ಇಂದಿನ ಇತಿಹಾಸ History Today ಡಿಸೆಂಬರ್ 16
2018:
ರಾಯ್ಪುರ: 5 ದಿನಗಳ ರಹಸ್ಯಕ್ಕೆ
ಕಾಂಗ್ರೆಸ್ ನಾಯಕರು ಕೊನೆಗೂ ಅಂತ್ಯ ಹಾಡಿದ್ದು ಛತ್ತೀಸ್ಘಡದ ನೂತನ ಮುಖ್ಯಮಂತ್ರಿಯನ್ನಾಗಿ ಭೂಪೇಶ್ ಬಘೇಲ್ ಅವರನ್ನು ಆಯ್ಕೆ ಮಾಡಲಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದ ಬಳಿಕ ಸರ್ವಾನುಮತದಿಂದ ಬಘೇಲ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಲಾಯಿತು. ರಾಹುಲ್
ಗಾಂಧಿ ಅವರು ಕಾಂಗ್ರೆಸ್ ನಾಯಕರೊಂದಿಗೆ ಹಲವು ಸುತ್ತುಗಳ ಸಭೆ ಬಳಿಕ ಬಘೇಲ್ ಅವರನ್ನು ಆಯ್ಕೆ ಮಾಡಿದರು. ಮಲ್ಲಿಕಾರ್ಜುನ ಖರ್ಗೆ, ಪಿ.ಎಲ್.ಪೂನಿಯಾ ಅವರು ರಾಹುಲ್ ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದ್ದರು. ಮುಖ್ಯಮಂತ್ರಿ ಹುದ್ದೆಗೆ ಬಘೇಲ್ ಅವರಿಗೆ ಟಿ.ಎಸ್.ಸಿಂಗ್ ದೇವ್, ಚರಣ ದಾಸ್ ಮಹಾಂತ್, ತಾಮ್ರಧ್ವಜ ಸಾಹೂ ಅವರು ಸ್ಪರ್ಧಿಗಳಾಗಿದ್ದರು. 57 ರ ಹರೆಯದ ಬಘೇಲ್ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿ ರಾಜಕೀಯ ಆರಂಭಿಸಿದ್ದರು. ಛತ್ತೀಸ್ಗಢ ವಿಭಜನೆಗೂ ಮುನ್ನ ಮಧ್ಯಪ್ರದೇಶದಲ್ಲಿ
ಶಾಸಕರಾಗಿದ್ದ ಬಘೇಲ್ ಅವರು ದಿಗ್ವಿಜಯ್ ಸಿಂಗ್ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
2004 ಮತ್ತು 2009 ರಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಥಿಸಿ ಸೋಲನ್ನೂ ಅನುಭವಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಪಾಟನ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿದ್ದರು.
2018:
ಗ್ವಾಂಗ್ಜೌ:
"ಬಿಡಬ್ಲ್ಯುಎಫ್ ವಿಶ್ವ ಟೂರ್ ಫೈನಲ್ಸ್' ಬ್ಯಾಡ್ಮಿಂಟನ್ ಕೂಟದಲ್ಲಿ ಪಿ.ವಿ. ಸಿಂಧು ಅವರು ರೋಚಕ
ಪಂದ್ಯದಲ್ಲಿ ಪ್ರಬಲ ಸ್ಪರ್ಧಿ ಜಪಾನ್ನ ನೊಜೊಮಿ ಒಕುಹಾರ ವಿರುದ್ಧ ಜಯ ದಾಖಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡು
ಸಂಭ್ರಮಿಸಿದರು.
ಬಿಡಬ್ಲ್ಯುಎಫ್ ಪ್ರಶಸ್ತಿ ಗೆದ್ದ ಮೊದಲ ಭಾರತಿಯ ಆಟಗಾರ್ತಿ ಎಂಬ ದಾಖಲೆಗೆ ಅವರು ಪಾತ್ರರಾದರು. ಗೆಲುವಿನ ಓಟ ಮುಂದವರಿಸಿದ 23 ರ ಹರೆಯದ ಸಿಂಧು ಭರ್ಜರಿ ಆಟವಾಡಿ 21-19, 21-17 ನೇರ
ಸೆಟ್ಗಳ ಜಯ ತನ್ನದಾಗಿಸಿಕೊಂಡು
ಮತ್ತೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಿದರು. ಸಿಂಧು
ಎರಡನೇ ಬಾರಿಗೆ ಈ ಕೂಟದ ಫೈನಲ್ ಪ್ರವೇಶಿಸಿದ್ದರು. ಕಳೆದ ಆವೃತ್ತಿಯಲ್ಲಿ ರನ್ನರ್ ಆಪ್ ಆಗಿದ್ದರು.
2018: ಕೊಲಂಬೋ: ಯುನೈಟೆಡ್ ನ್ಯಾಶ ನಲ್ ಪಾರ್ಟಿಯ ರಾನಿಲ್ ವಿಕ್ರಮ ಸಿಂಘೆ ಮತ್ತೆ ಶ್ರೀಲಂಕಾ ಪ್ರಧಾನಮಂತ್ರಿ ಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ದ್ವೀಪ ರಾಷ್ಟ್ರದಲ್ಲಿ ಕಳೆದ ೫೧ ದಿನಗಳಿಂದ ನಡೆಯುತ್ತಿರುವ ರಾಜಕೀಯ ಘರ್ಷ ಣೆಗೆ ತೆರೆ ಬಿದ್ದಿತು. ೬೯ ವರ್ಷದ ವಿಕ್ರಮಸಿಂಘೆ ಅವರಿಗೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಪ್ರಮಾಣ ವಚನ ಬೋ ಧಿಸಿದರು. ವಿಕ್ರಮಸಿಂಘೆ ಅವರನ್ನು ಅ.೨೬ರಂದು ವಿವಾದಾತ್ಮಕ ನಡೆ ಯೊಂದರಲ್ಲಿ ಪ್ರಧಾನಿ ಹುದ್ದೆಯಿಂದ ಉಚ್ಚಾಟಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕ ಟ್ಟು ತಲೆದೋರಿತ್ತು. ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವ ರು ಪ್ರಧಾನಿ ವಿಕ್ರಮ ಸಿಂಘೆ ಅವ ರನ್ನು ವಜಾ ಮಾಡಿ ಆ ಸ್ಥಾನಕ್ಕೆ ಮಹಿಂದಾ ರಾಜಪಕ್ಸ ಅವರನ್ನು ನೇಮಕ ಮಾಡಿದ್ದರು.
2018: ನವದೆಹಲಿ: ರಫೇಲ್ ಯುದ್ಧ ವಿಮಾನ ವಹಿವಾಟು ಕುರಿತ ಆರೋಪಗಳ ವಿಚಾರದಲ್ಲಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ ಸುಪ್ರೀಂಕೋರ್ಟ್ ತೀರ್ಪನ್ನು ಹಿಂಪಡೆದುಕೊಂಡು ಸುಳ್ಳುಸಾಕ್ಷಿ ಮತ್ತು ನ್ಯಾಯಾಲಯ ನಿಂದನೆಗಾಗಿ ಇಡೀ ಸರ್ಕಾರವನ್ನೇ ವಿಚಾರಣೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಆಗ್ರಹಿಸಿತು. ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ವರದಿ ಕುರಿತ ವಿವಾದವು ಮರುವಿಚಾರಣೆಗೆ ಅರ್ಹತೆ ಪಡೆದಿದೆ. ಆದ್ದರಿಂದ ಸರ್ಕಾರವನ್ನು ಸುಳ್ಳು ಸಾಕ್ಷಿ ಮತ್ತು ನ್ಯಾಯಾಲಯ ನಿಂದನೆಗಾಗಿ ವಿಚಾರಣೆಗೆ ಗುರಿಪಡಿಸಬೇಕು ಎಂದು ಕಾಂಗ್ರೆಸ್ ಹೇಳಿತು. ‘ಈ ವಿಚಾರದ ಇತ್ಯರ್ಥಕ್ಕೆ ನ್ಯಾಯಾಲಯ ಸೂಕ್ತ ಸ್ಥಳವಲ್ಲ ಎಂಬುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ಅಭಿಪ್ರಾಯ. ಕೇವಲ ಸಾರ್ವಜನಿಕ ವ್ಯವಹಾರಗಳ ಸಮಿತಿ (ಪಿಎಸಿ) ಮಾತ್ರವೇ ಈ ಬಗ್ಗೆ ನಿರ್ಧಾರ ಕೈಗೊಳ್ಲಬಹುದು. ಆದರೂ, ಕೆಲವು ಗಂಭಿರ ವಿಚಾರಗಳು ಬೆಳಕಿಗೆ ಬಂದಿವೆ. ಸರ್ಕಾರವು ತಪ್ಪು ಮಾಹಿತಿಯನ್ನು ನೀಡಿ, ನ್ಯಾಯಾಲಯಗಳ ದಾರಿ ತಪ್ಪಿಸಿದೆ. ಇದು ತೀರ್ಪಿನ ಮೇಲೆ ಪರಿಣಾಮ ಬೀರಿದೆ. ಸಿಎಜಿ ವರದಿ ಇನ್ನೂ ಬಂದೇ ಇಲ್ಲ. ಅದನ್ನು ಸಂಸತ್ತಿಗೂ ಸಲ್ಲಿಸಲಾಗಿಲ್ಲ. ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯು ಅವರು ನ್ಯಾಯಾಲಯ ನಿಂದನೆ ಮಾಡಿದ್ದಾರೆ ಎಂಬುದನ್ನು ತೋರಿಸಿದೆ. ಅವರು ಇದನ್ನು ನ್ಯಾಯಾಲಯದ ತಪ್ಪು ಎಂದು ಹೇಳುತ್ತಿದ್ದಾರೆ’ ಎಂದು ಕಾಂಗ್ರೆಸ್ ನಾಯಕ ಆನಂದ ಶರ್ಮ ಅವರು ಇಲ್ಲಿನ ಪಕ್ಷದ ಕಚೇರಿಯಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ಪ್ರಧಾನಿಯವರು ಏನೂ ತಪ್ಪು ಮಾಡಿಲ್ಲವಾದರೆ, ಜಂಟಿ ಸಂಸದೀಯ ಸಮಿತಿಯನ್ನು ಎದುರಿಸಲು ಅವರಿಗೆ ಅಂಜಿಕೆ ಏಕೆ? ಇಡೀ ಬಿಜೆಪಿಯು ಕುಂಭಮೇಳಕ್ಕೆ ಪ್ರಧಾನಿಯೊಂದಿಗೆ ಹೋಗಿ ತಮ್ಮ ತಪ್ಪುಗಳನ್ನು ತೊಳೆದುಕೊಳ್ಳಬೇಕಾಗಿದೆ’ ಎಂದು ಅವರು ನುಡಿದರು. ರಫೇಲ್ ಕುರಿತ ತನ್ನ ತೀರ್ಪನ್ನು ಹಿಂತೆಗೆದುಕೊಳ್ಳಬೇಕು ಮತ್ತು ಸುಳ್ಳು ಸಾಕ್ಷಿ ಹಾಗೂ ನ್ಯಾಯಾಲಯ ನಿಂದನೆಗಾಗಿ ಸರ್ಕಾರಕ್ಕೆ ನೋಟಿಸ್ಗಳನ್ನು ಜಾರಿ ಮಾಡಬೇಕು ಎಂದು ನಾವು ಸುಪ್ರೀಂಕೋರ್ಟನ್ನು ಆಗ್ರಹಿಸುತ್ತೇವೆ.
ಸುಪ್ರೀಂಕೋರ್ಟಿಗೆ ವ್ಯಾಕರಣ ಅರ್ಥವಾಗುವುದಿಲ್ಲ ಎಂದು ಹೇಳಲು ಸರ್ಕಾರ ಯತ್ನಿಸುತ್ತಿದೆಯೇ? ನಮ್ಮ ನ್ಯಾಯಮೂರ್ತಿಗಳಿಗೆ ಇಂಗ್ಲಿಷ್ ಭಾಷೆ ಅರ್ಥವಾಗುವುದಿಲ್ಲವೇ?
ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಸರ್ಕಾರವು ತೀರ್ಪಿನಲ್ಲಿ ಸಿಎಜಿ ಮತ್ತು ಪಿಎಸಿ ಕುರಿತ ಉಲ್ಲೇಖವನ್ನು ಸರಿಪಡಿಸುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಸುಪ್ರೀಂಕೋರ್ಟಿನ ಆದೇಶದಲ್ಲಿ ಕಂಪ್ಟ್ರೋಲರ್ ಅಂಡ್ ಅಡಿಟರ್ ಜನರಲ್ (ಸಿಎಜಿ) ವರದಿ ಮತ್ತು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕುರಿತು ಮಾಡಲಾಗಿರುವ ಉಲ್ಲೇಖವು ತಾನು ಸಲ್ಲಿಸಿದ ಟಿಪ್ಪಣಿಯ ತಪ್ಪು ಗ್ರಹಿಕೆಯಾಗಿದ್ದು,
ಪರಿಣಾಮವಾಗಿ ಸಾರ್ವಜನಿಕ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರವು ತನ್ನ ಅರ್ಜಿಯಲ್ಲಿ ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾವು ರಫೇಲ್ ಯುದ್ಧ ವಿಮಾನಗಳಿಗೆ ಸಂಬಂಧಿಸಿದ ಸಿಎಜಿ ವರದಿಯನ್ನು ನೋಡಿಯೇ ಇಲ್ಲ ಎಂದು ಹೇಳಿದರು. ರಫೇಲ್ ವಹಿವಾಟಿನ ಬೆಲೆ ವಿವರಗಳನ್ನು ಸಿಎಜಿ ಜೊತೆಗೆ ಹಂಚಿಕೊಳ್ಳಲಾಗಿದ್ದು, ಅದು ತನ್ನ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಜೊತೆಗೆ ಹಂಚಿಕೊಂಡಿದೆ ಎಂದು ಕೋರ್ಟ್ ತನ್ನ ಶುಕ್ರವಾರದ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ತೀರ್ಪಿನ ೨೫ನೇ ಪ್ಯಾರಾದ ಎರಡು ವಾಕ್ಯಗಳು ತಾನು ಮೊಹರಾದ ಲಕೋಟೆಯಲ್ಲಿ ನೀಡಲಾಗಿರುವ ಬೆಲೆ ವಿವರಗಳ ಜೊತೆಗೆ ಸಲ್ಲಿಸಿದ್ದ ಟಪ್ಪಣಿಯನ್ನು ಆಧರಿಸಿದಂತೆ ಕಾಣುತ್ತದೆ. ಆದರೆ ನ್ಯಾಯಾಲಯವು ಬಳಸಿದ ಪದಗಳು ಬೇರೆಯೇ ಅರ್ಥವನ್ನು ನೀಡಿವೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ. ಸಿಎಜಿ ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು (ಪಿಎಸಿ) ಪರಿಶೀಲಿಸಿದೆ ಅಥವಾ ಪರಿಷ್ಕೃತ ಭಾಗವನ್ನು ಸಂಸತ್ತಿನ ಮುಂದೆ ಮಂಡಿಸಲಾಗಿದೆ ಎಂಬುದಾಗಿ ತಾನು ಹೇಳಿಲ್ಲ ಎಂದು ಕೇಂದ್ರವು ನ್ಯಾಯಾಲಯಕ್ಕೆ ಸ್ಪಷ್ಟ ಪಡಿಸಿತು. ಸರ್ಕಾರವು ’ದರ ವಿವರಗಳನ್ನು ಸಿಜಿಎ ಜೊತೆಗೆ ಈಗಾಗಲೇ ಹಂಚಿಕೊಂಡಿದೆ’ ಎಂಬುದಾಗಿ ಟಿಪ್ಪಣಿ ಹೇಳಿದೆ. ಇದನ್ನು ಭೂತಕಾಲದಲ್ಲಿ ಬರೆಯಲಾಗಿದೆ ಮತ್ತು ಇದು ’ವಸ್ತುಶಃ ಸಮರ್ಪಕವಾದುದು’. ಏನಿದ್ದರೂ, ’ಸಿಎಜಿ ವರದಿಯನ್ನು ಪಿಎಸಿ ಪರಿಶೀಲಿಸುತ್ತದೆ’ (ರಿಪೋರ್ಟ್ ಆಫ್ ದ ಸಿಎಜಿ ’ಈಸ್’ ಎಕ್ಸಾಮಿನ್ಡ್ ಬೈ ಪಿಎಸಿ) ಎಂಬುದಾಗಿ ಸಾಮಾನ್ಯವಾಗಿ ಬರೆಯುವ ಶೈಲಿಯಲ್ಲಿ ಟಿಪ್ಪಣಿಯಲ್ಲಿ ವಿವರಿಸಲಾಗಿದೆ, ಆದರೆ ತೀರ್ಪು ಟಿಪ್ಪಣಿಯಲ್ಲಿದ್ದ ಇಂಗ್ಲಿಷಿನ ’ಈಸ್’ ಪದದ ಬದಲಿಗೆ ’ಹ್ಯಾಸ್ ಬೀನ್’ ಪದವನ್ನು ಬಳಸಿದೆ ಎಂದು ಕೇಂದ್ರದ ಅರ್ಜಿ ತಿಳಿಸಿತು. ಇದೇ ರೀತಿ ’ವರದಿಯ ಕೇವಲ ಪರಿಷ್ಕೃತ ಆವೃತ್ತಿಯನ್ನು ಸಂಸತ್ತಿನ ಮುಂದೆ ಮಂಡಿಸಲಾಗುತ್ತದೆ’ (ಓನ್ಲಿ ಅ ರಿಡಾಕ್ಟೆಡ್ ವರ್ಷನ್ ಆಫ್ ದಿ ರಿಪೋಟ್ ’ಇಸ್’ ಪ್ಲೆಸ್ಡ್ ಬಿಫೋರ್ ಪಾರ್ಲಿಮೆಂಟ್) ಎಂಬುದಾಗಿ ಟಿಪ್ಪಣಿಯಲ್ಲಿ ಹೇಳಲಾಗಿದೆ. ಇದನ್ನು ತೀರ್ಪಿನಲ್ಲಿ ಓನ್ಲಿ ಡಿಡಾಕ್ಟೆಡ್ ಪೋರ್ಷನ್ ಆಫ್ ದಿ ರಿಪೋರ್ಟ್ ’ವಾಸ್’ ಪ್ಲೇಸ್ಡ್ ಬಿಫೋರ್ ಪಾರ್ಲಿಮೆಂಟ್, ಆಂಡ್ ’ವಾಸ್’ ಇನ್
ಪಬ್ಲಿಕ್ ಡೊಮೇನ್’ (ವರದಿಯ ಕೇವಲ ಪರಿಷ್ಕೃತ ಭಾಗವನ್ನು ಸಂಸತ್ತಿನ ಮುಂದೆ ಮತ್ತು ಅಂತರ್ಜಾಲದಲ್ಲಿ ಮಂಡಿಸಲಾಗಿದೆ) ಎಂದು ಉಲ್ಲೇಖಿಸಲಾಗಿದೆ
ಎಂದು ಕೇಂದ್ರವು ತನ್ನ ಅರ್ಜಿಯಲ್ಲಿ ತಿಳಿಸಿದ್ದು, ಸುಪ್ರೀಂಕೋರ್ಟಿನ
ಈ ತೀರ್ಪಿನಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಬೇಕು ಎಂದು ಕೋರಿತು.
