Tuesday, December 4, 2018

ಇಂದಿನ ಇತಿಹಾಸ History Today ಡಿಸೆಂಬರ್ 04


ಇಂದಿನ ಇತಿಹಾಸ History Today ಡಿಸೆಂಬರ್  04
 ೨೦೧೮: ನವದೆಹಲಿ: ಆಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದಲ್ಲಿ ತನಿಖಾ ಸಂಸ್ಥೆಗಳಿಗೆ
ಬೇಕಾಗಿದ್ದ ಆರೋಪಿ ಬ್ರಿಟಿಷ್ ಮಧ್ಯವರ್ತಿ ಕ್ರಿಸ್ಟಿಯನ್ ಜೇಮ್ಸ್ ಮೈಕೆಲ್ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಯಿತು. ಕ್ರಿಸ್ಟಿಯನ್ ಮೈಕಲ್ ಅವರನ್ನು ಭಾರತಕ್ಕೆ ಗಡೀಪಾರು ಮಾಡಬೇಕು ಎಂಬುದಾಗಿ ಕೆಳಗಿನ ನ್ಯಾಯಾಲಯ ನೀಡಿದ್ದ ತೀರ್ಪನ್ನು ದುಬೈ ನ್ಯಾಯಾಲಯ ಕಳೆ ತಿಂಗಳು ಎತ್ತಿ ಹಿಡಿದಿತ್ತು. ಪೊಲೀಸರ ಕ್ರಿಮಿನಲ್ ತನಿಖಾ ಇಲಾಖೆಯು (ಸಿಐಡಿ) ಮೈಕೆಲ್ ಅವರನ್ನು ಬಂಧನದಲ್ಲಿ ಇರಿಸಿತ್ತು. ಭಾರತ ಸರ್ಕಾರದ ಮನವಿ ಮೇರೆಗೆ ಕ್ರಿಸ್ಟಿಯನ್ ಅವರನ್ನು ಗಡೀಪಾರು ಮಾಡಲಾಯಿತು.  ಕ್ರಿಸ್ಟಿಯನ್ ಗಡೀಪಾರು ಕೋರಿ ಭಾರತವು ಕೆಲಸ ಸಮಯದ ಹಿಂದೆ ಕೊಲ್ಲಿ ರಾಷ್ಟ್ರಕ್ಕೆ ಮನವಿ ಮಾಡಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ  ಕ್ರಿಮಿನಲ್ ತನಿಖೆಗಳ ಆಧಾರದಲ್ಲಿ ಭಾರತ ಸರ್ಕಾರವು ಗಡೀಪಾರು ಕೋರಿಕೆಯನ್ನು ಮಾಡಿತ್ತು. ಜಾರಿ ನಿರ್ದೇಶನಾಲಯವು ೨೦೧೬ರ ಜೂನ್ ತಿಂಗಳಲ್ಲಿ ಮೈಕೆಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಆಗಸ್ಟಾ ವೆಸ್ಟ ಲ್ಯಾಂಡ್ ನಿಂದ ಮೈಕೆಲ್ ೩೦ ಮಿಲಿಯನ್ ಯೂರೋ (೨೨೫ ಕೋಟಿ ರೂಪಾಯಿ) ಪಡೆದಿರುವುದಾಗಿ ಆಪಾದಿಸಿತ್ತು. ಈ ಹಣವು ಕಂಪೆನಿಯ ಪರವಾಗಿ ೧೨ ಹೆಲಿಕಾಪ್ಟರ್ ವ್ಯವಹಾರ ಕಾರ್ಯಗತಕ್ಕೆ ನೀಡಿದ ಲಂಚದ ಹೊರತು ಬೇರೇನೂ ಅಲ್ಲ ಎಂದು ದೋಷಾರೋಪ ಪಟ್ಟಿಯಲ್ಲಿ ಆಪಾದಿಸಲಾಗಿತ್ತು. ಪ್ರಕರಣದಲ್ಲಿ ತನಿಖೆಗೆ ಒಳಗಾಗಿರುವ ಮೂವರು ಮಧ್ಯವರ್ತಿಗಳಲ್ಲಿ ಮೈಕೆಲ್ ಒಬ್ಬರಾಗಿದ್ದು, ಇವರಲ್ಲದೆ ಗೈಡೊ ಹಶ್ಚಕೆ ಮತ್ತು ಕಾರ್ಲೋ ಗೆರೋಸಾ ಅವರಿಗಾಗಿ ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸುಗಳನ್ನು ಜಾರಿ ಮಾಡಿದೆ. ನ್ಯಾಯಾಲಯವೊಂದು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ಇಬ್ಬರು ಭಾರತೀಯರ ಜೊತೆ ಸೇರಿ ಮೈಕೆಲ್ ದೆಹಲಿಯಲ್ಲಿ ಸ್ಥಾಪಿಸಿದ ಮಾಧ್ಯಮ ಸಂಸ್ಥೆಗೆ ದುಬೈ ಮೂಲದ ಗ್ಲೋಬಲ್ ಸರ್ವೀಸಸ್ ಸಂಸ್ಥೆಯ ಮೂಲಕ ಈ ಹಣವನ್ನು ಪಾವತಿ ಮಾಡಲಾಗಿದ್ದು,  ಕ್ರಿಮಿನಲ್ ಚಟುವಟಿಕೆ ಮತ್ತು ಭ್ರಷ್ಟ ಮಾರ್ಗದ ಮೂಲಕ ಆಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಪಾವತಿ ಮಾಡಲಾದ ಹಣ ಮೈಕೆಲ್ ಗೆ ತಲುಪಿತ್ತು  ಎಂದು ಜಾರಿ ನಿರ್ದೇಶನಾಲಯದ ತನಿಖೆಯಿಂದ ಗೊತ್ತಾಗಿತ್ತು.

