Tuesday, December 18, 2018

ಇಂದಿನ ಇತಿಹಾಸ History Today ಡಿಸೆಂಬರ್ 18

ಇಂದಿನ ಇತಿಹಾಸ History Today ಡಿಸೆಂಬರ್  18
2018: ನವದೆಹಲಿ: ರಫೇಲ್ ಒಪ್ಪಂದದ ಸುತ್ತ ಎದ್ದಿರುವ ರಾಜಕೀಯ ವಿವಾದವು ಫ್ರಾನ್ಸಿನಿಂದ ರಫೇಲ್
ಯುದ್ಧ ವಿಮಾನ ಖರೀದಿಗೆ ಅಡ್ಡಿಯಾಗಬಾರದು ಎಂದು  ನವೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರುತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ರಕ್ಷಣಾ ಇಲಾಖೆಯ  ಹಿರಿಯ ಅಧಿಕಾರಿಯೊಬ್ಬರು   ವಿಚಾರವನ್ನು ಬಹಿರಂಗ ಪಡಿಸಿದರು. ವಾಯುಪಡೆ ಮುಖ್ಯಸ್ಥರ ಪತ್ರದ ಬಗ್ಗೆ ಪ್ರತಿಕ್ರಿಯಿಸಲು ಭಾರತೀಯ ವಾಯು ಪಡೆಯ ವಕ್ತಾರರು ನಿರಾಕರಿಸಿದರು. ಫ್ರಾನ್ಸಿನಿಂದ ೩೬ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಸುಪ್ರೀಂಕೋರ್ಟ್ ೧೪ ಡಿಸೆಂಬರ್ ೨೦೧೮ ರಂದು ಅರ್ಜಿಯನ್ನು ವಜಾಗೊಳಿಸಿತ್ತು. ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಬ್ರಿಂದರ್  ಸಿಂಗ್ ಧನೊವಾ ಅವರು ರಕ್ಷಣಾ ಸಚಿವರಿಗೆ  ಬರೆದ ಪತ್ರದಲ್ಲಿ ಭಾರತೀಯ ವಾಯುಪಡೆಯ ಸಮರದಳಗಳ ಸಾಮರ್ಥ್ಯ ಕ್ಷೀಣಿಸಿರುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಅಧಿಕಾರಿ ತಿಳಿಸಿದರು. ಪಶ್ಚಿಮ ಮತು ಉತ್ತರದ ಗಡಿಗಳಲ್ಲಿ ವಿಶ್ವಾಸಾರ್ಹ ನಿರೋಧಕ ಶಕ್ತಿಗಾಗಿ ಭಾರತೀಯ ವಾಯಪಡೆಗೆ ಕನಿಷ್ಠ ೪೨ ಸಮರದಳಗಳ ಅಗತ್ಯಇದೆ. (ಪ್ರತಿ ಸಮರದಳವೂ ೧೪-೧೬ ಸಮರ ವಿಮಾನಗಳನ್ನು ಹೊಂದಿರುತ್ತದೆ).ಆದರೆ ಪ್ರಸ್ತುತ ವಾಯು ಪಡೆಯು ೩೧ ಯುದ್ಧ ವಿಮಾನಗಳನ್ನು ಮಾತ್ರ ಹೊಂದಿದೆಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಯುದ್ಧ ವಿಮಾನಗಳನ್ನು ಸಮರದಳಗಳು ಕಳೆದುಕೊಳ್ಳುತ್ತವೆ ಎಂದು  ವಾಯುಪಡೆ ಮುಖ್ಯಸ್ಥರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದರು. ಭಾರತೀಯ ವಾಯುಪಡೆಗೆ ಕನಿಷ್ಠ ೩೬ ಯುದ್ಧ ವಿಮಾನಗಳು ಬೇಕೇ ಬೇಕು. ಇವುಗಳನ್ನು ಪಡೆಯುವ ನಿಟ್ಟಿನಲ್ಲಿ ಯಾವುದೇ ಅನಿಶ್ಚಿತತೆಯು ವಾಯುಪಡೆಯ ಸಮರ ಸಾಮರ್ಥ್ಯ ಮತ್ತು ರಕ್ಷಣಾ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದಾಗಿ ಧನೋವಾ ಅವರು ಸ್ಪಷ್ಟ ಪಡಿಸಿದ್ದರು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇನ್ನೊಬ್ಬ ಅಧಿಕಾರಿ ಹೇಳಿದರು.ವಿಮಾನದ ದರ ವಿವರಗಳನ್ನು ಬಹಿರಂಗ ಪಡಿಸದಂತೆಯೂ ವಾಯುಪಡೆ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ಮಾಡಿದ್ದರುಎಂದುಅವರು ನುಡಿದರು.ಭಾರತೀಯ ವಾಯುಪಡೆಯ ಬಳಿ ಇರುವ ಸಮರ ಸಾಧನಗಳ ದರಗಳ ಕುರಿತಾದ ವಿವರಗಳನ್ನು ಬಹಿರಂಗ ಪಡಿಸದಂತೆಯೂ ವಾಯುಪಡೆ ಮುಖ್ಯಸ್ಥರು ಸಲಹೆ ಮಾಡಿದ್ದರು. ದರ ವಿವರಗಳನ್ನು ಬಹಿರಂಗ ಪಡಿಸುವುದರಿಂದ ರಫೇಲ್ ಯುದ್ಧ ವಿಮಾನಗಳ ಸಮರ ಸಾಮರ್ಥ್ಯ ಬಹಿರಂಗಗೊಳ್ಳುತ್ತದೆ. ಇದರಿಂದ ಸೇನೆಯ ಮೇಲೆ ವ್ಯೂಹಾತ್ಮಕವಾಗಿ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ವಾಯುಪಡೆ ಮುಖ್ಯಸ್ಥರು ತಿಳಿಸಿದ್ದರು ಎಂದು ಅವರು ಹೇಳಿದರು.

2018: ನವದೆಹಲಿ: ಪಾಕಿಸ್ತಾನದಲ್ಲಿ ೨೦೧೨ರ ನವೆಂಬರ್ ೧೪ರಂದು ಬಂಧಿಸಲ್ಪಟ್ಟಿದ್ದ ಮುಂಬೈ ನಿವಾಸಿ ಹಮೀದ್ ನೆಹಲ್ ಅನ್ಸಾರಿ ಅವರು ವರ್ಷಗಳ ಕಾಲ ಪಾಕಿಸ್ತಾನದ ಪೇಶಾವರ ಕೇಂದ್ರೀಯ ಸೆರೆಮನೆಯಲ್ಲಿ ಸೆರೆವಾಸ ಅನುಭವಿಸಿದ ಬಳಿಕ ಬಿಡುಗಡೆಯಾಗಿ ಭಾರತಕ್ಕೆ ವಾಪಸಾದರು.ಬಂಧಿಸಲ್ಪಟ್ಟ ಬಳಿಕ ೨೦೧೫ರ ಡಿಸೆಂಬರಿನಲ್ಲಿ ಮೂರು ವರ್ಷಗಳ ಸೆರೆವಾಸದ ಶಿಕ್ಷೆಗೆ ಗುರಿಯಾಗಿದ್ದ ಅನ್ಸಾರಿ ಅವರನ್ನು ವಾಘಾ ಗಡಿಗೆ ಕರೆತರಲಾಗಿದ್ದು, ಸಂಜೆ .೩೦ರ ವೇಳೆಗೆ ಅವರು ಪುನಃ ಭಾರತದ ನೆಲಕ್ಕೆ ಅಡಿ ಇರಿಸಿ, ತಮ್ಮ ಕುಟುಂಬದ ಜೊತೆ ಸೇರಿದರು.ಇದಕ್ಕೆ ಮುನ್ನ ಹಮೀದ್ ಅನ್ಸಾರಿ ಅವರ ತಾಯಿ ಫೌಜಿಯಾ ಅನ್ಸಾರಿ ಅವರುಆತ ವೀಸಾ ಇಲ್ಲದೆ ಪಾಕಿಸ್ತಾನಕ್ಕೆ ಹೋಗಬಾರದಾಗಿತ್ತು ಎಂದು ಹೇಳಿದರು.  ‘ಆತ ಸದುದ್ದೇಶದೊಂದಿಗೆ ಪಾಕಿಸ್ತಾನಕ್ಕೆ ತೆರಳಿದ. ಮೊದಲಿಗೆ ಕಣ್ಮರೆಯಾದ ಆದರೆ ಬಳಿಕ ಪಾಕಿಸ್ತಾನದಲ್ಲಿ ಬಂಧಿಸಲ್ಪಟ್ಟ ಮತ್ತು ಆತನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು. ವೀಸಾ ಇಲ್ಲದೆ ಆತ ಪಾಕಿಸ್ತಾನಕ್ಕೆ ಹೋಗಬಾರದಾಗಿತ್ತು. ಆತನ ಬಿಡುಗಡೆ ಮಾನವೀಯತೆಗೆ ಲಭಿಸಿದ ವಿಜಯ ಎಂದು ಫೌಜಿಯಾ ಅನ್ಸಾರಿ ನುಡಿದರು.ಮುಂಬೈಯ ಮ್ಯಾನೇಜ್ಮೆಂಟ್ ಕಾಲೇಜಿನ ಎಂಜಿನಿಯರಿಂಗ್ ಶಿಕ್ಷಕರಾಗಿದ್ದ ಹಮೀದ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಗೆಳತಿಯಾಗಿದ್ದ ಮಹಿಳೆಯೊಬ್ಬರನ್ನು ಭೇಟಿ ಮಾಡುವ ಸಲುವಾಗಿ ೨೦೧೨ರ ನವೆಂಬರ್ ೧೨ರಂದು ಪಾಕಿಸ್ತಾನ ಪ್ರವೇಶಿಸಿದ್ದರು.ಅವರನ್ನು ಖೈಬರ್ ಫಕ್ತೂನ್ಖ್ವಾದ ಕೊಹಟ್ನಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಮತ್ತು ಸ್ಥಳೀಯ ಪೊಲೀಸರು ವಶಕ್ಕೆ ತೆಗೆದುಕೊಂಡರು. ಸಮಯದಲ್ಲಿ ಹಮ್ಝಾ ಹೆಸರಿನಲ್ಲಿದ್ದ ನಕಲಿ ಗುರುತಿನ ಚೀಟಿಯೊಂದು ಅವರ ಬಳಿ ಲಭಿಸಿತು ಎಂದು ಆಪಾದಿಸಲಾಯಿತು. ಪಾಕ್ ಗುಪ್ತಚರ ಸಂಸ್ಥೆಗಳು ಅನ್ಸಾರಿ ಅವರನ್ನು ಬಂಧಿಸಿದ ಬಳಿಕ ಅವರ ತಾಯಿ ಫೌಜಿಯಾ ಪಾಕಿಸ್ತಾನಿ ವಕೀಲರ ಮೂಲಕ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದರು. ಆಗ ಅನ್ಸಾರಿ ಅವರು ಪಾಕಿಸ್ತಾನಿ ಸೇನೆಯ ವಶದಲ್ಲಿ ಇರುವುದಾಗಿಯೂ, ’ರಾಷ್ಟ್ರ ವಿರೋಧಿ ಚಟುವಟಿಕೆಗಳಿಗಾಗಿ ಅವರನ್ನು ಉಗ್ರಗಾಮಿ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಲಾಗುತ್ತಿದೆ ಎಂದೂ ತಿಳಿದು ಬಂತುವಿಚಾರಣೆಯ ಬಳಿಕ ೩೩ರ ಹರೆಯದ ಹಮೀದ್ ಅವರಿಗೆ ೨೦೧೫ರ ಡಿಸೆಂಬರ್ ೧೫ರಂದು ನಕಲಿ ಪಾಕಿಸ್ತಾನಿ ಗುರುತಿನ ಚೀಟಿ ಹೊಂದಿದ್ದುದಕ್ಕಾಗಿ ಮೂರು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿದ ಪಾಕಿಸ್ತಾನಿ ಸೇನಾ ನ್ಯಾಯಾಲಯ ಅವರನ್ನು ಪೇಶಾವರ ಕೇಂದ್ರೀಯ ಸೆರೆಮನೆಗೆ ಕಳುಹಿಸಿತು.ಹಮೀದ್ ಅವರ ಶಿಕ್ಷೆ ೨೦೧೮ರ ಡಿಸೆಂಬರ್ ೧೫ರಂದು ಮುಕ್ತಾಯಗೊಂಡಿತು, ಆದರೆ ಅವರ ಕಾನೂನು ಸಂಬಂಧಿತ ದಾಖಲೆಗಳು ಸಿದ್ಧವಾಗಿ ಇಲ್ಲದ ಪರಿಣಾಮವಾಗಿ ತತ್ ಕ್ಷಣ ಭಾರತಕ್ಕೆ ವಾಪಸಾಗಲು ಸಾಧ್ಯವಾಗಲಿಲ್ಲ. ಆರು ವರ್ಷಗಳ ಬಳಿಕ ಮಂಗಳವಾರ ಪಾಲಕರನ್ನು ಮತ್ತೆ ಸೇರಿದ ಹಮೀದ್ ನೆಹಲ್ ಅನ್ಸಾರಿ ಅವರು ಭಾವ ಪರವಶಗೊಂಡಿದ್ದರು.ನೈಜವೀರ್-ಝಾರಾ: ವಾಸ್ತವವಾಗಿ ಪಾಕಿಸ್ತಾನದ ಯುವ ಪತ್ರಕರ್ತನೊಬ್ಬ ಹಮೀದ್ ಅನ್ಸಾರಿ ಬಗ್ಗೆ ವರದಿ ಪ್ರಕಟಿಸಿದ ಬಳಿಕವಷ್ಟೇ ಅವರು ಪಾಕಿಸ್ತಾನದಲ್ಲಿ ಸೆರೆಯಾಳಾಗಿರುವ ವಿಷಯ ಬೆಳಕಿಗೆ ಬಂದಿತ್ತು. ಅಲ್ಲಿಂದಾಚೆಗೆ ಹಮೀದ್ ಅನ್ಸಾರಿಯ ಬದುಕಿನ ಕಥೆ ನೈಜವೀರ್ -ಝಾರಾ ಆಗಿ ಮಾರ್ಪಟ್ಟಿತು. (’ವೀರಾ- ಝಾರಾ ೨೦೦೪ರಲ್ಲಿ ಯಶ್ ಚೋಪ್ರಾ ಮತ್ತು ಅವರ ಪುತ್ರ ಆದಿತ್ಯ ಚೋಪ್ರಾ ಜಂಟಿಯಾಗಿ ನಿರ್ದೇಶಿಸಿ ನಿರ್ಮಾಣಮಾಡಿದ್ದ ರೊಮ್ಯಾಂಟಿಕ್ ಚಿತ್ರ.. ಶಾರುಖ್ ಖಾನ್, ಪ್ರೀತಿ ಝಿಂಟಾ ಮತ್ತು ಕಿರಣ್ ಖೇರ್ ನಟಿಸಿದ ಚಿತ್ರ ಪ್ರೇಮ, ವಿರಹ, ಶೌರ್ ಮತ್ತು ಬಲಿದಾನದ ಕಥೆಯನ್ನು ಒಳಗೊಂಡಿತ್ತು).೨೦೧೫ರಲ್ಲಿ ಪಾಕಿಸ್ತಾನಿ ಸೇನೆ ಅನ್ಸಾರಿ ತನ್ನ ವಶದಲ್ಲಿ ಇರುವುದಾಗಿ ಪಾಕಿಸ್ತಾನ ಒಪ್ಪಿಕೊಂಡಿತು.ಅಂತರ್ಜಾಲದ ಮೂಲಕ ಪರಿಚಯವಾದ ಮಹಿಳೆಯ ಪ್ರೇಮಜಾಲದಲ್ಲಿ ಸಿಲುಕಿ ಆಕೆಯನ್ನು ಭೇಟಿ ಮಾಡುವ ಸಲುವಾಗಿ ಬಹುಶಃ ಆಘ್ಘಾನಿಸ್ಥಾನದ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದ ಅನ್ಸಾರಿಯನ್ನು ಗೂಢಚರ್ಯೆ ಆರೋಪ ಹೊರಿಸಿ ಪಾಕಿಸ್ತಾನಿ ಸೇನಾ ನ್ಯಾಯಾಲಯ ವಿಚಾರಣೆಗೆ ಗುರಿಪಡಿಸಿದಾಗ, ಭಾರತದಲ್ಲಿ ಅವರ ಪಾಲಕರು ಮಗನ ರಕ್ಷಣೆಗಾಗಿ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದ್ದರು. ಆದರೆ ಎಲ್ಲವೂ ವಿಫಲಗೊಂಡಿದ್ದವು. ಬಳಿಕವೂ ಅನ್ಸಾರಿಯನ್ನು ಮರಳಿ ದೇಶಕ್ಕೆ ಕರೆತರಲು ಅಹರ್ನಿಶಿ ದುಡಿದ ಕುಟುಂಬ ರಾಜತಾಂತ್ರಿಕ ಸಂಪರ್ಕ ಪಡೆಯಲು ಮಾಡಿದ್ದ ೯೬ ಮನವಿಗಳನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಕಳೆದ ಆರು ವರ್ಷಗಳಲ್ಲಿ ತಾಯಿ ಫೌಜಿಯಾ ಮತ್ತು ಪುತ್ರ ಅನ್ಸಾರಿ ಮಧ್ಯೆ ಅತ್ಯಂತ ಚುಟುಕಾದ ದೂರವಾಣಿ ಸಂಭಾಷಣೆಗೆ ಮಾತ್ರವೇ ಪಾಕಿಸ್ತಾನಿ ಅಧಿಕಾರಿಗಳು ಕಳೆದ ನವೆಂಬರ್ ತಿಂಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ತೀವ್ರ ಒತ್ತಡದ ಬಳಿಕ ಅವಕಾಶ ನೀಡಿದ್ದರು.೨೦೧೨ರಿಂದ ೨೦೧೫ರವರೆಗೆ ಪಾಕ್ ಸೆರೆಮನೆಯಲ್ಲೇ ಇದ್ದುದನ್ನು ನಿರ್ಲಕ್ಷಿಸಿದ ಪಾಕಿಸ್ತಾನದ ಸೇನಾ ನ್ಯಾಯಾಲಯ ೨೦೧೫ರ ಡಿಸೆಂಬರಿನಲ್ಲಿ ಮೂರು ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿತು. ಪರಿಣಾಮವಾಗಿ ಅನ್ಸಾರಿ ಅವರು ವರ್ಷಗಳ ಕಾಲ ಪಾಕ್ ಸೆರೆಮನೆಯಲ್ಲಿ ಕೊಳೆಯುವಂತಾಯಿತು. ಒಂದು ಮೂಲದ ಪ್ರಕಾರ ಅನ್ಸಾರಿ ಅವರನ್ನು ಇತ್ತೀಚೆಗೆ ಪೇಶಾವರ ಸೆರೆಮನೆಯಿಂದ ಖೈಬರ್ ಫಕ್ತೂನ್ ಖ್ವಾ ಸೆರೆಮನೆಗೆ ಸ್ಥಳಾಂತರಿಸಲಾಗಿತ್ತು. ವಾಸ್ತವಾಂಶಗಳನ್ನು ವಿವರಿಸಿ ಭಾರತವು ಡಿಸೆಂಬರ್ ೧೧ರಂದು ಪ್ರಬಲ ಸಂದೇಶವನ್ನು ಪಾಕಿಸ್ತಾನಕ್ಕೆ ಕಳುಹಿಸಿತ್ತುಯಾವ ಕಾನೂನಿನ ಯಾವ ವಿಧಿಗಳ ಅಡಿಯಲ್ಲಿ ಅನ್ಸಾರಿ ಅವರ ವಿಚಾರಣೆ ನಡೆಸಲಾಗಿದೆ ಎಂಬ ಪ್ರಶ್ನೆಗಳಿಗೂ ಪಾಕಿಸ್ತಾನ ಉತ್ತರಿಸಿಲ್ಲ ಎಂಬುದಾಗಿ ಭಾರತ ಸಂದೇಶದಲ್ಲಿ ಖಾರವಾಗಿ ತಿಳಿಸಿತ್ತುಭಾರತ ತಿಳಿಸಿದ್ದ ಇತರ ೧೧ ಮಂದಿ ಭಾರತೀಯರು ಪಾಕಿಸ್ತಾನದಲ್ಲಿ ಇದ್ದಾರೆ ಎಂದು ದೃಢಪಡಿಸಿ, ಶಿಕ್ಷೆ ಮುಗಿಸಿದ ಒಬ್ಬರನ್ನು ೨೦೧೪ರಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿದ್ದರೂ ಅವರು ಭಾರತ ತಲುಪಿಲ್ಲ, ೨೦೧೭ರಲ್ಲೇ ಶಿಕ್ಷೆ ಪೂರೈಸಿದ ಇತರ ೧೦ ಮಂದಿಯೂ ಭಾರತಕ್ಕೆ ವಾಪಸಾಗಿಲ್ಲ  ಎಂದು ಭಾರತ ಸಂದೇಶದಲ್ಲಿ ತೀವ್ರವಾಗಿ ಆಕ್ಷೇಪಿಸಿತ್ತು.ಪಾಕ್ ಕಸ್ಟಡಿಯಲ್ಲಿ ಇರುವ ಭಾರತೀಯ ಪ್ರಜೆಗಳ ಜೊತೆ ರಾಜತಾಂತ್ರಿಕ ಸಂಪರ್ಕಕ್ಕೂ ಪಾಕಿಸ್ತಾನ ಅವಕಾಶ ನೀಡಿಲ್ಲ, ವರ್ಷ ಜನವರಿ- ಜುಲೈ ಅವಧಿಯಲ್ಲಿ ಕೇವಲ ಒಂದು ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಭಾರತ ವರ್ಷ ಮಂದಿ ಪಾಕಿಸ್ತಾನಿಯರಿಗೆ ರಾಜತಾಂತ್ರಿಕ ಸಂಪರ್ಕದ ಅವಕಾಶ ಕಲ್ಪಿಸಿದೆ ಎಂದೂ ಭಾರತ ಹೇಳಿತ್ತು.ಸುದ್ದಿ ಮೂಲಗಳ ಪ್ರಕಾರ ಪಾಕಿಸ್ತಾನದ ಸೆರೆಮನೆಗಳಲ್ಲಿ ಪ್ರಸ್ತುತ ೪೦೦ ಮಂದಿ ಭಾರತೀಯ ಮೀನುಗಾರರು ಸೆರೆವಾಸ ಅನುಭವಿಸುತ್ತಿದ್ದಾರೆ.

