ನಾನು ಮೆಚ್ಚಿದ ವಾಟ್ಸಪ್

Tuesday, December 11, 2018

ಇಂದಿನ ಇತಿಹಾಸ History Today ಡಿಸೆಂಬರ್ 11

ಇಂದಿನ ಇತಿಹಾಸ History Today ಡಿಸೆಂಬರ್  11
2018: ನವದೆಹಲಿ: ೨೦೧೮ರ ಮಹಾಚುನಾವಣೆಗೆ ದಿಕ್ಸೂಚಿ ಎಂಬುದಾಗಿ ಪರಿಗಣಿಸಲಾಗಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇದೇ ಮೊತ್ತ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷಾಧ್ಯಕ್ಷ ಅಮಿತ್ ಶಾ ಜೋಡಿ ನೇತೃತ್ವದ ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಜಯಯಾತ್ರೆಗೆ ತಡೆ ಬಿದ್ದು, ಪಕ್ಷಕ್ಕೆ ಮರ್ಮಾಘಾತವಾಯಿತು. ಆಡಳಿತ ವಿರೋಧಿ ಅಲೆಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತತ್ತರಿಸಿದರೆ,  ತೆಲಂಗಾಣದ ಟಿಆರ್ ಎಸ್ ಮಾತ್ರ ಆಡಳಿತ ವಿರೋಧಿ ಅಲೆಯಿಂದ ಪಾರಾಯಿತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಈ ಮೂರು ರಾಜ್ಯಗಳನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತುಕೊಳ್ಳಲು ತೀವ್ರ ಹಣಾಹಣಿ ನಡೆಸಿದ ಕಾಂಗ್ರೆಸ್, ಛತ್ತೀಸ್ ಗಢದಲ್ಲಿ ಬಹುಮತ ಸಾಧಿಸಿತು.  ಮುಖ್ಯಮಂತ್ರಿ ರಮಣ್ ಸಿಂಗ್ ಸೋಲೊಪ್ಪಿಕೊಂಡು ಮುಖ್ಯಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಾಜಸ್ಥಾನ ಮತ್ತು ಮಧಪ್ರದೇಶದಲ್ಲಿ ದೊಡ್ಡ ಪಕ್ಷವಾಗಿ ಮೂಡಿದ ಕಾಂಗ್ರೆಸ್ ಇತರ ಪಕ್ಷಗಳ ಬೆಂಬಲದೊಂದಿಗೆ ಅಧಿಕಾರದ ಸನಿಹಕ್ಕೆ ಸರಿಯಿತು. ಲೋಕಸಭಾ ಚುನಾವಣೆಗೆ ಮುನ್ನ ವಿಪಕ್ಷ ಮೈತ್ರಿ ಮಾಡಿ ಕೊಂಡು ತೆಲುಗುದೇಶಂ ಜೊತೆಗೆ ’ಪ್ರಜಾಕೂಟಮಿ’ ಸ್ಥಾಪಿಸಿಕೊಂಡಿದ್ದ ಕಾಂಗ್ರೆಸ್ ತೆಲಂಗಾಣದಲ್ಲಿ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲುಗು ರಾಷ್ಟ್ರ ಸಮಿತಿ (ಟಿಆರ್ ಎಸ್) ಎದುರು ದಯನೀಯ ಸೋಲು ಅನುಭವಿಸಿದರೆ,  ಮಿಜೋರಾಂನಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡು ಮುಖಭಂಗಕ್ಕೆ ಒಳಗಾಯಿತು. ಮಿಜೋರಾಂನಲ್ಲಿ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ ಎಫ್) ದಶಕದ ಬಳಿಕ ಬಹುಮತ ಗಳಿಸಿ ಸರ್ಕಾರ ರಚನೆಯತ್ತ ಅಡಿ ಇಟ್ಟಿತು.

2018: ನವದೆಹಲಿ: ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಸಮಿತಿಯ ಅರೆ-ಕಾಲಿಕ ಸದಸ್ಯರಾಗಿದ್ದ (ಇಎಸಿ-ಪಿಎಂ) ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ಅವರು ಡಿಸೆಂಬರ್ ೧ರಿಂದ ಅನ್ವಯವಾಗುವಂತೆ ತಮ್ಮ ಅರೆಕಾಲಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಭಲ್ಲಾ ರಾಜೀನಾಮೆಯನ್ನು ಪ್ರಧಾನಿಯವರು ಅಂಗೀಕರಿಸಿದರು.  ತಾವು ಬೇರೊಂದು ಸಂಸ್ಥೆಯನ್ನು ಸೇರುತ್ತಿರುವುದಾಗಿ ಭಲ್ಲಾ ಅವರು ತಮ್ಮ ರಾಜೀನಾಮೆ ಕೋರಿಕೆಯಲ್ಲಿ ತಿಳಿಸಿದರು. ೨೦೧೯ರ ಚುನಾವಣಾ ಭವಿಷ್ಯ ಕುರಿತ ತಮ್ಮ ಲೇಖನವನ್ನು ತಾವು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಕಾಣಿಕೆ ಸಂಪಾದಕ ಹಾಗೂ ನೆಟ್ ವರ್ಕ್ ೧೮ ಸಮೂಹದ ಸಮಾಲೋಚಕರಾಗಿ ಬರೆದಿರುವುದಾಗಿ ಭಲ್ಲಾ ಅವರು ಟ್ವೀಟ್ ಮಾಡಿದರು. ತಾವು ಇಎಸಿ-ಪಿಎಂ ಅರೆಕಾಲಿಕ ಸದಸ್ಯತ್ವಕ್ಕೆ ಡಿಸೆಂಬರ್ ೧ರಂದು ರಾಜೀನಾಮೆ ಸಲ್ಲಿಸಿರುವುದಾಗಿಯೂ ಅವರು ಟ್ವೀಟಿನಲ್ಲಿ ತಿಳಿಸಿದರು.


