ಇಂದಿನ ಇತಿಹಾಸ History Today ಡಿಸೆಂಬರ್ 26
2018: ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ೧೭ ಕಡೆ ಏಕಕಾಲಕ್ಕೆ ಭಾರೀ ದಾಳಿ ಕಾರ್ಯಾಚರಣೆ ನಡೆಸಿ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಉಗ್ರಗಾಮಿ ಸಂಘಟನೆಯ ಪ್ರೇರಣೆ ಪಡೆದು ಭಾರತದಲ್ಲಿ ವ್ಯಾಪಕ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಜ್ಜಾಗುತ್ತಿದ್ದ
ಹೊಸ ಸಂಘಟನೆಯ ೧೦ ಮಂದಿಯನ್ನು ಬಂಧಿಸಿ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡನ್ನು ವಶಪಡಿಸಿಕೊಂಡಿತು. ‘ಹರ್ಕತ್ ಉಲ್ ಹರ್ಬ್ ಇ ಇಸ್ಲಾಂ’ ಹೆಸರಿನ ಹೊಸ ಸಂಘಟನೆ ಸರಣಿ ಸ್ಫೋಟಗಳನ್ನು ನಡೆಸುವ ಸಿದ್ಧತೆಗಳಲ್ಲಿ ತೊಡಗಿತ್ತು’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿತು. ’ಈ ಸಂಘಟನೆಯು ಜನಸಂದಣಿಯ ಪ್ರದೇಶಗಳು, ರಾಜಕೀಯ ಗಣ್ಯರು ಮತ್ತು ಭದ್ರತಾ ಕೇಂದ್ರಗಳ ಮೇಲೆ ದಾಳಿ ನಡೆಸುವ ಯೋಜನೆಗಳನ್ನು ರೂಪಿಸುತ್ತಿತ್ತು’ ಎಂದು ಅದು ಹೇಳಿತು. ದೆಹಲಿಯ
ಸೀಲಾಂಪುರ್ ಮತ್ತು ಉತ್ತರ ಪ್ರದೇಶದ ಅಮ್ರೋಹ, ಹಾಪುರ್, ಮೀರತ್ ಮತ್ತು ಲಕ್ನೋದಲ್ಲಿ ದಾಳಿಗಳನ್ನು ನಡೆಸಲಾಗಿದೆ. ಕಂಟ್ರಿ ಮೇಡ್ ರಾಕೆಟ್ ಲಾಂಚರ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು, ಮದ್ದುಗುಂಡನ್ನು ಈವರೆಗೆ ವಶಪಡಿಸಿಕೊಳ್ಳಲಾಗಿದೆ, ದಾಳಿ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಎನ್ಐಎ ಐಜಿಪಿ ಅಲೋಕ್ ಮಿತ್ತಲ್ ಪ್ರಕಟಿಸಿದರು. ‘ಅವರು ಹಿಡಿಯಷ್ಟು ಬಾಂಬುಗಳನ್ನು ತಯಾರಿಸುತ್ತಿರಲಿಲ್ಲ,
ಬದಲಿಗೆ ಭಾರೀ ಪ್ರಮಾಣದಲ್ಲಿ ಬಾಂಬ್ ತಯಾರಿಯಲ್ಲಿ ತೊಡಗಿದ್ದರು’ ಎಂದು
ಮಿತ್ರಲ್ ಹೇಳಿದರು. ‘ವಶಪಡಿಸಿಕೊಳ್ಳಲಾಗಿರುವ ಒಟ್ಟು ೭.೫ ಲಕ್ಷ ರೂಪಾಯಿ, ಸುಮಾರು ೧೦೦ ಮೊಬೈಲು ಫೋನುಗಳು, ೧೩೫ ಸಿಮ್ ಕಾರ್ಡುಗಳು, ಲ್ಯಾಪ್ ಟ್ಯಾಪ್ ಗಳು ಮತ್ತು ಮೆಮೋರಿ ಕಾರ್ಡುಗಳು, ೧೦೦ಕ್ಕೂ ಹೆಚ್ಚು ಅಲಾರಂ ಗಡಿಯಾರಗಳು, ಹಲವಾರು ದೂರನಿಯಂತ್ರಿತ ಬಾಂಬುಗಳಲ್ಲಿ ಬಳಸಲು ಸಾಕಾಗುವಷ್ಟಿದ್ದ
ಸುಮಾರು ೨೫ ಕಿಲೋಗ್ರಾಮ್ ರಾಸಾಯನಿಕಗಳು, ೧೩ ಪಿಸ್ತೂಲುಗಳು ಇತ್ಯಾದಿ ಅವರ ಸಿದ್ಧತೆಯ ಒಳನೋಟ ಒದಗಿಸುತ್ತವೆ’ ಎಂದು ಮಿತ್ತಲ್ ನುಡಿದರು. ’ಸಿದ್ಧತೆಯ ಮಟ್ಟವನ್ನು ನೋಡಿದರೆ ಸದ್ಯೋಭವಿಷ್ಯದಲ್ಲಿ
ರಿಮೋಟ್ ಕಂಟ್ರೋಲ್ ಸ್ಫೋಟಗಳ ಮೂಲಕ ’ಫಿಯಾದೀನ್ ದಾಳಿಗಳನು’ ನಡೆಸಲು ಅವರು ಸಜ್ಜಾಗುತ್ತಿದ್ದಂತೆ
ಕಂಡು ಬಂದಿದೆ. ಇದು ಐಸಿಸ್ನಿಂದ ಸ್ಫೂರ್ತಿ ಪಡೆದ ಹೊಸ ಸಂಘಟನೆ. ಅವರು ವಿದೇಶೀ ಏಜೆಂಟ್ ಜೊತೆಗೆ ಸಂಪರ್ಕ ಹೊಂದಿದ್ದು ಅವರ ಗುರುತುಗಳನ್ನು ಇನ್ನೂ ದೃಢಪಡಿಸಿಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು. ಒಬ್ಬ
ಸಿವಿಲ್ ಎಂಜಿನಿಯರ್, ಒಬ್ಬ ಮೌಲ್ವಿ ಮತ್ತು ಒಬ್ಬ ಪದವಿಪೂರ್ವ ವಿದ್ಯಾರ್ಥಿ ಹಾಗೂ ಒಬ್ಬ ಆಟೋ ಚಾಲಕ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಅವರು ನುಡಿದರು. ಹೊಸ ಸಂಘಟನೆಯ ನಾಯಕನನ್ನು ಮೌಲ್ವಿ ಮುಫ್ತಿ ಸೊಹೈಲ್ ಎಂಬುದಾಗಿ ಗುರುತಿಸಲಾಗಿದ್ದು,
ಈತ ಉತ್ರರ ಪ್ರದೇಶದ ಅಮ್ರೋಹದ ನಿವಾಸಿ ಎಂದು ಮಿತ್ತಲ್ ಹೇಳಿದರು. ’ಇದೊಂದು ಸ್ವಯಂ ಆರ್ಥಿಕ ನೆರವಿನ ಕಾರ್ಯಾಚರಣೆ. ಆದರೆ ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ವ್ಯಕ್ತಿ ವಿದೇಶದಲ್ಲಿ ನೆಲೆಸಿರುವಂತೆ ಕಾಣುತ್ತದೆ’ ಎಂದು ಎನ್ಐಎ ಅಧಿಕಾರಿ ನುಡಿದರು. ಬಂಧಿಸಲಾಗಿರುವ ೧೦ ಮಂದಿಯಲ್ಲಿ ಐವರನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆಗಳಿವೆ’ ಎಂದು ಮಿತ್ತಲ್ ಹೇಳಿದರು. ಮೂರು -ನಾಲ್ಕು ತಿಂಗಳ ಹಿಂದೆ ಗುಂಪಿನ ಕಾರ್ಯಾಚರಣೆಯ ಸುಳಿವು ಲಭಿಸಿತ್ತು. ಅವರ ಸಂಚನ್ನು ಭೇದಿಸಲು ತನಿಖೆಗಾರರು ೩-೪ ತಿಂಗಳುಗಳನ್ನು ತೆಗೆದುಕೊಂಡಿದ್ದರು.
ಈ ವರ್ಷದ ಆದಿಯಲ್ಲಿ ತನಿಖಾ ಸಂಸ್ಥೆಯು ತಮಿಳುನಾಡಿನ ೭ ಮಂದಿಯನ್ನು ಅವರಿಗೆ ಇರಾಕ್ ಮತ್ತು ಸಿರಿಯಾ ಮೂಲದ ಉಗ್ರಗಾಮಿ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಬಗೆಗಿನ ಸಾಕ್ಷ್ಯಾಧಾರ ಲಭಿಸಿದ್ದನ್ನು ಅನುಸರಿಸಿ ಬಂದಿಸಿತ್ತು. ’ಹರ್ಕತ್ - ಉಲ್ -ಹರ್ಬ್-ಇ-ಇಸ್ಲಾಂ’ ಹೆಸರಿನ ಐಸಿಸ್ ಸಂಘಟನೆಯ ಹೊಸ ಅವತಾರದ ಬಗ್ಗೆ ಲಭ್ಯವಾದ ಮಾಹಿತಿಯನ್ನು ಆಧರಿಸಿ ಈ ದಾಳಿಗಳನ್ನು ನಡೆಸಲಾಯಿತು ಎಂದು ಮೂಲಗಳು ತಿಳಿಸಿದವು. ಉತ್ತರ
ಪ್ರದೇಶ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ದಳದ ಐಜಿಪಿ ಅಸಿಮ್ ಅರುಣ್ ಅವರು ಭಯೋತ್ಪಾದಕ ಸಂಘಟನೆ ಜೊತೆಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಬಂಧನವನ್ನು ದೃಢ ಪಡಿಸಿದರು. ಬಂಧಿತ ವ್ಯಕ್ತಿಗಳು ಐಸಿಸ್‌ನ ಹೊಸ ರೂಪವಾದ ಹರ್ಕತ್ -ಉಲ್-ಹರ್ಬ್-ಇ-ಇಸ್ಲಾಂ ಸಂಘಟನೆಯ ಸದಸ್ಯರು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇನ್ನೊಬ್ಬ ಅಧಿಕಾರಿ ತಿಳಿಸಿದರು. ಎನ್ಐಎ ನೀಡಿರುವ ಪ್ರಾಥಮಿಕ ವರದಿಗಳ ಪ್ರಕಾರ ಅಮ್ರೋಹದ ಮಸೀದಿಯೊಂದರ ಮೌಲ್ವಿ ಮತ್ತು ಮೂರನೇ ವರ್ಷದ ಎಂಜಿನಿಯರಿಂಗ್ ಪದವೀಧರ ವಿದ್ಯಾರ್ಥಿ ಐಸಿಸ್‌ನ ಹೊಸ ರೂಪದ ಸಂಘಟನೆಯ ಹಿಂದಿರುವ ಮುಖ್ಯ ವ್ಯಕ್ತಿಗಳು ಎಂಬುದಾಗಿ ಹೇಳಲಾಗಿತ್ತು. ಐಸಿಸ್‌ನ ಈ ಹೊಸ ಸಂಘಟನೆಯು ರಾಷ್ಟ್ರದ ರಾಜಧಾನಿ ಮತ್ತು ಉತ್ತರಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಮುಂದಿನ ತಿಂಗಳು ಗಣರಾಜ್ಯೋತ್ಸವ ಆಚರಣೆ ವೇಳೆಯಲ್ಲಿ ವ್ಯಾಪಕ ದಾಳಿಗಳನ್ನು ನಡೆಸಲು ಯೋಜನೆ ರೂಪಿಸುತ್ತಿತ್ತು
ಎಂದು ಅಧಿಕಾರಿಗಳು ತಿಳಿಸಿದರು. ದಾಳಿಯಲ್ಲಿ ಬಂಧಿತರಾದ ವ್ಯಕ್ತಿಗಳು ನೇರವಾಗಿ ಇಸ್ಲಾಮಿಕ್ ಖಲೀಫತ್ ಸ್ಥಾಪನೆ ಗುರಿ ಹೊಂದಿರುವ ಐಸಿಸ್ಗೆ ಸೇರಿದವರೇ ಅಥವಾ ಅದರ ಸಿದ್ಧಾಂತದಿಂದ ಸ್ಫೂರ್ತಿ ಪಡೆದವರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಇದಕ್ಕೂ ಮೊದಲಿನ ವರದಿಗಳು ಹೇಳಿದ್ದವು. ಐಸಿಸ್ ಜೊತೆಗೆ ಸಂಪರ್ಕ ಹೊಂದಿದ್ದ ಆಪಾದನೆಯಲ್ಲಿ ತಮಿಳುನಾಡಿನ ಏಳು ಮಂದಿಯ ಮನೆಗಳ ಮೇಲೆ ಎನ್ ಐಎ ದಾಳಿ ನಡೆಸಿದ ಒಂದು ವಾರದ ಬಳಿಕ ಈ ದಾಳಿ ಕಾರ್ಯಾಚರಣೆ ನಡೆದಿದೆ. ಕೆಲವು ಹಿಂದು ಸಂಘಟನೆಗಳ ನಾಯಕರನ್ನು ಹತ್ಯೆಗೈಯಲು ಸಂಚು ಹೂಡುತ್ತಿದ್ದ ಆಪಾದನೆಯಲ್ಲಿ ಏಳು ಮಂದಿಯನ್ನು ನಂತರ ಬಂಧಿಸಲಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಗುಪ್ತಚರ ಅಧಿಕಾರಿಗಳು ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆಯ ಪ್ರಭಾವ ಭಾರತದಲ್ಲಿ ಹೆಚ್ಚುತ್ತಿರುವ ಬಗ್ಗೆ ನಿಗಾ ಇಟ್ಟಿದ್ದರು. ಐಸಿಸ್ ಸಿದ್ಧಾಂತದ ಆಕರ್ಷಣೆಗೆ ಸಿಲುಕಿ ಜೀವನಶೈಲಿ ಬದಲಾಯಿಸುತ್ತಿದ್ದ
ವ್ಯಕ್ತಿಗಳ ಮೇಲೆ ಹದ್ದುಗಣ್ಣು ಇರಿಸಲಾಗಿತ್ತು. ಐಸಿಸ್ ಸಂಘಟನೆಗೆ ಸೇರಿದವರೆಂಬ ಹಿನ್ನೆಲೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್ಐಎ ೧೦೩ ಆರೋಪಿಗಳನ್ನು ಬಂಧಿಸಿತ್ತು, ಅವರ ಪೈಕಿ ಬಹುತೇಕ ಮಂದಿ ಉತ್ತರ ಪ್ರದೇಶದವರಾಗಿದ್ದರು
ಎಂದು ೨೦೧೭ರ ಡಿಸೆಂಬರಿನಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ವರದಿಯೊಂದರಲ್ಲಿ ತಿಳಿಸಿತ್ತು. ಐಸಿಸ್ ಬಗ್ಗೆ ಅಥವಾ ಅದರ ವಿವಿಧ ರೂಪಗಳ ಸಂಘಟನೆಗಳ ಅನುಕಂಪ ಹೊಂದಿದವರು ಎಂಬ ಕಾರಣಕ್ಕಾಗಿ ಬಂಧಿಸಲಾದ ೧೦೩ ಜನರ ಪೈಕಿ ೧೭ ಮಂದಿಯನ್ನು ಉತ್ತರ ಪ್ರದೇಶದಲ್ಲಿಯೇ ಬಂಧಿಸಲಾಗಿತ್ತು.
ಇದಕ್ಕೆ ಮುನ್ನ ಗುಪ್ತಚರ ಸಂಸ್ಥೆಗಳು ಕಾಶ್ಮೀರದಲ್ಲಿ ಮತ್ತು ಕೇರಳ, ಕರ್ನಾಟಕ, ಆಂಧ್ರಪ್ರದೇಶ ಇತ್ಯಾದಿ ದಕ್ಷಿಣದ ರಾಜ್ಯಗಳಲ್ಲಿ ಐಸಿಸ್
ನ ಸಣ್ಣ ಘಟಕಗಳನ್ನು ಭೇದಿಸಿದ್ದವು. ೨೦೧೭ರ
ಮಾರ್ಚ್ ೭ರಂದು ೮ ಜನರನ್ನು ಗಾಯಗೊಳಿಸಿದ್ದ ಶಕ್ತಿಶಾಲಿ ಭೋಪಾಲ್ -ಉಜ್ಜೈನ್ ಪ್ಯಾಸೆಂಜರ್ ರೈಲು ಸ್ಫೋಟವು ಭಾರತದಲ್ಲಿ ಐಸಿಸ್ ಸಂಪರ್ಕಿತ ಸಂಘಟನೆಯ ಮೊತ್ತ ಮೊದಲ ಭಯೋತ್ಪಾದಕ ಕೃತ್ಯ ಎಂಬುದಾಗಿ ಗುರುತಿಸಲಾಗಿತ್ತು. ದಾಳಿ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದ ಭಯೋತ್ಪಾದನೆ ನಿಗ್ರಹ ದಳದ (ಯುಪಿಎಟಿಎಸ್) ಸಹಯೋಗ ನೀಡಿತ್ತು.