2018: ಪ್ರಯಾಗರಾಜ್: ತನ್ನ ಭ್ರಷ್ಟ ಮತ್ತು ಸರ್ವಾಧಿಕಾರೀ ಮಾರ್ಗಗಳಿಂದ ಕಾಂಗ್ರೆಸ್ ಪಕ್ಷವು ನ್ಯಾಯಾಂಗವನ್ನೂ ಉಳಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಗರಾಜ್ನಲ್ಲಿ (ಹಿಂದಿನ ಅಲಹಾಬಾದ್) ಗಂಗಾನದಿ ದಂಡೆಯಲ್ಲಿ ಸೇರಿದ್ದ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಾ ವಾಗ್ದಾಳಿ ನಡೆಸಿದರು. ಇದಕ್ಕೆ ಮುನ್ನ ಪ್ರಧಾನಿಯವರು ಉದ್ಯೋಗಗಳಿಂದ ಹಿಡಿದು ರೈತರ ದುಃಸ್ಥಿತಿ, ಸುಪ್ರೀಂಕೋರ್ಟ್ ಆದೇಶದೊಂದಿಗೆ ಸರ್ಕಾರಕ್ಕೆ ಕ್ಲೀನ್ ಚಿಟ್ ಲಭಿಸಿದ ರಫೇಲ್ ವಹಿವಾಟಿನವರೆಗೆ ವಿವಿಧ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ಸಿನ ಮೇಲೆ ಪ್ರಹಾರ ಎಸಗಿದರು. ಅಲಹಾಬಾದ್ ಹೈಕೋರ್ಟನ್ನು ಉಲ್ಲೇಖಿಸಿದ ಮೋದಿ ’ಪ್ರಯಾಗ ರಾಜ್ನ್ನು ’ನ್ಯಾಯದ ದೇಗುಲ’ ಎಂಬುದಾಗಿ ಕರೆಯಬಹುದ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗವು ಹೆಚ್ಚಿನ ಪ್ರಮಾಣದಲ್ಲಿ ರಾಜಕೀಯ ಒತ್ತಡಗಳ ಬಲಿಪಶುವಾಗುತ್ತಿದೆ
ಎಂದು ಹೇಳಿದರು. ‘ಸಂಸ್ಥೆಯು ತಾನು ಬಯಸಿದಂತೆ ಕಾರ್ಯ ಎಸಗಲು ವಿಫಲವಾದಾಗ ನ್ಯಾಯಾಂಗವೂ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಹಾನಿ ಉಂಟು ಮಾಡಿದ ಪಕ್ಷವೊಂದಿದೆ’ ಎಂದು ಕಾಂಗ್ರೆಸ್ ಪಕ್ಷದ ಹೆಸರನ್ನು ಉಲ್ಲೇಖಿಸದೆಯೇ ಮೋದಿ ಟೀಕಿಸಿದರು. ಪ್ರಯಾಗರಾಜ್ ಜನರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದ ಪ್ರಧಾನಿ ೧೯೭೫ರಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರು
ಹೇರಿದ ತುರ್ತುಪರಿಸ್ಥಿತಿಯ
ಉದಾಹರಣೆಯನ್ನು ನೀಡಿದರು.
ಈ ಪಕ್ಷದ ಉನ್ನತ ನಾಯಕ (ಕಿ) ಜನರನ್ನು ಹೇಗೆ ಅವಮಾನಿಸಿದರು ಮತ್ತು ತುರ್ತು ಪರಿಸ್ಥಿತಿಯನ್ನು ಹೇರಿದರು ಎಂಬುದನ್ನು ರಾಜ್ಯದ ಜನತೆ ಅರ್ಥ ನೆನಪು ಮಾಡಿಕೊಳ್ಳಬೇಕು.
ರಾಜಕೀಯ ಮಹತ್ವದ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸುವ ನ್ಯಾಯಾಂಗದ ಹಕ್ಕುಗಳನ್ನೇ ಕಸಿಯುವ ಯತ್ನಗಳನ್ನು ಮಾಡಲಾಯಿತು. ಅಧಿಕಾರದಲ್ಲಿ ಉಳಿಯಲು ಈ ಪಕ್ಷ ಎಲ್ಲ ಮಿತಿಗಳನ್ನೂ ದಾಟಿತು ಎಂದು ಅವರು ವಿವರಿಸಿದರು. ಕಾಂಗ್ರೆಸ್ ಮೇಲೆ ಪ್ರಹಾರ ಮುಂದುವರೆಸಿದ ಪ್ರಧಾನಿ, ’ಪಕ್ಷದ ಆಶಯಗಳಿಗೆ ಅನುಗುಣವಾಗಿ ವರ್ತಿಸುವ ವ್ಯಕ್ತಿಯನ್ನು ಮಾತ್ರವೇ ಮುಖ್ಯ ನ್ಯಾಯಮೂರ್ತಿಯಾಗಿ
ನೇಮಿಸಲಾಗುವುದು’ ಎಂದು ಪ್ರತಿಪಾದಿಸಿದ್ದ ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಒತ್ತಿ ಹೇಳಿದರು. ಭಾರತದ ಮುಖ್ಯ ನ್ಯಾಯಮೂರ್ತಿಯ ವಿರುದ್ಧ ದೋಷಾರೋಪ ನಿರ್ಣಯ ಮಂಡನೆಗೂ ಕಾಂಗ್ರೆಸ್ ಯತ್ನಿಸಿತು ಎಂದು ಜನತೆಗೆ ನೆನಪಿಸಿದ ಮೋದಿ, ’ನ್ಯಾಯಾಂಗವನ್ನು ಗೌಣಗೊಳಿಸಲು ವಿರೋಧ ಎಸಗಿದ್ದ ಇನ್ನೊಂದು ಯತ್ನ ಇದು’ ಎಂದು
ನುಡಿದರು. ಕಾಂಗ್ರೆಸ್ ಪಕ್ಷವು ತನ್ನನ್ನು ಪ್ರಜಾಪ್ರಭುತ್ವ,
ನ್ಯಾಯಾಂಗ ಮತ್ತು ಜನತೆಗಿಂತ ಕೂಡಾ ತಾನು ಮೇಲೆ ಎಂದು ಪರಿಗಣಿಸುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ತನ್ನ ಅಪೇಕ್ಷೆಯಂತೆ ಕೆಲಸ ನಡೆಯಲು ತೋಳ್ಬಲವನ್ನು ಮಾತ್ರವೇ ಅಲ್ಲ, ಮೋಸದ ಮಾರ್ಗಗಳನ್ನೂ ಕಾಂಗ್ರೆಸ್ ಅನುಸರಿಸುತ್ತದೆ ಎಂದು ಅವರು ಆಪಾದಿಸಿದರು. ‘ಈ ಪಕ್ಷವು (ಕಾಂಗ್ರೆಸ್) ತನಗೆ ಅನುಕೂಲಕರವಾಗಿ ಕಾರ್ಯ ನಿರ್ವಹಿಸದ ಪ್ರತಿಯೊಂದು ಸಂಸ್ಥೆಯನ್ನು ಹಾಳುಗೆಡವಿತು’ ಎಂದು
ಪ್ರಧಾನಿ ದೂರಿದರು. ‘ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರದ ಪ್ರಗತಿ, ಪರಂಪರೆ, ಸಂಸ್ಕೃತಿಯಲ್ಲಿ ಆಸಕ್ತಿ ಇಲ್ಲ’ ಎಂದು ನುಡಿದ ಮೋದಿ, ತಮ್ಮ ಪಕ್ಷವು ಇವುಗಳನ್ನು ಆತ್ಯಂತ ಆದ್ಯತೆಯ ವಿಚಾರಗಳಾಗಿ ಯಾವಾಗಲೂ ಪರಿಗಣಿಸುತ್ತದೆ ಎಂದು ಹೇಳಿದರು. ಇದಕ್ಕೆ ಮುನ್ನ ಸೋನಿಯಾ ಗಾಂಧಿ ಅವರ ರಾಯ್ ಬರೇಲಿ ಕ್ಷೇತ್ರದಲ್ಲಿ ಮಾತನಾಡಿದ ಮೋದಿ, ’ಕಾಂಗ್ರೆಸ್ ಪಕ್ಷವು ಪ್ರಕ್ಷುಬ್ಧಗೊಂಡಿದೆ ಮತ್ತು ಸುಳ್ಳುಗಳನ್ನು ಹೇಳುತ್ತಾ ತಿರುಗಾಡುತ್ತಿದೆ, ಏಕೆಂದರೆ ಎನ್ಡಿಎ ಸರ್ಕಾರದ ರಕ್ಷಣಾ ವಹಿವಾಟುಗಳಲ್ಲಿ ’ಕ್ವಟ್ರೋಚಿ ಮಾವ’ ಅಥವಾ
ಕ್ರಿಸ್ಟಿಯನ್ ಮೈಕೆಲ್ ಇಲ್ಲ’ ಎಂದು ಹೇಳಿದರು. ಹೀಗಾಗಿ ವಿರೋಧ ಪಕ್ಷವು ನ್ಯಾಯಾಂಗದ ವಿರುದ್ಧ ಅಪನಂಬಿಕೆ ಮೂಡಿಸಲು ಯತ್ನಿಸುತ್ತಿದೆ ಎಂದು ಪ್ರಧಾನಿ ಆಪಾದಿಸಿದರು. ಕೃಷಿ
ಕ್ಷೇತ್ರ ಹಾಗೂ ರೈತರ ಹಾಲಿ ದುಃಸ್ಥಿತಿಗೆ ಕಾಂಗ್ರೆಸ್ ಪಕ್ಷದ ನೀತಿಯೇ ಕಾರಣ ಎಂದು ನುಡಿದ ಪ್ರಧಾನಿ, ೧೦ ವರ್ಷ ಕಾಲ ಅಧಿಕಾರದಲ್ಲಿದ್ದರೂ
ಯುಪಿಎ ಸರ್ಕಾರ ಸ್ವಾಮಿನಾಥನ್ ಸಮಿತಿ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲಿಲ್ಲ ಎಂದು ಹೇಳಿದರು.
2018: ಚೆನ್ನೈ: ತಮಿಳುನಾಡಿನ ಚೆನ್ನೈಯಲ್ಲಿ ಡಿಎಂಕೆ ದಿವಂಗತ ಮುಖಂಡ ಎಂ. ಕರುಣಾನಿಧಿ ಅವರ ಪ್ರತಿಮೆ ಅನಾವರಣ ಸಮಾರಂಭದ ವೇಳೆ ಮತ್ತೊಮ್ಮೆ ವ್ಯಕ್ತವಾದ ವಿಪಕ್ಷ ನಾಯಕರ ಬಲ ಪ್ರದರ್ಶನದಲ್ಲಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಹೆಸರನ್ನು ಪ್ರಸ್ತಾಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಐದು ವರ್ಷಗಳ ಆಡಳಿತದಲ್ಲಿ ರಾಷ್ಟ್ರವು ೧೫ ವರ್ಷಗಳಷ್ಟು ಹಿಂದಕ್ಕೆ ಹೋಗಿದೆ. ನಾವು ಅವರಿಗೆ ಇನ್ನೊಂದು ಅವಕಾಶ ನೀಡಿದರೆ, ಖಂಡಿತವಾಗಿ ರಾಷ್ಟ್ರವು ೫೦ ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ. ಪ್ರಧಾನಿ ಮೋದಿಯವರು ದೊರೆಯಂತೆ ವರ್ತಿಸುತ್ತಿದ್ದಾರೆ.
ಹೀಗಾಗಿಯೇ ಪ್ರಜಾಪ್ರಭುತ್ವ ಮತ್ತು ರಾಷ್ಟ್ರದ ರಕ್ಷಣೆ ಸಲುವಾಗಿ ನಾವಿಲ್ಲಿ ಒಟ್ಟಾಗಿದ್ದೇವೆ ಎಂದು ಸ್ಟಾಲಿನ್ ನುಡಿದರು. ‘ತಮಿಳುನಾಡಿನ ಮಣ್ಣಿನಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನಾನು ರಾಹುಲ್ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದೇನೆ. ದೆಹಲಿಯಲ್ಲಿ ನೂತನ ಪ್ರಧಾನಿಯನ್ನು ಪ್ರತಿಷ್ಠಾಪಿಸುವುದಾಗಿ ನಾನು ಸೂಚಿಸುತ್ತೇನೆ. ತಮಿಳುನಾಡಿನಿಂದ ರಾಹುಲ್ ಗಾಂಧಿ ಅವರ ಅಭ್ಯರ್ಥನವನ್ನು ನಾನು ಸೂಚಿಸುತ್ತಿದ್ದೇನೆ.
ಅವರಿಗೆ ಫ್ಯಾಸಿಸ್ಟ್ ಮೋದಿ ಸರ್ಕಾರವನ್ನು ಪರಾಭವಗೊಳಿಸುವ ಸಾಮರ್ಥ್ಯ ಇದೆ’ ಎಂದು ಸ್ಟಾಲಿನ್ ಹೇಳಿದರು. ಸಮಾರಂಭದ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ’ಜನರು ಬಿಜೆಪಿ ಸರ್ಕಾರವನ್ನು ಆಯ್ಕೆ ಮಾಡಿದರು. ಆದರೆ ಅದು ಬಳಿಕ ಎಲ್ಲ ಸಂಸ್ಥೆಗಳನ್ನೂ ನಾಶಪಡಿಸಿತು. ಸಂಯುಕ್ತ ವ್ಯವಸ್ಥೆ (ಫೆಡರಲಿಸಂ) ನಾಶವಾಯಿತು. ಅವರು ಸಿಬಿಐಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದು ಭ್ರಷ್ಟಾಚಾರವನ್ನು
ನಿಯಂತ್ರಿಸುವ ಮುಂಚೂಣಿಯ ಸಂಸ್ಥೆ. ಈಗ ಅದೇ ಸ್ವತಃ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರು ಸಿಬಿಐ ನಿರ್ದೇಶಕರನ್ನು ಕಿತ್ತು ಹಾಕಿದ್ದಾರೆ. ಆರ್ ಬಿಐ ಗವರ್ನರ್ ರಾಜೀನಾಮೆ ನೀಡಿದ್ದಾರೆ’ ಎಂದು
ಅವರು ನುಡಿದರು. ‘ಜಾರಿ
ನಿರ್ದೇಶನಾಲಯ ಮತ್ತು ಆದಾಯ ತೆರಿಗೆ (ಐಟಿ) ಇಲಾಖೆಗಳನ್ನು ಕೂಡಾ ರಾಜಕಾರಣಿಗಳನ್ನು
ಬಲಿಪಶುಗಳನ್ನಾಗಿ ಮಾಡಲು ಬಳಸಲಾಗುತ್ತಿದೆ. ನಿನ್ನೆ ನೀವು ರಫೇಲ್ ಪ್ರಕರಣವನ್ನು ಸುಪ್ರೀಂಕೋರ್ಟಿನಲ್ಲಿ ನೋಡಿದ್ದೀರಿ. ಸುಪ್ರೀಂಕೋರ್ಟಿಗೆ
ಕೂಡಾ ಈ ಸರ್ಕಾರ ತಪ್ಪು ಪ್ರಮಾಣಪತ್ರವನ್ನು ಸಲ್ಲಿಸಿದೆ. ಗವರ್ನರುಗಳು ಗೋವಾ, ನಾಗಾಲ್ಯಾಂಡ್, ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ’ ಎಂದು ನಾಯ್ಡು ಹೇಳಿದರು. ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಹುಲ್ ಗಾಂಧಿ ಅವರು ’ಡಿಎಂಕೆ ಪಿತಾಮಹ ರಾಷ್ಟ್ರದ ಸಂಸ್ಥೆಗಳನ್ನು ರಕ್ಷಿಸಿದ್ದರೂ, ಇಂದು ನಾವು ರಾಷ್ಟ್ರ ಮತ್ತು ತಮಿಳುನಾಡಿನ ದನಿ, ಸಂಸ್ಕೃತಿ, ಸಂಸ್ಥೆಗಳ ಮೇಲೆ ದಾಳಿ ನಡೆಸುವ ಸರ್ಕಾರವನ್ನು ಹೊಂದಿದ್ದೇವೆ’ ಎಂದು
ಹೇಳಿದರು. ‘ಕರುಣಾನಿಧಿ ಜಿ ಅವರ ಸ್ಮರಣೆಯಲ್ಲಿ ಭಾರತದ ಎಲ್ಲ ದನಿಗಳೂ ಒಟ್ಟಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸಲಿವೆ’ ಎಂದು ಅವರು ನುಡಿದರು. ‘ನಾವು
ಇಂಡಿಯಾದ ಕಲ್ಪನೆ ನಾಶವಾಗಲು ಬಿಡುವುದಿಲ್ಲ, ನಮ್ಮ ಸಂಸ್ಥೆಗಳಾದ ಸುಪ್ರೀಂಕೋರ್ಟ್, ಆರ್ಬಿಐ, ಚುನಾವಣಾ ಆಯೋಗ ನಾಶವಾಗಲು ಬಿಡುವುದಿಲ್ಲ. ನಾವು ಒಟ್ಟಾಗಿ ಸಾಗಿ ಇದನ್ನು (ಬಿಜೆಪಿ ಪರಾಭವ) ಮಾಡುತ್ತೇವೆ’ ಎಂದು
ರಾಹುಲ್ ಗಾಂಧಿ ಹೇಳಿದರು. ಕರುಣಾನಿಧಿ ಪ್ರತಿಮೆ ಅನಾವರಣ: ಇದಕ್ಕೆ ಮುನ್ನ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚೆನ್ನೈಯ ಡಿಎಂಕೆ ಕೇಂದ್ರ ಕಚೇರಿಯಲ್ಲಿ ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ದಿವಂಗತ ನಾಯಕ ಎಂ. ಕರುಣಾನಿಧಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಈ ಸಮಾರಂಭವು ೨೦೧೯ರ ಲೋಕಸಭಾ ಚುನಾವಣೆಗಳಿಗಿಂತ ಮುಂಚೆ ವಿರೋಧ ಪಕ್ಷಗಳ ಬಲ ಪ್ರದರ್ಶನದ ಇನ್ನೊಂದು ಸಂದರ್ಭವಾಯಿತು. ಪುತ್ರ ಹಾಗೂ ಕಾಂಗೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆಗೆ ಆಗಮಿಸಿದ ಸೋನಿಯಾ ಗಾಂಧಿ ಅವರು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಪುದುಚೆರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಮತ್ತಿತರರ ಸಮ್ಮುಖದಲ್ಲಿ ಚೆನ್ನೈಯ ಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸಿದರು. ರಾಜಕಾರಣಿಯಾಗಿ ಪರಿವರ್ತನೆಗೊಂಡ ನಟ ರಜನಿಕಾಂತ್, ಕಾಂಗ್ರೆಸ್ ನಾಯಕ ಎ.ಕೆ. ಆಂಟನಿ, ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹ, ಅಣ್ಣಾ ಅರಿವಲಯಂ, ಡಿಎಂಕೆ ಮತ್ತು ಇತರ ಪಕ್ಷಗಳ ವಿವಿಧ ನಾಯಕರು, ಚಿತ್ರನಟರು, ಉದ್ಯಮಿಗಳು ಮತ್ತಿತರರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷವು ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಇತ್ತೀಚೆಗೆ ನವೆಂಬರ್- ಡಿಸೆಂಬರ್ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಜಯಭೇರಿ ಭಾರಿಸಿದ ಬಳಿಕ ವಿಪಕ್ಷ ನಾಯಕರು ಒಟ್ಟಾಗಿ ಕಾಣಿಸಿಕೊಂಡದ್ದು
ಇದೇ ಪ್ರಥಮ. ಪ್ರತಿಮೆ ಅನಾವರಣದ ಬಳಿಕ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರು ಮರೀನಾ ಬೀಚ್ನಲ್ಲಿ ಕರುಣಾನಿಧಿ ಸ್ಮಾರಕಕ್ಕೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ಡಿಸೆಂಬರ್ ೧೦ರಂದು ದೆಹಲಿಗೆ ವಿಪಕ್ಷ ನಾಯಕರ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ತೆರಳಿದ್ದಾಗ ಸ್ಟಾಲಿನ್ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳಾದ
ಕರುಣಾನಿಧಿ ಮತ್ತು ಸಿಎನ್ ಅಣ್ಣಾದುರೈ ಅವರ ಪ್ರತಿಮೆಗಳ ಅನಾವರಣ ಸಮಾರಂಭಕ್ಕೆ ಆಹ್ವಾನಿಸಿದ್ದರು.