2018: ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಯಿತು. ಸಂಸತ್ತಿನ ಅಗಲಿದ ಹಾಲಿ ಮತ್ತು ಮಾಜಿ ಸದಸ್ಯರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ, ಸಚಿವರಾಗಿದ್ದ ಅನಂತ ಕುಮಾರ್ ಸೇರಿದಂತೆ ವಿವಿಧ ಗಣ್ಯರಿಗೆ  ಸದನ ತನ್ನ ಶ್ರದ್ಧಾಂಜಲಿಯನ್ನು ಸಲ್ಲಿಸಿತು. ಭೋಲಾ ಸಿಂಗ್, ಎಂ. ಐ. ಶಾಣವಸ್, ಮೊಹಮ್ಮದ್ ಅಸ್ರಾರ್‍ವುಲ್ ಹಖ್, ಆರ್.ಕೆ. ದೊರೇಂದ್ರ ಸಿಂಗ್, ಕರ್ಮಾ ತೊಪ್ಡೆನ್, ಕುಲದೀಪ್ ನಯ್ಯರ್, ನಂದಮೂರಿ ಹರಿಕೃಷ್ಣ, ದರ್ಶನ್ ಸಿಂಗ್ ಯಾದವ್, ರತ್ನಾಕರ ಪಾಂಡೆ, ಸತ್ಯ ಪ್ರಕಾಶ ಮಾಳವೀಯ, ರಾಮ ದೇವ ಭಂಡಾರಿ, ಮಾಲತಿ ಶರ್ಮ, ನಾರಾಯಣ ದತ್ತ ತಿವಾರಿ, ಪಿ.ಕೆ. ಮಹೇಶ್ವರಿ ಮತ್ತು ಬೈಷ್ಣಬ್ ಪರಿಡ ಅವರಿಗೂ ಸದನ ತನ್ನ ಭಾಷ್ಪಾಂಜಲಿಯನ್ನು ಸಲ್ಲಿಸಿತು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಮತ್ತು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಅಟಲ್ ಬಿಹಾರಿ ಅವರ ಬದುಕು ಸೇವೆ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ನಾಯ್ಡು ಅವರು ತಿತ್ಲಿ ಮತ್ತು ಗಜ ಚಂಡ ಮಾರುತಗಳಲ್ಲಿ ಪ್ರಾಣ ಕಳೆದುಕೊಂಡವರಿಗೂ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು. ಗಣ್ಯರಿಗೆ ಶ್ರದ್ಧಾಂಜಲಿ ಬಳಿಕ ಸದನವನ್ನು ಮುಂದೂಡಲಾಯಿತು.  ರಾಜಕೀಯ ಪಕ್ಷಗಳಿಗೆ ಪ್ರಧಾನಿ ಮನವಿ: ಇದಕ್ಕೆ ಮುನ್ನ ರಾಜಕೀಯ ಹಿತಾಸಕ್ತಿಗಳಿಗೆ ಬದಲಾಗಿ ಸಾರ್ವಜನಿಕ ಹಿತಾಸಕ್ತಿ ಸಲುವಾಗಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಬಳಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಸಂಸತ್ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಸಂಸತ್ ಭವನದ ಹೊರಗೆ ಮಾತನಾಡಿದ ಪ್ರಧಾನಿ  ಸಾರ್ವಜನಿಕ ಹಿತಕ್ಕೆ ಸಂಬಂಧಿಸಿದ ವಿಷಯಗಳ ಬಗೆಗಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಮತ್ತು ಅವುಗಳನ್ನು ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಶ್ರಮಿಸುವಂತೆ ವಿವಿಧ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದರು. ಅಧಿವೇಶನವು ಧನಾತ್ಮಕವಾಗಿರುವುದು ಮತ್ತು ಸದಸ್ಯರು ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಮುಖ ಹಾಗೂ ತೀಕ್ಷ್ಣ ವಿಷಯಗಳ ಬಗ್ಗೆ ಚರ್ಚಿಸುವರು ಎಂದು ಮೋದಿ ಹಾರೈಸಿದರು. ಚಳಿಗಾಲದ ಅಧಿವೇಶನವು ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕಾರ್ಯ ನಿರ್ವಹಿಸುವುದು ಎಂದು ಅವರು ಹಾರೈಸಿದರು. ’ರಾಜಕೀಯ ಪಕ್ಷಗಳು ಸಾರ್ವಜನಿಕ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುವು ಮತ್ತು ಪಕ್ಷದ ಹಿತಾಸಕ್ತಿಗಳಿಗೆ ಬದಲಾಗಿ ಸಾರ್ವಜನಿಕ ಹಿತಾಸಕ್ತಿಗಳಿಗಾಗಿ ಸದನವನ್ನು ಬಳಸಿಕೊಳ್ಳುವುವು ಎಂಬ ವಿಶ್ವಾಸ ನನಗಿದೆ’ ಎಂದು ಪ್ರಧಾನಿ ನುಡಿದರು. ಸಂಸತ್ತಿನ ಈ ಬಾರಿಯ ಚಳಗಾಲದ ಅಧಿವೇಶನ ಅತ್ಯಂತ ಮಹತ್ವದ ಅಧಿವೇಶನವಾಗಿದ್ದು, ಪ್ರತಿಯೊಬ್ಬರೂ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮೋದಿ ಹೇಳಿದರು. ’ಅಧಿವೇಶನದಲ್ಲಿ ಚರ್ಚೆ, ಸಂಭಾಷಣೆ, ಮಾತುಕತೆ ನಡೆಯಬೇಕು’ ಎಂದು ಅವರು ನುಡಿದರು. 
2017: ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ವಿವಾಹ ಕೊನೆಗೂ ನೆರವೇರಿದ್ದು ಅವರು ಈಗ ದಂಪತಿಯಾಗಿದ್ದಾರೆ ಎಂಬ ಸುದ್ದಿ ಬಂದಿತು. ಸುದ್ದಿ ಬರುತ್ತಿದ್ದಂತೆಯೇ  ವಿಶ್ವಾದ್ಯಂತ ವಿರುಷ್ಕಾ ಅಭಿಮಾನಿಗಳು ಸಂಭ್ರಮಿಸಿದರು. ಇಟಲಿಯ ಟಸ್ಕಾನ್ ನಗರದಲ್ಲಿ ಕೇವಲ ಕುಟುಂಬ ಸದಸ್ಯರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ವಿರಾಟ್ ಮತ್ತು ಅನುಷ್ಕಾ ದಾಂಪತ್ಯ  ಜೀವನಕ್ಕೆ ಅಡಿ ಇಟ್ಟರು ಎಂದು ಸುದ್ದಿ ಮೂಲಗಳು ತಿಳಿಸಿದವು. ಬಾಲಿವುಡ್ ನಟಿ ಮತ್ತು ಭಾರತೀಯ ಕ್ರಿಕೆಟ್ ತಂಡದ ನಾಯಕನ ಮದುವೆ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸೆಲೆಬ್ರಿಟ್ ಗಾಸಿಪ್ ಗಳು ಜೋರಾಗಿಯೇ ಹರಿದಾಡುತ್ತಿದ್ದವು. ಆದರೆ ಕ್ರಿಕೆಟ್ ಮತ್ತು ಬಾಲಿವುಡ್ ಉದ್ಯಮ ಈ ಮದುವೆ ಬಗ್ಗೆ ಸಂಪೂರ್ಣ ಮೌನವಾಗಿದ್ದವು.  ಈಬಾರಿ ಉಭಯ ಕುಟುಂಬಗಳು ಒಂದೇ ಗುರಿಯತ್ತ ಪಯಣ ಹೊರಟದ್ದು  ಗಾಸಿಪ್ ಗಳ ತೂಕವನ್ನು ಹೆಚ್ಚಿಸಿತ್ತು.  ನಾಲ್ಕು ವರ್ಷಗಳ ರೊಮಾನ್ಸ್ ಬಳಿಕ ಟಸ್ಕಾನ್ ಮದುವೆ ನಡೆದಿದೆ. ಪಾಪರಾಜಿಗಳ ಕಣ್ತಪ್ಪಿಸುವ ಸಲುವಾಗಿ ದೂರದ ಊರಲ್ಲಿ ಮದುವೆ ನಡೆದಿದೆ ಎಂದು ಮೂಲಗಳು ಹೇಳಿದವು. ಇಟಲಿಯ ಟಸ್ಕನಿ  ಎಂಬ ೮೦೦ ವರ್ಷಗಳಷ್ಟು ಹಳೆಯ ಗ್ರಾಮದ ಬೋರ್ಗೊ ಫಿನೋಸ್ಚಿಎಟೊ ಎಂಬ ಸ್ಥಳದಲ್ಲಿ ಮದುವೆ ನಡೆದಿದೆ. ಮದುವೆ ಸಲುವಾಗಿಯೇ ಇರುವ ಈ ಸ್ಥಳ ೬ ಎಕರೆ ವಿಸ್ತೀರ್ಣದ ಬೆಟ್ಟ ಪ್ರದೇಶದಲ್ಲಿ ಇದ್ದು ಬೋರ್ಗೊ ಎಂಬ ಸುಂದರ ಮ್ಯಾನರ್ ಹೌಸನ್ನು ಮದುವೆಗಾಗಿಯೇ ಬಳಸಲಾಗುತ್ತದೆ. ೨೨ ಬೆಡ್ ರೂಂಗಳು ಇರುವ ಈ ಕಟ್ಟಡದಲ್ಲಿ ೪೪  ಅತಿಥಿಗಳು ಮಾತ್ರವೇ ಇರಬಹುದು ಎಂದು ಮೂಲಗಳು ತಿಳಿಸಿದವು.