2018: ನವದೆಹಲಿ: ಬುಲೆಟ್ ಟ್ರೇನನ್ನು ಮರೆತುಬಿಡಿ, ಈಗ ಇರುವ ಟೇನುಗಳ ಪರಿಸ್ಥಿತಿ ಸುಧಾರಿಸಿ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಳಂಬಿತ ರೈಲಿನಲ್ಲಿ ಸಿಕ್ಕಿಹಾಕಿಕೊಂಡ ಅಮೃತಸರದ ಬಿಜೆಪಿ ನಾಯಕಿ ಹಾಗೂ ಮಾಜಿ ಸಚಿವೆ ಲಕ್ಷ್ಮಿ ಕಾಂತ ಚಾವ್ಲಾ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ೧೦ ಗಂಟೆಗಳಿಗೂ ಹೆಚ್ಚು ತಾಸು ವಿಳಂಬಗೊಂಡ ಸರಯೂ -ಯಮುನಾ ರೈಲುಗಾಡಿಯಲ್ಲಿ ಸಿಕ್ಕಿಹಾಕಿಕೊಂಡ ಬಿಜೆಪಿ ನಾಯಕಿ ರೈಲಿನ ಒಳಗೆ ಕುಳಿತುಕೊಂಡೇ ತಾವು ಹಾಗೂ ಇತರ ಪ್ರಯಾಣಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿಡಿಯೋದಲ್ಲಿ ವಿವರಿಸಿದರು. ‘ಬುಲೆಟ್ ಟ್ರೇನ್ ಮರೆತುಬಿಡಿ, ಈಗ ಓಡುತ್ತಿರುವ ಟ್ರೇನುಗಳ ಬಗ್ಗೆ ಗಮನ ಹರಿಸಿ’ ಎಂದು ಲಕ್ಷಿ ವಿಡಿಯೋದಲ್ಲಿ ಪ್ರಧಾನಿಗೆ ಮೊರೆ ಇಟ್ಟರು. ಪಂಜಾಬಿನ ಮಾಜಿ ಆರೋಗ್ಯ ಸಚಿವರಾಗಿದ್ದ ಚಾವ್ಲಾ ಬಳಿಕ ಸಮಾಜ ಕಲ್ಯಾಣ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ಸರಯೂ-ಯಮುನಾ ರೈಲುಗಾಡಿಯ ಎಸಿ-೩ ಬೋಗಿಯಲ್ಲಿ ಪಯಣಿಸುತ್ತಿದ್ದರು. ‘ಒಂದಾನೊಂದು ಕಾಲದಲ್ಲಿ ಇದು ಫ್ಲೈಯಿಂಗ್ ಮೇಲ್ ಎಂದೇ ಪರಿಚಿತವಾಗಿತ್ತು. ಅದು ತನ್ನ ಗುರಿಯತ್ತ ಯಾವಾಗ ಹಾರಿತ್ತೋ ನನಗೆ ನೆನಪಿಲ್ಲ. ಇಂದು ಈ ರೈಲುಗಾಡಿಯಲ್ಲಿ ನಾವು ೨೪ ಪ್ಲಸ್ ೮ ಗಂಟೆಗಳಿಂದ ಕುಳಿತುಕೊಂಡಿದ್ದೇವೆ. ಇನ್ನೂ ನಮ್ಮ ಗಮ್ಯ ಸ್ಥಳವನ್ನು ನಾವು ತಲುಪಿಲ್ಲ. ಇದು ೯ ಗಂಟೆಗಳಿಗಿಂತಲೂ ಹೆಚ್ಚು ವಿಳಂಬವಾಗಿ ಸಂಚರಿಸುತ್ತಿದೆ’ ಎಂದು ರೈಲುಬೋಗಿಯೊಳಗೆ ಕುಳಿತುಕೊಂಡೇ ಚಾವ್ಲಾ ವಿಡಿಯೋದಲ್ಲಿ ಹೇಳಿದರು. ‘ಪ್ರಧಾನಿ
ಮೋದಿ ಮತ್ತು ಸರ್ಕಾರಕ್ಕೆ ನನ್ನ ಮನವಿ. ದಯವಿಟ್ಟು ನಮ್ಮಂತಹ ಸಾಮಾನ್ಯ ಜನರ ಬಗ್ಗೆ ಸ್ವಲ್ಪ ಕನಿಕರ ತೋರಿಸಿ. ರೈಲುಗಾಡಿಗಳು ಎಂತಹ ಶೋಚನೀಯ ಸ್ಥಿತಿಯಲ್ಲಿವೆ ಎಂದರೆ, ಅವುಗಳ ಬಾಗಿಲುಗಳು ಮುರಿದಿವೆ. ಶೌಚಾಲಯದ ನಲ್ಲಿಗಳು ಮುರಿದಿವೆ. ಟಾಯ್ಲೆಟ್ ಸೀಟುಗಳು ಕಿತ್ತು ಹೋಗಿವೆ.... ರೈಲುಗಾಡಿಯ ಮಾರ್ಗವನ್ನು ಯಾವುದೋ ಕಾರಣಕ್ಕಾಗಿ ಬದಲಾಯಿಸಲಾಗಿದೆ. ಈ ಬಗ್ಗೆ ನಮಗೆ ಯಾವುದೇ ಮಾಹಿತಿಯನ್ನೂ ಕೊಡಲಾಗಿಲ್ಲ. ಕಳೆದ ೧೦ ಗಂಟೆಗಳಿಂದ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರಿಗೆ ಈ ರೈಲುಗಾಡಿಯ ಒಳಗೆ ಆಹಾರ ಕೊಡುವ ವ್ಯವಸ್ಥೆ ಕೂಡಾ ಇಲ್ಲ’ ಎಂದು
ಮಾಜಿ ಸಚಿವೆ ಗೋಗರೆದರು. ‘ದೇವರಾಣೆಯಾಗಿ ಕೇಳಿಕೊಳ್ಳುತ್ತೇನೆ, ಗಂಟೆಗೆ ೧೨೦ ಕಿಮೀ ಇಲ್ಲವೇ ೨೦೦ ಕಿಮೀ ಓಡುವ ರೈಲುಗಳನ್ನು ಮರೆತುಬಿಡಿ. ಈಗಾಗಲೇ ಓಡುತ್ತಿರುವ ರೈಲುಗಳ ಬಗ್ಗೆ ಗಮನ ಹರಿಸಿ’ ಎಂದು
ಚಾವ್ಲಾ ಹೇಳಿದರು. ಚಾವ್ಲಾ
ಅವರ ಮೊರೆ ಇಲ್ಲಿಗೆ ನಿಂತಿಲ್ಲ. ಮುಂದುವರೆದ ಅವರು ’ಇಲ್ಲಿ ತಂಗುವ ಕೊಠಡಿ ಇಲ್ಲ. ಜನರು ಫ್ಲಾಟ್ ಫಾರಂ ಮೇಲೆ ನಿಂತಿರುವ ರೈಲುಗಾಡಿಯಲ್ಲೇ ಮರಗಟ್ಟುವ ಚಳಿಯಲ್ಲಿ ಕಟ ಕಟ ಹಲ್ಲು ಕಡಿಯುತ್ತಾ ಕಾಯುವಂತೆ ಮಾಡಲಾಗಿದೆ ಪೀಯೂಶ್ ಗೋಯಲ್ ಜಿ ಮತ್ತು ಮೋದಿ ಜಿ’ ಎಂದು
ಚಾವ್ಲಾ ಹೇಳಿದರು. ‘ನಾನು
ರೈಲ್ವೇ ಹೆಲ್ಪ್ ಲೈನಿಗೂ ಕರೆ ಮಾಡಿದೆ, ಪೀಯೂಶ್ ಗೋಯೆಲ್ ಅವರಿಗೆ ಇ-ಮೇಲ್ ಮಾಡಿದೆ. ಯಾರಿಂದಲೂ ಈವರೆಗೂ ಯಾವ ನೆರವೂ ಬಂದಿಲ್ಲ’ ಎಂಬುದಾಗಿ ಹೇಳುವ ಮೂಲಕ ರೈಲ್ವೇ ಹೆಲ್ಪ್ ಲೈನುಗಳನ್ನೂ ಅವರು ವಿಡಿಯೋದಲ್ಲಿ ತರಾಟೆಗೆ ತೆಗೆದುಕೊಂಡರು.
2018: ನವದೆಹಲಿ: ರಾಷ್ಟ್ರಪತಿ ಅಂಗರಕ್ಷಕ ಹುದ್ದೆಗೆ ನೇಮಕಾತಿಯಲ್ಲಿ ಕೇವಲ ಮೂರು ಜಾತಿಗಳನ್ನು ಪರಿಗಣಿಸಲಾಗಿದೆ ಎಂಬುದಾಗಿ ಆಪಾದಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಕೇಳಿ ಕೇಂದ್ರ ಸರ್ಕಾರ ಮತ್ತು ಸೇನಾ ಮುಖ್ಯಸ್ಥರಿಗೆ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿತು. ನ್ಯಾಯಮೂರ್ತಿಗಳಾದ ಎಸ್. ಮುರಳೀಧರ ಮತ್ತು ಸಂಜೀವ ನರುಲ ಅವರನ್ನು ಒಳಗೊಂಡ ಪೀಠವು ರಕ್ಷಣಾ ಸಚಿವಾಲಯ, ಸೇನಾ ದಂಡನಾಯಕ, ರಾಷ್ಟ್ರಪತಿಯವರ ಅಂಗರಕ್ಷಕ ದಳ ಮುಖ್ಯಸ್ಥ ಮತ್ತು ಸೇನಾ ನೇಮಕಾತಿ ನಿರ್ದೇಶಕರಿಗೆ ಈ ಬಗ್ಗೆ ನೋಟಿಸ್ಗಳನ್ನು ನೀಡಿತು. ‘ನಾಲ್ಕು ವಾರಗಳ ಒಳಗಾಗಿ ಉತ್ತರ ಸಲ್ಲಿಸಬೇಕು. ಪ್ರತ್ಯುತ್ತರ ಏನಾದರೂ ಇದ್ದಲ್ಲಿ ವಿಚಾರಣೆಯ ಮುಂದಿನ ದಿನಾಂಕದಂದು ಸಲ್ಲಿಸಬೇಕು’ ಎಂದು
ಹೇಳಿದ ಪೀಠ ೨೦೧೯ರ ಮೇ ೮ಕ್ಕೆ ವಿಚಾರಣೆಗೆ ದಿನ ನಿಗದಿ ಪಡಿಸಿತು. ನ್ಯಾಯಾಲಯವು ಹರಿಯಾಣದ ನಿವಾಸಿ ಗೌರವ್ ಯಾದವ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತ್ತು. ಯಾದವ್ ಅವರು ೨೦೧೭ರ ಸೆಪ್ಟೆಂಬರ್ ೪ರಂದು ನಡೆದ ರಾಷ್ಟ್ರಪತಿಯವರ ಅಂಗರಕ್ಷಕ ನೇಮಕಾತಿಯನ್ನು, ಕೇವಲ ಜಾಟರು, ರಜಪೂತರು ಮತ್ತು ಜಾಟ್ ಸಿಕ್ಖರನ್ನು ಕರೆದಿದ್ದ ಕಾರಣ ರದ್ದು ಪಡಿಸಬೇಕು ಎಂಬುದಾಗಿ ತಮ್ಮ ಅರ್ಜಿಯಲ್ಲಿ ಕೋರಿದ್ದರು. ತಾನು ಅಹಿರ್/ಯಾದವ್ ಜಾತಿಗೆ ಸೇರಿದ್ದು, ಜಾತಿಯನ್ನು ಹೊರತು ಪಡಿಸಿ, ರಾಷ್ಟ್ರಪತಿ ಅಂಗರಕ್ಷಕ ಹುದ್ದೆಗೆ ಬೇಕಾದ ಎಲ್ಲ ಅರ್ಹತಾ ಮಾನದಂಡಗಳನ್ನೂ ಪೂರೈಸಿರುವುದಾಗಿ
ತಿಳಿಸಿದ ಅವರು ತಮ್ಮನ್ನು ಹುದ್ದೆಗೆ ನೇಮಕ ಮಾಡಬೇಕು ಎಂದು ಕೋರಿದ್ದರು. ವಕೀಲ ರಾಮ್ ನರೇಶ ಯಾದವ್ ಮೂಲಕ
ಸಲ್ಲಿಕೆಯಾಗಿರುವ ಯಾದವ್ ಅವರ ಅರ್ಜಿಯು ’ಮೂರು ಜಾತಿಗಳಿಗೆ ನೀಡಲಾದ ಆದ್ಯತೆಯು ಅರ್ಹತೆಯುಳ್ಳ ಇತರ ನಾಗರಿಕರಿಗೆ ಈ ಹುದ್ದೆಗೆ ನೇಮಕಗೊಳ್ಳುವ ಅರ್ಹತೆ ಹಾಗೂ ಅವಕಾಶವನ್ನು ವಂಚಿಸಿದೆ’ ಎಂದು
ಹೇಳಿತು.
ನೇಮಕಾತಿ ಮಾನದಂಡವನ್ನು ಜಾತಿಯನ್ನಾಧರಿಸಿ
ನಿರಂಕುಶವಾಗಿ ವರ್ಗೀಕರಿಸಲಾಗಿದೆ. ಇದು ಭಾರತೀಯ ಸಂವಿಧಾನದ ೧೪ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ. ಜನಾಂಗ, ಧರ್ಮ, ಜಾತಿ, ಲಿಂಗ, ಬಣ್ಣ ಮತ್ತು ಹುಟ್ಟಿದ ಸ್ಥಳವನ್ನು ಆಧರಿಸಿ ಮಾಡಲಾಗುವ ತಾರತಮ್ಯಗಳನ್ನು ನಿಷೇಧಿಸುವ ಸಂವಿಧಾನದ ೧೫(೧) ಪರಿಚ್ಛದನ್ನೂ ಇದು ಉಲ್ಲಂಘಿಸುತ್ತದೆ’ ಎಂದು ಅರ್ಜಿ ಹೇಳಿತು. ರಾಷ್ಟ್ರಪತಿಯವರ ಅಂಗರಕ್ಷಕನ ನೇಮಕಾತಿ ಪ್ರಕ್ರಿಯೆಯಲ್ಲಿ
ಜಾತಿ ಆಧಾರಿತ ತಾರತಮ್ಯ ಮಾಡಲಾಗಿದೆ. ಸಂವಿಧಾನದ ಪರಿಚ್ಛೇಧವು ಸರ್ಕಾರಿ ಕಚೇರಿಯ ನೇಮಕಾತಿಯಲ್ಲಿ ತಾರಮ್ಯರಹಿತ ನೇಮಕಾತಿಗೆ ಅವಕಾಶ ಒದಗಿಸುತ್ತದೆ. ಈ ಪ್ರಕರಣದಲ್ಲಿ ಮೂರು ಜಾತಿಗಳನ್ನು ಮಾತ್ರ ರಾಷ್ಟ್ರಪತಿಯವರ ಅಂಗರಕ್ಷಕ ಹುದ್ದೆಗೆ ಪರಿಗಣಿಸಿದ್ದರಿಂದ
ಸಂವಿಧಾನದ ವಿಧಿಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿ ಪ್ರತಿಪಾದಿಸಿತು. ರಾಷ್ಟ್ರಪತಿಯವರ ಅಂಗರಕ್ಷಕನ ನೇಮಕಾತಿಯಲ್ಲಿ ಜಾತಿ, ಪ್ರದೇಶ, ಧರ್ಮ ಆಧಾರಿತ ನೇಮಕಾತಿ ನೀತಿಯನ್ನು ರದ್ದು ಪಡಿಸುವಂತೆ ಮತ್ತು ತಾರತಮ್ಯ ರಹಿತವಾಗಿ ನೇಮಕಾತಿಗಳನ್ನು ಮಾಡುವಂತೆ ಸೇನೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿ ಕೋರಿತು. ‘ಭಾರತದ ನಾಗರಿಕರ ಮೂಲಭೂತ ಹಕ್ಕಿಗೆ ವಿರುದ್ಧವಾಗಿರುವ ಮತ್ತು ಸಂವಿಧಾನ ಬಾಹಿರವಾಗಿರುವ ಕಾರಣಕ್ಕಾಗಿ ರಾಷ್ಟ್ರಪತಿಯವರ ಅಂಗರಕ್ಷಕನ ನೇಮಕಾತಿಯನ್ನು ರದ್ದು ಪಡಿಸಬೇಕು’ ಎಂದು
ಅರ್ಜಿ ಹೇಳಿದೆ.
ಇದಕ್ಕೆ ಮುನ್ನ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನಿರಾಕರಿಸಿದ್ದವು.
ಈ ಮಾದರಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ತಾನು ಪರಿಶೀಲಿಸಲಾಗದು ಎಂದು ನ್ಯಾಯಾಲಯಗಳು ಹೇಳಿದ್ದವು.