2018: ಪಣಜಿ: ಮೇದೋಜ್ಜೀರಕ ಗ್ರಂಥಿ ಸಮಸ್ಯೆಗಾಗಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಮೊತ್ತ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಮಾಂಡೋವಿ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಎರಡು ಸೇತುವೆಗಳನ್ನು ಪಣಜಿಯಲ್ಲಿ ಪರಿಶೀಲಿಸಿದರು. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತಹ ಅಕ್ಟೋಬರ್ ೧೪ರಂದು ಮನೆಗೆ ಮರಳಿದ್ದ ಮುಖ್ಯಮಂತ್ರಿ ಆ ಬಳಿಕ ಮನೆಯಲ್ಲೇ ಚಿಕಿತ್ಸೆ ಮುಂದುವರೆಸಿದ್ದರು. ಪಣಜಿಯಲ್ಲಿ ಸೇತುವೆಗಳ ಪರಿಶೀಲನೆ ಬಳಿಕ ಇಲ್ಲಿಂದ ಸುಮಾರು ೧೫ ಕಿಮೀ ದೂರದ ಅಗಸ್ಸಾಯಿಮ್ ಗಾಮದ ಸಮೀಪ ಇರುವ ಜುವಾರಿ ನದಿ ಮೇಲಿನ ಸೇತುವೆ ಕಾಮಗಾರಿಯನ್ನೂ ಮುಖ್ಯಮಂತ್ರಿ ಪರಿಶೀಲಿಸಿದರು. ದೆಹಲಿಯಿಂದ ವಾಪಸಾದ ಬಳಿಕ ಅಕ್ಟೋಬರ್ ೧೪ರಿಂದ ತಮ್ಮ ಖಾಸಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ರಿರುವ ಪರಿಕ್ಕರ್ ಅವರು ತಮ್ಮ ಮನೆಯಿಂದ ಹೊರಕ್ಕೆ ಬಂದದ್ದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದರು. ಮುಖ್ಯಮಂತ್ರಿಯವರು ಪೊರ್ವೊರಿಮ್ನಿಂದ ಮರ್ಸೆಸ್ಗೆ ಸೇತುವೆಯ ಪರಿಶೀಲನೆ ನಡೆಸುತ್ತಾ ಪಯಣಿಸಿದರು. ಮಾಂಡೋವಿ ನದಿ ಮೇಲೆ ನಿರ್ಮಿಸುತ್ತಿರುವ ಮೂರನೇ ಸೇತುವೆ ಇದು. ಸೇತುವೆ ಮುಂದಿನ ವರ್ಷ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಇದು ಪಣಜಿಯನ್ನು ಉತ್ತರ ಗೋವಾದ ಜೊತೆಗೆ ಸಂಪರ್ಕಿಸಲಿದೆ. ಕಾಮಗಾರಿ ಸ್ಥಳದಲ್ಲಿ ಕಾರಿನಿಂದ ಹೊರಕ್ಕೆ ಬಂದ ಪರಿಕ್ಕರ್ ಗೋವಾ ಮೂಲ ಸವಲತ್ತು ಅಭಿವೃದ್ಧಿ ನಿಗಮ ಮತ್ತು ಗುತ್ತಿಗೆದಾರ ಕಂಪೆನಿ ಲಾರ್ಸೆನ್ ಅಂಡ್ ಟೂಬ್ರೋ ಅಧಿಕಾರಿಗಳ ಜೊತೆಗೆ ಕಾಮಗಾರಿಯ ಪ್ರಗತಿ ಬಗ್ಗೆ ಚರ್ಚಿಸಿದರು ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಯೊಬ್ಬರು
ಹೇಳಿದರು. ಅಸ್ವಸ್ಥತೆ ಕಾರಣ ಕಚೇರಿಗೆ ಮುಖ್ಯಮಂತ್ರಿಯವರು ಗೈರುಹಾಜರಾಗಿರುವುದರಿಂದ ಕರಾವಳಿ ರಾಜ್ಯದ ಆಡಳಿತ ಸ್ಥಗಿತಗೊಂಡಿದೆ ಎಂದು ವಿರೋಧಿ ಕಾಂಗ್ರೆಸ್ ನಿರಂತರವಾಗಿ ಆಪಾದಿಸುತ್ತಿತ್ತು.
2017: ನವದೆಹಲಿ: ೪೭ರ ಹರೆಯದ ರಾಹುಲ್ ಗಾಂಧಿ ತಮ್ಮ ತಾಯಿ, ಹೊರಹೋಗುತ್ತಿರುವ
ಅಧ್ಯಕ್ಷೆ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ಆಕೆಯ ಪತಿ ರಾಬರ್ಟ್ ವಾದ್ರಾ, ಮಾಜಿ ಪ್ರಧಾನಿ ಮನಮೊಹನ್ ಸಿಂಗ್ ಮತ್ತು ಪಕ್ಷದ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಕಾರ್ಯಕರ್ತರ ಹರ್ಷೋದ್ಘಾರಗಳ ಮಧ್ಯೆ ಪಕ್ಷದ ಸಾರಥ್ಯವನ್ನು ವಹಿಸಿಕೊಂಡರು. ಕೇಂದ್ರೀಯ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್ ಅವರು ಆಯ್ಕೆಯ ಸರ್ಟಿಫಿಕೇಟ್ ನೀಡುವುದರೊಂದಿಗೆ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಏರಿದ ನೆಹರೂ- ಗಾಂಧಿ ಕುಟುಂಬದ ಐದನೆಯ ವ್ಯಕ್ತಿಯಾದರು. ಕಾಂಗ್ರೆಸ್ ಅಧ್ಯಕ್ಷರಾಗಿ ತಾಯಿ ಹಾಗೂ ಪಕ್ಷಾಧ್ಯಕ್ಷರಾದ
ಸೋನಿಯಾ ಗಾಂಧಿ ಅವರಿಂದ ಈದಿನ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಬಿಜೆಪಿ ವಿರುದ್ಧ ತೀವ್ರ ದಾಳಿ ನಡೆಸಿ ಪಕ್ಷವು ದ್ವೇಷವನ್ನು ಹರಡುತ್ತಿದೆ ಎಂದು ಆಪಾದಿಸಿದರು. ಜೊತೆಗೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಹಿಂದಿನ ಮಧ್ಯಯುಗಕ್ಕೆ ಒಯ್ಯುತ್ತಿದ್ದಾರೆ
ಎಂದೂ ದೂರಿದರು. ‘ಕಾಂಗ್ರೆಸ್ ರಾಷ್ಟ್ರದ ಪ್ರತಿಯೊಬ್ಬರಿಗಾಗಿಯೂ ಹೋರಾಟ ಮಾಡುತ್ತಿದ್ದರೆ ಬಿಜೆಪಿ ಸ್ವತಃ ತನಗಾಗಿ ಹೋರಾಟ ಮಾಡುತ್ತಿದೆ’ ಎಂದು
ರಾಹುಲ್ ಗಾಂಧಿ ಟೀಕಿಸಿದರು. ಪಕ್ಷವು ದೇಶದ ಎಲ್ಲ ಮೂಲೆಗಳ ಜನರೊಂದಿಗೆ ಸಂವಾದ ನಡೆಸುವ ಸಾಧನವಾಗಬೇಕು ಎಂದು ಬಯಸಿದ ಕಾಂಗ್ರೆಸ್ ಮುಖ್ಯಸ್ಥ, ‘ಎಲ್ಲ ಧರ್ಮಗಳು, ಎಲ್ಲ ಜನಾಂಗಗಳು, ಎಲ್ಲ ವಯೋಮಾನದವರು ಮತ್ತು ಎಲ್ಲ ಲಿಂಗದವರು ನಮ್ಮ ಸಂವಾದಕ್ಕೆ ಬರಬೇಕು, ಸಂವಾದವು ಪ್ರೇಮ ಮತ್ತು ಆತ್ಮೀಯವಾಗಿರಬೇಕು’ ಎಂದು ಹೇಳಿದರು. ‘ಇಂದು ರಾಜಕಾರಣವನ್ನು ಜನರನ್ನು ದಮನಿಸಲು ಬಳಸಲಾಗುತ್ತಿದೆ. ಅವರನ್ನು ಮೇಲೆತ್ತಲು ಅಲ್ಲ’ ಎಂದು
ನುಡಿದ ಅವರು ‘ಬಿಜೆಪಿಯು ದ್ವೇಷ ಮತ್ತು ಕೋಮುವಾದವನ್ನು ಹರಡುತ್ತಿದೆ. ಅವರು ಒಡೆಯುತ್ತಾರೆ, ನಾವು ಒಗ್ಗೂಡಿಸುತ್ತೇವೆ.
ಅವರು ಬೆಂಕಿ ಹಚ್ಚುತ್ತಾರೆ, ನಾವು ಅದನ್ನು ಆರಿಸುತ್ತೇವೆ’ ಎಂದು
ಗಾಂಧಿ ನುಡಿದರು. ಕಾಂಗ್ರೆಸ್ ಭಾರತವನ್ನು ೨೧ನೇ ಶತಮಾನಕ್ಕೆ ಒಯ್ದಿತು. ಆದರೆ ಇಂದಿನ ಪ್ರಧಾನಿ ಜನರನ್ನು ತಾವು ನಂಬಿದ ವಿಚಾರಕ್ಕಾಗಿ ಥಳಿಸುವ ಮತ್ತು ತಮಗೆ ತಿನ್ನುವುದಕ್ಕಾಗಿ
ಕೊಲ್ಲುವ ಕ್ರಮವಿದ್ದ ಮಧ್ಯಯುಗಕ್ಕೆ ಒಯ್ಯುತ್ತಿದ್ದಾರೆ’ ಎಂದು ಟೀಕಿಸಿದರು. ಈ ಕೊಳಕು ಹಿಂಸಾಚಾರವು ವಿಶ್ವದಲ್ಲಿ ನಾವು ನಾಚಿಕೆ ಪಡುವಂತೆ ಮಾಡಿದೆ’ ಎಂದು
ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ನುಡಿದರು. ಯುವಕರತ್ತ ಗಮನ ಕೇಂದ್ರೀಕರಿಸಿದ ರಾಹುಲ್, ’ಕಾಂಗ್ರೆಸ್ ಪಕ್ಷವು ಅತ್ಯಂತ ಹಳೆಯ
ಪಕ್ಷ ಎಂದು ಹೇಳಲಾಗುತ್ತದೆ. ನಾವು ಅದನ್ನು ಅತ್ಯಂತ ಹಳೆಯ ಹಾಗೂ ಯುವ ಪಕ್ಷವನ್ನಾಗಿ ಮಾಡುತ್ತೇವೆ. ನಾವು ಎಲ್ಲ ದ್ವೇಷದ ವಿರುದ್ಧ ಪ್ರೇಮದೊಂದಿಗೆ ಹೋರಾಡುತ್ತೇವೆ’ ಎಂದು ನುಡಿದರು. ಕಾಂಗ್ರೆಸ್ ಪಕ್ಷವು ತನಗೆ ಕುಟುಂಬದಂತೆ ಎಂದು ನುಡಿದ ರಾಹುಲ್ ಅದನ್ನು ಮುಂದಕ್ಕೆ ಒಯ್ಯುವುದಾಗಿ ಪಣ ತೊಟ್ಟರು. ‘ವಿನಮ್ರತೆಯೊಂದಿಗೆ
ನಾನು ಈ ಹೊಣೆಯನ್ನು ಸ್ವೀಕರಿಸುತ್ತಿದ್ದೇನೆ’ ಎಂದು ನುಡಿದ ಅವರು, ಬಿಜೆಪಿಯವರ ಸಿದ್ಧಾಂತವನ್ನು ನಾವು ಒಪ್ಪುವುದಿಲ್ಲವಾದರೂ ಅವರೂ ನಮ್ಮ ಸಹೋದರರು ಮತ್ತು ಸಹೋದರಿಯರೇ ಎಂದೂ ಹೇಳಿದರು. ಇದಕ್ಕೆ ಮುನ್ನ ತಾಯಿ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದಲ್ಲಿನ ಭೀತಿಯ ರಾಜಕೀಯ ಬಗ್ಗೆ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆಯಾಗಿ ಮಾಡಿದ ತಮ್ಮ ಮೊದಲ ಭಾಷಣದಲ್ಲಿ ಸೋನಿಯಾ ಗಾಂಧಿ ಅವರು ಭಾರತದ ಆತ್ಮಕ್ಕಾಗಿ ನಡೆಸುತ್ತಿರುವ ಹೋರಾಟದಿಂದ ಪಕ್ಷವನ್ನು ಹಿಮ್ಮೆಟ್ಟಿಸಲಾಗದು
ಎಂದು ಹೇಳಿದರು. ತಮ್ಮ ಪುತ್ರ ಎದುರಿಸಿದ ವೈಯಕ್ತಿಕ ದಾಳಿಗಳನ್ನು ಅವರು ಉಲ್ಲೇಖಿಸಿದರು. ರಾಹುಲ್ ಪಟ್ಟಾಭಿಷೇಕವನ್ನು
ಬಿಜೆಪಿ ’ಘಟನೆಯೇ ಅಲ್ಲ’ ಎಂದು ತಳ್ಳಿ ಹಾಕಿತು.
2017: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಯಲ್ಲಿ ರಾಯ್ ಬರೇಲಿ ಕ್ಷೇತ್ರದಿಂದ ತಾವು ಸ್ಪರ್ಧಿಸಬಹುದೆಂಬ ಊಹಾಪೋಹಗಳನ್ನು ಇಲ್ಲಿ ತಳ್ಳಿ ಹಾಕಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಉತ್ತರ ಪ್ರದೇಶದಿಂದ ಮತ್ತೆ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ ಎಂದು ಸ್ಪಷ್ಟ ಪಡಿಸಿದರು. ಪ್ರಸ್ತುತ ಲೋಕಸಭೆಯಲ್ಲಿ ರಾಯ್ ಬರೇಲಿ ಕ್ಷೇತ್ರವನ್ನು ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದಾರೆ. ತಾಯಿಯಿಂದ ಪಕ್ಷಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ರಾಹುಲ್ ಗಾಂಧಿ ಅವರಿಗೆ ನೆರವಾಗುವ ಸಲುವಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಕೀಯದಲ್ಲಿ ಸಕ್ರಿಯ ಪಾತ್ರ ವಹಿಸಲಿದ್ದಾರೆ ಎಂಬ ವದಂತಿ ಮಾಧ್ಯಮ ಕ್ಷೇತ್ರದಲ್ಲಿ ಹರಡಿತ್ತು. ಸೋನಿಯಾ ಗಾಂಧಿ ಅವರು ತಾವು ರಾಜಕೀಯದಿಂದ ನಿವೃತ್ತರಾಗುವುದಾಗಿ ಹಿಂದಿನ ದಿನ ಸುಳಿವು ನೀಡಿದ ಹಿನ್ನೆಲೆಯಲ್ಲಿ ಈ ಊಹಾಪೋಹ ಎದ್ದಿತ್ತು. ಆದರೆ ಕಾಂಗ್ರೆಸ್ ಪಕ್ಷವು ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಿವೃತ್ತರಾಗುತ್ತಿದ್ದಾರೆ ಆದರೆ ಸಕ್ರಿಯ ರಾಜಕಾರಣದಿಂದ ಅಲ್ಲ ಎಂದು ಸ್ಪಷ್ಟ ಪಡಿಸಿತ್ತು. ‘ನಾನು ಸ್ಪರ್ಧಿಸುವ (೨೦೧೯ರ ಚುನಾವಣೆಯಲ್ಲಿ) ಪ್ರಶ್ನೆ ಇಲ್ಲ . ನನ್ನ ತಾಯಿ ಅಲ್ಲಿಂದ (ರಾಯ್ ಬರೇಲಿ) ಸ್ಪರ್ಧಿಸುವರು’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಸಹೋದರ ರಾಹುಲ್ ಗಾಂದಿ ಪಕ್ಷಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಬಳಿಕ ಹೇಳಿದರು. ಕಾಂಗ್ರೆಸ್ ಅಧ್ಯಕ್ಷೆಯಾಗಿ ೧೯ ವರ್ಷಗಳ ದಾಖಲೆ ಅವಧಿಯಲ್ಲಿ ಅತ್ಯಂತ ಕಷ್ಟದ ದಿನಗಳನ್ನು ಎದುರಿಸಿದ್ದ ತಮ್ಮ ತಾಯಿಯನ್ನು ಪ್ರಿಯಾಂಕಾ ’ಅತ್ಯಂತ ಧೈರ್ಯಶಾಲಿ ಮಹಿಳೆ’ ಎಂದು
ಬಣ್ಣಿಸಿದರು. ಹಾಲಿ ಲೋಕಸಭೆಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ (ಅಮೇಥಿ) ಅವರು ಉತ್ತರ ಪ್ರದೇಶದಿಂದ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿತ್ತಿರುವ ಇಬ್ಬರೇ ಇಬ್ಬರು ಸದಸ್ಯರಾಗಿದ್ದಾರೆ.
2017: ನವದೆಹಲಿ: ದಿವ್ಯಾಂಗ ಅಥವಾ ವಿಕಲಾಂಗ ವ್ಯಕ್ತಿಗಳು ಉನ್ನತ ಶಿಕ್ಷಣ ಪಡೆಯುವ ಹಕ್ಕುಗಳನ್ನು ಹೊಂದಿದ್ದಾರೆ. ಅವರಿಗೆ ಸೂಕ್ತ ಶಿಕ್ಷಣ ಒದಗಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡದೇ ಇರುವುದು ತಾರತಮ್ಯವಾಗುತ್ತದೆ
ಎಂದು ಸುಪ್ರೀಂಕೋರ್ಟ್ ಇಲ್ಲಿ ತೀರ್ಪು ನೀಡಿತು. ಉನ್ನತ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದಿಂದ ನೆರವು ಪಡೆಯುತ್ತಿರುವ ಇಂತಹ ಇತರ ಸಂಸ್ಥೆಗಳಿಗೆ ೨೦೧೬ರ ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯ ವಿಧಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ದಿವ್ಯಾಂಗರಿಗೆ ಶೇಕಡಾ ೫ಕ್ಕೆ ಕಡಿಮೆಯಾಗದಂತೆ ಮೀಸಲಾತಿ ಒದಗಿಸಲು ಕಾಯ್ದೆ ಅವಕಾಶ ನೀಡಿದೆ.
ನ್ಯಾಯಮೂರ್ತಿಗಳಾದ ಎ.ಕೆ. ಸಿಕ್ರಿ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ಪೀಠವು ಕಾನೂನು ಪಾಲಿಸದೆ ತಪ್ಪೆಸಗುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಈ ಕಾಯ್ದೆಯ ವಿಧಿಗಳ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತು. ದಿವ್ಯಾಂಗ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಲಭಿಸುವಂತೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಬಗ್ಗೆ ಪರಿಶೀಲಿಸಲು ತಜ್ಞರ ಸಮಿತಿಯೊಂದನ್ನು ರಚಿಸುವಂತೆಯೂ ವಿಶ್ವ ವಿದ್ಯಾಲಯ ಅನುದಾನ ಆಯೋಗಕ್ಕೆ (ಯುನಿವರ್ಸಿಟಿ ಗ್ರಾಂಟ್ಸ್ ಕಮೀಷನ್) ಕೋರ್ಟ್ ಸೂಚಿಸಿತು. ದಿವ್ಯಾಂಗ ವ್ಯಕ್ತಿಗಳಿಗೆ ಬೋಧನೆ ಮತ್ತು ಇತರ ಸವಲತ್ತುಗಳ ಲಭ್ಯತೆಗೆ ಸಂಬಂಧಿಸಿದಂತೆ ಸಮಿತಿಯು ವಿವರವಾದ ಅಧ್ಯಯನ ನಡೆಸುವುದು ಮತ್ತು ಅಂತಹ ಸಲಹೆಗಳ ಜಾರಿ, ನಿಧಿ ಒದಗಿಸುವಿಕೆ ಮತ್ತು ನಿಗಾ ಇಟ್ಟುಕೊಳ್ಳುವ ವಿಧಿ ವಿಧಾನಗಳನ್ನು ಸಲಹೆ ಮಾಡುವುದು ಎಂದು ಕೋರ್ಟ್ ಹೇಳಿತು. ದಿವ್ಯಾಂಗ ವಿದ್ಯಾರ್ಥಿಗಳ ಅನುದಿನದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಪಾಲಕರನ್ನು ಒಳಗೊಂಡ ಸಮಿತಿಗಳನ್ನು ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ರಚಿಸುವ ಸಾಧ್ಯತೆ ಬಗೆಗೂ ತಜ್ಞರ ಸಮಿತಿ ಪರಿಶೀಲಿಸಬೇಕು. ಈ ಪ್ರಕ್ರಿಯೆ ಮುಂದಿನ ವರ್ಷ ಜೂನ್ ಒಳಗಾಗಿ ಪೂರ್ಣಗೊಂಡಿರಬೇಕು ಎಂದೂ ಸುಪ್ರೀಂಕೋರ್ಟ್ ಸೂಚಿಸಿತು. ಈ ಸಂಬಂಧ ಕಾರ್ಯಾನುಷ್ಠಾನ ವರದಿಯನ್ನು ೨೦೧೮ರ ಜುಲೈ ಒಳಗೆ ಸಲ್ಲಿಸಬೇಕು ಎಂದೂ ಕೋರ್ಟ್ ನಿರ್ದೇಶಿಸಿತು. ಶಿಕ್ಷಣ ಸಂಸ್ಥೆಗಳು ಕಾಯ್ದೆಯ ಪ್ರಕಾರ ಸೀಟು ಮೀಸಲಾತಿ ಕಲ್ಪಿಸದೇ ಇರುವುದು ಮತ್ತು ಮೂಳೆ ಸಂಬಂಧಿತ ಅಂಗವಿಕಲರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಸರಾಗವಾಗಿ ಓಡಾಡಲು ಸೂಕ್ತ ವ್ಯವಸ್ಥೆಗಳು ಇಲ್ಲದೇ ಇರುವುದು ಸೇರಿದಂತೆ ಎತ್ತಲಾಗಿದ್ದ ಮೂರು ಪ್ರಮುಖ ವಿಷಯಗಳ ಕುರಿತ ಮನವಿಯ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಈ ತೀರ್ಪು ನೀಡಿತು. ದಿವ್ಯಾಂಗ ವ್ಯಕ್ತಿಗಳಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಐದು ವರ್ಷಗಳ ವಯೋಮಿತಿ ಸಡಿಲಿಸಲು ೨೦೧೬ರ ಕಾಯ್ದೆಯಲ್ಲಿ ಅವಕಾಶ ಒದಗಿಸಲಾಗಿದೆ ಎಂದೂ ಪೀಠ ಹೇಳಿತು.
2017: ಲಂಡನ್: ಆಕ್ಸ್ ಫರ್ಡ್ ಇಂಗ್ಲಿಷ್ ಡಿಕ್ಸನರಿಯು (ಆಕ್ಸ್ ಫರ್ಡ್ ಶಬ್ದಕೋಶ) ಬಹುತೇಕ ಮಂದಿ ಎಂದೂ ಕೇಳದ ‘ಯುತ್ ಕ್ವೇಕ್’ ಎಂಬ ಪದವನ್ನು ‘೨೦೧೭ರ ವರ್ಷದ ಪದ’ ಎಂಬುದಾಗಿ ಘೋಷಿಸಿತು. ‘ಯುತ್ ಕ್ವೇಕ್’ ಪದವನ್ನು ಆಕ್ಸ್ ಫರ್ಡ್ ಶಬ್ದಕೋಶದ ೨೦೧೭ರ ವರ್ಷದ ಪದ ಎಂಬುದಾಗಿ ಸೂಚಿಸಲು ಹರ್ಷವಾಗುತ್ತದೆ’ ಎಂದು ಆಕ್ಸ್ ಫರ್ಡ್ ಶಬ್ದಕೋಶ ವಿಭಾಗದ ಅಧ್ಯಕ್ಷ ಕ್ಯಾಸ್ಪರ್ ಗ್ರಾತ್ ವೊಹ್ಲ್ ಪ್ರಕಟಿಸಿದರು. ಏನಿದರ ಅರ್ಥ? : ‘ಯುತ್ ಕ್ವೇಕ್’ ಪದಕ್ಕೆ ಆಕ್ಸ್ ಫರ್ಡ್ ಕೊಟ್ಟಿರುವ ವಿವರಣೆ ಹೀಗಿದೆ: ಯುವ ಜನರ ಪ್ರಭಾವ ಅಥವಾ ಕ್ರಿಯೆಗಳ ಪರಿಣಾಮವಾಗಿ ಆದ ಗಮನಾರ್ಹ ಸಾಂಸ್ಕೃತಿಕ, ರಾಜಕೀಯ ಅಥವಾ ಸಾಮಾಜಿಕ ಬದಲಾವಣೆ’. ‘ನಾವು ಯುತ್ ಕ್ವೇಕ್ ಪದವನ್ನು ಅದರ ಸಾಕ್ಷ್ಯಧಾರ ಮತ್ತು ಭಾಷಾ ಆಸಕ್ತಿಯ ಆಧಾರದಲ್ಲಿ ವರ್ಷದ ಪದ ಎಂಬುದಾಗಿ ಆಯ್ಕೆ ಮಾಡಿದ್ದೇವೆ. ಆದರೆ ನನ್ನ ಮಟ್ಟಿಗೆ ನಮ್ಮಭಾಷೆಯು ಆಳವಾದ ಅಶಾಂತಿಯ ಸಂದರ್ಭದಲ್ಲಿ ಬಳಸಬಹುದಾದ ಅಪರೂಪದ ಅರ್ಥವತ್ತಾದ ರಾಜಕೀಯ ಪದ ಇದು’ ಎಂದು ಕ್ಯಾಸ್ಪರ್ ಗ್ರಾತ್ ವೊಹ್ಲ್ ಬರೆದರು. ಎಲ್ಲಿಂದ ಬಂತು ಈ ಪದ?: ಬಹುಜನರಿಗೆ ಗೊತ್ತಿಲ್ಲದೇ ಹೋದರೂ ಈ ಪದದ ಬಳಕೆ ಇದೇ ಮೊದಲೇನಲ್ಲ. ೧೯೬೫ರಲ್ಲೇ ಈ ಪದ ಮೊತ್ತ ಮೊದಲಿಗೆ ಬಳಕೆಯಾಗಿತ್ತು. ವೋಗ್ ಮುಖ್ಯ ಸಂಪಾದಕರಾದ ಡಯಾನಾ ವ್ರೀಲೆಂಡ್ ಅವರು
ಸಾಂಸ್ಕೃತಿಕ ಚಳವಳಿಯೊಂದನ್ನು ಪ್ರತಿನಿಧಿಸಲು ಈ ಪದವನ್ನು ಮೊತ್ತ ಮೊದಲಿಗೆ ಬಳಸಿದ್ದರು. ಅದು ಬೇಬಿ ಬೂಮರ್ ಗಳು ಹದಿಹರೆಯಕ್ಕೆ ಕಾಲಿಟ್ಟಿದ್ದ ಸಮಯ, ಮಹಿಳೆಯರು ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಗಳಿಸಿದ್ದ ಸಮಯ ಮತ್ತು ವೋಗ್ ಹೇಳುವಂತೆ ಅಂಗಡಿಗಳು ಫ್ಯಾಷನ್ ಮನೆಗಳನ್ನು ಹಿಂದಕ್ಕೆ ಹಾಕಿದ ಸಮಯ. ಇದು ೨೦೧೭ರ ವರ್ಷದ ಪದ ಏಕೆ?: ಐದು ದಶಕಗಳ ಬಳಿಕ ರಾಜಕೀಯ ಜಾಗೃತಿಯೊಂದಿಗೆ ’ಯುತ್ ಕ್ವೇಕ್’ ಹೊಸ ಅರ್ಥದೊಂದಿಗೆ ಮರುಪ್ರವೇಶ ಮಾಡಿದೆ. ಜೂನ್ ತಿಂಗಳಲ್ಲಿ ನಡೆದ ಬ್ರಿಟಿಷ್ ಚುನಾವಣೆಯಲ್ಲಿ ಯುವ ಮತದಾರರು ಲೇಬರ್ ಪಕ್ಷಕ್ಕೆ ಅಸಾಧ್ಯವೆನಿಸಿದ್ದ ವಿಜಯ ತಂದುಕೊಟ್ಟರು. ಆಗ ಈ ಪದದ ಬಳಕೆಯಾಗಿತ್ತು. ಬಳಿಕ ಈ ಪದ ಸೆಪ್ಟೆಂಬರಿನಲ್ಲಿ ನಡೆದ ನ್ಯೂಜಿಲೆಂಡ್ ಚುನಾವಣೆಯಲ್ಲೂ ಬಳಕೆಗೆ ಬಂತು. ಆಸ್ಟ್ರೇಲಿಯಾದಲ್ಲಿ ಈ ವರ್ಷ ವಿವಾಹ ಸಮಾನತೆ ಜನಮತಗಣನೆ ಕಾಲದಲ್ಲಿ ಈ ಪದವನ್ನು ಬಳಸಲಾಯಿತು ಎಂದು ಗ್ರಾತ್ ವೊಹ್ಲ್ ವಿವರಿಸಿದರು. ಈ ಪದದ ಬಳಕೆ ಕೆಲವು ರಾಷ್ಟ್ರಗಳಿಗಷ್ಟೇ
ಸೀಮಿತವಾಗಿತ್ತು.ಹಾಗಾಗಿ ಬಹುತೇಕ ರಾಷ್ಟ್ರಗಳ ಜನರಿಗೆ ಈ ಪದ ಪರಿಚಿತವಾಗಿರಲಿಲ್ಲ.
2017: ಐಜ್ವಾಲ್: ಪ್ರಧಾನಿ ನರೇಂದ್ರ ಮೋದಿ ಅವರು ಮಿಜೊರಂನಲ್ಲಿ ೬೦ ಮೆ.ವಾ.ಶಕ್ತಿಯ ಟುಯಿರಿಯಲ್ ಜಲವಿದ್ಯುತ್ ಘಟಕವನ್ನು ರಾಷ್ಟ್ರಕ್ಕೆ ಅರ್ಪಿಸಿದರು. ಈ ಜಲ ವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸುವುದರೊಂದಿಗೆ ಮಿಜೋರಂ ಈಶಾನ್ಯ ಭಾರತದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಮೂರನೇ ರಾಜ್ಯವಾಗಿದೆ ಎಂದು ಪ್ರಧಾನಿ ಘೋಷಿಸಿದರು. ಸಿಕ್ಕಿಮ್ ಮತ್ತು ತ್ರಿಪುರಾ ಈಶಾನ್ಯ ಭಾರತದಲ್ಲಿ ತಮ್ಮ ಅಗತ್ಯಕ್ಕಿಂತ ಹೆಚ್ಚಿನ ವಿದ್ಯುತ್ ಉತ್ಪಾದಿಸುತ್ತಿರುವ ಇತರ ಎರಡು ರಾಜ್ಯಗಳು. ಈಶಾನ್ಯ ಭಾರತದ ಅಭಿವೃದ್ಧಿ ಸಲವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳು ವೇಗ ಪಡೆದುಕೊಂಡಿವೆ. ಪ್ರದೇಶದ ಅಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು. ಈ ದಿನ ೬೦ ಮೆವಾ ಶಕ್ತಿಯ ಟುಯಿರಿಯಲ್ ಜಲವಿದ್ಯುತ್ ಯೋಜನೆಯನ್ನು ಪೂರ್ಣಗೊಳಿಸಿ ರಾಷ್ಟ್ರಕ್ಕೆ ಅರ್ಪಿಸುವುದರೊಂದಿಗೆ ನಾವು ಮಿಜೋರಂನ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದನ್ನು
ನಾವು ಸ್ಥಾಪಿಸಿದ್ದೇವೆ
ಎಂದು ಪ್ರಧಾನಿ ಜಲ ವಿದ್ಯುತ್ ಘಟಕದ ಉದ್ಘಾಟನೆ ಬಳಿಕ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನುಡಿದರು.
ಇದರೊಂದಿಗೆ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುವ ಈಶಾನ್ಯ ಭಾರತದ ಮೂರನೇ ರಾಜ್ಯವಾಗಿ ಮಿಜೋರಂ ಉದಯಿಸಿದೆ ಎಂದು ಮೋದಿ ಹೇಳಿದರು. ಟುಯಿರಿಯಲ್ ಜಲ ವಿದ್ಯುತ್ ಸ್ಥಾವರವು ೨೫೧ ದಶಲಕ್ಷ ಯುನಿಟ್ ವಿದ್ಯುತ್ತನ್ನು ಪ್ರತಿವರ್ಷ ಉತ್ಪಾದಿಸುವುದು. ಇದು ರಾಜ್ಯದ ಆರ್ಥಿಕ ಬೆಳವಣಿಗೆಗೆ ಒತ್ತು ನೀಡಲಿದೆ ಎಂದು ಪ್ರಧಾನಿ ನುಡಿದರು. ಈ ಯೋಜನೆಯನ್ನು ಪೂರ್ಣಗೊಳಿಸಿರುವುದು ಹಾಲಿ ಯೋಜನೆಗಳನ್ನು ಪೂರ್ಣಗೊಳಿಸುವ ನಮ್ಮ ಬದ್ಧತೆಯ ಈಡೇರಿಕೆಯನ್ನು ಪ್ರತಿಫಲಿಸಿದೆ ಮತ್ತು ಈಶಾನ್ಯ ಭಾಗದಲ್ಲಿ ಅಭಿವೃದ್ಧಿಯ ಹೊಸ ಯುಗಾರಂಭವನ್ನು ಮಾಡಿದೆ ಎಂದು ಮೋದಿ ಹೇಳಿದರು. ಟುಯಿರಿಯಲ್ ಯೋಜನೆಯನ್ನು ೧೯೯೮ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಪ್ರಕಟಿಸಿ ಅದಕ್ಕೆ ಒಪ್ಪಿಗೆ ನೀಡಿತ್ತು. ಮಿಜೋರಂನಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿರುವ ಕೇಂದ್ರದ ಮೊತ್ತ ಮೊದಲ ಯೋಜನೆ ಇದು ಎಂದೂ ಪ್ರಧಾನಿ ವಿವರಿಸಿದರು.
2017: ನವದೆಹಲಿ: ಭಾರ್ತಿ ಏರ್ ಟೆಲ್ ಮತ್ತು
ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ನ್ನು ಮೊಬೈಲ್ ಗ್ರಾಹಕರ ಆಧಾರ್ ಆಧಾರಿತ ಸಿಮ್ ಬಳಸಿ
ಪಾವತಿಗಳನ್ನು ಮಾಡದಂತೆ ಮತ್ತು ಇ-ಕೆವೈಸಿ ಬಳಸಿ ಬ್ಯಾಂಕ್ ಗ್ರಾಹಕರಿಗೆ ಪಾವತಿಗಳನ್ನು ಮಾಡದಂತೆ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರ (ಯುಐಡಿಎಐ-ಉದಾಯ್) ತಾತ್ಕಾಲಿಕವಾಗಿ ನಿಷೇಧಿಸಿತು. ಆಧಾರ್ - ಇ-ಕೆವೈಸಿ ಆಧಾರಿತ ಸಿಮ್ ವೆರಿಫಿಕೇಷನ್ ಪ್ರಕ್ರಿಯೆಯನ್ನು ಚಂದಾದಾರರ ಒಪ್ಪಿಗೆ ಇಲ್ಲದೆಯೇ ಅವರ ಪಾವತಿ ಬ್ಯಾಂಕ್ ಖಾತೆಗಳನ್ನು ತೆರೆಯಲು ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ಅನುಸರಿಸಿ ಉದಾಯ್ ಈ ಕ್ರಮ ಕೈಗೊಂಡಿದೆ. ಈ ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ಎಲ್ ಪಿಜಿ ಸಬ್ಸಿಡಿ ಪಡೆಯಲೂ ಜೋಡಿಸಲಾಗುತ್ತಿದೆ ಎಂಬ ಆಪಾದನೆಗಳ ಬಗೆಗೂ ಉದಾಯ್ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. ತನ್ನ ಮಧ್ಯಂತರ ಆದೇಶದಲ್ಲಿ ಉದಾಯ್ ’ಭಾರ್ತಿ ಏರ್ ಟೆಲ್ ಲಿಮಿಟೆಡ್ ಮತ್ತು ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ನ ಇ-ಕೆವೈಸಿ ಪರವಾನಗಿಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಿದೆ’ ಎಂದು
ಖಚಿತ ಮೂಲಗಳು ತಿಳಿಸಿದವು. ಉದಾಯ್ ಮಧ್ಯಂತರ ಆದೇಶದ ಪರಿಣಾಮವಾಗಿ ಏರ್ ಟೆಲ್ ’ಎಲೆಕ್ಟ್ರಾನಿಕ್ ವೆರಿಫಿಕೇಷನ್’ ಮಾಡುವಂತಿಲ್ಲ ಅಥವಾ ತನ್ನ ಗ್ರಾಹಕರ ಮೊಬೈಲ್ ಸಿಮ್ ಗಳನ್ನು ಅವರ ೧೨ ಅಂಕಿಗಳ ಬಯೋಮೆಟ್ರಿಕ್ ರಾಷ್ಟ್ರೀಯ ಐಡಿ ಆಧಾರ್ ಗೆ ಇ-ಕೆವೈಸಿ ಪ್ರಕ್ರಿಯೆ ಮೂಲಕ ಜೋಡಿಸುವಂತಿಲ್ಲ. ಇದಲ್ಲದೆ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಆಧಾರ್
ಇ-ಕೆವೈಸಿ ಜೊತೆಗೆ ಹೊಸ ಖಾತೆ ತೆರೆಯುವಂತೆಯೂ ಇಲ್ಲ. ಏನಿದ್ದರೂ ಬೇರೆ ವಿಧಾನಗಳ ಮೂಲಕ ಖಾತೆಗಳನ್ನು ತೆರೆಯಬಹುದು. ಏರ್ ಟೆಲ್ ವಕ್ತಾರರು ಪ್ರಾಧಿಕಾರದ ತಾತ್ಕಾಲಿಕ ಆದೇಶ ಬಂದಿರುವುದನ್ನು ಖಚಿತ ಪಡಿಸಿದ್ದಾರೆ. ನಾವು ಪ್ರಾಧಿಕಾರದ ಜೊತೆಗೆ ಸಂಪರ್ಕದಲ್ಲಿದ್ದೇವೆ.
ಆದಷ್ಟೂ ಶೀಘ್ರ ಸಮಸ್ಯೆಯನ್ನು ಬಗೆಹರಿಸುತ್ತೇವೆ.
ಗ್ರಾಹಕರಿಗೆ ಆಗಿರುವ ತಾತ್ಕಾಲಿಕ ಅನಾನುಕೂಲಕ್ಕಾಗಿ
ವಿಷಾದಿಸುತ್ತೇವೆ’ ಎಂದು ಅವರು ನುಡಿದರು. ೨೩ ಲಕ್ಷಕ್ಕೂ ಹೆಚ್ಚು ಗ್ರಾಹಕರು ಅವರ ಅರಿವಿಗೆ ಬಾರದಂತೆಯೇ ತೆರೆಯಲ್ಪಟ್ಟ ಅವರ ಏರ್ ಟೆಲ್ ಬ್ಯಾಂಕ್ ಖಾತೆಗಳ ಮೂಲಕ ಸುಮಾರು ೪೭ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು. ಆಧಾರ್ ಇ-ಕೆವೈಸಿ ಬಳಸಿ ಮೊಬೈಲ್ ವೆರಿಫಿಕೇಷನ್ ಮಾಢುವ ಸಮಯದಲ್ಲಿ ಏರ್ ಟೆಲ್ ರಿಟೇಲರ್ ಗಳು ಗ್ರಾಹಕರ ಒಪ್ಪಿಗೆ ಇಲ್ಲದೆಯೇ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ತೆರೆಯುತ್ತಿದ್ದರು
ಎನ್ನಲಾಗಿದ್ದು ಇದನ್ನು ತನ್ನ ಗಮನಕ್ಕೆ ತಂದ ಬಳಿಕ ಉದಾಯ್ ಈ ಕಠಿಣ ಕ್ರಮಕ್ಕೆ ಮುಂದಾಯಿತು ಎಂದು ಮೂಲಗಳು ಹೇಳಿದವು. ಸರ್ಕಾರಿ
ಎಲ್ ಪಿಜಿ ಸಬ್ಸಿಡಿಯನ್ನು ಕೂಡಾ ಈ ಖಾತೆಗಳ ಮೂಲಕವೇ ಅವರ ಒಪ್ಪಿಗೆ ಇಲ್ಲದೇ ವರ್ಗಾವಣೆ ಮಾಡಲಾಗುತ್ತಿತ್ತು
ಎಂದು ಮೂಲಗಳು ತಿಳಿಸಿದವು.
2017: ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು ಪ್ರಕರಣದ ಇತರ ಆರೋಪಿಗಳಾದ ಕೋಡಾ ಸಹಾಯಕ ವಿಜಯ್ ಜೋಶಿ, ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತಾ ಹಾಗೂ ಆಗಿನ ಮುಖ್ಯ ಕಾರ್ಯದರ್ಶಿ ಎ.ಕೆ.ಬಸು ಅವರಿಗೂ ಮೂರು ವರ್ಷ ಶಿಕ್ಷೆ ಪ್ರಕಟಿಸಿದರು. ಖಾಸಗಿ ಸಂಸ್ಥೆ ವಿನಿ ಐಯರ್ನ್ ಹಾಗೂ ಸ್ಟೀಲ್ ಉದ್ಯೋಗ್ ಲಿ.ಗೆ ರೂ. 50 ಲಕ್ಷ, ಕೋಡಾ ಹಾಗೂ ಜೋಶಿಗೆ ತಲಾ ರೂ. 25 ಲಕ್ಷ ಮತ್ತು ಗುಪ್ತಾ ಹಾಗೂ ಬಸು ಅವರಿಗೆ ತಲಾ 1 ಲಕ್ಷ ದಂಡ ವಿಧಿಸಲಾಯಿತು. ಡಿಸೆಂಬರ್ 13 ರಂದು ನ್ಯಾಯಾಲಯವು ಕೋಡಾ, ಜೋಶಿ, ಗುಪ್ತಾ, ಬಸು ಮತ್ತು ವಿಐಎಸ್ಯುಎಲ್ ಕಂಪೆನಿಯನ್ನು ಭ್ರಷ್ಟಾಚಾರ ಹಾಗೂ ಮೋಸ, ಕ್ರಿಮಿನಲ್ ಪಿತೂರಿ ತಡೆಗಟ್ಟುವಿಕೆ ಕಾಯಿದೆ ಅಡಿಯಲ್ಲಿ ದೋಷಿಗಳೆಂದು ತೀರ್ಪು ನೀಡಿತ್ತು. ಈ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2015ರ ಏಪ್ರಿಲ್ನಲ್ಲಿ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2016: ನವದೆಹಲಿ: ಕಾಂಗ್ರೆಸ್ನ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರೈತರ ಸಾಲ ಮನ್ನಾ ಮಾಡುವಂತೆ ಮನವಿ ಮಾಡಿತು. ಕಾಂಗ್ರೆಸ್ನ ಹಿರಿಯ ಮುಖಂಡರು ಮೋದಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿ, ರೈತರ ಸಾಲ ಮನ್ನಾ ಮಾಡುವುದು ಸೇರಿದಂತೆ ವಿದ್ಯುತ್ ಬಿಲ್ ಕಡಿತ ಮಾಡಬೇಕು. ರೈತರ ಉತ್ಪನ್ನಗಳಿಗೆ ಗರಿಷ್ಠ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಅಜಾದ್, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಭಯ ಸದನಗಳ ಉಪ ನಾಯಕರಾದ ಆನಂದ ಶರ್ಮಾ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಪಂಜಾಬ್ನ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್, ಉತ್ತರ ಪ್ರದೇಶದ ಪಕ್ಷದ ಮುಖ್ಯಸ್ಥ ರಾಜ್ ಬಾಬರ್ ತಂಡದಲ್ಲಿದ್ದರು. ಪ್ರಧಾನಿ ಭೇಟಿ ಬಳಿಕ ಮಾತನಾಡಿದ ರಾಹುಲ್ಗಾಂಧಿ, ನರೇಂದ್ರ ಮೋದಿ ಅವರು ತಾಳ್ಮೆಯಿಂದ ನಮ್ಮ ಮನವಿಯನ್ನು ಆಲಿಸಿದರು. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ತಿಳಿಸಿದರು. ‘ಪಕ್ಷದ ಮುಖಂಡರ ತಂಡ ಪ್ರಧಾನಿ ಅವರನ್ನು ಭೇಟಿ ಮಾಡಿ, ರೈತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ. ನಿತ್ಯ ರೈತರು ಆತ್ಮಹತ್ಯೆಗೆ ಮಾಡಿಕೊಳ್ಳುತ್ತಿದ್ದಾರೆ. ಇದು ಒಂದು ರಾಜ್ಯದ ಸಮಸ್ಯೆಯಲ್ಲ. ದೇಶಾದ್ಯಂತ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ಆದ್ದರಿಂದ, ರೈತರ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿತು. ಮನವಿ ಆಲಿಸಿ, ಪರಿಸ್ಥಿತಿಯನ್ನು ಒಪ್ಪಿದ ಪ್ರಧಾನಿ ಅವರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ’ ಎಂದು ರಾಹುಲ್ ಗಾಂಧಿ ಅವರು ಸುದ್ದಿಗಾರರಿಗೆ ತಿಳಿಸಿದರು. ರಾಹುಲ್ ಭೇಟಿ ಕುರಿತು ಪ್ರಧಾನಿ ಮೋದಿ, ನಾವು ಯಾವಾಗಲೂ ಹೀಗೆ ಭೇಟಿ ಮಾಡುತ್ತಿರಬೇಕು ಎಂದು ಹೇಳಿದರು. ಈ ಕುರಿತು ಭೇಟಿ ವೇಳೆ ಹಾಜರಿದ್ದ ಮಲ್ಲಿಕಾರ್ಜುನ ಖರ್ಗೆ, ನಮ್ಮ ಮನಸ್ಸುಗಳು ಪರಸ್ಪರ ಭೇಟಿಯಾಗದಿದ್ದರೂ, ಕನಿಷ್ಠ ಪರಸ್ಪರ ಸಹಕಾರ ಮತ್ತು ಕೈಲುಕುವಿಕೆಯಿಂದ ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳೋಣ ಎಂದು ಮೋದಿ ಪ್ರತಿಕ್ರಿಯಿಸಿದ್ದಾಗಿ ತಿಳಿಸಿದರು. ಸ್ವಲ್ಪ ಹೊತ್ತು ಪ್ರತಿಪಕ್ಷ ನಾಯಕರ ಜತೆಗಿನ ಭೇಟಿ ವೇಳೆ ಕುಶಲೋಪರಿ, ಹಾಸ್ಯ ಬೆರೆತಿದ್ದವು ಎಂದು ಮೂಲಗಳು ತಿಳಿಸಿದವು. ಎರಡು ದಿನಗಳ ಹಿಂದಷ್ಟೇ ರಾಹುಲ್ ಗಾಂಧಿ ಮೋದಿ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು
2016: ನವದೆಹಲಿ: ಅಂಗವಿಕಲರ ಹಕ್ಕುಗಳ ಮಸೂದೆಯನ್ನು ಲೋಕಸಭೆ ಅಂಗೀಕರಿಸಿತು. ನೋಟು ರದ್ದತಿಯಿಂದ ಗದ್ದಲದ ಗೂಡಾಗಿದ್ದ ಸದನ ಅಂಗವಿಕಲರ ಹಕ್ಕುಗಳ ಮಸೂದೆಯ ಅಂಗೀಕಾರ ವಿಚಾರದಲ್ಲಿ ಒಮ್ಮತ ಪ್ರದರ್ಶಿಸಿತು.
ಮಸೂದೆಗೆ ರಾಜ್ಯಸಭೆಯಲ್ಲಿ ಡಿಸೆಂಬರ್ 14ರಂದು ಅನುಮೋದನೆ ದೊರಕಿತ್ತು. ಮಸೂದೆಯ ಮುಖ್ಯಾಂಶಗಳು: * ಅಂಗವಿಕಲರಿಗೆ ತಾರತಮ್ಯ ಮಾಡುವವರಿಗೆ ಕನಿಷ್ಠ 6 ತಿಂಗಳಿಂದ ಗರಿಷ್ಠ 2 ವರ್ಷ ಶಿಕ್ಷೆಗೆ ಅವಕಾಶ.
* ಕನಿಷ್ಠ ರೂ.10 ಸಾವಿರದಿಂದ ಗರಿಷ್ಠ ರೂ.5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ. * ಹಿಂದೆ 7 ನ್ಯೂನತೆಗಳನ್ನು ಮಾತ್ರ ಅಂಗವೈಕಲ್ಯ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅದನ್ನು 21ಕ್ಕೆ ಏರಿಸಲಾಯಿತು. * ಮಾನಸಿಕ ಅಸ್ವಾಸ್ಥ್ಯ, ಆಟಿಸಂ, ಮಿದುಳು ಲಕ್ವ, ಸ್ನಾಯು ಬೆಳವಣಿಗೆ ಕುಂಠಿತ ಸ್ಥಿತಿ, ದೀರ್ಘಕಾಲದ ನರಸಮಸ್ಯೆಗಳು ಪಟ್ಟಿಗೆ ಸೇರ್ಪಡೆ. * ಇನ್ನಷ್ಟು ಅಂಗವೈಕಲ್ಯ ವಿಧಗಳನ್ನು ಇದಕ್ಕೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅವಕಾಶ ಇದೆ. * ಅಂಗವಿಕಲರ ಮುಖ್ಯ ಆಯುಕ್ತರು, ರಾಜ್ಯ ಆಯುಕ್ತರ ಕಚೇರಿಗಳು ನಿಯಂತ್ರಣ ಸಮಿತಿಗಳಾಗಿ ಕೆಲಸ ಮಾಡುವಂತೆ ಬಲಪಡಿಸಲಾಯಿತು. * ಅಂಗವಿಕಲರ ಮೀಸಲಾತಿ ಶೇ 3ರಿಂದ 4ಕ್ಕೆ ಏರಿಕೆ
* ಕನಿಷ್ಠ ರೂ.10 ಸಾವಿರದಿಂದ ಗರಿಷ್ಠ ರೂ.5 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ. * ಹಿಂದೆ 7 ನ್ಯೂನತೆಗಳನ್ನು ಮಾತ್ರ ಅಂಗವೈಕಲ್ಯ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅದನ್ನು 21ಕ್ಕೆ ಏರಿಸಲಾಯಿತು. * ಮಾನಸಿಕ ಅಸ್ವಾಸ್ಥ್ಯ, ಆಟಿಸಂ, ಮಿದುಳು ಲಕ್ವ, ಸ್ನಾಯು ಬೆಳವಣಿಗೆ ಕುಂಠಿತ ಸ್ಥಿತಿ, ದೀರ್ಘಕಾಲದ ನರಸಮಸ್ಯೆಗಳು ಪಟ್ಟಿಗೆ ಸೇರ್ಪಡೆ. * ಇನ್ನಷ್ಟು ಅಂಗವೈಕಲ್ಯ ವಿಧಗಳನ್ನು ಇದಕ್ಕೆ ಸೇರಿಸುವುದಕ್ಕೆ ಕೇಂದ್ರ ಸರ್ಕಾರಕ್ಕೆ ಅವಕಾಶ ಇದೆ. * ಅಂಗವಿಕಲರ ಮುಖ್ಯ ಆಯುಕ್ತರು, ರಾಜ್ಯ ಆಯುಕ್ತರ ಕಚೇರಿಗಳು ನಿಯಂತ್ರಣ ಸಮಿತಿಗಳಾಗಿ ಕೆಲಸ ಮಾಡುವಂತೆ ಬಲಪಡಿಸಲಾಯಿತು. * ಅಂಗವಿಕಲರ ಮೀಸಲಾತಿ ಶೇ 3ರಿಂದ 4ಕ್ಕೆ ಏರಿಕೆ
2016: ನವದೆಹಲಿ: ನೋಟು ರದ್ದತಿ ಪ್ರಕರಣವನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಿತು.
ನೋಟು
ರದ್ದತಿಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟುಗಳಲ್ಲಿ ಇರುವ ಪ್ರಕರಣಗಳಿಗೆ ನ್ಯಾಯಪೀಠವು ತಡೆ ನೀಡಿತು. ಸರ್ಕಾರದ ಆರ್ಥಿಕ ನೀತಿಗಳಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದ ಸುಪ್ರೀಂಕೋರ್ಟ್, ರೂ.500 ಮತ್ತು ರೂ.1000 ಮುಖಬೆಲೆಯ ಹಳೆಯ ನೋಟುಗಳ ಚಲಾವಣೆಗೆ ದಿನಾಂಕ ವಿಸ್ತರಣೆ ಮಾಡಲು ಸರ್ಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲ ಎಂದು ಹೇಳಿತು. ನೋಟು ರದ್ದತಿಯ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯ ಪ್ರವೇಶಿಸಬೇಕು ಎಂದು ವಿವೇಕ್ ನಾರಾಯಣ್ ಎಂಬುವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ‘ನೋಟು ರದ್ದತಿಯಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ’ ಎಂದು ವಿವೇಕ್ ನಾರಾಯಣ್ ತಿಳಿಸಿದರು.
2016: ನವದೆಹಲಿ: ಕಾಳಧನಿಕರು ಶೇ 50ರಷ್ಟು ತೆರಿಗೆ ಪಾವತಿಸಿ, ಕಪ್ಪುಹಣವನ್ನು ಘೋಷಿಸಿಕೊಳ್ಳಲು 2017ರ ಮಾರ್ಚ್ 31ರ ವರೆಗೆ ಕೊನೆಯ ಅವಕಾಶ ಕಲ್ಪಸಿ ಸರ್ಕಾರ ಆದೇಶ ಹೊರಡಿಸಿತು.
ತೆರಿಗೆ ವಂಚಿಸಿದ್ದವರ ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ ಹಾಗೂ ಕಪ್ಪು ಹಣ ಘೋಷಣೆ ಯೋಜನೆ ಅಡಿ ಕಾನೂನು ಕ್ರಮಕ್ಕೆ ಬಳಕೆ ಮಾಡುವುದಿಲ್ಲ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದರು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ (ಪಿಎಂಜಿಕೆವೈ) ಡಿ. 17ರಿಂದ ಜಾರಿಯಾಗಲಿದ್ದು, ಕಪ್ಪುಹಣ ಘೋಷಣೆಗೆ 2017ರ ಮಾರ್ಚ್ 31ರವರೆಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
2016: ನವದೆಹಲಿ: ನೋಟು ರದ್ದತಿ ಬಳಿಕ ಕಾಳಧನಿಕರ ಭೇಟೆಗೆ ಹತ್ತು ಹಲವು ಕ್ರಮ ಕೈಗೊಂಡ ಸರ್ಕಾರ ಕಪ್ಪುಹಣದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಲು ಹೊಸ ಇ ಮೇಲ್ ವಿಳಾಸ
blackmoneyinfo@incometax.gov.in ತೆರೆಯಿತು. ಕಪ್ಪು ಹಣ ಹೊಂದಿದವರ ಬಗ್ಗೆ ಸಾರ್ವಜನಿಕರು ಮೇಲ್ ವಿಳಾಸಕ್ಕೆ ಮಾಹಿತಿ ನೀಡಬಹುದು ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಆಧ್ಯ ಅವರು ಹೇಳಿದರು.
ಸಾರ್ವಜನಿಕರು ಸರ್ಕಾರ ತೆರೆದಿರುವ ಹೊಸ ಇ ಮೇಲ್ ವಿಳಾಸ: blackmoneyinfo@incometax.gov.inಗೆ ಕಾಳಧನಿಕರ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹೆಸರು ಹಾಗೂ ಮಾಹಿತಿಯನ್ನು ಬಹಿರಂಗ ಪಡಿಸದೆ ಗೌಪ್ಯವಾಗಿ ಇರಿಸಲಾಗುವುದು ಎಂದು ಅವರು ತಿಳಿಸಿದರು.
2016: ಬೆಂಗಳೂರು: ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
ಅವರ
ಪುತ್ರ ಕಾರ್ತಿಕ್ ಗೌಡ ವಿರುದ್ಧದ ವಂಚನೆ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿತು. ತಮ್ಮನ್ನು ವಿವಾಹವಾಗಿ ವಂಚಿಸಿದ್ದಾರೆಂದು ನಟಿ ಮೈತ್ರಿಯಾ ಗೌಡ ಅವರು ಕಾರ್ತಿಕ್ ಗೌಡ ವಿರುದ್ಧ ಆರ್.ಟಿ. ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸಬೇಕೆಂದು ಕೋರಿ ಕಾರ್ತಿಕ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿತು.
2016: ಬೆಂಗಳೂರು: ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ವಾಯು ಮಾರ್ಗದ ಮೂಲಕ ಆಸ್ಪತ್ರೆಗೆ ರವಾನಿಸುವ ಏರ್ ಆಂಬುಲೆನ್ಸ್ ಸೇವೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನನಿಲ್ದಾಣದಲ್ಲಿ ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆಯ ಸಹಯೋಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ
ನೀಡಿದರು. ಏರ್ ಆಂಬುಲೆನ್ಸ್ಗೆ ಪೂಜೆ ಸಲ್ಲಿಸುವ ಮೂಲಕ ಈ ಸೇವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಬಳಿಕ, ಏರ್ ಆಂಬುಲೆನ್ಸ್ನಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ಎಚ್ಎಎಲ್ ವಿಮಾನನಿಲ್ದಾಣದಲ್ಲಿ ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆ ಸಹಯೋಗದೊಂದಿಗೆ ಖಾಸಗಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಇಂದು ಉದ್ಘಾಟನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದರು. ವಿವರ: ಏವಿಯೇಟರ್ಸ್ ಏರ್ ರೆಸ್ಕ್ಯೂ ಲಿಮಿಟೆಡ್ ಏರ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸುತ್ತಿರುವ ಸಂಸ್ಥೆ. ಈ ಸೇವೆಯು ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲಿದೆ. 2017 ರಲ್ಲಿ ದೇಶದ ಇತರ ರಾಜ್ಯಗಳಿಗೂ ಇದರ ವಿಸ್ತರಣೆ ಆಗಲಿದೆ. ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರುಣ್ ಶರ್ಮ ಅವರ ಪ್ರಕಾರ, ಕರ್ನಾಟಕವು ದೇಶದಲ್ಲೇ ಏರ್ ಆಂಬುಲೆನ್ಸ್ ಹೊಂದುತ್ತಿರುವ ಮೊದಲ ರಾಜ್ಯ. ರೋಗಿಯನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗೆ ರವಾನಿಸಲು ಏರ್ ಆಂಬುಲೆನ್ಸ್ ಹೆಲೆಕಾಪ್ಟರ್ ಬಳಸಲಾಗುತ್ತದೆ. ಸೇವೆ ಬಯಸುವ ವ್ಯಕ್ತಿಗಳು ವಾರ್ಷಿಕ ರೂ. 18,000 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಇಂತಹವರಿಗೆ ಕಡಿಮೆ ವೆಚ್ಚದಲ್ಲಿ ಏರ್ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ತುರ್ತು ಸೇವೆಗಾಗಿ ದೂರವಾಣಿ ಸಂಪರ್ಕ ಸಂಖ್ಯೆ 155350 ಗೆ ಸಂಪರ್ಕಿಸಬಹುದು.
ನೀಡಿದರು. ಏರ್ ಆಂಬುಲೆನ್ಸ್ಗೆ ಪೂಜೆ ಸಲ್ಲಿಸುವ ಮೂಲಕ ಈ ಸೇವೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು. ಬಳಿಕ, ಏರ್ ಆಂಬುಲೆನ್ಸ್ನಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ವೀಕ್ಷಿಸಿದರು. ಎಚ್ಎಎಲ್ ವಿಮಾನನಿಲ್ದಾಣದಲ್ಲಿ ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆ ಸಹಯೋಗದೊಂದಿಗೆ ಖಾಸಗಿ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಇಂದು ಉದ್ಘಾಟನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದರು. ವಿವರ: ಏವಿಯೇಟರ್ಸ್ ಏರ್ ರೆಸ್ಕ್ಯೂ ಲಿಮಿಟೆಡ್ ಏರ್ ಆಂಬುಲೆನ್ಸ್ ಸೇವೆಯನ್ನು ಆರಂಭಿಸುತ್ತಿರುವ ಸಂಸ್ಥೆ. ಈ ಸೇವೆಯು ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಲಿದೆ. 2017 ರಲ್ಲಿ ದೇಶದ ಇತರ ರಾಜ್ಯಗಳಿಗೂ ಇದರ ವಿಸ್ತರಣೆ ಆಗಲಿದೆ. ಏವಿಯೇಟರ್ಸ್ ಏರ್ ರೆಸ್ಕ್ಯೂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರುಣ್ ಶರ್ಮ ಅವರ ಪ್ರಕಾರ, ಕರ್ನಾಟಕವು ದೇಶದಲ್ಲೇ ಏರ್ ಆಂಬುಲೆನ್ಸ್ ಹೊಂದುತ್ತಿರುವ ಮೊದಲ ರಾಜ್ಯ. ರೋಗಿಯನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗೆ ರವಾನಿಸಲು ಏರ್ ಆಂಬುಲೆನ್ಸ್ ಹೆಲೆಕಾಪ್ಟರ್ ಬಳಸಲಾಗುತ್ತದೆ. ಸೇವೆ ಬಯಸುವ ವ್ಯಕ್ತಿಗಳು ವಾರ್ಷಿಕ ರೂ. 18,000 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಇಂತಹವರಿಗೆ ಕಡಿಮೆ ವೆಚ್ಚದಲ್ಲಿ ಏರ್ ಆಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ತುರ್ತು ಸೇವೆಗಾಗಿ ದೂರವಾಣಿ ಸಂಪರ್ಕ ಸಂಖ್ಯೆ 155350 ಗೆ ಸಂಪರ್ಕಿಸಬಹುದು.
2016: ದುಬೈ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ದುಬೈ ವರ್ಲ್ಡ್ ಸೂಪರ್ ಸಿರೀಸ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಹಮ್ದನ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ 3ನೇ ಪಂದ್ಯದಲ್ಲಿ ಪಿವಿ ಸಿಂಧು 21-17, 21-13 ನೇರ ಗೇಮಿನಿಂದ ಒಲಿಂಪಿಕ್ ಚಾಂಪಿಯನ್ ಸ್ಪೇನ್ನ ಕ್ಯಾರೊಲಿನ್ ಮರಿನ್ ವಿರುದ್ಧ ಸುಲಭ ಜಯ ದಾಖಲಿಸಿದರು. ಈ ಮೂಲಕ ಕಳೆದ ಆಗಸ್ಟ್ನಲ್ಲಿ ರಿಯೋ ಒಲಿಂಪಿಕ್ಸ್ ಫೈನಲ್ನಲ್ಲಿ ಸ್ಪೇನ್ ಆಟಗಾರ್ತಿ ಎದುರು ಅನುಭವಿಸಿದ್ದ ಸೋಲಿಗೆ ಹೈದರಾಬಾದ್ ಆಟಗಾರ್ತಿ ಸೇಡು ತೀರಿಸಿಕೊಂಡರು ಹಿಂದಿನ
ದಿನ ನಡೆದ 2ನೇ ಪಂದ್ಯದಲ್ಲಿ ಸಿಂಧು ಚೀನಾದ ಚುನ್ ಯುಗೆ ಸೋತಿದ್ದ ಹಿನ್ನೆಲೆಯಲ್ಲಿ ಸೆಮಿಫೈನಲ್ಲಿಗೆ ಏರಲು ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದ್ದರು. ಎರಡೂ ಗೇಮಿನಲ್ಲಿ
ಪ್ರಾಬಲ್ಯ ಸಾಧಿಸಿದ ಸಿಂಧುಗೆ ಸ್ಪೇನ್ ಆಟಗಾರ್ತಿ ಸುಲಭ ತುತ್ತಾದರು. ಜತೆಗೆ ಮೂರು ಪಂದ್ಯಗಳಲ್ಲಿ ಸೋಲುವ ಮೂಲಕ ಮರಿನ್ ಟೂರ್ನಿಯಿಂದ ನಿರ್ಗಮಿಸಿದರು.
ವಾಂಚೋ ಸಮಿತಿ ನೀಡಿದ್ದ ನೋಟು ನಿಷೇಧ ಪ್ರಸ್ತಾವನೆಯನ್ನು ಇಂದಿರಾಗಾಂಧಿ ಅವರು ನಿರಾಕರಿಸಿದ್ದರು. ಅಂದಿನಿಂದಲೂ ಕಾಂಗ್ರೆಸ್ ನೋಟು ರದ್ದಿಗೆ ಆಕ್ಷೇಪ ಎತ್ತುತ್ತಲೇ ಬಂದಿದೆ. ಪರೋಕ್ಷವಾಗಿ ಭ್ರಷ್ಟಾಚಾರವನ್ನು ಬೆಂಬಲಿಸುವಂತೆ ನಡೆದುಕೊಳ್ಳುತ್ತಿದೆ ಎಂದು ಕಿಡಿ ಕಾರಿದರು. ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಮಾತಿನ ಮಧ್ಯೆ, ಇಂದಿರಾ ಗಾಂಧಿಯವರು ಉಪಪ್ರಧಾನಿ ವೈ.ಬಿ. ಚೌವಾಣ್ರಿಗೆ ಹೇಳಿದ್ದರೆನ್ನಲಾದ ಮಾತೊಂದನ್ನು ಪ್ರಸ್ತಾಪಿಸಿ ವಿಪಕ್ಷ ಕಾಂಗ್ರಸ್ನ ನಡೆಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ‘ನೋಟು ನಿಷೇಧಕ್ಕೆ ಸಂಬಂಧಿಸಿ ಚೌಹಾಣ್ ಪ್ರಶ್ನಿಸಿದ್ದಕ್ಕೆ, ನಿಮಗೆ ಮುಂದಿನ ಚುನಾವಣೆ ಎದುರಿಸಬೇಕೆಂದಿಲ್ಲವೇ? ಎಂದು ಇಂದಿರಾಗಾಂಧಿ ಪ್ರಶ್ನಿಸಿದ್ದರು’ ಎಂದು ಕೇಳ್ಪಟ್ಟಿದ್ದೆ ಎನ್ನುವ ಮೂಲಕ ಮಾತಿನಲ್ಲೇ ಚಾಟಿ ಬೀಸಿದರು.. ಅಂದಿನಿಂದಲೂ ಭ್ರಷ್ಟಾಚಾರ ನಿಮೂಲನೆಗೆ ಕಾಂಗ್ರೆಸ್ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆ ಎಂದು ಖಾರವಾಗಿಯೇ ಮೋದಿ ಮಾತನಾಡಿದರು. ಆದರೆ ಮೋದಿ ಅವರ ಈ ಮಾತಿನ ಲಹರಿಗೆ ಕಾಂಗ್ರೆಸ್ ವಲಯದಲ್ಲಿ ಬೇರೆಯದೇ ಆದ ಆರೋಪ ಕೇಳಿಬಂದಿದೆ. ಸಂಸತ್ ಕಲಾಪ ನಡೆಯದೇ ಇರುವ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ, ಸಂಸತ್ನಿಂದಲೇ ದೂರ ಉಳಿಯಬೇಕೆನಿಸುತ್ತಿದೆ ಎಂದಿದ್ದರು. ಅಡ್ವಾಣಿ ಅವರ ಈ ಮಾತಿನಿಂದ ಸರ್ಕಾರಕ್ಕೆ ಮುಜುಗರ ಆಗಲಿದ್ದು, ಜನರ ಗಮನವನ್ನು ಬೇರೆ ಕಡೆ ಸೆಳೆಯಲಿಕ್ಕಾಗಿ ಮೋದಿ ಹೀಗೆ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿತು. ಗದ್ದಲಕ್ಕೆ ಸಂಸತ್ ಕಲಾಪ ಬಲಿಯಾಗಿರುವ ಬಗ್ಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
2008: ಭಯೋತ್ಪಾದನೆ ವಿರುದ್ಧದ ಸಮರವನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸ್ಥಾಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿತು. ಉಗ್ರಗಾಮಿಗಳ ಪ್ರಕರಣಗಳನ್ನು ತ್ವರಿತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆ ವಿಧಿಸುವುದಕ್ಕೆ ಅವಕಾಶ ನೀಡುವ ಹಾಗೂ ಭಯೋತ್ಪಾದನೆ ನಿಗ್ರಹ ಕಾನೂನುಗಳ ದುರ್ಬಳಕೆ ತಡೆಗಟ್ಟುವ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಇದರ ಪ್ರಕಾರ ರಾಷ್ಟ್ರೀಯ ತನಿಖಾ ಸಂಸ್ಥೆ ಮಸೂದೆಯು ದೇಶದೆಲ್ಲೆಡೆ ನಡೆಯುವ ಭಯೋತ್ಪಾದನೆ ಮತ್ತು ರಾಷ್ಟ್ರಮಟ್ಟದ ಪರಿಣಾಮ ಬೀರುವ ಇತರ ಅಪರಾಧಗಳ ಬಗ್ಗೆ ತನಿಖೆ ನಡೆಸುವ ತನಿಖಾ ಸಂಸ್ಥೆಯೊಂದರ ಸ್ಥಾಪನೆಗೆ ಅವಕಾಶ ಮಾಡಿಕೊಡಲಿದೆ.
2008: ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಮುರಕಿಬಾವಿ ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕಗ್ಗೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಎರಡನೇ ತ್ವರಿತಗತಿ ನ್ಯಾಯಾಲಯವು ಒಂಬತ್ತು ಮಂದಿ ಆರೋಪಿಗಳಿಗೆ ಮರಣ ದಂಡನೆ ಹಾಗೂ ಆರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು. ಕುಡಿಯುವ ನೀರಿಗೆ ಸಂಬಂಧಿಸಿದಂತೆ 2005ರ ಆ.30 ರಂದು 2 ಕುಟುಂಬಗಳ ಮಧ್ಯೆ ನಡೆದ ಜಗಳ ವಿಕೋಪಕ್ಕೆ ತಿರುಗಿ ಒಬ್ಬ ಮಹಿಳೆ ಸೇರಿ ನಾಲ್ವರ ಕಗ್ಗೊಲೆಯಲ್ಲಿ ಅಂತ್ಯ ಕಂಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಧೀಶ ಸಿ.ಆರ್. ಜಾವೀದ್ ಪಾಷಾ ಅವರು ಈದಿನ ಶಿಕ್ಷೆ ಪ್ರಕಟಿಸಿದರು. ಒಟ್ಟು 66 ಸಾಕ್ಷ್ಯಗಳನ್ನು ಆಲಿಸಿದ ನ್ಯಾಯಾಲಯ ಆರೋಪಿಗಳಾದ ಸುಂದರೇಶ ಉಡಕೇರಿ, ಸಿದಟಪ್ಪ ರೇವಣ್ಣವರ, ಸಿದಟಲಿಂಗಪ್ಪ ರೇವಣ್ಣವರ, ಕಲ್ಮೇಶ ಉಡಕೇರಿ, ರಾಜಶೇಖರ ಉಡಕೇರಿ, ಭಗವಂತ ಉಡಕೇರಿ, ಚಂದ್ರನಾಯಕ ರೇವಣ್ಣವರ, ಈರಪ್ಪ ಉಡಕೇರಿ, ಶಂಕರಪ್ಪ ಉಡಕೇರಿ ಅವರಿಗೆ ಮರಣ ದಂಡನೆ ವಿಧಿಸಿತು. ಅಲ್ಲದೇ ಉಳಿದ ಆರೋಪಿಗಳಾದ ಮಲ್ಲವ್ವ ರೇವಣ್ಣವರ, ಗೌರವ್ವ ಉಡಕೇರಿ, ಬಸವಣ್ಣೆಪ್ಪ ಉಡಕೇರಿ, ನಾಗಪ್ಪ ಉಡಕೇರಿ, ಸಕ್ರನಾಯಕ ರೇವಣ್ಣವರ, ದೊಡ್ಡನಾಯಕ ರೇವಣ್ಣವರ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು..
2008: ಶನಿಯ ಪುಟ್ಟ ಉಪಗ್ರಹವಾದ 'ಎನ್‌ಸೆಲ್‌ಡಸ್'ನಲ್ಲಿ ಸಕ್ರಿಯ ಜಗತ್ತಿನ ಕುರುಹುಗಳಿರುವುದಾಗಿ ನಾಸಾ ವಿಜ್ಞಾನಿಗಳು ತಿಳಿಸಿದರು. ಶನಿ ಹಾಗೂ ಅದರ ಉಪಗ್ರಹಗಳ ವಿವರ ಸಂಗ್ರಹಿಸುವ ಕ್ಯಾಸಿನಿ ಅಂತರಿಕ್ಷ ನೌಕೆ ಈ ವಿವರಗಳನ್ನು ಸಂಗ್ರಹಿಸಿದೆ. ಕ್ಯಾಸಿನಿ ರವಾನಿಸಿದ ಛಾಯಾಚಿತ್ರಗಳಿಂದ 'ಎನ್‌ಸೆಲ್‌ಡಸ್'ನ ದಕ್ಷಿಣ ಧ್ರುವ ಪ್ರದೇಶ ಆಗಾಗ್ಗೆ ಬಗದಲಾವಣೆಗೆ ಒಳಪಡುತ್ತದೆ ಎಂಬುದು ಸ್ಪಷ್ಟವಾಯಿತು. ದಕ್ಷಿಣ ಧ್ರುವ ಪ್ರದೇಶದಲ್ಲಿ ಸಮೀಪದಿಂದ ಸೆರೆಹಿಡಿದ ಛಾಯಾಚಿತ್ರಗಳು ಅಲ್ಲಿ ನೀರಿನ ಆವಿ, ಹಿಮಕಣ ಇರುವುದನ್ನು ತೋರಿಸಿದೆ. ಅಲ್ಲದೇ ಭೂಮಿಯ ಮಾದರಿಯಲ್ಲಿ ಅಲ್ಲಿನ ನೆಲ ಸಹ ಹಲವು ಫಲಕಗಳಿಂದ ನಿರ್ಮಾಣಗೊಂಡಿದೆ ಎಂಬುದನ್ನು ತೋರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದರು. ಭೂಮಿಯ ಧ್ರುವ ಪ್ರದೇಶಗಳಲ್ಲಿ ಹಿಮಗಡ್ಡೆ ಹಾಗೂ ಫಲಕಗಳು ಚಲಿಸಿದಂತೆ 'ಎನ್‌ಸೆಲ್‌ಡಸ್'ನಲ್ಲಿಯೂ ಹಿಮಫಲಕಗಳು ಚಲಿಸುತ್ತವೆ. ಆದರೆ, ಅಲ್ಲಿ ಕನ್ವೇಯರ್ ಬೆಲ್ಟ್ ಮಾದರಿಯಲ್ಲಿ ಒಂದೇ ದಿಕ್ಕಿನಲ್ಲಿ ಹಿಮಫಲಕಗಳು ಚಲಿಸುತ್ತವೆ ಎಂದು ವಿಜ್ಞಾನಿಗಳು ವಿವರಿಸಿದರು.
2008: ತೆಲುಗು ಚಲನಚಿತ್ರ ರಂಗದ ಉದಯೋನ್ಮುಖ ನಟಿ ಭಾರ್ಗವಿ ಅವರನ್ನು ಹತ್ಯೆ ಮಾಡಿರುವ ಜೊತೆಗಾರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನಗರದಲ್ಲಿ ನಡೆಯಿತು. ಭಾರ್ಗವಿ ಅವರ ಬಂಜಾರ ಹಿಲ್ ಫ್ಲ್ಯಾಟ್‌ನಲ್ಲಿ ಜೋಡಿ ಶವಗಳ ಜೊತೆಗೆ ್ಗಳಿ ವಿಷದ ಖಾಲಿ ಬಾಟಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ಜೊತೆಗಾರ ಪ್ರವೀಣ್ ಕುಮಾರ್ ಮೊದಲು ಭಾರ್ಗವಿಯನ್ನು ಹತ್ಯೆ ಮಾಡಿ ನಂತರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಆತನ ಬಳಿ ಮರಣ ಪತ್ರವೂ ದೊರೆತಿದೆ. 2006ರಿಂದ ಅವರಿಬ್ಬರೂ ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಆಕೆ ತನ್ನ ಬಗ್ಗೆ ತಾತ್ಸಾರ ಧೋರಣೆ ತಳೆದದ್ದರಿಂದ ಈ ಕೃತ್ಯ ಎಸಗಿರುವುದಾಗಿ ಪ್ರವೀಣ್ ಕುಮಾರ್ ಬರೆದಿಟ್ಟ ಪತ್ರವೋ ಪೊಲೀಸರಿಗೆ ಲಭಿಸಿತು.
2008: ಲೋಕಸಭೆಯಲ್ಲಿ ಜುಲೈ 22ರಂದು ನಡೆದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಹಣದ ಆಮಿಷ ಒಡ್ಡಿದ ಪ್ರಕರಣದಲ್ಲಿ ಹೆಸರಿಸಲಾದ ಮೂವರ ವಿರುದ್ಧ ಗೃಹ ಸಚಿವಾಲಯದಿಂದ ತನಿಖೆ ನಡೆಸಲು ಸ್ಪೀಕರ್ ಸೋಮನಾಥ ಚಟರ್ಜಿ ಶಿಫಾರಸು ಮಾಡಿದರು. ಪ್ರಕರಣದ ಬಗ್ಗೆ ತನಿಖೆ ನಡೆಸಿದ ಸಂಸದೀಯ ಸಮಿತಿ ತನ್ನ ವರದಿ ಮಂಡಿಸಿದ ಮರುದಿನವೇ ಸ್ಪೀಕರ್ ಅವರು ಈ ಕ್ರಮ ಕೈಗೊಂಡರು. ಅದರಂತೆ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್ ಅವರ ಸಹಾಯಕ ಸಂಜೀವ್ ಸಕ್ಸೇನಾ, ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರ ಸಹಾಯಕ ಸುಧೀಂದ್ರ ಕುಲಕರ್ಣಿ ಮತ್ತು ಚಾಲಕ ಸುಹೈಲ್ ಹಿಂದೂಸ್ತಾನಿ ವಿರುದ್ಧ ತನಿಖಾ ಸಂಸ್ಥೆಯೊಂದರಿಂದ ತನಿಖೆ ನಡೆಯುವುದು ಬಹುತೇಕ ಖಚಿತವಾಯಿತು. ವಿ. ಕಿಶೋರ್‌ಚಂದ್ರ ದೇವ್ ನೇತೃತ್ವದ ಸಮಿತಿ ತನ್ನ ವರದಿಯಲ್ಲಿ ಎಸ್‌ಪಿ ನಾಯಕ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿತ್ತು.
2008: ಖ್ಯಾತ ಇತಿಹಾಸ ತಜ್ಞ ಪ್ರೊ. ಎಸ್.ಶೆಟ್ಟರ್ ಅವರಿಗೆ 2007ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಭಾಷಾ ಸಮ್ಮಾನ್' ಪ್ರಶಸ್ತಿ ದೊರೆಕಿತು. ಪುರಾತನ ಮತ್ತು ಮಧ್ಯಕಾಲೀನ ಇತಿಹಾಸಕ್ಕೆ ಸಂಬಂಧಿಸಿದಂತೆ ಶೆಟ್ಟರ್ ಕೈಗೊಂಡಿರುವ ಸಂಶೋಧನೆಗಳು, ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಕಂಚಿನ ಪದಕವನ್ನು ಒಳಗೊಂಡಿರುತ್ತದೆ. ಶೆಟ್ಟರ್ ಅವರ ಇತ್ತೀಚಿನ 'ಸಂಗಮ್ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕದ ಮೂಲಕ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಇತಿಹಾಸಕ್ಕೆ ನೀಡಿರುವ ಸಮಗ್ರವಾದ ಕೊಡುಗೆಯನ್ನು ಸಹ ಪರಿಗಣಿಸಲಾಗಿದೆ ಎಂದು ಅಕಾಡೆಮಿಯ ಮೂಲಗಳು ತಿಳಿಸಿದವು.
2007: ಮಾವೊವಾದಿ ಪೀಡಿತ ಛತ್ತೀಸ್ ಗಢ ರಾಜ್ಯದ ದಾಂತೆವಾಡ ಜಿಲ್ಲಾ ಜೈಲಿನಿಂದ 105 ನಕ್ಸಲರು ಸೇರಿದಂತೆ ಸುಮಾರು 299 ಕೈದಿಗಳು ಪರಾರಿಯಾದರು. ಸಂಜೆ 4.35ರ ಸುಮಾರಿಗೆ ಊಟ ನೀಡುತ್ತಿದ್ದಾಗ ನಕ್ಸಲ್ ಕಮಾಂಡರ್ ಸುಜಿತ್ ಕುಮಾರ್ ಜೈಲು ಸಿಬ್ಬಂದಿಯ ಬಂದೂಕು ಕಸಿದುಕೊಂಡು ಗುಂಡು ಹಾರಿಸಿದ. ಆಗ ಸಂಭವಿಸಿದ ಗದ್ದಲದಲ್ಲಿ ಇತರ ಕೈದಿಗಳು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರು. 15 ನಿಮಿಷಗಳ ಘರ್ಷಣೆ ಬಳಿಕ ಪರಾರಿಯಾಗುವ ಮುನ್ನ ಕೈದಿಗಳು ಪೊಲೀಸರಿಂದ ಬಂದೂಕು ಕಸಿದುಕೊಂಡರು.
2007: ಪುಸಾದ ರಾಜೇಂದ್ರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಬಿಹಾರದ ಕೊತಿಯಾ ಗ್ರಾಮವನ್ನು ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿರುವುದನ್ನು ಬಹಿರಂಗಪಡಿಸಿದರು. ರಾಸಾಯನಿಕಗಳ ಬಳಕೆಯಿಂದಾಗಿ ಕೃಷಿ ಭೂಮಿಯ ಮೇಲಾಗುವ ವ್ಯತಿರಿಕ್ತ ಪರಿಣಾಮ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ವಿವಿ ಈ ಗ್ರಾಮದಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡಿತ್ತು. ಕೃಷಿ ಭೂಮಿಗೆ ಹೆಚ್ಚು ಜೈವಿಕ ಗೊಬ್ಬರ ಬಳಸಲು ಬಡ ರೈತರಿಗೆ ಉತ್ತೇಜನ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿತ್ತು. ಇದೀಗ ಕೊತಿಯಾ ಗ್ರಾಮದಲ್ಲಿ ಒಟ್ಟು 70 ರೈತರು ಜೈವಿಕ ಕೃಷಿ ಮಾಡುವ ಮೂಲಕ ಈ ಗ್ರಾಮವನ್ನು ಬಿಹಾರದಲ್ಲೇ ಪ್ರಪ್ರಥಮ ಜೈವಿಕ ಕೃಷಿ ಗ್ರಾಮವನ್ನಾಗಿ ಪರಿವರ್ತಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಎಂದು ವಿವಿಯ ಹಿರಿಯ ಕೃಷಿ ವಿಜ್ಞಾನಿ ಡಾ. ಆರ್. ಕೆ. ಸೊಹಾನೆ ಹೇಳಿದರು.
2007: ಜಗತಾಪ ಏರಿಕೆ (ಜಾಗತಿಕ ತಾಪಮಾನ) ತಡೆಗಟ್ಟಲು ಅಳಿಲು ಸೇವೆಯಾಗಿ ಬೆಂಗಳೂರು ಕನಕಪುರ ರಸ್ತೆಯ ಟೆಂಪಲ್ ಟ್ರೀ ಅಪಾರ್ಟ್ಮೆಂಟ್ (ಎಫ್ ಬ್ಲಾಕ್) ನಿವಾಸಿಗಳು ಈದಿನ ಸಂಜೆ 7.30 ರಿಂದ 9 ಗಂಟೆಯ ತನಕ ವಿದ್ಯುತ್ ದೀಪಗಳನ್ನು ಆರಿಸಿ ಆದರ್ಶ ಮೆರೆದರು. 50 ಮನೆಗಳಿರುವ ಈ ಅಪಾರ್ಟ್ ಮೆಂಟಿನಲ್ಲಿನ ಸುಮಾರು 25 ಮನೆಗಳ ಮಂದಿ ಈ ಅಭಿಯಾನದಲ್ಲಿ ಪಾಲ್ಗೊಂಡರು. ಸರಿಯಾಗಿ 7.30ಕ್ಕೆ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿದ ನಿವಾಸಿಗಳು ಕತ್ತಲೆ ಓಡಿಸಲು ಮೇಣದ ಬತ್ತಿ ಉರಿಸಿದರು. ಕೇವಲ 2 ತಿಂಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟೆಂಪಲ್ ಟ್ರೀ ಅಪಾಟರ್್ಮೆಂಟ್ಸ್ ಅಸೋಸಿಯೇಷನ್ ಈ ಸಾಧ್ಯತೆಯನ್ನು ಮಾಡಿ ತೋರಿಸಿತು.
2007: ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿ ನಾಲ್ಕು ತಿಂಗಳು ಕಳೆದ ನಂತರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ರಾಜಧಾನಿಯಲ್ಲಿ ಅಧಿಕೃತ ವಸತಿ ಕಲ್ಪಿಸಿಕೊಡಲಾಯಿತು. 2007ರ ಜುಲೈ 25 ರಂದು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಕಲಾಂ ಅವರು, ಸೇನಾಧಿಕಾರಿಗಳು ವಾಸಿಸುವ ದೆಹಲಿ ದಂಡು ಪ್ರದೇಶದ ವಸತಿಗೃಹದಲ್ಲಿ ನೆಲೆಸಿದ್ದರು. ಈಗ `10 ರಾಜಾಜಿ ಮಾರ್ಗ'ದಲ್ಲಿ ವಸತಿ ಕಲ್ಪಿಸಿಕೊಡಲಾಗಿದ್ದು, ಕಲಾಂ ತಮ್ಮ ಹೊಸ ಅಧಿಕೃತ ನಿವಾಸಕ್ಕೆ ವಾಸ್ತವ್ಯ ಬದಲಾಯಿಸಿದರು.