2018: ಗುವಾಹಟಿ: ಅಸ್ಸಾಮಿನ ಬಿಜೆಪಿ ಸರ್ಕಾರವು ೬೦೦ ಕೋಟಿ ರೂಪಾಯಿಗಳ ರೈತಸಾಲ ಮನ್ನಾಕ್ಕೆ ತನ್ನ ಅನುಮೋದನೆ ನೀಡಿತು. ಸಾಲ ಮನ್ನಾದಿಂದ ರಾಜ್ಯದ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಸರ್ಕಾರ ತಿಳಿಸಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರೈತ ಸಾಲ ಮನ್ನಾ ವಿಷಯವು ಪ್ರಮುಖ ವಿಷಯವಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಬಿಜೆಪಿ ಕ್ರಮ ಕೈಗೊಂಡಿತು. ರಾಜ್ಯದ ರೈತರ ಸಾಲಮನ್ನಾ ಮಾಡುವ ನಿರ್ಧಾರವನ್ನು ಸಚಿವ ಸಂಪುಟವು ರಾತ್ರಿ ನಡೆದ ಸಭೆಯಲ್ಲಿ ಕೈಗೊಂಡಿತು.. ಮಧ್ಯ ಪ್ರದೇಶ ಮತ್ತು ಛತ್ತೀಸ್ಗಢದ ನೂತನ ಕಾಂಗ್ರೆಸ್ ಸರ್ಕಾರಗಳು ರಚನೆಯಾದ ಕೆಲವೇ ಗಂಟೆಗಳಲ್ಲಿ ರೈತ ಸಾಲಮನ್ನಾ ನಿರ್ಧಾರ ಕೈಗೊಂಡಿದ್ದು, ಅಸ್ಸಾಂ ಸಾಲಮನ್ನಾ ನಿರ್ಧಾರ ಕೈಗೊಂಡ ಮೂರನೇ ರಾಜ್ಯವಾಯಿತು. ಇದಕ್ಕೆ ಮುನ್ನ ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳೂ ರೈತರ ಸಾಲ ಮನ್ನಾ ಮಾಡಿದ್ದವು. ಅಸ್ಸಾಂ ಸರ್ಕಾರವು ರೈತರ ಶೇಕಡಾ ೨೫ರಷ್ಟು ಅಂದರೆ ಗರಿಷ್ಠ ೨೫,೦೦೦ ರೂಪಾಯಿಗಳವರೆಗಿನ ಎಲ್ಲ ರೈತ ಸಾಲಗಳನ್ನೂ ಮಾಡಲಿದೆ ಎಂದು ರಾಜ್ಯ ಸರ್ಕಾರದ ವಕ್ತಾರ, ಸಂಸದೀಯ ವ್ಯವಹಾರಗಳ ಸಚಿವ ಚಂದ್ರ ಮೋಹನ ಪಟೋವರಿ ಹೇಳಿದರು.

2018: ನವದೆಹಲಿ: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿದ್ರಿಸಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಗುಡುಗಿದ ಕೆಲವೇ ಗಂಟೆಗಳಲ್ಲಿ ಬಿಜೆಪಿ ನಾಯಕ ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಅವರು ಕಾಂಗ್ರೆಸ್ ಪಕ್ಷವು ತನ್ನ ಭ್ರಷ್ಟಾಚಾರ ಮತ್ತು ಅಕ್ರಮಗಳ ಮೂಲಕ ರಾಷ್ಟ್ರದ ಜನ ನಿದ್ರಿಸದಂತೆ ಮಾಡಿದೆ ಎಂದು ಎದಿರೇಟು ನೀಡಿದರು. ‘ರೈತರ ಸಾಲ ಮನ್ನಾ ಮಾಡುವವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿದ್ರಿಸದಂತೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ಪ್ರಸಾದ್ ಅವರುಇಂತಹ ಹೇಳಿಕೆಗಳ ಮೂಲಕ ಕಾಂಗ್ರೆಸ್ ಅಧ್ಯಕ್ಷರು ತಮ್ಮ ಬಹಿರಂಗ ಭಾಷಣಗಳಲ್ಲಿ ಅತ್ಯಂತ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಚಾಟಿ ಬೀಸಿದರುತನ್ನ ಭ್ರಷ್ಟಾಚಾರ ಮತ್ತು ಅಕ್ರಮಗಳಿಂದ ರಾಷ್ಟ್ರದ ಜನತೆಗೆ ನಿದ್ರೆ ಬಾರದಂತೆ ಮಾಡಿರುವ ಪಕ್ಷದ ಅಧ್ಯಕ್ಷರಿಂದ ಯಾವುದೇ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು. ರಫೇಲ್ ವ್ಯವಹಾರದ ವಿಷಯವನ್ನು ಉಲ್ಲೇಖಿಸಿದ ಪ್ರಸಾದ್, ’ಕಾಂಗ್ರೆಸ್ಸಿಗೆ ಸಂಸತ್ತಿನಲ್ಲಿ ವಿಷಯದ ಬಗ್ಗೆ ಚರ್ಚೆ ನಡೆಸಲು ಹೆದರಿಕೆಯಾಗುತ್ತಿದೆ. ಅದಕ್ಕಾಗಿ ಅವರು ಸದನವು ಸಮರ್ಪಕವಾಗಿ ಕಾರ್ಯ ನಿರ್ವಹಿಸದಂತೆ ತಡೆಯುತ್ತಿದ್ದಾರೆ. ನಾವು ನಿಮ್ಮ ಜೊತೆಗೆ ಸದನದಲ್ಲಿ ರಫೇಲ್ ವ್ಯವಹಾರದ ಬಗ್ಗೆ ಚರ್ಚಿಸಬಯಸುತ್ತೇವೆ. ಅದರಿಂದ ಓಡಿ ಹೋಗಬೇಡಿ. ಕಾಂಗ್ರೆಸ್ ಚರ್ಚೆಯಿಂದ ಏಕೆ ದೂರ ಓಡುತ್ತಿದೆ ಎಂಬುದು ನನಗೆ ಗೊತ್ತಿದೆ. ಚರ್ಚೆ ನಡೆದರೆ, ಕಾಂಗ್ರೆಸ್ ಕಪಾಟಿನಿಂದ ಹಲವಾರು ಅಸ್ಥಿ ಪಂಜರಗಳು ಹೊರಬರುತ್ತವೆ ಎಂಬ ಭೀತಿ ಅವರಿಗಿದೆ ಎಂದು ಹೇಳಿದರು.ರಫೇಲ್ ವ್ಯವಹಾರದಲ್ಲಿ ಯಾವುದೇ ತಪ್ಪಾಗಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಂಡುಕೊಂಡಿರುವ ವಾಸ್ತವಾಂಶವನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ ಎಂದು ಕಾನೂನು ಸಚಿವರು ನುಡಿದರು. ತಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಮತ್ತು ಚರ್ಚೆಗೆ ಬನ್ನಿ ಎಂಬುದಾಗಿ ರಾಹುಲ್ ಗಾಂಧಿ ಅವರು ಸವಾಲು ಎಸೆದಿದ್ದುದನ್ನು ಜ್ಞಾಪಿಸಿದ ಪ್ರಸಾದ್, ತಮ್ಮ ಪಕ್ಷವು ಹಾಗೆ ಮಾಡಲು ಬಯಸಿದೆ, ಆದರೆ ಅವರು, ಕಾಂಗ್ರೆಸ್ ಚರ್ಚೆಯಿಂದ ದೂರ ಓಡುತ್ತಿದ್ದಾರೆ ಎಂದು ಹೇಳಿದರು.ರಾಹುಲ್ ಗಾಂಧಿಯವರು ಶ್ರೀಮಂತ ವರ್ತಕರ ಬಗ್ಗೆ ಮಾಡಿದ ಪ್ರಸ್ತಾಪಕ್ಕೂ ಪ್ರತಿಕ್ರಿಯಿಸಿದ ರವಿಶಂಕರ ಪ್ರಸಾದ್ ಅವರುಮಲ್ಯ ಮತ್ತು ನೀರವ್ ಮೋದಿ ಇಬ್ಬರೂ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಇದ್ದಾಗಲೇ ಎಲ್ಲ ಸವಲತ್ತುಗಳನ್ನು ಪಡೆದರು ಎಂದು ಆಪಾದಿಸಿದರು. ಇದಕ್ಕೆ ಮುನ್ನ, ರಾಜಸ್ಥಾನದಲ್ಲಿ ಅಶೋಕ ಗೆಹ್ಲೋಟ್, ಮಧ್ಯ ಪ್ರದೇಶದಲ್ಲಿ ಕಮಲ ನಾಥ್ ಮತ್ತು ಛತ್ತೀಸ್ ಗಢದಲ್ಲಿ ಭೂಪೇಶ್ ಬಘೇಲ್ ಅವರು ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಮಿಂಚಿನ ಪ್ರವಾಸ ನಡೆಸಿದ ಬಳಿಕ ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಪುನಃ ತಮ್ಮ ವಾಕ್ ಪ್ರಹಾರವನ್ನು ಮುಂದುವರೆಸಿದ್ದರು.ರೈತರ ದುಃಸ್ಥಿತಿಯನ್ನು ಪ್ರಸ್ತಾಪಿಸಿದ್ದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಮಂತ ವರ್ತಕರ ಬಗ್ಗೆ ಮಾತ್ರವೇ ಚಿಂತಿಸುತ್ತಾರೆ ಎಂದು ದೂರಿದ್ದರು. ಬಿಜೆಪಿಯಿಂದ ಕಾಂಗ್ರೆಸ್ ಅಧಿಕಾರವನ್ನು ಕಿತ್ತುಕೊಂಡ ಮೂರು ರಾಜ್ಯಗಳ ಪೈಕಿ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರೈತರ ಸಾಲ ಮನ್ನಾಕ್ಕೆ ಆದೇಶ ನೀಡಿದ್ದಾರೆ. ರಾಜಸ್ಥಾನ ಶೀಘ್ರವೇ ಹಾದಿ ಹಿಡಿಯಲಿದೆ. ಕಾಂಗ್ರೆಸ್ ಮತ್ತು ಎಲ್ಲ ವಿರೋಧ ಪಕ್ಷಗಳು ರೈತ ಸಾಲ ಮನ್ನಾಕ್ಕಾಗಿ ಮೋದಿ ಅವರ ಮೇಲೆ ಒತ್ತಡ ಹಾಕಲಿವೆಸಾಲ ಮನ್ನಾ ಆಗುವವರೆಗೆ ಮೋದಿ ಅವರಿಗೆ ನಿದ್ರಿಸಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಸಂಸತ್ ಆವರಣದಲ್ಲಿ ಹೇಳಿದ್ದರು.  ‘ಮೋದಿಜಿ ನಾಲ್ಕು ವರ್ಷಗಳಿಂದ ಪ್ರಧಾನಿಯಾಗಿದ್ದಾರೆ. ಅವರು ಒಂದು ರೂಪಾಯಿ ಸಾಲವನ್ನು ಕೂಡಾ ಮನ್ನಾ ಮಾಡಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಟೀಕಿಸಿದ್ದರು.

2018: ಶಬರಿಮಲೆ: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮಹಿಳೆಯರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಕ್ಕೆ ಯತ್ನಿಸಿ, ಪ್ರತಿಭಟನೆ, ಹಿಂಸಾ ಚಾರ ಘಟನೆಗಳ ಬಳಿಕ ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳು ದೇವರ ದರ್ಶನ ಪಡೆದರು.  ವಿವಾದದ ಕೇಂದ್ರವಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಾಲ್ವರು ತೃತೀಯ ಲಿಂಗಿಗಳು ಪೂಜೆ ಸಲ್ಲಿಸಿದರು. ಮೊದಲು ಹಿಂದು ಕಾರ್ಯಕರ್ತರಿಂದ ತಡೆಯಲ್ಪಟ್ಟಿದ್ದ ನಾಲ್ವರು, ಪೊಲೀಸ್ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದರು. ಈವರೆಗೂ ೧೫ಕ್ಕೂ ಹೆಚ್ಚು ಮಹಿಳೆಯರು ಅಯ್ಯಪ್ಪಸ್ವಾಮಿ ದರ್ಶನಕ್ಕೆ ಯತ್ನಿಸಿದ್ದರು. ಆದರೆ, ಹಿಂದು ಕಾರ್ಯಕರ್ತರ ವಿರೋಧದಿಂದ ವಿಫಲರಾಗಿ ಹಿಂತಿರುಗಿದ್ದರು. ಇದೀಗ ತೃತೀಯ ಲಿಂಗಿಗಳು, ಕೇರಳ ಹೈಕೋರ್ಟ್ ನಿಯೋಜಿತ ಡಿಜಿಪಿ . ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಭೇಟಿ ಬಳಿಕ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶಬರಿಮಲೆ ದೇಗುಲಕ್ಕೆ ೧೦ರಿಂದ ೫೦ ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಬಗ್ಗೆ ಸೆಪ್ಟೆಂಬರ್ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಆದೇಶ ಹೊರಡಿ ಸಿತ್ತು. ಬಗ್ಗೆ ಮೇಲ್ಮನವಿ ಸಲ್ಲಿಸಿದ್ದ ಹಿಂದು ಕಾರ್ಯಕರ್ತರು ಮತ್ತು ಶಬರಿಮಲೆ ಭಕ್ತರ ಅರ್ಜಿಯನ್ನು ಜನವರಿಗೆ ಮುಂದೂಡಿರುವುದ ರಿಂದ ಸದ್ಯಕ್ಕೆ ಎಲ್ಲ ವಯೋಮಾನದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಹಿಂದು ಕಾರ್ಯಕರ್ತರು ಶಬರಿ ಮಲೆ ಬೆಟ್ಟಕ್ಕೆ ಮಹಿಳೆಯರು ಪ್ರವೇಶಿಸದಂತೆ ತಡೆ ಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರು ಬೆಟ್ಟ ಹತ್ತಲು ಸಾಧ್ಯವಾಗಲಿಲ್ಲ. ಇದೀಗ, ನಾಲ್ವರು ತೃತೀಯ ಲಿಂಗಿಗಳು ಅಯ್ಯಪ್ಪಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದರು. ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕಾ ಎಂಬ ತೃತೀಯ ಲಿಂಗಿಗಳು ಶಬರಿಮ ಲೆಯ ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತು ಬೆಟ್ಟ ಹತ್ತಿದರು.

2018: ನವದೆಹಲಿ: ಸಿಖ್ಖರ ವಿರೋಧಿ ದಂಗೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಸಜ್ಜನ್ ಕುಮಾರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಬಗ್ಗೆ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದರು. ದೆಹಲಿ ನ್ಯಾಯಾಲಯ ನನ್ನ ವಿರುದ್ಧ ನೀಡಿದ ತೀರ್ಪಿನಿಂದ ಎಚ್ಚೆತ್ತ ನಾನು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನ ಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದು, ಇದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾಡಿ ಎಂದು ಪತ್ರದಲ್ಲಿ ತಿಳಿಸಿದರು. ೭೩ ವರ್ಷದ ಸಜ್ಜನ್ ಕುಮಾರ್ ನಾಲ್ಕು ದಶಕಗಳಿಂದ ಕಾಂಗ್ರೆಸ್ನಲ್ಲಿದ್ದಾರೆ. ಸಿಖ್ ಗಲಭೆಯ ಆರೋಪ ಅವರ ಮೇಲೆ ಕೇಳಿ ಬಂದ ನಂತರ ಪಕ್ಷ ಅವರನ್ನು ಕಡೆಗಣಿಸಿತ್ತು.