 ೨೦೧೮: ನವದೆಹಲಿ: ಚುನಾವಣಾ ಭಾಷಣಗಳನ್ನು ತಾವು ’ಭಾರತ ಮಾತಾ ಕೀ ಜೈ’ ಉದ್ಘೋಷದೊಂದಿಗೆ ಆರಂಭಿಸುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾಡಿದ್ದ ಟೀಕೆಯನ್ನೇ  ಕಾಂಗ್ರೆಸ್ ನಾಯಕನ ವಿರುದ್ಧ ಟೀಕೆಗೆ ’ಮದ್ದುಗುಂಡು’ ಆಗಿ ಬಳಸಿದ ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.  ‘ಚುನಾವಣಾ ಭಾಷಣಗಳನ್ನು ’ಭಾರತ್ ಮಾತಾ ಕಿ ಜೈ’ ಉದ್ಘೋಷದೊಂದಿಗೆ ತಾವು ಆರಂಭಿಸಬಾರದು ಎಂದು ರಾಹುಲ್ ಗಾಂಧಿ ಫತ್ವಾ ಹೊರಡಿಸಿದ್ದಾರೆ. ಕಾಂಗ್ರೆಸ್ ನಾಯಕ ಇಂತಹ ಮಾತುಗಳನ್ನು ಹೇಳುವುದು ನಾಚಿಕೆಗೇಡು’ ಎಂದು ಮೋದಿ ಹೇಳಿದರು. ರಾಜಸ್ಥಾನದ ಆಳ್ವಾರ್ನಲ್ಲಿ ಭಾಷಣ ಮಾಡುತ್ತಾ ರಾಹುಲ್ ಗಾಂಧಿ ಅವರು  ’ಪ್ರಧಾನಿಯವರು ಎಲ್ಲೆಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೋ ಅಲ್ಲೆಲ್ಲ ಜನರು ’ಭಾರತ್ ಮಾತಾ ಕೀ ಜೈ’ ಮಂತ್ರ ಘೋಷಿಸುವಂತೆ ಮಾಡುತ್ತಾರೆ. ಆದರೆ ಅದರ ಅರ್ಥ ಏನು ಎಂಬುದು ಯಾರಿಗಾದರೂ ಗೊತ್ತೇ? ರೈತರು, ಯುವಕರು ಮತ್ತು ಕಾರ್ಮಿಕರು ನಮ್ಮ ’ಭಾರತ್ ಮಾತಾ’. ಪ್ರತಿಯೊಂದು ಭಾಷಣದಲ್ಲೂ ಮೋದಿ ಅವರು ’ಭಾರತ್ ಮಾತಾ ಕೀ ಜೈ’ ಹೇಳುತ್ತಾರೆ, ಆದರೆ ವಾಸ್ತವದಲ್ಲಿ ಅವರು ನೀರವ್ ಮೋದಿ, ಮೆಹುಲ್ ಚೊಕ್ಸಿ, ಅನಿಲ್ ಅಂಬಾನಿ ಅವರಿಗಾಗಿ ಕೆಲಸ ಮಾಡುತ್ತಾರೆ’ ಎಂದು ಹೇಳಿದ್ದರು.  ಪ್ರಧಾನಿಯವರು ತಮ್ಮ ಸಭೆಗಳಲ್ಲಿ ’ಭಾರತ್ ಮಾತಾ ಕಿ ಜೈ’ ಘೋಷಿಸುವುದರಿಂದ ದೂರ ಉಳಿಯಬೇಕು’ ಎಂದೂ ರಾಹುಲ್ ಹೇಳಿದ್ದರು.  ‘ನಾನು ಭಾರತ್ ಮಾತಾ ಕೀ ಜೈ’ ಜೊತೆಗೆ ನನ್ನ ಸಭೆಗಳನ್ನು ಆರಂಭಿಸಬಾರದು ಎಂದು ಕಾಂಗ್ರೆಸ್ ನನಗೆ ’ಫತ್ವಾ’ ನೀಡಿದೆ. ಅವರು ಹೇಗೆ ಇದನ್ನು ನಿರಾಕರಿಸುತ್ತಾರೆ? ಇಂತಹ ವಿಷಯ ಹೇಳಲೂ ಅವರಿಗೆ ನಾಚಿಕೆಯಾಗಬೇಕು. ಇದು ನಮ್ಮ ತಾಯ್ನಾಡಿನ ಬಗ್ಗೆ ಅವರಿಗೆ ಇರುವ ಅಗೌರವವನ್ನು ತೋರಿಸುತ್ತದೆ’ ಎಂದು ರಾಜಸ್ಥಾನದ ಸಿಕಾರ್ನಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಹೇಳಿದರು. ಅದೇ ತೀವ್ರತೆಯ ದಾಳಿಯನ್ನು ಮುಂದುವರೆಸಿದ ಮೋದಿ, ಭಾರತೀಯ ಸೇನೆಯು ಗಡಿಯಾಚೆ ತೆರಳಿ ಪಾಕಿಸ್ತಾನದಲ್ಲಿ ಸರ್ಜಿಕಲ್ ದಾಳಿ ನಡೆಸಿದಾಗ ಕಾಂಗ್ರೆಸ್ ಪಕ್ಷಕ್ಕೆ ಆಘಾತವಾಯಿತು. ಕಾಂಗ್ರೆಸ್ ಪಕ್ಷದ ನಾಯಕರ ಮುಖದ ಎಲ್ಲ ಬಣ್ಣಗಳೂ ಮಾಸಿಹೋದವು ಎಂದು ಹೇಳಿದರು. ’ನಮ್ಮ ಯೋಧರು ಸರ್ಜಿಕಲ್ ದಾಳಿ ನಡೆಸಿ ಹಿಂತಿರುಗಿದಾಗ ಇಡೀ ರಾಷ್ಟ್ರವೇ ಉತ್ಸಾಹದಿಂದ ಕುಣಿದಾಡಿತು. ಆದರೆ ಕಾಂಗ್ರೆಸ್ ಮಾತ್ರವೇ ಶೋಕಾಚರಣೆಯಲ್ಲಿದ್ದಂತೆ ಕಂಡಿತು. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅವರ ನಾಯಕ ಹೇಳಿದರು. ದಾಳಿಯ ಬಗ್ಗೆ ಫೋಟೋಗ್ರಾಫಿಕ್ ಮತ್ತು ವಿಡಿಯೋ ಸಾಕ್ಷ್ಯ ಬೇಕು ಎಂದು ಅವರು ಒತ್ತಾಯಿಸಿದರು. ಯೋಧರು ಬಂದೂಕಿನೊಂದಿಗೆ ಹೋಗುತ್ತಾರೋ ಅಥವಾ ಕ್ಯಾಮರಾದೊಂದಿಗೆ ಹೋಗುತ್ತಾರೋ? ಎಂದು ನಾನು ನಿಮ್ಮನ್ನು ಕೇಳಬಯಸುತ್ತೇನೆ’ ಎಂದು ಮೋದಿ ನುಡಿದರು.   ‘ಸರ್ಜಿಕಲ್ ದಾಳಿ ಅಂದರೇನು ಎಂದು ಪಾಕಿಸ್ತಾನ ಅರ್ಥ ಮಾಡಿಕೊಂಡಿದೆ, ಆದರೆ ಪಾಕಿಸ್ತಾನ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ ಕಾಂಗ್ರೆಸ್ ಅದನ್ನು ಅಂಗೀಕರಿಸಲು ನಿರಾಕರಿಸಿದೆ ಮತ್ತು ಈಗಲೂ ಅದನ್ನು ನಂಬುತ್ತಿಲ್ಲ’ ಎಂದು ಪ್ರಧಾನಿ ಹೇಳಿದರು.  ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒನ್ ರಾಂಕ್ ಒನ್ ಪೆನ್ಶನ್- ಒರೋಪ್) ವಿಷಯವನ್ನೂ ಹಿಡಿದುಕೊಂಡು ಮೋದಿ ಅವರು ರಾಹುಲ್ ಗಾಂಧಿ ಅವರನ್ನು ಝಾಡಿಸಿದರು.   ‘ನಮ್ಮ ಯೋಧರು ಕಳೆದ ೪೦ ವರ್ಷಗಳಿಂದ ಒರೋಪ್ ಜಾರಿಗೆ ಒತ್ತಾಯಿಸುತ್ತಿದ್ದರು. ಅವರು ರಾಜೀವ್ ಗಾಂಧಿ ಅವರ ಕಾಲದಲ್ಲಿ ಅದಕ್ಕಾಗಿ ಆಗ್ರಹಿಸಿದರು. ಇಂದಿರಾಗಾಂಧಿ ಅವರ ಕಾಲದಲ್ಲಿ ಇದಕ್ಕಾಗಿ ಮನವಿ ಮಾಡಿದರು. ನಿಮ್ಮ ತಾಯಿಯವರ ದೂರ ನಿಯಂತ್ರಿತ ಸರ್ಕಾರದ ಕಾಲದಲ್ಲಿ ಇದಕ್ಕಾಗಿ ಒತ್ತಾಯಿಸಿದ್ದರು. ಆದರೆ ನಿಮ್ಮ ಪಕ್ಷ ಅದನ್ನು ಆಲಿಸಲಿಲ್ಲ. ಕಾಂಗ್ರೆಸ್ ಪಕ್ಷವು ಅವರಿಗಾಗಿ ಏನೂ ಮಾಡಲಿಲ್ಲ. ೨೦೧೪ರಲ್ಲಿ ದೆಹಲಿಯಲ್ಲಿ ಸರ್ಕಾರ ಬದಲಾಯಿತು. ನೀವು ನನ್ನನ್ನು ಪ್ರಧಾನ ಸೇವಕನಾಗಿ ಆಯ್ಕೆ ಮಾಡಿದರಿ. ನಾವು ಒರೋಪ್ ವಿಚಾರದಲ್ಲಿ ಕಾರ್ಯ ಮಗ್ನರಾದೆವು. ಒರೋಪ್ ವಿಚಾರದಲ್ಲಿ ಕಾಂಗ್ರೆಸ್ ಮಾಡಿದ್ದ ಕೆಲಸ ಎಷ್ಟೊಂದು ಬೇಸರದಾಯಕವಾಗಿತ್ತು ಎಂಬುದನ್ನು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಲೆಕ್ಕಾಚಾರಗಳನ್ನು ಮಾಡುವುದಕ್ಕೇ ನಮಗೆ ೨ ವರ್ಷ ಬೇಕಾಯಿತು. ಬಳಿಕ ನಾವು ರಾಷ್ಟ್ರದ ಯೋಧರಿಗಾಗಿ ’ಒರೋಪ್’ ಜಾರಿ ಮಾಡಿದೆವು. ಈಗ ಪ್ರತಿವರ್ಷ ೧೧,೦೦೦ ಕೋಟಿ ರೂಪಾಯಿಗಳನ್ನು ನಾವು ಒರೋಪ್ ಅಡಿಯಲ್ಲಿ ನಮ್ಮ ಸೈನಿಕರಿಗಾಗಿ ವಿತರಣೆ ಮಾಡುತ್ತಿದ್ದೇವೆ. ಸೈನಿಕರ ಈ ಬೇಡಿಕೆಯನ್ನು ಮೊದಲೇ ಈಡೇರಿಸಲು ಆಗುತ್ತಿರಲಿಲ್ಲವೇ? ನಿಮ್ಮ ವೋಟು ಒರೋಪ್ ಜಾರಿಯನ್ನು ಖಾತರಿಪಡಿಸಿತು’ ಎಂದು ಮೋದಿ ಹೇಳಿದರು. ಕಾಂಗ್ರೆಸ್ ಪಕ್ಷವು ಯೋಧರಿಗಾಗಿ ಏಕೆ ಏನನ್ನೂ ಮಾಡದೇ ಇರಲು ಕಾರಣ ಪಕ್ಷದ ನಾಯಕರಿಗೆ ಅವರ ಬಗ್ಗೆ ಗೌರವ ಇಲ್ಲದೇ ಇರುವುದೇ ಆಗಿದೆ. ಇಲ್ಲದೇ ಇದ್ದಲ್ಲಿ ಕಾಂಗ್ರೆಸ್ ನಾಯಕ ಸೇನಾ ಮುಖ್ಯಸ್ಥರನ್ನು ’ಬೀದಿ ಬದಿಯ ಗೂಂಡಾ’ ಎಂದು ಏಕೆ ಹೇಳುತ್ತಾರೆ ಎಂದು ಹಿಂದಿನ ಘಟನೆಯನ್ನು ಉಲ್ಲೇಖಿಸುತ್ತಾ ಪ್ರಧಾನಿ ನುಡಿದರು. ವಿವಾದಗಳಿಗೆ ಗುರಿಯಾಗಿದ್ದ ಅಶೋಕ ಗೆಹ್ಲೋಟ್ ಸರ್ಕಾರ ಮತ್ತು ಭನ್ವಾರಿ ದೇವಿ ಪ್ರಕರಣವನ್ನು ಉಲ್ಲೇಖಿಸಿದ ಮೋದಿ, ಕಾಂಗ್ರೆಸ್ ಪಕ್ಷವು ಅತ್ಯಾಚಾರ ಆರೋಪದಲ್ಲಿ ಸೆರೆಮನೆ ಸೇರಿದ ಕೈದಿಗಳ ಬಂಧುಗಳಿಗೆ ಟಿಕೆಟ್ಗಳನ್ನು ನೀಡಿದೆ. ಶತಮಾನಗಳ ಕಾಲ ಇದು ರಾಜಸ್ಥಾನ ಪ್ರವೇಶಿಸದಂತೆ ತಡೆಯಬೇಕು ಎಂದು ಹೇಳಿದರು. ರಾಜಸ್ಥಾನದ ಹನುಮಾನ್ ಗಢದಲ್ಲಿ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಸಿಕ್ಖರ ಪವಿತ್ರಕ್ಷೇತ್ರವಾದ ಕರ್ತಾರಪುರ ಪಾಕಿಸ್ತಾನಕ್ಕೆ ಸೇರ್ಪಡೆಯಾಗಲು ಕಾಂಗ್ರೆಸ್ ಪಕ್ಷದ ಆಗಿನ ನಾಯಕರಿಗೆ ಸಿಕ್ಖರ ಬಗೆ ಇದ್ದ ಅನಾದರವೇ ಕಾರಣ ಎಂದು ಹೇಳಿದರು. ಭಾರತ ಮತ್ತು ಪಾಕಿಸ್ತಾನವನ್ನು ಜೋಡಿಸುವ ಕರ್ತಾರಪುರ ಕಾರಿಡಾರ್ ಬಗ್ಗೆ ಉಲ್ಲೇಖ ಮಾಡಿದ ಮೋದಿ, ’೭೦ ವರ್ಷಗಳ ಹಿಂದೆಯೇ ಇದನ್ನು ಏಕೆ ಮಾಡಲಿಲ್ಲ ಎಂಬ ಪ್ರಶ್ನೆಗೆ ಕಾಂಗ್ರೆಸ್ ಉತ್ತರಿಸಬೇಕು’ ಎಂದು ಹೇಳಿದರು. ಡಿಸೆಂಬರ್ ೭ರಂದು ರಾಜಸ್ಥಾನ ವಿಧಾನಸಭಾ ಚುನಾವಣೆ ಸಲುವಾಗಿ ರಾಜ್ಯದಲ್ಲಿ ಪ್ರಚಾರ ನಿರತರಾಗಿರುವ ಪ್ರಧಾನಿ ’ಆಗಿನ ಕಾಂಗ್ರೆಸ್ ನಾಯಕರ ದೂರದೃಷ್ಟಿ ಶೂನ್ಯತೆ ಮತ್ತು ಸೂಕ್ಷ್ಮತೆಯ ಕೊರತೆಯಿಂದಾಗಿ ಕರ್ತಾರಪುರವು ಪಾಕಿಸ್ತಾನಕ್ಕೆ ಹೋಯಿತು’   ಎಂದು ನುಡಿದರು.  ಸಿಖ್ ಪಂಥದ ಸ್ಥಾಪಕ ಗುರುನಾನಕ್ ದೇವ್ ಅವರು ಅಂತಿಮ ದಿನಗಳಲ್ಲಿ ವಾಸವಾಗಿದ್ದ ಪಾಕಿಸ್ತಾನದ ಕರ್ತಾರಪುರದಲ್ಲಿನ ಗುರುದ್ವಾರ ದರ್ಬಾರ ಸಾಹಿಬ್ಗೆ ಭಾರತದ ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್ ಮಂದಿರದಿಂದ ಕಾರಿಡಾರ್ ಮೂಲಕ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಕಳೆದ ವಾರ ಶಿಲಾನ್ಯಾಸ ನೆರವೇರಿಸಲಾಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಸಿಖ್ ಭಾವನೆಗಳ ಬಗ್ಗೆ ಗೌರವ ಇಲ್ಲದೇ ಇದ್ದುದು ಮತ್ತು ಗುರುನಾನಕ್ ದೇವ್ ಅವರ ಮಹತ್ವದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಕಲ್ಪನೆಯೇ ಇಲ್ಲದೇ ಇದ್ದ ಕಾರಣ ಕರ್ತಾರಪುರ ಪಾಕಿಸ್ತಾನಕ್ಕೆ ಸೇರ್ಪಡೆಯಾಯಿತು ಎಂದು ಮೋದಿ ಹೇಳಿದರು.
  
೨೦೧೮: ನವದೆಹಲಿ: ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಗಳು ಸೇರಿದಂತೆ ಸುಮಾರು ಒಂದು ಲಕ್ಷ ಸಿಬ್ಬಂದಿಗೆ ಉನ್ನತ ಸೇನಾ ಸೇವಾ ವೇತನ (ಎಂಎಸ್ಪಿ) ನೀಡಬೇಕೆಂಬ ಸಶಸ್ತ್ರ ಪಡೆಗಳ ದೀರ್ಘ ಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಸೇನಾ ಮೂಲಗಳು ತಿಳಿಸಿದವು. ಕೇಂದ್ರ ವಿತ್ತ ಸಚಿವಾಲಯದ ನಿರ್ಧಾರದ ಬಗ್ಗೆ ಸೇನೆ ಭ್ರಮನಿರಸನಗೊಂಡಿದೆ. ನಿರ್ಧಾರವನ್ನು ಮರುಪರಿಶೀಲನೆ ಮಾಡುವಂತೆ ನಾವು ಕೋರುತ್ತೇವೆ ಎಂದು ಮೂಲಗಳು ಹೇಳಿದವು. ೮೭,೬೪೬ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿಗಳು (ಜೆಸಿಒ) ಮತ್ತು ೨೫,೪೩೪ ನೌಕಾಪಡೆ, ವಾಯಪಡೆ ಸಿಬ್ಬಂದಿ ಸೇರಿದಂತೆ ಸುಮಾರು ೧ ಲಕ್ಷ ಮಂದಿ ಸಿಬ್ಬಂದಿಯ ಮೇಲೆ ಈ ನಿರ್ಧಾರ ಪರಿಣಾಮ ಬೀರುತ್ತದೆ. ವಿಶಿಷ್ಟ ಸೇವಾ ಪರಿಸ್ಥಿತಿ ಮತ್ತು ಕಠಿಣತೆಯನ್ನು ಗಮನಿಸಿ ಸೇನಾ ಸೇವಾ ವೇತನವನ್ನು ಅಳವಡಿಸಲಾಗಿದೆ. ಜೆಸಿಒಗಳು ಮತ್ತು ನೌಕಾಪಡೆ ಹಾಗೂ ಭಾರತೀಯ ವಾಯಪಡೆಯ ಸಮಾನ ಶೃಎಣಿಯ ಸಿಬ್ಬಂದಿಗೆ ಉನ್ನತ ಸೇನಾ ಸೇವಾ ವೇತನ ನೀಡಬೇಕೆಂಬ ಪ್ರಸ್ತಾಪವನ್ನು ವಿತ್ತ ಸಚಿವಾಲಯವು ತಿರಸ್ಕರಿಸಿದೆ ಎಂದು ಸುದ್ದಿ ಮೂಲವೊಂದು ಹೇಳಿತು.
  