2017: ಶ್ರೀನಗರ: ಹಲವು ಭಯೋತ್ಪಾದಕ ದಾಳಿಗಳಲ್ಲಿ ಬೇಕಾಗಿದ್ದ ಜೈಷ್–ಎ–ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಕಮಾಂಡರ್ ನೂರ್ ಮೊಹಮ್ಮದ್ ತ್ರಾಂತ್ರೆಯನ್ನು (47) ಸೈನಿಕರು ಹೊಡೆದುರುಳಿಸಿದರು. ‘ಪುಲ್ವಾಮಾ ಜಿಲ್ಲೆಯ ಸಂಬೂರಾ ಗ್ರಾಮದ ಮನೆಯೊಂದರಲ್ಲಿ ನೂರ್ ಮತ್ತು ಇನ್ನೂ ಇಬ್ಬರು ಉಗ್ರರು ಅಡಗಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ 25 ಡಿಸೆಂಬರ್ 2017ರ ಸೋಮವಾರ ರಾತ್ರಿ ದಾಳಿ ನಡೆಸಲಾಯಿತು. ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ ನಡೆಸಲು ಅವರು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಯೂ ಇತ್ತು’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದರು. ಭಾರತೀಯ ಸೇನೆಯ 50 ರಾಷ್ಟ್ರೀಯ ರೈಫಲ್ಸ್ ಮತ್ತು ವಿಶೇಷ ಕಾರ್ಯ ಪಡೆಗಳು ಜಂಟಿಯಾಗಿ ದಾಳಿ ನಡೆಸಿದವು. ಡಿಸೆಂಬರ್ 26ರ ಬೆಳಗಿನವರೆಗೂ ನಡೆದ ಕಾರ್ಯಾಚರಣೆಯಲ್ಲಿ ಉಗ್ರನನ್ನು ಸೆದೆ ಬಡಿಯಲಾಯಿತು. ಉಳಿದ ಇಬ್ಬರು ಉಗ್ರರು ತಪ್ಪಿಸಿಕೊಂಡರು. ಕಾಶ್ಮೀರದ ಈ ಭಾಗದಲ್ಲಿ ಈತ ಜೆಇಎಂ ಉಗ್ರರನ್ನು ಸಂಘಟಿಸುತ್ತಿದ್ದ. ಈತನ ಸಾವಿನಿಂದ ಉಗ್ರರ ಸಂಘಟನೆಗೆ ಭಾರಿ ಹೊಡೆತ ಬಿದ್ದಿದೆ’ ಎಂದು ಪೊಲೀಸರು ಹೇಳಿದರು. ಜೆಇಎಂ ಉಗ್ರ ಸಂಘಟನೆಯ ಕಮಾಂಡರ್ ನೂರ್ ಮೊಹಮ್ಮದ್ ಕೇವಲ 4 ಅಡಿಯ ಕುಳ್ಳ! ಆತನ ಒಂದು ಕಾಲು ಕುಂಟಾಗಿತ್ತು. ಹೀಗಾಗಿ ಜನರ ಮಧ್ಯೆ ಇದ್ದರೂ ಆತನನ್ನು ಪತ್ತೆ ಮಾಡಬಹುದಾಗಿತ್ತು. ಹಲವು ಭಾರಿ ಕೂಗಳತೆ ಅಂತರದಲ್ಲಿ ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಂಡಿದ್ದ. ಒಂದೂವರೆ ದಶಕದಲ್ಲಿ ಕಾಶ್ಮೀರ ಕಣಿವೆಯಲ್ಲಿ ಜೆಇಎಂ ನಡೆಸಿದ ಬಹುತೇಕ ಎಲ್ಲಾ ಭಯೋತ್ಪಾದಕ ದಾಳಿಗಳ ಪ್ರಮುಖ ಸಂಚುಕೋರ ಈತನೇ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು. ‘2001ರಲ್ಲಿ ಸಂಸತ್ ಮೇಲಿನ ದಾಳಿಯ ಸಂಚುಕೋರ ಘಾಜಿ ಬಾಬಾನಿಗೆ ಈತ ಆಪ್ತನಾಗಿದ್ದ. ಭಯೋತ್ಪಾದಕ ದಾಳಿಗಳಿಗೆ ಸಂಚು ರೂಪಿಸಿದ ಆರೋಪದಲ್ಲಿ 2003ರಲ್ಲಿ ಈತನನ್ನು ಬಂಧಿಸಲಾಗಿತ್ತು. 2011ರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ದೆಹಲಿಯ ವಿಶೇಷ ನ್ಯಾಯಾಲಯವು ನೂರ್ ಮೊಹಮ್ಮದ್ ಮತ್ತು ಆತನ ಐವರು ಸಹಚರರನ್ನು ‘ಸಾವಿನ ವ್ಯಾಪಾರಿಗಳು’ ಎಂದು ಕರೆದಿತ್ತು. 2015ರಲ್ಲಿ ಆತ ಪೆರೋಲ್ ಮೇಲೆ ಬಿಡುಗಡೆಯಾಗಿದ್ದ. ಆದರೆ ಜೈಲಿಗೆ ವಾಪಸಾಗದೆ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು. ‘ಇದೇ ಅಕ್ಟೋಬರ್ 3ರಂದು ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಡಿ ಭದ್ರತಾ ಪಡೆಯ ಶಿಬಿರದ ಮೇಲೆ ನಡೆದ ದಾಳಿಯ ಸಂಚು ರೂಪಿಸಿದ್ದೂ ಈತನೆ. ಸಚಿವ ನಯೀಂ ಅಖ್ತರ್ ಅವರ ಮೇಲೆ ಸೆಪ್ಟೆಂಬರ್ 21ರಂದು ನಡೆದಿದ್ದ ದಾಳಿಯಲ್ಲಿ ಈತ ಭಾಗವಹಿಸಿದ್ದ. ಎರಡು ವರ್ಷಗಳಿಂದಲೂ ಆತನ ಮೇಲೆ ನಿಗಾ ಇರಿಸಲಾಗಿತ್ತು.
2017: ಅಹಮದಾಬಾದ್: ಗುಜರಾತಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಮತ್ತು ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಈದಿನ (27 ಡಿಸೆಂಬರ್ 2017ರ ಮಂಗಳವಾರ) ಪ್ರಮಾಣ ವಚನ ಸ್ವೀಕರಿಸಿದರು. ಗಾಂಧಿ ನಗರದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮತ್ತು ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸಾಕ್ಷಿಯಾದರು. ಕಳೆದ ಬಾರಿಯೂ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ರೂಪಾನಿ ಮತ್ತು ನಿತಿನ್ ಕ್ರಮವಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿದ್ದರು. ಹೊಸ ಸರ್ಕಾರದಲ್ಲೂ ಇಬ್ಬರೂ ಅದೇ ಹುದ್ದೆಗಳಲ್ಲಿ ಮುಂದುವರೆದರು. ಈ ಇಬ್ಬರ ಜತೆ 18 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಒ.ಪಿ.ಕೊಹ್ಲಿ ಪ್ರಮಾಣ ವಚನ ಬೋಧಿಸಿದರು. ಒಂಬತ್ತು ಮಂದಿ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದರು. ಉಳಿದ ಒಂಬತ್ತು ಮಂದಿ ಇದೇ ಮೊದಲ ಬಾರಿ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
2017:
ನವದೆಹಲಿ: ಇಸ್ಲಾಮಾಬಾದಿನಲ್ಲಿ
ಕುಲಭೂಷಣ್ ಜಾಧವ್ ಭೇಟಿಗೂ ಮುನ್ನ ಅವರ ತಾಯಿ ಅವಂತಿ ಮತ್ತು ಪತ್ನಿ ಚೇತನ್ ಕುಲ್ ಧರಿಸಿದ್ದ ಉಡುಪುಗಳನ್ನು ಬಲವಂತದಿಂದ ಬದಲಾಯಿಸುವಂತೆ ಮಾಡಲಾಗಿತ್ತು ಎಂದು ಭಾರತ ಆರೋಪಿಸಿತು. ‘ನಿಮ್ಮ ಪತಿ ಸಾವಿರಾರು ಅಮಾಯಕ ಪಾಕಿಸ್ತಾನಿಯರ ರಕ್ತದಿಂದ ಹೋಲಿ ಆಡಿದ್ದಾರೆ....ಈ ಕುರಿತು ಏನು ಹೇಳುತ್ತೀರಿ?’ ಎಂಬಿತ್ಯಾದಿ ಅನೇಕ ಪ್ರಶ್ನೆಗಳನ್ನು ಪಾಕಿಸ್ತಾನದ ಪತ್ರಕರ್ತರು ಕೂಗಿ ಕೇಳುವ ಮೂಲಕ ಜಾಧವ್ ಅವರ ತಾಯಿ ಮತ್ತು ಪತ್ನಿಗೆ ತೊಂದರೆ ನೀಡಿರುವುದು ವಿಡಿಯೊದಲ್ಲಿ ದಾಖಲಾಗಿತ್ತು.
‘ಭದ್ರತೆಯ ನೆಪದಲ್ಲಿ ಇಬ್ಬರ ಮಂಗಳಸೂತ್ರ, ಬಳೆಗಳು ಮತ್ತು ಕುಂಕುಮ ತೆಗೆಸಲಾಗಿತ್ತು. ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ’ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೂರಿತು. ‘ಜಾಧವ್ ಕುಟುಂಬದ ಮಾತೃಭಾಷೆ ಮರಾಠಿ. ಆದರೆ, ಅವಂತಿ ಅವರು ತಮ್ಮ ಮಗನೊಂದಿಗೆ ಮರಾಠಿಯಲ್ಲಿ ಮಾತನಾಡುವುದಕ್ಕೆ
ಪದೇ ಪದೇ ಅಡ್ಡಿಪಡಿಸಲಾಯಿತು’ ಎಂದು ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಆರೋಪಿಸಿದರು. ಜಾಧವ್ ಪತ್ನಿ ಚೇತನ್ ಕುಲ್ ಧರಿಸಿದ್ದ ಶೂಗಳನ್ನು ವಾಪಸ್ ನೀಡಲಿಲ್ಲ. ಇದಕ್ಕೆ ಏನು ಕಾರಣ ಎಂಬುದನ್ನೂ ಪಾಕಿಸ್ತಾನ ಹೇಳಿಲ್ಲ ಎಂದು ಅವರು ಹೇಳಿದರು.
2017:
ಮುಂಬೈ: ನವವಿವಾಹಿತ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿಯ ಎರಡನೆ ಆರತಕ್ಷತಾ ಸಮಾರಂಭ ಮುಂಬೈನಲ್ಲಿ ನಡೆಯಿತು. ಚಿತ್ರರಂಗ ಹಾಗೂ ಕ್ರೀಡಾ ಕ್ಷೇತ್ರದ ಅನೇಕ ಗಣ್ಯರು ಭಾಗಿಯಾದರು. ಕ್ರಿಕೆಟಿಗ
ಎಂ.ಎಸ್.ದೋನಿ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್, ವೀರೇಂದ್ರ ಸೆಹ್ವಾಗ್, ರವೀಂದ್ರ ಜಡೇಜಾ, ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸೇರಿ ಅನೇಕರು ವಿರಾಟ್–ಅನುಷ್ಕಾ ದಂಪತಿಗೆ ಶುಭ ಕೋರಿದರು. ಮುಂಬೈನ ತಾರಾ ಹೋಟೆಲ್ ದಿ ಸೇಂಟ್ ರೆಜಿಸ್‌ನಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಡಿಸೆಂಬರ್ 11 ರಂದು ಇಟಲಿಯ ಟಸ್ಕಾನ್ ನಗರದಲ್ಲಿ ಮದುವೆಯಾಗಿದ್ದ ವಿರುಷ್ಕಾ ಡಿ.21 ರಂದು ದೆಹಲಿಯಲ್ಲಿ ಮೊದಲ ಆರತಕ್ಷತಾ ಸಮಾರಂಭ ಏರ್ಪಡಿಸಿತ್ತು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ಆ ಸಮಾರಂಭದಲ್ಲಿ ಭಾಗವಹಿಸಿದ್ದರು.
2017: ನವದೆಹಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿ ಚೇತನ್ ಕುಲ್ ಮತ್ತು ತಾಯಿ ಅವಂತಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಭೇಟಿ ವೇಳೆ ಸಚಿವಾಲಯದ ಹಿರಿಯ ಅಧಿಕಾರಿಗಳು ಹಾಜರಿದ್ದರು ಎಂದು ಮೂಲಗಳು ತಿಳಿಸಿದವು. ಜಾಧವ್ ಅವರನ್ನು ಅವರ ತಾಯಿ ಮತ್ತು ಪತ್ನಿ ಹಿಂದಿನ ದಿನ ಇಸ್ಲಾಮಾಬಾದಿನಲ್ಲಿ
ಭೇಟಿ ಮಾಡಿದ್ದರು. ಗಾಜಿನಿಂದ ಪ್ರತ್ಯೇಕಿಸಿದ್ದ ಕೋಣೆಯಲ್ಲಿ ತಾಯಿ ಮತ್ತು ಪತ್ನಿ ಅವರೊಂದಿಗೆ ಕುಲಭೂಷಣ್ ಮಾತುಕತೆ ನಡೆಸಿದ್ದರು. ಪರಸ್ಪರ ಎದುರು-ಬದುರು ಕುಳಿತಿದ್ದರೂ ಗಾಜಿನ ಗೋಡೆ ಅಡ್ಡ ಇದ್ದ ಕಾರಣ ನೇರವಾಗಿ ಮಾತನಾಡಲು ಸಾಧ್ಯವಾಗಲಿಲ್ಲ.
ಇಂಟರ್ಕಾಮ್ನಲ್ಲಿಯೇ 40 ನಿಮಿಷ ಮಾತನಾಡಿದ್ದರು. ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ದಿನದಂದು ಮಾನವೀಯ ನೆಲೆಯಲ್ಲಿ ತಾಯಿ ಮತ್ತು ಪತ್ನಿಯನ್ನು ಭೇಟಿಯಾಗಲು ಜಾಧವ್ಗೆ ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನ ಹೇಳಿತ್ತು.2017: ಬೆಂಗಳೂರು: ಮಹದಾಯಿ ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಖಡಕ್ ಸೂಚನೆ ಬಳಿಕ ಮಹದಾಯಿ ಹೋರಾಟಗಾರರನ್ನು ಭೇಟಿಯಾಗಿ ಸಂಧಾನ ಮಾತುಕತೆ ನಡೆಸಿದರೂ ಅದು ಕೂಡಾ ವಿಫಲವಾಯಿತು. ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಭೇಟಿಯಾಗಿದ್ದರು. ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ ಅವರಲ್ಲಿ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಅವರು ಸುಮಾರು 10 ನಿಮಿಷಗಳ ಕಾಲ ಚರ್ಚೆ ನಡೆಸಿದರು, ಆದರೆ ಯಡಿಯೂರಪ್ಪನವರ ಸಂಧಾನಕ್ಕೆ ರೈತರು ಬಗ್ಗಲಿಲ್ಲ. ಕೊನೆಗೂ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕೈಮುಗಿದು ಪ್ರತಿಭಟನಾ ಸ್ಥಳದಿಂದ ನಿರ್ಗಮಿಸಿದ್ದರು. ಬಿಎಸ್ ವೈ ಜತೆಗಿನ ಚರ್ಚೆ ಬಳಿಕ ಮಹದಾಯಿ ಹೋರಾಟಗಾರರು ಕಣ್ಣೀರು ಹಾಕಿದರು, ಅಲ್ಲದೇ ಧರಣಿ ನಿರತರು ಬಿಜೆಪಿ ವಿರುದ್ಧ ಬಾಯಿಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.ಮಹದಾಯಿ ಹೋರಾಟಗಾರರ ಜತೆ ಸಂಧಾನ ವಿಫಲವಾದ ಬಳಿಕ ವೀರೇಶ್ ಸೊಬರದಮಠ ಸುದ್ದಿಗಾರರ ಜತೆ ಮಾತನಾಡಿ, 15 ದಿನದೊಳಗೆ ಮಹದಾಯಿ ವಿವಾದ ಬಗೆಹರಿಸುವುದಾಗಿ ಹೇಳಿದ್ದೀರಿ. ಅದರ ಆದೇಶ ಪ್ರತಿಯನ್ನು ಕೊಡಿ ಎಂದಾಗ, ಅದೆಲ್ಲಾ ನಮ್ಮಿಂದ ಆಗಲ್ಲ. ಇದೇ ಪತ್ರವನ್ನು ತೆಗೆದುಕೊಳ್ಳಿ ಎಂದು ಹೇಳಿದರು, ಅದಕ್ಕೆ ನಾವು ಒಪ್ಪಿಲ್ಲ. ಅಲ್ಲದೇ ನಾ ಇತ್ಯರ್ಥಪಡಿಸುತ್ತೇನೆ ಎಂದು ಹೇಳಿಯೇ ಇಲ್ಲ ಎಂದು ಸುಳ್ಳು ಹೇಳಿದರು ಎಂಬುದಾಗಿ ಆರೋಪಿಸಿದರು.