2017: ನವದೆಹಲಿ: ಮಾಜಿ ಪ್ರಧಾನಿ ಮತ್ತು ಸೇನಾ ಮುಖ್ಯಸ್ಥರು ಸೇರಿದಂತೆ ಪ್ರತಿಯೊಂದು ಸಾಂವಿಧಾನಿಕ ಕಚೇರಿಗೂ ಮಸಿ ಬಳಿಯುವ ಅಪಾಯಕಾರಿ ಪೂರ್ವ ನಿದರ್ಶನವನ್ನು ಆರಂಭಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಲ್ಲಿ ಕಟು ರಾಜಕೀಯ ದಾಳಿ ನಡೆಸಿದರು. ಮಣಿ ಶಂಕರ ಅಯ್ಯರ್ ಮನೆಯಲ್ಲಿ ಅವರ ಕಾಂಗ್ರೆಸ್ ನಾಯಕರು ರಹಸ್ಯ ಸಭೆ ನಡೆಸಿದ್ದುದಾಗಿ ನರೇಂದ್ರ ಮೋದಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಲಿಖಿತ ಹೇಳಿಕೆಯೊಂದನ್ನು ನೀಡಿ ಪ್ರಧಾನಿಯನ್ನು ಸೌಮ್ಯ ಸ್ವಭಾವದ ಕಾಂಗ್ರೆಸ್ ನಾಯಕ ಸಿಂಗ್ ಅವರು ತರಾಟೆಗೆ ತೆಗೆದುಕೊಂಡರು. ಈ ರಹಸ್ಯ ಸಭೆಯಲ್ಲಿ ಪಾಕಿಸ್ತಾದ ಮಾಜಿ ರಾಯಭಾರಿ ಮತ್ತು ವಿದೇಶಾಂಗ ಸಚಿವರೂ ಪಾಲ್ಗೊಂಡಿದ್ದರು ಎಂದು ಮೋದಿ ಆಪಾದಿಸಿದ್ದರು. ತಮ್ಮ ಭಾಷಣಕ್ಕಾಗಿ ಕ್ಷಮೆ ಯಾಚನೆ ಮಾಡುವಂತೆ ಮೋದಿ ಅವರನ್ನು ಆಗ್ರಹಿಸಿರುವ ಮಾಜಿ ಪ್ರಧಾನಿ, ಗುಜರಾತ್ ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ’ಗುಜರಾತಿನಲ್ಲಿ ಖಚಿತ ಪರಾಭವದ ಭೀತಿಗೆ ಒಳಗಾಗಿರುವ ಪ್ರಧಾನಿ, ಭ್ರಮ ನಿರಸನಗೊಂಡು ನಿರಂತರ ದೂಷಣೆ ಮಾಡುತ್ತಾ, ಸಿಕ್ಕ ಸಿಕ್ಕ ಹುಲ್ಲುಕಡ್ಡಿಯನ್ನೂ ಹಿಡಿದುಕೊಳ್ಳುತ್ತಿದ್ದಾರೆ ಎಂಬುದು ಸರ್ವವಿದಿತ’ ಎಂದು ಹೇಳಿದ ಸಿಂಗ್ ತಮ್ಮ ಸಾಧನೆಯ ಪೂರ್ವ ದಾಖಲೆಯನ್ನು ಮೋದಿ ಸೇರಿದಂತೆ ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ನುಡಿದರು. ’ಐದು ದಶಕಗಳ ನನ್ನ  ಸಾರ್ವಜನಿಕ ಸೇವಾ ಅವಧಿಯ ಸಾಧನೆಯ ಪೂರ್ವ ದಾಖಲೆ ಪ್ರತಿಯೊಬ್ಬನಿಗೂ ಗೊತ್ತಿದೆ. ಮೋದಿ ಸೇರಿದಂತೆ ಯಾರೊಬ್ಬರೂ ತಮ್ಮ ಕಳೆದುಹೋಗುತ್ತಿರುವ ರಾಜಕೀಯ ನೆಲೆ ಗಳಿಸಿಕೊಳ್ಳುವ ಸಲು ಈ ಸಾಧನೆಯ ದಾಖಲೆಯನ್ನು ಪ್ರಶ್ನಿಸಲು ಸಾಧ್ಯವಿಲ್ಲ’ ಎಂದು ಮಾಜಿ ಪ್ರಧಾನಿ ಹೇಳಿದರು. ’ಕಾಂಗ್ರೆಸ್ ಪಕ್ಷಕ್ಕೆ, ಭಯೋತ್ಪಾದನೆ ಜೊತೆಗೆ ಹೋರಾಡುವಲ್ಲಿ ರಾಜಿ ಮಾಡಿಕೊಂಡ ಪೂರ್ವ ದಾಖಲೆಯನ್ನು ಹೊಂದಿರುವ ಪಕ್ಷ ಅಥವಾ ಪ್ರಧಾನಿಯಿಂದ ರಾಷ್ಟ್ರೀಯತೆ ಬಗ್ಗೆ ಪ್ರವಚನದ ಅಗತ್ಯವಿಲ್ಲ’ ಎಂದು ಹೇಳಿದ ಸಿಂಗ್, ಮೋದಿ ಅವರು  ಉಧಂಪುರ ಮತ್ತು ಗುರುದಾಸಪುರ  ಭಯೋತ್ಪಾದಕ ದಾಳಿಗಳ ಬಳಿಕ ೨೦೧೫ರಲ್ಲಿ ಆಹ್ವಾನವಿಲ್ಲದೆಯೇ ಪಾಕಿಸ್ತಾನಕ್ಕೆ ಹೋದದ್ದು ಮತ್ತು ೨೦೧೬ರ ದಾಳಿಯ ತನಿಖೆಗಾಗಿ ಪಠಾಣ್ ಕೋಟ್ ವಾಯುನೆಲೆಗೆ ಭೇಟಿ ನೀಡುವಂತೆ ಐಎಸ್ ಐಗೆ ಆಹ್ವಾನ ನೀಡಿದ್ದನ್ನು ನೆನಪಿಸಿದರು.  ಮೋದಿ ಅವರು ಭಾನುವಾರ ಹಿರಿಯ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಮತ್ತು ಭಾರತದಲ್ಲಿನ ಪಾಕಿಸ್ತಾನದ ಹೈಕಮೀಷನರ್ ಜೊತೆಗೆ ಮಣಿ ಶಂಕರ ಅಯ್ಯರ್ ನಿವಾಸದಲ್ಲಿ ತಮ್ಮ ’ನೀಚ’ ಹೇಳಿಕೆ ನೀಡುವುದಕ್ಕೆ ಒಂದು ದಿನ ಮೊದಲು ರಹಸ್ಯ ಸಭೆ ನಡೆಸಿದ್ದರು ಎಂದು ಆಪಾದಿಸಿದ್ದರು. ’ಮಣಿ ಶಂಕರ ಅಯ್ಯರ್ ಅವರ ಮನೆಯಲ್ಲಿ ನಡೆದ ಸಭೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಈ ಸಭೆಯಲ್ಲಿ ಪಾಕಿಸ್ತಾನದ ಹೈಕಮೀಷನರ್, ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವರು, ಭಾರತದ ಮಾಜಿ ಉಪರಾಷ್ಟ್ರಪತಿ (ಹಮೀದ್ ಅನ್ಸಾರಿ) ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪಾಲ್ಗೊಂಡಿದ್ದರು. ಸಭೆ ಸುಮಾರು ೩ ಗಂಟೆ ಕಾಲ ನಡೆದಿತ್ತು’ ಎಂದು ಮೋದಿ ಹೇಳಿದ್ದರು. ಮೋದಿ ಅಪಾದನೆಗಳನ್ನು ತಿರಸ್ಕರಿಸಿದ ಮನಮೋಹನ್ ಸಿಂಗ್, ತಾವು ಗುಜರಾತ್ ಚುನಾವಣೆಗಳ ಬಗ್ಗೆ ಯಾರೊಂದಿಗೂ ಭೋಜನಕೂಟದಲ್ಲಿ ಮಾತನಾಡಿಲ್ಲ ಎಂದು ಹೇಳಿದರು. ’ಮಾತುಕತೆ ಭಾರತ- ಪಾಕಿಸ್ತಾನ ಬಾಂಧವ್ಯಗಳಿಗೆ ಮಾತ್ರ ಸೀಮಿತವಾಗಿತ್ತು. ಸಭೆಯಲ್ಲಿ ಹಾಜರಿದ್ದ ಯಾರ ವಿರುದ್ಧವೂ ಯಾವುದೇ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆಪಾದನೆ ಮಾಡುವಂತಿಲ್ಲ’ ಎಂದು ಅವರು ನುಡಿದರು. ತಪ್ಪಾಗಿ ಕಲ್ಪಿಸಿಕೊಂಡ ಸಂಶಯ ಪಿಶಾಚಿಗಳತ್ತ ಗಮನ ಕೇಂದ್ರೀಕರಿಸಿಕೊಂಡು ತಮ್ಮ ಶಕ್ತಿಯನ್ನು ವ್ಯಯ ಮಾಡುವ ಬದಲು ತಾವು ಹೊಂದಿರುವ ಉನ್ನತ ಹುದ್ದೆಯ ಮಹತ್ವವನ್ನು ಅರಿತುಕೊಂಡು ಪಕ್ವತೆಯನ್ನು ಪ್ರಧಾನಿ ತೋರುತ್ತಾರೆ ಎಂದು ನಾನು ಪ್ರಾಮಾಣಿಕವಾಗಿ ಹಾರೈಸುತ್ತೇನೆ ಎಂದು ಸಿಂಗ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು.


2017: ನವದೆಹಲಿ: ರಾಹುಲ್ ಗಾಂಧಿ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಸೋಮವಾರ ಅವಿರೋಧ ಆಯ್ಕೆಯಾದರು. ’ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಿದ ೮೯ ನಾಮಪತ್ರಗಳು ಬಂದಿದ್ದವು. ಎಲ್ಲ ನಾಮಪತ್ರಗಳೂ ಸಕ್ರಮವಾಗಿದ್ದವು’ ಎಂದು ಚುನಾವಣಾ ಅಧಿಕಾರಿ ಮುಲ್ಲಪ್ಪಲ್ಲಿ ರಾಮಚಂದ್ರನ್ ಅವರು ಹೇಳಿಕೆಯಲ್ಲಿ ತಿಳಿಸಿದರು. ’ನಾಮಪತ್ರ ಹಿಂತೆಗೆದುಕೊಳ್ಳುವ ದಿನಾಂಕ/ ಸಮಯ ಮುಗಿದಿದೆ. ಕಣದಲ್ಲಿ ಒಬ್ಬರೇ ಒಬ್ಬರು ಅಭ್ಯರ್ಥಿ ಉಳಿದಿದ್ದಾರೆ. ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂವಿಧಾನದ ೧೮ಲ ವಿಧಿಯ ಪ್ರಕಾರ ರಾಹುಲ್ ಗಾಂಧಿ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ನಾನು ಈ ಮೂಲಕ ಘೋಷಿಸುತ್ತೇನೆ’ ಎಂದು ಎಐಸಿಸಿ ಅಧಿಕಾರಿಯ ಹೇಳಿಕೆ ತಿಳಿಸಿತು. ಏಕೈಕ ಅಭ್ಯರ್ಥಿ: ನಾಮಪತ್ರ ಸಲ್ಲಿಕೆಯ ಅಂತಿಮ ದಿನದಂದು ತಮ್ಮ ನಾಮಪತ್ರಗಳನ್ನು ಸಲ್ಲಿಸಿದ ಏಕೈಕ ಅಭ್ಯರ್ಥಿ ರಾಹುಲ್ ಗಾಂಧಿ. ಅವರ ಪರವಾಗಿ ೮೯ ಸೆಟ್ ನಾಮಪತ್ರಗಳನ್ನು ಸಲ್ಲಿಸಲಾಗಿತ್ತು. ತಾಯಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಕ್ಷದ ಉನ್ನತ ಹುದ್ದೆಗೆ ರಾಹುಲ್ ಗಾಂಧಿ ಅವರ ಹೆಸರನ್ನು ಸೂಚಿಸಿದ್ದವರಲ್ಲಿ ಸೇರಿದ್ದರು. ಸೋನಿಯಾ ಗಾಂಧಿ ಅವರು ಕಳೆದ ೧೯ ವರ್ಷಗಳಿಂದ ಪಕ್ಷದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೨೦೦೪ರಲ್ಲಿ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿ ಅವರ ಮುಂದೆ ಪಕ್ಷದ ರಾಜಕೀಯ ಅದೃಷ್ಟವನ್ನು ಬದಲಾಯಿಸಬೇಕಾದ ಮಹತ್ವದ ಸವಾಲು ಇದೆ. ಅವರ ಮುಂದಿನ ತತ್ ಕ್ಷಣದ ಸವಾಲು ಗುಜರಾತ್ ಚುನಾವಣೆ. ಈ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ಏಕೈಕ ನಾಯಕನಾಗಿ ಪಕ್ಷದ ಪರ ಪ್ರಚಾರ ನಡೆಸಿದ್ದರು.


