ರಫೇಲ್ ಯುದ್ಧವಿಮಾನ ಅತ್ಯಗತ್ಯ,ಖರೀದಿಸಿ:
ಐಎಎಫ್ ಮುಖ್ಯಸ್ಥರ ಪತ್ರ
ಐಎಎಫ್ ಮುಖ್ಯಸ್ಥರ ಪತ್ರ
ನವದೆಹಲಿ: ರಫೇಲ್ ಒಪ್ಪಂದದ ಸುತ್ತ ಎದ್ದಿರುವ ರಾಜಕೀಯ ವಿವಾದವು ಫ್ರಾನ್ಸಿನಿಂದ ರಫೇಲ್ ಯುದ್ಧ ವಿಮಾನ ಖರೀದಿಗೆ ಅಡ್ಡಿಯಾಗಬಾರದು ಎಂದು ನವೆಂಬರ್ ತಿಂಗಳ ಮೊದಲ ವಾರದಲ್ಲಿ ಭಾರತೀಯ ವಾಯುಪಡೆಯ ಮುಖ್ಯಸ್ಥರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು.
ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು 18 ಡಿಸೆಂಬರ್ 2018ರ ಮಂಗಳವಾರ ಈ ವಿಚಾರವನ್ನು ತಿಳಿಸಿದರು.
ವಾಯುಪಡೆ ಮುಖ್ಯಸ್ಥರ ಪತ್ರದ ಬಗ್ಗೆ ಪ್ರತಿಕ್ರಿಯಿಸಲು ಭಾರತೀಯ ವಾಯು ಪಡೆಯ ವಕ್ತಾರರು ನಿರಾಕರಿಸಿದರು. ಫ್ರಾನ್ಸಿನಿಂದ 36 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ಸುಪ್ರೀಂಕೋರ್ಟ್ ಕಳೆದ ಶುಕ್ರವಾರ (14 ಡಿಸೆಂಬರ್ 2018)
ಅರ್ಜಿಯನ್ನು ವಜಾಗೊಳಿಸಿತ್ತು.
ವಾಯು ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬ್ರಿಂದರ್ ಸಿಂಗ್ ಧನೊವಾ ಅವರು ರಕ್ಷಣಾ ಸಚಿವರಿಗೆ ಬರೆದ ಪತ್ರದಲ್ಲಿ ಭಾರತೀಯ ವಾಯುಪಡೆಯ ಸಮರದಳಗಳ ಸಾಮರ್ಥ್ಯ ಕ್ಷೀಣಿಸಿರುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಪಶ್ಚಿಮ ಮತ್ತು ಉತ್ತರದ ಗಡಿಗಳಲ್ಲಿ ವಿಶ್ವಾಸಾರ್ಹ ನಿರೋಧಕ ಶಕ್ತಿಗಾಗಿ ಭಾರತೀಯ ವಾಯಪಡೆಗೆ ಕನಿಷ್ಠ 42 ಸಮರದಳಗಳ ಅಗತ್ಯ ಇದೆ. (ಪ್ರತಿ ಸಮರದಳವೂ 14-16
ಸಮರ ವಿಮಾನಗಳನ್ನು ಹೊಂದಿರುತ್ತದೆ). ಆದರೆ ಪ್ರಸ್ತುತ ವಾಯು ಪಡೆಯು 31 ಯುದ್ಧ ವಿಮಾನಗಳನ್ನು ಮಾತ್ರ ಹೊಂದಿದೆ. ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ಯುದ್ಧ ವಿಮಾನಗಳನ್ನು ಸಮರದಳಗಳು ಕಳೆದುಕೊಳ್ಳುತ್ತವೆ ಎಂದು ವಾಯುಪಡೆ ಮುಖ್ಯಸ್ಥರು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಭಾರತೀಯ ವಾಯುಪಡೆಗೆ ಕನಿಷ್ಠ 36 ಯುದ್ಧ ವಿಮಾನಗಳು ಅನಿವಾರ್ಯವಾಗಿ ಬೇಕೇ ಬೇಕು. ಇವುಗಳನ್ನು ಪಡೆಯುವ ನಿಟ್ಟಿನಲ್ಲಿ ಯಾವುದೇ ಅನಿಶ್ಚಿತತೆಯು ವಾಯುಪಡೆಯ ಸಮರ ಸಾಮರ್ಥ್ಯ ಮತ್ತು ರಕ್ಷಣಾ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂಬುದಾಗಿ ಧನೋವಾ ಅವರು ಸ್ಪಷ್ಟ ಪಡಿಸಿದ್ದರು ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಇನ್ನೊಬ್ಬ ಅಧಿಕಾರಿ ಹೇಳಿದರು.
ವಿಮಾನದ ದರ ವಿವರಗಳನ್ನು ಬಹಿರಂಗ ಪಡಿಸದಂತೆಯೂ ವಾಯುಪಡೆ ಮುಖ್ಯಸ್ಥರು ಸರ್ಕಾರಕ್ಕೆ ಸಲಹೆ ಮಾಡಿದ್ದರು ಎಂದು ಅವರು ನುಡಿದರು.
‘ಭಾರತೀಯ ವಾಯುಪಡೆಯ ಬಳಿ ಇರುವ ಸಮರ ಸಾಧನಗಳ ದರಗಳ ಕುರಿತಾದ ವಿವರಗಳನ್ನು ಬಹಿರಂಗ ಪಡಿಸದಂತೆಯೂ ವಾಯುಪಡೆ ಮುಖ್ಯಸ್ಥರು ಸಲಹೆ ಮಾಡಿದ್ದರು. ದರ ವಿವರಗಳನ್ನು ಬಹಿರಂಗ ಪಡಿಸುವುದರಿಂದ ರಫೇಲ್ ಯುದ್ಧ ವಿಮಾನಗಳ ಸಮರ ಸಾಮರ್ಥ್ಯ ಬಹಿರಂಗಗೊಳ್ಳುತ್ತದೆ. ಇದರಿಂದ ಸೇನೆಯ ಮೇಲೆ ವ್ಯೂಹಾತ್ಮಕವಾಗಿ ವ್ಯತಿರಿಕ್ತ ಪರಿಣಾಮವಾಗುತ್ತದೆ ಎಂದು ವಾಯುಪಡೆ ಮುಖ್ಯಸ್ಥರು ತಿಳಿಸಿದ್ದರು ಎಂದು ಅವರು ಹೇಳಿದರು.
No comments:
Post a Comment