2007: ವರದಕ್ಷಿಣೆ ಹಿಂಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಯಸ್ಕ ಪುರುಷರನ್ನು ಮಾತ್ರ ವಿಚಾರಣೆಗೆ ಒಳಪಡಿಸಬಹುದೇ ಹೊರತು ಕುಟುಂಬದ ಇತರ ಮಹಿಳೆಯರನ್ನಲ್ಲ ಎಂದು ದೆಹಲಿ ನ್ಯಾಯಾಲಯ ಹೇಳಿತು. ತನ್ನ ಪತಿ, ಆತನ ಇಬ್ಬರು ಸೋದರಿಯರು ಹಾಗೂ ಆತನ ತಾಯಿಯ ವಿರುದ್ಧ ಸುನೀಲ್ ಕುಮಾರ್ ಎಂಬವರ ಪತ್ನಿ ಹೂಡಿದ್ದ ವರದಕ್ಷಿಣೆ ಹಿಂಸೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ದೇವಿಂದರ್ ಕುಮಾರ್ ಜಂಗಾಲಾ `ಕೌಟುಂಬಿಕ ಹಿಂಸೆ ತಡೆ ಕಾಯಿದೆ' ಕುರಿತು ಈ ವಿವರಣೆ ನೀಡಿದರು. ವರದಕ್ಷಿಣೆ ಕಾಯಿದೆ ಪ್ರಕಾರ `ಪ್ರತಿವಾದಿ' ಎಂದರೆ ದೂರು ನೀಡಿದ ಮಹಿಳೆ ಜತೆಗೆ ಕೌಟುಂಬಿಕ ಸಂಬಂಧ ಹೊಂದಿರುವ ವಯಸ್ಕ ಪುರುಷರು ಎಂದರ್ಥ. ಪ್ರತಿವಾದಿಯ ಕುಟುಂಬದ ಮಹಿಳೆಯರ ಹಿತರಕ್ಷಣೆಯನ್ನೂ ಇದು ಒಳಗೊಂಡಿದೆ ಎಂದ ಅವರು, ಪ್ರಕರಣದಲ್ಲಿ ಹೆಸರಿಸಲಾದ ಮಹಿಳೆಯರ ವಿರುದ್ಧದ ವಿಚಾರಣೆಯನ್ನು ತಳ್ಳಿ ಹಾಕಿದರು.
2007: ನಾರಾಯಣ ಕಾರ್ತಿಕೇಯನ್ ಅವರು ಚೀನಾದ ಜುಹಾಯ್ ಅಂತಾರಾಷ್ಟ್ರೀಯ ರೇಸಿಂಗ್ ಸರ್ಕಿಟಿನಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದರು. ಇದೇ ವೇಳೆ ಅವರು ಭಾರತಕ್ಕೆ ಮೊತ್ತ ಮೊದಲ `ಎ 1 ಜಿಪಿ' ಪ್ರಶಸ್ತಿಯನ್ನು ಗೆದ್ದುಕೊಟ್ಟರು. ವಿಲಿಯಮ್ಸ್ ಟೆಸ್ಟ್ ಡ್ರೈವರ್ ಆಗುವಲ್ಲಿ ವಿಫಲರಾಗಿದ್ದ ಕಾರ್ತಿಕೇಯನ್ ಅವರು ಸರ್ಕಿಟಿನಲ್ಲಿ ಮಿಂಚು ಹರಿಸಿದರು. ಕಾರ್ತಿಕೇಯನ್ ಅವರು ಒಂದು ಗಂಟೆ 8 ನಿಮಿಷ 30.759 ಸೆಕೆಂಡುಗಳಲ್ಲಿ ದೂರವನ್ನು ಕ್ರಮಿಸಿದರು. ಇದರೊಂದಿಗೆ ಭಾರತ ಎ 1 ಗ್ರ್ಯಾಂಡ್ ಪ್ರೀಯಲ್ಲಿ ಪ್ರಶಸ್ತಿ ಗೆದ್ದ ಹದಿನಾಲ್ಕನೇ ರಾಷ್ಟ್ರ ಎನ್ನುವ ಖ್ಯಾತಿಗೆ ಪಾತ್ರವಾಯಿತು.
2006: ಕೇರಳದಲ್ಲಿ ನಕ್ಸಲೀಯ ಚಳವಳಿಯ ಮುಂಚೂಣಿಯಲ್ಲಿದ್ದ ಹಿರಿಯ ನಾಯಕಿ ಮಂದಾಕಿನಿ ನಾರಾಯಣನ್ (81) ಕೋಯಿಕ್ಕೋಡಿನ ತಮ್ಮ ನಿವಾಸದಲ್ಲಿ ಈದಿನ ಬೆಳಗ್ಗೆ ನಿಧನರಾದರು. ಮೂಲತಃ ಗುಜರಾತಿಯಾದ ಮಂದಾಕಿನಿ, 1968ರಲ್ಲಿ ತಲಶ್ಶೇರಿ -ಪುಲಪಲ್ಲಿ ಪ್ರಕರಣ ಎಂದೇ ಖ್ಯಾತಿ ಪಡೆದ ಕೇರಳದ ಮೊತ್ತ ಮೊದಲ ನಕ್ಸಲೀಯ ದಾಳಿಯಲ್ಲಿ ಪತಿ ನಾರಾಯಣನ್ ಮತ್ತು ಪುತ್ರಿ ಅಜಿತಾ ಜೊತೆಗೆ ಪಾಲ್ಗೊಂಡಿದ್ದರು. 1968ರ ನವೆಂಬರ್ 22ರಂದು ಸುಮಾರು 300 ಮಂದಿಯ ಸಶಸ್ತ್ರ ತಂಡ ತಲಶ್ಶೇರಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿತು. 48 ಗಂಟೆಗಳ ಬಳಿಕ ರೈತ ಕ್ರಾಂತಿಕಾರಿಗಳ ಗುಂಪೊಂದು ವೇನಾಡಿನ ಪುಲಪಲ್ಲಿಯಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿ ಪೊಲೀಸ್ ವೈರ್ ಲೆಸ್ ಆಪರೇಟರನನ್ನು ಕೊಂದು ಇತರ ಹಲವರನ್ನು ಗಾಯಗೊಳಿಸಿತ್ತು. 1970ರಲ್ಲಿ ಒಮ್ಮೆ ಮತ್ತು 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇನ್ನೊಮ್ಮೆ ಮಂದಾಕಿನಿ ಅವರನ್ನು ಬಂಧಿಸಲಾಗಿತ್ತು. ಗುಜರಾತಿನ ಭಾವನಗರದ ಬ್ರಾಹ್ಮಣ ಕುಟುಂಬ ಒಂದರಲ್ಲಿ ಜನಿಸಿದ ಮಂದಾಕಿನಿ ಮುಂಬೈಯಲ್ಲಿ ಇದ್ದಾಗ ಕಮ್ಯೂನಿಸಂ ಕಡೆಗೆ ಆಕರ್ಷಿತರಾದರು. ಅಲ್ಲೇ ಅವರಿಗೆ, ಮುಂದೆ ಪತಿಯಾದ ಮಲಯಾಳಿ ನಾರಾಯಣನ್ ಭೇಟಿಯೂ ಆಯಿತು. ಮದುವೆಯ ಬಳಿಕ ಅವರು ಕೋಯಿಕ್ಕೋಡಿನಲ್ಲಿ ನೆಲೆಸಿದರು. ಅಲ್ಲಿ ಮಂದಾಕಿನಿ ಗುಜರಾತಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಕೇರಳದಲ್ಲಿ ನಕ್ಸಲೀಯ ಚಳವಳಿಯ ಕಾವು ತಗ್ಗಿದ ಬಳಿಕ ಮಂದಾಕಿನಿ ಮಾನವ ಹಕ್ಕುಗಳ ಚಳವಳಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಎಡಪಂಥೀಯ ಮಹಿಳಾ ಹಕ್ಕುಗಳ ಗುಂಪುಗಳು ಮಂದಾಕಿನಿಯನ್ನು ಅಮ್ಮನಂತೆ ಆದರಿಸಿದವು.
2006: ಬಿಜೆಪಿ ಕರ್ನಾಟಕ ಘಟಕದ ಅಧ್ಯಕ್ಷರಾಗಿ ಸಂಸತ್ ಸದಸ್ಯ ಡಿ.ವಿ. ಸದಾನಂದ ಗೌಡ ಮುಂದಿನ ಮೂರು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡರು.
2006: ನೇಪಾಳದ ದೊರೆ ಜ್ಞಾನೇಂದ್ರ ಅವರನ್ನು ಪದಚ್ಯುತಗೊಳಿಸಲು ಹಾಗೂ ಸಂವಿಧಾನ ರಚನಾ ಸಭೆಗೆ ಜೂನ್ ತಿಂಗಳಲ್ಲಿ ಚುನಾವಣೆ ನಡೆಯುವವರೆಗೆ ಪ್ರಧಾನಿ ಕೊಯಿರಾಲಾ ಅವರು ದೇಶದ ಮುಖ್ಯ ಕಾರ್ಯ ನಿರ್ವಾಹಕರಾಗಿ ಕಾರ್ಯ ನಿರ್ವಹಿಸಬೇಕು ಎಂಬ ಒಮ್ಮತದ ತೀರ್ಮಾನಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಬಂದವು.
2005: ಖ್ಯಾತ ಉಕ್ಕು ಉದ್ಯಮಿ ಲಕ್ಷ್ಮಿ ನಿವಾಸ ಮಿತ್ತಲ್ 2000 ಕೋಟಿ ಆಸ್ತಿಯೊಂದಿಗೆ ಭಾರತದ ಅತಿ ಹೆಚ್ಚು ಶ್ರೀಮಂತರ ಪಟಿಯಲ್ಲಿ ಮೊದಲ ಸ್ಥಾನ ಪಡೆದರು. ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಮ್ ಜಿ 1100 ಕೋಟಿ ಬೆಲೆಯ ಆಸ್ತಿಯೊಂದಿಗೆ ದ್ವಿತೀಯ ಸ್ಥಾನವನ್ನೂ, 700 ಕೋಟಿ ಆಸ್ತಿಯೊಂದಿಗೆ ಮುಖೇಶ ಅಂಬಾನಿ ತೃತೀಯ ಸ್ಥಾನವನ್ನೂ, 550 ಕೋಟಿ ರೂಪಾಯಿ ಬೆಲೆಯ ಆಸ್ತಿಯೊಂದಿಗೆ ಅನಿಲ್ ಅಂಬಾನಿ ಚತುರ್ಥ ಸ್ಥಾನವನ್ನೂ ಪಡೆದರು. ಫೋಬ್ಸ್ ನಿಯತಕಾಲಿಕ ಭಾರತದ 40 ಶ್ರೀಮಂತರ ಈ ಪಟ್ಟಿಯನ್ನು ಪ್ರಕಟಿಸಿತು.
2005: ಹಿರಿಯ ವಿದ್ವಾಂಸ ಪ್ರೊ. ಎಸ್. ಕೆ. ರಾಮಚಂದ್ರರಾವ್, ಚಿತ್ರನಟ ವಿಷ್ಣುವರ್ಧನ್, ನೃತ್ಯಗುರು ಮಾಯಾರಾವ್ ಹಾಗೂ ಕಲಾವಿದ ಬಾಲು ಅವರಿಗೆ ಗೌರವ ಡಾಕ್ಟರೇಟ್ ನೀಡುವ ಪ್ರಸ್ತಾವಕ್ಕೆ ಬೆಂಗಳೂರು ವಿವಿ ಅಕೆಡಮಿಕ್ ಕೌನ್ಸಿಲ್ ಒಪ್ಪಿಗೆ ನೀಡಿತು.
2005: ಸಂಸತ್ ಭವನವನ್ನು ಸ್ಫೋಟಿಸುವುದಾಗಿ ತಿರುನಲ್ವೇಲಿಯಿಂದ ಬಂದ ಮಿಂಚಂಚೆ (ಇ-ಮೇಲ್) ಪರಿಣಾಮವಾಗಿ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ದಿಢೀರನೆ ಸ್ಥಗಿತಗೊಳಿಸಿ ಸದನಗಳನ್ನು ಹಠಾತ್ತನೆ ಮೂರು ಗಂಟೆಗಳ ಅವಧಿಗೆ ಮುಂದೂಡಲಾಯಿತು. ಎರಡು ಗಂಟೆ ಕಾಲದ ಶೋಧದ ಬಳಿಕ ಬೆದರಿಕೆ ಹುಸಿ ಎಂಬುದು ಖಚಿತಗೊಂಡಿತು.
2005: ಬೆಂಗಳೂರಿನ ಹ್ಯೂಲೆಟ್ ಪ್ಯಾಕಾರ್ಡ್ (ಎಚ್ ಪಿ) ಕಾಲ್ ಸೆಂಟರಿನ ಉದ್ಯೋಗಿ ಕಂಪ್ಯೂಟರ್ ಎಂಜಿನಿಯರ್ ಪ್ರತಿಭಾ (24) ಎಂಬವರನ್ನು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಾರು ಚಾಲಕ ಕತ್ತು ಕತ್ತರಿಸಿ ಕೊಂದ ಘಟನೆ ಬೆಳಕಿಗೆ ಬಂತು. ಈಕೆಯನ್ನು ಮೂರು ದಿನ ಹಿಂದೆಯೇ (12-12-06) ಕೊಲೆಗೈಯಲಾಗಿದ್ದು, ಶವ ಅಂಜನಾಪುರ ಬಳಿಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು.
1997: ವಿಡಿಯೋಟೇಪ್ ಕಾರ್ಟೂನನ್ನು ವೀಕ್ಷಿಸಿದ ಬಳಿಕ ರಕ್ತ ಕಾರಲು ಆರಂಭಿಸಿದ ಹಿನ್ನೆಲೆಯಲ್ಲಿ 700ಕ್ಕೂ ಹೆಚ್ಚು ಮಕ್ಕಳನ್ನು ಜಪಾನಿನಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಯಿತು. ವಿಡಿಯೋವನ್ನು ಸಮೀಪದಿಂದ ವೀಕ್ಷಿಸಿದಾಗ ಬೆಳಕಿನ ಅಲೆಗಳ ತೀವ್ರತೆಯಿಂದ `ಲಘು ಮೂರ್ಛೆಗೆ'ಗೆ (ಲೈಟ್ ಎಪಿಲೆಪ್ಸಿ) ತುತ್ತಾಗಿ ಇಂತಹ ಪರಿಸ್ಥಿತಿ ಉಂಟಾಯಿತು.
1971: ಪಾಕಿಸ್ಥಾನಿ ಪಡೆಗಳು ಭಾರತೀಯ ಸೇನೆಗೆ ಶರಣಾಗತವಾದವು. ಬಾಂಗ್ಲಾದೇಶದಲ್ಲಿನ ಪಾಕಿಸ್ತಾನಿ ಪಡೆಗಳ ಮಹಾದಂಡನಾಯಕ ಜನರಲ್ ಎ.ಎ.ಕೆ. ನಿಯಾಜಿ ಅವರು ಭಾರತದ ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆಂಟ್ ಜನರಲ್ ಜೆ. ಎಸ್. ಅರೋರಾ ಅವರ ಮುಂದೆ ಶರಣಾದರು. 90,000 ಕ್ಕೂ ಹೆಚ್ಚು ಪಾಕಿಸ್ಥಾನಿ ಸೈನಿಕರನ್ನು ಭಾರತವು `ಸಮರ ಕೈದಿ'ಗಳಾಗಿ ತನ್ನ ವಶಕ್ಕೆ ತೆಗೆದುಕೊಂಡಿತು. ಬಾಂಗ್ಲಾದೇಶದಲ್ಲಿ ಈ ದಿನವನ್ನು `ವಿಕ್ಟರಿ ಡೇ' ಆಗಿ ಆಚರಿಸಲಾಯಿತು. ಭಾರತದಲ್ಲೂ ಈ ದಿನವನ್ನು `ವಿಜಯ ದಿವಸ್' ಆಗಿ ಆಚರಿಸಲಾಯಿತು.
1952: ಪ್ರತ್ಯೇಕ ಆಂಧ್ರಪ್ರದೇಶ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಆಮರಣ ನಿರಶನ ಕೈಗೊಂಡಿದ್ದ ಪೊಟ್ಟಿ ಶ್ರೀರಾಮುಲು ಅವರು ತಮ್ಮ ನಿರಶನದ 58ನೇ ದಿನ ಮೃತರಾದರು. 1953ರಲ್ಲಿ ಆಂಧ್ರಪ್ರದೇಶವು ಭಾಷಾ ಆಧಾರದಲ್ಲಿ ರಚನೆಗೊಂಡ ಭಾರತದ ಪ್ರಥಮ ರಾಜ್ಯವಾಯಿತು.
1951: ಹೈದರಾಬಾದಿನಲ್ಲಿ ಸಾಲಾರ್ ಜಂಗ್ ಮ್ಯೂಸಿಯಮ್ ಉದ್ಘಾಟನೆಗೊಂಡಿತು. ಮ್ಯೂಸಿಯಮ್ಮಿನಲ್ಲಿ ಮೀರ್ ಯೂಸುಫ್ ಆಲಿ (ಸಾಲಾರ್ ಜಂಗ್ 3) ಅವರ ಸಂಗ್ರಹವಿದೆ.
1939: ಪ್ರಾಧ್ಯಾಪಕ , ಜಾನಪದ ತಜ್ಞ, ಸಾಹಿತಿ ಪ್ರೊ. ಡಿ. ಲಿಂಗಯ್ಯ ಅವರು ದೇವೇಗೌಡ- ಸಿದ್ದಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಪೀಹಳ್ಳಿಯಲ್ಲಿ ಜನಿಸಿದರು.
1917: ಇಂಗ್ಲಿಷ್ ವಿಜ್ಞಾನ ಕಥೆಗಾರ ಆರ್ಥರ್ ಚಾರ್ಲ್ಸ್ ಕ್ಲಾರ್ಕ್ ಹುಟ್ಟಿದ ದಿನ. ಇವರು ಸಂಪರ್ಕ ಉಪಗ್ರಹಗಳ ಬಳಕೆ ಬಗ್ಗೆ ಭವಿಷ್ಯ ನುಡಿದ ವ್ಯಕ್ತಿ.
1826: ಇಟಲಿಯ ಖಗೋಳ ತಜ್ಞ ಗಿಯೊವನ್ನಿ ಬಟ್ಟಿಸ್ಟಾ ಡೊನಾಟಿ (1826-73) ಹುಟ್ಟಿದ ದಿನ. ಈತ ದೂಮಕೇತುವಿನ ಬಾಲದಲ್ಲಿ `ಮಿನುಗುವ ಅನಿಲ' (luminous gas) ಇದೆ ಎಂಬುದನ್ನು ಮೊತ್ತ ಮೊದಲ ಬಾರಿಗೆ ಗಮನಿಸಿದ. ಹಾಗೂ ಧೂಮಕೇತುವಿನ ಬಾಲ ಹೊಳೆಯುವುದು ಕೇವಲ ಸೂರ್ಯನ ಬೆಳಕಿನ ಪ್ರತಿಫಲನದಿಂದ ಅಲ್ಲ ಎಂದು ವಿವರಿಸಿದ.
No comments:
Post a Comment