2018: ನವದೆಹಲಿ: ರೈತರ ಸಾಲ ಮನ್ನಾ ಮಾಡುವವ ರೆಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಿದ್ರೆ ಮಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಹೇಳಿದರು. ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ಗಂಟೆಯ ಒಳಗಾಗಿ ರೈತರ ಸಾಲಮನ್ನಾ ಮಾಡಿದೆ. ಮೂಲಕ ಆದರ್ಶವಾಗಿದೆ. ಎರಡು ರಾಜ್ಯಗಳನ್ನೇ ಉದಾಹರಣೆಯಾಗಿಟ್ಟುಕೊಂಡು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ರೈತರ ಸಾಲಮನ್ನಾ ಮಾಡಬೇಕು" ಎಂದು ರಾಹುಲ್ ಗಾಂಧಿ ಹೇಳಿದರು. ಕಾಂಗ್ರೆಸ್ ಆಡಳಿತದ ಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ನಾವು ಸಾಲಮನ್ನಾ ಮಾಡುತ್ತೇವೆ ಎಂದು ಅವರು ಅಭಯ ಸಹ ನೀಡಿದರು. ಪ್ರಧಾನಿ ಮೋದಿಯವರು ಇಬ್ಬಗೆಯ ಭಾರತ ನಿರ್ಮಾಣ ಮಾಡುತ್ತಿದ್ದಾರೆ. ಒಂದು ರೈತರು, ಬಡವರು, ಯುವಕರು ಮತ್ತು ಇನ್ನಿತರ ಸಣ್ಣ ಉದ್ಯಮಿಗಳು. ಇನ್ನೊಂದು ಭಾರತದಲ್ಲಿ ದೇಶದ ಅಗ್ರ ೧೫ ಉದ್ಯಮಿಗಳನ್ನು ಅವರು ಬೆಳೆಸುತ್ತಿದ್ದಾರೆ ಎಂದು ಅವರು ದೂರಿದರು. ರೈತರ ಸಾಲ ಮನ್ನಾ ಮಾಡುವವರೆಗೂ ಪ್ರಧಾನಿ ಮೋದಿಯವರನ್ನು ನಿದ್ರೆ ಮಾಡಲು ಬಿಡುವುದಿಲ್ಲ. ರೈತರ ಸಾಲ ಮನ್ನಾ ಮಾಡು ವಂತೆ ಸರ್ವ ಪಕ್ಷಗಳೂ ಒಗ್ಗೂಡಿ ಆಗ್ರಹ ಮಾಡ ಲಿವೆ. ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರಧಾನ ಮಂತ್ರಿಗಳು ರೈತರ ಒಂದು ಪೈಸೆಯನ್ನೂ ಮನ್ನಾ ಮಾಡಿಲ್ಲ ಎಂದು ಹೇಳಿದರು. ರಫೇಲ್ ಕುರಿತು ಜಂಟಿ ಸಂಸದೀಯ ಸಮಿತಿ ಯಿಂದ ತನಿಖೆ ನಡೆಸದಿರುವುದು, ರೈತರ ಸಾಲ ಮನ್ನಾ ಮಾಡದಿರುವುದು, ನೋಟು ನಿ? ದಂತಹ ತಪ್ಪುಗಳನ್ನು ಸರ್ಕಾರ ಮಾಡಿದೆ. ಜನರಿಗೆ ಸಾಕಷ್ಟು ಸುಳ್ಳುಗಳನ್ನೂ ಹೇಳಿದೆ. ರೈತರು, ಸಣ್ಣ ವ್ಯಾಪಾರಿಗಳನ್ನು ಲೂಟಿ ಮಾಡಿದೆ. ನೋಟು ನಿಷೇಧದ ಮೂಲಕ ಇಡೀ ವಿಶ್ವದಲ್ಲಿಯೇ ಅತೀ ದೊಡ್ಡ ಹಗರಣವನ್ನು ಸರ್ಕಾರ ಮಾಡಿದೆ. ೧೯೮೪ರ ಸಿಖ್ ವಿರೋಧಿ ಕಲಭೆಯಲ್ಲಿ ಸಜ್ಜನ್ ಕುಮಾರ್ ದೋಷಿಯಾಗಿದ್ದಾರೆ. ಪ್ರಕರಣದ ಬಗ್ಗೆ ನಾನು ಈಗಾಗಲೇ ಸ್ಪಷ್ಟನೆಗಳನ್ನೂ ನೀಡಿದ್ದೇನೆ. ಪ್ರಸ್ತುತದ ಸುದ್ದಿಗೋಷ್ಠಿ ದೇಶದ ರೈತರಿಗೆ ಸಂಬಂಧಿಸಿದ್ದು. ರೈತರ ಪೈಸೆಯನ್ನೂ ಮನ್ನಾ ಮಾಡುವುದಿಲ್ಲ ಎಂದು ಮೋದಿಯವರು ಹೇಳಿದ್ದಾರೆಂದು ತಿಳಿಸಿದರು. 
2017: ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಪಾಲಿಗೆ ಪ್ರತಿಷ್ಠೆ ಮತ್ತು ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿ ಅವರ ಪಾಲಿಗೆ ಅಗ್ನಿ ಪರೀಕ್ಷೆಯಾಗಿದ್ದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯ ಗಳಿಸಿತು. ಗುಜರಾತಿನಲ್ಲಿ ಸತತ ನೇ ಬಾರಿಗೆ ಗದ್ದುಗೆಯನ್ನು ವಶಪಡಿಸಿಕೊಂಡು ಬಿಜೆಪಿ ಹ್ಯಾಟಿಕ್ ಭಾರಿಸಿದೆಯಾದರೂ, ಒಟ್ಟು ಸ್ಥಾನ ಹಾಗೂ ಮತಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತು. ಎರಡು ದಶಕಗಳಿಗೂ ಹೆಚ್ಚು ಕಾಲ ವಿರೋಧ ಪಕ್ಷದ ಸ್ಥಾನದಲ್ಲಿ  ಕುಳಿತಿದ್ದ ಕಾಂಗ್ರೆಸ್ ಬಾರಿ ಶತಾಯಗತಾಯ ಅಧಿಕಾರ ಹಿಡಿಯಲು ಯತ್ನಿಸಿ, ಪರಾಭವ ಅನುಭವಿಸಿದ್ದರೂ ತನ್ನ ಸ್ಥಾನ ಹಾಗೂ ಮತಗಳನ್ನು ಹೆಚ್ಚಿಸಿಕೊಂಡು ಅಲ್ಪ ಸಾಧನೆಗೆ ತೃಪ್ತಿ ಪಟ್ಟಿತು. ಹಿಮಾಚಲ ಪ್ರದೇಶದಲ್ಲಿ ಅಧಿಕಾರಾರೂಢ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಅಧಿಕಾರವನ್ನು ಕಿತ್ತುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಇದರೊಂದಿಗೆ ಹಿಮದ ನಾಡಿನಲ್ಲೂ  ಕಮಲ ಅರಳಿತು. ಗುಜರಾತ್ ವಿಧಾನಸಭೆಯ ೧೮೨ ಸ್ಥಾನಗಳ ಪೈಕಿ ೯೯ ಸ್ಥಾನಗಳನ್ನು ಬಾರಿ ಬಿಜೆಪಿ ಗೆದ್ದಿತು. ಕಾಂಗ್ರೆಸ್ ಪಕ್ಷ ೮೦ ಸ್ಥಾನಗಳನ್ನು ಗೆದ್ದಿದ್ದು, ಇತರರು ಮೂರು ಸ್ಥಾನಗಳನ್ನು ಗೆದ್ದರು. ೨೦೧೨ರ ಚುನಾವಣೆಯಲ್ಲಿ ಬಿಜೆಪಿ ೧೧೫ ಸ್ಥಾನಗಳನ್ನು ಗೆದ್ದಿದ್ದು, ಬಾರಿ ಅದರ ಸ್ಥಾನಗಳ ಸಂಖ್ಯೆ ೧೬ರಷ್ಟು ಕುಗ್ಗಿತು.  ೨೦೧೨ರ ಚುನಾವಣೆಯಲ್ಲಿ ೬೧ ಸ್ಥಾನಗಳನ್ನು ಗೆದ್ದಿದ್ದ ಕಾಂಗೆಸ್ ಬಾರಿ ೮೦ ಸ್ಥಾನಗಳನ್ನು ಗೆದ್ದು ಸ್ಥಾನ ಬಲವನ್ನು ೧೯ರಷ್ಟು ಹೆಚ್ಚಿಸಿಕೊಂಡಿತು. ೨೦೧೨ರಲ್ಲಿ ೬ರಷ್ಟಿದ್ದ ಇತರರ ಬಲ ಬಾರಿ ೩ಕ್ಕೆ ಕುಸಿಯಿತು. ಕುಸಿದ ಬಿಜೆಪಿ ಮತ: ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಶೇ ೬೦ ರಷ್ಟು ಗುಜರಾತಿಗರ ಮತಗಳನ್ನು ಸೆಳೆದಿದ್ದ ಬಿಜೆಪಿ, ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಶೇ ೪೯. ರಷ್ಟು ಮತಗಳನ್ನು ಮಾತ್ರ ಗಳಿಸಿತು. ಕಳೆದ ಮೂರು ವರ್ಷದಲ್ಲಿ ಬಿಜೆಪಿಯ ಮತಗಳಿಕೆ ಪ್ರಮಾಣ ಕಡಿಮೆಯಾಯಿತು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹೆಚ್ಚು ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಶೇ ೩೩ ರಷ್ಟು ಮತಗಳನ್ನು ಗಳಿಸಲು ಶಕ್ತವಾಗಿದ್ದ ಕಾಂಗ್ರೆಸ್, ಬಾರಿ ಶೇ ೪೧. ರಷ್ಟು ಮತಗಳನ್ನು ಕಲೆಹಾಕಿತು. ೨೦೧೨ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶೇ ೩೯ ರಷ್ಟು ಮತಗಳನ್ನು ಪಡೆದಿತ್ತು. ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಗುಜರಾತಿನಲ್ಲಿ ಕಾಂಗ್ರೆಸ್ ತನ್ನ ಇರುವಿಕೆಯನ್ನು ಮತ್ತೆ ವಿಸ್ತರಿಸುತ್ತಿರುವುದು ಸ್ಪಷ್ಟವಾಯಿತು. ಇಂದಿನ ಫಲಿತಾಂಶದಲ್ಲಿ ಶೇ . ರಷ್ಟು ಮತಗಳನ್ನು ಪಕ್ಷೇತರರು ಪಡೆದರು. ಶೇ . ರಷ್ಟು ಮತದಾರರು ನೋಟಾ (ಯಾವುದೇ ಅಭ್ಯರ್ಥಿಗೆ ಮತ ಇಲ್ಲ) ಆಯ್ಕೆಯನ್ನು ಆಯ್ದುಕೊಂಡರು. ಮತ ಎಣಿಕೆ ಆರಂಭವಾದಾಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇತ್ತು. ಒಂದು ಹಂತದಲ್ಲಿ ಉಭಯ ಪಕ್ಷಗಳು ಬಹುತೇಕ ಒಂದೇ ವೇಗದಲ್ಲಿ ಮುನ್ನಡೆ ಪಡೆದಿದ್ದವು. ನಂತರದ ಸುತ್ತುಗಳ ಮತ ಎಣಿಕೆಯಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡು ಅಂತಿಮವಾಗಿ ಗೆಲುವಿನ ನಗೆ ಬೀರಿತು. ಸುಳ್ಳಾದ ಸಮೀಕ್ಷೆ: ಬಿಜೆಪಿ ಸಲದ ಚುನಾವಣೆಯಲ್ಲಿ ೧೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಸ್ಥಾನಗಳನ್ನು ಗೆಲ್ಲುವುದಾಗಿ ಹಲವಾರು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಸಮೀಕ್ಷೆಗಳು ಸುಳ್ಳಾದವು. ೧೮೨ ಸಂಖ್ಯಾಬಲದ ಸದನದಲಿ ೯೨ಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಬಹುಮತ ಸಾಧಿಸಿದ್ದರೂ, ಬಿಜೆಪಿಗೆ ಬಾರಿ ಶತಕದ ಗುರಿಯನ್ನು ಸಾಧಿಸಲಾಗಲಿಲ್ಲ. ಹಿಮಾಚಲ ಪ್ರದೇಶ: ೬೮ ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ  ಬಾರಿ ೪೪ ಸ್ಥಾನಗಳನ್ನು  ಗೆದ್ದಿತು. ೨೦೧೨ರಲ್ಲಿ ಅದು ಗಳಿಸಿದ್ದ  ಸ್ಥಾನಗಳ ಸಂಖ್ಯೆ ಕೇವಲ ೨೬. ಬಾರಿ ಅದು ಸ್ಥಾನಬಲವನ್ನು ೧೮ರಷ್ಟು ಹೆಚ್ಚಿಸಿಕೊಂಡಿತು.  ಬಾರಿ ೨೧ ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ೨೦೧೨ರಲ್ಲಿ ೩೬ ಸ್ಥಾನಗಳನ್ನು ಗೆದ್ದಿತ್ತು. ಅದರ ಸ್ಥಾನಬಲ ಐದು ವರ್ಷಗಳಲ್ಲಿ  ೧೫ರಷ್ಟು ತಗ್ಗಿತು. ೨೦೧೨ರಲ್ಲಿ ೬ರಷ್ಟಿದ್ದ ಇತರರ ಬಲ ಬಾರಿ ೩ಕ್ಕೆ ಇಳಿಯಿತು. ಹಗರಣಗಳ ಸುಳಿಯಲ್ಲಿ ಸಿಲುಕಿ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋದ ಕಾಂಗ್ರೆಸ್ ಮತ್ತೊಂದು ರಾಜ್ಯದ ಮೇಲಿದ್ದ ಹಿಡಿತವನ್ನು ಬಿಟ್ಟುಕೊಟ್ಟಿತು. ಬಿಜೆಪಿ ಭಾರಿ ಜಯ ಗಳಿಸಿದರೂ, ಅದರ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಪರಾಜಿತರಾದರು. ಹಿಮಾಚಲ ಪ್ರದೇಶ ವಿಧಾನಸಭೆಯ ೬೮ ಸ್ಥಾನಗಳಿಗಾಗಿ ನಡೆದ ಚುನಾವಣೆಯ ಮತಗಳನ್ನು ಮತದಾನದ ೪೦ ದಿನಗಳ ಬಳಿಕ೪೮ ಕೇಂದ್ರಗಳಲ್ಲಿ ಎಣಿಕೆ ಮಾಡಲಾಯಿತು. ಮತಗಟ್ಟೆ ಸಮೀಕ್ಷೆಗಳು ಬಾರಿ ಬಿಜೆಪಿಯ ಕಮಲ ಅರಳುವ ಬಗ್ಗೆ ಭವಿಷ್ಯ ನುಡಿದಿದ್ದವು. ೬೮ ಸ್ಥಾನಗಳಿಗಾಗಿ ಒಟ್ಟು ೩೭೭ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೆ, ಬಿಎಸ್ಪಿ ೪೨ ಸ್ಥಾನಗಳಿಗೆ ಮತ್ತು ಸಿಪಿಐ (ಎಂ) ೧೪ ಸ್ಥಾನಗಳಿಗೆ ಸ್ಪರ್ಧಿಸಿದ್ದವು. ಸ್ವಾಭಿಮಾನ್ ಪಕ್ಷಮತ್ತು ಲೋಕ ಗಠಬಂಧನ್ ಪಕ್ಷ ತಲಾ ಸ್ಥಾನಗಳಿಗೂ, ಸಿಪಿಐ ಸ್ಥಾನಕ್ಕೂ ಸ್ಪರ್ಧಿಸಿದ್ದವು. ಗುಡ್ಡಗಾಡು ರಾಜ್ಯದಲ್ಲಿ ಶೇಕಡಾ ೭೫.೨೮ರಷ್ಟು ಮತದಾನವಾಗಿತ್ತು.

