟಿ ರೂಪಾಯಿಗಳ ನೆರವನ್ನು ಕೇಂದ್ರ ಸರ್ಕಾರವು ಘೋಷಿಸಿತು.

1997: ನಿಗೂಢ `ಕೋಳಿಜ್ವರ' ತಡೆಯುವ ಸಲುವಾಗಿ ಹಾಂಗ್ ಕಾಂಗ್ 14 ಲಕ್ಷ ಕೋಳಿಗಳನ್ನು ಕೊಲ್ಲುವ ಕಾರ್ಯ ಆರಂಭಿಸಿತು. `ಕೋಳಿ ಜ್ವರ' ಇಲ್ಲಿ ನಾಲ್ಕು ಮಂದಿಯನ್ನು ಬಲಿತೆಗೆದುಕೊಂಡಿತ್ತು.

1986: ಮಾಜಿ ಬ್ರಿಟಿಷ್ ಪ್ರಧಾನಿ ಹರೋಲ್ಡ್ ಮ್ಯಾಕ್ ಮಿಲನ್ ತಮ್ಮ 92ನೇ ವಯಸ್ಸಿನಲ್ಲಿ ಇಂಗ್ಲೆಂಡಿನ ಸಸೆಕ್ನಲ್ಲಿ ನಿಧನರಾದರು.

1972: `ಲೈಫ್' ಮ್ಯಾಗಜಿನ್ 36 ವರ್ಷಗಳ ಪ್ರಕಟಣೆಯ ಬಳಿಕ ಮುಚ್ಚಿತು.

1944: `ಇಂಡಿಯಾ ಟುಡೆ' ಮ್ಯಾಗಜಿನ್ ಸ್ಥಾಪಕ ಅರುಣ್ ಪುರೀ ಹುಟ್ಟಿದ ದಿನ.

1942: ಚಿತ್ರನಟ ರಾಜೇಶ್ ಖನ್ನಾ ಹುಟ್ಟಿದ ದಿನ. (ಅವರ ಪುತ್ರಿ ಟ್ವಿಂಕಲ್ ಹುಟ್ಟಿದ್ದು ಕೂಡಾ ಇದೇ ತಾರೀಕಿನಂದು!)

1939: ಖ್ಯಾತ ಗಾಯಕ ಸಿ. ಅಶ್ವತ್ಥ್ ಜನನ.

1904: ರಾಷ್ಟ್ರಕವಿ ಕುವೆಂಪು (ಕೆ.ವಿ. ಪುಟ್ಟಪ್ಪ) (29-12-1904ರಿಂದ 10-11-1994) ಅವರು ವೆಂಕಟಪ್ಪ- ಹೇಮಾವತಮ್ಮ ದಂಪತಿಯ ಮಗನಾಗಿ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು.

1899: ಸಾಹಿತಿ ಡಿ.ಕೆ. ಭಾರದ್ವಾಜ್ ಜನನ.

1896: ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಜನನ.

1895: ಲೆಫ್ಟಿನೆಂಟ್ ಆರ್ಕಿಬಾಲ್ಡ್ ಬ್ಲೇರ್ ಮತ್ತು ಲೆಫ್ಟಿನೆಂಟ್ ಆರ್. ಎಚ್. ಕೊಲ್ ಬ್ರೂಕ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಅಧ್ಯಯನಕ್ಕಾಗಿ ಭಾರತದಿಂದ ಹೊರಟರು. ಬ್ಲೇರ್ ಗೌರವಾರ್ಥ ಒಂದು ದ್ವೀಪಕ್ಕೆ `ಪೋರ್ಟ್ ಬ್ಲೇರ್' ಹೆಸರನ್ನು ಇಡಲಾಯಿತು.

1844: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊತ್ತ ಮೊದಲ ಅಧ್ಯಕ್ಷ ವುಮೇಶ್ ಚಂದ್ರ ಬ್ಯಾನರ್ಜಿ 1844-1906) ಹುಟ್ಟಿದ ದಿನ.

1809: ವಿಲಿಯಂ ಎವರ್ಟ್ ಗ್ಲಾಡ್ ಸ್ಟೋನ್ (1809-1898) ಹುಟ್ಟಿದ ದಿನ. ಬ್ರಿಟಿಷ್ ರಾಜಕಾರಣಿಯಾದ ಇವರು ನಾಲ್ಕು ಬಾರಿ ಗ್ರೇಟ್ ಬ್ರಿಟನ್ನಿನ ಪ್ರಧಾನಿಯಾಗಿದ್ದರು.

1808: ಅಮೆರಿಕಾದ 17ನೇ ಅಧ್ಯಕ್ಷ ಆಂಡ್ರ್ಯೂ ಜಾನ್ಸನ್ (1808-1875) ಹುಟ್ಟಿದ ದಿನ. ದೋಷಾರೋಪಕ್ಕೆ ಗುರಿಯಾದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷರು ಇವರು.

No comments:

Post a Comment