2017: ನ್ಯೂಯಾರ್ಕ್: ಜನ ನಿಬಿಡ ಮ್ಯಾನ್ ಹಟ್ಟನ್ ಪಟ್ಟಣದಲ್ಲಿ ಸ್ಫೋಟ ಸಂಭವಿಸಿದ್ದು, ಹಲವರು ಗಾಯಗೊಂಡರು. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನ್ಯೂಯಾರ್ಕ್  ಸಿಟಿ ಪೊಲೀಸರು ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಟೈಮ್ಸ್ ಚೌಕಕ್ಕೆ ಸಮೀಪದ ಪೋರ್ಟ್ ಅಥಾರಿಟಿ ಟ್ರಾನ್ಸಿಟ್ ಟರ್ಮಿನಲ್ ಬಳಿ ಸ್ಫೋಟ ಸಂಭವಿಸಿದ ಬಳಿಕ ಕನಿಷ್ಠ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ಪೈಪ್ ಬಾಂಬ್ ಮೂಲಕ ಸ್ಫೋಟ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದವು. ಮ್ಯಾನ್ ಹಟ್ಟನ್ ನ ೪೨ನೇ ರಸ್ತೆಯಲ್ಲಿ ಸಂಭವಿಸಿದ ಸ್ಫೋಟದ ಮೂಲ ಗೊತ್ತಾಗಿಲ್ಲ. ಘಟನೆಯ ಬೆನ್ನಲ್ಲೇ ಎ, ಸಿ ಮತ್ತು ಇ ಲೈನ್ ಗಳಿಂದ ಜನರನ್ನು  ತೆರೆವುಗೊಳಿಸಲಾಗಿದೆ. ಪ್ರಾಥಮಿಕ ವರದಿಯಷ್ಟೇ ಬಂದಿದ್ದು ಹೆಚ್ಚಿನ ವಿವರಗಳು ಲಭಿಸಿಲ್ಲ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿತು. ಸ್ಫೋಟ ಘಟನೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಶ್ವೇತಭವನದ ವಕ್ತಾರ ಸರಾಹ್ ಹುಕಾಬಿ ಸ್ಯಾಂಡರ್ಸ್ ಟ್ವಿಟ್ಟರ್ ನಲ್ಲಿ ತಿಳಿಸಿದರು. ಮ್ಯಾನ್ ಹಟ್ಟನ್ ಸಬ್ ವೇ ಪ್ಲಾಟ್ ಫಾರಂನಲ್ಲಿ ಸ್ಫೋಟಕ ಸಾಧನವನ್ನು ಇಟ್ಟಿದ್ದಿರಬಹುದು ಎಂದು ಶಂಕಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ಹೇಳಿದರು.  ಡಿಸೆಂಬರ್  ೧೧ರ ಬೆಳಗ್ಗೆ ೭.೩೦ಕ್ಕೆ ಸ್ಫೋಟ ಸಂಭವಿಸಿತು. ಮುಂಜಾಗರೂಕತಾ ಕ್ರಮವಾಗಿ ಸ್ಫೋಟ ಸಂಭವಿಸಿದ ಸಬ್ ವೇ ಲೈನಿನಲ್ಲಿದ್ದ ಪ್ರಯಾಣಿಕರನ್ನು ತೆರೆವುಗೊಳಿಸಲಾಯಿತು. ಇನ್ನೊಂದು ಸ್ಫೋಟಕ ಇಟ್ಟುಕೊಂಡಿದ್ದನೆಂದು ಶಂಕಿಸಲಾದ ವ್ಯಕ್ತಿಯನ್ನು ಸಬ್ ವೇ ಟನೆಲ್ ನಲ್ಲಿ ಬಂಧಿಸಲಾಯಿತು ಎಂದು ಡಬ್ಲ್ಯೂಪಿಐಎಕ್ಸ್ ಟೆಲಿವಿಷನ್ ವರದಿ ಮಾಡಿತು.


2017: ನವದೆಹಲಿ:  ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುವ ಮೂಲಗಳು ಹಾಗೂ ಭಯೋತ್ಪಾದಕರಿಗೆ ಸಿಗುತ್ತಿರುವ ಮೂಲಸೌಕರ್ಯಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಉಗ್ರ ನಿಗ್ರಹದಲ್ಲಿ ಪರಸ್ಪರ ಸಹಕಾರ ನೀಡಲು ಭಾರತ, ಚೀನಾ ಮತ್ತು ರಷ್ಯಾ ಹೊಸ ಸಂಕಲ್ಪ ತೊಟ್ಟವು.  ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ  ಏರ್ಪಡಿಸಲಾಗಿದ್ದ 15ನೇ ರಷ್ಯಾ-ಭಾರತ-ಚೀನಾ (ಆರ್ಐಸಿ) ತ್ರಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ಸಚಿವರಾದ ಸೆರ್ಗೀ ಲಾವ್ರೊವ್‌ (ರಷ್ಯಾ), ಸುಷ್ಮಾ ಸ್ವರಾಜ್‌ (ಭಾರತ) ಹಾಗೂ ವಾಂಗ್ಯಿ (ಚೀನಾ) ನಿರ್ಧಾರ ಕೈಗೊಂಡರು. ಲಷ್ಕರೆ ತೊಯ್ಬಾದಂತಹ (ಎಲ್ಇಟಿ) ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳಿಂದ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚುತ್ತಿರುವುದಾಗಿ ಭಾರತ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತ್ರಿಪಕ್ಷೀಯ ಸಭೆ ನಿರ್ಧಾರ ತಳೆಯಿತು. ಭಯೋತ್ಪಾದನೆ ಹಾಗೂ ಉಗ್ರಗಾಮಿತ್ವಕ್ಕೆ ತಡೆಯೊಡ್ಡುವುದು ಹಾಗೂ ನಿಗ್ರಹಗೊಳಿಸುವುದು ಪ್ರತಿಯೊಂದು ದೇಶದ ಪ್ರಾಥಮಿಕ ಹಾಗೂ ಪ್ರಮುಖ ಪಾತ್ರ ಹಾಗೂ ಜವಾಬ್ದಾರಿಯಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ವಿವರಿಸಲಾಯಿತು. 


2016: ಬಹರಿಚ್ (ಉತ್ತರ ಪ್ರದೇಶ): ಪ್ರತಿಕೂಲ ಹವಾಮಾನದ ಕಾರಣ ಬಹರಿಚ್ನಲ್ಲಿ ಹೆಲಿಕಾಪ್ಟರ್ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆಯ ಮೂಲಕವೇ ಪರಿವರ್ತನ್ ಸಭೆ ತಮ್ಮ ಭಾಷಣವನ್ನು ಲಖನೌದಿಂದ ಮಾಡಿದ ಘಟನೆ ಈದಿನ  ಘಟಿಸಿತು. ಪರಿವರ್ತನ್ ಸಭೆಯಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ಮೂಲಕ ಪ್ರಧಾನಿ ಬಹರಿಚ್ ಗೆ ಆಗಮಿಸಿದ್ದರು. ಆದರೆ ದಟ್ಟ ಹಿಮ ಕವಿದಿದ್ದ ಕಾರಣ ಹೆಲಿಕಾಪ್ಟರನ್ನು ಕೆಳಕ್ಕೆ ಇಳಿಸಲು ಸಾಧ್ಯವಾಗಲಿಲ್ಲ. ಹೆಲಿಕಾಪ್ಟರ್ ಲಖನೌಗೆ ತೆರಳಿ ಇಳಿಯಿತು. ಆಗ ತತ್ ಕ್ಷಣ ಉಪಾಯ ಹುಡುಕಿದ ಮೋದಿ ದೂರವಾಣಿ ಕರೆಯ ಮೂಲಕವೇ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ‘ಕಾಳಧನಿರನ್ನು ಸರ್ಕಾರ ಬೆಂಬತ್ತಿರುವುದನ್ನು ನೀವು ನೋಡಿರಬಹುದು. ಸರ್ಕಾರವು ಬಡವರನ್ನು ಸಬಲರನ್ನಾಗಿ ಮಾಡಲು ಕಟ್ಟಿಬದ್ಧವಾಗಿದೆ. ಉತ್ತರ ಪ್ರದೇಶದ ಅಭಿವೃದ್ಧಿಗೆ ಬಡತನ ಮತ್ತು ಗೂಂಡಾರಾಜ್ಯವನ್ನು ಕಿತ್ತೊಗೆಯಬೇಕಾದ ಅಗತ್ಯ ಇದೆ ಎಂದು ಪ್ರಧಾನಿ ನುಡಿದರು. ಚುನಾವಣೆಯಲ್ಲಿ ಜನರಿಂದ ತಿರಸ್ಕೃತವಾದ ಪಕ್ಷಗಳೇ ಸಂಸತ್ತು ಕಲಾಪ ಎಸಗದಂತೆ ತಡೆಯುತ್ತಿವೆ. ನೋಟು ರದ್ದತಿಯಿಂದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳಿಗೆ ನೋಟು ನಿಷೇಧದಿಂದ ಅತೀವ ತೊಂದರೆಯಾಗುತ್ತದೆ ಎಂದು ಪ್ರಧಾನಿ ಹೇಳಿದರು. ವಂಚನೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿದವರನ್ನು ಸರ್ಕಾರ ಶಿಕ್ಷಿಸುತ್ತಿದೆ. ಮತ್ತು ಬಡವರ ಬಡವರ ಕಲ್ಯಾಣಕ್ಕಾಗಿ ಯತ್ನಿಸುತ್ತಿದೆ ಎಂದು ಅವರು ನುಡಿದರು. ಇದಕ್ಕೆ ಮುನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಇತರ ನಾಯಕರು ಭಾಷಣ ಮಾಡಿದ್ದರು.
2016: ಮುಂಬೈ: ಮುಂಬೈನ ಅರಣ್ಯ ಪ್ರದೇಶಕ್ಕೆ ಸಮೀಪದ ಗೊರೆಗಾಂವ್ ಆರೆಯ್ಕಾಲೋನಿಯ ಫಿಲ್ಟರ್ ಪಾಡಾ ಪ್ರದೇಶದಲ್ಲಿರಾಬಿನ್ಸನ್ಆರ್‌44’ ಹೆಲಿಕಾಪ್ಟರ್ಈದಿನ ಬೆಳಗ್ಗೆ  ಪತನಗೊಂಡಿ, ಪೈಲೆಟ್ ಮತ್ತು ಒಬ್ಬ ಮಹಿಳೆ ಸಹಿತ  ಇಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡರು.  ಸ್ಥಳೀಯರು ಗಾಯಾಳುಗಳನ್ನು ಸೆವೆನ್ಹಿಲ್ಸ್ಆಸ್ಪತ್ರೆಗೆ ದಾಖಲಿಸಿದರು. ಹೆಲಿಕಾಪ್ಟರ್ನಲ್ಲಿ ಪೈಲೆಟ್‌, ಇಬ್ಬರು ಮಹಿಳಾ ಪ್ರಯಾಣಿಕರು ಸೇರಿದಂತೆ 4 ಜನ ಪ್ರಯಾಣಿಸುತ್ತಿದ್ದರು. ರಾಬಿನ್ಸನ್ಆರ್‌44’ 1992ರಲ್ಲಿ ನಿರ್ಮಿಸಲಾದ ಹೆಲಿಕಾಪ್ಟರ್ಆಗಿದೆ. ಪ್ರಸ್ತುತ ಜಾಯ್ರೈಡ್ಗಾಗಿ ಬಳಸಲಾಗುತ್ತಿತ್ತು. ಹೆಲಿಕಾಪ್ಟರ್ ಪತನಗೊಳ್ಳುತ್ತಿದ್ದಂತೆಯೇ ಭಾರಿ ಬೆಂಕಿ ಕಾಣಿಸಿಕೊಂಡಿತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು ಬೆಂಕಿಯನ್ನು ಆರಿಸಲು ಶ್ರಮಿಸಿದವು.

