ನಾನು ಮೆಚ್ಚಿದ ವಾಟ್ಸಪ್

Friday, December 14, 2018

ಇಂದಿನ ಇತಿಹಾಸ History Today ಡಿಸೆಂಬರ್ 14

ಇಂದಿನ ಇತಿಹಾಸ History Today ಡಿಸೆಂಬರ್  14
2017: ನವದೆಹಲಿ: ಗುಜರಾತ್ ವಿಧಾನಸಭೆಗೆ ಎರಡನೇ ಹಂತದ ಚುನಾವಣೆಗಳು ಮುಕ್ತಾಯಗೊಳ್ಳುತ್ತಿದ್ದಂತೆಯೇ ೭ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು ಅವುಗಳ ಪೈಕಿ ೫ ಸಮೀಕ್ಷೆಗಳು ಬಿಜೆಪಿ ಭದ್ರವಾಗಿರುವುದನ್ನು ತೋರಿಸಿದವು. ಗುಜರಾತಿನಲ್ಲಿ ಮತ್ತೆ ಬಿಜೆಪಿಯೇ ಪ್ರಾಬಲ್ಯ ಹೊಂದಿದ್ದು, ಹಿಮಾಚಲ ಪ್ರದೇಶದಲ್ಲೂ ಅಧಿಕಾರ ಕಾಂಗ್ರೆಸ್ಸಿನಿಂದ ಕೈಜಾರಿ ಬಿಜೆಪಿ ಕೈಗೆ ಬರಲಿದೆ ಎಂದು ಸಮೀಕ್ಷೆಗಳು ಸೂಚನೆ ನೀಡಿದವು. ಗುಜರಾತ್ ವಿಧಾನಸಭೆಗೆ ನಡೆದ ೨೦೧೭ರ ಚುನಾವಣೆಯಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ಸ್ಪಷ್ಟ ಅನುಕೂಲಗಳು ಕಂಡು ಬಂದಿದ್ದು, ಹಿಮಾಚಲ ಪ್ರದೇಶದಲ್ಲೂ ಅದು ಅಧಿಕಾರವನ್ನು ಕಾಂಗ್ರೆಸ್ಸಿನಿಂದ ಕೈವಶ ಮಾಡಿಕೊಳ್ಳಲಿದೆ ಎಂದು ಐದು ಮತಗಟ್ಟೆ ಸಮೀಕ್ಷೆಗಳು ಹೇಳಿದವು. ಬಹುತೇಕ ಚುನಾವಣಾ ಸಮೀಕ್ಷೆಗಳು ಗುಜರಾತಿನಲ್ಲಿ ಬಿಜೆಪಿ ೧೦೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಭವಿಷ್ಯ ನುಡಿದವು. ಇದರೊಂದಿಗೆ ಪಕ್ಷವು ೧೮೨ ಸದಸ್ಯಬಲದ ಸದನದಲ್ಲಿ ೯೨ಕ್ಕಿಂತ ಹೆಚ್ಚು ಸ್ಥಾನಗಳನ್ನು ಸುಲಭವಾಗಿಯೇ ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿದವು.  ೬೮ ಸದಸ್ಯ ಬಲದ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೫೦ ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದವು.  ಗುಜರಾತಿನಲ್ಲಿ ಸಂಜೆ ೫ ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಬಿಜೆಪಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಕಾಂಗ್ರೆಸ್ ಆಪಾದಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದಿನ ರಾನಿಪ್  ಮತಗಟ್ಟೆಯ ಹೊರಗೆ ’ರೋಡ್ ಶೋ ನಡೆಸಿದ್ದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಕಾಂಗ್ರೆಸ್ ಆಪಾದಿಸಿತು. ಕಾಂಗ್ರೆಸ್ ಆಕ್ರೋಶದ ಬಳಿಕ ಅಂತಿಮವಾಗಿ ನರೇಂದ್ರ ಮೋದಿ ಅವರ ’ಮಿನಿ ರೋಡ್ ಶೋ ಬಗ್ಗೆ ವರದಿ ಸಲ್ಲಿಸುವಂತೆ ಜಿಲ್ಲಾ ಕಲೆಕ್ಟರ್  ಆದೇಶ ನೀಡಿದರು. ರಾಹುಲ್ ಗಾಂಧಿಯವರಿಗೆ ಡಿಸೆಂಬರ್ 13ರಂದು ನೋಟಿಸ್ ನೀಡಿದ ಚುನಾವಣಾ ಆಯೋಗ ಪ್ರಧಾನಿಯವರ ರೋಡ್ ಶೋ ಬಗ್ಗೆ ಮೌನ ವಹಿಸುವ ಮೂಲಕ ತಾರತಮ್ಯ ಎಸಗುತ್ತಿದೆ ಎಂದೂ ಕಾಂಗ್ರೆಸ್ ಆಪಾದಿಸಿತ್ತು. ಮತಗಟ್ಟೆ ಸಮೀಕ್ಷೆ: ಯಾರು ಏನೆನ್ನುತ್ತಾರೆ? ಚಾಣಕ್ಯ: ಗುಜರಾತಿನಲ್ಲಿ ಬಿಜೆಪಿಗೆ ೧೩೫, ಕಾಂಗ್ರೆಸ್ ಗೆ ೪೭ ಸ್ಥಾನ.  ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ೬೮ ಸ್ಥಾನ, ಕಾಂಗ್ರೆಸ್ ಕೇವಲ ೧೩ ಸ್ಥಾನ ಗೆಲ್ಲುವ ನಿರೀಕ್ಷೆ. ಇಲ್ಲಿ ಕಾಂಗ್ರೆಸ್ ವೀರಭದ್ರ ಸಿಂಗ್ ಅವರನ್ನು ಮುಖ್ಯಮಂತ್ರಿಯಾಗಿ ಬಿಂಬಿಸಿದರೆ, ಬಿಜೆಪಿ ಪ್ರೇಮ್ ಕುಮಾರ್ ಧುಮಾಲ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿತ್ತು. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಶೇಕಡಾ ೫೧ರಷ್ಟು ಮತದಾರರ ಬೆಂಬಲ.  ಕಾಂಗ್ರೆಸ್ಸಿಗೆ ಕೇವಲ ಶೇಕಡಾ ೩೮ರಷ್ಟು ಮತ. ಎಬಿಪಿ- ಸಿಎಸ್ ಡಿ ಎಸ್- ಲೋಕನೀತಿ: ಗುಜರಾತಿನಲ್ಲಿ  ಬಿಜೆಪಿಗೆ ಪ್ರಚಂಡ ಜಯ, ೧೧೭  ಸ್ಥಾನಗಳಲ್ಲಿ ವಿಜಯ ನಿರೀಕ್ಷೆ. ಕಾಂಗ್ರೆಸ್ ೬೪ ಸ್ಥಾನ ಗೆಲ್ಲಲಿದೆ.   ಉತ್ತರ ಗುಜರಾತಿನಲ್ಲಿ ಬಿಜೆಪಿ ೩೨-೩೮ ಸೀಟು ಗೆಲ್ಲಲಿದ್ದು ಶೇಕಡಾ ೪೯ರಷ್ಟು ಮತಪಾಲು ಪಡೆಯಲಿದೆ, ಕಾಂಗ್ರೆಸ್ ೧೬-೨೨ಸೀಟು  ಗೆಲ್ಲಲಿದ್ದು, ಶೇಕಡಾ ೪೨ ಮತಪಾಲು ಗಳಿಸಲಿದೆ ಎಂದು ಎಬಿಪಿ ಸಮೀಕ್ಷೆ ಹೇಳಿತು. ಸಹಾರಾ- ಸಮಯ್: ಗುಜರಾತಿನಲ್ಲಿ ಬಿಜೆಪಿಗೆ ೧೧೦-೧೨೦ ಸ್ಥಾನ, ಕಾಂಗ್ರೆಸ್‌ಗೆ ೬೫-೭೫ ಸ್ಥಾನ. ಇಂಡಿಯಾ ಟುಡೆ: ಗುಜರಾತಿನಲ್ಲಿ ಬಿಜೆಪಿಗೆ ೯೯-೧೧೩, ಕಾಂಗ್ರೆಸ್ ಗೆ ೬೮-೮೪ ಸ್ಥಾನ. ರಿಪಬ್ಲಿಕ್ - ಜನ್ ಕಿ ಬಾತ್: ಗುಜರಾತಿನಲ್ಲಿ ಬಿಜೆಪಿಗೆ ೧೧೫.  ಟೈಮ್ಸ್ ನೌ: ಗುಜರಾತಿನಲ್ಲಿ ಬಿಜೆಪಿಗೆ ೧೦೯, ಕಾಂಗ್ರೆಸ್ ಗೆ ೭೦. ನ್ಯೂಸ್ ಎಕ್ಸ್: ಗುಜರಾತಿನಲ್ಲಿ ಬಿಜೆಪಿಗೆ ೧೧೦-೧೨೦, ಕಾಂಗ್ರೆಸ್ ಗೆ ೬೫-೭೫. ಬಹುತೇಕ ಚುನಾವಣಾ ಸಮೀಕ್ಷೆಗಳ ಪ್ರಕಾರ ರಾಹುಲ್ ಗಾಂಧಿ ಅವರು ಬಿರುಸಿನ ಪ್ರಚಾರ ಅವರು ಹಾರೈಸಿದಷ್ಟು ಡಿವಿಡೆಂಡ್ ನೀಡಿಲ್ಲ.