೨೦೧೮: ಆಳ್ವಾರ್: ಉದ್ಯೋಗಾವಕಾಶಗಳು, ರೈತ ಸಾಲಮನ್ನಾ, ರಫೇಲ್ ವಹಿವಾಟು ಮತ್ತು ನೋಟು ಅಮಾನ್ಯೀಕರಣ ವಿಷಯಗಳನ್ನು ಎತ್ತಿಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ೨ ಕೋಟಿ ಯುವಕರಿಗೆ ಉದ್ಯೋಗ ಒದಗಿಸುವುದಾಗಿ ಮೋದಿ ನೀಡಿದ್ದ ಭರವಸೆಯನ್ನು ರಾಜಸ್ಥಾನ ಚುನಾವಣಾ ಪ್ರಚಾರ ಸಭೆಗಳಲ್ಲಿ ಪ್ರಸ್ತಾಪಿಸಿದ ಅವರು ಪ್ರಧಾನಿ ವಿರುದ್ಧ ವಾಗ್ಬಾಣಗಳನ್ನು ಎಸೆದರು.  ‘ನರೇಂದ್ರ ಮೋದಿ ಅವರು ತಮ್ಮ ೨೦೧೪ರ ಚುನಾವಣಾ ಭಾಷಣಗಳಲ್ಲಿ ೨ ಕೋಟಿ ಯುವಕರಿಗೆ ಕೆಲಸ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ನೀವು ಕೆಲಸ ಕೊಟ್ಟಿದ್ದರೆ ಆಳ್ವಾರ್ನಲ್ಲಿ ನಾಲ್ವರು ಯುವಕರು ಏಕೆ ಆತ್ಮಹತ್ಯೆ ಮಾಡಿಕೊಂಡರು?’ ಎಂದು ರಾಹುಲ್ ಪ್ರಶ್ನಿಸಿದರು. ಆಳ್ವಾರ್ ಜಿಲ್ಲೆಯ ಮಲಖೇರಾ ಪಟ್ಟಣದಲ್ಲಿ ಚುನಾವಣಾ ಸಭೆಯಲ್ಲಿ  ರಾಹುಲ್ ಮಾತನಾಡಿದರು.   ’ಮೂವರು ಗೆಳೆಯರು ಆಳ್ವಾರ್ ಜಿಲ್ಲೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ನೆಗೆದು ಆತ್ಮಹತ್ಯೆ ಮಾಡಿಕೊಂಡರು. ಅವರ ಜೊತೆಗೆ ನೆಗೆದ ಇನ್ನೊಬ್ಬ ಯುವಕ ಗಾಯಗಳೊಂದಿಗೆ ಪಾರಾದ. ಆತ್ಮಹತ್ಯಾ ಒಪ್ಪಂದ ಮಾಡಿಕೊಂಡು ಅವರು ಈ ಕೃತ್ಯ ಎಸಗಿದರು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಿಂದ ನಿರುದ್ಯೋಗದ ಪರಿಣಾಮವಾಗಿ ಅವರು ಭ್ರಮನಿರಸನಗೊಂಡಿದ್ದರು ಎಂಬುದು ಬೆಳಕಿಗೆ ಬಂತು’ ಎಂಬುದಾಗಿ ಪೊಲೀಸರು ತಿಳಿಸಿದ್ದರು. ‘ಪ್ರಧಾನಿ ತಮ್ಮ ಭಾಷಣಗಳಲ್ಲಿ ಭಾರತ ಮಾತಾ ಕಿ ಜೈ ಘೋಷಣೆ ಕೂಗುತ್ತಾರೆ, ಆದರೆ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರಿಗಾಗಿ ಕೆಲಸ ಮಾಡುತ್ತಾರೆ’ ಎಂದು ಕಾಂಗ್ರೆಸ್ ನಾಯಕ ನುಡಿದರು.  ‘ಪ್ರತಿಯೊಂದು ಭಾಷಣದಲ್ಲೂ ಅವರು (ಪ್ರಧಾನಿ) ಭಾರತ ಮಾತಾ ಕಿ ಜೈ ಎನ್ನುತ್ತಾರೆ ಮತ್ತು ಅನಿಲ್ ಅಂಬಾನಿ ಅವರಿಗಾಗಿ ದುಡಿಯುತ್ತಾರೆ. ಅವರು ತಮ್ಮ ಭಾಷಣಗಳನ್ನು ’ಅನಿಲ್ ಅಂಬಾನೀ ಕಿ ಜೈ’ ’ಮೆಹುಲ್ ಚೊಕ್ಸಿ ಕಿ ಜೈ’, ’ನೀರವ್ ಮೋದಿ ಕಿ ಜೈ’, ’ಲಲಿತ್ ಮೋದಿ ಕಿ ಜೈ’ ಎಂಬುದಾಗಿ ಆರಂಭಿಸಬೇಕು ಎಂದು ರಾಹುಲ್ ಗಾಂಧಿ ಅವರು ರಾಜಸ್ಥಾನದಲ್ಲಿ ಹೇಳಿದರು.  ‘ಭಾರತ ಮಾತಾ’ ಪದದ ಬಗ್ಗೆ ಪ್ರಸ್ತಾಪಿಸಿದ ಗಾಂಧಿ ’ಭಾರತ ಮಾತಾ ಅಂದರೆ ಇಡೀ ರಾಷ್ಟ್ರ, ರೈತರು, ಕೋಟ್ಯಂತರ ಯುವಕರು, ಮಹಿಳೆಯರು ಮತ್ತು ಕಾರ್ಮಿಕರ ಭಾವನೆಗಳು’ ಎಂದು ಹೇಳಿದರು.  ‘ನೀವು ಭಾರತ ಮಾತಾ ಬಗ್ಗೆ ಮಾತನಾಡಿದರೆ, ನೀವು ರೈತರನ್ನು ಮರೆಯಲು ಹೇಗೆ ಸಾಧ್ಯ?’ ಎಂದು ಪ್ರಶ್ನಿಸಿದ ಅವರು ೩.೫ ಕೋಟಿ ರೂಪಾಯಿ ವಸೂಲಾಗದ ಸಾಲವನ್ನು  ಮನ್ನಾ ಮಾಡಲಾಗಿದೆ, ಆದರೆ ರೈತರ ಒಂದೇ ಒಂದು ಪೈಸೆ ಸಾಲವನ್ನೂ ಮೋದಿ ಸರ್ಕಾರ ಮನ್ನಾ ಮಾಡಿಲ್ಲ’ ಎಂದು ನುಡಿದರು.  ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಜಯ ಗಳಿಸುವ ವಿಶ್ವಾಸ ವ್ಯಕ್ತ ಪಡಿಸಿದ ರಾಹುಲ್, ’ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸುವುದು ಮತ್ತು ೧೦ ದಿನಗಳಲ್ಲಿ ರೈತರ ಸಾಲಮನ್ನಾ ಮಾಡುವುದು. ಯುವಕರಿಗೆ ಉದ್ಯೋಗ ಒದಗಿಸಲು ಮುಖ್ಯಮಂತ್ರಿ ದಿನದಲ್ಲಿ ೧೮ ತಾಸು ನೀಡುವರು’ ಎಂದು ಹೇಳಿದರು. ರಫೇಲ್ ವ್ಯವಹಾರದ ಬಗ್ಗೆ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ, ’ಪ್ರಧಾನಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವುದಿಲ್ಲ, ಏಕೆಂದರೆ ಅವರು ಮಾತನಾಡಿದರೆ ಸಭೆಯಲ್ಲಿ ಯಾರಾದರೂ ಒಬ್ಬರು ’ಚೌಕೀದಾರ್ ಚೋರ್ ಹೈ’ ಎಂದು ಕೂಗುವರು’ ಎಂದು ನುಡಿದರು. ಮೋದಿ ಸರ್ಕಾರವು ೧೫ ಮಂದಿ ಉನ್ನತ ಕೈಗಾರಿಕೋದ್ಯಮಿಗಳಿಗಾಗಿ ಕೆಲಸ ಮಾಡಿದೆ ಎಂದು ರಾಹುಲ್ ಆಪಾದಿಸಿದರು. ಬಿಜೆಪಿಯು ಈ ಎಲ್ಲಾ ಆಪಾದನೆಗಳನ್ನೂ ನಿರಾಕರಿಸಿತು.  ರಾಜಸ್ಥಾನದ ಕಾಂಗ್ರೆಸ್ ರಾಜ್ಯ ಘಟಕ ಅಧ್ಯಕ್ಷ ಸಚಿನ್ ಪೈಲಟ್, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಆಳ್ವಾರ್ ವಿಧಾನಸಭಾ ಕ್ಷೇತ್ರದ ಪಕ್ಷದ ಎಲ್ಲ ಅಭ್ಯರ್ಥಿಗಳು ಮತ್ತು ಇತರ ನಾಯಕರು ಸಭೆಯಲ್ಲಿ ಹಾಜರಿದ್ದರು.
  