2016: ಕಲಬುರಗಿ
: ಮಂಡ್ಯ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ
ಬೆಂಗಳೂರಿನ ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾನಾಯ್ಕ ಅವರನ್ನು ಬಂಧಿಸಿದರು. ಕಲಬುರಗಿಯ ಸಿಐಬಿ ಕಾಲೋನಿಯಲ್ಲಿರುವ ನೆಂಟರ ಮನೆಯಲ್ಲಿ ಭೀಮಾನಾಯ್ಕ ಅವರನ್ನು ವಶಕ್ಕೆ ಪಡೆಯಲಾಯಿತು. ಕಾರು ಚಾಲಕ ರಮೇಶ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಭೀಮಾನಾಯ್ಕ್ ಮತ್ತು ಮಹಮದ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಡ್ಯ ಎಸ್ಪಿ ಸಿ.ಎಚ್.ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು. ಮಳವಳ್ಳಿ ಗ್ರಾಮಾಂತರ ಪಿಎಸ್ಐ ರವಿಕುಮಾರ್ ನೇತೃತ್ವದ ತಂಡ ಗುಲಬರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಯಿತು. ರಮೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಭೀಮನಾಯ್ಕ್ ತಪ್ಪಿತಸ್ಥ ಎಂದು ಸಾಕ್ಷಿಗಳು ಸಿಕ್ಕ ನಂತರ ಬಂಧನಕ್ಕೆ ತಂಡ ರಚಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿರುವುದರಿಂದ ಆರೋಪಿಗಳು ಮತ್ತು ಪ್ರಕರಣ ಪಟ್ಟಿಯನ್ನು ಸಿಐಡಿಗೆ ಹಸ್ತಾಂತರಿಸಲಾಗುತ್ತದೆ.


2016: ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ರನ್ಮಳೆ ಸುರಿಸಿದ ನಾಯಕ ವಿರಾಟ್ಕೊಹ್ಲಿ ದ್ವಿ ಶತಕ ಸಿಡಿಸಿ ಸಂಭ್ರಮಿಸಿದರು. ಭಾರತಇಂಗ್ಲೆಂಡ್ವಿರುದ್ಧದ ನಾಲ್ಕನೇ ಟೆಸ್ಟ್ಪಂದ್ಯ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್‌ 400 ರನ್ಗೆ ಆಲೌಟ್ಆಗಿತ್ತು. ಸವಾಲಿನ ಮೊತ್ತವನ್ನು ಬೆನ್ನತ್ತಿದ ಕೊಹ್ಲಿ ಪಡೆ 231 ರನ್ಗಳ ಮುನ್ನಡೆ ಕಾಯ್ದುಕೊಂಡಿತ್ತು. ನಾಲ್ಕನೇ ದಿನದಾಟ ಆರಂಭಿಸಿದ ವಿರಾಟ್ಕೊಹ್ಲಿ 16 ನೇ ಶತಕ ಸಿಡಿಸುವ ಮೂಲಕ ಇಂಗ್ಲೆಂಡ್ವಿರುದ್ಧ  235 ರನ್ಗಳಿಸಿದರು. ಟೆಸ್ಟ್ಕ್ರಿಕೆಟ್ನಲ್ಲಿ ಕೊಹ್ಲಿ ಗಳಿಸಿದ ಗರಿಷ್ಠ ರನ್ಇದಾಗಿದೆ.
2016: ಬೆಂಗಳೂರು: ರಾಜ್ಯ ಅಬಕಾರಿ ಸಚಿವ ಎಚ್.ವೈ. ಮೇಟಿ ಅವರ ಬೆಂಬಲಿಗರೆಂದು
ಹೇಳಿಕೊಂಡ ವ್ಯಕ್ತಿಗಳು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಮಾಹಿತಿ ಹಕ್ಕು (ಆರ್ಟಿಐ) ಕಾರ್ಯಕರ್ತ ರಾಜಶೇಖರ್ ಎಂಬವರು ಆಪಾದಿಸಿದರು. ನಿಮ್ಮ ಬಳಿ ಇರುವ ಸಚಿವ ಮೇಟಿ ಅವರಿಗೆ ಸಂಬಂಧಿಸಿದ ಅಶ್ಲೀಲ ದೃಶ್ಯಗಳ ವಿಡಿಯೋ ಒಂದನ್ನು ತತ್ ಕ್ಷಣ ತಮಗೆ ಹಿಂತಿರುಗಿಸಬೇಕು. ಇಲ್ಲದೇ ಇದ್ದಲ್ಲಿ ನಿಮ್ಮ ಕುಟುಂಬಕ್ಕೆ ಅಪಾಯವಾಗಲಿದೆ ಎಂದು ಆಗಂತುಕರು ತಮಗೆ ಬೆದರಿಕೆ ಹಾಕಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ದೂರಿದರು. ನೆರವು ಕೇಳಿ ತಮ್ಮ ಬಳಿಗೆ ಬಂದ ಯುವತಿಯೊಬ್ಬಳನ್ನು ಸಚಿವರು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆಪಾದಿಸಲಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಹಿರಂಗ ಪಡಿಸಬಾರದು, ತಮಗೆ ಒಪ್ಪಿಸಬೇಕು ಎಂದು ಅವರು ಬೆದರಿಕೆ ಹಾಕಿದರು ಎಂದು ಹೇಳಲಾಯಿತು.. ಸಂಬಂಧ ರಾಜಶೇಖರ್ ಅವರು ಬಳ್ಳಾರಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ಸಚಿವ ಮೇಟಿ ಅವರು ರಾಜಶೇಖರ್ ಬಗೆಗಾಗಲೀ ಅವರು ಹೇಳಿದ ಮಹಿಳೆ ಬಗೆಗಾಗಲೀ, ತಮ್ಮ ಬೆಂಬಲಿಗರು ಎಂದು ಹೇಳಿಕೊಂಡ ವ್ಯಕ್ತಿಗಳ ಬಗೆಗಾಗಲೀ ತಮಗೆ ಏನೂ ಗೊತ್ತಿಲ್ಲ,ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಮೂಲಗಳು ತಿಳಿಸಿದವು.
2016: ಕೋಲ್ಕತ: ಕಳವು ಆರೋಪ ಪ್ರಕರಣದಲ್ಲಿ ಬಂಧಿತರಾದ ರುಯಿಯಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪವನ್ ರುಯಿಯಾ ಅವರನ್ನು ನ್ಯಾಯಾಲಯವು 14 ದಿನಗಳ ಅವಧಿಗೆ ಸಿಐಡಿ ವಶಕ್ಕೆ ಒಪ್ಪಿಸಿತುರುಯಿಯಾ ಅವರನ್ನು ರೈಲ್ವೆ ಇಲಾಖೆ ನೀಡಿದ್ದ ಕಳವು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ ಇಲಾಖೆ ನವದೆಹಲಿಯ ಸುಂದರ ನಗರ ಪ್ರದೇಶದಲ್ಲಿನ ನಿವಾಸದಲ್ಲಿ ಈದಿನ ಬೆಳಗ್ಗೆ ಬಂಧಿಸಿತ್ತು. ಕೋಲ್ಕತ ನಗರದ ಡಂ ಡಂನ ಜೆಸ್ಸೋಪ್ ಕಾರ್ಖಾನೆ ಆವರಣದಲ್ಲಿ ಇದ್ದ 50 ಕೋಟಿ ರೂಪಾಯಿ ಮೌಲದ್ಯದ ವಸ್ತುಗಳ ನಾಪತ್ತೆಯಾದ ಸಂಬಂಧ ರೈಲ್ವೆ ಸಚಿವಾಲಯವು ತಿಂಗಳ ಹಿಂದೆ ರೈಲ್ವೆ ಇಲಾಖೆಗೆ ದೂರು ನೀಡಿತ್ತು. ದೂರಿನ ಆಧಾರದಲ್ಲಿ ರುಯಿಯಾ ಅವರನ್ನು ಬಂಧಿಸಿದ ಸಿಐಡಿ, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ವಂಚನೆ, ಕ್ರಿಮಿನಲ್ ವಿಶ್ವಾಸದ್ರೋಹ ಪ್ರಕರಣಗಳನ್ನು ದಾಖಲಿಸಿತ್ತು.