2017: ನವದೆಹಲಿ: ವಿವಿಧ ಕಲ್ಯಾಣ ಯೋಜನೆಗಳ ಜೊತೆ ಕಡ್ಡಾಯವಾಗಿ ಆಧಾರ್ ಜೋಡಿಸುವ ಸರ್ಕಾರದ ನಿರ್ಧಾರವನ್ನು ತಡೆ ಹಿಡಿಯುವಂತೆ ಕೋರಿ ಸಲ್ಲಿಸಲಾದ ವಿವಿಧ ಅರ್ಜಿಗಳ ಮೇಲಿನ ತನ್ನ ಮಧ್ಯಂತರ ಆದೇಶವನ್ನು ಸುಪ್ರೀಂಕೋರ್ಟ್ 2017ರ ಶುಕ್ರವಾರ ಡಿಸೆಂಬರ್ ೧೫ಕ್ಕೆ ಕಾಯ್ದಿರಿಸಿತು. ಕೇಂದ್ರ ಸರ್ಕಾರವು ಡಿಸೆಂಬರ್ 13ರ ಬುಧವಾರ ಆಧಾರ್ ಕಡ್ಡಾಯ ಜೋಡಣೆ ಗಡುವನ್ನು ಮುಂದಿನ ವರ್ಷ ಮಾರ್ಚ್ ೩೧ರವರೆಗೆ ವಿಸ್ತರಿಸಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು, ಶುಕ್ರವಾರ ಬೆಳಗ್ಗೆ ೧೦.೩೦ ಗಂಟೆಗೆ ಆಧಾರ್ ಜೊತೆಗೆ ಮೊಬೈಲ್ ನಂಬರುಗಳನ್ನು ಜೋಡಿಸುವ ಗಡುವನ್ನು ಫೆಬ್ರವರಿ ೬ರಿಂದ ೨೦೧೮ರ ಮಾರ್ಚ್ ೩೧ಕ್ಕೆ  ವಿಸ್ತರಿಸುವ ಬಗೆಗಿನ ತನ್ನ ಆದೇಶವನ್ನು ಪ್ರಕಟಿಸುವುದಾಗಿ ಹೇಳಿತು. ಕೇಂದ್ರ ಸರ್ಕಾರವು ಬುಧವಾರ, ಡಿ.13ರಂದು ಪ್ರಕಟಣೆಯೊಂದನ್ನು ಹೊರಡಿಸಿ ಪಾನ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಯ ಗಡುವನ್ನು ೨೦೧೮ರ ಮಾರ್ಚ್ ೩೧ರವರೆಗೆ ವಿಸ್ತರಿಸಲಾಗಿದೆ, ಆದರೆ ಮೊಬೈಲ್ ನಂಬರ್ ಗಳನ್ನು ೨೦೧೮ರ ಫೆಬ್ರುವರಿ ೬ರ ಒಳಗೆ ಜೋಡಣೆ ಮಾಡಬೇಕು ಎಂದು ತಿಳಿಸಿತ್ತು. ಹೊಸ ಬ್ಯಾಂಕ್ ಖಾತೆದಾರರಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಬೇಕು ಎಂಬ ಸರ್ಕಾರದ ವಾದದ ಬಗ್ಗೆ ಶುಕ್ರವಾರದ ಆದೇಶದಲ್ಲಿ ತಾನು ಸ್ಪಷ್ಟ ಪಡಿಸುವುದಾಗಿ ಪೀಠ ಹೇಳಿತು. ಆಧಾರ್ ಯೋಜನೆಯನ್ನೇ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ವಿಚಾರಣೆಯು ೨೦೧೮ರ  ಜನವರಿ ೧೭ರಿಂದ ಆರಂಭವಾಗಲಿದೆ.

2017: ನವದೆಹಲಿ: ಗುಜರಾತಿನಲ್ಲಿ ಈದಿನ ’ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದುದಕ್ಕಾಗಿ ಚುನಾವಣಾ ಆಯೋಗದ ಮೇಲೆ ಹರಿಹಾಯ್ದಿರುವ ಕಾಂಗ್ರೆಸ್ ಚುನಾವಣಾ ಆಯೋಗವು ಬಿಜೆಪಿಯ ’ಸೂತ್ರದ ಗೊಂಬೆ (ಕೈಗೊಂಬೆ) ಎಂದು ಆಪಾದಿಸಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ’ರೋಡ್ ಶೋ ನಡೆಸಿದ ಪ್ರಧಾನಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ಸಿನ ಮುಖ್ಯ ವಕ್ತಾರ ರಣ್ ದೀಪ್ ಸಿಂಗ್ ಸುರ್ಜಿವಾಲ ಆಪಾದಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುರ್ಜಿವಾಲಾ, ’ಚುನಾವಣಾ ಆಯೋಗವು ಬಿಜೆಪಿಯ ಸೂತ್ರದ ಗೊಂಬೆಯಷ್ಟೇ ಅಲ್ಲ ಮುಖವಾಣಿ ಸಂಸ್ಥೆಯೂ ಆಗಿದೆ. ಆದ್ದರಿಂದ ಅದು ಮೋದಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು. ಚುನಾವಣಾ ಆಯೋಗವು ಸಂವಿಧಾನಕ್ಕೆ ಮಸಿ ಬಳಿದಿರುವ ಈ ಈದಿನ ರಾಷ್ಟ್ರಕ್ಕೆ ಅತ್ಯಂತ ಬೇಸರದ ದಿನ ಎಂದು ಅವರು ನುಡಿದರು . ‘ಸಿಇಸಿ (ಮುಖ್ಯ ಚುನಾವಣಾ ಆಯುಕ್ತರು) ಪ್ರಧಾನಿಯವರ ಆಪ್ತ ಕಾರ್ಯದರ್ಶಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕಟುವಾಗಿ ಟೀಕಿಸಿದರು. ಗುಜರಾತ್ ಟಿವಿ ವಾಹಿನಿಗಳಿಗೆ ಸಂದರ್ಶನ ನೀಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾಗಿರುವ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದ ಒಂದು ದಿನದ ಬಳಿಕ ವಿಪಕ್ಷವು ಚುನಾವಣಾ ಆಯೋಗ ಮತ್ತು ಮೋದಿ ವಿರುದ್ಧ ಟೀಕಾಸ್ತ್ರವನ್ನು ಪ್ರಯೋಗಿಸಿತು. ಡಿಸೆಂಬರ್ ೧೮ರ ಒಳಗಾಗಿ ಉತ್ತರ ನೀಡುವಂತೆ ಚುನಾವಣಾ ಆಯೋಗವು ರಾಹುಲ್ ಗಾಂಧಿ ಅವರಿಗೆ ಸೂಚಿಸಿತ್ತು. ಉತ್ತರ ನೀಡಲು ವಿಫಲವಾದಲ್ಲಿ ಅವರಿಗೆ ಯಾವುದೇ ಸೂಚನೆಯನ್ನೂ ನೀಡದೆ ವಿಷಯವನ್ನು ಇತ್ಯರ್ಥ ಪಡಿಸುವುದಾಗಿ ಅದು ಹೇಳಿತ್ತು. ರಾಹುಲ್ ಗಾಂಧಿ ಅವರ ಸಂದರ್ಶನಗಳನ್ನು ಪ್ರಸಾರ ಮಾಡಲು ಕಾಂಗ್ರೆಸ್, ವೃತ್ತ ಪತ್ರಿಕೆಗಳು , ಟಿವಿ ವಾಹಿನಗಳಿಗೆ ಇರುವ ನಿಯಮಗಳೇ ಬೇರೆ. ಅವು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗುವುದಿಲ್ಲ. ಆದರೆ ಇದೇ ವೇಳೆಗೆ ಪ್ರಧಾನಿ ವಿರುದ್ಧ ಯಾವುದೇ ಕ್ರಮವನ್ನೂ ಆಯೋಗ ಕೈಗೊಂಡಿಲ್ಲ ಎಂದು ಸುರ್ಜಿವಾಲ ಹೇಳಿದರು.