2016: ನವದೆಹಲಿ: ಭಾರತದ ಅತ್ಯಂತ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ಅಗ್ನಿ–5ರ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಯಿತು. ಒಡಿಶಾದ ವೀಲರ್ ದ್ವೀಪದಲ್ಲಿ ಈದಿನ ಬೆಳಗ್ಗೆ ದೂರಗಾಮಿ ಕ್ಷಿಪಣಿ ಅಗ್ನಿ-5 ಅನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಉಡಾವಣೆ ಮಾಡಲಾಯಿತು. ಅಣ್ವಸ್ತ್ರ ವಾಹಕವಾದ ಅಗ್ನಿ–5ರ ಅಭಿವೃದ್ಧಿ ಹಂತದ ಅಂತಿಮ ಪರೀಕ್ಷೆಯಾಗಿದೆ ಇದು. 2012ರ ಏಪ್ರಿಲ್ ತಿಂಗಳಿನಲ್ಲಿ ಭಾರತ ಮೊದಲ ಬಾರಿ ಅಗ್ನಿ-5 ಪರೀಕ್ಷೆ ನಡೆಸಿತ್ತು. ಆನಂತರ 2013 ಸಪ್ಟೆಂಬರ್ ನಲ್ಲಿ ಮತ್ತು 2015 ಜನವರಿಯಲ್ಲಿ ಎರಡು ಮತ್ತು ಮೂರನೇ ಹಂತದ ಪರೀಕ್ಷೆ ನಡೆಸಲಾಗಿತ್ತು. ಇದರ ದಾಳಿ ವ್ಯಾಪ್ತಿ 5,000 ಕಿ.ಮೀ ಗಿಂತಲೂ ಹೆಚ್ಚಿದೆ. ಈ ಕ್ಷಿಪಣಿ ಮೂಲಕ ಚೀನಾದ ಪ್ರತೀ ಸ್ಥಳವೂ ಸೇರಿದಂತೆ ಏಷ್ಯಾದ ಎಲ್ಲಾ ರಾಷ್ಟ್ರಗಳ ಮೇಲೆ ದಾಳಿ ನಡೆಸಬಹುದು. ಜತೆಗೆ ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಕೆಲವು ರಾಷ್ಟ್ರಗಳ ಮೇಲೆ ದಾಳಿ ನಡೆಸಬಹುದು. ಹೀಗಾಗಿ ದೂರದ ರಾಷ್ಟ್ರಗಳ ಮೇಲೂ ದಾಳಿ ನಡೆಸುವ ಸಾಮರ್ಥ್ಯವನ್ನು ಭಾರತೀಯ ಸೇನೆ ಹೊಂದಲಿದೆ.
2016: ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮತ್ತು ಅಸೋಸಿಯೇಟೆಡ್ ಜರ್ನಲ್ (ಎಜೆಎಲ್) ಲಿಮಿಟೆಡ್ನಿಂದ ಲೆಡ್ಜರ್ ಬುಕ್ ಸಹಿತ ಕೆಲವು ದಾಖಲೆಗಳನ್ನು ತರಿಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ವಜಾಗೊಳಿಸಿತು. ಮುಂದಿನ ವಿಚಾರಣೆಯನ್ನು ಫೆಬ್ರುವರಿ 10ಕ್ಕೆ ಮುಂದೂಡಿತು. ಇದರೊಂದಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಇತರ ನಾಯಕರಿಗೆ ಭಾರಿ ನಿರಾಳತೆ ಲಭಿಸಿತು. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಅಪ್ರಾಮಾಣಿಕ ಮಾರ್ಗದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಮಾಲೀಕತ್ವವನ್ನು ಪಡೆದಿದ್ದಾರೆ ಎಂದು ತಮ್ಮ ಆರ್ಜಿಯಲ್ಲಿ ಆಪಾದಿಸಿರುವ ಸ್ವಾಮಿ ಅವರು ‘ಇದು ಕ್ರಿಮಿನಲ್ ದುರುಪಯೋಗ ಮತ್ತು ಕ್ರಿಮಿನಲ್ ವಿಶ್ವಾಸಘಾತ’ ಎಂದು ದೂರಿದ್ದರು. ಆದರೆ ಸ್ವಾಮಿಯವರು 2013ರ ಜುಲೈ ತಿಂಗಳಲ್ಲಿ ಸಲ್ಲಿಸಿದ್ದ ದೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸಾಲ ಪಡೆದ ಬಗ್ಗೆ ಪ್ರಸ್ತಾಪವೇ ಇಲ್ಲ ಎಂದು ಸೋನಿಯಾ ಮತ್ತು ರಾಹುಲ್ ಗಾಂಧಿ ಪರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದ್ದರು. ಸ್ವಾಮಿಯವರು ಕಾಂಗ್ರೆಸ್ ಪಕ್ಷವನ್ನು ಆರೋಪಿಯಾಗಿಯೂ ಹೆಸರಿಸಿಲ್ಲ ಇಲ್ಲವೇ ಪಕ್ಷದ ಯಾರೇ ಪದಾಧಿಕಾರಿಗೆ ಸಾಲ ಕೊಡುವ ಅಧಿಕಾರವಿಲ್ಲ ಎಂದು ಹೇಳಿಲ್ಲ. ಸ್ವಾಮಿ ಈ ಪ್ರಕರಣಕ್ಕಾಗಿ ಕೇಳಿರುವ ದಾಖಲೆಗಳಲ್ಲಿ ಸಾಲ -ಮರುಪಾವತಿ ಸಂಬಂಧಿತ ವಿವರಗಳು ದಾಖಲಾಗಿಯೇ ಇಲ್ಲ ಎಂದು ಗಾಂಧಿಗಳ ಪರ ವಕೀಲರು ವಾದಿಸಿದ್ದರು. ಬಳಿಕ ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
2016: ನವದೆಹಲಿ: ‘ಸಹಾರಾ ಡೈರಿ’ಯನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ ‘ಭ್ರಷ್ಟಾಚಾರ’ದ ಮೇಲೆ ರಾಹುಲ್ ಗಾಂಧಿಯವರು ದಾಳಿ ಮಾಡಿದ ಕೆಲವೇ ದಿನಗಳ ಬಳಿಕ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ಉತ್ತರ ಪ್ರದೇಶದದಲ್ಲಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ಶೀಲಾ ದೀಕ್ಷಿತ್ ಅವರು ‘ಸಹಾರಾ ಡೈರಿ’ ಹೆಸರಿನ ಆಯುಧವನ್ನೇ ಮೊಂಡುಗೊಳಿಸಿದರು. ಕಾಂಗ್ರೆಸ್ ಉಲ್ಲೇಖಿಸಿರುವ ‘ಸಹಾರಾ ಡೈರಿ’ಯಲ್ಲಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಹಣ ನೀಡಿದ ಬಗ್ಗೆ ಉಲ್ಲೇಖವಿದೆ. ಜೊತೆಗೇ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅವರಿಗೂ ಹಣ ನೀಡಿದ ಉಲ್ಲೇಖವಿತ್ತು. ‘ಅದೆಲ್ಲವೂ ಬರೀ ಊಹಾಪೋಹ. ಆರೋಪಗಳಲ್ಲಿ ಒಂದಿಷ್ಟೂ ಸತ್ಯಾಂಶ ಇಲ್ಲ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತೇನೆ’ ಎಂದು 78ರ ಹರೆಯದ ಶೀಲಾ ದೀಕ್ಷಿತ್ ಹೇಳಿದರು. ‘ಸಹಾರಾ ಡೈರಿ’ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ತನ್ನ ಅಭಿಪ್ರಾಯಗಳನ್ನು ಹೇಳಿದೆ ಎಂದೂ ಕಾಂಗ್ರೆಸ್ ನಾಯಕಿ ನುಡಿದರು. ಸಹಾರಾ ಡೈರಿಗೆ ಸಂಬಂಧಿಸಿದ ಆರೋಪಗಳಲ್ಲಿ ಯಾವುದೇ ಹುರಳಿಲ್ಲ ಎಂದು ಸುಪ್ರೀಂಕೋರ್ಟ್ ಈಗಾಗಲೇ ಹೇಳಿದೆ ಎಂಬುದರತ್ತ ಬಿಜೆಪಿ ಕೂಡಾ ಬೊಟ್ಟು ಮಾಡಿದೆ. ಕಾಂಗ್ರೆಸ್ ಪಕ್ಷ ಸಹಾರಾ ಡೈರಿಯಲ್ಲಿನ ಹೆಸರಿನ ಪಟ್ಟಿಯನ್ನು ಟ್ವೀಟ್ ಮಾಡಿರುವ ಬಗ್ಗೆ ಪ್ರಶ್ನಿಸಿದಾಗ, ‘ನನಗೆ ಅದು ಅಚ್ಚರಿ ಉಂಟು ಮಾಡಿದೆ’ ಎಂದು ದೀಕ್ಷಿತ್ ಪ್ರತಿಕ್ರಿಯಿಸಿದರು. ‘ಪಟ್ಟಿಯಲ್ಲಿ ಅನೇಕ ಮುಖ್ಯಮಂತ್ರಿಗಳ ಹೆಸರುಗಳಿವೆ. ನನ್ನ ಹೆಸರನ್ನು ಮಾತ್ರವೇ ಏಕೆ ಹೇಳುತ್ತೀರಿ? ಉಳಿದ ಮುಖ್ಯಮಂತ್ರಿಗಳ ಹೆಸರುಗಳ ಬಗ್ಗೆ ಮಾತನಾಡುವುದಿಲ್ಲ ಏಕೆ?’ ಎಂದು ದೀಕ್ಷಿತ್ ಪ್ರಶ್ನಿಸಿದರು.
2016:
ನವದೆಹಲಿ: ಬಹುಜನ ಸಮಾಜ ಪಕ್ಷಕ್ಕೆ ಸೇರಿದ ಬ್ಯಾಂಕ್ ಖಾತೆಗೆ ರೂ.104 ಕೋಟಿ ಜಮೆಯಾಗಿರುವುದು ಜಾರಿ ನಿರ್ದೇಶನಾಲಯದ ತಪಾಸಣೆ ವೇಳೆ ಪತ್ತೆಯಾಯಿತು. ಇದಲ್ಲದೆ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ಸೋದರ ಆನಂದ್ ಅವರ ಖಾತೆಯಲ್ಲಿ ರೂ.1.43 ಕೋಟಿ ಹಣವಿರುವುದು ಬೆಳಕಿಗೆ ಬಂದಿತು. ನೋಟು ರದ್ದತಿಯ ಬಳಿಕ ಭಾರಿ ಮೊತ್ತದ ಹಣ ಜಮೆಯಾಗಿರುವ ಬ್ಯಾಂಕ್ ಖಾತೆಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬಿಎಸ್‌ಪಿ ಹಾಗೂ ಆನಂದ್ ಅವರ ಖಾತೆಗಳಿಗೆ ದೊಡ್ಡ ಮೊತ್ತ ಜಮೆಯಾಗಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ದೆಹಲಿಯ ಕರೋಲ್‌ಬಾಗ್ ಖಾಖೆಯಲ್ಲಿರುವ ಬಿಎಸ್‌ಪಿ ಹಾಗೂ ಆನಂದ್ ಅವರ ಖಾತೆಗಳಿಗೆ ಭಾರಿ ಮೊತ್ತ ಜಮೆಯಾಗಿದೆ. ಬಿಎಸ್ಪಿ ಖಾತೆಗೆ ರೂ. 1000 ಮುಖಬೆಲೆಯ ರೂ.102 ಕೋಟಿ ಹಾಗೂ ರೂ.500 ಮುಖಬೆಲೆಯ ರೂ.2 ಕೋಟಿ ಜಮೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಬಿಎಸ್ಪಿ ಖಾತೆಗೆ ದಿನ ಬಿಟ್ಟು ದಿನ ರೂ.15–17 ಕೋಟಿ ಹಣ ಜಮೆಯಾಗಿದೆ. ಆನಂದ್ ಅವರ ಖಾತೆಯಲ್ಲಿ ರೂ.1.43 ಕೋಟಿ ಹಣವಿದೆ. ನೋಟು ರದ್ದತಿಯ ಬಳಿಕ ಇವರ ಖಾತೆಗೆ ರೂ.18.98 ಲಕ್ಷ ಜಮೆಯಾಗಿದೆ. ಈ ಭಾರಿ ಮೊತ್ತದ ಜಮೆಗೆ ಸಂಬಂಧಿಸಿದಂತೆ ದಾಖಲೆ ಹಾಗೂ ಸಿಸಿ ಟಿವಿ ದೃಶ್ಯಾವಳಿಗಳನ್ನು ಒದಗಿಸುವಂತೆ ಜಾರಿ ನಿರ್ದೇಶನಾಲಯ ಬ್ಯಾಂಕ್ ಅಧಿಕಾರಿಗಳನ್ನು ಕೇಳಿದೆ ಎಂದು ವರದಿಗಳು ತಿಳಿಸಿವೆ.
2016:
ಮುಂಬೈ: ಅಮೀರ್ ಖಾನ್ ಅಭಿನಯದ ಸಿನಿಮಾ ‘ದಂಗಲ್’ ಬಿಡುಗಡೆಯಾದ ಮೂರು ದಿನಗಳಲ್ಲಿ ರೂ.100 ಕೋಟಿಗೂ ಹೆಚ್ಚು ಗಳಿಕೆ ಮಾಡಿ,, ಹೊಸ ದಾಖಲೆ ಸೃಷ್ಟಿಸುವತ್ತ ಸಾಗಿತು. ಸಿನಿಮಾ ಗಳಿಕೆಯ (ಬಾಕ್ಸ್ ಆಫೀಸ್) ವಿಶ್ಲೇಷಣೆ ನಡೆಸುವ ತರಣ್ ಆದರ್ಶ್ ಪ್ರಕಾರ, ದಂಗಲ್ ಸಿನಿಮಾ ಮೊದಲ ವಾರದಲ್ಲಿಯೇ ರೂ.106.95 ಕೋಟಿ ಗಳಿಸಿತು. ಕುಸ್ತಿ ಅಖಾಡ ಮತ್ತು ಜೀವನದ ಏರಿಳಿತಗಳ ಕಥಾನಕ ದಂಗಲ್ ಸಿನಿಮಾ ನೂರು ಕೋಟಿ ಗಳಿಕೆ ಸಮೂಹವನ್ನು ಸೇರಿರುವ ಅಮೀರ್ ಅಭಿನಯದ 5ನೇ ಸಿನಿಮಾ. ಈ ಹಿಂದಿನ ಗಜನಿ, 3ಈಡಿಯೆಟ್ಸ್, ಧೂಮ್ 3 ಹಾಗೂ ಪಿಕೆ ಹೆಚ್ಚು ಗಳಿಕೆಯ ಸಿನಿಮಾಗಳು.
2016:
ಹೈದರಾಬಾದ್: ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯವು ನಟ ಶಾರುಕ್ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿತು. ಉರ್ದು ಭಾಷೆ ಮತ್ತು ಸಂಸ್ಕೃತಿ ಪ್ರಚುರಪಡಿಸುವ ಕಾರ್ಯದಲ್ಲಿನ ಕೊಡುಗೆಗಾಗಿ ಮೌಲಾನಾ ಆಜಾದ್ ವಿವಿ ನಟ ಶಾರುಕ್ ಖಾನ್ ಮತ್ತು ರೆಖ್ತಾ ಪ್ರತಿಷ್ಠಾನದ ಸ್ಥಾಪಕರಾದ ರಾಜೀವ್ ಸರಫ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿತು. ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದ ಸಂದರ್ಭದಲ್ಲಿ ಕುಲಾಧಿಪತಿ ಝಾಫರ್ ಸರೇಶ್‌ವಾಲಾ ಡಾಕ್ಟರೇಟ್ ಪ್ರದಾನ ಮಾಡಿದರು. 2885 ಪದವಿ ಮತ್ತು ಸ್ನಾತಕೋತ್ತರ ಪದವೀಧರರು, 276 ಎಂ.ಫಿಲ್ ಮತ್ತು ಪಿಎಚ್‌ಡಿ ಪದವಿ ನೀಡಲಾಯಿತು. ಹೈದರಾಬಾದ್ನಲ್ಲಿ ಗೌರವ ಪಡೆದಿದ್ದನ್ನು ಕಂಡಿದ್ದರೆ ನನ್ನ ತಂದೆ ತಾಯಿ ತುಂಬ ಸಂತಸ ಪಡುತ್ತಿದ್ದರು ಎಂದು ಶಾರುಖ್ ಹೇಳಿದರು.
2016:
ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣದಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ವಾಯುಪಡೆಯ ಮಾಜಿ ಮುಖ್ಯಸ್ಥ ಎಸ್.ಪಿ.ತ್ಯಾಗಿ ಅವರಿಗೆ ದೆಹಲಿ ಕೋರ್ಟ್ ಜಾಮೀನು ನೀಡಿತು. ಗಣ್ಯರ ಬಳಕೆಗೆ 12 ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್‌ಗಳ ಖರೀದಿ ಒಪ್ಪಂದ ಸಂಬಂಧ ರೂ.450 ಕೋಟಿ ಲಂಚ ಪಡೆದ ಆರೋಪದ ಮೇಲೆ ತ್ಯಾಗಿ ಅವರನ್ನು
ಬಂಧಿಸಲಾಗಿತ್ತು. ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ರೂ.2 ಲಕ್ಷ ಭದ್ರತಾ ಠೇವಣಿಯೊಂದಿಗೆ ಷರತ್ತಿನ ಜಾಮೀನು ನೀಡಿದ್ದು, ದೆಹಲಿಯಿಂದ ಹೊರ ಹೋಗದಂತೆ ಸೂಚಿಸಿತು. ಎಸ್.ಪಿ.ತ್ಯಾಗಿ ಹಾಗೂ ಅವರ ಸಂಬಂಧಿ ಸಂಜೀವ್ ತ್ಯಾಗಿ ಅಲಿಯಾಸ್ ಜೂಲಿ ಮತ್ತು ವಕೀಲ ಗೌತಮ್ ಖೇತಾನ್ ಈ ಮೂವರನ್ನು ಡಿ. 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಸಂಜೀವ್ ಮತ್ತು ಗೌತಮ್ ಅವರ ಜಾಮೀನು ಅರ್ಜಿ ಆದೇಶವನ್ನು ಜನವರಿ 4ರಂದು ನೀಡುವುದಾಗಿ ನ್ಯಾಯಾಲಯ ತಿಳಿಸಿತು.
2016:
ಲಂಡನ್: ಬ್ರಿಟಿಷ್ ಪಾಪ್ ಗಾಯಕ ಜಾರ್ಜ್ ಮೈಕೆಲ್ (53 ವರ್ಷ) ಹಿಂದಿನ ದಿನ (ಡಿ.25) ನಿಧನರಾದರು. ಶಾಲೆಯ ಗೆಳೆಯ ಆಂಡ್ರ್ಯೂ ರಿಡ್ಗೆಲೆ ಜೊತೆಗೂಡಿ 1980ರಲ್ಲಿ ‘ವ್ಯಾಮ್!’ ಮ್ಯೂಸಿಕಲ್ ಬ್ಯಾಂಡ್ ಕಟ್ಟಿಕೊಂಡ ಮೈಕೆಲ್, ಪಾಪ್ ಆಲ್ಬಮ್‌ಗಳ ಮೂಲಕ ಕೆಲವೇ ವರ್ಷಗಳಲ್ಲಿ ಬ್ರಿಟನ್ ಪಾಪ್ ಲೋಕದಲ್ಲಿ ಪ್ರಸಿದ್ಧರಾಗಿದ್ದರು. ಕ್ಲಬ್ ಟ್ರಾಪಿಕಾನಾ, ಲಾಸ್ಟ್ ಕ್ರಿಸ್‌ಮಸ್, ಕೇರ್‌ಲೆಸ್ ವಿಸ್ಪರ್ ಹಾಗೂ ಫೇಯ್ತ್ ಮೈಕೆಲ್ ಅವರ ಕೆಲವು ಜನಪ್ರಿಯ ಆಲ್ಬಮ್ಗಳು. ಜಗತ್ತಿನಾದ್ಯಂತ ಇವರ ವೃತ್ತಿ ಜೀವನದ10 ಕೋಟಿಗೂ ಹೆಚ್ಚು ಆಲ್ಬಮ್ ಪ್ರತಿಗಳು ಮಾರಾಟಗೊಂಡಿದ್ದವು. 2011ರಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಮೈಕೆಲ್ ಕ್ರಿಸ್‌ಮಸ್ ದಿನದಂದು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. 1963ರ ಜೂನ್ 25ರಂದು ಲಂಡನ್‌ನಲ್ಲಿ ಮೈಕೆಲ್ ಜನಿಸಿದ್ದರು.
2016:
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಡಿ.25ರ ರಾತ್ರಿ 1
ಗಂಟೆಯ ವೇಳೆಗೆ 900ಕ್ಕಿಂತಲೂ ಹೆಚ್ಚು ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡ ಘಟನೆ ಘಟಿಸಿತು. ಇಲ್ಲಿರುವ ಖಾಸಗಿ ಗ್ಯಾಸ್ ಕಂಪನಿಯ ದಾಸ್ತಾನು ಮಳಿಗೆಯ ಹೊರಗೆ ಎರಡು ಟ್ರಕ್ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡವು. ಒಂದು ಟ್ರಕ್ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಹತ್ತಿರವಿದ್ದ ಇನ್ನೊಂದು ಟ್ರಕ್ ಮತ್ತು ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೊಲೆರೊ ವಾಹನಕ್ಕೂ ಬೆಂಕಿ ಹಬ್ಬಿತು. ಈ ಘಟನೆಯಲ್ಲಿ ವಾಹನಗಳಿಗೆ ಮಾತ್ರ ಹಾನಿಯಾಗಿದ್ದು, ಜನರಿಗೆ ಅಪಾಯವೇನೂ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಘಟನೆಗೆ ಕಾರಣ ಏನು ಎಂಬುದು ಇಲ್ಲಿಯವರೆಗೆ ಗೊತ್ತಾಗಲಿಲ್ಲ.
2016: ನವದೆಹಲಿ: ಕ್ರಿಕೆಟಿಗ ಮೊಹಮ್ಮದ್ ಶಮಿ ಫೇಸ್ಬುಕ್ನಲ್ಲಿ ಪತ್ನಿ ಜತೆಗಿನ ಫೋಟೋ ಹಾಕಿ ಪಜೀತಿಗೆ ಸಿಲುಕಿದರು.. ಕೆಂಪು ಬಣ್ಣದ ಸ್ಲೀವ್ಲೆಸ್ ಉಡುಪು ಧರಿಸಿರುವ ಶಮಿ ಪತ್ನಿ ಹಸಿನ್ ಜಹನ್ ವಿರುದ್ಧ ಸಾಮಾಜಿಕ ತಾಣಗಳಲ್ಲಿ ತೀರಾ ಆಕ್ಷೇಪಾರ್ಹ ಕಮೆಂಟ್ಗಳು ವ್ಯಕ್ತವಾದವು.. ಹಿಜಬ್ ಧರಿಸದ ಆಕೆಯ ಜತೆ ಫೋಟೋ ತೆಗಿಸಿಕೊಂಡಿದ್ದಕ್ಕಾಗಿ ಶಮಿ ಮೇಲೆ ಕಮೆಂಟಿಗರು ಕೆಂಡಕಾರಿದರು.. ಡಿಸೆಂಬರ್ 23ರಂದು ಶಮಿ ಪತ್ನಿ ಜತೆಗಿನ ಈ ಫೋಟೋ ಪೋಸ್ಟ್ ಮಾಡಿದ್ದರು. ಫೇಸ್ಬುಕ್ನಲ್ಲಿ ಕಮೆಂಟಿಗರ ವರ್ತನೆ ವಿರುದ್ಧ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಬೇಸರ ವ್ಯಕ್ತಪಡಿಸಿದರು. ಈ ಹಿಂದೆ ವಿಶ್ವದ ನಂ.1 ಡಬಲ್ಸ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾರ ಉಡುಪಿನ ವಿರುದ್ಧ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
2016: ನವದೆಹಲಿ: ಬಾಲಿವುಡ್ನ ಖ್ಯಾತ ನಟ ಮಿಥುನ್ ಚಕ್ರವರ್ತಿ ಆನಾರೋಗ್ಯದ ಕಾರಣದಿಂದ
ಅವಧಿಗೂ ಮುನ್ನವೇ ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. 2014ರ ಏಪ್ರಿಲ್ನಲ್ಲಿ ತೃಣಮೂಲ ಕಾಂಗ್ರೆಸ್ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಿಥುನ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು. ಅನಾರೋಗ್ಯದ ಕಾರಣದಿಂದ ರಾಜ್ಯಸಭೆ ಸದಸ್ಯತ್ವಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಜನರ ಸೇವೆಯಲ್ಲಿ ತೊಡಗಲು ಅನಾರೋಗ್ಯ ಅಡ್ಡಿಯಾಗುತ್ತಿದೆ ಎಂದು ಮಿಥುನ್ ರಾಜ್ಯಸಭೆ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ಟಿಎಂಸಿ ಪಕ್ಷದ ಮೂಲಗಳು ತಿಳಿಸಿದವು. ಕಳೆದ ವರ್ಷ ಶಾರದಾ ಹಗರಣದಲ್ಲಿ ಮಿಥುನ್ ಚಕ್ರವರ್ತಿಯವರ ಹೆಸರೂ ಸಹ ತಳುಕು ಹಾಕಿಕೊಂಡಿತ್ತು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ವ್ಯತ್ಯಯಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನದಲ್ಲೂ ಸಹ ಪೂರ್ಣ ಪ್ರಮಾಣದಲ್ಲಿ ಹಾಜರಾಗಿರಲಿಲ್ಲ. ಮಿಥುನ್ ಅಧಿವೇಶನದಲ್ಲಿ ಕೇವಲ 3 ದಿನ ಮಾತ್ರ ಕಲಾಪಕ್ಕೆ ಹಾಜರಾಗಿದ್ದರು.
2016: ನವದೆಹಲಿ: ತಮ್ಮನ್ನು ಕಳೆದ ಮಾರ್ಚ್ ತಿಂಗಳಲ್ಲಿ ಐಸಿಸ್ (ಐಎಸ್ಐಎಸ್) ಭಯೋತ್ಪಾದಕರು ಅಪಹರಿಸಿದ್ದು, ರಕ್ಷಿಸಲು ಏನಾದರೂ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಕೇರಳದ ಪಾದ್ರಿ ಫಾದರ್ ಟಾಮ್ ಉಳುನ್ನಾಲಿಲ್ ಅವರು ವಿಡಿಯೋ ಒಂದರ ಮೂಲಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಪೋಲ್ ಫ್ರಾನ್ಸಿಸ್ ಅವರಿಗೆ ಮೊರೆಯಿಟ್ಟರು. ‘ಮಾರ್ಚ್ ತಿಂಗಳಲ್ಲೇ ನನ್ನ ಅಪಹರಣವಾಗಿದ್ದರೂ ನನ್ನ ರಕ್ಷಣೆಗೆ ಈವರೆಗೂ ಯಾವುದೇ ಗಂಭೀರವಾದ ಕ್ರಮ ಕೈಗೊಂಡಿಲ್ಲ. ನಾನೂ ಐರೋಪ್ಯ ಪಾದ್ರಿಯಾಗಿದ್ದಿದ್ದರೆ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರೋ ಏನೋ. ಆದರೆ ನಾನು ಭಾರತದ ಪಾದ್ರಿ. ಆದ್ದರಿಂದ ಬಹುಶಃ ಹೆಚ್ಚು ಬೆಲೆ ಇಲ್ಲದವನು ಎಂದು ಪರಿಗಣಿಸಿದಂತಿದೆ. ನಾನು ತುಂಬಾ ದುಃಖಿತನಾಗಿದ್ದೇನೆ’ ಎಂದು ಫಾದರ್ ಟಾಮ್ ಉಳುನ್ನಾಲಿಲ್ ವೆಬ್ ಸೈಟ್ ಒಂದರಲ್ಲಿ ಪ್ರಕಟಿಸಲಾಗಿರುವ ವಿಡಿಯೋದಲ್ಲಿ ಹೇಳಿದರು. ‘ನನ್ನ ರಕ್ಷಣೆಗಾಗಿ ಮುಂದೆ ಬರುವಂತೆ ವಿವಿಧ ಸರ್ಕಾರಗಳು ಮತ್ತು ಇತರರಿಗೆ ಮನವಿ ಮಾಡಿ. ದಯವಿಟ್ಟು ನನ್ನ ಜೀವದ ಬಗ್ಗೆ ಕಾಳಜಿ ವಹಿಸಿ’ ಎಂದು ಪೋಪ್ಗೆ ಮಾಡಿದ ಮನವಿಯಲ್ಲಿ ಅವರು ಪ್ರಾರ್ಥಿಸಿದರು. ಎಂಇಎ ಸ್ಪಷ್ಟನೆ: ಫಾದರ್ ಟಾಮ್ ಉಳುನ್ನಾಲಿಲ್ ಅಪಹರಣ ಪ್ರಕರಣದ ಬಗ್ಗೆ ಪ್ರದೇಶದಲ್ಲಿನ ದೇಶಗಳ ಜೊತೆಗೆ, ವಿಶೇಷವಾಗಿ ಸೌದಿ ಅರೇಬಿಯಾ ಮತ್ತು ಯೆಮೆನ್ನ ಸ್ಥಳೀಯ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಅವರನ್ನು ರಕ್ಷಿಸುವ ನಿಟ್ಟಿನ ಯತ್ನಗಳು ಮುಂದುವರೆಯಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟ ಪಡಿಸಿತು.
2016: ಬೀಜಿಂಗ್: ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಂದಿರುವ ಅಮೆರಿಕಕ್ಕೆ ಸೆಡ್ಡು ಹೊಡೆಯಲು ಮುಂದಾದ ಚೀನಾ ರಹಸ್ಯ ಯುದ್ಧ ವಿಮಾನವನ್ನು (ಸ್ಟ್ಲೀತ್ ಫೈಟರ್) ತಯಾರಿಸಿ, ಅದರ ಪರೀಕ್ಷೆಯನ್ನು ನಡೆಸಿದೆ ಎಂದು ಚೀನಾ ಮಾಧ್ಯಮ ವರದಿ ಮಾಡಿತು. ಚೀನಾ ದೇಶೀಯವಾಗಿ ನಿರ್ಮಿಸಿರುವ ಯುದ್ಧ ವಿಮಾನ ವಾಹಕ ನೌಕೆಯನ್ನು ಫೆಸಿಫಿಕ್ ಸಾಗರಕ್ಕೆ ಪರೀಕ್ಷೆಗಾಗಿ ಕಳುಹಿಸಿದ ಬೆನ್ನಲ್ಲೇ ಎಫ್ಸಿ-31 ಯುದ್ಧ ವಿಮಾನವನ್ನೂ ಸಹ ಚೀನಾ ಪರೀಕ್ಷಿಸಿತು. ಅಮೆರಿಕದ ಎಫ್-35 ರಹಸ್ಯ ಯುದ್ಧ ವಿಮಾನಕ್ಕೆ ಸರಿಸಮನಾದ ತಂತ್ರಜ್ಞಾನವನ್ನು ಹೊಂದಿರುವ ಐದನೇ ತಲೆಮಾರಿನ ಎರಡು ಇಂಜಿನ್ಗಳ ಎಫ್ಸಿ-31 ಯುದ್ಧ ವಿಮಾನದ ಪರೀಕ್ಷೆಯನ್ನು ಡಿಸೆಂಬರ್ 23ರಂದು ನಡೆಸಲಾಗಿದೆ ಎಂದು ಚೀನಾ ಡೈಲಿ ವರದಿ ಮಾಡಿತು. ಎಫ್ಸಿ-31 ಯುದ್ಧ ವಿಮಾನ ತಯಾರಿಕೆಯಿಂದಾಗಿ ಯುದ್ಧ ವಿಮಾನ ತಂತ್ರಜ್ಞಾನದಲ್ಲಿ ಪಾಶ್ಚಿಮಾತ್ಯ ದೇಶಗಳು ಹೊಂದಿದ್ದ ಪ್ರಾಬಲ್ಯವನ್ನು ಚೀನಾ ಮುರಿಯಿತು.. ಚೀನಾ ದೇಶೀಯವಾಗಿ ಅತ್ಯುತ್ತಮ ತಂತ್ರಜ್ಞಾನದ ಯುದ್ಧ ಸಲಕರಣೆಗಳನ್ನು ನಿರ್ಮಿಸಲು ಸಮರ್ಥವಾಯಿತು ಎಂದು ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿತು. ಇದಕ್ಕೂ ಮುನ್ನ ಜೆ-20 ಯುದ್ಧ ವಿಮಾನವನ್ನು ಚೀನಾ ಕಳೆದ ನವೆಂಬರ್ನಲ್ಲಿ ಏರ್ಶೋದಲ್ಲಿ ಪ್ರದರ್ಶಿಸಿತ್ತು.
2011:: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ, ಹಿಂದುಳಿದ ವರ್ಗಗಳ ನಾಯಕ, ಹಿರಿಯ ರಾಜಕಾರಣಿ ಸಾರೇಕೊಪ್ಪ ಬಂಗಾರಪ್ಪ (79 ) ಅವರು ಈದಿನ (ಡಿ.26) ನಸುಕಿನ ವೇಳೆ 12.45ಕ್ಕೆ ಬೆಂಗಳೂರಿನಲ್ಲಿ ನಿಧನರಾದರು. ಮೂತ್ರಪಿಂಡ ವೈಫಲ್ಯ ಕಾರಣ ಕೆಲಕಾಲದಿಂದ ಅಸ್ವಸ್ಥರಾಗಿದ್ದ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಬಂಗಾರಪ್ಪ ಅವರು ಪತ್ನಿ ಶಕುಂತಲಾ, ಪುತ್ರರಾದ ಕುಮಾರ ಬಂಗಾರಪ್ಪ, ಮಧು ಬಂಗಾರಪ್ಪ ಹಾಗೂ ಮೂವರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದರು. 1932ರ ಅಕ್ಟೋಬರ್ 26ರಂದು ಶಿವಮೊಗ್ಗ ಜಿಲ್ಲೆಯ ಕುಬತೂರಿನಲ್ಲಿ ದಿವಂಗತ ಕಲಪ್ಲ್ಪ ಮತ್ತು ಕಲಮ್ಲ್ಮ ದಂಪತಿಯ ಪುತ್ರರಾಗಿ ಜನಿಸಿದ ಬಂಗಾರಪ್ಪ ಕರ್ನಾಟಕದ ವರ್ಣರಂಜಿತ ರಾಜಕಾರಣಿ. ನೇರ ನಡೆ ನುಡಿಯ ವ್ಯಕ್ತಿಯಾಗಿ ಜನಪ್ರಿಯರಾಗಿದ್ದರು. 1990ರಿಂದ 1992ರ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಅವರು 14ನೇ ಲೋಕಸಭೆಯಲ್ಲಿ ಶಿವಮೊಗ್ಗ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ರಾಜಕಾರಣದಲ್ಲಿ ತಮ್ಮದೇ ಆದ ಮಾರ್ಗದಲ್ಲಿ ಸಾಗುವುದಕ್ಕೆ ಹೆಸರಾದ ಬಂಗಾರಪ್ಪ ಕಾಂಗ್ರೆಸ್ಸಿಗೆ ವಿರುದ್ಧವಾಗಿ ಕರ್ನಾಟಕ ಕ್ರಾಂತಿರಂಗ, ಕರ್ನಾಟಕ ವಿಕಾಸ ಪಕ್ಷಗಳನ್ನು ಕಟ್ಟಿದ್ದರು. 1967ರಿಂದ 1996ರವರೆಗೆ ರಾಜ್ಯವಿಧಾನಸಭೆಯ ಸದಸ್ಯರಾಗಿದ್ದ ಬಂಗಾರಪ್ಪ, ಸುದೀರ್ಘ ರಾಜಕಾರಣದ ಅವಧಿಯಲ್ಲಿ ಗೃಹ ರಾಜ್ಯ ಸಚಿವ, ಲೋಕೋಪಯೋಗಿ ಸಚಿವ, ಕಂದಾಯ, ಕೃಷಿ ತೋಟಗಾರಿಕಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1985-87ರಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದ ಅವರು 1996ರಲ್ಲಿ 11ನೇ ಲೋಕಸಭೆಗೆ ಆಯ್ಕೆಯಾಗಿದ್ದರು. 1998ರಲ್ಲಿ ಬಿಜೆಪಿಯ ಅಯನೂರು ಮಂಜುನಾಥ್ ವಿರುದ್ಧ ಸೋತಿದ್ದರು. 1999ರಲ್ಲಿ 12ನೇ ಲೋಕಸಭೆಗೆ ಮತ್ತೆ ಆಯ್ಕೆಯಾಗಿದ್ದ ಅವರು 2003ರಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. 2005ರಲ್ಲಿ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷವನ್ನು ಸೇರಿ ಲೋಕಸಭೆಗೆ ರಾಜೀನಾಮೆ ನೀಡಿದ್ದರು. ನಂತರ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಮೂಲಕ ಪುನಃ ಲೋಕಸಭೆಗೆ ಆಯ್ಕೆಯಾಗಿದ್ದರು. 2009ರಲ್ಲಿ ಸಮಾಜವಾದಿ ಪಕ್ಷ ತ್ಯಜಿಸಿ ಲೋಕಸಭೆಗೆ ರಾಜೀನಾಮೆ ನೀಡಿದ ಅವರು ಕಾಂಗ್ರೆಸ್ ಪಕ್ಷವನ್ನು ಸೇರಿ ಚುನಾವಣೆಗೆ ನಿಂತಿದ್ದರು. ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ಎಸ್. ರಾಘವೇಂದ್ರ ಅವರಿಂದ ಪರಾಜಿತರಾಗಿದ್ದರು. ವರ್ಷದ ಹಿಂದೆಯಷ್ಟೇ ಕಾಂಗ್ರೆಸ್ ತ್ಯಜಿಸಿ ಜನತಾದಳವನ್ನು ಸೇರಿದ್ದ ಬಂಗಾರಪ್ಪ ತಾವು ಮತ್ತು ದೇವೇಗೌಡರು ರಾಜಕೀಯದಿಂದ ನಿವೃತ್ತರಾಗುವುದೇ ಇಲ್ಲ ಎಂದು ಘೋಷಿಸಿದ್ದರು.
2011: ರಾಷ್ಟ್ರೀಯ ಗಣಿತ ವರ್ಷ'ವಾಗಿ 2012ನೇ ಇಸವಿಯನ್ನು ಘೋಷಿಸುವ ಮೂಲಕ 'ಗಣಿತ ಮಾಂತ್ರಿಕ' ಶ್ರೀನಿವಾಸ ರಾಮಾನುಜಂ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಈದಿನ ತಮಿಳುನಾಡಿನ ಚೆನ್ನೈಯಲ್ಲಿ ಗೌರವ ಸಲ್ಲಿಸಿದರು. ರಾಮಾನುಜಂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಂಗ್ ರಾಮಾನುಜಂ ಅವರ ಜನ್ಮದಿನವಾದ ಡಿಸೆಂಬರ್ 22ನ್ನು 'ರಾಷ್ಟ್ರೀಯ ಗಣಿತ ದಿನ' ವಾಗಿ ಆಚರಿಸಲಾಗುವುದು ಎಂದೂ ಘೋಷಿಸಿದರು.
2008: ಲಾಹೋರಿನಲ್ಲಿ ನಡೆದ ಕಾರ್ ಬಾಂಬ್ ಸ್ಫೋಟದ ಹೊಣೆಯನ್ನು ತಾಲಿಬಾನ್ ಪರವಾದ ಅನ್ಸಾರ್- ವಾ- ಮೊಹಜೀರ್ ಎಂಬ ಅಪರಿಚಿತ ಸಂಘಟನೆಯೊಂದು ಹೊತ್ತುಕೊಂಡಿತು. ಆದರೆ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪಾಕಿಸ್ಥಾನದ ಅಧಿಕಾರಿಗಳು ನಾಲ್ವರು ಭಾರತೀಯರನ್ನು ಬಂಧಿಸಿದ ವರದಿಗಳೊಂದಿಗೆ ವಿಷಯ ಹೊಸ ತಿರುವು ಪಡೆದುಕೊಂಡಿತು. ಸಂಘಟನೆಯ ಕಮಾಂಡರ್ ಹಾಗೂ ವಕ್ತಾರನಾದ ತೂಫಾನ್ ವಜೀರ್ ಎಂಬಗ ವ್ಯಕ್ತಿಯೊಬ್ಬ ಉತ್ತರ ವಜೀರಿಸ್ಥಾನದಿಂದ 'ನ್ಯೂಸ್ ಡೈಲಿ'ಗೆ ದೂರವಾಣಿ ಕರೆ ಮಾಡಿ ಸ್ಫೋಟ ನಡೆಸಿರುವುದು ತಾನೆಂದು ಹೇಳಿಕೊಂಡ. ಅಮೆರಿಕ ಪಡೆಗಳು ಇತ್ತೀಚೆಗೆ ಕ್ಷಿಪಣಿ ದಾಳಿ ನಡೆಸಿ ಪಂಜಾಜ್ ಪ್ರಾಂತ್ಯದ ಹಲವಾರು ಉಗ್ರರನ್ನು ಕೊಂದು ಹಾಕಿರುವುದಕ್ಕೆ ಪ್ರತೀಕಾರವಾಗಿ ಭದ್ರತಾ ಪಡೆಗಳು ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ಇನ್ನಷ್ಟು ದಾಳಿಗಳನ್ನು ನಡೆಸುವುದಾಗಿ ಆತ ಬೆದರಿಕೆ ಒಡ್ಡಿದ. ಇದರಿಂದ ವಜೀರ್ ಹಾಗೂ ಆತನ ಸಹಚರರು ಪಾಕಿಸ್ಥಾನದ ತಾಲಿಬಾನ್‌ಗಳು ಎಂಬುದು ಸ್ಪಷ್ಟವಾಗುತ್ತದೆ ಎಂದು ವರದಿ ಹೇಳಿತು.2011: ರಾಷ್ಟ್ರೀಯ ಗಣಿತ ವರ್ಷ'ವಾಗಿ 2012ನೇ ಇಸವಿಯನ್ನು ಘೋಷಿಸುವ ಮೂಲಕ 'ಗಣಿತ ಮಾಂತ್ರಿಕ' ಶ್ರೀನಿವಾಸ ರಾಮಾನುಜಂ ಅವರಿಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಈದಿನ ತಮಿಳುನಾಡಿನ ಚೆನ್ನೈಯಲ್ಲಿ ಗೌರವ ಸಲ್ಲಿಸಿದರು. ರಾಮಾನುಜಂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಿಂಗ್ ರಾಮಾನುಜಂ ಅವರ ಜನ್ಮದಿನವಾದ ಡಿಸೆಂಬರ್ 22ನ್ನು 'ರಾಷ್ಟ್ರೀಯ ಗಣಿತ ದಿನ' ವಾಗಿ ಆಚರಿಸಲಾಗುವುದು ಎಂದೂ ಘೋಷಿಸಿದರು.
2008: ಅಮೆರಿಕದ ವರ್ಜೀನಿಯಾ ರಾಜ್ಯ ಸರ್ಕಾರದ ಖಜಾನೆ ಅಧಿಕಾರಿಯಾಗಿ ಪ್ರಥಮ ಬಾರಿಗೆ ಭಾರತೀಯ ಮೂಲದ ವ್ಯಕ್ತಿಯನ್ನು ನೇಮಕ ಮಾಡಲಾಯಿತು. ಖಜಾಂಚಿ ಹುದ್ದೆಗೆ ನೇಮಕವಾದ ಮುಂಬೈಯ ಮಂಜು ಗನೇರಿವಾಲ ಅವರು ಪ್ರಸ್ತುತ ಹಣಕಾಸು ಇಲಾಖೆಯ ಉಪ ಕಾರ್ಯದರ್ಶಿ. ಗನೇರಿವಾಲ ಅವರು 2009ರ ಜನವರಿ 1ರಿಂದ ಖಜಾಂಚಿ ಹುದ್ದೆಯನ್ನು ವಹಿಸಿಕೊಳ್ಳುವರು ಎಂದು ವರ್ಜೀನಿಯಾ ರಾಜ್ಯಪಾಲ ತಿಮೋಥಿ ಎಂ. ಕೇನಿ ತಿಳಿಸಿದರು.
2008: ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸಾಧನೆ ಮಾಡಿದ 'ಹಿಂದೂಸ್ತಾನ್ ಟೈಮ್ಸ್' ಪತ್ರಿಕೆಯ ಸಂಪಾದಕೀಯ ನಿರ್ದೇಶಕ ವೀರ್ ಸಾಂಘ್ವಿ ಅವರು ಮೊಟ್ಟ ಮೊದಲ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದರು. ಲೋಕಮಾನ್ಯ ತಿಲಕ್ ಅವರು 'ಕೇಸರಿ' ಪತ್ರಿಕೆಯನ್ನು ಆರಂಭಿಸಿದ 128ನೇ ವರ್ಷಾಚರಣೆಯ ಸಂದರ್ಭದಲ್ಲಿ ಈ ವಿಶೇಷ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಪತ್ರಿಕೆಯ ಟ್ರಸ್ಟಿ ಸಂಪಾದಕ ದೀಪಕ್ ತಿಲಕ್ ಹೇಳಿದರು. ವೀರ್ ಸಾಂಘ್ವಿ ಅವರಿಗೆ ಪ್ರಶಸ್ತಿ ಜೊತೆಗೆ 1 ಲಕ್ಷ ರೂಪಾಯಿ ನಗದನ್ನು ನೀಡಲಾಗುವುದು. ಪತ್ರಿಕೋದ್ಯಮದ ಆಶಯಗಳನ್ನು ಎತ್ತಿಹಿಡಿಯುವ ಪತ್ರಕರ್ತರಿಗೆ ಪ್ರತಿ ವರ್ಷ ಈ ಪ್ರಶಸ್ತಿ ನೀಡಲಾಗುವುದು ಎಂದು ಲೋಕಮಾನ್ಯ ಅವರ ಮರಿಮೊಮ್ಮಗ ದೀಪಕ್ ನುಡಿದರು. ಬ್ರಿಟಿಷರ ದಬ್ಬಾಳಿಕೆ ವಿರುದ್ಧ ಲೋಕಮಾನ್ಯ ತಿಲಕ್ 1881ರಲ್ಲಿ 'ಕೇಸರಿ' ಪತ್ರಿಕೆಯನ್ನು ಆರಂಭಿಸಿದ್ದರು.
2008: ಮುದ್ರಣದಲ್ಲಿ ವಿಶೇಷ ಕೌಶಲ್ಯ ಮೆರೆದ ಬೆಂಗಳೂರಿನ ರಮ್ಯಾ ರೆಪ್ರೊಗ್ರಾಫಿಕ್ ಪ್ರೈವೆಟ್ ಲಿಮಿಟೆಡ್, ಏಷಿಯನ್ ಪ್ರಿಂಟ್ ಪ್ರಶಸ್ತಿಯ ಬೆಳ್ಳಿ ಪದಕಕ್ಕೆ ಭಾಜನವಾಯಿತು. ಕಲಾವಿದ ಸುದೇಶ್ ಮೋಹನ್ ಹಾಗೂ ವಿನ್ಯಾಸಕ ಯು.ಟಿ.ಸುರೇಶ್ ಅವರು ತಯಾರಿಸಿದ್ದ ಪುಷ್ಪಗಳನ್ನು ಆಧರಿಸಿದ ಆಕರ್ಷಕ ಬ್ರೋಷರಿಗೆ ಈ ಪ್ರಶಸ್ತಿ ಲಭಿಸಿತು. ಏಷ್ಯಾದ ಒಟ್ಟು 15 ದೇಶಗಳಿಂದ 2500 ಮುದ್ರಣ ಪ್ರತಿಗಳು ಸ್ಪರ್ಧೆಯಲ್ಲಿದ್ದವು ಎಂದು ಪ್ರಕಟಣೆ ತಿಳಿಸಿತು.
2008: ವಿಶ್ವದಲ್ಲಿ ಅಪರೂಪ ಎನ್ನಿಸಿದ ಹಾಗೂ ಅಳಿವಿನ ಅಂಚಿನಲ್ಲಿರುವ ಸಣ್ಣ ಗಾತ್ರದ ಬೆಕ್ಕು (ಮೈಮೇಲೆ ಚುಕ್ಕಿಗಳುಳ್ಳದ್ದು) ತುಮಕೂರು ಜಿಲ್ಲೆಯ ದೇವರಾಯದುರ್ಗ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿತು. ವನ್ಯ ಜೀವಿ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿದ ಸಂಜಯ್ ಗುಬ್ಬಿ, ಸತೀಶ್ ಮಲ್ಲಣ್ಣ, ಯೋಗೇಶ್ ಆರಾಧ್ಯ ಹಾಗೂ ಟಿ.ಬಿ.ರವೀಂದ್ರ ಅವರ ತಂಡಕ್ಕೆ ಈ ಅಪರೂಪದ ಬೆಕ್ಕು ಕಾಣಿಸಿತು. 'ಕಾಡುಬೆಕ್ಕು' ಅಥವಾ 'ಕಾಡು ಚುಕ್ಕಿಬೆಕ್ಕು' ಎಂದು ಕರೆಯಲಾಗುವ ಈ ಬೆಕ್ಕು ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಂಡು ಬರುತ್ತದೆ. ಈ ಬೆಕ್ಕು 14ರಿಂದ 17 ಅಂಗುಲ ಉದ್ದವಿರುತ್ತದೆ. ಗಂಡು ಬೆಕ್ಕಾಗಿದ್ದರೆ 1.5 ಕೆ.ಜಿ ತೂಕ, ಹೆಣ್ಣು ಬೆಕ್ಕಾಗಿದ್ದರೆ 1 ಕೆ.ಜಿ ತೂಕ ಹೊಂದಿರುತ್ತದೆ. ಈ ಚುಕ್ಕಿ ಬೆಕ್ಕಿನ ಪ್ರಭೇದ ಅಳಿವಿನ ಅಂಚಿನಲ್ಲಿದ್ದು, 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1ನೇ ಅನುಸೂಚಿಯಲ್ಲಿ ದಾಖಲಾಗಿದೆ.
2007: ಖ್ಯಾತ ಧಾರ್ಮಿಕ ಯಾತ್ರಾ ಸ್ಥಳವಾದ ದೆಹಲಿಯ ಅಕ್ಷರಧಾಮ ದೇವಾಲಯವು ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ ಸಂಕೀರ್ಣ ಎಂಬುದಾಗಿ ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯಿತು. ಗಿನ್ನೆಸ್ ಪುಸ್ತಕ ವಿಭಾಗದ ಹಿರಿಯ ಅಧಿಕಾರಿಗಳು ದೇವಾಲಯಕ್ಕೆ ಭೇಟಿ ನೀಡಿ ಇದಕ್ಕೆ ಸಂಬಂಧಪಟ್ಟ ಪ್ರಮಾಣಪತ್ರಗಳನ್ನು ದೇವಾಲಯದ ಪ್ರಮುಖರಿಗೆ ನೀಡಿದರು. 86,342 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ದೇವಾಲಯದ ಉದ್ದ 356 ಅಡಿಗಳಾಗಿದ್ದು, ಅಗಲ 316 ಅಡಿಗಳು. ಇದರ ಎತ್ತರ 141 ಅಡಿಗಳು.