2016: ನವದೆಹಲಿ: ಎಲೆಕ್ಟ್ರಾನಿಕ್ ವಹಿವಾಟಿಗೆ ಸರ್ಕಾರ ಒತ್ತು ನೀಡುತ್ತಿರುವ ಬೆನ್ನಲ್ಲೇ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಳಸಿಕೊಳ್ಳುವವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಸೇರಿದಂತೆ ಹಲವಾರು ಪ್ರೋತ್ಸಾಹಕರ ಯೋಜನೆಗಳನ್ನು ಜಾರಿಗೊಳಿಸಲು ನೀತಿ ಆಯೋಗ ಯೋಜಿಸಿತು. ಡಿಜಿಟಲ್ ಪಾವತಿದಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಯೋಜನೆ ರೂಪಿಸಿ ಜಾರಿಗೊಳಿಸುವಂತೆ ನೀತಿ ಆಯೋಗವು ಭಾರತದ ರಾಷ್ಟ್ರೀಯ ಪಾವತಿ ನಿಗಮಕ್ಕೆ (ಎನ್ಪಿಎಐ)ನಿರ್ದೇಶನ ನೀಡಿತು. ಪ್ರೋತ್ಸಾಹಕರ ಯೋಜನೆಗಳಿಗಾಗಿ ನಿಗಮದ ನಿಧಿಗೆ 125 ಕೋಟಿ ರೂಪಾಯಿಗಳನ್ನು ಒದಗಿಸಲಿದೆ ಎಂದು ನೀತಿ ಆಯೋಗ ಹೇಳಿತು. ಗ್ರಾಮೀಣ ಜನತೆಯನ್ನು ಡಿಜಿಟಲ್ ಪಾವತಿಯತ್ತ ಸೆಳೆಯುವ ಸಲುವಾಗಿ ಯೋಜನೆಯನ್ನು ರೂಪಿಸಲಾಗಿದೆ. ಎಸ್ಬಿಐ, ಕೆನರಾಬ್ಯಾಂಕ್, ಎಚ್ಎಸ್ಬಿಎಸ್, ಐಸಿಐಸಿಯ ಸೇರಿದಂತೆ 10 ಬ್ಯಾಂಕುಗಳಲ್ಲಿ ಎಲ್ಲ ಬಿಡಿ ಪಾವತಿ ವ್ಯವಸ್ಥೆಗಳನ್ನು ಎನ್ಪಿಎಐ ಕಲ್ಪಿಸುತ್ತದೆ. ಬಡವರು, ಮಧ್ಯಮ ವರ್ಗದವರು ಮತ್ತು ಸಣ್ಣ ವ್ಯಾಪಾರಿಗಳನ್ನು ಗಮನದಲ್ಲಿ ಇಟ್ಟುಕೊಂಡು ಡಿಜಿಟಲ್ ಪಾವತಿಗೆ ಬಹುಮಾನ ನೀಡುವ ಯೋಜನೆ ರೂಪಿಸಲಾಗಿದೆ. ಡಿಜಿಟಲ್ ವಹಿವಾಟು ನಡೆಸುವ ವ್ಯಕ್ತಿಗಳ ಐಡಿಗಳ ಡ್ರಾ ವಾರಕ್ಕೊಮ್ಮ  ಮತ್ತು ತಿಂಗಳಿಗೊಮ್ಮೆ ನಡೆಯುವುದು, ಡ್ರಾದಲ್ಲಿ ಗೆದ್ದ ವ್ಯಕ್ತಿಗೆ 10 ಲಕ್ಷ ರೂಪಾಯಿ ಲಭಿಸುವುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
2008: ಭಾರತ ಮತ್ತು ಅಮೆರಿಕದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಪಾಕಿಸ್ಥಾನ ಮೂಲದ ಉಗ್ರಗಾಮಿ ಸಂಘಟನೆ ಜಮಾತ್- ಉದ್-ದವಾ (ಜೆಯುಡಿ) ಮೇಲೆ ಕೊನೆಗೂ ನಿಷೇಧ ಹೇರಿತು. ಮುಂಬೈ ಮೇಲಿನ ದಾಳಿಯ ರೂವಾರಿ ಜಕೀರ್ ರೆಹಮಾನ್ ಲಖ್ವಿ ಸಹಿತ ನಾಲ್ವರನ್ನು ಭಯೋತ್ಪಾದಕರು ಎಂದೂ ಅದು ಘೋಷಿಸಿತು.

2008: ದಶಕಗಳ ತರುವಾಯ ಮಿಜೋರಾಂನಲ್ಲಿ, ಲಾಲ್ತನ್ ಹವ್ಲಾ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಐಜ್ವಾಲಿನಲ್ಲಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಬ್ಬರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ ಎಂ.ಎಂ ಲಖೇರಾ ಅವರು ಪ್ರಮಾಣ ವಚನ ಬೋಧಿಸಿದರು.

2007: ಎಂಟನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಆತನ ಸಹಪಾಠಿಗಳು ಶಾಲಾ ಅವರಣದಲ್ಲೇ ಗುಂಡಿಟ್ಟು ಕೊಲೆ ಮಾಡಿದ ಆಘಾತಕಾರಿ ಘಟನೆ ಹರಿಯಾಣದ ಗುಡಗಾಂವಿನ ಯೂರೊ ಇಂಟರ್ನ್ಯಾಷನಲ್ ಸ್ಕೂಲಿನಲ್ಲಿ ನಡೆಯಿತು. ರಾಜೇಂದ್ರ ತ್ಯಾಗಿ ಎಂಬವರ ಪುತ್ರ ಅಭಿಷೇಕ್ ತ್ಯಾಗಿ (14) ಎಂಬಾತ ಕೊಲೆಯಾದ ವಿದ್ಯಾರ್ತಿ. ರಿಯಲ್ ಎಸ್ಟೇಟ್ ಉದ್ಯಮಿಗಳ ಮಕ್ಕಳಿಬ್ಬರು ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಜತೆ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಲೈಸನ್ಸ್ ಹೊಂದಿದ ಪಿಸ್ತೂಲ್ ಬಳಸಿ ಅತಿ ಹತ್ತಿರದಿಂದ ಐದು ಬಾರಿ ಗುಂಡು ಹಾರಿಸಿದರು. ಇದರಿಂದಾಗಿ ಅಭಿಷೇಕ್ ಸ್ಥಳದಲ್ಲೇ ಕುಸಿದು ಬಿದ್ದ. ನಂತರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದ. ಘಟನೆಗೆ ಕಾರಣರಾದ ಇಬ್ಬರೂ ವಿದ್ಯಾರ್ಥಿಗಳನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡರು.

2007: ಎಲ್.ಕೆ.ಅಡ್ವಾಣಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಭಾರತೀಯ ಜನತಾ ಪಕ್ಷವು ಘೋಷಿಸಿರುವುದಕ್ಕೆ ನಮಗೇನೂ ಅಭ್ಯಂತರವಿಲ್ಲ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಶರದ್ ಯಾದವ್ ನವದೆಹಲಿಯಲ್ಲಿ ಹೇಳಿದರು.

2007: ನೀತಿ ಸಂಹಿತೆ ಉಲ್ಲಂಘನೆಗಾಗಿ ಚುನಾವಣಾ ಆಯೋಗದಿಂದ ನೋಟಿಸ್ ಪಡೆದಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರವಾಗಿ ಕಾಂಗ್ರೆಸ್ ಸುದೀರ್ಘವಾದ ವಿವರಣೆಯನ್ನು ಆಯೋಗಕ್ಕೆ ಸಲ್ಲಿಸಿತು. ಗುಜರಾತಿನ ನವಸಾರಿ ಎಂಬಲ್ಲಿ ಚುನಾವಣೆ ಪ್ರಚಾರದ ವೇಳೆ ಸೋನಿಯಾ ಗಾಂಧಿ ಅವರು ನೀಡಿದ `ಸಾವಿನ ವ್ಯಾಪಾರಿಗಳು' ಹೇಳಿಕೆಗಾಗಿ ಚುನಾವಣೆ ಆಯೋಗ ಈ ನೋಟಿಸ್ ಜಾರಿ ಮಾಡಿತ್ತು.

2007: ಭಾರತೀಯ ಸಂಜಾತರ ಜಾಗತಿಕ ಸಂಸ್ಥೆಯ ಅಧ್ಯಕ್ಷ ಥಾಮಸ್ ಅಬ್ರಹಾಂ ಅವರಿಗೆ `ಭಾರತವಂಶಿ ಗೌರವ್' ಪ್ರಶಸ್ತಿಯನ್ನು ಘೋಷಿಸಲಾಯಿತು.

2007: ಕನ್ನಡ ವೃತ್ತಿ ರಂಗಭೂಮಿಯ ದಿಗ್ಗಜರಲ್ಲಿ ಒಬ್ಬರಾಗಿದ್ದ ಗರೂಡ ಸದಾಶಿವರಾಯರ ಪುತ್ರ, ಖ್ಯಾತ ನಾಟಕಕಾರ ಶ್ರೀಪಾದರಾವ್ ಗರೂಡ (86) ಈದಿನ ಧಾರವಾಡದಲ್ಲಿ ನಿಧನರಾದರು. ಶ್ರೀಪಾದರಾವ್ ಗರೂಡ ಅವರು ಏಳು ನಾಟಕಗಳನ್ನು ಬರೆದು, ನಿರ್ದೇಶಿಸಿದ್ದರು. ನಾಟ್ಯಗೀತೆಗಳನ್ನು ರಚಿಸಿ ಬಾನುಲಿಯಿಂದ ಪ್ರಸಾರ ಮಾಡಿದ್ದರು. 1985ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಕೇಂದ್ರದ ಸಂಸ್ಕೃತಿ ಇಲಾಖೆಯಿಂದ ಎರಡು ವರ್ಷ ಫೆಲೋಶಿಪ್, ರಂಗತೋರಣದಿಂದ ನಾಟ್ಯ ಪುರಸ್ಕಾರ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಲಭಿಸಿವೆ. ಅವರ ಅಂತ್ಯಕ್ರಿಯೆ ಹೊಸಯಲ್ಲಾಪುರದ ರುದ್ರಭೂವಿಯಲ್ಲಿ ನಡೆಯಿತು.