2017: ಕೋಚಿ: ಕೇರಳದ ಕೋಚಿ ಸಮೀಪದ ಪೆರುಂಬವೂರ ಪಟ್ಟಣದಲ್ಲಿ ಕಳೆದ ವರ್ಷ ದಲಿತ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಕ್ಕಾಗಿ ಅಸ್ಸಾಮಿನ ವಲಸೆ ಕಾರ್ಮಿಕ ಅಮೀರುಲ್ ಇಸ್ಲಾಮ್ ಗೆ ಎರ್ನಾಕುಲಂ ಪ್ರಿನ್ಸಿಪಲ್ ಸೆಷನ್ಸ್ ಕೋರ್ಟ್ ಮರಣ ದಂಡನೆ ವಿಧಿಸಿತು. ಅಮೀರುಲ್ ಇಸ್ಲಾಂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ವಿಧಿಗಳ ಅಡಿಯಲ್ಲಿ ಅತ್ಯಾಚಾರ, ಕೊಲೆ, ಅಕ್ರಮ ದಿಗ್ಬಂಧನ, ಮನೆಗೆ ಅತಿಕ್ರಮ ಪ್ರವೇಶ ಇತ್ಯಾದಿ ಅಪರಾಧಗಳಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ 2017 ಡಿಸೆಂಬರ್ 12 ರ ಮಂಗಳವಾರ ತೀರ್ಪು ನೀಡಿತ್ತು. ನ್ಯಾಯಾಲಯವು ಈದಿನ ಅಮೀರುಲ್ ಗೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೬ ಎ ಅಡಿಯಲ್ಲಿ ಜೀವಾವಧಿ ಸಜೆ ಮತ್ತು ೨೫,೦೦೦ ರೂಪಾಯಿಗಳ ದಂಡವನ್ನು ಕೂಡಾ ವಿಧಿಸಿತು. ಇದರ ಜೊತೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್೩೭೬ರ ಅಡಿಯಲ್ಲಿ ೧೦ ವರ್ಷಗಳ ಕಠಿಣ ಸಜೆ ಮತ್ತು ೨೫,೦೦೦ ರೂಪಾಯಿಗಳ ದಂಡ ವಿಧಿಸಿತು.  ಐಪಿಸಿಯ ಸೆಕ್ಷನ್ ೪೪೯ ಮತ್ತು ೩೪೨ರ ಅಡಿಯಲ್ಲಿ ೭ ವರ್ಷಗಳ ಕಠಿಣ ಸಜೆ ಮತ್ತು ೫೦,೦೦೦ ರೂಪಾಯಿ ಹಾಗೂ ೧೦೦೦ ರೂಪಾಯಿಗಳ ದಂಡವನ್ನು ವಿಧಿಸಿತು. ಅಪರಾಧಿಯು ಎಲ್ಲ ಶಿಕ್ಷೆಗಳನ್ನೂ ಏಕಕಾಲಕ್ಕೆ ಅನುಭವಿಸಬೇಕು. ಮರಣದಂಡನೆಯು ಹೈಕೋರ್ಟ್‌ನಿಂದ ದೃಢ ಪಡಿಸಲ್ಪಟ್ಟ ಬಳಿಕ ಜಾರಿಯಾಗಬೇಕು ಎಂದು ಕೋರ್ಟ್ ಹೇಳಿತು.  ದೆಹಲಿಯ ನಿರ್ಭಯ ಪ್ರಕರಣದಂತೆ ಇದು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ವಿಚಾರಣೆ ಕಾಲದಲ್ಲಿ ಬಣ್ಣಿಸಿದ ಪಾಸೆಕ್ಯೂಷನ್, ನಿರ್ಭಯ ಪ್ರಕರಣದಂತೆಯೇ ಅತ್ಯಂತ ಬರ್ಬರ ಪ್ರಕರಣವಾದ್ದರಿಂದ ಆರೋಪಿಗೆ ಗಲ್ಲು ಶಿಕ್ಷೆಯನ್ನೇ ವಿಧಿಸಬೇಕು ಎಂದು ಆಗ್ರಹಿಸಿತ್ತು. ನಿರ್ಭಯ ಪ್ರಕರಣದಂತೆ ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿ ಸಾಕ್ಷಿಗಳಿಲ್ಲ, ಇಡೀ ಪ್ರಕರಣ ಸಂಪೂರ್ಣವಾಗಿ ಸಾಂದರ್ಭಿಕ ಮತ್ತು ವೈಜ್ಞಾನಿಕ ಸಾಕ್ಷಿಗಳನ್ನು ಅವಲಂಬಿಸಿದೆ, ಅದೂ ಅಲ್ಲದೆ ಆರೋಪಿ ಅಮೀರುಲ್ ವಲಸೆ ಕಾರ್ಮಿಕನಾಗಿದ್ದು ಮಲಯಾಳಂ ಬರುವುದಿಲ್ಲ ಎಂದು ಆರೋಪಿ ಪರ ವಕೀಲರು ವಾದಿಸಿದರು. ೨೦೧೬ರ ಏಪ್ರಿಲ್ ೨೮ರಂದು ಮೃತ ವಿದ್ಯಾರ್ಥಿನಿಯ ತಾಯಿ ರಾತ್ರಿ ೮.೩೦ರ ವೇಳೆಗೆ ಕೆಲಸ ಮುಗಿಸಿ ತನ್ನ  ಕಲ್ನಾರು ಛಾವಣಿಯ ಮನೆಗೆ ಬಂದಾಗ ೩೦ರ ಹರೆಯದ ಪುತ್ರಿ ಪೆರುಂಬವೂರು ಸಮೀಪದ ವಟ್ಟೋಲಿಪಡಿಯಲ್ಲಿನ ಕಾಲುವೆ ಬಳಿ ಸತ್ತು ಬಿದ್ದಿದುದು ಕಂಡು ಬಂದಿತ್ತು. ಆರೋಪಿಯು ಸಂಜೆ ೫.೩೦ರಿಂದ ೬ ಗಂಟೆ ನಡುವಣ ಅವಧಿಯಲ್ಲಿ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಅತ್ಯಾಚಾರ ಹಾಗೂ ಕೊಲೆ ಮಾಡಿದ್ದಾನೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ಅಂಗೀಕರಿಸಿದ ಕೋರ್ಟ್ , ಘಟನೆ ಸಂಭವಿಸಿದ ವೇಳೆಯಲ್ಲಿ ತಾನು ಆ ಸ್ಥಳದಲ್ಲಿ  ಇದ್ದುದು ಏಕೆ ಎಂಬುದಕ್ಕೆ ಸಮಾಧಾನಕರವಾದ ವಿವರಣೆಯನ್ನು ಆರೋಪಿ ವಿಚಾರಣೆಯಲ್ಲಿ ನೀಡಿಲ್ಲ ಎಂದು ಹೇಳಿತು. ಕೃತ್ಯದ ಮರುದಿನ ಅಮೀರುಲ್ ಪೆರುಂಬವೂರ್  ತ್ಯಜಿಸಿ ಹೊರಟು ಹೋಗಿದ್ದ. ೫೦ ದಿನಗಳ ಬಳಿಕ ಜೂನ್ ೧೬ರಂದು ತಮಿಳುನಾಡಿನ ಕಂಚಿಪುರಂನಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು. ೧೫ ಮಂದಿ ವಲಸೆ ಕಾರ್ಮಿಕರು ಸೇರಿದಂತೆ ೧೦೦ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಪರಿಶೀಲಿಸಿತ್ತು. ಕಳೆದ ಏಪ್ರಿಲ್ ನಲ್ಲಿ ವಿಚಾರಣೆ ಆರಂಭವಾಗಿತ್ತು. ಪ್ರಕರಣದಲ್ಲಿ೨೯೦ ದಾಖಲೆಗಳು ಮತ್ತು ೩೬ ವಸ್ತುರೂಪದ ಸಾಕ್ಷ್ಯಧಾರಗಳನ್ನು ಪ್ರಾಸೆಕ್ಯೂಷನ್ ಹಾಜರು ಪಡಿಸಿತ್ತು.

2017: ನವದೆಹಲಿ: ತಾನು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗಿದ್ದರೂ ಜೊರಾಸ್ಟ್ರಿಯನ್ ಫೈರ್ ಟೆಂಪಲ್ ಪ್ರವೇಶಿಸುವ ಹಕ್ಕನ್ನು ಪಾರ್ಸಿ ಮಹಿಳೆಯೊಬ್ಬರು ಗಳಿಸಿಕೊಂಡರು. ವಲ್ಸದ್ ನ ಪಾರ್ಸಿ ಅಂಜುಮನ್ ಟ್ರಸ್ಟ್ ಈದಿನ  ಸುಪ್ರೀಂಕೋರ್ಟಿಗೆ ಲಿಖಿತ ವಚನವನ್ನು ನೀಡಿ ತಾನು ಹಿಂದೂ ಧರ್ಮೀಯರನ್ನು ಮದುವೆಯಾಗಿರುವ ಅರ್ಜಿದಾರ ಮಹಿಳೆ ಗೂಲ್ರೋಖ್ ಎಂ. ಗುಪ್ತ ಅವರಿಗೆ  ಫೈರ್ ಟೆಂಪಲ್ ಅಥವಾ ’ಟವರ್ ಆಫ್ ಸೈಲೆನ್ಸ್ ಪ್ರವೇಶಕ್ಕೆ ಅನುಮತಿ ನೀಡುವುದಾಗಿ ತಿಳಿಸಿತು. ಟ್ರಸ್ಟ್ ಪರವಾಗಿ ಸುಪ್ರೀಂಕೋರ್ಟಿಗೆ ಹಾಜರಾಗಿದ್ದ ಹಿರಿಯ ವಕೀಲ ಗೋಪಾಲ ಸುಬ್ರಮಣಿಯಂ ಅವರು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸಂವಿಧಾನ ಪೀಠಕ್ಕೆ ಟ್ರಸ್ಟ್ ನಿರ್ಧಾರವನ್ನು ತಿಳಿಸಿದರು. ಟ್ರಸ್ಟ್ ಆಡಳಿತಕ್ಕೆ ಒಳಪಟ್ಟಿರುವ ದೇವಾಲಯಕ್ಕೆ ಪ್ರಾರ್ಥನೆ ಸಲುವಾಗಿ ಪ್ರವೇಶಿಸಲು ಮಹಿಳೆಯರಿಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ವಕೀಲರು ಕೋರ್ಟಿಗೆ ಹೇಳಿದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಎರಡನೆಯ ’ಟವರ್ ಆಫ್ ಸೈಲೆನ್ಸ್ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಜನವರಿ ೧೭ರಂದು ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಪೀಠ ಹೇಳಿತು. ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾದರೆ ಅಂತಹ ಪಾರ್ಸಿ ಮಹಿಳೆಗೆ ಫೈರ್ ಟೆಂಪಲ್ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂಬ ಟ್ರಸ್ಟ್ ನಿರ್ಧಾರವನ್ನು ಗುಜರಾತ್ ಹೈಕೋರ್ಟ್ ಎತ್ತಿ ಹಿಡಿದಿತ್ತು. ಗೂಲ್ರೋಖ್  ಅವರು ಹೈಕೋರ್ಟಿನ ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಗೂಲ್ರೋಖ್ ಅವರ ಹೆತ್ರವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಫೈರ್ ಟೆಂಪಲ್ ಪ್ರವೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಟ್ರಸ್ಟ್ ಪ್ರಕಟಿಸಿತ್ತು. ಗೂಲ್ರೋಖ್ ಅವರ ಹೆತ್ತವರು ಬದುಕಿದ್ದು ೮೦ರ ಹರೆಯದಲ್ಲಿದ್ದಾರೆ. ಗೂಲ್ರೋಖ್ ಅವರು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮದುವೆಯಾಗಿದ್ದರೂ, ಆಕೆ ಪಾರ್ಸಿಯಾಗಿ ಮುಂದುವರಿಯುವುದಿಲ್ಲ ಎಂಬ ಅಭಿಪ್ರಾಯವನ್ನೂ ಹೈಕೋರ್ಟ್ ಎತ್ತಿ ಹಿಡಿದಿತ್ತು. ಯಾವುದೇ ಧರ್ಮವನ್ನು ಅನುಸರಿಸಲು ಅವಕಾಶ ಕಲ್ಪಿಸುವ ಮೂಲಭೂತ ಹಕ್ಕಿನ ವಿಚಾರ ಪ್ರಕರಣದಲ್ಲಿ ಒಳಗೊಳ್ಳುವುದರಿಂದ ವಿಷಯವನ್ನು ಸುಪ್ರೀಂಕೋರ್ಟಿನ ಸಂವಿಧಾನ ಪೀಠಕ್ಕೆ ವರ್ಗಾಯಿಸಲಾಗಿತ್ತು. ಗೂಲ್ರೋಖ್ ಪರ ಹಾಜರಾದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಅವರು ತಮ್ಮ ಕಕ್ಷಿದಾರರು ತನ್ನ ಹೆತ್ತವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಎಲ್ಲ ಹಕ್ಕುಗಳನ್ನೂ ಹೊಂದಿದ್ದಾರೆ. ನಂಬಿಕೆಯ ಸ್ವಾತಂತ್ರ್ಯವನ್ನು ಧಾರ್ಮಿಕ ಟ್ರಸ್ಟ್ ಬಿಡಿ, ರಾಜ್ಯ ಸೇರಿದಂತೆ ಯಾರೇ ವ್ಯಕ್ತಿ ದಮನಿಸಲಾಗದು ಎಂದು ವಾದಿಸಿದ್ದರು. ಸುಪ್ರೀಂಕೋರ್ಟ್ ಪೀಠವು ಹಿಂದಿನ ವಿಚಾರಣೆ ಕಾಲದಲ್ಲಿ  ಜೈಸಿಂಗ್ ಅವರ ವಾದವನ್ನು ಮೇಲ್ನೋಟಕ್ಕೆ ಒಪ್ಪಿತ್ತು ಮತ್ತು ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾಗುವುದರಿಂದ ಮಹಿಳೆಯು ತನ್ನ ಧಾರ್ಮಿಕ ಅಸ್ತಿತ್ವವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿತ್ತು. ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಯುತವಾದ ತೀರ್ಪು ಬೇಕು ಏಕೆಂದರೆ ಇದು ಹಿಂದು ಮಹಿಳೆಯರ ಶಬರಿಮಲೈ ದೇವಾಲಯ ಪ್ರವೇಶದ ಹಕ್ಕಗಳಿಗೆ ಸಂಬಂಧಿಸಿದ ಇನ್ನೊಂದು ವಿಚಾರದ ಮೇಲೂ ಪ್ರಭಾವ ಬೀರುತ್ತದೆ ಎಂದು ಜೈಸಿಂಗ್ ಆಗ್ರಹಿಸಿದ್ದರು. ಕೇರಳದ ಶಬರಿಮಲೈ ದೇವಾಲಯದಲ್ಲಿ ಪೂಜೆಗೊಳ್ಳುತ್ತಿರುವ ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ ೧೦ರಿಂದ ೫೦ರ ವರೆಗಿನ ವಯೋಮಾನದ ಮಹಿಳೆಯರಿಗೆ ಪ್ರವೇಶದ ಅವಕಾಶ ಇಲ್ಲ. ಈ ವಿಚಾರವೂ ಸುಪ್ರೀಂಕೋರ್ಟ್ ಮುಂದಿದ್ದು, ಸಂವಿಧಾನ ಪೀಠಕ್ಕೆ ವಹಿಸಲಾಗಿದೆ. ಪ್ರಕರಣದ ವಿಚಾರಣೆಗೆ ಇನ್ನೂ ಸಂವಿಧಾನ ಪೀಠದ ರಚನೆಯಾಗಿಲ್ಲ.