2017: ನವದೆಹಲಿ: ಗುಜರಾತಿನಲ್ಲಿ ಸತತ ೬ನೇ ಅವಧಿಗೆ ಗದ್ದುಗೆ ವಶ ಮತ್ತು  ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ ಅಧಿಕಾರ ಕಿತ್ತು ಕೊಳ್ಳುವುದರೊಂದಿಗೆ ಭಾರತೀಯ ಜನತಾ ಪಕ್ಷವು ಈಗ ರಾಷ್ಟ್ರದ ೨೯ ರಾಜ್ಯಗಳ ಪೈಕಿ ೧೯ ರಾಜ್ಯಗಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಭಾರತದಲ್ಲಿ ಹಿಂದೆಂದೂ ಯಾವುದೇ ಒಂದು ರಾಜಕೀಯ ಪಕ್ಷ ಇಷ್ಟೊಂದು ರಾಜ್ಯಗಳನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರಲಿಲ್ಲ. ಕಾಂಗ್ರೆಸ್ ೨೪ ವರ್ಷಗಳ ಹಿಂದೆ  ೧೮ ರಾಜ್ಯಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿತ್ತು. ೧೯೯೩ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಬಲಾಢ್ಯ ಪಕ್ಷವಾಗಿದ್ದಾಗ, ಪಕ್ಷವು ೨೬ ರಾಜ್ಯಗಳ ಪೈಕಿ ೧೫ ರಾಜ್ಯಗಳನ್ನು ತನ್ನ ನೇರ ನಿಯಂತ್ರಣದಲ್ಲೂ ಒಂದು ರಾಜ್ಯವನ್ನು ಮೈತ್ರಿಕೂಟದ ಮೂಲಕವೂ ನಿಯಂತ್ರಣದಲ್ಲಿ ಇಟ್ಟುಕೊಂಡಿತ್ತು. ಇತರ ಎರಡು ರಾಜ್ಯಗಳು ಸಿಪಿಐ(ಎಂ) ವಶದಲ್ಲಿ ಇದ್ದವು. ಸಿಪಿಐ(ಎಂ) ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಹೊರಗಿನಿಂದ  ಬೆಂಬಲ ನೀಡಿತ್ತು. ಈಗ, ಬಿಜೆಪಿ ಇಲ್ಲವೇ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಯಾವುದಾದರೂ ಒಂದು ಅಂಗ ಪಕ್ಷ ಒಟ್ಟು ೧೯ ರಾಜ್ಯಗಳಲ್ಲಿ ನಿಯಂತ್ರಣ ಹೊಂದಿವೆ. ಸಾಧನೆಯ ಬಹುತೇಕ ಯಶಸ್ಸು  ೨೦೧೪ರಲ್ಲಿ ಅಧಿಕಾರಕ್ಕೆ  ಬಂದ ಪ್ರಧಾನಿ ನರೇಂದ್ರ  ಮೋದಿ ಅವರಿಗೆ ಸಲ್ಲುತ್ತದೆ. ಬಳಿಕ ಅವರು ಪ್ರಮುಖ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿಯ ನೇತ್ವತ್ವ ವಹಿಸಿ ಪ್ರಮುಖ ವಿಜಯ ಸಾಧನೆ ಜೊತೆಗೆ ಪಕ್ಷದ ನೆಲೆಯನ್ನು ವಿಸ್ತರಿಸಿದರು. ೨೦೧೪ರ ಮಹಾ ಚುನಾವಣೆಯಲ್ಲಿ ವಿಜಯ ಗಳಿಸುವುದಕ್ಕೆ ಮುನ್ನ ಬಿಜೆಪಿಯು ಗುಜರಾತ್, ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್ ಗಢ  ಮತ್ತು ನಾಗಾಲ್ಯಾಂಡ್ ಐದು ರಾಜ್ಯಗಳಲ್ಲಿ ಮಾತ್ರ ಅಧಿಕಾರದಲ್ಲಿ ಇತ್ತು. ಪ್ರಚಂಡ ಬಹುಮತದೊಂದಿಗೆ ೨೦೧೪ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ  ಬಿಜೆಪಿ, ನಂತರ ಬಂದ  ಪ್ರಮುಖ ರಾಜ್ಯ ಚುನಾವಣೆಗಳಲ್ಲಿ  ತನ್ನ ವಿಜಯದ ನಾಗಾಲೋಟವನ್ನು ಮುಂದುವರೆಸಿತುಬಿಜೆಪಿಯ ಮಿತ್ರ ಪಕ್ಷ  ಸಿಕ್ಕಿಂ ಡೆಮಾಕ್ರಾಟಿಕ್  ಫ್ರಂಟ್ (ಎಸ್ ಡಿ ಎಫ್) ಲೋಕಸಭಾ ಚುನಾವಣೆ ಜೊತೆಗೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯವನ್ನು ತನ್ನ ಕೈಯಲ್ಲೇ ಉಳಿಸಿಕೊಂಡಿತು. ಬಿಜೆಪಿಯ ಇನ್ನೊಂದು ಮಿತ್ರ ಪಕ್ಷ ತೆಲುಗು ದೇಶಂ (ಟಿಡಿಪಿ) ವಿಭಜನೆ ಹೊಂದಿದ ಆಂಧ್ರ ಪ್ರದೇಶದಲ್ಲಿ ಚೊಚ್ಚಲ ಸರ್ಕಾರವನ್ನು ರಚಿಸಿತು. ೨೮೮ ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ೧೨೨ ಸ್ಥಾನಗಳನ್ನು ಗೆದ್ದ  ಬಿಜೆಪಿಯು  ಎನ್ ಡಿಎ ಅಂಗ ಪಕ್ಷ ಶಿವಸೇನೆ ಜೊತೆಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು  ರಾಜ್ಯದಲ್ಲಿ ಸರ್ಕಾರ ರಚಿಸಿತು. ಪಕ್ಷವು ಬಳಿಕ ಹರಿಯಾಣದಲ್ಲಿ ಅಧಿಕಾರಕ್ಕೆ ಬಂತು. ಇದಾದ ಸ್ವಲ್ಪ ಸಮಯದಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಜೊತೆ ಸೇರಿ ಜಾರ್ಖಂಡ್  ರಾಜ್ಯದಲ್ಲೂ ಅಧಿಕಾರದ ಚುಕ್ಕಾಣಿ ಹಿಡಿಯಿತು. ೨೦೧೪ರಲ್ಲಿ ಪಕ್ಷವು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲೂ ಪ್ರಬಲಗೊಂಡಿತು. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (ಪಿಡಿಪಿ) ಜೊತೆಗೆ ಚುನಾವಣೋತ್ತರ ಮೈತ್ರಿ ಸಾಧಿಸಿಕೊಂಡು ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಅಧಿಕಾರಕ್ಕೆ  ಬಂತು.
ಏನಿದ್ದರೂ ೨೦೧೫ರಲ್ಲಿ ಬಿಜೆಪಿ ಎರಡು ಪ್ರಮುಖ ಹಿನ್ನಡೆಗಳನ್ನು ಅನುಭವಿಸಿತು. ದೆಹಲಿ ಮತ್ತು  ಬಿಹಾರದಲ್ಲಿ ಅದಕ್ಕೆ ಭಾರಿ ಪರಾಭವ ಉಂಟಾಯಿತು. ಆದರೆ ಅಚ್ಚರಿದಾಯಕ ರಾಜಕೀಯ ಹೆಜ್ಜೆ ಇರಿಸಿದ ಬಿಜೆಪಿ ನಿತೀಶ್ ಕುಮಾರ್ ನೇತೃತ್ವದ ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿ ಸಾಧಿಸಿ, ಅದಕ್ಕೆ ರಾಜ್ಯದಲ್ಲಿ ನಿಯಂತ್ರಣ ಹೊಂದಲು ನೆರವಾಯಿತು. ಬಿಜೆಪಿ ಜೊತೆ ಸೇರಿ ಹೊಸ ಸರ್ಕಾರ ರಚಿಸಿದ ನಿತೀಶ್ ಕುಮಾರ್ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗಳಿಸಿದರು. ೧೩೧ ಶಾಸಕರು ನಿತೀಶ್ ಪರ ಮತದಾನ ಮಾಡಿದರು. ೨೦೧೬ರಲ್ಲಿ ಬಿಜೆಪಿಯು ಅಸ್ಸಾಮಿನಲ್ಲಿ ಕಾಂಗ್ರೆಸ್ಸಿನ ೧೫ ವರ್ಷಗಳ ಆಡಳಿತಕ್ಕೆ ಮಂಗಳ ಹಾಡಿತು. ೧೨೬ ಸ್ಥಾನಗಳ ಪೈಕಿ ೬೦ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ೨೦೧೬ರ ಸೆಪ್ಟೆಂಬರಿನಲ್ಲಿ ಅರುಣಾಚಲ ಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ೪೭ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು. ಶಾಸಕರು ಸದನದಲ್ಲಿ ಬಹುಮತ ಸಾಬೀತು ಪಡಿಸುವ ಮೂಲಕ  ರಾಜ್ಯದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ನೆರವಾದರು. ಆದರೆ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ಮೂರು ರಾಜ್ಯಗಳ ಚುನಾವಣೆಯಲ್ಲಿ ತನ್ನ ಹೆಜ್ಜೆ ಗುರುತು ಮೂಡಿಸುವಲ್ಲಿ ಬಿಜೆಪಿ ವಿಫಲವಾಯಿತು. ೨೦೧೭ರಲ್ಲಿ ಹಲವು ಕಡೆಗಳಲ್ಲಿ ಯಶಸ್ಸು ಸಾಧಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಪಕ್ಷವು ಉತ್ತರಾಖಂಡವನ್ನು ವಶಕ್ಕೆ ತೆಗೆದುಕೊಂಡರೆ, ಉತ್ತರ ಪ್ರದೇಶದಲ್ಲಿ ಪ್ರಚಂಡ ಬಹುಮತ ಸಾಧಿಸಿತು. ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್ಸಿಗಿಂತ ಕಡಿಮೆ ಸ್ಥಾನ ಗಳಿಸಿದರೂ ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರ ಜೊತೆಗೆ ಮೈತ್ರಿ ಸಾಧಿಸಿಕೊಂಡು ಉಭಯ ರಾಜ್ಯಗಳಲ್ಲೂ ಸರ್ಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ೨೦೧೭ ಬಿಜೆಪಿಗೆ ಪಂಜಾಬ್ ಸೋಲುಣಿಸಿದ ವರ್ಷವೂ ಹೌದು. ಶಿರೋಮಣಿ ಅಕಾಲಿದಳ (ಎಸ್ ಎಡಿ) ಜೊತೆಗೆ ಮೈತ್ರಿಕೂಟ ರಚಿಸಿ ಸತತ ಎರಡು ಬಾರಿ ಅಧಿಕಾರಕ್ಕೆ ಏರಿದ್ದ ಬಿಜೆಪಿ, ಕಾಂಗ್ರೆಸ್ಸಿನಿಂದ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡಿತು. ಈಗ ಬಿಜೆಪಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳನ್ನು ಗೆದ್ದುಕೊಂಡಿತು. ಇನ್ನೀಗ ಅದು ೨೦೧೮ರಲ್ಲಿ ಚುನಾವಣೆ ನಡೆಯಲಿರುವ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ಕರ್ನಾಟಕರಾಜಸ್ಥಾನ, ಛತ್ತೀಸ್ ಗಢ ಮತ್ತು ಮಿಜೋರಂ ರಾಜ್ಯಗಳತ್ತ ತನ್ನ ದೃಷ್ಟಿ ಹರಿಸಲಿದೆ. ‘ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸುವ ಸಲುವಾಗಿ ದಕ್ಷಿಣ ಮತ್ತು ಪೂರ್ವದ ರಾಜ್ಯಗಳಲ್ಲಿ ಬಿಜೆಪಿ ದಾಂಗುಡಿ ಇಡುವುದೇ ಅಥವಾ ಅದಕ್ಕೆ ತಡೆ ಹಾಕುವ ಹೋರಾಟವನ್ನು ಕಾಂಗ್ರೆಸ್ ಗುಜರಾತಿನಲ್ಲಿ ಆರಂಭಿಸಿದೆಯೇ ಎಂಬುದನ್ನು ಕಾದು ನೋಡಬೇಕಷ್ಟೆ

2017: ನವದೆಹಲಿ: ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಗುಜರಾತಿನ ಬಹುತೇಕ ಹಾಲಿ ಸಚಿವರು ತಮ್ಮ ಸ್ಥಾನಗಳನ್ನು ಗೆದ್ದರು. ಆದರೆ ಹಿಮಾಚಲ ಪ್ರದೇಶದಲ್ಲಿ ಬಹುತೇಕ ಸಚಿವರು ಬಿಜೆಪಿ ಅಭ್ಯರ್ಥಿಗಳಿಂದ ದೂಳೀಪಟಗೊಂಡರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ತಮ್ಮ ರಾಜಕೋಟ್ ಸ್ಥಾನವನ್ನು ಗೆದ್ದರು. ನರೇಂದ್ರ ಮೋದಿ ಅವರು ಹಿಂದೆ ಪ್ರತಿನಿಧಿಸುತ್ತಿದ್ದ ಸ್ಥಾನವನ್ನು ರೂಪಾನಿ ಅವರು ೨೫,೦೦೦ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದುಕೊಂಡರು. ಉಪ ಮುಖ್ಯಮಂತ್ರಿ, ವಿತ್ತ ಹಾಗೂ ನಗರಾಭಿವೃದ್ಧಿ ಸಚಿವ ನಿತಿನ್ ಭಾಯಿ ಪಟೇಲ್ ಅವರು ಮೆಹ್ಸಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೀವಭಾಯಿ ಪಟೇಲ್ ಅವರನ್ನು ಹಿಂದಿಕ್ಕಿದರು. ಪ್ರವಾಸೋದ್ಯಮ ಮತ್ತು ಬುಡಕಟ್ಟು ಕಲ್ಯಾಣ ಸಚಿವ ಗಣಪತ್ ವಾಸವ ಅವರು ಮಂಗ್ರೋಲ್ (ಪರಿಶಿಷ್ಟ ವರ್ಗ) ಸ್ಥಾನವನ್ನು ಕಾಂಗ್ರೆಸ್ ಅಭ್ಯರ್ಥಿಯನ್ನು ೪೦,೦೦೦ ಮತಗಳ ಅಂತರದಿಂದ ಸೋಲಿಸಿ ವಶಕ್ಕೆ ತೆಗೆದುಕೊಂಡರು. ಕಂದಾಯ ಹಾಗೂ ಶಿಕ್ಷಣ ಸಚಿವರಾದ ಭೂಪೇಂದ್ರ ಸಿನ್ಹ ಚುಡಾಸಾಮ ಅವರು ಧೋಲ್ಕಾದಲ್ಲಿ ವಿಜಯದ ಹಾದಿಯಲ್ಲಿ ಮುನ್ನಡೆದರು.  ಕೃಷಿ ಸಚಿವ ಚಿಮನ್ ಸಪರಾಯಿಯ ಅವರು ಜಮಜಾವೊಧ್ ಪುರದಲ್ಲಿ ಕಾಂಗ್ರೆಸ್ಸಿನ ಚಿರಾಗ್ ಕಲರಿಯ ಅವರಿಗೆ ತನ್ನ ಸ್ಥಾನವನ್ನು ಬಿಟ್ಟುಕೊಟ್ಟರು. ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವ ಆತ್ಮಾರಾಮ್ ಪರ್ಮಾರ್ ಕೂಡಾ ತಮ್ಮ ಗಧಾದ ಸ್ಥಾನವನ್ನು ಕಾಂಗೆಸ್ ಅಭ್ಯರ್ಥಿ ಪ್ರವೀಣ್ ಮರು ಅವರಿಗೆ ಒಪ್ಪಿಸಿದರು. ನೀರು ಸರಬರಾಜು ಸಚಿವ ಬಾಬುಭಾಯಿ ಬೊಖಿರಿಯ ಅವರು ಪೋರ್ ಬಂದರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅರ್ಜುನ್ ಮೊಧವಾಡಿಯ ವಿರುದ್ಧ  ೨೦೦೦ ಮತಗಳ ಅಂತದಲ್ಲಿ ಜಯ ಸಾಧಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಯೇಶ್ ರಾದಾದಿಯ ಅವರು ಜೇತ್ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರವಿ ಅಂಬಾಲಿಯ  ಅವರನ್ನು ಹಿಂದಿಕ್ಕಿದರು. ಹಿಮಾಚಲ ಪ್ರದೇಶದಲ್ಲಿ: ಹಿಮಾಚಲ ಪ್ರದೇಶದಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅರ್ಕಿ ಕ್ಷೇತ್ರದಲ್ಲಿ ಜಯಗಳಿಸಿದರು.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೌಲ್ ಸಿಂಗ್ ಥಾಕೂರ್ ಅವರು ದರಂಗ್ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಜವಾಹರ್ ಎದುರು ಕೇವಲ ೨೦೦೦ ಮತಗಳ ಅಂತರದಲ್ಲಿ ಕಳೆದುಕೊಂಡರುಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಎಸ್. ಬಾಲಿ  ವಿರುದ್ಧ ಬಿಜೆಪಿಯ ಅರುಣ್ ಕುಮಾರ್ ಮುನ್ನಡೆ ಸಾಧಿಸಿದರು. ಪಕ್ಷೇತರ ಸದಸ್ಯ ಬಲದೇವ್  ಥಾಕೂರ್  ಅವರು ಇಂಧನ ಸಚಿವ ಸುಜನ್ ಸಿಂಗ್  ಪಠಾನಿಯ ಅವರ ಫತೇಪುರ ಕ್ಷೇತ್ರವನ್ನು ಕಿತ್ತುಕೊಂಡರು. ಪಠಾನಿಯ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರು. ಬಿಜೆಪಿಯ  ಕೃಪಾಲ್ ಸಿಂಗ್ ಪರ್ಮಾರ್ ಎರಡನೇ ಸ್ಥಾನದಲ್ಲಿದ್ದರು. ಅರಣ್ಯ ಸಚಿವ ಥಾಕೂರ್ ಸಿಂಗ್ ಭರಮೌರಿ ಅವರು ಬಿಜೆಪಿ ಅಭ್ಯರ್ಥಿ ಜಿಯಾ ಲಾಲ್ ಅವರ ಎದುರು ಹಿಂದೆ ಬಿದ್ದರೆ, ಕೈಗಾರಿಕಾ ಸಚಿವ ಮುಖೇಶ್ ಅಗ್ನಿಹೋತ್ರಿ ಅವರು ಹರೋಲಿಯಲ್ಲಿ ಮುನ್ನಡೆ ಸಾಧಿಸಿದರು. ನಗರಾಭಿವೃದ್ಧಿ ಸಚಿವ ಸುಧೀರ್ ಶರ್ಮ ಅವರನ್ನು ಬಿಜೆಪಿಯ  ಕೃಷ್ಣನ್ ಕಪೂರ್ ಅವರು ಪರಾಭವಗೊಳಿಸಿ ಧರ್ಮಶಾಲ ಕ್ಷೇತ್ರವನ್ನು ಗೆದ್ದುಕೊಂಡರು. ಅಬಕಾರಿ ಸಚಿವ ಪ್ರಕಾಶ ಚೌಧರಿ ಅವರು ಬಲ್ಹ್ ಕ್ಷೇತ್ರದಲ್ಲಿ ಬಿಜೆಪಿಯ ಇಂದೆರ್ ಸಿಂಗ್ ಅವರಿಂದ ೧೦,೦೦೦ ಮತಗಳ ಅಂತರದಲ್ಲಿ ಸೋಲುಂಡರು. ಇತರ ಸೋಲು ಗೆಲುವುಗಳು: ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಪರಾಭವಗೊಂಡರು. ಗುಜರಾತಿನ ವಡಗಂ ಕ್ಷೇತ್ರದಲ್ಲಿ ಜಿಗ್ನೇಶ್ ಮೇವಾನಿ ಜಯ ಸಾಧಿಸಿದರು.        

2017: ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶಗಳು ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ರಾಜಕೀಯಕ್ಕೆ ಪ್ರಬಲ ಬೆಂಬಲದ ಸೂಚನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಉಭಯ ರಾಜ್ಯಗಳಲ್ಲಿ ಬಿಜೆಪಿ ವಿಜಯ ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸೂಚನೆಗಳು  ಬರುತ್ತಿದ್ದಂತೆಯೇ ಸರಣಿ ಟ್ವೀಟ್ ಗಳನ್ನು ಮಾಡಿದ ಪ್ರಧಾನಿ ಬಿಜೆಪಿ ಮೇಲಿನ ಆತ್ಮೀಯತೆ ಮತ್ತು ವಿಶ್ವಾಸಕ್ಕಾಗಿ ನಾನು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನರಿಗೆ ತಲೆಬಾಗುತ್ತೇನೆ. ಅಭಿವೃದ್ಧಿಯ ಹಾದಿಯಲ್ಲಿ ಅವಿರತ ಶ್ರಮ ವಹಿಸಿ ಮುಂದೆ ಸಾಗುತ್ತೇವೆ ಮತ್ತು ವಿಶ್ರಾಂತಿ ರಹಿತವಾಗಿ ಜನರ ಸೇವೆ ಮಾಡುವುದಾಗಿ ನಾನು ಭರವಸೆ ನೀಡುವೆ’ ಎಂದು ಪ್ರಧಾನಿ  ತಿಳಿಸಿದರು. ಉತ್ತಮ ಆಡಳಿತ  ಮತ್ತು ಅಭಿವೃದ್ಧಿ ರಾಜಕೀಯಕ್ಕೆ ಪ್ರಬಲ ಬೆಂಬಲ ಇದೆ ಎಂಬುದನ್ನೂ ಫಲಿತಾಂಶಗಳು ಸಾಬೀತು ಪಡಿಸಿವೆ ಎಂದೂ ಮೋದಿ ಹೇಳಿದರು. ‘ಈ ರಾಜ್ಯಗಳಲ್ಲಿ  ಕಠಿಣ ಶ್ರಮವಹಿಸಿದ ಬಿಜೆಪಿ ಕಾರ್ಯಕರ್ತರಿಗೆ ನಾನು ನಮಸ್ಕರಿಸುತ್ತೇನೆ. ಅವರ ಕಠಿಣ ಶ್ರಮ ಹೃದಯಸ್ಪರ್ಶಿ ವಿಜಯಗಳಿಗೆ ಕಾರಣವಾಗಿದೆ ಎಂದು ಅವರು ಟ್ವೀಟ್ ನಲ್ಲಿ ಬರೆದರು.  ಹಿಂದಿಯಲ್ಲಿ ಇನ್ನೊಂದು ಟ್ವೀಟ್ ಮಾಡಿದ ಪ್ರಧಾನಿ ಅಭಿವೃದ್ಧಿ ಗೆದ್ದಿದೆ ಎಂದು ಪ್ರತಿಕ್ರಿಯಿಸಿದರು. ಅಮಿತ್ ಶಾ ಪ್ರತಿಕ್ರಿಯೆ:  ಪ್ರಧಾನಿಯ ಅಭಿವೃದ್ಧಿ ಕಾರ್‍ಯಸೂಚಿಯು ಜಾತೀಯತೆ, ವಂಶಡಳಿತ ಮತ್ತು ತುಷ್ಟೀಕರಣವನ್ನು ಪರಾಭವಗೊಳಿಸಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯಿಸಿದರು.