2007: ಅಕ್ರಮ ಕಟ್ಟಡ ಹಾಗೂ ನಿವೇಶನಗಳ ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕರ್ನಾಟಕ ರಾಜ್ಯ ಸರ್ಕಾರವು 2008 ಮಾರ್ಚ್ 31ರವರೆಗೆ ವಿಸ್ತರಿಸಿತು. ಈ ಯೋಜನೆಯನ್ನು ಸದ್ಯಕ್ಕೆ ಅಮಾನತಿನಲ್ಲಿ ಇಡಲು, ರಾಜ್ಯ ಹೈಕೋರ್ಟ್ ಈದಿನ ಮಧ್ಯಾಹ್ನ ಆದೇಶಿಸಿತು. ಈ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದಲ್ಲಿ ಸರ್ಕಾರದ ಕಾರ್ಯಕಾರಿ ಸಮಿತಿ (ಸಂಪುಟ)ಯ ತುರ್ತುಸಭೆ ನಡೆದು, ಯೋಜನೆಯಡಿ ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಲಾಯಿತು.

2007: ಕ್ರಿಕೆಟ್ ಮೋಸದಾಟದಲ್ಲಿ ಭಾಗಿಯಾದ ಆರೋಪ ಎದುರಿಸಿದ್ದ ದಕ್ಷಿಣ ಅಫ್ರಿಕಾದ ಕ್ರಿಕೆಟಿಗ ನಿಕಿ ಬೋಯೆ ನವದೆಹಲಿಯಲ್ಲಿ ವಿಚಾರಣೆಗೆ ಒಳಗಾದರು. ದೆಹಲಿ ಪೊಲೀಸರು 80 ನಿಮಿಷ ಬೋಯೆ ಅವರನ್ನು ಪ್ರಶ್ನಿಸಿ, ವಿವರಣೆ ಪಡೆದರು. ಈ ಸಂದರ್ಭದಲ್ಲಿ ನಿಕಿ ತಮ್ಮ ವಿರುದ್ಧ ಮಾಡಲಾದ ಎಲ್ಲ ಆರೋಪಗಳನ್ನು ನಿರಾಕರಿಸಿದರು. ಬುಕ್ಕಿಗಳಾದ ಸಂಜೀವ್ ಚಾವ್ಲಾ, ರಾಜೇಶ್ ಕಾರ್ಲಾ, ಕಿಷನ್ ಕುಮಾರ್ ಹಾಗೂ ಸುನಿಲ್ ಧಾರಾ ಜೊತೆಗೆ ತಾವು ಸಂಪರ್ಕ ಹೊಂದಿರಲಿಲ್ಲ ಎಂದು ಕೂಡ ಅವರು ತಿಳಿಸಿದರು. ದಕ್ಷಿಣ ಆಫ್ರಿಕಾ ತಂಡದ ಆಗಿನ ನಾಯಕ ಹ್ಯಾನ್ಸಿ ಕ್ರೋನಿ ಹಾಗೂ ಚಾವ್ಲಾ ನಡುವಣ ದೂರವಾಣಿ ಮಾತುಕತೆಯಲ್ಲಿ ಬೋಯೆ ಹೆಸರು ಪ್ರಸ್ತಾಪವಾಗಿತ್ತು.

2007: ಮಂಗಳ ಗ್ರಹದ ಒಳಪ್ರದೇಶದಲ್ಲಿ ಹಿಂದೆ ಜೀವಿಗಳು ವಾಸಿಸುತ್ತಿದ್ದವು ಎಂಬುದಕ್ಕೆ ಅಲ್ಲಿಗೆ ಅಮೆರಿಕದ ನಾಸಾ ಕಳುಹಿಸಿದ `ಸ್ಪಿರಿಟ್' ಗಗನನೌಕೆ ಪುರಾವೆಗಳನ್ನು ಒದಗಿಸಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದರು. ಮಂಗಳ ಗ್ರಹದಲ್ಲಿ ಅಪ್ಪಟ ಸಿಲಿಕಾ ಅಂಶಗಳು ಪತ್ತೆಯಾಗಿವೆ. `ಭೂಮಿಯಲ್ಲೂ ಏಕಾಣು ಸೂಕ್ಷ್ಮ ಜೀವಿಗಳ ಕಾಲಕ್ಕೆ ಸೇರಿದ ಸ್ಥಳಗಳಲ್ಲಿ ಇದೇ ಮಾದರಿಯ ಸಿಲಿಕಾ ಪತ್ತೆಯಾಗಿತ್ತು' ಎಂದು ನಾಸಾ ವಿಜ್ಞಾನಿಗಳು ಹೇಳಿದರು.

2007: ಅಲ್ಜೀರಿಯಾದ ರಾಜಧಾನಿ ಅಲ್ಜೀರ್ಸಿನಲ್ಲಿ ಸಂಭವಿಸಿದ ಎರಡು ಶಕ್ತಿಶಾಲಿ ಬಾಂಬ್ ಸ್ಫೋಟಗಳಲ್ಲಿ ಕನಿಷ್ಠ 52 ಜನರು ಮೃತರಾದರು. ಸುಪ್ರೀಂ ಕೋರ್ಟ್ ಎದುರಿನಲ್ಲಿ ಶಾಲಾ ಬಸ್ಸಿನ ಮೇಲೆ ಹಾಗೂ ಹೈಡಾ ಪ್ರದೇಶದ ವಸತಿ ಪ್ರದೇಶದಲ್ಲಿ ಸ್ಫೋಟಗಳು ಸಂಭವಿಸಿವೆ.

2007: ಬೆಂಗಳೂರಿನ ಸೆಪ್ಪಿಂಗ್ ರಸ್ತೆಯ ನೆಹರೂಪುರದಲ್ಲಿನ ಪಾಲಿಕೆಯ ಪೌರ ಕಾರ್ಮಿಕರ ವಸತಿ ಸಮುಚ್ಚಯದ ಎರಡನೇ ಮಹಡಿಯ ಬಾಲ್ಕನಿ ಕುಸಿದ ಪರಿಣಾಮವಾಗಿ ಎರಡು ವರ್ಷದ ಮಗು, ಒಬ್ಬ ಮಹಿಳೆ ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದರು. ಮಗಳ ಮದುವೆಯ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿದ್ದ ಹರೂನ್ ಅವರ ಕುಟುಂಬಕ್ಕೆ ಬರ ಸಿಡಿಲಿನಂತೆ ಬಂದೆರಗಿದ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ದೇಶದ ಸಂಪನ್ಮೂಲ ಹಾಗೂ ಅಭಿವೃದ್ಧಿ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ಅದರಲ್ಲೂ ನಿರ್ದಿಷ್ಟವಾಗಿ ಮುಸ್ಲಿಮರಿಗೆ `ಪ್ರಥಮ ಹಕ್ಕು' ಇರಬೇಕು ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಡಿಸೆಂಬರ್ 9ರಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯಲ್ಲಿ ನೀಡಿರುವ ಹೇಳಿಕೆ ಸಂಸತ್ತಿನ ಉಭಯ ಸದನಗಳಲ್ಲೂ ಭಾರಿ ಕೋಲಾಹಲಕ್ಕೆ ಕಾರಣವಾಗಿ ಎರಡೂ ಸದನಗಳ ಕಲಾಪಗಳು ಸ್ಥಗಿತಗೊಂಡವು. ಪ್ರಮುಖ ಪ್ರತಿಪಕ್ಷವಾದ ಬಿಜೆಪಿ ಮತ್ತು ಶಿವಸೇನೆ ಸದಸ್ಯರು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆರಂಭದಿಂದಲೇ ಘೋಷಣೆಗಳನ್ನು ಕೂಗುತ್ತಾ ಪ್ರಧಾನಿಯ ಕ್ಷಮೆಯಾಚನೆಗೆ ಪಟ್ಟು ಹಿಡಿದ ಪರಿಣಾಮವಾಗಿ ಊಟದ ವಿರಾಮಕ್ಕೆ ಮುನ್ನ ಮೂರುಬಾರಿ ಮುಂದೂಡಿಕೆಯಾದ ಸದನಗಳು, ಕೊನೆಗೆ ಯಾವುದೇ ಕಲಾಪವನ್ನೂ ನಡೆಸಲಾಗದೆ ದಿನದ ಮಟ್ಟಿಗೆ ಮುಂದೂಡಿಕೆಯಾದವು.

2006: ಒರಿಸ್ಸಾದ ಬಾಲಸೋರಿನಿಂದ 15 ಕಿ.ಮೀ. ದೂರದ ಚಂಡೀಪುರಕ್ಕೆ ಸಮೀಪ ಬಂಗಾಳ ಕೊಲ್ಲಿಯರ್ ಚಾಲಕ ರಹಿತ ವಿಮಾನ `ಲಕ್ಷ್ಯ'ದ ಪರೀಕ್ಷಾ ಹಾರಾಟ ಮತ್ತು ಭಾರತೀಯ ವಾಯು ಪಡೆಯ ಜಾಗ್ವಾರ್ ಹಾಗೂ ಮಿರಾಜ್ 2000 ಯುದ್ಧ ವಿಮಾನಗಳ ಪೈಲಟ್ ಗಳ ನಿಖರ ಗುರಿ ಪರೀಕ್ಷೆಯನ್ನು ನಡೆಸಲಾಯಿತು. ನಿಖರ ಗುರಿ ಸಾಧನೆ ಕವಾಯತಿನಲ್ಲಿ ಗುರಿಗಾಗಿ ಚಾಲಕ ರಹಿತ ವಿಮಾನ ಲಕ್ಷ್ಯವನ್ನು ಬಳಸಲಾಗುತ್ತದೆ. `ಲಕ್ಷ್ಯ' ಚಾಲಕ ರಹಿತ ವಿಮಾನವನ್ನು 2000ದಲ್ಲೇ ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದ್ದು, ಇದು ಮರುಬಳಕೆ ಮಾಡಬಹುದಾದಂತಹ ಸಬ್ ಸಾನಿಕ್ ವಿಮಾನವಾಗಿದೆ. ಭೂಮಿಯಂದಲೇ ದೂರ ನಿಯಂತ್ರಣ ಮೂಲಕ ಇದನ್ನು ನಿಯಂತ್ರಿಸಬಹುದು.