೨೦೧೮: ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ೨೦೧೧-೧೨ರ ಸಾಲಿನ ಆದಾಯ ತೆರಿಗೆ ಮರುಮೌಲ್ಯ ಮಾಪನಕ್ಕೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು. ಆದರೆ ತತ್ ಕ್ಷಣಕ್ಕೆ ಯಾವುದೇ ದಬ್ಬಾಳಿಕೆಯ ಕ್ರಮ ಕೈಗೊಳ್ಳದಂತೆ ಆದಾಯ ತೆರಿಗೆ ಇಲಾಖೆಯನ್ನು ನಿರ್ಬಂಧಿಸುವ ಮೂಲಕ ಕಾಂಗ್ರೆಸ್ ನಾಯಕರಿಗೆ ತಾತ್ಕಾಲಿಕ ನಿರಾಳತೆ ಒದಗಿಸಿತು. ಆದಾಯ ತೆರಿಗೆ ಇಲಾಖೆಯನ್ನು ಬಲಾತ್ಕಾರದ ಕ್ರಮ ಕೈಗೊಳ್ಳದಂತೆ ನಿರ್ಬಂಧಿಸುವ ಆದೇಶ ನೀಡುವ ಮೂಲಕ ರಾಹುಲ್ ಗಾಂಧಿ, ಸೋನಿಯಾ ಗಾಂದಿ ಮತ್ತಿತರರಿಗೆ ತಾತ್ಕಾಲಿಕ ನಿರಾಳತೆ ಒದಗಿಸಿದ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನೇತೃತ್ವದ ಪೀಠವು ಪ್ರಕರಣದ ವಿಚಾರಣೆಯನ್ನು  ಜನವರಿ ೮ಕ್ಕೆ ಮುಂದೂಡಿತು. ಇಲಾಖೆಯು  ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ೨೦೧೧-೧೨ರ ಸಾಲಿನ ಆದಾಯವನ್ನು ಮರುಮೌಲ್ಯ ಮಾಪನ ಮಾಡುವ ಕೆಲಸವನ್ನು ಆದಾಯ ತೆರಿಗೆ ಇಲಾಖೆಯು ಮುಂದುವರೆಸಬಹುದು ಮತ್ತು ತನ್ನ ಅಂತಿಮ ಆದೇಶವನ್ನೂ ನೀಡಬಹುದು ಆದರೆ ಅದನ್ನು ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತು. ಆದಾಯ ತೆರಿಗೆ ಇಲಾಖೆಯನ್ನು ಯಾವುದೇ ನ್ಯಾಯಾಲಯವೂ ಮರುಮೌಲ್ಯಮಾಪನ ಪ್ರಕ್ರಿಯೆ ನಡೆಸದಂತೆ ಎಂದೂ ನಿರ್ಬಂಧಿಸಿರಲಿಲ್ಲ, ಆದರೆ ಅದು ಈದಿನವರೆಗೂ ತನ್ನ ಆದೇಶವನ್ನು ಅಂತಿಮಗೊಳಿಸಿಲ್ಲ. ನ್ಯಾಷನಲ್ ಹೆರಾಲ್ಡ್ ವಿವಾದಕ್ಕೆ ಸಂಬಂಧಿಸಿದ ತೆರಿಗೆ ಮರುಮೌಲ್ಯಮಾಪನ ಪ್ರಕರಣದಲ್ಲಿ ಯಾವುದೇ ದಬ್ಬಾಳಿಕೆಯ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಆದಾಯ ತೆರಿಗೆ ಇಲಾಖೆಯನ್ನು ನಿರ್ಬಂಧಿಸಿದ್ದನ್ನು ಆದಾಯ ತೆರಿಗೆ ಇಲಾಖೆ ತೀವ್ರವಾಗಿ ವಿರೋಧಿಸಿತು.
ಆದೇಶವನ್ನು ವಿರೋಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ವಿಷಯವು ವಿಚಾರಣೆಗಾಗಿ ಅಂಗೀಕರಿಸಲು ಕೂಡಾ ಯೋಗ್ಯವಾದುದಲ್ಲ ಮತ್ತು ಮಧ್ಯಂತರ ಆದೇಶವು ಆದಾಯ ತೆರಿಗೆ ಇಲಾಖೆಗೆ ಶುಭ ಸೂಚಕವಲ್ಲ ಎಂದು ಅವರು ವಾದಿಸಿದರು.  ‘ಈ ಆದೇಶವು ನಮಗೆ ಅನುಕೂಲಕರವಲ್ಲ ಎಂದು ನಾನು ಹೇಳಬಲ್ಲೆ. ಇಂತಹ ಆದೇಶ ನೀಡಬೇಡಿ ಎಂದು ನಾನು ನ್ಯಾಯಾಲಯವನ್ನು ಆಗ್ರಹಿಸುತ್ತೇನೆ. ನನಗೆ ೧೦ ನಿಮಿಷಗಳ ಕಾಲಾವಕಾಶ ಕೊಡಿ, ಈ ಮೇಲ್ಮನವಿ ನೇರವಾಗಿ ವಜಾಗೊಳಿಸಲು ಯೋಗ್ಯವಾದದ್ದು ಎಂದು ನಾನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುತ್ತೇನೆ’ ಎಂದು ಮೆಹ್ತ ಹೇಳಿದರು.  ಆದರೆ ಆದೇಶವು ಉಭಯ ಕಡೆಗಳ ಪಾಲಿಗೂ ’ನ್ಯಾಯಸಮ್ಮತ’ವಾದುದಾಗಿದೆ ಎಂದು ಹೇಳಿದ ಪೀಠ, ಪ್ರಕರಣವನ್ನು ಈದಿನ ವಿಷದವಾಗಿ ಆಲಿಸಲು ಸಾಧ್ಯವಿಲ್ಲವಾದ ಕಾರಣ ಸೂಕ್ತವಾದ ಮಧ್ಯಂತರ ಆದೇಶವನ್ನು ತಾನು ನೀಡಬಹುದಾಗಿದೆ’ ಎಂದು ಹೇಳಿತು.  ಗಾಂಧಿಗಳ ಪರವಾಗಿ ಹಾಜರಾದ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಚಿದಂಬರಂ ಅವರು ಮಧ್ಯಂತರ ಆದೇಶ ನೀಡುವುದರ ಪರವಾಗಿ ವಾದ ಮಂಡಿಸಿದರು. ಈವರೆಗೂ ಪ್ರಕರಣವನ್ನು ಅರ್ಹತೆಯ ಆಧಾರದಲ್ಲಿ ಆಲಿಸಿಲ್ಲವಾದರೂ, ತಾನು ಮಧ್ಯಂತರ ಆದೇಶವನ್ನು ನೀಡುತ್ತಿರುವುದಾಗಿ ನ್ಯಾಯಾಲಯ ಸ್ಪಷ್ಟ ಪಡಿಸಿತು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಆರಂಭಿಸಿದ್ದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಪ್ರಕಾಶಕರಾದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಗೆ ಸಂಬಂಧಿಸಿದಂತೆ ತಮ್ಮ ತೆರಿಗೆಯ ಮರುಮೌಲ್ಯ ಮಾಪನ ಮಾಡುವುದನ್ನು ವಿರೋಧಿಸಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಸುಪ್ರೀಂಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.  ದೆಹಲಿ ಹೈಕೋರ್ಟ್ ಸೆಪ್ಟೆಂಬರಿನಲ್ಲಿ ನೀಡಿದ್ದ ತನ್ನ ಆದೇಶದಲ್ಲಿ ಕಾಂಗ್ರೆಸ್ ನಾಯಕರ ಅರ್ಜಿಗಳನ್ನು ವಜಾ ಮಾಡಿ ೨೦೧೧-೧೨ನೇ ಸಾಲಿನ ದಾಖಲೆಗಳ ಪರಿಶೀಲನೆಗೆ ಅದಾಯ ತೆರಿಗೆ ಇಲಾಖೆಯ ದಾರಿಯನ್ನು ಸುಗಮಗೊಳಿಸಿತ್ತು.  ‘ಕಾಂಗ್ರೆಸ್ ನಾಯಕರು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನ್ನು ಸ್ವಾಧೀನ ಪಡಿಸಿಕೊಳ್ಳಲು ಕೃತಕ ಹಾಗೂ ವಂಚನೆಯ ಕ್ರಮಗಳನ್ನು ಒಳಗೊಂಡ ಯೋಜನೆ ರೂಪಿಸಿದ್ದರು’ ಎಂದು ತೆರಿಗೆ ಇಲಾಖೆಯು ಆಪಾದಿಸಿತ್ತು. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ದಾಖಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ತನಿಖೆಯೊಂದಿಗೆ ಕಾಂಗ್ರೆಸ್ ನಾಯಕರ ಆದಾಯ ತೆರಿಗೆಯ ತನಿಖೆ ಪ್ರಾರಂಭವಾಗಿತ್ತು.  ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರೂ ನಾಯಕರು ಜಾಮೀನು ಪಡೆದಿದ್ದರು. ವಿಚಾರಣಾ ನ್ಯಾಯಾಯದಲ್ಲಿ ದಾಖಲಿಸಲಾಗಿದ್ದ ದೂರಿನಲ್ಲಿ ಸೋನಿಯಾ, ರಾಹುಲ್ ಮತ್ತು ಇತರರು ಕೇವಲ ೫೦ ಲಕ್ಷ ರೂಪಾಯಿಗಳನ್ನು ಲಾಭ ರಹಿತ ಸಂಸ್ಥೆ ಯಂಗ್ ಇಂಡಿಯನ್ (ವೈ ಐ) ಮೂಲಕ ಪಾವತಿ ಮಾಡಿ ಹಣ ವಂಚನೆ ಹಾಗೂ ಅದರ ದುರ್ವಿನಿಯೋಗಕ್ಕೆ ಸಂಚು ಹೂಡಿದ್ದರು ಎಂದು ಆಪಾದಿಸಲಾಗಿತ್ತು. ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜಿಎಲ್) ಕಾಂಗ್ರೆಸ್ ಪಕ್ಷಕ್ಕೆ ನೀಡಬೇಕಾಗಿದ್ದ ೯೦.೨೫ ಕೋಟಿ ರೂಪಾಯಿಗಳನ್ನು ಮರುಪಾವತಿ ಪಡೆಯುವ ಹಕ್ಕನ್ನು ಈ ವ್ಯವಹಾರದ ಮೂಲಕ ಯಂಗ್ ಇಂಡಿಯನ್ ಪಡೆದುಕೊಂಡಿತ್ತು.  ೨೦೧೦ರ ನವೆಂಬರ್ ತಿಂಗಳಲ್ಲಿ ಕೇವಲ ೫೦ ಲಕ್ಷ ರೂಪಾಯಿಗಳ ಬಂಡವಾಳದೊಂದಿಗೆ ಹುಟ್ಟು ಹಾಕಲಾಗಿದ್ದ ಯಂಗ್ ಇಂಡಿಯನ್ ಸಂಸ್ಥೆಯು ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ನ (ಎಜೆಎಲ್) ಎಲ್ಲ ಶೇರು, ಆಸ್ತಿಗಳನ್ನೂ ತಾನು ಸ್ವಾಧೀನ ಪಡಿಸಿಕೊಂಡಿತ್ತು. ಈ ಪ್ರಕ್ರಿಯೆಯಲ್ಲಿ ಯಂಗ್ ಇಂಡಿಯನ್ ೯೦ ಕೋಟಿ ರೂಪಾಯಿಗಳ ಎಜೆಎಲ್ನ ಸಾಲವನ್ನು ತಾನು ವಶಕ್ಕೆ ತೆಗೆದುಕೊಂಡಿತ್ತು.
  
೨೦೧೭: ಮುಂಬೈ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ನಟ ಶಶಿಕಪೂರ್ (೭೯ವರ್ಷ) ವಿಧಿವಶರಾದರು.   ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. ೧೯೭೦ರ ದಶಕದಲ್ಲಿ ಚಿತ್ರರಸಿಕರ ಮನಗೆದ್ದಿದ್ದ ಶಶಿ ಕಪೂರ್ ಅವರು, ಭಾರತ ಸರ್ಕಾರದಿಂದ ೨೦೧೧ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. ೨೦೧೫ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದರು.  ೧೯೮೬ರಲ್ಲಿ ಹೊಸದಿಲ್ಲಿ ಟೈಮ್ಸ್ನ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದರು. ಅವರ ದೀವಾರ್, ಜನೂನ್, ಕಲಿಯುಗ್ ಚಿತ್ರಗಲು ಫಿಲಂಫೇರ್ ಪ್ರಶಸ್ತಿಗೆ ಭಾಜನವಾಗಿದ್ದವು. ೧೯೩೮ ಮಾರ್ಚ್ ೧೮ರಂದು ಶಶಿ ಕಪೂರ್ ಜನಿಸಿದ್ದರು. ಸುಮಾರು ೧೭೫ ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು.  ಸುಹಾಗ್,  ಜೂನೂನ್, ವಿಜೇತ, ಉತ್ಸವ್ ಸೇರಿದಂತೆ ಹಲವು ಸಿನಿಮಾಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. ೧೯೯೧ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ಅಜೂಬಾ ಸಿನಿಮಾವನ್ನು ಶಶಿಕಪೂರ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ್ದರು. ಅಲ್ಲದೇ ಶಶಿಕಪೂರ್ ಅವರು ದ ರಿಟರ್ನ್ ಆಫ್ ದ ಥೀಫ್ ಆಫ್ ಬಗ್ದಾದ್ ಎಂಬ ಸಿನಿಮಾವನ್ನು  ರಷ್ಯನ್ ಭಾಷೆಯಲ್ಲಿ ೧೯೮೮ರಲ್ಲಿ ನಿರ್ದೇಶಿಸಿದ್ದರು. ಬಾಲನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಶಶಿ ಕಪೂರ್ ಅವರು ತನ್ನ ಸಹೋದರ ರಾಜ್ ಕಪೂರ್ ಜತೆಯಲ್ಲಿ ೧೯೪೮ರಲ್ಲಿ ಆಗ್ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದರು. ೧೯೫೧ರಲ್ಲಿ ಸೂಪರ್ ಹಿಟ್ ಆದ ಆವಾರ್ ದಲ್ಲಿಯೂ ಇಬ್ಬರೂ ಜತೆಯಾಗಿಯೇ ಚಿತ್ರಕ್ಕಾಗಿ ದುಡಿದಿದ್ದರು. ಕುನಾಲ್ ಕಪೂರ್, ಸಂಜನಾ ಕಪೂರ್ ಮತ್ತು ಕರಣ್ ಕಪೂರ್ ಶಶಿ ಕಪೂರ್ ಅವರ ಮಕ್ಕಳು. ಶಶಿಕಪೂರ್ ‘ಬಸೇರಾ’, ‘ಪಿಘಲ್ತಾ ಆಸ್ಮಾನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಶಶಿ ಕಪೂರ್ ಅಭಿನಯಿಸಿದ್ದರು. ಅಮಿತಾಬ್ ಬಚ್ಚನ್ ಜತೆಗೆ ದೀವಾರ್, ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾಲ್ ಚಿತ್ರಗಳಲ್ಲಿ ಶಶಿ ಕಪೂರ್ ನಟಿಸಿದ್ದರು. ಹಿರಿಯ ನಟ ಶಶಿ ಕಪೂರ್ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದರು.
  