2017: ನವದೆಹಲಿ: ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶಗಳು ಭಾರತೀಯ ಜನತಾ ಪಕ್ಷವು ಉಭಯ ರಾಜ್ಯಗಳಲ್ಲೂ ಬಹುಮತ ಸಾಧಿಸುವ ಸ್ಪಷ್ಟ ಸೂಚನೆ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟ್ಟರ್ ಸಂದೇಶದ ಮೂಲಕ ಪರಾಭವವನ್ನು ಒಪ್ಪಿಕೊಂಡರು ಮತ್ತು ಉಭಯ ರಾಜ್ಯಗಳ ನೂತನ ಸರ್ಕಾರಗಳನ್ನು ಅಭಿನಂದಿಸಿದರು. ‘ಕಾಂಗ್ರೆಸ್ ಪಕ್ಷವು ಜನರ ತೀರ್ಪನ್ನು ಸ್ವೀಕರಿಸುತ್ತದೆ ಮತ್ತು ಉಭಯ ರಾಜ್ಯಗಳ ನೂತನ ಸರ್ಕಾರಗಳನ್ನು ಅಭಿನಂದಿಸುತ್ತದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ‘ನನ್ನ ಮೇಲೆ ತೋರಿಸಿದ ಪ್ರೇಮಕ್ಕಾಗಿ ನಾನು ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದೂ ಅವರು ತಿಳಿಸಿದರು. ಕಾರ್ಯಕರ್ತರ ಶ್ಲಾಘನೆ: ಚುನಾವಣೆಯಲ್ಲಿ ಹೋರಾಟ ನಡೆಸಿದ ವೈಖರಿಗಾಗಿ ತಮ್ಮ ಪಕ್ಷದ ಕಾರ್ಯಕರ್ತರನ್ನು  ರಾಹುಲ್ ಶ್ಲಾಘಿಸಿದರು. ‘ಕಾಂಗ್ರೆಸ್ಸಿನ ನನ್ನ ಸಹೋದರರೇ ಮತ್ತು ಸಹೋದರಿಯರೇ, ನೀವು ನಾನು ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಿಮ್ಮೊಂದಿಗೆ ಹೋರಾಟ ನಡೆಸಿದವರಿಗಿಂತ ಭಿನ್ನವಾದ ಮಾರ್ಗದಲ್ಲಿ ನೀವು ಹೋರಾಟ ನಡೆಸಿದ್ದೀರಿ. ನಿಮ್ಮೊಂದಿಗೆ ಸಿಟ್ಟಿನಲ್ಲಿ ಹೋರಾಡಿದವರ ಜೊತೆ ನೀವು ಘನತೆಯಿಂದ ಹೋರಾಟ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷವು ತನ್ನ ಸಭ್ಯತೆ ಮತ್ತು ಶೌರ್ಯದ ಮಹಾನ್ ಶಕ್ತಿಯನ್ನು ಹೊಂದಿದೆ ಎಂಬುದನ್ನು ನೀವು ತೋರಿಸಿಕೊಟ್ಟಿದ್ದೀರಿ ಎಂದು ರಾಹುಲ್ ಟ್ವೀಟ್ ಮಾಡಿದರು. ಉಭಯ ರಾಜ್ಯಗಳ ಚುನಾವಣೆಯಲ್ಲಿ ವಿಶೇಷವಾಗಿ ಗುಜರಾತಿನಲ್ಲಿ ಅತ್ಯಂತ ಸಕ್ರಿಯವಾಗಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರ ನಡೆಸಿದ್ದರು. ಡಿಸೆಂಬರ್ ೧೬ರಂದು ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಬಿಜೆಪಿ ಸದಸ್ಯರನ್ನು ತಮ್ಮ ಸಹೋದರರು ಮತ್ತು ಸಹೋದರಿಯರು ಎಂಬುದಾಗಿ ಅವರು ಕರೆದಿದ್ದರು.

2017: ಮುಂಬೈ: ಅಂಧೇರಿ ಪೂರ್ವ ಭಾಗ ಪ್ರದೇಶದ  ಅಂಗಡಿಯೊಂದರಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ ಕನಿಷ್ಠ ೧೨ ಮಂದಿ ಸಾವನ್ನಪ್ಪಿ, ಇತರ ಅರ್ಧ ಡಜನ್ ಮಂದಿ ಬೆಂಕಿಯ ಮಧ್ಯೆ ಸಿಕ್ಕಿಹಾಕಿಕೊಂಡರು. ಬಾಂಬೆ  ಮೆಟ್ರೋಪಾಲಿಟನ್ ಕಾರ್ಪೋರೇಷನ್ (ಬಿಎಂಸಿ) ವಿಪತ್ತು ನಿಯಂತ್ರಣ ಕೇಂದ್ರದ ಪ್ರಕಾರ ಸಾಕಿನಾಕದ ಲಕ್ಷ್ಮೀನಾರಾಯಣ ಮಂದಿರ ಸಮೀಪದ ಖೈರಾನಿ  ರಸ್ತೆಯ ಭಾನು ಫರ್ಸಾನ್ ಅಂಗಡಿಯಲ್ಲಿ ಅಗ್ನಿ ದುರಂತ ಸಂಭವಿಸಿತು. ಅಗ್ನಿ ದುರಂತದಲ್ಲಿ ಅಂದಾಜು ೨೦೦ ಅಡಿ ವಿಸ್ತೀರ್ಣದಲ್ಲಿರುವ ಕಟ್ಟಡ ಕುಸಿದಿದ್ದು, ಮೂರು ಅಗ್ನಿಶಾಮಕ ವಾಹನಗಳು, ನಾಲ್ಕು ಜಂಬೋ ವಾಟರ್ ಟ್ಯಾಂಕರುಗಳು ಮತ್ತು ಆಂಬುಲೆನ್ಸ್ ಗಳು ಸ್ಥಳಕ್ಕೆ ಧಾವಿಸಿ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ಕೈಗೊಂಡು ಬೆಂಕಿಯನ್ನು ಆರಿಸಿದವು. ತಿನಸು, ಬಟ್ಟೆ ಮತ್ತು ಪೀಠೋಪಕರಣಗಳಿಗೆ ಬೆಂಕಿ ವ್ಯಾಪಿಸಿದ ಪರಿಣಾಮವಾಗಿ ಅಂಗಡಿಯ ಹಲವಾರು ಕೆಲಸಗಾರರು ಬೆಂಕಿ ಮಧ್ಯೆ ಸಿಕ್ಕಿಹಾಕಿಕೊಂಡರು ಎಂದು ಅಂಗಡಿ ಮಾಲೀಕರು ತಿಳಿಸಿದರು. ಅಗ್ನಿ ದುರಂತದ ಕಾರಣ ಸ್ಪಷ್ಟವಾಗಿಲ್ಲ. ಆದರೆ ಐದರಿಂದ ಆರು ಕೆಲಸಗಾರರು ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.

2017: ಕರಾಚಿ: ಇಸ್ರೇಲಿನ ರಾಜಧಾನಿಯಾಗಿ ಜೆರುಸಲೇಮ್ ಗೆ ಮಾನ್ಯತೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮದ ವಿರುದ್ಧ ಪಾಕಿಸ್ತಾನದ ಎರಡು ಪ್ರಮುಖ ನಗರಗಳಲ್ಲಿ ಸಹಸ್ರಾರು ಮಂದಿ ಇಸ್ಲಾಮೀಯರು ಭಾರಿ ಪ್ರತಿಭಟನೆ ನಡೆಸಿದರು. ಕರಾಚಿಯಲ್ಲಿ ಜಮಾತ್--ಇಸ್ಲಾಮೀ ಪಕ್ಷ ಮತ್ತು ಲಾಹೋರಿನಲ್ಲಿ ಇಸ್ಲಾಮಿಸ್ಟ್ ಹಫೀಜ್ ಸಯೀದ್ ಬೆಂಬಲಿಗರು ಟ್ರಂಪ್ ವಿರುದ್ಧ  ಭಾರಿ ಪ್ರತಿಭಟನೆ ನಡೆಸಿ ಪ್ಯಾಲೆಸ್ತೈನನ್ನು ಬೆಂಬಲಿಸಿದರುವಿಶ್ವಾದ್ಯಂತ ಮುಸ್ಲಿಮರನ್ನು ಸಿಟ್ಟಿಗೆಬ್ಬಿಸಿದ ಟ್ರಂಪ್ ಪ್ರಕಟಣೆ ಹೊರಬಿದ್ದಂದಿನಿಂದಲೂ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಿರಂತರ ನಡೆಯುತ್ತಲೇ ಇದ್ದವು. ಜೆರುಸಲೇಮ್ ವಿಮೋಚನೆಗಾಗಿ ವಿಶ್ವಾದ್ಯಂತದ ಮುಸ್ಲಿಮರು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಏಕತೆಯೊಂದಿಗೆ ಹೋರಾಡಬೇಕು ಎಂದು ಹಫೀಜ್ ಸಯೀದ್ ಕರೆ ನೀಡಿದರೆ, ಜಮಾಯತ್--ಇಸ್ಲಾಮೀ ಮುಖ್ಯಸ್ಥ ಸಿರಾಜುಲ್ ಹಕ್ ಅವರು  ಜೆರುಸಲೇಮ್ ಕುರಿತ ತನ್ನ ನಿರ್ಧಾರವನ್ನು ಅಮೆರಿಕ ಮರುಪರಿಶೀಲಿಸುವವರೆಗೆ ಅದರ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಗಳನ್ನು ಅಮಾನತುಗೊಳಿಸುವಂತೆ ಮುಸ್ಲಿಮ್ ರಾಷ್ಟ್ರಗಳನ್ನು ಆಗ್ರಹಿಸಿದರುಮುಸ್ಲಿಮ್ ಬಾಹುಳ್ಯದ ಪಾಕಿಸ್ತಾನ ಪ್ಯಾಲೆಸ್ತೀನಿಯನ್ನರಿಗೆ ತನ್ನ ಬೆಂಬಲವನ್ನು ಪುನುರುಚ್ಚರಿಸಿದೆತಮ್ಮ ಕನಸಿನ ಪ್ಯಾಲೆಸ್ತೈನ್  ರಾಷ್ಟ್ರದ ರಾಜಧಾನಿಯಾಗಿ ಪೂರ್ವ ಜೆರುಸಲೇಮ್ ನನ್ನು ಮಾನ್ಯ ಮಾಡಬೇಕು ಎಂದು ಪ್ಯಾಲೆಸ್ತೀನಿಯನ್ನರು ಆಗ್ರಹಿಸಿದ್ದರು.

2016: ಲಖನೌ: ಜೂನಿಯರ್ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್ನಲ್ಲಿ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಭಾರತ ತಂಡ 15 ವರ್ಷಗಳ ಬಳಿಕ ವಿಶ್ವಕಪ್ ತನ್ನದಾಗಿಸಿಕೊಂಡಿತು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ನಿರ್ವಹಣೆ ತೋರಿದ ಹರ್ಜಿತ್ ಸಿಂಗ್ ಸಾರಥ್ಯದ ಭಾರತ ತಂಡ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು. 8ನೇ ನಿಮಿಷದಲ್ಲಿ ಗುರ್ಜಂತ್ ಸಿಂಗ್ ಗೋಲ್ ಗಳಿಸುವ ಮೂಲಕ ಭಾರತದ ಗೋಲಿನ ಖಾತೆ ತೆರೆದರು. ನಂತರ 22 ನೇ ನಿಮಿಷದಲ್ಲಿ ಸಿಮ್ರನ್ಜೀತ್ ಸಿಂಗ್ ಮತ್ತೊಂದು ಗೋಲು ಗಳಿಸುವ ಮೂಲಕ ಭಾರತ 2-0 ಮುನ್ನಡೆ ಸಾಧಿಸಿತು. ಮುನ್ನಡೆಯನ್ನು ಪಂದ್ಯದ ಕೊನೆಯವರೆಗೂ ಕಾಯ್ದುಕೊಂಡ ಭಾರತ ತಂಡ ಬೆಲ್ಜಿಯಂ ಆಟಗಾರರಿಗೆ ಗೋಲು ಗಳಿಸಲು ಅವಕಾಶ ಮಾಡಿಕೊಡಲಿಲ್ಲ. ಆದರೆ ಪಂದ್ಯ ಮುಗಿಯಲು ಕೆಲವೇ ನಿಮಿಷಗಳು ಬಾಕಿ ಇದ್ದಾಗ ಬೆಲ್ಜಿಯಂನ ಫ್ಯಾಬ್ರಿಸ್ ಗೋಲು ಗಳಿಸಿ ಅಂತರವನ್ನು ತಗ್ಗಿಸಿದರು. ಭಾರತ ತಂಡ 2001ರಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿ ಚಾಂಪಿಯನ್ ಆಗಿತ್ತು. ಅದಕ್ಕೂ ಮುನ್ನ 1997 ರಲ್ಲಿ ರನ್ನರ್ ಅಪ್ ಮತ್ತು 2005 ರಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು.
2016: ತಿರುವನಂತಪುರಂ (ಕೇರಳ): ಫೇಸ್ ಬುಕ್ ಪೋಸ್ಟ್ನಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಿದ ಆರೋಪದಲ್ಲಿ ಕೇರಳದ ನಡಕ್ಕಾವು ಪೊಲೀಸರು ಮಲಯಾಳಿ ಬರಹಗಾರ, ರಂಗಕರ್ಮಿ ಹಾಗೂ ಬ್ಲಾಗರ್ ಕಮಲ್ ಸಿ ಚವರ ಯಾನೆ ಕಮಲ್ಸೆ ಪ್ರಾಣ ಅವರನ್ನು ಬಂಧಿಸಿ, ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದರು. ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸದಸ್ಯರು ಫೇಸ್ ಬುಕ್ ಬರಹದ ವಿರುದ್ಧ ಕೆಲವು ದಿನಗಳ ಹಿಂದೆ ಕೊಲ್ಲಂನ ಕರುನಾಗಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೋಸ್ಟ್ನಲ್ಲಿ ಬಳಸಲಾಗಿರುವುದು ಚವರ ಅವರ ಕಾದಂಬರಿಸ್ಮಶಾನಗಳುಡೆ ನೊಟ್ಟುಪುಸ್ತಕಮ್’  ಆಯ್ದ ಭಾಗವನ್ನು ಎಂದು ಚವರ ಅವರ ನಿಕಟವರ್ತಿಗಳು ಮಾಧ್ಯಮಗಳಿಗೆ ತಿಳಿಸಿದರು. ಚವರ ಅವರು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದಾಗಲೇ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿದವು. ಚವರ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘನೆಯಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರತಿಕ್ರಿಯಿಸಿದರು.
2016: ಇಂಫಾಲ: ಮಣಿಪುರದಲ್ಲಿ ಆರ್ಥಿಕ ದಿಗ್ಬಂಧನ ಹೇರಿರುವ ಕ್ರಮ ಮತ್ತು ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗಳನ್ನು ಖಂಡಿಸಿ ಹಲವು ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಕಾರಣ ಪೂರ್ವ ಇಂಫಾಲ ಜಿಲ್ಲೆಯಲ್ಲಿ ಕರ್ಫ್ಯೂ ಹೇರಿ, ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಯಿತು. ಈದಿನ ಮಧ್ಯಾಹ್ನ ಪ್ರತಿಭಟನಾಕಾರರು, ನಾಗಾ ಜನಾಂಗದವರು ಪ್ರಬಲವಾಗಿರುವ ಜಿಲ್ಲೆಗಳ ಕಡೆಯಿಂದ ಇಂಫಾಲಕ್ಕೆ ಬರುತ್ತಿದ್ದ ಕಾರುಗಳು ಮತ್ತು ಬಸ್ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಬೆಂಕಿ ಹಚ್ಚಿದರು. ಪ್ರತಿಭಟನಾಕಾರರು ಒಂದು ಬಸ್ಸನ್ನು ತಡೆದು ನದಿಗೆ ನೂಕಿದರು. ಹಿಂಸಾತ್ಮಕ ಘಟನೆಗಳಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿದವು.  ಕಳೆದ ನವೆಂಬರ್ನಲ್ಲಿ ನಾಗಾ ಆದಿವಾಸಿ ಸಂಘಟನೆಗಳು ಆರ್ಥಿಕ ದಿಗ್ಬಂಧನವನ್ನು ಹೇರಿರುವುದರಿಂದ ರಾಜ್ಯದಲ್ಲಿ ಆರ್ಥಿಕತೆಗೆ ತೀವ್ರ ಹೊಡೆತ ಬಿದ್ದಿದೆ. ದಿನನಿತ್ಯದ ಅಗತ್ಯ ವಸ್ತುಗಳು, ಇಂಧನ ಮತ್ತು ಔಷಧಿಗಳ ಬೆಲೆ ಏರಿಕೆಯಾಗಿದೆ. ಇದರ ಜತೆಗೆ ನಾಗಾ ಭಯೋತ್ಪಾದಕ ಸಂಘಟನೆಗಳು ದಾಳಿಗಳನ್ನು ಹೆಚ್ಚಿಸಿವೆ. ರಾಜ್ಯ ಸರ್ಕಾರ 7 ಹೊಸ ಜಿಲ್ಲೆಗಳನ್ನು ರಚಿಸಲು ಉದ್ದೇಶಿಸಿದ ನಂತರ ನಾಗಾ ಸಂಘಟನೆಗಳು ಆರ್ಥಿಕ ದಿಗ್ಬಂಧನ ಹೇರಿದ್ದವು.
2016: ನ್ಯೂಯಾರ್ಕ್: ಹಿಮ ತುಂಬಿದ್ದ ಜಾಗದಲ್ಲಿ ಕಾರೊಳಗೆ ಚಳಿಗೆ ಹೆಪ್ಪುಗಟ್ಟಿದಂತಿದ್ದ ಮಹಿಳೆಯನ್ನು ರಕ್ಷಿಸುವ ಸಲುವಾಗಿ ಕಾರಿನ ಗಾಜು  ಒಡೆದು ಒಳನುಗ್ಗಿದ ಪೊಲೀಸರು ಒಳಗಿನ ದೃಶ್ಯ ಕಂಡು ದಂಗಾದ ಘಟನೆ ನ್ಯೂರ್ಯಾನಲ್ಲಿ ಘಟಿಸಿತು. ನ್ಯೂಯಾರ್ಕಿನ ಹಡ್ಸನ್ ಸಿಟಿಯಲ್ಲಿ ಪೊಲೀಸರಿಗೆ ಕರೆಮಾಡಿದ ವ್ಯಕ್ತಿಯೊಬ್ಬ ನಿಲ್ಲಿಸಲಾಗಿದ್ದ ಕಾರಿನ ಒಳಗೆ ಮಹಿಳೆಯೊಬ್ಬಳು ಚಳಿಗೆ ಹೆಪ್ಪುಗಟ್ಟಿ ಸತ್ತುಹೋಗಿದ್ದಾಳೆ ಎಂದು ತಿಳಿಸಿದ. ತತ್ ಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ತಾಪ 13 ಡಿಗ್ರಿ ಸೆಂಟಿಗ್ರೇಡ್ಗೆ ಇಳಿದಿದ್ದ ರಾತ್ರಿಯಲ್ಲಿ ವ್ಯಾಪಕ ಹಿಮಪಾತದಿಂದ ಕಾರು ಹಿಮರಾಶಿಯಡಿ ಮುಚ್ಚಿಹೋಗಿತ್ತು. ಹಿಮಾವೃತ ಕಾರಿನ ಒಳಗೆ ಆಮ್ಲಜನಕರ ಮುಖವಾಡ ಹಾಕಿಕೊಂಡಿದ್ದ ಚಲನೆರಹಿತ ಮಾನವಾಕೃತಿ ಕಾಣಿಸುತ್ತಿತ್ತು. ವಸ್ತ್ರಧರಿಸಿ, ಕನ್ನಡಕ ಹಾಕಿಕೊಂಡು, ಕಾಲುಗಳಿಗೆ ಶೂ ಧರಿಸಿದ್ದ ಮಾನವಾಕೃತಿಯ ಬಾಯಿಯಲ್ಲಿ ಹಲ್ಲುಗಳಿದ್ದರೆ, ಚರ್ಮ ಕಾಂತಿಯುಕ್ತವಾಗಿತ್ತು. ಸೀಟ್ ಬೆಲ್ಟ್ ಧರಿಸಲಾಗಿತ್ತು. ತಡಮಾಡದ ಪೊಲೀಸರು ಕಾರಿನ ಗಾಜು ಒಡೆದು ಒಳಗಿದ್ದ ವ್ಯಕ್ತಿಯನ್ನು ಪಾರು ಮಾಡಲು ಯತ್ನಿಸಿದರು. ಹಾಗೆ ಒಳಗೆ ನುಗ್ಗಿದ ಬಳಿಕ ಪೊಲೀಸರು ದಂಗಾದರು. ಏಕೆಂದರೆ- ಅದು ನಿಜವಾದ ವ್ಯಕ್ತಿಯಾಗಿರದೆ, ಕೇವಲ ಮಾನವ ಪ್ರತಿಕೃತಿಯಾಗಿತ್ತು. ಆದರೆ ನೈಜ ಮಾನವನಂತೆಯೇ ಕಾಣುತ್ತಿತ್ತು. ಕಾರು ಮಾಲೀಕನನ್ನು ಸಂರ್ಪಸಿದ ಬಳಿಕ ಆತ ತಾನು ವೈದ್ಯಕೀಯ ತರಬೇತಿಗಾಗಿ ಪ್ರತಿಕೃತಿಯನ್ನು ಬಳಸುತ್ತಿದ್ದುದಾಗಿ ತಿಳಿಸಿದ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರು.