2006: ಆರು ವರ್ಷಗಳ ಹಿಂದೆ ಫಿಜಿಯಲ್ಲಿ ರಕ್ತಪಾತದ ವಿಫಲ ದಂಗೆಗೆ ಕಾರಣರಾಗಿದ್ದ ಆರೋಪದಿಂದ ಮಾಜಿ ಪ್ರಧಾನಿ ರಬುಕಾ ಅವರನ್ನು ಖುಲಾಸೆಗೊಳಿಸಲಾಯಿತು. 2000ದಲ್ಲಿ ಫಿಜಿಯಲ್ಲಿ ಮೊದಲು ನಡೆದ ದಂಗೆ ವಿಫಲಗೊಂಡು, ಆರು ತಿಂಗಳ ನಂತರ ಕ್ಷಿಪ್ರ ಕ್ರಾಂತಿ ನಡೆದಿತ್ತು.

2005: ಭಾರತದ ಅಮೃತಸರದಿಂದ ಪಾಕಿಸ್ಥಾನದ ಲಾಹೋರಿಗೆ ಸಂಪರ್ಕ ಕಲ್ಪಿಸುವ ಪ್ರಥಮ ಬಸ್ಸು ಅಮೃತಸರದ ಯೂತ್ ಹಾಸ್ಟೆಲ್ ಬಳಿಯಿಂದ ಬೆಳಗ್ಗೆ 9 ಗಂಟೆಗೆ ಪ್ರಯಾಣ ಹೊರಟು, 10.40ರ ವೇಳೆಗೆ ವಾಘಾ ಗಡಿಯ ಮೂಲಕ ಪಾಕಿಸ್ಥಾನ ಪ್ರವೇಶಿಸಿತು.

2005: ಲಂಡನ್ನಿನ ಲೂಟನ್ ವಿಮಾನ ನಿಲ್ದಾಣ ಸಮೀಪದ ತೈಲ ಸಂಗ್ರಹಾಗಾರದಲ್ಲಿ ಸಂಭವಿಸಿದ ಪ್ರಬಲ ಸರಣಿ ಸ್ಫೋಟಗಳಲ್ಲಿ ತೈಲಾಗಾರ ಬೆಂಕಿಗೆ ಆಹುತಿಯಾಗಿದ್ದು, ಕನಿಷ್ಠ 50 ಜನ ಗಾಯಗೊಂಡರು.

2004: ಖ್ಯಾತ ಸಂಗೀತ ವಿದುಷಿ ಎಂ.ಎಸ್. ಸುಬ್ಬುಲಕ್ಷ್ಮಿ(1916-2004) ಅವರು ಈ ದಿನ ನಿಧನರಾದರು. 1916ರ ಸೆಪ್ಟೆಂಬರ್ 16ರಂದು ಜನಿಸಿ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಸುಬ್ಬುಲಕ್ಷ್ಮಿ ಅವರು ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರವು ಅವರಿಗೆ `ಭಾರತ ರತ್ನ' ಪ್ರಶಸ್ತಿ ನೀಡಿ ಗೌರವಿಸಿದೆ.

1988: ಹೇಗ್ ನಲ್ಲಿ ಇರುವ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ನ ಅಧ್ಯಕ್ಷರಾದ ಮೊದಲ ಭಾರತೀಯ ಡಾ. ನಾಗೇಂದ್ರ ಸಿಂಗ್ (1914-1988) ಅವರು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

1969: ಭಾರತೀಯ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಹುಟ್ಟಿದ ದಿನ. ಚೆಸ್ಸಿನಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಗೆ ಭಾಜನರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಇವರದು.

1958: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಗ್ರ್ಯಾಂಡ್ ಹೋಟಲಿನಲ್ಲಿ ನಡೆದ ಅಂತಿಮ ಸ್ಪರ್ಧೆಯಲ್ಲಿ ಚಂದ್ರ ಹಿರ್ಜೀ ಅವರನ್ನು ಸೋಲಿಸುವ ಮೂಲಕ ವಿಲ್ಸನ್ ಜೋನ್ಸ್ ಅವರು ಜಾಗತಿಕ ಹವ್ಯಾಸಿ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಗಳಿಸಿದರು. ಇದರೊಂದಿಗೆ ಯಾವುದೇ ಕ್ರೀಡೆಯಲ್ಲಿ ಮೊತ್ತ ಮೊದಲ ವೈಯಕ್ತಿಕ ಜಾಗತಿಕ ಚಾಂಪಿಯನ್ ಎನಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

1953: ಜೈನಶಾಸ್ತ್ರ ಮತ್ತು ಪ್ರಾಕೃತ ಅಧ್ಯಯನದಲ್ಲಿ ಪ್ರಮುಖರೆನ್ನಿಸಿರುವ ಪದ್ಮಾ ಶೇಖರ್ ಅವರು ವೆಂಕಟಪ್ಪ ನಾಯ್ಡು- ಜಯಲಕ್ಷ್ಮಿ ದಂಪತಿಯ ಮಗಳಾಗಿ ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ತೊರೆನೂರು ಗ್ರಾಮದಲ್ಲಿ ಜನಿಸಿದರು.

1946: ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತುನಿಧಿ (ಯುನಿಸೆಫ್) ಸ್ಥಾಪನೆಗೊಂಡಿತು.

1944: ಎ. ಶ್ರೀಶದೇಪ ಪೂಜಿತ್ತಾಯ ಜನನ.

1942: ಸಾಹಿತಿ ಶಾಂತಲಾ ಯೋಗೀಶ ಯಡ್ರಾವಿ ಜನನ.

1936: ಅಮೆರಿಕದ ವಾಲ್ಲೀಸ್ ವಾರ್ ಫೀಲ್ಡ್ ಸಿಂಪ್ಸನ್ ಅವರನ್ನು ಮದುವೆಯಾಗುವ ಸಲುವಾಗಿ ಎಂಟನೇ ಎಡ್ವರ್ಡ್ ಇಂಗ್ಲೆಂಡಿನ ಸಿಂಹಾಸನ ತ್ಯಾಗ ಮಾಡಿದರು. ಸ್ವ ಇಚ್ಛೆಯಿಂದ ಈ ರೀತಿ ಸಿಂಹಾಸನ ತ್ಯಜಿಸಿದ ಏಕೈಕ ಬ್ರಿಟಿಷ್ ಸಾರ್ವಭೌಮ ದೊರೆ ಇವರು. `ನಾನು ಪ್ರೀತಿಸುವ ಮಹಿಳೆಯ ಬೆಂಬಲ ಹಾಗೂ ನೆರವಿಲ್ಲದೆೆ ರಾಜನಾಗಿ ನನ್ನ ಹೊಣೆಗಾರಿಕೆ ನಿಭಾಯಿಸುವುದು ನನಗೆ ಅಸಾಧ್ಯ' ಎಂದು ಈ ಸಂದರ್ಭದಲ್ಲಿ ಎಡ್ವರ್ಡ್ ಹೇಳಿಕೆ ನೀಡಿದರು.

1935: ಸಾಹಿತಿ ಶಾಂತಕ್ಕ ಮಠದ ಜನನ.

1922: ಭಾರತೀಯ ಚಿತ್ರನಟ ದಿಲೀಪ್ ಕುಮಾರ್ ಹುಟ್ಟಿದ ದಿನ.

1882: ಭಾರತೀಯ ಕವಿ, ಬರಹಗಾರ ಸುಬ್ರಹ್ಮಣ್ಯ ಸಿ. ಭಾರತೀ (1882-1921) ಹುಟ್ಟಿದ ದಿನ. ಆಧುನಿಕ ತಮಿಳು ಸಾಹಿತ್ಯ ಶೈಲಿಯ ಜನಕ ಎಂದೇ ಇವರು ಖ್ಯಾತಿ ಪಡೆದಿದ್ದಾರೆ.

1882: ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಫಿಯೊರೆಲ್ಲೋ ಎಚ್. ಲಾ ಗೌರ್ ಡಿಯಾ (1882-1947) ಹುಟ್ಟಿದ ದಿನ. ಮೂರು ಅವಧಿಗೆ ಸತತವಾಗಿ ನ್ಯೂಯಾರ್ಕ್ ನಗರದ ಮೇಯರ್ ಆದ ಇವರ ಹೆಸರನ್ನೇ ನ್ಯೂಯಾರ್ಕ್ ನಗರದ ವಿಮಾನ ನಿಲ್ದಾಣಕ್ಕೆ ಇರಿಸಲಾಗಿದೆ.

1858: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಹಾಗೂ ಜದುನಾಥ್ ಬೋಸ್ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬ್ಯಾಚ್ಲರ್ ಆಫ್ ಆರ್ಟ್ಸ್ ಪದವಿ ಪಡೆದ ಮೊದಲ ಇಬ್ಬರು ಭಾರತೀಯರು ಎನಿಸಿಕೊಂಡರು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment