ಇಂದಿನ ಇತಿಹಾಸ History Today ಡಿಸೆಂಬರ್ 28
2018: ನವದೆಹಲಿ: ಮಾನವ ಸಹಿತ ದೇಶೀ ಬಾಹ್ಯಾಕಾಶ ಯಾನಕ್ಕೆ ಕೇಂದ್ರ ಸಚಿವ ಸಂಪುಟವು ತನ್ನ ಅನುಮೋದನೆ ನೀಡಿತು. ’ಗಗನಯಾನ’ ಬಾಹ್ಯಾಕಾಶ ಯಾನ ಯೋಜನೆಯ ಅಡಿಯಲ್ಲಿ ಮೂವರು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕನಿಷ್ಠ ೭ ದಿನಗಳ ಅವಧಿಗೆ ಕಳುಹಿಸಲಾಗುತ್ತಿದ್ದು, ಈ ಯೋಜನೆಯ ಒಟ್ಟು ವೆಚ್ಚ ೧೦,೦೦೦ ಕೋಟಿ ರೂಪಾಯಿಗಳು ಎಂದು ಅಂದಾಜು ಮಾಡಲಾಗಿದೆ. ಮಾನವ ಸಹಿತ ಗಗನಯಾನ ಯೋಜನೆಗೆ ಸಚಿವ ಸಂಪುಟವು ಶುಕ್ರವಾರ ಅನುಮೋದನೆ ನೀಡಿತು ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ ಪ್ರಸಾದ್ ಪ್ರಕಟಿಸಿದರು. ೧೦,೦೦೦ ಕೋಟಿ ರೂಪಾಯಿ ವೆಚ್ಚದ ದೇಶೀ ಮಾನವ ಸಹಿತ ’ಗಗನಯಾನ’ ಬಾಹ್ಯಾಕಾಶ ಯಾನ ಯೋಜನೆಯ ಅಡಿಯಲ್ಲಿ ಎರಡು ಮಾನವ ರಹಿತ ಯಾನಗಳು ಮತ್ತು ಒಂದು ಮಾನವ ಸಹಿತ ಯಾನ ಇರುತ್ತದೆ. ಯೋಜನೆಯ ವೇಳೆಯಲ್ಲಿ ಮೂವರು ಬಾಹ್ಯಾಕಾಶ ಯಾನಿಗಳಿಗೆ ವಾಸಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನು ಹೊಂದಿದ ’ಕಕ್ಷೀಯ ಕೋಶ’ವನ್ನು ಒಯ್ಯಲು ಜಿಎಸ್ ಎಲ್ ವಿ ಎಂಕೆ- ೩ನ್ನು ಬಳಸಲಾಗುವುದು. ಭಾರತದ ೭೨ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕೆಂಪುಕೋಟೆಯ ಮೇಲಿನಿಂದ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೨ನೇ ಇಸವಿಯಲ್ಲಿ ಭಾರತದ ಗಗನಯಾನಿ, ಪುರುಷ ಅಥವಾ ಮಹಿಳೆ, ’ಗಗನಯಾನ’ ನೌಕೆಯ
ಮೂಲಕ ಬಾಹ್ಯಾಕಾಶಕ್ಕೆ ಹೋಗಲಿದ್ದಾರೆ ಎಂದು ಘೋಷಿಸಿದ್ದರು. ರಾಷ್ಟ್ರದ ಪಾಲಿನ ಈ ಮಹತ್ವದ ಹೆಜ್ಜೆಯ ಬಗ್ಗೆ ಮಾತನಾಡುತ್ತಾ ಮೋದಿಯವರು ”ಗಗನಯಾನ’ ನೌಕೆಯ
ಮೂಲಕ ಮಾನವ ಸಹಿತ ಬಾಹ್ಯಾಕಾಶ ಯಾನವು ಭಾರತವು ೨೦೨೨ರಲ್ಲಿ ತನ್ನ ೭೫ನೇ ಸ್ವಾತಂತ್ರ್ಯ ಉತ್ಸವವನ್ನು ಆಚರಿಸುವ ವೇಳೆಗೆ ಅಥವಾ ಅದಕ್ಕೂ ಮೊದಲೇ ಸಾಕಾರಗೊಳ್ಳಲಿದೆ’ ಎಂದು ಹೇಳಿದ್ದರು. ‘ಭಾರತದ ಪುತ್ರ ಅಥವಾ ಪುತ್ರಿ ಈ ಪಯಣದಲ್ಲಿ ರಾಷ್ಟ್ರಧ್ವಜವನ್ನು
ಬಾಹ್ಯಾಕಾಶಕ್ಕೆ ಒಯ್ಯಲಿದ್ದಾರೆ. ಚಂದ್ರಯಾನ -೧ (ಅಕ್ಟೋಬರ್ ೨೦೦೮) ಮತ್ತು ’ಮಂಗಳಯಾನ’ ಎಂಬುದಾಗಿ ಕರೆಯಲಾದ ಮಾರ್ಸ್ ಆರ್ಬಿಟರ್ ಮಿಷನ್ (ಎಂಒಎಂ-ಮೋಮ್) (ಸೆಪ್ಟೆಂಬರ್ ೨೦೧೪) ಸಾಹಸಗಳ ಬಳಿಕ ಭಾರತ ಕೈಗೊಳ್ಳುವ ಮಹತ್ವದ ಬಾಹ್ಯಾಕಾಶ ಯೋಜನೆ ಇದಾಗಲಿದೆ ಎಂದು ಪ್ರಧಾನಿ ಹೇಳಿದ್ದರು. ಮಾನವ ಸಹಿತ ’ಗಗಗನಯಾನ’ ಯೋಜನೆಯು ಭಾರತದಲ್ಲಿ ೧೫,೦೦೦ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಪ್ರತಿಪಾದಿಸಿದರು.
2018: ನವದೆಹಲಿ: ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ೨೦೧೨ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯಿದೆಗೆ ತಿದ್ದುಪಡಿ ತರಲು ಸಂಪುಟ ಹಸಿರು ನಿಶಾನೆ ತೋರಿತು. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ
ಸಚಿವ ಸಂಪುಟ ಸಭೆ ನಡೆದ ಬಳಿಕ, ಸುದ್ದಿಗಾರರೊಂದಿಗೆ
ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ಪೊಕ್ಸೊ ಕಾಯಿದೆಗೆ ಗಲ್ಲು ಶಿಕ್ಷೆ ಸೇರಿದಂತೆ ಕಾನೂನನ್ನು ಮತ್ತಷ್ಟು ಬಲ ಪಡಿಸಲು ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು.
2018:
ಬೆಂಗಳೂರು: ಅಖಿಲ ಹವ್ಯಕ ಮಹಾಸಭಾದ ‘ಅಮೃತ ಮಹೋತ್ಸವ’ ಹಾಗೂ
ವಿಶ್ವ
ಹವ್ಯಕ
ಸಮ್ಮೇಳನಕ್ಕೆ
ಅದ್ದೂರಿ ಚಾಲನೆ ದೊರೆಯಿತು. ಅರಮನೆ ಮೈದಾನದಲ್ಲಿ ನಡೆದ ಈ "ಅಮೃತ ಘಳಿಗೆ'ಗೆ ಸಹಸ್ರಾರು ಹವ್ಯಕರು ಸಾಕ್ಷಿಯಾದರು. ಮೂರು ದಿನಗಳ ಈ ಹವ್ಯಕರ ಜಾತ್ರೆಯಲ್ಲಿ ಸಮುದಾಯದ ಕಲೆ-ಸಂಸ್ಕೃತಿ, ಪರಂಪರೆ ಅನಾವರಣಗೊಂಡಿತು. ‘ಅಮೃತ ಘಳಿಗೆ’ಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಹವ್ಯಕ ಸಮುದಾಯ ಅರಮನೆ ಮೈದಾನಕ್ಕೆ ಹರಿದುಬಂದಿತು. ಈ ಅಪರೂಪದ ಉತ್ಸವವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಉದ್ಘಾಟಿಸಿದರು. ಇದೇ ವೇಳೆ ಒಂದೇ ಪ್ರಕಾಶನದಿಂದ ಏಕಕಾಲದಲ್ಲಿ ನೂರು ಪುಸ್ತಕಗಳನ್ನು ಪ್ರಕಟಿಸಿ ಒಮ್ಮೆಲೆ ಬಿಡುಗಡೆಗೊಳಿಸುವ ಮೂಲಕ ಲಿಮ್ಕಾ ದಾಖಲೆಗೂ ಈ ವೇದಿಕೆ ಸಾಕ್ಷಿಯಾಯಿತು. ಉತ್ಸವ ಉದ್ಘಾಟಿಸಿ ಮಾತನಾಡಿದ ನ್ಯಾ.ಶಿವರಾಜ್ ಪಾಟೀಲ್, "75 ಸಂವತ್ಸರಗಳನ್ನು ಪೂರೈಸಿರುವ ಸಮಾಜದ ಸಂಭ್ರಮದ ಕ್ಷಣಗಳಿವು. ಈವರೆಗಿನ ಸಾಧನೆ ಬಗ್ಗೆ ಸಮಾಜ ಸಂಭ್ರಮಾಚರಣೆ ಮಾಡಲಿ. ಇದರ ಬೆನ್ನಲ್ಲೇ ಭವಿಷ್ಯದ ಪರಿಕಲ್ಪನೆಯ ಬಗ್ಗೆಯೂ ಗಂಭೀರ ಚಿಂತನೆ ಮಾಡುವ ಅವಶ್ಯಕತೆ ಇದೆ. ನೂರಕ್ಕೆ ನೂರರಷ್ಟು ಸಾಕ್ಷರತೆಯನ್ನು ಹೊಂದಿದ ಹವ್ಯಕರು ಇತರೆ ಸಮಾಜಗಳಿಗೂ ಅದನ್ನು ವಿಸ್ತರಿಸಬೇಕು ಎಂದು ಕಿವಿಮಾತು ಹೇಳಿದರು. "ಎಲ್ಲ ಸಮಾಜಗಳೂ ಸಂಘಟನೆಗೊಳ್ಳಬೇಕು. ಈ ನಿಟ್ಟಿನಲ್ಲಿ ಸಂಕುಚಿತ ಮನೋಭಾವ ಬೇಡ. ಸಮಾಜಗಳು ಬೆಳೆದರೆ, ದೇಶಗಳ ಬೆಳೆಯುತ್ತದೆ. ಆದರೆ, ಆ ಸಂಘಟನೆ ಮತ್ತೂಂದು ಸಮಾಜದ ಬೆಳವಣಿಗೆಗೆ ಅಡ್ಡಿಯಾಗಬಾರದು. ಜನರ ಮಧ್ಯೆ ಪ್ರೀತಿ, ಸಹಿಷ್ಣುತೆಯ ಸೇತುವೆ ಕಟ್ಟುವಂತಾಗಬೇಕೆ ಹೊರತು, ದ್ವೇಷದ ಗುಡಿಗಳನ್ನು ಕಟ್ಟುವುದು ಬೇಡ' ಎಂದರು. ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಯಾವೊಂದು ಸಮುದಾಯಕ್ಕೆ ಸಂಘಟನೆ ಮುಖ್ಯ. ಹಾಗೂ ಈ ಎಲ್ಲ ಸಂಘಟನೆಗಳ ಗುರಿ ರಾಷ್ಟ್ರದ ಅಭಿವೃದ್ಧಿ ಆಗಿರಬೇಕು. ಈ ನಿಟ್ಟಿನಲ್ಲಿ ಹವ್ಯಕ ಸಮುದಾಯ ಕೆಲಸ ಮಾಡಿಕೊಂಡು ಬಂದಿದೆ. ನನ್ನ ರಾಜಕೀಯ ಜೀವನದಲ್ಲಿ ಹವ್ಯಕ ಸಮಾಜದ ಪಾತ್ರ ದೊಡ್ಡದು. ಯಾವಾಗಲು ನನ್ನನ್ನು ಬೆಂಬಲಿಸುತ್ತ ಬಂದ ಈ ಸಮಾಜಕ್ಕೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು. ಮಾಜಿ ಸಚಿವ ಪಿಜಿಆರ್ ಸಿಂಧ್ಯ ಮಾತನಾಡಿ, ನನ್ನ ರಾಜಕೀಯ ಜೀವನದಲ್ಲಿ ಹತ್ತಾರು ಖಾತೆಗಳನ್ನು ನಿಭಾಯಿಸಿದ್ದೇನೆ. ಅದು ರಾಮಕೃಷ್ಣ ಹೆಗಡೆ ಅವರ ಕೃಪೆ. ಕಾಂಗ್ರೆಸ್ ಅನ್ನು ಒಪ್ಪದ ಏಕೈಕ ಕಾರಣಕ್ಕೆ ಅರ್ಹತೆ ಇದ್ದರೂ ರಾಮಕೃಷ್ಣ ಹೆಗಡೆ ಅವರು ಪ್ರಧಾನಿ ಹುದ್ದೆ ಏರಲು ಸಾಧ್ಯವಾಗಲಿಲ್ಲ. ಇವರಂತಹ ಅನೇಕ ಅನಘ ರತ್ನಗಳನ್ನು ಹವ್ಯಕ ಸಮುದಾಯ ಕೊಡುಗೆ ನೀಡಿದೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪ್ರತಿಭೆಗಳನ್ನು ಗುರುತಿಸಿ, ರಾಜಕೀಯ ಶಕ್ತಿ ತುಂಬುವ ಕೆಲಸ ಸಮಾಜದಲ್ಲಿ ಆಗಬೇಕಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ನನ್ನ ಜೀವಮಾನದಲ್ಲಿ ವಿವಿಧ ಉನ್ನತ ಹುದ್ದೆಗಳು ನನಗೆ ಒದಗಿಬಂದವು. ಅದರ ಹಿಂದೆ ಹವ್ಯಕರ ಕೊಡುಗೆ ಇದೆ. ಸಹಕಾರ ಚಳವಳಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯಲು ಹವ್ಯಕರು ಕಾರಣ. ಅಪರಾಧರಹಿತ ಸಮುದಾಯ ಹವ್ಯಕರದ್ದು ಎಂದು ಶ್ಲಾಘಿಸಿದರು. ಬ್ರಾಹ್ಮಣರನ್ನು ಬಯ್ಯುವುದು ಕೆಲವರಿಗೆ ಶೋಕಿ ಆಗಿ ಬಿಟ್ಟಿದೆ. ಈ ಪ್ರವೃತ್ತಿ ಸರಿ ಅಲ್ಲ. ರಾಜಕೀಯ ಉದ್ದೇಶಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಬ್ರಾಹ್ಮಣರನ್ನು ಅನಗತ್ಯವಾಗಿ ಬೈಯ್ಯುತ್ತಾರೆ. ಆದರೆ, ನಾನು ಸಂಕಷ್ಟದಲ್ಲಿದ್ದಾಗ ನನ್ನ ನೆರವಿಗೆ ಬಂದಿದ್ದೇ ಹವ್ಯಕ ಸಮಾಜ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಸ್ಥಿತಿಯಲ್ಲಿದ್ದ ನನ್ನನ್ನು ಇಂದು ಬದುಕಿಸಿದವರೇ ಹವ್ಯಕರು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು. ನಾವು ಜಾತಿವಾದಿಗಳಾಗಬಾರದು. ಇದು ಸಮಾಜದ ಸಮಷ್ಟೀಕರಣದ ದೃಷ್ಟಿಯಿಂದ ಒಳ್ಳೆಯದೂ ಅಲ್ಲ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ ಇದು ಅನಿವಾರ್ಯ ಆಗುತ್ತಿದೆ. ಆದ್ದರಿಂದ ಬುದ್ಧಿವಂತರಾದ ಬ್ರಾಹ್ಮಣರು ಬುದ್ಧಿವಂತಿಕೆಯಿಂದ ಬದುಕುವುದನ್ನು ಕಲಿಯಬೇಕು ಎಂದರು ಯಲ್ಲಾಪುರದ ಶಾಸಕ -ಶಿವರಾಮ ಎಂ.
ಹೆಬ್ಬಾರ್. ರಾಮಚಂದ್ರಾಪುರ
ಮಠದ
ರಾಘವೇಶ್ವರ
ಭಾರತೀ
ಸಾಮೀಜಿ,
ಸುಬ್ರಹ್ಮಣ್ಯ
ಮಠಾಧೀಶ
ವಿದ್ಯಾಪ್ರಸನ್ನ
ತೀರ್ಥ
ಸ್ವಾಮೀಜಿ,
ಹವ್ಯಕ
ಮಹಾಸಭಾ
ಅಧ್ಯಕ್ಷ
ಡಾ.
ಗಿರಿಧರ
ಕಜೆ
ಮತ್ತಿತರರು
ವೇದಿಕೆಯಲ್ಲಿ
ಹಾಜರಿದ್ದರು.
2018:
ಬೆಂಗಳೂರು: ಎಚ್ 1 ಎನ್ 1 ಸೋಂಕಿನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಉಡುಪಿ ಮೂಲದ ಡಾ. ಕೆ. ಮಧುಕರ್ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಹೈದ್ರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾದರು. ಹೈದ್ರಾಬಾದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಎಚ್.1 ಎನ್ 1 ಸೋಂಕಿನ ಪರಿಣಾಮ, ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ಹೈದ್ರಾಬಾದಿನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹಿರಿಯ
ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರರಾದ ಉಡುಪಿ ಮೂಲದ ಮಧುಕರ್ ಶೆಟ್ಟಿ ಅವರು 1971 ಡಿ.17ರಂದು ಜನಿಸಿದ್ದರು. ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಸಮಾಜಶಾಸ್ತ್ರದಲ್ಲಿ
ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದರು. 1999ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾದ ಅವರು ಚಿಕ್ಕಮಗಳೂರು, ಚಾಮರಾಜನಗರ, ಲೋಕಾಯುಕ್ತದಲ್ಲಿ
ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಮಾಣಿಕ ಹಾಗೂ ದಕ್ಷ, ಸಾಮಾಜಿಕ ಕಳಕಳಿ ಹೊಂದಿದ ಅಧಿಕಾರಿ ಎಂಬ ಹಿರಿಮೆ ಗಳಿಸಿದ್ದರು. 2011ರಲ್ಲಿ ಉನ್ನತ ವಿದ್ಯಾಭ್ಯಾಸ ರಜೆಯ ಮೇಲೆ ಅಮೆರಿಕಾಗೆ ತೆರಳಿ ಡಾಕ್ಟರೇಟ್ ಪದವಿ ಪಡೆದಿದ್ದರು. ವಿದೇಶದಿಂದ ವಾಪಾಸ್ ಬಂದ ಬಳಿಕ ಡಿಐಜಿಯಾಗಿ ಬಡ್ತಿ ಪಡೆದು ಕೆಲ ಕಾಲ ಪೊಲೀಸ್ ನೇಮಕಾತಿ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದರು.
ಬಳಿಕ ಕೇಂದ್ರ ಸೇವೆಗೆ ತೆರಳಿದ್ದ ಅವರು ಹೈದ್ರಾಬಾದಿನ ಸರ್ದಾರ್ ವಲ್ಲಭಭಾಯ್ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಾಮಾಣಿಕ ಅಧಿಕಾರಿ: ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ವೃತ್ತಿ ಜೀವನದಲ್ಲಿ ಎಂದಿಗೂ ವೈಯಕ್ತಿಕ ವಿಚಾರಕ್ಕೆ ಸರ್ಕಾರಿ ವಾಹನ ಬಳಕೆ ಮಾಡಿದವರಲ್ಲ. ಒಂದು ವೇಳೆ ಬಳಕೆ ಮಾಡಿದರೆ, ತಮ್ಮ ಚಾಲಕನಿಗೆ ಪ್ರತಿ ಕಿ.ಮೀಟರ್ ಲೆಕ್ಕ
ಹಾಕುವಂತೆ ಸೂಚಿಸಿ, ಹಣ ಪಾವತಿಸುತ್ತಿದ್ದರು.
ಅಂತಹ ಅಧಿಕಾರಿಯನ್ನು ಕಳೆದುಕೊಂಡಿರುವುದು ಪೊಲೀಸ್ ಇಲಾಖೆ ಮಾತ್ರವಲ್ಲ. ಇಡೀ ರಾಜ್ಯಕ್ಕೆ ದೊಡ್ಡ ನಷ್ಟ ಎಂದು ಅವರೊಟ್ಟಿಗೆ ಕೆಲಸ ಮಾಡಿದ ಇಲಾಖೆಯ ಕಿರಿಯ ಅಧಿಕಾರಿಯೊಬ್ಬರು ಭಾವುಕರಾದರು. ಜಕ್ಕೂರು ಬಳಿ ಮಧುಕರ್ ಶೆಟ್ಟಿ ಅವರು ಪೊಲೀಸ್ ಹೌಸಿಂಗ್ ಸೊಸೈಟಿ ಮೂಲಕ ಖರೀದಿಸಿದ್ದ
ನಿವೇಶನಕ್ಕೆ ಭೇಟಿ
ನೀಡಿದ ಶೆಟ್ಟಿ ಅವರು, ಒಂದು ವೇಳೆ ರೈತರಿಗೆ ಅನ್ಯಾಯವಾಗಿ ಈ ಭೂಮಿ ಕೊಟ್ಟಿದ್ದರೆ ಅಂತಹ ನಿವೇಶನವೇ ಬೇಡ ಎಂದು ನಿರಾಕರಿಸಿದ್ದರು ಎಂದು ಆ ಅಧಿಕಾರಿ ಕಣ್ಣೀರಿಟ್ಟರು. ವೀರಪ್ಪನ್ ವಿಶೇಷ ಪಡೆಯಲ್ಲಿ ಸೇವೆ: ಖ್ಯಾತ
ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಪುತ್ರ ಮಧುಕರ್ ಶೆಟ್ಟಿ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಎಸ್ಪಿಯಾಗಿದ್ದರು. ಚಿಕ್ಕಮಗಳೂರು ಜಿಲ್ಲಾವರಿಷ್ಠಾಧಿಕಾರಿ ಬಡ್ತಿ ಪಡೆದು ಕರ್ತವ್ಯ ನಿರ್ವಹಿಸುವ ವೇಳೆ ಹಳ್ಳಿಯೊಂದರಲ್ಲಿ ದಲಿತರ ಭೂಮಿಯನ್ನು ಕಬಳಿಸಿದ್ದವರ ವಿರುದ್ಧ ಕ್ರಮ ಕೈಗೊಂಡು, ಜಮೀನು ವಾಪಸ್ ಕೊಡಿಸಿದ್ದರು. ಇದಕ್ಕೆ ಅಂದಿನ ಜಿಲ್ಲಾಧಿಕಾರಿ ಹರ್ಷಾಗುಪ್ತ ಕೂಡ ಸಹಕಾರ ನೀಡಿದ್ದರು. ಹೀಗಾಗಿ ಚಿಕ್ಕಮಗಳೂರಿನ ಆ ಹಳ್ಳಿಗೆ "ಗುಪ್ತ ಶೆಟ್ಟಿ' ಎಂದು ಹೆಸರಿಡಲಾಗಿದೆ. ನಕ್ಸಲ್ ನಿಗ್ರಹ ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ನಕ್ಸಲರು ಮುಖ್ಯವಾಹಿನಿಗೆ ಬರಬೇಕು ಎಂದು ಬಯಸಿದ್ದರು. ದಂತಚೋರ ವಿರಪ್ಪನ್ ಬಂಧನಕ್ಕೆ ರಚಿಸಿದ್ದ
"ವಿಶೇಷ ಕಾರ್ಯ ಪಡೆ'ಯಲ್ಲಿ ಮಧುಕರ್ ಶೆಟ್ಟಿ ಕರ್ತವ್ಯ ನಿರ್ವಹಿಸಿದ್ದರು.
ನಂತರ ಲೋಕಾಯುಕ್ತ ಎಸ್ಪಿಯಾಗಿದ್ದ ವೇಳೆ ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಸಿಂಹಸ್ಪಪ್ನವಾಗಿದ್ದರು. ಮುಖ್ಯಮಂತ್ರಿ ಸಂತಾಪ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಗೃಹಸಚಿವ ಎಂ.ಬಿ. ಪಾಟೀಲ್ ಅವರು ಮಧುಕರ್ ಶೆಟ್ಟಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಸಂತಾಪ ಸೂಚಿಸಿ, ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಧುಕರ್ ಶೆಟ್ಟಿ ಕರಾವಳಿಯ ಮನೆ ಮಗನಾಗಿದ್ದರು. ರಾಜ್ಯದ ಲೋಕಾಯುಕ್ತ ಸಂಸ್ಥೆಯಲ್ಲಿ ಎಸ್ಪಿಯಾಗಿದ್ದ ಅವರು, ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಿದ್ದರು. ಪೊಲೀಸ್ ಕಾರ್ಯದ ಜತೆಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಿ, ಮತ್ತೆ ತಮ್ಮ ಕರ್ತವ್ಯ ಆರಂಭಿಸಿದ್ದ ಮಧುಕರ್ ಶೆಟ್ಟಿ ಅವರ ಅಕಾಲಿಕ ಸಾವು ತೀವ್ರ ಆಘಾತ ಉಂಟು ಮಾಡಿದೆ ಎಂದು ಹೇಳಿದರು.
2017: ನವದೆಹಲಿ: ಒಂದೇ ಉಸಿರಿನಲ್ಲಿ ಅವಸರದ ತ್ರಿವಳಿ ತಲಾಖ್ ನೀಡುವುದನ್ನು ಕಾನೂನು ಬಾಹಿರ ಹಾಗೂ ನಿರರ್ಥಕವನ್ನಾಗಿ ಮಾಡುವ ಮತ್ತು ಈ ಅಪರಾಧ ಎಸಗುವ ಪತಿಗೆ ಮೂರು ವರ್ಷಗಳ ಸೆರೆವಾಸ ವಿಧಿಸಲು ಅವಕಾಶ ಕಲ್ಪಿಸುವ ಚಾರಿತ್ರಿಕ ಮಸೂದೆಗೆ ತೀವ್ರ ಚರ್ಚೆಯ ಬಳಿಕ ಲೋಕಸಭೆ ತನ್ನ ಅನುಮೋದನೆಯನ್ನು ನೀಡಿತು. ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಬೆಳಗ್ಗೆ ಮುಸ್ಲಿಮ್ ಮಹಿಳಾ (ವೈವಾಹಿಕ ಹಕ್ಕುಗಳ ರಕ್ಷಣೆ) ಮಸೂದೆಯನ್ನು ಆರ್ ಜೆಡಿ, ಎಐಎಂಐಎಂ, ಬಿಜೆಡಿ ಮತ್ತು ಆಲ್ ಇಂಡಿಯಾ ಮುಸ್ಲಿಮ್ ಲೀಗ್ ಸೇರಿದಂತೆ ವಿವಿಧ ಪಕ್ಷಗಳ ಪ್ರತಿಭಟನೆಯ ಮಧ್ಯೆ ಮಂಡಿಸಿ, ಈ ದಿನವನ್ನು ’ಐತಿಹಾಸಿಕ ದಿನ’ ಎಂಬುದಾಗಿ ಬಣ್ಣಿಸಿದ್ದರು. ತೀವ್ರ ಚರ್ಚೆಯ ಮಧ್ಯೆ ಕಾಂಗ್ರೆಸ್ ಪಕ್ಷವು ತಾನು ಮಸೂದೆಗೆ ಷರತ್ತಿನ ಬೆಂಬಲ ನೀಡುವುದಾಗಿ ಪ್ರಕಟಿಸಿತು. ಲೋಕಸಭೆಯಲ್ಲಿ ಅಂಗೀಕರಾರಗೊಂಡಿರುವ ಮಸೂದೆಯು ಇನ್ನು ರಾಜ್ಯಸಭೆಯ ಒಪ್ಪಿಗೆ ಪಡೆಯಬೇಕಾಗಿದೆ.
ಕಾನೂನು ಮಹಿಳೆಯರಿಗೆ ನ್ಯಾಯ ಮತ್ತು ಗೌರವ ನೀಡುವ ಉದ್ದೇಶವನ್ನು ಹೊಂದಿದೆ. ಯಾವುದೇ ಧರ್ಮ ಅಥವಾ ಸಮುದಾಯಕ್ಕೆ ಸಂಬಂಧಿಸಿದ್ದಲ್ಲ ಎಂದು ನುಡಿದ ಅವರು ಸುಪ್ರೀಂಕೋರ್ಟ್ ಆದೇಶ ನೀಡಿ ರದ್ದು ಪಡಿಸಿದ ಬಳಿಕವೂ ತ್ರಿವಳಿ ತಲಾಖ್ ನೀಡುವ ಪದ್ಧತಿ ಮುಂದುವರೆದಿದೆ ಎಂದು ಹೇಳಿದರು. ತ್ರಿವಳಿ ತಲಾಖ್ ಸಂತ್ತಸ್ಥರು ಮೂಲಭೂತ ಹಕ್ಕುಗಳನ್ನು ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಂಸತ್ತು ನಿರ್ಧರಿಸಬೇಕು ಎಂದು ಸಚಿವರು ಕೆಲವು ಸದಸ್ಯರ ಆಕ್ಷೇಪಗಳಿಗೆ ಉತ್ತರಿಸುತ್ತ ಹೇಳಿದರು. ಈ ಮಸೂದೆಯು ಸಂವಿಧಾನವು ನೀಡಿರುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ
ಎಂದು ಪ್ರತಿಪಾದಿಸಿದಾಗ
ಸಚಿವರು ಈ ಮಾತು ಹೇಳಿದರು. ‘ಇದು ಚಾರಿತ್ರಿಕ ದಿನ. ನಾವು ಈದಿನ ಇತಿಹಾಸ ನಿರ್ಮಾಣ ಮಾಡುತ್ತಿದ್ದೇವೆ’ ಎಂದು ಪ್ರಸಾದ್ ನುಡಿದರು. ಪ್ರಸ್ತಾಪಿತ ಕಾನೂನು ಒಂದೇ ಉಸಿರಿಗೆ ತ್ರಿವಳಿ ತಲಾಖ್ ಹೇಳಿದರೆ ಅಥವಾ ’ತಲಾಖ್ -ಇ-ಬಿದ್ದತ್’ ನೀಡಿದರೆ ಮಾತ್ರ ಅನ್ವಯವಾಗುತ್ತದೆ.
ಸಂತ್ರಸ್ಥೆಯು ತನಗೆ ಮತ್ತು ಅಪ್ರಾಪ್ತ ಮಕ್ಕಳಿಗೆ
’ಜೀವನೋಪಾಯ ಭತ್ಯೆ’ ಒದಗಿಸುವಂತೆ ಕೋರಿ ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಲು ಮಸೂದೆ ಅವಕಾಶ ಕಲ್ಪಿಸುತ್ತದೆ. ಕಾನೂನಿನ ಅಡಿಯಲ್ಲಿ ಮಹಿಳೆಯು ಅಪ್ರಾಪ್ತ ಮಕ್ಕಳನ್ನು ತನ್ನ ವಶಕ್ಕೆ ನೀಡುವಂತೆಯೂ ಮ್ಯಾಜಿಸ್ಟ್ರೇಟರನ್ನು ಕೋರಬಹುದು. ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರವನ್ನು ಮ್ಯಾಜಿಸ್ಟ್ರೇಟ್ ಕೈಗೊಳ್ಳಬಹುದು. ಕಾನೂನಿನ ಪ್ರಕಾರ ಮೌಖಿಕ, ಲಿಖಿತ ಅಥವಾ ಇ-ಮೇಲ್, ಎಸ್ ಎಂಎಸ್ ಮತ್ತು ವಾಟ್ಸ್ ಆಪ್ ಸೇರಿದಂತೆ ಯಾವುದೆ ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುವ ಒಂದೇ ಉಸಿರಿನ ತ್ರಿವಳಿ ತಲಾಖ್ ಕಾನೂನುಬಾಹಿರವಾಗುತ್ತದೆ ಮತ್ತು ರದ್ದಾಗುತ್ತದೆ. ಜಮ್ಮು
ಮತ್ತು ಕಾಶ್ಮೀರವನ್ನು ಹೊರತು ಪಡಿಸಿ ಇಡೀ ರಾಷ್ಟ್ರಕ್ಕೆ ಪ್ರಸ್ತಾಪಿತ ಕಾನೂನು ಅನ್ವಯವಾಗುತ್ತದೆ ಮತ್ತು ಒಂದೇ ಉಸಿರಿನ ತಲಾಖ್ ನೀಡುವವರು ಕಾನೂನು ಪ್ರಕಾರ ಮೂರು ವರ್ಷಗಳ ಸೆರೆವಾಸ ಮತ್ತು ದಂಡಕ್ಕೆ ಅರ್ಹರಾಗುತ್ತಾರೆ.
ಇದು ಜಾಮೀನು ರಹಿತ ಅಪರಾಧವಾಗುತ್ತದೆ. ಓವೈಸಿ ವಿರೋಧ: ಮಸೂದೆಯನ್ನು ವಿರೋಧಿಸಿದ ಎಐಎಂಐಎಂನ ಅಸಾದುದ್ದೀನ್ ಓವೈಸಿ ’ಮಸೂದೆಯು ಸಂವಿಧಾನದ ೧೫ನೇ ಪರಿಚ್ಛೇದವನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿದರು. ಹಾಲಿ ಕಾನೂನುಗಳೇ ಈ ಅಪರಾಧದ ಜೊತೆ ವ್ಯವಹರಿಸುತ್ತವೆ
ಎಂದು ಅವರು ನುಡಿದರು. ಬಿಜೆಡಿಯ ಭತೃಹರಿ ಮಹ್ತಾಬ್ ಅವರೂ ಮಸೂದೆ ದೋಷಪೂರಿತ ಎಂದು ಬಣ್ಣಿಸಿ ತಾವು ಇದನ್ನು ವಿರೋಧಿಸುವುದಾಗಿ ಹೇಳಿದರು. ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಮಲ್ಲಿಕಾರ್ಜುನ ಖರ್ಗೆ ’ಮಸೂದೆಯಲ್ಲಿ ಹಲವಾರು ಲೋಪದೋಷಗಳಿವೆ. ಇದನ್ನು ಸಂಸದೀಯ ಸ್ಥಾಯಿ ಸಮಿತಿಗೆ ಒಪ್ಪಿಸಬೇಕು’ ಎಂದು
ಹೇಳಿದರು. ಕಾಂಗೆಸ್ಸಿನ ಸುಷ್ಮಿತಾ ಡೇ ಅವರು ಇದು ಮಹಿಳೆಯರನ್ನು ಸಬಲರನ್ನಾಗಿ ಮಾಡುವ ಚಾರಿತ್ರಿಕ ಮಸೂದೆ ಎಂದು ಬಣ್ಣಿಸಿದರು. ಎಐಎಡಿಎಂಕೆಯ ಅನ್ವರ್ ರಜಾ ಅವರು ಸುಪ್ರೀಂಕೋರ್ಟ್ ಎಂದೂ ತ್ರಿವಳಿ ತಲಾಖ್ ನ್ನು ಅಪರಾಧವನ್ನಾಗಿ ಮಾಡಬೇಕು ಎಂದು ಹೇಳಿಲ್ಲ ಎಂದು ಪ್ರತಿಪಾದಿಸಿದರು.
ತ್ರಿವಳಿ ತಲಾಖ್ ಮಸೂದೆ ಮೇಲೆ ನಡೆದ ಚರ್ಚೆಯಲ್ಲಿ ಸರ್ಕಾರದ ಮಾತನಾಡಿದ ಸಚಿವ ಎಂ.ಜೆ. ಅಕ್ಬರ್ ಅವರು ಮಸೂದೆಯನ್ನು ವಿರೋಧಿಸುತ್ತಿರುವ
ಅಖಿಲ ಭಾರತದ ಮುಸ್ಲಿಮ್ ಕಾನೂನು ಮಂಡಳಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು. ’ಇವರನ್ನು ಯಾರು ಸಮುದಾಯದ ಪ್ರತಿನಿಧಿಗಳನ್ನಾಗಿ ಮಾಡಿದ್ದಾರೆ? ಎಂದು ಅವರು ಪ್ರಶ್ನಿಸಿದರು. ಇದಕ್ಕೆ ಮುನ್ನ ಬಿಜೆಪಿಯ ಮೀನಾಕ್ಷಿ ಲೇಖಿ ಅವರು ಒಂದೇ ಉಸಿರಿನ ತ್ರಿವಳಿ ತಲಾಖ್ ಪದ್ಧತಿಯನ್ನು ನೋಡಿಕೊಳ್ಳುವ ಮೌಲ್ವಿಗಳ ವಿರುದ್ಧ ಕಾನೂನು ರೂಪಿಸಲು ಸಲಹೆ ಮಾಡಿದರು. ’ತಲಾಖ್ -ಇ- ಬಿದ್ದತ್ ಗೂ ಧರ್ಮಕ್ಕೂ ಯಾವ ಸಂಬಂಧವೂ ಇಲ್ಲ ಎಂದು ಅವರು ನುಡಿದರು. ಮಹಿಳೆಯರು ರಾಷ್ಟ್ರದಲ್ಲಿ ಅತಿ ದೊಡ್ಡ ಅಲ್ಪಸಂಖ್ಯತರು ಮತ್ತು ಈ ಕಾರಣದಿಂದಲೇ ಅವರು ಸಮಾಜದಲ್ಲಿ ಅತ್ಯಂತ ಹೆಚ್ಚು ದಮನಕ್ಕೆ ಒಳಗಾಗಿದ್ದಾರೆ ಎಂದು ಅವರು ಹೇಳಿದರು.
2017: ನವದೆಹಲಿ: ತ್ರಿವಳಿ ತಲಾಖ್ ರದ್ದು ಪಡಿಸಿ ತನ್ನ ಚಾರಿತ್ರಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ದಿಢೀರ್ ವಿಚ್ಛೇದನ ನೀಡುವ ಈ ಪದ್ಧತಿಯ ಬಗೆಗೇ ಏಳು ದಿನಗಳ ಕಾಲ ವಿಚಾರಣೆ ನಡೆಸಿ, ಖಲೀಫ ಉಮರ್ ಹುಟ್ಟು ಹಾಕಿದ್ದ ’ತ್ರಿವಳಿ ತಲಾಖ್’ ಪದದ ವಿವರಗಳನ್ನು ಸಂಗ್ರಹಿಸಿತ್ತು.
ನಾಲ್ಕನೇ ದಿನದ ವಿಚಾರಣೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಕೈಯಲ್ಲಿ ಖುರಾನ್ ಹಿಡಿದುಕೊಂಡು ’ಒಂದೇ ಉಸಿರಿನಲ್ಲಿ ತಲಾಖ್ ನೀಡುವ ಈ ಪದ್ಧತಿ ಖುರಾನ್ ನಲ್ಲಿ ಉಲ್ಲೇಖಗೊಂಡಿಲ್ಲ’
ಎಂದು ಹೇಳಿದ್ದರು. ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪರ ವಾದಿಸಿದ ವಕೀಲ ಕಪಿಲ್ ಸಿಬಲ್ ಅವರು ತ್ರಿವಳಿ ತಲಾಖ್ ಇಸ್ಲಾಮಿಕ್ ಪದ್ಧತಿ ಎಂಬುದಾಗಿ ಸಾಬೀತುಪಡಿಸಲು ವಿವಿಧ ಕಾನೂನು ಶಾಲೆಗಳ ಹದೀತ್ ಗಳನ್ನು ಓದಿದ್ದರು. ಕೊನೆಯ ದಿನದ ವೇಳೆಗೆ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಈ ವಿಧಾನವು ಒಪ್ಪತಕ್ಕಂತದ್ದಲ್ಲ
ಮತ್ತು ಪಾಪಕೃತ್ಯ ಎಂಬುದಾಗಿ ಒಪ್ಪಿತು. ನ್ಯಾಯಮೂರ್ತಿ ಜೋಸೆಫ್ ಅವರು ’ದೇವರ ಕಣ್ಣಲ್ಲಿ ಪಾಪದ ಕೃತ್ಯವಾದ ಯಾವುದಾದರೂ ಮನುಷ್ಯನ ಕಣ್ಣಲ್ಲಿ ಕಾನೂನುಬದ್ಧವಾಗುವುದೇ?’ ಎಂದು ಪ್ರಶ್ನಿಸಿದ್ದರು. ತಲಾಖ್ -ಇ-ಬಿದ್ದತ್ ಹೊಸ ಸಂಶೋಧನೆಯೇ ಅಥವಾ ಅಲ್ಲವೇ ಎಂಬ ಬಗ್ಗೆ ಅಹವಾಲುಗಳನ್ನು ಆಲಿಸಿದ್ದ ನ್ಯಾಯಮೂರ್ತಿ ನಾರಿಮನ್ ಅವರು ’ಇದು ತಲಾಖ್ -ಇ-ಹಸನ್’ ವಿಧಾನದ ’ಸೂಪರ್ ಫಾಸ್ಟ್’ ರೀತಿ.
ಒಂದೇ ರಾತ್ರಿಯಲ್ಲಿ ಹಲವಾರು ಮಾದಕ ಪೇಯಗಳನ್ನು ಕುಡಿದ ಬಳಿಕ ತಲಾಖ್ ಕೊಡುವ ವ್ಯಕ್ತಿಯ ಬಗ್ಗೆ ಬಗ್ಗೆ ಏನು ಹೇಳುತ್ತೀರಿ?’ ಎಂದು ಪ್ರಶ್ನಿಸಿದ್ದರು.
2017: ನವದೆಹಲಿ: ಇಸ್ಲಾಮಾಬಾದಿನಲ್ಲಿ
ಬೆದರಿಕೆಯ ಪರಿಸರದಲ್ಲಿ ಭಾರತದ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಅವರ ತಾಯಿ ಅವಂತಿ ಮತ್ತು ಪತ್ನಿ ಚೇತನಾ ಅವರು ಭೇಟಿ ಮಾಡಿದ ಬಳಿಕ ಇದೀಗ ಈ ಭೇಟಿಯ ವಿಭಜಿಸಿ ತಿದ್ದಿದ ವಿಡಿಯೋವನ್ನು ಜಾಧವ್ ಅವರು ಭಾರತೀಯ ಗೂಢಚಾರಿ ಎಂಬುದನ್ನು ಸಾಬೀತು ಪಡಿಸುವ ಪ್ರಚಾರದ ತನ್ನ ಕುಟಿಲೋಪಾಯಕ್ಕೆ ಪಾಕಿಸ್ತಾನ ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು. ಜಾಧವ್ ಅವರ ತಾಯಿ ಪಾಕಿಸ್ತಾನದಿಂದ ಹಿಂದಿರುಗಿದ ಬಳಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳ ಜೊತೆ ಭೇಟಿ ಬಗ್ಗೆ ಹಂಚಿಕೊಂಡ ವಿವರಗಳಿಂದ ಇದೀಗ ಭಾರತಕ್ಕೆ ಈ ಅನುಮಾನ ಕಾಡಿದೆ ಎಂದು ಮೂಲಗಳು ಹೇಳಿದವು. ಅಧಿಕೃತ ಮೂಲಗಳ ಪ್ರಕಾರ ಜಾಧವ್ ಅವರು ತಮ್ಮ ತಾಯಿ ಮತ್ತು ಪತ್ನಿಯನ್ನು ಭೇಟಿ ಮಾಡಿದಾಗ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಅವರು ಪಾಕಿಸ್ತಾನ ಹೇಳಿರುವ ಕಥೆಯನ್ನು ನಂಬುವಂತೆ ಜಾಧವ್ ತಮ್ಮ ತಾಯಿಯ ಬಳಿ ಹೇಳಿದರು. ಆದರೆ ಮಗ ತನ್ನ ಅಂತಃಕರಣದ ಮಾತುಗಳನ್ನು ಹೇಳುತ್ತಿಲ್ಲ. ಹೇಳಿಕೊಟ್ಟ ಮಾತುಗಳೇ ಅವರ ಬಾಯಿಯಿಂದ ಬರುತ್ತಿವೆ ಎಂದು ತಾಯಿ ತತ್ ಕ್ಷಣವೇ ಗ್ರಹಿಸಿದರು. ಸತ್ಯ ಹೇಳುವಂತೆ ತಾಯಿ ಜಾಧವ್ ಅವರನ್ನು ಒತ್ತಾಯಿಸಿದರು. ವ್ಯವಹಾರದ ನಿಮಿತ್ತ ಇರಾನಿಗೆ ಹೋಗಿದ್ದ ಬಗ್ಗೆ ಮಾತನಾಡುವಂತೆ ಆಕೆ ಒತ್ತಾಯಿಸಿದರು.
’ಯಾವುದೇ ಒತ್ತಡಕ್ಕೆ ಒಳಗಾಗಿ ಮಾತನಾಡುವುದು ಬೇಡ, ನಿನ್ನ ಅಂತಃಕರಣದಿಂದ ನನ್ನ ಜೊತೆ ಮಾತನಾಡು’ ಎಂದು
ತಾಯಿ ಜಾಧವ್ಗೆ ಹೇಳಿದರು.
ತಾಯಿ-ಮಗನ ನಡುವಣ ಈ ಸಂಭಾಷಣೆಯನ್ನು ಪಾಕಿಸ್ತಾನ ಸಂಪೂರ್ಣವಾಗಿ ವಿಡಿಯೋ ಮೂಲಕ ಸೆರೆ ಹಿಡಿದಿದೆ. ಈ ವಿಡಿಯೋ ಕ್ಲಿಪ್ಪಿಂಗನ್ನು
ಜಾಧವ್ ಅವರು ತಮ್ಮ ಕುಟುಂಬದ ಜೊತೆಗೂ ತಪ್ಪೊಪ್ಪಿಕೊಂಡಿರುವುದಾಗಿ ಪ್ರತಿಪಾದಿಸಿ ಪ್ರಚಾರ ಮಾಡಲು ಪಾಕಿಸ್ತಾನವು ಬಳಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಇದೀಗ ಶಂಕಿಸಲಾಯಿತು. ಭೇಟಿಯ ವಿಡಿಯೋ ಸೆರೆ ಹಿಡಿಯಲು ಭಾರತಕ್ಕೆ ಅವಕಾಶ ಇರದಿದ್ದ ಕಾರಣ ಪಾಕಿಸ್ತಾನದ ಸುಳ್ಳುಗಳನ್ನು ಸಾಬೀತುಪಡಿಸಲು ಭಾರತಕ್ಕೆ ಯಾವುದೇ ಪರ್ಯಾಯ ಮಾರ್ಗವೂ ಇಲ್ಲ.
ಈದಿನ
ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಜಾಧವ್ ಜೊತೆಗಿನ ಅವರ ತಾಯಿ ಮತ್ತು ಪತ್ನಿ ಭೇಟಿಯನ್ನು ಪ್ರಚಾರಕ್ಕೆ ಪಾಕಿಸ್ತಾನವು ಬಳಸಿಕೊಳ್ಳುತ್ತಿರುವುದು, ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗಿದೆ ಎಂಬ ಅದರ ಪ್ರತಿಪಾದನೆಯಲ್ಲಿನ
ಟೊಳ್ಳುತನವನ್ನು ಬಯಲಿಗೆಳೆದರು. ಪಾಕಿಸ್ತಾನಿ ಅಧಿಕಾರಿಗಳು ತಾಯಿ ಮತ್ತು ಪತ್ನಿಯ ಮಂಗಳಸೂತ್ರ ಮತ್ತು ಬಿಂದಿಯನ್ನು ತೆಗೆಸಿದ್ದರಿಂದ ಜಾಧವ್ ಅವರು ಮೊದಲಿಗೆ ತನ್ನ ತನ್ನ ತಾಯಿ ವಿಧವೆಯಾಗಿದ್ದಾರೆ
ಎಂದು ಭಾವಿಸಿದ್ದರು ಎಂದು ಸುಷ್ಮಾ ಮೇಲ್ಮನೆಗೆ ತಿಳಿಸಿದರು. ಭಾವ ಪರವಶರಾಗಿದ್ದ ಜಾಧವ್ ಪತ್ನಿಗೆ ಹಲವಾರು ಬಾರಿ ಗಂಟಲು ಕಟ್ಟಿತು. ಸುಮಾರು ೪೦ ನಿಮಿಷ ಕಾಲ ಆಕೆ ಬಿಕ್ಕಿ ಬಿಕ್ಕಿ ಅತ್ತರು, ಹೀಗಾಗಿ ಆಕೆ ಪತಿಯ ಜೊತೆ ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ. ಜಾಧವ್ ತಾಯಿ ಅವಂತಿ ದೃಢವಾಗಿದ್ದುಕೊಂಡು ಮಾತನಾಡಿದರು. ಪಾಕಿಸ್ತಾನ ಮೊದಲು ಕೇವಲ ಪತ್ನಿ ಚೇತನಾ ಜಾಧವ್ ಅವರಿಗೆ ಮಾತ್ರ ಭೇಟಿ ಅವಕಾಶ ಕಲ್ಪಿಸುವುದಾಗಿ ಹೇಳಿದ್ದರೂ ತಾಯಿ ಅವಂತಿ ಅವರಿಗೂ ಭೇಟಿ ಅವಕಾಶ ಒದಗಿಸಬೇಕು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ನಿರ್ಧಾರ ತೆಗೆದುಕೊಂಡಿತ್ತು.
ಕಡೆಗೆ ಪಾಕಿಸ್ತಾನ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ಆಗ್ರಹಕ್ಕೆ ಒಪ್ಪಿ ತಾಯಿಗೂ ಭೇಟಿ ಅವಕಾಶ ಕಲ್ಪಿಸಿತ್ತು.
2017: ನವದೆಹಲಿ: ತಮ್ಮ ತಾಯಿ ಮತ್ತು ಪತ್ನಿ ಜೊತೆಗಿನ ಕುಲಭೂಷಣ್ ಜಾಧವ್ ಭೇಟಿಯನ್ನು ಪಾಕಿಸ್ತಾನ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರಾಜ್ಯಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ವಾಕ್ ಪ್ರಹಾರ ನಡೆಸಿದರು. ಜಾಧವ್ ಕುಟುಂಬ ಸದಸ್ಯರನ್ನು ಅಗೌರವದಿಂದ ನಡೆಸಿಕೊಂಡಿಲ್ಲ ಎಂಬ ಪಾಕ್ ಪ್ರತಿಪಾದನೆಯಲ್ಲಿನ
’ಟೊಳ್ಳುತನ’ವನ್ನು
ಸುಷ್ಮಾ ಸ್ವರಾಜ್ ಎತ್ತಿ ತೋರಿಸಿದರು. ಕುಲಭೂಷಣ್ ಮತ್ತು ಕುಟುಂಬ ಸದಸ್ಯರ ಭೇಟಿಗೆ ಸಂಬಂಧಿಸಿದಂತೆ ಸದನದಲ್ಲಿ ಹೇಳಿಕೆ ನೀಡಿದ ಸುಷ್ಮಾ, ಪಾಕಿಸ್ತಾನವು ಮಹಿಳೆಯರಿಬ್ಬರನ್ನೂ ಬಟ್ಟೆ ಬದಲಾಯಿಸುವಂತೆ ಮತ್ತು ತಮ್ಮ ಮಂಗಳಸೂತ್ರ, ಬಿಂದಿ ಹಾಗೂ ಬಳೆಗಳನ್ನು ತೆಗೆಯುವಂತೆ ಬಲಾತ್ಕರಿಸಿತು. ಪರಿಣಾಮವಾಗಿ ಜಾಧವ್ ಅವರು ಪ್ರಾರಂಭದಲ್ಲಿ ತನ್ನ ತಾಯಿ ವಿಧವೆಯಾಗಿದ್ದಾರೆ
ಎಂದು ಭ್ರಮಿಸುವಂತಾಯಿತು
ಎಂದು ಸುಷ್ಮಾ ಹೇಳಿದರು. ಜಾಧವ್ ಪತ್ನಿ ಧರಿಸಿದ್ದ ಚಪ್ಪಲಿಗಳಲ್ಲಿ ’ಏನೋ ಲೋಹದ ವಸ್ತು’ ಇದೆ
ಎಂಬ ಪಾಕಿಸ್ತಾನದ ಪ್ರತಿಪಾದನೆಯನ್ನೂ ಪ್ರಶ್ನಿಸಿದ ಸಚಿವೆ, ’ಅದೇ ಚಪ್ಪಲಿ ಧರಿಸಿಕೊಂಡು ಆಕೆ ಎರಡು ವಿಮಾನಯಾನ ಸಂಸ್ಥೆಗಳ ಭದ್ರತಾ ತಪಾಸಣೆ ಯಂತ್ರಗಳು ಮೂಲಕ ಹಾದುಹೋಗಿದ್ದರು’ ಎಂದು ಹೇಳಿದರು.
ಸುಷ್ಮಾ ಸ್ವರಾಜ್ ಅವರ ಭಾಷಣದ ಕೆಲವು ಮುಖ್ಯಾಂಶಗಳು ಇಲ್ಲಿವೆ: *ಪಾಕಿಸ್ತಾನವು ಕುಲಭೂಷಣ್ ಜಾಧವ್ ಮತ್ತು ಅವರ ಕುಟುಂಬದ ನಡುವಣ ಭೇಟಿಯನ್ನು ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. * ನಾನು ಜಾಧವ್ ಅವರ ತಾಯಿ ಜೊತೆ ಮಾತನಾಡಿದ್ದೇನೆ.
ಕುಲಭೂಷಣ್ ಅವರು ತನ್ನ ತಾಯಿ ಮಂಗಳಸೂತ್ರ ಮತ್ತು ಬಿಂದಿ ಧರಿಸದೇ ಇದ್ದುದನ್ನು ಕಂಡು ಮೊತ್ತ ಮೊದಲಿಗೆ ತನ್ನ ಬಳಿ ತನ್ನ ತಂದೆಯ ಬಗ್ಗೆ ವಿಚಾರಿಸಿದರು ಎಂದು ಆಕೆ ನನಗೆ ಹೇಳಿದರು. * ತಾಯಿ ಮತ್ತು ಪತ್ನಿಯನ್ನು ಕುಲಭೂಷಣ್ ಅವರಿಗೆ ವಿಧವೆಯರಂತೆ ತೋರಿಸಲಾಯಿತು. * ಕುಲಭೂಷಣ್ ಅತ್ಯಂತ ಉದ್ವಿಗ್ನನಾಗಿರುವಂತೆ ನನಗೆ ಕಂಡಿತು ಎಂದು ಜಾಧವ್ ತಾಯಿ ನನಗೆ ಹೇಳಿದರು. ಅವರು ಅಸ್ವಸ್ಥರಾಗಿರುವಂತೆ ತನಗೆ ಅನಿಸಿತು ಎಂದೂ ಜಾಧವ್ ತಾಯಿ ನನ್ನ ಬಳಿ ಹೇಳಿದರು. * ಸಭೆಯಲ್ಲಿ ಮಾನವೀಯತೆ ಇರಲಿಲ್ಲ. * ಜಾಧವ್ ಕುಟುಂಬದ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಯಿತು.
ಭೀತಿಯ ಪರಿಸರವನ್ನು ಸೃಷ್ಟಿಸಲಾಯಿತು. * ಕುಟುಂಬದಿಂದ ಮಾಧ್ಯಮವನ್ನು ದೂರ ಇರಿಸಬೇಕು ಎಂಬುದಾಗಿ ನಾವು ಪಾಕಿಸ್ತಾನದ ಜೊತೆ ಒಪ್ಪಂದ ಮಾಡಿಕೊಂಡಿದ್ದೆವು. ಅದನ್ನು ಗೌರವಿಸಲಿಲ್ಲ. * ಕುಲಭೂಷಣ್ ಜಾಧವ್ ಅವರ ಪತ್ನಿ ಧರಿಸಿದ್ದ ಚಪ್ಪಲಿಗಳನ್ನು ಅದರಲ್ಲಿ ಯಾವುದೋ ಚಿಪ್ ಅಥವಾ ರೆಕಾರ್ಡರ್ ಇದೆ ಎಂದು ಹೇಳಿಕೊಂಡು ಪಾಕಿಸ್ತಾನ ತನ್ನ ಬಳಿ ಇಟ್ಟುಕೊಂಡಿದೆ. ಮೊದಲು ದುಬೈಗೆ ಮತ್ತು ಬಳಿಕ ಪಾಕಿಸ್ತಾನಕ್ಕೆ ವಿಮಾನದ ಮೂಲಕ ಇದೇ ಚಪ್ಪಲಿಗಳನ್ನು ಧರಿಸಿ ಅವರು ಪಯಣಿಸಿರುವಾಗ ಇದು ಹೇಗೆ ಸಾಧ್ಯ? ಆಗ ತಪಾಸಣಾ ಯಂತ್ರಗಳು ಯಾವುದೇ ಎಚ್ಚರಿಕೆ ಗಂಟೆ ಮೊಳಗಿಸದಿರುವಾಗ ಪಾಕಿಸ್ತಾನ ಸರ್ಕಾರ ಚಪ್ಪಲಿಯಲ್ಲಿ ಏನನ್ನೋ ಪತ್ತೆ ಮಾಡಿದ್ದು ಹೇಗೆ? * ಪಾಕಿಸ್ತಾನ ಏನನ್ನು ಮಾಡುತ್ತಿದೆಯೋ ಅದು ಯಾವುದೇ ಮಾನದಂಡವನ್ನೂ ಮೀರಿದ ಅಸಂಬದ್ಧತೆ. * ನಾವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ
(ಐಸಿಜೆ) ಕಾಯಂ ಪರಿಹಾರ ಕೋರಿದ್ದೇವೆ. ನಾವು ಇನ್ನಷ್ಟು ಬಲವಾದ ಸಾಕ್ಷ್ಯಾಧಾರಗಳನ್ನು
ನ್ಯಾಯಾಲಯದ ಮುಂದಿಡುತ್ತೇವೆ.
ಐಸಿಜೆ ಕುಲಭೂಷಣ್ ಜಾಧವ್ ಅವರಿಗೆ ವಿಧಿಸಿರುವ ಮರಣದಂಡನೆಗೆ ತಡೆಯಾಜ್ಞೆ ನೀಡಿದೆ. ಅವರನ್ನು ಹಿಂದಕ್ಕೆ ಕರೆತರಲು ನಾವು ಈಗ ಇನ್ನೂ ಬಲವಾದ ಸಾಕ್ಷ್ಯಾಧಾರವನ್ನು
ನೀಡುತ್ತೇವೆ. ಪಾಕಿಸ್ತಾನವನ್ನು
ಖಂಡಿಸಿ, ಜಾಧವ್ ಅವರನ್ನು ಬೆಂಬಲಿಸಬೇಕು ಎಂದು ನಾನು ಈ ಸದನವನ್ನು ಒತ್ತಾಯಿಸುತ್ತೇನೆ.
2017: ಕಾಬೂಲ್: ಕಾಬೂಲಿನ ಶಿಯಾ ಸಾಂಸ್ಕೃತಿಕ ಕೇಂದ್ರದಲ್ಲಿ ಸಂಭವಿಸಿದ ಬಹುಬಾಂಬ್ ಸ್ಫೋಟಗಳಿಗೆ ಕನಿಷ್ಠ ೪೦ ಮಂದಿ ಬಲಿಯಾಗಿ, ೩೦ ಮಂದಿ ಗಾಯಗೊಂಡರು. ಆಫ್ಘಾನಿಸ್ಥಾನದ ರಾಜಧಾನಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಹಿಂಸಾಚಾರ ಇದು ಎಂದು ವರದಿಗಳು ಹೇಳಿದವು. ತತ್ ಕ್ಷಣಕ್ಕೆ ದಾಳಿಯ ಹೊಣೆಗಾರಿಕೆಯನ್ನು ಯಾರೂ ಹೊತ್ತುಕೊಂಡಿಲ್ಲ. ಆದರೆ ಆಫ್ಘನ್ ವಾಯ್ಸ್ ಏಜೆನ್ಸಿ ಸಮೀಪ ಸಂಭವಿಸಿದ ದಾಳಿಯಲ್ಲಿ ತನ್ನ ಪಾತ್ರ ಏನೂ ಇಲ್ಲ ಎಂದು ತಾಲಿಬಾನ್ ಕ್ಷಿಪ್ರ ಪ್ರತಿಕ್ರಿಯೆ ನೀಡಿತು. ಮಾಧ್ಯಮ ಸಂಸ್ಥೆಯ ಕಟ್ಟಡವೇ ದಾಳಿಕೋರರ ಗುರಿ ಆಗಿದ್ದಿರಬಹುದು ಎಂದು ಪ್ರಾಥಮಿಕ ವರದಿ ಹೇಳಿತ್ತು. ಆದರೆ, ವಾಸ್ತವವಾಗಿ ಸ್ಫೋಟಗಳು ಶಿಯಾ ಪಂಥಕ್ಕೆ ಸೇರಿದ ತಬಯಾನ್ ಸಾಂಸ್ಕೃತಿಕ ಕೇಂದ್ರವನ್ನು ಗುರಿಯಾಗಿಸಿಕೊಂಡು
ನಡೆದಿವೆ ಎಂದು ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದರು. ಸ್ಫೋಟ ಸಂಭವಿಸಿದಾಗ ಆಫ್ಘಾನಿಸ್ಥಾನದಲ್ಲಿ ಸೋವಿಯತ್ ಹಸ್ತಕ್ಷೇಪದ ೩೮ನೇ ವಾರ್ಷಿಕೋತ್ಸವ ಅಂಗವಾಗಿ ಸಮಾರಂಭ ನಡೆಯುತ್ತಿತ್ತು.
ದಾಳಿಯಲ್ಲಿ ಕನಿಷ್ಠ ೪೦ ಜನ ಮೃತರಾಗಿ ೩೦ ಮಂದಿ ಗಾಯಗೊಂಡರು, ಆದರೆ ಇದು ಅಂತಿಮ ಸಂಖ್ಯೆಯಲ್ಲಿ, ಸಾವಿನ ಸಂಖ್ಯೆ ಏರಲೂ ಬಹುದು ಎಂದು ಅವರು ನುಡಿದರು. ಎರಡು ಸಣ್ಣ ಬಾಂಬ್ ಸ್ಫೋಟಗಳ ಬಳಿಕ ಈ ದಾಳಿ ನಡೆದಿದೆ. ಸಣ್ಣ ಬಾಂಬ್ ಸ್ಫೋಟಗಳಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಹೀಮಿ ನುಡಿದರು. ಸಮರಗ್ರಸ್ತ ಆಫ್ಘಾನಿಸ್ಥಾನದಲ್ಲಿ ಇತ್ತೀಚೆಗೆ ಅತ್ಯಂತ ಹೆಚ್ಚು ಅಪಾಯಕಾರಿ ಎನಿಸಿರುವ ಸ್ಥಳಗಳಲ್ಲಿ ಕಾಬೂಲ್ ಕೂಡಾ ಒಂದಾಗಿದೆ. ತಾಲಿಬಾನ್ ಇಲ್ಲಿ ತನ್ನ ದಾಳಿಗಳನ್ನು ಪುನಾರಂಭಿಸಿದ್ದು, ಐಸಿಸ್ (ಇಸ್ಲಾಮಿಕ್ ಸ್ಟೇಟ್) ಕೂಡಾ ತನ್ನ ಅಸ್ತಿತ್ವ ವಿಸ್ತರಣೆಯ ಯತ್ನಗಳನ್ನು ನಡೆಸುತ್ತಿದೆ.
ಐಸಿಸ್ ನಡೆಸಿದ್ದ ಮಾನವ ಬಾಂಬ್ ಸ್ಫೋಟದಲ್ಲಿ ೬ ಮಂದಿ ಸತ್ತ ಘಟನೆಯ ಕೆಲವೇ ದಿನಗಳಲ್ಲಿ ಈದಿನದ ದಾಳಿ ನಡೆಯಿತು. ೨೦೧೫ರಲ್ಲಿ ಮೊದಲ ಬಾರಿಗೆ ಆಫ್ಘಾನಿಸ್ಥಾನದಲ್ಲಿ ನೆಲೆ ಕಂಡುಕೊಂಡ ಮಧ್ಯಪ್ರಾಚ್ಯದ ಜಿಹಾದಿ ಸಂಘಟನೆ ಐಸಿಸ್ ಕಾಬೂಲಿನಲ್ಲಿ ತನ್ನ ದಾಳಿಗಳನ್ನು ಆಗಾಗ ನಡೆಸುತ್ತಿದೆ. ಭದ್ರತಾ ನೆಲೆಗಳು ಮತ್ತು ಅಲ್ಪಸಂಖ್ಯಾತ ಶಿಯಾ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಐಸಿಸ್ ಈ ದಾಳಿಗಳನ್ನು ನಡೆಸುತ್ತಿದೆ.
2017: ಗೋವಾ: ಸುಮಾರು ೧೯ ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ ಸೋನಿಯಾ ಗಾಂಧಿ ಅವರು ಪುತ್ರ ರಾಹುಲ್ ಗಾಂಧಿ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಬಳಿಕ ಗೋವಾದಲ್ಲಿ ವಿರಾಮ ಪಡೆಯುತ್ತಿದ್ದು ಈ ಸಂದರ್ಭದ
ವಿರಾಮ ಕಾಲದಲ್ಲಿ ಅವರು ಸೈಕಲ್ ಸವಾರಿ ಮಾಡುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು. ೭೧ರ ಹರೆಯದ ಸೋನಿಯಾ ಗಾಂಧಿ ಅವರು ಡಿಸೆಂಬರ್ ೨೬ರಂದು ಕ್ರಿಸ್ ಮಸ್ ಬಳಿಕ ಗೋವಾಕ್ಕೆ ತೆರಳಿದ್ದರು. ಸೋನಿಯಾ ಗಾಂಧಿ ಅವರು ನಗುತ್ತಾ ಸೈಕಲ್ ಸವಾರಿ ಮಾಡುವ ಚಿತ್ರ ಟ್ವಿಟ್ಟರ್ ನಲ್ಲಿ ಪ್ರಕಟಗೊಂಡು ವ್ಯಾಪಕವಾಗಿ ಶೇರ್ ಆಗಿದೆ. ಸೋನಿಯಾ ಗೈರು ಹಾಜರಿಯಲ್ಲಿ ನಡೆದ ಪಕ್ಷದ ೧೩೩ನೇ ಸ್ಥಾಪನಾ ದಿನ ಸಮಾರಂಭದಲ್ಲಿ ರಾಹುಲ್ ಗಾಂಧಿ ಪಕ್ಷ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ತಾಯಿಯ ನಿವೃತ್ತಿ ಬಗ್ಗೆ ಅವರು ಪ್ರಸ್ತಾಪವನ್ನೇನೂ
ಮಾಡಲಿಲ್ಲ. ಸೋನಿಯಾ ಅವರ ಸೈಕಲ್ ಸವಾರಿ ಚಿತ್ರಕ್ಕೆ ಪ್ರತಿಕ್ರಿಯಿಸಿದ ರೀತೀಶ್ ದೇಶಮುಖ್ ಅವರು ’ಕೆಲವು ಚಿತ್ರಗಳು ನಿಮ್ಮನ್ನು ಖುಷಿ ಪಡಿಸುತ್ತವೆ. ಇದು ಅವುಗಳಲ್ಲಿ ಒಂದು. ಸೋನಿಯಾಜಿ ನಿಮಗೆ ಸಂತಸ ಹಾಗೂ ಉತ್ತಮ ಆರೋಗ್ಯವನ್ನು ಬಯಸುವೆ’ ಎಂದು ಬರೆದರು. ರಾಹುಲ್ ಗಾಂಧಿ ಅವರು ಡಿಸೆಂಬರ್ ೧೬ರಂದು ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ತಾಯಿಯಿಂದ ಅಧಿಕಾರ ವಹಿಸಿಕೊಂಡಿದ್ದಾರೆ. ’ಆತ ನನ್ನ ಮಗ, ಅವನನ್ನು ನಾನು ಪ್ರಶಂಸಿಸುವುದು ಸರಿಯಾಗುವುದಿಲ್ಲ’ ಎಂದು ಪಕ್ಷಾಧ್ಯಕ್ಷರಾಗಿ
ಕೊನೆಯ ಭಾಷಣ ಮಾಡುತ್ತಾ ಸೋನಿಯಾ ಗಾಂಧಿ ಹೇಳಿದ್ದರು. ಪಕ್ಷಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ರಾಹುಲ್ ಗಾಂಧಿ ಅವರು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪಕ್ಷ ಪರಾಭವ ಅನುಭವಿಸಿದ್ದನ್ನು
ಕಾಣಬೇಕಾಯಿತು. ಕಳೆದ ವರ್ಷ ಹೊಸ ವರ್ಷದ ರಜಾ ತೆಗೆದುಕೊಂಡು ವಿರೋಧಿಗಳ, ವಿಶೇಷವಾಗಿ ಬಿಜೆಪಿಯ ಟೀಕೆಗೆ ಒಳಗಾಗಿದ್ದ ರಾಹುಲ್ ಗಾಂಧಿ ಈ ಬಾರಿ ನಗರದಲ್ಲೇ ಉಳಿದುಕೊಂಡು ಪಕ್ಷದ ಸಾಧನೆಯ ಪರಾಮರ್ಶೆ ನಡೆಸಿದರು.
2017: ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ (ಎಲ್ ಪಿಜಿ) ಸಿಲಿಂಡರ್ ದರವನ್ನು ಪ್ರತಿ ತಿಂಗಳು ರೂ.೪ರಂತೆ ಹೆಚ್ಚಿಸಲು ತೈಲ ಕಂಪೆನಿಗಳಿಗೆ ನೀಡಿದ್ದ ಸೂಚನೆಯನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಬಡವರಿಗೆ ಉಚಿತವಾಗಿ ಎಲ್ ಪಿಜಿ ಸಂಪರ್ಕ ಒದಗಿಸುವ ‘ಉಜ್ವಲ’ ಯೋಜನೆಯ ಆಶಯಗಳಿಗೆ ಈ ನೀತಿ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಯಿತು. ಆದರೆ, ತೆರಿಗೆಯ ಕಾರಣಕ್ಕೆ ಸಬ್ಸಿಡಿ ಸಿಲಿಂಡರುಗಳ ಬೆಲೆ ಅಕ್ಟೋಬರ್ ನಂತರವೂ ಏರಿಕೆ ಆಗಿದೆ’ ಎಂದು
ಉನ್ನತ ಮೂಲಗಳು ತಿಳಿಸಿದವು. ೨೦೧೬ರ ಜೂನ್ ತಿಂಗಳಿನಿಂದ ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳು ಹೆಚ್ಚಿಸಲು ತೈಲ ಕಂಪೆನಿಗಳಿಗೆ ಸರ್ಕಾರ ಈ ಹಿಂದೆ ಸೂಚಿಸಿತ್ತು. ಇದೇ ಅಕ್ಟೋಬರಿನಲ್ಲಿ ಈ ಆದೇಶವನ್ನು ಹಿಂಪಡೆಯಲಾಗಿದೆ. ಇದರಂತೆ ತೈಲ ಕಂಪೆನಿಗಳು ಅಕ್ಟೋಬರಿನಿಂದ ಬೆಲೆ ಏರಿಕೆ ಮಾಡಿಲ್ಲ ಎಂದು ಮೂಲಗಳು ಹೇಳಿದವು. ಮೊದಲು ಪ್ರತಿ ತಿಂಗಳು ರೂ. ೨ ಏರಿಸಲು ತಿಳಿಸಲಾಗಿತ್ತು.
ನಂತರ, ಈ ವರ್ಷದ ಜೂನ್ ೧ರಿಂದ ರೂ. ೪ ಏರಿಸಲು ಆದೇಶಿಸಲಾಗಿತ್ತು. ಕಳೆದ ೧೭ ತಿಂಗಳುಗಳಲ್ಲಿ ಸಬ್ಸಿಡಿ ಅಡುಗೆ ಅನಿಲದ ಬೆಲೆ ರೂ. ೭೬.೫ ಏರಿಕೆಯಾಗಿದೆ. ಕಳೆದ ಹದಿನೇಳು ತಿಂಗಳಲ್ಲಿ, ೧೯ ಕಂತುಗಳಲ್ಲಿ, ಒಟ್ಟು ೭೬.೫ ರೂ.ಗಳನ್ನು ಅಡುಗೆ ಅನಿಲ ಸಿಲಿಂಡರ್ ಮೇಲೆ ಏರಿಸಿದ ಬಳಿಕ ರಾಷ್ಟ್ರೀಯ ತೈಲ ಕಂಪೆನಿಗಳು ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಮಾಸಿಕ ದರ ಪರಿಷ್ಕರಣೆಯನ್ನು ತಪ್ಪಿಸಿದ್ದವು. ೨೦೧೮ರೊಳಗೆ ಅಡುಗೆ ಅನಿಲ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಪೂರ್ತಿಯಾಗಿ ನಿವಾರಿಸುವ ನಿಟ್ಟಿನಲ್ಲಿ ಕಳೆದ ವರ್ಷ ಜುಲೈ ೧ರಿಂದ ಪ್ರತೀ ತಿಂಗಳ ಒಂದನೇ ತಾರೀಕಿನಂದು ಸರಕಾರಿ ಒಡೆತನದ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಓಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ (ಬಿಪಿಸಿಎಲ್) ಮತ್ತು ಹಿಂದುಸ್ಥಾರ್ ಪೆಟ್ರೋಲಿಯಂ ಕಾರ್ಪೊರೇಶನ್ (ಎಚ್ಪಿಸಿಎಲ್) ಕಂಪೆನಿಗಳು ಅಡುಗೆ ಅನಿಲ ಬೆಲೆಯನ್ನು ಏರಿಸುತ್ತಲೇ ಬಂದಿದ್ದವು. ಕಳೆದ ನ.೧ರಂದು ಕೊನೆಯ ಬಾರಿ ೪.೫೦ ರೂ. ಹೆಚ್ಚಿಸಿ ತಲಾ ಸಿಲಿಂಡರ್ ಬೆಲೆಯನ್ನು ೪೯೫.೬೯ ರೂ.ಗೆ ಏರಿಸಲಾಗಿತ್ತು. ಈ ಬಗ್ಗೆ ಸರಕಾರಿ ಒಡೆತನದ ಸಂಸ್ಥೆಗಳು ಪ್ರಕಟಣೆ ಹೊರಡಿಸಿದ್ದವು. ಪ್ರತೀ ಮನೆಗೆ ವರ್ಷಕ್ಕೆ ೧೪.೨ ಕೆಜಿ ತೂಕದ ತಲಾ ೧೨ ಸಿಲಿಂಡರುಗಳನ್ನು
ಸರಕಾರ ಸಬ್ಸಿಡಿ ದರದಲ್ಲಿ ಪೂರೈಸುತ್ತಿದೆ. ಇದಕ್ಕೆ ಮೀರಿದ ಸಿಲಿಂಡರುಗಳನ್ನು ಗ್ರಾಹಕರು ಮಾರುಕಟ್ಟೆ ದರದಲ್ಲಿ ಖರೀದಿಸಬೇಕಾಗುತ್ತದೆ.
2016: ನವದೆಹಲಿ: ನಿಷೇಧಿಸಲಾದ ಹಳೆಯ ನೋಟುಗಳನ್ನು ಇಟ್ಟುಕೊಂಡವರಿಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿದ ಸುಗ್ರೀವಾಜ್ಞೆಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತನ್ನ ಒಪ್ಪಿಗೆಯನ್ನು ನೀಡಿತು.ನಿಷೇಧಿಸಲಾದ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು 2017ರ ಮಾರ್ಚ್ 31ರ ಬಳಿಕ ಇಟ್ಟುಕೊಂಡವರಿಗೆ ದಂಡ ಇಲ್ಲವೇ ಜೈಲು ಶಿಕ್ಷೆ ವಿಧಿಸಲು ಈ ಸುಗ್ರೀವಾಜ್ಞೆ ಅವಕಾಶ ಕಲ್ಪಿಸಿತು. ಸುಗ್ರೀವಾಜ್ಞೆಯ ಪ್ರಕಾರ 2017ರ ಮಾರ್ಚ್ 31ರ ಬಳಿಕ 10ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ಮಾರ್ಚ್ 31ರ ಬಳಿಕ ಹಳೆ ನೋಟು ವರ್ಗಾವಣೆಯಲ್ಲಿ ನಿರತರಾದವರು 5000 ರೂ ದಂಡ ತೆರಬೇಕಾಗಿ ಬರುತ್ತದೆ. ಕೆಲವೊಂದು ಪ್ರಕರಣಗಳಲ್ಲಿ ಆ ಬಳಿಕ 10ಕ್ಕಿಂತ ಹೆಚ್ಚು ನೋಟು ಇಟ್ಟುಕೊಂಡರೆ 4 ವರ್ಷದ ಸೆರೆವಾಸಕ್ಕೆ ಗುರಿಯಾಗುತ್ತಾರೆ. ಸುಗ್ರೀವಾಜ್ಞೆಯನ್ನು ‘ದಿ ಸ್ಪೆಸಿಫೈಡ್ ಬ್ಯಾಂಕ್ ನೋಟ್ಸ್ ಸೆಸ್ಸೇಷನ್ ಆಫ್ ಲಯಬಿಲಿಟೀಸ್ ಆರ್ಡಿನೆನ್ಸ್’ ಎಂಬುದಾಗಿ ಕರೆಯಲಾಯಿತು. ಸುಗ್ರೀವಾಜ್ಞೆಯು ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕನ್ನು (ಆರ್ಬಿಐ) ನಿಷೇಧಿತ ನೋಟುಗಳ ಬಾಧ್ಯತೆಯಿಂದ ಮುಕ್ತಗೊಳಿಸಲಿದೆ. ನಿಷೇಧಿತ ನೋಟುಗಳನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು ನೀಡಲಾಗಿದ್ದ ಡಿಸೆಂಬರ್ 30ರ ಗಡುವನ್ನು ಸರ್ಕಾರ ವಿಸ್ತರಿಸಿಲ್ಲ. ಹೀಗಾಗಿ ಹೊಸ ವರ್ಷಾರಂಭದ ಹೊತ್ತಿಗೆ ಹಳೆ ನೋಟುಗಳು ಸಂಪೂರ್ಣವಾಗಿ ಮೂಲೆ ಪಾಲಾಗಲಿವೆ.
2016: ನವದೆಹಲಿ: ದೆಹಲಿಯ ಮುಂದಿನ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ಮಾಜಿ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಬೈಜಾಲ್ ಅವರ ಹೆಸರಿಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಅಚ್ಚರಿಯ ನಿರ್ಧಾರ ಪ್ರಕಟಿಸಿದ ಐದು ದಿನಗಳ ಬಳಿಕ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿತು. ಜಂಗ್ ರಾಜೀನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಕಳುಹಿಸಲಾಗಿದ್ದು, ಪ್ರಣಬ್ ಮುಖರ್ಜಿ ಅವರು ಅದನ್ನು ಅಂಗೀಕರಿಸಿದ್ದಾರೆ ಎಂದು ಮೂಲಗಳು ಹೇಳಿದವು. ಭಾರತೀಯ ಆಡಳಿತಾತ್ಮಕ ಸೇವೆಯ (ಐಎಎಸ್) 1969ರ ತಂಡದ ಅಧಿಕಾರಿಯಾದ ಬೈಜಾಲ್ ಅವರನ್ನು 2004ರ ಮೇ ತಿಂಗಳಲ್ಲಿ ಯುಪಿಎ ಅಧಿಕಾರಕ್ಕೆ ಬಂದಾಗ ಕೇಂದ್ರ ಗೃಹ ಇಲಾಖಾ ಕಾರ್ಯದರ್ಶಿ ಹುದ್ದೆಯಿಂದ ಕಿತ್ತು ಹಾಕಲಾಗಿತ್ತು. 2006ರಲ್ಲಿ ಅವರನ್ನು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಬಳಿಕ ಹಲವಾರು ಕಾರ್ಪರೇಟ್ ಸಂಸ್ಥೆಗಳ ಮಂಡಳಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ರಾಜೀನಾಮೆ ನೀಡಿರುವ ಜಂಗ್ ಅವರು ದೆಹಲಿ ಸರ್ಕಾರ ಮತ್ತು ದೆಹಲಿ ಮುಖ್ಯಮಂತ್ರಿ ಜೊತೆಗಿನ ತಿಕ್ಕಾಟಗಳಿಂದಾಗಿ ನಿರಂತರ ಸುದ್ದಿಯಲ್ಲಿದ್ದರು.
2016: ನವದೆಹಲಿ: ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಆಜೀವ ಅಧ್ಯಕ್ಷರಾಗಿ ಕಾಮನ್ವೆಲ್ತ್ ಗೇಮ್ಸ್ ಭ್ರಷ್ಟಾಚಾರ ಹಗರಣದ ಕಳಂಕಿತ ಸುರೇಶ್ ಕಲ್ಮಾಡಿ ನೇಮಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಲ್ಮಾಡಿ ಹುದ್ದೆಯಿಂದ ಹಿಂದೆ ಸರಿಯಲು ನಿರ್ಧರಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾ ಸಚಿವಾಲಯ ಐಒಎಗೆ ಶೋಕಾಸ್ ನೋಟಿಸ್ ಜಾರಿ ಮಾಡಿತು. ಆಜೀವ ಅಧ್ಯಕ್ಷರಾಗಿ ನೇಮಿಸುತ್ತಿರುವ ಕುರಿತು ಕಲ್ಮಾಡಿ ಅವರಿಗೆ ಮಾಹಿತಿ ಇರಲಿಲ್ಲ. ಐಒಎ ತನ್ನ ನಿರ್ಧಾರವನ್ನು ಪ್ರಕಟಿಸಿದ ನಂತರ ಕಲ್ಮಾಡಿ ಅಧ್ಯಕ್ಷ ಹುದ್ದೆಯನ್ನು ಒಪ್ಪಿಕೊಳ್ಳದಿರಲು ನಿರ್ಧರಿಸಿದರು ಎಂದು ಕಲ್ಮಾಡಿ ಅವರ ವಕೀಲ ಹಿತೇಶ್ ಜೈನ್ ಮಾಧ್ಯಮಗಳಿಗೆ ತಿಳಿಸಿದರು. ಚೆನ್ನೈನಲ್ಲಿ ನಡೆದ ಐಒಎಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸುರೇಶ್ ಕಲ್ಮಾಡಿ ಮತ್ತು ಐಒಎ ಮಾಜಿ ಅಧ್ಯಕ್ಷ ಅಭಯ್ ಸಿಂಗ್ ಚೌಟಾಲ ಅವರನ್ನು ನೇಮಕ ಮಾಡಲು ತೀರ್ಮಾನಿಸಲಾಗಿತ್ತು. ಕಲ್ಮಾಡಿ ನೇಮಕಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯ ಐಒಎಗೆ ಶೋಕಾಸ್ ನೋಟಿಸ್ ನೀಡಿತು. ಐಒಎ ತೆಗೆದುಕೊಂಡ ತೀರ್ಮಾನ ಅಸಾಂವಿಧಾನಿಕವಾದುದು, ಸಂಸ್ಥೆ ತೆಗೆದುಕೊಂಡಿರುವ ತೀರ್ಮಾನವನ್ನು ಕ್ರೀಡಾ ಸಚಿವಾಲಯ ಒಪ್ಪಿಕೊಳ್ಳುವುದಿಲ್ಲ. ಆಜೀವ ಅಧ್ಯಕ್ಷರಾಗಿ ನೇಮಕವಾಗಿರುವ ಇಬ್ಬರೂ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಕ್ರೀಡೆಯನದನು ಭ್ರಷ್ಟಾಚಾರ ಮುಕ್ತಗೊಳಿಸಲು ಕ್ರೀಡಾ ಸಚಿವಾಲಯ ಶ್ರಮಿಸುತ್ತಿದೆ. ಕಲ್ಮಾಡಿ ಮತ್ತು ಚೌಟಾಲ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಅವರನ್ನು ವಜಾ ಗೊಳಿಸಬೇಕು. ಅಲ್ಲಿಯವರೆಗೆ ಐಒಎಯೊಂದಿಗೆ ಕ್ರೀಡಾ ಸಚಿವಾಲಯ ಯಾವುದೇ ಸಂಬಂಧವನ್ನು ಹೊಂದಲು ಬಯಸುವುದಿಲ್ಲ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ತಿಳಿಸಿದರು. ಕಲ್ಮಾಡಿ ಹಿಂದೆ ಸರಿಯಲು ನಿರ್ಧರಿಸಿದ್ದರೆ ಚೌಟಾಲ ತಮ್ಮ ನೇಮಕವನ್ನು ಸಮರ್ಥಿಸಿಕೊಂಡರು. ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ, ನನ್ನ ವಿರುದ್ಧದ ಆರೋಪಗಳೆಲ್ಲವೂ ರಾಜಕೀಯ ಪ್ರೇರಿತವಾದವು ಎಂದು ಚೌಟಾಲ ತಿಳಿಸಿದರು.
2016: ನವದೆಹಲಿ: ಉತ್ತರ ಪ್ರದೇಶದ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷವು ಯಾವುದೇ ಪಕ್ಷದ ಜೊತೆಗೆ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಇಲ್ಲಿ ಪ್ರಕಟಿಸಿದರು. 2017ರ ವಿಧಾನಸಭಾ ಚುನಾವಣೆಗಾಗಿ ಪಕ್ಷದ 325 ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ನಾವು ಈಗಾಗಲೇ ಪ್ರಕಟಸಿದ್ದೇವೆ. ಉಳಿದ 78 ಸ್ಥಾನಗಳಿಗೆ ಶೀಘ್ರವೇ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು, ಯಾರೊಂದಿಗೂ ಸಮಾಜವಾದಿ ಪಕ್ಷ ಮೈತ್ರಿಕೂಟ ರಚಿಸಿಕೊಳ್ಳುವುದಿಲ್ಲ ಎಂದು ಅವರು ನುಡಿದರು. ನೋಟು ರದ್ದು ಕ್ರಮಕ್ಕೆ (ನೋಟ್ಬಂದಿ) ಶೀಘ್ರವೇ ಉತ್ತರ ಸಿಗುತ್ತದೆ. ಅದನ್ನು ನಾವು ಕೊಡುವುದಿಲ್ಲ, ಜನತೆಯೇ ಕೊಡುತ್ತದೆ ಎಂದು ನುಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ, ಪ್ರಧಾನಿ ಬಹಳ ಕಷ್ಟಪಟ್ಟು ಇಲ್ಲಿಯವರೆಗೆ ಬಂದಿದ್ದಾರೆ. ಅವರು ಸಾಧಾರಣ ಪರಿವಾರದಿಂದ ಬಂದವರು. ಆದರೆ ಬಿಜೆಪಿ ತನ್ನ ಆಶ್ವಾಸನೆಯನ್ನು ಈಡೇರಿಸಿಲ್ಲ ಎಂದು ಮುಲಾಯಂ ಹೇಳಿದರು. ‘ಯಾರು ಇಲ್ಲಿ ಗೆಲ್ಲುತ್ತಾರೋ ಅವರು ದಿಲ್ಲಿ ಗೆಲ್ಲುತ್ತಾರೆ. ಚುನಾವಣೆ ನಿಮ್ಮದು, ಅದು ಫೆಬ್ರುವರಿ 28ಕ್ಕೆ ಮುನ್ನವೇ ನಡೆಯುತ್ತದೆ’ ಎಂದು ಪಕ್ಷ ಕಾರ್ಯಕರ್ತರನ್ನು ಮುಲಾಯಂ ಹುರಿದುಂಬಿಸಿದರು.
2016: ಚೆನ್ನೈ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಉತ್ತರಾಧಿಕಾರಕ್ಕಾಗಿ ಎಐಎಡಿಎಂಕೆ ಪಕ್ಷದಲ್ಲಿ ಕಲಹ ಸ್ಪೋಟಗೊಂಡಿದ್ದು, ಪಕ್ಷದ ಸಭೆ ನಡೆಯುವ ತಾಣದ ಹೊರಗೆ ಪಕ್ಷದ ಸಂಸದೆ ಶಶಿಕಲಾ ಪುಷ್ಪ ಅವರ ವಕೀಲರ ಮೇಲೆ ಸಭೆಗೂ ಮುನ್ನ ಪಕ್ಷ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಘಟಿಸಿತು. ಜಯಲಲಿತಾ ಅವರ ಉತ್ತರಾಧಿಕಾರಿಯನ್ನು ನಿರ್ಧರಿಸಲು ಕರೆಯಲಾಗಿದ್ದ ಸಭೆ ನಡೆಯುವುದಕ್ಕೂ ಮುನ್ನವೇ ಪುಷ್ಪ ಅವರ ವಕೀಲರನ್ನು ಹಿಗ್ಗಾಮುಗ್ಗಾ ಥಳಿಸಲಾಯಿತು. ಗಲಭೆ ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾಯಿತು ಎಂದು ವರದಿಗಳು ತಿಳಿಸಿದವು. ಎಐಎಡಿಎಂಕೆ ಕೇಂದ್ರ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಪತ್ರವೊಂದನ್ನು ಸಲ್ಲಿಸುವ ಸಲುವಾಗಿ ಪುಷ್ಪ ಅವರ ನಾಲ್ವರು ವಕೀಲರು ಆಗಮಿಸಿದ್ದರು. ಈ ವೇಳೆಯಲ್ಲಿ ಅವರ ಮೇಲೆ ಹಲೆ ನಡೆಯಿತು ಎಂದು ಹೇಳಲಾಯಿತು. ಕಳೆದ ಆಗಸ್ಟ್ ತಿಂಗಳಲ್ಲಿ ‘ಸ್ಲ್ಯಾಪ್ಗೇಟ್’ ಘಟನೆಯ ಬಳಿಕ ಪಕ್ಷದ ವರ್ಚಸ್ಸಿಗೆ ಕುಂದು ಉಂಟು ಮಾಡಿದ ಆರೋಪದಲ್ಲಿ ಶಶಿಕಲಾ ಪುಷ್ಪ ಅವರನ್ನು ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸಿತ್ತು. ‘ಪಕ್ಷಕ್ಕೆ ಕೆಟ್ಟ ಹೆಸರು ತಂದ ಕಾರಣ ಶಶಿಕಲಾ ಪುಷ್ಪ ಅವರನ್ನು ಪಕ್ಷದಿಂದ ವಜಾಗೊಳಿಸಲಾಗಿದೆ ಎಂದು ಜಯಲಲಿತಾ ಅವರು ಆಗ ಹೇಳಿದ್ದರು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡಿದ್ದಕ್ಕಾಗಿ ಡಿಎಂಕೆಯ ತಿರುಚಿ ಶಿವ ಅವರಿಗೆ ಥಳಿಸುವ ಮೂಲಕ ಶಶಿಕಲಾ ಪುಷ್ಪ ಅವರು ಮೈಮೇಲೆ ಎಳೆದುಕೊಂಡಿದ್ದರು.
2016: ನವದೆಹಲಿ: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಸುಂದರ ಲಾಲ್ ಪಟ್ವಾ ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಪಟ್ವಾ ಅವರು 1980ರ ಜನವರಿ 20ರಿಂದ 1980ರ ಫೆಬ್ರುವರಿ 17 ಜನತಾ ಪಕ್ಷದಲ್ಲಿದ್ದಾಗ ಮತ್ತು 1990ರ ಮಾರ್ಚ್ 5ರಿಂದ 1992ರ ಡಿಸೆಂಬರ್ 15ರವರೆಗೆ ಭಾರತೀಯ ಜನತಾ ಪಕ್ಷದಲ್ಲಿದ್ದಾಗ -ಹೀಗೆ ಎರಡು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಜನಸಂಘದ ಮೂಲಕ 1951ರಲ್ಲಿ ಪಟ್ವಾ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಜನಸಂಘವು ಜನತಾ ಪಕ್ಷದಲ್ಲಿ ವಿಲೀನಗೊಂಡ ಬಳಿಕ ಜನತಾ ಪಕ್ಷದಲ್ಲಿ ಮುಂದುವರೆದಿದ್ದರು. ಬಳಿಕ ಇಂದೋರ್ ರಾಜ್ಯ ಪ್ರಜಾ ಮಂಡಲ ಮತ್ತು ಆರ್ಎಸ್ಎಸ್ನಲ್ಲಿ ಸೇವೆ ಸಲ್ಲಿಸಿದ್ದರು. 1948ರಲ್ಲಿ ಆರ್ಎಸ್ಎಸ್ ಚಳವಳಿಯಲ್ಲಿ ಪಾಲ್ಗೊಂಡಿದ್ದುದಕ್ಕಾಗಿ ಏಳು ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದ ಪಟ್ವಾ, ತುರ್ತು ಪರಿಸ್ಥಿತಿ ಕಾಲದಲ್ಲಿ 1975ರ ಜೂನ್ನಿಂದ 1977ರ ಜನವರಿವರೆಗೆ ಮೀಸಾ ಅಡಿ ಬಂಧಿತರಾಗಿದ್ದರು. 1997ರಲ್ಲಿ ಛಿಂದ್ವಾರ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಲೋಕಿಸಭೆ ಪ್ರವೇಶಿಸಿದ್ದ ಅವರು , 1999ರಲ್ಲಿ ಹೊಸಂಗಾಬಾದ್ ಲೋಕಸಭಾ ಸ್ಥಾನವನ್ನು ಗೆದ್ದು 1999ರಿಂದ 2001ರವರೆಗೆ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. ಪಟ್ವಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಮೂಲಕ ಶೋಕ ವ್ಯಕ್ತ ಪಡಿಸಿದರು.
2016: ನವದೆಹಲಿ: ಬ್ಯಾಂಕಿನಿಂದ ಹಣ ಹಿಂಪಡೆಯುವ (ವಿತ್ ಡ್ರಾ) ಮಿತಿ ಹೇರಿಕೆಯಿಂದ ರಾಷ್ಟ್ರದ ವಿತ್ತ ಸ್ವಾತಂತ್ರ್ಯನ್ನು ಕಿತ್ತುಕೊಂಡಂತಾಗಿದೆ. ದೈನಂದಿನ ವಿತ್ಡ್ರಾ ಮಿತಿ ಹಿಂತೆಗೆದುಕೊಳ್ಳಬೇಕು. ನೋಟು ನಿಷೇಧದಿಂದ ಸಂಕಷ್ಟಕ್ಕೆ ಸಿಲುಕಿದ ಬಡವರಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯ ಪಡಿಸಿದರು. ಕಾಂಗ್ರೆಸ್ ಪಕ್ಷದ 132ನೇ ಫೌಂಡೇಷನ್ ದಿನದ ಕಾರ್ಯಕ್ರಮದ ನಂತರ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್ ಗಾಂಧಿ, ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲ, ಕೃಷಿ ಉತ್ಪನ್ನಗಳಿಗೆ ಶೇ.20ರಷ್ಟು ಬೆಂಬಲ ಬೆಲೆ ನೀಡುವ ಮೂಲಕ ಕೃಷಿಕರಿಗೆ ಕೇಂದ್ರ ಸರ್ಕಾರ ನೆರವು ನೀಡಬೇಕು. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಮಹಿಳೆಗೆ 25,000 ರೂ. ಧನ ಸಹಾಯ ಮಾಡಬೇಕು ಎಂದು ರಾಹುಲ್ ಗಾಂಧಿ ಒತ್ತಾಯ ಪಡಿಸಿದರು. ಫೌಂಡೇಷನ್ ದಿನದ ಅಂಗವಾಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಒಂದು ಪಕ್ಷವಲ್ಲ, ಶ್ರೀಮಂತ ಇತಿಹಾಸ ಹೊಂದಿರುವ ಒಂದು ಸಿದ್ಧಾಂತ ಎಂದರು. ಕಪ್ಪುಪಟ್ಟಿ ಬಹಿರಂಗ ಪಡಿಸಿ: ಸ್ವಿಸ್ ಬ್ಯಾಂಕ್ನಲ್ಲಿ ಇರಿಸಿರುವ ಕಪ್ಪುಹಣವನ್ನು ಭಾರತಕ್ಕೆ ಎಷ್ಟು ವಾಪಾಸು ತರಲಾಗಿದೆ? ಸ್ವಿಸ್ನಲ್ಲಿ ಖಾತೆ ಹೊಂದಿರುವ ಭಾರತೀಯರ ಪಟ್ಟಿಯನ್ನು ಸ್ವಿಜರ್ಲೆಂಡ್ ಸರ್ಕಾರ ನೀಡಿದ್ದರು ಇನ್ನೂ ಅದನ್ನು ಬಹಿರಂಗಪಡಿಸಿಲ್ಲ ಏಕೆ? ಆದಷ್ಟು ಶೀಘ್ರದಲ್ಲಿ ಕಪ್ಪು ಪಟ್ಟಿಯಲ್ಲಿರುವ ಹೆಸರುಗಳನ್ನು ಬಹಿರಂಗ ಪಡಿಸಲಿ. ಕಪ್ಪುಹಣದ ವಿರುದ್ಧದ ಹೋರಾಟದ ಪಾರ್ದರ್ಶಕತೆ ತೋರಿಸಲಿ ಎಂದು ರಾಹುಲ್ ಗಾಂಧಿ ಒತ್ತಾಯ ಪಡಿಸಿದರು. ಮೋದಿ ಆರ್ಎಸ್ಎಸ್ ವಾದಿ: ಪ್ರಧಾನಿ ನರೇಂದ್ರ ಮೋದಿ ಆರ್ಎಸ್ಎಸ್ ಸಿದ್ಧಾಂತವನ್ನು ಅನುಸರಿಸುತ್ತಿದ್ದಾರೆ. ಆಕ್ರಮಣಕಾರಿ ನೀತಿಯನ್ನು ಕೈಗೊಳ್ಳುತ್ತಿದ್ದಾರೆ. ನೋಟು ನಿಷೇಧಿಸಿ ಶ್ರೀಮಂತರಿಗೆ ಅನುಕೂಲ ಮಾಡಿದ್ದಾರೆ. ಬಡವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಆಪಾದಿಸಿದರು. ಮತ್ತೊಮ್ಮೆ ಭ್ರಷ್ಟಾಚಾರದ ಆರೋಪ: ಪ್ರಧಾನಿ ಮೋದಿ ಭ್ರಷ್ಟಾಚಾರದ ವಿರುದ್ಧ ನಕಲಿ ಹೋರಾಟ ನಡೆಸುತ್ತಿದ್ದಾರೆ. ಮೋದಿ ಅವರ ನಿಜವಾದ ಬಂಡವಾಳ ಸಹರಾ ಹಗರಣದ ಮೂಲಕ ಬಯಲಾಗಿದೆ. ಈ ಕುರಿತು ಮೋದಿ ಬಾಯ್ಬಿಡುತ್ತಿಲ್ಲ ಎಂದು ಮೋದಿ ವಿರುದ್ಧದ ಭ್ರಷ್ಟಾಚಾರ ಆರೋಪನ್ನು ಪುನರುಚ್ಚರಿಸಿದ್ದಾರೆ. ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದ ಸಂದರ್ಭ ಸಹರಾ ಕಂಪನಿಯಲ್ಲಿ 40 ಕೋಟಿ ರೂ. ಅಕ್ರಮವಾಗಿ ಹಣ ಪಡೆದಿದ್ದಾರೆ ಎಂದು ರಾಹುಲ್ ಆರೋಪ ಹೊರಿಸಿದ್ದರು.
2016:
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ನೂತನ ಡೆಪ್ಯಟಿ ಗವರ್ನರ್ ಆಗಿ
ವಿರಳ ವಿ ಆಚಾರ್ಯ ಅವರನ್ನು ಸರ್ಕಾರ ನೇಮಕ ಮಾಡಿತು. ನ್ಯೂಯಾರ್ಕ್ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಅರ್ಥಶಾಸ್ತ್ರ ಪ್ರೊಫೆಸರ್ ಆಗಿರುವ ವಿರಳ ವಿ ಆಚಾರ್ಯ ಅವರು ಆರ್ಬಿಐ ನೂತನ ಡೆಪ್ಯುಟಿ ಗವರ್ನರ್ ಆಗಿ ನೇಮಕ ಗೊಂಡರು. ಹಣಕಾಸು ವಲಯದ ಮೇಲಿನ ವ್ಯವಸ್ಥೆಯ ಅಪಾಯದ ಕುರಿತಾಗಿ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ವಿಶ್ಲೇಷಣೆ ಹಾಗೂ ಅದರ ನಿಯಂತ್ರಣ ಕುರಿತಾಗಿ ನಡೆಸಿರುವ ಸಂಶೋಧನೆಯಿಂದ ಆಚಾರ್ಯ ಅವರು ಗುರುತಿಸಿಕೊಂಡವರು. ನೋಟು ರದ್ದತಿ ಬಳಿಕ ಆರ್ಬಿಐ ಪದೇ ಪದೇ ನಿಯಮ ಬದಲಿಸಿ ಹೊರಡಿಸಿದ ಸೂಚನೆಗಳಿಂದಾಗಿ ಟೀಕೆಗೆ ಒಳಗಾಗಿತ್ತು. ಇದೇ ಸಂದರ್ಭದಲ್ಲಿ ಆಚಾರ್ಯ ಅವರ ನೇಮಕಾತಿ ನಡೆದಿದೆ. ಅವರು 3 ವರ್ಷ ಉಪ ಗವರ್ನರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಿನ್ನೆಲೆ: ಮುಂಬೈ ಐಐಟಿಯಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಪಿಎಚ್ಡಿ ಪಡೆದಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಬ್ಯಾಂಕ್ ಆಫ್ ಇಂಗ್ಲೆಂಡ್ನಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
2008: ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗಲಿಲ್ಲ. ಆದರೆ ನ್ಯಾಷನಲ್ ಕಾನ್ಛರೆನ್ಸ್ ಪಕ್ಷ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು. ಒಟ್ಟು 87 ಸದಸ್ಯ ಬಲದ ವಿಧಾನಸಭೆಯಲ್ಲಿ ನ್ಯಾಷನಲ್ ಕಾನ್ಛರೆನ್ಸ್ 28 ಸ್ಥಾನಗಳನ್ನು ಗೆದ್ದುಕೊಂಡರೆ, ಪಿಡಿಪಿ 21 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತು. 17 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ನಿಂತಿತು. ಬಿಜೆಪಿ 11 ಸ್ಥಾನಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿತು. ಇತರರು 10 ಸ್ಥಾನಗಳನ್ನು ಪಡೆದರು.
2008: ಹಮಾಸ್ ಉಗ್ರಗಾಮಿಗಳ ಪ್ರಾಬಲ್ಯದ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಸತತ ಎರಡನೇ ದಿನ ಕೂಡ ವೈಮಾನಿಕ ದಾಳಿ ಮುಂದುವರೆಸಿತು. ಒಟ್ಟು 270ಕ್ಕೂ ಹೆಚ್ಚು ಪ್ಯಾಲೆಸ್ಥೀನಿಯರು ದಾಳಿಯಲ್ಲಿ ಅಸು ನೀಗಿ, 800 ಮಂದಿ ಗಾಯಗೊಂಡರು. 1967ರಿಂದೀಚೆಗೆ ಈ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಅತ್ಯಂತ ದೊಡ್ಡ ಸೇನಾ ಕಾರ್ಯಾಚರಣೆ ಇದು.
2008: ಪಂ. ಮಾಧವ ಗುಡಿ ಅವರ ಪುತ್ರ ಪ್ರಸನ್ನ ಗುಡಿ ಸತತ 24 ಗಂಟೆಗಳ ಕಾಲ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವ 'ಸ್ವರ ಮಹಾ ಯಾಗ' ಎಂಬ ವಿಶಿಷ್ಟ ಕಾರ್ಯಕ್ರಮ ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಈದಿನ ಆರಂಭವಾಯಿತು. ಈ ಮೂಲಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಪ್ರಸನ್ನ ಅವರು ಗಿನ್ನೆಸ್ ದಾಖಲೆ ನಿರ್ಮಿಸಲು ಹೊರಟರು. ಕಿರಾಣಾ ಸಂಗೀತ ಅಕಾಡೆಮಿ ಏರ್ಪಡಿಸಿದ್ದ ಈ ಕಾರ್ಯಕ್ರಮಕ್ಕೆ ಡಾ. ಗಂಗೂಬಾಯಿ ಹಾನಗಲ್ ಚಾಲನೆ ನೀಡಿದರು. ಪ್ರಸನ್ನ ಗುಡಿ ಅವರು ತೋಡಿ ರಾಗದ ಮೂಲಕ ತಮ್ಮ ಶಾಸ್ತ್ರೀಯ ಗಾಯನ ಆರಂಭಿಸಿದರು. 24 ತಾಸುಗಳವರೆಗೆ ವೈವಿಧ್ಯಮಯ ರಾಗಗಳನ್ನು ಪ್ರಸ್ತುತ ಪಡಿಸುವುದರ ಜೊತೆಗೆ ಮರಾಠಿ ಅಭಂಗ, ಕನ್ನಡ, ಹಿಂದಿ ಭಜನೆಗಳು, ದಾಸವಾಣಿಯನ್ನು ಡಿಸೆಂಬರ್ 29ರ ಬೆಳಗ್ಗೆ 10 ಗಂಟೆವರೆಗೆ ಹಾಡುವಮೂಲಕ ಅವರು ದಾಖಲೆ ನಿರ್ಮಿಸಿದರು.
2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಹತ್ಯೆ ಹಿನ್ನೆಲೆಯಲ್ಲಿ ದೇಶದಾದ್ಯತಂತ ಸಂಭವಿಸಿದ ಹಿಂಸಾಚಾರಗಳಿಗೆ 34 ಜನ ಬಲಿಯಾದರು. ಹಿಂಸಾಚಾರ ಹತ್ತಿಕ್ಕಲು ಸರ್ಕಾರ ಕಂಡಲ್ಲಿ ಗುಂಡಿಕ್ಕಲು ಆದೇಶಿಸಿತು. ಈ ಮಧ್ಯೆ ಬೆನಜೀರ್ ಹತ್ಯೆಗೆ ಅಲ್ ಖೈದಾ ಕಾರಣ ಎಂದು ಪಾಕ್ ಸರ್ಕಾರ ಹೇಳಿತು. ಬೆನಜೀರ್ ಗುಂಡೇಟಿನಿಂದ ಸತ್ತಿಲ್ಲ, ಬಾಂಬ್ ಸ್ಫೋಟದಿಂದ ಕಾರಿನ ಛಾವಣಿ ಬಡಿದು ಮೃತರಾಗಿದ್ದಾರೆ ಎಂದು ಆಂತರಿಕ ಭದ್ರತಾ ಸಚಿವಾಲಯದ ವಕ್ತಾರ ಜಾವೆದ್ ಇಕ್ಬಾಲ್ ಚೀಮಾ ಸ್ಪಷ್ಟ ಪಡಿಸಿದರು. ಬೆನಜೀರ್ ಹತ್ಯೆಗೆ ಸ್ವಲ್ಪ ಹೊತ್ತಿನ ಮೊದಲಿನ ಚಿತ್ರಗಳನ್ನು ಒಳಗೊಂಡ ವಿಡಿಯೋ ಚಿತ್ರವನ್ನೂ ಸರ್ಕಾರ ಬಿಡುಗಡೆ ಮಾಡಿತು. ಇದರಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದಿರುವುದು ಸ್ಪಷ್ಟವಾಗಿ ಕಾಣಿಸಿತು.
2007: ಬಿಜೆಪಿ ಯಶೋಗಾಥೆ ಮುಂದುವರೆಯಿತು. ಪಂಜಾಬ್, ಉತ್ತರಖಂಡ, ಗುಜರಾತ್ ನಂತರ ಈಗ ಹಿಮಾಚಲ ಪ್ರದೇಶದಲ್ಲೂ ಅದು ತನ್ನ ವಿಜಯ ಪತಾಕೆಯನ್ನು ಹಾರಿಸಿತು. ಹಿಮಾಚಲ ಪ್ರದೇಶ ವಿಧಾನಸಭೆಯ 68 ಸ್ಥಾನಗಳ ಪೈಕಿ 41 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಪಡೆಯಿತು. 2003ರ ಚುನಾವಣೆಯಲ್ಲಿ ಕೇವಲ 19 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಉತ್ತಮ ಸಾಧನೆ ತೋರಿ 41 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ಇದೇ ಮೊದಲ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಶಕ್ತಿ ಬಿಜೆಪಿಗೆ ಬಂತು. ಇದಕ್ಕೂ ಮೊದಲು 1990ರ ಚುನಾವಣೆಯಲ್ಲಿ ಜನತಾ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಧಿಕಾರ ಹಿಡಿದಿತ್ತು. ಬಿಜೆಪಿಗೆ ತೀವ್ರ ಸ್ಪರ್ಧೆ ನೀಡಿದ್ದ ಕಾಂಗ್ರೆಸ್ ಕೇವಲ 23 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ಸಿಗೆ 18 ಸ್ಥಾನಗಳ ಖೋತಾ ಆಯಿತು. ಈ ಮೂಲಕ ಪಕ್ಷದ 123ನೇ ಸಂಸ್ಥಾಪನಾ ದಿನವಾದ ಈ ದಿನವೇ ಪಕ್ಷಕ್ಕೆ ದೊಡ್ಡ ಬರಸಿಡಿಲು ಹೊಡೆದಂತಾಯಿತು.
2007: ಕಂದಮಲ್ನಲ್ಲಿ ಸಂಭವಿಸಿದ ಕೋಮು ಗಲಭೆಯ ಹೊಣೆ ಹೊತ್ತು ರಾಜ್ಯದ ಉಕ್ಕು ಹಾಗೂ ಗಣಿ ಸಚಿವ ಪದ್ಮನಾಭ್ ಬೆಹೆರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಾವು ಪ್ರತಿನಿಧಿಸುವ ಫೂಲ್ ಬನಿ ಮತಕ್ಷೇತ್ರದಡಿ ಬರುವ ಕಂದಮಲ್ನಲ್ಲಿ ನಡೆದ ಈ ಕೋಮು ಗಲಭೆಯ ನೈತಿಕ ಹೊಣೆಯನ್ನು ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬೆಹೆರ್ ಹೇಳಿದರು.
2007: ನಾಡಿನ ಸಜ್ಜನ ಸಾಹಿತಿ, ಸೃಜನಶೀಲ ಮನಸ್ಸಿನ ಸಹೃದಯಿ, ಸಾಹಿತ್ಯದ ಪರಿಚಾರಕ ಚಿ. ಶ್ರೀನಿವಾಸರಾಜು ಈದಿನ ಮುಂಜಾನೆ ತೀರ್ಥಹಳ್ಳಿಯಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಶ್ರೀನಿವಾಸರಾಜು ಅವರ ಇಚ್ಛೆಯಂತೆ ಅವರ ದೇಹವನ್ನು ಬೆಂಗಳೂರಿನಲ್ಲಿ ಸಂಜೆ ಎಂ. ಎಸ್. ರಾಮಯ್ಯ ವೈದ್ಯ ಕೀಯ ಕಾಲೇಜಿಗೆ ದಾನವಾಗಿ ನೀಡಲಾ ಯಿತು. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯಲ್ಲಿ ಏರ್ಪಾಡಾಗಿದ್ದ ಮೂರು ದಿನಗಳ `ಕುವೆಂಪು-ಬೇಂದ್ರೆ ಸಾಹಿತ್ಯ ಅಧ್ಯಯನ ಶಿಬಿರ'ದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಬಂದು ಬೆಳಿಗ್ಗೆ 7ಗಂಟೆಗೆ ತೀರ್ಥಹಳ್ಳಿಯಲ್ಲಿ ಇಳಿದ ನಂತರ ಶ್ರೀನಿವಾಸರಾಜು ತೀವ್ರ ಹೃದಯಾಘಾತಕ್ಕೆ ಒಳಗಾದರು. ತತ್ ಕ್ಷಣ ಸ್ಥಳೀಯರು ಇವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಕುವೆಂಪು ನಾಡು ಕುಪ್ಪಳ್ಳಿಯಲ್ಲಿ `ನಾಡು ನುಡಿ ಚಿಂತನೆ` ಎಂಬ ಗೋಷ್ಠಿಯೊಂದರ ಅಧ್ಯಕ್ಷತೆಯನ್ನು ವಹಿಸಿ, ಪ್ರಬಂಧವೊಂದನ್ನು ಅವರು ಮಂಡಿಸಬೇಕಿತ್ತು. ಅದರೆ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ.