2016: ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಪೌಲ್ ಕಲಾನಿಥಿಗೆ 36 ಹರೆಯ. ನ್ಯೂರೋಸರ್ಜನ್ ಆಗಿ ತರಬೇತಿ ಮುಗಿಸುತ್ತಿದ್ದ ಹೊತ್ತು. ಆಗ ಅವರಿಗೆ ಶ್ವಾಸಕೋಶದ ಕ್ಯಾನ್ಸರ್, ಅದೂ ನಾಲ್ಕನೇ ಹಂತ ತಲುಪಿದೆ ಎಂಬುದು ಗೊತ್ತಾಯಿತು. ಶಸ್ತ್ರ ಚಿಕಿತ್ಸೆ ಸಾಧ್ಯವಿರಲಿಲ್ಲ. ಕಲಾನಿಥಿಯ ಸಾವು ಖಚಿತವಾಗಿತ್ತು. ಆಗ ಪೌಲ್ ಕಲಾನಿಥಿ ಏನು ಮಾಡಿದರು? ವೆನ್ ಬ್ರೆಥ್ ಬಿಕಮ್್ಸ ಏರ್ (ಉಸಿರು ಗಾಳಿಯಾದಾಗ) ಪುಸ್ತಕ ಪೌಲ್ ಏನು ಮಾಡಿದರು ಎಂಬುದನ್ನು ಬಿಚ್ಚಿಟ್ಟಿದೆ. ಸಾವು ಖಚಿತ ಎಂಬುದು ಗೊತ್ತಾದ ಬಳಿಕ ಅಂತಿಮ ಉಸಿರು ಇರುವವರೆಗೆ ಲವಲವಿಕೆಯಿಂದ ಬದುಕಿದ್ದು ಹೇಗೆ ಎಂಬುದನ್ನು ಸಾರಿರುವ ಸ್ವತಃ ಪೌಲ್ ಬರೆದ ಪುಸ್ತಕ 2015 ಮಾರ್ಚ್ ತಿಂಗಳಲ್ಲಿ ಅವರು ನಿಧನರಾದ 10 ತಿಂಗಳ ಬಳಿಕ ಇದೀಗ ಮಾರುಕಟ್ಟೆಗೆ ಬಂದಿದ್ದು, ನ್ಯೂಯಾರ್ಕ್ ಟೈಮ್ಸ್ ವರ್ಷದ ಬೆಸ್ಟ್ ಸೆಲ್ಲರ್ ಪಟ್ಟಿಗೆ ಸೇರ್ಪಡೆಯಾಗಿದೆತನ್ನ ವೈದ್ಯೆ ಪತ್ನಿ ಲೂಸಿ ಜೊತೆಗೆ ಕುಳಿತು ತನ್ನದೇ ಸಿಟಿ ಸ್ಕ್ಯಾನ್ ಪರೀಕ್ಷಿಸುವಲ್ಲಿಂದ ಪೌಲ್ ಕಲಾನಿಥಿ ಅವರ ನೆನಪು ಪುಸ್ತಕದಲ್ಲಿ ಬಿಚ್ಚಿಕೊಂಡಿದೆ. ನಾನು ನನ್ನ ಹಿರಿಯರಿಂದ ಅಪಾರ ಗೌರವ ಗಳಿಸಿಕೊಂಡಿದ್ದೆ. ಪ್ರತಿಷ್ಠಿತ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದೆ. ಹಲವಾರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಂದ ಉದ್ಯೋಗಾವಕಾಶಗಳು ಕೈಬೀಸಿ ಕರೆಯುತ್ತಿದ್ದವು. ನಾನು ಬೆಟ್ಟದ ತುದಿಗೆ ತಲುಪಿದ್ದೆ. ಭರವಸೆಯ ಭೂಮಿಯನ್ನು ನಾನು ಅಲ್ಲಿಂದ ನೋಡುತ್ತಿದ್ದೆ. ಅಷ್ಟರಲ್ಲಿ ಕಾಡಿದ ಅಸ್ವಸ್ಥತೆಯ ಕಾರಣಕ್ಕಾಗಿ ವೈದ್ಯಕೀಯ ತಪಾಸಣೆ ಶುರುವಾಯಿತು. ಕೆಲವೇ ಕ್ಷಣಗಳ ಒಳಗಾಗಿ ಭವಿಷ್ಯ ಕರಗಿತು. ಜೀವಗಳನ್ನು ರಕ್ಷಿಸುವ ವೈದ್ಯನಾಗಿದ್ದವ, ಸಾವನ್ನು ಎದುರು ನೋಡುವ ರೋಗಿಯಾಗಿ ಬಿಟ್ಟೆ ಎಂದು ಪೌಲ್ ಬರೆದಿದ್ದಾರೆ. ‘ವೈದ್ಯನಾಗಿ ಕ್ಯಾನ್ಸರ್ ನಾನು ಗೆಲ್ಲಲು ಹೋಗುತ್ತಿರುವ ಸಮರ ಎಂದು ಘೋಷಿಸಬಾರದು ಎಂಬುದು ನನಗೆ ಗೊತ್ತಿತ್ತು. ಈಗ ನಾನೇ ಏಕೆ (ನಾನೇ ಏಕಾಗಬಾರದು?) ಎಂಬ ಪ್ರಶ್ನೆ ನನ್ನ ಮುಂದಿದೆ ಎಂದು ಅವರು ಬರೆದಿದ್ದಾರೆ. ಸಾವಿನ 10 ತಿಂಗಳ ಬಳಿಕ ಮಾರುಕಟ್ಟೆಗೆ ಬಂದ ಅವರ ಪುಸ್ತಕ ಅವರನ್ನು ಸಾವನ್ನು ಎದುರಿಸಲು ಸಜ್ಜಾದದ್ದು ಹೇಗೆ?, ಸಂಪೂರ್ಣ ಲವಲವಿಕೆಯಿಂದ ಇರಲು ಅದು ಕಲಿಸಿಕೊಟ್ಟದ್ದು ಹೇಗೆ? ಮಗಳು ಬೆಳೆಯುವುದನ್ನು ನೋಡಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ಆಕೆಯನ್ನು ಪಡೆಯುವ ನಿರ್ಧಾರ ಕೈಗೊಂಡದ್ದು ಹೇಗೆ? ಅಪ್ಪ ನೀನು ಸಾವನ್ನು ಗೆಲ್ಲುತ್ತೀ ಎಂದು ಹೇಳಿದಾಗ ಎದುರಿಸಿದ ಪರಿಸ್ಥಿತಿ ಎಂತಹುದು ಇತ್ಯಾದಿ ಸಂದರ್ಭಗಳನ್ನು ವೆನ್ ಬ್ರೆತ್ ಬಿಕಮ್ಸ್ ಏರ್ ವಿವರಿಸಿದೆ.
2016: ನವದೆಹಲಿ: ರಾಜಕೀಯ ಪಕ್ಷಗಳಿಗೆ 2000 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಬೇನಾಮಿ ದೇಣಿಗೆ ನೀಡುವುದನ್ನು ನಿಷೇಧಿಸಲು ಕಾನೂನು ತಿದ್ದುಪಡಿ ಮಾಡುವಂತೆ ಚುನಾವಣಾ ಆಯೋಗವು ಸರ್ಕಾರವನ್ನು ಒತ್ತಾಯಿಸಿತು.  ಕಾಳಧನವು ಚುನಾವಣೆಯಲ್ಲಿ ಬಳಕೆಯಾಗದಂತೆ ತಡೆಯುವ ಸಲುವಾಗಿ ಚುನಾವಣಾ ಆಯೋಗ ಮನವಿ ಮಾಡಿತು. ರಾಜಕೀಯ ಪಕ್ಷಗಳಿಗೆ ಅನಾಮಧೇಯರಿಂದ ದೇಣಿಗೆ ಸ್ವೀಕರಿಸಲು ಸಂವಿಧಾನ ಅಥವಾ ಕಾನೂನಿನ ನಿರ್ಬಂಧ ಇಲ್ಲ. ಆದರೆ 1951 ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29 ಸಿ ಅಡಿಯಲ್ಲಿ ದೇಣಿಗೆಯನ್ನು ಘೋಷಿಸುವುದು ಕಡ್ಡಾಯ ಎಂದು ಹೇಳಲಾಗಿದೆ. ಆದರೆ 20,000 ರೂಪಾಯಿಗಳಿಗಿಂತ ಹೆಚ್ಚಿನ ದೇಣಿಗೆಗೆ ಮಾತ್ರ ಇದು ಅನ್ವಯವಾಗುತ್ತದೆ. ಚುನಾವಣಾ ಆಯೋಗವು ಸರ್ಕಾರಕ್ಕೆ ಕಳುಹಿಸಿರುವ ಪ್ರಸ್ತಾಪಿತ ತಿದ್ದುಪಡಿಯ ಪ್ರಕಾರ ಪ್ರಸ್ತಾಪಿತ ಚುನಾವಣಾ ಸುಧಾರಣೆಗಳ ಭಾಗವಾಗಿ ದೇಣಿಗೆ ನಿಷೇಧದ ಪ್ರಸ್ತಾಪವನ್ನೂ ಸೇರಿಸಲು ಕೋರಲಾಗಿದೆ. ಅದರ ಪ್ರಕಾರ 2000 ರೂಪಾಯಿ ಅಥವಾ ಅದಕ್ಕೆ ತತ್ಸಮಾನವಾದ ಕೊಡುಗೆಯನ್ನು ನಿಷೇಧಿಸುವಂತೆ ಮನವಿ ಸಲ್ಲಿಸಲಾಗಿದೆ. ರಾಜಕೀಯ ಪಕ್ಷಗಳು ತಮ್ಮ ಖಾತೆಗಳಿಗೆ ಒಬ್ಬ ವ್ಯಕ್ತಿಯಿಂದ ಜಮಾ ಮಾಡುವ 20,000 ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳು ಕಾಯ್ದೆಗೆ ಅನುಗುಣವಾಗಿ ಆದಾಯ ತೆರಿಗೆಯಿಂದ ವಿನಾಯ್ತಿ ಪಡೆಯುತ್ತವೆ ಎಂದು ಸರ್ಕಾರ ಶನಿವಾರ ಹೇಳಿತ್ತು. ದೇಣಿಗೆಯನ್ನು ನೀಡುವ ವ್ಯಕ್ತಿಯ ಹೆಸರು ಹಾಗೂ ಮೊತ್ತವನ್ನು ಸಮರ್ಪಕವಾಗಿ ದಾಖಲಿಸಿರಬೇಕು ಎಂದು ಸರ್ಕಾರ ತಿಳಿಸಿತ್ತು
 2016: ಜಮ್ಮು: ಪುಲ್ವಾಮ ಜಿಲ್ಲೆಯಲ್ಲಿ ಶ್ರೀನಗರ- ಜಮ್ಮು ಹೆದ್ದಾರಿಯ ಸಮೀಪ ಪಾಂಪೋರೆಯಲ್ಲಿ ಭಯೋತ್ಪಾದಕರು ಸೇನಾ ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾದರು. ಪುಲ್ವಾಮ ಜಿಲ್ಲೆಯ ಪಾಂಪೋರೆ ಪಟ್ಟಣದ ಕಡ್ಲಾಬಲ್ನಲ್ಲಿ ದಾಳಿ ಮಧ್ಯಾಹ್ನದ ವೇಳೆಗೆ ನಡೆಯಿತು ಎಂದು ಅಧಿಕಾರಿಗಳು ಹೇಳಿದರು. ಘಟನೆಯ ಬೆನ್ನಲ್ಲೇ ಸೇನೆ ಪ್ರದೇಶವನ್ನು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗುಂಡಿನ ದಾಳಿಗೆ ನಮ್ಮ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ಅವರು ನುಡಿದರು.

ಸನಾ (ಯೆಮೆನ್): ಯೆಮೆನ್ ದಕ್ಷಿಣದ ಬಂರು ನಗರ ಅಡೆನ್ನಲ್ಲಿ ಸೈನಿಕರ ಮೇಲೆ ನಡೆದ ಮಾನವ ಬಾಂಬ್ ದಾಳಿಯಲ್ಲಿ 40 ಮಂದಿ ಸರ್ಕಾರಿ ಪರ ಸೈನಿಕರು ಸಾವನ್ನಪ್ಪಿದರು. ಅಡೆನ್ ಖೋರ್ವೆುೕಕ್ಸರ್ ಜಿಲ್ಲೆಯಲ್ಲಿ ಬ್ರಿಗೇಡಿಯರ್ ನಾಸೇರ್ ಅನ್ಬೌರಿ ಮನೆಯ ಹೊರಗೆ ಸಮಾವೇಶಗೊಂಡಿದ್ದ ಸೈನಿಕರ ಗುಂಪಿಗೆ ಬಂದ ದಾಳಿಕೋರ ಸ್ಪೋಟಕಗಳನ್ನು ಸಿಡಿಸಿಕೊಂಡ ಎಂದು ಸೇನಾ ಅಧಿಕಾರಿಯೊಬ್ಬರು ಕ್ಷಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದರು. ಸೈನಿಕರು ತಮ್ಮ ಮಾಸಿಕ ವೇತನ ಪಡೆಯುವ ಸಲುವಗಿ ಅನ್ಬೌರಿ ಮನೆಯ ಬಳಿ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದ ವೇಳೆಯಲ್ಲಿ ದಾಳಿ ನಡೆಯಿತು ಎಂದು ಅಧಿಕಾರಿ ಹೇಳಿದರು. ಮೃತ ಸೈನಿಕರು ಅಡೆನ್ ಪ್ರಾಂತದ ವಿಶೇಷ ಭದ್ರತಾ ಪಡೆಯಲ್ಲಿ ಹೊಸದಾಗಿ ತರಬೇತಿ ಪಡೆಯುತ್ತಿದ್ದ ಯೋಧರಾಗಿದ್ದರು ಎಂದು ಅಧಿಕಾರಿ ಹೇಳಿದರು..
2008: ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನ ಪ್ರವಾಸಕ್ಕೆ ಭಾರತ ತಂಡವನ್ನು ಕಳುಹಿಸದಿರುವಂತೆ ಕೇಂದ್ರ ಸರ್ಕಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ಸೂಚಿಸಿತು. ಇದರಿಂದ 2009ರ ಜನವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ನಡೆಯಬೇಕಿದ್ದ ಭಾರತ ತಂಡದ ಪಾಕ್ ಪ್ರವಾಸ ಅಧಿಕೃತವಾಗಿ ರದ್ದಾಯಿತು. ಸರ್ಕಾರ ತನ್ನ ಮಹತ್ವದ ನಿರ್ಧಾರವನ್ನು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರಿಗೆ ತಿಳಿಸಿತು.

2008: ಹತ್ತು ಮಂದಿ ಭ್ರಷ್ಟ ಅಧಿಕಾರಿಗಳ ಕೋಟೆಯನ್ನು ಭೇದಿಸಿದ ಲೋಕಾಯುಕ್ತ ಪೊಲೀಸರು 16 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಮೈಸೂರಿನ ಅರಣ್ಯ ಸಂರಕ್ಷಣಾಧಿಕಾರಿ ಸಿ.ಶ್ರೀನಿವಾಸನ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಆರ್.ಪಟೇಲಪ್ಪ (ಬೆಂಗಳೂರು), ಗೊರೂರು ಹೇಮಾವತಿ ಯೋಜನೆ ಮುಖ್ಯ ಎಂಜಿನಿಯರ್ ಎಸ್.ಸಿ. ಜಯಚಂದ್ರ, ವಿಜಾಪುರ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ ರಾಜಶೇಖರಯ್ಯ ಚೌಕಿಮಠ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಜಯಶಂಕರ್ (ಬೆಂಗಳೂರು), ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಮೈಸೂರು) ಚಂದ್ರೇಗೌಡ, ಆಲಮಟ್ಟಿ ಕೃಷ್ಣ ಭಾಗ್ಯಜಲ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರ್ ವೆಂಕಣ್ಣ ಚವಾಣ್, ಬಿಬಿಎಂಪಿ ಸಹಾಯಕ ಎಂಜಿನಿಯರ್ ದೇವರಾಜ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ನಿರೀಕ್ಷಕ ನಾಗಲಿಂಗಯ್ಯ (ಬೆಂಗಳೂರು) ಮತ್ತು ರಾಜಾನುಕುಂಟೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ವೀರೇಗೌಡ ಅವರ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.

2008: ರಾಜ್ಯದ ವಿವಿಧೆಡೆ 2000ದಿಂದ 2006ರವರೆಗೆ ನಡೆದ ಗಣಿಗಾರಿಕೆ ಅಕ್ರಮಗಳ ಕುರಿತ ತನಿಖಾ ವರದಿಯನ್ನು ಲೋಕಾಯುಕ್ತರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರ ಪರವಾಗಿ ಸಂಸ್ಥೆಯ ರಿಜಿಸ್ಟ್ರಾರ್ ಎಲ್.ಸುಬ್ರಹ್ಮಣ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರರಾವ್ ಅವರನ್ನು ಭೇಟಿ ಮಾಡಿ, 274 ಪುಟಗಳ ವರದಿ ಮತ್ತು ಆರೋಪಗಳನ್ನು ಪುಷ್ಟೀಕರಿಸುವ 1,000 ದಾಖಲೆಗಳನ್ನು ಸಲ್ಲಿಸಿದರು.

2008: ಖ್ಯಾತ ನೀರಾವರಿ ತಜ್ಞ, ಮಾಜಿ ಸಂಸದ ಹಾಗೂ ಮಾಜಿ ಸಚಿವ ಎಚ್.ಎನ್. ನಂಜೇಗೌಡ (74) ಅವರು ತೀವ್ರ ಹೃದಯಾಘಾತದಿಂದ ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ನಿಧನರಾದರು. ಅವರು ಮೂರು ಬಾರಿ ವಿಧಾನಸಭೆಯ ಸದಸ್ಯರಾಗಿ, ಎರಡು ಬಾರಿ ಲೋಕಸಭಾ ಸದಸ್ಯರಾಗಿ ಹಾಗೂ ಒಮ್ಮೆ ರಾಜ್ಯದ ಬೃಹತ್ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂಜೇಗೌಡರು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ 1967 (ಸ್ವತಂತ್ರ ಪಕ್ಷ) ಹಾಗೂ 1972ರಲ್ಲಿ ಶಾಸಕರಾಗಿ (ಕಾಂಗ್ರೆಸ್‌ನಿಂದ) ಆಯ್ಕೆ ಆಗಿದ್ದರು. 1972ರಲ್ಲಿ ದೇವರಾಜ ಅರಸು ಅವರ ಸಂಪುಟದಲ್ಲಿ ನೀರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 1994ರಲ್ಲಿ ಬಸವನಗುಡಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದರು. 1980 ಹಾಗೂ 1984 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆ ಆಗಿದ್ದರು.

2008: ಸೋಮಾಲಿಯಾದ ತೀರದಲ್ಲಿ ಉಪಟಳ ನೀಡುತ್ತಿರುವ ಕಡಲ್ಗಳ್ಳರನ್ನು ಮಣಿಸಲು ಇದೇ ಪ್ರಥಮ ಬಾರಿ ವಿಶ್ವಸಂಸ್ಥೆಯು ಸದಸ್ಯ ರಾಷ್ಟ್ರಗಳಿಗೆ ಅಧಿಕೃತ ಒಪ್ಪಿಗೆ ನೀಡಿತು. ವಿಶ್ವಸಂಸ್ಥೆಯ ಸದಸ್ಯ ದೇಶಗಳು ಭೂದಾಳಿ ಹಾಗೂ ವೈಮಾನಿಕ ದಾಳಿ ನಡೆಸಿ ಸೋಮಾಲಿಯಾದಲ್ಲಿರುವ ಕಡಲ್ಗಳ್ಳರ ನೆಲೆಗಳನ್ನು ನಾಶಪಡಿಸಬಹುದು ಎಂದು ಭದ್ರತಾ ಮಂಡಳಿ ಹೇಳಿತು. ಕಳೆದ 17 ವರ್ಷಗಳಿಂದ ಸೋಮಾಲಿಯಾದಲ್ಲಿ ಸರ್ಕಾರ ನೆಪಮಾತ್ರಕ್ಕೆ ಇದೆ. ದೇಶದ ದಕ್ಷಿಣದ ಬಹುಭಾಗ ಮುಸ್ಲಿಮ್ ಮೂಲಭೂತವಾದಿಗಳ ಹಿಡಿತದಲ್ಲಿದೆ. ಅಂತರ್ಯುದ್ಧದಿಂದ ಜರ್ಝರಿತಗೊಂಡಿರುವ ಈ ದೇಶದಲ್ಲಿ ಶಾಂತಿಪಡೆ ನಿಯೋಜಿಸಲು ಇದೇ ಮೊದಲ ಬಾರಿ ಅಮೆರಿಕ ಒಪ್ಪಿಕೊಂಡಿತು.

2008: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ರಚನೆಗೆ ಶಾಸನಬದ್ಧ ಕ್ರಮ ಹಾಗೂ ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ ತಿದ್ದುಪಡಿ ಕಾಯ್ದೆ (ಯುಎಪಿಎ)ಗೆ ಬಲ ತುಂಬುವ ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ದೊರೆಯಿತು. ಇದರೊಂದಿಗೆ ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಂಡಿಸಿದ ಈ ಎರಡೂ ಮಸೂದೆಗಳಿಗೆ ಸಂಸತ್ತಿನ ಸಮ್ಮತಿಯ ಮುದ್ರೆ ಬಿದ್ದಂತಾಯಿತು.

2008: ಅಮೆರಿಕ ಅಧ್ಯಕ್ಷ ಗದ್ದುಗೆಗೆ ಆಯ್ಕೆಯಾಗಿರುವ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂದು ಖ್ಯಾತಿ ಗಳಿಸಿರುವ ಬರಾಕ್ ಒಬಾಮ ಅವರನ್ನು ಪ್ರತಿಷ್ಠಿತ ಟೈಮ್ ನಿಯತಕಾಲಿಕ ವರ್ಷದ ವ್ಯಕ್ತಿ ಎಂದು ಆಯ್ಕೆ ಮಾಡಿತು. ಅಧ್ಯಕ್ಷೀಯ ಸ್ಥಾನಕ್ಕೆ ಮತ್ತೋರ್ವ ಅಭ್ಯರ್ಥಿಯಾಗಿದ್ದ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಒಬಾಮ ಈ ಗೌರವಕ್ಕೆ ಪಾತ್ರರಾದರು.

2008: ಅನಿವಾಸಿ ಭಾರತೀಯ ಹಾಗೂ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್‌ ಉಪ ಸಭಾಧ್ಯಕ್ಷ ಸ್ವರಾಜ್ ಪಾಲ್ ಅವರು ಹೌಸ್ ಆಫ್ ಲಾರ್ಡ್ಸ್‌ ಕಲಾಪ ನಡೆಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಭಾರತೀಯ ಹಾಗೂ ಏಷ್ಯಾ ಮೂಲದ ವ್ಯಕ್ತಿಯೊಬ್ಬರು ಬ್ರಿಟನ್ ಸಂಸತ್ತಿನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಉನ್ನತ ಹುದ್ದೆಯಲ್ಲಿ ಕುಳಿತು ಕಲಾಪ ನಿರ್ವಹಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2007: ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಅವರನ್ನು ಕೊಲೆಗೈದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಸಹೋದರ ಪ್ರವೀಣ್ ಮಹಾಜನ್ ಗೆ ಸ್ಥಳೀಯ ಮುಂಬೈ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು. ಪ್ರವೀಣ್ ವಿರುದ್ಧ ಪೊಲೀಸರು ದಾಖಲಿಸಿದ ಕೊಲೆ ಆರೋಪವನ್ನು ನ್ಯಾಯಾಲಯ ಡಿಸೆಂಬರ್ 17ರಂದು ದೃಢಪಡಿಸಿತ್ತು. ಈದಿನ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಧೀಶ ಎಸ್.ಪಿ. ದಾವರೆ ಅವರು ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ರೂ ದಂಡ ವಿಧಿಸಿದರು. ಪ್ರಮೋದ್ ಮಹಾಜನ್ ಅವರ ಮನೆಗೆ ಅಕ್ರಮವಾಗಿ ನುಗ್ಗಿದ ಅಪರಾಧಕ್ಕಾಗಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಐದು ಸಾವಿರ ರೂ ದಂಡ ವಿಧಿಸಿದರು. ಕೊಲೆಗಾರನಿಗೆ ಮರಣದಂಡನೆ ವಿಧಿಸಬೇಕು ಎಂದು ಸರ್ಕಾರಿ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಾಧೀಶರು `ಈ ಕೊಲೆ ಅಪರೂಪದಲ್ಲಿ ಅಪರೂಪದ್ದೇನಲ್ಲ. ಆದ್ದರಿಂದ ಮರಣದಂಡನೆಯ ಅಗತ್ಯವಿಲ್ಲ. ಮರಣದಂಡನೆ ವಿಧಿಸುವಷ್ಟು ಕ್ರೂರ ಅಪರಾಧವೂ ಅಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

2007: ತೆಂಕುತಿಟ್ಟು ಯಕ್ಷಗಾನದ ಹಿರಿಯ ಕಲಾವಿದ ಕೊಳ್ಯೂರು ರಾಮಚಂದ್ರರಾವ್ ಅವರು ಪ್ರಸಕ್ತ ಸಾಲಿನ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು. ಕೊಳ್ಯೂರು ಅವರು ಕರ್ನಾಟಕ ಯಕ್ಷಗಾನ ನಾಟಕ ಸಭಾದ `ಕಾಡಮಲ್ಲಿಗೆ, `ಪಟ್ಟದ ಪದ್ಮಲೆ, ಸೊರ್ಕುದ ಸಿರಿಗಿಂಡೆ ಮೊದಲಾದ ಜನಪ್ರಿಯ ಪ್ರಸಂಗಗಳಲ್ಲಿನ ಮುಖ್ಯ ಸ್ತ್ರಿಪಾತ್ರದ ಮೂಲಕ ರಾಜ್ಯದ ಕರಾವಳಿಯಲ್ಲಿ ಮನೆಮಾತಾಗಿದ್ದವರು. ತನ್ನ ಹನ್ನೆರಡನೇ ವರ್ಷದಲ್ಲಿಪುಂಡುವೇಷದ ಮೂಲಕ ಯಕ್ಷಗಾನ ರಂಗಕ್ಕೆ ಕಾಲಿಟ್ಟು ನಂತರ ಸ್ತ್ರೀ ವೇಷ ಹಾಕತೊಡಗಿದ ಕೊಳ್ಯೂರು ಇತ್ತೀಚಿನವರೆಗೂ ಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಧರ್ಮಸ್ಥಳ ಮಂಜುನಾಥೇಶ್ವರ ಮೇಳ ಮತ್ತು ಕಟೀಲು ದುರ್ಗಾಪರಮೇಶ್ವರಿ ಮೇಳದಲ್ಲಿಯೂ ಸೇವೆ ಸಲ್ಲಿಸಿದ್ದರು. ಇಲ್ಲಿಯವರೆಗೆ ನಾಲ್ಕು ಬಾರಿ ಬಡುಗುತಿಟ್ಟಿನ ಯಕ್ಷಗಾನ ಕಲಾವಿದರಿಗೆ (ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ ಮತ್ತು ಕುಮಟಾ ಗೋವಿಂದ ನಾಯ್ಕ) ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಬಂದಿದ್ದು ಇದೇ ಮೊದಲ ಬಾರಿ ತೆಂಕುತಿಟ್ಟಿನ ಕಲಾವಿದರಿಗೆ ಈ ಗೌರವ ಸಂದಿದೆ.

2008: ನಕ್ಸಲ್ ಕೈದಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ 350ಕ್ಕೂ ಹೆಚ್ಚು ನಕ್ಸಲೀಯ ಕೈದಿಗಳು ಜೈಲು ಸಿಬ್ಬಂದಿ ಮತ್ತು ಇತರ ಕೈದಿಗಳೊಂದಿಗೆ ಘರ್ಷಣೆಗೆ ಇಳಿದ ಘಟನೆ ಬಿಹಾರಿನ ಪಟ್ನಾದ ಬೆವೂರ್ ಜೈಲಿನಲ್ಲಿ ನಡೆಯಿತು. ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ನಕ್ಸಲೀಯರು ಇತರ ಕೈದಿಗಳನ್ನು ಪೀಡಿಸಿದರು. ಇದನ್ನು ಭದ್ರತಾ ಸಿಬ್ಬಂದಿ ಆಕ್ಷೇಪಿಸಿದಾಗ ನಕ್ಸಲ್ ಕೈದಿಗಳು ಘರ್ಷಣೆಗೆ ಇಳಿದರು. ಹೆಚ್ಚುವರಿ ಪಡೆಗಳು ಜೈಲು ಆವರಣ ಪ್ರವೇಶಿಸಿದಾಗ ಕ್ರುದ್ಧರಾದ ಧರಣಿ ನಿರತ ನಕ್ಸಲರು ಇಟ್ಟಿಗೆ ಹಾಗೂ ಕಲ್ಲು ತೂರಾಟ ನಡೆಸಿದರು. ಕೊನೆಗೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ನಕ್ಸಲೀಯರು ಜೈಲಿನ ಆವರಣದಲ್ಲಿದ್ದ ಬುದ್ಧ ಪ್ರತಿಮೆಯ ಎದುರು ಧರಣಿ ನಡೆಸಿದರು. ನಕ್ಸಲ್ ಪೀಡಿತ ಗಯಾ ಜಿಲ್ಲೆಯ ನಗಿನಾ ಮಾಂಝಿ ಎಂಬಾತನನ್ನು ನಕ್ಸಲೀಯ ಚಟುವಟಿಕೆಗಳನ್ನು ನಡೆಸಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಡಿಸೆಂಬರ್ 14ರಂದು ಆತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.

2008: ಶಸ್ತ್ರಚಿಕಿತ್ಸೆಯ ನಂತರ ರೋಗಿಗಳಲ್ಲಿ ನೋವು ಕಂಡುಬರುತ್ತದೆ. ಆ ಸಮಯದಲ್ಲಿ ದೇಹಕ್ಕೆ ಮಾಡುವ ಮಸಾಜಿನಿಂದಾಗಿ ನೋವಿನ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಮೆರಿಕದ ಶಸ್ತ್ರಚಿಕಿತ್ಸಾ ತಜ್ಞ ಡಾ.ಡೇನಿಯಲ್ ತಮ್ಮ ಅಧ್ಯಯನದಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸಾ ನೋವಿನ ಶಮನಕ್ಕಾಗಿ ರೋಗಿಗಳಿಗೆ ನೀಡುವ ಮಾರ್ಫಿನ್ (ಮತ್ತು ತರುವ ಮದ್ದು) ಔಷಧಿಯಷ್ಟೇ ಮಸಾಜ್ ಪರಿಣಾಮ ಬೀರುತ್ತದೆ ಎಂದೂ ಡೇನಿಯಲ್ ಅಭಿಪ್ರಾಯ.

2007: ಹಿಂದಿ ಮತ್ತು ಕನ್ನಡ ಭಾಷೆಯ ಪ್ರತಿಭಾವಂತ ಲೇಖಕ, ಹೈದರಾಬಾದಿನ ಮೌಲಾನ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಅಧ್ಯಕ್ಷ ಡಾ.ತೇಜಸ್ವಿ ವಿ.ಕಟ್ಟೀಮನಿ ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ `ಗಂಗಾಶರಣ ಸಿಂಹ ಪುರಸ್ಕಾರ' ನೀಡಿ ಗೌರವಿಸಿತು. ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು ಮತ್ತು ಪ್ರಶಸ್ತಿಫಲಕವನ್ನು ಒಳಗೊಂಡಿದೆ. ರಾಷ್ಟ್ರಪತಿ ಭವನದ ಅಶೋಕಾ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ಮಾನವ ಸಂಪನ್ಮೂಲ ಇಲಾಖೆಯಡಿ ಸ್ವಾಯತ್ತ ಸಂಸ್ಥೆಯಾದ ಆಗ್ರಾ ಕೇಂದ್ರೀಯ ಹಿಂದಿ ಸಂಸ್ಥಾನ ಈ ಪ್ರಶಸ್ತಿಯನ್ನು ಪ್ರತಿಷ್ಠಾಪಿಸಿದೆ. ಕೊಪ್ಪಳ ಜಿಲ್ಲೆಯ ಅಳವಂಡಿಯವರಾದ ಡಾ.ಕಟ್ಟೀಮನಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಪ್ರೊಫೆಸರ್ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕನ್ನಡದಲ್ಲಿ ಹದಿನೇಳು ಹಾಗೂ ಹಿಂದಿಯಲ್ಲಿ ಐದು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಪ್ರಸ್ತುತ ಯುಜಿಸಿಯ ಸಂಶೋಧನಾ ಯೋಜನೆಯಡಿ `ಕನ್ನಡ ಮತ್ತು ಹಿಂದಿ ನಡುವಿನ ಕೊಡು-ಕೊಳ್ಳು' ಬಗ್ಗೆ ಅಧ್ಯಯನ ನಿರತರು. 2004ರ ಮಹಾತ್ಮ ಜ್ಯೋತಿಬಾ ಪುಲೆ ಸಮ್ಮಾನ್, 2005ರ ಹಿಂದಿ-ಉರ್ದು ಪ್ರಶಸ್ತಿ ಹಾಗೂ 2006ರ ಲಖನೌದ ಸಾಹಿತ್ಯ ಶಿರೋಮಣಿ ಸಮ್ಮಾನ್ ಗೌರವಕ್ಕೆ ಡಾ.ಕಟ್ಟೀಮನಿ ಪಾತ್ರರಾಗಿದ್ದರು.

