ನಾನು ಮೆಚ್ಚಿದ ವಾಟ್ಸಪ್

Thursday, December 6, 2018

ಕರ್ನಾಟಕ ಕೆರೆಗಳ ಸಂರಕ್ಷಣೆ ವೈಫಲ್ಯ: ಹಸಿರು ಪೀಠ ಕೆಂಡ

ಕರ್ನಾಟಕ ಕೆರೆಗಳ ಸಂರಕ್ಷಣೆ ವೈಫಲ್ಯ: ಹಸಿರು ಪೀಠ ಕೆಂಡ

ನವದೆಹಲಿ: ಕರ್ನಾಟಕದ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಸಂರಕ್ಷಣೆ, ಮಾಲಿನ್ಯ ನಿವಾರಣೆ ಮತ್ತು ಪುನರುಜ್ಜೀವನ ನಿಟ್ಟಿನಲ್ಲಿ ತನ್ನ ಆದೇಶ ಪಾಲನೆ ವೈಪಲ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ  2018 ಡಿಸೆಂಬರ್ 6ರ ಗುರುವಾರ ಒಟ್ಟು ೭೫ ಕೋಟಿ ರೂಪಾಯಿಗಳ ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ ಜಿಟಿ), ೫೦೦ ಕೋಟಿ ರೂಪಾಯಿಗಳನ್ನು ಕಾಮಗಾರಿ ಖಾತರಿ ಖಾತೆಗೆ ವರ್ಗಾಯಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತು.

ಕೆರೆಗಳ ಪುನರುಜ್ಜೀವನ ಕಾರ್ಯಯೋಜನೆಯನ್ನು ತಿಂಗಳ ಒಳಗಾಗಿ ರೂಪಿಸಲು ಮತ್ತು ಅದರ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ನೇತೃತ್ವದಲ್ಲಿ ಸಮಿತಿಯೊಂದನ್ನೂ ಹಸಿರು ನ್ಯಾಯಪೀಠವು ರಚಿಸಿತು.

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯದಲ್ಲಿ ವಿಫಲವಾದುದಕ್ಕಾಗಿ ಸರ್ಕಾರ ಮತ್ತು ಬಿಬಿಎಂಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಅವರು, ರಾಜ್ಯ ಸರ್ಕಾರಕ್ಕೆ ೫೦ ಕೋಟಿ ರೂಪಾಯಿಗಳನ್ನು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ೨೫ ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿ ಮಾಡುವಂತೆ ನಿರ್ದೇಶಿಸಿದರು.

ಖಾತರಿ ಖಾತೆಗೆ ಪಾವತಿ ಮಾಡಲಾಗುವ ೫೦೦ ಕೋಟಿ ರೂಪಾಯಿಗಳನ್ನು ಕೆರೆಗಳ ಸ್ವಚ್ಚತೆಗಾಗಿ ಕಾರ್ಯಯೋಜನೆ ಅನುಷ್ಠಾನಕ್ಕೆ ಬಳಸಬೇಕು ಎಂದು ಸೂಚಿಸಿದ ಗೋಯೆಲ್,  ರಾಜ್ಯ ಸರ್ಕಾರಕ್ಕೆ ವಿಧಿಸಲಾದ ೫೦ ಕೋಟಿ ದಂಡದ ಹಣವನ್ನು ವಿವೇಚನೆ ರಹಿತವಾಗಿ ಹರಿದ ಸಂಸ್ಕರಿಸದ ಕೊಚ್ಚೆ ನೀರಿನಿಂದ ಕಲುಷಿತವಾದ ಕೆರೆಗಳ ಪುನರುಜ್ಜೀವನಕ್ಕಾಗಿ ಬಳಸಬೇಕು ಎಂದು ಸೂಚಿಸಿದರು. ಜಲ ಮಾಲಿನ್ಯದಿಂದ ಪರಿಸರಕ್ಕೆ ಆದ ಹಾನಿಗೆ ಪರಿಹಾರವಾಗಿ ಬಿಬಿಎಂಪಿ ೨೫ ಕೋಟಿ ರೂಪಾಯಿಗಳ ದಂಡವನ್ನು ತೆರಬೇಕು ಎಂದು ಗೋಯೆಲ್ ಆಜ್ಞಾಪಿಸಿದರು.

ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಹಾಗೂ ರಾಜ್ಯದ ರಾಜಕಾಲುವೆಗಳ ಅತಿಕ್ರಮಣ ತೆರವು ಬಗ್ಗೆ  ತಾಳಲಾದ ಉದಾಸೀನತೆಗಾಗಿ ತೀವ್ರ ಅಸಂತೋಷ ವ್ಯಕ್ತ ಪಡಿಸಿದ ಗೋಯೆಲ್ ಅವರು, ಪೀಠದ ಆದೇಶ ಪಾಲನೆ ನಿಟ್ಟಿನಲ್ಲಿ ಕಾಲಮಿತಿಯ ಕಾರ್ಯಯೋಜನೆಯನ್ನು ತಿಂಗಳ ಒಳಗಾಗಿ ರೂಪಿಸಲು ಮತ್ತು ಅದರ ಅನುಷ್ಠಾನ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಗೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಉಪನ್ಯಾಸಕ ಪ್ರೊಫೆಸರ್ ರಾಮಚಂದ್ರನ್ ಹಾಗೂ  ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಹಾಗೂ ಇತರರು ಸಮಿತಿಯ ಸದಸ್ಯರಾಗಿರುತ್ತಾರೆ.

ಹಸಿರು ನ್ಯಾಯಪೀಠದ ಹಿಂದಿನ ಆದೇಶಗಳನ್ನು ಜಾರಿಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಗುರುತಿಸುವಂತೆಯೂ ಪೀಠವು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.

ಕೆರೆಗಳಿಗೆ ಮಾಲಿನ್ಯಕಾರಕ ತ್ಯಾಜ್ಯ ಸೇರದಂತೆ ಖಾತರಿ ಪಡಿಸುವ ನಿಟ್ಟಿನಲ್ಲಿ ಪಂಜ್ವಾನಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಜಲಾನಯನ ಪ್ರದೇಶಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಪೀಠ ಆಜ್ಞಾಪಿಸಿತು. ವಿಷಯಕ್ಕೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವಂತೆಯೂ ಪೀಠ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತು.

No comments:

Post a Comment