2017: ಕೊಲಂಬೋ: ಶ್ರೀಲಂಕೆಯು ಭೂಸ್ಫೋಟಕ ನಿಷೇಧವನ್ನು ಅಂಗೀಕರಿಸಿದ ೧೬೩ನೇ ರಾಷ್ಟ್ರವಾಗಿದ್ದು, ಭೂ ಸ್ಫೋಟಕ ನಿವಾರಣಾ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಜೊತೆಗೂಡುವುದಾಗಿ ಕಳೆದ ವರ್ಷ  ನೀಡಿದ್ದ ತನ್ನ ವಚನವನ್ನು ಈಡೇರಿಸಿತು. ಶ್ರೀಲಂಕಾ ವಿದೇಶಾಂಗ ಸಚಿವಾಲಯವು ಈ ವಿಚಾರವನ್ನು ಇಲ್ಲಿ ಪ್ರಕಟಿಸಿತು. ಭೂ ಸ್ಫೋಟಕಗಳ ಬಳಕೆ, ದಾಸ್ತಾನು, ಉತ್ಪಾದನೆ ಮತ್ತು ವರ್ಗಾವಣೆಯನ್ನು ನಿಷೇಧಿಸುವ ಮತ್ತು ಅವುಗಳನ್ನು ನಾಶಪಡಿಸುವ ಒಪ್ಪಂದ ಪತ್ರವನ್ನು ವಿಶ್ವ ಸಂಸ್ಥೆಯಲ್ಲಿನ ಶ್ರೀಲಂಕೆಯ ಕಾಯಂ ಮಿಷನ್ ಪ್ರತಿನಿಧಿ ರೋಹನ್ ಪೆರೇರಾ ಅವರು ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿತು. ಭೂ ಸ್ಫೋಟಕ ಅಥವಾ ಆಂಟಿ ಪರ್ಸನಲ್ ಸ್ಫೋಟಕಗಳ ಬಳಕೆ,  ದಾಸ್ತಾನು, ಉತ್ಪಾದನೆ ಮತ್ತು ವರ್ಗಾವಣೆ ನಿಷೇಧಕ್ಕೆ ಸಂಬಂಧಿಸಿದ ಸಮಾವೇಶದ ನಿರ್ಧಾರವನ್ನು ಸಾಮಾನ್ಯವಾಗಿ ಸ್ಫೋಟಕ ನಿಷೇಧ ಒಪ್ಪಂದ ಅಥವಾ ಒಟ್ಟಾವ ಒಪ್ಪಂದ ಎಂದು ಹೇಳಲಾಗುತ್ತದೆ. ೧೯೯೭ರ ಸೆಪ್ಟೆಂಬರ್ ೧೮ರಂದು ನಾರ್ವೆಯ ಓಸ್ಲೋದಲ್ಲಿ ನಡೆದ ಸಮಾವೇಶದಲ್ಲಿ ಈ ಒಪ್ಪಂದವನ್ನು ಅಂಗೀಕರಿಸಲಾಗಿತ್ತು.  ೧೯೯೯ರ ಮಾರ್ಚ್ ೧ರಂದು ಜಾರಿಗೆ ಬಂದ ಒಪ್ಪಂದವು  ಆಂಟಿ ಪರ್ಸನಲ್ ಸ್ಫೋಟಕಗಳ ಬಳಕೆ,  ದಾಸ್ತಾನು, ಉತ್ಪಾದನೆ ಮತ್ತು ವರ್ಗಾವಣೆಯನ್ನು ನಿಷೇಧಿಸಿತ್ತು. ಅಂತಾರಾಷ್ಟ್ರೀಯ ಸಮಾವೇಶಕ್ಕೆ ಸೇರ್ಪಡೆಯಾಗುವ ಪ್ರತಿ ದೇಶವೂ ತನ್ನ ವ್ಯಾಪ್ತಿ ಪ್ರದೇಶದಲ್ಲಿ ಇರುವ ಸ್ಫೋಟಕಗಳನ್ನು  ಒಪ್ಪಂದಕ್ಕೆ ಸೇರಿದ ನಾಲ್ಕು ವರ್ಷ ಮೀರುವ ಮುನ್ನ ನಾಶ ಪಡಿಸುವುದಾಗಿ ವಚನ ನೀಡುತ್ತದೆ. ‘ಭೂ ಸ್ಫೋಟಕ ಮುಕ್ತ ಜಗತ್ತು ಶೀರ್ಷಿಕೆಯ ಒಟ್ಟಾವ ಸಮಾವೇಶದ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಪೆರೇರಾ ’ಸಮಾವೇಶದ ಅಂಗ ಪಕ್ಷವಾಗಿ ನಾವು ಪೂರ್ಣ ಪ್ರಮಾಣದಲ್ಲಿ ಸ್ಫೋಟಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಹೇಳಿದರು .


2016: ಬೆಂಗಳೂರು: ಮಹಿಳೆಯೊಬ್ಬರ ಜತೆ ಕಾಮಕೇಳಿ ನಡೆಸಿದ್ದಾರೆ ಎನ್ನಲಾದ ದೃಶ್ಯಾವಳಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಅಬಕಾರಿ ಸಚಿವ  ಎಚ್.ವೈ. ಮೇಟಿ ರಾಜೀನಾಮೆ ನೀಡಿದರು. ಕಳೆದ ಮೂರು ದಿನಗಳಿಂದ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದಿದ್ದ  ಕಾಮಕೇಳಿ ಪ್ರಕರಣದ ದೃಶ್ಯಾವಳಿ ಬೆಳಿಗ್ಗೆ 11.30 ಸುಮಾರಿಗೆ ಟಿ.ವಿ. ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಟಿ ಅವರನ್ನು ತಮ್ಮ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡು ರಾಜೀನಾಮೆ ಪಡೆದರುಅನಂತರ ಅಬಕಾರಿ ಸಚಿವರ ರಾಜೀನಾಮೆ ಪತ್ರವನ್ನು   ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಮುಖ್ಯಮಂತ್ರಿ ರವಾನಿಸಿದರುರಾಜ್ಯಪಾಲರು ರಾಜೀನಾಮೆ ಅಂಗೀಕರಿಸಿದರು. ಡಿಸೆಂಬರ್ 11ರ  ಬೆಳಿಗ್ಗೆ ಮೊದಲ ಬಾರಿಗೆ ಅಬಕಾರಿ ಸಚಿವರ ವಿರುದ್ಧ ಕಾಮಕೇಳಿಯ ಆರೋಪ ಕೇಳಿಬಂದಿತ್ತು. ಟಿ.ವಿ ವಾಹಿನಿಯೊಂದು ಸ್ಫೋಟಕ ಸುದ್ದಿ ಬಹಿರಂಗಪಡಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ಸಂಚಲನ ಉಂಟಾಗಿತ್ತು. ಆದರೆ, ‘ಅಂತಹ ಯಾವುದೇ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ಅವೆಲ್ಲಾಮಾಧ್ಯಮಗಳ ಸೃಷ್ಟಿಎಂದು ಮೇಟಿ ಅವರು ಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ನೀಡಿದ್ದರು.


2014: ನವದೆಹಲಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗಂಗಾ ಶುದ್ಧೀಕರಣದ ಯೋಜನೆಯ ನಿರ್ವಹಣೆಗಾಗಿ ಪ್ರತೇಕ ಸಂಸ್ಥೆ ರಚಿಸಲು ಕೇಂದ್ರ ಸರ್ಕಾರ ಚಿಂತಿಸಿದ್ದು, ಗಂಗೆ ಹರಿಯುವ ಪ್ರದೇಶದಲ್ಲಿ 'ಗಂಗಾ ಇನ್ಸ್ಟಿಟ್ಯೂಟ್ ಆಫ್ ರಿವರ್ ಸೈನ್ಸ್ಸ್ಸ್ಥಾಪಿಸಲು ನೀರಾವರಿ ಮತ್ತು ಗಂಗಾ ಶುದ್ಧೀಕರಣ ಸಚಿವಾಲಯ ನಿರ್ಧರಿಸಿತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಗಂಗಾ ಮತ್ತಷ್ಟು ಮಲಿನಗೊಳ್ಳುತ್ತಿರುವುದರಿಂದ ಗಂಗೆ ಹರಿಯುವ ಆಸುಪಾಸಿನ ಗ್ರಾಮಗಳಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಸಚಿವಾಲಯ ಯೋಚಿಸಿತು. ಪ್ರತಿದಿನ ಸುಮಾರು 12 ಸಾವಿರ ಮಿಲಿಯನ್ ಲೀಟರ್ ನಷ್ಟು ಕೊಳಚೆ ಗಂಗೆಯಿಂದ ಶೇಖರಿಸಲಾಗುತ್ತಿದೆ ಎನ್ನಲಾಯಿತು.

2014: ಶ್ರೀನಗರಪ್ರತ್ಯೇಕತಾವಾದಿಗಳ ಚುನಾವಣಾ ಬಹಿಷ್ಕಾರ ಕರೆ ಮತ್ತು ಕೊರೆಯುವ ಚಳಿಯ ನಡುವೆಯೂ ಜಮ್ಮು ಮತ್ತು ಕಾಶ್ಮೀರದಲ್ಲಿ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ 4ನೇ ಸುತ್ತಿನ
ಚುನಾವಣೆಯಲ್ಲಿ ಶೇಕಡಾ 49 ಮತದಾನವಾಯಿತು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರಅನಂತ್ನಾಗ್ಶೋಪಿಯಾನ್ ಮತ್ತು ಸಾಂಬ ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತುಕಣಿವೆ ರಾಜ್ಯದಲ್ಲಿ ಮೊದಲ 2ಹಂತದ ಮತದಾನದಲ್ಲಿ ತಲಾ 71% ಮತ್ತು 3ನೇ ಹಂತದ ಮತದಾನದಲ್ಲಿ 59% ಮತದಾನವಾಗಿತ್ತು. 4ನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿತು. ಕೆಲವು ಕಡೆ ರಾಜಕೀಯ ಪಕ್ಷಗಳ ಬೆಂಬಲಿಗರು ಸಣ್ಣ ಪುಟ್ಟ ಗಲಭೆ ಮಾಡಿದ್ದು ಹೊರತು ಪಡಿಸಿದರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಉಮಂಗ್ ನರೂಲ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಪ್ರದೇಶದಲ್ಲಿ ಶೇಕಡಾ 45ರಷ್ಟು ಮಾತ್ರ ಮತದಾನವಾಗಿತ್ತು ಮತ್ತು ವರ್ಷದ ಪ್ರಾರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 29% ಮತದಾನವಾಗಿತ್ತು.

2014: ನವದೆಹಲಿ: ಮಾದಕ ದ್ರವ್ಯ ಹಾವಳಿ ವಿರುದ್ಧ ತಮ್ಮ ಮಾಸಿಕ 'ಮನ್ ಕೀ ಬಾತ್' (ಮನದಾಳದ ಮಾತು) ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾದಕ ದ್ರವ್ಯಗಳನ್ನು ಖರೀದಿಸಲು ನೀವು ಕೊಡುವ ಹಣ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು. 'ಮಾದಕ ದ್ರವ್ಯ ಸೇವಿಸುತ್ತಿರುವ ಯುವಕರಲ್ಲಿ ನಾನೊಂದು ಪ್ರಶ್ನೆ ಕೇಳಬಯಸುತ್ತೇನೆ. ಮಾದಕ ದ್ರವ ತೆಗೆದುಕೊಂಡಾಗ ನೀವು ಬೇರೆಯೇ ಲೋಕಕ್ಕೆ ಹೋದ ಅನುಭವ ನಿಮಗಾಗಿ ಮುದಗೊಂಡಿರಬಹುದು. ಆದರೆ ನೀವು ಮಾದಕ ದ್ರವ್ಯಕ್ಕಾಗಿ ನೀಡುವ ಹಣ ಎಲ್ಲಿಗೆ ಹೋಗುತ್ತದೆ ಎಂದು ಎಂದಾದರೂ ನಿಮ್ಮನ್ನು ನೀವು ಕೇಳಿಕೊಂಡಿದ್ದೀರಾ?' ಎಂದು ಪ್ರಧಾನಿ ಪ್ರಶ್ನಿಸಿದರು. 'ಈ ಹಣ ಭಯೋತ್ಪಾದಕರಿಗೆ ತಲುಪಿ ಅದನ್ನು ಅವರು ಶಸ್ತ್ರಾಸ್ತ್ರ ಖರೀದಿಗೆ ಬಳಸುವ ಸಾಧ್ಯತೆ ಇದೆ ಎಂದು ಎಂದಾದರೂ ಒಮ್ಮೆ ಯೋಚಿಸಿದ್ದೀರಾ ಮತ್ತು ಅದೇ ಶಸ್ತ್ರಾಸ್ತ್ರಗಳನ್ನು ಅವರು ನಮ್ಮ ಸೈನಿಕರನ್ನು ಕೊಲ್ಲಲು ಬಳಸುತ್ತಿರಬಹುದು ಎಂದು ಚಿಂತಿಸಿದ್ದೀರಾ?' ಎಂದು ಮೋದಿ ಕೇಳಿದರು. 'ಸೈನಿಕನೊಬ್ಬನಿಗೆ ತಾಗಿದ ಗುಂಡು ನೀವು ಮಾದಕ ದ್ರವ್ಯಕ್ಕಾಗಿ ಕೊಟ್ಟ ಹಣದ ಒಂದು ಭಾಗವಾಗಲೂ ಬಹುದು ಎಂದು ಒಮ್ಮೆಯಾದರೂ ಚಿಂತಿಸಿದ್ದೀರಾ?' ಎಂದು ಪ್ರಶ್ನಿಸಿದ ಪ್ರಧಾನಿ ಮಾದಕ ದ್ರವ್ಯ ಸೇವನೆಯನ್ನು ಬಿಟ್ಟು ಬಿಡಿ ಎಂದು ಯುವಕರನ್ನು ಒತ್ತಾಯಿಸಿದರು. 'ಮಾದಕ ದ್ರವ್ಯವನ್ನು ತಿರಸ್ಕರಿಸಿ, ಮಾದಕ ದ್ರವ್ಯ ಸೇವನೆಗೆ 'ಇಲ್ಲ' ಎಂದು ಹೇಳುವ ಧೈರ್ಯ ಪ್ರದರ್ಶಿಸಿ. ನಿಮ್ಮ ಮಿತ್ರರಿಗೂ ಇದನ್ನೇ ಹೇಳಿ' ಎಂದು ಮೋದಿ ನುಡಿದರು. 'ಮಾದಕ ದ್ರವ್ಯ ಸೇವನೆಯು ಕತ್ತಲೆ, ಹಾನಿ ಮತ್ತು ಸರ್ವನಾಶವನ್ನು ತರುತ್ತದೆ' ಎಂದು ಹೇಳಿದ ಪ್ರಧಾನಿ, ಇದರ ವಿರುದ್ಧ ವಿಶೇಷ ಸಹಾಯವಾಣಿ ಮತ್ತು ಸಾಮಾಜಿಕ ಮಾಧ್ಯಮ ಮೂಲಕ ಚಳವಳಿ ನಡೆಸುವಂತೆ ಕರೆ ನೀಡಿದರು. 'ಈ ದೇಶದ ಯುವಜನತೆಯ ಬಗ್ಗೆ ನಾನು ಚಿಂತಿತನಾಗಿದ್ದೇನೆ ಎಂದು ಕಳೆದ ಬಾರಿಯೇ ನಾನು ಹೇಳಿದ್ದೇನೆ. ಕೆಲವು ಪುತ್ರರು ಮತ್ತು ಪುತ್ರಿಯರು ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬಿದ್ದು ಇಡೀ ಕುಟುಂಬವೇ ಚೂರು ಚೂರಾಗುವುದರ ಬಗ್ಗೆ ನನಗೆ ಚಿಂತೆಯಿದೆ' ಎಂದು ಅವರು ನುಡಿದರು. 'ಅದು ಅತ್ಯಂತ ಒಳ್ಳೆಯ ಕುಟುಂಬಗಳನ್ನು ನಾಶಗೊಳಿಸಬಲ್ಲುದು. ಅದಕ್ಕೆ ಯಾರನ್ನಾದರೂ ಸರ್ವ ನಾಶ ಮಾಡುವ ಶಕ್ತಿ ಇದೆ. ಇದು ಮಾನಸಿಕ- ಸಾಮಾಜಿಕ ಮತ್ತು ವೈದ್ಯಕೀಯ ಸಮಸ್ಯೆ. ಕೇವಲ ಔಷಧದಿಂದ ಅದನ್ನು ನಿವಾರಿಸಲಾಗದು' ಎಂದು ಮೋದಿ ಹೇಳಿದರು. ಬಹಳಷ್ಟು ಮಂದಿ ಈ ಚಟದಿಂದ ಹೊರಬಂದ ಉದಾಹರಣೆಗಳಿವೆ ಎಂದು ಹೇಳಿದ ಮೋದಿ ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಮುಂದೆ ಬರುವಂತೆ ಸಾರ್ವಜನಿಕ ಜೀವನದ ಗಣ್ಯರಿಗೆ ಮನವಿ ಮಾಡಿದರು. 'ಮಾದಕ ದ್ರವ್ಯ ಮುಕ್ತ ಭಾರತ' (ಡ್ರಗ್ ಫ್ರೀ ಇಂಡಿಯಾ) ಚಳವಳಿಯನ್ನು ಹೂಡಲು ನಾವು ಪ್ರಯತ್ನಿಸಬಹುದು ಎಂದು ಹೇಳಿದ ಪ್ರಧಾನಿ 'ಮಕ್ಕಳಲ್ಲಿ ಆಗುವ ಬದಲಾವಣೆಗಳ ಮೇಲೆ ಕಣ್ಣಿಟ್ಟುಕೊಂಡು ಅವರನ್ನು ಈ ಚಟಕ್ಕೆ ಬೀಳದಂತೆ ರಕ್ಷಿಸಿ' ಎಂದು ಪಾಲಕರಿಗೂ ಸಲಹೆ ಮಾಡಿದರು.

2014:ನವದೆಹಲಿ: ಗೃಹ ಸಚಿವಾಲಯದ ಶಿಫಾರಸು ಅಂಗೀಕಾರಗೊಂಡದ್ದೇ ಆದರೆ, ಸಿಡಿಲಿನ ಹೊಡೆತಕ್ಕೆ ಸಿಲುಕಿ ಅಸು ನೀಗುವ ವ್ಯಕ್ತಿಗಳ ವಾರಸುದಾರರಿಗೆ ಇನ್ನು ಮುಂದೆ ಸರ್ಕಾರದಿಂದ ಪರಿಹಾರ ಲಭಿಸಲಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 400 ಸಾವುಗಳು ಸಿಡಿಲ ಬಡಿತದಿಂದ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಸಿಡಿಲು ಬಡಿತವನ್ನು ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರಗಳ ಪರಿಹಾರ ನಿಧಿ ನೀಡುವ ಸಲುವಾಗಿ ಘೋಷಿತವಾಗಿರುವ ನೈಸರ್ಗಿಕ ಪ್ರಕೋಪಗಳ ಪಟ್ಟಿಗೆ ಸೇರಿಸುವಂತೆ ಗೃಹ ಸಚಿವಾಲಯವು 14ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಿತು. ಪ್ರಸ್ತುತ ಸಿಡಿಲ ಬಡಿತವು ಪರಿಹಾರಕ್ಕೆ ನಿಗದಿಯಾಗಿರುವ ನೈಸರ್ಗಿಕ ದುರಂತಗಳ ಪಟ್ಟಿಯಲ್ಲಿ ಇಲ್ಲ. 14ನೇ ಹಣಕಾಸು ಆಯೋಗವು ಡಿಸೆಂಬರ್ 31ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಕಾಲ ಕಾಲಕ್ಕೆ ರಚನೆಯಾಗುವ ಹಣಕಾಸು ಆಯೋಗಗಳು ಘೋಷಿತ ನೈಸರ್ಗಿಕ ಪ್ರಕೋಪಗಳ ಪಟ್ಟಿಗೆ ಯಾವುದೇ ವಿಷಯವನ್ನು ಸೇರಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತವೆ.

2014: ಜೈಪುರ: ಜೈಪುರದಿಂದ 35 ಕಿ.ಮೀ. ದೂರದ ಬೀಲ್​ಪುರ ಗ್ರಾಮದ ಬಳಿ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿಲದ ಟ್ಯಾಂಕರ್ ಒಂದು ಸ್ಪೋಟಗೊಂಡ ಪರಿಣಾಮವಾಗಿ 10 ಜನ ಸಜೀವವಾಗಿ ದಹನಗೊಂಡು, ಇತರ 12 ಹನ್ನೆರಡು ಮಂದಿ ಸುಟ್ಟ ಗಾಯಗಳಿಗೆ ಒಳಗಾದ ದಾರುಣ ಘಟನೆ ಹಿಂದಿನ ದಿನ ರಾತ್ರಿ ಘಟಿಸಿತು. ಹೆದ್ದಾರಿ ಮೂಲಕ ಸಾಗುತ್ತಿದ್ದ ಇತರ ಏಳು ವಾಹನಗಳಿಗೂ ಈ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿತು. ದುರಂತದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳಗಿನ ವೇಳೆಗೆ ದುರಂತಕ್ಕೆ ಈಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ದುರಂತದಲ್ಲಿ ಮೃತರಾದವರ ಪೈಕಿ ದಕ್ಷುಲ್ (6), ರಾಧಾಮೋಹನ್ (40), ವಿನೋದ್ (37) ಅವರನ್ನು ಗುರುತಿಸಲಾಗಿದೆ ಎಂದು ಜೈಪುರ (ಗ್ರಾಮೀಣ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ದೀಪ್ ಹೇಳಿದರು.

2014: ಕೋಲ್ಕತ: ದೆಹಲಿಗೆ ಹೊರಟಿದ್ದ ಪೂರ್ವಾ ಎಕ್ಸ್​ಪ್ರೆಸ್ ರೈಲುಗಾಡಿಯ ಒಂಬತ್ತು ಬೋಗಿಗಳು ಬೆಳಗ್ಗೆ ಹೌರಾ ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನ ಬಳಿಕ ಲಿಲಿವಾದಲ್ಲಿ ಹಳಿ ತಪ್ಪಿದವು. ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ತತ್​ಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು. 12381 ಯುಪಿ ಹೌರಾ - ನವದೆಹಲಿ ಪೂರ್ವಾ ಎಕ್ಸ್​ಪ್ರೆಸ್ ಬೆಳಗ್ಗೆ 8.25ಕ್ಕೆ ಹಳಿ ತಪ್ಪಿದೆ. ಹೌರಾದಿಂದ ಅದು ಬೆಳಗ್ಗೆ 8.15ಕ್ಕೆ ಹೊರಟಿತ್ತು. ಹಳಿ ತಪ್ಪುವ ವೇಳೆಯಲ್ಲಿ ರೈಲು ನಿಧಾನವಾಗಿ ಚಲಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾದ್ಯಂತ ಖ್ಯಾತರಾದ ಕರ್ನಾಟಕ ಮೂಲದ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 'ಜನ್ಮ ದಿನದ ಸಂದರ್ಭದಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಅವರಿಗೆ ನನ್ನ ಶ್ರದ್ಧಾಂಜಲಿಗಳು. ಯೋಗವನ್ನು ವಿಶ್ವವ್ಯಾಪಿಗೊಳಿಸುವಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯವಾದುದು' ಎಂದು ಪ್ರಧಾನಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದರು. ಭಾರತದ ಯೋಗದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಧಾನಿ ಜೂನ್ 21ನೇ ದಿನಾಂಕವನ್ನು 'ವಿಶ್ವ ಯೋಗ ದಿನ'ವಾಗಿ ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ವಿಶ್ವಸಂಸ್ಥೆ ಎರಡು ದಿನಗಳ ಹಿಂದಷ್ಟೇ ಜೂನ್ 21ನೇ ದಿನಾಂಕವನ್ನು 'ವಿಶ್ವ ಯೋಗ ದಿನ'ವಾಗಿ ಘೋಷಿಸಿತ್ತು. ವಿಶ್ವಸಂಸ್ಥೆಯ 175ಕ್ಕೂ ಹೆಚ್ಚು ದೇಶಗಳು ಮೋದಿ ಪ್ರಸ್ತಾವವನ್ನು ಅನುಮೋದಿಸಿದ್ದವು. ವಿಶ್ವಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರು 'ಅಯ್ಯಂಗಾರ್ ಯೋಗ' ಸಂಸ್ಥೆಯನ್ನೂ ಇದಕ್ಕಾಗಿ ಸ್ಥಾಪಿಸಿದ್ದರು. ಕರ್ನಾಟಕದ ಬೆಳ್ಳೂರಿನಲ್ಲಿ 1918ರ ಡಿಸೆಂಬರ್ 14ರಂದು ಜನಿಸಿದ್ದ ಅಯ್ಯಂಗಾರ್ 2014ರ ಆಗಸ್ಟ್ 20ರಂದು ಪುಣೆಯಲ್ಲಿ ನಿಧನರಾಗಿದ್ದರು.