2007: ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಅವರು ತಮ್ಮ `ಅರಮನೆ' ಕಾದಂಬರಿಗೆ 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದರು. ಬ್ರಿಟಿಷ್ ಅಧಿಕಾರಿ ಥಾಮಸ್ ಮನ್ರೋ ಕಲೆಕ್ಟರ್ ಆಗಿದ್ದ ದಿನಗಳಲ್ಲಿ ಬಳ್ಳಾರಿ, ಕಡಪ, ಅನಂತಪುರ ಪ್ರದೇಶಗಳಲ್ಲಿ ನಡೆದ ಸಾಮಾಜಿಕ ಮತ್ತು ರಾಜಕೀಯ ಘಟನಾವಳಿಗಳನ್ನು ಆಧರಿಸಿದ `ಅರಮನೆ' ಕಾದಂಬರಿ ಕುಂವೀ ಅವರ 35ನೇ ಕೃತಿ. `ಕಪ್ಪು' ಮತ್ತು `ಶಾಮಣ್ಣ' ಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಕುಂವೀ ಅವರ ಹದಿನಾಲ್ಕು ಕಾದಂಬರಿ ಮತ್ತು ಎಂಟು ಕಥಾ ಸಂಕಲನಗಳು ಪ್ರಕಟಗೊಂಡಿವೆ. `ಅರಮನೆ' ನನ್ನ ಹದಿನೈದು ವರ್ಷಗಳ ಸಂಶೋಧನೆಯ ಫಲ. ಸುಮಾರು 30 ಸಾವಿರ ಪುಟಗಳಷ್ಟಿದ್ದ ಮೂಲ ಬರಹವನ್ನು ಆರು ಬಾರಿ ತಿದ್ದಿ ಆರುನೂರು ಪುಟಗಳಿಗೆ ಇಳಿಸಲಾಗಿದೆ. ಹಿರಿಯ ಸಾಹಿತಿಗಳಾದ ಸಿ.ಎನ್. ರಾಮಚಂದ್ರನ್ ಮತ್ತು ಎಚ್. ಎಸ್. ರಾಘವೇಂದ್ರರಾವ್ ಅವರ ಮಾರ್ಗದರ್ಶನ ಮರೆಯಲಾಗದ್ದು ಎಂದು ಈ ಸಂದರ್ಭದಲ್ಲಿ ಕುಂವೀ ಸ್ಮರಿಸಿದರು.
2007: ಭಾರತದ ಮೊತ್ತ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಿರಣ್ ಬೇಡಿ ಅವರ ಸ್ವಯಂ ನಿವೃತ್ತಿಯ ಮನವಿಯನ್ನು ಭಾರತ ಸರ್ಕಾರ ಕೊನೆಗೂ ಅಂಗೀಕರಿಸಿತು. ಪ್ರಸ್ತುತ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ದೆಹಲಿ ಘಟಕದ ಮಹಾ ನಿರ್ದೇಶಕರಾಗಿರುವ ಕಿರಣ್ ಬೇಡಿಯವರು ಆ ಸ್ಥಾನದಿಂದ ಮುಕ್ತಗೊಳ್ಳುವರು. ದೆಹಲಿ ಪೊಲೀಸ್ ಆಯುಕ್ತ ಸ್ಥಾನವನ್ನು ತಮಗಿಂತ ಎರಡು ವರ್ಷ ಕಿರಿಯ ಅಧಿಕಾರಿಗೆ ನೀಡಿದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದ ಕಿರಣ್ ಬೇಡಿ ನವೆಂಬರ್ 15ರಂದು ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ ಇರುವ ಕಾರಣ, ಅದಕ್ಕೆ ಅನುಕೂಲ ಮಾಡಿಕೊಳ್ಳುವುದಕ್ಕಾಗಿ ಈ ಸ್ವಯಂ ನಿವೃತ್ತಿ ಬಯಸಿದ್ದೇನೆಂದೂ ಅವರು ಸರ್ಕಾರಕ್ಕೆ ತಿಳಿಸಿದ್ದರು. ಅರ್ಜಿಯ ಅಂಗೀಕಾರಕ್ಕಾಗಿ ಒತ್ತಡ ತರುವ ಸಲುವಾಗಿ ಅವರು ಫೆಬ್ರವರಿ 15ರ ವರೆಗೆ ದೀರ್ಘ ರಜೆಗೂ ಮನವಿ ಸಲ್ಲಿಸಿದ್ದರು. ಅಮೃತಸರದಲ್ಲಿ ಹುಟ್ಟಿದ ಕಿರಣ್ ಬೇಡಿ ತಮ್ಮ ಪೊಲೀಸ್ ಸೇವಾವಧಿಯಲ್ಲಿ ಹಲವು ಅತ್ಯುತ್ತಮ ಕೆಲಸಗಳನ್ನು ಮಾಡಿರುವುದರ ಜೊತೆಗೇ ವಿವಾದಗಳಲ್ಲೂ ಸಿಲುಕಿದ್ದರು. ಮೂರು ದಶಕಗಳ ಹಿಂದೆ ದೆಹಲಿಯ ಸಂಚಾರಿ ಪೊಲೀಸ್ ವಿಭಾಗದಲ್ಲಿದ್ದಾಗ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡದ್ದರಿಂದ `ಕ್ರೇನ್ ಬೇಡಿ' ಎಂದೇ ಜನಜನಿತರಾಗಿದ್ದರು. ತಿಹಾರ್ ಜೈಲಿನ ಮುಖ್ಯಸ್ಥೆಯಾಗಿದ್ದಾಗ ಅಲ್ಲಿ ತಂದ ಸುಧಾರಣೆಗಳು ಎಲ್ಲೆಡೆ ಸುದ್ದಿಯಾಗಿದ್ದವು. ಹಿಂದೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಪೊಲೀಸ್ ಸಲಹೆಗಾರ್ತಿಯಾಗಿದ್ದ ಕಿರಣ್ ಬೇಡಿಗೆ ಅತ್ಯುನ್ನತ ಸೇವೆಗಾಗಿ ವಿಶ್ವಸಂಸ್ಥೆಯ ಪದಕವೂ ಸಿಕ್ಕಿತ್ತು. ಮ್ಯಾಗ್ಸೆಸೆ ಪ್ರಶಸ್ತಿಯೂ ಸೇರಿದಂತೆ ನೂರಾರು ಪ್ರಶಸ್ತಿಗಳು ಅವರ ಮುಡಿಗೇರಿವೆ.
2007: ಬೆಂಗಳೂರಿನ ಪ್ರೆಸ್ ಕ್ಲಬ್ `ವರ್ಷದ ವ್ಯಕ್ತಿ' ಪ್ರಶಸ್ತಿಗೆ ಖ್ಯಾತ ಕವಿ ಪ್ರೊ.ಕೆ.ಎಸ್. ನಿಸಾರ್ ಅಹಮದ್ ಆಯ್ಕೆಯಾದರು. ಈ ಬಾರಿಯ `ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ'ಗೆ ಹಿರಿಯ ಪತ್ರಕರ್ತ ಕೆ.ಶ್ರೀಧರ ಆಚಾರ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಡಿ.ಬಾಬುರಾಜ್ ಆಯ್ಕೆಯಾದರು.
2007: ಇಂಡೋನೇಷ್ಯಾದ ಪಶ್ಚಿಮ ಭಾಗದಲ್ಲಿ ಧಾರಾಕಾರ ಮಳೆ ಸುರಿದು, ಭೂಕುಸಿತದ ಘಟನೆಗಳು ಸಂಭವಿಸಿ 61 ಮಂದಿ ಅಸು ನೀಗಿದರು. ನೂರಾರು ಮಂದಿ ಕಾಣೆಯಾದರು.
2007: ಅಲೆಕ್ಸಾಂಡರಿಯಾ ರೋಸ್ ನಗರದಲ್ಲಿ 14 ಮಹಡಿಗಳ ಕಟ್ಟಡ ಕುಸಿದು ಸಂಭವಿಸಿದ ಅನಾಹುತದಲ್ಲಿ ಮಡಿದವರ ಸಂಖ್ಯೆ 14ಕ್ಕೆ ಏರಿತು.
2007: ಪಶ್ಚಿಮ ನೇಪಾಳದಲ್ಲಿ ಸೇತುವೆ ಕುಸಿದ ಪರಿಣಾಮವಾಗಿ ವಾಹನವೊಂದು ನದಿಗೆ ಉರುಳಿ ಸಂಭವಿಸಿದ ಅಪಘಾತದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿತು.
2007: `ಕಂದಾಯ ಇಲಾಖೆ ಹಾಗೂ ನ್ಯಾಯಾಲಯದ ದಾಖಲೆಗಳ ಆಧಾರದ ಪ್ರಕಾರ ಚಿಕ್ಕಮಗಳೂರು ಸಮೀಪದ ದತ್ತಪೀಠವು ಹಿಂದೂಗಳಿಗೆ ಸೇರಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಪ್ರತಿಪಾದಿಸಿದರು. `ದತ್ತಪೀಠ ಸಂವರ್ಧನ ಸಮಿತಿ ಕಾರ್ಯದರ್ಶಿ ಬಿ.ಎಸ್.ವಿಠಲರಾವ್, ಸಮಾಜ ಸೇವಕ ಬಿ.ಎಸ್.ಮಂಜುನಾಥಸ್ವಾಮಿ ಜೊತೆಗೆ ಪೀಠಕ್ಕೆ ಭೇಟಿ ನೀಡಿ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಲಾಗಿದೆ. ಇದರ ಪ್ರಕಾರ ದತ್ತಪೀಠ ಹಿಂದುಗಳಿಗೆ ಸೇರಬೇಕು. ರಾಜ್ಯ ಸರ್ಕಾರ ಹಾಗೂ ಕೋಮು ಸೌಹಾರ್ದ ವೇದಿಕೆಗೆ ವಸ್ತುಸ್ಥಿತಿ ಗೊತ್ತಿಲ್ಲ. ರಾಜಕೀಯ ಉದ್ದೇಶಕ್ಕಾಗಿ ಅನಗತ್ಯ ವಿವಾದ ಮಾಡಲಾಗುತ್ತಿದೆ' ಎಂದು ಚಿಮೂ ಆರೋಪಿಸಿದರು.
2006: ಖ್ಯಾಗ ಲೆಗ್ ಸ್ಪಿನ್ನರ್ ಆಸ್ಟ್ರೇಲಿಯಾದ ಶೇನ್ ವಾರ್ನ್ ಟೆಸ್ಟಿನಲ್ಲಿ 700 ವಿಕೆಟುಗಳ ಗಡಿ ದಾಟಿ, ಕ್ರಿಕೆಟ್ ಜಗತಿನಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದರು. ಮೆಲ್ಬೋರ್ನಿನಲ್ಲಿ ಇಂಗ್ಲೆಂಡ್ ವಿರುದ್ಧ ಆರಂಭವಾದ ಆ್ಯಷಸ್ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆ್ಯಂಡ್ರ್ಯೂ ಸ್ಪ್ರಾಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ 700ನೇ ವಿಕೆಟ್ ಪಡೆಯುವ ಮೂಲಕ ಅವರು ಈ ಸಾಧನೆ ಮೆರೆದರು. ಪಂದ್ಯದಲ್ಲಿ ಅವರು ಪಡೆದ ವಿಕೆಕಟುಗಳ ಸಂಖ್ಯೆ 704ಕ್ಕೆ ಮುಟ್ಟಿತು.
2006: ನೈಜೀರಿಯಾದ ಅತ್ಯಂತ ದೊಡ್ಡ ನಗರವಾದ ಲಾಗೋಸ್ನಲ್ಲಿ ಸಂಭವಿಸಿದ ಭಾರಿ ಪೈಪ್ ಲೈನ್ ಸ್ಫೋಟದಲ್ಲಿ 700ಕ್ಕೂ ಹೆಚ್ಚು ಜನ ಭೀಕರವಾಗಿ ಸಾವನ್ನಪ್ಪಿದರು. ತೈಲ ಪೈಪ್ ಲೈನ್ ಸ್ಫೋಟಗೊಂಡಿರುವ ಸ್ಥಳದಲ್ಲಿ ಗುರುತು ಹಚ್ಚಲೂ ಸಾಧ್ಯವಾಗದಷ್ಟು ಸುಟ್ಟು ಹೋಗಿರುವ 500ಕ್ಕೂ ಹೆಚ್ಚು ಮಂದಿಯ ಶವಗಳನ್ನು ಎಣಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಜನನಿಬಿಡ ಅಬುಲೆ ಎಗ್ಬಾದಲ್ಲಿ ರಾತ್ರಿ ಕಳ್ಳರು ಈ ಪೈಪ್ ಲೈನನ್ನು ತೂತು ಮಾಡಿದ್ದು, ಅದರಿಂದ ಹರಿದು ಬಂದ ತೈಲವನ್ನು ಸಂಗ್ರಹಿಸಲು ನೂರಾರು ಮಂದಿ ಮುಗಿಬಿದ್ದರು. ಈ ಸಂದರ್ಭದಲ್ಲಿ ಬೆಂಕಿಹೊತ್ತಿಕೊಂಡು ಸ್ಫೋಟ ಸಂಭವಿಸಿತು.
2006: ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗ ಮಾಡಿದ್ದಕ್ಕಾಗಿ ಎರಡು ವರ್ಷಗಳ ಸೆರೆಮನೆವಾಸದ ಶಿಕ್ಷೆಗೆ ಗುರಿಯಾಗಿರುವ ಮಾಜಿ ಮಿಲಿಟರಿ ಆಡಳಿತಗಾರ ಹಾಗೂ ಜತಿಯಾ ಪಕ್ಷ (ಜೆಪಿ)ದ ಅಧ್ಯಕ್ಷ ಜನರಲ್ ಹುಸೇನ್ ಮೊಹಮ್ಮದ್ ಇರ್ಷಾದ್ ಅವರಿಗೆ, ಕೆಳಹಂತದ ನ್ಯಾಯಾಲಯಕ್ಕೆ ಶರಣಾಗುವಂತೆ ಬಾಂಗ್ಲಾದೇಶದ ಸುಪ್ರೀಂಕೋರ್ಟ್ ತಾಕೀತು ಮಾಡಿತು. ರಜಾಕಾಲೀನ ನ್ಯಾಯಮೂರ್ತಿ ಎಂ.ಜಾಯನುಲ್ ಅಬೆದಿನ್ ಅವರು ಇರ್ಷಾದ್ ಮತ್ತು ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿ ಈ ಆದೇಶ ಹೊರಡಿಸಿದರು. ಇರ್ಷಾದ್ ಅವರು 1990ರಲ್ಲಿ ರಕ್ತರಹಿತ ಸೇನಾ ಕ್ರಾಂತಿ ಮೂಲಕ ಆಡಳಿತ ಸೂತ್ರ ಹಿಡಿದು, ಅನಂತರ ಒಂಬತ್ತು ವರ್ಷ ಆಡಳಿತ ನಡೆಸಿದ್ದರು. ಆದರೆ ಇದಕ್ಕೂ ಮುಂಚೆಯೇ ಅಪರಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರುವರ್ಷ ಸೆರೆವಾಸ ಅನುಭವಿಸಿದ್ದರು. ಈಗ, ಜಪಾನ್ ನಿರ್ಮಿತ 520 ದೋಣಿ ಮತ್ತು 10 ಜಲಶುದ್ಧೀಕರಣ ಯಂತ್ರಗಳ ಖರೀದಿಯಲ್ಲಿ ಇರ್ಷಾದ್ ಅವರು ಅವ್ಯವಹಾರ ನಡೆಸಿದ್ದಾರೆ ಎಂದು ದೇಶದ ಭ್ರಷ್ಟಾಚಾರ ವಿರೋಧ ದಳದವರು 1991ರಲ್ಲಿಯೇ ಮೊಕದ್ದಮೆಯೊಂದನ್ನು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಇರ್ಷಾದ್ ತಪ್ಪಿತಸ್ಥರು ಎಂದು ವಿಭಾಗೀಯ ವಿಶೇಷ ಸೆಷನ್ಸ್ ನ್ಯಾಯಾಲಯ 1995ರ ಜುಲೈ 6ರಂದು ತೀರ್ಪು ನೀಡಿತ್ತು.
2006: ಸಣ್ಣ ಪ್ರಮಾಣದ ತೀವ್ರತೆಯ ಭೂಕಂಪಗಳಿಗೂ ತಾಳಿಕೆ ಬಾರದ ಕಟ್ಟಡ ನಿರ್ಮಿಸಲು ತಪ್ಪು ನಕಾಶೆ ಸಿದ್ಧಪಡಿಸಿದ ಟೋಕಿಯೋದ ವಾಸ್ತುಶಿಲ್ಪಿ ಹಿದೆತ್ಸುಗು ಅನೆಹ್ ಗೆ (49) ಟೋಕಿಯೋದ ಸ್ಥಳೀಯ ಕೋರ್ಟ್ ಐದು ವರ್ಷ ಜೈಲು ಶಿಕ್ಷೆ ವಿಧಿಸಿತು. ಆದರೆ, ಶಿಕ್ಷೆಯ ಜಾರಿಯನ್ನು ಅಮಾನತಿನಲ್ಲಿ ಇಟ್ಟಿತು. ದೊಡ್ಡ ಪ್ರಮಾಣದ ಬಹುಮಹಡಿ ಕಟ್ಟಡಗಳು ಮತ್ತು ಹೋಟೆಲುಗಳ ನಿರ್ಮಾಣ ಸಂದರ್ಭದಲ್ಲಿ ಭೂಕಂಪಗಳನ್ನು ತಾಳಿಕೊಳ್ಳಲು ಬೇಕಾದಂತಹ ಸಾಮಗ್ರಿಗಳನ್ನು ಹಾಕಲಾಗಿದೆ ಎನ್ನುವ ತಪ್ಪು ಅಂಕಿ-ಅಂಶಗಳನ್ನು ಆತ ನೀಡಿದ್ದರಿಂದ ಕೋರ್ಟ್ ಈ ಶಿಕ್ಷೆಗೆ ಗುರಿಮಾಡಿತು. ಕಟ್ಟಡ ನಿರ್ಮಾಣ ಕಂಪನಿ ಕಾರ್ಯನಿರ್ವಾಹಕ ಅಧಿಕಾರಿ, ಪರಿವೀಕ್ಷಣಾಧಿಕಾರಿಗಳಿಗೂ ಅಮಾನತು ಶಿಕ್ಷೆಯನ್ನು ನೀಡಲಾಯಿತು.