2007: ರಾವಲ್ಪಿಂಡಿಯಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪಾಕಿಸ್ಥಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ಥಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೊ ಅಂತ್ಯಕ್ರಿಯೆ ಅವರ ಪೂರ್ವಜರ ಗ್ರಾಮವಾದ ಗರಿ ಖುದಾ ಬಕ್ಷದಲ್ಲಿ ತಂದೆ ಜುಲ್ಫಿಕರ್ ಅಲಿ ಭುಟ್ಟೊ ಸಮಾಧಿಯ ಪಕ್ಕದಲ್ಲಿ ಸಾವಿರಾರು ಮಂದಿಯ ಅಶ್ರುತರ್ಪಣದ ಮಧ್ಯೆ ನಡೆಯಿತು. ಬೆನಜೀರ್ ಅವರ ಪತಿ ಆಸಿಫ್ ಅಲಿ ಜರ್ದಾರಿ, ಪುತ್ರ ಬಿಲಾವಲ್, ಪುತ್ರಿಯರಾದ ಭಕ್ತವಾರ್ ಮತ್ತು ಅಸಿಫಾ ಅವರ ಸಮ್ಮುಖದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆಯ ನಂತರ ಶವಪೆಟ್ಟಿಗೆಯನ್ನು ಸಮಾಧಿಯೊಳಗೆ ಇಳಿಸಲಾಯಿತು. ಕಪ್ಪು, ಹಸಿರು ಮತ್ತು ಕೆಂಪು ಬಣ್ಣದ ಪಿಪಿಪಿಯ ಧ್ವಜವನ್ನು ಶವಪೆಟ್ಟಿಗೆಗೆ ಹೊದಿಸಲಾಗಿತ್ತು. ಭುಟ್ಟೊ ಬೆಂಬಲಿಗರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಎದೆ ಬಡಿದುಕೊಂಡು ಕಣ್ಣೀರಿಟ್ಟರು. ಲರ್ಖಾನಾ ಜಿಲ್ಲೆಯ ಎಲ್ಲಾ ಕಡೆಗಳಿಂದಲೂ ಸಹಸ್ರಾರು ಜನರು ಲಾರಿ, ಟ್ರ್ಯಾಕ್ಟರುಗಳಲ್ಲಿ ಬಂದಿದ್ದರು.
2007: ಹಿರಿಯ ನೃತ್ಯ ಕಲಾವಿದೆ ಶಾಂತಾರಾವ್ (81) ಅವರು ಈದಿನ ನಸುಕಿನ 4.35ಕ್ಕೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವಿವಾಹಿತರಾಗಿದ್ದ ಶಾಂತಾರಾವ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಮೋಹಿನಿಯಾಟ್ಟಂ ನೃತ್ಯದಲ್ಲಿ ಅಪಾರ ಪ್ರಾವೀಣ್ಯ ಪಡೆದಿದ್ದ ಅವರು, ನೆಹರೂ, ಇಂದಿರಾ ಗಾಂಧಿ ಮತ್ತಿತರರಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಶಾಂತಾರಾವ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದವು. ನೃತ್ಯ ಕಲೆಯಲ್ಲಿನ ಸಾಧನೆಗಾಗಿ ಅವರು ಪದ್ಮಶ್ರೀ, ನಾಟ್ಯರಾಣಿ ಶಾಂತಲಾ, ಕಾಳಿದಾಸ ಪ್ರಶಸ್ತಿಗಳಲ್ಲದೆ ರಾಜ್ಯ ಮತ್ತು ಕೇಂದ್ರ ಸಂಗೀತ ನಾಟಕ ಅಕಾಡೆಮಿಗಳ ಗೌರವಕ್ಕೂ ಪಾತ್ರರಾಗಿದ್ದರು.
2006: ಬೆಂಗಳೂರಿನ ನಾರಾಯಣ ನೇತ್ರಾಲಯದ `ಯುವೆಟಿಸ್ ಮತ್ತು ಆಕ್ಯುಲರ್ ಇಮ್ಯುನಾಲಜಿ ಸೇವೆ'ಗಳ ವಿಭಾಗದ ಸಮಾಲೋಚಕಿ ಡಾ. ಎಂ. ಪದ್ಮಮಾಲಿನಿ ಅವರಿಗೆ ಅತ್ಯುತ್ತಮ ಪ್ರಬಂಧ ಮಂಡನೆಗಾಗಿ ಪ್ರತಿಷ್ಠಿತ ಪ್ರೊ. ನರಸಿಂಗ ಎ. ರಾವ್. ಪ್ರಶಸ್ತಿ ಲಭಿಸಿತು. ಮಧುರೈನ ಅರವಿಂದ ಕಣ್ಣಿನ ಆಸ್ಪತ್ರೆಯಲ್ಲಿ ನಡೆದ ಆರನೇ ಅಖಿಲ ಭಾರತ ಯುವೆಟಿಸ್ ಸಮ್ಮೇಳನದಲ್ಲಿ ಮಂಡಿಸಿದ `ಚಿಕುನ್ ಗುನ್ಯಾ ತರುವ ಸಮಸ್ಯೆಗಳು' ಪ್ರಬಂಧಕ್ಕೆ ಈ ಪ್ರಶಸ್ತಿ ಲಭಿಸಿತು.
2006: ಸಾಹಿತಿ ಎಂ. ಚಿದಾನಂದ ಮೂರ್ತಿ ಅವರಿಗೆ ಬೆಂಗಳೂರಿನ ಪುರಭವನದಲ್ಲಿ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಪ್ರತಿಷ್ಠಾನದ ವತಿಯಿಂದ `ವಿಶ್ವ ಚೇತನ' ಪ್ರಶಸ್ತಿ ಪ್ರದಾನ ಮಾಡಲಾಯಿತು.
2006: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಹಿರಿಯ ಸಾಹಿತಿ ನಾ.ಡಿಸೋಜಾ ಅವರಿಗೆ `ಗೌರವ ಡಾಕ್ಟರೇಟ್' ಪ್ರದಾನ ಮಾಡಲು ಕುವೆಂಪು ವಿಶ್ವ ವಿದ್ಯಾಲಯವು ನಿರ್ಧರಿಸಿತು.
2005: ಬೆಂಗಳೂರಿನಲ್ಲಿ ಇರುವ ದೇಶದ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್. ಟಾಟಾ ಸಭಾಂಗಣದ ಆವರಣದಲ್ಲಿ ಈ ದಿನ ರಾತ್ರಿ ಉಗ್ರಗಾಮಿಗಳು ಹಠಾತ್ತನೆ ನಡೆಸಿದ ಗುಂಡಿನ ದಾಳಿಯಲ್ಲಿ ವಿಜ್ಞಾನಿ, ದೆಹಲಿ ಐಐಟಿ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ.ಸಿ. ಪುರಿ ಮೃತರಾಗಿ ಇತರ ಐವರು ಗಾಯಗೊಂಡರು. ನಗರದಲ್ಲಿ ಉಗ್ರಗಾಮಿಗಳ ಮೊತ್ತ ಮೊದಲ ವಿಧ್ವಂಸಕ ಕೃತ್ಯವಿದು. ಪಾಕಿಸ್ಥಾನ ಮೂಲಕ ಲಷ್ಕರ್-ಇ-ತೊಯ್ಬಾ ಸಂಘಟನೆ ಇದರ ರೂವಾರಿ ಎಂಬುದು ಪೊಲೀಸರ ಗುಮಾನಿ. ಬಿಳಿಬಣ್ಣದ ಅಂಬಾಸಿಡರ್ ಕಾರಿನಲ್ಲಿ ರಾತ್ರಿ 7.10ರ ವೇಳೆಯಲ್ಲಿ ಪ್ರವೇಶಿಸಿದ ಉಗ್ರಗಾಮಿಗಳು ಯದ್ವಾತದ್ವ ಗುಂಡಿನ ಮಳೆಗರೆದರು. ಈ ಘಟನೆಯೊಂದಿಗೆ ಬೆಂಗಳೂರಿಗೂ ಭಯೋತ್ಪಾದನೆ ಪದಾರ್ಪಣೆ ಮಾಡಿತು.
2005: ದುಬೈಯ ಕಿಂಗ್ ಫೈಸಲ್ ಪ್ರತಿಷ್ಠಾನ ನೀಡುವ 2006ನೇ ಸಾಲಿನ ಅಂತಾರಾಷ್ಟ್ರೀಯ `ಕಿಂಗ್ ಫೈಸಲ್' ಪ್ರಶಸ್ತಿಯು ಮುಂಬೈಯ ಟಾಟಾ ಮುಲಭೂತ ಸಂಶೋಧನಾ ಸಂಸ್ಥೆಯ ಗಣಿತ ಶಾಸ್ತ್ರಜ್ಞ ಎಂ.ಎಸ್. ನರಸಿಂಹನ್ ಅವರಿಗೆ ಲಭಿಸಿತು. ಗಣಿತ ಶಾಸ್ತ್ರ ಮತ್ತು ಭೌತಶಾಸ್ತ್ರಗಳ ನಡುವಣ ಸಂಬಂಧವನ್ನು ಹಿಗ್ಗಿಸುವ ಸಂಶೋಧನಾ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿದ್ದು, ನರಸಿಂಹನ್ ಅವರು ಪ್ರಶಸ್ತಿಯನ್ನು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕ ಸಿಮೊನ್ ಕಿರ್ವಾನ್ ಡೊನಾಲ್ಡ್ ಸನ್ ಅವರ ಜೊತೆ ಹಂಚಿಕೊಂಡರು. ಪ್ರಶಸ್ತಿಯು 24 ಕ್ಯಾರೆಟಿನ 200 ಗ್ರಾಂ ತೂಕದ ಚಿನ್ನದ ಪದಕ ಮತ್ತು 2 ಲಕ್ಷ ಅಮೆರಿಕನ್ ಡಾಲರ್ ನಗದು ಹಣವನ್ನು ಹೊಂದಿದೆ.
2005: ಅರಬ್ ಜಗತ್ತಿನ ಪ್ರತಿಷ್ಠಿತ `ಐಪಿಆರ್ ಮಾಧ್ಯಮ ಪ್ರಶಸ್ತಿ'ಗೆ ಖಲೀಜ್ ಟೈಮ್ಸ್ ಪತ್ರಕರ್ತ ಭಾರತೀಯ ಮೂಲದ ಐಸಾಕ್ ಜಾನ್ ಆಯ್ಕೆಯಾದರು.
1987: ಕೊಯಮತ್ತೂರಿನಲ್ಲಿ ನಡೆದ ಶಕ್ತಿ ಫೈನಾನ್ಸ್ ಗ್ರ್ಯಾಂಡ್ ಮಾಸ್ಟರ್ ಟೂರ್ನಮೆಂಟಿನಲ್ಲಿ ವಿಶ್ವನಾಥನ್ ಆನಂದ್ ಅವರು ಭಾರತದ ಮೊತ್ತ ಮೊದಲ `ಗ್ರ್ಯಾಂಡ್ ಮಾಸ್ಟರ್' ಹೆಗ್ಗಳಿಕೆಗೆ ಭಾಜನರಾದರು.
1954: ಭಾರತದ `ಕ್ವಿಜ್ ದೊರೆ' ಸಿದ್ಧಾರ್ಥ ಬಸು ಹುಟ್ಟಿದ ದಿನ.
1947: ಸಾಹಿತಿ ಮಾತಂಗಿ ಜನನ.
1945: ನೇಪಾಳದ ದೊರೆ ಬೀರೇಂದ್ರ ಬೀರ ಬಿಕ್ರಮ್ ಶಾ ದೇವ್ (1945-2001) ಹುಟ್ಟಿದ ದಿನ. ಇವರನ್ನು ಪತ್ನಿ ಸೇರಿದಂತೆ ಇಡೀ ಕುಟುಂಬ ಸಹಿತವಾಗಿ ಪುತ್ರ ದೀಪೇಂದ್ರ ಗುಂಡಿಟ್ಟು ಕೊಲೆಗೈದ. 1972ರಿಂದ 2001ರವರೆಗೆ ಇವರು ನೇಪಾಳದ ದೊರೆಯಾಗಿ ಆಡಳಿತ ನಡೆಸಿದ್ದರು.
1944: ಕಾಕೋಳು ಸರೋಜಾರಾವ್ ಜನನ.
1939: ಸಾಹಿತಿ ಎಚ್. ಎಲ್. ಕೇಶವ ಮೂರ್ತಿ ಜನನ.
1937: ಟಾಟಾ ಇಂಡಸ್ಟ್ರೀಸ್ ಅಧ್ಯಕ್ಷ ರತನ್ ಟಾಟಾ ಜನ್ಮದಿನ.
1932: `ರಿಲಯನ್ಸ್ ಇಂಡಸ್ಟ್ರೀಸ್' ಸ್ಥಾಪಕ ಧೀರಜ್ ಲಾಲ್ ಹೀರಾಚಂದ್ `ಧೀರೂಭಾಯಿ' ಅಂಬಾನಿ (1932-2002) ಹುಟ್ಟಿದರು.
1928: ಸಾಹಿತಿ ಕೆ.ಎಸ್. ಉಮಾಪತಿ ಜನನ.
1923: ಗುಸ್ತಾವ್ ಐಫೆಲ್ (1832-1923) ತಮ್ಮ 91ನೇ ವಯಸ್ಸಿನಲ್ಲಿ ಮೃತರಾದರು. ಖ್ಯಾತ ಫ್ರೆಂಚ್ ಸಿವಿಲ್ ಎಂಜಿನಿಯರ್ ಆದ ಇವರ ಗೌರವಾರ್ಥ ಪ್ಯಾರಿಸ್ಸಿನ ಗೋಪುರಕ್ಕೆ `ಐಫೆಲ್ ಟವರ್' ಹೆಸರು ಇಡಲಾಗಿದೆ. ಅಮೆರಿಕಾದ `ಸ್ಟ್ಯಾಚ್ಯೂ ಆಫ್ ಲಿಬರ್ಟಿ' ಚೌಕಟ್ಟು ನಿರ್ಮಿಸಿದವರೂ ಇವರೇ.
1913: ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕ ದೊಡ್ಡೇರಿ ವೆಂಕಟಗಿರಿ ರಾವ್ (28-12-1913ರಿಂದ 26-5-2004) ಅವರು ಸೊರಬ ತಾಲ್ಲೂಕಿನ ದೊಡ್ಡೇರಿ ಹಳ್ಳಿಯಲ್ಲಿ ಜನಿಸಿದರು.
1902: ಸಾಹಿತಿ ರೊದ್ದ ಲಕ್ಷ್ಮೀನರಸಿಂಹಯ್ಯ ಜನನ.
1896: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಕಲ್ಕತ್ತಾ (ಈಗಿನ ಕೋಲ್ಕತ) ಅಧಿವೇಶನದಲ್ಲಿ `ವಂದೇ ಮಾತರಂ' ಗೀತೆಯನ್ನು ಹಾಡಲಾಯಿತು.
1885: ಭಾರತ ರಾಷ್ಟ್ರೀಯ ಕಾಂಗ್ರೆಸಸಿನ ಮೊತ್ತ ಮೊದಲ ಅಧಿವೇಶನ ಬಾಂಬೆಯ (ಈಗಿನ ಮುಂಬೈ) ಗೋಕುಲ್ ದಾಸ್ ತೇಜ್ ಪಾಲ್ ಸಂಸ್ಕೃತ ಪಾಠಶಾಲೆಯಲ್ಲಿ ನಡೆಯಿತು. ಡಬ್ಲ್ಯೂ.ಸಿ. ಬ್ಯಾನರ್ಜಿ ಅಧ್ಯಕ್ಷತೆ ವಹಿಸಿದ್ದರು. 72 ಮಂದಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
No comments:
Post a Comment