೨೦೧೭: ಬೆಂಗಳೂರು: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನು ‘ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು. ನ್ಯಾಯಮೂರ್ತಿ ವಿ. ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆಮಾಡಿದ್ದು, ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

೨೦೧೭: ಬರ್ಲಿನ್ : ಗೋಡೆ ಕೆಡಹುವ, ಕಿಟಕಿ ಮುರಿಯುವ ದರೋಡೆಕೋರರ ಸಂಚನ್ನು ವಿಫಲಗೊಳಿಸುವ

‘ಸ್ಮಾರ್ಟ್ ಅಲಾರಾಂ’ ವ್ಯವಸ್ಥೆಯನ್ನು ಕಂಡು ಹಿಡಿದಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು.  ಜರ್ಮನಿಯ ಫ್ರೌನ್ಹೋಫರ್? ಗೆಸೆಲ್ಶ್ಯಾಫ್ಟ್ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಈ ಕರೆಗಂಟೆಯು, ಉಷ್ಣಾಂಶದಲ್ಲಿನ ಬದಲಾವಣೆ, ಕಿಟಕಿಗಳ ಕಂಪನಗಳನ್ನು ಪತ್ತೆ ಹಚ್ಚಿ ಸದ್ದು ಮಾಡುತ್ತದೆ. ಕಲಾ ಗ್ಯಾಲರಿ, ಆಭರಣ ಮಳಿಗೆ ಹಾಗೂ ಬ್ಯಾಂಕ್ಗಳು ರಕ್ಷಣೆಗಾಗಿ ಈ ಅಲಾರಾಂ ಹಾಗೂ ಗಾಜಿನ ರಕ್ಷಣಾ ಕವಚ ಅಳವಡಿಸಿಕೊಳ್ಳಬಹುದು. ಕಟಿಂಗ್ ಟಾರ್ಚ್ ಅಥವಾ ಡ್ರಿಲ್ ಮೂಲಕ ಗಾಜನ್ನು ಹಾನಿಗೊಳಿಸಲು ಪ್ರಯತ್ನಿಸಿದರೆ ಈಗಿನ ರಕ್ಷಣಾ ವ್ಯವಸ್ಥೆಯು ತಡವಾಗಿ ಪ್ರತಿಕ್ರಿಯಿಸುತ್ತದೆ ಅಥವಾ ಪ್ರತಿಕ್ರಿಯಿಸುವುದೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ದರೋಡೆಕೋರರು, ಹ್ಯಾಮರ್ಗೆ ಬದಲಾಗಿ ಇಂತಹ ವಸ್ತುಗಳನ್ನೇ ಗಾಜು ಒಡೆಯಲು ಬಳಸುತ್ತಿದ್ದಾರೆ. ಆದರೆ ಹೊಸ ರಕ್ಷಣಾ ಕವಚದ ಮೇಲೆ ನಿಧಾನಕ್ಕೆ ಗುದ್ದಿದರೂ ಇದು ಕೂಡಲೇ ಸದ್ದು ಮಾಡುತ್ತದೆ.

೨೦೧೬: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚೆನ್ನೈನ ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದರು. ಈ ದಿನ ಸಂಜೆ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅಪೋಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿತು. ಸೆಪ್ಟೆಂಬರ್  ೨೨ ರಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಈವರೆಗೂ ಅಲ್ಲೇ  ಇದ್ದರು. ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಚೆನ್ನೈನ ಅಪೋಲೊ            ಆಸ್ಪತ್ರೆಯ ಎದುರು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು.

೨೦೧೬: ಚೆನ್ನೈ/ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಂದ ಮಾಹಿತಿ ಪಡೆದರು. ವಿದ್ಯಾಸಾಗರ್ ರಾವ್ ಅವರು ದೂರವಾಣಿ ಮೂಲಕ ಮೋದಿ ಅವರಿಗೆ      ಮಾಹಿತಿ ನೀಡಿದ್ದಾರೆ ಎನ್ನಲಾಯಿತು.  ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ತಮಿಳುನಾಡು ಸರ್ಕಾರ ತುರ್ತು ಸಂಪುಟ ಸಭೆ ನಡೆಸಿತು. ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈಲರ್ಟ್ ಘೋಷಿಸಲಾಯಿತು. ತಮಿಳು ಭಾಷಿಗರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
.
೨೦೧೬: ನವದೆಹಲಿ: ೨೦ ರೂ. ಮತ್ತು ೫೦ ರೂ. ಹೊಸ ನೋಟುಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು, ಈ ನೋಟುಗಳಲ್ಲಿ ಮುದ್ರಣಗೊಂಡ ವರ್ಷವನ್ನು ಮುಂಭಾಗದಲ್ಲಿ ನಮೂದಿಸಲಾಗುವುದು, ಹಳೆಯ ನೋಟುಗಳು ರದ್ದಾಗುವುದಿಲ್ಲ ಅವು ಚಲಾವಣೆಯಲ್ಲಿ ಮುಂದುವರೆಯಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಹೊಸ ನೋಟುಗಳು ಹಾಲಿ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿಯನ್ನು ಒಳಗೊಂಡಿರುತ್ತದೆ. ಹಳೆಯ ೨೦ ಮತ್ತು ೫೦ ರೂ. ನೋಟುಗಳಲ್ಲಿರುವ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರಲಿದೆ ಎಂದು ಆರ್ಬಿಐ ಹೇಳಿತು. ೫೦೦ ರೂ. ಮತ್ತು ೧೦೦೦ ರೂ. ನೋಟುಗಳ ರದ್ದತಿಯ ನಂತರ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ಸರಿದೂಗಿಸಲು ಆರ್ಬಿಐ ಈ ಕ್ರಮ ತೆಗೆದುಕೊಂಡಿತು.

೨೦೧೬: ನವದೆಹಲಿ: ೨೦೧೬ರ ಅಕ್ಟೋಬರ್ ೧ರಂದು ಪ್ರಕಟಿಸಲಾಗಿದ್ದ ಸ್ವಯಂ ಕಾಳಧನ ಘೋಷಣೆ ಯೋಜನೆಯ ಅಡಿಯಲ್ಲಿ ದಾಖಲೆಗೆ ಸೇರ್ಪಡೆಯಾಗಿರುವ ನೈಜ ಘೋಷಣೆಯ ಪರಿಷ್ಕೃತ ಅಂಕಿ ಸಂಖ್ಯೆಯ ಪ್ರಕಾರ ಒಟ್ಟು ಘೋಷಿತ ಕಪ್ಪು ಧನದ ಮೊತ್ತ ೬೭,೩೮೨ ಕೋಟಿ ರೂಪಾಯಿ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿತು. ಈ ಹಿಂದೆ ಘೋಷಿತ ಕಾಳಧನದ ಮೊತ್ತ ೬೫೨೫೦ ಕೋಟಿ ರೂಪಾಯಿ ಎಂದು ಪ್ರಕಟಿಸಲಾಗಿದ್ದು, ಇಲಾಖೆಯು ಅದನ್ನು ಈಗ ಪರಿಷ್ಕರಿಸಿತು. ಮುಂಬೈ ಮತ್ತು ಅಹಮದಾಬಾದಿನಲ್ಲಿ ಸಲ್ಲಿಕೆಯಾದ ಎರಡು ಕಾಳಧನ ಘೋಷಣೆಗಳನ್ನು ತನಿಖೆ ಸಲುವಾಗಿ ಬಾಕಿ ಇರಿಸಲಾಗಿದ್ದು, ಘೋಷಣೆಗಳ ಮೊತ್ತವನ್ನು ಒಟ್ಟು ಘೋಷಿತ ಕಾಳಧನದ ಮೌಲ್ಯಕ್ಕೆ ಸೇರ್ಪಡೆ ಮಾಡಲಾಗಿಲ್ಲ ಎಂದು ಇಲಾಖಾ ಮೂಲಗಳು ತಿಳಿಸಿದವು.

೨೦೧೬: ನವದೆಹಲಿ: ಆದಾಯ ಘೋಷಣಾ ಯೋಜನೆಯಡಿಯಲ್ಲಿ ಸಲ್ಲಿಸಲಾಗಿದ್ದ ೨ ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಘೋಷಣೆಯ ಒಂದು ಪ್ರತಿಯನ್ನು ಆದಾಯ ತೆರಿಗೆ ಇಲಾಖೆಯು ತಿರಸ್ಕರಿಸಿ, ತನಿಖೆಗಾಗಿ ಬಾಕಿ ಇರಿಸಿತು. ಮುಂಬೈಯ ನಾಲ್ಕು ಮಂದಿ ಸದಸ್ಯರು ಇರುವ ಕುಟುಂಬವೊಂದು ೨ ಲಕ್ಷ ಕೋಟಿ ರೂಪಾಯಿ ಕಪ್ಪುಹಣವನ್ನು ಘೋಷಣಾ ಯೋಜನೆಯ ಅಡಿಯಲ್ಲಿ ಘೋಷಿಸಿತ್ತು. ಆದಾಯ ತೆರಿಗೆ ಅಧಿಕಾರಿಗಳು ಈ ಬಗ್ಗೆ ತನಿಖೆಗಳನ್ನು ನಡೆಸಿದ್ದರು. ಮುಂಬೈಯ ಅಬ್ದುಲ್ ರಜಾಕ್ ಮೊಹಮ್ಮದ್ ಸಯೀದ್ (ಘೋಷಣೆದಾರ), ಮೊಹಮ್ಮದ್ ಆರಿಫ್ ಅಬ್ದುಲ್ ರಜಾಕ್ ಸಯೀದ್ (ಮಗ), ಶ್ರೀಮತಿ ರುಕ್ಸಾನಾ ಅಬ್ದುಲ್ ರಜಾಕ್ ಸಯೀದ್ (ಪತ್ನಿ) ಮತ್ತು ನೂರ್ ಜಹಾಂ ಮೊಹಮ್ಮದ್ ಸಯೀದ್ (ಸಹೋದರಿ) ಈ ನಾಲ್ವರು ಒಟ್ಟು ೨ ಲಕ್ಷ ಕೋಟಿ ರೂಪಾಯಿಗಳ ಕಾಳಧನ ಹೊಂದಿರುವುದಾಗಿ ಸ್ವಯಂ ಆದಾಯ ಘೋಷಣೆ ಅಡಿಯಲ್ಲಿ ಘೋಷಿಸಿದ್ದರು. ಇನ್ನೊಂದು ಆದಾಯ ತೆರಿಗೆ ಘೋಷಣೆಯಲ್ಲಿ ಅಹಮದಾಬಾದ್ ನಿವಾಸಿ ಮಹೇಶಕುಮಾರ್ ಚಂಪಕಲಾಲ್ ಷಾ ಅವರು ೧೩,೮೬೦ ಕೋಟಿ ರೂಪಾಯಿ ಮೊತ್ತದ ಕಾಳಧನವನ್ನು ಘೋಷಿಸಿದ್ದರು. ತನಿಖೆಯ ಬಳಿಕ ಈ ವ್ಯಕ್ತಿಗಳು ಸಂಶಯಾಸ್ಪದ ವ್ಯಕ್ತಿಗಳಾಗಿದ್ದು, ಸಣ್ಣ ಪ್ರಮಾಣದ ಆದಾಯ ಮೂಲಗಳನ್ನು ಹೊಂದಿದ್ದಾರೆ ಮತ್ತು ಆದಾಯ ಘೋಷಣೆ ಯೋಜನೆಯನ್ನು ದುರುಪಯೋಗಿಸಿಕೊಂಡಿರಬಹುದು ಎಂಬುದು ಕಂಡು ಬಂತು ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿದವು.