2007: ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಹತ್ಯೆ ನಂತರ 1984ರಲ್ಲಿ ದೆಹಲಿಯಲ್ಲಿನಡೆದ ಸಿಖ್ಖರ ಹತ್ಯಾಕಾಂಡ ವಿಚಾರಣೆಗೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಅವರ ವಿರುದ್ಧ ಹೂಡಲಾಗಿರುವ ಪ್ರಕರಣದ ಮರುವಿಚಾರಣೆ ನಡೆಸಬೇಕು ಎಂದು ದೆಹಲಿ ಮೆಟ್ರೋಪಾಲಿಟನ್ ನ್ಯಾಯಾಲಯ ಕೇಂದ್ರೀಯ ತನಿಖಾ ತಂಡಕ್ಕೆ (ಸಿಬಿಐ) ಆದೇಶಿಸಿತು. `ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮುಚ್ಚಬಹುದು' ಎಂಬ ಸಿಬಿಐ ಅರ್ಜಿಯನ್ನು ತಿರಸ್ಕರಿಸುತ್ತ ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಧೀಶ ಸಂಜೀವ ಜೈನ್, `ಈ ವಿಷಯದ ಬಗ್ಗೆ ಇನ್ನಷ್ಟು ಕೂಲಂಕಷ ತನಿಖೆ ನಡೆಸಬೇಕಾದ ಅವಶ್ಯಕತೆಯಿದೆ ಎಂಬುದು ನನ್ನ ಅಭಿಪ್ರಾಯ. ಆದ್ದರಿಂದ ಹೆಚ್ಚಿನ ವಿಚಾರಣೆ ನಡೆಸಿ ಜನವರಿ 16ರೊಳಗೆ ವರದಿ ಸಲ್ಲಿಸಬೇಕು' ಎಂದು ಸಿಬಿಐಗೆ ಆದೇಶ ನೀಡಿದರು. ಇದಕ್ಕೂ ಮುನ್ನ ಸೆಪ್ಟೆಂಬರ್ 29ರಂದು ತನ್ನ ವರದಿ ಸಲ್ಲಿಸಿದ್ದ ಸಿಬಿಐ, `ಇಂದಿರಾ ಹತ್ಯೆ ನಂತರ ನಡೆದ ಗಲಭೆಯಲ್ಲಿ, ಸಿಖ್ಖರನ್ನು ಕೊಲ್ಲುವಂತೆ ಕೇಂದ್ರದ ಮಾಜಿ ಸಚಿವ ಜಗದೀಶ ಟೈಟ್ಲರ್ ಗುಂಪೊಂದಕ್ಕೆ ಪ್ರಚೋದನೆ ನೀಡುತ್ತಿರುವುದನ್ನು ಕೇಳಿದ್ದಾಗಿ ಜಸ್ಬೀರ್ ಸಿಂಗ್ ಎಂಬುವವರು ಹೇಳಿದ್ದಾರೆ. ಆದರೆ, ಸದ್ಯ ಅವರು ಅಮೆರಿಕದಲ್ಲಿ ನೆಲೆಸಿರುವುದರಿಂದ ಹೇಳಿಕೆ ಪಡೆಯಲಾಗಿಲ್ಲ' ಎಂದು ತಿಳಿಸಿತ್ತು. ಆದರೆ, ಸಾಕ್ಷಿ ಜಸ್ಬೀರ್ ಸಿಂಗ್ ಪರ ವಕೀಲರು, ಟೈಟ್ಲರ್ ವಿರುದ್ಧದ ವಿಚಾರಣೆಯಲ್ಲಿ ಪಾಲ್ಗೊಳ್ಳಲು ತಮ್ಮ ಕಕ್ಷಿದಾರರು ಸಿದ್ಧರಿರುವುದಾಗಿ ಹೇಳಿದ ನಂತರ, ಮರು ವಿಚಾರಣೆ ನಡೆಸುವಂತೆ ನ್ಯಾಯಾಲಯ ಸಿಬಿಐಗೆ ಆದೇಶಿಸಿತು.

2007: ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಲು ಜನಾಂದೋಲನವನ್ನೇ ರೂಪಿಸಿದ ಕರ್ನಾಟಕ ಸರ್ಕಾರಕ್ಕೆ ವಿಶ್ವಸಂಸ್ಥೆಯ ಪ್ರಶಂಸೆ ಲಭಿಸಿತು. ಕರ್ನಾಟಕದ ಪ್ರಯತ್ನಗಳಿಂದಾಗಿ ವಿಶ್ವಸಂಸ್ಥೆ ನಿಗದಿಪಡಿಸಿದ `ಶತಮಾನದ ಅಭಿವೃದ್ಧಿಯ ಗುರಿ'ಗಳನ್ನು ತಲುಪುವುದು ಕಷ್ಟವಾಗಲಿಕ್ಕಿಲ್ಲ. 2015ರ ವೇಳೆಗೆ ಶೇ 60ರಷ್ಟು ಜನರು ಶುಚಿತ್ವಕ್ಕೆ ಮಹತ್ವ ನೀಡಲಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿತು.

2007: ಆಡಳಿತಾರೂಢ ಆಫ್ರಿಕಾ ರಾಷ್ಟ್ರೀಯ ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೇಕಬ್ ಜುಮಾ ಅವರಿಗೆ ಮಾಜಿ ಅಧ್ಯಕ್ಷ ಥಾಬೋ ಎಂಬೆಕಿ ಅಧಿಕಾರ ಹಸ್ತಾಂತರಿಸಿದರು. ಜೇಕಬ್ ಜುಮಾ ಕಾಂಗ್ರೆಸ್ಸಿನ ಉಪಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅನೇಕ ಆರೋಪಗಳನ್ನು ಹೊತ್ತು ಅಧಿಕಾರ ಕಳೆದುಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಬಹುಮತ ಗಳಿಸಿ, ತಮಗೆ ಅಂಟಿದ್ದ ಕಳಂಕವನ್ನು ತೊಳೆದುಕೊಂಡರು.

2006: ವಿವಾದಾತ್ಮಕ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಮಸೂದೆಗೆ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ವಾಷಿಂಗ್ಟನ್ನಿನಲ್ಲಿ ಸಹಿ ಹಾಕಿದರು. ಮಸೂದೆಗೆ ಬುಷ್ ಸಹಿ ಬೀಳುವುದರೊಂದಿಗೆ ಭಾರತ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದಿಂದ ಪರಮಾಣು ಇಂಧನ ಹಾಗೂ ತಂತ್ರಜ್ಞಾನ ಖರೀದಿಸುವ ಹಾದಿ ಸುಗಮಗೊಳ್ಳಲಿದೆ. ಹಲವಾರು ವಿರೋಧಗಳ ನಡುವೆ ಡಿಸೆಂಬರ್ 9ರಂದು ಅಮೆರಿಕದ ಕಾಂಗ್ರೆಸ್ಸಿನಲ್ಲಿ ಬಹುಮತದಿಂದ ಅಂಗೀಕಾರವಾದರೂ ಒಪ್ಪಂದದ ಮಸೂದೆಯು ಪರಮಾಣು ಪೂರೈಕೆಯ 45 ರಾಷ್ಟ್ರಗಳ ಗುಂಪು ಹಾಗೂ ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯಿಂದ ಇನ್ನೂ ಒಪ್ಪಿಗೆ ಪಡೆಯಬೇಕಾಗಿದೆ.

2006: ಹ್ಯಾನಾ -ಬಾರ್ಬರಾ ಕಾರ್ಟೂನ್ ಕಂಪೆನಿಯ ಸಹ ಸ್ಥಾಪಕ ಜೋಸೆಫ್ ಬಾರ್ಬರಾ (95) ನಿಧನರಾದರು. ಇವರು ಸೃಷ್ಟಿಸಿದ ಸ್ಕೂಬಿ-ಡೂ, ಫ್ಲಿಂಟ್ ಸ್ಟೋನ್ಸ್ ಎಂಬ ಕಥಾ ಪಾತ್ರಗಳು ಜನಪ್ರಿಯತೆ ಗಳಿಸಿದ್ದವು. ಬಿಲ್ ಹ್ಯಾನಾ ಅವರ ಜೊತೆಗೆ ಅನಿಮೇಷನ್ ಚಿತ್ರಗಳನ್ನು ನಿಮರ್ಿಸುವಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದ ಬಾರ್ಬರಾ `ಅನಿಮೇಷನ್ ದಂತಕಥೆ'ಯಾಗಿದ್ದರು.

2006: ಖ್ಯಾತ ಚಿತ್ರ ಕಲಾವಿದ ವಿಕಾಸ ಭಟ್ಟಾಚಾರ್ಯ (66) ಕೋಲ್ಕತದಲ್ಲಿ ನಿಧನರಾದರು. 1940ರಲ್ಲಿ ಉತ್ತರ ಕೋಲ್ಕತದಲ್ಲಿ ಜನಿಸಿದ್ದ ಭಟ್ಟಾಚಾರ್ಯ ಲಲಿತ ಕಲಾ ಅಕಾಡೆಮಿ ಮತ್ತು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 1960ರಲ್ಲಿ `ಗೊಂಬೆ' ಚಿತ್ರದ ಸರಣಿಯೊಂದಿಗೆ ಮನೆ ಮಾತಾಗಿದ್ದರು.

2006: ದೇಶವ್ಯಾಪಿ ಕುತೂಹಲ ಕೆರಳಿಸಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮನು ಶರ್ಮಾ ಅಪರಾಧಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ದಂಡ ಸಂಹಿತೆಯ ವಿಧಿ 302 ಮತ್ತು 201 (ಸಾಕ್ಷ್ಯನಾಶ) ಪ್ರಕಾರ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಲಯ ಹೇಳಿತು. ಹರಿಯಾಣದ ಸಚಿವ ವಿನೋದ ಶರ್ಮಾ ಅವರ ಪುತ್ರ ಮನು ಶರ್ಮಾ 1989ರ ಏಪ್ರಿಲಿನಲ್ಲಿ ನಡೆದ ಜೆಸ್ಸಿಕಾಲಾಲ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ.

2006: ಮೇವು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಸಂಪತ್ತು ಪ್ರಕರಣದಲ್ಲಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ಬಿಹಾರಿನ ಮಾಜಿ ಮುಖ್ಯಮಂತ್ರಿ ರಾಬ್ಡಿದೇವಿ ಅವರನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿತು.

2005: ವಿಶ್ವ ವ್ಯಾಪಾರ ಸಂಘಟನೆಯ ಆರನೇ ಸಚಿವ ಮಟ್ಟದ ಸಮ್ಮೇಳನವು ಕೃಷಿ ರಫ್ತು ಸಬ್ಸಿಡಿಯನ್ನು 2013ರ ವೇಳೆಗೆ ಸಂಪೂರ್ಣವಾಗಿ ಕಿತ್ತು ಹಾಕಲು ಒಪ್ಪಿತು. ಈ ದಿನ ಬಿಡುಗಡೆ ಮಾಡಲಾದ ಅಂತಿಮ ಪರಿಷ್ಕತ ಕರಡು ಪ್ರತಿಯಲ್ಲಿ ಇದನ್ನು ತಿಳಿಸಲಾಯಿತು. 149 ರಾಷ್ಟ್ರಗಳ ವಾಣಿಜ್ಯ ಸಚಿವರು ಈ ಅಂತಿಮ ಪರಿಷ್ಕತ ಕರಡು ಪ್ರತಿಗೆ ಒಪ್ಪಿಗೆ ಸೂಚಿಸಿದರು.

2005: ತಮಿಳುನಾಡಿನ ಚೆನ್ನೈಯ ಎಂಜಿಆರ್ ನಗರದಲ್ಲಿ ಪ್ರವಾಹ ಪರಿಹಾರ ಕೂಪನ್ ಪಡೆಯಲು ಸಾಲುಗಟ್ಟಿದ್ದ ಜನರ ಕಾಲ್ತುಳಿತಕ್ಕೆ ಸಿಲುಕಿದ ಪರಿಣಾಮವಾಗಿ 42 ಮಂದಿ ಅಸು ನೀಗಿದರು. 37ಕ್ಕೂ ಹೆಚ್ಚು ಜನ ಗಾಯಗೊಂಡರು. ತಿಂಗಳ ಒಳಗಾಗಿ ಇಲ್ಲಿ ಸಂಭಸಿದ ಎರಡನೇ ಕಾಲ್ತುಳಿತ ಘಟನೆ ಇದು. ನವೆಂಬರ್ 6ರಂದು ಇದೇ ರೀತಿ ಪ್ರವಾಹ ಪರಿಹಾರ ವಿತರಣೆ ಸಂದರ್ಭದಲ್ಲೇ ಕಾಲ್ತುಳಿತ ಸಂಭಸಿ 6 ಜನ ಮೃತರಾಗಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

2005: ಪಿತ್ತಕೋಶದ ಕಾಯಿಲೆಗೆ ಚಿಕಿತ್ಸೆ ಪಡೆಯಲು ದಕ್ಷಿಣ ಕೊರಿಯಾದ ಸೋಲ್ ಗೆ ಹೋಗಿದ್ದ ಕೇಂದ್ರ ಇಂಧನ ಸಚಿವ ಪಿ.ಎಂ. ಸಯೀದ್ (65) ಅಲ್ಲಿನ ಹ್ಯೂಂಡೈ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಓದಿದ್ದ ಸಯೀದ್ ತುಳು, ಕನ್ನಡ ಸೇರಿದಂತೆ 8 ಭಾಷೆ ಬಲ್ಲವರಾಗಿದ್ದರು. ಕಿರಿಯ ವಯಸ್ಸಿನಲ್ಲೇ ಲಕ್ಷದ್ವೀಪದಿಂದ ನಾಲ್ಕನೇ ಲೋಕಸಭೆಗೆ (1967) ಮೊದಲ ಸಲ ಪಕ್ಷೇತರರಾಗಿ ಆಯ್ಕೆಯಾದ ಅವರು 1999ರವರೆಗೆ ಸತತ 10 ಬಾರಿ ಇದೊಂದೇ ಕ್ಷೇತ್ರದಿಂದ ಗೆದ್ದು ಇತಿಹಾಸ ನಿರ್ಮಿಸಿದ್ದರು. 1979-80ರಲ್ಲಿ ಚೌಧುರಿ ಚರಣ್ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಅವರು ನಂತರ ಕಾಂಗ್ರೆಸ್ ಸೇರಿದರು. 13ನೇ ಲೋಕಸಭೆಯ ಉಪಾಧ್ಯಕ್ಷರಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಸಲ ಸೋಲು ಅನುಭವಿಸಿದ್ದರು. ಅವರ ಅನುಭವ, ದಕ್ಷತೆ ಪರಿಗಣಿಸಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇಂದ್ರ ಸಚಿವ ಸಂಪುಟಕ್ಕೆ ಸೇರಿಸಿಕೊಂಡು ಇಂಧನ ಖಾತೆ ಕೊಡಲಾಗಿತ್ತು. ನಂತರ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು.

2005: ಶಿವಸೇನೆಯ ಬಂಡಾಯ ನಾಯಕ ರಾಜ್ ಠಾಕ್ರೆ ಅವರು ಪಕ್ಷವನ್ನು ತ್ಯಜಿಸಿ ನೂತನ ರಾಜಕೀಯ ಪಕ್ಷ ರಚಿಸುವುದಾಗಿ ಮುಂಬೈಯಲ್ಲಿ ಪ್ರಕಟಿಸಿದರು.

1980: ಸೋವಿಯತ್ ಒಕ್ಕೂಟದ ಮಾಜಿ ಪ್ರಧಾನಿ ಅಲೆಕ್ಸಿ ಎನ್. ಕೊಸಿಗಿನ್ ಅವರು ಮಾಸ್ಕೋದಲ್ಲಿ ತಮ್ಮ 76ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಎಂ. ಕೃಷ್ಣೇ ಗೌಡ ಜನನ.

1945: ಸಾಹಿತಿ ರತ್ನಾಕರ ಶೆಟ್ಟಿ ಜನನ.

1942: ವಚನ ಸಾಹಿತ್ಯದಲ್ಲಿ ಆಳವಾದ ಆಧ್ಯಯನ ನಡೆಸಿ ವೈಜ್ಞಾನಿಕ ದೃಷ್ಟಿಕೋನ ರೂಢಿಸಿಕೊಂಡು ಕೃತಿಗಳನ್ನು ರಚಿಸಿರುವ ಸಾಹಿತಿ ಡಾ. ಪಿ.ವಿ. ನಾರಾಯಣ ಅವರು ಪಿ. ವೆಂಕಪ್ಪಯ್ಯ- ನರಸಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1934: ಸಾಹಿತಿ ರಾಜಲಕ್ಷ್ಮಿ ಎನ್. ರಾವ್ ಜನನ.

1930: ಬಾಂಬೆ ಸೆಂಟ್ರಲ್ ಸ್ಟೇಷನ್ ಆಗಿನ ಬಾಂಬೆ (ಈಗಿನ ಮುಂಬೈ) ಗವರ್ನರ್ ಸರ್ ಫ್ರೆಡರಿಕ್ ಸೈಕ್ಸ್ ಅವರಿಂದ ಉದ್ಘಾಟನೆಗೊಂಡಿತು.

1916: ಮೊದಲನೇ ವಿಶ್ವ ಸಮರ ಸಂದರ್ಭದಲ್ಲಿ ವೆರ್ಡನ್ನಿನಲ್ಲಿ ನಡೆದ ಕದನದಲ್ಲಿ ಫ್ರೆಂಚರು ಜರ್ಮನ್ನರನ್ನು ಸೋಲಿಸಿದರು. ಈ ಕದನ ಫೆಬ್ರುವರಿಯಲ್ಲಿ ಆರಂಭವಾಗಿತ್ತು. ಜರ್ಮನಿ ಮತ್ತು ಮಿತ್ರಪಡೆಗಳಿಗೆ ಸೇರಿದ 7 ಲಕ್ಷಕ್ಕೂ ಹೆಚ್ಚು ಮಂದಿ ಈ ಕದನದಲ್ಲಿ ಅಸು ನೀಗಿದರು.

1899: ಊಧಮ್ಸಿಂಗ್ ಜನ್ಮದಿನ. ಜಲಿಯನ್ ಬಾಗ್ ಹತ್ಯಾಕಾಂಡದ ರೂವಾರಿ ಮೈಕೆಲ್ ಒ'ಡೈಯರನನ್ನು ಕ್ಲೊಲುವ ಮೂಲಕ ಊಧಮ್ಸಿಂಗ್ ಈ ಹತ್ಯಾಕಾಂಡದ ಸೇಡು ತೀರಿಸಿದರು.

1885: ಭಾರತೀಯ ತತ್ವಜ್ಞಾನಿ ಸುರೇಂದ್ರನಾಥ ದಾಸಗುಪ್ತ (1885-1952) ಹುಟ್ಟಿದ ದಿನ. `ಹಿಸ್ಟರಿ ಆಫ್ ಇಂಡಿಯನ್ ಫಿಲಾಸಫಿ' ಗ್ರಂಥದ ಮೂಲಕ ಇವರು ಖ್ಯಾತರಾಗಿದ್ದಾರೆ.

1863: ಆಸ್ಟ್ರಿಯಾದ ಆರ್ಕ್ ಡ್ಯೂಕ್ ಫ್ರಾನ್ಸಿಸ್ ಫರ್ಡಿನಾಂಡ್ (1863-1914) ಹುಟ್ಟಿದ ದಿನ. ಇವರ ಕೊಲೆ ಮೊದಲ ಜಾಗತಿಕ ಸಮರಕ್ಕೆ ತತ್ ಕ್ಷಣದ ಕಾರಣವಾಯಿತು.

1856: ಸರ್. ಜೋಸೆಫ್ ಜಾನ್ ಥಾಮ್ಸನ್ (1856-1940) ಹುಟ್ಟಿದ ದಿನ. ಇಂಗ್ಲಿಷ್ ಭೌತ ತಜ್ಞರಾದ ಇವರು ನ್ಯೂಟ್ರಾನ್ ಸಂಶೋಧನೆಯ ಮೂಲಕ ಪರಮಾಣು ರಚನೆಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ನೆರವಾದರು.

No comments:

Post a Comment