2014: ಶಿಮ್ಲಾ: ಭಾರಿ ಹಿಮಪಾತದ ಪರಿಣಾಮವಾಗಿ ಹಿಮಾಚಲ ಪ್ರದೇಶದ ಮನಾಲಿ ಪ್ರವಾಸೀ ಧಾಮದ ಆಸುಪಾಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ 600ಕ್ಕೂ ಹೆಚ್ಚು ಮಂದಿ ಪ್ರವಾಸಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೂ ಸಿಕ್ಕಿಹಾಕಿಕೊಂಡದ್ದ 18 ಜನರಿಗೆ ಮನಾಲಿಯಿಂದ 35 ಕಿ.ಮೀ. ದೂರದಲ್ಲಿರುವ ಮರ್ಹಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಯಿತು ಎಂದು ಉಪ ಜಿಲ್ಲಾಧಿಕಾರಿ ವಿನಯ್ ಧಿಮಾನ್ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದರು. ರೊಹ್ತಂಗ್ ಕಣಿವೆಯತ್ತ ಹೊರಟಿದ್ದಾಗ ಗುಲಾಬಾ ಮತ್ತು ಮರ್ಹಿಯಲ್ಲಿ ಸಿಕ್ಕಿಹಾಕಿಕೊಂಡ ಬಹುತೇಕ ಪ್ರವಾಸಿಗಳನ್ನು ರಕ್ಷಿಸಿ ಶನಿವಾರ ರಾತ್ರಿ 10 ಗಂಟೆ ಮನಾಲಿಗೆ ಕರೆತರಲಾಯಿತು ಎಂದು ಅವರು ನುಡಿದರು. ಹಿಮಪಾತದ ಮಧ್ಯೆ ಸಿಕ್ಕಿಹಾಕಿಕೊಂಡವರ ರಕ್ಷಣೆಗಾಗಿ ಸ್ನೋ ಸ್ಕೂಟರ್​ಗಳನ್ನು ನಿಯೋಜಿಸಲಾಯಿತು. ಮನಾಲಿ ಆಸುಪಾಸಿನ ಗುಡ್ಡಗಳು ಹಿಂದಿನ ದಿನದಿಂದ ಭಾರಿ ಹಿಮಪಾತಕ್ಕೆ ಒಳಗಾಗಿ ತತ್ತರಿಸಿದವು. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಮನಾಲಿಯಿಂದ 20 ಕಿಮೀ ದೂರದಲ್ಲಿ ಇರುವ ಪಾಟ್ಲಿಕುಲ್ ಸಮೀಪ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹವಾಮಾನ ವರದಿಗಳ ಪ್ರಕಾರ ಮನಾಲಿಯಲ್ಲಿ ಒಂದಡಿಗೂ ಹೆಚ್ಚು ಪ್ರಮಾಣದಲ್ಲಿ ಹಿಮ ಸುರಿದಿತ್ತು.

2008: ಮಹಾತ್ಮ ಗಾಂಧಿ ಅವರ ಕುಟುಂಬದ ಸೊಸೆ ಸರಸ್ವತಿ ಗಾಂಧಿ ಅವರು (85) ಈದಿನ ಮಧ್ಯಾಹ್ನ ಕೇರಳದ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸರಸ್ವತಿ ಗಾಂಧಿ ಅವರು ಎಂ.ಕೆ. ಗಾಂಧಿಯವರ ಮೊಮ್ಮಗ ಕಾಂತಿಲಾಲ್ ಗಾಂಧಿ ಅವರ ಪತ್ನಿ. ಇವರ ಮದುವೆಯನ್ನೂ ಮಹಾತ್ಮ ಗಾಂಧಿಯವರೆ ಮಾಡಿಸಿದ್ದರು. ಕಾಂತಿಲಾಲ್ 1983ರಲ್ಲಿ ವಿಧಿವಶರಾಗಿದ್ದರು. ಆ ನಂತರ ಸರಸ್ವತಿ ಅಮೆರಿಕದಲ್ಲಿ ನೆಲೆಸಿದ ತಮ್ಮ ಮಕ್ಕಳಿಬ್ಬರ ಜೊತೆ ಕೆಲ ಕಾಲ ಇದ್ದರು. ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಭಾರತಕ್ಕೆ ಮರಳಿದ್ದ ಅವರು ತಿರುವನಂತಪುರದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು.

2008: ಸಂಯುಕ್ತ ಜನತಾದಳ (ಜೆಡಿಯು) ಅಧ್ಯಕ್ಷ ಶರದ್ ಯಾದವ್ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಹಂಗಾಮಿ ಸಂಚಾಲಕರಾಗಿ ನೇಮಕ ಮಾಡಲಾಯಿತು. ಸದ್ಯಕ್ಕೆ ಜೆಡಿಯು ಸಂಚಾಲಕರಾಗಿರುವ ಜಾರ್ಜ್ ಫರ್ನಾಂಡಿಸ್ ಅವರ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ ಈ ನಿರ್ಧಾರ ಕೈಗೊಂಡರು. ಈ ನಿರ್ಧಾರವನ್ನು ಎನ್‌ಡಿಎ ಎಲ್ಲಾ ಘಟಕಗಳೊಂದಿಗೆ ಚರ್ಚೆ ನಡೆಸಿದ ನಂತರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಮುಖ್ತರ್ ಅಬ್ಬಾಸ್ ನಕ್ವಿ ಹೇಳಿದರು.

2008: ಶ್ರೀರಂಗಪಟ್ಟಣ: ಮಾಜಿ ಶಾಸಕ ಎಂ.ಶ್ರೀನಿವಾಸ್ (66) ಹೃದಯಾಘಾತದಿಂದ ನಿಧನರಾದರು. ದಿಢೀರ್ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿದವು. ಧರ್ಮರತ್ನಾಕರ ಬಿ.ಮರೀಗೌಡ ಹಾಗೂ ಜಾನಕಮ್ಮ ಅವರ ತೃತೀಯ ಪುತ್ರನಾಗಿ 1942ರಲ್ಲಿ ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಜನಿಸಿದ, ಶ್ರೀನಿವಾಸ್ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಹಾಗೂ 1977ರಲ್ಲಿ ಜನತಾ ಪಕ್ಷದಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 1978ರಲ್ಲಿ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿ ಒಂದು ಅವಧಿಗೆ ಶಾಸಕರಾಗಿ ಕೆಲಸ ನಿರ್ವಹಿಸಿದ್ದರು.

2008: ಹಿಂದೂಜಾ ಸಮೂಹದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಘಟಕವಾದ ಅಮಸ್ ಬ್ಯಾಂಕ್ (ಸ್ವಿಟ್ಸರ್‌ಲೆಂಡ್) ಲಿ, ಚೆನ್ನೈ ಮೂಲದ ಷೇರು ದಲ್ಲಾಳಿ ಸಂಸ್ಥೆ ಪ್ಯಾಟರ್‌ಸನ್‌ (ಪ್ಯಾಟ್‌ಕೊ ಇನ್ವೆಸ್ಟ್‌ಮೆಂಟ್ಸ್ ಅಂಡ್ ಕನ್ಸಲ್ಟೆನ್ಸಿ ಸರ್ವಿಸ್ ಪ್ರೈ.ಲಿ) ಶೇ 40ರಷ್ಟನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತು.

2007: ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂದರ್ಭದಲ್ಲಿ ಈ ನಾಯಕನ ಕುರಿತಾಗಲಿ, ಅವರ ಜೈ ಜವಾನ್, ಜೈ ಕಿಸಾನ್ ಸಂದೇಶವನ್ನಾಗಲಿ ಪ್ರಚಾರ ಮಾಡಲು ಸರ್ಕಾರ ಕವಡೆ ಕಾಸನ್ನು ಖರ್ಚು ಮಾಡಿಲ್ಲ ಎಂಬ ಸತ್ಯ ಹೊರಬಿದ್ದಿತು. ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿದ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ದೃಶ್ಯ ಪ್ರಸಾರ ನಿರ್ದೇಶನಾಲಯದ (ಡಿಎವಿಪಿ) ಅಧಿಕಾರಿಗಳು ಈ ಮಾಹಿತಿ ನೀಡಿದರು. ತಮ್ಮ ಜೀವನದುದ್ದಕ್ಕೂ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಅವರ ಹುಟ್ಟುಹಬ್ಬ ಸರ್ಕಾರದಲ್ಲಿರುವ ಯಾರೊಬ್ಬರಲ್ಲೂ ಉತ್ಸಾಹ ಮೂಡಿಸಿಲ್ಲ ಎಂಬುದು ಈ ಉತ್ತರದಿಂದ ಬೆಳಕಿಗೆ ಬಂತು. ಸರ್ಕಾರದ ಪರವಾಗಿ ಅಧಿಕೃತ ಜಾಹೀರಾತು ನೀಡುವ `ಡಿಎವಿಪಿ' ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ 2.95 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಅದೇ ದಿನ ಹುಟ್ಟಿದ ಶಾಸ್ತ್ರಿ ಅವರನ್ನು ಸಂಪೂರ್ಣ ಮರೆತುಬಿಟ್ಟಿದೆ ಎಂದು ಭಟ್ಟಾಚಾರ್ಯ ಹೇಳಿದರು. ಶಾಸ್ತ್ರಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಗೆ, ಕೇಂದ್ರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಉತ್ತರಿಸಿದ್ದು, ವಿಜಯ್ ಘಾಟ್ ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಇತರ ಸಚಿವರು ಪಾಲ್ಗೊಂಡ್ದಿದರು ಎಂಬ ಮಾಹಿತಿ ನೀಡಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಸರ್ಕಾರದ ದಾಖಲೆಗಳ ಪ್ರಕಾರ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ ಎಂದು ಪ್ರಶ್ನಿಸಿದ್ದರು. ಈ ಅರ್ಜಿಗೆ ಗೃಹ ಸಚಿವಾಲಯದ ನಿರ್ದೇಶಕಿ ರೀತಾ ಆಚಾರ್ಯ ಉತ್ತರಿಸಿ, 'ನಮ್ಮ ದಾಖಲೆಗಳ ಪ್ರಕಾರ 1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು' ಎಂದು ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟದ ವಿಚಾರದ ಕುರಿತು ಇಲಾಖೆ ಮೌನ ವಹಿಸಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಒರಿಸ್ಸಾದ ಬಾಲಸೋರ್ ಸಮೀಪದ ಚಂಡಿಪುರದ ಪರೀಕ್ಷಾ ಕೇಂದ್ರದಲ್ಲಿ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಹೊತ್ತೊಯ್ಯಬಲ್ಲ `ಆಕಾಶ್' ಕ್ಷಿಪಣಿಯನ್ನು ಈದಿನ ಪ್ರಾಯೋಗಿಕ ಪರೀಕ್ಷೆಗೆ ಒಡ್ಡಲಾಯಿತು. ವಾಯು ಸೇನೆಯ ರಕ್ಷಣಾ ತಂತ್ರಗಳ ತಾಲೀಮಿನ ಭಾಗವಾಗಿ 25 ಕಿ.ಮೀ. ದೂರದ ಗುರಿ ತಲುಪುವ, 50 ಕೆಜಿ ಸಿಡಿ ತಲೆ ಹೊತ್ತೊಯ್ಯಬಲ್ಲ, ಭೂಮಿಯಿಂದ ಆಗಸಕ್ಕೆ ನೆಗೆಯುವ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು. ಯುದ್ಧ ವಿಮಾನವೊಂದರಿಂದ ಇಳಿಬಿಟ್ಟಿದ್ದ `ಬ್ಯಾರೆಲ್' ಗುರಿಯಾಗಿಸಿ `ಆಕಾಶ್' ಕ್ಷಿಪಣಿಯನ್ನು ಉಡಾಯಿಸಲಾಗಿತ್ತು. ಈ ಕ್ಷಿಪಣಿ 5.6 ಮೀ ಉದ್ದವಿದ್ದು 700 ಕೆ.ಜಿ. ತೂಗುತ್ತದೆ.