೨೦೧೬: ನವದೆಹಲಿ: ಜನಧನ ಖಾತೆಗಳಿಗೆ ಕಳೆದ ೧ ವಾರದಲ್ಲಿ ಜಮಾ ಆಗಿರುವ ಮೊತ್ತದಲ್ಲಿ ಇಳಿಕೆ ಕಂಡು ಬಂದಿತು. ನವೆಂಬರ್ ೩೦ ಕ್ಕೆ ಕೊನೆಗೊಂಡ ವಾರದಲ್ಲಿ ಕೇವಲ ೧,೪೮೭ ಕೋಟಿ ರೂ. ಜನಧನ ಖಾತೆಗಳಲ್ಲಿ ಜಮೆಯಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಅದಕ್ಕೂ ಹಿಂದಿನ ವಾರ ಒಟ್ಟು ೮,೨೮೩ ಕೋಟಿ ರೂ. ಜನಧನ ಖಾತೆಗೆ ಜಮೆಯಾಗಿತ್ತು. ನೋಟು ರದ್ಧತಿಯ ನಂತರ ನವೆಂಬರ್ ೨೩ರವರೆಗೆ ೨೫.೬೮ ಕೋಟಿ ಜನಧನ ಖಾತೆಗಳಲ್ಲಿ ಒಟ್ಟು ೭೨,೮೩೪.೭೨ ಕೋಟಿ ರೂ. ಜಮೆಯಾಗಿತ್ತು. ನವೆಂಬರ್ ೩೦ ಕ್ಕೆ ೨೫.೮೫ ಕೋಟಿ ಖಾತೆಗಳಲ್ಲಿ ೭೪,೩೨೧.೫೫ ಕೋಟಿ ರೂ. ಜಮೆಯಾಯಿತು.  ನೋಟು ರದ್ಧತಿ ಘೋಷಣೆಯಾದ ಮೊದಲೆರಡು ದಿನಗಳಲ್ಲಿ ಜನಧನ ಖಾತೆಗಳಿಗೆ ೪೫,೬೩೬.೬೧ ಕೋಟಿ ರೂ. ಹರಿದು ಬಂದಿತ್ತು ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಜನಧನ ಖಾತೆಗಳಿಗೆ ಹೆಚ್ಚಿನ ಹಣ ಹರಿದು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಹಣ ವಾಪಸ್ಸು ಪಡೆಯುವ ಮಿತಿಯನ್ನು ತಗ್ಗಿಸಿತು. ಜತೆಗೆ ಕಾಳಧನಿಕರು ಜನಧನ ಖಾತೆಯ ಮೂಲಕ ಹಣವನ್ನು ಬದಲಿಸಿಕೊಳ್ಳಲು ಮುಂದಾದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.

೨೦೧೬: ಬ್ಯಾಂಕಾಕ್: ಬ್ಯಾಂಕಾಕಿನಲ್ಲಿ ನಡೆದ ಟಿ-೨೦ ಪಂದ್ಯದ ಫೈನಲ್ನಲ್ಲಿ ಪಾಕಿಸ್ತಾನವನ್ನು ೧೭ ರನ್ನುಗಳಿಂದ  ಪರಾಭವಗೊಳಿಸುವ ಮೂಲಕ ಭಾರತದ ಮಹಿಳಾ ಕ್ರಿಕೆಟ್ ತಂಡವು ಸತತ ೬ನೇ ಬಾರಿಗೆ ಏಷ್ಯಾ ಕಪ್ಪನ್ನು  ಗೆದ್ದುಕೊಂಡಿತು. ಇಲ್ಲಿ ನಡೆದ ಪ್ರಾದೇಶಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ೧೭ ರನ್ನುಗಳಿಂದ ಪರಾಭವಗೊಳಿಸುವ ಮೂಲಕ ಏಷ್ಯಾ ಕಪ್ ಟಿ-೨೦ ಚಾಂಪಿಯನ್ ಷಿಪ್ಪನ್ನು ಭಾರತದ ವನಿತೆಯರು ೬ನೇ ಬಾರಿಗೆ ತಮ್ಮ ಬಗಲಿಗೆ ಏರಿಸಿಕೊಂಡರು. ಮೊದಲಿಗೆ ಬ್ಯಾಟಿಂಗ್ ಆರಿಸಿಕೊಂಡ ಭಾರತ ೫ ವಿಕೆಟ್ ನಷ್ಟಕ್ಕೆ ೧೨೧ ರನ್ ಪೇರಿಸಿತು. ಮೈಥಿಲಿ ರಾಜ್ ಅಜೇಯರಾಗಿ ಕೊನೆಯವರೆಗೂ ಉಳಿದು ೭೩ ರನ್ ಬಾಚಿಕೊಂಡರು. ಜುಲಿಯನ್ ಗೋಸ್ವಾಮಿ ೧೭ ರನ್ ಗಳಿಸಿದರು.  ಇದಕ್ಕೆ ಉತ್ತರವಾಗಿ ಪಾಕಿಸ್ತಾನದ ಆಯೇಶಾ ಜಾಫರ್ (೧೫), ಜವೀರಿಯಾ ಖಾನ್ (೨೨) ಮತ್ತು ಬಿಸ್ಮಾಹ್ ಮರೂಫ್ ೨೫ ರನ್ ಗಳಿಸಿದರಾದರೂ ಭಾರತದ ವನಿತೆಯರನ್ನು ಹಿಂದಿಕ್ಕಲಾಗಲಿಲ್ಲ. ಒಟ್ಟು ೬ ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ ೧೦೪ ರನ್ ಗಳಿಸಲಷ್ಟೇ ಸಾಧ್ಯವಾಯಿತು..

೨೦೧೬: ನವದೆಹಲಿ: ೫೦೦ ಮತ್ತು ೧೦೦೦ ರೂಪಾಯಿ ನೋಟು ರದ್ದತಿ ಹಿನ್ನೆಲೆಯಲ್ಲಿ ಮಾರಾಟ ಸ್ಥಳಗಳಲ್ಲಿ ಮೈಕ್ರೋ-ಎಟಿಎಂ ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ ಈ ವ್ಯವಸ್ಥೆಗಳ ಮೇಲೆ ಮಾಹಿತಿ ಕಳವು ಹಾಗೂ ದುರುದ್ದೇಶಪೂರಿತ ಸಾಫ್ಟವೇರ್ ದಾಳಿ (ಮೆಲಾಷಿಯಸ್ ಸಾಫ್ಟ್ವೇರ್- ಮಾಲ್ವೇರ್) ಸಾಧ್ಯತೆಗಳಿವೆ ಎಂದು ದೇಶದ ಮುಂಚೂಣಿ ಸೈಬರ್ ಭದ್ರತಾ ಸಂಸ್ಥೆ ಸಿಇಆರ್ಟಿ-ಇನ್ ಗ್ರಾಹಕರು, ಬ್ಯಾಂಕರುಗಳು ಮತ್ತು ವರ್ತಕರಿಗೆ ಎಚ್ಚರಿಕೆ ನೀಡಿತು. ಇಂತಹ ದಾಳಿಗಳಿಂದ ರಕ್ಷಿಸಿಕೊಳ್ಳಲು ಹೈ ಎಂಡ್ ಎನ್ಕ್ರಿಪ್ಷನ್ ಅಳವಡಿಸಿಕೊಳ್ಳಿ ಎಂದು ಸಿಇಆರ್ಟಿ -ಇನ್ ಸಲಹೆ ಮಾಡಿತು. ಭಾರತೀಯ ಇಂಟರ್ನೆಟ್ ಡೊಮೈನ್ ರಕ್ಷಣೆಗೆ ಸಂಬಂಧಿಸಿದಂತೆ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಸಿಇಆರ್ಟಿ ? ಇನ್ ಹ್ಯಾಕಿಂಗ್ ಮತ್ತಿತರ ಸಾಫ್ಟವೇರ್ ದಾಳಿಗಳ ವಿರುದ್ಧ ಕಾರ್ಯಾಚರಿಸುತ್ತಿರುವ ಸರ್ಕಾರಿ ನೋಡಲ್ ಸಂಸ್ಥೆಯಾಗಿದೆ. ಮೈಕ್ರೊ-ಆಟೋಮೇಟೆಡ್ ಟೆಲ್ಲರ್ ಮೆಷಿನ್ (ಎಟಿಎಂ) ಮತ್ತು ಪಿಒಎಸ್ ಟರ್ಮಿನಲ್ಗಳಿಗೆ ಭದ್ರತೆ ಸಂಬಂಧಿತ ಸಲಹೆಗಳನ್ನು ನೀಡಿತು. ಮೈಕ್ರೋ -ಎಟಿಎಂಗಳು ಅತ್ಯಂತ ಕಡಿಮೆ ವಿದ್ಯುತ್ತಿನಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಕೇಂದ್ರ ಬ್ಯಾಂಕಿಂಗ್ ಸರ್ವರ್ಗಳ ಜೊತೆಗೆ ಜಿಪಿಆರ್‌ಎಸ್ ಜಾಲದ ಮೂಲಕ ಸಂಪರ್ಕ ಹೊಂದಿರಬೇಕು. ಹ್ಯಾಕರ್ಗಳ ಪ್ರಯತ್ನಗಳನ್ನು ತಡೆಯಲು ಕಾಲ ಕಾಲಕ್ಕೆ ಅಗತ್ಯವಾದ ಭದ್ರತಾ ವ್ಯವಸ್ಥೆಗಳನ್ನು ನವೀಕರಿಸುತ್ತಿರಬೇಕು ಎಂದು ಸಿಇಆರ್ಟಿ -ಇನ್ ಸೂಚಿಸಿದೆ. ಹ್ಯಾಕರ್ಗಳು ಖಾಸಗಿ ಗ್ರಾಹಕನಿಗೆ ಸಂಬಂಧಿಸಿದ ಮಾಹಿತಿ ಹಾಗೂ ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿ ಕಳವು ಮಾಡುವ ದುರುದ್ಧೇಶಪೂರಿತ ಯೋಜನೆಗಳನ್ನು ಹೊಂದಿರುತ್ತಾರೆ ಎಂದು ಸಿಇಆರ್ಟಿ ಹೇಳಿತು. ಇದರಿಂದಾಗಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ಕಷ್ಟಪಟ್ಟು ಸಂಪಾದಿಸಿದ ಹಣ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಸಿಇಆರ್ಟಿ ಎಚ್ಚರಿಕೆ ನೀಡಿತು. ಸಾಮಾನ್ಯವಾಗಿ ಪಿಒಎಸ್ ವ್ಯವಸ್ಥೆಯಲ್ಲಿ ಮಾಹಿತಿಯು ಮೆಮೋರಿಯಲ್ಲಿ ಸ್ಪಷ್ಟ ಅಕ್ಷರ ರೂಪದಲ್ಲಿ ಇರುವುದರಿಂದ ದಾಳಿಕೋರರು, ಮೆಮೋರಿ ಕದಿಯುವವರು ಸುಲಭವಾಗಿ ತಮ್ಮ ಕೇಡುಕಾರ್ಯವನ್ನು ಮಾಡಲು ಸಮರ್ಥರಾಗುತ್ತಾರೆ ಎಂದು ಅದು ಹೇಳಿತು.