2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಇರಾಕಿ ನ್ಯಾಯಾಧೀಶರ ಮಂಡಳಿ ಎತ್ತಿ ಹಿಡಿಯಿತು. ಈ ನಿರ್ಧಾರದ ಪ್ರಕಾರ ಸದ್ದಾಂ ಹುಸೇನ್ ಅವರನ್ನು 30 ದಿನಗಳ ಒಳಗಾಗಿ ಗಲ್ಲಿಗೆ ಏರಿಸಬೇಕಾಗುತ್ತದೆ. 1982 ರಲ್ಲಿ ದುಜೈಲ್ ಪಟ್ಟಣದಲ್ಲಿ ತಮ್ಮ ಕೊಲೆ ಯತ್ನದ ವಿರುದ್ಧ ನಡೆದ ಸೇಡಿನ ಕಾರ್ಯಾಚರಣೆಯಲ್ಲಿ 148 ಮಂದಿ ಶಿಯಾಗಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ದಾಂ ಹುಸೇನ್ ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ.
2006: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸರಹದ್ದಿನಲ್ಲಿರುವ ಕೆಸಮುಡಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲ್ ಯುವಕ ಕುತ್ಲೂರು ದಿನಕರ ಮೃತನಾದ. ಇದರಿಂದಾಗಿ ಪಶ್ಚಿಮ ಘಟ್ಟದಲ್ಲಿ ನಕ್ಸಲೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಈವರೆಗೆ ಪ್ರಾಣತೆತ್ತವರ ಸಂಖ್ಯೆ 8ಕ್ಕೆ ಏರಿತು.
2005: ಬೆಂಗಳೂರು ಸೇರಿದಂತೆ ದೇಶದ ಹಲವು ನಗರ, ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಬಾಂಗ್ಲಾದೇಶದ ಹರ್ಕತ್ ಉಲ್ ಜಿಹಾದ್ ಸಂಘಟನೆಯ ಮೂವರು ಉಗ್ರಗಾಮಿಗಳನ್ನು ದೆಹಲಿ ಪೊಲೀಸರು ಬಂಧಿಸಿದರು. ಹರ್ಕತ್ ಉಲ್ ಸಂಘಟನೆಯ ಸದಸ್ಯ ಬಂಧಿತ ಹಿಲಾಲುದ್ದೀನ್ ಹೈದರಾಬಾದಿನಲ್ಲಿ ಅಕ್ಟೋಬರ್ 12ರಂದು ಎಸ್ ಟಿ ಎಫ್ ಕಚೇರಿ ಮೇಲೆ ನಡೆದ ಬಾಂಬ್ ದಾಳಿಯ ರೂವಾರಿ.
2005: ಏಕದಿನ ಕ್ರಿಕೆಟ್ ಪಂದ್ಯಗಳನ್ನು ಜನಪ್ರಿಯಗೊಳಿಸುವಲ್ಲಿ ಶ್ರಮಿಸಿದ ಆಸ್ಟ್ರೇಲಿಯಾದ ಮಾಧ್ಯಮ ಜಗತ್ತಿನ ದಿಗ್ಗಜ ಕೆರ್ರಿ ಪ್ಯಾಕರ್ (68) ಸಿಡ್ನಿಯ ತಮ್ಮ ನಿವಾಸದಲ್ಲಿ ನಿಧನರಾದರು. 1937ರ ಡಿಸೆಂಬರ್ 17ರಂದು ಸರ್ ಫ್ರಾಂಕ್ ಹಾಗೂ ಗ್ರೆಟೆಲ್ ಅವರ ಪುತ್ರನಾಗಿ ಜನಿಸಿದ ಕೆರ್ರಿ ಬಾಲ್ಯದಲ್ಲಿಯೇ ಲಘು ಪಾರ್ಶ್ವವಾಯುನಿಂದ ಬಳಲಿದ್ದರು. 9 ತಿಂಗಳು ಆಸ್ಪತ್ರೆಯಲ್ಲಿ ಕಳೆದ ಪರಿಣಾಮವಾಗಿ ಸಮವಯಸ್ಕರಿಗಿಂತ ಶಿಕ್ಷಣದಲ್ಲಿ ಹಿಂದುಳಿದಿದ್ದರು. ಕಲಿಕಾ ಸಾಮರ್ಥ್ಯವೂ ಕುಗ್ಗಿತ್ತು. ಆದರೆ ಕ್ರೀಡೆಯಲ್ಲಿ ಭಾರಿ ಆಸಕ್ತಿ ಬೆಳೆಸಿಕೊಂಡ ಅವರು 1956ರಲ್ಲಿ ತಂದೆಯ ಆಸ್ಟ್ರೇಲಿಯನ್ ಕನ್ನಾಲಿ ಡೇಟೆಡ್ ಪ್ರೆಸ್ (ಎಸಿಪಿ) ಸೇರಿಕೊಂಡಿದ್ದರು. 1974ರಲ್ಲಿ ತಂದೆ ಸಾಯುವ ಹೊತ್ತಿಗೆ ಕೆರ್ರಿ ಮಾಧ್ಯಮ ವಲಯದಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿದ್ದರು. 1982ರ ವೇಳೆಗೆ ಎಸಿಪಿ ಮೇಲೆ ಪೂರ್ಣ ಸ್ವಾಮ್ಯ ಹೊಂದಿದ್ದರು. ಮಾಧ್ಯಮ ಜಗತ್ತಿನ `ಬಾದಶಹ' ಆಗಿ ಮೆರೆದ ಕೆರ್ರಿ ಕಾಂಗರೂಗಳ ನಾಡಿನಲ್ಲಿ ಟೆಲಿವಿಷನ್ ಜಾಲವನ್ನೂ ಹರಡಿದ್ದಲ್ಲದೆ, ಪತ್ರಿಕಾರಂಗದಲ್ಲಿ ತಮ್ಮ ಛಾಪು ಮೂಡಿಸಿದರು. 1970ರಲ್ಲಿ ಕ್ರಿಕೆಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಲು ಕೆರ್ರಿ ಅವರೇ ಕಾರಣ. ವಿಶ್ವ ಕ್ರಿಕೆಟ್ ಸರಣಿ ಮತ್ತು ಏಕದಿನ ಕ್ರಿಕೆಟ್ ಪಂದ್ಯಗಳಿಗೆ ಪ್ರೋತ್ಸಾಹ ನೀಡಿ ಬೆಳೆಸಿದ್ದು, 1977ರಲ್ಲಿ ವಿಶ್ವ ಸರಣಿ ನಡೆಸಲು ಆರ್ಥಿಕ ನೆರವು ನೀಡಿದ್ದು ಕೆರ್ರಿ ಪ್ಯಾಕರ್ ಅವರೇ. ಪ್ಯಾಕರ್ ಮುದ್ರಣ ಹಾಗೂ ಪ್ರಸಾರ ಸಂಸ್ಥೆ (ಪಿಬಿಎಲ್) ಆಸ್ಟ್ರೇಲಿಯಾದಲ್ಲಿ ಪ್ರಮುಖ ಚಾನೆಲ್ ಹಾಗೂ ನಿಯತಕಾಲಿಕಗಳನ್ನು ಹೊಂದಿದೆ. 1990ರಲ್ಲಿ ಪ್ಯಾಕರ್ ಪೋಲೋ ಆಡುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾಗಿ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದರು. ಆಗ ಕೆಲವು ಕ್ಷಣ ಅವರ ಹೃದಯ ಬಡಿತವೇ ಸ್ಥಬ್ದಗೊಂಡಿತ್ತು. ಆಗ ಸಾವಿನ ದವಡೆಯಿಂದ ಪಾರಾಗಿದ್ದರು. 2000ದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದರು. ಹೆಲಿಕಾಪ್ಟರ್ ಚಾಲಕನೊಬ್ಬ ಅವರಿಗೆ ಮೂತ್ರಪಿಂಡ ದಾನ ಮಾಡಿದ್ದ. 2003ರಲ್ಲಿ ಮೂತ್ರಕೋಶದಲ್ಲಿ ತೊಂದರೆ ಕಾಣಿಸಿಕೊಂಡು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
2004: ಇಂಡೋನೇಷ್ಯ, ಶ್ರೀಲಂಕಾ, ಭಾರತ, ಥಾಯ್ಲೆಂಡ್, ಪೂರ್ವ ಆಫ್ರಿಕ, ಮಾಲ್ದೀವ್ಸ್, ಮಲೇಷ್ಯ, ಮ್ಯಾನ್ಮಾರ್, ಬಾಂಗ್ಲಾದೇಶ ಸೇರಿದಂತೆ 13 ರಾಷ್ಟ್ರಗಳ ಕರಾವಳಿ ಪ್ರದೇಶಗಳನ್ನು ಹಿಂದೂ ಮಹಾಸಾಗರದ ಆಳದಿಂದ ಹೊರಟ ದೈತ್ಯ 'ಸುನಾಮಿ' ಅಲೆಗಳು ನುಂಗಿ ನೀರು ಕುಡಿದವು. ಒಟ್ಟು 2.30 ಲಕ್ಷ ಮಂದಿ ಮೃತರಾದರು. ಅವರಲ್ಲಿ ಅಸುನೀಗಿದವರು 1.85 ಲಕ್ಷಕ್ಕೂ ಹೆಚ್ಚು ಮಂದಿಯಾದರೆ, ಕಣ್ಮರೆಯಾದವರ ಸಂಖ್ಯೆ ಸುಮಾರು 44 ಸಾವಿರ. ಇಂಡೋನೇಷ್ಯ ಒಂದರಲ್ಲೇ ಮೃತರಾದವರ ಸಂಖ್ಯೆ 1.69 ಲಕ್ಷ, ಶ್ರೀಲಂಕೆಯಲ್ಲಿ ಸತ್ತವರು 35,000, ಭಾರತದಲ್ಲಿ 16,000. ಮನುಕುಲದ ಅಚ್ಚಳಿಯದ ದುರಂತವಾಗಿ ನೆನಪಿನಲ್ಲಿ ಉಳಿದ ಈ ಸುನಾಮಿ ಭಾರತದ ಅಂಡಮಾನ್ ದ್ವೀಪವನ್ನು ಸಂಪೂರ್ಣವಾಗಿ ನಾಶ ಮಾಡಿತು. ತಮಿಳುನಾಡಿನ ತೀರಪ್ರದೇಶಗಳೂ ಹಾನಿಗೊಂಡವು. ಸುಮಾತ್ರ, ಇಂಡೋನೇಷ್ಯಗಳ ಕರಾವಳಿಗಳೂ ನೆಲಕಚ್ಚಿದವು. ಯಾವುದೇ ಸುಳಿವು ಕೂಡಾ ಇಲ್ಲದೆ ಬಂದೆರಗಿದ ದುರಂತವಾದ್ದರಂದ ಜನರಿಗೆ ತಪ್ಪಿಸಿಕೊಳ್ಳಲು ದಾರಿಯೇ ಉಳಿಯಲಿಲ್ಲ.
1999: ಭಾರತದ ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ (1918-1999) ಅವರು ನವದೆಹಲಿಯಲ್ಲಿ ತಮ್ಮ 81ನೇ ವಯಸ್ಸಿನಲ್ಲಿ ನಿಧನರಾದರು.
1985: ಅಮೆರಿಕಾದ ನಿಸರ್ಗ ಚಿಂತಕ, ಪ್ರಾಣಿ ತಜ್ಞ ಡಯನ್ ಫಾಸ್ಸಿ (1932-1985) ಅವರು ರ್ವಾಂಡಾದ ಕರಿಸೋಕೆ ರೀಸರ್ಚ್ ಸೆಂಟರಿನಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಇವರು ಕಾಡಿನಲ್ಲಿ ಗೊರಿಲ್ಲಾಗಳ ಬಗ್ಗೆ ಅಧ್ಯಯನ ನಡೆಸಿದ್ದರು.
1982: `ಟೈಮ್' ಮ್ಯಾಗಜಿನ್ ಮೊತ್ತ ಮೊದಲ ಬಾರಿಗೆ `ವರ್ಷದ ಮನುಷ್ಯ'ನಾಗಿ ಮನುಷ್ಯೇತರ ವಸ್ತುವನ್ನು ಆಯ್ಕೆ ಮಾಡಿತು. 1982ರಲ್ಲಿ ಈ ಗೌರವಕ್ಕೆ ಪಾತ್ರವಾದದ್ದು `ಒಂದು ಕಂಪ್ಯೂಟರ್'!.
1950: ಸಾಹಿತಿ, ಪ್ರಾಧ್ಯಾಪಕಿ ಮಾಲತಿ ಪಟ್ಟಣಶೆಟ್ಟಿ ಅವರು ಶಾಂತೇಶ ಬಸವಣ್ಣೆಪ್ಪ ಕೋಟೂರ- ಶಿವಗಂಗಾ ದಂಪತಿಯ ಮಗಳಾಗಿ ಕೊಲ್ಹಾಪುರದಲ್ಲಿ ಜನಿಸಿದರು.
1941: ವಿನ್ ಸ್ಟನ್ ಚರ್ಚಿಲ್ ಅವರು ಯುನೈಟೆಡ್ ಸ್ಟೇಟ್ಸ್ ಕಾಂಗ್ರೆಸ್ಸಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಮೊತ್ತ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1929: ಮಲಯಾಳಂ ಚಿತ್ರನಟ ಪ್ರೇಮ್ ನಜೀರ್ (1929-1989) ಹುಟ್ಟಿದ ದಿನ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನ ಪಾತ್ರ ವಹಿಸುವ ಮೂಲಕ ಇವರು ದಾಖಲೆ ಸ್ಥಾಪಿಸಿದ್ದಾರೆ.
1914: ಸಾಹಿತಿ ಟಿ.ಎನ್. ಮಹಾದೇವಯ್ಯ ಜನನ.
1898: ಮೇರಿ ಮತ್ತು ಪಿಯರೇ ಕ್ಯೂರಿ ಫ್ರೆಂಚ್ ವಿಜ್ಞಾನ ಅಕಾಡೆಮಿಯಲ್ಲಿ `ರೇಡಿಯಂ' ಸಂಶೋಧನೆಯನ್ನು ಪ್ರಕಟಿಸಿದರು. ಮಿನರಲ್ ಯುರಿನೈಟ್ನ ಒಂದು ವಿಧವಾದ `ಪಿಚ್ಬ್ಲೆಂಡೆ' ಬಲವಾದ `ರೇಡಿಯೊ ಆಕ್ಟಿವ್' ವಸ್ತುವನ್ನು ಹೊಂದಿದೆ ಎಂದು ಅವರು ಹೇಳಿದರು. 1906ರಲ್ಲಿ ಅಪಘಾತವೊಂದರಲ್ಲಿ ಅಸು ನೀಗಿದ ಪಿಯರೆ ಕ್ಯೂರಿ ಅವರ ಗೌರವಾರ್ಥ ಈ ರೇಡಿಯೊ ಆಕ್ಟಿವಿಟಿಗೆ `ಕ್ಯೂರಿ' ಎಂಬುದಾಗಿ ಹೆಸರಿಡಲಾಯಿತು. ಮೇರಿ ಅವರು `ರೇಡಿಯೊ-ಆಕ್ಟಿವಿಟಿ' ಶಬ್ದವನ್ನು ಚಾಲ್ತಿಗೆ ತಂದರು. ಲ್ಯಾಟಿನ್ನಿನ `ರೇಡಿಯಸ್'ನಿಂದ ರೇಡಿಯಂ ಬಂದಿದ್ದು ಅದರ ಅರ್ಥ `ರೇ' ಅಂದರೆ `ಕಿರಣ' ಎಂದು.
1893: ಚೀನಾದ ಮುತ್ಸದ್ದಿ ಮಾವೋ-ತ್ಸೆ-ತುಂಗ್ (1893-1976) ಹುಟ್ಟಿದ ದಿನ. ಚೀನಾದಲ್ಲಿ ಕಮ್ಯೂನಿಸ್ಟ್ ಕ್ರಾಂತಿಯ ನಾಯಕತ್ವ ವಹಿಸಿದ ಇವರು ಅಲ್ಲಿನ ಮೊತ್ತ ಮೊದಲ ಕಮ್ಯೂನಿಸ್ಟ್ ಧುರೀಣ.
1530: ಭಾರತದಲ್ಲಿ ಮೊಘಲ್ ರಾಜವಂಶವನ್ನು ಸ್ಥಾಪಿಸಿದ ಬಾಬರ್ (1483-1530) ಆಗ್ರಾದಲ್ಲಿ ಮೃತನಾದ. ಈತ 1526-30ರ ಅವಧಿಯಲ್ಲಿ ಚಕ್ರವರ್ತಿಯಾಗಿದ್ದ.
No comments:
Post a Comment