2007: ಪಂಜಾಬಿನ ನು ಚುರ್ ಚಕ್ ಗ್ರಾಮದ ಮಾನವ ಚಾಲಿತ ರೈಲ್ವೆ `ಕ್ರಾಸಿಂಗ್' ಬಳಿ ಫಿರೋಜ್ ಪುರ - ಲೂಧಿಯಾನ ಮಧ್ಯೆ ಚಲಿಸುತ್ತಿದ್ದ ಸಟ್ಲೇಜ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಬಹುತೇಕ ಶಾಲಾ ಮಕ್ಕಳು ಮತ್ತು ಉಪಾಧ್ಯಾಯರಿದ್ದ ಖಾಸಗಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 17 ಮಂದಿ ಸತ್ತು 14 ಮಂದಿ ತೀವ್ರವಾಗಿ ಗಾಯಗೊಂಡರು. ಮೋಗಾ ಜಿಲ್ಲೆಯ ಜಗ್ರೌನಿಂದ ಬಸ್ಸು ಲೋಪೊ ಗ್ರಾಮದತ್ತ ಹೊರಟಿದ್ದಾಗ ಈ ದುರಂತ ಸಂಭವಿಸಿತು.

2007: ಬೆಂಗಳೂರಿನಲ್ಲಿ ಈದಿನ ಸಂಜೆ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಮತ್ತು ಅನಿಲ್ ಕುಂಬ್ಳೆ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್. ರವೀಂದ್ರ ಅವರು ಕುಂಬ್ಳೆಗೆ `ಕರ್ನಾಟಕ ಕ್ರಿಕೆಟ್ ರತ್ನ' ಎಂಬ ಬಿರುದು ನೀಡಿ ಗೌರವಿಸಿದರು.

2006: ಬಾಲ್ಯ ವಿವಾಹ ಮಾಡುವವರಿಗೆ ಸೆರೆಮನೆವಾಸದ ಶಿಕ್ಷೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಮಸೂದೆಯನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ರೇಣುಕಾ ಚೌಧರಿ ರಾಜ್ಯಸಭೆಯಲ್ಲಿ ಮಂಡಿಸಿದರು.

2006: ಕೇಂದ್ರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಸೌಲಭ್ಯ ಕಲ್ಪಿಸುವ ಮಹತ್ವದ ಕೇಂದ್ರೀಯ ಶಿಕ್ಷಣಸಂಸ್ಥೆಗಳ ಮಸೂದೆ-2006ಕ್ಕೆ ಲೋಕಸಭೆ ಗುರುವಾರ ಅನುಮೋದನೆ ನೀಡಿತು.

2006: ಶ್ರೀಲಂಕಾ ತಮಿಳು ಉಗ್ರಗಾಮಿಗಳ (ಎಲ್ಟಿಟಿಇ) ಪರ ಮುಖ್ಯ ಸಂಧಾನಕಾರ ಅಂಟೋನ್ ಬಾಲಸಿಂಘಂ ಲಂಡನ್ನಿನಲ್ಲಿ ನಿಧನರಾದರು.

2005: ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸಿರಿಯಾಕ್ ಜೋಸೆಫ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದರು.

2005: ಐಟಿ ಮತ್ತು ಸಂಶೋಧನಾ ಕ್ಷೇತ್ರದ ಅಂತಾರಾಷ್ಟ್ರೀಯ ಮೈಂಡ್ ಟ್ರೀ ಕನ್ಸಲ್ಟಿಂಗ್ ಸೇವಾ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಂತ ಕಿರಿದಾದ ಅನಲಾಗ್ ಚಿಪ್ ಬಿಡುಗಡೆ ಮಾಡಿತು. ಲಿಥಿಯಮ್ ಅಯಾನ್ ಬ್ಯಾಟರಿ ತಂತ್ರಜ್ಞಾನದಲ್ಲಿ ತಯಾರಿಸಲಾದ ಈ ಇಂಟೆಗ್ರೇಟೆಡ್ ಸರ್ಕಿಟ್ (ಐಸಿ) ಗಾತ್ರ 1.5 ಮಿ.ಗ್ರಾಂ. ಭಾರತೀಯ ವಧುವಿನ ಪೋಷಾಕಿನಲ್ಲಿ ರೂಪದರ್ಶಿ ಅರ್ಚನಾ ತಿಲಕವನ್ನಾಗಿ ಧರಿಸಿ ಈ ಚಿಪ್ ಪ್ರದರ್ಶಿಸಿದರು.

2001: ಕ್ರಿಕೆಟಿನ ಖ್ಯಾತ ಅವಳಿ ಜವಳಿ ಆಟಗಾರರಾದ ಸ್ಟೀವನ್ ಮತ್ತು ಮಾರ್ಕ್ ವಾ ಅವರು ತಮ್ಮ 100ನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಒಟ್ಟಿಗೇ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಅಡಲೈಡಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವಿದು.

2000: ರಾಜಕೋಟ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಅಜಿತ್ ಅಗರ್ ಕರ್ 50 ರನ್ನುಗಳನ್ನು ಅತಿವೇಗವಾಗಿ ದಾಖಲಿಸಿದರು. 21 ಬಾಲುಗಳಿಗೆ ಅವರು ಈ ಸಾಧನೆ ಮಾಡಿದರು. ಈ ಹಿಂದೆ ಕಪಿಲ್ ದೇವ್ ಅವರು 22 ಬಾಲುಗಳಿಗೆ ಈ ದಾಖಲೆ ನಿರ್ಮಿಸಿದ್ದರು.

1989: ಸೋವಿಯತ್ತಿನ ಪರಮಾಣು ಭೌತವಿಜ್ಞಾನಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸಾಹಿತಿ ಅಂದ್ರೇಯಿ ಡಿ. ಸಖರೊವ್ ಅವರು ಮಾಸ್ಕೊದಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಅವರನ್ನು ಗೊರ್ಬಚೆವ್ ಆಡಳಿತ ಕಾಲದಲ್ಲಿ ವಿದೇಶದಿಂದ ಕರೆಸಿಕೊಳ್ಳಲಾಗಿತ್ತು.

1983: ನವದೆಹಲಿಯ ಗುಡಗಾಂವಿನ ಫ್ಯಾಕ್ಟರಿಯಿಂದ ಮಾರುತಿ ಕಾರುಗಳ ಮೊದಲ ಕಂತು ಬಿಡುಗಡೆಗೊಂಡಿತು.

1955: ಸಾಹಿತಿ ಸುವರ್ಣಾ ಚಂದ್ರಶೇಖರ್ ಜನನ.

1946: ಕಾಂಗ್ರೆಸ್ಸಿನ ಹಿರಿಯ ನಾಯಕ ಸಂಜಯ ಗಾಂಧಿ ಈ ದಿನ ನವದೆಹಲಿಯಲ್ಲಿ ಹುಟ್ಟಿದರು. ಫಿರೋಜ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಕಿರಿಯ ಮಗನಾದ ಸಂಜಯ ಗಾಂಧಿ ರಾಜಕೀಯ ಜೀವನದಲ್ಲಿ ತಾಯಿಗೆ ಸಲಹೆಗಾರರಾಗಿ ಅನೇಕ ವಿವಾದಗಳನ್ನು ಸೃಷ್ಟಿಸಿದ್ದರು. ಇಂದಿರಾ ಪ್ರಧಾನಿಯಾದ ಕೆಲವೇ ಸಮಯದಲ್ಲಿ ಸಂಜಯಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು. ಇದಕ್ಕೆ ಸ್ವಲ್ಪ ಕಾಲ ಮೊದಲು ಅವರು ಸಂಸತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

1934: ಚಿತ್ರ ನಟ ನಿರ್ದೇಶಕ ಶ್ಯಾಮ್ ಬೆನೆಗಲ್ ಜನ್ಮದಿನ.

1931: ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ, ಸಾಹಿತಿ ಡಾ. ಸಿ.ಎಂ. ಮುನಿರಾಮಪ್ಪ ಅವರು ಚಿಕ್ಕಮೈಲಪ್ಪ- ಪಾಪಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಬೇತಮಂಗಲ ತಾಲ್ಲೂಕಿನ ಅಂಕತಟ್ಟಿ ಹಳ್ಳಿಯಲ್ಲಿ ಜನಿಸಿದರು.

1924: ಭಾರತದ ಖ್ಯಾತ ಚಿತ್ರನಟ ರಾಜ್ ಕಪೂರ್ (1924-1988) ಹುಟ್ಟಿದ ದಿನ.

1900: ಮ್ಯಾಕ್ಸ್ ಪ್ಲಾಂಕ್ ತನ್ನ `ಕ್ವಾಂಟಮ್ ಥಿಯರಿ'ಯನ್ನು ಜರ್ಮನ್ ಫಿಸಿಕ್ಸ್ ಸೊಸೈಟಿಯಲ್ಲಿ ಪ್ರಕಟಿಸಿದರು.

1503: ನಾಸ್ಟ್ರಡಾಮಸ್ ಎಂದೇ ಖ್ಯಾತಿ ಪಡೆದ ಫ್ರೆಂಚ್ ಕಾಲಜ್ಞಾನಿ ಮೈಕೆಲ್ ಡೆ ನಾಟ್ರೆಡೇಮ್ (1503-1566) ಜನಿಸಿದ.

No comments:

Post a Comment