೨೦೧೬: ಅಮೃತಸರ (ಪಂಜಾಬ್): ಆಫ್ಘಾನಿಸ್ತಾನ ಮತ್ತು ನಮ್ಮ ಪ್ರದೇಶದಲ್ಲಿನ ಭಯೋತ್ಪಾದನೆ ವಿರುದ್ಧ ವಹಿಸುವ ಮೌನ ಮತ್ತು ನಿಷ್ಕ್ರಿಯತೆ ಭಯೋತ್ಪಾದಕರಿಗೆ ಮತ್ತು ಅವರ ದೊರೆಗಳಿಗೆ ಇನ್ನಷ್ಟು ಧೈರ್ಯವನ್ನು ತಂದುಕೊಡುತ್ತದೆ ಅಷ್ಟೆ. ರಕ್ತಪಾತ ಮತ್ತು ಭೀತಿಯನ್ನು ಸೃಷ್ಟಿಸುವ ಭಯೋತ್ಪಾದಕ ಜಾಲಗಳನ್ನು ಪರಾಭವಗೊಳಿಸಲು ನಾವು ಪ್ರಬಲ ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೃತಸರದಲ್ಲಿ ಕರೆ ನೀಡಿದರು. ನಮ್ಮ ಈದಿನದ ಸಮಾವೇಶವು ಆಫ್ಘಾನಿಸ್ತಾನದಲ್ಲಿ ಸುದೀರ್ಘ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಅಂತಾರಾಷ್ಟ್ರೀಯ ಸಮುದಾಯದ ಬದ್ಧತೆಯನ್ನು ಮತ್ತೆ ದೃಢ ಪಡಿಸುತ್ತದೆ ಎಂದು ‘ಹಾರ್ಟ್ ಆಫ್ ಏಷ್ಯಾ’ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು. ನಮ್ಮ ಮಾತುಗಳು ಮತ್ತು ಕೃತಿಗಳು ಆಫ್ಘಾನಿಸ್ತಾನದ ಪ್ರದೇಶ ಮತ್ತು ಅಲ್ಲಿನ ಜನರನ್ನು ವಿದೇಶೀ ಅಪಾಯಗಳಿಂದ ಪಾರು ಮಾಡುವ , ಅದನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರ ಮಾತುಗಳಿಗೆ ಸ್ಪಂದಿಸಿದ ಆಫ್ಘನ್ ಅಧ್ಯಕ್ಷ ಡಾ. ಅಶ್ರಫ್ ಘನಿ ಅವರು ‘ನಿಮ್ಮ ಮಾತುಗಳು ಆಫ್ಘಾನಿಸ್ತಾನಕ್ಕೆ ೧೨೫ ಕೋಟಿ ಭಾರತೀಯ ಜನರ ಬೆಂಬಲ ಮತ್ತು ನೆರವಿನ ಭರವಸೆಯನ್ನು ನೀಡುತ್ತದೆ. ಇದು ಉಭಯ ರಾಷಟ್ರಗಳ ಚಾರಿತ್ರಿಕ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸುತ್ತದೆ’ ಎಂದು ಹೇಳಿದರು. ವಿಶ್ವಸಂಸ್ಥೆಯು ಹೆಸರಿಸಿರುವ ಸುಮಾರು ೩೦ ಭಯೋತ್ಪಾದಕ ಗುಂಪುಗಳು ಆಫ್ಘಾನಿಸ್ತಾನದಲ್ಲಿ ನೆಲೆ ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿವೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು. ಸಮಾವೇಶವು ಅಮೃತಸರ ಘೋಷಣೆಯನ್ನು ಬಳಿಕ ಅಂಗೀಕರಿಸಿತು.

೨೦೧೬: ಅಹಮದಾಬಾದ್: ಆದಾಯ ಘೊಷಣೆ ಯೋಜನೆ ಅಡಿಯಲ್ಲಿ ೧೩,೦೦೦ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಘೋಷಿಸಿ, ಶೇಕಡಾ ೨೫ರಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾದ ಹೊತ್ತಿನಲ್ಲಿ ಕಣ್ಮರೆಯಾಗಿ ಬಳಿಕ ಹಿಂದಿನ ದಿನ ಸಂಜೆ ದಿಢೀರನೆ ಪ್ರತ್ಯಕ್ಷರಾಗಿದ್ದ ಉದ್ಯಮಿ ಮಹೇಶ ಷಹಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಷಹಾ ಹೇಳಿಕೆಗಳನ್ನು ನಿಯಮಾನುಸಾರ ದಾಖಲಿಸಿಕೊಂಡರು.  ಹೇಳಿಕೆ ದಾಖಲಾತಿ ಬಳಿಕ ಷಹಾ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಷಹಾ ಅವರ ಕುಟುಂಬಕ್ಕೂ ರಕ್ಷಣೆ ಒದಗಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ವಿಮಲ್ ಮೀನಾ ಹೇಳಿದರು. ಕಣ್ಮರೆಯಾಗಿದ್ದ ಷಹಾ ಅವರು ಹಿಂದಿನ ಸಂಜೆ ಗುಜರಾತಿನ ಸ್ಥಳೀಯ ಈಟಿವಿ ಗುಜರಾತಿ ವಾಹಿನಿಯಲ್ಲಿ ಸಂದರ್ಶನದಲ್ಲಿ ಪ್ರತ್ಯಕ್ಷರಾಗಿ ‘ಆದಾಯ ಘೋಷಣೆ ಯೋಜನೆ ಅಡಿಯಲ್ಲಿ ತಾವು ಘೋಷಿಸಿರುವ ಹಣ ತಮಗೆ ಸೇರಿದ್ದಲ್ಲ. ರಾಜಕಾರಣಿಗಳು, ಬಾಬುಗಳು ಮತ್ತು ಬಿಲ್ಡರುಗಳು  ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಸೇರಿದ್ದು’ ಎಂದು ಹೇಳಿದ್ದರು. ಟಿವಿ ವಾಹಿನಿಯಲ್ಲಿ ಷಹಾ ಸಂದರ್ಶನ ಬಿತ್ತರವಾಗುತ್ತಿದ್ದಂತೆಯೇ ಸಂಭವಿಸಿದ ನಾಟಕೀಯ ತಿರುವಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಪೊಲೀಸರು ಟಿವಿ ವಾಹಿನಿಗೆ ನುಗ್ಗಿ ಷಹಾ ಅವರನ್ನು ಪ್ರಶ್ನಿಸುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಇದಕ್ಕೆ ಮುನ್ನ ಆದಾಯ ತೆರಿಗೆ ಅಧಿಕಾರಿಗಳು ಷಹಾ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಕಳೆದ ಕೆಲ ಸಮಯದಿಂದ ಷಹಾ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ, ಆದರೆ ಅವರು ಬರುತ್ತಾರೆ ಮತ್ತು ತೆರಿಗೆ ಇಲಾಖೆಯವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂದು ಷಹಾ ಕುಟುಂಬ ಸದಸ್ಯರು ಹೇಳಿದ್ದರು.

೨೦೦೮: ರಾಷ್ಟ್ರೀಯ ಭದ್ರತಾ ದಳದ (ಎನ್‌ಎಸ್ಜಿ) ಮಾದರಿಯಲ್ಲೇ ಸುಮಾರು ೭೫೦ ಮಂದಿ ಕಮಾಂಡೊ ಪಡೆ ಮತ್ತು ತ್ವರಿತ ಪ್ರಹಾರ ದಳದ ಆಂತರಿಕ ಭದ್ರತಾ ವಿಭಾಗ ಸ್ಥಾಪಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಮುಂಬೈಯಲ್ಲಿ ನಡೆದ ಉಗ್ರರ ದಾಳಿ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು.

೨೦೦೮: ವಿಜಾಪುರ ತಾಲ್ಲೂಕಿನ ಬಗ್ಗಲೇಶ್ವರದ ವೀರಭದ್ರೇಶ್ವರ ಜಾತ್ರೆಯಲ್ಲಿ ವೃದ್ಧ ಪುರವಂತರೊಬ್ಬರು ತಮ್ಮ ಕೆನ್ನೆಯಲ್ಲಿ ೨೫೨೫ ಅಡಿ ಉದ್ದದ ಹಗ್ಗವನ್ನು ತೂರಿಸಿಕೊಳ್ಳುವ ಮೂಲಕ ಸಾಹಸ ಮೆರೆದ ಘಟನೆ ನಡೆಯಿತು. ಬಗ್ಗಲೇಶ್ವರದ ಲಕ್ಷ್ಮಣ ಚಿನ್ನಪ್ಪ ಬೂದಿಹಾಳ (೬೫) ಎಂಬಾತ ಈ ಸಾಹಸಿ. ತಾಯಿಯ ಹರಕೆ ತೀರಿಸಲಿಕ್ಕಾಗಿ ಈ ಭಕ್ತಿ ಸೇವೆ ಮಾಡಿದರು. ಬಗ್ಗಲೇಶ್ವರದ ಶ್ರೀ ಪ್ರಭು ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅಗ್ನಿ ಹಾಯುವ ಹಾಗೂ ಪುರವಂತರಿಂದ ಸಾಹಸ ಪ್ರದರ್ಶನ ಏರ್ಪಡಿಸಲಾಗಿತ್ತು. ಕಿರುಬೆರಳಿನಷ್ಟು ದಪ್ಪದ ೨೫೨೫ ಅಡಿ ಉದ್ದದ ನೂಲಿನಿಂದ ತಯಾರಿಸಿದ್ದ ಹಗ್ಗ ಇದಾಗಿತ್ತು. ಸೂಜಿಗೆ ದಾರ ಪೋಣಿಸುವಂತೆ ದೊಡ್ಡದಾದ ಶಸ್ತ್ರಕ್ಕೆ ಈ ಹಗ್ಗದ ತುದಿಯನ್ನು ಪೋಣಿಸಲಾಗಿತ್ತು. ಲಕ್ಷ್ಮಣ ಶಸ್ತ್ರದಿಂದ ತನ್ನ ಎಡಭಾಗದ ಕೆನ್ನೆಗೆ ಚುಚ್ಚಿಕೊಂಡು ಹಗ್ಗವನ್ನು ಕೆನ್ನೆಯಲ್ಲಿ ತೂರಿಸಿಕೊಂಡರು. ಅತ್ತ ಕಡೆ ನಾಲ್ಕಾರು ಜನರು ಹಗ್ಗವನ್ನು ಎಳೆದು ಕೊಡುತ್ತಿದ್ದರು. ಈತ ತನ್ನ ಕೆನ್ನೆಯಲ್ಲಿ ತೂರಿದ್ದ ಹಗ್ಗವನ್ನು ತನ್ನ ಎರಡೂ ಕೈಗಳಿಂದ ಹೊರ ಜಗ್ಗುತ್ತಿದ್ದ. ಹೀಗೆ ಕೆನ್ನೆಗೆ ತೂರುತ್ತಿದ್ದ ಹಗ್ಗವನ್ನು ಇನ್ನು ಕೆಲವರು ಸುತ್ತುತ್ತಿದ್ದರು. ಸುಮಾರು ೨೦ ನಿಮಿಷಗಳವರೆಗೆ ನಡೆದ ಈ ರೋಮಾಂಚನಕಾರಿ ಸಾಹಸವನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರು.
೨೦೦೮: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಹೋದರ ಹರದನಹಳ್ಳಿ .ಡಿ. ಬಸವೇಗೌಡ (೬೪) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

೨೦೦೮: ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೂತನ ಅಧ್ಯಕ್ಷರಾಗಿ ವಿ.ಪಿ. ಅಗರವಾಲ್ ಅವರನ್ನು ನೇಮಕ ಮಾಡಲಾಯಿತು.

೨೦೦೭: ದೇಶದ ಎಲ್ಲೆಡೆ ಹರಡುತ್ತಿರುವ ಉಗ್ರರ ದಾಳಿಗಳ ಹಿಂದೆ ಬಲವಾದ ಹಣಕಾಸಿನ ಜಾಲ ಇರಬಹುದು ಎಂಬ ಶಂಕೆ ಇದೀಗ ದೃಢಪಟ್ಟಿದ್ದು, ‘ಉಗ್ರರಿಗೆ ಷೇರುಪೇಟೆಯ ಮೂಲಕ ಹಣ ದೊರೆಯುತ್ತಿದೆ’ ಎಂದು ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯಸಭೆಯಲ್ಲಿ ಒಪ್ಪಿಕೊಂಡರು. ‘ಇಂತಹ ಒಬ್ಬ ವ್ಯಕ್ತಿಯ ಚಟುವಟಿಕೆ ಸರ್ಕಾರದ ಗಮನಕ್ಕೆ ಬಂದಿದ್ದು, ಆ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು ೨೦೦೭ರ ಫೆಬ್ರುವರಿಯಲ್ಲಿ ಮ್ಯೂನಿಚ್ಚಿನಲ್ಲಿ ನೀಡಿದ ಹೇಳಿಕೆ ಈ ಅನುಮಾನ ಹುಟ್ಟು ಹಾಕಿತ್ತು. ‘ಹಲವಾರು ಉಗ್ರ ಸಂಘಟನೆಗಳು ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆಲೆ ಕಂಡುಕೊಳ್ಳುತ್ತಿವೆ. ಮುಂಬೈ ಮತ್ತು ಚೆನ್ನೈ ಷೇರುಪೇಟೆಯಲ್ಲಿ ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿವೆ’ ಎಂಬ ಅವರ ಹೇಳಿಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಚಿದಂಬರಂ ಅವರ ಈದಿನದ ಬಹಿರಂಗ ಹೇಳಿಕೆ ಆ ಶಂಕೆಯನ್ನು ದೃಢಪಡಿಸಿತು.

೨೦೦೭: ಅಕ್ರಮ ಕಟ್ಟಡಗಳ ಸಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಇದರಿಂದಾಗಿ ಪ್ರಕರಣ ಹೈಕೋರ್ಟಿನಿಂದ ಸರ್ಕಾರದ ಅಂಗಳಕ್ಕೆ ಬಂದಿತು. ‘ಸಕ್ರಮ’ ಯೋಜನೆ ಕುರಿತು ರಾಜ್ಯಪಾಲರು ಇನ್ನೊಮ್ಮೆ ಅವಲೋಕನ ಮಾಡುವ ಅಗತ್ಯ ಇದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

೨೦೦೭: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ವಿಷಾದ ವ್ಯಕ್ತಪಡಿಸಿದರು. ‘ಅವರದೇ ವಿಧಾನದ ಮೂಲಕ ಅವರಿಗೆ ಪಾಠ ಕಲಿಸಿದ್ದೇವೆ ಎಂಬ ಹೇಳಿಕೆಯನ್ನು ನಾನು ನೀಡಬಾರದಿತ್ತು. ಏಕೆಂದರೆ ಎಲ್ಲ ವರ್ಗಗಳಲ್ಲಿ ಶಾಂತಿ ನೆಲೆಸಬೇಕಾಗಿರುವುದು ಈಗಿನ ಅವಶ್ಯಕತೆ’ ಎಂದು ಭಟ್ಟಾಚಾರ್ಯ ಹೇಳಿದರು.

೨೦೦೭: ಕೆಮ್ಮಿನಿಂದ ನರಳುವ ಮಕ್ಕಳಿಗೆ ಸಿರಪ್ ಕುಡಿಸುವ ಬದಲು ಹಳೇ ಜೇನುತುಪ್ಪ ಕುಡಿಸಿ. ಇದು ಈಗ ಜಾಗತಿಕವಾಗಿ ಸಂಶೋಧಕರು ಒಪ್ಪಿಕೊಂಡ ಸತ್ಯ. ಜೇನುತುಪ್ಪವನ್ನು ಹಿಂದಿನಿಂದಲೂ ಸ್ವಸ್ಥ ಆರೋಗ್ಯಕ್ಕೆ ಪೂರಕ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಈಗ ಅದಕ್ಕೆ ಲಂಡನ್ನಿನ ಸಂಶೋಧಕರೂ ಅಧಿಕೃತ ಮುದ್ರೆ ಒತ್ತಿದರು. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿ ಮಲಗುವಾಗ ದುಬಾರಿ ಸಿರಪ್ಪುಗಳನ್ನು ಕುಡಿಯುವ ಬದಲಿಗೆ ಜೇನುತುಪ್ಪವನ್ನು ಕುಡಿದರೆ ಹೆಚ್ಚು ನೆಮ್ಮದಿ ಸಿಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

೨೦೦೭: ಜಪಾನಿನ ಸೇನಾ ತುಕಡಿಗಳು ೧೯೩೭ರ ಡಿಸೆಂಬರ್ ೧೩ರಂದು ಚೀನಾದ ರಾಜಧಾನಿಯನ್ನು ವಶಪಡಿಸಿಕೊಂಡಾಗ ಹುತಾತ್ಮರಾದ ೩೦ ಸಾವಿರ ಚೀನಿಯರ ಪೈಕಿ ೧೩ ಸಾವಿರ ಜನರ ಹೆಸರುಗಳನ್ನು ಎಂಟು ಸಂಪುಟಗಳಲ್ಲಿ ಚೀನಾ ಪ್ರಕಟಿಸಿತು. ಚೀನಾದ ಮೇಲೆ ದಂಡೆತ್ತಿ ಬಂದ ಜಪಾನಿನ ಸೈನಿಕರು ೩೦ ಸಾವಿರ ನಾಗರಿಕರನ್ನು ನಿರ್ದಯವಾಗಿ ಹತ್ಯೆಗೈದರು. ಅವರೆಲ್ಲರ ಹೆಸರುಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಹೇಳಿತು. ‘ಜಸ್ಟ್ ಸ್ಟಾರ್ಟ್’ ಹೆಸರಿನಲ್ಲಿ ಪ್ರಕಟವಾಗಿರುವ ಎಂಟು ಸಂಪುಟಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒಟ್ಟು ೨೭ ಸಂಪುಟಗಳಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಪಾದಕರು ತಿಳಿಸಿದರು.

೨೦೦೬: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ಹತ್ಯಾಕಾಂಡದ ಎಲ್ಲ ೩೨ ಆರೋಪಿಗಳನ್ನೂ ಕೋಲಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ವಿಶೇಷ ನ್ಯಾಯಾಲಯವು ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನೀಡಿದ ಕಾರಣ ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

೨೦೦೬: ನಾಡಿನ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ವತ್ಸಲಾಬಾಯಿ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾದರು. ಪುಣೆಯ ಆರ್ಯ ಸಂಗೀತ ಪ್ರಸಾರಕ ಮಂಡಳಿ ಈ ಪ್ರಶಸ್ತಿಯನ್ನು ನೀಡುತ್ತಿದೆ.

೨೦೦೬: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದ ಸಂಸ್ಥೆಗಳಿಗೆ ನೀಡುವ ‘ಟೆಕ್ನಾಲಜಿ ಪಯೋನೀರ್ಸ್ ೨೦೦೭’ ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವ ಬೆಂಗಳೂರಿನ ‘ಸ್ಟ್ರಾಂಡ್ ಲೈಫ್ ಸೈನ್ಸಸ್’ ಮತ್ತು ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುತ್ತಿರುವ ‘ದೃಷ್ಟಿ’ ಈ ಎರಡು ಕಂಪೆನಿಗಳು ಪಡೆದುಕೊಂಡವು. ಜಿನೀವಾದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ. ವೇದಿಕೆ ಜಗತ್ತಿನ ೪೭ ಕಂಪೆನಿಗಳನ್ನು ಈ ಪ್ರಶಸ್ತಿಗಾಗಿ ಗುರುತಿಸಿದೆ.

೨೦೦೬: ಎಂ.ಎಲ್.ವಸಂತಕುಮಾರಿ ಸ್ಮಾರಕ ಸಂಗೀತ ಸಭಾ ನೀಡುವ ‘ಎಂ.ಎಲ್.ವಸಂತಕುಮಾರಿ ಮೆಮೋರಿಯಲ್ ಸಂಗೀತ ಪ್ರಶಸ್ತಿ’ಗೆ ಖ್ಯಾತ ಚಲನಚಿತ್ರ ನಟಿ, ಶ್ರೀಲತಾ ನಂಬೂದರಿ ಆಯ್ಕೆಯಾದರು.

೨೦೦೫: ಸಮಕಾಲೀನ ಕಲಾ ಪರಂಪರಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರಾಗಿದ್ದ ಕಲಾವಿದ, ಚಿಂತಕ ಹಡಪದ್ ಅವರ ನೆನಪಿಗೆ ನೀಡುವ ನಾಡೋಜ ಎಂ. ಹಡಪದ್ ಪ್ರಶಸ್ತಿ-೨೦೦೫ನ್ನು ಕಲಾವಿದ ಎನ್. ಕೃಷ್ಣಾಚಾರ್ ಅವರಿಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾಶಾಲೆಯಲ್ಲಿ ಪ್ರದಾನ ಮಾಡಿದರು.

೨೦೦೫: ವೋಲ್ಕರ್ ವರದಿಯ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಕಳೆದುಕೊಂಡ ಸಚಿವ ನಟವರ್ ಸಿಂಗ್ ವಿರುದ್ಧ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಕ್ರೊಯೇಷಿಯಾದ ಮಾಜಿ ರಾಯಭಾರಿ ಅನಿಲ್ ಮಥೆರಾನಿ ಅವರನ್ನು ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ವಿಭಾಗ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಅಧಿಕಾರಿಗಳ ತಂಡಗಳು ವಿಚಾರಣೆಗೆ ಒಳಪಡಿಸಿದವು.

೧೯೯೩: ಮುಲಯಂ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

೧೯೮೨: ಚೀನಾದಲ್ಲಿ ಸಂವಿಧಾನ ಅಳವಡಿಸಿಕೊಳ್ಳಲಾಯಿತು.


೧೯೮೧: ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ ೨೧ ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು ೪೫ ಮಂದಿ ಅಸು ನೀಗಿದರು. ಇತರ ೨೧ ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ಈ ನೂಕುನುಗ್ಗಲು ಸಂಭವಿಸಿತು.

೧೯೨೪: ವೈಸ್ ರಾಯ್ ದಿ ಅರ್ಲ್ ಅಫ್ ರೀಡಿಂಗ್ ಅವರಿಂದ ಬಾಂಬೆಯ (ಈಗಿನ ಮುಂಬೈ) ‘ಗೇಟ್ ವೇ ಆಫ್ ಇಂಡಿಯಾ’ ಉದ್ಘಾಟನೆಗೊಂಡಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾದ ಇದನ್ನು ದೊರೆ ೫ನೇ ಜಾರ್ಜ್ ಮತ್ತು ರಾಣಿ ಮೇರಿ ೧೯೧೧ರ ಡಿಸೆಂಬರಿನಲ್ಲಿ ಬಾಂಬೆಗೆ ನೀಡಿದ ಭೇಟಿಯ ನೆನಪಿಗಾಗಿ ನಿರ್ಮಿಸಲಾಯಿತು. ಇದಕ್ಕೆ ೧೯೧೧ರ ಮಾಚರ್?ಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಶಿಲ್ಪಿ ಜಾರ್ಜ್ ವಿಟ್ಟೆಟ್ ಅವರ ಅಂತಿಮ ವಿನ್ಯಾಸಕ್ಕೆ ೧೯೧೪ರ ಆಗಸ್ಟಿನಲ್ಲಿ ?ಲಮಂಜೂರಾತಿ ದೊರಕಿತ್ತು.

೧೯೧೯: ಭಾರತದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಹುಟ್ಟಿದ ದಿನ. ಅವರು ೧೯೯೭ರ
ಏಪ್ರಿಲ್ನಿಂದ ನವೆಂಬರವರೆಗೆ ಪ್ರಧಾನಿಯಾಗಿದ್ದರು.

೧೯೧೦: ಭಾರತದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟ್ರಾಮನ್ ಹುಟ್ಟಿದ ದಿನ. ರಾಜಕಾರಣಿ, ಅಧಿಕಾರಿ ಹಾಗೂ ವಕೀಲರಾಗಿದ್ದ ಅವರು ೧೯೮೭ ಜುಲೈ ೨೫ರಂದು ಭಾರತದ ರಾಷ್ಟ್ರಪತಿಯಾದರು.

೧೮೮೮: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (೧೮೮೮-೧೯೮೦) ಹುಟ್ಟಿದ ದಿನ.

೧೮೨೯: ರೆಗ್ಯೂಲೇಷನ್ ೧೭ ಜಾರಿ ಮಾಡುವ ಮೂಲಕ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದ.

೧೭೭೫: ಬ್ರಿಟಿಷ್ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ (೧೭೯೫-೧೮೮೧) ಹುಟ್ಟಿದ ದಿನ. ‘ಫ್ರೆಂಚ್ ರೆವಲ್ಯೂಷನ್’ ಕೃತಿ ಈತನಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಈ ಕೃತಿಯ ಇಡೀ ಮೊದಲ ಸಂಪುಟದ ಹಸ್ತಪ್ರತಿಯನ್ನು ಜಾನ್ ಸ್ಟುವರ್ಟ್ ಮಿಲ್ ಓದಲು ಒಯ್ದು ತನ್ನ ಭಾವೀ ಪತ್ನಿಯ ಕೈಯಲ್ಲಿ ಕೊಟ್ಟಿದ್ದ. ಆಕೆಯ ಸೇವಕಿ ಅದು ನಿರುಪಯುಕ್ತ ಹಾಳೆ ಎಂದು ಭಾವಿಸಿ ಸುಟ್ಟು ಹಾಕಿದಳು! ಹೀಗಾಗಿ ಥಾಮಸ್ ಕಾರ್ಲೈಲ್ ಕೃತಿಯ ಮೊದಲ ಇಡೀ ಸಂಪುಟವನ್ನು ಮತ್ತೆ ಬರೆಯಬೇಕಾಗಿ ಬಂದಿತ್ತು.


No comments:

Post a Comment